Tuesday 2 October 2018

ಲಾಲ್ ಬಹದ್ದೂರ್ ಶಾಸ್ತ್ರಿ ನಿಜವಾದ ಭಾರತ ರತ್ನ


ಇಂದು ಶಾಸ್ತ್ರಿ ಜಯಂತಿಯೂ ಹೌದು ಎಂಬುದನ್ನು ಮರೆತು ನಾನು ಘೋರ ಅಪರಾಧ ಮಾಡಿದೆನೋ ಎಂಬ ಭಾವ ಕಾಡುತಿದೆ.   ಶಾಸ್ತ್ರೀಜಿ ಕ್ಷಮೆ ಇರಲಿ. 

ಬಡ ಕುಟುಂಬದಲ್ಲಿ ಜನಿಸಿ ಹೋರಾಟ ಮತ್ತು ಸಾಮರ್ಥ್ಯಗಳಿಂದಲೇ ಮುಂದೆ ಬಂದವರು ಶಾಸ್ತ್ರಿ.  ಅವರು ಎಂದೂ ಅಧಿಕಾರಕ್ಕೆ ಆಸೆಪಟ್ಟವರಲ್ಲ.  ಎಲ್ಲೋ ನಡೆದ ರೈಲ್ವೆ ಅಪಘಾತದ ಹೊಣೆಹೊತ್ತು ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಿದ ಅವರೆಲ್ಲಿ?  ಅಧಿಕಾರದ ದಾಹಕ್ಕಾಗಿ ಏನನ್ನೂ ಮಾಡಲು ಹೇಸದ ಈಗಿನ ರಾಜಕಾರಣಿಗಳೆಲ್ಲಿ?

ಆಕಸ್ಮಿಕವಾಗಿ ಬಂದ ಪ್ರಧಾನಿ ಹುದ್ದೆಗೆ ನಿಸ್ವಾರ್ಥದಿಂದ ದುಡಿದ ಧೀಮಂತ ಅವರು.  ಒಂದಡೆ ಹಸಿವಿನಿಂದ ನರಳುತ್ತಿದ್ದ ದೇಶ, ಮತ್ತೊಂದೆಡೆ ಕಾಲ್ಕೆರೆದು ಯುದ್ಧಕ್ಕೆ ಸನ್ನದ್ದರಾದ ಶತ್ರುಗಳು. ಎರಡೂ ಸವಾಲುಗಳನ್ನು 'ಜೈ ಜವಾನ್, ಜೈ ಕಿಸಾನ್' ಎಂಬ ಒಂದೇ ಕರೆನೀಡಿ ಸಮರ್ಥವಾಗಿ ನಿಭಾಯಿಸಿದ ಮೇರುವ್ಯಕ್ತಿ.  ಹಸಿರು ಕ್ರಾಂತಿಯ ಹರಿಕಾರ ಮತ್ತು ಸಮರವೀರ!

ಶಾಸ್ತ್ರಿಯವರಿಂದ ನಾವು ಕಲಿಯಬೇಕಾದ ಮೊದಲ ಗುಣ ಪ್ರಾಮಾಣಿಕತೆ .  ಪ್ರಧಾನಿ ಕಾರನ್ನು ಸಂಸಾರದ ಉಪಯೋಗಕ್ಕೆ ಬಳೆಸಲು  ಶಾಸ್ತ್ರೀ ಬಿಲ್ಕುಲ್ ಒಪ್ಪುತ್ತಿರಲಿಲ್ಲ.  ಕಾರು ಕೊಳ್ಳಲು ಅವರ ಹತ್ತಿರ ಹಣವಿರಲಿಲ್ಲ.  ಅಂದಿನ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂದೆ ಕೇವಲ ರೂ. ೫೦೦೦ ಸಾಲಕ್ಕೆ ಕೈಯೊಡ್ಡಿದವರು.  ಸಾಲದ ಮರುಪಾವತಿ ಮಾಡುವಷ್ಟರಲ್ಲೇ ನಿಧನರಾದರು .  ಅವರ ಧರ್ಮಪತ್ನಿ ಶ್ರೀಮತಿ ಲಲಿತ ಶಾಸ್ತ್ರಿಯವರು ಗಂಡನ ಪೆನ್ಷನ್ ಹಣದಲ್ಲಿ ಸಾಲವನ್ನು ಮರುಪಾವತಿಸಿದರು ಎಂಬುದನ್ನು ನಾವು ನೆನಯಲೇ ಬೇಕು .  ಅದೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೆಲವರು ಪಂಗನಾಮ ಹಾಕಿ ಇತ್ತೀಚೆಗೆ ಓಡಿದರು ಎಂಬ ಸುದ್ದಿ ಕೇಳಿ  ನನಗೆ ಶಾಸ್ತ್ರಿಯವರ ನೆನಪಾಯ್ತು.  

ಶಾಸ್ತ್ರಿಯವರ ಅಕಾಲಿಕ ನಿಧನದಿಂದ ದೇಶ ಬಡವಾಯ್ತು ಮತ್ತು ಧಿಕ್ಕುತಪ್ಪಿತು ಎಂಬುದು ಸುಳ್ಳಲ್ಲ. 

ಶಾಸ್ತ್ರಿದಿನದಂದು ನಮಗೆ ಮತ್ತೆ ಮತ್ತೆ  ನೆನಪಾಗುವ ಘೋಷವಾಕ್ಯ 'ಜೈ ಜವಾನ್, ಜೈ ಕಿಸಾನ್'. 

ಲಕ್ಷ್ಮೀನಾರಾಯಣ 
ಬೆಂಗಳೂರು   

No comments:

Post a Comment