ರಾಣಿ ಅಬ್ಬಕ್ಕ ದೇವಿ
ವಿಜಯ ಕರ್ನಾಟಕ ದೀಪಾವಳಿ ಸಂಚಿಕೆ (೨೦೨೫)ಗಾಗಿ
ಲೇಖಕರು
ಕುಮಾರಿ 'ಗೌರಿ ನಂಜುಂಡ ಪ್ರಸಾದ್'
೧೧ನೇ ತರಗತಿ (ವಾಣಿಜ್ಯ ವಿಭಾಗ)
ನ್ಯಾಷನಲ್ ಪಬ್ಲಿಕ್ ಸ್ಕೂಲ್
ರಾಜಾಜಿನಗರ, ಬೆಂಗಳೂರು
ಮೊಬೈಲ್: ೯೯೦೦೧ ೨೭೨೭೫, ೮೯೫೧೦ ೬೬೪೩೬
-೦-೦-೦-
ಭಾರತದ ಸ್ವಾತಂತ್ರ್ಯ ಹೋರಾಟದ ಕಥೆ, ಯಾವುದೇ ಒಬ್ಬ ಭಾರತೀಯನ ಕಥೆಯಲ್ಲ. ಇದು ಪ್ರತಿಯೊಬ್ಬ ಭಾರತೀಯನ ಕಥೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತವನ್ನು ಕಟ್ಟಲು ಹೋರಾಡಿದ ಕಥೆ, ಈಗ ನಾವು ಹೆಮ್ಮೆಯ ಭಾರತೀಯರಾಗಿ ಗರ್ವದಿಂದ ಇಡೀ ಜಗತ್ತಿಗೆ ಹಂಚಿಕೊಳ್ಳಲಾಗುವಂತಹ ಕಥೆ. ಭಾರತೀಯ ಸ್ವಾತಂತ್ರ್ಯ ಹೋರಾಟದ ಮುನ್ನೂರು ವರ್ಷಗಳ ಕಾಲವೆಂದರೆ, ಪ್ರತಿಯೊಬ್ಬ ದೇಶಭಕ್ತನೂ ಬಹು ಪ್ರಯಾಸದಿಂದ ಬ್ರಿಟಿಷರನ್ನು ಭಾರತದಿಂದ ಬಿಟ್ಟು ಓಡಿಸಲು ಪ್ರಯತ್ನಿಸಿ, ನಂತರ ಯಶಸ್ಸು ಗಳಿಸಿದ ಪಯಣ. ಆ ನಮ್ಮ ಕನಸುಗಳನ್ನು ನನಸು ಮಾಡಲು ನಮ್ಮ ಹೋರಾಟಗಾರರು ಅಹೋರಾತ್ರಿ ಯೋಜಿಸಿ, ಕಠಿಣ ಪರಿಶ್ರಮ ಪಟ್ಟು ಬೆವರು ಸುರಿಸಿದ್ದಾರೆ. ಅವರು ಪಟ್ಟ ಪ್ರಯಾಸಗಳಿಂದಲೇ, ನಾವು ಇಂದು ಆ ಪರಿಶ್ರಮದ ಸಿಹಿಯಾದ ಫಲಗಳನ್ನು ಸೇವಿಸುತ್ತಿದ್ದೇವೆ.
ಸ್ವಾತಂತ್ರ್ಯ ಹೋರಾಟಗಾರರು ಎಂದ ಕೂಡಲೇ, ಕೆಲವು ಪ್ರಸಿದ್ಧ ಹೆಸರುಗಳು ನಮ್ಮ ನೆನಪಿಗೆ ಬರುತ್ತವೆ. ಗಾಂಧೀಜಿ, ಭಗತ್ ಸಿಂಗ್, ಮಂಗಳ್ ಪಾಂಡೆ, ರಾಣಿ ಲಕ್ಷ್ಮಿಬಾಯಿ, ಸರೋಜಿನಿ ನಾಯ್ಡು ಮುಂತಾದವರು ನಮ್ಮ ನೆನಪಿನ ಚೌಕಟ್ಟಿಗೆ ಬರುತ್ತಾರೆ. ಆದರೆ, ಬ್ರಿಟಿಷರು ಭಾರತವನ್ನು ಆಕ್ರಮಿಸುವುದಕ್ಕೂ ಮೊದಲು, ಈಗ ಹೆಸರಿಸಿದ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟುವುದಕ್ಕೂ ಮೊದಲು, ಭಾರತದಲ್ಲಿ ನೆಲಸಿದ್ದ ಒಬ್ಬ ರಾಣಿ, ತನ್ನ ರಾಜ್ಯದ ಸ್ವಾತಂತ್ರ್ಯಕ್ಕಾಗಿ, ಭಾರತದ ಮೇಲೆ ದುರಾಸೆಯ ನೋಟವನ್ನು ಹರಿಸಿದ್ದ ಮೊದಲ ಪರದೇಶಿಯರ ವಿರುದ್ಧ ವೀರಾವೇಶದಿಂದ ಹೋರಾಡಿದ್ದಳು. ಹೌದು, ಅವಳೇ ರಾಣಿ ಅಬ್ಬಕ್ಕ ದೇವಿ, ಚೌಟ ವಂಶದ ಹೆಣ್ಣುಮಗಳು. ನಮ್ಮ ಕರ್ನಾಟಕದ ಉಲ್ಲಾಳ ಎನ್ನುವ ಸ್ಥಳದಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿ, ಪೋರ್ಚುಗೀಸರ ವಿರುದ್ಧ ಯುದ್ಧಮಾಡಿ, ಅವರಿಗೆ ಬುದ್ಧಿ ಕಲಿಸಿದ ಧೀರ ಮಹಿಳೆಯೇ ರಾಣಿ ಅಬ್ಬಕ್ಕ ದೇವಿ. ಈಗ ಅವಳ ಪರಿಚಯವನ್ನು ಮಾಡಿಕೊಳ್ಳೋಣ.
ಅಬ್ಬಕ್ಕ ದೇವಿ ಚೌಟ ವಂಶದ ರಾಜ ಪರಿವಾರದಲ್ಲಿ ಜನಿಸಿದಳು. ಅಬ್ಬಕ್ಕನ ಆರಂಭಿಕ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದವರು ಅವಳ ಮಾವನವರಾದ ತಿರುಮಲರಾಯರು. ತಿರುಮಲರಾಯರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ಇವರ ನೇತೃತ್ವದಲ್ಲಿ ಚೌಟ ವಂಶದವರು, ಮೊದಲ ಬಾರಿಗೆ ಗುಜರಾತಿನಿಂದ ಕರ್ನಾಟಕದ ತುಳುನಾಡಿನವರೆಗೆ ವಲಸೆ ಬಂದರು. ಉಲ್ಲಾಳವೇ ಅವರ ರಾಜಧಾನಿಯಾಗಿತ್ತು. ಚಿಕ್ಕಂದಿನಿಂದಲೇ ಅಬ್ಬಕ್ಕಳಿಗೆ ಬಿಲ್ಲುಗಾರಿಕೆ, ಕುದುರೆ ಸವಾರಿ ಮುಂತಾದವುಗಳ ತರಬೇತಿಯನ್ನು ನೀಡಲಾಗಿತ್ತು. ಮುಂದೆ ಅವಳು ಯುದ್ಧನೀತಿ, ಯುದ್ಧ ತಂತ್ರಗಳು, ರಾಜನೀತಿ, ಆಡಳಿತ ನೀತಿಗಳಲ್ಲೂ ಪರಿಣತೆಯನ್ನು ಪಡೆದುಕೊಂಡಿದ್ದಳು. ಇದಕ್ಕೆಲ್ಲಾ ಮೂಲ ಕಾರಣ ತಿರುಮಲರಾಯರೇ. ಅವರ ನೇತೃತ್ವದಲ್ಲಿ ಅಬ್ಬಕ್ಕಳ ವಿದ್ಯಾಭ್ಯಾಸ, ಯುದ್ಧಾಭ್ಯಾಸಗಳು ಯಶಸ್ವಿಯಾಗಿ ಆಗಿತ್ತು. ಕೆಲವೇ ವರ್ಷಗಳಲ್ಲಿ ಅಬ್ಬಕ್ಕ, ಸಕಲ ಗುಣಗಳನ್ನು ಹೊಂದಿದ್ದ ಧೈರ್ಯಶಾಲಿ ಹಾಗೂ ಬುದ್ಧಿವಂತ ಮಹಿಳೆಯಾಗಿ ಬೆಳೆದಳು. ಇದನ್ನೆಲ್ಲಾ ಗಮನಿಸುತ್ತಿದ್ದ ತಿರುಮಲರಾಯರು ಅಬ್ಬಕ್ಕಳನ್ನು ಮೆಚ್ಚಿ, ಅವಳನ್ನು ಅವರ ರಾಜ್ಯದ ರಾಣಿಯೆಂದು ಪಟ್ಟವನ್ನು ಕಟ್ಟಿದರು. ಅಬ್ಬಕ್ಕ ಉಲ್ಲಾಳದ ರಾಣಿಯೆಂದು ನೇಮಿತಳಾದಳು.
ಉಲ್ಲಾಳ, ನಮಗೆಲ್ಲರಿಗೂ ತಿಳಿದಿರುವಂತೆ ತುಳುನಾಡಿನ ಒಂದು ಭಾಗ. ಚೌಟ ವಂಶದಲ್ಲಿ 'ಅಳಿಯ ಸಂತಾನ' ಎನ್ನುವ ಒಂದು ಪದ್ಧತಿಯಿತ್ತು. ಅವರದ್ದು ಮಾತೃಪ್ರಧಾನ ವಂಶ. ಅಬ್ಬಕ್ಕಳ ರಾಜ್ಯದಲ್ಲಿ ಮಹಿಳೆಯರೇ ಪ್ರಧಾನ ಪತ್ರಗಳನ್ನು ವಹಿಸಿಕೊಳ್ಳುತ್ತಿದ್ದರು. ಅಧಿಕಾರ ಹಾಗೂ ಜವಾಬ್ದಾರಿಗಳನ್ನುಳ್ಳ ಕೆಲಸಗಳನ್ನು ಮಾಡುತ್ತಿದ್ದವರು ಹೆಂಗಸರೇ. ತಿರುಮಲರಾಯರೇ, ಅಬ್ಬಕ್ಕ ದೇವಿಗೆ ಒಂದು ಒಳ್ಳೆಯ ಸಂಬಂಧವನ್ನು ಹುಡುಕಿ ಮದುವೆಯನ್ನು ಕೂಡ ಮಾಡಿದ್ದರು. ಅಬ್ಬಕ್ಕ ದೇವಿಯ ಪತಿಯ ಹೆಸರು ಲಕ್ಷ್ಮಪ್ಪ ಅರಸ ಬಂಗರಾಜ. ಆತ ಮಂಗಳೂರಿನ ಬಂಗ ಎನ್ನುವ ರಾಜ್ಯದ ರಾಜನಾಗಿದ್ದನು. ಈ ಸಂಬಂಧದಿಂದ ಎರಡೂ ರಾಜ್ಯಗಳ ರಾಜಕೀಯ ಮೈತ್ರಿ ಬಲವಾಯಿತು. ಆದರೆ ಅಬ್ಬಕ್ಕ ಹಾಗೂ ಲಕ್ಷ್ಮಪ್ಪ ಅರಸನ ಸಂಬಂಧ ಬಹು ಬೇಗನೆ ಮುರಿಯಿತು. ಅವಳ ಮೂರು ಹೆಣ್ಣುಮಕ್ಕಳೊಡನೆ ಅಬ್ಬಕ್ಕ ಮತ್ತೆ ಉಲ್ಲಾಳಕ್ಕೆ ವಲಸೆ ಬಂದು ನೆಲಸಿದಳು.
ಅಬ್ಬಕ್ಕ ಸಿಂಹಾಸನವನ್ನು ಏರಿದಾಗ, ಅವಳ ಉಲ್ಲಾಳ ಅಷ್ಟೇನು ವಿಶೇಷವಲ್ಲದ ಸಣ್ಣ ಊರಾಗಿತ್ತು. ಆದರೆ ಅದು ಕರಾವಳಿ ಪ್ರದೇಶವಾಗಿದ್ದುದರಿಂದ, ಅಲ್ಲಿ ಯಾರಾದರೂ ಪರಿಣಾಮಕಾರಿ ಆಡಳಿತವನ್ನು ಮಾಡಿದರೆ, ಅದು ಪ್ರಮುಖ ಪಟ್ಟಣವಾಗಿ ಹೊರಹೊಮ್ಮಬಹುದಾಗಿತ್ತು. ಇದಕ್ಕೆ ಸರಿಯಾಗಿ ಅಬ್ಬಕ್ಕ ಉಲ್ಲಾಳದ ರಾಣಿಯಾಗಿದ್ದಳು. ಉಲ್ಲಾಳದ ಆರ್ಥಿಕತೆ ಅಡಕೆ, ಮೆಣಸು ಹಾಗೂ ಜವಳಿ ಮಾರಾಟದ ಮೇಲೆ ಅವಲಂಬಿತವಾಗಿತ್ತು. ಜೊತೆಗೆ ಅರಬ್ ಹಾಗೂ ಪರ್ಷಿಯಾ ದೇಶಗಳೊಡನೆಯೂ ಆಗಾಗ ವ್ಯಾಪಾರ ನಡೆಯುತ್ತಿತ್ತು. ಉಲ್ಲಾಳ ಬಹಳ ಅನುಕೂಲಕರ ಸ್ಥಾನದಲ್ಲಿತ್ತು. ಪಶ್ಚಿಮ ಘಟ್ಟಗಳಲ್ಲಿ ಉತ್ಪಾದಿಸಿದ ಎಲ್ಲಾ ಸರಕುಗಳನ್ನು ಸಮುದ್ರದ ಮೂಲಕ ಹಡಗುಗಳಲ್ಲಿ ಬೇರೆಬೇರೆ ದೇಶಗಳಿಗೆ ರಫ್ತು ಮಾಡಬಹುದಾಗಿತ್ತು. ಉಲ್ಲಾಳ ವಿಜಯನಗರದ ಅಧೀನ ರಾಜ್ಯ ಕೂಡ ಆಗಿತ್ತು. ಆದರೆ, ಅಬ್ಬಕ್ಕ ರಾಣಿಯಾಗುವ ಹೊತ್ತಿಗೆ, ವಿಜಯನಗರ ಸಾಮ್ರಾಜ್ಯ ದುರ್ಬಲಗೊಳ್ಳುತ್ತಿತ್ತು. ಉಲ್ಲಾಳದಲ್ಲಿ ಮಾತೃಪ್ರಧಾನದ ಸಂಪ್ರದಾಯ ಇದ್ದರೂ, ಆಗಿನ ಕಾಲದಲ್ಲಿ ಮಹಿಳೆಯರಿಗೆ ಅಧಿಕಾರದ ಹುದ್ದೆಗಳನ್ನು ಕೊಡಲು ಹಿಂಜರಿಯುತ್ತಿದ್ದರು. ಇದಕ್ಕಾಗಿ, ಅಬ್ಬಕ್ಕ ಆಡಳಿತವನ್ನು ದೃಢವಾಗಿ ಮಾಡಬೇಕಾಗಿತ್ತು. ದುಡ್ಡು-ಕಾಸಿನ ವಿಚಾರಗಳು, ನ್ಯಾಯ ಒದಗಿಸುವುದು, ವ್ಯಾಪಾರದ ನಿರ್ವಹಣೆಗಳೊಂದಿಗೆ ಯುದ್ಧನೀತಿಯಲ್ಲೂ ಅಬ್ಬಕ್ಕ ದೇವಿ ಪರಿಣತೆಯನ್ನು ಗಳಿಸಿಕೊಂಡಿದ್ದಳು. ಉಲ್ಲಾಳದ ಹಿತ ಕಾಯಲು, ಅರಬ್ ಹಾಗೂ ಸ್ಥಳೀಯ ವ್ಯಾಪಾರಿಗಳೊಡನೆ ಉತ್ತಮ ಸಂಬಂಧಗಳನ್ನು ಅಬ್ಬಕ್ಕ ಕಾಪಾಡಿಕೊಂಡಿದ್ದಳು. ಸುತ್ತಮುತ್ತಲಿನಲ್ಲಿದ್ದ ರಾಜ್ಯಗಳು ಮೇಲಿಂದ ಮೇಲೆ ಉಲ್ಲಾಳದ ಮೇಲೆ ದಂಡೆತ್ತಿ ಬರುತ್ತಿದ್ದವು. ಅವರುಗಳನ್ನು ಕೂಡ ವೀರ ಅಬ್ಬಕ್ಕ ದೇವಿ ಸದೆಬಡೆದು, ರಾಜ್ಯವನ್ನು ನಿಷ್ಕಂಟಕವನ್ನಾಗಿ ಮಾಡುತ್ತಿದಳು. ದೊಡ್ಡ ಸಮಸ್ಯೆಗಳು ಹುಟ್ಟಿಬರುವುದಕ್ಕೂ ಮುನ್ನವೇ, ಉಲ್ಲಾಳ ನೆಲೆಸಿದ್ದ ಸ್ಥಳದ ಸೂಕ್ಷ್ಮತೆಯಿಂದಾಗಿ ಅವಳ ರಾಜ್ಯ, ಪರದೇಶಿಗಳ ಆಕ್ರಮಣಕ್ಕೆ ಗುರಿಯಾಗಬಹುದು ಎಂದು ಅಬ್ಬಕ್ಕ ಚೆನ್ನಾಗಿ ತಿಳಿದಿದ್ದಳು. ಹಾಗಾಗಿಯೇ ಅವಳು ಸೈನಿಕರಿಗೆ ತರಬೇತಿ ನೀಡಿ, ಕೋಟೆಗಳನ್ನು ನಿರ್ಮಿಸಿ, ನೌಕಾಪಡೆಯನ್ನೂ ಬಲಪಡಿಸಿಕೊಂಡಳು. ಇದೇ, ಅವಳು ಮುಂದೆ ಮಾಡಿದ ಸಾಧನೆಗಳಿಗೆ ಅಡಿಪಾಯವನ್ನು ನಿರ್ಮಿಸಿತ್ತು.
ಅಬ್ಬಕ್ಕ ರಾಣಿಯಾಗುವಷ್ಟರಲ್ಲೇ ಪೋರ್ಚುಗೀಸ್ ವ್ಯಾಪಾರಿಗಳು ಭಾರತದಲ್ಲಿ ಕಾಲಿಟ್ಟಾಗಿತ್ತು. 1498ರಲ್ಲೇ ವಾಸ್ಕೋಡಗಾಮ ಕೇರಳದವರೆಗೂ ಪಯಣ ಮಾಡಿದ್ದನು. ಕೆಲವೇ ವರ್ಷಗಳಲ್ಲಿ ಪೋರ್ಚುಗೀಸರು ಭಾರತದೊಡಗಿನ ವ್ಯಾಪಾರದಲ್ಲಿ ಪೂರ್ಣಾಧಿಕಾರವನ್ನು ಸ್ಥಾಪಿಸಲು ಇಚ್ಛಿಸಿದ್ದರು. ಈ ನೆಪದಲ್ಲಿ ಆ ವಿದೇಶಿಗಳು, ಮೆಲ್ಲನೆ ಅಕ್ಕಪಕ್ಕದ ರಾಜ್ಯಗಳ ರಾಜರುಗಳನ್ನು ಅವರತ್ತ ಸೇರಿಸಿಕೊಳ್ಳುವ ಹೊಂಚು ಹಾಕಿದ್ದರು. ಕರ್ನಾಟಕದ ರಾಜ್ಯಗಳನ್ನು ತಮ್ಮ ಕೈವಶವನ್ನಾಗಿಸಿಕೊಳ್ಳಲು ಇಚ್ಛಿಸಿದ್ದವರು ಪೋರ್ಚುಗೀಸರು. ಸ್ಥಳೀಯ ರಾಜರುಗಳು ಅವರ ಆದೇಶಗಳಂತೆ ನಡೆಯದಿದ್ದರೆ ಅವರನ್ನು ಬೆದರಿಸುವುದು, ಶಿಕ್ಷಿಸುವುದು ಮುಂತಾದ ಹಿಂಸಾಚಾರಗಳನ್ನು ಮಾಡುತ್ತಿದ್ದರು. ಆ ವಿದೇಶಿಗಳು ಮಾಡಿದ ಅತ್ಯಾಚಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಉಲ್ಲಾಳದ ಬಂದರಿನಿಂದ ಮೆಣಸು, ಅಕ್ಕಿ, ಅಡಕೆ ಇತ್ಯಾದಿಗಳ ವ್ಯಾಪಾರ ನಡೆಯುತ್ತಿತ್ತು. ಆದರೆ ಪೋರ್ಚುಗೀಸರಿಗೆ ಆ ವ್ಯಾಪಾರಗಳ ಮೇಲೆ ಸಂಪೂರ್ಣ ಅಧಿಕಾರ ಬೇಕಾಗಿತ್ತು. ಉಲ್ಲಾಳದವರಿಗೆ ಅರಬರೊಡನೆಯೂ ಒಳ್ಳೆಯ ಸಂಬಂಧ ಇತ್ತು. ಆದರೆ ಪೋರ್ಚುಗೀಸರಿಗೆ ಇದು ಇಷ್ಟವಿರಲಿಲ್ಲ. ಅರಬರನ್ನು ಹೊರಹಾಕುವುದು ಮತ್ತು ಉಲ್ಲಾಳದ ಬಂದರಿನ ಮೇಲೆ ತಮ್ಮ ಸಂಪೂರ್ಣ ಅಧಿಕಾರವನ್ನು ಸ್ಥಾಪಿಸುವುದು ಪೋರ್ಚುಗೀಸರ ಯೋಜನೆಯಾಗಿತ್ತು. ಪೋರ್ಚುಗೀಸರ ದಬ್ಬಾಳಿಕೆಗೆ ಹೆದರಿದ ಸಣ್ಣಪುಟ್ಟ ಸ್ಥಳೀಯ ರಾಜರುಗಳು ಅವರಿಗೆ ಕಪ್ಪ ಸಲ್ಲಿಸಲು ಸಿದ್ಧರಾದರು. ಆದರೆ ಅಬ್ಬಕ್ಕ ದೇವಿಯೊಬ್ಬಳು ಕಪ್ಪ ಸಲ್ಲಿಸಲು ನಿರಾಕರಿಸಿದಳು. ಇದರಿಂದ ಪೋರ್ಚುಗೀಸರಿಗೆ ಅಬ್ಬಕ್ಕ ದೇವಿಯೊಡನೆ ಶತ್ರುತ್ವ ಹುಟ್ಟಿತು. ಅಬ್ಬಕ್ಕಳಿಗೆ ಬುದ್ಧಿ ಕಲಿಸಬೇಕೆಂದು, ಪೋರ್ಚುಗೀಸರು ಉಲ್ಲಾಳದ ಹಡಗುಗಳನ್ನು ಮುಂದೆಹೋಗದಂತೆ ತಡೆದರು. ಪೋರ್ಚುಗೀಸರು ಅವರ ‘ಕಾರ್ಟಾಸ್’ ಎಂಬ ದಾಖಲೆಯಿಲ್ಲದೆ ಸಾಗುತ್ತಿದ್ದ ಉಲ್ಲಾಳದವರ ಹಡಗುಗಳನ್ನು ತಡೆದು ಶಿಕ್ಷಿಸುತ್ತಿದ್ದರು. ಅರಬ್ ಹಾಗೂ ಪರ್ಷಿಯಾ ದೇಶಗಳೊಡನೆ ಸ್ವತಂತ್ರವಾಗಿ ವ್ಯಾಪಾರ ಮಾಡುತ್ತಿದ್ದ ಉಲ್ಲಾಳದ ವ್ಯಾಪಾರಿಗಳನ್ನು ಈಗ ಕಟ್ಟಿಹಾಕಿದಂತೆ ಆಗಿತ್ತು. ಅಷ್ಟೇ ಅಲ್ಲದೆ, ಅಬ್ಬಕ್ಕ ದೇವಿಯ ಗಂಡನಾಗಿದ್ದ ಲಕ್ಷ್ಮಪ್ಪನನ್ನು ಪೋರ್ಚುಗೀಸರು ಅವರ ಕಡೆಗೆ ಸೇರಿಸಿಕೊಂಡಿದ್ದರು. ಇದರಿಂದ ಉಲ್ಲಾಳ ರಾಜಕೀಯವಾಗಿ ದುರ್ಬಲಗೊಂಡಿತ್ತು. ಅಬ್ಬಕ್ಕ ಪೋರ್ಚುಗೀಸರ ಪೂರ್ಣಾಧಿಕಾರದ ಕನಸನ್ನು ನಾಶಮಾಡುತ್ತಿದ್ದಳು. ಇದರಿಂದ ರೋಷಗೊಂಡ ಪೋರ್ಚಗೀಸರು ಅಬ್ಬಕ್ಕಳೊಡನೆ ಮುಖಾಮುಖಿಯಾಗಿ ಯುದ್ಧಮಾಡಬೇಕೆಂದು ಇಚ್ಛಿಸಿದರು.
ಮೊದಲನೆಯದಾಗಿ, ‘ಕಾರ್ಟಾಸ್’ ಎಂಬ ದಾಖಲೆ ಇಲ್ಲದ ಉಲ್ಲಾಳದ ಹಡಗುಗಳನ್ನು ತಡೆದು, ಅರಬ್ ಹಾಗೂ ಉಳ್ಳಾಲದ ವ್ಯಾಪಾರ ಸಂಬಂಧಗಳಲ್ಲಿ ಮೂಗು ತೂರಿಸುತ್ತಿದ್ದ, ಪೋರ್ಚುಗೀಸರನ್ನು ನೋಡಿ ಅಬ್ಬಕ್ಕಳಿಗೆ ಸಿಟ್ಟು ಬಂದಿತ್ತು. ಹೀಗಾಗಿ, ಅವಳು ತನ್ನ ರಾಜ್ಯದ ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಪೋರ್ಚುಗೀಸರೊಡನೆ ಹೋರಾಡಿದಳು. ಅಬ್ಬಕ್ಕ ದೇವಿ ತನ್ನ ನೌಕಾ ಪಡೆಗೆ ಪೋರ್ಚುಗೀಸರ ಹಡಗುಗಳ ಮೇಲೆ ದಾಳಿಮಾಡುವಂತೆ ಆಜ್ಞೆಮಾಡಿದಳು. ಪೋರ್ಚುಗೀಸರಿಗೆ ಉಲ್ಲಾಳದಂತಹ ಸಣ್ಣ ರಾಜ್ಯ ಈ ರೀತಿಯಲ್ಲಿ ಹೋರಾಡುವುದನ್ನು ನೋಡಿ ಆಶ್ಚರ್ಯವಾಯಿತು. ಉಲ್ಲಾಳವನ್ನೇ ನಾಶಮಾಡುವ ಒಂದು ದಂಡಯಾತ್ರೆಯ ತಯಾರಿಯನ್ನು ಪೋರ್ಚುಗೀಸರು ಮಾಡಿದರು.
1568ರಲ್ಲಿ ಉಲ್ಲಾಳವನ್ನು ನಾಶಮಾಡಬೇಕೆಂದು ಜನರಲ್ ಜೊವೊ ಅವರ ನೇತೃತ್ವದಲ್ಲಿ ಪೋರ್ಚುಗೀಸರು ಆಕ್ರಮಣವನ್ನು ಮಾಡಿ, ಉಲ್ಲಾಳದ ಬಂದರನ್ನು ವಶಪಡಿಸಿಕೊಂಡರು. ಅಬ್ಬಕ್ಕ ಹಾಗೂ ಅವಳ ಜನರನ್ನು ಪೋರ್ಚುಗೀಸರ ಸೈನ್ಯ ಹೆದರಿಸಿ, ಬಚ್ಚಿಟ್ಟುಕೊಳ್ಳುವ ಹಾಗೆ ಮಾಡಿತ್ತು. ಸ್ವಲ್ಪ ಸಮಯ ಉಲ್ಲಾಳ ನಿಜವಾಗಿಯೂ ಸೋತಿತು ಎಂಬಂತೆ ಇತ್ತು. ಆದರೆ ಅಬ್ಬಕ್ಕ ಹೆದರುವಂತಹಳಾಗಿರಲಿಲ್ಲ. ಸೋಲಲು ನಿರಾಕರಿಸಿದ ಅಬ್ಬಕ್ಕ ತನ್ನ ಸೈನಿಕರನ್ನು ಪುನಃ ಒಟ್ಟುಗೂಡಿಸಿದಳು. ರಾತ್ರಿಯ ಹೊತ್ತಿನಲ್ಲಿ ಅವಳ ಸೈನಿಕರನ್ನು, ಪ್ರಜೆಗಳನ್ನು, ಬೆಸ್ತರನ್ನು ಮತ್ತು ಮಹಿಳೆಯರನ್ನು ಕೂಡ ಸೇರಿಸಿಕೊಂಡು ಪೋರ್ಚುಗೀಸರ ವಿರುದ್ಧ ಪ್ರತಿದಾಳಿ ಮಾಡಿದಳು. ಕತ್ತಲೆಯ ಹಾಗೂ ತಮ್ಮ ಭೂಪ್ರದೇಶದ ಜ್ಞಾನವನ್ನು ಉಪಯೋಗಿಸಿಕೊಂಡ ಅಬ್ಬಕ್ಕಳ ಪಡೆ, ಪೋರ್ಚುಗೀಸರನ್ನು ಸದೆಬಡಿಯಿತು. ಇದಾದ ನಂತರ ಮುಂದುವರೆದ ಯುದ್ಧದಲ್ಲಿ ಅಬ್ಬಕ್ಕ, ಜನರಲ್ ಜೊವೊ ಅವರನ್ನೇ ಕೊಂದು ವಿಜಯಗಳಿಸಿದಳು.
ಅಬ್ಬಕ್ಕಳಿಗೆ ತನ್ನ ವಿಜಯ ಕೆಲವೇ ದಿನ ಇರುತ್ತದೆ, ಪುನಃ ಪೋರ್ಚುಗೀಸರು ದಾಳಿ ಮಾಡುತ್ತಾರೆ ಎಂಬ ಅನುಮಾನ ಇದ್ದೇ ಇತ್ತು. ಹಾಗಾಗಿ ಅವಳು ಅಕ್ಕಪಕ್ಕದ ರಾಜರುಗಳೊಡನೆ ಮೈತ್ರಿಯನ್ನು ಕೋರಿದಳು. ಅಬ್ಬಕ್ಕ, ಕಾಲಿಕಟ್ಟಿನ ಜಾಮೊರಿನ್ ಒಡನೆ ಮಿತ್ರತ್ವವನ್ನು ಬೆಳಸಿ, ಅವನ ನೌಕಾಪಡೆಯನ್ನು ತನ್ನ ಕಡೆಗೆ ಮಾಡಿಕೊಂಡಳು. ಅವಳು ಬಿಜಾಪುರದ ಸುಲ್ತಾನನೊಡನೆಯೂ ಸಂಬಂಧವನ್ನು ಬೆಳಸಿಕೊಂಡಳು. ಶಸ್ತ್ರಾಸ್ತ್ರಗಳ ಗಳಿಕೆಗೆ ಸಹಾಯ ಮಾಡಿದ ಅರಬ್ ವ್ಯಾಪಾರಿಗಳಿಗೆ, ವ್ಯಾಪಾರ ಮುಂದುವರೆಸುವಂತೆ ಅಬ್ಬಕ್ಕ ಅಭಯವನ್ನು ನೀಡಿದಳು.
1568ರಲ್ಲಿ ಸೋಲಿನಿಂದ ಅವಮಾನಗೊಂಡ ಪೋರ್ಚುಗೀಸರು, ಪದೇಪದೇ ಉಲ್ಲಾಳದ ಮೇಲೆ ದಾಳಿ ನಡೆಸಿದರು. ಪೋರ್ಚುಗೀಸರು ಉಲ್ಲಾಳದ ವ್ಯಾಪಾರಿಗಳ ಮೇಲೂ ಕಣ್ಣು ಇಟ್ಟಿರುತ್ತಿದ್ದರು. ಅಬ್ಬಕ್ಕ ಇದಕ್ಕೆಲ್ಲಾ ತನ್ನ ಗೆರಿಲ್ಲಾ ತಂತ್ರಗಳಿಂದ ಉತ್ತರ ನೀಡಿದಳು. ಅವಳ ಸಣ್ಣಸಣ್ಣ ದೋಣಿಗಳು ವೇಗದಿಂದ ಸಾಗಿ, ಪೋರ್ಚುಗೀಸರ ಯುದ್ಧ ಹಡಗುಗಳಿಗೆ ಕಿರುಕುಳ ನೀಡಿದವು. ಆದರೆ ಸವಾಲುಗಳು ಹೆಚ್ಚುತ್ತಾಹೋದವು. ಅಬ್ಬಕ್ಕಳ ಗಂಡನೇ ಆಗಿದ್ದ ಲಕ್ಷ್ಮಪ್ಪ, ಪೋರ್ಚುಗೀಸರೊಡನೆ ಸೇರಿ, ಉಲ್ಲಾಳದಲ್ಲಿ ನಡೆಯುತ್ತಿದ್ದ ಎಲ್ಲವನ್ನೂ ಗುಪ್ತಚರನಾಗಿ ಅವರಿಗೆ ತಿಳಿಸುತ್ತಿದ್ದನು. ಇದರಿಂದ ಅಬ್ಬಕ್ಕಳಿಗೆ ಬಹಳ ಕಷ್ಟ ಉಂಟಾಯಿತು. ನಂತರ ನಡೆದ ಒಂದು ಸಂಚಿನಲ್ಲಿ, ಅಬ್ಬಕ್ಕಳಿಗೆ ಒಳಗಿನಿಂದಲೇ ದ್ರೋಹಮಾಡಲಾಯಿತು. ಪೋರ್ಚುಗೀಸರ ಭರವಸೆಗಳಿಂದ ಆಕರ್ಷಿತರಾದ ಕೆಲವು ಮುಖಂಡರು ಅವಳ ಯೋಜನೆಗಳ ಬಗ್ಗೆ ಪೋರ್ಚುಗೀಸರಿಗೆ ಮುಂಚಿತವಾಗೇ ತಿಳಿಸಿಬಿಟ್ಟಿದ್ದರು. ನಂತರದ ಹೋರಾಟದಲ್ಲಿ ಅಬ್ಬಕ್ಕಳನ್ನು ಸೆರೆ ಹಿಡಿಯಲಾಯಿತು. ಸೆರೆಮನೆಯಲ್ಲಿ ಕೂಡ ಅಬ್ಬಕ್ಕ ಪೋರ್ಚುಗೀಸರಿಗೆ ಹೆದರಲಿಲ್ಲ. ಧೈರ್ಯಗೆಡದೆ ತನ್ನ ಹೋರಾಟವನ್ನು ಮುಂದುವರೆಸಿದಳು. ಕೊನೆಗೂ ರಾಣಿ ಅಬ್ಬಕ್ಕ, ಪೋರ್ಚುಗೀಸರ ಆಜ್ಞೆಗಳನ್ನು ಧಿಕ್ಕರಿಸಿಯೇ ಸತ್ತಳು. ಎಂದೂ ಶರಣಾಗತಿಯ ಒಪ್ಪಂದಕ್ಕೆ ಸಹಿ ಹಾಕದೆ, ಎಂದಿಗೂ ಪೋರ್ಚುಗೀಸರಿಗೆ ಗೌರವ ಸಲ್ಲಿಸದೆ, ಅಜೇಯಳಾಗಿ, ತನ್ನ ಮಾತೃಭೂಮಿಗಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ಮಹಾತಾಯಿ ರಾಣಿ ಅಬ್ಬಕ್ಕ ದೇವಿ.
ಅಬ್ಬಕ್ಕ ದೇವಿ ಮತ್ತು ಪೋರ್ಚುಗೀಸರ ನಡುವೆ ನಡೆದ ಯುದ್ಧಗಳು ಬರೀ ಹೋರಾಟಗಳಾಗಿರಲಿಲ್ಲ. ಸಾಮ್ರಾಜ್ಯಶಾಹಿ ಶಕ್ತಿಗಳ ಮುಂದೆ ಬಗ್ಗದೆ ನಿಂತು, ಭಾರತೀಯರ ಸ್ವಾತಂತ್ರ್ಯದ ಘನತೆಯನ್ನು ಎತ್ತಿಹಿಡಿಯುವ ಪ್ರಯತ್ನಗಳಾಗಿದ್ದವು. ಅಬ್ಬಕ್ಕಳಿಗೆ ಅವಳ ಗಂಡನೇ ಮತ್ತು ಅವಳ ಪ್ರಜೆಗಳೇ ದ್ರೋಹ ಬಗೆದರೂ, ಅವಳು ಎಂದೂ ತಲೆಬಾಗಿಸಲಿಲ್ಲ, ಮಾತೃಭೂಮಿಯನ್ನು ಬಿಟ್ಟುಕೊಡಲಿಲ್ಲ. ಅಬ್ಬಕ್ಕಳ ಉಲ್ಲಾಳ ಚಿಕ್ಕದಾಗಿದ್ದರೂ, ಅವಳ ಹೋರಾಟದ ಆತ್ಮ ವಿಶಾಲವಾಗಿತ್ತು. 'ನಿಜವಾದ ಶಕ್ತಿ ಇರುವುದು ದೊಡ್ಡ ದೊಡ್ಡ ಸಾಮ್ರಾಜ್ಯಗಳಲಲ್ಲ, ಬದಲಾಗಿ ಅದು ಇರುವುದು ಹೋರಾಡುವ ಧೈರ್ಯದಲ್ಲಿ,' ಎಂಬುದೇ ರಾಣಿ ಅಬ್ಬಕ್ಕ ದೇವಿಯ ಹೋರಾಟದ ಬದುಕಿನ ಪಾಠ.
-೦-೦-೦-
No comments:
Post a Comment