Friday, 19 November 2021

ಬರಲಿದೆ ಎಲ್.ಐ.ಸಿ.ಯ ಭಾರಿ ಐ.ಪಿ.ಓ.!


1.India’s biggest ever IPO to be launched by LIC, during next quarter. 

2.LIC’s IPO has potential to expand the Indian share market, says LIC chairman Shri. M R Kumar. 

3.As per reliable reports, LIC is valued at 10 lakh crores of rupees and is among the most valuable companies of India. 

4.LIC policies enjoy sovereign guarantee. But since beginning, LIC has never resorted to the use of this privilege. This shows the strength of LIC, says it’s chairman. 

5.Even after 2 decades of privatisation of life insurance sector, LIC is leading with 70% market share. 

6.Allotment quota likely for LIC policy holders. 

7. Premium may be quite high. But investors interest is expected to be upbeat. 

8. It is hoped that investors will remain cautious. Memory of the pains of investors in the recently concluded paytm ipo can’t be forgotten.


ಬರಲಿದೆ ಎಲ್.ಐ.ಸಿ.ಯ ಭಾರಿ ಐ.ಪಿ.ಓ.!

ಭಾರತೀಯ ಷೇರು ಮಾರುಕಟ್ಟೆಯ ಹೂಡಿಕೆದಾರರಿಗೀಗ ಪರ್ವ ಕಾಲ. ೨೦೨೧ರ ಸೆಪ್ಟೆಂಬರ್ ೨೪ರಂದು ೬೦,೦೦೦ಕ್ಕೇರಿದ ಸೆನ್ಸೆಕ್ಸ್ ಸೂಚ್ಯಂಕ, ಈಗಲೂ ತನ್ನ ಮಟ್ಟವನ್ನು ಕಾಪಾಡಿಕೊಂಡಿದ್ದು ಸ್ಥಿರ ಪ್ರದರ್ಶನವನ್ನು ನೀಡುತ್ತಿದೆ.  ಕಳೆದ ೨೦ ತಿಂಗಳುಗಳಿಂದ ಕೋವಿಡ್ನಿಂದ ತತ್ತರಿಸುತ್ತಿರುವ ಇಡೀ ವಿಶ್ವದಲ್ಲೇ, ಭಾರತದ ಷೇರು ಮಾರುಕಟ್ಟೆಯ ಪ್ರದರ್ಶನ ಉತ್ತಮವೆಂಬುದು ವಿತ್ತ ತಜ್ಞರ ಅಭಿಪ್ರಾಯವಾಗಿದೆ. ಭಾರತದ ಕೋವಿಡ್ ಲಸಿಕೆ ಅಭಿಯಾನ ವ್ಯಾಪಕವಾದ ಯಶಸ್ಸನ್ನು ಕಂಡಿದ್ದು, ಕೋವಿಡ್ ಹರಡುವಿಕೆ ಸಾಕಷ್ಟು ನಿಯಂತ್ರಣದಲ್ಲಿದೆ. ಹಲವಾರು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಕೋವಿಡ್ ಪೂರ್ವ ಸ್ಥಿತಿ ಮರಳುವ ಭರವಸೆ ಮೂಡುತ್ತಿದೆ. 

ಇಂತಹ ಆಶಾದಾಯಕ ಪರಿಸ್ಥಿತಿಯಲ್ಲಿ, ಭಾರತ ಸರಕಾರ ತನ್ನ ಸ್ವಾಮ್ಯದ ನವರತ್ನಗಳಲ್ಲೊಂದಾದ ಎಲ್.ಐ.ಸಿ.ಯ ಷೇರುಗಳ ಪ್ರಥಮ ಮಾರಾಟ(ಐ.ಪಿ.ಓ.)ದ ಅಭಿಯಾನಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಈ  ಯೋಜನೆಯನ್ನು, 'ಭಾರತದ ಅತ್ಯಂತ ದೊಡ್ಡ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ' ಎಂದೇ ಬಣ್ಣಿಸಲಾಗುತ್ತಿದೆ. 

'ಜೀವವೆಂಬ ಜ್ಯೋತಿಯನ್ನು ಕಾಪಾಡುತ್ತಿರುವ ಕೈಗಳ' ಸಂಕೇತ (ಲೋಗೊ)ದೊಂದಿಗೆ ಜನಪ್ರಿಯವಾಗಿರುವ ಎಲ್.ಐ.ಸಿ. ಸಂಸ್ಥೆ, ೧೯೫೬ರಲ್ಲಿ ಸ್ಥಾಪಿತವಾಯಿತು. 'ಯೋಗಕ್ಷೇಮಂ ವಹಾಮ್ಯಹಂ' ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ಈ ಸಂಸ್ಥೆ, ಕೋಟ್ಯಾಂತರ ಭಾರತೀಯರಲ್ಲಿ  'ಜೀವನದೊಂದಿಗಿನ  ಮತ್ತು ಜೀವನದನಂತರದ' ಭರವಸೆಯನ್ನು ಮೂಡಿಸಿರುವುದು ಸುಳ್ಳಲ್ಲ.  

ಭಾರತದ ಯಾವುದೇ ಮೂಲೆಯ ಮುಗ್ಧ ವ್ಯಕ್ತಿಯನ್ನು ಕೇಳಿ. 'ಸ್ವಾಮಿ, ತಾವು ಜೀವವಿಮೆ ಮಾಡಿಸಿದ್ದೀರಾ? "ಇಲ್ಲ"ವೆಂಬ ಉತ್ತರ ಬರಬಹುದು. ಅದೇ ವ್ಯಕ್ತಿಯನ್ನು ತಾವು ಎಲ್.ಐ.ಸಿ. ಮಾಡಿಸಿದ್ದೀರಾ ಎಂದು ಕೇಳಿದರೆ, ಥಟ್ಟನೆ "ಹೌದು" ಎಂಬ ಉತ್ತರ ಬಂದರೂ  ಆಶ್ಚರ್ಯವಿಲ್ಲ.' ಕಳೆದ ೬೫ ವರ್ಷಗಳಲ್ಲಿ, 'ಜೀವವಿಮೆ ಎಂದರೆ ಎಲ್.ಐ.ಸಿ.' ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿರುವುದಂತೂ ಎಲ್ಲರೂ ಅನುಮೋದಿಸುತ್ತಿರುವ ವಿಷಯ.  

ಭಾರತೀಯ ಜೀವವಿಮಾ ಸಂಸ್ಥೆ (ಎಲ್.ಐ.ಸಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ.), ಭಾರತದ ಆರ್ಥಿಕ ಕ್ಷೇತ್ರದಲ್ಲಿ ರಾರಾಜಿಸುತ್ತಿರುವ, ಸಂಪೂರ್ಣ ಸರಕಾರಿ ಸ್ವಾಮ್ಯದ  ಎರಡು ಭಾರಿ ಸಂಸ್ಥೆಗಳು. ಜಾಗತಿಕ ಮಟ್ಟದಲ್ಲೂ ಈ ಎರಡೂ ಸಂಸ್ಥೆಗಳಿಗೆ ಮಾನ್ಯತೆ ದೊರೆತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಸುಮಾರು ೨೫೦ ವಿವಿಧ ರೀತಿಯ ಸೇವೆಗಳು, ೩೦ ಕೋಟಿ ಜೀವವಿಮಾ ಪಾಲಿಸಿಗಳು, ೧೨ ಲಕ್ಷದಷ್ಟು ಏಜಂಟರು, ಒಂದು ಲಕ್ಷದಷ್ಟು ಉದ್ಯೋಗಿಗಳು, ೨೦೦೦ದಷ್ಟು ಶಾಖೆಗಳು ಮತ್ತು ೧೫೦೦ದಷ್ಟು ಸ್ಯಾಟಲೈಟ್ ಕಚೇರಿಗಳನ್ನೂ ಹೊಂದಿರುವ ಎಲ್.ಐ.ಸಿ.ಯೊಂದು ಮಾಹಾನ್ ವಿಮಾ ಸಂಸ್ಥೆಯೇ ಸರಿ. ಎಲ್.ಐ.ಸಿ. ಹೌಸಿಂಗ್ ಫೈನಾನ್ಸ್, ಎಲ್.ಐ.ಸಿ. ಮ್ಯೂಚುಯಲ್ ಫಂಡ್, ಐ.ಡಿ.ಬಿ.ಐ. ಬ್ಯಾಂಕ್ ಮುಂತಾದ ಅಂಗ ಸಂಸ್ಥೆಗಳನ್ನೂ ಹೊಂದಿರುವ ಎಲ್.ಐ.ಸಿ., ಬೇರೆ ಬೇರೆ ದೇಶಗಳಲ್ಲೂ ತನ್ನ ವಹಿವಾಟನ್ನು ನಡೆಸುತ್ತಿದೆ. 

ಕೋವಿಡ್-೧೯ ಮಹಾಮಾರಿಯ ದಾಳಿಗೆ ಕಳೆದ ೨೦ ತಿಂಗಳುಗಳಿಂದ ತತ್ತರಿಸಿರುವ ನಮ್ಮ ದೇಶ, ಭಾರಿ ಸಂಖ್ಯೆಯ ಸಾವು-ನೋವುಗಳನ್ನು ಕಂಡಿದೆ. ಅಂತಹ ಕೋವಿಡ್ ಸಾವುಗಳ ಜೀವವಿಮಾ ಕ್ಲೇಮ್ ಗಳ ನಿರ್ವಹಣೆಯನ್ನು ಎಲ್.ಐ.ಸಿ. ತ್ವರಿತವಾಗಿ ಮಾಡಿ ಮೆಚ್ಚುಗೆ ಗಳಿಸಿದೆ. ಕೋವಿಡ್ ನಿಂದ ಮೃತಪಟ್ಟವರ ಕುಟುಂಬದ ವಿವರಗಳನ್ನು, ಆಯಾ ಜಿಲ್ಲಾಧಿಕಾರಿಗಳಿಂದ ತರಿಸಿಕೊಳ್ಳುವ ವ್ಯವಸ್ಥೆಯನ್ನು ಎಲ್.ಐ.ಸಿ. ಮಾಡಿತ್ತು.  ಮೃತರ ಕುಟುಂಬಗಳು ಸಲ್ಲಿಸಿದ  ೩೮,೩೦೪ ಕೋವಿಡ್  ಕ್ಲೈಮ್ಸ್ ನ ಮೊತ್ತ                        ರು. ೧,೦೬೨. ೩೭ಕೋಟಿಗಳಷ್ಟಿತ್ತು. ಅವುಗಳ ಪೈಕಿ ಸಂಸ್ಥೆ  ೩೮,೨೯೦ ಕ್ಲೇಮ್ ಗಳನ್ನು ಸಂಸ್ಥೆ  ಅನುಮೋದಿಸಿದ್ದು, ರು. ೧೦೬೧. ೯೧ ಕೋಟಿಗಳನ್ನು ವಿತರಿಸಿದೆ. ಇದರಿಂದ ಎಲ್.ಐ.ಸಿ. ಯ ಬಗ್ಗೆ ಸಾರ್ವಜನಿಕರ ವಿಶ್ವಾಸ ಹೆಚ್ಚಿ, ಸಂಸ್ಥೆಯು ತನ್ನ ವಹಿವಾಟಿನಲ್ಲಿ ಭಾರಿ ವೃದ್ಧಿಯನ್ನು ಕಂಡಿದೆ. 

ಅಂತಹ ಮಾಹಾನ್ ಸಂಸ್ಥೆಯಾದ, ಭಾರತ ಸರಕಾರದ ಸ್ವಾಮ್ಯದ ಎಲ್.ಐ.ಸಿ.ಯ ಷೇರುಗಳನ್ನು ಪ್ರಥಮವಾಗಿ ಸಾರ್ವಜನಿಕ ಮಾರಾಟಕ್ಕೆ ನೀಡುತ್ತಿರುವುದು ಭಾರತದಲ್ಲೇ ಏಕೆ, ಇಡೀ ವಿಶ್ವದ ಷೇರು ಮಾರುಕಟ್ಟೆಯಲ್ಲೇ ಸಂಚಲನವನ್ನುಂಟು ಮಾಡಿದೆ.   ಭಾರತ ಸರಕಾರದ ನಿರ್ಣಯಗಳ ಪ್ರಕಾರ, ಸುಮಾರು ಒಂದು ವರ್ಷಗಳ ಹಿಂದೆಯೇ, ಈ ಪ್ರಥಮ ಷೇರು ಮಾರಾಟ ಜರುಗಬೇಕಿತ್ತು. ಕೋವಿಡ್-೧೯ರ ಕಾರಣದಿಂದ, ಷೇರುಗಳ ಮಾರಾಟದ ಪ್ರಕ್ರಿಯೆ, ಒಂದು ವರ್ಷ ತಡವಾಗಿ ಹೂಡಿಕೆದಾರರ ಮುಂದೆ ಬರುತ್ತಿದೆ. ಎಲ್ಲಾ ಸಿದ್ಧತೆಗಳು ಬಹುತೇಕ ಮುಗಿದಿದ್ದು, ಮುಂದಿನ ತ್ರೈಮಾಸಿಕ(ಜನವರಿ-ಮಾರ್ಚ್ ೨೦೨೨)ದ ಸಮಯದಲ್ಲಿ, ಎಲ್.ಐ.ಸಿ. ಷೇರುಗಳು ಮಾರುಕಟ್ಟೆಗೆ ಬರಬಹುದೆಂಬ ನೀರೀಕ್ಷೆಇದೆ. 

 ಜೀವ ವಿಮಾ ಕ್ಷೇತ್ರ, ಎರಡು ದಶಕಗಳ ಹಿಂದೆಯೇ ಖಾಸಗೀಕರಣ ಪ್ರಕ್ರಿಯೆಗೆ ಒಳಪಟ್ಟಿದೆ. ವಿದೇಶಿ ವಿಮಾ ಸಂಸ್ಥೆಗಳು ಸೇರಿದಂತೆ ಐ.ಸಿ.ಐ.ಸಿ.ಐ., ಎಚ್.ಡಿ.ಎಫ್.ಸಿ. ಮುಂತಾದ ಮಹಾನ್ ಖಾಸಗಿ ಜೀವ ವಿಮಾ ಸಂಸ್ಥೆಗಳು ಇಂದು ಭಾರತದಲ್ಲಿ ವಹಿವಾಟನ್ನು ಜೋರಾಗೆ ನಡೆಸುತ್ತಿದ್ದರೂ, ಎಲ್.ಐ.ಸಿ. ಸಂಸ್ಥೆ ಭಾರತದ ವಹಿವಾಟಿನ ೭೦%ರಷ್ಟರ ಸಿಂಹಪಾಲಿನೊಂದಿಗೆ  ತನ್ನ ಅಗ್ರಾ ಸ್ಥಾನವನ್ನು ಈಗಲೂ ಕಾಯ್ದುಕೊಂಡಿದೆ. ಭಾರತದ  ವಿತ್ತ ಕ್ಷೇತ್ರದಲ್ಲಿ ಶಿಖರ ಸ್ಥಾನವನ್ನು ಅಲಂಕರಿಸಿರುವ  ಎಲ್.ಐ.ಸಿ. ಸಂಸ್ಥೆಯ ಆಸ್ತಿಗಳ  ಮೌಲ್ಯಗಳ ನಿರ್ಧಾರ ಮಾಡುವುದೇ ಒಂದು ಸವಾಲಾಗಿದೆ. ಎಲ್.ಐ.ಸಿ. ಸಾರ್ವಜನಿಕರಿಗೆ ವಿತರಿಸಿರುವ  ೩೦ ಕೋಟಿ ಪಾಲಿಸಿಗಳ ಸಾಧಕ-ಬಾಧಕಗಳನ್ನು ಅಂದಾಜಿಸುವುದೇ ಒಂದು ಕ್ಲಿಷ್ಟ ಪ್ರಕ್ರಿಯೆಯಾಗಿದೆ. ಜೊತೆಗೆ ಸಂಸ್ಥೆಯ ೨೦೦೦ ಶಾಖೆಗಳಲ್ಲಿರುವ ಸ್ಥಿರಾಸ್ತಿಗಳ ಮೌಲ್ಯ ಮಾಪನ ಕೂಡ ನಡೆಯಬೇಕಾಗಿದೆ.  ಈ ಎಲ್ಲಾ ಮೌಲ್ಯ ಮಾಪನಗಳೂ ಬಹುತೇಕ ಮುಗಿದಿದ್ದು ಎಲ್.ಐ.ಸಿ. ಸುಮಾರು ೧೦ ಲಕ್ಷ ಕೋಟಿಗಳಷ್ಟರ ಮೌಲ್ಯವನ್ನು ಹೊಂದಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ  ಎಲ್.ಐ.ಸಿ.ಯ ಷೇರುಗಳನ್ನು ಖರೀದಿಸಲು, 'ನಾ ಮುಂದು, ತಾ ಮುಂದು' ಎಂದು ಹೂಡಿಕೆದಾರರು ತುದಿಗಾಲಲ್ಲಿ ನಿಂತಿದ್ದಾರೆ.

ಮೇಲಾಗಿ ಎಲ್.ಐ.ಸಿ. ಸಂಸ್ಥೆಯ ಜೀವವಿಮಾ ಪಾಲಸಿಗಳು ಸರಕಾರಿ ಖಾತರಿಯನ್ನು (ಸಾವರಿನ್ ಗ್ಯಾರಂಟಿ) ಹೊಂದಿರುತ್ತವೆ.  ಬೇರ್ಯಾವ ಜೀವ ವಿಮಾ  ಸಂಸ್ಥೆಯ ಪಾಲಿಸಿಗಳಿಗೂ ಈ ಸೌಲಭ್ಯವಿರುವುದಿಲ್ಲ. ಅದೇ ಎಲ್.ಐ.ಸಿ. ಪಾಲಸಿಗಳ ಮಾರಾಟಕ್ಕಿರುವ ವಿಶೇಷ ಬಲ (U.S.P.). ಆದರೆ ಈವರೆಗೆ ಸಂಸ್ಥೆ, ಸರಕಾರಿ  ಗ್ಯಾರಂಟಿಯ ನೆರವನ್ನು ಪಡೆಯದಿರುವುದು ಸಂಸ್ಥೆಯ ಗಟ್ಟಿತನಕ್ಕೆ ಸಾಕ್ಷಿ ಎನ್ನುತ್ತಾರೆ ಎಲ್.ಐ.ಸಿ.ಯ ಇಂದಿನ ಛೇರ್ಮನ್ ರಾದಂತಹ ಶ್ರೀ. ಎಂ.ಆರ್.ಕುಮಾರ್.  ಅವರು ಮುಂದುವರೆದು ಮಾತನಾಡುತ್ತಾ, 'ಎಲ್.ಐ.ಸಿ.ಯಲ್ಲಿ ಸುಮಾರು ೨೫೦ ದಶಲಕ್ಷ  ಪಾಲಿಸಿದಾರರಿದ್ದಾರೆ. ಆದರೆ ಈವರೆಗೆ, ಷೇರುಗಳ ವಹಿವಾಟಿನಲ್ಲಿ ತೊಡಗಲು ಬೇಕಾಗಿರುವ ಡಿಮ್ಯಾಟ್ ಖಾತೆಗಳನ್ನು ಹೊಂದಿರುವವರ ಸಂಖ್ಯೆ ೬೦ ದಶಲಕ್ಷ ಮಾತ್ರ. ಎಲ್.ಐ.ಸಿ.ಯ ಗ್ರಾಹಕರಿಗಳಿಗೂ ಕೆಲವು ಸಂಖ್ಯೆಯ ಷೇರುಗಳನ್ನು ಕಾದಿರಿಸುವ ಸಾಧ್ಯತೆ ಇರುವುದರಿಂದ, ಅವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆದು, ಷೇರು ಮಾರುಕಟ್ಟೆಗೆ ಕಾಲಿಡಲಿದ್ದಾರೆ. ಅಂತಹವರು ಎಲ್.ಐ.ಸಿ. ಷೇರುಗಳಿಗೆ ಅರ್ಜಿಯನ್ನು ಸಲ್ಲಿಸಿ ಸುಮ್ಮನೆ ಕೂರುವುದಿಲ್ಲ. ಬೇರೆ ಬೇರೆ ಷೇರುಗಳನ್ನು ಅವರುಗಳು ಖರೀದಿಸಲು ಮುಂದಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಎಲ್.ಐ.ಸಿ.ಯ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ, ಭಾರತದ ಷೇರು ಮಾರುಕಟ್ಟೆಯ ವಿಸ್ತರಣೆಯಲ್ಲಿ ದೊಡ್ಡದೊಂದು ಕ್ರಾಂತಿಯನ್ನೇ ಉಂಟುಮಾಡಲಿದೆ' ಎಂದಿದ್ದಾರೆ. 

೧೯೯೩ರಲ್ಲಿ ನಡೆದ ಸರಕಾರಿ ಸ್ವಾಮ್ಯದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಐ.ಪಿ.ಓ., ಭಾರಿ  ಯಶಸ್ಸನ್ನು ಕಂಡಿತ್ತು. ೧೦ ರು.ಗಳ ಬ್ಯಾಂಕಿನ ಷೇರನ್ನು ಕೇವಲ ರು. ೧೦೦ ಗಳಿಗೆ ನೀಡಿತ್ತು ಸರಕಾರ. ಎರಡು-ಮೂರು ವಾರಗಳ ಸಮಯದಲ್ಲೇ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಆ ಷೇರು ರೂ. ೨೫೦ಕ್ಕೆ ಮಾರಾಟವಾಗಿದ್ದು ಈಗ ಇತಿಹಾಸ.  ಇಂದು ೧೯೯೩ರ ಒಂದು ಸ್ಟೇಟ್ ಬ್ಯಾಂಕ್ ಷೇರು, ಈಗ  ರು. ೧ರ ಹತ್ತು ಷೇರುಗಳಾಗಿದ್ದು, ಪ್ರತಿ ರು. ೧ರ ಷೇರಿನ ಬೆಲೆ ಸುಮಾರು ರು. ೫೦೦ರಷ್ಟಿದೆ. ಅಂದರೆ ಸ್ಟೇಟ್ ಬ್ಯಾಂಕ್ ಷೇರಿನಲ್ಲಿ, ೧೯೯೩ರಲ್ಲಿ ಹೂಡಿದ್ದ ರು. ೧೦,೦೦೦ದ, ಬೆಲೆಯಿಂದು ರು. ೫,೦೦,೦೦ (ರು. ಐದು ಲಕ್ಷ - ಕಳೆದ ೨೮ ವರ್ಷಗಳಲ್ಲಿ ವಿತರಿಸಲಾಗಿರುವ ಡಿವಿಡೆಂಡ್ ಮತ್ತು ಬೋನಸ್ ಷೇರುಗಳನ್ನು ಹೊರೆತುಪಡಿಸಿ)ದಷ್ಟಿದೆ.  ಹಾಗಾಗಿ ಎಲ್.ಐ.ಸಿ.ಯ ಐ.ಪಿ.ಓ.ಗೆ ಭಾರಿ ಪ್ರತಿಕ್ರಿಯೆ ಕಂಡುಬರುವದರಲ್ಲಿ ಅನುಮಾನವಿಲ್ಲ ಎಂಬುದು ತಜ್ಞರ ಭವಿಷ್ಯವಾಣಿಯಾಗಿದೆ. 

ಏನೇ ಆದರೂ ನಾವುಗಳು ಕೆಲವು ಎಚ್ಚರಿಕೆಯ ಮಾತಗಳನ್ನು ಮರೆಯುವಂತಿಲ್ಲ. ಎಲ್.ಐ.ಸಿ.ಯಂತಹ ಪ್ರತಿಷ್ಠಿತ ಕಂಪನಿಗಳ ಷೇರುಗಳಿಗೆ ಭಾರಿ ಬೇಡಿಕೆ ಇರುತ್ತದೆ. ಐ.ಪಿ.ಓ.ಗೆ,  ಅವಶ್ಯಕತೆಗಿಂತ ೧೦೦ ಪಟ್ಟು ಹೆಚ್ಚು ಅರ್ಜಿದಾರರು, ಹಣವನ್ನು ಪಾವತಿಸಿದರೂ ಆಶ್ಚರ್ಯವಿಲ್ಲ. ಹಾಗಾಗಿ ಷೇರುಗಳಿಗೆ ಅರ್ಜಿ ಹಾಕಿದವರಿಗೆಲ್ಲಾ, ಷೇರುಗಳು ದೊರೆಯುತ್ತವೆಂಬ ಖಾತರಿಯೇನಿಲ್ಲ.    ಷೇರುಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದ್ದದೇ. ಮೊನ್ನೆಯಿನ್ನೂ 'ಪೇಟಿಎಂ' ಸಂಸ್ಥೆಯ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ ಸಂಪನ್ನಗೊಂಡಿದ್ದು, ಅದನ್ನು ಭಾರತದ ಈವರೆಗಿನ ಅತ್ಯಂತ ದೊಡ್ಡ ಐ.ಪಿ.ಓ. ಎಂದೇ ಬಣ್ಣಿಸಲಾಗಿತ್ತು. ರು. ೧ರ ಷೇರೊಂದನ್ನು,  ರೂ. ೨೧೫೦ರ ಬೆಲೆಗೆ ಮಾರಾಟ ಮಾಡಿದ್ದ ಆ ಕಂಪನಿಯ  ಷೇರುಗಳು, ಕೆಲವೇ ದಿನಗಳಲ್ಲಿ ಲಿಸ್ಟ್ ಆಗಿ ಮಾರುಕಟ್ಟೆಗೆ ಬಂದಾಗ ಅದರ ಬೆಲೆ ರು. ೧೫೬೪. ೧೫ ಮಾತ್ರವಾಗಿ, ಹೂಡಿಕೆದಾರರು ೨೭% ನಷ್ಟವನ್ನು ಅನುಭವಿಸಿದರು. ಮುಂದಿನ ದಿನಗಳಲ್ಲಿ ಅದೇ ಷೇರಿನ ಬೆಲೆ ಭಾರೀ ಹೆಚ್ಚಳವನ್ನು ದಾಖಲಿಸಿಲೂ ಬಹುದು. 

ಎಲ್.ಐ.ಸಿ. ಸಂಸ್ಥೆಯ  ಮೌಲ್ಯ ಸುಮಾರು ೧೦ ಲಕ್ಷ ಕೋಟಿಯಷ್ಟಿದೆ ಎಂದು ಅನುಮಾನಿಸಲಾಗಿದೆ. ಹಾಗಾಗಿ ಸಂಸ್ಥೆಯ ರು. ೧ರ ಷೇರಿಗೆ, ರು. ೧೦೦೦ ದಷ್ಟರ, ಅಥವಾ ಅದಕ್ಕೂ ಹೆಚ್ಚಿನ  ಬೆಲೆ ನಿಗದಿಯಾದರೂ ಆಶ್ಚರ್ಯವಿಲ್ಲ ಎಂಬುದು ತಜ್ಞರ ಒಂದು ಅಂದಾಜು. ಷೇರಿನ ವಿತರಣೆಯ ಪ್ರಕ್ರಿಯೆ ಒಂದೆರಡು ವಾರದಲ್ಲೇ ಮುಗಿದು, ಎಲ್.ಐ.ಸಿ.ಯ ಷೇರುಗಳು ಮುಕ್ತ ಮಾರುಕಟ್ಟೆಗೆ ಬಂದಾಗ, ಅದರ ಬೆಲೆ ಒಮ್ಮಲೇ ದುಪ್ಪಟಾದರೂ ಆಶ್ಚರ್ಯವಿಲ್ಲ ಎಂಬುದು ಮತ್ತೊಂದು ಅಂದಾಜು.  ಹಾಗಾಗಿ ಉತ್ಸಾಹಿ ಹೂಡಿಕೆದಾರರು, ಎಲ್.ಐ.ಸಿ.ಯ ಷೇರನ್ನು ಖರೀದಿಸಲು ಮುಗಿ ಬೀಳುವುದರಲ್ಲಿ ಅನುಮಾನವಿಲ್ಲ ಎಂದೇ ನೀರಿಕ್ಷಿಸಲಾಗಿದೆ. 

ಈವರೆಗೆ ಯಾವುದೇ ಐ.ಪಿ.ಓ.ದಲ್ಲಿ ಅರ್ಜಿ ಸಲ್ಲಿಸದಿರುವ ಓದುಗರ ಮನಸಿನಲ್ಲಿ, ಐ.ಪಿ.ಓ.ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿರಬಹುದು. ಅಂಥವರ ಪ್ರಶ್ನೆಯ ಉತ್ತರವನ್ನು ಮುಂದಿನ  ಲೇಖನದಲ್ಲಿ ಚರ್ಚಿಸೋಣ. 

-೦-೦-೦-೦-೦-

ಎಲ್.ಐ.ಸಿ.ಯ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ, ಭಾರತದ ಷೇರು ಮಾರುಕಟ್ಟೆಯ ವಿಸ್ತಾರವನ್ನೇ ಹೆಚ್ಚಿಸುವ  ಶಕ್ತಿಯನ್ನು ಹೊಂದಿದೆ.  - ಶ್ರೀ. ಎಂ.ಆರ್.ಕುಮಾರ್, ಛೇರ್ಮನ್, ಎಲ್.ಐ.ಸಿ. 

(You may put the above message in a separate box, inside the article)

(The suggested picture for the article is attached)




 




Sunday, 14 November 2021

ಬಿಟ್ ಕಾಯಿನ್ ಎಂದರೇನು?









ಬಿಟ್ ಕಾಯಿನ್ ಎಂದರೇನು?
ಬಿಟ್ ಕಾಯಿನ್ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿದೆ. ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾರಿ ಹಗರಣ ನಡೆದಿದೆ ಎಂದು ರಾಜಕೀಯ ಪಕ್ಷಗಳು ದಿನ ನಿತ್ಯ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಆದರೆ ಬಿಟ್ ಕಾಯಿನ್ ಎಂದರೇನು ಎಂಬುದು ಶ್ರೀಸಾಮಾನ್ಯನಿಗೆ ತಿಳಿದಿಲ್ಲವೆಂಬುದು ಮಾತ್ರ ಸರಳ ಸತ್ಯ. 

ಬಿಟ್ ಕಾಯಿನ್ ಎಂಬುದೊಂದು 'ವಿದ್ಯುನ್ಮಾನ ಹಣ (digital currency).' ಬಿಟ್ ಕಾಯಿನ್   ಕೊಳ್ಳುವ, ಮಾರುವ ಮತ್ತು ಹಣವನ್ನು ಸಂಗ್ರಹಿಸಿಡುವ (investment) ಸಾಧನವೆಂದು ಈಗಾಗಲೇ ಪ್ರಪಂಚಾದ್ಯಂತ ಮಾನ್ಯತೆ ಪಡೆದಿದೆ. ಬಿಟ್ ಕಾಯಿನಿನ ವ್ಯವಹಾರವನ್ನು 'ಗುಪ್ತ ಲಿಪಿ ಶಾಸ್ತ್ರ (Cryptography),' ಎಂಬ ತಂತ್ರಜ್ಞಾನದ ಮುಖಾಂತರ ನಡೆಸಲಾಗುತ್ತದೆ.  
 
ಚಾಲ್ತಿಯಲ್ಲಿರುವ ಹಲವಾರು ವಿದ್ಯುನ್ಮಾನ ಹಣಗಳಲ್ಲಿ, ಬಿಟ್ ಕಾಯಿನ್ ಮುಂಚೂಣಿಯಲ್ಲಿದೆ.  ಲಿಟೆಕಾಯ್ನ್, ಪೀರ್ ಕಾಯಿನ್, ನೋವ ಕಾಯಿನ್ ಮುಂತಾದ ಬೇರೆ ಬೇರೆ  ವಿದ್ಯುನ್ಮಾನ ಹಣಗಳೂ ಚಲಾವಣೆಯಲ್ಲಿ ಇವೆ. 

ಬಿಟ್ ಕಾಯಿನಿನ ಸೃಷ್ಟಿಯಲ್ಲೇ ನಿಗೂಢತೆ ಇದೆ. ಯಾರಿಗೂ ಪರಿಚಯವಿರದ  'ಸತೋಷಿ  ನಕಾಮೋಟೋ' ಎಂಬ ವ್ಯಕ್ತಿ, ೨೦೦೯ರಲ್ಲಿ ಬಿಟ್ ಕಾಯಿನನ್ನು ಕಂಡು ಹಿಡಿದನು ಎಂದು ಹೇಳಲಾಗುತ್ತಿದೆ. ಜನವರಿ ೨೦೧೧ರಂದು, ಅಮೆರಿಕಾದ ಡಾಲರ್ ೧ ರಸ್ಟು ಬೆಲೆಯಿದ್ದ ಒಂದು ಬಿಟ್ ಕಾಯಿನಿನ ಬೆಲೆ, ೨೦೧೭ರ ಹೊತ್ತಿಗೆ ಡಾ. ೧೮,೦೦೦ಕ್ಕೇರಿ, ವಿಶ್ವದೆಲ್ಲರ ಹುಬ್ಬೇರುವಂತೆ ಮಾಡಿದ್ದು ಈಗ ಇತಿಹಾಸ. ಅದರ ಬೆಲೆ ಈಗ ಸುಮಾರು ಡಾ. ೭೫,೦೦೦ದಷ್ಟಿದೆ (ಅಂದರೆ ರು. ೫೨ ಲಕ್ಷ) ಎನ್ನುವುದು ಸೋಜಿಗದ ಸಂಗತಿ.   

'ವಿದ್ಯುನ್ಮಾನ ಹಣ' ಎಂದರೇನು?
 ಸಾವಿರಾರು ವರುಷಗಳ ಹಿಂದೆ, ಕವಡೆ(seashells)ಗಳನ್ನೂ ಹಣವೆಂದು ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಅಂದಿನ ಜನರುಗಳು ಕವಡೆಗಳನ್ನು(ಅಂದರೆ ಹಣವನ್ನು) ಗಳಿಸಲು ಸರಕುಗಳನ್ನು ಮಾರಾಟ ಮಾಡಬೇಕಿತ್ತು ಅಥವಾ ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಕಿತ್ತು. ಮತ್ತೆ ಕೆಲವು ಸಾಹಸಿಗಳು ಸಮುದ್ರದ ನಡುವೆ ಸಾಗಿ, ಕವಡೆಗಳನ್ನೇ ನೇರವಾಗಿ ಸಂಗ್ರಹಿಸಿ ಹಣವಂತರಾಗುತ್ತಿದ್ದರು. ಇದೇ ಅಂದಿನ ದಿನಗಳಲ್ಲಿ 'ಕವಡೆಗಳ ಗಣಿಗಾರಿಕೆ (mining seashells)' ಎನ್ನಿಸಿಕೊಳ್ಳುತ್ತಿತ್ತು. 

ಈಗ ನಾವು ಕಂಪ್ಯೂಟರ್ ಯುಗದಲ್ಲಿದ್ದೇವೆ. ಕಂಪ್ಯೂಟರ್ ಒಗಟು (puzzles)ಗಳು ಮತ್ತು ಆಟಗಳಿಗೆ ಪರಿಹಾರ(solution)ವನ್ನು ಕಂಡು ಹಿಡಿಯುವುದರಲ್ಲೇ ದಿನವಿಡೀ ಮಗ್ನರಾಗಿ, ಪರಿಹಾರ ದೊರಕಿದಾಗ ಗೆಲುವಿನ ನಗೆ ಬೀರುವ ನಮ್ಮ ಯುವಕರನ್ನು ನಾವೀಗ ನೋಡುತ್ತಿದ್ದೇವೆ. ಆ ಗೆಲುವಿನ ಅಂಕಗಳನ್ನು ದಾಖಲಿಸಿಡುವ ಕಂಪ್ಯೂಟರ್ ಜಾಲತಾಣಗಳು ಇಲ್ಲದಿಲ್ಲ. ಈ ರೀತಿಯ ಪ್ರಕ್ರಿಯೆಯೇ ವಿದ್ಯುನ್ಮಾನ ಹಣಗಳ ಮೂಲವೆಂದು ಹೇಳಬಹುದು. 

ಬಿಟ್ ಕಾಯಿನಿನಂತಹ ವಿದ್ಯುನ್ಮಾನ ಹಣದ ಪ್ರವರ್ತಕರು(promoters), ಗುಪ್ತಲಿಪಿ ಶಾಸ್ತ್ರ(Cryptography) ತಂತ್ರ ಜ್ಞಾನವನ್ನು ಬಳಸಿ, ಅತ್ಯಂತ ಕ್ಲಿಷ್ಟ ಒಗಟು(puzzles)ಗಳನ್ನು ಸೃಷ್ಟಿಸುತ್ತಾರೆ. ಅಪಾರವಾದ ಬುದ್ಧಿಶಕ್ತಿ ಮತ್ತು ಕಷ್ಟಸಹಿಷ್ಣುತೆಯುಳ್ಳ ತಂತ್ರಜ್ಞರು, ಅತ್ಯಾಧುನಿಕ ಯಂತ್ರ (sophisticated hardware)ಗಳನ್ನು ಬಳಸಿ ಅಂತಹ ಒಗಟುಗಳಿಗೆ ಪರಿಹಾರವನ್ನು ಕಂಡುಹಿಡಿಯಬಲ್ಲರು. ಅಂತಹ ಪರಿಹಾರದ ಅಂಕಗಳಿಗೆ ಈಗ 'ವಿದ್ಯುನ್ಮಾನ ಹಣ(cryptocurrency)'ವೆಂಬ ಮಾನ್ಯತೆ ದೊರೆತು, ವಿನಿಮಯದ ಮಾಧ್ಯಮವಾಗಿ ಬೆಳೆದು ನಿಂತಿದೆ.  ಅಂತಹ ಪರಿಹಾರಗಳು 'ಬ್ಲಾಕ್ ಚೈನ್ (block chain)'ನ ವಿನ್ಯಾಸದಲ್ಲಿದ್ದು, ಅದು ಒಂದು ನಿರ್ಧಿಷ್ಟ ಸಂಖ್ಯೆಯ ವಿದ್ಯುನ್ಮಾನದ ಅಂಕಗಳನ್ನು, ಅಂದರೆ 'ವಿದ್ಯುನ್ಮಾನ ಹಣ/ನಾಣ್ಯ(cryptocurrency)'ವನ್ನು  ಹೊಂದಿರುತ್ತದೆ. ಈ ಶೋಧನೆಯನ್ನೇ 'ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency)' ಎನ್ನುತ್ತಾರೆ. ಬಿಟ್ ಕಾಯಿನಿನ ಬ್ಲಾಕ್ ಚೈನಿನಲ್ಲಿ ೨೧ ದಶ ಲಕ್ಷ ಬಿಟ್ ಕಾಯಿನ್ಗಳಿದ್ದು, ಅವುಗಳ ಪೈಕಿ ಸುಮಾರು ೧೭ ದಶ ಲಕ್ಷ ಬಿಟ್ ಕಾಯಿನ್ಗಳು  ಮಾತ್ರ ಶೋಧಕರ ಕೈವಶವಾಗಿದ್ದು, ಗಣಿಗಾರಿಕೆ ಮುಂದುವರೆದಿರುತ್ತದೆ. ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency) ಕಷ್ಟದಾಯಕವಾಗಿದ್ದು, ಆ ಪ್ರಕ್ರಿಯೆಗೆ ಅಪಾರವಾದ ಹಣ ಮತ್ತು ವಿದ್ಯುಚ್ಛಕ್ತಿಯ ವ್ಯಯವಾಗುವುದಂತೂ ಖಂಡಿತ. 

ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency)ಯನ್ನು ಶ್ರೀಸಾಮಾನ್ಯರು ಮಾಡಲಾರರು. ಅಂತಹ ವಿದ್ಯುನ್ಮಾನ ಹಣವನ್ನು, ಅವುಗಳನ್ನು ಹೊಂದಿರುವವರಿಂದ, ಅದರ ಬೆಲೆಯನ್ನು ತೆತ್ತು, ಶ್ರೀಸಾಮಾನ್ಯರು ಖರೀದಿಸಬೇಕಾಗುತ್ತದೆ. ಈ ರೀತಿಯ ವ್ಯವಹಾರ ಕುದುರಿ ವಿದ್ಯುನ್ಮಾನ ಹಣಕ್ಕೆ ಭಾರಿ ಬೇಡಿಕೆಯುಂಟಾಗಿದೆ. 

ಬ್ಲಾಕ್ ಚೈನ್ (block chain) ಎಂದರೇನು?
ವಿದ್ಯುನ್ಮಾನ ಹಣ, ನಾಣ್ಯದ ಅಥವಾ ನೋಟಿನ ರೂಪದಲ್ಲಿರುವುದಿಲ್ಲ. ಅವುಗಳು ಇ-ಚೀಲ(e-wallet)ದಲ್ಲಿ ವಿದ್ಯುನ್ಮಾನ(electronic) ರೂಪದಲ್ಲಿರುತ್ತವೆ. ವಿದ್ಯುನ್ಮಾನ ಹಣವನ್ನು ಹೊಂದಿರುವವರ ವಿವರಗಳ ದಾಖಲೆಯನ್ನು ಗುಪ್ತವಾಗಿ ಇಟ್ಟಿರುವ ವಿದ್ಯುನ್ಮಾನ ಸಾಧನವನ್ನೇ ಬ್ಲಾಕ್ ಚೈನ್(block chain) ಎನ್ನುತ್ತಾರೆ. ವಿದ್ಯುನ್ಮಾನ ಹಣದ ಮಾರಾಟ,  ಖರೀದಿ ಮತ್ತು ಸಂಗ್ರಹದ ವಿವರಗಳು  ಬ್ಲಾಕ್ ಚೈನಿನಲ್ಲಿ ಅಡಕವಾಗಿದ್ದು, ಅದನ್ನು ಹೊಂದಿದವರ ಹೆಸರುಗಳು ಯಾರಿಗೂ ತಿಳಿದಿರುವುದಿಲ್ಲ. ವಿದ್ಯುನ್ಮಾನ ಹಣದ ಬಳಕೆ ಅತ್ಯಂತ ಕ್ಲಿಷ್ಟವಾದ ಗುಪ್ತಪದ(password)ದ ಬಳಕೆಯಿಂದ ಮಾತ್ರ ಸಾಧ್ಯ. ಅಂತಹ ಕ್ಲಿಷ್ಟಕರವಾದ  ಗುಪ್ತಪದವನ್ನು ಮರೆತು/ಕಳೆದುಕೊಂಡು, ಕೋಟ್ಯಂತರ ರೂಪಾಯಿಗಳಷ್ಟರ ಹಣವನ್ನು ಕಳೆದುಕೊಂಡವರಿಲ್ಲದಿಲ್ಲ. ಗುಪ್ತಪದಗಳ ಗುಟ್ಟನ್ನು ಬೇಧಿಸಿ, ಕೋಟ್ಯಂತರ ಬೆಲೆಯ ವಿದ್ಯುನ್ಮಾನ ಹಣವನ್ನು ಲಪಟಾಯಿಸಿದ ಖದೀಮರೂ ಇಲ್ಲದಿಲ್ಲ!

ವಿದ್ಯುನ್ಮಾನ ಹಣದ ನಿಯಂತ್ರಣ ಸಾಧ್ಯವೇ?
ವಿದ್ಯುನ್ಮಾನ ಹಣವೆಂಬುದು ಪ್ರಪಂಚದ ಯಾವುದೇ ಸರಕಾರದ ನಿಯಂತ್ರಣಕ್ಕೂ ಒಳಪಟ್ಟಿಲ್ಲ. ಹಾಗಾಗಿ ಯಾವ ಸರಕಾರವೂ ವಿದ್ಯುನ್ಮಾನ ಹಣದ ಬೆಲೆಗೆ ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ!  ಅದರ ಪ್ರವತಕರು ಮತ್ತು ದಾಖಲೆಗಳ ವಿವರಗಳೇ ನಿಗೂಢ. ವಿದ್ಯುನ್ಮಾನ ಹಣದ ದಾಖಲೆಗಳ ಜಾಲತಾಣವೇ ಕುಸಿದು (crashing of cryptocurrency sites) ಬಿದ್ದರೆ, ಹೂಡಿಕೆದಾರರೆಲ್ಲರೂ ಮುಗ್ಗರಿಸಿ ಬಿದ್ದಂತೆಯೇ ಸರಿ. ಒಮ್ಮಲೇ ಬಲಿಷ್ಠ ಸರಕಾರಗಳು ಮುಂದಾಗಿ, ವಿದ್ಯುನ್ಮಾನ ಹಣದ ಮೇಲೆ ನಿಯಂತ್ರಣ ಸ್ಥಾಪಿಸಬಲ್ಲ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.  ಖದೀಮರಿಂದ ಲಪಟಾಯಿಸಲ್ಪಡುವ(swindling by hackers) ಸಾಧ್ಯತೆಯೂ ಸೇರಿದಂತೆ, ವಿದ್ಯುನ್ಮಾನ ಹಣದ ವ್ಯವಹಾರದಲ್ಲಿ ಭಾರಿ ಅಪಾಯ ಅಡಗಿದೆ ಎಂಬುದು ನಾವೆಲ್ಲರೂ ಅರಿಯಬೇಕಾದ ಸತ್ಯ. ಆದರೂ ವಿದ್ಯುನ್ಮಾನ ಹಣದ ವ್ಯವಹಾರಗಳಿಗೆ, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಹಲವಾರು ಐರೋಪ್ಯ ರಾಷ್ಟ್ರಗಳೂ ಮಾನ್ಯತೆ ನೀಡಿವೆ. ಇತ್ತೀಚಿಗೆ ನಮ್ಮ ದೇಶ ಭಾರತದಲ್ಲೂ ವಿದ್ಯುನ್ಮಾನ ಹಣದ ವ್ಯವಹಾರ ಭಾರಿ ಪ್ರಮಾಣದಲ್ಲೇ ನಡೆಯುತ್ತಿದ್ದು, ಅದು ನಮ್ಮ ಸರಕಾರಕ್ಕೂ ತಿಳಿದಿದೆ. 

ಮುಂದೇನು?
ತಂತ್ರಜ್ಞಾನ(technology)ವೆಂಬುದು ದಿಢೀರನೆ ಭಾರಿ ಬದಲಾವಣೆ(disruption)ಗಳನ್ನುತಂದೊಡ್ಡಬಲ್ಲದು. ಒಂದೂ ಟ್ಯಾಕ್ಸಿಯನ್ನು ಹೊಂದಿರದ ಉಬರ್(uber)ನಂತಹ ಸಂಸ್ಥೆಗಳು, ಇಂದು  ಕೋಟ್ಯಂತರ ಟ್ಯಾಕ್ಸಿಗಳನ್ನು ನಿಯಂತ್ರಿಸುತ್ತಿವೆ. 'ಇ-ಮೇಲ್ ತಂತ್ರಜ್ಞಾನವು ಪೋಸ್ಟ್ ಆಫೀಸಗಳನ್ನು ಅನಗತ್ಯಗೊಳಿಸಿದಂತೆ,  ವಿದ್ಯುನ್ಮಾನ ಹಣವೆಂಬುದು ಬ್ಯಾಂಕ್ಗಳನ್ನು ಮುಂದೆ ಅನಗತ್ಯಗೊಳಿಸಬಹುದು' ಎಂಬುದು ತಂತ್ರಜ್ಞರ ಭವಿಷ್ಯವಾಣಿಯಾಗಿದೆ. 

ಬದಲಾವಣೆಗಳಿಗೆ ಹೊಂದಿಕೊಂಡು ಮುನ್ನಡೆಯುವುದೇ ಜೀವನ. ವಿದ್ಯುನ್ಮಾನ ಹಣದ ಬಳಕೆ ನಿಯಂತ್ರಣದ ಹಾಗು ಕಾನೂನಿನ ಚೌಕಟ್ಟುಗಳಿಗೆ ಒಳಪಡಲಿ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನು ಶ್ರೀಸಾಮಾನ್ಯರು ಮುಂದಿಡುತ್ತಾ ಸಾಗಲಿ ಎಂದು ಆಶಿಸೋಣ. 

(Thanks to the sources of the pictures used here.  I am indebted to them).





Friday, 5 November 2021

 ಮಾನ್ಯರೇ, 

ನನ್ನ 'ಕವನೋತ್ಸವ' ಪದ್ಯ ಮಾಲಿಕೆಯನ್ನು ನವೆಂಬರ್ ೨ರ ದಿನದಿಂದ ಪ್ರಕಟಿಸುತ್ತಿದ್ದೀರಿ. ಧನ್ಯವಾದಗಳು. 

ಮಾಜಿ ಬ್ಯಾಂಕರ್ ಆದ ನಾನು 'ದುಡ್ಡೇ ದೊಡ್ಡಪ್ಪ' ಎಂಬ ಮಾಲಿಕೆಯಲ್ಲಿ ಪ್ರತಿ ವಾರ ಸಮಕಾಲೀನ ಆರ್ಥಿಕ ವಿಷಯಗಳೊನ್ನೊಳಗೊಂಡ ಕಿರು ಲೇಖನಗಳನ್ನು ಬರೆಯಲಿದ್ದೇನೆ. ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬಹುದೇ, ಪರೀಕ್ಷಿಸಿ. ಮೊದಲ ಲೇಖನವನ್ನು ಕಳುಸುತ್ತಿದೇನೆ. 

***

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಛೇರ್ಮನ್ ಶ್ರೀ ಪ್ರತೀಪ್ ಚೌಧ್ರೀರವರ ಇತ್ತೀಚಿನ ಬಂಧನ ಪ್ರಕರಣ ಕುರಿತಾದ ಕಿರು ಲೇಖನವನ್ನು ಕಳುಹಿಸುತ್ತಿದ್ದೇನೆ.  ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದು.  

ತಮ್ಮವ 

ಲಕ್ಷ್ಮೀನಾರಾಯಣ ಕೆ 

M.Sc., M.B.A., C.A.I.I.B. 

ಮಾಜಿ ಬ್ಯಾಂಕರ್ 

೯೮೪೫೫ ೬೨೬೦೩

Thursday, 4 November 2021

ಈ ಜೈಲು ನ್ಯಾಯವೇ?

 ಈ ಜೈಲು ನ್ಯಾಯವೇ?

ರಾಜಸ್ಥಾನದ ಹೋಟೆಲೊಂದರ ಅನುತ್ಪಾದಕ  ಸಾಲ(NPA)ವನ್ನು ಸಾಲ ಮರುಸಂಘಟನಾ ಸಂಸ್ಥೆ (Asset Reconstruction Company)ಯೊಂದಕ್ಕೆ ಅಗ್ಗದ ಬೆಲೆಗೆ ಮಾರಾಟ ಮಾಡಿದ ಆರೋಪದ ಮೇಲೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ(SBI)ದ ಮಾಜಿ ಛೇರ್ಮನ್ ಶ್ರೀ ಪ್ರತೀಪ್ ಚೌಧ್ರಿ ರವರನ್ನು, ರಾಜಸ್ಥಾನದ ಪೊಲೀಸರು ಕಳೆದ ನವೆಂಬರ್ ೧ರಂದು ಬಂಧಿಸಿದ್ದಾರೆ. ಬೃಹತ್ ಸಾಲಗಳ ನಿರ್ವಹಣೆ ಮಾಡುವಲ್ಲಿ ಭಯದ ವಾತಾವರಣದಿಂದ  ಹಿಂಜರಿಯುತ್ತಿರುವ ಬ್ಯಾಂಕಿಂಗ್ ಕ್ಷೇತ್ರದ ಉನ್ನತ ಅಧಿಕಾರಿಗಳ ವಲಯದಲ್ಲಿ, ಚೌಧ್ರಿಯವರ ಬಂಧನ ತಲ್ಲಣವನ್ನು ಮೂಡಿಸಿದೆ. ಚೌಧ್ರಿಯವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. 

ಜೈಸಲ್ಮೇರ್, ರಾಜಸ್ಥಾನದ ಹೋಟೆಲೊಂದಕ್ಕೆ ೨೦೦೭ರಲ್ಲಿ ಸ್ಟೇಟ್ ಬ್ಯಾಂಕ್, ರು.೨೫ ಕೋಟಿಯಷ್ಟರ  ಸಾಲವನ್ನು ನೀಡಿತ್ತು. ಮುಖ್ಯ ಪ್ರವರ್ತಕರೊಬ್ಬರ ನಿಧನದೊಂದಿಗೆ ಅಪೂರ್ಣವಾಗುಳಿದ ಹೋಟೆಲ್ ಯೋಜನೆಯನ್ನು, ೨೦೧೦ರಲ್ಲಿ ಅನುತ್ಪಾದಕ ಆಸ್ತಿ (NPA) ಎಂದು ಪರಿಗಣಿಸಲಾಯ್ತು. ಸಾಲ ವಸೂಲಿ ಮಾಡಲಾಗದ ಸ್ಟೇಟ್ ಬ್ಯಾಂಕ್, ೨೦೧೪ರಲ್ಲಿ ಅನುತ್ಪಾದಕ ಆಸ್ತಿಯನ್ನು (ಸಾಲವನ್ನು) ಅಗ್ಗದ ಬೆಲೆಗೆ, ಆಲ್ಕೆಮಿಸ್ಟ್ ಸಾಲ ಮರುಸಂಘಟನಾ ಸಂಸ್ಥೆ(AARC)ಗೆ  ಮಾರಾಟ ಮಾಡಿತು ಎಂಬುದು,  ಸಾಲ ಕಟ್ಟಲಾಗದ ಪ್ರವರ್ತಕರ ಅಹವಾಲು. ಆರೋಪಿ ಚೌಧ್ರಿಯವರು, ಸ್ಟೇಟ್ ಬ್ಯಾಂಕ್ ನಿಂದ ನಿವೃತ್ತ(೨೦೧೩)ರಾದ ಮೇಲೆ, ಅದೇ ಸಾಲ ಮರುಸಂಘಟನಾ ಸಂಸ್ಥೆಯ ಡೈರೆಕ್ಟರ್ ಆಗಿ ಸೇರಿಕೊಂಡಿದ್ದು(೨೦೧೪) ಅನುಮಾನಗಳಿಗೆ ಆಸ್ಪದ ನೀಡಿರುವುದು ಸುಳ್ಳಲ್ಲ. 

ಚೌಧ್ರಿಯವರ ಬಂಧನದಿಂದ ನೊಂದ ಸ್ಟೇಟ್ ಬ್ಯಾಂಕ್ನ ಇಂದಿನ ಛೇರ್ಮನ್ ಶ್ರೀ ದಿನೇಶ್ ಖಾರರವರು ಹೇಳಿಕೆಯೊಂದನ್ನು ನೀಡಿ, 'ಈ ರೀತಿಯ ಸಣ್ಣ ಪ್ರಮಾಣದ ಸಾಲ ಮಾರಾಟದ ನಿರ್ಣಯದ ವಿಷಯದಲ್ಲಿ, ಛೇರ್ಮನ್ ಮಟ್ಟದ ಉನ್ನತ ಅಧಿಕಾರಿಗಳ ಪಾತ್ರವಿರುವುದಿಲ್ಲ. ಈ ರೀತಿಯ ನಿರ್ಣಯಗಳನ್ನು ಸ್ಥಳೀಯ ಮಟ್ಟದಲ್ಲೇ ತೆಗೆದುಕೊಳ್ಳಲಾಗುತ್ತದೆ. ಸದರಿ ಸಾಲ ಮಾರಾಟದ ಪ್ರಕ್ರಿಯೆ, ಬ್ಯಾಂಕಿನ ನಿಯಮಗಳಂತೆ ನಡೆದಿದ್ದು, ಯಾವುದೇ ಅಕ್ರಮ ನಡೆದಿಲ್ಲ. ಚೌಧ್ರಿಯವರ ಬಂಧನ ದುರದೃಷ್ಟಕರ. ಭಾರತೀಯ ಬ್ಯಾಂಕರ್ಗಳ ಸಂಸ್ಥೆ (IBA) ವಿಷಯವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತಿದೆ. ಬೇಗನೆ ಚೌಧ್ರಿಯವರ ಬಿಡುಗಡೆ ಹೊಂದುತ್ತಾರೆಂಬ ಭರವಸೆ'ಯನ್ನು ವ್ಯಕ್ತಪಡಿಸಿದ್ದಾರೆ. 

ಚೌಧ್ರಿಯವರಿಗೆ ಕೂಡಲೇ ಜಾಮೀನು ದೊರೆಯಲಿ, ಇಡೀ ಘಟನೆಯ ಸಮಗ್ರ ತನಿಖೆ ನಡೆಯಲಿ, ನಿರ್ದೋಷಿಗಳಿಗೆ ಕಿರುಕುಳ ನೀಡದಂತಾಗಲಿ, ಭಯದ ವಾತಾವರಣದಿಂದ ಬ್ಯಾಂಕಿಂಗ್ ಉದ್ಯಮ ಹೊರಬರುವಂತಾಗಲಿ ಎಂದು ಆಶಿಸೋಣ. 

ಲೇಖಕರು:

ಲಕ್ಷ್ಮೀನಾರಾಯಣ ಕೆ. 

ಮಾಜಿ ಬ್ಯಾಂಕರ್ 

Tuesday, 2 November 2021

 ಸಮಸ್ತ ಬಾಂಧವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. 

ಕನ್ನಡ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಇಂದಿನಿಂದ ಪ್ರಾರಂಭಿಸುತ್ತಿದ್ದೇನೆ. ದಿನ ನಿತ್ಯದ ಪ್ರಶ್ನೆಗಳ ಉತ್ತರವನ್ನು ನನ್ನ ವಾಟ್ಸಪ್ಪ್ಗೆ (my whatsapp)/fb messengerಗೆ  ನೇರವಾಗಿ ಕಳುಹಿಸಿ. ಗ್ರೂಪ್ನಲ್ಲೇ ಉತ್ತರಿಸಬೇಡಿ. ಪ್ರಶ್ನೆಯ ರಹಸ್ಯವೇ ಇಲ್ಲವಾಗುತ್ತದೆಂಬುದು ಹಲವರ ಅಭಿಪ್ರಾಯ. ಸರಿಯುತ್ತರ ನೀಡಿದ ಪ್ರಥಮರ ಭಾವ ಚಿತ್ರವನ್ನು, ಉತ್ತರದ ಹಿಂದಿನ ಮಹಾವ್ಯಕ್ತಿಯ ಜೊತೆಗೆ ಪ್ರಕಟಿಸಲಾಗುವುದು. 

ಸಿರಿಗನ್ನಡಂ ಗೆಲ್ಗೆ!


೧) ಡಾ. ರಾಜ್ ಕುಮಾರ್ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿರುವರೆ? ಚರ್ಚಿಸಿ. 

೨) ಕನ್ನಡ ಕಾದಂಬರಿಗಾರ್ತಿ ತ್ರಿವೇಣಿಯವರ ಯಾವ ಕಾದಂಬರಿ ಮೊದಲ ಬಾರಿಗೆ ಚಲನ ಚಿತ್ರವಾಯಿತು?

೩) ಕನ್ನಡ ಚಿತ್ರ ರಂಗ ಮರೆಯಲಾಗದ ' ಎಂ. ವೆಂಕಟ ರಾಜು' ಯಾರು?

ನಿನ್ನೆಯ ಪ್ರಶ್ನೆಯ ಸರಿಯುತ್ತರ 

ಕಲ್ಪನಾ 

ಶಂಕರ್ ನಾಗ್ 

ಅಪ್ಪು 

ವಿಜೇತರು 

ಪಾರ್ವತಿ 

ಮೋಕ್ಷಗುಂಡಂ 


ಕನ್ನಡೋತ್ಸವ - ೨

 ಪ್ರಶ್ನೆಗಳ ಉತ್ತರ 

ನಿನ್ನೆಯ ಪ್ರಶ್ನೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತು, ಉನ್ನತ ಮಟ್ಟದ ಚರ್ಚೆ ನಡೆದಿದೆ. ಧನ್ಯವಾದಗಳು 

೧) ೧೯೫೪ರಲ್ಲಿ ತೆರೆ ಕಂಡ ರಾಜ್ ಕುಮಾರ್ ಅಭಿನಯದ ಚಿತ್ರ 'ಬೇಡರ ಕಣ್ಣಪ್ಪ' ಅಭೂತಪೂರ್ವ ಯಶಸ್ಸು ಕಂಡಿದ್ದು ಈಗ ಇತಿಹಾಸ. ಬೇಡರ ಕಣ್ಣಪ್ಪ ಚಿತ್ರ ತೆಲುಗಿನಲ್ಲಿ 'ಶ್ರೀ ಕಾಳಹಸ್ತಿ ಮಹಾತ್ಮೆ' ಎಂಬ ಹೆಸರಿನಲ್ಲಿ, ಹೊಸ ಚಿತ್ರವಾಗಿ ಅದೇ ವರ್ಷ ಮರು ನಿರ್ಮಾಣಗೊಂಡಿತ್ತು. ತೆಲುಗು ಚಿತ್ರದ ನಾಯಕ ನಟರೂ ನಮ್ಮ ರಾಜ್ ಕುಮಾರವರೇ ಆಗಿದ್ದರು. ನಾಯಕಿಯೂ ಸೇರಿದಂತೆ ಬಹುತೇಕ  ಕಲಾವಿದರು ತೆಲುಗಿನವರಾಗಿದ್ದರು. ಚಿತ್ರ ತೆಲುಗಿನಲ್ಲೂ ಜಯಭೇರಿ ಬಾರಿಸಿತ್ತು. ೧೯೫೪ರ ಸಮಯದಲ್ಲಿನ್ನೂ ತೆಲುಗಿನ ಮಹಾ ನಾಯಕರುಗಳಾದ ಎನ್ಟಿಆರ್, ಎಎನ್ನಾರ್ ರವರು  ಗಟ್ಟಿಯಾಗಿ ಬೇರು ಬಿಟ್ಟಿರದಿದ್ದ ಸಮಯ. ಅವರೊಂದಿಗೆ ತೆಲುಗು ಚಿತ್ರ ರಂಗದಲ್ಲೂ ಮಿಂಚುವ ಅವಕಾಶವನ್ನು ರಾಜ್- ರವರು  ತ್ಯಜಿಸಿ, ಕನ್ನಡ ಚಿತ್ರ ರಂಗಕ್ಕೇ ತಮ್ಮನ್ನು ಮೀಸಲಾಗಿರಿಸಿಕೊಂಡಿದ್ದು ಕನ್ನಡಿಗರ ಭಾಗ್ಯ ಎಂದೇ ಹೇಳಬೇಕು. 

೨) ೧೯೬೬ರಲ್ಲೇ, ತ್ರಿವೇಣಿಯವರ ಕಾದಂಬರಿ 'ಬೆಕ್ಕಿನ ಕಣ್ಣು,' ಮಲಯಾಳಂನಲ್ಲಿ, ಪುಟ್ಟಣ್ಣ ಕಣಗಾಲ್ರವರ ನಿರ್ದೇಶನದಲ್ಲೇ ಚಲನ ಚಿತ್ರವಾಗಿ ತೆರೆ ಕಂಡಿತ್ತು. ನಂತರ ಅದೇ ವರ್ಷ ಬೆಳ್ಳಿಮೋಡ ಕನ್ನಡ ಚಿತ್ರವಾಗಿ ತೆರೆ ಕಂಡಿತು. 

೩) 'ಭಕ್ತ ಕನಕದಾಸ, ಸ್ವರ್ಣ ಗೌರಿ, ನಂದಾ ದೀಪ' ಮುಂತಾದ ಚಿತ್ರಗಳಿಗೆ ಸುಮಧುರ ಸಂಗೀತವನ್ನು ನೀಡಿದವರು ಎಂ. ವೆಂಕಟರಾಜು. ಅವರು ಸಂಗೀತ ನಿರ್ದೇಶಕ ಎಂ. ರಂಗರಾವ್ ರವರ ಹಿರಿಯಣ್ಣನವರೂ ಹೌದು.  ಅಂತಹ ಮಹಾನ್ ಸಂಗೀತ ನಿರ್ದೇಶಕರು ಅಕಾಲ ಮೃತ್ಯುವಿಗೆ ತುತ್ತಾದದ್ದು ಕನ್ನಡಿಗರ ದುರ್ದೈವ. 

ಕನ್ನಡೋತ್ಸವ - ೨, ನಿನ್ನೆಯ ವಿಜೇತರು 

ಶ್ರೀ. ವೆಂಕಟಾಚಲ 

NIIT ಸಂಸ್ಥೆಯ ತರಬೇತುದಾರರು 


ಕನ್ನಡೋತ್ಸವ - ೩

ಕೆಳಗಿನ ಚಿತ್ರದಲ್ಲಿರುವ ಮಹಾನ್ ಕನ್ನಡಿಗರನ್ನು ಗುರುತಿಸಿ.