Monday, 17 January 2022

ಚುನಾವಣಾ ಬಜೆಟ್!

೨೦೨೨ರ ಫೆಬ್ರವರಿ ೧ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಅದೊಂದು ಚುನಾವಣಾ ಬಜೆಟ್ ಆಗಿರಲಿದೆ ಎಂಬುದರಲ್ಲಿ ಅನುಮಾನವಿರದು. ಉತ್ತರ ಪ್ರದೇಶವನ್ನೊಳಗೊಂಡಂತೆ ಐದು ರಾಜ್ಯಗಳ ಚುನಾವಣೆ ಫೆಬ್ರವರಿ ೧೦ರಿಂದ ನಡೆಯಲಿದೆ. ಈ ಐದು ರಾಜ್ಯಗಳ ಪೈಕಿ, ಪಂಜಾಬನ್ನು ಹೊರತು ಪಡಿಸಿ, ಮಿಕ್ಕ ನಾಲ್ಕು ರಾಜ್ಯಗಳಲ್ಲೂ ಭಾಜಪ ಪಕ್ಷವೇ ಆಡಳಿತದಲ್ಲಿದು, ಆ ನಾಲ್ಕೂ  ರಾಜ್ಯಗಳನ್ನುಳಿಸಿಕೊಳ್ಳುವ ಅನಿವಾರ್ಯತೆ ಆ ಪಕ್ಷಕ್ಕಿದೆ. ೨೦೨೪ರ ಲೋಕಸಭಾ ಚುನಾವಣೆಯ 'ಸೆಮಿಫೈನಲ್ಲೇ' ಮುಂದಿನ ತಿಂಗಳ ಪಂಚರಾಜ್ಯಗಳ ಚುನಾವಣೆ ಎನ್ನಬಹುದು. ಈ ನಡುವೆ ಉತ್ತರ ಪ್ರದೇಶದ ಹಲವಾರು ಭಾಜಪ ಮಂತ್ರಿಗಳು ಹಾಗೂ ಶಾಸಕರು, ಪಕ್ಷವನ್ನು ತೊರೆಯುತ್ತಿರುವುದು, ಆ ಪಕ್ಷದ ನಿದ್ದೆ ಕೆಡಿಸಿರುವುದು ಸುಳ್ಳಲ್ಲ.  ಹಾಗಾಗಿ ಮುಂಬರುವ ಕೇಂದ್ರ ಬಜೆಟ್ನ ಮೂಲೋದ್ದೇಶ ಮತಗಳಿಕೆಯ ಮೇಲೆ ಕೇಂದ್ರೀಕೃತವಾಗಿರದೆ ಅನ್ಯ ಮಾರ್ಗವಿಲ್ಲ. 

ಮೋದಿಯವರ ಮಹತ್ವಾಕಾಂಕ್ಷೆಯ ಕೃಷಿ ಸುಧಾರಣಾ ಕಾನೂನುಗಳನ್ನು ಹಿಂಪಡೆಯ ಬೇಕಾಗಿ ಬಂದ ಸನ್ನಿವೇಶವೊಂದು ವಿಪರ್ಯಾಸ. ಉತ್ತಮ ಆರ್ಥಿಕ ತತ್ವ ಎಂಬುದು ಜನಪ್ರಿಯತೆಯ ಹಾದಿಯ ಮುಳ್ಳು ಎಂಬುದು ಭಾರತ ದೇಶದ ರಾಜಕೀಯದ ಕಠೋರ ಸತ್ಯ. ಕೃಷಿ ಸುಧಾರಣೆಯಲ್ಲಿ ಕಂಡ ಹಿನ್ನಡೆಯ ಕರಿ ನೆರಳು, ಬೇರೆ ಆರ್ಥಿಕ ಕ್ಷೇತ್ರಗಳ ಸುಧಾರಣೆಗಳನ್ನೂ ಬಾಧಿಸದಿರದು. 

'ಹೋದ್ಯಾ ಪಿಶಾಚಿ ಅಂದ್ರೆ, ಬಂದೆ ಗವಾಕ್ಷೀಲಿ' ಎಂಬಂತೆ, ಒಮಿಕ್ರೋನ್ನಂತಹ ಹೊಸ ರೂಪಾಂತರಿ ಕೋವಿಡ್ ತಳಿಗಳು ಇಡೀ ವಿಶ್ವವನ್ನೇ, ಕೋವಿಡ್ನ ಮೂರನೇ ಅಲೆಗೆ ತಳ್ಳಿವೆ. ಕುಂಟುತ್ತಾ ಸುಧಾರಿಸುತ್ತಿದ್ದ ನಮ್ಮ ದೇಶದ ಆರ್ಥಿಕತೆಯನ್ನು, ಈಚೆಗೆ ದೇಶಾದ್ಯಂತ  ವಿಧಿಸಿರುವ  ನಿರ್ಬಂಧನೆಗಳು, ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂಗಳು ಮತ್ತೊಮ್ಮೆ ಹಾಳುಗೆಡವಿದೆ. ಇಂತಹ ಸನ್ನಿವೇಶದಲ್ಲಿ, ಮುಂಬರುವ ಬಜೆಟ್ನಲ್ಲಿ ಬಡವರ ಕಣ್ಣೀರೊರೆಸುವ ಕ್ರಮಗಳೇ ಹೆಚ್ಚಾಗಿರಬೇಕಾದ್ದು ಅನಿವಾರ್ಯ. 

ಮುಂಬರುವ ಬಜೆಟ್ ರೈತರ ಬಜೆಟ್ ಆದರೆ ಆಶ್ಚರ್ಯವಿಲ್ಲ. ನಮ್ಮ ರೈತರ ಪೈಕಿ ೮೨%ರಷ್ಟು ರೈತರು 'ಸಣ್ಣ ಮತ್ತು ಅತಿ ಸಣ್ಣ ರೈತರು.' ಅವರುಗಳಿಗೆ 'ವಿಶೇಷ ಬೆಂಬಲ ಬೆಲೆಯ' ತಂತ್ರವನ್ನು ಕೇಂದ್ರ ಸರಕಾರ ರೂಪಿಸಬಹುದು. ಜೊತೆಗೆ ನಮ್ಮ ಗ್ರಾಮೀಣರ ಪೈಕಿ, ೪೦%ರಷ್ಟು ಜನರು ಭೂರಹಿತ ಕೃಷಿ ಕಾರ್ಮಿಕರು. ಸಣ್ಣ ರೈತರುಗಳಿಗೆ ನೀಡುತ್ತಿರುವ ರೂ. ೬೦೦೦ದಷ್ಟರ  ವಾರ್ಷಿಕ ನೆರವನ್ನು ಭೂರಹಿತ ಕೃಷಿ ಕಾರ್ಮಿಕರಿಗೂ ವಿಸ್ತರಿಸುವುದು ಸೂಕ್ತ. ಆದಾಯದ ಕೊರತೆಯಿಂದ ನಲುಗುತ್ತಿರುವ ನಮ್ಮ ಕೃಷಿಕರುಗಳನ್ನು, ಕೃಷಿಯೇತರ ಆರ್ಥಿಕ ಚಟುವಟಿಕೆಗಳತ್ತ ಸೆಳೆಯುವ ಯೋಜನೆಗಳನ್ನು ರೂಪಿಸುವುದೂ ಸರಕಾರದ ಕರ್ತವ್ಯ. 

ಕೋವಿಡ್ ಸಂಕಷ್ಟದಿಂದ ನೊಂದ ಕೃಷಿಯೇತರ ಬಡವರ ಸಂಖ್ಯೆ ಬಹು ದೊಡ್ಡದು. ಕಟ್ಟಡ ಕಾರ್ಮಿಕರು, ವಲಸಿಗರು, ರಸ್ತೆಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು, ಸಣ್ಣ ಹೊಟೇಲಿಗರು, ಕ್ಷೌರ ಮುಂತಾದ ವಿವಿಧ ಸೇವೆಗಳನ್ನು ಒದಗಿಸುವವರು, ಇತ್ಯಾದಿ  ಬಡವರುಗಳಿಗೆ ಒಂದು ಬಾರಿಯ ತುರ್ತು ಆರ್ಥಿಕ ನೆರವನ್ನು ಘೋಷಿಸಬಹುದು. 

ಕೋವಿಡ್ ಎಂಬ ಮಹಾಮಾರಿ ಅಪಾರ ಸಂಖ್ಯೆಯ ಜೀವಗಳನ್ನು ಹಿಂಡಿ, ಲಕ್ಷಾಂತರ ಕುಟುಂಬಗಳ ದುಡಿಯುವರನ್ನೇ ಇಲ್ಲವಾಗಿಸಿದೆ. ಅಂತಹ ಬಡ  ಕುಟುಂಬಗಳಿಗೆ  ದೊರಕಿರುವ ಪರಿಹಾರ ಸಾಲದು. ಹೆಚ್ಚಿನ ನೆರವು ಅವರುಗಳಿಗೆ ದೊರೆಯುವಂತಾಗಬೇಕು. ಮೇಲಾಗಿ ಅಂತಹ ಕುಟುಂಬಗಳಿಗೆ ಉದ್ಯೋಗವನ್ನು ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸಬೇಕಾದ್ದು ಅತ್ಯವಶ್ಯಕ. 

ಹೆಚ್ಚು ಓದದೆ, ಅಲ್ಪಸ್ವಲ್ಪ ಕೌಶಲ್ಯಗಳನ್ನು (ಸೆಮಿ ಸ್ಕಿಲ್ಲ್ಡ್) ಹೊಂದಿರುವ  ನಮ್ಮ ಕೋಟ್ಯಂತರ  ಯುವಕರು ಉದ್ಯೋಗವನ್ನರಸುತ್ತಿದ್ದಾರೆ. ಅವರುಗಳಿಗೆ ಉದ್ಯೋಗವನ್ನೊದಗಿಸುವ ಯೋಜನೆಗಳು ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಕಡೆ ಗಮನ ಹರಿಸುವುದು ಒಳಿತು. ಇಡೀ ವಿಶ್ವದಲ್ಲೇ ಭಾರತದಂತಹ ಆಕರ್ಷಕ ಹಾಗೂ ಕಮ್ಮಿ ವೆಚ್ಚದ  ಪ್ರವಾಸಿ ತಾಣ ಬೇರೊಂದಿಲ್ಲ. ೧೩೫ ಕೋಟಿಯಷ್ಟರ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ, ನಮ್ಮ ಆಂತರಿಕ ಪ್ರವಾಸಿಗರ ಸಂಖ್ಯೆಯೂ ಅಪಾರ. ದೇಶದ ಆದಾಯದ (ಜಿಡಿಪಿ) ೧೦%ರಷ್ಟನ್ನು ಗಳಿಸಿಕೊಡುವ ಸಾಮರ್ಥ್ಯ ಭಾರತೀಯ ಪ್ರವಾಸೋದ್ಯಮಕ್ಕಿದೆ ಎಂಬುದು ತಜ್ಞರ ಅಭಿಪ್ರಾಯ. ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮುಖಾಂತರ, ನಮ್ಮ ಯುವಕರುಗಳಿಗೆ ಉದ್ಯೋಗ ದೊರೆಯುವಂತಾಗಬೇಕು. ರಸ್ತೆ ನಿರ್ಮಾಣ, ನದಿ ಜೋಡಣೆ ಮುಂತಾದ ಬೃಹತ್ ಯೋಜನೆಗಳನ್ನು ರೂಪಿಸುವ ಮುಖಾಂತರವೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದು ಖಂಡಿತ. 

ರಕ್ಷಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸರಕಾರ ವಿನಿಯೋಗಿಸುತ್ತಿರುವ ಹಣ ಏನೇನು ಸಾಲದು ಎಂಬುದು ಹಲವು ದಶಕಗಳ ಅಭಿಪ್ರಾಯ. ಹೆಚ್ಚಿನ ಹಣ ಈ ಮೂರೂ ಕ್ಷೇತ್ರಗಳಿಗೂ ಹರಿದು ಬರಬೇಕು.  ಈ ಮೂರು ಕ್ಷೇತ್ರಗಳಲ್ಲೂ ಅಪಾರ ಸಂಖ್ಯೆಯ ಕೆಲಸಗಾರರ ಕೊರತೆಯಿದ್ದು ಅವುಗಳನ್ನು ತುಂಬುವ ಪ್ರಯತ್ನ ಕೂಡಲೇ ನಡೆಯಬೇಕು. ಉದ್ಯೋಗ ಸೃಷ್ಟಿಯತ್ತ ಇದು ಮತ್ತೊಂದು ಹೆಜ್ಜೆಯಾಗಬಲ್ಲದು. 

ಗೃಹ ನಿರ್ಮಾಣ ಸಾಲಗಳಿಗೆ ಹೆಚ್ಚಿನ ಬಡ್ಡಿ ಸಹಾಯ ಧನ (ಇಂಟರೆಸ್ಟ್ ಸಬ್ಸಿಡಿ) ನೀಡಬಹುದು. ಜೊತೆಗೆ ಹೆಚ್ಚಿನ ಬಡ್ಡಿ ಮೊತ್ತಕ್ಕೆ ಆದಾಯ ತೆರಿಗೆಯ ತೆರಿಗೆಯ ರಿಯಾಯ್ತಿಯನ್ನು ದೊರಕಿಸಲೂ ಬಹುದು. ಈ ಕ್ರಮಗಳಿಂದ ಗೃಹ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದಂತಾಗಿ, ಉದ್ಯೋಗ ಸೃಷ್ಟಿಯಾಗುತ್ತದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ರೂ. ೫೦,೦೦೦ದಿಂದ ೧ ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಸಂಬಳದಾರರಿಗಿದೆ. 

ನಮ್ಮ ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ವರ್ಗವೆಂದರೆ ಹಿರಿಯ ನಾಗರೀಕರದು. ಆದಾಯವಿರದ ಅವರುಗಳಿಗೆ ಮಾಸಿಕ ಪೆನ್ಷನ್ ನೀಡುವುದು ಸರಕಾರದ ಕರ್ತವ್ಯ. ವಿವಿಧ ಇಲಾಖೆಗಳ ಪಿಂಚಣಿದಾರರ, ಪಿಂಚಣಿ ಪರಿಷ್ಕರಣೆ ಹಲವು ವರ್ಷಗಳಿಂದ ನಡೆದಿಲ್ಲ. ಅವರೆಲ್ಲರಿಗೂ 'ಒಂದು ಹುದ್ದೆ, ಒಂದು ಪೆನ್ಷನ್ (ಒನ್ ರಾಂಕ್, ಒನ್ ಪೆನ್ಷನ್)' ಎಂಬ ಸೂತ್ರದ ಪ್ರಕಾರ ಪೆನ್ಷನ್ ಪರಿಷ್ಕರಣೆ ಕೂಡಲೇ ಆಗಬೇಕು. ರೂ. ೫೦,೦೦೦ಗಳವರೆಗಿನ ವಾರ್ಷಿಕ ಪೆನ್ಷನ್ ಮೇಲೆ ಆದಾಯ ತೆರಿಗೆಯನ್ನು ಹೇರಬಾರದು. 

ಪೆಟ್ರೋಲ್ ಬೆಲೆ ರೂ. ೧೦೦ನ್ನೂ ಮೀರಿ ನಿಂತಿರುವುದು ಎಲ್ಲರನ್ನು ಕಂಗೆಡಿಸಿದೆ. ಕನಿಷ್ಠ ೧೦%ರಷ್ಟು ಪೆಟ್ರೋಲ್ ಬೆಲೆ ಇಳಿಯುವಂತೆ ಎಲ್ಲ ಕ್ರಮಗಳನ್ನು ಸರಕಾರ ಕೂಡಲೇ ಕೈಗೊಳ್ಳಬೇಕು. ಜೊತೆಗೆ ಬಡವರಿಗೆ ಪ್ರತಿ ತಿಂಗಳು ೧೦ರಿಂದ ೨೦ ಲೀಟರ್ಗಳಷ್ಟು ಪೆಟ್ರೋಲ್ ಉಚಿತವಾಗಿ ನೀಡುವ ಯೋಜನೆಯೊಂದನ್ನು ಸರಕಾರ ಜಾರಿಗೊಳಿಸುವುದು ಒಳಿತು. 

ಬೇಡಿಕೆಗಳ ಪಟ್ಟಿಗೆ ಕೊನೆಯಿಲ್ಲ. ಆದರೆ ಈ ಬಾರಿ ಸಂಪನ್ಮೂಲಗಳ ಕ್ರೋಡೀಕರಣವೊಂದು ದೊಡ್ಡ ಸವಾಲೇ. ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳನ್ನು ಹೆಚ್ಚಿಸಲು ಇರುವ ಅವಕಾಶ ಅತ್ಯಲ್ಪ. ಬಹು ನಿರೀಕ್ಷಿತ 'ಎಲ್.ಐ.ಸಿ.' ಷೇರುಗಳ ಮಾರಾಟದಂತಹ ಹಲವು ಯೋಜನೆಗಳನ್ನು ಸರಕಾರ ಕೈಗೊಳ್ಳಬೇಕಾಗಬಹುದು. ಹೆಚ್ಚಿನ ನೋಟುಗಳ ಮುದ್ರಣ ಕೂಡ ಸಂಪನ್ಮೂಲಗಳ ಕೊರತೆಯನ್ನು ನೀಗಿಸುವ ತಂತ್ರ ಎಂಬುದು ಕೆಲವು ತಜ್ಞರ ಅಭಿಪ್ರಾಯ. ಆರ್.ಬಿ.ಐ. ಸಂಸ್ಥೆ ಗಳಿಸಿರುವ ಹೆಚ್ಚುವರಿ (ಸರ್ಪ್ಲಸ್) ಹಣವನ್ನು ಕೇಂದ್ರ ಸರಕಾರ ಬಳಸಿಕೊಳ್ಳಬಹುದು. ಕೋವಿಡ್ ಸಂಕಷ್ಟದ ಈ ದಿನಗಳಲ್ಲಿ ಸರಕಾರ ಈ ಯಾವ ಮೂಲಗಳನ್ನು ಬಳಸಿಕೊಂಡರು ಆಶ್ಚರ್ಯವಿಲ್ಲ. ಎಲ್ಲವುದಕ್ಕು ಕೆಲವು ದಿನಗಳು  ಮಾತ್ರ ಬಾಕಿಯಿವೆ. ಕಾದು ನೋಡೋಣ. 

-೦-೦-೦-೦-೦-೦-

೨೦೨೪ರ ಲೋಕಸಭಾ ಚುನಾವಣೆಯ 'ಸೆಮಿಫೈನಲ್ಲೇ' ಮುಂದಿನ ತಿಂಗಳ ಪಂಚರಾಜ್ಯಗಳ ಚುನಾವಣೆ ಎನ್ನಬಹುದು.  ಹಾಗಾಗಿ ಮುಂಬರುವ ಕೇಂದ್ರ ಬಜೆಟ್ನ ಮೂಲೋದ್ದೇಶ ಮತಗಳಿಕೆಯ ಮೇಲೆ ಕೇಂದ್ರೀಕೃತವಾಗಿರದೆ ಅನ್ಯ ಮಾರ್ಗವಿಲ್ಲ. 


No comments:

Post a Comment