Tuesday, 26 October 2021

ನಾನು 'ಪರ್ವ ನಾಟಕ' ನೋಡಿದೆ!

 ನಾನು 'ಪರ್ವ ನಾಟಕ' ನೋಡಿದೆ!

ಬಹಳ ಕಾತರದಿಂದ ಕಾಯುತ್ತಿದ್ದ ಘಳಿಗೆ ಬಂದೇ ಬಿಟ್ಟಿತ್ತು. ಮೊನ್ನೆ, ಅಂದರೆ ಅಕ್ಟೋಬರ್ ೨೪ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ರಂಗಮಂದಿರಕ್ಕೆ ನನ್ನ ಪತ್ನಿ ಹಾಗೂ ಹನ್ನೆರಡೇ ವಯಸ್ಸಿನ  ನಮ್ಮ ಉತ್ಸಾಹಿ ಮೊಮ್ಮಗಳು ಗೌರಿಯೊಂದಿಗೆ  ಹೋಗಿ ಕುಳಿತದ್ದೂ  ಆಗಿತ್ತು. ನಾಟಕ ಆರಂಭವಾಗಲು ಉಳಿದ ಕೆಲವೇ ನಿಮಿಷಗಳಲ್ಲಿ ನನ್ನ ಮನಸ್ಸು ಸುಮಾರು ೪೦ ವರ್ಷಗಳ ಹಿಂದೆ ಸರಿದಿತ್ತು. 

ವಿಶ್ವಮಾನ್ಯ ಕಾದಂಬರಿಕಾರ ಶ್ರೀ ಎಸ್. ಎಲ್. ಭೈರಪ್ಪನವರ ಮೇರು ಕಾದಂಬರಿ 'ಪರ್ವ' ಬಿಡುಗಡೆಯಾದದ್ದು ೧೯೭೯ರಲ್ಲಿ. ಸಾರಸ್ವತ ಲೋಕದ ಓದುಗರ ಹಾಗೂ  ವಿಮರ್ಶಕರ ಅಂತಃಕರಣಗಳನ್ನು ಕೆದಕಿ, ತರ್ಕಕ್ಕಿಳಿಸಿದ ವಿನೂತನ ಕ್ಷಣ ಅದಾಗಿತ್ತು. ನಮ್ಮ ದೇಶದ 'ಮಹಾ ಪುರಾಣ'ವೆಂದೇ ಪ್ರಸಿದ್ಧವಾದ  ಮಹಾಭಾರತವನ್ನೇ ಒಂದು ಚಾರಿತ್ರಿಕ ಘಟನೆಯೆಂದು ಪರಿಗಣಿಸಿ, ಸಂಶೋಧನೆ ಮಾಡಿ ಬರೆದಿಟ್ಟ ಬೃಹತ್ ಕಾದಂಬರಿ 'ಪರ್ವ'ವಾಗಿತ್ತು. ಅಂದು ಜರುಗಿದ ಘಟನೆ, ಪವಾಡಗಳನೆಲ್ಲಾ 'ವಾಸ್ತವ'ದ ಮೂಸೆಯಲ್ಲಿ ಕುದಿಸಿ, ಹದಗೊಳಿಸಿ ಓದುಗರ ಮುಂದಿಟ್ಟ ಭೈರಪ್ಪನವರ ವಿಚಾರಧಾರೆ, ಮಡಿವಂತರ ಹಾಗೂ ವಿಚಾರವಂತರ ಹುಬ್ಬೇರುವಂತೆ ಮಾಡಿದ್ದು ಸುಳ್ಳಾಗಿತ್ತಿಲ್ಲ. 

ಅಂತಹ ಬೃಹತ್ ಕಾದಂಬರಿಯನ್ನು ನಾಟಕದ ರೂಪದಲ್ಲಿ ಪ್ರಸ್ತುತ ಪಡಿಸಬಹುದೇ? ಆ ಸಾಹಸಕ್ಕೆ ಕೈ ಹಾಕಿದ್ದು 'ರಂಗಾಯಣ, ಮೈಸೂರು!' ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ನಡೆದ ಪ್ರಥಮ ಪ್ರಯೋಗ ಅಭೂತಪೂರ್ವ ಯಶಸ್ಸು ಕಂಡಿದ್ದು ಈಗ ಇತಿಹಾಸ.  'ಪರ್ವ' ನಾಟಕದ ಪ್ರಸ್ತುತಿಗೆ ಶ್ರಮಿಸಿರುವ ನೂರಾರು ಕಲಾವಿದರು ಹಾಗೂ ನಿರ್ದೇಶಕರಾದ ಶ್ರೀ ಪ್ರಕಾಶ್ ಬೆಳವಾಡಿಯವರು ಅಭಿನಂದನಾರ್ಹರೇ. 

ಸುಮಾರು ೮ ಘಂಟೆಗಳಷ್ಟರ ದೀರ್ಘ ನಾಟಕವನ್ನು ವೀಕ್ಷಿಸುವುದೇ ಒಂದು ಜೀವಮಾನದ ಅನುಭವವಾಗಿತ್ತು. ಮಹಾಭಾರತದ ವಿಭಿನ್ನ ಪಾತ್ರಗಳ ಮಾನಸಿಕ ತುಮುಲಗಳ ಅಭಿವ್ಯಕ್ತಿಯೇ 'ಪರ್ವ' ಕಾದಂಬರಿಯ ಮೂಲ ವಸ್ತು. ಓದುಗರ ಮನಸ್ಸುಗಳನ್ನು ಕಾಡುವ ಹಲವಾರು 'ಸ್ವಗತ (soliloquy)'ಗಳ ಸರಮಾಲೆಯೇ ಕಾದಂಬರಿಯ ಹಂದರ. ವಿಭಿನ್ನ ಪಾತ್ರಗಳ ಸ್ವಗತಗಳ ಪ್ರಸ್ತುತಿ ನಾಟಕದ ಮಾಧ್ಯಮದಲ್ಲಿ ಚನ್ನಾಗಿ ಮೂಡಿಬಂದಿದೆ. ಹಿರಿಯ ನಟಿಯೊಬ್ಬರು ಕುಂತಿಯಾಗಿ ವೇದಿಕೆಯ ಮೇಲೆ ನಿಂತು ಬಿನ್ನವಿಸಿಕೊಳ್ಳುವ ಸ್ವಗತಕ್ಕೆ, ಪೂರಕವಾದ ಘಟನೆಗಳನ್ನು ಜೊತೆ ಜೊತೆಗೆ ವೇದಿಕೆಯ ಮೇಲೆ ಕಟ್ಟಿಕೊಡುವ ಕ್ರಮದೊಂದಿಗೆ ಆರಂಭವಾಗುವ ನಾಟಕ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಅಂತೆಯೇ ಮುಂದೆ ಮೂಡಿ ಬರುವ ದ್ರೌಪದಿ, ಕರ್ಣರುಗಳ ಸ್ವಗತ ನಿವೇದನೆ ಕೂಡ. 

ಮಹಾಭಾರತದ ಯುದ್ಧದ ಸನ್ನಿವೇಶಗಳನ್ನು ನಿರೂಪಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಯುದ್ಧ ವರದಿಗಾರ ಸಂಜಯನ ಪಾತ್ರದ ಬಳಕೆಯನ್ನು ನಿರ್ದೇಶಕರು ಚನ್ನಾಗಿ ಮಾಡಿದ್ದಾರೆ.  ಭೀಷ್ಮ-ದ್ರೋಣ-ಕರ್ಣಾದಿಗಳ ಯುದ್ಧದ ಪ್ರಸ್ತುತಿ ಚೆನ್ನಾಗಿದೆ. ಭೀಷ್ಮರ ಶರಶಯ್ಯೆ ಮತ್ತು ಮರಣದ ಸನ್ನಿವೇಶ ಪರಿಣಾಮಕಾರಿಯಾಗಿದೆ. ಬೆಳಕು, ಶಬ್ದ ಹಾಗೂ ವಾದ್ಯಗಳ ಬಳಕೆ ಸನ್ನಿವೇಶಗಳಿಗೆ ಪೂರಕವಾಗಿದ್ದು ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸುತ್ತವೆ. 

ಕುಂತಿ-ಕರ್ಣರುಗಳ ಭೇಟಿ, ಕೃಷ್ಣ ಸಂಧಾನ, ದ್ರೌಪಾದಿಯ ವಸ್ತ್ರಾಪಹರಣ, ದ್ರೋಣ ಏಕಲವ್ಯರ ಭೇಟಿ, ಘಟೋತ್ಗಜನ ಯುದ್ಧ, ಅಭಿಮನ್ಯುವಿನ ಯುದ್ಧ, ಭೀಮ ದುರ್ಯೋಧನರ ಗದಾಯುದ್ಧ, ಉಪಪಾಂಡವರ ಹೆಣಗಳ ಮುಂದೆ ದ್ರೌಪಾದಿಯ ಪ್ರಲಾಪ ಹಾಗು ಆಕ್ರೋಶ, ಅಂತಿಮ ಘಟದಲ್ಲಿನ ದ್ರೌಪದಿ-ಕುಂತಿಯರ ಸಂಘರ್ಷ, ಯುದ್ಧ ಸಮಯದಲ್ಲಿ ಮಡಿದ ಸೈನಿಕರಿಂದ ಬಸಿರಾದ ದಾಸಿಯರ ಪ್ರಲಾಪ ಮುಂತಾದ ದೃಶ್ಯಗಳು ಹಲವು ಕಾಲ ಪ್ರೇಕ್ಷಕರ ಮನಸಿನಲ್ಲಿ ಉಳಿಯುವುದರಲ್ಲಿ ಅನುಮಾನವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ, ಪ್ರೇಕ್ಷಕರಿಗೆ ಮೂಲ ಕಾದಂಬರಿಯ ಭೂರಿ  ಭೋಜನವನ್ನು ಸಂಪೂರ್ಣವಾಗಿ ಉಣಬಡಿಸುವಲ್ಲಿ ರಂಗಾಯಣದ ತಂಡ ಯಶಸ್ವಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. 

ಕುಂತಿ, ಕರ್ಣ, ದುರ್ಯೋಧನ, ಭೀಮ, ಸಂಜಯ, ದ್ರೌಪದಿ, ಕೃಷ್ಣ, ಧೃತರಾಷ್ಟ್ರ ಮುಂತಾದ ಪಾತ್ರಗಳು ಬಹುಕಾಲ ಮನಸಿನಲ್ಲಿ ಉಳಿಯುವಂತವು. ಆಯಾ ಪಾತ್ರಧಾರಿಗಳೆಲ್ಲರೂ ಅಭಿನಂದನಾರ್ಹರು. ರಂಗಾಯಣದ ಇಡೀ ತಂಡ ಹಾಗೂ ನಿರ್ದೇಶಕ ಶ್ರೀ ಪ್ರಕಾಶ್ ಬೆಳವಾಡಿಯವರು ನಮನಾರ್ಹರು.  

ನಾಟಕದ ಪ್ರಸ್ತುತಿಯಲ್ಲಿ ಕೊರತೆಗಳು ಇಲ್ಲದಿಲ್ಲ. ೮ ಘಂಟೆಗಳ ದೀರ್ಘ ನಾಟಕದಲ್ಲಿ, ಭೋಜನ ವಿರಾಮದಾನಂತರದ ಸುಮಾರು ೯೦ ನಿಮಿಷಗಳಷ್ಟರ ಸಮಯದಲ್ಲಿ ಕೃಷ್ಣದ್ವೈಪಾಯನರ ವೃತ್ತಾಂತದ ನಿರೂಪಣೆಯಿದ್ದು, ನೀರಸ (bore)ವೆನಿಸುತ್ತದೆ. ಮೂಲ ಕತೆಗೆ ಹೆಚ್ಚು ಸಂಬಂಧವಿಲ್ಲದ ಈ ಪ್ರಸಂಗವನ್ನು ಕೈಬಿಡಬಹುದಿತ್ತು.  ಭೀಮ-ಹಿಡಂಬಿಯರ ಪ್ರೇಮ ಪ್ರಸಂಗದ ಸನ್ನಿವೇಶವನ್ನು ನಿರ್ದೇಶಕರು ಮರೆತು, ಸುಂದರ ಅವಕಾಶವೊಂದನ್ನು ಕೈಚಲ್ಲಿದಾರೆ. ಬಕಾಸುರ ವಧೆ, ಊರ್ವಶಿಯ ಶಾಪದ ಪ್ರಸಂಗಗಳನ್ನೂ ಸೇರಿಸಬಹುದಿತ್ತು. 

ಸ್ವಯಂವರದಲ್ಲಿ ಗೆದ್ದು ತಂದ ದ್ರೌಪದಿಯನ್ನು, ಐದೂ ಜನರು ವಿವಾಹವಾಗಿರೆಂದು ಕುಂತಿ ತಿಳಿ ಹೇಳಿದ ಪ್ರಸಂಗವನ್ನು ಕೈಬಿಡಲಾಗಿದೆ. ತನ್ನ ಐದು ಮಕ್ಕಳ ಒಗ್ಗಟ್ಟನ್ನು ಉಳಿಸಲು ಕುಂತಿ ಮಾಡಿದ ತಂತ್ರ, ಕಿಶೋರಿಯಾದ ದ್ರೌಪದಿಗೆ ಐದು ಜನ ಗಂಡಂದಿರ ಸುಖದ ಆಮಿಷವೊಡ್ಡಿ ಪುಸಲಾಯಿಸಿದ ಕುಂತಿಯ ಸ್ವಾರ್ಥ, ಅನುಭವವಾದ ಮೇಲೆ ಕುಂತಿಯನ್ನು ದ್ರೌಪದಿ ಮನಸಿನಲ್ಲೇ ಶಪಿಸುವ ಸನ್ನಿವೇಶಗಳನ್ನು ದ್ರೌಪದಿಯ ಸ್ವಗತದಲ್ಲಾದರೂ ಸೇರಿಸಬಹುದಿತ್ತು. 

ದ್ರೌಪದಿಯ ವಸ್ತ್ರಾಪಹರಣ ಸನ್ನಿವೇಶದಲ್ಲಿ, ಭೈರಪ್ಪನವರು ಅಕ್ಷಯ ವಸ್ತ್ರ ಪ್ರಧಾನದ ಸನ್ನಿವೇಶಕ್ಕೆ ವಾಸ್ತವದ ಲೇಪವನ್ನು ನೀಡಿದ್ದಾರೆ. ನಿಸ್ಸಾಹಯಕಳಾದ ದ್ರೌಪದಿ, ತನ್ನ ಅಣ್ಣನಾದ ಕೃಷ್ಣನ ಮೊರೆಹೋಗಿ, ಸೇಡು ತೀರಿಸಿಕೊಳ್ಳುವುದಾಗೆ ಬೆದರಿಕೆ ಹಾಕಿದಾಗ, ಹೆದರಿದ ದುರ್ಯೋಧನಾದಿಗಳು ವಸ್ತ್ರಾಪಹರಣವನ್ನು ನಿಲ್ಲಿಸುತ್ತಾರೆ. ಈ ಸನ್ನಿವೇಶವನ್ನು ನಾಟಕದಲ್ಲಿ ಪ್ರಸ್ತುತ ಪಡಿಸಿದ್ದರೂ, ಕೃಷ್ಣನ ಹೆಸರಿನಿಂದಲೇ ದ್ರೌಪದಿಯ ಮಾನ ಉಳಿದಿದ್ದನ್ನು ಇನ್ನೂ ಹೆಚ್ಚು ಸ್ಪಷ್ಟ ಪಡಿಸಬಹುದಿತ್ತು. 

ದ್ರೋಣ-ಏಕಲವ್ಯರ ಪ್ರಸಂಗ ನಾಟಕದಲ್ಲಿ ಚನ್ನಾಗಿ ಮೂಡಿ ಬಂದಿದ್ದರೂ, ಅದು 'ಗುರು ದ್ರೋಣ'ರ ಮೇಲೆ ಪ್ರೇಕ್ಷಕರಿಗೆ ಅನುಕಂಪ ಬರುವಂತೆ ಮಾಡುವುದಿಲ್ಲ. ಏಕಲವ್ಯನ ಮೇಲಿನ ದ್ರೋಣರ ಪ್ರೀತಿ, ಏಕಲವ್ಯನ ಕಾಡಿಗೆ ಗುಟ್ಟಾಗಿ ದ್ರೋಣರು ಹೋಗಿ ಬಿಲ್ಲುವಿದ್ಯೆಯನ್ನು ಬೋಧಿಸಿದ್ದು, ಹೆಬ್ಬರಿಳಿನ ಗುರುದಕ್ಷಿಣೆ ಪಡೆದ ಮೇಲೂ ದ್ರೋಣರು ಗಾಯಕ್ಕೆ ನೀಡಿದ ಚಿಕಿತ್ಸೆ ಮತ್ತು 'ನಾಲ್ಕು ಬೆರಳಿನ ಬಿಲ್ಲು ವಿದ್ಯೆ'ಯನ್ನು ದ್ರೋಣರು ಏಕಲವ್ಯನಿಗೆ ಬೋಧಿಸಿದ್ದು ನಾಟಕದಲ್ಲಿ ವ್ಯಕ್ತವಾಗುವುದಿಲ್ಲ. ಮೂಲ ಕಾದಂಬರಿಯಲ್ಲಿ ಇದು ಸ್ಪಷ್ಟವಾಗಿ ಮೂಡಿ ಬಂದು, 'ಗುರುಜನ'ಗಳ ಮೇಲಿನ ಅಪವಾದವನ್ನು ಹೋಗಲಾಡಿಸಲು ಭೈರಪ್ಪನವರು ಮಾಡಿರುವ ಪ್ರಯತ್ನ ಗೋಚರಿಸುತ್ತದೆ. 

ಮುಂದಿನ ದಿನಗಳಲ್ಲಿ ನಾಟಕದ ಪ್ರಯೋಗ ಹೆಚ್ಚು ಹೆಚ್ಚು ಮುಂದುವರಿಯುದರಲ್ಲಿ ಅನುಮಾನವಿಲ್ಲ. ನಾಟಕವನ್ನು ನೋಡದಿರುವ ಅಭಿಮಾನಿಗಳೆಲ್ಲಾ ನಾಟಕವನ್ನು ನೋಡಲೇಬೇಕೆಂಬುದು ನನ್ನ ಮನವಿ.  ಪರ್ವ ನಾಟಕ ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ಮೂಡಿ ಬರಲಿ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರವಾಗಲಿ ಎಂದು ಹಾರೈಸುತ್ತೇನೆ. 

-೦-೦-೦-೦-

 



Wednesday, 20 October 2021

ಯಾರಿವರು ಕವನ ಸಂಕಲನ

 

 

ಕವನೋತ್ಸವ  

(ರಚನೆ: ಲಕ್ಷ್ಮೀನಾರಾಯಣ ಕೆ.

Klakshminarayana1956@rediffmail.com

Mobile: 98455 62603)

***

ಕವನೋತ್ಸವ1

ಯಾರಿವರು?

***

'ಮಸಣದ ಚಲುವೊಂದಿಗೆ' ಪ್ರಣಯವಾಯ್ತೆ?

ಮಸಣದ ನೀರವತೆ ದಮನಿತರ

ದನಿಗೆ, ತಾ ಸ್ಫೂರ್ತಿಯಾಯ್ತೆ?

 

'ನಾ ಮೂಳೆ, ನಾ ಇಂಗೆ ಇರಲ್ಲಾ

ಕೂಗ್ತೀನಿ, ಸಿಡಿತೀನಿ,' ಎಂಬಿವನ ದನಿ

ಬಂಡಾಯದ ಕೂಗಾಯ್ತೆ?

 

'ತ್ರಾಣ, ಪ್ರಾಣ ಎಳ್ಡೂ ಇಲ್ದೆ

ತ್ವಡೆ ನಡ್ಗಿ ಸತ್ತೋಗೋರಾ,' ಎಂಬೀ ಕೂಗು

ನಮ್ಮಾಳೋರ ಬಡಿದೆಬ್ಬಿಸಿತೇ?

 

 

'ಟಾಟಾ, ಬಿರ್ಲಾ ಜೋಬಿಗೆ ಬಂತು

ನಲವತ್ತೇಳರ ಸ್ವಾತಂತ್ರ್ಯ' ಎಂದವನ ನಾದ

ಸಾಮಾಜಿಕ ನ್ಯಾಯಕ್ಕೆ ತಾ ನಾಂದಿಯಾಯ್ತೆ?

 

ಶೋಷಿತರ ದನಿಯಿಂದು ಸದ್ದಡಗಿಸಿತೆ?

ದಿವ್ಯ ಚೇತನಕೇತರ ಸಾವು?

ಸ್ಥಾವರಕಳಿವುಂಟು, ಜಂಗಮಕ್ಕುಂಟೇ?

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಬಂಡಾಯ ಕವಿ ಸಿದ್ಧಲಿಂಗಯ್ಯ)

******

 

ಕವನೋತ್ಸವ2

ಯಾರಿವರು?

***

ಮೂರ್ತಿ ಚಿಕ್ಕದಾದರೂ 

ಕೀರ್ತಿ ದೊಡ್ಡದಂತೆ 

ಮೊದಲಾಟದಲ್ಲೇ ಸಿಡಿಯಿತಂತೆ 

ಭರ್ಜರಿ ಚೊಚ್ಚಲ ಶತಕ 

ಬ್ಯಾಟಿಂಗ್ ಕಲೆಯ ನಿಪುಣನೀತ 

ನೂರೇರಿಸಿದಾಗೆಲ್ಲ ನಾವ್  ಸೋತಿಲ್ಲವಂತೆ 

'ವಿಶ್ವ'ಮಾನ್ಯ ಕನ್ನಡಿಗನೀತ 

ಸಜ್ಜನ ಕ್ರಿಕೆಟಿಗನಂತೆ 

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಜಿ.ಆರ್. ವಿಶ್ವನಾಥ್) 

******

ಕವನೋತ್ಸವ - 3

ಯಾರಿವರು?

***

ಚಾಮಯ್ಯ ಮೇಷ್ಟ್ರ ಪ್ರೀತಿಯೇ 

ಶಿಷ್ಯನಿಗೆ ಮುಳುವಾಯ್ತೆ?

 

ಸದಾಶಿವರಾಯರ ಅತಿಯಕ್ಕರೆಯೂ 

ಮಿನುಗುತಾರೆಯ ಮೆರೆಸದಾಯ್ತೆ?

ದುರಂತಗಳಿಗೆ ಮುನ್ನುಡಿ ಬರೆವುದೆ 

ಇವರ ಪಾತ್ರವಾಯ್ತೆ?

 

'ನಮ್ಮ ಮಕ್ಕಳೀ' ಪಾತ್ರಧಾರಿ

'ಸತ್ಯಮಾರ್ಗದಿ ನಡೆವ ಶಕ್ತಿ' ಬೇಡಿದರೇಕೆ?

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಕೆ.ಎಸ್.ಅಶ್ವತ್ಥ್) 

 

 

ಕವನೋತ್ಸವ - 4

ಯಾರಿವರು?

***

ಹೆಸರಲಿ ಶಾಂತನಾದರೂ 

ಹೋರಾಟದ ಹಠವಂತನೆ?

ಕಾಗೋಡ ಗೂಡಿಗೆ ಲೋಹಿಯಾರ 

ಕರೆತಂದ ಭಗೀರಥನಿವನೆ?

'ಅವಸ್ಥೆ' ಶೋಷಿತನಿವ 

ಅರಸರ ಭೂಸುಧಾರಣೆಗೆ ಪ್ರೇರಣೆಯಾದನೆ?

ಏನವಸರವಿತ್ತೋ, ಬೇಗ ತೆರಳಿ 

ಉತ್ಸಾಹಿಗಳೇಕೆ ಅಲ್ಪಾಯುಗಳೆಂದೆಮ್ಮ ಕಾಡಿದನೆ?

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಶಾಂತವೇರಿ ಗೋಪಾಲ ಗೌಡ)

***

 

 

 

 

 

 

 

ಕವನೋತ್ಸವ - 5

ಯಾರಿವರು?

***

ವಿಷವುಂಡವನ ಬೀಡ ನರ್ತಕಿಗೆ 

ಬೆಂಗಳೂರ ಬಿರುದೇಕೆ?

ಗೆಜ್ಜೆಪೂಜೆಗೆ ಕೊರಳೊಡ್ಡಿದರು, ನೃತ್ಯ, ಸಂಗೀತ 

ಸಾಹಿತ್ಯಗಳ  ಕರುಳಲೇ  ಪಡೆದಳೆ?

ತನು, ಮನ, ಧನಗಳ ಗಾನಗುರು ತ್ಯಾಗಯ್ಯಗರ್ಪಿಸಿ 

 ಅವರರಾಧನೆಗೆ ನಾಂದಿ ಹಾಡಿದಳೆ?

ಕೀಳೆಂಬ ಹಣೆಪಟ್ಟಿ ಹೊತ್ತು ಸೆಣಸಿ  

ಲೀನಳಾದಳಲ್ಲ ಗುರು ಚರಣದೊಳಗೆ!

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಬೆಂಗಳೂರು ನಾಗರತ್ನಮ್ಮ)

******

 

ಕವನೋತ್ಸವ - 6

ಯಾರಿವರು?

***

ಕೃಷ್ಣರಾಜರ ಮುರಳಿ ಕರೆಯಿತೆ 

ದೂರ ತೀರಕೆ ನಿನ್ನನು?

ಸಪ್ತ ಸಾಗರದಾಚೆ ಹಾರಿ 

ಸೇರಿದೆಯಾ ಕರುನಾಡನು?

 

ಹೂವ ಹಾಸಿಗೆ ಹಸಿರು ಹೊದಿಕೆ 

ಮರರೆಂಬಗಳ ಚುಂಬನ 

'ಕೆಂಪು ತೋಟ' ಬೇಲಿಯೊಳಗೆ 

ನಿರ್ಮಿಸಿದೆ ಸ್ವರ್ಗವೊಂದನ!

 

ಬಿಳಿಯ ಸೀರೆಯನುಟ್ಟು ಬಳುಕುವ  

ಜಲಕನ್ನಿಕೆಯರ ನರ್ತನ 

ಸೆಳೆವ ಬೃಂದಾವನವ ಕಟ್ಟಿ 

ಸಿಂಗರಿಸಿದೆ ಕಾವೇರಿ ಅಣೆಕಟ್ಟನ!

 

ಕರ್ಮಭೂಮಿಯಲೇ ಮಣ್ಣಾದ 

ಸಾರ್ಥಕವು ನಿನ್ನೀ ಜೀವನ 

ಹಸಿರು ಸಂದೇಶದ ನಿನ್ನ 

ನೆನೆಯುತಿದೆ ಕನ್ನಡ ವನ, ಮನ 

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಜಿ.ಎಚ್. ಕ್ರುಮ್ಬಿಗಲ್)

******

 

 

ಕವನೋತ್ಸವ - 7

ಯಾರಿವರು?

***

ಮಧುರ ಕಂಠದ ಪುಟ್ಟ ಕೋಗಿಲೆಗೆ 

ಕುತ್ತಾಯ್ತೆ ಕೊರಳ ನೋವೊಂದು?

ಗಡುಸಾಯ್ತು ಗಾನಗಂಗೆಯ ಸಿರಿಕಂಠವಂದು!

 

ಸೋಲೊಪ್ಪುವುದುಂಟೆ 

ಗಂಡುಮೆಟ್ಟಿನ ನಾಡ ದಿಟ್ಟ ಮಹಿಳೆ?

ಒಲಿಸಿಕೊಂಡಳಲ್ಲಾ ಗಡುಸು ದನಿಗೆ ಭಾವದ ಸೆಲೆ!

 

ಸಣ್ಣ ಝರಿಯೊಂದು ಬೆಟ್ಟಗುಡ್ಡಗಳ ಬಳಸಿ 

ಮೈತುಂಬಿ ಭೋರ್ಗರೆದು ನದಿಯಾಗುವಂತೀ 

ಗಂಗೆಯ ಗಾನಶ್ರುತಿ 

 

ಭೀಮ, ಬಸವ, ಮಲ್ಲಿಕಾರ್ಜುನರ ಸೆಣಸಿ 

ಗೆದ್ದು ಬೀಗಿದಳಲ್ಲಾ ಹೆಣ್ತನವ ಮೆರೆಸಿ 

ಪದ್ಮವಿಭೂಷಣೆಯಾಗಿ ಕರುನಾಡ ಗೆಲಿಸಿ 

***

(ರಚನೆ: ಲಕ್ಷ್ಮೀನಾರಾಯಣ ಕೆ.) 

(ಉತ್ತರ: ಗಂಗೂಬಾಯ್ ಹಾನಗಲ್)

******

ಕವನೋತ್ಸವ - 8

ಯಾರಿವರು?

***

ಗೋಕಾಕದ ಜಲಧಾರ 

ಕರುನಾಡ ನಯಾಗರ 

ಅಲ್ಲಿ ಜನಿಸಿತೊಂದು 

ಗಣಿತದ ಧ್ರುವತಾರ 

 

ಬೆಳಗಿತದು  

ಗಂಡುಮೆಟ್ಟಿನ ನಾಡ  

ವಿದ್ಯಾಲಯಗಳ 

ಪರಿಕರ 

 

ದೂರದೈದು ನದಿಗಳ ಬೀಡ  

ಆಳಿದ್ದು ಅದರ ಶಿಖರ 

ಅದರ  ಸ್ಮರಣೆಯೆ 

ನಮಗೆ ಶ್ರೀಕಾರ 

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಡಿ.ಸಿ.ಪಾವಟೆ)

******

 

ಕವನೋತ್ಸವ9

ಯಾರಿವರು?

***

ಹೂವು ಹೊರಳುವವು ಸೂರ್ಯನ ಕಡೆಗೆ

ನಮ್ಮ ದಾರಿ  ಭಾವ ಜೀವಿಯವರೆಗೆ

ಗದ್ಯದ ಒಡಲಿಗೆ, ಪದ್ಯದ ಕಡಲಿಗೆ

ಮುಳುಗಿದಂತೆ, ದಿನ ಬೆಳಗಿದಂತೆ

ಹೊರಬರುವನು ರವಿಯ ಹಾಗೆ

 

'ಮಣ್ಣಿನ ಮೆರವಣಿಗೆ'ಯಲಿ

 ಕರಗಿಸಿ ಬಿಡವನು

ಎಲ್ಲ ಬಗೆಯ ಸರಕು:

ಸಮನ್ವಯದ ಕವಿಯು

ಕೂಡಿಸಿ ಬಾಳ ತೊಡಕು

 

'ಜೀವ ಧ್ವನಿ' ಕವನಗಳಿಗೂ ಮುದ

ಭಾವಪೂರ್ಣ ಗಾನಕೂ ಒಂದೇ ಹದ,

ಕವಿ ಹೃದಯದೊಳೇನು ನಡೆವುದೋ

'ಚೆಲ್ವವೀರನವನು'ನವನು ಕಲಾವಿದ

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಚೆನ್ನವೀರ ಕಣವಿ)

******

 

ಕವನೋತ್ಸವ10

ಯಾರಿವರು?

***

'ಇಗೋ ಕನ್ನಡ'  ಎಂದಾತ 

ನಮ್ಮೆಲ್ಲರ ಬಡಿದೆಬ್ಬಿಸಿದಾತ 

ಬರೆದಿಟ್ಟು ನಮಗೊಂದು ನಿಘಂಟ 

ಹೊರಟು ನಿಂತ ಧೀಮಂತ 

 

ಇಗೋ 'ಜೀವಿ' ಈತ 

ಪಂಪರನ್ನರ ನಮಗೆ ತೋರಿಸಿದಾತ 

ಕೆಟಲರ ಕಾರ್ಯ ಮುಂದುವರೆಸಿದಾತ 

'ಶಬ್ದಸಾಗರ'ಕೆ  ಸೇತು ನಿರ್ಮಿಸಿದಾತ 

 

ಎರಡು ಮಹಾಮಾರಿಗಳ ಜಯಿಸಿದಾತ 

ಎರಡು ಮಹಾಯುದ್ಧಗಳ ಗೆದ್ದು ನಿಂತಾತ 

ಕನ್ನಡದುಳಿವೆಗೆ ಯುವಸೈನ್ಯ ಕಟ್ಟಿದಾತ 

ಶತನಮಾನಗಳು ನಿಮಗಿದೋ ನಮ್ಮೆಲ್ಲರ ತಾತ

 

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಜಿ. ವೆಂಕಟಸುಬ್ಬಯ್ಯ)

******