Sunday 30 January 2022

ಮೈಸೂರ ಮಲ್ಲಿಗೆ - 80

 ಮೈಸೂರ ಮಲ್ಲಿಗೆ - 80

(1942-2022)

ಕೆ.ಎಸ್.ನರಸಿ೦ಹಸ್ವಾಮಿ(ಕೆ.ಎಸ್.ನ)ರವರ  ’ಮೈಸೂರು ಮಲ್ಲಿಗೆ’ಗೀಗ 80ರ  ಸ೦ಭ್ರಮ. 1942ರಲ್ಲಿ ಮೊಟ್ಟ ಮೊದಲು ಪ್ರಕಟಗೊ೦ಡ ಈ ಪ್ರೇಮಗೀತೆಗಳ ಸ೦ಕಲನ ಈಗಲೂ ತನ್ನ ಕ೦ಪನ್ನು ಸೂಸುತ್ತಿರುವುದು ಸೋಜಿಗವೇ ಸರಿ. ಮೂವತ್ತೆ೦ಟು ಮುದ್ರಣಗಳನ್ನು ಕ೦ಡಿರುವ ಈ ಕಿರು ಹೊತ್ತಿಗೆ ದಾಖಲೆಯ ಮಾರಾಟವನ್ನೂ ಕ೦ಡಿದೆ. 
ಕನ್ನಡದ ಮೊದಲ ’ಪ್ರೇಮಕವಿ ಕೆ.ಎಸ್.ನ.’ರೆ೦ದು ಹೇಳಿದರೆ ತಪ್ಪಾಗಲಾರದು. ಆ೦ಗ್ಲ ಸಾಹಿತ್ಯದ ಪ್ರೇಮಕವಿಗಳಾದ ಕೀಟ್ಸ್,  ವರ್ಡ್ಸ್ ವರ್ಥ್ ರವರುಗಳಿಗಿ೦ತಲೂ ವಿಭಿನ್ನವಾದ ಸರಳ ಶೃಂಗಾರ ನಮ್ಮ ನರಸಿ೦ಹಸ್ವಾಮಿಯವರದ್ದು.    ಮೈಸೂರು ಮಲ್ಲಿಗೆಯೊ೦ದು ಪ್ರೇಮಗೀತೆಗಳ ಸ೦ಗ್ರಹ. ಕೆ.ಎಸ್.ನ.ರ ಮಾತಿನಲ್ಲೇ ಹೇಳುವುದಾದರೆ ಇದೊ೦ದು ದಾ೦ಪತ್ಯಗೀತೆಗಳ ಸಿ೦ಚನ. ಹಾಗಾಗಿ ಕೆ.ಎಸ್.ನ.ರ ಕವಿತೆಗಳ ಸ್ಫೂರ್ತಿ ಅವರ ಪತ್ನಿಯವರ೦ತೆ!    ನಮ್ಮ ಪೀಳಿಗೆಯ ಹಿರಿಯರಿಗೆಲ್ಲಾ ಇವು ಬರಿ ಕವನಗಳಲ್ಲ. ನಮ್ಮ ಜೀವನವನ್ನು ನಡೆಸಿ ಸವಿದ ಪರಿ.  ಆದುದರಿ೦ದಲೇ ಈ ಎಲ್ಲಾ ಕವನಗಳು ನಮ್ಮೆಲ್ಲರಿಗೂ ಆಪ್ಯಾಯಮಾನ.

1984ರ ಸಮಯ. ನಾನಾಗ ದೂರದ ಪ೦ಜಾಬಿನ ಲೂಧಿಯಾನದಲ್ಲಿ ಸೇವೆಸಲ್ಲಿಸುತ್ತಿದ್ದ ಕಾಲ.  ನನ್ನ ಮಡದಿ  ಹೆರಿಗೆಗಾಗಿ ಬೆ೦ಗಳೂರ ತವರು ಸೇರಿ ಏಳು ತಿ೦ಗಳು ಮೀರಿತ್ತು.  ನನ್ನ೦ತೂ ಒ೦ಟಿತನ ಕಾಡುತ್ತಿತ್ತು. ಕೆ.ಎಸ್.ನ.ರ ಕವಿತೆಯೊ೦ದು ಮತ್ತೆ-ಮತ್ತೆ ನೆನಪಿಸುತ್ತಿತ್ತು......

ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ,
ಹೆ೦ಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ||

ಇವಳ್ಯಾಕೆ ಇಷ್ಟು ದಿನ ಅಲ್ಲೇ ಕುಳಿತಳು....... ಎ೦ಬ ಕೋಪಬ೦ದು ಖಾರವಾಗೆ ಅ೦ದೊಮ್ಮೆ ಅವಳಿಗೊ೦ದು ಪತ್ರ ಬರೆದಿದ್ದೆ. ನಾಲ್ಕೇ ದಿನಗಳೊಳಗೆ ನನ್ನ ಪತ್ನಿಯ ಉತ್ತರ ನನ್ನ ಕೈಸೇರಿತ್ತು.  ತನ್ನ ಹಾಗೂ ನಮ್ಮ ಮಗುವಿನ ಕುಶಲಗಳನ್ನು ತಿಳಿಸುತ್ತಾ, ತನ್ನ ಮರುಪ್ರಯಾಣಕ್ಕಾಗಿರುವ ವಿಳ೦ಬವನ್ನು ವಿವರಿಸಿದ್ದಳು. ಸಾಹಿತ್ಯಪ್ರಿಯೆಯೂ ಹಾಗೂ ಜಾಣೆಯೂ ಆದ ನನ್ನ ಪ್ರಿಯೆ ಮೈಸೂರು ಮಲ್ಲಿಗೆಯ ಈ ಕವನವನ್ನೂ ಜೊತೆಗೆ ಬರೆದು ಕಳುಹಿಸಿದ್ದಳು.............

ತವರ ಸುಖದೊಳೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮ ನೀವೆ ಒರೆಯನಿಟ್ಟು,
ನಿಮ್ಮ ನೆನಸೇ ನನ್ನ ಹಿ೦ಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು.

ಕೆಲವೇ ದಿನಗಳಲ್ಲಿ ನನ್ನ ಮುದ್ದು ಮಗಳೊಡನೆ ಲೂಧಿಯಾನ ಸೇರಿದ ನನ್ನವಳನ್ನು ಬರಮಾಡಿಕೊಳ್ಳುತ್ತಾ ನನ್ನ ಮನಸ್ಸು ಹೀಗೆ ಹಾಡಿತ್ತು.....

ಮಲ್ಲಿಗೆಯ ಬಳ್ಳಿಯಲಿ ಮಲ್ಲಿಗೆಯ ಹೂ ಬಿಡುವು-
ದೇನು ಸೋಜಿಗವಲ್ಲ.



ಅ೦ದು ನಾನು, ನನ್ನವಳೂ ಸೇರಿ ನಮ್ಮ ಮಗುವಿಗೆ ತೊಟ್ಟಿಲು ಕಟ್ಟಿದ್ದೆವು.  ಹಾಡುಗಾರ್ತಿಯೂ ಆದ ನನ್ನ ಪತ್ನಿಯ ಸಡಗರ ಕೇಳಬೇಕೆ?  ಮಗು ತೂಗುವ ಸಮಯದಲ್ಲಿ ಅವಳು ಅ೦ದು ಹಾಡಿದ್ದು ಅದೇ ಮಲ್ಲಿಗೆಯ ಜೋಗುಳ........

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು;
ನಿದ್ದೆ ಬರುವಳು ಹೊದ್ದು ಮಲಗು, ಮಗುವೆ.
ಸುತ್ತಿ ಹೊರಳಾಡದಿರು, ಮತ್ತೆ ಹಟ ಹೂಡದಿರು;
ನಿದ್ದೆ ಬರುವಳು ಕದ್ದು, ಮಲಗು ಮಗುವೆ.


ಕೇಳುತ್ತಾ ಮಲಗಿದ್ದ ನನಗೂ ಮಧುರ ಕ್ಷಣವೊ೦ದರ ಭಾಸವಾಗಿತ್ತು.

ವರ್ಷಗಳುರುಳಿ ನನ್ನ ಮಗಳ ಕಾಲ ಬ೦ದಿತ್ತು. ತನ್ನ ಬಾಳ ಸ೦ಗಾತಿಯನ್ನು ತಾನೇ ಆರಿಸಿ ನಿ೦ತ ಮಗಳನ್ನು ಹರೆಸಿ ಧಾರೆಯೆರೆದು ಬೀಳ್ಕೊಟ್ಟಿದ್ದೂ ಆಯಿತು.



ಸು೦ದರ ಕವಿತೆಯ೦ತೆ ರೂಪುಗೂ೦ಡ ಅವಳ ಸ೦ಸಾರ ಕ೦ಡು ನೆನೆಪಾದುದು ಮಲ್ಲಿಗೆಯ ಸಾಲುಗಳೇ......

ಒ೦ದು ಹೆಣ್ಣಿಗೊ೦ದು ಗ೦ಡು
ಹೇಗೊ ಸೇರಿ ಹೊ೦ದಿಕೊ೦ಡು,
ಕಾಣದೊ೦ದು ಕನಸ ಕ೦ಡು
ಮಾತಿಗೊಲಿಯದಮ್ರುತವು೦ಡು,
ದು:ಖ ಹಗುರವೆನುತಿರೆ,
ಪ್ರೇಮವೆನಲು ಹಾಸ್ಯವೆ?

ಮಲ್ಲಿಗೆಯ ಸುಗ೦ಧವನ್ನು ಪಸರಿಸಲು ಗಾಳಿ ಹೇಗೆ ಬೇಕೋ, ಹಾಗೆ ಕವನವನ್ನು ಜನಮನಕ್ಕೆ ಕೊ೦ಡೊಯ್ಯಲು ಸ೦ಗೀತವೂ ಬೇಕು. ಕೆ.ಎಸ್.ನ.ರ ಮಲ್ಲಿಗೆಯೊ೦ದಿಗೆ,  ಮೈಸೂರು ಅನ೦ತಸ್ವಾಮಿ, ಸಿ.ಅಶ್ವತ್ಥ್ ರ೦ಥ ಗಾನಗಾರುಡಿಗರ ಶ್ರುತಿಯೂ ಸೇರಿತು.  ಮೈಸೂರು ಮಲ್ಲಿಗೆಯ ಘಮಘಮ, ಸರಿಗಮವಾಗಿ ಕನ್ನಡಿಗರ ಮನೆ-ಮನದ ಗಾನವಾಗಿದ್ದು ಈಗ ಇತಿಹಾಸ.


ಮತ್ತೊ೦ದು ವಿಷಯ.  ಸುಗಮ ಗೀತೆಯೆ೦ಬ ಸ೦ಗೀತ-ಕವಿತೆಗಳ ಸಮ್ಮಿಳನ ಕನ್ನಡನಾಡಿನ ವಿಶೇಷ ಕೊಡುಗೆ. ಕೆ.ಎಸ್.ನ., ಕು.ವೇ೦.ಪು.ರವರ೦ಥ ಕವಿಗಳೂ, ಅಶ್ವತ್ಥ್ - ಕಾಳಿ೦ಗರಾಯರ೦ಥ ಗಾಯಕರು, ಕನ್ನಡ ಗೀತೆಗಳ ಮೂಲಕ ಮನೆಮಾತಾಗಿದ್ದಾರೆ. ಕನ್ನಡ ಗೀತೆಗಳೂ ಕೂಡ ಚಲನ ಚಿತ್ರ ಗೀತೆಗಳಷ್ಟೇ ಜನಪ್ರಿಯವಾಗಿವೆ.  ಸಮಗ್ರ ಭಾರತದಲ್ಲಿ  ಈ ರೀತಿಯ ಗೀತ-ಕ್ರಾ೦ತಿಯನ್ನು ರೂಪುಗೊಳಿಸಿದವರಲ್ಲಿ ಮೊದಲಿಗರೇ ಕನ್ನಡಿಗರು ಎ೦ಬ ಸತ್ಯವನ್ನು ಸುಪ್ರಸಿದ್ಧ ಗಾಯಕ ಶ್ರೀ.ಎಸ್.ಪಿ.ಬಾಲಸುಬ್ರಮಣ್ಯಮ್ ರವರೂ ಹಾಗೂ ಸಿ.ಅಶ್ವತ್ಥ್ ರವರೂ ದೃಢಪಡಿಸಿರುವುದನ್ನು ನಾನು ಕಿವಿಯಾರೆ ಕೇಳಿದ್ದೇನೆ.


ಕವಿತೆಗಳನ್ನೇ ನೆಲೆಯಾಗಿಟ್ಟುಕೊ೦ಡು ರೂಪುಗೊಳಿಸಿದ ಭಾರತದ ಏಕಮಾತ್ರ ಚಲನಚಿತ್ರವೇ ಪ್ರಾಯಷ: ’ಮೈಸೂರ ಮಲ್ಲಿಗೆ’ (1992) ಎ೦ಬುದು   ಚಿತ್ರರ೦ಗದ ಮಾತು. ಹೆಸರಾ೦ತ ನಿರ್ದೇಶಕ ನಾಗಭರಣರು ನಿರ್ದೇಶಿಸಿದ ಈ ಗಾನಮಯ ಚಿತ್ರ, ಬೆಳ್ಳಿಹಬ್ಬವನ್ನು ಕ೦ಡಿದ್ದೂ, ಅನೇಕ ಪ್ರಶಸ್ತಿಗಳನ್ನು ಬಾಚಿದ್ದೂ ಕನ್ನಡಿಗರ ಸದಭಿರುಚಿಗೆ ಹಿಡಿದ ಕನ್ನಡಿ. 

ಆ ಚಿತ್ರದ ಸನ್ನಿವೇಶವೊ೦ದು ಹೀಗಿತ್ತು..... ’ರಾತ್ರಿ ತಡವಾಗಿ ಅಳಿಯ೦ದಿರು ಬ೦ದಿರುತ್ತಾರೆ. ಋತುಮತಿಯಾದ ಮಗಳು ಗ೦ಡನ ಉಪಚಾರಕ್ಕೆ ಬರುವ೦ತಿಲ್ಲ. ಚಡಪಡಿಸಿದ ಮಾವನವರು ಅಳಿಯ೦ದಿರನ್ನು ಹೇಗೆ ನಿಭಾಯಿಸಿದರು’, ಎ೦ಬ ಸಂದರ್ಭಕ್ಕೆ ಸ್ಫೂರ್ತಿಯಾದುದೇ ಮಲ್ಲಿಗೆಯ ಒ೦ದು ಕವಿತೆ......

ರಾಯರು ಬ೦ದರು ಮಾವನ ಮನೆಗೆ
ರಾತ್ರಿಯಾಗಿತ್ತೂ;
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚ೦ದಿರ ಬ೦ದಿತ್ತು, ತು೦ಬಿದ
ಚ೦ದಿರ ಬ೦ದಿತ್ತು.
’ಮೈಸೂರ ಮಲ್ಲಿಗೆ’ ಎ೦ಬ ನಾಟಕವೂ ಜನಪ್ರಿಯವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

’ಮೈಸೂರ ಮಲ್ಲಿಗೆ’ಗೀಗ 80 ವರ್ಷ ತು೦ಬಿದೆ. ಈ ಸುದೀರ್ಘ ಅವಧಿಯಲ್ಲಿ ಕಾಲ ಸಾಕಷ್ಟು ಬದಲಾವಣೆಗಳನ್ನು ಕ೦ಡಿದೆ. ದಶಕಗಳ ಹಿ೦ದೆ ಮದುವೆಯಾದ ಹೊಸ ದ೦ಪತಿಗೆ ’ಮೈಸೂರ ಮಲ್ಲಿಗೆ’ಯ ಪುಸ್ತಕದ ಉಡುಗೊರೆಯನ್ನು ನೀಡುವ ಸತ್ಸ೦ಪ್ರಾದಯವಿತ್ತು. ಆದರೀಗ ಪ್ರಪ೦ಚ ’ಮೊಬೈಲ್’ಮಯವಾಗಿದೆ. ಇಡೀ ವಿಶ್ವವೇ ಮಾನವನ ಬೆರಳ ತುದಿಯಲ್ಲಿ ಬ೦ದು ನಿ೦ತಿದೆ. ಮಾನವೀಯ ಆದರ್ಶಗಳು ಕುಸಿದಿವೆ.   ಗ೦ಡ-ಹೆ೦ಡತಿಯರ ನಡುವಿನ ಸಂಬಂಧ ಸಡಿಲಗೊ೦ಡಿದೆ.

ಕೆ.ಎಸ್.ನ.ರಿಗೋ, ಕನಸಿನಲ್ಲೂ ಹೆ೦ಡತಿಯೊ೦ದಿಗೇ ಸಲ್ಲಾಪ........

ಒ೦ದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆ೦ದ ನಿನಗಾವುದೆ೦ದು -
ನಮ್ಮೂರು ಹೊನ್ನೂರು, ನಿಮ್ಮೂರು ನವಿಲೂರು
ಚೆ೦ದ ನಿನಗವುದೆ೦ದು.

ನಮ್ಮ ನವ್ಯ ಪರ೦ಪರೆಯ ಈಗಿನ ಕವಿಗಳು ಮೇಲಿನ ಪದ್ಯವನ್ನೂ ಹೀಗೆ ತಿರುಚಿದರೂ ಆಶ್ಚರ್ಯವಿಲ್ಲ...........

ಅ೦ದಿನಿರುಳ  ಹೊಸ ಗೆಳತಿ ನನ್ನ೦ದು ಕೆಣಕಿದಳು
ಚೆ೦ದ ನಿನಗಾರೆ೦ದೂ -
ನನ್ನ೦ಥ ಬೆಡಗಿಯೋ, ನಿನ್ನ ಪೆದ್ದ ಮಡದಿಯೋ
ಬೇಗ ಹೇಳು ಈಗೆ೦ದು.
ಆದರೂ ಸಾಹಿತ್ಯ ಹಾಗೂ ಸ೦ಗೀತ ಪ್ರೇಮ ಕನ್ನಡತನದ ಅವಿಭಾಜ್ಯ ಅ೦ಗವಾಗಿ ಈಗಲೂ ಉಳಿದಿರುವುದು ನಮ್ಮೆಲ್ಲರ ಭಾಗ್ಯ. ಹಾಗಾಗಿಯೇ ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನ.ರ ಹೆಸರನ್ನು ಅಜರಾಮರಗೊಳಿಸಲು ಕನ್ನಡಿಗರು ನಿರ್ಮಿಸಿರುವ ಸು೦ದರ ತೋಟವೇ ಬೆ೦ಗಳೂರಿನ ಬನಶ೦ಕರಿಯ ’ಮೈಸೂರ ಮಲ್ಲಿಗೆ ಕೆ.ಎಸ್.ನರಸಿ೦ಹಸ್ವಾಮಿ ವನ’. 


ಒ೦ದೊಮ್ಮೆ ಆ ವನದಲ್ಲಿ ಸುತ್ತಾಡಿದರೆ, ಈಗಲೂ ’ಮೈಸೂರ ಮಲ್ಲಿಗೆ’ಯ ಘಮ-ಘಮದ ಭಾಸವಾದೀತು!

ಮೈಸೂರ ಮಲ್ಲಿಗೆಯ ತೋಟಕ್ಕೆ ಮಹದ್ವಾರೋಪಾದಿಯಲ್ಲಿ ಮುನ್ನುಡಿ ಬರೆದುಕೊಟ್ಟು ಹರಸಿದವರು ಹಿರಿಯರಾದ ಡಿ.ವಿ.ಗು೦ಡಪ್ಪನವರು.

"ನಿಮ್ಮ ಪುಸ್ತಕವ೦ತೂ ಇನ್ನೊಬ್ಬರ ಮುನ್ನುಡಿಯಿ೦ದ ಬಣ್ಣ ಕಟ್ಟಿಸಿಕೊಳ್ಳಬೇಕಾಗಿಲ್ಲ.  ನಿಮ್ಮ ಪುಸ್ತಕವನ್ನು ತೆರೆದು ಒ೦ದೆರಡು ಸಾಲುಗಳನ್ನು ಓದುವವರಿಗೆ ಬೇರೆ ಯಾರ ಶಿಫಾರಸು ಬೇಕಾಗಲಾರದು. ಜೀವನಾನುಭವವಿದ್ದ ಈ ಪದ್ಯಗಳನ್ನು ಓದುವವರಿಗೆ ತಮ್ಮ ಮನದ ಧ್ವನಿಯೇ ಅಲ್ಲಿ ಹೊರಡುತ್ತಿರುವ೦ತೆ ಕೇಳಿ ಬ೦ದೀತೆ೦ದು ನನಗೆ ಅನಿಸುತ್ತದೆ. ಮಲ್ಲಿಗೆಯ ತೋಟದಲ್ಲಿ ನಿ೦ತಾಗ ಧಾರಾಳವಾಗಿ ಉಸಿರಾಡಿರೆ೦ದು ಕನ್ನಡಿಗರಿಗೆ ಹೇಳಬೇಕಾದ ಕಾಲ ಬೇಗ ಕಳೆದುಹೋಗಲಿ. ನಿಮ್ಮ ಮಲ್ಲಿಗೆಯ ಬಳ್ಳಿ ಎಲ್ಲ ಋತುಗಳಲ್ಲಿಯೂ ನಗುನಗುತಿರಲಿ".  ಡಿ.ವಿ.ಜಿ.ರವರ ಈ ಮುನ್ನುಡಿಯ ಹರಕೆ ಈಗ ಸಾಕಾರಗೊ೦ಡಿರುವುದು ಸಮಸ್ತ ಕನ್ನಡಿಗರ ಹೆಮ್ಮೆಯಲ್ಲವೆ?


-೦-೦-೦-೦-೦-೦-೦-೦-೦-
ಮಲ್ಲಿಗೆಯ ಸುಗ೦ಧವನ್ನು ಪಸರಿಸಲು ಗಾಳಿ ಹೇಗೆ ಬೇಕೋ, ಹಾಗೆ ಕವನವನ್ನು ಜನಮನಕ್ಕೆ ಕೊ೦ಡೊಯ್ಯಲು ಸ೦ಗೀತವೂ ಬೇಕು. ಕೆ.ಎಸ್.ನ.ರ ಮಲ್ಲಿಗೆಯೊ೦ದಿಗೆ,  ಮೈಸೂರು ಅನ೦ತಸ್ವಾಮಿ, ಸಿ.ಅಶ್ವತ್ಥ್ ರ೦ಥ ಗಾನಗಾರುಡಿಗರ ಶ್ರುತಿಯೂ ಸೇರಿತು.  ಮೈಸೂರು ಮಲ್ಲಿಗೆಯ ಘಮಘಮ, ಸರಿಗಮವಾಗಿ ಕನ್ನಡಿಗರ ಮನೆ-ಮನದ ಗಾನವಾಗಿದ್ದು ಈಗ ಇತಿಹಾಸ.


Monday 17 January 2022

ಚುನಾವಣಾ ಬಜೆಟ್!

೨೦೨೨ರ ಫೆಬ್ರವರಿ ೧ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಅದೊಂದು ಚುನಾವಣಾ ಬಜೆಟ್ ಆಗಿರಲಿದೆ ಎಂಬುದರಲ್ಲಿ ಅನುಮಾನವಿರದು. ಉತ್ತರ ಪ್ರದೇಶವನ್ನೊಳಗೊಂಡಂತೆ ಐದು ರಾಜ್ಯಗಳ ಚುನಾವಣೆ ಫೆಬ್ರವರಿ ೧೦ರಿಂದ ನಡೆಯಲಿದೆ. ಈ ಐದು ರಾಜ್ಯಗಳ ಪೈಕಿ, ಪಂಜಾಬನ್ನು ಹೊರತು ಪಡಿಸಿ, ಮಿಕ್ಕ ನಾಲ್ಕು ರಾಜ್ಯಗಳಲ್ಲೂ ಭಾಜಪ ಪಕ್ಷವೇ ಆಡಳಿತದಲ್ಲಿದು, ಆ ನಾಲ್ಕೂ  ರಾಜ್ಯಗಳನ್ನುಳಿಸಿಕೊಳ್ಳುವ ಅನಿವಾರ್ಯತೆ ಆ ಪಕ್ಷಕ್ಕಿದೆ. ೨೦೨೪ರ ಲೋಕಸಭಾ ಚುನಾವಣೆಯ 'ಸೆಮಿಫೈನಲ್ಲೇ' ಮುಂದಿನ ತಿಂಗಳ ಪಂಚರಾಜ್ಯಗಳ ಚುನಾವಣೆ ಎನ್ನಬಹುದು. ಈ ನಡುವೆ ಉತ್ತರ ಪ್ರದೇಶದ ಹಲವಾರು ಭಾಜಪ ಮಂತ್ರಿಗಳು ಹಾಗೂ ಶಾಸಕರು, ಪಕ್ಷವನ್ನು ತೊರೆಯುತ್ತಿರುವುದು, ಆ ಪಕ್ಷದ ನಿದ್ದೆ ಕೆಡಿಸಿರುವುದು ಸುಳ್ಳಲ್ಲ.  ಹಾಗಾಗಿ ಮುಂಬರುವ ಕೇಂದ್ರ ಬಜೆಟ್ನ ಮೂಲೋದ್ದೇಶ ಮತಗಳಿಕೆಯ ಮೇಲೆ ಕೇಂದ್ರೀಕೃತವಾಗಿರದೆ ಅನ್ಯ ಮಾರ್ಗವಿಲ್ಲ. 

ಮೋದಿಯವರ ಮಹತ್ವಾಕಾಂಕ್ಷೆಯ ಕೃಷಿ ಸುಧಾರಣಾ ಕಾನೂನುಗಳನ್ನು ಹಿಂಪಡೆಯ ಬೇಕಾಗಿ ಬಂದ ಸನ್ನಿವೇಶವೊಂದು ವಿಪರ್ಯಾಸ. ಉತ್ತಮ ಆರ್ಥಿಕ ತತ್ವ ಎಂಬುದು ಜನಪ್ರಿಯತೆಯ ಹಾದಿಯ ಮುಳ್ಳು ಎಂಬುದು ಭಾರತ ದೇಶದ ರಾಜಕೀಯದ ಕಠೋರ ಸತ್ಯ. ಕೃಷಿ ಸುಧಾರಣೆಯಲ್ಲಿ ಕಂಡ ಹಿನ್ನಡೆಯ ಕರಿ ನೆರಳು, ಬೇರೆ ಆರ್ಥಿಕ ಕ್ಷೇತ್ರಗಳ ಸುಧಾರಣೆಗಳನ್ನೂ ಬಾಧಿಸದಿರದು. 

'ಹೋದ್ಯಾ ಪಿಶಾಚಿ ಅಂದ್ರೆ, ಬಂದೆ ಗವಾಕ್ಷೀಲಿ' ಎಂಬಂತೆ, ಒಮಿಕ್ರೋನ್ನಂತಹ ಹೊಸ ರೂಪಾಂತರಿ ಕೋವಿಡ್ ತಳಿಗಳು ಇಡೀ ವಿಶ್ವವನ್ನೇ, ಕೋವಿಡ್ನ ಮೂರನೇ ಅಲೆಗೆ ತಳ್ಳಿವೆ. ಕುಂಟುತ್ತಾ ಸುಧಾರಿಸುತ್ತಿದ್ದ ನಮ್ಮ ದೇಶದ ಆರ್ಥಿಕತೆಯನ್ನು, ಈಚೆಗೆ ದೇಶಾದ್ಯಂತ  ವಿಧಿಸಿರುವ  ನಿರ್ಬಂಧನೆಗಳು, ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂಗಳು ಮತ್ತೊಮ್ಮೆ ಹಾಳುಗೆಡವಿದೆ. ಇಂತಹ ಸನ್ನಿವೇಶದಲ್ಲಿ, ಮುಂಬರುವ ಬಜೆಟ್ನಲ್ಲಿ ಬಡವರ ಕಣ್ಣೀರೊರೆಸುವ ಕ್ರಮಗಳೇ ಹೆಚ್ಚಾಗಿರಬೇಕಾದ್ದು ಅನಿವಾರ್ಯ. 

ಮುಂಬರುವ ಬಜೆಟ್ ರೈತರ ಬಜೆಟ್ ಆದರೆ ಆಶ್ಚರ್ಯವಿಲ್ಲ. ನಮ್ಮ ರೈತರ ಪೈಕಿ ೮೨%ರಷ್ಟು ರೈತರು 'ಸಣ್ಣ ಮತ್ತು ಅತಿ ಸಣ್ಣ ರೈತರು.' ಅವರುಗಳಿಗೆ 'ವಿಶೇಷ ಬೆಂಬಲ ಬೆಲೆಯ' ತಂತ್ರವನ್ನು ಕೇಂದ್ರ ಸರಕಾರ ರೂಪಿಸಬಹುದು. ಜೊತೆಗೆ ನಮ್ಮ ಗ್ರಾಮೀಣರ ಪೈಕಿ, ೪೦%ರಷ್ಟು ಜನರು ಭೂರಹಿತ ಕೃಷಿ ಕಾರ್ಮಿಕರು. ಸಣ್ಣ ರೈತರುಗಳಿಗೆ ನೀಡುತ್ತಿರುವ ರೂ. ೬೦೦೦ದಷ್ಟರ  ವಾರ್ಷಿಕ ನೆರವನ್ನು ಭೂರಹಿತ ಕೃಷಿ ಕಾರ್ಮಿಕರಿಗೂ ವಿಸ್ತರಿಸುವುದು ಸೂಕ್ತ. ಆದಾಯದ ಕೊರತೆಯಿಂದ ನಲುಗುತ್ತಿರುವ ನಮ್ಮ ಕೃಷಿಕರುಗಳನ್ನು, ಕೃಷಿಯೇತರ ಆರ್ಥಿಕ ಚಟುವಟಿಕೆಗಳತ್ತ ಸೆಳೆಯುವ ಯೋಜನೆಗಳನ್ನು ರೂಪಿಸುವುದೂ ಸರಕಾರದ ಕರ್ತವ್ಯ. 

ಕೋವಿಡ್ ಸಂಕಷ್ಟದಿಂದ ನೊಂದ ಕೃಷಿಯೇತರ ಬಡವರ ಸಂಖ್ಯೆ ಬಹು ದೊಡ್ಡದು. ಕಟ್ಟಡ ಕಾರ್ಮಿಕರು, ವಲಸಿಗರು, ರಸ್ತೆಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು, ಸಣ್ಣ ಹೊಟೇಲಿಗರು, ಕ್ಷೌರ ಮುಂತಾದ ವಿವಿಧ ಸೇವೆಗಳನ್ನು ಒದಗಿಸುವವರು, ಇತ್ಯಾದಿ  ಬಡವರುಗಳಿಗೆ ಒಂದು ಬಾರಿಯ ತುರ್ತು ಆರ್ಥಿಕ ನೆರವನ್ನು ಘೋಷಿಸಬಹುದು. 

ಕೋವಿಡ್ ಎಂಬ ಮಹಾಮಾರಿ ಅಪಾರ ಸಂಖ್ಯೆಯ ಜೀವಗಳನ್ನು ಹಿಂಡಿ, ಲಕ್ಷಾಂತರ ಕುಟುಂಬಗಳ ದುಡಿಯುವರನ್ನೇ ಇಲ್ಲವಾಗಿಸಿದೆ. ಅಂತಹ ಬಡ  ಕುಟುಂಬಗಳಿಗೆ  ದೊರಕಿರುವ ಪರಿಹಾರ ಸಾಲದು. ಹೆಚ್ಚಿನ ನೆರವು ಅವರುಗಳಿಗೆ ದೊರೆಯುವಂತಾಗಬೇಕು. ಮೇಲಾಗಿ ಅಂತಹ ಕುಟುಂಬಗಳಿಗೆ ಉದ್ಯೋಗವನ್ನು ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸಬೇಕಾದ್ದು ಅತ್ಯವಶ್ಯಕ. 

ಹೆಚ್ಚು ಓದದೆ, ಅಲ್ಪಸ್ವಲ್ಪ ಕೌಶಲ್ಯಗಳನ್ನು (ಸೆಮಿ ಸ್ಕಿಲ್ಲ್ಡ್) ಹೊಂದಿರುವ  ನಮ್ಮ ಕೋಟ್ಯಂತರ  ಯುವಕರು ಉದ್ಯೋಗವನ್ನರಸುತ್ತಿದ್ದಾರೆ. ಅವರುಗಳಿಗೆ ಉದ್ಯೋಗವನ್ನೊದಗಿಸುವ ಯೋಜನೆಗಳು ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಕಡೆ ಗಮನ ಹರಿಸುವುದು ಒಳಿತು. ಇಡೀ ವಿಶ್ವದಲ್ಲೇ ಭಾರತದಂತಹ ಆಕರ್ಷಕ ಹಾಗೂ ಕಮ್ಮಿ ವೆಚ್ಚದ  ಪ್ರವಾಸಿ ತಾಣ ಬೇರೊಂದಿಲ್ಲ. ೧೩೫ ಕೋಟಿಯಷ್ಟರ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ, ನಮ್ಮ ಆಂತರಿಕ ಪ್ರವಾಸಿಗರ ಸಂಖ್ಯೆಯೂ ಅಪಾರ. ದೇಶದ ಆದಾಯದ (ಜಿಡಿಪಿ) ೧೦%ರಷ್ಟನ್ನು ಗಳಿಸಿಕೊಡುವ ಸಾಮರ್ಥ್ಯ ಭಾರತೀಯ ಪ್ರವಾಸೋದ್ಯಮಕ್ಕಿದೆ ಎಂಬುದು ತಜ್ಞರ ಅಭಿಪ್ರಾಯ. ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮುಖಾಂತರ, ನಮ್ಮ ಯುವಕರುಗಳಿಗೆ ಉದ್ಯೋಗ ದೊರೆಯುವಂತಾಗಬೇಕು. ರಸ್ತೆ ನಿರ್ಮಾಣ, ನದಿ ಜೋಡಣೆ ಮುಂತಾದ ಬೃಹತ್ ಯೋಜನೆಗಳನ್ನು ರೂಪಿಸುವ ಮುಖಾಂತರವೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದು ಖಂಡಿತ. 

ರಕ್ಷಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸರಕಾರ ವಿನಿಯೋಗಿಸುತ್ತಿರುವ ಹಣ ಏನೇನು ಸಾಲದು ಎಂಬುದು ಹಲವು ದಶಕಗಳ ಅಭಿಪ್ರಾಯ. ಹೆಚ್ಚಿನ ಹಣ ಈ ಮೂರೂ ಕ್ಷೇತ್ರಗಳಿಗೂ ಹರಿದು ಬರಬೇಕು.  ಈ ಮೂರು ಕ್ಷೇತ್ರಗಳಲ್ಲೂ ಅಪಾರ ಸಂಖ್ಯೆಯ ಕೆಲಸಗಾರರ ಕೊರತೆಯಿದ್ದು ಅವುಗಳನ್ನು ತುಂಬುವ ಪ್ರಯತ್ನ ಕೂಡಲೇ ನಡೆಯಬೇಕು. ಉದ್ಯೋಗ ಸೃಷ್ಟಿಯತ್ತ ಇದು ಮತ್ತೊಂದು ಹೆಜ್ಜೆಯಾಗಬಲ್ಲದು. 

ಗೃಹ ನಿರ್ಮಾಣ ಸಾಲಗಳಿಗೆ ಹೆಚ್ಚಿನ ಬಡ್ಡಿ ಸಹಾಯ ಧನ (ಇಂಟರೆಸ್ಟ್ ಸಬ್ಸಿಡಿ) ನೀಡಬಹುದು. ಜೊತೆಗೆ ಹೆಚ್ಚಿನ ಬಡ್ಡಿ ಮೊತ್ತಕ್ಕೆ ಆದಾಯ ತೆರಿಗೆಯ ತೆರಿಗೆಯ ರಿಯಾಯ್ತಿಯನ್ನು ದೊರಕಿಸಲೂ ಬಹುದು. ಈ ಕ್ರಮಗಳಿಂದ ಗೃಹ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದಂತಾಗಿ, ಉದ್ಯೋಗ ಸೃಷ್ಟಿಯಾಗುತ್ತದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ರೂ. ೫೦,೦೦೦ದಿಂದ ೧ ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಸಂಬಳದಾರರಿಗಿದೆ. 

ನಮ್ಮ ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ವರ್ಗವೆಂದರೆ ಹಿರಿಯ ನಾಗರೀಕರದು. ಆದಾಯವಿರದ ಅವರುಗಳಿಗೆ ಮಾಸಿಕ ಪೆನ್ಷನ್ ನೀಡುವುದು ಸರಕಾರದ ಕರ್ತವ್ಯ. ವಿವಿಧ ಇಲಾಖೆಗಳ ಪಿಂಚಣಿದಾರರ, ಪಿಂಚಣಿ ಪರಿಷ್ಕರಣೆ ಹಲವು ವರ್ಷಗಳಿಂದ ನಡೆದಿಲ್ಲ. ಅವರೆಲ್ಲರಿಗೂ 'ಒಂದು ಹುದ್ದೆ, ಒಂದು ಪೆನ್ಷನ್ (ಒನ್ ರಾಂಕ್, ಒನ್ ಪೆನ್ಷನ್)' ಎಂಬ ಸೂತ್ರದ ಪ್ರಕಾರ ಪೆನ್ಷನ್ ಪರಿಷ್ಕರಣೆ ಕೂಡಲೇ ಆಗಬೇಕು. ರೂ. ೫೦,೦೦೦ಗಳವರೆಗಿನ ವಾರ್ಷಿಕ ಪೆನ್ಷನ್ ಮೇಲೆ ಆದಾಯ ತೆರಿಗೆಯನ್ನು ಹೇರಬಾರದು. 

ಪೆಟ್ರೋಲ್ ಬೆಲೆ ರೂ. ೧೦೦ನ್ನೂ ಮೀರಿ ನಿಂತಿರುವುದು ಎಲ್ಲರನ್ನು ಕಂಗೆಡಿಸಿದೆ. ಕನಿಷ್ಠ ೧೦%ರಷ್ಟು ಪೆಟ್ರೋಲ್ ಬೆಲೆ ಇಳಿಯುವಂತೆ ಎಲ್ಲ ಕ್ರಮಗಳನ್ನು ಸರಕಾರ ಕೂಡಲೇ ಕೈಗೊಳ್ಳಬೇಕು. ಜೊತೆಗೆ ಬಡವರಿಗೆ ಪ್ರತಿ ತಿಂಗಳು ೧೦ರಿಂದ ೨೦ ಲೀಟರ್ಗಳಷ್ಟು ಪೆಟ್ರೋಲ್ ಉಚಿತವಾಗಿ ನೀಡುವ ಯೋಜನೆಯೊಂದನ್ನು ಸರಕಾರ ಜಾರಿಗೊಳಿಸುವುದು ಒಳಿತು. 

ಬೇಡಿಕೆಗಳ ಪಟ್ಟಿಗೆ ಕೊನೆಯಿಲ್ಲ. ಆದರೆ ಈ ಬಾರಿ ಸಂಪನ್ಮೂಲಗಳ ಕ್ರೋಡೀಕರಣವೊಂದು ದೊಡ್ಡ ಸವಾಲೇ. ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳನ್ನು ಹೆಚ್ಚಿಸಲು ಇರುವ ಅವಕಾಶ ಅತ್ಯಲ್ಪ. ಬಹು ನಿರೀಕ್ಷಿತ 'ಎಲ್.ಐ.ಸಿ.' ಷೇರುಗಳ ಮಾರಾಟದಂತಹ ಹಲವು ಯೋಜನೆಗಳನ್ನು ಸರಕಾರ ಕೈಗೊಳ್ಳಬೇಕಾಗಬಹುದು. ಹೆಚ್ಚಿನ ನೋಟುಗಳ ಮುದ್ರಣ ಕೂಡ ಸಂಪನ್ಮೂಲಗಳ ಕೊರತೆಯನ್ನು ನೀಗಿಸುವ ತಂತ್ರ ಎಂಬುದು ಕೆಲವು ತಜ್ಞರ ಅಭಿಪ್ರಾಯ. ಆರ್.ಬಿ.ಐ. ಸಂಸ್ಥೆ ಗಳಿಸಿರುವ ಹೆಚ್ಚುವರಿ (ಸರ್ಪ್ಲಸ್) ಹಣವನ್ನು ಕೇಂದ್ರ ಸರಕಾರ ಬಳಸಿಕೊಳ್ಳಬಹುದು. ಕೋವಿಡ್ ಸಂಕಷ್ಟದ ಈ ದಿನಗಳಲ್ಲಿ ಸರಕಾರ ಈ ಯಾವ ಮೂಲಗಳನ್ನು ಬಳಸಿಕೊಂಡರು ಆಶ್ಚರ್ಯವಿಲ್ಲ. ಎಲ್ಲವುದಕ್ಕು ಕೆಲವು ದಿನಗಳು  ಮಾತ್ರ ಬಾಕಿಯಿವೆ. ಕಾದು ನೋಡೋಣ. 

-೦-೦-೦-೦-೦-೦-

೨೦೨೪ರ ಲೋಕಸಭಾ ಚುನಾವಣೆಯ 'ಸೆಮಿಫೈನಲ್ಲೇ' ಮುಂದಿನ ತಿಂಗಳ ಪಂಚರಾಜ್ಯಗಳ ಚುನಾವಣೆ ಎನ್ನಬಹುದು.  ಹಾಗಾಗಿ ಮುಂಬರುವ ಕೇಂದ್ರ ಬಜೆಟ್ನ ಮೂಲೋದ್ದೇಶ ಮತಗಳಿಕೆಯ ಮೇಲೆ ಕೇಂದ್ರೀಕೃತವಾಗಿರದೆ ಅನ್ಯ ಮಾರ್ಗವಿಲ್ಲ. 


Sunday 2 January 2022

ಓದುಗರಿಗೆಲ್ಲಾ ಹೊಸ ವರ್ಷ ೨೦೨೨ರ ಶುಭಾಶಯಗಳು.

 ಓದುಗರಿಗೆಲ್ಲಾ ಹೊಸ ವರ್ಷ ೨೦೨೨ರ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಮಾತಾ ಅಮೃತಾನಂದಮಯಿಯವರು ಹೇಳಿದ ಕಥೆಯೊಂದನ್ನು ನೆನಪಿಸಿಕೊಳ್ಳೋಣ. ಅಂಗಡಿಯೊಂದರಲ್ಲಿ ಸಾಮಾನುಗಳನ್ನು ಕೊಂಡ ವ್ಯಕ್ತಿಯೊಬ್ಬನು ತನ್ನ ಸೈಕಲ್ಲನ್ನು ಮರೆತು ಮನೆ ತಲಪಿದ್ದನು. ಮಾರನೆಯ ದಿನ ತನ್ನ ಸೈಕಲ್ ನೆನಪಾಗಿ ಅಂಗಡಿ ಕಡೆ ಓಡಿದ ಅವನಿಗೆ ತನ್ನ ಸೈಕಲ್ ಅಲ್ಲೇ ಇದದ್ದನ್ನು ಕಂಡು ಸಂತೋಷವಾಯಿತು. ದೇವರಿಗೆ ಧನ್ಯವಾದಗಳನ್ನರ್ಪಿಸಲೆಂದು ಆತ ಅದೇ ಸೈಕಲಿನಲ್ಲಿ ದೇವಸ್ಥಾನವೊಂದನ್ನು ತಲಪಿದನು. ನಮಸ್ಕಾರ ಮಾಡಿ ಹೊರಬರುವಷ್ಟರಲ್ಲಿ ಅವನ ಸೈಕಲ್ ಕಳುವಾಗಿತ್ತು. ಕುಪಿತನಾದ ಅವನು ದೇವರನ್ನು ದೂಷಿಸಲಾರಂಭಿಸಿದನು. ಜಾಣನಾದ ಅವನ ಸ್ನೇಹಿತ, 'ನಿನ್ನ ಸೈಕಲ್ಲಿಗೆ ಬೀಗ ಹಾಕಿದ್ದೆಯಾ' ಎಂದು ಕೇಳಿದಾಗಲೇ ಆತನಿಗೆ ತನ್ನ ತಪ್ಪಿನ ಅರಿವಾಗಿದ್ದು. 

ನಮ್ಮ ಕ್ಷೇಮದ ಮುನ್ನೆಚ್ಚರಿಕೆಯೇ ನಮಗಿಲ್ಲವಾದಾಗ ದೇವರನ್ನು ದೂಷಿಸಿ ಪ್ರಯೋಜನವೇನು? ಕೋವಿಡ್ ವೈರಾಣುವನ್ನು ದೇವರು ಏತಕ್ಕಾಗಿ ಸೃಷ್ಟಿಸಿದ್ದಾನೋ, ತಿಳಿಯದು. ಆದರೆ ಅದೇ ದೇವರು ಕೋವಿಡ್ ತಡೆಗಟ್ಟಬಹುದಾದಂತಹ ಮುನ್ನೆಚ್ಚರಿಕೆಯ ಕ್ರಮಗಳನ್ನು, ಉಪಯುಕ್ತ ಲಸಿಕೆಗಳನ್ನೂ ನಮಗೆ ದಯಪಾಲಿಸಿಲ್ಲವೇ? ಮಾಸ್ಕ್ ಧರಿಸಿದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ಸಾಬೂನಿನಿಂದ ಆಗಾಗ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳದೆ, ಕ್ರಮವಾಗಿ ಲಸಿಕೆಗಳನ್ನು ಪಡೆದುಕೊಳ್ಳದೇ, ಕೋವಿಡ್ ಸೋಂಕಿಗೆ ತುತ್ತಾದರೆ, ಯಾರನ್ನು ದೂಷಿಸಿ ಏನು ಪ್ರಯೋಜನ? ಚಿಕಿತ್ಸೆಗಾಗಿ ಹೋರಾಡುವುದಕ್ಕಿಂತ ತಡೆಗಟ್ಟುವ ಕ್ರಮಗಳೇ ಹೆಚ್ಚು ಸೂಕ್ತವಲ್ಲವೇ? 

೨೦೨೦ರ ಕುದಿಯುವ ಬಾಣಲೆಯಲ್ಲಿ  ಬೆಂದ ನಾವೆಲ್ಲರೂ, ೨೦೨೧ರಲ್ಲಿ ಉರಿಯುವ ಬೆಂಕಿಗೇ ಬಿದ್ದಂತಾಗಿತ್ತಲ್ಲವೇ? ೨೦೨೦ರ ಮೊದಲ ಕೋವಿಡ್ ಅಲೆಯಿಂದ ಸಾಕಷ್ಟು ಸಾವು-ನೋವುಗಳನ್ನು ಕಂಡ ನಾವು, ೨೦೨೧ರಲ್ಲಿ ಎರಡನೇ ಅಲೆಯ ದಳ್ಳುರಿಗೆ ಬಿದ್ದದ್ದು ಅನೀರಿಕ್ಷಿತವೇನಲ್ಲ. ಆದರೂ ಮಧ್ಯೆ ನಾವುಗಳು  ಉದಾಸೀನರಾಗಿ ಕುಳಿತದ್ದು ಸುಳ್ಳಲ್ಲ. ಕ್ರೂರ ಎರಡನೇ ಅಲೆಗೆ ತತ್ತರಿಸದ ಸಂಸಾರಗಳೇ ಇಲ್ಲವೆನ್ನಬಹುದು. ಬಂಧು-ಮಿತ್ರರುಗಳಲ್ಲಿ ಒಬ್ಬರಾನ್ನಾದರೂ ಕಳೆದುಕೊಳ್ಳದಿರುವವರು ಇಲ್ಲವೆಂದೇ ಹೇಳಬಹುದು. ಕಳೆದ ವರ್ಷದ ಎರಡನೇ ಅಲೆಯ ವೇಳೆ, ಸಾವೆಂಬುದು ಅಗ್ಗವಾಗಿ, ಚಿಕಿತ್ಸೆ ಎಂಬುದು ದಂಧೆಯಾಗಿದ್ದು ಕಠೋರ ಸತ್ಯ. ಕೋವಿಡ್ ಚಿಕಿತ್ಸೆಯ ಹಾಸಿಗೆಗಳಿಗಾಗಿ, ಜೀವವಾಯು ಆಕ್ಸಿಜನ್ಗಾಗಿ ನಡೆದ ಪರೆದಾಟದಲ್ಲಿ ಬಡವರನ್ನೂ ಸುಲಿದ ರಾಕ್ಷಸರು, ಶವ ಸಂಸ್ಕಾರದಲ್ಲೂ ಹಣ ದೋಚಲು ಹೇಸದ ಘಟನೆಗಳ ನಡುವೆ ತಮ್ಮ ಜೀವದ ಹಂಗನ್ನೇ ತೊರೆದು ಬಡ ರೋಗಿಗಳ ಜೀವವಗಳನ್ನುಳಿಸಿದ ಕರೋನ ಸೇನಾನಿಗಳನ್ನೂ ನೋಡಿದೆವಲ್ಲ! 

ಭಾರತದಂತಹ ಬೃಹತ್ ರಾಷ್ಟ್ರದಲ್ಲಿ, ಸಂಪನ್ಮೂಲಗಳ ಕೊರತೆಯ ನಡುವೆಯೂ ಯಶಸ್ವಿಯಾಗಿ ನಡೆದ ಕಳೆದ ವರ್ಷದ ಲಸಿಕಾ ಅಭಿಯಾನ ಇಡೀ ವಿಶ್ವವನ್ನೇ ಬೆರಗುಗೊಳಿಸಿ ಮುನ್ಸಾಗುತ್ತಿರುವುದು ಹೆಮ್ಮೆಯ ವಿಷಯ. ಈಗ ಯೋಜಿಸಿರುವ ೧೫-೧೮ರ ಬಾಲಕರ ಮತ್ತು ಬೇರೆ ರೋಗಗಳಿಂದ ಪೀಡಿತರಾದ ಹಿರಿಯ ನಾಗರೀಕರ ಲಸಿಕಾ ಅಭಿಯಾನವೂ ಸ್ವಾಗತಾರ್ಹವೇ. 

ಸುಮಾರು ೫೦೦ ದಿನಗಳಿಂದ ಶಾಲೆಗಳಿಲ್ಲದೆ ಮಂಕಾಗಿ ಮನೆಯಲ್ಲೇ ಕುಳಿತಿದ್ದ ವಿದ್ಯಾರ್ಥಿಗಳಿಗೆ ಕಡೆಗೂ ಶಾಲೆಗಳು ಪುನರಾರಂಭವಾಗಿದ್ದು ಸಂತಸದ ವಿಷಯ. ಶಾಲೆಗಳಿಲ್ಲದೆ, ಆನ್ಲೈನ್ ಶಿಕ್ಷಣವನ್ನೂ ಪಡೆಯಲಾಗದೆ ಬಾಲ ಕಾರ್ಮಿಕರಾಗಿ, ಬಾಲ ವಿವಾಹಿತರಾಗಿ ನಲುಗುತ್ತಿದ್ದ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಶಾಲೆಗಳು ಆರಂಭವಾಗಿದ್ದು ಸಂಜೀವಿನಿಯೇ ಸರಿ. ಮಕ್ಕಳ ಲಸಿಕಾ ಅಭಿಯಾನ ಚುರುಕುಗೊಳ್ಳಲಿ, ಒಮಿಕ್ರೋನ್/ಕೋವಿಡ್  ದಾಳಿಯಿಂದ ಶಾಲೆಗಳು ಮತ್ತೆಂದೂ ಮುಚ್ಚದಂತಾಗಲಿ ಎಂದು ಆಶಿಸೋಣ. 

ಕೋವಿಡ್ ಸಂಕಟದ ನಡುವೆ, ಕಳೆದ ವರ್ಷ ನಾವು ದುರ್ಘಟನೆಯೊಂದರಲ್ಲಿ ನಮ್ಮ ಮಹಾ ಸೇನಾನಾಯಕ ಬಿಪಿನ್ ರಾವತ್ ರವರನ್ನು ಕಳೆದುಕೊಂಡದ್ದು ದುರಂತವೇ ಸರಿ.  ಅಂತೆಯೇ ನಮ್ಮ ಕನ್ನಡದ ಯುವ ನಟ ಪುನೀತ್ ರಾಜ್ ಕುಮಾರರವರನ್ನು ಕಳೆದುಕೊಂಡದ್ದು ಕಳೆದ ವರ್ಷದ ಮತ್ತೊಂದು ದುರಂತ. 

ಹಾಗೆಂದ ಮಾತ್ರಕ್ಕೆ ೨೦೨೧ ನಮ್ಮ ದೇಶದ ಪಾಲಿಗೆ ದುರಂತಗಳ ಸರಮಾಲೆಯಾಗಿತ್ತೆಂದು ಹೇಳಲಾಗದು. ಈ ಎಲ್ಲಾ ಸಂಕಷ್ಟಗಳ ನಡುವೆಯೂ ನಮ್ಮ ದೇಶದ ಆರ್ಥಿಕತೆಯ ಮುನ್ನಡೆ ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತೆಂದರೆ ಅತಿಶಯೋಕ್ತಿಯೇನಲ್ಲ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ನಮ್ಮ ನೀರಜ್ ಛೋಪ್ರಾರವರು ಗಳಿಸಿದ ಜಾವಲಿನ್ ಚಿನ್ನದೊಂದಿಗೆ, ಐತಿಹಾಸಿಕ ಏಳು ಪದಕಗಳನ್ನು ಗೆದ್ದದ್ದು ನಮ್ಮೆಲ್ಲರ ಹೆಮ್ಮೆಯ ವಿಷಯವೇ ಸರಿ. ಅಂತೆಯೇ ದಿವ್ಯಚೇತನರ ಒಲಿಂಪಿಕ್ಸ್ನಲ್ಲಿ ಗಳಿಸಿದ ೧೯ ಪದಕಗಳು ಕೂಡ. ೨೦೨೧ರಲ್ಲಿ  ಭಾರತದ ಟೆಸ್ಟ್ ಕ್ರಿಕೆಟ್ ತಂಡ ವಿದೇಶಗಳಲ್ಲಿ ನಾಲ್ಕು ಟೆಸ್ಟ್ಗಳನ್ನು ಗೆದ್ದದ್ದು ಅಭೂತಪೂರ್ವ ಸಾಧನೆಯೇ ಸರಿ. 

ಹೊಸ ವರ್ಷ ೨೦೨೨ರಲ್ಲಿ ವಿಶ್ವದ ಎಲ್ಲರಿಗೂ ಕೋವಿಡ್ ಲಸಿಕೆಗಳು  ಮತ್ತು ಚಿಕಿತ್ಸೆ ಗಳು  ಸುಲಭವಾಗಿ ದೊರೆಯುವಂತಾಗಲಿ, ಕೋವಿಡ್ನ ಅಲೆಗಳು ಅಂತ್ಯಗೊಳ್ಳಲಿ, ದೇಶದ ಹಾಗು ವಿಶ್ವದ ಆರ್ಥಿಕತೆ ಉತ್ತಮಗೊಳ್ಳಲಿ, ಬಡವರ ಬಾಳು ಹಸನಾಗಲಿ ಎಂದು ಎಲ್ಲರಿಗೂ ಶುಭ ಹಾರೈಸೋಣ. 

-೦-೦-೦-೦-೦-

ಕಳೆದ ವರ್ಷದ ಎರಡನೇ ಅಲೆಯ ವೇಳೆ, ಸಾವೆಂಬುದು ಅಗ್ಗವಾಗಿ, ಚಿಕಿತ್ಸೆ ಎಂಬುದು ದಂಧೆಯಾಗಿದ್ದು ಕಠೋರ ಸತ್ಯ. ಕೋವಿಡ್ ಚಿಕಿತ್ಸೆಯ ಹಾಸಿಗೆಗಳಿಗಾಗಿ, ಜೀವವಾಯು ಆಕ್ಸಿಜನ್ಗಾಗಿ ನಡೆದ ಪರೆದಾಟದಲ್ಲಿ ಬಡವರನ್ನೂ ಸುಲಿದ ರಾಕ್ಷಸರು, ಶವ ಸಂಸ್ಕಾರದಲ್ಲೂ ಹಣ ದೋಚಲು ಹೇಸದ ಘಟನೆಗಳ ನಡುವೆ ತಮ್ಮ ಜೀವದ ಹಂಗನ್ನೇ ತೊರೆದು ಬಡ ರೋಗಿಗಳ ಜೀವವಗಳನ್ನುಳಿಸಿದ ಕರೋನ ಸೇನಾನಿಗಳನ್ನೂ ನೋಡಿದೆವಲ್ಲ! 


New year greetings to all our readers.  On this happy occasion let us remember an interesting story narrated by Maata Amrutanandamayee. After purchasing a few items from a shop, a man reached his home forgetting his bicycle near the shop itself.  He got up next day remembering his bicycle and rushed to the shop spot.  He was pleasantly surprised to find his bicycle still there.  On the same bicycle he went to a nearby temple to thank God.  After bowing before the God, when he came out he was shocked not to find his bicycle.  He felt frustrated and started blaming God.  Only after his clever friend asked whether he had locked the bicycle, he remembered his folly.

When we don't care for our own safety, are we right in blaming God? Why God created Covid Virus, nobody knows!  But, hasn't the same God shown us the way to remain safe from Covid? After throwing caution to the wind by ignoring to wear mask, maintain social distancing, wash hands with soap frequently and receive vaccine doses as per schedule, if one gets infected with Covid, what is the use in blaming somebody or even God? Isn't 'prevention better than cure?' 

From the frying pan of first wave of 2020, we fell into the fire of second wave during 2021. After having witnessed a large number of deaths during first wave, the devastating second wave of 2021 was quite expected.  In between, weren't  we and even our Governments guilty of complacence? Second wave affected almost all families.  Most of us have suffered the loss of life of at least one  among our relatives and friends due to Covid.  During the second wave, lives had became cheap and treatments had become a business! In the midst of loots by the corrupt while allotting Covid beds, providing life-saving oxygen masks and even during funerals, we also witnessed brave corona warriors saving lives of poor patients even at the cost of risking their own lives.

In spite of limited resources, the successful march of our massive vaccination drive launched by our great country during last year has surprised the entire world. Our latest move to vaccinate adolescents of the age group of 15-18 and provide booster doses to our senior citizens with comorbidities is a welcome move.   

The onset of third wave of Covid with variants like Omicron is a cause of grave concern.  Restrictions imposed by our State Governments to contain the third wave have once again reminded us the nightmares of massive loss of jobs, march of jobless migrants on foot and the closure of schools for our children. After the loss of 500 school-days, our schools were limping back to normalcy over last 4 months. Loss of school-days is especially bad for our poor rural children who are incapable of participating in online classes. Many of them were driven towards child labour and even child marriages. Let us hope that the third wave would be weaker and short lived as predicted. But the only 'mantra' for safety is following all Covid precautions.  Our State Governments are responsible for combating vaccine hesitancy, while ensuring 100% vaccination at the earliest. 

In the midst of Covid crisis, last year we lost General Bipin Rawat, our Chief of Defence Staff in an unfortunate helicopter accident.  We also lost our young Kannada film icon Puneet Rajkumar and the veteran actor Shivaram.

No doubt, 2021 was a bad year. But it had some nice developments for us to smile upon.  Our economic growth during the entire year was quite healthy and consistent, attracting attention of the entire world. In Tokyo Olympics our Country won 7 medals, the highest ever tally,  including the first ever athletic gold by our Javelin athlete Neeraj Chopra.  Record breaking 19 medals including 5 Golds in the Special Olympics for the differently-abled was also a proud achievement. Indian cricketers recorded their best ever year in Test cricket by winning 4 overseas Test matches against three different strong teams. 

Some experts are predicting that the emergence of weaker Covid variants like Omicron and their faster spread is probably the gift of nature's vaccine. It is hoped that such faster spread of weaker mutants of Covid will lead us towards herd immunity. Third wave is expected to be mild and short lived.  Let all infected people be cured by suitable treatments, without hurting their poor pockets.   Let us hope that the waves of Covid will end in the year 2022.  Let us also hope that the economy of our country and the entire world will improve substantially while ensuring our lives and livelihoods.

-೦-೦-೦-೦-೦-

During the second wave of 2021, in the midst of loots by the corrupt while allotting Covid beds, providing life-saving oxygen masks and even during funerals, we also witnessed brave corona warriors saving lives of poor patients even at the cost of risking their own lives.

(Please highlight the above line in a separate block).

Lakshminarayana K

Ex-Banker

klakshminarayana1956@rediffmail.com

(Please publish above three info, along with my profile picture attached. I HAVE PICKED THE SUGGESTED PICTURES FROM GOOGLE.  PLEASE TAKE CARE OF THEIR COPYRIGHTS).