ನಾಡಹಬ್ಬ ದಸರಾ
ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮಿಬ್ಬರ ಸವಿನಯ ನಮಸ್ಕಾರಗಳು. 'ನಾಡಹಬ್ಬ ದಸರಾ' ಎಂಬ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮಿಬ್ಬರ ಇಂದಿನ ಪ್ರಯತ್ನಕ್ಕೆ ತಮ್ಮೆಲ್ಲರ ಆಶೀರ್ವಾದಗಳು ಅತಿಮುಖ್ಯವಾದದು.
ದಸರಾ ಎಂದರೆ ಮೈಸೂರು, ಮೈಸೂರು ಎಂದರೆ ದಸರಾ. ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ. ಹರಿಕಥೆಯ ಆರಂಭವನ್ನು ತಾಯಿ ಚಾಮುಂಡೇಶ್ವರಿಯ ಸ್ಮರಣೆಯೊಂದಿಗೆ ಮಾಡೋಣ.
ಶ್ರೀ ಚಾಮುಂಡೇಶ್ವರಿ........
ಇಂದು ದಸರಾ ಆಚರಣೆಯ ಮಹತ್ವದ ದಿನ. ಇಂದು ಮಹಾನವಮಿಯ ಹಬ್ಬ. ನಾಳಿನ ವಿಜಯದಶಮಿಗೆ ಸಿದ್ಧತೆಯನ್ನು ನಡೆಸಲು ಇಂದು ನಾವು ಆಯುಧ ಪೂಜೆಯನ್ನು ಮಾಡುವ ಹಬ್ಬ. ಆಯುಧಗಳು ಶೌರ್ಯದ, ವಿಜಯದ ಸಂಕೇತವಾದರೆ, ದಿನನಿತ್ಯದ ಆಯುಧಗಳು ನಮ್ಮ ದುಡಿಮೆಯ ಸಂಕೇತ.
ನಮ್ಮ ದೇಶದಲ್ಲಿ ದಸರಹಬ್ಬವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸುತ್ತೇವೆ. ವರ್ಷದ ಆರಂಭದಲ್ಲಿ ಬರುವ ವಸಂತ ನವರಾತ್ರಿ ಹಾಗೂ ಮತ್ತೊಂದು ಇಂದಿನ ಶರನ್ನವರಾತ್ರಿ. ಚೈತ್ರಮಾಸದ ಯುಗಾದಿಯಿಂದ ರಾಮನವಮಿಯವರೆಗೂ ಆಚರಿಸುವ ದಸರವೇ ವಸಂತ ನವರಾತ್ರಿ. ಆಶ್ವೀಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ವಿಜಯದಶಮಿಯವರೆಗೆ ಆಚರಿಸುವ ದಸರವೇ ಇಂದಿನ ಶರನ್ನವರಾತ್ರಿ. ಮಳೆಗಾಲದಿಂದ ತೊಯ್ದ ಭೂಮಿ ಹಚ್ಚಹಸಿರಾಗಿ ಕಂಗೊಳಿಸುವ ದಿನಗಳೇ ಶರತ್ ಋತುವಿನ ದಿನಗಳು.
ವಸಂತ ನವರಾತ್ರಿಗೆ ಶೃಂಗಾರ ರಸವೇ ಪ್ರಧಾನ. ಹೊಸ ಚಿಗುರು ಹಳೆ ಬೇರಿನಿಂದ ಕಂಗೊಳಿಸುವ ಭೂಮಾತೆಯೇ ಶೃಂಗಾರದ ಎಂದರೆ ಪ್ರಣಯ ಭಾವದ ಸಂಕೇತ ಎಂದು ನಾವು ಹೇಳಬಹುದು. ಸಂಗೀತ, ಸಾಹಿತ್ಯ, ನಾಟಕ ಇತ್ಯಾದಿಗಳೇ ವಸಂತ ನವರಾತ್ರಿಯ ವಿಶೇಷಗಳು.
ಇಂದಿನ ಶರನ್ನವರಾತ್ರಿಗೆ ವೀರರಸವೇ ಪ್ರಧಾನ. ಶರನ್ನವರಾತ್ರಿ ಸ್ತ್ರೀಶಕ್ತಿಯನ್ನು ಆರಾಧಿಸುವ ಹಬ್ಬ. ದುಷ್ಟ ಶಕ್ತಿಗಳ ವಿರುದ್ಧ ತಾಯಿ ಚಾಮುಂಡೇಶ್ವರಿ ವಿಜಯವನ್ನು ಗಳಿಸಿದ ದಿನವೇ ದುರ್ಗಾಷ್ಟಮಿ. ಶ್ರೀ ರಾಮ ರಾವಣ ಸಂಹಾರ ಮಾಡಿದ ದಿನವೇ ವಿಜಯದಶಮಿ.
ಆದರೆ ನಮ್ಮ ದೇಶ ಪರಕೀಯರ ಆಡಳಿತಕ್ಕೆ ಸಿಕ್ಕಿ ಹಾಳಾಗಿ ಹೋಯ್ತು ನೋಡಿ. ನಮ್ಮ ಚರಿತ್ರೆಯ ಪುಸ್ತಕದ ತುಂಬಾ ನಾವು ಮುಸ್ಲಿಂ ದಾಳಿಕೋರರಿಗೆ ಸೋತೆವು, ಬ್ರಿಟಿಷರ ದಬ್ಬಾಳಿಕೆಗೆ ಸೋತೆವು ಎಂಬ ಸೋಲಿನ ಭಾವವನ್ನು ಉಂಟುಮಾಡುವ ಪಾಠಗಳನ್ನೇ ಓದಿದ್ದೇವೆ. ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿಯನ್ನು ನಮ್ಮ ಮೇಲೆ ಹೇರಿ ನಮ್ಮ ಮನಸ್ಸಿನಲ್ಲಿ ನೆಗೆಟಿವ್ ಭಾವನೆಗಳನ್ನೇ, ಎಂದರೆ ಋಣಾತ್ಮಕ ಭಾವನೆಗಳನ್ನೇ ಬಿತ್ತಿ ಹೋಗಿದ್ದಾರೆ. ಹೋರಾಟವನ್ನು ಆರಂಭಿಸುವ ಮೊದಲೇ ನಾವು ಸೋಲನ್ನು ಮನಸ್ಸಿನಲ್ಲೇ ಒಪ್ಪಿಕೊಂಡುಬಿಟ್ಟಿರುತ್ತೇವೆ. ಆ ನೆಗೆಟಿವ್ ಮೈಂಡ್ ಸೆಟ್ಟಿನಿಂದ ಹೊರಬರಬೇಕು. ಅದಕ್ಕಾಗಿಯೇ ವಿಜಯದ ಸಂದೇಶವನ್ನು ಸಾರುವ ದಸರಾ ಹಬ್ಬ ನಮಗೆ ಬಹಳ ಮುಖ್ಯವಾದುದು.
ಚರಿತ್ರೆಯಲ್ಲಿ ನಾವು ಮೊಗಲರ, ಬ್ರಿಟಿಷರ ಪಾಠವನ್ನೇ ಹೆಚ್ಚು ಓದುತ್ತೇವೆ. ಮೊಗಲರನ್ನು ಸದೆಬಡಿದ ಶಿವಾಜಿ, ರಾಣಾ ಪ್ರತಾಪ್ ಸಿಂಗ್, ಇವರುಗಳು ಪಾಠದಲ್ಲಿ ಹೀಗೆ ಬಂದು ಹಾಗೆ ಹೊರಟುಹೋಗಿರುತ್ತಾರೆ. ಗುಪ್ತರ ಕಾಲವನ್ನು ಭಾರತದ ಸುವರ್ಣಯುಗ ಎಂದು ಕರೆಯುತ್ತಾರೆ. ದಕ್ಷಿಣ ಭಾರತವನ್ನು ಕಾಂಬೋಡಿಯಾದವರೆಗೆ ವಿಸ್ತರಿಸಿ, ದಕ್ಷಿಣ ಭಾರತವನ್ನು ಹದಿಮೂರು ಶತಮಾನಗಳವರೆಗೆ ಆಳಿದ ಚೋಳರ ಪಾಠವನ್ನು ನಾವು ಮರೆತೇಬಿಟ್ಟಿದ್ದೇವೆ. ತಂಜಾವೂರಿನಲ್ಲಿ ಚೋಳರು ಕಟ್ಟಿದ ಬೃಹದೀಶ್ವರ ದೇವಸ್ಥಾನವೇ ಚೋಳರ ವಿಜಯಕ್ಕೆ ಜೀವಂತ ಸಾಕ್ಷಿಯಾಗಿ ಇಂದಿಗೂ ನಿಂತಿದೆ.
ದಸರಾ ಆಚರಣೆಯಿಂದ ಸ್ಪೂರ್ತಿಯನ್ನು ಪಡೆದ ನಮ್ಮ ಭಾರತ ಈಗ ವಿಶ್ವಗುರುವಾಗಿ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ. ನಮ್ಮ ಭಾರತೀಯ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸಿದ ಉಗ್ರವಾದಿಗಳ ಹೆಡೆಮುರಿಯನ್ನು ಆಪರೇಷನ್ ಸಿಂದೂರದ ಮೂಲಕ ಕಟ್ಟಿಹಾಕಿದ ನಮ್ಮ ಸೈನಿಕರ ಪರಾಕ್ರಮವನ್ನು ನಾವು ಇಂದು ನೆನಪಿಸಿಕೊಳ್ಳಲೇ ಬೇಕು.
ನಮ್ಮ ಸಿನಿಮಾಗಳಲ್ಲೂ ನೋಡಿ, ಸೀರೆ ಒಟ್ಟು ಕುಂಕುಮ ಇಟ್ಟ ಹೆಣ್ಣೆಂದರೆ ಅವಳು ಶಕ್ತಿಹೀನಳು, ದುರ್ಬಲೆ ಎಂದೇ ಬಿಂಬಿಸುತ್ತಾರೆ. ಹರಿದ ಜೀನ್ಸ್ ಪ್ಯಾಂಟ್ ಹಾಕಿದ ಹೆಣ್ಣೇ ಡ್ಯಾಶಿಂಗ್ ಹೆಣ್ಣು ಎಂದು ತೋರಿಸುತ್ತಾರೆ. ನಮ್ಮ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇವರೆಲ್ಲಾ ಸೀರೆ ಉಟ್ಟ ಭಾರತೀಯ ನಾರಿಯರೆ ಆಗಿತ್ತಿಲ್ಲವೇ? ಇಂದಿನ ಎಂ.ಎಸ್. ಸುಬ್ಬುಲಕ್ಷ್ಮಿ, ಲತಾ ಮಂಗೇಶ್ಕರ್, ಸುಧಾ ಮೂರ್ತಿ ಇವರುಗಳು ಕೂಡ ಸೀರೆ ಉಟ್ಟ ಮಹಿಳೆಯರಲ್ಲವೇ? ದಸರಾ ಹಬ್ಬದ ನವದುರ್ಗೆಯರೇ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಸ್ಫೂರ್ತಿ ತಾನೇ?
ಈಗ ಹರಿಕಥೆಯ ಆರಂಭವನ್ನು ನವದುರ್ಗಾ ಕವಚ ಸ್ತುತಿಯ ಮೂಲಕ ಮಾಡೋಣ.
ಪ್ರಥಮಂ ಶೈಲಪುತ್ರೀಚಾ.......
ನವರಾತ್ರಿಯ ಮೊದಲ ದಿನ ನಾವು ದುರ್ಗೆಯ ಶೈಲಪುತ್ರಿಯ ಅವತಾರವನ್ನು ಪೂಜಿಸುತ್ತೇವೆ. ಅದನ್ನೇ ನಾವು ನವದುರ್ಗಾಕವಚ ಸ್ತೋತ್ರದಲ್ಲಿ 'ಪ್ರಥಮಂ ಶೈಲಪುತ್ರೀಚಾ' ಎಂದು ಹಾಡುತ್ತೇವೆ. ಶೈಲಪುತ್ರಿ ಹಿಂದಿನ ಅವತಾರದಲ್ಲಿ 'ಸತಿ' ಎಂಬ ಅವತಾರವನ್ನು ಎತ್ತಿದ್ದಳು. ಸತಿ ಬ್ರಹ್ಮನ ಮಗನಾದ ದಕ್ಷನ ಮಗಳಾಗಿದ್ದಳು. ದಕ್ಷನ ಮಗಳಯಾದ ಸತಿದೇವಿಗೆ ದಾಕ್ಷಾಯಿಣಿ ಎಂಬ ಹೆಸರೂ ಇದೆ. ಸತಿದೇವಿ ಬಾಲ್ಯದಿಂದಲೂ ಶಿವನನ್ನೇ ತನ್ನ ಪತಿಯೆಂದು ಆರಾಧಿಸುತ್ತಿದ್ದಳು. ಇದು ತಂದೆಯಾದ ದಕ್ಷನಿಗೆ ಇಷ್ಟವಿರಲಿಲ್ಲ. ಸ್ಮಶಾನವನ್ನು ಕಾಯುವ ಬೂದಿಬಡುಕನಾದ ಶಿವನಿಗೆ ತನ್ನ ಮಗಳನ್ನು ಕೊಡುವುದಿಲ್ಲ ಎಂದು ದಕ್ಷನು ಹಠತೊಟ್ಟಿದ್ದನು. ತಂದೆಯ ವಿರೋಧದ ನಡುವೆಯೂ ಸತಿ, ಶಿವನನ್ನೇ ಮದುವೆಯಾದಳು. ಕೋಪಗೊಂಡ ದಕ್ಷನು ತನ್ನ ಮಗಳಾದ ಸತಿಯೊಂದಿಗೆ ತನ್ನ ಸಂಬಂಧವನ್ನೇ ಕಡಿದುಕೊಂಡನು. ಆದರೂ ಮಗಳಾದ ಸತಿಗೆ ತಂದೆಯ ಮೇಲೆ ಪ್ರೀತಿ ಇದ್ದೆ ಇತ್ತು.
ಒಮ್ಮೆ ದಕ್ಷನು ಒಂದು ಮಹಾಯಾಗವನ್ನು ಮಾಡಿದನು. ಆ ಯಾಗಕ್ಕೆ ಅವನು ಸಕಲ ದೇವತೆಗಳನ್ನೂ ಆಹ್ವಾನಿಸಿದ್ದನು. ಆದರೆ, ತನ್ನ ಸ್ವಂತ ಮಗಳೇ ಆದ ಸತಿಯನ್ನು ಮತ್ತು ತನ್ನ ಅಳಿಯನಾದ ಶಿವನನ್ನೂ ಯಾಗಕ್ಕೆ ಆಹ್ವಾನಿಸಲೇ ಇಲ್ಲ. ಆದರೂ, ಮಗಳಾದ ಸತಿಗೆ ಮನಸ್ಸು ತಡೆಯಲಿಲ್ಲ. ಶಿವನ ವಿರೋಧದ ನಡುವೆಯೂ ಸತಿ ದಕ್ಷನ ಯಜ್ಞಕ್ಕೆ ಬಂದೇಬಿಟ್ಟಳು. ಕರೆಯದೇ ಬಂದ ಸತಿಯನ್ನು, ಮಗಳು ಎಂಬಾ ಪ್ರೀತಿಯನ್ನೂ ತೊರೆದು, ದಕ್ಷನು ಅವಮಾನಿಸಿದನು. ಮಗಳ ಎದುರೇ, ಅವಳ ಗಂಡನಾದ ಶಿವನನ್ನು ಇನ್ನಿಲ್ಲದಂತೆ ಜರೆದು ಅವಮಾನಿಸಿದನು. ಪತಿದೇವರಾದ ಶಿವನ ನಿಂದನೆಯನ್ನು ಕೇಳಲಾಗದ ಸತಿ, ರೋಷದಲ್ಲಿ ದಕ್ಷನ ಅಗ್ನಿಕುಂಡಕ್ಕೆ ಧುಮುಕಿ, ಆತ್ಮಾಹುತಿಯನ್ನು ಮಾಡಿಕೊಂಡಳು. ವಿಷಯ ತಿಳಿದ ಶಿವನ ಕೋಪ ಕೈಲಾಸ ಶಿಖರದೆತ್ತರಕ್ಕೆ ಏರಿತು. ಸುಟ್ಟು ಕರಕಲಾದ ತನ್ನ ಪತ್ನಿ ಸತಿಯ ದೇಹವನ್ನು ತನ್ನ ಹೆಗಲಮೇಲೆ ಹೊತ್ತು, ಶಿವನು ತಾಂಡವ ನೃತ್ಯಮಾಡಲು ಆರಂಭಿಸಿದನು. ಶಿವನ ತಂಡವಾದ ಕೋಪಾಗ್ನಿಗೆ ಸಮಸ್ತ ಬ್ರಹ್ಮಾಂಡವೇ ಸುಟ್ಟುಹೋಗುವಂತಾಗಿತ್ತು. ವಿನಾಶವನ್ನು ತಪ್ಪಿಸಲು ಮಹಾವಿಷ್ಣುವು ತನ್ನ ಸುರ್ದರ್ಶನ ಚಕ್ರವನ್ನು ಸತಿಯ ಸುಟ್ಟು ಕರಕಲಾದ ದೇಹದ ಮೇಲೆ ಪ್ರಯೋಗಿಸಿದನು. ಸತಿಯ ದೇಹ 52 ತುಂಡುಗಳಾಗಿ, ಭೂಮಂಡಲದ 52 ಸ್ಥಾನಗಳಲ್ಲಿ ಬಿದ್ದಿತ್ತು. ಆ 52 ಸ್ಥಾನಗಳೇ ಈಗ 52 ಶಕ್ತಿಪೀಠಗಳೆಂದೇ ಪ್ರಸಿದ್ಧವಾಗಿವೆ. ಈ ಶಕ್ತಿ ಪೀಠಗಳು ಈಗ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಟಿಬೆಟ್, ಭೂತಾನ್ ಮತ್ತು ಪಾಕಿಸ್ತಾನಗಳಲ್ಲಿ ಇವೆ.
ಕಾಶಿ ವಿಶಾಲಾಕ್ಷಿ, ಕಂಚಿ ಕಾಮಾಕ್ಷಿ, ಮೈಸೂರು ಚಾಮುಂಡಿ, ಅಸ್ಸಾಮಿನ ಖಾಮಕ್ಯ ದೇವಿ , ಕೋಲ್ಕತ್ತಾ ಕಾಳಿ ಇವುಗಳು ಭಾರತದಲ್ಲಿರುವ ಮುಖ್ಯ ಶಕ್ತಿಪೀಠಗಳು. ಪಾಕಿಸ್ತಾನದ ಹಿಂಗ್ಲಾ ದೇವಿ, ಶ್ರೀಲಂಕಾದ ಟ್ರಿಂಕಾಮಲೆ ದೇವಿ, ಬಾಂಗ್ಲಾದೇಶದ ಡಾಕೇಶ್ವರಿ ಇವುಗಳು ಕೂಡ ಶಕ್ತಿಪೀಠಗಳೇ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಈ ಶಕ್ತಿಪೀಠಗಳು ಈಗಲೂ ಜೀವಂತವಾಗಿರುವುದೇ ದುರ್ಗಾಮಾತೆಯ ಮಹಿಮೆಗೆ ಸಾಕ್ಷಿ.
ಈಗ ದುರ್ಗಾದೇವಿಯನ್ನು ಮತ್ತೊಮ್ಮೆ ಪ್ರಾರ್ಥಿಸೋಣ.
ದುರ್ಗಾ ದೇವಿ.......
ಪ್ರಥಮಂ ಶೈಲಪುತ್ರೀಚಾ....... ನವರಾತ್ರಿಯ ಮೊದಲನೇ ದಿನ ನಾವು ದುರ್ಗಾಮಾತೆಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧಿಸುತ್ತೇವೆ. ದಕ್ಷಬ್ರಹ್ಮನ ಯಜ್ಞಕುಂಡದೊಳಗೆ ಧುಮುಕಿ ಆತ್ಮಾಹುತಿಯನ್ನು ಮಾಡಿಕೊಂಡ ಶಿವಪತ್ನಿ ಸತಿದೇವಿಯೇ, ಹಿಮವಂತನ ಮಗಳಾಗಿ ಜನಿಸಿ ಶೈಲಪುತ್ರಿ ಎಂದು ನಾಮಕರಣಗೊಂಡಳು. ಪರ್ವತರಾಜನ ಮಗಳಾದುದರಿಂದ ಶೈಲಪುತ್ರಿಗೆ ಪಾರ್ವತಿ ಎಂಬ ಹೆಸರೂ ಇತ್ತು. ಶೈಲಪುತ್ರಿ ಕೂಡ ಅಪರಿಮಿತ ಸುಂದರಿ ಮತ್ತು ಜಾಣೆ. ಬಾಲ್ಯದಿಂದಲೂ ಶಿವನನ್ನೇ ಆರಾಧಿಸುತ್ತಾ, ಶಿವನನ್ನೇ ಮದುವೆಯಾಗುವೆನೆಂದು ಪಣತೊಟ್ಟಿ ಬೆಳೆದವಳೇ ಶೈಲಪುತ್ರಿ.
ದ್ವಿತೀಯಂ ಬ್ರಹ್ಮಚಾರಣಿ......, ಎಂದರೆ ನವರಾತ್ರಿಯ ಎರಡನೇ ದಿನ ನಾವು ದುರ್ಗಾಮಾತೆಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜೆಮಾಡುತ್ತೇವೆ. ಬ್ರಹ್ಮಚಾರಿಣಿ ಎಂದರೆ ಅವಿವಾಹಿತ ಹೆಣ್ಣು. ಬಿಳಿ ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದ ಸೌಂದರ್ಯವತಿಯೇ ದುರ್ಗೆಯ ಅವತಾರವಾದ ಬ್ರಹ್ಮಚಾರಿಣಿ. ಬ್ರಹ್ಮಚಾರಿಣಿಯ ಜ್ಞಾನಾರ್ಜನೆಯನಂತರ, ಮಾಡಿದ್ದು ಶಿವನನ್ನು ಕುರಿತಾದ ತಪಸ್ಸು.
ಸತಿದೇವಿಯ ಆತ್ಮಾಹುತಿಯನಂತರ ದುಃಖಿತನಾದ ಶಿವನು ಗಾಢವಾದ ಧ್ಯಾನದಲ್ಲಿ ಮಗ್ನನಾಗಿಹೋಗುತ್ತಾನೆ. ಈ ನಡುವೆ ತಾರಕಾಸುರನೆಂಬ ಮಹಾದುಷ್ಟ ರಾಕ್ಷಸನ ಉಪಟಳದಿಂದ ಮನುಷ್ಯರು, ಋಷಿಮುನಿಗಳು ಮತ್ತು ಸಕಲ ದೇವತೆಗಳು ಕಂಗಾಲಾಗಿಹೋಗಿರುತ್ತಾರೆ. ಶಿವ-ಪಾರ್ವತಿಯರ ಪುತ್ರನಿಂದ ಮಾತ್ರ ಮರಣವೆಂಬ ವರವನ್ನು ತಾರಕಾಸುರ ಬಹಳ ಯೋಚಿಸಿ ಬ್ರಹ್ಮನಿಂದ ಪಡೆದಿರುತ್ತಾನೆ. ಶಿವನ ಪತ್ನಿಯಾದ ಸತಿದೇವಿಯು ಮರಣಹೊಂದಿದ್ದು, ಶಿವನು ಗಾಢವಾದ ಧ್ಯಾನದಲ್ಲಿ ಮಗ್ನನಾಗಿರುವ ಕಾರಣ, ಶಿವಪುತ್ರನು ಜನಿಸುವ ಸಂಭವವೇ ಇಲ್ಲವೆಂಬ ಭಯದಿಂದ ದೇವತೆಗಳೆಲ್ಲಾ ಭಯಗ್ರಸ್ತರಾಗಿರುತ್ತಾರೆ. ಹಾಗಾಗಿ ಶಿವನು ತಪಸ್ಸನ್ನು ಭಗ್ನಗೊಳಿಸಿ, ಅವನಲ್ಲಿ ಪಾರ್ವತಿಯನ್ನು ವರಿಸುವಂತಹ ಶೃಂಗಾರ ಭಾವನೆಗಳನ್ನು ಉಂಟುಮಾಡುವ ಕೆಲಸವನ್ನು, ದೇವತೆಗಳು ಶೃಂಗಾರಾದ ದೇವತೆಗಳಾದ ರತಿ-ಮನ್ಮಥರಿಗೆ ವಹಿಸುತ್ತಾರೆ. ರತಿ-ಮನ್ಮಥರ ಗಾಯನ-ನರ್ತನ ಹಾಗೂ ಹೂಬಾಣಗಳಿಂದ ಎಚ್ಚರಗೊಂಡ ಶಿವನು, ಕೋಪದಲ್ಲಿ ತನ್ನ ಮೂರನೇ ಕಣ್ಣನ್ನು ತೆರೆದು, ಮನ್ಮಥನನ್ನು ಸುಟ್ಟು ಭಸ್ಮಮಾಡುತ್ತಾನೆ. ಎಚ್ಚರಗೊಂಡ ಈಶ್ವರ ತನ್ನೆದುರು ಕಾಣಿಸಿಕೊಂಡ ಚಂದ್ರಘಂಟಾದೇವಿಯ ರೂಪದಲ್ಲಿದ್ದ ಪಾರ್ವತಿಯನ್ನು ನೋಡಿ ಮೋಹಿತನಾಗುತ್ತಾನೆ.
ಪಾರ್ವತಿಯನ್ನು ನಾವು ನವರಾತ್ರಿಯ ಮೂರನೇ ದಿನ ಚಂದ್ರಘಂಟ ದೇವಿಯ ರೂಪದಲ್ಲಿ ಆರಾಧಿಸುತ್ತೇವೆ. ಚಂದ್ರ ಶೃಂಗಾರದ, ಪ್ರಣಯದ ಸಂಕೇತ. ಅಂತಹ ಚಂದ್ರನನ್ನೇ ತನ್ನ ಶಿರದಲ್ಲಿ ಧರಿಸಿದ್ದ ಸುಂದರಿಯೇ ಚಂದ್ರಘಂಟಾ ದೇವಿ. ಹಿಮವಂತನ ಸಾಮ್ರಾಜ್ಯವೇ ಹಿಮಾಲಯ ಪರ್ವತ. ಹಿಮಾಲಯ ಪರ್ವತದ ಕೇದಾರನಾಥದ ಸಮೀಪವಿರುವ ತ್ರಿಯೋಗಿ ನಾರಾಯಣ ಎಂಬ ಹೋಮಕುಂಡ ಈಗಲೂ ಇದೆ. ಆ ಹೋಮಕೊಂಡುದ ಸ್ಥಾನವೇ ಶಿವ-ಪಾರ್ವತಿಯರ ವಿವಾಹವಾದ ಮಂಟಪ. ಹಾಗಾಗಿ ತ್ರಿಯೋಗಿ ನಾರಾಯಣ ಹೋಮಕುಂಡದ ಯಾತ್ರೆಯನ್ನು ಮಾಡಿದ ಭಕ್ತರೆಲ್ಲರೂ, ಈಗಲೂ ಸಮಿತ್ತನ್ನು ಅರ್ಪಿಸುವ ಆಚರಣೆ ಇದೆ.
ಹಿಮವಂತ ಮಹಾರಾಜನು ತನ್ನ ಮಗಳಾದ ಪಾರ್ವತಿಯ ವಿವಾಹವನ್ನು ಶಿವನೊಡನೆ ಅದ್ದೂರಿಯಾಗಿ ನೆರವೇರಿಸುತ್ತಾನೆ. ಸಕಲ ಋಷಿಮುನಿಗಳು, ದೇವತೆಗಳೂ ನೆರೆದಿದ್ದ ಆ ವಿವಾಹದ ಎಲ್ಲಾ ಏರ್ಪಾಡನ್ನು, ಪಾರ್ವತಿಯ ಸೋದರನಾದ ವಿಷ್ಣುವೇ ನಿಂತು ಮಾಡಿರುತ್ತಾನೆ. ಆದುದರಿಂದಲೇ ಪಾರ್ವತಿಯನ್ನು ನಾವು ಸರಸಿಜನಾಭ ಸೋದರಿ....... (ಈ ಕೀರ್ತನೆಯ ಪಲ್ಲವಿಯನ್ನು ಕಲಿತುಕೊಳ್ಳಬೇಕು) ಎಂದು ವರ್ಣಿಸುತ್ತೇವೆ.
ಈಗ ಹಿಮಗಿರಿಯ ಪುತ್ರಿಯಾದ ಪಾರ್ವತಿಯನ್ನು ಪ್ರಾರ್ಥಿಸೋಣ.
ಸರೋಜದಳನೇತ್ರಿ-------------
ನವದುರ್ಗೆಯ ಸ್ತೋತ್ರದಲ್ಲಿ ಕೂಷ್ಮಾಂಡೇತಿ ಚತುರ್ತಕಂ ಎಂದು ಹಾಡಲಾಗಿದೆ. ಎಂದರೆ ನಾವು ನವರಾತ್ರಿಯ ನಾಲ್ಕನೆಯ ದಿನ ಪಾರ್ವತಿಯನ್ನು ಕೂಷ್ಮಾಂಡ ದೇವಿಯ ರೂಪದಲ್ಲಿ ಪ್ರಾರ್ಥಿಸುತ್ತೇವೆ. ಕೂಷ್ಮಾಂ ಎಂದರೆ ಸೂಕ್ಷ್ಮ ಎಂದರ್ಥ. ಅಂಡ ಎಂದರೆ ಬಸಿರು ಎಂದರ್ಥ. ಶಿವನನ್ನು ವಿವಾಹವಾದ ಪಾರ್ವತಿ ಈಗ ಗರ್ಭವನ್ನು ಧರಿಸಿ, ಸ್ಕಂದನನ್ನು ತನ್ನ ಬಸಿರಿನಲ್ಲಿ ಕುಳ್ಳಿರಿಸಿಕೊಂಡಿರುತ್ತಾಳೆ.
ನವರಾತ್ರಿಯ ಐದನೇ ದಿನ ನಾವು ಪಾರ್ವತಿಯನ್ನು ಸ್ಕಂದಮಾತೆಯ ರೂಪದಲ್ಲಿ ಆರಾಧಿಸುತ್ತೇವೆ. ಹಾಗಾಗಿ ನವರಾತ್ರಿಯ ಐದನೇ ದಿನ ನಾವು ಪಾರ್ವತಿಗೆ ದೇವಸ್ಥಾನಗಳಲ್ಲಿ ಬಾಣಂತಿಯ ಅಲಂಕಾರವನ್ನು ಹಾಕಿರುತ್ತೇವೆ. ಎಲ್ಲಾ ಬಾಣಂತಿಯರು ಪಾರ್ವತಿಯರು, ಮತ್ತು ಅವರುಗಳ ಮಡಿಲಲ್ಲಿರುವ ಎಲ್ಲಾ ಕಂದಮ್ಮಗಳು ಸುಬ್ರಮಣ್ಯನೇ ಎಂಬ ಭಾವನೆಯನ್ನು ನಾವು ನಮ್ಮ ಮನೆಮನೆಗಳಲ್ಲಿ ಕಾಣುತ್ತೇವೆ. ಸ್ಕಂದನನ್ನು ಅಕ್ಕರೆಯಿಂದ ಬೆಳಸಿದ ಪಾರ್ವತಿ, ಬಾಲಕನಾದ ಸ್ಕಂದನಿಗೆ ವೇಲಾಯುಧವನ್ನು ಕೊಟ್ಟು ತಾರಕಾಸುರ ಸಂಹಾರಕ್ಕೆ ಪ್ರೇರೇಪಿಸುತ್ತಾಳೆ. ಬಾಲಕನಾದ ಸ್ಕಂದ ತಾರಕಾಸುರನ ಸಂಹಾರವನ್ನು ಮಾಡಿ ಲೋಕಕಲ್ಯಾಣವನ್ನು ಉಂಟುಮಾಡುತ್ತಾನೆ.
ಈ ಸಂಧರ್ಭದಲ್ಲಿ, ಬೆಂಗಳೂರಿಗರಾದ ನಾವು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರನ್ನು ನೆನಯಲೇ ಬೇಕು. 2008ರಲ್ಲಿ ಪಾಕಿಸ್ತಾನದ ಉಗ್ರವಾದಿಗಳೊಂದಿಗೆ ಮುಂಬೈನಲ್ಲಿ ಹೋರಾಡುತ್ತಾ, ತಮ್ಮ ಪ್ರಾಣವನ್ನೇ ಬಲಿದಾನವಾಗಿ ನೀಡಿದ ಮಹಾವೀರ ಮೇಜರ್ ಸಂದೀಪ್ ಉನ್ನಿಕೃಷ್ಣನ್. ಸಂದೀಪನ ತಂದೆ ಉನ್ನಿಕೃಷ್ಣನ್ ಮತ್ತು ತಾಯಿ ಧನಲಕ್ಷ್ಮೀ ಅವರು. ನಮ್ಮ ಮನೆಗಳಲ್ಲಿ ಒಂದು ಮಾತಿದೆ...... ಮನೆ ಮನೆಗಳಲ್ಲಿ ಭಗತ್ ಸಿಂಗರು ಹುಟ್ಟಲಿ, ಆದರೆ ನಮ್ಮ ಮನೆಯಲ್ಲಿ ಬೇಡ ಎಂದು. ಆದರೆ ಧನಲಕ್ಷ್ಮೀ ಅವರು ಹಾಗೆ ಯೋಚಿಸಲೇ ಇಲ್ಲ. ಹಿಂದೆಮುಂದೆ ಯೋಚಿಸದೆ ತಮ್ಮ ಪುತ್ರನಾದ ಸಂದೀಪನನ್ನು ಭಾರತೀಯ ಸೈನ್ಯಕ್ಕೆ ಕಳುಹಿಸಿದ ಮಹಾತಾಯಿ ಧನಲಕ್ಷ್ಮೀ ಅವರು. ಮಗನ ಬಲಿದಾನದ ಘಟನೆಯ ದುಃಖವನ್ನು ಸಹಿಸಿ ನಮ್ಮೊಡನೆ ಬಾಳುತ್ತಿರುವ ಮಹಾತಾಯಿ ಆಕೆ. ಸಂದೀಪ್ ಉನ್ನಿಕೃಷ್ಣನ್ ಅವರಂತಹ ಸೈನಿಕರ ಬಲಿದಾನದಿಂದಲೇ ನಾವು ನೀವು, ನಮ್ಮ ಭಾರತ ದೇಶದಲ್ಲಿ ಸುರಕ್ಷಿತವಾಗಿದ್ದೇವೆ ಎನ್ನುವುದನ್ನು ನೆನಪಿಸಿಕೊಳ್ಳುವ ಹಬ್ಬವೇ ದಸರಾ ಹಬ್ಬ.
ನವರಾತ್ರಿಯ ಆರನೆಯ ದಿನ ನಾವು ದುರ್ಗಾಮಾತೆಯನ್ನು ಕಾತ್ಯಾಯಿನಿಯ ರೂಪದಲ್ಲಿ ಆರಾಧಿಸುತ್ತೇವೆ. ಕಾತ್ಯಾಯನ ಋಷಿಗಳ ತಪಸ್ಸಿಗೆ ಒಲಿದು ಅವರ ಮಗಳಾಗಿ ಜನಿಸಿದ ದುರ್ಗೆಯನ್ನು ನಾವು ಕಾತ್ಯಾಯಿನಿ ಎಂದು ಕರೆಯುತ್ತೇವೆ. ನವರಾತ್ರಿಯ ಏಳನೆಯ ದಿನ ನಾವು ಪಾರ್ವತಿಯನ್ನು ಕಾಲರಾತ್ರಿಯ ರೂಪದಲ್ಲಿ ಆರಾಧಿಸುತ್ತೇವೆ. ಏಳನೇ ದಿನವೇ ನವರಾತ್ರಿಯ ಸರಸ್ವತಿ ಹಬ್ಬದ ದಿನವೂ ಹೌದು.
ನವರಾತ್ರಿಯ ಎಂಟನೇ ದಿನವೇ ದುರ್ಗಾಷ್ಟಮಿ. ದುರ್ಗೆಯ ಮತ್ತೊಂದು ಹೆಸರೇ ಚಾಮುಂಡೇಶ್ವರಿ. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ್ದು ದುರ್ಗಾಷ್ಟಮಿಯ ಮತ್ತು ಮಹಾ ನವಮಿಯ ನಡುವಿನ ಸಂಧಿಕಾಲದಂದು. ಮಹಿಷಾಸುರನ ಸಂಹಾರವನ್ನು ಮಾಡಿ ಲೋಕಕಲ್ಯಾಣವನ್ನು ಮಾಡಿದ ಪಾರ್ವತಿಯನ್ನೇ ನಾವು ನವಮಮಂ ಸಿದ್ಧಧಾತ್ರೀಚಾ ಎಂದು ಆರಾಧಿಸುತ್ತೇವೆ.
ಈಗ ನಾವು ವಿದ್ಯಾಧಿ ದೇವತೆಯಾದ ಸರಸ್ವತಿಯ ಪ್ರಾರ್ಥನೆಯನ್ನು ಮಾಡೋಣ.
ನಿಮಗೆ ಚೆನ್ನಾಗಿ ಬರುವ ಸರಸ್ವತಿಯ ಹಾಡನ್ನು ಹಾಡಿ
ತಾಯಿ ಕಾಳಿಮಾತೆಯ ಅನುಗ್ರಹದಿಂದ ಖ್ಯಾತಿಯನ್ನು ಪಡೆದ ವ್ಯಕ್ತಿಗಳಲ್ಲಿ ಕವಿರತ್ನ ಕಾಳಿದಾಸ ಎಲ್ಲರಿಗಿಂತಲೂ ಪ್ರಮುಖನು. ಕಾಡು ಕುರುಬ ಜನಾಂಗದಲ್ಲಿ ಜನಿಸಿದ ಕಾಳಿದಾಸ, ಕಾಳಿಮಾತೆಯ ಅನುಗ್ರಹದಿಂದ ಮಹಾಪಂಡಿತನಾಗಿ ರೂಪುಗೊಂಡನು. ಅಭಿಜ್ಞಾನ ಶಾಕುಂತಳಾ, ರಘುವಂಶ, ವಿಕ್ರಮೋರ್ವಶೀಯ, ಕುಮಾರಸಂಭವ ಮುಂತಾದ ಮಹಾ ನಾಟಕಗಳನ್ನು ಸಂಸ್ಕೃತದಲ್ಲಿ ರಚಿಸಿದ ಮಹಾನಾಟಕಕಾರನೇ ನಮ್ಮ ಕಾಳಿದಾಸ. ಕಾಳಿದಾಸ ರಚಿಸಿರುವ ಶ್ಯಾಮಲಾ ದಂಡಕವನ್ನು ಈಗ ಕೇಳೋಣ.
ಮಾಣಿಕ್ಯವೀಣಾ------------------------
ತೆನಾಲಿ ರಾಮಕೃಷ್ಣನ ಹೆಸರನ್ನು ನೀವೆಲ್ಲಾ ಕೇಳಿರುವಿರಿ. ಕೃಷ್ಣದೇವರಾಯರ ಆಸ್ಥಾನದಲ್ಲಿ ವಿದೂಷಕನಾಗಿದ್ದ ತೆನಾಲಿ ರಾಮಕೃಷ್ಣ ಕೂಡ ಕಾಳಿಮಾತೆಯ ಆಶೀರ್ವಾದದಿಂದಲೇ ಘನಪಂಡಿತನಾದವನು. ಒಮ್ಮೆ ತೆನಾಲಿ ರಾಮಕೃಷ್ಣನಿಗೆ ಕಾಳಿಮಾತೆಯ ದರ್ಶನವಾದಾಗ, ತೆನಾಲಿ ರಾಮ, ಆಕೆಯನ್ನು ನೋಡಿ ಗಹಗಹಿಸಿ ನಗಲು ಆರಂಭಿಸುತ್ತಾನೆ. ಕಾಳಿಮಾತೆ ಏಕೆ ನಗುತ್ತಿರುವೆ ಎಂದು ಕೇಳಿದಾಗ, ತೆನಾಲಿ ರಾಮ ಉತ್ತರಿಸುತ್ತಾ 'ಅಮ್ಮಾ, ನಮಗೆ ಒಂದೇ ಮೂಗು ಇದೆ. ನೆಗಡಿಯಾದಾಗ ಎರಡು ಕೈಗಳು ಇರುವುದರಿಂದ, ಹೇಗೋ ಸಂಭಾಳಿಸಿಕೊಳ್ಳುತೇವೆ. ತಾಯಿ, ನಿನಾಗಾದರೋ, ಆರು ಮುಖ, ಆರು ಮೂಗುಗಳಿವೆ, ಇರುವುದು ನಾಲ್ಕೇ ಕೈಗಳು, ನಿನಗೆ ನಿನಗೆ ನೆಗಡಿ ಬಂದಾಗ ಹೇಗೆ ನಿಭಾಯಿಸುವೆಯೋ, ಸಾಕ್ಷಾತ್ ಶಿವನೇ ಬಲ್ಲ' ಎಂದು ಮತ್ತೆ ಜೋರಾಗಿ ನಗುತ್ತಾನೆ. ಆಗ ಕಾಳಿಮಾತೆಗೂ ತುಂಬಾ ನಗುಬರುತ್ತದೆ. ತೆನಾಲಿ ರಾಮನ ಹಾಸ್ಯಪ್ರಜ್ಞೆಯನ್ನು ಮೆಚ್ಚಿದ ಕಾಳಿಮಾತೆ, ತೆನಾಲಿ ರಾಮನಿಗೆ ಹಾಸ್ಯಪ್ರಪಂಚದಲ್ಲೇ ನೀನು ಖ್ಯಾತಿ ಹೊಂದು ಎಂದು ಆಶೀರ್ವದಿಸುತ್ತಾಳೆ. ತೆನಾಲಿ ರಾಮ ಮತ್ತು ಕೃಷ್ಣದೇವರಾಯರ ನಡುವಿನ ಹಾಸ್ಯಪ್ರಸಂಗಗಳನ್ನು ವಿಶ್ವವಿಖ್ಯಾತವಾಗಿರುವುದು ತಮಗೆಲ್ಲಾ ಗೊತ್ತೇ ಗೊತ್ತು.
ದಸರಾ ಎಂದರೆ ಮೈಸೂರು, ಮೈಸೂರು ಎಂದರೆ ದಸರಾ. ದಸರಾ ಆಚರಿಸುವ ಪರಂಪರೆ ಮೊದಲು ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಲ್ಲಿ. ತಾವುಗಳು ಹಂಪಿ ಪ್ರವಾಸಕ್ಕೆ ಹೋದಾಗ ಈಗಲೂ, ಭವ್ಯವಾದ ಮಹಾನವಮಿ ದಿಬ್ಬವನ್ನು ಈಗಲೂ ನೋಡಬಹುದು. ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯರ ಕಾಲದಲ್ಲಿ ಅತ್ಯಂತ ವೈಭವಯುತವಾಗಿತ್ತು. ಅಂದಿನ ಕಾಲದ ಹಂಪಿಯ ದಸರಾ ಎಂದರೆ ವಿಜಯನಗರದ ಅರಸರ ಸೇನಾಬಲ ಪ್ರದರ್ಶನ. ದುರ್ಗಾಪೂಜೆಯೊಡನೆ ಆರಂಭವಾದ ದಸರಾ ವಿಜಯದಶಮಿಯಂದು ಅಂತ್ಯಗೊಳ್ಳುತ್ತಿತ್ತು. ಕೃಷ್ಣದೇವರಾಯರ ಕಾಲದಲ್ಲಿ ಮುತ್ತುರತ್ನಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದರು ಎಂದರೆ ಆಗಿನ ಕಾಲದ ವೈಭವ ಎಷ್ಟಿತ್ತೆಂದು ತಾವುಗಳು ಊಹಿಸಿಕೊಳ್ಳಬಹುದು. ಅಂತಹ ವೈಭವೋಪೇತವಾದ ವಿಜಯನಗರ ಸಾಮ್ರಾಜ್ಯ, ಬಹಮನಿ ಸುಲ್ತಾನರ ಆಕ್ರಮಣದಿಂದ ನಾಶವಾಗಿಹೋಯಿತು. ಅರಮನೆಯೊಳಗಿನ ಸಂಚುಕೋರರು, ಶತ್ರುಗಳೊಂದಿಗೆ ಸೇರಿದ್ದು ವಿಜಯನಗರಕ್ಕೆ ಮಾರಕವಾಯಿತು.
ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಮೈಸೂರು ಅರಸರು, ಅಂದು ಹಂಪಿಯಿಂದ ಚಾಮುಂಡಿಯ ವಿಗ್ರಹವನ್ನು ಮತ್ತು ಅಂಬಾರಿಯನ್ನೂ ರಕ್ಷಿಸಿ ತಂದರು ಎಂದು ಇತಿಹಾಸಕಾರರು ಹೇಳುತ್ತಾರೆ. ಮೈಸೂರು ದಸರಾವನ್ನು ಮೊದಲ ಬಾರಿಗೆ ಆರಂಭಿಸಿದ ಕೀರ್ತಿ ಮೊದಲನೇ ರಾಜ ಒಡೆಯರವರಿಗೆ ಸೇರುತ್ತದೆ. ಅವರು 1610ರಲ್ಲಿ ದಸರಾವನ್ನು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್, 1805ರಲ್ಲಿ ದಸರಾ ಆಚರಣೆಯನ್ನು ಮೈಸೂರಿಗೆ ಸ್ಥಳಾಂತರಿಸಿದರು. ಅಂದಿನ ದಸರಾದಲ್ಲಿ ಚಾಮುಂಡಿಯ ಪೂಜೆ ಮತ್ತು ಆಯುಧ ಪೂಜೆಗಳೇ ಮುಖ್ಯವಾಗಿದ್ದವು. ವಿಜಯದಶಮಿಯ ಶೋಭಾಯಾತ್ರೆಯಂದು, ಮಹಾರಾಜರೇ ಚಿನ್ನದ ಅಂಬಾರಿಯ ಮೇಲೆ ಆಸೀನರಾಗಿರುತ್ತಿದ್ದರು. ಮೈಸೂರು ಅರಮನೆಯಿಂದ ಹೊರಟ ಜಂಬೂ ಸವಾರಿ, ಬನ್ನಿಮಂಟಪ ತಲುಪಿ ಅಂತ್ಯಗೊಳ್ಳುತ್ತಿತ್ತು. ಅಂದಿನ ಕಾಲದ ಮೈಸೂರು ದಸರಾ ವಿಶ್ವವಿಖ್ಯಾತವಾಗಿತ್ತು.
ಭಾರತಕ್ಕೆ ಸ್ವಾತಂತ್ರ್ಯ ಬಂದನಂತರ ಮೈಸೂರು ಅರಸರ ಆಡಳಿತ ಅಂತ್ಯಗೊಂಡಿತು. 1971ರಿಂದ ಆನೆಯ ಅಂಬಾರಿಯ ಮೇಲೆ ಚಾಮುಂಡಿಯ ವಿಗ್ರಹವನ್ನು ಕೂರಿಸಿ ದಸರಾ ಮೆರವಣಿಗೆಯನ್ನು ನಡೆಸಲಾಗುತ್ತಿದೆ. ಆದರೆ ಚಾಮುಂಡಿಯ ಮೇಲಿನ ಭಕ್ತಿ ಮತ್ತು ದಸರಾವನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ.
ಈಗ ಮತ್ತೊಮ್ಮೆ ದೇವಿಯ ಪ್ರಾರ್ಥನೆಯನ್ನು ಮಾಡೋಣ.
ಯಾವ ಹಾಡು ಎಂಬುದನ್ನು ನೀವೇ ಆರಿಸಿಕೊಳ್ಳಿ.
ಮಹಾವೀರನಾದ ಶ್ರೀರಾಮ, ಲೋಕಕಂಟಕನಾಗಿದ್ದ ರಾವಣನನ್ನು ಸಂಹಾರ ಮಾಡಿದ್ದೂ ವಿಜಯದಶಮಿಯಂದೇ. ಆ ಕತೆಯನ್ನೀಗ ಕೇಳೋಣ.
ಸೀತಾನೇಷ್ವಣೆಯ ಕತೆಯಿಂದ ಆರಂಭಿಸಿ.