೧) ಓಂ ಗಣೇಶಯನಮಃ
ಓಂ ದಾಸ ಶ್ರೇಷ್ಠಯನಮಃ
ಓಂ ಪುರಂದರ ಗುರುವೇನಮಃ (ಸ, ಪ, ಸ ಧಾಟಿಯಲ್ಲಿ)
*******
ಶ್ರೀ ಪುರಂದರ ದಾಸರು ಎಂಬ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮಗಳ ಇಂದಿನ ಪ್ರಯತ್ನಕ್ಕೆ ತಮ್ಮಂಥ ಗುರುಹಿರಿಯರ ಆಶೀರ್ವಾದವು ಅತಿ ಮುಖ್ಯವಾದದ್ದು. ಹರಿಕಥೆಯ ಆರಂಭವನ್ನು ಶ್ರೀ ಪುರಂದರದಾಸರ ಸ್ಮರಣೆಯೊಂದಿಗೆ ಮಾಡೋಣ.
*********
ದಾಸರೆಂದರೆ ಪುರಂದರ ದಾಸರಯ್ಯಾ (ಹಾಡು)
*********
ನಮ್ಮ ಭಾರತ ದೇಶವನ್ನು ಕಟ್ಟಿ ಬೆಳಸಿದವರು ದಾಸ ಶ್ರೇಷ್ಠರುಗಳು. ದಕ್ಷಿಣದಲ್ಲಿ ಪುರಂದರದಾಸರು, ತ್ಯಾಗರಾಜರು, ಉತ್ತರದಲ್ಲಿ ತುಳಸಿದಾಸರು, ಮೀರಾಬಾಯಿ, ಪಶ್ಚಿಮದಲ್ಲಿ ಸಂತ ತುಕಾರಾಂ, ಏಕನಾಥರು, ಮತ್ತು ಪೂರ್ವದಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು ದಾಸ ಶ್ರೇಷ್ಠರುಗಳ ಸಾಲಿನಲ್ಲಿ ಪ್ರಮುಖರು. ಆದರೆ ನಾವುಗಳು ಈಗ ಈ ದಾಸ ಶ್ರೇಷ್ಠರುಗಳ ವಾಣಿಯನ್ನು ಮರೆತಿದ್ದೇವೆ. ಪ್ರಪಂಚ ವಿನಾಶದತ್ತ ಸಾಗುತ್ತಿದೆಯೋ ಎಂದೆನಿಸುತ್ತಿದೆ. ಪ್ರಪಂಚ ರಶಿಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧಗಳ ಭೀತಿಯಲ್ಲಿ ತತ್ತರಿಸುತ್ತಿದೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದಿರುವ ಹಿಂಸಾಚಾರ ನಮ್ಮನ್ನು ಆತಂಕದತ್ತ ತಳ್ಳಿದೆ. ನಮ್ಮ ಜನಗಳು ಸಮಚಿತ್ತ ಮತ್ತು ಸಮತಾಭಾವಗಳನ್ನು ಮರೆಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಮಗಿರುವ ಏಕೈಕ ಸನ್ಮಾರ್ಗವೆಂದರೆ ನಮ್ಮ ದಾಸರುಗಳು ತೋರಿಸಿದ ಮಾರ್ಗ. ಆದುದರಿಂದ ಇಂದಿನ ಪುರಂದರ ಆರಾಧನೆಯ ಈ ಕಾರ್ಯಕ್ರಮ ಎಂದಿಗಿಂತಲೂ ಹೆಚ್ಚು ಅವಶ್ಯಕವಾದದ್ದು ಎಂದೇ ಹೇಳಬೇಕಾಗುತ್ತದೆ.
***********
ಪುರಂದರ ದಾಸರು ಜನಿಸಿದ್ದು ಪುಣೆ ಸಮೀಪದ ಪುರಂದರಗಡದಲ್ಲಿ ಎನ್ನುತ್ತದೆ ಒಂದು ಇತಿಹಾಸ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಪುರಂದರದಾಸರು ಜನಿಸಿದ್ದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಅರಗ ಗ್ರಾಮ ಎಂದು ತಿಳಿದುಬಂದಿದೆ. ಪುರಂದರದಾಸರ ಜೀವನ ಮತ್ತು ಸಾಧನೆಯ ಸಾಧನ ಕ್ಷೇತ್ರವಾಗಿದ್ದು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಇಂದಿನ ಹಂಪಿ ಪಟ್ಟಣ.
ಪುರಂದರ ದಸರಾ ಪೂರ್ವಾಶ್ರಮದ ಹೆಸರು ಸೀನಪ್ಪ ನಾಯಕ. ಇಹಲೋಕದ ಲೋಭ-ಮೋಹಗಳ ದಾಸನಾಗಿದ್ದ ಸೀನಪ್ಪ ನಾಯಕ ವಜ್ರ-ವೈಡೂರ್ಯಗಳ ವ್ಯಾಪಾರಿ. ಮುಗ್ಧ ಜನರುಗಳನ್ನು ವಂಚಿಸಿ ಅಪಾರ ಹಣವನ್ನು ಗಳಿಸಿದ್ದ ಸೀನಪ್ಪ ನಾಯಕ ನವಕೋಟಿ ನಾರಾಯಣನೆಂದೇ ಹೆಸರುವಾಸಿಯಾಗಿದ್ದವನು. 'ಎಂಜಲು ಕೈಯಲ್ಲಿ ಕಾಗೆ ಹೊಡೆಯೊಲ್ಲ' ಎಂಬ ಗಾದೆಯು ಕಡುಜಿಪುಣನಾದ ಸೀನಪ್ಪ ನಾಯಕನನ್ನು ನೋಡಿ ಸೃಷ್ಟಿಸಿದ ಗಾದೆಯೇ ಆಗಿತ್ತು. ದೇವರಪೂಜೆಗೆ ಹಚ್ಚಿದ್ದ ಊದಿನ ಕಡ್ಡಿಯನ್ನು, ಪೂಜೆಯನಂತರ ಆರಿಸಿ ನಾಳಿನ ಪೂಜೆಗೆ ಇಟ್ಟುಕೊಳ್ಳುವಷ್ಟು ಜಿಪುಣನಾಗಿದ್ದವನು ಸೀನಪ್ಪ ನಾಯಕ. ಬೇಳೆ ಹೆಚ್ಚು ಬೇಯಿಸಿ ಸಾರು-ಹುಳಿಗಳನ್ನು ಮಾಡಿದರೆ, ಬೇಗನೆ ಹಳಸಿಹೋಗುತ್ತದೆ, ಬೇಳೆಯನ್ನು ಕಮ್ಮಿ ಬೇಯಿಸಿದರೆ ಸಾರು-ಹುಳಿಗಳನ್ನು ನಾಲ್ಕಾರು ದಿನ ಇಟ್ಟುಕೊಂಡು ತಿನ್ನಬಹುದು ಎಂದು ಹೆಂಡತಿಗೆ ಮತ್ತೆ ಮತ್ತೆ ಭೋದಿಸುತ್ತಿದ್ದ ಜಿಪುಣಾಗ್ರೇಸರ ಸೀನಪ್ಪ ನಾಯಕ.
ಜಿಪುಣ ಸೀನಪ್ಪ ನಾಯಕನ ಹೆಂಡತಿಯಾದ ಸರಸ್ವತಿಯಮ್ಮ ಮಹಾನ್ ದೈವಭಕ್ತೆ. ದಿನ ನಿತ್ಯವನ್ನು ನಾರಾಯಣನ ಸ್ಮರಣೆಯಲ್ಲೇ ಕಳೆಯುತ್ತಿದ್ದವಳು ಸರಸ್ವತಿ.
********************
ನಾರಾಯಣ ನಿನ್ನ ನಾಮದ (ಹಾಡು)
*********************
ಪತಿಯ ಕಣ್ಣುತಪ್ಪಿಸಿ ದಾನ-ಧರ್ಮಗಳನ್ನು ಮಾಡುತ್ತಿದ್ದ ಧಾರಾಳಿ ಸರಸ್ವತಿ. ಪತಿಗೆ ಸನ್ಮಾರ್ಗವನ್ನು ತೋರಿಸು ಎಂದು ಪ್ರತಿನಿತ್ಯ ಬೇಡುತ್ತಿದ್ದವಳು ಸರಸ್ವತಿ.
***********************
ಹೀಗಿರುವಾಗ ಸೀನಪ್ಪ ನಾಯಕನ ವಜ್ರ-ವೈಡೂರ್ಯಗಳ ಅಂಗಡಿಗೆ ಬ್ರಾಹ್ಮಣನೊಬ್ಬ ಬರುತ್ತಾನೆ. ಮಗನಿಗೆ ಉಪನಯನವನ್ನು ಮಾಡಬೇಕು, ಏನಾದರು ಸಹಾಯ ಮಾಡಿ ಎಂದು ಸೀನಪ್ಪನನ್ನು ಬೇಡುತ್ತಾನೆ. ಜಿಪುಣಾಗ್ರೇಸನಾದ ಸೀನಪ್ಪ ಒಂದು ಸವಕಲು ಕಾಸನ್ನು ಕೊಡುವುದಿಲ್ಲ, ಇಲ್ಲಿಂದ ಹೋರಡಿ ಎಂದು ಗದರುತ್ತಾನೆ.
ಅದೇ ಬ್ರಾಹ್ಮಣ, ಸೀನಪ್ಪನು ಇಲ್ಲದಿದ್ದ ಸಮಯದಲ್ಲಿ ಸೀನಪ್ಪನ ಮನೆಗೆ ಬಂದು ಸೀನಪ್ಪನ ಹೆಂಡತಿಯಾದ ಸರಸ್ವತಿ ಅಮ್ಮಳನ್ನು ಬೇಡುತ್ತಾನೆ. ನನ್ನ ಮಗನ ಉಪನಯನವನ್ನು ಮಾಡಬೇಕು. ಏನಾದರು ಸಹಾಯ ಮಾಡಿ ಎಂದು ಅಂಗಲಾಚುತ್ತಾನೆ. ನಿಮಗೆ ಸಹಾಯಮಾಡುವ ಮನಸಿದ್ದರು, ನನ್ನದು ಎಂಬುದು ಏನೂ ಇಲ್ಲ, ಪತಿಯನ್ನು ಕೇಳದೆ ಏನನ್ನೂ ಕೊಡಲಾರೆ ಎನ್ನುತ್ತಾಳೆ ಸರಸ್ವತಿ. 'ಹಾಗೇಕೆ ಹೇಳುವಿರಿ ಅಮ್ಮ, ನೀವು ತವರಿನಿಂದ ತಂದಿರುವ ಮೂಗುತಿಯನ್ನೇ ಕೊಡಿ ಎನ್ನುತ್ತಾನೆ ಬಡ ಬ್ರಾಹ್ಮಣ. ಅದೇ ಕ್ಷಣ ತನ್ನ ಮೂಗುತಿಯನ್ನು ಬಿಚ್ಚಿ ಅದನ್ನು ಬ್ರಾಹ್ಮಣನಿಗೆ ದಾನ ಮಾಡುತ್ತಾಳೆ ಸರಸ್ವತಿ.
ಸರಸ್ವತಿ ನೀಡಿದ ಮೂಗುತಿಯನ್ನು ತೆಗೆದುಕೊಂಡು ನೇರವಾಗಿ ಬ್ರಾಹ್ಮಣ ಹೊರಟಿದ್ದು ಸೀನಪ್ಪ ನಾಯಕನ ಅಂಗಡಿಯ ಕಡೆಗೆ. 'ನಾನೀಗ ಭಿಕ್ಷೆಯನ್ನು ಬೇಡುತ್ತಿಲ್ಲ. ಈ ಮೂಗುತಿಯನ್ನು ಮಾರಲು ಬಂದಿದ್ದೇನೆ, ಎಷ್ಟು ಹಣ ನೀಡುವಿರಿ ಎಂದು ಸೀನಪ್ಪನನ್ನು ಕೇಳುತ್ತಾನೆ ಬಡ ಬ್ರಾಹ್ಮಣ. ಮೂಗುತಿಯನ್ನು ನೋಡಿದ ತಕ್ಷಣ ಸೀನಪ್ಪನಿಗೆ ಅದು ತನ್ನ ಹೆಂಡತಿಯದೆ ಮೂಗುತಿ ಎಂಬ ಅನುಮಾನ ಬರುತ್ತದೆ. ಮೂಗುತಿಯನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಟು ಬೀಗ ಹಾಕಿದ ಸೀನಪ್ಪ ಓಡಿದ್ದು ಮನೆಯ ಕಡೆಗೆ.
'ಸರಸ್ವತಿ, ಸರಸ್ವತಿ' ಎಂದು ಕೂಗುತ್ತಲೇ ಬಂದ ಗಂಡನನ್ನು ನೋಡಿ ಸರಸ್ವತಿ ಭಯಭೀತಳಾಗುತ್ತಾಳೆ. 'ನಿನ್ನ ಮೂಗುತಿ ಎಲ್ಲಿ, ತೋರಿಸು' ಎಂದು ಘರ್ಜಿಸಿದ ಪತಿಯ ಕೋಪಕ್ಕೆ ತತ್ತರಿಸಿದ ಸರಸ್ವತಿ, ದೇವರಕೋಣೆಯನ್ನು ಸೇರುತ್ತಾಳೆ. ಪತಿಯ ಕೋಪದಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗ ಸಾಯುವುದೊಂದೇ ಎಂದು ನಿರ್ಧರಿಸಿದ ಸರಸ್ವತಿ 'ಪಾಂಡುರಂಗ.....ನಿನ್ನ ಪಾದವೇ ಗತಿ' ಎನ್ನುತ್ತಾ ವಿಷವನ್ನು ಕುಡಿಯಲು ಮುಂದಾಗುತ್ತಾಳೆ. ಅದೇ ಕ್ಷಣದಲ್ಲಿ ಠನ್ ಎಂಬ ಶಬ್ದದೊಂದಿಗೆ ಸರಸ್ವತಿಯ ಮೂಗುತಿ ವಿಷದ ಬಟ್ಟಲೊಳಗೆ ಬಂದು ಬೀಳುತ್ತದೆ. ಇದು ಪಾಂಡುರಂಗನ ಪವಾಡವೇ ಎಂದು ಭಾವಿಸಿದ ಸರಸ್ವತಿ, ಮೂಗುತಿಯನ್ನು ಪತಿಯಾದ ಸೀನಪ್ಪನಿಗೆ ನೀಡುತ್ತಲೇ, ಮೂಗುತಿಯನ್ನು ನೋಡಿ ಆಶ್ಚರ್ಯಗೊಂಡ ಸೀನಪ್ಪ ಆಗ ಓಡಿದ್ದು ತನ್ನ ಅಂಗಡಿಯ ಕಡೆಗೆ. ಅಂಗಡಿಯಲ್ಲಿ ಆ ಬಡ ಬ್ರಾಹ್ಮಣ ಇರುವುದಿಲ್ಲ. ಅತಾತುರವಾಗಿ ತನ್ನ ಕಬ್ಬಿಣದ ಪೆಟ್ಟಿಗೆಯನ್ನು ತೆರೆದ ಸೀನಪ್ಪ ನಾಯಕನಿಗೆ ಅಲ್ಲಿ ಆ ಬ್ರಾಹ್ಮಣ ಕೊಟ್ಟಿದ್ದ ಮೂಗುತಿ ಕಾಣುವುದಿಲ್ಲ. ಸೀನಪ್ಪನಿಗೆ ಪರಮಾಶ್ಚರ್ಯವಾಗಿರುತ್ತದೆ.
ಆ ಬಡ ಬ್ರಾಹ್ಮಣನು ಪುರಂದರ ವಿಠ್ಠಲನ ದೇವಸ್ಥಾನದ ಗರ್ಭಗುಡಿಯ ಕಡೆಗೆ ಹೋಗಿದ್ದಾಗಿ ಅಂಗಡಿಯ ಕೆಲಸಗಾರರು ತಿಳಿಸುತ್ತಾರೆ. ಪತ್ನಿಯಾದ ಸರಸ್ವತಿಯೊಂದಿಗೆ ಸೀನಪ್ಪ ನಾಯಕ ಪಾಂಡುರಂಗನ ಗುಡಿಗೆ ಹೋಗುತ್ತಾನೆ. ಗರ್ಭಗುಡಿಯಲ್ಲಿ ಸರಸ್ವತಿಗೆ ಆ ಬಡ ಬ್ರಾಹ್ಮಣ ಕಾಣಿಸುತ್ತಾನೆ, ಸೀನಪ್ಪನಿಗೆ ಕಾಣಿಸುವುದಿಲ್ಲ. ಜ್ಞಾನೋದಯವಾದ ಸೀನಪ್ಪ ನಾಯಕ ತನ್ನ ಎಲ್ಲ ಧನ-ಕನಕಗಳನ್ನು ಬಡಬಗ್ಗರಿಗೆ ದಾನ ಮಾಡುತ್ತಾನೆ. ಹೆಂಡತಿ ಕೊಟ್ಟ ತಂಬೂರಿ ಮತ್ತು ದಂಡವನ್ನು ಹಿಡಿದ ಸೀನಪ್ಪ ನಾಯಕ ಪುರಂದರ ವಿಠ್ಠಲನ ಧ್ಯಾನ ಮಾಡುತ್ತ ಗುರುಗಳಾದ ವ್ಯಾಸರಾಯರ ಆಶ್ರಮಕ್ಕೆ ಹೊರಡುತ್ತಾನೆ.
******************
ಆದದ್ದೆಲ್ಲಾ ಒಳಿತೇ ಆಯಿತು (ಹಾಡು)
********************
ಗುರುಗಳಾದ ವ್ಯಾಸರಾಯರಿಂದ ದಾಸ ಧೀಕ್ಷೆಯನ್ನು ಸ್ವೀಕರಿಸಿದ ಸೀನಪ್ಪ, ಶ್ರೀ ಪುರಂದರ ದಾಸರೆಂದು ಮರುನಾಮಕರಣಗೊಳ್ಳುತ್ತಾರೆ. ನವಕೋಟಿ ನಾರಾಯಣರೆಂದು ಮೆರೆದೆದಿದ್ದ ಸೀನಪ್ಪ, ಪುರಂದರದಾಸರಾಗಿ ಹಿಡಿದಿದ್ದು ಮಧುಕರವೃತ್ತಿಯನ್ನು.
******************
ಮಧುಕರವೃತ್ತಿ ನನ್ನದು (ಹಾಡು)
******************
ದಂಡಿಗೆ-ಬೆತ್ತಗಳನ್ನು ಹಿಡಿದು ಬರಿಗಾಲಲ್ಲಿ ಮನೆ ಮನೆಗಳಿಗೆ ತೆರಳುತ್ತಾ, ಹರಿನಾಮದ ಸಾರವನ್ನು ಸಾರುತ್ತಾ ಭಿಕ್ಷೆ ಸ್ವೀಕರಿಸುವುದೇ ಮಧುಕರ ವೃತ್ತಿಯಾಗಿತ್ತು ಪುರಂದರದಾಸರಿಗೆ.
**************
ಹರಿಕಥೆ ಅಂದ ಮೇಲೆ ಒಂದು ಉಪಕಥೆ ಇರಲೇ ಬೇಕು. ಈಗ ಒಂದು ಉಪಕಥೆ. ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ಕುರುಡನು ಇದ್ದನು. ಅವನು ಪ್ರತಿದಿನ ರಾತ್ರಿ ಸಮಯದಲ್ಲಿ ಓಡಾಡುವಾಗ ಬೆಳಕಿನ ಲ್ಯಾಟಿನ್ ಒಂದನ್ನು ಹಿಡಿದು ಓಡಾಡುತ್ತಿದ್ದನು. ಊರಿನ ಜನರೆಲ್ಲಾ ಅವನ ಪೆದ್ದತನವನ್ನು ನೋಡಿ ನಗುತ್ತಿರುತ್ತಾರೆ. ಒಬ್ಬ ಬುದ್ಧಿವಂತ ಆ ಕುರುಡನನ್ನು ಕೇಳಿಯೇ ಬಿಡುತ್ತಾನೆ. ಅಪ್ಪಾ ಕುರುಡ, ನಿನಗೆ ಕಣ್ಣೇ ಕಾಣದು. ನೀನು ಬೆಳಕಿನ ಲ್ಯಾಟಿನ್ ಹಿಡಿದು ಏನು ಪ್ರಯೋಜನ? ಕುರುಡು ನಕ್ಕು ಉತ್ತರಿಸುತ್ತಾ, ಈ ಬೆಳಕಿನ ಲ್ಯಾಟಿನ್ ಕಣ್ಣು ಕಾಣದ ನನಗಾಗಿ ಅಲ್ಲ. ಕಣ್ಣಿದ್ದೂ ಕುರುಡರಂತೆ ವರ್ತಿಸುವ ತಮ್ಮಂತಹವರು ನನಗೆ ಡಿಕ್ಕಿ ಹೊಡೆಯದಿರಲಿ ಎಂದು ಎಂದು ಉತ್ತರಿಸುತ್ತಾನೆ.
ಹೌದು, ನಮ್ಮಲ್ಲಿ ಹಲವರು ಕಣ್ಣಿದ್ದೂ ಕುರುಡುರು. ನಾನು, ನನ್ನದು ಎಂಬ ಅಂಧಕಾರದಲ್ಲಿ ಮುಳುಗಿರುವವರೆಲ್ಲಾ ಕಣ್ಣಿದ್ದು ಕುರುಡರೇ. ಹರಿನಾಮದ ಸ್ಮರಣೆಯನ್ನು ಮರೆತು, ಪ್ರಪಂಚದ ಲೋಭ-ಮೋಹಗಳಿಗೆ ತುತ್ತಾಗಿ, ಬರೀ ಪ್ರಾಪಂಚಿಕ ಸುಖಗಳನ್ನು ಅನುಭವಿಸುತ್ತಾ ಕಾಲಹರಣ ಮಾಡುತ್ತಿರುವರು ಕಣ್ಣಿದ್ದೂ ಕುರುಡರೇ. ಇಂತಹ ಕಣ್ಣಿರುವ ಕುರುಡರಿಗಾಗೇ ಪುರಂದರದಾಸರು ಹಾಡಿರುವುದು.
***********************
ಕುರುಡು ನಾಯಿ ಸಂತೆಗೆ ಬಂತಂತೆ (ಹಾಡು)
********************
ವೇದೋಪನಿಷತ್ತುಗಳು ಸಂಸ್ಕೃತದಲ್ಲಿದ್ದು , ಅವುಗಳನ್ನು ಅರ್ಥಮಾಡಿಕೊಳ್ಳುವುದು ಜನಸಾಮಾನ್ಯರಿಗೆ ಕಷ್ಟ. ವೇದೋಪನಿಷತ್ತುಗಳ ಸಾರವನ್ನು ಸರಳ ಕನ್ನಡದಲ್ಲಿ ಜನ ಸಾಮಾನ್ಯರಿಗೆ ಉಣಬಡಿಸಿದವರು ಪುರಂದರದಾಸರು.
ಮಾನವ ಜನ್ಮ ದೊಡ್ಡದ್ದು..... , ಈಸಬೇಕು, ಇದ್ದು ಜೈಸಬೇಕು ....... , ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ....... , ಇವುಗಳೆಲ್ಲಾ ದಾಸರು ನಮ್ಮಗಳಿಗೆ ಉಣಬಡಿಸಿರುವ ವೇದೋಪನಿಷತ್ತುಗಳ ಸಾರವೇ.
********************************
ಪುರಂದರದಾಸರನ್ನು ನಾವು ಕರ್ನಾಟಕ ಸಂಗೀತ ಪಿತಾಮಹ ಎಂದು ಗೌರವಿಸುತ್ತೇವೆ. ಭಕ್ತಿಯೇ ಪ್ರಧಾನವಾದ ಕರ್ನಾಟಕ ಸಂಗೀತವನ್ನು ಕಟ್ಟಿಬೆಳೆಸಿದವರು ಪುರಂದರದಾಸರು. ಕರ್ನಾಟಕ ಸಂಗೀತದ ಮೊದಲ ಪಾಠಕ್ಕೆ ದಾಸರು ಆರಿಸಿಕೊಂಡದ್ದು ಮಾಯಾಮಾಳವ ಗೌಳ ರಾಗ. ಸರಳೆ, ಜಂಟಿವರಸೆ, ಪಿಳ್ಳಾರಿ ಗೀತೆ ಮತ್ತು ಅಲಂಕಾರಗಳ ಪಾಠಗಳನ್ನು ರಚಿಸಿ ಭೋದಿಸಿದವರೇ ಪುರಂದರದಾಸರು.
ಶ್ರೀ ಗಣನಾಥ (ಒಂದನೇ ಕಾಲ)
ವರವೀಣ (ಎರಡನೇ ಕಾಲ)
ಕಮಲಜದಳ (ಮೂರನೇ ಕಾಲ)
ಪುರಂದರ ದಾಸರು ರಚಿಸಿದ ಪಾಠಗಳೇ, ಇಂದಿಗೂ ಕರ್ನಾಟಕ ಸಂಗೀತದ ಮೊದಲ ಪಾಠಗಳಾಗಿ ಉಳಿದಿರುವುದು, ದಾಸರ ವೈಜ್ಞಾನಿಕ ದೂರದೃಷ್ಟಿಗೆ ಉದಾಹರಣೆ.
************************
ಪುರಂದರ ದಾಸರು ಕರ್ನಾಟಕ ಸಂಗೀತದ ಪಿತಾಮಹರಾದರೂ, ಅವರು ಬೋಧಿಸಿದ್ದು ಭಕ್ತಿ ಮಾರ್ಗವನ್ನು. 'ಕೇಳನೋ ಹರಿ, ತಾಳನೊ, ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ, ಕೇಳನೋ ಹರಿ ತಾಳನೊ' ಎಂಬುದು ಪುರಂದಸರ ಮೂಲ ಬೋಧನೆ. ದಾಸರ ಕೀರ್ತನೆಗಳಿಗೆಲ್ಲಾ ಕೃಷ್ಣಭಕ್ತಿಯೇ ಆಧಾರ.
ಪಿಳ್ಳಂಗೋವಿಯ ಚೆಲ್ವ ಕೃಷ್ಣನ (ಹಾಡು)
**********************
ಪುರಂದರದಾಸರು ಕೃಷ್ಣನ ಪರಮಭಕ್ತರು. ಅವರು ಒಮ್ಮೆ ನಮ್ಮ ಬೆಂಗಳೂರು ಸಮೀಪದ ಚನ್ನಪಟ್ಟಣದ ಮಳ್ಳೂರಿನ ಅಪ್ರಮೇಯ ದೇವಸ್ಥಾನಕ್ಕೆ ಬಂದಿದ್ದರಂತೆ. ಅಪ್ರಮೇಯ ಅನ್ನುವುದು ಶ್ರೀ ಕೃಷ್ಣನ ಮತ್ತೊಂದು ಹೆಸರು.. ನೀವೆಲ್ಲ ನೋಡಿರಬಹುದು. ಅಂಬೆಗಾಲ್ ಕೃಷ್ಣನ ಸುಂದರವಾದ ಮೂರ್ತಿ ಆ ದೇವಸ್ಥಾನದಲ್ಲಿದೆ. ಆ ಅಂಬೆಗಾಲ್ ಕೃಷ್ಣನ ಮೂರ್ತಿಯನ್ನು ನೋಡಿ ಭಕ್ತಿಪರವಶರಾದ ಪುರಂದರದಾಸರು ಆ ದೇವಸ್ತಾನದಲ್ಲೇ ಕುಳಿತು "ಜಗದೋದ್ಧಾರನ ಆಡಿಸದೆಳೆಶೋದೆ" ಎಂಬ ದೇವರನಾಮವನ್ನು ರಚಿಸಿ ಹಾಡಿದರಂತೆ. ಆ ದೇವರನಾಮದಲ್ಲಿ ದಾಸರು "ಅಪ್ರಮೇಯ" ಎಂಬ ಕೃಷ್ಣನ ಹೆಸರನ್ನು ಬಳಸಿರುವುದು ವಿಶೇಷ.
ಜಗದೋದ್ಧಾರನ ದೇವರನಾಮದ ಮತ್ತೊಂದು ವಿಶೇಷ ಏನಪ್ಪಾ ಎಂದ್ರೆ, ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿಯವರು ತಮ್ಮ ೧೯೬೬ರ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಹಾಡಲು ಆರಿಸಿಕೊಂಡಿದ್ದು ಇದೇ ದೇವರನಾಮವನ್ನೇ.
ಜಗದೋದ್ಧಾರನ ದೇವರನಾಮ ಕಾಪಿ ರಾಗದ ಕೃತಿ. ಈ ದೇವರನಾಮಕ್ಕೆ ಕಾಪಿ ರಾಗದ ರಾಗಸಂಯೋಜನೆ ಮಾಡಿದವರು ಯಾರು ಗೊತ್ತೇ? ಯಾರಿಗಾದ್ರೂ ಗೊತ್ತಿದ್ರೆ ಹೇಳ್ತೀರಾ.......
--------------------------------
ಅವರೇ ಬಿ.ಎಸ್. ರಾಜ್ ಅಯಂಗಾರ್. ಕರ್ನಾಟಕದ ಸುಪ್ರಸಿದ್ದ ಹಾಡುಗಾರರು. ಅವರ ಹಳೆಯ ಗ್ರಾಮಫೋನ್ ರೆಕಾರ್ಡಿನ ಜಗದೋದ್ಧಾರನೆ ದೇವರನಾಮವನ್ನು ತಾವುಗಳು ಈಗಲೂ ಗೂಗ್ಲ್ನಲ್ಲಿ ಹುಡುಕಿ ಕೇಳಬಹುದು.
ಈಗ ಅಂತಹ ಭಕ್ತಿಭಾವದ ದೇವರನಾಮವನ್ನು ಕೇಳೋಣ.
ಜಗದ್ದೋಧಾರನ ಆಡಿಸಿದಳೇಶೋದೆ........
*******************
ಪುರಂದರ ದಾಸರು ಹದಿನಾರನೇ ಶತಮಾನದ ಹರಿದಾಸರು. ಅವರು ನೆಟ್ಟು ನೀರೆರದ ಕರ್ನಾಟಕ ಸಂಗೀತವನ್ನು ಮುಂದೆ ಬೆಳಸಿದವರು ತ್ಯಾಗರಾಜರು. ತ್ಯಾಗರಾಜರು ಹತ್ತೊಂಬತ್ತನೇ ಶತಮಾನದ ಹರಿದಾಸರು. ಈ ಎರಡು ಹರಿದಾಸರುಗಳ ನಡುವೆ ಮೂರು ಶತಮಾನಗಳ ಅಂತರ. ಪುರಂದರದಾಸರು ಕನ್ನಡದವರು, ತ್ಯಾಗರಾಜರು ತೆಲುಗಿನವರು. ಆದರೂ ತ್ಯಾಗರಾಜರ ಮಾನಸಿಕ ಗುರುಗಳು ಪುರಂದರ ದಾಸರಾಗಿದ್ದರು.
ತ್ಯಾಗರಾಜರ ರಚನೆಗಳಲ್ಲಿ ಪುರಂದರದಾಸರ ರಚನೆಗಳ ಪ್ರಭಾವ ಇರುವುದು ಸ್ವಾಭಾವಿಕವೇ ಎಂದು ಹೇಳಬಹುದು. ಉದಾಹರಣೆಗೆ ಪುರಂದರದಾಸರು ರಚಿಸಿದ ಈ ಕೀರ್ತನೆಯನ್ನು ನೋಡಿ.
ಜಯ ಜಾನಕೀ ನಾಥ (ಹಾಡು)
ನಾಟೈ ರಾಗದ ಪುರಂದರ ದಾಸರ ಈ ಕೃತಿಯೇ, ತ್ಯಾಗರಾಜರ ನಾಟೈ ರಾಗದ ಜಗದಾನಂದಕಾರಕ ಕೃತಿಗೆ ಸ್ಪೂರ್ತಿಯಾಗಿದೆ. ಎರಡೂ ಕೃತಿಗಳ ರಾಗ, ಭಾವ, ಒಕ್ಕಣೆ ಒಂದೇ ಆಗಿರುವದನ್ನು ನಾವು ಗಮನಿಸಬೇಕು.
ಜಗದಾನಂದಕಾರಕ (ಕೀರ್ತನೆ)
ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ "ಕನ ಕನ ರುಚಿರ" ಎಂಬ ವರಾಳಿ ರಾಗದ ಕೀರ್ತನೆಯಲ್ಲಿ, ತ್ಯಾಗರಾಜರು ಪುರಂದರದಾಸರ ಸ್ಮರಣೆಯನ್ನು ಮಾಡಿದ್ದಾರೆ. ರಾಮನ ಅಪಾರ ಮಹಿಮೆಗಳಿಗೆ "ನಾರದ ಪರಾಶರ ಶುಕ ಶೌನಕ ಪುರಂದರ ನಗಜಾ ಧರಜ ಮುಖ್ಯಲು ಸಾಕ್ಷಿ" ಎಂದು ಹಾಡಿದ್ದಾರೆ.
ತ್ಯಾಗರಾಜರು ರಚಿಸಿದ ಗೇಯ ನಾಟಕವಾದ "ಪ್ರಹ್ಲಾದ ಭಕ್ತ ವಿಜಯಂ"ನಲ್ಲೂ, ತ್ಯಾಗರಾಜರು ಪುರಂದರದಾಸರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.
**************************
ಶ್ರೀಮನ್ನಾರಾಯಣ (ಕೀರ್ತನೆ)
ಈ ಕೀರ್ತನೆಯನ್ನು ರಚಿಸಿ ಹಾಡಿದವರು ಅಣ್ಣಮ್ಮಚಾರ್ಯರು.
ಅಣ್ಣಮ್ಮಚಾರ್ಯರು ಆಂಧ್ರಪ್ರದೇಶದ ಹರಿದಾಸರು. ಅವರು ಪುರಂದರ ದಾಸರ ಸಮಕಾಲೀನರು. ಯುವಕರಾದ ಪುರಂದರದಾಸರು, ಹಿರಿಯರಾದ ಅಣ್ಣಮ್ಮಚಾರ್ಯರನ್ನು ತಿರುಪತಿಯ ವೆಂಕಟೇಶ್ವರರ ಸಾನ್ನಿಧ್ಯಲ್ಲಿ ಭೇಟಿಯಾಗಿದ್ದರು ಎಂದು ಇತಿಹಾಸದಲ್ಲಿ ದಾಖಲಾಗಿದೆ.
ಅಂದೊಮ್ಮೆ ಯುವಕರಾದ ಪುರಂದರ ದಾಸರು ತಿರುಪತಿಯ ವೆಂಕಟೇಶ್ವರರ ಸನ್ನಿಧಿಯಲ್ಲಿ ಧ್ಯಾನಾಸಕ್ತರಾಗಿರುತ್ತಾರೆ. ಆಗ ಅವರಿಗೆ ಹಿರಿಯ ಸಂತರೊಬ್ಬರು ಹಾಡುತ್ತಿದ್ದ ಕೀರ್ತನೆಯೊಂದು ಕೇಳುತ್ತದೆ.
ಪದುಮನಾಭ ಪರಮಪುರುಷ (ಬಾಲ ಗೀತೆ)
ಹಿರಿಯ ಸಂತರೊಬ್ಬರು ತಮ್ಮ ರಚನೆಯ ಕೀರ್ತನೆಯೊಂದನ್ನು ಹಾಡುತಿದ್ದನ್ನು ಕೇಳಿ, ಪುರಂದರ ದಾಸರು ಪುಳಕಿತರಾಗುತ್ತಾರೆ. ಒಮ್ಮಲೇ ಆ ಹಿರಿಯರ ಪದಗಳಿಗೆ ಧೀರ್ಘ ದಂಡ ನಮಸ್ಕಾರ ಮಾಡುತ್ತಾರೆ ಪುರಂದರ ದಾಸರು. ಆ ಹಿರಿಯ ಸಂತರೇ, ಆಂಧ್ರ ಪ್ರದೇಶದ ಅಣ್ಣಮ್ಮ ಚಾರ್ಯರು ಎಂದು ಗುರುಗಳಯಾದ ವ್ಯಾಸರಾಯರು ಪರಿಚಿಸಯಿದಾಗ ಪುರಂದರ ದಾಸರು ಇನ್ನೂ ಹೆಚ್ಚು ಪುಳಕಿತರಾಗುತ್ತಾರೆ. ಯುವಕರಾದ ಪುರಂದರ ದಾಸರೇ "ಪದುಮನಾಭ, ಪರಮಪುರುಷ" ಗೀತೆಯ ರಚನಾಕಾರರೆಂದು ತಿಳಿದ ಅಣ್ಣಮ್ಮಚಾರ್ಯರು, ಪುರಂದರ ದಾಸರನ್ನು ಆಶೀರ್ವದಿಸುತ್ತಾರೆ. ಕರ್ನಾಟಕ ಸಂಗೀತಕ್ಕೆ ಭದ್ರ ಅಡಿಪಾಯ ಹಾಕಿದ ಪುರಂದರ ದಾಸರನ್ನು, ಅಣ್ಣಮ್ಮಚಾರ್ಯರು ಹಾಡಿ ಹೊಗಳುತ್ತಾರೆ. ಅಣ್ಣಮಾಚಾರ್ಯರು ಪುರಂದರ ದಾಸರಿಗೆ ವೆಂಕಟೇಶ್ವರರ ಸನ್ನಿಧಿಯಲ್ಲೇ ಕೀರ್ತನೆಯೊಂದನ್ನು ರಚಿಸಿ ಹಾಡುವಂತೆ ಪ್ರೇರಿಪಿಸುತ್ತಾರೆ. ಆಗ ದಾಸರು ರಚಿಸಿದ ಹಾಡೇ…..
ವೆಂಕಟಾಚಲ ನಿಲಯಂ (ಹಾಡು)
ಅಣ್ಣಮ್ಮಚಾರ್ಯರನ್ನೂ ಮತ್ತು ಅವರುಗಳ ಶಿಷ್ಯರನ್ನೂ, ಪುರಂದರ ದಾಸರು ತಮ್ಮ ಆಶ್ರಮದಲ್ಲಿ ಭೋಜನಕ್ಕೆ ಆಹ್ವಾನಿಸುತ್ತಾರೆ. ಪುರಂದರ ದಾಸರ ಶಿಷ್ಯನಾದ ಅಪ್ಪಣ್ಣ ಅಡಿಗೆಯ ಮತ್ತು ಉಪಚಾರದ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಪುರಂದರ ದಾಸರ ವೈರಿಗಳಿಗೆ ಅಣ್ಣಮ್ಮಚಾರ್ಯರಿಗೆ ಏರ್ಪಾಡಾದ ಭೋಜನ ಕೂಟ ಇಷ್ಟವಿರುವುದಿಲ್ಲ.
ಊಟಕ್ಕೆ ಕುಳಿತ ಅಣ್ಣಮ್ಮಚಾರ್ಯರ ತಂಡಕ್ಕೆ ಅಪ್ಪಣ್ಣ ಮತ್ತು ಪುರಂದರ ದಾಸರು ಭಕ್ಷ್ಯ ಭೋಜ್ಯಗಳನ್ನು ಬಡಿಸುತ್ತಾರೆ. ತುಪ್ಪ ಬಡಿಸುವ ಹೊತ್ತಿಗೆ ತುಪ್ಪದ ಪಾತ್ರೆ ತಳಗೆ ಬಿದ್ದುಹೋಗಿರುತ್ತದೆ. ಅಪ್ಪಣ್ಣ ಕಾಣೆಯಾಗಿರುತ್ತಾನೆ. ಗಾಬರಿಗೊಂಡ ಪುರಂದರ ದಾಸರು ಅಪ್ಪಣ್ಣನಿಗಾಗಿ ಹುಡುಕಾಡುತ್ತಿರುತ್ತಾರೆ. ಅಷ್ಟು ಹೊತ್ತಿಗೆ ಅಪ್ಪಣ್ಣ ತುಂಬಿದ ತುಪ್ಪದ ಪಾತ್ರೆಯನ್ನು ತಂದು ತುಪ್ಪವನ್ನು ಬಡಿಸುತ್ತಾನೆ. ಬಿದ್ದು ಹೋಗಿದ್ದ ತುಪ್ಪದ ಪಾತ್ರೆಯಲ್ಲಿ ತುಪ್ಪ ಹೇಗೆ ಬಂತು ಎಂಬುದು ಪುರಂದಸರಿಗೆ ಆಶ್ಚರ್ಯವನ್ನು ಉಂಟು ಮಾಡಿರುತ್ತದೆ. ಭೋಜನ ಸಾಂಗವಾಗಿ ನಡೆಯುತ್ತದೆ. ಅಪ್ಪಣ್ಣ ಪಕ್ಕದ ಕೋಣೆಗೆ ಹೋಗಿ ಕಾಣೆಯಾಗುತ್ತಾನೆ. ಪಕ್ಕದ ಕೋಣೆಗೆ ದಾಸರು ಹೋಗಿ ನೋಡಿದಾಗ ಅಪ್ಪಣ್ಣನನ್ನು ಯಾರೋ ಕಂಬ ಒಂದಕ್ಕೆ ಕಟ್ಟಿರುತ್ತಾರೆ. ಹಾಗಾದರೆ ತುಪ್ಪ ಬಡಿಸಿ ಹೋದ ಅಪ್ಪಣ್ಣ ಯಾರು ಎಂದು ಯೋಚಿಸಿದ ದಾಸರಿಗೆ, ಸಾಕ್ಷಾತ್ ಪುರಂದರ ವಿಠ್ಠಲನೇ ಅಪ್ಪಣ್ಣನಾಗಿ ಬಂದು ತುಪ್ಪ ಬಡಿಸಿದ್ದು ಎಂಬ ಸತ್ಯ ತಿಳಿಯುತ್ತದೆ.
********************************
ಈತನೀಗ ವಾಸುದೇವನೋ (ಹಾಡು)
ಪುರಂದರ ದಾಸರ ಹರಿಕಥೆಯಲ್ಲಿ ಕನಕದಾಸರ ಕೀರ್ತನೆ ಏಕೆ ಬಂತು ಎಂದು ಯೋಚಿಸುತ್ತ ಇದ್ದೀರಾ? ಪುರಂದರ ದಾಸರು ಮತ್ತು ಕನಕದಾಸರು ಇಬ್ಬರೂ, ಕನ್ನಡದ ಹರಿದಾಸರು. ಇಬ್ಬರೂ ಸಮಕಾಲೀನರು ಕೂಡ. ಇಬ್ಬರೂ ಗುರುಗಳಾದ ವ್ಯಾಸರಾಯರ ಶಿಷ್ಯರು.
ಗುರು ವ್ಯಾಸರಾಯರ ಆಶ್ರಮದಲ್ಲಿ ಪುರಂದರ ದಾಸರು ಮತ್ತು ಕನಕದಾಸರು ಇಬ್ಬರೂ ಸಂಗೀತಾಭ್ಯಾಸ ಮಾಡುತ್ತಿರುತ್ತಾರೆ. ಕುರುಬ ಜನಾಂಗದ ಕನಕದಾಸರು ವ್ಯಾಸ ರಾಯರ ಆಶ್ರಮದಲ್ಲಿ ಅಧ್ಯಯನ ಮಾಡುತ್ತಿರುವುದು ವ್ಯಾಸರಾಯರ ಹಲವು ಶಿಷ್ಯರಿಗೆ ಇಷ್ಟವಿರುವುದಿಲ್ಲ. ಮಾತು ಮಾತಿಗೂ ಕನಕದಾಸರನ್ನು ಆ ದುಷ್ಟ ಶಿಷ್ಯರುಗಳು ಹಂಗಿಸುತ್ತಿರುತ್ತಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪುರಂದರದಾಸರು, ವಿಷಯವನ್ನು ಗುರುಗಳಾದ ವ್ಯಾಸರಾಯರಿಗೆ ತಿಳಿಸುತ್ತಾರೆ. ಕನಕದಾಸರ ಮಹಾಜ್ಞಾನದ ಹಿರಿಮೆ ಆಶ್ರಮದ ಎಲ್ಲ ಶಿಷ್ಯರುಗಳಿಗೂ ತಿಳಿಯುವಂತೆ ಮಾಡಬೇಕೆಂದು ಪುರಂದರ ದಾಸರು, ಗುರುಗಳಾದ ವ್ಯಾಸರಾಯರನ್ನು ಪ್ರಾರ್ಥಿಸುತ್ತಾರೆ.
ಒಂದು ದಿನ ಆಶ್ರಮದಲ್ಲಿ ಚರ್ಚೆಯೊಂದು ಏರ್ಪಾಡಾಗಿರುತ್ತದೆ. ಚರ್ಚೆಯ ಸೂತ್ರದಾರರಾಗಿ ಗುರುಗಳಾದ ವ್ಯಾಸರಾಯರು ಆಸೀನರಾಗಿರುತ್ತಾರೆ. ಗುರುಗಳ ಪಕ್ಕವೇ ಪುರಂದರ ದಾಸರು ಕುಳಿತಿರುತ್ತಾರೆ. ಕನಕ ಮತ್ತು ಉಳಿದ ಶಿಷ್ಯಂದಿರು ತಳಗೆ ಕುಳಿತಿರುತ್ತಾರೆ. ಆಶ್ರಮವಾಸಿಗಳಲ್ಲಿ ಸ್ವರ್ಗಕ್ಕೆ ಯಾರು ಹೋಗುತ್ತಾರೆ ಎಂಬ ಪ್ರಶ್ನೆಯನ್ನು ವ್ಯಾಸರಾಯರು ಸಭೆಯ ಮುಂದಿಡುತ್ತಾರೆ. ಕನಕನ ಬಗ್ಗೆ ದ್ವೇಷ ಕಾರುತ್ತಿದ್ದ ಹಲವು ಶಿಷ್ಯಂದಿರುಗಳು ತಮಗೆ ತೋಚಿದಂತೆ ಉತ್ತರಿಸುತ್ತಾರೆ. ಅವರ ಉತ್ತರಗಳನ್ನು ವ್ಯಾಸರಾಯರು ಒಪ್ಪುವುದಿಲ್ಲ.
ಆಶ್ರಮವಾಸಿಗಳಲ್ಲಿ ಸ್ವರ್ಗಕ್ಕೆ ಯಾರು ಹೋಗುತ್ತಾರೆಂಬ ಪ್ರಶ್ನೆಗೆ ಉತ್ತರಿಸುವ ಅವಕಾಶ ಕಡೆಯದಾಗಿ ಕನಕದಾಸರಿಗೆ ಬರುತ್ತದೆ. ಗುರುಗಳು ತಮ್ಮ ಶಿಷ್ಯೋತ್ತಮರುಗಳನ್ನು ಒಬ್ಬರಾಗಿ ತೋರಿಸುತ್ತ, ಇವರು ಸ್ವರ್ಗಕ್ಕೆ ಹೋಗುವರೇ? ಎಂದು ಕನಕನನ್ನು ಕೇಳುತ್ತಾರೆ. ಅವರ್ಯಾರು ಸ್ವರ್ಗಕ್ಕೆ ಹೋಗಲಾರರು ಎಂದು ಕನಕ ಉತ್ತರಿಸಿದಾಗ, ಸಮಸ್ತ ಶಿಷ್ಯರುಗಳು ಕನಕನ ಮೇಲೆ ಕೋಪಗೊಳ್ಳುತ್ತಾರೆ.
ಗುರುಗಳ ಪಕ್ಕದಲ್ಲೇ ಕುಳಿತಿದ್ದ ದಾಸಶ್ರೇಷ್ಠರಾದ ಪುರಂದರ ದಾಸರು ಸ್ವರ್ಗಕ್ಕೆ ಹೋಗುವರೇ ಎಂದು ವ್ಯಾಸರಾಯರು ಕನಕನನ್ನು ಪ್ರಶ್ನಿಸಿದಾಗ, ಇಲ್ಲವೆಂದು ಕನಕ ತಲೆಯಾಡಿಸುತ್ತಾನೆ. ಶಿಷ್ಯರುಗಳು ಕೋಪದಿಂದ ಕನಕನನ್ನು ಅಧಿಕಪ್ರಸಂಗಿ ಎಂದು ನಿಂದಿಸುತ್ತಾರೆ. ವ್ಯಾಸರಾಯರು ಮುಂದುವರೆದು, ನಾನು ಸ್ವರ್ಗಕ್ಕೆ ಹೋಗುವೆನೇ ಎಂದು ಪ್ರಶ್ನಿಸಿದಾಗ, ಕನಕ ದಾಸರು ಇಲ್ಲವೆಂದು ತಲೆಯಾಡಿಸುತ್ತಾರೆ. ಶಿಷ್ಯರುಗಳ ಕೋಪ ಮುಗಿಲುಮುಟ್ಟಿರುತ್ತದೆ.
ಕಡೆಯದಾಗಿ ವ್ಯಾಸರಾಯರು, ಕನಕ...... ನೀನು ಸ್ವರ್ಗಕ್ಕೆ ಹೋಗುವೆಯ ಎಂದು ಕೇಳಿದಾಗ ಕನಕ ಉತ್ತರಿಸುತ್ತಾ, "ನಾನು ಹೋದರೆ ಹೋಗಬಹುದು" ಎಂದು ಉತ್ತರಿಸುತ್ತಾರೆ. ಶಿಷ್ಯರುಗಳ ಕೋಪ ನೆತ್ತಿಗೇರಿರುತ್ತದೆ. ಒಮ್ಮಲೇ ಕನಕನ ಮೇಲೆರಗಿದ ಶಿಷ್ಯರುಗಳು, ಕನಕನನ್ನು ಗುರುಗಳ ಕ್ಷಮೆ ಕೋರುವಂತೆ ಆಗ್ರಹಿಸುತ್ತಾರೆ. ಶಿಷ್ಯರುಗಳನ್ನು ಸುಮ್ಮನಾಗಿಸಿದ ಗುರು ವ್ಯಾಸರಾಯರು, ಕನಕನ ಉತ್ತರದ ಅರ್ಥವೇನೆಂದು ಕನಕನನ್ನು ಕೇಳುತ್ತಾರೆ. ಕನಕ ವಿನಮ್ರತೆಯಿಂದ ಉತ್ತರಿಸುತ್ತಾ, "ನಾನು" ಎಂದರೆ 'ನಾನು ಎಂಬ ಅಹಂಕಾರ,' ನಾನು ಎಂಬ ಅಹಂಕಾರ ನನ್ನಿಂದ ಹೋದರೆ, ನಾನೂ ಸ್ವರ್ಗಕ್ಕೆ ಹೋಗಬಹುದು ಎಂದು ವಿವರಿಸಿದಾಗ ಇಡೀ ಸಭೆಯಲ್ಲಿ ಮೌನ ಆವರಿಸಿರುತ್ತದೆ. ಕನಕ ದಾಸರ ಮಹಾಜ್ಞಾನದ ಪರಿಚಯ ಎಲ್ಲಾ ಆಶ್ರಮವಾಸಿಗಳಿಗೂ ಆಗ ತಿಳಿಯುತ್ತದೆ.
****************
ಇಲ್ಲಿಗೆ ನಮ್ಮ ಶ್ರೀ ಪುರಂದರದಾಸರ ಹರಿಕಥೆ ಮುಗಿದಿದೆ. ಹರಿಕಥೆಗೆ ಮಂಗಳವೊಂದನ್ನು ಹಾಡೋಣ.
ತಂಬೂರಿ ಮೀಟಿದವ (ಹಾಡು)
ಶ್ರೀ ರಾಮಚಂದ್ರ ಮುಕ್ತಾಯ (ಶ್ಲೋಕ)
-೦-೦-೦-೦-೦-೦-೦-೦-