Saturday, 19 July 2025

 ಗೌರವಾನ್ವಿತ ಸಭಿಕರುಗಳಿಗೆ ನನ್ನ ನಮಸ್ಕಾರಗಳು. 


“ರಾಮಾಯಣದ ಆಯ್ದ ಭಾಗಗಳು” ಎಂಬ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. 


ಬಾಲಕಿಯಾದ ನನ್ನ ಈ ಪ್ರಯತ್ನಕ್ಕೆ ತಮ್ಮೆಲ್ಲರ ಆಶೀರ್ವಾದಗಳು ಅತಿಮುಖ್ಯವಾದುದು. 


ಸೀತಾನ್ವೇಷಣೆಗೆಂದು, ಹಿರಿಯರಾದ ಜಾಂಬವಂತರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿ, ಅದನ್ನು ದಕ್ಷಿಣ ದಿಕ್ಕಿಗೆ ಕಳುಹಿಸಲಾಗುತ್ತದೆ. ಆ ತಂಡದಲ್ಲಿ ಹನುಮಂತನೂ ಇರುತ್ತಾನೆ. ತಂಡ ದಕ್ಷಿಣದ ಸಮುದ್ರ ತೀರವನ್ನು ಬಂದು ಸೇರುತ್ತದೆ. 


ಸಮುದ್ರ ತೀರದಿಂದ ಲಂಕೆ ನೂರು ಯೋಜನದಷ್ಟು ದೂರದಲ್ಲಿರುತ್ತದೆ. ಅಷ್ಟು ದೂರ ಯಾರು ಹಾರುವರೆಂಬ ಯೋಚನೆಯಲ್ಲಿ ವಾನರ ತಂಡ ದಿಕ್ಕು ತೋಚದೆ ಕುಳಿತಿರುತ್ತದೆ. ಹನುಮಂತನೂ ಒಂದು ಮೂಲೆಯಲ್ಲಿ ಕುಳಿತಿರುತ್ತಾನೆ. 


ಆಗ ಹಿರಿಯರಾದ ಜಾಂಬವಂತರು, ಹನುಮನ ಬಳಿ ಬಂದು, “ಹನುಮ…ನಮ್ಮಲ್ಲಿ ನೀನೇ ಅತ್ಯಂತ ಬಲಶಾಲಿ. ಬಾಲ್ಯದಲ್ಲೇ ಸೂರ್ಯನನ್ನು ಹಣ್ಣೆಂದು ತಿಳಿದು, ತಿನ್ನಲು ಆಕಾಶಕ್ಕೆ ಹಾರಿದ ಧೀರ ನೀನು. ನೂರು ಯೋಜನ ದೂರವಿರುವ ಲಂಕೆಗೆ ಹಾರಲು ನಿನಗೆ ಮಾತ್ರ ಸಾಧ್ಯ, ಎದ್ದೇಳು” ಎಂದು ಹುರಿದುಂಬಿಸುತ್ತಾರೆ. 


ಉತ್ತೇಜಿತನಾದ ಹನುಮಂತ, ಸಮೀಪದ ಘಟೀಕಾಚಲ ಎಂಬ ಪರ್ವತವನ್ನೇರಿ, ಆಕಾಶದೆತ್ತರಕ್ಕೆ ಬೆಳೆದು ಒಮ್ಮೆ ಘರ್ಜಿಸುತ್ತಾನೆ…..ಜೈ ಶ್ರೀ ರಾಮ್…….


ಅಲ್ಲಿದ್ದ ವಾನರುಗಳಿಗೆಲ್ಲಾ ಅಂದು ಹನುಮಂತನ ವಿಶ್ವರೂಪದ ದರ್ಶನವೇ ಆಗಿರುತ್ತದೆ. 


ಘಟಿಕಾ ಚಲದಿ ನಿಂತ 

ಶ್ರೀ ಹನುಮಂತ…..


-0-0-0-0-0-0-0-0-0-0-0-0-



ರಾವಣನ ಮಗನಾದ ಇಂದ್ರಜಿತವನ್ನು ಲಕ್ಷ್ಮಣ ಸಂಹಾರಮಾಡುತ್ತಾನೆ. ಕೋಪಗೊಂಡ ರಾವಣನು ಮೂಲಬಲ ಎಂಬ ಎರಡು ಲಕ್ಷ ರಾಕ್ಷಸರ ಪಡೆಯನ್ನು ಕಪಿ ಸೈನ್ಯದ ಮೇಲೆ ಪ್ರಯೋಗಿಸುತ್ತಾನೆ. ಮೂಲಬಲದ ಆಕ್ರಮಣಕ್ಕೆ ಕಪಿ ಸೈನ್ಯ ದಿಕ್ಕಾಪಾಲಾಗಿ ಓಡಲಾರಂಭಿಸುತ್ತದೆ. ಅದನ್ನು ನೋಡಿದ ಶ್ರೀ ರಾಮ, ಕಪಿ ಸೈನ್ಯವನ್ನು ರಕ್ಷಿಸಲೆಂದು, ಗಂಧರ್ವಾಸ್ತ್ರ ಎಂಬ ಸಮ್ಮೋಹಿನಿ ಅಸ್ತ್ರವನ್ನು ಮೂಲಬಲದ ರಾಕ್ಷಸರ ಮೇಲೆ ಪ್ರಯೋಗಿಸುತ್ತಾನೆ. ಗಂಧರ್ವಾಸ್ತ್ರದಿಂದ ರಾಕ್ಷಸರುಗಳ ಮತಿಭ್ರಮಣೆಯಾಗುತ್ತದೆ. ಪ್ರತಿಯೊಬ್ಬ ರಾಕ್ಷಸನಿಗೂ ತನ್ನ ಪಕ್ಕದಲ್ಲಿರುವ ರಾಕ್ಷಸನೇ ರಾಮನಂತೆ ಕಾಣಿಸುವಂತಾಗುತ್ತದೆ. ಹಾಗಾಗಿ ರಾಕ್ಷಸರುಗಳು ಅವರವರೇ ಹೋರಾಡಿ ಸಾಯುತ್ತಾರೆ.  ಇದ್ದನ್ನೇ ಪುರಂದರದಾಸರು "ಅವನಿಗೆ ಇವ ರಾಮ, ಇವನಿಗೆ ಆವಾ ರಾಮ" ಎಂದು ಹಾಡಿ ವಿವರಿಸಿದ್ದಾರೆ.  ಆ ಹಾಡನೀಗ ಕೇಳೋಣ.  

-0-0-0-0-0-0-0-0-0-0-



ರಾವಣನ ಸೇನಾಧಿಪತಿ ಪ್ರಹಸ್ತನ ಸಂಹಾರವನ್ನು ಲಕ್ಷ್ಮಣ ಮಾಡುತ್ತಾನೆ.  ಬೇರೆ ಮಾರ್ಗವಿಲ್ಲದ ರಾವಣ ತಾನೇ ರಣರಂಗವನ್ನು ಪ್ರವೇಶಿಸುತ್ತಾನೆ. ಘೋರ ಯುದ್ಧವನ್ನು ಮಾಡಿದ ರಾವಣ ಲಕ್ಷ್ಮಣನನ್ನು ಮೂರ್ಛೆಗೊಳಿಸುತ್ತಾನೆ. ಯುದ್ಧದ ಪಾರಿತೋಷಕವೆಂದು ಲಕ್ಷ್ಮಣನನ್ನು ಎತ್ತಿಕೊಂಡು ಹೋಗಲು ರಾವಣ ಪ್ರಯತ್ನಿಸುತ್ತಾನೆ. ಆದರೆ ರಾವಣನಿಗೆ ಲಕ್ಷ್ಮಣನನ್ನು ಅಲುಗಾಡಿಸಲು ಕೂಡ ಆಗುವುದಿಲ್ಲ. ಏಕೆ ಹೇಳಿ? ಲಕ್ಷ್ಮಣ ಸಾಕ್ಷಾತ್ ಆದಿಶೇಷನ ಅವತಾರ ತಾನೇ? 

ಇದನೆಲ್ಲಾ ನೋಡುತ್ತಿದ್ದ ಹನುಮಂತ ಬಂದು, ಲೀಲಾಜಾಲವಾಗಿ ಲಕ್ಷ್ಮಣನನ್ನು ಎತ್ತಿಕೊಂಡು ಸುರಕ್ಷಿತವಾದ ಜಾಗಕ್ಕೆ ತಲುಪಿಸುತ್ತಾನೆ.  ಹನುಮಂತ ಹಿಂತಿರುಗುವ ಹೊತ್ತಿಗೆ, ರಾಮ ರಾವಣರ ನಡುವೆ ಘೋರ ಯುದ್ಧವಾಗುತ್ತಿರುತ್ತದೆ. ರಾವಣ ತನ್ನ ರಥದ ಮೇಲೆ ಯುದ್ಧ ಮಾಡುತ್ತಿದ್ದರೆ ರಾಮ, ಭೂಮಿಯ ಮೇಲೆ ನಿಂತು ಯುದ್ಧವಾಡುತ್ತಿರುತ್ತಾನೆ. ರಾಮನ ಬಲ ಹೆಚ್ಚಿಸಲೆಂದು ಹನುಮಂತ ರಾಮನನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಕೊಳ್ಳುತ್ತಾನೆ. ಉತ್ತೇಜಿತನಾದ ರಾಮ, ರಾವಣ ಮೇಲೆ ಘೋರವಾದ ಯುದ್ಧವನ್ನು ಮಾಡುತ್ತಾನೆ. ರಾವಣ ನಿರಾಯುಧನಾಗಿ ತತ್ತರಿಸಿ ಹೋಗುತ್ತಾನೆ. ಅವನ ರಥ ಪುಡಿ ಪುಡಿಯಾಗಿರುತ್ತದೆ. ರಾವಣನ ಸಾರಥಿ ಗಾಯಗೊಂಡಿರುತ್ತಾನೆ. 

ಆಗ ಶ್ರೀ ರಾಮ ರಾವಣನಿಗೆ ಹೇಳುತ್ತಾನೆ.  "ರಾವಣ, ನೀನು ಈಗ ನಿರಾಯುಧನಾಗಿದ್ದೀಯ. ನಾನು ಈಗ ನಿನ್ನನ್ನು ಒಂದೇ ಬಾಣದಲ್ಲಿ ಸಂಹಾರಮಾಡಬಹದು. ಆದರೆ ನಾನು ಹಾಗೆ ಮಾಡುವುದಿಲ್ಲ. ನೀನು ಈಗ ನಿನ್ನ ಅರಮನೆಗೆ ಹೋಗಿ ವಿಶ್ರಾಂತಿ ತೆಗೆದುಕೋ.  ನಾಳೆ ಬಂದು ನನ್ನೊಡನೆ ಯುದ್ಧ ಮಾಡುವಿಯಂತೆ." 

ಮಹಾವೀರ ಶ್ರೀ ರಾಮನ ಈ ಔದಾರ್ಯದ ಗುಣವನ್ನು, ತಮಿಳು ಕವಿ ವೇದಾಂತ ದೇಶಿಕರ್ ಅವರು ಸೊಗಸಾಗಿ ವರ್ಣಿಸಿದ್ದಾರೆ. ಅದನ್ನೇ ನಾವು ರಘುವೀರ ಗದ್ಯ ಎಂದು ಕರೆಯುತ್ತೇವೆ.  ಅದನ್ನೀಗ ನಾವು ಕೇಳೋಣ.