Friday, 3 June 2022

ಬಿಗ್ ಬಾಸ್

ಬಿಗ್ ಬಾಸ್ - ೧

ನನ್ನ ೪೪ ವರ್ಷಗಳ ಸುಧೀರ್ಘ ಬ್ಯಾಂಕಿಂಗ್ ಸೇವೆಯಲ್ಲಿ, ನಾನು ಬ್ಯಾಂಕಿಂಗ್ ಕೆಲಸ ಮಾಡಿದ್ದು ಬರಿ ೧೯ ವರ್ಷ ಮಾತ್ರ. ಅದರಲ್ಲೂ ೪.೫ ವರ್ಷದ ಗುಮಾಸ್ತಗಿರಿ.  ಮಿಕ್ಕ ೨೫ ವರ್ಷವೂ ನಾನೊಬ್ಬ ಬ್ಯಾಂಕ್ ಮೇಷ್ಟ್ರೇ.  ತರಬೇತಿ ಎಂಬುದು ತರಗತಿಗಳಲ್ಲಾಗದು ಎಂಬುದು ನನ್ನ ವಿಚಾರ. ಅದಕ್ಕಾಗೇ ನನ್ನ ತರಗತಿಗಳಲ್ಲಿ ಚಟುವಟಿಕೆಗಳೇ ಜಾಸ್ತಿ ಇರುತಿತ್ತು. ಮೇಲಿನವರ ಆಶಯವನ್ನೂ ಮೀರಿ, ತರಬೇತಿಗಾಗಿ ಬಂದ ವಿವಿಧ ಬ್ಯಾಂಕ್ ಅಭ್ಯರ್ಥಿಗಳನ್ನು  ಬೇರೆ ಬೇರೆ ಚಟುವಟಿಕೆಗಳ ಹೆಸರಿನಲ್ಲಿ ಹೊರಗಟ್ಟುವ ತುಡಿತ ನನ್ನದಾಗಿತ್ತು. ಹಾಗಾಗಿಯೇ ಮೇಲಿನವರು ಆಗಾಗ್ಗೆ ನನಗೆ ಬಿಸಿಮುಟ್ಟಿಸಿದೆ ಇರುತ್ತಿರಲಿಲ್ಲ. 

ಬ್ಯಾಂಕಿಂಗ್ ತರಬೇತಿಯಲ್ಲಿ ಯಾರೂ ಮಾಡದ್ದನ್ನು ಮಾಡಬೇಕೆಂದರೆ ನನಗಿಷ್ಟ. ೨೦೧೪ರಲ್ಲಿ ನಾನು ಮಣಿಪಾಲ ಸಂಸ್ಥೆಯಲ್ಲಿ ಬ್ಯಾಂಕಿಂಗ್ ತರಬೇತುದಾರನಾಗಿದ್ದಾಗ, 'Games Trainers Play' ಎಂಬ ವಿನೂತನ ಸ್ಫರ್ಧೆಯೊಂದನ್ನು ಏರ್ಪಡಿಸಿದ್ದೆ. ಈ ಸ್ಫರ್ಧೆಯಲ್ಲಿ ತರಬೇತುದಾರರೊಬ್ಬರು ತಮ್ಮ ಶಿಷ್ಯರ ತಂಡದೊಂದಿಗೆ ಭಾಗವಿಸಬೇಕಿತ್ತು. ಹಾಗಾಗಿ ಇದು ಮೇಸ್ಟ್ರು ಮತ್ತು ವಿದ್ಯಾರ್ಥಿಗಳಿಗೆ ಜಂಟಿ ಸ್ಫರ್ಧೆ! ಬ್ಯಾಂಕಿಂಗ್ ತರಗತಿಗಳಲ್ಲಿ ಮೇಷ್ಟ್ರುಗಳು ನಡೆಸುವ ವಿವಿಧ ಚಟುವಟಿಕೆಗಳು ಮತ್ತು ಆಟಗಳ (games) ಸ್ಫರ್ಧೆ ಅದಾಗಿತ್ತು.  ಜಂಬ ಕೊಚ್ಚುತ್ತಾನೆ ಎಂದುಕೊಳ್ಳಬೇಡಿ. ಈ ಸ್ಫರ್ಧೆ ನನ್ನದೆ ಆವಿಷ್ಕಾರ. ಇಂತಹ ಸ್ಫರ್ಧೆಯೊಂದನ್ನು ನಾನು ಬೇರೆಲ್ಲೂ ನೋಡಿಲ್ಲ. 

ಸ್ಫರ್ಧೆಯಲ್ಲಿ ಸುಮಾರು ೮ ವಿವಿಧ ಬ್ಯಾಂಕ್ ತರಬೇತಿ ತಂಡಗಳು ಭಾಗವಹಿಸಿದ್ದವು. ಸ್ಫರ್ಧೆ ಯಶಸ್ವಿಯಾಗಿ ನಡೆದು ಎಲ್ಲರ ಮೆಚ್ಚುಗೆ ಗಳಿಸಿದಾಗ ನಾನಂತೂ ಉಬ್ಬಿ ಹೋಗಿದ್ದೆ. 

ಇದೆ ನಿಟ್ಟಿನಲ್ಲಿ ಯೋಚಿಸುತ್ತಲೇ ಇದ್ದಾಗ ನನ್ನ ಯೋಚನಾ ಲಹರಿಯನ್ನು ಕೆರಳಿಸಿದ್ದೇ  ಬಿಗ್ ಬಾಸ್ ಟಿ.ವಿ. ಕಾರ್ಯಕ್ರಮ.                                                                                 (ಮುಂದುವರೆಯುವುದು)


ಬಿಗ್ ಬಾಸ್ - ೨

ಬಿಗ್ ಬಾಸ್ ಸರಣಿ ಶುರುವಾದ ವರ್ಷಗಳಲ್ಲಿ ನಾನು ಆ ಕಾರ್ಯಕ್ರಮವನ್ನು ನೋಡುತ್ತಿದ್ದೆ. 

ಬಿಗ್ ಬಾಸ್ ಅಭ್ಯರ್ಥಿಗಳಿಗೆ ನೀಡುವ ವಿವಿಧ ಕೆಲಸಗಳ ಪರಿಯನ್ನು ನೋಡಿ, ಬಿಗ್ ಬಾಸ್ ಎಂಬ ಸ್ಪರ್ಧೆಯೊಂದನ್ನು ಬ್ಯಾಂಕ್ ತರಬೇತಿ ಶಾಲೆಗಳಿಗೇಕೆ ಅಳವಡಿಸಬಾರದು ಎಂಬ ತುಡಿತ ನನ್ನನ್ನು ಕಾಡಹತ್ತಿತು. ಈ ನಿಟ್ಟಿನಲ್ಲಿ ಯೋಚಿಸುತ್ತಿದ್ದ ನನಗೆ ನಮ್ಮ ಕ್ಯಾಂಪಸ್ನಲ್ಲೇ ಬಿಗ್ ಬಾಸ್ನ ಶೋ ಸ್ವಾಭಾವಿಕವಾಗಿ ನಡೆಯುತ್ತಿರುವುದು  ಗೋಚರಿಸಹತ್ತಿತು. 

ನಮ್ಮ ಬ್ಯಾಂಕಿಂಗ್  ಶಾಲೆಗಳಿಗೆ  ಬರುವ ಅಭ್ಯರ್ಥಿಗಳ ಆಯ್ಕೆ ಬ್ಯಾಂಕ್ನಿಂದಲೇ ಆಗಲ್ಪಟ್ಟಿದ್ದು, ಪ್ರತಿಯೊಬ್ಬರೂ ಖಾಯಂ  ಆಪೀಸರ್ ಹುದ್ದೆಯ ಚೀಟಿ ಹಿಡಿದು ಬಂದವರೇ. ನಗರದ ಹೊರ ವಲಯದಲ್ಲಿದ್ದ ಸುಂದರ ಫಾರ್ಮ್ನ ನಡುವಿದ್ದ ನಮ್ಮ ಕ್ಯಾಂಪಸ್ಗೆ ಈ ರೀತಿ ಗಂಡು ಹೆಣ್ಣು ಅಭ್ಯರ್ಥಿಗಳ  (ಹಕ್ಕಿಗಳ) ಆಗಮನವೇ ನಮ್ಮಂತಹ ಹಿರಿಯರನ್ನೂ ಪುಳಕಿತಗೊಳಿಸುತಿತ್ತು. ಅಭ್ಯರ್ಥಿಗಳೆಲ್ಲರಿಗೂ ೨೨-೨೫ರ ನಿಗಿನಿಗಿ ಪ್ರಾಯ.  ಗಟ್ಟಿಯಾದ ಖಾಯಂ ಕೆಲಸ ಸಿಕ್ಕಾಗಿದೆಯೆಂಬ ಹುರುಪು, ಉತ್ಸಾಹ. ಮೇಲಾಗಿ ಎಲ್ಲರಿಗೂ ಮನೆಯಿಂದ ಸಾವಿರಗಟ್ಟಲೆ ಮೈಲು ದೂರದ  ಹಚ್ಚ ಹಸುರಿನ ಕ್ಯಾಂಪಸ್ನಲ್ಲಿ ಹಾಸ್ಟೆಲ್ ವಾಸ. ಪ್ರತಿ ಬ್ಯಾಚ್ನ ಅವಧಿ 'ಒಂಬತ್ತು ತಿಂಗಳು'ಗಳದಾಗಿದ್ದು ಕಾಕತಾಳೀಯ ಮಾತ್ರ. ಮನಸಲ್ಲಿ ಏನೇನೋ ಕಲ್ಪಿಸಿಕೊಳ್ಳಬೇಡಿ.

ಹೊಸದೊಂದು ಬ್ಯಾಚ್ ಶುರುವಾಯಿತೆಂದರೆ ಕ್ಯಾಂಪಸ್ನಲ್ಲಿ ಹೊಸದೊಂದು ಬಿಗ್ ಬಾಸ್ನ ಶೋ ಶುರುವಾದ ಹಾಗೇ ಅಂತಿಟ್ಟುಕೊಳ್ಳಿ. ಅಥವ ಹಿರಿಯ ಬ್ಯಾಚುಗಳ ಬಿಗ್ ಬಾಸ್ ಶೋಗೆ ಹೊಸ ಸೇರ್ಪಡೆಯಾದಂತೆ ಅಂತಲೂ ಇಟ್ಟುಕೊಳ್ಳಿ. ಬ್ಯಾಚ್ ಆರಂಭವಾದ ಒಂದೆರಡು ತಿಂಗುಳುಗಳಲ್ಲೇ  ಜೋಡಿಗಳಾಗಲು ಸೆಣೆಸುವ ತವಕ , ವಾರಾಂತ್ಯದಲ್ಲಿ ಬೆಂಗಳೂರು ಸುತ್ತುವ ತುಡಿತ, ಮೇಷ್ಟ್ರುಗಳ ಮೆಚ್ಚುಗೆಯನ್ನು ಗಳಿಸುವ ಹಪಹಪಿ, ಹಿರಿಯ ವಿದ್ಯಾರ್ಥಿಗಳಿಂದ ನೋಟ್ಸ್ಗಳನ್ನು, ಹಳೆಯ ಕ್ವೆಶ್ಚನ್ ಪೇಪರ್ಗಳನ್ನು ಗಿಟ್ಟಿಸುವ ಪರಿ, ಪ್ರಾಜೆಕ್ಟ್ ಕೆಲಸಗಳಿಗೆ ಟೀಮ್ಗಳ ವಿಂಗಡನೆಯನ್ನು ಮಾಡುವಾಗ ಸುಂದರ ಹುಡುಗಿಯಿರುವ ಟೀಮ್ಗೆ ಸೇರಬೇಕೆಂಬ ಹುಡುಗರ ಹಾತೊರೆತ,  ಮಿಂಚುವ ಕಾತರಕ್ಕಾಗೆ ಟೀಮ್ ಲೀಡರ್ ಆಗಲು ಸೆಣೆಸುವ ಸಂಚು, ರು. ೨೦೦೦ದಷ್ಟರ ಸ್ಟೈಪೆಂಡ್ ಹಣವನ್ನು ಪೂರ್ತಿಯಾಗಿ ಮನೆಗೆ ಕಳುಹಿಸಿ ಬರಿ ಕೈಯಲ್ಲಿ ನಿಂತಿರುತ್ತಿದ್ದ ಬಡ ವಿದ್ಯಾರ್ಥಿಗಳು, ತನ್ನಪ್ಪ ಧನಿಕನೆಂದು ತೋರ್ಪಡಿಸುವ ದೊಡ್ಡಸ್ತಿಕೆ,  ಈ ಎಲ್ಲಾ ತುಡಿತಗಳಲ್ಲಿ  ಹುಡುಗರಿಗಿಂತ ನಾವೇನು ಕಮ್ಮಿ ಎಂಬಂತೆ ಮಿಂಚಲಿಚ್ಛಿಸುವ ಹುಡುಗಿಯರು......... ಮುಂತಾದ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ (ನಾವು  ತುಂಬಾ ಮುಂಚೆಯೇ ಹುಟ್ಟಿಬಿಟ್ಟೆವಲ್ಲಾ ಎಂದು ಮನಸಲ್ಲೇ ನೋಯುವ ಕೆಲವು  ಹಿರಿಯ ಮೇಸ್ಟ್ರುಗಳು) ನಮ್ಮಗಳಿಗೆ, ನಮ್ಮ ಬ್ಯಾಂಕಿಂಗ್  ಶಾಲೆ ಯಾವ ಬಿಗ್ ಬಾಸ್ ಶೋಗೆ ಕಮ್ಮಿ ಎನಿಸುತಿತ್ತು. ಪ್ರಿನ್ಸಿಪಾಲರನ್ನು, ನಮ್ಮಂಥ ಮೇಸ್ಟ್ರುಗಳನ್ನು ಮತ್ತು ಹಾಸ್ಟೆಲ್ ವಾರ್ಡೆನ್ಗಳನ್ನು  'ಬಿಗ್ ಬಾಸ್' ಎನ್ನಲು ಅಡ್ಡಿಯಿಲ್ಲ. ಆದರೆ ತರಗತಿಯಿಂದ ಹೊರಗೆ ಮತ್ತು ತರಗತಿಯನಂತರ  ನಡೆಯುವ ಚೇಷ್ಟೆಗಳ ಮೇಲೆ ನಮಗೇನು ನಿಯಂತ್ರಣವಿತ್ತು?  ಅಲ್ಪ-ಸ್ವಲ್ಪ ನಿಯಂತ್ರಣವಿದ್ದರೂ ಚಾಪೆ-ರಂಗೋಲಿಗಳನ್ನು ನುಸಿಯಬಲ್ಲ ಹದಿಹರೆಯದ ಯುವಕ-ಯುವತಿಯರು ಇರದಿರುವರೇ? .........(ಮುಂದುವರೆಯುವುದು) 


ಬಿಗ್ ಬಾಸ್ -೩

ಬಿಗ್ ಬಾಸ್ ತಂತ್ರಗಳನ್ನು ಬ್ಯಾಂಕ್ ಮತ್ತು ಇನ್ಶೂರೆನ್ಸ್ ತರಬೇತಿ ಶಾಲೆಗಳಿಗೆ ಅಳವಡಿಸಿ ಸ್ಪರ್ಧೆಯೊಂದನ್ನು ಆಯೋಜಿಸಿದ ಬೇರೆ ನಿದರ್ಶನಗಳು ನನಗೆ ತಿಳಿದಂತೆ ಬೇರೆಲ್ಲೂ ಇಲ್ಲ. ಅಂತಹ ಪ್ರಯತ್ನವೊಂದಕ್ಕೆ ಕೈ ಹಾಕುತ್ತೇನೆಂದಾಗ ಮೇಲಿನವರಂತೂ ಸುತರಾಂ ಒಪ್ಪಲಿಲ್ಲ. ವಿದ್ಯಾರ್ಥಿಗಳನ್ನು ರೂಮಿನಲ್ಲಿ ದಿನಗಟ್ಟಲೆ ಕೂಡಿ ಹಾಕುವುದೇ? ಹುಡುಗ-ಹುಡುಗಿಯರನ್ನು ಒಂದೇ ರೂಮಿನಲ್ಲಿ ಕೂಡಿ ಹಾಕುವುದೇ?  ಯಾವುದಾದರೂ ವಿದ್ಯಾರ್ಥಿಗೆ ಏನಾದರೋ ಆದರೆ, ಮಾಡಿಕೊಂಡರೆ ಯಾರು ಹೊಣೆ? ಅಭ್ಯರ್ಥಿಗಳು ಕಳೆದುಕೊಳ್ಳುವ ತರಗತಿಗಳನ್ನು ಸರಿದೂಗಿಸುವುದು ಹೇಗೆ? ಒಂದೊಂದು ಬ್ಯಾಂಕಿಂಗ್/ಇನ್ಶೂರೆನ್ಸ್ ಶಾಲೆಯಿಂದ ಐದು ಅಭ್ಯರ್ಥಿಗಳನ್ನು ಅಷ್ಟು ದೀರ್ಘ ಕಾಲ ಕಳುಹಿಸಲು ಆಯಾ ವಿಭಾಗದ ಮುಖ್ಯಸ್ಥರು ಒಪ್ಪಿಯಾರೇ? ಟಿ.ವಿ.ಯಲ್ಲಿ ನಾವುಗಳು ನೋಡುವಂತಹ ಅವಿವೇಕದ ಸನ್ನಿವೇಶಗಳು ನಮ್ಮಂತಹ ಪ್ರತಿಷ್ಠಿತ ಸಂಸ್ಥೆಯ ಸ್ಪರ್ಧೆಗಳಲ್ಲಿ ನಡೆಯುವುದು ಎಂದರೇನು? ಈ ಸ್ಪರ್ಧೆಗೂ ಬ್ಯಾಂಕಿಂಗ್/ಇನ್ಸುರೆನ್ಸಗೂ ಏನು ಸಂಬಂಧ?.........  ಪ್ರಶ್ನೆಗಳ ಸುರಿಮಳೆಯಲ್ಲೇ ನಾನು ತತ್ತರಿಸಿದೆ.

ನಮ್ಮ ಕ್ಯಾಂಪಸ್ನಲ್ಲಿ ನಡೆಯುವ ಸ್ಪರ್ಧೆಗಳಿಗೆ ಕಡೆಯ ಎರಡು ಪಿರಿಯಡ್ ಗಳನ್ನೂ ರದ್ದು ಮಾಡಿದ್ದೆ ಹೆಚ್ಚೆನಿಸಿತ್ತು. ಸ್ಪರ್ಧೆಯ ಅವಧಿ ಒಂದು ದಿನದಸ್ಟಕ್ಕಾದರೂ  ಸೀಮಿತಗೊಳಿಸಿಕೊಳ್ಳ ಬೇಕೆಂಬ  ವಿದ್ಯಮಾನ ನನ್ನ ಮನಸಿನಲ್ಲೂ ಇತ್ತು. ಒಂದು ದಿನದ ಅವಧಿಯಲ್ಲಿ ನಡೆಸಬಹುದಾದಂತಹ  ಬಿಗ್ ಬಾಸ್ ಸ್ಪರ್ಧೆಯೊಂದನ್ನು ರಚಿಸಿ ನಮ್ಮ ಮೇಲಿನವರ ಮುಂದಿಟ್ಟಿದ್ದೆ. ಸ್ಪರ್ಧೆಗೊಳಪಟ್ಟ ಬೇರೆ ಬೇರೆ ಘಟನೆಗಳೆಲ್ಲವೂ ಬ್ಯಾಂಕಿಂಗ್/ಇನ್ಯೂರೆನ್ಸ್ ಸಂಸ್ಥೆಗಳ ವಿಚಾರಗಳಿಗೆ ಸಂಬಂಧ ಪಟ್ಟಂತೆಯೇ ಆಯೋಜಿಸಿದ್ದೆ. ನನ್ನ ಮೇಲಿನವರು ತುಟಿ ಪಿಟಕ್ ಅನ್ನಲಿಲ್ಲ.  ನನ್ನ ಮೇಲಿನವರಿಗೆ ತಿಳಿಯದಂತೆ, ಎಲ್ಲರಿಗು ಮೇಲ್ಪಟ್ಟವರನ್ನು ಗುಟ್ಟಾಗಿ ಸಂಪರ್ಕಿಸಿ ಅವರ ಅನುಮತಿಯನ್ನು ಗಿಟ್ಟಿಸಿದ್ದೆ! ಸರ್ವೋಚ್ಛ ಅಧಿಕಾರಿಯಿಂದ ಅನುಮತಿ ಬಂದರೂ, ನಮ್ಮ ಮೇಲಧಿಕಾರಿ ಮಾತ್ರ ನನ್ನ ಬಗ್ಗೆ ಮಗುಂ ಆಗೇ ಇದ್ದರು. ಬಿಗ್ ಬಾಸ್ನ ಮಾತೆತ್ತಿದರೆ ಮುಖ ತಿರುಗಿಸಿಕೊಳ್ಳುತ್ತಿದರು. ನಾನು ಗುಟ್ಚಾಗಿ ಸರ್ವೋಚ್ಛ ಅಧಿಕಾರಿಯನ್ನು ಸಂಪರ್ಕಿಸಿದ್ದು ಅವರಿಗೆ ಹೇಗೋ ತಿಳಿದಿರಬೇಕು. ಅಂತೂ ಅವರು ಯಾವ ಕಾರಣವನ್ನು ನೀಡದೆ ಸುಮಾರು ಎರಡೂವರೆ  ವರ್ಷಗಳ ಕಾಲ ಬಿಗ್ ಬಾಸ್ ಸ್ಪರ್ಧೆಯನ್ನು ತಡೆ ಹಿಡಿದಿದ್ದರು. ದೇವರು ವರ ಕೊಟ್ಚರೂ ಪೂಜಾರಿ ಕೊಡ ಎಂಬಂತ್ತಾಗಿತ್ತು ನನ್ನ ಕಥೆ.  ಬಿಗ್ ಬಾಸ್ನ ಶಿಶು ನನ್ನ ಹೊಟ್ಟೆಯೊಳಗೆ ಆಗಾಗ ಒದೆಯುತ್ತಲೇ ಇತ್ತು. ಗಜಗರ್ಭವನ್ನು ಮೀರಿಸಿತ್ತು ನನ್ನ ಬಿಗ್ ಬಾಸ್ನ ಗರ್ಭ ಪ್ರಸಂಗ---------------- ( ಮುಂದುವರೆಯುವುದು)

ಬಿಗ್ ಬಾಸ್ - ೪

ಈ ನಡುವೆ ನನಗೆ ಬೇರೊಂದು ವಿಭಾಗಕ್ಕೆ ವರ್ಗವಾಗಿದ್ದು ಒಳ್ಳೆಯದೇ ಆಯಿತು. ಹಳೆಯ ಸಂಕೋಲೆಯಿಂದ ಬಿಡುಗಡೆ ಸಿಕ್ಕಿತ್ತು. ಕ್ಯಾಂಪಸ್ ದೂರದ್ದಾಗಿದ್ದರು ಮನಸ್ಸಿಗೆ ಹೊಸ ಉತ್ಸಾಹ ತಂದಿತ್ತು. 

ಜಾಸ್ತಿ ಸಮಯ ವ್ಯಯ ಮಾಡದೇ ಬಿಗ್ ಬಾಸ್ನ ಪ್ರಸ್ತಾಪವನ್ನು ಹೊಸ ಬಾಸ್ನ ಮುಂದೆ ಮಾಡೇ  ಬಿಟ್ಟೆ. ಮರು ಮಾತಿಲ್ಲದೆ ಅವರು ಅನುಮತಿ ನೀಡೇ ಬಿಟ್ಟರು. ಬಿಗ್ ಬಾಸ್ನ ವಿವಿಧ ಉಪಸ್ಪರ್ಧೆ(event)ಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗಾಗಿ ಒಬ್ಬರೇ ಒಬ್ಬ ಜೋಡೀದಾರ ಮೇಸ್ಟ್ರನ್ನು ಆರಿಸಿ ಅವರಿಗೆ ಮಾತ್ರ ಎಲ್ಲ ವಿವರಗಳನ್ನು ನೀಡುತ್ತಿದ್ದೆ.  

ನಮ್ಮ ಹೊಸ ಕ್ಯಾಂಪಸ್ನಲ್ಲಿ ಸುಮಾರು ೩೦೦೦ ವಿದ್ಯಾರ್ಥಿಗಳಿದ್ದರು. ಅವರೆಲ್ಲ ಬ್ಯಾಂಕಿಂಗ್ ಹಾಗು ಇನ್ಶೂರೆನ್ಸ್ ಕಂಪನಿಗಳಿಗೆ ಆಯ್ಕೆಯಾದ ಆಫಿಸರ್ಗಳಾಗಿದ್ದರು. ಅಷ್ಟೊಂದು ವಿದ್ಯಾರ್ಥಿಗಳಿಗೆ ಊಟವನ್ನೊದಗಿಸಲು ನಮ್ಮ ಕ್ಯಾಂಪಸ್ನಲ್ಲೇ ಒಂದು ಬೃಹದಾದ ಸುಸಜ್ಜಿತ ಅಡುಗೆ (ಮಾಸ್ಟರ್ ಕಿಚೆನ್) ಮನೆಯೊಂದಿತ್ತು. ಪೂರ್ವಭಾವಿಯಾಗಿ ನಾನು ಆ ಅಡುಗೆ ಮನೆಗೆ ಭೇಟಿ ಕೊಟ್ಟು ಅಲ್ಲಿಯ ಎಲ್ಲಾ ವಿಧಿ-ವಿಧಾನಗಳ ಬಗ್ಗೆ ಮಾಹಿತಿ ಪಡೆದೆ. ಅಲ್ಲಿನ ಮುಖ್ಯ ಅಡುಗೇಕಾರರೊಡನೆ (Chief Chef) ಮಾತನ್ನಾಡಿ ನನ್ನ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅನುಮತಿ ಪಡೆದೆ. 

ಸ್ಪರ್ಧೆಯ ದಿನ (೨೪-೦೮-೨೦೧೮) ಬಂದೇಬಿಟ್ಟಿತ್ತು. ೮ ಬ್ಯಾಂಕಿಂಗ್ ಶಾಲೆಯ ಮತ್ತು ೨ ಇನ್ಶೂರೆನ್ಸ್ ಶಾಲೆಯ ತಂಡಗಳು ಸೇರಿದ್ದು ಒಂದು ದಾಖಲೆಯೇ ಆಗಿತ್ತು. ಪ್ರತಿ ಶಾಲೆಯಿಂದ ೫ ಅಭ್ಯರ್ಥಿಗಳ (ಕನಿಷ್ಠ ೨ ಮಹಿಳೆಯರು ಎಂದು ಮುಂಚೆಯೇ ಸೂಚಿಸಲಾಗಿತ್ತು) ತಂಡ ಒಬ್ಬ ತರಬೇತುದಾರರೊಡನೆ ಬಂದಿದ್ದವು. ಕ್ಯಾಂಪಸ್ನ ಸುಸಜ್ಜಿತ ಆಧುನಿಕ ಸಭಾಂಗಣದಲ್ಲೇ ಸ್ಪರ್ಧೆ ಏರ್ಪಾಡಾಗಿತ್ತು. ನಾನೇ ಬಿಗ್ ಬಾಸ್ನ ಪಾತ್ರವನ್ನು ವಹಿಸಿದ್ದೆ ಎಂದು ಬೇರೆ ಹೇಳಬೇಕಾಗಿಲ್ಲ.  ೨೦೦೭ರಲ್ಲಿ ಮಗಳ ಮದುವೆಗೆ ಹೊಲಿಸಿದ್ದ ಸೂಟಿಗೆ ಸೂಕ್ತ ಕೆಲಸವೊಂದು ದೊರೆತಿತ್ತು. ಅಭ್ಯರ್ಥಿಗಳ ಚಲನವಲನಗಳ ಮೇಲೆ ಕಣ್ಣಿಡಲು ಕ್ಯಾಮೆರಾವನ್ನು ಎಲ್ಲಿಂದ ತರುವುದು? ಆ ಕೆಲಸಕ್ಕೆ  ಅಭ್ಯರ್ಥಿಗಳಲ್ಲದ ವಿದ್ಯಾರ್ಥಿಗಳನ್ನು ನಾನೇ ಆರಿಸಿ ಪ್ರತಿ ತಂಡಕ್ಕೂ ಇಬ್ಬಿಬ್ಬರೆಂದು ನೇಮಿಸಿದ್ದೆ. ತಂಡದೊಂದಿಗೆ ಬಂದ ತರಬೇತುದಾರರು ಗಳನ್ನು ವಿಂಗಡಿಸಿ ಬೇರೆ ಬೇರೆ ಉಪಸ್ಪರ್ಧೆಗಳಿಗೆ ಬೇರೆ ಬೇರೆ ತೀರ್ಪುಗಾರರನ್ನಾಗಿಸಿದ್ದೆ. 

ಸ್ಪರ್ಧೆಯ ಮೊದಲ ಹಂತದಲ್ಲಿ ಅಭ್ಯರ್ಥಿಗಳನ್ನೆಲ್ಲ ಮಾಸ್ಟರ್ ಕಿಚೆನ್ಗೆ, ವೀಕ್ಷಕರು ಮತ್ತು ತೀರ್ಪುಗಾರರೊಂದಿಗೆ ಕರೆದೊಯ್ಯಲಾಯಿತು. ಅಭ್ಯರ್ಥಿಗಳಿಗೆ ಮಾತ್ರ ಯಾವ ಸೂಚನೆಯನ್ನು ನೀಡಿತ್ತಿಲ್ಲ. ಕಿಚೆನ್ ನಲ್ಲಿ ಚೀಫ್ ಚೆಫ್ರವರು ಎಲ್ಲರನ್ನು ಸ್ವಾಗತಿಸಿ ವಿವರಣೆ ನೀಡುವ ಹೊಣೆ ಹೊತ್ತರು.  ಎಲ್ಲರನ್ನು ಅಡುಗೆಮನೆಯ ಎಲ್ಲ ವಿಭಾಗಗಳಿಗೆ ಕೊಂಡೊಯ್ಯಲಾಯಿತು. ಅಡುಗೆ ವಿಧಿ ವಿಧಾನಗಳನ್ನು ಚೀಫ್ ಚೆಫ್ ಎಲ್ಲರಿಗೂ ವಿವರಸಿದರು. ಅಭ್ಯರ್ಥಿಗಳ ವರ್ತನೆ, ಪ್ರತಿಕ್ರಿಯೆ, ಕೂತೂಹಲ, ಸಂವಾದ ಮುಂತಾದವುಗಳನ್ನು ಸೂಕ್ಷ್ಮವಾಗಿ ಗಮನಿಸಲಾಯಿತು. ಭೇಟಿಯನಂತರ ಅಭ್ಯರ್ಥಿಗಳನ್ನು  ೧೦ ಪ್ರಶ್ನೆಗಳ (ಮಲ್ಟಿಪಲ್ ಚಾಯ್ಸ್) ಪರೀಕ್ಷೆಗೆ ಒಳಪಡಿಸಲಾಯ್ತು. ಪ್ರಶ್ನೆಗಳು ಕಿಚೆನ್ಗೆ ಸಂಬಂಧ ಪಟ್ಟವೇ ಆಗಿದ್ದವು. ಪರೀಕ್ಷೆಯ ಅಂಕಗಳೊಂದಿಗೆ, ವೀಕ್ಷಕರ ಅಂಕಗಳನ್ನು ಸೇರಿಸೆ ಅಭ್ಯರ್ಥಿಗಳ ಮೌಲ್ಯಮಾಪನ ಮಾಡಲಾಯಿತು. 

ಮುಂದಿನ ಉಪಸ್ಪರ್ಧೆಯ ಅಂಗವಾಗಿ ತಂಡಗಳನ್ನು ಸಮೀಪದ ಮುಖ್ಯರಸ್ತೆಗೆ ಕಳುಹಿಸಲಾಯ್ತು. ಪ್ರತಿ ತಂಡವು ಒಬ್ಬ ಉಳಿತಾಯ ಖಾತೆಯ ಮತ್ತು ಒಬ್ಬ ಕರೆಂಟ್ ಖಾತೆಯ ಅಭ್ಯರ್ಥಿಯನ್ನು ಭೇಟಿ ಮಾಡಿ, ಅವರುಗಳ ೩೦ ಮಾಹಿತಿಗಳನೊಳಗೊಂಡ  ಸಂಪೂರ್ಣ ಚಿತ್ರಣ (Customer ಪ್ರೊಫೈಲ್)ವನ್ನು ತಯಾರು ಮಾಡಬೇಕಿತ್ತು.  

ಸ್ಪರ್ಧೆಯ ಮೂರನೇ ಹಂತ ಮಾರಾಟದ ( ಸೇಲ್ಸ್) ಸ್ಪರ್ಧೆಯಾಗಿತ್ತು. ಸೋಪು, ಟೂತ್ ಪೇಸ್ಟ್, ಬ್ರಷ್, ಪೆನ್ ಮುಂತಾದ ಅವಶ್ಯಕ ವಸ್ತುಗಳ ಸೇಲ್ಸ್ ಕಿಟ್ ಅನ್ನು ಪ್ರತಿಯೊಬ್ಬರಿಗೂ ನೀಡಲಾಗಿತ್ತು. ಮಧ್ಯಾನ್ಹ ೧ ಗಂಟೆಗೆ ಶುರುವಾಗುವ ಊಟದ ಸೇವೆ ೨. ೩೦ ರ ವರೆಗೆ ನಡೆಯುತ್ತದೆ. ಆ ಸಮಯದಲ್ಲಿ ತಂಡಗಳ ತಮ್ಮ ಸರಕನ್ನು ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡಬೇಕಿತ್ತು.  ಹಾರ್ಡ್ ಸೇಲ್ಸ್ ಮಾತ್ರವಲ್ಲ, ಸಾಫ್ಟ್ ಸೇಲ್ಸ್ ಕೂಡ ಮಾಡಬಹುದು ಎಂದು ತಂಡಗಳಿಗೆ ಸೂಚಿಸಿದ್ದೆ. ಮಾರಾಟದ ಲಾಭವನ್ನು ಕೇರಳ ಪ್ರವಾಹ ನಿಧಿಗೆ ಕಳುಹಿಸುವುದಾಗಿ ತಿಳಿಸಿದ್ದೆ.  ಮಾರಾಟದ ಭರಾಟೆ ಜೋರಾಗಿತ್ತು. ಸಾಫ್ಟ್ ಸೇಲ್ಸ್ ಅಂತ ನನ್ನ ಹತ್ತಿರವೇ ಅಭ್ಯರ್ಥಿಗಳು ಬಂದರು. ಸಾರ್ ನಿಮಗೆ ಬಾಡಿ ಮಸಾಜ್ ಮಾಡ್ತೇವೆ, ಬನ್ನಿ ಅಂದ್ರು. ಚೆನ್ನಾಗೆ ಇತ್ತು ಅವರ ಮಸಾಜು. ಸಂತಸಗೊಂಡು ೧೦೦ ರು ಕೊಟ್ಟಿದ್ದೆ. ಹಾಗೆ ಕೋರಿಕೆಯ ಹಾಡು ಹೇಳಿ, ಮಿಮಿಕ್ರಿ ಮಾಡಿ, ಭವಿಷ್ಯ ಹೇಳಿ ವಿದ್ಯಾರ್ಥಿಗಳು ಹೆಚ್ಚು ಹಣ ಸಂಪಾದಿಸಿದರು. ಒಟ್ಟು ೧೦೦೦೦ ರೂಗಳ ಸೇಲ್ಸ್ ಕಿಟ್ನಿಂದ ಸುಮಾರು ೩೦೦೦೦ದಸ್ಟು ಹಣವನ್ನು ತಂಡಗಳು ಗಳಿಸಿಕೊಟ್ಟವು. 

ನಾಲ್ಕನೇ ಹಂತದಲ್ಲಿ ತಂಡಗಳು ಹೊಸ ಬ್ಯಾಂಕ್/ಇನ್ಶೂರೆನ್ಸ್ ಕಂಪನಿಯೊಂದನ್ನು ಸ್ಥಾಪಿಸಲು ಬೇಕಾದ ರೂಪು ರೇಷೆಗಳನ್ನು ತಯಾರಿಸಿ ಅವರವರ ಹೊಸ  ಸಂಸ್ಥೆಗಳಿಗೆ ಆಕರ್ಷಕ ಹೆಸರನ್ನು ನೀಡಬೇಕಿತ್ತು. ಸಂಸ್ಥೆಯ Logoದ ಚಿತ್ರವನ್ನು ಬರೆಯಬೇಕಿತ್ತು. ಸಂಸ್ಥೆಗೊಂದು ಗೀತೆಯನ್ನು ರಚಿಸಿ ಹಾಡಬೇಕಿತ್ತು. ಸಂಸ್ಥೆಯ ವಿವಿಧ product ಗಳ  ವಿವರಣೆಯನ್ನು ನೀಡಬೇಕಿತ್ತು.  ಅಂತಿಮ ಹಂತವಾಗಿ  ಅವರವರ ಹೊಸ ಸಂಸ್ಥೆಗಳನ್ನು ಕುರಿತಾದ ವಿವರಣೆಗಳನ್ನು ವೇದಿಕೆಯ ಮೇಲೆ ತಂಡಗಳು ವಿವರಿಸಿದವು. 

ನಾಲ್ಕನೆಯ ಹಂತಕ್ಕೆ ಸುಮಾರು ೫೦೦ರಸ್ಟು ವಿದ್ಯಾರ್ಥಿಗಳು ವೀಕ್ಷಕರಾಗಿ ಬಂದಿದ್ದರು.  ಎಲ್ಲ ವಿಭಾಗಗಳ ಮುಖ್ಯಸ್ಥರು ಬಂದಿದ್ದರು. ಕೆಲವು ಬ್ಯಾಂಕ್ಗಳ ಪ್ರತಿನಿಧಿಗಳೂ ಬಂದಿದ್ದರು.  ನಾಲ್ಕು ಹಂತಗಳ ಅಂಕಗಳನ್ನು ಕ್ರೋಡೀಕರಿಸಿ ವಿಜೇತರನ್ನು ಆಯ್ಕೆ ಮಾಡಲಾಯಿತು. ಕೆನರಾ ಬ್ಯಾಂಕ್, IDBI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ತಂಡಗಳು ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ  ಆಯ್ಕೆಯಾಗಿದ್ದವು.   

--------ಮುಗಿಯಿತು ------------- 


No comments:

Post a Comment