೧೪
ಅಂತಿಮ ಜಯ ನಮ್ಮದೇ
'ಕೊರೋನಾ ಸೇನಾನಿ'ಗಳಾಗಲು ತಮ್ಮ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಿದ ಮೇಲೆ ರಾಜು ಮತ್ತು ರೋಹಿಣಿಯವರಲ್ಲಿ ಹೊಸದೊಂದು ಉತ್ಸಾಹ ಮೂಡಿತ್ತು. ಅವರಿಬ್ಬರಿಗೂ 'ಸೇವಾ ಮನೋಭಾವ' ಎಂಬುದೇ ಸ್ಫೂರ್ತಿಯಾಗಿತ್ತು. ತನ್ನ ಸಂಶೋಧನೆಯ ಮಂಡನೆಗೆ ಹೆಚ್ಚಿನ ನೈಜತೆ ತರುವುದರಲ್ಲಿ, ಕೆಲವು ತಿಂಗಳುಗಳ 'ಕೊರೋನಾ ಸೇನಾನಿ' ಎಂಬ ಅನುಭವ ಅವಶ್ಯಕವಾದುದು ಎಂಬುದು ರೋಹಿಣಿಗೆ ಚೆನ್ನಾಗಿ ತಿಳಿದಿತ್ತು. 'ಅಪ್ಪಾ, ಸುಂದರ ಗುರಿಗಳ ಹಾದಿಗಳು ಕೆಲವೊಮ್ಮೆ ಕಲ್ಲು ಮುಳ್ಳಿನದಾಗಿರುತ್ತವೆ (difficult roads often lead to beautiful destinations), ಎಂದು ಕೇಳಿದ್ದೇನೆ. ಇದನ್ನೊಂದು ಅಪೂರ್ವ ಅವಕಾಶ ಎಂದು ಸ್ವೀಕರಿಸೋಣ,' ಎಂದಿದ್ದಳು ರೋಹಿಣಿ.
'ರೋಹಿಣಿ, "ಕೋವಿಡ್ ಮಣಿಸಲು ಯೋಗ" ಎಂಬ ಆನ್ಲೈನ್ ಕಾರ್ಯಕ್ರಮವೊಂದು ನಾಳೆ ಇದೆ. ಆ ಕಾರ್ಯಕ್ರಮವನ್ನು ಪ್ರಸಿದ್ಧ ಯೋಗ ಶಿಕ್ಷಕಿಯಾಗಿರುವ "ಜಾನಕೀ ಅಯ್ಯಂಗಾರ್"ರವರು ನಡೆಸಿಕೊಡುತ್ತಾರಂತೆ. ನಾಳಿನ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳೋಣವೇ?' ಎಂದರು ರಾಜು.
'ನಿಮ್ಮ ಸಲಹೆ ಉತ್ತಮವಾದುದೇ. ಕೋವಿಡ್ ರೋಗವನ್ನು ದೂರವಿಡುವಲ್ಲಿ ನಮಗೆ ಹೆಚ್ಚಿನೆ ನಿರೋಧಕ ಶಕ್ತಿಯನ್ನು ತಂದು ಕೊಡಬಲ್ಲ, ಹಲವಾರು ಯೋಗಾಸನಗಳಿವೆ ಎಂದು ಕೇಳಿದ್ದೇನೆ. ಕೊರೋನಾ ಸೇನಾನಿಗಳಾಗಿ ಸೇವೆ ಸಲ್ಲಿಸಲು ನಾವಿಬ್ಬರೂ ಮುಂದಾಗಿರುವುದರಿಂದ, ಮುಂದಿನ ದಿನಗಳಲ್ಲಿ ನಮಗೆ ಸೋಂಕಿನ ಸಾಧ್ಯತೆ ಹೆಚ್ಚಾಗಿರುವುದು. ಆದುದರಿಂದ ನಾವುಗಳು ನಮ್ಮ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಹೆಚ್ಚು ಪ್ರಯತ್ನಗಳನ್ನು ಮಾಡಬೇಕು. ಆ ನಿಟ್ಟಿನಲ್ಲಿ ಈ ಯೋಗದ ಕಾರ್ಯಕ್ರಮವು ಸಹಾಯಕವಾಗಬಲ್ಲದು,' ಎಂದಳು ರೋಹಿಣಿ.
೨೦೨೦ರ ಆಗಸ್ಟ್ ತಿಂಗಳ ಅಂತಿಮ ಭಾನುವಾರದ ಅಂದು ಯೋಗ ಕಾರ್ಯಕ್ರಮದ ದಿನವಾಗಿತ್ತು. ರಾಜು ಮತ್ತು ರೋಹಿಣಿಯವರಿಬ್ಬರೂ ತಮ್ಮ ತಮ್ಮ ಲ್ಯಾಪ್ಟಾಪ್ಗಳ ಮುಂದೆ ಸಿದ್ಧರಾಗಿ ಕುಳಿತಿದ್ದರು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು. ಮೊದಲನೆಯದಾಗಿ, ಜಾನಕಿಯವರ ತಂದೆಯವರಾದ ನರಸಿಂಹ ಅಯ್ಯಂಗಾರ್ರವರ ಪ್ರಾಸ್ತಾವಿಕ ಭಾಷಣವಿತ್ತು. ಅನುಭವಿ ಆಯುರ್ವೇದದ ವೈದ್ಯರು ಕೂಡ ಆಗಿದ್ದ ಅವರ ಭಾಷಣದ ವಾಗ್ಝರಿ ಹೀಗೆ ಸಾಗಿತ್ತು. 'ಇಡೀ ವಿಶ್ವವೀಗ ಕೋವಿಡ್ ಮಹಾಮಾರಿಯ ಸುಳಿವಿನಲ್ಲಿ ಸಿಕ್ಕಿ ನಲುಗುತ್ತಿದೆ. ನಮ್ಮ ಭಾರತೀಯ ಪರಂಪರೆಯ ಹಲವು ಮುನಿವರ್ಯರು, ಪ್ರಪಂಚವನ್ನು ಸಧ್ಯದಲ್ಲೇ ಕೋವಿಡ್ನಂತಹ ರೋಗವೊಂದು ಕಾಡಬಹುದೆಂಬ ಮುನ್ಸೂಚನೆಯನ್ನು, ಸುಮಾರು ಒಂದು ವರ್ಷದ ಹಿಂದೆಯೇ ನೀಡಿದ್ದರು. ಮೊನ್ನೆ ಇನ್ನೂ ನೇಪಥ್ಯಕ್ಕೆ ಸರಿದಿರುವ "ವಿಕಾರಿ ನಾಮ ಸಂವತ್ಸರ (೨೦೧೯-೨೦)"ದ ಅಂತ್ಯ, ಇಡೀ ವಿಶ್ವವನ್ನು "ವಿಕಾರ"ವಾದಂತಹ ಪರಿಸ್ಥಿತಿಗೆ ತಳ್ಳಿದೆ. ವಿಶ್ವವನ್ನು ಕಾಡುತ್ತಿರುವ ಈ ವಿಚಿತ್ರ ರೋಗಕ್ಕೆ ಮದ್ದನ್ನು ಹುಡುಕುವುದು ಕಷ್ಟಸಾಧ್ಯ. ಹಲವು ಬಾರಿ ಮರುಕಳಿಸುವ ಆ ರೋಗದ ಹೊಸ ಹೊಸ ಅಲೆಗಳಿಗೆ ವಿಶ್ವವು ನಲುಗುವುದು ಖಚಿತ. ಕೋಟಿಗಟ್ಟಲೆ ಸಾವು-ನೋವುಗಳಾಗಬಹುದು. ಮಹಾಮಾರಿಯನ್ನು ನಿಯಂತ್ರಿಸಲಾಗದೆ, ವಿಶ್ವದ ಹಲವು ಖ್ಯಾತ ನಾಯಕರುಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳಬಹುದು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಮಹಾಮಾರಿಯ ತೀವ್ರತೆ, ನಮ್ಮ ಭಾರತದ ಮೇಲೆ ಕಮ್ಮಿ ಇರುವುದೆಂದೇ ಹೇಳಬಹುದು. ಆ ಮಹಾಮಾರಿಯನ್ನು ಹತ್ತಿಕ್ಕುವುದರಲ್ಲಿ, ನಮ್ಮ ಆಯುರ್ವೇದದ ವೈದ್ಯರುಗಳು ಕಂಡುಹಿಡಿಯಬಹುದಾದ ಔಷಧವೊಂದು ಪರಿಣಾಮಕಾರಿಯಾಗುವುದು. ಆ ದಿವ್ಯ ಔಷಧದ ಸಹಾಯದಿಂದ ಇಡೀ ವಿಶ್ವವನ್ನು ಕಾಪಾಡಿ, ಭಾರತ ವಿಶ್ವಗುರುವಾಗಿ ಹೊರಹೊಮ್ಮುವುದು.'
ಕಾರ್ಯಕ್ರಮದ ಮುಂದಿನ ಭಾಗವಾಗಿ ಜಾನಕೀರವರ ಯೋಗ ಕುರಿತಾದ "ಪ್ರಾತ್ಯಕ್ಷಿಕೆ" ಶುರುವಾಗಿತ್ತು. 'ಕೋವಿಡ್-೧೯ ರೋಗವು ಮುಖ್ಯವಾಗಿ ಮಾನವನ ಶ್ವಾಸಕೋಶಗಳನ್ನು ಹಾನಿಗೊಳಿಸುತ್ತದೆ. ಆದುದರಿಂದ, ಕೋವಿಡ್ ನಿಯಂತ್ರಿಸಲು ಬೇಕಾದ ನಿರೋಧಕ ಶಕ್ತಿಯನ್ನು ಗಳಿಸಿಕೊಳ್ಳಲು ನಾವು ನಮ್ಮ ಶ್ವಾಸಕೋಶಗಳನ್ನು ಬಲಪಡಿಸಿಕೊಳ್ಳಬೇಕು. ನಮ್ಮ ಯೋಗ ಶಾಸ್ತ್ರದ "ಪ್ರಾಣಾಯಾಮ" ಎಂಬ ವಿಧಿಯ ಆವಿಷ್ಕಾರದ ಮೂಲೋದ್ದೇಶವೇ, ನಮ್ಮ ಶ್ವಾಸಕೋಶಗಳ ಬಲವರ್ಧನೆ. ನಮ್ಮ ಉಸಿರಾಟದ ಕ್ರಮವನ್ನು ನಿಯಂತ್ರಿಸುವ ವಿಶೇಷ ವಿಧಾನವೇ "ಪ್ರಾಣಾಯಾಮ"ವೆಂದು ಹೇಳಬಹುದು. ಇಂದು ನಾನು ತಮ್ಮಗಳಿಗೆ ಪ್ರಾಣಾಯಾಮದ ಮೂರು ಮುಖ್ಯ ವಿಧಾನಗಳಾದ "ಭಸ್ತ್ರಿಕ, ಕಪಾಲಭಾತಿ ಮತ್ತು ಅನುಲೋಮ-ವಿಲೋಮ"ಗಳನ್ನು, ಪ್ರಾತ್ಯಕ್ಷಿಕೆ ಮುಖಾಂತರ ವಿವರಿಸುತ್ತೇನೆ. ಕೋವಿಡ್ ರೋಗವನ್ನು ನಿಯಂತ್ರಿಸಲು ಬೇಕಾದ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು, ನಮ್ಮ ಪ್ರಾಣಾಯಾಮವೇ ಅತ್ಯಂತ ವೈಜ್ಞಾನಿಕವಾದ ಮಾರ್ಗವೆಂಬುದು ತಮ್ಮಗಳಿಗೆ ಇಂದು ಮನವರಿಕೆಯಾಗುವುದು ಖಂಡಿತ.'
'ತಾವೆಲ್ಲರೂ ಈಗ ಪ್ರಾಣಾಯಾಮದ ಪ್ರಕ್ರಿಯೆಗಳನ್ನು ಅಭ್ಯಾಸ ಮಾಡಲು ಸಿದ್ಧರಾಗಿ. ಮೊದಲ ಪ್ರಕ್ರಿಯೆಯನ್ನು "ಭಸ್ತ್ರಿಕ" ಎಂದು ಕರೆಯುತ್ತಾರೆ. ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಳ್ಳುವುದು (ಉಚ್ಛ್ವಾಸ) ಮತ್ತು ದೀರ್ಘವಾಗಿ ಉಸಿರನ್ನು ಹೊರಬಿಡುವುದು (ನಿಶ್ವಾಸ), ಈ ಎರಡು ಪ್ರಕ್ರಿಯೆಗಳಿಗೆ "ಭಸ್ತ್ರಿಕ" ಎಂದು ಹೆಸರು.' ಭಸ್ತ್ರಿಕ ಪ್ರಕ್ರಿಯೆಯನ್ನು ಜಾನಕಿರವರು ಪ್ರಾತ್ಯಕ್ಷಿಕೆಯ ಮುಖಾಂತರ ವಿವರಿಸಿದರು. ರಾಜು ಮತ್ತು ರೋಹಿಣಿಯರಿಬ್ಬರೂ ತಮ್ಮ ತಮ್ಮ ಆಸನಗಳ ಮೇಲೇ ಕುಳಿತು, ಭಸ್ತ್ರಿಕ ಪ್ರಕ್ರಿಯೆಯನ್ನು ಜಾನಕಿರವರ ಮಾರ್ಗದರ್ಶನದ ಪ್ರಕಾರ ನಿರ್ವಹಿಸಿದರು. 'ಹೊಸದಾಗಿ ಮಾಡುವವರು ೧೦-೧೨ ಭಸ್ತ್ರಿಕ ಪ್ರಕ್ರಿಯೆಗಳವರೆಗೆ ಮಾಡಬಹುದು. ಕ್ರಮೇಣವಾಗಿ ಪ್ರಕ್ರಿಯೆಗಳ ಸಂಖ್ಯೆಗಳನ್ನು ಹೆಚ್ಚಿಸುತ್ತಾ ಹೋಗಬಹುದು.'
ಮುಂದಿನ ಸರದಿ "ಕಪಾಲಭಾತಿ"ಯದಾಗಿತ್ತು. 'ಕಪಾಲಭಾತಿಯನ್ನು "ಪ್ರಾಣಾಯಾಮಗಳ ರಾಜ"ನೆಂದು ಕರೆಯುತ್ತಾರೆ. ಈ ವಿಧಾನದಲ್ಲಿ, ಮೂಗಿನ ಹೊಳ್ಳೆಗಳ ಮುಖಾಂತರ ಚಿಕ್ಕದಾಗಿ ಮತ್ತು ಬಲವಾಗಿ ಉಸಿರನ್ನು ಹಲವು ಬಾರಿ ಹೊರಹಾಕಬೇಕು (ನಿಶ್ವಾಸ). ಉಚ್ಛ್ವಾಸ (ಉಸಿರನ್ನು ಒಳಗೆಳುದುಕೊಳ್ಳುವ ಕ್ರಿಯೆ) ಪ್ರಕ್ರಿಯೆ ತನಗೆ ತಾನೇ ಆಗುತ್ತದೆ. ನೀವುಗಳು ೨೦ ಪ್ರಕ್ರಿಯೆಗಳೊಂದಿಗೆ ಆರಂಭಿಸಿ, ಕ್ರಮೇಣವಾಗಿ ೧೦೦ರವರೆಗೆ ಹೋಗಬಹುದು,' ಎಂದು ವಿವರಿಸಿದ ಜಾನಕಿಯವರು ಕಪಾಲಭಾತಿಯ ವಿಧಾನವನ್ನು ಮಾಡಿ ತೋರಿಸಿಕೊಟ್ಟರು. ಮಿಕ್ಕೆಲ್ಲರೂ ಪ್ರಕ್ರಿಯೆಯನ್ನು ವಿಧೇಯರಾಗಿ ಪಾಲಿಸಿದರು.
ಪ್ರಾಣಾಯಾಮದ ಮೂರನೇ ಪ್ರಕ್ರಿಯೆಯನ್ನು "ಅನುಲೋಮ-ವಿಲೋಮ" ಎಂದು ಕರೆಯುತ್ತಾರೆ. 'ತಮ್ಮ ಬಲ ಹೊಳ್ಳೆಯನ್ನು ತಮ್ಮ ಬಲ ಹೆಬ್ಬೆಟ್ಟಿನಿಂದ ಮುಚ್ಚಿಕೊಳ್ಳಿ ಮತ್ತು ಎಡ ಹೊಳ್ಳೆಯ ಮುಖಾಂತರ ದೀರ್ಘವಾಗಿ ಉಸಿರನ್ನೆಳೆದುಕೊಳ್ಳಿ. ಈಗ ತಮ್ಮ ಎಡ ಹೊಳ್ಳೆಯನ್ನು ಮುಚ್ಚಿಕೊಳ್ಳಿ ಮತ್ತು ತಮ್ಮ ಬಲ ಹೊಳ್ಳೆಯ ಮುಖಾಂತರ ದೀರ್ಘವಾಗಿ ಉಸಿರನ್ನು ಹೊರ ತಳ್ಳಿ. ಆನಂತರ ಉಸಿರನ್ನು ಒಳಗೆ ಳುದುಕೊಳ್ಳುವ ಪ್ರಕ್ರಿಯೆ ತಮ್ಮ ಬಲ ಹೊಳ್ಳೆಯ ಮುಖಾಂತರ ನಡೆಯಲಿ ಮತ್ತು ಉಸಿರನ್ನು ಹೊರಹಾಕುವ ಪ್ರಕ್ರಿಯೆ ತಮ್ಮ ಎಡ ಹೊಳ್ಳೆಯಿಂದಾಗಲಿ. ಈ ರೀತಿಯ ಜೋಡಿ ಪ್ರಕ್ರಿಯೆಗೆ ಒಂದು "ಅನುಲೋಮ-ವಿಲೋಮದ"ದ ಸುತ್ತು ಎಂದು ಹೇಳುತ್ತಾರೆ. ಈ ವಿಧಾನದಿಂದ ಉಸಿರಿನ ಶಕ್ತಿಯ ನಿರ್ವಹಣೆ ಮತ್ತು ಸಂರಕ್ಷಣೆ ಉತ್ತಮವಾಗಿ ಆಗುತ್ತದೆ. ಅಭ್ಯಾಸವನ್ನು ಶುರು ಮಾಡುತ್ತಾ, ತಾವುಗಳು ಈ ಪ್ರಕ್ರಿಯೆಯನ್ನು ದಿನವೊಂದಕ್ಕೆ ೧೦-೧೨ ಬಾರಿ ಮಾಡಬಹುದು' ಎಂದು ಸಾಗಿತ್ತು ಜಾನಕಿಯವರ ಪ್ರಾತ್ಯಕ್ಷಿಕೆ. ವಿಧೇಯರಾದ ಎಲ್ಲಾ ಅಭ್ಯರ್ಥಿಗಳು ತಮ್ಮ ಗುರುಗಳು ತೋರಿಸಿಕೊಟ್ಟ ವಿಧಾನವನ್ನು, ಚಾಚೂ ತಪ್ಪದೇ ಅನುಸರಿಸಿದರು.
'ಪ್ರಾಣಾಯಾಮದ ಅಭ್ಯಾಸ "ಓಂಕಾರ"ದ ಉದ್ಘೋಷದೊಂದಿಗೆ ಮುಗಿಯಬೇಕು. ಉದ್ಘೋಷದ ಮೊದಲು ತಾವು ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಳ್ಳಬೇಕು. ಉಸಿರನ್ನು ಹೊರ ಹಾಕುವ ಪ್ರಕ್ರಿಯೆ ಆದಷ್ಟೂ ದೀರ್ಘವಾಗಿದ್ದು, "ಓಂಕಾರ"ದ ಗಟ್ಟಿಯಾದ ಉಚ್ಚಾರದೊಂದಿಗೆ ಸಾಗಬೇಕು. ಆರಂಭದಲ್ಲಿ ೪-೫ ಸುತ್ತುಗಳೊಂದಿಗೆ ಶುರುಮಾಡಿ, ಈ ಪ್ರಕ್ರಿಯೆಯನ್ನು ೨೦ ಸುತ್ತುಗಳವರೆಗೆ ಹೆಚ್ಚಿಸುತ್ತಾ ಸಾಗಬಹುದು' ಎಂದಿತ್ತು ಜಾನಕಿಯವರ ವಿವರಣೆ. ಓಂಕಾರದ ಉದ್ಘೋಷದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಯೋಗದ ಕಾರ್ಯಕ್ರಮ ಮುಗಿದನಂತರ ರಾಜುರವರು ತಮ್ಮ ಮಗಳೊಂದಿಗೆ ಮಾತನಾಡುತ್ತಾ, 'ಇಂದಿನ ಕಾರ್ಯಕ್ರಮವೊಂದು ದೈವೀಕ ಅನುಭವವಾಗಿತ್ತಲ್ಲವೇ?' ಎಂದರು.
'ಹೌದು, ಅದೊಂದು ದೈವೀಕ ಅನುಭವವೇ ಆಗಿತ್ತು. ಪ್ರಾಣಾಯಾಮದಿಂದ ನಮ್ಮ ಶ್ವಾಸಕೋಶಗಳ ಶಕ್ತಿ ವೃದ್ಧಿಸಿ, ನಮ್ಮಲ್ಲಿ ಕೋವಿಡ್ ರೋಗವನ್ನು ಧೈರ್ಯವಾಗೆದುರಿಸುವ ಆತ್ಮವಿಶ್ವಾಸವು ಮೂಡುವುದರಲ್ಲಿ ಅನುಮಾನವಿಲ್ಲ,' ಎಂಬುದು ರೋಹಿಣಿಯ ಅನಿಸಿಕೆಯಾಗಿತ್ತು.
ಆದರೆ ಆಯುರ್ವೇದದ ವೈದ್ಯರಾದ ನರಸಿಂಹ ಅಯ್ಯಂಗಾರ್ರವರು ವ್ಯಕ್ತ ಪಡಿಸಿದ ವಿಚಾರಗಳ ಬಗ್ಗೆ ರೋಹಿಣಿಗೆ ತೀವ್ರ ಅಸಮಾಧಾನವಿತ್ತು. 'ಅವರ ವಿಚಾರಗಳು ಆಯುರ್ವೇದದ ವಿಚಾರಗಳಿಗಿಂತ, ಬುರುಡೆ ಭವಿಷ್ಯಕಾರರ ವಾಣಿಯಂತಿತ್ತು. ಅವರ ವಿಚಾರಗಳನ್ನೆಲ್ಲಾ ನಂಬಬಹುದೇ?'
'ನರಸಿಂಹ ಅಯ್ಯಂಗಾರ್ರವರ ಭವಿಷ್ಯ ವಾಣಿಯನ್ನು ಕುರಿತಾದ ನಿನ್ನ ಅಸಮ್ಮತಿ ನನಗರ್ಥವಾಗುತ್ತದೆ. ಆ ರೀತಿಯ ಭವಿಷ್ಯ ವಾಣಿಗಳನ್ನು ಗೌರವಿಸುವ ಹಲವರು ನಮ್ಮ ದೇಶದಲ್ಲಿದ್ದಾರೆ. ಆಯುರ್ವೇದದ ಔಷಧಗಳ ವಿಚಾರಕ್ಕೆ ಬರೋಣ. ನಮ್ಮ ಭಾರತೀಯ ಪದ್ಧತಿಯಾದ ಆಯುರ್ವೇದದ ಬಗ್ಗೆ ಹಲವರು ಹಗುರವಾಗಿ ಮಾತನಾಡುತ್ತಾರೆ. ನಮ್ಮ ದೇಶವಾದ ಭಾರತದಲ್ಲಿ ಅಲೋಪಥಿಯೂ ಸೇರಿದಂತೆ, ಸುಮಾರು ಏಳು ವಿಭಿನ್ನ ಚಿಕಿತ್ಸಾ ಪದ್ಧತಿಗಳು ಜಾರಿಯಲ್ಲಿವೆ. "ಆಯುರ್ವೇದ, ಸಿದ್ಧ, ಯುನಾನಿ, ಯೋಗ, ಪ್ರಾಕೃತಿಕ ಚಿಕಿತ್ಸೆ (naturopathy) ಮತ್ತು ಹೋಮಿಯೋಪಥಿ," ಮುಂತಾದ ಚಿಕಿತ್ಸಾ ವಿಧಾನಗಳು ನಮ್ಮ ದೇಶದ ಒಂದಿಲ್ಲೊಂದು ಮೂಲೆಯಲ್ಲಿ ಜನಪ್ರಿಯವಾಗಿವೆ. ಅವುಗಳಲ್ಲಿನ ಮೊದಲೈದು ಪದ್ಧತಿಗಳು ಶುದ್ಧ ಭಾರತೀಯ ಪದ್ಧತಿಗಳಾಗಿದ್ದು, ಅನಾದಿ ಕಾಲದಿಂದಲೂ ನಮ್ಮಲ್ಲಿ ಜಾರಿಯಲ್ಲಿವೆ. ವಿಶ್ವದಲ್ಲಿನ ಪ್ರತಿಯೊಂದು ಚಿಕಿತ್ಸಾ ವಿಧಾನಗಳಲ್ಲೂ, ಕೆಲವು ವಿಶೇಷಗಳು ಮತ್ತು ಕೆಲವು ನ್ಯೂನ್ಯತೆಗಳು ಇದ್ದೇ ಇರುತ್ತವೆ. ಅಲೋಪಥಿಯ ಎಲ್ಲಾ ವಿಧಿ-ವಿಧಾನಗಳು ಸರಿಯೆಂದು ಹೇಳಲಾಗದು. "ಮರಳಿ ಪ್ರಯತ್ನಿಸುವ ಮತ್ತು ಕಾದು ನೋಡುವ (trial and error, wait and watch)" ತಂತ್ರಗಳು ಅಲೋಪಥಿ ಪದ್ಧತಿಯ್ಲಲೂ ಇದ್ದೇ ಇದೆ. ೧೯೧೮ರಲ್ಲಿ "ಸ್ಪ್ಯಾನಿಷ್ ಫ್ಲೂ"ವನ್ನು ಹರಡಿದ್ದ ವೈರಾಣುವೇ, ೨೦೦೯ರಲ್ಲಿ "ಹಂದಿ ಜ್ವರ"ವನ್ನು ತಂದು ಹರಡಿತ್ತು ಎಂಬ ಬಲವಾದ ವಾದವಿದೆ. ೨೦೦೯ರಲ್ಲೂ, ಹಂದಿ ಜ್ವರವನ್ನು ನಿಯಂತ್ರಿಸುವಲ್ಲಿ ನಮ್ಮ ಅಲೋಪಥಿ ವೈದ್ಯರುಗಳು ತಿಣುಕಾಡಿದ್ದು ಸುಳ್ಳಲ್ಲ. ಇಂದಿಗೂ ನಮ್ಮ ಅಲೋಪಥಿ ವಿಜ್ಞಾನಿಗಳಿಗೆ, "ಸ್ಪ್ಯಾನಿಷ್ ಫ್ಲೂ - ೧೯೧೮ರ ವೈರಾಣು"ವಿನ ಬಗ್ಗೆ ಹೆಚ್ಚು ತಿಳಿದಿಲ್ಲ. ಒಂದು ಶತಮಾನದಷ್ಟರ ದೀರ್ಘಾವಧಿಯಲ್ಲಿ ನಮ್ಮ ಅಲೋಪಥಿ ವೈದ್ಯರುಗಳು ಹಾಗೂ ವಿಜ್ಞಾನಿಗಳು ಮಾಡಿದ್ದಾದರೂ ಏನು? ಎಂದು ನಾವು ಆರೋಪಿಸಬಹುದಲ್ಲವೇ?
ರೋಹಿಣಿ, ನಿನಗೆ ತಿಳಿದಿರುವಂತೆ ಹಲವು ವರ್ಷಗಳಿಂದ ನನ್ನನ್ನು "ಬೆನ್ನು ನೋವು" ತೀವ್ರವಾಗಿ ಕಾಡುತ್ತಿದೆ. ಮೂಳೆ ತಜ್ಞರ (orthopaedic surgeon) ಆಸ್ಪತ್ರೆಯ ಕಡೆಗಿನ ನನ್ನ ದಂಡಯಾತ್ರೆಯನ್ನು ನೀನು ನೋಡುತ್ತಲೇ ಬಂದಿದ್ದೀಯ. ನನಗೇನಾದರೂ ಶಾಶ್ವತ ಪರಿಹಾರ ದೊರೆತಿದೆಯೇ? ಹಾಗೆಂದು ನಾನು ಆ ವೈದ್ಯರನ್ನು ದೂಷಿಸುವುದಿಲ್ಲ. ಅವರಿಗೆ ತಿಳಿದಿರುವ ಎಲ್ಲಾ ಪ್ರಯತ್ನಗಳನ್ನೂ ಅವರು ಮಾಡುತ್ತಾ ಬಂದಿದ್ದಾರೆ. ಅದೇ ರೀತಿಯ ರಿಯಾಯಿತಿ, ಅನುಕಂಪಗಳು ಬೇರೇ ಪದ್ಧತಿಯ ವೈದ್ಯರುಗಳ ಮೇಲೂ ಇರಲಿ ಎಂಬುದೇ ನನ್ನ ಪ್ರಾಮಾಣಿಕ ಅನಿಸಿಕೆ. ಆದರೆ, ಭಾರತೀಯ ಚಿಕಿತ್ಸಾ ಪದ್ಧತಿಗಳ ಮೇಲೆ ಆರೋಪವನ್ನು ಹೊರಿಸುವಲ್ಲಿ ಮಾತ್ರ, ನಮ್ಮಲ್ಲಿ ಹಲವರು ಅಷ್ಟೊಂದು ತೀಕ್ಷ್ಣರಾಗುತ್ತಾರೇಕೆ?' ಎಂದು ಸಾಗಿತ್ತು ರಾಜುರವರ ವಿಚಾರ ಸರಣಿ.
'ಅಪ್ಪಾ, ನಿಮ್ಮ ವಿಚಾರದಲ್ಲಿ ಸತ್ಯವಿಲ್ಲದಿಲ್ಲ. ಭಾರತದಾದ್ಯಂತ ನಮ್ಮ ಆಯುರ್ವೇದದ ವೈದ್ಯರುಗಳು, ಕೋವಿಡ್ ರೋಗಕ್ಕೆ ಔಷಧಗಳನ್ನು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಅವರುಗಳಲ್ಲಿ ಕೆಲವರು ತಮ್ಮ ಔಷಧಗಳು ಪರಿಣಾಮಕಾರಿಯಾಗಿವೆ ಎಂದೂ ಘೋಷಿಸಿದ್ದಾರೆ. ಕೆಲವು ರಾಜ್ಯಗಳಲ್ಲಿ ಅಂತಹ ಔಷಧಗಳನ್ನು, ಕೋವಿಡ್ ರೋಗಿಗಳ ಮೇಲೆ ಪ್ರಯೋಗಿಸಿ ನೋಡುವ ಅನುಮತಿಯನ್ನೂ ನೀಡಿದ್ದಾರೆ. ಕೆಲವು ಕೇಂದ್ರಗಳಲ್ಲಿನ ಫಲಿತಾಂಶಗಳು ಆಶಾದಾಯಕವಾಗಿವೆ. "ಆಯುರ್ವೇದದ ಔಷಧಗಳಿಂದ ಗುಣಮುಖರಾದರು ಎಂಬ ರೋಗಿಗಳಿಗೆ, ಅಲೋಪಥಿಯ ಔಷಧಗಳನ್ನೂ ನೀಡಲಾಗಿತ್ತು" ಎಂಬುದನ್ನು ಮರೆಯುವಂತಿಲ್ಲ ಎಂಬುದು ಅಲೋಪಥಿ ವೈದ್ಯರುಗಳ ವಾದ. ಆದರೂ, ಆಯುರ್ವೇದದ ವೈದ್ಯರುಗಳ ಔಷಧಗಳಿಗೂ ಅರ್ಹ ವೇದಿಕೆ ದೊರೆಯಲಿ, ಆ ಔಷಧಗಳೂ ಎಲ್ಲಾ ಪರೀಕ್ಷೆಗಳಿಗೂ ಒಳಪಡಲಿ ಎಂಬುದು ನನ್ನ ಅನಿಸಿಕೆ. ಅವಕಾಶವನ್ನೇ ನೀಡದೆ ಆಯುರ್ವೇದದ ಔಷಧಗಳನ್ನು ಅಲ್ಲಗಳೆಯುವುದು ಸರಿಯಲ್ಲ.'
ರಾಜುರವರು ಮಾತು ಮುಂದುವರೆಸುತ್ತಾ, 'ನಿನ್ನ ವಿಚಾರಗಳು ಸರಿ ಎಂಬುದು ನನ್ನ ಅಭಿಪ್ರಾಯ. ಆಯುರ್ವೇದದ ಔಷಧಗಳ ಬಗ್ಗೆ ನಡೆಯುತ್ತಿರುವ ತನಿಖೆಗಳ ಬಗ್ಗೆ ನಾನೂ ಕೇಳಿದ್ದೇನೆ. ನಮ್ಮ ಕೆಲವು ಅಲೋಪಥಿ ವೈದ್ಯರುಗಳೂ, ಆಯುರ್ವೇದದ ಔಷಧಗಳ ಬಗ್ಗೆ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ಅವುಗಳಿಂದ ಅಡ್ಡ ಪರಿಣಾಮದ ಸಾಧ್ಯತೆ ಅತ್ಯಂತ ಕಡಿಮೆ ಎಂಬುದನ್ನು ಹಲವರು ಅನುಮೋದಿಸುತ್ತಾರೆ. "ಬೆಳ್ಳುಳ್ಳಿ, ಶುಂಠಿ, ಮೆಣಸು, ಈರುಳ್ಳಿ ಮತ್ತು ಜೇನುತುಪ್ಪ"ಗಳ ಆಯುರ್ವೇದದ ಕಷಾಯ, ವೈರಾಣುಗಳ ಸೋಂಕನ್ನು ತಡೆಯಬಲ್ಲದು ಎಂಬುದನ್ನು, ಹಲವು ಅಲೋಪಥಿಯ ವೈದ್ಯರುಗಳೂ ಒಪ್ಪುತ್ತಾರೆ.
"ಗೌಟ್ (Gout ಎಂಬುದು ಒಂದು ರೀತಿಯ arthritis ರೋಗ)" ರೋಗದ ಚಿಕಿತ್ಸೆಗೆ ನೀಡುವ "ಕೋಲ್ಚಿಸೀನ್ (Colchicine)" ಎಂಬ ಗಿಡಮೂಲಿಕೆಗಳ ಮೂಲದ ಔಷಧವು ೨೦೦೦ ವರ್ಷಗಳಷ್ಟು ಹಳೆಯದು. ಆ ಔಷಧವು ಕೋವಿಡ್ ರೋಗದ ನಿವಾರಣೆಗೂ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಗ್ರೀಸ್ ದೇಶದಲ್ಲಿ ಆ ಔಷಧಿಯ ಮೇಲಿನ ಸಂಶೋಧನೆ ಸಾಗಿದ್ದು, ಫಲಿತಾಂಶಗಳು ಹೊಸ ಭರವಸೆಯನ್ನು ಮೂಡಿಸಿವೆ. ಅದೇ ಔಷಧದ ಬಳಕೆ ಭಾರತೀಯ ಆಯುರ್ವೇದದ ಪದ್ಧತಿಯಲ್ಲೂ ಇದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಏನೇ ಆಗಲಿ, ಭಾರತೀಯ ಔಷಧಗಳು ಬಡವರ ಪಾಲಿಗೆ ದುಬಾರಿಯಲ್ಲದ್ದು, ಮತ್ತು ಅವುಗಳಿಂದ ಅಡ್ಡ ಪರಿಣಾಮಗಳ ಸಾಧ್ಯತೆ ಕಡಿಮೆ. ಆದುದರಿಂದ ಅವುಗಳ ಮೇಲಿನ ಪ್ರಯೋಗಗಳು ನಿರಂತರವಾಗಿ ಸಾಗಲಿ' ಎಂದರು.
###
ಅಂತೂ, ಬಹು ನಿರೀಕ್ಷೆಯ ಆ ದಿನ ಬಂದಿತ್ತು. ಸರಕಾರದ ವತಿಯಿಂದ ರಾಜು ಮತ್ತು ರೋಹಿಣಿರವರನ್ನು, 'ಕೊರೋನಾ ಸೇನಾನಿ'ಗಳೆಂದು ಅಧಿಕೃತವಾಗಿ ಗುರುತಿಸಿ, ಕರೆಪತ್ರವನ್ನು ನೀಡಲಾಗಿತ್ತು. ಅದೇ ದಿನ ಡಾ. ಕಿರಣರಿಗೆ ಸುದ್ದಿಯನ್ನು ಮುಟ್ಟಿಸಿದ ಅವರಿಬ್ಬರೂ, ಅಂದೇ ಕರ್ತವ್ಯಕ್ಕೆ ಹಾಜರಾಗಿದ್ದರು. 'ಕೊರೋನಾ ಸೇನಾನಿಗಳನ್ನು ನಿಯಂತ್ರಿಸುವ ಕೋಣೆ (digital war room)'ಯ ಮುಖಾಂತರ ಕೊರೋನಾ ಸೇನಾನಿಗಳನ್ನು ನಿಯಂತ್ರಿಸಲಾಗುತ್ತಿತ್ತು. ಕೊರೋನಾ ಸೇನಾನಿಗಳಿಗೆ ವಹಿಸಬಹುದಾದ ವಿವಿಧ ಕಾರ್ಯಗಳ ಪಟ್ಟಿ ಕೆಳಕಂಡಂತಿತ್ತು.
-ದಿನಸಿ ಪೊಟ್ಟಣಗಳ ವಿತರಣೆ
-ಹಿರಿಯ ನಾಗರೀಕರು ಮತ್ತು ದೈಹಿಕ ಸವಾಲುಗಳನ್ನೆದುರಿಸುತ್ತಿರುವವರಿಗೆ (physically challenged) ಔಷಧ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವುದು
-ಸಾಮೂಹಿಕ ಅಡುಗೆ ಮನೆಗಳಲ್ಲಿ ಸಿದ್ಧ ಪಡಿಸಿದ ಆಹಾರಗಳನ್ನು ಪೊಟ್ಟಣಗಳಲ್ಲಿರಿಸುವುದು
-ಅವಶ್ಯಕತೆ ಇದ್ದವರಿಗೆ 'ಫೋನ್ ಮುಖಾಂತರ ಔಷಧ (telemedicine)'ಗಳ ವ್ಯವಸ್ಥೆ ಮಾಡುವುದು
-ಕೊರೋನಾ ರೋಗಿಗಳ ಮತ್ತು ಕ್ವಾರಂಟೈನ್ಗೆ ಒಳಪಟ್ಟವರ ಮನೆಗಳ ಮುಂದೆ ಎಚ್ಚರಿಕೆಯ ಪತ್ರಗಳನ್ನು ಅಂಟಿಸುವುದು
-ಕೊಳಚೆ ಪ್ರದೇಶ ಮತ್ತು ಹಳ್ಳಿ ಪ್ರದೇಶಗಳಲ್ಲಿ ಮಾಸ್ಕ್, ಸಾಬೂನು ಮುಂತಾದ ಸಾಮಗ್ರಿಗಳ ವಿತರಣೆ
-ಜಿಲ್ಲಾಡಳಿತ ಏರ್ಪಡಿಸುವ ಕೊರೋನಾ ನಿರ್ವಹಣೆ ಕುರಿತಾದ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದು
-ವಲಸಿಗ ಕೆಲಸಗಾರರಿಗೆ ಸೂಕ್ತ ಸಲಹೆಗಳನ್ನು ನೀಡುವುದು ಮತ್ತು ಅವರುಗಳು 'ಸೇವಾಸಿಂಧು' ಅರ್ಜಿಗಳನ್ನು ತುಂಬಿಸಿ, ಸರಕಾರಕ್ಕೆ ಸಲ್ಲಿಸುವಲ್ಲಿ ಸಹಾಯ ಮಾಡುವುದು
ಹೀಗಿರಲು ಒಂದು ದಿನ, ಸೇನಾನಿಗಳ ಸಭೆಯೊಂದರಲ್ಲಿ ತಂಡದ ನಾಯಕರ ಕೋರಿಕೆಯೊಂದಿತ್ತು. ೮೦ ವರ್ಷದ ವಯೋವೃದ್ಧರೊಬ್ಬರಿಗೆ ಸಹಾಯವೊಂದು ಬೇಕಿತ್ತು. ಕೃಷ್ಣ ಸೋಲಂಕಿ ಎಂಬ ಹೆಸರಿನ ಅವರು ಪಾರ್ಶ್ವವಾಯು (paralysis)ವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಅವರ ಪತ್ನಿ ಜಯ ಸೋಲಂಕಿರವರಿಗೆ ಸುಮಾರು ೭೦ ವರ್ಷಗಳಾಗಿದ್ದು, ಪ್ರತಿ ವಾರ ಅವರಿಗೆ ಡಯಾಲಿಸಿಸ್ (dialysis) ಚಿಕಿತ್ಸೆಯ ಅವಶ್ಯಕತೆ ಇತ್ತು. ವೃದ್ಧ ದಂಪತಿಗೆ ಮಕ್ಕಳಿರಲಿಲ್ಲ. ಸಮೀಪದ ಹಳ್ಳಿಯ ಯುವಕನೊಬ್ಬನು ಪ್ರತಿ ವಾರ ಆಕೆಯನ್ನು, ಸುಮಾರು ೬೦ ಕಿ.ಮೀ.ರಷ್ಟು ದೂರವಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ಡಯಾಲಿಸಿಸ್ ಚಿಕಿತ್ಸೆಯನ್ನು ಕೊಡಿಸುವ ಸತ್ಕಾರ್ಯವನ್ನು ಮಾಡುತ್ತಿದ್ದನು. ತುರ್ತು ಕಾರಣಗಳಿಗಾಗಿ ಅಂದು, ಆ ಯುವಕನು ದೂರದ ಊರಿಗೆ ತೆರಳಿದ್ದನು. ಹಾಗಾಗಿ ಆ ಕಾರ್ಯವನ್ನು ಮಾಡುವ ಸೇನಾನಿಯೊಬ್ಬರನ್ನು ಹುಡುಕುವ ಭಾರ ತಂಡದ ನಾಯಕರ ಮೇಲಿತ್ತು. ಹಿರಿಯ ಸೇನಾನಿಗಳಾದ ರಾಜುರವರು ಆ ಕಾರ್ಯವನ್ನು ವಹಿಸಿಕೊಂಡಿದ್ದು, ಎಲ್ಲರಿಗೂ ಸ್ಫೂರ್ತಿದಾಯಕವಾಗಿತ್ತು.
ಹತ್ತು ವರ್ಷಗಳಷ್ಟು ಹಳೆಯದಾದ ರಾಜುರವರ ಕಾರು, ಓಡಿದ್ದಕ್ಕಿಂತ ನಿಂತ್ತಿದ್ದೇ ಜಾಸ್ತಿಯಾಗಿತ್ತು. ಆದರೂ ರಾಜುರವರು ಆ ಕಾರಿನ ಸುಸ್ಥಿತಿಯ ನಿರ್ವಹಣೆಯಲ್ಲಿ ಉದಾಸೀನ ಮಾಡುತ್ತಿರಲಿಲ್ಲ. ಅವರೇ ಕಾರನ್ನು ಚಲಾಯಿಸುತ್ತಾ, ಕೃಷ್ಣ ಸೋಲಂಕಿಯವರ ಮನೆಯಿಂದ ವೃದ್ಧೆಯನ್ನು ಕೊಂಡೊಯ್ದು ಡಯಾಲಿಸಿಸ್ ಆಸ್ಪತ್ರೆಯನ್ನು ತಲುಪಿಸಿದ್ದರು. ಡಯಾಲಿಸಿಸ್ ಪ್ರಕ್ರಿಯೆ ಮುಗಿಯಲು ಸುಮಾರು ನಾಲ್ಕು ಘಂಟೆಗಳ ಕಾಲ ಕಾಯಬೇಕಾಗಿ ಬಂತು. ಸಮಾಧಾನದಿಂದ ಕಾದ ರಾಜುರವರು, ಚಿಕಿತ್ಸೆ ಮುಗಿದನಂತರ ವೃದ್ಧೆಯನ್ನು ಕ್ಷೇಮವಾಗಿ ಮನೆ ತಲುಪಿಸಿದ್ದರು. ಕೃಷ್ಣ ಮತ್ತು ಜಯ ಸೋಲಂಕಿರವರ ಆನಂದಕ್ಕೆ ಅಂದು ಪಾರವೇ ಇರಲಿಲ್ಲ. ಮನಸಾರೆ ಹರೆಸಿ, ಅವರು ರಾಜುರವರನ್ನು ಬೀಳ್ಕೊಟ್ಟಿದ್ದರು.
ಮತ್ತೊಂದು ತಡ ರಾತ್ರಿ, 'ಕೊರೋನಾ ವಾರ್ ಕೋಣೆ'ಯಿಂದ ತುರ್ತು ಕರೆಯೊಂದು ಬಂದಿತ್ತು. ರಾಜು ಮತ್ತು ರೋಹಿಣಿಯರಿಬ್ಬರೂ ಕರೆಯನ್ನು ಸ್ವೀಕರಿಸಿ ಸಭೆಯಲ್ಲಿ ಭಾಗಿಗಳಾಗಿದ್ದರು. ತಂಡದ ನಾಯಕರ ಮಾತಿನಲ್ಲಿ ಸಾಕಷ್ಟು ಆತಂಕವಿತ್ತು. ಯುರೋಪ್ ಖಂಡದ ದೊಡ್ಡ ನಗರವೊಂದರಲ್ಲಿ, ಸುಮಾರು ೨೬೦ ಭಾರತೀಯರು ಸಿಲುಕಿಕೊಂಡಿದ್ದರು. ಅವರುಗಳಲ್ಲಿ ಬಹುತೇಕರು ಹಿರಿಯ ನಾಗರೀಕರಾಗಿದ್ದರು. ಕಳೆದೆರಡು ವಾರದಿಂದ ಅತಂತ್ರರಾದ ಅವರುಗಳು, ಭಾರತಕ್ಕೆ ಮರಳಲು ವಿಮಾನ ದೊರಕದೆ ಪರೆದಾಡುತ್ತಿದ್ದರು. ಅಂದು, ಭಾರತ ಸರಕಾರವು ಅವರುಗಳನ್ನು ವಾಪಸ್ಸು ಕರೆ ತರಲು ವಿಮಾನವೊಂದನ್ನು ಕಳುಹಿಸುವ ಏರ್ಪಾಡನ್ನು ಮಾಡಿತ್ತು. ಆದರೆ, ಆ ವಿಮಾನದಲ್ಲಿ ಗಗನ ಸಖಿಯರ ತೀವ್ರ ಕೊರತೆಯಿತ್ತು. 'ಆ ವಿಮಾನದಲ್ಲಿರುವ ಒಂದೆರಡು ಹಿರಿಯ ಗಗನ ಸಖಿಯರಿಗೆ ಸಹಾಯಕರಾಗಿ ಹೋಗಲಿಚ್ಛಿಸುವ, ಸುಮಾರು ೨೫ರ ಪ್ರಾಯದ ಯುವತಿಯರು ನನಗೆ ತಮ್ಮ ಹೆಸರುಗಳನ್ನು ಈಗಲೇ ನೀಡಿ. ಇಂದೊಂದು ತುರ್ತು ಕರೆಯಾದುದರಿಂದ, ಅಭ್ಯರ್ಥಿಗಳಿಗೆ ಯಾವುದೇ ಅನುಭವ ಅಥವಾ ತರಬೇತಿಗಳ ಅವಶ್ಯಕತೆ ಇಲ್ಲ. ಇಚ್ಛೆಯುಳ್ಳ, ಪಾಸ್ಪೋರ್ಟ್ ಇಲ್ಲದವರೂ ಮುಂದೆ ಬರಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ "ಕೋವಿಡ್ ರೋಗ"ದ ಪರೀಕ್ಷೆಯನ್ನು ವಿಮಾನ ನಿಲ್ದಾಣದಲ್ಲೇ ಮಾಡಲಾಗುವುದು. ಕೊರೋನಾ ಪರಿಸ್ಥಿತಿ ಇರುವುದರಿಂದ, ಕಾರ್ಯದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ, ಎಲ್ಲಾ ಮುಂಜಾಗರೂಕತೆಗಳನ್ನೂ ಅನುಸರಿಸಲಾಗುವುದು. "ಕೋವಿಡ್ ಇಲ್ಲ"ವೆಂಬ ಪ್ರಮಾಣ ಪತ್ರವನ್ನು, ಅಲ್ಲಿನ ಸ್ಥಳೀಯ ವೈದ್ಯರಿಂದ ಪಡೆದವರನ್ನು ಮಾತ್ರ ಭಾರತಕ್ಕೆ ವಾಪಸ್ಸು ಕರೆ ತರಲಾಗುವುದರಿಂದ, ತಮ್ಮಗಳಲ್ಲಿ ಆತಂಕ ಬೇಡ' ಎಂದು ಕೋರಿಕೊಂಡ ತಂಡದ ನಾಯಕರು, ಪ್ರತಿಕ್ರಿಯೆಗಳಿಗಾಗಿ ಕಾಯುತ್ತಾ ಕುಳಿತಿದ್ದರು.
ಕೋರಿಕೆಯ ಪ್ರಕಟಣೆಯನಂತರ, ಸದಸ್ಯರುಗಳು ತಮ್ಮ ತಮ್ಮ ಮನೆಯವರೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಲೆಂದು, ೩೦ ನಿಮಿಷಗಳ ವಿರಾಮವನ್ನು ನೀಡಲಾಗಿತ್ತು. ವಿರಾಮದ ವೇಳೆಯಲ್ಲಿ, ರೋಹಿಣಿ ತನ್ನ ತಂದೆಯೊಂದಿಗೆ ಚರ್ಚಿಸಿದ್ದಳು. 'ಅಪ್ಪಾ, ನಾನು ೨೫ರ ಒಳಗಿನ ಪ್ರಾಯದ ಯುವತಿ. ನನ್ನ ಹತ್ತಿರ ಪಾಸ್ಪೋರ್ಟ್ ಕೂಡಾ ಇದೆ. ಭಾರತದಲ್ಲಿನ ವಿವಿಧ ನಗರಗಳಿಗೆ ನಾನು ಸುಮಾರು ಏಳು ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದೇನೆ. ಆದುದರಿಂದ, ಗಗನ ಸಖಿಯರ ಕೆಲಸವೇನೆಂಬುದರ ಅರಿವು ನನಗಿದೆ. ಹೇಗೂ ಇಬ್ಬರು ನುರಿತ ಗಗನ ಸಖಿಯರು ಇದ್ದು, ನನಗೆ ಮಾರ್ಗದರ್ಶನ ನೀಡುತ್ತಾರೆ. ನಾನೇಕೆ ಈ ಕೆಲಸಕ್ಕೆ ಮುಂದಾಗಬಾರದು?'
'ಮಗಳೇ, ನಿನ್ನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತಿದೆ. ನಿನ್ನ ಧೈರ್ಯ ಮತ್ತು ಸೇವಾ ಮನೋಭಾವಗಳನ್ನು ನೋಡಿ ನನ್ನ ಮನಸ್ಸು ತುಂಬಿ ಬಂದಿದೆ. ಸಂಕಷ್ಟಗಳಿಗೆ ಸಿಲುಕಿರುವ ಮನುಷ್ಯರುಗಳಿಗೆ ಸಹಾಯ ಹಸ್ತ ಚಾಚುವುದೊಂದು ಮಹತ್ಕಾರ್ಯ. ದೇವರ ಆಶೀರ್ವಾದ ನಿನ್ನೊಂದಿಗಿರಲಿ' ಎಂದು ತುಂಬು ಮನಸ್ಸಿನಿಂದ ಹರಸಿದ್ದರು, ತಂದೆ ರಾಜು.
ಆನ್ಲೈನ್ ಸಭೆ ಮತ್ತೆ ಸೇರಿದ ಕ್ಷಣವೇ, ರೋಹಿಣಿ ತುದಿಗಾಲಿನಲ್ಲಿ ನಿಂತಿದ್ದಳು. 'ಗಗನ ಸಖಿಯರ ಸಹಾಯಕಿಯಾಗಿ ಕಾರ್ಯ ನಿರ್ವಹಿಸಲು ನಾನು ಸಿದ್ಧಳಿದ್ದೇನೆ' ಎಂದು ಕಿರುಚುತ್ತಾ ನುಡಿದ ರೋಹಿಣಿಯ ಧ್ವನಿಯಲ್ಲಿ ಕಾತರವಿತ್ತು.
ವಿಮಾನ ಪ್ರಯಾಣದ ದಿನ ಸಮೀಪಿಸುತ್ತಿತ್ತು. ರೋಹಿಣಿಯ ಗೆಳೆಯನಾದ ಡಾ. ಕಿರಣ್ ಕೊಂಚ ಚಿಂತಿತನಾಗಿದ್ದನು. ತನ್ನ ಆತಂಕಗಳನ್ನು ತೋರ್ಪಡಿಸದೇ, ಅವನು ಗೆಳತಿ ರೋಹಿಣಿಯೊಂದಿಗೆ ಮಾತನಾಡಿದ್ದನು. 'ರೋಹಿಣಿ, ನಿನ್ನ ಬಗ್ಗೆ ನನ್ನಲ್ಲೀಗ ಹೆಚ್ಚಿನ ಗೌರವ ಮೂಡಿದೆ. ನಿನ್ನ ನಿಸ್ವಾರ್ಥ ಸೇವೆಗೆ ನನ್ನದೊಂದು ನಮನವಿರಲಿ. ಆದರೆ ನೀನು ಮುನ್ನೆಚ್ಚರಿಕೆಯಿಂದಿರಬೇಕು. "ಪಿ.ಪಿ.ಇ. ತೊಡುಗೆ"ಯನ್ನು ಅವರು ನೀಡಿದರೆ, ಅದನ್ನು ತಪ್ಪದೇ ಧರಿಸು. ಎನ್-೯೫ ಮಾಸ್ಕ್ಗಳನ್ನು ಮತ್ತು ಕೈ-ತೊಡುಗೆ (hand-gloves)ಗಳನ್ನು ನಾನು ನೀಡುತ್ತೇನೆ. ಅವುಗಳ ಧಾರಣೆ ನಿರಂತರವಾಗಿರಲಿ. ಆದಷ್ಟೂ ಸಾಮಾಜಿಕ ಅಂತರವನ್ನು ಕಾಪಾಡಿಕೊ. ಹಾರಾಟ ತಂಡದ ಮುಖ್ಯಸ್ಥರುಗಳು ನಿನಗೆ ಸಾಕಷ್ಟು ಎಚ್ಚರಿಕೆಗಳನ್ನು ನೀಡುತ್ತಾರೆ. ಅವುಗಳನ್ನು ಚಾಚೂ ತಪ್ಪದೆ ಪಾಲಿಸು. ನಿನ್ನ ಕಾರ್ಯ ಯಶಸ್ವಿಯಾಗಿ ಸಾಗಲಿ.'
ರಾಜು ಮತ್ತು ಕಿರಣರಿಬ್ಬರೂ, ರೋಹಿಣಿಯನ್ನು ಬೀಳ್ಕೊಡಲು ವಿಮಾನ ನಿಲ್ದಾಣದವರೆಗೆ ಬಂದಿದ್ದರು. ಎರಡೂ ಕಡೆಯ ಹಾರಾಟದ ಸಮಯದಲ್ಲೂ ಪಿ.ಪಿ.ಇ. ತೊಡುಗೆಗಳೊಂದಿಗೆ ಎಲ್ಲಾ ಸಲಕರಣೆಗಳನ್ನೂ, ಸ್ವಯಂ ಸೇವಕರಿಗೆ ನೀಡುವುದಾಗಿ ವಿಮಾನದ ಮುಖ್ಯಸ್ಥರು ಪ್ರಕಟಿಸಿದ್ದು, ಮೂವರಿಗೂ ಸಮಾಧಾನವನ್ನು ತಂದಿತ್ತು. ತಂದೆಗೆ ನಮಸ್ಕರಿಸಿ, ಕಿರಣನಿಗೆ 'ಬೈ' ಹೇಳಿದ ರೋಹಿಣಿ ವಿಮಾನದ ಕಡೆ ಹೊರಟಳು.
ಯೂರೋಪಿನ ಆ ಮಹಾ ನಗರದಿಂದ ಭಾರತದ ಕಡೆಯ ಹಾರಾಟದ ದಿನ ಅದಾಗಿತ್ತು. ಎಲ್ಲಾ ೨೬೦ ಪ್ರಯಾಣಿಕರೂ ವಿಮಾನದಲ್ಲಿ ಆಸೀನರಾಗಿ ಕುಳಿತಿದ್ದರು. ಅವರೆಲ್ಲರೂ 'ಕೋವಿಡ್ ಇಲ್ಲ'ವೆಂಬ ಪ್ರಮಾಣ ಪತ್ರವನ್ನು ಸ್ಥಳೀಯ ವೈದ್ಯರಿಂದ ಹೊಂದಿದವರಾಗಿದ್ದರು. ರೋಹಿಣಿಯೂ ಸೇರಿದಂತೆ ವಿಮಾನದ ತಂಡದ ಎಲ್ಲ ಸದಸ್ಯರುಗಳಿಗೂ, ಕೋವಿಡ್ ಇಲ್ಲವೆಂದು ಪರೀಕ್ಷೆಯ ಮೂಲಕ ದೃಢ ಪಡಿಸಿಕೊಳ್ಳಲಾಗಿತ್ತು. ತಂಡದ ಎಲ್ಲಾ ಸದಸ್ಯರುಗಳಿಗೂ ಪಿ.ಪಿ.ಇ. ತೊಡುಗೆಗಳೊಂದಿಗೆ ಎಲ್ಲಾ ಸುರಕ್ಷಾ ಸಲಕರಣೆಗಳನ್ನೂ ನೀಡಲಾಗಿತ್ತು. ಮನ್ನೆಚ್ಚರಿಕೆಯ ಎಲ್ಲಾ ಸೂಚನೆಗಳನ್ನೂ ತಂಡದ ಸದಸ್ಯರುಗಳೆಲ್ಲರಿಗೂ ಸ್ಪಷ್ಟವಾಗಿ ನೀಡಲಾಗಿತ್ತು. ಪ್ರಯಾಣಿಕರೆಲ್ಲರುಗಳನ್ನೂ ಸಾಮಾಜಿಕ ಅಂತರವಿರುವಂತೆ ಆಸೀನರನ್ನಾಗಿಸಿತ್ತು. ಪ್ರತಿ ಎರಡು ಪ್ರಯಾಣಿಕರುಗಳ ನಡುವೆ ಮಧ್ಯದ ಆಸನವನ್ನು ಖಾಲಿ ಬಿಡಲಾಗಿತ್ತು. ಪ್ರಯಾಣಿಕರುಗಳಿಗೆ ಮುನ್ಸೂಚನೆಯನ್ನು, ಇದ್ದ ಎರಡು ನುರಿತ ಗಗನ ಸಖಿಯರೇ ನೀಡಿದ್ದರು. ವಿಧೇಯಳಾದ ರೋಹಿಣಿ ತನ್ನ ಸೇವೆಯಲ್ಲಿ ನಿರತಳಾಗಿದ್ದಳು. ಆ ವಿಮಾನ ಭಾರತವನ್ನು ತಲುಪಲು ಸುಮಾರು ಹತ್ತು ಘಂಟೆಗಳ ಹಾರಾಟವನ್ನು ನಡೆಸಿತ್ತು. ಭಾರತದ ವಿಮಾನ ನಿಲ್ದಾಣದಲ್ಲಿ ಕ್ಷೇಮವಾಗಿ ವಿಮಾನ ನೆಲಕ್ಕಿಳಿದಾಗ, ಎಲ್ಲಾ ೨೬೦ ಪ್ರಯಾಣಿಕರೂ ಮತ್ತು ತಂಡದ ಸದಸ್ಯರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ವಿಮಾನದಿಂದಿಳಿದ ಎಲ್ಲರನ್ನೂ, ವಿಮಾನ ನಿಲ್ದಾಣದಲ್ಲೇ ಪರೀಕ್ಷೆಗೊಳಪಡಿಸಲಾಯಿತು. ಪರೀಕ್ಷೆಗಳು ಮುಗಿದನಂತರ ರೋಹಿಣಿಯನ್ನು ಮನೆಗೆ ಕಳುಹಿಸುವ ಮುನ್ನ, ಹತ್ತು ದಿನಗಳ ಕ್ವಾರಂಟೈನಿನಲ್ಲಿರುವಂತೆ ಸೂಚಿಸಿ ಬೀಳ್ಕೊಡಲಾಯಿತು. ರೋಹಿಣಿಯನ್ನು ಸ್ವಾಗತಿಸಲು ಬಂದಿದ್ದ ಕಿರಣ್ ಮತ್ತು ರಾಜುರವರಿಬ್ಬರೂ, ರೋಹಿಣಿಯೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳ ಬೇಕಾಯಿತು. ಮೂರು ದಿನಗಳನಂತರ ಮತ್ತೊಮ್ಮೆ ಪರೀಕ್ಷೆಗೊಳಪಡುವಂತೆ ರೋಹಿಣಿಗೆ ಸೂಚಿಸಲಾಗಿತ್ತು.
***
ರೋಹಿಣಿಯ ಸಾಹಸದ ಸೇವೆಯ ಬಗ್ಗೆ, ತಂದೆ ರಾಜು ಮತ್ತು ಕಿರಣರಿಬ್ಬರಿಗೂ ಹೆಮ್ಮೆಯೆನಿಸಿತ್ತು. ರೋಹಿಣಿಯೊಂದಿಗೆ ಕಿರಣ್ ಮಾತನಾಡುತ್ತಾ, 'ಮೂರು ದಿನಗಳನಂತರ ನೀನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು ಎಂದು ಸೂಚಿಸಿದ್ದಾರೆ. ಮುಂಜಾಗರೂಕತೆಯ ಎಲ್ಲಾ ಕ್ರಮಗಳನ್ನು ವಿಮಾನ ಪ್ರಯಾಣದ ಎಲ್ಲಾ ಹಂತಗಳಲ್ಲೂ ಶಿಸ್ತಿನಿಂದ ಅನುಸರಿಸಿರುವುದರಿಂದ, ನೀನು ಭಯ ಪಡಬೇಕಿಲ್ಲ' ಎಂದಿದ್ದನು.
ಮೂರು ದಿನಗಳು ಕಳೆದನಂತರ, ಗೆಳಯ ಕಿರಣ್ ಮತ್ತು ತನ್ನ ತಂದೆ ರಾಜುರವರೊಂದಿಗೆ ರೋಹಿಣಿ ಕೋವಿಡ್ ಪರೀಕ್ಷೆಗೆಂದು ಆಸ್ಪತ್ರೆಯನ್ನು ತಲುಪಿದ್ದಳು. ಕಾರಿನಲ್ಲಿ ಪ್ರಯಾಣಿಸುವಾಗ ಎಲ್ಲಾ ಮುನ್ನೆಚ್ಚರಿಕೆಗಳನ್ನು ಮೂವರು ಚಾಚೂ ತಪ್ಪದೆ ಪಾಲಿಸಿದ್ದರು. ರೋಹಿಣಿಯನ್ನು 'ಆರ್.ಟಿ. - ಪಿ.ಸಿ.ಆರ್. (RT-PCR)' ಪರೀಕ್ಷೆಗೆ ಅಂದಿನ ಬೆಳಗ್ಗೆ ಒಳಪಡಿಸಲಾಯಿತು. 'ಆರ್.ಟಿ. - ಪಿ.ಸಿ.ಆರ್. ಪರೀಕ್ಷೆಯು ಅತ್ಯಂತ ನಿಖರವಾದ ಕೋವಿಡ್ ಪರೀಕ್ಷೆಯೆಂಬುದು ತಜ್ಞರೆಲ್ಲರ ಅಭಿಪ್ರಾಯ' ಎಂದು ಪರೀಕ್ಷೆಯನ್ನು ನಡೆಸಿದ ಡಾ. ನಿರ್ಮಲ, ರಾಜುರವರಿಗೆ ತಿಳಿಸಿದ್ದರು. ರೋಹಿಣಿಯ ಮೂಗು ಮತ್ತು ಗಂಟಲಿನ ದ್ರವಗಳನ್ನು (Swab samples), ಡಾ. ನಿರ್ಮಲರವರೇ ಪಡೆದುಕೊಂಡಿದ್ದರು. ಸುಮಾರು ೬-೭ ಘಂಟೆಗಳೊಳಗೆ ಪರೀಕ್ಷೆಯ ಫಲಿತಾಂಶವನ್ನು ತಿಳಿಸುವುದಾಗಿ ಹೇಳಿ ರೋಹಿಣಿಯನ್ನು ಕಳುಹಿಸಿಕೊಡಲಾಗಿತ್ತು.
ಆಸ್ಪತ್ರೆಯಿಂದ ಬಂದ ಕರೆಗೆ ಓಗೊಟ್ಟು, ರಾಜು ಮತ್ತು ರೋಹಿಣಿಯರಿಬ್ಬರೂ ಅದೇ ದಿನದ ಸಂಜೆ ೫ರ ವೇಳೆಗೆ ಆಸ್ಪತ್ರೆಯನ್ನು ತಲುಪಿದ್ದರು. ಡಾ. ನಿರ್ಮಲರವರ ಕೋಣೆಯಲ್ಲಿ, ಡಾ. ಕಿರಣ್ ಮುಂಚೆಯೇ ಬಂದು ಆಸೀನರಾಗಿದ್ದನ್ನು ನೋಡಿ ರಾಜು ಮತ್ತು ರೋಹಿಣಿಯರಿಗೆ ಆಶ್ಚರ್ಯವಾಗಿತ್ತು. ಡಾ. ನಿರ್ಮಲರ ಸನ್ನೆಯ ಮೇರೆಗೆ ರಾಜು ಮತ್ತು ರೋಹಿಣಿರವರು ಕೂಡಾ, ಅವರ ಕೋಣೆಯನ್ನು ಪ್ರವೇಶಿಸಿದರು. ಡಾ. ನಿರ್ಮಲರವರು ಮೆದುವಾದ ದನಿಯಲ್ಲಿ ಮಾತನಾಡುತ್ತಾ, 'ರೋಹಿಣಿ, ನೀನು ಹೆಚ್ಚು ಭಯ ಪಡುವ ಅವಶ್ಯಕತೆ ಇಲ್ಲ. ನಿನ್ನ ಮೇಲೆ ನಾವು ನಡೆಸಿರುವ ಆರ್.ಟಿ. - ಪಿ.ಸಿ.ಆರ್. ಪರೀಕ್ಷೆಯ ಫಲಿತಾಂಶಗಳು ನಿಖರವಾದವು ಎಂಬುದು ವೈದ್ಯಕೀಯ ವಲಯದ ಅಭಿಪ್ರಾಯ. ನಿನ್ನ ಪರೀಕ್ಷೆಯ ಫಲಿತಾಂಶ ಬಂದಿದೆ. ಫಲಿತಾಂಶದ ಪ್ರಮಾಣ ಪತ್ರ, ಇಗೋ ಇಲ್ಲಿದೆ. "ಅದರ ಪ್ರಕಾರ ನಿನಗೆ ಕೋವಿಡ್ ಸೋಂಕು ತಗುಲಿದೆ." ಆದರೆ ಸೋಂಕಿನ ತೀವ್ರತೆ ಕಮ್ಮಿಯಿದ್ದು, ನೀವುಗಳು ಗಾಬರಿ ಪಡಬೇಕಾದ ಅವಶ್ಯಕತೆ ಏನಿಲ್ಲ.' ಸೋಂಕು ತಗುಲಿರುವ ಸುದ್ದಿ, ರೋಹಿಣಿಗಿಂತ ತಂದೆ ರಾಜುರವರನ್ನು ಹೆಚ್ಚು ಆತಂಕಿತರನ್ನಾಗಿಸಿತ್ತು. ಡಾ. ಕಿರಣ್ ಕಣ್ಸನ್ನೆ ಮಾಡಿ, ಶಾಂತಿಯಿಂದಿರುವಂತೆ ರಾಜು-ರೋಹಿಣಿಯರಿಗೆ ಸೂಚಿಸಬೇಕಾಯಿತು. ತನಗೆ ಸೋಂಕು ತಗುಲಿರುವ ವಿಷಯ ಕಿರಣನಿಗೆ ಮುಂಚೆಯೇ ತಿಳಿದಿತ್ತೆಂದು, ರೋಹಿಣಿಗೆ ಅರಿವಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ.
ಡಾ.ನಿರ್ಮಲರವರೇ ಮಾತನ್ನು ಮುಂದುವರೆಸುತ್ತಾ, 'ರೋಹಿಣಿ, ತುಂಬಾ ಗಾಬರಿ ಪಡಬೇಡ. ನಿನ್ನ ಸೋಂಕಿನ ತೀವ್ರತೆ ಹೆಚ್ಚೇನಿಲ್ಲ. ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇರದು. ನಿನ್ನ ಚಿಕಿತ್ಸೆ ಮನೆಯಲ್ಲೂ ನಡೆಯಬಹುದು. ಇನ್ನೂ ಕೆಲವು ವಾರಗಳವರೆಗೆ ನೀನು ಕ್ವಾರಂಟೈನಿನಲ್ಲಿರಬೇಕಾಗ ಬಹುದು. ಮುಂದಿನ ವಿಧಿ-ವಿಧಾನಗಳು, ನಿನಗೆ ಚಿಕಿತ್ಸೆಯನ್ನು ನೀಡುವ ವೈದ್ಯರ ನಿರ್ಧಾರಕ್ಕೆ ಬಿಟ್ಟದ್ದು' ಎಂದು ಡಾ. ಕಿರಣ್ ರವರ ಕಡೆ ನೋಡಿದರು.
ರೋಹಿಣಿಯ ಸೋಂಕಿನ ನಿಜ ಪರಿಸ್ಥಿತಿಯನ್ನು ಡಾ. ನಿರ್ಮಲ, ಡಾ. ಕಿರಣರವರಿಗೆ ಮುಂಚೆಯೇ ವಿವರಿಸಿಯಾಗಿತ್ತು. ತಜ್ಞ ವೈದ್ಯರುಗಳಾಗಲೇ ರೋಹಿಣಿಯ ಸೋಂಕಿನ ತೀವ್ರತೆಯನ್ನು ಪರೀಶೀಲಿಸಿ, ಆಕೆಯನ್ನು ಎಲ್ಲಾ ಸೌಲಭ್ಯಗಳಿರುವ ಕೋವಿಡ್ ಆಸ್ಪತ್ರೆಯೊಂದಕ್ಕೆ ದಾಖಲಿಸುವುದೇ ಸೂಕ್ತ ಎಂದು ಡಾ. ಕಿರಣರಿಗೆ ತಿಳಿಸಿಯೂ ಆಗಿತ್ತು. ಅಸಲಿ ಪರಿಸ್ಥಿತಿಯನ್ನು ರೋಹಿಣಿ ಮತ್ತು ರಾಜುರವರಿಗೆ ತಿಳಿಸುವ ಭಾರ ಈಗ ಡಾ. ಕಿರಣರ ಮೇಲಿತ್ತು.
'ಡಾ ಕಿರಣ್ ರವರೊಂದಿಗೆ, ಡಾ. ನಿರ್ಮಲ ಮಾತನಾಡುತ್ತಾ, 'ನಿಮ್ಮ ಮತ್ತು ರೋಹಿಣಿಯವರ ನಡುವಿನ ಸಂಬಂಧ "ವಿಶೇಷ"ವಾದುದು ಎಂದು ನನಗೆ ಗೊತ್ತು. ಆದುದರಿಂದ ಈಕೆಯನ್ನು ತಮ್ಮ ಆಸ್ಪತ್ರೆಗೆ ಚಿಕಿತ್ಸೆಗೆಂದು ಕೊಂಡೊಯ್ಯುವುದು ಬೇಡ. ಅವರಿಗೆ ಚಿಕಿತ್ಸೆ ನೀಡುವಾಗ ತಾವು ಭಾವುಕರಾಗುವ ಸಾಧ್ಯತೆ ಹೆಚ್ಚು. ಆದುದರಿಂದ ರೋಹಿಣಿಯನ್ನು, ಮುಂದಿನ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯುವುದು ಒಳ್ಳೆಯದು. ಅಲ್ಲೂ ಕೋವಿಡ್ ಚಿಕಿತ್ಸೆಗೆ ಬೇಕಾದ ಎಲ್ಲಾ ಅನುಕೂಲಗಳೂ ಚೆನ್ನಾಗಿದೆ' ಎಂಬ ಡಾ.ನಿರ್ಮಲರ ಸಲಹೆ ಡಾ. ಕಿರಣರಿಗೂ ಸರಿಯೆನಿಸಿತ್ತು. ಡಾ. ನಿರ್ಮಲರ ಮಾತುಗಳನ್ನು ಕೇಳಿಸಿಕೊಂಡ ರೋಹಿಣಿಗೆ, ತಾನು ಆಸ್ಪತ್ರೆ ಸೇರಬೇಕಾಗಬಹುದೇನೋ ಎಂಬ ಸಂಶಯ ಮೂಡಿರ ಬಹುದು ಎಂಬದನ್ನು, ಡಾ ಕಿರಣ ಗಮನಿಸಿಯಾಗಿತ್ತು.
ರೋಹಿಣಿ, ರಾಜು ಮತ್ತು ಕಿರಣರು ಮನೆಯನ್ನು ತಲುಪುವ ಹೊತ್ತಿಗೆ ಸಮಯ ಸಂಜೆಯ ೭ ಘಂಟೆಯಾಗಿತ್ತು. ರೋಹಿಣಿ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿಯನ್ನು ಡಾ. ಕಿರಣ್, ರಾಜುರವರಿಗೆ ತಿಳಿಸಿಯಾಗಿತ್ತು. ತಂದೆ ರಾಜುರವರು ಆತಂಕಕ್ಕೊಳಗಾಗಿದ್ದು ಸ್ಪಷ್ಟವಾಗಿತ್ತು.
ಪರಿಸ್ಥಿತಿಯ ಸೂಕ್ಷ್ಮವನ್ನು ಗಮನಿಸಿದ್ದ ರೋಹಿಣಿ ಕೂಡ ಗಾಬರಿಗೊಂಡಿದ್ದರೂ, ಅದನ್ನಾಕೆ ಮುಖದಲ್ಲಿ ತೋರ್ಪಡಿಸುತ್ತಿಲ್ಲವೆಂಬುದು ವೈದ್ಯನಾದ ಕಿರಣನಿಗೆ ತಿಳಿದಿತ್ತು. ಕೆಲವು ನಿಮಿಷಗಳ ಮೌನ ಆ ಮೂವರನ್ನು ಆವರಿಸಿತ್ತು. ಎಲ್ಲರಿಗೂ ಚಹಾವನ್ನು ಮಾಡಿ ತರುತ್ತೇನೆಂದು ಹೇಳಿ, ತಂದೆ ರಾಜು ಅಡುಗೆ ಮನೆಯ ಕಡೆ ನಡೆದಿದ್ದರು. ಕಿರಣ್ ಮತ್ತು ರೋಹಿಣಿಯರ ನಡುವೆ ಪರಸ್ಪರ ವಿಚಾರ ವಿನಿಮಯಕ್ಕೆ ಅನುವು ಮಾಡಿಕೊಡುವುದೇ ರಾಜುರವರು ನಿರ್ಗಮಿಸಿದ ಉದ್ದೇಶವಾಗಿತ್ತು.
'ರೋಹಿಣಿ, ಬಹಳ ಚಿಂತಿಸ ಬೇಡ. ನಿನಗೆ ತಗುಲಿರುವ ಸೋಂಕು ಸಾಧಾರಣವಾದದ್ದು. ಮನೆಯಲ್ಲೇ ಇದ್ದುಕೊಂಡು ನೀನು ಗುಣ ಹೊಂದಬಹುದು. ಒಂದೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಬಂದರೂ, ಹೆದರುವುದು ಬೇಡ. ಚಿಕಿತ್ಸೆಯುದ್ದಕ್ಕೂ ನಾನು ನಿನ್ನೊಡನಿರುತ್ತೇನೆ. ಚಿಕಿತ್ಸೆ ಮತ್ತು ಕ್ವಾರಂಟೈನ್ ಅವಧಿ ೨-೩ ವಾರಗಳಷ್ಟಿರಬಹುದು. ಜಿಲ್ಲಾ ಆಸ್ಪತ್ರೆಯ ಕೋವಿಡ್ ಚಿಕಿತ್ಸೆಗೆಂದು ನಾನು ಕೂಡ ಹಲವು ಬಾರಿ ಹೋಗಿದ್ದೇನೆ. ಹಾಗಾಗಿ ಅಲ್ಲಿನ ವೈದ್ಯರುಗಳೆಲ್ಲರೂ ನನ್ನ ಮಿತ್ರರುಗಳೇ. ಈವರೆಗೆ ನಡೆದಿರುವ ಸಂಶೋಧನೆಗಳ ಪ್ರಕಾರ ಕೋವಿಡ್ನ ಪರಿಣಾಮದ ತೀವ್ರತೆ, ಸ್ತ್ರೀಯರ ಮೇಲೆ ಹೆಚ್ಚಾಗಿರುವುದಿಲ್ಲ ಎಂದೇ ತಿಳಿದು ಬಂದಿದೆ. ಪುರಷರಲ್ಲಿ ಒಂದೇ X-ಕ್ರೋಮೋಸೋಮ್ (X-chromosome) ಇರುತ್ತದೆ. ಆದರೆ ಸ್ತ್ರೀಯರಲ್ಲಿ X-ಕ್ರೋಮೋಸೋಮ್ ಗಳ ಸಂಖ್ಯೆ ಎರಡಿರುವದರಿಂದ, ಅವರಲ್ಲಿ ರೋಗ ನಿರೋಧಕ ಶಕ್ತಿ (immunity), ಪುರಷರಿಗಿಂತ ಜಾಸ್ತಿ. ಸ್ತ್ರೀಯರಲ್ಲಿರುವ ವಿಶೇಷವಾದ ಹಾರ್ಮೋನ್ (hormone)ಗಳೂ, ಅವರ ಹೆಚ್ಚಿನ ನಿರೋಧಕ ಶಕ್ತಿಗೆ ಪೂರಕವಾಗಿರುತ್ತದೆ. ಅಂದ ಹಾಗೆ, ನೀನಿನ್ನೂ ಯುವತಿ ಮತ್ತು ಆರೋಗ್ಯವಂತಳು. ಬೇರ್ಯಾವ ರೋಗದ (comorbidities) ತೊಡಕು ನಿನಗಿಲ್ಲ. ನೀನು ಎಂದಿನಂತೆ ಹರ್ಷಚಿತ್ತಳಾಗಿರು. ಅದು ಕೂಡ ನಿನ್ನ ಸೋಂಕಿನ ನಿವಾರಣೆಗೆ ಸಹಾಯಕವಾಗುತ್ತದೆ. ನಿನ್ನ ಮುಗುಳ್ನಗೆಯನ್ನು ನಾನು ನೋಡಲಿಚ್ಛಿಸುತ್ತೇನೆ. ಒಮ್ಮೆ ನಕ್ಕು ತೋರಿಸು' ಎಂದು ವಿವರಿಸಿದ ಡಾ. ಕಿರಣನ ಉದ್ದೇಶ ರೋಹಿಣಿಯ ಮನಸ್ಸನ್ನು ಹಗುರಗೊಳಿಸುವುದಾಗಿತ್ತು.
ಸ್ತ್ರೀಯರ ಮೇಲೆ ಮತ್ತು ಯುವಕರ ಮೇಲೆ ಕೋವಿಡ್ನ ಪರಿಣಾಮ ಹೆಚ್ಚು ತೀವ್ರವಾಗಿರದು ಎಂಬುದು ರೋಹಿಣಿಗೂ ತಿಳಿದಿತ್ತು. ಜೊತೆಗೆ ತಾನು ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇದೆ ಎಂಬುದೂ, ಸೂಕ್ಷ್ಮ ಮನಸ್ಸಿನ ರೋಹಿಣಿಯ ಗಮನಕ್ಕೆ ಬಂದಿತ್ತು. ಎಲ್ಲವುದಕ್ಕಿಂತ ಹೆಚ್ಚಾಗಿ ತನ್ನ ಗೆಳಯ ಕಿರಣನೂ ಆತಂಕಕ್ಕೊಳಪಟ್ಟಿರುವುದನ್ನು ರೋಹಿಣಿ ಗಮನಿಸದಿರಲಿಲ್ಲ. ಅವನ ಮನಸ್ಸನ್ನು ಹಗುರಗೊಳಿಸಲು, ತಾನೊಂದು ನಗೆ ಬೀರಬೇಕಾದ್ದು ಅವಶ್ಯಕವೆಂದು ರೋಹಿಣಿಗನಿಸಿತ್ತು. ರೋಹಿಣಿ ಆತ್ಮೀಯವಾಗಿ ಮುಗುಳ್ನಕ್ಕಿದ್ದನ್ನು ನೋಡಿ, ಗೆಳಯ ಕಿರಣನೂ ಮುಗುಳ್ನಕ್ಕರೂ, ಇಬ್ಬರ ಮನಸ್ಸಿನಲ್ಲೂ ಆತಂಕವಿದ್ದದ್ದು ಸುಳ್ಳಾಗಿರಲಿಲ್ಲ.
ಆಗ ಸಮಯ ರಾತ್ರಿಯ ಎಂಟು ಘಂಟೆಯಾಗಿತ್ತು. ಜಿಲ್ಲಾ ಆಸ್ಪತ್ರೆಗೆ ದಾಖಲಿಸಲೆಂದು, ಡಾ ಕಿರಣ್, 'ಕೋವಿಡ್ ಹಾಸಿಗೆಗಳ ನಿರ್ವಹಣಾ ಕೇಂದ್ರ'ದ ಮುಖ್ಯಸ್ಥರಾದ ಡಾ. ನಾರಂಗ್ ರವರಿಗೆ ಫೋನಾಯಿಸಿದ್ದರು. ಡಾ. ನಾರಂಗ್ ಉತ್ತರಿಸುತ್ತಾ, 'ಒಹೋ, ನಿಮ್ಮ ಗೆಳತಿ ರೋಹಿಣಿಯವರ ದಾಖಲಾತಿಯ ಬಗ್ಗೆ ವಿಚಾರಿಸುತ್ತಿದ್ದೀರಾ? ಅವರ ಎಲ್ಲಾ ದಾಖಲೆ-ಪಾತ್ರಗಳು ನನಗೆ ದೊರೆತಿದೆ. ಅವರಿಗೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಯ ಹಾಸಿಗೆ ದೊರೆಯಬೇಕಾದರೆ, ಸ್ವಲ್ಪ ಸಮಯ ಬೇಕಾಗಬಹುದು. ತಾವು ನನಗೆ ಬೆಳಗ್ಗೆ ಕರೆಯನ್ನು ಮಾಡುವಿರಾ?' ಎಂದಿದ್ದರು.
ಬೆಳಗಿನವರೆಗೆ ಕಾಯಬೇಕಾದ ಅನಿವಾರ್ಯತೆ ಉಂಟಾಗಿದ್ದರಿಂದ, ಡಾ. ಕಿರಣ್ ಅಂದಿನ ರಾತ್ರಿ ರೋಹಿಣಿಯ ಮನೆಯಲ್ಲೇ ಉಳಿದುಕೊಂಡರು.
ಬೆಳಗಾಗುತ್ತಲೇ, ಸಮಯ ಎಂಟರ ಹೊತ್ತಿಗೆ ಡಾ. ಕಿರಣ್, ಡಾ. ನಾರಂಗ್ ರವರಿಗೆ ಮತ್ತೆ ಫೋನಾಯಿಸಿದ್ದರು. 'ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕು. ಸಾಯಿಂಕಾಲಕ್ಕೆ ಮುಂಚೆ ಯಾವ ಹಾಸಿಗೆಯೂ ಲಭ್ಯವಿರುವುದಿಲ್ಲ. ಅಂದ ಹಾಗೆ ರೋಗಿಯ ಪರಿಸ್ಥಿತಿ ಹೇಗಿದೆ? ಭರವಸೆಯ ಮಾತುಗಳನ್ನಾಡಿ, ಆಕೆಯ ಮನಸ್ಸು ಹಗುರಗೊಳ್ಳುವಂತೆ ಮಾಡುತ್ತಿರಿ' ಎಂಬ ಉತ್ತರ ಡಾ. ನಾರಂಗರಿಂದ ಬಂದಿತ್ತು.
ಸಮಯ ಒಂಬತ್ತಾಗುತ್ತಲೇ, ಡಾ. ಕಿರಣ, ತನ್ನ ಆಸ್ಪತ್ರೆಗೆ ಹೊರಟು ನಿಂತಿದ್ದನು. 'ರೋಹಿಣಿ, ನಿನಗೆ ಹಾಸಿಗೆಯ ಏರ್ಪಾಡಾಗುವುದಕ್ಕೆ ಸಾಯಿಂಕಾಲದವರೆಗೆ ಕಾಯಬೇಕಾಗಿದೆ. ಕೊಟ್ಟಿರುವ ಔಷಧಿಗಳನ್ನು ಸಮಯಕ್ಕೆ ಸರಿಯಾಗೇ ತೆಗೆದುಕೋ, ಹೆದರಿಕೆ ಬೇಡ. "ನಾನಿದ್ದೇನಲ್ಲ," ಎಲ್ಲದರ ಮೇಲೂ ನನ್ನ ನಿಗಾ ಇದ್ದೆ ಇರುತ್ತದೆ. ನಿಮ್ಮಪ್ಪ ನಿನ್ನೊಡನೇ ಇರುತ್ತಾರಲ್ಲವೇ? ಸಾಯಿಂಕಾಲದ ಸಮಯಕ್ಕೆ ನಾನಿಲ್ಲಿಗೇ ಬರುತ್ತೇನೆ' ಎಂದನು. ಬಾಗಿಲನಲ್ಲೇ ನಿಂತ ರೋಹಿಣಿ, ಗೆಳಯ ಕಿರಣನಿಗೆ ಕೈಗಳನಾಡಿಸುತ್ತಾ ಬೀಳ್ಕೊಟ್ಟಿದ್ದಳು.
ಸಾಯಿಂಕಾಲ ಐದರ ಸಮಯಕ್ಕೆ, ರೋಹಿಣಿಯ ಮನೆಯನ್ನು ತಲುಪಿದ ಕೂಡಲೇ, ಅವನು ಕರೆ ಮಾಡಿದ್ದು ಡಾ. ನಾರಂಗ್ ರವರಿಗೆ. 'ಐ ಆಮ್ ಸಾರೀ ಡಾ. ಕಿರಣ್. ಸುಮಾರು ೧೨ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆ (discharge) ಆಗುವುದನ್ನು ಕಾಯುತ್ತಿದ್ದೇವೆ. ಅವರ ಅಂತಿಮ ಪರೀಕ್ಷಾ ಫಲಿತಾಂಶಗಳಿನ್ನೂ, ಆಸ್ಪತ್ರೆಯ ವೈದ್ಯರುಗಳ ಕೈಸೇರಿಲ್ಲ. ಸುಮಾರು ೨೦ ರೋಗಿಗಳು ಹಾಸಿಗೆ ಪಡೆಯಲು ಈಗಲೂ ಕಾಯುತ್ತಿದ್ದಾರೆ. ಸಧ್ಯಕ್ಕಂತೂ ನಾನೇನೂ ಮಾಡಲಾರೆ. ನಾಳಿನ ಬೆಳಗಿನವರೆಗೆ ಕಾಯದೆ ಅನ್ಯ ಮಾರ್ಗವಿಲ್ಲ.' ಡಾ. ನಾರಂಗ್ ರವರ ಉತ್ತರ, ಕಿರಣನನ್ನೇ ಆತಂಕಗೊಳಿಸಿತ್ತು.
ರೋಹಿಣಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಖಾತರಿಯಾಗಿ, ೨೪ ಘಂಟೆಗಳೇ ಕಳೆದಿದ್ದವು. ವೈದ್ಯನಾದ ಕಿರಣನಿಗೇ, ತನ್ನ ಗೆಳತಿಗೊಂದು ಹಾಸಿಗೆಯ ಏರ್ಪಾಡನ್ನು ಮಾಡಲಾಗಿರಲಿಲ್ಲ. ರಾತ್ರಿ ಹತ್ತರ ಸಮಯಕ್ಕೆ, ರೋಹಿಣಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ಅಂದ ಹಾಗೆ, ತನ್ನ ಆಸ್ಪತ್ರೆಯ ಪರಿಸ್ಥಿತಿ ಏನಿರಬಹುದೆಂದು ತಿಳಿಯಲು, ಡಾ. ಕಿರಣ್ ತನ್ನ ಆಸ್ಪತ್ರೆಗೇ ಫೋನಾಯಿಸಿದ್ದನು. ರಾತ್ರಿ ಪಾಳಯದ ಕರ್ತವ್ಯದ ಮೇಲಿದ್ದ, ಕಿರಿಯ ವೈದ್ಯ ಉಮೇಶ ಮಾತನಾಡುತ್ತಾ, ನಾಳಿನ ಬೆಳಗ್ಗೆ ವೇಳೆಗೆ ಒಂದೆರಡು ರೋಗಿಗಳು ಬಿಡುಗಡೆ ಹೊಂದಬಹುದೆಂದು ತಿಳಿಸಿದ್ದರು.
ಕಿರಣ್ ಮತ್ತು ರಾಜುರವರಿಗೆ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ. ಮಾರನೆಯ ದಿನದ ಬೆಳಗ್ಗೆ ೫ರ ಸಮಯಕ್ಕೆ, ಡಾ.ಕಿರಣ್ ರೋಹಿಣಿ ಹೇಗಿರಬಹುದೆಂದು ನೋಡಲು ಹೋಗಿದ್ದನು. ಅವಳ ಜ್ವರ ಸಾಕಷ್ಟು ಮೇಲೇರಿತ್ತು. ತನ್ನ ಇಡೀ ದೇಹದಲ್ಲಿ ನೋವಿನ ಅನುಭವವಾಗುತ್ತಿದ್ದು, ಮಗ್ಗುಲನ್ನು ಬದಲಾಯಿಸುವುದು ಕಷ್ಟವಾಗಿದೆ ಎಂದು ರೋಹಿಣಿ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಳು. ಆಗಾಗ ಅವಳು ಕೆಮ್ಮುತ್ತಿದ್ದದ್ದೂ, ಕಿರಣನ ಗಮನಕ್ಕೆ ಬಂದಿತ್ತು. ಕಳವಳಗೊಂಡ ಕಿರಣ್ ತನ್ನ ಆಸ್ಪತ್ರೆಯ, ಕಿರಿಯ ವೈದ್ಯ, ಉಮೇಶನಿಗೆ ಕರೆಮಾಡಿದ್ದನು. 'ಹೌದು, ಇನ್ನೇನು ೯ ಘಂಟೆಯ ಹೊತ್ತಿಗೆ ಮೂರು ಕೋವಿಡ್ ರೋಗಿಗಳು ಆಸ್ಪತ್ರೆಯಿಂದ ಮನೆಗೆ ತೆರಳಬಹುದು. ಅವರ ಡಿಸ್ಚಾರ್ಜ್ ಕುರಿತಾದ ಎಲ್ಲಾ ಕ್ರಮಗಳನ್ನು ಪೂರೈಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ನಿಮ್ಮ ರೋಹಿಣಿಗೆ ನಮ್ಮ ಆಸ್ಪತ್ರೆಯಲ್ಲಿ ಹಾಸಿಗೆಯ ವ್ಯವಸ್ಥೆ ಆಗಬೇಕಾದರೂ, ಸ್ಥಳೀಯ ಮುಖ್ಯಸ್ಥ ಡಾ.ನಾರಂಗ್ ರವರ ಅನುಮತಿ ಬೇಕೆಂಬುದು ನಿಮಗೂ ಗೊತ್ತು. ಕೂಡಲೇ ಅವರೊಂದಿಗೆ ಮಾತನಾಡುವುದು ಸೂಕ್ತ,' ಎಂದಿದ್ದರು ಡಾ. ಉಮೇಶ್.
ಅಷ್ಟುಹೊತ್ತಿಗೆ ಸಮಯವಾಗಲೇ ಬೆಳಗ್ಗೆ ೯ ಘಂಟೆಯಾಗಿತ್ತು. ರೋಹಿಣಿಗೆ ಕೋವಿಡ್ ಸೋಂಕು ತಗುಲಿದೆ ಎಂಬುದು ಖಾತರಿಯಾಗಿ ೩೬ ಘಂಟೆಗಳೇ ಕಳೆದಿದ್ದವು. ಭರವಸೆಯ ಸಣ್ಣ ಎಳೆಯೊಂದನ್ನು ಕಂಡಿದ್ದ ಡಾ. ಕಿರಣ್, ಡಾ. ನಾರಂಗರಿಗೆ ಕರೆ ಮಾಡಿದ್ದರು. 'ನಿಮ್ಮದೇ ಆಸ್ಪತ್ರೆಯಲ್ಲಿರುವ ಮೂರು ಹಾಸಿಗೆಗಳನ್ನು ಬಿಟ್ಟರೆ, ಬೇರೆಲ್ಲೂ ಹಾಸಿಗೆಗಳು ಖಾಲಿ ಇಲ್ಲ. ಆ ಮೂರು ಹಾಸಿಗೆಗಳಿಗೂ, ಸುಮಾರು ೨೦ ರೋಗಿಗಳು ಕಾಯುತ್ತಿದ್ದಾರೆ. ಆದರೆ ನಿಮ್ಮ ರೋಹಿಣಿಗೆ ಕೊರೋನಾ ಸೇನಾನಿಯಾಗಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ಸೋಂಕು ತಗುಲಿರುವುದರಿಂದ, ಅವಳಿಗೆ ಆದ್ಯತೆಯ ಮೇರೆಗೆ ನಿಮ್ಮ ಆಸ್ಪತ್ರೆಯ, ಎಲ್ಲಾ ಸಲಕರಣೆಗಳುಳ್ಳ ಹಾಸಿಗೆಯೊಂದರ ಏರ್ಪಾಡನ್ನು ಕೂಡಲೇ ಮಾಡುತ್ತಿದ್ದೇನೆ. ನಮ್ಮಲ್ಲಿ ಆಂಬುಲೆನ್ಸ್ ವ್ಯಾನ್ ಸಧ್ಯಕ್ಕಂತೂ ಲಭ್ಯವಿಲ್ಲ. ಅದರ ಏರ್ಪಾಡನ್ನು ತಾವೇ ಮಾಡಿಕೊಳ್ಳಬೇಕು. ಕೂಡಲೇ ಆಕೆಯನ್ನು ತಮ್ಮ ಆಸ್ಪತ್ರೆಗೆ ಕರೆದು ಕೊಂಡು ಹೊರಡಿರಿ,' ಎಂದಿದ್ದರು ಡಾ. ನಾರಂಗ್.
ಸಮಯಾವಕಾಶ ತುಂಬಾ ಕಮ್ಮಿ ಇದ್ದುದರಿಂದ, ಡಾ. ಕಿರಣನೇ, ತನ್ನ ಕಾರನ್ನು ಚಲಾಯಿಸುತ್ತಾ, ರೋಹಿಣಿಯನ್ನು, ಅವಳ ತಂದೆ ರಾಜುರವರೊಂದಿಗೆ, ತನ್ನ ಆಸ್ಪತ್ರೆಗೆ ಕರೆದೊಯ್ದಿದ್ದನು. ಕಿರಣನ ಮೇಲಿನ ಹಿರಿಯ ವೈದರಾದ ಡಾ.ಈಶ್ವರ್ ಗುಲಾಟಿಯವರಾಗಲೇ ಕಾಯುತ್ತಿದ್ದರು. ಡಾ. ಗುಲಾಟಿಯವರ ಮುಂದೆ ಕೈಜೋಡಿಸಿ ನಿಂತ ತಂದೆ ರಾಜು, 'ನನ್ನ ಮಗಳ ಜೀವವನ್ನುಳಿಸಿ,' ಎಂದು ಬೇಡಿಕೊಂಡಿದ್ದರು. ರಾಜುರವರನ್ನು ಸಂತೈಸಿದ ಡಾ. ಗುಲಾಟಿ, ರೋಹಿಣಿಯನ್ನು ಪರೀಕ್ಷಿಸಲೆಂದು ಅವಳ ವಾರ್ಡಿನ ಕಡೆಗೆ ನಡೆದರು; ಡಾ. ಕಿರಣ್ ಅವರನ್ನು ಹಿಂಬಾಲಿಸಿದ್ದರು. ಪರೀಕ್ಷೆಗಳನ್ನು ನಡೆಸಿದ ಡಾ. ಗುಲಾಟಿರವರು ಮಾತನಾಡುತ್ತಾ, 'ರೋಹಿಣಿ, ನೀನು ಭಯಪಡಬೇಕಾಗಿಲ್ಲ. ನಿನ್ನ ಪರೀಕ್ಷೆಯ ಪತ್ರಗಳನ್ನು ನೋಡಿದ್ದೇನೆ. ನಿನ್ನ ಸೋಂಕು ತೀವ್ರವಾದುದೇನಲ್ಲ. ೩-೪ ದಿನಗಳಲ್ಲಿ ನೀನು ಗುಣಮುಖಳಾಗಿ ಮನೆಗೆ ತೆರಳಬಹುದು. ಎಲ್ಲಿ, ಒಮ್ಮೆ ನಕ್ಕು ತೋರಿಸು' ಎಂದಿದ್ದರು. ರೋಹಿಣಿಯಲ್ಲಿ ಧೈರ್ಯವನ್ನು ತುಂಬುವುದು, ಚಿಕಿತ್ಸೆಯ ಯಶಸ್ಸಿಗೆ ಬೇಕಾದ ಪೂರಕ ಅಂಶವೆಂಬುದು ಡಾ.ಕಿರಣರಿಗೂ ಚೆನ್ನಾಗಿ ತಿಳಿದಿತ್ತು. ಸ್ವಲ್ಪವೂ ತಡ ಮಾಡದೆ ರೋಹಿಣಿಗೆ ಎಲ್ಲ ಚಿಕಿತ್ಸಾ ವಿಧಿ-ವಿಧಾನಗಳನ್ನು, ಆಸ್ಪತ್ರೆಯ ನರ್ಸ್ಗಳು ಶುರುಮಾಡಿದ್ದರು.
ತಂದೆ ರಾಜುರವರ ಆತಂಕ ಕಿರಣನಿಗೆ ತಿಳಿದಿತ್ತು. ಅವನು ರಾಜುರವರನ್ನು ಸಂತೈಸುತ್ತಾ, 'ರೋಹಿಣಿಯ ಚಿಕಿತ್ಸೆಯನ್ನು ಡಾ.ಗುಲಾಟಿ ಮಾಡುತ್ತಾರೆ. ಅವರೊಬ್ಬ ಅನುಭವಿ ವೈದ್ಯರು. ಸಧ್ಯಕ್ಕೆ ಕೆಲವು ಸರಳ ಔಷಧಗಳನ್ನು ಅವಳಿಗೆ ನೀಡಲಾಗಿದೆ. ಮುಂದಿನ ೨೪ ಘಂಟೆಗಳ ಬೆಳವಣಿಗೆಗಳನ್ನು ವೈದ್ಯರು ಗಮನಿಸುತ್ತಿರುತ್ತಾರೆ. ರೋಹಿಣಿ ೩-೪ ದಿನಗಳಲ್ಲಿ ಗುಣ ಹೊಂದುವ ನಿರೀಕ್ಷೆ ಇದೆ. ಆತಂಕ ಬೇಡ' ಎಂದಿದ್ದನು.
ರೋಹಿಣಿ, ಆಸ್ಪತ್ರೆಯನ್ನು ಸೇರಿ ೨೪ ಘಂಟೆಗಳ ಅವಧಿ ಕಳೆದಿತ್ತು. ಅಂದು ಬೆಳಗ್ಗೆ ನಡೆಸಿದ ಪರೀಕ್ಷೆಗಳಿಂದ, ರೋಹಿಣಿಯ ಶ್ವಾಸಕೋಶಗಳು ಊದಿಕೊಂಡಿರುವುದು ಸ್ಪಷ್ಟವಾಗಿತ್ತು. ಹಾಗಾಗಿ ಡಾ.ಗುಲಾಟಿ, ರೋಹಿಣಿಯನ್ನು ಆಮ್ಲಜನಕದ (Oxygen) ಹಾಸಿಗೆಯುಳ್ಳ ಐ.ಸಿ.ಯು.(ICU)ಗೆ ಸ್ಥಳಾಂತರಿಸಿದ್ದರು. ಐ.ಸಿ.ಯು. ಒಳಗೆ ಪ್ರವೇಶಿಸಿದ ಕಿರಣ್ ತನ್ನ ಗೆಳತಿ ರೋಹಿಣಿಯ ಬಳಿ ನಿಂತಿದ್ದನು. 'ರೋಹಿಣಿ, ಗುಡ್ ಮಾರ್ನಿಂಗ್, ನೆನ್ನೆಗಿಂತ ನಿನ್ನ ಇಂದಿನ ಪರಿಸ್ಥಿತಿ ಚೆನ್ನಾಗಿದೆ. ಬೇರೇ ಸೋಂಕಿತರಿಂದ ನಿನ್ನನ್ನು ರಕ್ಷಿಸಲೆಂದು ಮಾತ್ರ, ನಿನ್ನನ್ನು ಐ.ಸಿ.ಯು.ಗೆ ಸ್ಥಳಾಂತರಿಸಲಾಗಿದೆ. ನಿನ್ನ ಉಸಿರಾಟದ ಪ್ರಕ್ರಿಯೆ ಸುಲಲಿತವಾಗಿರಲೆಂದು ಮಾತ್ರ, ನಿನಗೆ ಆಕ್ಸಿಜನ್ ಮಾಸ್ಕನ್ನು ಅಳವಡಿಸಲಾಗಿದೆ. ಚಿಕಿತ್ಸೆಗಳೆಲ್ಲವೂ ಚೆನ್ನಾಗೇ ಮುನ್ಸಾಗುತ್ತಿದೆ. ನೀನು ಆತಂಕಪಡುವ ಅವಶ್ಯಕತೆ ಇಲ್ಲ' ಎಂದ ಗೆಳಯ ಕಿರಣನನ್ನು ನೋಡಿ ಮುಗುಳ್ನಕ್ಕು, ತನ್ನ ಹೆಬ್ಬರಳಿನಿಂದ 'ಥಂಬ್ಸ್-ಅಪ್ (Thumbs-up)' ಸನ್ನೆಯನ್ನು ತೋರಿಸಿದ ರೋಹಿಣಿಗೆ, ಕಿರಣ್ ತನ್ನಲ್ಲಿ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಾನೆಂಬುದು ತಿಳಿದಿತ್ತು.
ಮತ್ತೆರಡು ದಿನಗಳ ಅವಧಿ ಕಳೆದಿತ್ತು. ಡಾ.ಗುಲಾಟಿ ಮತ್ತು ಡಾ. ಕಿರಣರಿಬ್ಬರೂ, ರೋಹಿಣಿಯ ಪರಿಸ್ಥಿತಿ ಹದಗೆಡುತ್ತಿರುವದನ್ನು ಗಮನಿಸಿದ್ದರು. ಅಂದಿನ ಬೆಳಗ್ಗೆ, ಆಕ್ಸಿಜನ್ ಮಾಸ್ಕ್ ಧರಿಸಿದ್ದರೂ ರೋಹಿಣಿ ಉಸಿರಾಡಲಾಗದೆ ಒದ್ದಾಡುತ್ತಿದ್ದಳು. ಆಕೆಯ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿತ್ತು. ಡಾ ಗುಲಾಟಿರವರ ಅನುಮಾನ ಸರಿಯಾಗೇ ಇತ್ತು. ಕೂಡಲೇ ನಡೆಸಿದ ಪರೀಕ್ಷೆಗಳ ಪ್ರಕಾರ, ರೋಹಿಣಿಗೆ ನಿಮೋನಿಯಾ (pneumonia) ಕೂಡಾ ವಕ್ಕರಿಸಿತ್ತು. ಡಾ. ಕಿರಣರನ್ನು ಐ.ಸಿ.ಯು.ಗೆ ಕರೆದೊಯ್ದ ಡಾ. ಗುಲಾಟಿ ಮಾತನಾಡುತ್ತಾ, 'ರೋಹಿಣಿ, ಧೈರ್ಯದಿಂದಿರು. ನಿನ್ನ ಪರಿಸ್ಥಿತಿ ಉತ್ತಮಗೊಳ್ಳುತ್ತಾ ಸಾಗಿದೆ. ಕೆಲವು ರೋಗಿಗಳಲ್ಲಿ, ಕೋವಿಡ್ ರೋಗ ಸುಧಾರಿಸುವ ಮುನ್ನ, ಸ್ವಲ್ಪ ಉಲ್ಬಣಗೊಂಡಂತಾಗುತ್ತದೆ. ಈಗ ಲೈಟಾಗಿ ತಿಂಡಿಯನ್ನು ತಿನ್ನು. ಮುಂದಿನ ೨೪ ಘಂಟೆಗಳಲ್ಲಿ ನೀನು ಸರಿ ಹೋಗುತ್ತೀಯ' ಎಂದಿದ್ದರು. ರೋಹಿಣಿ ತಿಂಡಿ ತಿಂದು ಮುಗಿಸಿದ ಕೂಡಲೇ, ಅವಳಿಗೆ ಐ.ಸಿ.ಯು.ನಲ್ಲೇ, 'ವೆಂಟಿಲೇಟರನ್ನು(ventilator)' ಅಳವಡಿಸಲಾಯಿತು.
ರೋಹಿಣಿಯ ನಿಜ ಪರಿಸ್ಥಿತಿಯನ್ನು ಈಗ ತಡ ಮಾಡದೆ, ತಂದೆ ರಾಜುರವರಿಗೆ ತಿಳಿಸಬೇಕೆಂಬುದು ಡಾ. ಗುಲಾಟಿರವರ ಅಭಿಪ್ರಾಯವಾಗಿತ್ತು. ಡಾ. ಕಿರಣರ ಸಮ್ಮುಖದಲ್ಲಿ, ರಾಜುರವರೊಂದಿಗೆ ಅವರು ಮಾತನಾಡುತ್ತಾ, 'ರಾಜುರವರೇ ಭಯಪಡ ಬೇಡಿ. ತಮ್ಮ ಮಗಳು ಕಳೆದ ಮೂರು ದಿನಗಳಿಂದ ನಮ್ಮ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಅವಳಿಗೀಗ ನಿಮೋನಿಯಾದ ಸೋಂಕು ಕೂಡಾ ತಗುಲಿದೆ. ಆದುದರಿಂದಲೇ ಅವಳಿಗೆ ನಾವು ವೆಂಟಿಲೇಟರ್ ಅಳವಡಿಸಬೇಕಾಯಿತು. ಅವಳಿಗೀಗ "ಪ್ಲಾಸ್ಮಾ ಚಿಕಿತ್ಸೆ (plasma therapy)"ಯನ್ನು ನೀಡಬೇಕಾಗಿದೆ. ಅದಕ್ಕೆ ಬೇಕಾದ ಎಲ್ಲ ಏರ್ಪಾಡುಗಳನ್ನೂ ಮಾಡಿಕೊಳ್ಳುತ್ತಿದ್ದೇವೆ,' ಎಂದಾಗ, ಕಿರಣನು ಹೌದೆಂಬಂತೆ ತಲೆಯಾಡಿಸಿದ್ದನು. ಮಾತೇ ಹೊರಡದಾದ ತಂದೆ ರಾಜು, ಡಾ.ಗುಲಾಟಿಯವರ ಮುಂದೆ ಕೈಮುಗಿದು ನಿಂತಿದ್ದರು.
ತಂದೆ ರಾಜುರವರಿಗೆ, ಪ್ಲಾಸ್ಮಾ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಕಿರಣನಿಗೆ ಅನಿಸಿತ್ತು. 'ಪ್ಲಾಸ್ಮಾ ಚಿಕಿತ್ಸೆಯೊಂದು ಪರಿಣಾಮಕಾರಿಯಾದ ವಿಧಾನ. ಕೋವಿಡ್-೧೯ರ ರೋಗದಿಂದ ಗುಣಮುಖರಾಗಿರುವ ವ್ಯಕ್ತಿಗಳ ರಕ್ತದ "ಪ್ಲಾಸ್ಮಾ"ದಲ್ಲಿ, ಕೋವಿಡ್-೧೯ರ ವೈರಾಣುಗಳ ವಿರುದ್ಧ ಹೊರಡ ಬಲ್ಲ "ಪ್ರತಿರೋಧಕಾರಿ ಅಣು (antibodies)"ಗಳು ಇರುತ್ತವೆ. ಗುಣಮುಖರಾದ ರೋಗಿಗಳಿಂದ ಪಡೆದ ರಕ್ತದಿಂದ ಪ್ಲಾಸ್ಮಾವನ್ನು ನಮ್ಮ ತಂತ್ರಜ್ಞರು ಬೇರ್ಪಡಿಸುತ್ತಾರೆ. ವೈದ್ಯರು ಅಂತಹ ಪ್ಲಾಸ್ಮಾವನ್ನು ಕೋವಿಡ್ ರೋಗಿಗಳಿಗೆ ನೀಡುತ್ತಾರೆ. ಪ್ಲಾಸ್ಮಾ ಚಿಕಿತ್ಸೆಯಿಂದ ಈಚೆಗೆ ಸಾಕಷ್ಟು ರೋಗಿಗಳು ನಮ್ಮ ಆಸ್ಪತ್ರೆಯಲ್ಲೇ ಗುಣಮುಖರಾಗಿದ್ದಾರೆ. ರೋಹಿಣಿ ಕೂಡ ಶೀಘ್ರವಾಗಿ ಗುಣಮುಖಳಾಗಬಲ್ಲಳೂ ಎಂಬ ವಿಶ್ವಾಸ ನನಗಿದೆ,' ಎಂಬ ವಿವರಣೆಯನ್ನು ಕಿರಣನಿಂದ ಕೇಳಿದ ರಾಜುರವರಿಗೆ, ಪರಿಸ್ಥಿತಿ ಎಷ್ಟು ಗಂಭೀರವಾಗಿರುವುದು ಎಂಬುದರ ಅರಿವಾಗಿತ್ತು.
ಡಾ. ಗುಲಾಟಿರವರ ಮಾರ್ಗದರ್ಶನದಲ್ಲಿ, ಆಸ್ಪತ್ರೆಯ ಹಿರಿಯ ನರ್ಸ್ರವರಾದ ಶ್ರೀಮತಿ ನಳಿನಿ ಗೌಡರವರು, ರೋಹಿಣಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದರು. ಅವರು ರೋಹಿಣಿಯೊಂದಿಗೆ ಮಾತನಾಡುತ್ತಾ, 'ರೋಹಿಣಿ, ನಿನ್ನ ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ. ನಮ್ಮ ಆಸ್ಪತ್ರೆಯಲ್ಲೇ, ಈ ಚಿಕಿತ್ಸೆಯಿಂದ ಸಾಕಷ್ಟು ಕೋವಿಡ್ ರೋಗಿಗಳು ಗುಣಮುಖರಾಗಿದ್ದಾರೆ. ದೇಶಾದ್ಯಂತ ಪ್ಲಾಸ್ಮಾ ಚಿಕಿತ್ಸೆ ಹೆಚ್ಚಿನ ಯಶಸ್ಸನ್ನು ಕಂಡಿದ್ದು, ವೈದ್ಯಕೀಯ ವಲಯಗಳಲ್ಲಿ ಉತ್ತಮ ಭರವಸೆಯನ್ನು ಮೂಡಿಸಿದೆ. ನಿನಗೂ ಈ ಚಿಕಿತ್ಸೆಯಿಂದ ಒಳ್ಳೆಯದಾಗುವುದೆಂಬ ಭರವಸೆ ನನಗಿದೆ. ಡಾ. ಗುಲಾಟಿರವರೊಬ್ಬ ನುರಿತ ವೈದ್ಯರು. ಜೊತೆಗೆ ನಿನಗೆ ಡಾ. ಕಿರಣರಂತಹ ಆತ್ಮೀಯ ಗೆಳೆಯರಿದ್ದಾರೆ. ನಿಮ್ಮ ತಂದೆ ರಾಜುರವರು ದೇವರಲ್ಲಿ ನಂಬಿಕೆ ಇಟ್ಟವರು. ಅವರ ಪ್ರಾರ್ಥನೆ ಒಳ್ಳೆ ಫಲವನ್ನು ನೀಡೇ ನೀಡುತ್ತದೆ. ಇನ್ನೆರಡು ದಿನಗಳಲ್ಲಿ ನೀನು ಗುಣಮುಖ ಹೊಂದುವೆ,' ಎಂದರು. ವೆಂಟಿಲೇಟರ್ನ ಅಳವಡಿಕೆಯ ಜೊತೆಗೆ, ರೋಹಿಣಿಯ ಎಲ್ಲಾ ಚಿಕಿತ್ಸೆಗಳೂ ಐ.ಸಿ.ಯು.ನಲ್ಲೇ ಮುಂದುವರೆದಿತ್ತು.
ರಾಜು ಮತ್ತು ಕಿರಣರು ಮನೆಯನ್ನು ತಲುಪಿಯಾಗಿತ್ತು. ಮನೆಯ "ಪೂಜಾ ಕೋಣೆ"ಗೆ ರಾಜು ಕೂಡಲೇ ತೆರಳಿದ್ದರು. 'ಓ, ನನ್ನ ದೇವರೇ, ನಮ್ಮೊಂದಿಗೆ ನೀನಿರು. ನನ್ನ ಮಗಳ ಜೀವವನ್ನು ಕಾಪಾಡು. ನನ್ನ ಮಗಳು ರೋಹಿಣಿ ಗುಣಮುಖಳಾದ ಮೇಲೆ, ನಾನು ತಿರುಪತಿ, ಶಿರಡಿ ಮತ್ತು ಉಜ್ಜಯಿನಿ ಕ್ಷೇತ್ರಗಳಿಗೆ ಬಂದು ನಿನ್ನ ಸೇವೆಯನ್ನು ಮಾಡುತ್ತೇನೆ' ಎಂದು ಪ್ರಾರ್ಥಿಸಿದ ರಾಜು, ದೀರ್ಘದಂಡ ನಮಸ್ಕಾರವನ್ನು ಮಾಡಿದ್ದರು. ಕಣ್ಣೀರೊರೆಸಿಕೊಂಡ ರಾಜುರವರು, ರೂ. ೧೦೧ರ ಮೂರು ಮುಡುಪಿನ ಕಟ್ಟುಗಳನ್ನು ಮಹಾಕಾಳೇಶ್ವರರ ಮೂರ್ತಿಯ ಪಕ್ಕದಲ್ಲಿಟ್ಟರು. ರಾಜುರವರ ಹಿಂದೆಯೇ ಕಣ್ಣು ಮುಚ್ಚಿ ನಿಂತಿದ್ದ ಕಿರಣ್ ಕೂಡ ದೇವರಿಗೆ ಕೈಗಳನ್ನು ಮುಗಿದು, ತಲೆ ಬಾಗಿಸಿದ್ದನು.
ರೋಹಿಣಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಿ ೨೪ ಘಂಟೆಗಳ ಸಮಯ ಕಳೆದಿತ್ತು. ರೋಹಿಣಿಯನ್ನು ಪರೀಕ್ಷಿಸಲೆಂದು, ಡಾ ಕಿರಣರವರೊಂದಿಗೆ ಬಂದ ಡಾ. ಗುಲಾಟಿಯವರನ್ನು ಗುರುತಿಸಿದ, ರೋಹಿಣಿಯೇ ಅವರಿಗೆ ಸನ್ನೆಯ ಮುಖಾಂತರ ನಮಸ್ಕಾರಗಳನ್ನು ಮಾಡಿದ್ದಳು. ರೋಹಿಣಿಯ ಪರಿಸ್ಥಿತಿ ಸುಧಾರಿಸಿದೆಯೆಂಬ ವಿಶ್ವಾಸ ಡಾ. ಗುಲಾಟಿರವರಿಗೆ ಗೋಚರಿಸಿತ್ತು. ಅಂದಿನ ಬೆಳಗ್ಗೆ ನಡೆಸಿದ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳು ಡಾ. ಗುಲಾಟಿರವರ ಕೈಸೇರಿದ್ದವು. ಪ್ಲಾಸ್ಮಾ ಚಿಕಿತ್ಸೆಗೆ ರೋಹಿಣಿ ಉತ್ತಮವಾಗಿ ಪ್ರತಿಕ್ರಿಯಿಸಿದ್ದಳು. ಅವಳ ಆಕ್ಸಿಜನ್ ಮಟ್ಟ ಸಾಕಷ್ಟು ಸುಧಾರಿಸಿದ್ದು, ಶ್ವಾಸಕೋಶಗಳ ಸೋಂಕಿನ ದಟ್ಟಣೆ (congestion) ಸಾಕಷ್ಟು ತಿಳಿಯಾಗಿತ್ತು. ಹಸನ್ಮುಖರಾದ ಡಾ. ಗುಲಾಟಿರವರು ಸನ್ನೆಗಳನ್ನು ತೋರಿಸುತ್ತಾ, ರೋಹಿಣಿಯೊಂದಿಗೆ ಮಾತನಾಡಿ, 'ರೋಹಿಣಿ ಪ್ಲಾಸ್ಮಾ ಚಿಕಿತ್ಸೆಯಿಂದ ನಿನ್ನ ಪರಿಸ್ಥಿತಿ ಉತ್ತಮಗೊಂಡಿದೆ. ನಿನ್ನ ಆರೋಗ್ಯವೀಗ ನನ್ನ ನೀರಿಕ್ಷೆಗೂ ಮೀರಿ ಉತ್ತಮಗೊಂಡಿದೆ. ನಿನ್ನ ಆಕ್ಸಿಜನ್ ಮಟ್ಟ ವೃದ್ಧಿಸಿದ್ದು, ನಿನ್ನ ಶ್ವಾಸಕೋಶಗಳು ಸಾಕಷ್ಟು ತಿಳಿಯಾಗಿವೆ. ಗೆಲವಿನ ನಗೆ ಸೂಸುವ ಸಮಯ ನಿನಗೀಗ ಬಂದಿದೆ,' ಎಂದಾಗ, ರೋಹಿಣಿಯ ಮುಗುಳ್ನಗೆಯ ಮುಖಾಂತರ, ತನ್ನ ವೈದ್ಯರಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಳು.
ಡಾ. ಕಿರಣ್, ರಾಜುರವರಿಗೆ ಅವರ ಮಗಳು ಆರೋಗ್ಯ ಸುಧಾರಿಸಿರುವ ವಿಷಯವನ್ನು ವಿವರಿಸಿದರು. ಸಂತುಷ್ಟರಾದ ರಾಜುರವರು, ಆಕಾಶದ ಕಡೆ ನೋಡುತ್ತಾ, ಕೈ ಮುಗಿದಿದ್ದರು.
ರೋಹಿಣಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಿ ಮೂರು ದಿನಗಳು ಕಳೆದಿತ್ತು. ಡಾ. ಗುಲಾಟಿರವರೀಗ, ರೋಹಿಣಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದರು. ಬೇಗನೆ ಬಂದ ಫಲಿತಾಂಶದ ಪ್ರಕಾರ, ರೋಹಿಣಿ ಕೋವಿಡ್ನಿಂದ ಮುಕ್ತಳಾಗಿದ್ದಾಳೆಂದು ತಿಳಿದು ಬಂದಿತ್ತು. 'ಡಾ. ಕಿರಣ್, ನಿಮ್ಮ ರೋಹಿಣಿಯನ್ನು ಅದೃಷ್ಟಶಾಲಿ ಎಂದೇ ಹೇಳಬೇಕು. ಪ್ಲಾಸ್ಮಾ ಚಿಕಿತ್ಸೆ ಅವಳಿಗೆ ಫಲ ನೀಡಿದೆ. ಪ್ಲಾಸ್ಮಾ ಚಿಕಿತ್ಸೆ ಪಡೆದ ಮೂರು ದಿನಗಳನಂತರ ಅವಳ ಕೋವಿಡ್ ರೋಗ ನಿವಾರಣೆಗೊಂಡಿರುವುದು ಕಂಡುಬಂದಿದೆ. ಇನ್ನೆರಡು ದಿನಗಳನಂತರ ನಾವು ನಡೆಸುವ ಕೋವಿಡ್ ಪರೀಕ್ಷೆಯಲ್ಲಿ, ರೋಹಿಣಿ ಗುಣಮುಖಳಾಗಿರುವುದು ಖಾತರಿಯಾದರೆ, ಅವಳನ್ನು ಅಂದೇ ಮನೆಗೆ ಕಳುಹಿಸಬಹುದು' ಎಂದ ಡಾ. ಗುಲಾಟಿರವರಲ್ಲಿ ಗೆಲುವಿನ ನಗುವಿತ್ತು. ಶುಭ ಸಮಾಚಾರವನ್ನು ಕೇಳಿಸಿಕೊಂಡ ರೋಹಿಣಿ, ರಾಜು ಮತ್ತು ಕಿರಣರೆಲ್ಲರೂ ಸಂತಸಗೊಂಡಿದ್ದರು.
ಮತ್ತೆರಡು ದಿನಗಳ ಸಮಯ ಕಳೆದಿತ್ತು. ಆಸ್ಪತ್ರೆಗೆ ತೆರಳುವ ಮುನ್ನ, ಮೊತ್ತೊಮ್ಮೆ ಪೂಜಾ ಕೋಣೆಗೆ ತೆರಳಿದ ರಾಜು, ದೇವರಿಗೆ ಕೈಜೋಡಿಸಿ ಪ್ರಾರ್ಥಿಸಿದ್ದರು. ಆಸ್ಪತ್ರೆಯನ್ನು ತಲುಪಿದ ರಾಜುರವರಿಗೆ, ಡಾ. ಗುಲಾಟಿ ಮತ್ತು ಡಾ. ಕಿರಣರವರಿಬ್ಬರೂ ಐ.ಸಿ.ಯು. ಕೋಣೆಯಲ್ಲಿದ್ದದ್ದು ಕಂಡು ಬಂತು. ರೋಹಿಣಿಯ ಮೇಲೆ ಅಂತಿಮ ಕೋವಿಡ್ ಪರೀಕ್ಷೆ ನಡೆಯುತ್ತಿದೆಯೆಂಬುದು, ರಾಜುರವರು ಗಮನಿಸಿಯಾಗಿತ್ತು. ಬೇಗನೆ ಬಂದ ಪರೀಕ್ಷಾ ಫಲಿತಾಂಶಗಳಿಂದ ಸಂತುಷ್ಟರಾದ ಡಾ. ಗುಲಾಟಿ, ಡಾ. ಕಿರಣ್ ಮತ್ತು ನರ್ಸಗಳಿಬ್ಬರೂ, ವಿಜಯದ ಸನ್ನೆಯನ್ನು (V for Victory) ರೋಹಿಣಿಗೆ ತೋರಿಸುತ್ತಿರುವದನ್ನು ನೋಡಿದ, ರಾಜುರವರ ಆನಂದಕ್ಕೆ ಪಾರವೇ ಇರಲಿಲ್ಲ.
'ರೋಹಿಣಿ, ನಿನ್ನ ಧೈರ್ಯವನ್ನು ನಾನು ಮೆಚ್ಚುತ್ತೇನೆ. ನಾವು ನೀಡಿದ ಚಿಕಿತ್ಸೆಗಳಿಗೆಲ್ಲಾ ಉತ್ತಮ ಸಹಕಾರ ನೀಡಿದ್ದೀಯ. ನಿನ್ನ ಧನಾತ್ಮಕ ಚಿಂತನೆ (Positive Mental Attitude)ಗಳಿಂದಲೇ ನಮ್ಮ ಚಿಕಿತ್ಸೆಗಳೆಲ್ಲಾ ಉತ್ತಮ ಫಲ ನೀಡಿವೆ. ನೀನೀಗಲೇ ಮನೆಗೆ ತೆರಳಬಹುದು' ಎಂದರು ಡಾ. ಗುಲಾಟಿ. ರೋಹಿಣಿ ಕೈಜೋಡಿಸಿ ಮಾತನಾಡುತ್ತಾ, 'ತಾವು ನೀಡಿರುವ ಉತ್ತಮ ಚಿಕಿತ್ಸೆಗಳಿಂದಲೇ ನಾನು ಮತ್ತೆ ಬದುಕಿ ಬಂದಿದ್ದೇನೆ. ಚಿಕಿತ್ಸೆಯುದ್ದಕ್ಕೂ ನೀವು ಮತ್ತು ನಿಮ್ಮ ನರ್ಸಗಳೆಲ್ಲರೂ ನನ್ನಲ್ಲಿ ಧೈರ್ಯ ತುಂಬುತ್ತಿದ್ದಿರಿ. ಹಿರಿಯ ನರ್ಸ್ ರವರಾದ ನಳಿನಿ ಗೌಡರವರಿಗೆ ನನ್ನ ವಿಶೇಷ ಧನ್ಯವಾದಗಳು. ಡಾ. ಕಿರಣನಂತಹ ಆತ್ಮೀಯ ಗೆಳೆಯನನ್ನು ಪಡೆದ ನಾನೇ ಭಾಗ್ಯವಂತಳು. ನಮ್ಮಪ್ಪ ಯಾವಾಗಲೂ ನನ್ನೊಡನಿದ್ದದ್ದು, ನನ್ನ ವಿಶ್ವಾಸವನ್ನು ಹೆಚ್ಚಿಸಿತ್ತು,' ಎಂದಳು. ರೋಹಿಣಿಯ ಗೆಲುವಿನ ಮಾತುಗಳನ್ನು ಕೇಳುತ್ತಿದ್ದ ಕಿರಣನ ಮುಖದಲ್ಲೂ ಆನಂದದ ನಗೆ ಮೂಡಿತ್ತು. ತಂದೆ ರಾಜು ಮಾತ್ರ ಡಾ. ಗುಲಾಟಿರವರಿಗೆ ಕೈ ಜೋಡಿಸಿ ನಿಂತಿದ್ದರು.
ಆಸ್ಪತ್ರೆಯಿಂದ ಬಿಡುಗಡೆಯ ಪತ್ರಗಳನ್ನು ಸಹಿಮಾಡುತ್ತಿದ್ದ ಡಾ. ಗುಲಾಟಿರವರು, ರಾಜುವರೊಂದಿಗೆ ಮಾತನಾಡುತ್ತಾ, 'ರೋಹಿಣಿಗೆ ಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ, ಕೆಲವು ವಾರಗಳಾಗಬಹುದು. ಅವಳನ್ನು ಕೆಲವು ವಾರಗಳ ಕಾಲ ನಿರಂತರ ದಣಿವು ಕಾಡುಬಹುದು. ಮತ್ತೆ ೧೪ ದಿನಗಳು ಕಳೆದನಂತರ, ಅವಳನ್ನು ಮತ್ತೊಮ್ಮೆ ಪರೀಕ್ಷೆಗೆ ನೀವು ಕರೆತರಬೇಕು. ಮತ್ತೊಮ್ಮೆ ಸಂಪೂರ್ಣವಾಗಿ ಗುಣಮುಖಳಾದ ವರದಿಗಳು ಬರುವವರೆಗೆ, ಅವಳ ನಿರ್ಬಂಧನೆ (quarantine) ಮುಂದುವರೆಯಲಿ. ಎಲ್ಲರೂ ಜಾಗರೂಕತೆಯಿಂದಿರಿ,' ಎಂದರು.
ಮುಂದಿನ ೧೪ ದಿನಗಳು ಕಳೆದಿದ್ದವು. ರೋಹಿಣಿಯ ಅಂತಿಮ ಕೋವಿಡ್ ಪರೀಕ್ಷೆಯ ದಿನ ಅಂದಾಗಿತ್ತು. ಕೋವಿಡ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳಿಗೆ, ರಾಜ್ಯ ಪ್ರಶಸ್ತಿಯನ್ನು ಪ್ರಕಟಿಸುವ ದಿನವೂ ಅಂದೇ ಆಗಿತ್ತು. ಜಿಲ್ಲೆಯಿಂದ ರಾಜ್ಯ ಸರಕಾರಕ್ಕೆ ಶಿಫಾರಿಸು ಮಾಡಿ ಕಳುಹಿಸಿದ ವೈದ್ಯರುಗಳ ಪಟ್ಟಿಯಲ್ಲಿ, ತನ್ನ ಹೆಸರು ಮುಂಚೂಣಿಯಲ್ಲಿದೆ ಎಂಬುದು ಡಾ. ಕಿರಣನಿಗೆ ತಿಳಿದಿತ್ತು. ಹಾಗಾಗಿ ಅಂದು ಡಾ. ಕಿರಣನು ಎರಡು ವಿಷಯಗಳ ಬಗ್ಗೆ ಕಾತರನಾಗಿದ್ದನು. ಒಂದು ರೋಹಿಣಿಯ ಅಂತಿಮ ವೈದ್ಯಕೀಯ ಪರೀಕ್ಷೆಯ ಫಲಿತಾಂಶವಾದರೆ, ಮತ್ತೊಂದು ರಾಜ್ಯ ಪ್ರಶಸ್ತಿಯ ಫಲಿತಾಂಶದ ಸುದ್ದಿಯಾಗಿತ್ತು. ರೋಹಿಣಿ, ಕಿರಣ್ ಮತ್ತು ರಾಜುರವರುಗಳು ಆಸ್ಪತ್ರೆಯ ಡಾ. ಗುಲಾಟಿರವರ ಕೋಣೆಯನ್ನು ಸೇರಿದಾಗ, ಅವರುಗಳೆಲ್ಲಾ ಹರ್ಷಚಿತ್ತರಾಗಿದ್ದರು. ರೋಹಿಣಿಯನ್ನು ಅಂತಿಮ ಪರೀಕ್ಷೆಗೆಂದು ವಿಶೇಷ ಕಕ್ಷೆಯೊಳಗೆ ಕರೆದೊಯ್ಯಲಾಯಿತು. ಬೇಗನೆ ಬಂದ ಪರೀಕ್ಷಾ ವರದಿಯನ್ನು ನೋಡಿದ ಕೂಡಲೇ ಡಾ. ಗುಲಾಟಿರವರು ನಗುತ್ತಾ, ವಿಜಯದ ಸನ್ನೆಯನ್ನು ತೋರಿಸಿದ್ದರು. ನಾಲ್ವರ ನಡುವೆ ಸಂತಸದ ನಗೆಯ ವಿನಿಮಯವಾಗಿತ್ತು. ತಂದೆ ರಾಜು, ಕೈಜೋಡಿಸಿ ಡಾ. ಗುಲಾಟಿರವರಿಗೆ ವಂದನೆಗಳನ್ನು ಸಮರ್ಪಿಸಿದ್ದರು.
ಈ ನಡುವೆ, ಡಾ. ಗುಲಾಟಿರವರ ಫೋನು ರಿಂಗಣಿಸಿತ್ತು. ಆ ಕಡೆಯ ಧ್ವನಿಯ ಮುಖಾಂತರ, ಮಾತನಾಡುತ್ತಿದ್ದ ವ್ಯಕ್ತಿಯು ಯಾರೆಂಬುದು, ಡಾ. ಕಿರಣನಿಗೆ ತಿಳಿದಿತ್ತು. ಆ ಕಡೆಯಿಂದ ಮಾತನಾಡುತ್ತಿದ್ದವರು ರಾಜ್ಯದ ಆರೋಗ್ಯ ಇಲಾಖೆಯ ನಿರ್ದೇಶಕರಾಗಿದ್ದವರು. 'ಅಭಿನಂದನೆಗಳು ಡಾ. ಗುಲಾಟಿರವರೇ! ತಾವು ರಾಜ್ಯ ಸರಕಾರದ ಪ್ರಶಸ್ತಿಗೆ ಆಯ್ಕೆಯಾಗಿದ್ದೀರ. ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ತಮ್ಮ ಹೆಸರೇ ಮೊದಲನೆಯದು. ಪ್ರಶಸ್ತಿ ಗಳಿಸಿದ ಮಿಕ್ಕ ವೈದ್ಯರುಗಳ ಹೆಸರುಗಳು ಹೀಗಿವೆ,' ಎಂದು ಓದುತ್ತಾ ಸಾಗಿತ್ತು ನಿರ್ದೇಶಕರ ವಾಣಿ. ಪಟ್ಟಿಯಲ್ಲಿದ್ದ ಹೆಸರುಗಳನ್ನು, ಗಮನವಿಟ್ಟು ಡಾ. ಕಿರಣ್ ಕೇಳುತ್ತಿದ್ದದ್ದು, ಡಾ. ಗುಲಾಟಿ, ರೋಹಿಣಿ ಮತ್ತು ರಾಜುರವರ ಗಮನಕ್ಕೂ ಬಂದಿತ್ತು. ತನ್ನ ಹೆಸರು, ಪಟ್ಟಿಯಲ್ಲಿಲ್ಲದ್ದನ್ನು ಕೇಳಿ, ನಿರಾಶೆಯ ಛಾಯೆ ಡಾ. ಕಿರಣನ ಮುಖದಲ್ಲಿ ಮೂಡಿತ್ತು.
'ಸಾರೀ ಡಾ. ಕಿರಣ್, ಉತ್ಸಾಹಿ ಯುವ ವೈದ್ಯರಾದ ತಮಗೂ ಈ ಪ್ರಶಸ್ತಿ ದೊರೆಯಬೇಕಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ತಾವು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಪ್ರಶಸ್ತಿ ಪಡೆಯಬೇಕಾದ ಅರ್ಹ ವೈದ್ಯರು ತಾವಾಗಿದ್ದಿರಿ,' ಎಂದು ಡಾ. ಕಿರಣನನ್ನು ಸಂತೈಸಲೆತ್ನಿಸಿದವರು ಡಾ. ಗುಲಾಟಿ. 'ಇರಲಿ ಬಿಡಿ ಸಾರ್, ನನ್ನ ಪ್ರಶಸ್ತಿ ನನಗಾಗಲೇ ದೊರೆತಾಗಿದೆ,' ಎಂದು ಮುಗುಳ್ನಗುತ್ತಾ ಡಾ . ಕಿರಣ್, ತನ್ನ ಗೆಳತಿ ರೋಹಿಣಿಯತ್ತ ನೋಡಿದನು. ರೋಹಿಣಿ ಕೂಡಾ ಹೆಮ್ಮೆಯಿಂದ ತನ್ನ ಗೆಳಯ ಕಿರಣನತ್ತ ನೋಡಿ ಮುಗುಳ್ನಕ್ಕಿದ್ದಳು. ಅವರಿಬ್ಬರ ನಡುವಿನ ಗೆಲುವಿನ ನಗು, ಅವರಿಬ್ಬರ ಜೀವನದ ಮುಂದಿನ ಸುಂದರ ಅಧ್ಯಾಯದ ಆರಂಭಕ್ಕೆ ನಾಂದಿ ಹಾಡಿತ್ತು.
-೦-೦-೦-೦-೦-೦-೦-