Friday, 18 February 2022

Janamitra_My book


 'ಕೋವಿಡ್ ಮಾನವ ಸೃಷ್ಟಿಯೇ?'

'ಕೋವಿಡ್ ಮಾನವ ಸೃಷ್ಟಿಯೇ?' ಎಂಬುದೊಂದು ತನಿಖೆಯ ವಿಚಾರ. ಆದರೆ, ನನ್ನ ಈ  ಕಾಲ್ಪನಿಕ ಕಾದಂಬರಿಯ ಕಥಾವಸ್ತುವಿನ
ವಿಸ್ತಾರ ಇನ್ನೂ ವಿಶಾಲವಾದದು. ಚೀನಾದಿಂದ ಹೊರಹೊಮ್ಮಿದ 'ಕೋವಿಡ್-೧೯' ಎಂಬ ಮಹಾಮಾರಿ, ಈಗ ಇಡೀ
ವಿಶ್ವವನ್ನಾವರಿಸಿದೆ. ಕಷ್ಟಸಹಿಷ್ಣುವಾದ ಮನುಕುಲವು, ಕೋವಿಡ್-೧೯ಕ್ಕಿಂತಲೂ ಘೋರವಾದ ಮಹಾಮಾರಿಯನ್ನು ಕಳೆದ
ಶತಮಾನದಲ್ಲೇ ಎದುರಿಸಿ ಜಯಿಸಿಯಾಗಿದೆ. ಪುಟ್ಟ ವೈರಾಣುವೊಂದಕ್ಕೆ ಬೆದರಿ, ಕೈ ಕಟ್ಟಿ ಕೂರುವ ಜಾಯಮಾನ ಮಾನವನದಲ್ಲ.
'ಜೀವಗಳು ಮತ್ತು ಜೀವನೋಪಾಯಗಳ (Lives Vs Livelihoods)' ನಡುವಿನ ಹೋರಾಟ, ವಿಶ್ವಾದ್ಯಂತ
ಮುಂದುವರೆಯುತ್ತಿರುವುದು ಒಂದು ಧನಾತ್ಮಕ ಬೆಳವಣಿಗೆಯೇ ಸರಿ.

ಇಂದೊಂದು ಕಾಲ್ಪನಿಕ ಕಾದಂಬರಿಯಾದರೂ, ಇಲ್ಲಿನ ಪಾತ್ರಗಳ ಮತ್ತು ಕಥೆಗಳ ಸೃಷ್ಟಿಗೆ, ನಮ್ಮ ಸುತ್ತಲೂ ಜರುಗುತ್ತಿರುವ ನೈಜ
ಘಟನೆಗಳೇ ಮೂಲಾಧಾರ. ಮನುಕುಲ ಹಾಗೂ ನಮ್ಮ ದೇಶ ಭಾರತ, ಕೋವಿಡ್ ವಿರುದ್ಧ ನಡೆಸುತ್ತಿರುವ ಸಮರದ
ಪಕ್ಷಿನೋಟವನ್ನು, ಓದುಗರ ಮುಂದಿಡುವುದೇ ನನ್ನ ಈ ಪುಸ್ತಕದ ಉದ್ದೇಶ.

ನನ್ನ ಪುಸ್ತಕದ ಪ್ರಮುಖ ಪಾತ್ರಧಾರಿಯಾದ ತರುಣ ವೈದ್ಯ  ಡಾ. ಕಿರಣ್ ರವರಂದು ಉದ್ವಿಗ್ನರಾಗಿದ್ದರು. ಸಮಯ ಸುಮಾರು ರಾತ್ರಿ ೯ ಗಂಟೆಯಾಗಿತ್ತು. ಶವವೊಂದನ್ನು ಹೊತ್ತ ಆಂಬುಲೆನ್ಸ್ ವಾಹನವೊಂದು ನಗರದ ದಕ್ಷಿಣ ಭಾಗದಲ್ಲಿದ್ದ ಸ್ಮಶಾನದ ಕಡೆ ಸಾಗಿತ್ತು. ಶವದ ಜೊತೆಗೆ ಡಾ.ಕಿರಣ್ ರವರು ಕುಳಿತಿದ್ದರು.  ಸ್ಮಶಾನದ ಪರಿಸ್ಥಿತಿಯ ಪೂರ್ವಾಪರಗಳ ಸಮೀಕ್ಷೆಗೆಂದೇ ಮುಂಚೆಯೇ ತೆರಳಿದ್ದ ಆಸ್ಪತ್ರೆ ಸಿಬ್ಬಂದಿ ಸತೀಶರಿಂದ, ಡಾ.ಕಿರಣ್ ರವರಿಗೆ ಫೋನ್ ಕರೆಯೊಂದು ಬಂದಿತ್ತು. 'ಸ್ಮಶಾನದ ಬಳಿ ದೊಣ್ಣೆ, ಮಚ್ಚುಗಳನ್ನು ಹಿಡಿದ ನೂರಾರು  ಜನಗಳು ನೆರೆದಿದ್ದಾರೆ.  ಉದ್ರಿಕ್ತರಾದಂತೆ ಕಾಣುತ್ತಿರುವ ಅವರುಗಳು ಹೊಡಿ-ಬಡಿಯಲು ಸಿದ್ಧರಾದಂತಿದೆ. ನಾವು ತರುತ್ತಿರುವ ಶವದ ಅಂತ್ಯಕ್ರಿಯೆಯನ್ನು ಶತಾಯಗತಾಯ ತಡೆಯುವುದೇ ಅವರ ಉದ್ದೇಶದಂತಿದೆ' ಎಂಬುದಾಗಿ ತಿಳಿಸಿದ ಸತೀಶರ ದನಿಯಲ್ಲಿ ಆತಂಕವಿತ್ತು. ದೂರದಿಂದಲೇ ಸ್ಮಶಾನದ ಕಡೆ ಕಣ್ಣು ಹಾಯಿಸಿದ ಚಾಲಕ ದೇವೀಂದರ್ ರವರು ಕೂಡ ಡಾ.ಕಿರಣರವರನ್ನು ನೋಡುತ್ತಾ, ಏನೂ ಮಾಡಲು ಸಾಧ್ಯವಿಲ್ಲವೆನ್ನುವಂತೆ ತಲೆಯಾಡಿಸಿದರು. ಡಾ. ಕಿರಣ್ ರವರೀಗ ಗಾಬರಿಗೊಂಡಂತೆ ಕಂಡರು. 

ಸ್ಮಶಾನದ ಬಳಿ ನೆರೆದ ಜನರುಗಳೆಲ್ಲರೂ ಸ್ಥಳೀಯರೇ ಆಗಿದ್ದರು. ಕೋವಿಡ್ನಿಂದ ಮೃತಪಟ್ಟವರೊಬ್ಬರ ಶವವನ್ನು ಮಣ್ಣು ಮಾಡಲು ತಮ್ಮ ಸ್ಮಶಾನದ ಕಡೆ ಕರೆತರಲಾಗುತ್ತಿದೆ ಎಂಬ ಸುದ್ದಿ ಅವರುಗಳಿಗೆ ಹೇಗೋ ತಲುಪಿತ್ತು. ಕೋವಿಡ್ನಿಂದ ಸತ್ತ ವ್ಯಕ್ತಿಯ ಸಮಾಧಿಯಿಂದ ತಮ್ಮಗಳಿಗೂ ಕೋವಿಡ್ ಹರಡುವುದು ಖಚಿತವೆಂದು ನಂಬಿದ್ದ ಅವರುಗಳು, ಶವ ಸಂಸ್ಕಾರವನ್ನು ತಡೆಯಲು ಸನ್ನದ್ಧರಾಗಿದ್ದರು. ತಡ ರಾತ್ರಿಯಾದರೂ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ನೂರಾರು ಜನ ಶಸ್ತ್ರಧಾರಿಗಳು  ನೋಡು ನೋಡುತ್ತಲೇ ಜಮಾಯಿಸಿದ್ದರು. ಮಣ್ಣು ಮಾಡಲು ತರುತ್ತಿರುವ ಶವ ನಗರದ ಬಡವರ ಬಂಧುವಾಗಿದ್ದ ವೈದ್ಯೆ ಡಾ. ಸುಲೋಚನಾ ಸಿಂಗ್ ರವರದ್ದು ಎಂಬುದನ್ನೂ ಲೆಕ್ಕಿಸದ ಅವರುಗಳು ಹಿಂಸಾಚಾರಕ್ಕೆ ಕಾಲು ಕೆರೆದು ನಿಂತಿದ್ದಂತ್ತಿತ್ತು.   

ಅಪಾಯದ ಮುನ್ಸೂಚನೆಯನ್ನರಿತ ಚಾಲಕರು ತಮ್ಮ ಆಂಬುಲೆನ್ಸ್ ವಾಹನವನ್ನು ಸುಮಾರು ೪ ಕಿ.ಮೀ. ದೂರವಿರುವ ಮತ್ತೊಂದು ಸ್ಮಶಾನಕ್ಕೆ ಕರೆದೊಯ್ದಿದ್ದರು. ಬೇಗನೆ ಗುಂಡಿಯೊಂದನ್ನು ಅಲ್ಲಿ ತೋಡಲು, ನೆಲ ತೋಡುವ  ಮೇಷಿನ್ನೊಂದನ್ನು  ಕೂಡ ತರಿಸಲಾಗಿತ್ತು.  ಅದು ೧೨ ಅಡಿ ಆಳದ ಗುಂಡಿಯೊಂದನ್ನು ರಾತ್ರಿ ೧೧. ೩೦ರ ವೇಳೆಗೆ ತೆಗೆದು ಮುಗಿಸಾಗಿತ್ತು.  ನಾಲ್ಕು ವೈದ್ಯರುಗಳು, ಒಬ್ಬ ಮಹಿಳಾ ನರ್ಸ್ ಮತ್ತು ಒಂದೆರಡು ಶುದ್ಧೀಕರಣದ ಸಿಬ್ಬಂದಿಗಳನೊಳಗೊಂಡ ತಂಡವೊಂದೂ ಅಲ್ಲಿಗೆ ಬಂದು ಸಿದ್ಧವಾಗಿ ನಿಂತಿತ್ತು. ಎಲ್ಲಾ ವಿಧಿವಿಧಾನಗಳನ್ನು ಮುಗಿಸಿ, ಶವವನ್ನು ಗುಂಡಿಯೊಳಗೆ ಇಳಿಸಿಯೂ ಆಗಿತ್ತು. ಇದ್ದಕಿದ್ದಂತೆ ದೊಣ್ಣೆ, ಮಚ್ಚುಗಳನ್ನು ಹಿಡಿದ ೬೦-೭೦ ಪುಂಡರ ಗುಂಪೊಂದು ಪ್ರತ್ಯಕ್ಷವಾಗಿ, ದಿಢೀರನೆ ಎಲ್ಲರನ್ನೂ ಹೊಡಿ-ಬಡಿಯಲಾರಂಭಿಸಿತು. ಆ ಕ್ರೂರಿಗಳು ಎಸೆದ ಕಲ್ಲು, ಇಟ್ಟಿಗೆಗಳಿಂದ ಡಾ. ಕಿರಣ್ ಮತ್ತು ಅವರ ಸಹಚರರು ತೀವ್ರವಾಗಿ ಗಾಯಗೊಂಡರು.  ಆಕ್ರಮಣಕಾರಿಗಳ ಗುಂಪಿನಲ್ಲಿದ್ದ ಒಂದಿಬ್ಬರು ಕಿಡಿಗೇಡಿಗಳನ್ನು ಡಾ. ಕಿರಣ್ ಗುರುತಿಸಿ, ಹೊಡಿ-ಬಡಿಯುವುದನ್ನು ನಿಲ್ಲಿಸುವಂತೆ ವಿನಂತಿಸಿಕೊಂಡರೂ, ನಿರ್ದಯಿಗಳಾದ ಅವರು ಕರುಣೆ ತೋರದಾದರು.  ನಿಷ್ಕರುಣಿಗಳಾದ ಅವರು ಮಹಿಳಾ ನರ್ಸ್ ರವರನ್ನು ಕೂಡ ಲೆಕ್ಕಿಸದೆ ಥಳಿಸಿದರು. ನೋಡು ನೋಡುತ್ತಿದ್ದಂತೆ, ಚಾಲಕ ದೇವಿಂದರ್ ಹಾಗು ಸಹಾಯಕ ಸತೀಶ್ ರವರಗಳು ತಲೆ- ಪೆಟ್ಟಿನಿಂದ ರಕ್ತಸ್ರಾವಗೊಂಡು ನೆಲಕ್ಕುರುಳಿದರು. ಶವದ ಪೆಟ್ಟಿಗೆಯನ್ನೂ ಬಿಡದ ಅವರುಗಳು ಕಲ್ಲುಗಳಿಂದ ಅದನ್ನೂ ಚಚ್ಚಿಟ್ಟರು. ಬೇರೆ ಮಾರ್ಗ ತೋಚದೆ, ಡಾ. ಕಿರಣ್ ಮತ್ತವರ ಉಳಿದ ಸಂಗಡಿಗರು ಹೇಗೋ ಶವವನ್ನು ಮೇಲೆತ್ತಿ ಪೆಟ್ಟಿಗೆಯೊಳಗೆ ಸೇರಿಸಿ, ತಮ್ಮ ವಾಹನದೊಳಗೆ ತಳ್ಳಿದರು. ಚಾಲಕ ದೇವೀಂದರ್ ರವರು ಪ್ರಜ್ಞಾಹೀನರಾಗಿದ್ದರಿಂದ, ಡಾ. ಕಿರಣ್ ರವರೆ ವಾಹನವನ್ನು ನಡೆಸಬೇಕಾಯ್ತು. ತೀವ್ರವಾಗಿ ಗಾಯಗೊಂಡ ಸತೀಶ ಮತ್ತು ದೇವೀಂದರ್ ರವರುಗಳನ್ನು ಮೊದಲು ಹತ್ತಿರದ ಆಸ್ಪತ್ರೆಯೊಂದಕ್ಕೆ ಸೇರಿಸಲಾಯ್ತು. ವಾಹನದೊಳಗೀಗ ಡಾ. ಕಿರಣ್ ಏಕಾಂಗಿಯಾಗಿ ಬಿಟ್ಟಿದ್ದರು. 

ಶವ ಹೊತ್ತ ವಾಹನದೊಂದಿಗೆ ಡಾ. ಕಿರಣ್ ಸಮೀಪದ ಪೊಲೀಸ್ ಠಾಣೆಯೊಂದನ್ನು ಸೇರಿದರು.  ವಿವರ ತಿಳಿದ ಪೊಲೀಸ್ ಅಧಿಕಾರಿ, ಅವಶ್ಯಕ ಸಿಬ್ಬಂದಿಗಳ ತಂಡವನ್ನು ಕೂಡಲೇ ಕರೆಸಿದರು.  'ನಗರದಿಂದ ದೂರವಿರುವ ಬೇರೊಂದು ಕಡೆಗೆ ಹೋಗೋಣ'ವೆಂಬ ಪೊಲೀಸರ ಸಲಹೆಯಂತೆ ಶವದ              ವಾಹನವನ್ನೀಗ  ಡಾ. ಕಿರಣ್, ಮೂರನೇ ಸ್ಮಶಾನದ ಕಡೆಗೆ ಚಲಾಯಿಸಿದರು. ನೆಲ ತೋಡುವ  ಮೇಷಿನ್ ಕೂಡ ಶವದ ವಾಹನವನ್ನು ಹಿಂಬಾಲಿಸಿತು. ದೂರದ ಸ್ಮಶಾನ ತಲುಪಿ, ೧೨ ಅಡಿ ಆಳದ ಗುಂಡಿಯೊಂದನ್ನು ತೊಡುವ ಹೊತ್ತಿಗೆ ಸಮಯ ನಡುರಾತ್ರಿಯ ೨ ಗಂಟೆಯಾಗಿತ್ತು.  ಪೊಲೀಸರ ರಕ್ಷಣೆ ಇದ್ದರೂ, ಡಾ. ಕಿರಣ್ ಮತ್ತವರ ಸಂಗಡಿಗರು ಭಯಭೀತರಾಗಿದ್ದರು. ಪುಂಡರುಗಳ ತಂಡ ಯಾವಾಗ ಬಂದು  ಮೇಲೆರಗುತ್ತದೆಯೋ ಎಂಬ ಆತಂಕ ಎಲ್ಲರಲ್ಲೂ ಇತ್ತು. ಶವವನ್ನು ಬೇಗ ಬೇಗ ಗುಂಡಿಯಲ್ಲಿಳಿಸಿ ಮಣ್ಣು ಮುಚ್ಚುವ ಕೆಲಸವನ್ನು ಮುಗಿಸಲಾಯಿತು. ಶವ ಸಂಸ್ಕಾರ ಮುಗಿದಿದ್ದರೂ ಡಾ. ಕಿರಣ್ ಮಾತ್ರ ಮ್ಲಾನಚಿತ್ತರಾಗಿದ್ದು ಸುಳ್ಳಲ್ಲ.  

ಕೋವಿಡ್ನಿಂದ ಮೃತಪಟ್ಟ ಹಿರಿಯ ವೈದ್ಯೆ ಡಾ. ಸುಲೋಚನಾ ಸಿಂಗ್ ರವರ ಬಲಗೈ ಬಂಟನಾಗಿ ದುಡಿಯುತ್ತಿದ್ದವರು, ತರುಣ ವೈದ್ಯ ಡಾ. ಕಿರಣ್. ಅವಿವಾಹಿತೆಯಾದ ಡಾ. ಸುಲೋಚನಾರವರಿಗೆ ಡಾ. ಕಿರಣ್ ಸಾಕುಮಗನಂತಾಗಿ ಹೋಗಿದ್ದರು. ಡಾ. ಸುಲೋಚನಾರವರು ತಮ್ಮ 'ಸೇವಾ ಆಸ್ಪತ್ರೆ'ಯಲ್ಲಿ ಬಡ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದದ್ದು ಇಡೀ ದೇಶದ ಗಮನವನ್ನು ಸೆಳೆದಿತ್ತು. ಬಡ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗಲೇ, ಡಾ. ಸುಲೋಚನಾರವರಿಗೆ ಕೋವಿಡ್ನ ಸೋಂಕು ತಗುಲಿದ್ದೊಂದು ವಿಪರ್ಯಾಸವಾಗಿತ್ತು.  ೫೭ರ ಹರೆಯದಲ್ಲೇ  ಅಕಾಲಿಕ ಮರಣ ಹೊಂದಿದ  ಹಿರಿಯ ಜೀವಕ್ಕೆ ಗೌರವೋಚಿತ ಅಂತಿಮ ವಿದಾಯವನ್ನು ನೀಡಲಾಗದ ದುರ್ದೈವ ಇಂದು ಡಾ. ಕಿರಣ್ ರವರದ್ದಾಗಿತ್ತು.  ಡಾ. ಕಿರಣ್ ಗೆ ತಮಗುಂಟಾದ ಆಘಾತದಿಂದ ಹೊರಬರಲಾಯಿತೇ? 'ಕೋವಿಡ್ ಮಾನವ ಸೃಷ್ಟಿಯೇ?' ಎಂಬ ಪ್ರಶ್ನೆಗೆ ಅವರಿಗೆ ಉತ್ತರ ದೊರಕಿತೆ? ಮಹಾಮಾರಿ ಕೋವಿಡ್ನ ವಿರುದ್ಧದ ಅವರ ಹೋರಾಟಕ್ಕೆ ಜಯ ದೊರಕಿತೆ? ಈ ಪ್ರಶ್ನೆಗಳೇ ನನ್ನ ಪುಸ್ತಕದ ಕಥಾವಸ್ತು. ಸುಲಭ  ಬೆಲೆಯ ಈ ಪುಸ್ತಕದ ಪ್ರತಿಗಳಿಗಾಗಿ ನನ್ನನ್ನು ಸಂಪರ್ಕಿಸಿ ಎಂದು ಈ ಮೂಲಕ ನನ್ನ ಅರಿಕೆ. 

******

ಕೋವಿಡ್ ಮಾನವ ಸೃಷ್ಟಿಯೇ?' ಎಂಬುದೊಂದು ತನಿಖೆಯ ವಿಚಾರ. ಆದರೆ, ನನ್ನ ಈ  ಕಾಲ್ಪನಿಕ ಕಾದಂಬರಿಯ ಕಥಾವಸ್ತುವಿನ
ವಿಸ್ತಾರ ಇನ್ನೂ ವಿಶಾಲವಾದದು. ಚೀನಾದಿಂದ ಹೊರಹೊಮ್ಮಿದ 'ಕೋವಿಡ್-೧೯' ಎಂಬ ಮಹಾಮಾರಿ, ಈಗ ಇಡೀ
ವಿಶ್ವವನ್ನಾವರಿಸಿದೆ. ಕಷ್ಟಸಹಿಷ್ಣುವಾದ ಮನುಕುಲವು, ಕೋವಿಡ್-೧೯ಕ್ಕಿಂತಲೂ ಘೋರವಾದ ಮಹಾಮಾರಿಯನ್ನು ಕಳೆದ
ಶತಮಾನದಲ್ಲೇ ಎದುರಿಸಿ ಜಯಿಸಿಯಾಗಿದೆ. ಪುಟ್ಟ ವೈರಾಣುವೊಂದಕ್ಕೆ ಬೆದರಿ, ಕೈ ಕಟ್ಟಿ ಕೂರುವ ಜಾಯಮಾನ ಮಾನವನದಲ್ಲ.
'ಜೀವಗಳು ಮತ್ತು ಜೀವನೋಪಾಯಗಳ (Lives Vs Livelihoods)' ನಡುವಿನ ಹೋರಾಟ, ವಿಶ್ವಾದ್ಯಂತ
ಮುಂದುವರೆಯುತ್ತಿರುವುದು ಒಂದು ಧನಾತ್ಮಕ ಬೆಳವಣಿಗೆಯೇ ಸರಿ.

No comments:

Post a Comment