Tuesday, 16 October 2018

ದಸರಾ-ನಾರಿ ಶಕ್ತಿಯ ಪ್ರತೀಕ


೧೯೮೭ರ ದಸರಾ ಸಮಯ. ಯುವಕನಾಗಿದ್ದ ನಾನು ಪುಟ್ಟ ಮನೆಯೊಂದನ್ನು ಕಟ್ಟುವ ಕನಸು ಕಂಡಿದ್ದೆ. ಸಣ್ಣದೊಂದು ನಿವೇಶನ ಖರೀದಿಸಲೂ ಅಂದು ನನ್ನ ಕೈಯಲ್ಲಿ ಸಾಕಷ್ಟು ಹಣವಿತ್ತಿಲ್ಲ. ಹತ್ತಿರದ ಸಂಬಂಧಿಯೊಬ್ಬರಿಂದ ಕೈಸಾಲವೊಂದನ್ನು ಪಡೆಯಲು ನನ್ನ ಹೆಂಡತಿಯೊಂದಿಗೆ ಮೈಸೂರಿಗೆ ಹೋಗಿದ್ದೆ. ಸಾಲ ದೊರೆಯದೆ ನಿರಾಶರಾದ ನಾವು, ಸಮಯ 
ಕಳೆಯಲು ಮೈಸೂರ ಅರಮನೆಗೆ ತೆರಳಿದೆವು. ಅರಮನೆಯ ವಿವರಣೆಕಾರರೊಬ್ಬರು ನಮಗೆ  ಅಂದಿನ ಮಹಾರಾಜರಾದ ನಾಲ್ವಡಿ  ಕೃಷ್ಣರಾಜ ಒಡೆಯರ್ ರವರು  ಕೆ. ಆರ್. ಎಸ್. ಅಣೆಕಟ್ಟನ್ನು (೧೯೨೦) ನಿರ್ಮಿಸಿದ ಕಥೆಯನ್ನು ಮನಮುಟ್ಟುವಂತೆ ಹೇಳಿದರು. 

ದೂರದರ್ಶಿತ್ವವುಳ್ಳ ಮಹಾರಾಜರು ಸರ್. ಎಂ. ವಿಶ್ವೇಶ್ವರಯ್ಯರವರಂಥ ಧೀಮಂತ ವ್ಯಕ್ತಿಯನ್ನು ತಮ್ಮ ದಿವಾನರಾಗಿ (ಮಹಾಮಂತ್ರಿ) ನೇಮಿಸಿದ್ದರು.       
ವಿಶ್ವೇಶ್ವರಯ್ಯನವರು ಅಣೆಕಟ್ಟಿನ ನಕ್ಷೆಯನ್ನು ರೂಪಿಸಿ ನಿರ್ಮಾಣದ ಹೊಣೆಯನ್ನು ಹೊತ್ತಿದ್ದರು. ಅಂದು ಮೈಸೂರೊಂದು ಪುಟ್ಟ ಸಂಸ್ಥಾನ.  ಹಣಕಾಸಿನ ಸಂಗ್ರಹಣೆ ಸುಲಭವಿರಲಿಲ್ಲ.  ಬ್ರಿಟಿಷರು ಸೇರಿದಂತೆ ಎಲ್ಲಾ ಮೂಲಗಳಿಂದ ಸಾಲಕ್ಕಾಗಿ ವಿನಂತಿಸಿ ಮಹಾರಾಜರು ಕಂಗಾಲಾಗಿದ್ದರು. ಮಹಾರಾಜರ ದುಮ್ಮಾನವನ್ನರಿತ 
ಅವರ ಪತ್ನಿಯವರಾದ ಮಹಾರಾಣಿ ಪ್ರತಾಪ ಕುಮಾರಿ ಅಮ್ಮಣ್ಣಿಯವರು, ತಮ್ಮ ಎಲ್ಲಾ ಅಮೂಲ್ಯ ಆಭರಣಗಳನ್ನು ಅಡವಿಟ್ಟು ಸಾಲಪಡೆಯುವ ಸಲಹೆ ನೀಡಿದರು. ಬೇರೆ ಮಾರ್ಗ ಕಾಣದ ಮಹಾರಾಜರು ಹಾಗೆ ಮಾಡಿ ಹಣ ಸಂಗ್ರಹಿಸಿದರು. ಮಹಾರಾಣಿಯವರು ತ್ಯಾಗಕ್ಕೆ ಇಡೀ ಮೈಸೂರು ಮನಮಿಡಿಯಿತು.  ಅಣೆಕಟ್ಟು ನಿರ್ಮಾಣಕ್ಕಾಗಿ ದುಡಿಯುತ್ತಿದ್ದ ಮಹಿಳಾ ಕೂಲಿಗಳೂ ಸಹ ತಮ್ಮ  ವೇತನ ಪಾವತಿಯ ಮುಂದೂಡಿಕೆಗೆ ಸಮ್ಮತಿಸಿದರು. ಪತ್ನಿಯರಿಂದ ಪ್ರೇರೇಪಿತರಾದ ಪುರುಷ ಕೂಲಿಕಾರರೂ ವೇತನವಿಲ್ಲದ ದುಡಿದರು.  ಹೀಗಾಗಿ ನಾರಿಶಕ್ತಿ ಹಾಗೂ 

ತ್ಯಾಗಗಳಿಂದಲೇ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣವಾಯಿತೆಂದರ ತಪ್ಪಲ್ಲ. 

ಕಥೆಯನ್ನು ತನ್ಮಯತೆಯಿಂದ ಕೇಳುತಿದ್ದ ನನ್ನ ಪತ್ನಿಕೂಡ ಬಾವುಕಳಾದಂತೆ ಅಂದು ಕಂಡುಬಂತು. 'ನನ್ನಲ್ಲಿರುವ ಸಣ್ಣ-ಪುಟ್ಟ ಒಡವೆಗಳನ್ನು ಮಾರಿಯಾದರೂ 
ಪುಟ್ಟ ನಿವೇಶನವೊಂದನ್ನು ಖರೀದಿಸೋಣ' ಎಂದ ಅವಳ ಮಾತುಗಳಿಂದ ಅಂದು ನನ್ನ ಕಣ್ಣಡಿಗಳಲ್ಲೂ ಹನಿಗಳು ಮೂಡಿದ್ದು ಸುಳ್ಳಲ್ಲ. ಅದೇ ನಾರಿ-ಶಕ್ತಿಯಿಂದ ನನಗೂ ಪ್ರೇರೇಪಣೆ ದೊರೆತು ನಾನೂ ನನ್ನ 'ಪುಟ್ಟ ಅರಮನೆ'ಯೊಂದನ್ನು ನಿರ್ಮಿಸಿದೆ ಎಂಬ ನೆನಪು ನಮ್ಮಲ್ಲಿ ಇಂದಿಗೂ ಹಸಿರಾಗಿ ಉಳಿದಿದೆ. 

ನಮ್ಮ ಕಥೆ ಓದಿದಕ್ಕೆ ಧನ್ಯವಾದಗಳು. ಈಗ ಹೇಳಿ 'ದಸರಾ ನಾರಿ-ಶಕ್ತಿಯ ಪ್ರತೀಕವಲ್ಲವೆ'?
-೦-೦-೦-೦-೦-೦-೦-
(I am indebted to the sources of the pictures used here.  Thanks to them)

No comments:

Post a Comment