೧) ಓಂ ಗಣೇಶಯನಮಃ
ಓಂ ದಾಸ ಶ್ರೇಷ್ಠಯನಮಃ
ಓಂ ಪುರಂದರ ಗುರುವೇನಮಃ (ಸ, ಪ, ಸ ಧಾಟಿಯಲ್ಲಿ)
*******
ಶ್ರೀ ಪುರಂದರ ದಾಸರು ಎಂಬ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮಗಳ ಇಂದಿನ ಪ್ರಯತ್ನಕ್ಕೆ ತಮ್ಮಂಥ ಗುರುಹಿರಿಯರ ಆಶೀರ್ವಾದವು ಅತಿ ಮುಖ್ಯವಾದದ್ದು. ಹರಿಕಥೆಯ ಆರಂಭವಾವನ್ನು ಶ್ರೀ ಪುರಂದರದಾಸರ ಸ್ಮರಣೆಯೊಂದಿಗೆ ಮಾಡೋಣ.
*********
ದಾಸರೆಂದರೆ ಪುರಂದರ ದಾಸರಯ್ಯಾ
*********
ನಮ್ಮ ಭಾರತ ದೇಶವನ್ನು ಕಟ್ಟಿ ಬೆಳಸಿದವರು ದಾಸ ಶ್ರೇಷ್ಠರುಗಳು. ದಕ್ಷಿಣದಲ್ಲಿ ಪುರಂದರದಾಸರು, ತ್ಯಾಗರಾಜರು, ಉತ್ತರದಲ್ಲಿ ತುಳಸಿದಾಸರು, ಮೀರಾಬಾಯಿ, ಪಶ್ಚಿಮದಲ್ಲಿ ಸಂತ ತುಕಾರಾಂ, ಏಕನಾಥರು, ಮತ್ತು ಪೂರ್ವದಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು ದಾಸ ಶ್ರೇಷ್ಠರುಗಳ ಸಾಲಿನಲ್ಲಿ ಪ್ರಮುಖರು. ಆದರೆ ನಾವುಗಳು ಈಗ ಈ ದಾಸ ಶ್ರೇಷ್ಠರುಗಳ ವಾಣಿಯನ್ನು ಮರೆತಿದ್ದೇವೆ. ಪ್ರಪಂಚ ವಿನಾಶದತ್ತ ಸಾಗುತ್ತಿದೆಯೋ ಎಂದೆನಿಸುತ್ತಿದೆ. ಪ್ರಪಂಚ ರಶಿಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧಗಳ ಭೀತಿಯಲ್ಲಿ ತತ್ತರಿಸುತ್ತಿದೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದಿರುವ ಹಿಂಸಾಚಾರ ನಮ್ಮನ್ನು ಆತಂಕದತ್ತ ತಳ್ಳಿದೆ. ನಮ್ಮ ಜನಗಳು ಸಮಚಿತ್ತ ಮತ್ತು ಸಮತಾಭಾವಗಳನ್ನು ಮರೆಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಮಗಿರುವ ಏಕೈಕ ಸನ್ಮಾರ್ಗವೆಂದರೆ ನಮ್ಮ ದಾಸರುಗಳು ತೋರಿಸಿದ ಮಾರ್ಗ. ಆದುದರಿಂದ ಇಂದಿನ ಪುರಂದರ ಆರಾಧನೆಯ ಈ ಕಾರ್ಯಕ್ರಮ ಎಂದಿಗಿಂತಲೂ ಹೆಚ್ಚು ಅವಶ್ಯಕವಾದದ್ದು ಎಂದರೆ ಆಶ್ಚರ್ಯವೇನಿಲ್ಲ.
***********
ಪುರಂದರ ದಾಸರು ಜನಿಸಿದ್ದು ಪುಣೆ ಸಮೀಪದ ಪುರಂದರಗಡದಲ್ಲಿ ಎನ್ನುತ್ತದೆ ಒಂದು ಇತಿಹಾಸ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಪುರಂದರದಾಸರು ಜನಿಸಿದ್ದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಅರಗ ಗ್ರಾಮ ಎಂದು ತಿಳಿದುಬಂದಿದೆ. ಪುರಂದರದಾಸರ ಜೀವನ ಮತ್ತು ಸಾಧನೆಯ ಆಡಂಬೋಲವಾಗಿದ್ದು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಇಂದಿನ ಹಂಪಿ ಪ್ರದೇಶ.
ಪುರಂದರ ದಸರಾ ಪೂರ್ವಾಶ್ರಮದ ಹೆಸರು ಸೀನಪ್ಪ ನಾಯಕ. ಇಹಲೋಕದ ಲೋಭ-ಮೋಹಗಳ ದಾಸನಾಗಿದ್ದ ಸೀನಪ್ಪ ನಾಯಕ ವಜ್ರ-ವೈಡೂರ್ಯಗಳ ವ್ಯಾಪಾರ. ಮುಗ್ಧ ಜನರುಗಳನ್ನು ವಂಚಿಸಿ ಅಪಾರ ಹಣವನ್ನು ಗಳಿಸಿದ್ದ ಸೀನಪ್ಪ ನಾಯಕ ನವಕೋಟಿ ನಾರಾಯಣನೆಂದೇ ಹೆಸರುವಾಸಿಯಾಗಿದ್ದವನು. 'ಎಂಜಲು ಕೈಯಲ್ಲಿ ಕಾಗೆ ಹೊಡೆಯುತ್ತಿತ್ತಿಲ್ಲ' ಎಂಬ ಗಾದೆಯು ಕಡುಜಿಪುಣನಾದ ಸೀನಪ್ಪ ನಾಯಕನನ್ನು ನೋಡಿ ಸೃಷ್ಟಿಸಿದ ಗಾದೆಯೇ ಆಗಿತ್ತು. ದೇವರಪೂಜೆಗೆ ಹಚ್ಚಿದ್ದ ಊದಿನ ಕಡ್ಡಿಯನ್ನು, ಪೂಜೆಯನಂತರ ಆರಿಸಿ ನಾಳಿನ ಪೂಜೆಗೆ ಇಟ್ಟುಕೊಳ್ಳುವಷ್ಟು ಜಿಪುಣನಾಗಿದ್ದವನು ಸೀನಪ್ಪ ನಾಯಕ. ಬೇಳೆ ಹೆಚ್ಚು ಬೇಯಿಸಿ ಸಾರು-ಹುಳಿಗಳನ್ನು ಮಾಡಿದರೆ, ಬೇಗನೆ ಹಳಸಿಹೋಗುತ್ತದೆ, ಬೇಳೆಯನ್ನು ಕಮ್ಮಿ ಬೇಯಿಸಿದರೆ ಸಾರು-ಹುಳಿಗಳನ್ನು ನಾಲ್ಕಾರು ದಿನ ಇಟ್ಟುಕೊಂಡು ತಿನ್ನಬಹುದು ಎಂದು ಹೆಂಡತಿಗೆ ಮತ್ತೆ ಮತ್ತೆ ಭೋದಿಸುತ್ತಿದ್ದ ಜಿಪುಣಾಗ್ರೇಸರ ಸೀನಪ್ಪ ನಾಯಕ.
ಜಿಪುಣ ಸೀನಪ್ಪ ನಾಯಕನ ಹೆಂಡತಿಯಾದ ಸರಸ್ವತಿಯಮ್ಮ ಮಹಾನ್ ದೈವಭಕ್ತೆ. ದಿನ ನಿತ್ಯವನ್ನು ನಾರಾಯಣನ ಸ್ಮರಣೆಯಲ್ಲೇ ಕಳೆಯುತ್ತಿದ್ದವಳು.
********************
ನಾರಾಯಣ ನಿನ್ನ ನಾಮದ (ಹಾಡು)
*********************
ಪತಿಯ ಕಣ್ಣುತಪ್ಪಿಸಿ ದಾನ-ಧರ್ಮಗಳನ್ನು ಮಾಡುತ್ತಿದ್ದ ಧಾರಾಳಿ ಸರಸ್ವತಿ. ಪತಿಗೆ ಸನ್ಮಾರ್ಗವನ್ನು ತೋರಿಸು ಎಂದು ಪ್ರತಿನಿತ್ಯ ಬೇಡುತ್ತಿದ್ದವಳು ಸರಸ್ವತಿ.