Thursday 20 May 2021

ಮುನ್ನುಡಿ

ಮುನ್ನುಡಿ  

***

ಅಂದು ೩೧-೧೨-೨೦೧೯ರ ತಡ ರಾತ್ರಿಯಾಗಿತ್ತು. ನಾವು ವಾಸಿಸುವ ಪುಟ್ಟ ಬಡಾವಣೆಯಲ್ಲಿ, ಪ್ರತಿ ವರ್ಷದ ಆಚರಣೆಯಂತೆ 'ಹೊಸ ವರ್ಷ ೨೦೨೦'ನ್ನು ಸ್ವಾಗತಿಸುವ ಪುಟ್ಟ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಾವೆಲ್ಲರೂ ಸೇರಿದ್ದೆವು. ನಮ್ಮ ಯುವಕರ ಉತ್ಸಾಹ, ಸಂಭ್ರಮಗಳು ಮುಗಿಲು ಮುಟ್ಟಿದ್ದವು. ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿದ ಅವರುಗಳು, ಕುಣಿದು ಕುಪ್ಪಳಿಸಿ ನಮ್ಮೆಲ್ಲರಿಗೂ ಸಿಹಿಯನ್ನು ಹಂಚಿದ್ದರು. ಆದರೆ, ಅಂದು ನೆರೆದಿದ್ದ ನಮಗ್ಯಾರಿಗೂ ಅದೇ ದಿನದ ಬೆಳಗ್ಗೆ ನಮ್ಮ ನೆರೆ ರಾಷ್ಟ್ರವಾದ ಚೀನಾ ತನ್ನ 'ಉಹಾನ್' ನಗರದಲ್ಲಿ, ಕೋವಿಡ್ ರೋಗದ ಹರಡುವಿಕೆ ಆರಂಭವಾಗಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದ ವಿಷಯ ತಿಳಿದಿರಲಿಲ್ಲ. ಮಾರನೆಯ ದಿನದ ಬೆಳಗ್ಗೆ, ಆ ವಿಶ್ವವ್ಯಾಪಿ  ಮಹಾಮಾರಿ (pandemic) ಮನುಕುಲಕ್ಕಪ್ಪಳಿಸಿದ್ದ ಸುದ್ದಿ, ನಮ್ಮ ದಿನ ಪತ್ರಿಕೆಯ ಪುಟ್ಟ ಅಂಕಣವೊಂದರಲ್ಲಿ ಪ್ರಕಟವಾಗಿದ್ದು, ನನ್ನ ಗಮನಕ್ಕೆ ಬರಲೇ ಇಲ್ಲ. 'ಕೋವಿಡ್-೧೯' ಎಂಬ ಆ ಮಹಾಮಾರಿ ಇಂದು ಇಡೀ ವಿಶ್ವವನ್ನೇ ಆವರಿಸಿ, ಕೋಟಿಗಟ್ಟಲೆ ಜನರುಗಳನ್ನು ಸೋಂಕಿತರನ್ನಾಗಿಸಿ, ಲಕ್ಷಗಟ್ಟಲೆ ಸಾವು-ನೋವುಗಳನ್ನು ಉಂಟುಮಾಡಿರುವುದು, ನಮ್ಮೆಲ್ಲರನ್ನೂ ಕಂಗೆಡಿಸಿರುವುದು ಸುಳ್ಳಲ್ಲ. 

'ಕೋವಿಡ್-೧೯ರ ರೀತಿಯ ಮಹಾಮಾರಿಯೊಂದು ಸಧ್ಯದಲ್ಲೇ ಮನುಕುಲವನ್ನು ಕಾಡಬಹುದೆಂದು,' ವಿಶ್ವ ಆರೋಗ್ಯ ಸಂಸ್ಥೆ (World Health Organization - WHO) ಆಗಾಗ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಆದರೆ ಆ ಎಚ್ಚರಿಕೆಯನ್ನು ಹೆಚ್ಚಿನವರು ಗಂಭೀರವಾಗಿ ಪರಿಗಣಿಸಿರಲಿಲ್ಲ. 'ಬರಲಾರದೆಂದು ಉದಾಸೀನ ಮಾಡಿದ್ದ ಅಪಾಯವೇ, ದಿಢೀರನೇ ಬಂದು ನಮ್ಮ ಮೇಲೆರಗಬಹುದು (the danger which is least expected soonest comes to us),' ಎಂಬ ಎಚ್ಚರಿಕೆಯನ್ನು ಫ್ರೆಂಚ್ ನಾಟಕಕಾರ ಹಾಗೂ ಸಮಾಜ ಸುಧಾರಕ ವೊಲ್ಟೈರ್ (Voltaire) ನೀಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. 

೧೯೮೧ರ ಸಮಯದಲ್ಲಿ ವಿಶ್ವವನ್ನು ಆವರಿಸಿದ  ಏಡ್ಸ್ (AIDS) ರೋಗದ ದಿನಗಳಿಂದಲೇ, ವಿಶ್ವದ ಗ್ರಹಚಾರ ಸರಿಯಿಲ್ಲವೆಂದೇ ಹೇಳಬಹುದು. ಏಡ್ಸ್ ರೋಗದ ನಂತರ, ಸಾಂಕ್ರಾಮಿಕಗಳಾದ 'ಹಕ್ಕಿಜ್ವರ (Bird flu-೧೯೯೬), ಸಾರ್ಸ್ (SARS-೨೦೦೨), ಹಂದಿಜ್ವರ (Swine flu -೨೦೦೯), ಎಬೋಲಾ (Ebola -೨೦೧೩), ನಿಪಾಹ್ (Nipah -೨೦೧೮), ಮೆರ್ಸ್ (MERS - ೨೦೧೯), ಮತ್ತೀಗ ಕೋವಿಡ್-೧೯ (Covid-೧೯),ರಂತಹ' ರೋಗಗಳು ಮನುಕುಲದ ಮೇಲೆ ಸರಣಿ ದಾಳಿಯನ್ನೇ ನಡೆಸಿವೆ ಎನ್ನಬಹುದು. ಕೋವಿಡ್-೧೯ರ ರೋಗವಂತೂ, ಕಳೆದ ಹದಿನೆಂಟು ತಿಂಗುಳುಗಳಿಂದ ಇಡೀ ವಿಶ್ವವನ್ನೇ ಸತತವಾಗಿ ಕಾಡುತ್ತಿದ್ದು, ಮಹಾಮಾರಿಯ ಸ್ವರೂಪವನ್ನು ತಾಳಿಬಿಟ್ಟಿದೆ. ಆ ಮಹಾಮಾರಿ ಮಾನವನ ಎಲ್ಲಾ ಚಟುವಟಿಕೆಗಳ ಲಯವನ್ನೇ ಕಂಗೆಡಿಸಿಟ್ಟಿದೆ. 

ಕೋವಿಡ್-೧೯ರ ಮಹಾಮಾರಿ ನಮ್ಮ ದೇಶಕ್ಕೆ ಕೊಂಚ ತಡವಾಗೇ ಕಾಲಿಟ್ಟಿತೆಂದೇ ಹೇಳಬಹುದು. ಆದರೂ, ಕಳೆದ ವರ್ಷ ಅದರ ಮೊದಲನೇ ಅಲೆಯಿಂದ ತತ್ತರಿಸಿದ ನಮ್ಮ ಮೇಲೆ, ಈಗ ಕ್ರೂರವಾಗಿ ಅಪ್ಪಳಿಸಿರುವ ಎರಡನೇ ಅಲೆ, ನಡೆಸುತ್ತಿರುವ ಅನಾಹುತಗಳನ್ನಂತೂ ಹೇಳತೀರದು. ಹೊಸ ಹೊಸದಾಗಿ ರೂಪಾಂತರಗಳನ್ನು (mutation) ಹೊಂದುತ್ತಾ, ಹೊಸ ಹೊಸ ರೌದ್ರಾವತಾರಗಳೊಂದಿಗೆ ನಮ್ಮನ್ನು ಕಾಡುತ್ತಿರುವ, ಈ ಮಹಾಮಾರಿಯ ವಿಪತ್ತಿಗೆ ಕೊನೆಯೆಂದೋ? ಎಂಬುದು ಎಲ್ಲರ ತವಕವಾಗಿ ಹೋಗಿದೆ. 

'ಕೋವಿಡ್, ಮಾನವ ಸೃಷ್ಟಿಯೇ?' ಎಂಬ ಶೀರ್ಷಿಕೆಯ ನನ್ನೀ ಕಾದಂಬರಿ, ಬರೀ ದೋಷಾರೋಪಗಳ ಪಟ್ಟಿ ಮಾತ್ರವಲ್ಲ. ತತ್ತರಿಸಿರುವ ನಮ್ಮ ಜನರುಗಳಲ್ಲಿ ಭರವಸೆ ಮತ್ತು ವಿಶ್ವಾಸಗಳನ್ನು ತುಂಬುವುದೇ ನನ್ನ ಉದ್ದೇಶ. 'ಪ್ರತಿಯೊಂದು ಬಿಕ್ಕಟ್ಟೂ ಹೊಸ ಅವಕಾಶಗಳ ಬಳುವಳಿಗಳನ್ನು ತರುತ್ತವೆಂಬ (every crisis brings an opportunity),' ನಮ್ಮ ಹಿರಿಯರ ಮಾತುಗಳಿಂದ ಪ್ರೇರಿತರಾಗಿ, ಮುನ್ಸಾಗುವ ಸಮಯವಿದು. ಕೋವಿಡ್ ಮಹಾಮಾರಿಯೊಂದಿಗಿನ ಮಾನವನ ಸಂಘರ್ಷದ, ಅದರಲ್ಲೂ ಮುಖ್ಯವಾಗಿ ನಮ್ಮೆಲ್ಲರ ಮಾತೃಭೂಮಿಯಾದ ಭಾರತದ ಸಂಘರ್ಷದ ವೃತ್ತಾಂತಗಳೇ, ನನ್ನೀ ಕಾದಂಬರಿಯ ಕಥಾವಸ್ತು. 

ಮಹಾಮಾರಿಯ ಈ ವೈರಾಣುವಿನೊಂದಿಗೇ  ಜೀವಿಸಲು ಕಲಿಯುವ ಅನಿವಾರ್ಯತೆ ಈಗ ನಮ್ಮ ಮುಂದಿದೆ. 'ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಆಗಾಗ ಸೋಪಿನಿಂದ ಕೈಗಳನ್ನು ತೊಳೆಯುವುದು ಮತ್ತು ಮಾಸ್ಕ್ ಧಾರಣೆ'ಯಂತಹ ಸರಳ ವಿಧಾನಗಳಿಂದ ಈ ವೈರಾಣುವಿನ ಹರಡುವಿಕೆಯನ್ನು ಸಾಕಷ್ಟು ನಿಯಂತ್ರಿಸಲು ಸಾಧ್ಯವಿದೆ. ಹಗಲಿರಳೆನ್ನದೇ ಅವಿರತವಾಗಿ ಶ್ರಮಿಸಿ,  ಸಂಶೋಧನೆಗಳನ್ನು ನಡೆಸಿ ಹೊಸ ಲಸಿಕೆಗಳನ್ನು ನಮಗೆ ನೀಡಿರುವ ನಮ್ಮ ವಿಜ್ಞಾನಿಗಳು, ನಮ್ಮಲ್ಲಿ ಹೊಸ ಭರವಸೆಯೊಂದನ್ನು ಮೂಡಿಸಿದ್ದಾರೆ. 

ಒಂದು ಪುಟ್ಟ ವೈರಾಣುವಿಗೆ ಹೆದರಿ ತನ್ನ ಕ್ರಿಯಾಶೀಲ ಚಟುವಟಿಕೆಗಳನ್ನೇ ನಿಲ್ಲಿಸಿ, ಕೈಕಟ್ಟಿ ಕೂರುವ ಜಾಯಮಾನ ಮಾನವನದಲ್ಲ. ಇದು 'ಜೀವಗಳು ಮತ್ತು ಜೀವನೋಪಾಯಗಳ (lives Vs livelihood)' ನಡುವಿನ ಸಂಘರ್ಷ. ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು, ಮಹಾಮಾರಿಗಿಂತಲೂ ಮಾರಕ ಎಂಬುದು ನಮ್ಮ ಆರ್ಥಿಕ ತಜ್ಞರ ಅಭಿಪ್ರಾಯ. ಕೋವಿಡ್-೧೯ರ ರೋಗವನ್ನು ಹತ್ತಿಕ್ಕಲು ಸತತವಾಗಿ ಶ್ರಮಿಸುತ್ತಿರುವ ನಮ್ಮ 'ಕೊರೋನಾ ಸೇನಾನಿಗಳಾದ, ಆರೋಗ್ಯ ಕರ್ಮಚಾರಿಗಳು, ಪೊಲೀಸರು, ರೈತರು, ಕಾರ್ಮಿಕರು, ತಾಂತ್ರಿಕ ತಜ್ಞರು, ಸ್ವಚ್ಛತಾ ಕರ್ಮಿಗಳು, ವ್ಯಾಪಾರಿಗಳು, ಬ್ಯಾಂಕ್ ಕರ್ಮಚಾರಿಗಳು ಮುಂತಾದವರುಗಳೆಲ್ಲರಿಗೂ ನನ್ನದೊಂದು ದೊಡ್ಡ ಸಲಾಂ!' ಮಾರಕ ವೈರಾಣುವನ್ನು ಹತ್ತಿಕ್ಕಲು, ನಮ್ಮ ಜನತೆ 'ಧನಾತ್ಮಕ ಚಿಂತನೆ(Positive Mental Attitude)'ಗಳನ್ನು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಈ 'ಮಹಾಮಾರಿ(pandemic)ಯ  ವಿರುದ್ಧದ ಹೋರಾಟದಲ್ಲಿ ಅಂತಿಮ ಜಯ ನಮ್ಮದೇ,' ಎಂಬ ವಿಶ್ವಾಸದ ಅರಿವು ನನ್ನ ಓದುಗರಲ್ಲಿ ಮೂಡಲಿ, ಎಂಬುದೇ ನನ್ನೀ ಬರಹದ ಉದ್ದೇಶ.   

'ಕೋವಿಡ್, ಮಾನವ ಸೃಷ್ಟಿಯೇ?' ಎಂಬ ನನ್ನ ಈ ಕಾದಂಬರಿ ಕಾಲ್ಪನಿಕವಾದುದಾದರೂ, ನಾನಿಲ್ಲಿ ಹೆಣೆದಿರುವ ಕಥೆಗಳು ಹಾಗೂ ಪಾತ್ರಗಳಿಗೆ, ಕಳೆದ ಹದಿನೆಂಟು ತಿಂಗಳುಗಳಲ್ಲಿ ಜರುಗಿರುವ ನಿಜ ಘಟನೆಗಳೇ ಆಧಾರ. ನಾನಿಲ್ಲಿ, ಕಳೆದ ವರ್ಷ ಅಂದರೆ ೨೦೨೦ರ ಬೇರೆ ಬೇರೆ ಅವಧಿಗಳ ಅಂಕಿ-ಅಂಶಗಳನ್ನು ದಾಖಲಿಸಿ, ಚರ್ಚಿಸಿದ್ದೇನೆ. ಆ ಅಂಕಿ-ಅಂಶಗಳು ಇಂದು ಭಾರೀ ಬದಲಾವಣೆಯನ್ನು ಕಂಡಿರಬಹುದು. ಈ ಪುಸ್ತಕದ ಬಹುಭಾಗವನ್ನು ನಾನು '೨೦೨೦ರ ಮಾರ್ಚ್-ಸೆಪ್ಟೆಂಬರ್' ತಿಂಗಳುಗಳ ಅವಧಿಯಲ್ಲಿ ಬರೆದಿದ್ದೇನೆ ಎಂಬ ವಿಚಾರವನ್ನು, ನಾನು ನನ್ನ ಓದುಗರುಗಳಿಗೆ ತಿಳಿಸಲಿಚ್ಛಿಸುತ್ತೇನೆ. ಕೋವಿಡ್ ತರುತ್ತಿರುವ ಹೊಸ ಹೊಸ ವಿಪತ್ತುಗಳು, ನಾವದನ್ನೆದುರಿಸಲು ಮಾಡುತ್ತಿರುವ ಹೋರಾಟಗಳು ಮತ್ತು ನಮ್ಮ ನಿರೀಕ್ಷೆಯನ್ನೂ ಮೀರಿ ಜರುಗುತ್ತಿರುವ ಘಟನೆಗಳು ದಿನ ದಿನಕ್ಕೂ ಬದಲಾಗುತ್ತಿರುವುದನ್ನು, ನಮ್ಮ ಓದುಗರು ಗಮನಿಸಬೇಕು ಎಂಬುದು ನನ್ನ ವಿನಮ್ರ ಅರಿಕೆ. ಇತ್ತೀಚಿನ ಬೆಳವಣಿಗೆಗಳ ಪ್ರಸ್ತಾವನೆ ನನ್ನ ಕಾದಂಬರಿಯಲ್ಲಿ ಇರದಿರಬಹುದು.  ಆದರೂ ನಾನಿಲ್ಲಿ ಚರ್ಚಿಸಿರುವ ವಿಷಯಗಳು ಸರ್ವಕಾಲಿಕ ಸತ್ಯಗಳೇ ಆಗಿದ್ದು, ಅವುಗಳೆಂದಿಗೂ ಪ್ರಸ್ತುತ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. 

'ಚಿತ್ರವೊಂದಕ್ಕೆ, ಸಾವಿರ ಪದಗಳಿಗೂ ಮೀರಿದ ಸಂವಹನ ಶಕ್ತಿ ಇದೆ (A picture is equal to thousand words)' ಎಂಬ ಮಾತೊಂದಿದೆ. ಆ ಮಾತಿನ ಸಾಕಾರವೋ ಎಂಬಂತೆ ನಮ್ಮ ನಾಡಿನ ಸುಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ 'ಶ್ರೀ. ರಘುಪತಿ ಶೃಂಗೇರಿ'ರವರು ನನ್ನ ಈ ಕಾದಂಬರಿಯ ೧೪ ಅಧ್ಯಾಯಗಳಿಗೆ, ೧೪ ವ್ಯಂಗ್ಯಚಿತ್ರಗಳನ್ನು ಬರೆದು ಕೊಟ್ಟಿದ್ದಾರೆ. ಮುಖಪುಟದ ವಿನ್ಯಾಸವನ್ನೂ ಅವರೇ ಮಾಡಿಕೊಟ್ಟಿದ್ದಾರೆ. ಅವರ ಚಿತ್ರಕಲೆ ನನ್ನ ಪುಸ್ತಕದ ಗುಣಮಟ್ಟವನ್ನು ಹೆಚ್ಚಿಸಿದೆ ಎಂಬುದು ನನ್ನ ಅನಿಸಿಕೆ. ಹಾಗಾಗಿ ನಾನವರಿಗೆ ಆಭಾರಿ. 

ನನ್ನ ಮಾಜಿ ಸಹೋದ್ಯೋಗಿಗಳು ಹಾಗೂ ಬಹುಕಾಲದ ಸನ್ಮಿತ್ರರೂ ಆದ 'ಶ್ರೀ. ಎಂ.ಜಿ. ಗೋಪಾಲ ಕೃಷ್ಣ ಭಟ್ಟ B.Sc., LL.B.,CAIIB, ಬೆಂಗಳೂರು, ಇವರು ಈ ಕಾದಂಬರಿಯನ್ನು ಬರೆಯುವ ಕಾಲದಲ್ಲಿ ನನ್ನೊಡನಿದ್ದು, ಚರ್ಚಿಸಿ ನನಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ನಾನು ಬರೆದ ಕರಡು ಪ್ರತಿಯನ್ನು ಕೂಲಂಕಷವಾಗಿ ಓದಿ, ತಪ್ಪುಗಳನ್ನು ತಿದ್ದಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. 

ನನ್ನ ಮಗನಾದ ಡಾ. ಸುಭಾಷ್ L., (ಸಹಾಯಕ ಪ್ರಾಧ್ಯಾಪಕರು, ಸ್ಕೂಲ್ ಆಫ್ ಇಂಜಿನಿಯರಿಂಗ್, ವಾರ್ವಿಕ್ ವಿಶ್ವವಿದ್ಯಾಲಯ, ಯು.ಕೆ.) ಅವನ  ಬಾಲ್ಯದಿಂದಲೂ ನನ್ನ ವಿರುದ್ಧದ 'ದೈತ್ಯ ವಕೀಲ (devil's advocate)'ನಾಗಿದ್ದವನು. ಅವನು, ನನ್ನ ಪುಸ್ತಕದ ಕರಡು ಪ್ರತಿಯನ್ನು ಓದಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ ಹಲವು ಸಲಹೆಗಳನ್ನು ನೀಡಿ, ನನ್ನ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾನೆ ಎಂಬುದು ನನ್ನ ಅನಿಸಿಕೆ. ಅವನ ಶ್ರೇಯೋಭಿವೃದ್ಧಿಗೆ ನನ್ನ ಆಶೀರ್ವಾದಗಳು. 

ಕಾದಂಬರಿಯ ರಚನೆಯ ಕಾಲದ ಉದ್ದಕ್ಕೂ 'ನನ್ನೊಡನಿದ್ದ' ನನ್ನ ಪತ್ನಿ ಶ್ರೀಮತಿ. ಅನಸೂಯ'ಳಿಗೂ ನಾನು ಆಭಾರಿ. 

ನಾನು ನಿಮ್ಮಗಳಂತೆಯೇ ಶ್ರೀಸಾಮಾನ್ಯರುಗಳಲ್ಲೊಬ್ಬ ಮಾತ್ರ. ಈ ಕಾದಂಬರಿಯ ಉದ್ದಕ್ಕೂ ಹಲವು ವೈದ್ಯಕೀಯ ಪದಗಳನ್ನು, ವಿಧಿ-ವಿಧಾನಗಳನ್ನು ಚರ್ಚಿಸಿ, ಬರೆದಿದ್ದೇನೆ. ಆ ರೀತಿ ಬರೆಯುವುದಕ್ಕೆ,  ನನಗೆ ಯಾವ ವಿದ್ಯಾರ್ಹತೆಯೂ ಅಥವಾ ವೃತ್ತಿಪರತೆಯೂ ಇಲ್ಲವೇ ಇಲ್ಲ. ಆ ರೀತಿಯ ವೈದ್ಯಕೀಯ ವಿಚಾರಗಳ ಬಗ್ಗೆ ತಮ್ಮಗಳಿಗೇನಾದರೂ ಅನುಮಾನವಿದ್ದಲ್ಲಿ, ತಾವುಗಳು ತಮ್ಮ ಕುಟುಂಬದ ವೈದ್ಯರುಗಳ ಸಲಹೆಯನ್ನು ಪಡೆಯುವದು ಸೂಕ್ತ ಎಂಬುದು ನನ್ನ ಕೋರಿಕೆ. 

ಈ ಕೃತಿ ನನ್ನ ಮೂರನೇ ಕಾದಂಬರಿ. ಮುಂಚಿನ ನನ್ನ ಕೃತಿಗಳನ್ನು ಓದಿ, ನನ್ನನ್ನು ಪ್ರೋತ್ಸಾಹಿಸಿದ್ದೀರಿ. ನನ್ನ ಈ ಕಾದಂಬರಿಯನ್ನೂ ಅದೇ ರೀತಿ ಓದಿ ಪ್ರೋತ್ಸಾಹಿಸುವಿರೆಂದು ಆಶಿಸುತ್ತೇನೆ. ತೆರೆದ ಮನಸ್ಸಿ ನಿಂದ ನನ್ನ ಕಾದಂಬರಿಯನ್ನು ಓದಿ, ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ನನಗೆ ಕಳುಹಿಸಿ ಎಂದು ಈ ಮೂಲಕ ತಮ್ಮನ್ನು ಪ್ರಾರ್ಥಿಸಿಕೊಳ್ಳುತ್ತೇನೆ. 

ಧನ್ಯವಾದಗಳು,

ಲಕ್ಷ್ಮೀನಾರಾಯಣ ಕೆ. 

ಲೇಖಕರು 

೧೦೪, ೨ನೇ ಮುಖ್ಯ ರಸ್ತೆ, ಶ್ರೇಯಸ್ ಕಾಲೋನಿ 

ಜೆಪಿ ನಗರ ೭ನೇ ಹಂತ 

ಬೆಂಗಳೂರು - ೫೬೦೦೭೮

೨೪ - ೦೫ - ೨೦೨೧

klakshminarayana1956@rediffmail.com


 

                                                                                










No comments:

Post a Comment