೧
ದೀಪ ಬೆಳಗೋಣ ಬನ್ನಿ
ಅಂದು ಮಾರ್ಚ್ ೨೨, ೨೦೨೦ರ ಭಾನುವಾರದ ಸಂಜೆ ೫ ಸಮೀಪಿಸುತ್ತಿರುವ ಸಮಯ . ರಸ್ತೆಯ ಎರಡೂ ಬದಿಯ ತಮ್ಮ-ತಮ್ಮ ಮನೆಗಳ ಮುಂದೆ ಜನಗಳು ನೆರೆದಿದ್ದರು . ಕೆಲವರು ತಮ್ಮ ಮನೆಯ ಮೇಲ್ಛಾವಣಿಯ ಮೇಲೂ ಹತ್ತಿ ನಿಂತಿದ್ದರು. ಅವರುಗಳೀಗ ತಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕೋರಿಕೆಯನ್ನು ಪರಿಪಾಲಿಸಬೇಕಿತ್ತು. ಕೊರೋನಾ ಮಹಾಮಾರಿಯ ವಿರುದ್ಧದ ಸಮರದಲ್ಲಿ ಅವಿರತವಾಗಿ ಹೋರಾಡುತ್ತಿರುವ, ವೈದ್ಯಕೀಯ ಸಿಬ್ಬಂಧಿ, ಪೊಲೀಸರು, ಮಾಧ್ಯಮ ಮಿತ್ರರು, ಪೌರಕಾರ್ಮಿಕರು, ಅವಶ್ಯಕ ವಸ್ತುಗಳ ವಿತರಕರು, ಬ್ಯಾಂಕ್ ಕರ್ಮಚಾರಿಗಳು, ಅಂಚೆ ಕರ್ಮಚಾರಿಗಳು ಮುಂತಾದವರನ್ನೊಳಗೊಂಡ ಲಕ್ಷ-ಲಕ್ಷ 'ಕೊರೋನಾ ಸೇನಾನಿ'ಗಳನ್ನು, ಅಭಿನಂದಿಸಿ ಪ್ರೋತ್ಸಾಹಿಸುವ ಮಹಾಕಾರ್ಯ ಅವರುಗಳದಾಗಿತ್ತು.
ಸಂಜೆ ೫ರ ಸಮಕ್ಕೆ ಸರಿಯಾಗಿ, ನೆರೆದ ಜನಗಳೆಲ್ಲರೂ ತಾವುಗಳು ನಿಂತಲ್ಲಿಯೇ ಚಪ್ಪಾಳೆ ತಟ್ಟಲು ಆರಂಭಿಸಿದರು. ಗಂಟೆ, ಜಾಗಟೆಗಳೂ ಸದ್ದು ಮಾಡಿದವು. ಕೆಲವರಂತೂ ತಮ್ಮ ಮನೆಯ ಪಾತ್ರೆ, ತಟ್ಟೆಗಳನ್ನೇ ಬಡಿದು ಸಂಭ್ರಮಿಸಿದರು. ಶಂಖನಾದಗಳೂ ಮೊಳಗಲಾರಂಭಿಸಿದವು. ಆ ಬಡಾವಣೆಯ ಬಹು ಕಾಲದ ನಿವಾಸಿಯಾಗಿದ್ದ ಹಿರಿಯ ರಾಜುರವರು, ತಮ್ಮ ಸುತ್ತಲಿನ ಜನಗಳನ್ನು ಹುರಿದುಂಬಿಸುವುದರಲ್ಲಿ ನಿರತರಾಗಿದ್ದರು. ಸಮಾಜ ಶಾಸ್ತ್ರ ಸಂಶೋಧಕಿಯೂ, ಪ್ರಗತಿಪರ ಚಿಂತಕಳೂ ಆದ ರಾಜುರವರ ಪ್ರೀತಿಯ ಮಗಳು ರೋಹಿಣಿ ಕೂಡ ತಮ್ಮ ತಂದೆಯ ಕಾರ್ಯದಲ್ಲಿ ಕೈ ಜೋಡಿಸಿದ್ದಳು. ತಂತ್ರಜ್ಞಾನ-ಉತ್ಸಾಹಿಯಾಗಿದ್ದ ಅವಳು, ತನ್ನ ಐ-ಫೋನಿನ ಗಂಟಾನಾದವು ಬ್ಲೂಟೂಥ್ ಮುಖಾಂತರ ತನ್ನ ಸ್ಪೀಕರ್ ಗಳಲ್ಲಿ ಭೋರ್ಗರೆಯುವಂತೆ ಮಾಡಿದ್ದಳು. ಕೆಲವರು ತಮ್ಮ ಮೊಬೈಲ್ ಗಳ ಮುಖಾಂತರ ಕರತಾಡನದ ಈ ದೃಶ್ಯಗಳನ್ನು ಚಿತ್ರೀಕರಿಸುತಿದ್ದರು. ಆಬಾಲವೃದ್ಧರಾದಿಯಾಗಿ ರಸ್ತೆಯ ಎಲ್ಲರೂ ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕರತಾಡನದ ಕಲಾಪ ಸುಮಾರು ೧೫ ನಿಮಿಷಗಳವರೆಗೆ ನಡೆಯಿತು. ಉತ್ಸಾಹಿ ಹಿರಿಯ ರಾಜುವಿಗೆ, ತನ್ನ ರಸ್ತೆಯೇ ಕೊರೋನಾ ಸೇನಾನಿಗಳಿಗೆ ಚಪ್ಪಾಳೆಗಳ ಮೂಲಕ ಗೌರವವನ್ನು ಸಮರ್ಪಿಸುತ್ತಿರುವ 'ಪುಟ್ಟದೊಂದು ಭಾರತ'ದಂತೆ ಕಂಡಿತು.
ಮರುದಿನ ಸಾಮಾಜಿಕ ಜಾಲತಾಣಗಳಲ್ಲಿ , ಹಿರಿಯ ವೃದ್ಧೆಯಾದ ಪ್ರಧಾನಿ ಮೋದಿಯವರ ಪೂಜ್ಯ ಮಾತೆಯವರು, ಗುಜರಾತ್ ನ ಗಾಂಧಿನಗರದ ತಮ್ಮ ಮನೆಯ ಮುಂದೆ ತಟ್ಟೆ ಬಡಿದು ನಮ್ಮ ಕೊರೋನಾ ಸೇನಾನಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದ ವೀಡಿಯೊ ಜಗಜ್ಜಾಹೀರಾಗಿತ್ತು. ಈ ಚಿತ್ರಣ ಕುರಿತು ಪ್ರಧಾನಿ ಮೋದಿಯವರು ತಮ್ಮ ಟ್ವಿಟ್ಟರ್ನಲ್ಲಿ, 'ಹಿರಿಯರಾದ ತಮ್ಮ ಆಶೀರ್ವಾದಗಳಿಂದ ನಮ್ಮ ಕೊರೋನಾ ಕಾರ್ಯಕರ್ತರುಗಳಿಗೆ ಆನೆಯ ಬಲ ಬಂದಿದೆ,' ಎಂದು ಬರೆದಿದ್ದರು. ಈ ಎರಡೂ ದೃಶ್ಯಗಳನ್ನು ತಮ್ಮ ಮಗಳು ರೋಹಿಣಿಯ ಗಮನಕ್ಕೆ ತರುವುದನ್ನು ರಾಜುರವರು ಮರೆಯಲಿಲ್ಲ. ರೋಹಿಣಿ ಕೂಡ ಎರಡೂ ದೃಶ್ಯಗಳನ್ನು ನೋಡಿ ತಲೆದೂಗಿದ್ದು, ತಂದೆಗೆ ಸಮಾಧಾನ ತಂದದ್ದು ಸುಳ್ಳಲ್ಲ.
ಅಂದಿನ ದಿನಪತ್ರಿಕೆಗಳ ತುಂಬಾ ದೇಶದ ವಿವಿಧ ಮೂಲೆಗಳಲ್ಲಿ ಉತ್ಸಾಹಿ ಜನತೆ ನಮ್ಮಕೊರೋನಾ ಸೇನಾನಿಗಳಿಗೆ ಕರತಾಡನ ಮಾಡಿ ಧನ್ಯವಾದಗಳನ್ನರ್ಪಿಸಿದ ಚಿತ್ರಗಳೇ ತುಂಬಿದ್ದವು. ನಾವು ಯಾರಿಗೂ ಕಮ್ಮಿಯಿಲ್ಲವೆನ್ನುವಂತೆ ರಾಜಕಾರಣಿಗಳು, ಚಲನ ಚಿತ್ರ ಗಣ್ಯರು, ಕ್ರೀಡಾಪಟುಗಳು, ಮುಂತಾದವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾದ ದೃಶ್ಯಗಳು ಕೂಡ ಎಲ್ಲರ ಗಮನ ಸೆಳೆದಿದ್ದವು. ನಿಧಾನವಾಗಿ ಇಡೀ ದೇಶವನ್ನೇ ಆವರಿಸುತ್ತಿರುವ ಕೊರೋನಾ ವಿರುದ್ಧದ ಸಮರದಲ್ಲಿ ನಿರತರಾಗಿರುವ ನಮ್ಮ ಕಟ್ಟಾಳುಗಳನ್ನು ಕರತಾಡನದ ಮೂಲಕ ಜನಸಾಮಾನ್ಯರುಗಳು ಹುರಿದುಂಬಿಸಿದ ಚಿತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ನಿನ್ನೆಯ ಕರತಾಡನೆಯ ಕಾರ್ಯಕ್ರಮದಲ್ಲಿ ವಿರೋಧಾಭಾಸಗಳು ಇಲ್ಲದಿರಲಿಲ್ಲ. ಅಂತಹ ಅವಿವೇಕದ ದೃಶ್ಯಗಳನ್ನು ತನ್ನ ತಂದೆಗೆ ತೋರಿಸಿ ಛೇಡಿಸುತ್ತಾ ರೋಹಿಣಿ, 'ಅಪ್ಪ ಇಲ್ಲಿ ನೋಡಿ, ನಿಮ್ಮ ಜನಗಳಿಗೆ ಶಿಸ್ತು-ಸಂಯಮ ಎಲ್ಲಿದೆ? ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಗುಂಪುಗೂಡಿ, ಘೋಷಣೆಗಳನ್ನು ಕೂಗುತ್ತಾ, ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತಿದ್ದರಲ್ಲಾ! ಇದೇನು ಸಂಭ್ರಮಾಚರಣೆಯ ಸಂಧರ್ಭವೇ?' ಎಂದಿದ್ದಳು. ರಾಜುರವರು ಕೂಡ ಇದು ಸರಿಯಲ್ಲವೆಂದು ಗೋಣಾಡಿಸುವಂತಾಗಿತ್ತು.
ವಿಚಲಿತರಾದರು, ಬೇಗ ಸಮಸ್ಥಿತಿಗೆ ಮರಳಿದ ರಾಜುರವರು ತಮ್ಮ ಮಗಳಿಗೆ ಪರಿಸ್ಥಿತಿಯನ್ನು ವಿವರಿಸಲು ಸನ್ನದ್ಧರಾದರು. 'ಹೌದು, ಕೆಲವರು ೧೪ ಗಂಟೆಗಳ ಜನತಾ ಕರ್ಫ್ಯೂವಿನ ಗಾಂಭೀರ್ಯಕ್ಕೆ ಧಕ್ಕೆ ತರುವಂತೆ ವರ್ತಿಸಿರಬಹುದು. ಆದರೆ ಪ್ರಧಾನಿಯವರ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ದೇಶದ ಜನಗಳಿಂದ ದೊರೆತದ್ದು ಸುಳ್ಳಲ್ಲ. ದೇಶಾದ್ಯಂತ ನಾಗರಿಕರು ತಮ್ಮ ತಮ್ಮ ಮನೆಗಳ ಮುಂದೆ ನಿಂತು ಚಪ್ಪಾಳೆ ತಟ್ಟುತ್ತಾ, ತಮಟೆಗಳನ್ನು ಬಡಿಯುತ್ತಾ, ಶಂಖನಾದ ಮಾಡುತ್ತಾ, ಜಾಗಟೆಗಳನ್ನು ಬಡಿಯುತ್ತಾ, ಒಕ್ಕೊರಲಿನಲ್ಲಿ ನಮ್ಮ ಕೊರೋನಾ ಸೇನಾನಿಗಳಿಗೆ ಧನ್ಯವಾದಗಳನ್ನರ್ಪಿಸಿದ್ದು, ಏಕತೆಯ ಮತ್ತು ಧೃಢ ನಿಶ್ಚಯದ ಸಂಕೇತವೇ ಸರಿ,' ಎಂದು ರಾಜು ವಿವರಿಸಿದಾಗ, ಮಗಳು ರೋಹಿಣಿಯೇನು ಸಮ್ಮತಿಸಿದಂತೆ ತಲೆದೂಗಲಿಲ್ಲ.
ಸಾಮಾಜಿಕ ಜಾಲತಾಣಗಳನ್ನು ಕೆದಕುವಲ್ಲಿ ರೋಹಿಣಿ ಸಿದ್ಧಹಸ್ತೆ. ತಂದೆ ರಾಜುವಿಗೆ ಅತಿಪ್ರಿಯರಾದ, ಸಂಪೂರ್ಣ ಭಾರತ ಖ್ಯಾತಿಯ ಹಿರಿಯ ಚಿತ್ರನಟರೊಬ್ಬರ ಟ್ವೀಟೊಂದನ್ನು ಉಲ್ಲೇಖಿಸುತ್ತಾ, 'ಅಪ್ಪಾ, ಇಲ್ಲಿ ನೋಡಿ, ನಿಮಗೆ ಪ್ರಿಯರಾದ ಆ ಶ್ರೀಯುತರು ಏನು ಹೇಳಿದ್ದಾರೆ? ಚಪ್ಪಾಳೆ-ಶಂಖನಾದಗಳ ಭೋರ್ಗರೆತದಿಂದ ಉಂಟಾದ ಕಂಪನ, ಅಮಾವಾಸ್ಯೆ ದಿನವಾದ ಅಂದು, ಕೊರೋನಾ ವೈರಾಣುವಿನ ತೀವ್ರತೆಯನ್ನು ಕುಂದಿಸುವಲ್ಲಿ ಯಶಸ್ವಿಯಾಗಿದೆಯಂತೆ!' ಎಂಬ ವಾಕ್ಯವನ್ನು ತೋರಿಸಿ ನಕ್ಕಳು. ತನ್ನ ವಾದ ಸರಣಿಯನ್ನು ರೋಹಿಣಿ ಮುಂದುವರೆಸುತ್ತಾ, 'ಕೆಲವು ಸ್ವಘೋಷಿತ ಬುದ್ಧಿಜೀವಿಗಳ ಪ್ರಕಾರ, ಅಮಾವಾಸ್ಯೆ ದಿನವಾದ ಅಂದೇ, ಸಂಜೆ ೫ರ ಸಮಯಕ್ಕೆ ಕರತಾಡನದ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಪ್ರಧಾನಿಗಳಿಗೆ ಹಲವು ಜ್ಯೋತಿಷಿಗಳು ಸಲಹೆ ನೀಡಿದ್ದರಂತೆ. ವಾಟ್ಸಾಪ್ನಲ್ಲಿ ಹರಿದಾಡಿದ ಸುದ್ದಿಪ್ರವಾಹಗಳ ಪ್ರಕಾರ, "ನಾಸಾ"ದ ಉಪಗ್ರಹಗಳು ಅಂದಿನ ಕರತಾಡನದ ಸಮದಲ್ಲಿ ಭಾರತದಿಂದ ಕೊರೋನಾ ವೈರಾಣುಗಳು ಹಿಮ್ಮೆಟ್ಟುತ್ತಿರುವ ದೃಶ್ಯಗಳನ್ನು ಸೆರೆ ಹಿಡಿದಿವೆಯಂತೆ! ಇವೆಲ್ಲಾ ನಿಜವೆಂದು ನೀವೂ ನಂಬುವಿರಾ?' ಎಂದು ತಂದೆಯನ್ನು ಪ್ರಶ್ನಿಸಿದಳು. ಅವೆಲ್ಲಾ ಅತ್ತ್ಯುತ್ಸಾಹಿಗಳ ಕಪೋಲ ಕಲ್ಪಿತ ಮಿಥ್ಯೆಗಳೆಂದು ರಾಜುವಿಗೂ ತಿಳಿಯದೆ ಇರಲಿಲ್ಲ.
ಮಾಧ್ಯಮಗಳ ಒಳ ಹೊಕ್ಕ ರೋಹಿಣಿಯ ಶೋಧನೆ ಮುಂದುವರೆದಿತ್ತು. ಕೆಲವರಂತೂ ಮಾರ್ಚ್ ೨೨ರ ಜನತಾ ಕರ್ಫ್ಯೂವನ್ನು ನಾಟಕವೆಂದೇ ಬಣ್ಣಿಸಿದ್ದರು. 'ವೈರಾಣು ವಿರುದ್ಧ ಹೋರಾಡುವ ನಿರ್ಧಿಷ್ಟ ಮಾರ್ಗಗಳನ್ನು ಹುಡುಕುವುದನ್ನು ಬಿಟ್ಟು, ಮೋದಿಜಿ ಜನಗಳಿಗೆ ಚಪ್ಪಾಳೆ ತಟ್ಟಲು ಆದೇಶಿಸಿದರು,' ಎಂಬುದು ಮತ್ತೆ ಕೆಲವರ ಗೇಲಿಯಾಗಿತ್ತು. ಚಪ್ಪಾಳೆ ಕಾರ್ಯಕ್ರಮ ಪಾಶ್ಚಿಮಾತ್ಯ ರಾಷ್ಟ್ರಗಳ ನಕಲು ಎಂಬುದು ಹಲವು ಸುಶಿಕ್ಷಿತರ ಟೀಕೆಯಾಗಿತ್ತು. ದಕ್ಷಿಣ ಭಾರತದ ಖ್ಯಾತ ವೈದ್ಯರೊಬ್ಬರು ತಮ್ಮಬೇಡಿಕೆಗಳನ್ನು ಮುಂದಿಡುತ್ತಾ, 'ಮಾರ್ಚ್ ೨೨ರ ಸಂಜೆ ೫ಕ್ಕೆ ತಾವುಗಳು ನಮಗಾಗಿ ಹೊರಬಂದು ಚಪ್ಪಾಳೆ ತಟ್ಟುವುದು ಬೇಕಿಲ್ಲ. ಅದರ ಬದಲು "ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಲಿ, ಕೋವಿಡ್ ಗಾಗಿ ಮುಡಿಪಿಟ್ಟ ಆಸ್ಪತ್ರೆಗಳ ಸಂಖ್ಯೆ ಹೆಚ್ಚಲಿ, ಜೀವರಕ್ಷಕ ವೆಂಟಿಲೇಟರ್ ಗಳು ದೊರೆಯುವಂತಾಗಲಿ, ಕೋವಿಡ್ ಚಿಕಿತ್ಸೆಯ ಸಿಬ್ಬಂಧಿಗೆ ಹೆಚ್ಚು ರಕ್ಷಕ ಸಾಧನಗಳು ದೊರೆಯಲಿ, ಕೋವಿಡ್ನಿಂದ ದುಡಿಮೆಯಿಲ್ಲದೆ ಕುಳಿತಿರುವ ಬಡಬಗ್ಗರಿಗೆ ಆರ್ಥಿಕ ಸಹಾಯ ದೊರೆಯಲಿ," ಎಂದು ನಿಮ್ಮ ಪ್ರಧಾನಿಯನ್ನು ಆಗ್ರಹಿಸಿ' ಎಂದು ಜನಗಳಿಗೆ ಕರೆ ನೀಡಿದ್ದರು. ಪ್ರಜ್ಞಾವಂತ ವಲಯಗಳಲ್ಲಿ ಈ ರೀತಿಯ ವಿಚಾರ ಧಾರೆಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಪ್ರಗತಿಪರ ಚಿಂತಕಿಯಾದ ಮಗಳು ರೋಹಿಣಿಯ ವಿಚಾರ ಮಂಡನೆ, ರಾಜುರವರಿಗೂ ಮಂಕು ಬಡಿಸಿತ್ತು. ಓಲೈಕೆಯ ಮಾರ್ಗಕ್ಕೆ ಮುಂದಾದ ತಂದೆ ರಾಜು, 'ಮಗಳೆ, ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣಿಗಳು ಇರಬೇಕಾದದ್ದೆ. ಆದರೂ ಪ್ರಧಾನಿ ಮೋದಿಜಿಯವರ ಮಾರ್ಚ್ ೨೨ರ ಚಪ್ಪಾಳೆ ಕಾರ್ಯಕ್ರಮ ಇಡೀ ದೇಶದ ಜನತೆಗೆ ಕೊರೋನಾ ಹೆಮ್ಮಾರಿಯ ಬಗ್ಗೆ ಎಚ್ಚರಿಕೆ ಮೂಡಿಸಿದ್ದು ಸುಳ್ಳಲ್ಲ. ಮುಂಬರಲಿರುವ ಹಲವು ದಿನಗಳ ಎಡೆಬಿಡದ ಕರ್ಫ್ಯೂವಿಗೆ, ಜನತೆಯ ಮಾನಸಿಕತೆಯನ್ನು ಅಣಿಗೊಳಿಸುವ ಕೆಲಸ ಈ ಒಂದು ದಿನದ ಸ್ವಪ್ರೇರಿತ ಕರ್ಫ್ಯೂ ಮಾಡಿದೆ. "ವೈದ್ಯೋ ನಾರಾಯಣೋ ಹರಿಃ" ಎಂಬುದು ನಮ್ಮ ಸಂಸ್ಕೃತಿಯ ವಾಣಿ. ಅದೇ ವಾಣಿಯ ಅರ್ಥವನ್ನು ವಿಸ್ತರಿಸುತ್ತಾ, ನಮ್ಮ ಪ್ರಧಾನಿಯವರು, ನಮ್ಮೆಲ್ಲಾ ಕೊರೋನಾ ಸೇನಾನಿಗಳಿಗೆ ಕೃತಜ್ಞತೆಯನ್ನು ಸಮರ್ಪಿಸಲೆಂದು, ಅಂದಿನ ಚಪ್ಪಾಳೆ ಕಾರ್ಯಕ್ರಮಕ್ಕೆ ಕರೆ ನೀಡಿದ್ದರು' ಎಂದು ವಿವರಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
***
ಒಂದು ದಿನದ ಜನತಾ ಕರ್ಫ್ಯೂವಿನ ಕಾವು ಹೆಚ್ಚು ದಿನ ಉಳಿಯಲಿಲ್ಲ. ಹೆಮ್ಮಾರಿಯಂತೆ ಹರುಡುತಿದ್ದ ಕೋವಿಡ್ ಅನ್ನು ತಡೆಯುವುದು ಹೇಗೆಂಬುದೇ ಎಲ್ಲ ರಾಜ್ಯ ಸರ್ಕಾರಗಳಿಗೆ ದೊಡ್ಡ ತಲೆನೋವಾಗಿತ್ತು. ಕೋವಿಡ್ ಖಚಿತಗೊಂಡ ರೋಗಿಗಳಿದ್ದ ೮೨ ಜಿಲ್ಲೆಗಳನ್ನೊಳಗಂಡ ಆಯಾ ರಾಜ್ಯ ಸರಕಾರಗಳು, ಆಯಾ ಜಿಲ್ಲೆಗಳಲ್ಲಿ ಮಾರ್ಚ್ ೩೧ರವರೆಗಿನ 'ಲಾಕ್ ಡೌನ್ ' ಘೋಷಿಸಿದ್ದವು. ಹಲವು ರಾಜ್ಯಗಳು ಅಂತರ-ರಾಜ್ಯ ಬಸ್ ಸಂಚಾರಕ್ಕೂ ನಿರ್ಬಂಧ ಹೇರಿದ್ದವು . ಮೆಟ್ರೋ-ರೈಲು ಸಂಚಾರಕ್ಕೂ ನಿರ್ಬಂಧನೆ ಹೇರಬೇಕೆಂಬ ಯೋಚನೆ ಕೇಂದ್ರ ಸರ್ಕಾರದ್ದಾಗಿತ್ತು. ಇಡೀ ರಾಷ್ಟ್ರದಲ್ಲಿ ರೈಲುಗಳ ಸಂಚಾರವನ್ನು ನಿಲ್ಲಿಸುವ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು. ಇಷ್ಟು ನಿರ್ಬಂಧ ಸಾಲದೆಂಬದು ಸಾಮಾನ್ಯ ಜನತೆಗೂ ತಿಳಿದಿತ್ತು. ೭೦೦ಕ್ಕೂ ಹೆಚ್ಚು ಜಿಲ್ಲೆಗಳಿರುವ ಈ ಬೃಹತ್ ದೇಶದಲ್ಲಿ, ಕೇವಲ ೮೨ ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದು ಸಾಕೆ? ಎಂಬುದು ಹಲವರ ಪ್ರಶ್ನೆಯಾಗಿತ್ತು.
ಜನತಾ ಕರ್ಫ್ಯೂವಿನ ಯಶಸ್ಸಿಗೆ ದೇಶದ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಪ್ರಧಾನಿ ಮೋದಿಯರು ಇನ್ನೂ ದೀರ್ಘವಾದ ಹೋರಾಟದ ಎಚ್ಚರಿಕೆ ನೀಡಿದ್ದರು. 'ಇಂದಿನ ಜನತಾ ಕರ್ಫ್ಯೂವೇನೋ ಈ ರಾತ್ರಿಯ ೯ಕ್ಕೆ ಮುಕ್ತಯವಾಗಲಿದೆ. ಇದು ಸಂಭ್ರಮಿಸುವ ಸಮಯವಲ್ಲ. ಮುಂದಿದೆ ಸುಧೀರ್ಘ ಹೋರಾಟ. ಆ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂಬುದನ್ನು ದೇಶದ ಜನತೆ ಇಂದು ಸಾಬೀತು ಪಡಿಸಿದೆ' ಎಂದು ಮೋದಿಜಿ ಟ್ವೀಟಿಸಿದ್ದರು.
'ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಅನ್ನು ಕೂಡಲೇ ಜಾರಿಗೊಳಿಸಿ' ಎಂಬುದು ವೈದ್ಯಕೀಯ ವಿಶೇಷಜ್ಞರ ಅಭಿಮತವಾಗಿತ್ತು. 'ಚೀನಾಕ್ಕೆ ಮೊದಲು ಹರಡಿದ ಕೋವಿಡ್ ವೈರಾಣು, ನಂತರ ಯುರೋಪ್ ಮತ್ತು ಅಮೇರಿಕಾ ದೇಶಗಳಿಗೂ ಹಬ್ಬಿತು. ನಮ್ಮ ಸುದೈವವೋ ಏನೋ, ನಮ್ಮ ದೇಶಕ್ಕೆ ಕೋವಿಡ್ ತಡವಾಗಿ ಹಬ್ಬಿದೆ. ಕಠಿಣ ಕ್ರಮಗಳನ್ನು ಶೀಘ್ರವಾಗಿ ಜಾರಿಗೊಳಿಸಿದ ಚೀನಾ, ಕೋವಿಡ್ ಮೇಲೆ ಅತ್ಯಂತ ಬೇಗ ನಿಯಂತ್ರಣವನ್ನು ಸಾಧಿಸಿತು. ಆ ರೀತಿಯ ಕಠಿಣ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಯುರೋಪ್ ಹಾಗೂ ಅಮೇರಿಕಾ ದೇಶಗಳು ವಿಳಂಬ ಮಾಡಿದ್ದವು. ಅದರ ಪರಿಣಾಮ ಈಗ ಎಲ್ಲರ ಮುಂದಿದೆ. ಆ ದೇಶಗಳಲ್ಲೀಗ ಕೋವಿಡ್ ಕಾಳ್ಗಿಚ್ಚಿನಂತೆ ಹರಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಯೂರೋಪಿನ ಇಟಲಿಯ ಪರಿಸ್ಥಿತಿಯಂತೂ ಶೋಚನೀಯ. ಆ ರೀತಿಯ ತೀವ್ರ ಹರಡುವಿಕೆ ನಮ್ಮ ದೇಶದಲ್ಲಿ ಉಂಟಾದಲ್ಲಿ, ನಮ್ಮಲ್ಲಿರುವ ಸಾಧಾರಣ ಮಟ್ಟದ ವೈದ್ಯಕೀಯ ಸೌಲಭ್ಯಗಳೊಂದಿಗೆ ಕೋವಿಡ್ ಮಹಾಮಾರಿಯನ್ನು ನಿಭಾಯಿಸಲು ಸಾಧ್ಯವೇ?' ಎಂಬುದು ತಜ್ಞರುಗಳ ಕಳವಳವಾಗಿತ್ತು.
ರೋಹಿಣಿಯ ತನಿಖಾ ದೃಷ್ಟಿ 'ಮುಂದೇನು' ಎಂಬುದನ್ನು ಹುಡುಕುತ್ತಿತ್ತು. ಕೋವಿಡ್ ವೈರಾಣು ಬಹು ಬೇಗ ಹರಡುವಂಥದ್ದು ಎಂಬುದು ತಜ್ಞ ವೈದ್ಯರುಗಳ ಅಭಿಪ್ರಾಯವಾಗಿತ್ತು. ಸೋಂಕಿತರ ಬಾಯಿ ಮತ್ತು ಮೂಗಿನ ಮೂಲಕ ಒಸರುವ ಸಣ್ಣ ತುಂತುರಗಳಿಂದ ಹರಡುವ ಈ ಹೆಮ್ಮಾರಿ, ಜನ ಸಂಪರ್ಕ ಮತ್ತು ಗಾಳಿಯ ಮೂಲಕ ಹರಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ತೀವ್ರ ಸೋಂಕಿಗೊಳಗಾಗಿರುವ ರೋಗಿಗಳ ಸಾಗರವನ್ನೇ ಎದುರಿಸಿತ್ತಿರುವ ಇಟಲಿಯ ವೈದ್ಯರುಗಳಿಗೆ, ಸಲಕರಣೆಗಳ ಹಾಗು ಔಷಧಿಯ ಕೊರತೆಯುಂಟಾಗಿ, 'ಚಿಕಿತ್ಸೆ ಯಾರಿಗೆ ನೀಡುವುದು, ಯಾರಿಗೆ ಬಿಡುವುದೆಂಬ' ದ್ವಂದ್ವ ಕಾಡಿತ್ತು. ೮೦ ವಯಸ್ಸು ಮೀರಿರುವ ಕೋವಿಡ್ ರೋಗಿಗಳಿಗೆ ಇಟಲಿ ವೆಂಟಿಲೇಟರ್ಗಳನ್ನು ಒದಗಿಸುತ್ತಿಲ್ಲವೆಂಬ ವರದಿಗಳು ಎಲ್ಲಡೆ ಹರಿದಾಡಿದ್ದವು. ಆ ರೀತಿಯ ವಿಪ್ಲವ ಎದುರಾದಲ್ಲಿ, ಭಾರತ ನಿಭಾಯಿಸಬಲ್ಲುದೇ ಎಂಬ ಆತಂಕ ತಜ್ಞರುಗಳನ್ನು ಕಾಡಿತ್ತು.
'ಪರಿಸ್ಥಿತಿ ಕೈ ಮೀರುವ ಮುನ್ನ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿ' ಎಂಬುದು ಸಮಾಜ ಆರೋಗ್ಯಾಧಿಕಾರಿಗಳ ಅಭಿಮತವಾಗಿತ್ತು. ಲಾಕ್ ಡೌನ್ ಜಾರಿ ವಿಳಂಬವಾದಲ್ಲಿ ಉಂಟಾಗಬಹುದಾದ ಸೋಂಕಿತರ ಸಂಖ್ಯೆಗಳ ಏರಿಕೆಯ ಅನುಮಾನ ಎಲ್ಲರನ್ನು ಭಯಭೀತರನ್ನಾಗಿಸಿತ್ತು. 'ನಮ್ಮಲ್ಲಿ ಲಭ್ಯವಿರುವ ಆಸ್ಪತ್ರೆ ಹಾಸಿಗೆಗಳು, ಐ.ಸಿ.ಯು.ಗಳು ಹಾಗು ವೆಂಟಿಲೇಟರ್ಗಳ ಸಂಖ್ಯೆ ಸಾಕೆ? ರೋಗಿಗಳಿಗೆ ನಾವು ಸಮರ್ಪಕವಾಗಿ ಆಮ್ಲಜನಕವನ್ನು ಒದಗಿಸಬಲ್ಲೆವೆ? ಕೋವಿಡೇತರ ರೋಗಿಗಳನ್ನು ಕೋವಿಡ್ ರೋಗಿಗಳೊಂದಿಗೆ ಇರಿಸಲಾದೀತೆ? ಅವರುಗಳ ಚಿಕಿತ್ಸೆಯ ಗತಿಯೇನು? ನಮ್ಮಲಿ ಸಾಕಷ್ಟು ವೈದ್ಯರು, ನರ್ಸಗಳು ಮತ್ತು ವೈದ್ಯಕೀಯ ಸಹಾಯಕ ಸಿಬ್ಬಂಧಿ ಇರುವರೆ? ನಮ್ಮ ಕೊರೋನಾ ಸೇನಾನಿಗಳಿಗೆ ನಾವು ಸಾಕಷ್ಟು ಸುರಕ್ಷಾ ಸಲಕರಣೆಗಳನ್ನೊದಗಿಸಬಲ್ಲವೆ? ತಜ್ಞ ವೈದ್ಯರುಗಳನ್ನು ನಾವು ಹೊರದೇಶದಿಂದ ಕರೆಸಿಕೊಳ್ಳಬಲ್ಲವೆ? ವೈದ್ಯಕೀಯ, ನರ್ಸಿಂಗ್ ಮುಂತಾದ ವ್ಯಾಸಂಗಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಸೇವೆಗೆ ನಾವು ಬಳಸಿಕೊಳ್ಳಬಹುದೆ?' ತಜ್ಞರುಗಳ ಈ ಪರಿಯ ಸವಾಲುಗಳು ಸರಕಾರದ ಕಣ್ಣಿಗೆ ಕೈ ಹಾಕಿ ಪ್ರಶ್ನಿಸುವಂತಿತ್ತು.
ಅಂದು ೨೪-೦೩-೨೦೨೦. ಪ್ರಧಾನಿ ಮೋದಿಯವರು ಅಂದು ರಾತ್ರಿ ೮ ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡುವರೆಂಬ ಸುದ್ದಿ ಎಲ್ಲಡೆ ಹರಡಿತ್ತು. ಕಳೆದ ಐದು ದಿನಗಳಲ್ಲಿ ಎರಡೆನ ಬಾರಿ ಪ್ರಧಾನಿಯವರು ದೇಶದ ಜನತೆಯನ್ನುದ್ದೇಶಿಸಿ ಮಾತನಾಡುವ ತುರ್ತು ಅವಶ್ಯಕತೆ ಏನಿರಬಹುದೆಂಬುದನ್ನು ಹಲವರಾಗಲೇ ಊಹಿಸಿಯಾಗಿತ್ತು. 'ಲಾಕ್ ಡೌನ್ ಅಂತೂ ಖಚಿತ. ಆದರೆ ಎಷ್ಟು ದಿನದ್ದು?' ಎಂಬ ಕುತೂಹಲ ಮಾತ್ರ ಉಳಿದಿತ್ತು.
ಆಗ ಸಮಯ ೮ ಗಂಟೆಯಾಗಿತ್ತು. ರಾಜು ಮತ್ತು ಅವರ ಮಗಳು ರೋಹಿಣಿ ತಮ್ಮ ಟಿ.ವಿ.ಯನ್ನು ತದೇಕ ಚಿತ್ತದಿಂದ ನೋಡುತ್ತಿದ್ದರು. ಅಂತೆಯೆ ದೇಶದ ೧೩೦ ಕೋಟಿ ಜನತೆ, ಪ್ರಧಾನಿ ಏನು ಹೇಳಬಹುದೆಂಬದನ್ನು ಕಾತುರದಿಂದ ಕಾಯುತ್ತಿತ್ತು. ಧೃಢ ಸಂಕಲ್ಪದೊಂದಿಗೆ ಸಿದ್ಧರಾದಂತೆ ಕಂಡ ಪ್ರಧಾನಿ ಮೋದಿಯವರು, ಮಾರ್ಚ್ ೨೫ರಿಂದ ದೇಶದ್ಯಾಂತ ೨೧ ದಿನಗಳ ಲಾಕ್ಡೌನ್ ನಿರ್ಬಂಧವನ್ನು ಘೋಶಿಸಿಯೇ ಬಿಟ್ಟಿದ್ದು ನೀರೀಕ್ಷೆಯಂತೆಯೇ ಇದ್ದರೂ, ಅದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು ಸುಳ್ಳಲ್ಲ. ೨೧ ದಿನಗಳ ಕಾಲ ಜನಗಳು ಮನೆಯಿಂದ ಹೊರಬರುವಂತಿಲ್ಲ. ಬಸ್ಸು, ರೈಲು, ವಿಮಾನಗಳೂ ಸೇರಿದಂತೆ ಯಾವುದೇ ವಾಹನಗಳ ಸಂಚಾರವಿಲ್ಲ! ಸ್ಥ೦ಭಿಭೂತರಾದಂತೆ ಕಂಡ ಜನತೆಗೆ, ನಾಯಕರುಗಳಿಗೆ ಪ್ರತಿಕ್ರಿಯಿಸಲು ಕೊಂಚ ಸಮಯ ಬೇಕಾದಂತೆ ಅನಿಸಿದಂತೆ ಎಲ್ಲಡೆ ಕಂಡು ಬಂತು.
ಮಾರನೆಯ ದಿನದ ದಿನಪತ್ರಿಕೆಗಳು ಲಾಕ್ ಡೌನ್ ಘೋಷಣೆಯ ವರದಿಯನ್ನು ನೀಡಿದ್ದನ್ನು ಹೊರತು ಪಡಿಸಿದಂತೆ, ಮತ್ತ್ಯಾವ ವ್ಯಾಖ್ಯಾನವನ್ನು ಮಾಡುವ ಗೋಜಿಗೆ ಹೋಗಿರಲಿಲ್ಲ. ವಿರೋಧ ಪಕ್ಷಗಳು ಕೂಡ ಪ್ರತಿಕ್ರಿಯಿಸುವ ಮುನ್ನ ಸ್ವಲ್ಪ ಕಾಯುವ ನೀತಿಯನ್ನು ಅನುಸರಿಸಿದಂತೆ ಕಂಡುಬಂತು. ಒಂದೆರಡು ದಿನಗಳನಂತರವೇ ಟೀಕೆ-ಟಿಪ್ಪಣಿಗಳು ಬರಲಾರಂಭಿಸಿದ್ದು.
ಹಿರಿಯ ಅನುಭವಿ ರಾಜು ತಮ್ಮ ಮಗಳೊಂದಿಗೆ ಚರ್ಚಿಸುತ್ತಾ, ಲಾಕ್ ಡೌನ್ ಜಾರಿಯ ಉಪಯೋಗಗಳ ಪಟ್ಟಿ ನೀಡಲಾರಂಭಿಸಿದ್ದರು. 'ಅನುಮಾನಂ ಪೆದ್ದ ರೋಗಂ' ಎನ್ನುವ ತೆಲುಗಿನ ಗಾದೆಯಂತೆ ಅನಿಶ್ಚಿತತೆಯೆಂಬುದೊಂದು ದೊಡ್ಡ ರೋಗ. . ' ಲಾಕ್ ಡೌನ್ ಜಾರಿಯಿಂದ ಅನಿಶ್ಚಿತತೆಯ ಸನ್ನಿವೇಶ ಅಂತ್ಯಗೊಂಡದ್ದು ಸಂತಸದ ವಿಷಯ. ದೇಶಾದ್ಯಂತ ಲಾಕ್ ಡೌನ್ ವಿಧಿಸುವ ದೃಢ ನಿರ್ಧಾರ ಮಾಡಲು, ಪೂರಕವಾಗಿ ನೆರವಿಗೆ ಬಂದ ಹಲವು ಅಂಶಗಳ ಪಟ್ಟಿಯನ್ನು ನೀಡುತ್ತಾ ರಾಜು ಮಾತನಾಡಿದರು.
-ಸತತ ೨೧ ದಿನಗಳ ಕಾಲದ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸುವಲ್ಲಿ , ಪೂರ್ಣ ಬಹುಮತ ಹೊಂದಿದ್ದು ಪ್ರಧಾನಿ ಮೋದಿಯವರಿಗೆ ವರದಾನವಾಗಿ ಬಂದಿತ್ತು. ಇಂತಹ ಕಠಿಣ ನಿರ್ಧಾರವನ್ನು ದುರ್ಬಲವಾದ ಸಮ್ಮಿಶ್ರ ಸರಕಾರವೊಂದು ತೆಗೆದುಕೊಳ್ಳಲು ಸಾಧ್ಯವಿತ್ತೆ?
-ಭಾರತವೊಂದು ರಾಜ್ಯಗಳ ಒಕ್ಕೂಟದ ವ್ಯವಸ್ಥೆಯಾಗಿದ್ದು (Federal system), ಕೇಂದ್ರ- ರಾಜ್ಯಗಳೊಂದಿಗಿನ ಸಂಬಂಧ ಸುಮಧುರವಾಗಿದ್ದುದು ಕೂಡ ಪೂರಕ ಅಂಶವೊಂದಾಗಿತ್ತು. ಬೆರೆಳೆಣಿಕೆಯಷ್ಟು ರಾಜ್ಯಗಳೊಂದಿಗಿನ ವೈಮನಸ್ಯಗಳನ್ನು ಈ ವಿಷಯದಲ್ಲಿ ನಿಭಾಯಿಸುವ ವಿಶ್ವಾಸ ಕೇಂದ್ರ ಸರಕಾರಕ್ಕಿತ್ತು.
-ದೇಶ ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, ಕಳೆದ ವರ್ಷ (೨೦೧೯) ದೇಶಾದ್ಯಂತ ಉತ್ತಮ ಮಳೆ-ಬೆಳೆಗಳಾಗಿದ್ದು, ದವಸ-ಧಾನ್ಯಗಳ ದಾಸ್ತಾನು ಸಮೃದ್ಧವಾಗಿತ್ತು. ಕಚ್ಚಾ ತೈಲದ ಬೆಲೆ ಅಗ್ಗವಾಗಿದ್ದು, ವಿದೇಶಿ ವಿನಿಮಯದ ಪರಿಸ್ಥಿತಿ ಅನುಕೂಲಕರವಾಗಿತ್ತು.
-ಪದೇ-ಪದೇ ಕಾಡುವ ರಾಜ್ಯ ಸರಕಾರಗಳ ಚುನಾವಣೆಗಳು ದೂರವಿದ್ದದ್ದೂ, ಧೃಢ ನಿರ್ಧಾರ ಕೈಗೊಳ್ಳುವಲ್ಲಿ ಪೂರಕವಾಗಿತ್ತು. ಮುಂದಿನ ಬಿಹಾರ ರಾಜ್ಯ ಚುನಾವಣೆಗೆ ೨೦೨೦ರ ನವೆಂಬರ್ ವರೆಗಿನ ಕಾಲಾವಕಾಶವಿತ್ತು.
-ಕೋವಿಡ್ ವೈರಾಣುವಿನ ತೀವ್ರತೆ, ಭಾರತದಂಥ ಉಷ್ಣ ವಲಯದ ದೇಶವನ್ನು ಅಷ್ಟಾಗಿ ಕಾಡದು ಎಂಬ ವರದಿಯೂ ನಮ್ಮ ದೇಶದ ವಿಶ್ವಾಸವನ್ನು ಹೆಚ್ಚಿಸಿತ್ತು. ಯುವಕರೇ ಹೆಚ್ಚಾದ ಭಾರತದ ಜನತೆಯಲ್ಲಿ, ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು.
ತನ್ನಪ್ಪನ ವಾದಸರಣಿಗೆ ಮಗಳು ರೋಹಿಣಿ, ಒಂದಿಷ್ಟೂ ಸೊಪ್ಪು ಹಾಕಿದಂತೆ ಕಂಡುಬರಲಿಲ್ಲ. 'ಅಪ್ಪ ನೀವು ಗಂಭೀರವಾದ ಅಂಶಗಳನ್ನು ಮರೆಮಾಚಿಸುತ್ತಿದ್ದೀರಾ' ಎಂದ ರೋಹಿಣಿ, ತನ್ನ ಪಾಟಿ ಸವಾಲುಗಳೊಂದಿಗೆ ವಾದಕ್ಕೆ ನಿಂತಿದ್ದಳು.
'೨೧ ದಿನಗಳ ಸುಧೀರ್ಘ ಲಾಕ್ ಡೌನ್ ವಿಧಿಸುವ ಮುನ್ನ ಪ್ರಧಾನಿಯವರು ರಾಜ್ಯ ಸರಕಾರದ ಮುಖ್ಯ ಮಂತ್ರಿಗಳ ಜೊತೆ ಏಕೆ ಚರ್ಚಿಸಲಿಲ್ಲ? ಒಕ್ಕೂಟ ವ್ಯವಸ್ಥೆಯ ಮೇಲಿನ ವಿಶ್ವಾಸದ ಉದ್ದುದ್ದ ಭಾಷಣಗಳು ಪ್ರಧಾನಿಗಳ ಪಾಲಿಗೆ ಬಡಾಯಿ ಮಾತ್ರವಾಯಿತೆ? ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗಿನ ವೀಡಿಯೊ ಚರ್ಚೆ ಮಾತ್ರ ಸಾಕೆ? ದೇಶಾದ್ಯಂತ ಲಾಕ್ ಡೌನ್ ಹೇರುವ ಪರಮಾಧಿಕಾರ ಕೇಂದ್ರ ಸರಕಾರಕ್ಕಿದ್ದರೂ, ಆ ವ್ಯವಸ್ಥೆಯನ್ನೂ ಜಾರಿಗೊಳಿಸುವ ಜವಾಬ್ದಾರಿ ರಾಜ್ಯ ಸರಕಾರಗಳದ್ದಲವೇ? ಲಾಕ್ ಡೌನ್ ಘೋಷಣೆ ತರಾತುರಿಯಲ್ಲಾಯಿತಲ್ಲವೇ? ೨೦೧೬ರ ಅಪನಗದೀಕರಣದ ಎಡಬಿಡಂಗಿ ನಿರ್ಧಾರದಿಂದಾದ ಅನಾಹುತಗಳು ಮರೆತು ಹೋದವೆ? ಲಾಕ್ ಡೌನ್ ಘೋಷಣೆಗೆ ಮುಂಚೆಯೇ, ವಲಸೆ ಕಾರ್ಮಿಕರುಗಳಲ್ಲುಂಟಾದ ಆತಂಕಗಳು ಕೇಂದ್ರಕ್ಕೆ ಕಾಣಲಿಲ್ಲವೆ? ಲಾಕ್ ಡೌನ್ ಪೂರ್ವದಲ್ಲೇ ಕೆಲಸಗಳನ್ನು ಕಳೆದುಕೊಂಡ, ಮುಂಬೈನಂತಹ ಮಹಾನಗರಗಳ ವಲಸೆ ಕಾರ್ಮಿಕರುಗಳು, ದೇಶದ ಪೂರ್ವ ಭಾಗದಲ್ಲಿರುವ ತಮ್ಮ-ತಮ್ಮ ಹಳ್ಳಿಗಳಗೆ ಪ್ರಯಾಣ ಬೆಳಸಲು ರೈಲುಗಳನ್ನು ಹತ್ತಲಾಗದೆ ಪರದಾಡಿದ್ದು ಸುಳ್ಳೆ? ಪ್ರಧಾನಿ ಮೋದಿಯವರಾಗಲಿ, ರಾಜ್ಯಗಳ ಮುಖ್ಯ ಮಂತ್ರಿಗಳಾಗಲಿ, ವಲಸೆ ಕಾರ್ಮಿಕರುಗಳ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಏಕೆ ಮುಂಜಾಗ್ರತೆ ವಹಿಸಲಿಲ್ಲ?' ಎಂದ ರೋಹಿಣಿ, ಉದ್ರಿಕ್ತಳಾಗಿದ್ದನ್ನು, ತಂದೆ ರಾಜುರವರು ಗಮನಿಸದಿರಲಿಲ್ಲ.
'ಘಟನೆಗಳು ಘಟಿಸಿದನಂತರ ಜಾಣರಂತೆ ವಿಮರ್ಶಿಸುವುದು ಸುಲಭ. ಸುಕೃತವೋ ಎಂಬಂತೆ ಕೋವಿಡ್ ಮಾರಿ, ನಮ್ಮ ದೇಶಕ್ಕೆ ತಡವಾಗಿ ಕಾಲಿಟ್ಟಿದೆ. ಕೋವಿಡ್ ರೋಗಿಗಳ ಸಂಖ್ಯೆ ಕಮ್ಮಿ ಇದ್ದಾಗಲೇ ಲಾಕ್ ಡೌನ್ ಜಾರಿಗೊಳಿಸಿದ್ದೊಂದು ಜಾಣ್ಮೆಯ ನಡೆ' ಎಂದು ಅನುಭವಿ ಮಾತುಗಾರ ರಾಜು ತಮ್ಮ ಮಗಳಿಗೆ ಸಮಜಾಯಿಷಿ ನೀಡಿ ವಾದಕ್ಕೆ ತೆರೆ ಎಳೆದಿದ್ದರು.
ಸಂಪೂರ್ಣ ಲಾಕ್ ಡೌನ್ ಸನ್ನಿವೇಶವನ್ನು ನಿಭಾಯಿಸುವುದು, ಪೊಲೀಸರಿಗಾಗಲಿ, ಶ್ರೀಸಾಮಾನ್ಯರಿಗಾಗಲಿ ಹೊಸ ಅನುಭವವಾಗಿತ್ತು. ಲಾಕ್ ಡೌನ್ ನಿಯಮಗಳನ್ನು ಸಾರ್ವಜನಿಕರು ಗಾಳಿಗೆ ತೂರಿದ ಘಟನೆಗಳ ಸಂಖ್ಯೆ ಎಡಬಿಡದೆ ಸಾಗಿತ್ತು. ನಿರ್ಬಂಧ ಉಲ್ಲಂಘಿಸಿ ಸಂಚರಿಸುತ್ತಿದ್ದ ದ್ವಿಚಕ್ರ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ವರದಿಗಳು ಮೇಲೆ-ಮೇಲೆ ಬರಲಾರಂಭಿಸಿದ್ದವು. ಎಲ್ಲೆ ಮೀರಿ ಹೊರಬಂದ ಜನಗಳಿಗೆ ಪೊಲೀಸರು 'ಉಟ್-ಬೈಟ್'ನಂಥ ಸಣ್ಣ ಶಿಕ್ಷೆ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ ಘಟನೆಗಳ ವರದಿಯೂ ಮಾಧ್ಯಮಗಳಲ್ಲಿ ಸುಳಿದಾಡುತ್ತಿದ್ದವು. ಇವುಗಳ ನಡುವೆ ಕೆಲಸ ಕಳೆದುಕೊಂಡು, ಕೈಯಲ್ಲಿ ಕಾಸಿಲ್ಲದಂತಾದ ವಲಸೆ ಕಾರ್ಮಿಕರ ನೋವು ನೋಡುವವರ ಕರುಳು ಹಿಂಡುವಂತಿತ್ತು. ಮುಂದೇನು ಎಂದು ತೋಚದೆ ದಿಕ್ಕೆಟ್ಟ ಅವರುಗಳು ತಮ್ಮ ಸಮಾನುಗಳನ್ನು ಹೊತ್ತು, ಮಡದಿ-ಮಕ್ಕಳುಗಳೊಡನೆ, ಸಾವಿರಾರು ಕಿಲೋಮೀಟರ್ ದೂರದ ತಮ್ಮ -ತಮ್ಮ ಸ್ವಂತ ಊರುಗಳಿಗೆ ನಡೆಯುತ್ತಾ ಪ್ರಯಾಣ ಬೆಳಸಿದ್ದು ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿತ್ತು.
***
ಅಂದು ೨೦೨೦ರ ಏಪ್ರಿಲ್ ೩ರ ದಿನ. ಪ್ರಧಾನಿಯವರು ಮತ್ತೊಮ್ಮೆ ದೇಶವನ್ನುದ್ದೇಶಿಸಿ ಭಾಷಣ ಮಾಡುವವರಿದ್ದರು. ಎಂದಿನಂತೆ ರಾಜು ಮತ್ತು ರೋಹಿಣಿ ತಮ್ಮ ಮನೆಯ ಟಿ.ವಿ.ಯ ಮುಂದೆ ಕುಳಿತಿದ್ದರು. ಈ ಬಾರಿ ಪ್ರಧಾನಿಯವರದ್ದು ವೀಡಿಯೊ ಸಂದೇಶ ಮಾತ್ರವಾಗಿತ್ತು. 'ಲಾಕ್ ಡೌನ್ ಪ್ರಯುಕ್ತ ನಾವೆಲ್ಲಾ ನಮ್ಮ-ನಮ್ಮ ಮನೆಗಳಲ್ಲೇ ಕಾಲ ಕಳೆಯುವಂತಾದರೂ, ನಮ್ಮ ೧೩೦ ಕೋಟಿ ಬಾಂಧವರು ನಮ್ಮೊಡನಿದ್ದಾರೆಂಬುದೇ, ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ನಾಳಿನ ಭಾನುವಾರ, ಅಂದರೆ ಏಪ್ರಿಲ್ ೫ರ ರಾತ್ರಿ ೯.೦೦ ಗಂಟೆಗೆ ತಮ-ತಮ್ಮ ಮನೆಯ ಎಲ್ಲ ದೀಪಗಳನ್ನಾರಿಸಿ, ಹೊರಗೆ ಬನ್ನಿ. ೯ ನಿಮಿಷಗಳ ಕಾಲ ದೀಪಗಳನ್ನು ಬೆಳಗಿ, ಮೊ೦ಬತ್ತಿಗಳನ್ನು ಹಚ್ಚಿ, ಟಾರ್ಚ್ಗಳನ್ನು ಬೆಳಗಿಸಿ, ಮೊಬೈಲ್ ದೀವಿಗೆಗಳನ್ನು ಬೆಳಗಿ. ಕೋವಿಡ್ ಹರಡಿರುವ ಅಂಧಕಾರದಿಂದ, ಬೆಳಕಿನ ಕಡೆಗೆ ಪಯಣಿಸುವ ಸಾಂಕೇತಿಕತೆಯನ್ನು ನಮ್ಮ ದೀಪಗಳು ಸಾರಲಿ. ಜನರುಗಳು ಒಂದು ಕಡೆ ಗುಂಪುಗೂಡುವುದಾಗಲಿ, ಮೆರವಣಿಗೆಯಲ್ಲಿ ಸಾಗುವುದಾಗಲಿ ಬೇಡ' ಎಂಬುದು ಪ್ರಧಾನಿಗಳ ಅಂದಿನ ಸಂದೇಶದ ಸಾರವಾಗಿತ್ತು. ೨೧ ದಿನಗಳ ಸತತ ಲಾಕ್ ಡೌನ್ ನಡುವಿನ ಈ ಬೆಳಕಿನ ಕಾರ್ಯಕ್ರಮ, ಜನತೆಯ ಉಲ್ಲಾಸಕ್ಕೊಂದು ಪ್ರೇರಣೆಯನ್ನು ನೀಡಲೆಂಬುದು ಪ್ರಧಾನಿಗಳ ಉದ್ದೇಶವೆಂಬುದು ಹಲವರ ವ್ಯಾಖ್ಯಾನವಾಗಿತ್ತು.
ರಾಜುರವರೇನೋ ಬೆಳಕಿನ ಕಾರ್ಯಕ್ರಮದ ಬಗ್ಗೆ ಪುಳಕಿತರಾಗಿದ್ದರು. ವಿಚಾರವಾದಿಯಾಗಿದ್ದ ಮಗಳು ರೋಹಿಣಿಯ ಟೀಕಾಸ್ತ್ರಕ್ಕೀಗ ಹೊಸದೊಂದು ಮೊನಚು ಲಭಿಸಿತ್ತು. ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸದೆ, ಕೆಲಸವಿಲ್ಲದ ಕೈಗಳಿಗೆ ಸಹಾಯ ಹಸ್ತ ನೀಡದೆ, ಮೋದಿಜಿ ಥಳುಕಿನ ಮಾರ್ಗವನ್ನು ಹಿಡಿದಿರುವುದು ಸರಿಯೆ, ಎಂಬುದು ವಿರೋಧ ಪಕ್ಷಗಳ ಟೀಕೆಯಾಗಿತ್ತು. ಏಪ್ರಿಲ್ ೬ರಂದು, ಪ್ರಧಾನಿಗಳ ಬಿ.ಜೆ.ಪಿ. ಪಕ್ಷ ಉದಯಿಸಿದ ದಿನ. ಒಂದು ದಿನ ಮುಂಚೆಯೇ ಆ ಸಮಾರಂಭಾಚರಣೆಗೆ ಮೋದಿಜಿ ಕರೆ ನೀಡಿದ್ದಾರೆಂಬುದು ಕೆಲವು ವಿರೋಧಿ ನಾಯಕರುಗಳ ಕುಚೋದ್ಯವಾಗಿತ್ತು.
ದೇಶಾದ್ಯಂತ ಎಲ್ಲ ದೀಪಗಳನ್ನು ಒಮ್ಮೆಲೇ ಆರಿಸಿದರೆ, ವಿದ್ಯುತ್ ಬಳಕೆಯ ತೀವ್ರತೆ ಧಿಡೀರನೆ ಕುಸಿದು, ವಿದ್ಯುತ್ ಸರಬುರಾಜಿನ ವ್ಯತ್ಯಯ ಉಂಟಾಗಬಹುದೆಂಬುದು ಹಲವು ತಜ್ಞರುಗಳ ಆತಂಕಕ್ಕೆ ಕಾರಣವಾಗಿತ್ತು. 'ದೀಪಗಳನ್ನಾರಿಸಿ, ಆದರೆ ಫ್ಯಾನ್ಗಳು-ಫ್ರಿಡ್ಜ್ ಗಳನ್ನು ಆರಿಸಬೇಡಿ. ಆಗ ವಿದ್ಯುತ್ತಿನ ತೀವ್ರತೆ ಒಮ್ಮೆಲೇ ಕುಸಿಯದು, ಸರಬರಾಜಿನ ವ್ಯತ್ಯಯ ಆಗದೆಂಬುದು,' ವಿದ್ಯುತ್ ಇಲಾಖೆಯ ಅಧಿಕಾರಿಗಳ ಸಮಜಾಯಿಷಿಯಾಗಿತ್ತು.
ದೀಪಚಾರಣೆಯ ಹಿಂದಿನ ಸಂಜೆ, ಟೀಕೆ-ಟಿಪ್ಪಣಿಗಳಿಂದ ಧೃತಿಗೆಡದ ಪ್ರಧಾನಿ ಮೋದಿಜಿ, ತಮ್ಮ ಮಾರ್ಗದರ್ಶಿ ಹಾಗು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯೀರವರು, ದೀಪ ಬೆಳಗುವುದರ ಔಚಿತ್ಯವನ್ನು ಬಿಂಬಿಸಿ ಬರೆದ ಕವನವೊಂದನ್ನು ಉಲ್ಲೇಖಿಸಿದರು. ಆ ಕವನದ ಸಾಲುಗಳು ಹೀಗಿತ್ತು.
ಆವೋ ಫಿರ್ಸೆ ದಿಯಾ ಜಲಾಯೆ
(ಮೂಲ: ಹಿಂದೀ ಭಾಷೆಯಲ್ಲಿ)
ಆವೋ ಫಿರ್ಸೆ ದಿಯಾ ಜಲಾಯೆ
ಭರಿ ದುಪೆಹೆರಿಮೆ ಅಂಧಿಯಾರ
ಸೂರಜ್ ಪರ್ಚಾಯಿ ಸೆ ಹಾರಾ
ಅಂತರ್ತಮ್ ಕ ನೇಹ್ ನಿಚೋಡೆ
ಬುಜಿ ಹುಈ ಬಾತೀ ಸುಲಗಯೆ
ಆವೋ ಫಿರ್ಸೆ ದಿಯಾ ಜಲಾಯೆ
ಹಮ್ ಪಡಾವ್ ಕೋ ಸಂಝೆ ಮಂಜಿಲ್
ಲಕ್ಷ್ಯ ಹುವಾ ಆಂಖೋ ಸೆ ಒಝಾಲ್
ವರ್ತಮಾನ ಕೆ ಮೋಹಝಾಲ್ ಮೇ
ಆನೇ ವಾಲಾ ಕಲ್ ನ ಭುಲಾಯೆ
ಆವೋ ಫಿರ್ಸೆ ದಿಯಾ ಜಾಲಾಯೆ
ಆಹುತಿ ಬಾಕಿ ಯಜ್ಞ ಅಧುರಾ
ಅಪನೋ ಕೆ ವಿಘ್ನೋ ನೇ ಘೇರಾ
ಅಂತಿಮ್ ಜಯ್ ಕೋ ವಜ್ರ ಬನಾನೆ
ನವ್ ದಧೀಚಿ ಹಡ್ಡಿಯ ಗಲಯೆ
ಆವ್ ಫಿರ್ಸೆ ದಿಯಾ ಜಲಾಯ
-೦-೦-೦-
ದೀಪ ಬೆಳಗೋಣ ಬನ್ನಿ
(ಕನ್ನಡ ರೂಪಾಂತರ:
ಲಕ್ಷ್ಮೀನಾರಾಯಣ ಕೆ. )
ದಿನದ ನಡುವೆ ಕವಿದ ಕತ್ತಲ
ಸೂರ್ಯನ ಮುಸುಕಿದ ನೆರಳ ಹರಿಸಲು
ಅಂತರತಮದ ತೈಲವನೆರೆದು
ಆರಿದ ಬತ್ತಿಯ ಮತ್ತೆ ಹಚ್ಚಿ
ದೀಪ ಬೆಳಗೋಣ ಬನ್ನಿ
ನಡು ದಾರಿಯನೆ ಗುರಿಯೆಂದೆಣಿಸಿ
ಮರೆಯಾಯಿತು ಗುರಿ ಬಹುದೂರ
ಇಂದಿನ ಸುಖದ ಮೋಹಕೆ ಸಿಲುಕದೆ
ಸುಂದರ ನಾಳಿನ ಬದುಕನು ಬೆಳಗಿಸೆ
ದೀಪ ಬೆಳಗೋಣ ಬನ್ನಿ
ನಮ್ಮವರೊಡ್ಡಿದ ವಿಘ್ನವ ಸರಿಸಿ
ಆಹುತಿ ನೀಡದೆ ಯಜ್ಞ ಮುಗಿಯದು
ನವ ದಧೀಚಿಗಳ ಮೂಳೆಯ ಬಳಸಿ
ಅಂತಿಮ ಜಯವ ತಪ್ಪದೆ ಗಳಿಸಲು
ದೀಪ ಬೆಳಗೋಣ ಬನ್ನಿ
(ಗಮನಿಸಿ:
೧) ರಾಕ್ಷರನ್ನು ಸಂಹರಿಸಲು ಬೇಕಾದ ವಜ್ರಾಯುಧವನ್ನು ಸಿದ್ಧಪಡಿಸಲು, ತಮ್ಮ ಬಲಶಾಲಿ ಬೆನ್ನು ಮೂಳೆಯನ್ನೇ ದೇವೇಂದ್ರನಿಗೆ ದಾನ ಮಾಡಿದ ಮಹಾತ್ಯಾಗಿಯೇ ಮಹರ್ಷಿ ದಧೀಚಿ .
೨) ನವ ಯುವಕರನ್ನು ನವ ದಧೀಚಿಗಳೆಂದು ಕವಿ ಬಣ್ಣಿಸಿದ್ದಾರೆ. ಅಂತಿಮ ಜಯಗಳಿಸಲು ನಮ್ಮ ಯುವಕರು ನೀಡಬೇಕಾದ ಪರಿಶ್ರಮದ ಕಾಣಿಕೆಯನ್ನು, ದಧೀಚಿಗಳ ತ್ಯಾಗಕ್ಕೆ ಕವಿ ಹೋಲಿಸಿದ್ದಾರೆ.
***
'ವಾಜಪೇಯೀಯವರನ್ನು ಟಿ.ವಿ.ಯಲ್ಲಿ ನೋಡಿದ ನೆನಪು ಅಸ್ಪಷ್ಟವಾಗಿದೆ. ಅವರು ಮಾತುಗಳನ್ನು ಕೇಳಿದ ನೆನಪಿಲ್ಲ. ಈ ಕವನವನ್ನು ಅವರು ರಚಿಸಿದ್ದೆ? ಯಾವ ಸಂದರ್ಭದಲ್ಲಿ ರಚಿಸಿದ್ದರು?' ಎಂಬುದು ಕವನವನ್ನು ಕೇಳಿದ ರೋಹಿಣಿಯ ಪ್ರತಿಕ್ರಿಯೆಯಾಗಿತ್ತು. ಮಗಳ ಪ್ರಶ್ನೆಯಿಂದ ಉತ್ತೇಜಿತರಾದ ರಾಜುರವರೀಗ ವಾಜಪೇಯೀರವರ ಕವಿತೆಯ ಸಂದೇಶ ಮತ್ತು ಅದರ ಪ್ರಸ್ತುತತೆಯನ್ನು ವಿವರಿಸಲು ಸನ್ನದ್ಧರಾಗಿದ್ದರು. 'ವಾಜಪೇಯೀರವರು ನಮ್ಮ ಪ್ರಧಾನಿಯಾಗಿದ್ದರು. ಅವರೊಬ್ಬ ಉತ್ತಮ ವಾಗ್ಮಿಯೂ ಹಾಗೂ ಕವಿಯೂ ಆಗಿದ್ದರು. "ವಾಜಪೇಯೀರವರು ರಾಜಕಾರಣಕ್ಕೆ ಕಾಲಿಟ್ಟಿದ್ದರಿಂದ ನಾವೊಬ್ಬ ಶ್ರೇಷ್ಠ ಕವಿಯನ್ನು ಕಳೆದುಕೊಂಡೆವು" ಎಂಬುದು ಅವರ ಹಲವು ಸಮಕಾಲೀನರ ಕೊರಗಾಗಿತ್ತು. ಧೀರ್ಘಾವಧಿಯ ವಿರೋಧ ಪಕ್ಷದ ನಾಯಕರು ಹಾಗೂ ನಂತರ ಪ್ರಧಾನಿಗಳೂ ಆಗಿದ್ದ ವಾಜಪೇಯೀರವರು, ತಮ್ಮ ಬಿಡುವಿಲ್ಲದ ಕಾರ್ಯಭಾರಗಳ ನಡುವೆಯೂ ತಮ್ಮ ಸಾಹಿತ್ಯ ಕೃಷಿಯನ್ನು ನಿಲ್ಲಿಸಿದವರಲ್ಲ. ಅವರ "ದೀಪ ಬೆಳಗೋಣ ಬನ್ನಿ" ನಮ್ಮ ದೇಶದ ಯುವ ಜನಾಂಗವನ್ನುದ್ದೇಶಿಸಿ ರಚಿಸಿದ ಕವನ. ಈ ಕವನದಲ್ಲಿ ದೇಶದ ಯುವಕರ ಪರಿಸ್ಥಿತಿಯನ್ನು ಮೋಡ ಮುಸುಕಿದ ಮಧ್ಯಾಹ್ನದ ಸೂರ್ಯನಿಗೆ ಹೋಲಿಸಲಾಗಿದೆ. ಆದರೆ ನಮ್ಮ ಯುವಕರು ಚೈತನ್ಯಶೀಲರು ಹಾಗೂ ಉತ್ಸಾಹಿಗಳು. ಇಂದಿನ ಅಡೆ-ತಡೆಗಳಿಂದ ಅವರುಗಳು ಧೃತಿಗೆಡಬಾರದು. ನಾಳಿನ ಸುಂದರ ಬದುಕನ್ನು ಕಟ್ಟಿಕೊಳ್ಳಲು, "ಮತ್ತೊಮ್ಮೆ ದೀಪ ಬೆಳಗುವ" ಪ್ರಕ್ರಿಯೆ ಅವರುಗಳ ಹೋರಾಟಕ್ಕೆ ನಾಂದಿಯಾಗಬೇಕು. ನಮ್ಮ ಯುವಕರ ಆ ಹೋರಾಟವನ್ನೇ ಕವಿ "ಯಜ್ಞ"ವೆಂದು ಬಣ್ಣಿಸಿದ್ದಾರೆ. ತಪಸ್ವಿ ದಧೀಚಿಯವರಂತೆ ನಮ್ಮ ಯುವಕರು ತ್ಯಾಗಕ್ಕೆ ಸಿದ್ಧರಾಗಿ, ತಮ್ಮ ತನು-ಮನ-ಧನಗಳನ್ನು ಸಮರ್ಪಿಸಿ ಜಯಶೀಲರಾಗಬೇಕು ಎಂಬುದು ಕವಿಯ ಆಶಯ. ನಮ್ಮ ಪ್ರಧಾನಿಯವರು ಸಂದರ್ಭೋಚಿತವಾಗಿ ಈ ಕವಿತೆಯನ್ನುಲ್ಲೇಖಿಸಿ, "ದೀಪ ಬೆಳಗು"ವುದರ ಮುಖಾಂತರ ಕೊರೋನಾ ವಿರುದ್ಧದ ಹೋರಾಟಕ್ಕೆ ಸಜ್ಜಾಗುವಂತೆ ಜನತೆಗೆ ಕರೆ ನೀಡಿದ್ದಾರೆ' ಎಂದು ತಮ್ಮ ವ್ಯಾಖ್ಯಾನವನ್ನು ಮುಗಿಸಿದ ರಾಜುರವರು ಉಬ್ಬಿ ಹೋಗಿದ್ದರು. ಕವಿತೆಯ ಸಂದೇಶಕ್ಕೆ ಮತ್ತು ಔಚಿತ್ಯಕ್ಕೆ ಮಗಳು ರೋಹಿಣಿ ತಲೆದೂಗಿದ್ದು, ತಂದೆಯಾದ ರಾಜುರವರಿಗೆ ಸಮಾಧಾನ ತಂದಿತ್ತು.
ಅಷ್ಟು ಹೊತ್ತಿಗೆ ೦೫-೦೪-೨೦೨೦ರ ಭಾನುವಾರದ ರಾತ್ರಿ ೯ರ ಸಮಯವಾಗಿತ್ತು. ರಸ್ತೆಯ ಎಲ್ಲಾ ಜನರುಗಳು ತಮ್ಮ ತಮ್ಮ ಮನೆಗಳ ವಿದ್ಯುತ್ ದೀಪಗಳನ್ನಾರಿಸಿ ಹೊರಬಂದಿದ್ದರು. ರೋಹಿಣಿ ಕೂಡ ತನ್ನ ತಂದೆಯೊಂದಿಗೆ ತನ್ನ ಮನೆಯ ಮುಂದೆ ಬಂದು ದೀಪವನ್ನು ಬೆಳಗಿದಳು. ಕೆಲವರು ಶಂಖನಾದ ಮಾಡಿ, ಪಟಾಕಿಗಳನ್ನು ಸಿಡಿಸಿದರು. ಜನಗಳಲ್ಲಿ ದೀಪಾವಳಿ ಹಬ್ಬವನ್ನು ಮತ್ತೊಮ್ಮೆ ಆಚರಿಸಿದ ಸಂಭ್ರಮ ಕಂಡುಬಂದಿತ್ತು. ಅಪ್ಪಟ ಅಸ್ಸಾಮಿಯರಂತೆ 'ಮುಂದು' (ಪಂಚೆ)ವನುಟ್ಟು, 'ಗಮುಸ' (ಶಲ್ಯ)ವನ್ನು ಹೊದ್ದ ಪ್ರಧಾನಿ ಮೋದಿಯವರು ತಮ್ಮ ಮನೆಯ ಮುಂದೆ ದೀಪ ಬೆಳಗಿ ಎಲ್ಲರ ಗಮನ ಸೆಳೆದಿದ್ದರು. ರಾಷ್ಟ್ರಾದ್ಯಂತ ಮನೆ ಮನೆಗಳಲ್ಲಿ ಜರುಗಿದ ದೀಪ ಬೆಳಗುವ ಸಮಾರಂಭ, ಕೊರೋನಾ ವಿರುದ್ಧದ ಧೀರ್ಘ ಹೋರಾಟಕ್ಕೆ ದೇಶದ ಜನತೆ ನಾಂದಿ ಹಾಡಿದಂತಿತ್ತು.
***