೨
ಅಂತಿಮ ವಿದಾಯ
ತರುಣ ವೈದ್ಯರಾದ ಡಾ. ಕಿರಣ್ ರವರಂದು ಉದ್ವಿಗ್ನರಾಗಿದ್ದರು. ಸಮಯ ಸುಮಾರು ರಾತ್ರಿ ೯ ಗಂಟೆಯಾಗಿತ್ತು. ಶವವೊಂದನ್ನು ಹೊತ್ತ ಆಂಬುಲೆನ್ಸ್ ವಾಹನವೊಂದು ನಗರದ ದಕ್ಷಿಣ ಭಾಗದಲ್ಲಿದ್ದ ಸ್ಮಶಾನದ ಕಡೆ ಸಾಗಿತ್ತು. ಶವದ ಜೊತೆಗೆ ಡಾ.ಕಿರಣ್ ರವರು ಕುಳಿತಿದ್ದರು. ಸ್ಮಶಾನದ ಪರಿಸ್ಥಿತಿಯ ಪೂರ್ವಾಪರಗಳ ಸಮೀಕ್ಷೆಗೆಂದೇ ಮುಂಚೆಯೇ ತೆರಳಿದ್ದ ಆಸ್ಪತ್ರೆ ಸಿಬ್ಬಂದಿ ಸತೀಶರಿಂದ, ಡಾ.ಕಿರಣ್ ರವರಿಗೆ ಫೋನ್ ಕರೆಯೊಂದು ಬಂದಿತ್ತು. 'ಸ್ಮಶಾನದ ಬಳಿ ದೊಣ್ಣೆ, ಮಚ್ಚುಗಳನ್ನು ಹಿಡಿದ ನೂರಾರು ಜನಗಳು ನೆರೆದಿದ್ದಾರೆ. ಉದ್ರಿಕ್ತರಾದಂತೆ ಕಾಣುತ್ತಿರುವ ಅವರುಗಳು ಹೊಡಿ-ಬಡಿಯಲು ಸಿದ್ಧರಾದಂತಿದೆ. ನಾವು ತರುತ್ತಿರುವ ಶವದ ಅಂತ್ಯಕ್ರಿಯೆಯನ್ನು ಶತಾಯಗತಾಯ ತಡೆಯುವುದೇ ಅವರ ಉದ್ದೇಶದಂತಿದೆ' ಎಂಬುದಾಗಿ ತಿಳಿಸಿದ ಸತೀಶರ ದನಿಯಲ್ಲಿ ಆತಂಕವಿತ್ತು. ದೂರದಿಂದಲೇ ಸ್ಮಶಾನದ ಕಡೆ ಕಣ್ಣು ಹಾಯಿಸಿದ ಚಾಲಕ ದೇವೀಂದರ್ ರವರು ಕೂಡ ಡಾ.ಕಿರಣರವರನ್ನು ನೋಡುತ್ತಾ, ಏನೂ ಮಾಡಲು ಸಾಧ್ಯವಿಲ್ಲವೆನ್ನುವಂತೆ ತಲೆಯಾಡಿಸಿದರು. ಡಾ. ಕಿರಣ್ ರವರೀಗ ಗಾಬರಿಗೊಂಡಂತೆ ಕಂಡರು.
ಸ್ಮಶಾನದ ಬಳಿ ನೆರೆದ ಜನರುಗಳೆಲ್ಲರೂ ಸ್ಥಳೀಯರೇ ಆಗಿದ್ದರು. ಕೋವಿಡ್ನಿಂದ ಮೃತಪಟ್ಟವರೊಬ್ಬರ ಶವವನ್ನು ಮಣ್ಣು ಮಾಡಲು ತಮ್ಮ ಸ್ಮಶಾನದ ಕಡೆ ಕರೆತರಲಾಗುತ್ತಿದೆ ಎಂಬ ಸುದ್ದಿ ಅವರುಗಳಿಗೆ ಹೇಗೋ ತಲುಪಿತ್ತು. ಕೋವಿಡ್ನಿಂದ ಸತ್ತ ವ್ಯಕ್ತಿಯ ಸಮಾಧಿಯಿಂದ ತಮ್ಮಗಳಿಗೂ ಕೋವಿಡ್ ಹರಡುವುದು ಖಚಿತವೆಂದು ನಂಬಿದ್ದ ಅವರುಗಳು, ಶವ ಸಂಸ್ಕಾರವನ್ನು ತಡೆಯಲು ಸನ್ನದ್ಧರಾಗಿದ್ದರು. ತಡ ರಾತ್ರಿಯಾದರೂ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ನೂರಾರು ಜನ ಶಸ್ತ್ರಧಾರಿಗಳು ನೋಡು ನೋಡುತ್ತಲೇ ಜಮಾಯಿಸಿದ್ದರು. ಮಣ್ಣು ಮಾಡಲು ತರುತ್ತಿರುವ ಶವ ನಗರದ ಖ್ಯಾತ ವೈದ್ಯೆ ಡಾ. ಸುಲೋಚನಾ ಸಿಂಗ್ ರವರದ್ದು ಎಂಬುದನ್ನೂ ಲೆಕ್ಕಿಸದ ಅವರುಗಳು ಹಿಂಸಾಚಾರಕ್ಕೆ ಕಾಲು ಕೆರೆದು ನಿಂತಿದ್ದಂತ್ತಿತ್ತು.
ಅಪಾಯದ ಮುನ್ಸೂಚನೆಯನ್ನರಿತ ಚಾಲಕರು ತಮ್ಮ ಆಂಬುಲೆನ್ಸ್ ವಾಹನವನ್ನು ಸುಮಾರು ೪ ಕಿ.ಮೀ. ದೂರವಿರುವ ಮತ್ತೊಂದು ಸ್ಮಶಾನಕ್ಕೆ ಕರೆದೊಯ್ದಿದ್ದರು. ಬೇಗನೆ ಗುಂಡಿಯೊಂದನ್ನು ಅಲ್ಲಿ ತೋಡಲು, ಜೆಸಿಬಿ ಮೇಷಿನ್ನೊಂದನ್ನು ಕೂಡ ತರಿಸಲಾಗಿತ್ತು. ಅದು ೧೨ ಅಡಿ ಆಳದ ಗುಂಡಿಯೊಂದನ್ನು ರಾತ್ರಿ ೧೧. ೩೦ರ ವೇಳೆಗೆ ತೆಗೆದು ಮುಗಿಸಾಗಿತ್ತು. ನಾಲ್ಕು ವೈದ್ಯರುಗಳು, ಒಬ್ಬ ಮಹಿಳಾ ನರ್ಸ್ ಮತ್ತು ಒಂದೆರಡು ಶುದ್ಧೀಕರಣದ ಸಿಬ್ಬಂದಿಗಳನೊಳಗೊಂಡ ತಂಡವೊಂದೂ ಅಲ್ಲಿಗೆ ಬಂದು ಸಿದ್ಧವಾಗಿ ನಿಂತಿತ್ತು. ಎಲ್ಲಾ ವಿಧಿವಿಧಾನಗಳನ್ನು ಮುಗಿಸಿ, ಶವವನ್ನು ಗುಂಡಿಯೊಳಗೆ ಇಳಿಸಿಯೂ ಆಗಿತ್ತು. ಇದ್ದಕಿದ್ದಂತೆ ದೊಣ್ಣೆ, ಮಚ್ಚುಗಳನ್ನು ಹಿಡಿದ ೬೦-೭೦ ಪುಂಡರ ಗುಂಪೊಂದು ಪ್ರತ್ಯಕ್ಷವಾಗಿ, ದಿಢೀರನೆ ಎಲ್ಲರನ್ನೂ ಹೊಡಿ-ಬಡಿಯಲಾರಂಭಿಸಿತು. ಆ ಕ್ರೂರಿಗಳು ಎಸೆದ ಕಲ್ಲು, ಇಟ್ಟಿಗೆಗಳಿಂದ ಡಾ. ಕಿರಣ್ ಮತ್ತು ಅವರ ಸಹಚರರು ತೀವ್ರವಾಗಿ ಗಾಯಗೊಂಡರು. ಆಕ್ರಮಣಕಾರಿಗಳ ಗುಂಪಿನಲ್ಲಿದ್ದ ಒಂದಿಬ್ಬರು ಕಿಡಿಗೇಡಿಗಳನ್ನು ಡಾ. ಕಿರಣ್ ಗುರುತಿಸಿ, ಹೊಡಿ-ಬಡಿಯುವುದನ್ನು ನಿಲ್ಲಿಸುವಂತೆ ವಿನಂತಿಸಿಕೊಂಡರೂ, ನಿರ್ದಯಿಗಳಾದ ಅವರು ಕರುಣೆ ತೋರದಾದರು. ನಿಷ್ಕರುಣಿಗಳಾದ ಅವರು ಮಹಿಳಾ ನರ್ಸ್ ರವರನ್ನು ಕೂಡ ಲೆಕ್ಕಿಸದೆ ಥಳಿಸಿದರು. ನೋಡು ನೋಡುತ್ತಿದ್ದಂತೆ, ಚಾಲಕ ದೇವಿಂದರ್ ಹಾಗು ಸಹಾಯಕ ಸತೀಶ್ ರವರಗಳು ತಲೆ- ಪೆಟ್ಟಿನಿಂದ ರಕ್ತಸ್ರಾವಗೊಂಡು ನೆಲಕ್ಕುರುಳಿದರು. ಶವದ ಪೆಟ್ಟಿಗೆಯನ್ನೂ ಬಿಡದ ಅವರುಗಳು ಕಲ್ಲುಗಳಿಂದ ಅದನ್ನೂ ಚಚ್ಚಿಟ್ಟರು. ಬೇರೆ ಮಾರ್ಗ ತೋಚದೆ, ಡಾ. ಕಿರಣ್ ಮತ್ತವರ ಉಳಿದ ಸಂಗಡಿಗರು ಹೇಗೋ ಶವವನ್ನು ಮೇಲೆತ್ತಿ ಪೆಟ್ಟಿಗೆಯೊಳಗೆ ಸೇರಿಸಿ, ತಮ್ಮ ವಾಹನದೊಳಗೆ ತಳ್ಳಿದರು. ಚಾಲಕ ದೇವೀಂದರ್ ರವರು ಪ್ರಜ್ಞಾಹೀನರಾಗಿದ್ದರಿಂದ, ಡಾ. ಕಿರಣ್ ರವರೆ ವಾಹನವನ್ನು ನಡೆಸಬೇಕಾಯ್ತು. ತೀವ್ರವಾಗಿ ಗಾಯಗೊಂಡ ಸತೀಶ ಮತ್ತು ದೇವೀಂದರ್ ರವರುಗಳನ್ನು ಮೊದಲು ಹತ್ತಿರದ ಆಸ್ಪತ್ರೆಯೊಂದಕ್ಕೆ ಸೇರಿಸಲಾಯ್ತು. ವಾಹನದೊಳಗೀಗ ಡಾ. ಕಿರಣ್ ಏಕಾಂಗಿಯಾಗಿ ಬಿಟ್ಟಿದ್ದರು.
ಶವ ಹೊತ್ತ ವಾಹನದೊಂದಿಗೆ ಡಾ. ಕಿರಣ್ ಸಮೀಪದ ಪೊಲೀಸ್ ಠಾಣೆಯೊಂದನ್ನು ಸೇರಿದರು. ವಿವರ ತಿಳಿದ ಪೊಲೀಸ್ ಅಧಿಕಾರಿ, ಅವಶ್ಯಕ ಸಿಬ್ಬಂದಿಗಳ ತಂಡವನ್ನು ಕೂಡಲೇ ಕರೆಸಿದರು. 'ನಗರದಿಂದ ದೂರವಿರುವ ಬೇರೊಂದು ಕಡೆಗೆ ಹೋಗೋಣ'ವೆಂಬ ಪೊಲೀಸರ ಸಲಹೆಯಂತೆ ಶವದ ವಾಹನವನ್ನೀಗ ಡಾ. ಕಿರಣ್, ಮೂರನೇ ಸ್ಮಶಾನದ ಕಡೆಗೆ ಚಲಾಯಿಸಿದರು. ಜೆಸಿಬಿ ಮೇಷಿನ್ ಕೂಡ ಶವದ ವಾಹನವನ್ನು ಹಿಂಬಾಲಿಸಿತು. ದೂರದ ಸ್ಮಶಾನ ತಲುಪಿ, ೧೨ ಅಡಿ ಆಳದ ಗುಂಡಿಯೊಂದನ್ನು ತೊಡುವ ಹೊತ್ತಿಗೆ ಸಮಯ ನಡುರಾತ್ರಿಯ ೨ ಗಂಟೆಯಾಗಿತ್ತು. ಪೊಲೀಸರ ರಕ್ಷಣೆ ಇದ್ದರೂ, ಡಾ. ಕಿರಣ್ ಮತ್ತವರ ಸಂಗಡಿಗರು ಭಯಭೀತರಾಗಿದ್ದರು. ಪುಂಡರುಗಳ ತಂಡ ಯಾವಾಗ ಬಂದು ಮೇಲೆರಗುತ್ತದೆಯೋ ಎಂಬ ಆತಂಕ ಎಲ್ಲರಲ್ಲೂ ಇತ್ತು. ಶವವನ್ನು ಬೇಗ ಬೇಗ ಗುಂಡಿಯಲ್ಲಿಳಿಸಿ ಮಣ್ಣು ಮುಚ್ಚುವ ಕೆಲಸವನ್ನು ಮುಗಿಸಲಾಯಿತು. ಶವ ಸಂಸ್ಕಾರ ಮುಗಿದಿದ್ದರೂ ಡಾ. ಕಿರಣ್ ಮಾತ್ರ ಮ್ಲಾನಚಿತ್ತರಾಗಿದ್ದು ಸುಳ್ಳಲ್ಲ.
ಕೋವಿಡ್ನಿಂದ ಮೃತಪಟ್ಟ ಹಿರಿಯ ವೈದ್ಯೆ ಡಾ. ಸುಲೋಚನಾ ಸಿಂಗ್ ರವರ ಬಲಗೈ ಬಂಟನಾಗಿ ದುಡಿಯುತ್ತಿದ್ದವರು, ತರುಣ ವೈದ್ಯ ಡಾ. ಕಿರಣ್. ಅವಿವಾಹಿತೆಯಾದ ಡಾ. ಸುಲೋಚನಾರವರಿಗೆ ಡಾ. ಕಿರಣ್ ಸಾಕುಮಗನಂತಾಗಿ ಹೋಗಿದ್ದರು. ೫೭ರ ಹರೆಯದಲ್ಲೇ ಅಕಾಲಿಕ ಮರಣ ಹೊಂದಿದ ಹಿರಿಯ ಜೀವಕ್ಕೆ ಗೌರವೋಚಿತ ಅಂತಿಮ ವಿದಾಯವನ್ನು ನೀಡಲಾಗದ ದುರ್ದೈವ ಇಂದು ಡಾ. ಕಿರಣ್ ರವರದ್ದಾಗಿತ್ತು. ಜನಪ್ರಿಯ ವೈದ್ಯೆ ಡಾ. ಸುಲೋಚನಾರವರ ಕೋವಿಡ್ ಸಾವು ಅವರ ಸಮೀಪವರ್ತಿಗಳನ್ನೆಲ್ಲಾ ಶೋಕಸಾಗರದಲ್ಲಿ ಮುಳುಗಿಸಿತ್ತು. ಬಡ ಗ್ರಾಮೀಣ ಕುಟುಂಬವೊಂದರಲ್ಲಿ ಜನಿಸಿದ ಡಾ. ಸುಲೋಚನಾರವರನ್ನು, ಸುಮಾರು ಮೂರು ದಶಕಗಳ ಹಿಂದೆ 'ಲೂನಾ ಡಾಕ್ಟರ್' ಎಂದೇ ಹಳ್ಳಿಗರು ಕರೆಯುತ್ತಿದ್ದರು. ಆ ದಿನಗಳಲ್ಲಿ ಬಡವರ ದ್ವಿಚಕ್ರ ವಾಹನವಾಗಿದ್ದ 'ಲೂನಾ'ವೇರಿ ದುರ್ಗಮ ಹಳ್ಳಿ-ಹಳ್ಳಿಗಳನ್ನು ತಲುಪಿ, ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಸುಲೋಚನಾರವರಿಗೆ, ತಮ್ಮದೇ ಆದ 'ಕ್ಲಿನಿಕ್'ವೊಂದು ಇರಲೇ ಇಲ್ಲ. ಸರ್ಕಾರೀ ಆಸ್ಪತ್ರೆಗಳಿಂದ ದೂರವಿರುವ ಹಳ್ಳಿಗಳನ್ನು ಗುರುತಿಸಿ, ಆ ಹಳ್ಳಿಗಳನ್ನು ದಿನ ಬಿಟ್ಟು ದಿನ ತನ್ನ ವಾಹನವೇರಿ ತಲುಪುತ್ತಿದ್ದ ಆಕೆಗೆ, ಹಳ್ಳಿಯ ಮರಗಳ ನೆರಳ ತಾಣವೇ 'ಕ್ಲಿನಿಕ್' ಆಗಿ ಹೋಗಿತ್ತು. ಮಳೆ ದಿನಗಳಲ್ಲಿ, ಹಳ್ಳಿಯ ದೇವಸ್ಥಾನದ ಆವರಣವೋ ಅಥವಾ ದಯಾವಂತ ಹಳ್ಳಿಗರ ಮನೆಯ ಜಗುಲಿಯೋ ಸುಲೋಚನಾರ ಚಿಕಿತ್ಸಾಸ್ಥಾನವಾಗಿ ಹೋಗುತ್ತಿತ್ತು. ರೋಗಿಗಳ ಪರೀಕ್ಷೆ ಮಾಡಲು ಬೇಕಾದ ಮಂಚ-ಕುರ್ಚಿಗಳನ್ನು ಗ್ರಾಮೀಣರೇ ಒದಗಿಸುವ ಪರಿಪಾಠವೂ ಇತ್ತು. ದಿನ ಬೆಳಗಾಗುವುದರೊಳಗೆ ಸುತ್ತಲಿನ ನಾಲ್ಕಾರು ಹಳ್ಳಿಗಳ ರೋಗಿಗಳು ತಮ್ಮ ಎತ್ತಿನಗಾಡಿಗಳನ್ನೇರಿ ಬಂದು ಡಾ. ಸುಲೋಚನಾರವರ ಪೂರ್ವನಿಯೋಜಿತ ಹಳ್ಳಿಯನ್ನು ತಲುಪುತ್ತಿದ್ದರು. ಆಕೆ ಬಂದ ಕೂಡಲೇ ನೆರೆದ ಹಳ್ಳಿಗರೆಲ್ಲರೂ ಎದ್ದುನಿಂತು 'ನಮಸ್ತೆ ಡಾಕ್ಟರಮ್ಮಾ' ಎಂದು ಒಕ್ಕೊರಳಿನಲ್ಲಿ ಹೇಳಿ ಗೌರವ-ಪ್ರೀತಿಗಳನ್ನು ತೋರ್ಪಡಿಸುತ್ತಿದ್ದರು. ಅಷ್ಟೇ ವಿನಮ್ರತೆಯಿಂದ ಡಾ. ಸುಲೋಚನಾರವರು ಕೂಡ ಎಲ್ಲಾ ರೋಗಿಗಳನ್ನು ತನ್ಮಯರಾಗಿ ಪರೀಕ್ಷಿಸಿ, ಬೇಕಾದ ಚಿಕಿತ್ಸೆಗಳನ್ನು ನೀಡುತ್ತಿದ್ದರು. ಹಳ್ಳಿಗರ ಕಷ್ಟಗಳನ್ನರಿತ ಸುಲೋಚನಾರವರು ರೋಗಿಗಳಿಗೆ ಬೇಕಾಗುವ ಔಷಧಗಳ 'ಕಿಟ್' ಒಂದನ್ನು ತಾವೇ ಹೊತ್ತು ತರುತ್ತಿದ್ದರು. ಎಲ್ಲರ ನೆಚ್ಚಿನ ವೈದ್ಯೆಯಾದ ಅವರು, ಯಾವ ರೋಗಿಯಿಂದಲೂ, 'ಇಷ್ಟು-ಅಷ್ಟು' ಎಂದು ಹಣವನ್ನು ಕೇಳುತ್ತಿರಲಿಲ್ಲ. ಹೆಚ್ಚಿನ ರೋಗಿಗಳು ಸ್ವಪ್ರೇರಿತರಾಗಿ ರೂ. ೨ ನೀಡುವುದು ವಾಡಿಕೆಯಾಗಿ ಹೋಗಿತ್ತು. ಇಂಜೆಕ್ಷನ್ ಚಿಕಿತ್ಸೆಯನ್ನು ಪಡೆದ ರೋಗಿಗಳು ರೂ. ೪ ನೀಡಿದ್ದೇ ಹೆಚ್ಚೆನಿಸಿತ್ತು. ಇದೆಲ್ಲಕ್ಕಿಂತ ಮಿಗಿಲಾಗಿ, 'ಮೇಡಂ "ಕೈಗುಣ"ಕ್ಕೆ ಯಾವುದೇ ರೋಗವನ್ನು ಹುಷಾರು ಮಾಡಬಲ್ಲ ಶಕ್ತಿಯಿದೆ'ಯೆಂಬುದು ಗ್ರಾಮೀಣರ ವಿಶ್ವಾಸವಾಗಿತ್ತು.
೧೦ನೇ ತರಗತಿಯ ಪರೀಕ್ಷೆ ಎಂಬುದು ಗ್ರಾಮೀಣ ವಿದ್ಯಾರ್ಥಿಗಳ ನಿರ್ಣಾಯಕ ಹಂತ. ಆ ಮಕ್ಕಳ ಕಷ್ಟವನ್ನರಿತ ಡಾ. ಸುಲೋಚನಾರವರು, ಪರೀಕ್ಷೆಗೆ ಎರಡು ತಿಂಗುಳುಗಳ ಮುಂಚೆಯೇ ತಾವಾಗೇ 'ಪಾಠದ ಮೇಡಂ' ಆಗುತ್ತಿದ್ದರು. ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳನ್ನು ಸ್ಥಳೀಯ ಭಾಷೆಯಲ್ಲಿ ಭೋಧಿಸುವುದರಲ್ಲಿ ಸಿದ್ಧಹಸ್ತೆಯಾದ ಮೇಡಂ ತರಗತಿಗಳು ತುಂಬಿಹೋಗಿರುತ್ತಿದ್ದವು. ಸುಲೋಚನಾರವರ ಮಾರ್ಗದರ್ಶನದಿಂದಲೇ ಪ್ರತಿವರ್ಷ ೧೦ನೇ ತರಗತಿಯ ಫಲಿತಾಂಶ ಚೆನ್ನಾಗಿ ಬರುತ್ತಿದೆ ಎಂಬುದು ಆ ಹಳ್ಳಿಗರ ಧೃಡ ನಂಬಿಕೆಯಾಗಿ ಹೋಗಿತ್ತು. ಆ ಎಲ್ಲಾ ಹಳ್ಳಿಗರ ಪಾಲಿಗೆ ಸ್ನೇಹಿತೆಯೂ, ಮಾರ್ಗದರ್ಶಕಿಯೂ ಆಗಿಹೋಗಿದ್ದ ಡಾ. ಸುಲೋಚನಾರವರು, ರೈತರಿಗೆ ಕೃಷಿ ಸಲಹೆಗಳನ್ನೂ ನೀಡುತ್ತಿದ್ದರು. ರೈತರ ಮಗಳಾದ ಆಕೆಗೆ ಮಳೆ-ಬೆಳೆ-ಬಿತ್ತನೆ-ಗೊಬ್ಬರ ಮುಂತಾದ ವಿಷಯಗಳು ಚೆನ್ನಾಗಿಯೇ ತಿಳಿದಿತ್ತು.
ಕಡಿಮೆ ವೆಚ್ಚದಲ್ಲಿ, ಎಲ್ಲ ರೋಗಗಳಿಗೂ ಸಮರ್ಪಕ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆಯೊಂದನ್ನು ತಮ್ಮ ನಗರದಲ್ಲಿ ಸ್ಥಾಪಿಸಬೇಕೆಂಬುದೇ ಡಾ. ಸುಲೋಚನಾ ಸಿಂಗ್ ರವರ ಅಭಿಲಾಷೆಯಾಗಿತ್ತು. ಸುಮಾರು ಎರಡು ದಶಕಗಳ ಹಿಂದೆ 'ಸೇವಾ ಆಸ್ಪತ್ರೆ'ಯ ಆರಂಭದೊಂದಿಗೆ ಅವರ ಆಶಯ ಈಡೇರಿತ್ತು. ಚಿಕಿತ್ಸೆಯನ್ನರಸಿ ಬರುವ ಬಡ ರೋಗಿಗಳಿಗೆ ಕನಿಷ್ಠ ವೆಚ್ಚದ ವಿಶೇಷ ವ್ಯವಸ್ಥೆ 'ಮೇಡಂ ಆಸ್ಪತ್ರೆ'ಯಲ್ಲಿ ಸದಾ ಲಭ್ಯವಿರುತ್ತಿತ್ತು. ಹೆಚ್ಚಿನ ಹಣ ನೀಡಬಲ್ಲ ಧನಿಕ ರೋಗಿಗಳಿಂದ ಹೆಚ್ಚು ಶುಲ್ಕವನ್ನು ವಸೂಲಿ ಮಾಡಿ ಆಸ್ಪತ್ರೆ ಖರ್ಚು-ವೆಚ್ಚವನ್ನು ನಿಭಾಯಿಸುವಲ್ಲಿ ಡಾ. ಸುಲೋಚನಾರಿಗೆ ಸಾಕು-ಸಾಕಾಗಿ ಹೋಗುತ್ತಿತ್ತು. ಹಾಗಾಗಿ ಇತ್ತೀಚೆಗೆ ಹಣಕಾಸಿನ ಪೂರ್ಣ ಭಾರವನ್ನು ಅವರು ಡಾ. ಕಿರಣ್ ರವರಿಗೆ ವಹಿಸಿಬಿಟ್ಟಿದ್ದರು. ಏನೇ ಆಗಲಿ, ನೀಡಲು ಹಣವಿಲ್ಲವೆಂಬ ಕಾರಣಕ್ಕೆ, ಬಡ ರೋಗಿಗಳಿಗೆ ಮೇಡಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸುವುದಿಲ್ಲ ಎಂಬುದು ಜನಸಾಮಾನ್ಯರ ವಿಶ್ವಾಸವಾಗಿಬಿಟ್ಟಿತ್ತು. ಸಾವಿನ ಮನೆಯ ಕದ ತಟ್ಟಿಬಂದ ಎಷ್ಟೋ ರೋಗಿಗಳಿಗೆ ಡಾ. ಸುಲೋಚನಾರವರ ಆಸ್ಪತೆಯಲ್ಲಿ ಮರುಜೀವ ದೊರಕಿಸಿದ ಘಟನೆಗಳು ನಗರದಲ್ಲಿ ಮನೆಮಾತಾಗಿದ್ದವು. ಹಾಗಾಗಿ ಡಾ. ಸುಲೋಚನಾ ಬಡವರ ಪಾಲಿನ 'ದೇವಿ'ಯಾಗಿ ಹೋಗಿದ್ದರು.
ಆದರೆ ಕಳೆದ ೨೦೨೦ರ ಮಾರ್ಚ್ ತಿಂಗಳಿಂದ ಡಾ. ಸುಲೋಚನಾರವರು ಹೊಸ ಸವಾಲೊಂದನ್ನು ಎದುರಿಸುತ್ತಿದ್ದರು. ಜೀವ ಹಿಂಡುವ ಕೋವಿಡ್-೧೯ರ ಹಾವಳಿ ಅವರ ನಗರದಲ್ಲಿ ತುಸು ಹೆಚ್ಚಾಗಿಯೇ ಇತ್ತು. ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ರೋಗಿಗಳನ್ನು ನಿಭಾಯಿಸಲಾಗದ ಸರಕಾರ, ನಗರದ ಡಾ. ಸುಲೋಚನಾರವರ 'ಸೇವಾ ಆಸ್ಪತ್ರೆ'ಯನ್ನೂ ಕೋವಿಡ್ ಚಿಕಿತ್ಸೆಗೆಂದು ಆಯ್ಕೆ ಮಾಡಿಕೊಂಡಿತ್ತು. ಕೋವಿಡ್ ರೋಗಕ್ಕೆ ಸಂಬಂಧಪಟ್ಟಂತಹ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು, ಸರಕಾರ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ನೀಡುವ ವ್ಯವಸ್ಥೆ ಮೇಡಂ ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ಕೋವಿಡೇತರ ರೋಗಿಗಳ ಸಂಖ್ಯೆ ತಗ್ಗಿದ್ದರಿಂದ ಆಗುತ್ತಿರುವ ಆದಾಯದ ಖೋತವನ್ನು ಲೆಕ್ಕಿಸದೆ ಮೇಡಂ ಬಡ ಕೋವಿಡ್ ರೋಗಿಗಳ ಉಚಿತ ಚಿಕಿತ್ಸೆಯನ್ನು ಮುಂದುವರೆಸಿದ್ದರು. ಆಸ್ಪತ್ರೆಯ ಮುಖ್ಯಸ್ಥೆಯಾದರೂ, ತಮ್ಮ ಆಸ್ಪತ್ರೆಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಡಾ. ಸುಲೋಚನಾ ಹಿಂದುಳಿದಿರಲಿಲ್ಲ. ಅವರ ಕಾರ್ಯವೈಖರಿ ಮಿಕ್ಕೆಲ್ಲಾ ಕೊರೋನಾ ಕಾರ್ಯಕರ್ತರುಗಳಿಗೆ ಮಾದರಿಯಾಗಿತ್ತು. ದುರ್ದೈವವೋ, ಏನೋ ಎಂಬಂತೆ ಕೆಲವು ವಾರಗಳನಂತರ ಡಾ. ಸುಲೋಚನಾರವರಿಗೇ, ಹೆಮ್ಮಾರಿ ಕೊರೋನಾ ವಕ್ಕರಿಸಿತ್ತು. ಕೂಡಲೇ ಚಿಕೆತ್ಸೆಗೆ ಒಳಪಟ್ಟ ಅವರನ್ನು ದಿಗ್ಬಂಧನದಲ್ಲಿರಿಸಲಾಗಿತ್ತು. ದಿನೇ ದಿನೇ ಹದಕೆಟ್ಟ ಆಕೆಗೆ ಉಸಿರಾಟದ ಸಮಸ್ಯೆ ಉಂಟಾದಾಗ, ಬೇರೆ ಮಾರ್ಗವಿಲ್ಲದೆ ಡಾ.ಕಿರಣ್, ಅವರಿಗೆ 'ವೆಂಟಿಲೇಟರ್' ಅಳವಡಿಸಬೇಕಾಯಿತು. 'ಎಂತಹ ವಿಷಮ ಪರಿಸ್ಥಿತಿಯಲ್ಲೂ ಧೈರ್ಯದಿಂದಿರಿ' ಎಂದು ತಮ್ಮ ರೋಗಿಗಳಿಗೆ ತಿಳಿಹೇಳುತ್ತಿದ್ದ ಡಾ. ಸುಲೋಚನಾ, ಸ್ವತಃ ಧೈರ್ಯದಿಂದಿರುವಂತೆ ಕಂಡರೂ, ಮಾರಕ ಕೋವಿಡ್ ಒಳಗಿನಿಂದಲೇ ಅವರನ್ನು ಸ್ವಲ್ಪ-ಸ್ವಲ್ಪವಾಗಿ ಕೊಲ್ಲುತ್ತಿತ್ತು. ಅಧೀರರಾದಂತೆ ಕಂಡ ಡಾ. ಕಿರಣ್ ರವರು ದೇವರಿಗೂ ಹರಕೆ ಹೊತ್ತಿದ್ದೂ ಆಯಿತು. ಜೀವಾನಿಲದ ಕೊರತೆ ತೀವ್ರವಾದ ಒಂದು ದಿನ, ಮಾರಿ ಕೋವಿಡ್ ಡಾ. ಸುಲೋಚನಾರ ಜೀವವನ್ನು ಹಿಂಡಿ ಹಿಂಡೇ ಕೊಂಡೊಯ್ದಿತ್ತು. 'ಕೆಲವೊಮ್ಮೆ ದೇವರಿಗೂ ಡಾ. ಸುಲೋಚನಾರವರಂಥ ಸೇವಾತತ್ಪರರ ಅವಶ್ಯಕತೆ ಉಂಟಾಗುತ್ತೋ ಏನೋ? ಅಂಥವರುಗಳ ಜೀವವನ್ನು ಕೊಂಡೊಯ್ಯುವಲ್ಲಿ ದೈವ ಹಿಂದೆ ಮುಂದೆ ನೋಡದೇಕೆ?' ಎಂಬ ಪ್ರಶ್ನೆ ಡಾ. ಕಿರಣ್ ರವರನ್ನು ಮತ್ತೆ ಮತ್ತೆ ಕಾಡಿತ್ತು.
ಡಾ. ಸುಲೋಚನಾರವರೊಂದಿಗಿನ ತಮ್ಮ ಅವಿನಾಭಾವ ಸಂಬಂಧದ ಅಲೆಗಳನ್ನು ಡಾ. ಕಿರಣ್ ಮೆಲಕು ಹಾಕುತ್ತಿದ್ದರು. 'ಸಾವು ಜೀವವನ್ನು ಅಂತ್ಯಗೊಳಿಸಬಹುದು, ಸಂಬಂಧಗಳನ್ನಲ್ಲ,' ಎಂಬ ಮೇಡಂ ಮಾತುಗಳು ಕಿರಣ್ ರವರ ಕಿವಿಯಲ್ಲಿ ರಿಂಗಣಿಸುತ್ತಿತ್ತು. 'ಸುಲೋಚನಾರವರಂಥ ಸಾತ್ವಿಕ ಜೀವಿಯನ್ನೂ ನಿಷ್ಕರುಣಿ ಸಾವು ಲೆಕ್ಕಿಸದಾಯಿತೇಕೆ?' ಎಂಬ ಪ್ರಲಾಪ ಕಿರಣ್ ರದ್ದಾಗಿತ್ತು. ಅವರದೇ ಎಂಬ ಕುಟುಂಬವಿರದ ಡಾ. ಸುಲೋಚನಾರವರ ಅಂತಿಮ ಸಂಸ್ಕಾರದ ದುಃಖಮಯ ಕಾರ್ಯ ಅಂದು ಡಾ. ಕಿರಣ್ ರವರ ಹೆಗಲಿಗೆ ಬಿದ್ದಿತ್ತು. 'ಅವರಿಂದ ಧೀರ್ಘಕಾಲಾವಧಿಯ ಉಚಿತ ಸೇವೆಯನ್ನು ಪಡೆದ ಊರಿನ ಜನಗಳು ಇಂದು ಇಷ್ಟು ಕಠೋರವಾಗೇಕೆ ವರ್ತಿಸಿದರು? ಎಲ್ಲ ಸಮುದಾಯಗಳಲ್ಲೂ ಕಾಣಬರುವ "ಮುಗ್ಧಜೀವಿಗಳ ನಿಜರೂಪ"ವನ್ನು ಕೋವಿಡ್ ಸಂಕಟವಿಂದು ಅನಾವರಣಗೊಳಿಸಿತೆ? ಅಥವಾ ಅಂತಹ ಮುಗ್ಧಜೀವಿಗಳನ್ನು ಪ್ರಚೋದಿಸುವ ದುಷ್ಟಕೂಟವೊಂದಿದೆಯೆ? ಕೋವಿಡ್ ಹರಡುವ ಭಯವಿದ್ದ ಮಾತ್ರಕ್ಕೆ, ಜನಗಳ ಗೂಂಡಾವರ್ತನೆ ಸರಿಯೆ? ಕೋವಿಡ್ನಿಂದ ಮೃತಪಟ್ಟವರ ಶವವನ್ನು ಮಣ್ಣು ಮಾಡುವಾಗ ಅನುಸರಿಸುವ ಮುನ್ನೆಚ್ಚಿರಿಕೆಗಳನ್ನು ವಿವರಿಸಿದ್ದೂ, ಅವರುಗಳಿಗೆ ತಿಳಿಯದಾಯಿತೆ? ದಿನನಿತ್ಯ ಅವರುಗಳ ಸೇವೆಯಲ್ಲಿ ನಿರತರಾಗಿರುವ ವೈದ್ಯರುಗಳ ಮಾತಿಗೆ ಅವರಲ್ಲಿ ಬೆಲೆಯಿಲ್ಲದಾಯಿತೆ? ಡಾ. ಸುಲೋಚನಾರವರೇ ಏಕೆ? ಯಾವುದೇ ಸಾಧಾರಣ ವ್ಯಕ್ತಿ , ಯಾವುದೇ ಕಾರಣಕ್ಕೆ ಮೃತಪಟ್ಟರೆ, ಅವನಿಗೊಂದು ಗೌರವಯುತ "ಅಂತಿಮ ವಿದಾಯ" ನೀಡಬೇಕೆಂಬುದನ್ನು ಜನಗಳು ಮರೆತರೆ?' ಡಾ. ಕಿರಣರ ಪ್ರಲಾಪ ಲಹರಿ ಮುಂದುವರೆದಿತ್ತು. ತರುಣ ವೈದ್ಯರಾದ ಅವರಿಗೆ ಸಾವೆಂಬುದು ಹೊಸದೇನಾಗಿರಲಿಲ್ಲ. ಆದರೂ ತಮ್ಮ ಅತ್ಯಂತ ಪ್ರೀತಿಪಾತ್ರವಾದ ಜೀವವೊಂದಕ್ಕೆ ಅಂತಿಮ ವಿದಾಯ ನೀಡುವ ಸಂದರ್ಭದಲ್ಲಿ, ಊರಿನ ಜನರುಗಳು ಪ್ರದರ್ಶಿಸಿದ ರಾಕ್ಷಸೀ ವರ್ತನೆ ಮಾತ್ರ ಕಿರಣರಿಗೆ ಬೇಸರ ಮೂಡಿಸಿದ್ದು ಸುಳ್ಳಲ್ಲ.
ಕೊರೋನಾ ಸೇನಾನಿಗಳಿಗೆ ಸ್ವಾರ್ಥವೆಂಬುದಿಲ್ಲ. ಕರ್ತವ್ಯದ ಅನಿವಾರ್ಯತೆಗಳಿಗಾಗಿ ತಮ್ಮ ಜೀವವನ್ನೇ ಒತ್ತೆ ಇಟ್ಟಿರುವ ಅವರುಗಳಿಗೆ, ಸತ್ತಾಗ ನೀಡುವ '೨೧ ತುಪಾಕಿಗಳ ಸದ್ದಿ'ನ ಗೌರವದ ನಿರೀಕ್ಷೆ ಕಿಂಚಿತ್ತೂ ಇರುವುದಿಲ್ಲ. ಅವರುಗಳು ಬಯಸುವುದು 'ಸೇವಾ ನಿರತರುಗಳಾಗಿರುವಾಗ ಬೇಕಾದ ರಕ್ಷಣೆ ಮಾತ್ರ.' ಒಂದೊಮ್ಮೆ ಸತ್ತರಂತೂ ಇನ್ನೇನು ಉಳಿದಿರದು. ಆದರೂ 'ಸಾವಿಗೊಂದು ಘನೆತೆ ಇದೆ. ಆ ಘನೆತೆಯನ್ನು ಕಾಪಾಡಲು ಮೃತ ಆತ್ಮಕ್ಕೊಂದು ಗೌರವಯುತ ಅಂತಿಮ ವಿದಾಯವನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೆ?' ಎಂಬಾ ಯೋಚನೆಯಲ್ಲಿ ಮುಳುಗಿದ ಕಿರಣ್ ಕೂತ ಕುರ್ಚಿಯಲ್ಲೇ ನಿದ್ದೆಗೆ ಜಾರುವಷ್ಟರಲ್ಲೇ, ಹೊಸದೊಂದು ದಿನದ ಸೂರ್ಯೋದಯವಾಗಿತ್ತು. ***
No comments:
Post a Comment