Wednesday 25 November 2020

ಕವನೋತ್ಸವ  

(ರಚನೆ: ಲಕ್ಷ್ಮೀನಾರಾಯಣ ಕೆ.)

ಯಾರಿವರು?

***

ಮೂರ್ತಿ ಚಿಕ್ಕದಾದರೂ 

ಕೀರ್ತಿ ದೊಡ್ಡದಂತೆ 

ಮೊದಲಾಟದಲ್ಲೇ ಸಿಡಿಯಿತಂತೆ 

ಭರ್ಜರಿ ಚೊಚ್ಚಲ ಶತಕ 

ಬ್ಯಾಟಿಂಗ್ ಕಲೆಯ ನಿಪುಣನೀತ 

ನೂರೇರಿಸಿದಾಗೆಲ್ಲ ನಾವ್  ಸೋತಿಲ್ಲವಂತೆ 

'ವಿಶ್ವ'ಮಾನ್ಯ ಕನ್ನಡಿಗನೀತ 

ಸಜ್ಜನ ಕ್ರಿಕೆಟಿಗನಂತೆ 


ಕನ್ನಡ ಪ್ರೇಮಿ ಮಿತ್ರರೇ 

ನವೆಂಬರ್ ಕನ್ನಡ ಮಾಸದಾದಿಯಲ್ಲಿ 'ಪ್ರಕಾಶ ಶೆಟ್ಟರ ವ್ಯಂಗ್ಯೋತ್ಸವ'ದಲ್ಲಿ ಪಾಲುಗೊಂಡಿದ್ದೀರಿ. ಇದರಿಂದ ಪ್ರೇರಿತನಾದ ನಾನು, ಮಾಸಾಂತ್ಯಕ್ಕೆ ಉಳಿದಿರುವ ಒಂಬತ್ತು ದಿನಗಳ ಸದುಪಯೋಗ ಮಾಡಿಕೊಳ್ಳಲೆಂದು 'ಕವನೋತ್ಸವ'ವನ್ನು ಇಂದಿನಿಂದ ಆರಂಭಿಸುತ್ತಿದ್ದೇನೆ. ಪ್ರತಿದಿನ ಮಧ್ಯಾಹ್ನದ  ೧೨ ಘಂಟೆಯ ಹೊತ್ತಿಗೆ, ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತರಾದ ಕನ್ನಡಿಗರೊಬ್ಬರ ಬಗ್ಗೆ ಕವನವೊಂದನ್ನು ರಚಿಸಿ ಪ್ರಸ್ತುತಪಡಿಸುತ್ತೇನೆ. ಆ ವ್ಯಕ್ತಿ ಯಾರೆಂಬುದನ್ನು ಗುರುತಿಸ ತಮ್ಮ ಉತ್ತರವನ್ನು ಕೆಳಗೆ ನೀಡಿ. ನಾಳಿನ ಮಧ್ಯಾಹ್ನದ ೧೨ರವರೆಗಿನ ಸರಿಯುತ್ತರಗಳಲ್ಲಿ 'ಲಕ್ಕಿ ಡಿಪ್' ಮುಖಾಂತರ ಆಯ್ಕೆಯಾದ ಮಹನೀಯರೊಬ್ಬರ ಚಿತ್ರವನ್ನು, ಅವರು ಗುರುತಿಸಿದ ಪ್ರಖ್ಯಾತ ವ್ಯಕ್ತಿಯ ಭಾವಚಿತ್ರದೊಂದಿಗೆ ಮರುದಿನ ಈ ಮಾಧ್ಯಮದಲ್ಲಿ ಪ್ರಕಟಿಸಲಾಗುವುದು. 'ಕವನೋತ್ಸವದಲ್ಲಿ ಭಾಗವಹಿಸಿ, ಕನ್ನಡತನ ಮೆರೆಯಿರಿ' ಎಂಬುದು ನನ್ನ ಅರಿಕೆ. 


ಕವನೋತ್ಸವ - ೨

***

ಯಾರಿವರು?

***

ಚಾಮಯ್ಯ ಮೇಷ್ಟ್ರ ಪ್ರೀತಿಯೇ 

ಶಿಷ್ಯನಿಗೆ ಮುಳುವಾಯ್ತೆ?


ಸದಾಶಿವರಾಯರ ಅತಿಯಕ್ಕರೆಯೂ 

ಮಿನುಗುತಾರೆಯ ಮೆರೆಸದಾಯ್ತೆ?


ದುರಂತಗಳಿಗೆ ಮುನ್ನುಡಿ ಬರೆವುದೆ 

ಇವರ ಪಾತ್ರವಾಯ್ತೆ?


'ನಮ್ಮ ಮಕ್ಕಳೀ'ತಂದೆ 

'ಸತ್ಯಮಾರ್ಗದಿ ನಡೆವ ಶಕ್ತಿ' ಬೇಡಿದರೇಕೆ?

(ರಚನೆ: ಲಕ್ಷ್ಮೀನಾರಾಯಣ ಕೆ.)

ಕವನೋತ್ಸವ - ೩

***

ಯಾರಿವರು?

***

ಹೆಸರಲಿ ಶಾಂತನಾದರೂ 

ಹೋರಾಟದ ಹಠವಂತನೆ?

ಕಾಗೋಡ ಗೂಡಿಗೆ ಲೋಹಿಯಾರ 

ಕರೆತಂದ ಭಗೀರಥನಿವನೆ?

'ಅವಸ್ಥೆ'ಯ ಶೋಷಿತನಿವ 

ಅರಸರ ಭೂಸುಧಾರಣೆಗೆ ಪ್ರೇರಣೆಯಾದನೆ?

ಏನವಸರವಿತ್ತೋ, ಬೇಗ ತೆರಳಿ 

ಉತ್ಸಾಹಿಗಳೇಕೆ ಅಲ್ಪಾಯುಗಳೆಂದೆಮ್ಮ ಕಾಡಿದನೆ?

(ರಚನೆ: ಲಕ್ಷ್ಮೀನಾರಾಯಣ ಕೆ.)


ಕವನೋತ್ಸವ - ೪

ಯಾರಿವರು?

***

ವಿಷವುಂಡವನ ಬೀಡ ನರ್ತಕಿಗೆ 

ಬೆಂಗಳೂರ ಬಿರುದೇಕೆ?

ಗೆಜ್ಜೆಪೂಜೆಗೆ ಕೊರಳೊಡ್ಡಿದರು, ನೃತ್ಯ, ಸಂಗೀತ 

ಸಾಹಿತ್ಯಗಳ  ಕರುಳಲೇ  ಪಡೆದಳೆ?

ತನು, ಮನ, ಧನಗಳ ಗಾನಗುರು ತ್ಯಾಗಯ್ಯಗರ್ಪಿಸಿ 

 ಅವರರಾಧನೆಗೆ ನಾಂದಿ ಹಾಡಿದಳೆ?

ಕೀಳೆಂಬ ಹಣೆಪಟ್ಟಿ ಹೊತ್ತು ಸೆಣಸಿ  

ಲೀನಳಾದಳಲ್ಲ ಗುರು ಚರಣದೊಳಗೆ!

(ರಚನೆ: ಲಕ್ಷ್ಮೀನಾರಾಯಣ ಕೆ.)


ಶಾಂತವೇರಿ ಗೋಪಾಲ ಗೌಡ 

ಕಿರು ಪರಿಚಯ 

*ಜನನ: ೧೯೨೩, ಅರಗ, ತೀರ್ಥಹಳ್ಳಿ, ಶಿವಮೊಗ್ಗ 

*ಸಮಾಜವಾದಿ ಲೋಹಿಯರವರ ಶಿಷ್ಯ 

*ಭೂರಹಿತ ರೈತರ ಹಕ್ಕುಗಳಿಗಾಗಿ 'ಕಾಗೋಡು ಚಳವಳಿ'ಯ ನೇತಾರ 

*ಯು.ಆರ್. ಅನಂತ ಮೂರ್ತಿಯವರು ಬರೆದ 'ಅವಸ್ಥೆ' ಕಾದಂಬರಿಯು ಇವರ ಹೋರಾಟದ ಕಥೆಯೆ.  ಈ ಕಾದಂಬರಿ ಮುಂದೆ ಸಿನಿಮಾವು ಆಯಿತು.  ಅನಂತ ನಾಗ್ ನಾಯಕರಾಗಿ ನಟಿಸಿದ್ದರು. 

*ಅವರ ಹೋರಾಟದಿಂದ ಮುಂದೆ ದೇವರಾಜ ಅರಸರು ಜಾರಿಗೆ ತಂದ  "ಉಳುವವನಿಗೆ ಭೂಮಿ" ಎಂಬ ಭೂಸುಧಾರಣೆಗೆ ಪ್ರೇರಣೆಯಾಯಿತು. 

*೧೯೫೨, ೬೨ ಮತ್ತು ೬೭ರಲ್ಲಿ ಮೂರು ಭಾರಿ ವಿಧಾನ ಸಭಾ ಸದಸ್ಯರಾಗಿ ಆಯ್ಕೆ. 

*೧೯೭೨ರಲ್ಲಿ, ೪೯ರ ಪ್ರಾಯದಲ್ಲೇ ಅಕಾಲಿಕ ಮರಣ 


ಕವನೋತ್ಸವ - ೫

ಯಾರಿವರು?

***

ಬಿದಿರ ಪಿಡಿದಿಹನೀತ, ಎಲ್ಲರನು ರಂಜಿಪನು  

ಬಿದಿರ ನಾದೋಪಾಸನೆಯ ಆರಾಧಕನಿವನು 

ದಣಿದ ಮನಗಳ ತಣಿಸಿ ಮುದವ ನೀಡಲು 

ಬಿದಿರ ಚಿಣ್ಣರ ಸೈನ್ಯವನೆ ಕಟ್ಟಿಹನು 

ಕಲಾರ್ಣವದ ರಸಪಾಕ ಉಣ ಬಡಿಪನೀತ 

ಅದರ ಸ್ವಾದವನೊಮ್ಮೆ ಸವಿಯ ಬನ್ನಿ 

ನಮ್ಮವರೊಳಗಿನೀ ವಾಮನ ಮೂರ್ತಿ 

ತ್ರಿವಿಕ್ರಮನಾದ ಕಥೆಯ ತಿಳಿಯ ಬನ್ನಿ 

(ರಚನೆ: ಲಕ್ಷ್ಮೀನಾರಾಯಣ ಕೆ.)


ಕವನೋತ್ಸವ - ೫

ಸರಿಯುತ್ತರ: ವೇಣು ವಿದ್ವಾನ್ ಶ್ರೀ ಎಚ್. ಎಸ್. ವೇಣುಗೋಪಾಲ್ 

ವಿಜೇತರು: ಶ್ರೀ. 

ಅಭಿನಂದನೆಗಳು 

ವೇಣು ವಿದ್ವಾನ್ ಶ್ರೀ ಎಚ್. ಎಸ್. ವೇಣುಗೋಪಾಲ್

ಕಿರು ಪರಿಚಯ 

ಬೆಂಗಳೂರಿನ ಹಿರಿಯ ವೇಣುವಾದಕ ಶ್ರೀ. ಎಚ್. ಎಸ್. ವೇಣುಗೋಪಾಲರವರು, ಮೈಸೂರಿನ ಕೀರ್ತಿಶೇಷ ವೇಣು ವಿದ್ವಾನ್ ಎ. ವಿ. ಪ್ರಕಾಶ್ ರವರ ಶಿಷ್ಯರಲ್ಲಿ ಪ್ರಮುಖರು. ಕಳೆದ ೫ ದಶಕಗಳಿಂದ ಬೆಂಗಳೂರನ್ನು ತಮ್ಮ ಸಾಧನೆಯ ಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಇವರು ಕರ್ನಾಟಕ ಸಂಗೀತ ಪದ್ಧತಿಯ ಎಲ್ಲ ಪ್ರಕಾರಗಳಲ್ಲೂ ನಿಷ್ಣಾತರು. ಹೆಸರಿಗೆ ತಕ್ಕ ವೇಣುಮಾಧುರ್ಯವನ್ನು ದೈವದತ್ತವಾಗಿ ಮೈಗೂಡಿಸಿಕೊಂಡಿರುವ ಇವರು, 'ಬಾರೋ ಕೃಷ್ಣಯ್ಯ, ಕೃಷ್ಣ ನೀ ಬೇಗನೆ ಬಾರೋ, ಆಡಿಸಿದಳೇಶೋಧ' ಮುಂತಾದ ಭಕ್ತಿಭಾವದ ಗೀತೆಗಳನ್ನು ನುಡಿಸಿದಾಗ ತಲೆದೂಗದ ರಸಿಕರೇ ಇಲ್ಲವೆನ್ನಬಹುದು. ಕೆಲವು ತಿಂಗಳ ಹಿಂದೆ ಅವರ ಆನ್ಲೈನ್ ಕಾರ್ಯಕ್ರಮವೊಂದರಲ್ಲಿ ಕಟ್ಟಿಕೊಟ್ಟ ಕಲ್ಯಾಣಿ ರಾಗದ 'ರಾಗ, ತಾನ, ಪಲ್ಲವಿ'ಯ ಸವಿಸ್ತಾರ ಪ್ರಸ್ತುತಿ, ನಮ್ಮೆಲ್ಲರಿಗೂ ಆ ರಾಗದ ಎಲ್ಲ ಸೂಕ್ಷಮತಿಸೂಕ್ಷ್ಮ ಆಯಾಮಗಳ  ದರ್ಶನ ಮಾಡಿಸಿತೆಂದರೆ, ಅತಿಶಯೋಕ್ತಿಯಲ್ಲ.  

ಕೆಲವು ವರ್ಷಗಳ ಹಿಂದೆ ಅವರು ಶತಾವಧಾನಿ ಗಣೇಶ್ ಹಾಗೂ ಗಮಕಿ ಶ್ರೀ ಚಂದ್ರಶೇಖರ ಕೆದಿಲಾಯ ರವರೊಂದಿಗೆ ನಡೆಸಿಕೊಟ್ಟ ಮಹಾಭಾರತದ 'ವಾದನ, ವಾಚನ, ವ್ಯಾಖ್ಯಾನ'ದ ಸುಮಾರು ೨೪೦ ಘಂಟೆಗಳ ವಿನೂತನ ಕಾರ್ಯಕ್ರಮ ಅವಿಸ್ಮರಣೀಯವಾದುದು. 

ಬಾಲ ಪ್ರತಿಭೆಗಳನ್ನು ಗುರುತಿಸಿ, ಅವರುಗಳನ್ನು ಕೈಹಿಡಿದು ಪೋಷಿಸಿ, ಬೆಳಸುವ ಹೃದಯವಂತ ಗುರುಗಳಾಗಿ ಶ್ರೀಯುತರು ಸೇವೆ ಸಲ್ಲಿಸುತ್ತಿರುವುದು, ಬೆಂಗಳೂರಿಗರ ಸುದೈವ ಎನ್ನಬಹುದು. ಈ ಮಹಾಗುರುಗಳ  'ಗೋಕುಲಂ ಸಂಗೀತ ಶಾಲೆ'ಯ ಹಲವು ಬಾಲ ಹಾಗು ತರುಣ ಶಿಷ್ಯಂದಿರುಗಳು ಈಗಾಗಲೇ ಹಲವು ಸಂಪೂರ್ಣ ಮಟ್ಟದ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ದೇಶ-ವಿದೇಶಗಳಲ್ಲಿ ನಡೆಸಿಕೊಟ್ಟಿರುವುದು ಸಂತೋಷದ ಸಂಗತಿ. 

ಕರ್ನಾಟಕದ ಬಾಲ  ಪ್ರತಿಭೆಯಾಗಿ ಗುರುತಿಸಲ್ಪಟ್ಟು, ಈಗ ಪ್ರೌಢ ವಿದುಷಿಯಾಗಿ  ಬೆಳೆದಿರುವ ಕುಮಾರಿ ವಾರಿಜ ಶ್ರೀ ವೇಣುಗೋಪಾಲ್, ಶ್ರೀಯುತರ ಸುಪುತ್ರಿ ಹಾಗು ಶಿಷ್ಯೆ. ಗಾಯಕಿಯಾಗಿ, ವೇಣುವಾದಕಿಯಾಗಿ ಹೆಸರುಗಳಿಸಿರುವ ಈಕೆ ಈಗಾಗಲೇ, ದೇಶ-ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರಯೋಗಶೀಲೆಯಾದ ಇವರು ದೇಶ-ವಿದೇಶಗಳ ಸಂಗೀತಗಾರರುಗಳೊಂದಿಗೆ ಸಮ್ಮಿಶ್ರಣದ ಸಂಗೀತವನ್ನು (ಫ್ಯೂಶನ್ ಮ್ಯೂಸಿಕ್)  ಸಂಯೋಜಿಸಿದ್ದಾರೆ. 

ಶ್ರೀ ವೇಣುಗೋಪಾಲರವರ ಗೋಕುಲಂ ಸಂಗೀತ ಶಾಲೆ ಪ್ರತಿವರ್ಷ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮವೇ 'ಕಲಾರ್ಣವ.' ದೇಶದ ಪ್ರಖ್ಯಾತ ಸಂಗೀತಗಾರರುಗಳಾದ ಶಂಕರ್ ಮಹಾದೇವನ್, ಹರಿಹರನ್, ಎಸ್.ಪಿ. ಬಾಲಸುಬ್ರಮಣ್ಯಂ ಮುಂತಾದವರುಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿರುವದು ಶ್ರೀಯುತರ ಸಂಘಟನಾ ಸಾಮರ್ಥ್ಯದ ಪ್ರತಿಫಲವೇ ಸರಿ. 

ಕವನೋತ್ಸವ - ೬

(ಗೋಪಾಲಕೃಷ್ಣ ಅಡಿಗರ ನೆನೆಯುತ್ತಾ......)

ಯಾರಿವರು?

***

ಕೃಷ್ಣರಾಜರ ಮುರಳಿ ಕರೆಯಿತೆ 

ದೂರ ತೀರಕೆ ನಿನ್ನನು?

ಸಪ್ತ ಸಾಗರದಾಚೆ ಹಾರಿ 

ಸೇರಿದೆಯಾ ಕರುನಾಡನು?


ಹೂವ ಹಾಸಿಗೆ ಹಸಿರು ಹೊದಿಕೆ 

ಮರರೆಂಬಗಳ ಚುಂಬನ 

'ಕೆಂಪು ತೋಟ'ದ ಬೇಲಿಯೊಳಗೆ 

ನಿರ್ಮಿಸಿದೆ ಸ್ವರ್ಗವೊಂದನ!


ಬಿಳಿಯ ಸೀರೆಯನುಟ್ಟು ಬಳುಕುವ  

ಜಲಕನ್ನಿಕೆಯರ ನರ್ತನ 

ಸೆಳೆವ ಬೃಂದಾವನವ ಕಟ್ಟಿ 

ಸಿಂಗರಿಸಿದೆ ಕಾವೇರಿ ಅಣೆಕಟ್ಟನ!


ಕರ್ಮಭೂಮಿಯಲೇ ಮಣ್ಣಾದ 

ಸಾರ್ಥಕವು ನಿನ್ನೀ ಜೀವನ 

ಹಸಿರು ಸಂದೇಶದ ನಿನ್ನ 

ನೆನೆಯುತಿದೆ ಕನ್ನಡ ವನ, ಮನ 

(ರಚನೆ: ಲಕ್ಷ್ಮೀನಾರಾಯಣ ಕೆ.)



ಕವನೋತ್ಸವ - ೭

ಯಾರಿವರು?

***

ಮಧುರ ಕಂಠದ ಪುಟ್ಟ ಕೋಗಿಲೆಗೆ 

ಕುತ್ತಾಯ್ತೆ ಕೊರಳ ನೋವೊಂದು?

ಗಡುಸಾಯ್ತು ಗಾನಗಂಗೆಯ ಸಿರಿಕಂಠವಂದು!


ಸೋಲೊಪ್ಪುವುದುಂಟೆ 

ಗಂಡುಮೆಟ್ಟಿನ ನಾಡ ದಿಟ್ಟ ಮಹಿಳೆ?

ಒಲಿಸಿಕೊಂಡಳಲ್ಲಾ ಗಡುಸು ದನಿಗೆ ಭಾವದ ಸೆಲೆ!


ಸಣ್ಣ ಝರಿಯೊಂದು ಬೆಟ್ಟಗುಡ್ಡಗಳ ಬಳಸಿ 

ಮೈತುಂಬಿ ಭೋರ್ಗರೆದು ನದಿಯಾಗುವಂತೀ 

ಗಂಗೆಯ ಗಾನಶ್ರುತಿ 


ಭೀಮ, ಬಸವ, ಮಲ್ಲಿಕಾರ್ಜುನರ ಸೆಣಸಿ 

ಗೆದ್ದು ಬೀಗಿದಳಲ್ಲಾ ಹೆಣ್ತನವ ಮೆರೆಸಿ 

ಪದ್ಮವಿಭೂಷಣೆಯಾಗಿ ಕರುನಾಡ ಗೆಲಿಸಿ 

(ರಚನೆ: ಲಕ್ಷ್ಮೀನಾರಾಯಣ ಕೆ.) 


ಕವನೋತ್ಸವ - ೮

ಯಾರಿವರು?

***

ಗೋಕಾಕದ ಜಲಧಾರ 

ಕರುನಾಡ ನಯಾಗರ 

ಅಲ್ಲಿ ಜನಿಸಿತೊಂದು 

ಗಣಿತದ ಧ್ರುವತಾರ 


ಬೆಳಗಿತದು  

ಗಂಡುಮೆಟ್ಟಿನ ನಾಡ  

ವಿದ್ಯಾಲಯಗಳ 

ಪರಿಕರ 


ದೂರದೈದು ನದಿಗಳ ಬೀಡ  

ಆಳಿದ್ದು ಅದರ ಶಿಖರ 

ಅದರ  ಸ್ಮರಣೆಯೆ 

ನಮಗೆ ಶ್ರೀಕಾರ 

(ರಚನೆ: ಲಕ್ಷ್ಮೀನಾರಾಯಣ ಕೆ.)


ಕವನೋತ್ಸವ - ೯

ಯಾರಿವರು?

***

ನಾನೆಂಬುದು ಅಹಂಕಾರ, ನೀನೆಂಬುದು ಔದಾರ್ಯ 

ನಾನು, ನೀನುಗಳ ಮಿಲನವೇ  'ಆನು'

'ನಾನು, ನೀನು, ಆನು'ಗಳ ನಿಯಂತ್ರಣವೇ 

'ತಾನು' ಎಂದವರಿವರು 


ತೋಳುಗಳ ತೋಳ ಬಂಧಿ  

ತುಟಿಗಿತ್ತ ಹಾಲು ಜೇನು 

ಹೊಟ್ಟೆಗಿತ್ತ ಜೀವ ಫಲವೇ 

ಸಾಕೆಂದವರಿವರು 


ಕೂಲಿ ಕಂಬಳಿಯ ಪಾಲಿನ 

ಮೈದೊಗಲಿಗೆ 

ಧೂಳಿನ ಭಂಡಾರ ಹಣೆ ಹತ್ತಿದರೂ 

ಕುರುಡು ಕಾಂಚಾಣ ಬೇಡವೆಂದವರಿವರು 

(ರಚನೆ: ಲಕ್ಷ್ಮೀನಾರಾಯಣ ಕೆ.) 




Mini Poetry Festidval - 1

Who is this?

***

Used to count, when a child

not money, but the count of letters and words

composed many rhythmic poems 

Did he become famous? Nobody knows


Did plenty of counting during youth

not the count of letters and words

 but the county of money

the task of guarding money

 where did he do? You all know it!

   

Does he belong to 'Simha Rashi?', nobody knows

but he joined an 'union of Lions,' boasted 'I'm Lion too'

travelled all over the world

Who met his bill, Nobody knows


Even after retirement

he hasn't given up his instincts

does so many 'online meetings'!

with whom, you don't know it all


He carries the name of Tirupati Lord

cautions others not to fall for 'namas'

but he himself, often sports 'Lords namas'

Can you tell who he is?

(Written by

Lakshminarayana K)

Notes:

1) 'nama' often is a kannada phrase

 for getting cheated

2) 'nama' more often refers to the holy mark 

on Tirupati Lord's forehead


ಕಿರು ಕವನೋತ್ಸವ - ೧

ಯಾರಿವರು?

***

ಬಾಲ್ಯದಲ್ಲೆ ಮಾಡುತಿದ್ದ ಲೆಕ್ಕಾಚಾರ 

ಹಣಕಾಸಿನದಲ್ಲ, ಗುರು-ಲಘುಗಳದು 

ರಚಿಸಿದ್ದ ಛಂದಬದ್ಧ ಕವನಗಳ 

ಕವಿಪುಂಗವನಾದನೋ? ಗೊತ್ತಿಲ್ಲ 


ಯವ್ವನದಲ್ಲೂ ಮಾಡಿದ ಲೆಕ್ಕಾಚಾರ 

ಗುರು-ಲಘುಗಳದಲ್ಲ, ಹಣಕಾಸಿನದು 

ಧನ ಕಾಯುವ ಕಾಯಕ ಎಲ್ಲಿ ಮಾಡಿದನೀವ?

ನಿಮಗೆಲ್ಲಾ ಗೊತ್ತಲ್ಲಾ!


ಸಿಂಹರಾಶಿಯವನಿವನೋ, ತಿಳಿದಿಲ್ಲ 

'ಸಿಂಹಗಳ ಕೂಟ'  ಸೇರಿ, ತಾನೂ ಸಿಂಹನೆಂದ 

ತಿರುಗಿಬಂದ ದೇಶ-ವಿದೇಶ

ಖರ್ಚು ಯಾರದೊ? ಗೊತ್ತಿಲ್ಲ 


ನಿವೃತ್ತಿಯಾದರು ಬಿಟ್ಟಿಲ್ಲ 

ಪ್ರವೃತ್ತಿಯ ಗೀಳ 

'ಆನ್ಲೈನ್ ಮೀಟಿಂಗ್' ಮಾಡುತ್ತಾನಲ್ಲ 

ಯಾರ್ಯಾರ ಜೊತೆಯೊ, ಎಲ್ಲ ತಿಳಿದಿಲ್ಲ 


ತಿರುಪತಿ ಹೆಸರಿವನಿವ 

'ನಾಮ' ಯಾರಿಗೂ ಹಾಕಿದ್ದಿಲ್ಲ 

ಆಗಾಗ ಹಾಕಿಕೊಳ್ಳುತ್ತಾನೆ 

ಅವನಿಗವನೇ ನಾಮ 

ಯಾರಿವನು? ಹೇಳಿ ನೀವೆಲ್ಲಾ

(ರಚನೆ: ಲಕ್ಷ್ಮೀನಾರಾಯಣ ಕೆ.)


೧) ಜಿ.ಆರ್. ವಿಶ್ವನಾಥ್ ಕ್ರಿಕೆಟ್ ಪಟು ಸುಧೀರ್ ಕುಲ್ಕರ್ಣಿ  ಸುಧೀಂದ್ರ ಕುಮಾರ್ 

೨) ಕೆ.ಎಸ್.ಅಶ್ವಥ್ ಚಿತ್ರನಟರು ಪದ್ಮ ಪ್ರೇಮಚಂದ್ರ ಕೃಷ್ಣಯ್ಯ 

೩) ಶಾಂತವೇರಿ ಗೋಪಾಲ ಗೌಡ  ರೈತ ಹೋರಾಟಗಾರರು  ಸುಧೀರ್ ಕುಲ್ಕರ್ಣಿ ಸುರೇಶ ಕೇಣಿ 

೪) ಬೆಂಗಳೂರು ನಾಗರತ್ನಮ್ಮ ಗಾಯಕಿ-ನರ್ತಕಿ  ಆರ್.ಕೆ. ಕೃಷ್ಣ ಅಯ್ಯಂಗಾರ್ ಪಾರ್ವತಿ ಮೋಕ್ಷಗುಂಡಂ 

೫) ಎಚ್. ಎಸ್. ವೇಣುಗೋಪಾಲ್ ವೇಣುವಾದನ ರಕ್ಷಾ ಮಹೇಂದ್ರ ನಾಗರಾಜ್ 

೬) ಜಿ.ಎಚ್. ಕ್ರುಮ್ಬಿಗಲ್ ತೋಟಗಾರಿಕೆ ನರಸಿಂಹ ಮೂರ್ತಿ ಎಲ್. ನಾಗರಾಜ ಜೋಯಿಸ್ 

೭) ಗಂಗೂಬಾಯಿ ಹಾನಗಲ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ  ಜಿ.ಎಸ್.ಟಿ.ಪ್ರಭು ಶ್ರೀಕಾಂತ್ ಕೆ.ಆರ್. 

೮) ಡಿ. ಸಿ. ಪಾವಟೆ ಶಿಕ್ಷಣ ತಜ್ಞ ನಾಗೇಂದ್ರ  ಎ. ವೆಂಕಟರಾಜು ಎಚ್. 

೯) ದ.ರಾ. ಬೇಂದ್ರೆ ವರಕವಿ ಅನ್ನಪೂರ್ಣ ವೆಂಕಟನಂಜಪ್ಪ ಪದ್ಮ ರೇಖಾ 



ಪ್ರಖ್ಯಾತರ ಹೆಸರು ಕ್ಷೇತ್ರ ವಿಜೇತರು ಕ್ರ. ಸಂ. 


(ಮೂಲ ಕವನ ಹಿಂದಿಯಲ್ಲಿ 

ಅಟಲ್ ಬಿಹಾರಿ ವಾಜಪೇಯೀ 

ಭಾವಾನುವಾದ 

ಲಕ್ಷ್ಮೀನಾರಾಯಣ ಕೆ.)

ಗಳ 










 








 

 

 






No comments:

Post a Comment