Wednesday 17 August 2022

ಪಿಟೀಲು ಚೌಡಯ್ಯ

 ಪಿಟೀಲು ಚೌಡಯ್ಯ 

ದೃಶ್ಯ - ೧

(ಚೌಡಯ್ಯನವರ ತಂದೆಯವರಾದ ಅಗಸ್ತೇ ಗೌಡರ ತಿರುಮಕೂಡಲ ಮನೆ. ತುಂಬು ಗರ್ಭಿಣಿಯಾದ ಅಗಸ್ತೇ ಗೌಡರ ಧರ್ಮಪತ್ನಿ ಸುಂದರಮ್ಮನವರು ದೇವರಪೂಜೆಯಲ್ಲಿ ತೊಡಗಿರುತ್ತಾರೆ. ಅಗಸ್ತೇ ಗೌಡರೂ ಭಕ್ತಿಯಿಂದ ಕೈಜೋಡಿಸಿ ನಿಂತಿರುತ್ತಾರೆ). 

ಸುಂದರಮ್ಮ: (ದೇವರಿಗೆ ಕೈಗಳನ್ನು ಜೋಡಿಸಿ ಹಾಡುತ್ತಾ.....)  

"ಭಾಗ್ಯದ ಲಕ್ಷ್ಮಿ ಬಾರಮ್ಮ 

ಎನ್ನಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ........"

(ಶಾಸ್ತ್ರೋಕ್ತವಾಗಿ ಪೂಜೆಯ ವಿಧಿ ವಿಧಾನಗಳನ್ನು ಮುಗಿಸಿ ಸುಂದರಮ್ಮನವರು ದೇವರಿಗೆ ಆರತಿ ಬೆಳಗಿ, ಯಜಮಾನರಿಗೆ ಆರತಿ, ತೀರ್ಥ, ಪ್ರಸಾದಗಳನ್ನು ಕೊಡುತ್ತಾರೆ). 

ಅಗಸ್ತೇ ಗೌಡ: (ಭಕ್ತಿಯಿಂದ ತೀರ್ಥ ಪ್ರಸಾದಗಳನ್ನು ಸ್ವೀಕರಿಸುತ್ತ......) ಸುಂದ್ರಾ......... ತಡವಾಗಿ ಹೋಗಿದೆ, ಬ್ಯಾಗ ತಿಂಡಿ ತಿನ್ನು. ಬಸುರಿ ಹೆಂಗ್ಸು ಹೊಟ್ಟೆ ಕಾಯಿಸಬಾರದು. (ನಸುನಗುತ್ತಾ......) ನಿನ್ನ ಹೊಟ್ಟೆಲಿರೋ ನಮ್ಮಗ  ಏನಂತಾನೆ? 

ಸುಂದರಮ್ಮ: ಅಬ್ಬಬ್ಬಾ, ನಿಮಗೋ  ಸದಾ ನಂದೇ, ನಮ್ಮಗುದೇ ಚಿಂತೆ. ಅಲ್ಲರೀ....... ನನ್ನ ಹೊಟ್ಟೆಯಾಗಿರೋದು ಗಂಡುಮಗ ಅಂತಲೇ ಹೇಗೆ ಹೇಳ್ತೀರಾ?

ಅಗಸ್ತೇ ಗೌಡ: ನಮ್ಮೂರು ತಿರಮಕೂಡ್ಲು ಚೌಡೇಶ್ವರಿ ತೇರಿನ್ ದಿನನೇ, ಸಾಕ್ಷಾತ್ ಚೌಡೇಶ್ವರಿ ಅಮ್ಮನೇ ನಂಗೆ ಕನ್ಸಲ್ಲಿ ಬಂದ್  ಹೇಳಿದಾಳೆ. ನಮಗ್ ಹುಟ್ಟೋದು ಗಂಡ್ಮಗೂನೆ ಅಂತ! ಆ ತಾಯೀ ಹೆಸರೇ ನನ್ಮಗನಿಗೆ ಇಡೋದು  ಅಂತ ನಾನಾಗ್ಲೇ ನಿರ್ಧಾರ ಮಾಡ್ಬಿಟ್ಟಿದೀನಿ. ನಮ್ಗ್ ಹುಟ್ಟೋ ಮಗ್ನ ಹೆಸ್ರು 'ಚೌಡಯ್ಯ" ಅಂತಾನೆಯ. 

ಸುಂದರಮ್ಮ: ನಿಮ್ಮ್ ಸಡಗರಕ್ಕೆ ನಾನೇನ್ ಹೇಳ್ಲಿ? ಕೂಸು  ಹುಟ್ಟೋ ಮುಂಚೆನೇ ಕುಲಾವಿ ಅಂತಾರಲ್ಲ....... ಹಾಗಾಯ್ತು ನಿಮ್ಮ ಸಮಾಚಾರ....... (ಇಬ್ಬರೂ ನಗುತ್ತಾರೆ........). 

(ಊರ ಮಧ್ವ ಮತದ  ವಿದ್ವಾಂಸರುಗಳಾದ ವಿದ್ಯಾಕಾಂತಾಚಾರ್ಯರೂ ಹಾಗೂ ಗುಂಡಾಚಾರ್ಯರೂ ಅಗಸ್ತೇ ಗೌಡರ ಮನೆಗೆ ಬರುತ್ತಾರೆ. ಅಗಸ್ತೇ ಗೌಡರು ಅವರನ್ನು ವಿನಮ್ರತೆಯಿಂದ ಬರಮಾಡಿಕೊಳ್ಳುತ್ತಾರೆ. ದೂರದಿಂದಲೇ ಆಚಾರ್ಯರಿಬ್ಬರಿಗೂ ನಮಿಸಿದ ಸುಂದರಮ್ಮನವರು ಬಾಗಿಲ ಹಿಂದೆ ಸರಿದು ನಿಲ್ಲುತ್ತಾರೆ). 

ಅಗಸ್ತೇ ಗೌಡ: (ಕೈ ಮುಗಿದು ಸ್ವಾಗತಿಸುತ್ತಾ.....) ಓಹೋ! ವಿದ್ಯಾಕಾಂತಾಚಾರ್ರು, ಗುಂಡಾಚಾರ್ರು ಬರಬೇಕು, ಬರಬೇಕು.   

 (ಆಚಾರ್ಯರಿಬ್ಬರೂ ಮತ್ತು ಅಗಸ್ತೇ ಗೌಡ್ರು ಮನೆ ಜಗಲಿ ಮೇಲೆ ಕುಳಿತುಕೊಳ್ಳುತ್ತಾರೆ).  

ಗುಂಡಾಚಾರ್ಯ: ನಮಸ್ಕಾರ ಅಗಸ್ತೇ ಗೌಡ್ರೇ........                             

ವಿದ್ಯಾಕಾಂತಾಚಾರ್ಯ: ನಮಸ್ಕಾರ ಅಗಸ್ತೇ  ಗೌಡ್ರೇ.........  

ನಾಳೆ ನಂಜನಗೂಡಿಗೆ ಹೊರಟಿದ್ದೀರಂತೆ, ಹೌದೇ?

ಅಗಸ್ತೇ ಗೌಡ: ನಿಜ ಆಚಾರ್ರೇ.  ನಾಳೆ ನಂಜನಗೂಡಲ್ಲಿ ನಮ್ಮೂರು ತಿರುಮಕೂಡ್ಲು ಕಂಪನಿದೇ ನಾಟ್ಕ, ಕವಿರತ್ನ ಕಾಳಿದಾಸ. ನಿಮಗೆ ಗೊತ್ತಲ್ಲಾ........ ನಾಟ್ಕಕ್ಕೆ ಹಾಡುಗಾರಿಕೆ, ಹಾರ್ಮೋನಿಯಂ ಎರಡು ನಂದೇ. 

ಗುಂಡಾಚಾರ್ಯ: ಅಗಸ್ತೇ ಗೌಡ್ರೇ….., ನಿಮ್ಮನೆಗೆ ಭೂತಾಯಿ ಒಲ್ದಿದಾಳೆ, ಕೃಷಿ ಮಾಡ್ತೀರಾ. ತಾಯಿ ಸರಸ್ವತಿನೂ ಒಲ್ದಿದಾಳೆ, ನಾಟ್ಕದ ಮಟ್ಟು ಹಾಡೋದ್ರಲ್ಲಂತೂ ನಿಮ್ಮನ್ ಮೀರ್ಸೊರ್ ಯಾರೂ ಇಲ್ಲ. 

ವಿದ್ಯಾಕಾಂತಾಚಾರ್ಯ: (ಬಾಗಿಲ ಹಿಂದೆ ನಿಂತಿರೋ ಸುಂದರಮ್ಮನವರ ಕಡೆ ನೋಡುತ್ತಾ....) ಸುಂದರಮ್ಮನೋರ್  ಏನ್ ಕಮ್ಮಿನೇ? ಸಾಕ್ಷಾತ್ ಸರಸ್ವತಿ ಅವತಾರನೇ. ಮನೇಲೆ ಕೂತಿದ್ರು ಸಾಹಿತ್ಯ, ಸಂಸ್ಕೃತ, ಸಂಗೀತ ಎಲ್ಲಾ ಬಲ್ಲೋರ್ ತಾನೇ.. (ಮತ್ತೆ ಗೌಡ್ರ ಕಡೆ ನೋಡುತ್ತಾ....)ಅವರ್ಗೆ ಗೌಡ್ರ ಪ್ರೋತ್ಸಾಹ ಅಂತೂ ಇದ್ದೇ ಇದೆ. 

(ಸುಂದರಮ್ಮನವರು ಒಮ್ಮೆ ನಕ್ಕು ತಲೆತಗ್ಗಿಸುತ್ತಾರೆ).  

ಅಗಸ್ತೇ ಗೌಡ: ಎಲ್ಲ ನಿಮ್ಮನ್ಥೋರ್ ಆಶೀರ್ವಾದ ಆಚಾರ್ರೆ. 

ಅಂದ್ಹಾಗೆ ಹೋದ್ ವಾರ  ಮೈಸೂರ್ಗೆ ಹೋಗಿದ್ದೆ. ಅರಮನೆ ಸಭೇಲಿ ಭಾರಿ ಚರ್ಚೆ ನಡೀತಿತ್ತು. ಆ ಚರ್ಚೆಲೊಬ್ಬ ಆಸಾಮಿ, ಕರ್ನಾಟಕ ಸಂಗೀತನ್ನೋದು ಕರ್ನಾಟಕದಲ್ಲೇ ಹುಟ್ಟಿದ್ದು ಅಂತ ಏನಲ್ಲ. ಪುರಂದರದಾಸರು ಅನ್ನೋರು ಇದ್ರೋ ಇಲ್ಲ್ವೋ ಅನ್ನೋದೇ ಅನ್ಮಾನ ಅಂದುಬಿಡೋದೆ? ನಮ್ ಅರ್ಮನೆ ವಿದ್ವಾಂಸರು ಸುಮ್ಮನಿರೋದ್ ಉಂಟೇ? ಆ ವಯ್ಯನ್ ಮೇಲೆ ಮುಗಿಬಿದ್ರೂ ನೋಡಿ, ಬಾಲಮುದ್ರಿಕೊಂಡ್ ನಾಯಿ ತರ ಎದ್ ಜಾಗ ಖಾಲಿ ಮಾಡ್ದ. 

ಗುಂಡಾಚಾರ್ಯ: ಪುರಂದಾಸ್ರೇ ಇಲ್ಲ ಅಂದುಬಿಡೋದೆ! ಮಹಾಪರಾಧ, ಮಹಾಪರಾಧ, ಶಾಂತಂ ಪಾಪಂ ಶಾಂತಂ ಪಾಪಂ! ಹಾಗನ್ನೋರ್ನ ಆ ಪರಮಾತ್ಮ ಕೃಷ್ಣನೇ ನೋಡ್ಕೋಬೇಕು. 

ವಿದ್ಯಾಕಾಂತಾಚಾರ್ಯ: ಪುರಂದರದಾಸರು ನಮ್ಮ ಕರ್ನಾಟಕದಲ್ಲೇ ಅವತಾರ ಮಾಡಿದ್ರು ಅನ್ನೋದ್ದಕ್ಕೆ ಸೂರ್ಯ ಚಂದ್ರರೇ ಸಾಕ್ಷಿ. ಅವರು ನಮ್ಮ ಮಧ್ವಮತದ ಹರಿದಾಸ್ರು.  ಕೃಷ್ಣ ಪರಮಾತ್ಮನ ಪರಮ ಭಕ್ತರು. ಇವತ್ತಿಗೆ ಸುಮಾರು ೪೦೦ ವರ್ಷಗಳ ಹಿಂದೆ ವಿಜಯನಗರದರಸರ ಕಾಲದಲ್ಲಿ ಹಂಪಿನಲ್ಲಿ ಇದ್ರು ನಮ್ಮ ಪುರಂದರದಾಸರು. ಹಂಪಿನಲ್ಲಿ ಇವತ್ತಿಗೂ ಪುರಂದರ ಮಂಟಪ ಅಂತ ಇದೆ. ಆ ಮಂಟಪದಲ್ಲೇ ಕೂತ್ಕೊಂಡ್ ದಾಸರು ತಮ್ಮ ದೇವರ್ನಾಮಗಳನೆಲ್ಲ ರಚನೆ ಮಾಡಿದ್ರು ಅಂತಲೇ ಹೇಳುತ್ತೆ ನಮ್ ಇತಿಹಾಸ. 

ಅಗಸ್ತೇ ಗೌಡ್ರು: ದಿಟವಾದ್ ಮಾತ್ ಹೇಳಿದ್ರಿ ಆಚಾರ್ರೆ! ಪುರಂದರ ದಾಸರೇ ಅಲ್ವ ಕರ್ನಾಟಕ ಸಂಗೀತ ಅಂತ ಹುಟ್ಟು ಹಾಕಿದ್ದು, ಮಾಯಾಮಾಳವ ಗೌಳ ರಾಗದಲ್ಲಿ ಸರಳೆ, ಜಂಟಿವರಸೆ, ಅಲಂಕಾರ, ಗೀತೆಗಳನೆಲ್ಲಾ ರಚನೆ ಮಾಡಿದ್ದು? ತಮಿಳ್ನೋರು, ತೆಲುಗೋರು, ಮಲಯಾಳ್ದೋರು…… ಎಲ್ಲರಿಗೂ ಅದೇ ತಾನೇ ಸಂಗೀತದ್ ಮೊದಲ್ನೇ ಪಾಠ. ಅದಕ್ಕೆ ಅಲ್ವಾ ದಾಸ್ರನ್ನ ಕರ್ನಾಟಕ ಸಂಗೀತ ಪಿತಾಮಹ ಅಂತನ್ನೋದು?

ಗುಂಡಾಚಾರ್ಯ: ವಿಜಯನಗರದ ಅರಸರ ಕಾಲಕ್ಕೆ ಇಡೀ ದಕ್ಷಿಣ ಭಾರತನೇ ಕರ್ನಾಟಕ ಅಂತಿದ್ರಂತೆ. ಪುರಂದರದಾಸರು ತಿರುಪತಿ ಬೆಟ್ಟಕ್ ಹೋದಾಗ್ಲಲ್ಲ್ವಾ 'ವೆಂಕಟಾಚಲ ನಿಲಯಂ, ವೈಕುಂಠ ಪುರವಾಸಂ' ಅನ್ನೋ ದೇವರನಾಮ ರಚಿಸಿದ್ದು? ತಿರುಪತಿ ಬೆಟ್ಟದ್ ಮೇಲೂ ದಾಸ್ರ ಪ್ರತಿಮೆ ನಾನ್ ಅಲ್ಲಿಗ್ ಹೋದಾಗ ಕಂಡಿದೀನಿ. 

ವಿದ್ಯಾಕಾಂತಾಚಾರ್ಯ: (ಬಾಗಿಲ ಹಿಂದೆ ನಿಂತಿದ್ದ ಸುಂದರಮ್ಮನವರತ್ತ ನೋಡುತ್ತಾ......) ನೀವೇನ್ ಹೇಳ್ತೀರಾ ತಾಯಿ ಈ ವಿಷ್ಯದಲ್ಲಿ. 

ಸುಂದರಮ್ಮ: (ಸೆರಗನ್ನು ತಲೆಯಮೇಲಕ್ಕೆ ಸರಿಸುತ್ತಾ....) ಪುರಂದರ ದಾಸ್ರೇ ಕರ್ನಾಟಕ ಸಂಗೀತದ ಮೊದಲು ಗುರು ಅನ್ನೋದಕ್ಕೆ ಆ ಪುರಂದರ ವಿಠಲನೇ ಸಾಕ್ಷಿ. ಸಾಕ್ಷಾತ್ ತ್ಯಾಗರಾಜರೇ ಅವ್ರ ಸಂಗೀತ ನಾಟಕ 'ಪ್ರಹ್ಲಾದ ಭಕ್ತಿ ವಿಜಯಂ' ಅನ್ನೋದ್ರಲ್ಲಿ ಪುರಂದರ ದಾಸ್ರ ಸ್ಮರಣೆ ಮಾಡಿದ್ದಾರೆ. 

ಅಂದ್ಹಾಗೆ ದಾಸ್ರು ನಮ್ ಚನ್ನಪಟ್ಟಣದ ಹತ್ತಿರದ ಮಳೂರು ಅಪ್ರಮೇಯ ದೇವಸ್ಥಾನಕ್ಕೂ ಬಂದಿದ್ರಂತೆ. ಕಾಪಿ ರಾಗದ  'ಆಡಿಸಿದಳೆಶೋದಾ ಜಗದೋದ್ಧಾರನ' ಅನ್ನೋ  ಸುಪ್ರಸಿದ್ಧ ಕೃತಿನ ಅವರು ಅಲ್ಲೇ ರಚನೆ ಮಾಡಿದ್ದಂತೆ. 

ಗುಂಡಾಚಾರ್ಯ: ಗೌಡ್ರೆ, ಶ್ರೀ ಕೃಷ್ಣಲೀಲೆ ನಾಟ್ಕ್ದಲ್ಲಿ ನೀವು 'ಆಡಿಸಿದಳೆಶೋದಾ' ಹಾಡ್ನ ಎಷ್ಟು ಎತ್ತಿದ್ ಕಂಠದಲ್ಲಿ ಹಾಡ್ತೀರಿ.  ನನಗಂತೂ ನಿಮ್ಮ ಹಾಡೇ ಕಿವೀಲಿ ಗುನ್ಗುಟ್ತಾ ಇರುತ್ತೆ. 

ವಿದ್ಯಾಕಾಂತಾಚಾರ್ಯ: ಆ ಹಾಡ್ನ ಒಂದು ಮಟ್ಟ್ ಹಾಡೇಬಿಡಿ ಗೌಡ್ರೆ, ಕೇಳೋಣ. 

ಅಗಸ್ತೇ ಗೌಡ: (ಗಂಟಲನೊಮ್ಮೆ ಸರಿ ಮಾಡಿಕೊಂಡು  ಹಾಡಲು  ಶುರುಮಾಡುತ್ತಾರೆ. ಹಾಡಿಗೆ ತಾಳವನ್ನು ಆಚಾರ್ಯರಿಬ್ಬರೂ ಹಾಕುತ್ತಾರೆ. ಸುಂದರಮ್ಮನವರ ಕಾಲಲ್ಲೇ ಅಯಾಚಿತವಾಗಿ ತಾಳ ಮೂಡುತ್ತದೆ).  

ಆಡಿಸಿದಳೇಶೋದಾ  ಜಗದೋದ್ಧಾರನಾ . . . . . . . . . 

(ಗೌಡರು ಚರಣ ಎತ್ತಿಕೊಳ್ಳುವಾಗ ಸ್ವಲ್ಪ ತಡ ಮಾಡುತ್ತಾರೆ.  ಆಗ ಹಿಂದಿನಿಂದ ಸುಂದರಮ್ಮನವರು ಚರಣವನ್ನು ಎತ್ತಿಕೊಟ್ಟು ತಾವೂ ದನಿ ಸೇರಿಸುತ್ತಾರೆ). 

ವಿದ್ಯಾಕಾಂತಾಚಾರ್ಯ: ಗೌಡ್ರೆ ನಿಮ್ದು, ನಿಮ್ಮನೆಯಾಕೆದೂ ಹೇಳಿ ಮಾಡ್ಸಿದ್ ಜೋಡಿ. ಸಾಕ್ಷಾತ್ ಕೃಷ್ಣನೇ ಕೂಡ್ಸಿರೋ ಜೋಡಿ. 

(ಸುಂದರಮ್ಮನವರತ್ತ ತಿರುಗಿ........) ಅಂದ್ಹಾಗೆ ಅಮ್ಮಾ, ಹೋದ್ ತಿಂಗ್ಳು ನೀವು ನಿಮ್ಮ್ ಯಜಮಾನ್ರು ಮೇಲ್ಕೋಟೆ ಸಂಸ್ಕೃತ ಸಭೆಗ್ ಹೋಗಿದ್ರಂತೆ. 

ಅಗಸ್ತೇ ಗೌಡ: ಹೌದು ಆಚರ್ರೇ, ಅವಳ್ಗೆ ಮೇಲ್ಕೋಟೆ ದೇವಸ್ತಾನದಿಂದಲೇ ಆಹ್ವಾನ ಬಂದಿತ್ತು. ನಾನು ಜೊತೆಗೆ ಹೋಗಿದ್ದೆ. ಅಲ್ಲಿ ಅವಳ್ಗೆ ಶಾಲ್ ಹೊದ್ಸಿ ಸನ್ಮಾನನೂ ಮಾಡಿದ್ರು. 

ಸುಂದರಮ್ಮ: ಆಚರ್ರೇ, ಅವತ್ತಿನ್ ಸಭೇಲಿ ಸುಮಾರು ೪೦ ಸಂಸ್ಕೃತ ಪಂಡಿತರು ಸೇರಿದ್ರು. ಅದರಲ್ಲಿ ಸುಮಾರು ೨೦ ಜನ ಕಾಶಿ ಕಡೆಯಿಂದಲೇ ಬಂದಿದ್ರು. 

'ಜನನೀ ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರೀಯಸೀ' ಅನ್ನೋ ಮಾತು ಚರ್ಚೆಗ್ ಬಂದಿತ್ತು. ಅದರ ಮೂಲದ  ಬಗ್ಗೆ ಬೇರೆ ಬೇರೆ ವಿದ್ವಾಂಸರು ಬೇರೆ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದ್ರು.

ನನ್ನ ಸರದಿ ಬಂದಾಗ 'ಆ ಮಾತು ರಾಮಾಯಣದಲ್ಲಿ ಬರುತ್ತೆ ಅಂತ ವಿವರ್ಸದೆ.  ಆ ಮಾತ್ನ ಸಾಕ್ಷಾತ್ ಶ್ರೀರಾಮನೇ ಲಕ್ಷ್ಮಣನಿಗೆ ಹೇಳಿದ್ದು.

 'ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ,

 ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ  ಗರೀಯಸೀ' 

ಎಂಬುದು ಶ್ರೀರಾಮನ ಮಾತು. ಶ್ರೀ ರಾಮ ರಾವಣನ ವಧೆಮಾಡಿ ಲಂಕೆಯನ್ನು ಜಯಿಸಿಯಾಗಿರುತ್ತೆ. ವಜ್ರ ವೈಡೂರ್ಯಗಳಿಂದ ಖಚಿತವಾದ ಲಂಕಾಪಟ್ಣ ಕಂಡು ಬೆರಗಾದ ಲಕ್ಷ್ಮಣ 'ಅಣ್ಣಾ, ನಾವು ಲಂಕೆಲೇ ಏಕೆ ನೆಲಸಬಾರ್ದು? ಲಂಕೆನೇ ನಮ್ಮ ರಾಜಧಾನಿಯನ್ನಾಗಿ ಏಕೆ ಮಾಡಿಕೊಳ್ಳಬಾರದು?' ಅಂತ ಕೇಳ್ತಾನೆ. ರಾಮ ನಕ್ಕು 'ಸ್ವರ್ಣಮಯವಾದ ಈ ಲಂಕೆನೂ ನನ್ನನ್ನು ಬೆರಗುಗೊಳಿಸಿಲ್ಲ. ನನ್ನ ಮಾತೆ ಹಾಗೂ ಮಾತೃಭೂಮಿ ನನಗೆ ಸ್ವರ್ಗಕ್ಕಿಂತ ಮಿಗಿಲಾದ್ದು, ಬೇಗ ನಮ್ಮ ತಾಯ್ನಾಡಾದ ಅಯೋಧ್ಯೆ ಸೇರೋಣ' ಅಂತಾನೆ.   

ಮತ್ತೆ ಕೆಲವು ಮೂಲಗಳ ಪ್ರಕಾರ “ಮಹರ್ಷಿ ಭರದ್ವಾಜರು ಶ್ರೀ ರಾಮನಿಗೆ ಈ ಮಾತ್ನ ತಿಳಿಸಿದ್ರೂ ಅಂತಲೂ ತಿಳಿದು ಬರುತ್ತೆ” ಅಂತ ನನ್ನ ಮಂಡನೆಯನ್ನು ಮುಗಿಸಿದೆ.  ನೆರೆದ ವಿದ್ವಾಂಸರೆಲ್ಲರೂ ದೀರ್ಘ ಕಾಲ ಚಪ್ಪಾಳೆ ತಟ್ಟಿದ್ರು. ಕಾಶಿ ಮೂಲದ ಸಂಸ್ಕೃತ ವಿದ್ವಾಂಸರಾದ ಮಹೇಶ್ ತ್ರಿವೇದಿಯವರು ನನ್ನನ್ನು ಅಭಿನಂದಿಸಿ ಶಾಲು ಹೊದಿಸಿದ್ರು. 

ಗುಂಡಾಚಾರ್ಯ: (ಸುಂದರಮ್ಮನವರ ಕಡೆಗೆ ಕೈ  ಮುಗಿಯುತ್ತಾ. . . . . . . .) ತಾಯಿ, ನೀವೇ ಧನ್ಯರು. ಭಗವಂತ ನಿಮಗೂ ನಿಮ್ಮ ಕುಟುಂಬಕ್ಕೂ ಆಯುರಾರೋಗ್ಯ ಐಶ್ವರ್ಯಗಳನ್ನು ದಯಪಾಲಿಸ್ಲಿ. ನಾವುಗಳಿನ್ನು ಹೊರಡಲು ಅಪ್ಪಣೆ ಕೊಡಿ. (ಇಬ್ಬರೂ ಆಚಾರ್ಯರೂ ಗೌಡರ ಮನೆಯಿಂದ ನಿರ್ಗಮಿಸುತ್ತಾರೆ). 

(ಅಗಸ್ತೇ ಗೌಡ ಹಾಗೂ ಸುಂದರಮ್ಮನವರಿಬ್ಬರೂ ಕೈ ಮುಗಿದು ಆಚಾರ್ಯರಿಬ್ಬರನ್ನೂ ಬೀಳ್ಕೊಡುತ್ತಾರೆ).

-೦-೦-೦- 

ದೃಶ್ಯ - ೨

(ತಿರುಮಕೂಡಲ ಅಗಸ್ತೇ ಗೌಡರ ಮನೆ. ಸಮಯ ಸುಮಾರು ಬೆಳಗ್ಗೆ ೮.೩೦. ಕೋಣೆಯೊಳಗಿಂದ ಸುಂದರಮ್ಮನವರ ಹೆರಿಗೆ ಸಂಕಟ ಕೇಳಿಬರುತ್ತಿರುತ್ತದೆ.  ಅಗಸ್ತೇ ಗೌಡರು ದೇವರಿಗೆ ಕೈ ಮುಗಿದು, ಚಡಪಡಿಸುತ್ತಾ ಅತ್ತಿಂದಿತ್ತ ಓಡಾಡುತ್ತಿರುತ್ತಾರೆ. ಅವರ ಬಾಮೈದ ಚೌಡಯ್ಸನವರು ಗೌಡರನ್ನು ಸಂತೈಸುತ್ತಿರುತ್ತಾರೆ).

ಸೂಲಗಿತ್ತಿ: (ಕೋಣೆ ಬಾಗಿಲು ಸರಿಸಿ, ಆತಂಕದ ದನಿಯಲ್ಲಿ ಮಾತನಾಡುತ್ತಾ……..) ಗೌಡ್ರೇ….. ಅಮ್ಮನೋರ್ ನೋವು ಜಾಸ್ತಿಯಾಗೈತೆ. ಬ್ಯಾಗ ಒಂದೆರ್ಡ ಹತ್ತಿ ಸೀರೆ, ಎರ್ಡ ಬಕೀಟ್ ಬಿಸ್ನೀರು ತಗಂಬನ್ನಿ.

(ಗೌಡ್ರ ಬಾಮೈದ ಬೇಕಾದ್ದನ್ನೆಲ್ಲಾ ತಂದು ಕೋಣೆಯೊಳಗೆ ತಲಪಿಸುತ್ತಾರೆ………

ಕೆಲವೇ ಕ್ಷಣಗಳಲ್ಲೇ ಸಮೀಪದ ಅಗಸ್ತೇಶ್ವರ ದೇವಾಲಯದ ಗಂಟಾನಾದವೂ, ಜೊತೆ ಜೊತೆಗೆ ಕೋಣೆಯೊಳಗಿಂದ ನವಜಾತ ಶಿಶುವಿನ ರೋದನವೂ ಕೇಳಿಸುತ್ತದೆ. ಆನಂದಗೊಂಡ ಬಾಮೈದ ಚೌಡಯ್ಯನವರು ಅಗಸ್ತೇ ಗೌಡರನ್ನು ಕೈ ಹಿಡಿದು ಅಭಿನಂದಿಸುತ್ತಾರೆ. ಇಬ್ಬರೂ ಅಗಸ್ತೇಶ್ವರ ದೇವಸ್ಥಾನದ ಕಡೆಗೆ ಕೈ ಮುಗಿಯುತ್ತಾರೆ).  

ಸೂಲಗಿತ್ತಿ: (ಬಾಗಿಲು ಸರಿಸಿ...) ಗಂಡ್ಮಗ ಗೌಡ್ರೇ! ಜೋರಾಗವ್ನೆ!! ಹುಲಿ ಹೊಟ್ಟೇಲ್ ಹುಟ್ಟೋದ್ ಹುಲೀನೆ ಬುಡಿ. ಬರ್ರಿ, ಬರ್ರಿ ಮಗೂನೂ, ತಾಯೀನೂ ನೋಡೋರಂತೆ.

(ಅಗಸ್ತೇ ಗೌಡ, ಅವರ ಬಾಮೈದ ಚೌಡಯ್ಯ ಇಬ್ಬರೂ ಹೆರಿಗೆ ಕೋಣೆ ಪ್ರವೇಶಿಸುತ್ತಾರೆ. ಮಗನನ್ನೂ, ಪತ್ನಿಯನ್ನೂ ನೋಡಿ ಹಿಗ್ಗುತ್ತಾ….)

ಅಗಸ್ತೇ ಗೌಡ: ಎಲ್ಲಾ ಅಗಸ್ತೇಶ್ವರನ ದಯೆ, ನಮ್ಮಮ್ಮ ಚೌಡೇಶ್ವರಿ ಪ್ರಸಾದ.  (ಮಗುವನ್ನು ಎತ್ತಿ ಸೂಲಗಿತ್ತಿ ಗೌಡರ ಕೈಲಿರಿಸುತ್ತಾಳೆ). ಸುಂದ್ರ…ಅಗಸ್ತೇಶ್ವರನ ದೇವಸ್ಥಾನದ ಮಂಗಳಾರತಿ ಗಂಟೆ ಬಾರ್ಸೊ ಹೊತ್ತಿಗೆ ನಿನ್ನ ಮಗ ಹುಟ್ಟಿದ್ದು. (ಮಗುವನ್ನು ನೋಡುತ್ತಾ...)ಎಲ್ಲಾ ನಿನ್ನ ಹಾಗೆ ಇದ್ದಾನೆ ನಿನ್ನ ಮಗ. ನಿನ್ನ ಹಾಗೆ ಗುಂಡ್ ಮುಖ, ಪಿಳಿ ಪಿಳಿ ಹೊಳ್ಯೋ ಕಣ್ಗಳು, ಉದ್ದನೆ ಮೂಗು……

ಸುಂದರಮ್ಮ: ನನ್ನ ಹಾಗೋ, ನಿಮ್ಮ ಹಾಗೋ, ಅಂತೂ ನಮ್ಮಗ ಆರೋಗ್ಯವಾಗ್ ಕಲ್ಗುಂಡ್ ಥರ ಇದ್ರೆ ಸಾಕು ಬಿಡೀಂದ್ರೆ.

ಚೌಡಯ್ಯ: ನನ್ನ ಅಳಿಯಂದ್ರೇನ್ ಸಾಮಾನ್ಯನೇ? ಆ ಹಣೆ ನೋಡು ಅಕ್ಕಾ. ಮೂರ್ ಪಟ್ಟೆ ವಿಭೂತಿ ಇಟ್ಟಬಿಟ್ರಂತೂ ಸಾಕ್ಷಾತ್ ಈಶ್ವರನೇ! ಆ ತುಟಿಗಳ್ ನೋಡು, ಬ್ಯಾವ್ನ ಎಸಳಿದ್ದಹಂಗಿಲ್ವಾ? ತಾಯೀ ಥರಾನೇ ಹುಟ್ಟಿರೋದ್ರಿಂದ ಬಲ್ ಅದೃಷ್ಟವಂತ ಆಗ್ತಾನೆ ಬಿಡು ಅಕ್ಕಾ. 

ಅಗಸ್ತೇ ಗೌಡ: ಚೌಡ…..ನನ್ಮಗ್ನ ಹೆಸ್ರು ನಾನಾಗ್ಲೇ ನಿರ್ಧಾರ ಮಾಡ್ಯಾಗಿದೆ.  ನಮ್ಮ ಕುಲದೇವತೆ ಚೌಡಮ್ಮ್ನ ಹೆಸ್ರೇಯ. ಚೌಡಯ್ಯಂತ್ಲೇ ನನ್ಮಗ್ನ ಹೆಸ್ರು. 

ಸುಂದರಮ್ಮ: ಹಾಗೇ ಆಗ್ಲಿಬಿಡಿ. ನಮ್ಮಗು ಚೌಡಯ್ಯನ ಮೇಲೆ ತಾಯಿ ಚೌಡೇಶ್ವರಿ ಆಶೀರ್ವಾದ ಎಂದೆಂದಿಗೂ ಇರ್ಲಿ. 

(ಗೌಡ್ರು, ಬಾಮೈದ ಚೌಡಯ್ಯ ಇಬ್ಬರೂ ಹೆರಿಗೆ ಕೋಣೆಯಿಂದ ಹೊರಬರುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ವಿದ್ಯಾಕಾಂತಾಚಾರ್ಯರ ಆಗಮನವಾಗುತ್ತದೆ).

ವಿದ್ಯಾಕಾಂತಾಚಾರ್ಯ: ವಿಷ್ಯ ತಿಳೀತು ಗೌಡ್ರೇ. ಗಂಡ್ಮಗು ತಂದೇ ಆಗಿದೀರಂತೆ.  ಎಲ್ಲಾ ತಾಯಿ ಚೌಡೇಶ್ವರಿ ಆಶೀರ್ವಾದ. (ತಂದಿದ್ದ ಪಂಚಾಂಗ ತೆಗೆದು ಬೆರಳುಗಳಲ್ಲಿ ಲೆಕ್ಕಾಚಾರ ಹಾಕುತ್ತಾ……).  ಗೌಡ್ರೇ….ನಿಮ್ಮಮಗ ಹುಟ್ಟಿದ್ ಘಳಿಗೆ ಪ್ರಶಸ್ತವಾಗಿದೆ. ದೂರ್ ದೂರ್ದ ಊರ್ ತನ್ಕ ಇವ್ನ ಕೀರ್ತಿ ಹಬ್ಬುತ್ತೆ, ನೋಡೋರಂತೆ. ಜೊತೆಗೆ ಆರೋಗ್ಯವಂತನೂ, ದೃಢಕಾಯನೂ ಆಗಿರ್ತಾನೆ. ಆಯುಷ್ಯ ಭಾಗ್ಯನೂ ಚೆನ್ನಾಗೇ ಇದೆ. ಮಿಕ್ಕಿದ್ದೆಲ್ಲಾ ನಾನ್ ಜಾತ್ಕದಲ್ ಬರ್ದ ತಂದ್ಕೊಡ್ತೀನಿ. 

ಅಗಸ್ತೇ ಗೌಡ: ಎಲ್ಲಾ ನಿಮ್ಮಂಥೋರ್ ಆಶೀರ್ವಾದ ಆಚಾರ್ರೇ. ನಮ್ಮ ಕುಲ ದೇವ್ತೆ ಚೌಡಮ್ಮ್ನ ವರಪ್ರಸಾದ.   ನಿಮ್ಮ ಬಾಯ್ ಹರ್ಕೆ ನಿಜವಾಗ್ಲಿ. ನನ್ಮಗ ಬೆಳೆದ್ ದೊಡ್ಡ ವ್ಯಕ್ತಿ ಆಗ್ಲಿ. ಆ ದೇವಿ ಕೃಪೇ ಇದ್ರೆ ನಾವು ಎಲ್ಲಾ ಕಣ್ಣಾರೆ ನೋಡೋಣ್ವಂತೆ. 

(ಅಷ್ಟು ಹೊತ್ತಿಗಾಗ್ಲೇ ಊರ ಜನ ಬಂದು ಗೌಡ್ರ ಮನೆ ಮುಂದೆ ಬಂದ್ ನೆರದಿರ್ತಾರೆ. ನೆರೆದಿದ್ದೋರ್ಗೆಲ್ಲಾ ಬೆಲ್ಲ, ಕೊಬ್ಬರಿ ಗೌಡರೇ ಹಂಚುತ್ತಾರೆ).

-೦-೦-೦-

ದೃಶ್ಯ - ೩

(ಅಗಸ್ತೇ ಗೌಡರ ಮನೆ. ತಾಯೀ ಸುಂದರಮ್ಮನವರು ಅಡುಗೆ ಕೆಲಸದಲ್ಲಿ ತೊಡಗಿರುತ್ತಾರೆ. ಬಾಲಕ ಚೌಡಯ್ಯ ಅವರ ಸೀರೆ ಹಿಡಿದು ನಿಂತಿರುತ್ತಾನೆ). 

ಚೌಡಯ್ಯ: ಅವ್ವಾ...... ಹೊಟ್ಟೆ ಹಸಿತಾ ಇದೆ. ಬ್ಯಾಗ್ ತಿಂಡಿ ಕೊಡು. 

ಸುಂದರಮ್ಮ: (ಮಗನ ತಲೆಯ ಮೇಲೆ ಕೈ ಇಟ್ಟು...) ತಿಂಡಿ ಕೊಟ್ಟೆ ಕೊಡ್ತೀನಿ ಚೌಡ. ಮೊದ್ಲು ದೇವರ ಪ್ರಾರ್ಥನೆ ಹೇಳ್ಕೊಡ್ತೀನಿ, ಹೇಳು. 

(ಸುಂದರಮ್ಮ ಮಗನನ್ನು ದೇವರ ಮುಂದೆ ಕರೆದೊಯ್ಯುತ್ತಾರೆ. ದೇವರ ಮನೆಯಲ್ಲೇ ಅಗಸ್ತೇ ಗೌಡರು ತಮ್ಮ ಹಾರ್ಮೋನಿಯಂ ಮತ್ತು ಪಿಟೀಲುಗಳನ್ನು ಇಟ್ಟಿರುತ್ತಾರೆ.  ಚೌಡಯ್ಯ ಕೈ ಜೋಡಿಸಿ ದೇವರ ಮುಂದೆ ನಿಲ್ಲುತ್ತಾನೆ. ಹಿಂದಿನಿಂದ ತಂದೆ ಅಗಸ್ತೇ ಗೌಡರು ನೋಡುತ್ತಿರುತ್ತಾರೆ). 

ಸುಂದರಮ್ಮ: ಹೇಳು ಮಗ..... 

ಗುರು ಬ್ರಹ್ಮ ಗುರು ವಿಷ್ಣು 

ಗುರು  ದೇವೋ ಮಹೇಶ್ವರಃ 

ಗುರು ಸಾಕ್ಷಾತ್ ಪರಬ್ರಹ್ಮ 

ತಸ್ಮೈ ಶ್ರೀ ಗುರುವೇನಮಃ 

(ಚೌಡಯ್ಯ ವಿಧೇಯತೆಯಿಂದ ಸ್ತೋತ್ರವನ್ನು ಪುನರುಚ್ಛರಿಸುತ್ತಾನೆ). 

ಸುಂದರಮ್ಮ: (ಪ್ರಾರ್ಥನೆ ಮುಂದುವರೆಸುತ್ತಾ.....) ಚೌಡಯ್ಯ, ನಿನಗೀಗ ಕನಕದಾಸರ ಹಾಡೊಂದನ್ನು ಹೇಳಿಕೊಡುತ್ತೇನೆ. ಹೇಳ್ತೀಯಾ?

ಚೌಡಯ್ಯ: ಓ..... ಹೇಳ್ತೀನಿ. ಕನಕದಾಸರುನ್ದ್ರೆ ಯಾರವ್ವಯ್ಯಾ?

ಸುಂದರಮ್ಮ: (ದೇವರ ಪಕ್ಕನೆ ಇದ್ದ ಫೋಟೋ ತೋರಿಸ್ತಾ....) ನೋಡು ಪುಟ್ಟಾ...... ಇವರೇ ಕನಕದಾಸರು. ಕಪ್ಪನೆ ಕಂಬ್ಳಿ ಹೊದ್ಗೊಂಡಿದ್ದಾರೆ......... ತಂಬೂರಿ ಬಾರಿಸ್ತಾ ಹಾಡ್ ಹೇಳ್ತಾಯಿದ್ದರೆ ನೋಡು. ಪಕ್ಕ ಇರೋರೆ ಪುರಂದರ ದಾಸರು.  ಈಗ ಹಾಡ್ ಹೇಳು. 

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನ್ಯಾರಮ್ಮ?  ....... 

ಚೌಡಯ್ಯ: (ಅಪ್ಪಯ್ಯನ ಪಿಟೀಲ್ ಕಡೆ ತೋರಿಸುತ್ತಾ.... ) ಅಮ್ಮಾ ........ಅಪ್ಪಯ್ಯನ್ ಪಿಟ್ಲು ನಂಗ್ ಕೊಡು. ಹಾಡ್ ಹೇಳ್ತಾ ಹೇಳ್ತಾ ಪಿಟ್ಲು ಬಾರುಸ್ತೀನಿ. 

ಸುಂದರಮ್ಮ: ಕಂದಯ್ಯಾ......... ನಿನಿಗಿನ್ನೂ ಪಿಟ್ಲು ನುಡಿಸೊಕ್ ಬರವಲ್ದು ಕಣೋ. ದೊಡ್ಡನಾದ್ಮೇಲೆ ಪಿಟೀಲು ಕಲ್ತ್ಕೊಳ್ವಂತೆ. ಈಗ ಹಾಡ್ ಹೇಳು ಮಗಾ. 

ಚೌಡಯ್ಯ: ನನ್ಗೆ ಪಿಟೀಲು ಬೇಕೇ ಬೇಕು (ಎನ್ನುತ್ತಾ ಅಪ್ಪಯ್ಯನ ಪಿಟೀಲ್ನ ಅವನೇ ತೆಗೆದುಕೊಳ್ಳುತ್ತಾನೆ. ಅಮ್ಮನ ಹಾಡು ಪುನರುಚ್ಚರಿಸುತ್ತಾ  ಜೊತೆ ಜೊತೆಗೆ ಪಿಟೀಲು ನುಡಿಸೋಕೆ ಪ್ರಯತ್ನಿಸುತ್ತಾನೆ). 

ಅಗಸ್ತೇ ಗೌಡ: (ಅವ್ರ ಹಿಂದೆ ಊರ ಕೂಲಿ ಮಠ್ದ್ ಮೇಷ್ಟ್ರು  ಮಂಜಣ್ಣನೋರು ಬಂದಿರ್ತಾರೆ).  ಸುಂದ್ರಾ.......ನಿನ್ಮಗಂಗೆ ಪಿಟೀಲ್ ಬೇರೆ ಬೇಕಂತೋ. ಒಟ್ಗೆ ಆಕಾಶಕ್ಕೆ ಏಣಿ ಹಾಕೋ ಆಸಾಮಿ ಇವ್ನು! 

ನಿನ್ಮಗಂಗೆ ಹಾಡೇನೋ ನೀನೇ ಹೇಳ್ಕೊಡಬೋದು. ಅವನ್ಗೆ ಕೂಲಿ ಮಠಕ್ ಹೋಗೋ ದಿನ ಬಂದಿದೆ. ಅವ್ನು ನಾಲ್ಕಕ್ಷರ ಕಲ್ತಕಬೇಕಲ್ಲ. ನಮ್ಮೂರ್  ಕೂಲಿ ಮಠದ ಅಯ್ಯನೋರು......... ಮಂಜಣ್ಣನೋರು.........   ನಂಜೊತೆನೆ ಬಂದಿದ್ದಾರೆ ನೋಡು. 

ಚೌಡ........ , ಅಯ್ಯ್ನೋರ್ಗೆ ನಮಸ್ಕಾರ ಮಾಡು. 

(ಬಾಲಕ ಚೌಡಯ್ಯ ಹೆದರಿ ಅಮ್ಮನ ಸೀರೆ ಹಿಂದೆ ಅಡಗಿಕೊಳ್ಳುತ್ತಾನೆ. ಸುಂದರಮ್ಮ ಅವನನ್ನ ಮೇಷ್ಟ್ರ  ಕಾಲ್ತಳಗೆ ಹಾಕುತ್ತಾರೆ). 

ಚೌಡಯ್ಯ: (ಅಮ್ಮನ ಹಿಂದೆ ಓಡಿ ಹೋಗಿ ಅಡಗಿಕೊಳ್ಳುತ್ತಾ....... ) ನಾನ್ ಕೂಲಿ ಮಠಕ್ಕೆ ಹೋಗೋಲ್ಲಾ. ಹೋಗೋಲ್ಲಾ. (ಅಳುತ್ತಾನೆ....)

ಸುಂದರಮ್ಮ: (ಸಂತೈಸುತ್ತಾ.....) ಹಾಗ್ ಅಳಬಾರ್ದು ಮಗ. ಅಯ್ಯ್ನೋರ್ ಜೊತೆ ಹೋಗು. ನೀ ಜಾಣ ಆಗ್ಬೇಕೋ ಬೇಡ್ವೊ...... (ಮನೆಯಲ್ಲೇ ಇದ್ದ ಒಂದ್ ಹಳೆ ಬ್ಯಾಗೋಳ್ಗೆ ಒಂದು ಸ್ಲೇಟ್ ಹಾಕಿ, ಮಗನ ಹೆಗಲ್ಗೆ ನೇತ್ ಹಾಕ್ತಾರೆ).  

ಚೌಡಯ್ಯ: (ಅಳುತ್ತಾ....) ಅಮ್ಮಾ.... ಮಠದಲ್ಲಿ ಪಿಟೀಲ್ ಬಾರ್ಸೋದ್ ಹೇಳ್ಕೊಡ್ತಾರ? 

ಸುಂದರಮ್ಮ: ಪಿಟೀಲ್ ಆಮೇಲೆ ಕಲ್ತಕೊಳ್ಳುವಂತೆ. ಈಗ ಅಯ್ಯ್ನೋರ್ ಜೊತೆ ಸ್ಕೂಲ್ಗ್ ಹೋಗು. 

ಚೌಡಯ್ಯ: ನಾನ್ ಸ್ಕೂಲ್ಗೆ ಪಿಟೀಲ್ ತಗೊಂಡ್ ಹೋಗ್ಲಾ? 

ಅಗಸ್ತೇ ಗೌಡ: (ಬಾಲಕನ ಕೈಯಿಂದ ಪಿಟೀಲ್ ಕಿತ್ಕೊಳ್ಳುತ್ತಾ....) ಅಯ್ಯ್ನೋರು ಎಷ್ಟ್  ಹೊತ್ತಿಂದಾ ಕಾಯ್ತಾ ಇದ್ದಾರೆ. ಬ್ಯಾಗ್ ಅವರ್ ಜೊತೆ ಹೊರಡು. 

(ಅಯ್ಯ್ನೋರ್ ಚೌಡಯ್ಯನ ಕೈ ಹಿಡಿಯುತ್ತಲೇ, ಬಾಲಕ ಜೋರಾಗಿ ಅಳಲು ಆರಂಭಿಸುತ್ತಾನೆ. ಅಂತೂ ಬಲವಂತವಾಗಿ ಅಯ್ಯ್ನೋರು ಚೌಡಯ್ಯನ್ನ ಕೂಲಿಮಠಕ್ಕೆ ಕೊಂಡೊಯ್ಯುತ್ತಾರೆ).  

-೦-೦-೦-


ದೃಶ್ಯ - ೪

(ಅಗಸ್ತೇ ಗೌಡ್ರು ಮತ್ತು ಗುಂಡಾಚಾರ್ರು ಕಪಿಲಾ ನದಿ ತಟದಲ್ಲಿ ಓಡಾಡ್ತಾ ಇರುತ್ತಾರೆ). 

ಗುಂಡಾಚಾರ್ಯ: (ದೂರದಲ್ಲಿ ಒಬ್ಬನೇ ಕುಳಿತಿದ್ದ ಚೌಡಯ್ಯನನ್ನು ತೋರಿಸುತ್ತಾ.....) ಗೌಡ್ರೆ..... ಅಲ್ ನೋಡಿ..... ನಿಮ್ ಹುಡುಗ ನದಿ ಹತ್ತಿರ ಒಬ್ಬನೇ ಅಳ್ತಾ ಕೂತಿದಾನೆ. ಯಾಕ್, ಕೂಲಿ ಮಠಕ್ಕೆ ನೆಟ್ಗೆ  ಹೋಗೋದಿಲ್ವಾ? 

ಅಗಸ್ತೇ ಗೌಡ: (ನಿಟ್ಟುಸಿರು ಬಿಡ್ತಾ....) ಹೌದ್  ಆಚಾರ್ರೆ..... ಕೂಲಿ ಮಠದ ಅಯ್ಯ್ನೋರು ಎಷ್ಟೋ ಸರಿ ಹೇಳ್ಕಳ್ಸಿದಾರೆ. ಕೂಲಿಮಠ್ದಾಗ ಸರಿಯಗ್ ಕೂರೋದೇ ಇಲ್ಲವಂತೆ. ಮನೆಗೂ ಬರೋಲ್ಲ. ಅಲ್ಲಿ ಇಲ್ಲಿ ನಿಂತ್ಕೊಂಡಬಿಟ್ಟಿರ್ತಾನೆ. ನಾವೇ ಯಾರ್ಯಾರು ಹುಡ್ಕೊಂಡ್ ಮನೆಗೆ  ಕರ್ಕೊಂಡ್ಬರಬೇಕು. 

ಹೊಡ್ದು ಬಡ್ದು ಮಾಡ್ದ್ರೆ ಹುಡ್ಗ ಮೊಂಡಬಿದ್ದ್ ಹೋಗ್ತಾನೆ ಅಂತಾಳೆ ಅವನವ್ವ. 

ಗುಂಡಾಚಾರ್ಯ: ಸುಂದ್ರಮ್ಮನೋರ್ ಹೇಳೋದು ಸರಿ ಅನ್ನಿ. ಹುಡ್ಗನ್ನ ಒಳ್ಳೆ ಮಾತಲ್ಲಿ ದಾರಿಗ್ ತರ್ಬೇಕು. ಅವನ್ನ ನನ್ನ ಹತ್ರ ಕಳ್ಸಿ. ಅಮರ ಕೋಶಾನು, ರಘುವಂಶನೂ ಕಂಠಪಾಠ ಮಾಡಿಸ್ತೀನಿ. ಅವೆರ್ಡ್ನು ಕಲಿತಬಿಟ್ಟ್ರೆ ಹುಡ್ಗ ಪ್ರೈಮರಿ ಸ್ಕೂಲ್ ಯಾಕೆ? ಮಿಡ್ಡ್ಲ್ ಸ್ಕೂಲ್ನೇ  ಪೂರೈಸ್ದ ಹಾಗೇಂತ  ಇಟ್ಕಳಿ. 

ಆಗಸ್ತೇ ಗೌಡ: (ಕೈ ಮುಗಿಯುತ್ತಾ....) ಆಚಾರ್ರೆ, ನೀವೇ ಏನಾರು ದಾರಿ ತೋರಿಸ್ಬೇಕು. ನೀವೇ ಹೇಳಿದ್ದೆ ಸರಿ ಬಿಡಿ. 

(ಇಬ್ಬರೂ ಬಾಲಕ  ಚೌಡಯ್ಯನ ಹತ್ತಿರ ಹೋಗಿ ನಿಲ್ಲುತ್ತಾರೆ. ಚೌಡಯ್ಯನನ್ನು ಗುಂಡಾಚಾರ್ಯರು ತಮ್ಮ ಮನೆಗೆ ಕರೆದೊಯುತ್ತಾರೆ). 

ಗುಂಡಾಚಾರ್ಯ:(ಕೈಯಲ್ಲಿದ್ದ ಕಲ್ಸಕ್ರೆ ಶೀಶ ಕಲುಕುತ್ತಾ….), ಚೌಡಾ…ಕಲ್ ಸಕ್ರೆ ತಗೊ (ಬಾಲಕನ ಮುಖ ಅರಳುತ್ತದೆ).

ಯಾಕೋ ನಿಂಗೆ ಕೂಲಿ ಮಠ ಅಂದ್ರೆ ಇಷ್ಟ ಇಲ್ಲವೇನೋ? 

(ಹುಡುಗ ತಲೆಯಾಡಿಸುತ್ತಾನೆ......) 

ಹೋಗ್ಲಿ...... ಹೋಗಿ ಕೈ ಕಾಲ್ ತೋಳ್ಕಂಡ್ ಬಂದು, ರಾಯ್ರ ಪಟಕ್ಕೆ ಕೈ ಮುಗಿ.  ನಾನ್ ನಿನ್ಗೆ ಅಮರ ಕೋಶ ಹೇಳ್ಕೊಡ್ತೀನಿ. ಗಟ್ಟ್ ಮಾಡ್ಕೊಳ್ಳುವಿಯಂತೆ. 

(ಹುಡ್ಗ ಹೋಗಿ ಕೈ ಕಾಲ್ ತೊಳ್ಕೊಂಡ್ ಬಂದು, ರಾಯರ ಪಟಕ್ಕೆ ಕೈ ಮುಗಿಯುತ್ತಾನೆ. ಗುಂಡಾಚಾರ್ಯರ ಮುಂದೆ ವಿನಮ್ರನಾಗಿ ಕುಳಿತುಕೊಳ್ಳುತ್ತಾನೆ). 

ಗುಂಡಾಚಾರ್ಯ: ಈಗ ನಾನ್ ಹೇಳ್ಕೊಟ್ಹಾಗೆ  ಹೇಳ್ಬೇಕು. ಕೈ ಮುಕ್ಕೋ......

ನಾಮಲಿಂಗಾನುಶಾಸನಂ ನಾಮ ಅಮರಕೋಶಃ 

(ಹುಡುಗ ಒಂದೇ ಬಾರಿ ಪುನರಾವರ್ತಿಸುತ್ತಾನೆ). 

ಚೌಡ.... ನಾನ್ ಹೇಳ್ಕೊಟ್ಟಿದ್ದನೆಲ್ಲ ಎರಡೆರಡು ಸರ್ತಿ ಹೇಳ್ಬೇಕು. 

ಯಸ್ಯ ಜ್ಞಾನದಯಾಸಿಂಧೋರಗಧಸ್ಯಾನಘಾ ಗುಣಾ:

ಸೇವ್ಯತಾಮಕ್ಷಯೋ ಧೀರಾಸ್ಸ ಶ್ರಿಯೈ ಚಾಮೃತಾಯ ಚ

(ಈ ಬಾರಿ ಬಳಕೆ ಪ್ರತಿ ಉಕ್ತಿಯನ್ನೂ ಎರಡೆರಡು ಬಾರಿ ಸ್ಪಷ್ಟವಾಗಿ ಪುನರಾವರ್ತಿಸುತ್ತಾನೆ). 

ಚೌಡಯ್ಯ: ಆಚಾರ್ರೆ........ ನಾನು ಅಮರ ಕೋಶನ ಯಾಕೆ ಗಟ್ಟ್ ಮಾಡ್ಕಬೇಕು?

ಗುಂಡಾಚಾರ್ಯ: ಚೌಡ........ತುಂಬಾ ಒಳ್ಳೆ ಪ್ರಶ್ನೆ ಕೇಳಿದೀಯಾ. ಶಭಾಷ್!

ಅಮರ ಕೋಶ ಅನ್ನೋದು ಒಂದು ಶಬ್ದ ಕೋಶ ಅಂತ ತಿಳ್ಕೊ. 

ಅಮರ ಕೋಶ ಕಲ್ತಕೊಂಡ್ರೇ ಬೇರೇ ಬೇರೇ ನಾಮ ಪದ್ಗಳ್ಗೆ, ಅಂದ್ರೆ ಹೆಸ್ರುಗಳ್ಗೆ ಇರೋ ಬೇರೆ ಬೇರೇ ಪದಗಳ್ನ ತಿಳ್ಕೊಂಡಹಾಗೆ ಆಗುತ್ತೆ. ಉದಾಹರಣೆಗೆ  ಸೂರ್ಯನಿಗೆ ಅಮರ ಕೋಶದಲ್ಲಿ  ಆದಿತ್ಯ, ಭಾಸ್ಕರ, ಭಾನು, ದಿವಾಕರ, ರವಿ, ಪ್ರಭಾಕರ, ಸವಿತೃ ಅಂತ ಬೇರೆ ಬೇರೇ ಹೆಸರುಗಳಿವೆ. ಇದರ ಉಪಯೋಗ ಏನು ಅನ್ನೋದು ನೀನು ದೊಡ್ಡೋನಾಗ್ತಾ ಆಗ್ತಾ ನಿಂಗೇ ಗೊತ್ತಾಗ್ತಾ ಹೋಗುತ್ತೆ. 

(ಅಮರ ಕೋಶದ ಕಂಠಪಾಠ ಮುಂದುವರೆಯುತ್ತದೆ). 

-೦-೦-೦-

ದ್ರಶ್ಯ - ೫

(ವಿದ್ಯಾಕಾಂತಾಚಾರ್ಯರು ನದಿ ತಟದಲ್ಲಿ ನಡೆದು ಬರುತ್ತಿರುತ್ತಾರೆ. ಬಾಲಕ ಚೌಡಯ್ಯ ಕಲ್ಲು ಬಂಡೆಯೊಂದರ ಮೇಲೆ ಕುಳಿತಿರುತ್ತಾನೆ. ಶಾಲಾ ಬ್ಯಾಗು ಅವನ ಮುಂದೆ ಬಿದ್ದಿರುತ್ತದೆ). 

ವಿದ್ಯಾಕಾಂತಾಚಾರ್ಯ: (ಬಾಲಕನ ಹತ್ತಿರ ಬಂದು ಅವನ ತಲೆ ಸವರುತ್ತಾ.....) ಯಾಕೋ ಚೌಡ..... ನರಸೀಪುರ್ದ್ ಸ್ಕೂಲ್ಗೆ ಹೋಗ್ಲಿಲ್ವೇನೋ?  ದೋಣಿಯೊನ್ ಹೋಗಾಗ್ಲೇ ಬಾಳ ಹೊತ್ತಾಯ್ತಲೊ...... 

(ಚೌಡಯ್ಯ ತಲೆಯಾಡಿಸುತ್ತಾನೆ). 

ನಿಂಗೆ ಸ್ಕೂಲ್ಗ್ ಹೋಗೋಕ್ ಇಷ್ಟವಿಲ್ಲವೇನೋ?

(ಚೌಡಯ್ಯ ಸುಮ್ಮನೆ ನಿಂತಿರುತ್ತಾನೆ). 

ಬಾ ನಂಜೊತೆ ಮನೆಗ್ ಹೋಗೋಣ. 

(ಇಬ್ಬರೂ ಅಗಸ್ತೇ ಗೌಡರ ಮನೆಗೆ ಬರುತ್ತಾರೆ. ಸುಂದರಮ್ಮ, ಗೌಡ್ರು ಮನೆ ಬಾಗ್ಲಲ್ಲೇ ನಿಂತಿರುತ್ತಾರೆ).  

ವಿದ್ಯಾಕಾಂತಾಚಾರ್ಯ: ಸುಂದರಮ್ಮಾ, ಇವನ್ನಾ ಸ್ಕೂಲ್ಗ್ ಕಳಿಸಿ ಪ್ರಯೋಜನವಿಲ್ಲ. ದೋಣಿ ಹತ್ಕೊಂಡು ನರಸೀಪುರದ್ ಸ್ಕೂಲ್  ತಂಕ ಹೋಗೋ ಕುಳ ಇವ್ನಲ್ಲ. ಸುಮ್ಮ್ನೆ ನನ್ನ ಹತ್ರ ಸಂಗೀತ ಪಾಠಕ್ ಕಳಿಸು. 

(ಗೌಡರೂ ತಲೆಯಾಡಿಸುತ್ತಾರೆ). 

ಸುಂದರಮ್ಮ: ನೀವ್ ಹೇಳೋದು ಸರಿ ಆಚಾರ್ರೆ. ನರಸೀಪುರದ್ ಸ್ಕೂಲ್ಗ್ ಸೇರ್ಸಿದ್ ಅಷ್ಟೇ. ಆ ಸ್ಕೂಲ್ ಮುಖಾನೇ ಇವ್ನ್ ನೋಡ್ಲಿಲ್ಲ. ಹೇಗೂ ಅವರಪ್ಪನ್ ಪಿಟೀಲ್ನ್ ಹಿಡ್ಕೊಂಡು ಓಡಾಡ್ತಾ ಇರ್ತಾನೆ. ಎಷ್ಟಾಗುತ್ತೋ ಅಷ್ಟು ಸಂಗೀತನಾದ್ರೂ ಕಲ್ತಕೊಳ್ಳಲಿ. 

ಚೌಡಯ್ಯ: (ಹತ್ತಿರವಿದ್ದ ಪಿಟೀಲನ್ನ ಕೈಗೆತ್ತಿಕೊಂಡು....) ಅವ್ವಯ್ಯಾ...... ನಾನ್ ಪಿಟೀಲ್ ಬಾರ್ಸೋದ್ನೆ ಕಲ್ತಕೊಳ್ಳೋದೋ. ಆಚಾರ್ರುಗೆ ಹೇಳು. 

ವಿದ್ಯಾಕಾಂತಾಚಾರ್ಯ: ಚೌಡಾ....ಪಿಟೀಲ್ನ್ ಆಮೇಲೆ ಕಲ್ತಕೊಳ್ಳುವಂತೆ. ಮೊದ್ಲು ಸಂಗೀತ ಹಾಡೋದ್ನ ಕಲ್ತ್ಕೋ. 

ಗೌಡ್ರೇ....... ಅಂದ್ಹಾಗೆ ಇವತ್ತು ವಾರ ತಿಥಿ ಎಲ್ಲಾ ಪ್ರಶಸ್ತವಾಗೇ ಇದೆ. ಇವತ್ತಿಂದಲೇ ಸಂಗೀತ ಪಾಠ ಶುರು ಮಾಡ್ಬಿಡ್ತೀನಿ. 

ಚೌಡಾ......ಹೋಗಿ ಕೈ ಕಾಲು ಮುಖ ತೊಳ್ಕಂಡ್ ಬಾ. ದೇವರ್ಗೆ, ನಿಮ್ಮಪ್ಪ ಅಮ್ಮಂಗ್ ನಮಸ್ಕಾರ ಮಾಡು. 

(ಚೌಡಯ್ಯ ಬಚ್ಚಲು ಮನೆ ಕಡೆ ಹೋಗುತ್ತಾನೆ. ಅಷ್ಟರಲ್ಲಿ ಸುಂದರಮ್ಮನವರು ಅಡುಗೆ ಮನೆಯೊಳಗೆ ಹೋಗಿ ಒಂದು ತಟ್ಟೆ ಭರ್ತಿ ಹಣ್ಣು-ಹೂವು, ಒಂದು ರೇಷ್ಮೆ ಶಲ್ಯವನ್ನು ಬೆಳ್ಳಿ ತಟ್ಟೆಯೊಂದರಲ್ಲಿಟ್ಟು ತರುತ್ತಾರೆ. 

ಚೌಡಯ್ಯ ದೇವರಿಗೆ, ಅಪ್ಪ ಅಮ್ಮನಿಗೆ ನಮಸ್ಕಾರ ಮಾಡುತ್ತಾನೆ). 

ಸುಂದರಮ್ಮ: ಮಗಾ......... , ಸಂಗೀತ ಹೇಳ್ಕೊಡೋ ಮೊದಲ ಗುರುಗಳು ಅಂದ್ರೆ ದೇವ್ರ್ ಇದ್ದಹಾಗೆ. ಎಲ್ಲಿ, ಈ ತಟ್ಟೆನಾ ಅಚಾರ್ರ್ಗೆ ಕೊಟ್ಟು, ಅವರ್ಗೆ ನಮಸ್ಕಾರ ಮಾಡು. 

(ಚೌಡಯ್ಯ ಅವರಮ್ಮ ಹೇಳಿದ ಹಾಗೆ ಮಾಡುತ್ತಾನೆ. ಗುರುಗಳಿಗೆ ತಟ್ಟೆಯನ್ನು ನೀಡಿ ನಮಸ್ಕರಿಸುತ್ತಾನೆ). 

ವಿದ್ಯಾಕಾಂತಾಚಾರ್ಯ: (ಆಶೀರ್ವದಿಸುತ್ತಾ....) ಕೀರ್ತಿಮಾನ್ ಭವಾ, ಆಯುಷ್ಮಾನ್ ಭವಾ. 

(ಚೌಡಯ್ಯ ಗುರುಗಳ ಮುಂದೆ ಪದ್ಮಾಸನ ಹಾಕಿ ಕುಳಿತುಕೊಳ್ಳುತ್ತಾನೆ). 

ವಿದ್ಯಾಕಾಂತಾಚಾರ್ಯ: ಚೌಡಾ....ಎಲ್ಲಿ ನಾನ್ ಹೇಳ್ಕೊಟ್ಟ ಹಾಗೆ ಹೇಳು. 

ಸ........ಪ........ಸ 

(ಚೌಡಯ್ಯ ಸ ಪ ಸ ಕೂಗುತ್ತಾನೆ. ಗುರುಗಳು ಮಾಯಾಮಾಳವ ಗೌಳ ರಾಗದ  ಸರಳೆಯೊಂದಿಗೆ ಸಂಗೀತ ಪಾಠ ಆರಂಭಿಸುತ್ತಾರೆ. ಮೊದಲನೇ ದಿನದ ಪಾಠ ಮುಗಿಯುತ್ತದೆ).

ವಿದ್ಯಾಕಾಂತಾಚಾರ್ಯ: ಸುಂದರಮ್ಮ, ನಾಳೆ ಇವನ್ಗೆ ಸಂಗೀತ ಪಾಠದ ಎರಡನೇ ದಿನ. ದ್ವಿತೀಯ ವಿಘ್ನ  ಆಗ್ಬಾರದು.  ನಾಳೆ ನೀನೆ ಇವ್ನ ನಮ್ಮನೆಗೆ ಸಂಗೀತ್ ಪಾಠಕ್ ತಪ್ಪದೇ ಕರಕೊಂಬರಬೇಕು.  

ಸುಂದರಮ್ಮ: ಹಾಗೆ ಆಗ್ಲಿ ಆಚಾರ್ರೆ. 

-೦-೦-೦-

ದೃಶ್ಯ - ೬

(ಗೌಡರ ಮನೆಯಲ್ಲಿ ಒಂದು ದಿನ ವಿದ್ಯಾಕಾಂತಾಚಾರ್ಯರ ಮತ್ತು ಗೌಡರ ಬಾಮೈದ ಚೌಡಯ್ಯನವರ ಆಗಮನವಾಗಿರುತ್ತದೆ. ಬಾಲಕ ಚೌಡಯ್ಯನೂ ಅಲ್ಲೇ ಇರುತ್ತಾನೆ). 

ವಿದ್ಯಾಕಾಂತಾಚಾರ್ಯ: ಗೌಡ್ರೇ, ನಿಮ್  ಹುಡ್ಗ ಚೌಡಯ್ಯನ್ಗೆ ಸಂಗೀತ ಪಾಠ ಶುರುಮಾಡಿ ವರ್ಷ್ಗಳೇ ಕಳೀತು. ಸಾಕಷ್ಟು ಹಾಡುಗಾರಿಕೆ ಕಲ್ತಿದಾನೆ. ಅವನ್ಗೆ ಸ್ವರ ಜ್ಞಾನ, ಶ್ರುತಿ, ತಾಳ ಜ್ಞಾನ ಎಲ್ಲ ಚೆನ್ನಾಗೆ ಇದೆ. ಆದ್ರೆ ದ್ವನಿಯೇಕೋ ಸ್ವಲ್ಪ ಗಡಸು ಅಂತಲೇ ಹೇಳ್ಬೇಕು. ಅವನು ಕೂಡ, ಆಚಾರ್ರೆ ನಾನ್ ಪಿಟೀಲ್ನೆ ಕಲಿಯೋದು ಅಂತಿರ್ತಾನೆ.  ನಂಗೋ ಪಿಟೀಲ್ ಬರವಲ್ದು. ಅವ್ನ ವಯಸ್ಸು ಕೂಡ ೧೫ ತುಂಬಿರಬೇಕು. ಇನ್ನ್ ತಡಮಾಡಬಾರ್ದು ಆಲ್ವಾ. ಅವ್ನ್ ಯಾವುದಾದ್ರೂ ಬೇರೇ ಒಳ್ಳೆ ಸಂಗೀತ್  ಮೇಷ್ಟ್ರ  ಹತ್ರ ಹಾಕೋದ್ ಒಳ್ಳೇದು. 

ಸುಂದರಮ್ಮ....... , ಅಂದ್ಹಾಗೆ ನಿಮ್ಮ್ ಸಂಬಂಧದೋನು ಪಕ್ಕಣ್ಣ ಅಂತ ಒಬ್ಬ ನಮ್ಮ ಚೌಡಯ್ಯನ್ಗೆ ಪಿಟೀಲ್ ಕಲಿಸ್ತಾಯಿದ್ನಲ್ಲಾ, ಅದ್ ಎಲ್ಲಿ ತನಕ ಬಂತು?  

ಚೌಡಯ್ಯ: ಆ ಪಕ್ಕಣ್ಣನ ಹತ್ತ್ರ ನಾನ್ ಕಲಿಯೋಲ್ಲ ಆಚಾರ್ರೆ. ಅವನ್ಗೆ ಪಿಟೀಲ್ ವಿದ್ಯ ಬರೋದ್ ಅಷ್ಟರಲ್ಲೇ ಇದೆ. ಬರಿ ತಪ್ಪ್ ತಪ್ಪೇ ನುಡಿಸ್ತಾನೆ. ತಪ್ಪ್ ತಪ್ಪೇ ಹೇಳ್ಕೊಡ್ತಾನೆ. 

ಸುಂದರಮ್ಮ: ಆಚಾರ್ರೆ, ಆ ಪಕ್ಕಣ್ಣಂಗೂ ನಮ್ಮ ಚೌಡಯ್ಯನ್ಗು ಹತ್ತಿದ್ ಜಗಳ ಹರಿಯೋದಿಲ್ಲ. ಆ ಪಕ್ಕಣ್ಣ ಹೇಳ್ಕೊಡೋದ್ ಅಷ್ಟಕಷ್ಟೆ. ಅವ್ನ್ ಹೇಳ್ಕೊಡೋದ್ ಸರಿ ಇಲ್ಲ ಅಂತ ನಮ್ಮ ಚೌಡನ್ ಮನಸಲ್ ಕೂತಬಿಟ್ಟಿದೆ. ಜೊತೆಗೆ ಪಕ್ಕಣ್ಣಂದು ಕೀಟ್ಲೆ ಸ್ವಭಾವ ಬೇರೇ. ನಮ್ಮ್ ಚೌಡಂಗೂ ಮುಂಗೋಪ. ಒಂದ್ ಸರಿ ಅಂತೂ ಅವ್ನ್ ಜೊತೆ ಹುಡುಗ್ರನೆಲ್ಲಾ ಕಟ್ಟ್ಕೊಂಡ್ ಪಕ್ಕಣ್ಣನ್ ಮೇಲೆ ಯುದ್ಧಕ್ಕೆ ಹೊರಟ್ಬಿಟ್ಟಿದ್ದ. 

ಚೌಡಯ್ಯ: ಆವತ್ತ್  ನಾನೇನ್ ಮಾಡ್ದೆ ಅಂತ ನೀನೇ ನೋಡಿದ್ದ್ಯಲ್ಲಾ ಅವ್ವಯ್ಯಾ. ಸರಿಯಾಗ್ ಹೇಳ್ಕೊಡು ಅಂತ ತಾನೇ ನಾನ್ ಕೇಳಿದ್ದು. ಅಷ್ಟಕ್ಕೇ ಅವ್ನ್ ನಂಗೆ ಕಾಮನಲ್ಲೇ ಹೊಡ್ದುಬಿಡೋದೇ? 

ಸುಂದರಮ್ಮ: (ವ್ಯಂಗ್ಯವಾಗಿ) ಸರಿ ಚೌಡ, ಸರಿ. ನೀನೇನ್ ತಪ್ಪೇ ಮಾಡೋನೇ ಅಲ್ಲ. ನೀ ಮಾಡೋದೆಲ್ಲ ಸರೀನೇ. 

(ಆಚಾರ್ಯರ ಕಡೆ ತಿರುಗಿ....) ಇವರಿಬ್ಬರ ಜಗಳ ನೋಡಿ ನೋಡಿ ಬೇಸತ್ತೇ, ಒಂದು ದಿನ ಪಕ್ಕಣ್ಣಂಗೆ ನೀನ್ ಹೇಳ್ಕೊಟ್ಟಿದ್ ಸಾಕು ಅಂತ ಹೇಳಿ ಬಿಡ್ಸ್ದೆ. 

ವಿದ್ಯಾಕಾಂತಾಚಾರ್ಯ: ಅಮ್ಮಾ...... ನೀವ್ ಆ ಪಕ್ಕಣ್ಣನ ಬಿಡ್ಸಿದ್ದು ಒಳ್ಳೇದೇ  ಆಯ್ತು. ಪಿಟೀಲ್ ಕಲಿಯುವಾಗ ಕಮಾನ್ ಹಿಡಿಯೋದ್ರಲ್ಲಿ, ನುಡಿಸೋ ಬೆರಳುಗಳಲ್ಲಿ ತಪ್ಪು ಕೂತ್ಬಿಟ್ಟರೆ ಅದನ್ನ ಜನ್ಮೇಪಿ ಸರಿಮಾಡ್ಕೊಳ್ಳೋಕ್ಕಾಗೋಲ್ಲ. 

ಅಗಸ್ತೇ ಗೌಡ: ಆಚಾರ್ರೆ..... ನೀವೇ ಯಾರಾದ್ರೂ ಒಳ್ಳೆ ಮೇಷ್ಟ್ರು  ಗೊತ್ತಿದ್ರೆ ಹೇಳಿ. ಮೈಸೂರತಂಕನಾದ್ರು ಪರವಾಗಿಲ್ಲ, ಕಳ್ಸೋಣ. 

ಚೌಡಯ್ಯ: (ಬಾಲಕ ಚೌಡಯ್ಯನ ತಲೆ ಸವರುತ್ತಾ.....) ಬಾವಾ, ನನ್ ಸೋದರಳ್ಯಾ ಚೌಡಯ್ಯ ಸಾಮಾನ್ಯದೊನೇನಲ್ಲ ನೋಡ್ತಾಯಿರಿ. ಒಳ್ಳೆ ಒಬ್ಬ್ ಸಂಗೀತ್  ಮೇಷ್ಟ್ರು  ಸಿಕ್ಕ್ಲಿ. ಮುಂದಕ್ ಎಷ್ಟ್ರಮಟ್ಟಿಗ್ ಆಗ್ತಾನೆ ನೋಡ್ತಾಯಿರಿ. 

ಅಂದ್ಹಾಗೆ ಮೈಸೂರ್ರಲ್ಲಿ ಬಿಡಾರಂ ಕೃಷ್ಣಪ್ಪನೋರು ಅಂತ ಒಬ್ಬ್ರು         ಸಂಗೀತದ ಗುರುಗಳಿದ್ದಾರೆ.  ನಾಲ್ವಡಿ ಕೃಷ್ಣರಾಜ್ ಒಡೆಯರ್ ಆಸ್ಥಾನದ ವಿದ್ವಾಂಸ್ರು ಕೂಡ. ಅವರ ಪರಿಚಯ ನಂಗಿದೆ. (ಗೌಡ್ರ ಕಡೆ ನೋಡ್ತಾ....) ನೀವ್ ಹೂ ಅಂದ್ರೆ ನಾಳೇನೇ ನಾನಿವ್ನ ಅವರ ಹತ್ತ್ರ ಕರ್ಕೊಂಡ್ ಹೋಗ್ತೀನಿ. 

ವಿದ್ಯಾಕಾಂತಾಚಾರ್ಯ: ಗೌಡ್ರೆ, ಬಿಡಾರಂ ಕೃಷ್ಣಪ್ಪನೋರ್ ಹೆಸರು ನಾನೂ  ಕೇಳಿದೀನಿ. ದೊಡ್ಡ ಸಂಗೀತ ವಿದ್ವಾಂಸರು. ಮೈಸೂರಿನಲ್ಲೇ ಯಾಕೆ? ಮದ್ರಾಸ್-ಬೊಂಬಾಯಿವರ್ಗು ಅವ್ರು ಹೆಸರುವಾಸಿ. 

ಬಿಡಾರಂ ಕೃಷ್ಣಪ್ಪನೋರ್ ತಂದೆ ವಿಶ್ವನಾಥಯ್ಯನೋರು ಉಡುಪಿ ಕಡೆಯೋರು. ಅವರು  ದೊಡ್ಡ ಯಕ್ಷಗಾನದ ಪಟುವಾಗಿದ್ದವರು. ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಆಹ್ವಾನದ ಮೇರೆಗೆ ಅವರು ಮೈಸೂರಿಗೆ ಬಂದು ಬಿಡಾರ ಹೂಡಿದ್ದರು. ಆದುದರಿಂದಲೇ  ಅವರ ಕುಟುಂಬಕ್ಕೆ ಬಿಡಾರಂ ಅನ್ನೋ ಪ್ರವರ ಸೇರಿಕೊಂಡಿದ್ದು. 

ಚೌಡಯ್ಯ (ಮಾವ): ಬಾಲ್ಯದಲ್ಲೇ ತಂದೆ ಕಳ್ಕೊಂಡ್ ಬಿಡಾರಂ ಕೃಷ್ಣಪ್ಪನೋರ್, ಅವರ ತಾಯಿ ಪಟ್ಟ ಕಷ್ಟ ಅಷ್ಟಿಷ್ಟಲ್ಲಾ. ಕರೂರು ರಾಮಸ್ವಾಮಿ ಅಂಥೋರಂಥ ಗುರುಗಳ್ ಹತ್ತ್ರ ಸಂಗೀತ ಕಾಲ್ತೋರ್  ಅವ್ರು. ಚಾಮರಾಜ್ ಒಡೆಯರ್ ಕಾಲದಲ್ಲೇ ಆಸ್ಥಾನ ವಿದ್ವಾಂಸರಾದ್ರು.  ಹಾಡುಗಾರಿಕೆ, ಪಿಟೀಲು, ಕೊಳಲು ಎಲ್ಲಾದ್ರೋಳ್ಳು ಅವ್ರು ಎತ್ತಿದ ಕೈ. 

(ಮಾವನ ಮಾತುಗಳನ್ನು ಕೇಳಿ ಬಾಲಕ ಚೌಡಯ್ಯನ ಮುಖ ಅರಳುತ್ತದೆ). 

ಅಗಸ್ತೇ ಗೌಡ: ಬಿಡಾರಂ ಕೃಷ್ಣಪ್ಪನೋರು  ಅಷ್ಟು ದೊಡ್ಡ್ ವಿದ್ವಾಂಸ್ರು ಅಂತೀರಾ. ಅವ್ರು ದಿಟವಾಗಲೂ ನಮ್ಮ್ ಹುಡ್ಗನ್ಗೆ ಸಂಗೀತ್ ಪಾಠ ಹೇಳ್ಕೊಡೋಕೆ ಒಪ್ಪತ್ತಾರ? ಹೇಳೀ ಕೇಳೀ ನಾವು ಒಕ್ಕಲಿಗ್ರು, ರೈತ ಮನೆತನದೋರು. 

ಸುಂದರಮ್ಮ: ಹಾಗಂತ ನಾವ್ ನಾವೇ ಏನೇನೋ ಅಂದ್ಕೊಂಡ್ ಸುಮ್ಮ್ನೆಯಾಕ್ ಕೂತ್ಕೋಬೇಕು? ಹೋಗ್ ಕೇಳೋದ್ರಲ್ಲಿ ತಪ್ಪೇನಿದೆ? ಆ ಚೌಡೇಶ್ವರಿ ದಯನ್ನೋದ್ ಇದ್ರೆ, ಆ ಮೈಸೂರ್ ಮೇಷ್ಟ್ರು  ಒಪ್ಪ್ ಕೊಂಡ್ರು ಒಪ್ಪ್ಕೋಬಹುದು.  

ವಿದ್ಯಾಕಾಂತಾಚಾರ್ಯ: ನಿಮ್ಮ್ ಆತಂಕ ನಂಗ್ ಅರ್ಥ್ವಾಗುತ್ತೆ ಗೌಡ್ರೆ.  ಕೃಷ್ಣಪ್ಪನೋರು ತುಂಬಿದ್ ಕೊಡ. ಘನವಾದ್ ಸಂಗೀತಗಾರ್ರು.  ಆ ಜಾತಿ ಈ ಜಾತಿ ಅಂತ ಭೇದ ಮಾಡೋರಲ್ಲ ಅಂತ ಕೇಳೀದೀನಿ.  ಮುಖ್ಯವಾಗ್ ಅವ್ರ್ಗೆ ಶಿಷ್ಯ ದೃಢವಾದೋನು, ಕಲಿಯೋಕೆ ಆಸೆ ಇರೋನು  ಅಂತ ಖಾತ್ರಿಯಾಗ್ಬೇಕಷ್ಟೇ. 

ಚೌಡಯ್ಯ: ಬಾವಯ್ಯ...... ಹೋಗ್ ಕೇಳೋದ್ರಲ್ಲಿ ತಪ್ಪೇನಿದೆ? ಸುಮ್ನೆ ನಾಳೇನೇ ಹುಡ್ಗನ್ನ ನಂಜೊತೆ ಮೈಸೂರಿಗ್ ಕಳ್ಸಿ. 

ಅಗಸ್ತೇ ಗೌಡ: ನೀವೆಲ್ಲಾ ತಿಳ್ದೋರು. ನಮ್ ಹುಡ್ಗನ್ಗೆ ಒಳ್ಳೇದಾಗ್ಲಿ ಅಂತ ಬಯಸೋರು. ನೀವ್ಗಳ್ ಹೇಳ್ದಾಗೆ ಆಗ್ಲಿ. (ಬಾಮೈದನ ಕಡೆ ತಿರುಗಿ......) ಚೌಡ..... ನಾಳೇನೇ ನಮ್ ಚೌಡಯ್ಯನ್ನ ಮೈಸೂರ್ಗೆ ಕರ್ಕೊಂಡ್ ಹೋಗು. ಆ ಮೇಷ್ಟ್ರು  ಪಾದದ್ ಕೆಳಗೆ ಇವ್ನ ಕೆಡವು.

-೦-೦-೦-

ದೃಶ್ಯ - ೭

(ಮೈಸೂರಿನ ಬಿಡಾರಂ ಕೃಷ್ಣಪ್ಪನವರ ಮನೆಯನ್ನು  ಬಾಲಕ ಚೌಡಯ್ಯನೊಂದಿಗೆ ಅವನ ಸೋದರಮಾವ ಚೌಡಯ್ಯನವರು ಪ್ರವೇಶಿಸುತ್ತಾರೆ.  ಇಬ್ಬರೂ ಕೃಷ್ಣಪ್ಪನವರಿಗೆ ದೀರ್ಘದಂಡ ನಮಸ್ಕಾರ ಮಾಡುತ್ತಾರೆ). 

ಕೃಷ್ಣಪ್ಪ: ಶ್ರೀ ಕೃಷ್ಣಾಶೀರ್ವಾದ ಪ್ರಾಪ್ತಿರಸ್ತು. (ಎಂದು ಆಶೀರ್ವಾದ ಮಾಡುತ್ತಾರೆ. ಇಬ್ಬರಿಗೂ ಕುಳಿತುಕೊಳ್ಳುವಂತೆ ಸನ್ನೆ ಮಾಡುತ್ತಾರೆ. ಬಾಲಕ ಚೌಡಯ್ಯ ಮಾತ್ರ ಗುರುಗಳಿಗೆ ಕೈಮುಗಿದುಕೊಂಡು ನಿಂತೇ ಇರುತ್ತಾನೆ. ಮಾವ ಚೌಡಯ್ಯನವರು ತಾವು ಚೀಲದಲ್ಲಿ ತಂದಿದ್ದ ಹಣ್ಣು ಹೂವು, ರೇಷ್ಮೆ ಶಲ್ಯಗಳನ್ನು ಒಂದು ತಟ್ಟೆಯ ಮೇಲಿಟ್ಟು ಬಾಲಕ ಚೌಡಯ್ಯನ ಕೈಗೆ ಕೊಡುತ್ತಾರೆ. ಬಾಲಕ ಚೌಡಯ್ಯ ತಟ್ಟೆಯನ್ನು ಗುರುಗಳಿಗರ್ಪಿಸಿ ಮತ್ತೊಮ್ಮೆ ದೀರ್ಘದಂಡ ನಮಸ್ಕಾರ ಮಾಡುತ್ತಾನೆ).  

ಚೌಡಯ್ಯ (ಮಾವ): ನಾವು ತಿರುಮಕೂಡ್ಲು ಊರಿನವರು. ನನ್ನ ಹೆಸ್ರು ಚೌಡಯ್ಯ ಅಂತ. ಈ ಹುಡ್ಗ ನನ್ನ ಸೋದರಳಿಯ. ಇವ್ನ್ ಹೆಸರೂ ಚೌಡಯ್ಯ ಅಂತಲೇ. ಈಗಾಗ್ಲೇ ಇವಂಗೆ ಸಾಕಷ್ಟ್ ಸಂಗೀತ್ ಪಾಠ ಆಗಿದೆ. ಸ್ವಲ್ಪ ಸ್ವಲ್ಪ ಪಿಟೀಲ್ ಪಾಠಾನೂ ಆಗಿದೆ. ಮುಂದಿನ ಪಾಠಕ್ಕೆ ನಿಮ್ಮ್ ಹತ್ರ ಸೇರಿಸ್ಬೇಕು ಅಂತ ಇವ್ನ ಇಲ್ಲಿಗೆ ಕರ್ಕೊಂಡ್ ಬಂದಿದೀನಿ. ತಾವು ದೊಡ್ಡಮನಸ್ಸು ಮಾಡ್ಬೇಕು. (ಎಂದು ಹೇಳಿ ಕೈಮುಗಿಯುತ್ತಾರೆ). 

ಕೃಷ್ಣಪ್ಪ: (ಬಾಲಕ ಚೌಡಯ್ಯನನ್ನು ಮೇಲಿಂದ ತಳಗಿನವರೆಗೆ ನೋಡುತ್ತಾರೆ). ಹುಡ್ಗ ಏನೋ ಕಳೆಯಾಗೆ ಇದ್ದಾನೆ. ವಿಧೇಯನ ಥರಾನೂ ಕಾಣಿಸ್ತಾನೆ.  ಆದ್ರೆ ಆ ತಾಯಿ ಶಾರದೆ ಎಲ್ರಿಗೂ ಒಲಿಬೇಕಲ್ಲಾ......... 

ನಿನ್ನ ಹೆಸರು ಚೌಡಯ್ಯ ಅಂತಲೋ...... ಅಂದ್ಹಾಗೆ ನಿಂಗೆ ಎಲ್ಲಿ ತನಕ ಪಾಠ ಆಗಿದೆ. 

ಚೌಡಯ್ಯ: (ಮುಗಿದ ಕೈಯನ್ನು ಕೆಳಗಿಳಿಸದೆ.....) ನಮ್ಮೂರ್  ವಿದ್ಯಾಕಾಂತಾಚಾರ್ರೇ  ನನ್ನ ಸಂಗೀತದ್ ಮೊದಲ  ಗುರುಗಳು. ಹಾಡುಗಾರಿಕೆ ಹೇಳ್ಕೊಡ್ತಾರೆ. ಒಂದ್ ನಲವತ್ತು ಕೀರ್ತನೆ ಆಗಿದೆ. ರಾಗ, ಸ್ವರ, ಮನೋಧರ್ಮ ಇವ್ಗಳಲ್ಲಿ ನೀನ್ ಕಲಿಯೋದ್ ಇನ್ನೂ ತುಂಬಾ ಇದೆ ಅಂತ ನಮ್ ಗುರುಗಳು ಹೇಳ್ತಿರ್ತಾರೆ. ಬೇರೋಬ್ಬ    ಗುರುಗಳಿಂದ ಸ್ವಲ್ಪ ಪಿಟೀಲು ಪಾಠಾನೂ ಆಗಿದೆ. 

ಕೃಷ್ಣಪ್ಪ: ವಿದ್ಯಾಕಾಂತಾಚಾರ್ಯರ ಹೆಸರು ಕೇಳಿದೀನಿ. ಭಾರೀ ಉದ್ದನೇ ಆಳ್ ಅಲ್ವೇ!

........  ಎಲ್ಲಿ, ಇಲ್ ಬಾ, ಕೂತ್ಕೋ..... ನಿಂಗ್ ಇಷ್ಟಾವಾದ್ ಒಂದ್ ವರ್ಣ ಹಾಡು........  ನೋಡೋಣ. 

ಚೌಡಯ್ಯ: (ಗುರುಗಳ ಹತ್ತಿರ ವಿನಮ್ರನಾಗಿ ಕುಳಿತುಕೊಳ್ಳುತ್ತಾನೆ. ಯಾವ ರಾಗದ ವರ್ಣ ಹಾಡಬೇಕೆಂದು ಮನಸಲ್ಲೇ ಅಳೆದು ತೂಗುತ್ತಾನೆ. ಕಡೆಗೂ ಪಟ್ನಮ್ ಸುಬ್ರಮಣ್ಯ ಅಯ್ಯರ್ರವರ ನವ ರಾಗಮಾಲೀಕ ವರ್ಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ). 

ವ....ಲ.....ಚಿ........ವ.........ಚ್ಚಿ......... 

(ಗುರುಗಳು ಚೌಡಯ್ಯನ ಗಾಯನವನ್ನು ಗಂಭೀರವಾಗಿ ಆಲಿಸುತ್ತಾರೆ). 

ಕೃಷ್ಣಪ್ಪ: ಮಗೂ...... ಚೌಡಯ್ಯ...... ನಿನ್ನ ಗಾಯನದಲ್ಲಿ ಮಾಧುರ್ಯ ಸಾಲದಿರಬಹುದು, ಪ್ರಾಮಾಣಿಕತೆ ನಿಚ್ಚಳವಾಗ್ ಕಾಣ್ಸುತ್ತೆ. ಶ್ರುತಿ ತಾಳನು ಪರವಾಗಿಲ್ಲ. ಹಾಗಂತ ನೀನ್ ಹಾಡಿದ್ದೆಲ್ಲಾ ಸರಿ ಅಂತ ಅನ್ಕೋಬೇಡ. ಸುಧಾರಿಸ್ಕೊಬೇಕಾದ್ದು ಬೇಕಾದಷ್ಟಿದೆ. 

ಚೌಡಯ್ಯ (ಮಾವ): ಹಾಗಾದ್ರೆ ನಮ್ ಹುಡ್ಗ ನಿಮ್ಗ್ ಒಪ್ಪಿಗೆನಾ ಗುರುಗಳೇ...... 

ಕೃಷ್ಣಪ್ಪ: ತಾಯಿ ಸರಸ್ವತೀನ ಹುಡ್ಕೊಂಡ್ ಬಂದಿರೋ ಶಿಷ್ಯಂಗೆ ಇಲ್ಲನ್ನೋಕ್ಕೆ ನಾನ್ಯಾರು? ನಾನೊಬ್ಬ ನಿಮಿತ್ತ ಮಾತ್ರ. ಏನ್ ಮಾಡ್ಬೇಕು ಅಂತ ಪ್ರೇರಣೆ ಕೊಡೋಳು ಅವ್ಳೆ! ಗುರು ಶಿಷ್ಯನ್ನ ಒಪ್ಪಕೊಳ್ಳೋದ್ ಎಷ್ಟ್  ಮುಖ್ಯನೋ, ಶಿಷ್ಯನು ಗುರುಗಳ್ನ ಒಪ್ಪೋದ್ ಅಷ್ಟೇ ಮುಖ್ಯ. 

(ಬಾಲಕ ಚೌಡಯ್ಯನ ಕಡೆ ನೋಡುತ್ತಾ....) ವಿದ್ಯೆ ಸುಲಭವಾಗಿ ದಕ್ಕೋ ವಸ್ತುವಲ್ಲ. ತಪಸ್ಸಿನಿಂದ ಮಾತ್ರ ಶಾರದೆಯನ್ನ ಒಲಿಸಿಕೊಳ್ಳಬೇಕು, ಗೊತ್ತೋ..... 

ಚೌಡಯ್ಯ: (ಗೊತ್ತಾಯ್ತೆಂಬಂತೆ ತಲೆಯಾಡಿಸುತ್ತಾನೆ). 

ಚೌಡಯ್ಯ (ಮಾವ): ಹಾಗಾದ್ರೆ ಗುರುಗಳೇ, ಪಾಠ ಯಾವತ್ತಿಂದ ಶುರು ಮಾಡ್ತೀರಾ?

ಕೃಷ್ಣಪ್ಪ: ಇವತ್ತಿನಿಂದ್ಲೇ ಯಾಕಾಗಬಾರ್ದು?

ಚೌಡಯ್ಯ  (ಮಾವ): ಗುರುಗಳೇ...... ಈಗ ಆಷಾಡ ಮಾಸ ಆಲ್ವಾ. ಇವತ್ತ್ ಅಮಾವಾಸ್ಯೆ ಕೂಡಾ. ನಾಳೆಯಿಂದ ಮಾಡಬೋದ್ ಆಲ್ವಾ... 

ಕೃಷ್ಣಪ್ಪ: ಇವತ್ತಿನಿಂದ್ಲೇ  ಪಾಠ ಅಂತ ಆ ಶಾರದೆ ನನ್ ಮನಸಲ್ಲಿ ಪ್ರೇರಣೆ ನೀಡಾಗಿದೆ. ತಡ ಯಾಕೆ? 'ಇಂದಿನ ದಿನವೇ ಶುಭದಿನವು...... ' ಅಂತ ಸಾಕ್ಷಾತ್ ಪುರಂದರ ದಾಸರೇ ಅಪ್ಪಣೆ ಕೊಡ್ಸಿದ್ದಾರಲ್ಲ...

(ಗುರುಗಳು ಸಂಗೀತ್ ಪಾಠವನ್ನು ಆರಂಭ ಮಾಡೇಬಿಡುತ್ತಾರೆ). 

ಹೇಗಿದ್ದರೂ ಪಿಟೀಲು ತಂದಿದೀಯಲ್ಲಾ, ಅದೇ  ವರ್ಣನಾ ಪಿಟೀಲಲ್ ನುಡಿಸು ನೋಡೋಣ..... 

ಚೌಡಯ್ಯ: ಪಿಟೀಲಲ್ಲಿ ನವ ರಾಗಮಾಲಿಕ ವರ್ಣವನ್ನ ನುಡಿಸುತ್ತಾನೆ.

ಕೃಷ್ಣಪ್ಪ: (ಬಾಲಕ ಚೌಡಯ್ಯನನ್ನು ನೋಡುತ್ತಾ....) ಹಾಡುಗಾರಿಕೆಗಿಂತ ನೀನು ಪಿಟೀಲ್ಗೆ ಸರಿ. ಒಳ್ಳೆ ಕೈ ನಿಂದು. 

ಜೊತೆ ಜೊತೆಗೆ ಹಿನ್ನಲೆಯಲ್ಲಿ ಹಾಡು ಆರಂಭವಾಗುತ್ತದೆ. 

ಗುರುವಿನ ಗುಲಾಮನಾಗುವ ತನಕ 

ದೊರೆಯದಣ್ಣ ಮುಕುತಿ.....

(ಬಾಲಕ ಚೌಡಯ್ಯ ಬೆಳಗಾಗ ಎದ್ದು ಮಲಗಿರುವ ಗುರುಗಳಿಗೆ ನಮಸ್ಕಾರ ಮಾಡೋದು, ಬೆಳಗಿನ ವ್ಯಾಯಾಮ, ಅಭ್ಯಾಸ, ಪಠಾನ್ತರ, ಗುರುಗಳ ಮನೆ ಕಸ ಗುಡಿಸುವುದು,  ಪಾತ್ರೆ ತೊಳೆಯುವುದು, ಜಮಖಾನ ಹಾಸುವುದು, ತಂಬೂರಿ ಶ್ರುತಿ ಮಾಡಿಡುವುದು,  ಗುರುಗಳ ಬಟ್ಟೆ ಮಡಿಸಿ ಪೆಟ್ಟಿಗೆಯೊಳಗಿಡುವುದು, ಗುರುಗಳು ಊರಿಗೆ ಹೋಗುವಾಗ ಪೆಟ್ಟಿಗೆ ಹೊರುವುದು ಮುಂತಾದ ಕೆಲಸಗಳನ್ನು ಮಾಡುತ್ತಾನೆ).

 -೦-೦-೦-

ದೃಶ್ಯ - ೮ 

(ಕೃಷ್ಣಪ್ಪನವರ ಮನೆಯಲ್ಲಿ ಚೌಡಯ್ಯನ ಶಿಷ್ಯವೃತ್ತಿ ಮುಂದುವರೆದಿರಿರುತ್ತದೆ. ಚೌಡಯ್ಯ ಖರಹರಪ್ರಿಯ ರಾಗದ ಸರಳೆ, ಜಂಟಿ ವರಸೆಗಳನ್ನು ನುಡಿಸುತ್ತಿರುತ್ತಾನೆ. ಗುರುಗಳು ಆಲಿಸುತ್ತಾ, ತಪ್ಪುಗಳನ್ನು ಸರಿಮಾಡಿಕೊಡುತ್ತಾ ಕುಳಿತಿರುತ್ತಾರೆ). 

ಕೃಷ್ಣಪ್ಪ: ಮಗೂ ಚೌಡಯ್ಯ...... ಒಂದ್ ಮಾತ್ ಹೇಳ್ತೀನಿ, ಸರಿಯಾಗಿ ತಿಳ್ಕೊ....... ಒಂದು ರಾಗದಲ್ಲಿ ನಾವ್ ಸಾಧನೆ ಮಾಡ್ಬೇಕಾದ್ದ್ ಏನಾದ್ರು ಇದ್ರೆ, ಅದು ಸರಳೆ, ಜಂಟಿವರಸೆ, ದಾಟುವರಸೆ, ಅಲಂಕಾರ....... ಇಷ್ಟರೊಳ್ಗೆನೇ. ಇವಿಷ್ಟನ್ನ ಕರಗತ ಮಾಡ್ಕೊಂಡ್ಬಿಟ್ಟರೆ ಮುಂದಕ್ಕೆಲ್ಲಾ ಸಲೀಸು. 

ಖರಹರಪ್ರಿಯ ಸರಳೆ, ಜಂಟಿ ವರಸೆ, ದಾಟು ವರಸೆಗಳ ಮೇಲೆ ನಿನ್ನ ನಿಯಂತ್ರಣ ಪರವಾಗಿಲ್ಲ. ಈಗ ರಾಗ ನುಡಿಸೋಕೆ ಶುರು ಮಾಡು, ನೋಡೋಣ. 

ಚೌಡಯ್ಯ: (ಖರಹರಪ್ರಿಯ ರಾಗ ನುಡಿಸೋಕ್ಕೆ ಆರಂಭಿಸುತ್ತಾನೆ. ಗುರುಗಳು ಕಣ್ಣು ಮುಚ್ಚಿ ತದೇಕ ಚಿತ್ತದಿಂದ ಕೇಳುತ್ತಿರುತ್ತಾರೆ. ಅಷ್ಟರಲ್ಲಿ ಕೃಷ್ಣಪ್ಪನವರ ಆಪ್ತ ಸ್ನೇಹಿತರೊಬ್ಬರ ಆಗಮನವಾಗುತ್ತದೆ). 

ಕೃಷ್ಣಪ್ಪ: ಬನ್ನಿ ಶಾಮಣ್ಣೊರೆ ಬನ್ನಿ. ಕುಳಿತುಕೊಳ್ಳಿ. 

(ಚೌಡಯ್ಯನ ಕಡೆ ತಿರುಗಿ...) ಚೌಡ....ನಾನ್ ಶಾಮಣ್ಣನೊರ್  ಹತ್ತ್ರ ಮುಖ್ಯವಾಗ್ ಸ್ವಲ್ಪ ಮಾತಾಡೋದಿದೆ. ನೀನ್ ಖರಹರಪ್ರಿಯನೇ ನುಡಿಸ್ತಾ ಇರು. 

(ಗುರುಗಳು ಸ್ನೇಹಿತರ ಹತ್ತಿರ ಮಾತನಾಡುತ್ತಿದ್ದರೂ, ಅವರ ಕಿವಿಯೆಲ್ಲ ಶಿಷ್ಯನ ನುಡಿಸಾಣಿಕೆಯ ಮೇಲೆ ಇರುತ್ತದೆ. ಬಹಳ ಹೊತ್ತು ರಾಗವನ್ನು ನುಡಿಸಿದ ಚೌಡಯ್ಯ, ಗುರುಗಳ ಗಮನ ಬೇರೇ ಇದೆಯೆಂದು ಭಾವಿಸಿ ಕಲ್ಯಾಣಿ ರಾಗವನ್ನೆತ್ತಿಕೊಳ್ಳುತ್ತಾನೆ. ಸೂಕ್ಷ್ಮಗ್ರಾಹಿ ಗುರುಗಳು ಕುಪಿತರಾಗುತ್ತಾರೆ). 

ಕೃಷ್ಣಪ್ಪ: ಚೌಡಯ್ಯ! (ಗುರುಗಳು ಘರ್ಜಿಸುತ್ತಾ ಚೌಡಯ್ಯನ ಕೆನ್ನೆಗೊಂದು ಪಟೀರನೆ ಬಾರಿಸುತ್ತಾರೆ. ಹೊಡೆತದ ರಭಸಕ್ಕೆ ಚೌಡಯ್ಯ  ಥರ ಥರನೇ ನಡುಗುತ್ತಾ ತಲೆತಗ್ಗಿಸಿ  ನಿಲ್ಲುತ್ತಾನೆ.  ಗುರುಗಳೀಗ ಶಾಮಣ್ಣನವರ ಕಡೆ ತಿರುಗಿ......)

ನೋಡಿ ಶಾಮಣ್ಣನೊರೆ, ಈ ನನ್ ಶಿಷ್ಯಂಗೆ ಖರಹರಪ್ರಿಯ ರಾಗ ಅಭ್ಯಾಸ ಮಾಡು ಅಂತ ಹೇಳಿ ಕೂರಿಸಿದ್ದೇನೆ. ಇವಂಗಾಗ್ಲೇ ತಲೆ ತಿರುಗಿ ಹೋಗಿದೆ ನೋಡಿ. ಆ ರಾಗ ಬಿಟ್ಟು ಕಲ್ಯಾಣಿ ಎತ್ತ್ಕೊಂಡಿದಾನೆ ನೋಡಿ ಈ ಶಿಖಾಮಣಿ! ಹಾಗಾದ್ರೆನಿವ ಖರಹರಪ್ರಿಯ ರಾಗದಲ್ಲಿ ಪಂಡಿತನಾಗ್ಬಿಟ್ಟನೆ? ಆ ರಾಗದಲ್ ಇವ್ನ್ ಸಾಧ್ಸೋದ್ ಇನ್ನೇನು ಉಳಿದಿಲ್ವೇ? ಇಷ್ಟೇನೆ ಇವ್ನ್ ಗುರುಗಳ್ಗೆ ಕೊಡೊ ಮರ್ಯಾದೆ? ದುರಹಂಕಾರಿ! ದುರಹಂಕಾರಿ! ಇಂತೊನ್ ಮುಂದಕ್ಕೆ ಬರ್ತಾನೆಯೇ? 

(ಗುರುಗಳ ಶಿಕ್ಷೆ ನೋಡಿ ಶಾಮಣ್ಣನೋರೂ ದಂಗಾಗ್ ಹೋಗ್ತಾರೆ. ಚೌಡಯ್ಯ ಅಂತೂ ಕಣ್ಣೀರ್ ಹಾಕುತ್ತಾ ಮತ್ತೆ ಕೂತು ಕಣ್ಮುಚ್ಚಿ ಖರಹರಪ್ರಿಯ ರಾಗವನ್ನು ನುಡಿಸತೊಡಗುತ್ತಾನೆ. ಎಷ್ಟೋ ಗಂಟೆಗಳನಂತರವೂ ಚೌಡಯ್ಯ ಖರಹರಪ್ರಿಯ ರಾಗದಲ್ಲೇ ಮುಳುಗಿ ಹೋಗಿರುತ್ತಾನೆ. ಮನಸ್ಸು ಕರಗಿದ ಗುರುಗಳು ಶಿಷ್ಯನ ಹತ್ತಿರ ಬಂದು ನಿಲ್ಲುತ್ತಾರೆ. ಚೌಡಯ್ಯ ಕತ್ತೆತ್ತಿ ನೋಡಿ ಗುರುಗಳನ್ನು ಕಂಡು ಅಳತೊಡಗುತ್ತಾನೆ. ಶಿಷ್ಯನ ಬೆನ್ನು ಸವರಿ, ಸಂತೈಸೆ ಅವನನ್ನು ಊಟಕ್ಕೆ ಕೊಂಡೊಯ್ಯುತ್ತಾರೆ). 

-೦-೦-೦-

ದೃಶ್ಯ - ೯

(ಬಿಡಾರಂ ಕೃಷ್ಣಪ್ಪನವರ ಮನೆಯ ಪಡಸಾಲೆ. ಬಾಲಕ ಚೌಡಯ್ಯನ ಪಿಟೀಲು ಅಭ್ಯಾಸ ನಡೆಯುತ್ತಿರುತ್ತದೆ. ಗುರುಗಳಾದ ಕೃಷ್ಣಪ್ಪನವರು ಗಂಭೀರವಾಗಿ ಆಲಿಸುತ್ತಿರುತ್ತಾರೆ. ಅಷ್ಟರಲ್ಲಿ ಪಡಸಾಲೆಗೆ ಮೈಸೂರಿನ ವಿದ್ವಾಂಸರುಗಳಾದ ಮೈಸೂರು ವಾಸುದೇವಾಚಾರ್ಯರು ಹಾಗೂ ವೀಣೆ ಶೇಷಣ್ಣನವರು ಬರುತ್ತಾರೆ. ಅವರ ಹಿಂದೆಯೇ ಪಿಟೀಲ ಪೆಟ್ಟಿಗೆ ಮತ್ತು ಚೀಲ ಹಿಡಿದ ತಿರುಕ್ಕೋಡಿಕಾವಲ್ ಕೃಷ್ಣ ಅಯ್ಯರ್ರವರೂ ಬರುತ್ತಾರೆ. ಗುರುಗಳ ಸನ್ನೆಯ ಮೇರೆಗೆ ಬಾಲಕ ಚೌಡಯ್ಯ ಅಭ್ಯಾಸವನ್ನು ನಿಲ್ಲಿಸಿ, ಬಾಗೀಲ ಹಿಂದೆ ಸರಿದು ನಿಲ್ಲುತ್ತಾನೆ).  

ಕೃಷ್ಣಪ್ಪ: (ಬಂದ ಅತಿಥಿಗಳನೆಲ್ಲಾ ಎದ್ದು ನಿಂತು ಬರಮಾಡಿಕೊಳ್ಳುತ್ತಾ.....) ಶೇಷಣ್ಣನವರು, ವಾಸುದೇವಾಚಾರ್ಯರು ಬರಬೇಕು, ಬರಬೇಕು. (ಕೃಷ್ಣ ಅಯ್ಯರ್ ರವರನ್ನು ನೋಡಿ ಚಕಿತರಾಗಿ........ ) ಒಹೋ..... ತಿರುಕ್ಕೋಡಿಕಾವಲ್ ಕೃಷ್ಣ ಅಯ್ಯರ್ ರವರು, ಯಾವಾಗ್ ಬಂದಿರಿ? 

ಕೃಷ್ಣ ಅಯ್ಯರ್: ಸಂಗೀತಗಾರರು ಅಂದ್ರೆ ಮೈಸೂರಿಗೆ ಬರ್ತಾನೇ ಇರ್ಬೇಕಲ್ಲಾ. ಹೊಟ್ಟೆಪಾಡ್ ನಡೀಬೇಕಲ್ಲಾ.

ಮೈಸೂರಿಗ್ ಬಂದ್ರೆ ನಮ್ಗೆಲ್ಲಾ ನಿಮ್ಮನೇನೇ ದಿಕ್ಕು ಅಲ್ವೇ ಕೃಷ್ಣಪ್ಪನೋರೇ? 

ಶೇಷಣ್ಣ: ಹೌದೌದು, ಕೃಷ್ಣಪ್ಪನೋರ್ ಮನೆ ಸೇರ್ಬಿಟ್ಟ್ರೆ ಸಲೀಸು. ಹೇಳಿ ಕೇಳಿ ಕೃಷ್ಣಪ್ಪನೋರು ಉಡುಪಿ ಬ್ರಾಹ್ಮಣರು. ಧಾರಾಳವಂತ್ರು. ರುಚಿ ರುಚಿಯಾದ್ ಅಡುಗೆ ಮಾಡಿ ಬಡಿಸೋದ್ರಲ್ಲಂತೂ ಕೃಷ್ಣಪ್ಪನೋರ್ ಮನೆಯಾಕೆ ತುಂಗಮ್ಮನೋರು ಸಾಕ್ಷಾತ್  ಅನ್ನಪೂರ್ಣೆನೇ. 

ಕೃಷ್ಣ ಅಯ್ಯರ್: ನಿಜ, ನಿಜ, (ಕೃಷ್ಣಪ್ಪನೋರ್ ಕಡೆ ಕೈ ತೋರಿಸುತ್ತಾ... ) ಗುರುಗಳ್ ಮನೆ ಊಟ ಮರೆಯೋಕ್ ಉಂಟೇ?

(ಹಿರಿಯರ ಮಾತುಗಳನ್ನು ಮರೆಯಲ್ಲೇ ನಿಂತ ಚೌಡಯ್ಯ ತದೇಕಚಿತ್ತನಾಗಿ ಕೇಳುತ್ತಿರುತ್ತಾನೆ). 

ಕೃಷ್ಣಪ್ಪ: (ವಾಸುದೇವಾಚಾರ್ ಮತ್ತು ಶೇಷಣ್ಣನವರ ಕಡೆ ನೋಡುತ್ತಾ....) ಏನು, ನಿಮ್ಮಿಬ್ಬರ ಸವಾರಿ ತಂಜಾವೂರಿಂದ ತಿರುವರೂರ್ ತನ್ಕ ಸಾಗಿತ್ತಂತ್ತಲ್ಲಾ....... 

ಶೇಷಣ್ಣ: ಹೌದು ಕೃಷ್ಣಪ್ಪನೋರೇ......... ನಾವೆಲ್ಲಾ ಸಂಗೀತದ ತ್ರಿಮೂರ್ತಿಗಳು ಅಂತ ಹೇಳ್ತೀವಲ್ಲಾ..... ತ್ಯಾಗರಾಜರು, ದೀಕ್ಷಿತರು, ಶಾಮ ಶಾಸ್ತ್ರಿಗಳು……ಆ ಮೂರೂ ಮಹಾನುಭಾವರೂ ಹುಟ್ಟಿದ್ ಊರು ಆ ತಿರುವರೂರೇ ಅಂತ ಕೇಳಿದ್ ಮೇಲೆ ನಮ್ ಕೈಲಿ  ತಡ್ಕೊಳೋಕ್ಕಾಗ್ಲಿಲ್ಲ. ಅಂಥ ಪುಣ್ಯಸ್ಥಳದ ಮಣ್ಣನ್ನ ಕಣ್ನಗೊತ್ತ್ಕೊಂಡೆ ಬರಲೇ ಬೇಕು ಅಂತ ಸಂಕಲ್ಪ ಮಾಡೇಬಿಟ್ಟವೀ. ತಂಜಾವೂರಿನಿಂದ ತುಂಬಾ ದೂರ ಏನಿಲ್ಲ. 

ವಾಸುದೇವಾಚಾರ್: ತಿರುವರೂರಲ್ಲಿ ಮೊದ್ಲು ನೋಡ್ಬೇಕಾದ್ದು ತ್ಯಾಗರಾಜರೇಶ್ವರ ದೇವಸ್ಥಾನ. ಚೋಳರ್ ಕಾಲದ್ ದೇವಸ್ಥಾನ, ೯ನೇ ಶತಮಾನದ್ದು. ನಮ್ಮ ವಾಗ್ಗೇಯಕಾರ, ಗುರು  ತ್ಯಾಗರಾಜರಿಗೆ ಅವರ ತಂದೆ ಆ ದೇವ್ರ್ ಹೆಸ್ರನ್ನೇ ಅಂತೇ ಇಟ್ಟಿರೋದು. 

ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ನಮ್ಮ ಶಾಮ ಶಾಸ್ತ್ರಿಗಳು ಹುಟ್ಟಿದ್ ಮನೆಗಳು ಹತ್ತತ್ರನೇ ಇವೆ. ಅಂಥ ಮಹಾನುಭಾವರುಗಳು ಹುಟ್ಟಿದ್ ಮನೆಗಳ್ ಇರೋ ಸ್ಥಿತಿ ನೋಡಿ ಕಣ್ಣೀರ್ ಬಂದ್ಬಿಡ್ತು. 

ಶೇಷಣ್ಣ: ಆ ಮೂರು ಮಹಾನುಭಾವರು ಒಂದೇ ಊರಲ್ಲಿ, ಒಂದೇ ಕಾಲ್ದಲ್ ಹುಟ್ಟಿದ್ದು ಈ ದೇಶದ್ ಪುಣ್ಯ ಅಂತಲೇ ಹೇಳ್ಬೇಕು. ತ್ಯಾಗರಾಜರ್ಗೋ ಸಂಗೀತನ್ನೋದೊಂದ್ ಭಕ್ತಿ ಸಾಧನ. 'ಸಂಗೀತ್ ಜ್ಞಾನಮು ಭಕ್ತಿವಿನಾ' ಅಂಥ ಅವರ್ ಕೀರ್ತನೆಲೇ  ಹಾಡಿದ್ದಾರಲ್ಲ. 

ಇನ್ ದೀಕ್ಷಿತರೋ, ದಕ್ಷಿಣಾದಿ, ಉತ್ತರಾದಿ ಎರಡೂ ಪದ್ಧತಿ ಸಂಗೀತ ಬಲ್ಲೋರ್ ಆಗಿದ್ರು. ಅವ್ರ್ಗೆ ಪಾಶ್ಚಾತ್ಯ ಸಂಗೀತನು ಗೊತ್ತಿತ್ತು. 

ನಮ್ ಶಾಮಾ ಶಾಸ್ತ್ರಿಗಳೋ ದೇವಿ ಭಕ್ತರು!

ಒಟ್ಟ್ನಲ್ಲಿ ಮೂರೂ ಮಹಾನುಭಾವರು ಒಂದ್ ಕಡೆ ಒಂದ್ ಕಾಲ್ದಲ್ಲಿ ಸೇರಿದ್ರಿಂದ ನಮ್ಮ ಕರ್ನಾಟಕ ಸಂಗೀತ್ ಸಮೃದ್ಧವಾಯ್ತು. ನಾವ್ಗಳೆಲ್ಲಾ ಧನ್ಯರಾದ್ವಿ. 

ವಾಸುದೇವಾಚಾರ್: (ಕೃಷ್ಣಪ್ಪನೋರ್ ಕಡೆ ನೋಡುತ್ತಾ.....) ಮೊನ್ನೆ ಹೋಗಿದ್ದಾಗ, ತಂಜಾವೂರಲ್ಲಿ ನಮ್ಮ್ ವೀಣೆ ಶೇಷಣ್ಣೋರದೊಂದು ಕಛೇರಿ ನಡೀತು. ಎಷ್ಟ್ರಮಟ್ಟಗಿತ್ತು ಅಂದ್ರೆ ಆ ಊರ್ ರಸಿಕ್ರೆಲ್ಲಾ ದಂಗ್ ಬಡ್ದ್ ಹೋದ್ರು ಅಂತೀನಿ. 

ಅಲ್ಲಾ......ಶೇಷಣ್ಣನೋರೆ…… ರಾಗ, ತಾನ, ಪಲ್ಲವಿಗೆ ರಾಗ ಆರ್ಸ್ಕೊಬೇಕಾದ್ರೆ ಎಂಥ ಎದೆಗರಿಕೆ ನಿಮ್ಮ್ದು. ಹಿಂದ್ಯಾರು ಮಾಡಿರಬಾರ್ದು, ಮುಂದ್ಯಾರು ಮಾಡ್ಬಾರ್ದು....... ಹಂಗ್ ಮಾಡ್ಬಿಟ್ಟರಲ್ಲಾ.....

ಕೃಷ್ಣಾಪ್ಪೋನೊರೆ......... , ರಾಗ ತಾನ ಪಲ್ಲವಿಗೆ ನಮ್ಮ ಶೇಷಣ್ಣನೊರು ರಾಗ ಅರ್ಸ್ಕೊಬೇಕಾದ್ರೆ ಏನ್ ಮಾಡದ್ರೂ ಅಂದ್ರೆ........ ಒಬ್ಬಬ್ಬ ಶ್ರೋತೃಗೆ ಒಂದೊಂದ್ ಸ್ವರ ಆರಸ್ಕೊಂಡ್ ಹೇಳೋಕ್  ಬಿಟ್ಬಿಡೋದೇ .........? ಪಾರ್ಪತ್ಯ ಕೈಗ್ ಸಿಕ್ಕ್ಬಿಟ್ಟರೆ ಜನ ಕೇಳ್ಬೇಕೆ? ಶುದ್ಧ ರಿಷಭ ಅನ್ನೋನ್ ಒಬ್ಬ, ಸಾಧಾರಣ ಗಾಂಧಾರ ಅನ್ನೋನೊಬ್ಬ, ಪ್ರತಿ ಮಾಧ್ಯಮ ಅನ್ನೋನ್ ಮತ್ತೊಬ್ಬ, ಶಟ್ಶ್ರುತಿ  ದೈವತ ಅನ್ನೋನ್ ಮಗದೊಬ್ಬ! ಮತ್ತೊಬ್ಬ ಕಾಕಳೀ ನಿಷಾದ ಅಂತ ಕಿರ್ಚ್ಬಿಡೋದೆ?

ನಮ್ಮ ಶೇಷಣ್ಣನೊರ್ ಎಷ್ಚು ಚುರುಕು ಅಂದ್ರೆ, ಆ ಸ್ವರಗಳಿರೋ  ರಾಗ ೪೮ನೇ ಮೇಳಕರ್ತನೇ  ಅಂದೇ ಬಿಟ್ಟ್ರು.  ಆ ರಾಗದ ಹೆಸರು ದಿವ್ಯಮಣಿ ಅಂದೋರೆ, ರಾಗ ನುಡಿಸೋಕೆ ಶುರುಮಾಡೇಬಿಟ್ಟರಲ್ಲ! 

ಅವತ್ತಿನ ರಾಗಾನೊ, ತಾನನೋ, ಪಲ್ಲವಿನೋ ಕೇಳೋಕ್ ಎರಡ್ ಕಿವಿ ಸಾಲ್ದಾಗಿತ್ತು. ರಾಗ, ತಾನ, ಪಲ್ಲವಿ, ಸ್ವರ ವಿನ್ಯಾಸ ಎಲ್ಲಾದ್ರೋಲ್ಲೂ ರಾಗಮಾಲಿಕೆ ಮಾಡ್ ತೋರ್ಸಿಟ್ಬಿಟ್ಟರಲ್ಲಾ ......... 

(ಕೇಳುತ್ತಾ ನಿಂತಿದ್ದ ಬಾಲಕ ಚೌಡಯ್ಯ ದಂಗು ಬಡ್ದ್ ಹೋಗುತ್ತಾನೆ. ನಿಂತಲ್ಲಿಂದಲ್ಲೇ ವೀಣೆ ಶೇಷಣ್ಣನೊರ್ಗೊಂದು ನಮಸ್ಕಾರ ಮಾಡುತ್ತಾನೆ). 

ವೀಣೆ ಶೇಷಣ್ಣ: (ಕೈಜೋಡಿಸುತ್ತ.....) ವಾಸುದೇವಾಚಾರ್ಯರೇ....... ನಿಮ್ಮ್ ಅಭಿಮಾನ ದೊಡ್ದು. ಎಲ್ಲವುದಕ್ಕಿಂತ ನಮ್ ತಾಯಿ ಚಾಮುಂಡೇಶ್ವರಿ ಆಶೀರ್ವಾದ ದೊಡ್ದು. ಆ ತಾಯಿ ಆಶೀರ್ವಾದ ಇದ್ರೆ ಇನ್ನೂ ಹೊಸ ಹೊಸ ತಂತ್ರಗಳನ್ನ ಕಲಿತ್ಕೋ ಬೇಕು, ಪ್ರಯೋಗಗಳ್ನ ಮಾಡ್ಬೇಕು ಅನ್ನೋ ಆಸೆ ಇದೆ.

ಕೃಷ್ಣಪ್ಪ: ನೀವೇ ಧನ್ಯರು ಶೇಷಾಣ್ಣೋರೆ……. ನಿಮ್ಮಂಥೋರ್ನ ಗುರುಗಳಾಗ್ ಪಡೆದ ನಾವು ಧನ್ಯರೇ. 

.....ಅಂದ್ಹಾಗೆ ನಮ್ಮ್ ಪಿಟೀಲ್ ವಿದ್ವಾಂಸರು, ತಿರುಕ್ಕೋಡಿಕಾವಲ್ ಕೃಷ್ಣ ಅಯ್ಯರ್ ಸಾಹೇಬ್ರು....... ಸುಮ್ನೆ ಕೂತಬಿಟ್ಟಿದೀರಲ್ಲಾ. 

ವಾಸುದೇವಾಚಾರ್ಯ: ಕೃಷ್ಣ ಅಯ್ಯರ್ ಅಂದ್ರೇನ್ ಸಾಮಾನ್ಯದೊರೇ? ಅವರ್ನ್ ಮೀರ್ಸಿದ್ ಪಿಟೀಲ್ ವಿದ್ವಾಂಸರು ನಮ್ ದಕ್ಷಿಣ ಭಾರತದಲ್ಲೇ ಇಲ್ಲ. ನುಡಿಸಾಣಿಕೆಲಿ ಹೊಸ ಹೊಸ ಪ್ರಯೋಗ ಮಾಡ್ತಾನೇ ಇರೋ ಗಟ್ಟಿಗ್ರೂ ಅಂದ್ರೆ ಇವ್ರೇ!

(ಈ ಮಾತುಗಳನ್ನು ಕೇಳಿ ಬಾಲಕ ಚೌಡಯ್ಯನ ಕಿವಿ ನೆಟ್ಟಗಾಗುತ್ತದೆ). 

ಶೇಷಣ್ಣ: (ಕೃಷ್ಣ ಅಯ್ಯರ್ ಕಡೆ ನೋಡುತ್ತಾ.....) ತಿರುಕೊಡಿಯೋರು ಪಿಟೀಲ್ ಪ್ರಾವೀಣ್ಯದ ಬಗ್ಗೆ ಎರಡನೇ ಮಾತೇ ಇಲ್ಲ. ಆದ್ರೆ ಆಸಾಮಿ ಮಾತೇ ಆಡೋಲ್ಲಾ....... ಮಾತಾಡ್ದ್ರೆ ಗುಟ್ಟಗಳ್ ಎಲ್ಲಿ ಬಿಟ್ಕೊಡ್ಬೇಕಾಗುತ್ತೋ ಅನ್ನೋ ಆತಂಕ ಅವರ್ಗೆ! ಅಂದ್ಹಾಗೆ ಅಯ್ಯರ್ ಸಾಹೇಬ್ರೇ, ತಾವ್ ಬಂದು ಹೋದ್ ಕಡೆ ಪಿಟೀಲ್ ಅಭ್ಯಾಸ ಯಾವಾಗ್ ಮಾಡ್ಕೋತೀರಿ?

ಕೃಷ್ಣಪ್ಪ: ಅಯ್ಯರ್ ಅಂದ್ರೆ ಭಾರೀ ಗುಟ್ಟಿನ್ ಮನುಷ್ಯ. ಅವ್ರ್ಯಾಗ್ ಅಭ್ಯಾಸ ಮಾಡ್ಕೋತಾರೋ, ಪ್ರಯೋಗಗಳ್ನ ಮಾಡ್ಕೊತಾರೊ? ಆ ಶ್ರೀಕೃಷ್ಣನೇ ಬಲ್ಲ. 

(ಕೃಷ್ಣ ಅಯ್ಯರ್ ತುಟಿ ಬಿಚ್ಚೋದೆ ಇಲ್ಲ). 

ವಾಸುದೇವಾಚಾರ್ಯ:  ಸರಿ, ಕೃಷ್ಣಪ್ಪನೋರೇ, ನಾವಿನ್ ಹೊರಡ್ತೀವಿ. (ಜೊತೆಗೆ ಶೇಷಣ್ಣನೋರು ಎದ್ದು ಹೊರಡುತ್ತಾರೆ. ಕೃಷ್ಣಪ್ಪನೋರ್ ಎದ್ದು ನಿಂತು ಅವರಿಬ್ಬರಿಗೂ ಗೌರವ ಸಲ್ಲಿಸುತ್ತಾರೆ. ಕೃಷ್ಣ ಅಯ್ಯರ್ ಮಾತ್ರ ಕೃಷ್ಣಪ್ಪನೋರ್ ಮನೇಲೇ ಉಳಿದುಕೊಳ್ಳುತ್ತಾರೆ). 

ಕೃಷ್ಣಪ್ಪ: (ಬಾಗಿಲ ಹಿಂದೆ ಅಡಗಿಕೊಂಡಿದ್ದ ಚೌಡಯ್ಯನ ಕಡೆ ನೋಡುತ್ತಾ.....) ಚೌಡಯ್ಯ ಬಾರೋ. ಕೃಷ್ಣ ಅಯ್ಯರ್ಗೆ ನಮ್ಮ ಮಹಡಿ ಕೋಣೆ ತೋರ್ಸು. 

(ಚೌಡಯ್ಯ ಬಂದು ಕೃಷ್ಣ ಅಯ್ಯರ್ರವರ ಪಿಟೀಲು ಪೆಟ್ಟಿಗೆ ಮತ್ತು ಚೀಲಗಳನ್ನು ಎತ್ತಲು ಮುಂದಾಗುತ್ತಾನೆ). 

ಕೃಷ್ಣ ಅಯ್ಯರ್: (ಚೌಡಯ್ಯನ ಕೈಗಳನ್ನು ತಡೆಯುತ್ತ.....) ಬೇಡ ಬೇಡ, ನನ್ ಸಾಮಾನ್ ನಾನೇ ಎತ್ತ್ಕೊಂಡ್ ಹೋಗ್ತೀನಿ ಎನ್ನುತ್ತಾರೆ. (ಅವರ್ ಪಿಟೀಲ್ನ ಬೇರೇ ಯಾರದ್ರೋ ಮುಟ್ಟಿಬಿಟ್ಟರೇ ಏನ್ ಆಗುತ್ತೋ ಅನ್ನೋ ಭಾವ ತೋರಿಸ್ತಾರೆ. ಅವರೇ ನಡೆದು ಅವರ ಕೋಣೆ ಸೇರುತ್ತಾರೆ). 

ಕೃಷ್ಣಪ್ಪ: ಚೌಡಯ್ಯ...... ನೀನೂ ಒಂಥರ ಜಾಣ ಕಳ್ಳನೇ! ಬಾಗೀಲ್ ಸಂಧಿನೇ ನಿಂತ್ಕೊಂಡು ದೊಡ್ಡೋರ್ ಮಾತೆಲ್ಲಾ ಕೇಳ್ಸ್ಕೊಂಡ್ಯಲ್ಲವೇ?

ಚೌಡಯ್ಯ: (ಭಯಸ್ಥನಾಗಿ...., ಕೈ ಮುಗಿದು....) ತಪ್ಪಾಯ್ತು ಗುರುಗಳೇ.... ತಪ್ಪಾಯ್ತು. 

ಕೃಷ್ಣಪ್ಪ: (ಚೌಡಯ್ಯನ ಮುಗಿದ ಕೈಗಳನ್ನು ಕೆಳಗಿಳಿಸುತ್ತಾ.....) ತಪ್ಪೇನಿಲ್ಲ, ಬಿಡು. ದೊಡ್ಡರ, ವಿದ್ವಾಂಸರ ಮಾತ್ಗಳನ್ನ ಕೇಳೋದ್ರಿಂದಲೂ ತಿಳ್ಕೊಳೋದೋ ಬೇಕಾದಷ್ಟಿರುತ್ತೆ. 

ಚೌಡಯ್ಯ: ತಿರುವರೂರಲ್ಲೇ ನಮ್ಮ್ ಸಂಗೀತದ ತ್ರಿಮೂರ್ತಿಗಳು ಹುಟ್ಟಿದ್ದು ಅಂಥಾ ಕೇಳಿ ಸಂತೋಷ ಆಯ್ತು ಗುರುಗಳೇ. ನೀವ್ ಮುಂದಿನ್ಸರಿ ತಂಜಾವೂರ್ಗೆ ಹೋಗುವಾಗ ನನ್ನನ್ನು ಕರ್ಕೊಂಡ್ ಹೋಗಿ. ನಂಗೆ ತ್ಯಾಗರಾಜರ ಸಮಾಧಿ, ತಿರುವರೂರ್ ಎರಡನ್ನು ತೋರ್ಸಿ. 

ಕೃಷ್ಣಪ್ಪ: ಕಾಲ ಕೂಡಿ ಬಾರ್ಲಿ ಚೌಡ..... ಕರ್ಕೊಂಡ್ ಹೋಗ್ತೀನಿ. 

ಚೌಡಯ್ಯ: ಗುರುಗಳೇ, ಶೇಷಣ್ಣನೋರು ರಾಗ ತಾನ ಪಲ್ಲವಿಗೆ ರಾಗದ ಸ್ವರಗಳ ಆಯ್ಕೆನ ಶ್ರೋತೃಗಳ್ಗೆ ಬಿಟ್ಟಿದ್ ಕೇಳಿ ಆಶ್ಚರ್ಯ ಆಯ್ತು. ಅವರ ಹಾಗೂ ಮಾಡೋರುಂಟೇ?

ಕೃಷ್ಣಪ್ಪ: ಶೇಷಣ್ಣನೋರು ನನ್ನ ಗುರುಗಳು ಕೂಡ. ಅವರ್ ಥರಾನೇ ಬೇರೇ. ಅವರ್ಥರ ಸಾಹಸ ಮಾಡೋಕ್ಕೆ ೭೨ ಮೇಳಕರ್ತಗಳ ಮೇಲೋ ಅಪಾರವಾದ ಸಾಧನೆ ಇರ್ಬೇಕು.  ವೀಣೆ ನುಡಿಸಾಣಿಕೆಲಿ ಎಂಟೆದೆ ಇರೋರು ಅಂದ್ರೆ ಅವರೊಬ್ಬರೇ ಚೌಡ...... !  

ಮಲಗ್ಕೊಳ್ಳೋ ಹೊತ್ತಾಯ್ತು. ನೀನು ಅಭ್ಯಾಸ ಮುಂದುವರ್ಸು......   (ಎಂದು ಹೇಳಿ ನಿರ್ಗಮಿಸುತ್ತಾರೆ.....). 

(ದೀಪಗಳೆಲ್ಲಾ ಆರಿರುತ್ತವೆ. ಎಲ್ಲರೂ ಮಲಗಿರುತ್ತಾರೆ. ಚೌಡಯ್ಯ ಮಾತ್ರ  ಅಭ್ಯಾಸ ಮಾಡುತ್ತಿರುತ್ತಾನೆ. ಕೃಷ್ಣ ಅಯ್ಯರ್ ಕೋಣೆಯಿಂದ ಸಣ್ಣದಾಗಿ ಪಿಟೀಲಿನ ನಾದ ಹೊಮ್ಮುತ್ತಿರುತ್ತದೆ. ಕುತೂಹಲಗೊಂಡ ಚೌಡಯ್ಯ ಮೆಲ್ಲನೆ ಅವರ ಕೋಣೆಯ ಕಡೆ ಹೋಗಿ ಬಾಗಿಲ ಸಂಧಿಯಿಂದ ನೋಡುತ್ತಾನೆ. ಕೃಷ್ಣ ಅಯ್ಯರ್ರವರು ಕಂಬಳಿಯೊಳಗೆ ಕುಳಿತು ಗುಟ್ಟಾಗಿ ಅಭ್ಯಾಸ ಮಾಡುತ್ತಿರುತ್ತಾರೆ. ತದೇಕ ಚಿತ್ತನಾಗಿ ಆ ಪಿಟೀಲ ನಾದವನ್ನು ಚೌಡಯ್ಯ ತಾಳ ಹಾಕುತ್ತಾ ಕೇಳುತ್ತಾನೆ. ಬೆರಳುಗಳಲ್ಲಿ ಲೆಕ್ಕ ಹಾಕುತ್ತಾ ಕೆಲವು ವಿಷಯಗಳನ್ನು ಬರೆದಿಟ್ಟುಕೊಳ್ಳುತ್ತಾನೆ). 

-೦-೦-೦-

ದೃಶ್ಯ - ೧೦

(ಬಿಡಾರಂ ಕೃಷ್ಣಪ್ಪನವರ ಮನೆ. ಚೌಡಯ್ಯ ಗುರುಗಳ ಹಿಂದೆ ನಿಂತಿರುತ್ತಾನೆ. ಗುರುಗಳು ಯಾರದೋ ಬರುವಿಕೆಯನ್ನು ಕಾಯುತ್ತಾ ಕೊಂಚ ಚಡಪಡಿಸುತ್ತಿರುತ್ತಾರೆ. ಗುರುಗಳ ಪತ್ನಿಯವರಾದ ತುಂಗಮ್ಮನವರು  ಗುರುಗಳ ಕೈಗೆ ಶಲ್ಯವೊಂದನ್ನು ಕೊಡುತ್ತಾರೆ). 

ಕೃಷ್ಣಪ್ಪ: (ಹೆಂಡತಿಯ ಕಡೆ ನೋಡುತ್ತಾ..... )ತುಂಗಾ....... ಶಿವಗಂಗೆ ಸ್ವಾಮಿಗಳು ಮಹಾರಾಜರ ಸಂಸ್ಕೃತ ಕಾಲೇಜಿಗೆ ಬಂದಿದ್ದಾರೆ. ಅವ್ರ್ ಸಮ್ಮುಖದಲ್ಲಿ ಇವತ್ತು ನನ್ನ ಕಛೇರಿ ನಡೀಬೇಕು. 

ಕಛೇರಿಗ್ ಹೊರಡೋ ಸಮಯ ಮೀರ್ತಾಬಂತು. ಈ ಪಿಟೀಲ್ ಪುಟ್ಟಸ್ವಾಮಯ್ಯ ಇನ್ನೂ ಬರ್ಲೆ ಇಲ್ಲವಲ್ಲಾ. 

(ಗುರುಗಳು ಹಾಗೂ ಅವರ ಪತ್ನಿ, ಇಬ್ಬರೂ ಬಾಗಿಲತ್ತಲೇ ನೋಡುತ್ತಿರುತ್ತಾರೆ).

ಓರ್ವ ವ್ಯಕ್ತಿ: (ಮನೆ ಹೊರಗಡೆ ನಿಂತು...) ಅಯ್ಯ್ನೋರೇ........ ಕಛೇರಿಗ್ ಹೋಗೋಕೆ ಗಾಡಿ ತಂದಿದೀನಿ. ಹೊರಡ್ತೀರಾ? 

ಕೃಷ್ಣಪ್ಪ: (ಚೌಡಯ್ಯನ ಕಡೆ ನೋಡುತ್ತಾ....) ಮಗು ಚೌಡಯ್ಯ...... ಕಛೇರಿಗ್ ಹೋಗೋಣ ನಡಿ. 

(ಚೌಡಯ್ಯ ವಿನಮ್ರನಾಗಿ ತಂಬೂರಿಯನ್ನು ಕೈಗೆತ್ತಿಕೊಳ್ಳುತ್ತಾನೆ). 

ಕೃಷ್ಣಪ್ಪ: ಏನೋ ಚೌಡ......ಪಿಟೀಲಿಲ್ಲದೆ ಹೇಗೋ ಪಕ್ವಾದ್ಯ ನುಡಿಸ್ತೀಯಾ? ನಿನ್ನ್ ಪಿಟೀಲ್ ಪೆಟ್ಟಿಗೆನೂ ಕೈಗ್ ತಗೋ. 

ಚೌಡಯ್ಯ: (ಆಶ್ಚರ್ಯಚಕಿತನಾಗಿ....ಕೈಮುಗಿಯುತ್ತಾ....) ಗುರುಗಳೇ.......ನಾನು ನಿಮ್ ಕಚೇರಿಗೆ ಪಿಟೀಲ್ ನುಡಿಸೋದೇ? ಅಂಥಾ ಮಹತ್ಕಾರ್ಯ ನನ್ ಕೈಯಿಂದ ಸಾಧ್ಯವಾಗುತ್ಯೇ?

ಕೃಷ್ಣಪ್ಪ: (ಶಿಷ್ಯನ ಬೆನ್ನು ತಟ್ಟುತ್ತಾ.......) ಮೊದ್ಲು ನಿನ್ನ್ ಪಿಟೀಲ್ ಕೈಗ್ ತಗೋ. ಗಾಡಿಯೋನ್ ಕಾಯ್ತಾಯಿದ್ದಾನೆ ಬೇಗ ಹೊರಡು. 

ತುಂಗಮ್ಮ : (ಆಚಾರ್ಯಚಕಿತರಾಗಿ ಚೌಡಯ್ಯನ ಬೆನ್ನು ಸವರುತ್ತಾ.....) ಏನುಂದ್ರೇ ......ನಮ್ಮ ಚೌಡಯ್ಯ ಇನ್ನೂ ಚಿಕ್ಕ ಹುಡ್ಗ. ನೀವೇ ಮೊನ್ನೆ ಹೇಳ್ದಹಾಗೆ ಅವನಿಗಿನ್ನೂ ೧೬ ವರ್ಷ.  ಹೋದ್ ವರ್ಷ ಇನ್ನೂ ನಿಮ್ ಹತ್ರ ಪಾಠಕ್ ಸೇರಿರೋದು. ಇವತ್ತೇ ಅಲ್ವೆ ಮೊದ್ಲು, ನೀವ್ ಅವ್ನ ಕಛೇರಿಗೇ ಅಂಥ ಕರೀತಾ ಇರೋದು? ಅವನ್ ಕೈಲಿ ನಿಮ್ ಸರಿಗೆ ಪಿಟೀಲ್ ನುಡಿಸೊಕ್ಕಗುತ್ಯೇ?

ಕೃಷ್ಣಪ್ಪ: (ನಗುತ್ತಾ...... ) ಆತಂಕ ಪಡ್ಬೇಡ ತುಂಗಾ, ಆತಂಕ ಪಡ್ಬೇಡ! ಆ ಕೃಷ್ಣ ಪರಮಾತ್ಮ ನನ್ ಮನ್ಸಲ್ಲಿ ಏನ್ ಪ್ರೇರಣೆ ನೀಡಿದಾನೋ ಆ ಥರ ನಾನ್ ಮಾಡ್ತಾಯಿದೀನಿ. ಇವತ್ತಿನ ಕಛೇರಿ ಚೆನ್ನಾಗೆ ಆಗುತ್ತೆ ನೋಡ್ತಾಯಿರು. 

(ಕೃಷ್ಣಪ್ಪನವರ ಪತ್ನಿ ಸಮ್ಮತಿ ಸೂಚಿಸುತ್ತಾ ತಲೆಯಾಡಿಸುತ್ತಾರೆ......

ಚೌಡಯ್ಯ ಗುರುಗಳಿಗೆ ಮತ್ತು ಮಾತೆಯವರಾದ ತುಂಗಮ್ಮನವರಿಗೆ  ನಮಸ್ಕರಿಸುತ್ತಾನೆ).

ಕೃಷ್ಣಪ್ಪ:………(ಆಶೀರ್ವದಿಸುತ್ತಾ…..) ಯಶಸ್ವೀ ಭವ. ಇವತ್ತು ನಿನ್ನ ಮೊದಲ ಕಛೇರಿ. ರಾಯರ ಪಟಕ್ಕೂ ನಮಸ್ಕಾರ ಮಾಡು. 

(ಚೌಡಯ್ಯ ರಾಯರ ಪಾಠಕ್ಕೆ ನಮಸ್ಕರಿಸುತ್ತಾನೆ. ಕೃಷ್ಣಪ್ಪ, ಚೌಡಯ್ಯ ಇಬ್ಬರೂ ಕಛೇರಿಗೆ ಹೊರಡುತ್ತಾರೆ).  

-೦-೦-೦-

ದೃಶ್ಯ - ೧೧

(ಮೈಸೂರ ಮಹಾರಾಜಾ ಸಂಸ್ಕೃತ ಕಾಲೇಜಿನ ಸಭಾಂಗಣ.  ಕಾರ್ಯಕ್ರಮಕ್ಕೆ ಮೊದಲು ಕೃಷ್ಣಪ್ಪನವರು ಶಿವಗಂಗೆ ಸ್ವಾಮಿಗಳಿಗೆ ನಮಿಸುತ್ತಾರೆ. ಚೌಡಯ್ಯಯನೂ  ಸ್ವಾಮಿಗಳಿಗೆ ನಮಿಸುತ್ತಾನೆ.ಕೃಷ್ಣಪ್ಪನವರ ಕಛೇರಿಗೆ ಎಲ್ಲಾ ಸಿದ್ಧತೆಗಳೂ ನಡೆದಿರುತ್ತದೆ. ಪಿಟೀಲು ಹಿಡಿದ ಚೌಡಯ್ಯ ಗುರುಗಳ ಬಲಗಡೆ ಆಸೀನನಾಗಿರುತ್ತಾನೆ.). 

ಓರ್ವ ಹಿರಿಯರು: ನಮ್ಮ ಸಂಸ್ಕೃತ ಕಾಲೇಜಿಗೆ ಆಗಮಿಸಿರುವ  ಶ್ರೀ ಶ್ರೀ ಶ್ರೀ ಶಿವಗಂಗೆ ಸ್ವಾಮಿಗಳಿಗೆ ನಮ್ಮ ಗೌರವಪೂರ್ವಕ ನಮನಗಳು. ನೆರೆದಿರುವ ಸಂಗೀತಾಭಿಮಾನಿಗಳೆಲ್ಲರಿಗೆ ಇಂದಿನ ಕಾರ್ಯಕ್ರಮಕ್ಕೆ ಸುಸ್ವಾಗತ. ಮಹಾಸ್ವಾಮಿಗಳ ಸಮ್ಮುಖದಲ್ಲಿ ಇಂದು ತಮ್ಮ ಮುಂದೆ ಹಾಡಲಿರುವ ವಿದ್ವಾನ್ ಬಿಡಾರಂ ಕೃಷ್ಣಪ್ಪನವರಿಗೆ ಸುಸ್ವಾಗತ. ಪಿಟೀಲು ಹಿಡಿದು ಕುಳಿತಿರುವ  ಕೃಷ್ಣಪ್ಪನವರ ಶಿಷ್ಯನಾದ ೧೬ ವರ್ಷದ ಬಾಲಕ ತಿರುಮಕೂಡಲು ಚೌಡಯ್ಯ ಇಂದಿನ ಕಛೇರಿ ಮೂಲಕ ತನ್ನ ವೃತ್ತಿಜೀವನಕ್ಕೆ ಪದಾರ್ಪಣ ಮಾಡುತ್ತಿದ್ದಾನೆ. ಪರಮಾತ್ಮನ ಹಾಗೂ ಗುರುಹಿರಿಯರ ಆಶೀರ್ವಾದ ಅವನ ಮೇಲಿರಲಿ ಎಂದು ಹಾರೈಸುತ್ತೇನೆ. ಮೃದಂಗ ವಿದ್ವಾನ್ ಕೃಷ್ಣಮೂರ್ತಿರವರಿಗು ಹಾಗು ತಂಬೂರಿ ಶ್ರುತಿ ನೀಡಲಿರುವ ಪುಟ್ಟಸ್ವಾಮಿಗಳಿಗು ಸುಸ್ವಗಾತ. 

(ಶಂಕರಾಭರಣ ರಾಗದ ಆದಿತಾಳದ ವರ್ಣದೊಂದಿಗೆ ಕೃಷ್ಣಪ್ಪನವರು ತಮ್ಮ ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ಕೃಷ್ಣಪ್ಪನವರು  ಶಂಕರಾಭರಣ ರಾಗದ ರಾಗ, ತಾನ, ಪಲ್ಲವಿಗಳ ಸವಿಯನ್ನು ಶ್ರೋತೃಗಳಿಗುಣಬಡಿಸಿ ಕಾರ್ಯಕ್ರಮವನ್ನು ಮುಗಿಸುತ್ತಾರೆ. ಕೃಷ್ಣಪ್ಪನವರ ಅಮೋಘ ಹಾಡುಗಾರಿಕೆಯುದ್ದಕ್ಕೂ ಬಾಲಕ ಚೌಡಯ್ಯ ಅದ್ಭುತವಾಗಿ ನುಡಿಸುತ್ತಾನೆ. ಚೌಡಯ್ಯ ಅದ್ಭುತವಾಗಿ ನುಡಿಸಿದ ಕ್ಷಣಗಳಲೆಲ್ಲಾ ಶ್ರೋತೃಗಳು ದೀರ್ಘ ಕರತಾಡನ ಮಾಡುತ್ತಾರೆ. ಗುರುಗಳು ಮಾತ್ರ ತಮ್ಮ ಪ್ರಿಯಶಿಷ್ಯ ಎಲ್ಲಿ ಉಬ್ಬಿ ಹೋಗುತ್ತಾನೋ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ಸಂಯಮವನ್ನು ಕಾಯ್ದುಕೊಳ್ಳುತ್ತಾರೆ. 

ಶ್ರೋತೃಗಳಲ್ಲೊಬ್ಬರಾದ ಸಾಹುಕಾರ ತಿಮ್ಮಯ್ಯನವರು ಬಾಲಕ ಚೌಡಯ್ಯನ ಪಿಟೀಲು ವಾದನವನ್ನು ಮೆಚ್ಚಿ ಸ್ವರ್ಣ ಪದಕವೊಂದನ್ನು ಅವನ ಕೊರಳಿಗೆ ಹಾಕುತ್ತಾರೆ. ಬಾಲಕ ಚೌಡಯ್ಯ ಉಬ್ಬಿಹೋದಂತೆ ಕಾಣುತ್ತಾನೆ. ಗುರುಗಳು ಮಾತ್ರ ಹೆಚ್ಚಿನ ಪ್ರತಿಕ್ರಿಯೆಯನ್ನೇನೂ ತೋರಿಸುವುದಿಲ್ಲ).  

-೦-೦-೦-


ದೃಶ್ಯ ೧೨

(ವೀಣೆ ಶೇಷಣ್ಣನವರ ಮನೆ. ವೀಣೆ ಶೇಷಣ್ಣನವರು, ಮೈಸೂರು ವಾಸುದೇವಾಚಾರ್ಯರು ಹಾಗೂ ಬಿಡಾರಂ ಕೃಷ್ಣಪ್ಪನವರು ಮುಖ್ಯಾಸನಗಳಲ್ಲಿ ಕುಳಿತಿರುತ್ತಾರೆ. ಮಿಕ್ಕೆಲ್ಲಾ ವಿದ್ವಾಂಸರುಗಳು ನೆಲದ ಮೇಲೆ ಕುಳಿತಿರುತ್ತಾರೆ. ಬಾಲಕ ಚೌಡಯ್ಯನು ತಾನು ಗಳಿಸಿದ ಸ್ವರ್ಣಪದಕವನ್ನು ಕೊರಳಲ್ಲಿ ಧರಿಸಿ ಕುಳಿತಿರುತ್ತಾನೆ). 

ಮೈಸೂರು ವಾಸುದೇವಾಚಾರ್ಯ: (ಶೇಷಣ್ಣನವರಿಗು ಹಾಗೂ ಕೃಷ್ಣಪ್ಪನವರಿಗೂ ನಮಿಸಿ....)ನೆರೆದಿರುವ ಕಲಾವಿದರುಗಳೇ....... ನಿಮ್ಮೆಲ್ಲರಿಗೂ ಸುಸ್ವಾಗತ. ವೀಣೆ ಶೇಷಣ್ಣನವರ ಮನೆ ಎಂದರೆ ಆದೊಂದು ಸಂಗೀತ ವಿಶ್ವವಿದ್ಯಾಲಯವಿದ್ದಂತೆ. ವೀಣೆ ಶೇಷಣ್ಣನವರೇ ಅದರ ಕುಲಪತಿಗಳು. ನಿಮ್ಮ ಸಂಗೀತದ ಮೂಲಕ ನೀವವರ ಮನಸ್ಸನ್ನು ಗೆದ್ದರೆ, ನಿಮ್ಮ ಭಾಗ್ಯದ ಬಾಗಿಲು ತೆಗೆದ ಹಾಗೆ! ನಾಲ್ವಡಿ ಕೃಷ್ಣರಾಜ ಪ್ರಭುಗಳ ಆಸ್ಥಾನಕ್ಕೂ ಈ ಮನೆಯೇ ಪ್ರವೇಶದ್ವಾರವಿದ್ದಂತೆ. ಇಲ್ಲಿ ಪ್ರತಿಭೆಗೆ ಮಾತ್ರ ಪುರಸ್ಕಾರ. ಶಿಫಾರಿಸು ಎಂಬ ಪದಕ್ಕೂ ಇಲ್ಲಿ ಪ್ರವೇಶವಿಲ್ಲ. 

ಮೊದಲಿಗರಾಗಿ ವಿದ್ವಾನ್ ರಾ. ರಾಚಪ್ಪನವರು ಹಾಡಲಿದ್ದಾರೆ. 

ವೀಣೆ ಶೇಷಣ್ಣ: (ಕೃಷ್ಣಪ್ಪನವರ ಕಡೆ ನೋಡುತ್ತಾ......) ರಾಚಪ್ಪನವರಿಗೆ ಬಿಡಾರಂ ಕೃಷ್ಣಪ್ಪನವರ ಶಿಷ್ಯ ಬಾಲಕ ಚೌಡಯ್ಯ ಪಿಟೀಲು ನುಡಿಸಲಿ. (ಕೃಷ್ಣಪ್ಪನವರು ಸಮ್ಮತಿಸಿ ಚೌಡಯ್ಯನನ್ನು ಎದ್ದೇಳುವಂತೆ ಸೂಚಿಸುತ್ತಾರೆ. 

ವಿದ್ವಾನ್ ರಾಚಪ್ಪ ಹಾಗೂ ಚೌಡಯ್ಯನವರ ಸಂಗೀತ ಆರಂಭವಾಗುತ್ತದೆ. ಚೌಡಯ್ಯ ತನ್ನ ಸ್ವರ್ಣ ಪಧಕ ಧರಿಸಿಯೇ ಪಿಟೀಲು ನುಡಿಸುತ್ತಿರುತ್ತಾನೆ. ಪಿಟೀಲು ನುಡಿಸುತ್ತ, ನುಡಿಸುತ್ತ ಮೈಮರೆತ ಚೌಡಯ್ಯನ ಪಿಟೀಲಿನಿಂದ ಅಪಸ್ವರವೊಂದು ಹೊರಹೊಮ್ಮುತ್ತದೆ. ತಕ್ಷಣ ಉದ್ರಿಕ್ತರಾದ ಬಿಡಾರಂ ಕೃಷ್ಣಪ್ಪನವರು ತಮ್ಮ ಶಿಷ್ಯ ಚೌಡಯ್ಯ ಕೆನ್ನೆಗೊಂದು ಪಟೀರನೆ ಬಾರಿಸುತ್ತಾರೆ). 

ಕೃಷ್ಣಪ್ಪ: (ಕೋಪದಿಂದ ಗುಡುಗುತಾ...) ಅಪಸ್ವರ, ಅಪಸ್ವರ........ಕೇಳಲಸಹ್ಯ! ಚೌಡಯ್ಯ ನನ್ನ ಶಿಷ್ಯ, ಚೌಡಯ್ಯ ನನ್ನ ಶಿಷ್ಯ ಅಂತ ನಾನು ಹೇಳ್ಕೊಂಡಿದ್ದಕ್ಕೂ, ಎಲ್ಲ್ರ ಮುಂದೆ ನನ್ ಮಾನ ಕಳ್ದ್ ಬಿಟ್ಟೆಯಲ್ಲೋ  ಆಯೋಗ್ಯ!! ಮೊದ್ಲು ನಿನ್ ಪದಕ ತೆಗೆದ್ ಬಿಸಾಡು. ಇನ್ನು ಹುಟ್ಲಿಲ್ಲ, ಬೆಳೀಲಿಲ್ಲ, ದುರಹಂಕಾರ.........ದುರಹಂಕಾರಕ್ಕೇನ್ ಕಮ್ಮಿಯಿಲ್ಲ.  

(ಕೋಪಗೊಂಡ ಕೃಷ್ಣಪ್ಪನವರನ್ನು ವೀಣೆ ಶೇಷಣ್ಣ ಸಮಾಧಾನಿಸುತ್ತಾರೆ. ನಡುಗಿ ಹೋದ ಚೌಡಯ್ಯ ಅಂತೂ ಸವರಿಸಿಕೊಂಡು ಕಾರ್ಯಕ್ರಮ ಮುಂದುವರಿಸುತ್ತಾನೆ. ವೀಣೆ ಶೇಷಣ್ಣನವರು ಹಾಗೂ ವಾಸುದೇವಾಚಾರ್ಯರು, ಚೌಡಯ್ಯ ಚೆನ್ನಾಗಿ ನುಡಿಸಿದ ಕ್ಷಣಗಳಲೆಲ್ಲಾ ಧಾರಾಳವಾಗಿ ಚಪ್ಪಾಳೆ ತಟ್ಟುತ್ತಾ, ಚೌಡಯ್ಯನನ್ನು ಪ್ರೋತ್ಸಾಹಿಸುತ್ತಾರೆ. ಕೃಷ್ಣಪ್ಪನವರು ಮಾತ್ರ ಮುಗುಮ್ಮಾಗೆ  ಇರುತ್ತಾರೆ. 

ಕಾರ್ಯಕ್ರಮ ಮುಗಿದ ಮೇಲೆ ಕೃಷ್ಣಪ್ಪನವರು ಹಾಗೂ ಚೌಡಯ್ಯ ಮನೆಗೆ ಹಿಂತಿರುಗುತ್ತಾರೆ).

-೦-೦-೦-

ದೃಶ್ಯ - ೧೩

(ಬಿಡಾರಂ ಕೃಷ್ಣಪ್ಪನವರ ಮನೆ. ಗುರುಗಳು ಮತ್ತು ಶಿಷ್ಯ ಚೌಡಯ್ಯ, ವೀಣೆ ಶೇಷಣ್ಣನವರ ಮನೆಯಿಂದ ಹಿಂದಿರುಗುತ್ತಾರೆ). 

ಕೃಷ್ಣಪ್ಪನವರ ಪತ್ನಿ: (ಕೃಷ್ಣಪ್ಪನವರ ಕಡೆ ನೋಡುತ್ತಾ....) ಏನು........ನಿಮ್ಮ್ ಮನಸೆಲ್ಲಾ ಎಲ್ಲೋ ಇದ್ದಂತೆ ಇದ್ಯಲ್ಲ? ನಮ್ ಚೌಡಯ್ಯ ಅಂತೂ ಯಾಕೋ ಹೇದ್ರ್ಕೊಂಡ್ಹಾಗಿದ್ದಾನೆ. ಏನ್ ನಡೀತು ಇವತ್ತಿನ ಕಾರ್ಯಕ್ರಮದಲ್ಲಿ?

(ಕೃಷ್ಣಪ್ಪ ಹಾಗು ಚೌಡಯ್ಯ ಯಾವ ಮಾತನ್ನು ಆಡುವುದಿಲ್ಲ). 

ರಾತ್ರಿ ತುಂಬಾ ಹೊತ್ತಾಗಿದೆ. ಕಾಲ್ತೊಳೆದುಕೊಳ್ಳಿ. ಊಟ ಮಾಡುವಿರಂತೆ. 

(ಊಟ ಬೇಕಿಲ್ಲವೆಂದು ಕೃಷ್ಣಪ್ಪನವರು ತಲೆಯಾಡಿಸುತ್ತಾರೆ. ಚೌಡಯ್ಯನು ಊಟ ಮಾಡದೇ ತನ್ನ ಕೋಣೆಯತ್ತ ಮಲಗಲು ತೆರಳುತ್ತಾನೆ. ಕೃಷ್ಣಪ್ಪನವರ ಪತ್ನಿ ದೀಪಗಳನ್ನಾರಿಸುತ್ತಾರೆ. 

ಕೊಂಚ ಹೊತ್ತಿನ ಮೇಲೆ ಚೌಡಯ್ಯ ಒಬ್ಬನೇ ಗುರುಗಳ ಮನೆಯಿಂದ ಹೊರನಡೆದು ಕೆರೆಯೊಂದರ ಬಳಿಗೆ ಬಂದು ನಿಲ್ಲುತ್ತಾನೆ. ಸ್ವಲ್ಪ ಸಮಯ ಕಳೆದನಂತರ ಚೌಡಯ್ಯನಿಗೆ  ಬೆನ್ನ ಮೇಲೆ ಯಾರೋ ಕೈಯಿಟ್ಟಂತೆ ಅನಿಸುತ್ತದೆ.  ಚೌಡಯ್ಯ ಹಿಂತಿರುಗಿ ನೋಡಿದರೆ ಸಾಕ್ಷಾತ್ ಗುರುಗಳೇ ಬಂದಿರುತ್ತಾರೆ. ಗುರುಗಳನ್ನು ನೋಡಿದ ತಕ್ಷಣ ಚೌಡಯ್ಯನ ದುಃಖದ ಕಟ್ಟೆಯೊಡದು ಕಣ್ಣೀರು ಧಾರಾಕಾರವಾಗಿ ಹರಿಯುತ್ತದೆ. ಗುರುಗಳು ಚೌಡಯ್ಯನ ಕಣ್ಣೊರೆಸಿ ಅವನನ್ನು ತಬ್ಬಿ ಹಿಡಿಯುತ್ತಾರೆ). 

ಕೃಷ್ಣಪ್ಪ:  ನಾನಿವತ್ತು ನಿನ್ ಮೇಲೆ ಕೈಮಾಡಬಾರದಿತ್ತು. ನನ್ನ್ ಸಿಟ್ಟೆಲ್ಲಾ ಆ ಕ್ಷಣಕ್ ಮಾತ್ರ.  ಆಮೇಲೆ ನಿನ್ ಹೊಡ್ದ್ ಬಿಟ್ಟನಲ್ಲಾ ಅಂತ ನನ್ಗೆ ಮನಸಲ್ಲೇ ಬೇಜಾರು. 

ಚೌಡಯ್ಯ: ಗುರುಗಳೇ......ನಾನ್ ನಿಮಿಗ್ ತಕ್ಕ ಶಿಷ್ಯ ಆಗ್ಲಿಲ್ಲ. ಎಲ್ಲ್ರ ಮುಂದೆ ನಿಮಗ್ ಅವಮಾನ ಆಗೋ ಹಾಗೆ ಅಪಶ್ರುತಿ ನುಡ್ಸಿಬಿಟ್ಟೆ. ಇನ್ನು ನಾನಿದ್ದ್ ಏನ್ ಪ್ರಯೋಜನ? ನಾನ್ ಬದುಕಿರಬಾರ್ದು ಗುರುಗಳೇ, ನಾನ್ ಬದುಕಿರಬಾರ್ದು. 

ಕೃಷ್ಣಪ್ಪ: ಬಿಡ್ತು ಅನ್ನು, ಬಿಡ್ತು ಅನ್ನು. ಯಂಥೋರ್ ಕೈಲೂ ತಪ್ಪಗಳ್ ಆಗ್ಬಿಡುತ್ತೆ. ಅದನ್ನೆಲ್ಲಾ ಮರ್ತುಬಿಡಬೇಕು. ಅದೊಂದ್ ತಪ್ಪ್ ಆದ್ಮೇಲೆ ಇವತ್ತು ನೀನ್ ಚೆನ್ನಾಗೆ ನುಡ್ಸಿದೆಯಲ್ಲಾ. ವೀಣೆ ಶೇಷಣ್ಣ, ವಾಸುದೇವಾಚಾರ್ಯರಂಥೋರೇ ನಿನ್ ಇವತ್ತಿನ್ ನುಡಿಸಾಣಿಕೆ ಮೆಚ್ಚಕೊಂಡ್ರಲ್ಲಾ.

(ಚೌಡಯ್ಯನ ದುಃಖ ಉಮ್ಮಳಿಸುತ್ತಲೇ ಇರುತ್ತದೆ. ಗುರುಗಳು ಅವನನ್ನು ಸಮಾಧಾನ ಪಡಿಸಿ ಮನೆಗೆ ಕರೆತರುತ್ತಾರೆ).  

-೦-೦-೦-

ದೃಶ್ಯ - ೧೪

(ಚೌಡಯ್ಯನವರ ಮನೆ.  ಚೌಡಯ್ಯನವರು ತಮ್ಮ ಪಿಟೀಲನ್ನು ನುಡಿಸುತ್ತಾ ಏನೋ ಪ್ರಯೋಗ ನಡೆಸುತ್ತಿರುತ್ತಾರೆ.  ಚೌಡಯ್ಯನವರ ಪತ್ನಿ ನಂಜಮ್ಮ ಅವರೊಡನಿರುತ್ತಾರೆ.  ಮಧ್ಯೆ ಮಧ್ಯೆ ಯಾರದೋ ಬರುವನ್ನು ಚೌಡಯ್ಯನವರು ಎದುರು ನೋಡುತ್ತಿರುತ್ತಾರೆ). 

ನಂಜಮ್ಮ: ಏನುಂದ್ರೆ......? ನಿಮ್ ಪಿಟೀಲ್ಗೆನ್ ಮೈಗ್ ಹುಷಾರಿಲ್ವಾ? ಯಾರಿಗೆ ಕಾಯುತ್ತಿದ್ದೀರಿ?

ಚೌಡಯ್ಯ: ಪಿಟೀಲ್ ರಿಪೇರಿ ರಂಗಪ್ಪಂಗೆ ಹೇಳ್ಕಳಿಸಿದ್ದೆ. ಇನ್ನೇನ್ ಬರ್ಬೋದು. 

(ಅಷ್ಟರಲ್ಲಿ ರಂಗಪ್ಪನವರ ಆಗಮನವಾಗುತ್ತದೆ). 

ನಂಜಮ್ಮ: ಬನ್ನಿ ರಂಗಪ್ಪನೋರೇ..... ನೋಡಿ ಸ್ವಾಮಿಯವರು  ನಿಮ್ದೇ ದಾರಿ ನೋಡ್ತಾ ಇದ್ದಾರೆ (ಎಂದು ಸ್ವಾಗತಿಸುತ್ತಾರೆ). 

ರಂಗಪ್ಪ: (ಮನೆ ಒಳಗೆ ಕೈಮುಗಿದು ಬರುತ್ತಾ....) ಚೌಡಯ್ಯನೋರ್ಗೆ ನಮಸ್ಕಾರ. ಏನು...... ನಿಮ್ ಪಿಟೀಲ್ ಮೇಲೆ ಏನೋ ಪ್ರಯೋಗ ಮಾಡ್ತಾ ಇರೋಹಾಗಿದೆ? 

ಚೌಡಯ್ಯ: ರಂಗಪ್ಪ........ ಸರಿಯಾದ್ ಸಮಯಕ್ಕೆ ಬಂದೆ  ನೋಡು. ನಿನಿಗ್  ನೂರ್ ವರ್ಷ ಆಯಸ್ಸು. ಬಾ ಕುತ್ಕೋ. ನನ್ ಪಿಟೀಲ್ಗಳಿಗೆಲ್ಲಾ ನೀನೆ ಡಾಕ್ಟರ್ ಇದ್ದ ಹಾಗೆ.  ಅವ್ಗಳ ಮೇಲೆಲ್ಲಾ  ನೀನೊಂದ್  ಸರಿ ಕೈ ಆಡಿಸದೆ ಇದ್ರೆ, ಅವ್ಗಳೆಲ್ಲಾ ನೆಟ್ಗೆ ಇರೋದೇ ಇಲ್ಲ ನೋಡು. 

ರಂಗಪ್ಪ: ನನ್ನನ್ನ ಹೊಗಳೋದು ನಿಮ್ ದೊಡ್ಡಗುಣ. ನಿಮ್ ಪಿಟೀಲ್ನಲ್ಲಿ ಇರೋ ಜಾದು ಎಲ್ಲ ಇರೋದು ನಿಮ್ ಬೆರಳಲ್ಲೇ. ಅದ್ ಸರಿ. ನಿಮ್ ಪಿಟೀಲ್  ಪ್ರಯೋಗ....... ಇದೇನೂಂತ?  

ಚೌಡಯ್ಯ: ಮೊನ್ನೆ ಅರಮನೇಲಿ ನಮ್ ಗುರುಗಳು ಕೃಷ್ಣಪ್ಪನೋರ್ ಕಚೇರಿ. ಪಕ್ಕವಾದ್ಯ ಪಿಟೀಲು ನಂದೇ. ಅವರದೋ ಸಿಂಹದಂಥ ಕಂಠ. ಸಾವಿರ ಜನ ಇದ್ರು ಕಡೆಯೋರ್ ತಂಕ ಕೇಳ್ಸೋ ಕಂಚಿನ ಕಂಠ.  ಅಂಥೂರ್ ಮುಂದೆ  ಎಷ್ಟೇ ಬಲ ಕೊಟ್ ನುಡ್ಸಿದ್ರು ನನ್ನ ಪಿಟೀಲ್ ನಾದ ಹಿಂದ್ ಕೂತೂರ್ ತಂಕ ತಲುಪೋದೆ ಅನುಮಾನ ಅನ್ಸ್ತಾ ಇತ್ತು. ಜೊತೆಗೋ...... ಜನಗಳ ಗುಜ ಗುಜ ಶಬ್ದ ಬೇರೇ. ನನ್ ಪಿಟೀಲ್ ನಾದ ಎಲ್ಲೋ ಹೂತಹೋಗ್ತಾಯಿದೆಯೋನೋ...... ಅನ್ಸ್ತಾ ಇತ್ತು. 

ರಂಗಪ್ಪ: ನಿಜ ಅಯ್ಯ್ನೊರೆ ನೀವ್ ಹೇಳೋದು. ಈ ಇಂಗ್ಲಿಷ್ನೋರ್ ಪಿಟೀಲ್ಗೋ ನಾಲ್ಕೇ ತಂತಿ. ಮೆಲುವಾದ್ಯ ಅಂತಾನೆ ಇಟ್ಕಳಿ. ಕೃಷ್ಣಪ್ಪನೋರಂಥವರಿಗೆ ನುಡ್ಸಿ ಸೈ ಅನ್ನಿಸ್ಕೊಳೋದ್ ಕಷ್ಟ ಬಿಡಿ. 

ಚೌಡಯ್ಯ: ರಂಗಪ್ಪ........ಇಂಗ್ಲಿಷ್ನೋರ್ ದೇಶದಲ್ಲಿ ಅದೇನೋ ಮೈಕು ಅಂತ ಬಂದಿದೆಯಂತೆ. ಸಾವಿರ ಜನ ಸೇರಿದ್ರೂ, ಮೈಕು ಅನ್ನೋದ್ ಒಂದಿದ್ರೆ ಸುಲಭವಾಗಿ ಹಾಡೋದು, ನುಡಿಸೋದು ಮಾಡಬೋದಂತೆ. ಆ ಮೈಕು ಅನ್ನೋದು ನಮ್ ದೇಶದ್ ತಂಕ ಯಾವತ್ತ್ ಬರುತ್ತೋ.......? 

ಅದಕ್ಕೆ ನೋಡ್ ರಂಗಪ್ಪ......... ನಾನೀಗ ಹೊಸ ಪ್ರಯೋಗ ಮಾಡ್ತಾಯಿರೋದು. 

ರಂಗಪ್ಪ: ಅಯ್ಯೋನರೇ......ನಿಮ್ ಪ್ರಯೋಗ ಏನು ಅಂತ ಸ್ವಲ್ಪ ವಿವರ್ಸಿ ಹೇಳಿ. 

ಚೌಡಯ್ಯ: ನೋಡು ರಂಗಪ್ಪ...... ನಾನ್ ಬಲಗೈಯಲ್ಲಿ ಪಿಟೀಲ್ ನುಡಿಸೋನು. ನನ್ ಬಲಗೈ ಕಡೆ  ಇರೋ ಮೊದಲ್ನೇ ತಂತೀನೇ ಪಂಚಮದ್ ಅಲ್ವಾ. ಆ ತಂತಿ ಬಲ್ದ ಪಕ್ಕನೆ ಮತ್ತೊಂದು ತಂತಿ ಬೀಗದಿದೀನಿ ನೋಡು........ ಅದರ ಶ್ರುತಿನೂ ಪಂಚಮನೇ ....... ಆದ್ರೆ ಈ ಹೊಸ ತಂತಿ ಶ್ರುತಿ ಮೊದಲ್ನೇ ಪಂಚಮಕ್ಕಿಂತ ಎರಡರಷ್ಟ್  ಇರೋ ಹಾಗ್ ಮಾಡಿದೀನಿ.   ಈಗ ಇವರಡೂ ತಂತಿಗಳ್ ಮೇಲೆ ಒಟ್ಟಿಗೆ ಕಮಾನ್ ಹಾಕ್ ನುಡಿಸಿದ್ರೆ ನಾದ ಹೇಗ್ ಹೆಚ್ಚಾಗ್ತಾ ಇದೆ....... ನೀನೆ ನೋಡು..... (ಎಂದು ನುಡಿಸಿ ತೋರಿಸುತ್ತಾರೆ.  ರಂಗಪ್ಪನವರಿಗೆ ನಾದ ದ್ವಿಗುಣಗೊಂಡಂತೆ ಕೇಳಿಸುತ್ತದೆ). 

ರಂಗಪ್ಪ: ಹೌದು ಬುದ್ಧೀ......ಪಿಟೀಲ್ನ ಸೌಂಡ್ ಡಬಲ್ ಆದ್ ಹಾಗೆ ಕೇಳಿಸ್ತದೆ!

ಚೌಡಯ್ಯ: ನೋಡ್ ರಂಗಪ್ಪ...... ಈಗ ನಾನ್ ಹೇಳೋದ್ ಸರಿಯಾಗ್ ಕೇಳ್ಕೊ. ನಾವಿಬ್ರು ಸೇರಿ ಈಗೊಂದ್ ಹೊಸ ಪಿಟೀಲ್ ತಯಾರ್ ಮಾಡೋಣ. ಪಂಚಮದ ಶ್ರುತಿ ತಂತಿಗೆ ಹೇಗೆ ಮತ್ತೊಂದು ತಂತಿ ಜೋಡ್ಸಿದೀನೋ ಅದೇ ಥರ ಮುಂದಿನ ಷಡ್ಜ ಮತ್ತು ಪಂಚಮದ ತಂತಿಗಳಿಗೂ ಅದದರ ಎರಡರಷ್ಟು ಶ್ರುತಿ ಇರೋ ಹೊಸದೆರಡು ಷಡ್ಜ ಮತ್ತು ಪಂಚಮದ ತಂತಿಗಳ್ನ ಜೋಡ್ಸು. ಕಡೆ ಮಂದ್ರ ಷಡ್ಜದ ತಂತಿ ಮಾತ್ರ ಮುಟ್ಟೋದೇ ಬೇಡ. 

ರಂಗಪ್ಪ: ಓ.... ಹೊ......ಗೊತ್ತಾಯಿತ್ ಬಿಡಿ ಬುದ್ಧಿ.  ಎರಡು ಎರಡು ನಾಲ್ಕು ಎರಡ್ ಆರು ಮತ್ತೊಂದು........  ಏಳು! ಏಳ್ ತಂತೀ ಪಿಟೀಲ? ಇವರ್ಗೆ ಯಾರು ಮಾಡಿಲ್ದೆ ಇರೋದುನ್ನ ನೀವ್ ಮಾಡ್ದ ಹಾಗಾಯ್ತದೆ ಬಿಡಿ ಬುದ್ಧಿ. ನಮ್ ದೇಶದಾಗೆ ಯಾಕೆ? ಇಡೀ ಪ್ರಪಂಚ್ದಾಗೆ ಯಾರು ಮಾಡದನ್ನ ನೀವ್ ಮಾಡ್ದಹಾಗೈತದೆ.

ಚೌಡಯ್ಯ: (ಸಂಭ್ರಮಿಸುತಾ....) ಹೌದು ರಂಗಪ್ಪ.......ಏಳು ತಂತಿ ಪಿಟೀಲೇ..... ಅದರ ತಯಾರಿ ನಿನ್ನ ಕೈಯಿಂದಾನೆ ಆಗ್ಬೇಕು. ಇದ್ರಲ್ಲಿ ಪಂಚಮದ್ ಒಂದು ಜೋಡಿ, ಷಡ್ಜದ್  ಒಂದು ಜೋಡಿ ಮತ್ತೆ ಪಂಚಮ್ಮದ್ ಮತ್ತೊಂದು ಜೋಡಿ, ಒಟ್ಟು ಮೂರ್ ಜೋಡಿ ತಂತಿಗಳಿರುತ್ತವೆ. ಪ್ರತಿ ಜೋಡಿ ತಂತೀನೂ ಒಂದೇ ಬೆರಳಲ್ಲಿ ನುಡಿಸೋಕ್ ಆಗೋ ಹಾಗೆ ತಂತಿಗಳ್ನ ಜೋಡಿಸ್ಬೇಕು ರಂಗಪ್ಪ. 

ರಂಗಪ್ಪ: ಎಲ್ಲಾ ಗೊತ್ತಾಯಿತು ಬಿಡಿ ಅಯ್ಯ್ನೊರೆ...... ನಾಳೇನೇ ನಿಮ್ ಏಳು ತಂತಿ ಪಿಟೀಲ್ನ ರೆಡಿ ಮಾಡಿ ತರ್ತೀನಿ. 

(ಚೌಡಯ್ಯನವರು ರಂಗಪ್ಪನವರ ಬೆನ್ನು ತಟ್ಟಿ ಆತ್ಮೀಯವಾಗಿ ಬೀಳ್ಕೊಡುತ್ತಾರೆ). 

-೦-೦-೦-  

ದೃಶ್ಯ - ೧೫ 

(ವೀಣೆ ಶೇಷಣ್ಣನವರ ಮನೆಯಲ್ಲಿ ಬಿಡಾರಂ ಕೃಷ್ಣಪ್ಪನವರ ಕಚೇರಿ. ಚೌಡಯ್ಯನವರದ್ದೇ ಪಿಟೀಲು ಪಕ್ಕ ವಾದ್ಯ. ಚೌಡಯ್ಯನವರು ತಮ್ಮ ಹೊಸ ಆವಿಷ್ಕಾರವಾದ ಏಳು ತಂತಿ ಪಿಟೀಲನ್ನೇ ಹಿಡಿದು ಕುಳಿತಿರುತ್ತಾರೆ. ಕಚೇರಿಯು ಭೈರವಿ ರಾಗದ ಅಟ್ಟತಾಳದ ವರ್ಣದೊಂದಿಗೆ ಶುರುವಾಗುತ್ತದೆ. ಶಿಷ್ಯನ ಪಿಟೀಲಿನಿಂದ ಹೆಚ್ಚಿನ ನಾದ ಬರುತ್ತಿರುವುದನ್ನು ಗಮನಿಸಿದ ಗುರುಗಳು ಶಿಷ್ಯನ ಪಿಟೀಲಿನ ಕಡೆ ತೀಕ್ಷ್ಣವಾದ ನೋಟವೊಂದನ್ನು ಬೀರುತ್ತಾರೆ. ಶಿಷ್ಯ ಹೆದರಿ ಹೋಗಿರುತ್ತಾನೆ. ಎಲ್ಲಾ ವಿದ್ಯಮಾನಗಳನ್ನೂ ಹಿರಿಯರಾದ ವೀಣೆ ಶೇಷಣ್ಣನವರು ಗಮನಿಸುತ್ತಿರುತ್ತಾರೆ). 

ಕೃಷ್ಣಪ್ಪ: ಏನಿದು...... ನಿನ್ನ ಪಿಟೀಲು ಈವತ್ತು ಹೆಚ್ಚು ಶಬ್ದ ಮಾಡ್ತಾ ಇದೆಯಲ್ಲಾ........ 

ಚೌಡಯ್ಯ: (ಪಿಸು ಧ್ವನಿಯಲ್ಲಿ....ತಮ್ಮ ಪಿಟೀಲನ್ನು ತೋರಿಸುತ್ತಾ.... ) ಗುರುಗಳೇ, ಪಿಟೀಲಿನ ನಾದ ಹೆಚ್ಚಲೆಂದು ಮೂರು ಹೊಸ ತಂತಿಗಳನ್ನು ಜೋಡಿಸಿದ್ದೇನೆ. 

(ಈ ನಡುವೆ ಹಿರಿಯರಾದ ವೀಣೆ ಶೇಷಣ್ಣನವರು 'ಏಕಾಗಬಾರದು?' ಎಂಬಂತೆ ಸಮ್ಮತಿ ಸೂಚಿಸುತ್ತಾರೆ. ಕೃಷ್ಣಪ್ಪನವರು ಹಾಡುಗಾರಿಕೆ ಮುಂದುವರೆಸುತ್ತಾರೆ. ಕಛೇರಿಯುದ್ದಕ್ಕೂ ತಮ್ಮ ಹೊಸ  ಏಳು ತಂತಿಯ ಪಿಟೀಲಿನ ಪಕ್ಕವಾದ್ಯವನ್ನು ಚೌಡಯ್ಯನವರು ಸೊಗಸಾಗಿ ನುಡಿಸುತ್ತಾರೆ. ಕಾರ್ಯಕ್ರಮದ ಅಂತಿಮ ವೇಳೆಗೆ  ಗುರುಗಳು ಮತ್ತು ಸಭಿಕರು ಸುಪ್ರೀತರಾದಂತೆ ಕಾಣುತ್ತಾರೆ). 

ಕೃಷ್ಣಪ್ಪ: (ಶಿಷ್ಯನ ಬೆನ್ನು ತಟ್ಟುತ್ತಾ.....) ಭಲೇ ಚೌಡಯ್ಯ.... ನಿನ್ನ ಏಳು ತಂತಿ ಪಿಟೀಲನ್ನು ಮೆಚ್ಚಿದೆ. ನನ್ನ ಕಂಠವನ್ನು ಮೀರಿಸುತ್ತೇನೋ ಎನ್ನುವಷ್ಟು ನಾದ ನಿನ್ನ ಪಿಟೀಲಿನಿಂದ ಇಂದು ಹೊಮ್ಮಿದೆ. ಮಾಧುರ್ಯ-ಗಮಕಗಳಿಗೇನು ಧಕ್ಕೆ ಬರಲಿಲ್ಲ. (ಎನ್ನುತ್ತಾ ಕುತೂಹಲದಿಂದ ಏಳು ತಂತಿ ಪಿಟೀಲನ್ನು ನೋಡುತ್ತಾರೆ). 

ಚೌಡಯ್ಯ: ನನ್ನ ಪಾಲಿಗೆ ನೀವೇ ಸರ್ವೋಚ್ಛ ಗುರುಗಳು. ದೇವರ ಸಮಾನರು. ನನ್ನ ಹೊಸ ಪ್ರಯೋಗವಾದ ಏಳು ತಂತಿ ಪಿಟೀಲಿಗೆ ತಮ್ಮಿಂದ 'ಭೇಷ್' ಸಿಕ್ಕಿರುವುದು ಸಂತಸ ತಂದಿದೆ. ನನ್ನ ಪ್ರಯತ್ನ ಸಾರ್ಥಕವಾಗಿದೆ. 

ವೀಣೆ ಶೇಷಣ್ಣ: (ಚೌಡಯ್ಯನವರ ಬೆನ್ನು ತಟ್ಟುತ್ತಾ.....) ಭೇಷ್ ಚೌಡಯ್ಯ......ಏಳು ತಂತಿ ಪಿಟೀಲನ್ನು ಸಿದ್ಧಪಡಿಸಿ ನಮ್ಮ ಮೈಸೂರು ಸಂಗೀತ ಪರಂಪರೆಗೊಂದು ಹೊಸ ಗರಿ ಮೂಡಿಸಿದ್ದೀಯಾ. ನನಗೆ ತಿಳಿದ ಮಟ್ಟಿಗೆ ಇಡೀ ಪ್ರಪಂಚದಲ್ಲೇ ಏಳು ತಂತಿ ಪಿಟೀಲನ್ನು ಅವಿಷ್ಕಾರಗೊಳಿಸಿ ನುಡಿಸಿದವರಲ್ಲಿ ನೀನೆ ಮೊದಲಿಗನಿರಬೇಕು. ಅಭಿನಂದನೆಗಳು. 

ನಮ್ಮ ದೇಶಕ್ಕೆ ಮೈಕು ಅನಿಸಿಕೊಂಡಿದ್ದು ಬರುವುದಕ್ಕೆ ಇನ್ನೆಷ್ಟು ವರ್ಷಗಳು ಕಾಯಬೇಕೋ? ನಿನ್ನ ಏಳು ತಂತಿ ಪಿಟೀಲಿನ ಪ್ರಯೋಗ ಪಿಟೀಲಿನ ನಾದವನ್ನು ದ್ವಿಗುಣಗೊಳಿಸಿದೆ, ಪಿಟೀಲು ವಾದಕರಿಗೊಂದು ಹೊಸ ಚೈತನ್ಯ ದೊರೆತಂತಾಗಿದೆ.  ಆದರೆ ಒಂದು ವಿಷಯ. ಮಾಧುರ್ಯಕ್ಕೆ, ಗಮಕಗಳಿಗೆ ಧಕ್ಕೆಯಾಗದಂತೆ ನುಡಿಸಬೇಕು....... ಅಲ್ಲವೇ ಚೌಡಯ್ಯ? 

ಚೌಡಯ್ಯ: ತಮ್ಮ ಅನುಮೋದನೆ  ದೊರೆತು ನನ್ನ ಏಳು ತಂತಿ ಪಿಟೀಲಿಗೆ ಹೊಸದೊಂದು ಗರಿ ಬಂದಿದೆ. ತಾವು ಎಚ್ಚರಿಸಿದಂತೆ ಮಾಧುರ್ಯ, ಗಮಕಗಳ ಕಡೆಗೆ ವಿಶೇಷ ಗಮನ ಹರಿಸಬೇಕು. ಏಳು ತಂತಿ ಪಿಟೀಲಿನ ನುಡಿಸಾಣಿಕೆಯ ತಂತ್ರವೇ ಬೇರೆ. ತಂತಿಗಳ  ಮೇಲೆ ಬೆರಳಾಡಿಸುವಾಗ ಬಹಳ ಎಚ್ಚರ ವಹಿಸಬೇಕು. 

ಕೃಷ್ಣಪ್ಪ: ಇನ್ನು ಮುಂದೆ ಎಲ್ಲ ಸಂಗೀತ ಕಚೇರಿಗಳ ಪಕ್ಕವಾದ್ಯಗಳಿಗೆ ನೀನು ಏಳು ತಂತಿ ಪಿಟೀಲನ್ನೇ ಬಳೆಸು. ನಿನ್ನ  ತನಿ ಕಚೇರಿಗಳ ಪ್ರಯೋಗವು ಬೇಗ ಆಗಲಿ. 

-೦-೦-೦-

ದೃಶ್ಯ - ೧೬ 

(ಮದ್ರಾಸಿನ ಒಂದು ಸಭಾಂಗಣದಲ್ಲಿ ವಿದ್ವಾನ್ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ರವರ ಸಂಗೀತ ಕಚೇರಿ ಏರ್ಪಾಡಾಗಿರುತ್ತದೆ. ಚೌಡಯ್ಯನವರದೇ ಪಿಟೀಲು ಪಕ್ಕವಾದ್ಯ. ಆ ಸನ್ನಿವೇಶದಲ್ಲಿ ಅರಿಯಾಕುಡಿಯವರು ಚೌಡಯ್ಯನವರ ಬಗ್ಗೆ ಋಣಾತ್ಮಕ ಭಾವವನ್ನು ಹೊಂದಿರುತ್ತಾರೆ. ಇವನೇನು ನುಡಿಸಬಲ್ಲ ಎಂಬ ಧೋರಣೆ ಬೇರೆ. ಹಿಂದಿನ ಕಚೇರಿಯ ಕಹಿ ಅನುಭವದ ಹಿನ್ನಲೆಯಲ್ಲಿ ಚೌಡಯ್ಯನವರೂ  ಕೊಂಚ ಕೆರಳೆ ಸಿದ್ಧರಾಗಿರುತ್ತಾರೆ. ಕಚೇರಿಗೆ ಅಪಾರ ಜನ ಸೇರಿದ್ದು ಪೊಲೀಸ್ ಬಂದೂಬಸ್ತು ಕೂಡ ಏರ್ಪಾಡಾಗಿರುತ್ತೆ. 

ವ್ಯವಸ್ಥಾಪಕರು: ನೆರೆದಿರುವ ಶ್ರೋತೃಗಳಿಗೆಲ್ಲಾ ಸ್ವಾಗತ್. ನನಗೆ ಗೊತ್ತು. ಹಾಡುಗಾರ ದಿಗ್ಗಜ ತಿರು  ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಏಳು ತಂತಿ ಪಿಟೀಲು ದಿಗ್ಗಜ ತಿರು ಚೌಡಯ್ಯನವರು ಮತ್ತು ಮೃದಂಗ ದಿಗ್ಗಜ ಪಾಲಘಾಟ್ ಮಣಿ ಅಯ್ಯರ್ ರವರ ಸಂಗೀತ ಕಚೇರಿ ಕೇಳಲು ಕಾತುರರಾಗಿದ್ದೀರಿ. ದಯಾಮಾಡಿ ನಿಶ್ಯಬ್ಧರಾಗಿ ಕುಳಿತು ಕಚೇರಿಯನ್ನು ಆಲಿಸಬೇಕು (ಎಂದು ಹೇಳಿ ಕೈಮುಗಿಯುತ್ತಾರೆ. 

ಕಚೇರಿ ಶುರುವಾಗುತ್ತದೆ. ಅರಿಯಾಕುಡಿಯವರು ಕಲ್ಯಾಣಿ ರಾಗವನ್ನೆತ್ತಿಕೊಂಡು ಮನಸೋ ಇಚ್ಛೆ ಹಾಡತೊಡಗುತ್ತಾರೆ. ವಿಸ್ತೃತ ಲಹರಿ. ರಾಗಾಲಾಪ. ತ್ಯಾಗರಾಜರ 'ನಿಧಿಚಾಲ ಸುಖಮಾ' ಎಂಬ ಕೀರ್ತನೆಯನ್ನು ಅಮೋಘವಾಗಿ ಹಾಡುತ್ತಾರೆ. ಚೌಡಯ್ಯನವರು ತಾವ್ಯಾರಿಗೂ ಕಮ್ಮಿಯಿಲ್ಲವೆನ್ನುವಂತೆ ಸೊಗಸಾಗೇ ಪಕ್ಕವಾದ್ಯವನ್ನು ನುಡಿಸುತ್ತಾರೆ. ಅಂತಿಮವಾಗಿ ಅರಿಯಾಕುಡಿಯವರು ಸಂಕೀರ್ಣ ಲೆಕ್ಕಾಚಾರದ  ಸುದೀರ್ಘ ಸ್ವರಪ್ರಸ್ತಾರವನ್ನು ಮಾಡಿ, 'ಏನು' ಎಂಬಂತೆ ಹುಬ್ಬೇರಿಸಿ ಚೌಡಯ್ಯನವರತ್ತ ನೋಡಿ ಸವಾಲಿನ ನಗೆಯೊಂದನ್ನು ಬೀರುತ್ತಾರೆ. 

ಅಷ್ಟು ಸಾಕಾಗಿರುತ್ತೆ ನಮ್ಮ ಚೌಡಯ್ಯನವರಿಗೆ. ಅಂದು ಅರಿಯಾಕುಡಿಯವರತ್ತ ಅವರು ಬೀರಿದ ಮರು ನೋಟದಲ್ಲಿ ರೆಬೆಲ್ ಸ್ಟಾರ್ರೊಬ್ಬರ ಕೆಚ್ಚಿರುತ್ತದೆ. ಲೀಲಾಜಾಲವಾಗಿ ಏನು ಆಗೇ ಇಲ್ಲ ಎಂಬಂತೆ ಒಂದಕ್ಕೆ ಪ್ರತಿಯಾಗಿ ನಾಲ್ಕು ಸಂಗತಿಗಳನ್ನು ನುಡಿಸಿ ಜನರ ಭೋರ್ಗರೆಯುವ ಚಪ್ಪಾಳೆ ನಡುವೆ ಪಿಟೀಲನ್ನು ಕೆಳಗಿಟ್ಟು ಕುಳಿತುಬಿಡುತ್ತಾರೆ. 

ಆಗ ಅರಿಯಾಕುಡಿಯವರು ತಬ್ಬಿಬ್ಬಾಗುತ್ತಾರೆ. ಚೌಡಯ್ಯನವರು ಸಭೆಗೆ ಕೇಳುವಂತೆಯೇ ಜೋರಾಗಿ ನುಡಿಯುತ್ತಾರೆ). 

ಚೌಡಯ್ಯ: ನಿಮ್ಮ ಲೆಕ್ಕಾಚಾರ ನಿಮಗೆ ದೊಡ್ಡದಿರಬಹುದು. ಈ ಅತಿ ಜಾಣತನವೆಲ್ಲಾ ನನಗೆ ನೀರು ಕುಡಿದಂತೆ. ಅದನ್ನು ತೋರಿಸುವುದಕ್ಕೆ ನಾಲ್ಕವಾರ್ತ ನುಡಿಸಿಬಿಟ್ಟಿದ್ದೇನೆ. ಆದರೆ ಇವೆಲ್ಲಾ ಸಂಪ್ರದಾಯ ವಿರೋಧೀ ಧೋರಣೆಗಳು. ನೀವು ನಿಮ್ಮ ಮನಸ್ಸಿಗೆ ಸರಿ ಕಂಡಂತೆ ಹಾಡಿಕೊಳ್ಳಿ. ನಾನು ನುಡಿಸಲು ಸಿದ್ಧನಿಲ್ಲ (ಎಂದು ಸಭೆಗೆ ಕೈ ಮುಗಿಯುತ್ತಾರೆ. ವ್ಯವಸ್ಥಾಪಕರು ಮತ್ತು ಸಂಗೀತಾಭಿಮಾನಿಗಳೂ ಕೇಳಿಕೊಂಡ ಮೇಲೆ ಚೌಡಯ್ಯನವರು ಮತ್ತೆ ಪಿಟೀಲು ಕೈಗೆತ್ತಿಕೊಂಡದ್ದು. ಅರಿಯಾಕುಡಿಯವರು ಸಂಪ್ರದಾಯಕ್ಕೆ ಮರ್ಯಾದೆ ಕೊಟ್ಟು ಕಚೇರಿ ಮುಂದುವರೆಸುತ್ತಾರೆ. 

ಮುಂದೆ ಕಚೇರಿಯ ಅಂತ್ಯದಲ್ಲಿ ಕಾಪಿ ರಾಗದಲ್ಲಿ ರಾಗ ತಾನ ಪಲ್ಲವಿಯನ್ನು ಹಾಡಿದ ಅರಿಯಾಕುಡಿಯವರು ಚೌಡಯ್ಯನವರಿಗೆ ಅವಕಾಶ ಕೊಡದೆ ಮುನ್ನಡೆಯುತ್ತಾರೆ. ಇದು ಚೌಡಯ್ಯನವರನ್ನು ಮುಜುಗರಕ್ಕೆ ಸಿಕ್ಕಿಸುತ್ತದೆ. 

ಅಷ್ಟರಲ್ಲೇ ಜನಗಳು ಕೂಗುತ್ತಾ 'ಚೌಡಯ್ಯನವರಿಗೆ ಅವಕಾಶ ಕೊಡಿ, ಪಿಟೀಲಿಗೆ ಅವಕಾಶ ಕೊಡಿ' ಎನ್ನುತ್ತಾರೆ). 

ಅರಿಯಾಕುಡಿ: (ಸೋಲೊಪ್ಪದವರಾಗಿ.....) ಅವಕಾಶ ಕೊಟ್ಟದ್ದು ಬೇಕಾದಷ್ಟಾಗಿದೆ. ಇದು ಕಚೇರಿಯ ಅಂತ್ಯ ಭಾಗ. ಸಂಪ್ರದಾಯದಂತೆ ಇಲ್ಲಿ ಪಕ್ಕವಾದ್ಯದವರಿಗೆ ಅವಕಾಶವಿಲ್ಲ. 

('ಚೌಡಯ್ಯನವರಿಗೆ ಅವಕಾಶ ಕೊಡದಿದ್ದರೆ ನಿಮಗೆ ಹಾಡಲು ಬಿಡುವುದಿಲ್ಲ' ಎನ್ನುತ್ತಾ ಸಭೆಗೆ ಸಭೆಯೇ ಎದ್ದು ನಿಲ್ಲುತ್ತದೆ. ಪೊಲೀಸ್ ವರಿಷ್ಠಾಧಿಕಾರಿ ಸಮಾಧಾನ ಮಾಡಿದ್ದು ಪ್ರಯೋಜನಕ್ಕೆ ಬಾರದಾಗುತ್ತದೆ.  ಕೊನಗೆ ಅರಿಯಾಕುಡಿಯವರು ಚೌಡಯ್ಯನವರಿಗೆ ಅವಕಾಶ ಕೊಡಲೇ ಬೇಕಾಗುತ್ತದೆ. ಸೊಗಸಾಗಿ ಕಾಪಿ ರಾಗ ನುಡಿಸಿ ಚೌಡಯ್ಯನವರು ಚಪ್ಪಾಳೆ ಗಿಟ್ಟಿಸುತ್ತಾರೆ. ಇದರಿಂದ ಅರಿಯಾಕುಡಿಯವರು ಮುಜುಗರಗೊಳ್ಳುತ್ತಾರೆ. 

ಎಲ್ಲವನ್ನೂ ಗಮನಿಸುತ್ತಾ ಶ್ರೋತೃಗಳ ನಡುವೆ ಕುಳಿತ್ತಿದ್ದ ಹಿರಿಯರಾದ ಬಿಡಾರಂ ಕೃಷ್ಣಪ್ಪನವರು ಅಂದೇ ರಾತ್ರಿ ಇಬ್ಬರನ್ನೂ ಕರೆದು ಬುದ್ಧಿ ಹೇಳುತ್ತಾರೆ). 

ಕೃಷ್ಣಪ್ಪ: (ಇಬ್ಬರ ಬೆನ್ನು ತಟ್ಟುತ್ತಾ......) ನೀವಿಬ್ಬರೂ ಅದ್ವಿತೀಯ ಪ್ರತಿಭಾವಂತರು. ಅಪಾರ ಸಾಧನೆ ಮಾಡಿದ್ದೀರಿ. ಹೀಗೆ ಪರಸ್ಪರ ಕಚ್ಚಾಡಿಕೊಂಡರೆ ಏನು ಪ್ರಯೋಜನವಾದೀತು? ಒಬ್ಬರನೊಬ್ಬರು ಅರಿತು ಸಂಗೀತದ ಘನತೆ ಹೆಚ್ಚಿಸಲು ಯತ್ನಿಸಬೇಕು. 

(ತಪ್ಪಾಯಿತು ಎನ್ನುತ್ತಾ ಯುವಕರಾದ ಅರಿಯಾಕುಡಿ ಮತ್ತು ಚೌಡಯ್ಯನವರಿಬ್ಬರೂ ಗುರುಗಳಿಗೆ ವಂದಿಸುತ್ತಾರೆ).  

-೦-೦-೦-

ದೃಶ್ಯ ೧೭

(ಮೈಸೂರಿನ ಪ್ರಸಿದ್ಧ ವಕೀಲ ಪುಟ್ಟೂರಾಯರ ಮನೆ.  ಪುಟ್ಟೂರಾಯರ ಮನೆಯಂಗಳದಲ್ಲಿ ರಾಮೋತ್ಸವದ ಸಂಗೀತ ಕಾರ್ಯಕ್ರಮಗಳು ಪ್ರತಿದಿನ ಸಾಯಿಂಕಾಲ ನಡೆಯುತ್ತಿರುತ್ತವೆ. ಹಿಂದಿನ ದಿನ ಅರಿಯಾಕುಡಿ ಮತ್ತು ಚೌಡಯ್ಯನವರ ಕಾರ್ಯಕ್ರಮ ನಡೆದಿರುತ್ತದೆ. ಅಂದಿನ ದಿನ ಜಿ.ಎನ್.ಬಿ.ರವರ ಕಾರ್ಯಕ್ರಮ ನಡೆಯಬೇಕಿರುತ್ತೆ. ಅಂದಿನ ಬೆಳಿಗ್ಗೆ ಅರಿಯಾಕುಡಿಯವರು, ಜಿ.ಎನ್.ಬಿ.ರವರು, ಚೌಡಿಯ್ಯನವರು ಮತ್ತು ಯುವಕರಾದ ದೊರೆಸ್ವಾಮಿ ಅಯ್ಯಂಗಾರರವರೂ ಪುಟ್ಟೂರಾಯರ ಸಮ್ಮುಖದಲ್ಲಿ ಸೇರಿರುತ್ತಾರೆ). 

ಪುಟ್ಟೂರಾಯರು:  (ಅರಿಯಾಕುಡಿ ಮತ್ತು ಚೌಡಯ್ಯನವರನ್ನು ನೋಡುತ್ತಾ.....) ನಿನ್ನೆಯ ನಿಮ್ಮ  ಕಾರ್ಯಕ್ರಮ ಅಮೋಘವಾಗಿತ್ತು. 

ಅರಿಯಾಕುಡಿ: ಕಾರ್ಯಕ್ರಮದ ಶ್ರೇಯವೆಲ್ಲ ತಮಗೆ ಸಲ್ಲಬೇಕು ಪುಟ್ಟೂರಾಯರೇ. ತಮ್ಮ ಮನೆಯೊಂದು ಸಂಗೀತದ ತವರು. ನಮ್ಮಂಥ ಸಂಗೀತಗಾರರಿಗೆಲ್ಲಾ ಆಶ್ರಯ ಸದಾ ನೀಡುವ ಆಲದ ಮರವಿದ್ದಂತೆ. ಸಂಗೀತದ ಉಳಿವಿಗೆ ಸಂಗೀತಗಾರರಷ್ಟೇ ನಿಮ್ಮಂಥ ಸಂಗೀತಾಭಿಮಾನಿಗಳೂ ಕಾರಣ. ನಿಮ್ಮಂಥ ವ್ಯವಸ್ಥಾಪಕರನ್ನು ನಮ್ಮಗಳ ಅನ್ನದಾತರೆಂದರೂ ತಪ್ಪಿಲ್ಲ. 

ಪುಟ್ಟೂರಾಯರು: ದೊಡ್ಡ ಮಾತು ಅರಿಯಾಕುಡಿಯವರೇ, ತಮ್ಮದು ದೊಡ್ಡಮಾತು. ತಮ್ಮಂತಹ ಸಂಗೀತಗಾರರ  ಸೇವಾವಕಾಶವೇ ನಮ್ಮ ಪಾಲಿನ ದೊಡ್ಡ ಭಾಗ್ಯ (ಎಂದು ಎಲ್ಲರಿಗೂ ಕೈ ಮುಗಿಯುತ್ತಾರೆ). 

ಚೌಡಯ್ಯ: ಅರಿಯಾಕುಡಿಯವರೇ.......ತಮ್ಮ ನಿನ್ನೆಯ ಕಾರ್ಯಕ್ರಮದಲ್ಲಿ ಹಾಡಿದ ದೇವಮನೋಹರಿ ರಾಗ ಅದ್ಭುತವಾಗಿತ್ತು. ತ್ಯಾಗರಾಜರ 'ಎವರಿಕೈ ಅವತಾರಮು' ಕೀರ್ತನೆಯ ಎಸಳು ಎಸಳನ್ನು ಎಳೆ  ಎಳೆಯಾಗಿ ಬಿಡಿಸುತ್ತ ಸೊಗಸಾಗಿ ಹಾಡಿದಿರಿ. ತ್ಯಾಗರಾಜರು ಆ ಕೀರ್ತನೆಯನ್ನು ತಮಗಾಗೇ ರಚಿಸರಬೇಕು ಎನಿಸುತಿತ್ತು. ಆ ಮಟ್ಟದ ಗಾಯನವನ್ನು ಹಾಡಲು ತಮ್ಮನ್ನು ದೇವರು ನೂರ್ಕಾಲ ಬಾಳುವಂತೆ ಅನುಗ್ರಹಿಸಬೇಕು. 

ಅರಿಯಾಕುಡಿ: (ಚೌಡಯ್ಯನವರನ್ನು ನೋಡುತ್ತಾ....) ದೇವಮನೋಹರಿಯ ಆ ಕೀರ್ತನೆಯ ಹಾಡುಗಾರಿಕೆಗೆ ತಮ್ಮ ಪಿಟೀಲು ಸಹಕಾರವು ಅಷ್ಟೇ ಅದ್ಭುತವಾಗಿತ್ತು. ನೀವೂ ನೂರ್ಕಾಲ  ನನ್ನೊಟ್ಟಿಗಿದ್ದು ಇದೇ ರೀತಿ ಪಿಟೀಲು ಸಹಕಾರ ಕೊಡುವುದಾದರೆ, ನಾನಂತೂ ನೂರ್ಕಾಲ ಬಾಳಲು ಸಿದ್ಧ. 

ಚೌಡಯ್ಯ: (ಎಲ್ಲರನ್ನು ನೋಡುತ್ತಾ....) ಕಳೆದ ಸುಮಾರು ದಶಕಗಳಿಂದ ನಾನು ಅರಿಯಾಕುಡಿಯವರನ್ನು  ಹಿಡಿಯಲು ಹರಸಾಹಸ ಪಡುತ್ತಲೇ  ಇದ್ದೇನೆ. ಆದರೆ ಅವರು ನನ್ನ ಕೈಯಿಂದ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ.  ಅವರ ಪಾಂಡಿತ್ಯ ಮತ್ತು ಪ್ರಯೋಗಗಳು ಅಷ್ಟು ದೊಡ್ಡವು. (ಅರಿಯಾಕುಡಿಯವರು ವಿನಮ್ರರಾಗಿ ಕೈ ಮುಗಿಯುತ್ತಾರೆ). 

ಜಿ.ಎನ್.ಬಿ.: ಚೌಡಯ್ಯನವರೇ.....ತಮ್ಮ ಪ್ರಯೋಗಶೀಲತೆಯೇನು ಕಮ್ಮಿಯೇ? ಏಳು ತಂತಿ ಪಿಟೀಲನ್ನು ಆವಿಷ್ಕರಿಸಿ ಯಶಸ್ವಿಯಾಗಿ ನುಡಿಸುತ್ತಿರುವ ಇಡೀ ವಿಶ್ವದ  ಸಂಗೀತಗಾರರಲ್ಲಿ ತಾವೇ ಮೊದಲಿಗರು. ತಮ್ಮ ಪಿಟೀಲಿನ ನುಡಿಸಾಣಿಕೆಯಲ್ಲಿ ಗಂಡಸು ಮತ್ತು ಹೆಂಗಸು ಏಕಕಾಲದಲ್ಲಿ ಹಾಡಿ  ಕಳೆಕಟ್ಟಿಕೊಡುತ್ತಿರುವ ಛಾಯೆಯಿದೆ. ಅದಕ್ಕಾಗೇ ತಮನ್ನು 'ಚೌಡಯ್ಯ ಅಲ್ಲ, ಸೌಂಡಯ್ಯ' ಎಂದು ನಾನು ಕರೆಯುವುದು. 

ಅರಿಯಾಕುಡಿ: ಹೌದೌದು. ಚೌಡಯ್ಯನವರ ಏಳು ತಂತಿ ಪಿಟೀಲಿನ ಅಮೋಘ ನಾದ ಶಕ್ತಿಯನ್ನು ಕೇಳಿದ ಮೇಲೆ ಅವರನ್ನು ಸೌಂಡಯ್ಯ ಎಂದು ಧಾರಾಳವಾಗಿ ಕರೆಯಬಹುದು. 

ಚೌಡಯ್ಯ: ಅರಿಯಾಕುಡಿಯವರಂತೆ ಜಿ.ಎನ್.ಬಿ.ರವರೂ ಮಹಾಮಹಿಮರು. ಅತ್ತ್ಯುತ್ತಮ ಪ್ರಯೋಗಶೀಲರು. ಹೊಸ ಕುಡಿಗಳಾದ ರಾಧಾ-ಜಯಲಕ್ಷ್ಮಿ, ಎಂ.ಎಲ್.ವಸಂತಕುಮಾರಿ ಅವರಂತಹ ಹೊಸ  ಪ್ರತಿಭಾವಂತರನ್ನು ಮುಂದೆ ತರಲು ಹರಸಾಹಸ ಪಡುತ್ತಿದ್ದಾರೆ. ಭಾಮಾ ವಿಜಯಂ, ಶಕುಂತಲೈ, ರುಕ್ಮಾನ್ಗದನ್ ಮುಂತಾದ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿದ್ದಾರೆ.  ಬಹುಮುಖ ಪ್ರತಿಭೆ ಇವರು. 

ಜಿ.ಎನ್.ಬಿ.: ಚೌಡಯ್ಯನವರೇ, ನಿಮ್ಮ ಅಭಿಮಾನ ದೊಡ್ಡದ್ದು. ಪಕ್ಕವಾದ್ಯದ ಕಲಾವಿದರುಗಳ ಪೈಕಿ ಮುಖ್ಯಗಾಯಕರುಗಳಿಗೆ ವೇದಿಕೆ ಮೇಲೇ ತಿಳಿಹೇಳುವ ಎದೆಗಾರಿಕೆ ಇರುವುದು ನಿಮಗೆ  ಮಾತ್ರ. ಅದೇ ರೀತಿ ಮುಖ್ಯಗಾಯಕನೊಬ್ಬನು ಮೂಡ್ ಇಲ್ಲದೆ ಕಳೆಗುಂದಿ ವೇದಿಕೆಯ ಮೇಲೆ ಕುಳಿತಾಗ ಅವನನ್ನು ಚಿವುಟಿ ಎಚ್ಚರಿಸುವ  ಮಾತೃ ಹೃದಯ ನಿಮ್ಮದು.  ಅಂತಹ ಪರಿಸ್ಥಿತಿಯೊಂದರಲ್ಲಿ ತಾವು ನಾನು ಹಿಂದೆಂದೋ ಹಾಡಿದ್ದ ಕಲ್ಪನಾ ಸ್ವರದ ಛಾಯೆಯನ್ನು ನುಡಿಸಿ ತೋರಿಸಿ ನನ್ನನ್ನು ಹುರಿದುಂಬಿಸಿದ್ದೀರಿ. ಅನೇಕ ಸಲ ನಾನು ಇಷ್ಟು ಹಾಡಲು ಸಾಧ್ಯವಾಯೀತೆ ಎಂದು ನನಗೆ ನಾನೇ ಅಚ್ಚರಿಪಡುವಂತೆ ಮಾಡಿದ್ದೀರಿ. 

ಚೌಡಯ್ಯ: ಸಂಗೀತಗಾರರುಗಳಾದ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ. ಒಬ್ಬರಿಗೊಬ್ಬರು ಪೂರಕರಾಗಿ ಸಹಕರಿಸಬೇಕೇ ಹೊರತು ಪ್ರತಿಸ್ಪರ್ಧಿಗಳಾಗಬಾರದು. ಒಟ್ಟಿನಲ್ಲಿ ಸಂಗೀತ ಕಚೇರಿ ಕಳೆಗಟ್ಟಿ ರಸಿಕರಿಗೆ ರಸದೌತಣ ದೊರೆಯುವಂತಾಗಬೇಕು. 

ಜಿ.ಎನ್.ಬಿ.: ಅಂದ ಹಾಗೆ ಇಂದು ಸಂಜೆ ನನ್ನ ಕಾರ್ಯಕ್ರಮ. ನನ್ನ ಗಂಟಲೇಕೋ ಸ್ವಲ್ಪ ಸರಿಯಿಲ್ಲ. ತಾರಾ ಸ್ಥಾಯಿಯ ಸ್ವರಗಳನ್ನು ಲೀಲಾಜಾಲವಾಗಿ ಹಾಡಬಲ್ಲೆನೆಂಬ ಕಾನ್ಫಿಡೆನ್ಸ್ ಇಲ್ಲ. 

ಚೌಡಯ್ಯ: (ತಮ್ಮ ನೆಶ್ಯದ ಡಬ್ಬಿಯನ್ನು ಹೊರತೆಗೆಯುತ್ತಾ....)ಹಾಡುಗಾರರ ಗಂಟಲ ಸಮಸ್ಯೆಗೆ ಈ ನನ್ನ ನೆಶ್ಯವೇ ರಾಮಬಾಣ (ಎನ್ನುತ್ತಾ.....ತಮ್ಮ ನೆಶ್ಯೆವನ್ನೇರಿಸುವಂತೆ ಜಿ.ಎನ್.ಬಿ.ರವರಿಗೆ ತಮ್ಮ ನೆಶ್ಯದ ಡಬ್ಬಿಯನ್ನು ಕೊಡುತ್ತಾರೆ). 

ದೊರೆಸ್ವಾಮಿ ಅಯ್ಯಂಗಾರ್: (ಚೌಡಯ್ಯನವರನ್ನು ನೋಡುತ್ತಾ....) ಅಲ್ಲಾ ಚೌಡಯ್ಯನವರೇ......ನಿಮ್ಮ ನೆಶ್ಯ ಹಾಡುಗಾರರ ಗಂಟಲ ಸಮಸ್ಯಗೆ ಔಷಧವೇ? 

ಚೌಡಯ್ಯ: ದೊರೆಸ್ವಾಮಿ..... ನೀನಿನ್ನೂ ಎಳೆ ನಿಂಬೆಕಾಯಿ. ನಿನಗೇನೂ ಗೊತ್ತೋ? ಒಂದು ಚಿಟಿಕೆ ನೆಶ್ಯವನ್ನು ಎಂದಾದರೂ ಮೂಗಿಗೇರಿಸಿದ್ದಾರೆ ಗೊತ್ತಿರುತ್ತಿತ್ತು.  ಸುಮ್ಮನಿರು. 

ಈ ನನ್ನ ನೆಶ್ಯದ ಮಹಿಮೆ ಅರಿಯಾಕುಡಿಯವರಿಗೂ ಗೊತ್ತು. ಇದು ಸಾಮಾನ್ಯವಾದ ನೆಶ್ಯವಲ್ಲ. ಸುಣ್ಣ ಹಾಗು ಬೆಣ್ಣೆಯನ್ನು ಸೇರಿಸಿ ಅಂಗೈಯಲ್ಲಿ ಹಾಕಿ ಉಜ್ಜಿ ಉಜ್ಜಿ ಪರಿಷ್ಕರಿಸಿದ್ದು.  (ಉಜ್ಜುವ ವಿಧಾನವನ್ನು ಅಭಿನಯಿಸಿ ತೋರಿಸುತ್ತಾರೆ). ಒಂದು ಚಿಟಿಕೆ ಮೂಗಿಗೇರಿಸಿದರೆ ಬುದ್ಧಿ ಚುರುಕಾಗುತ್ತದೆ ಮತ್ತೆ ಗಂಟಲು ಕೂಡ ಸಲೀಸಾಗುತ್ತದೆ. 

(ದೊರೆಸ್ವಾಮಿ ಅಯ್ಯಂಗಾರವರೊಬ್ಬರನ್ನು  ಬಿಟ್ಟು ಬೇರೆಲ್ಲರೂ ಚೌಡಯ್ಯನವರ ನೆಶ್ಯವನ್ನೇರಿಸುತ್ತಾರೆ. ಅವರವರ ಕರವಸ್ತ್ರಗಳಲ್ಲಿ ಮೂಗು ಕೈಗಳನ್ನು ಒರೆಸಿಕೊಳ್ಳಲ್ಲು ತಡಕಾಡುತ್ತಾರೆ). 

ಚೌಡಯ್ಯ: ನೆಶ್ಯದ ಅಭ್ಯಾಸವಿದ್ದವರಿಗೆಲ್ಲ ಬಟ್ಟೆ ಕೊಳಕಾಗುವುದು ಸರ್ವೇ ಸಾಮಾನ್ಯ. ಸುಣ್ಣ-ಬೆಣ್ಣೆ ಹಾಕಿ ನೆಶ್ಯದ ಜೊತೆ ಉಜ್ಜಿರುತ್ತೀವಿ ನೋಡಿ ........ ಅಂಟಿಕೊಂಡ ಕೊಳಕು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಬಿಳಿ ಬಟ್ಟೆಯಾದರಂತೂ ಮುಗಿಯಿತು ಬಿಡಿ. ನನ್ನ ಬಟ್ಟೆ ಒಗೆಯೋ ಅಗಸರೊಂಗೆ ನಾನೆಷ್ಟು ಋಣಿಯಾಗಿದ್ರು ಸಾಲದು. ನನ್ನ ಜುಬ್ಬಾ ಪಂಚೆಗಳು ಎಷ್ಟೇ ಕೊಳಕ್ಕಾಗಿದ್ರೂ ಶುಭ್ರವಾಗಿ ಒಗೆದು ಇಸ್ತ್ರಿ ಮಾಡಿ ತಂದುಕೊಡುತ್ತಾನೆ. 

(ಎಲ್ಲರು ಒಟ್ಟಿಗೆ ಜೋರಾಗಿ ನಗುತ್ತಾರೆ)

ಜಿ.ಎನ್.ಬಿ.: ಮೈಸೂರಿಗೆ ಬಂದಾಗಲೇನೋ ತಾವು ನನಗೆ ನೆಶ್ಯವನ್ನು ಒದಗಿಸುತ್ತಿರೀ. ಮದ್ರಾಸ್ಗೆ ಹೋದ ಮೇಲೆ ಏನು ಮಾಡಲಿ?

ಚೌಡಯ್ಯ: ನೀವೇನು ಆತಂಕ ಪಡಬೇಡಿ.  ನನ್ನ ಬ್ರಾಂಡ್ ನೆಶ್ಯವನ್ನು ಪ್ರತಿ ತಿಂಗಳೂ ಪಾರ್ಸೆಲ್ ಮಾಡುತ್ತೇನೆ.  ಈ ವ್ಯಾಪಾರದಲ್ಲಿ ಅರಿಯಾಕುಡಿಯವರೇ ನನ್ನ ಮೊದಲ ಗಿರಾಖಿಗಳು (ಎಂದು ಅರಿಯಾಕುಡಿಯವರತ್ತ ನೋಡಿ ನಗುತ್ತಾರೆ. 

ಮತ್ತೊಮ್ಮೆ ಎಲ್ಲರ ನಡುವೆ ನಗೆಯ ಕಡಲು ಉಕ್ಕುತ್ತದೆ). 

-೦-೦-೦-

ದೃಶ್ಯ ೧೮

(ಚೌಡಯ್ಯನವರ ಸ್ನೇಹಿತರಾದ ಗೋಪಾಲ್ರವರ ಗೋಪಾಲ್ ಸ್ಟುಡಿಯೋದಲ್ಲಿ ಚೌಡಯ್ಯನವರು, ನಾಟಕರಂಗದ ದಿಗ್ಗಜರಲ್ಲಿ ಒಬ್ಬರಾದ ಕೆ. ಹಿರಣ್ಣಯ್ಯನವರು, ಬಸ್ ಮಾಲೀಕರಾದ ಜಿ.ಆರ್.ರಾಮಯ್ಯನವರು, ಫೋಟೋ ಸ್ಟುಡಿಯೋ ಮಾಲೀಕರಾದ ಗೋಪಾಲ್ರವರು ಮತ್ತು ಹೆಸರಾಂತ ರೇಷ್ಮೆ ವರ್ತಕ ಟಿ.ಎನ್. ಶಿವಬಸವ ಸ್ವಾಮಿಯವರೂ ಸೇರಿರುತ್ತಾರೆ). 

ಚೌಡಯ್ಯ: ನಾಟಕದ ರಂಗದ ದಿಗ್ಗಜರಾದ ಶ್ರೀ ಕೆ.ಹಿರಣ್ಣಯ್ಯರವರೇ, ಬಸ್ ಮಾಲೀಕರಾದ ಜಿ.ಆರ್.ರಾಮಯ್ಯನವರೇ, ಫೋಟೋ ಸ್ಟುಡಿಯೋ ಮಾಲೀಕರಾದ ಗೋಪಾಲ್ರವರೇ ಮತ್ತು ರೇಷ್ಮೆ ವರ್ತಕರಾದ ಟಿ.ಎನ್.ಶಿವಬಸವ ಸ್ವಾಮಿರವರೇ,  ನನ್ನ ಕರೆಗೆ ಓಗೊಟ್ಟು ಆಗಮಿಸಿರುವ ಮಿತ್ರರುಗಳಾದ ತಮಗೆಲ್ಲ ಸುಸ್ವಾಗತ. ತಮ್ಮೊಂದಿಗೆ ನಾನು ಚರ್ಚಿಸಲಿರುವ ವಿಷಯ ಸ್ಥೂಲವಾಗಿ ತಮಗೆಲ್ಲಾ ತಿಳಿದೇ ಇದೆ.

ಟಾಕಿ ಸಿನಿಮಾಗಳು ನಮ್ಮ ದೇಶಕ್ಕೆ ಲಗ್ಗೆ ಇಟ್ಟು  ೧೦ ವರ್ಷಗಳು ಕಳೆದಿವೆ.  ಹಿಂದಿಯ ಆಲಂ ಅರಾ ಹಾಗೂ ಕನ್ನಡದ ಸತಿ ಸುಲೋಚನಾ ಚಿತ್ರಗಳು ತೆರೆಕಂಡು ಅಪೂರ್ವ ಯಶಸ್ಸನ್ನು ಕಂಡಿವೆ. ನಿರ್ಮಾಪಕರುಗಳಿಗೆ ಉತ್ತಮ ಲಾಭವನ್ನು ತಂದಿವೆ. ನಮ್ಮ ಸಂಗೀತಗಾರರುಗಳ ಪೈಕಿ ಮತ್ತಯ್ಯ ಭಾಗವತರು, ಮಹಾರಾಜಪುರಂ ವಿಶ್ವನಾಥ ಅಯ್ಯರ್ರವರು, ಮುಸಿರಿ ಸುಬ್ರಮಣ್ಯ ಅಯ್ಯರ್ರವರು, ಜಿ.ಎನ್.ಬಿ.ರವರೂಗಳಂತಹ ಮಹನೀಯರು ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ, ನಟರಾಗಿ ಮಿಂಚುತ್ತಿದ್ದಾರೆ. ಯುವ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮೀರವರೂ ನಾಯಕಿಯಾಗಿ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಹಿನ್ನಲೆಯಲ್ಲಿ ನಾವುಗಳೇಕೆ ಸಿನಿಮಾವೊಂದನ್ನು ನಿರ್ಮಾಣ ಮಾಡಬಾರದು ಎಂಬ ವಿಷಯವನ್ನು ತಮ್ಮೊಂದಿಗೆ ಇಂದು ಚರ್ಚಿಸಲಿಚ್ಛಿಸುತ್ತೇನೆ. ಸಿನಿಮಾದ ಕಥೆಯನ್ನು ನಮ್ಮ ಮಿತ್ರರಾದ ಹಿರಣ್ಣಯ್ಯನವರು ನಿಮ್ಮಗಳಿಗೆ  ವಿವರಿಸುತ್ತಾರೆ. 

ಹಿರಣ್ಣಯ್ಯ:  ಚೌಡಯ್ಯನವರು ಮತ್ತು ನಾನು ಸೇರಿ  ಸಿನಿಮಾಕ್ಕಾಗಿ ಸಿದ್ಧ ಮಾಡಿಟ್ಟಿರುವ ಕಥೆಯ ಸ್ಥೂಲ ರೂಪವನ್ನು ನಿಮಗೆ ತಿಳಿಸಲಿಚ್ಛಿಸುತ್ತೇನೆ. ಕಥೆ ಸಂಗೀತ ಪ್ರಧಾನವಾದುದು, ಚೌಡಯ್ಯನವರ ಜೀವನಾಧಾರಿತ ಕಥೆಯೇ ಎಂದಿಟ್ಟುಕೊಳ್ಳಿ. ಚೌಡಯ್ಯನವರ ಹೊಸ ಆವಿಷ್ಕಾರವಾದ ಏಳು ತಂತಿ ಪಿಟೀಲನ್ನು ದಾಖಲಿಸುವುದು ಮತ್ತು ಜನಪ್ರಿಯಗೊಳಿಸುವುದೂ ಕೂಡ ಈ ಸಿನಿಮಾದ ಉದ್ದೇಶಗಳಲ್ಲಿ ಒಂದು. 

(ಅಷ್ಟರಲ್ಲಿ ಪಕ್ಕದಲ್ಲಿದ್ದ ನೆರಳು ಹರಿದು ಅಲ್ಲೊಂದು ಹೊಸ ವೇದಿಕೆ ಗೋಚರವಾಗುತ್ತದೆ. ಆ ವೇದಿಕೆಯ ಮೇಲೆ ಯುವ ಸಂಗೀತಗಾರರೊಬ್ಬರ ಏಳು ತಂತಿ ಪಿಟೀಲು ಕಚೇರಿ ಅಮೋಘವಾಗಿ ನಡೆಯುತ್ತಿರುತ್ತದೆ. ಮುಖದ ಮೇಲೆ ಸೆರಗು ಹೊದ್ದ ಹಿರಿಯ ಮಹಿಳೆಯೊಬ್ಬರು ದೂರ ನಿಂತು ಕಚೇರಿಯನ್ನು ಅಭಿಮಾನದಿಂದ ನೋಡುತ್ತಿರುತ್ತಾರೆ. ಕಚೇರಿ ಮುಗಿಯುತ್ತಲೇ ವ್ಯವಸ್ಥಾಪಕರೊಬ್ಬರು ಮಾತನಾಡುತ್ತಾ........)

ವ್ಯವಸ್ಥಾಪಕರು: ಶ್ರೋತೃಗಳೇ......ತಾವೆಲ್ಲರೂ ಕಳೆದ ಮೂರು ಗಂಟೆಗಳಿಂದ ಯುವ ಪಿಟೀಲು ವಾದಕ ಶಂಕರರ  ಏಳು ತಂತಿ ಪಿಟೀಲು ವಾದನದ  ಕಚೇರಿಯನ್ನು ಕೇಳಿದ್ದೀರಿ. ಏಳು ತಂತಿ ಪಿಟೀಲು ಎಂಬುದು ಶಂಕರನದೇ ಆವಿಷ್ಕಾರ.  ಅವರಿಗೀಗ ಸನ್ಮಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಶಂಕರರ ಪತ್ನಿ ನಳಿನಿಯವರು ಶ್ರೋತೃಗಳ ನಡುವಿದ್ದಾರೆ. ಅವರು ದಯಾಮಾಡಿ  ವೇದಿಕೆಗೆ ಬರಬೇಕು. 

(ಶಂಕರನ ಪತ್ನಿ ನಳಿನಿ ವೇದಿಕೆಗೆ ಬಂದು ಶಂಕರನ ಪಕ್ಕ ಕುಳಿತುಕೊಳ್ಳುತ್ತಾರೆ. ಪತಿ ಪತ್ನಿಯರಿಬ್ಬರಿಗೂ ಅಪಾರ ಕರತಾಡನದ ನಡುವೆ ಸನ್ಮಾನ ನಡೆಯುತ್ತದೆ. ಅವುಗಳೆನ್ನೆಲ್ಲಾ ನೋಡುತ್ತಾ ನಿಂತಿದ್ದ ಹಿರಿಯ ಮಹಿಳೆಯ ಕಣ್ಣಾಲಿಗಳಲ್ಲಿ ನೀರು ಹರಿಯುತ್ತದೆ. ಕಣ್ಣೀರನ್ನು ಒರೆಸಿಕೊಳ್ಳುತ್ತಾ ಆ ಮಹಿಳೆ ಮಾತನಾಡುತ್ತಾರೆ.....) 

ಹಿರಿಯ ಮಹಿಳೆ: (ಸೆರಗನ್ನು ಸ್ವಲ್ಪ ಸರಿಸುತ್ತಾ.....) ನನ್ನ ಹೆಸರು ಛಾಯಾಮ್ಮ. ನಾನು ಇಂದಿನ ಪಿಟೀಲು ವಾದಕ ಶಂಕರನನ್ನು ಹಡೆದ ತಾಯಿ. ಇಂದಿಗೆ ನಾನು ಪಟ್ಟ ಪ್ರಯತ್ನಗಳು ಸಾರ್ಥಕಗೊಂಡಿವೆ. ನನ್ನ ಪತಿಯವರಾದ ಭಾಸ್ಕರ ಪಂಡಿತರು ಪಿಟೀಲು ಕಲಾವಿದರೇ. ಅವರ ಅಕಾಲ ಮೃತ್ಯವಿನಿಂದ ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ಮಗನ ಪಿಟೀಲು ಕಲಿಕೆಗಾಗಿ ಜೀತದಾಳಾಗಿ ದುಡಿದು ವ್ಯಭಿಚಾರಿಣಿ ಎಂಬ  ಕಳಂಕವನ್ನು ಹೊತ್ತೆ. ನನ್ನ ಮೇಲಿನ ಕಳಂಕದ ಛಾಯೆ ಮಗನ ಏಳಿಗೆಗೆ ತೊಡಕಾಗದಿರಲಿ ಎಂದು ಅಗೋಚರಳಾಗೆ ದಿನಗಳನ್ನು ಕಳೆಯುತ್ತಿದ್ದೇನೆ.

(ಇಷ್ಟರಲ್ಲಿ ಸಭ್ಯನಂತೆ ಕಾಣುವ ವ್ಯಕ್ತಿಯೊಬ್ಬ ಗಡ್ಡಧಾರಿಯಾದ ವ್ಯಕ್ತಿಯ ಕುತ್ತಿಗೆ ಪಟ್ಟಿಯನ್ನು ಹಿಡಿದು ಎಳೆದು ತಂದು ಛಾಯಮ್ಮನ ಕಾಲುಗಳ ಕೆಳಗೆ ಕೆಡವುತ್ತಾನೆ). 

ಸಭ್ಯ ವ್ಯಕ್ತಿ: ಛಾಯಮ್ಮ..... ನಿಮಗೆ ವಂಚಿಸಿ ನಿಮ್ಮ ಮೇಲೆ ವ್ಯಭಿಚಾರದ ಆರೋಪ ಹೊರಿಸಿದ ದುಷ್ಕರ್ಮಿಯನ್ನು ಎಳೆದು ತಂದಿದ್ದೇನೆ ನೋಡಿ. 

(ಅಷ್ಟರಲ್ಲಿ ಶಂಕರ ಹಾಗು ಅವನ ಪತ್ನಿ ನಳಿನಿ ಕೂಡ ಬಂದು ಛಾಯಮ್ಮನವರ ಪಾದಗಳಿಗೆ ನಮಸ್ಕರಿಸುತ್ತಾರೆ. ಗಡ್ಡಧಾರಿ ವ್ಯಕ್ತಿಯನ್ನು ಛಾಯಮ್ಮ ಗುರುತಿಸುತ್ತಾರೆ.) 

ಗಡ್ಡಧಾರಿ ವ್ಯಕ್ತಿ: (ಛಾಯಮ್ಮನವರನ್ನು ನೋಡುತ್ತಾ....) ಅಮ್ಮ ನಾನು ನಿಮಗೆ ಕೊಟ್ಟ ಕಷ್ಟಗಳು, ಮಾಡಿದ ಅನ್ಯಾಯಗಳು ಅಷ್ಟಿಷ್ಟಲ್ಲ. ವಿನಾಕಾರಣ ವ್ಯಭಿಚಾರಿಣಿ ಎಂಬ ಆರೋಪದ ಪಟ್ಟಿಯನ್ನು ತಮ್ಮ ಮೇಲೆ ಹೊರಿಸಿ ವಂಚಿಸಿದೆ.  ತಾವೊಬ್ಬ ದೇವಿಯಂತಹ ಮಹಿಳೆ. ದಯಾಮಾಡಿ ನನ್ನನ್ನು ಕ್ಷಮಿಸಿ. 

ಛಾಯಮ್ಮ: (ಗಡ್ಡಧಾರಿ ವ್ಯಕ್ತಿಯನ್ನು ನೋಡುತ್ತಾ....) ಎಲ್ಲರ ಪಾಪ ಪುಣ್ಯದ ವಿಮರ್ಶೆಯನ್ನು ಆ ದೇವರು ಮಾಡಲಿ. ನಿಮ್ಮ ಮೇಲೆ ನನಗೆ ಯಾವ ಕೋಪವೂ ಈಗಿಲ್ಲ. 

(ಛಾಯಮ್ಮ ಮಗ ಸೊಸೆಯನ್ನು ಆನಂದದಿಂದ ಅಪ್ಪಿಕೊಳ್ಳುತ್ತಾರೆ. ಪ್ರೇಕ್ಷಕರ ಗಮನ ಈಗ ಗೋಪಾಲ್ ಸ್ಟುಡಿಯೋದಲ್ಲಿ ನೆರೆದ ಗಣ್ಯರ ಮೇಲೆ ಹೋಗುತ್ತದೆ). 

ಹಿರಣ್ಣಯ್ಯ: ಕಥೆಯ ಹಂದರವನ್ನು ನೀವುಗಳೀಗ ನೋಡಿದ್ದೀರಿ. ಸಿನಿಮಾದ ಹೆಸರು “ವಾಣಿ ಅಥವ ವಾಯಲಿನಿಸ್ಟ್” ಎಂದು.  ಸಿನಿಮಾಕ್ಕೆ ನಿರ್ದೇಶನ, ಚಿತ್ರಕಥೆ ಮತ್ತು ಸಂಭಾಷಣೆಗಳು ನನ್ನದು. ನಾನು ಯಾವುದೇ ಹಣವನ್ನು ತೊಡಗಿಸುತ್ತಿಲ್ಲವಾದುದರಿಂದ  ವರ್ಕಿಂಗ್ ಪಾರ್ಟ್ನರ್ ಮಾತ್ರ. ನಿಮ್ಮಗಳೊಡನೆ ನಿರ್ಮಾಪಕರೂ ಆದ ಚೌಡಯ್ಯನವರದು ಈ ಚಿತ್ರದಲ್ಲಿ ದ್ವಿಪಾತ್ರ. ಪಿಟೀಲು ವಿದ್ವಾಂಸರಾದ ತಂದೆ ಭಾಸ್ಕರ ಪಂಡಿತ ಮತ್ತು ಅವರ ಮಗ ಯುವ ಪಿಟೀಲು ಪ್ರವೀಣ ಶಂಕರ, ಈ  ಎರಡೂ ಪಾತ್ರಗಳನ್ನೂ   ಚೌಡಯ್ಯನವರೇ ಅಭಿನಯಿಸಲಿದ್ದಾರೆ. 

ಚೌಡಯ್ಯ: ನಾನು ದ್ವಿಪಾತ್ರದಲ್ಲಿ ಅಭಿನಯಿಸಬೇಕೆಂಬುದು ಹಿರಣ್ಣಯ್ಯನವರ ಸಲಹೆ. ಅವರಿಗೆ ನಾನು ಆಭಾರಿ.   ಉಳಿದಂತೆ ಗೋಪಾಲ್ರವರೇ ನಮ್ಮ ಕ್ಯಾಮೆರಾಮನ್. ನಮ್ಮ ಆತ್ಮೀಯರು ಹಾಗೂ ರೇಷ್ಮೆ ವರ್ತಕರಾದ ಶಿವಬಸವ ಸ್ವಾಮಿಯವರೇ ನಿರ್ಮಾಪಕರು ಹಾಗೂ ವಿತರಕರು ಕೂಡ. ಬಸ್ ಮಾಲೀಕರಾದ ರಾಮಯ್ಯನವರು ಕೂಡ ತಮ್ಮ ಹಣ ತೊಡಗಿಸಲು ಒಪ್ಪಿರುವ ನಿರ್ಮಾಪಕರು.ಹಾಗಾಗಿ ನಮ್ಮ ನಿರ್ಮಾಣ ಸಂಸ್ಥೆಯ ಹೆಸರು ಹೆಚ್.ಆರ್.ಜಿ.ಸಿ.ಎಸ್.ಸಂಸ್ಥೆ ಎಂದು. ಎಲ್ಲರ ಹೆಸರುಗಳ ಮೊದಲಕ್ಷರಗಳ ಹೃಸ್ವ ರೂಪ. 

ನಮ್ಮ ಮೈಸೂರರಸರುಗಳ ಭವ್ಯ ಪರಂಪರೆಯನ್ನು, ಕನ್ನಡ ನಾಡಿನ ಭವ್ಯ ನಿಸರ್ಗವನ್ನು, ಪುರಾಣ ಮತ್ತು ಇತಿಹಾಸಗಳನ್ನು ಚಿತ್ರದಲ್ಲಿ ಅಳವಡಿಸಲು ನಿರ್ಧರಿಸಿದ್ದೇವೆ. ಹಾಗಾಗಿ ಮೈಸೂರು, ಶ್ರೀರಂಗಪಟ್ಟಣ, ಶ್ರವಣಬೆಳಗೊಳ, ಬೇಲೂರು, ಹಳೇಬೀಡು, ಶೃಂಗೇರಿ ಮುಂತಾದ ಕ್ಷೇತ್ರಗಳಲ್ಲಿ ಹೊರಾಂಗಣ ಚಿತ್ರೀಕರಣ ನಡೆಸಲು ಆಯೋಜಿಸಿದ್ದೇವೆ. 

ಖರ್ಚು ಹೆಚ್ಚಾದರೂ ಅದ್ಧೂರಿ ಚಿತ್ರವನ್ನು ಜನತೆಗೆ ನೀಡಬೇಕೆಂಬುದೇ ನನ್ನ ಮಹದಾಶೆ.   

ಹಿರಣ್ಣಯ್ಯ: ಸಂಗೀತ ಪ್ರಧಾನ ಚಿತ್ರವಾದುದರಿಂದ ಚಿತ್ರದ ಸಂಗೀತ ನಿರ್ದೇಶನ ಚೌಡಯ್ಯನವರದೇ ಆಗಿರುತ್ತದೆ. ಚೌಡಯ್ಯನವರೇ ರಚಿಸಿದ ೧೪ ಹಾಡುಗಳ ಜೊತೆಗೆ ಪುರಂದರ ದಾಸರ ಒಂದು ಗೀತೆಯನ್ನೂ ಅಳವಡಿಸಲಾಗುವುದು. ಈ ಎಲ್ಲ ಹಾಡುಗಳ ಧ್ವನಿಮುದ್ರಣವನ್ನು ಸುಪ್ರಸಿದ್ಧ ರೆಕಾರ್ಡಿಂಗ್ ಕಂಪನಿಯಾದ ಕೊಲಂಬಿಯಾ ರೆಕಾರ್ಡ್ಸ್ ಮಾಡಲು ತೀರ್ಮಾನಿಸಿದ್ದೇವೆ. ಸಿನಿಮಾದ ಒಳಾಂಗಣ ಚಿತ್ರಣವೆಲ್ಲ ಕೊಯಮತ್ತೂರಿನ ಪಕ್ಷಿರಾಜ ಸ್ಟುಡಿಯೋದಲ್ಲಿ ನಡೆಸಲಾಗುವುದು. 

ಚೌಡಯ್ಯ: ಸ್ತ್ರೀ ಪಾತ್ರಗಳಲ್ಲಿ ಬಳ್ಳಾರಿ ಲಲಿತ, ಟಿ.ಎನ್.ಚಂದ್ರಮ್ಮ ನಟಿಸಲಿದ್ದಾರೆ. ಪಂಡರಿ ಬಾಯಿ ಎಂಬ ಯುವ ಕಲಾವಿದೆಯನ್ನು ನಮ್ಮ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇವೆ.  ಸುಮಾರು ೨೦ಕ್ಕೂ ಹೆಚ್ಚು ಜನರುಗಳನ್ನುಳ್ಳ ನಮ್ಮ ಚಿತ್ರ ತಂಡ ಕೊಯಮತ್ತೂರಿನಲ್ಲಿ ಸುಮಾರು ಒಂದು ವರ್ಷದಷ್ಟು ಕಾಲ ಇರುವ ಏರ್ಪಾಡನ್ನು ಮಾಡಲಾಗಿದೆ.

ಈಗ  ಎರಡನೇ ಮಹಾಯುದ್ಧ ನಡೆಯುತ್ತಿರುವದರಿಂದ ಚಿತ್ರಣಕ್ಕೆ ಬೇಕಾದ ಪಾಸಿಟಿವ್ ಮತ್ತು ನೆಗೆಟಿವ್ ಫಿಲ್ಮಿನ್ನದೆ ದೊಡ್ಡ ಸಮಸ್ಯೆ ಮತ್ತು ಅವುಗಳು  ದುಬಾರಿ ಕೂಡ. ಚಿತ್ರದ  ವೆಚ್ಚ ಒಂದೂವರೆಯಿಂದ ಎರಡು ಲಕ್ಷ ರುಪಾಯೀಗಳಾಗಬಹುದು ಎಂದು ಅಂದಾಜಿಸಲಾಗಿದೆ. 

ಹಿರಣ್ಣಯ್ಯ: ಚೌಡಯ್ಯನವರ ಪ್ರಾಣ ಗೆಳೆಯರಾದ ಸುಪ್ರಸಿದ್ಧ ಹಾಡುಗಾರ ಚೆಮ್ಬೈ ವೈದ್ಯನಾಥ ಭಾಗವತರ್ ಅವರಿಂದ ನಮ್ಮ ಚಿತ್ರಕ್ಕೆ ಮುಖ್ಯವಾದ ಹಾಡೊಂದನ್ನು ಹಾಡಿಸಲು ಆಯೋಜಿಸಿದೆ. ಸುಮಾರು ೧೦ ನಿಮಿಷಗಳಷ್ಟರ  ಚೆಮ್ಬೈ ಹಾಗೂ ಚೌಡಯ್ಯನವರ ಕಚೇರಿಯನ್ನು ಸಿನಿಮಾದಲ್ಲಿ ಅಳವಡಿಸಬೇಕು.  ಚೆಮ್ಬೈರವರು ಬಲು ಖಡಕ್ ಮನುಷ್ಯ. ಚಲನ ಚಿತ್ರಗಳೆಂದರೆ ಅವರು ಬಹು ದೂರ.  ಅವರನೊಪ್ಪಿಸುವ ಜವಾಬ್ದಾರಿಯನ್ನು ಚೌಡಯ್ಯನವರಿಗೆ ನೀಡಲಾಗಿದೆ. ಮಿಕ್ಕ ಚಿತ್ರೀಕರಣದ ಕಾರ್ಯಗಳೆಲ್ಲಾ ಮುಂದಿನ ತಿಂಗಳಿನಿಂದಲೇ ಆರಂಭವಾಗಲಿದೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನಮ್ಮ ಇಡೀ ತಂಡದ ಮೇಲಿದೆಯೆಂಬುದೇ ನಮ್ಮೆಲರ ವಿಶ್ವಾಸ. (ಎಂದು ಚಾಮುಂಡೇಶ್ವರಿ ಫೋಟೋಗೂ ಮತ್ತು ಎಲ್ಲರಿಗೂ ಕೈಮುಗಿಯುತ್ತಾರೆ). 

-೦-೦-೦-

ದೃಶ್ಯ ೧೯

(ಚೆಮ್ಭೈ ಎಂಬ ಸಣ್ಣ ಗ್ರಾಮವೊಂದರಲ್ಲಿ ಚೆಮ್ಭೈರವರ ಮನೆ. ಚೆಮ್ಭೈರವರನ್ನು ಭೇಟಿ ಮಾಡಲು ಚೌಡಯ್ಯನವರೇ ಚೆಮ್ಬೈಗೆ ಬಂದಿರುತ್ತಾರೆ). 

ಚೆಮ್ಬೈ: ಚೌಡಯ್ಯ........ ನಮ್ಮೂರಿನ ತನಕ ನನ್ನನ್ನು ಹುಡಿಕಿಕೊಂಡು ಬಂದಿದೀಯ. ಏನೋ ಬಲವಾದ ಕಾರಣವೇ ಇರಬೇಕು.  

ಚೌಡಯ್ಯ: ಹಾಗೇನಿಲ್ಲ ಗುರುಗಳೇ. ತಮ್ಮ ದರ್ಶನ ಭಾಗ್ಯಕ್ಕಾಗಿ ಮಾತ್ರ ಬಂದಿದ್ದೇನೆ. 

ಚೆಮ್ಬೈ: ನಿನ್ನ ಮಾತುಗಳು ಸಹ  ನಿನ್ನ ಪಿಟೀಲ್ ನುಡಿಸಾಣಿಕೆಯ ಹಾಗೆ ಬಹಳ ಜಾಣತನದ್ದು. ನನ್ನ ನಿನ್ನ ಸ್ನೇಹಕ್ಕೆ ೧೫ ವರ್ಷಗಳೇ ಕಳೆದಿವೆ. ಈ ಹದಿನೈದು ವರ್ಷಗಳಲ್ಲಿ ನನ್ನ ಕಚೇರಿಗಳಿಗೆಲ್ಲ ಹೆಚ್ಚು ಕಮ್ಮಿ ನೀನೆ ಪಿಟೀಲು ನುಡಿಸಿದೀಯ. ನಿನ್ನ ಪಿಟೀಲು ಕೊಯ್ಯುವಿಕೆಯ ಒಳಗುಟ್ಟು ನನಗೆ ತಿಳಿಯದೆ? ಏನೋ ವಿಷಯವನ್ನಿಟ್ಟುಕೊಂಡೇ ನೀನು ಬಂದಿರುವುದು ಖಂಡಿತ. 

ಚೌಡಯ್ಯ: ನನ್ನ ಗುರುಗಳಾದ ಬಿಡಾರಂ ಕೃಷ್ಣಪ್ಪನವರು ದೈವಾಧೀನರಾದನಂತರ ನೀವೇ ನನ್ನ ಗುರುಗಳಾಗಿ ನನ್ನ ಕೈ ಹಿಡಿದು ನಡೆಸುತ್ತಿದ್ದೀರಾ.  ವೇದಿಕೆ ಏರಿದ ಮೇಲಂತೂ ನೀವೊಂದು ಹೆಬ್ಬುಲಿಯಾಗಿ ಬಿಡುತ್ತೀರಾ. ನಿಮ್ಮ ವಿಭಿನ್ನ ವರಸೆಗಳಿಗೆ ಸರಿದೂಗುವಂತೆ ಪಿಟೀಲು ನುಡಿಸುವುದೇ ಒಂದು ದೊಡ್ಡ ಸವಾಲು ನನಗೆ. 

ಚೆಮ್ಬೈ: ಚೌಡಯ್ಯ..... ಹೇಳಿ ಕೇಳಿ ನೀನೊಬ್ಬ ಆಂಗ್ರಿ ಯಂಗ್ ಮ್ಯಾನ್. ವೇದಿಕೆಯ ಮೇಲೂ  ಮತ್ತು ವೇದಿಕೆಯ ಹೊರಗೂ ನಿನ್ನದೇ ಪ್ರತಿಷ್ಠೆಯನ್ನು ನಡೆಸಿಕೊಳ್ಳುತ್ತೀಯ.  ಯಾರ ಹಿಡಿತಕ್ಕೂ ಅಷ್ಟು ಸುಲಭವಾಗಿ ಸಿಕ್ಕುವ ಆಸಾಮಿ ನೀನಲ್ಲ. ಪಿಟೀಲ ಮೇಲೆ ಕಮಾನು ಆಡಿಸಿ ಆಡಿಸಿ ನನ್ನನ್ನು ಕೆಣಕಿ ಕೆಣಕಿ ನನ್ನಿಂದ ಹೊಸ ಹೊಸ ಪಟ್ಟುಗಳನ್ನು, ಮಟ್ಟುಗಳನ್ನು ಹೊರ ಚಿಮ್ಮಿಸುತ್ತೀಯಾ. ನಿನ್ನ ಪಿಟೀಲು ವಾದನವಿಲ್ಲದೆ ನನ್ನ ಹಾಡುಗಾರಿಕೆ ಅಪೂರ್ಣ ಎನ್ನುವುದು ನನ್ನ ಮನದಾಳದ ಮಾತು ಚೌಡಯ್ಯ. 

ಚೌಡಯ್ಯ: ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ. ಅಂದ ಹಾಗೆ ನಾನೊಂದು ಸಿನಿಮಾದ ನಿರ್ಮಾಣಕ್ಕೆ ಕೈಹಾಕಿದ್ದೇನೆ. ಸಂಗೀತ ಪ್ರಧಾನ ಚಿತ್ರ. ಸಂಗೀತವೇ ನನ್ನ ಚಿತ್ರದ ಜೀವಾಳ. 

ಚೆಮ್ಬೈ: ಹಾಗೆ ಬಾ ವಿಷಯಕ್ಕೆ ಚೌಡಯ್ಯ.....ನೀನೊಬ್ಬ ಸಾಹಸಿ. ನಾನು ಬೇಡವೆಂದರೆ ನೀನೇನು ನಿನ್ನ ಸಿನಿಮಾ ನಿಲ್ಲಿಸುವವನಲ್ಲ. ನಿನ್ನ ಚಿತ್ರ ಯಶಸ್ವಿಯಾಗಲಿ ಎಂದು ಹರಸಬಲ್ಲೆನೇ ಹೊರತು ನನ್ನಿಂದ ಯಾವ ಸಹಾಯವನ್ನು ನೀರಿಕ್ಷಿಸಬೇಡ.

ನಿನಗೆ ಚೆನ್ನಾಗಿ ಗೊತ್ತು. ನನಗು ಚಿತ್ರರಂಗಕ್ಕೂ ಬಹು ದೂರ. ಚಿತ್ರರಂಗವನ್ನು ಪ್ರವೇಶಿಸುವುದೆಂದರೆ ನಮ್ಮನ್ನು ನಾವು ಮಾರಿಕೊಂಡಂತೆ. ಏನಂತೀಯಾ?  

ಚೌಡಯ್ಯ: ಚಿತ್ರರಂಗವೆಂದರೆ ದೂರ ಸರಿಯುವಷ್ಟು ಮಡಿ ನಮ್ಮ ಸಂಗೀತಗಾರರಿಗೆ ಈಗಿಲ್ಲ. ಜಿ.ಎನ್.ಬಿ.ರವರು, ಮಹಾರಾಜಪುರಂ ವಿಶ್ವನಾಥ ಅಯ್ಯರ್ರಂತವರು ಸಿನಿಮಾದಲ್ಲಿ ಅಭಿನಯಿಸಿತ್ತಿರುವುದು ತಮಗೆ ತಿಳಿದೇ ಇದೆ. ನನ್ನ ಚಿತ್ರದಲ್ಲಿ ತಾವು ಅಭಿನಯಿಸಿ ಎಂದು ನಾನು ಕೇಳುವುದಿಲ್ಲ. ನನ್ನ ಚಿತ್ರದಲ್ಲಿ ನಿಮ್ಮ ಕಛೇರಿಯೊಂದರ ದೃಶ್ಯ ಇರಬೇಕೆಂಬುದು ನನ್ನ ಮಹದಾಶೆ.  

ಚೆಮ್ಬೈ: ಪಾತ್ರ ವಹಿಸುವುದು ಅಂದರೂ ಅದೇ, ಕಚೇರಿಯೊಂದರಲ್ಲಿ ಕಾಣಿಸಿಕೊಳ್ಳುವುದು ಎಂದರು  ಅದೇ, ನನ್ನ ಸ್ವಾಭಿಮಾನವನ್ನು ನಾನೇ ಬಲಿಕೊಟ್ಟಂತೆ ಅಲ್ಲವೇ ಚೌಡಯ್ಯ?  

ಚೌಡಯ್ಯ: ಏಳು ತಂತಿ ಪಿಟೀಲು ನನ್ನ ಆವಿಷ್ಕಾರ ಎಂಬುದು ನಿಮಗೆ ಗೊತ್ತು. ಆ ಆವಿಷ್ಕಾರವನ್ನು ದಾಖಲಿಸುವ ಮತ್ತು ನನ್ನ ಏಳು ತಂತಿ ಪಿಟೀಲನ್ನು ಜನಪ್ರಿಯಗೊಳಿಸುವ ಉದ್ದೇಶವು ನನ್ನ ಚಿತ್ರನಿರ್ಮಾಣದಲ್ಲಿದೆ. ತಮ್ಮ ಕಚೇರಿಯಿಂದ  ನನ್ನ ಚಿತ್ರಕ್ಕೆ ವಿಶೇಷ ಮೆರಗೊಂದು ದೊರಕುವುದು ಖಂಡಿತ.  ನಿಮ್ಮ ಘನತೆಗೆ ತಕ್ಕಂತಹ ಷಣ್ಮುಖಪ್ರಿಯ ರಾಗದಲ್ಲಿ ಗೀತೆಯೊಂದನ್ನು ರಚಿಸಿದ್ದೇನೆ. ತಮ್ಮ ಕಚೇರಿಯ ದೃಶ್ಯದಲ್ಲಿ ತಾವು ಆ ಗೀತೆಯನ್ನು ಹಾಡಿ ಎಂದು ಬೇಡಿಕೊಳ್ಳುತ್ತೇನೆ (ಎಂದು ಕೈಗಳನ್ನು ಜೋಡಿಸುತ್ತಾರೆ). 

ಚೆಮ್ಬೈ: (ಚೌಡಯ್ಯನವರ ಮುಗಿದ ಕೈಗಳನ್ನು ಹಿಡಿಯುತ್ತಾ...) ನಿನ್ನ ವಿನಮ್ರತೆಯಿಂದ ನೀನು ನನ್ನ ಮನಸ್ಸನ್ನು ಗೆದ್ದಿದೀಯಾ. ನಿನ್ನ ಚಿತ್ರಕ್ಕಾಗಿ ಹಾಡಿ ಕಚೇರಿಯೊಂದರಲ್ಲಿ ಕಾಣಿಸಿಕೊಳ್ಳಲು ನಾನು ಸಿದ್ಧ. ಆದರೆ ಒಂದು ಷರತ್ತು. ನಿನ್ನಿಂದ ನಾನು ಈ ಕೆಲಸಕ್ಕಾಗಿ ಯಾವ ಸಂಭಾವನೆಯನ್ನು ಸ್ವೀಕರಿಸುವುದಿಲ್ಲ. 

ಚೌಡಯ್ಯ: ಹಾಗೆಂದರೆ ಹೇಗೆ ಗುರುಗಳೇ? ನನ್ನ ಚಿತ್ರಕ್ಕಾಗಿ ತಾವು ನೀಡಲಿರುವ ಕಚೇರಿಗೆ ನಾನು ೫೦೦೦ ರೂಪಾಯಿಗಳಷ್ಟು ಸಂಭಾವನೆಯನ್ನು ನೀಡಲು ನಿರ್ಧರಿಸಿದ್ದೇನೆ. ದಯಮಾಡಿ ಈ ಅಲ್ಪ ಸಂಭಾವನೆಯನ್ನು ತಾವು ಸ್ವೀಕರಿಸಬೇಕು (ಎನ್ನುತ್ತಾ ಮತ್ತೊಮ್ಮೆ ಕೈ ಮುಗಿಯುತ್ತಾರೆ). 

ಚೆಮ್ಬೈ: ಚೌಡಯ್ಯ......ನೀನೊಬ್ಬ ಕೊಡುಗೈ ದೊರೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಬೇರೆಯವರಿಗೆಲ್ಲಾ ಹೆಚ್ಚಾಗಿ ಕೊಟ್ಟು ತನ್ನ ಕೈಯನ್ನೇ ಬರಿದಾಗಿಸಿಕೊಳ್ಳುವ ದಾನಶೂರ ಕರ್ಣ ನೀನು. ೫೦೦೦ ರುಪಾಯೀ ಎಂಬುದು ಕಮ್ಮಿ ಸಂಭಾವನೆಯೇ? ೧೦ ಕಚೇರಿಗಳನ್ನು ಮಾಡಿದರು ಅಷ್ಟೊಂದು ಹಣ ಸಿಕ್ಕದು.  ಆದರೂ ನಾನು ನಿನ್ನ ೫೦೦೦ ರುಪಾಯೀ ಸಂಭಾವನೆಯನ್ನು ನನ್ನ ಕೈಯಿಂದ ಮುಟ್ಟಲಾರೆ. ಆ ಹಣವನ್ನು ನಮ್ಮೂರ ಪಾರ್ಥಸಾರಥಿ ದೇವಸ್ಥಾನದ ಮುಖ್ಯ ದೇವರಿಗೆ ಚಿನ್ನದ ಕವಚವೊಂದನ್ನು ಮಾಡಿಸಲು ಕೊಟ್ಟುಬಿಡುತ್ತೇನೆ. ಇದೇ ನನ್ನ ಅಂತಿಮ ನಿರ್ಧಾರ. 

(ಅಂತೂ ಗೆದ್ದೇ ಎಂಬ ಭಾವವನ್ನು ತೋರುತ್ತಾ ಚೌಡಯ್ಯನವರು ನಿಧಾನವಾಗಿ ತಮ್ಮ ಪೆಟ್ಟಿಗೆಯಿಂದ ತಮ್ಮ ಪಿಟೀಲನ್ನು ಹೊರ ತೆಗೆದು ಚಿತ್ರದ ಷಣ್ಮುಖ ಪ್ರಿಯ ರಾಗದ ಗೀತೆಯನ್ನು  ನುಡಿಸತೊಡಗುತ್ತಾರೆ. ಚೆಮ್ಭೈರವರು ಜೊತೆಗೆ ಹಾಡತೊಡಗುತ್ತಾರೆ.

ನಿಖಿಲ ಪಾಪ ನಿವಾರಣೈಕ 

ತಾರಕ ಮಂತ್ರ ರೂಪಿಣಿ....  ). 

-೦-೦-೦-

ದೃಶ್ಯ ೨೦

(ಚೌಡಯ್ಯನವರ ಮನೆ. ಚಿತ್ರದ ಎಲ್ಲಾ ೫ ನಿರ್ಮಾಪಕರುಗಳು ಸೇರಿರುತ್ತಾರೆ). 

ಚೌಡಯ್ಯ: ಅಂತೂ ನಮ್ಮ ಸಿನಿಮಾ 'ವಾಣಿ ಅಥವಾ ವಯೊಲಿನಿಸ್ಟ್' ತೆರೆ ಕಂಡು ಬಿಡುಗಡೆಯಾಗಿದೆ. ಆದರೆ ನಾವು ನೀರೀಕ್ಷಿದಷ್ಟು ಹಣ ನಮ್ಮ ಕೈ ಸೇರಿಲ್ಲ. ನಾವು ತೊಡಗಸಿದ ಒಂದೂವರೆ ಲಕ್ಷ ರುಪಾಯೀಗಳಷ್ಟು ಹಣದಲ್ಲಿ ಸಾಕಷ್ಟು ದುಂದು ವೆಚ್ಚವಾಗಿದೆ.  ಇನ್ನು ಕಮ್ಮಿ ವೆಚ್ಚದಲ್ಲಿ ಚಿತ್ರ ನಿರ್ಮಾಣವನ್ನು ಮುಗಿಸಬಹುದಿತ್ತು. ಹಾಗಾಗಿ ನಮ್ಮೆಲ್ಲರ ಕೈ ಸೇರಿರುವ ಲಾಭಂಶ ಸ್ವಲ್ಪ ಮಾತ್ರ.  ನೀವೆಲ್ಲರೂ ನನ್ನ ಮೇಲಿಟ್ಟ ಅಭಿಮಾನ ದೊಡ್ಡದು. ದೊಡ್ಡ ಮನಸ್ಸು ಮಾಡಿ ತಾವುಗಳೆಲ್ಲರೂ ನನ್ನನ್ನು ಕ್ಷಮಿಸಬೇಕು (ಎಂದು ಎಲ್ಲರಿಗೂ ಕೈಮುಗಿಯುತ್ತಾರೆ). 

ರಾಮಯ್ಯ: (ಚೌಡಯ್ಯನವರ ಮುಗಿದ ಕೈಗಳನ್ನು ಸರಿಸುತ್ತಾ....) ಚೌಡಯ್ಯನವರು ಕ್ಷಮಾಪಣೆ ಕೇಳುವ ಅವಶ್ಯಕತೆ ಏನೂ ಇಲ್ಲ. ಚಿತ್ರ ಹೆಚ್ಚಿನ ಹಣ ತಂದುಕೊಡದಿದ್ದರೂ  ಅದರಿಂದ ನಮ್ಮೆಲರಿಗೂ ಅಪಾರವಾದ ಅನುಭವ ದೊರೆತಿದೆ. ನಾನು ಮೈಸೂರಿನಲ್ಲಿ  ಸ್ಥಾಪಿಲಸಿರುವ ಹೊಸ ಚಲನ ಚಿತ್ರ ಸ್ಟುಡಿಯೋಕ್ಕೆ ವಾಣಿ ಚಿತ್ರವೇ ಪ್ರೇರಣೆ. ನನ್ನ ನವಜ್ಯೋತಿ  ಸ್ಟುಡಿಯೋ ನಮ್ಮ ಇಡೀ ಕನ್ನಡ ನಾಡಿಗೆ ಮೊದಲೆನೆಯದು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ.  

ಹಿರಣ್ಣಯ್ಯ: ವಾಣಿ ಚಿತ್ರದ ಅನುಭವ ಮತ್ತು ಗಳಿಸಿದ ಅಲ್ಪ ಲಾಭವನ್ನು ಸೇರಿಸಿ 'ಹಿರಣ್ಣಯ್ಯ ಮಿತ್ರ ಮಂಡಳಿ' ಎಂಬ ಹೊಸ ನಾಟಕದ ಕಂಪನಿಯೊಂದನ್ನು ನಾನು ಆರಂಭಿಸಿದ್ದೇನೆ. ಬಳ್ಳಾರಿ ಲಲಿತ ಹಾಗೂ ಶಾಂತರಾಜರಮ್ಮನವರು ನನ್ನ ನಾಟಕದ ಕಂಪನಿಯಲ್ಲಿ ಅಭಿನಯಿಸತೊಡಗಿದ್ದಾರೆ. ಪಂಡರಿ ಬಾಯಿಯವರಿಗೆ ಚಲನಚಿತ್ರಗಳಲ್ಲಿ ಹೊಸ ಅವಕಾಶಗಳು ಒದಗುತ್ತಿವೆ. 

ಗೋಪಾಲ್: ನನಗೂ ಕ್ಯಾಮೆರಾಮನಾಗಿ ಬೆಳೆಯುವ ಹೊಸ ಅವಕಾಶಗಳು ಬರುತ್ತಿವೆ.  ನಮ್ಮ ಚಿತ್ರದ ಸಂಕಲನ ಮಾಡಿದ ಸಿ.ವಿ.ರಾಜೂರವರಿಗೆ ಒಳ್ಳೆಯ ಹೆಸರು ಬಂದಿದ್ದು ಚಿತ್ರ ರಂಗದಲ್ಲಿ ಬೇರೂರುವಂತೆ ಕಾಣುತ್ತಿದ್ದಾರೆ. 

ಚೌಡಯ್ಯ: ಚಲನ ಚಿತ್ರ ಎನ್ನುವುದು ಜನರ ಪಾಲಿಗೆ ಇನ್ನೂ ಕೂತುಹಲದ ವಿಷಯವಾಗಿದೆಯೇ ಹೊರತು, ಹಣ ತೆತ್ತು ಚಿತ್ರಮಂದಿರಗಳಿಗೆ ಮುಗಿಬಿದ್ದು ನೋಡುವ ಜಾಯಮಾನ ಜನರಲ್ಲಿನ್ನೂ ಬೆಳೆದಂತೆ ಕಾಣಿಸುತ್ತಿಲ್ಲ. ಸಿನಿಮಾ ಮಾಡಿ ಎಲ್ಲರೂ ಕಾರು ಕೊಂಡರೆ ನಾನು ಇದ್ದ ಕಾರನ್ನು ಮಾರಿದಂತಾಯಿತು. ಆದರೂ ಬೇಜಾರೇನು ಇಲ್ಲ. ನನ್ನ ಏಳು ತಂತಿ ಪಿಟೀಲಿಗೆ ಚಿತ್ರದ ಮೂಲಕ ಸಾಕಷ್ಟು ಪ್ರಚಾರ ಸಿಕ್ಕಿದೆ. ಚೆಮ್ಭೈರವರು ಹಾಡಿದ 'ನಿಖಿಲ ಪಾಪ ನೀವಾರಣೈಕ' ಎಂಬ ಗೀತೆ ಜನಪ್ರಿಯಗೊಂಡು ಆಕಾಶವಾಣಿಯಲ್ಲಿ ಮತ್ತೆ ಮತ್ತೆ ಪ್ರಸಾರಗೊಳ್ಳುತ್ತಿದೆ. 

ನನ್ನ ಮುಂದಿನ ಚಿತ್ರ ನಿರ್ಮಾಣಕ್ಕೂ ತಯಾರಿಯನ್ನು ನಡೆಸಿದ್ದೇನೆ. ಆ ಚಿತ್ರಕ್ಕೂ ತಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ (ಎಂದು ಎಲ್ಲರಿಗೂ ಕೈ ಮುಗಿಯುತ್ತಾರೆ. ತಥಾಸ್ತು ಎನ್ನುತ್ತಾ ಹಿರಣ್ಣಯ್ಯ ಮತ್ತು ಮಿತ್ರರೆಲ್ಲಾ ಚೌಡಯ್ಯನವರಿಗೆ ಆಶ್ವಾಸನೆ ನೀಡುತ್ತಾರೆ). 

-೦-೦-೦-