೧
ಇಂದಿರಾ ಗಾಂಧಿಯವರ ಹತ್ಯೆ
ಅಂದು ಅಕ್ಟೋಬರ್ 31, 1984ರ, ಬುಧವಾರವಾಗಿತ್ತು. ಬೆಳಗ್ಗೆ ಸುಮಾರು 9.20ರ ಸಮಯ. ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮ ದಿಲ್ಲಿಯ ನಂ. 1, ಸಫ್ದಾರ್ಜನ್ಗ್ ರಸ್ತೆಯ ನಿವಾಸದ ಹಿಂಬಾಗಿಲ ತೋಟದ ಕಡೆಯಿಂದ, ತಮ್ಮ ನಂ. 1, ಅಕ್ಬರ್ ರಸ್ತೆಯ ಕಚೇರಿಯ ಕಡೆಗೆ ಹೊರಟಿದ್ದರು. ಎಂದಿನಂತೆ ತಮ್ಮ ಕಚೇರಿಗೆ ಹೊರಟಿದ್ದ ಶ್ರೀಮತಿ ಗಾಂಧಿಯವರು ಅಂದು ತಮಗೆ ಬಲು ಪ್ರಿಯವಾದ ಕಂದು ಬಣ್ಣದ ಸಂಬಲ್ಪುರಿ ಸೀರೆಯನ್ನುಟ್ಟಿದ್ದರು. ಗುಪ್ತಚರ ಸಂಸ್ಥೆಗಳ ಕಟ್ಟುನಿಟ್ಟಿನ ಸಲಹೆಯಿದ್ದರೂ, 'ಗುಂಡು ನಿರೋಧಕ ಅಂಗಿಯನ್ನು (ಬುಲೆಟ್ ಪ್ರೂಫ್ ಜಾಕೆಟ್)' ಅಂದು ಪ್ರಧಾನಿಯವರು ಧರಿಸಿರಲಿಲ್ಲ. ಹೆಗಲ ಮೇಲೊಂದು ಕೆಂಪು ಚೀಲ ನೇತು ಹಾಕಿಕೊಂಡದ್ದು ಅವರ ಎಂದಿನ ಕಚೇರಿ ಉಡುಪಿನ ಭಾಗವಾಗಿತ್ತು. ಕಪ್ಪು ಬಣ್ಣದ ಬೂಟುಗಳನ್ನು ಧರಿಸಿದ್ದ ಅವರು ನಿಧಾನವಾಗಿ ಮನೆಯ ಹಿಂಬಾಗಿಲಿನಿಂದ ಹೊರ ನಡೆದಿದ್ದರು. ಶ್ರೀಮತಿ ಗಾಂಧಿ ಅವರ ಹಿಂದೆ ಕೊಡೆಯನ್ನು ಹಿಡಿದಿದ್ದ ಪೊಲೀಸ್ ಪೇದೆ ನಾರಾಯಣ್ ಸಿಂಗ್ ರವರು, ಅಂಗ ರಕ್ಷಕ ರಾಮೇಶ್ವರ್ ದಯಾಳ್ ರವರು, ಆಪ್ತ ಸಹಾಯಕ ನಾಥು ರಾಮ್ ರವರು ಮತ್ತು ಅವರ ಆಪ್ತ ಕಾರ್ಯದರ್ಶಿ ಆರ್. ಕೆ. ಧವನ್ ರವರು ನಡೆದಿದ್ದರು.
ದಿನದ ಮೊದಲ ಕಾರ್ಯಕ್ರಮವಾಗಿ ಅಂದು ಶ್ರೀಮತಿ ಗಾಂಧಿಯವರು, ಬ್ರಿಟನ್ ನ ಪೀಟರ್ ಉಸ್ತಿನೋವ್ ಅವರಿಗೆ ಸಂದರ್ಶನವೊಂದನ್ನು ನೀಡಬೇಕಾಗಿತ್ತು. ಅವರ ಅಂದಿನ ಸಂದರ್ಶನ ಐರ್ಲೆಂಡಿನ ಟಿ.ವಿ.ಯ ಸಾಕ್ಷ್ಯ ಚಿತ್ರವೊಂದರ ಭಾಗವಾಗಿತ್ತು.
ನಿಧಾನವಾಗಿ ನಡೆಯುತ್ತಾ ಸಾಗಿದ್ದ ಶ್ರೀಮತಿ ಗಾಂಧಿಯವರು, ದಿಲ್ಲಿ ಪೊಲೀಸ್ ನ ಇಬ್ಬರು ಭದ್ರತಾ ಪಡೆಗಳು ಕಾಯುತ್ತಿದ್ದ ದ್ವಾರವೊಂದನ್ನು ದಾಟುತ್ತಲೇ, ಸಮವಸ್ತ್ರವಲ್ಲದ ಸಾಧಾರಣ ಉಡುಪಿನಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬೆಅಂತ್ ಸಿಂಗ್ ತನ್ನ ಪಿಸ್ತೂಲನ್ನು ಹೊರತೆಗೆದು, ಏಕಾಏಕಿ ಮೂರು ಗುಂಡುಗಳನ್ನು ಅತಿ ಸಮೀಪವಿದ್ದ ಇಂದಿರಾ ಗಾಂಧಿಯವರ ಮೇಲೆ ಹಾರಿಸಿದನು. ಮೂರೂ ಗುಂಡುಗಳು ಇಂದಿರಾ ಗಾಂಧಿಯವರ ಹೊಟ್ಟೆಯನ್ನು ಹೊಕ್ಕಿದ್ದವು. ಗುಂಡುಗಳ ಹೊಡೆತಕ್ಕೆ ಇಂದಿರಾ ಗಾಂಧಿಯವರು ತತ್ತರಿಸಿ ನೆಲಕ್ಕುರುಳಿದರು. ನೆಲಕ್ಕುರುಳಿದ ಇಂದಿರಾ ಗಾಂಧಿಯವರ ಜಾಳು ಶರೀರದ ಮೇಲೆ, ದ್ವಾರದ ಇನ್ನೊಂದು ಪಕ್ಕದಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಪೇದೆ ಸತ್ವಂತ್ ಸಿಂಗ್ ತನ್ನ 9 ಮೀ.ಮೀ. ಕಾರ್ಭಯ್ನ್ ಬಂದೂಕದಿಂದ ಮೂವತ್ತು ಗುಂಡುಗಳ ಮಳೆಗರೆದನು. ಕ್ಷಣಾರ್ಧದಲ್ಲಿ ಆಗಬಾರಾದ್ದು ಆಗಿಹೋಗಿತ್ತು. ಕೂಡಲೇ ಹಂತಕರಾದ ಬೆಅಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಇಬ್ಬರೂ ತಮ್ಮ ಆಯುಧಗಳನ್ನು ಕೆಳಗೆಸದು, ತಮ್ಮ ಕೈಗಳನ್ನು ಮೇಲೆತ್ತಿದರು. 'ನಾವೇನು ಮಾಡಬೇಕಿತ್ತೋ, ಅದನ್ನು ಮಾಡಿದ್ದೇವೆ. ನೀವೇನು ಮಾಡಬೇಕೋ ಅದನ್ನು ನೀವು ಮಾಡಿರಿ' ಎಂದು ಸಂಚಿನ ರೂವಾರಿ ಬೆಅಂತ್ ಸಿಂಗ್ ಹೇಳಿದ್ದು, ಅಲ್ಲಿದ್ದ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು.
ಕೂಡಲೇ ಕಾರ್ಯೋನ್ಮುಖರಾದ ಗಡಿ ಭದ್ರತಾ ಪಡೆಯ (ಬಿ.ಎಸ್.ಎಫ್.) ಅಧಿಕಾರಿಗಳಾದ ತರ್ಸೆನ್ ಸಿಂಗ್ ಜಮ್ವಾಲ್ ಮತ್ತು ರಾಮ್ ಶರಣ್ ಅವರುಗಳು ಹಂತಕರಿಬ್ಬರನ್ನೂ ಹಿಡಿದು ತಮ್ಮ ರೂಮಿನತ್ತ ಕರೆದೊಯ್ದರು. ಹಂತಕ ಬೆಅಂತ್ ಸಿಂಗ್ ಪ್ರತಿರೋಧ ಒಡ್ಡಿದರಿಂದ ಘರ್ಷಣೆ ಉಂಟಾಯಿತು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಬೆಅಂತ್ ಸಿಂಗ್ ನ ಹತ್ಯೆಯಾಯಿತು. ಗಾಯಗೊಂಡ ಸತ್ವಂತ್ ಸಿಂಗ್ ನನ್ನು ಬಂಧಿಸಲಾಯಿತು.
ನಡೆದ ಗುಂಡಿನ ಚಕಮಕಿಯ ಸದ್ದು ಕೇಳಿ, ಇಂದಿರಾ ಗಾಂಧಿಯವರ ಸೊಸೆ ಸೋನಿಯಾ ಗಾಂಧಿ ಮತ್ತು ಇಂದಿರಾರ ಆಪ್ತ ಎಂ.ಎಲ್.ಫೋತೆದಾರ್ ಅವರುಗಳು ಮನೆಯಿಂದ ಹೊರಗೆ ಬಂದರು. ಇಂದಿರಾ ಗಾಂಧಿಯವರ ಪುತ್ರ ರಾಜೀವ್ ಗಾಂಧಿ ಚುನಾವಣಾ ಪ್ರಸಾರಕ್ಕೆಂದು ದೂರದ ಪಶ್ಚಿಮ ಬಂಗಾಳದ ಪ್ರವಾಸಕ್ಕೆ ತೆರಳಿದ್ದರು. ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಶಾಲೆಗೆ ತೆರಳಿದ್ದರು. ಪ್ರಧಾನಿಯವರ ಆಪ್ತ ವೈದ್ಯರೂ ಸ್ಥಳಕ್ಕೆ ಧಾವಿಸಿದ್ದರು. ಇವರೆಲ್ಲರೂ ಸೇರಿ ರಕ್ತದ ಮಡುವಿನಲ್ಲಿದ ಇಂದಿರಾ ಗಾಂಧಿಯವರನ್ನು ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್) ಚಿಕಿತ್ಸೆಗೆಂದು ಅಂಬಾಸೆಡರ್ ಕಾರೊಂದರ ಹಿಂದಿನ ಆಸನದಲ್ಲಿ ಮಲಗಿಸಿಕೊಂಡು ಕೊಂಡೊಯ್ದರು. ಪ್ರಧಾನಿಯವರ ನಿವಾಸ ಮತ್ತು ಕಚೇರಿ, ಇವೆರಡೂ ಕೂಗಳತೆಯ ಸಮೀಪದಲ್ಲೇ ಇದ್ದರೂ, ನಡುವೆ ಒಂದು ಆಂಬುಲೆನ್ಸ್ ವಾಹನವೊಂದು ಸಿದ್ಧವಿಲ್ಲದ್ದು ಸಂಬಂಧಪಟ್ಟ ಇಲಾಖೆಗಳ ಬೇಜಾಬ್ದಾರಿತನವನ್ನು ಎತ್ತಿ ತೋರಿಸುತ್ತಿತ್ತು. ಆಂಬುಲೆನ್ಸ್ ವಾಹನದಂತೆ ವಿಶೇಷ ದೀಪ ಮತ್ತು ಎಚ್ಚರಿಕೆ ಗಂಟೆಗಳ ಸೌಲಭ್ಯವಿರದೆ, ಇಂದಿರಾ ಗಾಂಧಿಯವರ ಶರೀರವನ್ನು ಹೊತ್ತ ಸಾಧಾರಣ ಅಂಬಾಸೆಡರ್ ಕಾರು, ಅತ್ಯಂತ ಸಂಚಾರ ದಟ್ಟಣೆಯಿಂದ ಕೂಡಿದ, ನಾಲ್ಕೂವರೆ ಕಿಲೋಮೀಟರಿನಷ್ಟು ದೂರವಿದ್ದ ಏಮ್ಸ್ ಆಸ್ಪತ್ರೆಯನ್ನು ಸೇರಲು ಸಾಕಷ್ಟು ಪ್ರಯಾಸಪಡಬೇಕಾಯಿತು. ಗುಂಡುಗಳ ಸುರಿಮಳೆಗೆ ತುತ್ತಾದ ಇಂದಿರಾ ಗಾಂಧಿಯವರನ್ನು ಬೇಗ ಆಸ್ಪತ್ರೆಗೆ ಕೊಂಡೊಯ್ದಿದ್ದರೆ, ಬದುಕುಳಿಯುತ್ತಿದ್ದರೆ? ಎಂಬುದು ಬೇರೆ ವಿಷಯ.
ಪ್ರಧಾನಿ ಇಂದಿರಾ ಗಾಂಧಿಯವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬತೊಡಗಿತ್ತು. ಹತ್ಯೆಯ ಪ್ರಯತ್ನದ ಘಾತಕ ಸುದ್ದಿಯನ್ನು ಬಿ.ಬಿ.ಸಿ.ಯಂತಹ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ಅಂದೇ ಬೆಳಗ್ಗೆ 10ರ ಹೊತ್ತಿಗೆ ಪ್ರಸಾರ ಮಾಡಿಯಾಗಿತ್ತು. ದೇಶಾದ್ಯಂತದ ಉನ್ನತ ವ್ಯಕ್ತಿಗಳಿಗೆ ದೂರವಾಣಿಯ ಮುಖಾಂತರ ಕೂಡ ಅದೇ ಸಮಯಕ್ಕೆ ಸುದ್ದಿ ತಿಳಿದು ಬಂದಿತ್ತು. ಸುದ್ದಿ ತಿಳಿದ ದಿಲ್ಲಿಯ ಜನಸಾಮಾನ್ಯರು ಏಮ್ಸ್ ಸಂಸ್ಥೆಯ ಮುಂದೆ ಜಮಾಯಿಸತೊಡಗಿದರು. ಇಂದಿರಾ ಗಾಂಧಿಯವರು ಬದುಕುಳಿಯುವ ಸಾಧ್ಯತೆ ಅತಿ ಕಮ್ಮಿ ಎಂಬುದು ನೆರದಿದ್ದ ಜನಗಳಿಗಾಗಲೇ ತಿಳಿದಿತ್ತು. ಮಧ್ಯಾಹ್ನ 2.20ರ ಹೊತ್ತಿಗೆ ಇಂದಿರಾ ಗಾಂಧಿಯವರು ನಿಧನ ಹೊಂದಿದ್ದಾರೆಂದು ಏಮ್ಸ್ ಸಂಸ್ಥೆಯ ವೈದ್ಯರುಗಳು ಖಾತರಿಪಡಿಸಿಯಾಗಿತ್ತು. ಇಂದಿರಾ ಗಾಂಧಿಯವರ ಹತ್ಯೆಯಾದದ್ದು 31-10-1984ರ ಬುಧವಾರ. ಕಾಕತಾಳಿಯವೋ ಏನೋ, ಇಂದಿರಾ ಗಾಂಧಿಯವರು ಸ್ವರ್ಣ ಮಂದಿರದೊಳಗೆ ಕಾರ್ಯಾಚರಣೆಗಾಗಿ ಸೇನೆಯನ್ನು ಜೂನ್ 06, 1984ರಂದು ಕಳುಹಿಸಿದ್ದೂ ಬುಧವಾರವೇ ಆಗಿತ್ತು.
ಹಿಂದಿನ ದಿನ, ಅಂದರೆ ಅಕ್ಟೋಬರ್ 30, 1984ರ ಮಂಗಳವಾರದಂದು ಇಂದಿರಾ ಗಾಂಧಿಯವರು ಒಡಿಶಾದ ಭುವನೇಶ್ವರದಲ್ಲಿ ಚುನಾವಣಾ ಪ್ರಸಾರದ ಭಾಷಣ ಮಾಡುತ್ತ, 'ನಾನು ಜೀವಂತ ಇರುತ್ತೇನೋ, ಇಲ್ಲವೋ ಅದರ ಚಿಂತೆ ನನಗಿಲ್ಲ. ಈಗಾಗಲೇ ನಾನು ದೀರ್ಘ ಕಾಲ ಬದುಕಿಯಾಗಿದೆ. ನನ್ನ ಇಡೀ ಜೀವನವನ್ನು ಸೇವೆಯಲ್ಲಿ ಕಳೆದಿದ್ದೇನೆ ಎಂಬುದು ನನಗೆ ಗೌರವದ ವಿಷಯ. ನನ್ನ ಜೀವನದ ಕಡೆಯ ಉಸಿರಿರುವವರೆಗೆ ನನ್ನ ಜೀವನ ಸೇವೆಯಲ್ಲೇ ಸಾಗುತ್ತದೆ. ಒಂದು ಪಕ್ಷ ನನ್ನ ಜೀವ ಹೋದರೆ, ನನ್ನ ಶರೀರದ ಒಂದೊಂದು ರಕ್ತದ ಹನಿಯೂ ಭಾರತವನ್ನು ಜೀವಿತಗೊಳಿಸಿ, ಸದೃಢಗೊಳಿಸುತ್ತದೆ' ಎಂದು ಹೇಳಿದ ಭವಿಷ್ಯ ವಾಣಿ, ಮಾರನೆಯ ದಿನವೇ ನಿಜವಾಗಿದ್ದು ಮಾತ್ರ ವಿಪರ್ಯಾಸ. ಇಂದಿರಾ ಗಾಂಧಿಯವರ ಅಂತಿಮ ಸಾರ್ವಜನಿಕ ಭಾಷಣ ಅದಾಗಿದ್ದು, ಭಾಷಣದ ಕಡೆಯಲ್ಲಿ ತಮ್ಮ ಸಾವಿನ ಬಗ್ಗೆ ಪ್ರಸ್ತಾಪಿಸಿದ್ದ ಅವರಿಗೆ ತಮ್ಮ ಸಾವು ಸಮೀಪವೇ ಇದೆ, ಮತ್ತು ತಮ್ಮ ಹತ್ಯೆ ಸದ್ಯದಲ್ಲೇ ಆಗಬಹುದೆಂಬ ಶಂಕೆ ಇತ್ತೆಂಬುದು ಸ್ಪಷ್ಟವಾಗಿತ್ತು.
ಏಮ್ಸ್ ಆಸ್ಪತ್ರೆಯವರು ಇಂದಿರಾ ಗಾಂಧಿಯವರ ಮರಣದ ಸುದ್ದಿಯನ್ನು ಖಾತರಿಪಡಿಸಿದ ಕೂಡಲೇ, ನೆರೆ ರಾಷ್ಟ್ರ ಪಾಕಿಸ್ತಾನವೂ ಸೇರಿದಂತೆ ಎಲ್ಲಾ ವಿದೇಶಿ ಸುದ್ದಿ ಸಂಸ್ಥೆಗಳು ಇಂದಿರಾ ಗಾಂಧಿಯವರ ಹತ್ಯೆಯ ಸುದ್ದಿಯನ್ನು ಪ್ರಸಾರ ಮಾಡಿದ್ದರೂ, ಭಾರತೀಯ ಸುದ್ದಿಮಾಧ್ಯಮಗಳು ಮಾತ್ರ ಮರಣದ ಸುದ್ದಿಯನ್ನು ಇನ್ನೂ ಪ್ರಸಾರ ಮಾಡಿರಲಿಲ್ಲ.
ಈ ನಡುವೆ ಡಾ. ತೀರ್ಥ್ ದಾಸ್ ದುಗಾರರಿಂದ ಮೃತಪಟ್ಟ ಇಂದಿರಾ ಗಾಂಧಿಯವರ ದೇಹದ ಮರಣೋತ್ತರ ಪರೀಕ್ಷೆ ನಡೆಯಿತು. ಇಂದಿರಾ ಗಾಂಧಿಯವರ ದೇಹದ ಮೇಲೆ ಒಟ್ಟು 33 ಗುಂಡುಗಳನ್ನು ಅತ್ಯಂತ ಸಮೀಪದಿಂದ ಹಾರಿಸಲಾಗಿದ್ದು, ಅವುಗಳಲ್ಲಿ 30 ಗುಂಡುಗಳು ಅವರ ದೇಹವನ್ನು ಹೊಕ್ಕಿದ್ದವು. ಅವುಗಳಲ್ಲಿ 7 ಗುಂಡುಗಳು ಇನ್ನೂ ಅವರ ದೇಹದಲ್ಲೇ ಉಳಿದಿತ್ತು. ಉಳಿದ 23 ಗುಂಡುಗಳು ಅವರ ದೇಹವನ್ನು ಹೊಕ್ಕು ಹೊರಬಂದಿದ್ದವೆಂದರೆ, ಅವರ ಮೇಲಿನ ಆಕ್ರಮಣದ ತೀವ್ರತೆಯನ್ನು ಅರಿಯಬಹುದು. ಇಂದಿರಾ ಗಾಂಧಿಯವರ ಹೊಟ್ಟೆ ಮತ್ತು ಎದೆಯ ಭಾಗಗಳೆಲ್ಲವೂ ಛಿದ್ರವಾಗಿದ್ದರೂ, ಅವರ ಮುಖಕ್ಕೆ ಯಾವುದೇ ಹಾನಿಯಾಗಿರಲಿಲ್ಲ.
ಇಂದಿರಾರವರ ಮೇಲೆ ಮಾರಣಾಂತಿಕ ಹಲ್ಲೆಯ ಸುದ್ದಿಯನ್ನು ತಿಳಿದು ತಲ್ಲಣಗೊಂಡ ರಾಜೀವ್ ಗಾಂಧಿಯವರು ತಮ್ಮ ಪಶ್ಚಿಮ ಬಂಗಾಳದ ಪ್ರವಾಸವನ್ನು ಮೊಟಕುಗೊಳಿಸಿ, ಅಂದಿನ ಕೇಂದ್ರ ಹಣಕಾಸು ಮಂತ್ರಿ ಪ್ರಣಬ್ ಕುಮಾರ್ ಮುಖರ್ಜಿ ಅವರೊಂದಿಗೆ ದಿಲ್ಲಿಯ ಕಡೆಗೆ ವಿಮಾನ ಪ್ರಯಾಣ ಬೆಳಸಿದ್ದರು. ವಿಮಾನ ಪ್ರಯಾಣ ಸಮಯದಲ್ಲಿ ರಾಜೀವರೊಂದಿಗೆ ಮಾತನಾಡಿದ ಪ್ರಣಬ್ ಮುಖರ್ಜಿಯವರು, 'ಹತ್ಯೆಯಾದ ಇಂದಿರಾ ಗಾಂಧಿಯವರ ಸಂಪುಟದಲ್ಲಿ ತಾವು ಅತ್ಯಂತ ಹಿರಿಯರಾಗಿದ್ದು, ಆ ಕ್ಷಣಕ್ಕೆ ಹೊಸ ಪ್ರಧಾನಿಯಾಗಲು ತಾವೇ ಸೂಕ್ತರೆಂಬ ಅಭಿಪ್ರಾಯ,' ಮಂಡಿಸಿದ್ದು ಅವರ ಪಾಲಿಗೆ ಮುಳ್ಳಾಗಿ ಪರಿಣಮಿಸಿತು. ಪ್ರಣಬರನ್ನು ದೂರವಿರಿಸಿದ ರಾಜೀವ್, ಅವರನ್ನು ಮತ್ತೆಂದೂ ಹತ್ತಿರಕ್ಕೆ ಕರೆಯಲೇ ಇಲ್ಲ. ಏಳು ವರ್ಷಗಳ ಸುಧೀರ್ಘ ರಾಜಕೀಯ ಅಜ್ಞಾತ ಅನುಭವಿಸಿದ ಪ್ರಣಬ್, ಮತ್ತೆ ಕೇಂದ್ರ ಸಂಪುಟ ಸೇರಿದ್ದು ರಾಜೀವ್ ಹತ್ಯೆಯಾದನಂತರವೇ! ಮಧ್ಯಾಹ್ನ 3.00ರ ಹೊತ್ತಿಗೆ ದಿಲ್ಲಿಗೆ ಬಂದಿಳಿದ ರಾಜೀವ್, ನೇರವಾಗಿ ತಲುಪಿದ್ದು ಇಂದಿರಾ ಮೃತಪಟ್ಟಿದ್ದ ಏಮ್ಸ್ ಆಸ್ಪತ್ರೆಯನ್ನು.
ಅಂದಿನ ರಾಷ್ಟ್ರಾಧ್ಯಕ್ಷ ಜೈಲ್ ಸಿಂಗರು ಕೂಡ ಅಂದು ವಿದೇಶಿ ಪ್ರವಾಸದಲ್ಲಿದ್ದರು. ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿದ ಅವರು ದಿಲ್ಲಿಯನ್ನು ತಲುಪಿದ ತಕ್ಷಣ, ಭೇಟಿ ನೀಡಿದ್ದು ಏಮ್ಸ್ ಆಸ್ಪತ್ರೆಗೆ. ಅಷ್ಟು ಹೊತ್ತಿಗಾಗಲೇ ಅಲ್ಲಿ ನೆರದಿದ್ದ ಜನಗಳಿಗೆ ಇಂದಿರಾ ಗಾಂಧಿ ಮೃತಪಟ್ಟ ಸುದ್ದಿ ತಿಳಿದು ಹೋಗಿತ್ತು. ಇಂದಿರಾಜಿ ಅವರ ಹತ್ಯೆ ಮಾಡಿದವರು ಅವರ ಅಂಗರಕ್ಷಕರೇ ಆಗಿದ್ದ ಇಬ್ಬರು ಸಿಖ್ ಪೊಲೀಸ್ ಕರ್ಮಚಾರಿಗಳು ಎಂದು ತಿಳಿದಿದ್ದ ಜನಗಳು ಅಂದು ಉದ್ರಿಕ್ತರಾಗಿದ್ದರು. ರಾಷ್ಟ್ರಾಧ್ಯಕ್ಷ ಜೈಲ್ ಸಿಂಗರ ವಾಹನವನ್ನು ಕಂಡ ಕೂಡಲೇ ರೋಷಗೊಂಡ ಜನರು, ಅವರ ವಾಹನದ ಮೇಲೆ ಕಲ್ಲುಗಳನ್ನೆಸೆದು ಘೋಷಣೆಗಳನ್ನು ಕೂಗಿದರು. ಜೈಲ್ ಸಿಂಗರ ವಾಹನದ ಮೇಲಿನ ಕಲ್ಲೆಸತದ ಘಟನೆ ಮುಂದುಂಟಾದ ಸಿಖ್ಖರ ವಿರುದ್ಧದ ದಂಗೆಗೆ ಮುನ್ನುಡಿಯೋ ಎಂಬಂತಿತ್ತು. ಜೈಲ್ ಸಿಂಗರನ್ನು ಸುರಕ್ಷಿತಗೊಳಿಸವುದೇ ಪೋಲಿಸರಿಗೊಂದು ಸವಾಲಾಗಿಹೋಗಿತ್ತು.
ಅಂದು ಸಂಜೆ 6.00ರ ಹೊತ್ತಿಗೆ ಭಾರತೀಯ ಸುದ್ದಿಮಾಧ್ಯಮಗಳು ಇಂದಿರಾ ಗಾಂಧಿಯವರ ಹತ್ಯೆಯ ಸುದ್ದಿಯನ್ನು ಪ್ರಸಾರ ಮಾಡಿದ್ದಾಗಿತ್ತು. ಅದೇ ಸುದ್ದಿಯ ನಡುವೆಯೇ ರಾಷ್ಟ್ರಾಧ್ಯಕ್ಷ ಜೈಲ್ ಸಿಂಗ್ ರವರು, ಇಂದಿರಾ ಗಾಂಧಿಯವರ ಪುತ್ರ ರಾಜೀವ್ ಗಾಂಧಿಯವರಿಗೆ ಭಾರತ ದೇಶದ ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಬೋಧಿಸಿದ ವಿಷಯವನ್ನು ಪ್ರಕಟಿಸಿದ್ದನ್ನು ಕೇಳಿ, ಸಮಸ್ತ ಭಾರತದ ಜನತೆ ಅನುಮೋದಿಸಿತ್ತೆಂದರೆ ತಪ್ಪಾಗಲಾರದು.
ಮೃತಪಟ್ಟ ಇಂದಿರಾ ಗಾಂಧಿಯವರ ದೇಹವನ್ನು ಮೊದಲು ಅವರ ನಿವಾಸಕ್ಕೆ ತಂದಿರಿಸಲಾಯಿತು. ಮಾರನೆಯ ದಿನ, ಅಂದರೆ ನವೆಂಬರ್ 01, 1984ರ, ಗುರುವಾರ ಬೆಳಗ್ಗೆ ಅವರ ದೇಹವನ್ನು ದಿಲ್ಲಿಯ ತೀನ್ ಮೂರ್ತಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಯಿತು.
ನವೆಂಬರ್, 3ರಂದು ಇಂದಿರಾ ಗಾಂಧಿಯವರ ಪಾರ್ಥಿವ ಶರೀರವನ್ನು ಸಕಲ ರಾಜಮರ್ಯಾದೆಯೊಂದಿಗೆ ಮೆರವಣಿಗೆಯಲ್ಲಿ ರಾಜ್ ಘಾಟ್ಗೆ ತೆಗೆದುಕೊಂಡು ಹೋಗಲಾಯ್ತು. ರಾಜ್ ಘಾಟ್ನಲ್ಲಿ ಮಹಾತ್ಮಾ ಗಾಂಧಿಯವರ ಸಮಾಧಿಯ ಸಮೀಪವೇ ಇಂದಿರಾ ಗಾಂಧಿಯವರ ಅಂತಿಮ ಸಂಸ್ಕಾರವನ್ನು ಹಿಂದೂ ಸಂಪ್ರದಾಯದ ಪ್ರಕಾರ ಮಾಡಲಾಯಿತು. ಇಂದಿರಾ ಗಾಂಧಿಯವರ ಪುತ್ರ ರಾಜೀವ್ ಗಾಂಧಿಯವರು ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದರು. ಇಂದಿರಾ ಗಾಂಧಿಯವರ ಸಮಾಧಿ ಸ್ಥಳಕ್ಕೆ 'ಶಕ್ತಿ ಸ್ಥಳ'ವೆಂದು ನಾಮಕರಣಮಾಡಲಾಯಿತು.
ಇಂದಿರಾ ಗಾಂಧಿಯವರ ಹತ್ಯೆಯ ಪ್ರತ್ಯಕ್ಷ ದರ್ಶಿಗಳಲ್ಲಿ, ಅವರ ಹಿಂದೆ ಕೊಡೆ ಹಿಡಿದು ಸಾಗಿದ್ದ ಪೊಲೀಸ್ ಪೇದೆ ನಾರಾಯಣ್ ಸಿಂಗ್ ರವರೂ ಒಬ್ಬರು. ಅವರು ನೀಡಿದ ದೂರಿನ ಆಧಾರದ ಮೇಲೆ ದಿಲ್ಲಿಯ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿಕೊಳ್ಳಲಾಯಿತು. ಇಂದಿರಾ ಗಾಂಧಿಯವರ ಹತ್ಯೆಯ ಕೂಲಂಕುಷ ತನಿಖೆಗಾಗಿ, ದಿಲ್ಲಿಯ ಸಿ.ಐ.ಎಸ್.ಎಫ್.ನ ಐ.ಪಿ.ಎಸ್. ಅಧಿಕಾರಿ ಎಸ್. ಆನಂದ ರಾಮ್ ರವರ ನೇತೃತ್ವದಲ್ಲಿ ವಿಶೇಷ ತನಿಖಾ ದಳವೊಂದನ್ನು (ಎಸ್.ಐ.ಟಿ.) ರಚಿಸಲಾಯಿತು.
ಐರ್ಲೆಂಡಿನ ಟಿ.ವಿ.ಗೆ ತಯಾರಾಗಬೇಕಿದ್ದ ಇಂದಿರಾಗಾಂಧಿಯವರ ಸಂದರ್ಶನಕ್ಕೆ ಛಾಯಾಗ್ರಾಹಕರ ತಂಡ ಸಿದ್ಧರಾಗಿದ್ದರೂ, ಇಂದಿರಾ ಗಾಂಧಿಯವರ ಹತ್ಯೆಯ ದೃಶ್ಯಗಳನ್ನು ಯಾರೂ ಚಿತ್ರೀಕರಿಸದಿದ್ದದ್ದು ಆಶ್ಚರ್ಯಕರವಾಗಿತ್ತು. ಪ್ರತ್ಯಕ್ಷ ಸಾಕ್ಷಿಗಳೇ ಅಲ್ಲಿದ್ದದ್ದು ಮತ್ತು ಹಂತಕರನ್ನು ಸ್ಥಳದಲ್ಲೇ ಬಂಧಿಸಿದ್ದು ಮುಂದಿನ ತನಿಖೆಗೆ ಅನುಕೂಲವಾಯಿತು.
ಭಾರತದ ಎಲ್ಲ ಗುಪ್ತಚರ ಸಂಸ್ಥೆಗಳಿಗೆ ಇಂದಿರಾ ಗಾಂಧಿಯವರ ಹತ್ಯೆಯ ಸಂಚಿನ ಬಗ್ಗೆ ಮೊದಲೇ ತಿಳಿದಿತ್ತು. 1984ರ ಜೂನ್ ತಿಂಗಳ ವೇಳೆಗೆ ಪಂಜಾಬಿನ ಅಮೃತ್ ಸರದ ಸ್ವರ್ಣ ಮಂದಿರ ಸಿಖ್ ಉಗ್ರವಾದಿಗಳ ಅಡ್ಡೆಯಾಗಿ ಹೋಗಿತ್ತು. ಉಗ್ರ ಸಂತ್ ಜರ್ನೈಲ್ ಸಿಂಗ್ ಭಿನ್ದ್ರನ್ ವಾಲೆ ನೇತೃತ್ವದಲ್ಲಿ ಸ್ವರ್ಣ ಮಂದಿರದಲ್ಲಿ ನೆಲೆಸಿದ್ದ ಉಗ್ರರ ತಂಡ ಪಂಜಾಬಿನಲ್ಲಿ ಇನ್ನಿಲ್ಲಿದ ಹಿಂಸಾಚಾರ, ಕೊಲೆ, ಸುಲಿಗೆಗಳ ಸರಣಿಯನ್ನು ನಡೆಸಿತ್ತು. ಸಾಕಷ್ಟು ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ಇಂದಿರಾ ಗಾಂಧಿ ನೇತೃತ್ವದ ಆಡಳಿತಕ್ಕೆ ದಿಕ್ಕುತೋಚದಂತಾಗಿತ್ತು. ಬೇರೆ ಮಾರ್ಗವಿಲ್ಲದೆ, ಇಂದಿರಾ ಗಾಂಧಿಯವರು ಜೂನ್ ತಿಂಗಳ ಆರಂಭದಲ್ಲಿ, ಸ್ವರ್ಣ ಮಂದಿರವನ್ನು ಉಗ್ರರಿಂದ ವಿಮುಕ್ತಗೊಳಿಸಲು ಭಾರತೀಯ ಸೇನೆಯನ್ನು ಕಳುಹಿಸಬೇಕಾಗಿಬಂದದ್ದು ಈಗ ಇತಿಹಾಸ. ಸೇನೆಯ ಕಾರ್ಯಾಚರಣೆಯ ವೇಳೆ ಸ್ವರ್ಣ ಮಂದಿರದ ಪ್ರಮುಖ ಮಂದಿರವೊಂದಾದ 'ಅಕಾಲ್ ತಖ್ತ್'ಗೆ ಭಾರಿ ಹಾನಿಯುಂಟಾಗಿದ್ದು ಸಮಸ್ತ ಸಿಖ್ ಸಮುದಾಯವನ್ನು ಕೆರಳಿಸಿತ್ತು. ಆ ವೇಳೆಗಾಗಲೇ ಸಿಖ್ಖರಿಗೊಂದು ಪ್ರತ್ಯೇಕ ರಾಷ್ಟ್ರ 'ಖಾಲಿಸ್ತಾನ್' ಬೇಕೆಂಬ ಹೋರಾಟವನ್ನು ಪಂಜಾಬಿನ ಕೆಲ ಸಿಖ್ ಸಂಸ್ಥೆಗಳು ಮತ್ತು ಕೆಲವು ಸಿಖ್ಖರ ವಿದೇಶಿ ಸಂಸ್ಥೆಗಳೂ ಆರಂಭಿಸಿದ್ದವು. ಅಂತಹ ಖಾಲಿಸ್ತಾನ್ ಹೋರಾಟದ ವಿದೇಶಿ ಸಂಸ್ಥೆಯ ನೇತಾರ ಜಗಜೀತ್ ಸಿಂಗ್ ಚೌಹಾಣ್ ಎಂಬುವರು ಜೂನ್ 12, 1984ರಂದು ಬಿ.ಬಿ.ಸಿ.ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಸ್ವರ್ಣ ಮಂದಿರದ ಮೇಲೆ ಸೇನೆಯ ಆಕ್ರಮಣ ನಡೆಸಿದ ಇಂದಿರಾ ಗಾಂಧಿ ಅವರ ಮೇಲೆ ಪ್ರತೀಕಾರದ ಮಾತುಗಳನ್ನಾಡಿದ್ದರು. ಇಂದಿರಾ ಗಾಂಧಿ ಮತ್ತವರ ಎಲ್ಲಾ ಕುಟುಂಬದ ಸದಸ್ಯರುಗಳನ್ನು ಬೇಗ ಹತ್ಯೆ ಮಾಡುವುದಾಗಿ ಚೌಹಾಣ್ ಆ ಸಂದರ್ಶನದಲ್ಲಿ ತಿಳಿಸಿದ್ದರು. ಹಾಗಾಗಿ ಭಾರತದ ಎಲ್ಲ ಗುಪ್ತಚರ ಸಂಸ್ಥೆಗಳಿಗೆ ಇಂದಿರಾ ಗಾಂಧಿಯವರ ಮೇಲಿನ ತೂಗುಗತ್ತಿಯ ವಿಚಾರ ಚೆನ್ನಾಗೇ ತಿಳಿದಿತ್ತು. ಹಾಗಾದರೂ ಇಂದಿರಾ ಗಾಂಧಿಯವರ ಹತ್ಯೆ ಚೌಹಾಣರು ಸಂದರ್ಶನದ ನೀಡಿದ ಐದು ತಿಂಗಳೊಳಗೆ ನಡೆದದ್ದು ದುರದೃಷ್ಟಕರವೇ ಸರಿ. 'ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ' ಇಂದಿರಾ ಗಾಂಧಿಯವರ ಹತ್ಯೆಯಾಗಿದ್ದು ನಮ್ಮ ಗುಪ್ತಚರ ಹಾಗು ಸುರಕ್ಷಾ ಸಂಸ್ಥೆಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.
ಇಂದಿರಾ ಗಾಂಧಿಯವರ ಹತ್ಯೆಯ ಪ್ರಮುಖ ಆರೋಪಿ, 38 ವರ್ಷದ ದಿಲ್ಲಿ ಪೊಲೀಸ್ ನ ಸಬ್ ಇನ್ಸ್ಪೆಕ್ಟರ್ ಬೆಅಂತ ಸಿಂಗ್. ಆತ ಕಳೆದ ಹತ್ತು ವರ್ಷಗಳಿಂದ ಇಂದಿರಾ ಗಾಂಧಿಯವರ ನಿವಾಸದ ಭದ್ರತೆಯ ಕರ್ತವ್ಯವನ್ನು ನಿರ್ವಹಿಸುತಿದ್ದು, ಅವರಿಗೆ ಮತ್ತು ಅವರ ಕುಟುಂಬದವರಿಗೆ ಆಪ್ತನಾಗಿಹೋಗಿದ್ದನು. ಬಾಲಕ ರಾಹುಲ್ ಗಾಂಧಿಗೆ ವ್ಯಾಯಾಮ ಮತ್ತು ಬ್ಯಾಡ್ಮಿಂಟನ್ ಹೇಳಿಕೊಡುತ್ತಿದ್ದ ಗುರುವು ಬೆಅಂತ್ ಸಿಂಗನೇ ಆಗಿದ್ದನು. ಮತ್ತೊಬ್ಬ ಹಂತಕ 22 ವರ್ಷದ ಪೊಲೀಸ್ ಪೇದೆ ಸತ್ವಂತ್ ಸಿಂಗ್ ಕಳೆದ 18 ತಿಂಗಳುಗಳಿಂದ ಇಂದಿರಾ ಗಾಂಧಿಯವರ ನಿವಾಸದ ಭದ್ರತೆಯ ಸೇವೆಯಲ್ಲಿದ್ದನು.
ಇಬ್ಬರು ನೇರ ಹಂತಕರಲ್ಲದೆ, ದಿಲ್ಲಿ ಪೊಲೀಸ್ನ ಮತ್ತೊಬ್ಬ ಸಬ್ ಇನ್ಸ್ಪೆಕ್ಟರ್ ಬಲಬೀರ್ ಸಿಂಗನನ್ನೂ ಮತ್ತು ದಿಲ್ಲಿ ಸರಕಾರದ ಉದ್ಯೋಗಿ ಕೆಹರ್ ಸಿಂಗ್ ನನ್ನೂ ಇಂದಿರಾ ಹತ್ಯೆಯ ಸಂಚಿನ ಆರೋಪಿಗಳನ್ನಾಗಿಸಿ ಪ್ರಕರಣವನ್ನು ದಾಖಲಿಸಲಾಯ್ತು. ಬಲಬೀರ್ ಸಿಂಗ್ ಬೆಅಂತ್ ಸಿಂಗನಿಗೆ ಆಪ್ತ ಸ್ನೇಹಿತನಾಗಿದ್ದನು. 1984ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಇಂದಿರಾ ಗಾಂಧಿಯವರ ನಿವಾಸದ ತೋಟದ ಮುಂದಿನ ಮರವೊಂದರ ಮೇಲೆ 'ಗಿಡುಗ'ವೊಂದು ಕುಳಿತಿದ್ದನ್ನು ನೋಡಿದ ಬಲಬೀರ್ ಸಿಂಗ್ ಅದನ್ನು ಸಮೀಪವೇ ಇದ್ದ ತನ್ನ ಸ್ನೇಹಿತ ಬೆಅಂತ್ ಸಿಂಗನನ್ನು ಕರೆದು ತೋರಿಸಿದನು. ಸಿಖ್ ಧರ್ಮದ ಹತ್ತನೇ ಗುರು, ಗುರುಗೋವಿಂದ್ ಸಿಂಗರ ಅತ್ಯಂತ ಮೆಚ್ಚಿನ ಪಕ್ಷಿ 'ಗಿಡುಗ'ವಾಗಿದ್ದು, ಆ ಪಕ್ಷಿಯನ್ನು ಗುರುಗೋವಿಂದ್ ಸಿಂಗರ ಪ್ರತೀಕವೆಂದೇ ಸಮಸ್ತ ಸಿಖ್ಖರೂ ಪರಿಗಣಿಸುತ್ತಿದ್ದದ್ದು ಎಲ್ಲರಿಗೂ ತಿಳಿದ ವಿಷಯ. ಬಲಬೀರ್ ಸಿಂಗ್ ಮತ್ತು ಬೆಅಂತ್ ಸಿಂಗ್ ಇಬ್ಬರೂ, ಗಿಡುಗ ಇಂದಿರಾ ಗಾಂಧಿಯವರ ಮನೆಯ ಮುಂದೆ ಕಾಣಿಸಿಕೊಂಡಿದ್ದು, ಇಂದಿರಾ ಗಾಂಧಿಯವರ ಹತ್ಯೆಗೆ ಗುರು ಗೋವಿಂದ್ ಸಿಂಗರಿಂದ ದೊರೆತ ಪ್ರೇರಣೆಯೆಂದು ಪರಿಗಣಿಸಿದರೆಂದೂ ಮತ್ತು ಆ ಸಮಯದಲ್ಲೇ ಸಿಖ್ಖರ ಪೂಜಾಮಂದಿರವಾದ ಗುರುದ್ವಾರಕ್ಕೆ ತೆರಳಿ ಬೆಅಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಇಬ್ಬರೂ ಹತ್ಯೆಯ ದೀಕ್ಷೆಯ ಪ್ರತೀಕವಾಗಿ 'ಪ್ರಾರ್ಥನೆ ಮತ್ತು ಅಮೃತ ಪ್ರಾಶನ' ಮಾಡಿದರೆಂಬ ವಿಷಯ, ವಿಚಾರಣಾ ಅಧಿಕಾರಿಗಳ ಮುಂದೆ ಪ್ರಸ್ತಾಪಗೊಂಡರೂ, ವಿಚಾರಣಾ ಸಂಸ್ಥೆ ಅವುಗಳನ್ನು ಆಧಾರವಾಗಿ ಪರಿಗಣಿಸಲಿಲ್ಲ.
ಬೆಅಂತ್ ಸಿಂಗನ ಹತ್ತಿರದ ನೆಂಟನಾಗಿದ್ದ ಮತ್ತೊಬ್ಬ ಆರೋಪಿ ಕೆಹರ್ ಸಿಂಗ್, ಸ್ವರ್ಣ ಮಂದಿರದ ಮೇಲೆ ಸೇನೆಯ ಆಕ್ರಮಣ ನಡೆಸಿದ ಇಂದಿರಾ ಗಾಂಧಿಯವರ ಮೇಲೆ ಸೇಡಿನ ಭಾವವನ್ನು ಹೊಂದಿದ್ದನು. ನೇರ ಹಂತಕರಾದ ಬೆಅಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಇಬ್ಬರನ್ನೂ ಹತ್ಯೆಗೆ ಪ್ರೇರೇಪಿಸಿದವರಲ್ಲಿ ಕೆಹರ್ ಸಿಂಗ್ ಕೂಡ ಸೇರಿದ್ದನು. ಕೆಹರ್ ಸಿಂಗ್, ಬೆಅಂತ್ ಸಿಂಗ್ ಮತ್ತು ಬೆಅಂತ್ ಸಿಂಗನ ಪತ್ನಿ ಬಿಮ್ಲಾ ಖಲ್ಸಾ, ಆ ಮೂವರೂ 1984ರ ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ಅಮೃತ್ ಸರಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಬೆಅಂತ್ ಸಿಂಗ್ ಸ್ವರ್ಣ ಮಂದಿರದಲ್ಲಿ 'ಅಮೃತ ಪ್ರಾಶನ' ಮಾಡಿ, ತನ್ನ ಉಂಗುರ ಮತ್ತು ಕೈಕಡಗಳನ್ನು ಕೆಹರ್ ಸಿಂಗನಿಗೊಪ್ಪಿಸಿದ್ದನು. ಇದಾದನಂತರ ದಿಲ್ಲಿಯ ಆರ್. ಕೆ. ಪುರಂನ ಗುರುದ್ವಾರಕ್ಕೆ ಬೆಅಂತ್, ಸತ್ವಂತ ಸಿಂಗನೊಂದಿಗೆ ತೆರಳಿ, ಸತ್ವಂತ್ ಸಿಂಗನಿಗೂ 'ಅಮೃತ ಪ್ರಾಶನ' ಮಾಡಿಸಿದನೆಂಬುದು ಕೂಡ ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿತ್ತು.
ಪಂಜಾಬಿನ ಐ.ಪಿ.ಎಸ್. ಪೊಲೀಸ್ ಅಧಿಕಾರಿಯಾಗಿದ್ದ ಸಿಮರಂಜಿತ್ ಸಿಂಗ್ ಮಾನ್ ಎಂಬುವರು ಕೂಡ ಅಮೃತ್ ಸರದ ಸ್ವರ್ಣ ಮಂದಿರದ ಮೇಲೆ ನಡೆದ ಸೇನೆಯ ಆಕ್ರಮಣದ ಬಗ್ಗೆ ಕುಪಿತರಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಪ್ರತೀಕಾರದ ಭಾವವನ್ನು ಹೊಂದಿದ್ದ ಅವರನ್ನು ಮತ್ತು ಅವರ ಮೂವರು ಸಹಚರರನ್ನೂ ಕೂಡ ಆರೋಪಿಗಳೆಂದು, ಇಂದಿರಾ ಹತ್ಯೆಯ ವಿಚಾರಣಾ ಸಮಿತಿ ಪರಿಗಣಿಸಿ ಬಂಧಿಸಿತ್ತು. ನಂತರ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಲಹೆ ಮೇರೆಗೆ ಆ ನಾಲ್ಕೂ ಜನರನ್ನು ವಿಚಾರಣೆಯಿಂದ ವಿಮುಕ್ತಗೊಳಿಸಲಾಯ್ತು.
ಇಂದಿರಾ ಗಾಂಧಿಯವರ ಹತ್ಯೆಯ ವಿಚಾರಣೆಯನ್ನು ತ್ವರಿತವಾಗೇ ಮುಗಿಸಿದ ವಿಚಾರಣಾ ನ್ಯಾಯಾಲಯ, ತನ್ನ ತೀರ್ಪನ್ನು ಪ್ರಕಟಿಸಿ, ಎಲ್ಲಾ ಮೂವರು ಆರೋಪಿಗಳಾದ ಸತ್ವಂತ ಸಿಂಗ್, ಬಲಬೀರ್ ಸಿಂಗ್ ಮತ್ತು ಕೆಹರ್ ಸಿಂಗರವರುಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಮತ್ತೊಬ್ಬ ಪ್ರಮುಖ ಆರೋಪಿ ಬೆಅಂತ್ ಸಿಂಗ್, ಇಂದಿರಾ ಗಾಂಧಿ ಹತ್ಯೆಯಾದ ದಿನವೇ, ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದನು. ದಿಲ್ಲಿಯ ಹೈಕೋರ್ಟ್ ಕೂಡ ಡಿಸೆಂಬರ್ 03, 1986ರಂದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಭಾರತದ ಸರ್ವೋಚ್ಛ ನ್ಯಾಯಾಲಯ ಬಲಬೀರ್ ಸಿಂಗ್ ಮಾಡಿದ ಅಹವಾಲನ್ನು ಪರಿಗಣಿಸಿ, ಆಗಸ್ಟ್ 03, 1988ರಂದು ಅವನನ್ನು ದೋಷಮುಕ್ತನನ್ನಾಗಿಸಿತು ಮತ್ತು ಮಿಕ್ಕಿಬ್ಬರಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿತ್ತು. ಕೆಹರ್ ಸಿಂಗನ ಕರುಣಾ ಕ್ಷಮೆಯ ಅಹವಾಲನ್ನು ಜನವರಿ 02, 1989ರಂದು ಭಾರತದ ರಾಷ್ಟ್ರಪತಿಯವರು ತಿರಸ್ಕರಿಸಿದರು. ಜನವರಿ 06, 1989ರಂದು ಸತ್ವಂತ ಸಿಂಗ್ ಮತ್ತು ಕೆಹರ್ ಸಿಂಗರನ್ನು ದಿಲ್ಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯ್ತು. ಅವರ ಶವಗಳನ್ನು ಜೈಲಿನ ಆವರಣದಲ್ಲೇ ಸಮಾಧಿ ಮಾಡಲಾಯಿತು.
ಸ್ವರ್ಣ ಮಂದಿರದೊಳಗೆ ಭಾರತೀಯ ಸೇನೆಯನ್ನು ಕಾರ್ಯಾಚರಣೆಗೆ ಕಳುಹಿಸಿದ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹತ್ಯೆ ಮಾಡಬೇಕೆಂಬ ರೋಷ, ಖಾಲಿಸ್ತಾನ್ ಹೋರಾಟಗಾರರ ಸಂಸ್ಥೆಗಳು ಸೇರಿದಂತೆ ಹಲವಾರು ಸಿಖ್ ಸಮುದಾಯಕ್ಕೆ ಸೇರಿದ ಸಂಸ್ಥೆಗಳಿಗೆ ಇದ್ದಿದ್ದು ನಿಜವಾದರೂ, ಇಂದಿರಾ ಹಂತಕರಿಗೂ ಮತ್ತು ಬೇರ್ಯಾವ ಸಂಸ್ಥೆಗಳಿಗೂ ಅಥವಾ ವ್ಯಕ್ತಿಗಳಿಗೂ ಇರಬಹುದಾದ ಸಂಬಂಧವನ್ನು ಸಾಬೀತುಪಡಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾದವು. ಇಂದಿರಾ ಗಾಂಧಿಯವರ ಹತ್ಯೆಯಾದ ಮರುಕ್ಷಣದಲ್ಲೇ ನಡೆದ ಗುಂಡಿನ ಚಕಮಕಿಯಲ್ಲಿ ಮಡಿದ, ಇಂದಿರಾ ಹತ್ಯೆಯ ಪ್ರಮುಖ ರೂವಾರಿ ಬೆಅಂತ್ ಸಿಂಗನೊಂದಿಗೆ ಹತ್ಯೆಯ ಸಂಚಿನ ಕೊಂಡಿಗಳೆಲ್ಲವೂ ಮತ್ತೆಂದಿಗೂ ಸಿಗದಂತೆ ಮಾಯವಾಗಿದ್ದವು. ವಿಚಾರಣೆಗೊಳಗಾದ ಆರೋಪಿಗಳಾದ ಸತ್ವಂತ್ ಸಿಂಗ್, ಕೆಹರ್ ಸಿಂಗ್ ಮತ್ತು ಬಲಬೀರ್ ಸಿಂಗರುಗಳಿಂದ ಹೆಚ್ಚಿನ ಮಾಹಿತಿಗಳನ್ನೇನೂ ಬೇಧಿಸಲಾಗಲಿಲ್ಲ.
ಜನವರಿ 06, 2008ರಂದು ಇಂದಿರಾಗಾಂಧಿಯವರ ಹಂತಕರಾದ ಬೆಅಂತ್ ಸಿಂಗ್, ಸತ್ವಂತ ಸಿಂಗ್ ಮತ್ತವರ ಸಹಚರನಾದ ಕೆಹರ್ ಸಿಂಗರನ್ನು ಹುತಾತ್ಮರೆಂದು ಅಮೃತ್ ಸರದ ಅಕಾಲ್ ತಖ್ತ್ ನ ಪೀಠದಿಂದ ಘೋಷಿಸಲಾಯಿತು. ಅಕ್ಟೋಬರ್ 31, 2008ರಂದು ಪ್ರಥಮ ಬಾರಿಗೆ ಆ ಮೂವರೂ ಹತ್ಯೆಕೋರ ಹುತಾತ್ಮರ ಪುಣ್ಯ ತಿಥಿಯನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಅವರುಗಳ ಪುಣ್ಯ ತಿಥಿಯನ್ನು ಅಕಲ್ ತಖ್ತ್ ನಲ್ಲಿ ಆಚರಿಸಲಾಗುತ್ತಿದೆ.
ಗುಪ್ತಚರ ಸಂಸ್ಥೆಗಳಿಗೆ ಇಂದಿರಾ ಗಾಂಧಿಯವರ ಹತ್ಯೆಯ ಮುನ್ಸೂಚನೆ ಚೆನ್ನಾಗೆ ತಿಳಿದಿತ್ತು. ಸಿಖ್ ಧರ್ಮಕ್ಕೆ ಸೇರಿದ ಪ್ರತಿಯೊಬ್ಬ ಸಿಖ್ ಪ್ರಜೆಗೂ, ಸ್ವರ್ಣ ಮಂದಿರದ ಮೇಲೆ ಸೇನೆಯ ಆಕ್ರಮಣ ನಡೆಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಮೇಲೆ ಕೋಪವಿದ್ದದ್ದು ಸರ್ವವಿಧಿತವಾಗಿತ್ತು. ಹಾಗಾಗಿ ಸಿಖ್ ಧರ್ಮಕ್ಕೆ ಸೇರಿದ ಭದ್ರತಾ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತೆಗೆ ನೇಮಿಸುವುದು ಬೇಡವೆಂಬ ಸಲಹೆಯನ್ನು ಗುಪ್ತಚರ ಸಂಸ್ಥೆಗಳು ಸಂಬಂಧ ಪಟ್ಟ ಮೇಲಧಿಕಾರಿಗಳಿಗೆ ತಿಳಿಸಿಯಾಗಿತ್ತು. ಮೇಲಧಿಕಾರಿಗಳು ಸಿಖ್ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತೆಯ ಪಡೆಗಳಿಂದ ದೂರವಿಡುವ ವ್ಯವಸ್ಥೆ ಮಾಡಬೇಕಾದ ಸಮಯದಲ್ಲಿ, ಇಂದಿರಾ ಗಾಂಧಿಯವರ ನಿವಾಸದ ಭದ್ರತೆಯ ಕರ್ತವ್ಯದ ಮೇಲಿದ್ದ ಸಬ್ ಇನ್ಸ್ಪೆಕ್ಟರುಗಳಾದ ಬೆಅಂತ್ ಸಿಂಗ್ ಮತ್ತು ಬಲಬೀರ್ ಸಿಂಗ್ ಇಬ್ಬರೂ, ಇಂದಿರಾ ಗಾಂಧಿಯವರ ಆಪ್ತ ಕಾರ್ಯದರ್ಶಿ ಆರ್.ಕೆ.ಧವನ್ ರವರನ್ನು ಸಂಪರ್ಕಿಸಿ, ತಾವುಗಳು ಪ್ರಾಮಾಣಿಕರೆಂದು, ಕರ್ತವ್ಯ ಲೋಪ ಮಾಡುವವರಲ್ಲವೆಂದು ಮತ್ತು ತಮ್ಮನ್ನು ಇಂದಿರಾ ಗಾಂಧಿಯವರ ನಿವಾಸದ ಭದ್ರತಾ ಕರ್ತವ್ಯದಿಂದ ದೂರಮಾಡದಂತೆ ವಿನಂತಿಸಿಕೊಂಡರು. ಸಿಖ್ ಭದ್ರತಾ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತೆಯ ಪಡೆಗಳಿಂದ ದೂರ ಸರಿಸಿದರೆ, ಅದು ಸಿಖ್ಖರನ್ನು ಬೇಧ ಭಾವದಿಂದ ನೋಡಿದಂತಾಗುತ್ತದೆ ಎಂದು ಪರಿಗಣಿಸಿದ ಆರ್.ಕೆ.ಧವನ್ ರವರು, ಬೆಅಂತ್ ಸಿಂಗ್ ಮತ್ತು ಬಲಬೀರ್ ಸಿಂಗರನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತಾ ಕರ್ತವ್ಯದಿಂದ ಬೇರ್ಪಡಿಸದಂತೆ ಶಿಫಾರಿಸು ಮಾಡಿದರು. ಸಿಖ್ ಪೊಲೀಸ್ ಕರ್ಮಚಾರಿಗಳನ್ನು ದೂರ ಸರಿಸದ ಔದಾರ್ಯದ ನಿರ್ಧಾರ ಇಂದಿರಾ ಗಾಂಧಿಯವರದೇ ಎಂದು ಕೆಲವರು ಹೇಳಿದರೂ, ವಾಸ್ತವದಲ್ಲಿ ಅದು ಆರ್.ಕೆ. ಧವನ್ ರವರ ನಿರ್ಧಾರವಾಗಿತ್ತು. ಮುಂದೆ ಅದೇ ನಿರ್ಣಯ ಘಾತಕವಾಗಿ ಪರಿಣಮಿಸಿ, ಇಂದಿರಾ ಗಾಂಧಿಯವರ ಸಮೀಪದ ಕರ್ತವ್ಯದಲ್ಲೇ ಉಳಿದ ಬೆಅಂತ್ ಸಿಂಗರಿಂದಲೇ ಇಂದಿರಾ ಹತ್ಯೆಯಾಗಿದ್ದು ದುರದೃಷ್ಟಕರ. ಆರ್.ಕೆ. ಧವನ್ ರವರ ಆ ನಿರ್ಣಯ ಸ್ವಾಭಾವಿಕವಾಗಿ ತನಿಖಾ ಸಮಿತಿಯ ಗಮನಕ್ಕೆ ಬಂದಿತ್ತು. 'ಅನುಮಾನದ ಸೂಜಿ' ಆರ್.ಕೆ.ಧವನ್ ರವರ ಕಡೆಗೂ ತಿರುಗಿದ್ದು, ಅವರ ವಿರುದ್ಧವೂ ತನಿಖೆಯಾಯಿತು. ಸಿಖ್ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತಾ ಕರ್ತವ್ಯದ ಮೇಲೆ ಉಳಿಸಿಕೊಂಡ ನಿರ್ಣಯ ಆರ್.ಕೆ.ಧವನ್ ರದ್ದಾಗಿತ್ತೇ ಹೊರತು, ಹತ್ಯೆಯಾದ ದಿನ ಎರಡು ಸಿಖ್ ಕರ್ಮಚಾರಿಗಳನ್ನು ಪಕ್ಕ ಪಕ್ಕವೇ ನೇಮಿಸಿದ್ದರಲ್ಲಿ, ಅವರ ಪಾತ್ರವಿರಲಿಲ್ಲ ಎಂಬ ವಿಷಯವನ್ನು ಮನಗಂಡ ತನಿಖಾ ಸಮಿತಿ ಆರ್.ಕೆ.ಧವನ್ ರನ್ನು ದೋಷಾರೋಪದಿಂದ ವಿಮುಕ್ತಗೊಳಿಸಿತು.
ಸಿಖ್ ಭದ್ರತಾ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತಾ ಕರ್ತವ್ಯದಿಂದ ದೂರವಿಡುವಂತೆ, ಗುಪ್ತಚರ ಸಂಸ್ಥೆಗಳು ಸಲಹೆ ನೀಡಿದ್ದರೂ, ಆ ವಿಷಯವನ್ನು ಇಂದಿರಾ ಗಾಂಧಿಯವರೊಂದಿಗೆ ಯಾವ ಉನ್ನತ ಅಧಿಕಾರಿಯೂ ಕೂಲಂಕುಷವಾಗಿ ಚರ್ಚಿಸದಿಲ್ಲದ್ದು, ಅಂದಿನ ಭದ್ರತಾ ವ್ಯವಸ್ಥೆ ಎಸಗಿದ ಮಹಾಪರಾಧವೆಂದೇ ಹೇಳಬಹುದು. ಆರ್.ಕೆ.ಧವನ್ ರ ನಿರ್ಧಾರವನ್ನು ಬದಿಗೊತ್ತಿ, ಸಿಖ್ ಭದ್ರತಾ ಕರ್ಮಚಾರಿಗಳನ್ನು ದೂರವಿಡುವ ಕಾರ್ಯವನ್ನು ಉನ್ನತ ಭದ್ರತಾ ಅಧಿಕಾರಿಗಳು ಮಾಡಬಹುದಿತ್ತು. ಹಾಗಾಗದಿದ್ದದ್ದು ಇಂದಿರಾ ಗಾಂಧಿಯವರ ಪಾಲಿಗೆ ಘಾತಕವಾಗಿ ಪರಿಣಮಿಸಿದ್ದು ಈಗ ಇತಿಹಾಸ.
ಭದ್ರತಾ ವ್ಯವಸ್ಥೆಯ ಮತ್ತೊಂದು ಘಾತಕ ಲೋಪವೆಂದರೆ, ಹಂತಕ ಸತ್ವಂತ ಸಿಂಗನನ್ನು ಮತ್ತೊಬ್ಬ ಹಂತಕ ಬೆಅಂತ್ ಸಿಂಗನ ಪಕ್ಕವೇ ಕರ್ತವ್ಯಕ್ಕೆ ನೇಮಿಸಿದ್ದು. ಆ ದಿನ, ಅಂದರೆ ಅಕ್ಟೋಬರ್ 31, 1984ರಂದು ಸತ್ವಂತ ಸಿಂಗನ ಕರ್ತವ್ಯವಿದ್ದದ್ದು, ಇಂದಿರಾ ಗಾಂಧಿಯವರ ಹತ್ಯೆಯಾದ ನಿವಾಸದಲ್ಲಲ್ಲ. ಅಂದು ಸತ್ವಂತ ಸಿಂಗನ ಕರ್ತವ್ಯವಿದ್ದದ್ದು ಇಂದಿರಾ ಕಚೇರಿ ಇದ್ದ ಅಕ್ಬರ್ ರಸ್ತೆಯ ಆವರಣದಲ್ಲಿ. ಅಂದಿನ ಅವನ ನೇಮಕವನ್ನು ಇಂದಿರಾ ಕಛೇರಿಯಿದ್ದ ಅಕ್ಬರ್ ರಸ್ತೆಯ ಆವರಣದಿಂದ, ಸಫ್ದಾರ್ಜನ್ಗ್ ರಸ್ತೆಯ ಇಂದಿರಾ ನಿವಾಸದ ಕಡೆಗೆ ಬದಲಿಸಿದ ನಿರ್ಧಾರ ಯಾರದೆಂಬುದು ಇಂದಿಗೂ ನಿಗೂಢ! ಕೆಲವರು ಹೇಳುವ ಪ್ರಕಾರ ನಡೆದ ಆ ಬದಲಾವಣೆಗೆ ಹತ್ಯೆಯ ಆರೋಪಿ ಸಬ್ ಇನ್ಸ್ಪೆಕ್ಟರ್ ಬಲಬೀರ್ ಸಿಂಗ್ ಕಾರಣರೆಂಬುದನ್ನು ನಂಬಲಸಾಧ್ಯ. ಕೇವಲ ಒಬ್ಬ ಸಬ್ ಇನ್ಸ್ಪೆಕ್ಟರ್ಗೆ ಅಷ್ಟೊಂದು ದೊಡ್ಡ ನಿರ್ಣಯದ ಅಧಿಕಾರವಿತ್ತೆ ಎಂಬುದು ಒಂದು ದೊಡ್ಡ ಪ್ರಶ್ನೆ. ಇಂದಿರಾ ನಿವಾಸದ ಕರ್ತವ್ಯದ ಅವಕಾಶವನ್ನು ಗಿಟ್ಟಿಸಿಕೊಂಡ ಸತ್ವಂತ ಸಿಂಗ್, ತನ್ನ ನಿಕಟವರ್ತಿ ಬೆಅಂತ್ ಸಿಂಗನ ಪಕ್ಕದಲ್ಲೇ ಕರ್ತವ್ಯ ಸ್ಥಾನವನ್ನು ಗಿಟ್ಟಿಸಿಕೊಂಡದ್ದು ಮತ್ತೊಂದು ಆಶ್ಚರ್ಯಜನಕ ವಿಷಯ. ಒಂದು ಮೂಲದ ಪ್ರಕಾರ ಸತ್ವಂತ, ತನಗೆ ಹೊಟ್ಟೆ ಸರಿ ಇಲ್ಲದಿದ್ದು, ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾದ ಅವಶ್ಯಕತೆ ಇದೆ ಎಂದು ಬೇಡಿ, ಬೆಅಂತ್ ಸಿಂಗನ ಪಕ್ಕದ ಸ್ಥಾನವನ್ನು ಗಿಟ್ಟಿಸಿದ್ದ ಎಂಬುದು ಮತ್ತೊಂದು ಸೋಜಿಗದ ವಿಷಯ. ಇಬ್ಬರೂ ಹಂತಕರು ಪಕ್ಕ ಪಕ್ಕವೇ ಇರದಿದ್ದರೆ, ಉಳಿದ ಒಬ್ಬ ಹಂತಕನಿಗೆ ಹತ್ಯೆ ಮಾಡುವ ಧೈರ್ಯ ಇಲ್ಲದಿರುವ ಸಾಧ್ಯತೆ ಇತ್ತು. ಎದುರಿಗಿರುವ ಬೇರೊಬ್ಬ ಭದ್ರತಾ ಸಿಬ್ಬಂಧಿ ಮಧ್ಯ ಪ್ರವೇಶಿಸಿ, ಹತ್ಯೆಯನ್ನು ತಪ್ಪಿಸುವ ಪ್ರಯತ್ನಪಟ್ಟರೆ ಏನಾದಿತೂ ಎಂಬ ಅನುಮಾನ ಹಂತಕನ ಧೈರ್ಯವನ್ನು ಹತ್ತಿಕ್ಕುವ ಸಾಧ್ಯತೆ ಇರುತ್ತಿತ್ತು. ಒಟ್ಟಿನಲ್ಲಿ ಅಂದು ಸತ್ವಂತ ಸಿಂಗ್ ಗಿಟ್ಟಿಸಿಕೊಂಡ ಬದಲಾವಣೆಗಳು, ಅಂದಿನ ಪ್ರಧಾನಿ ಅವರ ಸಮೀಪದ ಭದ್ರತಾ ಜವಾಬ್ದಾರಿಯನ್ನು ಹೊತ್ತ ಭದ್ರತಾ ಸಂಸ್ಥೆಗಳು ಎಷ್ಟರ ಮಟ್ಟಿಗೆ ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದವು ಎಂಬುದಕ್ಕೆ ಸಾಕ್ಷಿ. ಭದ್ರತಾ ಸಂಸ್ಥೆಗಳ ಬೇಜವಾಬ್ದಾರಿತನವೇ ಇಂದಿರಾ ಗಾಂಧಿಯವರ ಹತ್ಯೆಗೆ ಕಾರಣವಾದದ್ದು ಮಾತ್ರ ದುರದೃಷ್ಟಕರ.
ಸ್ವತಂತ್ರ ಭಾರತದಲ್ಲಿ ಮೂರು ಭಾರೀ ಹತ್ಯೆಗಳು ನಡೆದಿವೆ. 1948ರ ಜನವರಿ 30ರಂದು ನಡೆದ ಮಹಾತ್ಮಾ ಗಾಂಧಿಯವರ ಹತ್ಯೆ, 1984ರ ಅಕ್ಟೋಬರ್ 31ರಂದು ನಡೆದ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ಮತ್ತು 1991ರ ಮೇ 21ರಂದು ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ, ಇವುಗಳ ನಡುವೆ ಇದ್ದ ಆಘಾತಕಾರಿ ಸಾಮ್ಯವೆಂದರೆ ಗುಪ್ತಚರ ಹಾಗೂ ಭದ್ರತಾ ಸಂಸ್ಥೆಗಳ ಬೇಜಾಬ್ದಾರಿತನ ಮತ್ತು ವೈಫಲ್ಯ. ಮೂರೂ ಹತ್ಯೆಗಳ ಖಚಿತ ಮುನ್ಸೂಚನೆ ಗುಪ್ತಚರ ಸಂಸ್ಥೆಗಳಿಗಿದ್ದರೂ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದದ್ದು, ಹಂತಕರ ಕುಕೃತ್ಯದ ಹಾದಿಯನ್ನು ಸುಗಮಗೊಳಿಸಿತ್ತು. ಮಹಾತ್ಮಾ ಗಾಂಧಿಯವರ ಜೀವದ ಮೇಲೆ ಏಳು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿದ್ದರೂ, ಎಚ್ಚರಗೊಳ್ಳದ ಭದ್ರತಾ ಸಂಸ್ಥೆಗಳೂ ಅವರ ಹತ್ಯೆಗೆ ಕಾರಣರೆಂದರೆ ತಪ್ಪಲ್ಲ. ಮಹಾತ್ಮಾ ಗಾಂಧಿಯವರ ಹತ್ಯೆಗೆ ಹತ್ತು ದಿನಗಳ ಮುಂಚೆ, ಅಂದರೆ 1948ರ ಜನವರಿ 20ರಂದು ಬಿರ್ಲಾರ ಮನೆಯಲ್ಲೇ, ಅವರ ಹತ್ಯೆಗೆ ಪ್ರಯತ್ನ ನಡೆದು ವಿಫಲವಾದಾಗ, ಅಂದು ಮದನಲಾಲ್ ಪಹ್ವಾ ಎಂಬುವರನ್ನು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಆತನ ಹೇಳಿಕೆಯ ಮೇರೆಗೆ ಮತ್ತೊಬ್ಬ ಸಹಚರನನ್ನು ಹುಡುಕುತ್ತಾ ಸಮೀಪದ ಹೋಟೆಲ್ ಒಂದರಲ್ಲಿ ಹುಡುಕಾಟ ನಡೆಸಿದಾಗ ನಾಥುರಾಮ್ ಗೋಡ್ಸೆಗೆ ಸೇರಿದ್ದು ಎನ್ನಲಾದ ಅಂಗಿಯೊಂದು ದೊರಕ್ಕಿದ್ದರೂ, ಅವನನ್ನು ಬಂಧಿಸದಿದ್ದದ್ದು ತನಿಖಾ ದಳಗಳ ವೈಫಲ್ಯವಲ್ಲದೆ ಮತ್ತೇನು?
ಸ್ವರ್ಣ ಮಂದಿರಕ್ಕೆ ಸೇನೆಯನ್ನು ಕಳುಹಿಸಿದ್ದು ಇಂದಿರಾ ಗಾಂಧಿಯವರ ಹತ್ಯೆಗೆ ಕಾರಣವಾದರೆ, ಶ್ರೀ ಲಂಕಾದಲ್ಲಿ ತಮಿಳ್ ಉಗ್ರರ ವಿರುದ್ಧ ಹೋರಾಡಲು ಭಾರತೀಯ ಸೇನೆಯನ್ನು ಕಳುಹಿಸಿದ್ದು ರಾಜೀವ್ ಗಾಂಧಿಯವರ ಹತ್ಯೆಗೆ ಕಾರಣವಾಗಿದ್ದು ಮಾತ್ರ ದೊಡ್ಡ ವಿಪರ್ಯಾಸವೇ ಸರಿ. ಆ ಕಾರಣಕ್ಕಾಗಿ ರಾಜೀವ್ ಗಾಂಧಿಯವರ ಮೇಲೆ ತೂಗುಗತ್ತಿ ನೇತಾಡುತ್ತಿದ್ದದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಡಿಸೆಂಬರ್ 1990ರ ಸಮಯದಲ್ಲೇ ರಾಜೀವ್ ಗಾಂಧಿ ಹತ್ಯೆಯ ಮುನ್ಸೂಚನೆಯನ್ನು ಪಿ.ಎಲ್.ಓ. ನಾಯಕ ಯಾಸೀರ್ ಅರಾಫತ್ ಪತ್ರದ ಮೂಲಕ ಭಾರತ ಸರಕಾರಕ್ಕೆ ರವಾನಿಸಿದ್ದು ಈಗ ಇತಿಹಾಸ. ಪ್ರಧಾನಿಯಾಗಿದ್ದವರೆಗೆ ರಾಜೀವ್ ಗಾಂಧಿ ಮತ್ತವರ ಕುಟುಂಬದವರಿಗೆ ಎಸ್.ಪಿ.ಜಿ.ಭದ್ರತೆ ಇತ್ತು. 1989ರ ಚುನಾವಣೆಯನಂತರ ತಮ್ಮ ಪ್ರಧಾನಿ ಹುದ್ದೆಯನ್ನು ಕಳೆದುಕೊಂಡ ರಾಜೀವ್ ಗಾಂಧಿ ಮತ್ತವರ ಕುಟುಂಬಕ್ಕೆ ಎಸ್.ಪಿ.ಜಿ.ಭದ್ರತೆ ತಪ್ಪಿದ್ದು, ಅವರ ಆಪ್ತರೂ ಮತ್ತು ಅವರ ಸಂಪುಟದಲ್ಲಿ ಆಂತರಿಕ ಭದ್ರತೆಯ ಸಚಿವರೂ ಆಗಿದ್ದ ಪಿ.ಚಿದಂಬರಂರವರಿಗೆ ತಿಳಿದಿತ್ತು. ರಾಜೀವ್ ಗಾಂಧಿಯವರ ಹತ್ಯೆಯಾದಾಗ, ಕಾಂಗ್ರೆಸ್ ಪಕ್ಷದ ಕೃಪೆಯಲ್ಲೇ ರಚನೆಗೊಂಡ ಚಂದ್ರಶೇಖರ್ ಸರಕಾರವಿತ್ತು. ಆ ಸರಕಾರದೊಂದಿಗೆ ಚಿದಂಬರಂ ಅವರಂತಹ ಚಾಣಾಕ್ಷರು ಮಾತನಾಡಿ ರಾಜೀವ್ ಗಾಂಧಿಯವರಿಗೆ ಎಸ್.ಪಿ.ಜಿ. ರಕ್ಷಣೆ ಮತ್ತೆ ದೊರೆಯುವಂತೆ ಮಾಡಬಹುದಿತ್ತು. ಹಾಗಾಗದಿದ್ದದ್ದೂ ರಾಜೀವ್ ಗಾಂಧಿಯವರ ಹತ್ಯೆಗೆ ಕಾರಣವಾಗಿದ್ದು ದುರದೃಷ್ಟಕರ.
ಈ ಮೂರೂ ಮಹಾನ್ ವ್ಯಕ್ತಿಗಳ ಹತ್ಯೆಯ ಸಂಚಿನ ಸಾಧಕ ಬಾಧಕಗಳ ಅಧ್ಯಯನವನ್ನು, ಎಲ್ಲಾ ಭದ್ರತಾ ಸಂಸ್ಥೆಗಳ ಅಧಿಕಾರಿಗಳ ತರಬೇತಿ ಸಮದಲ್ಲಿ ಕಡ್ಡಾಯಗೊಳಿಸಬೇಕಾದುದು ಸೂಕ್ತ. ಆದರೂ ಆ ರೀತಿಯ ಅಧ್ಯಯನ ಮತ್ತು ಚರ್ಚೆ, ಸಂಬಂಧ ಪಟ್ಟ ಅಧಿಕಾರಿಗಳ ತರಬೇತಿ ಸಮಯದಲ್ಲಿ ಆಗುತ್ತಿಲ್ಲವೆಂಬುದು ಹಲವು ಹಿರಿಯ ಅಧಿಕಾರಿಗಳ ಅಳಲು. ಈ ಮೂರು ಮಹಾನ್ ವ್ಯಕ್ತಿಗಳ ಹತ್ಯೆಯನಂತರುವೂ ಭಾರತದಲ್ಲಿ ಭಾರಿ ಅನಾಹುತಗಳು ನಡೆದಿಲ್ಲವೆಂದೇನಲ್ಲ. ಭಾರತ ಮತ್ತದರ ಎಲ್ಲಾ ಪ್ರಜೆಗಳು ಸದಾ ಸುರಕ್ಷಿತವಾಗಿರಲಿ ಎಂಬುದು ಎಲ್ಲರ ಆಶಯ.
ನವೆಂಬರ್ 19, 1917ರಂದು ಜನಿಸಿದ ಇಂದಿರಾ ಪ್ರಿಯದರ್ಶಿನಿ ಗಾಂಧಿಯವರು ಸುಮಾರು 16 ವರ್ಷಗಳ ಕಾಲ ಭಾರತದ ಪ್ರಧಾನ ಮಂತ್ರಿಯಾಗಿದ್ದರು. ಇಂದಿರಾ ಗಾಂಧಿಯವರು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್ ನೆಹರುರವರ ಏಕೈಕ ಪುತ್ರಿಯಾಗಿದ್ದರು. ಇಂದಿರಾ ಗಾಂಧಿಯವರು ಅವರನಂತರದ ಪ್ರಧಾನಿ ರಾಜೀವ್ ಗಾಂಧಿಯವರ ಮಾತೆಯವರೂ ಹೌದು.
ನೆಹರು ಅವರನಂತರ ಧೀರ್ಘಕಾಲ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು, ನೆಹರುರವರು ಜೀವಂತವಾಗಿದ್ದ ಕಾಲದಲ್ಲೇ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ನೆಹರುರವರು 1964ರಲ್ಲಿ ನಿಧನರಾದಾಗ, ಅವರನಂತರ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾದರು. ಶಾಸ್ತ್ರಿಯವರ ಸಂಪುಟದಲ್ಲಿ ಇಂದಿರಾ ಗಾಂಧಿ ವಾರ್ತಾ ಮತ್ತು ಪ್ರಸಾರ ಮಂತ್ರಿಯಾಗಿದ್ದರು. 1966ರಲ್ಲಿ ಶಾಸ್ತ್ರಿಯವರು ನಿಧನರಾದಾಗ, ಇಂದಿರಾ ಗಾಂಧಿಯವರು ನೂತನ ಪ್ರಧಾನಿಯಾಗಿ ಆಯ್ಕೆಗೊಂಡರು. 1966ರ ಅವಧಿಯಲ್ಲಿ ಭಾರತ ಸಾಧಿಸಿದ 'ಹಸಿರು ಕ್ರಾಂತಿ'ಯ ರೂವಾರಿ ಇಂದಿರಾ ಗಾಂಧಿಯವರಾಗಿದ್ದರು. ಆಹಾರದಲ್ಲಿ ಸ್ವಾವಲಂಬನೆಯನ್ನು ಭಾರತ ಸಾಧಿಸಿದ್ದು ಇಂದಿರಾ ಗಾಂಧಿಯವರ ಆಡಳಿತ ಕಾಲದಲ್ಲೇ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ.
ಭಾರತ ಸ್ವಾತಂತ್ರ್ಯ ಗಳಿಸಿದನಂತರ, ಸ್ವಾತಂತ್ರ್ಯ ಭಾರತದಡಿ ಸಿಖ್ಖರಿಗೊಂದು ಪ್ರತ್ಯೇಕ ರಾಜ್ಯ ಬೇಕೆಂಬುದು ಸಿಖ್ ಸಮುದಾಯದ ಪ್ರಮುಖ ಬೇಡಿಕೆಯಾಗಿತ್ತು. ನವೆಂಬರ್ 01, 1966ರಂದು ಸಿಖ್ಖರ ಪ್ರಾಬಲ್ಯವಿದ್ದ ನೂತನ ಪಂಜಾಬ್ ರಾಜ್ಯ ಉದಯವಾಗಿದ್ದಕ್ಕೆ ನಾಂದಿ ಹಾಡಿದವರೇ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು. ಅದೇ ಸಿಖ್ ಸಮುದಾಯದ ಪ್ರತ್ಯೇಕತೆಯ ಹೋರಾಟಕ್ಕೆ ಇಂದಿರಾ ಗಾಂಧಿಯವರೇ ಬಲಿಯಾದದ್ದು ಒಂದು ದೊಡ್ಡ ವಿಪರ್ಯಾಸ.
1967ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ಇಂದಿರಾಜಿಯವರು ಮತ್ತೆ ಪ್ರಧಾನಿಯಾದರು. ಸ್ವಂತ ಬಲದ ಮೇಲೆ ಪ್ರಧಾನಿಯಾಗಿದ್ದ ಅವರು ಹಲವು ದೃಢ ನಿರ್ಧಾರಗಳನ್ನು ತೆಗೆದುಕೊಂಡರು. ಅವುಗಳಲ್ಲಿ ಹದಿನಾಲ್ಕು ಬ್ಯಾಂಕುಗಳ ರಾಷ್ಟ್ರೀಕರಣವೂ ಒಂದು. ಪರಿಣಾಮಕಾರಿಯಾದ ಬ್ಯಾಂಕುಗಳ ರಾಷ್ಟ್ರೀಕರಣ, ಇಡೀ ರಾಷ್ಟ್ರದಲ್ಲಿ ಬ್ಯಾಂಕುಗಳ ಶಾಖಾಜಾಲದ ವಿಸ್ತರಣೆಗೆ ನಾಂದಿಯಾಗಿತ್ತು. ಬ್ಯಾಂಕ್ ಸೇವೆಯನ್ನು ಜನರ ಮನೆ ಬಾಗಿಲಿಗೆ ಕೊಂಡೊಯುವಲ್ಲಿ ಯಶಸ್ವಿಯಾದ ರಾಷ್ಟ್ರೀಕರಣದ ಪ್ರಕ್ರಿಯೆ, ಬಡತನ ನಿವಾರಣೆಗೆ ಕೂಡ ದೊಡ್ಡ ಕೊಡುಗೆಯನ್ನು ನೀಡಿತು.
1971ರ ಸಾರ್ವತ್ರಿಕ ಚುನಾವಣೆಯಲ್ಲಿ 'ಗರೀಬೀ ಹಠಾವೋ' ಎಂಬ ಘೋಷಣೆಯೊಂದಿಗೆ ಇಂದಿರಾ ಗಾಂಧಿಯವರು ಭಾರತದೇಶದ ಜನತೆಯ ಮುಂದೆ ಮತಗಳನ್ನು ಬೇಡಿದರು. ಅಭೂತಪೂರ್ವ ವಿಜಯ ಸಾಧಿಸಿದ ಅವರು ಮತ್ತೊಮ್ಮೆ ಪ್ರಧಾನಿಯಾದರು. ಅದೇ ವರ್ಷದಲ್ಲೇ ಇಂದಿರಾ ಗಾಂಧಿಯವರು ಪಾಕಿಸ್ತಾನದೊಂದಿಗೆ ಘೋರ ಯುದ್ಧವನ್ನು ಮಾಡಬೇಕಾಯಿತು. ಪಶ್ಚಿಮ ಬಂಗಾಳದ ಮಗ್ಗುಲ ಅಂದಿನ ಪೂರ್ವ ಪಾಕಿಸ್ತಾನದ ಸ್ವಾತಂತ್ರದ ಹೋರಾಟವನ್ನು ಬೆಂಬಲಿಸಿ ಪಾಕಿಸ್ತಾನದ ವಿರುದ್ಧ ಹೋರಾಡಿ ಜಯಗಳಿಸಿದ ಇಂದಿರಾಜಿಯವರು ಬಾಂಗ್ಲಾದೇಶದ ಉದಯಕ್ಕೆ ಕಾರಣರಾದರು.
ಚುನಾವಣಾ ಅಕ್ರಮದ ಮೊಕದ್ದಮೆಯೊಂದರಲ್ಲಿ ಕೋರ್ಟ್ ನೀಡಿದ ತೀರ್ಪಿನಿಂದ ತಮ್ಮ ಲೋಕ ಸಭಾ ಸದಸ್ಯತ್ವವನ್ನು ಕಳೆದುಕೊಂಡ ಇಂದಿರಾ ಗಾಂಧಿಯವರು, ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿ ತಮ್ಮ ಅಧಿಕಾರವನ್ನು ಮುಂದುವರೆಸಿದರು. ದೇಶದ ಎಲ್ಲಾ ಪ್ರಮುಖ ವಿರೋಧ ಪಕ್ಷದ ನಾಯಕರುಗಳನ್ನು ಜೈಲಿಗಟ್ಟಿದ ಅವರು, ಭಾರತೀಯರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದರು. ದುರಾಡಳಿತವೆಂಬ ಹಣೆಪಟ್ಟಿ ಹೊತ್ತ ಅವರು 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಯಿತು. ಹಾಗಾಗಿ 1977ರ ಚುನಾವಣೆಯನ್ನು ಸೋತ ಇಂದಿರಾ ಗಾಂಧಿ ತಮ್ಮ ಅಧಿಕಾರವನ್ನು ಕಳೆದುಕೊಂಡರು.
ಛಲಬಿಡದೆ ವಿರೋಧ ಪಕ್ಷದ ನಾಯಕಿಯಾಗಿ ಕೆಲಸ ಮಾಡಿದ ಇಂದಿರಾ ಗಾಂಧಿಯವರು, 1980ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಗೊಂಡರು. 1980ರಲ್ಲಿ ವಿಮಾನ ಅಪಘಾತವೊಂದರಲ್ಲಿ ತಮ್ಮ ಕಿರಿಯ ಪುತ್ರ ಸಂಜಯ್ ಗಾಂಧಿಯವರನ್ನು ಕಳೆದುಕೊಂಡ ಅವರು, ತಮ್ಮ ಹಿರಿಯ ಪುತ್ರ ರಾಜೀವ್ ಗಾಂಧಿಯವರನ್ನು ರಾಜಕೀಯಕ್ಕೆ ಕರೆತಂದರು. 1980ರಲ್ಲಿ ಆರಂಭವಾದ ಪ್ರತ್ಯೇಕವಾದಿ ಸಿಖ್ಖರ ಸಮರ ಇಂದಿರಾ ಗಾಂಧಿಯವರಿಗೆ ನುಂಗಲಾರದ ತುತ್ತಾಯಿತು. ಪಂಜಾಬಿನ ಅಮೃತ್ ಸರದ ಸ್ವರ್ಣ ಮಂದಿರವನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡ ಸಿಖ್ ಉಗ್ರರು ಪಂಜಾಬಿನಾದ್ಯಂತ ಕೊಲೆ, ಸುಲಿಗೆಗಳ ಅವಿರತ ಸರಣಿಯನ್ನೇ ನಡೆಸಿ, ಆಡಳಿತಾರೂಢರನ್ನು ಕಂಗೆಡಿಸಿದರು. ಅನ್ಯ ಮಾರ್ಗವಿಲ್ಲದೆ ಇಂದಿರಾ ಗಾಂಧಿಯವರು ಸ್ವರ್ಣ ಮಂದಿರವನ್ನು ಉಗ್ರರಿಂದ ವಿಮುಕ್ತಗೊಳಿಸಲು ಸೇನೆಯನ್ನು ಕಳುಹಿಸಬೇಕಾಗಿಬಂತು. 'ಆಪರೇಷನ್ ಬ್ಲೂ ಸ್ಟಾರ್' ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿ, ಉಗ್ರರಿಂದ ಸ್ವರ್ಣ ಮಂದಿರ ವಿಮುಕ್ತಗೊಂಡರೂ, ಸ್ವರ್ಣ ಮಂದಿರದ ಅತಿ ಮುಖ್ಯ ಮಂದಿರವಾದ 'ಅಕಾಲ್ ತಖ್ತ್'ಗೆ ಉಂಟಾದ ಹಾನಿ, ಸಮಸ್ತ ಸಿಖ್ ಸಮುದಾಯವನ್ನು ಕೆರಳಿಸಿತ್ತು. ಸೇನಾ ಕಾರ್ಯಾಚರಣೆ ನಡೆಸಿದ ಇಂದಿರಾ ಗಾಂಧಿಯವರ ಮೇಲೆ ಘೋರ ಪ್ರತೀಕಾರದ ಭಾವ ಸಮಸ್ತ ಸಿಖ್ ಸಮುದಾಯದ ಮನಗಳಲ್ಲಿ ಉಂಟಾಗಿತ್ತು. ಸೇನಾ ಕಾರ್ಯಾಚರಣೆ ನಡೆಸಿದ ಐದು ತಿಂಗಳುಗಳೊಳಗೆ ಇಂದಿರಾ ಗಾಂಧಿಯವರ ಹತ್ಯೆ ಅವರ ಸಿಖ್ ಅಂಗರಕ್ಷಕರಿಂದಲೇ ಆಗಿದ್ದು ಈಗ ಇತಿಹಾಸ.
ಬಡವರ ಮತ್ತು ಹಿಂದುಳಿದವರ ನಾಯಕಿಯಾಗಿ ತಮ್ಮನ್ನು ಗುರುತಿಸಿಕೊಂಡ ಇಂದಿರಾ ಗಾಂಧಿಯವರು ಇಂದಿಗೂ ಭಾರತೀಯರ ಮನೆಮಾನಸಗಳಲ್ಲಿ ಉಳಿದುಹೋಗಿದ್ದಾರೆ. ಇಂದಿರಾ ಗಾಂಧಿಯವರ ಕಾಲದ ಅಮೇರಿಕಾದ ಖ್ಯಾತ ರಾಜತಂತ್ರಜ್ಞ ಹೆನ್ರಿ ಕಿಸ್ಸಿಂಜರ್ ಇಂದಿರಾ ಗಾಂಧಿಯವರ ದಿಟ್ಟ ನಿರ್ಧಾರಗಳನ್ನು ಪ್ರಶಂಸಿಸುತ್ತಾ ಅವರನ್ನು 'ಐರನ್ ಲೇಡಿ, ಉಕ್ಕಿನ ಮಹಿಳೆ' ಎಂದು ಕರೆದಿದ್ದರು. 1999ರಲ್ಲಿ ಬಿ.ಬಿ.ಸಿ.ಸಂಸ್ಥೆ ನಡೆಸಿದ ಸಮೀಕ್ಷೆಯೊಂದರಲ್ಲಿ ಇಂದಿರಾ ಗಾಂಧಿಯವರನ್ನು 'ಸಹಸ್ರಮಾನದ ಮಹಿಳೆ' ಎಂದು ಆಯ್ಕೆಮಾಡಲಾಯಿತು.
-0-0-0-
No comments:
Post a Comment