ವೀರ ಭಗತ್ ಸಿಂಗ್
ವಿಜಯ ಕರ್ನಾಟಕ ದೀಪಾವಳಿ ಸಂಚಿಕೆ (೨೦೨೫)ಗಾಗಿ
(ಲೇಖಕರು: ಲಕ್ಷ್ಮೀನಾರಾಯಣ ಕೆ., ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು, ಮೊಬೈಲ್ - ೯೮೪೫೫೬೨೬೦೩)
ಅಂದು 13 ಏಪ್ರಿಲ್ 1919ರ ಭಾನುವಾರವಾಗಿತ್ತು. ಆ ದಿನ ಪಂಜಾಬಿನ ಸುಗ್ಗಿಯ ಹಬ್ಬವಾದ ಬೈಸಾಖಿಯ ದಿನವಾದುದರಿಂದ ಅಂದು ಪಂಜಾಬಿನ ಅಮೃತಸರದ ಸ್ವರ್ಣಮಂದಿರದಲ್ಲಿ ವಿಶೇಷ ಸಮಾರಂಭ ಏರ್ಪಾಡಾಗಿತ್ತು. ಅಂದೇ, ಸಿಖ್ಖರ ಐದನೇ ಗುರು ಮತ್ತು ಸ್ವರ್ಣಮಂದಿರದ ನಿರ್ಮಾತೃವಾದ ಗುರು ಅರ್ಜುನ್ ದೇವರ ಬಲಿದಾನದ ದಿನವೂ ಆಗಿತ್ತು. ಆ ದಿನ ಹನ್ನೆರಡು ವರ್ಷದ ಬಾಲಕ ಭಗತ್ ಸಿಂಗ್, ತನ್ನ ತಂದೆ ಕಿಶನ್ ಸಿಂಗರೊಂದಿಗೆ ಪಂಜಾಬಿನ ಅಮೃತಸರದ ಸ್ವರ್ಣಮಂದಿರಕ್ಕೆ ಬಂದಿದ್ದನು. ಸ್ವರ್ಣ ಮಂದಿರದ ಗರ್ಭಗುಡಿಯಾದ ಶ್ರೀ ಹರಿಮಂದಿರ ಸಾಹಿಬಿಗೆ ತಮ್ಮ ನಮನವನ್ನು ಸಲ್ಲಿಸಿದ ಕಿಶನ್ ಸಿಂಗರು, ತಮ್ಮ ಮಗನಿಗೆ ಸ್ವರ್ಣಮಂದಿರದ ವಿವಿಧ ಪವಿತ್ರ ಸ್ಥಾನಗಳನ್ನು ತೋರಿಸಿದರು. ಸ್ವರ್ಣಮಂದಿರದ ಹೋರಾಟದ ಇತಿಹಾಸವನ್ನು ಕೇಳಿದ ಬಾಲಕ ಭಗತ್ ಸಿಂಗ್ ಪುಳಕಿತನಾಗಿದ್ದನು.
ಸ್ವರ್ಣಮಂದಿರದಿಂದ ಹೊರ ನಡೆಯುತ್ತಲೇ ಬಾಲಕ ಭಗತ್ ಸಿಂಗ್, ಸ್ವರ್ಣ ಮಂದಿರದ ಭಕ್ತರೆಲ್ಲರೂ ಸಮೀಪವೇ ಇದ್ದ ದೊಡ್ಡ ಮೈದಾನದ ಕಡೆ ಸಾಗುತ್ತಿದ್ದುದನ್ನು ನೋಡಿದನು. ಆ ಮೈದಾನವೇ ಜಲಿಯನ್ವಾಲಾ ಬಾಗ್ ಎಂದು ತಂದೆ ಕಿಶನ್ ಸಿಂಗರು ತಿಳಿಸಿದಾಗ ಬಾಲಕ ಭಗತ್ ಸಿಂಗನ ಕುತೂಹಲ ಮತ್ತಷ್ಟು ಕೆರಳಿತು. ಜಲಿಯನ್ವಾಲಾ ಬಾಗ್ ಎಂಬುದು ದೊಡ್ಡ ಮೈದಾನವೊಂದಾಗಿತ್ತು. ಆ ಮೈದಾನದ ಸುತ್ತಾ ಎತ್ತರದ ಗೋಡೆಯಿದ್ದು, ಆ ಮೈದಾನಕ್ಕೆ ಏಕೈಕ ಪ್ರವೇಶದ್ವಾರವಿದ್ದಿತು. ಭಗತ್ ಸಿಂಗ್, ಕೇವಲ ಹನ್ನೆರಡು ವರ್ಷದ ಬಾಲಕನಾದರೂ, ಅವನಿಗೆ ಭಾರತ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಾಕಷ್ಟು ತಿಳಿದಿತ್ತು. 'ಬ್ರಿಟಿಷ್ ಸರಕಾರ ರೌಲೆಟ್ ಕಾಯ್ದೆಯೆಂಬ ಹೊಸ ಕ್ರೂರ ಕಾನೂನನ್ನು ಜಾರಿಗೊಳಿಸಿದೆಯಂತೆ. ಆ ಕಾಯ್ದೆಯ ಪ್ರಕಾರ ಬ್ರಿಟಿಷ್ ಸರಕಾರ ಯಾವುದೇ ಸ್ವಾತಂತ್ರ್ಯ ಹೋರಾಟಗಾರನನ್ನು ಯಾವುದೇ ಕಾರಣ ಕೊಡದೆ ಬಂಧಿಸಬಹುದಂತೆ. ಆ ಕ್ರೂರ ಕಾಯ್ದೆಯ ವಿರುದ್ಧ ಶಾಂತಿಯುತವಾಗೇ ಪ್ರತಿಭಟಿಸಲು ಸ್ವಾತಂತ್ರ್ಯ ಹೋರಾಟದ ನಾಯಕರು, ಅಂದು ಅಂದರೆ 13 ಏಪ್ರಿಲ್ 1919ರ ಸಂಜೆ ಜಲಿಯನ್ವಾಲಾ ಬಾಗಿನ ಮೈದಾನದಲ್ಲಿ ಬೃಹತ್ ಸಭೆಯೊಂದನ್ನು ಏರ್ಪಾಡು ಮಾಡಿರುವರಂತೆ' ಎಂದು ತಂದೆ ಕಿಶನ್ ಸಿಂಗರು, ತಮ್ಮ ಮಗ ಭಗತ್ ಸಿಂಗನಿಗೆ ತಿಳಿಸಿದ್ದರು. ಆ ಸಭೆಯನ್ನು ತಾನೂ ನೋಡಬೇಕೆಂಬ ಆಸೆಯನ್ನು ಬಾಲಕ ಭಗತ್ ಸಿಂಗ್ ವ್ಯಕ್ತಪಡಿಸಿದರೂ, ತಂದೆ ಕಿಶನ್ ಸಿಂಗರು ಅವನನ್ನು ಮನೆಗೆ ಕರೆದೊಯ್ದಿದ್ದರು. ಲಾಹೋರಿನ ಕಿಶನ್ ಸಿಂಗರು, ಅಮೃತಸರದಲ್ಲಿ ತನ್ನ ಅಣ್ಣ ಅಜೀತ್ ಸಿಂಗರ ಮನೆಯಲ್ಲಿ ಉಳಿದುಕೊಂಡಿದ್ದರು.
ಮಾರನೆಯ ದಿನ ಅಮೃತಸರದ ಅಜೀತ್ ಸಿಂಗರ ಮನೆಯಲ್ಲಿ ಬಿಗುವಿನ ವಾತಾವರಣವಿದ್ದಿತು. ಅಂದು ಅಮೃತಸರದಾದ್ಯಂತ ಕರ್ಫ್ಯೂವನ್ನು ವಿಧಿಸಲಾಗಿತ್ತು. ತಂದೆ ಕಿಶನ್ ಸಿಂಗರು ಮತ್ತು ಅವನ ದೊಡ್ಡಪ್ಪ ಅಜೀತ್ ಸಿಂಗರು ಮಾತನಾಡಿಕೊಳ್ಳುತ್ತಿದ್ದನ್ನು, ಬಾಲಕ ಭಗತ್ ಸಿಂಗ್ ಕಣ್ಣು ಮಿಟುಕಿಸದೆ ಕೇಳುತ್ತಿದ್ದನು. 'ಯಾರೋ ಡೈಯರ್ ಎಂಬ ಕ್ರೂರ ಬ್ರಿಟಿಷ್ ಸೇನಾಧಿಕಾರಿಯಂತೆ. ನಿನ್ನೆಯ ದಿನ ಸಂಜೆ ಜಲಿಯನ್ವಾಲಾ ಬಾಗಿನಲ್ಲಿ ಬ್ರಿಟಿಷರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನಾ ಸಭೆಯನ್ನು ನಡೆಸುತ್ತಿದ್ದ ಸುಮಾರು 20,000 ಅಮಾಯಕ ಭಾರತೀಯರುಗಳ ಮೇಲೆ ಸೇನಾಧಿಕಾರಿ ಡೈಯರ್ ಯಾವುದೇ ಕಾರಣವಿಲ್ಲದಿದ್ದರೂ, ಯಾವುದೇ ಮುನ್ಸೂಚನೆಯನ್ನೂ ನೀಡದೆ ಯದ್ವಾತದ್ವಾ ಗುಂಡುಗಳ ಸುರಿಮಳೆಯನ್ನೇ ಸುರಿಸಿದನಂತೆ. ಗುಂಡಿನ ಸುರಿಮಳೆಯಿಂದ ತಪ್ಪಿಸಿಕೊಳ್ಳಲಾಗದ ಜನರು ದಿಕ್ಕಾಪಾಲಾಗಿ ಓಡತೊಡಗಿದರಂತೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಹಲವರು ಅಲ್ಲಿಯೇ ಇದ್ದ ಹಳೆಯ ಬಾವಿಯೊಳಗೂ ಧುಮಿಕಿದರಂತೆ. ಬಹಳ ಸಮಯ ಮುಂದುವರೆದಿದ್ದ ಗುಂಡಿನ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರು ಮೃತರಾಗಿದ್ದರಂತೆ. 1500ಕ್ಕೂ ಹೆಚ್ಚು ಜನರು ಗಾಯಗೊಂಡರಂತೆ,' ಎಂದು ಕೇಳಿದ ಬಾಲಕ ಭಗತ್ ಸಿಂಗನಿಗೆ ಆ ಬ್ರಿಟಿಷ್ ಸೇನಾಧಿಕಾರಿಯನ್ನು ತಕ್ಷಣವೇ ಗುಂಡಿಟ್ಟು ಕೊಲ್ಲಬೇಕು ಎಂಬಷ್ಟು ಕೋಪಬಂದಿತ್ತು. ನಿನ್ನೆಯ ದಿನ ತಾನೂ ಆ ಸಭೆಯನ್ನು ನೋಡಲು ಹೋಗಿರಬೇಕಿತ್ತೆನಿಸಿತು.
ಅಮೃತಸರ ಗೊತ್ತಿರದ ಊರಾದರು, ಕರ್ಫ್ಯೂವಿದ್ದದ್ದನ್ನೂ ಲೆಕ್ಕಿಸದೆ ಬಾಲಕ ಭಗತ್ ಸಿಂಗ್ ಯಾರಿಗೂ ತಿಳಿಸದೆ ಮನೆಯಿಂದ ಹೊರನಡೆದಿದ್ದನು. ಸಮೀಪವೇ ಇದ್ದ ಜಲಿಯನ್ವಾಲಾ ಬಾಗಿನತ್ತ ತಲುಪಲು ಭಗತ್ ಸಿಂಗನಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಅಲ್ಲಿ ಪೊಲೀಸರ ಭಾರಿ ಕಾವಲಿತ್ತು. ಪೊಲೀಸರ ಕಣ್ಣನ್ನು ಹೇಗೋ ತಪ್ಪಿಸಿ ಬಾಲಕ ಭಗತ್ ಸಿಂಗ್, ಜಲಿಯನ್ವಾಲಾ ಬಾಗಿನೊಳಗೆ ನುಸುಳಿದ್ದನು. ಮೈದಾನದ ಸುತ್ತಾ ಕಣ್ಣುಗಳನ್ನು ಹಾಯಿಸಿದ ಭಗತ್ ಸಿಂಗನಿಗೆ, ಅಲ್ಲಿ ನೀರವ ಮೌನ ಕಂಡಿತು. ಗುಂಡಿನ ಸುರಿಮಳೆಯಿಂದ ತಪ್ಪಿಸಿಕೊಳ್ಳಲಾಗದೆ ದಿಕ್ಕಾಪಾಲಾಗಿ ಓಡುತ್ತಿದ್ದ ಬಡಜನರ ದೃಶ್ಯ ಭಗತ್ ಸಿಂಗನ ಕಣ್ಣ ಮುಂದೆ ಮತ್ತೆ ಮತ್ತೆ ಬರುತ್ತಿತ್ತು. ಭಗತ್ ಸಿಂಗ ನಿಂತಿದ್ದ ಜಾಗದ ಮಣ್ಣು, ಬಲಿಯಾದ ಜನರ ರಕ್ತದಿಂದ ತೊಯ್ದಿತ್ತು. ಆ ಮಣ್ಣನ್ನು ಕಣ್ಣಿಗೊತ್ತಿಕೊಂಡು ಭಗತ್ ಸಿಂಗ್, ಆ ಮಣ್ಣನ್ನು ಸಮೀಪವೇ ಬಿದ್ದಿದ್ದ ಒಡಕು ಮಡಕೆಯೊಂದರಲ್ಲಿ ತುಂಬಿಸಿಕೊಂಡನು.
ಗೊತ್ತಿರದ ಊರಿನಲ್ಲಿ, ಕರ್ಫ್ಯೂವಿನ ದಿನ ಬಾಲಕ ಭಗತ್ ಸಿಂಗ್ ಮನೆಯಲ್ಲಿ ಇರದಿರುವುದನ್ನು ಕಂಡು ಕಿಶನ್ ಸಿಂಗರು ಗಾಬರಿಗೊಂಡಿದ್ದರು. ಸ್ವಲ್ಪ ಹೊತ್ತಿನನಂತರ ಬಾಲಕ ಭಗತ್ ಸಿಂಗ್ ಮನೆ ಸೇರಿದ್ದನು. ತಾನು ಜಲಿಯನ್ವಾಲಾ ಬಾಗನ್ನು ನೋಡಲು ಹೋಗಿದ್ದಾಗಿ ತಿಳಿಸಿದ ಭಗತ್ ಸಿಂಗನ ಬಗ್ಗೆ, ತಂದೆ ಕಿಶನ್ ಸಿಂಗರಿಗೆ ಹೆಮ್ಮೆಯೆನಿಸಿತು. ಭಗತ್ ಸಿಂಗ್ ತಂದಿದ್ದ ಹುತಾತ್ಮರ ರಕ್ತದಿಂದ ತೊಯ್ದ ಮಣ್ಣನ್ನು, ದೊಡ್ಡಪ್ಪ ಅಜೀತ್ ಸಿಂಗರು ದೇವರ ಮನೆಯಲ್ಲಿಟ್ಟು ಹೂವುಗಳನ್ನೇರಿಸಿದಾಗ, ಭಗತ್ ಸಿಂಗನಿಗೆ ತನ್ನ ಅಂದಿನ ಪ್ರಯತ್ನ ಸಾರ್ಥಕವೆನಿಸಿತು.
28 ಸೆಪ್ಟೆಂಬರ್ 1907ರಂದು ಭಗತ್ ಸಿಂಗ್ ಜನಿಸಿದ್ದು, ಅಂದಿನ ಅವಿಭಜಿತ ಪಂಜಾಬಿನ ಲಾಯಲ್ ಪುರ (ಲಾಯಲ್ ಪುರ ಈಗ ಪಾಕಿಸ್ತಾನಕ್ಕೆ ಸೇರಿದ್ದು, ಫೈಸ್ಲಾಬಾದ್ ಎಂದು ಮರುನಾಮಕರಣಗೊಂಡಿದೆ) ಸಮೀಪದ 'ಬಂಗ' ಎಂಬ ಹಳ್ಳಿಯಲ್ಲಿ. ಭಗತ್ ಸಿಂಗನ ತಂದೆ ಕಿಶನ್ ಸಿಂಗರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಕಿಶನ್ ಸಿಂಗರ ಅಣ್ಣಂದಿರಾದ ಅಜೀತ್ ಸಿಂಗರು ಕೂಡ ಸ್ವಾತಂತ್ರ್ಯ ಹೋರಾಟಗಾರರೇ. ಹಾಗಾಗಿ ಭಗತ್ ಸಿಂಗನಿಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ರಕ್ತದಲ್ಲೇ ಇತ್ತು. ಬಾಲಕನಾದ ಭಗತ್ ಸಿಂಗನ ಆರಂಭಿಕ ಶಿಕ್ಷಣ ಅವನ ಹುಟ್ಟುಹಳ್ಳಿಯಾದ ಬಂಗದಲ್ಲೇ ಆರಂಭವಾಯಿತು. 1923ರಲ್ಲಿ ಭಗತ್ ಸಿಂಗ್ ಲಾಹೋರಿನ ನ್ಯಾಷನಲ್ ಕಾಲೇಜನ್ನು ಸೇರಿದನು. ಆ ಕಾಲೇಜನ್ನು 'ಪಂಜಾಬಿನ ಸಿಂಹ' ಎಂದೇ ಹೆಸರುವಾಸಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯರು ಆರಂಭಿಸಿದ್ದರು. ಹದಿನಾರರ ಕಿಶೋರ ಭಗತ್ ಸಿಂಗ್ ಓದುಬರಹದಲ್ಲಿ ತೀಕ್ಷ್ಣ ಬುದ್ಧಿಯುಳ್ಳವನಾಗಿದ್ದನು. ಪಂಜಾಬಿ, ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಮತ್ತು ಬರೆಯಬಲ್ಲ ಸಾಮರ್ಥ್ಯ ಭಗತ್ ಸಿಂಗನಿಗಿತ್ತು.
1924ರಲ್ಲಿ ಭಗತ್ ಸಿಂಗ್ ಪೂರ್ಣಪ್ರಮಾಣದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದನು. ಹೋರಾಟಗಾರ ಚಂದ್ರಶೇಖರ ಅಜಾದ್ ನೇತೃತ್ವದ ಸಂಸ್ಥೆಯಾದ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ನಿನ (HRA) ಸಕ್ರಿಯ ಸದಸ್ಯನಾಗಿ ಭಗತ್ ಸಿಂಗ್ ಸೇರ್ಪಡೆಗೊಂಡನು. ಅವನ ಕಾರ್ಯಸ್ಥಾನ ಉತ್ತರ ಪ್ರದೇಶದ ಕಾನ್ಪುರಗೆ ಸ್ಥಳಾಂತರಗೊಂಡಿತು. ಅಜಾದರ ಮಾರ್ಗದರ್ಶನದಲ್ಲಿ ಭಗತ್ ಸಿಂಗ್ ಕೈಬಾಂಬ್ ತಯಾರಿಸುವುದನ್ನು ಕಲಿತನು. ಹಳ್ಳಿ ಹಳ್ಳಿಗಳಿಗೆ ತೆರಳಿ ಭಗತ್ ಸಿಂಗ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಯುವಕರ ಪಡೆಯೊಂದನ್ನು ಸಜ್ಜುಗೊಳಿಸಿಕೊಂಡಿದ್ದನು. ಭಗತ್ ಸಿಂಗನ ಚಟುವಟಿಕೆಗಳು ಬ್ರಿಟಿಷರ ಗಮನಕ್ಕೆ ಬಂದಿದ್ದವು. 1927ರಲ್ಲಿ ಪ್ರಥಮಬಾರಿಗೆ ಭಗತ್ ಸಿಂಗನನ್ನು ಕಕೋರಿ ರೈಲು ಲೂಟಿ ಪ್ರಕರಣದಲ್ಲಿ ಬಂಧಿಸಲಾಯಿತು. ಹಿಂದೊಮ್ಮೆ ಲಾಹೋರಿನ ದಸರಾ ಮೆರವಣಿಗೆಯ ಮೇಲೆ ಕೈಬಾಂಬನ್ನು ಎಸೆದ ಪ್ರಕರಣವನ್ನೂ ಭಗತ್ ಸಿಂಗನ ಮೇಲೆ ಹೊರಿಸಲಾಯಿತು. ಭಗತ್ ಸಿಂಗನ ಮೇಲಿನ ಆರೋಪಗಳೆಲ್ಲಾ ಹುರುಳಿಲ್ಲದವಾಗಿದ್ದುದರಿಂದ, ಅವನನ್ನು ಕೆಲವು ತಿಂಗಳುಗಳನಂತರ ಬಿಡುಗಡೆಮಾಡಲಾಯಿತು.
30 ಸೆಪ್ಟೆಂಬರ್1928ರಂದು ಬ್ರಿಟಿಷ್ ಸರಕಾರದ ಪ್ರತಿನಿಧಿಯಾದ ಜಾನ್ ಸೈಮನರ ನೇತೃತ್ವದ ನಿಯೋಗವೊಂದು ಲಾಹೋರಿಗೆ ಭೇಟಿ ನೀಡಿತ್ತು. ಭಾರತಕ್ಕೆ ಎಷ್ಟರ ಮಟ್ಟಿನ ಸ್ವಾಯತ್ತತೆಯನ್ನು ನೀಡಬಹುದು ಎಂಬ ಅಧ್ಯಯನವನ್ನು ನಡೆಸುವುದೇ ಸೈಮನ್ ನಿಯೋಗದ ಉದ್ದೇಶವಾಗಿತ್ತು. ಸಂಪೂರ್ಣ ಸ್ವರಾಜ್ಯದ ಕನಸನ್ನು ಕಂಡಿದ್ದ ಭಾರತದ ನಾಯಕರುಗಳಿಗೆ ಸೈಮನ್ ನಿಯೋಗದ ಕ್ರಮಗಳ ಬಗ್ಗೆ ಸಮ್ಮತಿ ಇರಲಿಲ್ಲ. ಲಾಲಾ ಲಜಪತರಾಯರ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರು ಸೈಮನ್ ನಿಯೋಗದ ವಿರುದ್ದ ಲಾಹೋರಿನಲ್ಲಿ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯ ಮುಂಚೂಣಿಯಲ್ಲಿ ಯುವಕನಾದ ಭಗತ್ ಸಿಂಗನೂ ಇದ್ದನು. ಲಾಹೋರಿನ ಪೊಲೀಸ್ ಠಾಣಾಧಿಕಾರಿ ಸ್ಕಾಟ್ ಎಂಬುವ ದುಷ್ಟ, ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರವನ್ನು ಮಾಡಿದನು. ಹೌಹಾರಿದ ಪ್ರದರ್ಶನಕಾರರು ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಕ್ರೂರಿ ಸ್ಕಾಟನ ಕೆಂಗಣ್ಣು ಪ್ರದರ್ಶನಕಾರರ ಹಿರಿಯ ನಾಯಕರಾದ ಲಾಲಾ ಲಜಪತರಾಯರ ಮೇಲೆ ಬಿತ್ತು. ಹಿಗ್ಗಾಮುಗ್ಗಾ ಲಾಠಿಯನ್ನು ಪ್ರಯೋಗಿಸಿದ ಸ್ಕಾಟನ ಏಟುಗಳನ್ನು ತಡೆಯಲಾರದೆ ಹಿರಿಯರಾದ ಲಜಪತರಾಯರು ನೆಲಕ್ಕುರುಳಿದರು. ಲಜಪತರಾಯರ ಬುರುಡೆಯಿಂದ ರಕ್ತ ಚಿಮ್ಮುತ್ತಿದುದನ್ನೂ ಲೆಕ್ಕಿಸದ ಸ್ಕಾಟ್ ತನ್ನ ಲಾಠಿ ಪ್ರಹಾರವನ್ನು ಮುಂದುವರೆಸಿದ್ದನು. ನೆಲಕ್ಕುರುಳಿದ ಲಜಪತರಾಯರು 'ನನ್ನ ಮೇಲೆ ಬಿದ್ದ ಪ್ರತಿಯೊಂದು ಲಾಠಿ ಏಟೂ, ಬ್ರಿಟಿಷ್ ಸರಕಾರದ ಶವಪೆಟ್ಟಿಗೆಗೆ ಬಡಿದ ಅಂತಿಮ ಮೊಳೆಗಳು, ಭಾರತ್ ಮಾತಾಕಿ ಜೈ' ಎಂದು ಕೂಗಿದರು. ಎಲ್ಲವನ್ನೂ ಅಸಹಾಯಕನಾಗಿ ನೋಡುತ್ತಿದ್ದ ಭಗತ್ ಸಿಂಗ್ ತನ್ನ ಸಂಗಡಿಗರೊಂದಿಗೆ, ತೀವ್ರವಾಗಿ ಗಾಯಗೊಂಡ ಲಜಪತರಾಯರನ್ನು ಆಸ್ಪತ್ರೆಗೆ ಸಾಗಿಸಿದನು.
ಆಸ್ಪತ್ರೆ ಸೇರಿದ ಲಾಲಾ ಲಜಪತರಾಯರು ಲಾಠಿ ಏಟಿನ ಹೊಡೆತದ ಗಾಯಗಳಿಂದ ಚೇತರಿಸಿಕೊಳ್ಳಲೇ ಇಲ್ಲ. ಲಾಠಿ ಏಟು ತಿಂದ ಎರಡೇ ತಿಂಗಳುಗಳೊಳಗೆ, ಅಂದರೆ 17 ನವೆಂಬರ್ 1928ರಂದು ಲಾಲಾ ಲಜಪತರಾಯರು ನಿಧನರಾದರು. ಹಿರಿಯ ನಾಯಕರಾದ ಲಾಲಾರವರ ಮೇಲೆ ಮಾರಣಾಂತಿಕ ಲಾಠಿ ಪ್ರಹಾರವನ್ನು ನಡೆಸಿದ ಆಂಗ್ಲ ಪೊಲೀಸ್ ಸ್ಕಾಟನ ಮೇಲೆ ಭಾರತದ ನಾಯಕರುಗಳ ಕೋಪ ಉಕ್ಕಿ ಹರಿಯುತ್ತಿತ್ತು. ಲಜಪತರಾಯರ ಮೇಲಿನ ಲಾಠಿ ಪ್ರಹಾರವನ್ನು ಕಣ್ಣಾರೆ ಕಂಡ ಭಗತ್ ಸಿಂಗ್ ಅತ್ಯಂತ ವಿಚಲಿತನಾಗಿದ್ದನು. ಲಾಲಾರವರ ದೇಹದಿಂದ ಹರಿದ ರಕ್ತದ ಪ್ರತೀಕಾರವನ್ನು ರಕ್ತದಿಂದಲೇ ತೀರಿಸಬೇಕೆಂಬುದು ಭಗತ್ ಸಿಂಗನ ಶಪಥವಾಗಿತ್ತು. ಹಿಂದುಸ್ತಾನ್ ರಿಪಬ್ಲಿಕನ್ ಅಸ್ಸೊಸಿಯೆಷನ್ನಿನ ಸದಸ್ಯರುಗಳಾದ ಸುಖದೇವ್,ರಾಜಗುರು, ಚಂದ್ರಶೇಖರ ಅಜಾದ್, ಜೈಗೋಪಾಲ್ ಮತ್ತು ಹನ್ಸ್ರಾಜ್ ವೊಹ್ರಾರವರು ಭಗತ್ ಸಿಂಗನ ಲಾಹೋರಿನ ಮನೆಯಲ್ಲಿ ಸಭೆ ಸೇರಿದ್ದರು. ಭಗತ್ ಸಿಂಗ್ ಮತ್ತು ರಾಜಗುರು ಅವರಿಗೆ ಸ್ಕಾಟನನ್ನು ಗುಂಡಿಕ್ಕಿ ಕೊಲ್ಲುವ ಕಾರ್ಯವನ್ನು ವಹಿಸಲಾಯಿತು. ತನಗೆ ವಹಿಸಿದ ಕಾರ್ಯಭಾರದ ಸೂಕ್ಷ್ಮತೆಯನ್ನರಿತಿದ್ದ ಭಗತ್ ಸಿಂಗ್, ತಾನು ಸಿಖ್ ಧರ್ಮದವನಾದರೂ ತನ್ನ ಶಿರ ಹಾಗೂ ಗಡ್ಡಗಳ ಕೂದಲನ್ನು ಕತ್ತರಿಸಿಕೊಂಡಿದ್ದನು. ಸ್ಕಾಟನ ಗುರುತನ್ನು ಪತ್ತೆ ಮಾಡಿ, ಅವನ ಚಲನವಲನಗಳ ಮೇಲೆ ನಿಗಾ ಇರಿಸುವ ಕಾರ್ಯವನ್ನು ಜೈಗೋಪಾಲನಿಗೆ ವಹಿಸಲಾಯಿತು. ದುರದೃಷ್ಟವಶಾತ್ ಜೈಗೋಪಾಲ್ ಸ್ಕಾಟನನ್ನು ನೋಡಿರಲೇ ಇಲ್ಲ. ಆ ವಿಷಯವನ್ನು ಜೈಗೋಪಾಲ್ ತನ್ನ ಸಹಚರರಿಗೆ ತಿಳಿಸಲೂ ಇಲ್ಲ. 17 ಡಿಸೆಂಬರ್ 1928ರ ದಿನದಂದು ಸ್ಕಾಟನನ್ನು, ಅವನ ಲಾಹೋರಿನ ಪೊಲೀಸ್ ಠಾಣೆಯ ಎದುರೇ ಹೊಡೆದುರುಳಿಸಬೇಕೆಂದು ನಿರ್ಧರಿಸಲಾಯಿತು.
17 ಡಿಸೆಂಬರ್ 1928ರಂದು ಸ್ಕಾಟ್ ತನ್ನ ಪೊಲೀಸ್ ಠಾಣೆಗೆ ಬಂದಿರಲೇ ಇಲ್ಲ. ಸ್ಕಾಟನನ್ನು ನೋಡಿರದ ಜೈಗೋಪಾಲ್, ಉಪಠಾಣಾಧಿಕಾರಿ ಸ್ಯಾಂಡರ್ಸನನ್ನೇ ಸ್ಕಾಟನೆಂದು ಊಹಿಸಿಕೊಂಡನು. ಬೆಳಗ್ಗೆ ಹತ್ತರ ಸಮಯಕ್ಕೆ ಸ್ಕಾಟನು ಪೊಲೀಸ್ ಠಾಣೆಗೆ ಬಂದಿರುವನೆಂಬ ಸುದ್ದಿಯನ್ನು ಜೈಗೋಪಾಲ್ ಭಗತ್ ಸಿಂಗನಿಗೆ ಕೊಟ್ಟಿದ್ದನು. ಮಧ್ಯಾಹ್ನದ ಹೊತ್ತಿಗೆ ಸ್ಕಾಟ್ ಪೊಲೀಸ್ ಠಾಣೆಯಿಂದ ಹೊರಬರುವನೆಂದು, ಬಂದ ಕೂಡಲೇ ಅವನ ಮೇಲೆ ಗುಂಡು ಹಾರಿಸಬೇಕೆಂದು ಭಗತ್ ಸಿಂಗ್ ಮತ್ತು ರಾಜಗುರು ಕಾದು ನಿಂತಿದ್ದರು. ಆ ಹೊತ್ತಿಗೆ ಹೊರಬಂದ ಸ್ಯಾಂಡರ್ಸ್ ನನ್ನೇ ಸ್ಕಾಟನೆಂದು ಭಾವಿಸಿದ ರಾಜಗುರು ಗುಂಡನ್ನು ಹಾರಿಸಿಯಾಗಿತ್ತು. 'ಆ ವ್ಯಕ್ತಿ ಸ್ಕಾಟನಲ್ಲ' ಎಂದು ಭಗತ್ ಸಿಂಗ್ ಕೂಗಿದ್ದು ವ್ಯರ್ಥವಾಯಿತು. ಒಂದೇ ಗುಂಡಿಗೆ ಸ್ಯಾಂಡರ್ಸ್ ನ ಪ್ರಾಣಪಕ್ಷಿ ಹಾರಿಹೋಗಿತ್ತು. ರೋಷದಲ್ಲಿದ್ದ ಭಗತ್ ಸಿಂಗ್ ಕೂಡ, ಸ್ಯಾಂಡರ್ಸ್ ನ ದೇಹದ ಮೇಲೆ ಮತ್ತಷ್ಟು ಗುಂಡುಗಳನ್ನು ಹಾರಿಸಿದನು. ಗುಂಡುಗಳ ಶಬ್ದದಿಂದ ವಿಚಲಿತನಾದ ಪೇದೆ ಚನ್ನನ್ ಸಿಂಗ್ ಹೊರಬಂದಿದ್ದನು. ಅಷ್ಟು ಹೊತ್ತಿಗಾಗಲೇ ಭಗತ್ ಸಿಂಗ್ ಹಾಗೂ ರಾಜಗುರುರವರು, ಪೂರ್ವನಿಯೋಜನೆಯಂತೆ ಸಮೀಪದ ಡಿಎವಿ ಕಾಲೇಜಿನ ಕಡೆಗೆ ಓಡುತ್ತಿದ್ದರು. ಅವರಿಬ್ಬರನ್ನು ಅಟ್ಟಿಸಿಕೊಂಡು ಬಂದ ಪೇದೆ ಚನ್ನನ್ ಸಿಂಗನನ್ನು, ರಾಜಗುರು ಹೊಡೆದುರುಳಿಸಿದನು.
ಸ್ಯಾಂಡರ್ಸ್ ನ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಲಾಹೋರಿನ ತುಂಬಾ ಭಗತ್ ಸಿಂಗನ ಕೈಬರಹದಲ್ಲಿದ್ದ ಭಿತ್ತಿಪತ್ರಗಳು ಪ್ರಕಟಗೊಂಡಿದ್ದವು. 'ಸ್ಕಾಟ್ ಈಸ್ ಡೆಡ್' ಎಂಬುದನ್ನು ಭಗತ್ ಸಿಂಗನೇ, 'ಸ್ಯಾಂಡರ್ಸ್ ಈಸ್ ಡೆಡ್, ಲಾಲಾ ಲಜಪತ್ ರಾಯ್ ಅವೆಂಜ್ಡ್ (ಸ್ಯಾಂಡರ್ಸ್ ಸತ್ತಿದ್ದಾನೆ, ಲಾಲಾ ಲಜಪತರಾಯರ ಹತ್ಯೆಯ ಪ್ರತೀಕರವಾಗಿದೆ)' ಎಂದು ಭಿತ್ತಿಪತ್ರವನ್ನು ಕೈಬರಹದಲ್ಲೇ ಸರಿಪಡಿಸಿದವನೂ ಭಗತ್ ಸಿಂಗನೇ ಆಗಿದ್ದನು. ಸ್ವಾತಂತ್ರ್ಯ ಹೋರಾಟಕ್ಕಾಗಿ ಆತ್ಮಾಹುತಿಯನ್ನೇ ನೀಡಲು ಸಿದ್ಧನಿದ್ದ ಭಗತ್ ಸಿಂಗನಿಗೆ ತನ್ನ ಕೈಬರಹದಿಂದಲೇ ತಯಾರಾಗಿದ್ದ ಭಿತ್ತಿಪತ್ರವೇ ತನ್ನ ವಿರುದ್ಧದ ಪ್ರಬಲ ಸಾಕ್ಷಿಯಾಗಬಹುದೆಂಬ ಭಯವೇ ಇರಲಿಲ್ಲ.
ತಾವು ಹತ್ಯೆ ಮಾಡಿದ ಲಾಹೋರಿನಲ್ಲೇ ಅಡಗಿಕೊಂಡಿದ್ದ ಭಗತ್ ಸಿಂಗ್ ಮತ್ತವನ ಸಹಚರರಿಗೆ, ತಮ್ಮ ಬಂಧನ ಯಾವಾಗ ಬೇಕಾದರೂ ಆಗಬಹುದೆಂಬ ಅನುಮಾನ ಇದ್ದೇ ಇತ್ತು. ಒಬ್ಬಬ್ಬರು ಒಂದೊಂದು ದಿಕ್ಕಿಗೆ ಪ್ರಯಾಣಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದ ಯುವಕರುಗಳ ಕೈಯಲ್ಲಿ ಹಣವೇ ಇರಲಿಲ್ಲ. ಆಗ ಅವರ ಸಹಾಯಕ್ಕೆ ಮುಂದಾದವಳು ದುರ್ಗಾದೇವಿ ಎಂಬ ಲಾಹೋರಿನ ಯುವ ಮಹಿಳೆ. ಆಕೆ ಮತ್ತು ಅವಳ ಪತಿಯಾದ ಭಗವತಿ ಚರಣ್, ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಹೋರಾಟದ ಸಮನ್ವಯದ ಕೆಲಸದ ಕಾರಣ ಭಗವತಿ ಚರಣ್ ದೂರದ ಕೊಲ್ಕತ್ತದಲ್ಲಿದ್ದನು. ದುರ್ಗಾ ತನ್ನ ಮೂರ ವರ್ಷದ ಮಗನೊಂದಿಗೆ ಲಾಹೋರಿನಲ್ಲೇ ಇದ್ದಳು. ಪತಿಯನ್ನು ಸೇರಲು ತನ್ನ ಮಗುವಿನೊಂದಿಗೆ ಹೊರಟಿದ್ದ ದುರ್ಗಳೊಡನೆ ಭಗತ್ ಸಿಂಗ್ ಕೊಲ್ಕತ್ತಾಗೆ ಪ್ರಯಾಣ ಬೆಳಸಬೇಕೆಂಬ ನಿರ್ಧಾರಕ್ಕೆ ಎಲ್ಲಾ ಸ್ನೇಹಿತರೂ ಬಂದಿದ್ದಾಗಿತ್ತು. ಪೊಲೀಸರ ಕಣ್ತಪ್ಪಿಸಲು ಭಗತ್ ಸಿಂಗ್ ತನ್ನ ಹೆಸರನ್ನು ಬದಲಿಸಿಕೊಂಡು ತಾನು ದುರ್ಗಳ ಗಂಡನೆಂದು ಪ್ರಯಾಣಿಸುವುದೆಂಬ ಉಪಾಯವನ್ನು ಎಲ್ಲರೂ ಸೇರಿ ಮಾಡಿಯಾಗಿತ್ತು. ದುರ್ಗಾ ಕೂಡ ತನ್ನ ಹೆಸರನ್ನು ಬದಲಿಸಿಕೊಂಡಿದ್ದಳು. ಹೆಸರುಗಳನ್ನು ಬದಲಿಸಿಕೊಂಡ ದುರ್ಗಾ ಮತ್ತು ಇಂಗ್ಲಿಷ್ ವ್ಯಕ್ತಿಯ ಉಡುಪಿನಲ್ಲಿದ್ದ ಭಗತ್ ಸಿಂಗ್ ಲಾಹೋರಿನಲ್ಲಿ, ಕೊಲ್ಕತ್ತಾದ ರೈಲು ಹತ್ತಿದ್ದರು. ರಾಜಗುರು ಆ ದಂಪತಿಯ ಸೇವಕನಂತೆ ಮಗುವನ್ನು ಹೊತ್ತು ಅವರುಗಳ ಹಿಂದೆ ನಡೆದಿದ್ದನು. ಪೊಲೀಸರ ಹದ್ದುಗಣ್ಣಿನ ಹುಡುಕಾಟ ರೈಲಿನ ಪ್ರಯಾಣದ ಉದ್ದಕ್ಕೂ ಇದ್ದೇ ಇತ್ತು. ಪೋಲೀಸರ ಕಣ್ಣು ತಪ್ಪಿಸಲು ದುರ್ಗಾ, ಭಗತ್ ಸಿಂಗ್ ಮತ್ತು ಮಗುವನ್ನು ಹೊತ್ತ ರಾಜಗುರು, ಕಾನ್ಪುರದಲ್ಲಿ ಇಳಿದುಕೊಂಡು, ಒಂದು ದಿನ ತಂಗಿದ್ದು, ಮಾರನೇ ದಿನ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಿ ಕೊಲ್ಕತ್ತಾ ತಲುಪಿದ್ದರು. ಕೊಲ್ಕತ್ತಾದಲ್ಲಿ ಅವರುಗಳನ್ನು ಎದುರುಗೊಂಡ ದುರ್ಗಳ ಪತಿ ಭಗವತಿ ಚರಣ್, ಭಗತ್ ಸಿಂಗ ಮತ್ತು ರಾಜಗುರುಗಳ ಗುಪ್ತತೆಯನ್ನು ಕಾಪಾಡಲು ಅವರನ್ನು ತನ್ನ ಸ್ನೇಹಿತರೊಬ್ಬರ ಮನೆಯಲ್ಲಿ ತಂಗುವ ವ್ಯವಸ್ಥೆ ಮಾಡಿದ್ದನು.
ತಲೆತಪ್ಪಿಸಿಕೊಂಡು ನಿಷ್ಕ್ರಿಯರಾಗಿ ಕುಳಿತುಕೊಳ್ಳುವುದು, ಭಗತ್ ಸಿಂಗ್ ಮತ್ತವನ ಸಹಚರರ ಜಾಯಮಾನಗಳಿಗೆ ವಿರುದ್ದದ ಮಾತಾಗಿತ್ತು. ಲಜಪತರಾಯರ ಹತ್ಯೆಯ ಪ್ರತೀಕಾರ ತೀರಿಸಿಕೊಂಡ ಎಲ್ಲಾ ಸಹಚರರು ಆಗ್ರಾದ ಗುಪ್ತಸ್ಥಳವೊಂದರಲ್ಲಿ ಒಂದಾಗಿದ್ದರು. ಸ್ಯಾಂಡರ್ಸ್ ನ ಹತ್ಯೆ ಮಾಡಿ 9 ತಿಂಗಳುಗಳೇ ಕಳೆದಿದ್ದವು. ಭಗತ್ ಸಿಂಗ್ ಮತ್ತವನ ಸಹಚರರು ಯಶಸ್ವಿಯಾಗಿ ತಪ್ಪಿಸಿಕೊಂಡಿದ್ದರೂ, ಸ್ಯಾಂಡರ್ಸ್ ನ ಹತ್ಯೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಭಾರೀ ಪ್ರಚಾರವೇನೂ ದೊರಕಿಲ್ಲ ಎಂಬುದು ಹೋರಾಟಗಾರರೆಲ್ಲರ ಅಭಿಪ್ರಾಯವಾಗಿತ್ತು. ಈ ನಡುವೆ 8 ಏಪ್ರಿಲ್ 1929ರಂದು ಬ್ರಿಟಿಷ್ ಸರಕಾರ, ಭಾರತದ ರಾಜಧಾನಿಯಾಗಿದ್ದ ದಿಲ್ಲಿಯ ಸಂಸತ್ತಿನಲ್ಲಿ ಮತ್ತೆರಡು ಕ್ರೂರ ಮಸೂದೆಗಳ ಚರ್ಚೆಯನ್ನು ಏರ್ಪಡಿಸಿತ್ತು. ಸಾರ್ವಜನಿಕ ರಕ್ಷಣಾ ಮಸೂದೆ (ಪಬ್ಲಿಕ್ ಸೇಫ್ಟಿ ಬಿಲ್) ಮತ್ತು ಕಾರ್ಮಿಕರ ವಿವಾದಗಳ ಮಸೂದೆ (ಟ್ರೇಡ್ ಡಿಸ್ಪ್ಯೂಟ್ ಬಿಲ್), ಇವೆರಡು ಮಸೂದೆಗಳು ಭಾರತೀಯರ ಹಿತಾಸಕ್ತಿಗೆ ವಿರುದ್ಧವಾಗಿದ್ದವು. ಭಗತ್ ಸಿಂಗ್ ಮತ್ತವನ ಅನುಯಾಯಿಗಳ ಕ್ರಾಂತಿಕಾರಿ ಹೋರಾಟಕ್ಕೆ ಈ ಎರಡು ಮಸೂದೆಗಳು ತಕ್ಕ ವೇದಿಕೆಯನ್ನು ಒದಗಿಸಿದ್ದವು. ಅವಕಾಶದಿಂದ ಭಾರೀ ಲಾಭವನ್ನು ಪಡೆಯಲು ಯೋಜಿಸಿದ ಭಗತ್ ಸಿಂಗ್ ಗುಂಪು, ಆ ದಿನ ಸಂಸತ್ತಿನ ಸಭೆಯ ಮೇಲೆ ಬಾಂಬುಗಳನ್ನು ಎಸೆಯುವ ಯೋಜನೆಯನ್ನು ತಯಾರಿಸಿತು. ಸ್ಫೋಟದ ಉದ್ದೇಶ ಯಾರನ್ನೂ ಕೊಲ್ಲುವುದಾಗಿರಲಿಲ್ಲ. ಸಂಸತ್ತಿನಲ್ಲಿ ನಡೆಸಿದ ಸ್ಫೋಟದಿಂದ ಭಾರೀ ಪ್ರಚಾರವನ್ನು ಗಿಟ್ಟಿಸುವುದೇ ಕ್ರಾಂತಿಕಾರಿಗಳ ಉದ್ದೇಶವಾಗಿತ್ತು. ಬಾಂಬುಗಳನ್ನು ಎಸೆದು ತಪ್ಪಿಸಿಕೊಂಡು ಓಡುವ ಬದಲು, ಪೊಲೀಸರಿಂದ ಬಂಧನಕ್ಕೊಳಪಟ್ಟು ವಿಚಾರಣೆ ಎದುರಿಸುವುದರಿಂದ, ತಮ್ಮ ಕ್ರಾಂತಿಕಾರಿ ಹೋರಾಟಕ್ಕೆ ಹೆಚ್ಚಿನ ಪ್ರಚಾರ ದೊರೆಯುವುದೆಂಬ ನಿರ್ಣಯಕ್ಕೆ ಭಗತ್ ಸಿಂಗನ ತಂಡ ಬಂದಾಗಿತ್ತು. ಆದರೆ ತಂಡ ಬಾಂಬ್ ಎಸೆಯುವ ಕೆಲಸಕ್ಕೆ ಭಗತ್ ಸಿಂಗನನ್ನು ನಿಯೋಜಿಸಲು ಹಿಂದೇಟು ಹಾಕಿತು. ಸ್ಯಾಂಡರ್ಸ್ ನ ಹತ್ಯೆಯ ಮುಖ್ಯ ಗುಮಾನಿ ಭಗತ್ ಸಿಂಗನ ಸುತ್ತ ಇದ್ದು, ಆತ ಹಾಲಿ ಪ್ರಕಾರಣದಲ್ಲೂ ಬಂಧಿತನಾದರೆ, ಅವನಿಗೆ ಮರಣದಂಡನೆ ಖಚಿತ ಎಂಬುದು ಹಲವು ಸಹಚರರ ವಾದವಾಗಿತ್ತು. ಆದರೂ, ವಿಚಾರಣಾ ವೇದಿಕೆಗಳಲ್ಲಿ ಕ್ರಾಂತಿಕಾರಿ ತಂಡದ ಹೋರಾಟ ಹಾಗೂ ಉದ್ದೇಶಗಳ ಬಗ್ಗೆ ಸಮರ್ಪಕವಾಗಿ ವಾದವನ್ನು ಮಂಡಿಸಬಲ್ಲ ಮಾತಿನ ಮಲ್ಲ, ಭಗತ್ ಸಿಂಗ್ ಮಾತ್ರ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಹಾಗಾಗಿ ಸಂಸತ್ತಿನ ಸಭೆಯ ಮೇಲೆ ಬಾಂಬುಗಳನ್ನು ಎಸೆಯುವ ಕೆಲಸಕ್ಕೆ ಭಗತ್ ಸಿಂಗ್ ಮತ್ತವನ ಸಹಚರ ಬಿ.ಕೆ.ದತ್ತರನ್ನೇ ನೇಮಿಸಲಾಯಿತು.
ಸಂಸತ್ತಿನೊಳಗೆ ಬಾಂಬ್ ಎಸೆಯುವ ದಿನ 8 ಏಪ್ರಿಲ್ 1929ರಂದು ಎಂದು ಭಗತ್ ಸಿಂಗ್ ತಂಡ ನಿಗದಿಪಡಿಸಿತ್ತು. ಅದಕ್ಕೆ ಎರಡು ದಿನ ಮುಂಚೆ ಭಗತ್ ಸಿಂಗ್ ಮತ್ತು ಬಿ.ಕೆ.ದತ್ತರು ಸಂಸತ್ತಿನ ವೀಕ್ಷಕರ ಚಾವಡಿಗೆ ಭೇಟಿಯಿತ್ತು, ಸ್ಥಳ ಪರಿಶೀಲನೆ ನಡೆಸಿದ್ದರು. ನಿಗದಿತಿ ದಿನದಂದು ಬೆಳಗ್ಗೆ 11 ಘಂಟೆಗೆ ಭಗತ್ ಸಿಂಗ್ ಹಾಗೂ ಅವನ ಸಹಚರ ಬಿ.ಕೆ.ದತ್ತ ಸಂಸತ್ತಿನ ವೀಕ್ಷಕರ ಚಾವಡಿಯನ್ನು ಮತ್ತೆ ಪ್ರವೇಶಿಸಿದ್ದರು. ಯಾವುದೋ ಭಾರತೀಯ ಸಂಸದರೊಬ್ಬರು ಅವರುಗಳಿಗೆ ಪ್ರವೇಶದ ಅನುಮತಿಯನ್ನು ಗಳಿಸಿಕೊಟ್ಟಿದ್ದರಂತೆ. ಸಂಸತ್ ಸದಸ್ಯರೆಲ್ಲರೂ ಸೇರಿ ಅಧಿವೇಶನವನ್ನು ಪ್ರಾರಂಭಿಸಿಯಾಗಿತ್ತು. ಸಂಸತ್ತಿನೊಳಗೆ ಬಾಂಬ್ ಎಸೆಯುವದರ ಉದ್ದೇಶ ಯಾರನ್ನೂ ಕೊಲ್ಲುವುದಾಗಿರಲಿಲ್ಲ. ಆದುದರಿಂದ ಕ್ರಾಂತಿಕಾರಿಗಳು ಸಣ್ಣದೊಂದು ಸ್ಫೋಟವನ್ನು ಉಂಟುಮಾಡುವ ಬಾಂಬುಗಳನ್ನೇ ಎಸೆಯುವ ಯೋಜನೆಯನ್ನು ಮಾಡಿದ್ದರು. ತಮ್ಮ ಹೋರಾಟಕ್ಕೆ ಪ್ರಪಂಚಾದ್ಯಂತ ಮತ್ತು ಮುಖ್ಯವಾಗಿ ಇಡೀ ಭಾರತ ದೇಶದಲ್ಲಿ ಪ್ರಚಾರ ಗಳಿಸಿಕೊಡುವುದೇ ಕ್ರಾಂತಕಾರಿಗಳ ಉದ್ದೇಶವಾಗಿತ್ತು. ಹಾಗಾಗಿ ಮೊದಲ ಬಾಂಬನ್ನು ಎಸೆದ ಭಗತ್ ಸಿಂಗ್, ಸಂಸದರುಗಳಿಗೆ ಅತ್ಯಂತ ಕಮ್ಮಿ ಹಾನಿಯಾಗುವ ಸ್ಥಳವನ್ನೇ ಆಯ್ಕೆಮಾಡಿಕೊಂಡಿದ್ದನು. ಭಗತ್ ಸಿಂಗ್ ಮೊದಲ ಬಾಂಬ್ ಎಸೆಯುತ್ತಲೇ, ಸಂಸತ್ತಿನಲ್ಲಿ ಭಾರಿ ಶಬ್ದದೊಂದಿಗೆ ಕೋಲಾಹಲವುಂಟಾಯಿತು. ಸಂಸತ್ ಆವರಣದ ತುಂಬಾ ದಟ್ಟವಾದ ಹೊಗೆ ಎದ್ದಿತ್ತು. ಮೊದಲ ಸ್ಫೋಟದ ಹಿಂದೆಯೇ ದತ್ತ ಕೂಡ ಮತ್ತೊಂದು ಬಾಂಬನ್ನು ಎಸೆದಿದ್ದ. ಯಾರನ್ನೂ ಕೊಲ್ಲುವ ಉದ್ದೇಶವಿರದ ಭಗತ್ ಸಿಂಗ್ ಹಾಗೂ ದತ್ತರ ಎಚ್ಚರದ ಕ್ರಮಗಳಿಂದ ಸ್ಫೋಟದಲ್ಲಿ ಯಾರೂ ಸಾಯಲಿಲ್ಲ. ಸಂಸದರುಗಳು ಗಾಬರಿಯಿಂದ ಹೌಹಾರುತ್ತಿದಾಗ, ಭಗತ್ ಸಿಂಗ್ ಮತ್ತು ದತ್ತ ಇಬ್ಬರೂ, 'ಇಂಕ್ವಿಲಾಬ್ ಜಿನ್ದಾಬಾದ್, ಪ್ರೊಲಿಟೇರಿಯಟ್ ಜಿಂದಾಬಾದ್ (ಕ್ರಾಂತಿಗೆ ಜಯವಾಗಲಿ, ಶ್ರಮಜೀವಿಗಳಿಗೆ ಜಯವಾಗಲಿ)' ಎಂದು ಘೋಷಣೆಗಳನ್ನು ಕೂಗಿದರು. ಭಗತ್ ಸಿಂಗನೇ ಬೆರಳಚ್ಚಿನಿಂದ ತಯಾರಿಸಿದ ಸುಮಾರು ಐವತ್ತು ಭಿತ್ತಿಪತ್ರಗಳನ್ನು, ಇಬ್ಬರೂ ಕ್ರಾಂತಿಕಾರಿಗಳೂ ಸಂಸತ್ತಿನೊಳಗೆ ಎಸೆದರು. ಭಿತ್ತಿಪತ್ರದಲ್ಲಿ 'ಕ್ರಾಂತಿಕಾರಿಗಳ ಅಳಲು ಕಿವುಡ ಬ್ರಿಟಿಷರಿಗೆ ತಲುಪುವಂತೆ ಮಾಡಲು ದೊಡ್ಡ ಶಬ್ದವನ್ನೇ ಮಾಡಬೇಕು. ಇಂದು ಸಂಸತ್ತು ಅನುಮೋದಿಸಲಿರುವ ಎರಡೂ ಮಸೂದೆಗಳು ದೇಶಕ್ಕೆ ಹಾನಿಕಾರಕವಾದವು. ಮಸೂದೆಗಳನ್ನು ಅನುಮೋದಿಸುವ ಬದಲು ಸಂಸದರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯನ್ನು ತೀವ್ರಗೊಳಿಸಲಿ. ದುಷ್ಟ ಬ್ರಿಟಿಷರು ಹೋರಾಟಗಾರರನ್ನು ಕೊಲ್ಲಬಹುದು, ಅವರುಗಳ ವಿಚಾರಧಾರೆಯನ್ನಲ್ಲ. ಕ್ರಾಂತಿಕಾರಿಗಳಾದ ನಾವು ಮನುಜರ ಜೀವಗಳಿಗೆ ಅತ್ಯಂತ ಪ್ರಾಶಸ್ತ್ಯವನ್ನು ನೀಡುತ್ತೇವೆ. ಇಂದಿನ ಸ್ಪೋಟದಲ್ಲಿ ಯಾರೂ ಸಾಯದ ಹಾಗೆ ಎಚ್ಚರ ವಹಿಸಿದ್ದೇವೆ. ಭಾರತೀಯರ ಸ್ವಾತಂತ್ರ್ಯ ಮತ್ತು ಉತ್ತಮ ಭವಿಷ್ಯಕ್ಕಾಗಿ ನಾವು ನಮ್ಮ ರಕ್ತಗಳನ್ನು ಹರಿಸಲು ಸದಾ ಸಿದ್ಧ,' ಎಂದು ಬರೆದಿತ್ತು.
ಭಗತ್ ಸಿಂಗ್ ಮತ್ತು ದತ್ತರು ಸ್ಫೋಟದನಂತರ ಸುಲಭವಾಗಿ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಬಂಧನಗೊಂಡು ಪ್ರಚಾರ ಪಡೆಯುವ ಉದ್ದೇಶವಿದ್ದ ಇಬ್ಬರೂ, ತಪ್ಪಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡಲೇ ಇಲ್ಲ. ಹಾಗಾಗಿ ಅವರಿಬ್ಬರನ್ನು ಪೊಲೀಸರು ಸುಲಭವಾಗೇ ಬಂಧಿಸಿದರು. ತನ್ನ ಕೈಯಲ್ಲಿದ್ದ ಪಿಸ್ತೂಲವೊಂದನ್ನು ಭಗತ್ ಸಿಂಗನು, ತಾನೇ ಪೊಲೀಸರಿಗೆ ಒಪ್ಪಿಸಿದನು. ಅದೇ ಪಿಸ್ತೂಲಿನಿಂದಲೇ ಭಗತ್ ಸಿಂಗ, ಪೊಲೀಸ್ ಅಧಿಕಾರಿ ಸ್ಯಾಂಡರ್ಸ್ ನ ಹತ್ಯೆ ಮಾಡಿದ್ದಾಗಿತ್ತು. ಕೋರ್ಟ್ ವಿಚಾರಣೆಯಲ್ಲಿ, ಅಂತಿಮವಾಗಿ ಭಗತ್ ಸಿಂಗನಿಗೆ ತನ್ನ ವಾದವನ್ನು ಮಂಡಿಸುವ ಅವಕಾಶ ದೊರೆಯಿತು. ಭಗತ್ ಸಿಂಗ್ ತಾನು ಕೋರ್ಟಿನಲ್ಲಿ ವಾದ ಮಂಡಿಸುವಾಗ ಪತ್ರಿಕಾ ಪ್ರತಿನಿಧಿಗಳು ಇರಬೇಕು ಎಂದು ಬೇಡಿಕೆ ಇಟ್ಟರೂ, ಬ್ರಿಟಿಷರಾದ ನ್ಯಾಯಾಧೀಶರು ಅವಕಾಶ ಕೊಡಲಿಲ್ಲ. ತನ್ನ ಭಾಷಣವನ್ನು ಶುರುಮಾಡುವ ಮುನ್ನ ಮತ್ತೊಮ್ಮೆ ಘೋಷಣೆಗಳನ್ನು ಕೂಗಿದ ಭಗತ್ ಸಿಂಗ್, ತನ್ನ ಭಿತ್ತಿಪತ್ರದಲ್ಲಿದ್ದ ವಿಷಯಗಳೆನೆಲ್ಲಾ ಪುನರುಚ್ಛರಿಸದನು. ಸ್ವಾತಂತ್ರ್ಯ ಹೋರಾಟಕ್ಕೆ ಅಹಿಂಸೆಯ ಮಾರ್ಗ ದುರ್ಬಲವಾದದ್ದು ಎಂದು ಭಗತ್ ಸಿಂಗ್ ತನ್ನ ಭಾಷಣದಲ್ಲಿ ಗಾಂಧೀಜಿಯವರ ಮಾರ್ಗವನ್ನು ಪರೋಕ್ಷವಾಗಿ ಟೀಕಿಸಿದ್ದನು. 'ಬ್ರಿಟಿಷರು ಭಾರತದಿಂದ ತೊಲಗಬೇಕು, ಸ್ವತಂತ್ರ ಭಾರತೀಯರ ಜೀವನ ಎಲ್ಲಾ ರೀತಿಯಲ್ಲೂ ಹಸನಾಗಬೇಕೆಂಬುದೇ ಕ್ರಾಂತಿಕಾರಿಗಳ ಉದ್ದೇಶ,' ಎಂದು ಭಗತ್ ಸಿಂಗ್ ತನ್ನ ಭಾಷಣವನ್ನು ಮುಗಿಸಿದಾಗ, ನ್ಯಾಯಾಲಯದಲ್ಲಿ ಮೌನವೇರ್ಪಟ್ಟಿತ್ತು.
ವಿಚಾರಣೆಯನ್ನು ಮುಗಿಸಿದ ನ್ಯಾಯಾಧೀಶರು ಭಗತ್ ಸಿಂಗ್ ಮತ್ತು ದತ್ತರವರನ್ನು ಸಂಸತ್ತಿನ ಮೇಲೆ ಬಾಂಬುಗಳನ್ನು ಎಸೆದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದರು. ಇಬ್ಬರೂ ಕ್ರಾಂತಿಕಾರಿಗಳನ್ನು ಬ್ರಿಟಿಷ್ ಸರಕಾರ ಬೇರೆ ಬೇರೆ ಜೈಲುಗಳಿಗೆ ಕಳುಹಿಸಿತ್ತು. ಕ್ಷಮಾದಾನವನ್ನು ಕೋರುವ ಇಚ್ಛೆ ಇಬ್ಬರೂ ಕ್ರಾಂತಿಕಾರಿಗಳಿಗೆ ಇಲ್ಲದಿದ್ದರೂ, ಮತ್ತೊಮ್ಮೆ ವಿಚಾರಣೆ, ಮತ್ತೊಮ್ಮೆ ದೊರಕುವ ಪ್ರಚಾರದ ಅವಕಾಶಕ್ಕಾಗಿ ಕ್ಷಮಾದಾನದ ಅರ್ಜಿಯನ್ನೂ ಸಲ್ಲಿಸಲಾಯಿತು. ನಿರೀಕ್ಷೆಯಂತೆ ಕ್ಷಮಾದಾನದ ಅರ್ಜಿ ತಿರಸ್ಕೃತವಾಯಿತು.
ಈ ನಡುವೆ ಭಗತ್ ಸಿಂಗನ ಸಹಚರರು ಹಾಗೂ ಸಂಸತ್ತಿನ ಮೇಲೆ ಬಾಂಬ್ ಎಸೆದ ಕಾರ್ಯದ ಅಪರಾಧಿಗಳಾಗಿದ್ದ ಜಯಗೋಪಾಲ್ ಮತ್ತು ಹಂಸ್ರಾಜ್ ವೊಹ್ರಾರವರು ಕ್ಷಮಾದಾನದ ಲಾಭಕ್ಕಾಗಿ ಭಗತ್ ಸಿಂಗನ ವಿರುದ್ಧದ ಪ್ರಕರಣಗಳ ಸಾಕ್ಷಿಗಳಾಗಿ, ಬ್ರಿಟಿಷರ ಪಾಳಯವನ್ನು ಸೇರಿದ್ದರು. ಅವರುಗಳು ಕೊಟ್ಟ ಸುಳಿವಿನಿಂದ ಬ್ರಿಟಿಷರು ಭಗತ್ ಸಿಂಗ ಮತ್ತವನ ಸಹಚರರ ಮೇಲೆ ಪೊಲೀಸ್ ಅಧಿಕಾರಿ ಸ್ಯಾಂಡರ್ಸ್ ನ ಕೊಲೆಯ ಆರೋಪವನ್ನು ಹೊರಿಸಿ, ಹೊಸ ವಿಚಾರಣೆಯನ್ನು ಆರಂಭಿಸಿದರು. ಈ ನಡುವೆ ಭಗತ್ ಸಿಂಗ್, ಜೈಲಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ದಯನೀಯ ಪರಿಸ್ಧಿತಿಯ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದನು. ಭಗತ್ ಸಿಂಗನ ಕರೆಯ ಮೇರೆಗೆ ಅವನ ಸಹಚರರಾದ ದತ್ತ, ಜತೀಂದ್ರನಾಥ್ ದಾಸ್ ಮುಂತಾದವರು ಕೂಡ ಜೈಲಿನಲ್ಲೇ ಉಪವಾಸ ವ್ರತವನ್ನು ಆರಂಭಿಸಿದರು. ಉಪವಾಸದ 63ನೇ ದಿನ ಜತೀಂದ್ರನಾಥ್ ದಾಸನ ಪರಿಸ್ಥಿತಿ ಚಿಂತಾಜನಕವಾಗಿತ್ತು. ಭಗತ್ ಸಿಂಗನೇ ಆಹಾರವನ್ನು ಸೇವಿಸುವಂತೆ ವಿನಂತಿಸಿಕೊಂಡರೂ, ಆಹಾರವನ್ನು ಸೇವಿಸಲೊಪ್ಪದ ಜತೀಂದ್ರನಾಥ್ ದಾಸ್ 13 ಸೆಪ್ಟೆಂಬರ್ 1929ರಂದು ಜೈಲಿನಲ್ಲೇ ಮೃತನಾದನು. ಧೃತಿಗೆಡದ ಭಗತ್ ಸಿಂಗ್ ಮತ್ತು ದತ್ತರು ಉಪವಾಸ ವ್ರತವನ್ನು ಮುಂದುವರೆಸಿದ್ದರು. ಭಗತ್ ಸಿಂಗ್ ಮತ್ತು ದತ್ತರ ಉಪವಾಸ ವ್ರತ 116ನೇ ದಿನವನ್ನು ತಲುಪಿದ್ದು, ಅಂದಿಗೆ ಅದು ವಿಶ್ವದಾಖಲೆಯಾಗಿತ್ತು. ಕಡೆಗೆ, ಭಗತ್ ಸಿಂಗನ ತಂದೆ ಕಿಶನ್ ಸಿಂಗರ ಕೋರಿಕೆಯ ಮೇರೆಗೆ ಇಬ್ಬರೂ ಕ್ರಾಂತಿಕಾರಿಗಳು ತಮ್ಮ ಉಪವಾಸ ವ್ರತವನ್ನು ಅಂತಿಮಗೊಳಿಸದರು.
ಪೊಲೀಸ್ ಅಧಿಕಾರಿ ಸ್ಯಾಂಡರ್ಸ್ ನ ಹತ್ಯೆ ಪ್ರಕರಣವೀಗ ‘ಲಾಹೋರ್ ಷಡ್ಯಂತ್ರದ ಪ್ರಕರಣ’ವೆಂದು ಹೆಸರನ್ನು ಪಡೆದುಕೊಂಡಿತ್ತು. ಉಪವಾಸದ ವ್ರತದ ನಡುವೆಯೂ ಭಗತ್ ಸಿಂಗ್ ವಿಚಾರಣೆಯ ದಿನಗಳಲ್ಲಿ ನ್ಯಾಯಾಲಯಕ್ಕೆ ಬರುತ್ತಿದ್ದನು. ಕ್ರಾಂತಿಕಾರಿಯೆಂಬ ಹಣೆಪಟ್ಟಿ ಹೊತ್ತಿದ್ದ ಭಗತ್ ಸಿಂಗನಿಗೆ ಕೈಕೋಳ ತೊಡಿಸಿಯೇ ನ್ಯಾಯಾಲಯಕ್ಕೆ ಕರೆತರಲಾಗುತ್ತಿತ್ತು. ವಿಚಾರಣೆಯ ವಿಧಿ ವಿಧಾನಗಳ ನ್ಯೂನ್ಯತೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದ ಭಗತ್ ಸಿಂಗನ ವಾದ ಸರಣಿಗೆ ವಕೀಲರುಗಳೇ ಏಕೆ, ನ್ಯಾಯಾಧೀಶರುಗಳೇ ತಲೆದೂಗುತ್ತಿದ್ದರು. ಆದರೇನು? ಬ್ರಿಟಿಷ್ ಸರಕಾರ ಭಗತ್ ಸಿಂಗ್ ಮತ್ತವನ ಸಹಚರರನ್ನು ಗಲ್ಲಿಗೇರಿಸುವುದೆಂದು ನಿರ್ಧರಿಸಿಯಾಗಿತ್ತು. ಸಾಲದಕ್ಕೆ ಭಗತ ಸಿಂಗನ ಎಲ್ಲಾ ಕ್ರಾಂತಿಕಾರಿ ಪ್ರಕರಣಗಳಲ್ಲೂ ಭಾಗಿಗಳಾಗಿದ್ದ ಜಯಗೋಪಾಲ್ ಮತ್ತು ಹನ್ಸ್ರಾಜ್ ವೊಹ್ರಾರವರು, ಈಗ ಪ್ರಕರಣದ ಸಾಕ್ಷಿಗಳಾಗಿ ಬ್ರಿಟಿಷರ ಪಕ್ಷ ಸೇರಿಹೋಗಿದ್ದರು. ಅವರಿಬ್ಬರೂ ಭಗತ್ ಸಿಂಗನ ಬೆನ್ನಿಗೆ ಚೂರಿ ಇರಿದಿದ್ದರು. 7 ಅಕ್ಟೋಬರ್ 1930ರಂದು ನ್ಯಾಯಾಲಯ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುರವರನ್ನು ಸ್ಯಾಂಡರ್ಸ್ ಹತ್ಯೆ ಪ್ರಕರಣದ ಅಪರಾಧಿಗಳೆಂದು ಘೋಷಿಸಿತ್ತು. ಆ ಮೂವರೂ ಕ್ರಾಂತಿಕಾರಿಗಳನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ತೀರ್ಪನ್ನು ಕೂಡ ನ್ಯಾಯಾಲಯ ನೀಡಿತ್ತು.
ಭಗತ್ ಸಿಂಗ್ ಮತ್ತವನ ಸಹಚರರು, ಬ್ರಿಟಿಷರಿಂದ ಕ್ಷಮಾದಾನವನ್ನು ಬೇಡಲು ಇಚ್ಛಿಸಲೇ ಇಲ್ಲ. ತಮ್ಮ ಬಲಿದಾನದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಬಲ ಬರುವುದೆಂದು ಅವರುಗಳು ನಂಬಿದ್ದರು. ಆದರೂ, ಬಹಳ ಸ್ವಾತಂತ್ರ್ಯ ಹೋರಾಟಗಾರರು ಅಂದಿನ ಮುಖಂಡರಾಗಿದ್ದ ಗಾಂಧೀಜಿಯವರು ಬ್ರಿಟಿಷ್ ಸರಕಾರದೊಂದಿಗೆ ಮಾತನಾಡಿ, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿಯಾದರೂ ಪರಿವರ್ತಿಸುವಂತೆ ಮಾಡಬೇಕೆಂಬ ಪ್ರಯತ್ನವನ್ನು ಮಾಡಿದ್ದರು. ಆದರೆ ಅಹಿಂಸಾವಾದಿಯಾಗಿದ್ದ ಗಾಂಧೀಜಿಯವರಿಗೆ ಭಗತ್ ಸಿಂಗನ ಕ್ರಾಂತಿಕಾರಿ ಮಾರ್ಗದ ಬಗ್ಗೆ ಸ್ವಲ್ಪವೂ ಸಹಮತಿ ಇರಲಿಲ್ಲ. ಭಗತ್ ಸಿಂಗನಿಗೆ ಕ್ಷಮಾದಾನವನ್ನು ಗಳಿಸಿಕೊಡುವಲ್ಲಿ, ಒಲ್ಲದ ಮನಸ್ಸಿನ ಗಾಂಧೀಜಿಯವರು ಅಂದಿನ ವೈಸ್ರಾಯ್ ಇರವಿನ್ ರೊಡನೆ ಏನು ಚರ್ಚೆ ಮಾಡಿದ್ದರು ಎಂಬುದು ಇಂದಿಗೂ ನಿಗೂಢ ವಿಷಯ.
ಭಗತ್ ಸಿಂಗನ ತಂದೆ ಕಿಶನ್ ಸಿಂಗರು, ಭಗತ್ ಸಿಂಗನ ಕ್ಷಮಾದಾನದ ಕೋರಿಕೆಯನ್ನು ಲಂಡನ್ನಿನ ನ್ಯಾಯಾಲಯದವರೆಗೂ ಕೊಂಡೊಯ್ದಿದ್ದು ಯಾವ ಫಲವನ್ನು ನೀಡಲಿಲ್ಲ. ದುರ್ಗಾ ದೇವಿಯ ಪತಿಯಾದ ಭಗವತಿ ಚರಣ್ ಜೈಲಿನ ಮೇಲೆ ಬಾಂಬ್ ಸಿಡಿಸಿ ಭಗತ್ ಸಿಂಗ್ ಮತ್ತವನ ಸಹಚರರನ್ನು ಬಿಡಿಸಲು ಮಾಡಿದ ಪ್ರಯತ್ನ, ಅಭ್ಯಾಸದ ಹಂತದಲ್ಲೇ ಕೊನೆಗೊಂಡಿತು. ಅಭ್ಯಾಸಕ್ಕಾಗಿ ಬಾಂಬ್ ಸಿಡಿಸಿದಾಗ, ಆ ಸಿಡಿತಕ್ಕೆ ಭಗವತಿ ಚರಣನೇ ಮೃತಪಟ್ಟಿದ್ದನು.
23 ಮಾರ್ಚ್ 1931ರ ದಿನ ಲಾಹೋರ್ ಜೈಲಿನಲ್ಲಿ ಎಂದಿನ ದಿನದಂತೆ ಆರಂಭವಾಗಿತ್ತು. ಎಂದಿನಂತೆ ಕೈದಿಗಳನ್ನು ಬೆಳಗ್ಗೆಯೇ ಜೈಲಿನ ಕೋಣೆಗಳಿಂದ ಹೊರಬಿಟ್ಟು, ಜೈಲಿನ ಅಂಗಳದಲ್ಲಿ ಓಡಾಡಿಕೊಂಡಿರಲು ಬಿಡಲಾಗಿತ್ತು. ಸೂರ್ಯ ಮುಳುಗುವವರೆಗೂ ಅವರೆಲ್ಲರನ್ನೂ ಜೈಲಿನ ಅಂಗಳದಲ್ಲೇ ಇರಲು ಬಿಡಲಾಗುತ್ತಿತ್ತು. ಆದರೆ ಅಂದು, ಜೈಲಿನ ವಾರ್ಡನ್ ಮತ್ತು ಹಿರಿಯರಾದ ಚರತ್ ಸಿಂಗ್, ಕೈದಿಗಳಿಗೆ ಸಂಜೆ ನಾಲ್ಕರ ಹೊತ್ತಿಗೆ ಜೈಲು ಕೋಣೆಗಳಿಗೆ ತೆರಳುವಂತೆ ಸೂಚನೆ ನೀಡಿದ್ದರು. ಹೃದಯವಂತರಾದ ಚರತ್ ಸಿಂಗ್ ಕೈದಿಗಳಿಗೆಲ್ಲಾ ಅಚ್ಚುಮೆಚ್ಚಿನವರಾಗಿದ್ದರು. ಅಂತಹ ಚರತ್ ಸಿಂಗರೇ, ಹೊತ್ತಿಗೆ ಮುಂಚೆಯೇ ಕೈದಿಗಳನ್ನು ಜೈಲು ಕೋಣೆಗಳಿಗೆ ಹೋಗುವಂತೆ ಸೂಚಿಸಿದ್ದು, ಎಲ್ಲಾ ಕೈದಿಗಳ ಮನಸ್ಸಿನಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಗುಸುಗುಸುಗಳ ನಡುವೆ, ಜೈಲಿನ ಕ್ಷೌರಿಕ ಬರ್ಕತ್ತನ ಬಾಯಿಂದ ವಿಷಯ ಹೊರಬಿದ್ದಿತ್ತು. ಅಂದಿನ ಸಂಜೆಯೇ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರುಗಳನ್ನು ಅದೇ ಜೈಲಿನಲ್ಲೇ ಗಲ್ಲಿಗೇರಿಸುವರೆಂಬ ಸುದ್ದಿ ಎಲ್ಲಾ ಕೈದಿಗಳನ್ನು ದಿಗ್ಭ್ರಾಂತರನ್ನಾಗಿಸಿತ್ತು.
ಹಿರಿಯರಾದ ಜೈಲಿನ ವಾರ್ಡನ್ ಚರತ್ ಸಿಂಗ್, ಭಗತ್ ಸಿಂಗನಿಗೆ ತಂದೆಯಂತಾಗಿ ಹೋಗಿದ್ದರು. ಓದಿನ ಹುಚ್ಚನಾದ ಭಗತ್ ಸಿಂಗನು ಕೇಳಿದ ಪುಸ್ತಕಗಳನ್ನೆಲ್ಲಾ ಒದಗಿಸುತ್ತಿದವರು ಚರತ್ ಸಿಂಗರಾಗಿದ್ದರು. ಮಾತೃಹೃದಯದ ಚರತ್ ಸಿಂಗರು 23 ಮಾರ್ಚ್ 1931ರಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುರವರಿಗೆ, ಅವರುಗಳ ಗಲ್ಲುಶಿಕ್ಷೆ ಅಂದು ಸಂಜೆ 6 ಘಂಟೆಗೇ ಎಂದು ತಿಳಿಸಿದಾಗ, ಮೂವರೂ ಕ್ರಾಂತಿಕಾರಿಗಳೇನೂ ವಿಚಲಿತರಾಗಲಿಲ್ಲ. ಗಲ್ಲುಶಿಕ್ಷೆಯ ಸಮಯದ ನಿರೀಕ್ಷೆಯಲ್ಲಿ ಜೈಲಿನ ಹೊರಗೆ ಸೇರಬಹುದಾದ ಭಾರೀ ಜನಸಮೂಹದ ಒತ್ತಡವನ್ನು ತಪ್ಪಿಸಲು, ಗಲ್ಲು ಶಿಕ್ಷೆಯ ಸಮಯವನ್ನು 11 ಘಂಟೆಗಳ ಕಾಲ ಹಿಂದೂಡಲಾಗಿತ್ತು. ಸ್ವತಃ ಸಿಖ್ ಧರ್ಮದವನಾಗಿದ್ದ ಚರತ್ ಸಿಂಗ್, ಭಗತ್ ಸಿಂಗನಿಗೆ ಗಲ್ಲುಶಿಕ್ಷೆಯಾಗುವ ಮುನ್ನ, ಸಿಖ್ಖರ ದೈವವಾದ 'ವಾಹೆ ಗುರು'ವನ್ನು ಸ್ಮರಿಸುವಂತೆ ತಿಳಿಸಿದನು. ನಿರೀಶ್ವರವಾದಿಯಾದ ಭಗತ್ ಸಿಂಗ್ ಸಮ್ಮತಿಸಲಿಲ್ಲ. ಬದಲಾಗಿ ಚರತ್ ಸಿಂಗರನ್ನೇ ಪ್ರಶ್ನಿಸಿದ ಭಗತ್ ಸಿಂಗ್ 'ದೇವರಿರುವುದು ನಿಜವಾಗಿದ್ದರೆ ಅವನೇಕೆ ಪ್ರಪಂಚದಲ್ಲಿರುವ ಕಷ್ಟಕಾರ್ಪಣ್ಯಗಳನ್ನು ನೋಡಿಕೊಂಡು ಸುಮ್ಮನಿದ್ದಾನೆ? ದುಷ್ಟ ಬ್ರಿಟಿಷರಲ್ಲಿ ಭಾರತವನ್ನು ಭಾರತೀಯರಿಗೆ ಬಿಟ್ಟುಕೊಡುವ ಮನಸ್ಸನ್ನೇಕೆ ಉಂಟುಮಾಡುತ್ತಿಲ್ಲ?' ಎಂದು ಕೇಳಿದನು. ಪಂಜಾಬಿ, ಉರ್ದು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಪಂಡಿತನಾದ ಭಗತ್ ಸಿಂಗ್ ತಾನೇ ಬರೆದ ಪುಸ್ತಕವಾದ 'ವೈ ಐ ಆಮ್ ಎನ್ ಅಥೆಇಸ್ಟ್ (ನಾನೇಕೆ ನಿರೀಶ್ವರವಾದಿ)?' ಎಂಬ ಪುಸ್ತಕವನ್ನು ಚರತ್ ಸಿಂಗರ ಕೈಗೆ ನೀಡಿದನು. ಭಗತ್ ಸಿಂಗನೇ ಜೈಲಿನಲ್ಲಿ ಬರೆದಿಟ್ಟಿದ್ದ 'ಜೈಲ್ ಡೈರಿ' ಎಂಬ ಪುಸ್ತಕದ ಹಸ್ತಪ್ರತಿಯೂ ಚರತ್ ಸಿಂಗರ ಕೈಸೇರಿತ್ತು.
ಸಂಜೆ ಆರರ ಹೊತ್ತಿಗೆ ಕೈದಿಗಳೆಲ್ಲಾ ತಮ್ಮ ತಮ್ಮ ಕೋಣೆಗಳಲ್ಲಿ ಗಲ್ಲು ಶಿಕ್ಷೆಯ ಭಯಾನಕ ಸಮಯದ ಕ್ಷಣಗಣನೆಯಲ್ಲಿ ತೊಡಗಿದ್ದರು. ಸಂಜೆ ಆರರ ಸಮಯ ಸಮೀಪಿಸುತ್ತಲೇ, ಪೋಲೀಸರ ಬೂಟಿನ ಟಪಟಪ ಸದ್ದು, ಅದರೊಡನೆ ಕ್ರಾಂತಿಕಾರಿಗಳ 'ಇನ್ಕ್ವಿಲಾಬ್ ಜಿನ್ದಾಬಾದ್, ಭಾರತ ಮಾತಾಕಿ ಜೈ' ಎಂಬ ಘೋಷಣೆಗಳು ಕೈದಿಗಳಿಗೆ ಕೇಳಿಸಿತು. ಮೂವರೂ ಕ್ರಾಂತಿಕಾರಿಗಳ ಗಲ್ಲುಶಿಕ್ಷೆಯನ್ನು ನೆನೆದು ಜೈಲಿನ ಇತರ ಕೈದಿಗಳು ಹತಾಶರಾಗಿದ್ದರು.
ಭಗತ್ ಸಿಂಗನನ್ನು ಮಧ್ಯದ ನೇಣುಗಂಬದ ಹಲಗೆಯ ಮೇಲೆ ನಿಲ್ಲಿಸಲಾಯಿತು. ಅಂತಿಮವಾಗಿ ಮೂವರೂ ಕ್ರಾಂತಿಕಾರಿಗಳು 'ಇನ್ಕ್ವಿಲಾಬ್ ಜಿನ್ದಾಬಾದ್, ಭಾರತ್ ಮಾತಾಕಿ ಜೈ' ಎಂಬ ಘೋಷಣೆಗಳನ್ನು ಕೂಗಿದರು. ಜೈಲಧಿಕಾರಿ ಸನ್ನೆ ಮಾಡುತ್ತಲೇ ಮೂವರು ಕ್ರಾಂತಿಕಾರಿಗಳ ಕಾಲ ತಳಗಿನ ಹಲಗೆಯನ್ನು ಎಳೆಯಲಾಯಿತು. ಮೂರು ಪವಿತ್ರ ಪ್ರಾಣಗಳು ಹಾರಿ ಸ್ವರ್ಗವನ್ನು ಸೇರಿದ್ದವು. ತರಾತುರಿಯಲ್ಲಿ ಹೆಣಗಳನ್ನು ಲಾರಿಯೊಂದರಲ್ಲಿ ಜೈಲ ಹಿಂಬಾಗಿಲಿನಿಂದ ಹೊರಸಾಗಿಸಿದ ಪೊಲೀಸರು, ಸಮೀಪದ ಸುಟ್ಲೆಜ್ ನದಿಯ ತೀರಕ್ಕೆ ಕೊಂಡೊಯ್ದು ಸುಟ್ಟುಹಾಕಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಸುವರ್ಣ ಅಧ್ಯಾಯವೊಂದು ಹೀಗೆ ಕೊನೆಗೊಂಡಿತ್ತು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುರವರು ಭಾರತ ದೇಶದ ಚರಿತ್ರೆಯ ಚಿರತಾರೆಗಳ ಸಮೂಹವನ್ನು ಸೇರಿಹೋಗಿದ್ದರು.
-೦-೦-೦-