ರೇಡಿಯೋ ಸಿಲೋನ್
ಶ್ರೀಲಂಕಾ ಹತ್ತಿ ಉರಿಯುತ್ತಿದೆ. ಪ್ರವಾಸೋದ್ಯಮವೇ ಆದಾಯದ ಮುಖ್ಯ ಮೂಲವಾಗಿದ್ದ ಆ ದೇಶ, ಕೋವಿಡ್ ಹೊಡತಕ್ಕೆ ಸಿಕ್ಕಿ ನಲುಗಿ ಹೋಗಿದೆ. ಅಲ್ಲಿನ ವಿದ್ಯಮಾನಗಳು ಬೇರೆ ದೇಶಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ.
ಅದಿರಲಿ, ನಮ್ಮ ಬಾಲ್ಯದ ದಿನಗಳ 'ಬಿನಾಕಾ ಗೀತಾ ಮಾಲಾ' ಕಾರ್ಯಕ್ರಮವನ್ನು ನೆನಪಿಸಿಕೊಳ್ಳಿ. ಆ ಕಾರ್ಯಕ್ರಮ ಪ್ರತಿ ಬುಧವಾರ ರಾತ್ರಿ ಎಂಟು ಘಂಟೆ ಸಮಯಕ್ಕೆ 'ರೇಡಿಯೋ ಸಿಲೋನ್'ನಿಂದ (ಶ್ರೀಲಂಕಾಗೆ ಆ ದಿನಗಳಲ್ಲಿ ಸಿಲೋನ್ ಎಂದು ಕರೆಯುತ್ತಿದ್ದರು) ಮೂಡಿಬರುತಿತ್ತು. ಹಿಂದಿ ಚಿತ್ರರಂಗ ಮತ್ತು ಹಿಂದಿಯ ಹೆಚ್ಚು ಪರಿಚಯವಿರದಿದ್ದ, ೭೦ರ ದಶಕದ ಆರಂಭದ ಆ ದಿನಗಳಲ್ಲಿ, ಕಿಶೋರರಾದ ನಾವುಗಳು ಆ ಕಾರ್ಯಕ್ರಮಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದೆವು. ಎಲ್ಲಿದ್ದರೂ ರಾತ್ರಿ ಎಂಟು ಘಂಟೆಗೆ ಮುಂಚೆ ಮನೆ ಸೇರುತ್ತಿದೆವು. ರೇಡಿಯೊಗಳೇ ಇಲ್ಲದ ಮನೆ ಹುಡುಗರೂ ಸಹ ರೇಡಿಯೋ ಇದ್ದ ಮನೆಗಳಿಗೆ ಸಂಕೋಚ ಬಿಟ್ಟು ಇಣುಕಿ ಸೇರಿಕೊಳ್ಳುತ್ತಿದ್ದರು. ಹೊಸ ಹಿಂದಿ ಸಿನಿಮಾಗಳ ಹಾಡುಗಳನ್ನು ಜನಪ್ರಿಯತೆಯ ಆಧಾರದ ಮೇಲೆ ತೂಗಿ, ಟಾಪ್-೧೦ ಶ್ರೇಣಿಯ ಸರಣಿಯಂತೆ ಆ ಕಾರ್ಯಕ್ರಮದಲ್ಲಿ ಪ್ರಸಾರ ಮಾಡುತ್ತಿದ್ದರು. ಆ ಕಾರ್ಯಕ್ರಮದ ಜಾದೂಗಾರ ನಿರೂಪಕರಾಗಿದ್ದ ಅಮೀನ್ ಸಾಯನಿಯಂತಹ ಮತ್ತೊಬ್ಬ ನಿರೂಪಕರನ್ನು ನಾವು ಇಲ್ಲಿಯವರೆಗೂ ನೋಡಲೇ ಇಲ್ಲ. ಹಿಂದಿ ಬಾರದ ನಮ್ಮಂತಹವರಿಗೂ ಅವರ ಮಾತಿನ ವೈಖರಿಯ ಅನುಭೂತಿ ಉಂಟಾಗುತ್ತಿತ್ತು.
ಅಂತಹ ರೇಡಿಯೋ ಸಿಲೋನ್ ಕಡೆಗೆ ಇಡೀ ಭಾರತೀಯರು ವಾಲಿದ್ದು ೧೯೫೨ರಲ್ಲಿ. ಏಕೆ ಗೊತ್ತೆ? ಅಂದಿನ ನಮ್ಮ ನಾಯಕರುಗಳ ಹೆಡ್ಡತನಕ್ಕೆ ಸಿಲುಕಿ, ಭಾರತೀಯ ಆಕಾಶವಾಣಿಯಿಂದ ಚಿತ್ರಗೀತೆಗಳು ಬಹಿಷ್ಕೃತಗೊಂಡಿದ್ದವು. ಹಿಂದೂಸ್ತಾನಿ ಹಾಡುಗಾರಿಕೆಯ ಜೀವಾಳವಾದ ಹಾರ್ಮೋನಿಯಂ ವಾದ್ಯವನ್ನು ಆಕಾಶವಾಣಿಯಿಂದ ಬಹಿಷ್ಕರಿಸಿದ್ದ ಅಂದಿನ ನಮ್ಮ ನಾಯಕರುಗಳಿಗೆ ಮತ್ತೇನೆನ್ನಬೇಕು? ನೀವೇ ಹೇಳಿ. ೯೦% ಭಾರತೀಯರು ಹಿಂದಿ ಮತ್ತು ಇತರ ಭಾಷೆಯ ಚಿತ್ರಗೀತೆಗಳನ್ನು ಕೇಳಲು ರೇಡಿಯೋ ಸಿಲೋನ್ ಕಡೆಗೆ ಮುಖ ಮಾಡಿದನಂತರ, ೧೯೫೭ರಲ್ಲಿ ನಮ್ಮ ನಾಯಕರುಗಳಿಗೆ ಬುದ್ಧಿ ಬಂತು. ಆದರೂ ರೇಡಿಯೋ ಸಿಲೋನ್ ಜನಪ್ರಿಯತೆ ಅಮೀನಾ ಸಾಯನಿಯವರ ಕ್ರಿಯಾಶೀಲತೆ ಕುಗ್ಗುವ ತನಕ, ಅಂದರೆ ಕಳೆದ ಶತಮಾನದ ಅಂತ್ಯದವರೆಗೆ ಬತ್ತಲೆ ಇಲ್ಲ.
ನಮ್ಮ ನೆರೆ ದೇಶವಾದ ಶ್ರೀಲಂಕಾದಲ್ಲಿ ಶಾಂತಿ ನೆಲಸಲಿ. ಅಲ್ಲಿನ ಆರ್ಥಿಕತೆ ಸ್ಥಿರತೆಯನ್ನು ಕಂಡುಕೊಳ್ಳಲಿ ಎಂದು ಹಾರೈಸೋಣ.