Saturday, 1 May 2021

೧೨. ಪುನರುಜ್ಜೀವನ

೧೨

ಪುನರುಜ್ಜೀವನ 



 ಒಂದು ದಿನ ಡಾ. ಕಿರಣರ ಮೇಲಧಿಕಾರಿಗಳು ಅವರಿಗೆ ಆಜ್ಞಾಪಿಸಿದ್ದರು. 'ಮುಂದಿನ ಹತ್ತು ದಿನಗಳವರೆಗೆ ನೀವು ಆಸ್ಪತ್ರೆಯನ್ನು ಪ್ರವೇಶಿಸುವಂತಿಲ್ಲ.' 

'ಏಕೆ ಸಾರ್? ಕೋವಿಡೇತರ (non-covid) ರೋಗಿಗಳ ಸೇವೆಯ ಅವಧಿ, ನನಗೆ  ಇಂದು  ಮುಗಿಯುತ್ತದೆ. ನಾಳೆಯಿಂದ ಕೋವಿಡ್ ರೋಗಿಗಳ ಚಿಕಿತ್ಸೆಯ ವಾರ್ಡ್ಗೆ ಹೋಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ಆಸ್ಪತ್ರೆ ಪ್ರವೇಶಿಸದಂತಹ  ತಪ್ಪನ್ನು ನಾನೇನು ಮಾಡಿದ್ದೇನೆ?' ಎಂದ ಡಾ. ಕಿರಣ್ ವಿಚಲಿತರಾಗಿದ್ದರು. 

ಕಿರಣರ ಮೇಲಧಿಕಾರಿ ಮಾತನ್ನು ಮುಂದುವರೆಸುತ್ತಾ, 'ಹೌದು, ನೀವು ಮಹಾಪರಾಧವೊಂದನ್ನು ಮಾಡಿದ್ದೀರಿ. ಕೋವಿಡ್ ರೋಗಿಗಳ ಮತ್ತು ಕೋವಿಡೇತರ ರೋಗಿಗಳ ಚಿಕಿತ್ಸೆಯನ್ನು ಸತತವಾಗಿ ನೀವು ಮೂರು ತಿಂಗುಳುಗಳಿಂದ ಮಾಡುತ್ತಿದ್ದೀರಿ. ಆದುದರಿಂದ ತಮಗೀಗ ವಿಶ್ರಾಂತಿಯ ಅವಶ್ಯಕತೆ ಇದೆ. ೧೦ ದಿನಗಳ ಅವಧಿಯಲ್ಲಿ ವಿಶ್ರಾಂತಿ ಪಡೆದು ಹೊಸ ಚೈತನ್ಯವನ್ನು ಪಡೆದು ಮತ್ತೆ ಬನ್ನಿ' ಎಂದರು. 

ಸಂತಸಗೊಂಡ ಡಾ. ಕಿರಣರು, ದಿನದ ಅವಧಿ ಮುಗಿದನಂತರ, ತಮ್ಮ ಕರ್ತವ್ಯಗಳನ್ನು ಬೇರೊಬ್ಬ ವೈದ್ಯರಿಗೆ ವಹಿಸಿ, ನೇರವಾಗಿ ಹೊರಟು ಗೆಳತಿ ರೋಹಿಣಿಯ ಮನೆಯನ್ನು ಸೇರಿದ್ದರು. ಮನೆಯನ್ನು ಪ್ರವೇಶಿಸುತ್ತಲೇ ಕಿರಣ್, 'ರೋಹಿಣಿ ನನಗೀಗ ೧೦ ದಿನಗಳ ರಜೆ ಸಿಕ್ಕಿದೆ. ಚೆನ್ನಾಗೆ ರಿಲ್ಯಾಕ್ಸ್ ಆಗೋಣ, ಪಿಕ್ನಿಕ್ಕೊಂದಕ್ಕೆ ಹೋಗೋಣ' ಎಂದನು. 

'ಪಿಕ್ನಿಕ್ ಬೇಡ, ಸಣ್ಣ ಪ್ರವಾಸವೊಂದನ್ನೇ ಕೈಗೊಳ್ಳೋಣ. ಆದರೆ ಪ್ರವಾಸದ ತಾಣದ ಆಯ್ಕೆ ನನ್ನದು, ನಾನಾಗಲೇ ಎಲ್ಲಾ ಏರ್ಪಾಡುಗಳನ್ನು ಮಾಡಿದ್ದಾಗಿದೆ.' ರೋಹಿಣಿ ಹೇಳಿದಾಗ ಕಿರಣ್ ರೋಮಾಂಚಿತನಾಗಿದ್ದನು. ಪುಟ್ಟ ಪ್ರವಾಸಕ್ಕೆ ತಂದೆ ರಾಜು ಕೂಡ ತಯಾರಾಗಿದ್ದರು. 

ಜಾಣೆಯಾದ ರೋಹಿಣಿ 'ರಜಾ, ಮಜಾ ಮತ್ತು ಕಲಿಕೆ' ಎಂಬ ಮೂರೂ ಅಂಶಗಳನ್ನು ಬೆಸೆದು, ತನ್ನ ಸಂಶೋಧನಾ ಕಾರ್ಯಕ್ಕೂ ಸಹಾಯಕವಾಗುವಂತಹ ಸಣ್ಣ ಪ್ರವಾಸದ ಏರ್ಪಾಡನ್ನು ಮಾಡಿದ್ದಳು. ಆ ಪ್ರವಾಸದ ತಾಣವನ್ನು ಸೇರಲು ಅವರುಗಳು ತಮ್ಮ 'ಟಾಟಾ ಸುಮೊ'ವಿನಲ್ಲಿ ಸುಮಾರು ೯೦೦ ಕಿ.ಮೀ.ನಷ್ಟು ದೂರ ಪ್ರಯಾಣಿಸಬೇಕಾಯಿತು. ಪಶ್ಚಿಮ ಘಟ್ಟಗಳ ಅತ್ಯಂತ ಒಳಗಿನ ನದಿಯೊಂದರ ತೀರದಲ್ಲಿ ಆ ತಾಣವಿತ್ತು. ಸರಕಾರ ಅಭಿವೃದ್ಧಿ ಪಡಿಸಿದ್ದ ಸುಮಾರು ೩೦ ಚ.ಕಿ.ಮೀ.ನಷ್ಟು ವಿಸ್ತೀರ್ಣದ ಅಭಯಾರಣ್ಯವೊಂದನ್ನು ಅವರುಗಳು ಸೇರಿದ್ದಾಗಿತ್ತು. ಆ ಅಭಯಾರಣ್ಯದಲ್ಲಿ ಪ್ರವಾಸಿ ಮಂದಿರವೊಂದೂ ಇತ್ತು. ನಾವೀ ಸರಕಾರೀ ಅಭಯರಾಣ್ಯಕ್ಕೆ ಹೋಗುತ್ತಿಲ್ಲಾ ಎಂದು ರೋಹಿಣಿ ಹೇಳಿದಾಗ, ಕಿರಣ್ ಮತ್ತು ರಾಜುರವರಿಬ್ಬರಿಗೂ ಆಶ್ಚರ್ಯವಾಗಿತ್ತು. ಅದೇ ಸರಕಾರಿ ಅಭಯಾರಣ್ಯಕ್ಕೆ ಹೊಂದಿಕೊಂಡಂತ್ತಿದ್ದ, ಸುಮಾರು ೪೦೦ ಎಕರೆ ವಿಸ್ತೀರ್ಣದ ಖಾಸಗೀ ಅರಣ್ಯವೊಂದನ್ನು ರೋಹಿಣಿ ಆರಿಸಿಕೊಂಡಿದ್ದಳು. 'ಈ ಖಾಸಗೀ ಅರಣ್ಯ ಯಾರಿಗೆ ಸೇರಿದ್ದು?' ಎಂದು ಕೇಳಿದ್ದನು ಕಿರಣ್. 'ಮೊದಲು ಒಳಗೆ ಹೋಗೋಣ. ನಂತರ ಎಲ್ಲಾ ವಿಷಯಗಳೂ ತಾನಾಗೇ ತಿಳಿಯುತ್ತವೆ' ಎಂದಳು ರೋಹಿಣಿ. 

ಸುಮಾರು ೬೭ರ ಪ್ರಾಯದ 'ಡ್ರೇಕ್ ಮತ್ತು ೬೮ರ ಪ್ರಾಯದ ಹರಿಣಿ,' ೪೦ ವರ್ಷಗಳ ಹಿಂದೆ ಅಮೇರಿಕಾದಲ್ಲಿ ಪ್ರಥಮ ಬಾರಿಗೆ ಭೇಟಿಯಾಗಿದ್ದರು. ಡ್ರೇಕ್ ಎಂದರೆ 'ಗಂಡು ಬಾತುಕೋಳಿ' ಎಂದು ಗೊತ್ತಾದ ಮೇಲೆ ರೋಹಿಣಿಗೆ, ಡ್ರೇಕನ ಮೇಲೆ ಕುತೂಹಲ ಉಂಟಾಗಿತ್ತು. 'ನೀನೊಬ್ಬ ಗಂಡು ಕೋಳಿ, ಮತ್ತು ನಾನೊಬ್ಬ ಹೆಣ್ಣು ಜಿಂಕೆ (ಹರಿಣಿ ಎಂದರೆ ಜಿಂಕೆ ಎಂದರ್ಥ). ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಬಾರದೇಕೆ?' ಎಂದು ಮೊದಲು  ಸ್ನೇಹಹಸ್ತ ಚಾಚಿದ್ದವಳು ಹರಿಣಿಯೇ. ಹರಿಣಿಯ ಸ್ನೇಹದ ಪ್ರಸ್ತಾಪ ಡ್ರೇಕನಿಗಿಷ್ಟವಾಗಿತ್ತು. ಅವರುಗಳ ಸ್ನೇಹ ಪ್ರೀತಿಗೆ ತಿರುಗಿದ ಕೆಲವೇ ತಿಂಗಳುಗಳಲ್ಲಿ ಅವರಿಬ್ಬರೂ ಮದುವೆ ಕೂಡ ಆಗಿದ್ದರು. ಸುಮಾರು ೩೦ ವರ್ಷಗಳ ಹಿಂದೆ, ಮಕ್ಕಳಿಲ್ಲದ ಡ್ರೇಕ್ ಮತ್ತು ರೋಹಿಣಿಯರು ವಿಚಿತ್ರ ಆಸೆಯೊಂದನ್ನು ಹೊತ್ತು,  ಭಾರತಕ್ಕೆ ಬಂದು ನೆಲಸಿದ್ದರು. ತಮ್ಮದೇ ಆದ ಕಾಡೊಂದನ್ನು ಹೊಂದುವ ಆಸೆ ಅವರುಗಳದಾಗಿತ್ತು. 'ನಿಮ್ಮದೇ ಆದ ಕಾಡು? ತುಂಬಾ ವಿಚಿತ್ರವಾದ ಮತ್ತು ಕುತೂಹಲಕಾರಿ ಸಾಹಸ ತಮ್ಮಗಳದ್ದು. ನಿಮಗೆ ಈ ರೀತಿಯ ಆಸೆ ಉಂಟಾಗಿದ್ದು ಹೇಗೆ?' ಎಂದು ಕೇಳಿದ್ದವನು ಕಿರಣ್.

'ಪ್ರಕೃತಿ ಮಾತೆಗೆ ಏನನ್ನಾದರೂ ಹಿಂತಿರುಗಿಸುವಾಸೆ ನಮಗಾಗಿತ್ತು. "ಸುಂದರವಾದ ಮರದ ನೆರಳಿನಲ್ಲಿ ಇಂದು ಯಾರಾದರೂ ಆರಾಮವಾಗಿ ಕುಳಿತಿದ್ದರೆ, ಬಹಳ ಹಿಂದೆ ಯಾರೋ ಆ ಮರವನ್ನು ನೆಟ್ಟಿದ್ದೇ ಕಾರಣ." ನಿರ್ಭೀತಿಯಿಂದ ಬದುಕುವ ತಾಣವೊಂದನ್ನು ಕಾಡು ಪ್ರಾಣಿಗಳಿಗಾಗಿ ನಾವು ಅಭಿವೃದ್ಧಿಪಡಿಸಲಿಚ್ಛಿಸಿದ್ದೆವು' ಎಂದವರು ಡ್ರೇಕ್. 

'ಆದರೆ ನಮ್ಮ ಯೋಜನೆ ಅಷ್ಟು ಸುಲಭವಾದುದಾಗಿತ್ತಿಲ್ಲ. ಸೂಕ್ತ ತಾಣಕ್ಕಾಗಿ ನಾವು ಭಾರತದ ಹಲವು ರಾಜ್ಯಗಳನ್ನರಸಿದೆವು. ೪೦೦ ಎಕರೆಗಳಷ್ಟರ ವಿಸ್ತಾರವಾದ ಜಾಗ, ಅಂತೂ ಇಲ್ಲಿ ನಮಗೆ ದೊರೆತಿತು. ಇಷ್ಟೂ ಜಾಗ ನಮಗೆ ಒಮ್ಮಲೇ ದೊರೆಯಲಿಲ್ಲ. ಸಣ್ಣ ಸಣ್ಣ ಜಮೀನುಗಳನ್ನು ಖರೀದಿಸಿ ಸೇರಿಸುತ್ತಾ ಹೋದ ನಮಗೆ ೪೦೦ ಎಕರೆಗಳನ್ನು ಪಡೆಯಲು ಸುಮಾರು ೧೦ ವರ್ಷಗಳ ಸಮಯ ಬೇಕಾಯಿತು. ಲಾಭ ಗಳಿಸುವ ಯೋಜನೆ ನಮ್ಮದಲ್ಲ. ಹಾಗೆ ನೋಡಿದರೆ ನಮ್ಮ ೪೦೦ ಎಕರೆಗಳ ಖಾಸಗೀ ಕಾಡು ಸಮೀಪದ ಸರಕಾರೀ ಅಭಯಾರಣ್ಯದ ವಿಸ್ತೀರ್ಣವನ್ನು ಹೆಚ್ಚಿಸಿದೆ; ಆದರೂ ಇದು ನಮಗೆ ಸೇರಿದ್ದೆಂಬ ಹೆಮ್ಮೆ ನಮ್ಮದು! ನಮ್ಮ ಕಾಡನ್ನು ಕಾಡು ಪ್ರಾಣಿಗಳ ವಾಸಕ್ಕೆಂದು ಬಿಟ್ಟು ಬಿಟ್ಟಿದ್ದೇವೆ. ನಮ್ಮ ಕಾಡಿನ ಒಂದು ಎಲೆಯನ್ನೂ ಯಾರೂ ಕೀಳುವಂತಿಲ್ಲ. ಇಲ್ಲಿರುವ ಕಾಡು ಪ್ರಾಣಿಗಳಿಗೆ ಯಾರೂ ತೊಂದರೆ ಕೊಡುವಂತಿಲ್ಲ. ಕಳೆದ ಒಂದು ದಶಕದಲ್ಲಿ, ಆರು ಹುಲಿಮರಿಗಳು ಇಲ್ಲಿ ಜನಿಸಿವೆ. ತಮ್ಮ ಮರಿಗಳಿಗೆ ಜನ್ಮನೀಡಿ, ಬೆಳಸಿಕೊಂಡು ಹೋಗಲು, ಕ್ಷೇಮವಾದ ತಾಣವನ್ನು ಹುಡುಕಿಕೊಂಡು ಕಾಡೆಮ್ಮೆಗಳು ನಮ್ಮಲಿಗೆ ಬರುತ್ತವೆ. ಕರಡಿ, ಕಡವೆ, ಜಿಂಕೆ ಮುಂತಾದ ಪ್ರಾಣಿಗಳ ನೆಚ್ಚಿನ ತಾಣ ನಮ್ಮ ಕಾಡಾಗಿದೆ.' ಎಂದು ವಿವರಣೆ ನೀಡಿದವರು ಹರಿಣಿ. 

ಮರು ದಿನದ  ನಸುಕಿನ ಸಮಯಕ್ಕೆ ಜೀಪೊಂದರಲ್ಲಿ, ಕಿರಣ್, ರೋಹಿಣಿ ಮತ್ತು ರಾಜುರವರು,  ಡ್ರೇಕ್ ಮತ್ತು ಹರಿಣಿಯವರೊಂದಿಗೆ ಪುಟ್ಟ ಕಾಡಿನ ಸುತ್ತಾ ಹೊರಟಾಗ ಅದೊಂದು ವಿಭಿನ್ನ ಅನುಭವವಾಗಿತ್ತು. ಮಾನವನ ಭಯವಿಲ್ಲದೆ ನಿರ್ಭೀತಿಯಿಂದ ಓಡಾಡುತ್ತಿದ್ದ ಕಾಡು ಪ್ರಾಣಿಗಳ ದೃಶ್ಯ ಸಂತಸದಾಯಕವಾಗಿತ್ತು. ಕಾಡು ಪ್ರಾಣಿಗಳ ಚಲನ-ವಲನಗಳ ದೃಶ್ಯಗಳನ್ನು ಸೆರೆ ಹಿಡಿಯಲೆಂದು, ಡ್ರೇಕರ ಪುಟ್ಟ ಅರಣ್ಯದ ಅಲ್ಲಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಚಿಲಿಪಿಲಿಗುಟ್ಟುವ ಅಪಾರ ಸಂಖ್ಯೆಯ ಹಕ್ಕಿ-ಪಕ್ಷಿಗಳು ಕಾಡಿನುದ್ದಕ್ಕೂ ಹಾರಾಡುತ್ತಿದ್ದುದು  ರಮಣೀಯ ದೃಶ್ಯವಾಗಿತ್ತು. ಅಪರೂಪದ ಪ್ರಾಣಿಯೆಂದೆನಿಸಿದ ಪೆಂಗೋಲಿನ್ಗಳು, ಆ ಕಾಡಿನಲ್ಲಿ ಸಾಕಷ್ಟಿದ್ದಂತೆ ಕಂಡುಬಂದಿತ್ತು. 

'ಕಾಡುಗಳ ಮರುಸೃಷ್ಟಿ ಸರಕಾರವೊಂದರ ಕಾರ್ಯವಲ್ಲ. ನಮ್ಮ-ನಿಮ್ಮಂತಹ  ಖಾಸಗಿ ವ್ಯಕ್ತಿಗಳು ಮತ್ತು ಭಾರಿ ಕಂಪನಿಗಳೂ ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು. ಮಾನವ ತನ್ನ ಸ್ವಾರ್ಥಕ್ಕಾಗಿ ಕಾಡುಗಳನ್ನು ನಾಶಪಡಿಸುತ್ತ ಹೋದರೆ, ಕೋವಿಡ್-೧೯ರಂತಹ ಮಹಾಮಾರಿಗಳು ಮತ್ತೆ ಮತ್ತೆ ಮನುಕುಲವನ್ನು ಕಾಡುವುದು ಖಂಡಿತ!' ಎಂದು ಡ್ರೇಕ್ರವರು ಹೇಳಿದ್ದು, ಡಾ. ಕಿರಣರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ವಿದ್ಯಾರ್ಹತೆ ಮತ್ತು ಅನುಭವಗಳಿಂದ ಡ್ರೇಕ್ ಒಬ್ಬ ನುರಿತ 'ವೈರಾಣು ತಜ್ಞ'ರಾಗಿದ್ದರು. 'ಕೋವಿಡ್-೧೯ರ ಮಹಾಮಾರಿಯ ದಾಳಿ ನನಗೆ ಆಶ್ಚರ್ಯವನ್ನೇನು ಉಂಟುಮಾಡಿಲ್ಲ. ಈ ರೀತಿಯ ಮಹಾಮಾರಿಯ ದಾಳಿ  ಮನುಕುಲವನ್ನು ಅಪ್ಪಳಿಸಬಹುದೆಂಬ ಎಚ್ಚರಿಕೆಯನ್ನು ತಜ್ಞರು ಕೆಲವು ದಶಕಗಳಿಂದ ನೀಡುತ್ತಲೇ ಬಂದಿದ್ದಾರೆ. ಈವರೆಗಿನ ಸಂಶೋಧನೆಗಳ ಪ್ರಕಾರ ಕೋವಿಡ್-೧೯ರ ವೈರಾಣು ಒಂದು ಜಾತಿಯ ಬಾವಲಿಗಳಲ್ಲಿ ಸುಮಾರು ಒಂದು ಸಾವಿರ ವರ್ಷಗಳಿಂದ ಇದೆ. ಈ ಬಾವಲಿಗಳಿಂದ, ವೈರಾಣು ಪೆಂಗೋಲಿನ್ಗಳಿಗೆ ಹರಡಿದೆ. ಚೀನಾದ ವುಹಾನಿನ ಮಾಂಸದ ಹಸಿ ಮಾರುಕಟ್ಟೆಯಲ್ಲಿ, ತಿನ್ನುವ ಉದ್ದೇಶಕ್ಕಾಗಿ, ಪೆಂಗೋಲಿನ್ಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತದೆ. ಅಂತಹ ಪೆಂಗೋಲಿನ್ಗಳಿಂದ ಕೋವಿಡ್-೧೯ರ ವೈರಾಣು ಮಾನವನಿಗೆ ತಗುಲಿರಬಹುದೆಂಬುದು ತಜ್ಞರ ಅಭಿಪ್ರಾಯವಾಗಿದೆ. ಕೋವಿಡ್-೧೯ರಂತಹ ರೋಗ ಹರಡುವ ವೈರಾಣುಗಳನ್ನು 'ಪೆಥೊಜೆನ್ಗಳು' ಎಂದು ಕರೆಯುತ್ತಾರೆ. ಪೆಥೊಜೆನ್ಗಳ ಬಗ್ಗೆ ಮಾನವನಿಗೆ ತಿಳಿದಿರುವುದು ಅತ್ಯಲ್ಪ. ಕಾಡು ಪ್ರಾಣಿಗಳ ಸ್ವಾಭಾವಿಕ ವಾಸಸ್ಥಾನಗಳಾದ ಕಾಡುಗಳ ವಿನಾಶದಿಂದ, ಕೋವಿಡ್ನಂತಹ ರೋಗಗಳು ಪ್ರಾಣಿಗಳಿಂದ ಮನುಕುಲಕ್ಕೆ ಹರಡುತ್ತಿದೆ. ಮಿಲಿಯಾಂತರ ಜಾತಿಯ ವೈರಾಣುಗಳು ಕಾಡು ಪ್ರಾಣಿಗಳಲ್ಲಿ ಜೀವಂತವಾಗಿವೆ. ಕಾಡುಗಳು ಅಂತಹ ಪ್ರಾಣಿಗಳು ಮತ್ತು ಮಾನವರ ನಡುವಿನ ತಡೆಗೋಡೆಗಳಾಗಿವೆ. ಕಾಡುಗಳ ವಿನಾಶದಿಂದ ಅಂತಹ ತಡೆಗೋಡೆಗಳು ಕುಸಿದುಬಿದ್ದಂತಾಗಿ, ಪೆಥೊಜೆನ್ಗಳನ್ನು ಹೊತ್ತ ಪ್ರಾಣಿಗಳು ಮಾನವನ ಆವಾಸ ಸ್ಥಾನಗಳತ್ತ ದಾಳಿಯಿಡುತ್ತವೆ. ಅದರಿಂದ ಹೊಸ ಹೊಸ ರೀತಿಯ ರೋಗಗಳಿಗೆ ಮಾನವ ತುತ್ತಾಗುತ್ತಾನೆ. ಆದುದರಿಂದ ಜೈವಿಕ ವೈವಿಧ್ಯ (bio-diversity)ದ ವಿನಾಶದ ಕಾರ್ಯಗಳು ಮೊದಲು ನಿಲ್ಲಬೇಕು' ಎಂದು ವಿಷಾದಿಸಿದವರು ವೈರಾಣು ತಜ್ಞರಾದ ಡ್ರೇಕರವರು. 

ರಾಜುರವರು ಪ್ರತಿಕ್ರಿಯಿಸುತ್ತಾ, 'ಜೀವಂತ ಪ್ರಾಣಿಗಳನ್ನು ಮತ್ತು ತಾಜಾ ಮಾಂಸದ ಮಾರಾಟವನ್ನು ಮಾಡುತ್ತಿದ್ದ ಉಹಾನ್ ನಗರದ ಹಸಿ ಮಾರುಕಟ್ಟೆಗಳೇ,  ಕೋವಿಡ್-೧೯ ಮಹಾಮಾರಿಯ ಉಗಮ ಸ್ಥಾನಗಳು ಎಂಬುದನ್ನು ಚೀನಾ ಸರಕಾರವೂ ಈಗ ಒಪ್ಪುತ್ತಿದೆ. ತೋಳಗಳು, ನಾಯಿಗಳು, ಓತಿಕ್ಯಾತಗಳು, ಮೊಸಳೆಗಳು, ಚೇಳುಗಳು, ಅಳಿಲುಗಳು, ನರಿಗಳು, ಪುನುಗು ಬೆಕ್ಕುಗಳು,                    ಪ್ಯಾಂಗೊಲಿನ್ಗಳು, ಆಮೆಗಳು ಮುಂತಾದ ಜೀವಂತ ಪ್ರಾಣಿಗಳು ಮತ್ತು ಅವುಗಳ ಮಾಂಸವನ್ನು ಉಹಾನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಅಂತಹ ಪ್ರಾಣಿಗಳ ಮಾಂಸವನ್ನು ಯಾವ ಮುನ್ನೆಚ್ಚರಿಕೆಯೂ ಇಲ್ಲದಂತೆ ತಿನ್ನವುದೆಂದರೆ, ವಿವಿಧ ವೈರಾಣುಗಳನ್ನು ನಾವು ಮೈಮೇಲೆ ಎಳೆದುಕೊಂಡಂತೆಯೇ ಸರಿ. ಇಂತಹ ಹಸಿ ಮಾರುಕಟ್ಟೆಗಳಲ್ಲಿ ಚರಂಡಿ ಮತ್ತು ಹಸಿ ತ್ಯಾಜ್ಯಗಳನ್ನು ಹೊರ ಸಾಗಿಸುವ ವ್ಯವಸ್ಥೆಗಳು ಸಮರ್ಪಕವಾಗಿರುವುದಿಲ್ಲ. ಚೀನಾ ದೇಶಕ್ಕೀಗ ಸಲ್ಪ ಬುದ್ಧಿ ಬಂದಂತೆ ಕಾಣುತ್ತಿದೆ. ವುಹಾನ್ ಹಸಿ ಮಾರುಕಟ್ಟೆಯನ್ನು ಅವರೀಗ ಮುಚ್ಚಿರುವುದಾಗಿ ಕೇಳ್ಪಟ್ಟಿದ್ದೇನೆ. ಕಾಡು ಪ್ರಾಣಿಗಳನ್ನು ಮಾರಾಟ ಮಾಡುವುದನ್ನು ಮತ್ತು ತಿನ್ನುವುದನ್ನು ಚೀನಾ ನಿಷೇಧಿಸಿರುವುದಾಗಿಯೂ  ಸುದ್ದಿಗಳು ಬಂದಿವೆ,' ಎಂದರು. 

ಆದರೆ ಡ್ರೇಕರು ಎಚ್ಚರಿಸುತ್ತಾ, 'ಈ ಹಸಿ ಮಾರುಕಟ್ಟೆಗಳು ಬಡವರ ಪೌಷ್ಠಿಕ ಆಹಾರದ ಮೂಲಗಳು. ಸಂಪೂರ್ಣವಾಗಿ ಅವುಗಳನ್ನು ಮುಚ್ಚುವುದು ಅಸಾಧ್ಯ. ಹಾಗೆ ಮಾಡಿದರೆ ಕಾಡು ಪ್ರಾಣಿಗಳ ಮಾಂಸದ ಕಾಳಸಂತೆಯ ಮಾರಾಟಕ್ಕೆ ಎಡೆ ಮಾಡಿಕೊಟ್ಟಂತಾಗುವುದು. ಕಾಳಸಂತೆಯ ವ್ಯವಸ್ಥೆಯು ಯಾವುದೇ ಕಾನೂನಿನ ಹಿಡಿತಕ್ಕೆ ಒಳಪಡದಿದ್ದು, ನೈರ್ಮಲ್ಯ ಮತ್ತು ಶುಚಿತ್ವಗಳ ನಿರ್ವಹಣೆ ಅಲ್ಲಿ ಅಸಾಧ್ಯವಾದುದಾಗಿರುತ್ತದೆ. ಗೃಹ ನಿರ್ಮಾಣಕ್ಕೆ ಬೇಕಾಗುವ ಮರಗಳು, ಖನಿಜಗಳು, ರಸ್ತೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳು, ಕೃಷಿ ಭೂಮಿಯ ವಿಸ್ತರಣೆ ಮುಂತಾದ ಕಾರಣಗಳಿಗಾಗಿ ಕಾಡುಗಳ ಮತ್ತು ಭೂಮಿಯ ಸಂಪನ್ಮೂಲಗಳ ವಿನಾಶ ಎಗ್ಗಿಲ್ಲದೆ ಸಾಗುತ್ತಿದೆ. ಕಾಡುಪ್ರಾಣಿಗಳ ಸಂಪರ್ಕ ಮಾನವನೊಂದಿಗೆ ಉಂಟಾಗಿ ವೈರಾಣುಗಳ ಹರಡುವಿಕೆ ಮುಂದುವರೆಯುತ್ತಿದೆ. ಮೈಕ್ರೋಸ್ಕೋಪಿಗೂ ಕಾಣದ ವೈರಾಣುಗಳು ಕೋವಿಡ್ನಂತಹ ಮಹಾಮಾರಿಯನ್ನು ಹರಡುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿರುತ್ತವೆ. ಕೋವಿಡ್-೧೯ರ ವೈರಾಣುವಿನ ಉದ್ದ ಕೇವಲ ೧೨೦ ನ್ಯಾನೋಮೀಟರ್ (ಒಂದು ಮೀಟರನ್ನು, ೧೦೦ ಕೋಟಿ ಭಾಗಗಳನ್ನಾಗಿ ಮಾಡಿದರೆ, ಅದರಳೊಗೊಂದು ಭಾಗ ಎಂದಿಟ್ಟುಕೊಳ್ಳಿ - billionth of a meter)  ಮಾತ್ರದ್ದಾಗಿರುತ್ತದೆ. ಒಂದು ಸಣ್ಣ ಗುಂಡುಸೂಜಿಯ ಗುಂಡಿನಷ್ಟು ಗಾತ್ರದಲ್ಲಿ ೧೦೦ ಮಿಲಿಯೋನ್ನಷ್ಟು ಕೋವಿಡ್-೧೯ರ ವೈರಾಣುಗಳಿರುತ್ತವೆ ಎಂದು ಅಂದಾಜಿಸಲಾಗಿದೆ. ಕೆಲವೇ ನೂರರಷ್ಟು ವೈರಾಣುಗಳು ಒಬ್ಬ ಮಾನವನಿಗೆ ಕೋವಿಡ್ ರೋಗವನ್ನು ಹರಡಬಲ್ಲದು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. 

ಇಂಗ್ಲೆಂಡಿನಲ್ಲಿ ನಡೆಸಿರುವ ಸಂಶೋಧನೆಗಳ ಪ್ರಕಾರ ಕೋವಿಡ್-೧೯ರ ವೈರಾಣು "ಕಪ್ಪು ಮತ್ತು ಕಂದು ಬಣ್ಣದ ಜನಾಂಗ"ದವರನ್ನು ಹೆಚ್ಚಾಗಿ ಕಾಡುತ್ತದೆ. ಭಾರತೀಯರಾದ ನಾವು ಕಂದು ಬಣ್ಣದ ಜನಾಂಗದವರಾದ್ದುದರಿಂದ ನಮ್ಮವರ ಮೇಲೆ ಇದರ ಪರಿಣಾಮ ಹೆಚ್ಚು ಎಂಬುದು ನನ್ನ ಆತಂಕ. "ಏಕೆ ಹೀಗೆ?" ತಜ್ಞರಲ್ಲಿ ಇದಕ್ಕೆ ನಿಖರವಾದ ಜೈವಿಕ ಕಾರಣಗಳಿಲ್ಲ. ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಕಂಡು ಬರುವ ಸಾಮಾಜಿಕ ಹಾಗೂ ಆರ್ಥಿಕ ಅಸಮತೋಲನಗಳು ಇದಕ್ಕೆ ಕಾರಣವಿರಬಹುದೆಂಬುದು  ಅವರುಗಳ ವಿಶ್ಲೇಷಣೆ ಮಾತ್ರವಾಗಿದೆ. 

ಮುಂದಿನ ಮಹಾಮಾರಿ (pandemic) ಎಲ್ಲಿಂದ ಮತ್ತು ಹೇಗೆ ಬರಬಹುದೆಂಬುದನ್ನು ಊಹಿಸುವುದು ಕಷ್ಟ ಸಾಧ್ಯ.  "ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ರೀತಿಯ ಮಹಾಮಾರಿಗಳು ಮನುಕುಲಕ್ಕೆ ತಗಲುವುದೆಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು!"  ಆದುದರಿಂದ ಮುಂದಿನ ದಿನಗಳಲ್ಲಿ ಬರಬಹುದಾದಂತಹ ಮಾಹಾಮಾರಿಗಳ ಪರಿಣಾಮವನ್ನು ಆದಷ್ಟೂ ತಗ್ಗಿಸಬಲ್ಲ ಸಿದ್ಧತೆಯನ್ನು ನಾವು ನಡೆಸುತ್ತಿರಬೇಕು.' ಡ್ರೇಕರು ಮುಚ್ಚುಮರೆಯಿಲ್ಲದೇ, ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದಾರೆ, ಎಂಬುದನ್ನು ರೋಹಿಣಿ ಗಮನಿಸದೆ ಇರಲಿಲ್ಲ. 

ಈ ಸಂದರ್ಭದಲ್ಲಿ ಡಾ. ಕಿರಣರಿಗೆ ಪ್ರತಿಕ್ರಿಯಿಸಬೇಕೆನಿಸಿತ್ತು. 'ಡ್ರೇಕ್ ರವರೇ, ಕಂದು ಬಣ್ಣದ ಜನಾಂಗದವರಾದ ಭಾರತೀಯರ ಮೇಲೆ, ಕೋವಿಡ್ನ ಪರಿಣಾಮ ತೀವ್ರವಾಗಿರುತ್ತದೆ ಎಂಬುದಾಗಿ ತಿಳಿಸಿದ್ದೀರಿ. ನಮ್ಮಂತಹ ದೇಶಗಳ ಆರ್ಥಿಕ ಹಾಗೂ ಸಾಮಾಜಿಕ ಅಸಮತೋಲನಗಳ ಕಾರಣವನ್ನೂ ನೀಡಿದ್ದೀರಿ. ಅದೃಷ್ಟವಶಾತ್ ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚು.  ೪೦ ವರ್ಷದ ಪ್ರಾಯದೊಳಗಿನ ಜನರುಗಳ ಸಂಖ್ಯೆ, ನಮ್ಮ ಭಾರತದಲ್ಲಿ ಶೇಕಡ ೬೦ರಷ್ಟಕ್ಕಿಂತಾ ಹೆಚ್ಚಿದೆ. ಅಂತಹ ಯುವಕರುಗಳಿಗೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ  ಬೇರೇ ಕಾಯಿಲೆಗಳ ಬಾಧೆ  (comorbidities) ಇರುವ ಸಾಧ್ಯತೆ ಕಮ್ಮಿ. ಹಾಗಾಗಿ ನಮ್ಮ  ಯುವಕರುಗಳ ಪ್ರತಿರೋಧ ಶಕ್ತಿ ಉತ್ತಮವಾಗಿರುತ್ತದೆ. ನಮ್ಮ ದೇಶದಲ್ಲಿ ಸಾವು- ನೋವುಗಳ ಸಂಖ್ಯೆ ಕಮ್ಮಿ ಇರವುದಕ್ಕೆ , ಈ ಅಂಶವೂ ಪೂರಕವಾಗಿರಬಹುದು. 

ರೋಗ ಹರಡುವ ಸಾಧ್ಯತೆ ಈಗ, ಕಾಡುಗಳ ಜೊತೆಗೆ ನಾಡಿನಿಂದಲೂ ಉಂಟಾಗಬಹುದೆಂದು ತಿಳಿದು ಬರುತ್ತಿದೆ. ನಮ್ಮ ಪಟ್ಟಣ ಮತ್ತು ನಗರಗಳ ಜನಸಂಖ್ಯೆಯ ದಟ್ಟಣೆ ಹೆಚ್ಚಾಗಿದ್ದು, ನಮ್ಮೊಡನೆ ಬಾವಲಿಗಳು, ಇಲಿಗಳು, ಹಾವುಗಳು, ಹಕ್ಕಿ-ಪಕ್ಷಿಗಳು ಇರುತ್ತವೆ. ಈ ಪ್ರಾಣಿಗಳೊಂದಿಗಿನ ಹತ್ತಿರದ ಸಂಪರ್ಕದಿಂದಲೂ ರೋಗಗಳು ಹರಡಬಹುದು' ಎಂದರು ಡಾ. ಕಿರಣ್. 

ಈ ನಡುವೆ ತುಂಬು ಗರ್ಭಿಣಿಯಾದ ಹೆಣ್ಣಾನೆಯೊಂದು ಭಾರಿ ಮರದ ಮರೆಯಲ್ಲಿ ತವಕ ಪಡುತ್ತಿರುವ ದೃಶ್ಯವೊಂದನ್ನು ಹರಿಣಿಯವರು ಗಮನಿಸಿದರು. ಎಲ್ಲರನ್ನು ನಿಶ್ಯಬ್ದವಾಗಿರುವಂತೆ ಸೂಚಿಸಿದ ಹರಿಣಿ, ಆ ಹೆಣ್ಣಾನೆಗೆ ಪ್ರಸವ ಸಮಯ ಸಮೀಪಿಸಿರಬಹುದೆಂದು ಎಲ್ಲರಿಗೂ ಪಿಸು ಮಾತಿನಲ್ಲಿ ತಿಳಿಸಿದರು. ಕುತೂಹಲದಿಂದ ನೋಡ ಹತ್ತಿದ ಎಲ್ಲರನ್ನೂ ಎಚ್ಚರಿಸಿದ ಹರಿಣಿ, 'ಇಂತಹ ಸಂದರ್ಭಗಳಲ್ಲಿ, ಮನುಷ್ಯರುಗಳು ಸಮೀಪದಲ್ಲಿದ್ದು ನೋಡುತ್ತಿದ್ದರೆ, ಹೆಣ್ಣಾನೆ ನಾಚುತ್ತದೆ. ಅದರ ಪ್ರಸವ ಕಾರ್ಯದಲ್ಲಿ ತೊಡಕುಂಟಾಗಬಹುದು. ಆದುದರಿಂದ ನಾವು ಬೇಗ ಬೇರೆಡೆಗೆ ನಿರ್ಗಮಿಸೋಣ' ಎಂದರು. 

ರೋಹಿಣಿ ಮಾತನ್ನು ಮುಂದುವರೆಸುತ್ತಾ, 'ಕೋವಿಡ್ ಲಾಕ್ಡೌನಿನಿಂದ ನಮ್ಮ ಪರಿಸರದಲ್ಲಿ  ನಾವೆಣಿಸಿರದ ಉತ್ತಮ ಮಾರ್ಪಾಡೊಂದು ಕಂಡು ಬಂದಿದೆ. ಗಾಳಿ ಮತ್ತು ನೀರುಗಳು ಈಗ ಹೆಚ್ಚು ಶುದ್ಧವಾಗಿವೆ. ಕೈಗಾರಿಕೆಗಳಿಂದ ಮತ್ತು ವಾಹನಗಳಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ಇಂಗಾಲದ ಡೈ ಆಕ್ಸೈಡಿನ (Carbon dioxide) ಹೊರಸೂಸುವಿಕೆ ತಗ್ಗಿದ್ದು ವಾತಾವರಣ ನಿರ್ಮಲವಾಗಿದೆ. ಲಾಕ್ಡೌನಿನ ಆ   ದಿನಗಳಲ್ಲಿ ಹರಿದ್ವಾರದ ಗಂಗಾನದಿಯ ನೀರು ಸತತವಾಗಿ ಕಲುಷಿತಗೊಳ್ಳುತ್ತಿದ್ದ ಪ್ರಕ್ರಿಯೆ, ತಾನಾಗೇ ನಿಂತಿದ್ದು, ಕುಡಿಯಲು  ಯೋಗ್ಯವಾಗಿತ್ತು ಎಂದು ಪ್ರಯೋಗಗಳಿಂದ ತಿಳಿದು ಬಂದಿದೆ. ಯಮುನೆಯ ನೀರಾಗ ತಿಳಿಯಾಗಿದ್ದು, ಅದರ ತೀರಗಳಲ್ಲಿ ಡಾಲ್ಫಿನ್ಗಳ ಹರಿದಾಟವನ್ನು ಜನರುಗಳು ಗಮನಿಸಿದ್ದರು. ಲಾಕ್ಡೌನಿನ ವೇಳೆ ಸುಮಾರು ೨೦೦ ಕಿ.ಮೀ.ಗಳಷ್ಟು ದೂರದಿಂದ ಹಿಮಾಲಯ ಪರ್ವತ ಶ್ರೇಣಿಯ ರಮಣೀಯ ದೃಶ್ಯವನ್ನು ಜನರು ಸ್ಪಷ್ಟವಾಗಿ ನೋಡಿ ಆನಂದಿಸಿದ್ದಾರೆ. ನಗರದ ರಸ್ತೆಗಳಲ್ಲಿ ನವಿಲುಗಳು, ಜಿಂಕೆಗಳು ಮುಂತಾದ ಪ್ರಾಣಿಗಲು ನಿರ್ಭೀತಿಯಿಂದ ನಡೆದಾಡುವುದನ್ನೂ, ಲಾಕ್ಡೌನಿನ ದಿನಗಳಲ್ಲಿ ಹಲವರು ಗಮನಿಸಿದ್ದಾರೆ. ಈ ಎಲ್ಲಾ ಆಶ್ಚರ್ಯಕರ ಬೆಳವಣಿಗೆಗಳು ನಮ್ಮಗಳ ಕಣ್ಣನ್ನು ತೆರೆಸಿವೆ. ಎಗ್ಗಿಲ್ಲದೆ ನಡೆಯುವ ಮಾನವನ ಹಣ ಸಂಪಾದನೆಯ ಸ್ವಾರ್ಥ ಕಾರ್ಯಗಳೇ, ಪರಿಸರದ ಕೆಡುವಿಕೆಗೆ ಕಾರಣ ಎಂಬುದು ಸ್ಪಷ್ಟವಾಗಿ ನಿರೂಪಿತಗೊಂಡಿದೆ. ಪರಿಸರದ ಸುಧಾರಣೆ ಮತ್ತು ರಕ್ಷಣೆ  ಅಸಾಧ್ಯವಾದ ಕೆಲಸವಲ್ಲ ಎಂಬುದೂ ಸಹ ಲಾಕ್ಡೌನ್ ಅವಧಿಯಲ್ಲಿ ಸಾಬೀತಾಗಿದೆ. 

ಆದರೆ ಲಾಕ್ಡೌನ್ ಕೊನೆಗೊಳ್ಳಲೇ ಬೇಕು. ಮಾನವನ ದುಡಿಯುವ ಚಟುವಟಿಕೆಗಳು ಮತ್ತೆ ಹಿಂದಿನಂತೆ ಆಗಲೇ ಬೇಕು. ಇಲ್ಲವಾದರೆ ದುಡಿಮೆಯಿಲ್ಲದೇ ಬಡವರುಗಳ ಜೀವನ ದುಸ್ತರವಾಗುತ್ತದೆ. ಆದರೂ ಪರಿಸರದ ರಕ್ಷಣೆ ಕೂಡ ಆಗಬೇಕಾದ ಕಾರ್ಯವೇ. ಪೆಟ್ರೋಲ್ ಮತ್ತು ಕಲ್ಲಿದ್ದಲಿನಂತಹ ಇಂಧನಗಳ ಬಳಕೆಯನ್ನು ನಿಯಂತ್ರಿಸುವುದರಿಂದ ಪರಿಸರದ ಸುಧಾರಣೆ ಸಾಧ್ಯ. "ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಂ)," ಎಂಬ ವ್ಯವಸ್ಥೆಯಿಂದ ವಾಹನಗಳ ಸಂಚಾರ ಮತ್ತು ದಟ್ಟಣೆ ಕಡಿಮೆಯಾಗುವುದು, ಒಂದು ಒಳ್ಳೆಯ ಬೆಳವಣಿಗೆ. ಕಾಡು ಮತ್ತು ನಗರಗಳ ಹೊರವಲಯಗಳ ಕಬಳಿಕೆ ನಿಲ್ಲಬೇಕು. ಕಾಡು ಪ್ರಾಣಿಗಳನ್ನು ತಿನ್ನುವುದಕ್ಕಾಗಿ  ಎಗ್ಗಿಲ್ಲದೇ ಕೊಲ್ಲುವುದನ್ನು ನಿಲ್ಲಿಸಬೇಕು. ಪ್ರಕೃತಿ ಮಾತೆಯನ್ನು ಗೌರವಿಸುವುದನ್ನು ನಾವೆಲ್ಲರೂ ಕಲಿಯಬೇಕು. "ರೋಗ ಹರಡುವುದನ್ನು ತಡೆಯುವುದೇ, ಚಿಕಿತ್ಸೆಗಾಗಿ ಹೆಣಗಾಡುವುದಕ್ಕಿಂತ ಒಳ್ಳೆಯದು (Prevention is better than cure)" ಎಂಬ ನಾಣ್ನುಡಿಯನ್ನು ನಾವು ಮರೆಯುವಂತಿಲ್ಲಾ' ಎಂದಳು.  

'ಪ್ರಪಂಚದ ೨೦ ಅತ್ಯಂತ ಕಲುಷಿತ ನಗರಗಳಲ್ಲಿನ, ೧೫ ನಗರಗಳು ಭಾರತದಲ್ಲೇ ಇವೆ ಎಂದು  ಕೇಳಿದ್ದೇನೆ. ನಮ್ಮ ರಾಷ್ಟ್ರದ ರಾಜಧಾನಿ ದಿಲ್ಲಿಯು, ಇಡೀ ವಿಶ್ವದಲ್ಲೇ ಅತ್ಯಂತ ಕಲುಷಿತ ನಗರ ಎಂದು ಕೂಡ ತಜ್ಞರು ಹೇಳುತ್ತಿದ್ದಾರೆ. ಲಾಕ್ಡೌನ್ ನಮಗೆ ಹಲವು ಪಾಠಗಳನ್ನು ಕಲಿಸಿದೆ. ಲಾಕ್ಡೌನ್ ಪಾಠಗಳನ್ನು ಅರಿತುಕೊಳ್ಳಲು ನಾವುಗಳು ಭಾರೀ ಬೆಲೆಯನ್ನೂ ತೆತ್ತಿರಬಹುದು. ಆದರೂ,  ಕೋವಿಡ್-೧೯ರ ಮಹಾಮಾರಿ, ಪರಿಸರದ ಪುನರುಜ್ಜೀವನ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಲಾಕ್ಡೌನನ್ನು ಜಾರಿಗೊಳಿಸಿದ ನಂತರ, ದಿಲ್ಲಿಯ ಪರಿಸರ ಮಾಲಿನ್ಯದ  ಪ್ರಮಾಣ ೬೦%ರಷ್ಟು ಸುಧಾರಿಸಿದೆ!  ಆದರೆ ಈ ಎಲ್ಲಾ ಒಳ್ಳೆ ಬೆಳವಣಿಗೆಗಳು ಬಹು ಕಾಲ ಉಳಿಯಲಾರವು. ಆದರೂ ನಮ್ಮ ಹಳ್ಳಿ, ಪಟ್ಟಣ ಮತ್ತು ನಗರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಮಾರ್ಗಗಳಿವೆ ಎಂಬುದನ್ನು ನಾವುಗಳು ಅರಿತುಕೊಳ್ಳಬೇಕು. ಅಂತಹ ಸುಧಾರಣೆಯನ್ನು ಮಾಡಲು,  ಬಲವಾದ ರಾಜಕೀಯ ಇಚ್ಚಾಶಕ್ತಿ, ನಮ್ಮ ನಾಯಕರುಗಳಲ್ಲಿ  ಇರಬೇಕು. ಜೊತೆಗೆ ಪರಿಸರ ಕಾಳಜಿಯ ಮನಃಸ್ಥಿತಿ ಶ್ರೀಸಾಮಾನ್ಯರಲ್ಲೂ ಉಂಟಾಗಬೇಕು,' ಎಂದರು ಡಾ. ಕಿರಣ್. 

'ಡ್ರೇಕ್ ಮತ್ತು ಹರಿಣಿಯಂಥವರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಅರಣ್ಯೀಕರಣ (afforestation)ದ ಮಹತ್ಕಾರ್ಯ ಆಗಬೇಕಾದರೆ ರಾಜಕಾರಣಿಗಳು, ಕಾರ್ಪೊರೇಟ್ ನಾಯಕರುಗಳು, ಪರಿಸರವಾದಿಗಳು ಮತ್ತು ಜನಸಾಮಾನ್ಯರುಗಳ ನಡುವಿನ ಸಮನ್ವಯ ಮತ್ತು ಪ್ರಯತ್ನಗಳು ಸತತವಾಗಿ ನಡೆಯುತ್ತಿರಬೇಕು. ಪ್ರಕೃತಿ ಮಾತೆಯಿಂದ ನಾವು ಕಸಿದುಕೊಂಡಿರುವ ಭೂಭಾಗದ  ಅರ್ಧದಷ್ಟನ್ನಾದರೂ ನಾವು ಹಿಂತಿರುಗಿಸಬೇಕು,' ಎಂಬ ಹಿರಿಯ ರಾಜುರವರ ಅಭಿಪ್ರಾಯಕ್ಕೆ ಎಲ್ಲರೂ ತಲೆದೂಗಿದ್ದರು. 

ಡ್ರೇಕ್ ಮತ್ತು ಹರಿಣೀರವರ ಆತಿಥ್ಯದಿಂದ ರಾಜು, ರೋಹಿಣಿ ಮತ್ತು ಡಾ. ಕಿರಣರವರು ಸಂತಸಗೊಂಡಿದ್ದರು. ಅಪರೂಪದ ದಂಪತಿಗೆ ತುಂಬು ಮನಸ್ಸಿನ ಧನ್ಯವಾದಗಳನ್ನು ಅರ್ಪಿಸಿ, ಮೂವರು ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದರು. 

***          

ಊರಿಗೆ ಹಿಂತಿರುಗುವ ಸಮಯದಯಲ್ಲಿ, ವಾಹನ ಚಾಲನೆಯ ಹೊಣೆಯನ್ನು ರಾಜುರವರು ಹೊತ್ತಿದ್ದರು. ದಣಿದಿದ್ದ ರೋಹಿಣಿ, ಸಣ್ಣ ನಿದ್ದೆಯೊಂದಕ್ಕೆ ಜಾರಿದ್ದಳು. ಹಾದು  ಹೋಗುತ್ತಿದ್ದ ವಾಹನಗಳನ್ನು, ಜನರುಗಳನ್ನೂ ವೀಕ್ಷಿಸುತ್ತಾ, ಡಾ. ಕಿರಣ್ ವಿಚಾರಮಗ್ನರಾಗಿದ್ದರು. 'ಮಾಸ್ಕ್  ಧರಿಸಿದವರ ಸಂಖ್ಯೆ ಅತ್ಯಲ್ಪ. ಮಾಸ್ಕ್ ಧರಿಸಬೇಕೆಂಬುದು, ನಮಗೆ ಕೋವಿಡ್ ಕಲಿಸಿದ ಮತ್ತೊಂದು ಪಾಠವಲ್ಲವೇ? ಮಾಸ್ಕ್ ಧರಿಸುವುದು, "ನಾನು ನಿನ್ನನ್ನು ರಕ್ಷಿಸುತ್ತೇನೆ, ನೀನು ನನ್ನನ್ನು ರಕ್ಷಿಸು" ಎಂಬ ಉತ್ತಮ ಸಂದೇಶದ ಪ್ರತೀಕ!  ಮಾಸ್ಕ್ ಧರಿಸುವುದು, ಸಮಾಜದ ಒಳಿತನ್ನು ಕುರಿತಾದ ಕಾಳಜಿಯನ್ನು ವ್ಯಕ್ತ ಪಡಿಸುವ  ಒಂದು ಪ್ರಕ್ರಿಯೆ. ಎರಡೂ ವ್ಯಕ್ತಿಗಳು ಮಾಸ್ಕ್ ಧರಿಸದೇ ಸಂಧಿಸಿದರೆ, ವೈರಾಣು ಹರಡುವ ಸಾಧ್ಯತೆ ಅತಿ ಹೆಚ್ಚು. ಇಬ್ಬರಲ್ಲಿ, ಒಬ್ಬರಾದರೂ ಮಾಸ್ಕ್ ಧರಿಸಿದ್ದರೆ ವೈರಾಣು ಹರಡುವ ಸಾಧ್ಯತೆ ಸ್ವಲ್ಪ ಕಮ್ಮಿ. ಇಬ್ಬರೂ ಮಾಸ್ಕ ಧರಿಸಿದ್ದರೆ, ವೈರಾಣು ಹಾಡುವ ಸಾಧ್ಯತೆ ಅತ್ಯಲ್ಪ,' ಎಂದು ಮತ್ತೆ ಮತ್ತೆ ಹೇಳುತ್ತಿದ್ದ ತಮ್ಮ ಹಿರಿಯ ಸಹೋದ್ಯೋಗಿಯ ಮಾತುಗಳನ್ನು ಡಾ. ಕಿರಣ್ ನೆನಪಿಸಿಕೊಂಡಿದ್ದರು. 

ಕೋವಿಡ್ ಕುರಿತಾದ ವಿಚಾರಗಳಲ್ಲೇ ಡಾ. ಕಿರಣ್ ಮುಳುಗಿ ಹೋಗಿದ್ದರು. ರೋಗ ಲಕ್ಷಣಗಳಿಲ್ಲದ ಹಲವರು ಕೂಡಾ, ರೋಗವನ್ನು ಹರಡಬಲ್ಲರು. ಮಾಸ್ಕ್ ಧರಿಸುವುದರಿಂದ ಅಂತಹ ವ್ಯಕ್ತಿಗಳಿಂದ ಸಿಡಿಯಬಹುದಾದ ಉಗುಳಿನ ತುಂತುರುಗಳು ಬೇರೆಯವರ ಮೇಲೆ ಬೀಳಲಾರವು. ಎನ್-೯೫ ಮಾಸ್ಕ್ ಹೆಚ್ಚಿನ ಬೆಲೆಯದಾಗಿದ್ದು, ಅದನ್ನೇ ಧರಿಸುವುದು ಕಡ್ಡಾಯವಲ್ಲ. ಜನ ಸಾಮಾನ್ಯರಿಗೆ, ದುಬಾರಿಯಲ್ಲದ  ೩-ಪದರದ ಸಾಧಾರಣ ಮಾಸ್ಕ್ ಸಾಕು. ಮನೆಯಲ್ಲೇ ಉತ್ತಮ ಹತ್ತಿ ಬಟ್ಟೆಯಿಂದ ತಯಾರಿಸಿದ ಮಾಸ್ಕ್ಗಳು ಉತ್ತಮವಾಗಿದ್ದು, ಮತ್ತೆ ಮತ್ತೆ ಒಗೆದನಂತರವೂ, ಅವುಗಳ ಪುನರ್ಬಳಕೆ ಸಾಧ್ಯ. ಆದರೆ ತಮ್ಮ ತಮ್ಮ ಮುಖದ ಆಕೃತಿಗೆ ಮತ್ತು ಗಾತ್ರಕ್ಕೆ ಸರಿಹೊಂದುವಂತಹ ಮಾಸ್ಕನ್ನು ಧರಿಸುವುದು ಅತ್ಯವಶ್ಯಕ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು, ಕೋವಿಡ್ ರೋಗವನ್ನು ತಡೆಯಬಹುದಾದ ಮತ್ತೆರಡು ಸುಲಭ ವಿಧಾನಗಳು. ಕೋವಿಡ್ ವೈರಾಣುವನ್ನು ಅತಿ ತೆಳುವಾದ ಕೊಬ್ಬಿನ ಪದರವೊಂದು ಜೋಪಾನವಾಗಿಟ್ಟಿರುತ್ತದೆ. ಆ ಕೊಬ್ಬಿನ ಪದರವನ್ನು, ಸೋಪಿನ ನೊರೆ ಸುಲಭವಾಗಿ ಕರಗಿಸಿ, ವೈರಾಣು ನಿಷ್ಕ್ರಿಯೆಗೊಳ್ಳುವಂತೆ ಮಾಡುತ್ತದೆ.

ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಡಾ. ಕಿರಣರ ದೃಷ್ಟಿ ನೆಟ್ಟಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಬೀಡಾ ಅಂಗಡಿಗಳಿದ್ದವು. ಹೊಗೆಸೊಪ್ಪಿನ ಮತ್ತು ವೀಳಯದೆಲೆಯ ಪಾನನ್ನು ಜನಗಳು ಜಗಿಯುತ್ತಾ ನಿಂತಿರುವುದು ಎಲ್ಲಡೆಯೂ ಕಂಡು ಬರುತ್ತಿತ್ತು. ಪಾನಿನ ಉಚ್ಚಿಷ್ಟವನ್ನು ಜನರುಗಳು ಎಲ್ಲೆಂದರಲ್ಲಿ ಉಗಿಯುವ ದೃಶ್ಯಗಳಂತೂ ಅತ್ಯಂತ ಅಸಹ್ಯಕಾರಿಯಾಗಿರುತ್ತಿತ್ತು. ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವ ಚಾಲಕರು ಮತ್ತು ಪ್ರಯಾಣಿಕರುಗಳು ಕೂಡಾ ಆ ರೀತಿ ಉಗಿಯುವುದು ತೀರಾ ಸಾಮಾನ್ಯವಾಗಿತ್ತು. ಆ ರೀತಿ ಉಗಿಯುವುದೆಂದರೆ, ಕೋವಿಡ್ ಹರಡುವಿಕೆಗೆ ಸ್ವಾಗತ ನೀಡಿದಂತೆ. ಎಲ್ಲೆಂದರಲ್ಲಿ ಉಗಿಯುವ ದುರಭ್ಯಾಸ ಇಡೀ ಭಾರತದಲ್ಲಿ ಸಾಗುತ್ತದೆ ಎಂಬುದು ಡಾ. ಕಿರಣರಿಗೆ ಗೊತ್ತಿತ್ತು. ಎಗ್ಗಿಲ್ಲದೆ ಎಲ್ಲೆಂದರಲ್ಲಿ ಉಗಿಯುವ ದುಶ್ಚಟವನ್ನು ತಡೆಯಬೇಕಾದ ಅವಶ್ಯಕತೆಯನ್ನು ಪ್ರಥಮ ಬಾರಿಗೆ, ಕೋವಿಡ್ನ ಜಾಗೃತಿ ಮೂಡಿಸಿತ್ತು! 

ಲಾಕ್ಡೌನಿನ ದಿನಗಳನಂತರ ದೇಶದಲ್ಲೇ ಪ್ರಥಮ ಬಾರಿಗೆ, ಎಲ್ಲೆಂದರಲ್ಲಿ ಉಗಿಯುವುದನ್ನು ನಿಷೇಧಿಸಿ ಮಹಾರಾಷ್ಟ್ರ ಸರಕಾರ ಕಾನೂನನ್ನು ಜಾರಿಗೊಳಿಸಿತ್ತು. ೨೦೨೦ರ ಮೇ ೨೯ರಂದು, ಸಾಂಕ್ರಾಮಿಕ ರೋಗಗಳ ಕಾಯಿದೆ - ೧೮೯೭ರ ಅಡಿಯಲ್ಲಿ ಆ ಸರಕಾರ ಜಾರಿಗೊಳಿಸಿದ ಕಾನೂನಿನ ಪ್ರಕಾರ, ಅಂತಹ ಅಪರಾಧಕ್ಕೆ ೬ ತಿಂಗಳ ಅವಧಿಯಿಂದ,  ೨ ವರುಷಗಳವರೆಗಿನ ಜೈಲುವಾಸವನ್ನು ವಿಧಿಸಬಹುದಾಗಿದೆ.  'ಮಹಾ' ಸರಕಾರದನಂತರ, ಇನ್ನೂ ಕೆಲವು ರಾಜ್ಯಗಳು ಅಂತಹ ಕಾನೂನನ್ನು ಜಾರಿಗೊಳಿಸಿವೆ. ಆದರೆ ಅಂತಹ ಕಾನೂನಿನ ಕಾರ್ಯಾನ್ವಯ ಮಾತ್ರ ಕಷ್ಟಸಾಧ್ಯ. ಎಲ್ಲವುದಕ್ಕಿಂತ ಪರಿಣಾಮಕಾರಿಯಾಗ ಬಲ್ಲದ್ದು, ಜನರುಗಳ ಮನಃಸ್ಥಿತಿಯ ಪರಿವರ್ತನೆ. ಅಂತಹ ಆರೋಗ್ಯಕರ ಅಭ್ಯಾಸಗಳಿಗೆ ಜನರುಗಳ ಮನಸ್ಸನ್ನು ಅಣಿಗೊಳಿಸುವಂತಹ ಪರಿಸ್ಥಿತಿಯನ್ನು ಕೋವಿಡ್ ಮಹಾಮಾರಿ ತಂದಿಟ್ಟಿರಬಹುದು ಎಂಬ ಆಶಾಭಾವನೆ ಕಿರಣರದಾಗಿತ್ತು. 

ಕೊರೋನಾ ಸೇನಾನಿಗಳನ್ನು ಗೌರವಿಸಬೇಕೆಂಬುದು ನಮಗೆ ಕೋವಿಡ್ ಮಹಾಮಾರಿ ಕಲಿಸಿದ ಮತ್ತೊಂದು ಪಾಠ. ಮುಖ್ಯವಾಗಿ ಸ್ವಚ್ಛತಾ ಕರ್ಮಚಾರಿಗಳ ಕೆಲಸ ಅತ್ಯಂತ ಕಷ್ಟದಾಯಕವಾದುದು. ಅವರುಗಳಿಗೀಗ ಸಾಕಷ್ಟು ಗೌರವ ದೊರೆಯುತ್ತಿರುವುದು ಸಂತಸದ ವಿಷಯ. ಕೆಲವು ಸಂದರ್ಭಗಳಲ್ಲಿ ಅವರುಗಳಿಗೆ ಜನರು ಹೆದರುವುದೂ ಉಂಟು! 'ನಮ್ಮ ಮನೆಯ ಕಸವನ್ನು ಅವರು ಬಿಟ್ಟು ಹೋದರೆ ಏನು ಮಾಡುವುದು?' ಎಂಬ ಭಯ ಸಾಧಾರಣವಾಗಿ ಎಲ್ಲಾ ಗೃಹಿಣಿಯರಿಗೂ ಇರುತ್ತದೆ. ಕಾಲೋನಿಗಳ  ಹೆಂಗಸರುಗಳು ಸ್ವಚ್ಛತಾ ಕರ್ಮಚಾರಿಗಳಿಗೆ ಕಾಫಿ/ಟೀ ಮತ್ತು ಬಿಸ್ಕತ್ ಗಳನ್ನೂ ಕೊಟ್ಟು ಸತ್ಕರಿಸುವುದು, ಲಾಕ್ಡೌನ್ ಸಮಯದಲ್ಲಿ ಕಂಡುಬರುತ್ತಿರುವ ಉತ್ತಮ ಬೆಳವಣಿಗೆಯಾಗಿದೆ. 

ಮಾಹಾಮಾರಿ (pandemic) ಸಮಯದಲ್ಲಿ ಎಲ್ಲಾ ವರ್ಗದ ಕರ್ಮಚಾರಿಗಳಿಗೂ ತಮ್ಮ ತಮ್ಮ ಕೆಲಸಗಳ ಬಗ್ಗೆ ಅಭಿಮಾನ (dignity of labour) ಮೂಡಿರುವುದು ಸಂತಸದ ವಿಷಯ. ತಾವು ಕೇಳಿದ ಸತ್ಯಕತೆಯೊಂದರ ನೆನಪು ಡಾ. ಕಿರಣರನ್ನು ಆಗ ಕೆಣಕಿತ್ತು. ಇಬ್ಬರೂ ಕೆಲಸ ಮಾಡುವ ದಂಪತಿಯ ಮನೆಯಲ್ಲಿ ಹೆಂಗಸೊಬ್ಬಳು ಮನೆಗೆಲಸ ಮಾಡುತ್ತಿದಳು. ಕೋವಿಡ್ ಹರಡುವಿಕೆ ಶುರುವಾದನಂತರ ಆ ಮನೆಗೆಲಸದವಳನ್ನು, ಆ ಮನೆಯೊಡತಿ ಕಡ್ಡಾಯವಾಗಿ ರಜೆಯ ಮೇಲೆ ಕಳುಹಿಸಿದ್ದಳು. ಒಂದು ತಿಂಗಳ ಸಮಯ ಕಳೆಯಿತು. ಮನೆಯ ಕೆಲಸದ ನಿಭಾವಣೆ ಅಸಾಧ್ಯವೆಂದು ಮನಗಂಡ ಆ ಮನೆಯೊಡತಿ, ಆ ಮನೆಗೆಲಸದವಳನ್ನು ಮತ್ತೆ ಕೆಲಸಕ್ಕೆ ಕರೆಸಿದ್ದಳು. ಮನೆಗೆಲಸದಾಕೆ ಥಟ್ಟನೆ ಬಂದಿದ್ದಳು, ಆದರೆ ರಜೆಯ ಒಂದು ತಿಂಗಳ ಅವಧಿಗೆ ಪೂರ್ತಿ ಸಂಬಳವನ್ನು ನೀಡಬೇಕೆಂದು ಆಗ್ರಹಿಸಿದ್ದಳು.  ಬೇರೆ ಮಾರ್ಗಗಳಿಲ್ಲದೆ ಆ ಮನೆಯೊಡತಿ ಅರ್ಧ ಸಂಬಳ ನೀಡಲೊಪ್ಪಿ, ಮನೆಗೆಲಸದವಳನ್ನು ಕರೆಸಿಕೊಂಡಿದ್ದಳು. ಬರುವ ಸೋಮವಾರದಿಂದ ಕೆಲಸಕ್ಕೆ ಹಾಜರಾಗುವ ಮುನ್ನ, ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು,  ಕೋವಿಡ್ ಇಲ್ಲವೆಂಬ ಪ್ರಮಾಣ ಪತ್ರವನ್ನು ತಂದು ತೋರಿಸಬೇಕಾಗಿ ಮನೆಯೊಡತಿ ಆಗ್ರಹಿಸಿದ್ದಳು. ಪರೀಕ್ಷೆ ಮಾಡಿಸಿಕೊಳ್ಳಲು ಪಾವತಿಸಬೇಕಾದ ಹಣವನ್ನು ಮನೆಯೊಡತಿಯೇ ನೀಡಲು ಸಮ್ಮತಿಸಿದ್ದಳು. ಪರೀಕ್ಷೆ ಮಾಡಿಸಿಕೊಳ್ಳಲೊಪ್ಪಿದ ಮನೆಗೆಲಸದಾಕೆ ನನ್ನದೂ ಒಂದು ಬೇಡಿಕೆ ಇದೆಯೆಂದಳು. "ಅಮ್ಮಾ, ನೀವೂ ಗಂಡ, ಹೆಂಡತಿ ಆಸ್ಪತ್ರಗೆ ಹೋಗಿ ಕೋವಿಡ್ ಇಲ್ಲವೆಂಬ ಪ್ರಮಾಣ ಪತ್ರವನ್ನು ನನಗೆ ಬರುವ ಸೋಮವಾರವೇ ತೋರಿಸಿ, ನನಗೂ ಮನೆಯಲ್ಲಿ ಗಂಡ ಮತ್ತು ಮಕ್ಕಳುಗಳಿದ್ದಾರೆ. ಅವರುಗಳು ಮತ್ತು ನನ್ನ ಆರೋಗ್ಯವೂ ನಿಮ್ಮಗಳಷ್ಟೇ  ಮುಖ್ಯ" ಎಂದಾಗ, ಮನೆಯೊಡತಿ ಮತ್ತವಳ ಗಂಡ ನಿಟ್ಟುಸಿರು ಬಿಡುವಂತಾಗಿತ್ತು. 

***

ದೂರದ ಖಾಸಗಿ ಕಾಡಿನ ಪ್ರವಾಸದಿಂದ  ಹಿಂತುರುಗಿದನಂತರವೂ, ಡಾ. ಕಿರಣರಿಗೆ ಇನ್ನೂ ನಾಲ್ಕು ದಿನಗಳ ರಜೆ ಉಳಿದಿತ್ತು. ಒಂದು ದಿನ, ಡಾ.ಕಿರಣರ ಫೋನು ರಿಂಗಣಿಸಿತ್ತು. 'ನಾನು, ಭವಾನಿ ಟೀಚರ್ ಮಾತನಾಡುತ್ತಿದ್ದೇನೆ. ನನ್ನ ನೆನಪು ನಿನಗಿದೆಯೇ?' ಥಟ್ಟನೆ ಉತ್ತರಿಸಿದ ಕಿರಣ್, 'ಒಹೋ, ಭವಾನಿ ಟೀಚರ್, ನಾನ್ಹೇಗೆ ನಿಮ್ಮನ್ನು ಮರೆಯಲಿ? ನನ್ನಲ್ಲಿ ವೈದ್ಯನಾಗಬೇಕೆಂಬ ಬಯಕೆಯ ಕಿಡಿಯನ್ನು  ಹೊತ್ತಿಸಿದವರೇ ನೀವು. ತಾವು ಹೇಗಿದ್ದೀರಿ ಮೇಡಂ? ನನ್ನಿಂದ ಏನಾಗಬೇಕು?' ಎಂದರು. 

'ನಾನು ನಿಮ್ಮ ಮನೆಗೊಮ್ಮೆ ಬಂದು ಕೆಲವು ವಿಷಯಗಳನ್ನು ಚರ್ಚಿಸಬಹುದೇ?' ಭವಾನಿಯವರ ಮಾತಿನಲ್ಲಿ ಕೋರಿಕೆಯ ಭಾವವಿತ್ತು. 

'ನಮ್ಮ ಮನೆಗೆ ಬರಲು, ತಾವು ಯಾವ ಅನುಮತಿಯನ್ನೂ ಪಡೆಯ ಬೇಕಿಲ್ಲ. ಯಾವಾಗಲಾದರೂ ತಾವು ನಮ್ಮ ಮನೆಗೆ ಬರಬಹುದು.' ಕಿರಣರ ಉತ್ತರದಲ್ಲಿ ಗೌರವದ ಭಾವವಿತ್ತು. 

ಪೂರ್ವ ನಿಗದಿತ ಸಮಯಕ್ಕೆ ಸರಿಯಾಗಿ ಭವಾನಿ ಟೀಚರ್ ಡಾ. ಕಿರಣರ ಮನೆಗೆ ಬಂದಿದ್ದರು. ಡಾ. ಕಿರಣರ ೧೦ನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಪಡೆದಿದ್ದ, ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲರಾಗಿ ಈಗ ಕಾರ್ಯ ನಿರ್ವಹಿಸುತ್ತಿದವರು ಭವಾನಿಯವರು. ಉಭಯ ಕುಶಲೋಪರಿಯ ಸಂಭಾಷಣೆಗಳು ಮುಗಿದನಂತರ, ಭವಾನಿ ಟೀಚರ್ ವಿಷಯದ ಚರ್ಚೆಗೆ ಬಂದಿದ್ದರು. 'ನೋಡು ಕಿರಣ್, ಕೋವಿಡ್-೧೯ರ ಮಹಾಮಾರಿ ನಮ್ಮ ವಿದ್ಯಾಭ್ಯಾಸದ ವ್ಯವಸ್ಥೆಯನ್ನೇ ಬುಡಮೇಲು ಮಾಡಿಟ್ಟಿದೆ. "ವಿಶ್ವಾದ್ಯಂತ           ೧. ೨ ಬಿಲಿಯನ್(೧೨೦ ಕೋಟಿ)ರಷ್ಟು ವಿದ್ಯಾರ್ಥಿಗಳು, ಕೆಲವು ತಿಂಗಳುಗಳ ಹಿಂದೆ ಆರಂಭವಾದ ಶೈಕ್ಷಣಿಕ ವರ್ಷದಿಂದ, ಶಾಲೆಗಳಿಗೆ ಹೋಗುತ್ತಿಲ್ಲ."  ಆನ್ ಲೈನ್ ಕಲಿಕೆಯ ವ್ಯವಸ್ಥೆ ಇಡೀ ಪ್ರಪಂಚದಲ್ಲೇ ಈಗ ಜಾರಿಗೊಂಡಿದೆ. ಶಿಕ್ಷಣ ಮತ್ತು ಮನೋವಿಜ್ಞಾನದ ತಜ್ಞರುಗಳು ಸಹ ಆನ್ ಲೈನ್ ಕಲಿಕೆ ಎನ್ನುವ ವ್ಯವಸ್ಥೆ ಶಾಶ್ವತವಾಗಿ ವಿದ್ಯಾಭ್ಯಾಸದ ಭಾಗವಾಗಿ ಹೋಗಿದೆ ಎಂಬುದನ್ನು ಒಪ್ಪುತ್ತಾರೆ. ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪೋಷಕರು "ಆನ್ ಲೈನ್ ಕಲಿಕೆಯ ವ್ಯವಸ್ಥೆ ಸಮರ್ಪಕವಾಗಿದ್ದು,  ದೂರದ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗಿಬರುವ ಪ್ರಯಾಸದ ಹೊರೆಯನ್ನು ಈ  ವ್ಯವಸ್ಥೆ ನಿವಾರಿಸಿದೆ" ಎನ್ನುತ್ತಾರೆ. ಸಮಯದ ಉಳಿತಾಯ ಕೂಡ ಆನ್ ಲೈನ್ ವ್ಯವಸ್ಥೆಯ ಮತ್ತೊಂದು ಆಕರ್ಷಣೆಯಾಗಿದೆ. ಸಾಕಷ್ಟು ಸಂಖ್ಯೆಯ "ಶಿಕ್ಷಾ-ತಾಂತ್ರಿಕ ಆಪ್," (edu-tech apps)ಗಳು, ಭಾರತದಲ್ಲಿ ಈಗ ಹೆಚ್ಚು-ಹೆಚ್ಚು ಜನಪ್ರಿಯವಾಗುತ್ತ ಬೆಳೆಯುತ್ತಿವೆ. 

ಆದರೆ ಮತ್ತೆ ಕೆಲವರು, ಕಲಿಕೆಯ ಡಿಜಿಟಲ್ ವೇದಿಕೆಗಳ ಪ್ರವೇಶ ನಮ್ಮ ದೇಶದಲ್ಲಿ ದಿಢೀರನೆ ಆಗುತ್ತಾ ಇದೆ ಎಂದು ಆರೋಪಿಸುತ್ತಾರೆ. ಆ ಹೊಸರೀತಿಯ ಬೋಧನಾ ಕ್ರಮಕ್ಕೆ ಬೇಕಾದ ತರಬೇತಿ, ಶಿಕ್ಷಕರುಗಳಿಗೆ ದೊರೆತಿಲ್ಲ ಮತ್ತು "ಪ್ರಸಾರದ ವಿಸ್ತಾರದ (bandwidth)" ಕೊರತೆ ಕೂಡಾ ಇದೆ. ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಸ್ಮಾರ್ಟ್ ಫೋನ್ಗಳನ್ನು ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿನ್ನೂ ಕಂಡೇ ಇಲ್ಲ. ಡಿಜಿಟಲ್ ಕಲಿಕೆಯ ಭಯದಿಂದ ಆ ಬಡ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಪೋಷಕರು ಹೆದರಿ ಹೋಗಿದ್ದಾರೆ. 

"ಶಾಲಾ ಕೊಠಡಿಗಳಲ್ಲಾಗುವ ನೇರ ಶಿಕ್ಷಣ ವ್ಯವಸ್ಥೆಗೆ ಪರ್ಯಾಯ" ಮತ್ತೊಂದಿಲ್ಲ ಎಂಬುದು ನನ್ನ ವೈಯುಕ್ತಿಕ ಅನಿಸಿಕೆ. ಶಿಕ್ಷಕ-ವಿದ್ಯಾರ್ಥಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವಿನ ಸುಮಧುರ ಸಂಬಂಧ ಬಹು ಮುಖ್ಯ ಮತ್ತು ಅದರ ಸಾಧ್ಯತೆ ಇರುವುದು ನೇರ ಶಿಕ್ಷಣದ ವ್ಯವಸ್ಥೆಯಲ್ಲಿ ಮಾತ್ರ. ಪಠ್ಯೇತರ ಮತ್ತು ಪಠ್ಯಸಹಿತದ ಕಲಿಕೆ (co-curricular and extra-curricular learning)ಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಬಹಳ ಅವಶ್ಯಕವಾಗಿದ್ದು, ಅದು ನೇರ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ. ಆಟೋಟ ಚಟುವಟಿಕೆಗಳ ಗತಿಯೇನು? ಆದರೆ ಕೋವಿಡ್ನ ಕಾಂಡ ಮುಗಿದನಂತರವೂ ಆನ್ಲೈನ್ ಶಿಕ್ಷಣವೆಂಬುದು ಹೋಗದು. ನೇರ ಶಿಕ್ಷಣ ಮತ್ತು ಆನ್ಲೈನ್ ಶಿಕ್ಷಣ, ಇವುಗಳ ಮಿಶ್ರಣದ ವ್ಯವಸ್ಥೆ (hybrid model) ಬರುವ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಹೋಗುವುದು ಖಂಡಿತ.'

ಭವಾನಿಯವರ ಮಾತುಗಳನ್ನು ಏಕಾಗ್ರತೆಯಿಂದ ಡಾ. ಕಿರಣ್ ಕೇಳುತ್ತಿದ್ದರು. 'ತಂತ್ರಜ್ಞಾನ (technology)ವೆಂಬುದೊಂದು ವ್ಯವಸ್ಥೆಯನ್ನು ಬದಲಿಸುವ (disruptor) ಶಕ್ತಿಯೆಂದು ತಿಳಿದಿದ್ದೆವು. ಆದರೆ ಕೋವಿಡ್-೧೯ ಎಂಬುದು ತಂತ್ರಜ್ಞಾನಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಬದಲಿಸುವ ಶಕ್ತಿಯಾಗಿ ಹೊರಹೊಮ್ಮಿದೆ. ಡಿಜಿಟಲ್ ಶಿಕ್ಷಣವೆಂಬುದು "ಮುಂದಿನ ದಿನಗಳ ಹೊಸ ಕ್ರಮವಾಗಿ (new normal)" ಹೋಗಿದೆ.  ಸಾರ್ಸ್-೨೦೦೨ರ ವೈರಾಣುವಿನ ರೋಗ ಹರಡಿದನಂತರ, ಇ-ವ್ಯಾಪಾರ (e-commerce) ಎಂಬ ವ್ಯವಸ್ಥೆ ಇಡೀ ವಿಶ್ವವನ್ನಾವರಿಸಿತು. ಕೋವಿಡ್-೧೯ರ ನಂತರ ಇ-ಶಿಕ್ಷಣದ ವ್ಯವಸ್ಥೆ ಬಂದು ನಿಂತಿದೆ.' ಶಿಷ್ಯನ ಅನಿಸಿಕೆ, ಭವಾನಿ ಟೀಚರ್ ರವರ ಮೆಚ್ಚುಗೆ ಗಳಿಸಿತ್ತು. 

'ಕಿರಣ್, ನಿನ್ನಿಂದ ನನಗೊಂದು ಕೆಲಸವಾಗಬೇಕು. ಇ-ಶಿಕ್ಷಣದ ವ್ಯವಸ್ಥೆಯೊಂದಿಗೆ ಮಕ್ಕಳು ಹೊಂದಿಕೊಳ್ಳುವಂತೆ ಮಾಡಲು ನಾವು ಬೇರೆ ಬೇರೆ ಕ್ಷೇತ್ರಗಳಿಂದ ಆಯ್ದ ನುರಿತ ಮಾತುಗಾರರ  ಕಾರ್ಯಕ್ರಮವನ್ನೇರ್ಪಡಿಸಿ, ಆ ತಜ್ಞರುಗಳೊಂದಿಗೆ ನಮ್ಮ ಮಕ್ಕಳು ಆನ್ಲೈನ್ನಲ್ಲಿ ಸಂವಹಿಸುವಂತಹ (interacting) ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ಈ ಬಾರಿ ಕೋವಿಡ್-೧೯ರ ವಿಷಯವನ್ನು ಕುರಿತಾದ ಕಾರ್ಯಕ್ರಮವನ್ನು ವೈದ್ಯನಾದ ನೀನು ನಡೆಸಿಕೊಡಬೇಕೆಂಬುದು ನನ್ನ ಬಯಕೆ. ನಿನ್ನ ಕಾರ್ಯಕ್ರಮ ಒಂದು ಇ-ಪ್ರಶೋತ್ತರಾವಳಿ (e-quiz) ರೂಪದಲ್ಲಿರಲಿ. ೧೩-೧೫ರ ವಯಸ್ಸಿನ ನಮ್ಮ ಶಾಲೆಯ ಪ್ರೌಢ ಶಾಲೆಯ ಮಕ್ಕಳನ್ನು ನಾವು ಆರಿಸಿದ್ದೇವೆ. ಕ್ವಿಜ್ನ ಆಯ್ಕೆಯ ಸುತ್ತುಗಳನ್ನು ಈಗಾಗಲೇ ನಡೆಸಿದ್ದೇವೆ. ಎರಡು ವಿದ್ಯಾರ್ಥಿಗಳಿರುವ, ಮೂರು ತಂಡಗಳು ಅಂತಿಮ ಸುತ್ತುನ್ನು (finals)  ಪ್ರವೇಶಿಸಿವೆ. ಅಂತಿಮ ಸುತ್ತಿನ ಕಾರ್ಯಕ್ರಮದ "ಕ್ವಿಜ್-ಮಾಸ್ಟರ್ (Quiz Master)" ನೀನಾಗಿ ಕಾರ್ಯಕ್ರಮವನ್ನು ನಡೆಸಿಕೊಡಬೇಕು. ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯಾದ ನೀನು, ನಮ್ಮ ವಿದ್ಯಾರ್ಥಿಗಳಿಗೆ  "ಮಾದರಿ ವ್ಯಕ್ತಿ (Role model)"ಯಾಗಿ ಕಾಣಿಸಿಕೊಳ್ಳಬೇಕು.' ಭವಾನಿ ಟೀಚರ್ ಕೋರಿಕೆಗೆ ಡಾ. ಕಿರಣ್ ತಕ್ಷಣ ಸಮ್ಮತಿ ನೀಡಿದ್ದನು. 

ಕ್ವಿಜ್ ದಿನ ಬಂದಿತ್ತು. ಉತ್ತಮ ತಯಾರಿಯನ್ನು ಮಾಡಿಕೊಂಡಿದ್ದ ಡಾ. ಕಿರಣ್ ಕ್ವಿಜ್ ನಡೆಸಲು ಕಾತರನಾಗಿದ್ದನು. 'ಇಂದಿನ ಆನ್ಲೈನ್ ಕ್ವಿಜ್ ಕಾರ್ಯಕ್ರಮಕ್ಕೆ ಎಲ್ಲಾ ವಿದ್ಯಾರ್ಥಿಗಳಿಗೂ ಸುಸ್ವಾಗತ. ಪ್ರಿನ್ಸಿಪಾಲರಾದ ಭವಾನಿರವರಿಗೆ ಮತ್ತು ಎಲ್ಲಾ ಶಿಕ್ಷಕ, ಶಿಕ್ಷಕಿಯರುಗಳಿಗೆ ನನ್ನ ಸವಿನಯ ನಮಸ್ಕಾರಗಳು. ಅಂತಿಮ ಸುತ್ತಿಗೆ ಆಯ್ಕೆಯಾಗಿರುವ "ಎ, ಬಿ, ಮತ್ತು ಸಿ" ತಂಡಗಳಿಗೆ ನನ್ನ ಅಭಿನಂದನೆಗಳು. ನಿಮ್ಮಗಳ ಹಾಗೇ ನಾನೂ ಕೂಡಾ, ಕೆಲವು ವರ್ಷಗಳ ಹಿಂದೆ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದೆ, ಎಂದು ನಿಮಗೆ ತಿಳಿಸಲು ಹೆಮ್ಮೆ ಪಡುತ್ತೇನೆ. ನನ್ನ ಹೆಸರು ಡಾ. ಕಿರಣ್. ಇಂದಿನ ಅಂತಿಮ ಸುತ್ತಿನ ಇ-ಕ್ವಿಜ್ ಗೆ ನಾನೇ ಇಂದಿನ ಕ್ವಿಜ್ ಮಾಸ್ಟರ್. ನಿಮಗೆಲ್ಲ ಮುಂಚೆಯೇ ತಿಳಿದಿರುವಂತೆ ಇಂದಿನ ಕ್ವಿಜ್ ನ ವಿಷಯ "ಕೋವಿಡ್-೧೯." ಕ್ವಿಜ್ ನ ನಿಯಮಗಳು ಬಹಳ ಸರಳವಾಗಿವೆ. ಒಟ್ಟು ೫ ಸುತ್ತುಗಳಲ್ಲಿ ಕ್ವಿಜ್ ಪ್ರಶ್ನೆಗಳನ್ನು ಕೇಳಲಾಗುತ್ತದೆ. ತಂಡವೊಂದಕ್ಕೆ ನೇರವಾಗಿ ಕೇಳಿದ ಪ್ರಶ್ನೆಗಳನ್ನು ಉತ್ತರಿಸಿದರೆ ೧೦ ಅಂಕಗಳು ದೊರೆಯುತ್ತದೆ. ನೇರ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕದಿದ್ದರೆ, ಅದೇ ಪ್ರಶ್ನೆಯನ್ನು ಮುಂದಿನ ತಂಡಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಆ ರೀತಿ ಮುಂತಳ್ಳಿದ ಪ್ರಶ್ನೆಗಳಿಗೆ (passed questions) ಸರಿಯುತ್ತರ ನೀಡಿದರೆ ೫ ಅಂಕಗಳನ್ನು ನೀಡಲಾಗುತ್ತದೆ. ನಿಮ್ಮ ಗಣಿತದ ಅಧ್ಯಾಪಕಿಯಾದ ಶ್ರೀಮತಿ ಮೇರಿಯವರು ಇಂದಿನ ಎಲೆಕ್ಟ್ರಾನಿಕ್ ಅಂಕಪಟ್ಟಿಯ ನಿರ್ವಹಣೆಯ ಕಾರ್ಯವನ್ನು ಮಾಡುತ್ತಾರೆ. ಪ್ರತಿ ಸುತ್ತು ಮುಗಿದನಂತರ ಅಂಕಪಟ್ಟಿಯನ್ನು ನಿಮ್ಮ ಪರದೆಗಳ ಮೇಲೆ  ತೋರಿಸಲಾಗುತ್ತದೆ. ಅತ್ತ್ಯತ್ತಮ ತಂಡ ಇಂದು ಜಯಗಳಿಸಲಿ ಎಂದು ಹಾರೈಸುತ್ತೇನೆ. ಇಂದಿನ ಕ್ವಿಜ್ ನ ವೀಕ್ಷಕರಾಗಿ  ಆನ್ಲೈನ್ ಚಾನ್ನೆಲ್ಲಿನಲ್ಲಿ ನಮ್ಮೊಡನಿರುವ ಎಲ್ಲ ವಿದ್ಯಾರ್ಥಿಗಳೂ,  ನಿಮ್ಮ ಪರದೆಗಳ ತಳಭಾಗದಲ್ಲಿರುವ  'ಸಂವಹನದ ಪೆಟ್ಟಿಗೆ (dialogue box)'ಯಲ್ಲಿ, ಇಂದಿನ ಅಂತಿಮ ಸುತ್ತಿನಲ್ಲಿ ಭಾಗವಹಿಸುತ್ತಿರುವ ಮೂರೂ ತಂಡಗಳಿಗೆ "ಗುಡ್ ಲಕ್" ಎಂದು ಟೈಪ್ ಮಾಡಿ, ಎಂದು  ಆಜ್ಞಾಪಿಸಿದ   ಡಾ. ಕಿರಣ್, ನುರಿತ ಕ್ವಿಜ್ ಮಾಸ್ಟರರಂತೆ ಕಂಡಿದ್ದರು. ಮುಂದಿನ ೭೦ ಸೆಕೆಂಡ್ ಸಮಯ ಮಾತ್ರದಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳಿಂದ  "ಗುಡ್ ಲಕ್" ಎಂಬ ಸಂದೇಶಗಳು ಡೈಲಾಗ್ ಬಾಕ್ಸ್ ನಲ್ಲಿ ಮೂಡಿದಾಗ ಡಾ. ಕಿರಣ್ ಮತ್ತು ಪ್ರಿನ್ಸಿಪಾಲರಾದ ಭವಾನಿಯವರು ಪುಳಕಿತಗೊಂಡಿದ್ದರು. 

'ಇಂದಿನ ಕ್ವಿಜ್ ನ ವಿಷಯ ಕೋವಿಡ್-೧೯ ಎಂಬುದು ತಮಗೆಲ್ಲ ತಿಳಿದಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾಹಿತಿ ಫಲಕದಲ್ಲಿ ಪ್ರಕಟಿಸಿರುವ ಕೋವಿಡ್ ಮಾಹಿತಿಗಳ  ಮೇಲೆ ನನ್ನ ಪ್ರಶ್ನೆಗಳು ಆಧಾರಿತವಾಗಿರುತ್ತದೆ. ತಂಡಗಳು ಸಮಯ ಪಾಲನೆಯನ್ನು ತಪ್ಪದೇ ಮಾಡಬೇಕು. ಉತ್ತರಗಳನ್ನು  ನೀಡುವ ಮುನ್ನ, ಬೇರ್ಯಾವ ವೆಬ್ಸೈಟ್ ಗಳನ್ನು ತೆರೆದು ಮಾಹಿತಿಯನ್ನು ಪಡೆಯಲೆತ್ನಿಸಬಾರದು. ಎಲ್ಲಾ ಮೂರು ತಂಡಗಳ ಚಲನ-ವಲನಗಳ ಮೇಲೆ ನಮ್ಮ ಪ್ರತಿನಿಧಿಗಳು ಹದ್ದಿನ ಕಣ್ಣಿಟ್ಟಿರುತ್ತಾರೆ.  ನಾನು ಅನೊಮೋದಿಸುವ ಯಾವುದೇ ಉತ್ತರವನ್ನು "ವೈದ್ಯರೊಬ್ಬರ ಸಲಹೆ" ಎಂದು ಪರಿಗಣಿಸಬಾರದು. ತಮಗಾಗಲಿ ಅಥವಾ ತಮ್ಮ ಕುಟುಂಬದಲ್ಲಿ ಯಾರಿಗಾದರೂ, ಏನಾದರೂ ಸಮಸ್ಯೆಗಳಿದ್ದಲ್ಲಿ ತಮ್ಮ ಕುಟುಂಬದ ಡಾಕ್ಟರ್ ರವರನ್ನು ಸಂಪರ್ಕಿಸಬೇಕು. ಕ್ವಿಜ್ ಕಾರ್ಯಕ್ರಮ ಈಗ ಪ್ರಾರಂಭವಾಗುತ್ತದೆ.' ಎನ್ನುತ್ತಾ ಡಾ. ಕಿರಣ್ ತಮ್ಮ ದನಿಯನ್ನೇರಿಸಿದ್ದರು. 

ತಂಡ 'ಎ' ಗಾಗಿ ಇಗೋ ನನ್ನ ಮೊದಲ ಪ್ರಶ್ನೆ. 'ಕೊರೋನಾವೈರಾಣು ಎಂದರೇನು?'

ಟೀಮ್ 'ಎ' ಉತ್ತರ ಹೀಗಿತ್ತು: 'ಕೊರೋನಾ ವೈರಾಣುಗಳೆಂಬುದು ವೈರಾಣುಗಳ ಒಂದು ವಂಶ. ಬೇರೆ ಬೇರೆ ರೀತಿಯ ಕೊರೋನಾ ವೈರಾಣುಗಳಿಂದ ಈ ಮುಂಚೆ ಸಾರ್ಸ್ ಮತ್ತು ಮೆರ್ಸ್ (SARS and MERS) ಎಂಬ ರೋಗಗಳು ಹರಡಿವೆ. ಅತ್ಯಂತ ಈಚೆಗೆ ಕೋವಿಡ್-೧೯ ವೈರಾಣುವಿನ ಇರುವಿಕೆಯನ್ನು ಕಂಡುಹಿಡಿಯಲಾಗಿದೆ.'

ಉತ್ತರ ಸರಿಯಾಗಿದೆ. ಮೇರಿ ಮೇಡಂ 'ಎ' ತಂಡಕ್ಕೆ ೧೦ ಅಂಕಗಳನ್ನು ನೀಡುವುದು. ಈಗ ನನ್ನ ಪ್ರಶ್ನೆ 'ಬಿ' ತಂಡಕ್ಕೆ. 

'ಕೋವಿಡ್-೧೯ ಎಂದರೇನು? ಅದನ್ನು ಮಹಾಮಾರಿ (pandemic) ಎಂದೇಕೆ ಕರೆಯುತ್ತಾರೆ?'

ತಂಡ 'ಬಿ' ಯ ಉತ್ತರ ಹೀಗಿತ್ತು: 'ಕೋವಿಡ್-೧೯ ಎಂದರೆ "ಕೊರೋನಾ ವೈರಾಣುವಿನ ರೋಗ-೨೦೧೯ (Corona Virus Disease - 19)" ಎಂದು. ಈ ರೋಗ ಇಡೀ ವಿಶ್ವವನ್ನೇ ಆವರಿಸಿರುವುದರಿಂದ, ವಿಶ್ವ ಆರೋಗ್ಯ ಸಂಸ್ಥೆ ಈ ರೋಗವನ್ನು ಮಹಾಮಾರಿ ಎಂದು ಘೋಷಿಸಿದೆ.'

ಸಂತುಷ್ಟರಾದ ಕಿರಣ್, 'ಚೆನ್ನಾಗಿ ಹೇಳಿದ್ದೀರಿ. ನಿಮಗೀಗ ಹತ್ತು ಅಂಕಗಳು ದೊರೆತಿವೆ' ಎಂದರು. 

'ಕೋವಿಡ್-೧೯ ರೋಗದ ಲಕ್ಷಣಗಳೇನು?' ಇದು 'ಸಿ' ತಂಡಕ್ಕೆ ಕೇಳಿದ ಪ್ರಶ್ನೆಯಾಗಿತ್ತು. 

"ಜ್ವರ, ವಣಗೆಮ್ಮು, ಆಯಾಸ, ಮೂಗು ಕಟ್ಟಿದಂತಾಗುವುದು, ಗಂಟಲ ಕೆರತ, ಭೇದಿ, ವಾಸನೆ ಮತ್ತು ರುಚಿಗಳನ್ನು ಕಳೆದುಕೊಳ್ಳುವುದು, ಚರ್ಮದ ಮೇಲಿನ ಬೊಬ್ಬೆಗಳು ಮತ್ತು ಕೈ -ಕಾಲುಗಳ ಬೆರಳುಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳುವುದು" ಎಂದುತ್ತರಿಸಿತ್ತು ತಂಡ 'ಸಿ.' 

'ಅಭಿನಂದನೆಗಳು ತಂಡ 'ಸಿ' ಗೆ. ಒಂದನೇ ಸುತ್ತು ಈಗ ಕೊನೆಗೊಂಡಿದೆ. ಎಲ್ಲಾ ತಂಡಗಳು  ೧೦ ಅಂಕಗಳನ್ನು ಗಳಿಸಿ ಸಮಸ್ಥಿತಿಯಲ್ಲಿವೆ. ಇದೀಗ ಎರಡನೇ ಸುತ್ತಿಗೆ ಪ್ರವೇಶಿಸುತ್ತಿದ್ದೇವೆ. ಡಾ. ಕಿರಣ್ ಮುಂದುವರೆಸಿದ್ದರು. 

'ಕೋವಿಡ್-೧೯ರ ಹರಡುವಿಕೆ ಹೇಗಾಗುತ್ತದೆ?'

ತಂಡ 'ಎ' ಉತ್ತರಿಸಿತ್ತು: ಸೋಂಕಿತರು ಕೆಮ್ಮುವಾಗ, ಸೀನುವಾಗ, ಅವರ  ಮೂಗುಗಳಿಂದ, ಬಾಯಿಗಳಿಂದ,  ಸಿಡಿಯುವ ತುಂತುರು ಬೇರೊಬ್ಬರ ಮುಖದ ಮೇಲೆ ಬಿದ್ದರೆ, ರೋಗ ಹರಡಬಹುದು. ಅಂತಹ ತುಂತುರುಗಳಲ್ಲಿನ ವೈರಾಣುಗಳು,  ಬಾಗಿಲ ಹಿಡಿಗಳು ಮತ್ತು ಮೇಜುಗಳ ಮೇಲೂ ಕೂತು ಕೆಲ ಕಾಲ ಜೀವಂತವಾಗಿರಬಹುದು. ಅವುಗಳನ್ನು ನಾವು ಮುಟ್ಟಿ, ಅದೇ ಕೈಗಳಿಂದ ನಮ್ಮ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಟ್ಟಿಕೊಂಡಾಗ, ರೋಗ ನಮಗೂ ಹರಡಬಹುದು.'

ತಂಡ 'ಎ' ಗೆ ಸಂಪೂರ್ಣ ಅಂಕಗಳನ್ನು ನೀಡಿತ್ತಿದ್ದೇನೆ. ಎರಡನೇ ಸುತ್ತಿನ ಮುಂದಿನ ಪ್ರಶ್ನೆ ಈಗ 'ಬಿ' ತಂಡಕ್ಕೆ. 

'ರೋಗ ಲಕ್ಷಣಗಳಿರದ ವ್ಯಕ್ತಿಯಿಂದ ಕೂಡಾ ರೋಗ ಹರಡಬಲ್ಲುದೆ?'

'ಯಾಕಾಗಬಾರದು?' ಎಂಬುದಾಗಿತ್ತು ತಂಡ 'ಬಿ' ಯ ಉತ್ತರ. 

'ತಮ್ಮ ತಂಡಕ್ಕೆ ಉತ್ತರ ನೀಡುವಲ್ಲಿನ ಪೂರ್ಣ ವಿಶ್ವಾಸ ಕಾಣಿಸಲಿಲ್ಲ. ಆದರೆ ನಿಮ್ಮ ಉತ್ತರ ಸರಿಯಾಗಿದೆ. ಅಂತೂ ಈ ಬಾರಿ ತಮಗೆ ಪೂರ್ಣ ಅಂಕಗಳನ್ನು ನೀಡಿತ್ತಿದ್ದೇನೆ.' ಎಂದರು ಡಾ. ಕಿರಣ್. 

ಮುಂದಿನ ಪ್ರಶ್ನೆ 'ಸಿ' ತಂಡದಾಗಿತ್ತು.  'ರೋಗ ಲಕ್ಷಣಗಳಿಲ್ಲದ ವ್ಯಕ್ತಿಯಿಂದ ರೋಗ ಹರಡುವುದನ್ನು  ನಾವು ಹೇಗೆ ತಡೆಯಬಹುದು?'

'ಎಲ್ಲ ವ್ಯಕ್ತಿಗಳಿಂದ ನಾವು ಒಂದು ಮೀಟರ್ನಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಉತ್ತಮ ಗುಣಮಟ್ಟದ ಮಾಸ್ಕನ್ನು ಯಾವಾಗಲೂ ಧರಿಸಿರಬೇಕು.' 

ಡಾ. ಕಿರಣ್ ಪ್ರತಿಕ್ರಿಯಿಸುತ್ತಾ, 'ಸರಿಯುತ್ತರ. ಆದರೆ ನಾವು ಆಗಾಗ ಸೋಪಿನಿಂದ ಕೈತೊಳೆಯುತ್ತಿರಬೇಕು ಎಂಬ ವಿಧಾನವನ್ನೂ ತಾವು ಹೇಳಬೇಕಿತ್ತು. ಆದರೂ ತಮ್ಮ ತಂಡಕ್ಕೆ ಪೂರ್ಣ ಅಂಕಗಳನ್ನು ನೀಡುತ್ತಿದ್ದೇನೆ' ಎಂದರು. ಎರಡನೇ ಸುತ್ತಿನ ಅಂತ್ಯದ ವೇಳೆಗೆ ಮೂರೂ ತಂಡಗಳು ೨೦ ಅಂಕಗಳನ್ನು ಗಳಿಸಿ ಸಮಸ್ಥಿತಿಯಲ್ಲಿದ್ದವು. 

'ಸ್ವಯಂ-ನಿರ್ಬಂಧ ಎಂದರೇನು?'

ಟೀಮ್ 'ಎ' ಉತ್ತರಿಸುತ್ತಾ, 'ವೈದ್ಯರನ್ನು ಸಂಪರ್ಕಿಸದೆ ಮನೆಯಲ್ಲೇ ಇರುವುದು.' ಎಂದಿತು. 

ಡಾ. ಕಿರಣ್ ಪ್ರತಿಕ್ರಿಯಿಸುತ್ತಾ, 'ತಮ್ಮ ಉತ್ತರದಿಂದ ನನಗೆ ಸಮಾಧಾನವಾಗಿಲ್ಲ. ಅದೇ ಪ್ರಶ್ನೆ ಈಗ ತಂಡ "ಬಿ"ಗೆ ದೊರೆತಿದೆ' ಎಂದರು. 

ಟೀಮ್ 'ಬಿ' ವಿದ್ಯಾರ್ಥಿಗಳು ಉತ್ತರಿಸುತ್ತಾ, 'ಯಾರಲ್ಲಾದರೂ ಕೋವಿಡ್-೧೯ರ ಲಕ್ಷಣಗಳು ಕಂಡುಬಂದಲ್ಲಿ ಅವರುಗಳು ಮನೆಯಲ್ಲೇ ಉಳಿದುಕೊಳ್ಳಬೇಕು. ದೇಹದಲ್ಲಾಗುವ ಮುಂದಿನ ಬೆಳವಣಿಗೆಗಳನ್ನು ಗಮನಿಸುತ್ತಿರಬೇಕು. ಸೋಂಕಿತರ ಪ್ರದೇಶದಲ್ಲಿ ಆ ವ್ಯಕ್ತಿ ವಾಸವಾಗಿದ್ದರೆ, ತಡ ಮಾಡದೆ ಅವರು ವೈದ್ಯರನ್ನು ಸಂಪರ್ಕಿಸಬೇಕು' ಎಂದರು. 

'ಹೆಚ್ಚು ಸಮರ್ಪಕವಾದ ಉತ್ತರ. ತಂಡ "ಬಿ"ಗೀಗ ೫ ಬೋನಸ್ ಅಂಕಗಳು ದೊರೆತಿದೆ' ಎಂದರು. 

'ಕ್ವಾರಂಟೈನಿಂಗ್ ಎಂದರೇನು?' ಇದು ಟೀಮ್ 'ಬಿ' ಗೆ ಕೇಳಿದ, ಮೂರನೇ ಸುತ್ತಿನ  ನೇರ ಪ್ರಶ್ನೆಯಾಗಿತ್ತು. 

'ವ್ಯಕ್ತಿಗೆ ರೋಗ ಲಕ್ಷಣಗಳು ಇಲ್ಲದಿರಬಹುದು. ಆದರೆ ಆ ವ್ಯಕ್ತಿ ಸೋಂಕಿತರೊಬ್ಬರ ಸಂಪರ್ಕವನ್ನು ಮಾಡಿದ್ದಾನೆ ಎಂಬುದು ತಿಳಿದಿರುತ್ತದೆ. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಯಿಂದ ಕೂಡಾ ರೋಗ ಬೇರೆಯವರಿಗೆ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗುವುದನ್ನು ತಡೆಯಲು ಆ ವ್ಯಕ್ತಿ, ವೈದ್ಯರುಗಳು  ತಿಳಿಸಿದಷ್ಟು ಅವಧಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು' ಎಂಬುದು ಟೀಮ್ 'ಬಿ' ಯ ಉತ್ತರವಾಗಿತ್ತು. 

ಡಾ. ಕಿರಣ್ ಸಂತುಷ್ಟರಾಗಿದ್ದರು. 

'ಪ್ರತ್ಯೇಕವಾಗಿರುವುದು ಎಂದರೇನು?' ಎಂಬುದು ಮುಂದಿನ ಪ್ರಶ್ನೆಯಾಗಿತ್ತು. 

ತಂಡ 'ಸಿ' ಉತ್ತರಿಸುತ್ತಾ, 'ಕೋವಿಡ್ ಸೋಂಕಿತರಿಂದ ಬೇರೆಯವರಿಗೆ ರೋಗ ಹರಡದಂತೆ, ಆ ಸೋಂಕಿತರನ್ನು ಪ್ರತ್ಯೇಕವಾಗಿರಿಸಬೇಕು' ಎಂದಿತು. 

'ಇಲ್ಲಿಗೆ ಮೂರು ಸುತ್ತುಗಳು ಮುಗಿದಿವೆ. ತಂಡ "ಎ" ಗೆ ೨೦ ಅಂಕಗಳು, ತಂಡ "ಬಿ" ಗೆ  ೩೫ ಅಂಕಗಳು ಮತ್ತು ಟೀಮ್ "ಸಿ" ಗೆ ೩೦ ಅಂಕಗಳು ದೊರೆತಿವೆ,' ಎಂದರು ಡಾ. ಕಿರಣ್.  

ಈಗ ನಾಲ್ಕನೇ ಸುತ್ತನ್ನು ಪ್ರವೇಶಿಸುತ್ತಿದ್ದೇವೆ. ಈ ಸುತ್ತಿನ ಆರಂಭ ಟೀಮ್ 'ಸಿ' ಯಿಂದ ಆಗುತ್ತದೆ. 

'ಮಕ್ಕಳಿಗೆ ಮತ್ತು ಕಿಶೋರರಿಗೆ ಕೋವಿಡ್-೧೯ರ ರೋಗ ಹರಡಬಹುದೇ?'

'ಮಕ್ಕಳಿಗೂ ಮತ್ತು ಕಿಶೋರರಿಗೂ ಕೋವಿಡ್-೧೯ ಹರಡಬಹುದು' ಎಂಬುದಾಗಿತ್ತು ಟೀಮ್ 'ಸಿ' ಯ ಉತ್ತರ. 

ಅದು ಸರಿಯುತ್ತರವಾದುದರಿಂದ ಟೀಮ್ 'ಸಿ' ಗೆ ೧೦ ಅಂಕಗಳು ದೊರೆತಿತ್ತು. 

'ಕೋವಿಡ್-೧೯ರ ರೋಗಕ್ಕೆ ಲಸಿಕೆ ಮತ್ತು ಔಷಧಗಳಿವೇಯೇ?' ಎಂಬ ಪ್ರಶ್ನೆ ನಾಲ್ಕನೇ ಸುತ್ತಿನ ಪ್ರಶ್ನೆ ತಂಡ 'ಬಿ' ಯದಾಗಿತ್ತು. 

'ಇಲ್ಲ'* (* ಓದುಗರು ಗಮನಿಸಿ: ಈ ಪುಸ್ತಕವನ್ನು ಬರೆದು ಮುಗಿಸಿದನಂತರ, ಕೋವಿಡ್-೧೯ ರೋಗವನ್ನು ತಡೆಯಬಲ್ಲ ಹಲವು ಲಸಿಕೆಗಳು ಬಂದಿವೆ) ಎಂಬ ಸರಿಯುತ್ತರವನ್ನು ತಂಡ 'ಬಿ' ನೀಡಿದಾಗ ಅದಕ್ಕೆ ೧೦ ಅಂಕಗಳು ದೊರೆತಿತ್ತು. 

ಡಾ. ಕಿರಣ್ ನಾಲ್ಕನೇ ಸುತ್ತಿನ ಅಂತಿಮ ಪ್ರಶ್ನೆಯನ್ನು ತಂಡ 'ಎ' ಮುಂದಿಡುತ್ತಾ, 'ಕೋವಿಡ್-೧೯ರ ಸೋಂಕು ತಗುಲಿದ ಮೇಲೆ, ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಎಷ್ಟು ದಿನಗಳು ಬೇಕಾಗಬಹುದು?' ಎಂದರು. 

ತಂಡ 'ಎ' ಉತ್ತರಿಸುತ್ತಾ, 'ಪ್ರಾಯಶಃ ೩ ದಿನಗಳು' ಎಂದಿತು. 

'ತಪ್ಪುತ್ತರ, ಪ್ರಶ್ನೆ ಈಗ ತಂಡ "ಸಿ" ಗೆ ವರ್ಗಾವಣೆಗೊಂಡಿದೆ' ಎಂದರು ಡಾ. ಕಿರಣ್. 

ಟೀಮ್ 'ಸಿ' ಉತ್ತರಿಸುತ್ತಾ, '೧ರಿಂದ ೧೪ ದಿನಗಳು' ಎಂದಿತು. 

ಉತ್ತರದಿಂದ ಸಮಾಧಾನಗೊಂಡ ಡಾ. ಕಿರಣ್ ಟೀಮ್ 'ಸಿ' ಗೆ ೫ ಬೋನಸ್ ಅಂಕಗಳನ್ನು ನೀಡಿದರು. 'ನಾಲ್ಕನೇ ಸುತ್ತಿನ ಅಂತ್ಯದ ವೇಳೆಗೆ, ಟೀಮ್ "ಎ"ಗೆ ೨೦ ಅಂಕಗಳು, ಟೀಮ್ "ಬಿ" ಮತ್ತು ಟೀಮ್ "ಸಿ" ಗಳಿಗೆ ತಲಾ ೪೫ ಅಂಕಗಳು ಇವೆ ಎಂದು ಅಂಕ ಪಟ್ಟಿ ತೋರಿಸುತ್ತಿದೆ. ನಾವೀಗ ಐದನೆಯ ಹಾಗೂ ಅಂತಿಮ ಸುತ್ತನ್ನು ಪ್ರವೇಶಿಸುತ್ತಿದ್ದೇವೆ' ಎಂದರು. 

'ಕೋವಿಡ್ ವೈರಾಣು ಬೇರೆ ಬೇರೆ ಮೇಲ್ಮೈ (surfaces)ಗಳ ಮೇಲೆ ಎಷ್ಟು ಕಾಲ ಜೀವಂತವಾಗಿರುತ್ತದೆ?'

'ಸಿ' ತಂಡದವರು ಉತ್ತರಿಸುತ್ತಾ, 'ಪ್ಲಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆಗಳ ಮೇಲೆ ೭೨ ಘಂಟೆಗಳು, ತಾಮ್ರದ ಪಾತ್ರೆಗಳ ಮೇಲೆ ೪ ಘಂಟೆಗಳು ಮತ್ತು ಕಾರ್ಡಬೋರ್ಡುಗಳ ಮೇಲೆ ೨೪ ಘಂಟೆಗಳಿಗಿಂತಾ ಕಮ್ಮಿಯಷ್ಟು ಅವಧಿಗಳ ಕಾಲ ಕೋವಿಡ್ ವೈರಾಣು ಜೀವಂತವಾಗಿರುತ್ತದೆ' ಎಂದಿತು. 

'ಸಿ' ತಂಡದ ಉತ್ತರ ಸರಿಯೆಂದು ಡಾ. ಕಿರಣ್ ಘೋಷಿಸಿದ್ದರು. 

'೫ಜಿ ಎಂದರೇನು?'

ಟೀಮ್ 'ಬಿ' ಉತ್ತರಿಸುತ್ತಾ, '೫ಜಿ ಅಥವಾ ೫ನೇ ತಲೆಮಾರು ಎಂಬುದು ಇತ್ತೀಚಿನ ವಿದ್ಯುನ್ಮಾನ ಫೋನ್ ತಂತ್ರಜ್ಞಾನ (wireless cellular phone technology). ಈ ತಂತ್ರಜ್ಞಾನವನ್ನು ೨೦೧೯ರ ನಂತರ ಹೆಚ್ಚು ಉಪಯೋಗಿಸಲಾಗುತ್ತಿದೆ' ಎಂದಿತು. 

ಸರಿಯುತ್ತರವೆಂಬ ಘೋಷಣೆ ಡಾ. ಕಿರಣ್ ರಿಂದ ಬಂದಿತ್ತು. 

'೫ಜಿ ತಂತ್ರ ಜ್ಞಾನದಿಂದ ಆರೋಗ್ಯದ ಸಮಸ್ಯಗಳೇನಾದರೂ ಉಂಟಾಗಬಹುದೇ?'

ಟೀಮ್ 'ಎ'  ಉತ್ತರಿಸುತ್ತಾ, 'ಈ ವರೆಗಿನ ಸಂಶೋಧನೆಗಳ ಪ್ರಕಾರ, ೫ ಜಿ ತಂತ್ರಜ್ಞಾನದ ಬಳೆಕೆಯಿಂದ ಆರೋಗ್ಯದ ಯಾವ ಸಮಸ್ಯೆಯೂ ಉಂಟಾಗದು' ಎಂದಿತು. 

ಡಾ. ಕಿರಣ್ ಪ್ರತಿಕ್ರಿಯಿಸುತ್ತಾ, 'ನಿಮ್ಮ ಉತ್ತರ ಸರಿಯಾಗಿದೆ. ನಿಮಗೆ ಪೂರ್ಣಾಂಕಗಳು. ಆದರೆ ೫ ಜಿ ತಂತ್ರಜ್ಞಾನದಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ ಎಂಬುದನ್ನು ತಮ್ಮಗಳಿಗೆ ತಿಳಿಸಲಿಚ್ಛಿಸುತ್ತೇನೆ. 

'ಇಲ್ಲಿಗೆ ೫ನೇ ಮತ್ತು ಅಂತಿಮ ಸುತ್ತು ಮುಗಿದಿದೆ. ತಂಡ "ಎ" ಗೆ ೩೦ ಅಂಕಗಳು, ತಂಡ "ಬಿ" ಮತ್ತು "ಸಿ" ಗಳಿಗೆ ತಲಾ ೫೫ ಅಂಕಗಳು ದೊರೆತಿವೆ. ಈಗ ತಂಡ "ಬಿ" ಮತ್ತು "ಸಿ" ತಂಡಗಳ ನಡುವೆ "ಟೈ-ಬ್ರೇಕರ್ (tie-breaker)" ಸುತ್ತು ನಡೆಯಬೇಕು. ಈ ಹೊಸ ಸುತ್ತನ್ನು "ಬಝರ್ ಸುತ್ತು (buzzer round)" ಎಂದು  ಕರೆಯೋಣ. ನಾನು ಪ್ರಶ್ನೆಯೊಂದನ್ನು ಕೇಳುತ್ತೇನೆ. ಬಝರ್  ಅನ್ನು ಯಾವ ತಂಡವು ಮೊದಲು ಒತ್ತುವುದೋ ಆ ತಂಡಕ್ಕೆ ಉತ್ತರವನ್ನು ನೀಡುವ ಅವಕಾಶವನ್ನು ನೀಡಲಾಗುವುದು. ಸರಿಯುತ್ತರಕ್ಕೆ ೧೦ ಅಂಕಗಳು. ಬಝರ್ ಒತ್ತಿದ ಮೇಲೂ ತಪ್ಪುತ್ತರ ನೀಡಿದರೆ "-೧೦ (minus ೧೦)" ಅಂಕಗಳನ್ನು ನೀಡಲಾಗುವುದು' ಎಂದರು. 

'ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?' ಎಂಬುದು ಬಝರ್ ಸುತ್ತಿನ ಪ್ರಶ್ನೆಯಾಗಿತ್ತು. 

'ಬಿ' ಮತ್ತು 'ಸಿ' ತಂಡಗಳ ನಡುವೆ ಒಂದು ನಿಮಿಷದ ಮೌನ ಆವರಿಸಿತ್ತು. ಅಂತಿಮವಾಗಿ ತಂಡ 'ಸಿ' ಬಝರ್ ಒತ್ತಿತ್ತು. 

ತಂಡ 'ಸಿ' ಉತ್ತರಿಸುತ್ತಾ 'ಜಿನೀವಾ, ಸ್ವಿಟ್ಜರ್ಲ್ಯಾಂಡ್' ಎಂದಿತು. 

ಸರಿಯುತ್ತರ ಎಂದು ಘೋಷಿಸಿದ ಡಾ. ಕಿರಣ್, 'ಸಿ' ತಂಡಕ್ಕೆ ೧೦ ಅಂಕಗಳನ್ನು ನೀಡಿದರು. ಒಟ್ಟು ೬೫ ಅಂಕಗಳನ್ನು ಗಳಿಸಿದ ತಂಡ 'ಸಿ' ಅನ್ನು ವಿಜೇತ ತಂಡವೆಂದು ಘೋಷಿಸಲಾಯಿತು. 'ತಂಡ "ಸಿ" ಗೆ ನಮ್ಮೆಲ್ಲರ ಅಭಿನಂದನೆಗಳು' ಎಂದರು ಡಾ. ಕಿರಣ್. ಪರದೆಯ ಮೇಲಿನ 'ಡೈಲಾಗ್ ಬಾಕ್ಸ್'ನಲ್ಲಿ, ತಂಡ 'ಸಿ' ಗೆ  ನೂರಾರು ಅಭಿನಂದನಾ ಸಂದೇಶಗಳು ಮೂಡಿ ಬಂದಿದ್ದವು. 

ಕ್ವಿಜ್ನ ಕಾರ್ಯಕ್ರಮ ಪ್ರಿನ್ಸಿಪಾಲರಾದ ಭವಾನಿಯವರ ಭಾಷಣದೊಂದಿಗೆ ಮುಗಿದಿತ್ತು. ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಕ್ಕೆ ಡಾ. ಕಿರಣ್ ರವರಿಗೆ ವಂದನೆಗಳನ್ನು ಭವಾನಿಯವರು ಅರ್ಪಿಸಿದ್ದರು. 

ಶಾಲಾ ಕಾರ್ಯಕ್ರಮವನ್ನು ಮುಗಿಸಿ ಮನೆಗೆ ಬಂದ ಕಿರಣನನ್ನು ಮೊದಲು ಅಭಿನಂದಿಸಿದವಳು ರೋಹಿಣಿ. 'ಇಡೀ ಕಾರ್ಯಕ್ರಮವನ್ನು ನಾನೂ ವೀಕ್ಷಿಸಿದೆ. ನೀನೊಬ್ಬ ವೃತ್ತಿಪರ ಕ್ವಿಜ್ ಮಾಸ್ಟರನಂತೆ ಕಾಣಿಸುತ್ತಿದ್ದೆ. ಕೊರೋನಾ ಬಗ್ಗೆ ನಿನಗೆ ಅಪಾರ ಜ್ಞಾನವಿರಬಹುದು. ನೀನೊಬ್ಬ 'ಗ್ರೇಟ್' ಎಂದಿಟ್ಟುಕೊಳ್ಳೋಣ.  ಆದರೆ ನನ್ನಿಂದ ನಿನಗೊಂದು ಪ್ರಶ್ನೆ.  ಸರಿಯುತ್ತರ ನೀಡ ಬಲ್ಲೆಯಾ?' ರೋಹಿಣಿ ತನ್ನ ಗೆಳಯ ಕಿರಣನಿಗೆ ಸವಾಲನ್ನೆಸೆದಿದ್ದಳು. ಕಿರಣ್ ತಯಾರಾಗೇ ನಿಂತಿದ್ದನು. 

'ಕೊರೋನಾವನ್ನು, ಕೊರೋನಾ ಎಂದು ಏಕೆ ಕರೆಯಲಾಗುತ್ತದೆ?' ಎಂಬುದು ರೋಹಿಣಿಯ ಸವಾಲಿನ ಪ್ರಶ್ನೆಯಾಗಿತ್ತು. 

'ಇದೆಂತಹ ಪ್ರಶ್ನೆ?' ಎಂದ ಕಿರಣ್, ಉತ್ತರವನ್ನು ನೀಡಲು ತಡಕಾಡಿದನು. ಆದರೆ ರೋಹಿಣಿಗೆ ಸರಿಯುತ್ತರ ತಿಳಿದಿತ್ತು. ಅವಳು ವಿವರಿಸುತ್ತಾ, 'ಕೋವಿಡ್-೧೯ರ ವೈರಾಣು ಕೊರೋನಾ ವಂಶಕ್ಕೆ ಸೇರಿದ್ದು. ನಾವುಗಳು ಟಿ.ವಿ.ಯಲ್ಲಿ ನೋಡುವಂತೆ ಕೊರೋನಾ ವೈರಾಣುವಿನ ಮೇಲಿನ ಹೊದಿಕೆಯ ಸುತ್ತ ಮೊಳೆಗಳು (ಸ್ಪೈಕ್ಸ್) ಇದ್ದು, ಆ ವೈರಾಣು ಕಿರೀಟದಂತೆ ಕಾಣುತ್ತದೆ. ಕಿರೀಟ (crown)ದ ಆಕಾರವಿರುವ ವೈರಾಣುವನ್ನು ವಿಜ್ಞಾನಿಗಳು "ಕೊರೋನಾ" ಎಂದು ಕರೆದಿದ್ದಾರೆ' ಎಂದಳು. 

'ಸರಿ ಮೇಡಂ, ನಾನಲ್ಲ, ನೀವೇ  ಗ್ರೇಟ್!, ನಿಮಗಿದೋ ಶರಣು. ಮತ್ತೇನಾದರೂ ಪ್ರಶ್ನೆಯನ್ನು ತಾವು ನನಗೆ ಕೇಳುವವರಿದ್ದೀರಾ?' ಎಂದವನು ಕಿರಣ್. 

ನಿಯತ ಕಾಲಿಕ (Magazine) ಒಂದನ್ನು ನೋಡುತ್ತಿದ್ದ ರೋಹಿಣಿ ಕಿರಣನಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಿದ್ದಳು. 'ಕೋವಿಡ್-೧೯ರ ವೈರಾಣು ಮಿಕ್ಕ ಕೋರೋನ  ವೈರಾಣುಗಳಿಗಿಂತ ಹೆಚ್ಚು ಅಪಾಯಕಾರಿ ಏಕೆ?'

ಕಿರಣ್ ಉತ್ತರಿಸುತ್ತಾ, 'ಇದನ್ನೇ ನೋಡು ರೋಹಿಣಿ, "ಚೀಟಿಂಗ್" ಅನ್ನೋದು. ಮ್ಯಾಗಜಿನ್ ಒಂದನ್ನು ನೋಡಿಕೊಂಡು ಪ್ರಶ್ನೆ ಕೇಳೋದು ತಪ್ಪು. ಆದರೂ ನಿನ್ನ ಪ್ರಶ್ನೆಗೆ ಉತ್ತರ ಹೇಳ್ತೀನಿ, ಕೇಳು. ೨೦ ವರ್ಷಗಳ ಹಿಂದೆ ಪ್ರಪಂಚವನ್ನು ಕಾಡಿದ ಸಾರ್ಸ್ ವೈರಾಣು ಕೋವಿಡ್-೧೯ರ ತರಹದ ಸರಣಿ ಹತ್ಯಾಕಾರನಾಗಿತ್ತಿಲ್ಲ. ರೋಗ ಲಕ್ಷಣಗಳಿಲ್ಲದ ವ್ಯಕ್ತಿಯೊಬ್ಬನಲ್ಲಿ ಕೋವಿಡ್-೧೯ರ ವೈರಾಣು ಅಡಗಿ ಕುಳಿತುಕೊಳ್ಳಬಹುದು. ಆ ರೀತಿಯ ಲಕ್ಷಣಗಳಿಲ್ಲದ ವ್ಯಕ್ತಿಗಳೂ ರೋಗವನ್ನು ಹರಡಬಲ್ಲರು. ಸಾರ್ಸ್ ವೈರಾಣುವಿಗೆ ಈ ರೀತಿಯ ಸಾಮರ್ಥ್ಯವಿತ್ತಿಲ್ಲ. ನಮ್ಮ ದೇಹದೊಳಗಿರುವ ಉಸಿರಾಟದ ಕೊಳವೆ ಮತ್ತು ಶ್ವಾಸಕೋಶಗಳಲ್ಲಿರುವ "ಎಂಜೈಮ್ (enzyme)"ಗಳೊಂದಿಗೆ ಅಂಟಿ ಕೂರಬಲ್ಲ ಸಾಮರ್ಥ್ಯವನ್ನು ಕೋವಿಡ್-೧೯ರ ವೈರಾಣು ಬೆಳಸಿಕೊಂಡಿದೆ. ಸಾರ್ಸ್ ವೈರಾಣುವಿಗೆ ಈ ಸಾಮರ್ಥ್ಯವೂ ಇತ್ತಿಲ್ಲ. ಇವೆರಡು ಕಾರಣಗಳಿಂದ ಕೋವಿಡ್-೧೯ರ ವೈರಾಣು, ನಾವು ಹಿಂದೆ ಕಂಡ  ಸಾರ್ಸ್ ಮತ್ತು ಮೆರ್ಸ್ ವೈರಾಣುಗಳಿಗಿಂತಾ ಹೆಚ್ಚು ಅಪಾಯಕಾರಿಯಾಗಿದೆ,' ಎಂದಾಗ, ರೋಹಿಣಿ ತನ್ನ ಗೆಳೆಯನ ಜ್ಞಾನ ಭಂಡಾರಕ್ಕೆ ತಲೆದೂಗಿದ್ದಳು. 

ಕಿರಣ್ ಮಾತನಾಡುತ್ತ, 'ಕಳೆದ ೧೦ ದಿನಗಳ ರಜೆಯ ಸಮಯವನ್ನು ನಾವುಗಳು ಸೃಜನಾತ್ಮಕವಾಗಿ ಕಳೆದಿದ್ದೇವೆ. ನೀನು ಏರ್ಪಾಡು ಮಾಡಿದ್ದ "ಪ್ರಕೃತಿಯ ಪ್ರವಾಸ" ಸೊಗಸಾಗಿತ್ತು. "ಪ್ರಕೃತಿಯ ಸಮತೋಲವನ್ನು ಕೆದಕುವುದು ಬೇಡ" ಎಂಬುದು ಒಂದು ದೊಡ್ಡ ಪಾಠ. ಪ್ರಕೃತಿಯನ್ನು ವಿನಾಶಗೊಳಿಸುತ್ತಾ ಹೋದರೆ ನಾವುಗಳು ವಿನಾಶ ಹೊಂದುವುದು ಖಂಡಿತ,' ಎಂದನು. 

'ಹೌದು, ಕಿರಣ್. ನೀನು ಮತ್ತೆ ಮತ್ತೆ ಹೇಳುತ್ತಿರುವಂತೆ, ದೈಹಿಕ ಅಂತರ, ಮಾಸ್ಕ್ ಧಾರಣೆ ಮತ್ತು ಸೋಪಿನಿಂದ ಆಗ್ಗಾಗೆ ಕೈಗಳನ್ನು ತೊಳೆದುಕೊಳ್ಳುವಂತಹ ಸರಳ ವಿಧಾನಗಳಿಂದ ಕೋವಿಡ್ ಮಹಾಮಾರಿಯನ್ನು ತಡೆಯಲು ಸಾಧ್ಯ. ಎಲ್ಲೆಂದರಲ್ಲಿ ಉಗಿಯುವ ಕೆಟ್ಟ ಅಭ್ಯಾಸ ನಮ್ಮ ದೇಶದಲ್ಲಿ ಕೊನೆಗೊಳ್ಳಬೇಕು. ಕೊರೋನಾ ಕಾರ್ಯಕರ್ತರುಗಳನ್ನು ಗೌರವಿಸಬೇಕು.' ಎಂದು ಪುನರುಚ್ಛರಿಸಿದವಳು ರೋಹಿಣಿ. 

'ರೋಹಿಣಿ, ಕೋವಿಡ್-೧೯ ಎಂಬುದು ಮನುಕುಲಕ್ಕೆ, ಹಿಂದೆಂದೂ ಕಂಡು ಕೇಳರಿಯದ  ಬದಲಾವಣೆಗಳನ್ನು ತಂದು ನಿಲ್ಲಿಸಿರುವುದನ್ನೂ ನೀನು ಗಮನಿಸಿದ್ದೀಯಾ ಎಂದುಕೊಂಡಿದ್ದೇನೆ. "ಕೋವಿಡ್ ನಂತರದ (After Covid ಅಥವಾ A.C.) ಅಭ್ಯಾಸಗಳು ಮತ್ತು ಕೋವಿಡ್ ಮುಂಚಿನ (Before Covid ಅಥವಾ B.C.)" ಅಭ್ಯಾಸಗಳಿಗೂ ಭಾರೀ ವ್ಯತ್ಯಾಸವಿರುತ್ತದೆ. ಕೋವಿಡ್ ಬಂದನಂತರ A.C. ಮತ್ತು B.C. ಎಂಬ "ಹ್ರಸ್ವ(acronym)"ಗಳ ಪರಿಭಾಷೆಯೇ ಬದಲಾಗಿದೆ' ಎಂಬ ಅಂಶವನ್ನೂ ನೀನು ವಿಶ್ಲೇಷಿಸಬೇಕು. 

ಆನ್ಲೈನ್ ಶಿಕ್ಷಣವೆಂಬುದು, ಈಗ ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಸಾಂಪ್ರದಾಯಿಕ ಶಾಲಾ ಕೊಠಡಿಯ ಕಲಿಕೆಯೊಂದಿಗೆ ಅದು ಮುಂದುವರೆಯಲಿದೆ.' ಕಿರಣ್ ಪಟ್ಟಿ ಮಾಡಿದ ಅಂಶಗಳೆಲ್ಲವನ್ನೂ, ರೋಹಿಣಿ ತನ್ನ ಸಂಶೋಧನಾ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದಳು. 

-೦-೦-೦-೦-೦-೦-  


     

 





                                        




Monday, 26 April 2021

೧೧ ಕೋವಿಡ್ಗಿಂತಲೂ ಭಯಂಕರ

೧೧ 

ಕೋವಿಡ್ಗಿಂತಲೂ ಭಯಂಕರ 



ಅಂದು ೨೦೨೦ರ ಜೂನ್ ೨೨ರ ದಿನವಾಗಿತ್ತು. ಭಾರಿ ಕೆಲಸದ ಒತ್ತಡದಿಂದ ಯುವ ವೈದ್ಯ  ಡಾ. ಕಿರಣ್ ಅಂದು ನಲುಗಿ ಹೋಗಿದ್ದರು. ಅವರ ಆಸ್ಪತ್ರೆಯ ಭರ್ತಿ, ಕೋವಿಡ್-೧೯ರ ರೋಗಿಗಳು ತುಂಬಿ ಹೋಗಿದ್ದರು. ಆಸ್ಪತ್ರೆಯ ಎಲ್ಲಾ ಹಾಸಿಗೆಗಳು ಹಾಗೂ ಐ.ಸಿ.ಯು.ಗಳ ತುಂಬಾ ರೋಗಿಗಳು ತುಂಬಿ ಹೋಗಿದ್ದರು. ಆಸ್ಪತ್ರೆಯಲ್ಲಿದ್ದ ಎಲ್ಲ ೨೦ ವೆಂಟಿಲೇಟರ್ಗಳನ್ನು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗಳಿಗೆ ಅಳವಡಿಸಲಾಗಿತ್ತು. ಬೇರೇ ರಾಜ್ಯಗಳ ಪರಿಸ್ಥಿತಿಗಳಿಗಿಂತ ತಮ್ಮ ರಾಜ್ಯದ ಪರಿಸ್ಥಿತಿ ಎಷ್ಟೋ ಸಮಾಧಾನಕರ ಎಂಬುದು ಡಾ. ಕಿರಣರಿಗೆ ತಿಳಿದಿತ್ತು. ಕೊಂಚ ವಿರಮಿಸಿದ್ದ ಅವರು ವಿಶ್ವದ, ಭಾರತದ ಮತ್ತು ಅವರ ರಾಜ್ಯದ ಕೋವಿಡ್ ಅಂಕಿ-ಅಂಶಗಳನ್ನು ಅವಲೋಕಿಸುತ್ತಿದ್ದರು. 

ಭಾರತದ ಕೋವಿಡ್ನ ಅಂಕಿ-ಅಂಶಗಳನ್ನು ಬೇರೆ ದೇಶಗಳಿಗೆ ಹೋಲಿಸಿದರೆ ಎಷ್ಟೋ ಸಮಾಧಾನಕರವಾಗಿದ್ದರೂ, ಅದು ಹೊರನೋಟದ ಪರಿಸ್ಥಿತಿ ಮಾತ್ರ ಎಂಬುದು ಅನುಭವಿಯಾದ ಡಾ.ಕಿರಣರಿಗೆ ತಿಳಿದಿತ್ತು. ಕೋವಿಡ್ ಲಕ್ಷಣಗಳಿರುವ ರೋಗಿಗಳ ಮೇಲಿನ ಪರೀಕ್ಷೆಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿಲ್ಲವೆಂಬುದು ಅವರಿಗೆ ತಿಳಿದಿತ್ತು. ಮುಂಬರುವ ದಿನಗಳಲ್ಲಿ ಕೋವಿಡ್ ರೋಗಿಗಳ ಮತ್ತು ಮೃತಪಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಬಹುದೆಂಬ ಆತಂಕವೂ ಅವರಿಗಿತ್ತು. ಕೋವಿಡ್ನಂತಹ ಮಹಾಮಾರಿಯಿಂದ ಉಂಟಾಗಿರುವ ಇಂದಿನ ಪರಿಸ್ಥಿತಿ ಯಾರೂ ಕಂಡು ಕೇಳರಿಯದ್ದೂ ಎಂಬ ವಿಷಯ ಡಾ. ಕಿರಣರ ಮೇಲಿನ ಹಿರಿಯ ವೈದ್ಯರುಗಳ ಅಭಿಪ್ರಾಯವಾಗಿತ್ತು. 

ಕುರ್ಚಿಯಲ್ಲೇ ಕುಸಿದು ಮಲಗಿದ್ದ ಕಿರಣರನ್ನು ನಿದ್ರೆಯ ಮಂಪರು ಆವರಿಸಿತ್ತು. ತಮಗೆ ತಿಳಿಯದಂತೆ ಅವರು ತಮ್ಮ ಟಿ.ವಿ.ಯ ರಿಮೋಟ್ನ ಬಟನ್ನೊಂದನ್ನುಒತ್ತಿದ್ದರು. ಅಂದಿನ ಕೋವಿಡ್ನ ಪರಿಸ್ಥಿತಿಗಿಂತ ಘೋರವಾದ ಅಂಕಿ-ಅಂಶಗಳನ್ನು ಅವರ ಟಿ.ವಿ. ಪರದೆಯ ಮೇಲಿನ 'ಬ್ರೇಕಿಂಗ್ ನ್ಯೂಸ್' ಪಟ್ಟಿಯಲ್ಲಿ ತೋರಿಸಲಾಗುತ್ತಿತ್ತು. ಆ ಅಂಕಿ-ಅಂಶಗಳು ಭಯಾನಕವಾಗಿದ್ದು, 'ಪ್ರತಿದಿನ ೨೫,೦೦೦ ಸಾವುಗಳು ಮತ್ತು ವರ್ಷವೊಂದಕ್ಕೆ ೯ ಮಿಲಿಯೋನ್ನಷ್ಟು ಸಾವುಗಳು ಸಂಭವಿಸುತ್ತಿವೆ' ಎಂದು ತೋರಿಸಲಾಗುತ್ತಿತ್ತು. ನಂಬಲಾಗದ ಕಿರಣ್ ಅದೊಂದು ಪ್ರಸಾರದ ಆಭಾಸವಿರಬಹುದೆಂದುಕೊಂಡರು. ಆದರೆ ಆ ರೀತಿಯ ಅಂಕಿ-ಅಂಶಗಳನ್ನು ಮತ್ತೆ ಮತ್ತೆ ಟಿ.ವಿ. ಪರದೆಯ ಮೇಲೆ ಕೆಂಪು ಅಕ್ಷರಗಳಲ್ಲಿ ತೋರಿಸಲಾಗುತ್ತಿತ್ತು. ಸ್ವಲ್ಪ ಗಮನವಿಟ್ಟು ನೋಡಿದ ಮೇಲೇ, ಅಂದಿನ ಕಾರ್ಯಕ್ರಮ 'ಹಸಿವಿನ ಸಮಸ್ಯ'ಗೆ ಸಂಬಂಧಪಟ್ಟಿದ್ದು ಎಂಬ ಅರಿವು ಕಿರಣರಿಗಾಗಿದ್ದು. ಹಸಿವಿನ ಸಮಸ್ಯೆಯಿಂದ, ಇಂದು ವಿಶ್ವಾದ್ಯಂತ ಬಳಲುತ್ತಿರುವವರ ಸಂಖ್ಯೆ ೮೨೨ ಮಿಲಿಯನ್ ಗಳಷ್ಟು ಎಂಬುದು ತಜ್ಞರಾದ ಕಿರಣರಿಗೇ ಆಶ್ಚರ್ಯಕರ ಸುದ್ದಿಯಾಗಿತ್ತು. ಟಿ.ವಿ.ಯ ಕಾರ್ಯಕ್ರಮದ ನಿರ್ವಾಹಕರು ಏರಿದ ದನಿಯಲ್ಲಿ ಮಾತನಾಡುತ್ತಿದ್ದರು. 'ವಿಶ್ವಾದಾದ್ಯಂತ ೯ ಮಿಲಿಯನ್ ಜನರುಗಳು ಪ್ರತಿವರ್ಷ ಹಸಿವಿನಿಂದ ಬಳಲಿ ಸಾವನ್ನಪ್ಪುತ್ತಾರೆ. ಏಡ್ಸ್, ಮಲೇರಿಯ ಮತ್ತು ಟಿ.ಬಿ.ಖಾಯಿಲೆಗಳಿಂದ ಪ್ರತಿವರ್ಷ ಸಾವನ್ನಪ್ಪುವವರ ಒಟ್ಟು ಸಂಖ್ಯೆಗಿಂತ, ಹಸಿವಿನಿಂದ ಬಳಲಿ ಸಾಯುವವರ ಸಂಖ್ಯೆ ಹೆಚ್ಚಿನದು!' ಟಿ.ವಿ.ಪ್ರಸಾರದಲ್ಲಿ ಆಭಾಸವೇನೂ ಇತ್ತಿಲ್ಲ. 'ವಿಶ್ವ ಹಸಿವಿನ ದಿನ(World Hunger Day)'ವಾದ, ೨೮-೦೫-೨೦೨೦ರ ಕಾರ್ಯಕ್ರಮದ ಮರುಪ್ರಸಾರ ಅಂದು ನಡೆಯುತ್ತಿತ್ತು. 

ಆ ಕಾರ್ಯಕ್ರಮವನ್ನು ವೀಕ್ಷಿಸುವಂತೆ, ತಮ್ಮ ಗೆಳತಿ ರೋಹಿಣಿಗೆ ತಕ್ಷಣ ಕರೆಮಾಡಿದರು ಕಿರಣ್. ಹಸಿವಿನ ಆ ಕಾರ್ಯಕ್ರಮವನ್ನು ತಾನು 'ವಿಶ್ವ ಹಸಿವಿನ ದಿನ'ದಂದೇ  ನೋಡಿದ್ದು, ತನ್ನ ಸಂಶೋಧನೆಗೆ ಅವಶ್ಯಕವಾದ ಟಿಪ್ಪಣಿಗಳನ್ನು ಬರೆದುಕೊಳ್ಳಲು, ಈಗಲೂ ಮತ್ತೊಮ್ಮೆ ನೋಡುತ್ತಿರುವುದಾಗಿ ರೋಹಿಣಿ ಉತ್ತರಿಸಿದ್ದಳು. ಆ ಚಾನೆಲ್ನ ಮುಂದಿನ ಕಾರ್ಯಕ್ರಮವಾದ 'ಹಸಿವನ್ನು ಕುರಿತಾದ ಟೆಲಿ-ನಾಟಕ'ವೊಂದನ್ನು ನೋಡುವಂತೆ ರೋಹಿಣಿ, ಕಿರಣರನ್ನಾಗ್ರಹಿಸಿದ್ದಳು. 

'ಇಂದಿನ ವಿಶೇಷ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ವಿಶ್ವಾದ್ಯಂತ ಪ್ರತಿ ೧೦ ಸೆಕೆಂಡ್ಗಳಿಗೊಮ್ಮೆ ಒಂದು ಮಗು ಹಸಿವಿನಿಂದ ಸಾಯುತ್ತದೆ. ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಹಸಿವಿನ ಸಾವುಗಳ ಸಂಖ್ಯೆ ಹೆಚ್ಚಾಗಾಗುತ್ತದೆ. ೨೧ನೇ ಶತಮಾನದ ಅತ್ಯಂತ ದೊಡ್ಡದಾದ ಆರೋಗ್ಯ ಸಮಸ್ಯೆಯೆಂದರೆ "ಹಸಿವಿನ ಸಾವು." ದಿನೇ ದಿನೇ ಆ ಸಮಸ್ಯೆಯ ತೀವ್ರತೆ ಹೆಚ್ಚುತ್ತಲೇ ಸಾಗುತ್ತಿರುವುದು ವಿಷಾದಕರ. ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆಯನ್ನು ಮಾಡವಂತೆ ಇಂದಿನ ಗಣ್ಯ ಅತಿಥಿಗಳನ್ನು ಕೋರಿಕೊಳ್ಳುತ್ತೇನೆ' ಎಂದು ಸಾಗಿತ್ತು ಅಂದಿನ ಕಾರ್ಯಕ್ರಮದ ನಿರ್ವಾಹಕರಾದ ರಾಮಸುಬ್ಬುರವರ ವಾಗ್ಝರಿ. "ಭಾರತದ ಹಸಿವಿನೊಂದಿಗಿನ ಹೋರಾಟದ  ಕಾರ್ಯಕ್ರಮ (Fight Hunger Project)"ದ ನಿರ್ದೇಶಕರಾದ ಡಾ. ದಿವಾಕರವರಿಂದ ಚರ್ಚೆ ಆರಂಭವಾಗಿತ್ತು. ಅವರ ವಿಷಯ ಮಂಡನೆ ವೈದ್ಯರಾದ ಕಿರಣರವರ ಕಣ್ಣನ್ನೂ ತೆರೆಸಿತ್ತು. 

'ಹಸಿವು, ಕೋವಿಡ್ಗಿಂತಲೂ ಭಯಾನಕವಾದುದೇ? ಹಸಿವೆಂಬ ಪೆಡಂಭೂತವನ್ನೇಕೆ ನಾವು ನಿರ್ಲಕ್ಷಿಸುತ್ತಿದ್ದೇವೆ? ವಿಶ್ವಾದ್ಯಂತ ಪ್ರತಿನಿತ್ಯ ಕೇವಲ ೫೦೦೦ ರೋಗಿಗಳನ್ನು ಕೊಲ್ಲುತ್ತಿರುವ  ಕೋವಿಡ್ಗಿಂತ, ೨೫,೦೦೦ ಮಾನವರುಗಳನ್ನು ಕೊಲ್ಲುತ್ತಿರುವ ಹಸಿವನ್ನು ನಾವು ನಿರ್ಲಕ್ಷಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ? "ಹಸಿವಿನಿಂದ ಸಾಯುವವರು ಬಡವರುಗಳು ಮಾತ್ರವೆಂಬುದು ಈ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವೇ?" ಶ್ರೀಮಂತರನ್ನೂ ಬಿಡದೆ ಎಲ್ಲಾ ವರ್ಗಗಳ ಜನರಗಳನ್ನೂ ಕೋವಿಡ್ ಮಹಾಮಾರಿ  ಕೊಲ್ಲುತ್ತಿರುವುದೇ ನಮ್ಮನ್ನು ಹೆಚ್ಚು ತಲ್ಲಣಗೊಳಿಸಿದೆಯೇ? ಬಡವರುಗಳ ಬಗೆಗಿನ ದಿವ್ಯ ನಿರ್ಲಕ್ಷ್ಯ, ಮಾನವರುಗಳ ಮಾನಸಿಕತೆಯ ಕರಾಳ ಮುಖವೇ?' 

'ನಾನು ನೀಡುತ್ತಿರುವ ಅಂಕಿ-ಅಂಶಗಳಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಹಸಿವನ್ನು ಕುರಿತಾದ ಭಾರತದ  ಅಂಕಿ-ಅಂಶಗಳನ್ನು ತಮ್ಮ ಮುಂದಿಟ್ಟರೆ, ತಮ್ಮಗಳಿಗೆ ಆಶ್ಚರ್ಯ ಕಾದಿರಬಹುದು.  ಅಪೌಷ್ಟಿಕತೆಯ ತವರೇ ಭಾರತವೆಂದು ಹೇಳಬಹುದು. ೧೯೬ ಮಿಲಿಯನ್ ಜನರುಗಳು ಭಾರತದಲ್ಲಿ ಇಂದೂ ಹಸಿವಿನಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿನ ೫ ವರ್ಷಕ್ಕೂ ಕಮ್ಮಿ ವಯಸ್ಸಿನ ೨೧% ಮಕ್ಕಳು "ಕಮ್ಮಿ ತೂಕ (Wasting - ವಯಸ್ಸಿಗೆ ತಕ್ಕ ತೂಕವಿಲ್ಲದಿರುವುದು)"ದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದೇ ವರ್ಗದ ೩೮. ೪%ರಷ್ಟು ಮಕ್ಕಳು "ಎತ್ತರದ ಕೊರತೆ (Stunting - ವಯಸ್ಸಿಗೆ ತಕ್ಕ ಎತ್ತರವಿಲ್ಲದಿರುವುದು)"ಯಿಂದ ಪೀಡಿತರಾಗಿದ್ದಾರೆ. ಈ ರೀತಿಯ ಕೊರತೆಗಳಿಂದ ಮಕ್ಕಳ ದೈಹಿಕ ಬಲ ಮತ್ತು ಮನೋಬಲಗಳೆರಡೂ ಸರಿಪಡಿಸಲಾಗದ ನ್ಯೂನ್ಯತೆಗಳಾಗಿ ಉಳಿದುಬಿಡುತ್ತವೆ. ೨೦೧೭ರ  ವಿಶ್ವ ಹಸಿವಿನ ಸೂಚಿ(Global Hunger Index)ಯ ಪ್ರಕಾರ, ೧೧೯ ವಿಕಾಸ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಭಾರತದ ಸ್ಥಾನ ೧೦೦ನೆಯ ಸ್ಥಾನದಷ್ಟು ಕೆಳಮಟ್ಟದಲ್ಲಿದೆ.  ಪಕ್ಕದ ಬಡ ರಾಷ್ಟ್ರಗಳಾದ ನೇಪಾಳ, ಮಯನ್ಮಾರ್, ಶ್ರೀ ಲಂಕಾ ಮತ್ತು ಬಾಂಗ್ಲಾದೇಶಗಳು ಈ ನಿಟ್ಟಿನಲ್ಲಿ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ ಎಂಬುದು ವಿಷಾದಕರ ಸಂಗತಿ. ಪ್ರತಿದಿನ ೭೦೦೦ ಜನಗಳು ಮತ್ತು ಪ್ರತಿವರ್ಷ ೨೫ ಲಕ್ಷ ಜನಗಳು ಹಸಿವಿನಿಂದ ಭಾರತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂಬ ಸಂಗತಿ ಆತಂಕಕಾರಿಯಾದುದಲ್ಲವೇ?' ಹೀಗೆ ಮಂಡಿಸಿದ ಡಾ. ದಿವಾಕರ್ ರವರ ವಿಷಯಗಳು ಎಲ್ಲರನ್ನೂ ಚಕಿತಗೊಳಿಸಿದ್ದು ಸುಳ್ಳಾಗಿತ್ತಿಲ್ಲ. 

'ಧನ್ಯವಾದಗಳು ದಿವಾಕರ್ ರವರೆ. ತಾವು ನೀಡಿದ ವಿವರಗಳು ಖೇದಕರವಾದವು. ದಿನನಿತ್ಯ ೨೫,೦೦೦ ಜನರುಗಳನ್ನು ಬಲಿಪಡೆಯುವ ಹಸಿವಿನ ಸಮಸ್ಯೆ ಬಗ್ಗೆ ನಾವೇಕೆ ಯೋಚಿಸುವುದೂ ಇಲ್ಲ? ಭಾರತ ಮತ್ತು ವಿಶ್ವದ ಮುಂದಿರುವ ಅತೀ ದೊಡ್ಡ ಸಮಸ್ಯೆಯೆಂದರೆ, ಹಸಿವಿನ ಸಮಸ್ಯೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ವಿಷಯದ ಚರ್ಚೆಯನ್ನು ಪ್ರೊ. ಪ್ರಹ್ಲಾದರವರು ಮುಂದುವರೆಸಲಿ ಎಂದು ಕೋರಿಕೊಂಡವರು ನಿರ್ವಾಹಕರಾದ ರಾಮಸುಬ್ಬುರವರು. 

ಪ್ರೊ. ಪ್ರಹ್ಲಾದ್ರವರು ಮಾತನಾಡುತ್ತಾ, 'ರಾಮಸುಬ್ಬು ಮತ್ತು ದಿವಾಕರ್ ರವರು ನಿರ್ದಾಕ್ಷಿಣ್ಯವಾಗಿ ವಿಷಯ ಮಂಡನೆಯನ್ನು ಮಾಡಿ ನಮ್ಮ ಕಣ್ಣುಗಳನ್ನು ತೆರೆಸಿದ್ದಾರೆ. ಅಮೆರಿಕಾದ ನಾಗರೀಕ ಹಕ್ಕುಗಳ ಖ್ಯಾತ ವಾದಿಯಾಗಿದ್ದ ಡಾ. ಮಾರ್ಟಿನ್ ಲೂಥರ್ ಕಿಂಗ್ ರವರು ಒಂದು ಕಡೆ ಮಾತನಾಡುತ್ತ, "ನಾನು ಸತ್ತರೆ ನನಗೊಂದು ಸ್ಮಾರಕವನ್ನು ಕಟ್ಟಿಸಬೇಡಿ. ಹಸಿದ ಹೊಟ್ಟೆಗಳಿಗೆ ಆಹಾರವನ್ನು ನೀಡುವ ಪ್ರಯತ್ನವನ್ನು ಮಾತ್ರ ನಾನು ಮಾಡುತ್ತಿದ್ದೆ ಎಂದು ಮುಂದಿನ ಪೀಳಿಗೆಗೆ ತಿಳಿಸಿ" ಎಂದಿದ್ದರು. ನಮ್ಮವರೇ ಆದ, ನೊಬೆಲ್ ಪಾರಿತೋಷಕ ವಿಜೇತರಾದ ಡಾ. ಅಮರ್ತ್ಯ ಸೇನ್ರವರು ವಿಶ್ಲೇಷಿಸುತ್ತಾ "ಭಾರತದಲ್ಲಿ ಆಹಾರದ ಕೊರತೆ ಇಲ್ಲ. ಹಸಿವಿನಿಂದ ಬಳಲುತ್ತಿರುವರಿಗೆ ಆಹಾರವನ್ನು ತಲುಪಿಸುವ ವ್ಯವಸ್ಥೆ ಮಾತ್ರ ಸಮರ್ಪಕವಾಗಿಲ್ಲ" ಎಂದಿದ್ದಾರೆ. ಭಾರತದಲ್ಲಿನ  ಹಸಿದ ಹೊಟ್ಟೆಗಳನ್ನು ತುಂಬಿಸಲು ಬೇಕಾಗುವ ಆಹಾರ ಧಾನ್ಯಗಳ ಪ್ರಮಾಣಕ್ಕಿಂತ  ಹೆಚ್ಚು ಆಹಾರ ಧಾನ್ಯಗಳು, ಪ್ರತಿ ವರ್ಷ ಹಾಳಾಗಿ ಹೋಗುತ್ತದೆ. ಹಸಿದವರಿಗೆ ಆಹಾರವನ್ನು ತಲುಪಿಸುವ ಮಾರ್ಗಗಳನ್ನು ಕುರಿತು ಚರ್ಚೆಗಳು ಮಾತ್ರ ನಡೆಯುತ್ತವೇ ಹೊರೆತು, ಅದರ ಕಾರ್ಯಾನ್ವಯದ ಕೆಲಸಗಳು ಮಾತ್ರ ನಡೆಯುವುದೇ ಇಲ್ಲ' ಎಂದರು. 

ಈ ನಡುವೆ ವಕೀಲ ಮದನ್ ಲಾಲರು ಮಾತನಾಡಲು ತುದಿಗಾಲಲ್ಲಿ ನಿಂತಿದ್ದರು. 'ಮತ್ತೊಬ್ಬ ನೊಬೆಲ್ ವಿಜೇತರಾದ ಅರ್ಥ ಶಾಸ್ತ್ರಜ್ಞ ಅಂಗಸ್ ಡೇಟನ್ ರವರ ಮಾತುಗಳನ್ನು ನೆನಪಿಸಲಿಚ್ಛಿಸುತ್ತೇನೆ. "ಭಾರತದ ಬಡವರ ಅಪೌಷ್ಟಿಕತೆಯ ಕೊರತೆ ಕ್ಯಾಲೋರಿಗಳ ಕೊರತೆಯಿಂದ ಉಂಟಾದುದಲ್ಲ. ಭಾರತೀಯರ ಆಹಾರ ಪದ್ಧತಿಯಲ್ಲಿ ಶರ್ಕರಪಿಷ್ಟಾದಿಗಳ (carbohydrates) ಅಂಶ ಹೆಚ್ಚಾಗಿದ್ದು, ಪ್ರೋಟೀನ್ ಮತ್ತು ಕೊಬ್ಬಿನ (Fats) ಅಂಶಗಳು ಕಡಿಮೆ ಇರುತ್ತದೆ." ಭಾರತದಲ್ಲಿ ಹಸಿವಿನಿಂದ ಬಳಲುತ್ತಿರುವವರಲ್ಲಿ,  ೬೦%ಗೂ ಹೆಚ್ಚಿನವರು ಮಹಿಳೆಯರು. ಭಾರತದ ಇಡೀ ಜನಸಂಖ್ಯೆಗೆ ಸಾಕಾಗುವಷ್ಟು ಆಹಾರ ಭಾರತದಲ್ಲೇ ಉತ್ಪಾದನೆಗೊಳ್ಳುತ್ತದೆ. ಆದರೆ ಭಾರೀ ಸಂಖ್ಯೆಯ ಭಾರತೀಯರಿಗೆ ಸಾಕಷ್ಟು ಹಣವನ್ನುದುಡಿಯುವ ಅವಕಾಶಗಳಿಲ್ಲದೇ ಇರುವುದು ಆಹಾರ ಸಮಸ್ಯೆಗೆ ಕಾರಣವಾಗಿದೆ. ಹಸಿದವರಲ್ಲಿ ೮೦%ರಷ್ಟು ಜನರು ಗ್ರಾಮೀಣ ಭಾಗದವರಾಗಿರುತ್ತಾರೆ. ವಲಸಿಗರ ಸಮಸ್ಯೆ, ವಿವಿಧ ವರ್ಗಗಳ ನಡುವಿನ  ಘರ್ಷಣೆ, ಹವಾಮಾನ ವೈಪರೀತ್ಯ, ಪ್ರಾಕೃತಿಕ ದುರ್ಘಟನೆಗಳು ಮುಂತಾದ ಕಾರಣಗಳೂ ಹಸಿವಿನ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತವೆ. ಹಸಿವೆಂಬುದೇ ಅತ್ಯಂತ ಕ್ರೂರವಾದ ಮಹಾಮಾರಿ. ಆ ಮಹಾಮಾರಿಯನ್ನು ಹಣಿಯಲು ಬೇಕಾದ ಲಸಿಕೆ ಮತ್ತು ಔಷಧಗಳೆರಡೂ "ಆಹಾರ" ಮಾತ್ರ. ಆಹಾರ ನಮ್ಮ ದೇಶದಲ್ಲಿ ಸಾಕಷ್ಟಿದ್ದು, ಅದರ ಹಂಚಿಕೆ ವ್ಯವಸ್ಥೆ ಸರಿಯಿಲ್ಲದಿರುವುದೇ ದೊಡ್ಡ ಸಮಸ್ಯೆ. ಹಸಿವಿನ ಮಹಾಮಾರಿಯನ್ನು ಹಣಿಯುವುದು, ಕೋವಿಡ್ ಮಹಾಮಾರಿಯನ್ನು ಹಣಿಯುವುದಕ್ಕಿಂತಾ ಸುಲಭವಾದ ಕೆಲಸ. ಆದರೆ ನಮ್ಮ ಜನಗಳಲ್ಲಿ ಮತ್ತು ನಮ್ಮ ನಾಯಕರುಗಳಲ್ಲಿ ಬೇಕಾದ ಇಚ್ಚಾಶಕ್ತಿಯ ಕೊರತೆ ಇರುವುದೇ ವಿಷಾದಕರ ಸಂಗತಿ' ಎಂದವರು ಮದನ್ ಲಾಲರು. 

ಟಿ.ವಿ. ಚರ್ಚೆಯ ಮುಂದಿನ ಮಾತಿನ ಅವಕಾಶ ರಾಜುರವರದಾಗಿತ್ತು. 'ಹಸಿವಿನ ಸಮಸ್ಯೆ ಕುರಿತಾದ ಮೂಲಭೂತ ಸಮಸ್ಯೆಗಳನ್ನು ಎತ್ತಿ ತೋರಿಸಿ ಮಾತನಾಡಿದ ಎಲ್ಲರಿಗೂ ನಾನು ಆಭಾರಿ. ತಜ್ಞರುಗಳ ಪ್ರಕಾರ ಇಂದಿನ ಕೋವಿಡ್ ಸಮಸ್ಯೆ, ಹಸಿವಿನ ಸಮಸ್ಯೆಯನ್ನು ಇನ್ನೂ ತೀವ್ರಗೊಳಿಸಬಲ್ಲದು. "ಉದ್ಯೋಗಗಳ ಹರಣ, ಬಡವರಲ್ಲಿನ ಆದಾಯದ ಕುಸಿತ, ಸಾಗಾಣಿಕೆಯ ಸಮಸ್ಯೆ, ಕೋವಿಡೇತರ ರೋಗಗಳಿಗೆ ಚಿಕಿತ್ಸೆಯ ಕೊರತೆ, ಮುಂತಾದ ಸಮಸ್ಯೆಗಳು ಆಹಾರದ ವಿತರಣೆಯ ವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸಿವೆ. ಕೋವಿಡ್ನ ಸಮಸ್ಯೆ ಮುಂದುವರೆದಷ್ಟೂ, ಆಹಾರದ ಸಮಸ್ಯೆಯೂ ಉಲ್ಬಣಗೊಳ್ಳುವುದರಲ್ಲಿ ಎರಡು ಮಾತಿಲ್ಲ.

 ಹಸಿವಿನ ಸಮಸ್ಯೆಯನ್ನು ನೀಗಿಸುವ ಕೆಲವು ಕಾರ್ಯಕ್ರಮಗಳನ್ನು ನಮ್ಮ ಸರಕಾರಗಳು ತೆಗೆದುಕೊಂಡಿವೆ. ಉಚಿತ ಹಾಗೂ ಕಮ್ಮಿ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಬಡವರಿಗೆ ತಲುಪಿಸುವ ವ್ಯವಸ್ಥೆ, ಶಾಲೆಗಳಲ್ಲಿ ಮಧ್ಯಾಹ್ನದೂಟದ ವ್ಯವಸ್ಥೆ, ರೈತರುಗಳಿಗೆ ನೇರ ಹಣದ ಪಾವತಿಯ ವ್ಯವಸ್ಥೆ, ಹಲವು ರಾಜ್ಯಗಳಲ್ಲಿನ ಉಚಿತ/ಕಮ್ಮಿ ಬೆಲೆಯ ಊಟದ ಕ್ಯಾಂಟೀನ್ ಗಳ ವ್ಯವಸ್ಥೆ , ಮುಂತಾದ ಕ್ರಮಗಳು ಹಸಿವಿನ ಸಮಸ್ಯೆಯನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನಗಳೇ ಎಂದು ಹೇಳಬಹುದು. ಆದರೆ ಹಲವಾರು ತಜ್ಞರುಗಳ ಪ್ರಕಾರ, ಉಚಿತವಾಗಿ ಆಹಾರವನ್ನೊದಗಿಸುವ ವ್ಯವಸ್ಥೆ ದೀರ್ಘಾವಧಿಯ ಪರಿಹಾರವಾಗಲಾರದು. ಹಲವಾರು ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಉಚಿತ ಆಹಾರದ ವ್ಯವಸ್ಥೆ ಜೀವಗಳನ್ನುಳಿಸಬಹುದು. ಆದರೆ ಎಗ್ಗಿಲ್ಲದೆ ಸಾಗುವ ಉಚಿತ ಆಹಾರದ ವ್ಯವಸ್ಥೆ ಹೊಸ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅದರಿಂದ ಆಹಾರ ಧಾನ್ಯಗಳ ಬೆಲೆಗಳಲ್ಲಿ ಏರುಪೇರಾಗಿ, ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ವ್ಯಾಪಾರಗಳ ಪ್ರಕ್ರಿಯೆಗಳಲ್ಲಿ ಉತ್ಸಾಹದ ಕೊರತೆಯುಂಟಾಗಬಹುದು. ಗ್ರಾಮೀಣಾಭಿವೃದ್ಧಿಗೆ ದೀರ್ಘಾವಧಿಯ ಯೋಜನೆಗಳು, ಸ್ತ್ರೀಯರ ಸಬಲೀಕರಣ ಮುಂತಾದ ಕ್ರಮಗಳಿಂದ ಹಸಿವಿನ ಸಮಸ್ಯೆಯನ್ನು ಹೆಚ್ಚು ಸಮರ್ಪಕವಾಗಿ ಎದುರಿಸಲು ಸಾಧ್ಯ. ನೀರು,  ನೈರ್ಮಲ್ಯ, ವಿದ್ಯಾಭ್ಯಾಸ, ಆರೋಗ್ಯ, ಸಾಗಾಣಿಕೆ, ಸಂವಹನ (communication) ಮುಂತಾದ ಸಮಸ್ಯೆಗಳು ನಮ್ಮ ಹಳ್ಳಿಗಳನ್ನು ಸತತವಾಗಿ ಕಾಡುತ್ತಿವೆ. ಪಟ್ಟಣದವರಿಗೆ ಹೋಲಿಸಿದರೆ ಗ್ರಾಮೀಣರ            ಜೀವಿತಾವಧಿ (Life expectancy)ಯೂ ಕಡಿಮೆಯೇ. ಹಾಗಾಗಿ ಹಸಿವಿನ ಸಮಸ್ಯೆಯನ್ನು ನಿವಾರಿಸಲು ಸಮಗ್ರ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ.  

ಹಸಿವೆಂಬುದು ಜನಸಂಖ್ಯಾ ಸ್ಫೋಟದಿಂದುಂಟಾದ ಸಮಸ್ಯೆಯೇ? ಅಲ್ಲ. ಹಸಿವು ಮತ್ತು ಜನಸಂಖ್ಯಾ ಸ್ಫೋಟಗಳೆರಡೂ ಬಡತನ ಮತ್ತು ಅಸಮಾನತೆಯಿಂದ ಉಂಟಾದ ಸಮಸ್ಯೆಗಳು. ಹೆಣ್ಣು ಕೀಳೆಂಬ ಭಾವನೆ ಮೊದಲು ತೊಲಗಬೇಕು. ಮಹಿಳೆಯರನ್ನು ಕೀಳೆಂದು ಕಾಣುವ ನಮ್ಮ ಜನರುಗಳ ಮನೋಭಾವದಿಂದಾಗಿ, ನಮ್ಮ ಮಹಿಳೆಯರುಗಳ ಪೈಕಿ ೬೦%ರಷ್ಟು ಮಹಿಳೆಯರು ಹಸಿವಿನಿಂದ ಬಳಲುತ್ತಿದ್ದಾರೆ.  ತಮ್ಮ ಮಕ್ಕಳುಗಳ ಹೊಟ್ಟೆಯನ್ನು ತುಂಬಿಸಲು ಮಾತೆಯರು ಉಪವಾಸದಿಂದಿರುತ್ತಾರೆ. ಕುಟುಂಬಗಳ ಅವಶ್ಯಕತೆಗಳ ಪೂರೈಕೆಯ ಜವಾಬ್ದಾರಿಯನ್ನು ತಾಯಂದಿರುಗಳು ನಿಭಾಯಿಸುತ್ತಾರೆ. ಆದರೂ ಹೆಚ್ಚಿನ ಕುಟುಂಬಗಳಲ್ಲಿ ಮಾತೆಯರಿಗೆ ಸೌಲಭ್ಯಗಳು ದೊರೆಯುವುದಿಲ್ಲ ಮತ್ತು ಕುಟುಂಬವನ್ನು ಕುರಿತಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ ಅಭಿಪ್ರಾಯವನ್ನು ಪರಿಗಣಿಸುವುದಿಲ್ಲ. ಈ ರೀತಿಯ ಧೋರಣೆಗಳೇ ಕುಟುಂಬದ ಎಲ್ಲಾ ಸಮಸ್ಯೆಗಳ ಮೂಲ. ಆದುದರಿಂದ ಮಹಿಳೆಯರ ಸಬಲೀಕರಣದ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಈ ಕಾರ್ಯಕ್ಕೆ ಪೂರಕವಾಗಿ ಪುರುಷರ ಮನಃಸ್ಥಿತಿಯೂ ಬದಲಾಗಬೇಕು.' ಹೀಗಿದ್ದ ರಾಜುರವರ ವಾದದ ವೈಖರಿ ತರ್ಕಬದ್ಧವಾಗಿದ್ದು ಎಲ್ಲರನ್ನೂ ಆಕರ್ಷಿಸಿತ್ತು. 

ಕಾರ್ಯಕ್ರಮದ ನಿರ್ವಾಹಕ ರಾಮಸುಬ್ಬುರವರು ಮಾತನಾಡುತ್ತಾ, 'ರಾಜುರವರ ಮಾತುಗಳು ಹಸಿವಿನ ಸಮಸ್ಯೆಯ ದರ್ಶನವನ್ನು ಸಮಗ್ರವಾಗಿ ಮಾಡಿಸಿವೆ.  ಹೆಚ್ಚಿನದೇನನ್ನೂ ನಾನು ಹೇಳಬಯಸುವುದಿಲ್ಲ. ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ನಮ್ಮ ಟಿ.ವಿ. ವಾಹಿನಿಯ ಮುಂದಿನ ಕಾರ್ಯಕ್ರಮ 'ಹಸಿವನ್ನು ಕುರಿತಾದ ಟೆಲಿ ನಾಟಕ' ಎಂದರು.

***

ಅಂದು ಸಮಯ ಸಾಯಿಂಕಾಲದ ೫. ೦೦ ಘಂಟೆಯಾಗಿತ್ತು. ಅಕ್ಷರಗಳನ್ನು ಬರೆಯುವುದನ್ನು ಕಲಿಯುತ್ತಿದ್ದ ದುರ್ಗಾ ತನ್ನ ಶಾಲೆಯಲ್ಲಿ ಕುಳಿತಿದ್ದಳು. ಶಿಕ್ಷಕರಾಗಿ ಆ ಶಾಲೆಗೆ ವಾರಕ್ಕೆ ಎರಡು ಬಾರಿ ಬರುತ್ತಿದ್ದ ಬ್ಯಾನರ್ಜಿರವರು ತಮ್ಮ ಒಬ್ಬಳೇ ವಿದ್ಯಾರ್ಥಿನಿ ದುರ್ಗಾಗಳಿಗೆ  ವರ್ಣಮಾಲೆಗಳ ಪಟವನ್ನು  ತೋರಿಸುತ್ತಿದ್ದರು. ಹರಿದ ಲಂಗಗಳನ್ನು ತೊಟ್ಟ, ಕೃಶವಾದ ದೇಹದ ದುರ್ಗಾಳ  ಮೂರು ಹೆಣ್ಣು ಮಕ್ಕಳು ಅವಳ ಸುತ್ತಾ ಕುಳಿತಿದ್ದರು. ಆ ಮೂರು ಮಕ್ಕಳೂ, ಅರೆ ಬೆಂದ ಒಂದೇ ಮುಸುಕಿನ ಜೋಳದ ತೆನೆಯಿಂದ ಕಾಳುಗಳನ್ನು ಹೆಕ್ಕಿ ತಿನ್ನುತ್ತಿದ್ದರು. ಮಕ್ಕಳುಗಳ ನಡುವೆ ಮತ್ತೆ ಮತ್ತೆ ಕಾಳುಗಳಿಗಾಗಿ ಕಿತ್ತಾಟ ನಡೆಯುತ್ತಿತ್ತು. ಒಳ್ಳೆಯ ಮಾತುಗಳನ್ನಾಡಿ ಮಕ್ಕಳನ್ನು ಸಮಾಧಾನ ಪಡಿಸುತ್ತಿದ್ದ ದುರ್ಗಾ, ಅಕ್ಷರಗಳನ್ನು ತಿದ್ದುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. 'ನಿಮ್ಮ ಅಮ್ಮನಿಗೆ ತೊಂದರೆ ಕೊಡಬೇಡಿ' ಎಂದು ನಡುವೆ ಬ್ಯಾನರ್ಜಿ ಮೇಷ್ಟ್ರು ಕೂಗು ಹಾಕುತ್ತಿದ್ದರು. 

ಒಂದು ದಿನ, ದುರ್ಗಾ ತನ್ನ ಶಾಲೆಯಲಿದ್ದಳು. ಸಾಯಿಂಕಾಲ ೫. ೩೦ರ ಸಮಯವಾಗಿತ್ತು. ದುರ್ಗಾಳ ಗಂಡನಾದ ಚುನ್ನಿ ಲಾಲ್ ಕೂಗಾಡುತ್ತಾ ಶಾಲೆಯ ಬಳಿ ಬಂದಿದ್ದನು. 'ಓ ದುರ್ಗಾ, ಹೊರಗೆ ಬಾ. ದುಡ್ಡು ಕೊಡು. ನಾನು ಶರಾಬು ಕುಡಿಯುವ ಹೊತ್ತಾಯ್ತು. ನಂಕಯ್ಲಿ ತಡ್ಕೊಳಕ್ಕಾಗ್ತಿಲ್ಲ.' ಪತಿಯ ಕೂಗಾಟವನ್ನು ಕೇಳಿದ ದುರ್ಗಾ ಒಳಗೇ ನಡುಗ ಹತ್ತಿದ್ದಳು. ಹಣ ಕೊಡದ್ದಿದ್ದರೆ ಅವನು ಹೋಗುವುದಿಲ್ಲವೆಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಆ ದಿನ ಅವಳ ಕೈಯಲ್ಲಿ ಒಂದು ರುಪಾಯಿಯೂ ಕೂಡಾ ಇರಲಿಲ್ಲ. 

ಚುನ್ನಿಯ ಕೂಗಾಟ ಮುಂದುವರೆದಿತ್ತು. 'ಓ ಹೆಂಗಸೇ, ಹೊರಗೆ ಬಾ. ಒಳಗೆ ಏನು ಮಾಡ್ತಿ? ನಿನ್ನ ಮೇಷ್ಟ್ರ ಜೊತೆ ಚಕ್ಕಂದವಾಡ್ತಿದ್ದೀಯ?' ಚುನ್ನಿ ಕೂಗಾಟವನ್ನು ನಿಲ್ಲಿಸುವುದಿಲ್ಲವೆಂದು ತಿಳಿದಿದ್ದ ದುರ್ಗಾ ಹೊರಗೆ ಬಂದಿದ್ದಳು. ದುರ್ಗಳ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದ ಚುನ್ನಿ 'ಹಣ ಕೊಡು, ಹಣ ಕೊಡು' ಎಂದು ಅರಚಿದ್ದ. 'ನನ್ನಲ್ಲಿ ಈ ದಿನ ಹಣವಿಲ್ಲ, ನಾಳೆ ಕೊಡುತ್ತೇನೆ' ಎಂದು ದುರ್ಗಾ ಅಂಗಲಾಚಿದರೂ ಚುನ್ನಿ ಸುಮ್ಮನಾಗಲಿಲ್ಲ. 

ಮಧ್ಯೆ ಪ್ರವೇಶ ಮಾಡಿದ ಬ್ಯಾನರ್ಜಿ ಮೇಷ್ಟ್ರು ಚುನ್ನಿಯನ್ನು ಸಮಾಧಾನ ಪಡಿಸಲೆತ್ನಿಸಿದ್ದರು. ಏರು ಧ್ವನಿಯಲ್ಲಿ ಕೂಗಾಡಿದ ಚುನ್ನಿ, 'ಏಯ್ ಮೇಸ್ಟ, ನಿನಗೂ ನನ್ನ ಹೆಂಡತಿಗೂ ಏನೋ ಸಂಬಂಧ? ಎಷ್ಟು ದಿನಗಳಿಂದ ಅವಳನ್ನು ಗುಟ್ಟಾಗಿ ಅನುಭವಿಸುತ್ತಿದ್ದೀಯಾ? ನನಗೆಲ್ಲಾ ತಿಳಿದಿದೆ. ಸೂಳೆ ಮಗನೇ, ನಾಳೆಯಿಂದ ನಮ್ಮ ಹಳ್ಳಿಗೆ ಬರಬೇಡ.' ಎಂದನು. ಕೋಪ ನೆತ್ತಿಗೇರಿದ ಚುನ್ನಿ, ಶಾಲೆಯ ಮೂಲೆಯಲ್ಲಿದ್ದ ಪರಕೆಯೊಂದನ್ನು ಎತ್ತಿಕೊಂಡು ಅದರಿಂದ ದುರ್ಗಾಳನ್ನು ಥಳಿಸ ಹತ್ತಿದನು. ದುರ್ಗಾಳನ್ನು ಬಿಗಿಯಾಗಿ ಹಿಡಿದ ಅವಳ ಮೂರೂ ಮಕ್ಕಳೂ ಅಳಲಾರಂಭಿಸಿದರು. ಮೇಷ್ಟ್ರು ಏನು ತೋಚದೆ ಸುಮ್ಮನೆ ನಿಂತಿದ್ದರು. ಥಳಿತವನ್ನು ನಿಲ್ಲಿಸದ ಚುನ್ನಿಯನ್ನು ನೋಡಿ ಮೇಷ್ಟ್ರ ಕಣ್ಣಲ್ಲಿ ನೀರಿನ ಹನಿ ಮೂಡಿತ್ತು. ತಮ್ಮ ಕಿಸೆಯಿಂದ ಕೆಲವು ನೋಟುಗಳನ್ನು ಹೊರ ತೆಗೆದ ಮೇಷ್ಟ್ರು, ಅವುಗಳನ್ನು ಚುನ್ನಿಯ ಕೈಯಲ್ಲಿಟ್ಟರು. ನೋಟುಗಳನ್ನು ತನ್ನ ಕಿಸೆಗಿಳಿಸಿದ ಚುನ್ನಿ ಮತ್ತೆ ಅರಚುತ್ತಾ 'ಏ ಮೇಸ್ಟಾ, ನೀನೇನು ಹಣವನ್ನು ಬಿಟ್ಟಿ ಕೊಡುತ್ತಿಲ್ಲ. ನನ್ನ ಹೆಂಡತಿ ಜೊತೆ ಮಲಗಿದ್ದಕ್ಕೆ ಹಣ ಕೊಡ್ತಿದ್ದೀಯ. ಮಲ್ಕೋ, ಮಲ್ಕೋ, ನನಗೆ ಹಣ ಕೊಡ್ತಾ ಇರು' ಎಂದನು. ಕೂಡಲೇ  ಚುನ್ನಿ ಶರಾಬಿನಂಗಡಿ ಕಡೆ ಓಡಿದನು. ಕಣ್ಣೀರಿಡುತ್ತಾ ದುರ್ಗಾ ಮಕ್ಕಳೊಂದಿಗೆ ಮನೆ ಕಡೆ ನಡೆದಳು. 

ಚುನ್ನಿಯೊಂದಿಗೆ ಮದುವೆಯಾದಾಗ ದುರ್ಗಾಳಿಗಿನ್ನು ೧೩ರ  ಪ್ರಾಯ. ಮದುವೆಯಾಗಿ ೧೪ ವರ್ಷಗಳುರುಳಿ ದುರ್ಗಾ ಮೂರು ಹೆಣ್ಣು ಮಕ್ಕಳನ್ನೂ ಹಡೆದಿದ್ದಳು. ಕಾಡಿನ ಬುಡಕಟ್ಟಿನ ಚುನ್ನಿಯ ಕೆಲಸ ಮರಗಳನ್ನು ಕಡಿಯುವುದಾಗಿತ್ತು. ಆದರವನು ದುಡಿಯುವುದಕ್ಕಿಂತಾ ಕುಡಿತದಲ್ಲೇ ಕಾಲ ಹರಣ ಮಾಡುತ್ತಿದ್ದನು. ನಾಲ್ಕು ಕಿ.ಮೀ. ದೂರವಿರುವ ಸಣ್ಣ ನಗರವೊಂದಕ್ಕೆ ನಿತ್ಯ ನಡೆದು ಹೋಗುತ್ತಿದ್ದ ದುರ್ಗಾ, ಕೆಲವು ಮನೆಗಳಲ್ಲಿ ಕೆಲಸವನ್ನು ಮಾಡುತ್ತಿದ್ದಳು. ಅವಳ ಸಂಪಾದನೆಯ ಬಹು ಭಾಗ ಚುನ್ನಿಯ ಕುಡಿತಕ್ಕೇ ಹರಿದು ಹೋಗುತ್ತಿತ್ತು. ದುರ್ಗಾಳನ್ನು ಹಣಕ್ಕಾಗಿ ಪೀಡಿಸಿ ಚುನ್ನಿ ಅವಳನ್ನು ಹೊಡೆಯುವುದು ನಿತ್ಯದ ಕ್ರಮವಾಗಿ ಹೋಗಿತ್ತು. 

ದುರ್ಗಾಳ ಹಳ್ಳಿ, ಕಾಡೊಳಗಿನ ದುರ್ಗಮ ಪ್ರದೇಶವಾಗಿದ್ದು, ಅವಳ ಹಳ್ಳಿಯವರೆಲ್ಲಾ ಕಡು ಬಡವರಾಗಿದ್ದರು. ಮುಖ್ಯ ರಸ್ತೆಯಲ್ಲಿರುವ ಬಸ್ ನಿಲ್ದಾಣ ತಲುಪಲು ಹಳ್ಳಿಗರು ೩ ಕಿ.ಮೀ.ನಷ್ಟು ದೂರವನ್ನು ಮಣ್ಣಿನ ರಸ್ತೆಯಲ್ಲೇ ನಡೆದು ಹೋಗಬೇಕಿತ್ತು. ಆ ನಿಲ್ದಾಣದಲ್ಲಿ ಕೆಲವು ಬಸ್ ಗಳು ಮಾತ್ರ ನಿಲ್ಲುತ್ತಿದ್ದವು. ಹಲವು ಬಾರಿ ಸಮೀಪದ ಪಟ್ಟಣವನ್ನು ತಲುಪಲು ಹಳ್ಳಿಗರು ಮತ್ತೆ ಒಂದು ಕಿ.ಮೀ.ನಷ್ಟು ದೂರವನ್ನು ನಡೆದೇ ಸಾಗಬೇಕಿತ್ತು. ಆ ಪಟ್ಟಣದಲ್ಲಿ ಮಾತ್ರ ದುರ್ಗಾಳ ಹಳ್ಳಿಗರಿಗೆ ಒಂದು ಕೆ.ಜಿ.ಗೆ ಒಂದು ರೂ.ಗಳ ಅಕ್ಕಿ, ಸರಕಾರಿ ರೇಷನ್ ಅಂಗಡಿಯಲ್ಲಿ ದೊರೆಯುತ್ತಿತ್ತು. ಮಣ್ಣಿನ ರಸ್ತೆಯಲ್ಲಿ ಮಳೆ ದಿನಗಳಲ್ಲಿ ನಡೆದು ಹೋಗುವುದು ಬಹಳ ತ್ರಾಸದಾಯಕವಾಗಿತ್ತು. 

ಒಂದು ದಿನ ದುರ್ಗಾ ತನ್ನ ಶಾಲೆಯ ಬ್ಯಾನರ್ಜಿ ಮೇಷ್ಟ್ರನ್ನು ಕೇಳಿದ್ದಳು. 'ಸರಕಾರದವರಿಗೆ ಹೇಳಿ ರೇಷನ್ ಅಂಗಡಿಯನ್ನು ನಮ್ಮ ಹಳ್ಳಿಗೇ ತರಿಸಬಾರದೇಕೆ?'

ಮೇಷ್ಟ್ರು ಉತ್ತರಿಸುತ್ತಾ, 'ನಾನು ಹೊರಗಿನವನು. ನಾನು ಕೇಳುವುದು ಸರಿಯಲ್ಲ. ನೀನೇ ಏಕೆ ಕೇಳಬಾರದು?' ಭಯಗೊಂಡಂತೆ ಕಂಡ ದುರ್ಗಾ, 'ನನ್ನ ಮಾತನ್ನು ಸರಕಾರದವರು ಕೇಳುವರೇ?' ಎಂದಳು. 'ಏಕಾಗಬಾರದು? ಹಳ್ಳಿಯ ೧೦-೨೦ ಹೆಂಗಸರನ್ನು ಜೊತೆ ಮಾಡಿಕೊಂಡು ಹೋಗು. ಆಗ ನಿನ್ನ ಮಾತನ್ನು ಅವರು ಕೇಳಲೇ ಬೇಕಾಗುತ್ತದೆ' ಎಂದರು ಮಾಸ್ಟರ್ಜಿ. 

ಒಂದು ದಿನ ದುರ್ಗಾ ಹಳ್ಳಿಯ ೨೦ ಮಹಿಳೆಯರನ್ನು ಜೊತೆ ಮಾಡಿಕೊಂಡು ಹೊರಟೇ ಬಿಟ್ಟಿದ್ದಳು. ನೆರೆ ಗ್ರಾಮಗಳ ಕೆಲವು ಮಹಿಳೆಯರೂ ದುರ್ಗಾಳ ತಂಡದೊಂದಿಗೆ ಸೇರಿಕೊಂಡಿದ್ದರು. ಕಾಲ್ನಡುಗೆಯಲ್ಲೇ ಇಡೀ ತಂಡ ನಡೆದು ಸಾಗಿತ್ತು. ತಂಡದ ಮುಂದೆ ದುರ್ಗಾ ಸಾಗಿದ್ದಳು. ದುರ್ಗಾಳ ತಂಡ ಅಂತೂ ಆಹಾರ ಇಲಾಖೆಯ ಕಚೇರಿಯನ್ನು ತಲುಪಿತ್ತು. ಮುಂದಾಳಾಗಿದ್ದ ದುರ್ಗಾಳೆ,  ಆಹಾರದ ಅಧಿಕಾರಿಯೊಂದಿಗೆ  ಮಾತನಾಡುತ್ತಾ, 'ಸಾರ್, ನಮ್ಮ ಹಳ್ಳಿ ಇಲ್ಲಿಂದ ೪ ಕಿ.ಮೀ.ದೂರದಲ್ಲಿದೆ. ತಿಂಗಳ ರೇಷನ್ ಪಡೆಯಲು ತಮ್ಮ ಪಟ್ಟಣಕ್ಕೆ ನಮ್ಮ ಸುತ್ತಮುತ್ತಲಿನ ಹಳ್ಳಿಗರು ಕಾಲ್ನಡುಗೆಯಲ್ಲೇ  ಬರಬೇಕಾಗುತ್ತದೆ. ತಾವು ನಮ್ಮ ಹಳ್ಳಿಯಲ್ಲೊಂದು ರೇಷನ್ ಅಂಗಡಿಯನ್ನೇಕೆ ಆರಂಭಿಸಬಾರದು?' ಎಂದು ಕೇಳಿದಳು. 

ಅಧಿಕಾರಿಗಳು ಉತ್ತರಿಸುತ್ತಾ, 'ತಾವುಗಳು ನಮಗೊಂದು  ಸ್ಥಳವನ್ನು ಕಲ್ಪಿಸಿ ಕೊಟ್ಟರೆ, ನಾವು ರೇಷನ್ ಅಂಗಡಿಯನ್ನು ತಮ್ಮ ಹಳ್ಳಿಯಲ್ಲೇ ಆರಂಭಿಸುತ್ತೇವೆ' ಎಂದರು. ತನ್ನ ಗುಡಿಸಿಲಿನಲ್ಲೇ ರೇಷನ್ ಅಂಗಡಿಯನ್ನು ಪ್ರಾರಂಭಿಸಬಹುದೆಂದು ದುರ್ಗಾ ಹೇಳಿದಾಗ, ಮಹಿಳೆಯರೆಲ್ಲರೂ ಚಪ್ಪಾಳೆ ತಟ್ಟಿದರು. 

ಮೇಲಿನ ಘಟನೆ ನಡೆದನಂತರ  ಕೆಲವು ದಿನಗಳು ಕಳೆದಿತ್ತು. ಅಕ್ಕಿ ಚೀಲವನ್ನು ಹೊತ್ತ ಲಾರಿಯೊಂದು ದುರ್ಗಾಳ ಹಳ್ಳಿಗೆ ಬಂದೇ ಬಿಟ್ಟಿತ್ತು. ಲಾರಿ ಬರುವುದೆಂದು ಕಾದಿದ್ದ ಮಹಿಳೆಯರು ಸಂತಸಗೊಂಡು ಲಾರಿಗೆ ಮತ್ತು ಲಾರಿ ಚಾಲಕರಿಗೆ ಹಾರಗಳನ್ನು ಹಾಕಿದರು. ಹಳ್ಳಿಗರೆಲ್ಲರೂ ಲಾರಿಗೆ ಪೂಜೆ ಮಾಡಿ ಆರತಿಯನ್ನು ಬೆಳಗಿದ್ದೂ ಆಗಿತ್ತು. ಹಳ್ಳಿಯ ಗಂಡಸರು ಲಾರಿಯ ಮುಂದೆ ಇಡುಗಾಯಿಯನ್ನು ಒಡೆದಿದ್ದೂ ನಡೆದಿತ್ತು. ಹಳ್ಳಿಗರೆಲ್ಲಾ ಮುಂದಾಗಿ ಲಾರಿಯಿಂದ ಅಕ್ಕಿಯ ಮೂಟೆಗಳನ್ನು ಇಳಿಸಿ ದುರ್ಗಾಳ ಮನೆಯೊಳಗೆ ಇಡಲಾರಂಭಿಸಿದ್ದರು. 

ಅಷ್ಟರಲ್ಲಿ ಎಲ್ಲಿಂದಲೋ ಬಂದ ದುರ್ಗಾಳ ಗಂಡ ಚುನ್ನಿ ಲಾಲ್ 'ನನ್ನ ಮನೆಯಲ್ಲಿ ಅಕ್ಕಿ      ಮೂಟೆಗಳನ್ನಿಡ ಬೇಡಿ. ನಾನು ಮಲಗುವುದೆಲ್ಲಿ? ಬೇಡ, ಬೇಡ' ಎಂದರುಚಿದನು. 

'ನಮ್ಮ ಮನೆಯನ್ನು ರೇಷನ್ ಅಂಗಡಿ ಮಾಡುವುದರಿಂದ, ಸರಕಾರ ನಮಗೆ ಬಾಡಿಗೆ ನೀಡುತ್ತದೆ. ಆ ಬಾಡಿಗೆಯ ಹಣ ನಿಮ್ಮ ಶರಾಬಿನ ಖರ್ಚಿಗೆ ದೊರಕುತ್ತದೆ' ಎಂದು ದುರ್ಗಾ ಜಾಣತನದಿಂದ ಚುನ್ನಿಯ ಕಿವಿಯಲ್ಲಿ ಹೇಳಿದಾಗಲೇ, ಚುನ್ನಿಯ ಮುಖದಲ್ಲಿ ರಂಗೇರಿದ್ದು. ಅವನೂ ಅಕ್ಕಿ ಮೂಟೆಗಳನ್ನು ಲಾರಿಯಿಂದ ಇಳಿಸಲಾರಂಭಿಸುವ ಕೆಲಸ ಮಾಡಲು ಶುರು ಮಾಡಿದನು. 

ತಮ್ಮ ಹಳ್ಳಿಯಲ್ಲೇ ರೇಷನ್ ಅಂಗಡಿ ಆರಂಭವಾಗುವಂತೆ ಮಾಡಿದ್ದಕ್ಕಾಗಿ, ಹಳ್ಳಿಗರೆಲ್ಲರೂ ದುರ್ಗಾಳನ್ನು ಅಭಿನಂದಿಸಿದರು. ಕೆಲವು ದಿನಗಳನಂತರ ಅದೇ ರೇಷನ್ ಅಂಗಡಿಯಲ್ಲಿ ಬೇಳೆ ಮತ್ತು ಅಡುಗೆ ಎಣ್ಣೆಯನ್ನೂ  ವಿತರಿಸಲಾರಂಭಿಸಿದರು. ಹಳ್ಳಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸುಮಾರು ಆರು ವಾರಗಳನಂತರ ಸುತ್ತಲಿನ ಹಳ್ಳಿಯವರಿಗೂ ರೇಷನ್ ಮಾಲುಗಳನ್ನು, ಅದೇ ರೇಷನ್ ಅಂಗಡಿಯಿಂದ  ವಿತರಿಸಲಾರಂಭಿಸಿದರು. 

ಕೆಲವು ತಿಂಗಳುಗಳು ಕಳೆದಿತ್ತು. ದುರ್ಗಾಳಿಗೀಗ ಓದಲು, ಬರೆಯಲು ಬರುತ್ತಿತ್ತು. ಸಾಕಷ್ಟು ವಿಷಯಗಳನ್ನು ಅವಳು ದಿನ ಪತ್ರಿಕೆಯನ್ನು ಓದಿ ತಿಳಿದುಕೊಳ್ಳುತ್ತಿದ್ದಳು. ಬ್ಯಾನರ್ಜಿ ಮೇಷ್ಟ್ರು ಒಂದು ದಿನ ತಂದಿದ್ದ ಪತ್ರಿಕೆಯಲ್ಲಿ ಸುದ್ದಿಯೊಂದು ಬಂದಿತ್ತು. 'ಹಳ್ಳಿಗಳ ಪಂಚಾಯಿತಿ ಕಾಯಿದೆಗೆ ಸರಕಾರ ತಿದ್ದುಪಡಿಯೊಂದನ್ನು ತಂದಿದೆ. ಹಳ್ಳಿ ಪಂಚಾಯಿತಿಯ ಸದಸ್ಯರುಗಳ ಸ್ಥಾನದಲ್ಲಿ, ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಕಾದಿರಿಸಲಾಗಿದೆ' ಎಂಬ ಸುದ್ದಿಯನ್ನು ಓದಿದ ದುರ್ಗಾಳಿಗೆ ಪಂಚಾಯಿತಿ ಚುನಾವಣೆ ಇನ್ನೊಂದು ತಿಂಗಳಲ್ಲಿ ನಡೆಯುತ್ತದೆ ಎಂಬುದೂ ತಿಳಿದಿತ್ತು. ಸುದ್ದಿಯ ವಿವರಗಳನ್ನು ಮತ್ತೊಮ್ಮೆ ಓದಿದ ಬ್ಯಾನರ್ಜಿ ಮೇಷ್ಟ್ರು, 'ದುರ್ಗಾ ನೀನೇಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು?' ಎಂದು ಕೇಳಿದರು. ಪುಳಕಿತಳಾದ ದುರ್ಗಾ, 'ನಾನೂ ಸ್ಪರ್ಧಿಸಬಹುದೇ?' ಎಂದು ಕೇಳುತ್ತಾ ನಾಚಿದ್ದಳು. 

ನಾಮಪತ್ರಗಳನ್ನು ಸಲ್ಲಿಸುವ ದಿನ ಬಂದಿತ್ತು. ಹಳ್ಳಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ದುರ್ಗಾ, ಹಳ್ಳಿಯ ಮುಂದಿನ ಕಾಳಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿದನಂತರ  ಪಂಚಾಯಿತಿ ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದ್ದಳು. ಬೇರ್ಯಾರೂ ಪ್ರತಿಸ್ಪರ್ಧಿಗಳು ಇಲ್ಲದ್ದರಿಂದ, ದುರ್ಗಾ ಅವಿರೋಧವಾಗಿ ಆಯ್ಕೆಗೊಂಡಿದ್ದಳು. 

ಆ ಬಾರಿಯ ಪಂಚಾಯಿತಿಯ ಅಧ್ಯಕ್ಷರ ಸ್ಥಾನ ಪರಿಶಿಷ್ಟ ವರ್ಗಗಳಿಗೆ ಮೀಸಲಾಗಿದ್ದರಿಂದ, ದುರ್ಗಾಳನ್ನೇ ಅಧ್ಯಕ್ಷಳನ್ನಾಗಿ ಆಯ್ಕೆ ಮಾಡಲಾಗಿತ್ತು. ಒಂದು ದಿನ ಆ ಕ್ಷೇತ್ರದ ಶಾಸಕರು ದುರ್ಗಾಳ ಹಳ್ಳಿಗೆ ಭೇಟಿ ನೀಡಿದ್ದರು. ಸುತ್ತಲಿನ ಎಲ್ಲ ಹಳ್ಳಿಗಳನ್ನೂ ಸಂಪರ್ಕಿಸುವ ಮತ್ತು ಎಲ್ಲಾ ಹಳ್ಳಿಗಳನ್ನು ಮುಖ್ಯ ರಸ್ತೆಗೆ ಜೋಡಿಸುವ ರಸ್ತೆಗಳನ್ನು ನಿರ್ಮಿಸಲೇ ಬೇಕೆಂದು ದುರ್ಗಾ ಶಾಸಕರ ಮುಂದೆ ಬೇಡಿಕೆ ಇಟ್ಟಿದ್ದಳು. ರಸ್ತೆಗಳಿಗೆ ಮಂಜೂರನ್ನು ಸರಕಾರದಿಂದ ಪಡೆದ ದುರ್ಗಾ ಸಂಭ್ರಮಿಸಿದ್ದಳು.  'ಮನರೇಗಾ (MANREGA)' ಎಂಬ ಯೋಜನೆಯಡಿ  ರಸ್ತೆಗಳ ನಿರ್ಮಾಣ ಕಾರ್ಯ ಶುರುವಾಗಿತ್ತು. ನಿರ್ಮಾಣ ಕಾರ್ಯಕ್ಕೆ ಹಳ್ಳಿಯ ಜನರುಗಳನ್ನೇ ನೇಮಿಸಿಕೊಳ್ಳಲಾಗಿತ್ತು. ಎಲ್ಲಾ ರಸ್ತೆಗಳ ನಿರ್ಮಾಣ ಕಾರ್ಯ ಎರಡು ತಿಂಗಳುಗಳಲ್ಲಿ ಮುಗಿದಿತ್ತು. ಸುತ್ತಲ ಹಳ್ಳಿಗಳೆಲ್ಲವಕ್ಕೂ ಮುಖ್ಯ ರಸ್ತೆಯೊಂದಿಗೆ ಸಂಪರ್ಕ ಕಲ್ಪಿಸಲು, ಎರಡು ಸರಕಾರೀ ಬಸ್ಸುಗಳು ಮಂಜೂರು ಆಗಿ, ಬಸ್ ಸಂಚಾರವೂ ಆರಂಭವಾಗಿತ್ತು. ಎಲ್ಲಾ ಕಾರ್ಯಗಳು ನಡೆಯುವಂತೆ ಪ್ರಾಮಾಣಿಕವಾಗಿ ದುಡಿದ ದುರ್ಗಾಳಿಗೆ  ಹಳ್ಳಿಗರೆಲ್ಲರೂ ಸನ್ಮಾನವನ್ನು ಮಾಡಿದ್ದರು. 

ಮೇಲಿನ ಅಧಿಕಾರಿಗಳ ನೆರವಿನಿಂದ ಹಳ್ಳಿಗಳ ಹಿರಿಯರಿಗೆ ಮತ್ತು ವಿಧವೆಯರಿಗೆ ಮಾಸಿಕ ಪಿಂಚಣಿ ಬರುವಂತಹ ಏರ್ಪಾಡನ್ನೂ ದುರ್ಗಾ ಮಾಡಿದ್ದಳು. ಅವಳ ಅಧಿಕಾರಾವಧಿಯ ಸಮಯದಲ್ಲೇ ದುರ್ಗಾ ತನ್ನ ಹಳ್ಳಿಯಲ್ಲಿ ಶಾಲೆಯೊಂದು ಆರಂಭವಾಗುವಂತೆ ಮಾಡಿದ್ದಳು. ನೆರೆ ಹಳ್ಳಿಗಳ ಮಕ್ಕಳೂ ಅದೇ ಶಾಲೆಯಲ್ಲಿ ಕಲಿಯಲಾರಂಭಿಸಿದ್ದರು. ಶಾಲೆಯಲ್ಲಿ ಮಧ್ಯಾಹ್ನದೂಟದ ವ್ಯವಸ್ಥೆಯೂ ಆಯಿತು. 

ದುರ್ಗಾಳ ಈ ಎಲ್ಲ ಕ್ರಮಗಳಿಂದ ಸುತ್ತಲಿನ ಹಲವು ಹಳ್ಳಿಗರ ಹಸಿವಿನ ಸಮಸ್ಯೆ ಸಾಕಷ್ಟು ನೀಗಿತ್ತು. ಹಳ್ಳಿಗಳ ಬಡ ರೈತರಿಗೆ ಸರಕಾರದಿಂದ ಪ್ರತಿ ವರ್ಷ ರೂ. ೬೦೦೦ ಗಳ ಸಹಾಯವೂ ದೊರೆಯ ಹತ್ತಿತು. 

ತನ್ನ ಹಳ್ಳಿಗೊಂದು ಆಸ್ಪತ್ರೆ ಬೇಕೆಂಬುದು ದುರ್ಗಾಳ ಮಹಾದಾಸೆಯಾಗಿತ್ತು. ಚಿಕಿತ್ಸೆಗಾಗಿ ಹಳ್ಳಿಗರು ೪ ಕಿ.ಮೀ.ನಷ್ಟು ದೂರದ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇತ್ತು. ಸರಕಾರದೊಡನೆ ಎರಡು ವರ್ಷಗಳಷ್ಟು ದೀರ್ಘಕಾಲ ದುರ್ಗಾ ಹೋರಾಟವನ್ನು ಮುಂದುವರೆಸಿದ್ದಳು. ರಾಜ್ಯ ಸರಕಾರದ ಆರೋಗ್ಯ ಮಂತ್ರಿಗಳನ್ನು ದುರ್ಗಾ ಭೇಟಿ ಮಾಡಿದನಂತರವೇ ಅವಳ ಹಳ್ಳಿಗೆ ಆಸ್ಪತ್ರೆಯೊಂದು ಮಂಜೂರಾಗಿದ್ದು. ಅದರಿಂದ ಸುತ್ತಲ ಹಳ್ಳಿಗರಿಗೆಲ್ಲರಿಗೂ ಆಸ್ಪತ್ರೆಯ ಸೌಲಭ್ಯ ದೊರೆತಂತಾಗಿತ್ತು. 

ದುರ್ಗಾಳ ಸತತ ಪರಿಶ್ರಮ ಮತ್ತು ಅವಳು ಸಾಧಿಸಿದ ಪ್ರಗತಿಯ ವಿಷಯ ಮಾಧ್ಯಮಗಳ ಗಮನಕ್ಕೆ ಬಂದಿತ್ತು. ಅಂತಾರಾಷ್ಟ್ರೀಯ ಮಾಧ್ಯಮಗಳು ದುರ್ಗಾಳ ಸಾಧನೆಯನ್ನು ಗುರುತಿಸಿದಾಗ, ವಿಶ್ವದ ಗಮನ ಅವಳ ಮೇಲಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರಶಸ್ತಿ-ಸನ್ಮಾನಗಳು ದುರ್ಗಾಳನ್ನರಸಿ ಬಂದಿದ್ದವು. 

ನಾಟಕ ಕೊನೆಗೊಳ್ಳುತ್ತಲೇ, ರೋಹಿಣಿ ತನ್ನ ಕಿರಣನಿಗೆ ಫೋನಾಯಿಸಿ ಮಾತನ್ನಾಡಿದ್ದಳು. 'ನಾಟಕ ಹೇಗಿತ್ತು? ಅದೊಂದು ಸತ್ಯಕತೆ. ಉಚಿತವಾಗಿ ಆಹಾರವನ್ನೊದಗಿಸುವುದರಿಂದ ಹಸಿವಿನ ಸಮಸ್ಯೆಯನ್ನು ತೊಲಗಿಸಲಾರದು. ಮಹಿಳೆಯರ ಸಬಲೀಕರಣ ನಮ್ಮ ಹಳ್ಳಿಗಳಲ್ಲಿ ಕ್ರಾಂತಿಯನ್ನು ತರಬಲ್ಲದು. ಹಸಿವಿನ ಸಮಸ್ಯೆಯ ನಿವಾರಣೆಗೆ  ಸಮಗ್ರ ಹೋರಾಟದ ಅವಶ್ಯಕತೆ ಇದೆ. ಅಂತಹ ಸಮಗ್ರ ಹೋರಾಟವನ್ನು ದುರ್ಗಾ ಮಾಡಿ ಗೆದ್ದಿದ್ದಾಳೆ' ಎಂದಾಗ ರೋಹಿಣಿಯ ಸಂತಸ, ಗೆಳಯ ಕಿರಣನದ್ದೂ  ಆಗಿತ್ತು. 

***          

ರೋಹಿಣಿಯ ಸಂಶೋಧನಾ ಕಾರ್ಯ ಎಡಬಿಡದೆ ಸಾಗಿತ್ತು. ಕೋವಿಡ್ ಮಹಾಮಾರಿ ಇಡೀ ದೇಶವನ್ನು ವ್ಯಾಪಿಸಿ ತಂದೊಡ್ಡಿದ್ದ ಸಮಸ್ಯೆಗಳ ಸಮಗ್ರ ಅಧ್ಯಯನ ಅವಳ ಸಂಶೋಧನೆಯ ಒಂದು ಮುಖ್ಯ ಭಾಗವಾಗಿತ್ತು. 'ಫೈಟ್ ಹಂಗರ್ ಪ್ರಾಜೆಕ್ಟ್' ಸಂಸ್ಥೆಯ ಅಧ್ಯಕ್ಷರಾದ ದಿವಾಕರ್ ರವರನ್ನು ಒಂದು ದಿನ  ಸಂಪರ್ಕಿಸಿ ರೋಹಿಣಿ ಮಾತನಾಡಿದ್ದಳು. 'ನಮಸ್ಕಾರ ಸಾರ್. ನಾನು ರೋಹಿಣಿ. ನಾನೊಬ್ಬ ಸಮಾಜ ಶಾಸ್ತ್ರಜ್ಞೆ ಮತ್ತು ಸಂಶೋಧಕಿ. ವಿಶ್ವ ಹಸಿವಿನ ದಿನದಂದು ತಾವು ಟಿ.ವಿ.ಚರ್ಚೆಯಲ್ಲಿ ಭಾಗವಹಿಸಿ ಮಂಡಿಸಿದ ವಿಷಯಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ. ತಮ್ಮಿಂದ ನನ್ನ ಸಂಶೋಧನಾ ಕಾರ್ಯಕ್ಕೆ ಮಾರ್ಗದರ್ಶನ ದೊರೆಯಲೆಂದು ಆಶಿಸಬಹುದೇ?'

'ನನ್ನನ್ನು ಸಂಪರ್ಕಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು. ತಮ್ಮ ಸಮಾಜ ಸೇವೆಯ ಬಗ್ಗೆ ನಾನು ಮಾಧ್ಯಮಗಳಲ್ಲಿ ಹಲವಾರು ಬಾರಿ ಓದಿದ್ದೇನೆ. ನನ್ನ ಸ್ನೇಹಿತರಾದ ಡಾ. ಕಿರಣರವರು ತಮ್ಮ ಸಂಶೋಧನಾ ಕಾರ್ಯದ  ಬಗ್ಗೆ ನನಗೆ ತಿಳಿಸಿದ್ದಾರೆ. ತಮ್ಮ ಮಾರ್ಗನಿರ್ದೇಶನಕ್ಕಾಗಿ ನನ್ನನ್ನು ಸಂಪರ್ಕಿಸಿದ್ದು ನನಗೆ ಹೆಮ್ಮೆಯ ವಿಷಯ. 

ನಾನೇನು ವೈದ್ಯನಲ್ಲ. ಆದರೂ ಸಮಸ್ಯೆಯ ಅರಿವು ನನಗಿದೆ. ಎಲ್ಲಾ ಮಾಧ್ಯಮಗಳೂ ಕೋವಿಡ್ ಸಮಸ್ಯೆಯನ್ನು ಅತಿರಂಜಿತವಾಗಿ ಬಣ್ಣಿಸುತ್ತಿವೆ. ಆ ರೀತಿಯ ಬಣ್ಣನೆಯಿಂದ ಜನರುಗಳು ಭಯಭೀತರಾಗುವುದಿಲ್ಲವೇ? ಟಿ.ಆರ್.ಪಿ. (TRP) ಹೆಚ್ಚಿಸಿಕೊಳ್ಳುವುದೊಂದೇ ಮಾಧ್ಯಮಗಳ ವ್ಯಾಪಾರವಾಗಿ ಹೋಗಿದೆ. "ಎಲ್ಲಾ ಮಾಧ್ಯಮಗಳಲ್ಲಿ ಕೋವಿಡ್ ಕುರಿತಾದ ಎಲ್ಲಾ ಕಾರ್ಯಕ್ರಮಗಳನ್ನು ಮತ್ತು ಸುದ್ದಿ ಪ್ರಸಾರಗಳನ್ನೂ ಎರಡು ತಿಂಗಳುಗಳ ಕಾಲ ನಿಷೇಧಿಸಿದರೆ, ಕೋವಿಡ್ ಸಮಸ್ಯೆಯನ್ನು ಹತ್ತಿಕ್ಕುವಲ್ಲಿ ಭಾರಿ ಮುನ್ನಡೆ ದೊರೆಯಬಹುದೆಂಬುದು" ಕೆಲವು ಮನಶ್ಯಾಸ್ತ್ರಜ್ಞರ ಅಭಿಪ್ರಾಯವಾಗಿದೆ." ಮತ್ತೆ ಕೆಲವರು ಹೇಳುವ ಪ್ರಕಾರ, ಮಾಧ್ಯಮಗಳು ವಿಷಯವನ್ನು ಕೊಂಚ ವೈಭವೀಕರಿಸಿ ಸರಕಾರ ಮತ್ತು ಜನರಗಳನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿವೆ" ಎಂಬುದಾಗಿದೆ. ಟಿ.ವಿ.ಗಳಲ್ಲಿ ಇಷ್ಟೆಲ್ಲ ಎಚ್ಚರಿಕೆಯ ಸಂದೇಶಗಳನ್ನು ಸತತವಾಗಿ ನೀಡುತ್ತಿದ್ದರೂ, ಎಗ್ಗಿಲ್ಲದೆ ಸಾಗಿರುವ ಜನರುಗಳ ಮೋಜು-ಮಸ್ತಿ ಮಾತ್ರ ವಿಷಾದಕರ. 

ಜನರುಗಳ ಮನಸ್ಸಿನಲ್ಲಿ ಕೋವಿಡ್ ಬಗೆಗಿನ ಭಯವನ್ನು ನಿವಾರಿಸಿ, ವಿಶ್ವಾಸವನ್ನು ಮೂಡಿಸುವ ಕಾರ್ಯ ಮೊದಲು ನಡೆಯಬೇಕು. "ಧೈರ್ಯಮ್ ಸರ್ವತ್ರ ಸಾಧನಂ" ಎಂಬ ಸಂಸ್ಕೃತ ಭಾಷೆಯ  ಮಾತನ್ನು ತಮಗೆ ನೆನಪಿಸಲಿಚ್ಛಿಸುತ್ತೇನೆ. ಜನರುಗಳಲ್ಲಿ ಮೂಡಿರುವ ಭಯದ ವಾತಾವರಣವೂ ಕೋವಿಡ್ ತೀವ್ರವಾಗಿ ಹರಡಲು ಕಾರಣ ಎಂಬುದು ಸತ್ಯ. ವೈದ್ಯರು ಮತ್ತು ಮನಶ್ಯಾಸ್ತ್ರಜ್ಞರು ಸಂಶೋಧಿಸಿ ಪ್ರತಿಪಾದಿಸುತ್ತಿರುವ  "ಸೈಕೊನ್ಯೂರೋಇಮ್ಮ್ಯೂನೊಲೊಜಿ (psychoneuroimmunology)" ಎಂಬುದೊಂದು  ಹೊಸ ವಿಜ್ಞಾನದ ಕವಲು. ಅದರ ಪ್ರಕಾರ, ಜನರುಗಳ ಮಾನಸಿಕ ಭಯ ಅವರುಗಳ ರೋಗ ನಿರೋಧಕ ಶಕ್ತಿಯನ್ನು ಬಹಳಷ್ಟು ಕುಂದಿಸಬಲ್ಲದು ಎನ್ನುತ್ತದೆ. ಕೋವಿಡ್ ಮಹಾಮಾರಿಯೂ ಬಹಳ ದಿನ ನಮ್ಮನ್ನು ಕಾಡದು ಮತ್ತು ಅದು ತನಗೆ ತಾನೇ ದುರ್ಬಲಗೊಳ್ಳುವುದು ಪ್ರಕೃತಿಯ ವಿಧಾನವೆಂಬ  ಧೈರ್ಯವನ್ನು ಜನರುಗಳಲ್ಲಿ ಮೂಡಿಸಬೇಕಾದ ಅವಶ್ಯಕತೆ ಇದೆ.' 

 ಡಾ. ದಿವಾಕರರ ವಿಷಯ ಧಾರೆ ರೋಹಿಣಿಯ ಸಂಶೋಧನಾ ಕಾರ್ಯಕ್ಕೆ ಒಂದು ಹೊಸ ಆಯಾಮವನ್ನು ತೋರಿಸಿಕೊಟ್ಟಂತಾಗಿದ್ದು ಸುಳ್ಳಲ್ಲ. 

'ಹೌದು, ಜನರುಗಳ ಭಯವನ್ನು ನಿವಾರಿಸಿ, ಅವರುಗಳ ಮನಃಸ್ಥಿತಿಯನ್ನು ಸುಧಾರಿಸಬೇಕಾದ ತುರ್ತು ಅವಶ್ಯಕತೆ ಇದೆ. ಆ ಕಾರ್ಯ ಹೇಗಾಗಬೇಕು?' ಎಂಬುದು ರೋಹಿಣಿಯ ಪ್ರಶ್ನೆಯಾಗಿತ್ತು.

'ರೋಹಿಣಿಯವರೇ, ಕೋವಿಡ್ ಎಂಬುದು ಮನುಕುಲ ಎದುರಿಸುತ್ತಿರುವ ಮೊದಲ ಮಹಾಮಾರಿಯಲ್ಲ. ನಮ್ಮ ಪ್ರಪಂಚ ಕೋವಿಡ್ಗಿಂತ ಭಯಂಕರವಾದ ಮಹಾಮಾರಿಯನ್ನು ಎದುರಿಸಿ ಬದುಕುಳಿದಿದೆ. ಹೌದು, "ಸ್ಪ್ಯಾನಿಷ್ ಫ್ಲೂ - ೧೯೧೮ (Spanish Flu - 1918)"ರ ಪ್ರಸ್ತಾಪವನ್ನು ನಾನು ಮಾಡುತ್ತಿದ್ದೇನೆ. ೧೯೧೮-೨೦ರ ಅವಧಿಯಲ್ಲಿ ವಿಶ್ವವನ್ನು ವ್ಯಾಪಿಸಿದ ಆ ಮಹಾಮಾರಿ ೫ ಕೋಟಿಯಷ್ಟು ಜನರುಗಳ ಪ್ರಾಣವನ್ನು ಹರಣ ಮಾಡಿತ್ತು ಎಂಬುದು ತಮಗೆ ತಿಳಿದಿದೆಯೇ? ೧೯೧೮ರ ಮಹಾಮಾರಿ ನಮ್ಮ ಭಾರತ ದೇಶದ ಪಾಲಿಗೆ ಮಾರಕವಾಗಿ, ನಮ್ಮ ೧. ೫ ಕೋಟಿ ಜನರುಗಳ ಪ್ರಾಣಗಳನ್ನು ತೆಗೆದಿತ್ತು. ತಮ್ಮ ಸಂಶೋಧನಾ ಪ್ರಬಂಧದಲ್ಲಿ ೧೯೧೮ರ ಮಹಾಮಾರಿಯನ್ನು ಪ್ರಸ್ತಾಪಿಸಲೇ ಬೇಕು. ಆ ಕಾಲದ ಕುತೂಹಲಕಾರಿ ಘಟನೆಯ ಕತೆಯೊಂದನ್ನು ನಾನು ಕಳುಹಿಸುತ್ತಿದ್ದೇನೆ. ಆ ಕತೆಯನ್ನೋದಿದರೆ, ತಮಗೆ ಸ್ಪ್ಯಾನಿಷ್ ಫ್ಲೂ - ೧೯೧೮ರ ಮಹಾಮಾರಿಯ ಬಗ್ಗೆ ಹೆಚ್ಚು ಅಧ್ಯಯನ ನಡೆಸುವ ಆಸಕ್ತಿ ಮೂಡುತ್ತದೆ ಎಂದು ಭಾವಿಸುತ್ತೇನೆ.' ಹೀಗಿದ್ದ ಡಾ. ದಿವಾಕರವರ ಮಾತುಗಳನ್ನು ಕೇಳಿದ ರೋಹಿಣಿಯ ಸಂಶೋಧನೆಯ ಉತ್ಸಾಹ ಇಮ್ಮಡಿಯಾಗಿತ್ತು. 

ದಿವಾಕರ್ ರವರು ಕಳುಹಿಸಿದ ಸ್ಪ್ಯಾನಿಷ್ ಫ್ಲೂ - ೧೯೧೮ರ ಸಮಯದ ಕತೆಯನ್ನು ಕುತೂಹಲದಿಂದ ರೋಹಿಣಿ ಓದ ಹತ್ತಿದ್ದಳು. .

ಅದಿತಿ ಜೋಗಳೇಕರ್ ೧೭ರ ಯುವತಿ. ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದ ಕಟ್ಟಾ ಅಭಿಮಾನಿ ಅವಳಾಗಿದ್ದಳು. ಅಂದು ಫೆಬ್ರವರಿ ೨೮ರ ದಿನವಾಗಿತ್ತು. ಅಂದು ಅದಿತಿಯ ಅಜ್ಜಿ ಸುಲಭ ಜೋಗಳೇಕರ್ ರವರ ಜನ್ಮದಿನವಾಗಿತ್ತು. ಸುಲಭರವರೇ ಅದಿತಿಯ ಮೊದಲ ಸಂಗೀತ ಗುರುಗಳಾಗಿದ್ದವರು. ತನ್ನಜ್ಜಿಯ ಜನ್ಮದಿನವಾದ ಅಂದು ಅದಿತಿಯ ನೆನಪಿನ ಲಹರಿ ತನ್ನಜ್ಜಿಯ ಜೀವನದ ವೃತ್ತಾಂತಗಳ ಕಡೆ ಹರಿದಿತ್ತು. 

ಪಾದರಸದಂತೆ ಚುರುಕಾದ ಸುಲಭ, ಹಲವು ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು. ಶಾಸ್ತ್ರೀಯ ಗಾಯನದ ಜೊತೆಗೆ, ಚಿತ್ರಕಲೆ, ಬಟ್ಟೆ ಹೊಲಿಗೆ ಮತ್ತು ಕಸೂತಿಯ ಕೆಲಸಗಳಲ್ಲಿ ಅವರು ಸಿದ್ಧಹಸ್ತೆಯಾಗಿದ್ದರು. ಸುಲಭಳಿಗೆ ಕಪ್ಪು ಮೊಲಗಳೆಂದರೆ ಪಂಚಪ್ರಾಣ. ಆಕೆ ಸಾಯುವ ಕೆಲವು ದಿನಗಳ ಮುಂಚೆ ಅವರು ಕಪ್ಪು ಮೊಲವೊಂದನ್ನು ತರಿಸಿ ಸಾಕಿಕೊಂಡಿದ್ದರು. ಬಹಳ ಆಕರ್ಷಕವಾದ ಆ ಕಪ್ಪು ಮೊಲಕ್ಕೆ ಸುಲಭ, 'ಶಾಲು' ಎಂದು ಹೆಸರಿಟ್ಟಿದ್ದರು. ಸುಲಭರವರ ಕಡೆಯ ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಿರುವಾಗ, ಶಾಲುವೇ ಅವರ ಏಕೈಕ ಸಂಗಾತಿಯಾಗಿತ್ತು. 'ಶಾಲು' ಸುಲಭರಿಗೆ ಸುಮಾರು ಒಂದು ಶತಮಾನದ ಹಳೆಯ ನೆನಪನ್ನು ಸ್ಮರಿಸುವಂತೆ ಮಾಡಿತ್ತು. 

ಸುಲಭ ಜೋಗಳೇಕರ್ ಜನಿಸಿದ್ದು ೧೯೦೯ರಲ್ಲಿ. ಅವಳ ತಂದೆ ದೀನನಾಥ್ ರವರು ಕೈಮಗ್ಗದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸುಲಭ ಸುಮಾರು ೭ ವಯಸ್ಸಿನವಳಾಗಿದ್ದಾಗ ಅವಳ ತಾಯಿ ಅವಳಿಗೊಂದು ಕಪ್ಪು ಮೊಲವನ್ನು ತಂದು ಕೊಟ್ಟಿದ್ದರು. ಸುಲಭ ತನ್ನ ಕಪ್ಪು ಮೊಲಕ್ಕೆ ನೀಡಿದ್ದ ಹೆಸರು, ಅಂದು ಕೂಡ 'ಶಾಲು' ಎಂಬುದಾಗಿತ್ತು. ಸುಲಭ ತನ್ನ ಮೊಲ ಶಾಲುವಿನೊಂದಿಗೆ ಎರಡು ವರ್ಷ ಖುಷಿಯಿಂದಲೇ ಬೆಳೆದಿದ್ದಳು. ಆದರೆ ಸುಲಭಳ ತಂದೆ ದೀನನಾಥರಿಗೆ ಸಾಕು ಪ್ರಾಣಿಗಳ ಮೇಲೆ ದ್ವೇಷವಿತ್ತು. ಸುಲಭಳ ಮೇಲಿನ ಪ್ರೀತಿಗಾಗಿ ಮಾತ್ರ ಅವರು ಶಾಲುವಿನ ತುಂಟಾಟಗಳನ್ನು ಹೇಗೋ ಸಹಿಸಿಕೊಂಡಿದ್ದರು. ಈ ನಡುವೆ ಯಾರೋ ದೀನನಾಥರ ಕಿವಿಗೆ ಚಾಡಿಯೊಂದನ್ನು ಚುಚ್ಚಿದ್ದರು. ಕಪ್ಪು ಮೊಲ ಮನೆಗೆ ಕೆಡಕು ತರಬಹುದೆಂದು ನಂಬಿದ್ದ ಅವರು, ಒಂದು ದಿನ ಶಾಲುವನ್ನು ಎತ್ತಿಕೊಂಡು ಹೋಗಿ ಸಮೀಪದ ಕಾಡೊಂದರಲ್ಲಿ ಬಿಟ್ಟು ಬಂದಿದ್ದರು. ಶಾಲುವನ್ನು ಕಳೆದುಕೊಂಡ ಚಿಕ್ಕ ಹುಡುಗಿ ಬಹಳ ನೊಂದು ಹೋಗಿದ್ದಳು. 

೧೯೧೮ರ ಆಗಸ್ಟ್ ತಿಂಗಳು ಶುರುವಾಗಿತ್ತು. ಸುಲಭಳಿಗೆ ಆಗ ೯ ವರ್ಷಗಳು ತುಂಬಿದ್ದವು. ತನ್ನ ಮೂವರು  ಅಕ್ಕಂದಿರೊಂದಿಗೆ ಸುಲಭ, ಶಾಲೆಯಿಂದ ಹಿಂತಿರುಗುತ್ತಿದ್ದ ಸಮಯದಲ್ಲಿ ಭಾರೀ ಮಳೆಯೊಂದು ಬಂದಿತ್ತು. ನಾಲ್ಕೂ ಜನ ಅಕ್ಕ-ತಂಗಿಯರು ಮನೆ ತಲುಪುವ ಹೊತ್ತಿಗೆ ನೆಂದು ತೊಪ್ಪೆಯಾಗಿದ್ದರು. ದಪ್ಪವಾದ ಬಟ್ಟೆಯೊಂದರಿಂದ ಎಲ್ಲಾ ನಾಲ್ಕು  ಹೆಣ್ಣು ಮಕ್ಕಳ ಕೂದಲುಗಳನ್ನು ಸುಲಭಳ ತಾಯಿ ಒರೆಸಿ, ಊಟವನ್ನು ಉಣಿಸಿ ಮಲಗಿಸಿದ್ದರು. ಬೆಳಗಾಗುವ ಹೊತ್ತಿಗಾಗಲೇ ಸುಲಭಳ ಮೂರು ಅಕ್ಕಂದಿರಿಗೂ ಜ್ವರವೇರಿತ್ತು. ಗಾಬರಿಯಾದ ದೀನನಾಥರು,  ಪಕ್ಕದ ಮನೆಯ  ಪಂಡಿತರನ್ನು ತಮ್ಮ ಮನೆಗೆ ಕರೆಸಿದ್ದರು. ಸಹೋದರಿಯರನ್ನು ಪರೀಕ್ಷಿಸಿದ ಪಂಡಿತರು ಕೆಲವು ಔಷಧಿಗಳನ್ನು ಕೊಟ್ಟಿದ್ದರು. 'ಸುತ್ತಲ ಹಳ್ಳಿಗಳಲೆಲ್ಲಾ ವಿಚಿತ್ರ ಜ್ವರವೊಂದು ಜನರನ್ನು ಕಾಡುತ್ತಿದೆ. ಜ್ವರ ಬಡಪೆಟ್ಟಿಗೆ ಇಳಿಯುತ್ತಿಲ್ಲ. ಆ ರೀತಿಯ ವಿಚಿತ್ರ ಜ್ವರ ಮುಂಬೈ ಮೂಲಕ ಹಿಂತಿರುಗುತ್ತಿರುವ ಮೊದಲ ಮಹಾಯುದ್ಧದ ಭಾರತೀಯ  ಸೈನಿಕರುಗಳಿಂದ ಹರಡುತ್ತಿದೆಯೆಂಬ ವದಂತಿಯಿದೆ.ಆದುದರಿಂದ ಆ ರೀತಿಯ ರೋಗವನ್ನು "ಬಾಂಬೆ ಜ್ವರ" ಎಂದೇ ಜನರು ಕರೆಯುತ್ತಿದ್ದಾರೆ. ಸರಕಾರ ರೋಗವನ್ನು 'ಸ್ಪ್ಯಾನಿಷ್ ಫ್ಲೂ' ಎಂದು ಕರೆದು, ಅದು ಬೇಗನೆ ಹರಡುತ್ತಿದ್ದು, ಜನರುಗಳಿಗೆ ಮಾರಕವಾಗಿದೆ ಎಂದು ಡಂಗೂರ ಹೊಡೆಸುವ ಮೂಲಕ ಜನರುಗಳನ್ನು ಎಚ್ಚರಿಸುತ್ತಿದೆ.  ಯಾವುದಕ್ಕೂ ಹುಷಾರಾಗಿರಿ' ಎಂದು ಪಂಡಿತರು, ದೀನನಾಥರಿಗೆ ತಿಳಿಸಿದ್ದರು. 

ಹಲವು ದಿನಗಳು ಕಳೆದರು ಸುಲಭಳ ಸಹೋದರಿಯರ ಜ್ವರ ಕಮ್ಮಿಯಾಗಲಿಲ್ಲ. ಮುಂದಿನ ಎರಡು ದಿನಗಳಲ್ಲಿ ಅವರುಗಳ ಮೂಗಿನ ಮೂಲಕ ರಕ್ತದ ಸೋರುವಿಕೆ ಶುರುವಾಗಿತ್ತು. ಮೂವರು ಸಹೋದರಿಯರಿಗೂ ಊಸಿರಾಡುವುದು ಕಷ್ಟವಾಗುತ್ತಿತ್ತು. ಅದೇ ವಾರದಲ್ಲಿ ದೀನನಾಥರಿಗೂ ಅದೇ ರೀತಿಯ ಜ್ವರ ಬಂದು ಹಾಸಿಗೆ ಹಿಡಿದಿದ್ದರು. 'ಬಾಂಬೆ ಜ್ವರ' ಹಳ್ಳಿಯ ಹಲವರಿಗೆ ತಗುಲಿ ಜನರುಗಳಲ್ಲಿ ಗಾಬರಿಯನ್ನುಂಟು ಮಾಡಿತ್ತು. ಇಡೀ ಹಳ್ಳಿಯ ಜನರುಗಳು ಚಿಕಿತ್ಸೆಗಾಗಿ ಪಂಡಿತರನ್ನು ಮಾತ್ರ ನಂಬಿದ್ದರು. ರೋಗಸ್ಥರ ಎಲ್ಲ ಮನೆಗಳಿಗೂ ಭೇಟಿ ನೀಡುತ್ತಿದ್ದ ಪಂಡಿತರು, ಎಲ್ಲಾ ರೋಗಿಗಳಿಗೂ, ತಾವೇ ತಯಾರಿಸಿದ  ಔಷಧಿಗಳನ್ನು ಕೊಡುತ್ತಿದ್ದರು. 'ರೋಗಿಗಳು ಹಾಗೂ ರೋಗವಿನ್ನೂ ಬಾರದವರೂ ಪ್ರತಿನಿತ್ಯ ೩-೪ ಬಾರಿ ಹಬೆಯನ್ನು ತೆಗೆದುಕೊಳ್ಳಬೇಕು. ಕೊಂಚ ಅರಿಶಿನ ಹಾಕಿ ಕುದಿಸಿದ ಬಿಸಿ ನೀರನ್ನೇ ಹೆಚ್ಚು ಕುಡಿಯಬೇಕು. ಶಕ್ತಿಯಿದ್ದವರು ಪ್ರತಿದಿನ ೩೦ ನಿಮಿಷಗಳಷ್ಟು ಕಾಲ ಸೂರ್ಯನ ಬೆಳಕಿನಲ್ಲಿ ವಾಯು ವಿಹಾರವನ್ನು ಮಾಡಬೇಕು. ರೋಗ ಬೇಗ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ, ಜನರುಗಳ ಮಧ್ಯೆ ೬ ಅಡಿಗಳ ಅಂತರವನ್ನು ಕಾಪಾಡಿಕೊಳ್ಳಬೇಕು, ಗುಂಪು ಗೂಡಬಾರದು. ಎಲ್ಲರೂ ಪ್ರತಿದಿನ ೮ ಘಂಟೆಯಷ್ಟರ ದೀರ್ಘ ನಿದ್ದೆಯನ್ನು ಮಾಡಬೇಕು. ನಿದ್ದೆ ಮಾನವನ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ,' ಎಂಬುದಾಗಿತ್ತು, ಪಂಡಿತರು ಹಳ್ಳಿಗರಿಗೆ ನೀಡುತ್ತಿದ್ದ ಸೂಚನೆಗಳ ಪಟ್ಟಿ. 

'ದೇವರಲ್ಲಿ ವಿಶ್ವಾಸವಿಡಿ.  ನಂಬಿಕೆಯನ್ನು ಕಳೆದುಕೊಳ್ಳದೆ ದಿನನಿತ್ಯ ದೇವರ ಪ್ರಾರ್ಥನೆಯನ್ನು ಮಾಡಿ. ನಂಬಿಕೆ ಮತ್ತು ವಿಶ್ವಾಸಗಳಿಗೆ ರೋಗವನ್ನು ತಡೆಯುವ ಮತ್ತು ನಿವಾರಿಸುವ ಮಹಾಶಕ್ತಿಯಿದೆ. ನಂಬಿಕೆಯಿಂದ ಪ್ರಾರ್ಥನೆ, ಪ್ರಾರ್ಥನೆಯಿಂದ ಮನಃಶಾಂತಿ ಮತ್ತು ಸ್ಥೈರ್ಯಗಳು ವೃದ್ಧಿಯಾಗುತ್ತವೆ. ವೈದ್ಯರು ಮತ್ತು ರೋಗಿಗಳ ನಡುವಿನ ವಿಶ್ವಾಸ ಔಷಧಿಗಳ ಪರಿಣಾಮವನ್ನು ಹೆಚ್ಚಿಸಿ ರೋಗವನ್ನು ನಿವಾರಿಸಬಲ್ಲುದು.' ಹೀಗಿದ್ದ ಪಂಡಿತರ ಮಾತುಗಳಲ್ಲಿ, ಹಳ್ಳಿಗರಿಗೆಲ್ಲ ಅಪಾರವಾದ ಗೌರವ ಮತ್ತು ವಿಶ್ವಾಸಗಳು ಇದ್ದವು. ಆದುದರಿಂದ ಅವರೆಲ್ಲರೂ ಪಂಡಿತರ ಹಿತವಚನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. 

ಪಂಡಿತರ ಪ್ರಾಮಾಣಿಕ ಚಿಕಿತ್ಸೆ ಹೀಗೇ ಮುಂದುವರೆದಿದ್ದರೂ ರೋಗದ ತೀವ್ರತೆ ಕಮ್ಮಿಯೇನಾಗಿರಲಿಲ್ಲ. ತನ್ನ ಪತಿಯನ್ನು ಮತ್ತು ಮಕ್ಕಳನ್ನು ಕಳೆದು ಕೊಂಡುಬಿಡುತ್ತೀನೇನೋ ಎಂಬ ಭೀತಿ ಸುಲಭಳ ತಾಯಿಯನ್ನು ಕಾಡ  ಹತ್ತಿತ್ತು. ಮುಗ್ಧ ಮನಸ್ಸಿನ ಸುಲಭಳಂದು ಅವಳಮ್ಮನಿಗೆ ಹೀಗೆ ಹೇಳಿದ್ದಳು. 'ಅಮ್ಮ, ನನ್ನ ಮುದ್ದಿನ ಕಪ್ಪು ಮೊಲ  "ಶಾಲು"ವನ್ನು ಮನೆಯಿಂದ ಕಾಡಿಗೆ ಕಳಿಸಿದ್ದು ನಮ್ಮೆಲ್ಲರಿಗೂ ದುರದೃಷ್ಟವನ್ನು ತಂದಿದೆ.' ಸುಲಭಳ ಅನಿಸಿಕೆಗೆ  ಅವಳ   ತಾಯಿಯಲ್ಲಿ ಯಾವುದೇ ಉತ್ತರವಿರಲಿಲ್ಲ. ಇಡೀ ಹಳ್ಳಿಯಲ್ಲಿ ಜನರುಗಳ ನಡುವೆ ಭಯದ ವಾತಾವರಣ ಉಂಟಾಗಿತ್ತು. 

ಒಂದು ದಿನ ಸುಲಭ ತನ್ನ ತಾಯಿಯೊಂದಿಗೆ ಕಟ್ಟಿಗೆಯನ್ನು ತರಲು ಸಮೀಪದ ಕಾಡಿಗೆ ಹೋಗಿದ್ದಳು. ಸುತ್ತಲೂ ನೋಡುತ್ತಿದ್ದ ಸುಲಭಳಿಗೆ ತನ್ನ ಕಪ್ಪು ಮೊಲ 'ಶಾಲು'ವನ್ನು ಕಂಡಾಗ ಅವಳಿಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಛಂಗನೆ ನೆಗೆದು ಶಾಲು ಸುಲಭಳ ಕೈಸೇರಿತ್ತು. ಶಾಲುವನ್ನು ಮನೆಗೆ ಕರೆದುಕೊಂಡು ಹೋಗುವಾಗ ಸುಲಭ ಮತ್ತು ಅವಳ ತಾಯಿ, ಇಬ್ಬರ ಮನಸಿನಲ್ಲೂ ಸಮಾಧಾನ ಹಾಗೂ ಸಂತೋಷಗಳು ಮೂಡಿದ್ದವು. ಶಾಲು  ಮನೆಗೆ ಬಂದ ಮಾರನೆಯ ದಿನವೇ ದೀನನಾಥರ ಜ್ವರ ಇಳಿದಿತ್ತು. ಇನ್ನೆರಡು ದಿನಗಳಲ್ಲಿ ಸುಲಭಳ ಮೂವರು ಅಕ್ಕಂದಿರ ಜ್ವರವೂ ಸಾಕಷ್ಟು ಕಮ್ಮಿಯಾಗಿತ್ತು. ಮತ್ತೊಮ್ಮೆ ಸುಲಭಳ ಮನೆಯಲ್ಲಿ ನಗುವಿನ ವಾತಾವರಣ ಮೂಡಿತ್ತು. ಶಾಲು ಹಿಂತಿರುಗಿ ಮನೆಯನ್ನು ಸೇರಿದ್ದೇ, ಎಲ್ಲರೂ ಬೇಗನೆ ಹುಷಾರಾಗಲು ಕಾರಣವಾಯಿತು ಎಂದು ಬಾಲಕಿ ಸುಲಭ ತನ್ನ ತಂದೆಗೆ ಹೇಳಿದಾಗ, ದೀನನಾಥರೂ ಹೌದೆಂಬಂತೆ ಗೋಣಾಡಿಸಬೇಕಾಗಿತ್ತು. 

ಇಡೀ ಹಳ್ಳಿಯಲ್ಲಿ ರೋಗದ ವಾತಾವರಣ ಮಾಯವಾಗಿತ್ತು. ನತದೃಷ್ಟ ಮೂರು ರೋಗಿಗಳು ಮಾತ್ರ ಸಾವನ್ನಪ್ಪಿದ್ದರು. 'ಆಧುನಿಕ ಚಿಕಿತ್ಸಾ ಕ್ರಮಗಳು ಗೊತ್ತಿಲ್ಲದ ಅಂದಿನ ದಿನಗಳಲ್ಲಿ, ಹಳ್ಳಿಯ ಬಡ ಪಂಡಿತರೊಬ್ಬರ ಸರಳ ಹಾಗು ಪ್ರಾಕೃತಿಕ  ಚಿಕಿತ್ಸೆ ಇಡೀ ಹಳ್ಳಿಗರನ್ನು ಮಹಾಮಾರಿಯಿಂದ ರಕ್ಷಿಸಿತ್ತು. 'ಪಂಡಿತರು ಭೋಧಿಸಿದ್ದ "ಪ್ರಾರ್ಥನೆ ಮತ್ತು ವಿಶ್ವಾಸ"ಗಳೆಂಬ ಮಹಾಮಂತ್ರಗಳು  ಫಲ ನೀಡಿದ್ದವು.' ಅಂದಿನ ಆ ಪ್ರಾಂತ್ಯದ ಮಹಾರಾಜರು, ಮಹಾಮಾರಿಯಿಂದ ಹಳ್ಳಿಗರ ಜೀವಗಳನ್ನುಳಿಸಿದ ಆ ಪಂಡಿತರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ್ದರು. ಪಂಡಿತರನ್ನು ತಮ್ಮ ಅರಮನೆಗೆ ಕರೆಸಿ ಅವರಿಗೆ  ಅದ್ಧೂರಿಯ  ಸನ್ಮಾನವನ್ನೂ ಮಾಡಿದ್ದರು. 

'೨೪X೭ರ ಕೋವಿಡ್ ಕುರಿತಾದ ಸತತ ನಕಾರಾತ್ಮಕ ಸುದ್ದಿಯನ್ನು ಮಾಧ್ಯಮಗಳ ಮೂಲಕ ಕೇಳಿ ಬೆಂಡಾಗಿರುವ ನಮಗೆ ಡಾ. ದಿವಾಕರ್ ರವರು ತಿಳಿಸಿರುವ ಸತ್ಯಕತೆಯಿಂದ ಸ್ಫೂರ್ತಿ ದೊರೆಯುವುದಿಲ್ಲವೇ? ಮನೋಬಲವನ್ನು ಕುಗ್ಗಿಸುವ ಮಾಧ್ಯಮಗಳ ನಕಾರಾತ್ಮಕ ಸುದ್ದಿಗಳಿಂದ ದೂರವಿರುವುದು, ಮಹಾಮಾರಿಯ ಭಯದಿಂದ ನಾವು ಹೊರಬರಲು ಸಹಾಯವನ್ನು ಮಾಡೀತೇ?' ಎಂದು ಸಂಶೋಧಕಿ ರೋಹಿಣಿ ಅಂದು ತನ್ನ ಡೈರಿಯಲ್ಲಿ ಟಿಪ್ಪಣಿ ಬರೆದುಕೊಂಡಿದ್ದಳು. 

***

ರೋಹಿಣಿಗೀಗ ೧೯೧೮ರ 'ಸ್ಪ್ಯಾನಿಷ್ ಫ್ಲೂ'ವಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಸಂಗ್ರಹಿಸುವ ಕುತೂಹಲ ಉಂಟಾಗಿತ್ತು. ವಿಶ್ವ ಈವರೆಗೆ ಕಂಡ ಮಹಾಮಾರಿಗಳಲ್ಲಿ ಅದು ಅತ್ಯಂತ ಮಾರಕವಾದುದ್ದಾಗಿತ್ತು. ಒಂದು ಸಮೀಕ್ಷೆಯ ಪ್ರಕಾರ ೧೯೧೮-೨೦ರಲ್ಲಿ ಇಡೀ ವಿಶ್ವವನ್ನೇ ಆವರಿಸಿದ್ದ ಆ ಮಹಾಮಾರಿ ೫ ಕೋಟಿಯಷ್ಟು ಜನರುಗಳ ಪ್ರಾಣಗಳನ್ನು ಹರಣ ಮಾಡಿತ್ತು. ಬಡ ಭಾರತದ ಮೇಲೆ ಅದರ ಪರಿಣಾಮ ಬಹಳ ಕ್ರೂರವಾಗಿತ್ತು. ಭಾರತದಲ್ಲೇ  ಸುಮಾರು ೧. ೫ ಕೋಟಿಯಷ್ಟರ ಸಾವುಗಳಾಗಿದ್ದವು. ಸಾವುಗಳ ಪಟ್ಟಿಯಲ್ಲಿ ಭಾರತದ್ದು ಪ್ರಥಮ ಸ್ಥಾನ ಎಂಬ ಕುಖ್ಯಾತಿ ನಮ್ಮ ದೇಶಕ್ಕೆ ಅಂಟಿತ್ತು. 

೧೯೧೮ರ ಮಹಾಮಾರಿಯ ಬಗ್ಗೆ ಈಗಲೂ ಸಂಶೋಧನೆ ನಡೆಸುತ್ತಿರುವ ಕೆಲವು ವಿಜ್ಞಾನಿಗಳ ಪ್ರಕಾರ, ಅಂದಿನ ಮಹಾಮಾರಿ ಮೊದಲು ಕಾಣಿಸಿಕೊಂಡಿದ್ದು ಅಮೇರಿಕಾದಲ್ಲಿ. 'ಎಚ್೧ಎನ್೧ ಇನ್ಫ್ಲುಯೆಂಜಾ ಎ'  (H1N1 Influenza A) ಎಂಬ ವೈರಾಣುವಿನಿಂದ ಆ ರೋಗ ಹರಡಿತ್ತು. ಅದೇ ವೈರಾಣುವಿನಿಂದ ೨೦೦೯ರಲ್ಲಿ 'ಸ್ವೈನ್ ಫ್ಲೂ (Swine Flu)' ಎಂಬ ರೋಗವು ಹರಡಿದ್ದನ್ನು ಇಲ್ಲಿ ಸ್ಮರಿಸಬಹುದು. ೧೯೧೮ರ ಅಂದಿನ ಮಹಾಮಾರಿ ಎರಡು ವರ್ಷಗಳ ಕಾಲ ಮುಂದುವರೆದಿತ್ತು. ಅಂದಿನ ವಿಶ್ವದ ಜನಸಂಖ್ಯೆಯ ಮೂರನೇ ಒಂದರಷ್ಟು, ಅಂದರೆ ಸುಮಾರು ೫೦ ಕೋಟಿ ಜನರು ಆ ವೈರಾಣುವಿನಿಂದ ಸೋಂಕಿತರಾಗಿದ್ದರು! ೫ ಕೋಟಿಯಷ್ಟು ಜನರುಗಳ ಸಾವಿಗೆ ಕಾರಣವಾದ ಆ ಸ್ಪ್ಯಾನಿಷ್ ಫ್ಲೂ ಎಂಬ ಮಹಾಮಾರಿ ಮೊದಲನೇ ಮಹಾಯುದ್ಧ(೧೯೧೪-೧೮)ದಲ್ಲಿ ಮಡಿದ ಜನರುಗಳ ಸಂಖ್ಯೆಗಿಂತ  ಹೆಚ್ಚು ಸಾವನ್ನುಂಟು ಮಾಡಿತ್ತು. ಮೊದಲನೇ ಮಹಾಯುದ್ಧದಲ್ಲಿ ೯೦ ಲಕ್ಷ ಸೈನಿಕರು ಮತ್ತು ೭೦ ಲಕ್ಷದಷ್ಟು ನಾಗರೀಕರು   ಸಾವನ್ನಪ್ಪಿದ್ದರು. 

೧೯೧೮ರ ಮಧ್ಯ ಭಾಗದಲ್ಲಿ, ಅಮೇರಿಕಾದಲ್ಲಿ ಮೊದಲು ಕಾಣಿಸಿಕೊಂಡಿದ್ದ ಆ ಮಹಾಮಾರಿ ನಂತರ ಯುರೋಪ್ ಖಂಡಕ್ಕೂ ಹರಡಿತ್ತು. ಮೊದಲನೇ ಮಹಾಯುದ್ಧದ ಬೆನ್ನಲ್ಲೇ ವ್ಯಾಪಿಸಿದ್ದ ಆ ರೋಗದ ಮಾಹಿತಿಯನ್ನು ವ್ಯಾಪಕವಾಗಿ ಬಹಿರಂಗ ಪಡಿಸುವ ಇಚ್ಛೆ ಅಂದಿನ ಬೃಹತ್ ರಾಷ್ಟ್ರಗಳಿಗಿತ್ತಿಲ್ಲ.  ಆದರೆ ಮೊದಲ ಮಹಾಯುದ್ಧದಲ್ಲಿ ಸಕ್ರಿಯವಾಗಿರದಿದ್ದ ಸ್ಪೇನ್ ದೇಶ ಮಾತ್ರ ಯಾವುದೇ ಮುಚ್ಚುಮರೆಯಿಲ್ಲದೆ, ರೋಗದ ಹಾಗೂ ಸಾವಿನ ಮಾಹಿತಿಗಳನ್ನು ಬಹಿರಂಗ ಪಡಿಸಿತ್ತು. ಆದುದರಿಂದ ವಿಶ್ವಾದ್ಯಂತ ಜನರು ಆ ಮಹಾಮಾರಿಯನ್ನು  'ಸ್ಪ್ಯಾನಿಷ್ ಫ್ಲೂ-೧೯೧೮ (Spanish Flu - 1918)' ಎಂದು ಗುರುತಿಸಿದ್ದರು. 

ಒಂದು ಸಂಶೋಧನೆಯ ಪ್ರಕಾರ, ಸ್ಪ್ಯಾನಿಷ್ ಫ್ಲೂ - ೧೯೧೮ರ ವೈರಾಣು, ಮೊದಲು ಹಕ್ಕಿಗಳಲ್ಲಿ ಕಾಣಿಸಿಕೊಂಡಿತ್ತು. ಅನಂತರ ಅದು ಕೋಳಿಗಳಿಗೆ ಮತ್ತು ಹಂದಿಗಳಿಗೆ ಹರಡಿತ್ತು. ಕೋಳಿ ಮತ್ತು ಹಂದಿಗಳ ಮಾಂಸಗಳನ್ನು ಮೊದಲನೇ ಮಹಾಯುದ್ಧದ ಸೈನಿಕರುಗಳಿಗೆ ನೀಡಿದಾಗ, ವೈರಾಣುವಿನಿಂದ ಸೈನಿಕರುಗಳು ಸೋಂಕಿತರಾದರು. ಯುದ್ಧ ಮುಗಿದ ಮೇಲೆ ಸೈನಿಕರುಗಳು, ತಮ್ಮೂರುಗಳಿಗೆ ಮರಳಿದಾಗ ವೈರಾಣು ವ್ಯಾಪಕವಾಗಿ ಹರಡ ತೊಡಗಿತು. ಮೃತ ಸೈನಿಕರುಗಳ ದೇಹವನ್ನು ಶವ ಸಂಸ್ಕಾರಕ್ಕಾಗಿ ಅವರೂರುಗಳಿಗೆ ತಂದಾಗಲೂ ವೈರಾಣು ತನ್ನ ಸೋಂಕನ್ನು ಹರಡುತ್ತಾ ಸಾಗಿತ್ತು. ಸೈನಿಕರುಗಳು ಹೆಚ್ಚಾಗಿ ಅಮೇರಿಕಾ ಮತ್ತು ಏಷ್ಯಾ  ಖಂಡಗಳಿಗೆ  ಸೇರಿದವರಾಗಿದ್ದರು. ಯುರೋಪ್ ಖಂಡದ ವಿವಿಧ ರಾಷ್ಟ್ರಗಳಿಗೂ ಭಾರಿ ಸಂಖ್ಯೆಯಲ್ಲಿ ಸೈನಿಕರುಗಳು ಮರಳಿದ್ದರು. 

ಸ್ಪ್ಯಾನಿಷ್ ಫ್ಲೂ - ೧೯೧೮ರ ರೋಗ ಲಕ್ಷಣಗಳು, ಕೋವಿಡ್-೧೯ರ ರೋಗ ಲಕ್ಷಣಗಳಂತೇ ಇತ್ತು. ಗಂಟಲ ಕೆರತ, ತಲೆನೋವು ಮತ್ತು ಜ್ವರದಂತಹ ಲಕ್ಷಣಗಳು ಮಾರ್ಚ್ ೧೯೧೮ರ ಮೊದಲನೇ ಅಲೆಯ ಸಮಯದಲ್ಲಿ ಕಾಣಿಸಿಕೊಂಡಿತ್ತು. ಮೊದಲನೇ ಅಲೆ ಹೆಚ್ಚು ತೀವ್ರವಾದುದಾಗಿರದೆ, ಅದರಿಂದ ಹೆಚ್ಚು ಸಾವು ನೋವುಗಳು ಉಂಟಾಗಲಿಲ್ಲ. ಆ ಹಂತದಲ್ಲಿ ಹೆಚ್ಚಾಗಿ ಇತರೆ ರೋಗಗಳಿಂದ ಪೀಡಿತರಾದವರು ಮತ್ತು ವಯೋವೃದ್ಧರು ಮೃತಪಟ್ಟಿದ್ದರು. ಆದರೆ ಅತ್ಯಂತ ಕ್ರೂರಿಯಾದ ಎರಡನೇ ಅಲೆಯು ಆಗಸ್ಟ್-೧೯೧೮ರ ಸಮಯಕ್ಕೆ ಕರಾಳವಾಗಿ ವ್ಯಾಪಿಸ ಹತ್ತಿತ್ತು. ಸೈನಿಕರು ಹಾಗೂ ಯುವಕರು ಅಪಾರ ಸಂಖ್ಯೆಯಲ್ಲಿ ಎರಡನೇ ಅಲೆಯ ಅವಧಿಯಲ್ಲಿ ಮೃತಪಟ್ಟರು. ೧೯೧೯ರಲ್ಲಿ ರೋಗದ ಮೂರನೇ ಅಲೆಯು ಮತ್ತು ೧೯೨೦ರ ಅವಧಿಯಲ್ಲಿ  ದುರ್ಬಲವಾದ ನಾಲ್ಕನೇ ಅಲೆಯೂ ಮನುಕುಲವನ್ನು ಬೆಂಬಿಡದೆ ಕಾಡಿತ್ತು. 

ಸ್ಪ್ಯಾನಿಷ್ ಫ್ಲೂ - ೧೯೧೮ರ ಎರಡನೇ ಅಲೆಯ ಅವಧಿಯಲ್ಲಿ, ವೈರಾಣುವಿನ  ಸೋಂಕು,  ಮಾನವರ ಶ್ವಾಸಕೋಶಗಳಿಗೆ ಹರಡಿ ಅಪಾರ ಸಂಖ್ಯೆಯ ಸಾವುಗಳನ್ನು ಉಂಟುಮಾಡಿತ್ತು. ಮೂಗು-ಬಾಯಿಗಳಲ್ಲಿನ  ರಕ್ತಸ್ರಾವ, ವಿಚಿತ್ರವಾದ ವಾಸನೆ, ಹಲ್ಲುಗಳು ಉದುರುವುದು, ಕೂದಲು ಉದುರುವುದು, ನಿದ್ರಾಹೀನತೆ ಮತ್ತು ಕಣ್ಣುಗಳ ದೋಷ ಮುಂತಾದ ರೋಗ ಲಕ್ಷಣಗಳು ಎರಡನೇ ಅಲೆಯ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದವು. ಅಂದಿನ ವೈದ್ಯರುಗಳಿಗೆ ಅಂದಿನ ರೋಗದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ.  ವಿಶ್ವಾದ್ಯಂತ ಹರಡಿದ್ದ ಅಪಾರ ಸಂಖ್ಯೆಯ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲು, ಅಂದಿದ್ದ ವೈದ್ಯಕೀಯ ಸೌಲಭ್ಯಗಳು ಏನೇನೂ ಸಾಲದಾಗಿತ್ತು. ಅಂದೂ ವೈದ್ಯರುಗಳು 'ಕ್ವಾರಂಟೈನ್ ಮತ್ತು ಮಾಸ್ಕ್ ಧಾರಣೆಯ' ಮುನ್ನೆಚ್ಚರಿಕೆಯ ಕ್ರಮಗಳನ್ನು ಪರಿಪಾಲಿಸುವಂತೆ ಜನರುಗಳಿಗೆ ತಿಳಿಸಿದ್ದರು. ತಲೆನೋವಿನ ಬಾಧೆಗೆ ಇಂದು ನೀಡುವಂತಹ 'ಆಸ್ಪಿರಿನ್ (Aspirin) ' ಗುಳಿಗೆಗಳನ್ನು ಅಂದಿನ ಮಹಾಮಾರಿಯ ನಿವಾರಣೆಗೆ ವ್ಯಾಪಕವಾಗಿ ನೀಡಲಾಗುತ್ತಿತ್ತು. 

೧೯೧೮ರ ಎರಡನೇ ಅಲೆಯನಂತರ, ಸೋಂಕಿತರ ಸಂಖ್ಯೆ ಸಾಕಷ್ಟು ಕಮ್ಮಿಯಾಗಿತ್ತು. ಅಂದಿನ ಮಹಾಮಾರಿಯ ಜೊತೆಗೆ 'ನಿಮೋನಿಯ (pneumonia)' ರೋಗವು ಕಾಣಿಸಿಕೊಳ್ಳುತ್ತಿತ್ತು. ನಿಮೋನಿಯಾ ರೋಗವನ್ನು ನಿಭಾಯಿಸುವ ಶ್ರಮತೆಯನ್ನು ಅಂದಿನ ವೈದ್ಯರುಗಳು ಅಭಿವೃದ್ಧಿ ಪಡಿಸಿಕೊಂಡಿದ್ದು, ಸಾವು-ನೋವುಗಳ ಸಂಖ್ಯೆ ಸಾಕಷ್ಟು ಕಮ್ಮಿಯಾಗುವಂತೆ ಮಾಡಿತ್ತು. ಸ್ಪ್ಯಾನಿಷ್ ಫ್ಲೂ - ೧೯೧೮ರನ್ನು ಕುರಿತಾದ ಸಂಶೋಧನೆ ಇಂದಿಗೂ ನಡೆಯುತ್ತಿದೆ. ಅಂದಿನ ಎರಡನೇ ಅಲೆಯನಂತರ, ವೈರಾಣು ದುರ್ಬಲವಾಗುತ್ತಾ ಸಾಗಿದ್ದೇ,  'ಸ್ಪ್ಯಾನಿಷ್ ಫ್ಲೂ - ೧೯೧೮' ತನಗೆ ತಾನೇ ಮಾಯವಾಗುವಂತೆ ಮಾಡಿತ್ತು. 

ಮೊದಲನೇ ಮಹಾಯುದ್ಧದ ನಂತರ, ಆಗಸ್ಟ್ ೧೯೧೮ರ ಹೊತ್ತಿಗೆ ಭಾರತಕ್ಕೆ ಹಿಂತಿರುಗಿದ ಸೈನಿಕರುಗಳ ಮುಖಾಂತರ, ನಮ್ಮ ದೇಶಕ್ಕೂ ಸ್ಪ್ಯಾನಿಷ್ ಫ್ಲೂ ಹರಡಿತ್ತು. ಸೈನಿಕರುಗಳು ಅಂದಿನ ಬಾಂಬೆ ಮೂಲಕ ಹಿಂತಿರುಗುತ್ತಾ ಬರುತ್ತಿದ್ದರಿಂದ, ಬಾಂಬೆಯಿಂದಲೇ ರೋಗ ಹರಡುತ್ತಿದೆಯೆಂಬುದು ಜನರುಗಳ ಅಭಿಪ್ರಾಯವಾಗಿ ಹೋಗಿತ್ತು. ಹಾಗಾಗಿ ಆ ರೋಗವನ್ನು 'ಬಾಂಬೆ ಜ್ವರ ಅಥವಾ ಬಾಂಬೆ ಇನ್ಫ್ಲುಯೆಂಜಾ' ಎಂದೇ ಅಂದು ಜನರು ಕರೆಯುತ್ತಿದ್ದರು. ಅಂದಿನ ಮಹಾಮಾರಿ ಬಹಳ ಬೇಗ ಇಡೀ ದೇಶದಲ್ಲಿ ಹರಡಿ ಹೋಗಿತ್ತು. ಒಂದು ಸಮೀಕ್ಷೆಯ ಪ್ರಕಾರ,ಭಾರತದ ೧. ೫ ಕೋಟಿಯಷ್ಟು ಜನರು ಅಂದಿನ ಮಹಾಮಾರಿಗೆ ಬಲಿಯಾಗಿದ್ದು, ಭಾರತ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಂಖ್ಯೆಯ ಸಾವುಗಳನ್ನು ಕಂಡ ದೇಶವೆನಿಸಿಕೊಂಡಿತ್ತು. 'ಸ್ಪ್ಯಾನಿಷ್ ಫ್ಲೂ - ೧೯೧೮ರ ಮಹಾಮಾರಿ ಮತ್ತು ಮೊದಲನೇ ಮಹಾಯುದ್ಧ'ದಂತಹ ಎರಡು ದುರಂತಗಳನ್ನು ಕಂಡ  ೧೯೧೧-೨೧ರ ದಶಕ ಭಾರತದ ಪಾಲಿಗೆ ಕರಾಳವಾದ ದಶಕವಾಗಿದ್ದು, ಆ ಅವಧಿಯಲ್ಲಿ ಭಾರತ ತನ್ನ ಜನಸಂಖ್ಯೆಯಲ್ಲಿನ  ಕುಸಿತವನ್ನು ಕಂಡಿತ್ತು. ಕಳೆದ ೧೨೦ ವರ್ಷಗಳ ಅವಧಿಯಲ್ಲಿ, ಭಾರತದ ಜನಸಂಖ್ಯೆ ಇನ್ನ್ಯಾವ ದಶಕದಲ್ಲೂ ಕುಸಿತವನ್ನು ಕಾಣದಿರುವುದು ಗಮನಿಸಬೇಕಾದ ಅಂಶ. ಸೂರ್ಯಕಾಂತ ತ್ರಿಪಾಠಿ ಎಂಬ ಹಿಂದೀ ಕವಿಯೊಬ್ಬರು ಆ ಅವಧಿಯ ಸಾವುಗಳ ಬಗ್ಗೆ ಬರೆಯುತ್ತಾ,  'ಗಂಗಾ ನದಿಯ ಒಡಲು ಶವದ ರಾಶಿಗಳಿಂದ ತುಂಬಿ ಹೋಗಿದೆ' ಎಂದು  ವಿಷಾದಿಸಿದ್ದರು. ಅಂದಿನ ಅಪಾರ ಸಾವು-ನೋವುಗಳಿಂದ ಬಳಲಿ ಬೆಂಡಾದ ಭಾರತದ ಜನತೆಯ ಆಕ್ರೋಶ ಬ್ರಿಟಿಷ್ ಸರಕಾರದ ವಿರುದ್ಧ ಭುಗಿಲೆದ್ದಿತ್ತು. 

'ಬ್ರಿಟಿಷ್ ಸರಕಾರದ ದಾಸ್ಯದಲ್ಲಿ ನಾವು ನಲುಗುತ್ತಿದಾಗಲೇ ನಮ್ಮ ದೇಶ ಸ್ಪ್ಯಾನಿಷ್ ಫ್ಲೂ - ೧೯೧೮ರ ದಾಳಿಯನ್ನು ಹೇಗೋ ಸಹಿಸಿ ಉಳಿದುಕೊಂಡಿತ್ತು. ಆ ದಿನಗಳಲ್ಲಿ ಭಾರತದಲ್ಲಿದ್ದ ವೈದ್ಯಕೀಯ ಸೌಲಭ್ಯಗಳ ಸ್ಥಿತಿ-ಗತಿಗಳನ್ನೋ, ಹೇಳ ತೀರದಾಗಿತ್ತು!  ಅಂತಹ ವಿಷಮ ಪರಿಸ್ಥಿತಿಯಲ್ಲೇ ಬದುಕುಳಿದ ಭಾರತಕ್ಕೆ, ಇಂದಿನ ಕೋವಿಡ್-೧೯ರ ದಾಳಿಯನ್ನು ನಿಭಾಯಿಸುವುದು ಕಷ್ಟವಾಗದು. ಇಂದಿನ ಕೇಂದ್ರ  ಮತ್ತು ರಾಜ್ಯ ಸರಕಾರಗಳು ಕೋವಿಡ್ ಹೋರಾಟಕ್ಕೆ ಸಾಕಷ್ಟು ಸಿದ್ಧತೆಗಳನ್ನು ನಡೆಸಿವೆ. ೧೯೧೮ರ ವೈದ್ಯಕೀಯ ಸೌಲಭ್ಯಗಳ ಹೀನಾಯ ಸ್ಥಿತಿಗೆ ಹೋಲಿಸಿದರೆ, ಇಂದಿನ ಸೌಲಭ್ಯಗಳು ಸಾಕಷ್ಟು ಸಮರ್ಪಕವಾಗಿವೆ. ನಮ್ಮ ವೈದ್ಯರುಗಳ ಸಾಮರ್ಥ್ಯ ಮತ್ತು ಸೇವಾ ಮನೋಭಾವಗಳು ವಿಶ್ವಖ್ಯಾತಿಯ ಮಟ್ಟದ್ದಾಗಿದೆ. ಜನ ಸಾಮಾನ್ಯರುಗಳಲ್ಲಿ ಅರಿವನ್ನು ಮೂಡಿಸಲು ಸರಕಾರಗಳು ಸಾಕಷ್ಟು ಪ್ರಯತ್ನವನ್ನು ನಡೆಸಿವೆ. ಕೇಂದ್ರ ಸರಕಾರ ವಿವಿಧ ದೇಶಗೊಳೊಂದಿಗೆ ಸುಮಧುರ ಬಾಂಧವ್ಯವನ್ನು ಹೊಂದಿದ್ದು, ಅಂತಾರಾಷ್ಟ್ರೀಯ ನೆರವೂ ಭಾರತಕ್ಕೆ ಹರಿದು ಬರುತ್ತಿದೆ. ಇಂದಿನ ಮಹಾಮಾರಿಯನ್ನು ತಡೆಯಬಲ್ಲ ಲಸಿಕೆಯ ಗಳಿಕೆಗಾಗಿ, ನಮ್ಮ ವಿಜ್ಞಾನಿಗಳು ಹಗಲಿರುಳೆನ್ನದೆ ಸಂಶೋಧನೆ ನಡೆಸುತ್ತಿ ದ್ದಾರೆ. ವಿಶ್ವದ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿನ ಸಾವು-ನೋವುಗಳ ಸಂಖ್ಯೆ ಕಮ್ಮಿಯೆಂದೇ ಹೇಳಬಹುದು. ಎಲ್ಲವುದಕ್ಕಿಂತ  ಮುಖ್ಯವಾಗಿ ನಮ್ಮ ದೇಶದ ಜನತೆಯಲ್ಲಿ 'ದೈವ ಭಕ್ತಿ ಮತ್ತು ನಂಬಿಕೆ'ಗಳು ಅಪಾರವಾಗಿದ್ದು, ಅದು ನಮ್ಮ ಜನರುಗಳಲ್ಲಿನ ಸ್ಥೈರ್ಯವನ್ನು ವೃದ್ಧಿಸುತ್ತಿದೆ. 'ನಂಬಿಕೆ ಮತ್ತು ವಿಶ್ವಾಸ'ಗಳು ಪ್ರತಿರೋಧವನ್ನು ವೃದ್ಧಿಸುವ ಅಂಶಗಳೆಂಬುದನ್ನು ಮನೋವಿ ಜ್ಞಾನಿಗಳೂ ಒಪ್ಪುತ್ತಾರೆ. 'ನಂಬಿಕೆ ಎಂಬುದು ಪರ್ವತಗಳನ್ನು ಕೂಡಾ ಕದಲಿಸಬಲ್ಲದು (Faith can move mountains).' ಹಾಗಾಗಿ ಇಂದಿನ ಮಹಾಮಾರಿಯನ್ನು ನಾವು ಗೆದ್ದು ಹೊರಬರುತ್ತೇವೆ' ಎಂದು ರಾಜುರವರು ವಿವರಿಸಿದಾಗ, ರೋಹಿಣಿ ಕೂಡ ತಲೆದೂಗಿದ್ದಳು. 

###




 


Sunday, 25 April 2021

ಪರಿವಿಡಿ

 ಪರಿವಿಡಿ 

೧. ದೀಪ ಬೆಳಗೋಣ ಬನ್ನಿ 

೨. ಸಾವಿನ ಘನತೆ 

೩. ಬಡವನ ಸೈಕಲ್ 

೪. ವಲಸಿಗರ ಪರದಾಟ 

೫. ವಲಸಿಗರ ವಂದನೆ 

೬. ಕೋವಿಡ್, ಮಾನವ ಸೃಷ್ಟಿಸಿದ ದುರಂತವೆ?

೭. ಕೊರೋನಾ ಸೇನಾನಿಗಳು 

೮. ಫ್ಲಾರೆನ್ಸ್ ನೈಟಿಂಗೇಲ್ 

೯. ಉದ್ಯೋಗಗಳ ಮರುಸೃಷ್ಟಿ 

೧೦. ಮಹಾಮಾರಿಗೆ ನಲುಗಿದ ಆರ್ಥಿಕತೆ 

೧೧. ಕೋವಿಡ್-೧೯ಕ್ಕಿಂತ ಭಯಾನಕ 

೧೨. ಪ್ರಕೃತಿಯ ಸೇಡು 

೧೩. ಕೊಳಚೆಗಳಲ್ಲಿ ಮಹಾಮಾರಿ 

೧೪. ಕೋವಿಡ್ ಮೇಲಿನ ವಿಜಯ 

Wednesday, 21 April 2021

NARASIMHAM THE SECOND COMING!



NARASIMHAM

THE SECOND COMING!
Those were the days of chaos,
Banks were ailing.
Demons of NPAs and bad assets
were killing banks from within.
He was retired and resting.
Distraught bankers
sought his ‘second coming,’
as Narasihmam once again.
When Narasimham rose up again,
he was fuming and furious.
‘Reform or perish’
was his ‘mantra’ for the bankers!
Narasimham took on the erring bankers
on his lap
With his razor sharp nails
he dissected their ailing bellies,
took out all that was rotten inside.
Good bankers stood around like Prahladas
Many of them were seniors, many were new borns
Narasimham blessed them all, but not before
Showing them the right path!
(Composed by Lakshminarayana K)

Monday, 19 April 2021

ವಿದಾಯ

    ವಿದಾಯ
***

'ಇಗೋ ಕನ್ನಡ' ಎಂದು 

ನಮ್ಮೆಲ್ಲರ ಬಡಿದೆಬ್ಬಿಸಿದಾತ 

ಬರೆದಿಟ್ಟು ನಮಗೊಂದು ನಿಘಂಟ 

ಹೊರಟು ನಿಂತ ಧೀಮಂತ 


ಇಗೋ 'ಜೀವಿ' ಈತ 

ಪಂಪ'ರನ್ನರ' ನಮಗೆ ತೋರಿಸಿದಾತ 

ಕೆಟಲರ ಕಾರ್ಯ ಮುಂದುವರೆಸಿದಾತ 

'ಶಬ್ದಸಾಗರ'ಕೆ  ಸೇತು ನಿರ್ಮಿಸಿದಾತ 


ಎರಡು ಮಹಾಮಾರಿಗಳ ಜಯಿಸಿದಾತ 

ಎರಡು ಮಹಾಯುದ್ಧಗಳ ಗೆದ್ದು ನಿಂತಾತ 

ಕನ್ನಡದುಳಿವೆಗೆ ಯುವಸೈನ್ಯ ಕಟ್ಟಿದಾತ 

'ಸಾರ್ಥಕ ಜೀವಿ' ಇವ ಕಂಡರಲ್ಲ ನೂರೆಂಟು ವಸಂತ 


'ಶತನಮನ'ಗಳು ನಿಮಗಿದೋ ನಮ್ಮೆಲ್ಲರ ತಾತ 

ಟಿಪ್ಪಣಿಗಳು 

೧) ಶ್ರೀಯುತ ಜಿ.ವೆಂಕಟಸುಬ್ಬಯ್ಯನವರು ''ಜೀವಿ' ಎಂದೇ ಪ್ರಸಿದ್ಧರು. 

೨)  'ಇಗೋ ಕನ್ನಡ' ಎಂಬುದು 'ಜೀವಿ'ಯವರ ವಿಶಿಷ್ಟ ನಿಘಂಟು.  

೩) ೧೦೦೦ ವರ್ಷಗಳ ಹಿಂದೆ ಕನ್ನಡದ ಮೊದಲ ನಿಘಂಟು ರಚನೆ ಮಾಡಿದವರು ಕವಿ  'ರನ್ನ. 

೪) ೧೮೯೪ರಲ್ಲಿ ಕನ್ನಡದ ನಿಘಂಟನ್ನು ಮತ್ತೆ ರಚಿಸಿದವರು 'ಕೆಟಲ್' ಎಂಬ ಜೆರ್ಮನಿಯ ವಿದ್ವಾಂಸರು. ನೂರು ವರ್ಷಗಳನಂತರ ಅಂದರೆ ೧೯೯೪ರಲ್ಲಿ 'ಜೀವಿ'ಯವರು ೯೦೦೦ ಪುಟಗಳ ಹೊಸ ಕನ್ನಡ ನಿಘಂಟು ಬಿಡುಗಡೆಯಾದದ್ದು ಕನ್ನಡಿಗರ ಹೆಮ್ಮೆ. 

೫) 'ಶಬ್ದ ಸಾಗರ, ಸಾರ್ಥಕ ಜೀವಿ, ಶತ ನಮನ, ಇವುಗಳು ಶ್ರೀಯುತರನ್ನು ಕುರಿತು ರಚಿತವಾಗಿರುವ ಅಭಿನಂದನಾ ಗ್ರಂಥಗಳು. 

(ರಚನೆ: ಲಕ್ಷ್ಮೀನಾರಾಯಣ ಕೆ.)


Monday, 5 April 2021

೧೦. ನಲುಗಿದ ಆರ್ಥಿಕ ಸ್ಥಿತಿ

೧೦ 

ನಲುಗಿದ ಆರ್ಥಿಕ ಸ್ಥಿತಿ 



ರಾಜುರವರು ಅವರ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷರಾಗಿದ್ದರು. ವಿವಿಧ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದ ರಾಜುರವರಿಂದ,  ದೇಶದಲ್ಲಿನ ಇಂದಿನ ಆಗು-ಹೋಗುಗಳ ಬಗ್ಗೆ ಚರ್ಚೆ-ತರ್ಕಗಳನ್ನು ಅವರ ಸ್ನೇಹಿತರು ಬಯಸುತ್ತಿದ್ದರು. ರಾಜು ಅವರ ಸ್ನೇಹಿತರುಗಳನ್ನೆಂದೂ ನಿರಾಸೆಗೊಳಿಸುವವರಾಗಿರಲಿಲ್ಲ. 

ಅಂದು ನಿವಾಸಿಗಳ ಸಂಘದ ತಿಂಗಳ ಸಭೆಯ ದಿನವಾಗಿತ್ತು. ಕೋವಿಡ್ ನಿರ್ಬಂಧಗಳಿಂದಾಗಿ ಅದು ಕೇವಲ ಹದಿನೈದು ಪದಾಧಿಕಾರಿಗಳ ಸಭೆಯಾಗಿತ್ತು. ಸಂಘದ ಮಾಮೂಲಿ ವ್ಯವಹಾರಗಳ ಮಂಡನೆ ಮುಗಿದನಂತರ ಅನೌಪಚಾರಿಕ ಚರ್ಚೆಯ ಸಮಯವಾಗಿತ್ತು. ಚರ್ಚೆ ಪ್ರಧಾನ ಮಂತ್ರಿಗಳು ಆ ದಿನಗಳಲ್ಲಿ ಪ್ರಕಟಿಸಿದ್ದ 'ಕೋವಿಡ್ ಆರ್ಥಿಕ ಪ್ಯಾಕೇಜ್ (Covid Pandemic Package)'ನ ಕಡೆಗೆ ತಿರುಗಿತ್ತು. 

ಹಿರಿಯ ಪದಾಧಿಕಾರಿಗಳಾಗಿದ್ದ ಶ್ರೀ ಶಂಕರ್ ಸಿಂಗ್ ರವರಿಂದ ಚರ್ಚೆಯ ಆರಂಭವಾಗಿತ್ತು. ಮಾಜಿ ಬ್ಯಾಂಕ್ ಅಧಿಕಾರಿ ಕೂಡ ಆಗಿದ್ದ ಸಿಂಗ್ ರವರು ಉತ್ತಮ ತಯಾರಿಯೊಂದಿಗೆ ಬಂದಿದ್ದರು. ಅವರು ಮಾತನಾಡುತ್ತಾ 'ಕೋವಿಡ್ ಮಹಾಮಾರಿ ಬರುವುದಕ್ಕೆ ಮುಂಚೆಯೇ ನಮ್ಮ ದೇಶ ಆರ್ಥಿಕ ಸಂಕಷ್ಟದಲ್ಲಿತ್ತು. "೨೦೧೬ರ ಅಪನಗದೀಕರಣ (demonetization) ಮತ್ತು ೨೦೧೭ರ ಸರಕು ಮತ್ತು ಸೇವೆಗಳ ತೆರಿಗೆ (GST)"ಗಳೊಡ್ಡಿದ್ದ ಅವಳಿ ಸಂಕಟಗಳಿಂದ ನಮ್ಮ ದೇಶ ಮುಂಚೆಯೇ ತತ್ತರಿಸಿ ಹೋಗಿತ್ತು. ಕೋವಿಡ್ನ ದಾಳಿಗೆ ಸಾಕಷ್ಟು ಮುಂಚೆಯೇ, ೨೦೨೦ರ  ಆರ್ಥಿಕ ವರ್ಷದ ಜಿ.ಡಿ.ಪಿ. ಹೆಚ್ಚಳದ ದರ         ೫. ೩%ರಿಂದ ೨. ೫%ರಷ್ಟಕ್ಕೆ ಇಳಿಯಬಹುದೆಂಬುದು ಆರ್ಥಿಕ ತಜ್ಞರ ನಿರೀಕ್ಷೆಯಾಗಿತ್ತು. 

ಆರ್ಥಿಕ ತಜ್ಞರ ಮುನ್ನೆಚ್ಚರಿಕೆಯಂತೆ ಮಹಾಮಾರಿ ಕೋವಿಡ್, ಮುಂಚೆಯೇ ಇದ್ದ ಆರ್ಥಿಕ ಸಂಕಷ್ಟಗಳನ್ನು ಮತ್ತಷ್ಟು ಜಟಿಲಗೊಳಿಸಿದೆ. ೨೦೨೧ರ ಆರ್ಥಿಕ ವರ್ಷದ ಜಿ.ಡಿ.ಪಿ. ಹೆಚ್ಚಳದ ದರದ ನಿರೀಕ್ಷೆಯಂತೂ ೧. ೫%ರಿಂದ ೨. ೦%ರಷ್ಟಿರಬಹುದೆಂದು ಅಂದಾಜಿಸಲಾಗಿದ್ದು, ಅದನ್ನು ೧೯೯೧ರ ಆರ್ಥಿಕ ಸುಧಾರಣೆಗಳನಂತರದ ಕನಿಷ್ಠ ಬೆಳವಣಿಗೆಯೆಂದೇ ಬಣ್ಣಿಸಲಾಗುತ್ತಿದೆ. ಕೋವಿಡ್ ಮತ್ತು ಅದರಿಂದುಟಾದ ಲಾಕ್ಡೌನಿನಿಂದ ಸುಮಾರು ೧೪ ಕೋಟಿಗಳಷ್ಟು ವಲಸಿಗ ಕೆಲಸಗಾರರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ದೇಶದ ಅರ್ಧದಷ್ಟು ಕುಟುಂಬಗಳು, ತಮ್ಮ ತಿಂಗಳ ಆದಾಯಗಳಲ್ಲಿ ಭಾರಿ ಕುಸಿತವನ್ನು ಕಂಡಿವೆ. ಒಂದು ಅಂದಾಜಿನ ಪ್ರಕಾರ, ಕೋವಿಡ್ ಲಾಕ್ಡೌನ್ - ೧೯ರ ಸಂಕಷ್ಟದಿಂದ ದಿನನಿತ್ಯ ರೂ. ೩೨,೦೦೦ ಕೋಟಿಗಳಷ್ಟರ (೪. ೫ ಬಿಲಿಯನ್ ಅಮೇರಿಕಾ ಡಾಲರ್) ನಷ್ಟ ನಮ್ಮ ದೇಶಕ್ಕಾಗುತ್ತಿದೆ. ದೇಶದ ಅರ್ಧದಷ್ಟಕ್ಕೂ ಹೆಚ್ಚಿನ ಸಂಖ್ಯೆಯ ಉದ್ದಿಮೆಗಳು ವಹಿವಾಟಿಲ್ಲದೆ ನಿಂತುಹೋಗಿವೆ. ಸರಬರಾಜಿನ ಸರಪಳಿ (supply chain)ಯ ಕೊಂಡಿಗಳು ಕಳಚಿ, ಇಡೀ ದೇಶದ ಆರ್ಥಿಕತೆಯೇ ಸ್ತಬ್ಧವಾಗಿದೆ.  ತರಕಾರಿಗಳಂತಹ ಬೇಗನೆ ಕೆಡುವ ಬೆಳೆಗಳನ್ನು ಬೆಳೆಯುವ ರೈತರಂತೂ ಕಂಗಾಲಾಗಿ ಹೋಗಿದ್ದಾರೆ. ಸಂಚಾರ ವ್ಯವಸ್ಥೆ ನಿಂತು, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ. ಲಕ್ಷಾಂತರ ರುಪಾಯಿಗಳ ಬೆಲೆ ಬಾಳುವ ಅವರ ಟ್ಯಾಕ್ಸಿಗಳು ಕೆಲಸವಿಲ್ಲದೆ ನಿಂತಿವೆ. ಪ್ರವಾಸೋದ್ಯಮವಂತೂ ನೆಲ ಕಚ್ಚಿಹೋಗಿದೆ. ನಮ್ಮ ಆಮದು-ರಫ್ತುಗಳ ವಹಿವಾಟಿನಲ್ಲಿ ೪೦%ರಷ್ಟು ಕುಸಿತ ಕಂಡುಬಂದಿದೆ. 

ಇವೆಲ್ಲಾ ಆತಂಕಕಾರಿ ಬೆಳವಣಿಗೆಗಳ ನಡುವೆ, ನಮ್ಮ ದೇಶದ ಷೇರು ಮಾರುಕಟ್ಟೆಯ ಬೆಳವಣಿಗೆ ಮಾತ್ರ ಕುಸಿಯದೆ ಉಳಿದು, ಆಶ್ಚರ್ಯವನ್ನುಂಟು ಮಾಡಿದೆ. ೨೦೨೦ರ ಮಾರ್ಚ್ ೨೩ರಂದು ಭಾರಿ ಕುಸಿತವನ್ನು ಕಂಡಿದ್ದ ಷೇರು ಮಾರುಕಟ್ಟೆ, ಮಾರ್ಚ್ ೨೫ರಂದೇ ಚೇತರಿಸಿಕೊಂಡಿತ್ತು. ಇಂದು, ಅಂದರೆ ೨೦೨೦ರ ಜೂನ್ ೧೭ರಂದು ಮುಂಬೈ ಸೂಚ್ಯಂಕ ೩೩,೫೦೭ ಮತ್ತು ನಿಫ್ಟಿ ಸೂಚ್ಯಂಕ ೯೮೮೧ರಷ್ಟಿದ್ದು ಸಮಾಧಾನಕರವಾದ ಮಟ್ಟದಲ್ಲೇ ಇದೆ. ಕೋವಿಡ್ನ ಮಹಾಮಾರಿಯ ದಾಳಿಯಿಂದ ವಿಶ್ವ ಕಾಣುತ್ತಿರುವ ಆರ್ಥಿಕ ಕುಸಿತದದ ಹೊರತಾಗಿಯೂ, ಏರುತ್ತಾ ಸಾಗುತ್ತಿರುವ ಷೇರು ಮಾರುಕಟ್ಟೆಯ ಸೂಚ್ಯಂಕದ ಬಗ್ಗೆ ಹೂಡಿಕೆದಾರರು ಎಚ್ಚರದಿಂದಿರುವುದು ಒಳಿತು' ಎಂದರು. 

ಈಗ ಮಾತಿನ ಸರದಿ ರಾಜುರವರದಾಗಿತ್ತು. 'ಧನ್ಯವಾದಗಳು ಶಂಕರ್ ಸಿಂಗರವರೆ. ಕೋವಿಡ್ ಮಹಾಮಾರಿಯ ದಾಳಿಗೆ ಸಿಲುಕಿ ನಲುಗುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಯ ವಿವರಣೆಯನ್ನು ಚೆನ್ನಾಗೇ ನೀಡಿದ್ದೀರಿ. ಆದರೆ ನಾವುಗಳು ನಿರಾಶರಾಗಬೇಕಿಲ್ಲ. ಆರ್ಥಿಕ ಪರಿಸ್ಥಿತಿಯ ಚೇತರಿಕೆಗೆ ಬೇಕಾದ ಎಲ್ಲಾ ಕ್ರಮಗಳನ್ನು ನಮ್ಮ ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿದೆ. ಆ ಕ್ರಮಗಳ ವಿವರಗಳನ್ನು ತಮ್ಮಗಳ ಮುಂದಿಡುತ್ತಿದ್ದೇನೆ. 

೧೨ ಮೇ ೨೦೨೦

ಅಂದು ನಮ್ಮ ಪ್ರಧಾನಿ ಮೋದಿಯವರು ರೂ. ೨೦ ಲಕ್ಷ ಕೋಟಿಗಳಷ್ಟರ (ಯು.ಎಸ್.ಡಾ.೨೮೦ ಬಿಲಿಯನ್) ಆರ್ಥಿಕ ಪರಿಹಾರವನ್ನು(ಪ್ಯಾಕೇಜ್) ಪ್ರಕಟಿಸಿದರು. ಅದು ನಮ್ಮ ಜಿ.ಡಿ.ಪಿ.ಯ ೧೦%ರಷ್ಟು ಎಂಬುದನ್ನು ನಾವು ಗಮನಿಸಬೇಕು. ಜಪಾನ್ (ಜಿ.ಡಿ.ಪಿಯ ೨೧%ರಷ್ಟು) ಮತ್ತು ಅಮೇರಿಕಾ (ಜಿ.ಡಿ.ಪಿ.ಯ ೧೩%ರಷ್ಟು) ದೇಶಗಳ ಕೋವಿಡ್  ಪ್ಯಾಕೇಜುಗಳನಂತರದ ಹೆಚ್ಚಿನ ಪ್ಯಾಕೇಜ್ ನಮ್ಮ ದೇಶದ್ದೇ ಎಂಬುದು ನಮಗೆ ಹೆಮ್ಮಯ ವಿಷಯ. ಕೋವಿಡ್ ಮಹಾಮಾರಿ ತಂದೊಡ್ಡಿರುವ ಆರ್ಥಿಕ ಸಂಕಷ್ಟ ನಮಗೆ ಹಲವು ಪಾಠಗಳನ್ನು ಕಲಿಸಿದೆ. "ಆತ್ಮನಿರ್ಭರ ಭಾರತದ ನಿರ್ಮಾಣದತ್ತ ನಾವೀಗ ಸಾಗಬೇಕಿದೆ" ಎಂಬ ಕರೆಯನ್ನೂ ನಮ್ಮ ಪ್ರಧಾನಿಗಳು ನಮಗೆ ಅಂದು ನೀಡಿದರು. 

ಆರ್ಥಿಕ ಪ್ಯಾಕೇಜ್ ಕುರಿತಾದ ಮುಂದಿನ ಪ್ರಕಟಣೆಗಳನ್ನು ವಿತ್ತ ಮಂತ್ರಿಗಳು ಮಾಡುತ್ತಾರೆಂದೂ ಅಂದೇ ಪ್ರಧಾನಿಗಳು ತಿಳಿಸಿದ್ದರು. 

೧೩ ಮೇ ೨೦೨೦

ಅಂದು ದೇಶದ ವಿತ್ತ ಮಂತ್ರಿಗಳಾದ ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನಕ್ಕಾಗಿ ರೂ. ೩ ಲಕ್ಷ ಕೋಟಿಗಳ ನಿಧಿಯೊಂದನ್ನು ಪ್ರಕಟಿಸಿದರು. ಮುಂದಿನ ದಿನದ ಪ್ರಕಟಣೆಗಳನ್ನೂ ಅವರೇ ಮುಂದುವರೆಸಿದ್ದರು. 

೧೪ ಮೇ ೨೦೨೦

ಆ ದಿನದ ಪರಿಹಾರದ ಪ್ರಕಟಣೆ ವಲಸಿಗ ಕೆಲಸಗಾರರು, ರೈತರು ಮತ್ತು ರಸ್ತೆ ಬದಿಯ ವ್ಯಾಪಾರಿಗಳಿಗಾಗಿತ್ತು. "ಒಂದು ದೇಶ, ಒಂದು ರೇಷನ್ ಕಾರ್ಡ್" ಎಂಬ ವ್ಯವಸ್ಥೆಯ ಕಾರ್ಯಾನ್ವಯವನ್ನು ವಲಸಿಗ ಕೆಲಸಗಾರರ ಹಿತದೃಷ್ಟಿಯಿಂದ ತ್ವರಿತಗೊಳಿಸಲಾಗುವುದೆಂದು ಕೂಡ ಪ್ರಕಟಿಸಲಾಯಿತು. 

೧೫ ಮೇ ೨೦೨೦

ಕೃಷಿ ಉತ್ಪನ್ನಗಳ ಶೇಖರಣೆಯ ಮಿತಿಯನ್ನು ಸಮಾಪ್ತಿಗೊಳಿಸಲೆಂದು "ಅವಶ್ಯಕ ವಸ್ತುಗಳ ಕಾಯಿದೆ (Essential Commodities Act - 1958)ಗೆ ತಿದ್ದುಪಡಿಯನ್ನು ಮಾಡಲಾಗುವುದು. ಹೊಸ ಕೃಷಿ ಕಾಯಿದೆಗಳನ್ನು ಜಾರಿಗೊಳಿಸಲಾಗುವುದು. ಮೀನುಗಾರಿಕೆ ಮತ್ತು ಪಶುಪಾಲನೆಗಳಿಗಾಗಿ ವಿಶೇಷ ನಿಧಿಯಯನ್ನು ಕೂಡ ಅಂದು ಪ್ರಕಟಿಸಲಾಯಿತು. 

೧೬ ಮೇ ೨೦೨೦

ಇಂಧನ, ರಕ್ಷಣೆ ಮತ್ತು ಬಾಹ್ಯಾಕಾಶ (Power, Defense and Space) ಕ್ಷೇತ್ರಗಳ ಖಾಸಗೀಕರಣವನ್ನು ಯೋಜಿಸಲಾಗಿದ್ದು, ಅವುಗಳ ತೀವ್ರ ಅಭಿವೃದ್ಧಿಗಾಗಿ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂಬ ಪ್ರಕಟಣೆಯನ್ನು ಅಂದು ಮಾಡಲಾಯಿತು.  

೧೭ ಮೇ ೨೦೨೦

ಅಂದು ವಿವಿಧ ಪ್ರಕಟಣೆಗಳ ಮುಕ್ತಾಯದ ದಿನವಾಗಿತ್ತು. ಆರ್ಥಿಕ ಪ್ಯಾಕೇಜಿನ ಯೋಜನೆ ಮೂರು ಮುಖ್ಯ ಆಯಾಮಗಳ ವ್ಯಾಪ್ತಿಯನ್ನೊಳಗೊಂಡಿದೆ. 

-ರಾಜ್ಯಾದಾಯ (Fiscal) - (ಸರಕಾರದ ಆದಾಯ ಮತ್ತು ವೆಚ್ಚಗಳ ಉತ್ತಮ ನಿರ್ವಹಣೆ)

-ವಿತ್ತೀಯ ನಿರ್ವಹಣೆ (Monetary) - (ಬಡ್ಡಿ ದರಗಳೂ ಸೇರಿದಂತೆ, ಆರ್.ಬಿ.ಐ.ನಿಂದ ವಿವಿಧ ನಿಯಮಾವಳಿಗಳ ಉತ್ತಮ ನಿರ್ವಹಣೆ)

-ಹಣಕಾಸಿನ ಪರ್ಯಾಪ್ತತೆ (liquidity) - (ಎಲ್ಲ ಉದ್ದಿಮೆಗಳಿಗೆ ಸಾಕಷ್ಟು ಸಾಲಗಳ ದೊರೆಯುವಿಕೆ) 

"ಪ್ರಕಟಿಸಿದ ಆರ್ಥಿಕ ಪರಿಹಾರಗಳಿಂದ ಇಂದೇ ಉತ್ತಮ ಫಲಿತಾಂಶಗಳು ಕಂಡುಬರದೆ ಇರಬಹುದು. ಆದರೆ ಕೋವಿಡ್ನ ದಾಳಿಯಿಂದ ತತ್ತರಿಸಿರುವ ಬಡವರಿಗೆ ಕೂಡಲೇ ಪರಿಹಾರ ದೊರೆಕಿಸುವುದೇ ನಮ್ಮ ಯೋಜನೆಗಳ ಉದ್ದೇಶ ಎಂಬುದು ವಿತ್ತ ಮಂತ್ರಿಗಳ ಅಂದಿನ ಸಮಜಾಯಿಷಿಯಾಗಿತ್ತು" ಎಂದು ತಮ್ಮ ಭಾಷಣವನ್ನು ಅಂತ್ಯಗೊಳಿಸಿದ ರಾಜುರವರು, ಇತರರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾ ಕುಳಿತರು. 

ರಾಜುರವರ ಭಾಷಣ ಮುಗಿಯುತ್ತಲೇ ಉತ್ತೇಜಿತರಾಗಿ ಕುಳಿತಲ್ಲಿಂದಲೇ ಘರ್ಜಿಸಿದವರು ಹರ್ಬನ್ಸ್ ಲಾಲರಾಗಿದ್ದರು. ಸುಮಾರು ೨೦,೦೦೦ ಸದಸ್ಯರನ್ನೊಳಗೊಂಡ ನಗರದ ರಸ್ತೆ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಅವರಾಗಿದ್ದರು. 'ನಿಮ್ಮ ವಿತ್ತ ಶಾಸ್ತ್ರದ ಯೋಜನೆಗಳು ನಮಗೆ ತಿಳಿಯುವುದಿಲ್ಲ. ತಮ್ಮ ಕೋಟಿ ಕೋಟಿಗಳ  ಅಂಕೆ-ಸಂಖ್ಯೆಗಳ ವಿವರ ನಮಗೆ ಬೇಕಿಲ್ಲ. ಕಳೆದ ಮೂರು ತಿಂಗಳ ಲಾಕ್ಡೌನಿನಿಂದ ವ್ಯಾಪಾರವಿಲ್ಲದೆ ಕೈಕಟ್ಟಿ, ಹೊಟ್ಟೆಗಿಲ್ಲದೆ ಕುಳಿತಿರುವ ನಮ್ಮ ರಸ್ತೆ ಬದಿಯ ವ್ಯಾಪಾರಿಗಳಿಗೆ ಯಾವ ನೆರವನ್ನು ನೀಡಿದ್ದೀರಿ? ಎಂಬುದನ್ನು ಮೊದಲು ತಿಳಿಸಿ. ಲಾಕ್ಡೌನ್ ಮುಗಿದನಂತರವೂ ಅವರ ರಸ್ತೆ ಬದಿಯ ವ್ಯಾಪಾರಕ್ಕೆ ಇಲ್ಲದ ಅಡೆತಡೆಗಳನ್ನೊಡ್ಡಲಾಗುತ್ತಿದೆ. ದಿನ ಬೆಳಗಾದರೆ ಸ್ವಚ್ಛತೆ, ಕೋವಿಡ್ಗಳ ಹೆಸರಿನಲ್ಲಿ ಪೊಲೀಸರು, ನಗರಸಭೆಯ ಅಧಿಕಾರಿಗಳು ಅವರುಗಳನ್ನು ಒಕ್ಕಲೆಬ್ಬಿಸುತ್ತಾರೆ. ತಮ್ಮ ಕೋವಿಡ್ ಪ್ಯಾಕೇಜ್ನಲ್ಲಿ ರಸ್ತೆ ಬದಿಯ ವ್ಯಾಪಾರಿಗಳನ್ನು ಏಕೆ ಕಡೆಗಣಿಸಲಾಗಿದೆ?' ಹರ್ಬನ್ಸ್ ಲಾಲರ ಸಿಟ್ಟು ನೆತ್ತಿಗೇರಿತ್ತು. 

ಹರ್ಬನ್ಸ್ ಲಾಲರ ಘರ್ಜನೆಯಿಂದ ಎಲ್ಲರು ಆಶ್ಚರ್ಯಚಕಿತರಾಗಿದ್ದರು. ಕೆಲಕ್ಷಣ ಇಡೀ ಕೋಣೆ ಮೌನದಿಂದ ಮರಗಟ್ಟಿತ್ತು. 'ಅವರ ಆಕ್ರೋಶ ನ್ಯಾಯಯುತವಾದದ್ದು. ಅವರ ಪ್ರಶ್ನೆಗಳಿಗೆ ನಮ್ಮಲ್ಲಿ ಯಾರೊಬ್ಬರಾದರೂ ಸರಿಯುತ್ತರ ನೀಡಬೇಕು' ಎಂಬ ಗುಸು ಗುಸು ಎಲ್ಲರ ನಡುವೆ ಹರಿದಾಡಿತ್ತು. ರಾಜುರವರಲ್ಲಿ ಯಾವ ಉತ್ತರವೂ ಇದ್ದಂತೆ ಕಾಣುತ್ತಿರಲಿಲ್ಲ. ವಕೀಲ ಮದನ್ ಲಾಲರು ಮಾತ್ರ ತಮ್ಮ ಮೊಬೈಲ್ನಲ್ಲಿ ಅಂತರ್ಜಾಲವನ್ನು ಕೆದಕುತ್ತಿರುವಂತೆ ಕಂಡುಬಂದಿತ್ತು. ಕೆಲವು ನಿಮಿಷಗಳನಂತರ ಮದನ್ ಲಾಲರು ಮಾತನಾಡುತ್ತ, 'ಹರ್ಬನ್ಸ್ ಲಾಲ್ರವರೇ, ತಮ್ಮ ಸಾತ್ವಿಕ ಆಕ್ರೋಶವನ್ನು ನಾನು ಗೌರವಿಸುತ್ತೇನೆ. ಬಡಬಗ್ಗರ ನೆರವಿಗೆ ಬಾರದ ಯಾವುದೇ ಯೋಜನೆಯನ್ನೂ ನಿಷ್ಪ್ರಯೋಜಕವೆಂದೇ ಹೇಳಬೇಕು. ಆದರೆ ಕೇಂದ್ರ ಸರಕಾರದ ಕೋವಿಡ್ ಪ್ಯಾಕೇಜ್ನಲ್ಲಿ ರಸ್ತೆ ಬದಿಯ ವ್ಯಾಪಾರಿಗಳ ಬವಣೆಯನ್ನು ನಿವಾರಿಸುವ ಬಗ್ಗೆ ಕೆಲವು ಕ್ರಮಗಳನ್ನು ಘೋಷಿಸಲಾಗಿದೆ. ಸರಕಾರಿ ಜಾಲತಾಣದಲ್ಲಿರುವ ವಿವರಗಳನ್ನು ಓದುತ್ತಿದ್ದೇನೆ. ಎಲ್ಲರೂ ದಯಮಾಡಿ ಕೇಳಿ. 

"ಸಣ್ಣ ವ್ಯಾಪಾರಿಗಳೇ ಹಾಗೂ ರಸ್ತೆ ಬದಿಯ ವ್ಯಾಪಾರಿಗಳೇ,

ತಮಗೆ ತಿಳಿದಿದೆಯೇ?

ಲಾಕ್ಡೌನ್ನಿನ ದಿನಗಳು ಮುಗಿದಿವೆ. ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮತ್ತೆ ತೆರೆಯುವ ಸಮಯ ಬಂದಿದೆ. ನಿಮಗೆ ಬಂಡವಾಳದ ನೆರವು ದೊರೆತು, ಬಡ್ಡಿಯ ಹೊರೆ ಇಳಿಸಲಾಗಿದೆ. 

-ಸಣ್ಣ ವ್ಯಾಪಾರಿಗಳ (ಮುದ್ರಾ ಶಿಶು ಸಾಲಗಳು - MUDRA SHISHU LOANS) ಬಡ್ಡಿಯ ಹೊರೆಯನ್ನು ತಗ್ಗಿಸಲು ಕೇಂದ್ರ ಸರಕಾರ ೨%ರಷ್ಟು ನೆರವು ನೀಡಲಿದೆ. ಈ ನೆರವಿಗಾಗಿ ರೂ. ೧೫೦೦ ಕೋಟಿಯಷ್ಟರ ನಿಧಿಯನ್ನು ಕಾದಿರಸಲಾಗಿದೆ. 

-೫೦ ಲಕ್ಷ ರಸ್ತೆ ಬದಿಯ ವ್ಯಾಪಾರಿಗಳಿಗೆ ತಲಾ ರೂ. ೧೦,೦೦೦ ಸಾಲವನ್ನು ಸರಕಾರಿ ವಲಯದ ಬ್ಯಾಂಕ್ಗಳಿಂದ ಒದಗಿಸುವ ಕಾರ್ಯಕ್ರಮವೊಂದನ್ನು ಜಾರಿಗೊಳಿಸಲಾಗಿದೆ. ಈ ನೆರವಿಗಾಗಿ              ರೂ. ೫೦೦೦ ಕೋಟಿಗಳ ನಿಧಿಯನ್ನು ಕಾದಿರಿಸಲಾಗಿದೆ. 

ತಮ್ಮ ಗೆಲುವೇ ದೇಶದ ಗೆಲುವು" 

ಹರ್ಬನ್ಸ್ ಲಾಲ್ರವರೇ, 'ತಮ್ಮ ಎಲ್ಲ ರಸ್ತೆ ಬದಿಯ ವ್ಯಾಪಾರಿಗಳನ್ನು ದಾಖಲೆ ಪಾತ್ರಗಳೊಂದಿಗೆ ಕರೆ ತನ್ನಿ. ಅವರುಗಳಿಗೆ ತಲಾ  ರೂ.೧೦೦೦೦ ಸಾಲವನ್ನು ಕೊಡಿಸುವ ಪ್ರಯತ್ನವನ್ನು ಮಾಡೋಣ. ಎಲ್ಲ  ರಾಜ್ಯ ಸರಕಾರಗಳೂ ರಸ್ತೆ ಬದಿಯ ವ್ಯಾಪಾರಿಗಳಿಗೆ ಅಧಿಕೃತ ಗುರುತಿನ ಚೀಟಿಯೊಂದನ್ನು ನೀಡುವ ಏರ್ಪಾಡನ್ನು ಮಾಡಿವೆ. ಆ ಗುರುತಿನ ಚೀಟಿಯನ್ನು ಒಮ್ಮೆ ಪಡೆದರೆ ಮುಗಿಯಿತು, ಅವರುಗಳನ್ಯಾರು ರಸ್ತೆ ಬದಿಗಳಿಂದ ಒಕ್ಕಲೆಬ್ಬಿಸಲು ಸಾಧ್ಯವಾಗದು' ಎಂದರು. 

ಹರ್ಬನ್ಸ್ ಲಾಲರು ಸೇರಿದಂತೆ ಎಲ್ಲರಿಗೂ ಮದನ್ ಲಾಲರು ನೀಡಿದ ರಸ್ತೆ ಬದಿಯ ವ್ಯಾಪಾರಿಗಳ ಸವಲತ್ತುಗಳ ಬಗೆಗಿನ ಮಾಹಿತಿಗಳು ಆಶ್ಚರ್ಯವನ್ನು ಮತ್ತು ಸಂತಸವನ್ನು ಒಮ್ಮಲೇ ಉಂಟುಮಾಡಿದ್ದವು.  ಆದರೂ ಸುಮ್ಮನಾಗದ ಹರ್ಬನ್ಸ್ ಲಾಲರು ಮಾತನಾಡುತ್ತ, '೧೪ ಕೋಟಿಗಳಷ್ಟು ವಲಸಿಗ ಕೆಲಸಗಾರರು ಕಳೆದ ಮೂರು ತಿಂಗಳುಗಳಿಂದ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಸುಡು ಬಿಸಿಲಿನಲ್ಲಿ ಸಂಸಾರದೊಂದಿಗೆ ತಮ್ಮ ತಮ್ಮ ಹಳ್ಳಿಗಳತ್ತ ನಡೆದು ಸಾಗಿದ ಅವರುಗಳಲ್ಲಿ ಕೆಲವರು ನೀರು ಆಹಾರಗಳಿಲ್ಲದೆ ಪ್ರಾಣವನ್ನು ಬಿಟ್ಟಿದ್ದಾರೆ. ಅವರುಗಳಿಗ್ಯಾವ ಆರ್ಥಿಕ ನೆರವು ಸಿಗುತ್ತದೆ?' ಎಂದು ಕೇಳಿದರು. 

ಮದನ್ ಲಾಲರು ಉತ್ತರಿಸುತ್ತಾ, 'ವಲಸಿಗ ಕೆಲಸಗಾರರೆಲ್ಲರಿಗೂ ಎರಡು ತಿಂಗುಳುಗಳಿಗೆ ಸಾಕಾಗುವಷ್ಟು ದಿನಸಿ ಪೊಟ್ಟಣಗಳನ್ನು ವಿತರಿಸಲಾಗಿದೆ. ಈ ಯೋಜನೆಯನ್ನು ಈ ವರ್ಷದ ಡಿಸೆಂಬರ್ ತಿಂಗಳ ಅಂತ್ಯದವರೆಗೆ ವಿಸ್ತರಿಸುವ ಪ್ರಸ್ತಾಪವಿದೆ. ಕೆಲವು ರಾಜ್ಯ ಸರಕಾರಗಳು ಅವರುಗಳಿಗೆ ಸ್ವಲ್ಪ ಆರ್ಥಿಕ ಸಹಾಯವನ್ನೂ ನೀಡಿವೆ. ಇನ್ನೂ ಹೆಚ್ಚಿನ ಪರಿಹಾರ ಅವರುಗಳಿಗೆ ಹರಿದು ಬರಬೇಕಿತ್ತು ಎಂಬುದನ್ನು ನಾನು ಒಪ್ಪುತ್ತೇನೆ. ಕನಿಷ್ಠ ತಲಾ ರೂ.೧೦,೦೦೦ಗಳ ಆರ್ಥಿಕ ನೆರವು ಅವರುಗಳ ತುರ್ತು ಪರಿಹಾರಕ್ಕಾಗಿ ನೀಡಬೇಕಿತ್ತು. ಆ ರೀತಿಯ ಪರಿಹಾರ ಬೇಗ ಹರಿದು ಬರಲಿ ಎಂದು ಆಶಿಸೋಣ.' 

ಮುಂದಿನ ಮಾತಿನ ಸರದಿ ಪ್ರೊ. ಪ್ರಹ್ಲಾದ್ ಸರ್ದೇಶಪಾಂಡೆರವರದಾಗಿತ್ತು. ಅವರು ನಿವೃತ್ತ ಅರ್ಥ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ಮೋದಿಯವರ ಆರ್ಥಿಕ ಯೋಜನೆಗಳ ಕಡು ವಿಮರ್ಶಕರಾಗಿದ್ದರು. 'ಕೋವಿಡ್-೧೯ ಮಹಾಮಾರಿಯು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೂಲಂಕಷವಾಗಿ ವಿಮರ್ಶಿಸದೆ ಸರಕಾರ  ದಿಢೀರನೆ ವಿಧಿಸಿದ ದೀರ್ಘಾವಧಿಯ ಲಾಕ್ಡೌನ್ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಕೊಂದು  ಹಾಕಿಬಿಟ್ಟಿದೆ ಎಂಬುದು ನನ್ನ ಅಭಿಪ್ರಾಯ. ೨೦೧೬ರ ಅಪನಗದೀಕರಣವೆಂಬ ದುಃಸ್ವಪ್ನದ ಪುನರಾವರ್ತನೆಯೆ ಲಾಕ್ಡೌನ್ - ೨೦೨೦ ಎಂಬುದು ಹಲವು ತಜ್ಞರ ಅನಿಸಿಕೆಯೂ ಹೌದು. ನಮ್ಮ ದೇಶದಲ್ಲಿ ವಿಧಿಸಿದ ಲಾಕ್ಡೌನ್ ಇಡೀ ವಿಶ್ವದಲ್ಲೇ ಅತ್ಯಂತ ಕಠಿಣವಾದುದಾಗಿತ್ತು. ಆದರೆ ಲಾಕ್ಡೌನ್ ಜಾರಿಗೊಳಿಸಿದ ನಮ್ಮ ನಾಯಕರುಗಳು "ಜೀವಗಳ ರಕ್ಷಣೆ ಮುಖ್ಯವೋ ಅಥವ ಜೀವನೋಪಾಯಗಳ ರಕ್ಷಣೆ ಮುಖ್ಯವೋ (Lives Vs Livelihood)" ಎಂಬ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಸ್ವಲ್ಪ ವಿವೇಚನೆಯುಳ್ಳ ಯಾರಿಗಾದರೂ ಲಾಕ್ಡೌನ್ ಪೂರ್ವಾಪರಗಳನ್ನು ವಿಮರ್ಶಿಸದೆ ಕೈಗೊಂಡ ಮಾರಕ ನಿರ್ಧಾರವೆಂಬುದು ತಿಳಿಯದಿರದು. 

ರೋಗಿಯ ರೋಗದ ಸಂಪೂರ್ಣ ಮಾಹಿತಿ ತಿಳಿದನಂತರವೂ ವೈದ್ಯರು ನೀಡಿರುವ ತಪ್ಪು ಔಷಧದಂತಿದೆ ಮೋದಿಯವರು ಪ್ರಕಟಿಸಿದ ಆರ್ಥಿಕ ಪ್ಯಾಕೇಜ್. ದೇಶದ ಜಿ.ಡಿ.ಪಿ.ಯ ೧೦%ರಷ್ಟು ಎಂದು ಘೋಷಿಸಿರುವ ಅವರ ಬಹುಪ್ರಚಾರಿತ ಆರ್ಥಿಕ ಪ್ಯಾಕೇಜ್ನ ರೂ. ೨೦ ಲಕ್ಷ ಕೋಟಿಗಳಲ್ಲಿ, ಮುಂಚೆಯೇ ಆರ್.ಬಿ.ಐ. ಘೋಷಿಸಿದ್ದ ರೂ. ೮ ಲಕ್ಷ ಕೋಟಿಗಳಷ್ಟರ ನಿಧಿಯೂ ಸೇರಿದೆ. ಅದೇ ಪ್ಯಾಕೇಜ್ನ ನಿಧಿಯಲ್ಲಿ ಬ್ಯಾಂಕ್ಗಳು ಮುಂದಿನ ದಿನಗಳಲ್ಲಿ ಹಲವು ಉದ್ದಿಮೆಗಳಿಗೆ ನೀಡಲಿರುವ ಸಾಲಗಳ ಮೊತ್ತವನ್ನು ಸೇರಿಸಲಾಗಿದೆ. ಈ ಎಲ್ಲಾ ಮೊತ್ತಗಳನ್ನು ಹೊರತುಪಡಿಸಿದರೆ, ಆರ್ಥಿಕ ಪ್ಯಾಕೇಜ್ನ ನೈಜ ಮೊತ್ತ ದೇಶದ ಜಿ.ಡಿ.ಪಿ.ಯ ೧%ರಷ್ಟು ಮಾತ್ರ ಎಂದು ಹೇಳಬಹುದು. 

ವಿತ್ತ ಮಂತ್ರಿಗಳು ಮಾಡಿದ ಐದು ಪ್ರಕಟಣೆಗಳು, ಪರಿಹಾರ ಒದಗಿಸಿದ್ದಕ್ಕಿಂತ ಸದ್ದು ಮಾಡಿದ್ದೆ ಜಾಸ್ತಿಯೆನ್ನಬಹುದು. ಅದರಿಂದ ತತ್ತರಿಸಿದ ಅರ್ಥ ವ್ಯವಸ್ಥೆಗೆ ಸ್ವಲ್ಪ ಹಣ ಒದಗಿಸಿದಂತೆ ಮಾತ್ರವಾಗಿದೆಯೇ ಹೊರತು, ಉದ್ದಿಮೆಗಳ ಉತ್ಪನ್ನಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಮನುಕುಲಕ್ಕೆ ಕೋವಿಡ್ ಮಹಾಮಾರಿಯೊಂದು ಶಾಪವಿದ್ದಂತೆ. ಆಹಾರ ಮತ್ತು ಔಷಧಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಉದ್ದಿಮೆಗಳ ಉತ್ಪನ್ನಗಳ ಬೇಡಿಕೆಯನ್ನು ಕೋವಿಡ್ ರೋಗ ಮತ್ತು ಎಗ್ಗಿಲ್ಲದೆ ವಿಧಿಸಿದ ಲಾಕ್ಡೌನ್ಗಳು ನುಂಗಿ ಕುಳಿತಿವೆ. ಮಧ್ಯಮ ವರ್ಗದ ಕುಟುಂಬಗಳೇ ನಮ್ಮ ಆರ್ಥಿಕತೆಯ ಜೀವನಾಡಿಗಳೆನ್ನಬಹುದು. ಆದರೆ ಆ ವರ್ಗದ ಬಹುತೇಕ ಕುಟುಂಬಗಳ ತಿಂಗಳ ಆದಾಯಗಳಲ್ಲಿ ಭಾರಿ ಕುಸಿತವುಂಟಾಗಿದೆ. ಸುಮಾರು ೪೦ ಕೋಟಿಯಷ್ಟು ಅಸಂಘಟಿತ (unorganized workers) ನೌಕರರು ಲಾಕ್ಡೌನಿನಿಂದ  ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿಗೆ ಆರ್ಥಿಕ ಪ್ಯಾಕೇಜ್ನಲ್ಲಿ ಪ್ರಯತ್ನ ಮಾಡಿದ್ದಾರೆಯೆ? ದೇಶೀಯ ಉತ್ಪನ್ನಗಳ ಮಾರಾಟಕ್ಕೆ ಬೇಡಿಕೆಯನ್ನು ಉಂಟುಮಾಡುವ ವ್ಯವಸ್ಥೆ ರೂಪುಗೊಳ್ಳುವುದು ಯಾವಾಗ? ಕೆಲಸ ಕಳೆದುಕೊಂಡು ಕುಳಿತಿರುವ  ವಲಸಿಗ ಕೆಲಸಗಾರರ ಜೇಬುಗಳಿಗಿಷ್ಟು ಹಣವನ್ನು ಸರಕಾರಗಳು ಇಳಿಸಿದ್ದರೆ, ಬೇಡಿಕೆಯ ಸೃಷ್ಟಿ ಗ್ರಾಮೀಣ ಮಟ್ಟದಲ್ಲೂ ಉಂಟಾಗುತ್ತಿತ್ತಲ್ಲವೆ? 

ಇಂದಿನ ಕೋವಿಡ್ ಪ್ಯಾಕೇಜ್ನ ಮಾತು ಬದಿಗಿರಲಿ. ಸ್ವಾತಂತ್ರ್ಯ ಗಳಿಸಿದನಂತರ ನಮ್ಮ ಬಜೆಟ್ಗಳಲ್ಲಿ ಆರೋಗ್ಯ ವಲಯಕ್ಕೆ ಮುಡಿಪಾಗಿಟ್ಟ ಧನದ ರಾಶಿಯನ್ನು "ಜುಜುಬಿ" ಎಂದೇ ಹೇಳಬಹುದು. "ಆರೋಗ್ಯವೇ ಭಾಗ್ಯ"ವೆಂಬ ಗಾದೆ ಮಾತಿನ ಅರಿವೇ ನಮ್ಮ ನಾಯಕರುಗಳಿಗೆ  ಇದ್ದಂತ್ತಿಲ್ಲ. ಆರೋಗ್ಯದ ವ್ಯವಸ್ಥೆ ಸುಧಾರಿಸದೆ ಸಂಪತ್ತಿನ ಕ್ರೋಡೀಕರಣ ಆಗದು. 

೨೦೧೯ರ ಡಿಸೆಂಬರ್ ೩೧ರಂದು ಕೇಂದ್ರ ಸರಕಾರ ಪ್ರಕಟಿಸಿದ ರಾಷ್ಟ್ರೀಯ ಮೂಲಭೂತ ಸೌಕರ್ಯದ (National Infra Plan - NIA) ರೂ. ೧೦೨ ಲಕ್ಷ ಕೋಟಿಗಳ ಯೋಜನೆಯನ್ನು, ಸರಕಾರ ಮರೆತು ಕೂತಿದೆಯೇಕೆ? ಈ ಯೋಜನೆಯನ್ನು ತ್ವರಿತಗೊಳಿಸುವುದರಿಂದ ಉದ್ಯೋಗ ಸೃಷ್ಟಿಗೆ ಭಾರಿ ಚಾಲನೆ ದೊರೆತಂತಾಗುವುದಿಲ್ಲವೆ? ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ "ನದಿಗಳ ಜೋಡಣೆ"ಯ ಯೋಜನೆಯನ್ನು ಕೈಗೆತ್ತಿಕೊಳ್ಳುವುದರಿಂದ, ಕೋಟಿಗಟ್ಟಲೆ ಉದ್ಯೋಗಗಳ ಸೃಷ್ಟಿಯಾಗುವುದಿಲ್ಲವೆ? ಸರಕಾರದಲ್ಲಿ ಇಚ್ಚಾ ಶಕ್ತಿಯ ಕೊರತೆ ಇರವುದೇಕೆ? 

ನಮ್ಮ ಜಿ.ಡಿ.ಪಿ.ಯ ಹೆಚ್ಚಳ ಹೆಚ್ಚಾಗಿ ನಮ್ಮ ಮಹಾರಾಷ್ಟ್ರ, ತಮಿಳ್ ನಾಡು, ಗುಜರಾತ್ ಮತ್ತು ದಿಲ್ಲಿ ರಾಜ್ಯಗಳ ಆರ್ಥಿಕತೆಯ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ.  ದುರದೃಷ್ಟವಶಾತ್ ಇದೇ ನಾಲ್ಕು ರಾಜ್ಯಗಳಲ್ಲಿ ಕೋವಿಡ್ನ ದಾಳಿ ತೀವ್ರವಾಗಿದೆ. ಹಾಗಾಗಿ ದೇಶದ ಜಿ.ಡಿ.ಪಿ.ಯ ಹೆಚ್ಚಳ ಆಗಬಹುದೇ ಎಂಬ ಅನುಮಾನ ಕಾಡದಿರದು. 

ಆರ್ಥಿಕ ಸುಧಾರಣೆಗಳ ಪ್ರಕಟಣೆಯಿಂದ ಮಾತ್ರ ಏನೂ ಆಗದು. ಅವುಗಳ ಕಾರ್ಯಾನ್ವಯಕ್ಕೆ ದೃಢ ವಾದ ರಾಜಕೀಯ ಇಚ್ಚಾಶಕ್ತಿ ಬೇಕು. ಅತ್ಯವಶ್ಯಕ ಸಂಪನ್ಮೂಲಗಳಾದ "ಭೂಮಿ, ನೌಕರರು ಮತ್ತು ಇಂಧನ" ಕ್ಷೇತ್ರಗಳಲ್ಲಿ ತುರ್ತಾಗಿ ಸುಧಾರಣೆಗಳಾಗಬೇಕು. "ಭೂಮಿ" ರಾಜ್ಯಗಳ ನಿಯಂತ್ರಣಕ್ಕೆ ಸಂಬಂಧಪಟ್ಟಿದ್ದಾದರೆ, "ನೌಕರರು ಮತ್ತು ಇಂಧನ"ಗಳ ವಿಷಯ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸಂಬಂಧಿಸಿದ್ದು. ಆದುದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯದ ಕೊರತೆ ಕಾಡುತ್ತಿದ್ದರೆ, ಈ ಸುಧಾರಣೆಗಳ ಕಾರ್ಯಾನ್ವಯ ಅಸಾಧ್ಯ. ಇಂತಹ ಮಹತ್ವದ ಸುಧಾರಣೆಗಳ ಕಾರ್ಯಸಾಧನೆ ಆಗದಿದ್ದರೆ, ಚೀನಾ ದೇಶದಿಂದ ಹೊರಬರಲಿಚ್ಛಿಸುವ ಭಾರಿ ಉದ್ಯಮಗಳನ್ನು ಕರೆತರುವುದು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ವಿಯಟ್ನಾಂ ಮತ್ತು ಇಂಡೋನೇಷ್ಯಾ ರಾಷ್ಟ್ರಗಳಲ್ಲಿ ಅನುಕೂಲಕರ ವಾತಾವರಣದ ಸೃಷ್ಟಿ ಭರದಿಂದ ಸಾಗಿದ್ದು, ಚೀನಾದ ಭಾರಿ ಉದ್ಯಮಗಳು ಆ ರಾಷ್ಟ್ರಗಳ ಕಡೆಗೆ ಮುಖ ಮಾಡಿರುವುದನ್ನು ನಾವು ಗಮನಿಸಬೇಕು. 

ಬ್ಯಾಂಕುಗಳು ಸಾಲದ ಬಡ್ಡಿಯ ದರಗಳನ್ನು ಇಳಿಸುತ್ತಿರುವುದು ಒಳ್ಳೆಯದೇ. ಅದರ ಜೊತೆ ಜೊತೆಗೆ ಬ್ಯಾಂಕುಗಳು ಠೇವಣಿಗಳ ಮೇಲೆ ನೀಡುವ ಬಡ್ಡಿ ದರಗಳು ಕೂಡ ಇಳಿತವನ್ನು ಕಂಡಿವೆ. ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವವರಲ್ಲಿ ಹೆಚ್ಚಿನವರು ಹಿರಿಯ ನಾಗರೀಕರು. ಬ್ಯಾಂಕುಗಳು ನೀಡುವ ತಿಂಗಳ ಬಡ್ಡಿಯಲ್ಲೇ ಅವರುಗಳ ಜೀವನ. ಹಾಗಾಗಿ ಹಿರಿಯ ನಾಗರೀಕರ ಜೀವನಕ್ಕೆ ಕುತ್ತೊದಗಿದ್ದು, ಅವರುಗಳು ಖಾಸಗಿ ಹಣಕಾಸು ಸಂಸ್ಥೆಗಳತ್ತ ಮುಖ ಮಾಡುವಂತಾಗಿದೆ. ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ನಮ್ಮ ಹಿರಿಯ ನಾಗರೀಕರುಗಳ ಹಣ ಸುರಕ್ಷಿತವಾಗಿರಬಲ್ಲದೆ? 

ಹೌದು,  ನಮ್ಮ ಬ್ಯಾಂಕ್ಗಳು ಮತ್ತು ಆರ್.ಬಿ.ಐ.ನ ಬಳಿ ಅಪಾರವಾದ ಧನರಾಶಿಯಿದೆ. ಆದರೆ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆಯುವ ಅಭ್ಯರ್ಥಿಗಳೇ ಮುಂದೆ ಬರುತ್ತಿಲ್ಲ. ನಮ್ಮ ದೇಶದಲ್ಲಿ ಸಕ್ರಿಯವಾಗಿರುವ ಕಾರ್ಪೊರೇಟ್ ಸಂಸ್ಥೆಗಳು ಜಾಗರೂಕತೆಯ ಹೆಜ್ಜೆಗಳನಿಡುತ್ತಾ, "ಕಾದು ನೋಡುವ" ನೀತಿಯನ್ನು ತಮ್ಮದಾಗಿಸಿಕೊಂಡು, ಭಾರಿ ಸಾಲಗಳನ್ನು ಪಡೆಯಲು ಉತ್ಸುಕರಾಗಿದ್ದಂತೆ ತೋರುತ್ತಿಲ್ಲ. ಗೃಹ ಸಾಲಗಳ ಬೇಡಿಕೆಯಲ್ಲೂ ಹಿಂಜರಿತ ಕಂಡುಬಂದಿದೆ. ವಾಹನಗಳ ಮಾರಾಟದಲ್ಲಿ ಭಾರಿ ಕುಸಿತವುಂಟಾಗಿದೆ. ನಮ್ಮ ಬ್ಯಾಂಕರ್ಗಳಿಗೂ ಭಾರಿ ಸಾಲಗಳನ್ನು ಮಂಜೂರು ಮಾಡುವ  ಮನಸಿದ್ದಂತ್ತಿಲ್ಲ. "ಮಂಜೂರು ಮಾಡಿದ ಸಾಲಗಳೇನಾದರೂ ಹಿಂತುರುಗಿ ಬಾರದವಾದರೆ, ತಮ್ಮಗಳಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ" ಎಂಬ ಭಯ ನಮ್ಮ ಬ್ಯಾಂಕ್ ಅಧಿಕಾರಿಗಳನ್ನು ಕಾಡುತ್ತಿದೆ. ಸಾಲಗಳನ್ನು ಮಂಜೂರು ಮಾಡುವಾಗ ಸಾಲದ ಅಭ್ಯರ್ಥಿಗಳಲ್ಲಿ ಪರೀಕ್ಷಿಸಬೇಕಾದ ೪-Cಗಳಾದ "ಗುಣ (Character), ಸಾಮರ್ಥ್ಯ (Capacity), ಬಂಡವಾಳ (Capital) ಮತ್ತು ಪರಿಸ್ಥಿತಿ (Conditions)"ಗಳನ್ನು ನಮ್ಮ ಹಿರಿಯ ಬ್ಯಾಂಕ್ ಅಧಿಕಾರಿಗಳು ಮರೆತೇಬಿಟ್ಟಿದ್ದಾರೆ. ಈಗ ಅವರುಗಳನ್ನು ಬೇರೆ ೪-Cಗಳಾದ "ಕೋರ್ಟ್ಗಳು, ಸಿ.ವಿ.ಸಿ., ಸಿ.ಏ.ಜಿ. ಮತ್ತು ಸಿ.ಬಿ.ಐ. (Courts, CVC, CAG and CBI)"ಗಳ ಭಯ ಕಾಡ ಹತ್ತಿದೆ. ಈ ಭಯದ ವಾತಾವರಣವನ್ನು ಹೋಗಲಾಡಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿಲ್ಲ. ಪ್ರಾಮಾಣಿಕ ಬ್ಯಾಂಕ್ ಅಧಿಕಾರಿಗಳ ಬೆನ್ನ ಹಿಂದೆ ನಾವಿದ್ದೇವೆ ಎಂಬ ಸಂದೇಶವನ್ನು ಸರಕಾರ ಅವರುಗಳಿಗೇಕೆ ರವಾನಿಸುತ್ತಿಲ್ಲ?

ಕಾರ್ಮೋಡ ಕವಿದಂತಿರುವ ಆರ್ಥಿಕ ಕ್ಷೇತ್ರದ, ಬೆಳ್ಳಿ ಅಂಚಾಗಿ ನಮ್ಮ ಕೃಷಿ ವಲಯ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್ ದಾಳಿಯನ್ನೂ ಲೆಕ್ಕಿಸದೆ ನಮ್ಮ ರೈತರುಗಳು ತಮ್ಮ ಕಾರ್ಯಗಳನ್ನು         ಎಂದಿನ ಉತ್ಸಾಹದಿಂದ ಮಾಡುತ್ತಿದ್ದಾರೆ. ಮೊನ್ನೆಯಿನ್ನು ಸಮಾಪ್ತಿಗೊಂಡ ಹಿಂಗಾರು ಬೆಳೆಗಳ (Rabi harvest) ಕೊಯ್ಲಿನಲ್ಲಿ, ಕಳೆದ ವರ್ಷಕ್ಕಿಂತ ಹೆಚ್ಚಿನ ಇಳುವರಿಯನ್ನು ನಮ್ಮ ರೈತರು ಸಾಧಿಸಿ ತೋರಿಸಿದ್ದಾರೆ. ಮುಂಗಾರು ಬೆಳೆಯ (Kharif season) ಭಿತ್ತನೆಯ ಕಾರ್ಯ ಕೂಡ ಚುರುಕಾಗೇ  ಸಾಗಿದೆ. ಈ ಬಾರಿಯ ಮುಂಗಾರು ಮಳೆ (Manson)ಯ ವಿಷಯದಲ್ಲಿ ವರುಣ ದೇವ ನಮ್ಮ ದೇಶದ ಪಾಲಿಗೆ ಕರುಣಾಮಯನಾಗಿದ್ದಾನೆ. ಆದರೆ ತನ್ನ ಆರ್ಥಿಕ ಪ್ಯಾಕೆಜ್ನಲ್ಲಿ ನಮ್ಮ ಸರಕಾರ ರೈತರಿಗಳಿಗೇನು ಕೊಟ್ಟಿದೆ?' ಎಂದು ಪ್ರಶ್ನಿಸುತ್ತಾ ಪ್ರೊ. ಪ್ರಹ್ಲಾದ್ ರವರು ತಮ್ಮ ಭಾಷಣವನ್ನು ಮುಗಿಸುತ್ತಲೇ, ಎಲ್ಲರ ನಡುವೆ ಕೆಲ ಕ್ಷಣ ಮೌನ ಮರಗಟ್ಟಿತ್ತು. ಪ್ರಹ್ಲಾದರ ಭಾಷಣದದ್ದಕ್ಕೂ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಿದ್ದ ರಾಜುರವರು ಮಾತನಾಡಲು ಎದ್ದು ನಿಂತಾಗ, ಎಲ್ಲರ ಗಮನ ಅವರ ಮೇಲೇ  ಕೇಂದ್ರೀಕೃತವಾಗಿತ್ತು. 

'ವಿಮರ್ಶಾತ್ಮಕ ಭಾಷಣವನ್ನು ಮನಮುಟ್ಟುವಂತೆ ಮಾಡಿದ ಪ್ರೊ. ಪ್ರಹ್ಲಾದ್ ರವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಅವರು ಪ್ರಸ್ತಾಪಿಸಿದ ಕೆಲವೊಂದು ಅಂಶಗಳು ಕೇಂದ್ರ ಸರಕಾರದ ಕಣ್ತೆರಸುವಂತಾಗಲಿ ಎಂದು ಆಶಿಸುತ್ತೇನೆ. ಸಾಧ್ಯವಾದ ಎಲ್ಲಾ ಕಡೆಗಳಲ್ಲಿ ನದಿಗಳ ಜೋಡಣೆಯ ಬಗೆಗಿನ ಅವರ ಸಲಹೆ ಸ್ವಾಗತಾರ್ಹವಾದುದು. ೨೦೧೯ರ ಡಿಸೆಂಬರ್ ದಿನಗಳಂದು ಕೇಂದ್ರ ಸರಕಾರ ಯೋಜಿಸಿದ್ದ ರೂ. ೧೦೨ ಲಕ್ಷ ಕೋಟಿಗಳ ನ್ಯಾಷನಲ್ ಇನ್ಫ್ರಾ ಯೋಜನೆಯಡಿ ಕಾರ್ಯಗಳನ್ನು ತ್ವರಿತಗೊಳಿಸುವ ಅವರ ಸಲಹೆ ಕೂಡಾ ಸೂಕ್ತವಾದುದೆ. ಆದರೆ ಪ್ರೊ. ಪ್ರಹ್ಲಾದರು ಪ್ರಸ್ತಾಪಿಸಿದ ಮಿಕ್ಕ ಪ್ರಶ್ನೆಗಳನ್ನು ಕುರಿತಾದ ಉತ್ತರಗಳನ್ನು ನೀಡಲಿಚ್ಛಿಸುತ್ತೇನೆ. 

-ಮಾರ್ಚ್ ೨೫ರಿಂದ ಜಾರಿಗೊಳಿಸಿದ ಲಾಕ್ಡೌನನ್ನು ದಿಢೀರನೆ ಕೈಕೊಂಡ ನಿರ್ಧಾರ ಎನ್ನಲಾಗದು. ಮಾರ್ಚ್ ೨೨ರಂದು ಜಾರಿಗೊಳಿಸಿದ ಜನತಾ ಕರ್ಫ್ಯೂವಿನ ಘೋಷಣೆಯನ್ನು ಮಾರ್ಚ್ ೨೦ರಂದೇ ಪ್ರಧಾನಿ ಮೋದಿಯವರು ಮಾಡಿದ್ದರು. ಅಂದಿನ ಭಾಷಣದಲ್ಲೇ ದೀರ್ಘವಾದ ಲಾಕ್ಡೌನಿನ ಮುನ್ಸೂಚನೆಯನ್ನು ನೀಡಲಾಗಿತ್ತು. 

-೨೦-೨೧ರ ಆರ್ಥಿಕ ವರ್ಷದ ಮುನ್ಸೂಚನೆಯ ಪ್ರಕಾರ ಭಾರತ (೧. ೫%) ಮತ್ತು ಚೀನಾ (೧. ೭%)ಗಳು ಮಾತ್ರ ತಮ್ಮ ತಮ್ಮ ಜಿ.ಡಿ.ಪಿ.ಗಳಲ್ಲಿ ಹೆಚ್ಚಳವನ್ನು ದಾಖಲಿಸಲಿವೆ. ಮಿಕ್ಕೆಲ್ಲಾ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಕುಸಿಯುವುದು ಖಚಿತ. 

-ಕೋವಿಡ್ ಪ್ಯಾಕೇಜ್ನ ಯೋಜನೆಗಳ ಪ್ರಕಾರ, ಎಂ.ಎಸ್.ಎಂ.ಇ.ಗಳಿಗೆ ಒದಗಿಸಲಿರುವ ಆಧಾರರಹಿತ ಸಾಲಗಳಿಂದ, ಅವುಗಳು ಮತ್ತೆ ಪ್ರಗತಿಯ ಹಾದಿಯನ್ನು ಹಿಡಿಯುವ ಎಲ್ಲಾ ಸಾಧ್ಯತೆಗಳು ಇವೆ. ಈ ಎಲ್ಲ ಸಂಕಷ್ಟಗಳ ನಡುವೆಯೂ ನಿರ್ಮಾಣದ ಕ್ಷೇತ್ರದಲ್ಲಿ ಕಾರ್ಯಗಳಾಗಲೇ ಶುರುವಾಗಿದೆ. ಈ ಎಲ್ಲಾ  ಬೆಳವಣಿಗೆಗಳಿಂದ ವಲಸಿಗರು ಮತ್ತೆ ನಗರಗಳತ್ತ ಕೆಲಸವನ್ನರಸಿ ಮುಖ ಮಾಡುವಂತಾಗಿದೆ. 

-ನಗರಗಳಿಗೆ ಹಿಂತಿರುಗಲಿಚ್ಛಿಸಿದ ವಲಸಿಗರಿಗೆ, ಅವರವರ ಹಳ್ಳಿಗಳಲ್ಲೇ ಉದ್ಯೋಗವನ್ನೊದಗಿಸುವ ಏರ್ಪಾಡನ್ನೂ ಮನರೇಗ (MANREGA) ಯೋಜನೆಯಡಿ ರೂಪಿಸಲಾಗಿದೆ. ಆರ್ಥಿಕ ವರ್ಷ ೨೦-೨೧ಕ್ಕೆ ಮನರೇಗ ಯೋಜನೆಯಡಿ ಮೀಸಲಿರಿಸಿದ ಮೊತ್ತ ರೂ. ೧ ಲಕ್ಷ ಕೋಟಿಗಳಾಗಿತ್ತು. ಆ ಯೋಜನೆಗೀಗ  ರೂ .೪೦,೦೦೦ ಕೋಟಿಗಳ ಹೆಚ್ಚಿನ ಮೊತ್ತವನ್ನು ನೀಡಲಾಗಿದೆ. ಆ ಯೋಜನೆಯಡಿ ನಿರುದ್ಯೋಗಿ ವಲಸಿಗರೆಲ್ಲರಿಗೂ ಅವರವರ ಹಳ್ಳಿಗಳಲ್ಲಿ ೧೦೦ ದಿನಗಳ ಉದ್ಯೋಗದ ಖಾತರಿಯನ್ನು ನೀಡಲಾಗಿದೆ. ಪ್ರತಿ ದಿನದ ಸಂಬಳವನ್ನು ರೂ.೧೮೨ರಿಂದ ರೂ.೨೦೨ರ ವರೆಗೆ ಹೆಚ್ಚಿಸಲಾಗಿದೆ. 

-ಅತ್ಯಂತ ಹೆಚ್ಚಿನ ಸಂಖ್ಯೆಯ ವಲಸಿಗರು ಹಿಂತಿರುಗಿರುವ ಪೂರ್ವ ಭಾಗದ  ಆರು ರಾಜ್ಯಗಳ ೧೧೬ ಜಿಲ್ಲೆಗಳಲ್ಲಿ, ಹೆಚ್ಚಿನ ಉದ್ಯೋಗಗಳ ಸೃಷ್ಟಿಯನ್ನುಂಟುಮಾಡಲು, ಹಲವು ಮೂಲಭೂತ ಸೌಕರ್ಯಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳಿಗೆ ರೂ. ೫೦,೦೦೦ ಕೋಟಿಗಳ ನಿಧಿಯನ್ನು ಕಾದಿರಿಸಲಾಗಿದೆ. 

-"ಭೂಮಿ, ರಕ್ಷಣೆ ಮತ್ತು ಕಾರ್ಮಿಕರ (Land, Defense and Labour)" ಕ್ಷೇತ್ರಗಳಲ್ಲಿ ತುರ್ತಾಗಿ ಬೇಕಾದ ಸುಧಾರಣೆಗಳನ್ನು ಹಲವು ರಾಜ್ಯಗಳಾಗಲೇ ಜಾರಿಗೊಳಿಸಿದ್ದಾಗಿದೆ. ಆ ಸುಧಾರಣೆಗಳ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನು ಆಯಾ ರಾಜ್ಯಗಳ ಎ.ಪಿ.ಎಂ.ಸಿ.ಗಳಲ್ಲೇ ಮಾರಾಟ ಮಾಡಬೇಕಾದ ಅನಿವಾರ್ಯತೆ ಇಲ್ಲ. ಉತ್ತಮ ದರ ದೊರೆಯುವ ಯಾವುದೇ ಮಾರುಕಟ್ಟೆಯಲ್ಲಿ ಅವರುಗಳು ತಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದಾಗಿದೆ. 

-ಚೀನಾದಿಂದ ಹೊರಬರಲಿಚ್ಛಿಸುವ ಉದ್ಯಮಿಗಳನ್ನು ಭಾರತದ ಕಡೆ ಕರೆತರುವ ಎಲ್ಲ ಪ್ರಯತ್ನಗಳಿಗೂ ಒತ್ತು ನೀಡಲಾಗುತ್ತಿದೆ. ಜೆರ್ಮನಿಯ ಭಾರಿ ಪಾದರಕ್ಷೆಗಳ ಘಟಕವೊಂದು ಚೀನಾದಿಂದ ಭಾರತದೆಡೆಗೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಕೈಗೊಂಡಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉದ್ಯಮಿಗಳು ಭಾರತದೆಡೆಗೆ ಬರುವ ನೀರೀಕ್ಷೆಯಿದೆ. 

-ಭಾರತ ಹೊಂದಿರುವ  ಇಂದಿನ ವಿದೇಶಿ ವಿನಿಮಯಗಳ ರಾಶಿಯ ಮೊತ್ತ ಯು.ಎಸ್.ಡಾ.  ೫೦೧ ಬಿಲಿಯನ್ ಗಳಷ್ಟಿದ್ದು, ಇಂದೊಂದು ದಾಖಲೆಯ ಮೊತ್ತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಮ್ಮಿಯಾಗಿದ್ದು, ನಮ್ಮ ವಿದೇಶಿ ವಿನಿಮಯಗಳ ರಾಶಿಯ ಹೆಚ್ಚಿನ ಶೇಖರಣೆಗೆ ಪೂರಕವಾಗಿದೆ. 

-ಠೇವಣಿಗಳ ಮೇಲಿನ ಬಡ್ಡಿಯ ದರ ಬ್ಯಾಂಕುಗಳಲ್ಲಿ ಕುಸಿಯುತ್ತಿರುವುದರ ಬಗೆಗಿನ ತಮ್ಮ ಕಳಕಳಿ ನನಗೂ ಇದೆ. ನಮ್ಮ ಹಿರಿಯ ನಾಗರಿಕರು ಇದರಿಂದ ಆತಂಕಗೊಂಡಿರುವುದಂತೂ ಸತ್ಯ. ಆದರೆ ಕೇಂದ್ರ ಸರಕಾರ ಹಿರಿಯ ನಾಗರೀಕರಿಗಾಗಿ ಎರಡು ಉತ್ತಮ ಠೇವಣಿಯ ಯೋಜನೆಗಳನ್ನು ಈಗಲೂ ಜಾರಿಯಲ್ಲಿರಿಸಿದೆ. "ಎಲ್.ಐ.ಸಿ. ಸಂಸ್ಥೆಯ ವಯವಂದನಾ" ಯೋಜನೆ ೧೦ ವರ್ಷಗಳ ಠೇವಣಿ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಹಿರಿಯ ನಾಗರಿಕರು ತಲಾ ರೂ. ೧೫ ಲಕ್ಷಗಳವರೆಗಿನ ಹಣವನ್ನು ತೊಡಗಿಸಬಹುದಾಗಿದೆ. ಕೇಂದ್ರ ಸರಕಾರದ ಮತ್ತೊಂದು ಯೋಜನೆಯಾದ "ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme - SCSS)" ಕೂಡ ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಅದು ೫ ವರ್ಷಗಳ ಅವಧಿಯ ಯೋಜನೆಯಾಗಿದ್ದು, ಆ  ಯೋಜನೆಯಲ್ಲೂ ತಲಾ ರೂ. ೧೫ ಲಕ್ಷಗಳವರೆಗಿನ ಮೊತ್ತವನ್ನು ತೊಡಗಿಸಬಹುದಾಗಿದೆ. ಈ ಎರಡೂ ಯೋಜನೆಗಳಲ್ಲಿ ಇಂದು ೭. ೪%ರಷ್ಟು ಬಡ್ಡಿಯ ದರ ನಿಗದಿಯಾಗಿದ್ದು, ಪ್ರತಿ ತಿಂಗಳು ಬಡ್ಡಿ ಪಡೆಯುವ  ಸೌಲಭ್ಯವಿದೆ.   

ಕಡೆಯದಾಗಿ ಪ್ರಹ್ಲಾದ್ರವರು ರೈತರ ಬವಣೆಯ ಮೇಲಿನ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮೆಲ್ಲರಿಗೂ ಆ ವಿಷಯದ ಬಗೆಗಿನ ಅನುಕಂಪವಿದೆ. ಕೋವಿಡ್ ಪ್ಯಾಕೇಜಿನಡಿ ರೈತರುಗಳಿಗಾಗಿ ಪ್ರಕಟಿಸಿರುವ ಪರಿಹಾರಗಳ ವಿವರಗಳನ್ನು ತಮ್ಮಗಳ ಮುಂದೆ ನೀಡ ಬಯಸುತ್ತೇನೆ. ದಯಮಾಡಿ ಗಮನವಿಟ್ಟು ಕೇಳಿ. 

"ನಮ್ಮ ಪ್ರೀತಿಯ ರೈತರುಗಳೇ 

ಭಾರತ ತಮ್ಮೊಂದಿಗಿದೆ. 

ಕೋವಿಡ್ನಿಂದಾದ ದುಃಸ್ಥಿತಿಯನ್ನು ನಿಭಾಯಿಸಲು ತಮಗಾಗಿ ಕೆಳಕಂಡ ವ್ಯವಸ್ಥೆಗಳನ್ನು ಮಾಡಲಾಗಿದೆ. 

-ಕಿಸಾನ್ ಕ್ರೆಡಿಟ್ ಕಾರ್ಡ್ನಡಿ ಹೆಚ್ಚಿನ ಸಾಲವನ್ನು ಒದಗಿಸಲು ರೂ. ೨ ಲಕ್ಷ ಕೋಟಿಯಷ್ಟರ ನಿಧಿಯನ್ನು ಕಾದಿರಸಲಾಗಿದೆ. 

-ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ತಲಾ ರೂ. ೬೦೦೦ ಗಳನ್ನೂ, ಮೂರು ಸಮನಾದ ಕಂತುಗಳಲ್ಲಿ ವಿತರಿಸಲಾಗುವುದು. ಈ ಯೋಜನೆಯಡಿ ಲಾಕ್ಡೌನ್ ಅವಧಿಯಲ್ಲಿ  ರೂ. ೧೯,೪೫೭ ಕೋಟಿಯಷ್ಟು ಹಣವನ್ನು ೯. ೭೨ ಕೋಟಿ  ರೈತ ಕುಟುಂಬಗಳಿಗೆ ನೀಡಲಾಗಿದೆ. 

-ರೈತರ ಉತ್ಪನ್ನಗಳಿಗಾಗಿ  ಶಿಥಿಲೀಕರಣ ಕಪಾಟುಗಳ(Cold Storage) ವ್ಯವಸ್ಥೆಯ ಅಭಿವೃದ್ಧಿಗಾಗಿ ರೂ. ೧ ಲಕ್ಷ ಕೋಟಿಯಷ್ಟರ ನಿಧಿಯನ್ನು ಕಾದಿರಿಸಲಾಗಿದೆ. 

-ಈಗಿರುವ ಎ.ಪಿ.ಎಂ.ಸಿ. ವ್ಯವಸ್ಥೆ ಮುಂದುವರೆಯುತ್ತದೆ. ರೈತರ ಉತ್ಪನ್ನಗಳ ಮಾರುಕಟ್ಟೆಯ ವಿಸ್ತಾರವನ್ನು ಹೆಚ್ಚಿಸಲು ಬೇಕಾದ ಕಾನೂನಿನ ಸುಧಾರಣೆಗಳನ್ನು ತರಲಾಗುವುದು. ಉತ್ತಮ ಬೆಲೆ ಸಿಗುವ ಯಾವುದೇ ಮಾರುಕಟ್ಟೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಂತಹ  ವ್ಯವಸ್ಥೆಯನ್ನು ರೂಪಿಸಲಾಗುವುದು. 

-ಅಗತ್ಯ ವಸ್ತುಗಳ ಕಾಯಿದೆ (Essential Commodities Act) ಮತ್ತು ಎ.ಪಿ.ಎಂ.ಸಿ. ಕಾಯಿದೆಗಳಿಗೆ ಬೇಕಾದ ಸುಧಾರಣೆಗಳನ್ನು ತಂದು, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡಲಾಗುವುದು. 

-ಅಸಂಘಟಿತ (unorganized sector) ಕ್ಷೇತ್ರದ ಎರಡು ಲಕ್ಷ  ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ (Micro-Food Processing Enterprises) ಪ್ರೋತ್ಸಾಹ ನೀಡಲು, ರೂ. ೧೦,೦೦೦ ಕೋಟಿಗಳಷ್ಟು ನಿಧಿಯನ್ನು ಮಂಜೂರು ಮಾಡಲಾಗಿದೆ. 

-ಮೀನುಗಾರರ ಆದಾಯ ವೃದ್ಧಿಸಲು ಬೇಕಾದ ಕ್ರಮಗಳನ್ನು ಜಾರಿಗೊಳಿಸಲು ರೂ. ೨೦,೦೫೦ ಕೋಟಿಗಳ ನಿಧಿಯನ್ನು ವಿನಿಯೋಗಿಸಲಾಗುವುದು. 

-ಪಶು ಸಂಗೋಪನೆಯ ಕಾಯಕದ ಅಭಿವೃದ್ಧಿಗೆ ರೂ. ೧೫,೦೦೦ ಕೋಟಿಗಳ ಧನವನ್ನು ಕಾದಿರಿಸಲಾಗಿದೆ. 

-ರೈತರ ಗೆಲುವೇ ದೇಶದ ಗೆಲುವು. ತಮ್ಮ ವಿಜಯದೊಂದಿಗೆ  ಕೋವಿಡ್ನೊಂದಿಗಿನ ಸಮರದ ವಿಜಯ ಸಾಧಿಸೋಣ."

ಇಡೀ ವಿಶ್ವ ಇಂದು ಎದುರಿಸುತ್ತಿರುವ ಕೋವಿಡ್ನ ಸವಾಲುಗಳು ನಮಗೆ "ಆತ್ಮನಿರ್ಭರತೆ"ಯ ಪಾಠವನ್ನು ಕಲಿಸಿದೆ. 

ನರೇಂದ್ರ ಮೋದಿ 

ಪ್ರಧಾನ ಮಂತ್ರಿಗಳು'

ಮೋದಿಯವರ ಕಟ್ಟಾ ಅಭಿಮಾನಿಯಾದ ರಾಜುರವರ ಸಮಜಾಯಿಷಿಯ ವಾದದ ಸರಣಿ ಹೀಗೆ ಅಂತ್ಯಗೊಂಡಿತ್ತು. 

ರಾಜುರವರ ವಾದ ಸರಣಿಯನ್ನು ಅನುಮೋದಿಸಿ ಭೋರ್ಗರೆದ ಚಪ್ಪಾಳೆಯ ಸರಣಿ ಪ್ರೊ. ಪ್ರಹ್ಲಾದ್ರವರಿಂದಲೇ ಆರಂಭವಾಗಿದ್ದು ಗಮನಾರ್ಹವಾಗಿತ್ತು. 

ತನ್ನ ಮಾತಿನ ಅವಕಾಶಕ್ಕಾಗಿ ಸಹನೆಯಿಂದ ಕಾಯುತ್ತಿದ್ದ ರೋಹಿಣಿಯ ಸರದಿ ಈಗ ಬಂದಿತ್ತು. 'ಇಂದಿನ ಗಹನವಾದ ಚರ್ಚೆ ಉನ್ನತ ಮಟ್ಟದಾಗಿದ್ದು ನಾನು ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಇಂದು ಮಾತನಾಡಿದ ಎಲ್ಲಾ ಹಿರಿಯರುಗಳಿಗೂ ನನ್ನ ಧನ್ಯವಾದಗಳು. 

ಶ್ರೀಮತಿ ನಳಿನೀರವರು ನನ್ನ ಚಿಕ್ಕಮ್ಮ. ಸುಮಾರು ೪೦ರ ಪ್ರಾಯದ,  ಆಕೆಯ ಹೋರಾಟದ ಕತೆಯನ್ನು ತಮ್ಮಗಳ ಮುಂದೆ ಪ್ರಸ್ತಾಪಿಸಲಿಚ್ಛಿಸುತ್ತೇನೆ. ನಾಲ್ಕು ವರ್ಷಗಳ ಹಿಂದೆ ಆಕೆಯ ಪತಿಯವರು ಅಪಘಾತವೊಂದರಲ್ಲಿ ಮೃತಪಟ್ಟರು. ಎರಡು ಚಿಕ್ಕ ಹೆಣ್ಣು ಮಕ್ಕಳ ಜಾವಬ್ದಾರಿ ಅವರ ಮೇಲೆ ದಿಢೀರನೇ ಬಿದ್ದಿತ್ತು.  ಜೀವನೋಪಾಯಕ್ಕಾಗಿ ಯಾವುದಾದರೂ ಕೆಲಸವನ್ನು ಕೈಗೊಳ್ಳುವ ಒತ್ತಡ  ಆಕೆಯ ಮೇಲಿತ್ತು. ಪತಿಯ ನಿಧನದನಂತರ ಅವರು ಮಾಂಟೆಸರಿ ತರಬೇತಿಯ ಕೋರ್ಸ್ ಒಂದನ್ನು   ಪೂರ್ಣಗೊಳಿಸಿಕೊಂಡರು. ಎರಡು ವರ್ಷಗಳ ಹಿಂದೆ ಬ್ಯಾಂಕೊಂದರಿಂದ ಏಳು ಲಕ್ಷ ರುಪಾಯಿಗಳ ಸಾಲವನ್ನು ಪಡೆದು ಮಾಂಟೆಸರಿ ಶಾಲೆಯೊಂದನ್ನು ಆಕೆ ಆರಂಭಿಸಿದ್ದರು. ಸುಮಾರು ೧೦,೦೦೦ ಫ್ಲ್ಯಾಟ್ಗಳ ಸಂಕೀರ್ಣಗಳಿಂದ ಸುತ್ತುವರೆದ ಬಡಾವಣೆಯೊಂದರ ಕೇಂದ್ರ ಸ್ಥಾನದಲ್ಲಿ ಹೆಚ್ಚಿನ ಬಾಡಿಗೆಯ ಕರಾರಿಗೆ ಸಹಿಮಾಡಿ ತಮ್ಮ ಶಾಲೆಗಾಗಿ ಸುಸಜ್ಜಿತ ಕಟ್ಟಡವೊಂದನ್ನು ಅವರು ಪಡೆದಿದ್ದರು. ಇಂದಿನ ದಿನಗಳ ಮಾಂಟೆಸರಿ ಶಾಲೆಗೆ ಬೇಕಾದ ಎಲ್ಲಾ ಆಧುನಿಕ ಉಪಕರಣಗಳನ್ನು ಆರು ಲಕ್ಷ ರುಪಾಯಿಗಳ ಹಣವನ್ನು ತೊಡಗಿಸಿ ಖರೀದಿಸಿದ್ದರು. ಶಾಲೆಯನ್ನು ಆರಂಭಿಸಿದ ಮೊದಲ ವರ್ಷದಲ್ಲೇ ೧೦೦ಕ್ಕೂ ಹೆಚ್ಚು ಮಕ್ಕಳು ಸೇರ್ಪಡೆಯಾಗಿದ್ದು ನನ್ನ ಚಿಕ್ಕಮ್ಮನಿಗೆ ಸಂತಸವನ್ನು ತಂದಿತ್ತು. ಆರು ಶಿಕ್ಷಕರನ್ನು ಮತ್ತು ೮ ಸಹಾಯಕರನ್ನು ಅವರು ನೇಮಿಸಿಕೊಂಡಿದ್ದರು. ಕೆಲವೇ ತಿಂಗಳುಗಳ ಹಿಂದೆ ಅವರು ಒಬ್ಬ ಹೆಮ್ಮೆಯ ಮಹಿಳಾ ಉದ್ಯಮಿ ಎನಿಸಿಕೊಂಡಿದ್ದರು. 

ಕೋವಿಡ್ನ ಮಹಾಮಾರಿ ವ್ಯಾಪಕವಾಗಿ ಹರಡಿದನಂತರ, ಪೋಷಕರು ತಮ್ಮ ಮಕ್ಕಳುಗಳನ್ನು ಮಾಂಟೆಸರಿ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ. ಕೇವಲ ಸೇವಾ ಮನೋಭಾವದ ಮಹಿಳೆಯಾದ ನನ್ನ ಚಿಕ್ಕಮ್ಮ ತಿಂಗಳು ಕಳೆದನಂತರವೇ ಶುಲ್ಕವನ್ನು ವಸೂಲು ಮಾಡುತ್ತಿದ್ದವರು. ಇಡೀ ವರ್ಷದ ಶುಲ್ಕವನ್ನು ವರ್ಷದ ಮೊದಲೇ ಪಡೆದುಕೊಳ್ಳುವ ಪರಿಪಾಠ ಮುಗ್ಧೆಯಾದ ನಳಿನಿಯವರಿಗೆ ತಿಳಿದಿರಲಿಲ್ಲ. ಹೆಚ್ಚಿನ ಸಂಖ್ಯೆಯ ಪೋಷಕರು ಫೆಬ್ರವರಿ ೨೦೨೦ರ ನಂತರ ಶುಲ್ಕವನ್ನು ಕಟ್ಟುವುದನ್ನೇ ನಿಲ್ಲಿಸಿದ್ದಾರೆ. ಹೊಸವರ್ಷದ ಹೊಸ ಸೇರ್ಪಡೆಗಳು ಆರಂಭವಾಗೇ ಇಲ್ಲ. ಮಹಾಮಾರಿ ಮುಂದುವರೆದಿರುವುದರಿಂದ ಹೊಸ ಸೇರ್ಪಡೆಗಳ ಸಾಧ್ಯತೆ ಇಲ್ಲವೇ ಇಲ್ಲ. ಬ್ಯಾಂಕಿನ ಸಾಲದ ಕಂತುಗಳನ್ನು ಕಟ್ಟಲಾಗದ ಅವರ ಮೇಲೆ ಬೇರೆ ಬೇರೆ ಕಡೆಗಳಿಂದ ಹಣಕ್ಕಾಗಿ ಒತ್ತಡಗಳು ಬರ ಹತ್ತಿವೆ.  ಎಲ್ಲಾ ಭರವಸೆಗಳನ್ನೂ ಕಳೆದುಕೊಂಡಿರುವ ನಮ್ಮ ಚಿಕ್ಕಮ್ಮ ಈಗ ತಮ್ಮ ಶಾಲೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಆದರೆ ಶಾಲೆಯನ್ನು ಖರೀದಿಸಲು ಯಾರೂ ಮುಂದೆ ಬಂದಿಲ್ಲ. ಪೀಠೋಪಕರಣಗಳನ್ನು ಬಿಡಿಯಾಗೂ ಮಾರಲು ಆಕೆ ತಯಾರಿದ್ದರೂ, ಅವರ ವಸ್ತುಗಳನ್ನು ಕೊಳ್ಳುವರಿಲ್ಲವಾಗಿದ್ದಾರೆ. ಕೋವಿಡ್ ಮಹಾಮಾರಿ ಅವರನ್ನು ಜೀವಂತವಾಗಿ ಕೊಂದು ಬಿಟ್ಟಿದೆ. 

ಮಹಾಮಾರಿ ಕೊನೆಗೊಳ್ಳಬಹುದೆಂಬ ಭರವಸೆಯ ಮೇಲೆ ನಳಿನೀರವರು ಮತ್ತೊಂದು ವರ್ಷ ಕಾಯಲು ತಯಾರಿದ್ದಾರೆ. ಆದರೆ ಒಂದು ವರ್ಷ ಕಳೆದನಂತರವೂ ಹೆಚ್ಚಿನ ಮಕ್ಕಳು ಸೇರುವ ನೀರಿಕ್ಷೆ ಕುಂದುತ್ತಿದೆ. ಮನೆಯಿಂದಲೇ ಕೆಲಸಗಳನ್ನು ಮಾಡುತ್ತಿರುವ ಮಹಿಳೆಯರು  ತಮ್ಮ ಮಕ್ಕಳುಗಳನ್ನು ಕೆಲಸದೊಂದಿಗೇ ಮನೆಯಲ್ಲೇ ನಿಭಾಯಿಸುವ ವಿಧಾನಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. 

ಕೆಲವೇ ತಿಂಗಳುಗಳ ಹಿಂದೆ ನನ್ನ ಚಿಕ್ಕಮ್ಮ ಒಬ್ಬ "ಮಹಾತಾಯಿ (Super Mother)"ಯಾಗಿದ್ದರು,  ರಾಣಿಯಂತ್ತಿದ್ದರು. ಆದರೀಗ ಅವರು ಅಸಹಾಯಕ ಮಹಿಳೆಯಾಗಿ ನಿಂತಿದ್ದಾರೆ. ಆಕೆಗೆ ಯಾರು ಪರಿಹಾರವನ್ನೊದಗಿಸ ಬಲ್ಲರು? ಬ್ಯಾಂಕುಗಳು ಅವರ ಸಾಲದ ಮರುಪಾವತಿಯಲ್ಲಿ ರಿಯಾಯಿತಿಗಳನ್ನು ತೋರಬಲ್ಲದೇ? ಸರಕಾರ ಅವರ ನೆರವಿಗೆ ಬರಬಲ್ಲದೆ?'

ನಳಿನಿಯವರ ಕತೆಯನ್ನು ಹೇಳುತ್ತಾ ನಿಂತ್ತಿದ್ದ ರೋಹಿಣಿಯವರ ಕಣ್ಣುಗಳಲ್ಲಿ ನೀರು ಹನಿಯುತ್ತಿತ್ತು. ಕೆಲವು ಹಿರಿಯವರು  ಕೂಡಾ ಅವರ ಕಣ್ಣಾಲೆಗಳನ್ನು ಒರೆಸಿಕೊಳ್ಳುವುದು ಕಂಡಿತ್ತು. ಕಾರ್ಯಕ್ರಮದ ಅಂತ್ಯದಲ್ಲಿ ಸಭಿಕರೆಲ್ಲರನ್ನು ದುಃಖದಲ್ಲಿ ಮುಳುಗಿಸಿದ್ದಕ್ಕಾಗಿ ರೋಹಿಣಿ ಎಲ್ಲರ ಕ್ಷಮೆಯಾಚಿಸಿದ್ದಳು. ಆದರೆ ರೋಹಿಣಿ ಹೇಳಿದ ಕತೆ,  ಇಡೀ ದೇಶದ ಮೂಲೆ ಮೊಲೆಗಳಲ್ಲಿರುವ ಕೋಟಿ ಕೋಟಿ ಸ್ವಂತ ಉದ್ಯಮಿಗಳ ಕತೆಯಾಗಿತ್ತು. ಕಾಣದ ಮಹಾಮಾರಿ ಜೀವಗಳನ್ನು ಹರಣ ಮಾಡಿದ್ದಕ್ಕಿಂತ, ಹೆಚ್ಚಿನ ಸಂಖ್ಯೆಯ ಉದ್ಯಮಗಳನ್ನು ಮತ್ತು ಉದ್ಯೋಗಗಳನ್ನು ಕೊಂದಿತ್ತು. 'ದೇವರೆಂಬ ಒಬ್ಬನಿದ್ದಾನೆಯೇ? ಮನುಕುಲದ ಕಷ್ಟಗಳೇನು ಅವನಿಗೆ ಕಾಣಿಸುತ್ತಿಲ್ಲವೇ? ಅವನು ಮೌನವಾಗಿದ್ದನೇಕೆ?' ಯಾರ ಮನಸಿನಲ್ಲೂ ಈ ಪ್ರಶ್ನೆಗಳಿಗೆ ಅಂದು ಉತ್ತರವಿರಲಿಲ್ಲ.

###