Sunday, 2 March 2025

ರಾಮಾಯಣದ ರಹಸ್ಯಗಳು - ಹರಿಕಥೆ

ರಾಮಾಯಣದ ರಹಸ್ಯಗಳು - ಹರಿಕಥೆ  

ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮ ಸವಿನಯ ನಮಸ್ಕಾರಗಳು.  

'ರಾಮಾಯಣದ ರಹಸ್ಯಗಳು' ಎಂಬ ಇಂದಿನ ಹರಿಕಥೆಗೆ ತಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮ ಇಂದಿನ ಪ್ರಯತ್ನಕ್ಕೆ ತಮ್ಮಗಳ ಆಶೀರ್ವಾದ ಅತಿ ಮುಖ್ಯವಾದದ್ದು. 

ಹರಿಕಥೆಗೆ ಮೊದಲು ನಮ್ಮ ಸಂಗೀತ ಗುರುಗಳಾದ ಚೆನ್ನೈನ ಅಕ್ಕರೈ ಸಹೋದರಿಯರ ಮತ್ತು ನಮ್ಮ ಹರಿಕಥಾ ಗುರುಗಳಾದ ನಮ್ಮ ತಾತ ಲಕ್ಷ್ಮೀನಾರಾಯಣ ಅವರ ಆಶೀರ್ವಾದಗಳನ್ನು ಬೇಡುತ್ತೇವೆ.  

ಹರಿಕಥೆಯ ಶುಭಾರಂಭವನ್ನು ಶ್ರೀ ರಾಮನ ಸ್ಮರಣೆಯೊಂದಿಗೆ ಮಾಡೋಣ. 

ರಾಮ ರಾಮ ರಾಮ ಸೀತಾ ರಾಮ ಎನ್ನಿರೋ........ (ಪೂರ್ತಿ ಹಾಡು)

---------------------------------------------------------------------------

ಸಭಿಕರೆ...... 

ಕಳೆದ ಹತ್ತು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲಿ ನಮ್ಮ ಸನಾತನ ಧರ್ಮದ ಬಗ್ಗೆ ಹೆಚ್ಚು ಹೆಚ್ಚು ಒಲವು ಮೂಡುತ್ತಿರುವುದು ಸಂತೋಷದ ವಿಷಯ. ಈ ವರ್ಷದ ಆರಂಭದಲ್ಲಿ ಪ್ರಯಾಗ್ ರಾಜ್ನಲ್ಲಿ ನಡೆದ 'ಮಹಾ ಕುಂಭಮೇಳ'ದಲ್ಲಿ ೬೬ ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಂಗಳ ಸ್ನಾನದ ಪುಣ್ಯಯಾತ್ರೆಯನ್ನು ಮಾಡಿರುವುದು ಒಂದು ವಿಶ್ವ ದಾಖಲೆಯೇ ಸರಿ. 

ಸನಾತನ ಧರ್ಮ ಎಲ್ಲಿದೆ?

ಅದು ನಶಿಸಿ ಹೋಗುತ್ತಿದೆ....... ಎಂದು ಬೊಬ್ಬೆ ಹೊಡೆಯುತ್ತಿದ್ದವರ ಬಾಯನ್ನು ನಮ್ಮ ಮಹಾ ಕುಂಭಮೇಳದ ದಾಖಲೆ ಮುಚ್ಚಿಸಿದೆ. ಇಡೀ ವಿಶ್ವವೇ ನಮ್ಮ ಭಾರತ ದೇಶದ ಕಡೆ ತಿರುಗಿ ನೋಡಿ ಗೌರವದಿಂದ ನಮಿಸುವಂತೆ ಮಾಡಿದೆ. 

ನಮ್ಮ ಅಯೋಧ್ಯಯ ರಾಮ ಮಂದಿರ ಇಡೀ ವಿಶ್ವದ ಅತಿ ದೊಡ್ಡ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಿದೆ. ಕಳೆದ ವರ್ಷ, ಅಂದರೆ ೨೦೨೪ರಲ್ಲಿ, ಮುಸಲ್ಮಾನರ ಮೆಕ್ಕಾಕ್ಕೆ ೧.೪ ಕೋಟಿ ಜನ ಭೇಟಿ ನೀಡಿದ್ದಾರೆ. ಕ್ರಿಶ್ಚೆನರ ವ್ಯಟಿಕನ್ ಸಿಟಿಗೆ  ೮೦ ಲಕ್ಷ ಜನ ಭೇಟಿ ನೀಡಿದ್ದಾರೆ.  ನಮ್ಮ ಅಯೋಧ್ಯಗೆ ೧೬ ಕೋಟಿ ಜನ, ೨೦೨೪ರಲ್ಲಿ ಭೇಟಿ ನೀಡಿ ಶ್ರೀ ರಾಮನ ದರ್ಶನ ಪಡೆದಿದ್ದಾರೆ.  

ಎಲ್ಲಿಯ ೮೦ ಲಕ್ಷ?

ಎಲ್ಲಿಯೇ ೧ ಕೋಟಿ ೪೦ ಲಕ್ಷ?

ಎಲ್ಲಿಯ ೧೬ ಕೋಟಿ?

ನೀವೇ ಲೆಕ್ಕ ಹಾಕಿ ಶ್ರೋತೃಗಳೇ? 

ಸನಾತನ   ಧರ್ಮ ಕಿ  ______________ ಜೈ 

ಬೋಲೋ ಭಾರತ ಮಾತಾ ಕಿ._________ಜೈ 

ಶ್ರೀ ರಾಮಚಂದ್ರ ಕಿ __________________ಜೈ 

ಪವನ ಪುತ್ರ ಹನುಮಾನ ________________ ಜೈ 

________________________________________________________________________

ಇಂದಿನ ನಮ್ಮ ಹರಿಕಥಾ ವಿಷಯ ಬರೋಣ .  "ರಾಮಾಯಣದ ರಹಸ್ಯಗಳು", ಇಂದಿನ ನಮ್ಮ ಹರಿಕಥಾ ವಿಷಯ. 

ರಾಮಾಯಣ ನಿಮಗೆಲ್ಲರಿಗೂ ಚೆನ್ನಾಗೆ ಗೊತ್ತು. ಅಂತಹ ರಾಮಾಯಣದಲ್ಲಿ ರಹಸ್ಯಗಳು ಇರಬಹುದೇ? 

ಸಭಿಕರೆ, ಪ್ರಪಂಚದ ಎಲ್ಲ ಭಾಷೆಗಳಲ್ಲೂ ರಾಮಾಯಣ ಇದೆ. 

ಎಲ್ಲವುದಕ್ಕೂ ಮೂಲ ನಮ್ಮ ಸಂಸ್ಕೃತದ ವಾಲ್ಮೀಕಿ ರಾಮಾಯಣ. ಕನ್ನಡದಲ್ಲಿ ತೊರವೆ ರಾಮಾಯಣ, ತಮಿಳಿನಲ್ಲಿ ಕಂಬ ರಾಮಾಯಣ, ತೆಲುಗಿನಲ್ಲಿ ರಂಗನಾಥ ರಾಮಾಯಣ, ಮಲಯಾಳಂನಲ್ಲಿ ಅಧ್ಯಾತ್ಮ ರಾಮಾಯಣ, ಹಿಂದಿಯಲ್ಲಿ ತುಳಸಿ ರಾಮಾಯಣ, ಬೆಂಗಾಲಿಯಲ್ಲಿ ಕೃತ್ತಿವಾಸ ರಾಮಾಯಣ, ಮರಾಠಿಯಲ್ಲಿ ಏಕನಾಥರ  ರಾಮಾಯಣ, ಇಂಗ್ಲಿಷ್ನಲ್ಲಿ ಟಿ.ಎಚ್. ಗ್ರಿಫಿತ್ ರ ರಾಮಾಯಣ--------------- ಹೀಗೆ ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ರಾಮಾಯಣ ಇದೆ. 

ಹಾಗಾಗೇ 

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ

ಎಂದು ನಮ್ಮ ಕವಿ ಕುಮಾರ ವ್ಯಾಸ ಹಾಡಿದ್ದಾನೆ. 

ಬೇರೆ ಬೇರೆ ಕವಿಗಳು ಬೇರೆ ಬೇರೆ ಘಟನೆಗಳನ್ನು ಕಂಡು ತಮ್ಮ ರಾಮಾಯಣದಲ್ಲಿ ಬರೆದಿದ್ದಾರೆ. ಹಾಗಾಗಿ ಎಲ್ಲ ಘಟನೆಗಳ ಪರಿಚಯ ಎಲ್ಲಾ ಶ್ರೋತೃಗಳಿಗೂ ಇರುವುದಿಲ್ಲ. ನಮಗೆ ಪರಿಚಯವಿರದ ಘಟನೆಗಳೇ ನಮ್ಮ ಪಾಲಿಗೆ ರಹಸ್ಯಗಳು.  ಅಂತಹ ರಾಮಾಯಣದ ವಿವಿಧ ರಹಸ್ಯಗಳನ್ನು ತಮ್ಮ ಮುಂದೆ ಪ್ರಸ್ತುತಪಡಿಸುವುದೇ ಇಂದಿನ ಹರಿಕಥೆಯ ಉದ್ದೇಶ. 

ರಾಮಾಯಣ ಒಂದು ಚಿನ್ನದ ಗಣಿ. ಅದನ್ನು ಶೋಧಿಸುತ್ತಾ ಹೋದಷ್ಟೂ ನಮಗೆ ಹೊಸ ಹೊಸ ರತ್ನಗಳು ಅಂದರೆ ರಹಸ್ಯಗಳು ದೊರಕುತ್ತಾಹೋಗುತ್ತವೆ. 

--------------------------------------------------------------------------------------------------------

 ಶ್ರೋತೃಗಳೇ--------

ಅಂದ ಹಾಗೆ ರಾಮಾಯಣ ನಡೆದ್ದದ್ದು ಯಾವಾಗ? ಇದೇ ಒಂದು ದೊಡ್ಡ ರಹಸ್ಯದ ವಿಷಯ. ಆ ರಹಸ್ಯವನೀಗ ಪರಿಶೀಲಿಸೋಣ. 

ರಾಮನ ಜನನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯ ಮಧ್ಯಾನ್ಹ ೧ ಘಂಟೆಗಾಯ್ತು ಅಂತ ವಾಲ್ಮೀಕಿಗಳು ರಾಮಾಯಣದಲ್ಲಿ ಬರೆದಿದ್ದರೆ. ರಾಮನ ಜನ್ಮ ಕುಂಡಲಿಯನ್ನೇ ಬರೆದಿರುವ ವಾಲ್ಮೀಕಿಗಳು ರಾಮ ಜನನದ ಸಮಯದಲ್ಲಿದ್ದ ಗ್ರಹಕೂಟಗಳ ಸ್ಥಾನವನ್ನು ಬರೆದಿಟ್ಟಿದ್ದಾರೆ. ಇಂದಿನ ವಿಜ್ಞಾನಿಗಳು ತಮ್ಮ ಪ್ಲಾನೆಟ್ ಸಾಫ್ಟ್ವೇರ್ ನಲ್ಲಿ  ಶೋಧಿಸಿದಾಗ, ವಾಲ್ಮೀಕಿಗಳು ದಾಖಲಿಸಿರುವ ಗ್ರಹಸ್ಥಾನಗಳು ಕ್ರಿಸ್ತ ಪೂರ್ವ ೫೧೧೪ರ ಏಪ್ರಿಲ್ ೧೦ರಂದು ಇತ್ತು ಎಂದು ಒಪ್ಪಿಕೊಳ್ಳುತ್ತಾರೆ. ಕ್ರಿಸ್ತ ಪೂರ್ವದ ೫೦೦೦ ವರ್ಷ ಪ್ಲಸ್ ಕ್ರಿಸ್ತ ಶಕದ ಇಂದಿನ ೨೦೦೦ ವರ್ಷ……….ಅಂದರೆ ರಾಮಾಯಣ ನಡೆದದ್ದು ಇಂದಿಗೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ. 

ಆದರೂ ವಿತಂಡ ವಾದಿಗಳು ಇಷ್ಟೇ ಆಧಾರ ಸಾಲದು ಅಂತ ತಕರಾರು ಮಾಡ್ತಾರೆ. ಅಂತಹವರಿಗೆ ನಾನ್ ಹೇಳೋದೆನಂದ್ರೆ, ರಾಮ ಸೇತು ಎನ್ನೋದು ಈಗಲೂ ಇದೆ. ಅದು ಶಿಥಿಲವಾಗಿ ಸಾಕಷ್ಟು ಹಾಳಾಗಿರಬಹುದು. ಆದರೂ  ನಮ್ಮ ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ತುದಿಯವರೆಗೆ ಇರುವ ರಾಮಸೇತುವನ್ನು ಬ್ರಿಟಿಷರು ಆಡಮ್'ಸ್ ಬ್ರಿಡ್ಜ್ ಎಂದು ಕರೆದರು. ಕಾರ್ಬನ್ ಡೇಟಿಂಗ್ ಅನ್ನೋ ತಂತ್ರದ ಪ್ರಕಾರ ರಾಮಸೇತುಗೆ ೭೦೦೦ ವರ್ಷಗಳಾಗಿರಬಹುದು ಎಂಬುದನ್ನು ಇಂದಿನ ವಿಜ್ಞಾನಿಗಳು ಒಪ್ಪುತ್ತಾರೆ. ರಾಮಾಯಣ ನಡೆದ್ದದ್ದು ನಿಜ, ರಾಮಾವತಾರವಾಗಿದ್ದು ೭೦೦೦ ವರ್ಷಗಳ ಹಿಂದೆ ಎಂಬುದಕ್ಕೆ ರಾಮ ಸೇತು ಮತ್ತೊಂದು ಆಧಾರ. 

---------------------------------------------------------------------------------------------------

೭೦೦೦ ವರ್ಷದ ಹಿಂದೆ ನಮ್ಮನ್ನೆಲ್ಲಾ ಕಾಪಾಡಲು ಭೂಮಿಯ ಮೇಲೆ ಅವತರಿಸಿದ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರು  ಹೇಗೆ ಸ್ವಾಗತಿಸಿದರು ಎಂಬುದನ್ನು ಈಗ ಕೇಳೋಣ. 

ರಾ ರಾ ರಾಜೀವಲೋಚನಾ ರಾಮ-----------(ಪೂರ್ತಿ ಹಾಡು) 

------------------------------------------------------------------------------------------------------

ಇಡೀ ಪ್ರಪಂಚಕ್ಕೆ ಆದಿ ಕವಿ ವಾಲ್ಮೀಕಿಗಳು, ಆದಿ ಕಾವ್ಯ ಶ್ರೀಮದ್ರಾಮಾಯಣ. ಬೇಡರಾಗಿ ಜನಿಸಿದ ವಾಲ್ಮೀಕಿಗಳಿಗೆ ರಾಮಾಯಣ ಬರೆಯಲು ಪ್ರೇರಣೆ ದೊರೆತದ್ದು ಹೇಗೆ? ಇದು ರಾಮಾಯಣದ ಮತ್ತೊಂದು ರಹಸ್ಯ. 

ನಾರದರ ಬೋಧನೆಯಿಂದ ಜ್ಞಾನವನ್ನು ಪಡೆದು ಋಷಿಗಳಾದ ವಾಲ್ಮೀಕಿಗಳು ಒಂದು ಬೆಳಗ್ಗೆ ತಮ್ಮ ಪ್ರಿಯ ಶಿಷ್ಯ ಭರದ್ವಾಜನೊಡನೆ ಬೆಳಗಿನ ಮಂಗಳ ಸ್ನಾನಕ್ಕಾಗಿ ತಮಸಾ ನದಿಯ ದಡಕ್ಕೆ ತೆರಳುತ್ತಾರೆ. ಪೂರ್ವದಲ್ಲಿ ಸೂರ್ಯ ಉದಯಿಸುತ್ತ ಇರುವ ನೋಟ ಮನೋಹರವಾಗಿರುತ್ತೆ. ನದಿಯ ತೀರದಲ್ಲಿ ಎರಡು ಕ್ರೌನ್ಚ ಪಕ್ಷಿಗಳು (ಕ್ರೌನ್ಚ ಪಕ್ಷಿ ಎಂದರೆ ಕೆಂಪು ಕತ್ತುಳ್ಳ ಕೊಕ್ಕರೆ ಎಂದಿಟ್ಟುಕೊಳ್ಳಿ), ಅದರಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಪಕ್ಷಿಗಳು ಪ್ರಣಯದಲ್ಲಿ ತೊಡಗಿರುತ್ತವೆ. ಕವಿಹೃದಯದ ಕೋಮಲ ಮನಸ್ಸಿನ ವಾಲ್ಮೀಕಿಗಳು ಕ್ರೌನ್ಚ ಪಕ್ಷಿಗಳ ಪ್ರಣಯವನ್ನು ಬಹಳ ಕುತೂಹಲದಿಂದ ನೋಡುತ್ತಿರುತ್ತಾರೆ. ಆ ಸಮಯದಲ್ಲಿ ಇದ್ದಕಿದ್ದಂತೆ ದೂರದ ಮರದ ಮರೆಯಿಂದ ಬೇಡನೊಬ್ಬ ತೀಕ್ಷ್ಣವಾದ ಬಾಣವೊಂದನ್ನು ಗಂಡು ಕ್ರೌನ್ಚ ಪಕ್ಷಿಯ ಕೊರಳಿಗೆ ಗುರಿಯಿಟ್ಟು ಬಿಡುತ್ತಾನೆ. ಬಾಣ ಕೊರಳಿಗೆ ಬೀಳುತ್ತಲೇ, ಪಕ್ಷಿಯ ಕೊರಳು ತುಂಡಾಗಿ ಗಂಡು ಪಕ್ಷಿ ಸಾಯುತ್ತದೆ. ಸತ್ತ ಗಂಡು ಪಕ್ಷಿಯನ್ನು ನೋಡಿ ಹೆಣ್ಣು ಪಕ್ಷಿ ದುಃಖಿಸುತ್ತಾ ರೋದಿಸಲಾರಂಭಿಸುತ್ತದೆ. ಆ ದುಃಖದ ದೃಶ್ಯವನ್ನು ನೋಡಿ ವಾಲ್ಮೀಕಿಗಳ ಸಿಟ್ಟು ನೆತ್ತಿಗೇರಿರುತ್ತದೆ. ಕೋಪದಲ್ಲಿ ಅವರು ಬೇಡನಿಗೆ ಶಪಿಸುತ್ತಾ.----------

ಮಾ ನಿಷಾದ  ಪ್ರತಿಷ್ಠಾ ತ್ವ೦ 

ಅಗಮಃ ಶಾಶ್ವತೀ:  ಸಮಾ: 

ಯತ್ ಕ್ರೌನ್ಚಮಿಥುನಾದೇಕಂ   

ಅವಧೀ: ಕಾಮಮೋಹಿತಃ 

ಎಂದು ಜೋರಾಗಿ ಹೇಳುತ್ತಾರೆ. ವಾಲ್ಮೀಕಿಗಳ ಶಾಪದ ಅರ್ಥವೇನೆಂದರೆ, 'ಓ ಬೇಡ, ಪ್ರಣಯದಲ್ಲಿದ ಕ್ರೌನ್ಚ ಪಕ್ಷಿಯನ್ನು ಕೊಂದಿರುವ ನಿನಗೆ, ಜೀವನದಲ್ಲಿ ಶಾಂತಿ ಎನ್ನುವುದು ಎಂದೆಂದಿಗೂ ಇಲ್ಲದಿರಲಿ' ಎಂದು. 

ಕ್ರೌನ್ಚ ಪಕ್ಷಿಗಳ ಗೋಳನ್ನು ನೋಡಿ ಮನಕಲಕಿಹೋದ ವಾಲ್ಮೀಕಿಗಳು, ಮನಸ್ಸಿಲ್ಲದಿದ್ದರೂ ಸ್ನಾನವನ್ನು ಮಾಡಿ ತಮ್ಮ ನಿತ್ಯ ಕರ್ಮಗಳನ್ನು ಬೇಗನೆ ಮುಗಿಸಿ, ತಮ್ಮ ಶಿಷ್ಯ ಭರದ್ವಾಜನೊಡನೆ ತಮ್ಮ ಆಶ್ರಮವನ್ನು ಸೇರುತ್ತಾರೆ. ಅವರ ಮನಸಿನಲ್ಲಿ ಬೇರೆ ಬೇರೆ ರೀತಿಯ ಯೋಚನೆಗಳು ಹಾದು ಹೋಗುತ್ತಿರುತ್ತದೆ. "ಆ ಬೇಡನೇಕೆ ಕ್ರೌನ್ಚ ಪಕ್ಷಿಯನ್ನು ಕೊಂದ? ಸನ್ಯಾಸಿಯಾದ ನಾನೇಕೆ ಕೋಪಕ್ಕೊಳಗಾದೆ? ನಾನೇಕೆ ಆ ಬೇಡನನ್ನು ಶಪಿಸಿದೆ? ಸ್ವಲ್ಪ ಕಾಲದ ಹಿಂದೆ ತಾನೂ ಬೇಡನಾಗಿ, ಪ್ರಾಣಿಗಳ ಬೇಟೆಯನ್ನಾಡುತ್ತಿದ್ದೆನಲ್ಲವೇ? ಹೊಟ್ಟೆ ಪಾಡಿಗೆ ಬೇಟೆಯಾಡಿದ ಆ ಬೇಡನದೆನು ತಪ್ಪು?"

ಆ ಸಮಯದಲ್ಲಿ ವಾಲ್ಮೀಕಿಗಳ ಮುಂದೆ ಬ್ರಹ್ಮದೇವರು ಪ್ರತ್ಯಕ್ಷಗೊಳ್ಳುತ್ತಾರೆ. ವಾಲ್ಮೀಕಿಗಳನ್ನು ಸಂಭೋದಿಸುತ್ತಾ, 'ಓ ವಾಲ್ಮೀಕಿ, ಏಕೆ ದುಃಖದಿಂದ ಕುಳಿತಿರುವೆ? ಇಂದು ಬೆಳಗ್ಗೆ ನಿನ್ನ ಬಾಯಿಂದ ಅಯಾಚಿತವಾಗಿ, ಅಂದರೆ ತಾನೇ ತಾನಾಗಿ ಹೋರಾಟ ಶಬ್ದಗಳು ಬೇಡನಿಗಿತ್ತ ಶಾಪವಲ್ಲ, ಅದು ಶ್ರೀಮನ್ನಾರಾಯಣನ ಸ್ತುತಿ" ಎನ್ನುತ್ತಾರೆ. ಆಶ್ಚರ್ಯಗೊಂಡ  ವಾಲ್ಮೀಕಿಗಳು ಬ್ರಹ್ಮದೇವರಿಗೆ ವಂದಿಸಿ, 'ಬ್ರಹ್ಮದೇವರೇ, ಅದು ಹೇಗೆ ಶ್ರೀಮನ್ನಾರಾಯಣನ ಸ್ತುತಿಯಾಗುತ್ತದೆ?' ಎಂದು ಕೇಳುತ್ತಾರೆ. 

ಶ್ರೋತೃಗಳೇ ನೋಡಿ, ಸಂಸ್ಕೃತ ಭಾಷೆಯ ಆಪೂರ್ವ ಶಕ್ತಿಯೇ ಅಂತಹದ್ದು. ಒಂದೇ ಪದಕ್ಕೆ ಹಲವಾರು ಅರ್ಥಗಳು ಇಲ್ಲುಂಟು.  ಮಾ ನಿಷಾದ ಎಂದರೆ ಏನರ್ಥ? 'ಮಾ' ಅಂದರೆ  'ಆಗದಿರಲಿ' ಎಂದರ್ಥ. ನಿಷಾದ ಎಂದರೆ ಬೇಟೆಯಾಡುವ ಬೇಡ ಎಂದರ್ಥ. ಅದೇ ಪದಗಳಿಗೆ ಬೇರೆ ಅರ್ಥಗಳು ಉಂಟು. ಬ್ರಹ್ಮದೇವರು ವಾಲ್ಮೀಕಿಗಳಿಗೆ ವಿವರಿಸುತ್ತಾ, 'ಮಾ ಎಂದರೆ ಮಹಾತಾಯೀ ಲಕ್ಷ್ಮಿ ಎಂದರ್ಥ. ನಿಷಾದ ಎಂದರೆ ವಾಸಸ್ಥಾನ. ಲಕ್ಷ್ಮಿಯ ವಾಸಸ್ಥಾನ ಎಂದರೆ ಶ್ರೀಮನ್ನಾರಾಯಣ ಎಂದರ್ಥ. ಲಕ್ಷ್ಮಿ ವಾಸಸ್ಥಾನ ಶ್ರೀಮನ್ನಾರಾಯಣನ ಹೃದಯ ತಾನೇ? ಹಾಗಾಗಿ ನಿನ್ನ ಬೆಳಗಿನ ಮಾತುಗಳ ಅರ್ಥವೇ ಬೇರೆ. ಕಾಮಮೋಹಿತನಾದ ರಾವಣನನ್ನು ಕೊಂದು, ಲೋಕಕಲ್ಯಾಣವನ್ನು ಮಾಡಿರುವ ಶ್ರೀಮನ್ನಾರಾಯಣನೇ, ನಿನ್ನ ನಾಮವು ಬ್ರಹ್ಮಾ೦ಡದಲ್ಲಿ ಶಾಶ್ವತವಾಗಿ ಉಳಿಯಲಿ ಎಂದರ್ಥ. 

ವಾಲ್ಮೀಕಿ,  ನೀನಾಡಿದ ಮಾತುಗಳು ಬರಿ ಮಾತುಗಳಲ್ಲ, ಅದೊಂದು ಉತ್ತಮ ಛ೦ದಸ್ಸಿನಲ್ಲಿರುವ   ಶ್ಲೋಕ ನೋಡು. 

ಮಾ ನಿಷಾದ  ಪ್ರತಿಷ್ಠಾ ತ್ವ೦ 

ಅಗಮಃ ಶಾಶ್ವತೀ:  ಸಮಾ: 

ಯತ್ ಕ್ರೌನ್ಚಮಿಥುನಾದೇಕಂ   

ಅವಧೀ: ಕಾಮಮೋಹಿತಃ 

ನಿನ್ನ ಮಾತುಗಳಲ್ಲಿ ನಾಲ್ಕು ಸಾಲುಗಳಿವೆ.  ಪ್ರತಿ ಸಾಲಿನಲ್ಲೂ ಎಂಟು ಅಕ್ಷರಗಳಿವೆ. ಕಾವ್ಯಕ್ಕೆ ಇಂದೊಂದು ಸುಂದರ ಛಂದಸ್ಸು. ಇದನ್ನು ಇನ್ನು ಮುಂದೆ 'ಅನುಷ್ಟಪ್ ಛಂದಸ್ಸು' ಎಂದು ಕರೆಯೋಣ. ಇದೆ ಛಂದಸ್ಸಿನಲ್ಲಿ ವಾಲ್ಮೀಕಿ ನೀನು ಶ್ರೀಮದ್ರಾಮಯಣದ ಕಾವ್ಯವನ್ನು ರಚಿಸಿ ಲೋಕಕಲ್ಯಾಣವನ್ನುಂಟುಮಾಡು' ಎನ್ನುತ್ತಾರೆ ಬ್ರಹ್ಮದೇವರು. 

ಬ್ರಹ್ಮದೇವರಿಂದ ಹೊಸ ಪ್ರೇರೇಪಣೆಯನ್ನು ಪಡೆದ ವಾಲ್ಮೀಕಿಗಳು, ತಮ್ಮ ಬಾಯಿಂದ ಅಯಾಚಿತವಾಗಿ ಹೋರಾಟ ಅನುಷ್ಟಪ್ ಛಂದಸ್ಸಿನಲ್ಲೇ ರಾಮಾಯಣ ರಚನೆಯನ್ನು ಮಾಡಿರುವುದು ಈಗ ಇತಿಹಾಸ. ವಾಲ್ಮೀಕಿಗಳಿಂದ ರಚಿತವಾದ ಅನುಷ್ಟಪ್ ಛಂದಸ್ಸು ಈಗ ಇಡೀ ಸಂಸ್ಕೃತ ಕಾವ್ಯಲೋಕಕ್ಕೆ ಅಡಿಪಾಯವಾಗಿರುವುದೂ ಇತಿಹಾಸ. ಮುಂದೆ ಬಂದ  ವ್ಯಾಸರು ಮಹಾಭಾರತವನ್ನು ರಚಿಸಿದ್ದೂ ಅನುಷ್ಟಪ್ ಛಂದಸ್ಸಿನಲ್ಲೇ.

-------------------------------------------------------------------------------------------------

ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||

ಶ್ರೋತೃಗಳೇ, ನಾನೀಗ ಪಠಿಸಿದ್ದು ಗಾಯತ್ರಿ ಮಂತ್ರ. ರಾಮಾಯಣದ ಮಧ್ಯ ಗಾಯತ್ರಿ ಮಂತ್ರ ಏಕೆ ಬಂತು? ಗಾಯತ್ರಿ ಮಂತ್ರಕ್ಕೂ, ರಾಮಾಯಣಕ್ಕೂ ಏನು ಸಂಬಂಧ? ರಾಮಾಯಣ ಮುಂಚೆ ಬಂತೋ? ಅಥವಾ ಗಾಯತ್ರಿ ಮಂತ್ರ ಮುಂಚೆ ಬಂತೋ? ಎಂಬ ಅನುಮಾನಗಳು ನಿಮ್ಮಿಗಳನೀಗ ಕಾಡುತ್ತಿರಬಹುದು. 

ಗಾಯತ್ರಿ ಮಂತ್ರಕ್ಕೂ ರಾಮಾಯಣಕ್ಕೂ ಇರುವ ಸಂಬಂಧವೇ ರಾಮಾಯಣದ ಮತ್ತೊಂದು ರಹಸ್ಯ. 

ಗಾಯತ್ರಿ ಮಂತ್ರ ರಾಮಾಯಣಕ್ಕಿಂತ ಪ್ರಾಚೀನವಾದುದು. ಆತ್ಮಲಿಂಗವನ್ನು ಪ್ರಮೇಶ್ವರನಿಂದ ಪಡೆದುಕೊಂಡ ರಾವಣ, ಲಂಕೆಗೆ ಹಿಂತಿರುಗುವಾಗ ಗಾಯತ್ರಿ ಮಂತ್ರದ ಪಠಣದೊಂದಿಗೆ ಸಂಧ್ಯಾವಂದನೆಯನ್ನು ಮಾಡಿದ್ದನ್ನು ನಾವು ಕೇಳಿದ್ದೇವೆ. 

ಗಾಯತ್ರಿ ಮಂತ್ರದ ಅರ್ಥವೇನು?

ಗಾಯತ್ರಿ ಮಂತ್ರ ಪ್ರತ್ಯಕ್ಷ ದೈವ ಸೂರ್ಯನಾರಾಯಣನ ಪ್ರಾರ್ಥನೆ. ಮಹಾ ತೇಜಸ್ಸಿನಿಂದ ಕೂಡಿರುವ ಓ, ಸೂರ್ಯನಾರಾಯಣ, ನಿನ್ನ ತೇಜಸ್ಸು ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸಲಿ, ಚುರುಕುಗೊಳಿಸಲಿ, ಧಿಯೋ ಯೋ ನ: ಪ್ರಚೋದಯಾತ್ ಎಂದರ್ಥ. ಇಂದು ನಾವೆಲ್ಲರೂ ಪ್ರತಿದಿನ ಮಾಡುವ ಸೂರ್ಯನಾರಾಯಣನ ಸ್ಮರಣೆ. 

ಸಭಿಕರೆ, ನೋಡಿ ಗಾಯತ್ರಿ ಮಂತ್ರದ ಉದಾರ ಧ್ಯೇಯವನ್ನು! ನನ್ನ ಬುದ್ಧಿಯನ್ನು ಉದ್ದೀಪನಗೊಳಿಸು ಎನ್ನುವ ಸ್ವಾರ್ಥ ಅದರಲಿಲ್ಲ. ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸು, ಇಡೀ ಸಮಾಜವನ್ನೇ ಜಾಗೃತಗೊಳಿಸು ಎಂಬ ಉದಾರ ಧ್ಯೇಯ ಗಾಯತ್ರಿ ಮಂತ್ರದ್ದು.  

ತತ್ಸವಿತುರ್ವರೇಣ್ಯಂ------------------------------------------------------------------------------------------------

ಎಂಬಲ್ಲಿಂದ ಎಣಿಸಿದರೆ ಗಾಯತ್ರಿ ಮಂತ್ರದಲ್ಲಿ ೨೪ ಅಕ್ಷರಗಳಿವೆ.  ವಾಲ್ಮೀಕಿ ರಾಮಾಯಣದಲ್ಲಿ ೨೪೦೦೦ ಶ್ಲೋಕಗಳಿವೆ. ರಾಮಾಯಣದ ಮೊದಲ ಶ್ಲೋಕ ಯಾವುದು? 

ತಪ: ಸ್ವಾಧ್ಯಾಯ ನಿರತ೦
ತಪಸ್ವೀ ವಾಗ್ವಿದಾಂ ವರ೦
ನಾರದಂ ಪರಿಪಪ್ರಚ್ಛ 
ವಾಲ್ಮೀಕಿರ್ಮುನಿಪುಂಗವ೦

ರಾಮಾಯಣದ ಮೊದಲ ಶ್ಲೋಕದ ಮೊದಲ ಅಕ್ಷರ 'ತ'

ಹಾಗೆಯೇ ಹುಡುಕುತ್ತಹೋದರೆ ರಾಮಾಯಣದ ೧೦೦೧ನೇ ಶ್ಲೋಕದ ಮೊದಲ ಅಕ್ಷರ 'ತ್ಸ'. 

೨೦೦೧ನೇ ಶ್ಲೋಕದ ಮೊದಲ ಅಕ್ಷರ 'ವಿ'

ಹೀಗೆ ರಾಮಾಯಣದ ಪ್ರತಿ ಒಂದು ಸಾವಿರದ ಮೊದಲ ಶ್ಲೋಕದ ಮೊದಲ ಅಕ್ಷರಗಳನ್ನು ನಾವುಗಳು ಆರಿಸಿಕೊಳ್ಳುತ್ತಾಹೋದರೆ ನಮಗೆ ೨೪ ಅಕ್ಷರಗಳು ಸಿಕ್ಕುತ್ತವೆ. ಆ ೨೪ ಅಕ್ಷರಗಳನ್ನು ಅದೇ ಕ್ರಮದಲ್ಲಿ ಜೋಡಿಸಿ ನೋಡಿದರೆ ನಮಗೆ ಗಾಯತ್ರಿ ಮಂತ್ರ ದೊರಕ್ಕುತ್ತದೆ. ಹೀಗೆ ಗಾಯತ್ರಿ ಮಂತ್ರ ಎಂಬ ಅನರ್ಘ್ಯ ರತ್ನವನ್ನು ವಾಲ್ಮೀಕಿಗಳು  ತಮ್ಮ ರಾಮಾಯಣದಲ್ಲಿ ಅಡಗಿಸಿಟ್ಟಿದ್ದಾರೆ 

ಮೊದಲಕ್ಷರವನ್ನು ನಾವುಗಳು ಆರಿಸಿಕೊಂಡ ಆ ೨೪ ಶ್ಲೋಕಗಳನ್ನು ನಾವು ಪಠಿಸಿದರೆ ಅದೇ 'ಗಾಯತ್ರಿ ರಾಮಾಯಣ.'   ಗಾಯತ್ರಿ ರಾಮಾಯಣದ ೨೪ ಶ್ಲೋಕಗಳನ್ನು ನಾವು ಪಠಿಸಿದರೆ, ಇಡೀ ರಾಮಾಯಣವನ್ನು ಪಠಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವಾಲ್ಮೀಕಿಗಳು ನಮ್ಮೆಲ್ಲರಿಗೂ ತಿಳಿಸಿದ್ದಾರೆ. 

-------------------------------------------------------------------------------------------------------------------------

ರಾಮಾಯಣ ಪಠಿಸುವುದು ಜನಸಾಮಾನ್ಯರಿಗೆ ಕಷ್ಟ. ೨೪,೦೦೦ ಶ್ಲೋಕಗಳು. 

ಗಾಯತ್ರಿ ರಾಮಾಯಣವನ್ನು ಪಠಿಸುವುದೂ ಕಷ್ಟ. ೨೪ ಶ್ಲೋಕಗಳು, ಅದೂ ಸಂಸ್ಕೃತದಲ್ಲಿ. 

ಪುರಂದರ ದಾಸರು ನಮ್ಮಂತಹವರಿಗೆ ಹೇಳಿದ್ದಾರೆ. ೨೪,೦೦೦ ಶ್ಲೋಕವೂ ಬೇಡ, ೨೪ ಶ್ಲೋಕಗಳೂ ಬೇಡ, ನಾನು ಎರಡಕ್ಷರದ ಒಂದು ಮಂತ್ರ ಹೇಳಿಕೊಡುತ್ತೇನೆ, ಕಲಿತುಕೊಳ್ಳುವಿರಾ ಎಂದು ನಮ್ಮನ್ನು ಕೇಳಿದ್ದಾರೆ. ಯಾವುದು ಆ ಮಂತ್ರ? 

ರಾಮ ಮಂತ್ರವ ಜಪಿಸೋ, ಹೇ ಮನುಜ (ಪೂರ್ತಿ ಹಾಡು) 

------------------------------------------------------------------------------------------------------------------------

ರಾಮನಾಮದ ಮಹಿಮೆಯನ್ನು ಪುರಂದರದಾಸರು ಮತ್ತೊಂದು ದೇವರನಾಮದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. 'ರಾಮ, ರಾಮ' ಎಂದು ಉಚ್ಛರಿಸುವುದರಿಂದ ನಮ್ಮ ದೇಹಕ್ಕಾಗುವ ಪ್ರಯೋಜನಗಳೇನು? 

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು 
ಪಾಮರರು ತಾವೇನು ಬಲ್ಲಿರಯ್ಯ?

ಎಂದಿದ್ದಾರೆ ದಾಸರು. 

ರಾ ಎಂಬ ಉಚ್ಚಾರದಿಂದ ನಮ್ಮ ದೇಹಕ್ಕಾಗುವ ಒಳ್ಳೆಯ ಪರಿಣಾಮವೇನು? 

ರಾ ಎಂದ ಮಾತ್ರದೊಳು ರಕ್ತಮಾಂಸದಲ್ಲಿದ್ದ 
ಆಯಸ್ಥಿಗತವಾದ ಅತಿ ಪಾಪವನು 
ಮಾಯಾವನು ಮಾಡಿ ಮಹರಾಯ ಮುಕ್ತಿಯ ಕೊಡುವ 
ದಾಯವನು ವಾಲ್ಮೀಕಿ ಮುನಿ ತಾ ಬಲ್ಲ 

ರಾ ಎಂದು ಉಚ್ಛರಿಸಬೇಕಾದರೆ ಬಾಯನ್ನು ದೊಡ್ಡದಾಗಿ ತೆರೆಯಬೇಕಾಗುತ್ತದೆ. ಆಗ ನಮ್ಮೊಳಗಿದ್ದ ಸಕಲ ಪಾಪಗಳು ಹೊರಗೆ ಹೋಗಿಬಿಡುತ್ತವೆ. 

ಮ ಎಂದರೆ ಆಗುವ ಉಪಯೋಗಗಳೇನು? 

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು 
ಮತ್ತೆ ಒಳ ಪೊಗದಂತೆ ಕವಾಟವಾಗಿ 
ಚಿತ್ತಾಕಯವನ್ನೆಲ್ಲಾ ಪರಿಶುದ್ಧಮಾಡುವ ಪರಿಯ 
ಭಕ್ತವರ ಹನುಮಂತ ಒಬ್ಬ ತಾ ಬಲ್ಲ 

ಮ ಎಂದು ಉಚ್ಛರಿಸಬೇಕಾದರೆ ಎರಡೂ ತುಟಿಗಳನ್ನು ಮುಚ್ಚಬೇಕಾಗುತ್ತದೆ. ಆಗ ಹೊರಬಿದ್ದ ಪಾಪಗಳೆಲ್ಲಾ ಮತ್ತೆ ದೇಹವನ್ನು ಪ್ರವೇಶಿಸದಂತೆ ಕವಾಟವಾಗಿಬಿಡುತ್ತವೆ. ಹೀಗೆ ರಾಮ ನಾಮ ಮಂತ್ರ ನಮ್ಮ ದೇಹವನ್ನು, ಮನಸ್ಸನ್ನು ಶುದ್ಧಿಗೊಳಿಸುತ್ತದೆ. 

------------------------------------------------------------------------------------------------------------------------

ಕೃಷ್ಣನ ಬಾಲಲೀಲೆಯನ್ನು ನಾವು ವಿಶೇಷವಾಗಿ ಓದಿ ಆನಂದಿಸುತ್ತೇವೆ. ಯಶೋಧ ಕಂದನ ತುಂಟಾಟಗಳಿಗೆ ಇಡೀ ನಂದಗೋಕುಲವೇ ಬೆರಗಾಗಿತ್ತು. ಆದರೆ ನಮ್ಮ ರಾಮನ ಬಾಲಲೀಲೆಗಳನ್ನು ವಾಲ್ಮೀಕಿಗಳು ಅದೇಕೋ  ಅಷ್ಟಾಗಿ ವರ್ಣಿಸಿಲ್ಲ. ರಾಮ ಜನನವಾಗುತ್ತಲೇ ವಿಶ್ವಮಿತ್ರರು ಬಂದೆ ಬಿಡ್ತಾರೆ, ಯಜ್ಞ ರಕ್ಷಣೆಗೆಂದು ರಾಮ ಲಕ್ಷ್ಮಣರನ್ನು ಕರೆದುಕೊಂಡು ಹೋಗೇಬಿಡುತ್ತಾರೆ. ತಾಟಕಿ, ಸುಭಾಹುಗಳ ಸಂಹಾರವಾಗುತ್ತದೆ. ಅಲ್ಲಿಂದ ರಾಮನನ್ನು ವಿಶ್ವಮಿತ್ರರು ಜನಕನ ಮಿಥಿಲೆಗೆ  ಕರೆದುಕೊಂಡು ಹೋಗಿ, ರಾಮನಿಗೆ ಸೀತೆಯೊಂದಿಗೆ  ಮದುವೆ ಮಾಡ್ಸೆಬಿಡ್ತಾರೆ. ವಾಲ್ಮೀಕಿಗಳಿಗೆ ಅದೇಕೋ ರಾಮನಿಗೆ ಮದುವೆ ಮಾಡ್ಸೋ ಆತುರ. ನಮ್ಮ ಕುಟುಂಬಗಳಲ್ಲೂ ಮಕ್ಕಳ ಮದುವೆಗೆ ಆತುರಪಡೋ ಹಿರಿಯರ ಥರ ನಮ್ಮ ವಾಲ್ಮೀಕಿಯವರು.  

ಆದ್ರೆ ತುಳಸಿದಾಸರು ಹಾಗಲ್ಲ.  ಶ್ರೀ ರಾಮನ ಬಾಲಲೀಲೆಯನ್ನು ಸೊಗಸಾಗಿ ವರ್ಣಿಸಿದ್ದಾರೆ.  ದಶರಥನ ಅರಮನೆಯಲ್ಲಿ ಎರಡು ವರ್ಷದ ಬಾಲರಾಮ  ತಪ್ಪು ಹೆಜ್ಜೆಗಳನಿಡುತ್ತಾ ನಡೆಯುತ್ತಾ ಅಡ್ಡಾಡುತ್ತಿದ್ದರೆ ಅರಮನೆಯ ರಾಣಿಯರೆಲ್ಲಾ ಸುಸ್ತಾಗಿಬಿಡುತ್ತಿದ್ದರಂತೆ.  ತುಳಸಿ ದಾಸರು ಅದರ ವರ್ಣನೆಯನ್ನು ಹೇಗೆ ಮಾಡಿದ್ದಾರೆ ನೋಡೋಣ. 

ಠುಮಕ ಚಲತ ರಾಮಚಂದ್ರ  (ಪೂರ್ತಿ ಹಾಡು)

-----------------------------------------------------------------------------------------------------------------------

ರಾಮಯ್ಯ ರಾಮಭದ್ರಾಯ 
ರಾಮಚಂದ್ರಾಯ ವೇದಸೆ 
ರಘುನಾಥಾಯ ನಾಥಾಯ 
ಸೀತಾಯ ಪತೇಯೇನಮಃ 

ಇದು ದಶರಥನ ಅರಮನೆಯಲ್ಲಿ ಚಾಲ್ತಿಯಲ್ಲಿದಂತಹ ರಾಮನ ಬೇರೆ ಬೇರೆ ಹೆಸರುಗಳ ಶ್ಲೋಕ.  ರಾಮನನ್ನು 'ರಾಮಾ' ಎಂದು ಕರೆಯುತ್ತಿದ್ದವರು ದಶರಥ ಮಹಾರಾಜರು. ರಾಮಭದ್ರಾಯ - ಎಂದು ಕರೆಯುತ್ತಿದ್ದವರು ರಾಮನ ತಾಯೀ ಕೌಸಲ್ಯ. ರಾಮಭದ್ರ ಎಂದರೆ ರಾಮ ಎಲ್ಲರಿಗೂ ಮಂಗಳವನ್ನುಂಟುಮಾಡುವವನು ಎಂದರ್ಥ.  ರಾಮಚಂದ್ರಯ್ಯ--------! ರಾಮನನ್ನು ರಾಮಚಂದ್ರ ಎಂದು ಮೊದಲು ಕರೆದವರು ಯಾರು?  ಇದು ರಾಮಾಯಣದ ಮತ್ತೊಂದು ರಹಸ್ಯ. 

ಒಮ್ಮೆ ರಾಮ ಇನ್ನು ಮೂರು ವರ್ಷದ ಮಗುವಾಗಿದ್ದಾಗ, ಹುಣ್ಣಿಮ್ಮೆಯ ಒಂದು ದಿನ ನನಗೆ ಚಂದ್ರ ಬೇಕು, ನನಗೆ ಚಂದ್ರ ಬೇಕು ಅಂತ ರಚ್ಚೆ ಹಿಡಿದು ಅಳುವುದಕ್ಕೆ ಶುರುಮಾಡಿದ್ದನಂತೆ. ಮೂರು ಜನ ಮಹಾರಾಣಿಯರು ಮತ್ತು ಅರಮನೆಯ ಸಖಿಯರೆಲ್ಲ ರಾಮನನ್ನು ಸಮಾಧಾನಪಡಿಸಲಾಗದೆ ಕಂಗಾಲಾಗಿಹೋಗಿದ್ದರಂತೆ. ಆಗ ಜಾಣೆಯಾದ ಮಂಥರೆ ಬೋಗುಣಿಯೊಂದರಲ್ಲಿ ನೀರನ್ನು ತುಂಬಿ, ಆ ನೀರಿನಲ್ಲಿ ಚಂದ್ರನ ಪ್ರತಿಬಿಂಬವನ್ನು ರಾಮನಿಗೆ ತೋರಿಸಿ, ರಾಮಾ ನೋಡಿಲ್ಲಿ ಚಂದ್ರ, ರಾಮ..........,ಚಂದ್ರ......... ರಾಮಚಂದ್ರ ಎಂದು ರಾಮನನ್ನು ರಾಮಚಂದ್ರ ಎಂದು ಬಾಯ್ತುಂಬಾ ಮೊದಲ ಬಾರಿಗೆ ಕರೆದವಳು ಮಂಥರೆ.  ಚಂದ್ರ ಸಿಕ್ಕಿದ ಎಂದು ಹಿಗ್ಗಿಹೋದ ರಾಮ ಸಮಾಧಾನಗೊಂಡನಂತೆ. ರಾಮನನ್ನು ಸಮಾಧಾನಪಡಿಸಿದ  ಸಂತೋಷ ಹಾಗು ಹೆಮ್ಮೆಯಿಂದ ಮಂಥರೆ ಮಗು ರಾಮನನ್ನು ಎತ್ತಿಕೊಳ್ಳಲು ಹೋದಾಗ, ಮಹಾರಾಣಿ ಕೌಶಲ್ಯ ಅವಳನ್ನು ತಡೆದಳಂತೆ. "ವಕ್ರ ಹೆಂಗಸೇ, ವಿಕಾರವಾದವಳೇ" ಎಂದು ಕೌಸಲ್ಯೆ ಮಂಥರೆಯನ್ನು ಹಿಯ್ಯಾಳಿಸಿದಳಂತೆ. ಆ ಅವಮಾನದ ಸೇಡನ್ನು ಮನಸ್ಸಿನಲ್ಲೇ ಇಟ್ಟುಕೊಂಡ ಮಂಥರೆ ಸಮಯಕ್ಕಾಗಿ ಕಾದು, ರಾಮನನ್ನು ಕಾಡಿಗೆ ಕಳುಹಿಸಿವಂತೆ ಮಾಡಿದ್ದು ನಿಮಗೆಲ್ಲ ತಿಳಿದ ವಿಷಯವೇ. 

ಈ ಪ್ರಸಂಗ ಕನ್ನಡದ ಮಹಾಕವಿ ಕುವೆಂಪುರವರ ರಾಮಾಯಣದಲ್ಲಿ ಬರುತ್ತದೆ. ಮಂಥರೆಯ  'ಜಜ್ಜರಿತ ಮೈತ್ರಿ'ಯ ಪ್ರಸಂಗವನ್ನು ಕುವೆಂಪುರವರು ಸೊಗಸಾಗಿ ವರ್ಣಿಸಿದ್ದಾರೆ.  

ಹಾಗಂತ ನಾವು ಮಂಥರೆ-ಕೈಕಯೀಯರನ್ನು ಕೆಟ್ಟವರು ಅಂತ ಹೀಯಾಳಿಸಿದರೆ, ಅದು ತಪ್ಪು. ಮಂಥರೆ-ಕೈಕಯೀಯರು ಸಂಚು ಮಾಡದೇ ರಾಮನನ್ನು ಅಯೋಧ್ಯೆಯಲ್ಲೇ ಇರಿಸಿಕೊಂಡಿದ್ದಾರೆ, ರಾಮ ರಾಮ ಆಗ್ತಾನೇ ಇರಲಿಲ್ಲ. ರಾಮಾಯಣ ನಡೆಯುತ್ತಲೇ ಇರಲಿಲ್ಲ, ರಾವಣನ ಸಂಹಾರ ಆಗುತ್ತಲೇ ಇರಲಿಲ್ಲ. ಆದುದರಿಂದ ಮಂಥರೆ-ಕೈಕಯೀಯರು ಪ್ರಾತಃಸ್ಮರಣೀಯರು ಎಂದರೆ ತಪ್ಪಲ್ಲ.   

ಉತ್ತರದ ಅಯೋಧ್ಯಯಿಂದ ದಕ್ಷಿಣದ ರಾಮೇಶ್ವರಂವರೆಗೂ ಮೊದಲು ಪಾದಯಾತ್ರೆಯನ್ನು ಮಾಡಿ ಸಮಸ್ತ ಭಾರತವನ್ನು ಒಗ್ಗೂಡಿಸಿದ ಮಹಾನ್ ಶಕ್ತಿ ರಾಮ. ರಾಮನ ಭಾರತ ಯಾತ್ರೆಗೆ ಕಾರಣೀಭೂತಳು ಮಂಥರೆ.

ಸಭಿಕರೆ, ಹರಿಕಥೆ ಅಂದಮೇಲೆ ಒಂದು ಉಪಕಥೆ ಇರಲೇಬೇಕು. ಈಗ ಒಂದು ಉಪಕಥೆ ಪ್ರಜ್ಞಾಳಿಂದ.. 

ಶಿವಧನುಸ್ಸನ್ನು ಮುರಿದವರು ಯಾರು?

--------------------------------------------------------------------------------------------------------

ರಾಮನ ಬಾಲಲೀಲೆಗಳ ಸರಣಿಯನ್ನು ಮುಂದುವರೆಸುತ್ತಾ, ರಾಮನಿಗೆ ಬಾಲ್ಯ ಸ್ನೇಹಿತರು ಯಾರಾದರೂ ಇದ್ದಾರೆ ಎಂಬ ರಹಸ್ಯವನ್ನು ಪರಿಶೀಲಿಸೋಣ. ಕೃಷ್ಣನಿಗೋ ಇಡೀ ನಂದಗೋಕುಲದ ಭರ್ತಿ ಅವನಿಗೆ ಸ್ನೇಹಿತರು. ಮಕರಂದ, ಕುಚೇಲ ಇವರೆಲ್ಲಾ ಕೃಷ್ಣನ ಬಾಲ್ಯ ಸ್ನೇಹಿತರು.  ಜೊತೆಗೆ ರಾಧೆ ಎಂಬ ಗರ್ಲ್ ಫ್ರೆಂಡ್ ಬೇರೆ. ರಾಮನ ಬಾಲ್ಯ ಸ್ನೇಹಿತರು ಯಾರು?  ಇದೂ ಒಂದು ರಾಮಾಯಣದ ರಹಸ್ಯವೇ ಸರಿ. 

ಅವನೇ ಗುಹ, ಬೆಸ್ತರ ರಾಜ. ಗಂಗಾನದಿಯನ್ನು ದಾಟಲು ರಾಮನಿಗೆ ಸಹಾಯ ಮಾಡಿದ ಗುಹ ರಾಮನ ಬಾಲ್ಯ ಸ್ನೇಹಿತ.  ಈ ಮಾತನ್ನು ನಾನು ಹೇಳುತ್ತಿಲ್ಲ, ಸಾಕ್ಷಾತ್ ವಾಲ್ಮೀಕಿಗಳೇ ಹೇಳಿದ್ದಾರೆ. 

ತ್ರ ರಾಜ ಗುಹೋ ನಾಮ 

ರಾಮಸ್ಯಾತ್ಮಸಮ: ಸಖಾ 

ನಿಷಾದ ಜಾತ್ಯೋ ಬಲವಾನ್ 

ಸ್ಥಪತಿಶ್ಚೇತಿ ವಿಶ್ರುತಃ 

ರಾಮಸ್ಯಾತ್ಮಸಮ: ಸಖಾ-----------ಎಂದರೆ ರಾಮನ ಬಾಲ್ಯ ಸ್ನೇಹಿತ ಗುಹ ಎಂಬುದಾಗಿ ವಾಲ್ಮೀಕಿಗಳೇ ಹೇಳಿದ್ದಾರೆ. 

ಗಂಗಾ ನದಿಯನ್ನು ದಾಟಿಸಿದ ಗುಹನಿಗೆ ಎಷ್ಟು ದಕ್ಷಿಣೆಯನ್ನು ಕೊಡಬೇಕೆಂದು ರಾಮ ಕೇಳಿದಾಗ, ಗುಹ ಹೇಳಿದ್ದು ಒಂದೇ ಮಾತು.  ಗಂಗಾನದಿಯನ್ನು ನಾನು ನಿನಗೆ ದಾಟಿಸಿದ್ದೇನೆ, ಜೀವನವೆಂಬ ಭವಸಾಗರವನ್ನು, ರಾಮ ನನ್ನನ್ನು ನೀನು ದಾಟಿಸಬೇಕು ಎಂದು ಕೇಳಿಕೊಂಡಾಗ, ಬೆಸ್ತನಾದರೂ ಗುಹ ಎಷ್ಟು ಜ್ಞಾನಿಯಾಗಿದ್ದನೆಂಬುದು ನಮಗೆ ತಿಳಿಯುತ್ತದೆ. 

ಭವ ಸಾಗರವನ್ನು ದಾಟಿಸುವ ನಮ್ಮನ್ನು ರಕ್ಷಿಸಬಲ್ಲ ಏಕೈಕ ದೈವ ಶ್ರೀ ರಾಮ. ಅಂತಹ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರು ಹೇಗೆ ಪ್ರಾರ್ಥಿಸಿದ್ದಾರೆ ಎಂಬುದನ್ನು ಈಗ ಕೇಳೋಣ. 

ಬ್ರೋಚೇವಾರೆ ವರೂರ (ಪೂರ್ತಿ ಹಾಡು)

-------------------------------------------------------------------------------------------------------

ಗಂಗಾನದಿಯನ್ನು ದಾಟಿದ ಶ್ರೀರಾಮ ಮೊದಲು ಪ್ರವೇಶಿಸಿದ್ದು ಚಿತ್ರಕೂಟವೆಂಬ ಅರಣ್ಯವನ್ನು. ರಾಮ ಚಿತ್ರಕೂಟವನ್ನು ಪ್ರವೇಶಿಸುತ್ತಾಲೇ ಚಿತ್ರಕೂಟದ ದೇವಿಯನ್ನು ಶ್ರೀ ರಾಮ ಏನೆಂದು ಬೇಡಿಕೊಂಡನು ಎಂಬುದು ರಾಮಾಯಣದ ಮತ್ತೊಂದು ರಹಸ್ಯ. 

ಚಿತ್ರಕೂಟದ ಅರಣ್ಯವನ್ನು ಪ್ರವೇಶಿಸಿದ ರಾಮನಿಗೆ ಚಿತ್ರಕೂಟದ ವನದೇವಿ ನಮಿಸುತ್ತಾ, ರಾಮಾ, ನೀನು ಸೀತಾ ಲಕ್ಷ್ಮಣ ಸಮೇತ ನನ್ನ ಚಿತ್ರಕೂಟವನ್ನು ಪ್ರವೇಶಿಸಿದೀಯ, ಸುಸ್ವಾಗತ. ನಿನ್ನ ಸೇವೆಯಲ್ಲಿ ನಾನು ಏನು ಮಾಡಬಹುದು ಎಂದು ಕೇಳುತ್ತಾಳೆ. ಶ್ರೀ ರಾಮ 'ಚಿತ್ರಕೂಟದ ದೇವಿ, ನಿನಗೆ ವಂದನೆ.  ನಿನ್ನ ಅರಣ್ಯಕ್ಕೆ ನಾನು ನಡೆದು ಬಂದ ದಾರಿಯಲ್ಲಿ ಇರುವ ಕಲ್ಲು ಮುಳ್ಳುಗಳನೆಲ್ಲಾ ಇಲ್ಲದಂತೆ ಮಾಡು' ಎಂದು ಪ್ರಾರ್ಥಿಸುತ್ತಾನೆ.  ಆಶ್ಚರ್ಯಚಕಿತಳಾದ ವನದೇವತೆ, 'ರಾಮ, ನೀನು ಆ ದಾರಿಯನ್ನು ದಾಟಿ ಬಂದಾಯಿತಲ್ಲಾ, ಈಗೇಕೆ ಆ ದಾರಿಯಲ್ಲಿ ಕಲ್ಲು ಮುಳ್ಳುಗಳು ಇಲ್ಲದಂತೆ ಮಾಡಬೇಕು?' ಎಂದು ಕೇಳುತ್ತಾಳೆ. ರಾಮ ಉತ್ತರಿಸುತ್ತಾ 'ನಾನು ಬಂದಾಯಿತು, ಆದರೆ ನನ್ನ ತಮ್ಮ ಭರತ ನನ್ನನ್ನು ಹುಡುಕುತ್ತಾ ಇಲ್ಲಿಗೆ ಬರುತ್ತಾನೆ. ಅವನಿಗೆ ಕಲ್ಲು, ಮುಳ್ಳುಗಳು ಚುಚ್ಚದೆ ಇರಲಿ' ಎಂದು ಉತ್ತರಿಸುತ್ತಾನೆ. ಹಾಗೆ ಆಗಲಿ ಎಂದು ಅಭಯವನಿತ್ತ ವನದೇವತೆ ರಾಮನನ್ನು ಪ್ರಶ್ನಿಸುತ್ತಲೇ.... 'ರಾಮ, ನಿನ್ನ ತಮ್ಮ ಭರತ ಸೂರ್ಯ ವಂಶಿ. ವಜ್ರದಂತೆ ಅವನ ಶರೀರ ಭಾರಿ ಗಟ್ಟಿ. ನನ್ನ ಅರಣ್ಯದ ಕಲ್ಲು ಮುಳ್ಳುಗಳಿಗೆ ಅವನು ಅಂಜುವನೆ?' ಎಂದು ಕೇಳುತ್ತಾಳೆ. ರಾಮ ಉತ್ತರಿಸುತ್ತಾ....'ವನದೇವಿ, ನೀನು ಹೇಳುತ್ತಿರುವುದು ನಿಜ.  ವಜ್ರಕಾಯದ ಪರಾಕ್ರಮಿಯಾದ ನನ್ನ ತಮ್ಮ ಭರತನಿಗೆ ನಿನ್ನ ಅರಣ್ಯದ ಕಲ್ಲು ಮುಳ್ಳುಗಳು ಏನೂ ಮಾಡವು.  ಆದರೆ ಮುಳ್ಳುಗಳು ನನ್ನ ತಮ್ಮ ಭರತನ ಕಾಲಿಗೆ ಚುಚ್ಚಿದಾಗ, ನನ್ನ ಅಣ್ಣನಾದ ರಾಮನಿಗೆ ಈ ಮುಳ್ಳುಗಳು ಚುಚ್ಚಿದಾಗ ಅವನಿಗೆ ಎಷ್ಟು ನೋವಾಗಿತ್ತೋ' ಎಂದು ಯೋಚಿಸಿ ಬಹಳ ನೊಂದುಕೊಳ್ಳುತ್ತಾನೆ. ಅದಕ್ಕಾಗಿ ವನದೇವಿ ನಿನಗೆ ಈ ಪ್ರಾರ್ಥನೆ ಎಂದು ರಾಮ ವನದೇವಿಗೆ ತಿಳಿಸುತ್ತಾನೆ. 

ಈ ಘಟನೆಯಿಂದ ರಾಮನ ಭ್ರಾತೃಪ್ರೇಮ ಭರತನ ಮೇಲೆ ಎಷ್ಟಿತ್ತೆಂಬುದು ತಿಳಿಯುತ್ತದೆ. 

-------------------------------------------------------------------------------------------------------------

ಅಣ್ಣ ಶ್ರೀ ರಾಮನನ್ನು ಹುಡುಕುತ್ತಾ ಭರತ ಚಿತ್ರಕೂಟಕ್ಕೆ ಬರುತ್ತಾನೆ.  ದೂರದಿಂದಲೇ ಭರತ ಬರುತ್ತಿರುವುದನ್ನು ನೋಡಿ ಲಕ್ಷ್ಮಣನಿಗೆ ಅನುಮಾನದ ಭಾವವು ಮತ್ತು ಕ್ರೋಧವು ಬರುತ್ತದೆ. ಲಕ್ಷ್ಮಣನನಿಗೆ ತಿಳಿಹೇಳಿದ ರಾಮ, ಭರತನನ್ನು ಸ್ವಾಗತಿಸುತ್ತಾ ಅವನನ್ನು ಆಲಿಂಗಿಸಿಕೊಳ್ಳುತ್ತಾನೆ. ಮಾತೆಯಾದ ಕೈಕಯೀಗೆ ಮೊದಲು ವಂದಿಸಿದ ರಾಮ ಕೌಸಲ್ಯೆ ಸುಮಿತ್ರೆಯರಿಗೂ ನಮಿಸುತ್ತಾನೆ. 

ತಂದೆ ದಶರಥನ ಮರಣದ ಸುದ್ದಿಯನ್ನು ಕೇಳಿ ತತ್ತರಿಸಿಹೋದ ಶ್ರೀ ರಾಮ ಬಹಳ ದುಃಖವನ್ನು ಅನುಭವಿಸುತ್ತಾನೆ. ಎಚ್ಚರಗೊಂಡ ಶ್ರೀ ರಾಮ  ಭರತನಿಗೆ ಆಡಳಿತ ನೀತಿಯ ಉಪದೇಶವನ್ನು ಮಾಡುತ್ತಾನೆ. ಭರತನನ್ನು ಪ್ರಶ್ನಿಸುತ್ತಾ 

ಗುರು ಹಿರಿಯರನ್ನು, ಮಹಿಳೆಯರನ್ನು ಗೌರವದಿಂದ ಕಾಣುತ್ತಿರುವೆ ತಾನೇ?

ತಾಯಂದಿರ, ಮಕ್ಕಳ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವೆ ತಾನೇ?

ಯೋಗ್ಯರನ್ನು ಮಂತ್ರಿ ಮಾಡಿದ್ದೀಯಾ ತಾನೇ?

ಗಹನವಾದ ಸಮಸ್ಯೆಗಳನ್ನು ಮಂತ್ರಿಗಳೊಂದಿಗೆ ಚರ್ಚಿಸುತ್ತೀಯಾ ತಾನೇ?

ಮಹತ್ತರವಾದ ಯೋಜನೆಗಳಿಗೆ ತಡಮಾಡುತ್ತಿಲ್ಲ ತಾನೇ?

ಗೌಪ್ಯಾಯತೆಯನ್ನು ಕಾಪಾಡಿಕೊಳ್ಳುತ್ತಿದ್ದೀಯ ತಾನೇ?

ದಕ್ಷರು ನಿನ್ನ ಸೇನಾಧಿಪತಿಗಳಾಗಿದ್ದರೆ ತಾನೇ?

ಸೈನಿಕರಿಗೆ ಉಚಿತ ವೇತನ ನೀಡುತ್ತಿದ್ದೀಯ ತಾನೇ?

ಆದಾಯ ಹೆಚ್ಚಿದ್ದು, ಖರ್ಚು ಕಮ್ಮಿ ಇದೆ ತಾನೇ?

ಹೀಗೆ ಹಲವು ಪ್ರಶ್ನೆಗಳಿಂದ ಭರತನಿಗೆ ಆಡಳಿತ ನೀತಿಯನ್ನು ಶ್ರೀ ರಾಮ ಭೋದಿಸುತ್ತಾನೆ. ವಾಲ್ಮೀಕಿ ರಾಮಾಯಣದ ಆಡಳಿತ ನೀತಿಯೇ ಭಾರತದ ಸಂವಿಧಾನವನ್ನು ರಚಿಸಿದ ಡಾ. ಅಂಬೇಡ್ಕರ್ ಅವರಿಗೆ ಸ್ಪೂರ್ತಿ. ಹಾಗಾಗೇ ಅಂಬೇಡ್ಕರ್ ಅವರು ಭಾರತ ಸಂವಿಧಾನದ ಪುಟಗಳಲ್ಲಿ ರಾಮಾಯಣದ ಚಿತ್ರವನ್ನು ಅಳವಡಿಸಿದ್ದಾರೆ. ರಾಮಾಯಣದ ರಹಸ್ಯಗಳಲ್ಲಿ ಇದೂ ಒಂದು. ರಾಮ, ಲಕ್ಷ್ಮಣ, ಸೀತೆಯರು ಅಯೋಧ್ಯೆಗೆ ಮರಳುತ್ತಿರುವ ಚಿತ್ರ ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನದ ಒಂದು ಭಾಗವಾಗಿ ಇಂದಿಗೂ ರಾರಾಜಿಸುತ್ತಿದೆ. 

-------------------------------------------------------------------------------------------------------------

ರಾಮೋ ವಿಗ್ರಹವಾನ್ ಧರ್ಮ:

ಇಂದೊಂದು ರಾಮಾಯಣದ ಮೇರು ವಾಕ್ಯ. 'ರಾಮ ಧರ್ಮದ ಅಂದರೆ ಸನ್ನಡತೆಯ ಮೂರ್ತಿ ರೂಪ, rama is the very embodiment of dharma'  ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು ಎಂಬುದೇ ಒಂದು ದೊಡ್ಡ ರಹಸ್ಯ. 

ಶ್ರೋತೃಗಳೇ ನಿಮಗೆ ಆಶ್ಚರ್ಯವಾಗ ಬಹುದು. ಈ ಮಾತನ್ನು ಮಾರೀಚ ರಾವಣನಿಗೆ ಹೇಳಿದ್ದು. 

ರಾಮೋ ವಿಗ್ರಹವಾನ್ ಧರ್ಮ:

ಸಾಧುಹು ಸತ್ಯ ಪರಾಕ್ರಮಃ 

ರಾಜ ಸರ್ವಸ್ಯ ಲೋಕಸ್ಯ 

ದೇವಾನಿವ ವಾಸವಃ 

ಸೀತೆಯ ಅಪಹರಣದ ಸಂಚು ಮಾಡಿದ ರಾವಣ, ತನ್ನ ಮಾವ ಮಾರೀಚನ ಸಹಾಯಕ್ಕಾಗಿ ಆಗ್ರಹಿಸುತ್ತಾನೆ. ಸೀತೆಯ ಮುಂದೆ ಚಿನ್ನದ ಮಾಯಾಮೃಗವಾಗಿ ಕಾಣಿಸಿಕೊಳ್ಳುವಂತೆ ಆದೇಶಿಸುತ್ತಾನೆ. 

ವಿಶ್ವಾಮಿತ್ರ  ಯಾಗ ಸಂರಕ್ಷಣೆಯ ಸಮಯದಲ್ಲಿ, ರಾಮನ ಬಾಣದ ಹೊಡೆತಕ್ಕೆ ತತ್ತರಿಸಿ  ನೂರು ಯೋಜನ ಹಾರಿಬಿದ್ದ ಮಾರೀಚ ಈಗ ಸನ್ಯಾಸಿಯಾಗಿ ದಂಡಕಾರಣ್ಯದಲ್ಲಿ ತಪಸ್ಸನ್ನು ಮಾಡುತ್ತಿರುತ್ತಾನೆ. ದುಷ್ಟ ರಾವಣನ ಆಗ್ರಹವನ್ನು ಕೇಳಿ, ಮಾರೀಚ ರಾವಣನ ನ್ನು ಎಚ್ಚರಿಸುತ್ತಾ...... 'ರಾಮ ಧರ್ಮದ ಮೂರ್ತರೂಪ. ಅವನು ಮಹಾ ಪರಾಕ್ರಮಿ. ಅವನೊಂದಿಗಿನ ವೈರದಿಂದ ನೀನು ನಾಶವಾಗಿ ಹೋಗುತ್ತೀಯಾ, ಜೋಕೆ. ಸೀತೆಯನ್ನು ಅಪಹರಿಸುವ ಸಂಚು ಬೇಡ' ಎಂದು ಉಪದೇಶಿಸುತ್ತಾನೆ. ಕೋಪಗೊಂಡ ರಾವಣ 'ನನ್ನೊಡನೆ ಸಹಕರಿಸು, ಇಲ್ಲವೇ ಸಾಯಲು ಸಿದ್ಧನಾಗು' ಎಂದು ಮಾರೀಚನನ್ನು ಗದರಿಸುತ್ತಾನೆ. ಪರಿಸ್ಥಿತಿಯನ್ನು ಅರಿತುಕೊಂಡ ಮಾರೀಚ 'ರಾವಣ......  ನಿನ್ನೊಡನೆ ಸಹಕರಿಸದಿದ್ದರೆ ನಿನ್ನ ಕೈಯಿಂದ ಸಾಯುತ್ತೇನೆ.  ನಿನ್ನೊಡನೆ ಸಹಕರಿಸಿದರೆ ಸಾಕ್ಷಾತ್ ರಾಮನ ಕೈಯಲ್ಲಿ ಹತ್ಯೆಗೊಂಡು ಸ್ವರ್ಗವನ್ನು ಸೇರುತ್ತೇನೆ. ರಾಮನ ಕೈಯಲ್ಲಿ ಸಾಯುವುದೇ ಮೇಲೆ' ಎಂದು ರಾವಣನ ಸಂಚಿಗೆ ಒಪ್ಪಿಕೊಳ್ಳುತ್ತಾನೆ. 

-----------------------------------------------------------------------------------------------------------

ಸೀತೆಯನ್ನು ಕಳೆದುಕೊಂಡ ರಾಮ ಲಕ್ಷ್ಮಣರು, ಸೀತೆಯನ್ನು ಹುಡುಕುತ್ತಾ ಹನುಮನಂತನ ಭೇಟಿಯಾಗುತ್ತಾರೆ. ಹನುಮಂತನ ಮೂಲಕ ಸುಗ್ರೀವನೊಡನೆ ಸ್ನೇಹವಾಗುತ್ತದೆ. 

ಸೀತೆಯನ್ನು ಹುಡುಕಲು ಜಾಂಬವಂತರ  ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ ಸುಗ್ರೀವ, ಆ ತಂಡವನ್ನು ದಕ್ಷಿಣ ದಿಕ್ಕಿಗೆ ಕಳುಹಿಸುತ್ತಾನೆ. ಆ ತಂಡದಲ್ಲಿದ್ದ ನಮ್ಮ ಆಂಜನೇಯನ ಮೇಲೆ ಸಂಪೂರ್ಣ ಭರವಸೆ ಇದ್ದ ಶ್ರೀ ರಾಮ, ಅವನ ಕೈಗೆ ತನ್ನ ಮುದ್ರೆಯುಂಗುರವನ್ನು ನೀಡಿ ಸೀತೆಗೆ ಕೊಡುವಂತೆ ಆದೇಶಿಸುತ್ತಾನೆ. 

ಜಾಂಬವಂತರ ತಂಡ ದಕ್ಷಿಣದ ತುತ್ತುದಿಯ ಸಮುದ್ರದ ದಡಕ್ಕೆ ಬಂದು ನಿಲ್ಲುತ್ತದೆ. ಲಂಕಾ ಪಟ್ಟಣವನ್ನು ತಲುಪಲು ನೂರು ಯೋಜನಾ ಸಮುದ್ರವನ್ನು ಹಾರಬೇಕಾದಾಗ, ದಿಕ್ಕು ತೋಚದ ವಾನರ ತಂಡ ಪೆಚ್ಚಾಗಿ ಕುಳಿತುಕೊಳ್ಳುತ್ತದೆ. ಹನುಮಂತನು ಒಂದು ಮೂಲೆಯಲ್ಲಿ ಕುಳಿತುಕೊಂಡಿರುತ್ತಾನೆ. 

ಹನುಮಂತನ ಅಘಾದ ಶಕ್ತಿಯ ಅರಿವಿದ್ದ ಜಾಂಬವಂತರು, ಹನುಮಂತನೊಡನೆ ಮಾತನಾಡುತ್ತ...... 'ಹನುಮಂತ ನೀನು ವಾಯುಪುತ್ರ.  ಬಾಲ್ಯದಲ್ಲಿ ಸೂರ್ಯನನ್ನು ಹಿಡಿಯಲು ಆಕಾಶಕ್ಕೆ ಹಾರಿದ ಶಕ್ತಿವಂತ. ನೂರು ಯೋಜನಾ ಸಮುದ್ರವನ್ನು ಹಾರಿ ಲಂಕಾ ಪಟ್ಟಣವನ್ನು ತಲುಪುವುದು ನಿನಗೆ ಮಾತ್ರ ಸಾಧ್ಯ. ಎದ್ದೇಳು' ಎಂದು ಹುರಿದುಂಬಿಸಲು, ಸಮೀಪವ ಇದ್ದ  ಪರ್ವತವನ್ನು ಹತ್ತಿ ನಿಂತ ಹನುಮಂತ ಮುಗಿಲ್ಲೆತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಹನುಮಂತನ ವಿಶ್ವರೂಪವನ್ನು ನೋಡಿದ ವಾನರ ಸೇನೆ ಬೆರಗಾಗಿ ಹೋಗುತ್ತದೆ. ಮುಗಿಲ ಎತ್ತರದ ಹನುಮಂತ ಒಮ್ಮೆ ಘರ್ಜಿಸಿದಾಗ ಏನಾಯ್ತು?

ಘಟಿಕಾ ಚಲದಿ ನಿಂತ  (ಪೂರ್ತಿ ಹಾಡು)


-----------------------------------------------------------------------------------------------------------------------------

ಹನುಮಂತನ ಸಮುದ್ರ ಲಂಘನದ ಕಥೆ, (ಪ್ರಜ್ಞಳಿಂದ)

-----------------------------------------------------------------------------------------------------------------------------

ತುಳಸಿ ದಸರಾ ಹನುಮಾನ್ ಚಾಲೀಸಾದ ಆಯ್ದ ಅನುಪಲ್ಲವಿಗಳ ಗಾಯನ ಮತ್ತು  ಕಥೆ ಗೌರಿಯಿಂದ 

----------------------------------------------------------------------------------------------------------------------------

ರಾವಣನ ಮೇಲೆ ಯುದ್ಧ ಮಾಡಲು ಶ್ರೀ ರಾಮ ಸೇತುವೆಯನ್ನು ನಿರ್ಮಿಸಿ ಲಂಕಾ ಪಟ್ಟಣದ ಗಾಡಿಯನ್ನು ತಲುಪುತ್ತಾನೆ. ಆಗ ಶ್ರೀ ರಾಮನಿಗೆ ಯುದ್ಧದ ವಿಜಯಕ್ಕಾಗಿ ಯಾಗವೊಂದನ್ನು ಮಾಡುವ ಆಲೋಚನೆ ಬರುತ್ತದೆ.  ಆದರೆ ಅಂತಹ ಮಹಾಯಾಗವನ್ನು ನಡೆಸಲು ಸಮರ್ಥನಾದ ಪುರೋಹಿತನೊಬ್ಬ ಬೇಕಾಗಿರುತ್ತದೆ. ಆ ಮಹಾಯಾಗವನ್ನು ಶ್ರೀ ರಾಮ ಮಾಡಲು ಪುರೋಹಿತನಾಗಿ ಬಂದ ಆ ಮಹಾನ್ ವ್ಯಕ್ತಿ ಯಾರು ಎಂಬುದೇ ರಾಮಾಯಣದ ಮುಂದಿನ ರಹಸ್ಯ.  

ಮಹಾಯಾಗದ ಆಲೋಚನೆಯನ್ನು ಹಿರಿಯರಾದ ಜಾಂಬವಂತರಿಗೆ ತಿಳಿಸಿದ ಶ್ರೀ ರಾಮ, ಯಾಗವನ್ನು ನಡೆಸಿಕೊಡುವ ಶೈವರು, ವೈಷ್ಣವರೂ ಆದ ಪುರೋಹಿತರೊಬ್ಬರು ಇಲ್ಲಿ ಯಾರಿದ್ದಾರೆ ಎಂದು ಸಮಾಲೋಚಿಸುತ್ತಾನೆ. ಯೋಚಿಸಿದ ಜಾಂಬವಂತರು 'ಈ ಪ್ರದೇಶದಲ್ಲಿ ಅಂತಹ ವಿಜಯದ ಯಾಗವನ್ನು ನಡೆಸಿಕೊಡಬಲ್ಲ ಒಬ್ಬನೇ ಪುರೋಹಿತನಿದ್ದಾನೆ, ಅವನೇ ರಾವಣ. ಆದರೆ ತನ್ನ ಮೇಲಿನ ವಿಜಯದ ಯಾಗವನ್ನು ರಾವಣ ನಡೆಸಿಕೊಟ್ಟನೆಯೇ' ಎಂದು ಅನುಮಾನವನ್ನು ವ್ಯಕ್ತಪಡಿಸುತ್ತಾರೆ. ಎಲ್ಲವನ್ನು ತಿಳಿದ ರಾಮ ಜಾಂಬವಂತರಿಗೆ ರಾವಣನನ್ನು ಹೋಗಿ ಆಹ್ವಾನಿಸುವಂತೆ ಕೇಳಿಕೊಳ್ಳುತ್ತಾರೆ. 

ಜಾಂಬವಂತರ ಮುಖವನ್ನು ನೋಡೇ ರಾವಣನಿಗೆ ಎಲ್ಲಾ ಅರ್ಥವಾಗಿಹೋಗಿರುತ್ತದೆ. ಅಪ್ಪಟ ಬ್ರಾಹ್ಮಣನು ಮತ್ತು ಪುರೋಹಿತನು ಆದ ರಾವಣ 'ಪೌರೋಹಿತ್ಯಕ್ಕೆ ಆಹ್ವಾನ ಬಂದಲ್ಲಿ ನಿರಾಕರಿಸುವ ಪ್ರಶ್ನೆಯೇ ಇಲ್ಲ, ಬರುತ್ತೇನೆ' ಎಂದು ಒಪ್ಪಿಕೊಳ್ಳುತ್ತಾನೆ. 

ರಾಮನ ಯುದ್ಧವಿಜಯದ ಯಾಗದ ಪೌರೋಹಿತ್ಯವನ್ನು ವಹಿಸಿಕೊಂಡ ಮಹಾಬ್ರಾಹ್ಮಣ ರಾವಣನ್ನು ಕುರಿತಾದ ಲಾವಣಿಯೊಂದು ಹಿಂದಿ  ಬಾಷೆಯಲ್ಲಿದೆ. 

ಬನಾ ಪುರೋಹಿತ್ ರಾಮಚಂದ್ರಕಾ 
ಜಯ್ ಕಾ ವರ್ ವೊ ದೇ ಆಯಾ 
ಲಂಕಾ ವಿಜಯ್ ಕೆ ಹೇತು ರಾಮ ನೆ 
ಹವನ್  ಯಜ್ಞ ಹೈ ಕರವಾಯ 

ರಾಮಚಂದ್ರನ ಯುದ್ಧವಿಜಯದ ಯಜ್ಞಕ್ಕೆ ರಾವಣ ಪುರೋಹಿತನಾದ. 

ಜಾಂಬವಂತ ಸೆ ಬೋಲೇ ಭಗವನ್ 
ಕೋಯೀ ಪುರೋಹಿತ್ ಲೇ ಆವೋ 
ಹೊ ವಹ್ ಶೈವ್ ಔರ್ ವೈಷ್ಣವ್ 
ಐಸಾ ಪಂಡಿತ್ ಲೇ ಆವೋ 

ಜಾಂಬವಂತರಿಗೆ ರಾಮ ಹೇಳುತ್ತಾನೆ. 'ಯಜ್ಞಕ್ಕಾಗಿ ಸೂಕ್ತ ಪುರೋಹಿತನನ್ನು ಕರೆದುಕೊಂಡು ಬಾ. ಆ ಪುರೋಹಿತ ಶೈವನು ಆಗಿರಬೇಕು ಮತ್ತು ವೈಷ್ಣವನೂ ಆಗಿರಬೇಕು. ಜಾಂಬವಂತರು ಯೋಚಿಸಿ ಹೇಳುತ್ತಾರೆ.  ಆ ಪ್ರದೇಶದಲ್ಲಿ ಅಂತಹ ಪುರೋಹಿತನಾಗಿ ರಾವಣ ಮಾತ್ರ ಇದ್ದಾನೆ. ರಾವಣನನ್ನೇ ಕರೆದು ತರುತ್ತೇನೆ. 

ಜಾಂಬವಂತನ ಆಹ್ವಾನವನ್ನು ಒಪ್ಪಿದ ರಾವಣ 'ಕಾರ್ಯದ ಯಜಮಾನ ಕಷ್ಟದಲ್ಲಿದ್ದಾಗ ಅವನಿಗೆ ಬೇಕಾದ ಸಕಲ ಅನುಕೂಲಗಳನ್ನೂ ಮಾಡಿಕೊಡುವುದು ಪುರೋಹಿತನ ಕರ್ತವ್ಯ' ಎನ್ನುತ್ತಾನೆ. 

ಇಂದ್ರಜೀತ್ ಸೆ ಬೋಲಾ ರಾವಣ್ 
ಮಾ ಸೀತಾ ಕೋ ಪಹುಂಚವೋ 
ಬಿನ ಪತ್ನಿ ಕೆ ಯಜ್ಞ ನ ಹೊವೆ 
ಪೂರ್ಣ ಯಜ್ಞ ಹಾಯ್ ಕರವಾವೊ 

ಪತ್ನಿಯಿಲ್ಲದ ಯಾವ ಯಜ್ಞವೂ  ಫಲಿಸದು ಎಂದ ರಾವಣ, ತನ್ನ ಮಗ ಇಂದ್ರಜಿತನಿಗೆ ಸೀತೆಯನ್ನು ಯಜ್ಞ ಮಂಟಪಕ್ಕೆ ಕರೆತರುವಂತೆ ಆಜ್ಞಾಪಿಸುತ್ತಾನೆ. 


ಮಾ ಸೀತಾ ಕೆ ಸಾತ್ ರಾಮ ಕೋ 
ಯಜ್ಞ ಪೂರ್ಣ ಹೈ ಕರವಾಯ 

ಸೀತಾ ರಾಮ ದಂಪತಿಯನ್ನು ಕೂರಿಸಿ ಯಜ್ಞವನ್ನು ಸಾಂಗವಾಗಿ ನೆರವೇರಿಸಿಕೊಡುತ್ತಾನೆ ಪುರೋಹಿತ ರಾವಣ. 

ರಾಮಜಿ ಬೋಲೇ ರಾವಣ್ ಸೆ 
ದಕ್ಷಿಣಾ ಅಪನೀ ಬತಲವೋ 
ತ್ರಿಲೋಕ್ ಕಿ ಸಂಪದ ಮೇರೇ 
ಕ್ಯಾ ಮಾಂಗೂ ಭಗವನ್ ತುಂಸೇ 

ಧನ್ಯನಾದ ರಾಮ ರಾವಣನನ್ನು ತಮ್ಮ ದಕ್ಷಿಣೆ ಏನೆಂದು ಕೇಳುತ್ತಾನೆ. ತ್ರಿಲೋಕದ ಸಮಸ್ತ ಐಶ್ವರಿಯವೂ ತನ್ನದಾಗಿರುವಾಗ, ಭಗವಂತನಿಂದ ಏನು ದಕ್ಷಿಣೆಯನ್ನು ಬೇಡಲಿ ಎಂದು ರಾವಣ ಹೇಳುತ್ತಾನೆ.   

ಅಂತ ಸಮಯ್ ಮೇರೇ ಸಾಮನೆ ಹೊ ತುಮ 
ಯಹೀ ದಕ್ಷಿಣ ಹೊ ಮೇರಿ 

ಚೆನ್ನಾಗಿ ಯೋಚಿಸಿದ ರಾವಣ, ತನ್ನ ಅಂತ್ಯಕಾಲದಲ್ಲಿ ಹೇ ರಾಮ, ನಿನ್ನ ದರ್ಶನ ನನಗೆ ಕರುಣಿಸು ಎನ್ನುತ್ತಾನೆ. 

(ಇಲ್ಲಿರುವಷ್ಟು ಪದ್ಯಗಳನ್ನು ಹಾಡಿಕೊಂಡು ಅರ್ಥ ಹೇಳುತ್ತಹೋದರೆ ಸಾಕು. ಪೂರ್ತಿ ಹಾಡು ಬೇಡ) 

---------------------------------------------------------------------------------------------------------------------------

ರಾಮ ರಾವಣರ ಮಧ್ಯೆ ಘೋರ ಯುದ್ಧವಾಗುತ್ತದೆ. 

ವೀರಾವೇಶದಿಂದ ಹೋರಾಡಿದ ಲಕ್ಷ್ಮಣ ರಾವಣ ಪುತ್ರ ಇಂದ್ರಜಿತುವಿನ ಸಂಹಾರ ಮಾಡುತ್ತಾನೆ.  ಪುತ್ರ ಇಂದ್ರಜಿತುವಿನ ಹತ್ಯೆಯಿಂದ ರೋಷಗೊಂಡ ರಾವಣ, ರಾಮನ ಕಪಿ ಸೇನೆಯ ಮೇಲೆ 'ಮೂಲಬಲ'ವೆಂಬ ಎರಡು ಲಕ್ಷ ರಾಕ್ಷಸರ ಪಡೆಯ ಸೈನ್ಯದಿಂದ ದಾಳಿಮಾಡುತ್ತಾನೆ. ರಾವಣನ ಮೂಲಬಲದ ಹೋದತ್ತಕ್ಕೆ ತತ್ತರಿಸಿದ ಕಪಿಸೈನ್ಯ ದಿಕ್ಕಾಪಾಲಾಗಿ ಓಡಲಾರಂಭಿಸುತ್ತದೆ. ಕಪಿಸೈನ್ಯದ ರಕ್ಷಣೆಗಾಗಿ ಪಣತೊಟ್ಟ ಶ್ರೀ ರಾಮ, ರಾವಣ ಮೂಲಬಲದ ಮೇಲೆ ಗಂಧರ್ವಾಸ್ತ್ರವೆಂಬ ಸಮ್ಮೋಹಿನಿ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ಗಂಧರ್ವಾಸ್ತ್ರದ ಮೋದಿಯ ಫಲವಾಗಿ ಮೂಲಬಲದ ರಾಕ್ಷರಿಗೆ ಮಂಕುಹಿಡಿದಂತಾಗುತ್ತದೆ. ರಾಕ್ಷಸರಿಗೆ  ಎಲ್ಲೆಲ್ಲೂ ಶ್ರೀ ರಾಮನೇ  ಕಾಣುವಂತಾಗುತ್ತದೆ. ಪ್ರತಿಯೊಬ್ಬ ರಾಕ್ಷಸನಿಗೂ ಪಕ್ಕದ ರಾಕ್ಷಸನೇ ರಾಮನಂತೆ ಕಾಣಿಸುತ್ತದೆ. ಅದನ್ನೇ ಪುರಂದರ ದಾಸರು 'ಅವನಿಗೆ ಇವ ರಾಮ, ಇವನಿಗೆ ಅವ ರಾಮ' ಎಂದು ವರ್ಣಿಸಿದ್ದಾರೆ. ಸಂಮೋಹಕ್ಕೆ ಒಳಗಾದ ರಾಕ್ಷಸರು ತಮ್ಮ ತಮ್ಮೊಳಗೆ ಕಾದಾಡಿ ಮಡಿಯುತ್ತಾರೆ. ಹೀಗೆ ರಾವಣನ ಮೂಲಬಲ ಹಾಗೂ ಅವನ ಎರಡು ಲಕ್ಷ ರಾಕ್ಷಸರ ಪದೇ ನಿರ್ನಾಮಗೊಳ್ಳುತ್ತದೆ.  

ಈ ಯುದ್ಧದ ವರ್ಣನೆಯನ್ನು ಪುರಂದರ ದಾಸರು ತಮ್ಮ ದೇವರನಾಮದಲ್ಲಿ ಸೊಗಸಾಗಿ ಮಾಡಿದ್ದಾರೆ. 

ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ (ಪೂರ್ತಿ ಹಾಡು) 

-----------------------------------------------------------------------------------------------------------------------------
ಇಡೀ ರಾಮಾಯಣವನ್ನು ಗದ್ಯ ರೂಪದಲ್ಲಿ ಪ್ರಸ್ತುತಪಡಿಸಿದವರು ತಮಿಳ್ ನಾಡಿನ ಕವಿ ವೇದಾಂತ ದೇಶಿಕರ್ರವರು. ತಮಿಳ್ ನಾಡಿನ ತಿರುವಹಿಂದ್ರಾಪುರಂನ ಕೋದಂಡ ರಾಮನ ಪರಮ ಭಕ್ತರಾದ ವೇದಾಂತ ದೇಶಿಕರ್ ಅವರು ಕೋದಂಡ ರಾಮನ shauryaವನ್ನು ತಮ್ಮ ರಘುವೀರ ಗದ್ಯದಲ್ಲಿ ಪ್ರಸ್ತುತಪಡಿಸಿದ್ದಾರೆ. 

ರಾವಣನ ಸೇನಾಧಿಪತಿ ಪ್ರಹಸ್ತನ ಹತ್ಯೆಯಾನಂತರ ರಾವಣ ತಾನೇ ರಣರಂಗಕ್ಕೆ ಬರುತ್ತಾನೆ. ಲಕ್ಷ್ಮಣನ ಮೇಲೆ ಘೋರ ಯುದ್ಧವನ್ನಾಡಿದ ರಾವಣ, ಅಮೋಘವಾದ ಅಸ್ತ್ರವೊಂದನ್ನು ಪ್ರಯೋಗಿಸಿ ಲಕ್ಷ್ಮಣನನ್ನು ಮೂರ್ಚಿತನನ್ನಾಗಿ ಮಾಡುತ್ತಾನೆ.  ಯುದ್ಧದ ಪಾರಿತೋಷಕವೆಂದು ಲಕ್ಷ್ಮಣನ ಶರೀರವನ್ನು ರಾವಣ ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಾನೆ.  ಕೈಲಾಸವನ್ನು ಎತ್ತಿ ನಡುಗಿಸಿದ ರಾವಣನಿಗೆ, ಲಕ್ಷ್ಮಣನನ್ನು ಎತ್ತಲು ಆಗುವುದಿಲ್ಲ.  ಎಲ್ಲವನ್ನು ನೋಡುತ್ತಿದ್ದ ಹನುಮಂತ ರಾವಣನನ್ನು ಹಿಮ್ಮೆಟ್ಟಿಸಿ, ಲೀಲಾಜಾಲವಾಗಿ ಲಕ್ಷ್ಮಣನನ್ನು ಎತ್ತಿಕೊಂಡು ಹೋಗಿ ಸುರಕ್ಷಿತ ತಾಣಕ್ಕೆ ಕರೆದೊಯುತ್ತಾನೆ. 

ಹನುಮಂತ ಹಿಂತುರುಗಿ ರಣರಂಗಕ್ಕೆ ಬರುವ ಹೊತ್ತಿಗೆ ರಾಮ ರಾವಣರ ಯುದ್ಧವಾಗುತ್ತಿರುತ್ತದೆ. ರಾವಣ ರಥದ ಮೇಲಿದ್ದರೆ, ಶ್ರೀ ರಾಮ ಭೂಮಿಯ ಮೇಲೆ ನಿಂತಿರುತ್ತಾನೆ. ಮುನ್ನುಗ್ಗಿ ರಾಮನನ್ನು ತನ್ನ ಕುತ್ತಿಗೆಯ ಮೇಲೇರಿಸಿಕೊಂಡ ಹನುಮಂತ, ರಾಮನ ಬಲವನ್ನು ಹೆಚ್ಚಿಸುತ್ತಾನೆ. ವೀರಾವೇಶದಿಂದ ಹೋರಾಡಿದ ರಾಮನ ಬಾಣಗಳಿಗೆ ರಾವಣ ತತ್ತರಿಸಿ ಹೋಗುತ್ತಾನೆ, ನಿರಾಯುಧನಾಗಿ ಹೋಗುತ್ತಾನೆ.  ರಾವಣನ ಅಸಹಾಯಕ ಪರಿಸ್ಥಿತಿಯನ್ನು ಕಂಡ ರಾಮ, 'ರಾವಣ, ನೀನು ಸೋತು ನಿರಾಯುಧನಾಗಿದ್ದೀಯ. ಇಂತಹ ಪರಿಸ್ಥಿತಿಯಲ್ಲಿ ನಾನು ನಿನ್ನ ಹತ್ಯೆ ಮಾಡುವುದಿಲ್ಲ.  ಈಗ ನಿನ್ನ ಮನೆಗೆ ಹೋಗಿ ವಿಶ್ರಾಂತಿ ಪಡೆದುಕೋ. ನಾಳೆ ಮತ್ತೆ ಯುದ್ಧ ಮಾಡುವಿಯಂತೆ' ಎನ್ನುತ್ತಾನೆ. ವೀರ ರಾಮನ ಈ ಔದಾರ್ಯದ ಪ್ರಸಂಗವನ್ನು ರಘುವೀರ ಗದ್ಯದಲ್ಲಿ ವೇದಾಂತ ದೇಶಿಕರು ಹೇಗೆ ವರ್ಣಿಸಿದ್ದಾರೆ ಎಂಬುದನ್ನು ನೋಡೋಣ. 



ರಘುವೀರ ಗದ್ಯ ಗಾಯನ 


----------------------------------------------------------------------------------------------------------------------------

ಇಂದಿನ ರಾಮಾಯಣದ ರಹಸ್ಯಗಳು ಎಂಬ ಹರಿಕಥೆ ರಾಮಾಯಣವನ್ನು ಸ್ವಾರಸ್ಯಕರ ರೀತಿಯಲ್ಲಿ ಪ್ರಸ್ತುತಪಡಿಸುವ ಒಂದು ಹೊಸ ಪ್ರಯತ್ನ.  ನಮ್ಮ ಇಂದಿನ ಹರಿಕಥೆಯನ್ನು ಆಲಿಸಿ ಆಶೀರ್ವದಿಸ ತಮಗೆಲ್ಲಾ ನಮಸ್ಕಾರಗಳು.  ಶ್ರೀ ರಾಮನಿಗೆ ಒಂದು ಮಂಗಳವನ್ನು ಈಗ ಹಾಡೋಣ. 







 







No comments:

Post a Comment