Tuesday, 29 June 2021

P.V.Narasimha Rao Centenary 1921-2021

P.V.Narasimha Rao Centenary
1921-2021
P.V.Narasimha Rao's dead body was at the gates of Congress party Head Quarters at Delhi, waiting for the gates to open. The day was 23rd Dec 2004. But the orders from 'top' never came and the gates were never opened! After thirty awkward minutes, the cortege  was taken to airport for taking the body to Hyderabad for cremation. It was customary to place the bodies of past Congress Presidents at the Congress Party Head Quarters in Delhi, to enable party workers to pay their homage.  But not only this honor was denied to Rao, but a memorial in Delhi was also denied for the departed PM by the 'power center' which was at the helm during those days!

When P.V.Narasimha Rao became the accidental Prime Minister of India during 1991, India was in the midst of a worst crisis.  Countries economy was in doldrums, license raj and restrictions had tied the hands and legs of our entrepreneurs and terror was ruling high in Punjab and Kashmir. Rao never had a political base of his own. He headed a minority Government and was mistrusted by his own party people.  Still 'Chanakya of Indian Politics,' managed all these challenges admirably to reinvent India, at home and abroad.

When Rao took over as PM, our Country had meagre reserves of foreign exchange. Rao had cleverly chosen Manmohan Singhji as his Finance Minister.  Rao devalued Indian Rupee to an extent of about 25%, which became the launch pad for further reforms that followed. New Industrial Policy, the abolition of license raj, paving way for Foreign Direct Investment (FDI), establishment of SEBI and NSE paving way for an active market, liberal licenses grant to new entrepreneurs to establish their business and many more reform steps were initiated by Rao, which virtually provided a paradigm shift for Indian economy to move away from the Nehruvian model.

We bankers fondly remember the launching of new generation private sector banks like the ICICI Bank, HDFC Bank etc. as a result of Rao's liberalization policies.  Also the Indian software companies like Infosys, TCS grew by leaps and bounds as a result of Rao's reforms. Vajpayee, Manmohan Singhji and even the present PM Modi have just followed the footsteps of Rao in steering the economy of our Country. Rao richly deserves the title of 'father of Indian Economic Reforms.'

Not many know that Rao may also be called as the 'father of Indian Nuclear Power.'  During the end of the year 1995 itself, Rao was planning for the 'nuclear test,' but had to abandon the plan because of pressure from US.  But the selfless statesman, Rao passed on the nuclear baton and the useful tips to his successor Vajpayee who successfully conducted the nuclear tests during 1998.

Rao also scripted the end of two decades long terrorism in Punjab during his regime.  His handling of terror in J & K is also admired by many discerning viewers. 

The fall of Babri Masjid during the end of 1992 and the riots that followed became a black mark in his stint as PM. 

Managing a minority Government was a big challenge for Rao.  Corruption charges levelled against him while managing the confidence vote for survival of the Government is another black mark on his career. Harshad Mehta stock market scam also occurred during his regime.

Rao was an 'unsung hero' both during his life and life after. He was the most deserving candidate for the 'Bharat Ratna' award.  But neither his mother party nor the BJP have bothered to confer it on him.  But nothing prevents many from rating him as the 'best Prime Minister, India ever had.' Long live the memory of P.V.Narasimha Rao!
-0-0-0-0-0-0- 




Monday, 28 June 2021

ಚೆನ್ನವೀರ ಕಣವಿರವರಿಗೆ ಹುಟ್ಟು ಹಬ್ಬದ ಶುಭಾಶಯಗಳು

 ೨೮-೦೬-೨೦೨೧ರಂದು ಕಣವಿಯವರ ಹುಟ್ಟುಹಬ್ಬದಂದು ಈ ಗೀತೆಯನ್ನು ರಚಿಸಿ ಅವರಿಗೆ ಕಳುಹಿಸಿದ್ದೆ. ಕೂಡಲೇ ನನಗೆ ಕಣವಿಯವರೇ ಕರೆ ಮಾಡಿ, ನನ್ನನ್ನು ಆಶೀರ್ವದಿಸಿದ್ದು ನನ್ನ ಸುದೈವ. 

***

ಸಮನ್ವಯದ ಕವಿ 

ಚೆನ್ನವೀರ ಕಣವಿರವರಿಗೆ 

ನಮನಗಳು 

***

ಹೂವು ಹೊರಳುವವು ಸೂರ್ಯನ ಕಡೆಗೆ 

ನಮ್ಮ ದಾರಿ ಬರಿ 'ಕಣವಿ'ಯವರೆಗೆ 

ಗದ್ಯದ ಒಡಲಿಗೆ, ಪದ್ಯದ ಕಡಲಿಗೆ 

ಮುಳುಗಿದಂತೆ, ದಿನ ಬೆಳಗಿದಂತೆ 

ಹೊರಬರುವನು 'ವರಕವಿ'ಯ ಹಾಗೆ 

*

'ಮಣ್ಣಿನ ಮೆರವಣಿಗೆ'ಯಲಿ ಕರಗಿಸಿ ಬಿಡವನು 

ಎಲ್ಲ ಬಗೆಯ ಸರಕು:

ಸಮನ್ವಯದ ಕವಿಯು 

ಕೂಡಿಸಿ ಬಾಳ ತೊಡಕು.  

*

'ಜೀವ ಧ್ವನಿ' ಕವನಗಳಿಗೂ ಮುದ 

ಭಾವಪೂರ್ಣ ಗಾನಕೂ ಒಂದೇ ಹದ, 

ಕವಿ ಹೃದಯದೊಳೇನು ನಡೆವುದೋ 

'ಚೆನ್ನವೀರ'ನವನು ಕಲಾವಿದ. 

ರಚನೆ:

ಲಕ್ಷ್ಮೀನಾರಾಯಣ ಕೆ.  

***

ಟಿಪ್ಪಣಿ:

೧) ಕಣವಿಯವರ ಕ್ಷಮೆ ಕೋರುತ್ತಾ,

ಅವರ 'ಹೂವು ಹೊರಳುವವು'

ಕವನದ ಧಾಟಿಯಲ್ಲಿ....... 

೨) 'ಮಣ್ಣಿನ ಮೆರವಣಿಗೆ ಮತ್ತು ಜೀವ ಧ್ವನಿ' 

ಶ್ರೀಯುತರ ಎರಡು ಕವನಗಳು. 

೩) 'ಸಮನ್ವಯದ ಕವಿ' ಎಂಬುದು 

ಕಣವಿಯರ ಒಂದು ಬಿರುದು 


ಹೂವು ಹೊರಳುವವು ಸೂರ್ಯನ ಕಡೆಗೆ 

ನಮ್ಮ ದಾರಿ ವರಕವಿಯವರೆಗೆ  

ಗದ್ಯದ ಒಡಲಿಗೆ, ಪದ್ಯದ ಕಡಲಿಗೆ 

ಮುಳುಗಿದಂತೆ, ದಿನ ಬೆಳಗಿದಂತೆ 

ಹೊರಬರುವನು ರವಿಯ ಹಾಗೆ 

*

'ಮಣ್ಣಿನ ಮೆರವಣಿಗೆ'ಯಲಿ ಕರಗಿಸಿ ಬಿಡವನು 

ಎಲ್ಲ ಬಗೆಯ ಸರಕು:

ಸಮನ್ವಯದ ಕವಿಯು 

ಕೂಡಿಸಿ ಬಾಳ ತೊಡಕು.  

*

'ಜೀವ ಧ್ವನಿ' ಕವನಗಳಿಗೂ ಮುದ 

ಭಾವಪೂರ್ಣ ಗಾನಕೂ ಒಂದೇ ಹದ, 

ಕವಿ ಹೃದಯದೊಳೇನು ನಡೆವುದೋ 

'ಚೆಲ್ವವೀರನವನು'ನವನು ಕಲಾವಿದ. 

ರಚನೆ:

ಲಕ್ಷ್ಮೀನಾರಾಯಣ ಕೆ.  





Wednesday, 23 June 2021

ಎಚ್ಚೆಸ್ವಿ ರವರಿಗೆ ಜನುಮದಿನದ ಶುಭಾಷಯಗಳು

ಎಚ್ಚೆಸ್ವಿ ರವರಿಗೆ ಜನುಮದಿನದ 
            ಶುಭಾಷಯಗಳು
*** 
ಹಚ್ಚ ಹಸಿರಿನ್ನೂ ಮನಸು 
ಅದು ಎಪ್ಪತ್ತೇಳರ ವಯಸು 
*
ಮಾತು ಮಾತಿಗೂ ಕವನ 
'ಶಂಖದೊಳಗಿನ ಮೌನ' 
ಲೇಖನಿ ಹಿಡಿದಷ್ಟು ಹೊತ್ತು 
ನೋಡು, ಅದು 'ಅಕ್ಷರ ಜಗತ್ತು' 
*
ಪ್ರೀತಿ ಹೆಚ್ಚಾಯಿತೇ?
ರಾಧೆ ತುಟಿ ಕೆಂಪಾಯಿತೇ?
ಶ್ಯಾಮನ ಮತ್ತೆ ಛೇಡಿಸಿತೇ?
ಅವಳ ಗಲ್ಲದ ಮಚ್ಚೆ! 
*
ಇನ್ನೂ ಹಸಿರು, ಇನ್ನೂ ನವಿರು 
ಎದೆಯಲ್ಲೆಷ್ಟು ಭಾವವೋ?
ಯಾವ ಹೊಸ ಕವನವೋ?
ಪ್ರಸವಿಸಲಿ 
ನಮ್ಮ ರಂಜಿಸುತಿರಲಿ 
*
ರಚನೆ: ಲಕ್ಷ್ಮೀನಾರಾಯಣ ಕೆ. (ಎಚ್ಚೆಸ್ವಿರವರ ಕ್ಷಮೆ ಕೋರುತ್ತಾ......ಅವರ  
'ಹುಚ್ಚು ಕೋಡಿ ಮನಸು' ಕವನಾಧಾರಿತ), ಧನ್ಯವಾದಗಳು: ಚಿತ್ರ : ಶ್ರೀ ರಘುಪತಿ ಶೃಂಗೇರಿ 

Saturday, 12 June 2021

'ಮಸಣದ ಚಲುವೊಂದಿಗೆ' ಪ್ರಣಯವಾಯ್ತೆ?

'ಮಸಣದ ಚಲುವೊಂದಿಗೆ' ಪ್ರಣಯವಾಯ್ತೆ? 

ಮಸಣದ ನೀರವತೆ ದಮನಿತರ  

 ದನಿಗೆ, ತಾ ಸ್ಫೂರ್ತಿಯಾಯ್ತೆ?


'ನಾ ಮೂಳೆ, ನಾ ಇಂಗೆ ಇರಲ್ಲಾ 

ಕೂಗ್ತೀನಿ, ಸಿಡಿತೀನಿ,' ಎಂಬಿವನ ದನಿ 

ಬಂಡಾಯದ ಕೂಗಾಯ್ತೆ?


'ತ್ರಾಣ, ಪ್ರಾಣ ಎಳ್ಡೂ ಇಲ್ದೆ 

ತ್ವಡೆ ನಡ್ಗಿ ಸತ್ತೋಗೋರಾ,' ಎಂಬೀ ಕೂಗು 

ನಮ್ಮಾಳೋರ ಬಡಿದೆಬ್ಬಿಸಿತೇ?


'ಟಾಟಾ, ಬಿರ್ಲಾ ಜೋಬಿಗೆ ಬಂತು 

ನಲವತ್ತೇಳರ ಸ್ವಾತಂತ್ರ್ಯ' ಎಂದವನ ನಾದ 

ಸಾಮಾಜಿಕ ನ್ಯಾಯಕ್ಕೆ ತಾ ನಾಂದಿಯಾಯ್ತೆ?


ಶೋಷಿತರ ದನಿಯಿಂದು ಸದ್ದಡಗಿಸಿತೆ?

ದಿವ್ಯ ಚೇತನಕೇತರ ಸಾವು?

ಸ್ಥಾವರಕಳಿವುಂಟು, ಜಂಗಮಕ್ಕುಂಟೇ?

ರಚನೆ: ಲಕ್ಷ್ಮೀನಾರಾಯಣ ಕೆ. 


ಟಿಪ್ಪಣಿ: ಡಾ. ಸಿದ್ಧಲಿಂಗಯ್ಯರವರ "ಮಸಣದ 

ಚಲುವೆ, ಒಂದು ಮೂಳೆಯ ಹಾಡು, 

ಸತ್ತೋಗೋರಾ, ನಲವತ್ತೇಳರ ಸ್ವಾತಂತ್ರ್ಯ"

ಗೀತೆಗಳಿಂದ ಆಯ್ದ ಸಾಲುಗಳನ್ನು 

ಇಲ್ಲಿ ಕ್ರಮವಾಗಿ ಬಳಸಲಾಗಿದೆ)


 

Monday, 7 June 2021

ಕೋವಿಡ್ ಮಾನವ ಸೃಷ್ಟಿಯೇ?

(proposed cover page)


 ಕೋವಿಡ್ 

ಮಾನವ ಸೃಷ್ಟಿಯೇ?

(ಇದು ಭಾರತದ ಕೋವಿಡ್ ಸಮರದ ಕಥೆ)

ಲೇಖಕರು:

ಲಕ್ಷ್ಮೀನಾರಾಯಣ ಕೆ. 

******

ಈ ಪುಸ್ತಕದ ಎಲ್ಲಾ ಹಕ್ಕುಗಳು © ಲೇಖಕರಿಗೆ ಸೇರಿದ್ದು. 

ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಈ ಪುಸ್ತಕದ ಯಾವುದೇ ಭಾಗಗಳನ್ನು, ಲೇಖಕರ ಲಿಖಿತ  ಅನುಮತಿಯಿಲ್ಲದೆ, ಯಾವುದೇ ಬೇರೆ ರೂಪದಲ್ಲಿ ಬೇರ್ಯಾರು ಪ್ರಕಟಿಸುವ ಹಾಗಿಲ್ಲ. ಈ ಪುಸ್ತಕದ  ವಿಮರ್ಶೆ ಮಾಡಲಿಚ್ಛಿಸುವವರು, ಈ ಪುಸ್ತಕದಲ್ಲಿ ಬರುವ ವಾಕ್ಯಗಳನ್ನು ಅವಶ್ಯಕತೆಗೆ ತಕ್ಕಂತೆ ಉಲ್ಲೇಖಿಸಬಹುದು.   

******

ನಿರಾಕರಣೆ (Disclaimer)

"ಕೋವಿಡ್, ಮಾನವ ಸೃಷ್ಟಿಯೇ?" ಎಂಬ ನನ್ನ ಪುಸ್ತಕ ಒಂದು ಕಾಲ್ಪನಿಕ ಕಥೆ. ಈ ಪುಸ್ತಕದಲ್ಲಿ ಬರುವ ಎಲ್ಲಾ ಪಾತ್ರಗಳು, ಘಟನೆಗಳು, ಸಂಸ್ಥೆಗಳು ಮತ್ತು ಸ್ಥಳಗಳು (ಅಲ್ಲಲ್ಲೇ ಸ್ಪಷ್ಟಪಡಿಸಿದ, ಕೆಲವನ್ನು ಹೊರತು ಪಡಿಸಿ) ಲೇಖಕರ ಕಲ್ಪನೆ ಮಾತ್ರ. ಇಲ್ಲಿನ ಪಾತ್ರಗಳ, ಸ್ಥಳಗಳ ಮತ್ತು ಘಟನೆಗಳ ಹೋಲಿಕೆ, ಯಾವುದಾದರೂ ಜೀವಂತ ಅಥವಾ ಮರಣ ಹೊಂದಿರುವ ವ್ಯಕ್ತಿಗಳೊಂದಿಗಿದ್ದರೆ, ಅದು ಕಾಕತಾಳೀಯ (coincidental) ಮಾತ್ರ.  ಈ ಪುಸ್ತಕದಲ್ಲಿ, ನಿಜವಾದ ವ್ಯಕ್ತಿಗಳ, ಸಂಸ್ಥೆಗಳ ಮತ್ತು ಸ್ಥಳಗಳ  ಉಲ್ಲೇಖವಿರುವಲ್ಲಿ, ಅದರ ಬಳಕೆಯನ್ನು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಮಾಡಿಕೊಳ್ಳಲಾಗಿದೆ. ಅಂತಹ ನಿಜ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಮತ್ತು ಸ್ಥಳಗಳಿಗೆ ಯಾವುದೇ ತೊಂದರೆ, ಅಗೌರವಗಳನ್ನುಂಟು ಮಾಡುವ ಉದ್ದೇಶ ಲೇಖಕರಿಗಿಲ್ಲ. 

ತಮಗೆ ಮಾಹಿತಿಯನ್ನು ನೀಡಿ, ಮನರಂಜಿಸಿ, ತಮ್ಮನ್ನು ಯೋಚನಾಪರರನ್ನಾಗಿಸುವುದೇ ಲೇಖಕರ ಉದ್ದೇಶ. ತಮಗೇನಾದರೂ ಆರೋಗ್ಯದ ತೊಂದರೆಗಳಿದ್ದಲ್ಲಿ, ಈ ಪುಸ್ತಕದಲ್ಲಿ ಉಲ್ಲೇಖಿಸಿರುವ ಪರೀಕ್ಷೆ ಹಾಗೂ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಡಿ. ಅಂತಹ ಸಂದರ್ಭಗಳಲ್ಲಿ ಯೋಗ್ಯ ವೈದ್ಯರುಗಳನ್ನು ಸಂಪರ್ಕಿಸುವುದೇ ಸೂಕ್ತ. 

ಈ ಪುಸ್ತಕದ ಲೇಖಕರು, ತಮ್ಮ ಹಾಗೆ ಶ್ರೀಸಾಮಾನ್ಯರಲ್ಲೊಬ್ಬರು. ವೈದ್ಯಕೀಯ, ತಾಂತ್ರಿಕ, ಬ್ಯಾಂಕಿಂಗ್ ಮತ್ತು ಹಣಕಾಸಿನ ವಿಚಾರ, ಕಾನೂನಿನ ವಿಚಾರ ಮುಂತಾದ ಯಾವುದೇ ವಿಷಯಗಳ ಬಗ್ಗೆ ತಮಗೆ ಸಲಹೆಯನ್ನು ನೀಡುವ ಯಾವ ಅರ್ಹತೆಯೂ ಈ ಪುಸ್ತಕದ ಲೇಖಕರಿಗಿಲ್ಲ. ಅಂತಹ ಸಲಹೆಗಳ ಅವಶ್ಯಕತೆ ತಮಗಿದ್ದಲ್ಲಿ, ಈ ಪುಸ್ತಕದಲ್ಲಿರುವ ವಿಚಾರಗಳನ್ನು ಪರಿಗಣಿಸಬೇಡಿ. ಅಂತಹ ಅವಶ್ಯಕತೆಗಳಿದ್ದಲ್ಲಿ, ತಾವು ಆಯಾ ಕ್ಷೇತ್ರಗಳ ತಜ್ಞರನ್ನು ಸಂಪರ್ಕಿಸುವುದೇ ಸೂಕ್ತ. 

******

 ಕೋವಿಡ್ 
ಮಾನವ ಸೃಷ್ಟಿಯೇ?

ನನ್ನ ಈ ಕಾದಂಬರಿ 

ನಮ್ಮ ಕೊರೋನಾ ಸೇನಾನಿಗಳಿಗೆ 
ಸಮರ್ಪಿತ 
******


ಪರಿವಿಡಿ 


೧. ದೀಪ ಬೆಳಗೋಣ ಬನ್ನಿ 

೨. ಸಾವಿನ ಘನತೆ 

೩. ಬಡವನ ಸೈಕಲ್ 

೪. ವಲಸಿಗರ ಪರದಾಟ 

೫. ವಲಸಿಗರ ವಂದನೆ 

೬. ಕೋವಿಡ್, ಮಾನವ ಸೃಷ್ಟಿಯೇ?

೭. ಕೊರೋನಾ ಸೇನಾನಿಗಳು 

೮. ಫ್ಲಾರೆನ್ಸ್ ನೈಟಿಂಗೇಲ್ 

೯. ಉದ್ಯೋಗಗಳ ಮರುಸೃಷ್ಟಿ 

೧೦. ನಲುಗಿದ ಆರ್ಥಿಕ ವ್ಯವಸ್ಥೆ  

೧೧. ಕೋವಿಡ್-೧೯ಕ್ಕಿಂತ ಭಯಾನಕ 

೧೨. ಪುನರುಜ್ಜೀವನ  

೧೩. ಕೊಳಚೆ ಪ್ರದೇಶಗಳಗಳ ನಿರ್ವಹಣೆ ಅಸಾಧ್ಯವಲ್ಲ  

೧೪. ಕೋವಿಡ್ ಮೇಲಿನ ವಿಜಯ 

ವಿಷಯಾಧಾರದ ಮೂಲಗಳು  (Bibliography)

ಲೇಖಕರ ಪರಿಚಯ 

******


ಮುನ್ನುಡಿ 


ಡಾ. ಗಿರೀಶ್ H.C. 
 
M.D. (Paed), DABPCC (USA), CCST (UK)
ಮಕ್ಕಳ ತಜ್ಞರು, ವಿಕ್ರಂ ಆಸ್ಪತ್ರೆ 
ಬೆಂಗಳೂರು 
***

ಮುನ್ನುಡಿ 

ಕಳೆದ ಹದಿನೆಂಟು ತಿಂಗಳುಗಳಿಂದ, ಇಡೀ ವಿಶ್ವ ಕಂಡು ಕೇಳರಿಯದ ದುರಂತವೆನ್ನುದುರಿಸುತ್ತಿದೆ.  ಇದೇ ರೀತಿಯ ದುರಂತವಾಗಿದ್ದ, "ಸ್ಪ್ಯಾನಿಷ್ ಫ್ಲೂ ರೋಗ(Spanish Flu)"ವನ್ನು ಸುಮಾರು ಒಂದು ಶತಮಾನದ ಹಿಂದೆ ಇಡೀ ವಿಶ್ವ ಎದುರಿಸಿತ್ತು. ಅಂದಿನ ದುರಂತವನ್ನು ಕಣ್ಣಾರೆ ಕಂಡವರು ಈಗಿಲ್ಲ ಎಂದೇ ಹೇಳಬಹುದು. ಸ್ಪ್ಯಾನಿಷ್ ಫ್ಲೂ ರೋಗವನ್ನು ಕುರಿತಾದ ಕೆಲವೇ ದಾಖಲೆಗಳು ಮಾತ್ರ ನಮಗೀಗ ಲಭ್ಯವಿದೆ. 

ಕೋವಿಡ್-೧೯ ಎಂಬ ಮಹಾಮಾರಿ (Pandemic) ವಿಶ್ವದ ಎಲ್ಲಾ ವ್ಯಕ್ತಿಗಳ ಮೇಲೂ, ತನ್ನ ಪ್ರಭಾವವನ್ನು ಒಂದಲ್ಲ ಒಂದು ರೀತಿ ಬೀರಿದೆ. ಯಾವುದೇ ರಾಷ್ಟ್ರ ಅಥವಾ ವ್ಯಕ್ತಿ ಇದಕ್ಕೆ ಹೊರತಾಗಿಲ್ಲ. ಈ ಮಹಾಮಾರಿಯ ಪರಿಣಾಮಗಳೆಲ್ಲವೂ ವಿನಾಶಕಾರಿಯಾದರೂ, ಅಲ್ಲಲ್ಲಿ ಕೆಲವು ಹೃದಯಸ್ಪರ್ಶಿ ಕತೆಗಳು ನಮಗೆ ಕೇಳಬರುತ್ತಿವೆ. ವಿಶಾಲವಾಗಿ ಹರಡಿರುವ ಸಾಮಾಜಿಕ ಜಾಲತಾಣಗಳಲ್ಲಿ, ಸತ್ಯ ಹಾಗೂ  ಮಿಥ್ಯೆಗಳನ್ನೊಳಗೊಂಡ ಹಲವು ಸುದ್ದಿಗಳು ಹರಿದಾಡುತ್ತಿವೆ.  ನಮ್ಮ ಜನತೆಯ ಆರೋಗ್ಯವನ್ನು ಕುರಿತಾದ ಪ್ರಾಮಾಣಿಕ ಕಾಳಜಿಯನ್ನು ಒಂದೆಡೆ ನಾವು ಕಂಡರೆ, ದಿವ್ಯ ನಿರ್ಲಕ್ಷ್ಯದ ಘಟನೆಗಳೂ ಇಲ್ಲದಿಲ್ಲ. ನಮ್ಮನ್ನಾಳುವವರು, ಒಳ್ಳೆಯ ಕ್ರಮಗಳ ತ್ವರಿತ ಕಾರ್ಯಾನ್ವಯವನ್ನು ಅಧಿಕ ಸಂಖ್ಯೆಯಲ್ಲಿ ಜರುಗಿಸಿದ್ದರೂ, ಅಷ್ಟೇ ಸಂಖ್ಯೆಯ ಪ್ರಸಂಗಗಳಲ್ಲಿ ನಿಷ್ಕ್ರಿಯರಾಗಿ ಕುಳಿತಿದ್ದನ್ನೂ ನಾವು ನೋಡಿದ್ದೇವೆ. ಈ ಮಾರಕ ವೈರಾಣುವಿನ ಹೋರಾಟದಲ್ಲಿ ದುರಂತದ ಕಥೆಗಳು ಒಂದೆಡೆಯಾದರೆ, ಮತ್ತೊಂದೆಡೆ ಗುಣಮುಖರಾಗಿ ಗೆಲುವಿನ ನಗೆ ಬೀರಿದವರ ಕಥೆಗಳೂ ಕೇಳಿಬರುತ್ತಿವೆ. 

ಈ ಪುಸ್ತಕದ ಲೇಖಕರು ಹಿರಿಯ ನಾಗರೀಕರಾಗಿದ್ದು, ಅಪಾರವಾದ ಅನುಭವವನ್ನು ಹೊಂದಿದವರಾಗಿದ್ದಾರೆ. ಕೋವಿಡ್ ಹೆಮ್ಮಾರಿಯ ದಾಳಿ ಆರಂಭವಾದಾಗಿನಿಂದ ಕಳೆದ ವರ್ಷದ ಅಂತ್ಯದವರೆಗೆ, ವಿಶ್ವಾದ್ಯಂತ ಜರುಗಿರುವ ಮುಖ್ಯ  ಘಟನೆಗಳ ಪಕ್ಷಿ ನೋಟವನ್ನು ಲೇಖಕರು ಇಲ್ಲಿ ಸರಳವಾಗಿ ಚಿತ್ರಿಸಿದ್ದಾರೆ. ಲೇಖಕರು ಇಲ್ಲಿ ದಾಖಲಿಸಿರುವ ಹಲವು ವಿಚಾರಗಳು ಅವರದ್ದೇ ಆಗಿದ್ದು, ಅವುಗಳನ್ನು ಓದುಗರು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ, ಕೊರೋನಾ ಮಹಾಮಾರಿಯ ವಿಷಯದಲ್ಲಿ ನಾವಾಗಲಿ, ನಮ್ಮ ಸಮಾಜವಾಗಲಿ ಅಥವಾ ನಮ್ಮ ರಾಷ್ಟ್ರವಾಗಲಿ ಕೈಗೊಂಡ ಹಲವು ಕ್ರಮಗಳ ಬಗ್ಗೆ ಭಿನ್ನಾಭಿಪ್ರಾಯಗಳು ಇಲ್ಲದಿಲ್ಲ. ಆ ರೀತಿಯ ಭಿನ್ನಾಭಿಪ್ರಾಯಗಳನ್ನೂ ಲೇಖಕರು ಈ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಲೇಖಕರ ಬರವಣಿಗೆಯ ಶೈಲಿ ಚೇತೋಹಾರಿಯಾಗಿದ್ದು, ಶ್ರೀಸಾಮಾನ್ಯರ ಅನಿಸಿಕೆಗೆ ಅನುರೂಪವಾಗಿದೆ. 

ಲೇಖಕರ ಈ ಪ್ರಯತ್ನಕ್ಕೆ ಯಶಸ್ಸು ದೊರಕಲಿ ಎಂದು ಹಾರೈಸುತ್ತೇನೆ!

ಡಾ. ಗಿರೀಶ್ H.C. 
******



ಲೇಖಕರ ಅರಿಕೆ 

ಅಂದು ೩೧-೧೨-೨೦೧೯ರ ತಡ ರಾತ್ರಿಯಾಗಿತ್ತು. ನಾವು ವಾಸಿಸುವ ಪುಟ್ಟ ಬಡಾವಣೆಯಲ್ಲಿ, ಪ್ರತಿ ವರ್ಷದ ಆಚರಣೆಯಂತೆ 'ಹೊಸ ವರ್ಷ ೨೦೨೦'ನ್ನು ಸ್ವಾಗತಿಸುವ ಪುಟ್ಟ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಾವೆಲ್ಲರೂ ಸೇರಿದ್ದೆವು. ನಮ್ಮ ಯುವಕರ ಉತ್ಸಾಹ, ಸಂಭ್ರಮಗಳು ಮುಗಿಲು ಮುಟ್ಟಿದ್ದವು. ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿದ ಅವರುಗಳು, ಕುಣಿದು ಕುಪ್ಪಳಿಸಿ ನಮ್ಮೆಲ್ಲರಿಗೂ ಸಿಹಿಯನ್ನು ಹಂಚಿದ್ದರು. ಆದರೆ, ಅಂದು ನೆರೆದಿದ್ದ ನಮಗ್ಯಾರಿಗೂ ಅದೇ ದಿನದ ಬೆಳಗ್ಗೆ ನಮ್ಮ ನೆರೆ ರಾಷ್ಟ್ರವಾದ ಚೀನಾ ತನ್ನ 'ಉಹಾನ್' ನಗರದಲ್ಲಿ, ಕೋವಿಡ್ ರೋಗದ ಹರಡುವಿಕೆ ಆರಂಭವಾಗಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದ ವಿಷಯ ತಿಳಿದಿರಲಿಲ್ಲ. ಮಾರನೆಯ ದಿನದ ಬೆಳಗ್ಗೆ, ಆ ವಿಶ್ವವ್ಯಾಪಿ  ಮಹಾಮಾರಿ (pandemic) ಮನುಕುಲಕ್ಕಪ್ಪಳಿಸಿದ್ದ ಸುದ್ದಿ, ನಮ್ಮ ದಿನ ಪತ್ರಿಕೆಯ ಪುಟ್ಟ ಅಂಕಣವೊಂದರಲ್ಲಿ ಪ್ರಕಟವಾಗಿದ್ದು, ನನ್ನ ಗಮನಕ್ಕೆ ಬರಲೇ ಇಲ್ಲ. 'ಕೋವಿಡ್-೧೯' ಎಂಬ ಆ ಮಹಾಮಾರಿ ಇಂದು ಇಡೀ ವಿಶ್ವವನ್ನೇ ಆವರಿಸಿ, ಕೋಟಿಗಟ್ಟಲೆ ಜನರುಗಳನ್ನು ಸೋಂಕಿತರನ್ನಾಗಿಸಿ, ಲಕ್ಷಗಟ್ಟಲೆ ಸಾವು-ನೋವುಗಳನ್ನು ಉಂಟುಮಾಡಿರುವುದು, ನಮ್ಮೆಲ್ಲರನ್ನೂ ಕಂಗೆಡಿಸಿರುವುದು ಸುಳ್ಳಲ್ಲ. 

'ಕೋವಿಡ್-೧೯ರ ರೀತಿಯ ಮಹಾಮಾರಿಯೊಂದು ಸಧ್ಯದಲ್ಲೇ ಮನುಕುಲವನ್ನು ಕಾಡಬಹುದೆಂದು,' ವಿಶ್ವ ಆರೋಗ್ಯ ಸಂಸ್ಥೆ (World Health Organization - WHO) ಆಗಾಗ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಆದರೆ ಆ ಎಚ್ಚರಿಕೆಯನ್ನು ಹೆಚ್ಚಿನವರು ಗಂಭೀರವಾಗಿ ಪರಿಗಣಿಸಿರಲಿಲ್ಲ. 'ಬರಲಾರದೆಂದು ಉದಾಸೀನ ಮಾಡಿದ್ದ ಅಪಾಯವೇ, ದಿಢೀರನೇ ಬಂದು ನಮ್ಮ ಮೇಲೆರಗಬಹುದು (the danger which is least expected soonest comes to us),' ಎಂಬ ಎಚ್ಚರಿಕೆಯನ್ನು ಫ್ರೆಂಚ್ ನಾಟಕಕಾರ ಹಾಗೂ ಸಮಾಜ ಸುಧಾರಕ ವೊಲ್ಟೈರ್ (Voltaire) ನೀಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. 

೧೯೮೧ರ ಸಮಯದಲ್ಲಿ ವಿಶ್ವವನ್ನು ಆವರಿಸಿದ  ಏಡ್ಸ್ (AIDS) ರೋಗದ ದಿನಗಳಿಂದಲೇ, ವಿಶ್ವದ ಗ್ರಹಚಾರ ಸರಿಯಿಲ್ಲವೆಂದೇ ಹೇಳಬಹುದು. ಏಡ್ಸ್ ರೋಗದ ನಂತರ, ಸಾಂಕ್ರಾಮಿಕಗಳಾದ 'ಹಕ್ಕಿಜ್ವರ (Bird flu-೧೯೯೬), ಸಾರ್ಸ್ (SARS-೨೦೦೨), ಹಂದಿಜ್ವರ (Swine flu -೨೦೦೯), ಎಬೋಲಾ (Ebola -೨೦೧೩), ನಿಪಾಹ್ (Nipah -೨೦೧೮), ಮೆರ್ಸ್ (MERS - ೨೦೧೯), ಮತ್ತೀಗ ಕೋವಿಡ್-೧೯ (Covid-೧೯),ರಂತಹ' ರೋಗಗಳು ಮನುಕುಲದ ಮೇಲೆ ಸರಣಿ ದಾಳಿಯನ್ನೇ ನಡೆಸಿವೆ ಎನ್ನಬಹುದು. ಕೋವಿಡ್-೧೯ರ ರೋಗವಂತೂ, ಕಳೆದ ಹದಿನೆಂಟು ತಿಂಗುಳುಗಳಿಂದ ಇಡೀ ವಿಶ್ವವನ್ನೇ ಸತತವಾಗಿ ಕಾಡುತ್ತಿದ್ದು, ಮಹಾಮಾರಿಯ ಸ್ವರೂಪವನ್ನು ತಾಳಿಬಿಟ್ಟಿದೆ. ಆ ಮಹಾಮಾರಿ ಮಾನವನ ಎಲ್ಲಾ ಚಟುವಟಿಕೆಗಳ ಲಯವನ್ನೇ ಕಂಗೆಡಿಸಿಟ್ಟಿದೆ. 

ಕೋವಿಡ್-೧೯ರ ಮಹಾಮಾರಿ ನಮ್ಮ ದೇಶಕ್ಕೆ ಕೊಂಚ ತಡವಾಗೇ ಕಾಲಿಟ್ಟಿತೆಂದೇ ಹೇಳಬಹುದು. ಆದರೂ, ಕಳೆದ ವರ್ಷ ಅದರ ಮೊದಲನೇ ಅಲೆಯಿಂದ ತತ್ತರಿಸಿದ ನಮ್ಮ ಮೇಲೆ, ಈಗ ಕ್ರೂರವಾಗಿ ಅಪ್ಪಳಿಸಿರುವ ಎರಡನೇ ಅಲೆ, ನಡೆಸುತ್ತಿರುವ ಅನಾಹುತಗಳನ್ನಂತೂ ಹೇಳತೀರದು. ಹೊಸ ಹೊಸದಾಗಿ ರೂಪಾಂತರಗಳನ್ನು (mutation) ಹೊಂದುತ್ತಾ, ಹೊಸ ಹೊಸ ರೌದ್ರಾವತಾರಗಳೊಂದಿಗೆ ನಮ್ಮನ್ನು ಕಾಡುತ್ತಿರುವ, ಈ ಮಹಾಮಾರಿಯ ವಿಪತ್ತಿಗೆ ಕೊನೆಯೆಂದೋ? ಎಂಬುದು ಎಲ್ಲರ ತವಕವಾಗಿ ಹೋಗಿದೆ. 

'ಕೋವಿಡ್, ಮಾನವ ಸೃಷ್ಟಿಯೇ?' ಎಂಬ ಶೀರ್ಷಿಕೆಯ ನನ್ನೀ ಕಾದಂಬರಿ, ಬರೀ ದೋಷಾರೋಪಗಳ ಪಟ್ಟಿ ಮಾತ್ರವಲ್ಲ. 'ಇದು ಭಾರತದ ಕೋವಿಡ್ ಸಮರದ ಕಥೆ.' ತತ್ತರಿಸಿರುವ ನಮ್ಮ ಜನರುಗಳಲ್ಲಿ ಭರವಸೆ ಮತ್ತು ವಿಶ್ವಾಸಗಳನ್ನು ತುಂಬುವುದೇ ನನ್ನ ಉದ್ದೇಶ. 'ಪ್ರತಿಯೊಂದು ಬಿಕ್ಕಟ್ಟೂ ಹೊಸ ಅವಕಾಶಗಳ ಬಳುವಳಿಗಳನ್ನು ತರುತ್ತವೆಂಬ (every crisis brings an opportunity),' ನಮ್ಮ ಹಿರಿಯರ ಮಾತುಗಳಿಂದ ಪ್ರೇರಿತರಾಗಿ, ಮುನ್ಸಾಗುವ ಸಮಯವಿದು. ಕೋವಿಡ್ ಮಹಾಮಾರಿಯೊಂದಿಗಿನ ಮಾನವನ ಸಂಘರ್ಷದ, ಅದರಲ್ಲೂ ಮುಖ್ಯವಾಗಿ ನಮ್ಮೆಲ್ಲರ ಮಾತೃಭೂಮಿಯಾದ ಭಾರತದ ಸಂಘರ್ಷದ ವೃತ್ತಾಂತಗಳೇ, ನನ್ನೀ ಕಾದಂಬರಿಯ ಕಥಾವಸ್ತು. 

ಮಹಾಮಾರಿಯ ಈ ವೈರಾಣುವಿನೊಂದಿಗೇ  ಜೀವಿಸಲು ಕಲಿಯುವ ಅನಿವಾರ್ಯತೆ ಈಗ ನಮ್ಮ ಮುಂದಿದೆ. 'ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಆಗಾಗ ಸೋಪಿನಿಂದ ಕೈಗಳನ್ನು ತೊಳೆಯುವುದು ಮತ್ತು ಮಾಸ್ಕ್ ಧಾರಣೆ'ಯಂತಹ ಸರಳ ವಿಧಾನಗಳಿಂದ ಈ ವೈರಾಣುವಿನ ಹರಡುವಿಕೆಯನ್ನು ಸಾಕಷ್ಟು ನಿಯಂತ್ರಿಸಲು ಸಾಧ್ಯವಿದೆ. ಹಗಲಿರುಳೆನ್ನದೇ ಅವಿರತವಾಗಿ ಶ್ರಮಿಸಿ,  ಸಂಶೋಧನೆಗಳನ್ನು ನಡೆಸಿ ಹೊಸ ಲಸಿಕೆಗಳನ್ನು ನಮಗೆ ನೀಡಿರುವ ನಮ್ಮ ವಿಜ್ಞಾನಿಗಳು, ನಮ್ಮಲ್ಲಿ ಹೊಸ ಭರವಸೆಯೊಂದನ್ನು ಮೂಡಿಸಿದ್ದಾರೆ. 

ಒಂದು ಪುಟ್ಟ ವೈರಾಣುವಿಗೆ ಹೆದರಿ ತನ್ನ ಕ್ರಿಯಾಶೀಲ ಚಟುವಟಿಕೆಗಳನ್ನೇ ನಿಲ್ಲಿಸಿ, ಕೈಕಟ್ಟಿ ಕೂರುವ ಜಾಯಮಾನ ಮಾನವನದಲ್ಲ. ಇದು 'ಜೀವಗಳು ಮತ್ತು ಜೀವನೋಪಾಯಗಳ (lives Vs livelihood)' ನಡುವಿನ ಸಂಘರ್ಷ. ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು, ಮಹಾಮಾರಿಗಿಂತಲೂ ಮಾರಕ ಎಂಬುದು ನಮ್ಮ ಆರ್ಥಿಕ ತಜ್ಞರ ಅಭಿಪ್ರಾಯ. ಕೋವಿಡ್-೧೯ರ ರೋಗವನ್ನು ಹತ್ತಿಕ್ಕಲು ಸತತವಾಗಿ ಶ್ರಮಿಸುತ್ತಿರುವ ನಮ್ಮ 'ಕೊರೋನಾ ಸೇನಾನಿಗಳಾದ, ಆರೋಗ್ಯ ಕರ್ಮಚಾರಿಗಳು, ಪೊಲೀಸರು, ರೈತರು, ಕಾರ್ಮಿಕರು, ತಾಂತ್ರಿಕ ತಜ್ಞರು, ಸ್ವಚ್ಛತಾ ಕರ್ಮಿಗಳು, ವ್ಯಾಪಾರಿಗಳು, ಬ್ಯಾಂಕ್ ಕರ್ಮಚಾರಿಗಳು ಮುಂತಾದವರುಗಳೆಲ್ಲರಿಗೂ ನನ್ನದೊಂದು ದೊಡ್ಡ ಸಲಾಂ!' ಮಾರಕ ವೈರಾಣುವನ್ನು ಹತ್ತಿಕ್ಕಲು, ನಮ್ಮ ಜನತೆ 'ಧನಾತ್ಮಕ ಚಿಂತನೆ(Positive Mental Attitude)'ಗಳನ್ನು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಈ 'ಮಹಾಮಾರಿ(pandemic)ಯ  ವಿರುದ್ಧದ ಹೋರಾಟದಲ್ಲಿ ಅಂತಿಮ ಜಯ ನಮ್ಮದೇ,' ಎಂಬ ವಿಶ್ವಾಸದ ಅರಿವು ನನ್ನ ಓದುಗರಲ್ಲಿ ಮೂಡಲಿ, ಎಂಬುದೇ ನನ್ನೀ ಬರಹದ ಉದ್ದೇಶ.   

'ಕೋವಿಡ್, ಮಾನವ ಸೃಷ್ಟಿಯೇ?' ಎಂಬ ನನ್ನ ಈ ಕಾದಂಬರಿ ಕಾಲ್ಪನಿಕವಾದುದಾದರೂ, ನಾನಿಲ್ಲಿ ಹೆಣೆದಿರುವ ಕಥೆಗಳು ಹಾಗೂ ಪಾತ್ರಗಳಿಗೆ, ಕಳೆದ ಹದಿನೆಂಟು ತಿಂಗಳುಗಳಲ್ಲಿ ಜರುಗಿರುವ ನಿಜ ಘಟನೆಗಳೇ ಆಧಾರ. ನಾನಿಲ್ಲಿ, ಕಳೆದ ವರ್ಷ ಅಂದರೆ ೨೦೨೦ರ ಬೇರೆ ಬೇರೆ ಅವಧಿಗಳ ಅಂಕಿ-ಅಂಶಗಳನ್ನು ದಾಖಲಿಸಿ, ಚರ್ಚಿಸಿದ್ದೇನೆ. ಆ ಅಂಕಿ-ಅಂಶಗಳು ಇಂದು ಭಾರೀ ಬದಲಾವಣೆಗಳನ್ನು ಕಂಡಿರಬಹುದು. ಈ ಪುಸ್ತಕದ ಬಹುಭಾಗವನ್ನು ನಾನು '೨೦೨೦ರ ಮಾರ್ಚ್-ಸೆಪ್ಟೆಂಬರ್' ತಿಂಗಳುಗಳ ಅವಧಿಯಲ್ಲಿ ಬರೆದಿದ್ದೇನೆ ಎಂಬ ವಿಚಾರವನ್ನು, ನಾನು ನನ್ನ ಓದುಗರುಗಳಿಗೆ ತಿಳಿಸಲಿಚ್ಛಿಸುತ್ತೇನೆ. ಕೋವಿಡ್ ತರುತ್ತಿರುವ ಹೊಸ ಹೊಸ ವಿಪತ್ತುಗಳು, ನಾವದನ್ನೆದುರಿಸಲು ಮಾಡುತ್ತಿರುವ ಹೋರಾಟಗಳು ಮತ್ತು ನಮ್ಮ ನಿರೀಕ್ಷೆಯನ್ನೂ ಮೀರಿ ಜರುಗುತ್ತಿರುವ ಘಟನೆಗಳು ದಿನ ದಿನಕ್ಕೂ ಬದಲಾಗುತ್ತಿರುವುದನ್ನು, ನಮ್ಮ ಓದುಗರು ಗಮನಿಸಬೇಕು ಎಂಬುದು ನನ್ನ ವಿನಮ್ರ ಅರಿಕೆ. ಇತ್ತೀಚಿನ ಬೆಳವಣಿಗೆಗಳ ಪ್ರಸ್ತಾವನೆ ನನ್ನ ಕಾದಂಬರಿಯಲ್ಲಿ ಇರದಿರಬಹುದು.  ಆದರೂ, ನಾನಿಲ್ಲಿ ಚರ್ಚಿಸಿರುವ ವಿಷಯಗಳು ಸಾರ್ವಕಾಲಿಕ ಸತ್ಯಗಳೇ ಆಗಿದ್ದು, ಅವುಗಳೆಂದಿಗೂ ಪ್ರಸ್ತುತ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. 

'ಚಿತ್ರವೊಂದಕ್ಕೆ, ಸಾವಿರ ಪದಗಳಿಗೂ ಮೀರಿದ ಸಂವಹನ ಶಕ್ತಿ ಇದೆ (A picture is equal to thousand words)' ಎಂಬ ಮಾತೊಂದಿದೆ. ಆ ಮಾತಿನ ಸಾಕಾರವೋ ಎಂಬಂತೆ ನಮ್ಮ ನಾಡಿನ ಸುಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ 'ಶ್ರೀ ರಘುಪತಿ ಶೃಂಗೇರಿ'ರವರು ನನ್ನ ಈ ಕಾದಂಬರಿಯ ೧೪ ಅಧ್ಯಾಯಗಳಿಗೆ, ೧೪ ವ್ಯಂಗ್ಯಚಿತ್ರಗಳನ್ನು ಬರೆದು ಕೊಟ್ಟಿದ್ದಾರೆ. ಮುಖಪುಟದ ವಿನ್ಯಾಸವನ್ನೂ ಅವರೇ ಮಾಡಿಕೊಟ್ಟಿದ್ದಾರೆ. ಅವರ ಚಿತ್ರಕಲೆ ನನ್ನ ಪುಸ್ತಕದ ಗುಣಮಟ್ಟವನ್ನು ಹೆಚ್ಚಿಸಿದೆ ಎಂಬುದು ನನ್ನ ಅನಿಸಿಕೆ. ಹಾಗಾಗಿ ನಾನವರಿಗೆ ಆಭಾರಿ. 

ನನ್ನ ಮಾಜಿ ಸಹೋದ್ಯೋಗಿಗಳು ಹಾಗೂ ಬಹುಕಾಲದ ಸನ್ಮಿತ್ರರೂ ಆದ 'ಶ್ರೀ ಎಂ.ಜಿ. ಗೋಪಾಲ ಕೃಷ್ಣ ಭಟ್ಟ B.Sc., LL.B.,CAIIB, ಬೆಂಗಳೂರು, ಇವರು ಈ ಕಾದಂಬರಿಯನ್ನು ಬರೆಯುವ ಕಾಲದಲ್ಲಿ ನನ್ನೊಡನಿದ್ದು, ಚರ್ಚಿಸಿ ನನಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ನಾನು ಬರೆದ ಕರಡು ಪ್ರತಿಯನ್ನು ಕೂಲಂಕಷವಾಗಿ ಓದಿ, ತಪ್ಪುಗಳನ್ನು ತಿದ್ದಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. 

ನನ್ನ ಮಗನಾದ ಡಾ. ಸುಭಾಷ್ L., (ಸಹಾಯಕ ಪ್ರಾಧ್ಯಾಪಕರು, ಸ್ಕೂಲ್ ಆಫ್ ಇಂಜಿನಿಯರಿಂಗ್, ವಾರ್ವಿಕ್ ವಿಶ್ವವಿದ್ಯಾಲಯ, ಯು.ಕೆ.) ಅವನ  ಬಾಲ್ಯದಿಂದಲೂ ನನ್ನ ವಿರುದ್ಧದ 'ದೈತ್ಯ ವಕೀಲ (devil's advocate)'ನಾಗಿದ್ದವನು. ಅವನು, ನನ್ನ ಪುಸ್ತಕದ ಕರಡು ಪ್ರತಿಯನ್ನು ಓದಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ ಹಲವು ಸಲಹೆಗಳನ್ನು ನೀಡಿ, ನನ್ನ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾನೆ ಎಂಬುದು ನನ್ನ ಅನಿಸಿಕೆ. ಅವನ ಶ್ರೇಯೋಭಿವೃದ್ಧಿಗೆ ನನ್ನ ಆಶೀರ್ವಾದಗಳು. 

ಕಾದಂಬರಿಯ ರಚನೆಯ ಕಾಲದ ಉದ್ದಕ್ಕೂ 'ನನ್ನೊಡನಿದ್ದ' ನನ್ನ ಪತ್ನಿ ಶ್ರೀಮತಿ. ಅನಸೂಯ'ಳಿಗೂ ನಾನು ಆಭಾರಿ. 

ನಾನು ನಿಮ್ಮಗಳಂತೆಯೇ ಶ್ರೀಸಾಮಾನ್ಯರುಗಳಲ್ಲೊಬ್ಬ ಮಾತ್ರ. ಈ ಕಾದಂಬರಿಯ ಉದ್ದಕ್ಕೂ ಹಲವು ವೈದ್ಯಕೀಯ, ಆರ್ಥಿಕ, ಕಾನೂನು ಮತ್ತಿತರ ಕ್ಷೇತ್ರಗಳ ಪದಗಳು, ಪದಪುಂಜ(phrases)ಗಳು, ವಿಧಿ-ವಿಧಾನಗಳು, ಮುಂತಾದವುಗಳನ್ನು ಉಲ್ಲೇಖಿಸಿ ಬರೆದಿದ್ದೇನೆ. ಆ ರೀತಿ ಬರೆಯುವುದಕ್ಕೆ,  ನನಗೆ ಯಾವ ವಿದ್ಯಾರ್ಹತೆಯೂ ಅಥವಾ ವೃತ್ತಿಪರತೆಯೂ ಇಲ್ಲವೇ ಇಲ್ಲ. ಆ ರೀತಿಯ ವಿವಿಧ ಕ್ಷೇತ್ರಗಳ ವಿಚಾರಗಳ ಬಗ್ಗೆ ತಮ್ಮಗಳಿಗೇನಾದರೂ ಅನುಮಾನವಿದ್ದಲ್ಲಿ, ತಾವುಗಳು ಆಯಾ ಕ್ಷೇತ್ರಗಳ ತಜ್ಞರ ಸಲಹೆಯನ್ನು ಪಡೆಯುವದು ಸೂಕ್ತ ಎಂಬುದು ನನ್ನ ಕೋರಿಕೆ. 

ಈ ಕೃತಿ ನನ್ನ ಮೂರನೇ ಕಾದಂಬರಿ. ಮುಂಚಿನ ನನ್ನ ಕೃತಿಗಳನ್ನು ಓದಿ, ನನ್ನನ್ನು ಪ್ರೋತ್ಸಾಹಿಸಿದ್ದೀರಿ. ನನ್ನ ಈ ಕಾದಂಬರಿಯನ್ನೂ ಅದೇ ರೀತಿ ಓದಿ ಪ್ರೋತ್ಸಾಹಿಸುವಿರೆಂದು ಆಶಿಸುತ್ತೇನೆ. ತೆರೆದ ಮನಸ್ಸಿ ನಿಂದ ನನ್ನ ಕಾದಂಬರಿಯನ್ನು ಓದಿ, ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು, ನನಗೆ ಕಳುಹಿಸಿ ಎಂದು ಈ ಮೂಲಕ ತಮ್ಮನ್ನು ಪ್ರಾರ್ಥಿಸಿಕೊಳ್ಳುತ್ತೇನೆ. ವಿಚಾರ, ವ್ಯಾಕರಣ ಹಾಗೂ ಕಾಗುಣಿತದ ತಪ್ಪುಗಳನ್ನು ದಯಮಾಡಿ ನನ್ನ ಗಮನಕ್ಕೆ ತಂದು, ಈ ಹೊತ್ತಿಗೆಯ ಸುಧಾರಣೆಗೆ ಸಹಾಯ ಮಾಡಿ ಎಂದು, ನಮ್ಮ ಸಹೃದಯ ಓದುಗರಲ್ಲಿ ನನ್ನ ಅರಿಕೆ. 

ಧನ್ಯವಾದಗಳು,

ಲಕ್ಷ್ಮೀನಾರಾಯಣ ಕೆ. 

ಲೇಖಕರು 

೧೦೪, ೨ನೇ ಮುಖ್ಯ ರಸ್ತೆ, ಶ್ರೇಯಸ್ ಕಾಲೋನಿ 

ಜೆಪಿ ನಗರ ೭ನೇ ಹಂತ 

ಬೆಂಗಳೂರು - ೫೬೦೦೭೮

ಜೂನ್ ೧೦, ೨೦೨೧

klakshminarayana1956@rediffmail.com

******

ದೋಷಗಳನ್ನು ಮತ್ತು ಲೋಪಗಳನ್ನು ಹೊರತು ಪಡಿಸಿ 

(Errors and omissions excepted)

******


ದೀಪ ಬೆಳಗೋಣ ಬನ್ನಿ  

ಅಂದು ಮಾರ್ಚ್ ೨೨, ೨೦೨೦ರ ಭಾನುವಾರದ  ಸಂಜೆ ೫ ಸಮೀಪಿಸುತ್ತಿರುವ ಸಮಯ .  ರಸ್ತೆಯ ಎರಡೂ ಬದಿಯ ತಮ್ಮ-ತಮ್ಮ ಮನೆಗಳ ಮುಂದೆ ಜನಗಳು ನೆರೆದಿದ್ದರು .  ಕೆಲವರು ತಮ್ಮ ಮನೆಯ ಮೇಲ್ಛಾವಣಿಯ  ಮೇಲೂ ಹತ್ತಿ ನಿಂತಿದ್ದರು.  ಅವರುಗಳೀಗ ತಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕೋರಿಕೆಯನ್ನು ಪರಿಪಾಲಿಸಬೇಕಿತ್ತು.  ಕೊರೋನಾ ಮಹಾಮಾರಿಯ ವಿರುದ್ಧದ ಸಮರದಲ್ಲಿ  ಅವಿರತವಾಗಿ ಹೋರಾಡುತ್ತಿರುವ, ವೈದ್ಯಕೀಯ ಸಿಬ್ಬಂಧಿ, ಪೊಲೀಸರು, ಮಾಧ್ಯಮ ಮಿತ್ರರು, ಪೌರಕಾರ್ಮಿಕರು, ಅವಶ್ಯಕ ವಸ್ತುಗಳ ವಿತರಕರು, ಬ್ಯಾಂಕ್ ಕರ್ಮಚಾರಿಗಳು, ಅಂಚೆ ಕರ್ಮಚಾರಿಗಳು ಮುಂತಾದವರನ್ನೊಳಗೊಂಡ  ಲಕ್ಷ-ಲಕ್ಷ  'ಕೊರೋನಾ ಸೇನಾನಿ'ಗಳನ್ನು, ಅಭಿನಂದಿಸಿ ಪ್ರೋತ್ಸಾಹಿಸುವ ಮಹಾಕಾರ್ಯ ಅವರುಗಳದಾಗಿತ್ತು.  

ಸಂಜೆ ೫ರ ಸಮಕ್ಕೆ ಸರಿಯಾಗಿ, ನೆರೆದ ಜನಗಳೆಲ್ಲರೂ ತಾವುಗಳು ನಿಂತಲ್ಲಿಯೇ ಚಪ್ಪಾಳೆ ತಟ್ಟಲು ಆರಂಭಿಸಿದರು.  ಗಂಟೆ, ಜಾಗಟೆಗಳೂ ಸದ್ದು ಮಾಡಿದವು. ಕೆಲವರಂತೂ ತಮ್ಮ ಮನೆಯ ಪಾತ್ರೆ, ತಟ್ಟೆಗಳನ್ನೇ ಬಡಿದು ಸಂಭ್ರಮಿಸಿದರು.  ಶಂಖನಾದಗಳೂ  ಮೊಳಗಲಾರಂಭಿಸಿದವು.  ಆ ಬಡಾವಣೆಯ ಬಹು ಕಾಲದ ನಿವಾಸಿಯಾಗಿದ್ದ ಹಿರಿಯ  ರಾಜುರವರು, ತಮ್ಮ ಸುತ್ತಲಿನ ಜನಗಳನ್ನು ಹುರಿದುಂಬಿಸುವುದರಲ್ಲಿ ನಿರತರಾಗಿದ್ದರು. ಸಮಾಜ ಶಾಸ್ತ್ರ  ಸಂಶೋಧಕಿಯೂ, ಪ್ರಗತಿಪರ ಚಿಂತಕಳೂ ಆದ ರಾಜುರವರ ಪ್ರೀತಿಯ ಮಗಳು ರೋಹಿಣಿ ಕೂಡ ತಮ್ಮ ತಂದೆಯ ಕಾರ್ಯದಲ್ಲಿ ಕೈ ಜೋಡಿಸಿದ್ದಳು.  ತಂತ್ರಜ್ಞಾನ-ಉತ್ಸಾಹಿಯಾಗಿದ್ದ ಅವಳು, ತನ್ನ ಐ-ಫೋನಿನ ಗಂಟಾನಾದವು  ಬ್ಲೂಟೂಥ್ ಮುಖಾಂತರ ತನ್ನ ಸ್ಪೀಕರ್ ಗಳಲ್ಲಿ ಭೋರ್ಗರೆಯುವಂತೆ ಮಾಡಿದ್ದಳು.  ಕೆಲವರು ತಮ್ಮ ಮೊಬೈಲ್ ಗಳ ಮುಖಾಂತರ ಕರತಾಡನದ ಈ ದೃಶ್ಯಗಳನ್ನು  ಚಿತ್ರೀಕರಿಸುತಿದ್ದರು. ಆಬಾಲವೃದ್ಧರಾದಿಯಾಗಿ ರಸ್ತೆಯ ಎಲ್ಲರೂ ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.  ಕರತಾಡನದ ಕಲಾಪ ಸುಮಾರು ೧೫ ನಿಮಿಷಗಳವರೆಗೆ ನಡೆಯಿತು. ಉತ್ಸಾಹಿ ಹಿರಿಯ ರಾಜುವಿಗೆ, ತನ್ನ ರಸ್ತೆಯೇ ಕೊರೋನಾ ಸೇನಾನಿಗಳಿಗೆ ಚಪ್ಪಾಳೆಗಳ ಮೂಲಕ ಗೌರವವನ್ನು ಸಮರ್ಪಿಸುತ್ತಿರುವ 'ಪುಟ್ಟದೊಂದು ಭಾರತ'ದಂತೆ ಕಂಡಿತು.  

ಮರುದಿನ ಸಾಮಾಜಿಕ ಜಾಲತಾಣಗಳಲ್ಲಿ , ಹಿರಿಯ ವೃದ್ಧೆಯಾದ ಪ್ರಧಾನಿ ಮೋದಿಯವರ ಪೂಜ್ಯ ಮಾತೆಯವರು, ಗುಜರಾತ್ ನ ಗಾಂಧಿನಗರದ ತಮ್ಮ ಮನೆಯ ಮುಂದೆ ತಟ್ಟೆ ಬಡಿದು ನಮ್ಮ ಕೊರೋನಾ ಸೇನಾನಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದ ವೀಡಿಯೊ ಜಗಜ್ಜಾಹೀರಾಗಿತ್ತು. ಈ ಚಿತ್ರಣ ಕುರಿತು ಪ್ರಧಾನಿ ಮೋದಿಯವರು ತಮ್ಮ ಟ್ವಿಟ್ಟರ್ನಲ್ಲಿ, 'ಹಿರಿಯರಾದ ತಮ್ಮ ಆಶೀರ್ವಾದಗಳಿಂದ  ನಮ್ಮ ಕೊರೋನಾ ಕಾರ್ಯಕರ್ತರುಗಳಿಗೆ ಆನೆಯ ಬಲ ಬಂದಿದೆ,' ಎಂದು ಬರೆದಿದ್ದರು. ಈ ಎರಡೂ  ದೃಶ್ಯಗಳನ್ನು ತಮ್ಮ ಮಗಳು ರೋಹಿಣಿಯ ಗಮನಕ್ಕೆ ತರುವುದನ್ನು ರಾಜುರವರು ಮರೆಯಲಿಲ್ಲ.  ರೋಹಿಣಿ ಕೂಡ ಎರಡೂ ದೃಶ್ಯಗಳನ್ನು ನೋಡಿ ತಲೆದೂಗಿದ್ದು, ತಂದೆಗೆ ಸಮಾಧಾನ ತಂದದ್ದು ಸುಳ್ಳಲ್ಲ. 

ಅಂದಿನ ದಿನಪತ್ರಿಕೆಗಳ ತುಂಬಾ ದೇಶದ ವಿವಿಧ ಮೂಲೆಗಳಲ್ಲಿ ಉತ್ಸಾಹಿ ಜನತೆ ನಮ್ಮಕೊರೋನಾ ಸೇನಾನಿಗಳಿಗೆ ಕರತಾಡನ ಮಾಡಿ ಧನ್ಯವಾದಗಳನ್ನರ್ಪಿಸಿದ ಚಿತ್ರಗಳೇ ತುಂಬಿದ್ದವು. ನಾವು  ಯಾರಿಗೂ ಕಮ್ಮಿಯಿಲ್ಲವೆನ್ನುವಂತೆ ರಾಜಕಾರಣಿಗಳು, ಚಲನ ಚಿತ್ರ ಗಣ್ಯರು, ಕ್ರೀಡಾಪಟುಗಳು, ಮುಂತಾದವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾದ ದೃಶ್ಯಗಳು ಕೂಡ ಎಲ್ಲರ ಗಮನ ಸೆಳೆದಿದ್ದವು. ನಿಧಾನವಾಗಿ  ಇಡೀ ದೇಶವನ್ನೇ ಆವರಿಸುತ್ತಿರುವ ಕೊರೋನಾ ವಿರುದ್ಧದ  ಸಮರದಲ್ಲಿ ನಿರತರಾಗಿರುವ ನಮ್ಮ ಕಟ್ಟಾಳುಗಳನ್ನು ಕರತಾಡನದ ಮೂಲಕ ಜನಸಾಮಾನ್ಯರುಗಳು ಹುರಿದುಂಬಿಸಿದ ಚಿತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.  

ನಿನ್ನೆಯ ಕರತಾಡನೆಯ ಕಾರ್ಯಕ್ರಮದಲ್ಲಿ ವಿರೋಧಾಭಾಸಗಳು ಇಲ್ಲದಿರಲಿಲ್ಲ.  ಅಂತಹ ಅವಿವೇಕದ ದೃಶ್ಯಗಳನ್ನು ತನ್ನ ತಂದೆಗೆ ತೋರಿಸಿ ಛೇಡಿಸುತ್ತಾ ರೋಹಿಣಿ, 'ಅಪ್ಪ ಇಲ್ಲಿ ನೋಡಿ, ನಿಮ್ಮ ಜನಗಳಿಗೆ ಶಿಸ್ತು-ಸಂಯಮ ಎಲ್ಲಿದೆ? ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಗುಂಪುಗೂಡಿ, ಘೋಷಣೆಗಳನ್ನು ಕೂಗುತ್ತಾ, ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತಿದ್ದರಲ್ಲಾ! ಇದೇನು  ಸಂಭ್ರಮಾಚರಣೆಯ ಸಂಧರ್ಭವೇ?' ಎಂದಿದ್ದಳು.  ರಾಜುರವರು ಕೂಡ ಇದು ಸರಿಯಲ್ಲವೆಂದು ಗೋಣಾಡಿಸುವಂತಾಗಿತ್ತು. 

ವಿಚಲಿತರಾದರು, ಬೇಗ ಸಮಸ್ಥಿತಿಗೆ ಮರಳಿದ ರಾಜುರವರು ತಮ್ಮ ಮಗಳಿಗೆ ಪರಿಸ್ಥಿತಿಯನ್ನು ವಿವರಿಸಲು  ಸನ್ನದ್ಧರಾಗಿದ್ದರು. 'ಹೌದು, ಕೆಲವರು ೧೪ ಗಂಟೆಗಳ ಜನತಾ ಕರ್ಫ್ಯೂವಿನ ಗಾಂಭೀರ್ಯಕ್ಕೆ ಧಕ್ಕೆ ತರುವಂತೆ ವರ್ತಿಸಿರಬಹುದು. ಆದರೆ ಪ್ರಧಾನಿಯವರ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ದೇಶದ ಜನಗಳಿಂದ ದೊರೆತದ್ದು ಸುಳ್ಳಲ್ಲ. ದೇಶಾದ್ಯಂತ ನಾಗರಿಕರು ತಮ್ಮ ತಮ್ಮ ಮನೆಗಳ ಮುಂದೆ ನಿಂತು ಚಪ್ಪಾಳೆ ತಟ್ಟುತ್ತಾ, ತಮಟೆಗಳನ್ನು ಬಡಿಯುತ್ತಾ, ಶಂಖನಾದ ಮಾಡುತ್ತಾ, ಜಾಗಟೆಗಳನ್ನು ಬಡಿಯುತ್ತಾ, ಒಕ್ಕೊರಲಿನಲ್ಲಿ ನಮ್ಮ ಕೊರೋನಾ ಸೇನಾನಿಗಳಿಗೆ ಧನ್ಯವಾದಗಳನ್ನರ್ಪಿಸಿದ್ದು, ಏಕತೆಯ ಮತ್ತು ಧೃಢ ನಿಶ್ಚಯದ ಸಂಕೇತವೇ ಸರಿ,' ಎಂದು ರಾಜು ವಿವರಿಸಿದಾಗ, ಮಗಳು ರೋಹಿಣಿಯೇನು ಸಮ್ಮತಿಸಿದಂತೆ ತಲೆದೂಗಲಿಲ್ಲ. 

ಸಾಮಾಜಿಕ ಜಾಲತಾಣಗಳನ್ನು ಕೆದಕುವಲ್ಲಿ ರೋಹಿಣಿ ಸಿದ್ಧಹಸ್ತೆ.   ತಂದೆ ರಾಜುವಿಗೆ ಅತಿಪ್ರಿಯರಾದ, ಸಂಪೂರ್ಣ ಭಾರತ ಖ್ಯಾತಿಯ ಹಿರಿಯ ಚಿತ್ರನಟರೊಬ್ಬರ ಟ್ವೀಟೊಂದನ್ನು ಉಲ್ಲೇಖಿಸುತ್ತಾ, 'ಅಪ್ಪಾ,  ಇಲ್ಲಿ ನೋಡಿ, ನಿಮಗೆ ಪ್ರಿಯರಾದ ಆ ಶ್ರೀಯುತರು ಏನು ಹೇಳಿದ್ದಾರೆ? ಚಪ್ಪಾಳೆ-ಶಂಖನಾದಗಳ ಭೋರ್ಗರೆತದಿಂದ ಉಂಟಾದ ಕಂಪನ, ಅಮಾವಾಸ್ಯೆ ದಿನವಾದ ಅಂದು, ಕೊರೋನಾ ವೈರಾಣುವಿನ ತೀವ್ರತೆಯನ್ನು ಕುಂದಿಸುವಲ್ಲಿ ಯಶಸ್ವಿಯಾಗಿದೆಯಂತೆ!'  ಎಂಬ ವಾಕ್ಯವನ್ನು ತೋರಿಸಿ ನಕ್ಕಳು.  ತನ್ನ ವಾದ ಸರಣಿಯನ್ನು ರೋಹಿಣಿ ಮುಂದುವರೆಸುತ್ತಾ, 'ಕೆಲವು ಸ್ವಘೋಷಿತ ಬುದ್ಧಿಜೀವಿಗಳ ಪ್ರಕಾರ, ಅಮಾವಾಸ್ಯೆ ದಿನವಾದ ಅಂದೇ, ಸಂಜೆ ೫ರ ಸಮಯಕ್ಕೆ ಕರತಾಡನದ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಪ್ರಧಾನಿಗಳಿಗೆ ಹಲವು ಜ್ಯೋತಿಷಿಗಳು ಸಲಹೆ ನೀಡಿದ್ದರಂತೆ.  ವಾಟ್ಸಾಪ್ನಲ್ಲಿ ಹರಿದಾಡಿದ ಸುದ್ದಿಪ್ರವಾಹಗಳ ಪ್ರಕಾರ, "ನಾಸಾ"ದ ಉಪಗ್ರಹಗಳು ಅಂದಿನ ಕರತಾಡನದ ಸಮದಲ್ಲಿ ಭಾರತದಿಂದ  ಕೊರೋನಾ ವೈರಾಣುಗಳು ಹಿಮ್ಮೆಟ್ಟುತ್ತಿರುವ ದೃಶ್ಯಗಳನ್ನು  ಸೆರೆ ಹಿಡಿದಿವೆಯಂತೆ! ಇವೆಲ್ಲಾ ನಿಜವೆಂದು ನೀವೂ ನಂಬುವಿರಾ?' ಎಂದು ತಂದೆಯನ್ನು ಪ್ರಶ್ನಿಸಿದಳು.  ಅವೆಲ್ಲಾ ಅತ್ತ್ಯುತ್ಸಾಹಿಗಳ  ಕಪೋಲ ಕಲ್ಪಿತ ಮಿಥ್ಯೆಗಳೆಂದು ರಾಜುವಿಗೂ ತಿಳಿಯದೆ ಇರಲಿಲ್ಲ.  

ಮಾಧ್ಯಮಗಳ ಒಳ ಹೊಕ್ಕ ರೋಹಿಣಿಯ ಶೋಧನೆ ಮುಂದುವರೆದಿತ್ತು.  ಕೆಲವರಂತೂ ಮಾರ್ಚ್ ೨೨ರ ಜನತಾ ಕರ್ಫ್ಯೂವನ್ನು ನಾಟಕವೆಂದೇ ಬಣ್ಣಿಸಿದ್ದರು.  'ವೈರಾಣು ವಿರುದ್ಧ ಹೋರಾಡುವ ನಿರ್ಧಿಷ್ಟ ಮಾರ್ಗಗಳನ್ನು ಹುಡುಕುವುದನ್ನು ಬಿಟ್ಟು, ಮೋದಿಜಿ ಜನಗಳಿಗೆ ಚಪ್ಪಾಳೆ ತಟ್ಟಲು ಆದೇಶಿಸಿದರು,' ಎಂಬುದು ಮತ್ತೆ ಕೆಲವರ ಗೇಲಿಯಾಗಿತ್ತು.  ಚಪ್ಪಾಳೆ ಕಾರ್ಯಕ್ರಮ ಪಾಶ್ಚಿಮಾತ್ಯ ರಾಷ್ಟ್ರಗಳ  ನಕಲು ಎಂಬುದು ಹಲವು ಸುಶಿಕ್ಷಿತರ ಟೀಕೆಯಾಗಿತ್ತು.  ದಕ್ಷಿಣ ಭಾರತದ ಖ್ಯಾತ ವೈದ್ಯರೊಬ್ಬರು ತಮ್ಮಬೇಡಿಕೆಗಳನ್ನು ಮುಂದಿಡುತ್ತಾ,  'ಮಾರ್ಚ್ ೨೨ರ ಸಂಜೆ ೫ಕ್ಕೆ ತಾವುಗಳು ನಮಗಾಗಿ ಹೊರಬಂದು ಚಪ್ಪಾಳೆ ತಟ್ಟುವುದು ಬೇಕಿಲ್ಲ.  ಅದರ ಬದಲು "ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಲಿ, ಕೋವಿಡ್ ಗಾಗಿ ಮುಡಿಪಿಟ್ಟ ಆಸ್ಪತ್ರೆಗಳ ಸಂಖ್ಯೆ ಹೆಚ್ಚಲಿ,  ಜೀವರಕ್ಷಕ ವೆಂಟಿಲೇಟರ್ ಗಳು ದೊರೆಯುವಂತಾಗಲಿ, ಕೋವಿಡ್ ಚಿಕಿತ್ಸೆಯ ಸಿಬ್ಬಂಧಿಗೆ ಹೆಚ್ಚು ರಕ್ಷಕ ಸಾಧನಗಳು ದೊರೆಯಲಿ, ಕೋವಿಡ್ನಿಂದ ದುಡಿಮೆಯಿಲ್ಲದೆ ಕುಳಿತಿರುವ ಬಡಬಗ್ಗರಿಗೆ ಆರ್ಥಿಕ ಸಹಾಯ ದೊರೆಯಲಿ," ಎಂದು ನಿಮ್ಮ ಪ್ರಧಾನಿಯನ್ನು ಆಗ್ರಹಿಸಿ' ಎಂದು ಜನಗಳಿಗೆ ಕರೆ ನೀಡಿದ್ದರು.  ಪ್ರಜ್ಞಾವಂತ ವಲಯಗಳಲ್ಲಿ ಈ ರೀತಿಯ ವಿಚಾರ ಧಾರೆಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.  

ಪ್ರಗತಿಪರ ಚಿಂತಕಿಯಾದ ಮಗಳು ರೋಹಿಣಿಯ ವಿಚಾರ ಮಂಡನೆ, ರಾಜುರವರಿಗೂ ಮಂಕು ಬಡಿಸಿತ್ತು.  ಓಲೈಕೆಯ ಮಾರ್ಗಕ್ಕೆ ಮುಂದಾದ ತಂದೆ ರಾಜು, 'ಮಗಳೆ, ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣಿಗಳು ಇರಬೇಕಾದದ್ದೆ.  ಆದರೂ ಪ್ರಧಾನಿ ಮೋದಿಜಿಯವರ ಮಾರ್ಚ್ ೨೨ರ ಚಪ್ಪಾಳೆ ಕಾರ್ಯಕ್ರಮ ಇಡೀ ದೇಶದ ಜನತೆಗೆ ಕೊರೋನಾ ಹೆಮ್ಮಾರಿಯ ಬಗ್ಗೆ ಎಚ್ಚರಿಕೆ ಮೂಡಿಸಿದ್ದು ಸುಳ್ಳಲ್ಲ.  ಮುಂಬರಲಿರುವ ಹಲವು ದಿನಗಳ ಎಡೆಬಿಡದ ಕರ್ಫ್ಯೂವಿಗೆ, ಜನತೆಯ ಮಾನಸಿಕತೆಯನ್ನು ಅಣಿಗೊಳಿಸುವ ಕೆಲಸ ಈ ಒಂದು ದಿನದ ಸ್ವಪ್ರೇರಿತ ಕರ್ಫ್ಯೂ ಮಾಡಿದೆ.  "ವೈದ್ಯೋ ನಾರಾಯಣೋ ಹರಿಃ" ಎಂಬುದು ನಮ್ಮ ಸಂಸ್ಕೃತಿಯ ವಾಣಿ.  ಅದೇ ವಾಣಿಯ ಅರ್ಥವನ್ನು ವಿಸ್ತರಿಸುತ್ತಾ, ನಮ್ಮ ಪ್ರಧಾನಿಯವರು, ನಮ್ಮೆಲ್ಲಾ ಕೊರೋನಾ ಸೇನಾನಿಗಳಿಗೆ ಕೃತಜ್ಞತೆಯನ್ನು ಸಮರ್ಪಿಸಲೆಂದು, ಅಂದಿನ ಚಪ್ಪಾಳೆ ಕಾರ್ಯಕ್ರಮಕ್ಕೆ ಕರೆ ನೀಡಿದ್ದರು' ಎಂದು ವಿವರಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
                                                                            ***

 ಒಂದು ದಿನದ ಜನತಾ ಕರ್ಫ್ಯೂವಿನ ಕಾವು ಹೆಚ್ಚು ದಿನ  ಉಳಿಯಲಿಲ್ಲ.  ಹೆಮ್ಮಾರಿಯಂತೆ ಹರುಡುತಿದ್ದ ಕೋವಿಡ್ ಅನ್ನು ತಡೆಯುವುದು ಹೇಗೆಂಬುದೇ ಎಲ್ಲ ರಾಜ್ಯ ಸರ್ಕಾರಗಳಿಗೆ ದೊಡ್ಡ ತಲೆನೋವಾಗಿತ್ತು.  ಕೋವಿಡ್ ಖಚಿತಗೊಂಡ ರೋಗಿಗಳಿದ್ದ ೮೨ ಜಿಲ್ಲೆಗಳನ್ನೊಳಗಂಡ ಆಯಾ ರಾಜ್ಯ ಸರಕಾರಗಳು, ಆಯಾ ಜಿಲ್ಲೆಗಳಲ್ಲಿ ಮಾರ್ಚ್ ೩೧ರವರೆಗಿನ 'ಲಾಕ್ ಡೌನ್ ' ಘೋಷಿಸಿದ್ದವು.  ಹಲವು ರಾಜ್ಯಗಳು ಅಂತರ-ರಾಜ್ಯ ಬಸ್ ಸಂಚಾರಕ್ಕೂ ನಿರ್ಬಂಧ ಹೇರಿದ್ದವು .  ಮೆಟ್ರೋ-ರೈಲು ಸಂಚಾರಕ್ಕೂ ನಿರ್ಬಂಧನೆ ಹೇರಬೇಕೆಂಬ ಯೋಚನೆ ಕೇಂದ್ರ ಸರ್ಕಾರದ್ದಾಗಿತ್ತು.  ಇಡೀ ರಾಷ್ಟ್ರದಲ್ಲಿ ರೈಲುಗಳ ಸಂಚಾರವನ್ನು ನಿಲ್ಲಿಸುವ ಬಗ್ಗೆ ವದಂತಿಗಳು  ಹರಿದಾಡುತ್ತಿದ್ದವು.  ಇಷ್ಟು ನಿರ್ಬಂಧ  ಸಾಲದೆಂಬದು ಸಾಮಾನ್ಯ ಜನತೆಗೂ ತಿಳಿದಿತ್ತು.  ೭೦೦ಕ್ಕೂ ಹೆಚ್ಚು ಜಿಲ್ಲೆಗಳಿರುವ ಈ ಬೃಹತ್  ದೇಶದಲ್ಲಿ, ಕೇವಲ ೮೨ ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದು ಸಾಕೆ?  ಎಂಬುದು ಹಲವರ ಪ್ರಶ್ನೆಯಾಗಿತ್ತು.  

ಜನತಾ ಕರ್ಫ್ಯೂವಿನ ಯಶಸ್ಸಿಗೆ ದೇಶದ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಪ್ರಧಾನಿ ಮೋದಿಯರು ಇನ್ನೂ ದೀರ್ಘವಾದ ಹೋರಾಟದ ಎಚ್ಚರಿಕೆ ನೀಡಿದ್ದರು. 'ಇಂದಿನ ಜನತಾ ಕರ್ಫ್ಯೂವೇನೋ ಈ  ರಾತ್ರಿಯ ೯ಕ್ಕೆ ಮುಕ್ತಯವಾಗಲಿದೆ. ಇದು ಸಂಭ್ರಮಿಸುವ ಸಮಯವಲ್ಲ.  ಮುಂದಿದೆ ಸುಧೀರ್ಘ ಹೋರಾಟ. ಆ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂಬುದನ್ನು ದೇಶದ ಜನತೆ ಇಂದು ಸಾಬೀತು ಪಡಿಸಿದೆ' ಎಂದು ಮೋದಿಜಿ ಟ್ವೀಟಿಸಿದ್ದರು.  

'ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್  ಅನ್ನು ಕೂಡಲೇ ಜಾರಿಗೊಳಿಸಿ' ಎಂಬುದು ವೈದ್ಯಕೀಯ ವಿಶೇಷಜ್ಞರ ಅಭಿಮತವಾಗಿತ್ತು.  'ಚೀನಾಕ್ಕೆ ಮೊದಲು ಹರಡಿದ ಕೋವಿಡ್ ವೈರಾಣು, ನಂತರ ಯುರೋಪ್ ಮತ್ತು ಅಮೇರಿಕಾ ದೇಶಗಳಿಗೂ ಹಬ್ಬಿತು. ನಮ್ಮ ಸುದೈವವೋ ಏನೋ,  ನಮ್ಮ ದೇಶಕ್ಕೆ ಕೋವಿಡ್ ತಡವಾಗಿ ಹಬ್ಬಿದೆ.  ಕಠಿಣ ಕ್ರಮಗಳನ್ನು ಶೀಘ್ರವಾಗಿ ಜಾರಿಗೊಳಿಸಿದ ಚೀನಾ, ಕೋವಿಡ್ ಮೇಲೆ ಅತ್ಯಂತ ಬೇಗ ನಿಯಂತ್ರಣವನ್ನು ಸಾಧಿಸಿತು. ಆ ರೀತಿಯ ಕಠಿಣ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಯುರೋಪ್ ಹಾಗೂ ಅಮೇರಿಕಾ ದೇಶಗಳು ವಿಳಂಬ ಮಾಡಿದ್ದವು.  ಅದರ ಪರಿಣಾಮ ಈಗ ಎಲ್ಲರ ಮುಂದಿದೆ.  ಆ ದೇಶಗಳಲ್ಲೀಗ  ಕೋವಿಡ್ ಕಾಳ್ಗಿಚ್ಚಿನಂತೆ ಹರಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.  ಯೂರೋಪಿನ ಇಟಲಿಯ ಪರಿಸ್ಥಿತಿಯಂತೂ ಶೋಚನೀಯ.  ಆ ರೀತಿಯ ತೀವ್ರ ಹರಡುವಿಕೆ ನಮ್ಮ ದೇಶದಲ್ಲಿ ಉಂಟಾದಲ್ಲಿ, ನಮ್ಮಲ್ಲಿರುವ ಸಾಧಾರಣ ಮಟ್ಟದ ವೈದ್ಯಕೀಯ ಸೌಲಭ್ಯಗಳೊಂದಿಗೆ ಕೋವಿಡ್ ಮಹಾಮಾರಿಯನ್ನು ನಿಭಾಯಿಸಲು ಸಾಧ್ಯವೇ?' ಎಂಬುದು ತಜ್ಞರುಗಳ ಕಳವಳವಾಗಿತ್ತು.  

ರೋಹಿಣಿಯ ತನಿಖಾ ದೃಷ್ಟಿ 'ಮುಂದೇನು' ಎಂಬುದನ್ನು ಹುಡುಕುತ್ತಿತ್ತು.  ಕೋವಿಡ್ ವೈರಾಣು ಬಹು ಬೇಗ ಹರಡುವಂಥದ್ದು ಎಂಬುದು ತಜ್ಞ ವೈದ್ಯರುಗಳ ಅಭಿಪ್ರಾಯವಾಗಿತ್ತು.  ಸೋಂಕಿತರ ಬಾಯಿ  ಮತ್ತು ಮೂಗಿನ ಮೂಲಕ ಒಸರುವ ಸಣ್ಣ ತುಂತುರಗಳಿಂದ ಹರಡುವ ಈ ಹೆಮ್ಮಾರಿ, ಜನ ಸಂಪರ್ಕ ಮತ್ತು ಗಾಳಿಯ ಮೂಲಕ ಹರಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.  ತೀವ್ರ ಸೋಂಕಿಗೊಳಗಾಗಿರುವ ರೋಗಿಗಳ ಸಾಗರವನ್ನೇ ಎದುರಿಸಿತ್ತಿರುವ  ಇಟಲಿಯ ವೈದ್ಯರುಗಳಿಗೆ, ಸಲಕರಣೆಗಳ ಹಾಗು ಔಷಧಿಯ ಕೊರತೆಯುಂಟಾಗಿ,  'ಚಿಕಿತ್ಸೆ ಯಾರಿಗೆ ನೀಡುವುದು, ಯಾರಿಗೆ ಬಿಡುವುದೆಂಬ' ದ್ವಂದ್ವ ಕಾಡಿತ್ತು. ೮೦ ವಯಸ್ಸು ಮೀರಿರುವ ಕೋವಿಡ್ ರೋಗಿಗಳಿಗೆ ಇಟಲಿ ವೆಂಟಿಲೇಟರ್ಗಳನ್ನು ಒದಗಿಸುತ್ತಿಲ್ಲವೆಂಬ ವರದಿಗಳು ಎಲ್ಲಡೆ ಹರಿದಾಡಿದ್ದವು.  ಆ ರೀತಿಯ ವಿಪ್ಲವ ಎದುರಾದಲ್ಲಿ, ಭಾರತ ನಿಭಾಯಿಸಬಲ್ಲುದೇ ಎಂಬ ಆತಂಕ ತಜ್ಞರುಗಳನ್ನು ಕಾಡಿತ್ತು.  

'ಪರಿಸ್ಥಿತಿ ಕೈ ಮೀರುವ ಮುನ್ನ ದೇಶಾದ್ಯಂತ ಲಾಕ್ ಡೌನ್  ಜಾರಿಗೊಳಿಸಿ' ಎಂಬುದು ಸಮಾಜ ಆರೋಗ್ಯಾಧಿಕಾರಿಗಳ ಅಭಿಮತವಾಗಿತ್ತು. ಲಾಕ್ ಡೌನ್  ಜಾರಿ ವಿಳಂಬವಾದಲ್ಲಿ ಉಂಟಾಗಬಹುದಾದ ಸೋಂಕಿತರ ಸಂಖ್ಯೆಗಳ  ಏರಿಕೆಯ ಅನುಮಾನ ಎಲ್ಲರನ್ನು ಭಯಭೀತರನ್ನಾಗಿಸಿತ್ತು.  'ನಮ್ಮಲ್ಲಿ ಲಭ್ಯವಿರುವ ಆಸ್ಪತ್ರೆ ಹಾಸಿಗೆಗಳು, ಐ.ಸಿ.ಯು.ಗಳು ಹಾಗು ವೆಂಟಿಲೇಟರ್ಗಳ  ಸಂಖ್ಯೆ ಸಾಕೆ? ರೋಗಿಗಳಿಗೆ ನಾವು ಸಮರ್ಪಕವಾಗಿ ಆಮ್ಲಜನಕವನ್ನು ಒದಗಿಸಬಲ್ಲೆವೆ? ಕೋವಿಡೇತರ ರೋಗಿಗಳನ್ನು ಕೋವಿಡ್ ರೋಗಿಗಳೊಂದಿಗೆ ಇರಿಸಲಾದೀತೆ? ಅವರುಗಳ ಚಿಕಿತ್ಸೆಯ ಗತಿಯೇನು? ನಮ್ಮಲಿ ಸಾಕಷ್ಟು ವೈದ್ಯರು, ನರ್ಸಗಳು ಮತ್ತು ವೈದ್ಯಕೀಯ ಸಹಾಯಕ ಸಿಬ್ಬಂಧಿ ಇರುವರೆ?  ನಮ್ಮ ಕೊರೋನಾ ಸೇನಾನಿಗಳಿಗೆ ನಾವು ಸಾಕಷ್ಟು ಸುರಕ್ಷಾ ಸಲಕರಣೆಗಳನ್ನೊದಗಿಸಬಲ್ಲವೆ? ತಜ್ಞ ವೈದ್ಯರುಗಳನ್ನು ನಾವು ಹೊರದೇಶದಿಂದ ಕರೆಸಿಕೊಳ್ಳಬಲ್ಲವೆ? ವೈದ್ಯಕೀಯ, ನರ್ಸಿಂಗ್ ಮುಂತಾದ ವ್ಯಾಸಂಗಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಸೇವೆಗೆ ನಾವು ಬಳಸಿಕೊಳ್ಳಬಹುದೆ?'  ತಜ್ಞರುಗಳ ಈ ಪರಿಯ ಸವಾಲುಗಳು ಸರಕಾರದ ಕಣ್ಣಿಗೆ ಕೈ ಹಾಕಿ ಪ್ರಶ್ನಿಸುವಂತಿತ್ತು.   

ಅಂದು ೨೪-೦೩-೨೦೨೦.  ಪ್ರಧಾನಿ ಮೋದಿಯವರು ಅಂದು ರಾತ್ರಿ ೮ ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡುವರೆಂಬ ಸುದ್ದಿ ಎಲ್ಲಡೆ ಹರಡಿತ್ತು.  ಕಳೆದ ಐದು ದಿನಗಳಲ್ಲಿ ಎರಡೆನ ಬಾರಿ ಪ್ರಧಾನಿಯವರು ದೇಶದ ಜನತೆಯನ್ನುದ್ದೇಶಿಸಿ ಮಾತನಾಡುವ ತುರ್ತು ಅವಶ್ಯಕತೆ ಏನಿರಬಹುದೆಂಬುದನ್ನು ಹಲವರಾಗಲೇ ಊಹಿಸಿಯಾಗಿತ್ತು.  'ಲಾಕ್ ಡೌನ್  ಅಂತೂ ಖಚಿತ.  ಆದರೆ ಎಷ್ಟು ದಿನದ್ದು?' ಎಂಬ ಕುತೂಹಲ ಮಾತ್ರ ಉಳಿದಿತ್ತು. 

ಆಗ ಸಮಯ ೮ ಗಂಟೆಯಾಗಿತ್ತು.  ರಾಜು ಮತ್ತು ಅವರ ಮಗಳು ರೋಹಿಣಿ ತಮ್ಮ ಟಿ.ವಿ.ಯನ್ನು ತದೇಕ ಚಿತ್ತದಿಂದ ನೋಡುತ್ತಿದ್ದರು.  ಅಂತೆಯೆ ದೇಶದ ೧೩೦ ಕೋಟಿ ಜನತೆ,  ಪ್ರಧಾನಿ ಏನು ಹೇಳಬಹುದೆಂಬದನ್ನು ಕಾತರದಿಂದ ಕಾಯುತ್ತಿತ್ತು.  ಧೃಢ ಸಂಕಲ್ಪದೊಂದಿಗೆ ಸಿದ್ಧರಾದಂತೆ ಕಂಡ ಪ್ರಧಾನಿ ಮೋದಿಯವರು, ಮಾರ್ಚ್ ೨೫ರಿಂದ ದೇಶದ್ಯಾಂತ ೨೧ ದಿನಗಳ ಲಾಕ್ಡೌನ್ ನಿರ್ಬಂಧವನ್ನು  ಘೋಶಿಸಿಯೇ ಬಿಟ್ಟಿದ್ದು ನೀರೀಕ್ಷೆಯಂತೆಯೇ  ಇದ್ದರೂ, ಅದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು ಸುಳ್ಳಲ್ಲ.  ೨೧ ದಿನಗಳ ಕಾಲ ಜನಗಳು ಮನೆಯಿಂದ ಹೊರಬರುವಂತಿಲ್ಲ.  ಬಸ್ಸು, ರೈಲು, ವಿಮಾನಗಳೂ  ಸೇರಿದಂತೆ ಯಾವುದೇ  ವಾಹನಗಳ  ಸಂಚಾರವಿಲ್ಲ! ಸ್ಥ೦ಭಿಭೂತರಾದಂತೆ ಕಂಡ ಜನತೆಗೆ, ನಾಯಕರುಗಳಿಗೆ ಪ್ರತಿಕ್ರಿಯಿಸಲು ಕೊಂಚ ಸಮಯ ಬೇಕಾದಂತೆ ಅನಿಸಿದಂತೆ  ಎಲ್ಲಡೆ ಕಂಡು ಬಂತು.  

ಮಾರನೆಯ ದಿನದ ದಿನಪತ್ರಿಕೆಗಳು ಲಾಕ್ ಡೌನ್  ಘೋಷಣೆಯ ವರದಿಯನ್ನು ನೀಡಿದ್ದನ್ನು ಹೊರತು ಪಡಿಸಿದಂತೆ, ಮತ್ತ್ಯಾವ ವ್ಯಾಖ್ಯಾನವನ್ನು ಮಾಡುವ ಗೋಜಿಗೆ ಹೋಗಿರಲಿಲ್ಲ.  ವಿರೋಧ ಪಕ್ಷಗಳು ಕೂಡ ಪ್ರತಿಕ್ರಿಯಿಸುವ ಮುನ್ನ ಸ್ವಲ್ಪ ಕಾಯುವ ನೀತಿಯನ್ನು ಅನುಸರಿಸಿದಂತೆ ಕಂಡುಬಂತು. ಒಂದೆರಡು ದಿನಗಳನಂತರವೇ ಟೀಕೆ-ಟಿಪ್ಪಣಿಗಳು ಬರಲಾರಂಭಿಸಿದ್ದು.  

ಹಿರಿಯ ಅನುಭವಿ ರಾಜು ತಮ್ಮ ಮಗಳೊಂದಿಗೆ ಚರ್ಚಿಸುತ್ತಾ, ಲಾಕ್ ಡೌನ್ ಜಾರಿಯ ಉಪಯೋಗಗಳ ಪಟ್ಟಿ ನೀಡಲಾರಂಭಿಸಿದ್ದರು.  'ಅನುಮಾನಂ ಪೆದ್ದ ರೋಗಂ' ಎನ್ನುವ ತೆಲುಗಿನ ಗಾದೆಯಂತೆ ಅನಿಶ್ಚಿತತೆಯೆಂಬುದೊಂದು ದೊಡ್ಡ ರೋಗ.  . ' ಲಾಕ್ ಡೌನ್ ಜಾರಿಯಿಂದ ಅನಿಶ್ಚಿತತೆಯ ಸನ್ನಿವೇಶ ಅಂತ್ಯಗೊಂಡದ್ದು ಸಂತಸದ ವಿಷಯ.  ದೇಶಾದ್ಯಂತ ಲಾಕ್ ಡೌನ್ ವಿಧಿಸುವ ದೃಢ ನಿರ್ಧಾರ ಮಾಡಲು, ಪೂರಕವಾಗಿ ನೆರವಿಗೆ ಬಂದ ಹಲವು ಅಂಶಗಳ ಪಟ್ಟಿಯನ್ನು ನೀಡುತ್ತಾ ರಾಜು ಮಾತನಾಡಿದರು. 

-ಸತತ ೨೧ ದಿನಗಳ ಕಾಲದ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸುವಲ್ಲಿ , ಪೂರ್ಣ ಬಹುಮತ ಹೊಂದಿದ್ದು ಪ್ರಧಾನಿ ಮೋದಿಯವರಿಗೆ ವರದಾನವಾಗಿ ಬಂದಿತ್ತು.  ಇಂತಹ ಕಠಿಣ ನಿರ್ಧಾರವನ್ನು ದುರ್ಬಲವಾದ ಸಮ್ಮಿಶ್ರ ಸರಕಾರವೊಂದು ತೆಗೆದುಕೊಳ್ಳಲು ಸಾಧ್ಯವಿತ್ತೆ?

-ಭಾರತವೊಂದು  ರಾಜ್ಯಗಳ ಒಕ್ಕೂಟದ ವ್ಯವಸ್ಥೆಯಾಗಿದ್ದು (Federal system), ಕೇಂದ್ರ- ರಾಜ್ಯಗಳೊಂದಿಗಿನ ಸಂಬಂಧ ಸುಮಧುರವಾಗಿದ್ದುದು ಕೂಡ ಪೂರಕ ಅಂಶವೊಂದಾಗಿತ್ತು. ಬೆರೆಳೆಣಿಕೆಯಷ್ಟು ರಾಜ್ಯಗಳೊಂದಿಗಿನ ವೈಮನಸ್ಯಗಳನ್ನು  ಈ ವಿಷಯದಲ್ಲಿ ನಿಭಾಯಿಸುವ ವಿಶ್ವಾಸ ಕೇಂದ್ರ ಸರಕಾರಕ್ಕಿತ್ತು. 

-ದೇಶ ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, ಕಳೆದ ವರ್ಷ (೨೦೧೯) ದೇಶಾದ್ಯಂತ ಉತ್ತಮ ಮಳೆ-ಬೆಳೆಗಳಾಗಿದ್ದು, ದವಸ-ಧಾನ್ಯಗಳ ದಾಸ್ತಾನು ಸಮೃದ್ಧವಾಗಿತ್ತು. ಕಚ್ಚಾ ತೈಲದ ಬೆಲೆ ಅಗ್ಗವಾಗಿದ್ದು, ವಿದೇಶಿ ವಿನಿಮಯದ ಪರಿಸ್ಥಿತಿ ಅನುಕೂಲಕರವಾಗಿತ್ತು.  

-ಪದೇ-ಪದೇ ಕಾಡುವ ರಾಜ್ಯ ಸರಕಾರಗಳ ಚುನಾವಣೆಗಳು ದೂರವಿದ್ದದ್ದೂ, ಧೃಢ ನಿರ್ಧಾರ ಕೈಗೊಳ್ಳುವಲ್ಲಿ ಪೂರಕವಾಗಿತ್ತು.  ಮುಂದಿನ ಬಿಹಾರ ರಾಜ್ಯ ಚುನಾವಣೆಗೆ  ೨೦೨೦ರ ನವೆಂಬರ್ ವರೆಗಿನ ಕಾಲಾವಕಾಶವಿತ್ತು. 

-ಕೋವಿಡ್ ವೈರಾಣುವಿನ ತೀವ್ರತೆ, ಭಾರತದಂಥ ಉಷ್ಣ ವಲಯದ ದೇಶವನ್ನು ಅಷ್ಟಾಗಿ ಕಾಡದು ಎಂಬ ವರದಿಯೂ ನಮ್ಮ ದೇಶದ ವಿಶ್ವಾಸವನ್ನು ಹೆಚ್ಚಿಸಿತ್ತು.  ಯುವಕರೇ ಹೆಚ್ಚಾದ ಭಾರತದ ಜನತೆಯಲ್ಲಿ, ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು.   

ತನ್ನಪ್ಪನ ವಾದಸರಣಿಗೆ ಮಗಳು ರೋಹಿಣಿ, ಒಂದಿಷ್ಟೂ ಸೊಪ್ಪು ಹಾಕಿದಂತೆ ಕಂಡುಬರಲಿಲ್ಲ.  'ಅಪ್ಪ ನೀವು ಗಂಭೀರವಾದ ಅಂಶಗಳನ್ನು ಮರೆಮಾಚಿಸುತ್ತಿದ್ದೀರಾ' ಎಂದ ರೋಹಿಣಿ, ತನ್ನ ಪಾಟಿ ಸವಾಲುಗಳೊಂದಿಗೆ ವಾದಕ್ಕೆ ನಿಂತಿದ್ದಳು.  

'೨೧ ದಿನಗಳ ಸುಧೀರ್ಘ ಲಾಕ್ ಡೌನ್ ವಿಧಿಸುವ ಮುನ್ನ ಪ್ರಧಾನಿಯವರು ರಾಜ್ಯ ಸರಕಾರದ ಮುಖ್ಯ ಮಂತ್ರಿಗಳ ಜೊತೆ ಏಕೆ ಚರ್ಚಿಸಲಿಲ್ಲ? ಒಕ್ಕೂಟ ವ್ಯವಸ್ಥೆಯ ಮೇಲಿನ ವಿಶ್ವಾಸದ ಉದ್ದುದ್ದ  ಭಾಷಣಗಳು ಪ್ರಧಾನಿಗಳ ಪಾಲಿಗೆ ಬಡಾಯಿ ಮಾತ್ರವಾಯಿತೆ? ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗಿನ ವೀಡಿಯೊ ಚರ್ಚೆ ಮಾತ್ರ ಸಾಕೆ? ದೇಶಾದ್ಯಂತ ಲಾಕ್ ಡೌನ್ ಹೇರುವ ಪರಮಾಧಿಕಾರ ಕೇಂದ್ರ ಸರಕಾರಕ್ಕಿದ್ದರೂ, ಆ ವ್ಯವಸ್ಥೆಯನ್ನೂ ಜಾರಿಗೊಳಿಸುವ ಜವಾಬ್ದಾರಿ ರಾಜ್ಯ ಸರಕಾರಗಳದ್ದಲವೇ? ಲಾಕ್ ಡೌನ್ ಘೋಷಣೆ ತರಾತುರಿಯಲ್ಲಾಯಿತಲ್ಲವೇ? ೨೦೧೬ರ ಅಪನಗದೀಕರಣದ ಎಡಬಿಡಂಗಿ ನಿರ್ಧಾರದಿಂದಾದ ಅನಾಹುತಗಳು ಮರೆತು ಹೋದವೆ? ಲಾಕ್ ಡೌನ್ ಘೋಷಣೆಗೆ ಮುಂಚೆಯೇ, ವಲಸೆ ಕಾರ್ಮಿಕರುಗಳಲ್ಲುಂಟಾದ ಆತಂಕಗಳು ಕೇಂದ್ರಕ್ಕೆ ಕಾಣಲಿಲ್ಲವೆ?  ಲಾಕ್ ಡೌನ್ ಪೂರ್ವದಲ್ಲೇ ಕೆಲಸಗಳನ್ನು ಕಳೆದುಕೊಂಡ, ಮುಂಬೈನಂತಹ ಮಹಾನಗರಗಳ ವಲಸೆ ಕಾರ್ಮಿಕರುಗಳು, ದೇಶದ ಪೂರ್ವ ಭಾಗದಲ್ಲಿರುವ ತಮ್ಮ-ತಮ್ಮ ಹಳ್ಳಿಗಳಗೆ ಪ್ರಯಾಣ ಬೆಳಸಲು ರೈಲುಗಳನ್ನು ಹತ್ತಲಾಗದೆ ಪರದಾಡಿದ್ದು ಸುಳ್ಳೆ? ಪ್ರಧಾನಿ ಮೋದಿಯವರಾಗಲಿ, ರಾಜ್ಯಗಳ ಮುಖ್ಯ ಮಂತ್ರಿಗಳಾಗಲಿ, ವಲಸೆ ಕಾರ್ಮಿಕರುಗಳ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಏಕೆ ಮುಂಜಾಗ್ರತೆ ವಹಿಸಲಿಲ್ಲ?' ಎಂದ ರೋಹಿಣಿ, ಉದ್ರಿಕ್ತಳಾಗಿದ್ದನ್ನು, ತಂದೆ ರಾಜುರವರು ಗಮನಿಸದಿರಲಿಲ್ಲ. 

'ಘಟನೆಗಳು ಘಟಿಸಿದನಂತರ ಜಾಣರಂತೆ ವಿಮರ್ಶಿಸುವುದು ಸುಲಭ.  ಸುಕೃತವೋ ಎಂಬಂತೆ ಕೋವಿಡ್ ಮಾರಿ, ನಮ್ಮ ದೇಶಕ್ಕೆ ತಡವಾಗಿ ಕಾಲಿಟ್ಟಿದೆ.  ಕೋವಿಡ್ ರೋಗಿಗಳ ಸಂಖ್ಯೆ ಕಮ್ಮಿ ಇದ್ದಾಗಲೇ ಲಾಕ್ ಡೌನ್ ಜಾರಿಗೊಳಿಸಿದ್ದೊಂದು ಜಾಣ್ಮೆಯ ನಡೆ' ಎಂದು ಅನುಭವಿ ಮಾತುಗಾರ ರಾಜು ತಮ್ಮ ಮಗಳಿಗೆ ಸಮಜಾಯಿಷಿ ನೀಡಿ ವಾದಕ್ಕೆ ತೆರೆ ಎಳೆದಿದ್ದರು.  

ಸಂಪೂರ್ಣ ಲಾಕ್ ಡೌನ್ ಸನ್ನಿವೇಶವನ್ನು ನಿಭಾಯಿಸುವುದು, ಪೊಲೀಸರಿಗಾಗಲಿ,                                  ಶ್ರೀಸಾಮಾನ್ಯರಿಗಾಗಲಿ ಹೊಸ ಅನುಭವವಾಗಿತ್ತು.  ಲಾಕ್ ಡೌನ್ ನಿಯಮಗಳನ್ನು ಸಾರ್ವಜನಿಕರು    ಗಾಳಿಗೆ ತೂರಿದ ಘಟನೆಗಳ ಸಂಖ್ಯೆ ಎಡಬಿಡದೆ ಸಾಗಿತ್ತು. ನಿರ್ಬಂಧ ಉಲ್ಲಂಘಿಸಿ ಸಂಚರಿಸುತ್ತಿದ್ದ    ದ್ವಿಚಕ್ರ  ಸವಾರರಿಗೆ  ಪೊಲೀಸರು ಲಾಠಿ ರುಚಿ ತೋರಿಸಿದ ವರದಿಗಳು ಮೇಲೆ-ಮೇಲೆ ಬರಲಾರಂಭಿಸಿದ್ದವು.  ಎಲ್ಲೆ ಮೀರಿ ಹೊರಬಂದ ಜನಗಳಿಗೆ ಪೊಲೀಸರು 'ಉಟ್-ಬೈಟ್'ನಂಥ ಸಣ್ಣ ಶಿಕ್ಷೆ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ ಘಟನೆಗಳ ವರದಿಯೂ ಮಾಧ್ಯಮಗಳಲ್ಲಿ ಸುಳಿದಾಡುತ್ತಿದ್ದವು. ಇವುಗಳ ನಡುವೆ ಕೆಲಸ ಕಳೆದುಕೊಂಡು, ಕೈಯಲ್ಲಿ ಕಾಸಿಲ್ಲದಂತಾದ  ವಲಸೆ ಕಾರ್ಮಿಕರ ನೋವು ನೋಡುವವರ ಕರುಳು  ಹಿಂಡುವಂತಿತ್ತು.  ಮುಂದೇನು ಎಂದು ತೋಚದೆ ದಿಕ್ಕೆಟ್ಟ ಅವರುಗಳು ತಮ್ಮ ಸಮಾನುಗಳನ್ನು ಹೊತ್ತು, ಮಡದಿ-ಮಕ್ಕಳುಗಳೊಡನೆ, ಸಾವಿರಾರು ಕಿಲೋಮೀಟರ್ ದೂರದ ತಮ್ಮ -ತಮ್ಮ ಸ್ವಂತ ಊರುಗಳಿಗೆ ನಡೆಯುತ್ತಾ ಪ್ರಯಾಣ ಬೆಳಸಿದ್ದು ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿತ್ತು. 
***

ಅಂದು ೨೦೨೦ರ ಏಪ್ರಿಲ್ ೩ರ ದಿನ.  ಪ್ರಧಾನಿಯವರು ಮತ್ತೊಮ್ಮೆ ದೇಶವನ್ನುದ್ದೇಶಿಸಿ ಭಾಷಣ ಮಾಡುವವರಿದ್ದರು.  ಎಂದಿನಂತೆ ರಾಜು ಮತ್ತು ರೋಹಿಣಿ ತಮ್ಮ ಮನೆಯ ಟಿ.ವಿ.ಯ ಮುಂದೆ ಕುಳಿತಿದ್ದರು.  ಈ ಬಾರಿ ಪ್ರಧಾನಿಯವರದ್ದು ವೀಡಿಯೊ ಸಂದೇಶ ಮಾತ್ರವಾಗಿತ್ತು.  'ಲಾಕ್ ಡೌನ್ ಪ್ರಯುಕ್ತ ನಾವೆಲ್ಲಾ ನಮ್ಮ-ನಮ್ಮ ಮನೆಗಳಲ್ಲೇ ಕಾಲ ಕಳೆಯುವಂತಾದರೂ, ನಮ್ಮ ೧೩೦ ಕೋಟಿ ಬಾಂಧವರು ನಮ್ಮೊಡನಿದ್ದಾರೆಂಬುದೇ, ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ನಾಳಿನ ಭಾನುವಾರ, ಅಂದರೆ ಏಪ್ರಿಲ್ ೫ರ ರಾತ್ರಿ ೯.೦೦ ಗಂಟೆಗೆ ತಮ-ತಮ್ಮ ಮನೆಯ ಎಲ್ಲ ದೀಪಗಳನ್ನಾರಿಸಿ, ಹೊರಗೆ ಬನ್ನಿ. ೯ ನಿಮಿಷಗಳ ಕಾಲ ದೀಪಗಳನ್ನು ಬೆಳಗಿ, ಮೊ೦ಬತ್ತಿಗಳನ್ನು ಹಚ್ಚಿ, ಟಾರ್ಚ್ಗಳನ್ನು ಬೆಳಗಿಸಿ, ಮೊಬೈಲ್ ದೀವಿಗೆಗಳನ್ನು ಬೆಳಗಿ. ಕೋವಿಡ್ ಹರಡಿರುವ ಅಂಧಕಾರದಿಂದ, ಬೆಳಕಿನ ಕಡೆಗೆ ಪಯಣಿಸುವ ಸಾಂಕೇತಿಕತೆಯನ್ನು ನಮ್ಮ ದೀಪಗಳು ಸಾರಲಿ. ಜನರುಗಳು ಒಂದು ಕಡೆ ಗುಂಪುಗೂಡುವುದಾಗಲಿ, ಮೆರವಣಿಗೆಯಲ್ಲಿ ಸಾಗುವುದಾಗಲಿ ಬೇಡ' ಎಂಬುದು ಪ್ರಧಾನಿಗಳ ಅಂದಿನ ಸಂದೇಶದ ಸಾರವಾಗಿತ್ತು.  ೨೧ ದಿನಗಳ ಸತತ ಲಾಕ್ ಡೌನ್ ನಡುವಿನ  ಈ ಬೆಳಕಿನ ಕಾರ್ಯಕ್ರಮ, ಜನತೆಯ ಉಲ್ಲಾಸಕ್ಕೊಂದು ಪ್ರೇರಣೆಯನ್ನು ನೀಡಲೆಂಬುದು ಪ್ರಧಾನಿಗಳ ಉದ್ದೇಶವೆಂಬುದು ಹಲವರ ವ್ಯಾಖ್ಯಾನವಾಗಿತ್ತು.  

ರಾಜುರವರೇನೋ ಬೆಳಕಿನ ಕಾರ್ಯಕ್ರಮದ ಬಗ್ಗೆ ಪುಳಕಿತರಾಗಿದ್ದರು. ವಿಚಾರವಾದಿಯಾಗಿದ್ದ  ಮಗಳು ರೋಹಿಣಿಯ ಟೀಕಾಸ್ತ್ರಕ್ಕೀಗ ಹೊಸದೊಂದು ಮೊನಚು ಲಭಿಸಿತ್ತು.  ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸದೆ, ಕೆಲಸವಿಲ್ಲದ ಕೈಗಳಿಗೆ ಸಹಾಯ ಹಸ್ತ ನೀಡದೆ, ಮೋದಿಜಿ ಥಳುಕಿನ ಮಾರ್ಗವನ್ನು ಹಿಡಿದಿರುವುದು ಸರಿಯೆ, ಎಂಬುದು ವಿರೋಧ ಪಕ್ಷಗಳ ಟೀಕೆಯಾಗಿತ್ತು. ಏಪ್ರಿಲ್ ೬ರಂದು, ಪ್ರಧಾನಿಗಳ ಬಿ.ಜೆ.ಪಿ. ಪಕ್ಷ ಉದಯಿಸಿದ ದಿನ.  ಒಂದು ದಿನ ಮುಂಚೆಯೇ ಆ ಸಮಾರಂಭಾಚರಣೆಗೆ ಮೋದಿಜಿ ಕರೆ ನೀಡಿದ್ದಾರೆಂಬುದು ಕೆಲವು ವಿರೋಧಿ ನಾಯಕರುಗಳ ಕುಚೋದ್ಯವಾಗಿತ್ತು. 

ದೇಶಾದ್ಯಂತ ಎಲ್ಲ ದೀಪಗಳನ್ನು ಒಮ್ಮೆಲೇ ಆರಿಸಿದರೆ, ವಿದ್ಯುತ್ ಬಳಕೆಯ ತೀವ್ರತೆ ಧಿಡೀರನೆ ಕುಸಿದು, ವಿದ್ಯುತ್ ಸರಬುರಾಜಿನ ವ್ಯತ್ಯಯ ಉಂಟಾಗಬಹುದೆಂಬುದು ಹಲವು ತಜ್ಞರುಗಳ ಆತಂಕಕ್ಕೆ ಕಾರಣವಾಗಿತ್ತು.  'ದೀಪಗಳನ್ನಾರಿಸಿ, ಆದರೆ ಫ್ಯಾನ್ಗಳು-ಫ್ರಿಡ್ಜ್ ಗಳನ್ನು ಆರಿಸಬೇಡಿ.  ಆಗ ವಿದ್ಯುತ್ತಿನ  ತೀವ್ರತೆ ಒಮ್ಮೆಲೇ ಕುಸಿಯದು, ಸರಬರಾಜಿನ ವ್ಯತ್ಯಯ ಆಗದೆಂಬುದು,' ವಿದ್ಯುತ್ ಇಲಾಖೆಯ ಅಧಿಕಾರಿಗಳ ಸಮಜಾಯಿಷಿಯಾಗಿತ್ತು.   

ದೀಪಚಾರಣೆಯ ಹಿಂದಿನ ಸಂಜೆ, ಟೀಕೆ-ಟಿಪ್ಪಣಿಗಳಿಂದ ಧೃತಿಗೆಡದ ಪ್ರಧಾನಿ ಮೋದಿಜಿ, ತಮ್ಮ ಮಾರ್ಗದರ್ಶಿ ಹಾಗು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯೀರವರು, ದೀಪ ಬೆಳಗುವುದರ ಔಚಿತ್ಯವನ್ನು ಬಿಂಬಿಸಿ ಬರೆದ ಕವನವೊಂದನ್ನು ಉಲ್ಲೇಖಿಸಿದರು.  ಆ ಕವನದ ಸಾಲುಗಳು ಹೀಗಿತ್ತು.  

ಆವೋ ಫಿರ್ಸೆ ದಿಯಾ ಜಲಾಯೆ 
(ಮೂಲ: ಹಿಂದೀ ಭಾಷೆಯಲ್ಲಿ)

ಆವೋ ಫಿರ್ಸೆ ದಿಯಾ ಜಲಾಯೆ 
ಭರಿ ದುಪೆಹೆರಿಮೆ ಅಂಧಿಯಾರ 
ಸೂರಜ್ ಪರ್ಚಾಯಿ ಸೆ ಹಾರಾ  
ಅಂತರ್ತಮ್ ಕ ನೇಹ್ ನಿಚೋಡೆ 
ಬುಜಿ  ಹುಈ  ಬಾತೀ  ಸುಲಗಯೆ 
ಆವೋ ಫಿರ್ಸೆ ದಿಯಾ ಜಲಾಯೆ 

ಹಮ್ ಪಡಾವ್ ಕೋ ಸಂಝೆ ಮಂಜಿಲ್ 
ಲಕ್ಷ್ಯ ಹುವಾ ಆಂಖೋ ಸೆ ಒಝಾಲ್ 
ವರ್ತಮಾನ ಕೆ ಮೋಹಝಾಲ್ ಮೇ 
ಆನೇ ವಾಲಾ ಕಲ್ ನ ಭುಲಾಯೆ 
ಆವೋ ಫಿರ್ಸೆ ದಿಯಾ ಜಾಲಾಯೆ 

ಆಹುತಿ ಬಾಕಿ ಯಜ್ಞ ಅಧುರಾ 
ಅಪನೋ ಕೆ ವಿಘ್ನೋ ನೇ ಘೇರಾ 
ಅಂತಿಮ್ ಜಯ್ ಕೋ ವಜ್ರ ಬನಾನೆ  
ನವ್ ದಧೀಚಿ ಹಡ್ಡಿಯ ಗಲಯೆ 
ಆವ್ ಫಿರ್ಸೆ ದಿಯಾ ಜಲಾಯ
-೦-೦-೦-

 ದೀಪ ಬೆಳಗೋಣ ಬನ್ನಿ 
(ಕನ್ನಡ ರೂಪಾಂತರ: 
ಲಕ್ಷ್ಮೀನಾರಾಯಣ ಕೆ.  )

ದಿನದ ನಡುವೆ ಕವಿದ ಕತ್ತಲ
ಸೂರ್ಯನ ಮುಸುಕಿದ ನೆರಳ ಹರಿಸಲು 
ಅಂತರತಮದ ತೈಲವನೆರೆದು  
ಆರಿದ ಬತ್ತಿಯ ಮತ್ತೆ ಹಚ್ಚಿ 
ದೀಪ ಬೆಳಗೋಣ ಬನ್ನಿ 

ನಡು ದಾರಿಯನೆ ಗುರಿಯೆಂದೆಣಿಸಿ 
ಮರೆಯಾಯಿತು ಗುರಿ ಬಹುದೂರ
ಇಂದಿನ ಸುಖದ ಮೋಹಕೆ ಸಿಲುಕದೆ  
ಸುಂದರ ನಾಳಿನ ಬದುಕನು ಬೆಳಗಿಸೆ 
ದೀಪ ಬೆಳಗೋಣ ಬನ್ನಿ 


ನಮ್ಮವರೊಡ್ಡಿದ ವಿಘ್ನವ ಸರಿಸಿ  
ಆಹುತಿ ನೀಡದೆ ಯಜ್ಞ ಮುಗಿಯದು  
ನವ ದಧೀಚಿಗಳ ಮೂಳೆಯ ಬಳಸಿ 
ಅಂತಿಮ ಜಯವ ತಪ್ಪದೆ ಗಳಿಸಲು 
ದೀಪ ಬೆಳಗೋಣ ಬನ್ನಿ 

(ಗಮನಿಸಿ:
೧) ರಾಕ್ಷರನ್ನು ಸಂಹರಿಸಲು ಬೇಕಾದ ವಜ್ರಾಯುಧವನ್ನು ಸಿದ್ಧಪಡಿಸಲು, ತಮ್ಮ ಬಲಶಾಲಿ ಬೆನ್ನು ಮೂಳೆಯನ್ನೇ ದೇವೇಂದ್ರನಿಗೆ ದಾನ ಮಾಡಿದ ಮಹಾತ್ಯಾಗಿಯೇ ಮಹರ್ಷಿ ದಧೀಚಿ .  

೨) ನವ ಯುವಕರನ್ನು ನವ ದಧೀಚಿಗಳೆಂದು ಕವಿ ಬಣ್ಣಿಸಿದ್ದಾರೆ.  ಅಂತಿಮ ಜಯಗಳಿಸಲು ನಮ್ಮ ಯುವಕರು ನೀಡಬೇಕಾದ  ಪರಿಶ್ರಮದ ಕಾಣಿಕೆಯನ್ನು, ದಧೀಚಿಗಳ ತ್ಯಾಗಕ್ಕೆ ಕವಿ ಹೋಲಿಸಿದ್ದಾರೆ. 

***

'ವಾಜಪೇಯೀಯವರನ್ನು ಟಿ.ವಿ.ಯಲ್ಲಿ ನೋಡಿದ ನೆನಪು ಅಸ್ಪಷ್ಟವಾಗಿದೆ. ಅವರು ಮಾತುಗಳನ್ನು  ಕೇಳಿದ ನೆನಪಿಲ್ಲ. ಈ ಕವನವನ್ನು ಅವರು ರಚಿಸಿದ್ದೆ? ಯಾವ ಸಂದರ್ಭದಲ್ಲಿ ರಚಿಸಿದ್ದರು?' ಎಂಬುದು ಕವನವನ್ನು ಕೇಳಿದ ರೋಹಿಣಿಯ ಪ್ರತಿಕ್ರಿಯೆಯಾಗಿತ್ತು. ಮಗಳ ಪ್ರಶ್ನೆಯಿಂದ ಉತ್ತೇಜಿತರಾದ  ರಾಜುರವರೀಗ ವಾಜಪೇಯೀರವರ ಕವಿತೆಯ ಸಂದೇಶ ಮತ್ತು ಅದರ ಪ್ರಸ್ತುತತೆಯನ್ನು  ವಿವರಿಸಲು ಸನ್ನದ್ಧರಾಗಿದ್ದರು.  'ವಾಜಪೇಯೀರವರು ನಮ್ಮ ಪ್ರಧಾನಿಯಾಗಿದ್ದರು. ಅವರೊಬ್ಬ ಉತ್ತಮ ವಾಗ್ಮಿಯೂ ಹಾಗೂ ಕವಿಯೂ ಆಗಿದ್ದರು. "ವಾಜಪೇಯೀರವರು ರಾಜಕಾರಣಕ್ಕೆ ಕಾಲಿಟ್ಟಿದ್ದರಿಂದ ನಾವೊಬ್ಬ ಶ್ರೇಷ್ಠ ಕವಿಯನ್ನು ಕಳೆದುಕೊಂಡೆವು" ಎಂಬುದು ಅವರ ಹಲವು ಸಮಕಾಲೀನರ ಕೊರಗಾಗಿತ್ತು. ಧೀರ್ಘಾವಧಿಯ ವಿರೋಧ ಪಕ್ಷದ ನಾಯಕರು ಹಾಗೂ ನಂತರ ಪ್ರಧಾನಿಗಳೂ ಆಗಿದ್ದ ವಾಜಪೇಯೀರವರು, ತಮ್ಮ ಬಿಡುವಿಲ್ಲದ ಕಾರ್ಯಭಾರಗಳ ನಡುವೆಯೂ ತಮ್ಮ ಸಾಹಿತ್ಯ ಕೃಷಿಯನ್ನು ನಿಲ್ಲಿಸಿದವರಲ್ಲ.  ಅವರ  "ದೀಪ ಬೆಳಗೋಣ ಬನ್ನಿ"  ನಮ್ಮ ದೇಶದ ಯುವ ಜನಾಂಗವನ್ನುದ್ದೇಶಿಸಿ ರಚಿಸಿದ ಕವನ.  ಈ ಕವನದಲ್ಲಿ ದೇಶದ ಯುವಕರ ಪರಿಸ್ಥಿತಿಯನ್ನು  ಮೋಡ ಮುಸುಕಿದ ಮಧ್ಯಾಹ್ನದ ಸೂರ್ಯನಿಗೆ ಹೋಲಿಸಲಾಗಿದೆ. ಆದರೆ ನಮ್ಮ ಯುವಕರು ಚೈತನ್ಯಶೀಲರು ಹಾಗೂ ಉತ್ಸಾಹಿಗಳು. ಇಂದಿನ ಅಡೆ-ತಡೆಗಳಿಂದ ಅವರುಗಳು ಧೃತಿಗೆಡಬಾರದು. ನಾಳಿನ ಸುಂದರ ಬದುಕನ್ನು ಕಟ್ಟಿಕೊಳ್ಳಲು, "ಮತ್ತೊಮ್ಮೆ ದೀಪ ಬೆಳಗುವ" ಪ್ರಕ್ರಿಯೆ ಅವರುಗಳ ಹೋರಾಟಕ್ಕೆ ನಾಂದಿಯಾಗಬೇಕು. ನಮ್ಮ ಯುವಕರ ಆ ಹೋರಾಟವನ್ನೇ ಕವಿ "ಯಜ್ಞ"ವೆಂದು ಬಣ್ಣಿಸಿದ್ದಾರೆ.  ತಪಸ್ವಿ ದಧೀಚಿಯವರಂತೆ ನಮ್ಮ ಯುವಕರು ತ್ಯಾಗಕ್ಕೆ ಸಿದ್ಧರಾಗಿ, ತಮ್ಮ ತನು-ಮನ-ಧನಗಳನ್ನು ಸಮರ್ಪಿಸಿ ಜಯಶೀಲರಾಗಬೇಕು ಎಂಬುದು ಕವಿಯ ಆಶಯ. ನಮ್ಮ ಪ್ರಧಾನಿಯವರು      ಸಂದರ್ಭೋಚಿತವಾಗಿ  ಈ  ಕವಿತೆಯನ್ನುಲ್ಲೇಖಿಸಿ, "ದೀಪ ಬೆಳಗು"ವುದರ ಮುಖಾಂತರ ಕೊರೋನಾ ವಿರುದ್ಧದ ಹೋರಾಟಕ್ಕೆ ಸಜ್ಜಾಗುವಂತೆ ಜನತೆಗೆ ಕರೆ ನೀಡಿದ್ದಾರೆ' ಎಂದು ತಮ್ಮ ವ್ಯಾಖ್ಯಾನವನ್ನು  ಮುಗಿಸಿದ ರಾಜುರವರು ಉಬ್ಬಿ ಹೋಗಿದ್ದರು.  ಕವಿತೆಯ ಸಂದೇಶಕ್ಕೆ ಮತ್ತು ಔಚಿತ್ಯಕ್ಕೆ ಮಗಳು ರೋಹಿಣಿ ತಲೆದೂಗಿದ್ದು, ತಂದೆಯಾದ ರಾಜುರವರಿಗೆ ಸಮಾಧಾನ ತಂದಿತ್ತು. 

ಅಷ್ಟು ಹೊತ್ತಿಗೆ ೦೫-೦೪-೨೦೨೦ರ ಭಾನುವಾರದ ರಾತ್ರಿ ೯ರ ಸಮಯವಾಗಿತ್ತು. ರಸ್ತೆಯ ಎಲ್ಲಾ ಜನರುಗಳು ತಮ್ಮ ತಮ್ಮ ಮನೆಗಳ ವಿದ್ಯುತ್  ದೀಪಗಳನ್ನಾರಿಸಿ ಹೊರಬಂದಿದ್ದರು. ರೋಹಿಣಿ ಕೂಡ ತನ್ನ ತಂದೆಯೊಂದಿಗೆ ತನ್ನ ಮನೆಯ ಮುಂದೆ ಬಂದು ದೀಪವನ್ನು ಬೆಳಗಿದಳು. ಕೆಲವರು ಶಂಖನಾದ ಮಾಡಿ, ಪಟಾಕಿಗಳನ್ನು ಸಿಡಿಸಿದರು.  ಜನಗಳಲ್ಲಿ ದೀಪಾವಳಿ ಹಬ್ಬವನ್ನು ಮತ್ತೊಮ್ಮೆ ಆಚರಿಸಿದ ಸಂಭ್ರಮ ಕಂಡುಬಂದಿತ್ತು.  ಅಪ್ಪಟ ಅಸ್ಸಾಮಿಯರಂತೆ 'ಮುಂದು' (ಪಂಚೆ)ವನುಟ್ಟು, 'ಗಮುಸ' (ಶಲ್ಯ)ವನ್ನು ಹೊದ್ದ ಪ್ರಧಾನಿ ಮೋದಿಯವರು ತಮ್ಮ ಮನೆಯ ಮುಂದೆ ದೀಪ ಬೆಳಗಿ ಎಲ್ಲರ ಗಮನ ಸೆಳೆದಿದ್ದರು.  ರಾಷ್ಟ್ರಾದ್ಯಂತ ಮನೆ ಮನೆಗಳಲ್ಲಿ ಜರುಗಿದ ದೀಪ ಬೆಳಗುವ ಸಮಾರಂಭ, ಕೊರೋನಾ ವಿರುದ್ಧದ ಧೀರ್ಘ ಹೋರಾಟಕ್ಕೆ ದೇಶದ ಜನತೆ ನಾಂದಿ ಹಾಡಿದಂತಿತ್ತು. 

******

        ಅಂತಿಮ ವಿದಾಯ 


 
 

ತರುಣ ವೈದ್ಯರಾದ ಡಾ. ಕಿರಣ್ ರವರಂದು ಉದ್ವಿಗ್ನರಾಗಿದ್ದರು. ಸಮಯ ಸುಮಾರು ರಾತ್ರಿ ೯ ಗಂಟೆಯಾಗಿತ್ತು. ಶವವೊಂದನ್ನು ಹೊತ್ತ ಆಂಬುಲೆನ್ಸ್ ವಾಹನವೊಂದು ನಗರದ ದಕ್ಷಿಣ ಭಾಗದಲ್ಲಿದ್ದ ಸ್ಮಶಾನದ ಕಡೆ ಸಾಗಿತ್ತು. ಶವದ ಜೊತೆಗೆ ಡಾ.ಕಿರಣ್ ರವರು ಕುಳಿತಿದ್ದರು.  ಸ್ಮಶಾನದ ಪರಿಸ್ಥಿತಿಯ ಪೂರ್ವಾಪರಗಳ ಸಮೀಕ್ಷೆಗೆಂದೇ ಮುಂಚೆಯೇ ತೆರಳಿದ್ದ ಆಸ್ಪತ್ರೆ ಸಿಬ್ಬಂದಿ ಸತೀಶರಿಂದ, ಡಾ.ಕಿರಣ್ ರವರಿಗೆ ಫೋನ್ ಕರೆಯೊಂದು ಬಂದಿತ್ತು. 'ಸ್ಮಶಾನದ ಬಳಿ ದೊಣ್ಣೆ, ಮಚ್ಚುಗಳನ್ನು ಹಿಡಿದ ನೂರಾರು  ಜನಗಳು ನೆರೆದಿದ್ದಾರೆ.  ಉದ್ರಿಕ್ತರಾದಂತೆ ಕಾಣುತ್ತಿರುವ ಅವರುಗಳು ಹೊಡಿ-ಬಡಿಯಲು ಸಿದ್ಧರಾದಂತಿದೆ. ನಾವು ತರುತ್ತಿರುವ ಶವದ ಅಂತ್ಯಕ್ರಿಯೆಯನ್ನು ಶತಾಯಗತಾಯ ತಡೆಯುವುದೇ ಅವರ ಉದ್ದೇಶದಂತಿದೆ' ಎಂಬುದಾಗಿ ತಿಳಿಸಿದ ಸತೀಶರ ದನಿಯಲ್ಲಿ ಆತಂಕವಿತ್ತು. ದೂರದಿಂದಲೇ ಸ್ಮಶಾನದ ಕಡೆ ಕಣ್ಣು ಹಾಯಿಸಿದ ಚಾಲಕ ದೇವೀಂದರ್ ರವರು ಕೂಡ ಡಾ.ಕಿರಣರವರನ್ನು ನೋಡುತ್ತಾ, ಏನೂ ಮಾಡಲು ಸಾಧ್ಯವಿಲ್ಲವೆನ್ನುವಂತೆ ತಲೆಯಾಡಿಸಿದರು. ಡಾ. ಕಿರಣ್ ರವರೀಗ ಗಾಬರಿಗೊಂಡಂತೆ ಕಂಡರು. 

ಸ್ಮಶಾನದ ಬಳಿ ನೆರೆದ ಜನರುಗಳೆಲ್ಲರೂ ಸ್ಥಳೀಯರೇ ಆಗಿದ್ದರು. ಕೋವಿಡ್ನಿಂದ ಮೃತಪಟ್ಟವರೊಬ್ಬರ ಶವವನ್ನು ಮಣ್ಣು ಮಾಡಲು ತಮ್ಮ ಸ್ಮಶಾನದ ಕಡೆ ಕರೆತರಲಾಗುತ್ತಿದೆ ಎಂಬ ಸುದ್ದಿ ಅವರುಗಳಿಗೆ ಹೇಗೋ ತಲುಪಿತ್ತು. ಕೋವಿಡ್ನಿಂದ ಸತ್ತ ವ್ಯಕ್ತಿಯ ಸಮಾಧಿಯಿಂದ ತಮ್ಮಗಳಿಗೂ ಕೋವಿಡ್ ಹರಡುವುದು ಖಚಿತವೆಂದು ನಂಬಿದ್ದ ಅವರುಗಳು, ಶವ ಸಂಸ್ಕಾರವನ್ನು ತಡೆಯಲು ಸನ್ನದ್ಧರಾಗಿದ್ದರು. ತಡ ರಾತ್ರಿಯಾದರೂ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ನೂರಾರು ಜನ ಶಸ್ತ್ರಧಾರಿಗಳು  ನೋಡು ನೋಡುತ್ತಲೇ ಜಮಾಯಿಸಿದ್ದರು. ಮಣ್ಣು ಮಾಡಲು ತರುತ್ತಿರುವ ಶವ ನಗರದ ಖ್ಯಾತ  ವೈದ್ಯೆ ಡಾ. ಸುಲೋಚನಾ ಸಿಂಗ್ ರವರದ್ದು ಎಂಬುದನ್ನೂ ಲೆಕ್ಕಿಸದ ಅವರುಗಳು ಹಿಂಸಾಚಾರಕ್ಕೆ ಕಾಲು ಕೆರೆದು ನಿಂತಿದ್ದಂತ್ತಿತ್ತು.   

ಅಪಾಯದ ಮುನ್ಸೂಚನೆಯನ್ನರಿತ ಚಾಲಕರು ತಮ್ಮ ಆಂಬುಲೆನ್ಸ್ ವಾಹನವನ್ನು ಸುಮಾರು ೪ ಕಿ.ಮೀ. ದೂರವಿರುವ ಮತ್ತೊಂದು ಸ್ಮಶಾನಕ್ಕೆ ಕರೆದೊಯ್ದಿದ್ದರು. ಬೇಗನೆ ಗುಂಡಿಯೊಂದನ್ನು ಅಲ್ಲಿ ತೋಡಲು, ನೆಲ ತೋಡುವ  ಮೇಷಿನ್ನೊಂದನ್ನು  ಕೂಡ ತರಿಸಲಾಗಿತ್ತು.  ಅದು ೧೨ ಅಡಿ ಆಳದ ಗುಂಡಿಯೊಂದನ್ನು ರಾತ್ರಿ ೧೧. ೩೦ರ ವೇಳೆಗೆ ತೆಗೆದು ಮುಗಿಸಾಗಿತ್ತು.  ನಾಲ್ಕು ವೈದ್ಯರುಗಳು, ಒಬ್ಬ ಮಹಿಳಾ ನರ್ಸ್ ಮತ್ತು ಒಂದೆರಡು ಶುದ್ಧೀಕರಣದ ಸಿಬ್ಬಂದಿಗಳನೊಳಗೊಂಡ ತಂಡವೊಂದೂ ಅಲ್ಲಿಗೆ ಬಂದು ಸಿದ್ಧವಾಗಿ ನಿಂತಿತ್ತು. ಎಲ್ಲಾ ವಿಧಿವಿಧಾನಗಳನ್ನು ಮುಗಿಸಿ, ಶವವನ್ನು ಗುಂಡಿಯೊಳಗೆ ಇಳಿಸಿಯೂ ಆಗಿತ್ತು. ಇದ್ದಕಿದ್ದಂತೆ ದೊಣ್ಣೆ, ಮಚ್ಚುಗಳನ್ನು ಹಿಡಿದ ೬೦-೭೦ ಪುಂಡರ ಗುಂಪೊಂದು ಪ್ರತ್ಯಕ್ಷವಾಗಿ, ದಿಢೀರನೆ ಎಲ್ಲರನ್ನೂ ಹೊಡಿ-ಬಡಿಯಲಾರಂಭಿಸಿತು. ಆ ಕ್ರೂರಿಗಳು ಎಸೆದ ಕಲ್ಲು, ಇಟ್ಟಿಗೆಗಳಿಂದ ಡಾ. ಕಿರಣ್ ಮತ್ತು ಅವರ ಸಹಚರರು ತೀವ್ರವಾಗಿ ಗಾಯಗೊಂಡರು.  ಆಕ್ರಮಣಕಾರಿಗಳ ಗುಂಪಿನಲ್ಲಿದ್ದ ಒಂದಿಬ್ಬರು ಕಿಡಿಗೇಡಿಗಳನ್ನು ಡಾ. ಕಿರಣ್ ಗುರುತಿಸಿ, ಹೊಡಿ-ಬಡಿಯುವುದನ್ನು ನಿಲ್ಲಿಸುವಂತೆ ವಿನಂತಿಸಿಕೊಂಡರೂ, ನಿರ್ದಯಿಗಳಾದ ಅವರು ಕರುಣೆ ತೋರದಾದರು.  ನಿಷ್ಕರುಣಿಗಳಾದ ಅವರು ಮಹಿಳಾ ನರ್ಸ್ ರವರನ್ನು ಕೂಡ ಲೆಕ್ಕಿಸದೆ ಥಳಿಸಿದರು. ನೋಡು ನೋಡುತ್ತಿದ್ದಂತೆ, ಚಾಲಕ ದೇವಿಂದರ್ ಹಾಗು ಸಹಾಯಕ ಸತೀಶ್ ರವರಗಳು ತಲೆ- ಪೆಟ್ಟಿನಿಂದ ರಕ್ತಸ್ರಾವಗೊಂಡು ನೆಲಕ್ಕುರುಳಿದರು. ಶವದ ಪೆಟ್ಟಿಗೆಯನ್ನೂ ಬಿಡದ ಅವರುಗಳು ಕಲ್ಲುಗಳಿಂದ ಅದನ್ನೂ ಚಚ್ಚಿಟ್ಟರು. ಬೇರೆ ಮಾರ್ಗ ತೋಚದೆ, ಡಾ. ಕಿರಣ್ ಮತ್ತವರ ಉಳಿದ ಸಂಗಡಿಗರು ಹೇಗೋ ಶವವನ್ನು ಮೇಲೆತ್ತಿ ಪೆಟ್ಟಿಗೆಯೊಳಗೆ ಸೇರಿಸಿ, ತಮ್ಮ ವಾಹನದೊಳಗೆ ತಳ್ಳಿದರು. ಚಾಲಕ ದೇವೀಂದರ್ ರವರು ಪ್ರಜ್ಞಾಹೀನರಾಗಿದ್ದರಿಂದ, ಡಾ. ಕಿರಣ್ ರವರೆ ವಾಹನವನ್ನು ನಡೆಸಬೇಕಾಯ್ತು. ತೀವ್ರವಾಗಿ ಗಾಯಗೊಂಡ ಸತೀಶ ಮತ್ತು ದೇವೀಂದರ್ ರವರುಗಳನ್ನು ಮೊದಲು ಹತ್ತಿರದ ಆಸ್ಪತ್ರೆಯೊಂದಕ್ಕೆ ಸೇರಿಸಲಾಯ್ತು. ವಾಹನದೊಳಗೀಗ ಡಾ. ಕಿರಣ್ ಏಕಾಂಗಿಯಾಗಿ ಬಿಟ್ಟಿದ್ದರು. 

ಶವ ಹೊತ್ತ ವಾಹನದೊಂದಿಗೆ ಡಾ. ಕಿರಣ್ ಸಮೀಪದ ಪೊಲೀಸ್ ಠಾಣೆಯೊಂದನ್ನು ಸೇರಿದರು.  ವಿವರ ತಿಳಿದ ಪೊಲೀಸ್ ಅಧಿಕಾರಿ, ಅವಶ್ಯಕ ಸಿಬ್ಬಂದಿಗಳ ತಂಡವನ್ನು ಕೂಡಲೇ ಕರೆಸಿದರು.  'ನಗರದಿಂದ ದೂರವಿರುವ ಬೇರೊಂದು ಕಡೆಗೆ ಹೋಗೋಣ'ವೆಂಬ ಪೊಲೀಸರ ಸಲಹೆಯಂತೆ ಶವದ              ವಾಹನವನ್ನೀಗ  ಡಾ. ಕಿರಣ್, ಮೂರನೇ ಸ್ಮಶಾನದ ಕಡೆಗೆ ಚಲಾಯಿಸಿದರು. ನೆಲ ತೋಡುವ  ಮೇಷಿನ್ ಕೂಡ ಶವದ ವಾಹನವನ್ನು ಹಿಂಬಾಲಿಸಿತು. ದೂರದ ಸ್ಮಶಾನ ತಲುಪಿ, ೧೨ ಅಡಿ ಆಳದ ಗುಂಡಿಯೊಂದನ್ನು ತೊಡುವ ಹೊತ್ತಿಗೆ ಸಮಯ ನಡುರಾತ್ರಿಯ ೨ ಗಂಟೆಯಾಗಿತ್ತು.  ಪೊಲೀಸರ ರಕ್ಷಣೆ ಇದ್ದರೂ, ಡಾ. ಕಿರಣ್ ಮತ್ತವರ ಸಂಗಡಿಗರು ಭಯಭೀತರಾಗಿದ್ದರು. ಪುಂಡರುಗಳ ತಂಡ ಯಾವಾಗ ಬಂದು  ಮೇಲೆರಗುತ್ತದೆಯೋ ಎಂಬ ಆತಂಕ ಎಲ್ಲರಲ್ಲೂ ಇತ್ತು. ಶವವನ್ನು ಬೇಗ ಬೇಗ ಗುಂಡಿಯಲ್ಲಿಳಿಸಿ ಮಣ್ಣು ಮುಚ್ಚುವ ಕೆಲಸವನ್ನು ಮುಗಿಸಲಾಯಿತು. ಶವ ಸಂಸ್ಕಾರ ಮುಗಿದಿದ್ದರೂ ಡಾ. ಕಿರಣ್ ಮಾತ್ರ ಮ್ಲಾನಚಿತ್ತರಾಗಿದ್ದು ಸುಳ್ಳಲ್ಲ.  

ಕೋವಿಡ್ನಿಂದ ಮೃತಪಟ್ಟ ಹಿರಿಯ ವೈದ್ಯೆ ಡಾ. ಸುಲೋಚನಾ ಸಿಂಗ್ ರವರ ಬಲಗೈ ಬಂಟನಾಗಿ ದುಡಿಯುತ್ತಿದ್ದವರು, ತರುಣ ವೈದ್ಯ ಡಾ. ಕಿರಣ್. ಅವಿವಾಹಿತೆಯಾದ ಡಾ. ಸುಲೋಚನಾರವರಿಗೆ ಡಾ. ಕಿರಣ್ ಸಾಕುಮಗನಂತಾಗಿ ಹೋಗಿದ್ದರು. ೫೭ರ ಹರೆಯದಲ್ಲೇ ಅಕಾಲಿಕ ಮರಣ ಹೊಂದಿದ  ಹಿರಿಯ ಜೀವಕ್ಕೆ ಗೌರವೋಚಿತ ಅಂತಿಮ ವಿದಾಯವನ್ನು ನೀಡಲಾಗದ ದುರ್ದೈವ ಇಂದು ಡಾ. ಕಿರಣ್ ರವರದ್ದಾಗಿತ್ತು.  ಜನಪ್ರಿಯ ವೈದ್ಯೆ ಡಾ. ಸುಲೋಚನಾರವರ ಕೋವಿಡ್ ಸಾವು ಅವರ ಸಮೀಪವರ್ತಿಗಳನ್ನೆಲ್ಲಾ ಶೋಕಸಾಗರದಲ್ಲಿ ಮುಳುಗಿಸಿತ್ತು. ಬಡ ಗ್ರಾಮೀಣ ಕುಟುಂಬವೊಂದರಲ್ಲಿ ಜನಿಸಿದ ಡಾ. ಸುಲೋಚನಾರವರನ್ನು, ಸುಮಾರು ಮೂರು ದಶಕಗಳ ಹಿಂದೆ 'ಲೂನಾ ಡಾಕ್ಟರ್' ಎಂದೇ ಹಳ್ಳಿಗರು ಕರೆಯುತ್ತಿದ್ದರು. ಆ ದಿನಗಳಲ್ಲಿ ಬಡವರ ದ್ವಿಚಕ್ರ ವಾಹನವಾಗಿದ್ದ 'ಲೂನಾ'ವೇರಿ ದುರ್ಗಮ ಹಳ್ಳಿ-ಹಳ್ಳಿಗಳನ್ನು ತಲುಪಿ, ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಸುಲೋಚನಾರವರಿಗೆ, ತಮ್ಮದೇ ಆದ 'ಕ್ಲಿನಿಕ್'ವೊಂದು ಇರಲೇ ಇಲ್ಲ.  ಸರ್ಕಾರೀ ಆಸ್ಪತ್ರೆಗಳಿಂದ ದೂರವಿರುವ ಹಳ್ಳಿಗಳನ್ನು ಗುರುತಿಸಿ, ಆ ಹಳ್ಳಿಗಳನ್ನು ದಿನ ಬಿಟ್ಟು ದಿನ ತನ್ನ ವಾಹನವೇರಿ ತಲುಪುತ್ತಿದ್ದ ಆಕೆಗೆ, ಹಳ್ಳಿಯ ಮರಗಳ ನೆರಳ ತಾಣವೇ 'ಕ್ಲಿನಿಕ್' ಆಗಿ ಹೋಗಿತ್ತು.  ಮಳೆ ದಿನಗಳಲ್ಲಿ,  ಹಳ್ಳಿಯ ದೇವಸ್ಥಾನದ ಆವರಣವೋ ಅಥವಾ ದಯಾವಂತ ಹಳ್ಳಿಗರ ಮನೆಯ ಜಗುಲಿಯೋ ಸುಲೋಚನಾರ ಚಿಕಿತ್ಸಾಸ್ಥಾನವಾಗಿ ಹೋಗುತ್ತಿತ್ತು. ರೋಗಿಗಳ ಪರೀಕ್ಷೆ ಮಾಡಲು ಬೇಕಾದ ಮಂಚ-ಕುರ್ಚಿಗಳನ್ನು ಗ್ರಾಮೀಣರೇ ಒದಗಿಸುವ ಪರಿಪಾಠವೂ ಇತ್ತು. ದಿನ ಬೆಳಗಾಗುವುದರೊಳಗೆ  ಸುತ್ತಲಿನ ನಾಲ್ಕಾರು ಹಳ್ಳಿಗಳ ರೋಗಿಗಳು ತಮ್ಮ ಎತ್ತಿನಗಾಡಿಗಳನ್ನೇರಿ ಬಂದು  ಡಾ. ಸುಲೋಚನಾರವರ ಪೂರ್ವನಿಯೋಜಿತ ಹಳ್ಳಿಯನ್ನು ತಲುಪುತ್ತಿದ್ದರು. ಆಕೆ ಬಂದ ಕೂಡಲೇ ನೆರೆದ ಹಳ್ಳಿಗರೆಲ್ಲರೂ ಎದ್ದುನಿಂತು 'ನಮಸ್ತೆ ಡಾಕ್ಟರಮ್ಮಾ' ಎಂದು ಒಕ್ಕೊರಳಿನಲ್ಲಿ ಹೇಳಿ ಗೌರವ-ಪ್ರೀತಿಗಳನ್ನು ತೋರ್ಪಡಿಸುತ್ತಿದ್ದರು. ಅಷ್ಟೇ ವಿನಮ್ರತೆಯಿಂದ ಡಾ. ಸುಲೋಚನಾರವರು ಕೂಡ ಎಲ್ಲಾ ರೋಗಿಗಳನ್ನು ತನ್ಮಯರಾಗಿ ಪರೀಕ್ಷಿಸಿ, ಬೇಕಾದ ಚಿಕಿತ್ಸೆಗಳನ್ನು ನೀಡುತ್ತಿದ್ದರು. ಹಳ್ಳಿಗರ ಕಷ್ಟಗಳನ್ನರಿತ ಸುಲೋಚನಾರವರು ರೋಗಿಗಳಿಗೆ ಬೇಕಾಗುವ ಔಷಧಗಳ 'ಕಿಟ್' ಒಂದನ್ನು ತಾವೇ ಹೊತ್ತು ತರುತ್ತಿದ್ದರು. ಎಲ್ಲರ ನೆಚ್ಚಿನ ವೈದ್ಯೆಯಾದ ಅವರು, ಯಾವ ರೋಗಿಯಿಂದಲೂ, 'ಇಷ್ಟು-ಅಷ್ಟು' ಎಂದು ಹಣವನ್ನು ಕೇಳುತ್ತಿರಲಿಲ್ಲ. ಹೆಚ್ಚಿನ ರೋಗಿಗಳು ಸ್ವಪ್ರೇರಿತರಾಗಿ ರೂ. ೨ ನೀಡುವುದು ವಾಡಿಕೆಯಾಗಿ ಹೋಗಿತ್ತು. ಇಂಜೆಕ್ಷನ್ ಚಿಕಿತ್ಸೆಯನ್ನು ಪಡೆದ ರೋಗಿಗಳು ರೂ. ೪ ನೀಡಿದ್ದೇ ಹೆಚ್ಚೆನಿಸಿತ್ತು. ಇದೆಲ್ಲಕ್ಕಿಂತ ಮಿಗಿಲಾಗಿ, 'ಮೇಡಂ "ಕೈಗುಣ"ಕ್ಕೆ ಯಾವುದೇ ರೋಗವನ್ನು ಹುಷಾರು ಮಾಡಬಲ್ಲ ಶಕ್ತಿಯಿದೆ'ಯೆಂಬುದು ಗ್ರಾಮೀಣರ ವಿಶ್ವಾಸವಾಗಿತ್ತು. 

೧೦ನೇ ತರಗತಿಯ ಪರೀಕ್ಷೆ ಎಂಬುದು  ಗ್ರಾಮೀಣ ವಿದ್ಯಾರ್ಥಿಗಳ ನಿರ್ಣಾಯಕ ಹಂತ. ಆ ಮಕ್ಕಳ  ಕಷ್ಟವನ್ನರಿತ  ಡಾ. ಸುಲೋಚನಾರವರು, ಪರೀಕ್ಷೆಗೆ  ಎರಡು ತಿಂಗುಳುಗಳ ಮುಂಚೆಯೇ  ತಾವಾಗೇ 'ಪಾಠದ ಮೇಡಂ' ಆಗುತ್ತಿದ್ದರು. ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳನ್ನು ಸ್ಥಳೀಯ ಭಾಷೆಯಲ್ಲಿ ಭೋಧಿಸುವುದರಲ್ಲಿ ಸಿದ್ಧಹಸ್ತೆಯಾದ ಮೇಡಂ ತರಗತಿಗಳು ತುಂಬಿಹೋಗಿರುತ್ತಿದ್ದವು. ಸುಲೋಚನಾರವರ ಮಾರ್ಗದರ್ಶನದಿಂದಲೇ ಪ್ರತಿವರ್ಷ ೧೦ನೇ ತರಗತಿಯ ಫಲಿತಾಂಶ ಚೆನ್ನಾಗಿ ಬರುತ್ತಿದೆ ಎಂಬುದು ಆ ಹಳ್ಳಿಗರ ಧೃಡ ನಂಬಿಕೆಯಾಗಿ ಹೋಗಿತ್ತು.  ಆ ಎಲ್ಲಾ ಹಳ್ಳಿಗರ ಪಾಲಿಗೆ ಸ್ನೇಹಿತೆಯೂ, ಮಾರ್ಗದರ್ಶಕಿಯೂ ಆಗಿಹೋಗಿದ್ದ ಡಾ. ಸುಲೋಚನಾರವರು, ರೈತರಿಗೆ ಕೃಷಿ ಸಲಹೆಗಳನ್ನೂ ನೀಡುತ್ತಿದ್ದರು. ರೈತರ ಮಗಳಾದ ಆಕೆಗೆ ಮಳೆ-ಬೆಳೆ-ಬಿತ್ತನೆ-ಗೊಬ್ಬರ ಮುಂತಾದ ವಿಷಯಗಳು ಚೆನ್ನಾಗಿಯೇ ತಿಳಿದಿತ್ತು.  

ಕಡಿಮೆ ವೆಚ್ಚದಲ್ಲಿ, ಎಲ್ಲ ರೋಗಗಳಿಗೂ ಸಮರ್ಪಕ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆಯೊಂದನ್ನು ತಮ್ಮ ನಗರದಲ್ಲಿ ಸ್ಥಾಪಿಸಬೇಕೆಂಬುದೇ ಡಾ. ಸುಲೋಚನಾ ಸಿಂಗ್ ರವರ ಅಭಿಲಾಷೆಯಾಗಿತ್ತು. ಸುಮಾರು ಎರಡು ದಶಕಗಳ ಹಿಂದೆ 'ಸೇವಾ ಆಸ್ಪತ್ರೆ'ಯ ಆರಂಭದೊಂದಿಗೆ ಅವರ ಆಶಯ ಈಡೇರಿತ್ತು. ಚಿಕಿತ್ಸೆಯನ್ನರಸಿ ಬರುವ ಬಡ ರೋಗಿಗಳಿಗೆ ಕನಿಷ್ಠ ವೆಚ್ಚದ  ವಿಶೇಷ ವ್ಯವಸ್ಥೆ 'ಮೇಡಂ ಆಸ್ಪತ್ರೆ'ಯಲ್ಲಿ  ಸದಾ ಲಭ್ಯವಿರುತ್ತಿತ್ತು. ಹೆಚ್ಚಿನ ಹಣ ನೀಡಬಲ್ಲ ಧನಿಕ ರೋಗಿಗಳಿಂದ ಹೆಚ್ಚು ಶುಲ್ಕವನ್ನು ವಸೂಲಿ ಮಾಡಿ ಆಸ್ಪತ್ರೆ  ಖರ್ಚು-ವೆಚ್ಚವನ್ನು ನಿಭಾಯಿಸುವಲ್ಲಿ ಡಾ. ಸುಲೋಚನಾರಿಗೆ ಸಾಕು-ಸಾಕಾಗಿ ಹೋಗುತ್ತಿತ್ತು. ಹಾಗಾಗಿ ಇತ್ತೀಚೆಗೆ ಹಣಕಾಸಿನ ಪೂರ್ಣ ಭಾರವನ್ನು ಅವರು ಡಾ. ಕಿರಣ್ ರವರಿಗೆ ವಹಿಸಿಬಿಟ್ಟಿದ್ದರು. ಏನೇ ಆಗಲಿ, ನೀಡಲು ಹಣವಿಲ್ಲವೆಂಬ ಕಾರಣಕ್ಕೆ, ಬಡ ರೋಗಿಗಳಿಗೆ ಮೇಡಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸುವುದಿಲ್ಲ ಎಂಬುದು ಜನಸಾಮಾನ್ಯರ ವಿಶ್ವಾಸವಾಗಿಬಿಟ್ಟಿತ್ತು. ಸಾವಿನ ಮನೆಯ ಕದ ತಟ್ಟಿಬಂದ ಎಷ್ಟೋ ರೋಗಿಗಳಿಗೆ                                 ಡಾ. ಸುಲೋಚನಾರವರ ಆಸ್ಪತೆಯಲ್ಲಿ ಮರುಜೀವ ದೊರಕಿಸಿದ ಘಟನೆಗಳು ನಗರದಲ್ಲಿ ಮನೆಮಾತಾಗಿದ್ದವು. ಹಾಗಾಗಿ ಡಾ. ಸುಲೋಚನಾ ಬಡವರ ಪಾಲಿನ 'ದೇವಿ'ಯಾಗಿ ಹೋಗಿದ್ದರು. 

ಆದರೆ ಕಳೆದ ೨೦೨೦ರ ಮಾರ್ಚ್ ತಿಂಗಳಿಂದ ಡಾ. ಸುಲೋಚನಾರವರು ಹೊಸ ಸವಾಲೊಂದನ್ನು ಎದುರಿಸುತ್ತಿದ್ದರು. ಜೀವ ಹಿಂಡುವ ಕೋವಿಡ್-೧೯ರ ಹಾವಳಿ ಅವರ ನಗರದಲ್ಲಿ ತುಸು ಹೆಚ್ಚಾಗಿಯೇ ಇತ್ತು.  ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ರೋಗಿಗಳನ್ನು ನಿಭಾಯಿಸಲಾಗದ ಸರಕಾರ, ನಗರದ    ಡಾ. ಸುಲೋಚನಾರವರ  'ಸೇವಾ ಆಸ್ಪತ್ರೆ'ಯನ್ನೂ ಕೋವಿಡ್ ಚಿಕಿತ್ಸೆಗೆಂದು ಆಯ್ಕೆ ಮಾಡಿಕೊಂಡಿತ್ತು.  ಕೋವಿಡ್ ರೋಗಕ್ಕೆ ಸಂಬಂಧಪಟ್ಟಂತಹ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು, ಸರಕಾರ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ನೀಡುವ ವ್ಯವಸ್ಥೆ ಮೇಡಂ ಆಸ್ಪತ್ರೆಯಲ್ಲಿ ಮಾಡಲಾಗಿತ್ತು.  ಕೋವಿಡೇತರ ರೋಗಿಗಳ ಸಂಖ್ಯೆ ತಗ್ಗಿದ್ದರಿಂದ ಆಗುತ್ತಿರುವ ಆದಾಯದ ಖೋತವನ್ನು ಲೆಕ್ಕಿಸದೆ ಮೇಡಂ ಬಡ ಕೋವಿಡ್ ರೋಗಿಗಳ ಉಚಿತ ಚಿಕಿತ್ಸೆಯನ್ನು ಮುಂದುವರೆಸಿದ್ದರು. ಆಸ್ಪತ್ರೆಯ ಮುಖ್ಯಸ್ಥೆಯಾದರೂ, ತಮ್ಮ ಆಸ್ಪತ್ರೆಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಡಾ. ಸುಲೋಚನಾ ಹಿಂದುಳಿದಿರಲಿಲ್ಲ. ಅವರ ಕಾರ್ಯವೈಖರಿ ಮಿಕ್ಕೆಲ್ಲಾ ಕೊರೋನಾ ಕಾರ್ಯಕರ್ತರುಗಳಿಗೆ ಮಾದರಿಯಾಗಿತ್ತು. ದುರ್ದೈವವೋ, ಏನೋ ಎಂಬಂತೆ ಕೆಲವು ವಾರಗಳನಂತರ ಡಾ. ಸುಲೋಚನಾರವರಿಗೇ, ಹೆಮ್ಮಾರಿ ಕೊರೋನಾ ವಕ್ಕರಿಸಿತ್ತು. ಕೂಡಲೇ ಚಿಕೆತ್ಸೆಗೆ ಒಳಪಟ್ಟ ಅವರನ್ನು ದಿಗ್ಬಂಧನದಲ್ಲಿರಿಸಲಾಗಿತ್ತು. ದಿನೇ ದಿನೇ ಹದಕೆಟ್ಟ ಆಕೆಗೆ ಉಸಿರಾಟದ ಸಮಸ್ಯೆ ಉಂಟಾದಾಗ, ಬೇರೆ ಮಾರ್ಗವಿಲ್ಲದೆ ಡಾ.ಕಿರಣ್, ಅವರಿಗೆ  'ವೆಂಟಿಲೇಟರ್' ಅಳವಡಿಸಬೇಕಾಯಿತು. 'ಎಂತಹ ವಿಷಮ ಪರಿಸ್ಥಿತಿಯಲ್ಲೂ ಧೈರ್ಯದಿಂದಿರಿ' ಎಂದು ತಮ್ಮ ರೋಗಿಗಳಿಗೆ ತಿಳಿಹೇಳುತ್ತಿದ್ದ ಡಾ. ಸುಲೋಚನಾ, ಸ್ವತಃ ಧೈರ್ಯದಿಂದಿರುವಂತೆ ಕಂಡರೂ, ಮಾರಕ ಕೋವಿಡ್ ಒಳಗಿನಿಂದಲೇ ಅವರನ್ನು ಸ್ವಲ್ಪ-ಸ್ವಲ್ಪವಾಗಿ ಕೊಲ್ಲುತ್ತಿತ್ತು. ಅಧೀರರಾದಂತೆ ಕಂಡ ಡಾ. ಕಿರಣ್ ರವರು ದೇವರಿಗೂ ಹರಕೆ ಹೊತ್ತಿದ್ದೂ ಆಯಿತು.  ಜೀವಾನಿಲದ ಕೊರತೆ ತೀವ್ರವಾದ ಒಂದು ದಿನ, ಮಾರಿ ಕೋವಿಡ್ ಡಾ. ಸುಲೋಚನಾರ ಜೀವವನ್ನು ಹಿಂಡಿ ಹಿಂಡೇ ಕೊಂಡೊಯ್ದಿತ್ತು.  'ಕೆಲವೊಮ್ಮೆ ದೇವರಿಗೂ ಡಾ. ಸುಲೋಚನಾರವರಂಥ ಸೇವಾತತ್ಪರರ ಅವಶ್ಯಕತೆ ಉಂಟಾಗುತ್ತೋ ಏನೋ? ಅಂಥವರುಗಳ ಜೀವವನ್ನು ಕೊಂಡೊಯ್ಯುವಲ್ಲಿ ದೈವ ಹಿಂದೆ ಮುಂದೆ ನೋಡದೇಕೆ?' ಎಂಬ ಪ್ರಶ್ನೆ ಡಾ. ಕಿರಣ್ ರವರನ್ನು ಮತ್ತೆ ಮತ್ತೆ ಕಾಡಿತ್ತು. 

ಡಾ. ಸುಲೋಚನಾರವರೊಂದಿಗಿನ ತಮ್ಮ ಅವಿನಾಭಾವ ಸಂಬಂಧದ ಅಲೆಗಳನ್ನು ಡಾ. ಕಿರಣ್ ಮೆಲಕು ಹಾಕುತ್ತಿದ್ದರು. 'ಸಾವು ಜೀವವನ್ನು ಅಂತ್ಯಗೊಳಿಸಬಹುದು, ಸಂಬಂಧಗಳನ್ನಲ್ಲ,' ಎಂಬ ಮೇಡಂ ಮಾತುಗಳು ಕಿರಣ್ ರವರ ಕಿವಿಯಲ್ಲಿ ರಿಂಗಣಿಸುತ್ತಿತ್ತು. 'ಸುಲೋಚನಾರವರಂಥ ಸಾತ್ವಿಕ ಜೀವಿಯನ್ನೂ ನಿಷ್ಕರುಣಿ ಸಾವು  ಲೆಕ್ಕಿಸದಾಯಿತೇಕೆ?' ಎಂಬ ಪ್ರಲಾಪ ಕಿರಣ್ ರದ್ದಾಗಿತ್ತು.  ಅವರದೇ ಎಂಬ ಕುಟುಂಬವಿರದ ಡಾ. ಸುಲೋಚನಾರವರ ಅಂತಿಮ ಸಂಸ್ಕಾರದ ದುಃಖಮಯ ಕಾರ್ಯ ಅಂದು ಡಾ. ಕಿರಣ್ ರವರ ಹೆಗಲಿಗೆ ಬಿದ್ದಿತ್ತು. 'ಅವರಿಂದ ಧೀರ್ಘಕಾಲಾವಧಿಯ ಉಚಿತ ಸೇವೆಯನ್ನು ಪಡೆದ ಊರಿನ ಜನಗಳು ಇಂದು ಇಷ್ಟು ಕಠೋರವಾಗೇಕೆ ವರ್ತಿಸಿದರು? ಎಲ್ಲ ಸಮುದಾಯಗಳಲ್ಲೂ ಕಾಣಬರುವ  "ಮುಗ್ಧಜೀವಿಗಳ ನಿಜರೂಪ"ವನ್ನು ಕೋವಿಡ್ ಸಂಕಟವಿಂದು ಅನಾವರಣಗೊಳಿಸಿತೆ?  ಅಥವಾ ಅಂತಹ ಮುಗ್ಧಜೀವಿಗಳನ್ನು ಪ್ರಚೋದಿಸುವ ದುಷ್ಟಕೂಟವೊಂದಿದೆಯೆ?  ಕೋವಿಡ್ ಹರಡುವ ಭಯವಿದ್ದ ಮಾತ್ರಕ್ಕೆ, ಜನಗಳ ಗೂಂಡಾವರ್ತನೆ ಸರಿಯೆ? ಕೋವಿಡ್ನಿಂದ ಮೃತಪಟ್ಟವರ ಶವವನ್ನು ಮಣ್ಣು ಮಾಡುವಾಗ ಅನುಸರಿಸುವ ಮುನ್ನೆಚ್ಚಿರಿಕೆಗಳನ್ನು ವಿವರಿಸಿದ್ದೂ, ಅವರುಗಳಿಗೆ ತಿಳಿಯದಾಯಿತೆ? ದಿನನಿತ್ಯ ಅವರುಗಳ ಸೇವೆಯಲ್ಲಿ ನಿರತರಾಗಿರುವ ವೈದ್ಯರುಗಳ ಮಾತಿಗೆ ಅವರಲ್ಲಿ ಬೆಲೆಯಿಲ್ಲದಾಯಿತೆ? ಡಾ. ಸುಲೋಚನಾರವರೇ ಏಕೆ? ಯಾವುದೇ ಸಾಧಾರಣ ವ್ಯಕ್ತಿ , ಯಾವುದೇ ಕಾರಣಕ್ಕೆ  ಮೃತಪಟ್ಟರೆ, ಅವನಿಗೊಂದು ಗೌರವಯುತ "ಅಂತಿಮ ವಿದಾಯ" ನೀಡಬೇಕೆಂಬುದನ್ನು ಜನಗಳು ಮರೆತರೆ?'  ಡಾ. ಕಿರಣರ ಪ್ರಲಾಪ ಲಹರಿ ಮುಂದುವರೆದಿತ್ತು. ತರುಣ ವೈದ್ಯರಾದ ಅವರಿಗೆ ಸಾವೆಂಬುದು ಹೊಸದೇನಾಗಿರಲಿಲ್ಲ.  ಆದರೂ ತಮ್ಮ ಅತ್ಯಂತ ಪ್ರೀತಿಪಾತ್ರವಾದ ಜೀವವೊಂದಕ್ಕೆ ಅಂತಿಮ ವಿದಾಯ ನೀಡುವ ಸಂದರ್ಭದಲ್ಲಿ, ಊರಿನ ಜನರುಗಳು ಪ್ರದರ್ಶಿಸಿದ ರಾಕ್ಷಸೀ ವರ್ತನೆ ಮಾತ್ರ ಕಿರಣರಿಗೆ ಬೇಸರ ಮೂಡಿಸಿದ್ದು ಸುಳ್ಳಲ್ಲ. 

ಕೊರೋನಾ ಸೇನಾನಿಗಳಿಗೆ ಸ್ವಾರ್ಥವೆಂಬುದಿಲ್ಲ. ಕರ್ತವ್ಯದ ಅನಿವಾರ್ಯತೆಗಳಿಗಾಗಿ ತಮ್ಮ ಜೀವವನ್ನೇ ಒತ್ತೆ ಇಟ್ಟಿರುವ ಅವರುಗಳಿಗೆ, ಸತ್ತಾಗ ನೀಡುವ '೨೧ ತುಪಾಕಿಗಳ ಸದ್ದಿ'ನ ಗೌರವದ ನಿರೀಕ್ಷೆ' ಕಿಂಚಿತ್ತೂ ಇರುವುದಿಲ್ಲ. ಅವರುಗಳು ಬಯಸುವುದು 'ಸೇವಾ ನಿರತರುಗಳಾಗಿರುವಾಗ ಬೇಕಾದ ರಕ್ಷಣೆ  ಮಾತ್ರ.' ಒಂದೊಮ್ಮೆ ಸತ್ತರಂತೂ ಇನ್ನೇನು ಉಳಿದಿರದು. ಆದರೂ 'ಸಾವಿಗೊಂದು ಘನೆತೆ ಇದೆ. ಆ ಘನೆತೆಯನ್ನು ಕಾಪಾಡಲು ಮೃತ ಆತ್ಮಕ್ಕೊಂದು ಗೌರವಯುತ ಅಂತಿಮ ವಿದಾಯವನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೆ?' ಎಂಬಾ ಯೋಚನೆಯಲ್ಲಿ ಮುಳುಗಿದ ಕಿರಣ್ ಕೂತ  ಕುರ್ಚಿಯಲ್ಲೇ  ನಿದ್ದೆಗೆ ಜಾರುವಷ್ಟರಲ್ಲೇ, ಹೊಸದೊಂದು ದಿನದ ಸೂರ್ಯೋದಯವಾಗಿತ್ತು.

******

 ಬಡವನ ಸೈಕಲ್   



ಅಂದು ೨೦೨೦ರ ಮೇ ತಿಂಗಳ ಕಡೆ ವಾರದ ಸಮಯ. ಸುಮಾರು ಎರಡು ತಿಂಗಳ ಹಿಂದೆ ದೇಶಾದ್ಯಂತ ವಿಧಿಸಿದ ಲಾಕ್ಡೌನ್ ನಿರ್ಬಂಧದಿಂದ  ಗಳಿಸಿದ ಉಪಯೋಗಗಳ ಮಾಹಿತಿಯನ್ನು, ತನ್ನ ಲ್ಯಾಪ್ಟಾಪ್ ಕೆದಕುತ್ತಾ ರೋಹಿಣಿ ಕಲೆಹಾಕುತ್ತಿದ್ದಳು. ವಿಶ್ವದಲ್ಲೇ ಅತ್ಯಂತ ಕಠಿಣ ನಿರ್ಬಂಧನೆಗಳನ್ನೊಳಗೊಂಡ  ಲಾಕ್ಡೌನನ್ನು ಭಾರತ ವಿಧಿಸಿದ್ದರೂ, ಅದರ ಕೋವಿಡ್ ಪೀಡಿತರ ಸಂಖ್ಯೆ ಈಗಾಗಲೇ  ೧.೪ ಲಕ್ಷಗಳನ್ನೂ ಮೀರಿತ್ತು.  ವಿಶ್ವದ ದೇಶಗಳ ಕೋವಿಡ್ ಪಟ್ಟಿಯಲ್ಲಿ ಟರ್ಕಿಯನಂತರದ ೧೦ನೇ ಸ್ಥಾನ ಭಾರತದ್ದಾಗಿತ್ತು. 'ತಡವಾಗಿ ಕೋವಿಡ್ ಕಬಳಿಸಿದ್ದ ಭಾರತವನ್ನು ಅದೃಷ್ಟಶಾಲಿ ಎಂದೇ ಪರಿಗಣಿಸಬಹುದಿತ್ತು.  ಕೋವಿಡ್ ರೋಗಿಗಳ ಸಂಖ್ಯೆ ಕೇವಲ ೬೦೦ ಮಾತ್ರವಿದ್ದಾಗಲೇ ಲಾಕ್ಡೌನ್ ವಿಧಿಸಿದ್ದರೂ, ಪರಿಸ್ಥಿತಿ ಹೀಗೇಕೆ ಕೈಮೀರುತ್ತಿದೆ? ಎರಡು ತಿಂಗಳ ಲಾಕ್ಡೌನ್ಗಾಗಿ ದೇಶದ ಜನತೆ ಮಾಡಿದ ತ್ಯಾಗ ವ್ಯರ್ಥವಾಯ್ತೆ? ಮಾರಕ ವೈರಾಣುವಿನ  ಹರಡುವಿಕೆಯನ್ನು ತಡೆಹಿಡಿಯುವುದರಲ್ಲಿ ನಾವು ವಿಫಲರಾದೆವೆ?' ಎಂಬುದು ರೋಹಿಣಿಯ ಆತಂಕವಾಗಿತ್ತು. 

ಅವಳ ಗೆಳಯ ಡಾ. ಕಿರಣ್  ಇ-ಅಂಚೆ ಮುಖಾಂತರ ಕಳುಹಿಸಿದ್ದ ವಿವಿಧ ದೇಶಗಳ ಕೋವಿಡ್ ಪೀಡಿತರ ಅಂಕಿಅಂಶಗಳನ್ನು ಅವಲೋಕಿಸಿದಾಗಲೇ, ರೋಹಿಣಿಗೆ ನಿಜವಾದ ಪರಿಸ್ಥಿತಿಯ ಅರಿವಾಗಿದ್ದು. ಆ ಅಂಕಿಅಂಶಗಳು ಅಂದು ಕೆಳಕಂಡಂತ್ತಿದ್ದವು. 

ವಿಶ್ವಾದ್ಯಂತದ ೫೫ ಲಕ್ಷ ಕೋವಿಡ್ ಪೀಡಿತರ ಪೈಕಿ, ೧೬.೪೪ ಲಕ್ಷ (ಸುಮಾರು ೩೦%) ಪೀಡಿತರು ಅಮೆರಿಕದಲ್ಲೇ  ಇದ್ದರು. ಆ ದಿನಗಳಲ್ಲಿ ಭಾರತದಲ್ಲಿ ಪ್ರತಿನಿತ್ಯ ೭೦೦೦ ಹೊಸ ರೋಗಿಗಳ ಪತ್ತೆಯಾಗುತ್ತಿದ್ದು, ಒಟ್ಟು ಸಂಖ್ಯೆ ೧೫ ದಿನಗಳೊಳಗೆ ದ್ವಿಗುಣಗೊಳ್ಳುತ್ತಿತ್ತು. ಭಾರತದಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ಸುಮಾರು ೬೦,೦೦೦ (೪೩%)ವಾದರೆ, ಸಾವುಗಳ ಸಂಖ್ಯೆ ಸುಮಾರ ೪೦೦೦ (೨.೮%)ವಾಗಿತ್ತು. ಭಾರತದಲ್ಲಿನ ಕೋವಿಡ್ ಪರೀಕ್ಷಾ ಅನುಪಾತ ಪ್ರತಿ ೧೦೦೦ ಜನಸಂಖ್ಯೆಗೆ ಕೇವಲ ೨ ಮಾತ್ರವಿದ್ದದ್ದು, ಪೀಡಿತರ ಹಾಗು ಸಾವುಗಳ ಸಂಖ್ಯೆ ಇನ್ನೂ ಭಾರಿ ಪ್ರಮಾಣದಲ್ಲಿವೆಯೇನೋ ಎಂಬ ಆತಂಕಕ್ಕೆ ಕಾರಣವಾಗಿತ್ತು. ರಷ್ಯಾ, ಇಟಲಿ ಹಾಗೂ  ಅಮೇರಿಕಾಗಳ  ಪರೀಕ್ಷಾ ಅಂಕಿ-ಅಂಶಗಳ ಅನುಪಾತ ಪ್ರತಿ ಸಾವಿರ ಜನಸಂಖ್ಯೆಗೆ ಕ್ರಮವಾಗಿ ೬೦, ೫೬ ಮತ್ತು ೪೨ ಆಗಿದ್ದು, ಭಾರತವೇಕೆ ಹಿಂದೆ ಬಿದ್ದಿದೆ ಎಂಬುದು ರೋಹಿಣಿಯ ಕಳವಳವಾಗಿತ್ತು. 

ರೋಹಿಣಿ ತನ್ನ ಗೆಳಯ ಡಾ. ಕಿರಣ್ ಗೆ ಉತ್ತರಿಸುತ್ತಾ, 'ಭಾರತದಲ್ಲಿ ಕೋವಿಡ್ ಪರೀಕ್ಷಾ ಪರಿಕರಗಳು ಇನ್ನೂ ದುರ್ಲಭವಾಗಿದ್ದು, ಪ್ರಯಾಣದ ಹಿನ್ನೆಲೆಯುಳ್ಳವರು ಮತ್ತವರ ನೇರ ಮತ್ತು ಪರೋಕ್ಷ ಸಂಪರ್ಕವುಳ್ಳವರುಗಳನ್ನು ಮಾತ್ರ ಪರೀಕ್ಷೆಗೊಳಪಡಿಸುತ್ತಿರುವುದು ಸೂಕ್ತ. ಜೊತೆಗೆ, ಸತತ ಸಂಪರ್ಕದಲ್ಲಿರುವ ಕಾರಣ ಸೋಂಕಿನ ಸಾಧ್ಯತೆ ಹೆಚ್ಚಾಗಿರುವುದರಿಂದ ಕೊರೋನಾ ಸೇನಾನಿಗಳ ಮೇಲೂ  ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸುತ್ತಿರುವುದು ಸರಿ' ಎಂದು ವಾದಿಸಿದ್ದಳು.

ಡಾ. ಕಿರಣನ ಉತ್ತರ ರೋಹಿಣಿಯನ್ನು ಎಚ್ಚರಿಸುವಲ್ಲಿ ಹೆಚ್ಚು ಸಮರ್ಪಕವಾಗಿತ್ತು.  'ರೋಹಿಣಿ, ಈಗಾಗಲೇ ನಮ್ಮ ದೇಶದಲ್ಲಿ ಪ್ರತಿ ೧೦೦ ಪರೀಕ್ಷೆಗಳಿಗೆ, ೫ರಷ್ಟು ಕೋವಿಡ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ನಮ್ಮ ದೇಶದ ಹೊಸ ರೋಗಿಗಳ ಪತ್ತೆಯ ದರವನ್ನು ಅತ್ಯಂತ ಹೆಚ್ಚು ಪೀಡಿತ ದೇಶಗಳಿಗೆ ಹೋಲಿಸಿದರೂ, ಕಮ್ಮಿಯೇನಲ್ಲ. ನೀನು ಅನುಮಾನಿಸಿದಂತೆ, ನಮ್ಮ ದೇಶದಲ್ಲಿ ಸೋಂಕಿನ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳ ಮೇಲೇ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ, ರೋಗಿಗಳ ಪತ್ತೆಯ ಪ್ರಮಾಣ ಹೆಚ್ಚಾಗಿದೆ. ನಾವೀಗ ಲಾಕ್ಡೌನಿನ ನಾಲ್ಕನೇ ಹಂತದಲ್ಲಿದ್ದು, ಎರಡು ತಿಂಗಳ ಹಿಂದೆ ವಿಧಿಸಿದ ಲಾಕ್ಡೌನಿನ ಮೊದಲ ಹಂತಕ್ಕೆ ಹೋಲಿಸಿದರೆ, ನಿರ್ಬಂಧಗಳನ್ನು ಸಾಕಷ್ಟು ಸಡಿಲಿಸಿರುವುದು ಸೋಂಕಿತರ ಪ್ರಮಾಣದ ತೀವ್ರ ಹೆಚ್ಚಳಕ್ಕೆ ಕಾರಣವಾಗಿರಬಹುದು. ಸೋಂಕಿನ ತೀವ್ರತೆಯ ಸರಿ ಪ್ರಮಾಣವನ್ನು ತಿಳಿಯಬೇಕಾದರೆ, ಪರೀಕ್ಷೆಯ ಸಂಖ್ಯೆಗಳನ್ನು ಹೆಚ್ಚಿಸುವುದೊಂದೇ ಉಳಿದಿರುವ ಮಾರ್ಗ. ಆದರೆ ನಮ್ಮ ದೇಶದ ಸೋಂಕಿತರಲ್ಲಿನ  "ಸಾವುಗಳ ದರ" ಕೇವಲ ೨.೮% ಮಾತ್ರವಿದ್ದು, ಇದನ್ನು ವಿಶ್ವದಲ್ಲೇ ಕನಿಷ್ಠವೆಂದು ಹೇಳಬಹದು. ವಿಶ್ವದ ಸರಾಸರಿ ಸಾವಿನ ದರ ೬.೮%ರಷ್ಟಿದ್ದು, ಹೆಚ್ಚು ಕಳವಳಕಾರಿಯಾಗಿದೆ. ಲಾಕ್ಡೌನನ್ನು ಬೇಗ ವಿಧಿಸಿದ್ದು, ಪರೀಕ್ಷೆ ಮತ್ತು ಸೋಂಕಿತರ ಚಿಕಿತ್ಸೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿರುವುದು ನಮ್ಮ ಸಾವಿನ ದರವನ್ನು ಕಮ್ಮಿಮಾಡುವುದರಲ್ಲಿ ಸಹಕಾರಿಯಾಗಿದೆ ಎನ್ನಬಹದು. ಯುವಕರೇ ಹೆಚ್ಚಿರುವ ನಮ್ಮ ದೇಶದಲ್ಲಿನ ಜನತೆಗೆ ರೋಗನಿರೋಧಕ ಶಕ್ತಿ ಹೆಚ್ಚಿರುವುದೂ, ಸಾವುಗಳ ದರವನ್ನು ನಿಯಂತ್ರಿಸುವಲ್ಲಿ ಅನುಕೂಲಕರ ಪರಿಣಾಮವನ್ನು ಉಂಟು ಮಾಡಿರಬಹುದು,' ಎಂಬ ವಿವರಣೆಗೆ ಸಂಶೋಧಕಿ ರೋಹಿಣಿ ತಲೆದೂಗಿದ್ದಳು.  

ಭಾರತದಲ್ಲಿನ ಮೊದಲ ಹಂತದ  ೨೧ ದಿನಗಳ ಲಾಕ್ಡೌನ್, ಇಡೀ ವಿಶ್ವದಲ್ಲೇ ಅತ್ಯಂತ ಕಠಿಣ ಮಾದರಿಯದಾಗಿದ್ದು, ಕೆಳಕಂಡ ನಿರ್ಬಂಧನೆಗಳಿಂದ ಕೂಡಿತ್ತು. 

-ಶಾಲೆಗಳು, ಕಾಲೇಜುಗಳು ಹಾಗು ಕಾರ್ಯಾಲಯಗಳು ಸಂಪೂರ್ಣವಾಗಿ ಮುಚ್ಚಿದ್ದವು. 

-ಅವಶ್ಯಕ ವಸ್ತುಗಳ ವ್ಯಾಪಾರವನ್ನು ಹೊರತು ಪಡಿಸಿ, ಮಿಕ್ಕೆಲ್ಲ ವ್ಯಾಪಾರಗಳನ್ನು ಸ್ಥಗಿತಗೊಳಿಸಲಾಗಿತ್ತು. 

-ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. 

-ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿತ್ತು. 

-ಎಲ್ಲ ಮಾಧ್ಯಮಗಳ ಮುಖಾಂತರ ಸಾರ್ವಜನಿಕರಿಗೆ ಸೂಕ್ತ ತಿಳುವಳಿಕೆ ನೀಡಲಾಗಿತ್ತು. 

-ಅವಶ್ಯಕವಾದ ಆರ್ಥಿಕ ಪರಿಹಾರಗಳನ್ನು ಜಾರಿಗೊಳಿಸಲಾಗಿತ್ತು. 

-ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. 

-ಕೋವಿಡ್ ಪರೀಕ್ಷಾ ವಿಧಿಗಳನ್ನು ಚುರುಕುಗೊಳಿಸಲಾಗಿತ್ತು. 

-ಕೋವಿಡ್ ರೋಗಿಗಳೊಂದಿಗಿನ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಪ್ರತ್ಯೇಕವಾಗಿರಿಸುವ  ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿತ್ತು. 

-ಕೋವಿಡ್ ಪರೀಕ್ಷೆ, ಚಿಕಿತ್ಸೆ ಹಾಗು ಲಸಿಕೆಗಳಿಗೆ ಸಂಬಂಧಪಟ್ಟ ಸಂಶೋಧನೆಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. 

-ವಲಸೆ ಕಾರ್ಮಿಕರ ಬವಣೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ ಎಂಬುದು ಸರಕಾರಗಳ ಹೇಳಿಕೆಯಾಗಿತ್ತು.  

'ನಿರ್ಬಂಧನೆಗಳ ಪಟ್ಟಿಯೇನೋ ಜೋರಾಗೆ ಇದೆ. ಆದರೆ ಅವುಗಳ ನಿರ್ವಹಣೆ ಸಮರ್ಪಕವಾಗಿದೆಯೆ?' ಎಂಬುದು ರೋಹಿಣಿಯ ಪ್ರಶ್ನೆಯಾಗಿತ್ತು.  ಗೆಳಯ ಡಾ. ಕಿರಣನ ಉತ್ತರ ತೀಕ್ಷ್ಣವಾಗೇ ಇತ್ತು.  'ನಮ್ಮ ದೇಶದ ಇತಿ-ಮಿತಿಗಳೊಳಗೆ ಪರಿಶೀಲಿಸಿದರೆ, ನಿರ್ಬಂಧಗಳ ಅನುಷ್ಠಾನ ಸಮರ್ಪಕವಾಗಿಯೇ ಇದೆ. ಆದರೆ ವಲಸೆ ಕಾರ್ಮಿಕರ ಕಷ್ಟಗಳನ್ನು ಮಾತ್ರ ಹೇಳತೀರದು. ಅವರುಗಳಿಗುಂಟಾಗಬಹುದಾದ ಬವಣೆಗಳ ಬಗ್ಗೆ ಸರಕಾರಗಳು ಮುಂಜಾಗರೂಕತೆ ವಹಿಸದೆ ಕಣ್ಣುಮುಚ್ಚಿ ಕುಳಿತದ್ದು ಮಾತ್ರ ವಿಪರ್ಯಾಸವೇ ಸರಿ. ಅವರುಗಳ ಸಮಸ್ಯೆಗಳು ಬುಗಿಲೆದ್ದ ಮೇಲೂ ಪರಿಹಾರಕ್ಕೆಂದು ಕೈಕೊಂಡ ಕ್ರಮಗಳು ಏನೇನೂ ಸಾಲದು. 

ವರ್ಷಾರಂಭದ ಜನವರಿಯಿಂದ, ಮಾರ್ಚ್ ೨೫ರಂದು  ಲಾಕ್ಡೌನ್ ವಿಧಿಸುವವರೆಗೂ ಸುಮಾರು ೧೫ ಲಕ್ಷಗಳಿಗೂ ಹೆಚ್ಚು ಪ್ರಯಾಣಿಕರು ವಿದೇಶಗಳಿಂದ ಭಾರತಕ್ಕೆ ಬಂದಿದ್ದಾರೆ. ಅವರ್ಯಾರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದೆ ಇದ್ದದೂ ಬೇಜಾಬ್ದಾರಿಯ ಪರಮಾವಧಿಯೇ ಸರಿ. 

ವಿಶ್ವ ಖ್ಯಾತಿಯ ಗಾಯಕ-ನರ್ತಕ ಮೈಕೆಲ್ ಕಿಶೋರ್ ಮಿಶ್ರನ ವಿಷಯದಲ್ಲಿ ಏನಾಯ್ತು ಎಂಬುದು ನಿನಗೆ ಗೊತ್ತಿರಬಹುದು! ಪಾಪ್ ಜಗತ್ತಿನ ಮಹಾನ್ ತಾರೆ ಮೈಕೆಲ್ ಜ್ಯಾಕ್ಸನನ ಮರು ಅವತಾರವೆಂದೇ ಕಿಶೋರ್ ಮಿಶ್ರನನ್ನು ಅವನ ಅಭಿಮಾನಿಗಳು ಭಾವಿಸಿದ್ದಾರೆ. ಹಾಗಾಗೇ ಅವನಿಗೆ ಅವರುಗಳು  'ಮೈಕೆಲ್' ಎಂಬ ಬಿರುದನ್ನೂ ನೀಡಿದ್ದಾರೆ. ಕೀರ್ತಿಶೇಷ ಮಹಾನ್ ಕಥಕ್ ನರ್ತಕರಾದ ವಿಶ್ವನಾಥ್ ಮಿಶ್ರಾಜಿರವರ ಮೊಮ್ಮಗನಾದ ಮೈಕೆಲ್, ಪಾಪ್ ನೃತ್ಯಗಳ ಶೈಲಿಯೊಂದಿಗೆ ಕಥಕ್ನ ಭಾವ-ಭಂಗಿಗಳನ್ನೂ ಸಮ್ಮಿಳನಗೊಳಿಸಿ ಸಿದ್ಧಪಡಿಸಿರುವ ಹೊಸ ನೃತ್ಯದ ಆವಿಷ್ಕಾರಕ್ಕೆ, ಇಡೀ ಉಪಖಂಡದ ಅಭಿಮಾನಿಗಳೇ ಹುಚ್ಚೆದ್ದಿರುವುದು ನಿನಗೂ ತಿಳಿದಿರಬಹುದು.  

ಯೂರೋಪ್ನ ಖ್ಯಾತ ನಗರವೊಂದರಲ್ಲಿ ತನ್ನ ತಂದೆ-ತಾಯಿಯರೊಂದಿಗೆ ಕೆಲವು ವಾರಗಳನ್ನು ೨೦೨೦ರ ಫೆಬ್ರವರಿ ತಿಂಗಳಲ್ಲಿ ಕಳೆದ ಮೈಕೆಲ್, ಅದೇ ನಗರದಲ್ಲಿ ಒಂದೆರಡು ಕಾರ್ಯಕ್ರಮಗಳನ್ನೂ ನೀಡಿದ್ದನು. ಆ ಕಾರ್ಯಕ್ರಮಗಳಲ್ಲಿ ಕಿಕ್ಕಿರಿದ ಪ್ರೇಕ್ಷೆಕರಲ್ಲಿ ಭಾರತೀಯ ಮೂಲದವರೇ ಹೆಚ್ಚಾಗಿದ್ದರು. 

೨೦೨೦ರ ಮಾರ್ಚ್ ೨೦ರ ಮೊದಲ ವಾರದಲ್ಲಿ ಮೈಕೆಲ್ ಯೂರೋಪಿನಿಂದ ಭಾರತಕ್ಕೆ ಪ್ರಯಾಣಿಸಿದ್ದನು. ವಿಶ್ವ ವಿಖ್ಯಾತನಾದ ಮೈಕೆಲನಿಗೆ ಭಾರತದ ವಿಮಾನ ನಿಲ್ದಾಣದಲ್ಲಿ ಯಾವುದೇ ತಡೆಯೊಡ್ಡದೆ ಒಳ ಬರಲು ಅನುಮತಿ ನೀಡಿದ್ದರೂ, ಆರೋಗ್ಯಾಧಿಕಾರಿಗಳು ಅವನಿಗೆ ಎರಡು ವಾರಗಳ ಸ್ವಯಂ-ನಿರ್ಬಂಧನೆಯೊಳಗಿರುವಂತೆ ಸೂಚಿಸಿದ್ದರು. ಎಲ್ಲರೊಡನೆ ಬೆರೆಯುವ ಮುನ್ನ ಕೋವಿಡ್ ಪರೀಕ್ಷೆಗೊಳಪಡುವಂತೆಯೂ ಸೂಚಿಸಲಾಗಿತ್ತು. ಸೂಚಿಸಿದ ಯಾವುದೇ ಮುಂಜಾಗರೂಕತೆಗಳಿಗೂ 'ಕ್ಯಾರೆ' ಎನ್ನದ ಮೈಕೆಲ್ ಎಗ್ಗಿಲ್ಲದೆ ಪ್ರಯಾಣಿಸಿದ್ದು ಮಾತ್ರ ವಿಷಾದಕರವೇ ಸರಿ. ಭಾರತಾದ್ಯಂತದ  ವಿವಿಧ ನಗರಗಳಲ್ಲಿ ಮೈಕೇಲನ ಬಹು ಪ್ರಚಾರಿತ ಕಾರ್ಯಕ್ರಮಗಳಿಗಾಗಲೇ ದಿನಾಂಕಗಳ ನಿಗದಿಯಾಗಿತ್ತು. ಮೈಕೇಲನ ಮೊದಲ ವಿಮಾನ ಪ್ರಯಾಣ, ಸುಮಾರು ೧೫೦೦ ಕಿ.ಮೀ. ದೂರವಿರುವ ಅವನ ಸ್ವಂತದೂರಿಗಾಗಿತ್ತು. ಅವನೂರಿನ ಭಾನುವಾರದ ಕಾರ್ಯಕ್ರಮದಲ್ಲಿ ಪ್ರಖ್ಯಾತ ರಾಜಕಾರಣಿಗಳನ್ನೂ ಒಳಗೊಂಡಂತೆ ಸುಮಾರು ೧೦೦೦ಕ್ಕೂ ಹೆಚ್ಚು ಗಣ್ಯಾತಿಗಣ್ಯರು ಸೇರಿದ್ದರು. ಭಾರತದ ಪ್ರಖ್ಯಾತ ಕೈಗಾರಿಕೋದ್ಯಮಿ, ಬದ್ರಿಪ್ರಸಾದರು ತಮ್ಮ ಮಗಳಾದ ಕಾಮಿನಿಯೊಂದಿಗೆ ಆಗಮಿಸಿದ್ದರು. ಹಾರ್ವರ್ಡ್ ಎಂಬಿಎ ಪದವೀಧರೆಯಾಗಿದ್ದ ನವ ತರುಣಿ ಕಾಮಿನಿ ವಿಶ್ವಾದ್ಯಂತ ಹಲವಾರು ಪ್ರತಿಷ್ಠಿತ ಉದ್ದಿಮೆಗಳನ್ನು ಖರೀದಿಸಿ ಪ್ರಖ್ಯಾತೆಯಾಗಿದ್ದಳು. ಮೈಕೇಲನನ್ನು ಹೊರತು ಪಡಿಸಿ, ಸಮಾರಂಭದ ಮುಖ್ಯಾಕರ್ಷಣೆ ಸುಂದರ ಯುವತಿ ಕಾಮಿನಿಯಾಗಿದ್ದಳು ಎಂಬುದು ಸುಳ್ಳಾಗಿತ್ತಿಲ್ಲ. 

ಸಮಾರಂಭದಲ್ಲಿ ನೆರೆದ ಪ್ರತಿಯೊಬ್ಬರೂ ಮೋಹಕ ತರುಣ ಮೈಕೇಲನ ಕೈಕುಲುಕಿ, ಸೆಲ್ಫಿಯೊಂದನ್ನು ಪಡೆಯಲು ಹಾತೊರೆಯುತ್ತಿದ್ದರು. ಬಹು ವರ್ಷಗಳನಂತರ ತನ್ನೂರಿನಲ್ಲಿ ಕಾರ್ಯಕ್ರಮ ನಡೆಸಿಕೊಡುವ ಉತ್ಸಾಹದಿಂದ ಉತ್ತೇಜಿನಾದಂತೆ ಕಂಡ ಮೈಕೆಲ್,  "ಸ್ವಯಂ ನಿರ್ಬಂಧ"ದ ಎಗ್ಗಿಲ್ಲದೆ ಎಲ್ಲರೊಡನೆ ಬೆರೆಯುತ್ತಿದ್ದದ್ದು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತ್ತು. ಸುಮಾರು ಎರಡು ಘಂಟೆಗಳ ಕಾಲ ನಡೆದ ಅಭೂತಪೂರ್ವ ನೃತ್ಯ ಕಾರ್ಯಕ್ರಮವನ್ನು ನೋಡಿ ನೆರೆದವರೆಲ್ಲರೂ ಮೂಕವಿಸ್ಮಿತರಾಗಿದ್ದರು. 

ನೃತ್ಯದ ಕಾರ್ಯಕ್ರಮ ಮುಗಿದನಂತರ, ನೆರಳು ಬೆಳಕಿನ ಪಂಚತಾರಾ ಭೋಜನ ಕೂಟದ ಸಮಯ. ವಿಶ್ವಮಾನ್ಯ ದುಬಾರಿ ಮದ್ಯಗಳ ವಿತರಣೆಯೊಂದಿಗೆ ಆರಂಭವಾದ ಕೂಟದ ರಂಗೇರಿತ್ತು. ಅಭಿಮಾನಿಗಳ ಉತ್ಸಾಹಕ್ಕೆ ಪುಳಕಿತನಾದ ಮೈಕೆಲ್ ಗಣ್ಯಾತಿಗಣ್ಯರುಗಳು ಆಸೀನರಾದ ಪ್ರತಿ ಮೇಜುಗಳ ಬಳಿಯೂ ತೆರಳಿ ಉಭಯ ಕುಶಲೋಪರಿ ನಡೆಸುತ್ತಿದ್ದನು. ಬದ್ರಿಪ್ರಸಾದರ ಕಣ್ಸನ್ನೆಯ ಅಯಸ್ಕಾಂತಕ್ಕೆ  ಸೂಜಿಯಂತೆ  ಆಕರ್ಷಿತನಾದ ಮೈಕೆಲ್, ತಂದೆ ಮಗಳ ನಡುವಿನ ಆಸನವನ್ನು ಕ್ಷಣಾರ್ಧದಲ್ಲಿ ಆಕ್ರಮಿಸಿ ಕುಳಿತು ಸಂಭ್ರಮಿಸಿದ್ದನು. ಆಗ ಸಭಿಕರೆಲ್ಲರೂ ತಮ್ಮ ಕಣ್ಣುಗಳನ್ನು ಮೈಕೆಲ್-ಕಾಮಿನಿಯರ ಮೇಲೇ ಹಾಯಿಸಿದ್ದು ಗುಟ್ಟಾಗಿ ಉಳಿದಿರಲಿಲ್ಲ. ಮೈಕೆಲ್-ಕಾಮಿನಿಯರು ಪರಸ್ಪರ ಕೈ-ಕೈ ಮಿಲಾಯಿಸಿ, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಕ್ಷಣಗಳಲ್ಲಿ, ತಂದೆ ಬದ್ರಿಪ್ರಸಾದರು ಮೂಕ ಪ್ರೇಕ್ಷಕರು ಮಾತ್ರವಾಗಿದ್ದರು. ನಾಳಿನ ಮಾಧ್ಯಮಗಳ ಮುಖಪುಟದ ಸಿಂಗಾರಕ್ಕೋ ಎಂಬಂತೆ, ಸುತ್ತಲಿದ್ದ ಛಾಯಾಗ್ರಾಹಕರೆಲ್ಲರೂ ಮೈಕೆಲ್-ಕಾಮಿನಿಯರ ಜೋಡಿಯ ಆಪ್ತತೆಯ ಕ್ಷಣಗಳನ್ನು ಕ್ಲಿಕ್ಕಿಸಿದ್ದಕ್ಕೆ  ಲೆಕ್ಕವಿತ್ತಿಲ್ಲ.  ಇಂತಹ ಆಪ್ತತೆಯ ಕ್ಷಣಗಳ ನಡುವೆ ಗಣ್ಯಾತಿಗಣ್ಯರುಗಳ ನಡುವೆ ಮೈಕೆಲ್-ಕಾಮಿನಿಯರ ಜೋಡಿ ಕುರಿತ ಗುಸುಗುಸುಗಳು ಹರಿದಾಡ ತೊಡಗಿದ್ದವು. ಭೋಜನ ಕೂಟ ಮುಗಿಯುವ ಹೊತ್ತಿಗೆ ನಡುರಾತ್ರಿಯಾಗಿ ಹೋಗಿತ್ತು. 

ಮರು ದಿನವೂ ಮೈಕೆಲನ ಓಡಾಟ ಭರದಿಂದ ಸಾಗಿತ್ತು. ನಗರದ ಗಣ್ಯ ಉದ್ದಿಮೆದಾರರು, ಚಿತ್ರೋದ್ಯಮದ ಗಣ್ಯರು ಮತ್ತು ರಾಜಕಾರಣಿಗಳ ಜೊತೆಗಿನ ಭೇಟಿಯ ಸರಣಿ ಮುಂದುವರೆದಿತ್ತು. ಐದು ಹಿರಿಯ ಮಂತ್ರಿಗಳೊಂದಿಗಿನ ಪೂರ್ವ ನಿರ್ಧಾರಿತ ಭೇಟಿಗಳನ್ನು ಕೂಡ ಮೈಕೆಲ್ ಮರೆಯಲಿಲ್ಲ. ಮೈಕೆಲ್ ಹೋದಲೆಲ್ಲಾ ನೆರಳಿನಂತೆ  ಹಿಂಬಾಲಿಸಿದವರು ಬದ್ರಿಪ್ರಸಾದ್ ಮತ್ತವರ ಮುದ್ದು ಮಗಳು ಕಾಮಿನಿ.  

ಅಂದಿನ ಮಂಗಳವಾರದಂದೇ  ಬದ್ರಿಪ್ರಸಾದ್ರವರು ತಮ್ಮ ಕಂಪನಿಯ ಬೋರ್ಡ್ ಸದಸ್ಯರ ಸಭೆಯನ್ನು ಏರ್ಪಡಿಸಿದ್ದು ವಿಶೇಷವಾಗಿತ್ತು. ಸಭೆಯನಂತರದ ರಾತ್ರಿ ಭೋಜನ ಕೂಟಕ್ಕೆ ವಿಶೇಷ ಅತಿಥಿಯಾಗಿದ್ದವನು ಮೈಕೇಲನೇ ಎಂದು ಬೇರೆ ಹೇಳಬೇಕಿತ್ತಿಲ್ಲ. ಕಾಮಿನಿ-ಮೈಕೆಲ್ರವರ ವಿವಾಹದ ಬಗ್ಗೆ ಬೋರ್ಡ್ ಸದಸ್ಯ ಮಿತ್ರರ ಪ್ರಶ್ನೆಗೆ, ಬದ್ರಿಪ್ರಸಾದರ ಕಣ್ಣಲ್ಲಿ ಹಾಯ್ದ ಕಿರುಮಿಂಚೊನ್ದೆ ಉತ್ತರವಾಗಿತ್ತು. 

ಬೋರ್ಡ್ ಮೀಟಿಂಗ್ ನಂತರದ  ದಿನ, ಮೈಕೆಲನ ಕಾರ್ಯಕ್ರಮ, ದೇಶದ ಖ್ಯಾತ ಚಲನಚಿತ್ರ ನಿರ್ಮಾಪಕರೊಬ್ಬರು ಏರ್ಪಡಿಸಿದ್ದ ಭೋಜನ ಕೂಟವೊಂದಾಗಿತ್ತು.  ದೇಶದ ಚಿತ್ರೋದ್ಯಮದ ಪ್ರಮುಖರು, ಉದ್ಯೋಗಪತಿಗಳು, ಶಾಸಕರು ಹಾಗು ಸಂಸದರುಗಳು ಈ ಕೂಟದ ಆಹ್ವಾನಿತರುಗಳಾಗಿದ್ದರು. ಈ ಭೋಜನ ಕೂಟವನ್ನೇರ್ಪಡಿಸಿದ್ದ ನಿರ್ಮಾಪಕರು ಮೈಕೇಲನನ್ನು ನಾಯಕ ನಟನನ್ನಾಗಿಸಿ ತಯಾರಿಸಲು ಯೋಜಿಸಿರುವ ಭಾರಿ ವೆಚ್ಚದ ಚಲನ ಚಿತ್ರದ ಬಗೆಗಿನ ವದಂತಿಗಳ ಗುಸುಗುಸು ಜೋರಾಗಿತ್ತು. ಮೈಕೆಲ್, ಆಗಮಿಸಿದ ಗಣ್ಯರೆಲ್ಲರ ಕೈ ಕುಲುಕಿ ಅವರುಗಳನ್ನು ತಬ್ಬಿದ್ದು ಎಲ್ಲರಿಗೂ ಸಂತಸ ತಂದಿತ್ತು. 

ನಂತರದ ಶುಕ್ರವಾರ ಮಾತ್ರ ವಿಪತ್ತಿನ ದಿನವಾಗಿತ್ತು. ವೈದ್ಯರು ನೀಡಿದ ಹಲವು ದಿನಗಳ ಹಿಂದಿನ ಸಲಹೆಯಂತೆ ಮೈಕೆಲ್ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಅವನಿಗೂ ಹಾಗು ಅವನ ವೈದ್ಯರುಗಳಿಗೂ ಅಚ್ಚರಿಯ ಫಲಿತಾಂಶವನ್ನು ತಂದಿತ್ತು. ಮೈಕೆಲ್ ಕೋವಿಡ್ ಸೋಂಕಿತನೆಂಬ ಫಲಿತಾಂಶ ಹೊರಬಿದ್ದು, ಆ ಸುದ್ದಿ ಕಾಳ್ಗಿಚ್ಚಿನಂತೆ ಹರಡ ತೊಡಗಿತ್ತು. ಕಳೆದ ಒಂದು ವಾರದ ಕಾರ್ಯಕ್ರಮಗಳಲ್ಲಿ ಅವನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಲ್ಲ ಗಣ್ಯರ ಹಾಗು ಜನಸಾಮಾನ್ಯರ ಎದೆಯಲ್ಲಿ ನಡುಕವುಂಟಾಗಿತ್ತು. ಮೈಕೆಲ್ ಓಡಾಡಿದ ನಗರಗಳ ನಡುವೆಲ್ಲಾ ಆತಂಕದ ಕರೆಗಳ ಸರಣಿಯೇ ಹರಿದಾಡಿತ್ತು. 

ಬದ್ರಿಪ್ರಸಾದ್ ಮತ್ತು ಕಾಮಿನಿಯವರುಗಳನ್ನೋಳಗೊಂಡಂತೆ, ಮೈಕೆಲ್ ಸಂಪರ್ಕದಲ್ಲಿದ್ದವರೆಲ್ಲರೂ ಕೂಡಲೇ ಕೋವಿಡ್ ಪರೀಕ್ಷೆಗೊಳಪಟ್ಟಿದ್ದೂ ಆಯ್ತು ಮತ್ತು ವೈದ್ಯರ ಸಲಹೆಯಂತೆ ಎರಡು ವಾರಗಳ ನಿರ್ಬಂಧನೆಗೆ ಒಳಪಟ್ಟಿದ್ದೂ ಆಯ್ತು. ಪರೀಕ್ಷೆಗೊಳಪಟ್ಟ ಮತ್ತು ಸ್ವಯಂ ನಿರ್ಬಂಧನೆಗೊಳಗಾದ ವಿಷಯವನ್ನು ಬದ್ರಿಪ್ರಸಾದ್ ಹಾಗು ಕಾಮಿನಿಯವರೇ ಎಲ್ಲರಿಗು ಟ್ವಿಟ್ಟರ್ ಮೂಲಕ ತಿಳಿಯಪಡಿಸಿ, ಮೈಕೇಲನ ಕೋವಿಡ್ ಸೋಂಕಿನ ಬಗ್ಗೆ ತಮಗ್ಯಾವ ಮುನ್ಸೂಚನೆಯಾಗಲಿ, ಅನುಮಾನಗಳಾಗಲಿ ಇರಲಿಲ್ಲವೆಂಬುದನ್ನು ಸ್ಪಷ್ಟಪಡಿಸಿ, ತಮ್ಮಗಳ ಸಂಪರ್ಕದಲ್ಲಿದ್ದವರೆಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಕೂಡ ಮಾಡಿಕೊಂಡದ್ದೂ ಆಯ್ತು. 

ಮರುದಿನವೇ ಮೈಕೆಲ್ ಕೋವಿಡ್ ಸೋಂಕಿತನಾಗಿರುವ ವಿಷಯ ಎಲ್ಲಾ ಮಾಧ್ಯಮಗಳಲ್ಲೂ ಭಾರಿ ಸಂಚಲನವನ್ನುಂಟುಮಾಡಿತ್ತು. ಎರಡು ವಾರಗಳ ಸ್ವಯಂ-ನಿರ್ಬಂಧನೆಯಲ್ಲಿರುವಂತೆಯೂ ಮತ್ತು   ಸಾರ್ವಜನಿಕರುಗಳ ನಡುವೆ ಬೆರೆಯುವ ಮುನ್ನ ಕೋವಿಡ್ ಸೋಂಕಿನಿಂದ ಮುಕ್ತನೆಂಬುದನ್ನು ಖಾತರಿ ಪಡಿಸಿಕೊಳ್ಳಬೇಕೆಂಬ ವೈದ್ಯರ ಸೂಚನೆಗಳನ್ನು ಗಾಳಿಗೆ ತೂರಿ, ಎಲ್ಲರೊಡನೆ ಬೆರೆತು, ಅವರೆಲ್ಲರಿಗೂ ಕೋವಿಡ್ನ ಆತಂಕವುಂಟುಮಾಡಿದ ಮೈಕೆಲನ ಬೇಜಾಬ್ದಾರಿ ವರ್ತನೆಗೆ, ಎಲ್ಲಾ ಮಾಧ್ಯಮಗಳಲ್ಲೂ  ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸಂಬಂಧಪಟ್ಟ ರಾಜ್ಯ ಸರಕಾರವು ಸುಮಾರು ೪೦೦ ಪೊಲೀಸ್ ಕರ್ಮಚಾರಿಗಳನ್ನೊಳಗೊಂಡ ೨೦ ತಂಡಗಳನ್ನು ರಚಿಸಿ, ಮೈಕೆಲನೊಡನೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಪರ್ಕದಲ್ಲಿದ್ದರ ಪತ್ತೆಗೆ ಮುಂದಾಗಿತ್ತು. ಆ ರೀತಿಯ ಸುಮಾರು ೨೦೦೦ದಷ್ಟು ಸಂಪರ್ಕಿತರನ್ನು ಪತ್ತೆ ಹಚ್ಚಿ, ಅವರೆಲ್ಲರನ್ನು ಎರಡು ವಾರಗಳ ನಿರ್ಬಂಧನೆಗೊಳಪಡುವಂತೆ  ಸೂಚಿಸುವ ತ್ರಾಸದಾಯಕ ಕಾರ್ಯವನ್ನು ಮಾಡುವಲ್ಲಿ ಪೊಲೀಸರು ಹೈರಾಣಾಗಿ ಹೋಗಿದ್ದರು.' ಹೀಗೆ  ಡಾ. ಕಿರಣ್ ವಿವರಿಸಿದ  ಮೈಕೇಲನ ವೃತ್ತಾಂತವನ್ನು ರೋಹಿಣಿ ತದೇಕಚಿತ್ತಳಾಗಿ ಕೇಳಿದಳು. 

ಮೈಕೆಲನ ಬೇಜವಾಬ್ದಾರಿಯ ವೃತ್ತಾಂತವನ್ನು ಕೇಳಿ ರೋಹಿಣಿಗೆ ರೋಸಿಹೋಗಿತ್ತು. ಕೋವಿಡ್ನಂತಹ ಸಂಕಟದ ದಿನಗಳಲ್ಲೂ, ಮೈಕೇಲನಂಥ ವಿದ್ಯಾವಂತರು, ವಿಶ್ವಖ್ಯಾತಿ ಗಳಿಸಿದವರು, ವೈದ್ಯರ ಮುನ್ನೆಚ್ಚೆರಿಕೆಯನ್ನು ಧಿಕ್ಕರಿಸುತ್ತಾರೇಕೆ?  ಪ್ರಖ್ಯಾತರ ಸುತ್ತುವರೆಯಲು ಜನಸಾಮಾನ್ಯರಲ್ಲಿ ಅಷ್ಟೊಂದು ತುಡಿತವೇಕೆ? ಕೋವಿಡ್ ದಿನಗಳ ಅಪಾಯದ ಅರಿವು ಜನರಿಗಿಲ್ಲವೆ? ವಿದೇಶ  ಪ್ರಯಾಣ ಮಾಡಿರುವ ವ್ಯಕ್ತಿಗಳು ಕೋವಿಡ್ ವೈರಾಣುವನ್ನು ಹರಡುವ ಸಾಧ್ಯತೆಯಿದೆ ಎಂಬುದು  ಶ್ರೀಸಾಮಾನ್ಯರಿಗೆ ತಿಳಿದಿಲ್ಲವೆ? ಮೈಕೆಲನಂತಹ ಗಣ್ಯಾತಿಗಣ್ಯರ ವರ್ತನೆಯೇ ಈ ರೀತಿಯ ಬೇಜಾಬ್ದಾರಿಯಿಂದ ಕೂಡಿರುವುದಾದರೆ, ಜನಸಾಮಾನ್ಯರಿಂದ ಏನನ್ನು ನೀರಿಕ್ಷಿಸಬಹುದು? ಈ ಬಗೆಯ ಟಿಪ್ಪಣಿಗಳನ್ನು ತನ್ನ ಸಂಶೋಧನಾ ಪುಸ್ತಕದಲ್ಲಿ ಬರೆದುಕೊಳ್ಳುತ್ತಾ, ರೋಹಿಣಿ ಆತಂಕಿತಳಾಗಿದ್ದಳು. 

***

ರಾತ್ರಿಯೂಟದ ಸಮಯವಾಗಿತ್ತು. ತಂದೆ ರಾಜುರವರು, ಮಗಳು ರೋಹಿಣಿಗಾಗಿ ಕಾಯುತ್ತಿದ್ದರು. ಕೊಂಚ ತಡವಾಗಿ ಬಂದ ರೋಹಿಣಿ ದಣಿದಿದ್ದಳು. ಕೂಡಲೇ ರಾಜು ಅವಳನ್ನು ಊಟದ ಮೇಜಿನತ್ತ ಕರೆದೊಯ್ಯದಿದ್ದರು. ರೋಹಿಣಿಯ ಆಲೋಚನೆಗಳು ಮಾತ್ರ ನಾಲ್ಕು ಹಂತಗಳಲ್ಲಿ ಜಾರಿಗೊಳಿಸಿದ್ದ ಕಳೆದ ಎರಡು ತಿಂಗಳ ಅವಧಿಯ ಲಾಕ್ಡೌನಿನ ಸಾಧಕ-ಭಾಧಕಗಳ  ಸುತ್ತವೇ ಹರಿದಾಡುತ್ತಿದ್ದವು.          ಡಾ. ಕಿರಣನ ಮಾತುಗಳೇ ಅವಳ ಕಿವಿಯಲ್ಲಿ ರಿಂಗಣಿಸುತ್ತಿದ್ದವು. 

'ಲಾಕ್ಡೌನ್ ಕುರಿತಾದ ಸಂಶೋಧನೆಯ ಕೆಲಸ ಹೇಗೆ ಸಾಗಿದೆ?' ಎಂದು ಕೇಳಿ ರಾಜು ಮೌನ ಮುರಿದರು. ಮೌನ ಮುರಿಯದ ರೋಹಿಣಿಯ ನೋಟ ಮಾತ್ರ ರಾಜುರವರ ಮೇಲೇ ನೆಟ್ಟಿತ್ತು. ಲಾಕ್ಡೌನ್ನ ಸಾಧಕ-ಬಾಧಕಗಳನ್ನು ಕುರಿತಾದ ವೃತ್ತಪತ್ರಿಕೆಯ ಲೇಖನವೊಂದನ್ನು ರಾಜು ತಮ್ಮ ಮಗಳ ಮುಂದಿರಿಸಿದ್ದರು. ಆ ಲೇಖನದಲ್ಲಿ ವಿರೋಧ ಪಕ್ಷಗಳ ತೀಕ್ಷ್ಣ ಪ್ರತಿಕ್ರಿಯೆ ಬಗೆಗಿನ ಪ್ರಸ್ತಾಪವಿತ್ತು. 'ಎರಡು ತಿಂಗಳ ಲಾಕ್ಡೌನ್ ಜೀವಗಳನ್ನುಳಿಸಿದ್ದಂತೂ ಶುದ್ಧ ಸುಳ್ಳಿನ ಮಾತು.  ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿದೆ. ಲಾಕ್ಡೌನ್ನಿಂದ ಸುಮಾರು  ೪೦ ಕೋಟಿ  ಬಡಬಗ್ಗರುಗಳ ಸಂಪಾದನೆಗೆ ಕುತ್ತು ಬಂದಿದೆ. ಬೃಹತ್ ನಗರಗಳಿಂದ ತಮ್ಮ ತಮ್ಮ ಹಳ್ಳಿಗಳ ಕಡೆಗೆ  ಗುಳೆ ಹೊರಟ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರ ಕಷ್ಟಗಳನಂತೂ ಹೇಳತೀರದು. ಬಸ್ ಹಾಗೂ ರೈಲುಗಳ ಸಂಚಾರಗಳು  ಸ್ಥಗಿತಗೊಂಡಿದ್ದು, ಅನ್ಯ ಮಾರ್ಗವಿಲ್ಲದೆ ಅವರುಗಳು  ತಮ್ಮ ತಮ್ಮ ಹೆಂಡತಿ-ಮಕ್ಕಳೊಡನೆ, ಸಾಮಾನುಗಳನ್ನು ಹೊತ್ತು  ಕಾಲ್ನಡಿಗೆಯಲ್ಲೇ ಪ್ರಯಾಣಿಸಿತ್ತಿರುವುದನ್ನು ನೋಡಿದರೆ, ಹೃದಯವಂತರ ಕರುಳು    ಕಿತ್ತುಬಾರದಿರದು' ಎಂಬುದಾಗಿ ವಿರೋಧಿ ನಾಯಕರುಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆದರೆ ಸರಕಾರಿ ಮೂಲಗಳ ಸಮಜಾಯಿಷಿಯೇ  ಬೇರೆಯಾಗಿತ್ತು.  'ಲಾಕ್ಡೌನ್ ಕೊರೋನಾ ಸೋಂಕನ್ನು ಹತ್ತಿಕ್ಕಲು, ಸಮಯಕ್ಕೆ ಸರಿಯಾಗಿ ಜಾರಿಗೊಳಿಸಿದಂತ ಮುನ್ನೆಚ್ಚರಿಕೆಯ ಕ್ರಮ. ನಾವು ನಡೆಸಿರುವ ಅಧ್ಯಯನಗಳ ಪ್ರಕಾರ ಈ ಎರಡು ತಿಂಗಳ ಲಾಕ್ಡೌನ್ನಿಂದ ಸುಮಾರು ೧೫-೩೦ ಲಕ್ಷ ಜನಗಳನ್ನು ಸೋಂಕಿನಿಂದ ಸಂರಕ್ಷಿಸಲಾಗಿದೆ ಮತ್ತು ಸುಮಾರು ೪೦ರಿಂದ ೮೦ ಸಾವಿರದಷ್ಟು ಜೀವಗಳನ್ನು ರಕ್ಷಿಸಲಾಗಿದೆ. ವಿದೇಶಿ ಸಂಸ್ಥೆಗಳ ಅಧ್ಯಯನದ ಪ್ರಕಾರ, ಭಾರತದಲ್ಲಿ ವಿಧಿಗೊಳಿಸಲಾದ ಸಮಯೋಚಿತ ಲಾಕ್ಡೌನ್ನಿಂದ ಇನ್ನೂ  ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹಾಗೂ ಸಾವುಗಳನ್ನು ನಿಯಂತ್ರಿಸಲಾಗಿದೆ' ಎಂಬುದು ಸರಕಾರಿ ಸಂಸ್ಥೆಗಳು ನೀಡಿದ ವಿವರಣೆಯಾಗಿತ್ತು. 

'ಭಾರತದಲ್ಲಿನ ಶೇ. ೮೦ರಷ್ಟು ಸೋಂಕಿತರು ಐದು ಪ್ರಮುಖ ರಾಜ್ಯಗಳಾದ, ಮಹಾರಾಷ್ಟ್ರ, ತಮಿಳ್ ನಾಡು, ಗುಜರಾತ್, ದಿಲ್ಲಿ ಮತ್ತು ಮಧ್ಯ ಪ್ರದೇಶಗಳಲ್ಲಿ ಮಾತ್ರವಿದ್ದಾರೆ. ಇಷ್ಟೇ ರಾಜ್ಯಗಳಿಗೆ ಹೆಚ್ಚಿನ ಸೋಂಕನ್ನು ಸೀಮಿತಗೊಳಿಸಿದ್ದು ಲಾಕ್ಡೌನಿನ ಒಳ್ಳೆ ಪರಿಣಾಮಗಳಲ್ಲೊಂದು ಎಂದೇ ಹೇಳಬಹುದು.  ಎರಡು ತಿಂಗಳ ಲಾಕ್ಡೌನಿನ ಸಮಯದಲ್ಲಿ, ಸುಮಾರು ಎರಡು ಲಕ್ಷ ಹಾಸಿಗೆಗಳುಳ್ಳ ೧೦೦೦ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ಸುಮಾರು ೩೦ ಲಕ್ಷದಷ್ಟು ಪಿಪಿಇ ತೊಡಿಗೆಗಳನ್ನು ಕೊರೋನಾ ಸೇನಾನಿಗಳಿಗೆ ಒದಗಿಸಲಾಗಿದೆ. ಸರಕಾರ ನೀಡಿದ ಸಹಾಯ ಹಸ್ತದಿಂದ ೧೦೯ ಕೈಗಾರಿಕೋದ್ಯಮಿಗಳು ದಿನನಿತ್ಯ ೨ ಲಕ್ಷ ಪಿಪಿಇ ತೊಡುಗೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಸಾಧಿಸಿದ್ದಾರೆ' ಎಂಬುದು ಮತ್ತೊಂದು ಸರಕಾರಿ ಅಂಗ ಸಂಸ್ಥೆ ನೀಡಿದ ಅಂಕಿ ಅಂಶವಾಗಿತ್ತು. 

'ಅಪ್ಪಾ, ಸರಕಾರಿ ಅಂಕಿ-ಅಂಶಗಳೆಲ್ಲ ಉತ್ಪ್ರೇಕ್ಷೆ ಮಾತ್ರ. ನಿಜ ಪರಿಸ್ಥಿತಿ ಬೇರೆಯೇ ಆಗಿದೆ. ಲಾಕ್ಡೌನ್ ಹೆಸರಿಗೆ ಮಾತ್ರವಿದೆ. ಸಾಮಾಜಿಕ ಅಂತರವನ್ನೇ ಗಾಳಿಗೆ ತೂರಿ, ತರಕಾರಿ ಹಣ್ಣುಗಳನ್ನು ಕೊಳ್ಳಲು ಜನ ಮುಗಿಬೀಳುತ್ತಿರುವುದು ಆತಂಕಕಾರಿಯಲ್ಲವೆ? ಉಚಿತ ಹಾಲಿನ ಪ್ಯಾಕೆಟ್ ಮತ್ತು ದಿನಸಿ ಪೊಟ್ಟಣಗಳನ್ನು ಹಂಚುವಾಗಲಂತೂ, ಪುಟ್ಟದೊಂದು ಯುದ್ಧವೇ ನಡೆದು ಹೋಗುತ್ತಿದೆ. ಪೊಲೀಸರ ಕಣ್ಣುಗಳಿಗೆ ಮಣ್ಣೆರಚಿ, ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುವ ಹೊಸ ಹೊಸ ವಿಧಾನಗಳನ್ನು ಜನಗಳು ಕಂಡುಕೊಳ್ಳುತ್ತಿದ್ದಾರೆ. ಲಾಕ್ಡೌನ್ ವಿಧಿಸಿದ ಕೆಲ ದಿನಗಳ ಮುಂಚೆ, ಸುಮಾರು ೨೫ ಜನಗಳಿದ್ದ ಅನಿವಾಸಿ ಭಾರತೀಯರ ತಂಡವೊಂದು ಗಲ್ಫ್ ದೇಶವೊಂದರಿಂದ ಹೊರಟು ಭಾರತದ ಬೃಹತ್ ನಗರವೊಂದಕ್ಕೆ  ಬಂದಿಳಿಯಿತು.  ಅವರ್ಯಾರಲ್ಲೂ ಯಾವುದೇ ರೀತಿಯ ಕೋವಿಡ್ ಲಕ್ಷಣಗಳಿಲ್ಲ ದಿದ್ದು, ಅವರೆಲ್ಲರನ್ನೂ ಎರಡು ವಾರಗಳ ಗೃಹ-ನಿರ್ಬಂಧದಲ್ಲಿರುವಂತೆ ಸಲಹೆ ನೀಡಿ, ವಿಮಾನ ನಿಲ್ದಾಣದಿಂದ ನಗರ ಪ್ರವೇಶಿಸಲು ಅನುಮತಿ ನೀಡಲಾಯಿತು. ಅವರುಗಳ ಎಡಗೈ ಮೇಲ್ಭಾಗಕ್ಕೆ ನಿರ್ಬಂಧದ ಮುದ್ರೆಯನ್ನೊತ್ತಿದ್ದರು, ಅವರುಗಳೆಲ್ಲ ಆ ನಗರದ ಪ್ರಮುಖ ರೈಲು ನಿಲ್ದಾಣವನ್ನು ತಲುಪಿ, ತಮ ತಮ್ಮ ಪಟ್ಟಣಗಳಿಗೆ ಹೊರಡುವ ರೈಲುಗಳನ್ನು ಹತ್ತಿ ಕೂತಿದ್ದರು. ಅವರುಗಳ ಕೈಮೇಲಿನ ಮುದ್ರೆಯನ್ನು ಗಮನಿಸಿದ ಸಹಪ್ರಯಾಣಿಕರು ಪೊಲೀಸರಿಗೆ ವಿಷಯ ಮುಟ್ಟಿಸುತ್ತಲೇ, ಕಾರ್ಯೋನ್ಮುಖರಾದ ಪೊಲೀಸರು ಅವರುಗಳನ್ನು ವಶಕ್ಕೆ ಪಡೆಯಬೇಕಾಯಿತು. ಮತ್ತೊಂದು ಪ್ರಕರಣದಲ್ಲಿ, ಗಂಡ-ಹೆಂಡಿರ ಜೋಡಿಯೊಂದು ತಮ್ಮ ಮುದ್ರೆಯೊತ್ತಿದ ಕೈಗಳಿಗೆ ಗಾಯವಾದಂತೆ ದಪ್ಪ ಪಟ್ಟಿಗಳನ್ನು ಕಟ್ಟಿಕೊಂಡು, ತನ್ನ ಹಸುಗೂಸಿನೊಂದಿಗೆ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿತ್ತು. ಅನುಮಾನಗೊಂಡ ಪೊಲೀಸರು ಪ್ರಶ್ನೆಸಿದಾಗ ಆ ಜೋಡಿ ತಾವು ನಿರ್ಬಂಧನ ಅವಧಿಯಲ್ಲಿರುವುದಾಗಿ ಒಪ್ಪಿಕೊಂಡಿದ್ದರು. ಪೊಲೀಸರು ತಾನೇ ಎಷ್ಟು ಕಾವಲು ಕಾಯಲು ಸಾಧ್ಯ? ಈ ರೀತಿಯ ಘಟನೆಗಳು ಲಾಕ್ಡೌನಿನ ಸದುದ್ದೇಶಗಳನ್ನು ವಿಫಲಗೊಳಿಸಿದಂತಾಗುವುದಿಲ್ಲವೇ?' ಎಂಬುದು ಸಂಶೋಧಕಿ ರೋಹಿಣಿಯ ಕಳಕಳಿಯಾಗಿತ್ತು. ಎಲ್ಲವನ್ನು ತದೇಕ ಚಿತ್ತರಾಗಿ ಆಲಿಸಿದ ತಂದೆ ರಾಜುರವರಲ್ಲಿ ಯಾವುದಕ್ಕೂ ಉತ್ತರವಿರಲಿಲ್ಲ. 

***

'ಲಾಕ್ಡೌನ್ ದಿನಗಳಲ್ಲಿ, ದುರ್ಗಮ ಕ್ಷೇತ್ರಗಳಲ್ಲಿರುವ ಬಡ ಗ್ರಾಮೀಣರ ಗತಿಯೇನು? ತುರ್ತು ಕಾರಣಗಳಿಗಾಗಿ ಅವರಗಳು ಪ್ರಯಾಣಿಸಬೇಕಾದರೆ ಏನು ಮಾಡಿಯಾರು?' ಎಂಬುದು ರೋಹಿಣಿಯ ಮತ್ತೊಂದು ಕಳಕಳಿಯಾಗಿತ್ತು. 

'ಲಾಕ್ಡೌನ್ ಎಂಬುದೊಂದು ಕುರುಡು ಕಾವಲುಗಾರನಿದ್ದಂತೆ! ತಂಟೆಕೋರರ ಕುಕೃತ್ಯಗಳಾಗಲಿ, ಜನಸಾಮಾನ್ಯರ ಪ್ರಾಮಾಣಿಕ ಪರದಾಟಗಳಾಗಲಿ ಅದಕ್ಕೆ ಕಾಣದು' ಎಂಬ ದಪ್ಪಕ್ಷರಗಳ ಮುನ್ನುಡಿಯಿದ್ದ ಅಂದಿನ ಮತ್ತೊಂದು ದಿನಪತ್ರಿಕೆಯ ನಿಜ ಘಟನೆಯ ಲೇಖನವನ್ನು ರಾಜುರವರು ತಮ್ಮ ಮಗಳ ಅವಗಾಹನೆಗೆ ತಂದಿದ್ದರು. 

ಬಹಳ ದಿನಗಳ ಹಿಂದೆ ಪತ್ನಿಯನ್ನು ಕಳೆದುಕೊಂಡ ರಾಜಿಂದರ್ ವೃತ್ತಿಯಲ್ಲಿ ಕ್ಷೌರಿಕ.  ದೂರದ ಹಳ್ಳಿಯೊಂದರಲ್ಲಿ ಒಂದೇ ಆಸನವಿದ್ದ ಸೆಲೂನೊಂದೆ ಅವನ ಹೊಟ್ಟೆಪಾಡಿನ ಸಾಧನವಾಗಿತ್ತು. ಲಾಕ್ಡೌನ್ ಜಾರಿಗೊಂಡನಂತರ ಅವನ ಸೆಲೂನ್ ಗ್ರಾಹಕರಿಲ್ಲದೆ ಬಿಕೋ ಎನ್ನುತಿತ್ತು. ಆತನ ಮುದ್ದಿನ ಮಗಳಾದ, ಸುಮಾರು ೨೩ ವರ್ಷದ  ಲಾಜು  ಕೂಡ, ಮೂರು ಹಾಲ್ಕರೆಯುವ ಎಮ್ಮೆಗಳ ನಿಗಾವಹಿಸಿಕೊಂಡು, ಸಂಸಾರದ ಹೊಣೆ ಹೊತ್ತಿದ್ದಳು. ರಾಜಿಂದರರ  ಇನ್ನಿಬ್ಬರು ಹೆಣ್ಣುಮಕ್ಕಳು ಚಿಕ್ಕವರಾಗಿದ್ದರು. ತೆರವಾಗಿದ್ದ ಕುಟುಂಬದ ತಾಯಿಯ ಸ್ಥಾನವನ್ನು ಲಾಜು ತುಂಬಿದ್ದಳು. 

೨೦ರ ಪ್ರಾಯದವರೆಗೂ ಲಾಜುವಿನ ಆರೋಗ್ಯ ಚೆನ್ನಾಗೇ ಇತ್ತು.  ಕಳೆದ ಮೂರು ವರ್ಷಗಳಿಂದ ಅವಳನ್ನು ವಿಚಿತ್ರ ಖಾಯಿಲೆಯೊಂದು ಕಾಡಿತ್ತು. ಕೆಂಪು ರಕ್ತಕಣಗಳ ಕೊರತೆ ಅವಳಿಗುಂಟಾಗಿ, ಅವಳನ್ನು ನಿತ್ರಾಣಗೊಳಿಸುತ್ತಿತ್ತು.  ಹಳ್ಳಿಯ ವೈದ್ಯರ ಸಲಹೆಯಂತೆ, ರಾಜಿಂದರ್ ಅವಳನ್ನು ದೂರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.  ಅಲ್ಲಿನ ವೈದ್ಯರುಗಳ ತಪಾಸಣೆಯಂತೆ, ಲಾಜುವಿನಲ್ಲಿ ಎಲ್ಲರಂತೆ ರಕ್ತದ ಸಾಕಷ್ಟು ಉತ್ಪಾದನೆಯಾಗುತ್ತಿರಲಿಲ್ಲ. ಮೂರು ತಿಂಗಳಿಗೊಮ್ಮೆ ಹೊರಗಿನಿಂದ ಅವಳ ದೇಹಕ್ಕೆ ಅವಶ್ಯಕ ಪ್ರಮಾಣದ  ರಕ್ತವನ್ನೊದಗಿಸುವುದೊಂದೇ (Blood transfusion) ಚಿಕಿತ್ಸೆ ಎಂಬುದು ವೈದ್ಯರುಗಳ ಸಲಹೆಯಾಗಿತ್ತು.  ಈ ರೀತಿಯ ಮೂರು ತಿಂಗಳುಗಳಿಗೊಮ್ಮೆಯ ಚಿಕಿತ್ಸೆ ಶುರುವಾಗಿ ಮೂರು ವರುಷಗಳೇ ಕಳೆದಿತ್ತು.  ಚಿಕಿತ್ಸೆಯನಂತರದ ಮೂರು ತಿಂಗಳು, ಲಾಜುವಿನ ಆರೋಗ್ಯ ಎಂದಿನಂತೆ ಇರುತ್ತಿತ್ತು. ಯಾವುದೇ ಕಷ್ಟ-ನಷ್ಟಗಳಿರಲಿ, ತಂದೆ ರಾಜಿಂದರ್ ಮಾತ್ರ ಮಗಳನ್ನು ದೂರದ ಜಿಲ್ಲಾಸ್ಪತ್ರೆಗೆ ನಿಗದಿತ ಸಮಯಕ್ಕೆ ಕರೆದುಕೊಂಡು  ಹೋಗುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಮೂರು ತಿಂಗಳುಗಳಿಗೊಮ್ಮಿನ ಚಿಕಿತ್ಸೆ ತಪ್ಪಿದರೆ, ಲಾಜುವಿಗೆ ವಿಪತ್ತು ತಪ್ಪದು ಎಂಬ ಅರಿವು ತಂದೆಗಿತ್ತು. ಮದುವೆಯ ವಯಸ್ಸಿನ ಮಗಳಿಗೆ ಈ ರೀತಿಯ ವಿಚಿತ್ರ ರೋಗ ಬಂದೊದಗಿದ್ದು, ರಾಜಿಂದರನ ಮನಸ್ಸನ್ನು ಕಾಡುತ್ತಿದ್ದದ್ದು ಸುಳ್ಳಲ್ಲ. ವೈದ್ಯರುಗಳು ನೀಡಿದ ವೇಳಾಪಟ್ಟಿಯಂತೆ, ಲಾಜುವಿನ ಮುಂದಿನ ಚಿಕಿತ್ಸೆ ೨೦೨೦ರ ಮಾರ್ಚ್ ೨೮ರಂದು ಎಂದು ನಿಗಿದಿಯಾಗಿತ್ತು.  

೨೦೨೦ರ ಮಾರ್ಚ್ ೨೫ರಂದು ಜಾರಿಗೊಳಿಸಿದ ಲಾಕ್ಡೌನ್, ರಾಜಿಂದರನಿಗೊಂದು ಆತಂಕವನ್ನುಂಟು ಮಾಡಿತ್ತು.  ಬಸ್ಸು-ರೈಲುಗಳ ಸಂಚಾರ ಸ್ತಬ್ಧಗೊಂಡಿದ್ದು, ದೂರದ ಜಿಲ್ಲಾಸ್ಪತ್ರೆಗೆ ಮಗಳನ್ನು ಕರೆದುಕೊಂಡು ಹೋಗುವುದು ಹೇಗೆ ಎಂಬ ಸಮಸ್ಯೆ ರಾಜಿಂದರನನ್ನು ಕಾಡಿತ್ತು. ಸತತ ಪ್ರಯತ್ನ ಮಾಡಿ ಡಾ. ತೇಜ್ ಕರಣ್ ರವರನ್ನು ಸಂಪರ್ಕಿಸಿದ ರಾಜಿಂದರನಿಗೆ, ಮಾರ್ಚ್ ೨೮ರ ಚಿಕಿತ್ಸೆ ಖಚಿತವೆಂಬುದು ತಿಳಿದಿತ್ತು. ಸುಮಾರು ೧೫೦ ಕಿ.ಮೀ. ದೂರವಿರುವ ಜಿಲ್ಲಾ ಕೇಂದ್ರಕ್ಕೆ ಪ್ರಯಾಣಿಸಲು ಟ್ಯಾಕ್ಸಿಯ ಲಭ್ಯವೂ ಇತ್ತಿಲ್ಲ.  ಅದರ ವೆಚ್ಚವನ್ನು ಭರಿಸುವಷ್ಟು ಹಣವಂತೂ ರಾಜಿಂದರನಲ್ಲಿ ಇತ್ತೇ ಇರಲಿಲ್ಲ.  ಹಳ್ಳಿಯ ನಾಯಕರುಗಳ ಬಳಿ ಹೋಗಿ ಅಂಗಲಾಚಿದರೂ, ರಾಜಿಂದರನ ಬವಣೆ ನೀಗದಾಗಿತ್ತು. ಸ್ಥಳೀಯ ಶಾಸಕರು ಎಲ್ಲಿದ್ದಾರೆ ಎಂಬದೇ ಯಾರಿಗೂ ತಿಳಿದಿತ್ತಿಲ್ಲ. ಹಾಲು ಮಾರಲು ಉಪಯೋಗಿಸುತ್ತಿದ್ದ ಹಳೆ ಸೈಕಲ್ಲೊಂದೇ ರಾಜಿಂದರನ ಪಾಲಿಗುಳಿದಿದ್ದ ವಾಹನವಾಗಿತ್ತು. ಹಳ್ಳಿಯ ಸೈಕಲ್ ರಿಪೇರಿಯವನ ಮೊರೆ ಹೋದ ರಾಜಿಂದರ್, ಎರಡು ದಿನ ಮೊದಲೇ ತನ್ನ ಸೈಕಲ್ಲನ್ನು ಸಿದ್ಧಗೊಳಿಸಿಕೊಂಡಿದ್ದೂ ಆಗಿತ್ತು. 

ಮಾರ್ಚ್ ೨೭ರ ಮುಂಜಾನೆಯೇ ರಾಜಿಂದರನ ಸೈಕಲ್ ಪ್ರಯಾಣ ಶುರುವಾಗಿತ್ತು. ಹಿಂಬದಿಯ ಆಸನದಲ್ಲಿ ಮಗಳು ಲಾಜು, ಸುಮಾರು ೩೦ ರೊಟ್ಟಿ-ಪಲ್ಯಗಳ ಗಂಟೊಂದನ್ನು ಹಿಡಿದೇ ಕುಳಿತಿದ್ದಳು. ಸೈಕಲ್ ಪ್ರಯಾಣದ ಮಾರ್ಗದಲ್ಲಿ, ಪೊಲೀಸರ ತಪಾಸಣೆ ಎದುರಾಗಬಹುದೆಂಬ ಆತಂಕ ರಾಜಿಂದರನಿಗೆ ಇದ್ದೇ ಇತ್ತು. ಪೊಲೀಸರ ಸಮಜಾಯಿಷಿಗೆಂದು ಪ್ಲಾಸ್ಟಿಕ್ ಚೀಲವೊಂದರಲ್ಲಿ, ಆಸ್ಪತ್ರೆ ಕಾಗದಗಳು ಹಾಗು ಆಧಾರ್ ಕಾರ್ಡ್ಗಳನ್ನು ಇಟ್ಟುಕೊಂಡು ಹೋಗುವುದನ್ನು ರಾಜಿಂದರ್ ಮರೆತಿರಲಿಲ್ಲ.  ಪ್ರಯಾಣ ೧೫೦ ಕಿ.ಮೀ.ನಷ್ಟು ದೂರದ್ದಾದರೂ, ಸುಮಾರು ೨೦ ಕಿ.ಮೀ.ನಷ್ಟು ದೂರವನ್ನು ತಗ್ಗಿಸುವ ಅಡ್ಡದಾರಿಗಳು ರಾಜಿಂದರನಿಗೆ ತಿಳಿದಿತ್ತು. ಸಾಯಂಕಾಲದ ಸಮಯ ಸಮೀಪಿಸುತ್ತಲೇ, ಅಡ್ಡಮಾರ್ಗವೊಂದರಲ್ಲಿ ಚಲಿಸುತ್ತಿದ್ದ ರಾಜಿಂದರನಿಗೆ, ಇಬ್ಬರು ಪೊಲೀಸ್ ಪೇದೆಗಳು ಎದುರಾಗೇ ಬಿಟ್ಟಿದ್ದರು. ಹಿರಿಯ ಪೇದೆಯ ಮೆಚ್ಚುಗೆ ಗಳಿಸಲೆಂದೇ, ಯುವ ಪೇದೆ ಒಮ್ಮಲೇ ರಾಜಿಂದರನ ಮೇಲೆ ಒಂದೆರಡು ಬಾರಿ ಲಾಠಿ ಪ್ರಯೋಗಿಸಿದ್ದು ಆಗಿ ಹೋಗಿತ್ತು.  ಮತ್ತೆರಡು ಲಾಠಿ ಏಟುಗಳು ರಾಜಿಂದರನ ಸೈಕಲ್ಲನ್ನು ಘಾಸಿಗೊಳಿಸಿತ್ತು. ಕೈ ಜೋಡಿಸಿ ಬೇಡಿದ ಲಾಜುವಿನ ವಿನಂತಿಗೂ ಪೇದೆಗಳ ಕೋಪ ಇಳಿಯದಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿರುವುದಾಗಿ ಲಾಜು ಕಿರುಚಿ ಹೇಳಿದಾಗ ಮಾತ್ರ ಪೊಲೀಸರು ಎತ್ತಿದ್ದ ಕೈಗಳನ್ನು ಇಳಿಸಿದ್ದು.  ಭಯಭೀತನಾದ ರಾಜಿಂದರ್ ಆಸ್ಪತ್ರೆಯ ಕಾಗದಗಳನ್ನು ತೋರಿಸಿದಾಗ ಮಾತ್ರ ಪೇದೆಗಳು ಸುಮ್ಮನಾಗಿದ್ದು. 'ಜಿಲ್ಲಾಸ್ಪತ್ರೆಯಲ್ಲಿನ ಚಿಕಿತ್ಸೆ ನಾಳೆ ದೊರೆಯದಿದ್ದಲ್ಲಿ ಮಗಳ ಜೀವಕ್ಕೇ ಕುತ್ತೆಂದು' ರಾಜಿಂದರ್ ವಿವರಿಸಿ ಹೇಳಿದಾಗ, ಪೊಲೀಸರ ಮನಸ್ಸು ಕರಗಿತ್ತು.  'ನಾವುಗಳು ನಮ್ಮ ಕರ್ತವ್ಯವನ್ನು ಮಾತ್ರ ಮಾಡುತ್ತಿರುತ್ತೇವೆ. ದಾಖಲೆಗಳಿಲ್ಲದೆ ನೀವುಗಳು ಮೇಲಧಿಕಾರಿಗಳ ಕೈಯಲ್ಲಿ ಮುಂದೆ ಸಿಕ್ಕಿ ಬಿದ್ದರೆ, ನಮ್ಮಗಳಿಗೆ ಶಿಕ್ಷೆ ತಪ್ಪಿದ್ದಲ್ಲ. ನಿಮ್ಮನ್ನು ಹೊಡೆದು ನೋಯಿಸಿದ್ದಕ್ಕೆ ಕ್ಷಮೆಯಿರಲಿ' ಎಂದು ತನ್ನ ಕೈಗಳನ್ನು ಮುಗಿಯುತ್ತ ತಿಳಿಸುವ ಹೊತ್ತಿಗೆ, ಹಿರಿಯ ಪೇದೆಯ ಕಣ್ಣಾಲೆಗಳು ತುಂಬಿ ಬಂದಿದ್ದವು. 

ಸೈಕಲ್ ಪ್ರಯಾಣದ ಮೊದಲ ದಿನವೇ ಸುಮಾರು ೮೦ ಕಿ.ಮೀ.ಗಳಷ್ಟು ದೂರ ಸವೆಸಿದ್ದ, ಅಪ್ಪ-ಮಗಳು ದಣಿದಿದ್ದರು. ಕತ್ತಲಾಗುತ್ತಲೇ ಸಮೀಪದ ಶಾಲೆಯೊಂದರ ಜಗುಲಿಯ ಮೇಲೆ ಅವರಿಬ್ಬರೂ ವಿರಮಿಸಿದ್ದರು. ಅದೇ ಕ್ಷಣ, ತಮ್ಮ ಲಾಠಿಗಳನ್ನು ಝಳಪಿಸುತ್ತಾ ಇಬ್ಬರು ಪೊಲೀಸ್ ಪೇದೆಗಳು ಅಲ್ಲಿಗೆ  ಬಂದರು. ವಿನಮ್ರನಾಗಿ ಎದ್ದುನಿಂತ ರಾಜಿಂದರ್, ತಮನ್ನು ಜಗುಲಿಯಿಂದ ಓಡಿಸದಂತೆ ಪೇದೆಗಳಿಗೆ ಕೈಜೋಡಿಸಿದನು. ಕೊಂಚ ಮುಂಚೆ ತಮನ್ನು ಥಳಿಸಿದ್ದ ಪೇದೆಗಳೇ ಮತ್ತೆ ಎದುರಾಗಿದ್ದನ್ನು ಅರಿಯಲು ಲಾಜುವಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ತಾವುಗಳು ಕೂಡ ರಾತ್ರಿಯಲ್ಲಿ ವಿರಮಿಸಲೆಂದೇ ಶಾಲೆಯ ಜಗುಲಿಯನ್ನು ಹುಡುಕಿಕೊಂಡು ಬಂದುದಾಗಿ ಪೊಲೀಸರು ತಿಳಿಸಿದಾಗ, ರಾಜಿಂದರ್ ಆಶ್ಚರ್ಯಚಕಿತನಾದನು. ಹಿರಿಯ ಪೇದೆ ಮಾತು ಮುಂದುವರಿಸುತ್ತಾ, 'ಇಲ್ಲಿ ವಿರಮಿಸದೇ ನಮಗೆ ಬೇರೆ ಮಾರ್ಗವಿಲ್ಲ. ನಾಳೆ ಬೆಳಗಿನ ೬ಕ್ಕೆ ಡ್ಯೂಟಿ ಮೇಲೆ ಹಾಜರಾಗಬೇಕು, ಮನೆಗೆ ಹೋಗಿ ಬರುವಷ್ಟು ಸಮಯಾವಕಾಶವೇ ಇಲ್ಲ' ಎಂದು ತಿಳಿಸದರು. ಲಾಜು ತನ್ನ ರೊಟ್ಟಿಯ ಗಂಟನ್ನು ಬಿಚ್ಚುತ್ತಲೇ, ಇಬ್ಬರೂ ಪೇದೆಗಳು ತಮ್ಮ ಮುಖಗಳನ್ನು ಬೇರೆಡೆ ತಿರುಗಿಸಿದರು. ಹಿರಿಯ ಪೇದೆಯ ಕಡೆ ತಿರುಗಿ 'ಪೊಲೀಸಣ್ಣ, ತಮ್ಮಗಳ ಊಟವಾಯ್ತೆ?' ಎಂದು ಲಾಜು ಕೇಳಿದಾಗ, ಪೇದೆಗಳಿಬ್ಬರೂ ಪೆಚ್ಚಾದರು. ತುಂಬಿ ಬಂದ ಅವರುಗಳ ದನಿಯಲ್ಲೇ, ಅವರುಗಳು ಹಸಿದಿರುವರೆಂದು ಲಾಜುವಿಗೆ ತಿಳಿಯಿತು. 'ರಸ್ತೆ ಬದಿಯ ಸಣ್ಣ ಹೋಟೆಲುಗಳೆಲ್ಲಾ ಲಾಕ್ಡೌನಿಂದ ಮುಚ್ಚಿ ಹೋಗಿವೆ. ಹಾಗಾಗಿ ನಮ್ಮಗಳಿಗೆ ಸಮಯಕ್ಕೆ ಸರಿಯಾಗಿ ಊಟ-ತಿಂಡಿಗಳೇ ಸಿಗದಾಗಿದೆ. ಕೋವಿಡ್ ಕರ್ತವ್ಯಕ್ಕೆ ನೇಮಕಗೊಂಡಾಗ, ೧೫ ದಿನಗಳ ಬಿಡುವಿರದ ಡ್ಯೂಟಿ ಕಡ್ಡಾಯವಾಗಿರುತ್ತದೆ. ಮನೆಗಳಿಗೆ ಹೋಗಿಬರುವಷ್ಟು ಸಮಯ ಇರುವುದೇ ಇಲ್ಲ' ಎಂದು ತಿಳಿಸಿದ ಹಿರಿಯ ಪೇದೆಯ ಮುಖದಲ್ಲಿ ವಿಷಾದವಿತ್ತು. ಎರಡು ಪೇದೆಗಳಿಗೆ ತಲಾ ಎರಡೆರಡು ರೊಟ್ಟಿ-ಪಲ್ಯಗಳನ್ನು ಮೊಸರ ದೊನ್ನೆಯೊಂದಿಗೆ ರಾಜಿಂದರ್ ನೀಡಿದಾಗ, ಪೇದೆಗಳ ಮುಖದಲ್ಲಿ ಮೂಡಿದ ನಗು, ಅವರುಗಳ ಪೊಲೀಸ್ ಸೇವಾ ಬವಣೆಯನ್ನು ಸಾರಿ ಹೇಳಿತ್ತು. 'ನಾವುಗಳು ನಿಮ್ಮನ್ನು ಲಾಠಿಯಿಂದ ಥಳಿಸಿದ್ದೆವು. ತಾವುಗಳು ನಮ್ಮ ಹಸಿದ ಹೊಟ್ಟೆಗೆ ರೊಟ್ಟಿಗಳನ್ನು ನೀಡಿದಿರಿ' ಎಂದು ಹಿರಿಯ ಪೇದೆ ಹೇಳುವಷ್ಟರಲ್ಲಿ, ಅವನ ಕಣ್ಣೀರ ಹನಿಗಳು ಕೈಲಿದ್ದ ರೊಟ್ಟಿಗಳ ಮೇಲೆ ಬಿದ್ದಿತ್ತು. 

ಘಟನೆಯ ವಿವರಗಳನ್ನು ಕೇಳುತ್ತಾ,  ರೋಹಿಣಿಯ ತಂದೆಯಾದ ರಾಜುರವರು  'ಅನುಕಂಪವೆಂಬುದು  ಧನಿಕರ ಹಾಗೂ ಬಲಿಷ್ಠರ ವರ್ಗದಲ್ಲಿ ಕಾಣಸಿಗದಿರಬಹುದು. ಅದು ಹೃದಯವಂತರ ಅಂತರಾಳದ ಮಿಡಿತ ಮಾತ್ರ' ಎಂದು ಉದ್ಗರಿಸುವಷ್ಟರಲ್ಲಿ ಅವರ ಕಣ್ಣುಗಳು ತುಂಬಿ ಬಂದಿದ್ದವು. 

ಮಾರನೆಯ ದಿನದ ಸೂರ್ಯೋದಯಕ್ಕೆ ಮುಂಚೆಯೇ ತನ್ನ ಸೈಕಲ್ ಪ್ರವಾಸವನ್ನು ಆರಂಭಿಸಿದ ರಾಜಿಂದರನಿಗೆ, ಮಧ್ಯಾಹ್ನ ೨ರ ಸಮಯಕ್ಕೆ ಜಿಲ್ಲಾಸ್ಪತ್ರೆಯನ್ನು ಸೇರಲಾರೆ ಎಂಬ ವಿಷಯದ ಅರಿವಾಗಿತ್ತು. ಜಾಣನಾದ ಅವನು ಕೂಡಲೇ ಡಾ. ತೇಜ್ ಕರಣರನ್ನು ಮೊಬೈಲ್ನಿಂದ ಸಂಪರ್ಕಿಸಿ ತನ್ನ ಸೈಕಲ್ ಪ್ರಯಾಣದ ಪ್ರಯಾಸವನ್ನು ವಿವರಿಸಿದನು. ದಯಾವಂತರಾದ ವೈದ್ಯರು ರಾಜಿಂದರನಿಗಾಗಿ ತಡರಾತ್ರಿವರೆಗೂ ಕಾಯುವುದಾಗಿ ಆಶ್ವಾಸನೆಯನ್ನು ನೀಡಿದರು. 

ಎರಡೆನೆಯ ದಿನ ಸೈಕಲ್ ತುಳಿಯುವುದು ರಾಜಿಂದರನಿಗೆ ಹೆಚ್ಚು ಪ್ರಯಾಸವೆನಿಸುತ್ತಿತ್ತು. ಸುಮಾರು ೩೦ ಕಿ.ಮೀ.ನಷ್ಟು ದೂರ ಕ್ರಮಿಸುವಷ್ಟರಲ್ಲೇ ಸೈಕಲ್ ಸರಪಳಿ ತುಂಡಾಯಿತು. ದಿಕ್ಕು ತೋಚದ ರಾಜಿಂದರ್ ಮಗಳೊಂದಿಗೆ ಸೈಕಲ್ ತಳ್ಳುತ್ತಾ ಸಾಗಿ, ಸಮೀಪದ ತೋಟದ ಮನೆಯೊಂದನ್ನು ತಲುಪಿದನು. ಆ ಮನೆಯ ಮಾಲಿಕನು ಇಬ್ಬರಿಗೂ ಊಟವನ್ನು ಉಣ ಬಡಿಸಿದಾಗ, ಅವರುಗಳ ದಣಿವು ಸಾಕಷ್ಟು ನಿವಾರಣೆಯಾಯಿತು. 'ಇದೆ ದಾರಿಯಲ್ಲೇ ಮತ್ತೆ ೩ ಕಿ.ಮೀ.ನಷ್ಟು ದೂರ ನಡೆದರೆ, ಸೈಕಲ್ ರಿಪೇರಿ ಅಂಗಡಿಯೊಂದು ಇದೆ' ಎಂದು ಆ ಮನೆಯ ಮಾಲೀಕ ರಾಜಿಂದರನಿಗೆ ತಿಳಿಸಿದನು. ರಾಜಿಂದರನ ಬಳಿ ಸೈಕಲ್ ರಿಪೇರಿಗೆ ಹಣವಿಲ್ಲದಿದ್ದು, ಅವನು ಆ ಮನೆಯ ಮಾಲೀಕನ ಮುಂದೆ ಹಣಕ್ಕಾಗಿ ಕೈ ಜೋಡಿಸಬೇಕಾಯಿತು. ಎಡಬಿಡದ ತ್ರಿವಿಕ್ರಮನಂತೆ ಸೈಕಲ್ ತಳ್ಳಿದ ರಾಜಿಂದರ್ ಸೈಕಲ್ ರಿಪೇರಿ ಅಂಗಡಿಯನ್ನು ತಲುಪುವಹೊತ್ತಿಗೆ ಹೈರಾಣಾಗಿ ಹೋಗಿದ್ದನು. ರಾಜಿಂದರನ ಪ್ರಯಾಸದ ಕಥೆಯನ್ನು ಕೇಳಿ ಮರುಗಿದ ಸೈಕಲ್ ರಿಪೇರಿಯವನು, ಯಾವುದೇ ಹಣ ಪಡೆಯದೆ ಅವನ ಸೈಕಲ್ ರಿಪೇರಿ ಮಾಡಿಕೊಟ್ಟಾಗ, ರಾಜಿಂದರ್ ಕರಗಿ ನೀರಾಗಿದ್ದನು. 

ಸೈಕಲ್ ಪ್ರಯಾಣ ಮುಂದುವರೆಸಿ ಜಿಲ್ಲಾಸ್ಪತ್ರೆಯನ್ನ ತಲುಪುವ ಹೊತ್ತಿಗಾಗಲೇ ಸಂಜೆಯ ಸಮಯದ ೫ ಘಂಟೆಯಾಗಿತ್ತು. ಕಾಯುತ್ತ ಕುಳಿತಿದ್ದ ಡಾ. ತೇಜ್ ಕರಣರವರು ಕೂಡಲೇ ದಣಿದಿದ್ದ ಇಬ್ಬರಿಗೂ ತಿಂಡಿಯನ್ನು ನೀಡಿ ಉಪಚರಿಸಿದರು. ಲಾಜು ಕೊಂಚ ವಿರಮಿಸಿದನಂತರ ಅವಳಿಗೆ ನಿಗದಿತದ ಪ್ರಮಾಣದ ರಕ್ತ ನೀಡುವ ಚಿಕಿತ್ಸೆಯನ್ನು ವೈದ್ಯರ ತಂಡ ಯಶಸ್ವಿಯಾಗಿ ಮಾಡಿ ಮುಗಿಸಿತ್ತು. ಇನ್ನೆರಡು ತಾಸಿನ ವಿರಾಮದಾನಂತರ ಲವಲವಿಕೆಯಿಂದ ಎದ್ದು ಕುಳಿತ ಮಗಳನ್ನು ನೋಡಿ, ರಾಜಿಂದರನಿಗೆ ತಾನು ಪಟ್ಟ ಶ್ರಮ ಸಾರ್ಥಕವಾಯಿತೆನಿಸಿತು. ಡಾ. ತೇಜ್ ಕರಣ್ ಹಾಗು ಅವರ ತಂಡದ ಸದಸ್ಯರುಗಳು ರಾಜಿಂದರ್ ಹಾಗು ಲಾಜುರವರ ಸಾಹಸವನ್ನು ಹೊಗಳಿ ಮೆಚ್ಚುಗೆಯ ಮಾತುಗಳನ್ನಾ ಡಿದರು.  ಇಬ್ಬರಿಗೂ ಆಸ್ಪತ್ರೆಯಲ್ಲೇ ರಾತ್ರಿ ತಂಗುವ ವ್ಯವಸ್ಥೆಯನ್ನು ವೈದ್ಯರು ಮಾಡಿಕೊಟ್ಟರು. ಮೇಲಧಿಕಾರಿಗಳನ್ನು ಸಂಪರ್ಕಿಸಿದ ಡಾ. ತೇಜ್ ಕರಣ್, ಇಬ್ಬರೂ ಅವರ  ಹಳ್ಳಿಗೆ  ಹಿಂತಿರುಗಲು ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದರು. ಆದರೂ ಮುಗ್ಧ ಮನಸ್ಸಿನ  ಲಾಜುವನ್ನು ಸಮಸ್ಯೆಯೊಂದು ಕಾಡುತ್ತಿತ್ತು. ಅಪ್ಪನ ಸೈಕಲ್ಲನ್ನು ತೆಗೆದುಕೊಂಡು ಹೋಗುವುದು ಹೇಗೆ ಎಂಬುದೇ ಅವಳ ಆತಂಕಕ್ಕೆ ಕಾರಣವಾಗಿತ್ತು. ಸೈಕಲನ್ನು ಆಂಬುಲೆನ್ಸ್ ವ್ಯಾನಲ್ಲೇ ಕೊಂಡೊಯ್ಯಬಹುದೆಂದು ಡಾ. ತೇಜ್ ಕರಣ್ ತಿಳಿಸಿದಾಗ, ಅಪ್ಪ-ಮಗಳ ಆನಂದಕ್ಕೆ ಪಾರವೇ ಇರಲಿಲ್ಲ. 

'ಲಾಕ್ಡೌನ್ ವಿಧಿಸದೇ ವಿಧಿಯಿತ್ತಿಲ್ಲ. ಆದರೆ ಲಾಕ್ಡೌನ್ ಬೇರೆ ಬೇರೆ ಜನಗಳಿಗೆ, ವಿಶೇಷವಾಗಿ ಬಡವರಿಗೆ ಹಲುವು ಕಷ್ಟಗಳನ್ನು ತಂದೊಡ್ಡಿತ್ತು. ದಿನಗೂಲಿ ಕಾರ್ಮಿಕರ ದುಡಿಮೆಗೆ ಕುತ್ತು ಉಂಟಾಗಿದ್ದು ಮಾತ್ರ ಅವರುಗಳಿಗೆ ಭರಿಸಲಾಗದ ಸಮಸ್ಯೆಯಾಗಿತ್ತು. ಸರ್ಕಾರೀ ಹಾಗೂ ಹಲವು ಖಾಸಗಿ ಸಂಸ್ಥೆಗಳ ಪ್ರಯತ್ನದಿಂದ ದಿನಸಿ ಹಾಗು ಸಿದ್ಧ ಭೋಜನದ ಪೊಟ್ಟಣಗಳು ಬಡವರ ಕೈಗಳನ್ನೇನೋ ಸೇರುತ್ತಿದ್ದವು. ಆದರೂ ಎಲ್ಲರಿಗೂ ಆಹಾರದ ಸೌಲಭ್ಯ ಸಾಕಷ್ಟು ಪ್ರಮಾದಲ್ಲಿ ದೊರಕ್ಕುತ್ತಿದೆಯೇ ಎಂಬ ಕಳಕಳಿಯನ್ನು ರೋಹಿಣಿ ತನ್ನ ಸಂಶೋಧನೆಯ ಪುಸ್ತಕದಲ್ಲಿ ದಾಖಲಿಸಿದ್ದು, ತಂದೆ ರಾಜುರವರ ಅಭಿಪ್ರಾಯವೂ ಆಗಿತ್ತು.

                                                                                            ******

 ವಲಸಿಗರ ಪರದಾಟ 



ಸುಮಾರು ೪೦ರ ಪ್ರಾಯದ ಮದನ್ ಲಾಲ್ ವೃತ್ತಿಯಲ್ಲಿ ವಕೀಲರಾಗಿದ್ದರು.  ಬಡ ಕಾರ್ಮಿಕರ ಹಕ್ಕುಗಳಿಗಾಗಿ ಸದಾ ಹೋರಾಡಲು ಸಿದ್ಧರಿರುವ ಚಳವಳಿಗಾರರೆಂದೇ ಅವರನ್ನು ಜನತೆ ಗುರುತಿಸಿತ್ತು. ಹಾಗಾಗಿ ಅವರ ವಕೀಲೀ ವೃತ್ತಿಯ ವರಮಾನವೇನು ಹೇಳಿಕೊಳ್ಳುವಷ್ಟಿತ್ತಿಲ್ಲ. ಒಂದು ಕೋಟಿಗೂ ಮೀರಿದ ಜನಸಂಖ್ಯೆಯ ಒಂದು ನಗರದ ಹೊರವಲಯದಲ್ಲಿ ಮದನರ ಪುಟ್ಟ ಮನೆಯೊಂದಿತ್ತು.  ಅವರ ಮನೆಯ ಸುತ್ತ ಹಲವಾರು ಬೃಹತ್ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು.  ಆ ಕಟ್ಟಡಗಳ ಬದಿಯ ರಸ್ತೆಗಳಲ್ಲೇ ಮದನ್ ಲಾಲರ  ದಿನನಿತ್ಯದ ವಾಯುವಿಹಾರದ  ನಡಿಗೆ ಸಾಗಿತ್ತು. ನಿರ್ಮಾಣ ಹಂತದ ಆ ಕಟ್ಟಡಗಳ ಸುತ್ತ ಕಟ್ಟಡ ಕಾರ್ಮಿಕರ ಮಕ್ಕಳು ಆಟವಾಡುವುದನ್ನು ಮದನ್ ವಿಶೇಷವಾಗಿ ಗಮನಿಸುತ್ತಿದ್ದರು.  'ಚುಕ್-ಬುಕ್ ರೈಲಾಟ' ಆ ಮಕ್ಕಳ ದಿನನಿತ್ಯದ ಆಟವಾಗಿತ್ತು. ಕೊಂಚ ಹೆಚ್ಚು ಎತ್ತರವಿರುವ ಹುಡುಗನೊಬ್ಬ 'ಎಂಜಿನ್' ಆದರೆ, ಒಬ್ಬರ ಅಂಗಿಯನ್ನೊಬ್ಬರು ಹಿಡಿದ ಮಿಕ್ಕ ಬಾಲಕರು ಅವನ ಹಿಂದಿನ ರೈಲು ಡಬ್ಬಗಳಾಗಿ ಹಿಂಬಾಲಿಸುವುದು ಆಟದ ಕ್ರಮವಾಗಿತ್ತು. ಎಂಜಿನ್ ಬಾಲಕ 'ಕೂ....' ಎಂದು ಜೋರಾಗಿ ಕೂಗಿ ಓಡಲು ಶುರು ಮಾಡುತ್ತಲೇ, ಹಿಂದಿನ ಬಾಲಕರೆಲ್ಲರೂ 'ಚುಕ್-ಬುಕ್' ಎಂದು ಸದ್ದು ಮಾಡುತ್ತಾ  ಅವನನ್ನು ಹಿಂಬಾಲಿಸುತ್ತಿದ್ದರು. ಸುಮಾರು ೧೪ರ ಪ್ರಾಯದ ಒಂಟಿ ಕಾಲಿನ ಕುಂಟ ಹುಡುಗನೊಬ್ಬ ಮಾತ್ರ ವೃತ್ತಾಕಾರದ ರೈಲಿನ ಪಥದ ನಡುವೆ ನಿಂತು, ಹಳೆಯ ಹಸಿರು ಬಟ್ಟೆಯೊಂದನ್ನು ಬೀಸುತ್ತಾ ನಿರ್ವಾಹಕನ ಪಾತ್ರವನ್ನು ಉತ್ಸಾಹದಿಂದ ನಿರ್ವಹಿಸುತ್ತಿದ್ದನು. ಎಂಜಿನ್ ಮತ್ತು ರೈಲು ಡಬ್ಬಗಳ ಸರದಿ, ಮಿಕ್ಕ ಬಾಲಕರುಗಳ ನಡುವೆ ದಿನನಿತ್ಯ ಬದಲಾಗುತ್ತಿದಾದರೂ, ಆ ಒಂಟಿ ಕಾಲಿನ ಬಾಲಕನ ಪಾತ್ರ ಮಾತ್ರ ಎಲ್ಲ ದಿನಗಳಲ್ಲೂ ಮಧ್ಯೆ ನಿಂತ ನಿರ್ವಾಹಕನದೇ ಆಗಿರುತ್ತಿತ್ತು. 

ಒಂದು ದಿನ, ಎಂದಿನಂತೆ ಮದನ್ ಲಾಲರ ಗಮನ ರೈಲಾಟವಾಡುತ್ತಿರುವ ಬಾಲಕರ ಮೇಲಿತ್ತು. ಎಂದಿನಂತೆ ಆ ಒಂಟಿ ಕಾಲಿನ ಬಾಲಕ ಮಧ್ಯೆ ನಿಂತು, ನಿರ್ವಾಹಕನ ಪಾತ್ರವನ್ನು ನಿರ್ವಹಿಸುತ್ತಿದ್ದನು. ಆಟದ ರೈಲಿನ ಮಾರ್ಗದ ಬದಿಯೇ, ಮಹಿಳಾ ಕಾರ್ಮಿಕರುಗಳು ತಮ್ಮ ಕಂದಮ್ಮಗಳನ್ನು ಮಲಗಿಸಿ ಕೆಲಸಕ್ಕೆ ತೆರಳಿದ್ದರು. ಹುಡುಗರ ರೈಲು ಮಲಗಿದ್ದ ಕಂದಮ್ಮಗಳನ್ನು ಸಮೀಪಿಸುತ್ತಲೇ, 'ಕಂದಮ್ಮಗಳು ಮಲಗಿವೆ, ಹುಷಾರಾಗಿ ರೈಲು ಚಲಾಯಿಸಿ' ಎಂದು ನಿರ್ವಾಹಕ ಬಾಲಕ ಕೂಗಿದನು. ಹುಡುಗರು ರೈಲು ಮಾರ್ಗವನ್ನು ಕೊಂಚ ಬದಲಿಸಿ ಚಲಿಸಿದಾಗ, ಮಲಗಿದ ಕಂದಮ್ಮಗಳಿಗೆ ಯಾವ ತೊಂದರೆಯೂ  ಉಂಟಾಗಲಿಲ್ಲ. ನಿರ್ವಾಹಕ ಬಾಲಕನ ಎಚ್ಚರ, ಸೂಕ್ಷ್ಮಮತಿಯಾದ ಮದನ್ ಲಾಲರ ಗಮನಕ್ಕೆ ಬಾರದೇ ಇರಲಿಲ್ಲ. ನಿರ್ವಾಹಕ ಬಾಲಕನನ್ನು ಮಾತನಾಡಿಸುವ ಇಚ್ಛೆ ಅಂದು ಮದನ್ ಲಾಲರಿಗಾಗಿತ್ತು. ಆ ಬಾಲಕನನ್ನು ಮಾತನಾಡಿಸುತ್ತಾ,  'ಪ್ರತಿ ದಿನ ನೀನು ನಿರ್ವಾಹಕನ ಪಾತ್ರವನ್ನೇ ವಹಿಸುವೆ. ಎಂಜಿನ್ ಆಗುವ ಬಯಕೆ ನಿನಗಿಲ್ಲವೆ?' ಎಂಬುದು ಮದನರ ಪ್ರಶ್ನೆಯಾಗಿತ್ತು. 'ನನಗಿರುವುದು ಒಂದೇ ಕಾಲು.  ಅವರುಗಳಂತೆ ನಾನು ಓಡಲಾರೆ. ಹಾಗಾಗಿ ನನಗೆ ಬೇರೆ ದಾರಿಯಿಲ್ಲ. ದಿನ ನಿತ್ಯ ರೈಲ್ವೆ ಗಾರ್ಡ್ ಆಗುವುದೇ ನನ್ನ ಆಟ.  ಇಲ್ಲವಾದಲ್ಲಿ ಅವರುಗಳು ನನ್ನನ್ನು ಆಟಕ್ಕೆ ಸೇರಿಸಿಕೊಳ್ಳರು' ಎಂದ ಬಾಲಕನ ಉತ್ತರವನ್ನು ಕೇಳಿ ಮದನ್ ಲಾಲರಿಗೆ ಕನಿಕರ ಮೂಡಿತು. ಆ ಬಾಲಕನ ಉತ್ತರದಲ್ಲಿ ಜೀವನದ ಕಟು ಸತ್ಯವೊಂದು ಅಡಗಿತ್ತು. 'ಇಲ್ಲದಿರುವ ವಸ್ತುಗಳ ಬಗೆಗಿನ ತುಡಿತ ಎಲ್ಲರನ್ನೂ ಕಾಡುವುದು ಸಹಜ. ಆದರೆ ಈ ಬಾಲಕನ ಚಿಂತನೆಯೇ ಬೇರೆ.  ಒಂದು ಕಾಲಿಲ್ಲದ ಕುಂಟನಾದರೂ, ವಿಷಾದಿಸದೆ ಮಿಕ್ಕ ಬಾಲಕರೊಂದಿಗೆ ಬೆರೆತು ಆಟವಾಡುವ ಮಾರ್ಗವೊಂದನ್ನು ಕಂಡುಕೊಂಡಿದ್ದಾನೆ. ಇದಲ್ಲವೇ ಬದುಕುವ ದಾರಿ' ಎಂದು ಸಾಗಿತ್ತು ಮದನ್ ಲಾಲರ ಅಂದಿನ ವಿಚಾರ ಧಾರೆ. 

ಮತ್ತೊಂದು ದಿನ ಮದನರಿಗೆ, ವ್ಯಕ್ತಿಯೊಬ್ಬ ಆ ಕುಂಟ ಬಾಲಕನಿಗೆ ತಿಂಡಿಯ ಪೊಟ್ಟಣವೊಂದನ್ನು ಕೊಡುತ್ತಿರುವ ದೃಶ್ಯ ಕಂಡು ಬಂತು. ಆ ವ್ಯಕ್ತಿಯ ಬಳಿ ತೆರಳಿದ ಮದನ್ 'ನೀವು ಈ ಬಾಲಕನಿಗೇನಾಗಬೇಕು?' ಎಂದು ಕೇಳಿದರು. ಬಾಲಕನ ಬೆನ್ನು ತಟ್ಟುತ್ತಾ, 'ನನ್ನ ಹೆಸರು ವಿಷ್ಣು ಮಂಡಲ್. ಈ ಬಾಲಕ ನನ್ನ ಮಗ ಸೋನು. ನಾನು ಮತ್ತು ನನ್ನ ಹೆಂಡತಿ ಈ ಕಟ್ಟಡದ ಕೆಲಸ ಮಾಡುತ್ತೇವೆ. ನನ್ನ ತಮ್ಮನೂ ಇಲ್ಲೇ ಕೆಲಸ ಮಾಡುತ್ತಾನೆ. ನಮ್ಮ ಹಳ್ಳಿಯ ಸುಮಾರು ೪೦ ಜನರು ಇದೇ ಕಟ್ಟಡದ ಕೆಲಸ ಮಾಡುತ್ತಾರೆ' ಎಂದು ಆ ವ್ಯಕ್ತಿ ಉತ್ತರಿಸಿದನು. ಕುಂಟು ಬಾಲಕ ಸೋನುವಿನ ತಂದೆ ವಿಷ್ಣುವಿನ ಎಡಗೈ ಇಲ್ಲದಿರುವುದನ್ನು ಮದನ್ ಗಮನಿಸದಿರಲಿಲ್ಲ. 

'ನೀವು ಎಲ್ಲಿಯವರು?' ಎಂಬುದು ಮದನರ ಮರು ಪ್ರಶ್ನೆಯಾಗಿತ್ತು. 

'ನಾವು ದೂರದ ರಾಜ್ಯದವರು. ಸಾವಿರಾರು ಕಿ.ಮೀ. ದೂರದಲ್ಲಿ ನಮ್ಮ ಹಳ್ಳಿ ಇದೆ. ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿಕೊಂಡು ಇಲ್ಲಿಯವರೆಗೆ ಬಂದಿದ್ದೇವೆ' ಎಂಬುದು ವಿಷ್ಣುವಿನ  ಉತ್ತರವಾಗಿತ್ತು. 

'ನೀವಿಲ್ಲಿ ಏನು ಕೆಲಸ ಮಾಡುವಿರಿ?' ಮದನರ ಕುತೂಹಲ ಮುಂದುವರೆದಿತ್ತು. 

'ನನಗೆ ಎಡಗೈ ಇಲ್ಲದಿರುವುದನ್ನು ತಾವೇ ನೋಡಿದ್ದೀರಿ. ಕಟ್ಟಡದ ಕೆಲಸ ನಾನು ಮಾಡಲಾರೆ. ನಾನು ೧೦ನೇ ತರಗತಿವರೆಗೆ ಓದಿದ್ದೇನೆ. ಹಾಗಾಗಿ ಇವರು ನನ್ನನು "ಗೋದಾಮಿನ ರಕ್ಷಕ (Store keeper)" ಎಂದು ನೇಮಿಸಿಕೊಂಡಿದ್ದಾರೆ.'  

'ನಿಮ್ಮ ಸಂಬಳ ಎಷ್ಟು?' ಎಂಬದು ಮದನರ ಮರುಪ್ರಶ್ನೆಯಾಗಿತ್ತು. 

'ನಾನು ಮತ್ತು ನನ್ನ ಹೆಂಡತಿ ಇಬ್ಬರೂ  ಇಲ್ಲಿ ಕೆಲಸ ಮಾಡುತ್ತೇವೆ. ಸಿಮೆಂಟ್ ಚೀಲಗಳ ಲೆಕ್ಕವಿಡುವುದು ನನ್ನ ಕೆಲಸವಾದರೆ, ನಾವಿಬ್ಬರು ಮತ್ತು ನಮ್ಮ ಮಗ ಇಲ್ಲಿನ  ಸಿಮೆಂಟ್ ಗೋದಾಮಿನ  ರಾತ್ರಿ ಕಾವಲುಗಾರರಾಗಿ ಮಲಗುತ್ತೇವೆ. ನಮ್ಮಿಬ್ಬರ ಒಟ್ಟು ಸಂಬಳ  ದಿನವೊಂದಕ್ಕೆ ಸಾವಿರ ರೂಪಾಯಿಗಳೆಂದು ಕೊಡುತ್ತಾರೆ. ಇಡೀ ತಿಂಗಳ ಎಲ್ಲ ದಿನಗಳ ಸಂಬಳವೂ ನಮಗೆ ಸಿಗುತ್ತದೆ' ಎಂದು ಉತ್ತರಿಸುವಾಗ ವಿಷ್ಣು ಉಬ್ಬಿಹೋದಂತೆ ಮದನರಿಗೆ ಕಂಡು ಬಂತು. 'ತಂದೆಯಂತೆ ಮಗ' ಎಂಬ ನಾಣ್ನುಡಿಯನ್ನು ನೆನಪಿಸಿಕೊಂಡ  ಮದನ್ 'ಒಂದೇ ಕೈನವನಾದರೂ ಅಪ್ಪ ದುಡಿಯುವುದನ್ನು ನಿಲ್ಲಿಸಿಲ್ಲ, ಕುಂಟನಾದರೂ ಅವನ ಪುಟ್ಟ ಮಗ ಮಿಕ್ಕ ಬಾಲಕರೊಂದಿಗೆ ಆಡುವುದನ್ನು ಬಿಟ್ಟಿಲ್ಲ. ಜೀವನವೆಂಬುದು ಹಲವು ಉಪಯುಕ್ತ ಪಾಠಗಳನ್ನು ಕಲಿಸುತ್ತೆ' ಎಂದು ಯೋಚಿಸುತ್ತ ವಿಚಾರ ಮಗ್ನರಾದರು. 

ಅಂದು ೨೦೨೦ರ ಮಾರ್ಚ್ ೨೫ರ ದಿನವಾಗಿತ್ತು. ಕೋವಿಡ್ನ ಸಲುವಾಗಿ ದೇಶಾದ್ಯಂತ ಲಾಕ್ಡೌನನ್ನು ಜಾರಿಗೊಳಿಸಲಾಗಿತ್ತು. ಆ ಕಟು ನಿರ್ಧಾರ ಬಡವರ ಪಾಲಿಗೆ ಮಾರಕವಾದುದೆಂಬುದು ಎಲ್ಲರಿಗೂ  ತಿಳಿದಿತ್ತು. ಮದನ್ ಲಾಲರ ಮನೆ ಸಮೀಪದ ಬೃಹತ್ ಕಟ್ಟಡಗಳ ನಿರ್ಮಾಣ ಕಾರ್ಯವೆಲ್ಲಾ  ಸ್ಥಗಿತಗೊಂಡಿತ್ತು. ನಿರ್ಮಾಣ ಕಾರ್ಯದ ಸಾವಿರಾರು ಕಾರ್ಮಿಕರುಗಳಿಗೆ ಕೆಲಸವಿಲ್ಲದಂತಾಗಿತ್ತು. ಆ ಬಡ ಕೆಲಸಗಾರರ ವಾರದ ಸಂಬಳ ನಿಂತು ಹೋಗಿತ್ತು.  ಕೆಲಸವಿಲ್ಲದೇ ಬರಿಗೈಯಲ್ಲಿ ಕಾಲ ತಳ್ಳುತ್ತಿದ್ದ ಬಡ ಕಾರ್ಮಿಕರ ದೃಶ್ಯಗಳು ಮದನರ ಗಮನಕ್ಕೆ ಬಂದಿತ್ತು. ಒಂದು ದಿನ ವಿಷ್ಣು ಮಂಡಲನನ್ನು ಭೇಟಿ ಮಾಡಿದ ಮದನರು ಅವನ ಜೊತೆ ಮಾತಿಗಿಳಿದಿದ್ದರು.  

'ಸ್ವಾಮಿ, ನಾವ್ಗಳು ಸಂಬಳದ ಮುಖ ನೋಡಿ ಹತ್ತು ದಿನಗಳಾಯ್ತು. ನಮ್ಮವರ್ಯಾರ ಹತ್ತಿರವೂ ಹಣವಿಲ್ಲ. ನಮ್ಮ ಹಳ್ಳಿಗಳಿಗೆ ಈ ತಿಂಗಳ ಹಣವನ್ನು ನಾವುಗಳು ಕಳಿಸಲಾಗಿಲ್ಲ. ನಮ್ಮ ಗುತ್ತಿಗೆದಾರ ಒಳ್ಳೆಯವನು. ಅವನು ನಮ್ಮ ಹಳ್ಳಿಯವನೇ. ಎಲ್ಲರಿಗೂ ದಿನಸಿ ಪೊಟ್ಟಣಗಳನ್ನು ಅವನು ವಿತರಿಸಿದ್ದಾನೆ. ಮೇಲಿನ ಗುತ್ತಿಗೆದಾರರಿಂದ ಅವನಿಗೆ ಹಣ ಬಂದಿಲ್ಲವಾಗಿ, ಮುಂದಿನ ದಿನಗಳಲ್ಲಿ ಹಣದ ವಿತರಣೆ ಸಾಧ್ಯವಿಲ್ಲವೆಂದು ಅವನು ನಮ್ಮಗಳಿಗೆ ತಿಳಿಸಿಯಾಗಿದೆ. ಕಟ್ಟಡಗಳ ಕೆಲಸಗಳು ಮತ್ತೆ ಶುರುವಾಗುವ  ಯಾವ ಸೂಚನೆಯೂ ಸಿಕ್ಕಿಲ್ಲ. ಹತ್ತಿರದ ಕೊಳಚೆ ಪ್ರದೇಶದಲ್ಲಿ ವಾಸಿಸುವ ನಮ್ಮ ಹಲವಾರು ಕೆಲಸಗಾರರು, ಮನೆಯ ಬಾಡಿಗೆಗಳನ್ನು ಕಟ್ಟಲಾಗದೆ, ಬೈಗುಳಗಳನ್ನು ಕೇಳಬೇಕಾಗಿ ಬಂದಿದೆ. ಮುಂದೇನು ಎಂಬುದೇ ತಿಳಿಯದು' ಎನ್ನುತ್ತಿದ್ದ ವಿಷ್ಣುವಿನ ದನಿಯಲ್ಲಿ ನೋವಿತ್ತು. 

ಮದನರು ಮಾತು ಮುಂದುವರೆಸಿ 'ವಿಷ್ಣು, ನಾನೊಬ್ಬ ವಕೀಲ. ಕೋರ್ಟಿನಲ್ಲಿ ಹೋರಾಡಿ ನಿಮ್ಮಗಳಿಗೆ ಸ್ವಲ್ಪವಾದರೂ ಸಂಬಳ ಬರುವಂತೆ ಮಾಡಬಲ್ಲೆ. ನಿನ್ನೊಡನಿರುವ ಎಲ್ಲ ಕೆಲಸಗಾರರನ್ನೂ ನನ್ನ ಕಚೇರಿಗೆ ಕರೆತರಬಲ್ಲೆಯ?' ಎಂದು ಕೇಳಿದರು. ನಮ್ಮ ಪರವಾಗಿ ಮಾತಾಡುವರೊಬ್ಬರಿದ್ದಾರೆ ಎಂದು ವಿಷ್ಣುವಿಗೆ ಆಗ ಅನಿಸಿದ್ದು ಸುಳ್ಳಾಗಿತ್ತಿಲ್ಲ. 

ಮಾರನೆಯ ದಿನವೇ ಒಂದೆರಡು ಸ್ನೇಹಿತರೊಂದಿಗೆ ವಿಷ್ಣು, ಮದನರ ಕಚೇರಿ ಬಳಿ ಬಂದಿದ್ದನು. 'ಮಿಕ್ಕವರೆಲ್ಲಾ ಎಲ್ಲಿ?' ಎಂಬುದು ಮದನರ ಪ್ರಶ್ನೆಯಾಗಿತ್ತು.  'ಸಾರ್, ಅವರುಗಳೆಲ್ಲಾ ಹೆದರಿದವರಾಗಿದ್ದಾರೆ. ನಾವುಗಳು ತಮ್ಮ ಬಳಿಗೆ ಬಂದ ವಿಷಯ ನಮ್ಮ ಗುತ್ತಿಗೆದಾರನಿಗೆ ತಿಳಿದರೆ, ಅವನು ಸುಮ್ಮನಿರುವುದಿಲ್ಲ. "ಮೇಲಿನ ಗುತ್ತಿಗೆದಾರರೊಡನೆ ಮಾತನಾಡಿದ್ದೇನೆ, ಸ್ವಲ್ಪವಾದರೂ ಹಣವನ್ನು ತಮ್ಮಗಳಿಗೆ ದೊರಕಿಸಬಲ್ಲೆ. ಸ್ವಲ್ಪ ತಾಳ್ಮೆಯಿಂದಿರಿ" ಎಂದವನು ನಮಗೆ ತಿಳಿಹೇಳಿದ್ದಾಗಿದೆ. ಏನೇ ಆಗಲಿ, ಅವನು ನಮ್ಮ ಹಳ್ಳಿಯವನು. ಎಲ್ಲರಿಗೂ ಅವನಲ್ಲಿ ನಂಬಿಕೆ ಇದೆ. ಆದುದರಿಂದ ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಸಾರ್,' ಎಂಬ ವಿಷ್ಣುವಿನ ಮಾತುಗಳಲ್ಲಿ ಭಯ ಹಾಗು ಮುಗ್ಧತೆಯ ಎರಡೂ ಭಾವಗಳು ಮದನರಿಗೆ ಕಂಡು ಬಂತು. ಇನ್ನು ಮಾತು ಬೆಳಸಿ ಪ್ರಯೋಜನವಿಲ್ಲವೆಂಬ ನಿರ್ಧಾರಕ್ಕೆ ಮದನರು ಬಂದಾಗಿತ್ತು. 

ಕಟ್ಟಡ ನೌಕರರ ಪರಿಸ್ಥಿತಿ ದಿನೇ ದಿನೇ ಚಿಂತಾಜನಕವಾಗುತ್ತಾ ಸಾಗುತ್ತಿದುದನ್ನು ಮದನರು ಗಮನಿಸುತ್ತಲೇ ಇದ್ದರು. ಕೈಯಲ್ಲಿ ಕೆಲಸವಿಲ್ಲದೇ ಅವರುಗಳು ಒಂದು ತಿಂಗಳು ಕಳೆದುದ್ದಾಗಿತ್ತು. ಲಾಕ್ಡೌನಿನಿಂದ ಸಧ್ಯಕ್ಕೆ ಬಿಡುಗಡೆ ದೊರಕದೆಂಬುದು ವಲಸಿಗ ಕೆಲಸಗಾರರೆಲ್ಲರಿಗೂ ತಿಳಿದಿತ್ತು. ಸುತ್ತಲ ೧೦೦ ಕಿ.ಮೀ.ನಷ್ಟು ದೂರದ ಹಳ್ಳಿಗಳ ನೌಕರರು ಕಾಲ್ನಡುಗೆಯಲ್ಲೇ ಹೊರಟು, ತಮ್ಮ ತಮ್ಮ ಹಳ್ಳಿಗಳನ್ನು ಸೇರಿಯಾಗಿತ್ತು. ದೂರದ ರಾಜ್ಯಗಳ ವಲಸೆ ಕೆಲಸಗಾರರೂ ತಮ್ಮ ಹಳ್ಳಿಗಳನ್ನು ಹೇಗಾದರೂ ತಲುಪುವ ತವಕದಲ್ಲಿದ್ದರು. ಸರಕಾರ, ಗುತ್ತಿಗೆದಾರರು ಮತ್ತು ಕೆಲವು ಸೇವಾ ಸಂಸ್ಥೆಗಳಿಂದ ದಿನಸಿ  ಪೊಟ್ಟಣಗಳೇನೋ ಅವರುಗಳಿಗೆ ಆಗೀಗ ಬರುತ್ತಿತ್ತು. ಆದರೆ ಆಹಾರದ ವಿತರಣೆ ಸಾಕಾಗುತ್ತಿರಲಿಲ್ಲ. ಕೆಲಸವೇ ಇಲ್ಲದ ಕೈಗಳಿಗೆ ಸಂಬಳವೊಂದು ದೂರದ ಕನಸಾಗಿತ್ತು.  ಈ ನಡುವೆ ದೂರದ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕೊಂಡೊಯ್ಯಲು ರೈಲುಗಳ ವ್ಯವಸ್ಥೆಯನ್ನು ಸರಕಾರ ಮಾಡುತ್ತಿರುವ ಬಗ್ಗೆ ಹಲವಾರು ಮೂಲಗಳಿಂದ ಸುದ್ದಿ ಬರತೊಡಗಿತ್ತು. 

ಹೀಗಿರುವಾಗ ಒಂದು ದಿನ ಬೆಳಗಾಗಿ ಏಳುವ ಹೊತ್ತಿಗಾಗಲೇ ಮದನರನ್ನು ಭಯಾನಕ ಸುದ್ದಿಯೊಂದು ಆಘಾತಗೊಳಿಸಿತ್ತು. ಕಳೆದ ರಾತ್ರಿ, ಮದನರ ಮನೆಯಿಂದ ಕೇವಲ ೫೦ ಕಿ.ಮೀ. ದೂರದ ರಾಜ್ಯದ ಹೆದ್ದಾರಿಯ ಪಾದಚಾರಿಗಳ ಪಥದಲ್ಲಿ ಮಲಗಿದ್ದ ೧೫ ವಲಸಿಗ ಕೆಲಸಗಾರರ ಮೇಲೆ ವೇಗವಾಗಿ ಬಂದ ಬಸ್ಸೊಂದು ಹರಿದು, ಅವರುಗಳೆಲ್ಲರೂ ಸ್ಥಳದಲ್ಲೇ ಮೃತರಾಗಿದ್ದರು. ಕಾಲ್ನಡುಗೆಯಲ್ಲಿ  ಹೊರಟಿದ್ದ ಸಹಸ್ರಾರು ಕಿ.ಮೀ.ಗಳ ದೂರದ ಪ್ರಯಾಣ,  ಅವರುಗಳ ಸಾವಿನೊಂದಿಗೆ ಮುಗಿದಿತ್ತು.  ಮದನ್ ಲಾಲರ ಊರಿನಿಂದ ತಮ್ಮ ಹಳ್ಳಿಗಳ ಕಡೆ ಕೊಂಡೊಯ್ಯುವ ರೈಲುಬಂಡಿಗಳನ್ನು ಹತ್ತಲು ಕಾಲ್ನಡುಗೆಯಲ್ಲಿ  ಹೊರಟಿದ್ದ ೧೮ ವಲಸಿಗರ ಪೈಕಿ ೧೫ ಜನ ಮೃತಪಟ್ಟಿದ್ದು, ಮೂವರು ಮಾತ್ರ ಬದುಕುಳಿದಿದ್ದರು. ಹತ್ತಲು ಹೊರಟಿದ್ದ ರೈಲುಗಾಡಿ, ಯಾವ ಕಾರಣಕ್ಕೂ ತಪ್ಪದಂತೆ ಯೋಜಿಸಿದ್ದ ಅವರುಗಳ ಪೈಕಿ, ೧೫ ಜನಗಳಿಗೆ  ಜೀವನ ಪಯಣವೇ ತಪ್ಪಿಹೋಗಿದ್ದು ಮಾತ್ರ ದೊಡ್ಡ ವಿಪರ್ಯಾಸವಾಗಿತ್ತು.  

ಅಪಘಾತದಲ್ಲಿ ಬದುಕುಳಿದ ಮೂವರು ಕೂಡ ಮಲಗಿದ್ದು ಅದೇ ಹೆದ್ದಾರಿಯ ಪಾದಚಾರಿಗಳ ಪಥದಲ್ಲಿಯೆ.  ಆದರೂ ಅವರುಗಳು ನಿದ್ರೆಗಿನ್ನು ಜಾರಿರದ ಕಾರಣ ಬದುಕುಳಿದಿದ್ದರು. 'ಎರಡು ದಿನಗಳ ಹಿಂದಿನ ಬೆಳಗ್ಗೆ ೧೦ರ ಸಮಯಕ್ಕೆ ನಾವುಗಳು ನಮ್ಮ ಊರುನಿಂದ ಕಾಲ್ನಡುಗೆಯಲ್ಲಿ ಹೊರಟೆವು. ಸಹಸ್ರಾರು ಮೈಲು ದೂರದ ನಮ್ಮ ಹಳ್ಳಿಯನ್ನು ತಲುಪುವುದು ನಮ್ಮ ಉದ್ದೇಶವಾಗಿತ್ತು. ಸುಮಾರು ೫೦ ಕಿ.ಮೀ.ನಷ್ಟು ದೂರವನ್ನು ಕ್ರಮಿಸಿ, ನಮ್ಮನ್ನು ಕೊಂಡೊಯ್ಯುವ ರೈಲುಬಂಡಿ ಹೊರಡುವ ರೈಲು ನಿಲ್ದಾಣವನ್ನು ತಲುಪುವುದರಿಲ್ಲಿದ್ದೆವು. ರೈಲುಬಂಡಿ ಹೊರಡಲು ಇನ್ನೆರಡು ದಿನಗಳ ಸಮಯಾವ ಕಾಶವಿದೆಯೆಂದು ತಿಳಿದಿತ್ತು.  ಅಷ್ಟು ಹೊತ್ತಿಗಾಗಲೇ ಸಮಯ ರಾತ್ರಿ ೮ ಘಂಟೆಯಾಗಿತ್ತು. ೫೦ ಕಿ.ಮೀ.ನಷ್ಟು ದೂರ ನಡೆದು ನಾವೆಲ್ಲರೂ ದಣಿದಿದ್ದೆವು. ಲಾಕ್ಡೌನ್ ದಿನಗಳಾದ್ದರಿಂದ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಬಹಳ ಕಮ್ಮಿಯಿತ್ತು. ಹೆದ್ದಾರಿಯ ಬದುವಿನಲ್ಲೇ ವಿರಮಿಸಲು ಕುಳಿತ ನಾವುಗಳು ರೊಟ್ಟಿ-ಪಲ್ಯಗಳನ್ನು ತಿನ್ನುವಷ್ಟರಲ್ಲೇ, ನಮ್ಮಲ್ಲಿನ ಹಲವರುಗಳು ನಿದ್ದೆಗೆ ಜಾರಿದ್ದಾಗಿತ್ತು. ವೇಗವಾಗಿ ಅಡ್ಡಾದಿಡ್ಡಿ ಚಲಿಸುತ್ತಾ ಬರುತ್ತಿದ್ದ ಬಸ್ಸೊಂದನ್ನು ಎಚ್ಚರವಿದ್ದ ನಾವು ಮೂವರೂ ಮುಂಚೆಯೇ ನೋಡಿದ್ದೆವು. ಬಸ್ಸು ಮಾಮೂಲಿನಂತೆ ಹೆದ್ದಾರಿಯಲ್ಲೇ ಹೋಗುವುದೆಂದು ಎಣಿಸಿದ್ದೆವು.  ನಮ್ಮವರು ನಿದ್ರಿಸುತ್ತಿದ್ದ ಸ್ಥಳಕ್ಕೆ, ಸ್ವಲ್ಪ ದೂರದಿಂದ ಧಾವಿಸಿ ಬರುತ್ತಿದ್ದ ಬಸ್ಸು ನಿಯಂತ್ರಣ ತಪ್ಪಿ ಪಾದಚಾರಿಗಳ ಪಥದ ಕಟ್ಟೆಯನ್ನೇರಿತ್ತು. ಎಚ್ಚರವಿದ್ದ ನಾವುಗಳು ಎಷ್ಟೇ ಕಿರುಚಾಡಿದರೂ, ಮಲಗಿದ್ದ ನಮ್ಮವರುಗಳು ಏಳಲಿಲ್ಲ. ಬಸ್ ಚಾಲಕ ಬಸ್ಸನ್ನು ನಿಯಂತ್ರಿಸಲಾಗಲಿಲ್ಲ. ನೋಡು ನೋಡುತ್ತಲೇ ಆ ಪಾಪಿ ಬಸ್ಸು ಮಲಗಿದ್ದ  ನಮ್ಮವರುಗಳ ಮೇಲೆ ಹರಿದು ಅವರುಗಳ ಪ್ರಾಣಗಳನ್ನು ತೆಗೆದಿತ್ತು' ಎಂದು ವಿವರಿಸುತ್ತಾ ಟಿ.ವಿ. ಸುದ್ದಿಗಾರರ ಮುಂದೆ ರೋದಿಸಿದವನೇ ಸೋನು ಮಂಡಲ್ ಎಂದು ತಿಳಿಯಲು ಮದನ್ ಲಾಲರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. 

ಕೂಡಲೇ ಮದನ್ ಲಾಲರ ಕಣ್ಣು ಮೃತರ ಪಟ್ಟಿಯ ಮೇಲೆ ಹರಿಯಿತು. ಸತ್ತವರ ಪೈಕಿ ಸೋನುವಿನ ತಂದೆ ವಿಷ್ಣು ಮಂಡಲರ ಹೆಸರೂ ಇದ್ದುದನ್ನು ನೋಡಿ ಅವರು ಬೇಸರಗೊಂಡರು. 'ಇದೆಂತಹ ದುರಂತ? ದಿನ ನಿತ್ಯ ರೈಲುಗಾಡಿಯ ಆಟದಲ್ಲಿ ನಿರ್ವಾಹಕನಾಗುತ್ತಿದ್ದ ಸೋನು, ಅತ್ಯಾವಶ್ಯಕವಾದಾಗ  ಬಸ್ಸೊಂದನ್ನು ನಿಲ್ಲಿಸಿ ತನ್ನವರ ಪ್ರಾಣಗಳನ್ನು ಉಳಿಸಿಕೊಳ್ಳದಾದನೆ?' ಎನಿಸಿದ ಮದನ್ ಲಾಲರ ಕಣ್ಣುಗಳು ಅಪಘಾತದ ಕರಾಳ ದೃಶ್ಯಗಳ ಮೇಲೆ ಬಿತ್ತು. ಹೆದ್ದಾರಿಯ ಕಾಲ್ನಡುಗೆಯ ಪಥದ  ಭರ್ತಿ ಚದುರಿ ಹರಡಿದ್ದ ರುಂಡ-ಮುಂಡಗಳು, ಕೈ-ಕಾಲುಗಳು, ಸೂಟ್ಕೇಸುಗಳು, ರೊಟ್ಟಿಯ ಚೂರುಗಳ ದೃಶ್ಯ ಎಲ್ಲರ ಮನ ಕಲಕುವಂತ್ತಿತ್ತು.   

 'ಅಂದು ಇಡೀ ಬಸ್ ಖಾಲಿಯಿತ್ತು. ಬಸ್ಸನ್ನು ನಾನು ಗ್ಯಾರೇಜ್ ಕಡೆಗೆ ಚಲಾಯಿಸುತ್ತಿದ್ದೆ. ತಡ ರಾತ್ರಿಯಾದುದರಿಂದ ಬಸ್ಸನ್ನು ನಾನು ವೇಗವಾಗೇ ಓಡಿಸುತ್ತಿದ್ದೆ. ರಸ್ತೆಯ ಬದಿಯಲ್ಲೇ ಹಲವರು ಮಲಗಿದ್ದುದನ್ನು ನಾನು ದೂರದಿಂದಲೇ ನೋಡಿದ್ದೆ.  ಇದ್ದಕ್ಕಿದ್ದಂತೆ ನನಗೆ ಬಸ್ ಮೇಲಿನ ನಿಯಂತ್ರಣ ತಪ್ಪಿತು. ಬ್ರೇಕ್ ಹಾಕಿದ್ದು, ಜೋರಾಗಿ ಹಾರ್ನ್ ಬಾರಿಸಿದ್ದು, ಪ್ರಯೋಜನಕ್ಕೆ ಬರಲಿಲ್ಲ.  ನಿಯಂತ್ರಣ ತಪ್ಪಿದ ಬಸ್ಸು ಕಾಲ್ನಡುಗೆಯ ಕಟ್ಟೆಯನ್ನು ಹತ್ತೇ ಬಿಟ್ಟಿತ್ತು. ನೋಡು ನೋಡುವಷ್ಟರಲ್ಲೇ ಮಲಗಿದ್ದ ಹಲವರ ಮೇಲೆ ಬಸ್ಸು ಹರಿದೇ ಬಿಟ್ಟಿತ್ತು. ಬಡ ವಲಸಿಗ ಕೆಲಸಗಾರರ ಸಾವಿಗೆ ಕಾರಣನಾದ ನನ್ನನ್ನು ಕ್ಷಮಿಸಿ' ಎಂದು ಕೋರಿಕೊಂಡ ಬಸ್ ಚಾಲಕನ ಮುಖದಲ್ಲೂ ವಿಷಾದವಿತ್ತು. 

ಅಪಘಾತ ಜರುಗಿದ ರಾಜ್ಯದ ಮುಖ್ಯ ಮಂತ್ರಿಗಳು ಮೃತ ಪಟ್ಟವರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದರು. ವಲಸಿಗರ ರಾಜ್ಯದ ಮುಖ್ಯ ಮಂತ್ರಿಗಳು ಕೂಡ ಅಷ್ಟೇ ಮೊತ್ತದ ಪರಿಹಾರವನ್ನು ಸಂಬಂಧ ಪಟ್ಟ ಕುಟುಂಬಗಳಿಗೆ ಘೋಷಿಸಿದ್ದರು. ಹಣದ ರಾಶಿ ಹಾರಿ ಹೋದ ಜೀವಗಳನ್ನು ಮರಳಿಸಬಲ್ಲುದೆ, ಎಂಬುದು ಮದನ್ ಲಾಲರ ಚಿಂತೆಯಾಗಿತ್ತು. ಮನೆಯಲ್ಲಿ ಕೂತು  ಮೊಬೈಲುಗಳನ್ನು ಒತ್ತುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ವಿತಂಡ ವಾದಿಗಳು ಅಪಘಾತದ ಬಗ್ಗೆ ಹರಿಬಿಟ್ಟಿದ್ದ ಉಡಾಫೆ ಟಿಪ್ಪಣಿಗಳು ಮದನರನ್ನು ಕುಪಿತರನ್ನಾಗಿಸಿತ್ತು. 'ಅಪಘಾತಕ್ಕೆ ವಲಸಿಗರ ಬೇಜಾಬ್ದಾರಿಯೇ ಕಾರಣ. ಅವರುಗಳು ಬೇರೆಯವರನ್ನು ಬೈದು ಪ್ರಯೋಜನವಿಲ್ಲ. ಹೆದ್ದಾರಿಯ ಕಾಲ್ನಡುಗೆಯ ಪಥದಲ್ಲಿ ಮಲಗುವ ಮುನ್ನ ಅವರುಗಳು ಕೊಂಚ ಯೋಚಿಸಬೇಕಿತ್ತು. ಅವರುಗಳ ಬೇಜಾಬ್ದಾರಿಗೆ ಪ್ರಾಯಶಃ ಅವರುಗಳ ಕುಡಿತದ ಚಟವೇ ಕಾರಣವಿರಬೇಕು. ಹೆದ್ದಾರಿಯ ಪಕ್ಕದಲ್ಲೇ ಇದ್ದ ದೊಡ್ಡ ಮೈದಾನದಲ್ಲೇಕೆ ಅವರುಗಳು ಮಲಗಲಿಲ್ಲ? ಆ ಮೂರ್ಖರ ಬೇಜಾಬ್ದಾರಿಯಿಂದುಂಟಾದ ಸಾವುಗಳಿಗೆ ಭಾರಿ ಮೊತ್ತದ ಸರಕಾರಿ ಪರಿಹಾರವೇಕೆ?' ಎಂಬ ನಿಷ್ಕರುಣರ  ಮಾತುಗಳನ್ನು ಫೇಸ್ಬುಕ್/ವಾಟ್ಸಪ್ಪುಗಳಲ್ಲಿ ಓದಿದ ಮದನರ ಮನಸ್ಸು ರೋಸಿ ಹೋಗಿತ್ತು. 'ಅತ್ಯಾಚಾರದ ಘಟನೆಗಳು ನಡೆದಾಗ, ಅತ್ಯಾಚಾರಕ್ಕೊಳಗಾದ ಬಲಿಪಶುಗಳದ್ದೆ ತಪ್ಪೆನ್ನುವ ನಮ್ಮ ಜನಗಳಿಂದ ಬೇರ್ಯಾವ ರೀತಿಯ ಮಾತುಗಳನ್ನು ನೀರಿಕ್ಷಿಸಲು ಸಾಧ್ಯ?' ಎಂಬುದು ಮದನರ್ ಮನಸ್ಸಿನ ಉದ್ಗಾರವಾಗಿತ್ತು. 

ಮದನ್ ಲಾಲರ ಯೋಚನಾ ಲಹರಿ ಮುಂದುವರೆದಿತ್ತು......  'ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡವರ, ಬಾಡಿಗೆ ಮನೆಗಳಿಂದ ಹೊರದೂಡಲ್ಪಟ್ಟವರ, ಹೆಂಡತಿ ಮಕ್ಕಳುಗಳೊಡನೆ ಸಾಮಾನುಗಳನ್ನು ಹೊತ್ತು  ಸುಡುಬಿಸಿಲ ನಡುವೆ ಕಾಲ್ನಡುಗೆಯಲ್ಲಿ ತಮ್ಮೂರಿನತ್ತ ತೆರಳುತ್ತಿರುವರ ನೋವು, ಹವಾನಿಯಂತ್ರಿತ ಕೋಣೆಯ ಆರಾಮದ ಕುರ್ಚಿಗಳ ಮೇಲೆ ಕುಳಿತು ಬರೆಯುವ ಈ ಸ್ವಯಂ ನಿಯೋಜಿತ ಸುದ್ದಿ ವಿಶ್ಲೇಷಕರಿಗೆ ತಿಳಿಯುತ್ತದೆಯೆ? ಅಸಹಾಯಕತೆ ಮತ್ತು ಆಯಾಸದಿಂದ ದಣಿದ ಮನಸ್ಸುಗಳಲ್ಲುಂಟಾದ ಆಘಾತಗಳಿಂದ  ವಿವೇಚನೆ ಕಳೆದು ಹೋಗುವುದು  ಸಹಜವಲ್ಲವೆ? ಕೋರ್ಟಿನ  ನ್ಯಾಯಾಧೀಶರುಗಳಿಗೆ ಅಂತಹ ವಲಸಿಗರ ಮೇಲೆ ಅನುಕಂಪ ಮೂಡಲಾರದೆ?'

ಲಾಕ್ಡೌನ್ ಜಾರಿಗೊಂಡನಂತರ, ರೈಲು ಮತ್ತು ರಸ್ತೆ ಅಪಘಾತಗಳಲ್ಲಿ ಸುಮಾರು ೭೨ರಷ್ಟು ವಲಸಿಗರು ಮೃತಪಟ್ಟಿದ್ದಾರೆಂದು ಕೇಂದ್ರ ಸರಕಾರಕ್ಕೆ ತಿಳಿದಿತ್ತು. ಇನ್ನೂ ಹೆಚ್ಚು ಜನರು ಹೊಟ್ಟೆಗಿಲ್ಲದೆ, ಕುಡಿಯಲು ನೀರಿಲ್ಲದೆ ಮತ್ತು ಬಿಸಿಲಿನ ತಾಪವನ್ನು ತಾಳಲಾರದೆ ಸತ್ತಿದ್ದರು. ೨೦೨೦ರ ಮಾರ್ಚ್ ೩೧ರ ದಿನ ಕೇಂದ್ರ ಸರಕಾರ  'ವಲಸಿಗರ್ಯಾರೂ ರಸ್ತೆ ಮತ್ತು ರೈಲ್ವೆ ಹಳಿಗಳ ಮೇಲೆ ಕಾಲ್ನಡುಗೆಯಲ್ಲಿ ತಮ್ಮ ಹಳ್ಳಿಗಳತ್ತ ನಡೆಯುವಂತೆ ಮಾಡುವುದಿಲ್ಲ. ಅವರುಗಳೆಲ್ಲರಿಗೂ ವಸತಿ ಹಾಗೂ ಆಹಾರದ ವ್ಯವಸ್ಥೆಗಳನ್ನು ಅವರುಗಳಿರುವಲ್ಲಿಯೇ ಮಾಡಿಕೊಡುತ್ತೇವೆಂಬ' ವಾಗ್ದಾನವನ್ನು ಪರಮೋಚ್ಚ ನ್ಯಾಯಾಲಯಕ್ಕೆ ನೀಡಿದ್ದಾಗಿತ್ತು. ಅದರನಂತರದ ದಿನಗಳಲ್ಲಿ ವಲಸಿಗರಿಗೆ ತಮ್ಮ ತಮ್ಮ ಊರುಗಳತ್ತ ಪ್ರಯಾಣಿಸಲು ಬಸ್ ಹಾಗು ರೈಲುಗಳ ವ್ಯವಸ್ಥೆಯನ್ನು ಕಲ್ಪಿಸುವ ಪ್ರಯತ್ನಗಳನ್ನು ಸರಕಾರಗಳು ಮಾಡಿದ್ದವು. ಆದರೂ ವ್ಯವಸ್ಥೆ ಸಮರ್ಪಕವಾಗಿರದೆ, ರೈಲು-ಬಸ್ಸುಗಳು ಹೊರಡುವ ಬಗ್ಗೆ ತಪ್ಪು ಮಾಹಿತಿಗಳು, ವದ೦ತಿಗಳು ಹರಿದಾಡಿ ವಲಸಿಗರನ್ನು ಹೈರಾಣಾಗಿಸಿದ್ದವು. ರದ್ದಾದ ಮತ್ತು ತಪ್ಪಿ ಹೋದ ರೈಲು-ಬಸ್ಸುಗಳಿಗಂತೂ ಲೆಕ್ಕವೇ ಇಲ್ಲದಂತಾಗಿ, ಪ್ರಯಾಣಕ್ಕೆ ಕಟ್ಟಿದ ಹಣ ವಾಪಸ್ಸು ಪಡೆಯುವುದು ಹೇಗೆಂಬ ಮಾಹಿತಿ ವಲಸಿಗರಿಗೆ ತಿಳಿಯದಾಗಿತ್ತು. ಹೀಗಾಗಿ ರೈಲ್ವೆ ಹಳಿಗಳ ಮೇಲೆ, ಹೆದ್ದಾರಿಯ ಕಾಲ್ನಡುಗೆಯ ಪಥಗಳ ಮೇಲೆ ವಲಸಿಗ ಕೆಲಸಗಾರರು ಮಲಗುವಂತಹ ಪರಿಸ್ಥಿತಿ ಏಕೆ ಉಂಟಾಯಿತು ಎಂಬುದು ಸಂಬಂಧಪಟ್ಟವರಿಗೆಲ್ಲ ತಿಳಿದ ವಿಷಯವೇ ಆಗಿತ್ತು. ಹಸಿವು, ಬಾಯಾರಿಕೆ ಮತ್ತು ದಣಿವಿನಿಂದ ಬಳಲಿ ನಿದ್ರಿಸುತ್ತಿದ್ದ ಅವರುಗಳನ್ನು ಓಡುತ್ತಿರುವ ರೈಲು-ಬಸ್ಸುಗಳ ಶಬ್ದ ಕೂಡ  ಎಚ್ಚರಿಸಲಾಗದಿದ್ದುದು ದುರಂತವೇ ಸರಿ. 'ರೈಲು-ಬಸ್ಸುಗಳ ಪಥದ ಮೇಲೆ ಚದುರಿ ಬಿದ್ದ ವಲಸಿಗರ ಕಾಲು-ಕೈಗಳಿಂದಲೇ ನಮ್ಮ ರಸ್ತೆಗಳು, ಸೇತುವೆಗಳು, ಅಣೆಕಟ್ಟುಗಳು ನಿರ್ಮಾಣಗೊಂಡಿದ್ದೆಂಬುದನ್ನು ಯಾರೂ ಮರೆಯುವಂತಿಲ್ಲ. ಅವರುಗಳ ಛಿದ್ರವಾದ ದೇಹಗಳ ಸುತ್ತ ಚದುರಿ ಬಿದ್ದ            ರೊಟ್ಟಿಗಳನ್ನೇನೋ ಅವರುಗಳೇ ತಯಾರಿಸಿದ್ದು. ಆದರೆ ಅವರುಗಳ ಪ್ರಾಣಗಳನ್ನು  ಹರಣ ಮಾಡಿದ್ದ  ಸಾವುಗಳನ್ನು ಮಾತ್ರ ಅವರುಗಳು ತಂದುಕೊಂಡಿದ್ದೆಂದು ಹೇಳಲಾಗದು' ಎಂಬ ಹೊಸ ವಾದ ಸರಣಿಯೊಂದನ್ನು ಮದನರ ಮನಸ್ಸು ಯೋಚಿಸುತ್ತಿತ್ತು. 

'ಸಂತ್ರಸ್ತರ ಕಣ್ಣು-ಕಿವಿಗಳ ತುಡಿತಗಳನ್ನು ಗಮನಿಸುವ ಹಾಗೂ ಅವರುಗಳ ಹೃದಯದ ಮಿಡಿತಗಳನ್ನು ಅರಿಯುವ ಅಂತಃಕರಣವೇ ಅನುಕಂಪದ ಮೂಲ'ವೆಂಬ ಸಮಾಜ ಶಾಸ್ತ್ರಜ್ಞ ಆಲ್ಫ್ರೆಡ್ ಅಡ್ಲರರ ಮಾತುಗಳು  ಮದನ್ ಲಾಲರ ಕಿವಿಯಲ್ಲಿ ರಿಂಗಣಿಸುತ್ತಿದ್ದವು. 

                                                                                                ***

ಮದನ್ ಲಾಲ್ ಮತ್ತು ಸಲೋನಿಯವರು ಬಾಲ್ಯ ಸ್ನೇಹಿತರೂ ಹಾಗೂ ಸಹಪಾಠಿಗಳಾಗಿದ್ದವರು. ಬೇರೆ ರಾಜ್ಯವೊಂದರ ಸರ್ಕಾರಿ ಅಧಿಕಾರಣಿಯಾಗಿದ್ದರೂ ಸಲೋನಿ, ಮದನ್ ಲಾಲರ ಸಂಪರ್ಕದಲ್ಲಿದ್ದರು. ವಕೀಲ ಮದನ್ ಲಾಲರ ಕಾನೂನಿನ ಜ್ಞಾನ ಹಾಗೂ ಬಡವರುಗಳ ಮೇಲಿನ ಕಳಕಳಿಯ ಬಗ್ಗೆ  ಸಲೋನಿಗೆ ಅಪಾರ ಮೆಚ್ಚುಗೆಯಿತ್ತು. ಬಡ ಕೆಲಸಗಾರರ ನೂರಾರು ಕಾನೂನಿನ ಹೋರಾಟಗಳನ್ನು ಯಶಸ್ವಿಯಾಗಿ ಮದನ್ ಲಾಲರು ನಿರ್ವಹಿಸಿದ್ದ ವಿಷಯ ಸಲೋನಿಗಿ ತಿಳಿದಿತ್ತು.  ಕಳೆದ ವರ್ಷ, ತಮ್ಮ ರಾಜ್ಯದ ಜಿಲ್ಲೆಯೊಂದರ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಅಧಿಕಾರಿಣಿಯಾಗಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಹಾಗಾಗಿ ಮದನ್ ಲಾಲರಿಂದ ಆಗಾಗ ತಮ್ಮ ಇಲಾಖೆಗೆ ಸಂಬಂಧಪಟ್ಟಂತಹ ಕಾನೂನಿನ ಸಲಹೆಯನ್ನು ಸಲೋನಿ ಪಡೆಯುತ್ತಿದ್ದುದು  ಸಾಮಾನ್ಯವಾಗಿತ್ತು. ತನ್ನ ಇಲಾಖೆಗೆ ಸಂಬಂಧಪಟ್ಟಂತಹ ರಾಜ್ಯ ಹಾಗೂ ರಾಷ್ಟ್ರದ ಆಗು-ಹೋಗುಗಳು ಮತ್ತು ಅಂಕಿ-ಅಂಶಗಳು  ದಕ್ಷ ಅಧಿಕಾರಿಣಿಯಾಗಿದ್ದ ಸಲೋನಿಯವರ ಬೆರಳ ತುದಿಯಲ್ಲೇ ಇರುತ್ತಿತ್ತು. 

ಒಂದು ಭಾನುವಾರದ ಬೆಳಗ್ಗೆ ಸಲೋನಿ, ಮದನ್ ಲಾಲರಿಗೆ ಫೋನಾಯಿಸಿದ್ದರು. 'ಮದನ್ ಹೇಗಿದ್ದೀರಿ? ಇಂಟರ್ನೆಟ್ನಲ್ಲಿ, ನಿಮ್ಮ ರಾಜ್ಯದಲ್ಲಿ ನಡೆದ ಹೆದ್ದಾರಿ ಬಸ್ ದುರ್ಘಟನೆಯ ಬಗ್ಗೆ ತಾವು ಬರೆದ ವಿಶ್ಲೇಷಣೆಯನ್ನು ಓದಿದೆ. ದುರ್ಘಟನೆಯಲ್ಲಿ ೧೫ ಜನ ಅಮಾಯಕ ವಲಸಿಗರ ಸಾವು ಸಂಭವಿಸಿದ್ದನ್ನು ಕೇಳಿ ನನ್ನ ಮನಸ್ಸಿಗೆ ನೋವಾಯಿತು. ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರವನ್ನೊದಗಿಸಲು, ತಾವು ಕಾನೂನಿನ ಹೋರಾಟ ಕೈಗೆತ್ತಿಕೊಂಡಿರುವ ವಿಷಯ ತಿಳಿಯಿತು. ತಮ್ಮ ಹೋರಾಟ ಕೈಗೂಡಿದಲ್ಲಿ, ಇಡೀ ರಾಷ್ಟ್ರದ ವಲಸಿಗ ಕೆಲಸಗಾರರ ಸೇವಾ ನಿಯಮಗಳಲ್ಲಿ ಮಾರ್ಪಾಡುಂಟಾಗಿ, ಅವರುಗಳ ಜೀವನ ಹೆಚ್ಚು ಸುಗಮವಾಗಬಹುದೆಂಬ ನಂಬಿಕೆ ನನಗಿದೆ. ಇಲ್ಲಿ ನನ್ನ ಇಲಾಖೆಯ ವ್ಯಾಪ್ತಿಯು ಕೂಡ ವಲಸಿಗ ಕೆಲಸಗಾರರಿಗೆ ಸಂಬಂಧಪಟ್ಟದ್ದಾದುದರಿಂದ, ತಮ್ಮಿಂದ ಕೆಲವು ಸಲಹೆಗಳನ್ನು ಪಡೆಯೋಣವೆಂದು ತಮಗೆ ಕರೆ ಮಾಡಿದ್ದೇನೆ. ನನ್ನೊಂದಿಗೆ ಮಾತನಾಡಲು ತಮಗೆ ಸ್ವಲ್ಪ ಸಮಯವಿದೆಯೆ?'

'ಪ್ರಾಮಾಣಿಕವಾಗಿ ಸಲಹೆ ಕೇಳುವ ತಮಗೆ ನನ್ನ ಬಳಿ ಯಾವಾಗಲೂ ಸಮಯವಿದ್ದೇ ಇರುತ್ತದೆ. ತಮ್ಮ ಕಾರ್ಯಬದ್ಧತೆಯ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಆದರೆ ತಮ್ಮ ಸಮಸ್ಯೆಗಳಿಗೆ ದೀರ್ಘವಾದ ಚರ್ಚೆ ಅವಶ್ಯಕವಿರಬಹುದೆಂದು ನನ್ನ ಅನಿಸಿಕೆ. ತಮ್ಮ ಸಮಸ್ಯೆಗಳನ್ನು ವಿವರಿಸಿ ತಾವು ಇ-ಅಂಚೆಯೊಂದನ್ನು ಕಳುಹಿಸಬಾರದೇಕೆ?' ಎಂದು ಉತ್ತರಿಸಿದರು ಮದನ್. 

ಮಾರನೆಯ ದಿನವೇ ಮದನರ ಕೈಸೇರಿದ ಇ-ಅಂಚೆ ಹೀಗಿತ್ತು. 'ಮದನ್ ಲಾಲರವರಿಗೆ...., ನನ್ನ ಇಲಾಖೆಗೆ ಸಂಬಂಧಪಟ್ಟಂತಹ ಕೆಲವು ವಿಷಯಗಳ ಬಗ್ಗೆ ತಮ್ಮ ಸಲಹೆಯನ್ನು, ನಾನು ವೈಯಕ್ತಿಕವಾಗಿ ಕೇಳುತ್ತಿದ್ದೇನೆ. ನಿಮಗೆ ತಿಳಿದಿರುವಂತೆ ನಾನು ಬೇರೊಂದು ರಾಜ್ಯವೊಂದರಲ್ಲಿ ಸೇವೆ ಸಲ್ಲಿಸುತ್ತಿರುತ್ತೇನೆ. ನನ್ನ ಇಲಾಖೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ, ನನ್ನ ರಾಜ್ಯದ ಪರಿಸ್ಥಿತಿಗಳ ಅರಿವು ಮತ್ತು ನಮ್ಮ ಹಿರಿಯಧಿಕಾರಿಗಳ ಸಮ್ಮತಿಯೂ ಮುಖ್ಯ ಎಂಬುದು ನನಗೆ ಗೊತ್ತು. 

ಕೃಷಿ ಕ್ಷೇತ್ರವನ್ನು ಹೊರತು ಪಡಿಸಿ, ನಿರ್ಮಾಣ ಕ್ಷೇತ್ರ  ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬುದು ತಮಗೆ ಗೊತ್ತು. ನಮ್ಮ ದೇಶದಲ್ಲಿ ಸುಮಾರು  ೧೪ ಕೋಟಿಗಳಷ್ಟು ವಲಸಿಗ ಕೆಲಸಗಾರರಿದ್ದು, ಅವರುಗಳ ಪೈಕಿ ೫ ಕೋಟಿಯಷ್ಟು ಕೆಲಸಗಾರರು ದುಡಿಯುವುದು ನಿರ್ಮಾಣ ಕ್ಷೇತ್ರದಲ್ಲಿ. ನಮ್ಮ ರಾಜ್ಯದ ನಾಲ್ಕು ನಗರಗಳಲ್ಲಿ, ಹಲವಾರು ಭಾರಿ ನಿರ್ಮಾಣ ಕ್ಷೇತ್ರದ ಕಂಪನಿಗಳು, ನೂರಾರು ಬೃಹತ್ ಕಟ್ಟಡಗಳ ನಿರ್ಮಾಣ ಮಾಡುತ್ತಿವೆ. ಆದರೆ ನಾನು ನಮ್ಮ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಣಿ ಮಾತ್ರ. ಕಳೆದ ಮಾರ್ಚ್ ೨೫ರಂದು ದೇಶಾದ್ಯಂತ ಜಾರಿಗೊಂಡ ಲಾಕ್ಡೌನ್, ನಿರ್ಮಾಣ ಕ್ಷೇತ್ರದ ವಲಸಿಗ ಕೆಲಸಗಾರರಿಗೆ ಕಂಡು ಕೇಳರಿಯದ ಸಮಸ್ಯೆಗಳನ್ನು ತಂದೊಡ್ಡಿದೆ. ನನ್ನ ಜಿಲ್ಲೆಯ ವಲಸಿಗ ಕೆಲಸಗಾರರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿತ್ತಿದ್ದೇನೆ.  

ಸಾವಿರಾರು ಕಟ್ಟಡ ನಿರ್ಮಾಣ ಕೆಲಸಗಾರರು ಪರಿಹಾರ ಕೇಳಿ ನನ್ನನ್ನು ಸಂಪರ್ಕಿಸಿದ್ದಾರೆ. ಲಾಕ್ಡೌನ್ ಜಾರಿಗೊಂಡಾಗಿನಿಂದ ಇವರುಗಳು ತಮ್ಮ ಕೆಲಸಗಳನ್ನು ಕಳೆದುಕೊಂಡು ಆದಾಯವಿಲ್ಲದೆ, ವಸತಿ ಸೌಕರ್ಯವನ್ನು ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಅವರುಗಳಲ್ಲಿ ಕೆಲವರಿಗೆ ಮಾತ್ರ ವಸತಿ ಸೌಕರ್ಯ ಇನ್ನೂ ಉಳಿದಿದ್ದು, ಅಲ್ಪ-ಸ್ವಲ್ಪ ದಿನಸಿ ಪೊಟ್ಟಣಗಳು ಅವರುಗಳ ಗುತ್ತಿಗೆದಾರರ ಮೂಲಕ ದೊರೆಯುತ್ತಿವೆ. ಹಲವಾರು ನೌಕರರು ಬಾಡಿಗೆ ಶೆಡ್ಡುಗಳಲಿದ್ದು ಅವರುಗಳಿಗೆ ಬಾಡಿಗೆ ಕಟ್ಟಲಾಗುತ್ತಿಲ್ಲ. ಶೆಡ್ಡುಗಳನ್ನು ಖಾಲಿ ಮಾಡುವಂತೆ ಅವರುಗಳ ಮೇಲೆ ಬಲಾತ್ಕಾರ ನಡೆಯುತ್ತಿದೆ. ನನ್ನ ಇಲಾಖೆಯ ಮುಖಾಂತರ, ಕಳೆದ ಏಪ್ರಿಲ್ ತಿಂಗಳಂದು ಹಲವು ವಲಸಿಗರಿಗೆ ನಾವು ದಿನಸಿ ಪೊಟ್ಟಣಗಳನ್ನು ಒದಗಿಸಿದ್ದೆವು. ಹಲವಾರು ಸ್ವಯಂ ಪ್ರೇರಿತ ಸಂಘ ಸಂಸ್ಥೆಗಳ ನೆರವಿನ ಸಹಕಾರವಿದ್ದರೂ, ನಮ್ಮ ಜಿಲ್ಲೆಯ ಎಲ್ಲಾ ವಲಸಿಗರಿಗೆ  ಮೇ ತಿಂಗಳ ದಿನಸಿ ವಿತರಿಸಲಾಗಿಲ್ಲ. ಹಲವಾರು ಕೆಲಸಗಾರರು ನನ್ನಲ್ಲಿ ಬೇಡಿಕೆ ಇಟ್ಟಿದ್ದು, ಅವರುಗಳ ಗುತ್ತಿಗೆದಾರರು ತಡೆ ಹಿಡಿದಿಟ್ಟಿರುವ ಸುಮಾರು ತಲಾ ೨೫,೦೦೦ ರುಪಾಯಿಗಳಷ್ಟು ಹಣವನ್ನು ಬಿಡುಗಡೆ ಮಾಡಿಸಿಕೊಡಬೇಕಾಗಿ ಕೇಳಿಕೊಂಡಿದ್ದಾರೆ. ಗುತ್ತಿಗೆದಾರ ರುಗಳ ಪ್ರತಿನಿಧಿಗಳೊಂದಿಗೆ ಈ ವಿಷಯವನ್ನು ಚರ್ಚಿಸಿದ್ದೇನೆ. ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿದ್ದು, ಅವರುಗಳ ಮೇಲಧಿಕಾರಿಗಳು ಹಣ ಬಿಡುಗಡೆಗೆ ಸಿದ್ಧರಿಲ್ಲ. 

ನನ್ನ ಇಲಾಖೆಯ ಮೇಲಿನ ಅಧಿಕಾರಿಗಳಿಗೆ ನನ್ನ ಕಾರ್ಯ ವೈಖರಿ ಬಗ್ಗೆ ಅಸಮಾಧಾನವಿದೆ. ನಾನು "ಅತಿ ಜಾಣೆ"ಯಾಗಲು ಪ್ರಯತ್ನಿಸುತ್ತಿದ್ದೇನೆಂಬುದು ಅವರುಗಳ ಅನಿಸಿಕೆ. ನನ್ನ ಮೇಲಿನ ರಾಜ್ಯ ಮಟ್ಟದ ಅಧಿಕಾರಿಗಳು "ನಿಮ್ಮ ಇತಿ-ಮಿತಿ"ಯೊಳಗಿರಿ ಎಂದು ನನ್ನನ್ನು ಎಚ್ಚರಿಸಿದ್ದಾರೆ. "ವಲಸೆ ಕೆಲಸಗಾರರ ಸಾಮಾನ್ಯ ಸಮಸ್ಯೆಗಳ ಬಗ್ಗೆ ರಾಜ್ಯಮಟ್ಟದಲ್ಲಿ ತೆಗೆದುಕೊಳ್ಳಬಹುದಾದ ನಿರ್ಧಾರಗಳ ತನಕ ಸುಮ್ಮನಿರಿ"ಎಂಬುದು ಅವರುಗಳ ಅಲಿಖಿತ ಆಜ್ಞೆಯಾಗಿದೆ. ನಾನು ಜಿಲ್ಲಾ ಮಟ್ಟದ ಅಧಿಕಾರಿಣಿ ಮಾತ್ರವಾಗಿದ್ದು, ಸ್ವತಂತ್ರವಾಗಿ ಹೊಸ ಕ್ರಮಗಳನ್ನು ಕೈಗೂಳ್ಳುವ  ಅಧಿಕಾರ ನನಗಿಲ್ಲವೆಂಬುದು ಇಲಾಖೆಯ ಮುಖ್ಯಸ್ಥರ ವಿಚಾರವಾಗಿದೆ. 

ನಮ್ಮ ಜಿಲ್ಲೆಯ ವಲಸಿಗ ಕಟ್ಟಡದ ಕೆಲಸಗಾರರನ್ನು, ದೇಶದ ಪೂರ್ವದ ರಾಜ್ಯಗಳಿಂದ ದಲ್ಲಾಳಿಗಳು ಕರೆತಂದಿದ್ದಾರೆ. ಆಹಾರ, ವಸತಿ ಮತ್ತು ಪ್ರಯಾಣದ ಖರ್ಚುಗಳ ಆಶ್ವಾಸನೆಗಳನ್ನು ನೀಡಿ ಈ ಕಾರ್ಮಿಕರುಗಳನ್ನು ಆಕರ್ಷಿಸಲಾಗುತ್ತದೆ. ೧೦೦ರಿಂದ ೨೦೦ ಕೆಲಸಗಾರರುಗಳ ತಂಡವನ್ನು ನಮ್ಮ ನಗರಕ್ಕೆ ಕರೆತಂದು, ಅವರುಗಳನ್ನು ನಗರದ ಹೊರವಲಯಗಳ ಬಿಡಾರಗಳಲ್ಲಿ ಇರಿಸಲಾಗುತ್ತದೆ. ಅವರುಗಳಿಗೆ ಕೆಲಸಗಳನ್ನೊದಗಿಸುವ ಹೊತ್ತಿಗೆ ೨-೩ ವಾರಗಳಷ್ಟು ಸಮಯ ಬೇಕಾಗಬಹುದು. ಅಲ್ಲಿಯವರೆಗಿನ ವಲಸಿಗರ ಖರ್ಚುಗಳೆಲ್ಲವನ್ನೂ, ಸಂಬಂಧ ಪಟ್ಟ ದಳ್ಳಾಳಿಗಳೇ ವಹಿಸಿಕೊಂಡಿರುತ್ತಾರೆ. ಕಟ್ಟಡದ ಗುತ್ತಿಗೆದಾರರುಗಳಡಿ ಕೆಲಸಕ್ಕೆ ನೇಮಕಗೊಳ್ಳುವವರೆಗಿನ ಹೊಸ ವಲಸಿಗರ ಮೇಲಿನ ಖರ್ಚು-ವೆಚ್ಚಗಳನ್ನು, ಅವರುಗಳು ಮುಂದೆ ಗಳಿಸುವಂತಹ ವಾರ/ತಿಂಗಳುಗಳ ಹಣದಿಂದ ಕಂತುಗಳ ಮುಖಾಂತರ ಮುರಿದುಕೊಂಡು ಇರಿಸಿಕೊಳ್ಳಲಾಗುತ್ತೆ.  ಆ ರೀತಿ ಕಾದಿರಿಸಲಾದ ಮೊತ್ತವನ್ನು, ಆಯಾ ವಲಸಿಗ ಕೆಲಸಗಾರರು ಮೂರು ವರುಷುಗಳ ಸೇವಾವಧಿಯನ್ನು ಪೂರ್ಣಗೊಳಿಸಿದನಂತರ ಹಿಂತಿರುಗಿಸಲಾಗುವುದೆಂದು ಮುಂಚಿತವಾಗೇ ತಿಳಿಸಲಾಗಿರುತ್ತೆ. ಈ ರೀತಿಯ ನಿರ್ಬಂಧಗಳನ್ನು ಕೆಲಸ ಸಿಕ್ಕ ಹುರುಪಿನಲ್ಲಿ ಯಾವ ಹೊಸ ವಲಸಿಗರು ವಿರೋಧಿಸಿರುವುದಿಲ್ಲ. ಲಾಕ್ಡೌನಿನಿಂದ ಕೆಲಸ ಕಳೆದುಕೊಂಡಿರುವ ವಲಸಿಗರು ನನ್ನಲ್ಲಿ ಬಂದು ಈಗ ಗುತ್ತಿಗೆದಾರರುಗಳಿಂದ  ಹಿಂತುರಿಗಿಸಿ ಕೊಡಿಸುವಂತೆ ಕೇಳುತ್ತಿರುವುದೇ ಈಗಾಗಲೇ ಆ ರೀತಿ ಕಾದಿರಿಸಿಡಲಾದ  ತಲಾ ೨೫,೦೦೦ ರೂಪಾಯಿಗಳಷ್ಟರ  ಮೊತ್ತ. "ಹಾಗೆ ಕಾದಿರಿಸಿಟ್ಟ ಮೊತ್ತ ಕೈಸೇರಿದರೆ, ನಾವುಗಳು ನಮ್ಮ ಹಳ್ಳಿಗಳತ್ತ ಪ್ರಯಾಣ ಬೆಳಸಲು ಅನುಕೂಲ"ವಾಗುವುದೆಂಬುದು ಅವರುಗಳ ಆಗ್ರಹ. 

ಹೊಸ ವಲಸಿಗರನ್ನು ಸಣ್ಣ ಗುತ್ತಿಗೆದಾರರುಗಳ ಕೈಸೇರಿಸಿದ ಕೂಡಲೇ, ಅವರುಗಳನ್ನು ಕರೆತಂದ ದಲ್ಲಾಳಿಗಳ ಜಾವಬ್ದಾರಿ ಮುಗಿದಂತೆ. ವಲಸಿಗರ ಮುಂದಿನ ಆಗು-ಹೋಗುಗಳ ಜವಾಬ್ದಾರಿ ಆಯಾ ಸಣ್ಣ ಗುತ್ತಿಗೆದಾರರುಗಳದ್ದೆ. ವಲಸಿಗರಲ್ಲಿ ಕೆಲವರಿಗೆ ಮಾತ್ರ ವಸತಿಯ ಶೆಡ್ಡುಗಳು ದೊರೆಯುತ್ತೆ. ಮಿಕ್ಕವರು ತಮ್ಮ ಶೆಡ್ಡುಗಳನ್ನು ತಾವೇ ಬಾಡಿಗೆಗೆ ಪಡೆದು ಕೊಳ್ಳಬೇಕಾಗುತ್ತದೆ. ಕೆಲಸಗಾರರ ವಾರದ ಅಥವಾ ತಿಂಗಳ ಸಂಬಳದ ಪಾವತಿ ಸಣ್ಣ ಗುತ್ತಿಗೆದಾರರುಗಳಿಂದಲೇ ನಡೆದು ಹೋಗುತ್ತದೆ. ಹಾಗಾಗಿ ಕೆಲಸಗಾರರಿಗೆ ತಾವು ಯಾವ ಗುತ್ತಿಗೆದಾರರಡಿ ಕೆಲಸ ಮಾಡುತ್ತಿದ್ದೆವೆಂಬುದೇ ತಿಳಿದಿರುವುದಿಲ್ಲ. 

ವಲಸಿಗರ ನೆರವಿನಿಂದ ನಾನು ಎಲ್ಲ ಸಣ್ಣ ಗುತ್ತಿಗೆದಾರರುಗಳನ್ನು ಗುರುತಿಸಿ, ಅವರುಗಳನ್ನು ನನ್ನ ಕಚೇರಿಯ ಸಭೆಯೊಂದಕ್ಕೆ ಕರೆದಿದ್ದೆ. ಸಭೆಗೆ ಹಾಜರಾದವರು ಬೆರಳೆಣಿಕೆಯಷ್ಟು ಸಣ್ಣ ಗುತ್ತಿಗೆದಾರರುಗಳು ಮಾತ್ರ. ಮಿಕ್ಕವರೆಲ್ಲ ಮೇಲಿನ ಗುತ್ತಿಗೆದಾರರುಗಳ ಭಯದಿಂದ ಬಂದಿರಲಿಲ್ಲವಂತೆ. ನನ್ನೊಡನೆ ಮಾತನಾಡಿದ ಸಣ್ಣ ಗುತ್ತಿಗೆದಾರರುಗಳ ಪ್ರಕಾರ, ಮೇಲಿನ ಗುತ್ತಿಗೆದಾರರುಗಳೊಂದಿಗೆ ಅವರುಗಳು  ವ್ಯವಹರಿಸುವದೇ ಇಲ್ಲವಂತೆ. ನೌಕರರಿಗೆ ವಿತರಿಸಬೇಕಾದ ಹಣವನ್ನೆಲ್ಲಾ  ಮಧ್ಯವರ್ತಿಗಳ ಮುಖಾಂತರ ಪಡೆಯುತ್ತಾರಂತೆ. "ಹಾಗಾಗಿ ಕಾದಿರಿಸಿಟ್ಟ ಹಣದ ವಿಷಯ ತಮ್ಮಗಳಿಗೇನೂ ತಿಳಿದಿಲ್ಲವೆಂಬುದು" ಅವರುಗಳ ವಿವರಣೆಯಾಗಿತ್ತು. 

೨೦೨೦ರ ಮಾರ್ಚ್ ೨೯ರಂದು ಕೇಂದ್ರ ಸರ್ಕಾರ ಜಾರಿಗೊಳಿಸಿದ ನಿರ್ದೇಶನದ ಪ್ರಕಾರ, ಕಟ್ಟಡ ನೌಕರರ ಸಂಬಳಗಳನ್ನು ಲಾಕ್ಡೌನ್ ಅವಧಿಯಲ್ಲಿ ತಡೆ ಹಿಡಿಯುವಂತಿಲ್ಲ. ಆದರೆ ನಮ್ಮ ಜಿಲ್ಲೆಯ ಯಾವ ಗುತ್ತಿಗೆದಾರರು ಆ ನಿರ್ದೇಶನವನ್ನು ಪಾಲಿಸುತ್ತಿಲ್ಲ. ಅಂದ ಹಾಗೆ ನಿರ್ಮಾಣ ಕ್ಷೇತ್ರ ವಿಧಿಯುಕ್ತವಲ್ಲದ್ದು (informal sector). ಈ ಕ್ಷೇತ್ರದ ಸುಮಾರು ಶೇಕಡ ೯೮ರಷ್ಟು ಕೆಲಸಗಾರರುಗಳೊಂದಿಗೆ ಯಾವ ಲಿಖಿತ ಕರಾರುಗಳು ಇರುವುದಿಲ್ಲ.  ಪರಿಸ್ಥಿತಿ ಹೀಗಿರುವಾಗ ಕೆಲಸಗಾರರ ಹಿತಾಸಕ್ತಿಗಳಿಗೆ ಯಾರು ಜವಾಬ್ದಾರರೆಂಬುದನ್ನು ನಿರ್ಧರಿಸುವುದೇ ದೊಡ್ಡ ಪ್ರಶ್ನೆ.'

ಸಲೋನಿರವರ ಸಮಸ್ಯೆಗಳಿಗೆ ಮದನ್ ಲಾಲರ ಉತ್ತರ ಹೀಗಿತ್ತು. 'ಕಾರ್ಮಿಕರುಗಳಿಗೆ ಸಂಬಂಧ ಪಟ್ಟಂತಹ ಕಾನೂನುಗಳ ಸುಧಾರಣೆಗೆ ಸರಕಾರ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಬರುತ್ತಿದ್ದು, ನಿರ್ಮಾಣ ಕ್ಷೇತ್ರದಲ್ಲಿ ನಿರ್ಮಾಣೋದ್ಯಮಿಗಳ (builders) ಹಾಗೂ ಗುತ್ತಿಗೆದಾರರುಗಳ ಕೈ ಮೇಲಾಗುತ್ತಿದೆ. ಮಧ್ಯವರ್ತಿಗಳ ಮುಖಾಂತರ ಸಣ್ಣ ಗುತ್ತಿಗೆದಾರರನ್ನು ನಿಯಂತ್ರಿಸುವ ನಿರ್ಮಾಣೋದ್ಯಮಿಗಳು, ತೆರೆಯ ಹಿಂದೆ ನಿಂತು ತಮ್ಮ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ. ಹೀಗಿರುವಾಗ ಕಟ್ಟಡ ನಿರ್ಮಾಣ ಕಾರ್ಯದ ಒಡೆಯ (employer) ಯಾರೆಂದು ನಿರ್ಧರಿಸುವುದೇ ಕಷ್ಟ. ಆದುದರಿಂದ ನನಗೆ ಒಂದೆರಡು ವಾರಗಳ ಸಮಯಾವಕಾಶ ಬೇಕಾಗಿದೆ. ಸಮಸ್ಯೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ತಮಗೆ ನಾನು ಸಲಹೆಯನ್ನು ನೀಡುತ್ತೇನೆ.'

ತಮ್ಮ ಸಲಹೆಯನ್ನು ಕಳುಹಿಸುವಲ್ಲಿ ವಕೀಲ ಮದನ್ ಲಾಲರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಆದರೆ,  ತಮ್ಮ ಸಲಹೆಯನ್ನು ಸಲೋನಿರವರಿಗೆ ಕಳುಹಿಸಿದ ಕೆಲವೇ ದಿನಗಳಲ್ಲೇ, ನಡೆದ ಬೆಳವಣಿಗೆಗಳು  ಅವರಿಗೆ ಆಘಾತವನ್ನುಂಟುಮಾಡಿತ್ತು. ದಿನ ಪತ್ರಿಕೆಗಳ ಸುದ್ದಿಯ ಪ್ರಕಾರ ಸಲೋನಿರವರನ್ನು ಬೇರೊಂದು ಇಲಾಖೆಗೆ ದಿಢೀರನೆ ವರ್ಗ ಮಾಡಲಾಗಿತ್ತು.  ರಾಜ್ಯ ಸಂಪುಟ ಮಟ್ಟದ ಒತ್ತಡವೇ ಸಲೋನಿರವರ ಅಕಾಲಿಕ ವರ್ಗಾವಣೆಗೆ ಕಾರಣವೆಂದು ಪತ್ರಿಕೆಗಳಲ್ಲಿ ಬರೆಯಲಾಗಿತ್ತು. ಸುದ್ದಿ ವಿಶ್ಲೇಷಕರ ಪ್ರಕಾರ ಸಲೋನಿರವರ ವರ್ಗದ ಹಿಂದಿನ ಕಾರಣಗಳ ಪಟ್ಟಿ ಕೆಳಕಂಡ ರೀತಿ ಇತ್ತು. 

-ಸಲೋನಿರವರು, ತಮ್ಮಕಾರ್ಮಿಕ ಇಲಾಖೆಯ ಮುಖಾಂತರ ಸುಮಾರು ೨೦,೦೦೦ ದಿನಸಿ ಪೊಟ್ಟಣಗಳನ್ನು ಕಟ್ಟಡದ ವಲಸೆ ಕೆಲಸಗಾರರಿಗೆ ವಿತರಣೆ ಮಾಡಿಸಿದ್ದರು. ಹಾಗೆ ವಿತರಿಸುವಲ್ಲಿ ಸ್ಥಳೀಯ ಶಾಸಕರುಗಳು ಮತ್ತು ನಗರ ಪಾಲಿಕೆ ಸದಸ್ಯರುಗಳು ನೀಡಿದ್ದ ಪಟ್ಟಿಯನ್ನು ಸಲೋನಿರವರು  ಸಾರಾ ಸಗಟಾಗಿ ತಿರಸ್ಕರಿಸಿದ್ದರು. ಅವರುಗಳು ಮಾಡಿದ್ದ ಪ್ರತ್ಯಾರೋಪಗಳ ಪ್ರಕಾರ ಸಲೋನಿಯವರೊಬ್ಬರೇ ವಿತರಣೆ ಕುರಿತಾದ ನಿರ್ಣಯಗಳನ್ನು ತೆಗೆದುಕೊಂಡಿದ್ದು, 'ಅವರ ನೆಚ್ಚಿನ ಪ್ರದೇಶ'ಗಳಿಗೆ ಹೆಚ್ಚಿನ ಪೊಟ್ಟಣಗಳು ವಿತರಣೆಯಾಗಿದ್ದು, ಬಡವರುಗಳಿಗೆ ಅನ್ಯಾಯವಾಗಿದೆ ಎಂಬುದಾಗಿತ್ತು.  

-ಸಲೋನಿಯವರ ಕೋರಿಕೆಯ ಮೇರೆಗೆ ಖಾಸಗಿ ಸಂಸ್ಥೆಗಳು ವಲಸಿಗರಿಗೆ ನೀಡಿದ ತಲಾ ರೂ.೨೦೦೦ಗಳ ನಗದು ವಿತರಣೆಯಲ್ಲಿ ಅಕ್ರಮ ನಡೆದಿದ್ದು, ನಗದು ವಿತರಣೆಯ ಬದಲು ಹಣವನ್ನು ಚೆಕ್ಕುಗಳ ಮುಖಾಂತರ ವಿತರಿಸಬಹುದಿತ್ತು ಎಂಬುದು ಮತ್ತೊಂದು ಆರೋಪವಾಗಿತ್ತು.  

-ತಮ್ಮ ಜಿಲ್ಲೆಯಲ್ಲಿನ ವಲಸಿಗ ಕಟ್ಟಡದ ಕೆಲಸಗಾರರನ್ನು ಲಾಕ್ಡೌನ್ ನೆಪವೊಡ್ಡಿ ಕೆಲಸದಿಂದ ತೆಗೆಯಬಾರದು ಹಾಗೂ ಅವರುಗಳ ಸಂಬಳಗಳನ್ನು ತಡೆ ಹಿಡಿಯಬಾರದಾಗಿ ಜಿಲ್ಲೆಯ ಎಲ್ಲ ನಿರ್ಮಾಣೋದ್ಯಮಿಗಳಿಗೆ ಸಲೋನಿರವರು ಆದೇಶ ನೀಡಿದ್ದರು. ಆದೇಶವನ್ನು ಪಾಲಿಸದ  ಕೆಲವು ನಿರ್ಮಾಣೋದ್ಯಮಿಗಳ ವಿರುದ್ಧ ಸಲೋನಿ, ಪೊಲೀಸ್ ದೂರನ್ನು ದಾಖಲಿಸಿದ್ದರು. ಜಿಲ್ಲೆಯ ಮಂತ್ರಿಗಳಿಗೆ ಈ ಕ್ರಮ ತೀವ್ರ ಮುಜುಗರವನ್ನುಂಟು ಮಾಡಿದ್ದು, ಸಲೋನಿಯವರ ಕ್ರಮ ಸಿಂಧುವಲ್ಲವೆಂಬುದು ಹಲವರ ಅಭಿಪ್ರಾಯವಾಗಿತ್ತು. ಜರುಗಿಸಿದ ಕ್ರಮಗಳೆಲ್ಲವನ್ನೂ ಹಿಂತೆಗೆದುಕೊಳ್ಳುವಂತೆ ಸಲೋನಿಯವರ ಮೇಲೆ ತೀವ್ರ ಒತ್ತಡವನ್ನು ಹೇರಲಾಗಿತ್ತು. 

-ಕೆಲಸವಿಲ್ಲದೆ ಕುಳಿತಿದ್ದ ವಲಸಿಗ ಕಟ್ಟಡದ ಕೆಲಸಗಾರರುಗಳಿಗೆ ಸಲೋನಿರವರು ಸ್ಥಳೀಯ ನಗರ ಪಾಲಿಕೆಯ ಕೆಲಸಗಳನ್ನು ನೀಡಿ ಸಹಾಯ ಮಾಡಿದ್ದರು. ಆ ರೀತಿ ಕೆಲಸಗಳಿಗೆ ಸ್ಥಳೀಯ ಕೆಲಸಗಾರರು ಲಭ್ಯವಿದ್ದರೂ, ಅವರುಗಳನ್ನು ನೇಮಿಸಿಕೊಳ್ಳಲಿಲ್ಲವೇಕೆ ಎಂಬುದೂ ಒಂದು ಆರೋಪವಾಗಿತ್ತು. 

-ವಲಸಿಗ ಕೆಲಸಗಾರರುಗಳ ಪರವಾಗಿ ಯಾರಾದರೂ 'ಆನ್ ಲೈನ್ (online)' ದೂರುಗಳನ್ನು ದಾಖಲಿಸುವ ಸೌಲಭ್ಯವೊಂದನ್ನು ಸಲೋನಿ ಕಲ್ಪಿಸಿದ್ದರು. ಈ ಕ್ರಮದ ಬಗೆಗಿನ ಮಾಹಿತಿ ಅವರ ಹಿರಿಯಧಿಕಾರಿಗಳಿಗೆ ಸಲೋನಿಯವರು ನೀಡಿತ್ತಿಲ್ಲ.

-ತಮ್ಮ ಕಾರ್ಯವ್ಯಾಪ್ತಿಯ ಎಲ್ಲೆಯನ್ನು ಮೀರಿ, ಕೋವಿಡ್ ಪರಿಹಾರ ಕಾರ್ಯಗಳಲ್ಲಿ ಆಗಿರಬಹುದಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಕಾರ್ಯಕರ್ತರುಗಳನ್ನೊಳಗೊಂಡ  'ಕೋವಿಡ್ ಸೇನಾನಿಗಳ ಜಾಗೃತ ದಳ'ವೊಂದನ್ನು ಸಲೋನಿ ಆರಂಭಿಸಿದ್ದರು. 

-ಸಲೋನಿಯವರ ಎಲ್ಲ ಕ್ರಮಗಳು ಅತಿಯಾದ ಉತ್ಸಾಹದಿಂದ ಕೂಡಿದ್ದು, ಇಲಾಖೆಯ ನೀತಿ-ನಿಯಮಗಳ ಅನುಸಾರ ಇತ್ತಿಲ್ಲವೆಂಬುದು ಹಲವರ ಅಭಿಪ್ರಾಯವಾಗಿತ್ತು. 

ಈ ಬೆಳವಣಿಗೆಗಳ ಮಧ್ಯೆ ಸಲೋನಿರವರು ಮಾಧ್ಯಮ ಮಿತ್ರರುಗಳೊಂದಿಗೆ ಮಾತನಾಡಿ, 'ತಾನು ತೆಗೆದುಕೊಂಡ ಕ್ರಮಗಳೆಲ್ಲವೂ ವಲಸಿಗ ಕೆಲಸಗಾರರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ತೆಗೆದುಕೊಂಡವುಗಳಾಗಿವೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಪರಮಾಧಿಕಾರ  ಸರಕಾರಕ್ಕಿದೆ. ಅದರ ಪ್ರಕಾರ ನನ್ನ ಅಧಿಕಾರವನ್ನು ನೇಮಕಗೊಂಡಿರುವ ಹೊಸ ಅಧಿಕಾರಿಗೆ ಹಸ್ತಾಂತರಿಸಿದ್ದೇನೆ. ನನ್ನ ವರ್ಗಾವಣೆ ಕುರಿತು ಹರಿದಾಡುತ್ತಿರುವ ವದಂತಿಗಳು ಈಗ ಅಪ್ರಸ್ತುತ. ಆ ರೀತಿಯ ವದಂತಿಗಳಿಂದ ನಮ್ಮಂತಹ ಸಾರ್ವಜನಿಕ ಸೇವಕರಿಗೆ ಯಾವ ಉಪಯೋಗವೂ ಆಗದು. ಸರಕಾರದ ರೀತಿ-ನೀತಿಗಳ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮುಂದಿನ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ನನ್ನೊಡನೆ ಸಹಕರಿಸಿ ದುಡಿದ ಎಲ್ಲರಿಗೂ ನಾನು ಆಭಾರಿ' ಎಂದಿದ್ದರು.

ಎಲ್ಲ ವಿಷಯಗಳನ್ನು ಗ್ರಹಿಸಿದ ಮದನ್ ಲಾಲರು ತಮ್ಮ ಸ್ನೇಹಿತೆ ಸಲೋನಿರವರನ್ನು ಕೂಡಲೇ ಸಂಪರ್ಕಿಸಿ,  'ಆದ ಬೆಳವಣಿಗೆಗಳನ್ನೆಲ್ಲ ನಿಭಾಯಿಸಿ ಮುನ್ನಡೆಯುವ ಮನೋಧರ್ಮ ನಿಮ್ಮದು ಎಂದು ನನಗೆ ಗೊತ್ತು. ನಿಮ್ಮ ಕ್ರಮಗಳೆಲ್ಲವೂ ಪ್ರಾಮಾಣಿಕವಾದವಾಗಿದ್ದು, ತಲೆಯೆತ್ತಿ ಸಾಗುವ ಹೆಮ್ಮೆ ನಿಮ್ಮದು. ತಾತ್ಕಾಲಿಕವಾಗಿ ಸ್ವಲ್ಪ ಹಿನ್ನಡೆ ನಿಮಗಾಗಿರಬಹುದು. ಕೆಲವು ದಿನಗಳು ಕಳೆದನಂತರ ಗೆಲುವು ನಿಮ್ಮದೇ ಆಗಿರುತ್ತದೆ. ನೀವು ಜಾರಿಗೊಳಿಸಿದ ಕ್ರಮಗಳೆಲ್ಲವೂ ನ್ಯಾಯಯುತವಾಗಿದ್ದು, ಸರಕಾರ ಕೂಡ ಅವುಗಳನ್ನು ಜಾರಿಗೊಳಿಸಲೇ ಬೇಕಾಗುವ ಪರಿಸ್ಥಿತಿ ಬಂದೇ ಬರುತ್ತದೆ. ಕಾರ್ಮಿಕ ಇಲಾಖೆಯ ಅಧಿಕಾರವನ್ನು ನಿಮ್ಮಿಂದ ವಹಿಸಿಕೊಂಡಿರುವ ಅಧಿಕಾರಿಯೂ, ನೀವಿಟ್ಟ ದಿಟ್ಟ ಹೆಜ್ಜೆಯ  ಗುರುತುಗಳನ್ನು ಅನುಸರಿಸೇ ಸಾಗಬೇಕಾಗುತ್ತೆ. ಎಲ್ಲಿ ಹೋದರೂ ನಿಮ್ಮ ಪ್ರಾಮಾಣಿಕತೆ ಹಾಗೂ  ಉತ್ಸಾಹಗಳು ನಿಮ್ಮೊಂದಿಗಿರಲಿ. ದೇವರ ಆಶೀರ್ವಾದವೂ ನಿಮ್ಮೊಡನಿರಲಿ' ಎಂದರು.

******

     

 ವಲಸಿಗರ ವಂದನೆ 

ಅಂದು ೨೦೨೦ರ ಮಾರ್ಚ್ ೨೮ರ ದಿನವಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಪರಮೋಚ್ಚ ನ್ಯಾಯಾಲಯ ನೀಡಿದ್ದ ಮಧ್ಯಕಾಲದ ಆದೇಶದ (interim order) ವಿಷಯದಲ್ಲಿ ತಂದೆ ರಾಜು ಮತ್ತು ಮಗಳು ರೋಹಿಣಿಯ ನಡುವಿನ ಸುದೀರ್ಘ ಚರ್ಚೆಯ ಕಾವೇರಿತ್ತು. ಲಾಕ್ಡೌನಿನಿಂದ  ಉಂಟಾದ ವಲಸಿಗ ಕೆಲಸಗಾರರ ಪರದಾಟಗಳಿಗೆ, ಸಾಧ್ಯವಾದಷ್ಟು ಪರಿಹಾರ ದೊರಕಲೆಂಬುದು ಪರಮೋಚ್ಚ ನ್ಯಾಯಾಲಯದ ಆದೇಶದ ಆಶಯವಾಗಿತ್ತು. ಕೋರ್ಟ್ ಆದೇಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ತಂದೆ-ಮಗಳಿಬ್ಬರೂ, ಕುಟುಂಬದ ಸ್ನೇಹಿತರು ಹಾಗೂ ವಕೀಲರೂ ಆದ ಮದನ್ ಲಾಲರ ಮನೆಗೆ ಬಂದಿದ್ದರು. ಕೋವಿಡ್ನಿಂದ ಉಂಟಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಕುರಿತಾದ ಸಂಶೋಧನೆಯನ್ನು ಕೈಗೊಂಡಿದ್ದ ಯುವತಿ ರೋಹಿಣಿಗೆ, ಮದನ್ ಲಾಲರೊಂದಿಗಿನ ಚರ್ಚೆ ಬಹು ಮುಖ್ಯವಾಗಿತ್ತು. 

ರಾಜು ಮತ್ತು ರೋಹಿಣಿ ಇಬ್ಬರನ್ನೂ ಮದನ್ ಲಾಲರು ಬರಮಾಡಿಕೊಂಡೊಡನೆ, ರಾಜುರವರ ವಾದ ಸರಣಿ ಶುರುವಾಗಿತ್ತು. 'ಮದನ್ ಲಾಲರೆ, ನೋಡಿ ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವಿನ ತಿಕ್ಕಾಟ ಇಂದು-ನೆನ್ನೆಯದಲ್ಲ. ಪರಮೋಚ್ಚ ನ್ಯಾಯಾಲಯ ಕೆಲವೊಮ್ಮೆ ಕಾರ್ಯಾಂಗದ ವ್ಯಾಪ್ತಿಗೆ ಮೂಗು ತೂರಿಸಿ ಅಧಿಕಾರ ಚಲಾಯಿಸುವುದೆಂಬುದು ನನ್ನಂತಹ ಹಲವರ ವಾದ. "ಹೆದ್ದಾರಿಗಳಲ್ಲಿ ಮದ್ಯದ ಮಾರಾಟವನ್ನು ನಿಷೇಧಿಸಿ ಪರಮೋಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶ"ವನ್ನೆ ನೋಡಿ. ಮದ್ಯದ ಬಾರುಗಳು ಮತ್ತು ಭೋಜನ ಮಂದಿರಗಳು ಹೆದ್ದಾರಿಯಿಂದ ೫೦೦ ಮೀಟರ್ಗಳಷ್ಟು ದೂರವಿರಬೇಕೆಂಬುದು ಸುಪ್ರೀಂ ಕೋರ್ಟ್ನ ಆದೇಶ. ಈ ಆದೇಶದಿಂದ ಹಲವಾರು ಬಾರುಗಳು ಮತ್ತು ಉಪಹಾರ ಗೃಹಗಳಿಗೆ ತೊಂದರೆಯುಂಟಾಗಿ ಅವರುಗಳ ಗಳಿಕೆಯಲ್ಲಿ ಭಾರಿ ವ್ಯತ್ಯಯವುಂಟಾಗಿದೆ. ಇಡೀ ಪ್ರವಾಸೋದ್ಯಮಕ್ಕೇ ಭಾರಿ ಹೊಡತವೇ ಬಿದ್ದು, ಸಹಸ್ರಾರು ಯುವಕರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಹೀಗೆಲ್ಲಾ ಮಾಡುವ ಬದಲು, ನ್ಯಾಯಾಲಯ ಸರಕಾರಕ್ಕೆ ಹೆದ್ದಾರಿಗಳಲ್ಲಾ ಗುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬೇಕಾದ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳುವಂತೆ ಆದೇಶವನ್ನು ನೀಡಬಹುದಿತ್ತು. ತಾನೇ ಕಾರ್ಯಾಂಗವೆಂಬಂತೆ ಇಷ್ಟು ತೀವ್ರವಾದ ಆದೇಶವನ್ನು ನೀಡುವ ಅವಶ್ಯಕತೆ ಏನಿತ್ತು?' ಹೀಗಿದ್ದ ರಾಜುರವರ ವಾದದಲ್ಲಿ ಸಾಕಷ್ಟು ಆಕ್ರೋಶವಿತ್ತು. 

ವಕೀಲರಾದ ಮದನ್ ಲಾಲರ ಮುಂದೆ ಮಗಳು ರೋಹಿಣಿಯ ಪ್ರತಿವಾದದಲ್ಲಿ ಕೂಡ ಅಷ್ಟೇ ತೀವ್ರತೆಯಿತ್ತು. 'ಪರಮೋಚ್ಚ ನ್ಯಾಯಾಲಯದ ಆದೇಶದಿಂದ ಹೆದ್ದಾರಿಗಳಲ್ಲಿನ ಅಪಘಾತಗಳ ಸಂಖ್ಯೆ ಕಮ್ಮಿಯಾಗಿ ಸಹಸ್ರಾರು ಅಮೂಲ್ಯ ಜೀವಗಳ ರಕ್ಷಣೆಯಾಗಿರುವುದು ಸುಳ್ಳಲ್ಲ. ಪರಿಸ್ಥಿತಿಯ ಅರಿವು ನ್ಯಾಯಾಲಯಕ್ಕೂ ಇದೆ. ಉದ್ಯಮಗಳಿಗಾಗುತ್ತಿರುವ ನಷ್ಟವನ್ನು ತುಂಬುವ  ಹಾಗೂ ಉದ್ಯೋಗಗಳ ಮರುಸೃಷ್ಠಿ ಮಾಡುವ ಉದ್ದೇಶದಿಂದ, ನ್ಯಾಯಾಲಯ ತನ್ನ ಆದೇಶವನ್ನು ಸಡಿಲಿಸಿ, ನಗರಗಳ ಹಾಗೂ  ಪಟ್ಟಣಗಳ ಪ್ರದೇಶಗಳಿಗೆ ತನ್ನ ಆದೇಶ ಅನ್ವಯಿಸದೆಂದು ಮರು ಆದೇಶ ಹೊರಡಿಸಿದೆ. 

ಪರಮೋಚ್ಚ ನ್ಯಾಯಾಲಯದ ಇತ್ತೀಚಿನ ಬಾಬ್ರಿ ಮಸೀದಿ ಕುರಿತಾದ ತೀರ್ಪು ಕೇಂದ್ರ ಸರಕಾರದ ಆಶಯಕ್ಕೆ ಪೂರಕವಾಗಿದೆ. ರಾಮ ಮಂದಿರದ ನಿರ್ಮಾಣಕ್ಕೆ ಬೇಕಾದ ಆದೇಶವನ್ನು ಕೇಂದ್ರ ಸರಕಾರ  ಹೊರಡಿಸಬೇಕಾಗಿ ಬಂದಿದ್ದರೆ, ದೊಡ್ಡ ಕೋಲಾಹಲವೇ ನಡೆದು ಹೋಗುತ್ತಿತ್ತು. ಸರಕಾರಕ್ಕೆ ಸಂಸತ್ತಿನಲ್ಲಿ ನಿಭಾಯಿಸಲಾಗದಷ್ಟು ಪ್ರತಿರೋಧ ಬರುತ್ತಿತ್ತು. ದಿನ ನಿತ್ಯ ನ್ಯಾಯಾಂಗವನ್ನು ಟೀಕಿಸುವ ಬುದ್ಧಿಜೀವಿಗಳು ರಾಮ ಮಂದಿರ ಕುರಿತಾದ ತೀರ್ಪಿಗೆ, ನ್ಯಾಯಾಲಯವನ್ನು ಪ್ರಶಂಸಿದ್ದಾರೆಯೆ? ಜಾರಿಗೊಳಿಸಲು ಕಷ್ಟ ಸಾಧ್ಯವಾದ ತೀರ್ಪುಗಳ ಬಗ್ಗೆ, ಸೂರಮೇಲೆ ನಿಂತು ಕೂಗಾಡುವ ಅವರುಗಳು, ಸರಕಾರಕ್ಕೆ ಅನುಕೂಲವಾಗುವಂತಹ ತೀರ್ಪುಗಳು ಬಂದಾಗ "ಜಾಣ ಮೌನ"ಕ್ಕೆ ಜಾರುತ್ತಾರೇಕೆ?' ಎಂದಿತ್ತು ರೋಹಿಣಿಯ ವಾದದ ಸರಣಿ.

ಸದರಿ ವಲಸಿಗರ ಪರದಾಟದ ವಿಷಯಕ್ಕೆ ಬರೋಣವೆಂಬುದು ಮದನ್ ಲಾಲರ ಅಭಿಪ್ರಾಯವಾಗಿತ್ತು. 

'ಮೇ ೧ರಂದು, ಸರ್ವೋಚ್ಚ ನ್ಯಾಯಾಲಯ ತನ್ನ ನಿಲುವನ್ನು ವ್ಯಕ್ತಪಡಿಸುತ್ತಾ, ವಲಸಿಗ ಕೆಲಸಗಾರರಿಗೆ ಪ್ರಯಾಣದ ವ್ಯವಸ್ಥೆಯನ್ನು ಮಾಡುವ ಕೆಲಸ ಸರಕಾರಗಳ ರೈಲು ಮತ್ತು ಬಸ್ಸಿನ ಇಲಾಖೆಗಳಿಗೆ ಸಂಬಂಧಪಟ್ಟದ್ದು ಎಂದು ಅಭಿಪ್ರಾಯಪಟ್ಟಿತ್ತು. ತಜ್ಞರ ಹಾಗೂ ಜನಾಭಿಪ್ರಾಯದ ಒತ್ತಡಗಳು  ನ್ಯಾಯಾಲಯವನ್ನೂ ಮಣಿಸಿದಂತೆ ಕಾಣುತ್ತದೆ. ತನ್ನ ತಟಸ್ಥ ನಿಲುವನ್ನು ಇದ್ದಕಿದ್ದಂತೆ ಕೈಬಿಟ್ಟ ನ್ಯಾಯಾಲಯ ಈಗ ಸರಕಾರಗಳಿಗೆ ವಲಸಿಗರ ಕುರಿತಾದ ಹೊಸ ಆದೇಶವನ್ನು ಹೊರಡಿಸಿರುವುದು ಸರಿಯೇ?' ಎಂದು ಮುಂದುವರೆದಿತ್ತು ರಾಜುರವರ ವಿಚಾರ ಧಾರೆ. 

'ಕೈ ಕಟ್ಟಿ ಕುಳಿತುಕೊಳ್ಳುವುದಕ್ಕಿಂತ, ತಡವಾಗಾದರೂ ಸರ್ವೋಚ್ಚ ನ್ಯಾಯಾಲಯವು ತೆಗೆದುಕೊಂಡಿರುವ ನಿಲುವು ವಲಸಿಗ ಕೆಲಸಗಾರರಿಗೆ ಪರಿಹಾರವನ್ನೊದಗಿಸಿದೆ. ವಲಸಿಗರ ಅತಿಥೇಯ ಮತ್ತು ಮೂಲ ರಾಜ್ಯಗಳು ಪ್ರಯಾಣದ ವೆಚ್ಚವನ್ನು ಸಮನಾಗಿ ಭರಿಸಬೇಕಾಗುತ್ತದೆ. ಪ್ರಯಾಣದ ವೇಳೆಯ ನೀರು-ಆಹಾರಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆಗಳು ಮಾಡಬೇಕಾಗುತ್ತದೆ. ಪ್ರಯಾಣ ಮಾಡಲು ತಮ್ಮ ಸರದಿಗೆ ಕಾಯುತ್ತಿರುವ ವಲಸಿಗರಿಗೆ ಪ್ರಯಾಣದ ವ್ಯವಸ್ಥೆ ಮಾಡಿ ಸರಿಯಾದ ಮಾಹಿತಿಯನ್ನು ನೀಡುವ ಮತ್ತು ಅವರುಗಳಿಗೆ  ವಸತಿ ಮತ್ತು ಆಹಾರದ ಏರ್ಪಾಡನ್ನು ಮಾಡುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳದ್ದಾಗಿರುತ್ತದೆ. ವಲಸಿಗರು ಸುಡು ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಪರದಾಡುವಂತಾಗ ಬಾರದೆಂಬುದು ನ್ಯಾಯಾಲಯದ ಆಶಯ' ಎಂದು ರೋಹಿಣಿ ತನ್ನ ಅನಿಸಿಕೆಯನ್ನು ಮಂಡಿಸಿದ್ದಳು. 

ರಾಜುರವರು ತಮ್ಮ ಮಗಳ ವಾದಕ್ಕೆ ತೀಕ್ಷ್ಣವಾಗೇ ಪ್ರತಿಕ್ರಿಯಿಸುತ್ತಾ 'ನ್ಯಾಯಾಂಗಕ್ಕಾಗಲಿ ಅಥವಾ ಕಾರ್ಯಾಂಗಕ್ಕಾಗಲಿ ತಮ್ಮದೇ ಆದ ಇತಿ-ಮಿತಿಗಳಿವೆ. ಭಾರತದ ಎಲ್ಲ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಲಕ್ಷಾಂತರ ದಾವೆಗಳ ಪೈಕಿ ಶೇಕಡಾ ೭೦ರಷ್ಟನ್ನು ಇನ್ನೊಂದು ವರ್ಷದೊಳಗೆ ಇತ್ಯರ್ಥಗೊಳಿಸಿ ಎಂದು ಕೇಂದ್ರ ಸರಕಾರ ವಿನಂತಿಸಿಕೊಂಡರೆ, ಸರ್ವೋಚ್ಚ ನ್ಯಾಯಾಲಯ ತಾನೇ ಏನು ಮಾಡಬಲ್ಲದು? ಕೋರ್ಟ್ ಆದೇಶಗಳನ್ನೂ ಜಾರಿಗೊಳಿಸುವಲ್ಲಿ ಕಾರ್ಯಾಂಗಕ್ಕೂ ಅದೇ ರೀತಿಯ ಅಡಚಣೆಗಳು ಇರವುದಿಲ್ಲವೆ?' ಎಂದರು. 

ತಂದೆ-ಮಗಳ ವಾದ-ಪ್ರತಿವಾದಗಳನ್ನಾಲಿಸಿದ ವಕೀಲ ಮದನ್ ಲಾಲರಿಗೆ ಈಗ ಮಧ್ಯ ಪ್ರವೇಶ ಅನಿವಾರ್ಯವೆನಿಸಿತು. 'ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕುರಿತಾದ ರೋಹಿಣಿಯ ವಿಶ್ಲೇಷಣೆ ಸರಿಯಾಗಿಯೇ ಇದೆ. ರಾಜುರವರ ವಾದದಲ್ಲೂ ತೂಕವಿಲ್ಲದಿಲ್ಲ. ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿರುವಂತೆ ಸರಕಾರಗಳ ಕ್ರಮಗಳಿಂದ  ವಲಸಿಗರುಗಳಿಗೆ ಹಲವಾರು ತೊಂದರೆಗಳು ಉಂಟಾಗಿವೆ. ಬಸ್ಸು ಮತ್ತು ರೈಲುಗಳ ಬಗೆಗಿನ ತಪ್ಪು ಮಾಹಿತಿಗಳು, ಪ್ರಯಾಣದ ವೆಚ್ಚಗಳ ತೀವ್ರ ಹೆಚ್ಚಳ, ಬಸ್ಸು-ರೈಲುಗಳು ಕಡೇ ನಿಮಿಷದಲ್ಲಿ ರದ್ಧಾಗುವುದು ಮುಂತಾದ ಅಚಾತುರ್ಯಗಳಿಂದ ವಲಸಿಗರು ಬಳಲಿ ಬೆಂಡಾಗಿದ್ದಾರೆ. ಸರಕಾರಿ ವಕೀಲರ ವಾದವನ್ನು ಒಪ್ಪದ ಸರ್ವೋಚ್ಚ ನ್ಯಾಯಾಲಯ, ವಲಸಿಗರ ಹಿತರಕ್ಷಣೆಗಾಗಿ ಕೇಂದ್ರ ಹಾಗು ರಾಜ್ಯ ಸರಕಾರಗಳು ಕೈಗೊಂಡಿರುವ ಕ್ರಮಗಳ ವಿವರವನ್ನು ನೀಡುವಂತೆ ಆದೇಶಿಸಿದೆ. 

ಇದು ನಮ್ಮ ಸಂವಿಧಾನದ ಶಿಲ್ಪಿಗಳು ಸೃಷ್ಟಿಸಿಟ್ಟಿರುವಂತಹ ಅತ್ಯಂತ ಸೂಕ್ಷ್ಮವಾದ ಸಮತೋಲ. ಕಾರ್ಯಾಂಗ  ಹಾಗೂ ಶಾಸಕಾಂಗಗಳು ನೇರವಾಗಿ ಜನತೆಯಿಂದ ಚುನಾಯಿತವಾಗಿದ್ದರೂ, ನಮ್ಮ ಸಂವಿಧಾನದಲ್ಲಿ ನ್ಯಾಯಾಂಗದ ಸ್ವಾಯತ್ತತೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಸದಾ ಒಂದು ಹೆಜ್ಜೆಯನ್ನು ಮುಂದಾಗಿಯೇ ಇಡುವಂತೆ ಕಾಣುವ ನಮ್ಮ ನ್ಯಾಯಾಂಗ, ಆಗಾಗ ತನ್ನ ಎಲ್ಲೆಯನ್ನು ಮೀರಿದಂತೆ ಕಂಡರೂ, ಅದರ ಕ್ರಮಗಳೆಲ್ಲವೂ ಸಂವಿಧಾನದ ಪಾವಿತ್ರ್ಯವನ್ನು ಎತ್ತಿ ಹಿಡಿಯಲು ಕೈಗೊಂಡವಾಗಿವೆ. ನ್ಯಾಯಾಂಗದ ನಿರ್ಣಯಗಳೆಲ್ಲವೂ ಜನಪರವಾಗಿದ್ದು ದೇಶವನ್ನು ಸದೃಢ ಗೊಳಿಸಿವೆ ಎಂಬುದನ್ನು ನಾವು ಮರೆಯುವಂತಿಲ್ಲ' ಎಂದ  ಮದನ್ ಲಾಲರ ಮಾತುಗಳು ಅವರ ತೀರ್ಪೆನೋ ಎಂಬತ್ತಿತ್ತು. 

'ಕೇಂದ್ರ ಸರಕಾರವೂ ಹಲವಾರು ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡಿದೆ. ವಲಸಿಗರ ಜೊತೆ ಇಡೀ ದೇಶವಿದೆ ಎಂಬುದನ್ನು ಈಗಾಗಲೇ ಸರಕಾರ ಸ್ಪಷ್ಟಪಡಿಸಿದೆ. ಕೋವಿಡ್ ಪಿಡುಗಿನಿಂದ ವಲಸಿಗರು ತೀವ್ರವಾಗಿ ಪೀಡಿತರಾಗಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಹುಟ್ಟಿ ಬೆಳದ ಹಳ್ಳಿಗಳಿಗೆ ಹಿಂತಿರುಗಿರುವ ವಲಸಿಗರಿಗೆ, ಅವರವರ ಹಳ್ಳಿಗಳಲ್ಲೇ, ಕೂಡಲೇ ಉದ್ಯೋಗ ಕಲ್ಪಿಸಲು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗದ ಯೋಜನೆಗೆ (MANREGA) ಪ್ರಸಕ್ತ ವರ್ಷದಲ್ಲಿ (೨೦೨೦-೨೧) ಈಗಾಗಲೇ ನೀಡಿರುವ ಒಂದು ಲಕ್ಷ ಕೋಟಿ  ರೂಪಾಯಿಗಳ ಜೊತೆಗೆ ಮತ್ತೆ ೪೦,೦೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. 

-ಮನ್ರೇಗಾ ಯೋಜನೆಯಡಿ ನೀಡುವ ದಿನದ ಸಂಬಳವನ್ನು ೧೮೨ರಿಂದ ೨೦೨ ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ. 

-ಮನರೇಗಾದ ಅಡಿಯಲ್ಲಿ ಉದ್ಯೋಗ ಪಡೆಯಲಿಚ್ಛಿಸುವವರು ಹಳ್ಳಿಯ ಗ್ರಾಮ ಪಂಚಾಯಿತಿಯ ಕಚೇರಿಯನ್ನು ಸಂಪರ್ಕಿಸಬಹುದು. 

-ರಾಷ್ಟ್ರದ ಪೂರ್ವ ಭಾಗದಲ್ಲಿರುವ ೬ ರಾಜ್ಯಗಳ ೧೧೬ ಜಿಲ್ಲೆಗಳಿಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಹಿಂತಿರುಗಿ ಬಂದಿದ್ದಾರೆ. ಅವರುಗಳಿಗೆ ಉದ್ಯೋಗ ಕಲ್ಪಿಸಲೆಂದೇ ಆ ೬ ರಾಜ್ಯಗಳಲ್ಲಿ ಸರಕಾರ ಭಾರಿ ಪ್ರಮಾಣದಲ್ಲಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗಿದೆ. ಮನರೇಗಾದಡಿ ಈ ಕಾರ್ಯಗಳು ನಡೆಯಲಿದ್ದು, ಆ ೧೧೬ ಜಿಲ್ಲೆಗಳಿಗೆ ಈಗಾಗಲೇ  ೫೦,೦೦೦ ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿದೆ.  

-ಪಡಿತರ ಚೀಟಿ ಇರದಿದ್ದರೂ, ವಲಸಿಗರು ಎಲ್ಲಾದರೂ ೫ ಕೆ.ಜಿ.ಗಳಷ್ಟು ದಿನಸಿಯನ್ನು ಮತ್ತು ೧ ಕೆ.ಜಿ.ಯಷ್ಟು ಬೇಳೆಯನ್ನು ಪಡೆಯುವ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. 

-ಕೆಲಸ ಕಳೆದುಕೊಂಡ ವಲಸಿಗರು ತಮ್ಮ ಶೆಡ್ಡುಗಳಿಗೆ ಬಾಡಿಗೆ ಕಟ್ಟಲಾಗದೆ, ತಮ್ಮ ತಮ್ಮ ಹಳ್ಳಿಗಳ ಕಡೆಗೆ ಮುಖ ಮಾಡುವಂತಾಗಿದೆ. ಈ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಲು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಲಭ ಬಾಡಿಗೆಯ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.' 

ಬರುವ ದಿನಗಳಲ್ಲಿ ಈ ರೀತಿಯ ಇನ್ನೂ ಹೆಚ್ಚಿನ ಯೋಜನಗಳನ್ನು ಜಾರಿಗೊಳಿಸಲಾಗುವುದೆಂದು ವಿವರಿಸಿದ ರಾಜುರವರ ಮುಖದಲ್ಲಿ ದೊಡ್ಡದಾದ ಮುಗಳ್ನಗೆಯೊಂದು ಮೂಡಿತ್ತು.

ತಂದೆ ರಾಜುರವರು ತಮ್ಮ ವಿವರಗಳನ್ನು ನೀಡುತ್ತಿದ್ದ ಇಡೀ ಸಮಯದಲ್ಲಿ 'ಅವೆಲ್ಲ ಏನೇನು ಸಾಲದೆಂಬಂತೆ,' ಮಗಳು ರೋಹಿಣಿ ತಲೆಯಾಡಿಸುತ್ತಿದ್ದಳು. ಹಲವು ತಜ್ಞರುಗಳು ಆಗ್ರಹ ಪಡಿಸಿದಂತೆ ವಲಸೆ ಕೆಲಸಗಾರರೆಲ್ಲರಿಗೂ ತಲಾ ೨೫,೦೦೦ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂಬುದು ರೋಹಿಣಿಯ ಅಭಿಪ್ರಾಯವೂ ಆಗಿತ್ತು. 

ಚರ್ಚೆಗೆ ತೆರೆ ಎಳೆಯುವ ಸಮಯ ಇದೆಂದು ಮದನ್ ಲಾಲರಿಗೆ  ಅನಿಸಿತ್ತು. ಅವರು ಮಾತನಾಡುತ್ತಾ 'ದೇಶದಲ್ಲಿ ಸುಮಾರು ೧೪ ಕೋಟಿಯಷ್ಟು ವಲಸಿಗ ಕೆಲಸಗಾರರಿದ್ದಾರೆ. ಅವರಗಳಲ್ಲಿ ಹೆಚ್ಚಿನವರು ದೇಶದ ಪೂರ್ವ ಭಾಗದ ರಾಜ್ಯಗಳವರು. ಹೆಚ್ಚಿನ ವಲಸಿಗರು ಬೃಹತ್ ನಗರಗಳನ್ನು ಸೇರಿದ್ದಾರೆ. 

-ಲಾಕ್ಡೌನ್ ಜಾರಿಗೊಳ್ಳುವುದಕ್ಕಿಂತ ಮುಂಚಿತವಾಗಿಯೇ, ಕೋವಿಡ್ ಭಯದಿಂದ ಸುಮಾರು ಶೇಕಡಾ ೧೦ರಷ್ಟು ವಲಸಿಗರು ತಮ್ಮ ಹಳ್ಳಿಗಳಿಗೆ ಪ್ರಯಾಣಿಸಿದ್ದರು. ಲಾಕ್ಡೌನ್ನಿನ  ಮೂರು ಮತ್ತು ನಾಲ್ಕನೇ ಹಂತಗಳ ನಡುವೆ ಇನ್ನು ೧೦%ರಷ್ಟು ವಲಸಿಗರು ನಿರ್ಗಮಿಸಿದ್ದಾರೆ. ಐದನೇ ಹಂತದ ಸಮಯದಲ್ಲಿ ಮತ್ತೆ ಶೇಕಡಾ ೧೦ರಷ್ಟು ವಲಸಿಗರ ಪ್ರಯಾಣದೊಂದಿಗೆ, ಒಟ್ಟು ಶೇಕಡಾ ೩೦ರಷ್ಟು ವಲಸಿಗರು ತಮ್ಮ ತಮ್ಮ ಹಳ್ಳಿಗಳಿಗೆ ಹಿಂತುರುಗಿದಂತಾಗಿದೆ. 

ರೋಹಿಣಿ ಆಗ್ರಹ ಪಡಿಸಿದಂತೆ, ಲಾಕ್ಡೌನಿನ  ಮೊದಲೆರಡು ತಿಂಗುಳುಗಳ ಸಂಬಳದ ಕೊರತೆಯೆನ್ನು ಸರಿದೂಗಿಸಲು, ವಲಸಿಗರಿಗೆ ತಲಾ ೨೫,೦೦೦ ರೂಪಾಯಿಗಳಷ್ಟು ಪರಿಹಾರವನ್ನು ಸರಕಾರ  ನೀಡಬೇಕಿತ್ತು.  ಇದರಿಂದ ವಲಸಿಗರ  ಕೈಯಲ್ಲಿ ಖರ್ಚು ಮಾಡಲು ಹಣ ಸೇರಿ,  ಸ್ಥಳೀಯ ವ್ಯಾಪಾರಗಳು  ಚುರುಕುಗೊಳ್ಳುತ್ತಿತ್ತು. 

ಹಳ್ಳಿಗಳನ್ನು ತಲುಪಿರುವ ಸುಮಾರು ಶೇಕಡಾ ೩೦ರಷ್ಟು ವಲಸಿಗರು ನಗರಗಳಿಗೆ ಹಿಂತಿರುಗಿ  ಬರಲಿಷ್ಟಪಡಲಾರರು. ಆದರೂ ಹಳ್ಳಿಗಳಲ್ಲಿ ಉದ್ಯೋಗಾವಕಾಶವಿರದ ಕಾರಣ ಅವರುಗಳೆಲ್ಲರೂ ನಗರಗಳಿಗೆ ಹಿಂತಿರುಗಬೇಕಾಗಬಹುದು' ಎಂದರು. 

***

ಈ ನಡುವೆ, ಪಟ್ಟಣಿಗರಂತೆ ಕಾಣುವ ಇಬ್ಬರು ವ್ಯಕ್ತಿಗಳ ಜೊತೆ ಸುಮಾರು ೧೦ ವಲಸಿಗ ಕೆಲಸಗಾರರು ಮದನ್ ಲಾಲರ ಕಚೇರಿಗೆ ಧಾವಿಸಿ ಬಂದರು. ಅವರುಗಳನ್ನು ಕಂಡ ಕೂಡಲೇ, ಎದ್ದು ನಿಂತು ಹೊರಗೆ ಹೊರಟ ರಾಜು ಮತ್ತು ರೋಹಿಣೀರವರನ್ನು ಕುಳಿತುಕೊಳ್ಳುವಂತೆ ಮದನ್ ಸೂಚಿಸಿದರು. ಪತ್ರಿಕಾ ವರದಿಗಾರ ಯೋಗಿಂದರ್ ಮತ್ತು ಸಮಾಜ ಸೇವಕ ಜಸ್ಪಾಲರು ಕೂಡ ಆಸನಗಳಲ್ಲಿ ಕುಳಿತರು.  ಮಿಕ್ಕವರು ಸುತ್ತಲೂ ನಿಂತೇ ಇದ್ದರು. 

ಯೋಗಿಂದರ್ ಮಾತನಾಡುತ್ತ 'ಏಪ್ರಿಲ್-ಮೇ ತಿಂಗಳುಗಳಲ್ಲಿ ಬಂಧನಗೊಂಡ ನಮ್ಮಿಬರನ್ನೂ ಮತ್ತು ಮಿಕ್ಕ ಹನ್ನೆರಡು ವಲಸಿಗರನ್ನೂ ಜಾಮೀನನ ಮೇಲೆ ಬಿಡುಗಡೆಗೊಳಿಸದ್ದಕ್ಕಾಗಿ ತಮಗೆ ಧನ್ಯವಾದಗಳು' ಎಂದರು. 

ವಕೀಲ ಮದನ್ ಲಾಲರು ಉತ್ತರಿಸುತ್ತಾ, 'ತಮ್ಮೆಲ್ಲರುಗಳ ಮೇಲೂ ಜಾರಿಗೊಂಡಿರುವ ಆರೋಪ ಪತ್ರ (Charge sheet) ನನ್ನ ಕೈಸೇರಿದೆ. ನಿಮ್ಮಗಳ ಮೇಲಿನ ಆರೋಪಗಳು ಗಂಭೀರವಾಗೇ ಇದೆ. ಅಂದಿನ ಘಟನೆ ಕುರಿತಾದ ಎಲ್ಲ ವಿವರಗಳನ್ನು ತಾವುಗಳು ನನಗೆ ನೀಡಬೇಕು. ತಾವುಗಳು ಶೀಘ್ರವಾಗಿ ದೋಷ ಮುಕ್ತರಾಗಬೇಕಾದರೆ, ಸದೃಢವಾದ ವಾದವನ್ನು ನ್ಯಾಯಾಲಯದ ಮುಂದಿಡಬೇಕು' ಎಂದರು. 

'ನಮ್ಮಗಳ ಮೇಲಿನ ಆರೋಪದ ವಿವರಗಳನ್ನು ನಮಗೆ ದಯಮಾಡಿ ತಿಳಿಸಿ' ಎಂದರು ಆತಂಕಗೊಂಡಂತೆ ಕಂಡ ಯೋಗಿಂದರ್. 

ವಕೀಲ ಮದನರು ಆರೋಪಗಳ ವಿವರಗಳನ್ನು ನೀಡುತ್ತಾ, 'ನಿಮ್ಮ ನಗರದ ಹನುಮಾನ್ ಮಂದಿರದ ಹತ್ತಿರವಿರುವ ಅಂತರ ರಾಜ್ಯ ಬಸ್ ನಿಲ್ದಾಣದಲ್ಲಿ ತಾವಿಬ್ಬರು ಅಂದು ಜಮಾಯಿಸಿದ್ದ ವಲಸಿಗರನ್ನು ದಾಂಧಲೆ ನಡೆಸುವಂತೆ ಪ್ರಚೋದಿಸಿದ್ದೀರಿ. ಆ ನಿಲ್ದಾಣದಿಂದ ಹೊರಡುವ ದೂರ ಪ್ರಯಾಣದ ಬಸ್ಸುಗಳ ತಪ್ಪು ಮಾಹಿತಿಯನ್ನು ನೀಡಿದ್ದೀರಿ. ಏಪ್ರಿಲ್ ೧೫ರನಂತರವೂ ಲಾಕ್ಡೌನ್ ಮುಂದುವರೆಸಿದ್ದರಿಂದ, ವಲಸಿಗರುಗಳಾಗಲೇ ಉದ್ರಿಕ್ತರಾಗಿದ್ದರು. ತಮ್ಮ ತಮ್ಮ ದೂರದ ಹಳ್ಳಿಗಳಿಗೆ ಪ್ರಯಾಣ ಬೆಳಸಲು ಬೇಕಾದ ಬಸ್ಸು-ರೈಲುಗಳ ವ್ಯವಸ್ಥೆಯನ್ನು ಕೂಡಲೇ ಮಾಡಿಕೊಡಬೇಕೆಂಬುದು ಅವರುಗಳ ಆಗ್ರಹವಾಗಿತ್ತು. "ನಮಗೆ ಕೆಲಸವಿಲ್ಲ, ನಮ್ಮ ಬಳಿ ಹಣವಿಲ್ಲ, ನಮ್ಮ ವಸತಿಯ ಶೆಡ್ಡುಗಳಿಗೆ ಬಾಡಿಗೆ ಕಟ್ಟಲಾಗುತ್ತಿಲ್ಲ" ಎಂಬುದು ಅವರುಗಳ ಒಕ್ಕೊರಲ ಘೋಷಣೆಯಾಗಿತ್ತು. 

ಅಂದು ನೆರೆ ರಾಜ್ಯಗಳ ಬೃಹತ್ ನಗರಗಳಲ್ಲೂ ಅದೇ ರೀತಿಯ ವಲಸಿಗರ ಜಮಾವಣೆ ಮತ್ತು ಹರತಾಳಗಳು ನಡೆದಿತ್ತು.  ಅವರುಗಳೂ ರಸ್ತೆ ತಡೆಗಳನ್ನು ಉಂಟುಮಾಡಿದ್ದರು. ನಿಮ್ಮಗಳ ಸಂಪರ್ಕದಲ್ಲಿದ್ದ ಬೇರೆ ಬೇರೆ ನಗರಗಳ ನಾಯಕರುಗಳ ಪೂರ್ವನಿಯೋಜನೆಗಳಿಂದಲೇ, ಸುತ್ತಲಿನ ಎಲ್ಲಾ ಬೃಹತ್ ನಗರಗಳಲ್ಲೂ, ಜಮಾಯಿಸಿದ್ದ ವಲಸಿಗರುಗಳು ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ರೊಚ್ಚಿಗೆದ್ದು ದಾಂಧಲೆಯೆಬ್ಬಿಸ್ಸಿದ್ದಾರೆ. 

ಸಹಸ್ರಾರು ಸಂಖ್ಯೆಗಳಲ್ಲಿ ಪ್ರಯಾಣಕ್ಕೆಂದು ಜಮಾಯಿಸಿದ್ದ ವಲಸಿಗರುಗಳ ಕೈಯಲ್ಲಿ ಗಂಟು ಮೂಟೆಗಳೇಕಿತ್ತಿಲ್ಲ? ದೊಂಬಿ ನಡೆದ ಬಸ್ ನಿಲ್ದಾಣದ ಸುತ್ತ ವಾಸವಿದ್ದ ವಲಸಿಗರುಗಳು ಮಾತ್ರ ಅಲ್ಲಿ ಜಮಾಯಿಸಿದ್ದಕ್ಕೆ ಕಾರಣವೇನು? ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಜರುಗಿದ ದೊಂಬಿ ಪ್ರಕರಣಗಳು ಸರಕಾರದ ಮುಖಕ್ಕೆ ಮಸಿ ಬಳಿಯಲೆಂದೇ ಪೂರ್ವನಿಯೋಜಿತವಾಗಿ ನಡೆಸಿದ ಕೃತ್ಯಗಳು ಎಂದು ನಿಮ್ಮಗಳ ಮೇಲೆ ಆರೋಪಿಸಲಾಗಿದೆ' ಎಂದರು.  

ಆರೋಪಗಳ ಪಟ್ಟಿಯನ್ನು ಆಲಿಸಿದ ಯೋಗಿಂದರ್ ಮತ್ತವರ ಸಂಗಡಿಗರು ಸ್ವಲ್ಪ ವಿಚಲಿತರಾದಂತೆ ಕಂಡರು. 'ಚಿಂತಿತರಾಗಬೇಡಿ, ತಮ್ಮಗಳನ್ನು ಆರೋಪ ಮುಕ್ತರುಗಳನ್ನಾಗಿಸುವ ಎಲ್ಲ ಪ್ರಯತ್ನಗಳನ್ನು ಮಾಡುವೆ' ಎಂದು ಮದನ್ ಅವರುಗಳನ್ನು ಸಮಾಧಾನ ಪಡಿಸಿದರು. 

ಘಟನೆಗಳ ಎಲ್ಲಾ ವಿವರಗಳನ್ನು ತದೇಕ ಚಿತ್ತಳಾಗಿ ಆಲಿಸಿದ ರೋಹಿಣಿ, ತನ್ನ ಡೈರಿಯಲ್ಲಿ ಕೆಲವು ಟಿಪ್ಪಣಿಗಳನ್ನು ಬರೆದುಕೊಂಡಿದ್ದಳು.  'ಲಾಕ್ಡೌನನ್ನು ಮಾರ್ಚ್ ೨೪ರಂದು ದಿಢೀರನೆ ಜಾರಿಗೊಳಿಸಿದಾಗ, ವಲಸಿಗ ಕೆಲಸಗಾರರಿಗೆ ಉಂಟಾಗಬಹುದಾದ ಅತಂತ್ರ ಪರಿಸ್ಥಿತಿಯ ಪೂರ್ವಾನುಮಾನ ನಮ್ಮ ನಾಯಕರುಗಳಿಗೆ ಇದ್ದಂತೆ ಕಾಣುವುದಿಲ್ಲ. ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುಲು ಹಲವು ಸಾಧನಗಳಿರುವ ನಮ್ಮ ನಾಯಕರುಗಳಿಗೆ ವಲಸಿಗರ ಬವಣೆಯ ಪೂರ್ವಾನುಮಾನ ಇರದೇ ಇದ್ದದ್ದು ನಾಚಿಕೆಗೇಡಿನ ವಿಷಯವೇ ಸರಿ. ಮಾರ್ಚ್ ೨೪ಕ್ಕಿಂತ ಕೆಲವು ದಿನಗಳ ಮುಂಚೆಯೇ, ಲಾಕ್ಡೌನಿನ ಪೂರ್ವಾನುಮಾನವಿದ್ದ ಹಲವು ವಲಸಿಗರು, ಪೂರ್ವದ ರಾಜ್ಯಗಳ ಕಡೆ ಹೊರಡುವ ಹಲವು ರೈಲುಗಳನ್ನು ಹತ್ತಲು ಮುಗಿ ಬಿದ್ದದ್ದು ಸರಕಾರಗಳು ಗಮನಿಸಲಿಲ್ಲವೆ? ವಲಸಿಗರ ಅತಂತ್ರ ಸ್ಥಿತಿಗೆ ನಮ್ಮ ಕೇಂದ್ರ ಹಾಗು ರಾಜ್ಯ ಸರಕಾರಗಳೇ ಕಾರಣ. ಉಂಟಾಗ ಬಹುದಾದ ವಲಸಿಗರ ಪರದಾಟಗಳನ್ನು ನಿಭಾಯಿಸುವ ಯಾವ ಮುಂಜಾಗರೂಕತೆಯ ಕ್ರಮಗಳನ್ನೂ ನಮ್ಮ ಸರಕಾರಗಳು ಕೈಗೊಳ್ಳಲಿಲ್ಲ. ಹಾಗಾಗಿ ನಮ್ಮ ವಲಸಿಗ ಕೆಲಸಗಾರರು ನೀರು, ಆಹಾರ, ವಸತಿಗಳಿಲ್ಲದೆ ಒದ್ದಾಡುವಂತಾಯ್ತು. ಪ್ರಯಾಣಿಸಲು ಅನ್ಯ ಮಾರ್ಗವಿಲ್ಲದೆ, ತಮ್ಮ ಸಾಮಾನುಗಳನ್ನು ಹೊತ್ತು, ಹೆಂಡತಿ-ಮಕ್ಕಳುಗಳೊಡನೆ, ಸುಡುಬಿಸಿಲಿನಲ್ಲಿ ರೈಲು ಮತ್ತು ಬಸ್ಸು ಮಾರ್ಗಗಳನ್ನು ಹಿಡಿದು ಕಾಲ್ನಡಿಗೆಯಲ್ಲಿ ಸಾಗಬೇಕಾಯಿತು' ಎನ್ನುತ್ತಾ ಪ್ರಲಾಪಿಸಿದವಳು ರೋಹಿಣಿ. 

ಮದನ್ ಲಾಲರು ಕೂಡ ಹೌದೆಂಬಂತೆ ತಲೆಯಾಡಿಸುತ್ತಾ, 'ರೈಲು ಮತ್ತು ಬಸ್ ಮಾರ್ಗಗಳಲ್ಲಿ  ಚಲಿಸುತ್ತಾ ತಮ್ಮ ತಮ್ಮ ಊರುಗಳತ್ತ ಹೋರಾಟ ವಲಸಿಗ ಕೆಲಸಗಾರರ ಕಾಲ್ನಡಿಗೆಯ ಪ್ರಯಾಣ, ೧೯೪೭ರ ಭಾರತ ವಿಭಜನೆಯ ಕರಾಳ ದಿನಗಳಂದು, ಪಂಜಾಬ್ ಹಾಗೂ ಬಂಗಾಳ ಗಡಿಗಳಲ್ಲಿ ದಿಕ್ಕೆಟು ಎರಡೂ ಕಡೆಗೆ ಸಾಗಿದ ನಿರಾಶ್ರಿತರ ವಲಸೆಯನ್ನು ನೆನಪಿಸಿತ್ತು. ಲಾಕ್ಡೌನ್ ವಿಧಿಸುವ ಮುನ್ನ, ವಲಸಿಗ ಕೆಲಸಗಾರರ ಸಮಸ್ಯೆಯನ್ನು ಸರಕಾರಗಳು ಮುಂಚಿತವಾಗಿ ಮನಗಾಣಬೇಕಿತ್ತು. ಲಾಕ್ಡೌನ್ ವಿಧಿಸುವ ಮುನ್ನ ವಲಸಿಗರು ತಮ್ಮ ತಮ್ಮ ಊರುಗಳತ್ತ ಪ್ರಯಾಣಿಸುವ ವ್ಯವಸ್ಥೆಯನ್ನು ಮಾಡಿಕೊಡಬೇಕಿತ್ತು ಅಥವಾ ಅವರುಗಳಿರುವಲ್ಲೇ ಅವರುಗಳಿಗೆ ನೀರು, ಆಹಾರ ಮತ್ತು ವಸತಿಯ ಸೌಕರ್ಯವನ್ನು ಮಾಡಿಕೊಡಬೇಕಿತ್ತು. ಲಾಕ್ಡೌನ್ ದಿನಗಳಲ್ಲಿ ವಲಸಿಗ ಕೆಲಸಗಾರರ ಮೂಲಭೂತ ಅವಶ್ಯಕತೆಗಳ  ಏರ್ಪಾಡನ್ನು ಅವರಗುಳಿರುವಲ್ಲಿಯೇ ಮಾಡಿಕೊಡಬೇಕೆಂದು, ನಿರ್ಮಾಣೋದ್ಯಮಿಗಳ ಮತ್ತು ದೊಡ್ಡ ಗುತ್ತಿಗೆದಾರರುಗಳ ಮೇಲೆ ಕಠಿಣ ಷರತ್ತುಗಳನ್ನು ಸರಕಾರಗಳು ವಿಧಿಸಬೇಕಿತ್ತು. ಈ ಅವಧಿಯಲ್ಲಿ ನೂರಾರು ವಲಸಿಗರು ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಂಡದ್ದು, ಸ್ವತಂತ್ರ ಭಾರತದ ಇತಿಹಾಸದ ಮೇಲಿನ ಕಪ್ಪು ಚುಕ್ಕೆ' ಎಂದು ಉದ್ಗರಿಸಿದರು. 

ಉತ್ತೇಜಿರಾದಂತೆ ಕಂಡ ರಾಜುರವರು, 'ನಾನು ವಕೀಲನಾಗಿರದಿರಬಹುದು. ಆದರೂ ತಮ್ಮ ಹೋಲಿಕೆ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ' ಎಂದು ಮದನರನ್ನು ನೋಡುತ್ತಾ ಗುಡುಗಿದರು. 'ಹೌದು, ೧೯೪೭ರ ಭಾರತ ವಿಭಜನೆಯ ಸಮಯದಲ್ಲಿ ನಡೆದ ನಿರಾಶ್ರಿತರ ವಲಸೆಯ ದುರಂತ,  ಮನುಕುಲದ ಇತಿಹಾಸದಲ್ಲಿ ಕರಾಳವಾದುದೆಂದು ಓದಿದ್ದೇನೆ. ಸುಮಾರು ಒಂದು ಕೋಟಿಗೂ ಮೀರಿದಷ್ಟು ನಿರಾಶ್ರಿತರು ಪಂಜಾಬ್ ಗಡಿಯ ಎರಡೂ ಕಡೆ ಪರದಾಡುತ್ತ ಸಾಗಿದ್ದರು. ಬಂಗಾಳದ ಗಡಿಯಲ್ಲೂ ಸುಮಾರು ೧೦ ಲಕ್ಷದಷ್ಟು ನಿರಾಶ್ರಿತರ ವಿನಿಮಯ ಅಮಾನುಷ ರೀತಿಯಲ್ಲಿ ನಡೆದಿದೆ. ಆ  ರೀತಿಯ ನಿರಾಶ್ರಿತರ ಆತಂಕದ ಪ್ರಯಾಣ, ಹಿಂಸಾಚಾರಗಳು, ಕೊಲೆ-ಸುಲಿಗೆಗಳು ನಡೆದೇ ನಡೆಯುತ್ತದೆಂಬ ಪೂರ್ವಾನುಮಾನ ಎರಡೂ ಕಡೆಯ ನಾಯಾಕರುಗಳಿಗೆ ಇದ್ದೇ ಇತ್ತು. ಆದರೆ ಅಂದಿನ ಎರಡೂ ಕಡೆಯ ನಾಯಕರುಗಳಿಗೆ ಅಧಿಕಾರವನ್ನು ಕೂಡಲೇ ವಹಿಸಿಕೊಳ್ಳುವ ತವಕ ಮಾತ್ರವಿದ್ದು, ನಿರಾಶ್ರಿತರ ಕ್ಷೇಮೆದ ಚಿಂತೆಯನ್ನು ಮಾಡಲೇ ಇಲ್ಲ. ಅಂದಿನ ಭಾರತ ವಿಭಜನೆಯ ಪ್ರಕ್ರಿಯೆ, ಅಂದಿನ ನಾಯಕರುಗಳು  ಆತಾತುರವಾಗಿ ನಡೆಸಿದ ಅವಿವೇಕವಾಗಿತ್ತು. ಅಂದಿನ ಬ್ರಿಟಿಷ್ ಸರಕಾರ ವಿಭಜನೆಯ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವಂತೆ  ೧೨ ತಿಂಗಳುಗಳಿಗೂ ಹೆಚ್ಚಿನ ಸಮಯಾವಕಾಶವನ್ನು ಅಂದಿನ ವೈಸ್ರಾಯರಿಗೆ ನೀಡಿದ್ದರೂ, ಎಲ್ಲ ನಾಯಕರುಗಳು ನಾಲ್ಕೇ ತಿಂಗಳುಗಳ ತರಾತುರಿಯಲ್ಲಿ ದೇಶದ ವಿಭಜನೆಯನ್ನು ಮಾಡಿ ಮುಗಿಸಿದರು. 

ಅಂದಿನ ಅವಿಭಜಿತ ಭಾರತದ ಕೈಯಲ್ಲಿ ಸಾಕಷ್ಟು ದೊಡ್ಡದಾದ ಸೇನಾಬಲವಿತ್ತು. ಸೇನೆಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ, ಸೂಕ್ತವಾಗಿ ನಿಯೋಜಿಸಿದ್ದರೆ  ರಕ್ತಪಾತ ಹಾಗು ಕೊಲೆ-ಸುಲಿಗೆಗಳನ್ನು ತಡೆಯಬಹುದಿತ್ತು. ದುರದೃಷ್ಟವಶಾತ್ ಹಾಗಾಗಲಿಲ್ಲ. ಆ ದಿನಗಳ ವರದಿಯೊಂದರ ಪ್ರಕಾರ ಅಂದು ನಡೆದ ಹಿಂಸಾಚಾರಗಳಲ್ಲಿ, ಎರಡೂ ಕಡೆಯ ಸುಮಾರು ೧೦ರಿಂದ ೨೦ ಲಕ್ಷಗಳಷ್ಟು ನಿರಾಶ್ರಿತರ ಕಗ್ಗೊಲೆ ನಡೆದು ಹೋಯಿತು. ಸಾವು-ನೋವುಗಳ ಅನುಮಾನವನ್ನು ಉತ್ಪ್ರೇಕ್ಷೆಯಿಲ್ಲದೆ  ಬಣ್ಣಿಸಿದ್ದೇವೆಂದು ಹೇಳಿಕೊಂಡ ವರದಿಗಳೂ ಕೂಡ ೨ ಲಕ್ಷದಿಂದ ೫ ಲಕ್ಷಗಳವರೆಗಿನ ಸಂಖ್ಯೆಯಲ್ಲಿ ನಿರಾಶ್ರಿತರು ಹಿಂಸಾಚಾರದಲ್ಲಿ ಅಸು ನೀಗಿದರು ಎಂದು ದಾಖಲಿಸಿವೆ. ಮತ್ತೊಂದು ವರದಿಯ ಪ್ರಕಾರ, "ಎರಡೂ ರಾಷ್ಟ್ರಗಳು ನಿರಾಶ್ರಿತರ  ವಿನಿಮಯಕ್ಕೆಂದು ಚಲಾಯಿಸಿದ ಹಲವಾರು ರೈಲುಗಾಡಿಗಳು, ತಮ್ಮ ಅಂತಿಮ ನಿಲ್ದಾಣಗಳನ್ನು ತಲುಪಿ ನಿಂತರೂ, ಯಾವ ಪ್ರಯಾಣಿಕರೂ ಇಳಿಯಲೇ ಇಲ್ಲ. ರೈಲಿನಲ್ಲೇ ನಿರಾಶ್ರಿತರ ಸಾಮೂಹಿಕ ಮಾರಣ ಹೋಮವನ್ನು ನಡೆಸಲಾಗಿತ್ತು. ಎರಡೂ ಕಡೆಯ ನಿರಾಶ್ರಿತರುಗಳ  ನಡುವಿನ ದ್ವೇಷ, ಅಸೂಯೆ ಅಷ್ಟು ತೀವ್ರವಾಗಿತ್ತು. ದುಷ್ಕರ್ಮಿಗಳ ಸಂಚು ಹಿಂಸಾಚಾರಕ್ಕೆ ತುಪ್ಪವನ್ನು ಸುರಿಯುವ ಕೆಲಸ ಮಾಡಿತ್ತು. ಜೊತೆಗೆ ಅಂದಿನ ನಾಯಕರುಗಳ ಬೇಜವಾಬ್ದಾರಿ ವರ್ತನೆ ಮತ್ತು ದಿವ್ಯ ನಿರ್ಲಕ್ಷ್ಯಗಳು ಸಾಮೂಹಿಕ ಹತ್ಯೆಗಳಿಗೆ ಎಡೆ ಮಾಡಿ ಕೊಟ್ಟಿತ್ತು. ಎರಡೂ ಕಡೆಯ ನಿರಾಶ್ರಿತರು ತಮ್ಮ ತಮ್ಮ ಆಸ್ತಿ-ಪಾಸ್ತಿಗಳನ್ನು ತೊರೆದು, ಬರಿಗೈಗಳಲ್ಲಿ ದೇಶಾಂತರಿಸಬೇಕಾಗಿ ಬಂದಿತ್ತು. ನಿರಾಶ್ರಿತರು ತ್ಯಜಿಸಿ ಬಂದ ಆಸ್ತಿಗಳ ಕ್ರಮಬದ್ಧ ಮರುಹಂಚಿಕೆಯನ್ನು ಮಾಡುವ ಯಾವ ಪ್ರಯತ್ನಗಳೂ  ವ್ಯವಸ್ಥಿತವಾಗಿ ನಡೆಯಲಿಲ್ಲ" ತಿಳಿದು ಬಂದಿದೆ.  

೨೦೨೦ರ ವಲಸಿಗರ ಬವಣೆಯನ್ನು ೧೯೪೭ರ ಘಟನೆಯೊಂದಿಗೆ ಹೋಲಿಸಬೇಡಿ. ಮಾರ್ಚ್ ೨೨ರ ದಿನದಂದೇ ನಮ್ಮ ಪ್ರಧಾನಿಯವರು ದೇಶದ ಜನತೆಯನ್ನು ಲಾಕ್ಡೌನ್ಗೆ ಮಾನಸಿಕವಾಗಿ ಸಿದ್ಧರಿರುವಂತೆ ಮಾಡಲು, ಒಂದು ದಿನದ ಲಾಕ್ಡೌನನ್ನು ಜಾರಿಗೊಳಿಸಿದ್ದರು. ಮಾರ್ಚ್ ೨೦ರ ತಮ್ಮ ಭಾಷಣದಲ್ಲೇ ಪ್ರಧಾನಿಯವರು ಜನತೆಗೆ ದೀರ್ಘವಾದ  ಹೋರಾಟವೊಂದಕ್ಕೆ ಸಿದ್ಧರಾಗಿರುವಂತೆ ಕರೆ ನೀಡಿದ್ದರು. ಆದುದರಿಂದ ಹಲವಾರು ಹಂತಗಳಲ್ಲಿ ದೀರ್ಘವಾದ  ಲಾಕ್ಡೌನನ್ನು ಜಾರಿಗೊಳಿಸಿದ್ದು, ದಿಢೀರನೆ ಕೈಗೊಂಡ ನಿರ್ಣಯವೆಂದು ಹೇಳಲಾಗದು. ಸರಕಾರಕ್ಕೆ ವಲಸಿಗರ ಸಮಸ್ಯೆಯ ಅರಿವು ಇರಲಿಲ್ಲವೆಂದೂ ಹೇಳಲಾಗದು. ವಲಸಿಗರನ್ನು ಲಾಕ್ಡೌನ್ಗೆ ಮುಂಚಿತವಾಗೇ ಅವರವರ ಊರುಗಳನ್ನು ತಲುಪುವಂತೆ ಮಾಡಿದ್ದರೆ, ನಗರಗಳಿಂದ ಸೋಂಕು ಮುಕ್ತವಾಗಿದ್ದ ಹಳ್ಳಿಗಳಿಗೆ ಕೋವಿಡ್ ಸೋಂಕನ್ನು ತಂದು ಸೇರಿಸಿದಂತಾಗುತ್ತಿತ್ತು. ರೈಲುಗಾಡಿಗಳ ತುಂಬಾ ವಲಸಿಗರು ಕಿಕ್ಕಿರಿದು ಸೇರಬೇಕಾಗಿದ್ದುದೇ  ಸೋಂಕಿನ ತೀವ್ರ ಹರಡುವಿಕೆಗೆ ಕಾರಣವಾಗ ಬಹುದೇನೋ ಎಂಬ ಭಯವಿತ್ತು. 

ವಲಸಿಗರ ಪರದಾಟದ ಬವಣೆಯನ್ನು, ೧೯೯೦ರಲ್ಲಿ ಕಾಶ್ಮೀರದಿಂದ ಹಿಂದೂಗಳನ್ನು ಹೊಡೆದಟ್ಟಿದ ಘಟನೆಗೂ ಹೋಲಿಸಿ ನೋಡಬಹುದು. ಅಂದು ಕಾಶ್ಮೀರದಿಂದ ಹೊರದೂಡಲ್ಪಟ್ಟ ಹಿಂದೂಗಳನ್ನು, ನಮ್ಮ ಮಾಧ್ಯಮದವರು, ರಾಜಕಾರಣಿಗಳು ಮತ್ತು ಕೆಲವು ಸರಕಾರಗಳೂ ಉದ್ದೇಶಪೂರ್ವಕವಾಗಿ "ಕಾಶ್ಮೀರಿ ಪಂಡಿತ"ರೆಂದೇ ಕರೆಯುತ್ತಾರೆ. ಪಂಡಿತ ಜನಾಂಗದವರು ಹಿಂದೂಗಳಲ್ಲವೆ? ಇದು "ಒಡೆದು ಆಳುವ ನೀತಿಯ" ಮುಂದುವರೆದ  ಹುನ್ನಾರವಲ್ಲವೆ? ಈ ರೀತಿಯ ಒಡೆದಾಳುವ ಹುನ್ನಾರಗಳಿಗೆ ನನ್ನ ಕಡು ವಿರೋಧವಿದೆ. ಆ ದಿನಗಳಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿರಂತರವಾಗಿ ಸಾಗಿತ್ತು. ಅಪಾರ ಸಂಖ್ಯೆಯಲ್ಲಿ ಅತ್ಯಾಚಾರ ಹಾಗು ಕೊಲೆ ಪ್ರಕರಣಗಳು ನಡೆದಿದ್ದವು. ಕಾಶ್ಮೀರವನ್ನು ಬಿಟ್ಟು ತೊಲಗುವಂತೆ ಉಗ್ರರು, ಶತ ಶತಮಾನಗಳಿಂದ ಅಲ್ಲೇ ಬದುಕು ಕಟ್ಟಿಕೊಂಡಿದ್ದ ಹಿಂದುಗಳಿಗೆ ಬೆದರಿಕೆಯೊಡ್ಡಿದ್ದರು. ನಾಲ್ಕು ಲಕ್ಷಕ್ಕೂ ಹೆಚ್ಚು ಹಿಂದೂಗಳು ಜೀವ ಭಯದಿಂದ ರಾತ್ರೋರಾತ್ರಿ ಕಾಶ್ಮೀರವನ್ನು ತೊರೆದು, ಜಮ್ಮು, ದಿಲ್ಲಿ ಮುಂತಾದ ಸುರಕ್ಷಿತ ತಾಣಗಳಿಗೆ ವಲಸೆ ಹೋದರು. ಆಸ್ತಿ-ಪಾಸ್ತಿಗಳನ್ನು ಬಿಟ್ಟು ಓಡಿ ಹೋಗಬೇಕಾದ ಅವರುಗಳಿಗೆ, ಎಷ್ಟರ ಮಟ್ಟಿನ ಮನೋವೇದನೆಯಾಗಿರ ಬೇಡ? ನಮ್ಮ ದೇಶದಲ್ಲೇ, ನಮ್ಮ ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾದರು. ಆ ದಿನಗಳಲ್ಲಿ ಕಾಶ್ಮೀರಿ ಹಿಂದೂಗಳ ರಕ್ಷಣೆ ಮಾಡಲು ಅಂದಿನ ಯಾವ ಸರಕಾರಗಳೂ ಮುಂದೆ ಬರದೇ ಇದ್ದದ್ದು ದುರಂತವೇ ಸರಿ. ಈ ದುರ್ಘಟನೆ ನಡೆದು ಮೂರು ದಶಕಗಳೇ ಕಳೆದಿದ್ದರೂ, ಕಾಶ್ಮೀರಿ ಹಿಂದುಗಳಿಗೆ ತಮ್ಮ ಊರುಗಳಿಗೆ ಹಿಂತಿರುಗಲಾಗಿಲ್ಲ. ಅವರುಗಳೆಲ್ಲ ಕಾಶ್ಮೀರದ ಹೊರಗೆ ಉಳಿದು, ತಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಂಡಿದ್ದಾರೆ. ಇಂದಿನ ಕೇಂದ್ರ ಸರಕಾರ, ಕಾಶ್ಮೀರಿ ಹಿಂದೂಗಳು ಕಾಶ್ಮೀರಕ್ಕೆ            ಹಿಂತಿರುಗುವಂತೆ ಧೈರ್ಯ ತುಂಬಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಅವರುಗಳಿಗೆ ಹಿಂತಿರುಗುವಲ್ಲಿನ ಭಯದ ನಿವಾರಣೆಯಾಗಿಲ್ಲ. ಕಾಶ್ಮೀರಿ ಹಿಂದೂಗಳ ಸಮಸ್ಯೆಗಳಿಗೆ ಹೋಲಿಸಿದರೆ, ಲಾಕ್ಡೌನಿನಿಂದ ಸಂತ್ರಸ್ತರಾದ ವಲಸಿಗರ ಪರಿಸ್ಥಿತಿ ಅಷ್ಟೇನು ತ್ರಾಸದಾಯಕವಾಗೇನಿಲ್ಲವೆಂದೇ ಹೇಳಬಹುದು. ವಲಸಿಗ ಕೆಲಸಗಾರರು ಕೆಲಸಗಳನ್ನು ಕಳೆದುಕೊಂಡಿದ್ದಾರೆ, ಆದರೆ ಆಸ್ತಿ-ಪಾಸ್ತಿಗಳನ್ನಲ್ಲ. ಅವರವರ ಹಳ್ಳಿಗಳಲ್ಲೇ ಅವರುಗಳಿಗೆ ವಸತಿ, ಉದ್ಯೋಗಗಳ ವ್ಯವಸ್ಥೆಯನ್ನು ಮಾಡುವ ಸರ್ವ ಪ್ರಯತ್ನಗಳನ್ನು ಸರಕಾರಗಳು ಮಾಡಿವೆ. ಒಂದೊಮ್ಮೆ ಅವರುಗಳು ಕೆಲಸದ ಸಲುವಾಗಿ ನಗರಗಳಿಗೆ ಹಿಂತಿರುಗಲು ಬಯಸಿದಲ್ಲಿ, ಅವರ ಪ್ರಯಾಣದ ವ್ಯವಸ್ಥೆಯನ್ನೂ ಸರಕಾರ ಮಾಡುವ ಭರವಸೆ ನೀಡಿದೆ. 

ಲಾಕ್ಡೌನ್ ಜಾರಿಗೊಂಡ ಕೂಡಲೇ, ವಲಸಿಗ ನೌಕರರು ರೈಲು-ಬಸ್ಸುಗಳನ್ನು ಹಿಡಿದು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಲು ಪ್ರಯತ್ನಿಸಿದರು. ದಿಕ್ಕು ತೋಚದ ಹಲವು ವಲಸಿಗರು ಕಾಲ್ನಡಿಗೆಯಲ್ಲೇ ತಮ್ಮ ಊರುಗಳತ್ತ ಹೊರಟರು. ಇಂತಹ ಬೆಳವಣಿಗೆಗಳನ್ನು ಗಮನಿಸಿದ ಕೇಂದ್ರ ಸರಕಾರ, ಆಯಾ ರಾಜ್ಯ ಸರಕಾರಗಳಿಗೆ ವಲಸಿಗರನ್ನು ಅವರುಗಳಿರುವ ಸ್ಥಳದಲ್ಲೇ ಉಳಿದುಕೊಳ್ಳುವಂತೆ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಕೂಡಲೇ ಮಾಡುವಂತೆ ನಿರ್ದೇಶಿಸಿತು. ಎಲ್ಲಾ ರಾಜ್ಯ ಸರಕಾರಗಳೂ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡರೂ, ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದಿರಬಹುದು. ಆದರೂ ಅಪಾರ ಸಂಖ್ಯೆಯಲ್ಲಿ ವಲಸಿಗರು ಅತಂತ್ರರಾಗಿದ್ದು, ಕಂಡು ಕೇಳರಿಯದ ಸಮಸ್ಯೆಯೇ ಸರಿ. ಆದರೂ ಸರಕಾರಗಳು ಕೈಗೊಂಡ ಕ್ರಮಗಳಿಂದ ಸಾವು ನೋವುಗಳು ನೂರರ ಸಂಖ್ಯೆಯಲ್ಲಿ ಮಾತ್ರವಿದ್ದು, ೧೯೪೭ರಂದು ನಡೆದ "ನರಮೇಧ"ದೊಂದಿಗಿನ ಹೋಲಿಕೆ ಸಲ್ಲದು. ಪರಿಸ್ಥಿತಿಯನ್ನು ನಿಭಾಯಿಸಲು ಶ್ರಮ ಪಡುತ್ತಿರುವ ಸರಕಾರಗಳ ಬಗ್ಗೆ ಸ್ವಲ್ಪ ಅನುಕಂಪವಿರಲಿ.' ಭಾವಾವೇಶದಿಂದ ಕೂಡಿದ ತಮ್ಮ ವಿಚಾರಗಳನ್ನು ಮಂಡಿಸಿದ ರಾಜುರವರು ಸಾಕಷ್ಟು ದಣಿದಿದ್ದಂತೆ ಕೂಡ ಕಂಡರು. 

ವಕೀಲ ಮದನ್ ಲಾಲ್ ಮತ್ತು ರೋಹಿಣಿಯವರಿಬ್ಬರೂ ರಾಜುರವರ ಆವೇಶಭರಿತ ವಾದವನ್ನು ಕೇಳಿ ಮೂಕವಿಸ್ಮಿತರಾಗಿದ್ದರು. ೧೯೪೭ರ ಘಟನೆಗಳ ಬಗ್ಗೆ ಕರಾರುವಾಕಾದ ವಿಚಾರಗಳನ್ನು ವಿವರಿಸಿದ ತಂದೆ ರಾಜುರವರಿಗೆ, ಮಗಳು ರೋಹಿಣಿ ಮೆಚ್ಚುಗೆ ವ್ಯಕ್ತಪಡಿಸಿದಳು. ರಾಜು ಮತ್ತು ರೋಹಿಣಿ ಮದನ್ ಲಾಲರ ಮನೆಯನ್ನು ಬಿಟ್ಟು ಹೊರಡುವ ಹೊತ್ತಿಗಾಗಲೇ ತಡರಾತ್ರಿಯಾಗಿತ್ತು. 

***     

ವಲಸಿಗ ಕೆಲಸಗಾರರ ಕಷ್ಟ-ಕಾರ್ಪಣ್ಯಗಳನ್ನು ಕುರಿತು ಇನ್ನೂ ಹೆಚ್ಚಿನ ಪರಿಶೋಧನೆಯನ್ನು ಮುಂದುವರಿಸಲಿಚ್ಛಿಸಿದ ರೋಹಿಣಿ, ತನ್ನ ತಂದೆ ರಾಜುರವರೊಂದಿಗೆ ನಗರ ಪ್ರದಕ್ಷಿಣೆ ಕೈಗೊಂಡಿದ್ದಳು. ಹೊರವಲಯದ ಒಂದು ಪ್ರದೇಶದಲ್ಲಿ, ಸುಮಾರು ೫೦ ವಲಸಿಗರು ಭಾರಿ ಚರಂಡಿಯ ಬದುವಿನ ಮೇಲಿದ್ದ, ಶಿಥಿಲವಾದ ಶೆಡ್ಡುಗಳಲ್ಲಿ ವಾಸವಿದ್ದರು. ಅವರುಗಳ ಮುಖ್ಯಸ್ಥರಾದ ಮಲ್ಕಿಯತ್ ಸಿಂಗರವರು ತಮ್ಮ ದುರಂತದ ಕಥೆಯನ್ನು ರೋಹಿಣಿಗೆ ವಿವರಿಸಿದರು. 'ನಮ್ಮ ತಂಡದವರೆಲ್ಲ ಕಟ್ಟಡದ ವಿಶೇಷ ಕುಶಲ ಕರ್ಮಿಗಳು. ಆದುದರಿಂದ ನಮ್ಮ ಗುತ್ತಿಗೆದಾರರು ನಮ್ಮಗಳಿಗೆ ಉತ್ತಮವಾದ ಶೆಡ್ಡುಗಳನ್ನು ವಾಸಕ್ಕಾಗಿ ನೀಡಿದ್ದರು.  ಆ ಶೆಡ್ಡುಗಳಲ್ಲಿ ವಾಸಿಸುತ್ತ, ನಾಲ್ಕು ವರ್ಷಗಳಷ್ಟು ಕಾಲ ನೆಮ್ಮದಿಯಿಂದ ಕೆಲಸ ಮಾಡಿಕೊಂಡಿದ್ದೆವು. ಲಾಕ್ಡೌನಿನ ಮುನ್ಸೂಚನೆಯನ್ನರಿತ ನಾನು, ನನ್ನ ತಂಡದವರೊಂದಿಗೆ  ಮುಂಚಿತವಾಗೇ ನಮ್ಮ ಊರುಗಳನ್ನು ಸೇರಿದೆ. ಆದರೆ ನಮ್ಮ ಊರಿನವರುಗಳೇ ನಮ್ಮಗಳನ್ನು "ದೂರದ ನಗರಗಳಿಂದ ಬಂದವರು, ಕೋವಿಡ್ ಸೋಂಕು ಹರಡುವವರು" ಎಂದು  ಭಾವಿಸಿ ನಮ್ಮನ್ನು ಊರಿನ ಹೊರಗೆ ಉಳಿದುಕೊಳ್ಳುವಂತೆ ಮಾಡಿದ್ದರು. ಮೂರು ವಾರಗಳನಂತರವೇ ನಮ್ಮಗಳನ್ನು ಊರಿನೊಳಗೆ ಸೇರಿಸಿಕೊಂಡಿದ್ದು. ನನ್ನ ಹತ್ತಿರ ಕೂಡಿಟ್ಟ ಸ್ವಲ್ಪ ಹಣವಿತ್ತು. ನನ್ನ ತಂದೆ ಹಾಗು ಚಿಕ್ಕಪ್ಪರುಗಳೊಂದಿಗೆ ನಮ್ಮ ಮುತ್ತಾತನವರು ಕಟ್ಟಿದ ಮನೆಯಲ್ಲಿ ಸ್ವಲ್ಪ ದಿನಗಳನ್ನು ಆರಾಮವಾಗಿ ಕಳೆದೆವು. ದಿನಗಳು ಕಳೆದಂತೆ ನನ್ನ ಕೈಯಲ್ಲಿದ್ದ ಹಣ ಖರ್ಚಾಗಿ ಹೋಯಿತು. ಏನಾದರೂ ಕೆಲಸ ಮಾಡಿ ದುಡಿಯೋಣವೆಂದರೆ, ನಮ್ಮ ಊರಿನಲ್ಲಿ ಯಾವ ಕೆಲಸಗಳೂ  ಸಿಗುವಂತಿರಲಿಲ್ಲ. ಕೈಗಳು ಬರಿದಾದ ನಮ್ಮಗಳನ್ನು, ನಮ್ಮ ತಂದೆಯವರು ಕೂಡ ಖರ್ಚಿನ  ಹೊರೆಗಳಂತೆ ಕಾಣ ತೊಡಗಿದರು. ಹಾಗೂ ಹೀಗೂ ಎರಡು ತಿಂಗಳುಗಳನ್ನು ಕಳೆದ ಬಳಿಕ, ರೈಲು ಬಸ್ಸುಗಳ ಸಂಚಾರ ಆರಂಭವಾಯಿತು. ನನ್ನೊಂದಿಗೆ ಸುಮಾರು ೪೦ ಜನಗಳು ಹೊರಟರು. ನಾವೆಲ್ಲರೂ ನಮ್ಮ ಕಟ್ಟಡದ ಕೆಲಸವಿದ್ದ ನಗರಕ್ಕೆ ಹಿಂತುರುಗಿ ಬಂದೆವು. ಅಷ್ಟು ಹೊತ್ತಿಗಾಗಲೇ ನಾವು ವಾಸಿಸುತ್ತಿದ್ದ ಶೆಡ್ಡುಗಳೆಲ್ಲವೂ ನೆಲಸಮಗೊಂಡಿದ್ದವು. ನಮ್ಮ ಗುತ್ತಿಗೆದಾರರನ್ನು ಭೇಟಿಮಾಡಿ ಕೇಳಿದಾಗ ಅವರು ನಮಗೆ ಯಾವ ಭರವಸೆಯನ್ನೂ ನೀಡದಾದರು. ನಾನು ಕೇಳ್ಪಟ್ಟ ಸುದ್ದಿಗಳ ಪ್ರಕಾರ, ನಮ್ಮ ನಿರ್ಮಾಣೋದ್ಯಮಿಗಳೇ ನಮ್ಮ ಶೆಡ್ಡುಗಳನ್ನು ನೆಲಸಮಗೊಳಿಸಿ ಮುಂದಿನ ಕಟ್ಟಡಗಳಿಗೆ ಅನುವು ಮಾಡಿಕೊಂಡಿದ್ದರು.  ಶೆಡ್ಡುಗಳ ಒಳಗಿದ್ದ ನಮ್ಮ ಸಾಮಾನುಗಳು ಏನಾದುವೆಂಬುದನ್ನು ಯಾರೂ ಹೇಳದಾದರು. ನಾವುಗಳು ಪೊಲೀಸರಿಗೆ ದೂರನ್ನು ನೀಡಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ಕಟ್ಟಡದ ಕೆಲಸಗಳು ಪುನರಾರಂಭವಾಗುವ ಸೂಚನೆಗಳು ಇರಲಿಲ್ಲ. ಬೇರೆಲ್ಲೂ ಹೋಗಲು ತಿಳಿಯದೆ, ಭಾರಿ ಚರಂಡಿಯ ಬದುವಿನ ಮೇಲೆ ಹರಿದ ಮುರಿದ ತಗಡುಗಳಿಂದ ಶೆಡ್ಡುಗಳನ್ನು ನಿರ್ಮಿಸಿಕೊಂಡು ದಿನ ಕಳೆಯುತ್ತಿದ್ದೇವೆ' ಎಂದು ತಮ್ಮ ಅಳಲನ್ನು ರೋಹಿಣಿಯ ಬಳಿ ತೋಡಿಕೊಂಡವರು ಮಲ್ಕಿಯತ್ ಸಿಂಗ್. ಅವರುಗಳ ದಾಖಲೆ ಪತ್ರಗಳ ವಿವರಗಳನ್ನು ಬರೆದುಕೊಂಡ ರೋಹಿಣಿ, ಅವರುಗಳಿಗೆ ಸರಕಾರದಿಂದ ದೊರೆಯಬೇಕಾದ ದಿನಸಿ ಪೊಟ್ಟಣಗಳು ದೊರೆಯುವಂತೆ ಮಾಡುವ ಭರವಸೆಯನ್ನು ನೀಡಿದಳು. 

ಕೋವಿಡ್ ತಡೆಗೆಂದು ಜಾರಿಗೊಳಿಸಿದ ಲಾಕ್ಡೌನ್ ದಿನಗಳು ವಲಸಿಗ ಕೆಲಸಗಾರರ ಪಾಲಿಗೆ ಕರಾಳ ದಿನಗಳಾಗಿದ್ದವು. ದೇಶದ ದಕ್ಷಿಣದ ತುತ್ತುದಿಯ ವಲಸಿಗ ರಾಮುವಿನ ದುರಂತ ಕತೆಯನ್ನೋದಿದ ರೋಹಿಣಿ ದುಃಖಿತಳಾಗಿದ್ದಳು. ಒಂಬತ್ತು ಮಕ್ಕಳ ಬಡ ಕುಟುಂಬವೊಂದರ ಐದನೇ ಮಗುವಾಗಿ ಜನಿಸಿದ್ದವನು ರಾಮು. ಹದಿನೈದರ ಎಳೆ ಪ್ರಾಯದಲ್ಲೇ, ಮನೆಯವರಿಗೂ ತಿಳಿಸದೆ ನೌಕರಿಯನ್ನರಸಿ ದೂರದ ನಗರವೊಂದಕ್ಕೆ ವಲಸೆ ಹೋದ ಅವನಿಗೆ, ಸಕ್ಕರೆಯ ಕಾರ್ಖಾನೆಯೊಂದರಲ್ಲಿ ಕೆಲಸ ಸಿಕ್ಕಿತ್ತು. ಕೆಲಸದ ಸೂಕ್ಷ್ಮಗಳನ್ನು ಬೇಗನೆ ಕಲಿತ ರಾಮು ತನ್ನ ಮೇಲಧಿಕಾರಿಗಳ ಮೆಚ್ಚುಗೆಯನ್ನು ಗಳಿಸಿದ್ದನು. ಆರೇ ತಿಂಗಳುಗಳ ಅವಧಿಯಲ್ಲಿ ಸಾಕಷ್ಟು ಸಂಪಾದಿಸಲಾರಂಭಿಸಿದ ರಾಮು, ತನ್ನ ತಾಯಿಗೆ ಪ್ರತಿ ತಿಂಗಳು ಹಣವನ್ನು ಕಳುಹಿಸಲಾರಂಭಿಸಿದ ದಿನ, ಅವನ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಳೆದು ಹೋಗಿದ್ದ ಮಗ ಜೀವಂತವಾಗಿದ್ದು ಇಡೀ ಕುಟುಂಬವನ್ನು ಆನಂದ ಸಾಗರದಲ್ಲಿ ಮುಳಿಗಿಸಿತ್ತು. ಆರು ವರುಷಗಳ ಕಾಲ ನಿರಂತರವಾಗಿ ದುಡಿಯುತ್ತಿದ್ದ ರಾಮು, ಪ್ರತಿ ತಿಂಗಳು ಮನೆಗೆ ಹಣವನ್ನು ಕಳುಹಿಸುವುದನ್ನು ಮಾತ್ರ ಎಂದೂ ಮರೆಯುತ್ತಿರಲಿಲ್ಲ. ಕೋವಿಡ್ನಿಂದಾದ ಲಾಕ್ಡೌನ್ ರಾಮುವಿನ ಮೇಲೆ  ಬರ ಸಿಡಿಲಿನಂತೆ ಅಪ್ಪಳಿಸಿತ್ತು. ಕಾರ್ಖಾನೆಯ ಬಾಗಿಲು ಮುಚ್ಚಿ, ಅವನ ಕೆಲಸ ಇಲ್ಲದಂತಾಯ್ತು. ರಾಮುವಿಗೀಗ ತನ್ನ ಊರಿನತ್ತ ಪ್ರಯಾಣ ಬೆಳಸಿ ತನ್ನ ತಂದೆ-ತಾಯಿಗಳನ್ನು ನೋಡುವಾಸೆಯಾಗಿತ್ತು. ಆದರೆ ಬಸ್ಸು-ರೈಲುಗಳ ಸಂಚಾರ ಇಲ್ಲದಂತಾಗಿತ್ತು. ಎದೆಗುಂದದ ಯುವಕ ರಾಮು ಕಾಲ್ನಡುಗೆಯಲ್ಲೇ, ಸುಮಾರು ೨೫೦೦ ಕಿ.ಮೀ.ನಷ್ಟು ದೂರವಿರುವ ತನ್ನೂರಿನತ್ತ ಹೊರಟಿದ್ದನು. ಸ್ವಲ್ಪ ಕಾಲ್ನಡಿಗೆ, ಸ್ವಲ್ಪ ಸರಕು ವಾಹನಗಳ ಮೇಲಿನ ಸವಾರಿ, ಸ್ವಲ್ಪ ವಿಶ್ರಾಂತಿಗಳನ್ನೊಳಗೊಂಡ ರಾಮುವಿನ ಪ್ರಯಾಣ ಸುಮಾರು ಹತ್ತು ದಿನಗಳವರಗೆ ಮುಂದುವರೆದಿತ್ತು. ಕಡೆಗೊಂದು ದಿನ ತನ್ನೂರನ್ನು ತಲುಪಿದ ರಾಮುವನ್ನು ನೋಡಿದ ಅವನ ತಂದೆ-ತಾಯಿಗಳು ಸಂತೋಷದಿಂದ ಉಬ್ಬಿ ಹೋಗಿದ್ದರು. ತಮ್ಮ ಮಗ ರಾಮುವನ್ನು ತಮ್ಮ ಬಳಿ ಕಳುಹಿಸಿದ ದೇವರಿಗೆ ತುಪ್ಪದ ದೀಪ ಹಚ್ಚಿದ ರಾಮುವಿನ ತಾಯಿ, ಪ್ರಸಾದದ ಬೆಲ್ಲದ ಚೂರೊಂದನ್ನು ಮಗನ ಬಾಯಿಗಿಟ್ಟಿದ್ದರು. ರಾಮು ತಂದಿದ್ದ ಮಿಠಾಯಿಯ ಡಬ್ಬವೊಂದು ಮನೆಯವರ ಕೈಗಳಲ್ಲೆಲ್ಲಾ  ಸಾಗುತ್ತ, ಕ್ಷಣಾರ್ಧದಲ್ಲಿ ಖಾಲಿಯಾಗಿತ್ತು. ಮನೆಯವರೆಲ್ಲಾ ರಾಮುವಿನ ಮಿಠಾಯಿನ ಸವಿ ಸವಿದನಂತರ, ರಾಮು ಸ್ನಾನಕ್ಕೆಂದು ಹತ್ತಿರದ ತೆಂಗಿನ ತೋಟದ ಕಡೆ ಹೊರಟನು.  ಆ ತೋಟದ ಕಾವಲುಗಾರಿಕೆ ರಾಮುವಿನ ತಂದೆಯ ಕೆಲಸವಾಗಿತ್ತು. ನುರಿತ ಈಜುಗಾರನಾದ ರಾಮು ಸಂತೋಷವುಕ್ಕಿ ತೋಟದ ಬಾವಿಯೊಳಗೆ ಹಾರಿ, ಸುಮಾರು ಅರ್ಧ ಘಂಟೆಗಳ ಕಾಲ ಈಜಾಡುತ್ತಾ ಆನಂದಿಸಿದನು. ಸ್ನಾನ ಮುಗಿದನಂತರ ಮೆಟ್ಟಿಲುಗಳನ್ನೇರಿ ಬರುತ್ತಿದ್ದ ರಾಮು, ಪ್ರಾಯಶಃ ಜಾರಿ ಬಾವಿಯೊಳಗೆ ಹಿಮ್ಮುಖನಾಗಿ ಬಿದ್ದವನು, ಮತ್ತೇಳಲೇ ಇಲ್ಲ!

ಎಷ್ಟು ಹೊತ್ತಾದರೂ ಹಿಂತುರುಗಿ ಬಾರದ ರಾಮುವನ್ನು ಹುಡುಕಿಕೊಂಡು ಬಂದ  ಅವನ ಅಣ್ಣಂದಿರಿಗೆ, ರಾಮು ಕಾಣ ಸಿಗಲಿಲ್ಲ. ರಾಮು ಬಾವಿಯಲ್ಲಿ ಮುಳುಗಿರಬಹುದೆಂಬ ಅನುಮಾನ ಬಂದ  ಅವರು, ಬಾವಿ ಶೋಧಿಸುವರನ್ನು ಕರೆಸಿದರು. ಸುಮಾರು ಒಂದು ತಾಸಿನ ಸಮಯದಲ್ಲೇ ರಾಮುವಿನ ದೇಹವನ್ನು ಹೊರ ತೆಗೆದಾಗ, ರಾಮುವಿನ ಇಡೀ ಕುಟುಂಬ ದಿಗ್ಭ್ರಾಂತವಾಗಿತ್ತು.  ರಾಮುವಿನ ತಾಯಿ-ತಂದೆಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಆರು ವರುಷಗಳನಂತರ ಮರಳಿ ಬಂದ ಅವರ ಮುದ್ದಿನ ಮಗನ ಜೀವ ಆರೇ ಘಂಟೆಗಳಲ್ಲಿ ಹಾರಿ ಹೋಗಿತ್ತು. 

ಕತೆಯ ವರದಿಯನ್ನೋದಿದ  ರೋಹಿಣಿ 'ಒಮ್ಮೊಮ್ಮೆ ದೇವರೇಕೆ ಇಷ್ಟು ನಿಷ್ಕರುಣಿಯಾಗುತ್ತಾನೆ?' ಎಂದುಕೊಳ್ಳುತ್ತ ಕಣ್ಣೀರೊರೆಸಿಕೊಂಡಳು. 

ವಲಸಿಗರ ಕಾರ್ಪಣ್ಯಗಳ ಕತೆಯನ್ನು ಹೆಚ್ಚು ಹೆಚ್ಚು ಕಲೆ ಹಾಕುವ ರೋಹಿಣಿಯ ಶೋಧ ಮುಂದುವರೆದಿತ್ತು. ಗಡಿಗಂಟಿಕೊಂಡಿದ್ದ ರಾಜ್ಯವೊಂದರ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ವಲಸಿಗ ತಂಡವೊಂದರ, ಬೇಸಿಗೆ ಬೆಳೆಯ (Rabi crop) ಕೊಯ್ಲಿನ ಕಾರ್ಯ ಆಗಿನ್ನೂ ಮುಗಿದಿತ್ತು. ಲಾಕ್ಡೌನಿನಿಂದಾಗಿ ಬೇರೆ ಮಾರ್ಗವಿಲ್ಲದೆ, ಕಾಲ್ನಡಿಗೆಯಲ್ಲೇ ಅವರುಗಳು ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದರು. ಮಾರ್ಗ ತಪ್ಪಿ ಅವರುಗಳು ನೆರೆ ರಾಷ್ಟ್ರವಾದ ಪಾಕಿಸ್ತಾನದ ಗಡಿಯನ್ನು ತಲುಪಿಬಿಟ್ಟಿದ್ದರು. ಅಲ್ಲಿ ಕಾವಲು ಕಾಯುತ್ತಿದ್ದ ಭಾರತದ ಸುರಕ್ಷತಾ ಪಡೆಯ ಸೈನಿಕರುಗಳು ವಲಸಿಗರನ್ನು ನೋಡಿ ಆಶ್ಚರ್ಯಗೊಂಡರು. ಆದರೂ ಆಹಾರ ನೀರುಗಳ ಉಪಚಾರವನ್ನು ಸೈನಿಕರುಗಳು ವಲಸಿಗರಿಗೆ ಮಾಡಿದರು. 'ವಲಸಿಗರು ಕೂಡಲೇ ಹೊರಟು, ಸರಕಾರ ವಲಸಿಗರುಗಳಿಗಾಗಿ ಏರ್ಪಾಡು ಮಾಡಿರುವ ತಂಗುದಾಣಗಳನ್ನು ಸೇರಬೇಕು' ಎಂಬುದು ಸೈನಿಕರ ಕಟ್ಟಪ್ಪಣೆಯಾಗಿತ್ತು.  ವಲಸಿಗರ ತಂಡ ನಡಿಗೆಯನ್ನು ಮುಂದುವರೆಸಿ ಸಮೀಪದ ಸರಕಾರಿ ಶಾಲೆಯ ಕಟ್ಟಡವೊಂದರಲ್ಲಿ ಆಶ್ರಯ ಪಡೆಯಿತು. ಸಮೀಪದ ಹಳ್ಳಿಗರು ಅವರುಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡಿದರು. ಸುಮಾರು ೧೫ ದಿನಗಳು ಕಳೆದನಂತರ ವಲಸಿಗರು ಮಾಡಲು ಕೆಲಸವಿಲ್ಲದೇ ಬೇಜಾರುಗೊಂಡಿದ್ದರು. ತಮ್ಮಗಳಿಗೇನಾದರೂ ಕೆಲಸ ಕೊಡುವಂತೆ ಅವರುಗಳು ಶಾಲೆಯ ಮುಖ್ಯೋಪಾಧ್ಯಾಯರನ್ನು ಕೇಳಿಕೊಂಡರು. ಶಾಲೆಯ ಮತ್ತು ಅದಕ್ಕೆ ಸೇರಿದ ಶಾಲಾ ವಸತಿ ಗೃಹದ ಕಟ್ಟಡಗಳಿಗೆ ಕಳೆದ ಹತ್ತು ವರ್ಷಗಳಿಂದ ಬಣ್ಣ ಬಳಿಯುವ ಕೆಲಸವಾಗಿಲ್ಲ. ತಾವುಗಳು ಆ ಕೆಲಸವನ್ನು ಮಾಡುವಿರಾ ಎಂದು ಕೇಳಿದ ಮುಖ್ಯೋಪಾಧ್ಯಾಯರ ಸಲಹೆಗೆ, ವಲಸಿಗರು ಕೂಡಲೇ ಸಮ್ಮತಿಸಿದರು. ಹಳ್ಳಿಯ ಸರಪಂಚರು ಮತ್ತು ಹಳ್ಳಿಯ ಹಿರಿಯರ ಸಹಾಯದಿಂದ   ಮುಖ್ಯೋಪಾಧ್ಯಾಯರು ಬೇಕಾದ ಬಣ್ಣದ ಡಬ್ಬಗಳನ್ನು ತರಿಸಿಕೊಟ್ಟರು. ಉತ್ಸಾಹದಿಂದ ಬಣ್ಣ ಬಳಿಯುವ ಕೆಲಸ ಮಾಡಿದ ವಲಸಿಗರು, ಸುಮಾರು ಹತ್ತು ದಿನಗಳ ಅವಧಿಯಲ್ಲಿ ಇಡೀ ಶಾಲೆ ಹಾಗು ಶಾಲೆಯ ವಸತಿ ಗೃಹದ ಕಟ್ಟಡಗಳು ಹೊಸ ಶೋಭೆಯೊಂದಿಗೆ ಹೊಳೆಯುವಂತೆ ಮಾಡಿದರು. ಹಳ್ಳಿಯ ಮುಖ್ಯಸ್ಥರು ಕೆಲಸದ ಸಂಭಾವನೆಯನ್ನು ವಲಸಿಗರಿಗೆ ನೀಡಲು ಮುಂದಾದಾಗ, ವಲಸಿಗರು ಹಣವನ್ನು ಅಷ್ಟೇ ನಯವಾಗಿ ನಿರಾಕರಿಸಿದರು. 'ನಿಮ್ಮ ಆಥಿತ್ಯ ಪಡೆದು ತೃಪ್ತರಾಗಿದ್ದೇವೆ. ನಿರಾಶ್ರಿತರಾದ ನಮ್ಮಗಳಿಗೆ ಆಹಾರ, ನೀರು ಮತ್ತು ವಸತಿಗಳೊನ್ನದಗಿಸಿ ಸಲಹಿದ್ದೀರಿ. ತಮ್ಮ ಹಳ್ಳಿಯ ಶಾಲೆಗೆ ಬಣ್ಣವನ್ನು ಬಳಿದು, ಸುಂದರವನ್ನಾಗಿಸಿದ ತೃಪ್ತಿ ನಮ್ಮದಾಗಿದೆ' ಎಂದು ವಂದಿಸುತ್ತಾ ನುಡಿದ  ವಲಸಿಗರ ಮಾತುಗಳನ್ನು ಕೇಳಿ ಹಳ್ಳಿಗರು ಸಂತೋಷಗೊಂಡರು. 

****** 

 

 ಕೋವಿಡ್

 ಮಾನವ ಸೃಷ್ಟಿಯೇ?



'ದೇವರ ನ್ಯಾಯಾಲಯ'ದಲ್ಲಂದು ಮೊಕದ್ದಮೆಯೊಂದರ ಅಂತಿಮ ವಿಚಾರಣೆಯ ದಿನವಾಗಿತ್ತು. 'ಕೋವಿಡ್ನ ದುರಂತ ಮಾನವ ಸೃಷ್ಟಿಯೆ?' ಎಂಬ ಸೂಕ್ಷ್ಮ ಪ್ರಶ್ನೆಯ ನಿರ್ಣಯ ಅಂದಾಗಬೇಕಿತ್ತು.  ನಿಷ್ಪಕ್ಷಪಾತಿಯಾದ  ದೇವರು, ಸಂಬಂಧಪಟ್ಟ ಎಲ್ಲಾ ಆರೋಪಿಗಳಿಗೂ ಹಾಗೂ  ದೂರುದಾರರುಗಳಿಗೂ ತಮ್ಮ ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸುವಂತೆ ತಿಳಿ ಹೇಳಿ ಕರೆಗಳನ್ನು ಜಾರಿಗೊಳಿಸಿದ್ದರು.  ನ್ಯಾಯಾಲಯಕ್ಕೆ ಹಾಜರಾದ ವ್ಯಕ್ತಿಗಳಲ್ಲಿ 'ರೋಹಿಣಿ ಮತ್ತವಳ ತಂದೆ ರಾಜು, ಅವಳ ಸ್ನೇಹಿತ ಡಾ. ಕಿರಣ್ ಮತ್ತು ವಕೀಲ ಮದನ್ ಲಾಲರು' ಸೇರಿದ್ದರು. ಚೀನಾ, ಫ್ರಾನ್ಸ್, ಜಪಾನ್, ಆಸ್ಟ್ರೇಲಿಯಾ, ಅಮೆರಿಕಾ ಮುಂತಾದ ದೇಶಗಳ ಅಧಿಕೃತ ಪ್ರತಿನಿಧಿಗಳು, ಹಲವಾರು ಖ್ಯಾತ ವಿಜ್ಞಾನಿಗಳು ಹಾಗೂ ಸಂಶೋಧಕರು ಕೂಡ ನ್ಯಾಯಾಲಯದಲ್ಲಿ ಜಮಾಯಿಸಿದ್ದರು. ಕೋವಿಡ್ನ ಸ್ಫೋಟದನಂತರ ವಿವಾದಾತ್ಮಕ ಪರಿಸ್ಥಿತಿಯಲ್ಲಿ ಮೃತಪಟ್ಟಿದ್ದ ಚೀನಾದ ಯುವ ವೈದ್ಯರೊಬ್ಬರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.  'ದಿವಂಗತರಾದ ಡಾ. ದ್ವಾರಕಾನಾಥ್ ಕೊಟ್ನಿಸ್' ಎಂಬ ವೈದ್ಯರೂ ಸಹ ದೇವರ ಕರೆಯ ಮೇರೆಗೆ ಬಂದು ಆಸೀನರಾಗಿದ್ದರು. 

'ನ್ಯಾಯದ ಪೀಠವಾದ ದೇವರ ಕುರ್ಚಿ' ಮಾತ್ರ ಖಾಲಿಯಿತ್ತು. ಆದರೆ ಅಂದಿನ ಸಭೆಯಲ್ಲಿ ದೇವರ ಇರುವಿಕೆಯ ಅನುಭೂತಿ ಮಾತ್ರ ಅಲ್ಲಿ ನೆರೆದಿದ್ದವರಿಗೆಲ್ಲಾ ಸ್ಪಷ್ಟವಾಗಿತ್ತು. ದೇವರ ಧ್ವನಿ ಎಲ್ಲರಿಗೂ ಕೇಳಿಸುತ್ತಿತ್ತು. ದೇವರ ದನಿಯಲ್ಲಿ ಪ್ರೇಮ, ವಿಶ್ವಾಸ, ನಿಷ್ಪಕ್ಷಪಾತ ಹಾಗು ಮುಚ್ಚುಮರೆಯಿಲ್ಲದ ಭಾವಗಳು ಸ್ಪಷ್ಟವಾಗಿದ್ದವು. ಸ್ವಯಂ ದೇವರೇ ದಿನದ ಚರ್ಚೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. 

ದೇವರೇ ಎಲ್ಲರನ್ನು ಸಂಬೋಧಿಸುತ್ತ, 'ವಿಶ್ವವ್ಯಾಪಿ ಕೋವಿಡ್ ರೋಗದ ದಾಳಿಯಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಎಲ್ಲ ವೈರಸ್ಗಳು, ಬ್ಯಾಕ್ಟೀರಿಯಗಳು ಮತ್ತು ಪ್ರಾಣಿಗಳು ಪ್ರಕೃತಿಯ ಸೃಷ್ಟಿಗಳೆ. ಕಾಲಾನುಕಾಲಕ್ಕೆ ಸೃಷ್ಟಿಯಾಗುತ್ತ ಸಾಗುವ ಈ ಜೀವಿಗಳ ಸೃಷ್ಟಿಯ ಹಿಂದೆ ಪ್ರಕೃತಿ ತನ್ನ    ಸಮತೋಲನವನ್ನು ಕಾಯ್ದಿರಿಸಿಕೊಳ್ಳುವ ಅಣಿಯಿದೆ. ಬ್ರಹ್ಮಾಂಡದ ಕೇಂದ್ರ, ಭೂಮಿಯೂ ಅಲ್ಲ ಮತ್ತು ಮಾನವನ ಸೃಷ್ಟಿ ಅದರ ಉದ್ದೇಶವೂ ಅಲ್ಲ. ಪ್ರಾಣಿ  ಜಗತ್ತಿನ ವಿಕಾಸದ ಪ್ರಕ್ರಿಯೆಯಲ್ಲಿ ಬುದ್ಧಿವಂತನಾದ ಮಾನವನ ಸೃಷ್ಟಿ ಆಕಸ್ಮಿಕ ಮಾತ್ರ. ಮಾನವನ ಯೋಚನೆ ಮತ್ತು ಕೃತ್ಯಗಳನ್ನು ನಾನಾಗಲಿ, ಪ್ರಕೃತಿಯಾಗಲಿ ನಿಯಂತ್ರಿಸುವ ಕಾರ್ಯವನ್ನು ಮಾಡವುದಿಲ್ಲ. ಪ್ರಪಂಚ ಹೇಗೆ ಮುಂದುವರಿಯಬೇಕೆಂಬುದು ನಾನು ನಿಯಂತ್ರಿಸುವ ಕಾರ್ಯವಲ್ಲ. ಸೃಷ್ಟಿಯ ಎಲ್ಲ ಜೀವಿಗಳು ಅವರವರ ವಿಚಾರಗಳಿಗೆ ಮತ್ತು ಕೃತ್ಯಗಳಿಗೆ ಅವರವರೇ ಜವಾಬ್ದಾರರು. ತಾವು ಜೀವಿಸಬೇಕಾದ ಪ್ರಪಂಚ  ಹೇಗಿರಬೇಕೆಂಬ ನಿರ್ಧಾರ, ಅಲ್ಲಿನ ಜೀವಿಗಳಿಗೆ ಬಿಟ್ಟದ್ದು. ಆದರೆ ಪ್ರಕೃತಿಯೆಂಬುದು ಜೀವಿಗಳ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಪ್ರಕೃತಿಯ ಜೀವಿಗಳ ವಿಚಾರ ಮತ್ತು ಕೃತ್ಯಗಳಿಂದ ಪ್ರಪಂಚಕ್ಕೆ ಆಗಾಗ ವಿಪತ್ತು ಬಂದೊದಗಬಹುದು. ನಿರ್ಜೀವಿಗಳಲ್ಲಾಗುವ ಬದಲಾವಣೆ ಮತ್ತು ಜರುಗುವ ಪ್ರಕ್ರಿಯೆಗಳಿಂದಲೂ ಪ್ರಪಂಚಕ್ಕೆ ವಿಪತ್ತು ಉಂಟಾಗಬಹುದು. ಹಾಗಾದರೂ ನಾನು ಎಂದಿಗೂ ಮಧ್ಯೆ ಪ್ರವೇಶಿಸುವುದಿಲ್ಲ. ಏಕೆಂದರೆ ಪ್ರಕೃತಿ ತನ್ನ ಸಮತೋಲನವನ್ನು ಕಾಯ್ದುಕೊಳ್ಳುವ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳುವ  ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿರುತ್ತೆ. ಆದುದರಿಂದ ಇಂದಿನ ಮೊಕದ್ದಮೆಯ ವಿಚಾರಣೆ ನನ್ನ ಪಾಲಿಗೆ ಅಪ್ರಸ್ತುತವಾದದ್ದು. ಇಂದಿನ ವಿಚಾರಣೆಯನ್ನು ಅಣಿಗೊಳಿಸಿರುವುದು ತಮ್ಮಗಳ ಕೋರಿಕೆಯ ಮನ್ನಣೆಗಾಗಿ ಮಾತ್ರ. ಇಲ್ಲಿ ನೆರೆದಿರುವರೆಲ್ಲರೂ ತಮ್ಮ ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸಲು ಮುಕ್ತರು. ಇಂದಿನ ಚರ್ಚೆ ಶುರವಾಗಿದೆ ಎಂದು ಘೋಷಿಸುತ್ತೇನೆ' ಎಂದರು. 

ವಿಷಯ ಮಂಡನೆಗಾಗಿ ತುದಿಗಾಲಿನಲ್ಲಿ ನಿಂತಿದ್ದ ರೋಹಿಣಿ ಎದ್ದು ನಿಂತು ತನ್ನ ವಾದವನ್ನು ದೇವರ ಮುಂದಿಡುತ್ತಾ, 'ದೇವರೇ, ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದನೆಗಳು. ನಿಮಗೆ ಎಲ್ಲವೂ ತಿಳಿದಿದೆ. ವಿಶ್ವಮಾರಿ ಕೋವಿಡ್ ಇಡೀ ವಿಶ್ವವನ್ನಾವರಿಸಿದೆ. ವಿಶೇಷವಾಗಿ ನನ್ನ ದೇಶ ಭಾರತ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಪ್ರಪಂಚದ ಐದನೇ ಒಂದು ಭಾಗದಷ್ಟು ಜನರುಗಳಿಗೆ ಆಶ್ರಯನ್ನು ನೀಡಿರುವ ನನ್ನ ದೇಶ, ಎದುರಿಸುತ್ತಿರುವ ಸವಾಲುಗಳು ಜಟಿಲವಾದವುಗಳಾಗಿವೆ. ಆದರೂ ತಮ್ಮ ಕೃಪೆಯಿಂದ, ಕಳೆದ ಮೂರು ದಶಕಗಳ ಸರ್ವತೋಮುಖ ವಿಕಾಸದ ಸಾಧನೆ ನಮ್ಮದಾಗಿತ್ತು. ಆದರೆ ಈಗ ಈ ವಿಶ್ವವ್ಯಾಪಿ ಕೋವಿಡ್ನ ದಾಳಿಯಿಂದ ನಮ್ಮ ದೇಶ ಕಂಡು ಕೇಳರಿಯದ ಸಂಕಷ್ಟಗಳ ಸುಳಿಗೆ ಸಿಕ್ಕಿ ಹಾಕಿಕೊಂಡು ನಲುಗಿ ಹೋಗಿದೆ. ೨೦೨೦ರ ಜೂನ್ ೧೦ರ ದಿನವಾದ ಇಂದು ೨.೫ ಲಕ್ಷ  ಕೋವಿಡ್ ರೋಗಿಗಳೊಂದಿಗೆ, ಸೋಂಕಿತ ದೇಶಗಳ ಪಟ್ಟಿಯಲ್ಲಿ, ನಮ್ಮ ದೇಶ ಐದನೇ ಸ್ಥಾನದಲ್ಲಿದೆ. ಈ ಐದು ದೇಶಗಳ ನಡುವೆಯೂ, ಶೇಕಡಾ ೪ರಷ್ಟು ಸೋಂಕಿತರ ಹೆಚ್ಚಳವನ್ನು ದಾಖಲಿಸುತ್ತಿರುವ ನಮ್ಮ ದೇಶದ ಪರಿಸ್ಥಿತಿ ಆತಂಕಕಾರಿಯಾಗಿದೆ. ಬೃಹತ್ ರಾಷ್ಟ್ರವಾದ ನಮ್ಮ ಭಾರತದಲ್ಲಿ ಕೋವಿಡ್ ಪರೀಕ್ಷೆಗಳನ್ನು ಮಾಡುವುದೊಂದು ಸವಲಾಗಿ ಹೋಗಿದೆ. ನಮ್ಮ ಕೋವಿಡ್ ಪರೀಕ್ಷೆಯ ಪ್ರಮಾಣ ಪ್ರತಿ ಸಾವಿರ ಜನಗಳಿಗೆ ೩.೪ ಮಾತ್ರವಾಗಿದೆ. ಇದೆ ಪ್ರಮಾಣದ ಸಂಖ್ಯೆ ರಷ್ಯಾಕ್ಕೆ ೮೭.೨, ಅಮೆರಿಕಕ್ಕೆ ೬೧.೬ ಮತ್ತು ಇಂಗ್ಲೆಂಡ್ಗೆ ೪೭.೯ರಷ್ಟಿದ್ದು, ಆ ದೇಶಗಳು ನಮಗಿಂತ ಬಹಳಷ್ಟು ಮುಂದಿವೆ. ನಮ್ಮ ಕೋವಿಡ್ ಪೀಡಿತರಲ್ಲಿ ಈಗಾಗಲೇ ಸುಮಾರು ೭೦೦೦ ಜನಗಳು ಮೃತಪಟ್ಟಿದ್ದಾರೆ. ಬೇಕಾದ ಪ್ರಮಾಣದಲ್ಲಿ ಸೋಂಕಿತರ ಪರೀಕ್ಷೆಗಳನ್ನು ನಡೆಸಿದಲ್ಲಿ, ನಮ್ಮ ಸೋಂಕಿತರ ಹಾಗೂ  ಕೋವಿಡ್ ಮೃತರುಗಳ ಸಂಖ್ಯೆ ಇನ್ನೂ ಹೆಚ್ಚಿರುವುದಾಗಿ ಕಂಡು ಬಂದರೂ ಆಶ್ಚರ್ಯವಿಲ್ಲ. ಮುಂಬರುವ ಇನ್ನೆರಡು ತಿಂಗಳುಗಳಲ್ಲಿ ಕೋವಿಡ್ ರೋಗದ  ಹರಡುವಿಕೆಯ ಬಗೆಗಿನ ಮುನ್ಸೂಚನೆ ನಮಗೆ ಆತಂಕವನ್ನುಂಟು ಮಾಡಿದೆ. ಭಾರಿ ಪ್ರಮಾಣದಲ್ಲಿ ಹರಡಲಿರುವ ಕೋವಿಡ್ ರೋಗವನ್ನು ನಿವಾರಿಸುವ ಮತ್ತು ನಿಯಂತ್ರಿಸುವ ಮೂಲಭೂತ ಸೌಕರ್ಯಗಳು ನಮ್ಮ ದೇಶದಲ್ಲಿ ಅತಿ ಕಡಿಮೆಯಿದ್ದು, ನಮ್ಮ ಕೋವಿಡ್ ಸೇನಾನಿಗಳ ಮೇಲಿನ ಒತ್ತಡವನ್ನು ಹೆಚ್ಚಾಗಿಸಿದೆ.  

ಸುಮಾರು ೧೪ ಕೋಟಿಯಷ್ಟು ವಲಸಿಗ ಕೆಲಸಗಾರರು ತಮ್ಮ ಕೆಲಸಗಳನ್ನು ಕಳೆದುಕೊಂಡು, ಆದಾಯವಿಲ್ಲದೆ ಕಂಗೆಟ್ಟಿದ್ದಾರೆ. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ನಮ್ಮ ದೇಶ  ಎರಡೂವರೆ ತಿಂಗಳುಗಳಷ್ಟರ ದೀರ್ಘಾವಧಿಯ ಲಾಕ್ಡೌನನ್ನು ಜಾರಿಗೊಳಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದ್ದು ದುರದೃಷ್ಟಕರ. ಅದರಿಂದಾಗಿ ನಮ್ಮ ಅರ್ಥ ವ್ಯವಸ್ಥೆ ಅಲ್ಲೋಲ- ಕಲ್ಲೋಲವಾಗಿದ್ದು, ಕಳೆದ ಎರಡು-ಮೂರು ದಶಕಗಳಲ್ಲಿ ನಾವು ಸಾಧಿಸಿದ ಪ್ರಗತಿಗೆ ಭಾರಿ ಹಿನ್ನಡೆಯುಂಟಾಗಿದೆ. 

ನಮ್ಮ ದೇಶ ಅನುಭವಿಸುತ್ತಿರುವ ಆಘಾತಗಳಿಗೆ ಚೀನಾ ದೇಶವೇ ಕಾರಣವೆಂದು ನಾನು ನೇರವಾಗಿ ಆರೋಪಿಸುತ್ತೇನೆ. ಕೋವಿಡ್ನ ವೈರಾಣು ಆ ದೇಶದ ಮೂಲದ್ದು. ಆ ವೈರಾಣುವನ್ನು ಸೃಷ್ಟಿಸಿದ್ದೇ  ಚೀನಾದವರು ಎಂಬ ಆರೋಪಗಳೂ ಕೇಳಿ ಬಂದಿದೆ. ಕೋವಿಡ್ ರೋಗ ಆ  ದೇಶದಲ್ಲೇ ಮೊದಲು ಕಂಡು ಬಂದಿದ್ದು, ರೋಗದ ಹರಡುವಿಕೆ ಸ್ಪಷ್ಟವಾಗಿ ತಿಳಿದಿದ್ದರೂ, ರೋಗದ ಸುಳಿವನ್ನು ಮುಚ್ಚಿಟ್ಟು, ಇಡೀ ಜಗತ್ತನ್ನು ಚೀನಾ ವಂಚಿಸಿದೆ. ಚೀನಾ ದೇಶ ತನ್ನ ಸ್ವಾರ್ಥ ಸಾಧನಗೆ ಮಾಡಿದ ವಂಚನೆಯಿಂದ,  ನಮ್ಮ ದೇಶ ಭಾರತದೊಂದಿಗೆ ಇಡೀ ವಿಶ್ವವಿಂದು ಕಂಡು ಕೇಳರಿಯದ ಸಂಕಷ್ಟಕ್ಕೆ ತುತ್ತಾಗಿದೆ. ಎಲ್ಲರನ್ನೂ ಕಾಯುವ ದೇವರಾದ ತಾವು ಚೀನಾ ದೇಶಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕೆಂದು ನಾನು ತಮ್ಮನ್ನು ವಿನಂತಿಸಿಕೊಳ್ಳುತ್ತೇನೆ' ಎಂದ ರೋಹಿಣಿಯ ಧ್ವನಿಯು ಗದ್ಗದಿತವಾಗಿತ್ತು. 

ಚೀನಾ ದೇಶದ ಪ್ರತಿನಿಧಿಗೆ, ತನ್ನ ದೇಶದ ಮೇಲಾಗಬಹುದಾದ ಆರೋಪಗಳ ಪೂರ್ವಾನುಮಾನ ಚೆನ್ನಾಗಿಯೇ ಇತ್ತು. ಉತ್ತಮವಾದ ವಾದವನ್ನು ನ್ಯಾಯಾಲಯದ ಮುಂದಿಡಲು ಬೇಕಾದ ತಯಾರಿಯನ್ನು ಮಾಡಿಕೊಂಡೇ ಬಂದಿತ್ತು ಚೀನಾದ ತಂಡ. ಎದ್ದು ನಿಂತು ಎಲ್ಲರಿಗೂ ವಂದಿಸಿದ ಚೀನಾದ ಪ್ರತಿನಿಧಿ ತನ್ನ ವಿಚಾರಗಳನ್ನು ಮಂಡಿಸುತ್ತಾ, 'ದೇವರೇ, ತಮ್ಮ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸುವ ಅವಕಾಶವನ್ನು ನಮ್ಮ ದೇಶಕ್ಕೂ ಕಲ್ಪಿಸಿದ ತಮಗೆ ವಂದನೆಗಳು. ಈ ಮಹಾಮಾರಿ ಕೋವಿಡ್ ವಿಶ್ವವನ್ನು ವ್ಯಾಪಿಸುವ ದುರಂತ  ಆರಂಭವಾದಾಗಿನಿಂದ, "ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ"ನೆಂಬಂತೆ, ಎಲ್ಲರೂ  ನಮ್ಮ ದೇಶ ಚೀನಾದ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಆದರೆ ಆ ಆರೋಪಗಳೆಲ್ಲವೂ ನಿರಾಧಾರವಾದದ್ದು. ಈ ವೈರಸ್ನ ವಂಶವಾಹಿ ನಕ್ಷೆ (genetic map) ಪತ್ತೆಯಾದ ಕೂಡಲೇ, ಅದರ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆ (W.H.O.) ಮತ್ತು ಇಡೀ ವಿಶ್ವದೊಂದಿಗೆ ಹಂಚಿ ಕೊಂಡಿದ್ದೇವೆ. ನಮ್ಮ ಕಡೆಯಿಂದ ಎಲ್ಲರೊಂದಿಗೆ ಮಾಹಿತಿಯ ಹಂಚಿಕೆ ನಿರಂತರವಾಗಿ ಸಾಗಿದೆ. ನಮ್ಮ ದೇಶದ ವಿಜ್ಞಾನಿಗಳು ಅತಿ ಬೇಗನೆ ಅನಾವರಣಗೊಳಿಸಿದ ಕೋವಿಡ್ ವೈರಸ್ನ ವಂಶವಾಹಿ ನಕ್ಷೆಯಿಂದ, ರೋಗ ನಿಯಂತ್ರಣಕ್ಕೆ ಬೇಕಾದ ಪರೀಕ್ಷೆಗಳ, ಲಸಿಕೆಗಳ ಮತ್ತು ಔಷಧಿಗಳ ತಯಾರಿಕೆಯ ಪ್ರಕ್ರಿಯೆ ಇಡೀ ವಿಶ್ವದಲ್ಲಿ ಚುರುಕುಗೊಂಡಿದೆ. ಕೋವಿಡ್ ರೋಗ ಕಾಣಿಸಿಕೊಂಡ ದಿನಗಳಲ್ಲಿ, ನಮ್ಮ ವಿಜ್ಞಾನಿಗಳಿಗೂ ಯಾವುದೇ ಮಾಹಿತಿಯ ಸುಳಿವಿಲ್ಲದಿದ್ದು, ಅವರುಗಳು ಸಾಕಷ್ಟು ಹೆಣಗಾಡಿದ್ದಾರೆ. ಅವಶ್ಯಕವಾದ ಸಂಶೋಧನೆಗಳನ್ನು ಆದಷ್ಟು ಬೇಗ  ನಡೆಸಿ, ಮಾಹಿತಿಯನ್ನು ವಿಶ್ವದ ಮುಂದಿಟ್ಟು, ನಮ್ಮ ಚೀನಾ ದೇಶದ ವಿಜ್ಞಾನಿಗಳು ಮಹದುಪಕಾರವನ್ನು ಮಾಡಿದ್ದಾರೆ' ಎಂದರು. 

ಈ ಹಂತದಲ್ಲಿ ರಾಜುರವರಿಗೆ ಸುಮ್ಮನಿರುವುದು ಕಷ್ಟಸಾಧ್ಯವಾಗಿತ್ತು. ತಟ್ಟನೆ ಎದ್ದು ನಿಂತು, ಬಾಗಿ ದೇವರಿಗೆ ನಮಸ್ಕರಿಸಿದ ಅವರು, 'ದೇವರೇ, ನನ್ನ ವಿನಮ್ರ ಪ್ರಣಾಮಗಳನ್ನು ಸ್ವೀಕರಿಸಿ. ಇತಿಹಾಸದದುದ್ದಕ್ಕೂ, ಚೀನಾ ದೇಶದ ನಡವಳಿಕೆಗಳಲ್ಲಿ ಪ್ರಾಮಾಣಿಕತೆಯಿಲ್ಲದಿದ್ದು, ಅದರ ವಾದಗಳು ಸುಳ್ಳಿನ ಕಂತೆಗಳೇ ಆಗಿವೆ. ಕೋವಿಡ್ ವೈರಾಣುವಿನ ಸೃಷ್ಟಿ ಚೀನಾದವರೇ ಮಾಡಿದ್ದು, ಅದನ್ನವರು ಹೊಸ ಜೈವಿಕ ಅಸ್ತ್ರವನ್ನಾಗಿರಿಸಿಕೊಂಡಿರುವುದು ಸುಳ್ಳಲ್ಲ. ಮಹತ್ವಾಕಾಂಕ್ಷೆಯುಳ್ಳ ಚೀನಾಕ್ಕೆ ಬೇರೆಲ್ಲ ದೇಶಗಳನ್ನೂ, ಮುಖ್ಯವಾಗಿ ಅಮೇರಿಕಾ ಮತ್ತು ಭಾರತ ದೇಶಗಳನ್ನು, ಆದಷ್ಟೂ ಬೇಗ ಹಿಂದೆ ಹಾಕುವ ಹುನ್ನಾರವಿದೆ. ಆ ಉದ್ದೇಶದಿಂದ ತಾನು ಆವಿಷ್ಕರಿಸಿದ ಹೊಸ ಜೈವಿಕ ಅಸ್ತ್ರವಾದ ಕೋವಿಡ್ ವೈರಾಣುವಿನ  ಪ್ರಯೋಗವನ್ನು ಅದು ತನ್ನ ವುಹಾನ್ ನಗರದ ಪ್ರಯೋಗಶಾಲೆಯೊಂದರಲ್ಲಿ ಗುಪ್ತವಾಗಿ ನಡೆಸಿದೆ. ವೈರಾಣುವಿನ ಹರಡುವಿಕೆಯನ್ನು ಸಾಕಷ್ಟು ಕಾಲ ಗುಟ್ಟಾಗಿಟ್ಟ ಚೀನಾ, ವುಹಾನ್ ನಗರದಿಂದ ವಿಶ್ವದೆಲ್ಲಡೆಗೆ ಪ್ರಯಾಣಿಕರ ವಿಮಾನಯಾನಗಳನ್ನು ಎಗ್ಗಿಲ್ಲದಂತೆ ಮೂರು ತಿಂಗಳಿಗೂ ಹೆಚ್ಚು ಕಾಲ  ನಡೆಸಿದೆ. ಕುಟಿಲ ಬುದ್ಧಿಯ ಚೀನಾ ವುಹಾನ್ ನಗರದಿಂದ ಯಾವ ವಾಹನಗಳೂ ತನ್ನದೇ ದೇಶದ ಬೇರೆ ಊರುಗಳಿಗೆ ಹೋಗಿ ತಲುಪುವುದನ್ನು ಸಂಪೂರ್ಣವಾಗಿ ನಿಯಂತ್ರಿಸಿದೆ. ಈ ರೀತಿಯ ದುಷ್ಟ ವ್ಯೂಹದಿಂದ ಇಡೀ ವಿಶ್ವಕ್ಕೆ ಕೋವಿಡ್ ಹರಡಿದರೂ, ತನ್ನ ದೇಶ ಮಾತ್ರ ಸುರಕ್ಷಿತವಾಗಿರುವಂತೆ ಚೀನಾ ನೋಡಿಕೊಂಡಿದೆ. ಚೀನಾ ಮಾಡಿದ ಜೈವಿಕಾಸ್ತ್ರ ಪ್ರಯೋಗದಿಂದ ಇಡೀ ವಿಶ್ವವೇ ಕೋವಿಡ್ ರೋಗಕ್ಕೆ ತುತ್ತಾಗಿದೆ. ತನ್ನ ದೇಶದಿಂದಲೂ ಕೆಲವು  ಸಹಸ್ರ ಸಂಖ್ಯೆಗಳಲ್ಲಿನ  ಸಾವುಗಳನ್ನು ವರದಿ ಮಾಡಿರುವ   ಚೀನಾ, ತಾನಾಡಿದ ಮಹಾಮಾರಿಯ ನಿಯಂತ್ರಣದ ನಾಟಕಕ್ಕೆ ತೆರೆ ಎಳೆದಿದೆ.  "ಈ ರೀತಿಯ ಜೈವಿಕಾಸ್ತ್ರದ ಗುಪ್ತ ಪ್ರಯೋಗ, ಇಡೀ ವಿಶ್ವದ ವಿರುದ್ಧ ಚೀನಾ ನಡೆಸಿದ ಮೂರನೇ ಮಹಾಯುದ್ಧದ ಪ್ರಮುಖ ಭಾಗವಾಗಿತ್ತು ಎಂಬುದೇ ಸತ್ಯ."  ಒಂದು ಗುಂಡನ್ನೂ ಚಲಾಯಿಸದೇ, ಚೀನಾ ಈಗಾಗಲೇ ಮೂರನೇ ಮಹಾಯುದ್ಧವನ್ನು ಗೆದ್ದಾಗಿದೆ. ವಿಶ್ವದೆಲ್ಲಾ ದೇಶಗಳು ತಮ್ಮತಮ್ಮ ಪ್ರಗತಿಯ ಹಾದಿಯಲ್ಲಿ, ಕನಿಷ್ಠ ಒಂದು ದಶಕದಷ್ಟಾದರೂ ಹಿಂದೆ ಸರಿದಿವೆ. ಚೀನಾ ಮಾತ್ರ ಯಾವುದೇ ಅಡೆತಡೆಗಳಿಲ್ಲದೆ ಮುನ್ನಡೆದಿದೆ. ಮನುಕುಲದ ವಿರುದ್ಧ ರೂಪಿಸಿದ ಈ ಷಡ್ಯಂತ್ರಕ್ಕಾಗಿ ಚೀನಾ ದೇಶಕ್ಕೆ ತಕ್ಕ ಶಿಕ್ಷೆಯನ್ನು ತಮ್ಮ ನ್ಯಾಯಾಲಯ ನೀಡ ಬೇಕೆಂಬುದೇ ನನ್ನ ಕೋರಿಕೆ' ಎಂದು ಹೇಳಿ  ಕುಳಿತಾಗ, ಸಭಿಕರಿಗೆಲ್ಲಾ ದೀರ್ಘವಾದ ಸಿಡಿಲೊಂದು ಅಂತ್ಯಗೊಂಡಂತೆ  ಅನಿಸಿತ್ತು.  

ವಿಷಯ ಮಂಡನೆಯ ಮುಂದಿನ ಬಾರಿ, ಶಿಸ್ತಿನ ಸೂಟನ್ನು ಧರಿಸಿದ್ದ ಯೂರೋಪಿನ ವಿಜ್ಞಾನಿಯೊಬ್ಬರದಾಗಿತ್ತು. ತಮ್ಮ ವಾದವನ್ನು ಅವರು ಮಂಡಿಸುತ್ತಾ  'ಎಲ್ಲವನ್ನೂ ಬಲ್ಲ ದೇವರೇ, ನಾನು ಹೇಳುವುದೆಲ್ಲ ಸತ್ಯವೆಂದು ವಿನಂತಿಸಿಕೊಳ್ಳುತ್ತೇನೆ. ೧೯೮೦ರ ದಶಕದಿಂದ ವಿಶ್ವವನ್ನು ಕಾಡುತ್ತಿರುವ ಏಡ್ಸ್ ವೈರಸ್ನ ರಚನೆಯ ವಿನ್ಯಾಸದ  ಸಂಶೋಧನೆಯನ್ನು ಮಾಡಿದ ವಿಜ್ಞಾನಿಗಳ ತಂಡದಲ್ಲಿದ್ದವನು ನಾನು. ನಮ್ಮ ಸಂಶೋಧನೆ  ಏಡ್ಸ್ ರೋಗದ ಪತ್ತೆ, ಪರೀಕ್ಷೆ, ಲಸಿಕೆ ಮತ್ತು ಚಿಕಿತ್ಸೆಗಳಿಗೆ ಅನುವು ಮಾಡಿಕೊಟ್ಟಿದೆ. ಚೀನಾ ದೇಶದ ವುಹಾನಿನಲ್ಲಿ ಏಡ್ಸ್ ರೋಗದ ಸಂಪೂರ್ಣ ನಿಯಂತ್ರಣಕ್ಕೆ ಬೇಕಾದ ಪರಿಕರಗಳ ಬಗ್ಗೆ ಸಂಶೋಧನೆ ಮುಂದುವರೆದಿದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಚೀನಾದ ವಿಜ್ಞಾನಿಗಳು ತಮ್ಮ ಏಡ್ಸ್ ಸಂಶೋಧನೆಯನ್ನು ತ್ವರಿತಗೊಳಿಸಲು, ವಿಶ್ವವನ್ನು ೨೦೦೨-೦೪ರಲ್ಲಿ ಕಾಡಿದ ಸಾರ್ಸ್ ವೈರಾಣುವನ್ನು ಹೇರಳವಾಗಿ ಬಳಸಿದರೆಂಬುದು ನನಗೆ ಗೊತ್ತು. ಈ ಪ್ರಯೋಗಗಳ ನಡುವೆ, ಅನೀರಿಕ್ಷಿತವಾಗಿ ಕೋವಿಡ್ ವೈರಾಣುವಿನ ಸೃಷ್ಟಿಯಾಗಿದೆ. ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಯಲ್ಲಿ ಏಡ್ಸ್ ಮತ್ತು ಸಾರ್ಸ್ ವೈರಾಣುಗಳ ವಿನ್ಯಾಸಗಳು ಕಂಡು ಬಂದಿರುವುದು ನನ್ನ ವಾದಕ್ಕೆ ಪುಷ್ಟಿಯನ್ನು ನೀಡುತ್ತದೆ. ಕೋವಿಡ್ ವೈರಾಣುವಿನ ವಿನಾಶಕಾರಿ ಶಕ್ತಿ, ಪ್ರಾಯಶಃ ಚೀನಾದ ವಿಜ್ಞಾನಿಗಳಿಗೂ ತಿಳಿದಿಲ್ಲದಿರಬಹುದು. ಪ್ರಯೋಗಾಲಯದಲ್ಲಿ ನಡೆದಿರಬಹುದಾದ ಅಚಾತುರ್ಯದ ಪ್ರಸಂಗವೊಂದರಲ್ಲಿ ಕೋವಿಡ್ ವೈರಾಣು ಮಾನವನೊಬ್ಬನನ್ನು ಸೋಂಕಿತಗೊಳಿಸಿರಬಹುದು. ಹೊಸ ಸೋಂಕಿನ ಹರಡುವಿಕೆಯ ಅರಿವು ಚೀನಕ್ಕಿದ್ದರೂ, ತನ್ನ ವ್ಯಾಪಾರೋದ್ಯಮಕ್ಕೆ ಘಾತಕಕಾರಿಯಾಗಬಹುದೆಂಬ ಕಾರಣಕ್ಕೆ, ಅದು ಕೋವಿಡ್ ವೈರಾಣುವಿನ ಸುದ್ದಿಯನ್ನು ಗೌಪ್ಯವಾಗಿಟ್ಟಿತು. ಅದರ ದುಷ್ಪರಿಣಾಮವನ್ನು ಈಗ ಇಡೀ ವಿಶ್ವ ಅನುಭವಿಸುತ್ತಿದೆ' ಎಂದರು. 

ಯೂರೋಪಿನ ವಿಜ್ಞಾನಿಯ ಆರೋಪವನ್ನು ಅಲ್ಲಗಳೆಯಲು ಚೀನಾದ ಪ್ರತಿನಿಧಿಗಳು ತುದಿಗಾಲಲ್ಲಿ ನಿಂತಿದ್ದು,  'ಪ್ರಭುವೇ, ಈ ಯೂರೋಪಿನ ವಿಜ್ಞಾನಿಯ ವಾದದಲ್ಲಿ ಹುರುಳಿಲ್ಲ. ಅವರದೇ ದೇಶದ ಹಲವು ವಿಜ್ಞಾನಿಗಳು ಅವರ ವಾದದ ಮಿಥ್ಯತೆಯನ್ನು ಚರ್ಚಿಸಿ ಗೇಲಿ ಮಾಡಿದ್ದಾರೆ. ಸಾರ್ಸ್ ಮತ್ತು ಏಡ್ಸ್ನ ವೈರಾಣುಗಳ ವಿನ್ಯಾಸ, ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಯಲ್ಲಿ ಕಂಡು ಬಂದಿರುವುದರಿಂದ, ಆ ಎಲ್ಲ ವೈರಸ್ಸುಗಳು ಒಂದೇ ವರ್ಗಕ್ಕೆ ಸೇರಿದವಾಗಿರಬಹುದು ಎಂದು ಮಾತ್ರ ಹೇಳಬಹುದೇ ಹೊರತು ಇನ್ಯಾವ  ಅರ್ಥವನ್ನು ಕಲ್ಪಿಸಿಕೊಳ್ಳುವುದು ಸರಿಯಲ್ಲ,' ಎಂದರು. 

ಏತನ್ಮಧ್ಯೆ, ಅಮೆರಿಕಾದ ತಂಡದ ನಾಯಕರ ತುಡಿತ ಅವರ ನೆತ್ತಿಗೇರಿತ್ತು. ಬಿರುಗಾಳಿ ಮುನ್ನುಗುವಂತೆ ತಮ್ಮ ವಾದ ಮಂಡನೆಗೆ ಎದ್ದು ನಿಂತ ಅವರು, 'ಪ್ರಭುವೇ, ಇಡೀ ವಿಶ್ವದಲ್ಲಿ ಕೋವಿಡ್ನಿಂದ ಅತಿ ಹೆಚ್ಚು ಸಂಕಷ್ಟವನ್ನು ಅನುಭವಿಸುತ್ತಿರುವ ದೇಶ ನಮ್ಮದು. ಇಡೀ ವಿಶ್ವದ ಎಲ್ಲ ದೇಶಗಳೊಂದಿಗೆ ಚೀನಾ ಯುದ್ಧ ಮಾಡಲು ಕಾಲು ಕೆರದು ನಿಂತಿದೆ. ತನ್ನ ಗಡಿ ಸುತ್ತಲಿವಿರುವ ಎಲ್ಲಾ ದೇಶಗಳೊಂದಿಗೆ ಅದು ಘರ್ಷಣೆಯ ಧೋರಣೆಯನ್ನು ಪ್ರದರ್ಶಿಸುತ್ತಿದೆ. ತನ್ನದೇ ಭಾಗವಾಗಿರುವ ಹಾಂಗಕಾಂಗ್ ನಲ್ಲಿ  ನಡೆಯುತ್ತಿರುವ ಪ್ರಜಾಪ್ರಭುತ್ವದ ಪರವಾದ ಜನಾಂದೋಲನವನ್ನು ಚೀನಾ ತನ್ನ ರಾಕ್ಷಸೀ ಕೃತ್ಯಗಳೊಂದಿಗೆ ದಮನಗೊಳಿಸುತ್ತಿದೆ. ತನ್ನದೇ ಜನರುಗಳ ಮೇಲೆ ದೌರ್ಜನ್ಯವೆಸಗಿ, ಕೊಂದು, ಅವರುಗಳ ಬಾಯ್ಮುಚ್ಚಲೆತ್ನಿಸುತ್ತಿರುವ ಚೀನಾ, ತನ್ನೊಂದಿಗೆ ತಾನು ಯುದ್ಧನಿರತವಾಗಿರುವಂತೆ ಕಾಣಿಸುತ್ತಿದೆ. ಇಡೀ ವಿಶ್ವದ ಮೇಲೆ ತನ್ನ ಪಾರುಪತ್ಯವನ್ನು ಸಾಧಿಸಲು ಏನನ್ನಾದರೂ ಮಾಡಲು ಚೀನಾ ಸಿದ್ಧವಾಗಿ ನಿಂತಿದೆ. 

ಕಳೆದ ನಾಲ್ಕು ದಶಕಗಳಿಂದ ಇಡೀ ವಿಶ್ವವನ್ನು ವಿಶ್ವವ್ಯಾಪಿ ವೈರಾಣುಗಳು ಕಾಡುತ್ತಿವೆಯೆಂದು ಚೀನಾಕ್ಕೆ ತಿಳಿದಿದೆ. ೧೯೮೦ರ ಏಡ್ಸ್ ರೋಗದಿಂದ  ಶುರುವಾದ ಈ ಸರಣಿಯಲ್ಲಿ ವಿಶ್ವ, ಹಕ್ಕಿ-ಜ್ವರ, ಹಂದಿ-ಜ್ವರ, ಸಾರ್ಸ್, ಮೆರ್ಸ್ ಮತ್ತು ಎಬೋಲಾ (SARS, MERS and EBOLA)ದಂತಹ ಮಾರಕ ರೋಗಗಳನ್ನು ಎದುರಿಸುತ್ತಿದೆ. ವುಹಾನ್ನಿನ ವೈರಾಣು ಪ್ರಯೋಗಾಲಯ ೨೦೧೩ರಲ್ಲೇ  ಕೋವಿಡ್-೧೯ರ ವೈರಾಣುವಿನ ಸಂಶೋಧನೆಯನ್ನು ನಡೆಸಿತ್ತು.  ಅದರ ಸೋಂಕು ಮನುಕುಲಕ್ಕೆ ಮಾರಕವಾಗಬಹುದೆಂಬುದು ಚೀನಾಕ್ಕೆ ಚೆನ್ನಾಗೇ ತಿಳಿದಿತ್ತು. ಕೋವಿಡ್ ವೈರಾಣುವನ್ನು ಜೈವಿಕಾಸ್ತ್ರವಾಗಿ ಪ್ರಯೋಗಿಸುವ ದುಷ್ಕೃತ್ಯಕ್ಕೆ ಕೈ ಹಾಕಿದ ಚೀನಾ, ಅದರ ಪ್ರಯೋಗವನ್ನು ತನ್ನ ಪ್ರಜೆಗಳ ಮೇಲೇ ಆರಂಭಿಸಿತು. ಇಂತಹ ನೀಚ ಕೃತ್ಯವನ್ನು ಮರೆಮಾಚಲು, ತನ್ನ ಕೆಲವು ವಿಜ್ಞಾನಿಗಳಿಂದ "ಕೋವಿಡ್ ಸೋಂಕಿನ ಹರಡುವಿಕೆ ಆಕಸ್ಮಿಕವಾಗಾಗಿದ್ದು" ಎಂಬ ಹೇಳಿಕೆಯನ್ನು ನೀಡಿಸಿ ನಾಟಕವಾಡುತ್ತಿದೆ. 

ಕಳೆದ ವರ್ಷದ ಕಡೆಯ ದಿನವಾದ, ೩೧-೧೨-೨೦೧೯ರಂದೇ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ  ಕೋವಿಡ್ ವೈರಾಣುವಿನ ಬಗ್ಗೆ ಮಾಹಿತಿಯನ್ನು ತಾನು ಹಂಚಿಕೊಂಡಿರುವುದಾಗಿ ಚೀನಾ ಹೇಳಿಕೊಂಡಿದೆ. ಮಾರನೇ ದಿನವಾದ, ೦೧-೦೧-೨೦೨೦ರಂದು ಚೀನಾ ಸುಮಾರು ೨ ಲಕ್ಷ ಜನರುಗಳನ್ನು, ವುಹಾನ್ನಿಂದ ಬೇರೆ ಬೇರೆ ದೇಶಗಳಿಗೆ ವಿಮಾನ ಪ್ರಯಾಣದ ಮೂಲಕ ಕಳುಹಿಸಿದೆ. ಅಷ್ಟು ಹೊತ್ತಿಗಾಗಲೇ ಚೀನಾ, ಕೋವಿಡ್ನ ಎಚ್ಚರಿಕೆಯ ಸೀಟಿಯನ್ನು ಬಾರಿಸಿದ ತನ್ನ ಎಲ್ಲಾ ವೈದ್ಯರುಗಳ ಹಾಗೂ ವಿಜ್ಞಾನಿಗಳ ಬಾಯ್ಮುಚ್ಚಿಸಿಯಾಗಿತ್ತು. ತನ್ನ ದೇಶದಲ್ಲಿ ಕೋವಿಡ್ ರೋಗದಿಂದ ಉಂಟಾದ ಪ್ರಥಮ ಸಾವನ್ನು ಚೀನಾ ೨೦೨೦ರ ಜನವರಿ ೯ರಂದು ಪ್ರಕಟಿಸಿತ್ತು. ಆ ದಿನದ ನಂತರವೂ ಚೀನಾ ವುಹಾನ್ನಿಂದ, ಸುಮಾರು ೧೦೦೦ ಸೋಂಕಿತರು ಸೇರಿದಂತೆ, ೭೫,೦೦೦ ಪ್ರಯಾಣಿಕರನ್ನು ವಿಶ್ವದ ಎಲ್ಲೆಡೆಗೆ ರವಾನಿಸಿತ್ತು. 

೨೦೨೦ರ ಜನವರಿ ೧೦ರಂದು ಕೂಡ ಚೀನಾ ಕೋವಿಡ್ ವೈರಾಣು ಮಾನವನಿಂದ ಮಾನವನಿಗೆ ಹರಡುವುದಿಲ್ಲವೆಂದು ಹೇಳುತ್ತಾ, ವಿಶ್ವವನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಮುಂದುವರೆಸಿತ್ತು. "ತನ್ನ ಮಾಲೀಕನ ಮಾತುಗಳನ್ನೇ ಪುನರುಚ್ಛರಿಸು"ತ್ತಿರುವಂತೆ ಕಂಡ ವಿಶ್ವ ಆರೋಗ್ಯ ಸಂಸ್ಥೆಯೂ, ಕೋವಿಡ್ ವೈರಾಣು ಮಾನವರಿಂದ ಮಾನವರಿಗೆ ಹರಡುವುದಿಲ್ಲ ಮತ್ತು ಚೀನಾದ ಆರೋಗ್ಯ ಸಿಬ್ಬಂಧಿಗಳ್ಯಾರಿಗೂ ಕೋವಿಡ್ನ ಸೋಂಕು ಹರಡಿಲ್ಲವೆಂದು ಹೇಳಿತ್ತು.  ಇನ್ನೂ ಕೊಂಚ ಮುಂದುವರಿದ ವಿಶ್ವ ಆರೋಗ್ಯ ಸಂಸ್ಥೆ "ವಿಶ್ವದ ಯಾವುದೇ ದೇಶ ಚೀನಾದೊಂದಿಗಿನ ವ್ಯಾಪಾರ ಮತ್ತು ಪ್ರಯಾಣದ ಸಂಬಂಧವನ್ನು ಕಡಿದುಕೊಳ್ಳಬಾರದೆಂಬ ನೀತಿಬೋಧೆಯನ್ನು ಕೂಡ ಮಾಡಿತ್ತು." 

ಈ ಎಲ್ಲ ಘಟನೆಗಳನ್ನು ಅವಲೋಕಿಸಿದರೆ, ಚೀನಾ ಬೇಕೆಂದೇ ಕೋವಿಡ್ ವೈರಾಣು ವಿಶ್ವವನ್ನೆಲ್ಲಾ ವ್ಯಾಪಿಸುವಂತೆ ಮಾಡಿದ್ದು, ತಾನು ಮಾತ್ರ ಕ್ಷೇಮವಾಗಿ ಉಳಿಯುವ ಯೋಜನೆಯನ್ನು ವ್ಯವಸ್ಥಿತವಾಗಿ ಮಾಡಿದೆಯೆಂಬುದು ಸಾಬೀತಾಗುತ್ತದೆ. ಆದುದರಿಂದ ತಾವು ಚೀನಾಕ್ಕೆ ಅತಿ ಘೋರವಾದ ಶಿಕ್ಷೆಯನ್ನು ವಿಧಿಸಬೇಕೆಂದು ನಾನು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ' ಎಂದರು. 

ಅಮೆರಿಕಾದವರ ಆವೇಶಭರಿತ ವಾದವನ್ನು ತದೇಕ ಚಿತ್ತರಾಗಿ  ಕೇಳಿದ, ಚೀನಾ ತಂಡದವರೇನೂ  ವಿಚಲಿತರಾದಂತೆ ಕಂಡು ಬರಲಿಲ್ಲ. ಚೀನಾ ತಂಡದ ನಾಯಕ ತನ್ನ ಪ್ರತಿವಾದವನ್ನು ಮಂಡಿಸುತ್ತಾ, 'ಸದಾ ಯುದ್ಧನಿರತ ದೇಶವೆಂದರೆ ಅದು ಅಮೇರಿಕಾ ಮಾತ್ರ, ನಮ್ಮ ದೇಶವಲ್ಲ. ಎರಡನೇ ಮಹಾಯುದ್ಧದನಂತರವೂ ಪ್ರಪಂಚಾದ್ಯಂತ ವಿವಿಧ ದೇಶಗಳೊಂದಿಗೆ ಅಮೇರಿಕಾ ಕಾಲು ಕೆರದು ಯುದ್ಧ ಮಾಡುತ್ತಿದೆ. 

ವಿಶ್ವದ ಮುಂಚೂಣಿಯಲ್ಲಿರುವ ಅಮೆರಿಕ, ಮಹಾಮಾರಿ ಕೋವಿಡ್ನಿಂದ ತತ್ತರಿಸುತ್ತಿರುವ ದೇಶಗಳಿಗೆ ಸಹಾಯಹಸ್ತವನ್ನು ನೀಡುವ ಯಾವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿಲ್ಲ. ತನ್ನ ಮಿತ್ರ ದೇಶಗಳ ಕಡೆ ಕೋವಿಡ್ ಚಿಕಿತ್ಸಾ ಸಾಮಗ್ರಿಗಳನ್ನು ಹೊತ್ತು ಹೊರಟ ಹಡಗುಗಳನ್ನೇ ತನ್ನ ಕಡೆಗೆ ಅಪಹರಿಸಿದ ಆರೋಪ ಅಮೆರಿಕಾದ ಮೇಲಿದೆ. ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆಯ ಸಂಶೋಧನೆಯನ್ನು ನಡೆಸುತ್ತಿರುವ ಜರ್ಮನಿ ದೇಶದ ಪ್ರಯೋಗಾಲಯವೊಂದನ್ನು, ತನ್ನ ದೇಶಕ್ಕೆ ಸ್ಥಳಾಂತರಿಸುವಂತೆ ಅಮೇರಿಕಾ ಬಲಾತ್ಕಾರ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ.  ಮಲೇರಿಯಾ ಔಷಧಿಯಾದ ಎಚ್.ಸಿ.ಕ್ಯೂ.ವನ್ನು ಭಾರಿ ಪ್ರಮಾಣದಲ್ಲಿ ಪಡೆಯಲು, ಅಮೇರಿಕಾ ಭಾರತದ ದೇಶದ ಮೇಲೆ ಇನ್ನಿಲ್ಲದ ಒತ್ತಡವನ್ನು ಹೇರಿದ್ದು, ಗೂಂಡಾಗಿರಿಯ ವರ್ತನೆಯೇ ಸರಿ.  ಬೇರ್ಯಾವ ದೇಶದ ಮೇಲೂ ಬೊಟ್ಟು ತೋರಿಸಿ ಆರೋಪಿಸುವ ಅರ್ಹತೆ ಅಮೆರಿಕಾಗಿಲ್ಲ.

ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ತಂಡವೊಂದು, ೨೦೧೬ರಲ್ಲೇ ಕೋವಿಡ್-೧೯ ವೈರಾಣುವನ್ನು ಹೋಲುವ ವೈರಾಣುವೊಂದನ್ನು ಕಂಡು ಹಿಡಿದಿತ್ತು. ಹಾಗಾಗಿ ಕೋವಿಡ್ ವೈರಾಣುವನ್ನು ಅಮೆರಿಕವೇ ಇಡೀ ವಿಶ್ವಾದ್ಯಂತ ಹರಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 

೨೦೨೦ರ ಜನವರಿ ೨೦ರಂದು ನಾವು ಇಡೀ ವುಹಾನ್ ನಗರದಲ್ಲಿ ಸಂಪೂರ್ಣ ಲಾಕ್ಡೌನನ್ನು ಜಾರಿಗೊಳಿಸಿದೆವು. ಜನವರಿ ೩೧ರಂದು, ಟ್ರಂಪ್ ಸರಕಾರ, ಚೀನಾ ದೇಶಕ್ಕೆ ಭೇಟಿ ನೀಡಿರುವ ಯಾವುದೇ ಬೇರೆ ದೇಶಗಳ ಪ್ರಜೆ, ಅಮೇರಿಕಾ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಅದರನಂತರವೂ ಸುಮಾರು ೪೦,೦೦೦ದಷ್ಟು ಜನರು ಚೀನಾದಿಂದ ಹೊರಟು ಅಮೇರಿಕಾ ಸೇರಿದ್ದಾರೆ. ೨೦೨೦ರ ಮೊದಲ ಮೂರು ತಿಂಗಳುಗಳಲ್ಲಿ, ಚೀನಾದಿಂದ ನೇರ ಹಾರಾಟದಲ್ಲಿ ಹೊರಟ ಸುಮಾರು ೪,೩೦,೦೦೦ದಷ್ಟು ಜನರು ಅಮೇರಿಕಾವನ್ನು ತಲುಪಿದ್ದಾರೆ. ಇದೇ ಅವಧಿಯಲ್ಲಿ, ಸಹಸ್ರಾರು ಸೋಂಕಿತರು ಯೂರೋಪ್ನ ವಿವಿಧ ದೇಶಗಳಿಂದ ಅಮೆರಿಕಾವನ್ನು ಸೇರಿದ್ದಾರೆ. ೨೦೨೦ರ ಫೆಬ್ರವರಿ ೨೫ರ ಹೊತ್ತಿಗಾಗಲೇ ಶೇಷ-ವಿಶ್ವದ ಕೋವಿಡ್ ಸೋಂಕಿತರ ಸಂಖ್ಯೆ, ಚೀನಾ ದೇಶದ ಕೋವಿಡ್ ಸೋಂಕಿತರ ಸಂಖ್ಯೆಗಿಂತ ಹೆಚ್ಚಿತ್ತು. ಅಂತಹ ವಿಷಮ ಪರಿಸ್ಥಿತಿಯಲ್ಲೂ, ಅಮೆರಿಕಾದ "ನ್ಯೂ ಒರಲೆಯನ್ಸ್"  ನಗರದ ರಸ್ತೆಗಳಲ್ಲಿ, "ಮರ್ಡಿ ಗ್ರಾಸ್ ಹಬ್ಬ"ದ ಸಂಭ್ರಮನ್ನಾಚರಿಸಲು, ಹತ್ತಾರು ಸಾವಿರ ಸಂಖ್ಯೆಯಲ್ಲಿ ಜನಗಳು ಜಮಾಯಿಸಿದ್ದು ಮತ್ತು ಅದು ಕೋವಿಡ್ ಕಾಡ್ಗಿಚ್ಚಿನಂತೆ ಹರಡಲು ಕಾರಣವಾಗಿದ್ದು, ಎಲ್ಲರಿಗೂ ತಿಳಿದ ವಿಷಯವೇ. ಇಷ್ಟೆಲ್ಲ ದುರ್ಘಟನೆಗಳು ತನ್ನದೇ ಮೂಗಿನಡಿ ಜರುಗುತ್ತಿದ್ದರೂ, ಕಣ್ಮುಚ್ಚಿ ಕುಳಿತು, ತನ್ನ ದೇಶದ ಸೋಂಕಿತರ ಸಂಖ್ಯೆಯನ್ನು ತಾನೇ  ಹೆಚ್ಚಿಸಿಕೊಂಡ ಅಮೆರಿಕಾಕ್ಕೆ, ಚೀನಾವನ್ನು ಆಕ್ಷೇಪಿಸುವ ಹಕ್ಕೆಲ್ಲಿದೆ? 

ಕೋವಿಡ್ ವೈರಾಣು ಮಾನವ ಸೃಷ್ಟಿ ಎಂಬ ವಾದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಆದುದರಿಂದ ಅಮೇರಿಕಾ ಸೇರಿದಂತೆ ಬೇರೆಲ್ಲರೂ ಹೊರಿಸುತ್ತಿರುವ ಆರೋಪಗಳಿಂದ, ನಮ್ಮ ದೇಶ ಚೀನಾವನ್ನು ವಿಮುಕ್ತಗೊಳಿಸಬೇಕು ಎಂದು ನಾನು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ' ಎಂದರು. 

ಇಷ್ಟರ ನಡುವೆ, ರೋಹಿಣಿಯ ಚಿತ್ತ ತನ್ನ ಸ್ನೇಹಿತ ಡಾ.ಕಿರಣನ ಮೇಲೆ ನೆಟ್ಟಿತ್ತು. ಅವನೇಕೆ ತನ್ನ ವಾದವನ್ನು ಮಂಡಿಸುತ್ತಿಲ್ಲ ಎನ್ನುವಂತ್ತಿತ್ತು ಅವಳ ನೋಟ. ರೋಹಿಣಿಯನ್ನು ಓಲೈಸಲೆಂದೇ ಎದ್ದುನಿಂತಂತೆ ಕಂಡ ಡಾ. ಕಿರಣ್ ಮಾತನಾಡುತ್ತ, 'ಪ್ರಭುವೇ, "ತೇನವಿನಾ ತೃಣಮಪಿನಚಲತಿ" ಎಂಬುದು ನಮ್ಮ ದೇಶದ ಜನಗಳ ಅಚಲವಾದ ನಂಬಿಕೆ. ತಮ್ಮ ಆಣತಿಯಿಲ್ಲದ ಒಂದು ಹುಲ್ಲುಕಡ್ಡಿ ಕೂಡ ಕದಲದು ಎಂಬುದು ನಮ್ಮ ಜನರ ವಿಶ್ವಾಸ. ಕೋವಿಡ್ ವೈರಾಣು ಪ್ರಕೃತಿಯ ಸೃಷ್ಟಿ ಮಾತ್ರ ಎಂಬುದು ನನ್ನ ನಂಬಿಕೆ. ಏತಕ್ಕಾಗಿ ಎಂಬುದು ಯಾರಿಗೂ ತಿಳಿಯದ ವಿಷಯ. ಚೀನಾ ದೇಶದ ವುಹಾನ್ ನಗರದಲ್ಲಿ ಜನಗಳಿಗೆ ರೋಗದ ಸೋಂಕನ್ನು ಹರಡಿದ ಕೋವಿಡ್ ವೈರಾಣು, ಎಲ್ಲ ವೈರಾಣುಗಳಂತೆ ಪ್ರಾಣಿಗಳಿಂದ ಮಾನವನಿಗೆ ಬಂದದ್ದು. ಕೋವಿಡ್ ವೈರಾಣುವಿನ ಮೂಲದ ಸಂಶೋಧನೆಯಿಂದ, ಕೋವಿಡ್ ನಿವಾರಣೆಗೆ ಬೇಕಾದ ಲಸಿಕೆ ಮತ್ತು ಔಷಧಿಗಳ ತಯಾರಿಕೆಗೆ ಸಹಾಯವಾಗುತ್ತದೆ. 

ತಿಳಿದ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ಚೀನಾ ವಿಳಂಬ ಮಾಡಿತು ಎಂಬ ಆರೋಪವನ್ನು ಸರಿ ಎಂದಿಟ್ಟುಕೊಂಡರೂ, ವಿಶಾಲ ಮನೋಭಾವದವರಾದ ನಮ್ಮ ಭಾರತೀಯರಿಗೆ "ಚೀನಾದ ನಾಗರಿಕರು ಮತ್ತು ಚೀನಾದ ಸರಕಾರ"ದ ನಡುವಿನ ಅಂತರ ಚೆನ್ನಾಗಿ ತಿಳಿದಿದೆ. "ಸರಕಾರಗಳ ನಡುವೆ  ಇರಬಹುದಾದ ವೈಷಮ್ಯಗಳಿಂದಾಗಿ, ಜನಗಳ ನಡುವೆ ಕಂದಕವೇರ್ಪಡುವುದು ಸರಿಯಲ್ಲ." ಕೋವಿಡ್ನ ಬಗ್ಗೆ ಎಚ್ಚರಿಕೆಯ ಸೀಟಿಯನ್ನೂದಿದ, ಚೀನಾದ ಹಲವು ವಿಜ್ಞಾನಿಗಳು ಹಾಗೂ ವೈದ್ಯರುಗಳು, ತಮ್ಮ ಜೀವದ ಹಂಗನ್ನು ತೊರೆದು, ಇಡೀ ವಿಶ್ವವನ್ನೆಚ್ಚರಿಸಿದ್ದಾರೆ. ಚೀನಾದ ಜಾಕ್ ಮಾರಿಗೆ  ಮತ್ತು ಅಲಿಬಾಬಾ ಕಂಪನಿಗೆ ಸೇರಿದ ಹಲವಾರು ಸೇವಾ ಸಂಸ್ಥೆಗಳು ಭಾರತ ಮತ್ತು ಇನ್ನಿತರ ದೇಶಗಳಿಗೆ,  ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಬೇಕಾದ ಹಲವು ಪರಿಕರಗಳನ್ನು ಮತ್ತು ಪದಾರ್ಥಗಳನ್ನು  ಕೊಡುಗೆಯಾಗಿ ನೀಡಿವೆ. ವಿಶ್ವ ಮಟ್ಟದಲ್ಲಿ ದಾಪುಗಾಲನ್ನಿಟ್ಟು ಮುನ್ನಡೆಯುತ್ತಿರುವ ಭಾರತದ ಔಷಧೋದ್ಯಮಕ್ಕೆ (Indian Pharmacy Industry) ಬೇಕಾದ ಕಚ್ಚಾ ವಸ್ತುಗಳ ೭೦%ರಷ್ಟು ಭಾಗವನ್ನು ನಾವು ಚೀನಾದಿಂದ ಪಡೆಯುತ್ತಿದ್ದೇವೆ ಎಂಬುದರಲ್ಲಿ ಉತ್ಪ್ರೇಕ್ಷೆಯಿಲ್ಲ.  ಚೀನಾದೊಂದಿಗಿನ ಇಂತಹ ಸುಮಧುರ ಸಂಬಂಧವನ್ನು, ನಾವು ಬೇಜಾವಾಬ್ದಾರಿಯಿಂದ ಕೂಡಿದ ಆರೋಪಗಳನ್ನು ಮಾಡಿ, ದುರ್ಬಲಗೊಳಿಸಬಾರದು. ಕೋವಿಡ್ ವೈರಾಣು ಮಾನವ ಸೃಷ್ಟಿಯಲ್ಲ ಎಂಬ ನಮ್ಮ ಚೀನಾದ ಪ್ರತಿನಿಧಿಗಳ ವಾದವನ್ನು ನಾನು ಕೂಡ ಸಮರ್ಥಿಸುತ್ತೇನೆ.  ಚೀನಿಯರ ಪ್ರಾಮಾಣಿಕತೆಯನ್ನು ಅನುಮಾನಿಸುವುದಕ್ಕೆ ಯಾವುದೇ ಬಲವಾದ ಕಾರಣಗಳಿಲ್ಲ ಎಂಬುದು ನನ್ನ ಅನಿಸಿಕೆ'  ಎಂದರು. ಹೀಗೆಂದ         ಡಾ. ಕಿರಣನ ವಿನೂತನವಾದ ವಿಷಯ ಮಂಡನೆಯನ್ನು, ತಲೆಯಾಡಿಸುತ್ತಾ ರೋಹಿಣಿ ಮೆಚ್ಚಿಕೊಂಡಿದ್ದು, ಹಾಗೂ ಕಿರಣ ಅದರಿಂದ ಪುಳಕಿತಗೊಂಡಿದ್ದು, ತಂದೆ ರಾಜುರವರ ಗಮನಕ್ಕೂ  ಬಾರದಿರಲಿಲ್ಲ. 

ಹೊಸ ವಾದ ಸರಣಿಯೊಂದಿಗೆ ಎದ್ದು ನಿಂತ ರೋಹಿಣಿಗೆ, ತಾನು ಈಗ ಮಂಡಿಸಲಿರುವ ವಾದವನ್ನು ಅಲ್ಲಗಳೆಯುವುದು ಯಾರಿಗೂ ಸಾಧ್ಯವಾಗದೆಂಬ ನಂಬಿಕೆಯಿತ್ತು. 'ಪ್ರಭುವೇ, ಏಷ್ಯಾದ ವಿಜ್ಞಾನಿಯೊಬ್ಬರ ವರದಿಯ ಆಧಾರದ ಮೇಲೆ ಒಂದು ವಿಷಯವನ್ನು ಎಲ್ಲರ ಮುಂದಿಡುತ್ತಿದ್ದೇನೆ. ಚೀನಾದ ಪ್ರಯೋಗಾಲಯಗಳ ಒಳ ಉದ್ದೇಶಗಳು ಮತ್ತು ಅವುಗಳು ಕಾರ್ಯ ನಿರ್ವಹಿಸುವ ವಿಧಾನಗಳು ಆ ವಿಜ್ಞಾನಿಗೆ ಚೆನ್ನಾಗಿ ತಿಳಿದಿದೆ. ಅವರ ವಾದದ ಪ್ರಕಾರ, ಕೋವಿಡ್ ವೈರಾಣು ಬಾವಲಿಗಳಿಂದ ಹರಡಿದ್ದಲ್ಲ. ಜೈವಿಕ ಅಸ್ತ್ರವೊಂದನ್ನು ತಯಾರಿಸುವ ಉದ್ದೇಶದಿಂದ ಕೋವಿಡ್ ವೈರಾಣುವನ್ನು ಚೀನಾದ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಒಂದೊಮ್ಮೆ ಕೋವಿಡ್ ವೈರಾಣು ಪ್ರಕೃತಿಯ ಕ್ರಿಯೆಯಿಂದ ಜನಿತವಾಗಿದ್ದರೆ, ಅದು ಚೀನಾದ  ವುಹಾನ್ ನಗರವಿರುವ ಹುಬೆಯ್ ಪ್ರಾಂತ್ಯದ ವಾತಾವರಣ ಮತ್ತು ಹವಾಮಾನವಿರುವ ಅನ್ಯ ಪ್ರಾಂತ್ಯಗಳಲ್ಲಿ ಮಾತ್ರ ಹರಡಬೇಕಿತ್ತು. ಆದರೆ ಹಾಗಾಗದೆ, ಬೇರೆ ಬೇರೆ ರೀತಿಯ ವಾತಾವರಣಗಳಿರುವ  ವಿಶ್ವದ ಎಲ್ಲಾ ಮೂಲೆ ಮೂಲೆಗಳಲ್ಲೂ ಕೋವಿಡ್ ಸಮನಾಗಿ ಹರಡುತ್ತಿದೆ. ಆದುದರಿಂದ ಕೋವಿಡ್ ವೈರಾಣು ಮಾನವ ಸೃಷ್ಟಿಯೇ ಹೊರತು ಸ್ವಾಭಾವಿಕವಾದ ಪ್ರಕ್ರಿಯೆಯಿಂದ ಉಂಟಾದುದಲ್ಲ ಎಂದು ಸಾಬೀತಾಗುತ್ತದೆ' ಎಂದ ರೋಹಿಣಿ ಚೀನಾದವರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾ ಕುಳಿತಳು. 

ಯಾವ ಏಷ್ಯಾದ ವಿಜ್ಞಾನಿಯ ವರದಿಯನ್ನು ರೋಹಿಣಿ ಉಲ್ಲೇಖಿಸಿದ್ದಳೋ, ಅದೇ ವಿಜ್ಞಾನಿ ಖುದ್ದು ಪ್ರತ್ಯಕ್ಷನಾಗಿ ಸಭೆಯಲ್ಲಿ ಎದ್ದು ನಿಂತಾಗ, ರೋಹಿಣಿ ಆಶ್ಚರ್ಯಚಕಿತಳಾದಳು. ಕೋವಿಡ್ ವೈರಾಣುವಿನ ಮಾನವ ಸೃಷ್ಟಿಯ ಬಗ್ಗೆ,  ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವರದಿಯೆಂದು ಹಲವಾರು ಜನರು ಹರಿಬಿಟ್ಟಿರುವ, ಚೀನಾದ ಮೇಲಿನ ಆರೋಪ ಸುಳ್ಳೆಂದು ಆ ವಿಜ್ಞಾನಿ ಹೇಳಿದಾಗ ಸಭಿಕರೆಲ್ಲರೂ ತಬ್ಬಿಬ್ಬುಗೊಂಡರು. ತನ್ನ ವರದಿಯನ್ನಾಧರಿಸಿ ಹಲವರು ಚೀನಾದ ಮೇಲೆ ಮಾಡಿರುವ ಆರೋಪದಿಂದ, ಚೀನಾದ ಖ್ಯಾತಿಗೆ ಧಕ್ಕೆಯುಂಟಾಗಿದ್ದು, ಅದಕ್ಕಾಗಿ ತಾನು ಚೀನಾದ ಕ್ಷಮೆಯನ್ನು ಕೇಳುತ್ತಿರುವುದಾಗಿಯೂ ಆ ವಿಜ್ಞಾನಿ ಹೇಳಿದರು. 

ಚೀನಾದ ತಂಡದ ಬಹುದೂರ ಕುಳಿತಿದ್ದ, ಚೀನಾದ ಯುವ ನಾಗರೀಕನೊಬ್ಬ ಮಾತನಾಡಲು ಎದ್ದು ನಿಂತು ಎಲ್ಲರ ಗಮನ ಸೆಳೆದನು. 'ದೇವರೇ, ನಾನೊಬ್ಬ ಮೃತಪಟ್ಟ ವ್ಯಕ್ತಿ. ನಾನೊಬ್ಬ ಚೀನಾ ದೇಶದ ವೈದ್ಯ. ೨೦೧೯ರ ಕಡೆಯ ದಿನಗಳಲ್ಲಿ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯೊಬ್ಬನು ಚಿಕಿತ್ಸೆಗಾಗಿ ನನ್ನಲ್ಲಿಗೆ ಬಂದಿದ್ದನು. ಸುಮಾರು ಒಂದು ದಶಕದ ಹಿಂದೆ ಪ್ರಪಂಚವನ್ನು ಕಾಡಿದ ಉಸಿರಾಟದ ಸಮಸ್ಯೆಯ ಸಾಂಕ್ರಾಮಿಕವೊಂದರ ಲಕ್ಷಣಗಳನ್ನೇ, ಆ ರೋಗಿಯ ಹೊಸ ರೋಗವು ಹೋಲುತ್ತಿತ್ತು. ಆ ರೋಗದ ಬಗ್ಗೆ ಹೆಚ್ಚು ಸಂಶೋಧಿಸುವಂತೆ ಮತ್ತು ಜಾಗರೂಕರಾಗಿರುವಂತೆ ನಾನು ನನ್ನ ಮಿತ್ರ ವೈದ್ಯರುಗಳನ್ನು ಎಚ್ಚರಿಸಿದೆ. ಬಿರುಗಾಳಿಯಂತೆ ಹರಡಿದ ನನ್ನ ಎಚ್ಚರಿಕೆಯ ಸಂದೇಶ, ಪೊಲೀಸರ ಗಮನಕ್ಕೂ ಬಂತು. ನನ್ನ ಸಂದೇಶದ ಸತ್ಯಾಸತ್ಯತೆಯ ತನಿಖೆಯನ್ನು ಮಾಡಿದ ಪೊಲೀಸರು, ನನ್ನ ಮೇಲೆ ಸಮಾಜದ ಶಾಂತಿಯನ್ನು ವಿನಾಕಾರಣ ಕದಡಿದ ಆರೋಪವನ್ನು ಹೊರಿಸಿ, ನನ್ನಿಂದ ತಪ್ಪೊಪ್ಪಿಗೆಯ ಪತ್ರವನ್ನೂ ಬರೆಸಿಕೊಂಡರು. ನನ್ನ ಮೇಲಾದ ಹಿಂಸಾಚಾರಕ್ಕೆ ಚೀನಾದ ಜನತೆಯಿಂದ ತೀವ್ರವಾದ ವಿರೋಧ ವ್ಯಕ್ತವಾಯಿತು. ಹೊಸದಾಗಿ ಕಂಡುಬಂದಿದ್ದ ರೋಗವೊಂದನ್ನು ಕುರಿತು ನಾನು ಎಚ್ಚರಿಕೆಯ ಸೀಟಿಯನ್ನು ಊದಿದ್ದನ್ನು ಪೊಲೀಸರು, ವದಂತಿಗಳನ್ನು ಹರಡಿದ ಅಪರಾಧವೆಂದು ಆರೋಪಿಸಿದರು. ಹೊಸ ರೋಗದ ಸುದ್ದಿಯ ಹಬ್ಬುವಿಕೆ ಚೀನಾದ ಮಾಣಿಜ್ಯೋದ್ಯಮಕ್ಕೆ ಮಾರಕವಾಗಬಹುದೆಂಬುದು ಚೀನೀ ಪೊಲೀಸರ ಅನಿಸಿಕೆಯಿರಬಹುದು. 

ರೋಗಿಯೊಬ್ಬರಲ್ಲಿ ನಾನು ಪತ್ತೆ ಹಚ್ಚಿದ ಹೊಸ ರೋಗವೊಂದನ್ನು, ಕೆಲವು ದಿನಗಳನಂತರ "ಕೋವಿಡ್-೧೯" ರೋಗ ಎಂದು ವಿಜ್ಞಾನಿಗಳು ಕಂಡು ಹಿಡಿದರು. ಕೆಲವು ದಿನಗಳನಂತರ ನಾನು ಕೂಡ ಅದೇ ರೋಗದಿಂದ ಸೋಂಕಿತನಾದೆ. ಕೋವಿಡ್ ರೋಗಿಯೆಂದು ಪರಿಗಣಿಸಲ್ಪಟ್ಟ ನನ್ನನು ನಿರ್ಬಂಧನದಲ್ಲಿಟ್ಟು(ಕ್ವಾರಂಟೈನ್), ನನಗೆ ಚಿಕಿತ್ಸೆಯನ್ನು ನೀಡಲಾರಂಭಿಸಿದರು. ಮತ್ತೆ ಕೆಲವು ದಿನಗಳನಂತರ ನಾನು ಅದೇ ರೋಗಕ್ಕೆ ಬಲಿಯಾಗಿ ಸತ್ತೆ. ಕೋವಿಡ್ ರೋಗದ ಬಗ್ಗೆ ಎಚ್ಚರಿಕೆಯ ಸೀಟಿಯನ್ನು ನಾನು ಊದಿದ ಪ್ರಕ್ರಿಯೆಗಿಂತ ನನ್ನ ಸಾವು, ಆ ರೋಗದ ಎಚ್ಚರಿಕೆಯನ್ನು ಅತಿ ದೊಡ್ಡದಾದ ಪ್ರಮಾಣದಲ್ಲಿ, ಇಡೀ ವಿಶ್ವಕ್ಕೇ ಸಾರಿತ್ತು. ನಾನು ಮೃತಪಟ್ಟಿದ್ದಕ್ಕೆ ನನಗೆ ವಿಷಾದವಿಲ್ಲ. ತಮ್ಮ ಇಚ್ಚೆಯಂತೆ ನನ್ನ ಸಾವು ಉಂಟಾಗಿದೆ. ನನ್ನ ದೇಶ ಚೀನಾವನ್ನು ಮತ್ತು ಇಡೀ ವಿಶ್ವವನ್ನು ಕೋವಿಡ್ ರೋಗದಿಂದ ಬೇಗ ಮುಕ್ತಗೊಳಿಸಬೇಕೆಂದು ತಮ್ಮನ್ನು ಪ್ರಾರ್ಥಿಸಿಕೊಳ್ಳುತೇನೆ,' ಎಂದ ಆ ತರುಣ ವೈದ್ಯನ ಮಾತುಗಳನ್ನು ಕೇಳಿ ಎಲ್ಲಾ ಸಭಿಕರು ದುಃಖತಪ್ತರಾದರು. 

ಹೆಚ್ಚು ಪರಿಚಯವಿಲ್ಲದ ಮತ್ತೊಬ್ಬ ವ್ಯಕ್ತಿ ಮಾತನಾಡಲು ಎದ್ದು ನಿಂತಾಗ, ದೇವರ ನ್ಯಾಯಾಲಯದ ಸಭಿಕರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. 'ನನ್ನ ಹೆಸರು ಡಾ. ದ್ವಾರಕಾನಾಥ್ ಎಸ್. ಕೊಟ್ನಿಸ್. ನಾನು ಭಾರತ ದೇಶದ ಮಹಾರಾಷ್ಟ್ರ ರಾಜ್ಯದವನು. ೧೯೩೮ರಲ್ಲಿ ಜಪಾನಿನ ಆಕ್ರಮಣದಿಂದ ಗಾಯಗೊಂಡ  ಚೀನಾದ ಸೈನಿಕರ ಶುಶ್ರೂಷೆಗೆಂದು ನನ್ನನ್ನು ಭಾರತದಿಂದ ಚೀನಾಕ್ಕೆ ಕಳುಹಿಸಲಾಯಿತು. ನಾನು ನನ್ನ ಕೆಲಸವನ್ನು ಮತ್ತು ಚೀನಾದ ಜನತೆಯನ್ನು ಪ್ರೀತಿಸುತಿದ್ದೆ. ಚೀನಾದ ಜನರೂ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಚೀನಾದ ಯುವತಿಯೊಬ್ಬಳನ್ನು ಪ್ರೀತಿಸಿದ ನಾನು ಅವಳನ್ನೇ ಮದುವೆ ಕೂಡ ಆದೆ. ದುರದೃಷ್ಟವಶಾತ್ ರೋಗವೊಂದಕ್ಕೆ ತುತ್ತಾದ ನಾನು ಚೀನಾದಲ್ಲಿ, ೧೯೪೨ರಲ್ಲೇ ಮೃತಪಟ್ಟೆ.  ಆಗ ನನ್ನ ವಯಸ್ಸು ಕೇವಲ ೩೨ ವರ್ಷವಾಗಿತ್ತು. "ನಮ್ಮ ಸೈನ್ಯ ಸಹಾಯ ಹಸ್ತವೊಂದನ್ನು ಕಳೆದುಕೊಂಡಿದೆ. ನಮ್ಮ ದೇಶ ಸನ್ಮಿತ್ರನೊಬ್ಬನನ್ನು ಕಳೆದುಕೊಂಡಿದೆ. ಗಡಿಯ ಎಲ್ಲೆಗಳನ್ನು ದಾಟಿದ ಅವನ ಸೇವಾ ಮನೋಭಾವವನ್ನು ಗೌರವಿಸೋಣ," ಎಂಬುದು ಅಂದಿನ ಚೀನಾ ದೇಶದ ಸರ್ವೋಚ್ಚ  ನಾಯಕರು ನನ್ನ ಬಗ್ಗೆ ನುಡಿದ ಮೆಚ್ಚುಗೆಯ ಮಾತುಗಳಾಗಿದ್ದವು. ನನ್ನ ನೆನಪಿನ ಸ್ಮಾರಕವೊಂದನ್ನು ಚೀನಾದ ಹೆಬಿ ಪ್ರಾಂತ್ಯದಲ್ಲಿ ನಿರ್ಮಿಸಲಾಗಿದೆ. ಈಗಲೂ ಕೂಡ ಚೀನಿಯರ ಪಾಲಿಗೆ ನಾನೊಬ್ಬ ಗೌರವಾನ್ವಿತ ಮಿತ್ರ. ನನ್ನ ಅಂಚೆ ಚೀಟಿಯೊಂದು ಕೂಡ ಅಲ್ಲಿ ಪ್ರಕಟವಾಗಿದ್ದು, ೨೦೦೯ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, "ಚೀನಾದ ಮೊದಲ ೧೦ ಸನ್ಮಿತ್ರರ ಪಟ್ಟಿಯಲ್ಲಿ," ನಾನು ಕೂಡ ಒಬ್ಬನಾಗಿ ಆಯ್ಕೆಗೊಂಡಿದ್ದೇನೆ. ನನ್ನ ಕತೆಯಿಂದ "ಚೀನಾ ಸುಸಂಸ್ಕೃತ ದೇಶವೊಂದೆಂಬುದು" ಎಲ್ಲರಿಗೂ ಮನವರಿಕೆಯಾಗುತ್ತದೆ. ನನ್ನ ಮರಣದನಂತರ ಭಾರತಕ್ಕೆ ಭೇಟಿ ನೀಡಿರುವ, ಚೀನಾದ ಹಿರಿಯ ನಾಯಕರುಗಳೆಲ್ಲರೂ, ನನ್ನ ಸ್ಮರಣೆಯನ್ನು ಗೌರವಿಸಲು, ನನ್ನ ಕುಟುಂಬದ ಸದಸ್ಯರುಗಳನ್ನು ಭೇಟಿ ಮಾಡುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ. ನನ್ನ ಸೇವಾ ಸ್ಮರಣೆ ಭಾರತ-ಚೀನಾದ ಬಾಂಧವ್ಯವನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಿರುವ ಬಗ್ಗೆ ನನಗೆ ಹೆಮ್ಮೆಯಿದೆ. 

ಭಾರತದಲ್ಲೂ ನನಗೆ ಅಪಾರ ಗೌರವ ದೊರೆತಿದೆ. ನನ್ನ ಜೀವನಾಧಾರಿತ  "ಡಾ. ಕೊಟ್ನಿಸ್ ಕಿ ಅಮರ್ ಕಹಾನಿ" ಎಂಬ ಚಲನ ಚಿತ್ರವೊಂದನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ, ೧೯೪೬ರಲ್ಲಿ ತಯಾರಿಸಲಾಯಿತು. ಸುಪ್ರಸಿದ್ಧ ನಟರಾದ ವಿ. ಶಾಂತಾರಾಮರವರು ನನ್ನ ಪಾತ್ರವನ್ನು ನಿರ್ವಹಿಸಿ, ಚಿತ್ರದ ನಿರ್ದೇಶನವನ್ನು ಸಹ ಮಾಡಿದ್ದರು. 

ಕೋವಿಡ್ ರೋಗದ ಬಗ್ಗೆ ಎಚ್ಚರಿಕೆಯ ಸೀಟಿಯನ್ನುಸಕಾಲದಲ್ಲಿ ಊದಿ, ಇಡೀ ವಿಶ್ವವನ್ನೇ ಎಚ್ಚರಿಸಿದ ಚೀನಾದ ತರುಣ ವೈದ್ಯರು ಈ ಸಭೆಗೆ ಬಂದು ಮಾತನಾಡಿದ್ದು ನನಗೆ ಸಂತಸ ತಂದಿದೆ.  ಆ  ತರುಣ ವೈದ್ಯರನ್ನು ವದಂತಿಕೋರನೆಂದು ಚೀನಾ ಶಿಕ್ಷಿಸಿದ ಘಟನೆಯನ್ನು ಕೇಳಿ ನನ್ನ ಮನಸ್ಸಿಗೆ ನೋವಾಗಿದೆ. ಪ್ರಾಯಶಃ ಅದು ಆತುರದ ಕಾರ್ಯಾಚರಣೆಯಿರಬಹುದು. ಅಂದಿನ ಘಟನೆಯನಂತರ ಚೀನಾ, ಆ ತರುಣ ವೈದ್ಯರನ್ನು ನಿರಪರಾಧಿಯೆಂದು ಘೋಷಿಸಿದೆ ಹಾಗೂ ಆ ವೈದ್ಯರ  ಕುಟುಂಬದ ಕ್ಷಮೆಯನ್ನು ಕೂಡ ಯಾಚಿಸಿದೆ.  

ನನ್ನ ಚೀನಾದ ಸೇವಾವಧಿಯಲ್ಲಿನ ಸುಮಧುರ ಕ್ಷಣಗಳನ್ನು ನೆನಪಿಸಿಕೊಂಡರೆ, ಕೋವಿಡ್ ವೈರಾಣುವನ್ನು ಸೃಷ್ಟಿಸಿ, ಅದನ್ನು ಜೈವಿಕಾಸ್ತ್ರವನ್ನಾಗಿ ಪ್ರಯೋಗಿಸಿರುವಂತಹ ನೀಚ ಕಾರ್ಯವನ್ನು ಚೀನಾ ಮಾಡಿರಲಾರದು ಎಂಬುದು ನನ್ನ ಅಭಿಪ್ರಾಯ. ಕೋವಿಡ್ನ ಶರವೇಗದ ಹಬ್ಬುವಿಕೆಗೆ ಕಾರಣವಾಗುವಂತಹ ಯಾವುದೇ ಕೃತ್ಯವನ್ನು ಚೀನಾ, ಗೊತ್ತಿದ್ದೂ ಮಾಡಿರಲಾರದೆಂಬುದು ನನ್ನ ಅನಿಸಿಕೆ.' ಹೀಗೆಂದು ಡಾ. ದ್ವಾರಕಾನಾಥ್ ಕೊಟ್ನಿಸ್ರವರು ತಮ್ಮ ಮಾತುಗಳನ್ನು ಮುಗಿಸುತ್ತಲೇ, ಇಡೀ ಸಭೆಯಲ್ಲಿ ಮೆಚ್ಚುಗೆಯ ಚಪ್ಪಾಳೆಗಳ ಭೋರ್ಗರೆತ ಕೇಳಿಬಂತು. 

ರಾಜುರವರ ಕಣ್ಣುಗಳೀಗ, ಅವರ ವಕೀಲ ಮಿತ್ರ ಮದನ್ ಲಾಲರ ಮೇಲಿತ್ತು. ಜಾಣರೂ ಮತ್ತು ಅನುಭವಿಯೂ ಆದ ಮದನ್ ಲಾಲರು, ಚೀನಾದ ವಿರುದ್ಧ ಪ್ರಬಲವಾದ ವಾದವನ್ನು ಮಂಡಿಸಬಲ್ಲರೆಂಬ ವಿಶ್ವಾಸ ರಾಜುರವರಿಗಿತ್ತು. 

'ಪ್ರಭುವೇ, ನನ್ನ ವಿನಮ್ರ ನಮಸ್ಕಾರಗಳನ್ನು ಸ್ವೀಕರಿಸಿ. ನಿಮ್ಮ ನ್ಯಾಯಾಲಯದಲ್ಲಿ ನಾನು, ಈಗ ತಾನೇ ಮತ್ತೊಬ್ಬ ದೇವರ ದರ್ಶನವನ್ನು ಮಾಡಿದ್ದೇನೆ. ಹೌದು, ನಮ್ಮವರೇ ಆದ ಡಾ. ದ್ವಾರಕಾನಾಥ್ ಕೊಟ್ನಿಸ್ರವರದ್ದು ಯಾವ ದೇವರಿಗೂ ಕಮ್ಮಿ ಇಲ್ಲದ ವ್ಯಕ್ತಿತ್ವ. ಮನುಕುಲಕ್ಕೆ ಅವರು ಸಲ್ಲಿಸಿರುವ ನಿಸ್ವಾರ್ಥ ಸೇವೆ ಶ್ಲಾಘನೀಯವಾದುದು. ಆದರೆ ಕುಟಿಲ ಬುದ್ಧಿಯ ಚೀನಾ, ಕೊಟ್ನಿಸ್ರವರನ್ನು ಗೌರವಿಸುವ, ಸ್ಮರಿಸುವ ನಾಟಕವನ್ನು ಮಾತ್ರ ಮಾಡುತ್ತಿದೆ. ಭಾರತದ ವಿರುದ್ಧ ಚೀನಾ ನಡೆಸಿರುವ ಕುಕೃತ್ಯಗಳು, ಆ ದೇಶ ವಿಶ್ವಾಸಕ್ಕೆ ಅರ್ಹವಲ್ಲವೆಂದು ಸಾರುತ್ತವೆ. 

ಭೂಗೋಳ ಶಾಸ್ತ್ರದ ಕೆಲವು ಪಾಠಗಳನ್ನು ನೆನೆಪಿಸಿಕೊಳ್ಳೋಣ. ಮಾರಕ ಕೋವಿಡ್ ವೈರಾಣುವಿನ ಮೂಲಸ್ಥಾನವಾದ ಚೀನಾ ದೇಶದ ವುಹಾನ್ ನಗರದಿಂದ, ವಿಶ್ವದ ಬೇರೆ ಪ್ರಮುಖ ನಗರಗಳ ನಡುವಿನ ದೂರವನ್ನು ಗಮನಿಸೋಣ. 

ವುಹಾನ್ನಿಂದ ಶಾಂಘೈ ಗೆ  - ೮೪೦ ಕಿ.ಮೀ.ಗಳು 

ವುಹಾನ್ನಿಂದ ಬೀಜಿಂಗ್ ಗೆ  - ೧೨೦೦ ಕಿ.ಮೀ.ಗಳು 

ವುಹಾನ್ನಿಂದ ಇಟಲಿ ದೇಶದ ಮಿಲಾನ್ ಗೆ - ೧೫,೦೦೦ ಕಿ.ಮೀ.ಗಳು 

ವುಹಾನ್ನಿಂದ ಅಮೆರಿಕಾದ ನ್ಯೂ ಯಾರ್ಕ್ ಗೆ - ೧೫,೦೦೦ ಕಿ.ಮೀ.ಗಳು 

ವುಹಾನ್ನಿಂದ ಭಾರತದ ದಿಲ್ಲಿಗೆ - ೩,೫೦೦ ಕಿ.ಮೀ.ಗಳು 

ವುಹಾನ್ನಿಂದ ಇರಾನಿನ ಟೆಹರಾನ್ ಗೆ - ೬,೦೦೦ ಕಿ.ಮೀ.ಗಳು 

ಆದರೆ ಮಾರಕ ಕೋವಿಡ್ ವೈರಾಣು ಶಾಂಘೈ ಮತ್ತು ಬೀಜಿಂಗ್ ನಗರಗಳಿಗೆ ದೊಡ್ಡ ಪ್ರಮಾಣದಲ್ಲಿ ಹರಡೇ ಇಲ್ಲ. ಆದರೆ ದೂರದ ಯೂರೋಪ್ನ ದೇಶಗಳಲ್ಲಿನ ಜನಗಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿ ಮೃತಪಟ್ಟಿದ್ದಾರೆ. ಅಮೇರಿಕಾ ಮತ್ತು ಭಾರತ ದೇಶಗಳಲ್ಲೂ ಕೋವಿಡ್ನ ಸಮಸ್ಯೆ ತೀವ್ರವಾಗಿ ಹರಡಿದೆ. ಆದರೆ ಚೀನಾ ಕೋವಿಡ್ನ ಶರವೇಗದ ಹರಡುವಿಕೆಗೆ ಅಮೇರಿಕಾ ಮತ್ತಿತರ ದೇಶಗಳನ್ನು ದೋಷಿಯೆಂದು ಆರೋಪಿಸುತ್ತಿದೆ. "ತಾ ಕಳ್ಳ, ಪರರ ನಂಬ" ಎಂಬ ಗಾದೆಯಂತೆ ಚೀನಾ, ಕೋವಿಡ್ ಹರಡಿಸುವ ಅಪರಾಧವನ್ನು ತಾನು ಮಾಡಿ, ಬೇರೆಯವರ ಮೇಲೆ ಆರೋಪವನ್ನು ಹೊರಿಸುತ್ತಿದೆ. ಮುಜುಗರವೆನಿಸಿದರೂ ಚೀನಾ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು. 

೧) ಇಡೀ ವಿಶ್ವದ ಮೂಲೆ ಮೂಲೆಗಳನ್ನಾವರಿಸಿರುವ ಕೋವಿಡ್, ಅಷ್ಟೇ ತೀವ್ರವಾಗಿ ಚೀನಾದಲ್ಲೇಕೆ ವ್ಯಾಪಿಸಿಲ್ಲ? ವುಹಾನ್ನ ಸುತ್ತವಿರುವ ಕೆಲವೇ ಪ್ರಾಂತ್ಯಗಳಲ್ಲಿ ಮಾತ್ರ ಕೋವಿಡ್ ಹರಡಿದ್ದು, ಚೀನಾದ ಮಿಕ್ಕ ಪ್ರಾಂತ್ಯಗಳು ಕ್ಷೇಮವಾಗೇ ಉಳಿದಿರುವುದು ಹೇಗೆ? 

೨) ಕೋವಿಡ್ ಕುರಿತಾದ ಮಾಹಿತಿಯನ್ನು ಬೇರೆ ದೇಶಗಳೊಂದಿಗೆ ಹಂಚಿಕೊಳ್ಳುವಲ್ಲಿ ಚೀನಾ ವಿಳಂಬನ್ನೇಕೆ ಮಾಡಿತು? ನಿಯಂತ್ರಣ ಕಾರ್ಯವನ್ನು ತ್ವರಿತಗೊಳಿಸಬಹುದಾದ ಅಮೂಲ್ಯ ಸಮಯ ವ್ಯರ್ಥವಾಗಿ ಹೋಗಿದ್ದಕ್ಕೆ ಚೀನಾ ಹೊಣೆಯಲ್ಲವೆ?

೩) ಕೋವಿಡ್ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ ತನ್ನದೇ ವಿಜ್ಞಾನಿಗಳ ಮತ್ತು ವೈದ್ಯರುಗಳ ವಿರುದ್ಧ ಚೀನಾ ದಮನಕಾರಿ ಕ್ರಮಗಳನ್ನು ಜರುಗಿಸಿ, ಅವರುಗಳ ಬಾಯ್ಮುಚ್ಚಿಸಿದ್ದೇಕೆ? 

೪) ಕೋವಿಡ್ ವೈರಾಣುವಿನ ಹರಡುವಿಕೆಯನ್ನು ಘೋಷಿಸಿದನಂತರವೂ, ಚೀನಾ ತನ್ನ ವುಹಾನ್ ನಗರದಿಂದ ಅಂತಾರಾಷ್ಟ್ರೀಯ ಹಾರಾಟಗಳನ್ನು ನಿಯಂತ್ರಿಸಲಿಲ್ಲವೇಕೆ? 

೫) ಕೋವಿಡ್ ವೈರಾಣುವಿನ ಹರಡುವಿಕೆಗೆ ಪೂರಕವಾಗಿ ಚೀನಾ ನಡೆಸಿದ ಕುಟಿಲ ನಡೆಗಳ ಬಗ್ಗೆ, ವಿಶ್ವ ಆರೋಗ್ಯ ಸಂಸ್ಥೆ ಮೃದು ಧೋರಣೆಯನ್ನು ತಳೆದಿರುವುದೇಕೆ?'

ಹೀಗೆ ಸೂಕ್ಷ್ಮವಾದ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ ಮದನ್ ಲಾಲರ ವಾದವನ್ನು ಕೇಳಿ ರಾಜು ರವರು ಪುಳಕಿತರಾದರು. 

ವಾದವನ್ನು ಮುಂದುವರೆಸಿದ ಚೀನಾದ ಪ್ರತಿವಾದಿಗಳು ತಮಗೆ ಪೂರಕವಾದ ಅಂಶಗಳಿಗೆ ಒತ್ತು ನೀಡಿದರು. 'ಕೋವಿಡ್ನ ವೈರಾಣು ಪ್ರಾಣಿಗಳಿಂದ ಮಾನವನಿಗೆ ಹರಡಿದೆ. "ಕುದುರೆ ಗಾಳದ ಬಾವಲಿ(ಹಾರ್ಸ್ ಶೂ ಬ್ಯಾಟ್)"ಯಲ್ಲಿ ಕಂಡು ಬಂದ ವೈರಾಣುವಿನ ಮತ್ತು ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಗಳ ನಡುವೆ ತುಂಬಾ ಹೋಲಿಕೆ ಇರುವುದು ಸಂಶೋಧನೆಯಿಂದ ತಿಳಿದಿದೆ. ಬಾವಲಿಯಿಂದ ಮಾನವನಿಗೆ ವೈರಾಣುಗಳು ಹರಡಲು ಮೂರನೇ ಪ್ರಾಣಿಯೊಂದರ ಸಂಪರ್ಕ ಬೇಕೇ ಬೇಕು. ೨೦೦೩ರಲ್ಲಿ ಹರಡಿದ್ದ ಸಾರ್ಸ್ ವೈರಾಣುಗಳು ಬಾವಲಿಗಳಿಂದ ಮಾನವನಿಗೆ ಪುನುಗು ಬೆಕ್ಕಿನ ಮೂಲಕ ಹರಡಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕೊರೋನಾ ವೈರಾಣುಗಳ ವಂಶದಿಂದ ಮಾನವನನ್ನು ಹೊಕ್ಕ ಮೊದಲ ವೈರಾಣುವೇ ಸಾರ್ಸ್ ವೈರಾಣು. ೨೦೧೨ರಲ್ಲಿ ಜಗತ್ತು ಕಂಡ ಮೆರ್ಸ್ ವೈರಾಣು, ಒಂಟೆಗಳ ಮೂಲಕ ಮಾನವನಿಗೆ ಹರಡಿರುವುದೆಂದೂ ತಿಳಿದು ಬಂದಿದೆ. ೨೦೧೯ರ ಕೋವಿಡ್ ರೋಗಕ್ಕೆ ಕಾರಣವಾಗಿರುವ ವೈರಾಣು, ಬಾವಲಿಗಳಿಂದ "ಇರುವೆ ತಿನ್ನುವ ಪ್ಯಾಂಗೋಲಿನ್"ಗಳಿಗೆ, ಮತ್ತು ಪ್ಯಾಂಗೋಲಿನ್ಗಳಿಂದ ಮಾನವನಿಗೆ ಹರಡಿದೆ ಎಂಬುದು ಸಂಶೋಧನೆಯಿಂದ ಋಜುವಾತಾಗಿದೆ. ಅಂತಹ ಪ್ಯಾಂಗೋಲಿನ್ ಗಳಲ್ಲಿ ಕಂಡುಬಂದಿರುವ ಕೊರೋನಾ ವೈರಾಣುವಿಗೂ ಮತ್ತು ಕೋವಿಡ್-೧೯ರ ವೈರಾಣುವಿಗೂ ಬಹಳಷ್ಟು ಹೋಲಿಕೆಯಿದೆ. 

ಕೋವಿಡ್-೧೯ರ ವೈರಾಣು, ಜೀವಂತ ಪ್ರಾಣಿಗಳ ಮಾರಾಟ ಮಾಡುವ ವುಹಾನಿನ ಮಾಂಸದ "ಹಸಿ ಮಾರುಕಟ್ಟೆ (ವೆಟ್ ಮಾರ್ಕೆಟ್)"ಯಿಂದ ಹರಡಿದೆ. ಅಂತಹ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೆಲವು ಕೆಲಸಗಾರರಿಗೆ ಸೋಂಕು ಮೊದಲು ಹರಡಿ, ಅನಂತರ ಅವರುಗಳ ಮೂಲಕ ಬೇರೇ ಜನಗಳಿಗೂ ಹರಡಿದೆ. ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಯನ್ನು ಚೀನಾದ ವಿಜ್ಞಾನಿಗಳು ಅತೀ ಬೇಗನೆ ಅನಾವರಣಗೊಳಿಸಿದ್ದಾರೆ. ಅದರ ಮಾಹಿತಿಯನ್ನು ಕೂಡಲೇ ವಿಶ್ವ ಆರೋಗ್ಯ ಸಂಸ್ಥೆಗೆ ನಮ್ಮ ದೇಶ  ನೀಡಿದೆ. ಇದೆಲ್ಲ ಮಾಹಿತಿಗಳಿಂದ, ಕೋವಿಡ್ ವೈರಾಣು ಮಾನವ ಸೃಷ್ಟಿಯಿಂದ ಆದುದ್ದಲ್ಲ, ಅದರ ಸೃಷ್ಟಿ ಸ್ವಾಭಾವಿಕವಾಗಿ ಆಗಿದೆ  ಎಂದು ಸಾಬೀತಾಗುತ್ತದೆ.' ಕೋವಿಡ್ ವೈರಾಣುವಿನ ಉಗಮದ ಬಗೆಗಿನ ಚೀನಾದ ವಿವರಣೆ ಹೀಗಿತ್ತು. 

'ವಕೀಲ ಮದನ್ ಲಾಲರು ಮುಂದಿಟ್ಟ ಕರಾರುವಾಕ್ಕಾದ ಪ್ರಶ್ನೆಗಳ ಮುಂದೆ ಚೀನಾದವರ ವಿವರಣೆ ಸಮಂಜಸವಾಗಿ ಕಾಣುತ್ತಿಲ್ಲ. ಸರಿಯಾದ ಸಮಯದಲ್ಲಿ ಚೀನಾ ಸರಿಯಾದ ಕ್ರಮಗಳನ್ನು ಕೈಗೊಂಡಿದ್ದರೆ, ಕೋವಿಡ್ ಇಡೀ ವಿಶ್ವವನ್ನಾವರಿಸುವುದನ್ನು ತಡೆಯಬಹುದಿತ್ತು. ಹಾಗೆ ಮಾಡದ ಚೀನಾ, ತನ್ನ ವ್ಯಾಪಾರದ ಹಿತದೃಷ್ಟಿಯ ರಕ್ಷಣೆಗೆ ಮೊದಲ ಆದ್ಯತೆಯನ್ನು ನೀಡಿ, ಬಹಳ ವಾರಗಳ ತನಕ ಸುಮ್ಮನಿದ್ದು, ಇಡೀ ವಿಶ್ವವನ್ನು ವಂಚಿಸಿದೆ. ಇಂತಹ ವಂಚನೆಯನ್ನು ಕುರಿತ ಚರ್ಚೆ ವಿಶ್ವ ಸಂಸ್ಥೆಯ ಮುಂದೆ ೨೦೨೦ರ ಮಾರ್ಚ್ ತಿಂಗಳ ಅಧಿವೇಶನದಲ್ಲಿ ನಡೆಯಬೇಕಾದಾಗ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಚೀನಾ, ಚರ್ಚೆಯೇ ಆಗದಂತೆ ಮಾಡಿತು. ಏಕೆಂದರೆ ಚೀನಾಕ್ಕೆ ತನ್ನ ವಂಚನೆಯನ್ನು ಮುಚ್ಚಿಟ್ಟುಕೊಳ್ಳಬೇಕಾದ ಹುನ್ನಾರವಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನಾದೊಂದಿಗೆ ಒಳಸಂಚು ಮಾಡಿ, ತನ್ನ ಕರ್ತವ್ಯವನ್ನು ಮರೆತು, ಇಡೀ ವಿಶ್ವಕ್ಕೇ  ದ್ರೋಹವನ್ನು ಬಗೆಯಿತು,' ಎಂದು ರೋಹಿಣಿ ತನ್ನ ವಾದವನ್ನು ಮತ್ತೊಮ್ಮೆ ಮುಂದಿಟ್ಟಳು. 

ತಮ್ಮ ಮಗಳ ವಾದಕ್ಕೆ ಒತ್ತು ನೀಡುವಂತೆ ಮಾತನಾಡಿದ ರಾಜುರವರು 'ಮೊನ್ನೆ ಮೊನ್ನೆಯ ಏಪ್ರಿಲ್ ತಿಂಗಳ ನಡುಭಾಗದಲ್ಲಿ, ಚೀನಾ ತನ್ನ ವುಹಾನ್ ನಗರದಲ್ಲಿ ಕೋವಿಡ್ನಿಂದಾದ ಮೃತರುಗಳ ಸಂಖ್ಯೆ, ಮುಂಚೆಯೇ ಘೋಷಿತವಾದ ಸಂಖ್ಯೆಗಿಂತ  ಶೇಕಡಾ ೫೦ರಷ್ಟು ಹೆಚ್ಚಿತ್ತು ಎಂದು ಒಪ್ಪಿಕೊಂಡಿದೆ! ಚೀನಾದ ಈ ಕ್ರಮ, ಆ ದೇಶದ "ಕೋವಿಡ್ ಮಾಹಿತಿ ಮತ್ತು ಅಂಕಿಅಂಶಗಳ ಪ್ರಕಟಣಾ ನೀತಿ"ಯಲ್ಲಿನ ಪಾರದರ್ಶಕತೆಯ ಕೊರತೆಗೆ ಹಿಡಿದ ಕನ್ನಡಿಯಾಗಿದೆ. ಆಸ್ಟ್ರೇಲಿಯಾ ದೇಶ ಕೂಡ, ಚೀನಾ ತನಗೆ ತಿಳಿದಿರುವ ಕೋವಿಡ್ ಮಾಹಿತಿಯನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳದೆಂದು ಅನುಮಾನವನ್ನು ವ್ಯಕ್ತಪಡಿಸಿದೆ. ವಿಶ್ವದ ೬೨ ದೇಶಗಳು, ಚೀನಾ ಕೋವಿಡ್ನ ವಿಷಯದಲ್ಲಿ ನಡೆಸಿರಬಹುದಾದ ವಂಚನೆಗಳ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿವೆ. ವಿಶ್ವ ಆರೋಗ್ಯ ಸಂಸ್ಥೆ ತನ್ನ ಚೀನಾ ಕುರಿತಾದ ಮೃದು ಧೋರಣೆಯನ್ನು ಬಿಟ್ಟು, ಪ್ರಾಮಾಣಿಕ ತನಿಖೆಯನ್ನು ನಡೆಸುವುದೆಂದು ಆಶಿಸೋಣ. 

ಕೋವಿಡ್ನ ಸಂಕಟಗಳ ನಡುವೆ, ಭಾರತದ ಲಡಾಖ್ ಪ್ರಾಂತ್ಯದ ಗಡಿ ಭಾಗದಲ್ಲಿ, ಚೀನಾ ತನ್ನ ಕತ್ತಿಯನ್ನು ಮಸೆಯುತ್ತಾ,  ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿರುವುದು ಹೀನ ಕೃತ್ಯವೇ ಸರಿ. ಈ ರೀತಿಯ ಗಡಿಭಾಗದ ಚಕಮಕಿಗಳನ್ನು ಬೇರೆ ಬೇರೆ ಕಡೆ ನಡೆಸಿ, ವಿಶ್ವದ ಗಮನವನ್ನು ತನ್ನ ಕೋವಿಡ್ ವಂಚನೆಯ ಪ್ರಕರಣಗಳಿಂದ ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಚೀನಾ ಮಾಡುತ್ತಿದೆ. ತನ್ನ ತಪ್ಪುಗಳ ಬಗ್ಗೆ ಚೀನಾಕ್ಕೆ ವಿಷಾದವೆಂಬುದೇ ಇಲ್ಲ. ವಿಶ್ವದ ಐದನೇ ಒಂದು ಭಾಗದಷ್ಟು ಮನುಕುಲಕ್ಕೆ ಆವಾಸ ಸ್ಥಾನವಾದ ನಮ್ಮ ದೇಶ ಭಾರತ ಕೋವಿಡ್ನ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಸಮಯದಲ್ಲಿ, ಚೀನಾ ನಮ್ಮ ಗಡಿಭಾಗದಲ್ಲಿ ಸೈನ್ಯದ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದು ಮನುಕುಲದ ವಿರುದ್ಧ ಚೀನಾವೆಸಗಿರುವ ದ್ರೋಹವಲ್ಲವೆ?' ಎಂದು ಪ್ರಶ್ನಿಸಿದರು. 

ನಿರಂತರವಾಗಿ ಸಾಗಿದ್ದ ವಾದಗಳ ಸರಣಿಗೆ ಮುಕ್ತಾಯ ಹಾಡಲು ಎದ್ದು ನಿಂತಂತೆ  ಕಂಡ  ಚೀನಾ ತಂಡದ  ಪ್ರತಿನಿಧಿ ಮಾತನಾಡುತ್ತ, 'ಪ್ರಭುವೇ, ಈ ಚರ್ಚೆಯ ಎಳೆದಾಟ ಜಾಸ್ತಿಯಾಯಿತು ಎನಿಸುತ್ತದೆ. ಆದರೆ ನಮ್ಮ ದೇಶದ ಮೇಲಿನ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಕೋವಿಡ್ ವೈರಾಣು ಮಾನವ ಸೃಷ್ಟಿಯಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕೋವಿಡ್ ರೋಗಿಗಳಲ್ಲಿ ಕಂಡು ಬಂದಿರುವ ವೈರಾಣುಗಳು ಹಾಗೂ ಪ್ಯಾಂಗೋಲಿನ್ನಿಂದ ಹೊರ ತೆಗೆದ ವೈರಾಣುಗಳಿಗೂ ಬಹಳ ಹತ್ತಿರದ ಹೋಲಿಕೆ ಇದೆ. ಪ್ಯಾಂಗೋಲಿನ್ ಪ್ರಾಣಿ ಕೋವಿಡ್ ವೈರಾಣುವಿನ ವಾಹಕವೆಂಬುದು ವೈಜ್ಞಾನಿಕ ಸತ್ಯ. 

ಕೋವಿಡ್ ವೈರಾಣುವಿನ ಸ್ವಾಭಾವಿಕ ಸೃಷ್ಟಿ, ಮಾನವನ ಊಹೆಗೂ ಮೀರಿದ ಸಂಕೀರ್ಣತೆಯಿಂದ ಕೂಡಿದೆ. ಮಾನವನ ಜೀವಕೋಶಗಳ ಒಳಹೊಕ್ಕು, ಗಟ್ಟಿಯಾಗಿ ಕುಳಿತು, ವೇಗವಾಗಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ಕೋವಿಡ್ ವೈರಾಣುವಿನ ಸಾಮರ್ಥ್ಯ, ಆಧುನಿಕ ವಿಜ್ಞಾನ ಲೋಕವನ್ನೇ ಆಶ್ಚರ್ಯಗೊಳಿಸಿದೆ. ಮುಂಬರುವ ದಿನಗಳಲ್ಲಿ ಕೋವಿಡ್ ವೈರಾಣುವಿಗಿಂತ ಇನ್ನೂ ಮಾರಕವಾದ ಕೊರೋನಾ ವೈರಾಣುಗಳು ನಮ್ಮ ವಿಸ್ಮಯ ಲೋಕದಲ್ಲಿ ಕಂಡು ಬರಬಹುದು.  

ಕೋವಿಡ್ ವೈರಾಣುವಿನ ಸೃಷ್ಟಿಯ ಬಗ್ಗೆ ಇಡೀ ವಿಶ್ವ ಚೀನಾದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರೂ, ಕೋವಿಡ್ ರೋಗದ ಮೇಲಿನ ಹತೋಟಿಯನ್ನು ಮೊದಲು ಸಾಧಿಸಿದ್ದು ಚೀನಾ ದೇಶವೇ ಎಂಬುದನ್ನು ಕಡೆಗಣಿಸುವಂತಿಲ್ಲ. ಕೋವಿಡ್ ರೋಗದ ಯಶಸ್ವಿ ನಿರ್ವಹಣೆಯ ವಿಷಯದಲ್ಲಿ, ಚೀನಾ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು, ಹಗಲಿರುಳೆನ್ನದೆ ಸಂಶೋಧನೆ ನಡೆಸುತ್ತಿರುವ ನಮ್ಮ ವಿಜ್ಞಾನಿಗಳು ಕೋವಿಡ್ ರೋಗ ನಿಯಂತ್ರಣಕ್ಕೆ ಬಹು ಬೇಗ ಲಸಿಕೆಯನ್ನು ಮತ್ತು ಔಷಧಗಳನ್ನು ಕಂಡು ಹಿಡಿಯುತ್ತಾರೆಂಬ ವಿಶ್ವಾಸ ನಮಗಿದೆ. ನಮ್ಮ ವಿಜ್ಞಾನಿಗಳ ಸಂಶೋಧನೆಯ ವಿಚಾರವನ್ನು, ಲಸಿಕೆ ಮತ್ತು ಔಷಧಗಳನ್ನು ವಿಶ್ವದ ಎಲ್ಲಾ ದೇಶಗಳೊಂದಿಗೆ ಹಂಚಿಕೊಳ್ಳುವಲ್ಲಿ ನಮ್ಮಿಂದ ಯಾವುದೇ ವಿಳಂಬವಾಗದು ಎಂಬ ಪ್ರಮಾಣವನ್ನು, ತಮ್ಮ ನ್ಯಾಯಾಲಯದ ಮುಂದೆ ಇಂದು ನಾನು ಮಾಡುತ್ತಿದ್ದೇನೆ.  ವಿಶ್ವವನ್ನು ಕೋವಿಡ್ ರೋಗದಿಂದ ಮುಕ್ತಗೊಳಿಸುವಲ್ಲಿ, ಚೀನಾ ಮಹತ್ತರ ಪಾತ್ರವೊಂದನ್ನು ನಿರ್ವಹಿಸಲಿದೆ. 

ಕೋವಿಡ್ ವೈರಾಣುವನ್ನು ಕುರಿತಾದ, ನಮ್ಮ ಚೀನಾ ದೇಶದ ಮೇಲಿನ ಆರೋಪಗಳೆಲ್ಲವೂ ಆಧಾರರಹಿತವೆಂದು ಪರಿಗಣಿಸಿ, ನಮ್ಮ ದೇಶವನ್ನು ದೋಷಮುಕ್ತವಾಗಿಸಬೇಕೆಂದು ನಾನು ತಮ್ಮಲ್ಲಿ ಬೇಡುತ್ತೇನೆ' ಎಂದು ವಿನಂತಿಸಿಕೊಂಡರು. 

ಚೀನಾದ ಪ್ರತಿನಿಧಿ ತನ್ನ ಅಂತಿಮ ವಾದವನ್ನು ಮಂಡಿಸಿ ಕುಳಿತನಂತರ, ದೇವರ ನ್ಯಾಯಾಲಯವನ್ನು ದಿವ್ಯ ಮೌನ ಆವರಿಸಿತ್ತು. ಕೆಲ ಕಾಲ ನಿಶ್ಯಬ್ದವಾಗಿದ್ದ ಸಭಿಕರಲ್ಲಿ ದೇವರ ನಿರ್ಣಯದ ನಿರೀಕ್ಷೆಯಿತ್ತು. ಎಲ್ಲಾ ಕಣ್ಣುಗಳೂ ದೇವರ ನ್ಯಾಯ ಪೀಠದ ಮೇಲಿದ್ದವು. ದೇವರು ತಮ್ಮ ನ್ಯಾಯದ ಸುತ್ತಿಗೆಯನ್ನು ವೃತ್ತಾಕಾರದ ಹಲಗೆಯ ಮೇಲೆ ಬಡಿದ ತಕ್ಷಣ ಉಂಟಾದ ಭಾರೀ ಸದ್ದಿನಿಂದ ರೋಹಿಣಿ ಎಚ್ಚರಗೊಂಡಳು! ಇಡೀ ಕನಸಿನ ಎಲ್ಲಾ ವೃತ್ತಾಂತಗಳೂ ಅವಳ ಸ್ಮೃತಿ ಪಟಲದ  ಮೇಲೆ ಮತ್ತೊಮ್ಮೆ ಹಾದು  ಹೋದವು. ದೇವರು ನೀಡಬಹುದಾದ ನಿರ್ಣಯವನ್ನು ಕೇಳುವ ತನಕ ಕನಸು ಮುಂದುವರಿಯಲಿಲ್ಲವಲ್ಲಾ ಎಂಬ ವಿಷಾದ ರೋಹಿಣಿಯನ್ನು ಕಾಡಿತ್ತು. 'ದೇವರಿಗೆ ಸತ್ಯ ತಿಳಿದಿರುತ್ತದೆ, ಆದರವನು ಕಾದು ನೋಡುತ್ತಾನೆ (God sees the truth, but waits) ಎಂಬ ರಷ್ಯಾದ ತತ್ತ್ವಜ್ಞಾನಿ ಲಿಯೋ ಟಾಲ್ಸ್ಟಾಯ್'ರವರ ವಾಣಿ ಅವಳ ಕಿವಿಗಳಲ್ಲಿ ರಿಂಗಣಿಸುತ್ತಿತ್ತು. 

******  


          

ಕೊರೋನಾ ಸೇನಾನಿಗಳು  

ರೋಹಿಣಿಗಾದ ಅಂದಿನ ಅಚ್ಚರಿಯು  ಖುಷಿ ನೀಡಿತ್ತು. ಆತ್ಮೀಯ ಸ್ನೇಹಿತರಾದರೂ, ಅಪರೂಪದ ಅತಿಥಿಯಾದ ಡಾ. ಕಿರಣರ ಆಗಮನ ರೋಹಿಣಿಯನ್ನು ಚಕಿತಗೊಳಿಸಿತ್ತು. ಸಮಯವಾಗಲೇ ರಾತ್ರಿ ೮ ಘಂಟೆಯಾಗಿತ್ತು. ಆಯಾಸಗೊಂಡಂತೆ ಕಂಡ ಕಿರಣ್ ಮನೆಯ ಹೊರಗಿನ ಕುರ್ಚಿಯ ಮೇಲೆ ಕುಳಿತರು. ಕೊರೋನಾ ಸೋಂಕು ಹರಡಲು ಶುರುವಾದಾಗಿನಿಂದ ಡಾ. ಕಿರಣ್, ಯಾರ ಮನೆಗೆ ಹೋದರೂ, ಮನೆಯ ಹೊರಗೇ ಉಳಿದು ಮಾತನಾಡಿಕೊಂಡು ಹೋಗುವ ನಿಯಮವನ್ನು ಸ್ವಯಂ ವಿಧಿಸಿಕೊಂಡಿದ್ದರು. ಆತಂಕದಿಂದ ಕೂಡಿದ್ದ ಅವರು, ಏನೋ ಹೇಳಲು ಬಂದಂತ್ತಿತ್ತು. ಎಲ್ಲವನ್ನೂ  ಗಮಿನಿಸಿದ ರಾಜುರವರೂ ಮನೆಯಿಂದ ಹೊರಗೆ ಬಂದರು. 

'ಇಂದು ಬೆಳಗ್ಗೆ ದುರ್ಘಟನೆಯೊಂದು ನಡೆಯಿತು. ನಮ್ಮ ಆಶಾ (ASHA - Accredited Social Health Activist) ಕಾರ್ಯಕರ್ತೆಯರ ತಂಡವೊಂದನ್ನು, ಹೆಚ್ಚು ಜನದಟ್ಟಣೆಯುಳ್ಳ ನಮ್ಮ ನಗರದ ಬಡಾವಣೆಯೊಂದಕ್ಕೆ, ಕೋವಿಡ್ ಕುರಿತಾದ ಸಲಹೆಗಳನ್ನು ನೀಡಲು ಕಳುಹಿಸಿದ್ದೆವು. ಆ ಬಡಾವಣೆಯ ಹಲವರು ದೂರದೂರಿನ ಪ್ರವಾಸ ಮುಗಿಸಿ ಹಿಂತಿರುಗಿದ್ದು, ಅವರ ಪ್ರವಾಸದ ವೇಳೆ, ಅವರುಗಳು ಕೋವಿಡ್ ರೋಗ ಪೀಡಿತರ ನಿಕಟ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ನಮಗೆ ಬಂದಿತ್ತು. ಸೋಂಕಿತರ ಪತ್ತೆ ಮತ್ತು ಇನ್ನಿತರರನ್ನು ಎಚ್ಚರಿಸುವ ಕಾರ್ಯ ಕೂಡಲೇ ಆಗಬೇಕಿತ್ತು. ಆ ಬಡಾವಣೆಯ ನಿವಾಸಿಗಳು ಆರಂಭದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಲು ಇಚ್ಛಿಸಲಿಲ್ಲ. ನಂತರ ಅವರುಗಳ ಮಾತಿನ ಬಿಸಿ ಏರಿತ್ತು. ನೋಡ ನೋಡುತ್ತಿದಂತೆ ೧೫-೨೦ ಯುವಕರ ಗುಂಪೊಂದು ಜಮಾಯಿಸಿ ನಮ್ಮ ಕಾರ್ಯಕರ್ತೆಯರನ್ನು ಅಶ್ಲೀಲ ಪದಗಳಿಂದ ಬಯ್ಯಲಾರಂಭಿಸಿತು. ಅವರಲ್ಲಿ ಕೆಲವರು ನಮ್ಮ ವನಿತೆಯರ ಪೆನ್ನು ಮತ್ತು ಡೈರಿಗಳನ್ನು ಕಿತ್ತೆಸದರು. ಕೆಲವು ಕಿಡಿಗೇಡಿಗಳು ನಮ್ಮ ಆಶಾ ಕಾರ್ಯಕರ್ತೆಯರ ಮುಖಗಳ ಮೇಲೆ ಉಗುಳಿದಾಗ, ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಭಯಭೀತರಾದ ನಮ್ಮ ಮಹಿಳೆಯರು, ತಮ್ಮ ಮುಖಗಳನ್ನು ಮುಚ್ಚಿಕೊಂಡು ಅಲ್ಲಿಂದ ಓಡಿ ಬರಬೇಕಾಯಿತು.' ಘಟನೆಯ ವಿವರಗಳನ್ನು ನೀಡಿದ ಡಾ. ಕಿರಣ್ ಜಿಗುಪ್ಸೆಗೊಂಡಂತೆ ಕಂಡಿತ್ತು. 

'ನಮ್ಮ ಆಶಾ ವನಿತೆಯೊರೊಂದಿಗೆ ಅವರುಗಳು ಅಷ್ಟು ಕೀಳಾಗಿ ವರ್ತಿಸಿದರೆ? ಅವರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲವೆ?' ಎಂದು ಕೇಳಿದಳು ರೋಹಿಣಿ. 

'ಈ ರೀತಿಯ ಘಟನೆಗಳು ನಡೆಯುವುದು ಅಪರೂಪವಾಗಿತ್ತು. ಕೋವಿಡ್ ಮಹಾಮಾರಿ ಹಬ್ಬಿದಾಗಿನಿಂದ, ಕೆಲವರು ಈ ರೀತಿಯ ರೊಚ್ಚಿನ ಪ್ರತಿಕ್ರಿಯೆಯನ್ನು ತೋರಿಸಲಾರಂಭಿಸಿದ್ದಾರೆ. ವೈದ್ಯಕೀಯ ಸಿಬ್ಬಂಧಿಗಳು ಮಾತ್ರವಲ್ಲ, ಪೊಲೀಸರು, ಸ್ವಚ್ಛತಾ ಕರ್ಮಿಗಳು, ಬ್ಯಾಂಕ್ ಕರ್ಮಚಾರಿಗಳು, ಚಾಲಕರು ಮುಂತಾದ ಕೊರೋನಾ ಕಾರ್ಯಕರ್ತರುಗಳು ತಮ್ಮ ಕರ್ತವ್ಯವನ್ನು ನಿಭಾಯಿಸುವುದು ಈಗ  ಕಷ್ಟವಾಗಿ ಹೋಗಿದೆ. ನಮ್ಮಗಳ ಕರ್ಮಕ್ಷೇತ್ರ ರಣಭೂಮಿಯಂತಾಗಿ ಹೋಗಿದೆ. ಆದರೂ ನಾವುಗಳು ನಮ್ಮ ಕರ್ತವ್ಯವನ್ನು ನಿರ್ವಹಿಸುವುದು ಅನಿವಾರ್ಯವಾಗಿದೆ. ನಮ್ಮ ವೈದ್ಯರುಗಳು, ದಾದಿಯರು ಮತ್ತು ಕೆಲವು ಆಶಾ ವನಿತೆಯರುಗಳ ತಂಡವೊಂದು ಅದೇ ಬಡಾವಣೆಗೆ ಮತ್ತೆ ಭೇಟಿ ನೀಡಲಿದೆ. ಆ ಬಡಾವಣೆಯಲ್ಲಿ ಕೋವಿಡ್ ಸೋಂಕಿತರುಗಳ ಕುರಿತಾದ ಸಮೀಕ್ಷೆ, ಪತ್ತೆ, ನಿರ್ಬಂಧನ ಮತ್ತು ಚಿಕಿತ್ಸೆಗಳನ್ನು ತುರ್ತಾಗಿ ನಡೆಸಲೇ ಬೇಕಾಗಿದೆ' ಎಂದರು ಡಾ. ಕಿರಣ್. 

'ಪೋಲೀಸರ ರಕ್ಷಣೆಯನ್ನು ಏಕೆ ನೀವು ಪಡೆಯಬಾರದು?' ಎಂಬುದು ರಾಜುರವರ ಸಲಹೆಯಾಗಿತ್ತು. 'ಪೊಲೀಸರು ಕೂಡ ತೀವ್ರ ಒತ್ತಡದಲ್ಲಿದ್ದಾರೆ. ಅವರಲ್ಲೂ ಸಿಬ್ಬಂಧಿಯ ಕೊರತೆಯಿದೆ. ಎಲ್ಲಾ  ಕಾರ್ಯಕರ್ತರ ತಂಡಗಳಿಗೂ ಪೊಲೀಸರು ರಕ್ಷಣೆ ಕೊಡಲಾರರು' ಎಂದರು ಡಾ. ಕಿರಣ್. 

'ಕೋವಿಡ್ ಕುರಿತಾದ ಅಧ್ಯಯನ ಅಧಿಕೃತವಾಗಿ ಮಾಡುತ್ತಿರುವ ಸಂಶೋಧಕಿ ನಾನು. ಹಾಗಾಗಿ ತಮ್ಮ ತಂಡದೊಂದಿಗೆ ನಾಳೆ ನಾನೂ ಬರಬಹುದೆ?' ಎಂದು ಕೇಳಿದಳು ರೋಹಿಣಿ. 

'ನೀನು ನಮ್ಮೊಡನೆ ಬರಬಹುದು. ನಮ್ಮೊಂದಿಗೆ ನಾಳೆ ಕೆಲವು ಮಾಧ್ಯಮದ ಪ್ರತಿನಿಧಿಗಳೂ ಬರಲಿದ್ದಾರೆ. ಆದರೆ, ನಮ್ಮಗಳ ಮೇಲೆ ಹಲ್ಲೆ ನಡೆಯಬಹುದು, ಹಿಂಸಾಚಾರ ಜರುಗಬಹುದು' ಎಂದು ರೋಹಿಣಿಯನ್ನು ಎಚ್ಚರಿಸಿದರು ಡಾ. ಕಿರಣ್. 

ಮಾರನೆಯ ದಿನ ೮ ಘಂಟೆಗೂ ಮುಂಚೆಯೇ, ಡಾ. ಕಿರಣ್ ಮತ್ತವರ ತಂಡ ಆ ಬಡಾವಣೆಯನ್ನು ತಲುಪಿತ್ತು. ತಂಡದ ವಾಹನವನ್ನು ಬಡಾವಣೆಯ ಪ್ರವೇಶದ ರಸ್ತೆಯಲ್ಲೇ ನಿಲ್ಲಿಸಲಾಗಿತ್ತು. ಬಹಳ ಜನಜಂಗುಳಿಗಳಿಂದ ಕೂಡಿದ್ದ ಆ ಬಡಾವಣೆಯ ರಸ್ತೆಗಳು ಕಿರಿದಾಗಿಯೂ, ಅಂಕುಡೊಂಕಾಗಿಯೂ ಇದ್ದವು. ರಸ್ತೆಗಳ ತುಂಬಾ ಗಲೀಜಿದ್ದು, ದುರ್ವಾಸನೆಯ ನಾತ ಹೊಡೆಯುತ್ತಿತ್ತು. ಅಲ್ಲಲ್ಲಿ ನಾಯಿಗಳು, ಮಕ್ಕಳು ಮಲವಿಸರ್ಜನೆ ಮಾಡುತ್ತಿದ್ದದ್ದು ಕಂಡು ಬರುತಿತ್ತು. ಆದರೂ ಡಾ. ಕಿರಣರ ತಂಡ ಉತ್ಸಾಹದಿಂದ ತನ್ನ ಕೆಲಸವನ್ನು ನಿರ್ವಹಿಸಲು ಮುನ್ನಡೆದಿತ್ತು. ರಸ್ತೆಯಲ್ಲಿ ಓಡಾಡುತ್ತಿದ್ದ ಜನಗಳು ನಿಂತು, ಡಾ. ಕಿರಣರ ತಂಡವನ್ನು ಅನುಮಾನದಿಂದ ನೋಡ ತೊಡಗಿದರು. ಮನೆಗಳಲ್ಲಿದ್ದವರು ಕಿಟಕಿಗಳನ್ನು ತೆರದು ನೋಡುತ್ತಿದ್ದರು. ಅಂತೂ ವೈದ್ಯಕೀಯ ತಂಡ ತನ್ನ ಕಾರ್ಯಕ್ಷೇತ್ರದ ಸ್ಥಾನಕ್ಕೆ  ಬಂದು ನಿಂತ್ತಿತ್ತು. ಸುತ್ತುವರೆದಿದ್ದ ಜನರುಗಳನ್ನು ಡಾ. ಕಿರಣ್ ಸಂಭೋದಿಸಲಾರಂಭಿಸುತ್ತಿದ್ದಂತೆಯೇ, ಗುಂಪಿನಲ್ಲಿದ್ದ ಕೆಲವರು 'ಮಾಧ್ಯಮದವರನ್ನೇಕೆ ಕರೆತಂದಿದ್ದೀರ? ಕ್ಯಾಮೆರಾಗಳನ್ನೇಕೆ ತಂದಿದ್ದೀರ? ಅವರುಗಳೆಲ್ಲಾ ಕೂಡಲೇ ಹೊರಟು ಹೋಗಲಿ' ಎಂದು ಕಿರುಚಿದರು. ಡಾ. ಕಿರಣ್ ಸನ್ನೆ ಮಾಡುತ್ತಲೇ ಮಾಧ್ಯಮದ ಮಿತ್ರರೆಲ್ಲ ಹೊರನಡೆದರು. 

ತನ್ನ ಸಂಬೋಧನೆಯನ್ನು ಮುಂದುವರಿಸಿದ ಡಾ. ಕಿರಣ್, 'ದೂರದ ಊರಿನಲ್ಲಿ ಈಚೆಗೆ ಜರುಗಿದ ಸಮಾರಂಭವೊಂದಕ್ಕೆ, ತಮ್ಮ ಬಡಾವಣೆಯ ಬಹಳ ಜನಗಳು ಹೋಗಿ ಬಂದಿದ್ದಾರೆ ಎಂದು ತಿಳಿಯಿತು. ಆ ಸಮಾರಂಭದಲ್ಲಿ ವಿದೇಶಿ ಪ್ರತಿನಿಧಿಗಳೂ ಭಾಗವಹಿಸಿದ್ದರೆಂಬ ಮಾಹಿತಿಯಿದೆ. ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದವರಲ್ಲಿ, ಭಾರಿ ಸಂಖ್ಯೆಯಲ್ಲಿನ ವ್ಯಕ್ತಿಗಳಿಗೆ ಕೋವಿಡ್ ಸೋಂಕಿತ್ತು ಎಂದು ಪತ್ತೆಯಾಗಿದೆ. ತಮ್ಮಲ್ಲಿ ಹಲವರುಗಳು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ, ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದಿರಬಹುದು. ಹಾಗಾಗಿ ತಮ್ಮಗಳಿಗೂ ಕೂಡ ಸೋಂಕು ತಗುಲಿರಬಹುದು. ಪ್ರವಾಸದಿಂದ ಹಿಂತಿರುಗಿರುವ ತಮ್ಮ ಬಡಾವಣೆಯವರು ಮತ್ತು ಅವರುಗಳ ನಿಕಟ ಸಂಪರ್ಕದಲ್ಲಿರುವವರನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ಬಂದಿದ್ದೇವೆ. ನಿಮ್ಮ ಬಡಾವಣೆಯಲ್ಲಾಗಲೇ ಕೆಲವು ಕೋವಿಡ್ ರೋಗಿಗಳಿದ್ದಾರೆ. ಸೋಂಕಿತರ ಪತ್ತೆ, ನಿರ್ಬಂಧನೆ ಮತ್ತೆ ಚಿಕಿತ್ಸಾ ಕಾರ್ಯಗಳು ಕೂಡಲೇ ಆಗಬೇಕಾಗಿದೆ' ಎಂದು ತಮ್ಮ ಮಾತನ್ನು ಮುಗಿಸುವಷ್ಟರಲ್ಲೇ, ಆ ಗುಂಪಿನ ನಾಯಕನಂತೆ ಕಾಣುವ ವ್ಯಕ್ತಿಯೊಬ್ಬ, 'ಇಲ್ಲಿ ಬರಲು ನೀವು ನಮ್ಮ ಅನುಮತಿಯನ್ನು ಪಡೆದಿದ್ದೀರ? ನಮಗೆ ಮುಂಚಿತವಾಗಿ ತಿಳಿಸದೇ ಇಲ್ಲಿಗೇಕೆ ಬಂದಿರಿ? ಮಾಧ್ಯಮದವರನ್ನೇಕೆ ಕರೆತಂದಿದ್ದೀರಿ?' ಎಂದು ಕಿರುಚಿದನು. ಅಷ್ಟು ಹೊತ್ತಿಗಾಗಲೇ ಇನ್ನೂ ಹೆಚ್ಚು ಜನಗಳು ಜಮಾಯಿಸಿದ್ದರು. ಇದ್ದಕಿದ್ದಂತೆ ಅಲ್ಲಿನ ಗುಂಪಿನ ಜನರು ಹಿಂಸಾಕಾರ್ಯಕ್ಕೆ ಸಿದ್ಧರಾದರು. ವೈದ್ಯರುಗಳ ಕೈಗಳನ್ನೆಳದು, ಅವರುಗಳ ಅಂಗಿಗಳನ್ನು ಹರಿದರು. ಗುಂಪಿನ ಹಲವರು 'ಇಲ್ಲಿಂದ ಹೊರಡಿ, ಹೊರಡಿ' ಎಂದು ಕಿರುಚಿದರು. ಪೋಲಿ ಸಂಜ್ಞೆಗಳನ್ನು ಮಾಡುತ್ತಾ, ಅಶ್ಲೀಲ ಪದಗಳಿಂದ ಬಯ್ಯುತ್ತ ಮಹಿಳೆಯರತ್ತ ಬಂದ ದುಷ್ಕರ್ಮಿಗಳು ಅವರುಗಳ ಸೀರೆಗಳನ್ನೆಳೆದಾಡಿದರು. ಕಲ್ಲೆಸತದಿಂದ ತಪ್ಪಿಸಿಕೊಳ್ಳಲು ಓಡಲು ಹೊರಟವರಲ್ಲಿ, ಇಬ್ಬರು ಪುರುಷ ಡಾಕ್ಟರ್ಗಳು ಮತ್ತೊಬ್ಬ  ಮಹಿಳಾ ದಾದಿಯೊಬ್ಬರು ಕೆಳಗೆ ಬಿದ್ದರು. ಕೆಳಗೆ ಬಿದ್ದವರನ್ನು ಲಾಠಿಯಿಂದ ಥಳಿಸಲಾಯಿತು. ಕೆಲವು ಹಿರಿಯರು ಮಧ್ಯೆ ಪ್ರವೇಶಿಸಿ ಬಿದ್ದವರಿಗೆ ಹೆಚ್ಚಿನ ಹೊಡತಗಳು ಬೀಳದಂತೆ ನೋಡಿಕೊಂಡರು. ತಂಡದ ಎಲ್ಲಾ ಸದಸ್ಯರು ಆತ್ಮರಕ್ಷಣೆಗಾಗಿ ಓಡಿಹೋಗಬೇಕಾಗಿ ಬಂತು. 

'ಅಂದಿನ ಅನುಭವ ಭಯಾನಕವಾಗಿತ್ತು' ಎಂದು ರೋಹಿಣಿ ತನ್ನ ಡೈರಿಯಲ್ಲಿ ಬರೆದಳು. 'ತಮ್ಮವರಿಗೆ  ಸಹಾಯ ಮಾಡಲು ಬಂದ ವೈದ್ಯಕೀಯ ತಂಡದೊಂದಿಗೆ ಅಷ್ಟು ಕ್ರೂರವಾಗಿ ವರ್ತಿಸಿದರೇಕೆ? ಅವರ ಕ್ರೌರ್ಯಕ್ಕೆ ಕಾರಣ, ಸಿಟ್ಟೋ ಅಥವಾ ದ್ವೇಷವೋ? ಬೇರೆ ವಿಷಯಗಳನ್ನು ಕುರಿತಂತೆ ಸರಕಾರದ ವಿರುದ್ಧ ಅವರುಗಳಿಗಿರಬಹುದಾದ ದ್ವೇಷದಿಂದ, ಅವರುಗಳು ನಮ್ಮ ಕೊರೋನಾ ಸೇನಾನಿಗಳೊಂದಿಗೆ ಈ ರೀತಿಯ ಹಿಂಸಾಚಾರಕ್ಕಿಳಿದರೆ? ನಮ್ಮ ಕೊರೋನಾ ಕಾರ್ಯಕರ್ತರುಗಳ ಜೀವಕ್ಕೆ ಅಪಾಯವಿಲ್ಲವೆ? ಅವರುಗಳಿಗೇಕೆ ಪೊಲೀಸ್ ರಕ್ಷಣೆ ಸಿಗುತ್ತಿಲ್ಲ? ಇಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಮುಂದಾಗುತ್ತಿರುವ ನಮ್ಮ ಕೊರೋನಾ ಸೇನಾನಿಗಳ ಹಿಂದಿರುವ ಪ್ರೇರಕ ಶಕ್ತಿ ಯಾವುದು?' ಹೀಗೆ ಸಾಗಿತ್ತು ರೋಹಿಣಿಯ ಯೋಚನಾ ಲಹರಿ. 

ಘಟನೆ ನಡೆದ ಎರಡು ದಿನಗಳನಂತರ ಮತ್ತೆ ಸೇರಿದ ವೈದ್ಯಕೀಯ ತಂಡದಲ್ಲಿ, ಅಂದು ಗಾಯಗೊಂಡ ಡಾ. ಸಯ್ಯದ್, ಡಾ. ಗೋಯಲ್ ಮತ್ತು ಮಹಿಳಾ ದಾದಿ ಸುಪ್ರಿಯಾ ಹೆಚ್ಚು ಉತ್ಸಾಹಿಗಳಂತೆ ಕಂಡರು. 'ಆ ದಿನದ ಅನುಭವ ಆತಂಕಕಾರಿಯಾಗಿತ್ತು. ಆ ರೀತಿಯ ಹಿಂಸಾಚಾರ ನಡೆಯಬಹುದೆಂಬ ಅನುಮಾನ ನಮಗಿರಲಿಲ್ಲ. ಮುಂಚಿನ ಹಲವಾರು ಆರೋಗ್ಯ ಕಾರ್ಯಕ್ರಮಗಳಲ್ಲಿ ಅಲ್ಲಿನ ಜನಗಳು ನಮ್ಮೊಂದಿಗೆ ಸಹಕರಿಸಿದ್ದರು. ಆ ದಿನ ಅವರುಗಳಿಗೇನಾಗಿತ್ತೋ, ತಿಳಿಯದು. ಯಾವುದೇ ರೀತಿಯ ಹಿಂಸಾಚಾರಕ್ಕೆ ಹೆದರುವವರು ನಾವಲ್ಲ. ನಮ್ಮ ಕಾರ್ಯಗಳನ್ನು ಇಂದು ಪೂರ್ತಿ ಮಾಡೇ ಹಿಂತಿರುಗುತ್ತೇವೆ,' ಎಂದ ಡಾ. ಸಯ್ಯದ್ರವರ ಮಾತಿನಲ್ಲಿ ದೃಢ ವಿಶ್ವಾಸವಿತ್ತು. 

ಮುನ್ನೆಚ್ಚರಿಕೆಯ ಕ್ರಮವಾಗಿ ಆ ದಿನ ಡಾ. ಕಿರಣರವರ ತಂಡಕ್ಕೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿತ್ತು. ಆದರೆ ಪೊಲೀಸರು ತಮ್ಮ ವಾಹನಗಳೊಂದಿಗೆ ಸ್ವಲ್ಪ ದೂರ ಉಳಿದಿದ್ದರು. ಡಾ. ಸಯ್ಯದ್, ಡಾ. ಗೋಯಲ್ ಮತ್ತು ದಾದಿ ಸುಪ್ರಿಯಾರವರು ತಮ್ಮ ಕೈಯಲ್ಲಿ ಗುಲಾಬಿ ಹೂಗಳನ್ನು ಹಿಡಿದಿದ್ದರು. 'ಎಲ್ಲಿ ಗೂಂಡಾಗಿರಿ ನಡೆಯಬಹುದೋ, ಅಲ್ಲಿ "ಗಾಂಧೀಗಿರಿ" ಪರಿಸ್ಥಿತಿಯನ್ನು ನಿಭಾಯಿಸುವುದೆಂಬ ವಿಶ್ವಾಸ ನಮಗಿದೆ. ಯಾರು ನಿಮ್ಮನ್ನು ದ್ವೇಷಿಸುತ್ತಾರೋ, ಅವರುಗಳನ್ನು ಪ್ರೀತಿಸು ಎಂಬುದೇ "ಗಾಂಧೀಗಿರಿ."  ಅದಕ್ಕಾಗಿಯೇ ಈ ಗುಲಾಬಿ ಹೂಗಳು' ಎಂದ ದಾದಿ ಸುಪ್ರಿಯರ ಮುಖದಲ್ಲಿ ಸ್ನೇಹಭರಿತ ಮುಗುಳ್ನಗೆಯೊಂದಿತ್ತು. 

ವೈದ್ಯರ ತಂಡ ಮತ್ತೆ ಬಂದಿದ್ದನ್ನು ನೋಡಿ ಅಲ್ಲಿನ ಜನತೆಗೆ ಆಶ್ಚರ್ಯವಾಯಿತು. ಅಂದು  ಗಾಯಗೊಂಡಿದ್ದ ಡಾಕ್ಟರ್ಗಳು ಮತ್ತೆ ದಾದಿಯರು, ಇಂದು  ಕೈಗಳಲ್ಲಿ ಗುಲಾಬಿಯನ್ನು ಹಿಡಿದು ಬಂದದ್ದನ್ನು ನೋಡಿ, ಅಲ್ಲಿನ ಹಿರಿಯರು ಮತ್ತು ಮಹಿಳೆಯರು ಸಂತೋಷಗೊಂಡಂತೆ ಕಂಡರು. 'ಗಾಂಧೀಗಿರಿ ಕೆಲಸ ಮಾಡಲು ಶುರು ಮಾಡಿದೆ' ಎಂದು ಆಗ ರೋಹಿಣಿಗೆ ಖಾತರಿಯಾಗಿತ್ತು. ಡಾ. ಕಿರಣರ ತಂಡ ತನ್ನ ಕಾರ್ಯವನ್ನು ಆರಂಭಿಸಿತ್ತು. ಸೋಂಕಿತರೊಂದಿಗಿನ ಸಂಪರ್ಕದಲ್ಲಿರುವವರೊಂದಿಗೆ ಮಾತನಾಡಲಾಯಿತು. ನೋಡು ನೋಡುತ್ತಿರುವಷ್ಟರಲ್ಲೇ, ಸೋಂಕಿತರ ಪರೀಕ್ಷೆ, ಪತ್ತೆ, ನಿರ್ಬಂಧನೆ ಮತ್ತು ಚಿಕಿತ್ಸಾ ಕಾರ್ಯಗಳು ಚುರುಕುಗೊಂಡವು. ಆಗಾಗ ಸಾಬೂನಿನಿಂದ ಕೈ ತೊಳೆಯುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಮುಂತಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಅಲ್ಲಿನ ಜನಗಳಿಗೆ ಆಶಾ ಕಾರ್ಯಕರ್ತೆಯರು ವಿವರಿಸಿದರು. ನೆರೆದವರಿಗೆಲ್ಲಾ ಮಾಸ್ಕ್ಗಳನ್ನೂ ವಿತರಿಸಲಾಯಿತು. 

ತನ್ನ ಕಾರ್ಯವನ್ನು ಮುಗಿಸಿ ಸಂತೃಪ್ತವಾದ ವೈದ್ಯಕೀಯ ತಂಡ ಹಿಂತಿರುಗಲಾರಂಭಿಸಿತು. ಅಲ್ಲಿನ ಜನತೆಯ ನಡುವಿನ ಹಿರಿಯರೊಬ್ಬರು ಡಾ. ಕಿರಣರ ಕ್ಷಮೆಯನ್ನು ಕೋರುತ್ತಾ, 'ನಕಲಿಯಾಗಿರಬಹುದಾದ ಕೆಲವು ವಿಡಿಯೋಗಳಿಂದ ನಮ್ಮ ಜನರ ಮನಸ್ಸು ಕೆಟ್ಟಿದೆ. ಕೆಲವು ದುಷ್ಟರು ವೈದ್ಯಕೀಯ ತಂಡದ ಸೋಗಿನಲ್ಲಿ ಬಂದು, ಕೋವಿಡ್ ರೋಗವನ್ನು ಹರಡುವ ಚುಚ್ಚುಮದ್ದನ್ನು ನಮ್ಮೆಲ್ಲರಿಗೂ ಚುಚ್ಚುವ ಸಂಚು ನಡೆಸಿದ್ದಾರೆಂಬ ವದಂತಿಗಳು ಇಲ್ಲಿ ದಟ್ಟವಾಗಿ ಹಬ್ಬಿದೆ. ತಾವುಗಳು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೀರಿ. ನಮ್ಮ ಜನಗಳಿಂದ ತಮಗಾದ ತೊಂದರೆಗೆ ನಾನು ಕ್ಷಮೆ ಬೇಡುತ್ತೇನೆ. ಅವರುಗಳನ್ನು ಕ್ಷಮಿಸಿ. ತಮ್ಮೊಂದಿಗೆ ಮುಂದಿನ ದಿನಗಳಲ್ಲಿ ನಾವುಗಳು ಸಹಕರಿಸುತ್ತೇವೆ' ಎಂದರು. 

ಸಂತುಷ್ಟಗೊಂಡಂತೆ ಕಂಡ ರೋಹಿಣಿ ತನ್ನ ಡೈರಿಯಲ್ಲಿ ಹೀಗೆ ಬರೆದಳು. 'ಅವಿರತ ಯತ್ನ, ತಾಳ್ಮೆ ಮತ್ತು ಜನತೆಯ ಮೇಲಿನ ವಿಶ್ವಾಸಗಳಿಂದ ಯಾವ ಕಾರ್ಯವನ್ನಾಗಲೀ, ಸಾಧಿಸಬಹುದು.'

***

ಕೊರೋನಾ ಸೇನಾನಿಗಳ ತಂಡಗಳ ಮೇಲಿನ ದಾಳಿ, ಹಿಂಸಾಚಾರದ ವರದಿಗಳು ಬೇರೆ ಬೇರೆ ನಗರಗಳಿಂದಲೂ ಬರುತ್ತಿದ್ದವು. ದೂರದ ಊರೊಂದರಲ್ಲಿ ವೈದ್ಯರ ತಂಡವೊಂದು ಸೋಂಕಿತರೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕದಲ್ಲಿದ್ದ ಹಲವರನ್ನು ಪತ್ತೆ ಹಚ್ಚಿ, ಅದೇ ಊರಿನ ಹೊರ ವಲಯದ ಶಾಲೆಯೊಂದರಲ್ಲಿ ನಿರ್ಬಂಧನೆ(quarantine)ಗೊಳಪಡಿಸಿತ್ತು. ಆದರೆ ನಿರ್ಬಂಧನೆಗೊಳಪಟ್ಟ ಆ ಜನಗಳು ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದರು. ಬೆಳಗಿನ ತಿಂಡಿಗಾಗಿ ಉಪ್ಪಿಟನ್ನು ಕೊಟ್ಟಾಗ, ತಿಂಡಿಯ ತಟ್ಟೆಗಳನ್ನು ರೊಯ್ಯನೆ ಎಸೆದ ಅವರುಗಳು, ಮಸಾಲೆ ದೋಸೆ ಬೇಕೆಂದು ಹಠ ಹಿಡಿದಿದ್ದರು. ಅವರಲ್ಲಿ ಕೆಲವರು ಸಿಗರೇಟುಗಳು ಮತ್ತು ಮದ್ಯದ ಬಾಟಲಿಗಳು ಬೇಕೆಂದು ದಾಂಧಲೆ ನಡೆಸಿದ್ದರು. ಕೆಲ ಯುವಕರು ಶಾಲಾ ಕೊಠಡಿಗಳಲ್ಲೇ ಮೂತ್ರ ಮತ್ತು ಮಲವಿಸರ್ಜನೆ ಮಾಡಹತ್ತಿದ್ದರು. ಅಂತಹ ಗಲೀಜುಗಳನ್ನು ಸ್ವಚ್ಛಗೊಳಿಸಲು ಕೆಲಸಗಾರರು ಹೆಣಗಾಡಬೇಕಾಯಿತು. ಮತ್ತೆ ಕೆಲವು ಯುವಕರು ಮಹಿಳಾ ಪೋಲೀಸರ ಮುಂದೆ ನಗ್ನರಾಗಿ ಓಡಾಡ ಹತ್ತಿದ್ದರು. ಅವರುಗಳನ್ನು ನಿಯಂತ್ರಿಸುವ ಹೊತ್ತಿಗೆ ಪೊಲೀಸರು ಹೈರಾಣಾಗಿ ಹೋಗಿದ್ದರು. ಹೀಗೆ ವರ್ತಿಸಿದ ಕೆಲವರ ಮೇಲೆ ದೂರು ದಾಖಲಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. 

'ತಮ್ಮ ಜೀವಗಳನ್ನೇ ಒತ್ತೆ ಇಟ್ಟು ಕಾರ್ಯ ನಿರ್ವಹಿಸುತ್ತಿರುವ ಕೊರೋನಾ ಸೇನಾನಿಗಳ ಸೇವೆ, ನಮ್ಮ ಪರಾಕ್ರಮಿ ಸೈನಿಕರ ಸೇವೆಯಷ್ಟೇ ಕಷ್ಟಕರವಾದದ್ದು. ಕೊರೋನಾ ಸೇನಾನಿಗಳನ್ನು ಜನತೆಯನ್ನು ಕಾಯುವ ದೇವರೆಂದೇ ಕರೆಯಬಹುದು. ಆದರೆ ಅವರುಗಳ ಕಾರ್ಯಕ್ಕೆ ವಿಘ್ನವೊಡ್ಡಿ, ಅವರುಗಳನ್ನು ಅವಮಾನಿಸುತ್ತಿರುವದು ದುರದೃಷ್ಟಕರ. ಅವರುಗಳ ನಿಸ್ವಾರ್ಥ ಸೇವೆಗೆ ನನ್ನದೊಂದು ದೊಡ್ಡ ಸಲಾಮ್.'  ಹೀಗೆ ಹೇಳುತ್ತಾ ರೋಹಿಣಿ ತನ್ನ ಸ್ನೇಹಿತ ಹಾಗು ಕೊರೋನಾ ಸೇನಾನಿ ಡಾ.ಕಿರಣ್ಗೆ 'ಸಲಾಂ' ಹೊಡೆದ್ದಿದ್ದಳು. 

ಈ ಮಧ್ಯೆ ಸರಕಾರಗಳು ಕೊರೋನಾ ಸೇನಾನಿಗಳ ಸಂಕಷ್ಟಗಳಿಗೆ ಮರುಗಿ, ಅವರುಗಳ ಬೆಂಬಲಕ್ಕಾಗಿ ಹಲವು ಕ್ರಮಗಳನ್ನು ಕೈಕೊಂಡಿದ್ದವು. ಅವರುಗಳಿಗೆ ಕರ್ತವ್ಯ ನಿರ್ವಹಣಾ ಸಮಯದಲ್ಲಿ ನಿರಂತರ ಪೊಲೀಸ್ ರಕ್ಷಣೆಯ ಏರ್ಪಾಡನ್ನು ಮಾಡಲಾಯಿತು. ಕೊರೋನಾ ಸೇನಾನಿಗಳಿಗೆ ತೊಂದರೆಯನ್ನುಂಟು ಮಾಡಿದ ಹಲವಾರು  ದುಷ್ಕರ್ಮಿಗಳ ವಿಚಾರಣೆ ನಡೆಸಿ,    ಶಿಕ್ಷೆಗೊಳಪಡಿಸಲಾಗಿತ್ತು. ಎಲ್ಲಾ ಕೊರೋನಾ ಸೇನಾನಿಗಳಿಗೆ ೫೦ ಲಕ್ಷ ರೂಪಾಯಿಗಳ ಜೀವವಿಮೆಯ ಭದ್ರತೆಯನ್ನು ನೀಡಲಾಯಿತು. ಆದರೂ ಅವರುಗಳ ಕಾರ್ಯ ನಿರ್ವಹಣೆಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಾ ಸಾಗಿತ್ತಿದ್ದದು ಮಾತ್ರ ಸುಳ್ಳಾಗಿರಲಿಲ್ಲ.

***

ಯುವ ವೈದ್ಯರಾದ ಡಾ.ಕಿರಣರವರು ಅವರ ನೆರೆಹೊರೆಯವರ 'ಯುವ ಕಣ್ಮಣಿ'ಯಾಗಿದ್ದರು. ಅನುರೂಪ ವರನಾದ ಅವರ ಮೇಲೆ ಎಲ್ಲರ ಕಣ್ಣುಗಳು ಸದಾ ನೆಟ್ಟಿರುತ್ತಿದ್ದವು. ಕೆಲವು ತಿಂಗಳುಗಳ ಹಿಂದೆ ನಡೆದ ಘಟನೆಯೊಂದರ ನೆನಪನ್ನು ಡಾ.ಕಿರಣರು ಇನ್ನೂ ಮರೆತಿರಲಿಲ್ಲ. ತನ್ನ ವೃದ್ಧ ತಾಯಿಯೊಂದಿಗೆ ಡಾ. ಕಿರಣ್ ವಾಸವಿದ್ದ ಮನೆಯ ಮಾಲೀಕರ ಹೆಸರು ರವಿ ಶ್ರೀವಾಸ್ತವ ಎಂದು. ಒಂದು ದಿನ ರವಿಯವರು ಡಾ. ಕಿರಣರನ್ನು ತಮ್ಮ ಮನೆಗೆ ರಾತ್ರಿ ಭೋಜನಕ್ಕಾಗಿ ಆಮಂತ್ರಿಸಿದ್ದರು. 'ನಿಮ್ಮ ತಾಯಿಯವರನ್ನೂ ಜೊತೆಗೆ ಕರೆ ತನ್ನಿ' ಎಂಬುದು ರವಿಯವರ ವಿಶೇಷ ಬಿನ್ನಹವಾಗಿತ್ತು. 

ತಮ್ಮ ತಾಯಿಯೊಂದಿಗೆ ಡಾ. ಕಿರಣ್ ಆಗಮಿಸುತ್ತಲೇ, 'ಸ್ವಾಗತ, ಸುಸ್ವಾಗತ ಡಾ. ಕಿರಣರವರೇ; ಮಾತಾಜಿಯವರಿಗೆ ನನ್ನ ವಿಶೇಷ ನಮಸ್ಕಾರಗಳು' ಎನ್ನುತ್ತಾ ಮಾತಾಜಿಯವರ ಚರಣಗಳನ್ನು ಸ್ಪರ್ಶಿಸಿದ್ದರು ರವಿ. ತಾಯಿ ಹಾಗೂ ಮಗನ ಜೋಡಿಯನ್ನು ತಮ್ಮ ಐಷಾರಾಮಿ ಬಂಗಲೆಯ ಕೇಂದ್ರ ಕೊಠಡಿಗೆ, ವಿಶೇಷವಾಗಿ ಸ್ವಾಗತಿಸಿ ಕರೆದೊಯ್ದವರು ರವಿಯವರ ಪತ್ನಿ ಮಂಜುಳಾರವರು. ರವಿ ಸನ್ನೆ ಮಾಡುತ್ತಲೇ, ಸ್ವಾಗತ ಪಾನೀಯಗಳನ್ನು ಹೊತ್ತು ತಂದವಳು ಅವರ ಮಗಳು ಪಿಂಕಿ. ೨೧ರ ಪ್ರಾಯದ ಪಿಂಕಿ ತನ್ನ ಪದವಿ ಕೋರ್ಸನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಯುವ ವೈದ್ಯ ಡಾ.ಕಿರಣರನ್ನು ಸ್ವಾಗತಿಸಲು, 'ಜಾಣರ ಜಾಣೆ' ಪಿಂಕಿ ತುದಿಗಾಲಲ್ಲಿ ನಿಂತ್ತಿದ್ದಳು. 'ಹಲೋ ಡಾ.ಕಿರಣ್, ನೀವು ನಮ್ಮ ಮನೆಗೆ ಬಂದದ್ದು ಬಹಳ ಬಹಳ ಸಂತೋಷದ ವಿಷಯ. ತಮ್ಮ ಮಾರ್ಗದರ್ಶನದೊಂದಿಗೆ ನಾನು ಬರೆದ, ನನ್ನ ಅಂತಿಮ ವರ್ಷದ ಸಾಮಾಜಿಕ ಅಧ್ಯಯನದ ಪ್ರಬಂಧ (dissertation)ಕ್ಕೆ ಪ್ರಥಮ ಸ್ಥಾನ ದೊರೆತಿದೆ! ಮನಸ್ಸಿನಲ್ಲೇ ತಮಗೆ ಅದೆಷ್ಟು ಬಾರಿ "ಥ್ಯಾಂಕ್ಯೂ" ಎಂದು ಹೇಳಿದ್ದೇನೋ ನನಗೇ ತಿಳಿಯದು' ಎಂದು ಕಿರಣರ ಪಕ್ಕದಲ್ಲೇ ಕುಳಿತಳು ಪಿಂಕಿ. 'ಪಿಂಕಿ ನೀನು ಯೋಚಿಸಬೇಕಿಲ್ಲ, ನಿನ್ನ ಡಿಗ್ರಿ ಮುಗಿದ ದಿನದಿಂದಲೇ, ನಿನ್ನ ಕೆಲಸವನ್ನು ಕಿರಣರೊಂದಿಗೇ ಮುಂದುವರೆಸಲು ಅವಕಾಶ ಕಲ್ಪಿಸುವಂತೆ ಕಿರಣರನ್ನು ನಾನಾಗಲೇ ಕೋರಿಕೊಂಡಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನೀನು ಕಿರಣರೊಂದಿಗೆ ನಿನ್ನ ಅಧ್ಯಯನವನ್ನು ನಡೆಸುವೆ' ಎಂದು ಹೇಳುವಾಗ ತಂದೆ ರವಿಯವರು ಉಬ್ಬಿಹೋದಂತೆ ಕಂಡಿದ್ದರು. ರವಿಯವರ ಪತ್ನಿ ಮಂಜುಳಾರವರು ಕೂಡ ಜಾಣತನದ ಮಾತನಾಡುವುದರಲ್ಲಿ ಕಮ್ಮಿಯೇನಿರಲಿಲ್ಲ. 'ಮಾತಾಜಿ, ಡಾ. ರವಿಯಂತಹ ಸುಪುತ್ರನನ್ನು ಹಡೆದ ತಾವು ಅದೃಷ್ಟಶಾಲಿಗಳು. ಕೋಮಲೆಯರಾದ ಹೆಣ್ಣುಮಕ್ಕಳನ್ನು ಪಡೆದ ಪೋಷಕರು, ತಮ್ಮ ಹೆಣ್ಣುಮಕ್ಕಳನ್ನು ನಿಮ್ಮ ಮಗನಿಗೆ ನೀಡಲು ಹಾತೊರೆಯುತ್ತಿರಬಹುದು. ಅಂತಹವರುಗಳ ಪೈಕಿ ನಾವೂ ಇದ್ದೇವೆಂಬುದನ್ನು ಮರೆಯಬೇಡಿ' ಎಂದು ಹೇಳಿದ ಮಂಜುಳಾರವರು, ಡಾ.ಕಿರಣರತ್ತವೂ ಕಣ್ಣು ಹಾಯಿಸುವುದನ್ನು ಮರೆತಿರಲಿಲ್ಲ. ಹಲವು ವಿಭಿನ್ನ ಸಿಹಿತಿಂಡಿಗಳೊಂದಿಗಿನ ಅಂದಿನ ಭೋಜನ ರಸಭರಿತವಾಗಿದ್ದು, ರವಿಯವರು ತಮ್ಮಉಪಚಾರದೊಂದಿಗೆ  ಸ್ವರ್ಗವನ್ನೇ ಧರೆಗಿಳಿಸುವ ಪ್ರಯತ್ನ ನಡೆಸಿದ್ದರೆಂಬುದು ಸುಳ್ಳಾಗಿರಲಿಲ್ಲ.  

ಕೋವಿಡ್ ರೋಗದ ಹಾವಳಿ ಶುರುವಾದಾಗಿನಿಂದ, ತನ್ನ ನೆರೆಹೊರೆಯವರು ತನ್ನನ್ನು ನೋಡುವ ರೀತಿಯಲ್ಲಿ ಭಾರಿ ಬದಲಾವಣೆಯನ್ನು ಕಂಡಿದ್ದರು ಕಿರಣ್.  ಅವರೆಲ್ಲರಿಗೂ ಡಾ. ಕಿರಣ್, ಕೋವಿಡ್ ರೋಗಿಗಳ ಚಿಕಿತ್ಸೆಯ ಕಾರ್ಯಕ್ಕಾಗಿ ನೇಮಕಗೊಂಡಿರುವುದು ತಿಳಿದಿತ್ತು. 'ಕೋವಿಡ್ನ ಸೋಂಕು ವೈದ್ಯರುಗಳಿಗೆ ತಗುಲುವ ಸಾಧ್ಯತೆ ತುಂಬಾ ಹೆಚ್ಚು. ವೈದ್ಯರುಗಳಿಂದ ನಮ್ಮಗಳಿಗೂ ಸೋಂಕು ಹರಡುವ ಸಾಧ್ಯತೆಯು ಮತ್ತೂ ಹೆಚ್ಚು' ಎಂಬ ಪಿಸುಮಾತುಗಳು ಕಿರಣರವರ ಕಿವಿಗೂ ಮತ್ತೆ ಮತ್ತೆ ಬೀಳುತ್ತಿತ್ತು. ನೆರೆಹೊರೆಯ ಸ್ನೇಹಿತರು ಕಿರಣರ ಜೊತೆ ಮಾತನಾಡುವುದನ್ನು ಬಿಟ್ಟು ಎಷ್ಟೋ ದಿನಗಳಾಗಿ ಹೋಗಿತ್ತು. 

ಒಂದು ದಿನ ಡಾ. ಕಿರಣ್ ತನ್ನ ಮನೆಯಿಂದ ಆಸ್ಪತ್ರೆ ಕಡೆಗೆ ಹೊರಟಿದ್ದಾಗ, ಮಾಸ್ಕ್ ಧರಿಸಿದ್ದ ರವಿ, ಕಿರಣರನ್ನು ಕರೆದು 'ತಾವು ಇನ್ನೆರಡು ವಾರಗಳಲ್ಲಿ ನನ್ನ ಮನೆಯನ್ನು ಖಾಲಿ ಮಾಡಿ. ನಮ್ಮ ಮನೆಯವರ  ಉಪಯೋಗಕ್ಕೇ  ಆ ಮನೆ ಬೇಕು. ತಾವು ಕೂಡಲೇ ಮನೆಯನ್ನು ಖಾಲಿ ಮಾಡಿದರೆ, ತಾವು ನೀಡಿರುವ ಮುಂಗಡ ಬಾಡಿಗೆಯನ್ನು ಅದೇ ಕ್ಷಣ ಹಿಂತಿರುಗಿಸುವೆ. ನನ್ನ ಮನೆಯನ್ನು ಖಾಲಿ ಮಾಡುವ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿ' ಎಂದು ಗಡುಸಾದ ಧ್ವನಿಯಲ್ಲೇ ಹೇಳಿದ್ದರು. ಮನೆ ಮಾಲೀಕರಾದ ರವಿಯ ಈ ಗಡುಸಿನ ಮಾತುಗಳನ್ನು, ಬೇರೆ ಬಾಡಿಗೆದಾರರು ತಮ್ಮ ಮನೆಯ ಕಿಟಕಿಗಳ ಹಿಂದೇ ನಿಂತು ಕೇಳಿಸಿಕೊಳ್ಳುತ್ತಿದ್ದದ್ದು ಕಿರಣರ ಗಮನಕ್ಕೆ ಬಾರದಿರಲಿಲ್ಲ. ಅವರುಗಳ್ಯಾರೂ  ಮಧ್ಯ ಪ್ರವೇಶಿಸದೆ ತಟಸ್ಥರಾಗಿ ಉಳಿದದ್ದು, ಕಿರಣರ ನೀರಿಕ್ಷೆಗೆ ಹೊರತಾಗೇನೂ ಇರಲಿಲ್ಲ. 

ತಮ್ಮ ಆಸ್ಪತ್ರೆಯನ್ನು ತಲುಪಿದ ತಕ್ಷಣ ಡಾ. ಕಿರಣ್, ತಮ್ಮ ಮನೆಯ ಮಾಲೀಕರು ತಮಗೆ ನೀಡಿದ 'ಕಟ್ಟಪ್ಪಣೆ'ಯ ವಿಷಯವನ್ನು ತನ್ನ ಸಹೋದ್ಯೋಗಿಗಳಿಗೆಲ್ಲಾ ಹೇಳಿದ್ದರು. ಕಿರಣರ ಸಹೋದ್ಯೋಗಿಗಳು ಅದೇ ರೀತಿಯ ಅನುಭವಗಳನ್ನು ಅಂದು ಹೇಳಿಕೊಂಡಿದ್ದರು. ಸ್ಟಾಫ್ ನರ್ಸೊಬ್ಬರು ಮಾತನಾಡುತ್ತಾ, 'ಕೋವಿಡ್ ಕರ್ತ್ಯವದ ಮೇಲೆ  ಬೇರೆ ಊರಿಗೆ ತೆರಳಿದ್ದ ಮಹಿಳಾ ನರ್ಸೊಬ್ಬರ ಮನೆಯ ಬೀಗವನ್ನು, ಅವರ ಮನೆಯ ಮಾಲೀಕ ಮುರಿದು ಒಳ ಪ್ರವೇಶಿಸಿ, ಮನೆಯೊಳಗಿದ್ದ ಅವರ ಸಾಮಾನುಗಳನ್ನೆಲ್ಲ ಹೊರಗಿಟ್ಟು, ಬೇರೊಂದು ಬೀಗವನ್ನು ಆ ಮನೆಗೆ ಜಡಿದಿದ್ದ ಪ್ರಕರಣವನ್ನು ಮೊನ್ನೆ ನಾನೊಂದು ಪತ್ರಿಕೆಯಲ್ಲಿ ಓದಿದ್ದೆ. ಆ ಬಡಪಾಯಿ ನರ್ಸ್ರವರು ಪೊಲೀಸ್ ದೂರನ್ನು ದಾಖಲಿಸಿದ ಮೇಲೂ, ಅವರಿಗ್ಯಾವ ಪರಿಹಾರವೂ ಇನ್ನೂ ದೊರೆತಿಲ್ಲವೆಂದು ಕೇಳ್ಪಟ್ಟೆ' ಎಂದರು. 

'ಇದ್ದಕಿದ್ದಂತೆ ನಾವುಗಳೆಲ್ಲ ಅಸ್ಪೃಶ್ಯರಾಗಿ ಹೋಗಿದ್ದೇವೆ' ಎಂದು ಉದ್ಗರಿಸಿದವರು ಡಾ. ಕಿರಣ್.  

ಈ ಮಧ್ಯೆ ಆತಂಕಕಾರಿ ಸುದ್ದಿಯೊಂದು ಡಾ. ಕಿರಣರನ್ನು ತಲುಪಿತ್ತು. ಅವರ ವಾರ್ಡಿನಲ್ಲಿದ್ದ ಕೋವಿಡ್ ರೋಗಿಯೊಬ್ಬ ತಪ್ಪಿಸಿಕೊಂಡು ಓಡಿ ಹೋಗಿದ್ದ. ವೈದ್ಯರುಗಳ ತಂಡವೊಂದರ ಮೇಲೆ ಮಾರಕ ದಾಳಿಯನ್ನು ಮಾಡಿದ್ದ ಆರೋಪ, ಓಡಿ ಹೋಗಿದ್ದ ಆ ರೋಗಿಯ ಮೇಲಿದ್ದ ವಿಷಯ ಕಿರಣರ ಆತಂಕವನ್ನು ಇನ್ನೂ ಹೆಚ್ಚಿಸಿತ್ತು. ಪ್ರಕರಣವನ್ನು ಕುರಿತಾದ ದೂರನ್ನು ಪೊಲೀಸರಿಗೆ ತಲುಪಿಸುವ ಜವಾಬ್ದಾರಿಯೂ ಕಿರಣರದ್ದೇ ಆಗಿತ್ತು. ತಮ್ಮ ಕರ್ತ್ಯವಗಳ ಜೊತೆ ಪೊಲೀಸರಂತೆ ರೋಗಿಗಳನ್ನು, ಅಪರಾಧಿಗಳನ್ನೂ ಕಾಯುವ ಹೊಣೆಯೂ ಈಗ ವೈದ್ಯರುಗಳದ್ದಾಗಿ ಹೋಗಿತ್ತು. 

***

ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಿರುವ ಪೊಲೀಸರ ಮೇಲಿನ ಒತ್ತಡವೂ ದಿನದಿಂದ ದಿನಕ್ಕೆ ಹದಗೆಡುತ್ತಾ ಸಾಗಿತ್ತು. ಲಾಕ್ಡೌನ್ ಉಲ್ಲಂಘಿಸಿದವರ ಬೆನ್ನಟ್ಟುವುದು, ವೈದ್ಯಕೀಯ ತಂಡಗಳಿಗೆ ರಕ್ಷಣೆಯನ್ನು ಒದಗಿಸುವುದು, ನಿರ್ಬಂಧನೆಗಳೊಪಟ್ಟವರನ್ನು ನಿಯಂತ್ರಿಸುವುದು, ಹೆದ್ದಾರಿ ಹಾಗೂ ರೈಲು ಹಳಿಗಳನ್ನು ಹಿಡಿದು ಕಾಲ್ನಡುಗೆಯಲ್ಲಿ ಸಾಗುವ ವಲಸಿಗರನ್ನು ತಡೆಯುವುದು, ಪೂಜಾ ಮಂದಿರಗಳ ಮೇಲೊಂದು ಕಣ್ಣಿಟ್ಟಿರುವುದು, ಮೇಲಧಿಕಾರಿಗಳ ಆಜ್ಞೆಯನ್ನು ಪಾಲಿಸುವುದು ಮುಂತಾದ ಎಲ್ಲಾ ಕಾರ್ಯಗಳ ಒತ್ತಡ ಪೊಲೀಸರನ್ನು ಸತತವಾಗಿ ಕಾಡಿತ್ತು. ಬಿಡುವಿಲ್ಲದ ಕೆಲಸದ ಭಾರ ಅವರುಗಳ ಮನೋಬಲವನ್ನು ದುರ್ಬಲಗೊಳಿಸಿತ್ತು. 

೨೭ರ ಯುವತಿ ತಾಮರೈ ಸೆಲ್ವಿ ದಕ್ಷ ಪೊಲೀಸ್ ಅಧಿಕಾರಿಣಿಯೆಂದು ಹೆಸರು ಗಳಿಸಿದ್ದವರು. ಅವರು ಉತ್ತಮ ವಾಗ್ಮಿಯು ಹಾಗೂ ಗಾಯಕಿಯೂ ಕೂಡ ಎಂಬುದು ಎಲ್ಲರಿಗೂ ತಿಳಿದಿದ್ದ ವಿಷಯವಾಗಿತ್ತು.  ಇಲಾಖೆಯ ಹಲವಾರು ಕಠಿಣವಾದ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರವನ್ನು ಕಂಡುಹಿಡಿದ ಖ್ಯಾತಿ ಅವರದ್ದಾಗಿತ್ತು. ಅವರ ನಗರದ ಪ್ರದೇಶವೊಂದು ಕುಖ್ಯಾತ ರೌಡಿಗಳಿಂದ ತುಂಬಿದ್ದು, ಅಲ್ಲಿನ ಜನಗಳೆಲ್ಲರೂ ಲಾಕ್ಡೌನ್ ನಿರ್ಬಂಧಗಳನ್ನು ಲೆಕ್ಕಿಸುತ್ತಿರಲಿಲ್ಲ. ಆ ಪ್ರದೇಶವನ್ನು ನಿಯಂತ್ರಿಸುವಲ್ಲಿ ದಕ್ಷರೆನಿಸಿಕೊಂಡ ಹಲವು ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದರು. ತಾಮರೈ ಸೆಲ್ವಿಯವರ ವಿನೂತನ ವಿಧಾನಗಳ ಬಗ್ಗೆ ಕೇಳಿದ್ದ ನಗರದ ಪೊಲೀಸ್ ಕಮೀಷನರವರು, ಅವರನ್ನು ಆ ಪ್ರದೇಶದ ಪೊಲೀಸ್ ಠಾಣೆಯ ಮುಖ್ಯಾಧಿಕಾರಿಯನ್ನಾಗಿ ನೇಮಿಸಿದ್ದರು. ಸೆಲ್ವಿ ಹೊಸ ಅಧಿಕಾರವನ್ನು ವಹಿಸಿಕೊಳ್ಳುವ ಮುನ್ನ ಅವರೊಂದಿಗೆ ಮಾತನಾಡಿದ ಕಮಿಷನರವರು, 'ಸೆಲ್ವಿಯವರೇ, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಾವುಗಳು ಈವರೆಗೆ ಕೈಗೊಂಡ ಕಠಿಣ ಕ್ರಮಗಳು ವಿಫಲವಾಗಿವೆ. ನಾನು ನಿಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತಿದ್ದೇನೆ. ತಾವು ಯಾವುದೇ ಹೊಸ ರೀತಿಯ ವಿಧಾನಗಳನ್ನು ಪ್ರಯೋಗಿಸಬಹುದು. ನಿಮ್ಮೊಡನೆ ನಾವುಗಳು ಎಂದಿಗೂ ಇರುತ್ತೇವೆ. ತಾವು ಯಶಸ್ವಿಯಾಗುವಿರೆಂಬ ವಿಶ್ವಾಸ ನಮಗಿದೆ' ಎಂದರು. 

ಮಾರನೆಯ ದಿನವೇ ಸೆಲ್ವಿಯವರು ಆ ಪೊಲೀಸ್ ಠಾಣೆಯ ಅಧಿಕಾರವನ್ನು ವಹಿಸಿಕೊಂಡಿದ್ದರು. ತಮ್ಮೆಲ್ಲ ಸಹೋದ್ಯೋಗಿಗಳ ಸಭೆಯೊಂದನ್ನು ಕರೆದು ಮಾತನಾಡಿದ ಸೆಲ್ವಿಯವರು, 'ನಾನು ನಿಮ್ಮವರಲ್ಲೊಬ್ಬಳು. ಪರಿಸ್ಥಿತಿಯ ಅರಿವು ನನಗಿಂತ ತಮ್ಮಗಳಿಗೆ ಚೆನ್ನಾಗಿದೆ. ನಯವಾದ ಕ್ರಮಗಳಿಂದ  ಜನರುಗಳನ್ನು ಗೆಲ್ಲುವ ಪ್ರಯತ್ನ ಮಾಡೋಣ. ಬಲ ಪ್ರಯೋಗದ ಪ್ರಯತ್ನ ಕಡೆಯದಾಗಿರಲಿ' ಎಂದರು. ಮರು ದಿನ ಬೆಳಗ್ಗೆ ಸೆಲ್ವಿಯವರು ತಮ್ಮ ತಂಡದೊಂದಿಗೆ, ತಮ್ಮ ಪ್ರದೇಶದ ಪ್ರದಕ್ಷಿಣೆ ನಡೆಸುತ್ತಾ, ಬೆಳಗಿನ ವಾಯುವಿಹಾರ ಮಾಡುತ್ತಿದ್ದವರನ್ನು ಭೇಟಿ ಮಾಡಿದರು. ಮಾಸ್ಕ್ ಧರಿಸಿದೆ ಇದ್ದವರಿಗೆಲ್ಲಾ, ಸೆಲ್ವಿ ಗುಲಾಬಿಗಳನ್ನಿತ್ತರು, ಮತ್ತು ಅವರುಗಳಿಗೆ ಮಾಸ್ಕ್ಗಳನ್ನು ವಿತರಿಸಿದರು.  ಪೋಷಕರೊಂದಿಗೆ ನಡೆದಾಡುತ್ತಿದ್ದ ಮಕ್ಕಳುಗಳಿಗೆಲ್ಲಾ ಚಾಕಲೇಟ್ಗಳನ್ನೂ ಹಂಚಲಾಯಿತು. ಕೆಲವೇ ಘಂಟೆಗಳಲ್ಲಿ ಸೆಲ್ವಿಯವರ ಈ ವಿನೂತನ ಕ್ರಮದ ಸುದ್ದಿ ಅವರ ಠಾಣೆಯ ಪ್ರದೇಶದ ಸುತ್ತೆಲ್ಲ ಹರಡಿಹೋಗಿತ್ತು. ಮಾರನೆಯ ದಿನ ಬೆಳಗಿನ ನಡೆದಾಟ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಸೆಲ್ವಿಯವರು ಕೂಡ ಮೈಕ್ ಉಪಕರಣಗಳನ್ನುಅಳವಡಿಸಿದ್ದ ಜೀಪೊಂದರಲ್ಲಿ ತಮ್ಮ ತಂಡದವರೊಂದಿಗೆ ಹಾಜರಾಗಿದ್ದರು. ನಡೆದಾಡುತ್ತಿದ್ದ ಜನಗಳನ್ನು ಅಲ್ಲಲ್ಲಿಯೇ ಅಂತರಗಳನ್ನು ಕಾಯ್ದುಕೊಂಡು ನಿಲ್ಲುವಂತೆ ಸೂಚಿಸಿದ ಸೆಲ್ವಿ, ಜನರುಗಳನ್ನುದ್ದೇಶಿಸಿ ಮಾತನಾಡಹತ್ತಿದರು. 'ತಾವುಗಳೆಲ್ಲ ಬೆಳಗಿನ ವಾಯುವಿಹಾರದ ನಡಿಗೆಯನ್ನು ಉತ್ಸಾಹದಿಂದ ಮಾಡುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಆದರೆ ಕೋವಿಡ್ ದಾಳಿಗೆ ನಾವೆಲ್ಲರೂ ತುತ್ತಾಗಬಹುದೆಂಬ ವಿಷಯ ನೆನಪಿರಲಿ. ಲಾಕ್ಡೌನಿನ ನಿಯಮಗಳನ್ನು ಪಾಲಿಸಿ ನಮ್ಮ ನಮ್ಮ ಮನೆಗಳಲ್ಲಿ ನಾವುಗಳು ಉಳಿದುಕೊಳ್ಳುವುದರಿಂದ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಸಹಾಯವಾಗುತ್ತದೆ. ಗುಂಪು ಸೇರುವುದು ಬೇಡ. ಸಭೆ-ಸಮಾರಂಭಗಳಲ್ಲಿ ಸರಕಾರ ನಿಗದಿಪಡಿಸಿರುವಷ್ಟಕ್ಕಿಂತಾ ಹೆಚ್ಚು ಜನರಗಳನ್ನು ಸೇರಿಸುವುದು ಬೇಡ. ಮಾಸ್ಕ್ ಧಾರಣೆ, ಆಗಾಗ ಸಾಬೂನಿನಿಂದ ಕೈತೊಳೆಯುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಂತಾದ ಕ್ರಮಗಳಿಂದ, ಕೋವಿಡ್ ಹರಡುವಿಕೆಯನ್ನು ತಡೆಯಲು ಸಾಧ್ಯ. ಕೋವಿಡ್ ರೋಗವನ್ನು ಹೊಡೆದೋಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆಂಬ ವಿಶ್ವಾಸ ನನಗಿದೆ' ಎಂದ ಸೆಲ್ವಿಯವರು, ತಮ್ಮ ಪುಟ್ಟ ಭಾಷಣದ ಕಡೆಗೊಂದು ಜನಪ್ರಿಯ ಗೀತೆಯೊಂದನ್ನು ಹಾಡ ಹತ್ತಿದರು. 

ಜಯವು ನಮ್ಮದೇ, ಜಯವು ನಮ್ಮದೇ 

ಜಯವು ನಮ್ಮದೇ ಎಂದೆಂದಿಗೂ 

ಮನದಲ್ಲಿದೆ ವಿಶ್ವಾಸ 

ಪೂರ್ತಿ ವಿಶ್ವಾಸ 

ಜಯವು ನಮ್ಮದೇ ಎಂದೆಂದಿಗೂ  

ತನ್ನ ಕೈಗಳಿಂದ ಚಪ್ಪಾಳೆ ತಟ್ಟುತ್ತಾ  ಸನ್ನೆ ಮಾಡಿದ ಸೆಲ್ವಿಯವರನ್ನು ಕಂಡು ಉತ್ತೇಜಿತರಾದ ಜನಗಳು ಕೂಡ ಹಾಡಿನ ತಾಳಕ್ಕೆ ಸರಿಯಾಗಿ ಚಪ್ಪಾಳೆ ತಟ್ಟುತ್ತಾ ಹಾಡಲಾರಂಭಿಸಿದರು. ಮಹಿಳೆಯರಲ್ಲಿ ಮತ್ತು ಮಕ್ಕಳುಗಳಲ್ಲಿ ಹಾಡುವ ಉತ್ಸಾಹ ಹೆಚ್ಚಾಗಿದ್ದು ಕಂಡುಬಂದಿತ್ತು.

ಅದೇ ದಿನ ಆ ಪ್ರದೇಶದ ನಾಯಕರು ಮತ್ತು ಹಿರಿಯರ ಸಭೆಯೊಂದನ್ನು ಸೆಲ್ವಿ ಕರೆದಿದ್ದರು. ಸಭೆಯಲ್ಲಿ ಮಾತನಾಡಿದ ಸೆಲ್ವಿ, ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಲಾಕ್ಡೌನಿನ  ನಿಯಮಗಳನ್ನು ಪಾಲಿಸಿ ಕೋವಿಡ್ ರೋಗವನ್ನು ನಿಯಂತ್ರಿಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿಕೊಂಡರು. ಅವರುಗಳಲ್ಲಿ ಕೆಲವರು ದಿನಸಿ ಪೊಟ್ಟಣಗಳ ವಿತರಣೆಯ ವಿಷಯವನ್ನು ಪ್ರಸ್ತಾಪಿಸಿದಾಗ, ಒಂದೇ ದಿನದಲ್ಲಿ ಇಡೀ ಪ್ರದೇಶಕ್ಕೆ ಬೇಕಾದಷ್ಟು ದಿನಸಿ ಪೊಟ್ಟಣಗಳನ್ನು ತರಿಸಿ,  ಹಂಚುವ ಕಾರ್ಯವನ್ನು ಸೆಲ್ವಿ ಮಾಡಿ ಮುಗಿಸಿದ್ದರು. ಈ ರೀತಿಯ ನಯವಾದ ಕಾರ್ಯಕ್ರಮಗಳಿಂದ, ಇಡೀ ಪ್ರದೇಶವನ್ನು ಒಂದು ವಾರದೊಳಗೆ ಸೆಲ್ವಿ ನಿಯಂತ್ರಣಕ್ಕೆ ತಂದಿಟ್ಟಿದ್ದರು. ಸೆಲ್ವಿಯವರ ಯಶಸ್ವೀ ಪ್ರಯತ್ನದ ಸುದ್ದಿಯು ಪೊಲೀಸ್ ಇಲಾಖೆಯ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ದೇಶದ ದೂರ ದೂರದ ಪೊಲೀಸ್ ವಲಯಗಳಲ್ಲಿ ಸೆಲ್ವಿ ಕ್ರಮದ ಬಗ್ಗೆ ಪ್ರಶಂಸೆಗಳು ಮತ್ತು ಅವರ ವಿಧಾನಗಳನ್ನನುಸರಿಸುವ ಪ್ರಯತ್ನಗಳ ವರದಿಗಳು ಹರಿದಾಡತೊಡಗಿದ್ದವು.  

ಅಂದು ರಾತ್ರಿ ೮ ಘಂಟೆಯ ಸಮಯವಾಗಿತ್ತು.  ಹೆದ್ದಾರಿಯೊಂದರಲ್ಲಿ ಸಂಚಾರಿ ವಾಹನಗಳ ತಪಾಸಣೆ ನಡೆಸಲೆಂದು ತಡೆಗಟ್ಟನ್ನು (barricades) ಹಾಕಿದ್ದ ಸ್ಥಳದಲ್ಲಿ, ಸೆಲ್ವಿ ಮತ್ತವರ ನಾಲ್ಕು ಸಹೋದ್ಯೋಗಿಗಳು ಕಾವಲು ಕಾಯುತ್ತಿದ್ದರು. ಸೆಲ್ವಿಯವರು ಅಂದು ಮೂರು ತಿಂಗಳ ಗರ್ಭಿಣಿಯಾಗಿದ್ದರು. ಗರ್ಭಾವಸ್ಥೆಯ ಆರಂಭದ ದಿನಗಳ ತೊಂದರೆ ಸೆಲ್ವಿಯವರನ್ನು ತೀವ್ರವಾಗೇ ಕಾಡುತ್ತಿತ್ತು. ಆದರೂ ಮೇಲಧಿಕಾರಿಗಳಿಂದ ಯಾವ ರಿಯಾಯ್ತಿಗೂ ವಿನಂತಿಸದ ಸೆಲ್ವಿಯವರು ರಾತ್ರಿ ಪಾಳಿಯ ಸೇವೆಗೇ ಬಂದು ನಿಂತ್ತಿದ್ದರು. ಲಾಕ್ಡೌನ್ ಜಾರಿಯಲ್ಲಿದ್ದರೂ, ಅನುಮತಿ ಪಡೆದ ವಾಹನಗಳ ಸಂಚಾರಕ್ಕೆ ಅಡ್ಡಿಯಿರಲಿಲ್ಲ. ಇದ್ದಕಿದ್ದಂತೆ ವೇಗವಾಗಿ ನುಗ್ಗಿ ಬಂದ ಕಾರೊಂದು                            ತಡೆಗಟ್ಟುಗಳಿಗಪ್ಪಳಿಸಿತ್ತು. ಪೊಲೀಸರ ಸೀಟಿಯನ್ನು ಧಿಕ್ಕರಿಸುತ್ತಾ ಆ ಕಾರು ಓಡುತ್ತಾ ರೊಯ್ಯನೆ ಮುಂದೆ ಸಾಗಿತ್ತು. ತಕ್ಷಣವೇ ತನ್ನ ಜೀಪಿನ ಚಾಲಕರ ಆಸನದಲ್ಲಿ ಕುಳಿತಿದ್ದ ಸೆಲ್ವಿ, ತನ್ನ ಸಹೋದ್ಯೋಗಿಗಳಿಗೆ ಜೀಪನ್ನೇರುವಂತೆ ಸನ್ನೆ ಮಾಡಿದರು. ಆ ಪುಂಡ ಕಾರಿನ ಬೆನ್ನಟ್ಟಿ ಹೊರಟ ಸೆಲ್ವಿ ತಮ್ಮ ಜೀಪನ್ನು ಅತಿ ವೇಗವಾಗೇ ಚಲಾಯಿಸಿದ್ದರು. ನಾಲ್ಕೈದು ನಿಮಿಷಗಳು ಬೆನ್ನಟ್ಟುವಷ್ಟರಲ್ಲೇ ಸೆಲ್ವಿ, ಆ ದುಷ್ಟರುಗಳ ಕಾರನ್ನು ತಡೆದು ನಿಲ್ಲಿಸಿದ್ದರು. ಜೀಪಿನಿಂದ ಕೆಳಗಿಳಿದ ಸೆಲ್ವಿ, ಆ ಕಾರಿನ ಚಾಲಕರಿಗೆ ಅನುಮತಿಯ ಪತ್ರವನ್ನು ತೋರಿಸುವಂತೆ ಆಗ್ರಹಿಸಿದ್ದರು. ಮಿಕ್ಕ ಪೊಲೀಸ್ ಅಧಿಕಾರಿಗಳು, ಕಾರಲ್ಲಿದ್ದವರನ್ನೆಲ್ಲಾ ಹೊರಬರುವಂತೆ ಕರೆದರು. ಕಾರೊಳಗಿದ್ದ ಐದೂ ವ್ಯಕ್ತಿಗಳು ಒಮ್ಮಲೇ ಹೊರಬಂದಿದ್ದರು. ಅವರುಗಳ ಪೈಕಿ, ಭಾರಿ ಕತ್ತಿಯೊಂದನ್ನು ಝಳಪಿಸುತ್ತಾ ಮುನ್ನುಗಿದ ದುಷ್ಟನೊಬ್ಬ ನೋಡು ನೋಡುತ್ತಿರುವಷ್ಟರಲ್ಲೇ, ಪಿಸ್ತೂಲ್ ಹಿಡಿದಿದ್ದ ಸೆಲ್ವಿಯವರ ಬಲಗೈಯನ್ನು ತುಂಡರಿಸಿಯೇ ಬಿಟ್ಟಿದ್ದನು. ತುಂಡಾದ ಸೆಲ್ವಿಯವರ ಬಲಗೈ ಕೆಳಗೆ ಬಿದ್ದ ಕೂಡಲೇ, ಸೆಲ್ವಿಯವರೂ ನೆಲಕ್ಕುರುಳಿದ್ದರು. ಇನ್ನುಳಿದ ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅಷ್ಟರೊಳಗೆ ಕಾರನ್ನು ವೇಗವಾಗಿ ಚಲಾಯಿಸಿತ್ತಾ ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದರು. 

ಗಾಯಗೊಂಡ ನಾಲ್ಕು ಪೊಲೀಸ್ ಕರ್ಮಚಾರಿಗಳು ತಕ್ಷಣವೇ ಕಾರ್ಯೋನ್ಮುಖರಾಗಿ, ಕೆಳಗೆ ತುಂಡಾಗಿ ಬಿದ್ದಿದ್ದ ಸೆಲ್ವಿಯವರ ಬಲಗೈಯನ್ನು ಕೈಗೆತ್ತಿಕೊಂಡರು. ಎದ್ದು ನಿಲ್ಲಲು ಸೆಲ್ವಿಗೆ ಸಹಾಯ ಮಾಡಿದ ಪೊಲೀಸ್ ಸಹಚರರು, ಸೆಲ್ವಿಯವರನ್ನು ಜೀಪಿನೊಳಗೆ ಕೂರಿಸಿಕೊಂಡು, ಜಿಲ್ಲಾ ಆಸ್ಪತ್ರೆಯ ಕಡೆಗೆ ವೇಗವಾಗಿ ಜೀಪನ್ನು ಓಡಿಸತೊಡಗಿದರು. ತೀವ್ರವಾಗಾಗುತ್ತಿದ್ದ ರಕ್ತಸ್ರಾವವನ್ನು ತಡೆಯಲು ಸೆಲ್ವಿಯವರ ಕೈಗಳಿಗೆ ಮತ್ತು ಮುರಿದುಬಿದ್ದಿದ್ದ ಕೈಭಾಗಕ್ಕೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿದ್ದ ವಸ್ತ್ರಗಳಿಂದ ಬಿಗಿಯಾಗಿ ಬ್ಯಾಂಡೇಜುಗಳನ್ನು, ಸೆಲ್ವಿಯ ಸಹೋದ್ಯೋಗಿಗಳು ಕಟ್ಟಿದ್ದರು.  ಸೆಲ್ವಿ ಸಹಚರರೊಬ್ಬರ  ಮೊಬೈಲ್ ಮೂಲಕ ನಿಯಂತ್ರಣ ಕಾರ್ಯಾಲಯವನ್ನು ಮುಟ್ಟಿದ ಸುದ್ದಿ, ಬಿರುಗಾಳಿಯಂತೆ ಪೊಲೀಸ್ ವಲಯಗಳೆಲ್ಲ ಹಬ್ಬಿ ಹೋಯಿತು. ಸುದ್ದಿ ತಿಳಿದ ರಾಜ್ಯದ ಮುಖ್ಯ ಮಂತ್ರಿಗಳು, ಗಾಯಗೊಂಡ ಎಲ್ಲ ಪೊಲೀಸರಿಗೂ ಅತ್ತ್ಯುತ್ತಮ ಚಿಕಿತ್ಸೆಯ ಏರ್ಪಾಡು ಕೂಡಲೇ ಆಗಬೇಕೆಂದು ಆಜ್ಞಾಪಿಸಿದ್ದರು. 

ತುರ್ತು ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರುಗಳು, ಸೆಲ್ವಿಯವರ ಚಿಕಿತ್ಸೆಯನ್ನಾರಂಭಿಸಿದರು. ಎಲ್ಲಾ  ಹಿರಿಯ ವೈದ್ಯರುಗಳಿಗೂ ತುರ್ತು ಕರೆಯನ್ನು ಕಳುಹಿಸಲಾಯಿತು. ಕೊಂಚವೂ ಸಮಯ ವ್ಯರ್ಥವನ್ನು ಮಾಡದ ವೈದ್ಯರುಗಳ ತಂಡ , ಸೆಲ್ವಿಯವರ ಕೈಯನ್ನು ಮತ್ತೆ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ವೈದ್ಯರುಗಳು ನಿರ್ಧಾರ ಸರಿಯಾಗಿಯೇ ಇತ್ತು. ಕತ್ತಿಯಿಂದ ಬಿದ್ದ ಏಟು ಕೈಯನ್ನು ಒಮ್ಮಲೇ ಕತ್ತರಿಸಿ ತುಂಡಾಗಿಸಿತ್ತು. ಕತ್ತಿಯಿಂದ ಜಜ್ಜು ಗಾಯಗಳಾಗದೆ ಇದ್ದದ್ದು, ಕೈಜೋಡಣೆಯ ಶಸ್ತ್ರಚಿಕಿತ್ಸೆಯ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಿತ್ತು. ನೋವಿನಿಂದ ಬಳಲುತ್ತಿದ್ದ ಸೆಲ್ವಿ, ವೈದ್ಯರ ತಂಡಕ್ಕೆ 'ತಾನು ಮೂರು ತಿಂಗಳ ಗರ್ಭಿಣಿ' ಎಂಬುದನ್ನು ತಿಳಿಸಲು ಮರೆಯಲಿಲ್ಲ. ಎರಡು ಸ್ತ್ರೀ ರೋಗ ತಜ್ಞರನ್ನು (gynaecologists) ಕೂಡಲೇ ಕರೆಸಲಾಯಿತು. ಎಂಟು ವೈದ್ಯರುಗಳ ತಂಡ ಶಸ್ತ್ರಕ್ರಿಯೆಯನ್ನು ಆರಂಭಿಸಿದಾಗ ಸಮಯವಾಗಲೇ ರಾತ್ರಿಯ ೧೦ ಘಂಟೆಯಾಗಿತ್ತು. ಸುಮಾರು ಒಂದು ಲೀಟರಿನಷ್ಟು ರಕ್ತವನ್ನು ಕಳೆದುಕೊಂಡಿದ್ದ ಸೆಲ್ವಿಯವರಿಗೆ, ಹೊರಗಿನಿಂದ ರಕ್ತವನ್ನೊದಗಿಸುವ ಕಾರ್ಯಕೂಡ ಜೊತೆ ಜೊತೆಯೇ ಶುರುವಾಗಿತ್ತು. 

ಈ ನಡುವೆ ಸ್ತ್ರೀ ರೋಗ ತಜ್ಞರು, ಸೆಲ್ವಿಯವರ ದೇಹದ ಕೆಳಭಾಗದಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದರು. ಸೆಲ್ವಿಯವರು ಘಟನೆಯಿಂದ ಗಾಬರಿಕೊಂಡಿದ್ದು, ಆ ಕಾರಣದಿಂದ ಅವರಿಗೆ ಗರ್ಭಪಾತವಾಗಿರಬಹುದೆಂಬ ವೈದ್ಯರುಗಳು ಅನುಮಾನ ಸರಿಯಾಗಿಯೇ ಇತ್ತು. ಸೆಲ್ವಿಯವರಿಗೆ ಗರ್ಭಪಾತವಾಗಿತ್ತು. ಬೇಕಾದ ಚಿಕಿತ್ಸೆಯನ್ನು ಸ್ತ್ರೀ ರೋಗ ತಜ್ಞರು ಜೊತೆ ಜೊತೆಯಲ್ಲೇ ಆರಂಭಿಸಿದ್ದರು. 

ಮುರಿದುಬಿದ್ದ ಕೈಯನ್ನು ಮರುಜೋಡಣೆ ಮಾಡುವ ಶಸ್ತ್ರಚಿಕಿತ್ಸೆಗೆ 'ಅನಸ್ಟೋಮೊಸಿಸ್ (anastomosis)' ಎನ್ನುತ್ತದೆ ವೈದ್ಯಕೀಯ ಶಾಸ್ತ್ರ. ಮೂಳೆಗಳು, ಮಾಂಸ ಖಂಡಗಳು, ರಕ್ತ ನಾಳಗಳು ಮತ್ತು ನರಗಳ ಜೋಡಣೆಯನ್ನೂ ನಡೆಸಬೇಕಾದ ಆ ಶಸ್ತ್ರಚಿಕಿತ್ಸೆ ತುಂಬಾ ಸಂಕೀರ್ಣವಾದದ್ದು ಎಂಬುದು ವೈದ್ಯರುಗಳ ಅಭಿಪ್ರಾಯ. ಮೂಳೆಗಳನ್ನು ವಿಶೇಷವಾದ ತಂತಿಗಳಿಂದ ಕೂಡಿಸಿಡಬೇಕು. ಮೂಳೆಗಳ ನಡುವೆ ಸ್ವಾಭಾವಿಕವಾದ ಸೇರುವಿಕೆ ಉಂಟಾದ ಮೇಲೆ ತಂತಿಗಳನ್ನು ತೆಗೆಯಬೇಕು. ತಜ್ಞ ವೈದ್ಯರುಗಳ ತಂಡಕ್ಕೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಲು ಸುಮಾರು ಏಳು ಘಂಟೆಗಳಷ್ಟು ಸಮಯ ಬೇಕಾಯಿತು. ಶಸ್ತ್ರಚಿಕಿತ್ಸೆಯ ಗಾಯ ಮಾಯಲು ಕನಿಷ್ಠ ಮೂರು ವಾರಗಳ ಸಮಯ ಬೇಕೆಂಬುದು ವೈದ್ಯರುಗಳಿಗೆ ತಿಳಿದಿತ್ತು. 

ಏತನ್ಮಧ್ಯೆ ಸೆಲ್ವಿ ಮತ್ತವರ ಸಹೋದ್ಯೋಗಿಗಳ ಸಾಹಸಗಾಥೆ ರಾಷ್ಟ್ರೀಯ ಮಟ್ಟದ ಸುದ್ದಿಯಾಗಿಹೋಗಿತ್ತು. ವೈದ್ಯರುಗಳ ತಂಡ ಯಶಸ್ವಿಯಾಗಿ ಸೆಲ್ವಿಯವರ ಕೈಯಿನ  ಮರುಜೋಡಣೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಮಾಡಿರುವ ಸುದ್ದಿ ಜನಗಳಿಗೆ ಸಮಾಧಾನ ತಂದಿತ್ತು. ಆಘಾತದಿಂದ ಸೆಲ್ವಿಯವರಿಗಾದ ಗರ್ಭಪಾತದ ಸುದ್ದಿಯನ್ನು ಟಿ.ವಿ.ಯಲ್ಲಿ ನೋಡಿದ ಮಹಿಳೆಯರು ಕಣ್ಣೀರಿಟ್ಟಿದ್ದರು. 

ಶಸ್ತ್ರಚಿಕಿತ್ಸೆಯನಂತರದ ಮೂರುವಾರಗಳ ಅವಧಿ ಮುಗಿದಿತ್ತು. ಧೈರ್ಯಶಾಲಿಯಾದ ಸೆಲ್ವಿಯವರು ಚಿಕಿತ್ಸೆಯ ನೋವನ್ನು ಸಹಿಸುವಲ್ಲಿ ಅಪಾರವಾದ ಸಂಯಮವನ್ನು ಪ್ರದರ್ಶಿಸಿದ್ದರು. ಅವರು ಸಮಸ್ಥಿತಿಗೆ ಮರಳುತ್ತಿದ್ದ ವೇಗವನ್ನು ನೋಡುತ್ತಿದ್ದ ವೈದ್ಯರುಗಳ ತಂಡವೇ ಆಶ್ಚರ್ಯಗೊಂಡಿತ್ತು. ಆದರೂ ಜೋಡಿಸಲ್ಪಟ್ಟ ಕೈಯಿನ ಚಲನೆ ಮತ್ತು ಸಂವೇದನೆಗಳು (motor movements and sensation) ಮರಳಲು ಮತ್ತೆ ಮೂರು ವಾರಗಳಷ್ಟರ 'ಫಿಸಿಯೋಥೆರಪಿ (physiotherapy)'ಯ ಅವಶ್ಯಕತೆಯಿತ್ತು.

ಕಡೆಗೂ ಸೆಲ್ವಿಯವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಹೊರನಡೆವ ದಿನ ಬಂದೇ ಬಂದಿತ್ತು. ಆಸ್ಪತ್ರೆಯಿಂದ ಹೊರಬರುವಾಗಲೇ ಪೊಲೀಸ್ ಸಮವಸ್ತ್ರವನ್ನು ಧರಿಸಿ, ನೇರವಾಗಿ ತನ್ನ ಪೊಲೀಸ್ ಠಾಣೆಯನ್ನು ಸೇರಿ ಕರ್ತವ್ಯಕ್ಕೆ ಹಾಜರಾಗುವ ಆಶಯವನ್ನು ಸೆಲ್ವಿ ವ್ಯಕ್ತಪಡಿಸಿದ್ದರು.  ಪೊಲೀಸ್ ಮೇಲಧಿಕಾರಿಗಳ ಆಜ್ಞೆಯ ಮೇರೆಗೆ, ಸೆಲ್ವಿಯವರ ಠಾಣೆ ಸೇರುವ ಮಾರ್ಗಕ್ಕೆ ಕೆಂಪುಹಾಸನ್ನು ಹಾಸಿ ಸಿಂಗರಿಸಲಾಗಿತ್ತು. ಆಸ್ಪತ್ರೆಯಿಂದ ಹೊರಟ ಸೆಲ್ವಿಯವರನ್ನು ತೆರದ ಪೊಲೀಸ್ ಜೀಪೊಂದರಲ್ಲಿ ಕೊಂಡೊಯ್ಯಲಾಗಿತ್ತು. ಅವರ ಜೀಪಿನ್ನು ಹಲವಾರು ಪೊಲೀಸ್ ಅಧಿಕಾರಿಗಳು ಕುಳಿತ ಜೀಪುಗಳು ಹಿಂಬಾಲಿಸಿದವು. ದಾರಿಯುದ್ದಕ್ಕೂ ಪೊಲೀಸ್ ವಾದ್ಯಗಾರರು ತಮ್ಮ ವಾದ್ಯಗಳನ್ನು ನುಡಿಸುತ್ತಾ ಸಾಗಿದ್ದರು. ರಸ್ತೆಗಳ ಎರಡೂ ಬದಿಗಳ, ತಮ್ಮ ಮನೆ ಮತ್ತು ಅಂಗಡಿಗಳ ಬಾಗಿಲುಗಳಲ್ಲಿ ನಿಂತಿದ್ದ ಜನರು ಕೈ ಬೀಸುತ್ತಾ 'ಸೆಲ್ವಿ, ಸೆಲ್ವಿ, ಸೆಲ್ವಿ' ಎಂದು ಜೈಕಾರಗಳನ್ನು ಕೂಗಿದ್ದರು. ಸೆಲ್ವಿ ತನ್ನ ಪೊಲೀಸ್ ಠಾಣೆಯ ಮುಂದಿಳಿಯುತ್ತಲೇ, ಪೊಲೀಸ್ ಅಧಿಕಾರಿಗಳು ಅವರ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದರು. ಸೆಲ್ವಿಯವರ ಪತಿಯವರು ಹಾಗೂ ಅವರ ಕುಟುಂಬದವರೆಲ್ಲರೂ, ಆರತಿ ಬೆಳಗಿ ಸೆಲ್ವಿಯವರನ್ನು ಸ್ವಾಗತಿಸಿದರು. ದೀರ್ಘ ಕರತಾಡನದ ನಡುವೆ ಸೆಲ್ವಿ ತಮ್ಮ ಅಧಿಕೃತ ಆಸನದ ಮೇಲೆ ಕುಳಿತರು. ಸುತ್ತಲೂ ನೆರೆದಿದ್ದವರೆಲ್ಲರಿಗೂ ಸಿಹಿಯನ್ನು ಹಂಚಲಾಯಿತು. ಸಮಾರಂಭಕ್ಕೆ ತಪ್ಪದೆ ಹಾಜರಾಗಿದ್ದ ನಗರದ ಪೊಲೀಸ್ ಕಮೀಷನರ್ರವರು   ಸೆಲ್ವಿಯವರ ಧೈರ್ಯ-ಸಾಹಸಗಳನ್ನು ಕೊಂಡಾಡಿ 'ಸೆಲ್ವಿಯವರಿಗೆ  ಈ ಕ್ಷಣದಿಂದಲೇ ಮುಂಬಡ್ತಿ ನೀಡಿ,  ಡಿ.ವೈ.ಎಸ್ಪಿ. (Dy.S.P.) ಹುದ್ದೆಗೆ ನೇಮಿಸಲಾಗಿದೆ' ಎಂದು ಘೋಷಿಸಿದರು. ಸೆಲ್ವಿಯವರೊಂದಿಗಿದ್ದ ಮಿಕ್ಕ ನಾಲ್ಕು ಪೊಲೀಸ್ ಕರ್ಮಚಾರಿಗಳಿಗೂ ಮುಂಬಡ್ತಿಯನ್ನು ಮೇಲಧಿಕಾರಿಗಳು ಘೋಷಿಸಿದ್ದರು. ಹಾಜರಿದ್ದ ಆರೋಗ್ಯ ಸಚಿವರು, ಸೆಲ್ವಿಯವರಿಗೆ ಚಿಕಿತ್ಸೆ ನೀಡಿದ ವೈದ್ಯರುಗಳ ಇಡೀ ತಂಡಕ್ಕೆ ವಿಶೇಷ ನಗದು ಬಹುಮಾನವನ್ನು ನೀಡಿದರು. 

ತನ್ನ ಡೈರಿಯಲ್ಲಿ, ಪೊಲೀಸ್ ಅಧಿಕಾರಿಣಿ ತಾಮರೈ ಸೆಲ್ವಿಯವರ ಸಾಹಸಗಾಥೆಯನ್ನು ದಾಖಲಿಸುತ್ತಾ ರೋಹಿಣಿ ಭಾವಪರವಶರಾಗಿದ್ದರು. ಸೆಲ್ವಿಯವರು  ಅನುಭವಿಸಿರಬಹುದಾದ ದೈಹಿಕ ಮತ್ತು ಮಾನಸಿಕ ಆಘಾತಗಳು ರೋಹಿಣಿಯನ್ನು ಇಡೀ ರಾತ್ರಿ ಕಾಡುತ್ತಿತ್ತು. 

***

ಮಾರನೆಯ ದಿನದ ಬೆಳಗ್ಗೆ, ದಿನಪತ್ರಿಕೆಯನ್ನೋದುತ್ತಿದ್ದ ರೋಹಿಣಿಗೆ ಸಂತಸದ ಅಚ್ಚರಿಯುಂಟಾಗಿತ್ತು. ಪೊಲೀಸ್ ಸಮವಸ್ತ್ರದಲ್ಲಿದ ಅವಳ ಕಾಲೇಜು ದಿನಗಳ ಸಹಪಾಠಿ ಆಕಾಶ್, ತನ್ನ ಮೇಲಧಿಕಾರಿಯೊಬ್ಬರಿಂದ ಪ್ರಶಸ್ತಿಯೊಂದನ್ನು ಸ್ವೀಕರಿಸುತ್ತಿದ್ದನು. ರೋಹಿಣಿಗೆ ತನ್ನ ಕಾಲೇಜು ದಿನಗಳ ನೆನಪಾಗಿತ್ತು. ಆಕಾಶ್ ಮತ್ತು ರೋಹಿಣಿ ಸಮಾಜ ಶಾಸ್ತ್ರದ ಎಮ್. ಎ. ತರಗತಿಯ ಸಹಪಾಠಿಗಳಾಗಿದ್ದರು. ರೋಹಿಣಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಳು. ಕುಟುಂಬದ ಸಮಸ್ಯೆಗಳ ಒತ್ತಡದ ಕಾರಣಗಳಿಂದ ಆಕಾಶನಿಗೆ ಹಾಜರಿಯ ಕೊರತೆಯುಂಟಾಗಿ, ಪದವಿ ಗಳಿಸದಾಗಿದ್ದನು. ಎಂಟು ತಿಂಗಳ ಹಿಂದೆ ಪೊಲೀಸ್ ಪೇದೆಯಾಗಿ ನೇಮಕಗೊಂಡ ಆಕಾಶ್, ಒಂಬತ್ತು ತಿಂಗಳ ತರಬೇತಿಯ  ಅಭ್ಯರ್ಥಿಯಾಗಿದ್ದನು.  ಸಂಬಳ ಮತ್ತು ನಿವೃತ್ತಿವೇತನಗಳ ಖಾತರಿಯಿದ್ದ ಸರಕಾರಿ ಕೆಲಸ ಸಿಕ್ಕಿದ್ದರಿಂದ ಆಕಾಶ್ ಖುಷಿಯಾಗೇ ಇದ್ದನು. ಕೊರೋನಾದ ನಿಮಿತ್ತ ಉಂಟಾದ ಸಿಬ್ಬಂಧಿಯ ಕೊರತೆಯನ್ನು ತುಂಬಲು, ಆಕಾಶನೊಡನೆ ತರಬೇತಿಯಲ್ಲಿದ್ದ ಎಲ್ಲಾ ಅಭ್ಯರ್ಥಿಗಳನ್ನು, ಕೋರ್ಸ್ ಮುಗಿಯುವ ಮೂರು ತಿಂಗಳ ಮುಂಚೆಯೇ, ಪೇದೆ ಕೆಲಸ ನಿರ್ವಹಿಸಲು ನೇಮಕ ಮಾಡಲಾಗಿತ್ತು. ಕೆಲಸಗಳನ್ನು ಕಳೆದುಕೊಂಡ ಸುಮಾರು ೬೦ ವಲಸಿಗರುಗಳು ತಂಗಲು ನಿರ್ಮಿಸಿದ್ದ ದೊಡ್ಡ ಬಿಡಾರವೊಂದರ ಕಾವಲಿಗಾಗಿ ಆಕಾಶನನ್ನು ನೇಮಿಸಲಾಗಿತ್ತು. 

ಪತ್ರಿಕೆಯ ವರದಿಯನ್ನು ರೋಹಿಣಿ ಕುತೂಹಲದಿಂದ ಓದಲಾರಂಭಿಸಿದಳು. ಜೂನ್ ತಿಂಗಳ ಮಳೆ ಅಬ್ಬರಿಸಿ ಸುರಿಯುತ್ತಿತ್ತು. ಆಕಾಶ್ ಕಾವಲಿದ್ದ ಬಿಡಾರದ ಸೂರು ಮಳೆಯ ರಭಸಕ್ಕೆ ಹರಿದು, ಮಳೆ ನೀರು ಬಿಡಾರದ ತುಂಬಾ ಹರಿಯಲಾರಂಭಿಸಿತ್ತು. ಮಕ್ಕಳುಗಳಿದ್ದ ಮಹಿಳೆಯರನ್ನು ಕ್ಷೇಮವಾದ ಜಾಗಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ಆಕಾಶ್ ತೊಡಗಿದ್ದಾಗ, ಭಾರಿ ಮರವೊಂದು ಮುರಿದು ಬಿಡಾರದ ಮೇಲೆ ಬಿದ್ದಿತ್ತು. ಬಿಡಾರದ ಸೂರಿನ ತಗಡುಗಳು ನೆಲಕ್ಕುರುಳಿದ್ದವು. ಇದ್ದಕಿದ್ದಂತೆ ವಿದ್ಯುತ್ ಸಂಪರ್ಕ ತಪ್ಪಿದ್ದು, ಒಳಗಿದ್ದವರ ಆತಂಕವನ್ನು ಇನ್ನೂ ಹೆಚ್ಚಿಸಿತ್ತು. ಉರಿಯುತ್ತಿದ್ದ ವಿದ್ಯುತ್ ತಂತಿಯೊಂದು ಮಗುವನ್ನು ಹೊತ್ತ ಮಹಿಳೆಯೊಬ್ಬರ ಮೇಲೆ ಬಿದ್ದು, ಆ ಮಹಿಳೆ ಗಾಬರಿಯಿಂದ ಕಿರುಚಾಡಹತ್ತಿದ್ದರು. ಜಾಗರೂಕನಾಗಿದ್ದ ಆಕಾಶ್, ಉದ್ದವಾದ ದೊಣ್ಣೆಯೊಂದರ ಸಹಾಯದಿಂದ ಉರಿಯುತ್ತಿದ್ದ ತಂತಿಯನ್ನು ಮಹಿಳೆಯಿಂದ ದೂರ ಸರಿಸಿದ್ದನು. ತಾಳ್ಮೆಯಿಂದಿರುವಂತೆ ಜನರನ್ನು ಎಚ್ಚರಿಸಿದ ಆಕಾಶ್, ಒಬ್ಬರಿಗೊಬ್ಬರು ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದನು. ವಲಸಿಗರ ಭಾಷೆ ಬರದಿದ್ದರೂ, ಪಕ್ಕದ ಬಿಡಾರದಿಂದ ೮-೧೦ ಯುವಕರನ್ನು ಕರೆತಂದ ಆಕಾಶ್, ಅವರುಗಳ ಸಹಾಯದಿಂದ ತನ್ನ ಬಿಡಾರದ ಜನರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದನು. ಆಕಾಶ್,  ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ಸುದ್ದಿಯನ್ನಾಗಲೇ ತಲುಪಿಸಿಯಾಗಿತ್ತು. ಕೂಡಲೇ ಬಿಡಾರದ ಬಳಿ ಆಗಮಿಸಿದ ಪೊಲೀಸ್ ಮೇಲಧಿಕಾರಿಗಳು, ಆಕಾಶನ ಸಮಯ ಪ್ರಜ್ಞೆ ಮತ್ತು ಪರಿಹಾರ ಕಾರ್ಯಗಳನ್ನು ಮೆಚ್ಚಿಕೊಂಡಿದ್ದರು. 

ಆಕಾಶನ ಸಾಹಸವನ್ನು ರೋಹಿಣಿ ಕೂಡ ಮೆಚ್ಚಿಕೊಂಡಿದ್ದಳು. ಆಕಾಶನಿಗೆ ಕರೆಮಾಡಿ ಮಾತನಾಡಿದ್ದ ರೋಹಿಣಿ 'ಆಕಾಶ್ ನಿನಗೆ ಅಭಿನಂದನೆಗಳು. ನಿನ್ನ ಮಹತ್ಕಾರ್ಯವನ್ನು ನೋಡಿದ ನಮ್ಮೆಲ್ಲರಿಗೂ ಹೆಮ್ಮೆಯೆನಿಸಿದೆ. ಮುರಿದು ಬಿದ್ದ ಬಿಡಾರದಲ್ಲಿದ್ದ ವಲಸಿಗರ ಜೀವಗಳನ್ನುಳಿಸಿದ್ದೀಯ. ಪೊಲೀಸ್ ಇಲಾಖೆಯಲ್ಲಿ ಇನ್ನೂ ದೊಡ್ಡ ಹುದ್ದೆ ನಿನಗೆ ದೊರೆಯುವಂತಾಗಬೇಕು. ನೀನು "ಐ.ಪಿ.ಎಸ್." ಹುದ್ದೆಗೆ ಪ್ರಯತ್ನಿಸಬೇಕೆಂಬುದು ನನ್ನ ಆಸೆ. ನಿನಗೆ ಬೇಕಾದ ಪರೀಕ್ಷಾ ತಯಾರಿಗೆ ಕೈಲಾದ ಸಹಾಯವನ್ನು ಮಾಡಲು ನಾನು ಸಿದ್ಧಳಿದ್ದೇನೆ' ಎಂದಿದ್ದಳು. ಆಕಾಶ್ ಉತ್ತರಿಸುತ್ತಾ, 'ನನ್ನನ್ನು ಇನ್ನೂ ನೀನು  ಮರೆತಿಲ್ಲದ್ದು ಸಂತೋಷದ ವಿಷಯ. ನಾನು ನಿರ್ವಹಿಸಿರುವ ಅಲ್ಪ ಕರ್ತವ್ಯವನ್ನು ನೀನು ಮೆಚ್ಚಿಕೊಂಡಿರುವುದಕ್ಕೆ ನಾನು ಆಭಾರಿ. ಐ.ಪಿ.ಎಸ್. ಎಂಬುದು ದೂರದ ಕನಸು. ಆ ಹುದ್ದೆಗೆ ನಾನು ಅರ್ಹನೆಂದು ಪರಿಗಣಿಸಿದ್ದಕ್ಕೆ ನಿನಗೆ ಧನ್ಯವಾದಗಳು. ನಿನ್ನಂತಹ ಸ್ನೇಹಿತರ ಶುಭ ಹಾರೈಕೆಗಳೊಂದಿಗೆ ನಾನು ಆ ಪರೀಕ್ಷೆಯಲ್ಲಿ ಆಯ್ಕೆಯಾಗಬಲ್ಲೆನೆಂಬ ಭರವಸೆಯಿದೆ,' ಎಂದಿದ್ದನು. 

******

 

 ಫ್ಲಾರೆನ್ಸ್ ನೈಟಿಂಗೇಲ್ 


ಅಂದು ೨೦೨೦ರ ಮೇ ೧೨ರ ದಿನವಾಗಿತ್ತು. 'ಆಧುನಿಕ ನರ್ಸಿಂಗ್ ವ್ಯವಸ್ಥೆಯ ಸಂಸ್ಥಾಪಕಿ'ಯಾದ ಫ್ಲಾರೆನ್ಸ್ ನೈಟಿಂಗೇಲ್ರವರ ಜಯಂತಿಯ ದ್ವಿಶತಮಾನೋತ್ಸವ ಅಂದಾಗಿತ್ತು. ಆ ಮಹಾ ಚೇತನದ ಗೌರವಾರ್ಥ ೨೦೨೦ರ ವರ್ಷವನ್ನು 'ಅಂತಾರಾಷ್ಟ್ರೀಯ ನರ್ಸ್ ಮತ್ತು ಮಿಡ್ ವೈಫಗಳ ವರ್ಷ'ವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು. 'ಉತ್ತಮ ನರ್ಸಿಂಗ್ ಮೂಲಕ ವಿಶ್ವ ಆರೋಗ್ಯ' ಎಂಬುದು ಆ ಸಂಸ್ಥೆಯ ೨೦೨೦ರ ಧ್ಯೇಯ ವಾಕ್ಯವಾಗಿತ್ತು. ಅಂದಿನ ಫ್ಲಾರೆನ್ಸ್ ನೈಟಿಂಗೇಲ್ ರವರ ದ್ವಿಶತಮಾನೋತ್ಸವ ಸಮಾರಂಭಕ್ಕೆ ನಗರದ ಕೇಂದ್ರ ಸಭಾಂಗಣವೇ ವೇದಿಕೆಯಾಗಿತ್ತು. ಆಹ್ವಾನಿತರಾದ ಕೆಲವೇ ಗಣ್ಯರುಗಳ ಮುಖಗಳಲ್ಲಿ ಅಂದು ಎಂದಿನ ಉತ್ಸಾಹವಿರಲಿಲ್ಲ. ದಿನದಿಂದ ದಿನಕ್ಕೆ ಇಡೀ ದೇಶವನ್ನೇ ಆವರಿಸುತ್ತಿರುವ ಕೋವಿಡ್ನ ಆತಂಕ ಅವರುಗಳನ್ನು ಕಾಡುತ್ತಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಸನಗಳ ಏರ್ಪಾಡನ್ನು ಎಲ್ಲರಿಗೂ ಮಾಡಲಾಗಿತ್ತು.  'ನೈಟಿಂಗೇಲ್ ಪದಕ ವಿಜೇತರಾದ ಶ್ರೀಮತಿ. ವಸಂತ, ಶ್ರೀ. ಥಾಮಸ್, ಶ್ರೀಮತಿ. ಯಶೋಧ ಮತ್ತು ಶ್ರೀಮತಿ.  ಮಿಠಾಲಿರವರುಗಳೇ ಅಂದಿನ ಸಮಾರಂಭದ ಮುಖ್ಯಾಕರ್ಷಣೆಯಾಗಿದ್ದರು. ವೇದಿಕೆಯ ಮೇಲೆ ಹಾಕಲಾಗಿದ್ದ ವಿಶೇಷ ಆಸನಗಳಲ್ಲಿ ಅವರುಗಳು ಕುಳಿತಿದ್ದರು. ಅಂದಿನ ಸಮಾರಂಭದ ನಿರ್ವಹಣೆಯ ಕಾರ್ಯವನ್ನು  ಡಾ. ಕಿರಣ್ ರವರಿಗೆ ವಹಿಸಲಾಗಿತ್ತು. ರೋಹಿಣಿ ಮತ್ತವಳ ತಂದೆ ರಾಜುರವರು ಶ್ರೋತೃಗಳ ಮೊದಲ ಸಾಲಲ್ಲಿ ಕುಳಿತಿದ್ದರು. ಆಹ್ವಾನಿತ ಮುಖ್ಯ ಅತಿಥಿಗಳೆಲ್ಲರೂ ಸೇರಿ 'ದೀಪವನ್ನು ಬೆಳಗು'ವುದರ ಮೂಲಕ ಅಂದಿನ ಕಾರ್ಯಕ್ರಮಕ್ಕೆ ಚಾಲನೆ ದೊರೆತಿತ್ತು. ಫ್ಲಾರೆನ್ಸ್ ನೈಟಿಂಗೇಲ್ ರವರ ಜೀವನ ಮತ್ತು ಸಾಧನೆಗಳ ಸಾಕ್ಷ್ಯ ಚಿತ್ರವೊಂದರ ಪ್ರದರ್ಶನದೊಂದಿಗೆ ಅಂದಿನ ಕಾರ್ಯಕ್ರಮ ಆರಂಭವಾಗಿತ್ತು. ತನ್ನ ಡೈರಿ ಮತ್ತು ಲೇಖನಿಗಳೊಂದಿಗೆ ಕಾರ್ಯಕ್ರಮದ ವಿವರಗಳನ್ನು ಬರೆದುಕೊಳ್ಳಲು ರೋಹಿಣಿ ಸಿದ್ಧಳಾಗಿ ಕುಳಿತಿದ್ದಳು. 

'ದೀಪದ ಮಹಿಳೆ' (Lady with the lamp) ಎಂದೇ ಖ್ಯಾತಿ ಹೊಂದಿರುವ ಫ್ಲಾರೆನ್ಸ್ ನೈಟಿಂಗೇಲ್ ರವರು ಇಟಲಿ ದೇಶದ ಫ್ಲಾರೆನ್ಸ್ ನಗರದ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಅವರು ಜನಿಸಿದ ನಗರದ ಜ್ಞಾಪಕಾರ್ಥವಾಗಿ ಅವರಿಗೆ 'ಫ್ಲಾರೆನ್ಸ್' ಎಂದು ಹೆಸರಿಡಲಾಗಿತ್ತು. ಕೆಲವು ವರ್ಷಗಳನಂತರ ಅವರ ಕುಟುಂಬವು ತಮ್ಮ ಮೂಲ ದೇಶವಾದ ಇಂಗ್ಲೆಂಡ್ಗೆ ಮರಳಿತ್ತು. ಬಾಲ್ಯದ ದಿನಗಳಿಂದ    ಫ್ಲಾರೆನ್ಸ್ ದೈವಭಕ್ತಳಾಗಿದ್ದು, ದೀನ ದಲಿತರ ಬಗ್ಗೆ ಅಪಾರವಾದ ಅನುಕಂಪವನ್ನು ಹೊಂದಿದವಳಾಗಿದ್ದಳು. ಫ್ಲಾರೆನ್ಸ್ ಮದುವೆಯಾಗಿ ನೆಮ್ಮದಿಯಾದ ಸಂಸಾರವನ್ನು ನಡೆಸಲಿ ಎಂಬುದು ಅವರ ಶ್ರೀಮಂತ ಪೋಷಕರ ಅಭಿಲಾಷೆಯಾಗಿತ್ತು. ಆದರೆ ಫ್ಲಾರೆನ್ಸ್ ತಮ್ಮ ಪೋಷಕರ ಅಭಿಲಾಷೆಯನ್ನು ನಿರಾಕರಿಸಿ, ತನ್ನ ಅಂತಃಸ್ಫೂರ್ತಿಗನುಗುಣವಾದ ನರ್ಸಿಂಗ್ ಕ್ಷೇತ್ರವನ್ನೇ ಆರಿಸಿಕೊಂಡರು. ಆ ದಿನಗಳಲ್ಲಿ ನರ್ಸಿಂಗ್ ಕೆಲಸವನ್ನು ಗೌರವಾನ್ವಿತ  ಕುಟುಂಬದ ಹೆಣ್ಣು ಮಕ್ಕಳು ಆರಿಸಿಕೊಳ್ಳುವುದು ಅಪರೂಪವಾಗಿತ್ತು. 

೧೮೫೪ರ ಇಸವಿಯ ಸಮಯದಲ್ಲಿ, ಇಂಗ್ಲೆಂಡ್ ಮತ್ತು ರಷ್ಯಾ ದೇಶಗಳ ನಡುವೆ ಭೀಕರ ಯುದ್ಧ ಶುರುವಾಗಿತ್ತು. ಆ ಯುದ್ಧದ ಕೇಂದ್ರ ಸ್ಥಾನವಾಗಿದ್ದ ಟರ್ಕಿ ಪ್ರಾಂತ್ಯದ ಸೇವೆಗೆಂದು ಫ್ಲಾರೆನ್ಸ್ ರವರನ್ನು ಅಂದಿನ ಬ್ರಿಟಿಷ್ ಸರಕಾರ ಕಳುಹಿಸಿತ್ತು. ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಗಾಯಾಳು ಸೈನಿಕರ ಆರೈಕೆಯ ಜವಾಬ್ದಾರಿ ಫ್ಲಾರೆನ್ಸ್ರವರ ತಂಡದ ಮೇಲಿತ್ತು.  ಭಾರಿ ಸಂಖ್ಯೆಯ ಗಾಯಾಳು ಸೈನಿಕರುಗಳನ್ನು ಕಿರಿದಾದ ಗಲೀಜು ಕೋಣೆಗಳಲ್ಲಿ ಮಲಗಿಸಲಾಗಿತ್ತು. ಆ ಕೋಣೆಗಳಲ್ಲಿ ಬೆಳಕು, ಗಾಳಿ ಮತ್ತು ನೀರಿನ ವ್ಯವಸ್ಥೆಯ ಕೊರತೆಯಿದ್ದು, ಚರಂಡಿಗಳ ಅನುಕೂಲವೇ ಇರಲಿಲ್ಲ. ಇಲಿಗಳು ಮತ್ತು ಕ್ರಿಮಿಕೀಟಗಳ ಓಡಾಟ ಆ ಕೋಣೆಗಳಲ್ಲಿ ಎಗ್ಗಿಲ್ಲದೆ ಸಾಗಿತ್ತು. ಆಹಾರ ಸಾಮಗ್ರಿಗಳು, ಸಾಬೂನುಗಳು ಮತ್ತು ಬ್ಯಾಂಡೇಜುಗಳ ಕೊರತೆ ತೀವ್ರವಾಗಿತ್ತು. ಯುದ್ಧದಲ್ಲಾದ ಗಾಯಗಳಿಗಿಂತ, 'ಕಾಲರಾ, ಟೈಫಾಯಿಡ್, ಭೇದಿ ಮತ್ತು ಪೌಷ್ಟಿಕ ಆಹಾರದ ಕೊರತೆ' ಮುಂತಾದ ರೋಗಗಳಿಂದ ಹೆಚ್ಚು ಸೈನಿಕರು ಅಲ್ಲಿ ಸಾಯುತ್ತಿದ್ದರು.  

ಆಸ್ಪತ್ರೆಯ ಪರಿಸ್ಥಿತಿಯ ಸುಧಾರಣೆಗಾಗಿ ತನ್ನ ಮೇಲಧಿಕಾರಿಗಳೊಂದಿಗೆ ಹೋರಾಡಲು ಫ್ಲಾರೆನ್ಸ್ ನಿರ್ಧರಿಸಿದ್ದರು. ಹಾಗಾಗಿ ಅವರು ಹಿರಿಯ ವೈದ್ಯರುಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೂ ಫ್ಲಾರೆನ್ಸ್ ತಮ್ಮ ಛಲವನ್ನು ಬಿಡದಾದರು. ತನ್ನ ಆಸ್ಪತ್ರೆಯ ದುಃಸ್ಥಿತಿಯನ್ನು ಇಂಗ್ಲೆಂಡ್ ಸರಕಾರದ ಗಮನಕ್ಕೂ ತರುವುದರಲ್ಲಿ ಫ್ಲಾರೆನ್ಸ್ ಹಿಂಜರಿಯಲಿಲ್ಲ. ಫ್ಲಾರೆನ್ಸ್ರವರು ಗಣಿತ ಮತ್ತು ಸಂಖ್ಯಾಶಾಸ್ತ್ರಗಳಲ್ಲೂ ನಿಪುಣೆಯಾಗಿದ್ದರು. ತಾನೇ ವಿನ್ಯಾಸಗೊಳಿಸಿದ 'ಪೈ ಛಾರ್ಟ(Pai Chart)ನ್ನು ಹೋಲುವ ಕಾಕ್ಸ್ಕುಂಬ್ ನಕ್ಷೆ (coxcomb diagrams)'ಗಳ ಸಹಾಯದಿಂದ ತನ್ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಫ್ಲಾರೆನ್ಸ್, 'ಯುದ್ಧದ ಕಾರಣಗಳಿಗಿಂತ, ಯುದ್ಧೇತರ ಕಾರಣಗಳಿಂದಾಗಿ ಸೈನಿಕರ ಸಾವುಗಳು ಹೆಚ್ಚಾಗುತ್ತಿದೆ' ಎಂದು ಅವರುಗಳು ಮನಗಾಣುವಂತೆ ಮಾಡಿದರು. ಫ್ಲಾರೆನ್ಸ್ ರ ಹೋರಾಟಕ್ಕೆ  ಮನ್ನಣೆ ದೊರೆತಿತ್ತು. ಸಮಸ್ಯೆಯನ್ನು ಒಪ್ಪಿಕೊಂಡ ಹಿರಿಯ ಅಧಿಕಾರಿಗಳು ಔಷಧ, ಆಹಾರ ಮತ್ತು ಸ್ವಚ್ಛತಾ ಸಾಮಗ್ರಿಗಳ ಸರಬರಾಜನ್ನು ಹೆಚ್ಚಿಸಿದರು. ತನ್ನ ತಂಡದ ಸದಸ್ಯರುಗಳೊಂದಿಗೆ ಮಾತನಾಡಿದ ಫ್ಲಾರೆನ್ಸ್, 'ಸ್ವಚ್ಛತೆ ಮತ್ತು ಚಿಕಿತ್ಸಾ ವಿಧಿ-ವಿಧಾನ'ಗಳ ಪಾಲನೆಗೆ  ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವಂತೆ ಆಗ್ರಹಿಸಿದರು. 'ಸಾಬೂನಿನಿಂದ ಆಗಾಗ ಕೈ ತೊಳೆಯುವ ವಿಧಾನ'ವನ್ನು ಅಂದೇ ಫ್ಲಾರೆನ್ಸ್ ರವರು ಸಾರಿ ಸಾರಿ ತಿಳಿಸಿದ್ದರು. ಫ್ಲಾರೆನ್ಸ್ ರ ಈ ಎಲ್ಲ ಕ್ರಮಗಳಿಂದ ಅವರ ಆಸ್ಪತ್ರೆಯ ನೈರ್ಮಲ್ಯ ಮಟ್ಟ ಸುಧಾರಿಸಿತ್ತು.  ಆಸ್ಪತ್ರೆಯಲ್ಲಿನ  ಗಾಯಾಳು ಸೈನಿಕರ ಸಾವು, ಮುಂಚಿನ ಸಂಖ್ಯೆಯ ಮೂರನೇ ಒಂದು ಭಾಗದಷ್ಟಕ್ಕೆ ಇಳಿದಿತ್ತು. ಫ್ಲಾರೆನ್ಸ್ ರ ಶ್ರಮ ಮತ್ತು ಸಾಧನೆ ಇಂಗ್ಲೆಂಡಿನ ಸರಕಾರದ ಗಮನವನ್ನು ಕೂಡ ಸೆಳೆದಿತ್ತು. 

ಫ್ಲಾರೆನ್ಸ್ ರವರು ತಮ್ಮ ರೋಗಿಗಳ ಬಗ್ಗೆ ಅಪಾರವಾದ ಅನುಕಂಪವನ್ನು ಹೊಂದಿದ್ದರು. ಪ್ರತಿ ರೋಗಿಯ ಹೆಸರನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದ ಫ್ಲಾರೆನ್ಸ್ ರವರಲ್ಲಿ, ರೋಗಿಗಳ ನೋವನ್ನು ನಿವಾರಿಸುವ ಮಾಂತ್ರಿಕ ಶಕ್ತಿಯೊಂದಿತ್ತು. ರೋಗಿಗಳ ಆರೋಗ್ಯದ ವಿಷಯವನ್ನು ಅವರವರ ಕುಟುಂಬಗಳಿಗೆ ಪತ್ರಗಳನ್ನು ಬರೆದು ಫ್ಲಾರೆನ್ಸ್ ತಿಳಿಸುತ್ತಿದ್ದರು. ಫ್ಲಾರೆನ್ಸ್ ವಾರ್ಡುಗಳ ಭೇಟಿಗೆಂದು ಬಂದರೆ, ಗಾಯಾಳು ಸೈನಿಕರ ಚೈತನ್ಯ ಇಮ್ಮಡಿಯಾಗುತ್ತಿತ್ತು. ರಾತ್ರಿ ವೇಳೆ ಅವರು ವಾರ್ಡುಗಳ ಭೇಟಿ ನೀಡುವಾಗ ತಪ್ಪದೆ ದೀಪವೊಂದನ್ನು ಹಿಡಿದು ಬರುತ್ತಿದ್ದರು. ಹಾಗಾಗಿ ಸೈನಿಕರು ಅವರನ್ನು 'ದೀಪದ ಮಹಿಳೆ' ಎಂದೇ ಕರೆಯುತ್ತಿದ್ದರು. 

೧೮೫೬ನೇ ಇಸವಿಯಲ್ಲಿ ಯುದ್ಧ ಮುಗಿದನಂತರ 'ದೇಶದ ಹೆಮ್ಮೆ'ಯಾಗಿ ಫ್ಲಾರೆನ್ಸ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿದ್ದರು. ತನ್ನ ಸ್ವಂತ ಉಳಿತಾಯದ ಮತ್ತು ಬಹುಮಾನಗಳಿಂದ ಗಳಿಸಿದ ೪೫,೦೦೦ ಪೌಂಡ್ಗಳಷ್ಟು ಬೃಹತ್ತಾದ ಮೊತ್ತವನ್ನು ವಿನಿಯೋಗಿಸಿ, ಫ್ಲಾರೆನ್ಸ್ ೧೮೬೦ರಲ್ಲಿ, ಲಂಡನ್ ನಗರದಲ್ಲಿ 'ನೈಟಿಂಗೇಲ್ ಟ್ರೈನಿಂಗ್ ಸ್ಕೂಲ್ ಫಾರ್ ನರ್ಸಸ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.  ನರ್ಸ್ಗಳಿಗೆ ತರಬೇತಿಯನ್ನು ನೀಡುವ ವಿಶ್ವದ ಮೊದಲ ಸಂಸ್ಥೆ ಅದಾಗಿತ್ತು. ನರ್ಸಿಂಗ್ ಆದರ್ಶಗಳನ್ನು ತನ್ನ ಶಾಲೆಯಲ್ಲಿ ಬೋಧಿಸಿದ ಫ್ಲಾರೆನ್ಸ್, ನರ್ಸಿಂಗ್ ವೃತ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು. 'ರೋಗಿಗಳಿಗೆ, ನೀವೆಷ್ಟು ಕಾಳಜಿಯನ್ನು ಹೊಂದಿದ್ದೀರಿ ಎಂಬುದು ಮುಖ್ಯ, ನಿಮಗೆಷ್ಟು ಗೊತ್ತೆಂಬುದು ಅವರುಗಳಿಗೆ ಮುಖ್ಯವಲ್ಲ' ಎಂಬ ಧ್ಯೇಯ ವಾಕ್ಯವನ್ನು ಫ್ಲಾರೆನ್ಸ್ ತಮ್ಮ ನರ್ಸಿಂಗ್ ವಿದ್ಯಾರ್ಥಿಗಳಿಗೆ ತಪ್ಪದೆ ಬೋಧಿಸುತ್ತಿದ್ದರು. 

'ಎಲ್ಲರ ಆರೋಗ್ಯಕ್ಕಾಗಿ ಸಮಗ್ರ ಪ್ರಯತ್ನ ನಡೆಸೋಣ' ಎಂಬುದು ಫ್ಲಾರೆನ್ಸ್ ರ ಗುರಿಯಾಗಿತ್ತು. ನರ್ಸಿಂಗ್ ವೃತ್ತಿಗೆ ಅವರು ನೀಡಿದ ಹೊಸ ರೂಪುರೇಷೆಗಳು ಫಲ ನೀಡಿ, ಇಡೀ ಇಂಗ್ಲೆಂಡ್ ದೇಶದ ಆಸ್ಪತ್ರೆಗಳ ಪರಿಸ್ಥಿತಿಯಲ್ಲಿ ಭಾರಿ ಸುಧಾರಣೆ ಉಂಟಾಗಿತ್ತು. ಫ್ಲಾರೆನ್ಸ್ ರ ಬೋಧನೆಯ ಪ್ರೇರಣೆಯಿಂದ, ಅಂದು ಇಂಗ್ಲೆಂಡ್ ದೇಶದ ಆಳ್ವಿಕೆಗೆ ಒಳಪಟ್ಟಿದ್ದ ಭಾರತದ ಆಸ್ಪತ್ರೆಗಳಲ್ಲೂ ಸುಧಾರಣೆ ಕಂಡು ಬಂದಿತ್ತು.  ಅಂದಿನ ಇಂಗ್ಲೆಂಡ್ ದೇಶದ ರಾಜರಾದ ಕಿಂಗ್ ಎಡ್ವರ್ಡ್ರವರು, ಫ್ಲಾರೆನ್ಸ್ ರ ಸೇವೆಯನ್ನು ಗುರುತಿಸಿ ಅವರಿಗೆ 'ಆರ್ಡರ್ ಆಫ್ ಮೆರಿಟ್' ಎಂಬ ಗೌರವವನ್ನು ೧೯೦೮ರಲ್ಲಿ ನೀಡಿದ್ದರು.  

ಫ್ಲಾರೆನ್ಸ್ ರವರು ೨೦೦ ವರ್ಷಗಳ ಹಿಂದೆ ಬೋಧಿಸಿದ 'ಸ್ವಚ್ಛತೆ, ಚಿಕಿತ್ಸಾ ವಿಧಿ-ವಿಧಾನ ಮತ್ತು ಸಾಬೂನಿನಿಂದ ಆಗಾಗ ಕೈ ತೊಳೆಯುವುದು' ಮುಂತಾದ ಪ್ರಕ್ರಿಯೆಗಳು ಇಂದಿಗೂ ಪ್ರಸ್ತುತವಾಗಿವೆ. ನಮ್ಮ ಇಂದಿನ ಕೊರೋನಾ ವಿರುದ್ಧದ ಹೋರಾಟಕ್ಕೆ ಅವುಗಳೇ ದಿವ್ಯವಾದ ಅಸ್ತ್ರಗಳಾಗಿವೆ. 'ರೋಗಿಗಳ ಚಿಕಿತ್ಸೆಗೆ ಅವರವರ ಮನೆಗಳೇ ಅತ್ತ್ಯುತ್ತಮ ಚಿಕಿತ್ಸಾ ತಾಣಗಳೆಂಬ' ಸರಳ ಸತ್ಯವನ್ನು ಫ್ಲಾರೆನ್ಸ್ ರವರು ಅಂದೇ ಬೋಧಿಸಿದ್ದರು. ಆದರಿಂದು ನಾವು ಅವರ ಬೋಧನೆಗಳನ್ನು ಮರೆತ್ತಿದ್ದೇವೆ. 'ನಿರ್ಬಂಧನಾ  (quarantine) ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಇಂದು ನಮ್ಮ ಆರೋಗ್ಯಾಧಿಕಾರಿಗಳಿಗಿರುವ ಗೊಂದಲ ಮತ್ತು ಅವರುಗಳು ಅನುಸರಿಸುತ್ತಿರುವ ಚಂಚಲ ನಡೆಗಳು, ನಮಗೆ ಫ್ಲಾರೆನ್ಸ್ ರವರು ಅಂದು ಬೋಧಿಸಿದ ಸರಳ ವಿಧಾನಗಳ ಪ್ರಾಮುಖ್ಯತೆಯನ್ನು ನೆನಪಿಸುತ್ತವೆ' ಎಂದು ರೋಹಿಣಿ ತನ್ನ ಸಂಶೋಧನಾ ಡೈರಿಯಲ್ಲಿ ಬರೆದುಕೊಂಡಿದ್ದಳು.  

ಫ್ಲಾರೆನ್ಸ್ ನೈಟಿಂಗೇಲ್ ರವರ ಸ್ಮರಣಾರ್ಥವಾಗಿ, ಇಂದಿಗೂ ವಿಶ್ವದಾದ್ಯಂತ ಹೊಸದಾಗಿ ನರ್ಸಿಂಗ್ ವೃತ್ತಿಯ ಪದವಿಯನ್ನು ಪಡೆದ ಅಭ್ಯರ್ಥಿಗಳು ತಮ್ಮ 'ನರ್ಸಿಂಗ್ ಪ್ರಮಾಣ ವಚನ'ವನ್ನು ಅವರ ಹೆಸರಿನಲ್ಲೇ ಸ್ವೀಕರಿಸುತ್ತಾರೆ. ಕೋವಿಡ್ ನಿಯಂತ್ರಣಕ್ಕಾಗೇ ಇತ್ತೀಚೆಗೆ ಲಂಡನ್ನಲ್ಲಿ ಆರಂಭಿಸಿದ ಐದು ಮತ್ತು ಐರ್ಲೆಂಡಿನ ಎರಡು ಚಿಕಿತ್ಸಾ ಕೇಂದ್ರಗಳಿಗೆ ಫ್ಲಾರೆನ್ಸ್ರ ಹೆಸರನ್ನೇ ಇಡಲಾಗಿದೆ. 

***

ಅಂದಿನ ಸಮಾರಂಭದ ಮುಂದಿನ ಕಾರ್ಯಕ್ರಮದ ಅಂಗವಾಗಿ ಆಯ್ಕೆಯಾಗಿದ್ದ ನಾಲ್ಕು ಕೊರೋನಾ ಸೇನಾನಿಗಳಿಗೆ ಫ್ಲಾರೆನ್ಸ್ ನೈಟಿಂಗೇಲ್ ಪದಕಗಳ ವಿತರಣೆಯನ್ನು ಮಾಡಲಾಯಿತು. ತಮ್ಮ ಪದಕಗಳನ್ನು ಪ್ರದರ್ಶಿಸುತ್ತಾ ವಿನಮ್ರತೆಯಿಂದ ವೇದಿಕೆಯ ಮೇಲೆ ನಿಂತ ನಾಲ್ಕೂ ಕೊರೋನಾ ಸೇನಾನಿಗಳಿಗೆ, ಸಭಿಕರುಗಳೆಲ್ಲಾ ದೀರ್ಘ ಕರತಾಡನ ಮಾಡುವ ಮೂಲಕ ತಮ್ಮ ಗೌರವವನ್ನು ಸಲ್ಲಿಸಿ ದರು. 

ಕೊರೋನಾ ಸೇನಾನಿಗಳ ಪೈಕಿ ಮೊದಲನೆಯವರಾಗಿ ಮಾತನಾಡಲು ಆರಂಭಿಸಿದ ವಸಂತರವರ  ಕಣ್ಣಾಲೆಗಳು ತುಂಬಿ ಬಂದಿದ್ದವು. ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಆಸ್ಪತ್ರೆಯ ಆಡಳಿತ ಮಂಡಳಿಗೆ  ಮತ್ತು ಸಭಿಕರಿಗೆ ತಮ್ಮ ಧನ್ಯವಾದಗಳನ್ನು ಅವರು ವ್ಯಕ್ತಪಡಿಸಿದರು.

'ಬಾಲ್ಯದ ದಿನಗಳಿಂದಲೂ ವಸಂತ, ಓರ್ವ ವಿಭಿನ್ನ ಬಾಲಕಿಯಾಗಿದ್ದಳು. ಅವಳ ವಯಸ್ಸು ಕೇವಲ ೧೦ ವರ್ಷಗಳಾಗಿದ್ದಾಗಲೇ, ವಸಂತಳ ಪ್ರೌಢಿಮೆ ಅವಳ ವಯಸ್ಸಿಗೆ ಮೀರಿದ್ದಾಗಿತ್ತು ಎಂಬುದನ್ನು ಅವರ ತಾಯಿ ಮನಗಂಡಿದ್ದರು. ಆ ದಿನಗಳಲ್ಲಿ ವಸಂತಳ ಅಜ್ಜಿ ಸ್ನಾನದ ಮನೆಯಲ್ಲಿ ಬಿದ್ದು ತನ್ನ ಬಲಗಾಲನ್ನು ಮುರಿದುಕೊಂಡಿದ್ದಾಗ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಧೈರ್ಯಶಾಲಿಯಾದ ವಸಂತ ಏಕಾಂಗಿಯಾಗಿದ್ದರೂ, ನೆರೆಹೊರೆಯವರ ಸಹಾಯವನ್ನು ಪಡೆದು, ತನ್ನ ಅಜ್ಜಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಮುರಿದ ಕಾಲಿಗೆ ಹಾಕಿದ ಭಾರಿ ಬ್ಯಾಂಡೇಜಿನ ಸಹಿತ ಅವಳಜ್ಜಿ ಮೂರು ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು.  ಆ ಇಡೀ ಮೂರು ತಿಂಗಳುಗಳ ಕಾಲ ಅವಳಜ್ಜಿಯ ಸೇವೆಗೆ ಅವಿರತವಾಗಿ ನಿಂತಿದ್ದವಳು ಬಾಲಕಿ ವಸಂತ. ಆ ಅವಧಿಯಲ್ಲೇ ವಸಂತ ನರ್ಸಿಂಗ್ ವೃತ್ತಿಯ ಸಾಕಷ್ಟು ಕೆಲಸಗಳನ್ನು ಕಲಿತಿದ್ದಳು. ಅಂದಿನ ದಿನಗಳಲ್ಲೇ ಮುಂದೆ ತಾನು ನರ್ಸ್ ಆಗಬೇಕೆಂಬ ಬಯಕೆ ಬಾಲಕಿ ವಸಂತಳ ಮನಸ್ಸಿನಲ್ಲಿ ಮೂಡಿತ್ತು. 

೨೨ರ ಯುವತಿ ವಸಂತ ನರ್ಸಾಗಿ ಜಿಲ್ಲಾ ಆಸ್ಪತ್ರೆಯನ್ನು ಸೇರಿದಾಗ 'ಅವರ ಕನಸು ನನಸಾಗಿತ್ತು.' ಅರ್ಪಣಾ ಮನೋಭಾವದ ವೃತ್ತಿಪರರಾಗಿದ್ದ ವಸಂತ ತನ್ನ ಆಸ್ಪತ್ರೆಯಲ್ಲಿ ಬಹು ಬೇಗ ಎಲ್ಲರ ಮನಗಳನ್ನು ಗೆದ್ದಿದರು. ಆದರೆ ಮದುವೆಯ ವಿಷಯದಲ್ಲಿ ಅವರಿಗಿದ್ದ ನಿರಾಸಕ್ತಿ, ಅವರ ತಾಯಿ ಅನಸೂಯರಿಗೆ ಆತಂಕವನ್ನುಂಟು ಮಾಡಿತ್ತು. 'ಮದುವೆಯಾಗ ಬೇಕಾದ ಅವಶ್ಯಕತೆ ಎಲ್ಲಿದೆ? ನಮ್ಮ ದೇಶದಲ್ಲಿ ಸಹಸ್ರಾರು ಅನಾಥ ಮಕ್ಕಳಿದ್ದಾರೆ. ಆ ತರಹದ ಅನಾಥ ಮಗುವೊಂದ್ದಕ್ಕೆ ನಾನು ತಾಯಿಯಾಗಬಾರದೇಕೆ?' ಎಂದು ವಸಂತ ತಾಯಿಯನ್ನು ಕೇಳುತ್ತಿದ್ದರು. 

ಬಡ ಕುಟುಂಬದಲ್ಲಿ ಜನಿಸಿದ ಸುಮಿತ್ರ, ವಸಂತಳ ಬಾಲ್ಯದ ಸ್ನೇಹಿತಳಾಗಿದ್ದಳು. ಪ್ರಾಯಕ್ಕೆ ಬಂದಿದ್ದ ಸುಮಿತ್ರ ಒಬ್ಬ ಹುಡುಗನ ಪ್ರೇಮಜಾಲಕ್ಕೆ ಬಿದ್ದಿದ್ದಳು. ದಿನಗಳು ಕಳೆದಂತೆ ಸುಮಿತ್ರ ಬಸುರಿ ಕೂಡ ಆಗಿಬಿಟ್ಟಿದ್ದಳು. ಆದರೆ ಸುಮಿತ್ರಾಳ ಕೈಬಿಟ್ಟ ಆ ಹುಡುಗ ಬೇರೊಂದು ಊರಿಗೆ ಹೋಗಿಬಿಟ್ಟಿದ್ದನು. ಅವನ ನಿರೀಕ್ಷೆಯಲ್ಲೇ ಕಾಲವನ್ನು ತಳ್ಳುತ್ತಿದ್ದ ಸುಮಿತ್ರಳ ಗರ್ಭ ಬೆಳೆಯುತ್ತಾ ಸಾಗಿತ್ತು. ಒಂದು ದಿನ ಹೆರಿಗೆಗಾಗಿ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವಳಿಗೆ ಹೆರಿಗೆ ಮಾಡಿಸುವ ಕಾರ್ಯ ವಸಂತರ ಹೆಗಲಿಗೆ ಬಿದ್ದಿತ್ತು. ತೀವ್ರ ನೋವನ್ನು ಅನುಭವಿಸುತ್ತಿದ್ದ ಸುಮಿತ್ರಾಳ ಹೆರಿಗೆ ಕಷ್ಟವಾಗಿದೆಯೆಂಬುದು ವೈದ್ಯರ ಅಭಿಪ್ರಾಯವಾಗಿತ್ತು. ವಿಪರೀತ ರಕ್ತಸ್ರಾವದ ನಡುವೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ಸುಮಿತ್ರಾಳ ಜೀವವನ್ನು, ವಸಂತ ಮತ್ತವರ ವೈದ್ಯರು ಉಳಿಸದಾದರು. ಮರಣಾವಸ್ಥೆಯಲ್ಲಿದ್ದ ಸುಮಿತ್ರಾ, ವಸಂತರತ್ತ ನೋಡುತ್ತಾ 'ನನ್ನ ಮಗುವಿಗೆ ನೀನೇ ತಾಯಿ' ಎಂದಿದ್ದಳು. ಕೈ ಸೇರಿದ ಹೆಣ್ಣುಮಗುವನ್ನು 'ದೇವರಿತ್ತ ವರ'ವೆಂದೇ ಭಾವಿಸಿದ ವಸಂತ ಮಗುವಿನ ಪಾಲನೆಯನ್ನು ಅಕ್ಕರೆಯಿಂದ ಆರಂಭಿಸಿದ್ದರು. ಆ ಸುಂದರ ಹೆಣ್ಣು ಮಗುವಿಗೆ ವಸಂತ ನೀಡಿದ ಮುದ್ದಾದ ಹೆಸರು 'ಆದ್ಯ.'  ಅಕ್ಕರೆಯ ಪಾಲನೆಯೊಂದಿಗೆ ಬೆಳೆಯುತ್ತಾ ಆದ್ಯ, ವಸಂತರ ಮನಸ್ಸನ್ನು ಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದ್ದಳು. ವಸಂತ ಆಸ್ಪತ್ರೆಯ ಕೆಲಸದ ಮೇಲೆ ತೆರೆಳಿದಾಗ ಆದ್ಯಳ ಲಾಲನೆ, ವಸಂತರ ತಾಯಿ ಅನಸೂಯರವರದಾಗುತ್ತಿತ್ತು.

ಆದ್ಯಳ ಪಾಲನೆ ಪೋಷಣೆಯಲ್ಲಿ ಮೂರು ವರುಷಗಳು ಕಳೆದಿತ್ತು. ವಸಂತ ಹಿರಿಯ ನರ್ಸಾಗಿ ಬಡ್ತಿ ಹೊಂದಿದ್ದರು. ಆ ದಿನಗಳಲ್ಲಿ ಕೋವಿಡ್ ವೈರಾಣು ತನ್ನ ಕೆನ್ನಾಲಿಗೆಯನ್ನು ಭಯಾನಕವಾಗಿ ಚಾಚಿತ್ತು. ಕೋವಿಡ್ ರೋಗಿಗಳ ಚಿಕಿತ್ಸೆಗೆಂದು ಆಯ್ಕೆಗೊಂಡ ಸಿಬ್ಬಂಧಿಯಲ್ಲಿ, ವೃತ್ತಿಪರತೆ ಮತ್ತು ಅರ್ಪಣಾ ಮನೋಭಾವಗಳಿಗೆ ಹೆಸರಾದ ವಸಂತರವರು ಮೊದಲಿಗರಾಗಿದ್ದರು.  ಆಸ್ಪತ್ರೆಯ ಆಡಳಿತ ಮಂಡಳಿಯ ಸೂಚನೆಯ ಪ್ರಕಾರ ವಸಂತ ಮೂರು ವಾರಗಳ ಕಾಲದ ಸತತ ಸೇವೆಯನ್ನು ಆಸ್ಪತ್ರೆಯಲ್ಲೇ ಉಳಿದು ಸಲ್ಲಿಸಬೇಕಿತ್ತು. ಅದಾದನಂತರ ಮನೆಗೆ ಹಿಂತಿರುಗುವ ಮುನ್ನ, ಆಸ್ಪತ್ರೆಯಲ್ಲೇ ಮತ್ತೆರಡು ವಾರಗಳ ನಿರ್ಬಂಧನಾ  ಅವಧಿಯನ್ನು ವಸಂತ ಪೂರ್ಣಗೊಳಿಸಬೇಕಿತ್ತು. 

ತನ್ನ ಅಮ್ಮನ ಮೇಲೆ ಆಸ್ಪತ್ರೆಯವರು ವಿಧಿಸಿದ್ದ ಕರ್ತವ್ಯದ ಹೊರೆಯ ಭಾರವನ್ನರಿಯುವ ವಯಸ್ಸು ಪುಟ್ಟ ಬಾಲಕಿ ಆದ್ಯಳದಾಗಿತ್ತಿಲ್ಲ. ಆಸ್ಪತ್ರೆಗೆ ಹೊರಟು ನಿಂತ ಅಮ್ಮನಿಗೆ, ಎಂದಿನ ಉತ್ಸಾಹದಿಂದಲೇ ಆದ್ಯ 'ಟಾ ಟಾ' ಹೇಳಿದ್ದಳು. ಆದರೆ ಆದ್ಯಳನ್ನು ತನ್ನ ತೋಳುಗಳ ಮೇಲೆ ಕೂರಿಸಿಕೊಂಡಿದ್ದ ಅನಸೂಯಮ್ಮರವರ ಕಣ್ಣುಗಳಿಂದ ಮಾತ್ರ ಕಣ್ಣೀರ ಕೋಡಿ ಹರಿದಿತ್ತು. ತನ್ನ ಕರ್ತವ್ಯ ಕಠಿಣವಾದದ್ದು ಮತ್ತು ದೀರ್ಘವಾದದ್ದು ಎಂದು ವಸಂತರಿಗೆ ತಿಳಿದಿತ್ತು. ಆದರೂ ತನ್ನಮ್ಮ ಮತ್ತು ಪ್ರೀತಿಯ ಮಗಳ ಮುಂದೆ ದುಃಖವನ್ನು ತೋರ್ಪಡಿಸಲಿಚ್ಛಿಸದ ವಸಂತ, ಕಣ್ಣೀರನ್ನು ತಡೆಹಿಡಿದೇ ಆಸ್ಪತೆಯ ವ್ಯಾನನ್ನೇರಿದ್ದರು. 

ವಸಂತರ ಸತತ ಸೇವೆಗೆ ದಿನ ರಾತ್ರಿಗಳ ವ್ಯತ್ಯಾಸವಿರಲಿಲ್ಲ. 'ಐ.ಸಿ.ಯು.'ನಲ್ಲಿದ್ದ ೮ ರೋಗಿಗಳೂ ಸೇರಿದಂತೆ, ೩೨ ಕೋವಿಡ್ ರೋಗಿಗಳನ್ನು ನಿಭಾಯಿಸುವ ಜವಾಬ್ದಾರಿ ವಸಂತರ ತಂಡದ್ದಾಗಿತ್ತು. ಅವರುಗಳಲ್ಲಿ ಮೂರು ರೋಗಿಗಳಿಗೆ 'ವೆಂಟಿಲೇಟರ್' ಕೂಡ ಅಳವಡಿಸಲಾಗಿತ್ತು. ವಸಂತರ ತಂಡದ ಎಲ್ಲಾ  ಸದಸ್ಯರುಗಳಿಗೂ 'ಪಿ.ಪಿ.ಇ.' ತೊಡುಗೆಗಳು ದೊರೆತ್ತದ್ದು ಅವರುಗಳ ಅದೃಷ್ಟವೇ ಆಗಿತ್ತು. ಆದರೆ ಆ ತೊಡುಗೆಗಳನ್ನು ಧರಿಸುವುದೇ ಬಹಳ ತ್ರಾಸದಾಯಕವಾಗಿತ್ತು. ಇಡೀ ದೇಹವನ್ನೇ ಆವರಿಸುತ್ತಿದ್ದ ಆ ತೊಡುಗೆ,  ರಕ್ಷಕ ಪ್ಲಾಸ್ಟಿಕ್ನಿಂದ ತಯಾರಿಸಿದ್ದಾಗಿತ್ತು. ತೊಡುಗೆಯೊಂದಿಗೆ ಶಿರಸ್ತ್ರಣ, ದಪ್ಪವಾದ ಕಪ್ಪನೆಯ ಕನ್ನಡಕ ಮತ್ತು ಉಸಿರಾಟದ ಉಪಕರಣಗಳನ್ನೂ ಧರಿಸಬೇಕಾಗಿತ್ತು. 'ಪಿ.ಪಿ.ಇ. ತೊಡುಗೆಯನ್ನು ಧರಿಸಿದ ಮಾತ್ರಕ್ಕೆ ಸೋಂಕಿನ ಸಾಧ್ಯತೆ ಇಲ್ಲವೇ ಇಲ್ಲವೆಂದು ಹೇಳಲಾಗದು' ಎಂಬುದು ತಜ್ಞರ ಅಭಿಪ್ರಾಯವಾಗಿತ್ತು. ಆದರೂ ಆ ತೊಡುಗೆಯನ್ನು ಧರಿಸದೆ ಬೇರೇ ದಾರಿಯಿರಲಿಲ್ಲ. ಪಿ.ಪಿ.ಇ ತೊಡುಗೆಯನ್ನು ಧರಿಸಿ, ಮಲ ಮೂತ್ರ ವಿಸರ್ಜನೆಗೆ ಹೋಗುವುದು ಅಸಾಧ್ಯವಾಗಿತ್ತು. ಆದುದರಿಂದ ಆ ತೊಡುಗೆಯೊಂದಿಗೆ ವಿಶೇಷ ಪ್ಯಾಡ್ಗಳನ್ನು ಧರಿಸುವುದೂ ಅನಿವಾರ್ಯವಾಗಿತ್ತು. ಸುಡು ಬೇಸಿಗೆ ಈ ಎಲ್ಲಾ ಕಷ್ಟಗಳ ತ್ರಾಸವನ್ನು ಇನ್ನೂ ಹೆಚ್ಚಿಸಿತ್ತು. ಆದರೆ ವಸಂತರವರಿಗೆ ಕರ್ತವ್ಯದ ಕರೆ ಎಲ್ಲವುದಕ್ಕಿಂತಾ ಮಿಗಿಲಾಗಿತ್ತು.

ತನ್ನ ಕೆಲಸದಲ್ಲಿ ನಿಪುಣೆಯಾದ ವಸಂತರಿಗೆ, ತನ್ನ ಕರ್ತವ್ಯದೊತ್ತಡವನ್ನು ನಿಭಾಯಿಸುವುದು ಹೇಗೆ ಎಂದು ಚೆನ್ನಾಗೇ ತಿಳಿದಿತ್ತು. ಆದರೆ ತನ್ನ ಪ್ರೀತಿಯ ಮಗಳು ಆದ್ಯಳನ್ನು ಅಷ್ಟೊಂದು ದಿನ ಬಿಟ್ಟಿರುವುದು ಸಹಿಸಿಕೊಳ್ಳಲಾರದ ವೇದನೆಯಾಗಿತ್ತು. ತನ್ನಮ್ಮನಿಗೆ ಮೊಬೈಲ್ನಿಂದ ವಿಡಿಯೋ ಕರೆ ಮಾಡುವುದು ಹೇಗೆಂಬುದು ಆದ್ಯಳಿಗೆ ತಿಳಿದಿತ್ತು. ಪಿ.ಪಿ.ಇ. ತೊಡುಗೆಯನ್ನು ಧರಿಸಿ ಕರ್ತ್ಯವದಲ್ಲಿ ನಿರತೆಯಾಗಿದ್ದ ವಸಂತಳಿಗೆ ಆದ್ಯಳ ಕರೆಯನ್ನು ಎಷ್ಟೋ ಬಾರಿ ಸ್ವೀಕರಿಸಲಾಗುತ್ತಿರಲ್ಲಿಲ್ಲ. ಅಂತೂ ಒಂದು ದಿನ ವಸಂತ ತನ್ನ ಮಗಳ ಕರೆಯನ್ನು ಸ್ವೀಕರಿಸಿದಾಗ, ಆದ್ಯ ಅಳುತ್ತಲೇ ಮಾತನಾಡಿದ್ದಳು. 'ಅಮ್ಮ, ಮನೆಗ್ ಬಾ. ಈಗಲೇ ಮನೆಗ್ ಬಾ. ಮನೆಗೆ ನೀನ್ಯಾಕೆ ಬರುತ್ತಿಲ್ಲ? ನೀನಿವತ್ತು ಬರ್ದಿದ್ರೆ, ನಾನ್ ಊಟನೇ ಮಾಡಲ್ಲ. ನೋಡಿಲ್ಲಿ, ಅನಸೂಯಜ್ಜಿನೂ ಅಳ್ತಿದಾರೆ.' ತಮ್ಮ ಮಗಳನ್ನು ಸಮಾಧಾನ ಪಡಿಸುವ ಮಾತುಗಳೇ ತೋಚದಾದ ವಸಂತ, 'ನಂಚಿನ್ನ ಅಳಬೇಡ. ನಾನು ಬೇಗ ಬಂದ್ಬಿಡ್ತೀನಿ. ಅಜ್ಜಿ ನಿಂಜೊತೆ ಇದ್ದರಲ್ಲಾ. ಅವರೇ ನಿಂಗ್ ಊಟ ಮಾಡಿಸ್ತಾರೆ. ಅಮ್ಮ....... , ಆದ್ಯಂಗೆ ಮಾವ್ನ ಹಣ್ಣು ಕೊಡ್ಸು.  ನಾನು ಬರುವಾಗ ಅವಳಿಗೆ ದೊಡ್ಡ ದೊಡ್ಡ ಚೊಕೊಲೇಟ್ಸ್ ತರ್ತೀನಿ' ಎಂದು ಹೇಳುವಷ್ಟರಲ್ಲೇ, ಮುಂದಿನ ಮಾತುಗಳು ಅವರ ಕಂಠದಿಂದ ಹೊರಡದಾಗಿತ್ತು. ಪ್ರತಿ ಬಾರಿಯೂ  ಮೊಬೈಲ್ ಕರೆಗಳಿಂದ ತನ್ನಮ್ಮನನ್ನು, ಮಗಳನ್ನು, ವಸಂತ ಸಂತೈಸದಾಗುತ್ತಿದ್ದರು. ಬಿಸಿ ಮುತ್ತುಗಳು ಮತ್ತು ಅಳುಗಳೊಂದಿಗೆ  ಕರೆಗಳು ಕೊನೆಗೊಳ್ಳುವುದು ಸಾಮಾನ್ಯವಾಗಿ ಹೋಗಿತ್ತು. 

ಮೂರು ವಾರಗಳ ಕೋವಿಡ್ ಕರ್ತವ್ಯ, ವಸಂತರಿಗೆ ಮೂರು ವರ್ಷಗಳದ್ದಾಗಿತ್ತೇನೋ ಎಂದೆನಿಸಿತ್ತು. ಅಂತೂ ಮೂರು ವಾರಗಳ ಕೋವಿಡ್ ವಾರ್ಡ್ನ ಕರ್ತವ್ಯ ಮುಗಿಸಿ, ಕ್ವಾರಂಟೈನ್ ವಾರ್ಡ್ಗೆ ಹೊರಡುವ ಸಮಯ ಬಂದೇ ಬಿಟ್ಟಿತ್ತು. ಕ್ವಾರಂಟೈನ್ ವಾರ್ಡ್ಗೆ ಸೇರುವ ಮುನ್ನ ದೂರದಿಂದ ಮಾತ್ರ ತನ್ನ ಮಗಳನ್ನು ನೋಡುವ ಸದವಕಾಶ ಅಂದು ವಸಂತಳದಾಗಿತ್ತು. ಆದ್ಯಳನ್ನು ಎತ್ತಿಕೊಂಡಿದ್ದ ಅನಸೂಯಮ್ಮ ಅಂದು ಆಸ್ಪತ್ರೆಯ ಆವರಣದ ಮೂಲೆಯೊಂದರಲ್ಲಿ ನಿಂತಿದ್ದರು. ಕರುಳು ಕಿತ್ತು ಬರುವಂತಹ  ಅಂದಿನ ಸನ್ನಿವೇಶದ  ನೇರ ಪ್ರಸಾರ ಮಾಡಲು ವಿವಿಧ ಟಿ.ವಿ. ವಾಹಿನಿಗಳು ತಮ್ಮ ಕ್ಯಾಮೆರಾಗಳೊಂದಿಗೆ ಸಿದ್ಧವಾಗಿ ನಿಂತಿದ್ದವು. ಆದ್ಯಳನ್ನು ಕಂಡಾಕ್ಷಣ ವಸಂತ ತಮ್ಮ ಕಣ್ಣೀರನ್ನು ತಡೆಹಿಡಿಯದಾಗಿದ್ದರು. ಆದ್ಯಳ ಆಕ್ರಂದನ ಮುಗಿಲು ಮುಟ್ಟಿತ್ತು. 'ಅಮ್ಮ, ನೀನ್ಯಾಕೆ ದೂರಾನೇ ಇದ್ದೀಯ? ನನ್ನನ್ ಎತ್ಕೊ, ಮುದ್ದ್ ಮಾಡು' ಎಂದ ಆದ್ಯಳ ಗೋಳನ್ನು ನೋಡಿ, ಸುತ್ತಲೂ ನೆರೆದಿದ್ದ ಜನಗಳ ಕಣ್ಣಾಲೆಗಳು ತುಂಬಿ ಬಂದಿದ್ದವು. ಟಿ.ವಿ.ಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದ ರಾಜ್ಯದ ಜನಗಳೆಲ್ಲರೂ ಅಮ್ಮ-ಮಗಳ ಪರಿಸ್ಥಿತಿಯನ್ನು ನೋಡಿ ಕಣ್ಣೀರಿಟ್ಟಿದ್ದರು. ಹಿರಿಯರಾದ ಅನಸೂಯಮ್ಮ ಮಾತ್ರ ಏನೂ ಮಾಡಲು ತೋಚದೆ, ಮೂಕರಾಗಿ ನಿಂತಿದ್ದರು. 

ಅಂದು ವಸಂತರ ಎರಡು ವಾರಗಳ ಕ್ವಾರಂಟೈನ್ ಅವಧಿ ಮುಗಿದಿತ್ತು. ವಸಂತರ ಮನಸ್ಸು ತನ್ನ ಮಗಳನ್ನು ಸೇರುವ ಕಾತರದಲ್ಲಿತ್ತು. ಆ ಅಪೂರ್ವ ಕ್ಷಣವನ್ನು ವೀಕ್ಷಿಸಲು ಇಡೀ ರಾಜ್ಯದ ಜನತೆ ಮತ್ತೆ ಟಿ.ವಿ.ಗಳ ಮುಂದೆ ಕಾಯುತ್ತಿತ್ತು. ಆಸ್ಪತ್ರೆಯಿಂದ ಹೊರಬಂದ ಕ್ಷಣವೇ ವಸಂತ ತನ್ನ ಮಗಳ  ಕಡೆ ಧಾವಿಸಿದ್ದರು. ತನ್ನಮ್ಮ ಎತ್ತಪ್ಪಿಕೊಂಡಾಗ ಆದ್ಯಳ ಸಂತಸಕ್ಕೆ ಪಾರವೇ ಇರಲಿಲ್ಲ. ಸಿಹಿ ಮುತ್ತುಗಳ ಮಳೆಯನ್ನೇ ತಮ್ಮ ಮುದ್ದು ಮಗಳ ಮೇಲೆ ಸುರಿಸಿದ ವಸಂತ, ಮಾತುಗಳೇ ಹೊರಡದಂತಾಗಿದ್ದರು. ಅನಸೂಯಮ್ಮ ಸಮಾಧಾನದ ನಿಟ್ಟುಸಿರಿಟ್ಟಿದ್ದರು. 

ವಸಂತರ ವೃತ್ತಿ ಹಾಗು ವೈಯುಕ್ತಿಕ ಜೀವನದ ಭಾವನಾತ್ಮಕ ಅನುಭವಗಳನ್ನು ಕೇಳಿದ ರೋಹಿಣಿ ಕೂಡ ಕಣ್ಣೀರಿಟ್ಟಿದ್ದಳು. ಸಮೀಪದಲ್ಲೇ ನಿಂತಿದ್ದ ಅವಳ ಗೆಳಯ ಡಾ. ಕಿರಣ್ ಅವಳಿಗೆ ಸಂಯಮದಿಂದಿರುವಂತೆ ಸನ್ನೆ ಮಾಡಿದ್ದರು. 

*** 

ಮಾತನಾಡಿದ, ಮುಂದಿನ ಕೊರೋನಾ ಸೇನಾನಿ ಶ್ರೀ.ಥಾಮಸ್ರವರಾಗಿದ್ದರು. ಅವರು ಕೋವಿಡ್ ಪರೀಕ್ಷಾ ಕೇಂದ್ರವೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಶಂಕಿತ ಸೋಂಕಿತರಿಂದ 'ಸ್ವಾಬ್ (swab - ಗಂಟಲು ಮತ್ತು ಮೂಗೊಳಗಿನ ದ್ರವ) ದ್ರವದ ಮಾದರಿ'ಯನ್ನು ಶೇಖರಿಸಿ, ಕೋವಿಡ್ ಪರೀಕ್ಷೆಗೆ ಕಳುಹಿಸುವುದೇ ಅವರ ಕೆಲಸವಾಗಿತ್ತು. ಥಾಮಸ್ ರವರ ಆಸ್ಪತ್ರೆಯ ಪರಿಧಿಯೊಳಗಿದ್ದ ಹಳ್ಳಿಯೊಂದರಲ್ಲಿ,  ಸುಮಾರು ೭೫ ವರ್ಷದ ಹಿರಿಯರೊಬ್ಬರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದರು. ವಿಷಯ ಆಸ್ಪತ್ರೆಯ ಹಿರಿಯಧಿಕಾರಿಗಳನ್ನು ತಲುಪಿತ್ತು. ಉಸಿರಾಟದ ತೊಂದರೆಯಿಂದಾದ ಸಾವಾದುದರಿಂದ, ಆ ಮೃತ ದೇಹದ ಸ್ವಾಬ್ ಮಾದರಿಯನ್ನುಪಡೆದು, ಕೋವಿಡ್ ಪರೀಕ್ಷೆಗೆ ಕಳುಹಿಸಬೇಕೆಂದು ಮೇಲಧಿಕಾರಿಗಳು ಥಾಮಸ್ ರವರಿಗೆ ಆಜ್ಞಾಪಿಸಿದ್ದರು.  ಸಾವುಂಟಾದ ನಾಲ್ಕು ಘಂಟೆಗಳ ಕಾಲಾವಧಿಯಲ್ಲಿ ಸ್ವಾಬ್ ಮಾದರಿಯನ್ನು ಪಡೆಯುವುದು ಅನಿವಾರ್ಯವೆಂದು ಥಾಮಸ್ ರಿಗೆ ತಿಳಿದಿತ್ತು. ಸಾಕಷ್ಟು ಕಾಲಾವಧಿ ಇದ್ದುದರಿಂದ,  ಸುಮಾರು ೨೦ ಕಿ.ಮೀ.ದೂರದಲ್ಲಿದ್ದ ಆ ಹಳ್ಳಿಗೆ ಥಾಮಸ್ ತಮ್ಮ ಆಸ್ಪತ್ರೆ ವ್ಯಾನಿನಲ್ಲೇ ಧಾವಿಸಿದ್ದರು.

ಥಾಮಸ್ ರವರು ಆ ಹಳ್ಳಿಯನ್ನು ಸೇರುವಷ್ಟರಲ್ಲೇ ಆ ಮೃತರ ಕುಟುಂಬದವರು, ದೇಹವನ್ನು ಮಣ್ಣು ಮಾಡುವ ಸ್ಮಶಾನಕ್ಕಾಗಲೇ ಸಾಗಿಸಿಯಾಗಿತ್ತು. ಬೇರೇ ದಾರಿಯಿಲ್ಲದೆ, ಥಾಮಸ್ ಸ್ಮಶಾನಕ್ಕೇ ಧಾವಿಸಬೇಕಾಗಿ  ಬಂದಿತ್ತು.  ದೇಹವನ್ನಾಗಲೇ ಗುಂಡಿಯೊಳಗೆ ಇಳಿಸಿಯಾಗಿತ್ತು. ತನ್ನ ಕೆಲಸವೀಗ ಕಷ್ಟಸಾಧ್ಯವೆಂಬುದು ಥಾಮಸ್ರಿಗೆ ತಿಳಿದಿತ್ತು. ವ್ಯಾನೊಳಗಿಂದಲೇ ಕೂಗಿ ಹೇಳಿದ ಥಾಮಸ್, ನೆರೆದ ಜನಗಳಿಗೆ ಸ್ವಲ್ಪ ನಿಧಾನಿಸುವಂತೆ ತಿಳಿಸಿದರು. ಪಿ.ಪಿ.ಇ. ತೊಡುಗೆಯನ್ನು ಧರಿಸಿಯೇ ತಯಾರಾಗಿದ್ದ ಥಾಮಸ್, ಜನಗಳ ಸಹಾಯ ಪಡೆದು, ಗುಂಡಿಯೊಳಗೆ ಇಳಿಯಬೇಕಾಯಿತು. ಕರ್ತ್ಯವ್ಯ ಪ್ರಜ್ಞೆ ಮೆರೆದ ಥಾಮಸ್, ವಿಧಿ ವಿಧಾನಗಳ ಮೂಲಕ ಶವದಿಂದ ಸ್ವಾಬ್ ಮಾದರಿಯನ್ನು ಪಡೆದು, ಅದನ್ನು ತಂದಿದ್ದ ವಿಶೇಷ  ಸಾಧನವೊಂದರಲ್ಲಿ ಶೇಖರಿಸಿ ಇಟ್ಟದ್ದೂ ಆಯಿತು. ಗುಂಡಿಯಿಂದ ಹೊರಗೆದ್ದ ಥಾಮಸ್, ಸುತ್ತಲೂ ನೆರೆದಿದ್ದವರನ್ನು ಎಚ್ಚರಿಸುತ್ತಾ, 'ಮೃತರು ಕೋವಿಡ್ನಿಂದ ಸತ್ತಿರಬಹುದು. ಕೋವಿಡ್ ಪರೀಕ್ಷೆಯ ವರದಿ ಬರುವ ತನಕ,  ಅವರ ಸಂಪರ್ಕದಲ್ಲಿದ್ದವರೆಲ್ಲರೂ ಕ್ವಾರಂಟೈನಿನಲ್ಲಿ ಇರಬೇಕು' ಎಂದರು. ಆಸ್ಪತ್ರೆಯನ್ನು ಮರಳಿ ತಲುಪಲು ಇನ್ನೂ ೪೦ ನಿಮಿಷಗಳ ಕಾಲಾವಧಿಯಿತ್ತು. ಸಮಯಾವಧಿಯೊಳಗೆ ಆಸ್ಪತ್ರೆಯನ್ನು ತಲುಪಿದ ಥಾಮಸ್, ತಮ್ಮ ಅನುಭವವನ್ನು ಮೇಲಧಿಕಾರಿಗಳಿಗೆ ವಿವರಿಸಿದರು. ಥಾಮಸ್ ರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡ ಅವರ ಮೇಲಧಿಕಾರಿಗಳು, ಅವರ ಸಾಹಸಗಾಥೆಯನ್ನು ಇಲಾಖೆಯ ಮುಖ್ಯಸ್ಥರಿಗೂ ತಲುಪಿಸಿದ್ದರು.  

ಎರಡು ದಿನಗಳೊಳಗೆ ಮೃತರ ಸ್ವಾಬ್ ಮಾದರಿಯ ಪರೀಕ್ಷೆಯ ವರದಿ ಬಂದಿತ್ತು. ಮೃತರಿಗೆ ಕೋವಿಡ್ ಸೋಂಕಿತ್ತೆಂಬುದು ಖಾತರಿಯಾಗಿತ್ತು. ಕೂಡಲೇ ಮೃತರ ಸಂಪರ್ಕದಲ್ಲಿದ್ದವರನ್ನೆಲ್ಲಾ ಎಚ್ಚರಿಸಿದ ಥಾಮಸ್, ಅವರೆಲ್ಲರನ್ನು ಕ್ವಾರಂಟೈನ್ಗೆ ಒಳಪಡಿಸುವ ಏರ್ಪಾಡು ಮಾಡಿಯಾಗಿತ್ತು. 

'ಮಣ್ಣಿನ ಗುಂಡಿಯೊಳಗಿಳಿದು, ಶವದಿಂದ ಸ್ವಾಬ್ ಮಾದರಿಯನ್ನು ಶೇಖರಿಸುವದು, ಥಾಮಸ್ ರಂತಹ ಧೈರ್ಯಶಾಲಿ ಕೊರೋನಾ ಸೇನಾನಿಗಳಿಗೆ ಮಾತ್ರ  ಸಾಧ್ಯ' ಎಂದು ರೋಹಿಣಿ ತನ್ನ ಸಂಶೋಧನಾ ಡೈರಿಯಲ್ಲಿ ದಾಖಲಿಸಿದ್ದಳು. 

***

ಮುಂದಿನ ಹೃದ್ರಾವಕ ಅನುಭವವನ್ನು ಸಭಿಕರ ಮುಂದಿಡಲು ನಿಂತಿದ್ದವರು, ಮಹಿಳಾ ಪೊಲೀಸ್ ಪೇದೆ ಯಶೋದರವರು. ಕೇವಲ ಒಂದು ತಿಂಗಳ ಹಿಂದೆ ಆಕೆ ಗಂಡು ಮಗುವೊಂದ್ದಕ್ಕೆ ಜನ್ಮ ನೀಡಿದ್ದರು. ಆದರೂ ಕೋವಿಡ್ ದಾಳಿಯಿಂದುಟಾದ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಇಲಾಖೆಯಿಂದ ಬಂದ ಕರೆಗೆ ಓಗೊಟ್ಟ ಯಶೋದ, ಸ್ಥಳೀಯ ಸರಕಾರಿ ಆಸ್ಪತ್ರೆಯ ಪೊಲೀಸ್ ತಂಡವನ್ನು ಸೇರಿದ್ದರು. ಹೆರಿಗೆಯಾದ ಸುಮಾರು ೨೦ ತಾಯಂದಿರುಗಳನ್ನೊಳಗೊಂಡ ವಾರ್ಡಿನ ರಾತ್ರಿ ಕಾವಲಿನ ಕರ್ತವ್ಯ ಅವರದ್ದಾಗಿತ್ತು. 

ಹೀಗಿರುವಾಗ ಒಂದು ದಿನ ಯಶೋದರಿದ್ದ ವಾರ್ಡಿಗೆ, ದಿನ ತುಂಬಿದ ಬಸುರಿಯಾದ ಕಮ್ರುನ್ನಿಸ್ಸಾ  ಎಂಬ ಮಹಿಳೆಯನ್ನು ಸುಮಾರು ರಾತ್ರಿ ೧೦ ಘಂಟೆಯ ಹೊತ್ತಿಗೆ ಸೇರಿಸಲಾಗಿತ್ತು. ಅರ್ಧ ಘಂಟೆಯೊಳಗೆ ಕಮ್ರುನಿಸ್ಸಾ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗುವಿನ ಆರೋಗ್ಯ              ಚೆನ್ನಾಗಿತ್ತು. ಹುಟ್ಟಿದ ಒಂದು ಘಂಟೆಯೊಳಗೆ ಮಗು ಹಸಿವಿನಿಂದ ಅಳತೊಡಗಿತು. ಆದರೆ ತಾಯಿಗಿನ್ನೂ  ಹಾಲು ಬಂದಿರಲಿಲ್ಲ. ಕೆಲವು ತಾಯಂದಿರಿಗೆ ಹಾಲು ಬರುವುದು ತಡವಾಗಬಹುದೆಂಬುದು ನರ್ಸೊಬ್ಬರ ಅಭಿಪ್ರಾಯವಾಗಿತ್ತು. ಹೊರಗಿನಿಂದ ನೀಡಲ್ಪಟ್ಟ ಹಾಲನ್ನು ಮಗು ಕುಡಿಯದಾಯಿತು. ಮಗುವಿನ ನಿರಂತರ ರೋದನ ಎಲ್ಲರನ್ನು ಕಂಗೆಡಿಸಿತ್ತು. ಯಶೋದಾ ಕೂಡ ಮಗುವಿನ ಬಗ್ಗೆ ಚಿಂತಿತರಾಗಿದ್ದರು. ಇಡೀ ರಾತ್ರಿ ಕಳೆದು, ಬೆಳಗಿನ ಜಾವದ ಐದು ಘಂಟೆಯ ಸಮಯವಾಗಿದ್ದರೂ ತಾಯಿಗಿನ್ನೂ ಹಾಲು ಬಂದಿರಲಿಲ್ಲ. ಹಾಲು ನೀಡಲಾಗದ ತಾಯಿ ಕಣ್ಣೀರುಡುತ್ತಿದ್ದರು.  ದಿಕ್ಕು ತೋಚದ ಹಿರಿಯ ನರ್ಸ್, ಕಮರುನ್ನೀಸಾರ ಮಗುವಿಗೆ ಮೊಲೆ ಹಾಲನ್ನುಣಿಸಿ, ಮಗುವಿನ ಜೀವವನ್ನುಳಿಸುವಂತೆ, ವಾರ್ಡಿನಲ್ಲಿದ್ದ ಎಲ್ಲಾ ತಾಯಂದಿರನ್ನು ಕೇಳಿಕೊಂಡರು. ಯಾವ ತಾಯಿಯೂ ಹಾಲನ್ನುಣಿಸಲು ಮುಂದೆ ಬರಲೇ ಇಲ್ಲ. ಅಂತೂ ಕಡೆಗೆ ಗಿರಿಜಾ ಎಂಬ ಒಬ್ಬ ತಾಯಿ ತನ್ನ ಮೊಲೆಯುಣಿಸಲು ಮುಂದಾದರೂ, ಗಿರಿಜಾರ ತಾಯಿ ಅವರನ್ನುತಡೆದು, 'ಕೋವಿಡ್ನ ದಿನಗಳಲ್ಲಿ ಗೊತ್ತಿಲ್ಲದವರ ಮಗುವಿಗೆ ಮೊಲೆಯುಣಿಸಿ ತೊಂದರೆಯನ್ನು ತಲೆಯ ಮೇಲೆಳುದುಕೊಳ್ಳುವುದು ಬೇಡ'ವೆಂದಿದ್ದರು. ಪೊಲೀಸ್ ಪೇದೆ ಯಶೋದಾ ಇವೆಲ್ಲವನ್ನೂ ಗಮನಿಸುತ್ತಲೇ ಇದ್ದರು. 

ಯಶೋದರ ಕಣ್ಣುಗಳು ವಾರ್ಡಿನ ಗೋಡೆಯ ಮೇಲೆ ನೇತುಹಾಕಿದ್ದ ಚಿತ್ರವೊಂದರ ಮೇಲೆ ಬಿದ್ದಿದ್ದವು. ತಾಯಿ ಯಶೋದಾ ತನ್ನ ಸಾಕುಮಗ ಕೃಷ್ಣನಿಗೆ ಮೊಲೆಹಾಲುಣಿಸುತ್ತಿರುವ ಚಿತ್ರ ಅದಾಗಿತ್ತು. ಆಗಲೇ ಪೇದೆ ಯಶೋದಾಳ ಒಳಗೆ ಅಡಗಿದ್ದ 'ಮಹಾ ತಾಯಿ'ಯ ಭಾವ ಜಾಗೃತವಾಗಿತ್ತು. ತಟ್ಟನೆ ಮುಂದಾದ ಯಶೋದಾ ಅಳುತ್ತಿದ್ದ ಮಗುವನ್ನು ಕೈಗೆತ್ತಿಕೊಂಡು ಕುಳಿತು, ತಮ್ಮ ಮೊಲೆಯನ್ನು ಮಗುವಿನ ಬಾಯಿಗಿಟ್ಟಿದ್ದರು. ಮೊಲೆಯನ್ನು ಚೀಪುತ್ತಾ ಹಾಲುಂಡ ಮಗು ಸಮಾಧಾನಗೊಂಡಿತ್ತು. ಮನ ಕಲಕುವ ದೃಶ್ಯವನ್ನು ನೋಡುತ್ತಾ ವಾರ್ಡಿನಲ್ಲಿದ್ದ ಎಲ್ಲರೂ ಮೂಕವಿಸ್ಮಿತರಾಗಿದ್ದರು. ಮಾರನೆಯ ದಿನದ ವೃತ್ತ ಪತ್ರಿಕೆಗಳು ಘಟನೆಯ ವಿವರಣೆಯನ್ನು ನೀಡಿ,  'ಕರ್ತವ್ಯದ ಎಲ್ಲೆಯನ್ನು ಮೀರಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಸತ್ಕಾರ್ಯ' ಯಶೋದರದ್ದು ಎಂದು ಪ್ರಶಂಸಿದ್ದವು. 

'ಈ ವರಗೆ ನಾನು ಕೇಳಿದ್ದು ಜಗದೋದ್ಧಾರಕ  ಕೃಷ್ಣನ ತಾಯಿ ಯಶೋದಾ ಬಗ್ಗೆ ಮಾತ್ರ.  ಆದರಿಂದು ಜೀವಂತ ಯಶೋದರ ದರ್ಶನ ಮಾಡಿದ ಭಾಗ್ಯ ನನ್ನದಾಯಿತು' ಎಂದೆನಿಸಿದ ರೋಹಿಣಿ ಭಾವಪರವಶರಾಗಿದ್ದರು. 

***  

ತನ್ನನ್ನು ನೈಟಿಂಗೇಲ್ ಪದಕದ ಪ್ರಶಸ್ತಿಗೆ ಭಾಜನಳನ್ನಾಗಿ ಮಾಡಿದ ತನ್ನ ಸತ್ಕಾರ್ಯವನ್ನು ಸಭಿಕರ ಮುಂದಿಡುವ ಕಡೆಯ ಸರದಿ ಮಿಠಾಲಿಯವರದಾಗಿತ್ತು. ಅವರು ಮಧ್ಯ ವಯಸ್ಸಿನ ವಿಧವೆಯಾಗಿದ್ದರು. ವಿನಯವೇ ಮೂರ್ತಿವೆತ್ತಂತ್ತಿದ್ದ ಮಿಠಾಲಿಯವರು, ಸುಮಾರು ಹತ್ತು ವರ್ಷಗಳ ಹಿಂದೆ 'ಸುಭಿಕ್ಷ ಫೌಂಡೇಶನ್' ಎಂಬ ಸೇವಾ ಸಂಸ್ಥೆಯೊಂದನ್ನು ಆರಂಭಿಸಿದ್ದರು. ಶಾಲಾ ಬಾಲಕರುಗಳಿಗೆ ಮಧ್ಯಾಹ್ನದೂಟವನ್ನು ಕಳುಹಿಸುವುದೇ ಅವರ ಸಂಸ್ಥೆಯ ಮೂಲೋದ್ಧೇಶವಾಗಿತ್ತು. ೨೦ ಸ್ವಯಂ ಸೇವಕಿಯರುಗಳು ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಆಶ್ರಯವಿಲ್ಲದ ಸುಮಾರು ೧೦೦ ಮಹಿಳೆಯರನ್ನು ಮಿಠಾಲಿ ಸಂಸ್ಥೆಯ ವಿವಿಧ ಕೆಲಸಗಳಿಗೆ ನೇಮಿಸಿಕೊಂಡಿದ್ದರು. ಒಂದು ಲಕ್ಷ ಶಾಲಾ ಮಕ್ಕಳಿಗೆ ಭೋಜನವನ್ನು ತಯಾರಿಸುವ ಅಣಿಯಿದ್ದ ಎಂಟು ಸುಸಜ್ಜಿತ ಅಡುಗೆ ಮನೆಗಳು ಅವರೊಂದಿಗಿತ್ತು. ಇಡೀ ನಗರದ ಶಾಲೆಗಳಿಗೆ ಸಿದ್ಧ ಭೋಜನವನ್ನು ಕೊಂಡೊಯ್ಯುವ ಒಂದು ನೂರು ವ್ಯಾನ್ಗಳನ್ನು ಆ ಸಂಸ್ಥೆ ಹೊಂದಿತ್ತು. 

ಕೋವಿಡ್ ಲಾಕ್ಡೌನ್ನಿಂದ ಕೆಲಸವನ್ನು ಕಳೆದುಕೊಂಡ ವಲಸಿಗರು ಮತ್ತು ಇತರ ಬಡವರುಗಳಿಗೆ ಊಟವನ್ನು ಒದಗಿಸುವ ಕಾರ್ಯಕ್ಕೆ ಮಿಠಾಲಿ ಮುಂದಾಗಿದ್ದರು. ಅವರ ಸಂಸ್ಥೆಯಾಗಲೇ ಸರಕಾರದಿಂದ ಮಾನ್ಯತೆಯನ್ನು ಪಡೆದುದಾದ್ದರಿಂದ, ಹೆಚ್ಚಿನ ಸೌಲಭ್ಯಗಳನ್ನು ಗಳಿಸುವುದು ಮಿಠಾಲಿರವರಿಗೆ ಕಷ್ಟವಾಗಲಿಲ್ಲ. ಲಾಕ್ಡೌನ್ ಜಾರಿಗೊಳಿಸಿದಾಗಿನಿಂದ ಸಿದ್ಧ ಭೋಜನದ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಾ ಸಾಗಿತ್ತು. ಹೆಚ್ಚು ಸ್ವಯಂ ಸೇವಕರುಗಳು ಅವರ ಸಂಸ್ಥೆಯನ್ನು ಸೇರಿದ್ದು, ಮೂರು ಪಾಳಿಗಳಲ್ಲಿ ಅಡುಗೆಯ ಕೆಲಸ ನಡೆಸುತ್ತಿದ್ದರು. ಭೋಜನದ ಅವಶ್ಯಕತೆಯುಳ್ಳವರು ಸಂಪರ್ಕಿಸಲೆಂದು ಅವರ ಸಂಸ್ಥೆಗೆ 'ಸಹಾಯ ವಾಣಿ'ಯ ವ್ಯವಸ್ಥೆಯನ್ನು ಏರ್ಟೆಲ್ನಂತಹ ಸಂಸ್ಥೆಗಳು ಮಾಡಿದ್ದವು. ಎಲ್ಲಾ  ಮಾಧ್ಯಮಗಳೂ ಅವರ ಸಂಸ್ಥೆಯ ಸಹಾಯ ವಾಣಿಯ ಬಗೆಗಿನ ಪ್ರಸಾರವನ್ನು ಮತ್ತೆ ಮತ್ತೆ ಮಾಡುತ್ತಿದ್ದವು. ಅವಶ್ಯಕತೆ ಇರುವ ಯಾರಾದರೂ ಸಂಸ್ಥೆಯ ಸಹಾಯ ವಾಣಿಗೆ ಕರೆ ಮಾಡಿ ಬೇಕಾದಷ್ಟು ಭೋಜನಗಳನ್ನು ಉಚಿತವಾಗಿ ಪಡೆಯಬಹುದಿತ್ತು. ನಗರದ ಯಾವುದೇ ಮೂಲೆಯ ನಿರಾಶ್ರಿತರ ಶಿಬಿರಗಳಿಗೆ ಬೇಕಾದಷ್ಟು ಭೋಜನಗಳನ್ನು ತಲುಪಿಸಲು, ನಾಲ್ಕು ಘಂಟೆಗಳ ಮುನ್ಸೂಚನೆ ಆ ಸಂಸ್ಥೆಗೆ ಸಾಕಾಗಿತ್ತು. ಸಂಸ್ಥೆಯ ಈ ಮಹಾ ಅಭಿಯಾನಕ್ಕೆ ಪೊಲೀಸ್ ಇಲಾಖೆಯ ಬೆಂಬಲ ಕೂಡ ಸಹಾಯಕವಾಗಿತ್ತು. ವಲಸಿಗರು, ರಸ್ತೆಬದಿಯ ವ್ಯಾಪಾರಿಗಳು, ಕೊಳಚೆ ಪ್ರದೇಶದ ನಿವಾಸಿಗಳು ಮುಂತಾದವರಿಗೆ, ಮಿಠಾಲೀಯವರ ಸಂಸ್ಥೆ ದಿನನಿತ್ಯ ಒಂದು ಲಕ್ಷದಷ್ಟು ಭೋಜನಗಳನ್ನು ಒದಗಿಸುತ್ತಿತ್ತು. ಸುಡು ಬಿಸಿಲಿನ ದಿನಗಳಲ್ಲಿ ಬೆವರಿಳಿಸಿ ದುಡಿಯುತ್ತಿದ್ದ ಪೊಲೀಸರು, ಸ್ವಚ್ಛತಾ ಕರ್ಮಚಾರಿಗಳು, ಆರೋಗ್ಯ ಸಂಸ್ಥೆಗಳ ನೌಕರರು, ಚಾಲಕರು ಮುಂತಾದ ಸಹಸ್ರಾರು ಕರೋನ ಸೇನಾನಿಗಳಿಗೂ ಆ ಸಂಸ್ಥೆಯ ಭೋಜನವನ್ನು ಅವರಿರುವ ಸ್ಥಳಗಳಿಗೇ ತಲುಪಿಸಲಾಗುತ್ತಿತ್ತು.  

ಮಿಠಾಲೀಯವರ ಮಹತ್ಕಾರ್ಯ ದೇಶದ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಯಾಗಿ, ಇಡೀ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಅವರ ಕಾರ್ಯ ವೈಖರಿ, ಲಾಕ್ಡೌನ್ ಕಾರಣದಿಂದಾಗಿ ಕೆಲಸವಿಲ್ಲದೇ ಬಳಲುತ್ತಿದ್ದ ಕೋಟ್ಯಂತರ ಹಸಿದ ಹೊಟ್ಟೆಗಳಿಗೆ ಅನ್ನವನ್ನೊದಗಿಸುವ ಕಾರ್ಯವನ್ನು ಮಾಡುತ್ತಿದ್ದ ಸಹಸ್ರಾರು ಸಂಸ್ಥೆಗಳಿಗೆ ಮಾದರಿಯಾಗಿತ್ತು. 

'ನಿಷ್ಕರುಣಿ ಕೋವಿಡ್, ಇಡೀ ದೇಶಕ್ಕೆ ಕಂಡು ಕೇಳರಿಯದ ಸಂಕಷ್ಟವನ್ನು ತಂದೊಡ್ಡಿದೆ. ವಸಂತ, ಥಾಮಸ್, ಯಶೋದಾ, ಮಿಠಾಲಿಯವರುಗಳಂತಹ ನಿಸ್ವಾರ್ಥ ಕೊರೋನಾ ಸೇನಾನಿಗಳ ನೆರವಿನಿಂದ ಕೋವಿಡ್ನ ವಿರುದ್ಧದ ಸಮರವನ್ನು ನಾವು ಗೆದ್ದೇ ಗೆಲ್ಲುತ್ತೇವೆ' ಎಂಬ ಭರವಸೆಯೊಂದಿಗೆ ರೋಹಿಣಿ, ಕಿರಣ್ ಮತ್ತು ರಾಜು ಅಂದಿನ ಸಮಾರಂಭದಿಂದ ನಿರ್ಗಮಿಸಿದ್ದರು.

****** 

೯  

ಉದ್ಯೋಗಗಳ ಮರುಸೃಷ್ಟಿ


ಯುವಕನಾದ ಶಶಿಕಾಂತ್ ಒಬ್ಬ ವಿಭಿನ್ನ ಉದ್ದಿಮೆದಾರನಾಗಿದ್ದನು. ೧೦ ವರ್ಷಗಳ ಹಿಂದೆ ಅವನು 'ಎಂಬಿಬಿಎಸ್ಸ್' ಪದವಿ ಗಳಿಸಿ ವೈದ್ಯನಾದರೂ, ಉತ್ತಮ ಉದ್ಯೋಗವನ್ನು ಗಳಿಸಲು ಆ ಪದವಿ ಸಾಕಾಗದಾಗಿತ್ತು. ಸ್ನಾತಕೋತ್ತರ ಕೋರ್ಸಗಳ ಪ್ರವೇಶ ಪಡೆಯಲು ಅವನು ಆ ದಿನಗಳಲ್ಲಿ  ನಡೆಸಿದ ಹಲವು ಪ್ರಯತ್ನಗಳು ಸತತ ವಿಫಲವನ್ನು ಕಂಡಿದ್ದವು. ಅಂತಹ ಕೋರ್ಸಗಳ ಸೀಟೊಂದನ್ನು ಭಾರಿ ಮೊತ್ತದ ದೇಣಿಗೆ ತೆತ್ತು 'ಖರೀದಿಸುವಷ್ಟು ಹಣ' ಅವರಪ್ಪನ ಬಳಿ ಇತ್ತಿಲ್ಲ. 

ತನ್ನ 'ವೈದ್ಯಕೀಯ ಪದವಿಪೂರ್ವ ಸೇವಾ ಅವಧಿ (internship)'ಯನ್ನು ಪೂರೈಸಲು  ಸರಕಾರಿ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ, ಅದೇ ಆಸ್ಪತ್ರೆಯಲ್ಲಿ ನರ್ಸಾಗಿ ಸೇವೆ ಸಲ್ಲಿಸುತ್ತಿದ್ದ ಸುಹಾಸಿನಿ ಎಂಬ ಯುವತಿಯ ಪ್ರೇಮಪಾಶಕ್ಕೆ ಶಶಿಕಾಂತ್ ಬಿದ್ದಿದ್ದನು. ಅವರ ಪ್ರೇಮಾಯಣ ಸುಮಾರು ಎರಡು ವರ್ಷಗಳವರೆಗೂ ಸಾಗಿತ್ತು. ನಿರೋದ್ಯೋಗಿಯಾಗಿದ್ದರೂ, ಎರಡೂ ಕಡೆಯ ಪೋಷಕರ ಒತ್ತಾಯದ ಮೇರೆಗೆ ಶಶಿಕಾಂತ್, ಸುಹಾಸಿನಿಯನ್ನು ಮದುವೆಯಾಗಿದ್ದನು. ಮದುವೆಯನಂತರ ಶಶಿಯ ಮೇಲೆ ಸಂಪಾದಿಸಲೇ ಬೇಕಾದ ಒತ್ತಡ ಹೆಚ್ಚಿತ್ತು. ಪತಿಗಿಂತಲೂ ಹೆಚ್ಚು ಉತ್ಸಾಹಿಯೂ, ಉದ್ಯಮಶೀಲೆಯೂ ಆದ ಸುಹಾಸಿನಿ, ಶಶಿಗೆ ಮಾರ್ಗದರ್ಶಕಿಯಾಗಿಬಿಟ್ಟಿದ್ದಳು. ಆಸ್ಪತ್ರೆಗಳ ವಿವಿಧ ಉಪಕರಣಗಳಿಗೆ ನಗರದ ಆಸ್ಪತ್ರೆಗಳಿಲ್ಲಿ ಭಾರಿ ಬೇಡಿಕೆಯಿದೆಯೆಂಬುದನ್ನು ಮನಗಂಡಿದ್ದ ಸುಹಾಸಿನಿ, ತನ್ನ ಪತಿಗೆ ಆ ರೀತಿಯ ಉಪಕರಣಗಳನ್ನು ತಯಾರಿಸುವ ಸಣ್ಣ ಕೈಗಾರಿಕೆಯೊಂದನ್ನು ಆರಂಭಿಸುವ ಸಲಹೆಯನ್ನು ನೀಡಿದ್ದಳು. ಈ ವಿಷಯದಲ್ಲಿ ಮಾಜಿ ಬ್ಯಾಂಕರ್ ಕೂಡ ಆಗಿದ್ದ ಸುಹಾಸಿನಿಯ ತಂದೆ ಶಂಕರ್ ಸಿಂಗ್ ರವರ ಸಮ್ಮತಿಯೂ ಇತ್ತು. ಹತ್ತು ವರ್ಷಗಳ ಸುಲಭ ಬಾಡಿಗೆ (ಲೀಸ್) ಆಧಾರದ ಮೇಲೆ, ೩೦ ಕಿಲೋವಾಟ್ ಉಚಿತ ವಿದ್ಯುತ್ ಸಂಪರ್ಕದೊಂದಿಗೆ ೩೦೦೦ ಚ.ಮೀ.ನಷ್ಟು ವಿಸ್ತಾರವಿದ್ದ ಕೈಗಾರಿಕಾ ಮಳಿಗೆಯೊಂದು ಸರಕಾರದ ಕಡೆಯಿಂದ ಲಭಿಸಿದಾಗಿನಿಂದ, ಶಶಿಯ ಯೋಜನೆ ಚುರುಕುಗೊಂಡಿತ್ತು. 'ಶಶಿ ಹಾಸ್ಪಿಟಲ್ ಎಕ್ವಿಪ್ಮೆಂಟ್ಸ್' ಎಂಬ ಹೆಸರಿನ ತನ್ನ ಹೊಸ ಉದ್ದಿಮೆಯನ್ನು ಶಶಿ, 'ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್ಪ್ರೈಸಸ್  (Micro, Small and Medium Enterprises - MSME)'* ಎಂಬ ಕೇಂದ್ರ ಸರಕಾರದ ಯೋಜನೆಯಡಿ ದಾಖಲಿಸಿದ್ದನು. ಆ ಕೇಂದ್ರ ಸರಕಾರದ ಯೋಜನೆಯಡಿ 'ಉತ್ಪಾದಕ, ಸೇವಾ ಹಾಗೂ ವ್ಯಾಪಾರದ (Manufacturing, servicing and trading units)' ಘಟಕಗಳಿಗೂ ಮಾನ್ಯತೆ ಇದ್ದು, ಶಶಿಯ ಉದ್ದಿಮೆಯನ್ನು ಉತ್ಪಾದಕ ಘಟಕವೆಂದು ಪರಿಗಣಿಸಲಾಗಿತ್ತು.

ಇತ್ತೀಚೆಗೆ, ಕೋವಿಡ್ ದಾಳಿಯಿಂದಾದ ಉದ್ಯೋಗ ನಷ್ಟವನ್ನು ಮರುಸೃಷ್ಟಿಸಲು ಕೇಂದ್ರ ಸರಕಾರ ಘೋಷಿಸಿದ 'ಕೋವಿಡ್ ಆರ್ಥಿಕ ಪರಿಹಾರ(Covid package)ದ ಯೋಜನೆಯಡಿ  ಎಂ.ಎಸ್.ಎಂ.ಇ. ಯೋಜನೆಯ ಹೂಡಿಕೆ ಮತ್ತು ವಹಿವಾಟುಗಳ ಮಿತಿ (investment and turnover)ಗಳ ವಿಸ್ತಾರವನ್ನು ಹೆಚ್ಚಿಸಲಾಗಿತ್ತು. ಹೆಚ್ಚು ಘಟಕಗಳನ್ನು ಎಂ.ಎಸ್.ಎಂ. ಇ. ಯೋಜನೆಯಡಿ ಸೇರಿಸುವುದೇ ಆ ಕ್ರಮದ ಆಶಯವಾಗಿತ್ತು. 

ಉದ್ದಿಮೆಗೆ ಬೇಕಾದ ೨.೨ ಕೋಟಿಯಷ್ಟರ ಬ್ಯಾಂಕ್ ಸಾಲ, ಆ ದಿನಗಳಲ್ಲಿ ಭಾರಿ ಮೊತ್ತವಾಗಿದ್ದರೂ, ಶಶಿಗೆ ಅದು ದೊರಕುವುದರಲ್ಲಿ ಕಷ್ಟವೇನಾಗಲಿಲ್ಲ.  ಶಶಿಯ ಬ್ಯಾಂಕ್ ಸಾಲಕ್ಕೆ ಜಾಮೀನುದಾರರಾಗಿ ಸಹಿಮಾಡಿದ ಅವರ ಮಾವನವರಾದ ಶಂಕರ್ ಸಿಂಗ್ ರವರು, ಸುಮಾರು ಒಂದು ಕೋಟಿಯಷ್ಟು ಬೆಲೆಬಾಳುವ ತಮ್ಮ ವಾಸದ ಮನೆಯನ್ನೂ ಬ್ಯಾಂಕಿಗೆ ಅಡಮಾನ (mortgage) ಮಾಡಿಕೊಟ್ಟಿದ್ದರು. 

ಈ ಎಲ್ಲಾ ಬೆಳವಣಿಗೆಗಳು ಸುಮಾರು ಎಂಟು ವರ್ಷಗಳ ಹಿಂದೆ ನಡೆದಿದ್ದವು. ಆ ದಿನಗಳಲ್ಲಿ ಶಶಿಯ ಉತ್ಪನ್ನಗಳಾದ ಆಸ್ಪತ್ರೆಯ ಉಪಕರಣಗಳಿಗೆ ಸಾಕಷ್ಟು ಬೇಡಿಕೆಯಿತ್ತು. ಕುಶಲೆಯಾದ ಪತ್ನಿ ಸುಹಾಸಿನಿಯ ಆಸ್ಪತ್ರೆಯ ಸಂಪರ್ಕಗಳೂ ಶಶಿಗೆ ಸಹಾಯಕವಾಗಿತ್ತು. ಶಶಿಯ ಉದ್ದಿಮೆ ಬೇಗನೆ ಪ್ರಗತಿಯನ್ನು ಕಂಡಿತ್ತು. ಸುಮಾರು ೨೦ ಖಾಯಂ ಕೆಲಸಗಾರರನ್ನು ಮತ್ತು ೧೦ ದಿನಗೂಲಿಯ ಕೆಲಸಗಾರರನ್ನೂ ನೇಮಿಸಿಕೊಂಡಿದ್ದ ಶಶಿಯ ಉದ್ದಿಮೆ, ಕೇವಲ ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಕೋಟಿಗೂ ಮೀರಿದ ವಾರ್ಷಿಕ ವ್ಯವಹಾರವನ್ನು ಕಂಡಿತ್ತು. ಹೊರಗಿನ ಸಣ್ಣ ಊರುಗಳಿಗೂ ತನ್ನ ಉತ್ಪಾದನೆಗಳ ಮಾರಾಟವನ್ನು ಶಶಿ ವಿಸ್ತರಿಸಿದ್ದು, ಅವನ ಉದ್ದಿಮೆಯ ಲಾಭಾಂಶ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಏರುತ್ತಲೇ ಸಾಗಿತ್ತು. 

ನಾಲ್ಕು ವರ್ಷಗಳನಂತರ ಶಶಿಯನ್ನು ಸಣ್ಣದಾಗಿ ಸಮಸ್ಯೆಗಳು ಕಾಡಹತ್ತಿದ್ದವು. ಶಶಿಯ ಉತ್ಪನ್ನಗಳನ್ನೇ ತಯಾರಿಸುವ ಹೆಚ್ಚು ಘಟಕಗಳು ನಗರದಲ್ಲಿ ತಲೆಯೆತ್ತಿದ್ದವು. ಮಾರಾಟದ ಬೆಲೆ ಗಳಲ್ಲಿ ಸ್ಪರ್ಧೆ ಹೆಚ್ಚಾಗಿ, ಶಶಿಯ ಗಳಿಕೆ ಕುಸಿತವನ್ನು ಕಂಡಿತ್ತು. ಖಾಸಗಿ ಆಸ್ಪತ್ರೆಗಳು 'ಕಮ್ಮಿ ಬೆಲೆಯಲ್ಲಿ ಅತ್ತ್ಯತ್ತಮ ಉಪಕರಣಗಳನ್ನು ನೀಡಿ' ಎಂದು ಶಶಿಯ ಮೇಲೆ ಒತ್ತಡವನ್ನು ಹೇರಲಾರಂಭಿಸಿದ್ದರು.  ಎರಡು ವರುಷಗಳ ಹಿಂದೆ, ಗುಣಮಟ್ಟ ಸಾಲದೆಂಬ ಕಾರಣವನ್ನು ನೀಡಿ, ಶಶಿಯು ಮಾರಾಟ ಮಾಡಿದ್ದ ಭಾರಿ ಸರಕುಗಳ ಪ್ಯಾಕೊಂದನ್ನು ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದು  ಹಿಂತಿರುಗಿಸಿದಾಗಿನಿಂದ, ಅವನ ತೊಂದರೆಗಳ ಸರಮಾಲೆ ಶುರುವಾಗಿತ್ತು. ಮಾರಾಟದ ಮೊತ್ತ ಕಮ್ಮಿಯಾಗುತ್ತಾ ಸಾಗಿತ್ತು. ಸಣ್ಣ ಸಣ್ಣ ಆಸ್ಪತ್ರೆಗಳು ಶಶಿಗೆ ಹಣ ಪಾವತಿಸುವಲ್ಲಿ ವಿಳಂಬ ಮಾಡತೊಡಗಿದ್ದವು. ಮಾರಾಟಗಳು ನಿಲ್ಲದಂತೆ ಮುಂದುವರೆಸಲು, ಸಾಲದ ಮೇಲೆ ಸರಕುಗಳನ್ನು ಕಳುಹಿಸುವುದೊಂದೇ ಮಾರ್ಗವಾಗಿತ್ತು. ಹಣದ ಒಳ ಹರಿವು ನಿಂತ್ತಿದ್ದರಿಂದ, ಶಶಿ ತನ್ನ ಕೆಲಸಗಾರರಿಗೆ ಸಂಬಳಗಳನ್ನು ಕೊಡುವುದು ಕಷ್ಟವಾಗಿ ಹೋಗಿತ್ತು. ಕೇವಲ ೨೦,೦೦೦ ರುಪಾಯಿಗಳಷ್ಟಿದ್ದ ಅವನ ಕೈಗಾರಿಕಾ ಮಳಿಗೆಯ ತಿಂಗಳ ಬಾಡಿಗೆ, ಒಮ್ಮಲೇ ಶಶಿಗೆ ಭಾರಿಯಾಗಿ ಕಾಣಿಸಹತ್ತಿತ್ತು. ನಗರದ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದ ಅವರ ಇಬ್ಬರು ಮುದ್ದು ಪುತ್ರಿಯರ ಶಾಲಾ ಶುಲ್ಕವನ್ನು ಕಟ್ಟಲಾಗ ದಾದಾಗ, ಶಶಿ-ಸುಹಾಸಿನಿಯರ ಆರ್ಥಿಕ ಮುಗ್ಗಟ್ಟಿನ ಬಿಸಿ ನೆತ್ತಿಗೇರಿತ್ತು. ವಿವಿಧ ಸಾಲಗಳ ಕಂತುಗಳ ಭಾರಿ ಬಾಕಿಯನ್ನು ಕಟ್ಟುವಂತೆ ಬ್ಯಾಂಕ್ ಮ್ಯಾನೇಜರ್ ರವರಿಂದ ಮೇಲಿಂದ ಮೇಲೆ ಒತ್ತಡ ಬರುತ್ತಿತ್ತು. ಹಲವರಿಗೆ ನೀಡಬೇಕಾದ ಹಣ ಪಾವತಿಗಾಗಿ ಶಶಿ, ಖಾಸಿಗಿಯವರಿಂದ ೩೦ ಲಕ್ಷ ರೂಪಾಯಿಗಳಷ್ಟು, ಭಾರಿ ಬಡ್ಡಿಯ ಕೈಸಾಲವನ್ನು ಮಾಡಬೇಕಾಗಿ ಬಂದಿತ್ತು. ೨೦೨೦ರ ಮಾರ್ಚ್ ತಿಂಗಳ ಮೊದಲ ವಾರದಲ್ಲಿ, ಬ್ಯಾಂಕ್ ಮ್ಯಾನೇಜರ್ ಶಶಿಯೊಂದಿಗೆ ಮಾತನಾಡಿ, ಅವನ ವಿವಿಧ ಸಾಲಗಳಲ್ಲಿ ಕಟ್ಟಬೇಕಾದ ಮೊತ್ತಗಳೇರುತ್ತಿದ್ದು, ಅವನ ಖಾತೆಯನ್ನು 'ಎನ್.ಪಿ.ಎ. (N.P.A.-ನಿರುತ್ಪಾದಕ ಆಸ್ತಿ)' ಎಂದು ಪರಿಗಣಿಸಬೇಕಾಗಬಹುದು ಎಂದು ಎಚ್ಚರಿಸಿದ್ದರು. 

ದೇಶಾದ್ಯಂತ ಕೋವಿಡ್ ಹರಡುವಿಕೆಯನ್ನು ತಡೆಯಲು ಜಾರಿಗೊಳಿಸಿದ್ದ ಲಾಕ್ಡೌನ್, ಶಶಿ ದಂಪತಿಯ ಉದ್ದಿಮೆಗೆ ಭಾರಿ ಆಘಾತವನ್ನೇ ತಂದಿತ್ತು. ನಗರದ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಹೊರತಾದ ರೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. ಶಶಿಯ ಉತ್ಪಾದನೆಗಳಿಗೆ ಬೇಡಿಕೆಯೇ ಇಲ್ಲದಂತಾಗಿತ್ತು. ವೆಚ್ಚಗಳನ್ನು ಕಮ್ಮಿ ಮಾಡುವ ಸಲುವಾಗಿ ಶಶಿ ತನ್ನ ಹತ್ತು ದಿನಗೂಲಿಯ ನೌಕರರನ್ನು ಕೆಲಸದಿಂದ ತೆಗೆದು ಹಾಕಿದ್ದನು. ಲಾಕ್ಡೌನಿನಂತರದ ಆರು ವಾರಗಳು ಕಳೆದ ಮೇಲಂತೂ, ಕಾರ್ಖಾನೆಯ ಕೆಲಸಗಳು ನಿಂತು, ಹಣದ ಕೊರತೆ ತೀವ್ರವಾಗಿ, ೧೪ ಖಾಯಂ ನೌಕರರನ್ನೂ ಶಶಿ ತೆಗೆಯಬೇಕಾಗಿ ಬಂದಿತ್ತು.  ಇನ್ನುಳಿದ ಆರು ನೌಕರರುಗಳು ವಿಶೇಷ ಕೌಶಲ್ಯವುಳ್ಳವರಾಗಿದ್ದು ಅವರುಗಳು ಕೆಲಸವಿಲ್ಲದೇ ಕುಳಿತಿದ್ದರೂ, ಅವರುಗಳನ್ನು ಕೆಲಸದಿಂದ ತೆಗೆಯುವುದು ಕಷ್ಟಸಾಧ್ಯವಾಗಿತ್ತು. ಅಂತಹ ಕೌಶಲ್ಯವುಳ್ಳ ಕೆಲಸಗಾರರನ್ನು ಮತ್ತೆ ಪಡೆಯುವುದು ಅಷ್ಟು ಸುಲಭವಿರಲಿಲ್ಲ. ಬಹಳ ಪ್ರಯಾಸದಿಂದ ಆ ಆರು ನೌಕರರುಗಳನ್ನು ಅರ್ಧ ಸಂಬಳ ಮಾತ್ರ ನೀಡಿ ಶಶಿ ಉಳಿಸಿಕೊಂಡಿದ್ದನು. ತನ್ನ ಉದ್ದಿಮೆಯ ಕೆಲಸದಿಂದ ತೆಗೆಯಲ್ಪಟ್ಟ ೨೪ ನೌಕರರು ಎಲ್ಲಿ ಹೋದರು? ಏನು ಮಾಡುತ್ತಿದ್ದಾರೆ? ಎಂಬ ವಿಷಯದ ಬಗ್ಗೆ ಶಶಿಗೆ ಯಾವ ಆಸಕ್ತಿಯೂ ಉಳಿದಿತ್ತಿಲ್ಲ. ಗಂಡ, ಹೆಂಡತಿ ಇಬ್ಬರಿಗೂ ಮಂಕು ಕವಿದುಬಿಟ್ಟಿತ್ತು. 

ಪಕ್ಕದ ರಾಜ್ಯದ ಮುಖ್ಯಮಂತ್ರಿಗಳು, ಸಮಾರಂಭವೊಂದರಲ್ಲಿ, ತನ್ನ ಕಾಲೇಜು ದಿನಗಳ ಗೆಳತಿ ಉಷ ಮತ್ತವಳ ಗಂಡ ಮನೋಜರಿಗೆ ಸನ್ಮಾನ ಮಾಡುತ್ತಿರುವ ಚಿತ್ರವನ್ನು, ದಿನ ಪತ್ರಿಕೆಯೊಂದರಲ್ಲಿ ನೋಡಿದ ಸುಹಾಸಿನಿ ಆಶ್ಚರ್ಯಚಕಿತಳಾಗಿದ್ದಳು. ಆ ಸನ್ಮಾನದ ಚಿತ್ರವನ್ನು ಸುಹಾಸಿನಿ ತನ್ನ ಗಂಡನ ಗಮನಕ್ಕೂ ತಂದಿದ್ದಳು. ಶಶಿಯಂತೆ, ಮನೋಜ್ ಕೂಡ ನೆರೆಯ ನಗರವೊಂದರಲ್ಲಿ ಆಸ್ಪತ್ರೆ ಉಪಕರಣಗಳನ್ನು ತಯಾರಿಸುವ ಘಟಕವೊಂದನ್ನು ನಡೆಸುತ್ತಿದ್ದನು. ಮನೋಜನ ಘಟಕ ದೊಡ್ಡದಾಗಿದ್ದು, ಅವನ ಆರ್ಥಿಕ ಅನುಕೂಲ ಉತ್ತಮವಾಗಿತ್ತು. ದಿನ ಪತ್ರಿಕೆಯ ವರದಿಯ ಪ್ರಕಾರ, ಮನೋಜ್ ತನ್ನ ಘಟಕದಲ್ಲಿ ಉತ್ತಮ ಗುಣಮಟ್ಟದ ಪಿ.ಪಿ.ಇ. ತೊಡುಗೆಗಳ ಉತ್ಪಾದನೆಯನ್ನು   ಹೊಸದಾಗಿ ಆರಂಭಿಸಿದ್ದು, ಅದು ಇಡೀ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಆ ರೀತಿಯ ತೊಡುಗೆಗಳಿಗೆ ರಫ್ತಿನ ಬೇಡಿಕೆ ಹೆಚ್ಚಿದ್ದರೂ, ಸ್ಥಳೀಯ ಆಸ್ಪತ್ರೆಗಳಿಗೆ ಅವುಗಳ ಪೂರೈಕೆಯನ್ನು ಮಾಡುತ್ತಿದ್ದ ಮನೋಜನ ಸೇವೆಯನ್ನು ಅಲ್ಲಿನ ರಾಜ್ಯ ಸರಕಾರ ಗಮನಿಸಿತ್ತು. ಆ ವಿನೂತನ ಸಾಧನೆಗಾಗೇ ನಡೆದಿತ್ತು ಅಂದಿನ ಸನ್ಮಾನ ಸಮಾರಂಭ. 

ತಮ್ಮ ಉದ್ದಿಮೆಯ ಸಮಸ್ಯೆಗಳಿಗೆ, ಉಷಾ ಮತ್ತು ಮನೋಜ್ರವರನ್ನು ಭೇಟಿ ಮಾಡುವುದರಿಂದ, ಏನಾದರೂ ಪರಿಹಾರ ಸಿಗಬಹುದೆಂಬ ಸಲಹೆಯನ್ನು ಸುಹಾಸಿನಿ ತನ್ನ ಗಂಡನಿಗೆ ಅಂದೇ ನೀಡಿದ್ದಳು. ಕೋವಿಡ್ ಹರಡುವಿಕೆ ಎರಡೂ ರಾಜ್ಯಗಳಲ್ಲಿ ತೀವ್ರವಾಗಿದ್ದುದರಿಂದ, ಮನೋಜನ ಊರಿಗೆ ಪ್ರಯಾಣಿಸುವುದು ಬೇಡ ಎಂಬುದು ಶಶಿಯ ಅಭಿಪ್ರಾಯವಾಗಿತ್ತು. ಕೋವಿಡ್ನ ಆತಂಕದಿಂದಾಗಿ  ಉಷಾ-ಮನೋಜರು ಕೂಡ, ನೆರೆ ರಾಜ್ಯದಿಂದ ಬಂದವರನ್ನು ಭೇಟಿಮಾಡಲು ಇಷ್ಟಪಡರು ಎಂಬ ವಿಚಾರವೂ, ಶಶಿ-ಸುಹಾಸಿನಿಯರ ಅನಿಸಿಕೆಯಾಗಿತ್ತು. 

ಶಶಿ-ಸುಹಾಸಿನಿಯರು ಮನೋಜನನ್ನು ಸಂಪರ್ಕಿಸಿ, ತಮ್ಮ ಸಮಸ್ಯೆಗಳನ್ನು ತೋಡಿಕೊಂಡ ಕೂಡಲೇ, ಮನೋಜ್ ವಿಡಿಯೋ ಮಾತುಕತೆಗೆ ಸಮ್ಮತಿಸಿದ್ದನು. ಉಷಾ ಹಾಗೂ ಮನೋಜರ ಈ ಔದಾರ್ಯ, ಶಶಿ-ಸುಹಾಸಿನಿಯರಿಗೆ ಸಂತಸವನ್ನು ತಂದಿತ್ತು. ತನ್ನ ಫ್ಯಾಕ್ಟರಿಯ ಎಲ್ಲಾ ವಿಭಾಗಗಳ ವಿಡಿಯೋ ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮಾಡಿರಿಸಿದ್ದ ಉಷಾ, ತನ್ನ ಗೆಳತಿ ಸುಹಾಸಿನಿಗೆ ಅದರ ವಿವರಗಳನ್ನು ವಿಸ್ತಾರವಾಗೇ ವಿವರಿಸಿದ್ದಳು. ಮನೋಜನ ಫ್ಯಾಕ್ಟರಿ ದೊಡ್ಡದಾಗಿದ್ದು, ಅದರಲ್ಲಿ ಸುಮಾರು ೨೦೦ ಕೆಲಸಗಾರರು ಕೆಲಸ ಮಾಡುತ್ತಿದ್ದರು. ಅವರ ಫ್ಯಾಕ್ಟರಿಯಲ್ಲಿ ಚುರುಕಿನಿಂದ ನಡೆಯುತ್ತಿದ್ದ ಉತ್ಪಾದನಾ ಕಾರ್ಯವನ್ನು ನೋಡಿ ಶಶಿ ದಂಗು ಬಡಿದಂಥವನಾಗಿದ್ದು ಸುಳ್ಳಲ್ಲ. 

'ನೀನೇಕಿಷ್ಟು ಮಂಕಾಗಿಬಿಟ್ಟಿದ್ದೀಯ?' ಉಷಾ ತನ್ನ ಗೆಳತಿ ಸುಹಾಸಿನಿಯನ್ನು ಪ್ರಶ್ನಿಸಿದ್ದಳು. 

'ನಿನಗೆ ನಮ್ಮ ಉದ್ದಿಮೆಯ ಬಗ್ಗೆ ತಿಳಿದಿರಬಹುದು. ನಮ್ಮ ಫ್ಯಾಕ್ಟರಿ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಕಳೆದೆರಡು ವಷಗಳಿಂದ ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಕೋವಿಡ್ ಲಾಕ್ಡೌನ್ ನಮ್ಮನ್ನು ನೆಲಕಪ್ಪಳಿಸಿ ತುಳಿದಿದೆ. ನಮ್ಮ ಫ್ಯಾಕ್ಟರಿಯಲ್ಲೀಗ ಯಾವ ಚಟುವಟಿಕೆಗಳೂ ನಡೆಯುತ್ತಿಲ್ಲ' ಎಂದುತ್ತರಿಸುವಾಗ ಸುಹಾಸಿನಿಯ ಮುಖದಲ್ಲಿ ಸಂಕೋಚವಿತ್ತು. 

'ನಿಮ್ಮ ಮಾರ್ಗದರ್ಶನವನ್ನು ಕೋರಿ ನಿಮ್ಮನ್ನು ಸಂಪರ್ಕಿಸಿದ್ದೇವೆ. ನಮ್ಮ ಉದ್ದಿಮೆಯನ್ನು ಪುನರುಜ್ಜೀವನಗೊಳಿಸುವ ಬಗೆ ಹೇಗೆ?' ಎಂದು ಶಶಿ, ಮನೋಜನನ್ನು ಪ್ರಶ್ನಿಸಿದ್ದನು. 

ಮನೋಜ್ ಮಾತನಾಡುತ್ತ, 'ತಾವಿಬ್ಬರೂ ಸರಿಯಾದ ಸಮಯದಲ್ಲಿ ನಮ್ಮನು ಸಂಪರ್ಕಿಸಿದ್ದೀರಿ. ತಾವುಗಳು ಹಳೆಯ ಸ್ನೇಹಿತರುಗಳಾದುದರಿಂದ ತಮ್ಮೊಡನೆ ಕೆಲವು ವಿಷಯಗಳನ್ನು ಹಂಚಿಕೊಳ್ಳಬಯಸುತ್ತೇನೆ. ಆ ವಿಷಯಗಳು ತಮ್ಮಲ್ಲೇ ಗೌಪ್ಯವಾಗಿರಬೇಕು,' ಎಂದಾಗ, ಶಶಿ-ಸುಹಾಸಿನಿಯರಿಬ್ಬರೂ ತಲೆಯಾಡಿಸಿ ಸಮ್ಮತಿಸಿದ್ದರು. 

'ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳ ಪರಿಚಯ ನಮಗೆ ಚೆನ್ನಾಗಿದೆ. ಕೋವಿಡ್ ರೋಗಿಗಳಿಗೆ ಅತ್ಯಾವಶ್ಯಕವಾಗಿ ಬೇಕಾಗಬಹುದಾದಂತಹ  "ಉಸಿರಾಟದ ಉಪಕರಣಗಳು ಮತ್ತು ವೆಂಟಿಲೇಟರ್ಗಳ" ಉತ್ಪಾದನೆಯನ್ನು ನಿಮ್ಮ ಫ್ಯಾಕ್ಟರಿಯಲ್ಲಿ ಮಾಡುವ ಪ್ರಯತ್ನವನ್ನೇಕೆ ಮಾಡಬಾರದೆಂದು, ಅವರು ನಮಗೆ ಸಲಹೆ ನೀಡಿದ್ದಾರೆ. ಆ ಎರಡೂ ಉಪಕರಣಗಳು ಜೀವ ರಕ್ಷಕಗಳಾಗಿದ್ದು, ಅವುಗಳಿಗೆ ದೇಶಾದ್ಯಂತ ಅಪಾರ ಬೇಡಿಕೆಯಿದೆ. ಅದರ ಉತ್ಪಾದನಾ ಕಾರ್ಯದಲ್ಲಿ, ವಿದೇಶೀ ಸಂಯೋಗದ ಮೂಲಕ, ನಮ್ಮ ರಾಜ್ಯವು ನಮಗೆ ಮಾರ್ಗದರ್ಶನವನ್ನು ನೀಡುವ ಭರವಸೆ ನೀಡಿದೆ.  ಆದರೂ ಆ ಕಾರ್ಯಕ್ಕೆ ಕೈ ಹಾಕುವುದು ಒಂದು ಸವಾಲೇ ಸರಿ. ನಮ್ಮ ಫ್ಯಾಕ್ಟರಿಯ ಮೇಲೆ ಕೆಲಸದೊತ್ತಡ ಹೆಚ್ಚಿ, ನಮ್ಮ ಎಂದಿನ ಉತ್ಪನ್ನವಾದ ಪಿ.ಪಿ.ಇ. ತೊಡುಗೆಗಳ ಉತ್ಪಾದನೆಗೆ ತೊಡಕುಂಟಾಗಬಹುದು. ಅಂದಹಾಗೆ ನಮ್ಮ ಪಿ.ಪಿ.ಇ. ತೊಡುಗೆಗಳಿಗೆ ಬೇಡಿಕೆ ಏರುತ್ತಲೇ ಸಾಗಿದ್ದು, ರಫ್ತಿನ ವ್ಯಾಪಾರಕ್ಕೂ ಅಪಾರ ಬೇಡಿಕೆ ಇದೆ. ತಾವುಗಳು ಪಿ.ಪಿ.ಇ. ತೊಡುಗೆಗಳನ್ನು ಉತ್ಪಾದಿಸುವಲ್ಲಿ ನಮ್ಮೊಡನೆ ಸಹಕರಿಸಬಹುದು. ಆ ಉತ್ಪಾದನೆಯನ್ನು ನೀವು ನಮಗಾಗಿ ಮಾಡಿಕೊಟ್ಟರೆ (job work), ಅದು ನಮ್ಮಿಬರಿಗೂ ಲಾಭದಾಯಕವಾಗುತ್ತದೆ. ಪಿ.ಪಿ.ಇ. ತೊಡುಗೆಗಳ ಉತ್ಪಾದನೆಯನ್ನು ಮಾಡಲು ಬೇಕಾದ ಕಚ್ಚಾ ವಸ್ತುಗಳನ್ನು ಮತ್ತು ಮಾರ್ಗದರ್ಶನವನ್ನೂ ನಿಮಗೆ ನಾವು ನೀಡಬಲ್ಲೆವು' ಎಂದು ಮನೋಜ್ ವಿವರಿಸಿದಾಗ, ಉಷಾ ತನ್ನ ಗೆಳತಿ ಸುಹಾಸಿನಿಯ ಪ್ರತಿಕ್ರಿಯೆಯನ್ನು ಗಮನಿಸುತ್ತಾ, ಅವಳ  ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದಳು. 

ಸುಹಾಸಿನಿಗೀಗ, ಶಶಿಯ ಕಣ್ಣುಗಳಲ್ಲಿ ಹೊಸ ಮಿಂಚೊನ್ದು ಕಂಡುಬಂದಿತ್ತು. 'ತಾವು ನೀಡುತ್ತಿರುವ ಕೆಲಸವನ್ನು ಕೈಗೊಳ್ಳಲು ನನಗೆ ಎಷ್ಟು ಹಣ ಬೇಕಾಗಬಹುದು?' ಶಶಿಯ ಪ್ರಶ್ನೆ ಮನೋಜನ ಕಡೆಗಿತ್ತು. 

'ಹೊಸ ಉತ್ಪಾದನಾ ಯಂತ್ರಗಳನ್ನು ಖರೀದಿಸಲು ಸುಮಾರು ಒಂದು ಕೋಟಿ ರುಪಾಯೀಗಳು ಬೇಕಾಗಬಹುದು. ಕಚ್ಚಾ ಸಾಮಗ್ರಿಗಳನ್ನು ನಾವು ಕಳುಹಿಸಿಕೊಡುತ್ತೇವೆ,' ಮನೋಜನ ಉತ್ತರ ಥಟ್ಟನೆ ಬಂದಿತ್ತು. 

ಒಂದು ಕೋಟಿ ರೂಪಾಯಿಗಳಷ್ಟರ ಭಾರಿ ಮೊತ್ತದ ಮಾತನ್ನು ಕೇಳುತ್ತಲೇ, ಶಶಿಯ ಮನಸ್ಸು ಒಳಗೊಳಗೆ ಕುಸಿದಿದ್ದರೂ, ಮುಖದಲ್ಲಿ ಧೈರ್ಯ ತಂದುಕೊಂಡ ಅವನು, 'ಅಷ್ಟು ಹಣವನ್ನು ನಾನು ಹೊಂದಿಸಬಲ್ಲೆ. ೨-೩ ವಾರಗಳಷ್ಟರ ಸಮಯ ಬೇಕಾಗಬಹುದು,' ಎಂದನು. 

ಉಷಾ-ಮನೋಜರ ಅನುಮತಿಯನ್ನು ಪಡೆದನಂತರ, ಶಶಿ ವಿಡಿಯೋ ಕರೆಯನ್ನು ಅಂತ್ಯಗೊಳಿಸಿದ್ದನು. 

ಮಾರನೆಯ ದಿನವೇ ಶಶಿಕಾಂತ್ ಮತ್ತು ಸುಹಾಸಿನಿಯರು, ಅವರ ಬ್ಯಾಂಕ್ ಮ್ಯಾನೇಜರ್ ಕ್ಯಾಬಿನ್ನಲ್ಲಿ ಉಪಸ್ಥಿತರಿದ್ದರು. 'ನಿಮ್ಮ ವಿವಿಧ ಸಾಲಗಳಲ್ಲಿರುವ ಭಾರಿ ಬಾಕಿಯನ್ನು ಪಾವತಿಸುವ ಯಾವುದಾದರೂ ಪ್ರಸ್ತಾಪವನ್ನು ತಂದಿದ್ದೀರಾ?' ಬ್ಯಾಂಕ್ ಮ್ಯಾನೇಜರ್ ಪ್ರಶ್ನೆ ಶಶಿಯ ಕಣ್ಣಿಗೆ ಕೈ ಹಾಕಿದಂತಿತ್ತು. 

'ಹೌದು ಸಾರ್,' ಶಶಿಯ ಉತ್ತರದಲ್ಲೀಗ ದೃಢತೆಯಿತ್ತು. 

ತಮ್ಮ ಉದ್ದಿಮೆಯ ವಿಸ್ತರಣಾ ಯೋಜನೆಯನ್ನು ವಿವರಿಸಿದ ಶಶಿ, 'ಸುಮಾರು ಒಂದು ಕೋಟಿಯಷ್ಟು ಹೊಸ ಸಾಲವನ್ನು ತಾವು ಮಂಜೂರು ಮಾಡಿಸಿಕೊಟ್ಟರೆ, ನಾವು ನಮ್ಮ ಸಮಸ್ಯೆಯಿಂದ ಹೊರ ಬಂದು, ಆದಷ್ಟು ಬೇಗ ತಮ್ಮ ಸಾಲಗಳ ಬಾಕಿಯನ್ನೆಲ್ಲಾ ತೀರಿಸಬಲ್ಲೆವು' ಎಂದನು. 

ಶಶಿಯ ಕೋರಿಕೆಗೆ ಮ್ಯಾನೇಜರ್ ರವರ ಪ್ರತಿಕ್ರಿಯೆ ತಿರಸ್ಕಾರ ಭಾವದ ನಗೆ ಮಾತ್ರವಾಗಿತ್ತು. 'ನಿಮ್ಮ ವಿವಿಧ ಸಾಲಗಳಲ್ಲಿ ಭಾರಿ ಮೊತ್ತಗಳು ಬಾಕಿಯಿದ್ದು, ನಿಮ್ಮ ಎಲ್ಲಾ ಸಾಲಗಳನ್ನೂ  ಎನ್.ಪಿ.ಎ. ಎಂದು ಪರಿಗಣಿಸಬೇಕಾಬಹುದು. ನಿಮ್ಮ ಫ್ಯಾಕ್ಟರಿಯಲ್ಲಿ ಉತ್ಪಾದನೆ ನಿಂತಿದೆ. ತಮ್ಮ ಸಾಲಗಳಿಗೆ ಆಧಾರವಾಗಿ ತಾವು ನೀಡಿರುವ ಸ್ಥಿರಾಸ್ತಿಯ ಇಂದಿನ ಮಾರುಕಟ್ಟೆಯ ಬೆಲೆ ಕೇವಲ ಒಂದೂವರೆ ಕೋಟಿಯಷ್ಟಿದ್ದು, ತಮ್ಮ ಒಟ್ಟು ಸಾಲಗಳ ಮೊತ್ತ, ೩.೫ ಕೋಟಿ ರೂಪಾಯಿಗಳ ಮಂಜೂರಾತಿಗೆ ಹೋಲಿಸಿದರೆ, ೩.೮ ಕೋಟಿ ರುಪಾಯೀಗಳಿಷ್ಟಿದೆ. ಹೊಸ ಸಾಲವನ್ನು ನೀಡುವ ಪ್ರಶ್ನೆಯೇ ಇಲ್ಲ.' ಮ್ಯಾನೇಜರ್ ತಮ್ಮ ಕಂಪ್ಯೂಟರ್ ಮಾನಿಟರ್ನತ್ತ ನೋಡುತ್ತಾ, ಗಡಸು ಧ್ವನಿಯಲ್ಲೇ ಶಶಿಗೆ ಹೇಳಿದ್ದರು. 

ಸಪ್ಪಗಾದ ಶಶಿ ತನ್ನ ಪತ್ನಿಯ ಮುಖವನ್ನು ನೋಡಹತ್ತಿದ್ದನು. 'ಹೊಸ ಸಾಲವನ್ನು ಒದಗಿಸುವ ಅವಕಾಶವೇ ಇಲ್ಲ. ಕೋವಿಡ್ ಲಾಕ್ಡೌನ್ನಿಂದ ಇಡೀ ದೇಶದ ಆರ್ಥಿಕತೆಯೇ ಹದಗೆಟ್ಟು ಹೋಗಿದೆ. ಎಲ್ಲಾ ಬ್ಯಾಂಕ್ಗಳಂತೆ ನಮ್ಮ ಬ್ಯಾಂಕ್ ಕೂಡ ತೀವ್ರ ಸಂಕಷ್ಟದಲ್ಲಿದೆ. ತಮ್ಮ ಸಾಲಗಳ ಬಾಕಿಯನ್ನು ಮೊದಲು ಮರುಪಾವತಿ ಮಾಡುವ ಏರ್ಪಾಡು ಮಾಡಿ.' ಮ್ಯಾನೇಜರ್ ರವರ ಆದೇಶದಲ್ಲಿ ಆಕ್ರೋಶದ ಭಾವವಿತ್ತು. ಮ್ಯಾನೇಜರ್ ರವರ ಕ್ಯಾಬಿನ್ನನ್ನು ಕೆಲ ಕ್ಷಣ ಮೌನ ಆವರಿಸಿತ್ತು. ನಿರಾಶರಾದ ಶಶಿಕಾಂತ್, ಸುಹಾಸಿನಿ  ಹೊರಟು ನಿಂತಾಗ, ಮ್ಯಾನೇಜರ್ ರವರ ಅನುಮತಿಯನ್ನು ಕೇಳಬೇಕೆಂಬ ಸಮಾಧಾನವೂ ಅವರಲ್ಲಿ ಉಳಿದಿತ್ತಿಲ್ಲ. 

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆದ ತನ್ನ ತಂದೆ ಶಂಕರ್ ಸಿಂಗ್ ರವರೊಂದಿಗೆ ವಿಷಯವನ್ನು ಚರ್ಚಿಸಬೇಕೆಂಬುದು ಸುಹಾಸಿನಿಯ ವಿಚಾರವಾಗಿತ್ತು. ನಿವೃತ್ತರಾದರೂ, ಚಟುವಟಿಕೆಯಿಂದಲೇ ಇದ್ದ ಶಂಕರ್ ಸಿಂಗ್, ಆರ್ಥಿಕ ವಲಯದ ಆಗು-ಹೋಗುಗಳನ್ನು ದಿನ ನಿತ್ಯ ಗಮನಿಸುವವರಾಗಿದ್ದರು. ಕೋವಿಡ್ನ ದಾಳಿಯಿಂದ ತತ್ತರಿಸಿದ ದೇಶ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಪ್ರಧಾನಿ ಮೋದಿಯವರು ಈಚೆಗೆ ಜಾರಿಗೊಳಿಸಿದ್ದ ರೂ. ೨೦ ಲಕ್ಷ ಕೋಟಿಯಷ್ಟರ ಆರ್ಥಿಕ ಪರಿಹಾರದ (pandemic package) ವಿಚಾರವನ್ನು, ಶಂಕರ್ ಸಿಂಗ್ರವರು ಕೆಲವು ಬಾರಿ ತಮ್ಮ ಅಳಿಯ ಶಶಿಕಾಂತನೊಂದಿಗೆ ಚರ್ಚಿಸಿದ್ದರು. 

'ದೇಶದ ಆರ್ಥಿಕತೆಯ ಜೀವನಾಡಿಗಳಾದಂತಹ  ಎಂ.ಎಸ್.ಎಂ.ಇ. ಘಟಕಗಳು ಲಾಕ್ಡೌನಿನಿಂದ ಬಳಲಿದ್ದು, ಅವುಗಳಿಗೆ ಹೊಸ ಚೈತನ್ಯವನ್ನು ನೀಡಲು ಪ್ರಧಾನಿಯವರ ಆರ್ಥಿಕ ಪ್ಯಾಕೇಜ್ನಲ್ಲಿ ವಿಶೇಷವಾದ ಪ್ರಸ್ತಾಪಗಳಿವೆ. ನೀವಿಬ್ಬರೂ ಬನ್ನಿ. ಎಂ.ಎಸ್.ಎಂ.ಇ. ಮಂತ್ರಾಲಯದ ವೆಬ್ಸೈಟನ್ನೇ ಅವಲೋಕಿಸೋಣ' ಎಂದು ಶಂಕರ್ ಸಿಂಗ್ ತಮ್ಮ ಮಗಳು-ಅಳಿಯಂದಿರನ್ನೂ ಕರೆದಾಗ, ಅವರ ಮುಖದಲ್ಲಿ ಕೊಂಚ ಕ್ರೋಧ ಭಾವವಿತ್ತು. ಆ ವೆಬ್ಸೈಟ್ನಲ್ಲಿ ಎಂ.ಎಸ್.ಎಂ.ಇ.ಗಳ ಪುನರುಜ್ಜೀವನಕ್ಕಾಗಿ ಅಧಿಕೃತವಾಗಿ ಪ್ರಕಟವಾದ ಪ್ಯಾಕೇಜ್ನ ವಿವರಗಳು ಹೀಗಿತ್ತು.  

"ಉದ್ಯಮಿ ಬಾಂಧವರೇ 

ತಾವುಗಳು ಎಂದಿಗೂ ಒಬ್ಬಂಟಿಗರಲ್ಲ. 

ಕೋವಿಡ್ನ ಪಿಡುಗಿನ ದಿನಗಳಲ್ಲಿ ಇಡೀ ದೇಶವೇ ತಮ್ಮೊಂದಿಗಿದೆ. 

ಎಂ.ಎಸ್.ಎಂ.ಇ. ಘಟಕಗಳನ್ನು ಪುನರುಜ್ಜೀವನಗೊಳಿಸಲು, ಕಮ್ಮಿ ಬಡ್ಡಿ ದರದಲ್ಲಿ ಅವುಗಳಿಗೆ ಸಾಲವನ್ನೊದಗಿಸಲು, ೩ ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಕಾದಿರಸಲಾಗಿದೆ. ತಮ್ಮ ಸಮೀಪದ ಬ್ಯಾಂಕ್ಗಳಲ್ಲಿ ಅಥವಾ ನಮ್ಮ ಪೋರ್ಟಲ್ ಮುಖಾಂತರ ತಾವುಗಳು ಆ ರೀತಿಯ ಸಾಲಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. 

ಆ ರೀತಿಯ ಸಾಲಗಳ ಮಂಜೂರಾತಿಗೆ ಯಾವ ರೀತಿಯ ಹೆಚ್ಚಿನ ಭದ್ರತೆ ಬೇಡವಾಗಿದ್ದು, ೧೦೦%ನಷ್ಟು ಮರು ಪಾವತಿಯ ಖಾತರಿಯನ್ನು ಕೇಂದ್ರ ಸರಕಾರ ಸಾಲ ನೀಡುವ ಹಣಕಾಸು ಸಂಸ್ಥೆಗಳಿಗೆ  ನೀಡುತ್ತದೆ. 

ಆ ರೀತಿಯ ಸಾಲಗಳ ಅಸಲಿನ ಮರುಪಾವತಿಯನ್ನು ಮೊದಲ ವರ್ಷ ಮಾಡಬೇಕಿಲ್ಲ. 

ಎಂ.ಎಸ್.ಎಂ.ಇ. ಘಟಕಗಳ 'ಹೂಡಿಕೆ ಮತ್ತು ವಹಿವಾಟುಗಳ ಮಿತಿ (investment and turnover)'ಯ ವಿಸ್ತಾರವನ್ನು ಹೆಚ್ಚಿಸಿರುವದರಿಂದ, ಇನ್ನೂ ಹೆಚ್ಚು ಘಟಕಗಳು ಆ ಯೋಜನೆಯಡಿ ವಿವಿಧ ರೀತಿಯ ಸೌಲಭ್ಯಗಳನ್ನು ಈಗ ಪಡೆಯಬಹುದು. 

ಎಂ.ಎಸ್.ಎಂ.ಇ. ಘಟಕಗಳ ವಹಿವಾಟನ್ನು ಸುಲಭೀಕರಣಗೊಳಿಸಲು, ಅವುಗಳು ೨೦೦ ಕೋಟಿ ರೂಪಾಯಿಗಳವರೆಗೆ ಸರಕಾರಗಳಿಗೆ ಮಾರಾಟ ಮಾಡುವ ಕರಾರುಗಳನ್ನು ಅಂಗೀಕರಿಸುವಾಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಂಡರ್ಗಳನ್ನು ಕರೆಯಲಾಗುವುದಿಲ್ಲ.  

ಕೋವಿಡ್ನ ಪರಿಸ್ಥಿತಿಯಿಂದ ಬಳಲಿರುವ ಎಂ.ಎಸ್.ಎಂ.ಇ. ಘಟಕಗಳ ಬೆಂಬಲಕ್ಕಾಗಿ ಕೆಳಕಂಡ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 

-೨೦,೦೦೦ ಕೋಟಿ ರುಪಾಯಿಗಳ ನಿಧಿಯೊಂದನ್ನು ಸುಲಭ ಸಾಲಗಳ ಬಿಡುಗಡೆಗಾಗಿ ಕಾದಿರಿಸಲಾಗಿದೆ. ಈ ನಿಧಿಯಿಂದ ಸುಮಾರು ೨ ಲಕ್ಷ ಘಟಕಗಳಿಗೆ ಸಹಾಯ ಕಲ್ಪಿಸಬಹುದೆಂದು ಅಂದಾಜಿಸಲಾಗಿದೆ. 

-೫೦,೦೦೦ ಕೋಟಿ ರುಪಾಯಿಗಳ ನಿಧಿಯೊಂದನ್ನು ಬಂಡವಾಳವನ್ನೊದಗಿಸುವ ಸಲುವಾಗಿ ಕಾದಿರಿಸಲಾಗಿದೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಜಂಟಿಯಾಗಿ ಈ ನಿಧಿಯನ್ನು ಒದಗಿಸಲಿವೆ. 

'www.champions.gov.in' ಎಂಬ ಹೊಸ ಪೋರ್ಟಲ್ಲೊಂದನ್ನು ಎಂ.ಎಸ್.ಎಂ.ಇ. ಮಂತ್ರಾಲಯ ಸ್ಥಾಪಿಸಿದೆ. ಅನ್ಯಾಯಕ್ಕೊಳಗಾಗಿರುವ ಘಟಕಗಳು ತಮ್ಮ ದೂರುಗಳನ್ನು ಈ ಪೋರ್ಟಲ್ ಮೂಲಕ ದಾಖಲಿಸಬಹುದಾಗಿದೆ. 

ತಾವುಗಳು ಗೆದ್ದರೆ, ದೇಶ ಗೆದ್ದಂತೆ. 

ಕೋಟ್ಯಾಂತರ ಪ್ರಜೆಗಳ ಜೀವನಕ್ಕಾಧಾರಿಯಾಗಿರುವ ಎಂ.ಎಸ್.ಎಂ.ಇ.ಗಳು ಆತ್ಮನಿರ್ಭರ ಭಾರತದ ಭದ್ರ ಬುನಾದಿಯಾಗಿವೆ. 

ನರೇಂದ್ರ ಮೋದಿ 

ಪ್ರಧಾನ ಮಂತ್ರಿಗಳು"

ಬ್ಯಾಂಕಿಂಗ್ ಕ್ಷೇತ್ರದ ಹಳೆ ಹುಲಿಯಾದ ಶಂಕರ್ ಸಿಂಗ್, ಮಂತ್ರಾಲಯದ ಪ್ರಕಟಣೆಯನ್ನೋದಿದನಂತರ ಇನ್ನೂ ಕುಪಿತರಾಗಿದ್ದರು. 'ಮಾನ್ಯ ಪ್ರಧಾನಿಗಳು ಇಷ್ಟು ಒಳ್ಳೆಯ ಸೌಲಭ್ಯಗಳನ್ನು ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನಕ್ಕಾಗಿ ಪ್ರಕಟಿಸಿರುವಾಗ, ಕಷ್ಟದಲ್ಲಿರುವ ನಿಮ್ಮ ಘಟಕಕ್ಕೇಕೆ ಸಹಾಯ ಮಾಡಲು ನಿಮ್ಮ ಬ್ಯಾಂಕ್ ಮ್ಯಾನೇಜರ್ ನಿರಾಕರಿಸಿದ್ದಾರೆ? ಹೊಸ ನೀತಿಯ ಪ್ರಕಟಣೆಯನ್ನು ನಿಮ್ಮ ಬ್ಯಾಂಕ್ ಮ್ಯಾನೇಜರ್ ರವರು ಓದಿಲ್ಲವೇಕೆ? ನಿಮ್ಮ ಮ್ಯಾನೇಜರ್ ಬಳಿ ಮತ್ತೆ ಹೋಗೋಣ, ಹೊಸ ನೀತಿಯ ಪ್ರಕಟಣೆಯನ್ನು ಅವರಿಗೆ ತೋರಿಸೋಣ.' ಶಂಕರ್ ಸಿಂಗ್ ತಮ್ಮ ಅಳಿಯನನ್ನು ನೋಡುತ್ತಾ ಸಣ್ಣದಾಗಿ ಗುಡುಗಿದ್ದರು. 

ಅದೇ ದಿನ ಶಶಿಕಾಂತನೊಡನೆ, ಶಂಕರ್ ಸಿಂಗ್ ರವರು ಬ್ಯಾಂಕ್ ಮ್ಯಾನೇಜರ್ ಬಳಿಗೆ ದೌಡಾಯಿಸಿದ್ದರು. ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನಕ್ಕಾಗಿ ಕೇಂದ್ರ ಸರಕಾರ ಪ್ರಕಟಿಸಿದ್ದ ವಿವರಗಳನ್ನು ಪ್ರಸ್ತಾಪಿಸುತ್ತಾ ಶಂಕರ್ ಸಿಂಗ್, ಬ್ಯಾಂಕ್ ಮ್ಯಾನೇಜರ್ ಮೇಲೆ ಒಮ್ಮಲೇ ಮುಗಿ ಬಿದ್ದಿದ್ದರು. 'ನಾನು ಕೂಡ ಒಬ್ಬ ಮಾಜಿ ಬ್ಯಾಂಕ್ ಮ್ಯಾನೇಜರ್. ಸಣ್ಣ ಕೈಗಾರಿಕೆಯೊಂದನ್ನು ಕೊಲ್ಲುವ ಪ್ರಯತ್ನವನ್ನೇಕೆ ಮಾಡುತ್ತಿದ್ದೀರಿ?  ಈ ರೀತಿಯ ಉದ್ದಿಮೆಗಳು  ೧೨ ಕೋಟಿಯಷ್ಟು ಜನಗಳಿಗೆ  ಉದ್ಯೋಗವನ್ನು ಕಲ್ಪಿಸಿವೆ ಎಂದು ತಮಗೆ ತಿಳಿದಿಲ್ಲವೆ? ಕೇಂದ್ರ ಸರಕಾರ ಜಾರಿಗೊಳಿಸಿರುವ ಹೊಸ ಯೋಜನೆಗಳನುಸಾರ ನಮ್ಮ ಘಟಕಕ್ಕೆ ಹೆಚ್ಚಿನ ಆರ್ಥಿಕ ಸಹಾಯವನ್ನು ನೀಡುವಲ್ಲಿ ಇರುವ ತೊಂದರೆಗಳಾದರೂ ಏನು?' ಎಂದಿತ್ತು  ಶಂಕರ್ ಸಿಂಗ್ ರವರ ವಾದ. 

ಶಂಕರ್ ಸಿಂಗ್ ರವರು ತಮ್ಮ ಮೊಬೈಲ್ನಲ್ಲಿ ತೆಗೆದು ತೋರಿಸಿದ್ದ ಕೇಂದ್ರ ಸರಕಾರದ ಹೊಸ ನೀತಿಯನ್ನು ನೋಡುವ ಗೋಜಿಗೂ ಹೋಗದ ಬ್ಯಾಂಕ್ ಮ್ಯಾನೇಜರ್, 'ನಿಮ್ಮ ಸಾಲಗಳು          "ಎನ್.ಪಿ.ಎ." ಹಾದಿ ಹಿಡಿದಿವೆ. ತಮ್ಮ ಫ್ಯಾಕ್ಟರಿ ಹಲವು ತಿಂಗಳುಗಳಿಂದ ಚಾಲನೆಯಲ್ಲಿಲ್ಲ. ನಿಮ್ಮ ಕೆಲಸಗಾರರನ್ನು ತೆಗೆದು ಹಾಕಿದ್ದೀರಿ. ೩೦ ಲಕ್ಷ ರೂಪಾಯಿಗಳಷ್ಟರ ಮರುಪಾವತಿಯನ್ನು ತಾವು ಕೂಡಲೇ ಮಾಡಬೇಕಾಗಿದೆ. ಹೀಗಿರುವಾಗ ತಮ್ಮ ಘಟಕಕ್ಕೆ ಒಂದು ಕೋಟಿಯಷ್ಟರ ಹೊಸ ಸಾಲವನ್ನು ಹೇಗೆ ನೀಡಲಿ? ಮಾಜಿ ಬ್ಯಾಂಕರ್ ಆದ ತಮಗೆ, ವಸೂಲಾಗದ ಸಾಲಗಳ ತೂಗುಗತ್ತಿ ನಮ್ಮಂಥ ಬಡಪಾಯೀ ಮ್ಯಾನೇಜರ್ ಗಳ ಮೇಲೆ ತೂಗುತ್ತಿರುತ್ತದೆ ಎಂದು ಗೊತ್ತಿಲ್ಲವೆ?' ಎಂದು ಕೇಳಿದಾಗ ಮ್ಯಾನೇಜರ್ ರವರ ದನಿಯಲ್ಲಿ ಕೊಂಚ ಆತಂಕವಿತ್ತು. 

'ಹಾಗಾದರೆ ಕೇಂದ್ರ ಸರಕಾರದ ಹೊಸ ನೀತಿಗೆ ಅರ್ಥವಿಲ್ಲವೇ? ನಿಮ್ಮ ಮೇಲಧಿಕಾರಿಗಳ ಅಭಿಪ್ರಾಯವನ್ನೇಕೆ ತಾವು ಕೇಳಬಾರದು?' ಶಶಿಯ ಪ್ರಶ್ನೆಯಲ್ಲಿ ಅಸಮಾಧಾನ ಕಾಣುತ್ತಿತ್ತು. 

'ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ಹೊಸ ನೀತಿಯನ್ನು ನಾನೊಮ್ಮೆ ನೋಡುವೆ. ನಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸುವೆ. ಹೆಚ್ಚಿನ ಸಾಲವನ್ನು ನೀಡುವೆನೆಂಬ ಖಾತರಿಯನ್ನು ಈಗಲೇ ಕೊಡಲಾರೆ.' ಮ್ಯಾನೇಜರ್ ರವರ ಉತ್ತರ ಯಾವ ಭರವಸೆಯನ್ನೂ ಕೊಡದಂತಿತ್ತು.  

ಶಶಿಯೀಗ 'ಎಡಬಿಡದ ತ್ರಿವಿಕ್ರಮ'ನಂತಾಗಿದ್ದನು. ಮಾರನೇ ದಿನವೇ ಅವನು, ಮ್ಯಾನೇಜರ್ ಮುಂದಿನ ಕುರ್ಚಿಯಲ್ಲಿ ಜಮಾಯಿಸಿದ್ದನು. 'ನಿಮಗೆ ಹೆಚ್ಚಿನ ಸಾಲವನ್ನು ಒದಗಿಸುವ ಸಣ್ಣ ಭರವಸೆಯೊಂದು ಕಂಡಿದೆ. ತಮ್ಮ ಸಾಲಗಳನ್ನು ನಾವಿನ್ನು ಎನ್.ಪಿ. ಎ. ಎಂದು ಪರಿಗಣಿಸದಿರುವುದು ನಿಮ್ಮ ಪಾಲಿಗೆ ಒಳ್ಳೆಯದಾಗಿದೆ. ಹೆಚ್ಚಿನ ಸಾಲವನ್ನು ಕೋರಿ ತಾವು ಹೊಸ ಅರ್ಜಿಯೊಂದನ್ನು, ಈ ಪಟ್ಟಿಯಲ್ಲಿರುವ ವಿವರಗಳೊಂದಿಗೆ ಸಲ್ಲಿಸಿ' ಎಂದು ಹೇಳಿದ ಮ್ಯಾನೇಜರ್, ಶಶಿಯ ಕೈಗೆ ಪಟ್ಟಿಯನ್ನಿಟ್ಟಿದ್ದರು. ಮ್ಯಾನೇಜರ್ ನೀಡಿದ ಉದ್ದನೆಯ ಪಟ್ಟಿಯನ್ನು ನೋಡಿ ಶಶಿಕಾಂತ್ಗೆ ಗಾಬರಿಯಾಗಿತ್ತು.  ತನ್ನ ಹೊಸ ಸಾಲದ ಅರ್ಜಿಯೊಂದಿಗೆ ಶಶಿ ನೀಡಬೇಕಾದ ವಿವರಗಳು ಹಾಗೂ ದಾಖಲೆಗಳ ಪಟ್ಟಿ ಕೆಳಕಂಡಂತಿತ್ತು. 

೧. ಉದ್ದಿಮೆಯಲ್ಲಿ ಉತ್ಪಾದನೆ ನಿಂತು ಎಷ್ಟು ದಿನಗಳಾಗಿವೆ? ಉತ್ಪಾದನೆ ನಿಲ್ಲಲು ಕಾರಣಗಳೇನು?

೨. ೨೦೨೦ರ ಮಾರ್ಚ್ ೩೧ರ 'ಆಸ್ತಿ ಮತ್ತು ಹೊಣೆಗಳ(Balance Sheet) ಪಟ್ಟಿ'ಯನ್ನು ನೀಡಿ. 

೩. ಹೊಸ ಉತ್ಪಾದನೆ ಹಾಗು ಮುಂಚಿನ  ಉತ್ಪಾದನೆಯನ್ನು ಮತ್ತೆ ಆರಂಭಿಸುವ ಬಗೆಗಿನ ವಿವರಗಳನ್ನು (Project report) ನೀಡಿ. 

೪. ಪಿ.ಪಿ. ಇ. ತೊಡುಗೆಗಳನ್ನು ತಯಾರು ಮಾಡಿ, ಅವುಗಳನ್ನು ಮನೋಜರ ಸಂಸ್ಥೆಗೆ ಕಳುಹಿಸುವ/ಮಾರಾಟ ಮಾಡುವ ಪ್ರಕ್ರಿಯೆಯನ್ನು ಕುರಿತಾದ ಒಪ್ಪಂದದ ಪತ್ರವನ್ನು ನೀಡಿ. 

೫. ಮನೋಜರ ಸಂಸ್ಥೆಯ ಕಳೆದ ಎರಡು ವರ್ಷದ ಆಸ್ತಿ ಮತ್ತು ಹೊಣೆಗಳ ಪಟ್ಟಿಗಳನ್ನೂ ನೀಡಿ. 

೬. ಮನೋಜರವರು ವ್ಯವಹರಿಸುವ ಬ್ಯಾಂಕಿನಿಂದ, ಮನೋಜ್ರವರ ಸಂಸ್ಥೆಯ ಆರ್ಥಿಕ ಸ್ಥಿರತೆ ಕುರಿತಾದ 'ಗೌಪ್ಯ ವರದಿ (Confidential report)'ಯ ಪತ್ರವನ್ನು ನೀಡಿ. 

೭. ಮನೋಜ್ರವರ ಸಂಸ್ಥೆಯಿಂದ ನಿಮ್ಮ ಸಂಸ್ಥೆಗೆ ಮುಂದಿನ ದಿನಗಳಲ್ಲಿ ನೀಡಬಹುದಾದ ಹಣದ ಪಾವತಿ ನೇರವಾಗಿ ನಮ್ಮ ಬ್ಯಾಂಕಿಗೇ ತಲುಪಬೇಕು. ಈ ವಿಷಯದಲ್ಲಿ ಮನೋಜರವರ ಸಂಸ್ಥೆಯ 'ಸಮ್ಮತಿ ಪತ್ರ (Power of Attorney - PoA)'ವನ್ನು ನೀಡಿ. 

೮. ಹೊಸ ಉತ್ಪಾದನೆಯನ್ನು ಆರಂಭಿಸಲು ಈಗಿರುವ ಫ್ಯಾಕ್ಟರಿಯಲ್ಲಿರುವಷ್ಟು ಸ್ಥಳಾವಕಾಶ ಸಾಕೆ? ಅದರ ಬಗೆಗಿನ ವಿವರಗಳನ್ನು ನೀಡಿ. 

೯. ಹೊಸ ಉತ್ಪಾದನೆಗೆ ಬೇಕಾದ ಕೌಶಲ್ಯವುಳ್ಳ ಕೆಲಸಗಾರರ ಲಭ್ಯದ ಬಗೆಗಿನ ವಿವರಗಳನ್ನು ನೀಡಿ. 

೧೦. ಫ್ಯಾಕ್ಟರಿ ಆವರಣದ ಬಾಡಿಗೆ ಕರಾರು ಪತ್ರದ ಅವಧಿ ಶೀಘ್ರವೇ ಅಂತ್ಯಗೊಳ್ಳಲಿದ್ದು, ಅದನ್ನು ನವೀಕರಣಗೊಳಿಸಿ, ಹೊಸ ಕರಾರು ಪತ್ರದ ಪ್ರತಿಯನ್ನು ನೀಡಿ. 

'ಇಷ್ಟೊಂದು ವಿವರಗಳು, ದಾಖಲೆ ಪಾತ್ರಗಳು ಏಕೆ ಬೇಕು? ಈ ಎಲ್ಲ ಅಂಶಗಳಿಗೆ ದಾಖಲೆಗಳನ್ನೊದಗಿಸಲು ಸಾಕಷ್ಟು ಸಮಯ ಬೇಕು. ಸಧ್ಯಕ್ಕೆ ೫೦ ಲಕ್ಷ ರೂಪಾಯಿಗಳ ನೆರವನ್ನೇಕೆ ಬಿಡುಗಡೆ ಮಾಡಬಾರದು?' ಶಶಿಯ ಪ್ರಶ್ನೆಯಲ್ಲಿ ಅಸಹಾಯಕತೆ ಇತ್ತು. 

'ಶಶಿಯವರೇ, ತಾವು ಬ್ಯಾಂಕ್ಗೂ ಮತ್ತು ಸರಕಾರಕ್ಕೂ ಆಭಾರಿಗಳಾಗಿರಬೇಕು. ಕೋವಿಡ್ ಪ್ಯಾಕೇಜ್ನ ಸೌಲಭ್ಯಗಳ ಪ್ರಕಾರ, ತಮ್ಮ ಸಾಲದ ಖಾತೆಯಲ್ಲಿ ಬಾಕಿ ಇರುವ ಇಡೀ ಮೊತ್ತದ ೨೦%ನಷ್ಟು ಮೊತ್ತವನ್ನು, ಅಂದರೆ ಸುಮಾರು ೭೬ ಲಕ್ಷ ರೂಪಾಯಿಗಳನ್ನು ತಮ್ಮ ಫ್ಯಾಕ್ಟರಿಯ ಪುನರುಜ್ಜೀವನಕ್ಕೆಂದು ಹೊಸ ಸಾಲದ ರೂಪದಲ್ಲಿ ನೀಡಬಹುದು. ಬಂಡವಾಳದ ಹೆಚ್ಚಳಕ್ಕಾಗೆಂದು ಮತ್ತೆ ೧೨ ಲಕ್ಷ ರುಪಾಯಿಗಳ ನೆರವನ್ನು ನೀಡಬಹುದು. ನಿಮ್ಮ ಫ್ಯಾಕ್ಟರಿಯ ಪುನರುಜ್ಜೀವನ ಸಾಲದ ಬಡ್ಡಿಯ ದರ ೮%ಗಿಂತ ಹೆಚ್ಚಿರಲಾರದು. ನೀವು ಯಾವುದೇ ರೀತಿಯ ಹೆಚ್ಚಿನ ಭದ್ರತೆ/ಅಡಮಾನಗಳನ್ನು ನೀಡಬೇಕಿಲ್ಲ. ಆದರೆ ನಾವು ಕೇಳಿರುವ ವಿವರಗಳು ಮತ್ತು ದಾಖಲೆ ಪತ್ರಗಳನ್ನು  ನೀಡದೆ ಅನ್ಯ ಮಾರ್ಗವಿಲ್ಲ. ನಿಮ್ಮ ಸಾಲದ ಹೊಣೆ, ಮಂಜೂರಾತಿ ನೀಡುತ್ತಿರುವ ನಮ್ಮಗಳ ಮೇಲೂ ಇರುತ್ತದೆ. ಬ್ಯಾಂಕ್ ಮ್ಯಾನೇಜರ್ ಗಳಾದ ನಮ್ಮಗಳ ಮೇಲೂ ಹೆಚ್ಚಿನ ಜವಾಬ್ದಾರಿ ಹಾಗೂ ತೀವ್ರವಾದ ಆತಂಕಗಳು ಇರುತ್ತವೆ. ಮಾಜಿ ಬ್ಯಾಂಕರ್ ಆದ ನಿಮ್ಮ ಮಾವನವರಿಗೆ ನಮ್ಮ ಆತಂಕಗಳ ಅರಿವಿರಬಹುದು. ನಮಗೆ ಬೇಕಾದ ವಿವರಗಳು, ದಾಖಲೆಗಳು ನಮ್ಮ ಕೈಸೇರದೆ ನಾವು ಮುಂದುವರಿಯುವಂತಿಲ್ಲ.' ಬ್ಯಾಂಕ್ ಮ್ಯಾನೇಜರ್ ರವರ ಮಾತುಗಳಲ್ಲಿ ಖಚಿತತೆಯಿತ್ತು. 

'ನಿಮ್ಮ ಆಡಿಟರ್ಗಳ (ಲೆಕ್ಕ ಪರಿಶೋಧಕರು) ಮತ್ತು ನಿಮ್ಮ ಮಾವನವರ ಸಹಾಯವನ್ನು ಪಡೆಯಿರಿ. ನೀವೂ ಕೂಡಲೇ ಕಾರ್ಯೋನ್ಮುಖರಾಗಿ. ಆಗ ನಿಮ್ಮ ಕೆಲಸಗಳು ಬೇಗ ಮುಗಿಯಬಹುದು. ಮುಖ್ಯವಾಗಿ ತಮ್ಮ ಸ್ನೇಹಿತರಾದ ಮನೋಜ್ರವರ ಬೆಂಬಲ ತಮಗೆ ಅವಶ್ಯಕ.' ಮ್ಯಾನೇಜರ್ ರವರ ಸಲಹೆ ಮುಂದುವರೆದಿತ್ತು. 

ಶಶಿಗೀಗ ಹೊಸ ಭರವಸೆಯೊಂದು ಮೂಡಿತ್ತು. ಬೇಕಾದ ದಾಖಲೆಗಳನ್ನು ಪಡೆಯಲು ಅವನ ಪ್ರಯತ್ನಗಳು ಶುರುವಾಗಿತ್ತು. ಮಾವನವರಾದ ಶಂಕರ್ ಸಿಂಗ್ ರವರು ಫ್ಯಾಕ್ಟರಿ ಬಾಡಿಗೆ ಕರಾರು ಪತ್ರದ ನವೀಕರಣವನ್ನು ಮಾಡಿಸಿ ಮುಗಿಸಿದ್ದರು. ಶಶಿಯ ಫ್ಯಾಕ್ಟರಿಯ ಸಮೀಪವೇ ಇದ್ದ ಮತ್ತೊಂದು ಫ್ಯಾಕ್ಟರಿ ಆವರಣವನ್ನು ಅವರು ಪಡೆಯುವ ಕಾರ್ಯವನ್ನು ಮುಗಿಸಿಯಾಗಿತ್ತು. ಶಶಿಯ ಆಡಿಟರ್ಗಳು ಶಶಿಗೆ ಬೇಕಾದ ಮಿಕ್ಕೆಲ್ಲ ದಾಖಲೆಗಳನ್ನು ತಯಾರು ಮಾಡಿ ಕೊಟ್ಟಿದ್ದರು. ಮನೋಜರಿಂದ ಬರಬೇಕಾದ ಮಾಹಿತಿ ಮತ್ತು ದಾಖಲೆಗಳು ಬರುವಲ್ಲಿ ಯಾವ ತಡವೂ ಆಗಲಿಲ್ಲ. ಫ್ಯಾಕ್ಟರಿಗೆ ಬೇಕಾದ ಹೆಚ್ಚಿನ ವಿದ್ಯುತ್ತಿನ ಮಂಜೂರಿ ಸುಹಾಸಿನಿಯ ಪ್ರಯತ್ನದಿಂದ ದೊರೆತಿತ್ತು. ಫ್ಯಾಕ್ಟರಿಯಿಂದ ಹೊರನಡೆದ್ದಿದ್ದ ಕೆಲಸಗಾರರೆಲ್ಲರನ್ನು ವಾಪಸ್ಸು ಕರೆಸಿಕೊಳ್ಳುವ ಪ್ರಯತ್ನವನ್ನೂ ಸುಹಾಸಿನಿ ಮಾಡಹತ್ತಿದ್ದಳು. 'ಮನಸ್ಸಿದ್ದಲ್ಲಿ ಮಾರ್ಗ' ಎಂಬ ಮಾತು ಶಶಿಗೀಗ ನಿಜವೆನಿಸತೊಡಗಿತ್ತು.

ಹತ್ತು ದಿನಗಳು ಕಳೆಯುವಷ್ಟರಲ್ಲಿ, ಶಶಿ ಎಲ್ಲ ವಿವರಗಳನ್ನು ಹಾಗೂ ದಾಖಲೆಗಳನ್ನು ತನ್ನ ಬ್ಯಾಂಕ್ಗೆ ಸಲ್ಲಿಸಿದ್ದನು. ಶಶಿ ೧ ಕೋಟಿ ರುಪಾಯಿಗಳಷ್ಟರ  ಹೆಚ್ಚುವರಿ ಸಾಲಕ್ಕೆ ಅರ್ಜಿಯನ್ನು ನೀಡಿದ್ದರೂ, ಬ್ಯಾಂಕ್ ಮ್ಯಾನೇಜರ್ ರವರು ಮುಂಚೆಯೇ ತಿಳಿಸಿದ್ದಂತೆ  ರೂ. ೭೬  ಲಕ್ಷಗಳ ಹೆಚ್ಚುವರಿ ಸಾಲವನ್ನು ಮತ್ತು ರೂ. ೧೨ ಲಕ್ಷಗಳಷ್ಟರ ಬಂಡವಾಳ ನಿಧಿಯನ್ನು ಮಾತ್ರ ಮಂಜೂರು ಮಾಡಿದ್ದರು. ಅಷ್ಟೇ ಹೆಚ್ಚಿನ ಹಣದೊಂದಿಗೆ ತನ್ನ ಕೆಲಸವನ್ನು ನಿಭಾಯಿಸುವ ವಿಶ್ವಾಸ ಶಶಿಗೀಗ ಬಂದಿತ್ತು. 

ಫ್ಯಾಕ್ಟರಿಯಿಂದ ಕಳುಹಿಸಲ್ಪಟ್ಟ ೨೪ ಕೆಲಸಗಾರರ ಪೈಕಿ, ೧೬ ಕೆಲಸಗಾರರು ಅದೇ ನಗರದಲ್ಲೇ ವಾಸವಿದ್ದರು. ಕೆಲಸಕ್ಕೆ ಹಿಂತಿರುಗಿದ ೧೬ ಕೆಲಸಗಾರರಿಗೆ ಸುಹಾಸಿನಿ ತಲಾ ರೂ. ೧೦,೦೦೦ಗಳ ತಕ್ಷಣದ ಪರಿಹಾರವನ್ನು ನೀಡಿದ್ದಳು. ನೋಡು ನೋಡುವಷ್ಟರಲ್ಲೇ ಫ್ಯಾಕ್ಟರಿಗೆ ಮರು ಜೀವ ಬಂದು, ಕರ್ಣಾನಂದಕರವಾದ  ಉತ್ಪಾದನೆಯ ಸದ್ದು ಕೇಳಿಸತೊಡಗಿತು. ಒಂದೇ ತಿಂಗಳೊಳಗಾಗಿ ಶಶಿ ಪಿ.ಪಿ.ಇ. ತೊಡುಗೆಗಳ ಮೊದಲ ಕಟ್ಟ(ಪ್ಯಾಕ್)ನ್ನು, ಮನೋಜರಿಗೆ ಕಳಿಸಿದ್ದೂ ಆಗಿತ್ತು. ಸುಹಾಸಿನಿ ಮತ್ತು ಶಶಿಕಾಂತರಲ್ಲಿ ಹೊಸ ಉತ್ಸಾಹವೊಂದು ಮೂಡಿತ್ತು. 

ಶಶಿಯ ಆಹ್ವಾನದ ಮೇರೆಗೆ, ಅವನ  ಫ್ಯಾಕ್ಟರಿಯನ್ನು ಕಣ್ಣಾರೆ ಕಂಡ  ರಾಜು ಹಾಗು ರೋಹಿಣಿಯವರಿಗೆ ಸಂತೋಷವಾಗಿತ್ತು. ಶಶಿ ನೀಡಿದ ಮಾಹಿತಿಗಳ ಎಲ್ಲಾ ವಿವರಗಳನ್ನು ದಾಖಲಿಸಿಕೊಂಡ ರೋಹಿಣಿಗೆ, ತನ್ನ ಸಂಶೋಧನೆಯ ಪ್ರಬಂಧಕ್ಕೆ ಹೊಸದೊಂದು ಅಧ್ಯಾಯ ದೊರೆಕಿತ್ತು. 'ಸರಕಾರವನ್ನು ಟೀಕಿಸುವುದು ಸುಲಭದ ಕೆಲಸ. ಆದರೆ ಕುಸಿದು ಬಿದ್ದ ದೇಶದ ಆರ್ಥಿಕತೆಗೆ ಮರುಜೀವ ನೀಡುವುದು ಸುಲಭದ ಕೆಲಸವಲ್ಲ. ಮೋದಿಯವರು ಪ್ರಕಟಿಸಿದ ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನ ಯೋಜನೆಯ ಕಾರ್ಯಾನ್ವಯ ಸಾಧ್ಯ ಎಂಬುದಕ್ಕೆ ಶಶಿಯ ವೃತ್ತಾಂತವೇ ಜೀವಂತ ಸಾಕ್ಷಿ. ಸರಕಾರದ ಈ ಯೋಜನೆಯ ಯಶಸ್ಸಿಗೆ ಬ್ಯಾಂಕರ್ ಮತ್ತು ಗ್ರಾಹಕರುಗಳ ನಡುವಿನ ಸುಮಧುರ ಬಾಂಧವ್ಯ ಬಹಳ ಮುಖ್ಯವಾದದ್ದು. ಎರಡೂ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ನಡೆದರೆ, ಯಶಸ್ಸು ಖಚಿತ.' ರಾಜುರವರ ಸಮಜಾಯಿಷಿ ಈ ಬಾರಿ ರೋಹಿಣಿಗೆ ಸರಿಯೆನಿಸಿತ್ತು.  

******

೧೦ 

ನಲುಗಿದ ಆರ್ಥಿಕ ವ್ಯವಸ್ಥೆ 



ರಾಜುರವರು ಅವರ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷರಾಗಿದ್ದರು. ವಿವಿಧ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದ ರಾಜುರವರಿಂದ,  ದೇಶದಲ್ಲಿನ ಇಂದಿನ ಆಗು-ಹೋಗುಗಳ ಬಗ್ಗೆ ಚರ್ಚೆ-ತರ್ಕಗಳನ್ನು ಅವರ ಸ್ನೇಹಿತರು ಬಯಸುತ್ತಿದ್ದರು. ರಾಜು ಅವರ ಸ್ನೇಹಿತರುಗಳನ್ನೆಂದೂ ನಿರಾಸೆಗೊಳಿಸುವವರಾಗಿರಲಿಲ್ಲ. 

ಅಂದು ನಿವಾಸಿಗಳ ಸಂಘದ ತಿಂಗಳ ಸಭೆಯ ದಿನವಾಗಿತ್ತು. ಕೋವಿಡ್ ನಿರ್ಬಂಧಗಳಿಂದಾಗಿ ಅದು ಕೇವಲ ಹದಿನೈದು ಪದಾಧಿಕಾರಿಗಳ ಸಭೆಯಾಗಿತ್ತು. ಸಂಘದ ಮಾಮೂಲಿ ವ್ಯವಹಾರಗಳ ಮಂಡನೆ ಮುಗಿದನಂತರ ಅನೌಪಚಾರಿಕ ಚರ್ಚೆಯ ಸಮಯವಾಗಿತ್ತು. ಚರ್ಚೆ ಪ್ರಧಾನ ಮಂತ್ರಿಗಳು ಆ ದಿನಗಳಲ್ಲಿ ಪ್ರಕಟಿಸಿದ್ದ 'ಕೋವಿಡ್ ಆರ್ಥಿಕ ಪ್ಯಾಕೇಜ್ (Covid Pandemic Package)'ನ ಕಡೆಗೆ ತಿರುಗಿತ್ತು. 

ಹಿರಿಯ ಪದಾಧಿಕಾರಿಗಳಾಗಿದ್ದ ಶ್ರೀ ಶಂಕರ್ ಸಿಂಗ್ ರವರಿಂದ ಚರ್ಚೆಯ ಆರಂಭವಾಗಿತ್ತು. ಮಾಜಿ ಬ್ಯಾಂಕ್ ಅಧಿಕಾರಿ ಕೂಡ ಆಗಿದ್ದ ಸಿಂಗ್ ರವರು ಉತ್ತಮ ತಯಾರಿಯೊಂದಿಗೆ ಬಂದಿದ್ದರು. ಅವರು ಮಾತನಾಡುತ್ತಾ 'ಕೋವಿಡ್ ಮಹಾಮಾರಿ ಬರುವುದಕ್ಕೆ ಮುಂಚೆಯೇ ನಮ್ಮ ದೇಶ ಆರ್ಥಿಕ ಸಂಕಷ್ಟದಲ್ಲಿತ್ತು. "೨೦೧೬ರ ಅಪನಗದೀಕರಣ (demonetization) ಮತ್ತು ೨೦೧೭ರ ಸರಕು ಮತ್ತು ಸೇವೆಗಳ ತೆರಿಗೆ (GST)"ಗಳೊಡ್ಡಿದ್ದ ಅವಳಿ ಸಂಕಟಗಳಿಂದ ನಮ್ಮ ದೇಶ ಮುಂಚೆಯೇ ತತ್ತರಿಸಿ ಹೋಗಿತ್ತು. ಕೋವಿಡ್ನ ದಾಳಿಗೆ ಸಾಕಷ್ಟು ಮುಂಚೆಯೇ, ೨೦೨೦ರ  ಆರ್ಥಿಕ ವರ್ಷದ ಜಿ.ಡಿ.ಪಿ. ಹೆಚ್ಚಳದ ದರ         ೫. ೩%ರಿಂದ ೨. ೫%ರಷ್ಟಕ್ಕೆ ಇಳಿಯಬಹುದೆಂಬುದು ಆರ್ಥಿಕ ತಜ್ಞರ ನಿರೀಕ್ಷೆಯಾಗಿತ್ತು. 

ಆರ್ಥಿಕ ತಜ್ಞರ ಮುನ್ನೆಚ್ಚರಿಕೆಯಂತೆ ಮಹಾಮಾರಿ ಕೋವಿಡ್, ಮುಂಚೆಯೇ ಇದ್ದ ಆರ್ಥಿಕ ಸಂಕಷ್ಟಗಳನ್ನು ಮತ್ತಷ್ಟು ಜಟಿಲಗೊಳಿಸಿದೆ. ೨೦೨೧ರ ಆರ್ಥಿಕ ವರ್ಷದ ಜಿ.ಡಿ.ಪಿ. ಹೆಚ್ಚಳದ ದರದ ನಿರೀಕ್ಷೆಯಂತೂ ೧. ೫%ರಿಂದ ೨. ೦%ರಷ್ಟಿರಬಹುದೆಂದು ಅಂದಾಜಿಸಲಾಗಿದ್ದು, ಅದನ್ನು ೧೯೯೧ರ ಆರ್ಥಿಕ ಸುಧಾರಣೆಗಳನಂತರದ ಕನಿಷ್ಠ ಬೆಳವಣಿಗೆಯೆಂದೇ ಬಣ್ಣಿಸಲಾಗುತ್ತಿದೆ. ಕೋವಿಡ್ ಮತ್ತು ಅದರಿಂದುಟಾದ ಲಾಕ್ಡೌನಿನಿಂದ ಸುಮಾರು ೧೪ ಕೋಟಿಗಳಷ್ಟು ವಲಸಿಗ ಕೆಲಸಗಾರರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ದೇಶದ ಅರ್ಧದಷ್ಟು ಕುಟುಂಬಗಳು, ತಮ್ಮ ತಿಂಗಳ ಆದಾಯಗಳಲ್ಲಿ ಭಾರಿ ಕುಸಿತವನ್ನು ಕಂಡಿವೆ. ಒಂದು ಅಂದಾಜಿನ ಪ್ರಕಾರ, ಕೋವಿಡ್ ಲಾಕ್ಡೌನ್ - ೧೯ರ ಸಂಕಷ್ಟದಿಂದ ದಿನನಿತ್ಯ ರೂ. ೩೨,೦೦೦ ಕೋಟಿಗಳಷ್ಟರ (೪. ೫ ಬಿಲಿಯನ್ ಅಮೇರಿಕಾ ಡಾಲರ್) ನಷ್ಟ ನಮ್ಮ ದೇಶಕ್ಕಾಗುತ್ತಿದೆ. ದೇಶದ ಅರ್ಧದಷ್ಟಕ್ಕೂ ಹೆಚ್ಚಿನ ಸಂಖ್ಯೆಯ ಉದ್ದಿಮೆಗಳು ವಹಿವಾಟಿಲ್ಲದೆ ನಿಂತುಹೋಗಿವೆ. ಸರಬರಾಜಿನ ಸರಪಳಿ (supply chain)ಯ ಕೊಂಡಿಗಳು ಕಳಚಿ, ಇಡೀ ದೇಶದ ಆರ್ಥಿಕತೆಯೇ ಸ್ತಬ್ಧವಾಗಿದೆ.  ತರಕಾರಿಗಳಂತಹ ಬೇಗನೆ ಕೆಡುವ ಬೆಳೆಗಳನ್ನು ಬೆಳೆಯುವ ರೈತರಂತೂ ಕಂಗಾಲಾಗಿ ಹೋಗಿದ್ದಾರೆ. ಸಂಚಾರ ವ್ಯವಸ್ಥೆ ನಿಂತು, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ. ಲಕ್ಷಾಂತರ ರುಪಾಯಿಗಳ ಬೆಲೆ ಬಾಳುವ ಅವರ ಟ್ಯಾಕ್ಸಿಗಳು ಕೆಲಸವಿಲ್ಲದೆ ನಿಂತಿವೆ. ಪ್ರವಾಸೋದ್ಯಮವಂತೂ ನೆಲ ಕಚ್ಚಿಹೋಗಿದೆ. ನಮ್ಮ ಆಮದು-ರಫ್ತುಗಳ ವಹಿವಾಟಿನಲ್ಲಿ ೪೦%ರಷ್ಟು ಕುಸಿತ ಕಂಡುಬಂದಿದೆ. 

ಇವೆಲ್ಲಾ ಆತಂಕಕಾರಿ ಬೆಳವಣಿಗೆಗಳ ನಡುವೆ, ನಮ್ಮ ದೇಶದ ಷೇರು ಮಾರುಕಟ್ಟೆಯ ಬೆಳವಣಿಗೆ ಮಾತ್ರ ಕುಸಿಯದೆ ಉಳಿದು, ಆಶ್ಚರ್ಯವನ್ನುಂಟು ಮಾಡಿದೆ. ೨೦೨೦ರ ಮಾರ್ಚ್ ೨೩ರಂದು ಭಾರಿ ಕುಸಿತವನ್ನು ಕಂಡಿದ್ದ ಷೇರು ಮಾರುಕಟ್ಟೆ, ಮಾರ್ಚ್ ೨೫ರಂದೇ ಚೇತರಿಸಿಕೊಂಡಿತ್ತು. ಇಂದು, ಅಂದರೆ ೨೦೨೦ರ ಜೂನ್ ೧೭ರಂದು ಮುಂಬೈ ಸೂಚ್ಯಂಕ ೩೩,೫೦೭ ಮತ್ತು ನಿಫ್ಟಿ ಸೂಚ್ಯಂಕ ೯೮೮೧ರಷ್ಟಿದ್ದು ಸಮಾಧಾನಕರವಾದ ಮಟ್ಟದಲ್ಲೇ ಇದೆ. ಕೋವಿಡ್ನ ಮಹಾಮಾರಿಯ ದಾಳಿಯಿಂದ ವಿಶ್ವ ಕಾಣುತ್ತಿರುವ ಆರ್ಥಿಕ ಕುಸಿತದದ ಹೊರತಾಗಿಯೂ, ಏರುತ್ತಾ ಸಾಗುತ್ತಿರುವ ಷೇರು ಮಾರುಕಟ್ಟೆಯ ಸೂಚ್ಯಂಕದ ಬಗ್ಗೆ ಹೂಡಿಕೆದಾರರು ಎಚ್ಚರದಿಂದಿರುವುದು ಒಳಿತು' ಎಂದರು. 

ಈಗ ಮಾತಿನ ಸರದಿ ರಾಜುರವರದಾಗಿತ್ತು. 'ಧನ್ಯವಾದಗಳು ಶಂಕರ್ ಸಿಂಗರವರೆ. ಕೋವಿಡ್ ಮಹಾಮಾರಿಯ ದಾಳಿಗೆ ಸಿಲುಕಿ ನಲುಗುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಯ ವಿವರಣೆಯನ್ನು ಚೆನ್ನಾಗೇ ನೀಡಿದ್ದೀರಿ. ಆದರೆ ನಾವುಗಳು ನಿರಾಶರಾಗಬೇಕಿಲ್ಲ. ಆರ್ಥಿಕ ಪರಿಸ್ಥಿತಿಯ ಚೇತರಿಕೆಗೆ ಬೇಕಾದ ಎಲ್ಲಾ ಕ್ರಮಗಳನ್ನು ನಮ್ಮ ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿದೆ. ಆ ಕ್ರಮಗಳ ವಿವರಗಳನ್ನು ತಮ್ಮಗಳ ಮುಂದಿಡುತ್ತಿದ್ದೇನೆ. 

೧೨ ಮೇ ೨೦೨೦

ಅಂದು ನಮ್ಮ ಪ್ರಧಾನಿ ಮೋದಿಯವರು ರೂ. ೨೦ ಲಕ್ಷ ಕೋಟಿಗಳಷ್ಟರ (ಯು.ಎಸ್.ಡಾ.೨೮೦ ಬಿಲಿಯನ್) ಆರ್ಥಿಕ ಪರಿಹಾರವನ್ನು(ಪ್ಯಾಕೇಜ್) ಪ್ರಕಟಿಸಿದರು. ಅದು ನಮ್ಮ ಜಿ.ಡಿ.ಪಿ.ಯ ೧೦%ರಷ್ಟು ಎಂಬುದನ್ನು ನಾವು ಗಮನಿಸಬೇಕು. ಜಪಾನ್ (ಜಿ.ಡಿ.ಪಿಯ ೨೧%ರಷ್ಟು) ಮತ್ತು ಅಮೇರಿಕಾ (ಜಿ.ಡಿ.ಪಿ.ಯ ೧೩%ರಷ್ಟು) ದೇಶಗಳ ಕೋವಿಡ್  ಪ್ಯಾಕೇಜುಗಳನಂತರದ ಹೆಚ್ಚಿನ ಪ್ಯಾಕೇಜ್ ನಮ್ಮ ದೇಶದ್ದೇ ಎಂಬುದು ನಮಗೆ ಹೆಮ್ಮಯ ವಿಷಯ. ಕೋವಿಡ್ ಮಹಾಮಾರಿ ತಂದೊಡ್ಡಿರುವ ಆರ್ಥಿಕ ಸಂಕಷ್ಟ ನಮಗೆ ಹಲವು ಪಾಠಗಳನ್ನು ಕಲಿಸಿದೆ. "ಆತ್ಮನಿರ್ಭರ ಭಾರತದ ನಿರ್ಮಾಣದತ್ತ ನಾವೀಗ ಸಾಗಬೇಕಿದೆ" ಎಂಬ ಕರೆಯನ್ನೂ ನಮ್ಮ ಪ್ರಧಾನಿಗಳು ನಮಗೆ ಅಂದು ನೀಡಿದರು. 

ಆರ್ಥಿಕ ಪ್ಯಾಕೇಜ್ ಕುರಿತಾದ ಮುಂದಿನ ಪ್ರಕಟಣೆಗಳನ್ನು ವಿತ್ತ ಮಂತ್ರಿಗಳು ಮಾಡುತ್ತಾರೆಂದೂ ಅಂದೇ ಪ್ರಧಾನಿಗಳು ತಿಳಿಸಿದ್ದರು. 

೧೩ ಮೇ ೨೦೨೦

ಅಂದು ದೇಶದ ವಿತ್ತ ಮಂತ್ರಿಗಳಾದ ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನಕ್ಕಾಗಿ ರೂ. ೩ ಲಕ್ಷ ಕೋಟಿಗಳ ನಿಧಿಯೊಂದನ್ನು ಪ್ರಕಟಿಸಿದರು. ಮುಂದಿನ ದಿನದ ಪ್ರಕಟಣೆಗಳನ್ನೂ ಅವರೇ ಮುಂದುವರೆಸಿದ್ದರು. 

೧೪ ಮೇ ೨೦೨೦

ಆ ದಿನದ ಪರಿಹಾರದ ಪ್ರಕಟಣೆ ವಲಸಿಗ ಕೆಲಸಗಾರರು, ರೈತರು ಮತ್ತು ರಸ್ತೆ ಬದಿಯ ವ್ಯಾಪಾರಿಗಳಿಗಾಗಿತ್ತು. "ಒಂದು ದೇಶ, ಒಂದು ರೇಷನ್ ಕಾರ್ಡ್" ಎಂಬ ವ್ಯವಸ್ಥೆಯ ಕಾರ್ಯಾನ್ವಯವನ್ನು ವಲಸಿಗ ಕೆಲಸಗಾರರ ಹಿತದೃಷ್ಟಿಯಿಂದ ತ್ವರಿತಗೊಳಿಸಲಾಗುವುದೆಂದು ಕೂಡ ಪ್ರಕಟಿಸಲಾಯಿತು. 

೧೫ ಮೇ ೨೦೨೦

ಕೃಷಿ ಉತ್ಪನ್ನಗಳ ಶೇಖರಣೆಯ ಮಿತಿಯನ್ನು ಸಮಾಪ್ತಿಗೊಳಿಸಲೆಂದು "ಅವಶ್ಯಕ ವಸ್ತುಗಳ ಕಾಯಿದೆ (Essential Commodities Act - 1958)ಗೆ ತಿದ್ದುಪಡಿಯನ್ನು ಮಾಡಲಾಗುವುದು. ಹೊಸ ಕೃಷಿ ಕಾಯಿದೆಗಳನ್ನು ಜಾರಿಗೊಳಿಸಲಾಗುವುದು. ಮೀನುಗಾರಿಕೆ ಮತ್ತು ಪಶುಪಾಲನೆಗಳಿಗಾಗಿ ವಿಶೇಷ ನಿಧಿಯಯನ್ನು ಕೂಡ ಅಂದು ಪ್ರಕಟಿಸಲಾಯಿತು. 

೧೬ ಮೇ ೨೦೨೦

ಇಂಧನ, ರಕ್ಷಣೆ ಮತ್ತು ಬಾಹ್ಯಾಕಾಶ (Power, Defense and Space) ಕ್ಷೇತ್ರಗಳ ಖಾಸಗೀಕರಣವನ್ನು ಯೋಜಿಸಲಾಗಿದ್ದು, ಅವುಗಳ ತೀವ್ರ ಅಭಿವೃದ್ಧಿಗಾಗಿ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂಬ ಪ್ರಕಟಣೆಯನ್ನು ಅಂದು ಮಾಡಲಾಯಿತು.  

೧೭ ಮೇ ೨೦೨೦

ಅಂದು ವಿವಿಧ ಪ್ರಕಟಣೆಗಳ ಮುಕ್ತಾಯದ ದಿನವಾಗಿತ್ತು. ಆರ್ಥಿಕ ಪ್ಯಾಕೇಜಿನ ಯೋಜನೆ ಮೂರು ಮುಖ್ಯ ಆಯಾಮಗಳ ವ್ಯಾಪ್ತಿಯನ್ನೊಳಗೊಂಡಿದೆ. 

-ರಾಜ್ಯಾದಾಯ (Fiscal) - (ಸರಕಾರದ ಆದಾಯ ಮತ್ತು ವೆಚ್ಚಗಳ ಉತ್ತಮ ನಿರ್ವಹಣೆ)

-ವಿತ್ತೀಯ ನಿರ್ವಹಣೆ (Monetary) - (ಬಡ್ಡಿ ದರಗಳೂ ಸೇರಿದಂತೆ, ಆರ್.ಬಿ.ಐ.ನಿಂದ ವಿವಿಧ ನಿಯಮಾವಳಿಗಳ ಉತ್ತಮ ನಿರ್ವಹಣೆ)

-ಹಣಕಾಸಿನ ಪರ್ಯಾಪ್ತತೆ (liquidity) - (ಎಲ್ಲ ಉದ್ದಿಮೆಗಳಿಗೆ ಸಾಕಷ್ಟು ಸಾಲಗಳ ದೊರೆಯುವಿಕೆ) 

"ಪ್ರಕಟಿಸಿದ ಆರ್ಥಿಕ ಪರಿಹಾರಗಳಿಂದ ಇಂದೇ ಉತ್ತಮ ಫಲಿತಾಂಶಗಳು ಕಂಡುಬರದೆ ಇರಬಹುದು. ಆದರೆ ಕೋವಿಡ್ನ ದಾಳಿಯಿಂದ ತತ್ತರಿಸಿರುವ ಬಡವರಿಗೆ ಕೂಡಲೇ ಪರಿಹಾರ ದೊರೆಕಿಸುವುದೇ ನಮ್ಮ ಯೋಜನೆಗಳ ಉದ್ದೇಶ ಎಂಬುದು ವಿತ್ತ ಮಂತ್ರಿಗಳ ಅಂದಿನ ಸಮಜಾಯಿಷಿಯಾಗಿತ್ತು" ಎಂದು ತಮ್ಮ ಭಾಷಣವನ್ನು ಅಂತ್ಯಗೊಳಿಸಿದ ರಾಜುರವರು, ಇತರರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾ ಕುಳಿತರು. 

ರಾಜುರವರ ಭಾಷಣ ಮುಗಿಯುತ್ತಲೇ ಉತ್ತೇಜಿತರಾಗಿ ಕುಳಿತಲ್ಲಿಂದಲೇ ಘರ್ಜಿಸಿದವರು ಹರ್ಬನ್ಸ್ ಲಾಲರಾಗಿದ್ದರು. ಸುಮಾರು ೨೦,೦೦೦ ಸದಸ್ಯರನ್ನೊಳಗೊಂಡ ನಗರದ ರಸ್ತೆ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಅವರಾಗಿದ್ದರು. 'ನಿಮ್ಮ ವಿತ್ತ ಶಾಸ್ತ್ರದ ಯೋಜನೆಗಳು ನಮಗೆ ತಿಳಿಯುವುದಿಲ್ಲ. ತಮ್ಮ ಕೋಟಿ ಕೋಟಿಗಳ  ಅಂಕೆ-ಸಂಖ್ಯೆಗಳ ವಿವರ ನಮಗೆ ಬೇಕಿಲ್ಲ. ಕಳೆದ ಮೂರು ತಿಂಗಳ ಲಾಕ್ಡೌನಿನಿಂದ ವ್ಯಾಪಾರವಿಲ್ಲದೆ ಕೈಕಟ್ಟಿ, ಹೊಟ್ಟೆಗಿಲ್ಲದೆ ಕುಳಿತಿರುವ ನಮ್ಮ ರಸ್ತೆ ಬದಿಯ ವ್ಯಾಪಾರಿಗಳಿಗೆ ಯಾವ ನೆರವನ್ನು ನೀಡಿದ್ದೀರಿ? ಎಂಬುದನ್ನು ಮೊದಲು ತಿಳಿಸಿ. ಲಾಕ್ಡೌನ್ ಮುಗಿದನಂತರವೂ ಅವರ ರಸ್ತೆ ಬದಿಯ ವ್ಯಾಪಾರಕ್ಕೆ ಇಲ್ಲದ ಅಡೆತಡೆಗಳನ್ನೊಡ್ಡಲಾಗುತ್ತಿದೆ. ದಿನ ಬೆಳಗಾದರೆ ಸ್ವಚ್ಛತೆ, ಕೋವಿಡ್ಗಳ ಹೆಸರಿನಲ್ಲಿ ಪೊಲೀಸರು, ನಗರಸಭೆಯ ಅಧಿಕಾರಿಗಳು ಅವರುಗಳನ್ನು ಒಕ್ಕಲೆಬ್ಬಿಸುತ್ತಾರೆ. ತಮ್ಮ ಕೋವಿಡ್ ಪ್ಯಾಕೇಜ್ನಲ್ಲಿ ರಸ್ತೆ ಬದಿಯ ವ್ಯಾಪಾರಿಗಳನ್ನು ಏಕೆ ಕಡೆಗಣಿಸಲಾಗಿದೆ?' ಹರ್ಬನ್ಸ್ ಲಾಲರ ಸಿಟ್ಟು ನೆತ್ತಿಗೇರಿತ್ತು. 

ಹರ್ಬನ್ಸ್ ಲಾಲರ ಘರ್ಜನೆಯಿಂದ ಎಲ್ಲರು ಆಶ್ಚರ್ಯಚಕಿತರಾಗಿದ್ದರು. ಕೆಲಕ್ಷಣ ಇಡೀ ಕೋಣೆ ಮೌನದಿಂದ ಮರಗಟ್ಟಿತ್ತು. 'ಅವರ ಆಕ್ರೋಶ ನ್ಯಾಯಯುತವಾದದ್ದು. ಅವರ ಪ್ರಶ್ನೆಗಳಿಗೆ ನಮ್ಮಲ್ಲಿ ಯಾರೊಬ್ಬರಾದರೂ ಸರಿಯುತ್ತರ ನೀಡಬೇಕು' ಎಂಬ ಗುಸು ಗುಸು ಎಲ್ಲರ ನಡುವೆ ಹರಿದಾಡಿತ್ತು. ರಾಜುರವರಲ್ಲಿ ಯಾವ ಉತ್ತರವೂ ಇದ್ದಂತೆ ಕಾಣುತ್ತಿರಲಿಲ್ಲ. ವಕೀಲ ಮದನ್ ಲಾಲರು ಮಾತ್ರ ತಮ್ಮ ಮೊಬೈಲ್ನಲ್ಲಿ ಅಂತರ್ಜಾಲವನ್ನು ಕೆದಕುತ್ತಿರುವಂತೆ ಕಂಡುಬಂದಿತ್ತು. ಕೆಲವು ನಿಮಿಷಗಳನಂತರ ಮದನ್ ಲಾಲರು ಮಾತನಾಡುತ್ತ, 'ಹರ್ಬನ್ಸ್ ಲಾಲ್ರವರೇ, ತಮ್ಮ ಸಾತ್ವಿಕ ಆಕ್ರೋಶವನ್ನು ನಾನು ಗೌರವಿಸುತ್ತೇನೆ. ಬಡಬಗ್ಗರ ನೆರವಿಗೆ ಬಾರದ ಯಾವುದೇ ಯೋಜನೆಯನ್ನೂ ನಿಷ್ಪ್ರಯೋಜಕವೆಂದೇ ಹೇಳಬೇಕು. ಆದರೆ ಕೇಂದ್ರ ಸರಕಾರದ ಕೋವಿಡ್ ಪ್ಯಾಕೇಜ್ನಲ್ಲಿ ರಸ್ತೆ ಬದಿಯ ವ್ಯಾಪಾರಿಗಳ ಬವಣೆಯನ್ನು ನಿವಾರಿಸುವ ಬಗ್ಗೆ ಕೆಲವು ಕ್ರಮಗಳನ್ನು ಘೋಷಿಸಲಾಗಿದೆ. ಸರಕಾರಿ ಜಾಲತಾಣದಲ್ಲಿರುವ ವಿವರಗಳನ್ನು ಓದುತ್ತಿದ್ದೇನೆ. ಎಲ್ಲರೂ ದಯಮಾಡಿ ಕೇಳಿ. 

"ಸಣ್ಣ ವ್ಯಾಪಾರಿಗಳೇ ಹಾಗೂ ರಸ್ತೆ ಬದಿಯ ವ್ಯಾಪಾರಿಗಳೇ,

ತಮಗೆ ತಿಳಿದಿದೆಯೇ?

ಲಾಕ್ಡೌನ್ನಿನ ದಿನಗಳು ಮುಗಿದಿವೆ. ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮತ್ತೆ ತೆರೆಯುವ ಸಮಯ ಬಂದಿದೆ. ನಿಮಗೆ ಬಂಡವಾಳದ ನೆರವು ದೊರೆತು, ಬಡ್ಡಿಯ ಹೊರೆ ಇಳಿಸಲಾಗಿದೆ. 

-ಸಣ್ಣ ವ್ಯಾಪಾರಿಗಳ (ಮುದ್ರಾ ಶಿಶು ಸಾಲಗಳು - MUDRA SHISHU LOANS) ಬಡ್ಡಿಯ ಹೊರೆಯನ್ನು ತಗ್ಗಿಸಲು ಕೇಂದ್ರ ಸರಕಾರ ೨%ರಷ್ಟು ನೆರವು ನೀಡಲಿದೆ. ಈ ನೆರವಿಗಾಗಿ ರೂ. ೧೫೦೦ ಕೋಟಿಯಷ್ಟರ ನಿಧಿಯನ್ನು ಕಾದಿರಸಲಾಗಿದೆ. 

-೫೦ ಲಕ್ಷ ರಸ್ತೆ ಬದಿಯ ವ್ಯಾಪಾರಿಗಳಿಗೆ ತಲಾ ರೂ. ೧೦,೦೦೦ ಸಾಲವನ್ನು ಸರಕಾರಿ ವಲಯದ ಬ್ಯಾಂಕ್ಗಳಿಂದ ಒದಗಿಸುವ ಕಾರ್ಯಕ್ರಮವೊಂದನ್ನು ಜಾರಿಗೊಳಿಸಲಾಗಿದೆ. ಈ ನೆರವಿಗಾಗಿ              ರೂ. ೫೦೦೦ ಕೋಟಿಗಳ ನಿಧಿಯನ್ನು ಕಾದಿರಿಸಲಾಗಿದೆ. 

ತಮ್ಮ ಗೆಲುವೇ ದೇಶದ ಗೆಲುವು" 

ಹರ್ಬನ್ಸ್ ಲಾಲ್ರವರೇ, 'ತಮ್ಮ ಎಲ್ಲ ರಸ್ತೆ ಬದಿಯ ವ್ಯಾಪಾರಿಗಳನ್ನು ದಾಖಲೆ ಪಾತ್ರಗಳೊಂದಿಗೆ ಕರೆ ತನ್ನಿ. ಅವರುಗಳಿಗೆ ತಲಾ  ರೂ.೧೦೦೦೦ ಸಾಲವನ್ನು ಕೊಡಿಸುವ ಪ್ರಯತ್ನವನ್ನು ಮಾಡೋಣ. ಎಲ್ಲ  ರಾಜ್ಯ ಸರಕಾರಗಳೂ ರಸ್ತೆ ಬದಿಯ ವ್ಯಾಪಾರಿಗಳಿಗೆ ಅಧಿಕೃತ ಗುರುತಿನ ಚೀಟಿಯೊಂದನ್ನು ನೀಡುವ ಏರ್ಪಾಡನ್ನು ಮಾಡಿವೆ. ಆ ಗುರುತಿನ ಚೀಟಿಯನ್ನು ಒಮ್ಮೆ ಪಡೆದರೆ ಮುಗಿಯಿತು, ಅವರುಗಳನ್ಯಾರು ರಸ್ತೆ ಬದಿಗಳಿಂದ ಒಕ್ಕಲೆಬ್ಬಿಸಲು ಸಾಧ್ಯವಾಗದು' ಎಂದರು. 

ಹರ್ಬನ್ಸ್ ಲಾಲರು ಸೇರಿದಂತೆ ಎಲ್ಲರಿಗೂ ಮದನ್ ಲಾಲರು ನೀಡಿದ ರಸ್ತೆ ಬದಿಯ ವ್ಯಾಪಾರಿಗಳ ಸವಲತ್ತುಗಳ ಬಗೆಗಿನ ಮಾಹಿತಿಗಳು ಆಶ್ಚರ್ಯವನ್ನು ಮತ್ತು ಸಂತಸವನ್ನು ಒಮ್ಮಲೇ ಉಂಟುಮಾಡಿದ್ದವು.  ಆದರೂ ಸುಮ್ಮನಾಗದ ಹರ್ಬನ್ಸ್ ಲಾಲರು ಮಾತನಾಡುತ್ತ, '೧೪ ಕೋಟಿಗಳಷ್ಟು ವಲಸಿಗ ಕೆಲಸಗಾರರು ಕಳೆದ ಮೂರು ತಿಂಗಳುಗಳಿಂದ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಸುಡು ಬಿಸಿಲಿನಲ್ಲಿ ಸಂಸಾರದೊಂದಿಗೆ ತಮ್ಮ ತಮ್ಮ ಹಳ್ಳಿಗಳತ್ತ ನಡೆದು ಸಾಗಿದ ಅವರುಗಳಲ್ಲಿ ಕೆಲವರು ನೀರು ಆಹಾರಗಳಿಲ್ಲದೆ ಪ್ರಾಣವನ್ನು ಬಿಟ್ಟಿದ್ದಾರೆ. ಅವರುಗಳಿಗ್ಯಾವ ಆರ್ಥಿಕ ನೆರವು ಸಿಗುತ್ತದೆ?' ಎಂದು ಕೇಳಿದರು. 

ಮದನ್ ಲಾಲರು ಉತ್ತರಿಸುತ್ತಾ, 'ವಲಸಿಗ ಕೆಲಸಗಾರರೆಲ್ಲರಿಗೂ ಎರಡು ತಿಂಗುಳುಗಳಿಗೆ ಸಾಕಾಗುವಷ್ಟು ದಿನಸಿ ಪೊಟ್ಟಣಗಳನ್ನು ವಿತರಿಸಲಾಗಿದೆ. ಈ ಯೋಜನೆಯನ್ನು ಈ ವರ್ಷದ ಡಿಸೆಂಬರ್ ತಿಂಗಳ ಅಂತ್ಯದವರೆಗೆ ವಿಸ್ತರಿಸುವ ಪ್ರಸ್ತಾಪವಿದೆ. ಕೆಲವು ರಾಜ್ಯ ಸರಕಾರಗಳು ಅವರುಗಳಿಗೆ ಸ್ವಲ್ಪ ಆರ್ಥಿಕ ಸಹಾಯವನ್ನೂ ನೀಡಿವೆ. ಇನ್ನೂ ಹೆಚ್ಚಿನ ಪರಿಹಾರ ಅವರುಗಳಿಗೆ ಹರಿದು ಬರಬೇಕಿತ್ತು ಎಂಬುದನ್ನು ನಾನು ಒಪ್ಪುತ್ತೇನೆ. ಕನಿಷ್ಠ ತಲಾ ರೂ.೧೦,೦೦೦ಗಳ ಆರ್ಥಿಕ ನೆರವು ಅವರುಗಳ ತುರ್ತು ಪರಿಹಾರಕ್ಕಾಗಿ ನೀಡಬೇಕಿತ್ತು. ಆ ರೀತಿಯ ಪರಿಹಾರ ಬೇಗ ಹರಿದು ಬರಲಿ ಎಂದು ಆಶಿಸೋಣ.' 

ಮುಂದಿನ ಮಾತಿನ ಸರದಿ ಪ್ರೊ. ಪ್ರಹ್ಲಾದ್ ಸರ್ದೇಶಪಾಂಡೆರವರದಾಗಿತ್ತು. ಅವರು ನಿವೃತ್ತ ಅರ್ಥ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ಮೋದಿಯವರ ಆರ್ಥಿಕ ಯೋಜನೆಗಳ ಕಡು ವಿಮರ್ಶಕರಾಗಿದ್ದರು. 'ಕೋವಿಡ್-೧೯ ಮಹಾಮಾರಿಯು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೂಲಂಕಷವಾಗಿ ವಿಮರ್ಶಿಸದೆ ಸರಕಾರ  ದಿಢೀರನೆ ವಿಧಿಸಿದ ದೀರ್ಘಾವಧಿಯ ಲಾಕ್ಡೌನ್ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಕೊಂದು  ಹಾಕಿಬಿಟ್ಟಿದೆ ಎಂಬುದು ನನ್ನ ಅಭಿಪ್ರಾಯ. ೨೦೧೬ರ ಅಪನಗದೀಕರಣವೆಂಬ ದುಃಸ್ವಪ್ನದ ಪುನರಾವರ್ತನೆಯೆ ಲಾಕ್ಡೌನ್ - ೨೦೨೦ ಎಂಬುದು ಹಲವು ತಜ್ಞರ ಅನಿಸಿಕೆಯೂ ಹೌದು. ನಮ್ಮ ದೇಶದಲ್ಲಿ ವಿಧಿಸಿದ ಲಾಕ್ಡೌನ್ ಇಡೀ ವಿಶ್ವದಲ್ಲೇ ಅತ್ಯಂತ ಕಠಿಣವಾದುದಾಗಿತ್ತು. ಆದರೆ ಲಾಕ್ಡೌನ್ ಜಾರಿಗೊಳಿಸಿದ ನಮ್ಮ ನಾಯಕರುಗಳು "ಜೀವಗಳ ರಕ್ಷಣೆ ಮುಖ್ಯವೋ ಅಥವ ಜೀವನೋಪಾಯಗಳ ರಕ್ಷಣೆ ಮುಖ್ಯವೋ (Lives Vs Livelihood)" ಎಂಬ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಸ್ವಲ್ಪ ವಿವೇಚನೆಯುಳ್ಳ ಯಾರಿಗಾದರೂ ಲಾಕ್ಡೌನ್ ಪೂರ್ವಾಪರಗಳನ್ನು ವಿಮರ್ಶಿಸದೆ ಕೈಗೊಂಡ ಮಾರಕ ನಿರ್ಧಾರವೆಂಬುದು ತಿಳಿಯದಿರದು. 

ರೋಗಿಯ ರೋಗದ ಸಂಪೂರ್ಣ ಮಾಹಿತಿ ತಿಳಿದನಂತರವೂ ವೈದ್ಯರು ನೀಡಿರುವ ತಪ್ಪು ಔಷಧದಂತಿದೆ ಮೋದಿಯವರು ಪ್ರಕಟಿಸಿದ ಆರ್ಥಿಕ ಪ್ಯಾಕೇಜ್. ದೇಶದ ಜಿ.ಡಿ.ಪಿ.ಯ ೧೦%ರಷ್ಟು ಎಂದು ಘೋಷಿಸಿರುವ ಅವರ ಬಹುಪ್ರಚಾರಿತ ಆರ್ಥಿಕ ಪ್ಯಾಕೇಜ್ನ ರೂ. ೨೦ ಲಕ್ಷ ಕೋಟಿಗಳಲ್ಲಿ, ಮುಂಚೆಯೇ ಆರ್.ಬಿ.ಐ. ಘೋಷಿಸಿದ್ದ ರೂ. ೮ ಲಕ್ಷ ಕೋಟಿಗಳಷ್ಟರ ನಿಧಿಯೂ ಸೇರಿದೆ. ಅದೇ ಪ್ಯಾಕೇಜ್ನ ನಿಧಿಯಲ್ಲಿ ಬ್ಯಾಂಕ್ಗಳು ಮುಂದಿನ ದಿನಗಳಲ್ಲಿ ಹಲವು ಉದ್ದಿಮೆಗಳಿಗೆ ನೀಡಲಿರುವ ಸಾಲಗಳ ಮೊತ್ತವನ್ನು ಸೇರಿಸಲಾಗಿದೆ. ಈ ಎಲ್ಲಾ ಮೊತ್ತಗಳನ್ನು ಹೊರತುಪಡಿಸಿದರೆ, ಆರ್ಥಿಕ ಪ್ಯಾಕೇಜ್ನ ನೈಜ ಮೊತ್ತ ದೇಶದ ಜಿ.ಡಿ.ಪಿ.ಯ ೧%ರಷ್ಟು ಮಾತ್ರ ಎಂದು ಹೇಳಬಹುದು. 

ವಿತ್ತ ಮಂತ್ರಿಗಳು ಮಾಡಿದ ಐದು ಪ್ರಕಟಣೆಗಳು, ಪರಿಹಾರ ಒದಗಿಸಿದ್ದಕ್ಕಿಂತ ಸದ್ದು ಮಾಡಿದ್ದೆ ಜಾಸ್ತಿಯೆನ್ನಬಹುದು. ಅದರಿಂದ ತತ್ತರಿಸಿದ ಅರ್ಥ ವ್ಯವಸ್ಥೆಗೆ ಸ್ವಲ್ಪ ಹಣ ಒದಗಿಸಿದಂತೆ ಮಾತ್ರವಾಗಿದೆಯೇ ಹೊರತು, ಉದ್ದಿಮೆಗಳ ಉತ್ಪನ್ನಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಮನುಕುಲಕ್ಕೆ ಕೋವಿಡ್ ಮಹಾಮಾರಿಯೊಂದು ಶಾಪವಿದ್ದಂತೆ. ಆಹಾರ ಮತ್ತು ಔಷಧಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಉದ್ದಿಮೆಗಳ ಉತ್ಪನ್ನಗಳ ಬೇಡಿಕೆಯನ್ನು ಕೋವಿಡ್ ರೋಗ ಮತ್ತು ಎಗ್ಗಿಲ್ಲದೆ ವಿಧಿಸಿದ ಲಾಕ್ಡೌನ್ಗಳು ನುಂಗಿ ಕುಳಿತಿವೆ. ಮಧ್ಯಮ ವರ್ಗದ ಕುಟುಂಬಗಳೇ ನಮ್ಮ ಆರ್ಥಿಕತೆಯ ಜೀವನಾಡಿಗಳೆನ್ನಬಹುದು. ಆದರೆ ಆ ವರ್ಗದ ಬಹುತೇಕ ಕುಟುಂಬಗಳ ತಿಂಗಳ ಆದಾಯಗಳಲ್ಲಿ ಭಾರಿ ಕುಸಿತವುಂಟಾಗಿದೆ. ಸುಮಾರು ೪೦ ಕೋಟಿಯಷ್ಟು ಅಸಂಘಟಿತ (unorganized workers) ನೌಕರರು ಲಾಕ್ಡೌನಿನಿಂದ  ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿಗೆ ಆರ್ಥಿಕ ಪ್ಯಾಕೇಜ್ನಲ್ಲಿ ಪ್ರಯತ್ನ ಮಾಡಿದ್ದಾರೆಯೆ? ದೇಶೀಯ ಉತ್ಪನ್ನಗಳ ಮಾರಾಟಕ್ಕೆ ಬೇಡಿಕೆಯನ್ನು ಉಂಟುಮಾಡುವ ವ್ಯವಸ್ಥೆ ರೂಪುಗೊಳ್ಳುವುದು ಯಾವಾಗ? ಕೆಲಸ ಕಳೆದುಕೊಂಡು ಕುಳಿತಿರುವ  ವಲಸಿಗ ಕೆಲಸಗಾರರ ಜೇಬುಗಳಿಗಿಷ್ಟು ಹಣವನ್ನು ಸರಕಾರಗಳು ಇಳಿಸಿದ್ದರೆ, ಬೇಡಿಕೆಯ ಸೃಷ್ಟಿ ಗ್ರಾಮೀಣ ಮಟ್ಟದಲ್ಲೂ ಉಂಟಾಗುತ್ತಿತ್ತಲ್ಲವೆ? 

ಇಂದಿನ ಕೋವಿಡ್ ಪ್ಯಾಕೇಜ್ನ ಮಾತು ಬದಿಗಿರಲಿ. ಸ್ವಾತಂತ್ರ್ಯ ಗಳಿಸಿದನಂತರ ನಮ್ಮ ಬಜೆಟ್ಗಳಲ್ಲಿ ಆರೋಗ್ಯ ವಲಯಕ್ಕೆ ಮುಡಿಪಾಗಿಟ್ಟ ಧನದ ರಾಶಿಯನ್ನು "ಜುಜುಬಿ" ಎಂದೇ ಹೇಳಬಹುದು. "ಆರೋಗ್ಯವೇ ಭಾಗ್ಯ"ವೆಂಬ ಗಾದೆ ಮಾತಿನ ಅರಿವೇ ನಮ್ಮ ನಾಯಕರುಗಳಿಗೆ  ಇದ್ದಂತ್ತಿಲ್ಲ. ಆರೋಗ್ಯದ ವ್ಯವಸ್ಥೆ ಸುಧಾರಿಸದೆ ಸಂಪತ್ತಿನ ಕ್ರೋಡೀಕರಣ ಆಗದು. 

೨೦೧೯ರ ಡಿಸೆಂಬರ್ ೩೧ರಂದು ಕೇಂದ್ರ ಸರಕಾರ ಪ್ರಕಟಿಸಿದ ರಾಷ್ಟ್ರೀಯ ಮೂಲಭೂತ ಸೌಕರ್ಯದ (National Infra Plan - NIA) ರೂ. ೧೦೨ ಲಕ್ಷ ಕೋಟಿಗಳ ಯೋಜನೆಯನ್ನು, ಸರಕಾರ ಮರೆತು ಕೂತಿದೆಯೇಕೆ? ಈ ಯೋಜನೆಯನ್ನು ತ್ವರಿತಗೊಳಿಸುವುದರಿಂದ ಉದ್ಯೋಗ ಸೃಷ್ಟಿಗೆ ಭಾರಿ ಚಾಲನೆ ದೊರೆತಂತಾಗುವುದಿಲ್ಲವೆ? ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ "ನದಿಗಳ ಜೋಡಣೆ"ಯ ಯೋಜನೆಯನ್ನು ಕೈಗೆತ್ತಿಕೊಳ್ಳುವುದರಿಂದ, ಕೋಟಿಗಟ್ಟಲೆ ಉದ್ಯೋಗಗಳ ಸೃಷ್ಟಿಯಾಗುವುದಿಲ್ಲವೆ? ಸರಕಾರದಲ್ಲಿ ಇಚ್ಚಾ ಶಕ್ತಿಯ ಕೊರತೆ ಇರವುದೇಕೆ? 

ನಮ್ಮ ಜಿ.ಡಿ.ಪಿ.ಯ ಹೆಚ್ಚಳ ಹೆಚ್ಚಾಗಿ ನಮ್ಮ ಮಹಾರಾಷ್ಟ್ರ, ತಮಿಳ್ ನಾಡು, ಗುಜರಾತ್ ಮತ್ತು ದಿಲ್ಲಿ ರಾಜ್ಯಗಳ ಆರ್ಥಿಕತೆಯ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ.  ದುರದೃಷ್ಟವಶಾತ್ ಇದೇ ನಾಲ್ಕು ರಾಜ್ಯಗಳಲ್ಲಿ ಕೋವಿಡ್ನ ದಾಳಿ ತೀವ್ರವಾಗಿದೆ. ಹಾಗಾಗಿ ದೇಶದ ಜಿ.ಡಿ.ಪಿ.ಯ ಹೆಚ್ಚಳ ಆಗಬಹುದೇ ಎಂಬ ಅನುಮಾನ ಕಾಡದಿರದು. 

ಆರ್ಥಿಕ ಸುಧಾರಣೆಗಳ ಪ್ರಕಟಣೆಯಿಂದ ಮಾತ್ರ ಏನೂ ಆಗದು. ಅವುಗಳ ಕಾರ್ಯಾನ್ವಯಕ್ಕೆ ದೃಢ ವಾದ ರಾಜಕೀಯ ಇಚ್ಚಾಶಕ್ತಿ ಬೇಕು. ಅತ್ಯವಶ್ಯಕ ಸಂಪನ್ಮೂಲಗಳಾದ "ಭೂಮಿ, ನೌಕರರು ಮತ್ತು ಇಂಧನ" ಕ್ಷೇತ್ರಗಳಲ್ಲಿ ತುರ್ತಾಗಿ ಸುಧಾರಣೆಗಳಾಗಬೇಕು. "ಭೂಮಿ" ರಾಜ್ಯಗಳ ನಿಯಂತ್ರಣಕ್ಕೆ ಸಂಬಂಧಪಟ್ಟಿದ್ದಾದರೆ, "ನೌಕರರು ಮತ್ತು ಇಂಧನ"ಗಳ ವಿಷಯ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸಂಬಂಧಿಸಿದ್ದು. ಆದುದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯದ ಕೊರತೆ ಕಾಡುತ್ತಿದ್ದರೆ, ಈ ಸುಧಾರಣೆಗಳ ಕಾರ್ಯಾನ್ವಯ ಅಸಾಧ್ಯ. ಇಂತಹ ಮಹತ್ವದ ಸುಧಾರಣೆಗಳ ಕಾರ್ಯಸಾಧನೆ ಆಗದಿದ್ದರೆ, ಚೀನಾ ದೇಶದಿಂದ ಹೊರಬರಲಿಚ್ಛಿಸುವ ಭಾರಿ ಉದ್ಯಮಗಳನ್ನು ಕರೆತರುವುದು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ವಿಯಟ್ನಾಂ ಮತ್ತು ಇಂಡೋನೇಷ್ಯಾ ರಾಷ್ಟ್ರಗಳಲ್ಲಿ ಅನುಕೂಲಕರ ವಾತಾವರಣದ ಸೃಷ್ಟಿ ಭರದಿಂದ ಸಾಗಿದ್ದು, ಚೀನಾದ ಭಾರಿ ಉದ್ಯಮಗಳು ಆ ರಾಷ್ಟ್ರಗಳ ಕಡೆಗೆ ಮುಖ ಮಾಡಿರುವುದನ್ನು ನಾವು ಗಮನಿಸಬೇಕು. 

ಬ್ಯಾಂಕುಗಳು ಸಾಲದ ಬಡ್ಡಿಯ ದರಗಳನ್ನು ಇಳಿಸುತ್ತಿರುವುದು ಒಳ್ಳೆಯದೇ. ಅದರ ಜೊತೆ ಜೊತೆಗೆ ಬ್ಯಾಂಕುಗಳು ಠೇವಣಿಗಳ ಮೇಲೆ ನೀಡುವ ಬಡ್ಡಿ ದರಗಳು ಕೂಡ ಇಳಿತವನ್ನು ಕಂಡಿವೆ. ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವವರಲ್ಲಿ ಹೆಚ್ಚಿನವರು ಹಿರಿಯ ನಾಗರೀಕರು. ಬ್ಯಾಂಕುಗಳು ನೀಡುವ ತಿಂಗಳ ಬಡ್ಡಿಯಲ್ಲೇ ಅವರುಗಳ ಜೀವನ. ಹಾಗಾಗಿ ಹಿರಿಯ ನಾಗರೀಕರ ಜೀವನಕ್ಕೆ ಕುತ್ತೊದಗಿದ್ದು, ಅವರುಗಳು ಖಾಸಗಿ ಹಣಕಾಸು ಸಂಸ್ಥೆಗಳತ್ತ ಮುಖ ಮಾಡುವಂತಾಗಿದೆ. ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ನಮ್ಮ ಹಿರಿಯ ನಾಗರೀಕರುಗಳ ಹಣ ಸುರಕ್ಷಿತವಾಗಿರಬಲ್ಲದೆ? 

ಹೌದು,  ನಮ್ಮ ಬ್ಯಾಂಕ್ಗಳು ಮತ್ತು ಆರ್.ಬಿ.ಐ.ನ ಬಳಿ ಅಪಾರವಾದ ಧನರಾಶಿಯಿದೆ. ಆದರೆ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆಯುವ ಅಭ್ಯರ್ಥಿಗಳೇ ಮುಂದೆ ಬರುತ್ತಿಲ್ಲ. ನಮ್ಮ ದೇಶದಲ್ಲಿ ಸಕ್ರಿಯವಾಗಿರುವ ಕಾರ್ಪೊರೇಟ್ ಸಂಸ್ಥೆಗಳು ಜಾಗರೂಕತೆಯ ಹೆಜ್ಜೆಗಳನಿಡುತ್ತಾ, "ಕಾದು ನೋಡುವ" ನೀತಿಯನ್ನು ತಮ್ಮದಾಗಿಸಿಕೊಂಡು, ಭಾರಿ ಸಾಲಗಳನ್ನು ಪಡೆಯಲು ಉತ್ಸುಕರಾಗಿದ್ದಂತೆ ತೋರುತ್ತಿಲ್ಲ. ಗೃಹ ಸಾಲಗಳ ಬೇಡಿಕೆಯಲ್ಲೂ ಹಿಂಜರಿತ ಕಂಡುಬಂದಿದೆ. ವಾಹನಗಳ ಮಾರಾಟದಲ್ಲಿ ಭಾರಿ ಕುಸಿತವುಂಟಾಗಿದೆ. ನಮ್ಮ ಬ್ಯಾಂಕರ್ಗಳಿಗೂ ಭಾರಿ ಸಾಲಗಳನ್ನು ಮಂಜೂರು ಮಾಡುವ  ಮನಸಿದ್ದಂತ್ತಿಲ್ಲ. "ಮಂಜೂರು ಮಾಡಿದ ಸಾಲಗಳೇನಾದರೂ ಹಿಂತುರುಗಿ ಬಾರದವಾದರೆ, ತಮ್ಮಗಳಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ" ಎಂಬ ಭಯ ನಮ್ಮ ಬ್ಯಾಂಕ್ ಅಧಿಕಾರಿಗಳನ್ನು ಕಾಡುತ್ತಿದೆ. ಸಾಲಗಳನ್ನು ಮಂಜೂರು ಮಾಡುವಾಗ ಸಾಲದ ಅಭ್ಯರ್ಥಿಗಳಲ್ಲಿ ಪರೀಕ್ಷಿಸಬೇಕಾದ ೪-Cಗಳಾದ "ಗುಣ (Character), ಸಾಮರ್ಥ್ಯ (Capacity), ಬಂಡವಾಳ (Capital) ಮತ್ತು ಪರಿಸ್ಥಿತಿ (Conditions)"ಗಳನ್ನು ನಮ್ಮ ಹಿರಿಯ ಬ್ಯಾಂಕ್ ಅಧಿಕಾರಿಗಳು ಮರೆತೇಬಿಟ್ಟಿದ್ದಾರೆ. ಈಗ ಅವರುಗಳನ್ನು ಬೇರೆ ೪-Cಗಳಾದ "ಕೋರ್ಟ್ಗಳು, ಸಿ.ವಿ.ಸಿ., ಸಿ.ಏ.ಜಿ. ಮತ್ತು ಸಿ.ಬಿ.ಐ. (Courts, CVC, CAG and CBI)"ಗಳ ಭಯ ಕಾಡ ಹತ್ತಿದೆ. ಈ ಭಯದ ವಾತಾವರಣವನ್ನು ಹೋಗಲಾಡಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿಲ್ಲ. ಪ್ರಾಮಾಣಿಕ ಬ್ಯಾಂಕ್ ಅಧಿಕಾರಿಗಳ ಬೆನ್ನ ಹಿಂದೆ ನಾವಿದ್ದೇವೆ ಎಂಬ ಸಂದೇಶವನ್ನು ಸರಕಾರ ಅವರುಗಳಿಗೇಕೆ ರವಾನಿಸುತ್ತಿಲ್ಲ?

ಕಾರ್ಮೋಡ ಕವಿದಂತಿರುವ ಆರ್ಥಿಕ ಕ್ಷೇತ್ರದ, ಬೆಳ್ಳಿ ಅಂಚಾಗಿ ನಮ್ಮ ಕೃಷಿ ವಲಯ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್ ದಾಳಿಯನ್ನೂ ಲೆಕ್ಕಿಸದೆ ನಮ್ಮ ರೈತರುಗಳು ತಮ್ಮ ಕಾರ್ಯಗಳನ್ನು         ಎಂದಿನ ಉತ್ಸಾಹದಿಂದ ಮಾಡುತ್ತಿದ್ದಾರೆ. ಮೊನ್ನೆಯಿನ್ನು ಸಮಾಪ್ತಿಗೊಂಡ ಹಿಂಗಾರು ಬೆಳೆಗಳ (Rabi harvest) ಕೊಯ್ಲಿನಲ್ಲಿ, ಕಳೆದ ವರ್ಷಕ್ಕಿಂತ ಹೆಚ್ಚಿನ ಇಳುವರಿಯನ್ನು ನಮ್ಮ ರೈತರು ಸಾಧಿಸಿ ತೋರಿಸಿದ್ದಾರೆ. ಮುಂಗಾರು ಬೆಳೆಯ (Kharif season) ಭಿತ್ತನೆಯ ಕಾರ್ಯ ಕೂಡ ಚುರುಕಾಗೇ  ಸಾಗಿದೆ. ಈ ಬಾರಿಯ ಮುಂಗಾರು ಮಳೆ (Manson)ಯ ವಿಷಯದಲ್ಲಿ ವರುಣ ದೇವ ನಮ್ಮ ದೇಶದ ಪಾಲಿಗೆ ಕರುಣಾಮಯನಾಗಿದ್ದಾನೆ. ಆದರೆ ತನ್ನ ಆರ್ಥಿಕ ಪ್ಯಾಕೆಜ್ನಲ್ಲಿ ನಮ್ಮ ಸರಕಾರ ರೈತರಿಗಳಿಗೇನು ಕೊಟ್ಟಿದೆ?' ಎಂದು ಪ್ರಶ್ನಿಸುತ್ತಾ ಪ್ರೊ. ಪ್ರಹ್ಲಾದ್ ರವರು ತಮ್ಮ ಭಾಷಣವನ್ನು ಮುಗಿಸುತ್ತಲೇ, ಎಲ್ಲರ ನಡುವೆ ಕೆಲ ಕ್ಷಣ ಮೌನ ಮರಗಟ್ಟಿತ್ತು. ಪ್ರಹ್ಲಾದರ ಭಾಷಣದದ್ದಕ್ಕೂ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಿದ್ದ ರಾಜುರವರು ಮಾತನಾಡಲು ಎದ್ದು ನಿಂತಾಗ, ಎಲ್ಲರ ಗಮನ ಅವರ ಮೇಲೇ  ಕೇಂದ್ರೀಕೃತವಾಗಿತ್ತು. 

'ವಿಮರ್ಶಾತ್ಮಕ ಭಾಷಣವನ್ನು ಮನಮುಟ್ಟುವಂತೆ ಮಾಡಿದ ಪ್ರೊ. ಪ್ರಹ್ಲಾದ್ ರವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಅವರು ಪ್ರಸ್ತಾಪಿಸಿದ ಕೆಲವೊಂದು ಅಂಶಗಳು ಕೇಂದ್ರ ಸರಕಾರದ ಕಣ್ತೆರಸುವಂತಾಗಲಿ ಎಂದು ಆಶಿಸುತ್ತೇನೆ. ಸಾಧ್ಯವಾದ ಎಲ್ಲಾ ಕಡೆಗಳಲ್ಲಿ ನದಿಗಳ ಜೋಡಣೆಯ ಬಗೆಗಿನ ಅವರ ಸಲಹೆ ಸ್ವಾಗತಾರ್ಹವಾದುದು. ೨೦೧೯ರ ಡಿಸೆಂಬರ್ ದಿನಗಳಂದು ಕೇಂದ್ರ ಸರಕಾರ ಯೋಜಿಸಿದ್ದ ರೂ. ೧೦೨ ಲಕ್ಷ ಕೋಟಿಗಳ ನ್ಯಾಷನಲ್ ಇನ್ಫ್ರಾ ಯೋಜನೆಯಡಿ ಕಾರ್ಯಗಳನ್ನು ತ್ವರಿತಗೊಳಿಸುವ ಅವರ ಸಲಹೆ ಕೂಡಾ ಸೂಕ್ತವಾದುದೆ. ಆದರೆ ಪ್ರೊ. ಪ್ರಹ್ಲಾದರು ಪ್ರಸ್ತಾಪಿಸಿದ ಮಿಕ್ಕ ಪ್ರಶ್ನೆಗಳನ್ನು ಕುರಿತಾದ ಉತ್ತರಗಳನ್ನು ನೀಡಲಿಚ್ಛಿಸುತ್ತೇನೆ. 

-ಮಾರ್ಚ್ ೨೫ರಿಂದ ಜಾರಿಗೊಳಿಸಿದ ಲಾಕ್ಡೌನನ್ನು ದಿಢೀರನೆ ಕೈಕೊಂಡ ನಿರ್ಧಾರ ಎನ್ನಲಾಗದು. ಮಾರ್ಚ್ ೨೨ರಂದು ಜಾರಿಗೊಳಿಸಿದ ಜನತಾ ಕರ್ಫ್ಯೂವಿನ ಘೋಷಣೆಯನ್ನು ಮಾರ್ಚ್ ೨೦ರಂದೇ ಪ್ರಧಾನಿ ಮೋದಿಯವರು ಮಾಡಿದ್ದರು. ಅಂದಿನ ಭಾಷಣದಲ್ಲೇ ದೀರ್ಘವಾದ ಲಾಕ್ಡೌನಿನ ಮುನ್ಸೂಚನೆಯನ್ನು ನೀಡಲಾಗಿತ್ತು. 

-೨೦-೨೧ರ ಆರ್ಥಿಕ ವರ್ಷದ ಮುನ್ಸೂಚನೆಯ ಪ್ರಕಾರ ಭಾರತ (೧. ೫%) ಮತ್ತು ಚೀನಾ (೧. ೭%)ಗಳು ಮಾತ್ರ ತಮ್ಮ ತಮ್ಮ ಜಿ.ಡಿ.ಪಿ.ಗಳಲ್ಲಿ ಹೆಚ್ಚಳವನ್ನು ದಾಖಲಿಸಲಿವೆ. ಮಿಕ್ಕೆಲ್ಲಾ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಕುಸಿಯುವುದು ಖಚಿತ. 

-ಕೋವಿಡ್ ಪ್ಯಾಕೇಜ್ನ ಯೋಜನೆಗಳ ಪ್ರಕಾರ, ಎಂ.ಎಸ್.ಎಂ.ಇ.ಗಳಿಗೆ ಒದಗಿಸಲಿರುವ ಆಧಾರರಹಿತ ಸಾಲಗಳಿಂದ, ಅವುಗಳು ಮತ್ತೆ ಪ್ರಗತಿಯ ಹಾದಿಯನ್ನು ಹಿಡಿಯುವ ಎಲ್ಲಾ ಸಾಧ್ಯತೆಗಳು ಇವೆ. ಈ ಎಲ್ಲ ಸಂಕಷ್ಟಗಳ ನಡುವೆಯೂ ನಿರ್ಮಾಣದ ಕ್ಷೇತ್ರದಲ್ಲಿ ಕಾರ್ಯಗಳಾಗಲೇ ಶುರುವಾಗಿದೆ. ಈ ಎಲ್ಲಾ  ಬೆಳವಣಿಗೆಗಳಿಂದ ವಲಸಿಗರು ಮತ್ತೆ ನಗರಗಳತ್ತ ಕೆಲಸವನ್ನರಸಿ ಮುಖ ಮಾಡುವಂತಾಗಿದೆ. 

-ನಗರಗಳಿಗೆ ಹಿಂತಿರುಗಲಿಚ್ಛಿಸಿದ ವಲಸಿಗರಿಗೆ, ಅವರವರ ಹಳ್ಳಿಗಳಲ್ಲೇ ಉದ್ಯೋಗವನ್ನೊದಗಿಸುವ ಏರ್ಪಾಡನ್ನೂ ಮನರೇಗ (MANREGA) ಯೋಜನೆಯಡಿ ರೂಪಿಸಲಾಗಿದೆ. ಆರ್ಥಿಕ ವರ್ಷ ೨೦-೨೧ಕ್ಕೆ ಮನರೇಗ ಯೋಜನೆಯಡಿ ಮೀಸಲಿರಿಸಿದ ಮೊತ್ತ ರೂ. ೧ ಲಕ್ಷ ಕೋಟಿಗಳಾಗಿತ್ತು. ಆ ಯೋಜನೆಗೀಗ  ರೂ .೪೦,೦೦೦ ಕೋಟಿಗಳ ಹೆಚ್ಚಿನ ಮೊತ್ತವನ್ನು ನೀಡಲಾಗಿದೆ. ಆ ಯೋಜನೆಯಡಿ ನಿರುದ್ಯೋಗಿ ವಲಸಿಗರೆಲ್ಲರಿಗೂ ಅವರವರ ಹಳ್ಳಿಗಳಲ್ಲಿ ೧೦೦ ದಿನಗಳ ಉದ್ಯೋಗದ ಖಾತರಿಯನ್ನು ನೀಡಲಾಗಿದೆ. ಪ್ರತಿ ದಿನದ ಸಂಬಳವನ್ನು ರೂ.೧೮೨ರಿಂದ ರೂ.೨೦೨ರ ವರೆಗೆ ಹೆಚ್ಚಿಸಲಾಗಿದೆ. 

-ಅತ್ಯಂತ ಹೆಚ್ಚಿನ ಸಂಖ್ಯೆಯ ವಲಸಿಗರು ಹಿಂತಿರುಗಿರುವ ಪೂರ್ವ ಭಾಗದ  ಆರು ರಾಜ್ಯಗಳ ೧೧೬ ಜಿಲ್ಲೆಗಳಲ್ಲಿ, ಹೆಚ್ಚಿನ ಉದ್ಯೋಗಗಳ ಸೃಷ್ಟಿಯನ್ನುಂಟುಮಾಡಲು, ಹಲವು ಮೂಲಭೂತ ಸೌಕರ್ಯಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳಿಗೆ ರೂ. ೫೦,೦೦೦ ಕೋಟಿಗಳ ನಿಧಿಯನ್ನು ಕಾದಿರಿಸಲಾಗಿದೆ. 

-"ಭೂಮಿ, ರಕ್ಷಣೆ ಮತ್ತು ಕಾರ್ಮಿಕರ (Land, Defense and Labour)" ಕ್ಷೇತ್ರಗಳಲ್ಲಿ ತುರ್ತಾಗಿ ಬೇಕಾದ ಸುಧಾರಣೆಗಳನ್ನು ಹಲವು ರಾಜ್ಯಗಳಾಗಲೇ ಜಾರಿಗೊಳಿಸಿದ್ದಾಗಿದೆ. ಆ ಸುಧಾರಣೆಗಳ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನು ಆಯಾ ರಾಜ್ಯಗಳ ಎ.ಪಿ.ಎಂ.ಸಿ.ಗಳಲ್ಲೇ ಮಾರಾಟ ಮಾಡಬೇಕಾದ ಅನಿವಾರ್ಯತೆ ಇಲ್ಲ. ಉತ್ತಮ ದರ ದೊರೆಯುವ ಯಾವುದೇ ಮಾರುಕಟ್ಟೆಯಲ್ಲಿ ಅವರುಗಳು ತಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದಾಗಿದೆ. 

-ಚೀನಾದಿಂದ ಹೊರಬರಲಿಚ್ಛಿಸುವ ಉದ್ಯಮಿಗಳನ್ನು ಭಾರತದ ಕಡೆ ಕರೆತರುವ ಎಲ್ಲ ಪ್ರಯತ್ನಗಳಿಗೂ ಒತ್ತು ನೀಡಲಾಗುತ್ತಿದೆ. ಜೆರ್ಮನಿಯ ಭಾರಿ ಪಾದರಕ್ಷೆಗಳ ಘಟಕವೊಂದು ಚೀನಾದಿಂದ ಭಾರತದೆಡೆಗೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಕೈಗೊಂಡಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉದ್ಯಮಿಗಳು ಭಾರತದೆಡೆಗೆ ಬರುವ ನೀರೀಕ್ಷೆಯಿದೆ. 

-ಭಾರತ ಹೊಂದಿರುವ  ಇಂದಿನ ವಿದೇಶಿ ವಿನಿಮಯಗಳ ರಾಶಿಯ ಮೊತ್ತ ಯು.ಎಸ್.ಡಾ.  ೫೦೧ ಬಿಲಿಯನ್ ಗಳಷ್ಟಿದ್ದು, ಇಂದೊಂದು ದಾಖಲೆಯ ಮೊತ್ತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಮ್ಮಿಯಾಗಿದ್ದು, ನಮ್ಮ ವಿದೇಶಿ ವಿನಿಮಯಗಳ ರಾಶಿಯ ಹೆಚ್ಚಿನ ಶೇಖರಣೆಗೆ ಪೂರಕವಾಗಿದೆ. 

-ಠೇವಣಿಗಳ ಮೇಲಿನ ಬಡ್ಡಿಯ ದರ ಬ್ಯಾಂಕುಗಳಲ್ಲಿ ಕುಸಿಯುತ್ತಿರುವುದರ ಬಗೆಗಿನ ತಮ್ಮ ಕಳಕಳಿ ನನಗೂ ಇದೆ. ನಮ್ಮ ಹಿರಿಯ ನಾಗರಿಕರು ಇದರಿಂದ ಆತಂಕಗೊಂಡಿರುವುದಂತೂ ಸತ್ಯ. ಆದರೆ ಕೇಂದ್ರ ಸರಕಾರ ಹಿರಿಯ ನಾಗರೀಕರಿಗಾಗಿ ಎರಡು ಉತ್ತಮ ಠೇವಣಿಯ ಯೋಜನೆಗಳನ್ನು ಈಗಲೂ ಜಾರಿಯಲ್ಲಿರಿಸಿದೆ. "ಎಲ್.ಐ.ಸಿ. ಸಂಸ್ಥೆಯ ವಯವಂದನಾ" ಯೋಜನೆ ೧೦ ವರ್ಷಗಳ ಠೇವಣಿ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಹಿರಿಯ ನಾಗರಿಕರು ತಲಾ ರೂ. ೧೫ ಲಕ್ಷಗಳವರೆಗಿನ ಹಣವನ್ನು ತೊಡಗಿಸಬಹುದಾಗಿದೆ. ಕೇಂದ್ರ ಸರಕಾರದ ಮತ್ತೊಂದು ಯೋಜನೆಯಾದ "ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme - SCSS)" ಕೂಡ ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಅದು ೫ ವರ್ಷಗಳ ಅವಧಿಯ ಯೋಜನೆಯಾಗಿದ್ದು, ಆ  ಯೋಜನೆಯಲ್ಲೂ ತಲಾ ರೂ. ೧೫ ಲಕ್ಷಗಳವರೆಗಿನ ಮೊತ್ತವನ್ನು ತೊಡಗಿಸಬಹುದಾಗಿದೆ. ಈ ಎರಡೂ ಯೋಜನೆಗಳಲ್ಲಿ ಇಂದು ೭. ೪%ರಷ್ಟು ಬಡ್ಡಿಯ ದರ ನಿಗದಿಯಾಗಿದ್ದು, ಪ್ರತಿ ತಿಂಗಳು ಬಡ್ಡಿ ಪಡೆಯುವ  ಸೌಲಭ್ಯವಿದೆ.   

ಕಡೆಯದಾಗಿ ಪ್ರಹ್ಲಾದ್ರವರು ರೈತರ ಬವಣೆಯ ಮೇಲಿನ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮೆಲ್ಲರಿಗೂ ಆ ವಿಷಯದ ಬಗೆಗಿನ ಅನುಕಂಪವಿದೆ. ಕೋವಿಡ್ ಪ್ಯಾಕೇಜಿನಡಿ ರೈತರುಗಳಿಗಾಗಿ ಪ್ರಕಟಿಸಿರುವ ಪರಿಹಾರಗಳ ವಿವರಗಳನ್ನು ತಮ್ಮಗಳ ಮುಂದೆ ನೀಡ ಬಯಸುತ್ತೇನೆ. ದಯಮಾಡಿ ಗಮನವಿಟ್ಟು ಕೇಳಿ. 

"ನಮ್ಮ ಪ್ರೀತಿಯ ರೈತರುಗಳೇ 

ಭಾರತ ತಮ್ಮೊಂದಿಗಿದೆ. 

ಕೋವಿಡ್ನಿಂದಾದ ದುಃಸ್ಥಿತಿಯನ್ನು ನಿಭಾಯಿಸಲು ತಮಗಾಗಿ ಕೆಳಕಂಡ ವ್ಯವಸ್ಥೆಗಳನ್ನು ಮಾಡಲಾಗಿದೆ. 

-ಕಿಸಾನ್ ಕ್ರೆಡಿಟ್ ಕಾರ್ಡ್ನಡಿ ಹೆಚ್ಚಿನ ಸಾಲವನ್ನು ಒದಗಿಸಲು ರೂ. ೨ ಲಕ್ಷ ಕೋಟಿಯಷ್ಟರ ನಿಧಿಯನ್ನು ಕಾದಿರಸಲಾಗಿದೆ. 

-ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ತಲಾ ರೂ. ೬೦೦೦ ಗಳನ್ನೂ, ಮೂರು ಸಮನಾದ ಕಂತುಗಳಲ್ಲಿ ವಿತರಿಸಲಾಗುವುದು. ಈ ಯೋಜನೆಯಡಿ ಲಾಕ್ಡೌನ್ ಅವಧಿಯಲ್ಲಿ  ರೂ. ೧೯,೪೫೭ ಕೋಟಿಯಷ್ಟು ಹಣವನ್ನು ೯. ೭೨ ಕೋಟಿ  ರೈತ ಕುಟುಂಬಗಳಿಗೆ ನೀಡಲಾಗಿದೆ. 

-ರೈತರ ಉತ್ಪನ್ನಗಳಿಗಾಗಿ  ಶಿಥಿಲೀಕರಣ ಕಪಾಟುಗಳ(Cold Storage) ವ್ಯವಸ್ಥೆಯ ಅಭಿವೃದ್ಧಿಗಾಗಿ ರೂ. ೧ ಲಕ್ಷ ಕೋಟಿಯಷ್ಟರ ನಿಧಿಯನ್ನು ಕಾದಿರಿಸಲಾಗಿದೆ. 

-ಈಗಿರುವ ಎ.ಪಿ.ಎಂ.ಸಿ. ವ್ಯವಸ್ಥೆ ಮುಂದುವರೆಯುತ್ತದೆ. ರೈತರ ಉತ್ಪನ್ನಗಳ ಮಾರುಕಟ್ಟೆಯ ವಿಸ್ತಾರವನ್ನು ಹೆಚ್ಚಿಸಲು ಬೇಕಾದ ಕಾನೂನಿನ ಸುಧಾರಣೆಗಳನ್ನು ತರಲಾಗುವುದು. ಉತ್ತಮ ಬೆಲೆ ಸಿಗುವ ಯಾವುದೇ ಮಾರುಕಟ್ಟೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಂತಹ  ವ್ಯವಸ್ಥೆಯನ್ನು ರೂಪಿಸಲಾಗುವುದು. 

-ಅಗತ್ಯ ವಸ್ತುಗಳ ಕಾಯಿದೆ (Essential Commodities Act) ಮತ್ತು ಎ.ಪಿ.ಎಂ.ಸಿ. ಕಾಯಿದೆಗಳಿಗೆ ಬೇಕಾದ ಸುಧಾರಣೆಗಳನ್ನು ತಂದು, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡಲಾಗುವುದು. 

-ಅಸಂಘಟಿತ (unorganized sector) ಕ್ಷೇತ್ರದ ಎರಡು ಲಕ್ಷ  ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ (Micro-Food Processing Enterprises) ಪ್ರೋತ್ಸಾಹ ನೀಡಲು, ರೂ. ೧೦,೦೦೦ ಕೋಟಿಗಳಷ್ಟು ನಿಧಿಯನ್ನು ಮಂಜೂರು ಮಾಡಲಾಗಿದೆ. 

-ಮೀನುಗಾರರ ಆದಾಯ ವೃದ್ಧಿಸಲು ಬೇಕಾದ ಕ್ರಮಗಳನ್ನು ಜಾರಿಗೊಳಿಸಲು ರೂ. ೨೦,೦೫೦ ಕೋಟಿಗಳ ನಿಧಿಯನ್ನು ವಿನಿಯೋಗಿಸಲಾಗುವುದು. 

-ಪಶು ಸಂಗೋಪನೆಯ ಕಾಯಕದ ಅಭಿವೃದ್ಧಿಗೆ ರೂ. ೧೫,೦೦೦ ಕೋಟಿಗಳ ಧನವನ್ನು ಕಾದಿರಿಸಲಾಗಿದೆ. 

-ರೈತರ ಗೆಲುವೇ ದೇಶದ ಗೆಲುವು. ತಮ್ಮ ವಿಜಯದೊಂದಿಗೆ  ಕೋವಿಡ್ನೊಂದಿಗಿನ ಸಮರದ ವಿಜಯ ಸಾಧಿಸೋಣ."

ಇಡೀ ವಿಶ್ವ ಇಂದು ಎದುರಿಸುತ್ತಿರುವ ಕೋವಿಡ್ನ ಸವಾಲುಗಳು ನಮಗೆ "ಆತ್ಮನಿರ್ಭರತೆ"ಯ ಪಾಠವನ್ನು ಕಲಿಸಿದೆ. 

ನರೇಂದ್ರ ಮೋದಿ 

ಪ್ರಧಾನ ಮಂತ್ರಿಗಳು'

ಮೋದಿಯವರ ಕಟ್ಟಾ ಅಭಿಮಾನಿಯಾದ ರಾಜುರವರ ಸಮಜಾಯಿಷಿಯ ವಾದದ ಸರಣಿ ಹೀಗೆ ಅಂತ್ಯಗೊಂಡಿತ್ತು. 

ರಾಜುರವರ ವಾದ ಸರಣಿಯನ್ನು ಅನುಮೋದಿಸಿ ಭೋರ್ಗರೆದ ಚಪ್ಪಾಳೆಯ ಸರಣಿ ಪ್ರೊ. ಪ್ರಹ್ಲಾದ್ರವರಿಂದಲೇ ಆರಂಭವಾಗಿದ್ದು ಗಮನಾರ್ಹವಾಗಿತ್ತು. 

ತನ್ನ ಮಾತಿನ ಅವಕಾಶಕ್ಕಾಗಿ ಸಹನೆಯಿಂದ ಕಾಯುತ್ತಿದ್ದ ರೋಹಿಣಿಯ ಸರದಿ ಈಗ ಬಂದಿತ್ತು. 'ಇಂದಿನ ಗಹನವಾದ ಚರ್ಚೆ ಉನ್ನತ ಮಟ್ಟದಾಗಿದ್ದು ನಾನು ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಇಂದು ಮಾತನಾಡಿದ ಎಲ್ಲಾ ಹಿರಿಯರುಗಳಿಗೂ ನನ್ನ ಧನ್ಯವಾದಗಳು. 

ಶ್ರೀಮತಿ ನಳಿನೀರವರು ನನ್ನ ಚಿಕ್ಕಮ್ಮ. ಸುಮಾರು ೪೦ರ ಪ್ರಾಯದ,  ಆಕೆಯ ಹೋರಾಟದ ಕತೆಯನ್ನು ತಮ್ಮಗಳ ಮುಂದೆ ಪ್ರಸ್ತಾಪಿಸಲಿಚ್ಛಿಸುತ್ತೇನೆ. ನಾಲ್ಕು ವರ್ಷಗಳ ಹಿಂದೆ ಆಕೆಯ ಪತಿಯವರು ಅಪಘಾತವೊಂದರಲ್ಲಿ ಮೃತಪಟ್ಟರು. ಎರಡು ಚಿಕ್ಕ ಹೆಣ್ಣು ಮಕ್ಕಳ ಜಾವಬ್ದಾರಿ ಅವರ ಮೇಲೆ ದಿಢೀರನೇ ಬಿದ್ದಿತ್ತು.  ಜೀವನೋಪಾಯಕ್ಕಾಗಿ ಯಾವುದಾದರೂ ಕೆಲಸವನ್ನು ಕೈಗೊಳ್ಳುವ ಒತ್ತಡ  ಆಕೆಯ ಮೇಲಿತ್ತು. ಪತಿಯ ನಿಧನದನಂತರ ಅವರು ಮಾಂಟೆಸರಿ ತರಬೇತಿಯ ಕೋರ್ಸ್ ಒಂದನ್ನು   ಪೂರ್ಣಗೊಳಿಸಿಕೊಂಡರು. ಎರಡು ವರ್ಷಗಳ ಹಿಂದೆ ಬ್ಯಾಂಕೊಂದರಿಂದ ಏಳು ಲಕ್ಷ ರುಪಾಯಿಗಳ ಸಾಲವನ್ನು ಪಡೆದು ಮಾಂಟೆಸರಿ ಶಾಲೆಯೊಂದನ್ನು ಆಕೆ ಆರಂಭಿಸಿದ್ದರು. ಸುಮಾರು ೧೦,೦೦೦ ಫ್ಲ್ಯಾಟ್ಗಳ ಸಂಕೀರ್ಣಗಳಿಂದ ಸುತ್ತುವರೆದ ಬಡಾವಣೆಯೊಂದರ ಕೇಂದ್ರ ಸ್ಥಾನದಲ್ಲಿ ಹೆಚ್ಚಿನ ಬಾಡಿಗೆಯ ಕರಾರಿಗೆ ಸಹಿಮಾಡಿ ತಮ್ಮ ಶಾಲೆಗಾಗಿ ಸುಸಜ್ಜಿತ ಕಟ್ಟಡವೊಂದನ್ನು ಅವರು ಪಡೆದಿದ್ದರು. ಇಂದಿನ ದಿನಗಳ ಮಾಂಟೆಸರಿ ಶಾಲೆಗೆ ಬೇಕಾದ ಎಲ್ಲಾ ಆಧುನಿಕ ಉಪಕರಣಗಳನ್ನು ಆರು ಲಕ್ಷ ರುಪಾಯಿಗಳ ಹಣವನ್ನು ತೊಡಗಿಸಿ ಖರೀದಿಸಿದ್ದರು. ಶಾಲೆಯನ್ನು ಆರಂಭಿಸಿದ ಮೊದಲ ವರ್ಷದಲ್ಲೇ ೧೦೦ಕ್ಕೂ ಹೆಚ್ಚು ಮಕ್ಕಳು ಸೇರ್ಪಡೆಯಾಗಿದ್ದು ನನ್ನ ಚಿಕ್ಕಮ್ಮನಿಗೆ ಸಂತಸವನ್ನು ತಂದಿತ್ತು. ಆರು ಶಿಕ್ಷಕರನ್ನು ಮತ್ತು ೮ ಸಹಾಯಕರನ್ನು ಅವರು ನೇಮಿಸಿಕೊಂಡಿದ್ದರು. ಕೆಲವೇ ತಿಂಗಳುಗಳ ಹಿಂದೆ ಅವರು ಒಬ್ಬ ಹೆಮ್ಮೆಯ ಮಹಿಳಾ ಉದ್ಯಮಿ ಎನಿಸಿಕೊಂಡಿದ್ದರು. 

ಕೋವಿಡ್ನ ಮಹಾಮಾರಿ ವ್ಯಾಪಕವಾಗಿ ಹರಡಿದನಂತರ, ಪೋಷಕರು ತಮ್ಮ ಮಕ್ಕಳುಗಳನ್ನು ಮಾಂಟೆಸರಿ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ. ಕೇವಲ ಸೇವಾ ಮನೋಭಾವದ ಮಹಿಳೆಯಾದ ನನ್ನ ಚಿಕ್ಕಮ್ಮ ತಿಂಗಳು ಕಳೆದನಂತರವೇ ಶುಲ್ಕವನ್ನು ವಸೂಲು ಮಾಡುತ್ತಿದ್ದವರು. ಇಡೀ ವರ್ಷದ ಶುಲ್ಕವನ್ನು ವರ್ಷದ ಮೊದಲೇ ಪಡೆದುಕೊಳ್ಳುವ ಪರಿಪಾಠ ಮುಗ್ಧೆಯಾದ ನಳಿನಿಯವರಿಗೆ ತಿಳಿದಿರಲಿಲ್ಲ. ಹೆಚ್ಚಿನ ಸಂಖ್ಯೆಯ ಪೋಷಕರು ಫೆಬ್ರವರಿ ೨೦೨೦ರ ನಂತರ ಶುಲ್ಕವನ್ನು ಕಟ್ಟುವುದನ್ನೇ ನಿಲ್ಲಿಸಿದ್ದಾರೆ. ಹೊಸವರ್ಷದ ಹೊಸ ಸೇರ್ಪಡೆಗಳು ಆರಂಭವಾಗೇ ಇಲ್ಲ. ಮಹಾಮಾರಿ ಮುಂದುವರೆದಿರುವುದರಿಂದ ಹೊಸ ಸೇರ್ಪಡೆಗಳ ಸಾಧ್ಯತೆ ಇಲ್ಲವೇ ಇಲ್ಲ. ಬ್ಯಾಂಕಿನ ಸಾಲದ ಕಂತುಗಳನ್ನು ಕಟ್ಟಲಾಗದ ಅವರ ಮೇಲೆ ಬೇರೆ ಬೇರೆ ಕಡೆಗಳಿಂದ ಹಣಕ್ಕಾಗಿ ಒತ್ತಡಗಳು ಬರ ಹತ್ತಿವೆ.  ಎಲ್ಲಾ ಭರವಸೆಗಳನ್ನೂ ಕಳೆದುಕೊಂಡಿರುವ ನಮ್ಮ ಚಿಕ್ಕಮ್ಮ ಈಗ ತಮ್ಮ ಶಾಲೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಆದರೆ ಶಾಲೆಯನ್ನು ಖರೀದಿಸಲು ಯಾರೂ ಮುಂದೆ ಬಂದಿಲ್ಲ. ಪೀಠೋಪಕರಣಗಳನ್ನು ಬಿಡಿಯಾಗೂ ಮಾರಲು ಆಕೆ ತಯಾರಿದ್ದರೂ, ಅವರ ವಸ್ತುಗಳನ್ನು ಕೊಳ್ಳುವರಿಲ್ಲವಾಗಿದ್ದಾರೆ. ಕೋವಿಡ್ ಮಹಾಮಾರಿ ಅವರನ್ನು ಜೀವಂತವಾಗಿ ಕೊಂದು ಬಿಟ್ಟಿದೆ. 

ಮಹಾಮಾರಿ ಕೊನೆಗೊಳ್ಳಬಹುದೆಂಬ ಭರವಸೆಯ ಮೇಲೆ ನಳಿನೀರವರು ಮತ್ತೊಂದು ವರ್ಷ ಕಾಯಲು ತಯಾರಿದ್ದಾರೆ. ಆದರೆ ಒಂದು ವರ್ಷ ಕಳೆದನಂತರವೂ ಹೆಚ್ಚಿನ ಮಕ್ಕಳು ಸೇರುವ ನೀರಿಕ್ಷೆ ಕುಂದುತ್ತಿದೆ. ಮನೆಯಿಂದಲೇ ಕೆಲಸಗಳನ್ನು ಮಾಡುತ್ತಿರುವ ಮಹಿಳೆಯರು  ತಮ್ಮ ಮಕ್ಕಳುಗಳನ್ನು ಕೆಲಸದೊಂದಿಗೇ ಮನೆಯಲ್ಲೇ ನಿಭಾಯಿಸುವ ವಿಧಾನಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. 

ಕೆಲವೇ ತಿಂಗಳುಗಳ ಹಿಂದೆ ನನ್ನ ಚಿಕ್ಕಮ್ಮ ಒಬ್ಬ "ಮಹಾತಾಯಿ (Super Mother)"ಯಾಗಿದ್ದರು,  ರಾಣಿಯಂತ್ತಿದ್ದರು. ಆದರೀಗ ಅವರು ಅಸಹಾಯಕ ಮಹಿಳೆಯಾಗಿ ನಿಂತಿದ್ದಾರೆ. ಆಕೆಗೆ ಯಾರು ಪರಿಹಾರವನ್ನೊದಗಿಸ ಬಲ್ಲರು? ಬ್ಯಾಂಕುಗಳು ಅವರ ಸಾಲದ ಮರುಪಾವತಿಯಲ್ಲಿ ರಿಯಾಯಿತಿಗಳನ್ನು ತೋರಬಲ್ಲದೇ? ಸರಕಾರ ಅವರ ನೆರವಿಗೆ ಬರಬಲ್ಲದೆ?'

ನಳಿನಿಯವರ ಕತೆಯನ್ನು ಹೇಳುತ್ತಾ ನಿಂತ್ತಿದ್ದ ರೋಹಿಣಿಯವರ ಕಣ್ಣುಗಳಲ್ಲಿ ನೀರು ಹನಿಯುತ್ತಿತ್ತು. ಕೆಲವು ಹಿರಿಯವರು  ಕೂಡಾ ಅವರ ಕಣ್ಣಾಲೆಗಳನ್ನು ಒರೆಸಿಕೊಳ್ಳುವುದು ಕಂಡಿತ್ತು. ಕಾರ್ಯಕ್ರಮದ ಅಂತ್ಯದಲ್ಲಿ ಸಭಿಕರೆಲ್ಲರನ್ನು ದುಃಖದಲ್ಲಿ ಮುಳುಗಿಸಿದ್ದಕ್ಕಾಗಿ ರೋಹಿಣಿ ಎಲ್ಲರ ಕ್ಷಮೆಯಾಚಿಸಿದ್ದಳು. ಆದರೆ ರೋಹಿಣಿ ಹೇಳಿದ ಕತೆ,  ಇಡೀ ದೇಶದ ಮೂಲೆ ಮೊಲೆಗಳಲ್ಲಿರುವ ಕೋಟಿ ಕೋಟಿ ಸ್ವಂತ ಉದ್ಯಮಿಗಳ ಕತೆಯಾಗಿತ್ತು. ಕಾಣದ ಮಹಾಮಾರಿ ಜೀವಗಳನ್ನು ಹರಣ ಮಾಡಿದ್ದಕ್ಕಿಂತ, ಹೆಚ್ಚಿನ ಸಂಖ್ಯೆಯ ಉದ್ಯಮಗಳನ್ನು ಮತ್ತು ಉದ್ಯೋಗಗಳನ್ನು ಕೊಂದಿತ್ತು. 'ದೇವರೆಂಬ ಒಬ್ಬನಿದ್ದಾನೆಯೇ? ಮನುಕುಲದ ಕಷ್ಟಗಳೇನು ಅವನಿಗೆ ಕಾಣಿಸುತ್ತಿಲ್ಲವೇ? ಅವನು ಮೌನವಾಗಿದ್ದನೇಕೆ?' ಯಾರ ಮನಸಿನಲ್ಲೂ ಈ ಪ್ರಶ್ನೆಗಳಿಗೆ ಅಂದು ಉತ್ತರವಿರಲಿಲ್ಲ.

******

೧೧ 

ಕೋವಿಡ್ಗಿಂತಲೂ ಭಯಂಕರ 



ಅಂದು ೨೦೨೦ರ ಜೂನ್ ೨೨ರ ದಿನವಾಗಿತ್ತು. ಭಾರಿ ಕೆಲಸದ ಒತ್ತಡದಿಂದ ಯುವ ವೈದ್ಯ  ಡಾ. ಕಿರಣ್ ಅಂದು ನಲುಗಿ ಹೋಗಿದ್ದರು. ಅವರ ಆಸ್ಪತ್ರೆಯ ಭರ್ತಿ, ಕೋವಿಡ್-೧೯ರ ರೋಗಿಗಳು ತುಂಬಿ ಹೋಗಿದ್ದರು. ಆಸ್ಪತ್ರೆಯ ಎಲ್ಲಾ ಹಾಸಿಗೆಗಳು ಹಾಗೂ ಐ.ಸಿ.ಯು.ಗಳ ತುಂಬಾ ರೋಗಿಗಳು ತುಂಬಿ ಹೋಗಿದ್ದರು. ಆಸ್ಪತ್ರೆಯಲ್ಲಿದ್ದ ಎಲ್ಲ ೨೦ ವೆಂಟಿಲೇಟರ್ಗಳನ್ನು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗಳಿಗೆ ಅಳವಡಿಸಲಾಗಿತ್ತು. ಬೇರೇ ರಾಜ್ಯಗಳ ಪರಿಸ್ಥಿತಿಗಳಿಗಿಂತ ತಮ್ಮ ರಾಜ್ಯದ ಪರಿಸ್ಥಿತಿ ಎಷ್ಟೋ ಸಮಾಧಾನಕರ ಎಂಬುದು ಡಾ. ಕಿರಣರಿಗೆ ತಿಳಿದಿತ್ತು. ಕೊಂಚ ವಿರಮಿಸಿದ್ದ ಅವರು ವಿಶ್ವದ, ಭಾರತದ ಮತ್ತು ಅವರ ರಾಜ್ಯದ ಕೋವಿಡ್ ಅಂಕಿ-ಅಂಶಗಳನ್ನು ಅವಲೋಕಿಸುತ್ತಿದ್ದರು. 

ಭಾರತದ ಕೋವಿಡ್ನ ಅಂಕಿ-ಅಂಶಗಳನ್ನು ಬೇರೆ ದೇಶಗಳಿಗೆ ಹೋಲಿಸಿದರೆ ಎಷ್ಟೋ ಸಮಾಧಾನಕರವಾಗಿದ್ದರೂ, ಅದು ಹೊರನೋಟದ ಪರಿಸ್ಥಿತಿ ಮಾತ್ರ ಎಂಬುದು ಅನುಭವಿಯಾದ ಡಾ.ಕಿರಣರಿಗೆ ತಿಳಿದಿತ್ತು. ಕೋವಿಡ್ ಲಕ್ಷಣಗಳಿರುವ ರೋಗಿಗಳ ಮೇಲಿನ ಪರೀಕ್ಷೆಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿಲ್ಲವೆಂಬುದು ಅವರಿಗೆ ತಿಳಿದಿತ್ತು. ಮುಂಬರುವ ದಿನಗಳಲ್ಲಿ ಕೋವಿಡ್ ರೋಗಿಗಳ ಮತ್ತು ಮೃತಪಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಬಹುದೆಂಬ ಆತಂಕವೂ ಅವರಿಗಿತ್ತು. ಕೋವಿಡ್ನಂತಹ ಮಹಾಮಾರಿಯಿಂದ ಉಂಟಾಗಿರುವ ಇಂದಿನ ಪರಿಸ್ಥಿತಿ ಯಾರೂ ಕಂಡು ಕೇಳರಿಯದ್ದೂ ಎಂಬ ವಿಷಯ ಡಾ. ಕಿರಣರ ಮೇಲಿನ ಹಿರಿಯ ವೈದ್ಯರುಗಳ ಅಭಿಪ್ರಾಯವಾಗಿತ್ತು. 

ಕುರ್ಚಿಯಲ್ಲೇ ಕುಸಿದು ಮಲಗಿದ್ದ ಕಿರಣರನ್ನು ನಿದ್ರೆಯ ಮಂಪರು ಆವರಿಸಿತ್ತು. ತಮಗೆ ತಿಳಿಯದಂತೆ ಅವರು ತಮ್ಮ ಟಿ.ವಿ.ಯ ರಿಮೋಟ್ನ ಬಟನ್ನೊಂದನ್ನುಒತ್ತಿದ್ದರು. ಅಂದಿನ ಕೋವಿಡ್ನ ಪರಿಸ್ಥಿತಿಗಿಂತ ಘೋರವಾದ ಅಂಕಿ-ಅಂಶಗಳನ್ನು ಅವರ ಟಿ.ವಿ. ಪರದೆಯ ಮೇಲಿನ 'ಬ್ರೇಕಿಂಗ್ ನ್ಯೂಸ್' ಪಟ್ಟಿಯಲ್ಲಿ ತೋರಿಸಲಾಗುತ್ತಿತ್ತು. ಆ ಅಂಕಿ-ಅಂಶಗಳು ಭಯಾನಕವಾಗಿದ್ದು, 'ಪ್ರತಿದಿನ ೨೫,೦೦೦ ಸಾವುಗಳು ಮತ್ತು ವರ್ಷವೊಂದಕ್ಕೆ ೯ ಮಿಲಿಯೋನ್ನಷ್ಟು ಸಾವುಗಳು ಸಂಭವಿಸುತ್ತಿವೆ' ಎಂದು ತೋರಿಸಲಾಗುತ್ತಿತ್ತು. ನಂಬಲಾಗದ ಕಿರಣ್ ಅದೊಂದು ಪ್ರಸಾರದ ಆಭಾಸವಿರಬಹುದೆಂದುಕೊಂಡರು. ಆದರೆ ಆ ರೀತಿಯ ಅಂಕಿ-ಅಂಶಗಳನ್ನು ಮತ್ತೆ ಮತ್ತೆ ಟಿ.ವಿ. ಪರದೆಯ ಮೇಲೆ ಕೆಂಪು ಅಕ್ಷರಗಳಲ್ಲಿ ತೋರಿಸಲಾಗುತ್ತಿತ್ತು. ಸ್ವಲ್ಪ ಗಮನವಿಟ್ಟು ನೋಡಿದ ಮೇಲೇ, ಅಂದಿನ ಕಾರ್ಯಕ್ರಮ 'ಹಸಿವಿನ ಸಮಸ್ಯ'ಗೆ ಸಂಬಂಧಪಟ್ಟಿದ್ದು ಎಂಬ ಅರಿವು ಕಿರಣರಿಗಾಗಿದ್ದು. ಹಸಿವಿನ ಸಮಸ್ಯೆಯಿಂದ, ಇಂದು ವಿಶ್ವಾದ್ಯಂತ ಬಳಲುತ್ತಿರುವವರ ಸಂಖ್ಯೆ ೮೨೨ ಮಿಲಿಯನ್ ಗಳಷ್ಟು ಎಂಬುದು ತಜ್ಞರಾದ ಕಿರಣರಿಗೇ ಆಶ್ಚರ್ಯಕರ ಸುದ್ದಿಯಾಗಿತ್ತು. ಟಿ.ವಿ.ಯ ಕಾರ್ಯಕ್ರಮದ ನಿರ್ವಾಹಕರು ಏರಿದ ದನಿಯಲ್ಲಿ ಮಾತನಾಡುತ್ತಿದ್ದರು. 'ವಿಶ್ವಾದಾದ್ಯಂತ ೯ ಮಿಲಿಯನ್ ಜನರುಗಳು ಪ್ರತಿವರ್ಷ ಹಸಿವಿನಿಂದ ಬಳಲಿ ಸಾವನ್ನಪ್ಪುತ್ತಾರೆ. ಏಡ್ಸ್, ಮಲೇರಿಯ ಮತ್ತು ಟಿ.ಬಿ.ಖಾಯಿಲೆಗಳಿಂದ ಪ್ರತಿವರ್ಷ ಸಾವನ್ನಪ್ಪುವವರ ಒಟ್ಟು ಸಂಖ್ಯೆಗಿಂತ, ಹಸಿವಿನಿಂದ ಬಳಲಿ ಸಾಯುವವರ ಸಂಖ್ಯೆ ಹೆಚ್ಚಿನದು!' ಟಿ.ವಿ.ಪ್ರಸಾರದಲ್ಲಿ ಆಭಾಸವೇನೂ ಇತ್ತಿಲ್ಲ. 'ವಿಶ್ವ ಹಸಿವಿನ ದಿನ(World Hunger Day)'ವಾದ, ೨೮-೦೫-೨೦೨೦ರ ಕಾರ್ಯಕ್ರಮದ ಮರುಪ್ರಸಾರ ಅಂದು ನಡೆಯುತ್ತಿತ್ತು. 

ಆ ಕಾರ್ಯಕ್ರಮವನ್ನು ವೀಕ್ಷಿಸುವಂತೆ, ತಮ್ಮ ಗೆಳತಿ ರೋಹಿಣಿಗೆ ತಕ್ಷಣ ಕರೆಮಾಡಿದರು ಕಿರಣ್. ಹಸಿವಿನ ಆ ಕಾರ್ಯಕ್ರಮವನ್ನು ತಾನು 'ವಿಶ್ವ ಹಸಿವಿನ ದಿನ'ದಂದೇ  ನೋಡಿದ್ದು, ತನ್ನ ಸಂಶೋಧನೆಗೆ ಅವಶ್ಯಕವಾದ ಟಿಪ್ಪಣಿಗಳನ್ನು ಬರೆದುಕೊಳ್ಳಲು, ಈಗಲೂ ಮತ್ತೊಮ್ಮೆ ನೋಡುತ್ತಿರುವುದಾಗಿ ರೋಹಿಣಿ ಉತ್ತರಿಸಿದ್ದಳು. ಆ ಚಾನೆಲ್ನ ಮುಂದಿನ ಕಾರ್ಯಕ್ರಮವಾದ 'ಹಸಿವನ್ನು ಕುರಿತಾದ ಟೆಲಿ-ನಾಟಕ'ವೊಂದನ್ನು ನೋಡುವಂತೆ ರೋಹಿಣಿ, ಕಿರಣರನ್ನಾಗ್ರಹಿಸಿದ್ದಳು. 

'ಇಂದಿನ ವಿಶೇಷ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ವಿಶ್ವಾದ್ಯಂತ ಪ್ರತಿ ೧೦ ಸೆಕೆಂಡ್ಗಳಿಗೊಮ್ಮೆ ಒಂದು ಮಗು ಹಸಿವಿನಿಂದ ಸಾಯುತ್ತದೆ. ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಹಸಿವಿನ ಸಾವುಗಳ ಸಂಖ್ಯೆ ಹೆಚ್ಚಾಗಾಗುತ್ತದೆ. ೨೧ನೇ ಶತಮಾನದ ಅತ್ಯಂತ ದೊಡ್ಡದಾದ ಆರೋಗ್ಯ ಸಮಸ್ಯೆಯೆಂದರೆ "ಹಸಿವಿನ ಸಾವು." ದಿನೇ ದಿನೇ ಆ ಸಮಸ್ಯೆಯ ತೀವ್ರತೆ ಹೆಚ್ಚುತ್ತಲೇ ಸಾಗುತ್ತಿರುವುದು ವಿಷಾದಕರ. ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆಯನ್ನು ಮಾಡವಂತೆ ಇಂದಿನ ಗಣ್ಯ ಅತಿಥಿಗಳನ್ನು ಕೋರಿಕೊಳ್ಳುತ್ತೇನೆ' ಎಂದು ಸಾಗಿತ್ತು ಅಂದಿನ ಕಾರ್ಯಕ್ರಮದ ನಿರ್ವಾಹಕರಾದ ರಾಮಸುಬ್ಬುರವರ ವಾಗ್ಝರಿ. "ಭಾರತದ ಹಸಿವಿನೊಂದಿಗಿನ ಹೋರಾಟದ  ಕಾರ್ಯಕ್ರಮ (Fight Hunger Project)"ದ ನಿರ್ದೇಶಕರಾದ ಡಾ. ದಿವಾಕರವರಿಂದ ಚರ್ಚೆ ಆರಂಭವಾಗಿತ್ತು. ಅವರ ವಿಷಯ ಮಂಡನೆ ವೈದ್ಯರಾದ ಕಿರಣರವರ ಕಣ್ಣನ್ನೂ ತೆರೆಸಿತ್ತು. 

'ಹಸಿವು, ಕೋವಿಡ್ಗಿಂತಲೂ ಭಯಾನಕವಾದುದೇ? ಹಸಿವೆಂಬ ಪೆಡಂಭೂತವನ್ನೇಕೆ ನಾವು ನಿರ್ಲಕ್ಷಿಸುತ್ತಿದ್ದೇವೆ? ವಿಶ್ವಾದ್ಯಂತ ಪ್ರತಿನಿತ್ಯ ಕೇವಲ ೫೦೦೦ ರೋಗಿಗಳನ್ನು ಕೊಲ್ಲುತ್ತಿರುವ  ಕೋವಿಡ್ಗಿಂತ, ೨೫,೦೦೦ ಮಾನವರುಗಳನ್ನು ಕೊಲ್ಲುತ್ತಿರುವ ಹಸಿವನ್ನು ನಾವು ನಿರ್ಲಕ್ಷಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ? "ಹಸಿವಿನಿಂದ ಸಾಯುವವರು ಬಡವರುಗಳು ಮಾತ್ರವೆಂಬುದು ಈ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವೇ?" ಶ್ರೀಮಂತರನ್ನೂ ಬಿಡದೆ ಎಲ್ಲಾ ವರ್ಗಗಳ ಜನರಗಳನ್ನೂ ಕೋವಿಡ್ ಮಹಾಮಾರಿ  ಕೊಲ್ಲುತ್ತಿರುವುದೇ ನಮ್ಮನ್ನು ಹೆಚ್ಚು ತಲ್ಲಣಗೊಳಿಸಿದೆಯೇ? ಬಡವರುಗಳ ಬಗೆಗಿನ ದಿವ್ಯ ನಿರ್ಲಕ್ಷ್ಯ, ಮಾನವರುಗಳ ಮಾನಸಿಕತೆಯ ಕರಾಳ ಮುಖವೇ?' 

'ನಾನು ನೀಡುತ್ತಿರುವ ಅಂಕಿ-ಅಂಶಗಳಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಹಸಿವನ್ನು ಕುರಿತಾದ ಭಾರತದ  ಅಂಕಿ-ಅಂಶಗಳನ್ನು ತಮ್ಮ ಮುಂದಿಟ್ಟರೆ, ತಮ್ಮಗಳಿಗೆ ಆಶ್ಚರ್ಯ ಕಾದಿರಬಹುದು.  ಅಪೌಷ್ಟಿಕತೆಯ ತವರೇ ಭಾರತವೆಂದು ಹೇಳಬಹುದು. ೧೯೬ ಮಿಲಿಯನ್ ಜನರುಗಳು ಭಾರತದಲ್ಲಿ ಇಂದೂ ಹಸಿವಿನಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿನ ೫ ವರ್ಷಕ್ಕೂ ಕಮ್ಮಿ ವಯಸ್ಸಿನ ೨೧% ಮಕ್ಕಳು "ಕಮ್ಮಿ ತೂಕ (Wasting - ವಯಸ್ಸಿಗೆ ತಕ್ಕ ತೂಕವಿಲ್ಲದಿರುವುದು)"ದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದೇ ವರ್ಗದ ೩೮. ೪%ರಷ್ಟು ಮಕ್ಕಳು "ಎತ್ತರದ ಕೊರತೆ (Stunting - ವಯಸ್ಸಿಗೆ ತಕ್ಕ ಎತ್ತರವಿಲ್ಲದಿರುವುದು)"ಯಿಂದ ಪೀಡಿತರಾಗಿದ್ದಾರೆ. ಈ ರೀತಿಯ ಕೊರತೆಗಳಿಂದ ಮಕ್ಕಳ ದೈಹಿಕ ಬಲ ಮತ್ತು ಮನೋಬಲಗಳೆರಡೂ ಸರಿಪಡಿಸಲಾಗದ ನ್ಯೂನ್ಯತೆಗಳಾಗಿ ಉಳಿದುಬಿಡುತ್ತವೆ. ೨೦೧೭ರ  ವಿಶ್ವ ಹಸಿವಿನ ಸೂಚಿ(Global Hunger Index)ಯ ಪ್ರಕಾರ, ೧೧೯ ವಿಕಾಸ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಭಾರತದ ಸ್ಥಾನ ೧೦೦ನೆಯ ಸ್ಥಾನದಷ್ಟು ಕೆಳಮಟ್ಟದಲ್ಲಿದೆ.  ಪಕ್ಕದ ಬಡ ರಾಷ್ಟ್ರಗಳಾದ ನೇಪಾಳ, ಮಯನ್ಮಾರ್, ಶ್ರೀ ಲಂಕಾ ಮತ್ತು ಬಾಂಗ್ಲಾದೇಶಗಳು ಈ ನಿಟ್ಟಿನಲ್ಲಿ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ ಎಂಬುದು ವಿಷಾದಕರ ಸಂಗತಿ. ಪ್ರತಿದಿನ ೭೦೦೦ ಜನಗಳು ಮತ್ತು ಪ್ರತಿವರ್ಷ ೨೫ ಲಕ್ಷ ಜನಗಳು ಹಸಿವಿನಿಂದ ಭಾರತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂಬ ಸಂಗತಿ ಆತಂಕಕಾರಿಯಾದುದಲ್ಲವೇ?' ಹೀಗೆ ಮಂಡಿಸಿದ ಡಾ. ದಿವಾಕರ್ ರವರ ವಿಷಯಗಳು ಎಲ್ಲರನ್ನೂ ಚಕಿತಗೊಳಿಸಿದ್ದು ಸುಳ್ಳಾಗಿತ್ತಿಲ್ಲ. 

'ಧನ್ಯವಾದಗಳು ದಿವಾಕರ್ ರವರೆ. ತಾವು ನೀಡಿದ ವಿವರಗಳು ಖೇದಕರವಾದವು. ದಿನನಿತ್ಯ ೨೫,೦೦೦ ಜನರುಗಳನ್ನು ಬಲಿಪಡೆಯುವ ಹಸಿವಿನ ಸಮಸ್ಯೆ ಬಗ್ಗೆ ನಾವೇಕೆ ಯೋಚಿಸುವುದೂ ಇಲ್ಲ? ಭಾರತ ಮತ್ತು ವಿಶ್ವದ ಮುಂದಿರುವ ಅತೀ ದೊಡ್ಡ ಸಮಸ್ಯೆಯೆಂದರೆ, ಹಸಿವಿನ ಸಮಸ್ಯೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ವಿಷಯದ ಚರ್ಚೆಯನ್ನು ಪ್ರೊ. ಪ್ರಹ್ಲಾದರವರು ಮುಂದುವರೆಸಲಿ ಎಂದು ಕೋರಿಕೊಂಡವರು ನಿರ್ವಾಹಕರಾದ ರಾಮಸುಬ್ಬುರವರು. 

ಪ್ರೊ. ಪ್ರಹ್ಲಾದ್ರವರು ಮಾತನಾಡುತ್ತಾ, 'ರಾಮಸುಬ್ಬು ಮತ್ತು ದಿವಾಕರ್ ರವರು ನಿರ್ದಾಕ್ಷಿಣ್ಯವಾಗಿ ವಿಷಯ ಮಂಡನೆಯನ್ನು ಮಾಡಿ ನಮ್ಮ ಕಣ್ಣುಗಳನ್ನು ತೆರೆಸಿದ್ದಾರೆ. ಅಮೆರಿಕಾದ ನಾಗರೀಕ ಹಕ್ಕುಗಳ ಖ್ಯಾತ ವಾದಿಯಾಗಿದ್ದ ಡಾ. ಮಾರ್ಟಿನ್ ಲೂಥರ್ ಕಿಂಗ್ ರವರು ಒಂದು ಕಡೆ ಮಾತನಾಡುತ್ತ, "ನಾನು ಸತ್ತರೆ ನನಗೊಂದು ಸ್ಮಾರಕವನ್ನು ಕಟ್ಟಿಸಬೇಡಿ. ಹಸಿದ ಹೊಟ್ಟೆಗಳಿಗೆ ಆಹಾರವನ್ನು ನೀಡುವ ಪ್ರಯತ್ನವನ್ನು ಮಾತ್ರ ನಾನು ಮಾಡುತ್ತಿದ್ದೆ ಎಂದು ಮುಂದಿನ ಪೀಳಿಗೆಗೆ ತಿಳಿಸಿ" ಎಂದಿದ್ದರು. ನಮ್ಮವರೇ ಆದ, ನೊಬೆಲ್ ಪಾರಿತೋಷಕ ವಿಜೇತರಾದ ಡಾ. ಅಮರ್ತ್ಯ ಸೇನ್ರವರು ವಿಶ್ಲೇಷಿಸುತ್ತಾ "ಭಾರತದಲ್ಲಿ ಆಹಾರದ ಕೊರತೆ ಇಲ್ಲ. ಹಸಿವಿನಿಂದ ಬಳಲುತ್ತಿರುವರಿಗೆ ಆಹಾರವನ್ನು ತಲುಪಿಸುವ ವ್ಯವಸ್ಥೆ ಮಾತ್ರ ಸಮರ್ಪಕವಾಗಿಲ್ಲ" ಎಂದಿದ್ದಾರೆ. ಭಾರತದಲ್ಲಿನ  ಹಸಿದ ಹೊಟ್ಟೆಗಳನ್ನು ತುಂಬಿಸಲು ಬೇಕಾಗುವ ಆಹಾರ ಧಾನ್ಯಗಳ ಪ್ರಮಾಣಕ್ಕಿಂತ  ಹೆಚ್ಚು ಆಹಾರ ಧಾನ್ಯಗಳು, ಪ್ರತಿ ವರ್ಷ ಹಾಳಾಗಿ ಹೋಗುತ್ತದೆ. ಹಸಿದವರಿಗೆ ಆಹಾರವನ್ನು ತಲುಪಿಸುವ ಮಾರ್ಗಗಳನ್ನು ಕುರಿತು ಚರ್ಚೆಗಳು ಮಾತ್ರ ನಡೆಯುತ್ತವೇ ಹೊರೆತು, ಅದರ ಕಾರ್ಯಾನ್ವಯದ ಕೆಲಸಗಳು ಮಾತ್ರ ನಡೆಯುವುದೇ ಇಲ್ಲ' ಎಂದರು. 

ಈ ನಡುವೆ ವಕೀಲ ಮದನ್ ಲಾಲರು ಮಾತನಾಡಲು ತುದಿಗಾಲಲ್ಲಿ ನಿಂತಿದ್ದರು. 'ಮತ್ತೊಬ್ಬ ನೊಬೆಲ್ ವಿಜೇತರಾದ ಅರ್ಥ ಶಾಸ್ತ್ರಜ್ಞ ಅಂಗಸ್ ಡೇಟನ್ ರವರ ಮಾತುಗಳನ್ನು ನೆನಪಿಸಲಿಚ್ಛಿಸುತ್ತೇನೆ. "ಭಾರತದ ಬಡವರ ಅಪೌಷ್ಟಿಕತೆಯ ಕೊರತೆ ಕ್ಯಾಲೋರಿಗಳ ಕೊರತೆಯಿಂದ ಉಂಟಾದುದಲ್ಲ. ಭಾರತೀಯರ ಆಹಾರ ಪದ್ಧತಿಯಲ್ಲಿ ಶರ್ಕರಪಿಷ್ಟಾದಿಗಳ (carbohydrates) ಅಂಶ ಹೆಚ್ಚಾಗಿದ್ದು, ಪ್ರೋಟೀನ್ ಮತ್ತು ಕೊಬ್ಬಿನ (Fats) ಅಂಶಗಳು ಕಡಿಮೆ ಇರುತ್ತದೆ." ಭಾರತದಲ್ಲಿ ಹಸಿವಿನಿಂದ ಬಳಲುತ್ತಿರುವವರಲ್ಲಿ,  ೬೦%ಗೂ ಹೆಚ್ಚಿನವರು ಮಹಿಳೆಯರು. ಭಾರತದ ಇಡೀ ಜನಸಂಖ್ಯೆಗೆ ಸಾಕಾಗುವಷ್ಟು ಆಹಾರ ಭಾರತದಲ್ಲೇ ಉತ್ಪಾದನೆಗೊಳ್ಳುತ್ತದೆ. ಆದರೆ ಭಾರೀ ಸಂಖ್ಯೆಯ ಭಾರತೀಯರಿಗೆ ಸಾಕಷ್ಟು ಹಣವನ್ನುದುಡಿಯುವ ಅವಕಾಶಗಳಿಲ್ಲದೇ ಇರುವುದು ಆಹಾರ ಸಮಸ್ಯೆಗೆ ಕಾರಣವಾಗಿದೆ. ಹಸಿದವರಲ್ಲಿ ೮೦%ರಷ್ಟು ಜನರು ಗ್ರಾಮೀಣ ಭಾಗದವರಾಗಿರುತ್ತಾರೆ. ವಲಸಿಗರ ಸಮಸ್ಯೆ, ವಿವಿಧ ವರ್ಗಗಳ ನಡುವಿನ  ಘರ್ಷಣೆ, ಹವಾಮಾನ ವೈಪರೀತ್ಯ, ಪ್ರಾಕೃತಿಕ ದುರ್ಘಟನೆಗಳು ಮುಂತಾದ ಕಾರಣಗಳೂ ಹಸಿವಿನ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತವೆ. ಹಸಿವೆಂಬುದೇ ಅತ್ಯಂತ ಕ್ರೂರವಾದ ಮಹಾಮಾರಿ. ಆ ಮಹಾಮಾರಿಯನ್ನು ಹಣಿಯಲು ಬೇಕಾದ ಲಸಿಕೆ ಮತ್ತು ಔಷಧಗಳೆರಡೂ "ಆಹಾರ" ಮಾತ್ರ. ಆಹಾರ ನಮ್ಮ ದೇಶದಲ್ಲಿ ಸಾಕಷ್ಟಿದ್ದು, ಅದರ ಹಂಚಿಕೆ ವ್ಯವಸ್ಥೆ ಸರಿಯಿಲ್ಲದಿರುವುದೇ ದೊಡ್ಡ ಸಮಸ್ಯೆ. ಹಸಿವಿನ ಮಹಾಮಾರಿಯನ್ನು ಹಣಿಯುವುದು, ಕೋವಿಡ್ ಮಹಾಮಾರಿಯನ್ನು ಹಣಿಯುವುದಕ್ಕಿಂತಾ ಸುಲಭವಾದ ಕೆಲಸ. ಆದರೆ ನಮ್ಮ ಜನಗಳಲ್ಲಿ ಮತ್ತು ನಮ್ಮ ನಾಯಕರುಗಳಲ್ಲಿ ಬೇಕಾದ ಇಚ್ಚಾಶಕ್ತಿಯ ಕೊರತೆ ಇರುವುದೇ ವಿಷಾದಕರ ಸಂಗತಿ' ಎಂದವರು ಮದನ್ ಲಾಲರು. 

ಟಿ.ವಿ. ಚರ್ಚೆಯ ಮುಂದಿನ ಮಾತಿನ ಅವಕಾಶ ರಾಜುರವರದಾಗಿತ್ತು. 'ಹಸಿವಿನ ಸಮಸ್ಯೆ ಕುರಿತಾದ ಮೂಲಭೂತ ಸಮಸ್ಯೆಗಳನ್ನು ಎತ್ತಿ ತೋರಿಸಿ ಮಾತನಾಡಿದ ಎಲ್ಲರಿಗೂ ನಾನು ಆಭಾರಿ. ತಜ್ಞರುಗಳ ಪ್ರಕಾರ ಇಂದಿನ ಕೋವಿಡ್ ಸಮಸ್ಯೆ, ಹಸಿವಿನ ಸಮಸ್ಯೆಯನ್ನು ಇನ್ನೂ ತೀವ್ರಗೊಳಿಸಬಲ್ಲದು. "ಉದ್ಯೋಗಗಳ ಹರಣ, ಬಡವರಲ್ಲಿನ ಆದಾಯದ ಕುಸಿತ, ಸಾಗಾಣಿಕೆಯ ಸಮಸ್ಯೆ, ಕೋವಿಡೇತರ ರೋಗಗಳಿಗೆ ಚಿಕಿತ್ಸೆಯ ಕೊರತೆ, ಮುಂತಾದ ಸಮಸ್ಯೆಗಳು ಆಹಾರದ ವಿತರಣೆಯ ವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸಿವೆ. ಕೋವಿಡ್ನ ಸಮಸ್ಯೆ ಮುಂದುವರೆದಷ್ಟೂ, ಆಹಾರದ ಸಮಸ್ಯೆಯೂ ಉಲ್ಬಣಗೊಳ್ಳುವುದರಲ್ಲಿ ಎರಡು ಮಾತಿಲ್ಲ.

 ಹಸಿವಿನ ಸಮಸ್ಯೆಯನ್ನು ನೀಗಿಸುವ ಕೆಲವು ಕಾರ್ಯಕ್ರಮಗಳನ್ನು ನಮ್ಮ ಸರಕಾರಗಳು ತೆಗೆದುಕೊಂಡಿವೆ. ಉಚಿತ ಹಾಗೂ ಕಮ್ಮಿ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಬಡವರಿಗೆ ತಲುಪಿಸುವ ವ್ಯವಸ್ಥೆ, ಶಾಲೆಗಳಲ್ಲಿ ಮಧ್ಯಾಹ್ನದೂಟದ ವ್ಯವಸ್ಥೆ, ರೈತರುಗಳಿಗೆ ನೇರ ಹಣದ ಪಾವತಿಯ ವ್ಯವಸ್ಥೆ, ಹಲವು ರಾಜ್ಯಗಳಲ್ಲಿನ ಉಚಿತ/ಕಮ್ಮಿ ಬೆಲೆಯ ಊಟದ ಕ್ಯಾಂಟೀನ್ ಗಳ ವ್ಯವಸ್ಥೆ , ಮುಂತಾದ ಕ್ರಮಗಳು ಹಸಿವಿನ ಸಮಸ್ಯೆಯನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನಗಳೇ ಎಂದು ಹೇಳಬಹುದು. ಆದರೆ ಹಲವಾರು ತಜ್ಞರುಗಳ ಪ್ರಕಾರ, ಉಚಿತವಾಗಿ ಆಹಾರವನ್ನೊದಗಿಸುವ ವ್ಯವಸ್ಥೆ ದೀರ್ಘಾವಧಿಯ ಪರಿಹಾರವಾಗಲಾರದು. ಹಲವಾರು ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಉಚಿತ ಆಹಾರದ ವ್ಯವಸ್ಥೆ ಜೀವಗಳನ್ನುಳಿಸಬಹುದು. ಆದರೆ ಎಗ್ಗಿಲ್ಲದೆ ಸಾಗುವ ಉಚಿತ ಆಹಾರದ ವ್ಯವಸ್ಥೆ ಹೊಸ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅದರಿಂದ ಆಹಾರ ಧಾನ್ಯಗಳ ಬೆಲೆಗಳಲ್ಲಿ ಏರುಪೇರಾಗಿ, ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ವ್ಯಾಪಾರಗಳ ಪ್ರಕ್ರಿಯೆಗಳಲ್ಲಿ ಉತ್ಸಾಹದ ಕೊರತೆಯುಂಟಾಗಬಹುದು. ಗ್ರಾಮೀಣಾಭಿವೃದ್ಧಿಗೆ ದೀರ್ಘಾವಧಿಯ ಯೋಜನೆಗಳು, ಸ್ತ್ರೀಯರ ಸಬಲೀಕರಣ ಮುಂತಾದ ಕ್ರಮಗಳಿಂದ ಹಸಿವಿನ ಸಮಸ್ಯೆಯನ್ನು ಹೆಚ್ಚು ಸಮರ್ಪಕವಾಗಿ ಎದುರಿಸಲು ಸಾಧ್ಯ. ನೀರು,  ನೈರ್ಮಲ್ಯ, ವಿದ್ಯಾಭ್ಯಾಸ, ಆರೋಗ್ಯ, ಸಾಗಾಣಿಕೆ, ಸಂವಹನ (communication) ಮುಂತಾದ ಸಮಸ್ಯೆಗಳು ನಮ್ಮ ಹಳ್ಳಿಗಳನ್ನು ಸತತವಾಗಿ ಕಾಡುತ್ತಿವೆ. ಪಟ್ಟಣದವರಿಗೆ ಹೋಲಿಸಿದರೆ ಗ್ರಾಮೀಣರ            ಜೀವಿತಾವಧಿ (Life expectancy)ಯೂ ಕಡಿಮೆಯೇ. ಹಾಗಾಗಿ ಹಸಿವಿನ ಸಮಸ್ಯೆಯನ್ನು ನಿವಾರಿಸಲು ಸಮಗ್ರ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ.  

ಹಸಿವೆಂಬುದು ಜನಸಂಖ್ಯಾ ಸ್ಫೋಟದಿಂದುಂಟಾದ ಸಮಸ್ಯೆಯೇ? ಅಲ್ಲ. ಹಸಿವು ಮತ್ತು ಜನಸಂಖ್ಯಾ ಸ್ಫೋಟಗಳೆರಡೂ ಬಡತನ ಮತ್ತು ಅಸಮಾನತೆಯಿಂದ ಉಂಟಾದ ಸಮಸ್ಯೆಗಳು. ಹೆಣ್ಣು ಕೀಳೆಂಬ ಭಾವನೆ ಮೊದಲು ತೊಲಗಬೇಕು. ಮಹಿಳೆಯರನ್ನು ಕೀಳೆಂದು ಕಾಣುವ ನಮ್ಮ ಜನರುಗಳ ಮನೋಭಾವದಿಂದಾಗಿ, ನಮ್ಮ ಮಹಿಳೆಯರುಗಳ ಪೈಕಿ ೬೦%ರಷ್ಟು ಮಹಿಳೆಯರು ಹಸಿವಿನಿಂದ ಬಳಲುತ್ತಿದ್ದಾರೆ.  ತಮ್ಮ ಮಕ್ಕಳುಗಳ ಹೊಟ್ಟೆಯನ್ನು ತುಂಬಿಸಲು ಮಾತೆಯರು ಉಪವಾಸದಿಂದಿರುತ್ತಾರೆ. ಕುಟುಂಬಗಳ ಅವಶ್ಯಕತೆಗಳ ಪೂರೈಕೆಯ ಜವಾಬ್ದಾರಿಯನ್ನು ತಾಯಂದಿರುಗಳು ನಿಭಾಯಿಸುತ್ತಾರೆ. ಆದರೂ ಹೆಚ್ಚಿನ ಕುಟುಂಬಗಳಲ್ಲಿ ಮಾತೆಯರಿಗೆ ಸೌಲಭ್ಯಗಳು ದೊರೆಯುವುದಿಲ್ಲ ಮತ್ತು ಕುಟುಂಬವನ್ನು ಕುರಿತಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ ಅಭಿಪ್ರಾಯವನ್ನು ಪರಿಗಣಿಸುವುದಿಲ್ಲ. ಈ ರೀತಿಯ ಧೋರಣೆಗಳೇ ಕುಟುಂಬದ ಎಲ್ಲಾ ಸಮಸ್ಯೆಗಳ ಮೂಲ. ಆದುದರಿಂದ ಮಹಿಳೆಯರ ಸಬಲೀಕರಣದ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಈ ಕಾರ್ಯಕ್ಕೆ ಪೂರಕವಾಗಿ ಪುರುಷರ ಮನಃಸ್ಥಿತಿಯೂ ಬದಲಾಗಬೇಕು.' ಹೀಗಿದ್ದ ರಾಜುರವರ ವಾದದ ವೈಖರಿ ತರ್ಕಬದ್ಧವಾಗಿದ್ದು ಎಲ್ಲರನ್ನೂ ಆಕರ್ಷಿಸಿತ್ತು. 

ಕಾರ್ಯಕ್ರಮದ ನಿರ್ವಾಹಕ ರಾಮಸುಬ್ಬುರವರು ಮಾತನಾಡುತ್ತಾ, 'ರಾಜುರವರ ಮಾತುಗಳು ಹಸಿವಿನ ಸಮಸ್ಯೆಯ ದರ್ಶನವನ್ನು ಸಮಗ್ರವಾಗಿ ಮಾಡಿಸಿವೆ.  ಹೆಚ್ಚಿನದೇನನ್ನೂ ನಾನು ಹೇಳಬಯಸುವುದಿಲ್ಲ. ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ನಮ್ಮ ಟಿ.ವಿ. ವಾಹಿನಿಯ ಮುಂದಿನ ಕಾರ್ಯಕ್ರಮ 'ಹಸಿವನ್ನು ಕುರಿತಾದ ಟೆಲಿ ನಾಟಕ' ಎಂದರು.

***

ಅಂದು ಸಮಯ ಸಾಯಿಂಕಾಲದ ೫. ೦೦ ಘಂಟೆಯಾಗಿತ್ತು. ಅಕ್ಷರಗಳನ್ನು ಬರೆಯುವುದನ್ನು ಕಲಿಯುತ್ತಿದ್ದ ದುರ್ಗಾ ತನ್ನ ಶಾಲೆಯಲ್ಲಿ ಕುಳಿತಿದ್ದಳು. ಶಿಕ್ಷಕರಾಗಿ ಆ ಶಾಲೆಗೆ ವಾರಕ್ಕೆ ಎರಡು ಬಾರಿ ಬರುತ್ತಿದ್ದ ಬ್ಯಾನರ್ಜಿರವರು ತಮ್ಮ ಒಬ್ಬಳೇ ವಿದ್ಯಾರ್ಥಿನಿ ದುರ್ಗಾಗಳಿಗೆ  ವರ್ಣಮಾಲೆಗಳ ಪಟವನ್ನು  ತೋರಿಸುತ್ತಿದ್ದರು. ಹರಿದ ಲಂಗಗಳನ್ನು ತೊಟ್ಟ, ಕೃಶವಾದ ದೇಹದ ದುರ್ಗಾಳ  ಮೂರು ಹೆಣ್ಣು ಮಕ್ಕಳು ಅವಳ ಸುತ್ತಾ ಕುಳಿತಿದ್ದರು. ಆ ಮೂರು ಮಕ್ಕಳೂ, ಅರೆ ಬೆಂದ ಒಂದೇ ಮುಸುಕಿನ ಜೋಳದ ತೆನೆಯಿಂದ ಕಾಳುಗಳನ್ನು ಹೆಕ್ಕಿ ತಿನ್ನುತ್ತಿದ್ದರು. ಮಕ್ಕಳುಗಳ ನಡುವೆ ಮತ್ತೆ ಮತ್ತೆ ಕಾಳುಗಳಿಗಾಗಿ ಕಿತ್ತಾಟ ನಡೆಯುತ್ತಿತ್ತು. ಒಳ್ಳೆಯ ಮಾತುಗಳನ್ನಾಡಿ ಮಕ್ಕಳನ್ನು ಸಮಾಧಾನ ಪಡಿಸುತ್ತಿದ್ದ ದುರ್ಗಾ, ಅಕ್ಷರಗಳನ್ನು ತಿದ್ದುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. 'ನಿಮ್ಮ ಅಮ್ಮನಿಗೆ ತೊಂದರೆ ಕೊಡಬೇಡಿ' ಎಂದು ನಡುವೆ ಬ್ಯಾನರ್ಜಿ ಮೇಷ್ಟ್ರು ಕೂಗು ಹಾಕುತ್ತಿದ್ದರು. 

ಒಂದು ದಿನ, ದುರ್ಗಾ ತನ್ನ ಶಾಲೆಯಲಿದ್ದಳು. ಸಾಯಿಂಕಾಲ ೫. ೩೦ರ ಸಮಯವಾಗಿತ್ತು. ದುರ್ಗಾಳ ಗಂಡನಾದ ಚುನ್ನಿ ಲಾಲ್ ಕೂಗಾಡುತ್ತಾ ಶಾಲೆಯ ಬಳಿ ಬಂದಿದ್ದನು. 'ಓ ದುರ್ಗಾ, ಹೊರಗೆ ಬಾ. ದುಡ್ಡು ಕೊಡು. ನಾನು ಶರಾಬು ಕುಡಿಯುವ ಹೊತ್ತಾಯ್ತು. ನಂಕಯ್ಲಿ ತಡ್ಕೊಳಕ್ಕಾಗ್ತಿಲ್ಲ.' ಪತಿಯ ಕೂಗಾಟವನ್ನು ಕೇಳಿದ ದುರ್ಗಾ ಒಳಗೇ ನಡುಗ ಹತ್ತಿದ್ದಳು. ಹಣ ಕೊಡದ್ದಿದ್ದರೆ ಅವನು ಹೋಗುವುದಿಲ್ಲವೆಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಆ ದಿನ ಅವಳ ಕೈಯಲ್ಲಿ ಒಂದು ರುಪಾಯಿಯೂ ಕೂಡಾ ಇರಲಿಲ್ಲ. 

ಚುನ್ನಿಯ ಕೂಗಾಟ ಮುಂದುವರೆದಿತ್ತು. 'ಓ ಹೆಂಗಸೇ, ಹೊರಗೆ ಬಾ. ಒಳಗೆ ಏನು ಮಾಡ್ತಿ? ನಿನ್ನ ಮೇಷ್ಟ್ರ ಜೊತೆ ಚಕ್ಕಂದವಾಡ್ತಿದ್ದೀಯ?' ಚುನ್ನಿ ಕೂಗಾಟವನ್ನು ನಿಲ್ಲಿಸುವುದಿಲ್ಲವೆಂದು ತಿಳಿದಿದ್ದ ದುರ್ಗಾ ಹೊರಗೆ ಬಂದಿದ್ದಳು. ದುರ್ಗಳ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದ ಚುನ್ನಿ 'ಹಣ ಕೊಡು, ಹಣ ಕೊಡು' ಎಂದು ಅರಚಿದ್ದ. 'ನನ್ನಲ್ಲಿ ಈ ದಿನ ಹಣವಿಲ್ಲ, ನಾಳೆ ಕೊಡುತ್ತೇನೆ' ಎಂದು ದುರ್ಗಾ ಅಂಗಲಾಚಿದರೂ ಚುನ್ನಿ ಸುಮ್ಮನಾಗಲಿಲ್ಲ. 

ಮಧ್ಯೆ ಪ್ರವೇಶ ಮಾಡಿದ ಬ್ಯಾನರ್ಜಿ ಮೇಷ್ಟ್ರು ಚುನ್ನಿಯನ್ನು ಸಮಾಧಾನ ಪಡಿಸಲೆತ್ನಿಸಿದ್ದರು. ಏರು ಧ್ವನಿಯಲ್ಲಿ ಕೂಗಾಡಿದ ಚುನ್ನಿ, 'ಏಯ್ ಮೇಸ್ಟ, ನಿನಗೂ ನನ್ನ ಹೆಂಡತಿಗೂ ಏನೋ ಸಂಬಂಧ? ಎಷ್ಟು ದಿನಗಳಿಂದ ಅವಳನ್ನು ಗುಟ್ಟಾಗಿ ಅನುಭವಿಸುತ್ತಿದ್ದೀಯಾ? ನನಗೆಲ್ಲಾ ತಿಳಿದಿದೆ. ಸೂಳೆ ಮಗನೇ, ನಾಳೆಯಿಂದ ನಮ್ಮ ಹಳ್ಳಿಗೆ ಬರಬೇಡ.' ಎಂದನು. ಕೋಪ ನೆತ್ತಿಗೇರಿದ ಚುನ್ನಿ, ಶಾಲೆಯ ಮೂಲೆಯಲ್ಲಿದ್ದ ಪರಕೆಯೊಂದನ್ನು ಎತ್ತಿಕೊಂಡು ಅದರಿಂದ ದುರ್ಗಾಳನ್ನು ಥಳಿಸ ಹತ್ತಿದನು. ದುರ್ಗಾಳನ್ನು ಬಿಗಿಯಾಗಿ ಹಿಡಿದ ಅವಳ ಮೂರೂ ಮಕ್ಕಳೂ ಅಳಲಾರಂಭಿಸಿದರು. ಮೇಷ್ಟ್ರು ಏನು ತೋಚದೆ ಸುಮ್ಮನೆ ನಿಂತಿದ್ದರು. ಥಳಿತವನ್ನು ನಿಲ್ಲಿಸದ ಚುನ್ನಿಯನ್ನು ನೋಡಿ ಮೇಷ್ಟ್ರ ಕಣ್ಣಲ್ಲಿ ನೀರಿನ ಹನಿ ಮೂಡಿತ್ತು. ತಮ್ಮ ಕಿಸೆಯಿಂದ ಕೆಲವು ನೋಟುಗಳನ್ನು ಹೊರ ತೆಗೆದ ಮೇಷ್ಟ್ರು, ಅವುಗಳನ್ನು ಚುನ್ನಿಯ ಕೈಯಲ್ಲಿಟ್ಟರು. ನೋಟುಗಳನ್ನು ತನ್ನ ಕಿಸೆಗಿಳಿಸಿದ ಚುನ್ನಿ ಮತ್ತೆ ಅರಚುತ್ತಾ 'ಏ ಮೇಸ್ಟಾ, ನೀನೇನು ಹಣವನ್ನು ಬಿಟ್ಟಿ ಕೊಡುತ್ತಿಲ್ಲ. ನನ್ನ ಹೆಂಡತಿ ಜೊತೆ ಮಲಗಿದ್ದಕ್ಕೆ ಹಣ ಕೊಡ್ತಿದ್ದೀಯ. ಮಲ್ಕೋ, ಮಲ್ಕೋ, ನನಗೆ ಹಣ ಕೊಡ್ತಾ ಇರು' ಎಂದನು. ಕೂಡಲೇ  ಚುನ್ನಿ ಶರಾಬಿನಂಗಡಿ ಕಡೆ ಓಡಿದನು. ಕಣ್ಣೀರಿಡುತ್ತಾ ದುರ್ಗಾ ಮಕ್ಕಳೊಂದಿಗೆ ಮನೆ ಕಡೆ ನಡೆದಳು. 

ಚುನ್ನಿಯೊಂದಿಗೆ ಮದುವೆಯಾದಾಗ ದುರ್ಗಾಳಿಗಿನ್ನು ೧೩ರ  ಪ್ರಾಯ. ಮದುವೆಯಾಗಿ ೧೪ ವರ್ಷಗಳುರುಳಿ ದುರ್ಗಾ ಮೂರು ಹೆಣ್ಣು ಮಕ್ಕಳನ್ನೂ ಹಡೆದಿದ್ದಳು. ಕಾಡಿನ ಬುಡಕಟ್ಟಿನ ಚುನ್ನಿಯ ಕೆಲಸ ಮರಗಳನ್ನು ಕಡಿಯುವುದಾಗಿತ್ತು. ಆದರವನು ದುಡಿಯುವುದಕ್ಕಿಂತಾ ಕುಡಿತದಲ್ಲೇ ಕಾಲ ಹರಣ ಮಾಡುತ್ತಿದ್ದನು. ನಾಲ್ಕು ಕಿ.ಮೀ. ದೂರವಿರುವ ಸಣ್ಣ ನಗರವೊಂದಕ್ಕೆ ನಿತ್ಯ ನಡೆದು ಹೋಗುತ್ತಿದ್ದ ದುರ್ಗಾ, ಕೆಲವು ಮನೆಗಳಲ್ಲಿ ಕೆಲಸವನ್ನು ಮಾಡುತ್ತಿದ್ದಳು. ಅವಳ ಸಂಪಾದನೆಯ ಬಹು ಭಾಗ ಚುನ್ನಿಯ ಕುಡಿತಕ್ಕೇ ಹರಿದು ಹೋಗುತ್ತಿತ್ತು. ದುರ್ಗಾಳನ್ನು ಹಣಕ್ಕಾಗಿ ಪೀಡಿಸಿ ಚುನ್ನಿ ಅವಳನ್ನು ಹೊಡೆಯುವುದು ನಿತ್ಯದ ಕ್ರಮವಾಗಿ ಹೋಗಿತ್ತು. 

ದುರ್ಗಾಳ ಹಳ್ಳಿ, ಕಾಡೊಳಗಿನ ದುರ್ಗಮ ಪ್ರದೇಶವಾಗಿದ್ದು, ಅವಳ ಹಳ್ಳಿಯವರೆಲ್ಲಾ ಕಡು ಬಡವರಾಗಿದ್ದರು. ಮುಖ್ಯ ರಸ್ತೆಯಲ್ಲಿರುವ ಬಸ್ ನಿಲ್ದಾಣ ತಲುಪಲು ಹಳ್ಳಿಗರು ೩ ಕಿ.ಮೀ.ನಷ್ಟು ದೂರವನ್ನು ಮಣ್ಣಿನ ರಸ್ತೆಯಲ್ಲೇ ನಡೆದು ಹೋಗಬೇಕಿತ್ತು. ಆ ನಿಲ್ದಾಣದಲ್ಲಿ ಕೆಲವು ಬಸ್ ಗಳು ಮಾತ್ರ ನಿಲ್ಲುತ್ತಿದ್ದವು. ಹಲವು ಬಾರಿ ಸಮೀಪದ ಪಟ್ಟಣವನ್ನು ತಲುಪಲು ಹಳ್ಳಿಗರು ಮತ್ತೆ ಒಂದು ಕಿ.ಮೀ.ನಷ್ಟು ದೂರವನ್ನು ನಡೆದೇ ಸಾಗಬೇಕಿತ್ತು. ಆ ಪಟ್ಟಣದಲ್ಲಿ ಮಾತ್ರ ದುರ್ಗಾಳ ಹಳ್ಳಿಗರಿಗೆ ಒಂದು ಕೆ.ಜಿ.ಗೆ ಒಂದು ರೂ.ಗಳ ಅಕ್ಕಿ, ಸರಕಾರಿ ರೇಷನ್ ಅಂಗಡಿಯಲ್ಲಿ ದೊರೆಯುತ್ತಿತ್ತು. ಮಣ್ಣಿನ ರಸ್ತೆಯಲ್ಲಿ ಮಳೆ ದಿನಗಳಲ್ಲಿ ನಡೆದು ಹೋಗುವುದು ಬಹಳ ತ್ರಾಸದಾಯಕವಾಗಿತ್ತು. 

ಒಂದು ದಿನ ದುರ್ಗಾ ತನ್ನ ಶಾಲೆಯ ಬ್ಯಾನರ್ಜಿ ಮೇಷ್ಟ್ರನ್ನು ಕೇಳಿದ್ದಳು. 'ಸರಕಾರದವರಿಗೆ ಹೇಳಿ ರೇಷನ್ ಅಂಗಡಿಯನ್ನು ನಮ್ಮ ಹಳ್ಳಿಗೇ ತರಿಸಬಾರದೇಕೆ?'

ಮೇಷ್ಟ್ರು ಉತ್ತರಿಸುತ್ತಾ, 'ನಾನು ಹೊರಗಿನವನು. ನಾನು ಕೇಳುವುದು ಸರಿಯಲ್ಲ. ನೀನೇ ಏಕೆ ಕೇಳಬಾರದು?' ಭಯಗೊಂಡಂತೆ ಕಂಡ ದುರ್ಗಾ, 'ನನ್ನ ಮಾತನ್ನು ಸರಕಾರದವರು ಕೇಳುವರೇ?' ಎಂದಳು. 'ಏಕಾಗಬಾರದು? ಹಳ್ಳಿಯ ೧೦-೨೦ ಹೆಂಗಸರನ್ನು ಜೊತೆ ಮಾಡಿಕೊಂಡು ಹೋಗು. ಆಗ ನಿನ್ನ ಮಾತನ್ನು ಅವರು ಕೇಳಲೇ ಬೇಕಾಗುತ್ತದೆ' ಎಂದರು ಮಾಸ್ಟರ್ಜಿ. 

ಒಂದು ದಿನ ದುರ್ಗಾ ಹಳ್ಳಿಯ ೨೦ ಮಹಿಳೆಯರನ್ನು ಜೊತೆ ಮಾಡಿಕೊಂಡು ಹೊರಟೇ ಬಿಟ್ಟಿದ್ದಳು. ನೆರೆ ಗ್ರಾಮಗಳ ಕೆಲವು ಮಹಿಳೆಯರೂ ದುರ್ಗಾಳ ತಂಡದೊಂದಿಗೆ ಸೇರಿಕೊಂಡಿದ್ದರು. ಕಾಲ್ನಡುಗೆಯಲ್ಲೇ ಇಡೀ ತಂಡ ನಡೆದು ಸಾಗಿತ್ತು. ತಂಡದ ಮುಂದೆ ದುರ್ಗಾ ಸಾಗಿದ್ದಳು. ದುರ್ಗಾಳ ತಂಡ ಅಂತೂ ಆಹಾರ ಇಲಾಖೆಯ ಕಚೇರಿಯನ್ನು ತಲುಪಿತ್ತು. ಮುಂದಾಳಾಗಿದ್ದ ದುರ್ಗಾಳೆ,  ಆಹಾರದ ಅಧಿಕಾರಿಯೊಂದಿಗೆ  ಮಾತನಾಡುತ್ತಾ, 'ಸಾರ್, ನಮ್ಮ ಹಳ್ಳಿ ಇಲ್ಲಿಂದ ೪ ಕಿ.ಮೀ.ದೂರದಲ್ಲಿದೆ. ತಿಂಗಳ ರೇಷನ್ ಪಡೆಯಲು ತಮ್ಮ ಪಟ್ಟಣಕ್ಕೆ ನಮ್ಮ ಸುತ್ತಮುತ್ತಲಿನ ಹಳ್ಳಿಗರು ಕಾಲ್ನಡುಗೆಯಲ್ಲೇ  ಬರಬೇಕಾಗುತ್ತದೆ. ತಾವು ನಮ್ಮ ಹಳ್ಳಿಯಲ್ಲೊಂದು ರೇಷನ್ ಅಂಗಡಿಯನ್ನೇಕೆ ಆರಂಭಿಸಬಾರದು?' ಎಂದು ಕೇಳಿದಳು. 

ಅಧಿಕಾರಿಗಳು ಉತ್ತರಿಸುತ್ತಾ, 'ತಾವುಗಳು ನಮಗೊಂದು  ಸ್ಥಳವನ್ನು ಕಲ್ಪಿಸಿ ಕೊಟ್ಟರೆ, ನಾವು ರೇಷನ್ ಅಂಗಡಿಯನ್ನು ತಮ್ಮ ಹಳ್ಳಿಯಲ್ಲೇ ಆರಂಭಿಸುತ್ತೇವೆ' ಎಂದರು. ತನ್ನ ಗುಡಿಸಿಲಿನಲ್ಲೇ ರೇಷನ್ ಅಂಗಡಿಯನ್ನು ಪ್ರಾರಂಭಿಸಬಹುದೆಂದು ದುರ್ಗಾ ಹೇಳಿದಾಗ, ಮಹಿಳೆಯರೆಲ್ಲರೂ ಚಪ್ಪಾಳೆ ತಟ್ಟಿದರು. 

ಮೇಲಿನ ಘಟನೆ ನಡೆದನಂತರ  ಕೆಲವು ದಿನಗಳು ಕಳೆದಿತ್ತು. ಅಕ್ಕಿ ಚೀಲವನ್ನು ಹೊತ್ತ ಲಾರಿಯೊಂದು ದುರ್ಗಾಳ ಹಳ್ಳಿಗೆ ಬಂದೇ ಬಿಟ್ಟಿತ್ತು. ಲಾರಿ ಬರುವುದೆಂದು ಕಾದಿದ್ದ ಮಹಿಳೆಯರು ಸಂತಸಗೊಂಡು ಲಾರಿಗೆ ಮತ್ತು ಲಾರಿ ಚಾಲಕರಿಗೆ ಹಾರಗಳನ್ನು ಹಾಕಿದರು. ಹಳ್ಳಿಗರೆಲ್ಲರೂ ಲಾರಿಗೆ ಪೂಜೆ ಮಾಡಿ ಆರತಿಯನ್ನು ಬೆಳಗಿದ್ದೂ ಆಗಿತ್ತು. ಹಳ್ಳಿಯ ಗಂಡಸರು ಲಾರಿಯ ಮುಂದೆ ಇಡುಗಾಯಿಯನ್ನು ಒಡೆದಿದ್ದೂ ನಡೆದಿತ್ತು. ಹಳ್ಳಿಗರೆಲ್ಲಾ ಮುಂದಾಗಿ ಲಾರಿಯಿಂದ ಅಕ್ಕಿಯ ಮೂಟೆಗಳನ್ನು ಇಳಿಸಿ ದುರ್ಗಾಳ ಮನೆಯೊಳಗೆ ಇಡಲಾರಂಭಿಸಿದ್ದರು. 

ಅಷ್ಟರಲ್ಲಿ ಎಲ್ಲಿಂದಲೋ ಬಂದ ದುರ್ಗಾಳ ಗಂಡ ಚುನ್ನಿ ಲಾಲ್ 'ನನ್ನ ಮನೆಯಲ್ಲಿ ಅಕ್ಕಿ      ಮೂಟೆಗಳನ್ನಿಡ ಬೇಡಿ. ನಾನು ಮಲಗುವುದೆಲ್ಲಿ? ಬೇಡ, ಬೇಡ' ಎಂದರುಚಿದನು. 

'ನಮ್ಮ ಮನೆಯನ್ನು ರೇಷನ್ ಅಂಗಡಿ ಮಾಡುವುದರಿಂದ, ಸರಕಾರ ನಮಗೆ ಬಾಡಿಗೆ ನೀಡುತ್ತದೆ. ಆ ಬಾಡಿಗೆಯ ಹಣ ನಿಮ್ಮ ಶರಾಬಿನ ಖರ್ಚಿಗೆ ದೊರಕುತ್ತದೆ' ಎಂದು ದುರ್ಗಾ ಜಾಣತನದಿಂದ ಚುನ್ನಿಯ ಕಿವಿಯಲ್ಲಿ ಹೇಳಿದಾಗಲೇ, ಚುನ್ನಿಯ ಮುಖದಲ್ಲಿ ರಂಗೇರಿದ್ದು. ಅವನೂ ಅಕ್ಕಿ ಮೂಟೆಗಳನ್ನು ಲಾರಿಯಿಂದ ಇಳಿಸಲಾರಂಭಿಸುವ ಕೆಲಸ ಮಾಡಲು ಶುರು ಮಾಡಿದನು. 

ತಮ್ಮ ಹಳ್ಳಿಯಲ್ಲೇ ರೇಷನ್ ಅಂಗಡಿ ಆರಂಭವಾಗುವಂತೆ ಮಾಡಿದ್ದಕ್ಕಾಗಿ, ಹಳ್ಳಿಗರೆಲ್ಲರೂ ದುರ್ಗಾಳನ್ನು ಅಭಿನಂದಿಸಿದರು. ಕೆಲವು ದಿನಗಳನಂತರ ಅದೇ ರೇಷನ್ ಅಂಗಡಿಯಲ್ಲಿ ಬೇಳೆ ಮತ್ತು ಅಡುಗೆ ಎಣ್ಣೆಯನ್ನೂ  ವಿತರಿಸಲಾರಂಭಿಸಿದರು. ಹಳ್ಳಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸುಮಾರು ಆರು ವಾರಗಳನಂತರ ಸುತ್ತಲಿನ ಹಳ್ಳಿಯವರಿಗೂ ರೇಷನ್ ಮಾಲುಗಳನ್ನು, ಅದೇ ರೇಷನ್ ಅಂಗಡಿಯಿಂದ  ವಿತರಿಸಲಾರಂಭಿಸಿದರು. 

ಕೆಲವು ತಿಂಗಳುಗಳು ಕಳೆದಿತ್ತು. ದುರ್ಗಾಳಿಗೀಗ ಓದಲು, ಬರೆಯಲು ಬರುತ್ತಿತ್ತು. ಸಾಕಷ್ಟು ವಿಷಯಗಳನ್ನು ಅವಳು ದಿನ ಪತ್ರಿಕೆಯನ್ನು ಓದಿ ತಿಳಿದುಕೊಳ್ಳುತ್ತಿದ್ದಳು. ಬ್ಯಾನರ್ಜಿ ಮೇಷ್ಟ್ರು ಒಂದು ದಿನ ತಂದಿದ್ದ ಪತ್ರಿಕೆಯಲ್ಲಿ ಸುದ್ದಿಯೊಂದು ಬಂದಿತ್ತು. 'ಹಳ್ಳಿಗಳ ಪಂಚಾಯಿತಿ ಕಾಯಿದೆಗೆ ಸರಕಾರ ತಿದ್ದುಪಡಿಯೊಂದನ್ನು ತಂದಿದೆ. ಹಳ್ಳಿ ಪಂಚಾಯಿತಿಯ ಸದಸ್ಯರುಗಳ ಸ್ಥಾನದಲ್ಲಿ, ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಕಾದಿರಿಸಲಾಗಿದೆ' ಎಂಬ ಸುದ್ದಿಯನ್ನು ಓದಿದ ದುರ್ಗಾಳಿಗೆ ಪಂಚಾಯಿತಿ ಚುನಾವಣೆ ಇನ್ನೊಂದು ತಿಂಗಳಲ್ಲಿ ನಡೆಯುತ್ತದೆ ಎಂಬುದೂ ತಿಳಿದಿತ್ತು. ಸುದ್ದಿಯ ವಿವರಗಳನ್ನು ಮತ್ತೊಮ್ಮೆ ಓದಿದ ಬ್ಯಾನರ್ಜಿ ಮೇಷ್ಟ್ರು, 'ದುರ್ಗಾ ನೀನೇಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು?' ಎಂದು ಕೇಳಿದರು. ಪುಳಕಿತಳಾದ ದುರ್ಗಾ, 'ನಾನೂ ಸ್ಪರ್ಧಿಸಬಹುದೇ?' ಎಂದು ಕೇಳುತ್ತಾ ನಾಚಿದ್ದಳು. 

ನಾಮಪತ್ರಗಳನ್ನು ಸಲ್ಲಿಸುವ ದಿನ ಬಂದಿತ್ತು. ಹಳ್ಳಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ದುರ್ಗಾ, ಹಳ್ಳಿಯ ಮುಂದಿನ ಕಾಳಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿದನಂತರ  ಪಂಚಾಯಿತಿ ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದ್ದಳು. ಬೇರ್ಯಾರೂ ಪ್ರತಿಸ್ಪರ್ಧಿಗಳು ಇಲ್ಲದ್ದರಿಂದ, ದುರ್ಗಾ ಅವಿರೋಧವಾಗಿ ಆಯ್ಕೆಗೊಂಡಿದ್ದಳು. 

ಆ ಬಾರಿಯ ಪಂಚಾಯಿತಿಯ ಅಧ್ಯಕ್ಷರ ಸ್ಥಾನ ಪರಿಶಿಷ್ಟ ವರ್ಗಗಳಿಗೆ ಮೀಸಲಾಗಿದ್ದರಿಂದ, ದುರ್ಗಾಳನ್ನೇ ಅಧ್ಯಕ್ಷಳನ್ನಾಗಿ ಆಯ್ಕೆ ಮಾಡಲಾಗಿತ್ತು. ಒಂದು ದಿನ ಆ ಕ್ಷೇತ್ರದ ಶಾಸಕರು ದುರ್ಗಾಳ ಹಳ್ಳಿಗೆ ಭೇಟಿ ನೀಡಿದ್ದರು. ಸುತ್ತಲಿನ ಎಲ್ಲ ಹಳ್ಳಿಗಳನ್ನೂ ಸಂಪರ್ಕಿಸುವ ಮತ್ತು ಎಲ್ಲಾ ಹಳ್ಳಿಗಳನ್ನು ಮುಖ್ಯ ರಸ್ತೆಗೆ ಜೋಡಿಸುವ ರಸ್ತೆಗಳನ್ನು ನಿರ್ಮಿಸಲೇ ಬೇಕೆಂದು ದುರ್ಗಾ ಶಾಸಕರ ಮುಂದೆ ಬೇಡಿಕೆ ಇಟ್ಟಿದ್ದಳು. ರಸ್ತೆಗಳಿಗೆ ಮಂಜೂರನ್ನು ಸರಕಾರದಿಂದ ಪಡೆದ ದುರ್ಗಾ ಸಂಭ್ರಮಿಸಿದ್ದಳು.  'ಮನರೇಗಾ (MANREGA)' ಎಂಬ ಯೋಜನೆಯಡಿ  ರಸ್ತೆಗಳ ನಿರ್ಮಾಣ ಕಾರ್ಯ ಶುರುವಾಗಿತ್ತು. ನಿರ್ಮಾಣ ಕಾರ್ಯಕ್ಕೆ ಹಳ್ಳಿಯ ಜನರುಗಳನ್ನೇ ನೇಮಿಸಿಕೊಳ್ಳಲಾಗಿತ್ತು. ಎಲ್ಲಾ ರಸ್ತೆಗಳ ನಿರ್ಮಾಣ ಕಾರ್ಯ ಎರಡು ತಿಂಗಳುಗಳಲ್ಲಿ ಮುಗಿದಿತ್ತು. ಸುತ್ತಲ ಹಳ್ಳಿಗಳೆಲ್ಲವಕ್ಕೂ ಮುಖ್ಯ ರಸ್ತೆಯೊಂದಿಗೆ ಸಂಪರ್ಕ ಕಲ್ಪಿಸಲು, ಎರಡು ಸರಕಾರೀ ಬಸ್ಸುಗಳು ಮಂಜೂರು ಆಗಿ, ಬಸ್ ಸಂಚಾರವೂ ಆರಂಭವಾಗಿತ್ತು. ಎಲ್ಲಾ ಕಾರ್ಯಗಳು ನಡೆಯುವಂತೆ ಪ್ರಾಮಾಣಿಕವಾಗಿ ದುಡಿದ ದುರ್ಗಾಳಿಗೆ  ಹಳ್ಳಿಗರೆಲ್ಲರೂ ಸನ್ಮಾನವನ್ನು ಮಾಡಿದ್ದರು. 

ಮೇಲಿನ ಅಧಿಕಾರಿಗಳ ನೆರವಿನಿಂದ ಹಳ್ಳಿಗಳ ಹಿರಿಯರಿಗೆ ಮತ್ತು ವಿಧವೆಯರಿಗೆ ಮಾಸಿಕ ಪಿಂಚಣಿ ಬರುವಂತಹ ಏರ್ಪಾಡನ್ನೂ ದುರ್ಗಾ ಮಾಡಿದ್ದಳು. ಅವಳ ಅಧಿಕಾರಾವಧಿಯ ಸಮಯದಲ್ಲೇ ದುರ್ಗಾ ತನ್ನ ಹಳ್ಳಿಯಲ್ಲಿ ಶಾಲೆಯೊಂದು ಆರಂಭವಾಗುವಂತೆ ಮಾಡಿದ್ದಳು. ನೆರೆ ಹಳ್ಳಿಗಳ ಮಕ್ಕಳೂ ಅದೇ ಶಾಲೆಯಲ್ಲಿ ಕಲಿಯಲಾರಂಭಿಸಿದ್ದರು. ಶಾಲೆಯಲ್ಲಿ ಮಧ್ಯಾಹ್ನದೂಟದ ವ್ಯವಸ್ಥೆಯೂ ಆಯಿತು. 

ದುರ್ಗಾಳ ಈ ಎಲ್ಲ ಕ್ರಮಗಳಿಂದ ಸುತ್ತಲಿನ ಹಲವು ಹಳ್ಳಿಗರ ಹಸಿವಿನ ಸಮಸ್ಯೆ ಸಾಕಷ್ಟು ನೀಗಿತ್ತು. ಹಳ್ಳಿಗಳ ಬಡ ರೈತರಿಗೆ ಸರಕಾರದಿಂದ ಪ್ರತಿ ವರ್ಷ ರೂ. ೬೦೦೦ ಗಳ ಸಹಾಯವೂ ದೊರೆಯ ಹತ್ತಿತು. 

ತನ್ನ ಹಳ್ಳಿಗೊಂದು ಆಸ್ಪತ್ರೆ ಬೇಕೆಂಬುದು ದುರ್ಗಾಳ ಮಹಾದಾಸೆಯಾಗಿತ್ತು. ಚಿಕಿತ್ಸೆಗಾಗಿ ಹಳ್ಳಿಗರು ೪ ಕಿ.ಮೀ.ನಷ್ಟು ದೂರದ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇತ್ತು. ಸರಕಾರದೊಡನೆ ಎರಡು ವರ್ಷಗಳಷ್ಟು ದೀರ್ಘಕಾಲ ದುರ್ಗಾ ಹೋರಾಟವನ್ನು ಮುಂದುವರೆಸಿದ್ದಳು. ರಾಜ್ಯ ಸರಕಾರದ ಆರೋಗ್ಯ ಮಂತ್ರಿಗಳನ್ನು ದುರ್ಗಾ ಭೇಟಿ ಮಾಡಿದನಂತರವೇ ಅವಳ ಹಳ್ಳಿಗೆ ಆಸ್ಪತ್ರೆಯೊಂದು ಮಂಜೂರಾಗಿದ್ದು. ಅದರಿಂದ ಸುತ್ತಲ ಹಳ್ಳಿಗರಿಗೆಲ್ಲರಿಗೂ ಆಸ್ಪತ್ರೆಯ ಸೌಲಭ್ಯ ದೊರೆತಂತಾಗಿತ್ತು. 

ದುರ್ಗಾಳ ಸತತ ಪರಿಶ್ರಮ ಮತ್ತು ಅವಳು ಸಾಧಿಸಿದ ಪ್ರಗತಿಯ ವಿಷಯ ಮಾಧ್ಯಮಗಳ ಗಮನಕ್ಕೆ ಬಂದಿತ್ತು. ಅಂತಾರಾಷ್ಟ್ರೀಯ ಮಾಧ್ಯಮಗಳು ದುರ್ಗಾಳ ಸಾಧನೆಯನ್ನು ಗುರುತಿಸಿದಾಗ, ವಿಶ್ವದ ಗಮನ ಅವಳ ಮೇಲಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರಶಸ್ತಿ-ಸನ್ಮಾನಗಳು ದುರ್ಗಾಳನ್ನರಸಿ ಬಂದಿದ್ದವು. 

ನಾಟಕ ಕೊನೆಗೊಳ್ಳುತ್ತಲೇ, ರೋಹಿಣಿ ತನ್ನ ಕಿರಣನಿಗೆ ಫೋನಾಯಿಸಿ ಮಾತನ್ನಾಡಿದ್ದಳು. 'ನಾಟಕ ಹೇಗಿತ್ತು? ಅದೊಂದು ಸತ್ಯಕತೆ. ಉಚಿತವಾಗಿ ಆಹಾರವನ್ನೊದಗಿಸುವುದರಿಂದ ಹಸಿವಿನ ಸಮಸ್ಯೆಯನ್ನು ತೊಲಗಿಸಲಾರದು. ಮಹಿಳೆಯರ ಸಬಲೀಕರಣ ನಮ್ಮ ಹಳ್ಳಿಗಳಲ್ಲಿ ಕ್ರಾಂತಿಯನ್ನು ತರಬಲ್ಲದು. ಹಸಿವಿನ ಸಮಸ್ಯೆಯ ನಿವಾರಣೆಗೆ  ಸಮಗ್ರ ಹೋರಾಟದ ಅವಶ್ಯಕತೆ ಇದೆ. ಅಂತಹ ಸಮಗ್ರ ಹೋರಾಟವನ್ನು ದುರ್ಗಾ ಮಾಡಿ ಗೆದ್ದಿದ್ದಾಳೆ' ಎಂದಾಗ ರೋಹಿಣಿಯ ಸಂತಸ, ಗೆಳಯ ಕಿರಣನದ್ದೂ  ಆಗಿತ್ತು. 

***          

ರೋಹಿಣಿಯ ಸಂಶೋಧನಾ ಕಾರ್ಯ ಎಡಬಿಡದೆ ಸಾಗಿತ್ತು. ಕೋವಿಡ್ ಮಹಾಮಾರಿ ಇಡೀ ದೇಶವನ್ನು ವ್ಯಾಪಿಸಿ ತಂದೊಡ್ಡಿದ್ದ ಸಮಸ್ಯೆಗಳ ಸಮಗ್ರ ಅಧ್ಯಯನ ಅವಳ ಸಂಶೋಧನೆಯ ಒಂದು ಮುಖ್ಯ ಭಾಗವಾಗಿತ್ತು. 'ಫೈಟ್ ಹಂಗರ್ ಪ್ರಾಜೆಕ್ಟ್' ಸಂಸ್ಥೆಯ ಅಧ್ಯಕ್ಷರಾದ ದಿವಾಕರ್ ರವರನ್ನು ಒಂದು ದಿನ  ಸಂಪರ್ಕಿಸಿ ರೋಹಿಣಿ ಮಾತನಾಡಿದ್ದಳು. 'ನಮಸ್ಕಾರ ಸಾರ್. ನಾನು ರೋಹಿಣಿ. ನಾನೊಬ್ಬ ಸಮಾಜ ಶಾಸ್ತ್ರಜ್ಞೆ ಮತ್ತು ಸಂಶೋಧಕಿ. ವಿಶ್ವ ಹಸಿವಿನ ದಿನದಂದು ತಾವು ಟಿ.ವಿ.ಚರ್ಚೆಯಲ್ಲಿ ಭಾಗವಹಿಸಿ ಮಂಡಿಸಿದ ವಿಷಯಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ. ತಮ್ಮಿಂದ ನನ್ನ ಸಂಶೋಧನಾ ಕಾರ್ಯಕ್ಕೆ ಮಾರ್ಗದರ್ಶನ ದೊರೆಯಲೆಂದು ಆಶಿಸಬಹುದೇ?'

'ನನ್ನನ್ನು ಸಂಪರ್ಕಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು. ತಮ್ಮ ಸಮಾಜ ಸೇವೆಯ ಬಗ್ಗೆ ನಾನು ಮಾಧ್ಯಮಗಳಲ್ಲಿ ಹಲವಾರು ಬಾರಿ ಓದಿದ್ದೇನೆ. ನನ್ನ ಸ್ನೇಹಿತರಾದ ಡಾ. ಕಿರಣರವರು ತಮ್ಮ ಸಂಶೋಧನಾ ಕಾರ್ಯದ  ಬಗ್ಗೆ ನನಗೆ ತಿಳಿಸಿದ್ದಾರೆ. ತಮ್ಮ ಮಾರ್ಗನಿರ್ದೇಶನಕ್ಕಾಗಿ ನನ್ನನ್ನು ಸಂಪರ್ಕಿಸಿದ್ದು ನನಗೆ ಹೆಮ್ಮೆಯ ವಿಷಯ. 

ನಾನೇನು ವೈದ್ಯನಲ್ಲ. ಆದರೂ ಸಮಸ್ಯೆಯ ಅರಿವು ನನಗಿದೆ. ಎಲ್ಲಾ ಮಾಧ್ಯಮಗಳೂ ಕೋವಿಡ್ ಸಮಸ್ಯೆಯನ್ನು ಅತಿರಂಜಿತವಾಗಿ ಬಣ್ಣಿಸುತ್ತಿವೆ. ಆ ರೀತಿಯ ಬಣ್ಣನೆಯಿಂದ ಜನರುಗಳು ಭಯಭೀತರಾಗುವುದಿಲ್ಲವೇ? ಟಿ.ಆರ್.ಪಿ. (TRP) ಹೆಚ್ಚಿಸಿಕೊಳ್ಳುವುದೊಂದೇ ಮಾಧ್ಯಮಗಳ ವ್ಯಾಪಾರವಾಗಿ ಹೋಗಿದೆ. "ಎಲ್ಲಾ ಮಾಧ್ಯಮಗಳಲ್ಲಿ ಕೋವಿಡ್ ಕುರಿತಾದ ಎಲ್ಲಾ ಕಾರ್ಯಕ್ರಮಗಳನ್ನು ಮತ್ತು ಸುದ್ದಿ ಪ್ರಸಾರಗಳನ್ನೂ ಎರಡು ತಿಂಗಳುಗಳ ಕಾಲ ನಿಷೇಧಿಸಿದರೆ, ಕೋವಿಡ್ ಸಮಸ್ಯೆಯನ್ನು ಹತ್ತಿಕ್ಕುವಲ್ಲಿ ಭಾರಿ ಮುನ್ನಡೆ ದೊರೆಯಬಹುದೆಂಬುದು" ಕೆಲವು ಮನಶ್ಯಾಸ್ತ್ರಜ್ಞರ ಅಭಿಪ್ರಾಯವಾಗಿದೆ." ಮತ್ತೆ ಕೆಲವರು ಹೇಳುವ ಪ್ರಕಾರ, ಮಾಧ್ಯಮಗಳು ವಿಷಯವನ್ನು ಕೊಂಚ ವೈಭವೀಕರಿಸಿ ಸರಕಾರ ಮತ್ತು ಜನರಗಳನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿವೆ" ಎಂಬುದಾಗಿದೆ. ಟಿ.ವಿ.ಗಳಲ್ಲಿ ಇಷ್ಟೆಲ್ಲ ಎಚ್ಚರಿಕೆಯ ಸಂದೇಶಗಳನ್ನು ಸತತವಾಗಿ ನೀಡುತ್ತಿದ್ದರೂ, ಎಗ್ಗಿಲ್ಲದೆ ಸಾಗಿರುವ ಜನರುಗಳ ಮೋಜು-ಮಸ್ತಿ ಮಾತ್ರ ವಿಷಾದಕರ. 

ಜನರುಗಳ ಮನಸ್ಸಿನಲ್ಲಿ ಕೋವಿಡ್ ಬಗೆಗಿನ ಭಯವನ್ನು ನಿವಾರಿಸಿ, ವಿಶ್ವಾಸವನ್ನು ಮೂಡಿಸುವ ಕಾರ್ಯ ಮೊದಲು ನಡೆಯಬೇಕು. "ಧೈರ್ಯಮ್ ಸರ್ವತ್ರ ಸಾಧನಂ" ಎಂಬ ಸಂಸ್ಕೃತ ಭಾಷೆಯ  ಮಾತನ್ನು ತಮಗೆ ನೆನಪಿಸಲಿಚ್ಛಿಸುತ್ತೇನೆ. ಜನರುಗಳಲ್ಲಿ ಮೂಡಿರುವ ಭಯದ ವಾತಾವರಣವೂ ಕೋವಿಡ್ ತೀವ್ರವಾಗಿ ಹರಡಲು ಕಾರಣ ಎಂಬುದು ಸತ್ಯ. ವೈದ್ಯರು ಮತ್ತು ಮನಶ್ಯಾಸ್ತ್ರಜ್ಞರು ಸಂಶೋಧಿಸಿ ಪ್ರತಿಪಾದಿಸುತ್ತಿರುವ  "ಸೈಕೊನ್ಯೂರೋಇಮ್ಮ್ಯೂನೊಲೊಜಿ (psychoneuroimmunology)" ಎಂಬುದೊಂದು  ಹೊಸ ವಿಜ್ಞಾನದ ಕವಲು. ಅದರ ಪ್ರಕಾರ, ಜನರುಗಳ ಮಾನಸಿಕ ಭಯ ಅವರುಗಳ ರೋಗ ನಿರೋಧಕ ಶಕ್ತಿಯನ್ನು ಬಹಳಷ್ಟು ಕುಂದಿಸಬಲ್ಲದು ಎನ್ನುತ್ತದೆ. ಕೋವಿಡ್ ಮಹಾಮಾರಿಯೂ ಬಹಳ ದಿನ ನಮ್ಮನ್ನು ಕಾಡದು ಮತ್ತು ಅದು ತನಗೆ ತಾನೇ ದುರ್ಬಲಗೊಳ್ಳುವುದು ಪ್ರಕೃತಿಯ ವಿಧಾನವೆಂಬ  ಧೈರ್ಯವನ್ನು ಜನರುಗಳಲ್ಲಿ ಮೂಡಿಸಬೇಕಾದ ಅವಶ್ಯಕತೆ ಇದೆ.' 

 ಡಾ. ದಿವಾಕರರ ವಿಷಯ ಧಾರೆ ರೋಹಿಣಿಯ ಸಂಶೋಧನಾ ಕಾರ್ಯಕ್ಕೆ ಒಂದು ಹೊಸ ಆಯಾಮವನ್ನು ತೋರಿಸಿಕೊಟ್ಟಂತಾಗಿದ್ದು ಸುಳ್ಳಲ್ಲ. 

'ಹೌದು, ಜನರುಗಳ ಭಯವನ್ನು ನಿವಾರಿಸಿ, ಅವರುಗಳ ಮನಃಸ್ಥಿತಿಯನ್ನು ಸುಧಾರಿಸಬೇಕಾದ ತುರ್ತು ಅವಶ್ಯಕತೆ ಇದೆ. ಆ ಕಾರ್ಯ ಹೇಗಾಗಬೇಕು?' ಎಂಬುದು ರೋಹಿಣಿಯ ಪ್ರಶ್ನೆಯಾಗಿತ್ತು.

'ರೋಹಿಣಿಯವರೇ, ಕೋವಿಡ್ ಎಂಬುದು ಮನುಕುಲ ಎದುರಿಸುತ್ತಿರುವ ಮೊದಲ ಮಹಾಮಾರಿಯಲ್ಲ. ನಮ್ಮ ಪ್ರಪಂಚ ಕೋವಿಡ್ಗಿಂತ ಭಯಂಕರವಾದ ಮಹಾಮಾರಿಯನ್ನು ಎದುರಿಸಿ ಬದುಕುಳಿದಿದೆ. ಹೌದು, "ಸ್ಪ್ಯಾನಿಷ್ ಫ್ಲೂ - ೧೯೧೮ (Spanish Flu - 1918)"ರ ಪ್ರಸ್ತಾಪವನ್ನು ನಾನು ಮಾಡುತ್ತಿದ್ದೇನೆ. ೧೯೧೮-೨೦ರ ಅವಧಿಯಲ್ಲಿ ವಿಶ್ವವನ್ನು ವ್ಯಾಪಿಸಿದ ಆ ಮಹಾಮಾರಿ ೫ ಕೋಟಿಯಷ್ಟು ಜನರುಗಳ ಪ್ರಾಣವನ್ನು ಹರಣ ಮಾಡಿತ್ತು ಎಂಬುದು ತಮಗೆ ತಿಳಿದಿದೆಯೇ? ೧೯೧೮ರ ಮಹಾಮಾರಿ ನಮ್ಮ ಭಾರತ ದೇಶದ ಪಾಲಿಗೆ ಮಾರಕವಾಗಿ, ನಮ್ಮ ೧. ೫ ಕೋಟಿ ಜನರುಗಳ ಪ್ರಾಣಗಳನ್ನು ತೆಗೆದಿತ್ತು. ತಮ್ಮ ಸಂಶೋಧನಾ ಪ್ರಬಂಧದಲ್ಲಿ ೧೯೧೮ರ ಮಹಾಮಾರಿಯನ್ನು ಪ್ರಸ್ತಾಪಿಸಲೇ ಬೇಕು. ಆ ಕಾಲದ ಕುತೂಹಲಕಾರಿ ಘಟನೆಯ ಕತೆಯೊಂದನ್ನು ನಾನು ಕಳುಹಿಸುತ್ತಿದ್ದೇನೆ. ಆ ಕತೆಯನ್ನೋದಿದರೆ, ತಮಗೆ ಸ್ಪ್ಯಾನಿಷ್ ಫ್ಲೂ - ೧೯೧೮ರ ಮಹಾಮಾರಿಯ ಬಗ್ಗೆ ಹೆಚ್ಚು ಅಧ್ಯಯನ ನಡೆಸುವ ಆಸಕ್ತಿ ಮೂಡುತ್ತದೆ ಎಂದು ಭಾವಿಸುತ್ತೇನೆ.' ಹೀಗಿದ್ದ ಡಾ. ದಿವಾಕರವರ ಮಾತುಗಳನ್ನು ಕೇಳಿದ ರೋಹಿಣಿಯ ಸಂಶೋಧನೆಯ ಉತ್ಸಾಹ ಇಮ್ಮಡಿಯಾಗಿತ್ತು. 

ದಿವಾಕರ್ ರವರು ಕಳುಹಿಸಿದ ಸ್ಪ್ಯಾನಿಷ್ ಫ್ಲೂ - ೧೯೧೮ರ ಸಮಯದ ಕತೆಯನ್ನು ಕುತೂಹಲದಿಂದ ರೋಹಿಣಿ ಓದ ಹತ್ತಿದ್ದಳು. .

ಅದಿತಿ ಜೋಗಳೇಕರ್ ೧೭ರ ಯುವತಿ. ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದ ಕಟ್ಟಾ ಅಭಿಮಾನಿ ಅವಳಾಗಿದ್ದಳು. ಅಂದು ಫೆಬ್ರವರಿ ೨೮ರ ದಿನವಾಗಿತ್ತು. ಅಂದು ಅದಿತಿಯ ಅಜ್ಜಿ ಸುಲಭ ಜೋಗಳೇಕರ್ ರವರ ಜನ್ಮದಿನವಾಗಿತ್ತು. ಸುಲಭರವರೇ ಅದಿತಿಯ ಮೊದಲ ಸಂಗೀತ ಗುರುಗಳಾಗಿದ್ದವರು. ತನ್ನಜ್ಜಿಯ ಜನ್ಮದಿನವಾದ ಅಂದು ಅದಿತಿಯ ನೆನಪಿನ ಲಹರಿ ತನ್ನಜ್ಜಿಯ ಜೀವನದ ವೃತ್ತಾಂತಗಳ ಕಡೆ ಹರಿದಿತ್ತು. 

ಪಾದರಸದಂತೆ ಚುರುಕಾದ ಸುಲಭ, ಹಲವು ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು. ಶಾಸ್ತ್ರೀಯ ಗಾಯನದ ಜೊತೆಗೆ, ಚಿತ್ರಕಲೆ, ಬಟ್ಟೆ ಹೊಲಿಗೆ ಮತ್ತು ಕಸೂತಿಯ ಕೆಲಸಗಳಲ್ಲಿ ಅವರು ಸಿದ್ಧಹಸ್ತೆಯಾಗಿದ್ದರು. ಸುಲಭಳಿಗೆ ಕಪ್ಪು ಮೊಲಗಳೆಂದರೆ ಪಂಚಪ್ರಾಣ. ಆಕೆ ಸಾಯುವ ಕೆಲವು ದಿನಗಳ ಮುಂಚೆ ಅವರು ಕಪ್ಪು ಮೊಲವೊಂದನ್ನು ತರಿಸಿ ಸಾಕಿಕೊಂಡಿದ್ದರು. ಬಹಳ ಆಕರ್ಷಕವಾದ ಆ ಕಪ್ಪು ಮೊಲಕ್ಕೆ ಸುಲಭ, 'ಶಾಲು' ಎಂದು ಹೆಸರಿಟ್ಟಿದ್ದರು. ಸುಲಭರವರ ಕಡೆಯ ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಿರುವಾಗ, ಶಾಲುವೇ ಅವರ ಏಕೈಕ ಸಂಗಾತಿಯಾಗಿತ್ತು. 'ಶಾಲು' ಸುಲಭರಿಗೆ ಸುಮಾರು ಒಂದು ಶತಮಾನದ ಹಳೆಯ ನೆನಪನ್ನು ಸ್ಮರಿಸುವಂತೆ ಮಾಡಿತ್ತು. 

ಸುಲಭ ಜೋಗಳೇಕರ್ ಜನಿಸಿದ್ದು ೧೯೦೯ರಲ್ಲಿ. ಅವಳ ತಂದೆ ದೀನನಾಥ್ ರವರು ಕೈಮಗ್ಗದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸುಲಭ ಸುಮಾರು ೭ ವಯಸ್ಸಿನವಳಾಗಿದ್ದಾಗ ಅವಳ ತಾಯಿ ಅವಳಿಗೊಂದು ಕಪ್ಪು ಮೊಲವನ್ನು ತಂದು ಕೊಟ್ಟಿದ್ದರು. ಸುಲಭ ತನ್ನ ಕಪ್ಪು ಮೊಲಕ್ಕೆ ನೀಡಿದ್ದ ಹೆಸರು, ಅಂದು ಕೂಡ 'ಶಾಲು' ಎಂಬುದಾಗಿತ್ತು. ಸುಲಭ ತನ್ನ ಮೊಲ ಶಾಲುವಿನೊಂದಿಗೆ ಎರಡು ವರ್ಷ ಖುಷಿಯಿಂದಲೇ ಬೆಳೆದಿದ್ದಳು. ಆದರೆ ಸುಲಭಳ ತಂದೆ ದೀನನಾಥರಿಗೆ ಸಾಕು ಪ್ರಾಣಿಗಳ ಮೇಲೆ ದ್ವೇಷವಿತ್ತು. ಸುಲಭಳ ಮೇಲಿನ ಪ್ರೀತಿಗಾಗಿ ಮಾತ್ರ ಅವರು ಶಾಲುವಿನ ತುಂಟಾಟಗಳನ್ನು ಹೇಗೋ ಸಹಿಸಿಕೊಂಡಿದ್ದರು. ಈ ನಡುವೆ ಯಾರೋ ದೀನನಾಥರ ಕಿವಿಗೆ ಚಾಡಿಯೊಂದನ್ನು ಚುಚ್ಚಿದ್ದರು. ಕಪ್ಪು ಮೊಲ ಮನೆಗೆ ಕೆಡಕು ತರಬಹುದೆಂದು ನಂಬಿದ್ದ ಅವರು, ಒಂದು ದಿನ ಶಾಲುವನ್ನು ಎತ್ತಿಕೊಂಡು ಹೋಗಿ ಸಮೀಪದ ಕಾಡೊಂದರಲ್ಲಿ ಬಿಟ್ಟು ಬಂದಿದ್ದರು. ಶಾಲುವನ್ನು ಕಳೆದುಕೊಂಡ ಚಿಕ್ಕ ಹುಡುಗಿ ಬಹಳ ನೊಂದು ಹೋಗಿದ್ದಳು. 

೧೯೧೮ರ ಆಗಸ್ಟ್ ತಿಂಗಳು ಶುರುವಾಗಿತ್ತು. ಸುಲಭಳಿಗೆ ಆಗ ೯ ವರ್ಷಗಳು ತುಂಬಿದ್ದವು. ತನ್ನ ಮೂವರು  ಅಕ್ಕಂದಿರೊಂದಿಗೆ ಸುಲಭ, ಶಾಲೆಯಿಂದ ಹಿಂತಿರುಗುತ್ತಿದ್ದ ಸಮಯದಲ್ಲಿ ಭಾರೀ ಮಳೆಯೊಂದು ಬಂದಿತ್ತು. ನಾಲ್ಕೂ ಜನ ಅಕ್ಕ-ತಂಗಿಯರು ಮನೆ ತಲುಪುವ ಹೊತ್ತಿಗೆ ನೆಂದು ತೊಪ್ಪೆಯಾಗಿದ್ದರು. ದಪ್ಪವಾದ ಬಟ್ಟೆಯೊಂದರಿಂದ ಎಲ್ಲಾ ನಾಲ್ಕು  ಹೆಣ್ಣು ಮಕ್ಕಳ ಕೂದಲುಗಳನ್ನು ಸುಲಭಳ ತಾಯಿ ಒರೆಸಿ, ಊಟವನ್ನು ಉಣಿಸಿ ಮಲಗಿಸಿದ್ದರು. ಬೆಳಗಾಗುವ ಹೊತ್ತಿಗಾಗಲೇ ಸುಲಭಳ ಮೂರು ಅಕ್ಕಂದಿರಿಗೂ ಜ್ವರವೇರಿತ್ತು. ಗಾಬರಿಯಾದ ದೀನನಾಥರು,  ಪಕ್ಕದ ಮನೆಯ  ಪಂಡಿತರನ್ನು ತಮ್ಮ ಮನೆಗೆ ಕರೆಸಿದ್ದರು. ಸಹೋದರಿಯರನ್ನು ಪರೀಕ್ಷಿಸಿದ ಪಂಡಿತರು ಕೆಲವು ಔಷಧಿಗಳನ್ನು ಕೊಟ್ಟಿದ್ದರು. 'ಸುತ್ತಲ ಹಳ್ಳಿಗಳಲೆಲ್ಲಾ ವಿಚಿತ್ರ ಜ್ವರವೊಂದು ಜನರನ್ನು ಕಾಡುತ್ತಿದೆ. ಜ್ವರ ಬಡಪೆಟ್ಟಿಗೆ ಇಳಿಯುತ್ತಿಲ್ಲ. ಆ ರೀತಿಯ ವಿಚಿತ್ರ ಜ್ವರ ಮುಂಬೈ ಮೂಲಕ ಹಿಂತಿರುಗುತ್ತಿರುವ ಮೊದಲ ಮಹಾಯುದ್ಧದ ಭಾರತೀಯ  ಸೈನಿಕರುಗಳಿಂದ ಹರಡುತ್ತಿದೆಯೆಂಬ ವದಂತಿಯಿದೆ.ಆದುದರಿಂದ ಆ ರೀತಿಯ ರೋಗವನ್ನು "ಬಾಂಬೆ ಜ್ವರ" ಎಂದೇ ಜನರು ಕರೆಯುತ್ತಿದ್ದಾರೆ. ಸರಕಾರ ರೋಗವನ್ನು 'ಸ್ಪ್ಯಾನಿಷ್ ಫ್ಲೂ' ಎಂದು ಕರೆದು, ಅದು ಬೇಗನೆ ಹರಡುತ್ತಿದ್ದು, ಜನರುಗಳಿಗೆ ಮಾರಕವಾಗಿದೆ ಎಂದು ಡಂಗೂರ ಹೊಡೆಸುವ ಮೂಲಕ ಜನರುಗಳನ್ನು ಎಚ್ಚರಿಸುತ್ತಿದೆ.  ಯಾವುದಕ್ಕೂ ಹುಷಾರಾಗಿರಿ' ಎಂದು ಪಂಡಿತರು, ದೀನನಾಥರಿಗೆ ತಿಳಿಸಿದ್ದರು. 

ಹಲವು ದಿನಗಳು ಕಳೆದರು ಸುಲಭಳ ಸಹೋದರಿಯರ ಜ್ವರ ಕಮ್ಮಿಯಾಗಲಿಲ್ಲ. ಮುಂದಿನ ಎರಡು ದಿನಗಳಲ್ಲಿ ಅವರುಗಳ ಮೂಗಿನ ಮೂಲಕ ರಕ್ತದ ಸೋರುವಿಕೆ ಶುರುವಾಗಿತ್ತು. ಮೂವರು ಸಹೋದರಿಯರಿಗೂ ಊಸಿರಾಡುವುದು ಕಷ್ಟವಾಗುತ್ತಿತ್ತು. ಅದೇ ವಾರದಲ್ಲಿ ದೀನನಾಥರಿಗೂ ಅದೇ ರೀತಿಯ ಜ್ವರ ಬಂದು ಹಾಸಿಗೆ ಹಿಡಿದಿದ್ದರು. 'ಬಾಂಬೆ ಜ್ವರ' ಹಳ್ಳಿಯ ಹಲವರಿಗೆ ತಗುಲಿ ಜನರುಗಳಲ್ಲಿ ಗಾಬರಿಯನ್ನುಂಟು ಮಾಡಿತ್ತು. ಇಡೀ ಹಳ್ಳಿಯ ಜನರುಗಳು ಚಿಕಿತ್ಸೆಗಾಗಿ ಪಂಡಿತರನ್ನು ಮಾತ್ರ ನಂಬಿದ್ದರು. ರೋಗಸ್ಥರ ಎಲ್ಲ ಮನೆಗಳಿಗೂ ಭೇಟಿ ನೀಡುತ್ತಿದ್ದ ಪಂಡಿತರು, ಎಲ್ಲಾ ರೋಗಿಗಳಿಗೂ, ತಾವೇ ತಯಾರಿಸಿದ  ಔಷಧಿಗಳನ್ನು ಕೊಡುತ್ತಿದ್ದರು. 'ರೋಗಿಗಳು ಹಾಗೂ ರೋಗವಿನ್ನೂ ಬಾರದವರೂ ಪ್ರತಿನಿತ್ಯ ೩-೪ ಬಾರಿ ಹಬೆಯನ್ನು ತೆಗೆದುಕೊಳ್ಳಬೇಕು. ಕೊಂಚ ಅರಿಶಿನ ಹಾಕಿ ಕುದಿಸಿದ ಬಿಸಿ ನೀರನ್ನೇ ಹೆಚ್ಚು ಕುಡಿಯಬೇಕು. ಶಕ್ತಿಯಿದ್ದವರು ಪ್ರತಿದಿನ ೩೦ ನಿಮಿಷಗಳಷ್ಟು ಕಾಲ ಸೂರ್ಯನ ಬೆಳಕಿನಲ್ಲಿ ವಾಯು ವಿಹಾರವನ್ನು ಮಾಡಬೇಕು. ರೋಗ ಬೇಗ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ, ಜನರುಗಳ ಮಧ್ಯೆ ೬ ಅಡಿಗಳ ಅಂತರವನ್ನು ಕಾಪಾಡಿಕೊಳ್ಳಬೇಕು, ಗುಂಪು ಗೂಡಬಾರದು. ಎಲ್ಲರೂ ಪ್ರತಿದಿನ ೮ ಘಂಟೆಯಷ್ಟರ ದೀರ್ಘ ನಿದ್ದೆಯನ್ನು ಮಾಡಬೇಕು. ನಿದ್ದೆ ಮಾನವನ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ,' ಎಂಬುದಾಗಿತ್ತು, ಪಂಡಿತರು ಹಳ್ಳಿಗರಿಗೆ ನೀಡುತ್ತಿದ್ದ ಸೂಚನೆಗಳ ಪಟ್ಟಿ. 

'ದೇವರಲ್ಲಿ ವಿಶ್ವಾಸವಿಡಿ.  ನಂಬಿಕೆಯನ್ನು ಕಳೆದುಕೊಳ್ಳದೆ ದಿನನಿತ್ಯ ದೇವರ ಪ್ರಾರ್ಥನೆಯನ್ನು ಮಾಡಿ. ನಂಬಿಕೆ ಮತ್ತು ವಿಶ್ವಾಸಗಳಿಗೆ ರೋಗವನ್ನು ತಡೆಯುವ ಮತ್ತು ನಿವಾರಿಸುವ ಮಹಾಶಕ್ತಿಯಿದೆ. ನಂಬಿಕೆಯಿಂದ ಪ್ರಾರ್ಥನೆ, ಪ್ರಾರ್ಥನೆಯಿಂದ ಮನಃಶಾಂತಿ ಮತ್ತು ಸ್ಥೈರ್ಯಗಳು ವೃದ್ಧಿಯಾಗುತ್ತವೆ. ವೈದ್ಯರು ಮತ್ತು ರೋಗಿಗಳ ನಡುವಿನ ವಿಶ್ವಾಸ ಔಷಧಿಗಳ ಪರಿಣಾಮವನ್ನು ಹೆಚ್ಚಿಸಿ ರೋಗವನ್ನು ನಿವಾರಿಸಬಲ್ಲುದು.' ಹೀಗಿದ್ದ ಪಂಡಿತರ ಮಾತುಗಳಲ್ಲಿ, ಹಳ್ಳಿಗರಿಗೆಲ್ಲ ಅಪಾರವಾದ ಗೌರವ ಮತ್ತು ವಿಶ್ವಾಸಗಳು ಇದ್ದವು. ಆದುದರಿಂದ ಅವರೆಲ್ಲರೂ ಪಂಡಿತರ ಹಿತವಚನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. 

ಪಂಡಿತರ ಪ್ರಾಮಾಣಿಕ ಚಿಕಿತ್ಸೆ ಹೀಗೇ ಮುಂದುವರೆದಿದ್ದರೂ ರೋಗದ ತೀವ್ರತೆ ಕಮ್ಮಿಯೇನಾಗಿರಲಿಲ್ಲ. ತನ್ನ ಪತಿಯನ್ನು ಮತ್ತು ಮಕ್ಕಳನ್ನು ಕಳೆದು ಕೊಂಡುಬಿಡುತ್ತೀನೇನೋ ಎಂಬ ಭೀತಿ ಸುಲಭಳ ತಾಯಿಯನ್ನು ಕಾಡ  ಹತ್ತಿತ್ತು. ಮುಗ್ಧ ಮನಸ್ಸಿನ ಸುಲಭಳಂದು ಅವಳಮ್ಮನಿಗೆ ಹೀಗೆ ಹೇಳಿದ್ದಳು. 'ಅಮ್ಮ, ನನ್ನ ಮುದ್ದಿನ ಕಪ್ಪು ಮೊಲ  "ಶಾಲು"ವನ್ನು ಮನೆಯಿಂದ ಕಾಡಿಗೆ ಕಳಿಸಿದ್ದು ನಮ್ಮೆಲ್ಲರಿಗೂ ದುರದೃಷ್ಟವನ್ನು ತಂದಿದೆ.' ಸುಲಭಳ ಅನಿಸಿಕೆಗೆ  ಅವಳ   ತಾಯಿಯಲ್ಲಿ ಯಾವುದೇ ಉತ್ತರವಿರಲಿಲ್ಲ. ಇಡೀ ಹಳ್ಳಿಯಲ್ಲಿ ಜನರುಗಳ ನಡುವೆ ಭಯದ ವಾತಾವರಣ ಉಂಟಾಗಿತ್ತು. 

ಒಂದು ದಿನ ಸುಲಭ ತನ್ನ ತಾಯಿಯೊಂದಿಗೆ ಕಟ್ಟಿಗೆಯನ್ನು ತರಲು ಸಮೀಪದ ಕಾಡಿಗೆ ಹೋಗಿದ್ದಳು. ಸುತ್ತಲೂ ನೋಡುತ್ತಿದ್ದ ಸುಲಭಳಿಗೆ ತನ್ನ ಕಪ್ಪು ಮೊಲ 'ಶಾಲು'ವನ್ನು ಕಂಡಾಗ ಅವಳಿಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಛಂಗನೆ ನೆಗೆದು ಶಾಲು ಸುಲಭಳ ಕೈಸೇರಿತ್ತು. ಶಾಲುವನ್ನು ಮನೆಗೆ ಕರೆದುಕೊಂಡು ಹೋಗುವಾಗ ಸುಲಭ ಮತ್ತು ಅವಳ ತಾಯಿ, ಇಬ್ಬರ ಮನಸಿನಲ್ಲೂ ಸಮಾಧಾನ ಹಾಗೂ ಸಂತೋಷಗಳು ಮೂಡಿದ್ದವು. ಶಾಲು  ಮನೆಗೆ ಬಂದ ಮಾರನೆಯ ದಿನವೇ ದೀನನಾಥರ ಜ್ವರ ಇಳಿದಿತ್ತು. ಇನ್ನೆರಡು ದಿನಗಳಲ್ಲಿ ಸುಲಭಳ ಮೂವರು ಅಕ್ಕಂದಿರ ಜ್ವರವೂ ಸಾಕಷ್ಟು ಕಮ್ಮಿಯಾಗಿತ್ತು. ಮತ್ತೊಮ್ಮೆ ಸುಲಭಳ ಮನೆಯಲ್ಲಿ ನಗುವಿನ ವಾತಾವರಣ ಮೂಡಿತ್ತು. ಶಾಲು ಹಿಂತಿರುಗಿ ಮನೆಯನ್ನು ಸೇರಿದ್ದೇ, ಎಲ್ಲರೂ ಬೇಗನೆ ಹುಷಾರಾಗಲು ಕಾರಣವಾಯಿತು ಎಂದು ಬಾಲಕಿ ಸುಲಭ ತನ್ನ ತಂದೆಗೆ ಹೇಳಿದಾಗ, ದೀನನಾಥರೂ ಹೌದೆಂಬಂತೆ ಗೋಣಾಡಿಸಬೇಕಾಗಿತ್ತು. 

ಇಡೀ ಹಳ್ಳಿಯಲ್ಲಿ ರೋಗದ ವಾತಾವರಣ ಮಾಯವಾಗಿತ್ತು. ನತದೃಷ್ಟ ಮೂರು ರೋಗಿಗಳು ಮಾತ್ರ ಸಾವನ್ನಪ್ಪಿದ್ದರು. 'ಆಧುನಿಕ ಚಿಕಿತ್ಸಾ ಕ್ರಮಗಳು ಗೊತ್ತಿಲ್ಲದ ಅಂದಿನ ದಿನಗಳಲ್ಲಿ, ಹಳ್ಳಿಯ ಬಡ ಪಂಡಿತರೊಬ್ಬರ ಸರಳ ಹಾಗು ಪ್ರಾಕೃತಿಕ  ಚಿಕಿತ್ಸೆ ಇಡೀ ಹಳ್ಳಿಗರನ್ನು ಮಹಾಮಾರಿಯಿಂದ ರಕ್ಷಿಸಿತ್ತು. 'ಪಂಡಿತರು ಭೋಧಿಸಿದ್ದ "ಪ್ರಾರ್ಥನೆ ಮತ್ತು ವಿಶ್ವಾಸ"ಗಳೆಂಬ ಮಹಾಮಂತ್ರಗಳು  ಫಲ ನೀಡಿದ್ದವು.' ಅಂದಿನ ಆ ಪ್ರಾಂತ್ಯದ ಮಹಾರಾಜರು, ಮಹಾಮಾರಿಯಿಂದ ಹಳ್ಳಿಗರ ಜೀವಗಳನ್ನುಳಿಸಿದ ಆ ಪಂಡಿತರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ್ದರು. ಪಂಡಿತರನ್ನು ತಮ್ಮ ಅರಮನೆಗೆ ಕರೆಸಿ ಅವರಿಗೆ  ಅದ್ಧೂರಿಯ  ಸನ್ಮಾನವನ್ನೂ ಮಾಡಿದ್ದರು. 

'೨೪X೭ರ ಕೋವಿಡ್ ಕುರಿತಾದ ಸತತ ನಕಾರಾತ್ಮಕ ಸುದ್ದಿಯನ್ನು ಮಾಧ್ಯಮಗಳ ಮೂಲಕ ಕೇಳಿ ಬೆಂಡಾಗಿರುವ ನಮಗೆ ಡಾ. ದಿವಾಕರ್ ರವರು ತಿಳಿಸಿರುವ ಸತ್ಯಕತೆಯಿಂದ ಸ್ಫೂರ್ತಿ ದೊರೆಯುವುದಿಲ್ಲವೇ? ಮನೋಬಲವನ್ನು ಕುಗ್ಗಿಸುವ ಮಾಧ್ಯಮಗಳ ನಕಾರಾತ್ಮಕ ಸುದ್ದಿಗಳಿಂದ ದೂರವಿರುವುದು, ಮಹಾಮಾರಿಯ ಭಯದಿಂದ ನಾವು ಹೊರಬರಲು ಸಹಾಯವನ್ನು ಮಾಡೀತೇ?' ಎಂದು ಸಂಶೋಧಕಿ ರೋಹಿಣಿ ಅಂದು ತನ್ನ ಡೈರಿಯಲ್ಲಿ ಟಿಪ್ಪಣಿ ಬರೆದುಕೊಂಡಿದ್ದಳು. 

***

ರೋಹಿಣಿಗೀಗ ೧೯೧೮ರ 'ಸ್ಪ್ಯಾನಿಷ್ ಫ್ಲೂ'ವಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಸಂಗ್ರಹಿಸುವ ಕುತೂಹಲ ಉಂಟಾಗಿತ್ತು. ವಿಶ್ವ ಈವರೆಗೆ ಕಂಡ ಮಹಾಮಾರಿಗಳಲ್ಲಿ ಅದು ಅತ್ಯಂತ ಮಾರಕವಾದುದ್ದಾಗಿತ್ತು. ಒಂದು ಸಮೀಕ್ಷೆಯ ಪ್ರಕಾರ ೧೯೧೮-೨೦ರಲ್ಲಿ ಇಡೀ ವಿಶ್ವವನ್ನೇ ಆವರಿಸಿದ್ದ ಆ ಮಹಾಮಾರಿ ೫ ಕೋಟಿಯಷ್ಟು ಜನರುಗಳ ಪ್ರಾಣಗಳನ್ನು ಹರಣ ಮಾಡಿತ್ತು. ಬಡ ಭಾರತದ ಮೇಲೆ ಅದರ ಪರಿಣಾಮ ಬಹಳ ಕ್ರೂರವಾಗಿತ್ತು. ಭಾರತದಲ್ಲೇ  ಸುಮಾರು ೧. ೫ ಕೋಟಿಯಷ್ಟರ ಸಾವುಗಳಾಗಿದ್ದವು. ಸಾವುಗಳ ಪಟ್ಟಿಯಲ್ಲಿ ಭಾರತದ್ದು ಪ್ರಥಮ ಸ್ಥಾನ ಎಂಬ ಕುಖ್ಯಾತಿ ನಮ್ಮ ದೇಶಕ್ಕೆ ಅಂಟಿತ್ತು. 

೧೯೧೮ರ ಮಹಾಮಾರಿಯ ಬಗ್ಗೆ ಈಗಲೂ ಸಂಶೋಧನೆ ನಡೆಸುತ್ತಿರುವ ಕೆಲವು ವಿಜ್ಞಾನಿಗಳ ಪ್ರಕಾರ, ಅಂದಿನ ಮಹಾಮಾರಿ ಮೊದಲು ಕಾಣಿಸಿಕೊಂಡಿದ್ದು ಅಮೇರಿಕಾದಲ್ಲಿ. 'ಎಚ್೧ಎನ್೧ ಇನ್ಫ್ಲುಯೆಂಜಾ ಎ'  (H1N1 Influenza A) ಎಂಬ ವೈರಾಣುವಿನಿಂದ ಆ ರೋಗ ಹರಡಿತ್ತು. ಅದೇ ವೈರಾಣುವಿನಿಂದ ೨೦೦೯ರಲ್ಲಿ 'ಸ್ವೈನ್ ಫ್ಲೂ (Swine Flu)' ಎಂಬ ರೋಗವು ಹರಡಿದ್ದನ್ನು ಇಲ್ಲಿ ಸ್ಮರಿಸಬಹುದು. ೧೯೧೮ರ ಅಂದಿನ ಮಹಾಮಾರಿ ಎರಡು ವರ್ಷಗಳ ಕಾಲ ಮುಂದುವರೆದಿತ್ತು. ಅಂದಿನ ವಿಶ್ವದ ಜನಸಂಖ್ಯೆಯ ಮೂರನೇ ಒಂದರಷ್ಟು, ಅಂದರೆ ಸುಮಾರು ೫೦ ಕೋಟಿ ಜನರು ಆ ವೈರಾಣುವಿನಿಂದ ಸೋಂಕಿತರಾಗಿದ್ದರು! ೫ ಕೋಟಿಯಷ್ಟು ಜನರುಗಳ ಸಾವಿಗೆ ಕಾರಣವಾದ ಆ ಸ್ಪ್ಯಾನಿಷ್ ಫ್ಲೂ ಎಂಬ ಮಹಾಮಾರಿ ಮೊದಲನೇ ಮಹಾಯುದ್ಧ(೧೯೧೪-೧೮)ದಲ್ಲಿ ಮಡಿದ ಜನರುಗಳ ಸಂಖ್ಯೆಗಿಂತ  ಹೆಚ್ಚು ಸಾವನ್ನುಂಟು ಮಾಡಿತ್ತು. ಮೊದಲನೇ ಮಹಾಯುದ್ಧದಲ್ಲಿ ೯೦ ಲಕ್ಷ ಸೈನಿಕರು ಮತ್ತು ೭೦ ಲಕ್ಷದಷ್ಟು ನಾಗರೀಕರು   ಸಾವನ್ನಪ್ಪಿದ್ದರು. 

೧೯೧೮ರ ಮಧ್ಯ ಭಾಗದಲ್ಲಿ, ಅಮೇರಿಕಾದಲ್ಲಿ ಮೊದಲು ಕಾಣಿಸಿಕೊಂಡಿದ್ದ ಆ ಮಹಾಮಾರಿ ನಂತರ ಯುರೋಪ್ ಖಂಡಕ್ಕೂ ಹರಡಿತ್ತು. ಮೊದಲನೇ ಮಹಾಯುದ್ಧದ ಬೆನ್ನಲ್ಲೇ ವ್ಯಾಪಿಸಿದ್ದ ಆ ರೋಗದ ಮಾಹಿತಿಯನ್ನು ವ್ಯಾಪಕವಾಗಿ ಬಹಿರಂಗ ಪಡಿಸುವ ಇಚ್ಛೆ ಅಂದಿನ ಬೃಹತ್ ರಾಷ್ಟ್ರಗಳಿಗಿತ್ತಿಲ್ಲ.  ಆದರೆ ಮೊದಲ ಮಹಾಯುದ್ಧದಲ್ಲಿ ಸಕ್ರಿಯವಾಗಿರದಿದ್ದ ಸ್ಪೇನ್ ದೇಶ ಮಾತ್ರ ಯಾವುದೇ ಮುಚ್ಚುಮರೆಯಿಲ್ಲದೆ, ರೋಗದ ಹಾಗೂ ಸಾವಿನ ಮಾಹಿತಿಗಳನ್ನು ಬಹಿರಂಗ ಪಡಿಸಿತ್ತು. ಆದುದರಿಂದ ವಿಶ್ವಾದ್ಯಂತ ಜನರು ಆ ಮಹಾಮಾರಿಯನ್ನು  'ಸ್ಪ್ಯಾನಿಷ್ ಫ್ಲೂ-೧೯೧೮ (Spanish Flu - 1918)' ಎಂದು ಗುರುತಿಸಿದ್ದರು. 

ಒಂದು ಸಂಶೋಧನೆಯ ಪ್ರಕಾರ, ಸ್ಪ್ಯಾನಿಷ್ ಫ್ಲೂ - ೧೯೧೮ರ ವೈರಾಣು, ಮೊದಲು ಹಕ್ಕಿಗಳಲ್ಲಿ ಕಾಣಿಸಿಕೊಂಡಿತ್ತು. ಅನಂತರ ಅದು ಕೋಳಿಗಳಿಗೆ ಮತ್ತು ಹಂದಿಗಳಿಗೆ ಹರಡಿತ್ತು. ಕೋಳಿ ಮತ್ತು ಹಂದಿಗಳ ಮಾಂಸಗಳನ್ನು ಮೊದಲನೇ ಮಹಾಯುದ್ಧದ ಸೈನಿಕರುಗಳಿಗೆ ನೀಡಿದಾಗ, ವೈರಾಣುವಿನಿಂದ ಸೈನಿಕರುಗಳು ಸೋಂಕಿತರಾದರು. ಯುದ್ಧ ಮುಗಿದ ಮೇಲೆ ಸೈನಿಕರುಗಳು, ತಮ್ಮೂರುಗಳಿಗೆ ಮರಳಿದಾಗ ವೈರಾಣು ವ್ಯಾಪಕವಾಗಿ ಹರಡ ತೊಡಗಿತು. ಮೃತ ಸೈನಿಕರುಗಳ ದೇಹವನ್ನು ಶವ ಸಂಸ್ಕಾರಕ್ಕಾಗಿ ಅವರೂರುಗಳಿಗೆ ತಂದಾಗಲೂ ವೈರಾಣು ತನ್ನ ಸೋಂಕನ್ನು ಹರಡುತ್ತಾ ಸಾಗಿತ್ತು. ಸೈನಿಕರುಗಳು ಹೆಚ್ಚಾಗಿ ಅಮೇರಿಕಾ ಮತ್ತು ಏಷ್ಯಾ  ಖಂಡಗಳಿಗೆ  ಸೇರಿದವರಾಗಿದ್ದರು. ಯುರೋಪ್ ಖಂಡದ ವಿವಿಧ ರಾಷ್ಟ್ರಗಳಿಗೂ ಭಾರಿ ಸಂಖ್ಯೆಯಲ್ಲಿ ಸೈನಿಕರುಗಳು ಮರಳಿದ್ದರು. 

ಸ್ಪ್ಯಾನಿಷ್ ಫ್ಲೂ - ೧೯೧೮ರ ರೋಗ ಲಕ್ಷಣಗಳು, ಕೋವಿಡ್-೧೯ರ ರೋಗ ಲಕ್ಷಣಗಳಂತೇ ಇತ್ತು. ಗಂಟಲ ಕೆರತ, ತಲೆನೋವು ಮತ್ತು ಜ್ವರದಂತಹ ಲಕ್ಷಣಗಳು ಮಾರ್ಚ್ ೧೯೧೮ರ ಮೊದಲನೇ ಅಲೆಯ ಸಮಯದಲ್ಲಿ ಕಾಣಿಸಿಕೊಂಡಿತ್ತು. ಮೊದಲನೇ ಅಲೆ ಹೆಚ್ಚು ತೀವ್ರವಾದುದಾಗಿರದೆ, ಅದರಿಂದ ಹೆಚ್ಚು ಸಾವು ನೋವುಗಳು ಉಂಟಾಗಲಿಲ್ಲ. ಆ ಹಂತದಲ್ಲಿ ಹೆಚ್ಚಾಗಿ ಇತರೆ ರೋಗಗಳಿಂದ ಪೀಡಿತರಾದವರು ಮತ್ತು ವಯೋವೃದ್ಧರು ಮೃತಪಟ್ಟಿದ್ದರು. ಆದರೆ ಅತ್ಯಂತ ಕ್ರೂರಿಯಾದ ಎರಡನೇ ಅಲೆಯು ಆಗಸ್ಟ್-೧೯೧೮ರ ಸಮಯಕ್ಕೆ ಕರಾಳವಾಗಿ ವ್ಯಾಪಿಸ ಹತ್ತಿತ್ತು. ಸೈನಿಕರು ಹಾಗೂ ಯುವಕರು ಅಪಾರ ಸಂಖ್ಯೆಯಲ್ಲಿ ಎರಡನೇ ಅಲೆಯ ಅವಧಿಯಲ್ಲಿ ಮೃತಪಟ್ಟರು. ೧೯೧೯ರಲ್ಲಿ ರೋಗದ ಮೂರನೇ ಅಲೆಯು ಮತ್ತು ೧೯೨೦ರ ಅವಧಿಯಲ್ಲಿ  ದುರ್ಬಲವಾದ ನಾಲ್ಕನೇ ಅಲೆಯೂ ಮನುಕುಲವನ್ನು ಬೆಂಬಿಡದೆ ಕಾಡಿತ್ತು. 

ಸ್ಪ್ಯಾನಿಷ್ ಫ್ಲೂ - ೧೯೧೮ರ ಎರಡನೇ ಅಲೆಯ ಅವಧಿಯಲ್ಲಿ, ವೈರಾಣುವಿನ  ಸೋಂಕು,  ಮಾನವರ ಶ್ವಾಸಕೋಶಗಳಿಗೆ ಹರಡಿ ಅಪಾರ ಸಂಖ್ಯೆಯ ಸಾವುಗಳನ್ನು ಉಂಟುಮಾಡಿತ್ತು. ಮೂಗು-ಬಾಯಿಗಳಲ್ಲಿನ  ರಕ್ತಸ್ರಾವ, ವಿಚಿತ್ರವಾದ ವಾಸನೆ, ಹಲ್ಲುಗಳು ಉದುರುವುದು, ಕೂದಲು ಉದುರುವುದು, ನಿದ್ರಾಹೀನತೆ ಮತ್ತು ಕಣ್ಣುಗಳ ದೋಷ ಮುಂತಾದ ರೋಗ ಲಕ್ಷಣಗಳು ಎರಡನೇ ಅಲೆಯ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದವು. ಅಂದಿನ ವೈದ್ಯರುಗಳಿಗೆ ಅಂದಿನ ರೋಗದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ.  ವಿಶ್ವಾದ್ಯಂತ ಹರಡಿದ್ದ ಅಪಾರ ಸಂಖ್ಯೆಯ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲು, ಅಂದಿದ್ದ ವೈದ್ಯಕೀಯ ಸೌಲಭ್ಯಗಳು ಏನೇನೂ ಸಾಲದಾಗಿತ್ತು. ಅಂದೂ ವೈದ್ಯರುಗಳು 'ಕ್ವಾರಂಟೈನ್ ಮತ್ತು ಮಾಸ್ಕ್ ಧಾರಣೆಯ' ಮುನ್ನೆಚ್ಚರಿಕೆಯ ಕ್ರಮಗಳನ್ನು ಪರಿಪಾಲಿಸುವಂತೆ ಜನರುಗಳಿಗೆ ತಿಳಿಸಿದ್ದರು. ತಲೆನೋವಿನ ಬಾಧೆಗೆ ಇಂದು ನೀಡುವಂತಹ 'ಆಸ್ಪಿರಿನ್ (Aspirin) ' ಗುಳಿಗೆಗಳನ್ನು ಅಂದಿನ ಮಹಾಮಾರಿಯ ನಿವಾರಣೆಗೆ ವ್ಯಾಪಕವಾಗಿ ನೀಡಲಾಗುತ್ತಿತ್ತು. 

೧೯೧೮ರ ಎರಡನೇ ಅಲೆಯನಂತರ, ಸೋಂಕಿತರ ಸಂಖ್ಯೆ ಸಾಕಷ್ಟು ಕಮ್ಮಿಯಾಗಿತ್ತು. ಅಂದಿನ ಮಹಾಮಾರಿಯ ಜೊತೆಗೆ 'ನಿಮೋನಿಯ (pneumonia)' ರೋಗವು ಕಾಣಿಸಿಕೊಳ್ಳುತ್ತಿತ್ತು. ನಿಮೋನಿಯಾ ರೋಗವನ್ನು ನಿಭಾಯಿಸುವ ಶ್ರಮತೆಯನ್ನು ಅಂದಿನ ವೈದ್ಯರುಗಳು ಅಭಿವೃದ್ಧಿ ಪಡಿಸಿಕೊಂಡಿದ್ದು, ಸಾವು-ನೋವುಗಳ ಸಂಖ್ಯೆ ಸಾಕಷ್ಟು ಕಮ್ಮಿಯಾಗುವಂತೆ ಮಾಡಿತ್ತು. ಸ್ಪ್ಯಾನಿಷ್ ಫ್ಲೂ - ೧೯೧೮ರನ್ನು ಕುರಿತಾದ ಸಂಶೋಧನೆ ಇಂದಿಗೂ ನಡೆಯುತ್ತಿದೆ. ಅಂದಿನ ಎರಡನೇ ಅಲೆಯನಂತರ, ವೈರಾಣು ದುರ್ಬಲವಾಗುತ್ತಾ ಸಾಗಿದ್ದೇ,  'ಸ್ಪ್ಯಾನಿಷ್ ಫ್ಲೂ - ೧೯೧೮' ತನಗೆ ತಾನೇ ಮಾಯವಾಗುವಂತೆ ಮಾಡಿತ್ತು. 

ಮೊದಲನೇ ಮಹಾಯುದ್ಧದ ನಂತರ, ಆಗಸ್ಟ್ ೧೯೧೮ರ ಹೊತ್ತಿಗೆ ಭಾರತಕ್ಕೆ ಹಿಂತಿರುಗಿದ ಸೈನಿಕರುಗಳ ಮುಖಾಂತರ, ನಮ್ಮ ದೇಶಕ್ಕೂ ಸ್ಪ್ಯಾನಿಷ್ ಫ್ಲೂ ಹರಡಿತ್ತು. ಸೈನಿಕರುಗಳು ಅಂದಿನ ಬಾಂಬೆ ಮೂಲಕ ಹಿಂತಿರುಗುತ್ತಾ ಬರುತ್ತಿದ್ದರಿಂದ, ಬಾಂಬೆಯಿಂದಲೇ ರೋಗ ಹರಡುತ್ತಿದೆಯೆಂಬುದು ಜನರುಗಳ ಅಭಿಪ್ರಾಯವಾಗಿ ಹೋಗಿತ್ತು. ಹಾಗಾಗಿ ಆ ರೋಗವನ್ನು 'ಬಾಂಬೆ ಜ್ವರ ಅಥವಾ ಬಾಂಬೆ ಇನ್ಫ್ಲುಯೆಂಜಾ' ಎಂದೇ ಅಂದು ಜನರು ಕರೆಯುತ್ತಿದ್ದರು. ಅಂದಿನ ಮಹಾಮಾರಿ ಬಹಳ ಬೇಗ ಇಡೀ ದೇಶದಲ್ಲಿ ಹರಡಿ ಹೋಗಿತ್ತು. ಒಂದು ಸಮೀಕ್ಷೆಯ ಪ್ರಕಾರ,ಭಾರತದ ೧. ೫ ಕೋಟಿಯಷ್ಟು ಜನರು ಅಂದಿನ ಮಹಾಮಾರಿಗೆ ಬಲಿಯಾಗಿದ್ದು, ಭಾರತ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಂಖ್ಯೆಯ ಸಾವುಗಳನ್ನು ಕಂಡ ದೇಶವೆನಿಸಿಕೊಂಡಿತ್ತು. 'ಸ್ಪ್ಯಾನಿಷ್ ಫ್ಲೂ - ೧೯೧೮ರ ಮಹಾಮಾರಿ ಮತ್ತು ಮೊದಲನೇ ಮಹಾಯುದ್ಧ'ದಂತಹ ಎರಡು ದುರಂತಗಳನ್ನು ಕಂಡ  ೧೯೧೧-೨೧ರ ದಶಕ ಭಾರತದ ಪಾಲಿಗೆ ಕರಾಳವಾದ ದಶಕವಾಗಿದ್ದು, ಆ ಅವಧಿಯಲ್ಲಿ ಭಾರತ ತನ್ನ ಜನಸಂಖ್ಯೆಯಲ್ಲಿನ  ಕುಸಿತವನ್ನು ಕಂಡಿತ್ತು. ಕಳೆದ ೧೨೦ ವರ್ಷಗಳ ಅವಧಿಯಲ್ಲಿ, ಭಾರತದ ಜನಸಂಖ್ಯೆ ಇನ್ನ್ಯಾವ ದಶಕದಲ್ಲೂ ಕುಸಿತವನ್ನು ಕಾಣದಿರುವುದು ಗಮನಿಸಬೇಕಾದ ಅಂಶ. ಸೂರ್ಯಕಾಂತ ತ್ರಿಪಾಠಿ ಎಂಬ ಹಿಂದೀ ಕವಿಯೊಬ್ಬರು ಆ ಅವಧಿಯ ಸಾವುಗಳ ಬಗ್ಗೆ ಬರೆಯುತ್ತಾ,  'ಗಂಗಾ ನದಿಯ ಒಡಲು ಶವದ ರಾಶಿಗಳಿಂದ ತುಂಬಿ ಹೋಗಿದೆ' ಎಂದು  ವಿಷಾದಿಸಿದ್ದರು. ಅಂದಿನ ಅಪಾರ ಸಾವು-ನೋವುಗಳಿಂದ ಬಳಲಿ ಬೆಂಡಾದ ಭಾರತದ ಜನತೆಯ ಆಕ್ರೋಶ ಬ್ರಿಟಿಷ್ ಸರಕಾರದ ವಿರುದ್ಧ ಭುಗಿಲೆದ್ದಿತ್ತು. 

'ಬ್ರಿಟಿಷ್ ಸರಕಾರದ ದಾಸ್ಯದಲ್ಲಿ ನಾವು ನಲುಗುತ್ತಿದಾಗಲೇ ನಮ್ಮ ದೇಶ ಸ್ಪ್ಯಾನಿಷ್ ಫ್ಲೂ - ೧೯೧೮ರ ದಾಳಿಯನ್ನು ಹೇಗೋ ಸಹಿಸಿ ಉಳಿದುಕೊಂಡಿತ್ತು. ಆ ದಿನಗಳಲ್ಲಿ ಭಾರತದಲ್ಲಿದ್ದ ವೈದ್ಯಕೀಯ ಸೌಲಭ್ಯಗಳ ಸ್ಥಿತಿ-ಗತಿಗಳನ್ನೋ, ಹೇಳ ತೀರದಾಗಿತ್ತು!  ಅಂತಹ ವಿಷಮ ಪರಿಸ್ಥಿತಿಯಲ್ಲೇ ಬದುಕುಳಿದ ಭಾರತಕ್ಕೆ, ಇಂದಿನ ಕೋವಿಡ್-೧೯ರ ದಾಳಿಯನ್ನು ನಿಭಾಯಿಸುವುದು ಕಷ್ಟವಾಗದು. ಇಂದಿನ ಕೇಂದ್ರ  ಮತ್ತು ರಾಜ್ಯ ಸರಕಾರಗಳು ಕೋವಿಡ್ ಹೋರಾಟಕ್ಕೆ ಸಾಕಷ್ಟು ಸಿದ್ಧತೆಗಳನ್ನು ನಡೆಸಿವೆ. ೧೯೧೮ರ ವೈದ್ಯಕೀಯ ಸೌಲಭ್ಯಗಳ ಹೀನಾಯ ಸ್ಥಿತಿಗೆ ಹೋಲಿಸಿದರೆ, ಇಂದಿನ ಸೌಲಭ್ಯಗಳು ಸಾಕಷ್ಟು ಸಮರ್ಪಕವಾಗಿವೆ. ನಮ್ಮ ವೈದ್ಯರುಗಳ ಸಾಮರ್ಥ್ಯ ಮತ್ತು ಸೇವಾ ಮನೋಭಾವಗಳು ವಿಶ್ವಖ್ಯಾತಿಯ ಮಟ್ಟದ್ದಾಗಿದೆ. ಜನ ಸಾಮಾನ್ಯರುಗಳಲ್ಲಿ ಅರಿವನ್ನು ಮೂಡಿಸಲು ಸರಕಾರಗಳು ಸಾಕಷ್ಟು ಪ್ರಯತ್ನವನ್ನು ನಡೆಸಿವೆ. ಕೇಂದ್ರ ಸರಕಾರ ವಿವಿಧ ದೇಶಗೊಳೊಂದಿಗೆ ಸುಮಧುರ ಬಾಂಧವ್ಯವನ್ನು ಹೊಂದಿದ್ದು, ಅಂತಾರಾಷ್ಟ್ರೀಯ ನೆರವೂ ಭಾರತಕ್ಕೆ ಹರಿದು ಬರುತ್ತಿದೆ. ಇಂದಿನ ಮಹಾಮಾರಿಯನ್ನು ತಡೆಯಬಲ್ಲ ಲಸಿಕೆಯ ಗಳಿಕೆಗಾಗಿ, ನಮ್ಮ ವಿಜ್ಞಾನಿಗಳು ಹಗಲಿರುಳೆನ್ನದೆ ಸಂಶೋಧನೆ ನಡೆಸುತ್ತಿ ದ್ದಾರೆ. ವಿಶ್ವದ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿನ ಸಾವು-ನೋವುಗಳ ಸಂಖ್ಯೆ ಕಮ್ಮಿಯೆಂದೇ ಹೇಳಬಹುದು. ಎಲ್ಲವುದಕ್ಕಿಂತ  ಮುಖ್ಯವಾಗಿ ನಮ್ಮ ದೇಶದ ಜನತೆಯಲ್ಲಿ 'ದೈವ ಭಕ್ತಿ ಮತ್ತು ನಂಬಿಕೆ'ಗಳು ಅಪಾರವಾಗಿದ್ದು, ಅದು ನಮ್ಮ ಜನರುಗಳಲ್ಲಿನ ಸ್ಥೈರ್ಯವನ್ನು ವೃದ್ಧಿಸುತ್ತಿದೆ. 'ನಂಬಿಕೆ ಮತ್ತು ವಿಶ್ವಾಸ'ಗಳು ಪ್ರತಿರೋಧವನ್ನು ವೃದ್ಧಿಸುವ ಅಂಶಗಳೆಂಬುದನ್ನು ಮನೋವಿ ಜ್ಞಾನಿಗಳೂ ಒಪ್ಪುತ್ತಾರೆ. 'ನಂಬಿಕೆ ಎಂಬುದು ಪರ್ವತಗಳನ್ನು ಕೂಡಾ ಕದಲಿಸಬಲ್ಲದು (Faith can move mountains).' ಹಾಗಾಗಿ ಇಂದಿನ ಮಹಾಮಾರಿಯನ್ನು ನಾವು ಗೆದ್ದು ಹೊರಬರುತ್ತೇವೆ' ಎಂದು ರಾಜುರವರು ವಿವರಿಸಿದಾಗ, ರೋಹಿಣಿ ಕೂಡ ತಲೆದೂಗಿದ್ದಳು. 

******


೧೨

ಪುನರುಜ್ಜೀವನ 



 ಒಂದು ದಿನ ಡಾ. ಕಿರಣರ ಮೇಲಧಿಕಾರಿಗಳು ಅವರಿಗೆ ಆಜ್ಞಾಪಿಸಿದ್ದರು. 'ಮುಂದಿನ ಹತ್ತು ದಿನಗಳವರೆಗೆ ನೀವು ಆಸ್ಪತ್ರೆಯನ್ನು ಪ್ರವೇಶಿಸುವಂತಿಲ್ಲ.' 

'ಏಕೆ ಸಾರ್? ಕೋವಿಡೇತರ (non-covid) ರೋಗಿಗಳ ಸೇವೆಯ ಅವಧಿ, ನನಗೆ  ಇಂದು  ಮುಗಿಯುತ್ತದೆ. ನಾಳೆಯಿಂದ ಕೋವಿಡ್ ರೋಗಿಗಳ ಚಿಕಿತ್ಸೆಯ ವಾರ್ಡ್ಗೆ ಹೋಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ಆಸ್ಪತ್ರೆ ಪ್ರವೇಶಿಸದಂತಹ  ತಪ್ಪನ್ನು ನಾನೇನು ಮಾಡಿದ್ದೇನೆ?' ಎಂದ ಡಾ. ಕಿರಣ್ ವಿಚಲಿತರಾಗಿದ್ದರು. 

ಕಿರಣರ ಮೇಲಧಿಕಾರಿ ಮಾತನ್ನು ಮುಂದುವರೆಸುತ್ತಾ, 'ಹೌದು, ನೀವು ಮಹಾಪರಾಧವೊಂದನ್ನು ಮಾಡಿದ್ದೀರಿ. ಕೋವಿಡ್ ರೋಗಿಗಳ ಮತ್ತು ಕೋವಿಡೇತರ ರೋಗಿಗಳ ಚಿಕಿತ್ಸೆಯನ್ನು ಸತತವಾಗಿ ನೀವು ಮೂರು ತಿಂಗುಳುಗಳಿಂದ ಮಾಡುತ್ತಿದ್ದೀರಿ. ಆದುದರಿಂದ ತಮಗೀಗ ವಿಶ್ರಾಂತಿಯ ಅವಶ್ಯಕತೆ ಇದೆ. ೧೦ ದಿನಗಳ ಅವಧಿಯಲ್ಲಿ ವಿಶ್ರಾಂತಿ ಪಡೆದು ಹೊಸ ಚೈತನ್ಯವನ್ನು ಪಡೆದು ಮತ್ತೆ ಬನ್ನಿ' ಎಂದರು. 

ಸಂತಸಗೊಂಡ ಡಾ. ಕಿರಣರು, ದಿನದ ಅವಧಿ ಮುಗಿದನಂತರ, ತಮ್ಮ ಕರ್ತವ್ಯಗಳನ್ನು ಬೇರೊಬ್ಬ ವೈದ್ಯರಿಗೆ ವಹಿಸಿ, ನೇರವಾಗಿ ಹೊರಟು ಗೆಳತಿ ರೋಹಿಣಿಯ ಮನೆಯನ್ನು ಸೇರಿದ್ದರು. ಮನೆಯನ್ನು ಪ್ರವೇಶಿಸುತ್ತಲೇ ಕಿರಣ್, 'ರೋಹಿಣಿ ನನಗೀಗ ೧೦ ದಿನಗಳ ರಜೆ ಸಿಕ್ಕಿದೆ. ಚೆನ್ನಾಗೆ ರಿಲ್ಯಾಕ್ಸ್ ಆಗೋಣ, ಪಿಕ್ನಿಕ್ಕೊಂದಕ್ಕೆ ಹೋಗೋಣ' ಎಂದನು. 

'ಪಿಕ್ನಿಕ್ ಬೇಡ, ಸಣ್ಣ ಪ್ರವಾಸವೊಂದನ್ನೇ ಕೈಗೊಳ್ಳೋಣ. ಆದರೆ ಪ್ರವಾಸದ ತಾಣದ ಆಯ್ಕೆ ನನ್ನದು, ನಾನಾಗಲೇ ಎಲ್ಲಾ ಏರ್ಪಾಡುಗಳನ್ನು ಮಾಡಿದ್ದಾಗಿದೆ.' ರೋಹಿಣಿ ಹೇಳಿದಾಗ ಕಿರಣ್ ರೋಮಾಂಚಿತನಾಗಿದ್ದನು. ಪುಟ್ಟ ಪ್ರವಾಸಕ್ಕೆ ತಂದೆ ರಾಜು ಕೂಡ ತಯಾರಾಗಿದ್ದರು. 

ಜಾಣೆಯಾದ ರೋಹಿಣಿ 'ರಜಾ, ಮಜಾ ಮತ್ತು ಕಲಿಕೆ' ಎಂಬ ಮೂರೂ ಅಂಶಗಳನ್ನು ಬೆಸೆದು, ತನ್ನ ಸಂಶೋಧನಾ ಕಾರ್ಯಕ್ಕೂ ಸಹಾಯಕವಾಗುವಂತಹ ಸಣ್ಣ ಪ್ರವಾಸದ ಏರ್ಪಾಡನ್ನು ಮಾಡಿದ್ದಳು. ಆ ಪ್ರವಾಸದ ತಾಣವನ್ನು ಸೇರಲು ಅವರುಗಳು ತಮ್ಮ 'ಟಾಟಾ ಸುಮೊ'ವಿನಲ್ಲಿ ಸುಮಾರು ೯೦೦ ಕಿ.ಮೀ.ನಷ್ಟು ದೂರ ಪ್ರಯಾಣಿಸಬೇಕಾಯಿತು. ಪಶ್ಚಿಮ ಘಟ್ಟಗಳ ಅತ್ಯಂತ ಒಳಗಿನ ನದಿಯೊಂದರ ತೀರದಲ್ಲಿ ಆ ತಾಣವಿತ್ತು. ಸರಕಾರ ಅಭಿವೃದ್ಧಿ ಪಡಿಸಿದ್ದ ಸುಮಾರು ೩೦ ಚ.ಕಿ.ಮೀ.ನಷ್ಟು ವಿಸ್ತೀರ್ಣದ ಅಭಯಾರಣ್ಯವೊಂದನ್ನು ಅವರುಗಳು ಸೇರಿದ್ದಾಗಿತ್ತು. ಆ ಅಭಯಾರಣ್ಯದಲ್ಲಿ ಪ್ರವಾಸಿ ಮಂದಿರವೊಂದೂ ಇತ್ತು. ನಾವೀ ಸರಕಾರೀ ಅಭಯರಾಣ್ಯಕ್ಕೆ ಹೋಗುತ್ತಿಲ್ಲಾ ಎಂದು ರೋಹಿಣಿ ಹೇಳಿದಾಗ, ಕಿರಣ್ ಮತ್ತು ರಾಜುರವರಿಬ್ಬರಿಗೂ ಆಶ್ಚರ್ಯವಾಗಿತ್ತು. ಅದೇ ಸರಕಾರಿ ಅಭಯಾರಣ್ಯಕ್ಕೆ ಹೊಂದಿಕೊಂಡಂತ್ತಿದ್ದ, ಸುಮಾರು ೪೦೦ ಎಕರೆ ವಿಸ್ತೀರ್ಣದ ಖಾಸಗೀ ಅರಣ್ಯವೊಂದನ್ನು ರೋಹಿಣಿ ಆರಿಸಿಕೊಂಡಿದ್ದಳು. 'ಈ ಖಾಸಗೀ ಅರಣ್ಯ ಯಾರಿಗೆ ಸೇರಿದ್ದು?' ಎಂದು ಕೇಳಿದ್ದನು ಕಿರಣ್. 'ಮೊದಲು ಒಳಗೆ ಹೋಗೋಣ. ನಂತರ ಎಲ್ಲಾ ವಿಷಯಗಳೂ ತಾನಾಗೇ ತಿಳಿಯುತ್ತವೆ' ಎಂದಳು ರೋಹಿಣಿ. 

ಸುಮಾರು ೬೭ರ ಪ್ರಾಯದ 'ಡ್ರೇಕ್ ಮತ್ತು ೬೮ರ ಪ್ರಾಯದ ಹರಿಣಿ,' ೪೦ ವರ್ಷಗಳ ಹಿಂದೆ ಅಮೇರಿಕಾದಲ್ಲಿ ಪ್ರಥಮ ಬಾರಿಗೆ ಭೇಟಿಯಾಗಿದ್ದರು. ಡ್ರೇಕ್ ಎಂದರೆ 'ಗಂಡು ಬಾತುಕೋಳಿ' ಎಂದು ಗೊತ್ತಾದ ಮೇಲೆ ರೋಹಿಣಿಗೆ, ಡ್ರೇಕನ ಮೇಲೆ ಕುತೂಹಲ ಉಂಟಾಗಿತ್ತು. 'ನೀನೊಬ್ಬ ಗಂಡು ಕೋಳಿ, ಮತ್ತು ನಾನೊಬ್ಬ ಹೆಣ್ಣು ಜಿಂಕೆ (ಹರಿಣಿ ಎಂದರೆ ಜಿಂಕೆ ಎಂದರ್ಥ). ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಬಾರದೇಕೆ?' ಎಂದು ಮೊದಲು  ಸ್ನೇಹಹಸ್ತ ಚಾಚಿದ್ದವಳು ಹರಿಣಿಯೇ. ಹರಿಣಿಯ ಸ್ನೇಹದ ಪ್ರಸ್ತಾಪ ಡ್ರೇಕನಿಗಿಷ್ಟವಾಗಿತ್ತು. ಅವರುಗಳ ಸ್ನೇಹ ಪ್ರೀತಿಗೆ ತಿರುಗಿದ ಕೆಲವೇ ತಿಂಗಳುಗಳಲ್ಲಿ ಅವರಿಬ್ಬರೂ ಮದುವೆ ಕೂಡ ಆಗಿದ್ದರು. ಸುಮಾರು ೩೦ ವರ್ಷಗಳ ಹಿಂದೆ, ಮಕ್ಕಳಿಲ್ಲದ ಡ್ರೇಕ್ ಮತ್ತು ರೋಹಿಣಿಯರು ವಿಚಿತ್ರ ಆಸೆಯೊಂದನ್ನು ಹೊತ್ತು,  ಭಾರತಕ್ಕೆ ಬಂದು ನೆಲಸಿದ್ದರು. ತಮ್ಮದೇ ಆದ ಕಾಡೊಂದನ್ನು ಹೊಂದುವ ಆಸೆ ಅವರುಗಳದಾಗಿತ್ತು. 'ನಿಮ್ಮದೇ ಆದ ಕಾಡು? ತುಂಬಾ ವಿಚಿತ್ರವಾದ ಮತ್ತು ಕುತೂಹಲಕಾರಿ ಸಾಹಸ ತಮ್ಮಗಳದ್ದು. ನಿಮಗೆ ಈ ರೀತಿಯ ಆಸೆ ಉಂಟಾಗಿದ್ದು ಹೇಗೆ?' ಎಂದು ಕೇಳಿದ್ದವನು ಕಿರಣ್.

'ಪ್ರಕೃತಿ ಮಾತೆಗೆ ಏನನ್ನಾದರೂ ಹಿಂತಿರುಗಿಸುವಾಸೆ ನಮಗಾಗಿತ್ತು. "ಸುಂದರವಾದ ಮರದ ನೆರಳಿನಲ್ಲಿ ಇಂದು ಯಾರಾದರೂ ಆರಾಮವಾಗಿ ಕುಳಿತಿದ್ದರೆ, ಬಹಳ ಹಿಂದೆ ಯಾರೋ ಆ ಮರವನ್ನು ನೆಟ್ಟಿದ್ದೇ ಕಾರಣ." ನಿರ್ಭೀತಿಯಿಂದ ಬದುಕುವ ತಾಣವೊಂದನ್ನು ಕಾಡು ಪ್ರಾಣಿಗಳಿಗಾಗಿ ನಾವು ಅಭಿವೃದ್ಧಿಪಡಿಸಲಿಚ್ಛಿಸಿದ್ದೆವು' ಎಂದವರು ಡ್ರೇಕ್. 

'ಆದರೆ ನಮ್ಮ ಯೋಜನೆ ಅಷ್ಟು ಸುಲಭವಾದುದಾಗಿತ್ತಿಲ್ಲ. ಸೂಕ್ತ ತಾಣಕ್ಕಾಗಿ ನಾವು ಭಾರತದ ಹಲವು ರಾಜ್ಯಗಳನ್ನರಸಿದೆವು. ೪೦೦ ಎಕರೆಗಳಷ್ಟರ ವಿಸ್ತಾರವಾದ ಜಾಗ, ಅಂತೂ ಇಲ್ಲಿ ನಮಗೆ ದೊರೆತಿತು. ಇಷ್ಟೂ ಜಾಗ ನಮಗೆ ಒಮ್ಮಲೇ ದೊರೆಯಲಿಲ್ಲ. ಸಣ್ಣ ಸಣ್ಣ ಜಮೀನುಗಳನ್ನು ಖರೀದಿಸಿ ಸೇರಿಸುತ್ತಾ ಹೋದ ನಮಗೆ ೪೦೦ ಎಕರೆಗಳನ್ನು ಪಡೆಯಲು ಸುಮಾರು ೧೦ ವರ್ಷಗಳ ಸಮಯ ಬೇಕಾಯಿತು. ಲಾಭ ಗಳಿಸುವ ಯೋಜನೆ ನಮ್ಮದಲ್ಲ. ಹಾಗೆ ನೋಡಿದರೆ ನಮ್ಮ ೪೦೦ ಎಕರೆಗಳ ಖಾಸಗೀ ಕಾಡು ಸಮೀಪದ ಸರಕಾರೀ ಅಭಯಾರಣ್ಯದ ವಿಸ್ತೀರ್ಣವನ್ನು ಹೆಚ್ಚಿಸಿದೆ; ಆದರೂ ಇದು ನಮಗೆ ಸೇರಿದ್ದೆಂಬ ಹೆಮ್ಮೆ ನಮ್ಮದು! ನಮ್ಮ ಕಾಡನ್ನು ಕಾಡು ಪ್ರಾಣಿಗಳ ವಾಸಕ್ಕೆಂದು ಬಿಟ್ಟು ಬಿಟ್ಟಿದ್ದೇವೆ. ನಮ್ಮ ಕಾಡಿನ ಒಂದು ಎಲೆಯನ್ನೂ ಯಾರೂ ಕೀಳುವಂತಿಲ್ಲ. ಇಲ್ಲಿರುವ ಕಾಡು ಪ್ರಾಣಿಗಳಿಗೆ ಯಾರೂ ತೊಂದರೆ ಕೊಡುವಂತಿಲ್ಲ. ಕಳೆದ ಒಂದು ದಶಕದಲ್ಲಿ, ಆರು ಹುಲಿಮರಿಗಳು ಇಲ್ಲಿ ಜನಿಸಿವೆ. ತಮ್ಮ ಮರಿಗಳಿಗೆ ಜನ್ಮನೀಡಿ, ಬೆಳಸಿಕೊಂಡು ಹೋಗಲು, ಕ್ಷೇಮವಾದ ತಾಣವನ್ನು ಹುಡುಕಿಕೊಂಡು ಕಾಡೆಮ್ಮೆಗಳು ನಮ್ಮಲಿಗೆ ಬರುತ್ತವೆ. ಕರಡಿ, ಕಡವೆ, ಜಿಂಕೆ ಮುಂತಾದ ಪ್ರಾಣಿಗಳ ನೆಚ್ಚಿನ ತಾಣ ನಮ್ಮ ಕಾಡಾಗಿದೆ.' ಎಂದು ವಿವರಣೆ ನೀಡಿದವರು ಹರಿಣಿ. 

ಮರು ದಿನದ  ನಸುಕಿನ ಸಮಯಕ್ಕೆ ಜೀಪೊಂದರಲ್ಲಿ, ಕಿರಣ್, ರೋಹಿಣಿ ಮತ್ತು ರಾಜುರವರು,  ಡ್ರೇಕ್ ಮತ್ತು ಹರಿಣಿಯವರೊಂದಿಗೆ ಪುಟ್ಟ ಕಾಡಿನ ಸುತ್ತಾ ಹೊರಟಾಗ ಅದೊಂದು ವಿಭಿನ್ನ ಅನುಭವವಾಗಿತ್ತು. ಮಾನವನ ಭಯವಿಲ್ಲದೆ ನಿರ್ಭೀತಿಯಿಂದ ಓಡಾಡುತ್ತಿದ್ದ ಕಾಡು ಪ್ರಾಣಿಗಳ ದೃಶ್ಯ ಸಂತಸದಾಯಕವಾಗಿತ್ತು. ಕಾಡು ಪ್ರಾಣಿಗಳ ಚಲನ-ವಲನಗಳ ದೃಶ್ಯಗಳನ್ನು ಸೆರೆ ಹಿಡಿಯಲೆಂದು, ಡ್ರೇಕರ ಪುಟ್ಟ ಅರಣ್ಯದ ಅಲ್ಲಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಚಿಲಿಪಿಲಿಗುಟ್ಟುವ ಅಪಾರ ಸಂಖ್ಯೆಯ ಹಕ್ಕಿ-ಪಕ್ಷಿಗಳು ಕಾಡಿನುದ್ದಕ್ಕೂ ಹಾರಾಡುತ್ತಿದ್ದುದು  ರಮಣೀಯ ದೃಶ್ಯವಾಗಿತ್ತು. ಅಪರೂಪದ ಪ್ರಾಣಿಯೆಂದೆನಿಸಿದ ಪೆಂಗೋಲಿನ್ಗಳು, ಆ ಕಾಡಿನಲ್ಲಿ ಸಾಕಷ್ಟಿದ್ದಂತೆ ಕಂಡುಬಂದಿತ್ತು. 

'ಕಾಡುಗಳ ಮರುಸೃಷ್ಟಿ ಸರಕಾರವೊಂದರ ಕಾರ್ಯವಲ್ಲ. ನಮ್ಮ-ನಿಮ್ಮಂತಹ  ಖಾಸಗಿ ವ್ಯಕ್ತಿಗಳು ಮತ್ತು ಭಾರಿ ಕಂಪನಿಗಳೂ ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು. ಮಾನವ ತನ್ನ ಸ್ವಾರ್ಥಕ್ಕಾಗಿ ಕಾಡುಗಳನ್ನು ನಾಶಪಡಿಸುತ್ತ ಹೋದರೆ, ಕೋವಿಡ್-೧೯ರಂತಹ ಮಹಾಮಾರಿಗಳು ಮತ್ತೆ ಮತ್ತೆ ಮನುಕುಲವನ್ನು ಕಾಡುವುದು ಖಂಡಿತ!' ಎಂದು ಡ್ರೇಕ್ರವರು ಹೇಳಿದ್ದು, ಡಾ. ಕಿರಣರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ವಿದ್ಯಾರ್ಹತೆ ಮತ್ತು ಅನುಭವಗಳಿಂದ ಡ್ರೇಕ್ ಒಬ್ಬ ನುರಿತ 'ವೈರಾಣು ತಜ್ಞ'ರಾಗಿದ್ದರು. 'ಕೋವಿಡ್-೧೯ರ ಮಹಾಮಾರಿಯ ದಾಳಿ ನನಗೆ ಆಶ್ಚರ್ಯವನ್ನೇನು ಉಂಟುಮಾಡಿಲ್ಲ. ಈ ರೀತಿಯ ಮಹಾಮಾರಿಯ ದಾಳಿ  ಮನುಕುಲವನ್ನು ಅಪ್ಪಳಿಸಬಹುದೆಂಬ ಎಚ್ಚರಿಕೆಯನ್ನು ತಜ್ಞರು ಕೆಲವು ದಶಕಗಳಿಂದ ನೀಡುತ್ತಲೇ ಬಂದಿದ್ದಾರೆ. ಈವರೆಗಿನ ಸಂಶೋಧನೆಗಳ ಪ್ರಕಾರ ಕೋವಿಡ್-೧೯ರ ವೈರಾಣು ಒಂದು ಜಾತಿಯ ಬಾವಲಿಗಳಲ್ಲಿ ಸುಮಾರು ಒಂದು ಸಾವಿರ ವರ್ಷಗಳಿಂದ ಇದೆ. ಈ ಬಾವಲಿಗಳಿಂದ, ವೈರಾಣು ಪೆಂಗೋಲಿನ್ಗಳಿಗೆ ಹರಡಿದೆ. ಚೀನಾದ ವುಹಾನಿನ ಮಾಂಸದ ಹಸಿ ಮಾರುಕಟ್ಟೆಯಲ್ಲಿ, ತಿನ್ನುವ ಉದ್ದೇಶಕ್ಕಾಗಿ, ಪೆಂಗೋಲಿನ್ಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತದೆ. ಅಂತಹ ಪೆಂಗೋಲಿನ್ಗಳಿಂದ ಕೋವಿಡ್-೧೯ರ ವೈರಾಣು ಮಾನವನಿಗೆ ತಗುಲಿರಬಹುದೆಂಬುದು ತಜ್ಞರ ಅಭಿಪ್ರಾಯವಾಗಿದೆ. ಕೋವಿಡ್-೧೯ರಂತಹ ರೋಗ ಹರಡುವ ವೈರಾಣುಗಳನ್ನು 'ಪೆಥೊಜೆನ್ಗಳು' ಎಂದು ಕರೆಯುತ್ತಾರೆ. ಪೆಥೊಜೆನ್ಗಳ ಬಗ್ಗೆ ಮಾನವನಿಗೆ ತಿಳಿದಿರುವುದು ಅತ್ಯಲ್ಪ. ಕಾಡು ಪ್ರಾಣಿಗಳ ಸ್ವಾಭಾವಿಕ ವಾಸಸ್ಥಾನಗಳಾದ ಕಾಡುಗಳ ವಿನಾಶದಿಂದ, ಕೋವಿಡ್ನಂತಹ ರೋಗಗಳು ಪ್ರಾಣಿಗಳಿಂದ ಮನುಕುಲಕ್ಕೆ ಹರಡುತ್ತಿದೆ. ಮಿಲಿಯಾಂತರ ಜಾತಿಯ ವೈರಾಣುಗಳು ಕಾಡು ಪ್ರಾಣಿಗಳಲ್ಲಿ ಜೀವಂತವಾಗಿವೆ. ಕಾಡುಗಳು ಅಂತಹ ಪ್ರಾಣಿಗಳು ಮತ್ತು ಮಾನವರ ನಡುವಿನ ತಡೆಗೋಡೆಗಳಾಗಿವೆ. ಕಾಡುಗಳ ವಿನಾಶದಿಂದ ಅಂತಹ ತಡೆಗೋಡೆಗಳು ಕುಸಿದುಬಿದ್ದಂತಾಗಿ, ಪೆಥೊಜೆನ್ಗಳನ್ನು ಹೊತ್ತ ಪ್ರಾಣಿಗಳು ಮಾನವನ ಆವಾಸ ಸ್ಥಾನಗಳತ್ತ ದಾಳಿಯಿಡುತ್ತವೆ. ಅದರಿಂದ ಹೊಸ ಹೊಸ ರೀತಿಯ ರೋಗಗಳಿಗೆ ಮಾನವ ತುತ್ತಾಗುತ್ತಾನೆ. ಆದುದರಿಂದ ಜೈವಿಕ ವೈವಿಧ್ಯ (bio-diversity)ದ ವಿನಾಶದ ಕಾರ್ಯಗಳು ಮೊದಲು ನಿಲ್ಲಬೇಕು' ಎಂದು ವಿಷಾದಿಸಿದವರು ವೈರಾಣು ತಜ್ಞರಾದ ಡ್ರೇಕರವರು. 

ರಾಜುರವರು ಪ್ರತಿಕ್ರಿಯಿಸುತ್ತಾ, 'ಜೀವಂತ ಪ್ರಾಣಿಗಳನ್ನು ಮತ್ತು ತಾಜಾ ಮಾಂಸದ ಮಾರಾಟವನ್ನು ಮಾಡುತ್ತಿದ್ದ ಉಹಾನ್ ನಗರದ ಹಸಿ ಮಾರುಕಟ್ಟೆಗಳೇ,  ಕೋವಿಡ್-೧೯ ಮಹಾಮಾರಿಯ ಉಗಮ ಸ್ಥಾನಗಳು ಎಂಬುದನ್ನು ಚೀನಾ ಸರಕಾರವೂ ಈಗ ಒಪ್ಪುತ್ತಿದೆ. ತೋಳಗಳು, ನಾಯಿಗಳು, ಓತಿಕ್ಯಾತಗಳು, ಮೊಸಳೆಗಳು, ಚೇಳುಗಳು, ಅಳಿಲುಗಳು, ನರಿಗಳು, ಪುನುಗು ಬೆಕ್ಕುಗಳು,                    ಪ್ಯಾಂಗೊಲಿನ್ಗಳು, ಆಮೆಗಳು ಮುಂತಾದ ಜೀವಂತ ಪ್ರಾಣಿಗಳು ಮತ್ತು ಅವುಗಳ ಮಾಂಸವನ್ನು ಉಹಾನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಅಂತಹ ಪ್ರಾಣಿಗಳ ಮಾಂಸವನ್ನು ಯಾವ ಮುನ್ನೆಚ್ಚರಿಕೆಯೂ ಇಲ್ಲದಂತೆ ತಿನ್ನವುದೆಂದರೆ, ವಿವಿಧ ವೈರಾಣುಗಳನ್ನು ನಾವು ಮೈಮೇಲೆ ಎಳೆದುಕೊಂಡಂತೆಯೇ ಸರಿ. ಇಂತಹ ಹಸಿ ಮಾರುಕಟ್ಟೆಗಳಲ್ಲಿ ಚರಂಡಿ ಮತ್ತು ಹಸಿ ತ್ಯಾಜ್ಯಗಳನ್ನು ಹೊರ ಸಾಗಿಸುವ ವ್ಯವಸ್ಥೆಗಳು ಸಮರ್ಪಕವಾಗಿರುವುದಿಲ್ಲ. ಚೀನಾ ದೇಶಕ್ಕೀಗ ಸಲ್ಪ ಬುದ್ಧಿ ಬಂದಂತೆ ಕಾಣುತ್ತಿದೆ. ವುಹಾನ್ ಹಸಿ ಮಾರುಕಟ್ಟೆಯನ್ನು ಅವರೀಗ ಮುಚ್ಚಿರುವುದಾಗಿ ಕೇಳ್ಪಟ್ಟಿದ್ದೇನೆ. ಕಾಡು ಪ್ರಾಣಿಗಳನ್ನು ಮಾರಾಟ ಮಾಡುವುದನ್ನು ಮತ್ತು ತಿನ್ನುವುದನ್ನು ಚೀನಾ ನಿಷೇಧಿಸಿರುವುದಾಗಿಯೂ  ಸುದ್ದಿಗಳು ಬಂದಿವೆ,' ಎಂದರು. 

ಆದರೆ ಡ್ರೇಕರು ಎಚ್ಚರಿಸುತ್ತಾ, 'ಈ ಹಸಿ ಮಾರುಕಟ್ಟೆಗಳು ಬಡವರ ಪೌಷ್ಠಿಕ ಆಹಾರದ ಮೂಲಗಳು. ಸಂಪೂರ್ಣವಾಗಿ ಅವುಗಳನ್ನು ಮುಚ್ಚುವುದು ಅಸಾಧ್ಯ. ಹಾಗೆ ಮಾಡಿದರೆ ಕಾಡು ಪ್ರಾಣಿಗಳ ಮಾಂಸದ ಕಾಳಸಂತೆಯ ಮಾರಾಟಕ್ಕೆ ಎಡೆ ಮಾಡಿಕೊಟ್ಟಂತಾಗುವುದು. ಕಾಳಸಂತೆಯ ವ್ಯವಸ್ಥೆಯು ಯಾವುದೇ ಕಾನೂನಿನ ಹಿಡಿತಕ್ಕೆ ಒಳಪಡದಿದ್ದು, ನೈರ್ಮಲ್ಯ ಮತ್ತು ಶುಚಿತ್ವಗಳ ನಿರ್ವಹಣೆ ಅಲ್ಲಿ ಅಸಾಧ್ಯವಾದುದಾಗಿರುತ್ತದೆ. ಗೃಹ ನಿರ್ಮಾಣಕ್ಕೆ ಬೇಕಾಗುವ ಮರಗಳು, ಖನಿಜಗಳು, ರಸ್ತೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳು, ಕೃಷಿ ಭೂಮಿಯ ವಿಸ್ತರಣೆ ಮುಂತಾದ ಕಾರಣಗಳಿಗಾಗಿ ಕಾಡುಗಳ ಮತ್ತು ಭೂಮಿಯ ಸಂಪನ್ಮೂಲಗಳ ವಿನಾಶ ಎಗ್ಗಿಲ್ಲದೆ ಸಾಗುತ್ತಿದೆ. ಕಾಡುಪ್ರಾಣಿಗಳ ಸಂಪರ್ಕ ಮಾನವನೊಂದಿಗೆ ಉಂಟಾಗಿ ವೈರಾಣುಗಳ ಹರಡುವಿಕೆ ಮುಂದುವರೆಯುತ್ತಿದೆ. ಮೈಕ್ರೋಸ್ಕೋಪಿಗೂ ಕಾಣದ ವೈರಾಣುಗಳು ಕೋವಿಡ್ನಂತಹ ಮಹಾಮಾರಿಯನ್ನು ಹರಡುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿರುತ್ತವೆ. ಕೋವಿಡ್-೧೯ರ ವೈರಾಣುವಿನ ಉದ್ದ ಕೇವಲ ೧೨೦ ನ್ಯಾನೋಮೀಟರ್ (ಒಂದು ಮೀಟರನ್ನು, ೧೦೦ ಕೋಟಿ ಭಾಗಗಳನ್ನಾಗಿ ಮಾಡಿದರೆ, ಅದರಳೊಗೊಂದು ಭಾಗ ಎಂದಿಟ್ಟುಕೊಳ್ಳಿ - billionth of a meter)  ಮಾತ್ರದ್ದಾಗಿರುತ್ತದೆ. ಒಂದು ಸಣ್ಣ ಗುಂಡುಸೂಜಿಯ ಗುಂಡಿನಷ್ಟು ಗಾತ್ರದಲ್ಲಿ ೧೦೦ ಮಿಲಿಯೋನ್ನಷ್ಟು ಕೋವಿಡ್-೧೯ರ ವೈರಾಣುಗಳಿರುತ್ತವೆ ಎಂದು ಅಂದಾಜಿಸಲಾಗಿದೆ. ಕೆಲವೇ ನೂರರಷ್ಟು ವೈರಾಣುಗಳು ಒಬ್ಬ ಮಾನವನಿಗೆ ಕೋವಿಡ್ ರೋಗವನ್ನು ಹರಡಬಲ್ಲದು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. 

ಇಂಗ್ಲೆಂಡಿನಲ್ಲಿ ನಡೆಸಿರುವ ಸಂಶೋಧನೆಗಳ ಪ್ರಕಾರ ಕೋವಿಡ್-೧೯ರ ವೈರಾಣು "ಕಪ್ಪು ಮತ್ತು ಕಂದು ಬಣ್ಣದ ಜನಾಂಗ"ದವರನ್ನು ಹೆಚ್ಚಾಗಿ ಕಾಡುತ್ತದೆ. ಭಾರತೀಯರಾದ ನಾವು ಕಂದು ಬಣ್ಣದ ಜನಾಂಗದವರಾದ್ದುದರಿಂದ ನಮ್ಮವರ ಮೇಲೆ ಇದರ ಪರಿಣಾಮ ಹೆಚ್ಚು ಎಂಬುದು ನನ್ನ ಆತಂಕ. "ಏಕೆ ಹೀಗೆ?" ತಜ್ಞರಲ್ಲಿ ಇದಕ್ಕೆ ನಿಖರವಾದ ಜೈವಿಕ ಕಾರಣಗಳಿಲ್ಲ. ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಕಂಡು ಬರುವ ಸಾಮಾಜಿಕ ಹಾಗೂ ಆರ್ಥಿಕ ಅಸಮತೋಲನಗಳು ಇದಕ್ಕೆ ಕಾರಣವಿರಬಹುದೆಂಬುದು  ಅವರುಗಳ ವಿಶ್ಲೇಷಣೆ ಮಾತ್ರವಾಗಿದೆ. 

ಮುಂದಿನ ಮಹಾಮಾರಿ (pandemic) ಎಲ್ಲಿಂದ ಮತ್ತು ಹೇಗೆ ಬರಬಹುದೆಂಬುದನ್ನು ಊಹಿಸುವುದು ಕಷ್ಟ ಸಾಧ್ಯ.  "ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ರೀತಿಯ ಮಹಾಮಾರಿಗಳು ಮನುಕುಲಕ್ಕೆ ತಗಲುವುದೆಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು!"  ಆದುದರಿಂದ ಮುಂದಿನ ದಿನಗಳಲ್ಲಿ ಬರಬಹುದಾದಂತಹ ಮಾಹಾಮಾರಿಗಳ ಪರಿಣಾಮವನ್ನು ಆದಷ್ಟೂ ತಗ್ಗಿಸಬಲ್ಲ ಸಿದ್ಧತೆಯನ್ನು ನಾವು ನಡೆಸುತ್ತಿರಬೇಕು.' ಡ್ರೇಕರು ಮುಚ್ಚುಮರೆಯಿಲ್ಲದೇ, ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದಾರೆ, ಎಂಬುದನ್ನು ರೋಹಿಣಿ ಗಮನಿಸದೆ ಇರಲಿಲ್ಲ. 

ಈ ಸಂದರ್ಭದಲ್ಲಿ ಡಾ. ಕಿರಣರಿಗೆ ಪ್ರತಿಕ್ರಿಯಿಸಬೇಕೆನಿಸಿತ್ತು. 'ಡ್ರೇಕ್ ರವರೇ, ಕಂದು ಬಣ್ಣದ ಜನಾಂಗದವರಾದ ಭಾರತೀಯರ ಮೇಲೆ, ಕೋವಿಡ್ನ ಪರಿಣಾಮ ತೀವ್ರವಾಗಿರುತ್ತದೆ ಎಂಬುದಾಗಿ ತಿಳಿಸಿದ್ದೀರಿ. ನಮ್ಮಂತಹ ದೇಶಗಳ ಆರ್ಥಿಕ ಹಾಗೂ ಸಾಮಾಜಿಕ ಅಸಮತೋಲನಗಳ ಕಾರಣವನ್ನೂ ನೀಡಿದ್ದೀರಿ. ಅದೃಷ್ಟವಶಾತ್ ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚು.  ೪೦ ವರ್ಷದ ಪ್ರಾಯದೊಳಗಿನ ಜನರುಗಳ ಸಂಖ್ಯೆ, ನಮ್ಮ ಭಾರತದಲ್ಲಿ ಶೇಕಡ ೬೦ರಷ್ಟಕ್ಕಿಂತಾ ಹೆಚ್ಚಿದೆ. ಅಂತಹ ಯುವಕರುಗಳಿಗೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ  ಬೇರೇ ಕಾಯಿಲೆಗಳ ಬಾಧೆ  (comorbidities) ಇರುವ ಸಾಧ್ಯತೆ ಕಮ್ಮಿ. ಹಾಗಾಗಿ ನಮ್ಮ  ಯುವಕರುಗಳ ಪ್ರತಿರೋಧ ಶಕ್ತಿ ಉತ್ತಮವಾಗಿರುತ್ತದೆ. ನಮ್ಮ ದೇಶದಲ್ಲಿ ಸಾವು- ನೋವುಗಳ ಸಂಖ್ಯೆ ಕಮ್ಮಿ ಇರವುದಕ್ಕೆ , ಈ ಅಂಶವೂ ಪೂರಕವಾಗಿರಬಹುದು. 

ರೋಗ ಹರಡುವ ಸಾಧ್ಯತೆ ಈಗ, ಕಾಡುಗಳ ಜೊತೆಗೆ ನಾಡಿನಿಂದಲೂ ಉಂಟಾಗಬಹುದೆಂದು ತಿಳಿದು ಬರುತ್ತಿದೆ. ನಮ್ಮ ಪಟ್ಟಣ ಮತ್ತು ನಗರಗಳ ಜನಸಂಖ್ಯೆಯ ದಟ್ಟಣೆ ಹೆಚ್ಚಾಗಿದ್ದು, ನಮ್ಮೊಡನೆ ಬಾವಲಿಗಳು, ಇಲಿಗಳು, ಹಾವುಗಳು, ಹಕ್ಕಿ-ಪಕ್ಷಿಗಳು ಇರುತ್ತವೆ. ಈ ಪ್ರಾಣಿಗಳೊಂದಿಗಿನ ಹತ್ತಿರದ ಸಂಪರ್ಕದಿಂದಲೂ ರೋಗಗಳು ಹರಡಬಹುದು' ಎಂದರು ಡಾ. ಕಿರಣ್. 

ಈ ನಡುವೆ ತುಂಬು ಗರ್ಭಿಣಿಯಾದ ಹೆಣ್ಣಾನೆಯೊಂದು ಭಾರಿ ಮರದ ಮರೆಯಲ್ಲಿ ತವಕ ಪಡುತ್ತಿರುವ ದೃಶ್ಯವೊಂದನ್ನು ಹರಿಣಿಯವರು ಗಮನಿಸಿದರು. ಎಲ್ಲರನ್ನು ನಿಶ್ಯಬ್ದವಾಗಿರುವಂತೆ ಸೂಚಿಸಿದ ಹರಿಣಿ, ಆ ಹೆಣ್ಣಾನೆಗೆ ಪ್ರಸವ ಸಮಯ ಸಮೀಪಿಸಿರಬಹುದೆಂದು ಎಲ್ಲರಿಗೂ ಪಿಸು ಮಾತಿನಲ್ಲಿ ತಿಳಿಸಿದರು. ಕುತೂಹಲದಿಂದ ನೋಡ ಹತ್ತಿದ ಎಲ್ಲರನ್ನೂ ಎಚ್ಚರಿಸಿದ ಹರಿಣಿ, 'ಇಂತಹ ಸಂದರ್ಭಗಳಲ್ಲಿ, ಮನುಷ್ಯರುಗಳು ಸಮೀಪದಲ್ಲಿದ್ದು ನೋಡುತ್ತಿದ್ದರೆ, ಹೆಣ್ಣಾನೆ ನಾಚುತ್ತದೆ. ಅದರ ಪ್ರಸವ ಕಾರ್ಯದಲ್ಲಿ ತೊಡಕುಂಟಾಗಬಹುದು. ಆದುದರಿಂದ ನಾವು ಬೇಗ ಬೇರೆಡೆಗೆ ನಿರ್ಗಮಿಸೋಣ' ಎಂದರು. 

ರೋಹಿಣಿ ಮಾತನ್ನು ಮುಂದುವರೆಸುತ್ತಾ, 'ಕೋವಿಡ್ ಲಾಕ್ಡೌನಿನಿಂದ ನಮ್ಮ ಪರಿಸರದಲ್ಲಿ  ನಾವೆಣಿಸಿರದ ಉತ್ತಮ ಮಾರ್ಪಾಡೊಂದು ಕಂಡು ಬಂದಿದೆ. ಗಾಳಿ ಮತ್ತು ನೀರುಗಳು ಈಗ ಹೆಚ್ಚು ಶುದ್ಧವಾಗಿವೆ. ಕೈಗಾರಿಕೆಗಳಿಂದ ಮತ್ತು ವಾಹನಗಳಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ಇಂಗಾಲದ ಡೈ ಆಕ್ಸೈಡಿನ (Carbon dioxide) ಹೊರಸೂಸುವಿಕೆ ತಗ್ಗಿದ್ದು ವಾತಾವರಣ ನಿರ್ಮಲವಾಗಿದೆ. ಲಾಕ್ಡೌನಿನ ಆ   ದಿನಗಳಲ್ಲಿ ಹರಿದ್ವಾರದ ಗಂಗಾನದಿಯ ನೀರು ಸತತವಾಗಿ ಕಲುಷಿತಗೊಳ್ಳುತ್ತಿದ್ದ ಪ್ರಕ್ರಿಯೆ, ತಾನಾಗೇ ನಿಂತಿದ್ದು, ಕುಡಿಯಲು  ಯೋಗ್ಯವಾಗಿತ್ತು ಎಂದು ಪ್ರಯೋಗಗಳಿಂದ ತಿಳಿದು ಬಂದಿದೆ. ಯಮುನೆಯ ನೀರಾಗ ತಿಳಿಯಾಗಿದ್ದು, ಅದರ ತೀರಗಳಲ್ಲಿ ಡಾಲ್ಫಿನ್ಗಳ ಹರಿದಾಟವನ್ನು ಜನರುಗಳು ಗಮನಿಸಿದ್ದರು. ಲಾಕ್ಡೌನಿನ ವೇಳೆ ಸುಮಾರು ೨೦೦ ಕಿ.ಮೀ.ಗಳಷ್ಟು ದೂರದಿಂದ ಹಿಮಾಲಯ ಪರ್ವತ ಶ್ರೇಣಿಯ ರಮಣೀಯ ದೃಶ್ಯವನ್ನು ಜನರು ಸ್ಪಷ್ಟವಾಗಿ ನೋಡಿ ಆನಂದಿಸಿದ್ದಾರೆ. ನಗರದ ರಸ್ತೆಗಳಲ್ಲಿ ನವಿಲುಗಳು, ಜಿಂಕೆಗಳು ಮುಂತಾದ ಪ್ರಾಣಿಗಲು ನಿರ್ಭೀತಿಯಿಂದ ನಡೆದಾಡುವುದನ್ನೂ, ಲಾಕ್ಡೌನಿನ ದಿನಗಳಲ್ಲಿ ಹಲವರು ಗಮನಿಸಿದ್ದಾರೆ. ಈ ಎಲ್ಲಾ ಆಶ್ಚರ್ಯಕರ ಬೆಳವಣಿಗೆಗಳು ನಮ್ಮಗಳ ಕಣ್ಣನ್ನು ತೆರೆಸಿವೆ. ಎಗ್ಗಿಲ್ಲದೆ ನಡೆಯುವ ಮಾನವನ ಹಣ ಸಂಪಾದನೆಯ ಸ್ವಾರ್ಥ ಕಾರ್ಯಗಳೇ, ಪರಿಸರದ ಕೆಡುವಿಕೆಗೆ ಕಾರಣ ಎಂಬುದು ಸ್ಪಷ್ಟವಾಗಿ ನಿರೂಪಿತಗೊಂಡಿದೆ. ಪರಿಸರದ ಸುಧಾರಣೆ ಮತ್ತು ರಕ್ಷಣೆ  ಅಸಾಧ್ಯವಾದ ಕೆಲಸವಲ್ಲ ಎಂಬುದೂ ಸಹ ಲಾಕ್ಡೌನ್ ಅವಧಿಯಲ್ಲಿ ಸಾಬೀತಾಗಿದೆ. 

ಆದರೆ ಲಾಕ್ಡೌನ್ ಕೊನೆಗೊಳ್ಳಲೇ ಬೇಕು. ಮಾನವನ ದುಡಿಯುವ ಚಟುವಟಿಕೆಗಳು ಮತ್ತೆ ಹಿಂದಿನಂತೆ ಆಗಲೇ ಬೇಕು. ಇಲ್ಲವಾದರೆ ದುಡಿಮೆಯಿಲ್ಲದೇ ಬಡವರುಗಳ ಜೀವನ ದುಸ್ತರವಾಗುತ್ತದೆ. ಆದರೂ ಪರಿಸರದ ರಕ್ಷಣೆ ಕೂಡ ಆಗಬೇಕಾದ ಕಾರ್ಯವೇ. ಪೆಟ್ರೋಲ್ ಮತ್ತು ಕಲ್ಲಿದ್ದಲಿನಂತಹ ಇಂಧನಗಳ ಬಳಕೆಯನ್ನು ನಿಯಂತ್ರಿಸುವುದರಿಂದ ಪರಿಸರದ ಸುಧಾರಣೆ ಸಾಧ್ಯ. "ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಂ)," ಎಂಬ ವ್ಯವಸ್ಥೆಯಿಂದ ವಾಹನಗಳ ಸಂಚಾರ ಮತ್ತು ದಟ್ಟಣೆ ಕಡಿಮೆಯಾಗುವುದು, ಒಂದು ಒಳ್ಳೆಯ ಬೆಳವಣಿಗೆ. ಕಾಡು ಮತ್ತು ನಗರಗಳ ಹೊರವಲಯಗಳ ಕಬಳಿಕೆ ನಿಲ್ಲಬೇಕು. ಕಾಡು ಪ್ರಾಣಿಗಳನ್ನು ತಿನ್ನುವುದಕ್ಕಾಗಿ  ಎಗ್ಗಿಲ್ಲದೇ ಕೊಲ್ಲುವುದನ್ನು ನಿಲ್ಲಿಸಬೇಕು. ಪ್ರಕೃತಿ ಮಾತೆಯನ್ನು ಗೌರವಿಸುವುದನ್ನು ನಾವೆಲ್ಲರೂ ಕಲಿಯಬೇಕು. "ರೋಗ ಹರಡುವುದನ್ನು ತಡೆಯುವುದೇ, ಚಿಕಿತ್ಸೆಗಾಗಿ ಹೆಣಗಾಡುವುದಕ್ಕಿಂತ ಒಳ್ಳೆಯದು (Prevention is better than cure)" ಎಂಬ ನಾಣ್ನುಡಿಯನ್ನು ನಾವು ಮರೆಯುವಂತಿಲ್ಲಾ' ಎಂದಳು.  

'ಪ್ರಪಂಚದ ೨೦ ಅತ್ಯಂತ ಕಲುಷಿತ ನಗರಗಳಲ್ಲಿನ, ೧೫ ನಗರಗಳು ಭಾರತದಲ್ಲೇ ಇವೆ ಎಂದು  ಕೇಳಿದ್ದೇನೆ. ನಮ್ಮ ರಾಷ್ಟ್ರದ ರಾಜಧಾನಿ ದಿಲ್ಲಿಯು, ಇಡೀ ವಿಶ್ವದಲ್ಲೇ ಅತ್ಯಂತ ಕಲುಷಿತ ನಗರ ಎಂದು ಕೂಡ ತಜ್ಞರು ಹೇಳುತ್ತಿದ್ದಾರೆ. ಲಾಕ್ಡೌನ್ ನಮಗೆ ಹಲವು ಪಾಠಗಳನ್ನು ಕಲಿಸಿದೆ. ಲಾಕ್ಡೌನ್ ಪಾಠಗಳನ್ನು ಅರಿತುಕೊಳ್ಳಲು ನಾವುಗಳು ಭಾರೀ ಬೆಲೆಯನ್ನೂ ತೆತ್ತಿರಬಹುದು. ಆದರೂ,  ಕೋವಿಡ್-೧೯ರ ಮಹಾಮಾರಿ, ಪರಿಸರದ ಪುನರುಜ್ಜೀವನ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಲಾಕ್ಡೌನನ್ನು ಜಾರಿಗೊಳಿಸಿದ ನಂತರ, ದಿಲ್ಲಿಯ ಪರಿಸರ ಮಾಲಿನ್ಯದ  ಪ್ರಮಾಣ ೬೦%ರಷ್ಟು ಸುಧಾರಿಸಿದೆ!  ಆದರೆ ಈ ಎಲ್ಲಾ ಒಳ್ಳೆ ಬೆಳವಣಿಗೆಗಳು ಬಹು ಕಾಲ ಉಳಿಯಲಾರವು. ಆದರೂ ನಮ್ಮ ಹಳ್ಳಿ, ಪಟ್ಟಣ ಮತ್ತು ನಗರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಮಾರ್ಗಗಳಿವೆ ಎಂಬುದನ್ನು ನಾವುಗಳು ಅರಿತುಕೊಳ್ಳಬೇಕು. ಅಂತಹ ಸುಧಾರಣೆಯನ್ನು ಮಾಡಲು,  ಬಲವಾದ ರಾಜಕೀಯ ಇಚ್ಚಾಶಕ್ತಿ, ನಮ್ಮ ನಾಯಕರುಗಳಲ್ಲಿ  ಇರಬೇಕು. ಜೊತೆಗೆ ಪರಿಸರ ಕಾಳಜಿಯ ಮನಃಸ್ಥಿತಿ ಶ್ರೀಸಾಮಾನ್ಯರಲ್ಲೂ ಉಂಟಾಗಬೇಕು,' ಎಂದರು ಡಾ. ಕಿರಣ್. 

'ಡ್ರೇಕ್ ಮತ್ತು ಹರಿಣಿಯಂಥವರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಅರಣ್ಯೀಕರಣ (afforestation)ದ ಮಹತ್ಕಾರ್ಯ ಆಗಬೇಕಾದರೆ ರಾಜಕಾರಣಿಗಳು, ಕಾರ್ಪೊರೇಟ್ ನಾಯಕರುಗಳು, ಪರಿಸರವಾದಿಗಳು ಮತ್ತು ಜನಸಾಮಾನ್ಯರುಗಳ ನಡುವಿನ ಸಮನ್ವಯ ಮತ್ತು ಪ್ರಯತ್ನಗಳು ಸತತವಾಗಿ ನಡೆಯುತ್ತಿರಬೇಕು. ಪ್ರಕೃತಿ ಮಾತೆಯಿಂದ ನಾವು ಕಸಿದುಕೊಂಡಿರುವ ಭೂಭಾಗದ  ಅರ್ಧದಷ್ಟನ್ನಾದರೂ ನಾವು ಹಿಂತಿರುಗಿಸಬೇಕು,' ಎಂಬ ಹಿರಿಯ ರಾಜುರವರ ಅಭಿಪ್ರಾಯಕ್ಕೆ ಎಲ್ಲರೂ ತಲೆದೂಗಿದ್ದರು. 

ಡ್ರೇಕ್ ಮತ್ತು ಹರಿಣೀರವರ ಆತಿಥ್ಯದಿಂದ ರಾಜು, ರೋಹಿಣಿ ಮತ್ತು ಡಾ. ಕಿರಣರವರು ಸಂತಸಗೊಂಡಿದ್ದರು. ಅಪರೂಪದ ದಂಪತಿಗೆ ತುಂಬು ಮನಸ್ಸಿನ ಧನ್ಯವಾದಗಳನ್ನು ಅರ್ಪಿಸಿ, ಮೂವರು ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದರು. 

***          

ಊರಿಗೆ ಹಿಂತಿರುಗುವ ಸಮಯದಯಲ್ಲಿ, ವಾಹನ ಚಾಲನೆಯ ಹೊಣೆಯನ್ನು ರಾಜುರವರು ಹೊತ್ತಿದ್ದರು. ದಣಿದಿದ್ದ ರೋಹಿಣಿ, ಸಣ್ಣ ನಿದ್ದೆಯೊಂದಕ್ಕೆ ಜಾರಿದ್ದಳು. ಹಾದು  ಹೋಗುತ್ತಿದ್ದ ವಾಹನಗಳನ್ನು, ಜನರುಗಳನ್ನೂ ವೀಕ್ಷಿಸುತ್ತಾ, ಡಾ. ಕಿರಣ್ ವಿಚಾರಮಗ್ನರಾಗಿದ್ದರು. 'ಮಾಸ್ಕ್  ಧರಿಸಿದವರ ಸಂಖ್ಯೆ ಅತ್ಯಲ್ಪ. ಮಾಸ್ಕ್ ಧರಿಸಬೇಕೆಂಬುದು, ನಮಗೆ ಕೋವಿಡ್ ಕಲಿಸಿದ ಮತ್ತೊಂದು ಪಾಠವಲ್ಲವೇ? ಮಾಸ್ಕ್ ಧರಿಸುವುದು, "ನಾನು ನಿನ್ನನ್ನು ರಕ್ಷಿಸುತ್ತೇನೆ, ನೀನು ನನ್ನನ್ನು ರಕ್ಷಿಸು" ಎಂಬ ಉತ್ತಮ ಸಂದೇಶದ ಪ್ರತೀಕ!  ಮಾಸ್ಕ್ ಧರಿಸುವುದು, ಸಮಾಜದ ಒಳಿತನ್ನು ಕುರಿತಾದ ಕಾಳಜಿಯನ್ನು ವ್ಯಕ್ತ ಪಡಿಸುವ  ಒಂದು ಪ್ರಕ್ರಿಯೆ. ಎರಡೂ ವ್ಯಕ್ತಿಗಳು ಮಾಸ್ಕ್ ಧರಿಸದೇ ಸಂಧಿಸಿದರೆ, ವೈರಾಣು ಹರಡುವ ಸಾಧ್ಯತೆ ಅತಿ ಹೆಚ್ಚು. ಇಬ್ಬರಲ್ಲಿ, ಒಬ್ಬರಾದರೂ ಮಾಸ್ಕ್ ಧರಿಸಿದ್ದರೆ ವೈರಾಣು ಹರಡುವ ಸಾಧ್ಯತೆ ಸ್ವಲ್ಪ ಕಮ್ಮಿ. ಇಬ್ಬರೂ ಮಾಸ್ಕ ಧರಿಸಿದ್ದರೆ, ವೈರಾಣು ಹಾಡುವ ಸಾಧ್ಯತೆ ಅತ್ಯಲ್ಪ,' ಎಂದು ಮತ್ತೆ ಮತ್ತೆ ಹೇಳುತ್ತಿದ್ದ ತಮ್ಮ ಹಿರಿಯ ಸಹೋದ್ಯೋಗಿಯ ಮಾತುಗಳನ್ನು ಡಾ. ಕಿರಣ್ ನೆನಪಿಸಿಕೊಂಡಿದ್ದರು. 

ಕೋವಿಡ್ ಕುರಿತಾದ ವಿಚಾರಗಳಲ್ಲೇ ಡಾ. ಕಿರಣ್ ಮುಳುಗಿ ಹೋಗಿದ್ದರು. ರೋಗ ಲಕ್ಷಣಗಳಿಲ್ಲದ ಹಲವರು ಕೂಡಾ, ರೋಗವನ್ನು ಹರಡಬಲ್ಲರು. ಮಾಸ್ಕ್ ಧರಿಸುವುದರಿಂದ ಅಂತಹ ವ್ಯಕ್ತಿಗಳಿಂದ ಸಿಡಿಯಬಹುದಾದ ಉಗುಳಿನ ತುಂತುರುಗಳು ಬೇರೆಯವರ ಮೇಲೆ ಬೀಳಲಾರವು. ಎನ್-೯೫ ಮಾಸ್ಕ್ ಹೆಚ್ಚಿನ ಬೆಲೆಯದಾಗಿದ್ದು, ಅದನ್ನೇ ಧರಿಸುವುದು ಕಡ್ಡಾಯವಲ್ಲ. ಜನ ಸಾಮಾನ್ಯರಿಗೆ, ದುಬಾರಿಯಲ್ಲದ  ೩-ಪದರದ ಸಾಧಾರಣ ಮಾಸ್ಕ್ ಸಾಕು. ಮನೆಯಲ್ಲೇ ಉತ್ತಮ ಹತ್ತಿ ಬಟ್ಟೆಯಿಂದ ತಯಾರಿಸಿದ ಮಾಸ್ಕ್ಗಳು ಉತ್ತಮವಾಗಿದ್ದು, ಮತ್ತೆ ಮತ್ತೆ ಒಗೆದನಂತರವೂ, ಅವುಗಳ ಪುನರ್ಬಳಕೆ ಸಾಧ್ಯ. ಆದರೆ ತಮ್ಮ ತಮ್ಮ ಮುಖದ ಆಕೃತಿಗೆ ಮತ್ತು ಗಾತ್ರಕ್ಕೆ ಸರಿಹೊಂದುವಂತಹ ಮಾಸ್ಕನ್ನು ಧರಿಸುವುದು ಅತ್ಯವಶ್ಯಕ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು, ಕೋವಿಡ್ ರೋಗವನ್ನು ತಡೆಯಬಹುದಾದ ಮತ್ತೆರಡು ಸುಲಭ ವಿಧಾನಗಳು. ಕೋವಿಡ್ ವೈರಾಣುವನ್ನು ಅತಿ ತೆಳುವಾದ ಕೊಬ್ಬಿನ ಪದರವೊಂದು ಜೋಪಾನವಾಗಿಟ್ಟಿರುತ್ತದೆ. ಆ ಕೊಬ್ಬಿನ ಪದರವನ್ನು, ಸೋಪಿನ ನೊರೆ ಸುಲಭವಾಗಿ ಕರಗಿಸಿ, ವೈರಾಣು ನಿಷ್ಕ್ರಿಯೆಗೊಳ್ಳುವಂತೆ ಮಾಡುತ್ತದೆ.

ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಡಾ. ಕಿರಣರ ದೃಷ್ಟಿ ನೆಟ್ಟಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಬೀಡಾ ಅಂಗಡಿಗಳಿದ್ದವು. ಹೊಗೆಸೊಪ್ಪಿನ ಮತ್ತು ವೀಳಯದೆಲೆಯ ಪಾನನ್ನು ಜನಗಳು ಜಗಿಯುತ್ತಾ ನಿಂತಿರುವುದು ಎಲ್ಲಡೆಯೂ ಕಂಡು ಬರುತ್ತಿತ್ತು. ಪಾನಿನ ಉಚ್ಚಿಷ್ಟವನ್ನು ಜನರುಗಳು ಎಲ್ಲೆಂದರಲ್ಲಿ ಉಗಿಯುವ ದೃಶ್ಯಗಳಂತೂ ಅತ್ಯಂತ ಅಸಹ್ಯಕಾರಿಯಾಗಿರುತ್ತಿತ್ತು. ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವ ಚಾಲಕರು ಮತ್ತು ಪ್ರಯಾಣಿಕರುಗಳು ಕೂಡಾ ಆ ರೀತಿ ಉಗಿಯುವುದು ತೀರಾ ಸಾಮಾನ್ಯವಾಗಿತ್ತು. ಆ ರೀತಿ ಉಗಿಯುವುದೆಂದರೆ, ಕೋವಿಡ್ ಹರಡುವಿಕೆಗೆ ಸ್ವಾಗತ ನೀಡಿದಂತೆ. ಎಲ್ಲೆಂದರಲ್ಲಿ ಉಗಿಯುವ ದುರಭ್ಯಾಸ ಇಡೀ ಭಾರತದಲ್ಲಿ ಸಾಗುತ್ತದೆ ಎಂಬುದು ಡಾ. ಕಿರಣರಿಗೆ ಗೊತ್ತಿತ್ತು. ಎಗ್ಗಿಲ್ಲದೆ ಎಲ್ಲೆಂದರಲ್ಲಿ ಉಗಿಯುವ ದುಶ್ಚಟವನ್ನು ತಡೆಯಬೇಕಾದ ಅವಶ್ಯಕತೆಯನ್ನು ಪ್ರಥಮ ಬಾರಿಗೆ, ಕೋವಿಡ್ನ ಜಾಗೃತಿ ಮೂಡಿಸಿತ್ತು! 

ಲಾಕ್ಡೌನಿನ ದಿನಗಳನಂತರ ದೇಶದಲ್ಲೇ ಪ್ರಥಮ ಬಾರಿಗೆ, ಎಲ್ಲೆಂದರಲ್ಲಿ ಉಗಿಯುವುದನ್ನು ನಿಷೇಧಿಸಿ ಮಹಾರಾಷ್ಟ್ರ ಸರಕಾರ ಕಾನೂನನ್ನು ಜಾರಿಗೊಳಿಸಿತ್ತು. ೨೦೨೦ರ ಮೇ ೨೯ರಂದು, ಸಾಂಕ್ರಾಮಿಕ ರೋಗಗಳ ಕಾಯಿದೆ - ೧೮೯೭ರ ಅಡಿಯಲ್ಲಿ ಆ ಸರಕಾರ ಜಾರಿಗೊಳಿಸಿದ ಕಾನೂನಿನ ಪ್ರಕಾರ, ಅಂತಹ ಅಪರಾಧಕ್ಕೆ ೬ ತಿಂಗಳ ಅವಧಿಯಿಂದ,  ೨ ವರುಷಗಳವರೆಗಿನ ಜೈಲುವಾಸವನ್ನು ವಿಧಿಸಬಹುದಾಗಿದೆ.  'ಮಹಾ' ಸರಕಾರದನಂತರ, ಇನ್ನೂ ಕೆಲವು ರಾಜ್ಯಗಳು ಅಂತಹ ಕಾನೂನನ್ನು ಜಾರಿಗೊಳಿಸಿವೆ. ಆದರೆ ಅಂತಹ ಕಾನೂನಿನ ಕಾರ್ಯಾನ್ವಯ ಮಾತ್ರ ಕಷ್ಟಸಾಧ್ಯ. ಎಲ್ಲವುದಕ್ಕಿಂತ ಪರಿಣಾಮಕಾರಿಯಾಗ ಬಲ್ಲದ್ದು, ಜನರುಗಳ ಮನಃಸ್ಥಿತಿಯ ಪರಿವರ್ತನೆ. ಅಂತಹ ಆರೋಗ್ಯಕರ ಅಭ್ಯಾಸಗಳಿಗೆ ಜನರುಗಳ ಮನಸ್ಸನ್ನು ಅಣಿಗೊಳಿಸುವಂತಹ ಪರಿಸ್ಥಿತಿಯನ್ನು ಕೋವಿಡ್ ಮಹಾಮಾರಿ ತಂದಿಟ್ಟಿರಬಹುದು ಎಂಬ ಆಶಾಭಾವನೆ ಕಿರಣರದಾಗಿತ್ತು. 

ಕೊರೋನಾ ಸೇನಾನಿಗಳನ್ನು ಗೌರವಿಸಬೇಕೆಂಬುದು ನಮಗೆ ಕೋವಿಡ್ ಮಹಾಮಾರಿ ಕಲಿಸಿದ ಮತ್ತೊಂದು ಪಾಠ. ಮುಖ್ಯವಾಗಿ ಸ್ವಚ್ಛತಾ ಕರ್ಮಚಾರಿಗಳ ಕೆಲಸ ಅತ್ಯಂತ ಕಷ್ಟದಾಯಕವಾದುದು. ಅವರುಗಳಿಗೀಗ ಸಾಕಷ್ಟು ಗೌರವ ದೊರೆಯುತ್ತಿರುವುದು ಸಂತಸದ ವಿಷಯ. ಕೆಲವು ಸಂದರ್ಭಗಳಲ್ಲಿ ಅವರುಗಳಿಗೆ ಜನರು ಹೆದರುವುದೂ ಉಂಟು! 'ನಮ್ಮ ಮನೆಯ ಕಸವನ್ನು ಅವರು ಬಿಟ್ಟು ಹೋದರೆ ಏನು ಮಾಡುವುದು?' ಎಂಬ ಭಯ ಸಾಧಾರಣವಾಗಿ ಎಲ್ಲಾ ಗೃಹಿಣಿಯರಿಗೂ ಇರುತ್ತದೆ. ಕಾಲೋನಿಗಳ  ಹೆಂಗಸರುಗಳು ಸ್ವಚ್ಛತಾ ಕರ್ಮಚಾರಿಗಳಿಗೆ ಕಾಫಿ/ಟೀ ಮತ್ತು ಬಿಸ್ಕತ್ ಗಳನ್ನೂ ಕೊಟ್ಟು ಸತ್ಕರಿಸುವುದು, ಲಾಕ್ಡೌನ್ ಸಮಯದಲ್ಲಿ ಕಂಡುಬರುತ್ತಿರುವ ಉತ್ತಮ ಬೆಳವಣಿಗೆಯಾಗಿದೆ. 

ಮಾಹಾಮಾರಿ (pandemic) ಸಮಯದಲ್ಲಿ ಎಲ್ಲಾ ವರ್ಗದ ಕರ್ಮಚಾರಿಗಳಿಗೂ ತಮ್ಮ ತಮ್ಮ ಕೆಲಸಗಳ ಬಗ್ಗೆ ಅಭಿಮಾನ (dignity of labour) ಮೂಡಿರುವುದು ಸಂತಸದ ವಿಷಯ. ತಾವು ಕೇಳಿದ ಸತ್ಯಕತೆಯೊಂದರ ನೆನಪು ಡಾ. ಕಿರಣರನ್ನು ಆಗ ಕೆಣಕಿತ್ತು. ಇಬ್ಬರೂ ಕೆಲಸ ಮಾಡುವ ದಂಪತಿಯ ಮನೆಯಲ್ಲಿ ಹೆಂಗಸೊಬ್ಬಳು ಮನೆಗೆಲಸ ಮಾಡುತ್ತಿದಳು. ಕೋವಿಡ್ ಹರಡುವಿಕೆ ಶುರುವಾದನಂತರ ಆ ಮನೆಗೆಲಸದವಳನ್ನು, ಆ ಮನೆಯೊಡತಿ ಕಡ್ಡಾಯವಾಗಿ ರಜೆಯ ಮೇಲೆ ಕಳುಹಿಸಿದ್ದಳು. ಒಂದು ತಿಂಗಳ ಸಮಯ ಕಳೆಯಿತು. ಮನೆಯ ಕೆಲಸದ ನಿಭಾವಣೆ ಅಸಾಧ್ಯವೆಂದು ಮನಗಂಡ ಆ ಮನೆಯೊಡತಿ, ಆ ಮನೆಗೆಲಸದವಳನ್ನು ಮತ್ತೆ ಕೆಲಸಕ್ಕೆ ಕರೆಸಿದ್ದಳು. ಮನೆಗೆಲಸದಾಕೆ ಥಟ್ಟನೆ ಬಂದಿದ್ದಳು, ಆದರೆ ರಜೆಯ ಒಂದು ತಿಂಗಳ ಅವಧಿಗೆ ಪೂರ್ತಿ ಸಂಬಳವನ್ನು ನೀಡಬೇಕೆಂದು ಆಗ್ರಹಿಸಿದ್ದಳು.  ಬೇರೆ ಮಾರ್ಗಗಳಿಲ್ಲದೆ ಆ ಮನೆಯೊಡತಿ ಅರ್ಧ ಸಂಬಳ ನೀಡಲೊಪ್ಪಿ, ಮನೆಗೆಲಸದವಳನ್ನು ಕರೆಸಿಕೊಂಡಿದ್ದಳು. ಬರುವ ಸೋಮವಾರದಿಂದ ಕೆಲಸಕ್ಕೆ ಹಾಜರಾಗುವ ಮುನ್ನ, ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು,  ಕೋವಿಡ್ ಇಲ್ಲವೆಂಬ ಪ್ರಮಾಣ ಪತ್ರವನ್ನು ತಂದು ತೋರಿಸಬೇಕಾಗಿ ಮನೆಯೊಡತಿ ಆಗ್ರಹಿಸಿದ್ದಳು. ಪರೀಕ್ಷೆ ಮಾಡಿಸಿಕೊಳ್ಳಲು ಪಾವತಿಸಬೇಕಾದ ಹಣವನ್ನು ಮನೆಯೊಡತಿಯೇ ನೀಡಲು ಸಮ್ಮತಿಸಿದ್ದಳು. ಪರೀಕ್ಷೆ ಮಾಡಿಸಿಕೊಳ್ಳಲೊಪ್ಪಿದ ಮನೆಗೆಲಸದಾಕೆ ನನ್ನದೂ ಒಂದು ಬೇಡಿಕೆ ಇದೆಯೆಂದಳು. "ಅಮ್ಮಾ, ನೀವೂ ಗಂಡ, ಹೆಂಡತಿ ಆಸ್ಪತ್ರಗೆ ಹೋಗಿ ಕೋವಿಡ್ ಇಲ್ಲವೆಂಬ ಪ್ರಮಾಣ ಪತ್ರವನ್ನು ನನಗೆ ಬರುವ ಸೋಮವಾರವೇ ತೋರಿಸಿ, ನನಗೂ ಮನೆಯಲ್ಲಿ ಗಂಡ ಮತ್ತು ಮಕ್ಕಳುಗಳಿದ್ದಾರೆ. ಅವರುಗಳು ಮತ್ತು ನನ್ನ ಆರೋಗ್ಯವೂ ನಿಮ್ಮಗಳಷ್ಟೇ  ಮುಖ್ಯ" ಎಂದಾಗ, ಮನೆಯೊಡತಿ ಮತ್ತವಳ ಗಂಡ ನಿಟ್ಟುಸಿರು ಬಿಡುವಂತಾಗಿತ್ತು. 

***

ದೂರದ ಖಾಸಗಿ ಕಾಡಿನ ಪ್ರವಾಸದಿಂದ  ಹಿಂತುರುಗಿದನಂತರವೂ, ಡಾ. ಕಿರಣರಿಗೆ ಇನ್ನೂ ನಾಲ್ಕು ದಿನಗಳ ರಜೆ ಉಳಿದಿತ್ತು. ಒಂದು ದಿನ, ಡಾ.ಕಿರಣರ ಫೋನು ರಿಂಗಣಿಸಿತ್ತು. 'ನಾನು, ಭವಾನಿ ಟೀಚರ್ ಮಾತನಾಡುತ್ತಿದ್ದೇನೆ. ನನ್ನ ನೆನಪು ನಿನಗಿದೆಯೇ?' ಥಟ್ಟನೆ ಉತ್ತರಿಸಿದ ಕಿರಣ್, 'ಒಹೋ, ಭವಾನಿ ಟೀಚರ್, ನಾನ್ಹೇಗೆ ನಿಮ್ಮನ್ನು ಮರೆಯಲಿ? ನನ್ನಲ್ಲಿ ವೈದ್ಯನಾಗಬೇಕೆಂಬ ಬಯಕೆಯ ಕಿಡಿಯನ್ನು  ಹೊತ್ತಿಸಿದವರೇ ನೀವು. ತಾವು ಹೇಗಿದ್ದೀರಿ ಮೇಡಂ? ನನ್ನಿಂದ ಏನಾಗಬೇಕು?' ಎಂದರು. 

'ನಾನು ನಿಮ್ಮ ಮನೆಗೊಮ್ಮೆ ಬಂದು ಕೆಲವು ವಿಷಯಗಳನ್ನು ಚರ್ಚಿಸಬಹುದೇ?' ಭವಾನಿಯವರ ಮಾತಿನಲ್ಲಿ ಕೋರಿಕೆಯ ಭಾವವಿತ್ತು. 

'ನಮ್ಮ ಮನೆಗೆ ಬರಲು, ತಾವು ಯಾವ ಅನುಮತಿಯನ್ನೂ ಪಡೆಯ ಬೇಕಿಲ್ಲ. ಯಾವಾಗಲಾದರೂ ತಾವು ನಮ್ಮ ಮನೆಗೆ ಬರಬಹುದು.' ಕಿರಣರ ಉತ್ತರದಲ್ಲಿ ಗೌರವದ ಭಾವವಿತ್ತು. 

ಪೂರ್ವ ನಿಗದಿತ ಸಮಯಕ್ಕೆ ಸರಿಯಾಗಿ ಭವಾನಿ ಟೀಚರ್ ಡಾ. ಕಿರಣರ ಮನೆಗೆ ಬಂದಿದ್ದರು. ಡಾ. ಕಿರಣರ ೧೦ನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಪಡೆದಿದ್ದ, ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲರಾಗಿ ಈಗ ಕಾರ್ಯ ನಿರ್ವಹಿಸುತ್ತಿದವರು ಭವಾನಿಯವರು. ಉಭಯ ಕುಶಲೋಪರಿಯ ಸಂಭಾಷಣೆಗಳು ಮುಗಿದನಂತರ, ಭವಾನಿ ಟೀಚರ್ ವಿಷಯದ ಚರ್ಚೆಗೆ ಬಂದಿದ್ದರು. 'ನೋಡು ಕಿರಣ್, ಕೋವಿಡ್-೧೯ರ ಮಹಾಮಾರಿ ನಮ್ಮ ವಿದ್ಯಾಭ್ಯಾಸದ ವ್ಯವಸ್ಥೆಯನ್ನೇ ಬುಡಮೇಲು ಮಾಡಿಟ್ಟಿದೆ. "ವಿಶ್ವಾದ್ಯಂತ           ೧. ೨ ಬಿಲಿಯನ್(೧೨೦ ಕೋಟಿ)ರಷ್ಟು ವಿದ್ಯಾರ್ಥಿಗಳು, ಕೆಲವು ತಿಂಗಳುಗಳ ಹಿಂದೆ ಆರಂಭವಾದ ಶೈಕ್ಷಣಿಕ ವರ್ಷದಿಂದ, ಶಾಲೆಗಳಿಗೆ ಹೋಗುತ್ತಿಲ್ಲ."  ಆನ್ ಲೈನ್ ಕಲಿಕೆಯ ವ್ಯವಸ್ಥೆ ಇಡೀ ಪ್ರಪಂಚದಲ್ಲೇ ಈಗ ಜಾರಿಗೊಂಡಿದೆ. ಶಿಕ್ಷಣ ಮತ್ತು ಮನೋವಿಜ್ಞಾನದ ತಜ್ಞರುಗಳು ಸಹ ಆನ್ ಲೈನ್ ಕಲಿಕೆ ಎನ್ನುವ ವ್ಯವಸ್ಥೆ ಶಾಶ್ವತವಾಗಿ ವಿದ್ಯಾಭ್ಯಾಸದ ಭಾಗವಾಗಿ ಹೋಗಿದೆ ಎಂಬುದನ್ನು ಒಪ್ಪುತ್ತಾರೆ. ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪೋಷಕರು "ಆನ್ ಲೈನ್ ಕಲಿಕೆಯ ವ್ಯವಸ್ಥೆ ಸಮರ್ಪಕವಾಗಿದ್ದು,  ದೂರದ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗಿಬರುವ ಪ್ರಯಾಸದ ಹೊರೆಯನ್ನು ಈ  ವ್ಯವಸ್ಥೆ ನಿವಾರಿಸಿದೆ" ಎನ್ನುತ್ತಾರೆ. ಸಮಯದ ಉಳಿತಾಯ ಕೂಡ ಆನ್ ಲೈನ್ ವ್ಯವಸ್ಥೆಯ ಮತ್ತೊಂದು ಆಕರ್ಷಣೆಯಾಗಿದೆ. ಸಾಕಷ್ಟು ಸಂಖ್ಯೆಯ "ಶಿಕ್ಷಾ-ತಾಂತ್ರಿಕ ಆಪ್," (edu-tech apps)ಗಳು, ಭಾರತದಲ್ಲಿ ಈಗ ಹೆಚ್ಚು-ಹೆಚ್ಚು ಜನಪ್ರಿಯವಾಗುತ್ತ ಬೆಳೆಯುತ್ತಿವೆ. 

ಆದರೆ ಮತ್ತೆ ಕೆಲವರು, ಕಲಿಕೆಯ ಡಿಜಿಟಲ್ ವೇದಿಕೆಗಳ ಪ್ರವೇಶ ನಮ್ಮ ದೇಶದಲ್ಲಿ ದಿಢೀರನೆ ಆಗುತ್ತಾ ಇದೆ ಎಂದು ಆರೋಪಿಸುತ್ತಾರೆ. ಆ ಹೊಸರೀತಿಯ ಬೋಧನಾ ಕ್ರಮಕ್ಕೆ ಬೇಕಾದ ತರಬೇತಿ, ಶಿಕ್ಷಕರುಗಳಿಗೆ ದೊರೆತಿಲ್ಲ ಮತ್ತು "ಪ್ರಸಾರದ ವಿಸ್ತಾರದ (bandwidth)" ಕೊರತೆ ಕೂಡಾ ಇದೆ. ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಸ್ಮಾರ್ಟ್ ಫೋನ್ಗಳನ್ನು ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿನ್ನೂ ಕಂಡೇ ಇಲ್ಲ. ಡಿಜಿಟಲ್ ಕಲಿಕೆಯ ಭಯದಿಂದ ಆ ಬಡ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಪೋಷಕರು ಹೆದರಿ ಹೋಗಿದ್ದಾರೆ. 

"ಶಾಲಾ ಕೊಠಡಿಗಳಲ್ಲಾಗುವ ನೇರ ಶಿಕ್ಷಣ ವ್ಯವಸ್ಥೆಗೆ ಪರ್ಯಾಯ" ಮತ್ತೊಂದಿಲ್ಲ ಎಂಬುದು ನನ್ನ ವೈಯುಕ್ತಿಕ ಅನಿಸಿಕೆ. ಶಿಕ್ಷಕ-ವಿದ್ಯಾರ್ಥಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವಿನ ಸುಮಧುರ ಸಂಬಂಧ ಬಹು ಮುಖ್ಯ ಮತ್ತು ಅದರ ಸಾಧ್ಯತೆ ಇರುವುದು ನೇರ ಶಿಕ್ಷಣದ ವ್ಯವಸ್ಥೆಯಲ್ಲಿ ಮಾತ್ರ. ಪಠ್ಯೇತರ ಮತ್ತು ಪಠ್ಯಸಹಿತದ ಕಲಿಕೆ (co-curricular and extra-curricular learning)ಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಬಹಳ ಅವಶ್ಯಕವಾಗಿದ್ದು, ಅದು ನೇರ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ. ಆಟೋಟ ಚಟುವಟಿಕೆಗಳ ಗತಿಯೇನು? ಆದರೆ ಕೋವಿಡ್ನ ಕಾಂಡ ಮುಗಿದನಂತರವೂ ಆನ್ಲೈನ್ ಶಿಕ್ಷಣವೆಂಬುದು ಹೋಗದು. ನೇರ ಶಿಕ್ಷಣ ಮತ್ತು ಆನ್ಲೈನ್ ಶಿಕ್ಷಣ, ಇವುಗಳ ಮಿಶ್ರಣದ ವ್ಯವಸ್ಥೆ (hybrid model) ಬರುವ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಹೋಗುವುದು ಖಂಡಿತ.'

ಭವಾನಿಯವರ ಮಾತುಗಳನ್ನು ಏಕಾಗ್ರತೆಯಿಂದ ಡಾ. ಕಿರಣ್ ಕೇಳುತ್ತಿದ್ದರು. 'ತಂತ್ರಜ್ಞಾನ (technology)ವೆಂಬುದೊಂದು ವ್ಯವಸ್ಥೆಯನ್ನು ಬದಲಿಸುವ (disruptor) ಶಕ್ತಿಯೆಂದು ತಿಳಿದಿದ್ದೆವು. ಆದರೆ ಕೋವಿಡ್-೧೯ ಎಂಬುದು ತಂತ್ರಜ್ಞಾನಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಬದಲಿಸುವ ಶಕ್ತಿಯಾಗಿ ಹೊರಹೊಮ್ಮಿದೆ. ಡಿಜಿಟಲ್ ಶಿಕ್ಷಣವೆಂಬುದು "ಮುಂದಿನ ದಿನಗಳ ಹೊಸ ಕ್ರಮವಾಗಿ (new normal)" ಹೋಗಿದೆ.  ಸಾರ್ಸ್-೨೦೦೨ರ ವೈರಾಣುವಿನ ರೋಗ ಹರಡಿದನಂತರ, ಇ-ವ್ಯಾಪಾರ (e-commerce) ಎಂಬ ವ್ಯವಸ್ಥೆ ಇಡೀ ವಿಶ್ವವನ್ನಾವರಿಸಿತು. ಕೋವಿಡ್-೧೯ರ ನಂತರ ಇ-ಶಿಕ್ಷಣದ ವ್ಯವಸ್ಥೆ ಬಂದು ನಿಂತಿದೆ.' ಶಿಷ್ಯನ ಅನಿಸಿಕೆ, ಭವಾನಿ ಟೀಚರ್ ರವರ ಮೆಚ್ಚುಗೆ ಗಳಿಸಿತ್ತು. 

'ಕಿರಣ್, ನಿನ್ನಿಂದ ನನಗೊಂದು ಕೆಲಸವಾಗಬೇಕು. ಇ-ಶಿಕ್ಷಣದ ವ್ಯವಸ್ಥೆಯೊಂದಿಗೆ ಮಕ್ಕಳು ಹೊಂದಿಕೊಳ್ಳುವಂತೆ ಮಾಡಲು ನಾವು ಬೇರೆ ಬೇರೆ ಕ್ಷೇತ್ರಗಳಿಂದ ಆಯ್ದ ನುರಿತ ಮಾತುಗಾರರ  ಕಾರ್ಯಕ್ರಮವನ್ನೇರ್ಪಡಿಸಿ, ಆ ತಜ್ಞರುಗಳೊಂದಿಗೆ ನಮ್ಮ ಮಕ್ಕಳು ಆನ್ಲೈನ್ನಲ್ಲಿ ಸಂವಹಿಸುವಂತಹ (interacting) ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ಈ ಬಾರಿ ಕೋವಿಡ್-೧೯ರ ವಿಷಯವನ್ನು ಕುರಿತಾದ ಕಾರ್ಯಕ್ರಮವನ್ನು ವೈದ್ಯನಾದ ನೀನು ನಡೆಸಿಕೊಡಬೇಕೆಂಬುದು ನನ್ನ ಬಯಕೆ. ನಿನ್ನ ಕಾರ್ಯಕ್ರಮ ಒಂದು ಇ-ಪ್ರಶೋತ್ತರಾವಳಿ (e-quiz) ರೂಪದಲ್ಲಿರಲಿ. ೧೩-೧೫ರ ವಯಸ್ಸಿನ ನಮ್ಮ ಶಾಲೆಯ ಪ್ರೌಢ ಶಾಲೆಯ ಮಕ್ಕಳನ್ನು ನಾವು ಆರಿಸಿದ್ದೇವೆ. ಕ್ವಿಜ್ನ ಆಯ್ಕೆಯ ಸುತ್ತುಗಳನ್ನು ಈಗಾಗಲೇ ನಡೆಸಿದ್ದೇವೆ. ಎರಡು ವಿದ್ಯಾರ್ಥಿಗಳಿರುವ, ಮೂರು ತಂಡಗಳು ಅಂತಿಮ ಸುತ್ತುನ್ನು (finals)  ಪ್ರವೇಶಿಸಿವೆ. ಅಂತಿಮ ಸುತ್ತಿನ ಕಾರ್ಯಕ್ರಮದ "ಕ್ವಿಜ್-ಮಾಸ್ಟರ್ (Quiz Master)" ನೀನಾಗಿ ಕಾರ್ಯಕ್ರಮವನ್ನು ನಡೆಸಿಕೊಡಬೇಕು. ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯಾದ ನೀನು, ನಮ್ಮ ವಿದ್ಯಾರ್ಥಿಗಳಿಗೆ  "ಮಾದರಿ ವ್ಯಕ್ತಿ (Role model)"ಯಾಗಿ ಕಾಣಿಸಿಕೊಳ್ಳಬೇಕು.' ಭವಾನಿ ಟೀಚರ್ ಕೋರಿಕೆಗೆ ಡಾ. ಕಿರಣ್ ತಕ್ಷಣ ಸಮ್ಮತಿ ನೀಡಿದ್ದನು. 

ಕ್ವಿಜ್ ದಿನ ಬಂದಿತ್ತು. ಉತ್ತಮ ತಯಾರಿಯನ್ನು ಮಾಡಿಕೊಂಡಿದ್ದ ಡಾ. ಕಿರಣ್ ಕ್ವಿಜ್ ನಡೆಸಲು ಕಾತರನಾಗಿದ್ದನು. 'ಇಂದಿನ ಆನ್ಲೈನ್ ಕ್ವಿಜ್ ಕಾರ್ಯಕ್ರಮಕ್ಕೆ ಎಲ್ಲಾ ವಿದ್ಯಾರ್ಥಿಗಳಿಗೂ ಸುಸ್ವಾಗತ. ಪ್ರಿನ್ಸಿಪಾಲರಾದ ಭವಾನಿರವರಿಗೆ ಮತ್ತು ಎಲ್ಲಾ ಶಿಕ್ಷಕ, ಶಿಕ್ಷಕಿಯರುಗಳಿಗೆ ನನ್ನ ಸವಿನಯ ನಮಸ್ಕಾರಗಳು. ಅಂತಿಮ ಸುತ್ತಿಗೆ ಆಯ್ಕೆಯಾಗಿರುವ "ಎ, ಬಿ, ಮತ್ತು ಸಿ" ತಂಡಗಳಿಗೆ ನನ್ನ ಅಭಿನಂದನೆಗಳು. ನಿಮ್ಮಗಳ ಹಾಗೇ ನಾನೂ ಕೂಡಾ, ಕೆಲವು ವರ್ಷಗಳ ಹಿಂದೆ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದೆ, ಎಂದು ನಿಮಗೆ ತಿಳಿಸಲು ಹೆಮ್ಮೆ ಪಡುತ್ತೇನೆ. ನನ್ನ ಹೆಸರು ಡಾ. ಕಿರಣ್. ಇಂದಿನ ಅಂತಿಮ ಸುತ್ತಿನ ಇ-ಕ್ವಿಜ್ ಗೆ ನಾನೇ ಇಂದಿನ ಕ್ವಿಜ್ ಮಾಸ್ಟರ್. ನಿಮಗೆಲ್ಲ ಮುಂಚೆಯೇ ತಿಳಿದಿರುವಂತೆ ಇಂದಿನ ಕ್ವಿಜ್ ನ ವಿಷಯ "ಕೋವಿಡ್-೧೯." ಕ್ವಿಜ್ ನ ನಿಯಮಗಳು ಬಹಳ ಸರಳವಾಗಿವೆ. ಒಟ್ಟು ೫ ಸುತ್ತುಗಳಲ್ಲಿ ಕ್ವಿಜ್ ಪ್ರಶ್ನೆಗಳನ್ನು ಕೇಳಲಾಗುತ್ತದೆ. ತಂಡವೊಂದಕ್ಕೆ ನೇರವಾಗಿ ಕೇಳಿದ ಪ್ರಶ್ನೆಗಳನ್ನು ಉತ್ತರಿಸಿದರೆ ೧೦ ಅಂಕಗಳು ದೊರೆಯುತ್ತದೆ. ನೇರ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕದಿದ್ದರೆ, ಅದೇ ಪ್ರಶ್ನೆಯನ್ನು ಮುಂದಿನ ತಂಡಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಆ ರೀತಿ ಮುಂತಳ್ಳಿದ ಪ್ರಶ್ನೆಗಳಿಗೆ (passed questions) ಸರಿಯುತ್ತರ ನೀಡಿದರೆ ೫ ಅಂಕಗಳನ್ನು ನೀಡಲಾಗುತ್ತದೆ. ನಿಮ್ಮ ಗಣಿತದ ಅಧ್ಯಾಪಕಿಯಾದ ಶ್ರೀಮತಿ ಮೇರಿಯವರು ಇಂದಿನ ಎಲೆಕ್ಟ್ರಾನಿಕ್ ಅಂಕಪಟ್ಟಿಯ ನಿರ್ವಹಣೆಯ ಕಾರ್ಯವನ್ನು ಮಾಡುತ್ತಾರೆ. ಪ್ರತಿ ಸುತ್ತು ಮುಗಿದನಂತರ ಅಂಕಪಟ್ಟಿಯನ್ನು ನಿಮ್ಮ ಪರದೆಗಳ ಮೇಲೆ  ತೋರಿಸಲಾಗುತ್ತದೆ. ಅತ್ತ್ಯತ್ತಮ ತಂಡ ಇಂದು ಜಯಗಳಿಸಲಿ ಎಂದು ಹಾರೈಸುತ್ತೇನೆ. ಇಂದಿನ ಕ್ವಿಜ್ ನ ವೀಕ್ಷಕರಾಗಿ  ಆನ್ಲೈನ್ ಚಾನ್ನೆಲ್ಲಿನಲ್ಲಿ ನಮ್ಮೊಡನಿರುವ ಎಲ್ಲ ವಿದ್ಯಾರ್ಥಿಗಳೂ,  ನಿಮ್ಮ ಪರದೆಗಳ ತಳಭಾಗದಲ್ಲಿರುವ  'ಸಂವಹನದ ಪೆಟ್ಟಿಗೆ (dialogue box)'ಯಲ್ಲಿ, ಇಂದಿನ ಅಂತಿಮ ಸುತ್ತಿನಲ್ಲಿ ಭಾಗವಹಿಸುತ್ತಿರುವ ಮೂರೂ ತಂಡಗಳಿಗೆ "ಗುಡ್ ಲಕ್" ಎಂದು ಟೈಪ್ ಮಾಡಿ, ಎಂದು  ಆಜ್ಞಾಪಿಸಿದ   ಡಾ. ಕಿರಣ್, ನುರಿತ ಕ್ವಿಜ್ ಮಾಸ್ಟರರಂತೆ ಕಂಡಿದ್ದರು. ಮುಂದಿನ ೭೦ ಸೆಕೆಂಡ್ ಸಮಯ ಮಾತ್ರದಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳಿಂದ  "ಗುಡ್ ಲಕ್" ಎಂಬ ಸಂದೇಶಗಳು ಡೈಲಾಗ್ ಬಾಕ್ಸ್ ನಲ್ಲಿ ಮೂಡಿದಾಗ ಡಾ. ಕಿರಣ್ ಮತ್ತು ಪ್ರಿನ್ಸಿಪಾಲರಾದ ಭವಾನಿಯವರು ಪುಳಕಿತಗೊಂಡಿದ್ದರು. 

'ಇಂದಿನ ಕ್ವಿಜ್ ನ ವಿಷಯ ಕೋವಿಡ್-೧೯ ಎಂಬುದು ತಮಗೆಲ್ಲ ತಿಳಿದಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾಹಿತಿ ಫಲಕದಲ್ಲಿ ಪ್ರಕಟಿಸಿರುವ ಕೋವಿಡ್ ಮಾಹಿತಿಗಳ  ಮೇಲೆ ನನ್ನ ಪ್ರಶ್ನೆಗಳು ಆಧಾರಿತವಾಗಿರುತ್ತದೆ. ತಂಡಗಳು ಸಮಯ ಪಾಲನೆಯನ್ನು ತಪ್ಪದೇ ಮಾಡಬೇಕು. ಉತ್ತರಗಳನ್ನು  ನೀಡುವ ಮುನ್ನ, ಬೇರ್ಯಾವ ವೆಬ್ಸೈಟ್ ಗಳನ್ನು ತೆರೆದು ಮಾಹಿತಿಯನ್ನು ಪಡೆಯಲೆತ್ನಿಸಬಾರದು. ಎಲ್ಲಾ ಮೂರು ತಂಡಗಳ ಚಲನ-ವಲನಗಳ ಮೇಲೆ ನಮ್ಮ ಪ್ರತಿನಿಧಿಗಳು ಹದ್ದಿನ ಕಣ್ಣಿಟ್ಟಿರುತ್ತಾರೆ.  ನಾನು ಅನೊಮೋದಿಸುವ ಯಾವುದೇ ಉತ್ತರವನ್ನು "ವೈದ್ಯರೊಬ್ಬರ ಸಲಹೆ" ಎಂದು ಪರಿಗಣಿಸಬಾರದು. ತಮಗಾಗಲಿ ಅಥವಾ ತಮ್ಮ ಕುಟುಂಬದಲ್ಲಿ ಯಾರಿಗಾದರೂ, ಏನಾದರೂ ಸಮಸ್ಯೆಗಳಿದ್ದಲ್ಲಿ ತಮ್ಮ ಕುಟುಂಬದ ಡಾಕ್ಟರ್ ರವರನ್ನು ಸಂಪರ್ಕಿಸಬೇಕು. ಕ್ವಿಜ್ ಕಾರ್ಯಕ್ರಮ ಈಗ ಪ್ರಾರಂಭವಾಗುತ್ತದೆ.' ಎನ್ನುತ್ತಾ ಡಾ. ಕಿರಣ್ ತಮ್ಮ ದನಿಯನ್ನೇರಿಸಿದ್ದರು. 

ತಂಡ 'ಎ' ಗಾಗಿ ಇಗೋ ನನ್ನ ಮೊದಲ ಪ್ರಶ್ನೆ. 'ಕೊರೋನಾವೈರಾಣು ಎಂದರೇನು?'

ಟೀಮ್ 'ಎ' ಉತ್ತರ ಹೀಗಿತ್ತು: 'ಕೊರೋನಾ ವೈರಾಣುಗಳೆಂಬುದು ವೈರಾಣುಗಳ ಒಂದು ವಂಶ. ಬೇರೆ ಬೇರೆ ರೀತಿಯ ಕೊರೋನಾ ವೈರಾಣುಗಳಿಂದ ಈ ಮುಂಚೆ ಸಾರ್ಸ್ ಮತ್ತು ಮೆರ್ಸ್ (SARS and MERS) ಎಂಬ ರೋಗಗಳು ಹರಡಿವೆ. ಅತ್ಯಂತ ಈಚೆಗೆ ಕೋವಿಡ್-೧೯ ವೈರಾಣುವಿನ ಇರುವಿಕೆಯನ್ನು ಕಂಡುಹಿಡಿಯಲಾಗಿದೆ.'

ಉತ್ತರ ಸರಿಯಾಗಿದೆ. ಮೇರಿ ಮೇಡಂ 'ಎ' ತಂಡಕ್ಕೆ ೧೦ ಅಂಕಗಳನ್ನು ನೀಡುವುದು. ಈಗ ನನ್ನ ಪ್ರಶ್ನೆ 'ಬಿ' ತಂಡಕ್ಕೆ. 

'ಕೋವಿಡ್-೧೯ ಎಂದರೇನು? ಅದನ್ನು ಮಹಾಮಾರಿ (pandemic) ಎಂದೇಕೆ ಕರೆಯುತ್ತಾರೆ?'

ತಂಡ 'ಬಿ' ಯ ಉತ್ತರ ಹೀಗಿತ್ತು: 'ಕೋವಿಡ್-೧೯ ಎಂದರೆ "ಕೊರೋನಾ ವೈರಾಣುವಿನ ರೋಗ-೨೦೧೯ (Corona Virus Disease - 19)" ಎಂದು. ಈ ರೋಗ ಇಡೀ ವಿಶ್ವವನ್ನೇ ಆವರಿಸಿರುವುದರಿಂದ, ವಿಶ್ವ ಆರೋಗ್ಯ ಸಂಸ್ಥೆ ಈ ರೋಗವನ್ನು ಮಹಾಮಾರಿ ಎಂದು ಘೋಷಿಸಿದೆ.'

ಸಂತುಷ್ಟರಾದ ಕಿರಣ್, 'ಚೆನ್ನಾಗಿ ಹೇಳಿದ್ದೀರಿ. ನಿಮಗೀಗ ಹತ್ತು ಅಂಕಗಳು ದೊರೆತಿವೆ' ಎಂದರು. 

'ಕೋವಿಡ್-೧೯ ರೋಗದ ಲಕ್ಷಣಗಳೇನು?' ಇದು 'ಸಿ' ತಂಡಕ್ಕೆ ಕೇಳಿದ ಪ್ರಶ್ನೆಯಾಗಿತ್ತು. 

"ಜ್ವರ, ವಣಗೆಮ್ಮು, ಆಯಾಸ, ಮೂಗು ಕಟ್ಟಿದಂತಾಗುವುದು, ಗಂಟಲ ಕೆರತ, ಭೇದಿ, ವಾಸನೆ ಮತ್ತು ರುಚಿಗಳನ್ನು ಕಳೆದುಕೊಳ್ಳುವುದು, ಚರ್ಮದ ಮೇಲಿನ ಬೊಬ್ಬೆಗಳು ಮತ್ತು ಕೈ -ಕಾಲುಗಳ ಬೆರಳುಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳುವುದು" ಎಂದುತ್ತರಿಸಿತ್ತು ತಂಡ 'ಸಿ.' 

'ಅಭಿನಂದನೆಗಳು ತಂಡ 'ಸಿ' ಗೆ. ಒಂದನೇ ಸುತ್ತು ಈಗ ಕೊನೆಗೊಂಡಿದೆ. ಎಲ್ಲಾ ತಂಡಗಳು  ೧೦ ಅಂಕಗಳನ್ನು ಗಳಿಸಿ ಸಮಸ್ಥಿತಿಯಲ್ಲಿವೆ. ಇದೀಗ ಎರಡನೇ ಸುತ್ತಿಗೆ ಪ್ರವೇಶಿಸುತ್ತಿದ್ದೇವೆ. ಡಾ. ಕಿರಣ್ ಮುಂದುವರೆಸಿದ್ದರು. 

'ಕೋವಿಡ್-೧೯ರ ಹರಡುವಿಕೆ ಹೇಗಾಗುತ್ತದೆ?'

ತಂಡ 'ಎ' ಉತ್ತರಿಸಿತ್ತು: ಸೋಂಕಿತರು ಕೆಮ್ಮುವಾಗ, ಸೀನುವಾಗ, ಅವರ  ಮೂಗುಗಳಿಂದ, ಬಾಯಿಗಳಿಂದ,  ಸಿಡಿಯುವ ತುಂತುರು ಬೇರೊಬ್ಬರ ಮುಖದ ಮೇಲೆ ಬಿದ್ದರೆ, ರೋಗ ಹರಡಬಹುದು. ಅಂತಹ ತುಂತುರುಗಳಲ್ಲಿನ ವೈರಾಣುಗಳು,  ಬಾಗಿಲ ಹಿಡಿಗಳು ಮತ್ತು ಮೇಜುಗಳ ಮೇಲೂ ಕೂತು ಕೆಲ ಕಾಲ ಜೀವಂತವಾಗಿರಬಹುದು. ಅವುಗಳನ್ನು ನಾವು ಮುಟ್ಟಿ, ಅದೇ ಕೈಗಳಿಂದ ನಮ್ಮ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಟ್ಟಿಕೊಂಡಾಗ, ರೋಗ ನಮಗೂ ಹರಡಬಹುದು.'

ತಂಡ 'ಎ' ಗೆ ಸಂಪೂರ್ಣ ಅಂಕಗಳನ್ನು ನೀಡಿತ್ತಿದ್ದೇನೆ. ಎರಡನೇ ಸುತ್ತಿನ ಮುಂದಿನ ಪ್ರಶ್ನೆ ಈಗ 'ಬಿ' ತಂಡಕ್ಕೆ. 

'ರೋಗ ಲಕ್ಷಣಗಳಿರದ ವ್ಯಕ್ತಿಯಿಂದ ಕೂಡಾ ರೋಗ ಹರಡಬಲ್ಲುದೆ?'

'ಯಾಕಾಗಬಾರದು?' ಎಂಬುದಾಗಿತ್ತು ತಂಡ 'ಬಿ' ಯ ಉತ್ತರ. 

'ತಮ್ಮ ತಂಡಕ್ಕೆ ಉತ್ತರ ನೀಡುವಲ್ಲಿನ ಪೂರ್ಣ ವಿಶ್ವಾಸ ಕಾಣಿಸಲಿಲ್ಲ. ಆದರೆ ನಿಮ್ಮ ಉತ್ತರ ಸರಿಯಾಗಿದೆ. ಅಂತೂ ಈ ಬಾರಿ ತಮಗೆ ಪೂರ್ಣ ಅಂಕಗಳನ್ನು ನೀಡಿತ್ತಿದ್ದೇನೆ.' ಎಂದರು ಡಾ. ಕಿರಣ್. 

ಮುಂದಿನ ಪ್ರಶ್ನೆ 'ಸಿ' ತಂಡದಾಗಿತ್ತು.  'ರೋಗ ಲಕ್ಷಣಗಳಿಲ್ಲದ ವ್ಯಕ್ತಿಯಿಂದ ರೋಗ ಹರಡುವುದನ್ನು  ನಾವು ಹೇಗೆ ತಡೆಯಬಹುದು?'

'ಎಲ್ಲ ವ್ಯಕ್ತಿಗಳಿಂದ ನಾವು ಒಂದು ಮೀಟರ್ನಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಉತ್ತಮ ಗುಣಮಟ್ಟದ ಮಾಸ್ಕನ್ನು ಯಾವಾಗಲೂ ಧರಿಸಿರಬೇಕು.' 

ಡಾ. ಕಿರಣ್ ಪ್ರತಿಕ್ರಿಯಿಸುತ್ತಾ, 'ಸರಿಯುತ್ತರ. ಆದರೆ ನಾವು ಆಗಾಗ ಸೋಪಿನಿಂದ ಕೈತೊಳೆಯುತ್ತಿರಬೇಕು ಎಂಬ ವಿಧಾನವನ್ನೂ ತಾವು ಹೇಳಬೇಕಿತ್ತು. ಆದರೂ ತಮ್ಮ ತಂಡಕ್ಕೆ ಪೂರ್ಣ ಅಂಕಗಳನ್ನು ನೀಡುತ್ತಿದ್ದೇನೆ' ಎಂದರು. ಎರಡನೇ ಸುತ್ತಿನ ಅಂತ್ಯದ ವೇಳೆಗೆ ಮೂರೂ ತಂಡಗಳು ೨೦ ಅಂಕಗಳನ್ನು ಗಳಿಸಿ ಸಮಸ್ಥಿತಿಯಲ್ಲಿದ್ದವು. 

'ಸ್ವಯಂ-ನಿರ್ಬಂಧ ಎಂದರೇನು?'

ಟೀಮ್ 'ಎ' ಉತ್ತರಿಸುತ್ತಾ, 'ವೈದ್ಯರನ್ನು ಸಂಪರ್ಕಿಸದೆ ಮನೆಯಲ್ಲೇ ಇರುವುದು.' ಎಂದಿತು. 

ಡಾ. ಕಿರಣ್ ಪ್ರತಿಕ್ರಿಯಿಸುತ್ತಾ, 'ತಮ್ಮ ಉತ್ತರದಿಂದ ನನಗೆ ಸಮಾಧಾನವಾಗಿಲ್ಲ. ಅದೇ ಪ್ರಶ್ನೆ ಈಗ ತಂಡ "ಬಿ"ಗೆ ದೊರೆತಿದೆ' ಎಂದರು. 

ಟೀಮ್ 'ಬಿ' ವಿದ್ಯಾರ್ಥಿಗಳು ಉತ್ತರಿಸುತ್ತಾ, 'ಯಾರಲ್ಲಾದರೂ ಕೋವಿಡ್-೧೯ರ ಲಕ್ಷಣಗಳು ಕಂಡುಬಂದಲ್ಲಿ ಅವರುಗಳು ಮನೆಯಲ್ಲೇ ಉಳಿದುಕೊಳ್ಳಬೇಕು. ದೇಹದಲ್ಲಾಗುವ ಮುಂದಿನ ಬೆಳವಣಿಗೆಗಳನ್ನು ಗಮನಿಸುತ್ತಿರಬೇಕು. ಸೋಂಕಿತರ ಪ್ರದೇಶದಲ್ಲಿ ಆ ವ್ಯಕ್ತಿ ವಾಸವಾಗಿದ್ದರೆ, ತಡ ಮಾಡದೆ ಅವರು ವೈದ್ಯರನ್ನು ಸಂಪರ್ಕಿಸಬೇಕು' ಎಂದರು. 

'ಹೆಚ್ಚು ಸಮರ್ಪಕವಾದ ಉತ್ತರ. ತಂಡ "ಬಿ"ಗೀಗ ೫ ಬೋನಸ್ ಅಂಕಗಳು ದೊರೆತಿದೆ' ಎಂದರು. 

'ಕ್ವಾರಂಟೈನಿಂಗ್ ಎಂದರೇನು?' ಇದು ಟೀಮ್ 'ಬಿ' ಗೆ ಕೇಳಿದ, ಮೂರನೇ ಸುತ್ತಿನ  ನೇರ ಪ್ರಶ್ನೆಯಾಗಿತ್ತು. 

'ವ್ಯಕ್ತಿಗೆ ರೋಗ ಲಕ್ಷಣಗಳು ಇಲ್ಲದಿರಬಹುದು. ಆದರೆ ಆ ವ್ಯಕ್ತಿ ಸೋಂಕಿತರೊಬ್ಬರ ಸಂಪರ್ಕವನ್ನು ಮಾಡಿದ್ದಾನೆ ಎಂಬುದು ತಿಳಿದಿರುತ್ತದೆ. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಯಿಂದ ಕೂಡಾ ರೋಗ ಬೇರೆಯವರಿಗೆ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗುವುದನ್ನು ತಡೆಯಲು ಆ ವ್ಯಕ್ತಿ, ವೈದ್ಯರುಗಳು  ತಿಳಿಸಿದಷ್ಟು ಅವಧಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು' ಎಂಬುದು ಟೀಮ್ 'ಬಿ' ಯ ಉತ್ತರವಾಗಿತ್ತು. 

ಡಾ. ಕಿರಣ್ ಸಂತುಷ್ಟರಾಗಿದ್ದರು. 

'ಪ್ರತ್ಯೇಕವಾಗಿರುವುದು ಎಂದರೇನು?' ಎಂಬುದು ಮುಂದಿನ ಪ್ರಶ್ನೆಯಾಗಿತ್ತು. 

ತಂಡ 'ಸಿ' ಉತ್ತರಿಸುತ್ತಾ, 'ಕೋವಿಡ್ ಸೋಂಕಿತರಿಂದ ಬೇರೆಯವರಿಗೆ ರೋಗ ಹರಡದಂತೆ, ಆ ಸೋಂಕಿತರನ್ನು ಪ್ರತ್ಯೇಕವಾಗಿರಿಸಬೇಕು' ಎಂದಿತು. 

'ಇಲ್ಲಿಗೆ ಮೂರು ಸುತ್ತುಗಳು ಮುಗಿದಿವೆ. ತಂಡ "ಎ" ಗೆ ೨೦ ಅಂಕಗಳು, ತಂಡ "ಬಿ" ಗೆ  ೩೫ ಅಂಕಗಳು ಮತ್ತು ಟೀಮ್ "ಸಿ" ಗೆ ೩೦ ಅಂಕಗಳು ದೊರೆತಿವೆ,' ಎಂದರು ಡಾ. ಕಿರಣ್.  

ಈಗ ನಾಲ್ಕನೇ ಸುತ್ತನ್ನು ಪ್ರವೇಶಿಸುತ್ತಿದ್ದೇವೆ. ಈ ಸುತ್ತಿನ ಆರಂಭ ಟೀಮ್ 'ಸಿ' ಯಿಂದ ಆಗುತ್ತದೆ. 

'ಮಕ್ಕಳಿಗೆ ಮತ್ತು ಕಿಶೋರರಿಗೆ ಕೋವಿಡ್-೧೯ರ ರೋಗ ಹರಡಬಹುದೇ?'

'ಮಕ್ಕಳಿಗೂ ಮತ್ತು ಕಿಶೋರರಿಗೂ ಕೋವಿಡ್-೧೯ ಹರಡಬಹುದು' ಎಂಬುದಾಗಿತ್ತು ಟೀಮ್ 'ಸಿ' ಯ ಉತ್ತರ. 

ಅದು ಸರಿಯುತ್ತರವಾದುದರಿಂದ ಟೀಮ್ 'ಸಿ' ಗೆ ೧೦ ಅಂಕಗಳು ದೊರೆತಿತ್ತು. 

'ಕೋವಿಡ್-೧೯ರ ರೋಗಕ್ಕೆ ಲಸಿಕೆ ಮತ್ತು ಔಷಧಗಳಿವೇಯೇ?' ಎಂಬ ಪ್ರಶ್ನೆ ನಾಲ್ಕನೇ ಸುತ್ತಿನ ಪ್ರಶ್ನೆ ತಂಡ 'ಬಿ' ಯದಾಗಿತ್ತು. 

'ಇಲ್ಲ'* (* ಓದುಗರು ಗಮನಿಸಿ: ಈ ಪುಸ್ತಕವನ್ನು ಬರೆದು ಮುಗಿಸಿದನಂತರ, ಕೋವಿಡ್-೧೯ ರೋಗವನ್ನು ತಡೆಯಬಲ್ಲ ಹಲವು ಲಸಿಕೆಗಳು ಬಂದಿವೆ) ಎಂಬ ಸರಿಯುತ್ತರವನ್ನು ತಂಡ 'ಬಿ' ನೀಡಿದಾಗ ಅದಕ್ಕೆ ೧೦ ಅಂಕಗಳು ದೊರೆತಿತ್ತು. 

ಡಾ. ಕಿರಣ್ ನಾಲ್ಕನೇ ಸುತ್ತಿನ ಅಂತಿಮ ಪ್ರಶ್ನೆಯನ್ನು ತಂಡ 'ಎ' ಮುಂದಿಡುತ್ತಾ, 'ಕೋವಿಡ್-೧೯ರ ಸೋಂಕು ತಗುಲಿದ ಮೇಲೆ, ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಎಷ್ಟು ದಿನಗಳು ಬೇಕಾಗಬಹುದು?' ಎಂದರು. 

ತಂಡ 'ಎ' ಉತ್ತರಿಸುತ್ತಾ, 'ಪ್ರಾಯಶಃ ೩ ದಿನಗಳು' ಎಂದಿತು. 

'ತಪ್ಪುತ್ತರ, ಪ್ರಶ್ನೆ ಈಗ ತಂಡ "ಸಿ" ಗೆ ವರ್ಗಾವಣೆಗೊಂಡಿದೆ' ಎಂದರು ಡಾ. ಕಿರಣ್. 

ಟೀಮ್ 'ಸಿ' ಉತ್ತರಿಸುತ್ತಾ, '೧ರಿಂದ ೧೪ ದಿನಗಳು' ಎಂದಿತು. 

ಉತ್ತರದಿಂದ ಸಮಾಧಾನಗೊಂಡ ಡಾ. ಕಿರಣ್ ಟೀಮ್ 'ಸಿ' ಗೆ ೫ ಬೋನಸ್ ಅಂಕಗಳನ್ನು ನೀಡಿದರು. 'ನಾಲ್ಕನೇ ಸುತ್ತಿನ ಅಂತ್ಯದ ವೇಳೆಗೆ, ಟೀಮ್ "ಎ"ಗೆ ೨೦ ಅಂಕಗಳು, ಟೀಮ್ "ಬಿ" ಮತ್ತು ಟೀಮ್ "ಸಿ" ಗಳಿಗೆ ತಲಾ ೪೫ ಅಂಕಗಳು ಇವೆ ಎಂದು ಅಂಕ ಪಟ್ಟಿ ತೋರಿಸುತ್ತಿದೆ. ನಾವೀಗ ಐದನೆಯ ಹಾಗೂ ಅಂತಿಮ ಸುತ್ತನ್ನು ಪ್ರವೇಶಿಸುತ್ತಿದ್ದೇವೆ' ಎಂದರು. 

'ಕೋವಿಡ್ ವೈರಾಣು ಬೇರೆ ಬೇರೆ ಮೇಲ್ಮೈ (surfaces)ಗಳ ಮೇಲೆ ಎಷ್ಟು ಕಾಲ ಜೀವಂತವಾಗಿರುತ್ತದೆ?'

'ಸಿ' ತಂಡದವರು ಉತ್ತರಿಸುತ್ತಾ, 'ಪ್ಲಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆಗಳ ಮೇಲೆ ೭೨ ಘಂಟೆಗಳು, ತಾಮ್ರದ ಪಾತ್ರೆಗಳ ಮೇಲೆ ೪ ಘಂಟೆಗಳು ಮತ್ತು ಕಾರ್ಡಬೋರ್ಡುಗಳ ಮೇಲೆ ೨೪ ಘಂಟೆಗಳಿಗಿಂತಾ ಕಮ್ಮಿಯಷ್ಟು ಅವಧಿಗಳ ಕಾಲ ಕೋವಿಡ್ ವೈರಾಣು ಜೀವಂತವಾಗಿರುತ್ತದೆ' ಎಂದಿತು. 

'ಸಿ' ತಂಡದ ಉತ್ತರ ಸರಿಯೆಂದು ಡಾ. ಕಿರಣ್ ಘೋಷಿಸಿದ್ದರು. 

'೫ಜಿ ಎಂದರೇನು?'

ಟೀಮ್ 'ಬಿ' ಉತ್ತರಿಸುತ್ತಾ, '೫ಜಿ ಅಥವಾ ೫ನೇ ತಲೆಮಾರು ಎಂಬುದು ಇತ್ತೀಚಿನ ವಿದ್ಯುನ್ಮಾನ ಫೋನ್ ತಂತ್ರಜ್ಞಾನ (wireless cellular phone technology). ಈ ತಂತ್ರಜ್ಞಾನವನ್ನು ೨೦೧೯ರ ನಂತರ ಹೆಚ್ಚು ಉಪಯೋಗಿಸಲಾಗುತ್ತಿದೆ' ಎಂದಿತು. 

ಸರಿಯುತ್ತರವೆಂಬ ಘೋಷಣೆ ಡಾ. ಕಿರಣ್ ರಿಂದ ಬಂದಿತ್ತು. 

'೫ಜಿ ತಂತ್ರ ಜ್ಞಾನದಿಂದ ಆರೋಗ್ಯದ ಸಮಸ್ಯಗಳೇನಾದರೂ ಉಂಟಾಗಬಹುದೇ?'

ಟೀಮ್ 'ಎ'  ಉತ್ತರಿಸುತ್ತಾ, 'ಈ ವರೆಗಿನ ಸಂಶೋಧನೆಗಳ ಪ್ರಕಾರ, ೫ ಜಿ ತಂತ್ರಜ್ಞಾನದ ಬಳೆಕೆಯಿಂದ ಆರೋಗ್ಯದ ಯಾವ ಸಮಸ್ಯೆಯೂ ಉಂಟಾಗದು' ಎಂದಿತು. 

ಡಾ. ಕಿರಣ್ ಪ್ರತಿಕ್ರಿಯಿಸುತ್ತಾ, 'ನಿಮ್ಮ ಉತ್ತರ ಸರಿಯಾಗಿದೆ. ನಿಮಗೆ ಪೂರ್ಣಾಂಕಗಳು. ಆದರೆ ೫ ಜಿ ತಂತ್ರಜ್ಞಾನದಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ ಎಂಬುದನ್ನು ತಮ್ಮಗಳಿಗೆ ತಿಳಿಸಲಿಚ್ಛಿಸುತ್ತೇನೆ. 

'ಇಲ್ಲಿಗೆ ೫ನೇ ಮತ್ತು ಅಂತಿಮ ಸುತ್ತು ಮುಗಿದಿದೆ. ತಂಡ "ಎ" ಗೆ ೩೦ ಅಂಕಗಳು, ತಂಡ "ಬಿ" ಮತ್ತು "ಸಿ" ಗಳಿಗೆ ತಲಾ ೫೫ ಅಂಕಗಳು ದೊರೆತಿವೆ. ಈಗ ತಂಡ "ಬಿ" ಮತ್ತು "ಸಿ" ತಂಡಗಳ ನಡುವೆ "ಟೈ-ಬ್ರೇಕರ್ (tie-breaker)" ಸುತ್ತು ನಡೆಯಬೇಕು. ಈ ಹೊಸ ಸುತ್ತನ್ನು "ಬಝರ್ ಸುತ್ತು (buzzer round)" ಎಂದು  ಕರೆಯೋಣ. ನಾನು ಪ್ರಶ್ನೆಯೊಂದನ್ನು ಕೇಳುತ್ತೇನೆ. ಬಝರ್  ಅನ್ನು ಯಾವ ತಂಡವು ಮೊದಲು ಒತ್ತುವುದೋ ಆ ತಂಡಕ್ಕೆ ಉತ್ತರವನ್ನು ನೀಡುವ ಅವಕಾಶವನ್ನು ನೀಡಲಾಗುವುದು. ಸರಿಯುತ್ತರಕ್ಕೆ ೧೦ ಅಂಕಗಳು. ಬಝರ್ ಒತ್ತಿದ ಮೇಲೂ ತಪ್ಪುತ್ತರ ನೀಡಿದರೆ "-೧೦ (minus ೧೦)" ಅಂಕಗಳನ್ನು ನೀಡಲಾಗುವುದು' ಎಂದರು. 

'ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?' ಎಂಬುದು ಬಝರ್ ಸುತ್ತಿನ ಪ್ರಶ್ನೆಯಾಗಿತ್ತು. 

'ಬಿ' ಮತ್ತು 'ಸಿ' ತಂಡಗಳ ನಡುವೆ ಒಂದು ನಿಮಿಷದ ಮೌನ ಆವರಿಸಿತ್ತು. ಅಂತಿಮವಾಗಿ ತಂಡ 'ಸಿ' ಬಝರ್ ಒತ್ತಿತ್ತು. 

ತಂಡ 'ಸಿ' ಉತ್ತರಿಸುತ್ತಾ 'ಜಿನೀವಾ, ಸ್ವಿಟ್ಜರ್ಲ್ಯಾಂಡ್' ಎಂದಿತು. 

ಸರಿಯುತ್ತರ ಎಂದು ಘೋಷಿಸಿದ ಡಾ. ಕಿರಣ್, 'ಸಿ' ತಂಡಕ್ಕೆ ೧೦ ಅಂಕಗಳನ್ನು ನೀಡಿದರು. ಒಟ್ಟು ೬೫ ಅಂಕಗಳನ್ನು ಗಳಿಸಿದ ತಂಡ 'ಸಿ' ಅನ್ನು ವಿಜೇತ ತಂಡವೆಂದು ಘೋಷಿಸಲಾಯಿತು. 'ತಂಡ "ಸಿ" ಗೆ ನಮ್ಮೆಲ್ಲರ ಅಭಿನಂದನೆಗಳು' ಎಂದರು ಡಾ. ಕಿರಣ್. ಪರದೆಯ ಮೇಲಿನ 'ಡೈಲಾಗ್ ಬಾಕ್ಸ್'ನಲ್ಲಿ, ತಂಡ 'ಸಿ' ಗೆ  ನೂರಾರು ಅಭಿನಂದನಾ ಸಂದೇಶಗಳು ಮೂಡಿ ಬಂದಿದ್ದವು. 

ಕ್ವಿಜ್ನ ಕಾರ್ಯಕ್ರಮ ಪ್ರಿನ್ಸಿಪಾಲರಾದ ಭವಾನಿಯವರ ಭಾಷಣದೊಂದಿಗೆ ಮುಗಿದಿತ್ತು. ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಕ್ಕೆ ಡಾ. ಕಿರಣ್ ರವರಿಗೆ ವಂದನೆಗಳನ್ನು ಭವಾನಿಯವರು ಅರ್ಪಿಸಿದ್ದರು. 

ಶಾಲಾ ಕಾರ್ಯಕ್ರಮವನ್ನು ಮುಗಿಸಿ ಮನೆಗೆ ಬಂದ ಕಿರಣನನ್ನು ಮೊದಲು ಅಭಿನಂದಿಸಿದವಳು ರೋಹಿಣಿ. 'ಇಡೀ ಕಾರ್ಯಕ್ರಮವನ್ನು ನಾನೂ ವೀಕ್ಷಿಸಿದೆ. ನೀನೊಬ್ಬ ವೃತ್ತಿಪರ ಕ್ವಿಜ್ ಮಾಸ್ಟರನಂತೆ ಕಾಣಿಸುತ್ತಿದ್ದೆ. ಕೊರೋನಾ ಬಗ್ಗೆ ನಿನಗೆ ಅಪಾರ ಜ್ಞಾನವಿರಬಹುದು. ನೀನೊಬ್ಬ 'ಗ್ರೇಟ್' ಎಂದಿಟ್ಟುಕೊಳ್ಳೋಣ.  ಆದರೆ ನನ್ನಿಂದ ನಿನಗೊಂದು ಪ್ರಶ್ನೆ.  ಸರಿಯುತ್ತರ ನೀಡ ಬಲ್ಲೆಯಾ?' ರೋಹಿಣಿ ತನ್ನ ಗೆಳಯ ಕಿರಣನಿಗೆ ಸವಾಲನ್ನೆಸೆದಿದ್ದಳು. ಕಿರಣ್ ತಯಾರಾಗೇ ನಿಂತಿದ್ದನು. 

'ಕೊರೋನಾವನ್ನು, ಕೊರೋನಾ ಎಂದು ಏಕೆ ಕರೆಯಲಾಗುತ್ತದೆ?' ಎಂಬುದು ರೋಹಿಣಿಯ ಸವಾಲಿನ ಪ್ರಶ್ನೆಯಾಗಿತ್ತು. 

'ಇದೆಂತಹ ಪ್ರಶ್ನೆ?' ಎಂದ ಕಿರಣ್, ಉತ್ತರವನ್ನು ನೀಡಲು ತಡಕಾಡಿದನು. ಆದರೆ ರೋಹಿಣಿಗೆ ಸರಿಯುತ್ತರ ತಿಳಿದಿತ್ತು. ಅವಳು ವಿವರಿಸುತ್ತಾ, 'ಕೋವಿಡ್-೧೯ರ ವೈರಾಣು ಕೊರೋನಾ ವಂಶಕ್ಕೆ ಸೇರಿದ್ದು. ನಾವುಗಳು ಟಿ.ವಿ.ಯಲ್ಲಿ ನೋಡುವಂತೆ ಕೊರೋನಾ ವೈರಾಣುವಿನ ಮೇಲಿನ ಹೊದಿಕೆಯ ಸುತ್ತ ಮೊಳೆಗಳು (ಸ್ಪೈಕ್ಸ್) ಇದ್ದು, ಆ ವೈರಾಣು ಕಿರೀಟದಂತೆ ಕಾಣುತ್ತದೆ. ಕಿರೀಟ (crown)ದ ಆಕಾರವಿರುವ ವೈರಾಣುವನ್ನು ವಿಜ್ಞಾನಿಗಳು "ಕೊರೋನಾ" ಎಂದು ಕರೆದಿದ್ದಾರೆ' ಎಂದಳು. 

'ಸರಿ ಮೇಡಂ, ನಾನಲ್ಲ, ನೀವೇ  ಗ್ರೇಟ್!, ನಿಮಗಿದೋ ಶರಣು. ಮತ್ತೇನಾದರೂ ಪ್ರಶ್ನೆಯನ್ನು ತಾವು ನನಗೆ ಕೇಳುವವರಿದ್ದೀರಾ?' ಎಂದವನು ಕಿರಣ್. 

ನಿಯತ ಕಾಲಿಕ (Magazine) ಒಂದನ್ನು ನೋಡುತ್ತಿದ್ದ ರೋಹಿಣಿ ಕಿರಣನಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಿದ್ದಳು. 'ಕೋವಿಡ್-೧೯ರ ವೈರಾಣು ಮಿಕ್ಕ ಕೋರೋನ  ವೈರಾಣುಗಳಿಗಿಂತ ಹೆಚ್ಚು ಅಪಾಯಕಾರಿ ಏಕೆ?'

ಕಿರಣ್ ಉತ್ತರಿಸುತ್ತಾ, 'ಇದನ್ನೇ ನೋಡು ರೋಹಿಣಿ, "ಚೀಟಿಂಗ್" ಅನ್ನೋದು. ಮ್ಯಾಗಜಿನ್ ಒಂದನ್ನು ನೋಡಿಕೊಂಡು ಪ್ರಶ್ನೆ ಕೇಳೋದು ತಪ್ಪು. ಆದರೂ ನಿನ್ನ ಪ್ರಶ್ನೆಗೆ ಉತ್ತರ ಹೇಳ್ತೀನಿ, ಕೇಳು. ೨೦ ವರ್ಷಗಳ ಹಿಂದೆ ಪ್ರಪಂಚವನ್ನು ಕಾಡಿದ ಸಾರ್ಸ್ ವೈರಾಣು ಕೋವಿಡ್-೧೯ರ ತರಹದ ಸರಣಿ ಹತ್ಯಾಕಾರನಾಗಿತ್ತಿಲ್ಲ. ರೋಗ ಲಕ್ಷಣಗಳಿಲ್ಲದ ವ್ಯಕ್ತಿಯೊಬ್ಬನಲ್ಲಿ ಕೋವಿಡ್-೧೯ರ ವೈರಾಣು ಅಡಗಿ ಕುಳಿತುಕೊಳ್ಳಬಹುದು. ಆ ರೀತಿಯ ಲಕ್ಷಣಗಳಿಲ್ಲದ ವ್ಯಕ್ತಿಗಳೂ ರೋಗವನ್ನು ಹರಡಬಲ್ಲರು. ಸಾರ್ಸ್ ವೈರಾಣುವಿಗೆ ಈ ರೀತಿಯ ಸಾಮರ್ಥ್ಯವಿತ್ತಿಲ್ಲ. ನಮ್ಮ ದೇಹದೊಳಗಿರುವ ಉಸಿರಾಟದ ಕೊಳವೆ ಮತ್ತು ಶ್ವಾಸಕೋಶಗಳಲ್ಲಿರುವ "ಎಂಜೈಮ್ (enzyme)"ಗಳೊಂದಿಗೆ ಅಂಟಿ ಕೂರಬಲ್ಲ ಸಾಮರ್ಥ್ಯವನ್ನು ಕೋವಿಡ್-೧೯ರ ವೈರಾಣು ಬೆಳಸಿಕೊಂಡಿದೆ. ಸಾರ್ಸ್ ವೈರಾಣುವಿಗೆ ಈ ಸಾಮರ್ಥ್ಯವೂ ಇತ್ತಿಲ್ಲ. ಇವೆರಡು ಕಾರಣಗಳಿಂದ ಕೋವಿಡ್-೧೯ರ ವೈರಾಣು, ನಾವು ಹಿಂದೆ ಕಂಡ  ಸಾರ್ಸ್ ಮತ್ತು ಮೆರ್ಸ್ ವೈರಾಣುಗಳಿಗಿಂತಾ ಹೆಚ್ಚು ಅಪಾಯಕಾರಿಯಾಗಿದೆ,' ಎಂದಾಗ, ರೋಹಿಣಿ ತನ್ನ ಗೆಳೆಯನ ಜ್ಞಾನ ಭಂಡಾರಕ್ಕೆ ತಲೆದೂಗಿದ್ದಳು. 

ಕಿರಣ್ ಮಾತನಾಡುತ್ತ, 'ಕಳೆದ ೧೦ ದಿನಗಳ ರಜೆಯ ಸಮಯವನ್ನು ನಾವುಗಳು ಸೃಜನಾತ್ಮಕವಾಗಿ ಕಳೆದಿದ್ದೇವೆ. ನೀನು ಏರ್ಪಾಡು ಮಾಡಿದ್ದ "ಪ್ರಕೃತಿಯ ಪ್ರವಾಸ" ಸೊಗಸಾಗಿತ್ತು. "ಪ್ರಕೃತಿಯ ಸಮತೋಲವನ್ನು ಕೆದಕುವುದು ಬೇಡ" ಎಂಬುದು ಒಂದು ದೊಡ್ಡ ಪಾಠ. ಪ್ರಕೃತಿಯನ್ನು ವಿನಾಶಗೊಳಿಸುತ್ತಾ ಹೋದರೆ ನಾವುಗಳು ವಿನಾಶ ಹೊಂದುವುದು ಖಂಡಿತ,' ಎಂದನು. 

'ಹೌದು, ಕಿರಣ್. ನೀನು ಮತ್ತೆ ಮತ್ತೆ ಹೇಳುತ್ತಿರುವಂತೆ, ದೈಹಿಕ ಅಂತರ, ಮಾಸ್ಕ್ ಧಾರಣೆ ಮತ್ತು ಸೋಪಿನಿಂದ ಆಗ್ಗಾಗೆ ಕೈಗಳನ್ನು ತೊಳೆದುಕೊಳ್ಳುವಂತಹ ಸರಳ ವಿಧಾನಗಳಿಂದ ಕೋವಿಡ್ ಮಹಾಮಾರಿಯನ್ನು ತಡೆಯಲು ಸಾಧ್ಯ. ಎಲ್ಲೆಂದರಲ್ಲಿ ಉಗಿಯುವ ಕೆಟ್ಟ ಅಭ್ಯಾಸ ನಮ್ಮ ದೇಶದಲ್ಲಿ ಕೊನೆಗೊಳ್ಳಬೇಕು. ಕೊರೋನಾ ಕಾರ್ಯಕರ್ತರುಗಳನ್ನು ಗೌರವಿಸಬೇಕು.' ಎಂದು ಪುನರುಚ್ಛರಿಸಿದವಳು ರೋಹಿಣಿ. 

'ರೋಹಿಣಿ, ಕೋವಿಡ್-೧೯ ಎಂಬುದು ಮನುಕುಲಕ್ಕೆ, ಹಿಂದೆಂದೂ ಕಂಡು ಕೇಳರಿಯದ  ಬದಲಾವಣೆಗಳನ್ನು ತಂದು ನಿಲ್ಲಿಸಿರುವುದನ್ನೂ ನೀನು ಗಮನಿಸಿದ್ದೀಯಾ ಎಂದುಕೊಂಡಿದ್ದೇನೆ. "ಕೋವಿಡ್ ನಂತರದ (After Covid ಅಥವಾ A.C.) ಅಭ್ಯಾಸಗಳು ಮತ್ತು ಕೋವಿಡ್ ಮುಂಚಿನ (Before Covid ಅಥವಾ B.C.)" ಅಭ್ಯಾಸಗಳಿಗೂ ಭಾರೀ ವ್ಯತ್ಯಾಸವಿರುತ್ತದೆ. ಕೋವಿಡ್ ಬಂದನಂತರ A.C. ಮತ್ತು B.C. ಎಂಬ "ಹ್ರಸ್ವ(acronym)"ಗಳ ಪರಿಭಾಷೆಯೇ ಬದಲಾಗಿದೆ' ಎಂಬ ಅಂಶವನ್ನೂ ನೀನು ವಿಶ್ಲೇಷಿಸಬೇಕು. 

ಆನ್ಲೈನ್ ಶಿಕ್ಷಣವೆಂಬುದು, ಈಗ ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಸಾಂಪ್ರದಾಯಿಕ ಶಾಲಾ ಕೊಠಡಿಯ ಕಲಿಕೆಯೊಂದಿಗೆ ಅದು ಮುಂದುವರೆಯಲಿದೆ.' ಕಿರಣ್ ಪಟ್ಟಿ ಮಾಡಿದ ಅಂಶಗಳೆಲ್ಲವನ್ನೂ, ರೋಹಿಣಿ ತನ್ನ ಸಂಶೋಧನಾ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದಳು. 

******  

೧೩

 ಕೊಳಚೆ ಪ್ರದೇಶದ ನಿರ್ವಹಣೆ ಅಸಾಧ್ಯವಲ್ಲ 



ಸಮರ್ಪಣಾ ಭಾವದ ಯುವಕನಾದ ಡಾ. ಕಿರಣ್, ಸ್ವಯಂಪ್ರೇರಿತನಾಗಿ ಸರಕಾರಿ ಆಸ್ಪತ್ರೆಗಳಲ್ಲೂ ಕೋವಿಡ್-೧೯ರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದನು. ೮೦-೯೦%ರಷ್ಟು ಕೋವಿಡ್ ರೋಗಿಗಳ ಚಿಕಿತ್ಸೆಯನ್ನು ನಿರ್ವಹಿಸುವ ಬೃಹತ್ ಕಾರ್ಯವನ್ನು ಮಾಡುತ್ತಿದ್ದ ಸರಕಾರಿ ಆಸ್ಪತ್ರೆಗಳ ಮತ್ತು ಅವುಗಳ ಕರ್ಮಚಾರಿಗಳ ಅಭಿಮಾನಿ ಅವನಾಗಿದ್ದನು. 'ಈ ಸಂಕಟದ ಸಮಯದಲ್ಲಿ ಬಡವರ ಹಾಗೂ ಕೆಳವರ್ಗದ ಜನರುಗಳ ಸೇವೆಯನ್ನು ಸಾರ್ವಜನಿಕ ವಲಯದ ಸಂಸ್ಥೆಗಳು ಮಾಡುತ್ತಿವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ವಲಸಿಗ ಕೆಲಸಗಾರರು ಕೆಲಸಗಳನ್ನು ಕಳೆದುಕೊಂಡು, ನಗರಗಳಲ್ಲಿ ಸಿಲುಕಿಕೊಂಡಾಗ, ಭಾರತೀಯ ರೈಲು ಅವರುಗಳನ್ನು ಹೊತ್ತು, ಅವರವರ ಹಳ್ಳಿಗಳಿಗೆ ತಲುಪಿಸಿತ್ತು. ಇದೇ ಕಾರ್ಯದಲ್ಲಿ ಸರಕಾರಿ ಬಸ್ಸುಗಳು ಸಲ್ಲಿಸಿದ ಕಾರ್ಯವು ಮಹತ್ವವಾದುದೇ. ನಮ್ಮ ಅನಿವಾಸಿ ಭಾರತೀಯರು ಮತ್ತಿತರ ಭಾರತೀಯರುಗಳು ವಿದೇಶಗಳಲ್ಲಿ ಸಿಲುಕಿಕೊಂಡಾಗ, ಅವರುಗಳನ್ನು ಕ್ಷೇಮವಾಗಿ ಹೊತ್ತೊಯ್ದು ಭಾರತಕ್ಕೆ ಕರೆತಂದಿದ್ದು "ಏರ್ ಇಂಡಿಯಾ"ದ ವಿಮಾನಗಳೇ. ನಮ್ಮ ಸಣ್ಣ ಕೈಗಾರಿಕೆಗಳಿಗೆ, ಸಣ್ಣ ವ್ಯಾಪಾರಿಗಳಿಗೆ ಹಾಗೂ ಸಣ್ಣ ರೈತರಿಗೆ ಸಾಲದ ಸೌಲಭ್ಯ ಬೇಕಾದಾಗ, ಅವರುಗಳ ಸಹಾಯಕ್ಕೆ ಬಂದಿದ್ದು ಸಾರ್ವಜನಿಕವಲಯದ ಬ್ಯಾಂಕುಗಳೇ. ಇಂತಹ ವಿಷಮ ಪರಿಸ್ಥಿತಿಯಲ್ಲೂ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿರುವುದು ನಮ್ಮ ಪೊಲೀಸರೇ. ನಗರ ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಡುವ ಮಹತ್ಕಾರ್ಯವನ್ನು ಮಾಡುತ್ತಿರುವುದು ನಮ್ಮ ನಗರ ಹಾಗೂ ಪಟ್ಟಣಗಳ ಆಡಳಿತದ ಸ್ವಚ್ಛತಾ ಕರ್ಮಚಾರಿಗಳೇ. ಆದರೆ ನಮ್ಮ ಸಾರ್ವಜನಿಕ ವಲಯದ ಸಂಸ್ಥೆಗಳನ್ನೇ, ಸಂಬಂಧ ಪಟ್ಟ ಎಲ್ಲರೂ ನಿರ್ಲಕ್ಷಿಸುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ,' ಎನ್ನುತ್ತಾ ಆತಂಕಗೊಂಡಿದ್ದವನು ಡಾ. ಕಿರಣ್. 

ಅಂದು ಅವರಿಬ್ಬರ ವಾರದ ಭೇಟಿಯ ಸಮಯವಾದುದ್ದರಿಂದ, ಕಿರಣ್ ತನ್ನ ಗೆಳತೀ ರೋಹಿಣಿಗಾಗಿ   ಕಾಯುತ್ತಿದ್ದನು. ರೋಹಿಣಿ ಬಂದ ಕೂಡಲೇ, ತನ್ನ ಎಂದಿನ ಉತ್ಸಾಹದಲ್ಲಿ ಮಾತನಾಡುತ್ತಾ, 'ಕಿರಣ್, ಇಂದಿನ ಸುದ್ದಿಯನ್ನು ಓದಿದೆಯಾ? ಕೇರಳ ರಾಜ್ಯದ ಆರೋಗ್ಯ ಮಂತ್ರಿ ಶ್ರೀಮತಿ ಕೆ.ಕೆ.ಶೈಲಜಾರವರನ್ನು ವಿಶ್ವಸಂಸ್ಥೆಯ ಸಾರ್ವಜನಿಕ ಸೇವೆಗಳ ದಿನದ ಭಾಷಣವನ್ನು ಮಾಡಲು ವಿಶ್ವಸಂಸ್ಥೆ ಆಹ್ವಾನಿಸಿದೆ. ಕೋವಿಡ್ ವಿರುದ್ಧದದ ಮಹಾಸಂಗ್ರಾಮದ ಹೋರಾಟದ ಮುಂಚೂಣಿಯಲ್ಲಿರುವವರನ್ನು ಸನ್ಮಾನಿಸುವುದೇ ಆ ಕಾರ್ಯಕ್ರಮದ ಉದ್ದೇಶ' ಎಂದಳು. 

'ಹೌದು ರೋಹಿಣಿ, ಮೇಡಂರವರಿಗೆ ಬಂದಿರುವ ಆಹ್ವಾನದ ಬಗ್ಗೆ ತಿಳಿದು ನನಗೂ ಸಂತಸವೆನಿಸಿತು. ಆ ಗೌರವಕ್ಕೆ ಆಕೆ ಅರ್ಹರು. ಕೋವಿಡ್-೧೯ರ ವಿರುದ್ಧದದ ಹೋರಾಟದಲ್ಲಿ, ನಮ್ಮ ಸಣ್ಣ ರಾಜ್ಯಗಳು ಉತ್ತಮ ನಿರ್ವಹಣೆಯನ್ನು ಮಾಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ಗೋವಾ, ಮಣಿಪುರ್ ಮತ್ತು ಅರುಣಾಚಲ ಪ್ರದೇಶ ಮುಂತಾದ ಸಣ್ಣ ರಾಜ್ಯಗಳು, ಒಂದು ಹಂತದಲ್ಲಿ, ತಮ್ಮೆಲ್ಲಾ ಕೋವಿಡ್ ರೋಗಿಗಳನ್ನು ಗುಣಮುಖರನ್ನಾಗಿ ಮಾಡಿ, ೧೦೦%ರಷ್ಟು ಸುಸ್ಥಿತಿಯ ಸಾಧನೆಯನ್ನು ಮಾಡಿದ್ದವು. ಸ್ವಲ್ಪ ದೊಡ್ಡವಾದರೂ, ಕೇರಳ, ಹಿಮಾಚಲ್ ಪ್ರದೇಶ, ಉತ್ತರಾಖಂಡ್, ಝಾರ್ಖಂಡ್ ಮತ್ತು ಅಸ್ಸಾಮಿನಂತಹ ರಾಜ್ಯಗಳು, ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ರಾಜ್ಯಗಳಿಗಿಂತಲೂ ಉತ್ತಮವಾದ ಸಾಧನೆಯನ್ನು ಮಾಡಿವೆ,' ಎಂದನು ಡಾ. ಕಿರಣ್. 

'ಶ್ರೀಮತಿ ಕೆ.ಕೆ. ಶೈಲಜಾರವರು, ಹೈಸ್ಕೂಲ್ ವಿಜ್ಞಾನದ ಶಿಕ್ಷಕಿ ಮಾತ್ರವಾಗಿದ್ದವರು. ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಸೇವೆಯನ್ನು ಸತತವಾಗಿ ಮಾಡುತ್ತಿರುವ ಅವರನ್ನು "ಕೊರೋನಾ ಸಂಹಾರಕಿ (corona slayer)" ಎಂದೇ ಗುರುತಿಸಲಾಗುತ್ತಿದೆ. ೨೦೨೦ರ ಮೇ ೧೫ರಂದು ನಡೆಸಿದ ಅಧ್ಯಯನದ ಪ್ರಕಾರ ೩೫ ಮಿಲಿಯೋನ್ನಷ್ಟು ಜನಸಂಖ್ಯೆ ಮತ್ತು ಪ್ರತಿವ್ಯಕ್ತಿಯ ವರಮಾನ (per capita GDP) ೨೨೦೦ ಬ್ರಿಟಿಷ್ ಪೌಂಡ್ಗಳಷ್ಟಿರುವ ಪುಟ್ಟ ರಾಜ್ಯ ಕೇರಳ, ಕೇವಲ ೫೨೪ ಸೋಂಕಿತರನ್ನು ಹೊಂದಿದ್ದು, ನಾಲ್ಕು ಸಾವುಗಳನ್ನು ಮಾತ್ರ ಕಂಡಿತ್ತು. ಅದಕ್ಕೆ ಹೋಲಿಸಿದರೆ, ೭೦ ಮಿಲಿಯೋನ್ನಷ್ಟು ಜನಸಂಖ್ಯೆಯನ್ನು ಮತ್ತು ಪ್ರತಿವ್ಯಕ್ತಿಯ ವರಮಾನ ೩೩,೧೦೦ ಬ್ರಿಟಿಷ್ ಪೌಂಡ್ಗಳಿಷ್ಟಿರುವ ಗ್ರೇಟ್ ಬ್ರಿಟನ್, ೪೦,೦೦೦ದಷ್ಟು ಸಾವುಗಳನ್ನು ಕಂಡಿತ್ತು. ಕೇರಳದ ಹತ್ತರಷ್ಟರ ಜನಸಂಖ್ಯೆಯನ್ನು ಮತ್ತು ೫೧,೦೦೦ ಬ್ರಿಟಿಷ್ ಪೌಂಡ್ಗಳಷ್ಟು ಪ್ರತಿವ್ಯಕ್ತಿಯ ವರಮಾನ ಹೊಂದಿರುವ ಬೃಹತ್ ರಾಷ್ಟ್ರ  ಅಮೇರಿಕಾ ೮೨,೦೦೦ ಸಾವುಗಳನ್ನು ಕಂಡಿದೆ! ಇಂದಿಗೂ ಕೇರಳದ ಕೋವಿಡ್ ನಿರ್ವಹಣೆ ಮೆಚ್ಚಬಹುದದ್ದಾಗಿದೆ. 

ಹಳ್ಳಿಗಳ ಮಟ್ಟದಲ್ಲಿರುವ "ಪ್ರಾಥಮಿಕ ಆರೋಗ್ಯ ಕೇಂದ್ರ"ಗಳನ್ನು ಸುಸ್ಥಿತಿಯಲ್ಲಿಟ್ಟಿರುವುದೇ, ಕೇರಳ ರಾಜ್ಯದ ಉತ್ತಮ ಕೋವಿಡ್ ನಿರ್ವಹಣೆಗೆ ಪೂರಕವಾಗಿ ಪರಿಣಮಿಸಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲೂ ಕೇರಳ ಸುಸಜ್ಜಿತ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿದೆ. ಆ ರಾಜ್ಯದಲ್ಲಿ ಹತ್ತು ವೈದ್ಯಕೀಯ ಕಾಲೇಜುಗಳಿದ್ದು, ಅವೆಲ್ಲವೂ ಉತ್ತಮ ಆಸ್ಪತ್ರೆಗಳನ್ನು ಹೊಂದಿವೆ. 

೨೦೧೮ರಲ್ಲಿ ಕೇರಳದಲ್ಲಿ ಹರಡಿದ್ದ "ನಿಪಾಹ್ ವೈರಾಣು (Nipah Virus)"ವನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಶೈಲಜಾರವರಿಗಿತ್ತು. ೨೦೨೦ರ ಜನವರಿ ೨೪ರ ಹೊತ್ತಿಗೇ, ಆಕೆ ಕೇರಳದಲ್ಲಿ ಕೋವಿಡ್-೧೯ರ ರೋಗವನ್ನು ನಿರ್ವಹಿಸಲು ವಿಶೇಷ  "ನಿರ್ವಹಣಾ ಕೇಂದ್ರ"ಗಳನ್ನು ಆರಂಭಿಸಿದ್ದರು. "ಪತ್ತೆ ಮಾಡು, ಪರೀಕ್ಷಿಸು, ಪ್ರತ್ಯೇಕಿಸು ಮತ್ತು ಬೆಂಬಲಿಸು (trace, test, isolate, support)" ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಕಿ ಕೊಟ್ಟ ಮೇಲ್ಪಂಕ್ತಿಯನ್ನೇ ಶೈಲಜಾರವರು ಅಳವಡಿಸಿಕೊಂಡಿದ್ದರು. 

ಹಳ್ಳಿಗಳ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉತ್ತಮ ನಿರ್ವಹಣೆ ಕೇರಳ ರಾಜ್ಯಕ್ಕೆ ಉತ್ತಮ ಫಲ ನೀಡಿದೆ. "ಜನಸಾಮಾನ್ಯರ ದೀರ್ಘ ಜೀವಾವಧಿ ಮತ್ತು ಮಕ್ಕಳ ಸಾವಿನ ನಿಯಂತ್ರಣ (Life expectancy and Infant mortality)"ಗಳ ನಿಟ್ಟಿನಲ್ಲಿ ಕೇರಳ ಇಡೀ ದೇಶದಲ್ಲಿ ಮುಂದಿದೆ. ಸಾಕ್ಷರತೆಯ ಸಾಧನೆಯಲ್ಲೂ ಕೇರಳವೇ ಮುಂದು.' ತನ್ನ ಗೆಳತಿ, ಕೇರಳ ಮಾದರಿಯ ಬಗ್ಗೆ ಬಿಗಿದ ಪುಟ್ಟ ಭಾಷಣವೊಂದನ್ನು, ಕಿರಣ್ ತದೇಕಚಿತ್ತನಾಗಿ ಆಲಿಸಿದ್ದನು. 

'ನಿನ್ನ ಅನಿಸಿಕೆಗಳು ಸರಿಯಾಗಿವೆ. ಮುಂಬೈನ ನನ್ನ ಸ್ನೇಹಿತ ಡಾ. ಪ್ರಶಾಂತ್ ಹೇಳುವಂತೆ "ಶ್ರೀಮಂತ ರಾಜ್ಯಗಳು ಆರೋಗ್ಯವಂತ ರಾಜ್ಯಗಳೇನಲ್ಲ." ಇಡೀ ದೇಶದಲ್ಲಿ ಮುಂಬೈ, ಅತ್ಯಂತ ಸಂಪನ್ಮೂಲಗಳನ್ನು ಮತ್ತು ಆದಾಯವನ್ನೂ ದಾಖಲಿಸಿದೆ. ಆದರೀಗ ಆ ಮಹಾನಗರವೇ ಕೋವಿಡ್-೧೯ರ ರೋಗದ ಕೇಂದ್ರವಾಗಿ ಹೋಗಿದೆ. ಮುಂಬೈ ಮತ್ತು ದಿಲ್ಲಿಯಂತಹ ೧೫ ಮಹಾನಗರಗಳಲ್ಲಿ ದೇಶದ ೫೦%ರಷ್ಟು ಕೋವಿಡ್ ಸೋಂಕಿತರಿದ್ದಾರೆ ಎಂಬುದು ಆಶ್ಚರ್ಯಕರ ಸುದ್ದಿ. ಮಹಾನಗರಗಳಲ್ಲಿ ಮತ್ತು ಅವುಗಳ ಹೊರ ವಲಯದಲ್ಲಿ ಆರೋಗ್ಯದ ವ್ಯವಸ್ಥೆ ತೀರಾ ಕಳಪೆಯೆಂದೇ ಹೇಳಬೇಕು. ಎಲ್ಲಾ  ಮಹಾನಗರಗಳಲ್ಲೂ ದೊಡ್ಡ ದೊಡ್ಡ ಕೊಳಚೆ ಪ್ರದೇಶ (slums) ಗಳಿವೆ. ನಗರಗಳ ೩೦%ರಷ್ಟು ಜನರುಗಳು ಆ ಸ್ಲಮ್ಗಳಲ್ಲಿ ವಾಸಿಸುತ್ತಾರೆ. ಎಲ್ಲಾ ಕೊಳಚೆ ಪ್ರದೇಶಗಳೂ ಜನರುಗಳಿಂದ ತುಂಬಿ ತುಳುಕುತ್ತಿರುತ್ತವೆ. ನೀರು ಮತ್ತು ನೈರ್ಮಲ್ಯದ ವ್ಯವಸ್ಥೆಯ ಕೊರತೆ ಎಲ್ಲಾ ಕೊಳಚೆ ಪ್ರದೇಶಗಳನ್ನೂ ಕಾಡಿವೆ. 

ಮುಂಬೈನ "ಧಾರಾವಿ ಸ್ಲಂ" ಎಂಬುದು ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡದಾದ ಕೊಳಚೆ ಪ್ರದೇಶ. ೨. ೫ ಚ.ಕಿ.ಮೀ.ಯಷ್ಟರ ಸಣ್ಣ ಪ್ರದೇಶದ ಆ ಕೊಳಚೆ ಪ್ರದೇಶದಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ಅಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ವಲಸಿಗರಾಗಿದ್ದು,  ಸಣ್ಣ ವ್ಯಾಪಾರ, ದಿನಗೂಲಿ ಮುಂತಾದ ಕೆಲಸಗಳನ್ನು ಮಾಡುತ್ತಾರೆ. "೬-೮ ಜನರುಗಳ ಕುಟುಂಬಗಳು ಅಲ್ಲಿನ ೮'X೮'ಗಳಷ್ಟರ ಸಣ್ಣ ಕೋಣೆಗಳಲ್ಲಿ ವಾಸಿಸುತ್ತವೆ." ಅವರುಗಳಿಗೆ  ಸಾರ್ವಜನಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳೇ ಗತಿ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅಸಾಧ್ಯವೇ ಸರಿ!  

೨೦೨೦ರ ಏಪ್ರಿಲ್ ತಿಂಗಳಲ್ಲೇ, ಧಾರಾವಿ ಸ್ಲಮ್ನಲ್ಲಿನ ೫ ಭಾಗಗಳನ್ನು "ಅತ್ಯಂತ ಕೋವಿಡ್ ಪೀಡಿತ ಪ್ರದೇಶ"ಗಳೆಂದು ಗುರುತಿಸಲಾಗಿತ್ತು. ೨೫೦೦ಕ್ಕಿಂತಲೂ ಹೆಚ್ಚು ಆರೋಗ್ಯ ಕರ್ಮಚಾರಿಗಳನ್ನು ಆ ಐದು ಪ್ರದೇಶಗಳ ಸೇವೆಗೆಂದೇ ಮೀಸಲಿಡಲಾಗಿತ್ತು. ಸುರಕ್ಷಾ ತೊಡುಗೆಗಳನ್ನು ತೊಟ್ಟ ಆ ಕರ್ಮಚಾರಿಗಳು, ಅಂದಿನ ಏಪ್ರಿಲ್ ತಿಂಗಳಲ್ಲೇ, ಮನೆ ಮನೆಗಳಿಗೆ ತೆರಳಿ ಕೋವಿಡ್ ಸೋಂಕಿತರ ಪತ್ತೆ ಕಾರ್ಯವನ್ನು ನಡೆಸಿದ್ದರು. ಕಾರ್ಯತತ್ಪರ ಯೋಧನಾಗಿ ಆ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಶಾಮಣ್ಣ, ಸ್ಲಂ ನಿವಾಸಿಗಳನ್ನು ಎಚ್ಚರಿಸುವ ಪ್ರಕ್ರಿಯೆಯ ಮುಂಚೂಣಿಯಲ್ಲಿದ್ದರು. 'ಸಂಸಾರ ಗುಟ್ಟು, ವ್ಯಾಧಿ ರಟ್ಟು' ಎಂಬ ಕನ್ನಡದ ಗಾದೆಯನ್ನು ಮನದಟ್ಟಾಗುವಂತೆ ತಿಳಿಸುತ್ತಿದ್ದ ಡಾ. ಶಾಮಣ್ಣ, ಅಲ್ಲಿನ ಜನರುಗಳ ವಿಶ್ವಾಸವನ್ನು ಗೆದ್ದಿದ್ದರು. ಇಂತಹ ಪ್ರಯತ್ನಗಳ ಫಲವಾಗಿ ಧಾರಾವಿ ಸ್ಲಂ ನಿವಾಸಿಗಳಲ್ಲಿ ಕೋವಿಡ್ ಮುಂಜಾಗರೂಕತೆಯ ಬಗೆಗಿನ ಅರಿವು ಚೆನ್ನಾಗಿಯೇ ಮೂಡಿತ್ತು. ಅತ್ಯಂತ ಸಣ್ಣ ಲಕ್ಷಣವೊಂದು ಕಾಣಿಸಿಕೊಂಡರೂ, ಜನರು ತಮ್ಮ ತಮ್ಮ ಸಮೀಪದ ವೈದ್ಯರನ್ನು ಕಾಣುವಲ್ಲಿ ವಿಳಂಬ ಮಾಡುತ್ತಿರಲಿಲ್ಲ. ಆಯ್ದ ಆ ಐದು ಪ್ರದೇಶಗಳಲ್ಲಿ, ಸೋಂಕಿತರನ್ನು ಸಂಪರ್ಕಿಸಿದ ಚಾರಿತ್ರ್ಯವಿರುವ ೨೦%ರಷ್ಟು ವ್ಯಕ್ತಿಗಳು ಸೇರಿದಂತೆ ಸುಮಾರು ೫೦,೦೦೦ ಜನರುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರುಗಳ ಪೈಕಿ ಸುಮಾರು ೧೦,೦೦೦ ಶಂಕಿತರನ್ನು, ಸರಕಾರಿ ನೇತೃತ್ವದ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿತ್ತು. ಪರಿಸ್ಥಿತಿ ಸಾಕಷ್ಟು ನಿಯಂತ್ರಣದಲ್ಲಿರುವಂತೆ ಕಂಡಿದ್ದರೂ, ಲಾಕ್ಡೌನಿನ ಸಡಿಲಿಕೆ ಮತ್ತು  ಮಳೆಗಾಲದ ಆಗಮನ, ತಜ್ಞರುಗಳು ಮತ್ತೆ ಆತಂಕಗೊಳ್ಳುವಂತೆ ಮಾಡಿತ್ತು.

೨೦೨೦ರ ಏಪ್ರಿಲ್ ಸಮಯಕ್ಕೆ ೪೯೧ರಷ್ಟಿದ್ದ ಸೋಂಕಿತರ ಸಂಖ್ಯೆ, ಮೇ ತಿಂಗಳ ಹೊತ್ತಿಗೆ ೧೨೦೦ರಷ್ಟಾಗಿತ್ತು. ಸ್ಥಳೀಯ ಅಧಿಕಾರಿಗಳು, ಸರಕಾರಿ ಹಾಗೂ ಖಾಸಗಿ ವೈದ್ಯರುಗಳ ಸತತ ಪರಿಶ್ರಮದ ಫಲವಾಗಿ, ಜೂನ್ ತಿಂಗಳ ವೇಳೆಗೆ ಸೋಂಕಿತರ ಸಂಖ್ಯೆ ೨೭೪ಕ್ಕೆ ಇಳಿದಿತ್ತು, ಮತ್ತು ಕೇವಲ ೬ ಜನ ಸೋಂಕಿತರು ಸಾವನ್ನಪ್ಪಿದ್ದರು. ಆದರೂ ಜಾಗರೂಕರಾಗೇ ಇರಬೇಕಾದ ಅವಶ್ಯಕತೆಯನ್ನು ಮತ್ತೆ ಮತ್ತೆ ಹೇಳುತ್ತಿದ್ದ ಅಧಿಕಾರಿಗಳ ಅಭಿಪ್ರಾಯ,  "ಎಲ್ಲವನ್ನು ಗೆದ್ದೆವು" ಎಂದು ಹೇಳಲಾಗದು ಎಂಬುದಾಗಿತ್ತು. 

೨೦೨೦ರ ಜೂಲೈ ತಿಂಗಳ ಅಂತ್ಯದ ವೇಳೆಗೆ, ಧಾರಾವಿ ಸ್ಲಮ್ನಲ್ಲಿ ಒಟ್ಟು ೨೫೦೦ ಸೋಂಕಿತರ ಪತ್ತೆಯಾಗಿದ್ದು, ಅವರುಗಳಲ್ಲಿ ೨೧೨೧ರಷ್ಟು ರೋಗಿಗಳು ಗುಣಮುಖರಾಗಿದ್ದರು. ಸುಮಾರು ೨೦೦ ಸಾವುಗಳೂ ಸಂಭವಿಸಿದ್ದವು. ಅಂದಿಗೆ ೧೪೦ ರೋಗಿಗಳು ಮಾತ್ರ ಇದ್ದು,  ಅಲ್ಲಿ ಪ್ರತಿ ದಿನದ ಹೊಸ ರೋಗಿಗಳ ಪತ್ತೆಯ ಸಂಖ್ಯೆ ೨೦ರಷ್ಟಕ್ಕೆ ಇಳಿದಿತ್ತು. ಇಷ್ಟು ಸುಧಾರಿಸಿದ್ದ ಧಾರಾವಿ ಸ್ಲಮ್ಮಿನ ಪರಿಸ್ಥಿತಿ, ಇಡೀ ಮುಂಬೈ ನಗರಕ್ಕೇ ಮಾದರಿಯಾಗಿತ್ತು. 

ಧಾರಾವಿ ಸ್ಲಮ್ಮಿನ ಜನರುಗಳು ಮತ್ತೊಂದು ವಿಷಯದಲ್ಲಿ ಮಾನವೀಯತೆ ಮೆರೆದಿದ್ದರು. ತೀವ್ರವಾಗಿ ಬಳಲುತ್ತಿದ್ದ ಕೋವಿಡ್ ರೋಗಿಗಳ ಚಿಕಿತ್ಸೆಗೆ, ಕೋವಿಡ್ನಿಂದ ಗುಣಮುಖರಾದ ವ್ಯಕ್ತಿಗಳ ರಕ್ತ ನೀಡುವ  ಪ್ರಯೋಗವೂ, ಒಂದು ವಿಧಾನ. ಆ ವಿಧಾನವನ್ನು 'ಪ್ಲಾಸ್ಮಾ ಚಿಕಿತ್ಸೆ' ಎಂದೇ ಕರೆಯಲಾಗುತ್ತದೆ. ೮೫%ರಷ್ಟು ಗುಣಮುಖರಿದ್ದ ಧಾರಾವಿ ಸ್ಲಮ್ಮಿನಲ್ಲಿ, 'ಪ್ಲಾಸ್ಮಾ ದಾನ'ಕ್ಕೆ ಮುಂದಾಗುತ್ತಿದ್ದ ವ್ಯಕ್ತಿಗಳ ಸಂಖ್ಯೆ ಸಾಕಷ್ಟು ಹೆಚ್ಚಿತ್ತು. ಕೋವಿಡ್ನಿಂದ ಗುಣಮುಖರಾದ ೨೧೨೧ ವ್ಯಕ್ತಿಗಳನ್ನೂ, ಸ್ಥಳೀಯ ಅಧಿಕಾರಿಗಳು ಸಂಪರ್ಕಿಸಿದಾಗ, ಸುಮಾರು ೪೫೦ ವ್ಯಕ್ತಿಗಳು ಪ್ಲಾಸ್ಮಾದಾನಕ್ಕೆ ಸಮ್ಮತಿಯನ್ನು ನೀಡಿದ್ದರು. ಆ ೪೫೦ ವ್ಯಕ್ತಿಗಳಲ್ಲಿ ೫೦ರೊಳಗಿನ ಪ್ರಾಯದ ವ್ಯಕ್ತಿಗಳು ಸಾಕಷ್ಟಿದ್ದು, ಅವರುಗಳಿಗೆ ಬೇರ್ಯಾವ ರೋಗಗಳೂ (comorbidities) ಇಲ್ಲದೆ ಇದ್ದದ್ದು ಅನುಕೂಲಕರವಾಗಿತ್ತು. ಗುಣಮುಖರಾದವರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಪ್ಲಾಸ್ಮಾದಾನಕ್ಕೆ ಮುಂದಾಗುವ ಸಾಧ್ಯತೆ ನಿಚ್ಚಳವಾಗಿತ್ತು. 

'ಕೋವಿಡ್-೧೯ರ ನಿರ್ವಹಣೆಯ ಅನುಭವದಿಂದ ಕಲಿತ ಪಾಠಗಳು ಅಮೂಲ್ಯವಾದುದ್ದು. ಹಳ್ಳಿಗಳ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗುಣಮಟ್ಟವನ್ನು ಮೊದಲು ಹೆಚ್ಚಿಸಬೇಕು. ಅಂತೆಯೇ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಗುಣಮಟ್ಟದ ನಿರ್ವಹಣೆಯೂ ಉತ್ತಮವಾಗಬೇಕು. ಭಾರೀ ನಗರಗಳ ಪರಿಸ್ಥಿತಿ ಮತ್ತು ನಿರ್ವಹಣೆ ಎಂದಿಗೂ ಆತಂಕಕಾರಿಯಾದದ್ದು. ಅಂತಹ ನಗರಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದರೂ, ಸರಕಾರಿ  ಆಸ್ಪತ್ರೆಗಳ ಸೇವೆಯನ್ನು ನಿರ್ಲಕ್ಷಿಸುವಂತಿಲ್ಲ. ಭಾರಿ ನಗರಗಳ ಅವಿಭಾಜ್ಯ ಅಂಗದಂತೆ, ಸ್ಲಮ್ಗಳು (ಕೊಳಚೆ ಪ್ರದೇಶಗಳು) ಎಂದಿಗೂ ಇದ್ದೆ ಇರುತ್ತವೆ. ಸ್ಲಮ್ಗಳ ಉತ್ತಮ ನಿರ್ವಹಣೆ ಅಸಾಧ್ಯವಾದುದೇನಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಸತತವಾಗಿ ಸಾಗುತ್ತಿರಬೇಕು' ಎಂಬುದು ಡಾ. ಕಿರಣನ ವಿಶ್ಲೇಷಣೆಯಾಗಿತ್ತು. 

ಆಶಾ ಕಾರ್ಯಕರ್ತೆಯರ (ASHA - Accredited Social Health Activists) ಸಮಸ್ಯೆಗಳನ್ನು ಕುರಿತಾದ ಕಳಕಳಿ ರೋಹಿಣಿಯದಾಗಿತ್ತು. 'ಬರೀ ಮೂರನೇ ಒಂದು ಭಾಗದಷ್ಟರ ಸಂಬಳಕ್ಕೆ ದುಡಿಯುತ್ತಿರುವಂತಹ, ೯ ಲಕ್ಷ ಆಶಾ ಕಾರ್ಯಕರ್ತೆಯರು ಮತ್ತು ೨. ೭೫ ಲಕ್ಷ ಇನ್ನಿತರ ಆರೋಗ್ಯ ಕಾರ್ಯಕರ್ತರೂ ನಮ್ಮ ದೇಶದಲ್ಲಿದ್ದಾರೆ. ಇವರ್ಯಾರು ಸರಕಾರದ ಖಾಯಂ ನೌಕರರಲ್ಲ. ಅವರುಗಳ ನೌಕರಿಯನ್ನು ಖಾಯಂಗೊಳಿಸಿ ಅವರುಗಳಿಗೆ ಸಂಪೂರ್ಣ ವೇತನವನ್ನು ನೀಡಿವಂತಹ ನಿರ್ಣಯವನ್ನು ಸರಕಾರ ಕೂಡಲೇ ಜಾರಿಗೊಳಿಸಬೇಕು' ಎಂದಳು. 

***

'ನಾನೊಂದು ಮುಖ್ಯವಾದ ವಿಚಾರವನ್ನು ಚರ್ಚಿಸಬೇಕು' ಎಂದು ನೀನು ನನಗೆ ತಿಳಿಸಿದ್ದೆ. 'ಏನದು?' ಎಂದು ಕೇಳಿದವನು ಡಾ. ಕಿರಣ್. 

'ನಾನು ಈವರಗೆ ಚರ್ಚಿಸಿದ ವಿಚಾರಗಳು ಮುಖ್ಯವಾದುವೇ. ಯುವಕರುಗಳು ಮತ್ತು ಉತ್ಸಾಹಿಗಳನ್ನು  ಕೊರೋನಾ ಸೇನಾನಿಗಳಾಗುವಂತೆ ಆಹ್ವಾನಿಸಿ ಸರಕಾರ ಜಾರಿಗೊಳಿಸಿದ ಜಾಹಿರಾತನ್ನು ನಾನು  ನೋಡಿದ್ದೇನೆ. ನಮ್ಮ ತಂದೆಯವರಾದ ರಾಜುರವರು ಮತ್ತು ನಾನೂ ಕೂಡಾ ಈ ವಿಷಯದಲ್ಲಿ ಆಸಕ್ತರು. ಅದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸರಕಾರಕ್ಕೆ ಸಲ್ಲಿಸುವುದು ಹೇಗೆ?' ಎಂದು ಕೇಳಿದಳು ರೋಹಿಣಿ. 

'ಒಹೋ, ಇದು ನಿಜವಾಗಲೂ ಸಂತೋಷದ ವಿಷಯ. ಕೊರೋನಾ ಸೇನಾನಿಗಳಾಗುವುದಕ್ಕೆ ಬೇಕಾದ ಮೊದಲ ಅರ್ಹತೆಯೆಂದರೆ, ಮೊದಲು ಅವರವರ ಸ್ಮಾರ್ಟ್ ಫೋನ್ಗಳಲ್ಲಿ "ಆರೋಗ್ಯ ಸೇತು" ಎಂಬ "ಆಪ್ (App)" ಅನ್ನು ಅಳವಡಿಸಿಕೊಂಡಿರಬೇಕು (download). ನಿನ್ನ ಫೋನಿನಲ್ಲಿ ಆ ಆಪ್ ಇದೆಯೇ?' 

'ಆರೋಗ್ಯ ಸೇತು ಆಪ್!' ಒಹೋ, ಕೇಳಿದ್ದೇನೆ. ಅದೇಕೋ, ನಾನು ಆ ಆಪನ್ನು ಡೌನ್ಲೋಡ್ ಮಾಡಿಕೊಳ್ಳಲಾಗಿಲ್ಲ. ನಮ್ಮ ತಂದೆಯವರಿಗಂತೂ ಅದರ ವಿಷಯವೇನೂ ಗೊತ್ತೇ ಇಲ್ಲ. ಆ ಆಪನ್ನು  ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಅದರಿಂದೇನು ಉಪಯೋಗ?' ತಿಳಿಸ ಬಲ್ಲೆಯಾ ಎಂದು ಕೇಳಿದವಳು ರೋಹಿಣಿ. 

'ಆರೋಗ್ಯ ಸೇತು ಎಂಬುದು ಭಾರತ ಸರಕಾರ ಸಿದ್ಧಪಡಿಸಿದ ಒಂದು ಮೊಬೈಲ್ ಆಪ್. ನಿನ್ನ ಸ್ಮಾರ್ಟ್ ಫೋನಿಗೆ ಅದನ್ನು "ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಗಳಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಕೋವಿಡ್-೧೯ ರೋಗದಿಂದ ಜನರನ್ನು ಕಾಪಾಡುವುದೇ ಆ ಆಪ್ನ ಮೂಲ ಉದ್ದೇಶ. ಆ ಆಪ್ನ ಪ್ರಮುಖ ರೂಪರೇಷೆಗಳು ಹೀಗಿವೆ. 

-ಆ ಆಪ್ ಅಳವಡಿಸಿರುವ ಸ್ಮಾರ್ಟ್ ಫೋನ್ ಹೊಂದಿರುವ ವ್ಯಕ್ತಿಗಳು, ಅದೇ ರೀತಿಯ ಆರೋಗ್ಯ ಸೇತು ಆಪನ್ನು ಅಳವಡಿಸಿರುವ ಫೋನನ್ನು ಹೊಂದಿರುವ  ಸೋಂಕಿತರ ಸಂಪರ್ಕಕ್ಕೆ ಬಂದಿದ್ದಲ್ಲಿ, ಆ ಸಂಪರ್ಕದ ಮಾಹಿತಿ ಬ್ಲೂ ಟೂತ್ (bluetooth)  ಮುಖಾಂತರ ಎರಡೂ ಫೋನ್ಗಳಲ್ಲಿ ದಾಖಲಾಗುತ್ತದೆ. 

-"ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)" ಸಿದ್ಧ ಪಡಿಸಿರುವ ಕ್ರಮಗಳ ಪ್ರಕಾರ, ಕೆಲವು ಸೂಚಕ  ಸ್ವಯಂ ಪರೀಕ್ಷೆಗಳನ್ನು ಆ ಆಪ್ ಮುಖಾಂತರ ಮಾಡಿಕೊಳ್ಳಬಹುದಾಗಿರುತ್ತದೆ. 

-ಸೋಂಕಿತರ ಸಂಪರ್ಕದ ಮಾಹಿತಿಯ ಅನುಸಾರವಾಗಿ ಆಯಾ ವ್ಯಕ್ತಿಗಳು ಮುಂದಿನ ದಿನಗಳಲ್ಲಿ  ಸೋಂಕಿತರಾಗುವ ಸಾಧ್ಯತೆಯನ್ನು ಆ ಆಪ್ನಲ್ಲಿ ಕಾಣಬಹುದಾಗಿರುತ್ತದೆ. 

-ಕೋವಿಡ್-೧೯ ಅನ್ನು ಕುರಿತಾದ ಇತ್ತೀಚಿನ ಮಾಹಿತಿಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ಆ ಆಪ್ನಲ್ಲಿ ಪಡೆಯಬಹುದಾಗಿರುತ್ತದೆ. 

-ದೇಶಾದ್ಯಂತದ ಕೋವಿಡ್ ಅಂಕಿ-ಅಂಶಗಳನ್ನು ಅಲ್ಲಿ ಪಡೆಯಬಹುದಾಗಿರುತ್ತದೆ. 

-ಕೋವಿಡ್ ರೋಗಕ್ಕೆ ಸಂಬಂಧ ಪಟ್ಟಂತಹ ಮಾಹಿತಿಗಳನ್ನು ಪಡೆಯುವ ತುರ್ತು ಕರೆಗಳ ನಂಬರ್ಗಳನ್ನು ಅಲ್ಲಿ ನೀಡಲಾಗಿರುತ್ತದೆ. 

-ಕೋವಿಡ್ ರೋಗದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದಾದ ಕೇಂದ್ರಗಳ ಬಗೆಗಿನ ಮಾಹಿತಿಯನ್ನೂ ಆ ಆಪ್ನ ಸಹಾಯದಿಂದ ಪಡೆಯಬಹುದಾಗಿರುತ್ತದೆ.'

'ಕೋವಿಡ್ ಸೋಂಕಿತರೊಬ್ಬರ ಸಂಪರ್ಕ ನನಗಾಗಿದ್ದರೆ, ಆ ಬಗೆಗಿನ ಮುನ್ಸೂಚನೆಯನ್ನು ಆರೋಗ್ಯ ಸೇತು ನನಗೆ ನೀಡುತ್ತದೆಯೇ?' ರೋಹಿಣಿ ಕುತೂಹಲಕಾರಿಯಾಗಿದ್ದಳು. 

'ನಿನ್ನ ಸ್ಮಾರ್ಟ್ ಫೋನಿನಲ್ಲಿರುವ ಆರೋಗ್ಯ ಸೇತು ಆಪ್,  ಬೇರೆಯವರ  ಸ್ಮಾರ್ಟ್ ಫೋನಿನಲ್ಲಿ ಅಳವಡಿಕೆಯಾಗಿರುವ ಆರೋಗ್ಯ ಸೇತು ಆಪ್ನ ಸನಿಹಕ್ಕೆ ಬಂದಿದ್ದರೆ, ಬ್ಲೂ ಟೂತ್ ಮುಖಾಂತರ ಆ ಸಂಪರ್ಕದ ಮಾಹಿತಿ ದಾಖಲಾಗುತ್ತದೆ. ಅಂತಹ ದಾಖಲೆಯಲ್ಲಿ "ಎಲ್ಲಿ ಸಂಪರ್ಕವಾಗಿತ್ತು? ಎಷ್ಟು ಹೊತ್ತು ಸಂಪರ್ಕದಲ್ಲಿದ್ದಿರಿ? ಯಾವಾಗ ಸಂಪರ್ಕದಲ್ಲಿದ್ದಿರಿ?" ಎಂಬ ಎಲ್ಲಾ ಮಾಹಿತಿಗಳೂ ಇರುತ್ತವೆ. ನೀನು ಸಂಪರ್ಕಿಸಿದ್ದ ವ್ಯಕ್ತಿ ಸೋಂಕಿತನಾಗಿದ್ದರೆ, ಅಥವಾ ಮುಂದಿನ ೧೪ ದಿನಗಳಲ್ಲಿ ಆ ವ್ಯಕ್ತಿ  ಸೋಂಕಿತನಾದರೆ, ಅದರಿಂದ ನಿನಗಿರುವ ಅಪಾಯದ ಮುನ್ಸೂಚನೆ, ನಿನಗೆ ನಿನ್ನ ಆಪ್ ಮುಖಾಂತರ ತಿಳಿಯುತ್ತದೆ. ನಿನ್ನ ಸೋಂಕಿನ ಮಾಹಿತಿ, ಸಂಬಂಧ ಪಟ್ಟ ಆರೋಗ್ಯಾಧಿಕಾರಿಗಳಿಗೂ ದೊರೆತು, ಬೇಕಾದ ಮುಂದಿನ ಕ್ರಮಗಳನ್ನು ಅವರೇ ಆರಂಭಿಸುತ್ತಾರೆ. 

ಆರೋಗ್ಯ ಸೇತು ಆಪ್ನ ನಿನ್ನ ಪರದೆ, ನಿನಗೆ ರೋಗ ಬರುವ ಸಾಧ್ಯತೆಯ ತೀವ್ರತೆಯನ್ನು ಮಾಪನ ಮಾಡಿ, ಅದಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಾಯಿಸುತ್ತದೆ. 

-ನಿನಗ್ಯಾವ ಸೋಂಕಿನ ಸಾಧ್ಯತೆಯೂ ಇಲ್ಲದಿದ್ದರೆ ಅದರ ಬಣ್ಣ ಹಸಿರಾಗಿರುತ್ತದೆ. 

-ನಿನಗೆ ಸೋಂಕಿನ ಸಾಧ್ಯತೆ ಸಾಧಾರಣವಾಗಿದ್ದರೆ, ಅದರ ಬಣ್ಣ ಹಳದಿಯಾದಾಗಿರುತ್ತದೆ. 

-ನಿನಗೆ ಸೋಂಕಿನ ಸಾಧ್ಯತೆ ಹೆಚ್ಚಾಗಿದ್ದರೆ, ಪರದೆಯ ಬಣ್ಣ ಕಿತ್ತಳೆ ಹಣ್ಣಿನ ಬಣ್ಣದ್ದಾಗಿರುತ್ತದೆ. 

-ನೀನಾಗಲೇ ಕೋವಿಡ್ ಸೋಂಕಿತೆಯಾಗಿದ್ದರೆ, ಅದರ ಬಣ್ಣ ಕೆಂಪಾಗಿ ಹೋಗಿರುತ್ತದೆ.'

ಎಂದು ಸಾಗಿತ್ತು ಡಾ. ಕಿರಣನ ವಿವರಣೆ. 

'ಯಾರಿಗಾದರೂ ಕೋವಿಡ್-೧೯ರ ಸೋಂಕು ತಗುಲಿದಲ್ಲಿ ಆರೋಗ್ಯ ಸೇತು ಆಪ್ಗೆ ಅದು ಹೇಗೆ ತಿಳಿಯುತ್ತದೆ?'

'ಪ್ರಯೋಗಾಲಯವೊಂದರಲ್ಲಿ ಯಾವುದಾದರೂ ವ್ಯಕ್ತಿಗೆ ಕೋವಿಡ್-೧೯ರ ಸೋಂಕು ತಗುಲಿದೆ (ಪೊಸಿಟಿವ್ ಆಗಿದೆ) ಎಂದು ತಿಳಿದಾಗ, ಆ ಪ್ರಯೋಗಾಲಯದವರು ಆ ಮಾಹಿತಿಯನ್ನು "ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)"ಗೆ ವಿದ್ಯುನ್ಮಾನ (electronic) ವಿಧಾನದ ಮೂಲಕ  ರವಾನಿಸುತ್ತಾರೆ. ಆ ಸಂಸ್ಥೆ ಸಂಬಂಧ ಪಟ್ಟ ವ್ಯಕ್ತಿಗಳ "ಆರೋಗ್ಯ ಸೇತು" ಆಪ್ಗಳಿಗೆ ಮಾಹಿತಿಯನ್ನು ರವಾನಿಸುತ್ತದೆ.  ಸೋಂಕಿತನಾದ ವ್ಯಕ್ತಿಯ ಆಪ್ನ ಬಣ್ಣ ಕೆಂಪಾಗಿ, ಸೋಂಕಿತನನ್ನು ಎಚ್ಚರಿಸುತ್ತದೆ. ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಆಪ್ನಲ್ಲೂ ಅಪಾಯದ ಸೂಚನೆ ಕಾಣಿಸಿಕೊಂಡಿರುತ್ತದೆ' ಎಂಬುದು ಡಾ. ಕಿರಣನ ವಿವರಣೆಯಾಗಿತ್ತು. 

'ನಾನಿರುವ ಪ್ರದೇಶದಲ್ಲಿರುವ ಅಪಾಯದ ತೀವ್ರತೆಯ ಸೂಚನೆಯನ್ನು "ಆರೋಗ್ಯ ಸೇತು" ಆಪ್ ತಿಳಿಸಬಲ್ಲದೇ?'

'ನಿನ್ನ ಆರೋಗ್ಯ ಸೇತುವಿನ ಆಪ್ನ ಪರದೆಯ ಚಲಿಸುವ (live) ಭಾಗವು ನಿನಗೆ ನಾಲ್ಕು ಅಂಕಿ-ಅಂಶಗಳನ್ನು ತೋರಿಸುತ್ತದೆ. ನೀನು ಪಾಯಿಂಟ್ "ಎ" ಇಂದ ಪಾಯಿಂಟ್ "ಬಿ"ಗೆ ತಲುಪಿದಾಗ, ಆ ಪ್ರದೇಶದ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೆಳಕಂಡ ಮಾಹಿತಿಗಳನ್ನು, ನಿನ್ನ ಆಪ್ ತಿಳಿಸುತ್ತದೆ. 

- X-ಅಂತರದಲ್ಲಿರುವ, ಆಪ್ ಅಳವಡಿಸಿಕೊಂಡಿರುವ ವ್ಯಕ್ತಿಗಳ ಪೈಕಿ ಎಷ್ಟು ಜನರು, ಕಳೆದ ೨೪ ಘಂಟೆಗಳೊಳಗೆ  ಸ್ವಯಂ-ಪರೀಕ್ಷೆಗಳನ್ನು ನಡೆಸಿಕೊಂಡಿದ್ದಾರೆ?

-X-ಅಂತರದಲ್ಲಿರುವ ಎಷ್ಟು ವ್ಯಕ್ತಿಗಳು ಆರೋಗ್ಯ ಸೇತು ಆಪನ್ನು ಅಳವಡಿಸಿಕೊಂಡಿದ್ದಾರೆ? 

-X-ಅಂತರದಲ್ಲಿರುವ ಎಷ್ಟು ವ್ಯಕ್ತಿಗಳಲ್ಲಿ, ಒಂದು ಮತ್ತು ಅದಕ್ಕಿಂತ ಹೆಚ್ಚಿನ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ? 

-X-ಅಂತರದಲ್ಲಿನ ಎಷ್ಟು ವ್ಯಕ್ತಿಗಳನ್ನು ಕೋವಿಡ್ ಸೋಂಕಿತರೆಂದು (covid positive) ಗುರುತಿಸಲಾಗಿದೆ?

-X-ಅಂತರದಲ್ಲಿನ ಎಷ್ಟು ವ್ಯಕ್ತಿಗಳು ಕೋವಿಡ್ ಸೋಂಕಿತನೊಬ್ಬನ ಸಂಪರ್ಕಕ್ಕೆ ಬಂದಿದ್ದಾರೆ?

"x" ಎಂಬ ಅಂತರವನ್ನು, ಸ್ಮಾರ್ಟ್ ಫೋನಿನ ಮಾಲೀಕನು "೫೦೦ ಮೀ., ೧ ಕಿ.ಮೀ., ೨ ಕಿ.ಮೀ., ೫ ಕಿ.ಮೀ. ಮತ್ತು ೧೦ ಕಿ.ಮೀ." ಎಂದು ಬದಲಿಸಿ ಬೇಕಾದ ಎಲ್ಲಾ ಮಾಹಿತಿಗಳನ್ನೂ ಪಡೆಯಬಹುದು' ಎಂಬ ವಿಷಯವನ್ನು ಡಾ. ಕಿರಣ್ ತನ್ನ ಫೋನಿನ ಆರೋಗ್ಯ ಸೇತು ಆಪನ್ನು  ತೋರಿಸುತ್ತಾ ವಿವರಿಸಿದ್ದನು. 

'ಕಿರಣ್, ನನಗೊಬ್ಬ ಸ್ನೇಹಿತನಿದ್ದಾನೆ. ಆತನ ತಂದೆಗೆ ಕೆಲವು ದಿನಗಳ ಹಿಂದೆ  ಕೋವಿಡ್ ರೋಗವಿರುವುದು ಖಚಿತವಾಗಿತ್ತು. ಆದರೆ ನನ್ನ ಸ್ನೇಹಿತನ ಮೊಬೈಲ್ನ ಆರೋಗ್ಯ ಸೇತು ಆಪ್ನಲ್ಲಿ ಅವನೇ ಕೋವಿಡ್ ಸೋಂಕಿತನೆಂದು ಬಿಂಬಿತವಾಗುತ್ತಿದೆ. ಇದರಿಂದ ಅವನ ಸ್ನೇಹಿತರೆಲ್ಲರೂ ಅವನನ್ನು ಅನುಮಾನಿಸ ತೊಡಗಿದ್ದಾರೆ. ಇಂತಹ ಆಭಾಸಗಳು ಆರೋಗ್ಯ ಸೇತುವಿನಿಂದ ಉಂಟಾಗ ಬಹುದೇ?' ರೋಹಿಣಿ ಪ್ರಶೆಯಲ್ಲಿ ಆತಂಕವಿತ್ತು. 

ಕೆಲವು ಕ್ಷಣ ಯೋಚಿಸಿದ ಡಾ. ಕಿರಣನ ಉತ್ತರ ಹೀಗಿತ್ತು. 'ತನ್ನ ತಂದೆಗೆ ಪರೀಕ್ಷೆ ಮಾಡಿಸುವಾಗ, ನಿನ್ನ ಸ್ನೇಹಿತ, ತನ್ನ ಮೊಬೈಲ್ ಸಂಖ್ಯೆಯನ್ನೇ ನೀಡಿರಬಹುದು. ಆದುದರಿಂದ ಈ ರೀತಿಯ ಆಭಾಸ ನಡೆದಿರಬಹುದು. ಸಂಬಂಧಪಟ್ಟ ಜಿಲ್ಲಾ ಅಥವಾ ರಾಜ್ಯ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ಈಗ ಉಂಟಾಗಿರುವ ತೊಡಕನ್ನು ಸರಿಪಡಿಸಿಕೊಳ್ಳಬಹುದು' ಎಂದನು. 

'ನೀಡಿದ ಎಲ್ಲ ಮಾಹಿತಿಗಳಿಗಾಗಿ ವಂದನೆಗಳು ಎಂದು ನಾನು ಹೇಳುವುದಿಲ್ಲ. ಏಕೆಂದರೆ ನೀನು ನನ್ನ ಗೆಳಯ ತಾನೇ? ಆರೋಗ್ಯ ಸೇತು ಆಪನ್ನು ನಾನೀಗಲೇ ಅಳವಡಿಸಿಕೊಳ್ಳುತೇನೆ ಮತ್ತು ಕೊರೋನಾ ಸೇನಾನಿಯಾಗಲು ಕೂಡಲೇ ನನ್ನ ಮತ್ತು ನನ್ನಪ್ಪನ ಅರ್ಜಿಗಳನ್ನು ದಾಖಲಿಸುತ್ತೇನೆ' ಎಂದಳು ರೋಹಿಣಿ.

'ಅದು ಸಂತೋಷದ ವಿಷಯ. ಆರೋಗ್ಯ ಸೇತು ಎಂಬ ಆಪನ್ನು, ಕೋವಿಡ್-೧೯ ಕಲಿಸಿದ ಮತ್ತೊಂದು ಪಾಠವೆಂದು ಪರಿಗಣಿಸಬಹುದು. ಸಧ್ಯಕ್ಕೆ ಆ ಆಪ್ ಕೋವಿಡ್-೧೯ರ ಮಾಹಿತಿಯನ್ನು ಮಾತ್ರ ನೀಡು ತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ವ್ಯಕ್ತಿಯ ಆರೋಗ್ಯವನ್ನು ಕುರಿತಾದ ಸಮಗ್ರ ಮಾಹಿತಿಯನ್ನು ಅದೇ ಆಪ್ನಲ್ಲಿ ಅಳವಡಿಸಬಹುದು. ಆರೋಗ್ಯ ಸೇತು ಎಂಬ ಆಪ್ ದೇಶದ ಹೆಮ್ಮೆಯಾಗಿ ಪರಿವರ್ತನೆಗೊಳ್ಳಬಹುದು' ಎಂದ ಕಿರಣ್, ತನ್ನ ಗೆಳತಿಗೆ ಬೈ-ಬೈ ಹೇಳಿ ಹೊರಟನು. 

***

ಮನೆಗೆ ಹಿಂತಿರುಗಿದ ನಂತರ ರೋಹಿಣಿ ಮಾಡಿದ ಮೊದಲ ಕೆಲಸವೆಂದರೆ, ಆರೋಗ್ಯ ಸೇತು ಆಪನ್ನು ತನ್ನ ಸ್ಮಾರ್ಟ್ ಫೋನಿಗೆ ಅಳವಡಿಸಿಕೊಂಡಿದ್ದು. 

ತನ್ನ ತಂದೆ ರಾಜುರವರಿಗೂ ಆಪನ್ನು ಅಳವಡಿಸಿಕೊಡುವ ಕಾರ್ಯಕ್ಕೆ ರೋಹಿಣಿ ಮುಂದಾದಾಗ, ರಾಜುರವರು ಒಪ್ಪಲಿಲ್ಲ. 'ನೀನು ಆಪನ್ನು ಅಳವಡಿಸಿಕೊಡುವುದು ಬೇಡ, ಆ ಕೆಲಸವನ್ನು ಹೇಗೆ ಮಾಡಬೇಕೆಂಬುದನ್ನು ನನಗೆ ತಿಳಿಸು. ಆ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ. ಏಕೆಂದರೆ ನಾನು "ಆತ್ಮನಿರ್ಭರ"ನಾಗಲು ಇಚ್ಛಿಸುತ್ತೇನೆ' ಎಂದರು ರಾಜು. 

'ಅಪ್ಪಾ, ನಿನ್ನ ಉತ್ಸಾಹವನ್ನು ನಾನು ಮೆಚ್ಚುತ್ತೇನೆ. ಆತ್ಮನಿರ್ಭರತೆಯೆಂಬುದು ಬರೀ ವ್ಯಕ್ತಿಗಳಿಗೆ ಸೀಮಿತವಾದುದಲ್ಲ. ನಮ್ಮ ಇಡೀ ದೇಶವೇ ಆತ್ಮನಿರ್ಭರತೆಯತ್ತ ಸಾಗಬೇಕಾಗಿದೆ. ಇದು ನಮ್ಮ ಪ್ರಧಾನಿ ಮೋದಿಯವರು ನೀಡಿರುವ ಸಂದೇಶವೂ ಹೌದು.'

ರೋಹಿಣಿ ನೀಡಿದ ಮಾರ್ಗದರ್ಶನದ ಪ್ರಕಾರ, ಪ್ರಯತ್ನ ಮಾಡಿದ ರಾಜುರವರು ಯಶಸ್ವಿಯಾಗಿ ಆರೋಗ್ಯ ಸೇತು ಆಪನ್ನು ತಮ್ಮ ಸ್ಮಾರ್ಟ್ ಫೋನಿಗೆ ಅಳವಡಿಸಿಕೊಂಡಾಗ ಉಬ್ಬಿ ಹೋಗಿ, 'ನಾನೀಗ  ಆತ್ಮನಿರ್ಭರನಾದೆ' ಎಂದು ಸಣ್ಣದಾಗಿ ಘರ್ಜಿಸಿದ್ದರು. 

'ಕೋವಿಡ್-೧೯ರ ಮಹಾಮಾರಿ ಕಲಿಸಿದ ಮತ್ತೊಂದು ಪಾಠವೆಂದರೆ "ಆತ್ಮನಿರ್ಭರತೆ." ಕೇವಲ ನಾಲ್ಕು ತಿಂಗಳುಗಳ ಹಿಂದೆ, ನಮ್ಮ ದೇಶದಲ್ಲಿ ಪಿ.ಪಿ.ಇ. ತೊಡುಗೆಗಳ ಉತ್ಪಾದನೆಯೂ ಆಗುತ್ತಿರಲಿಲ್ಲ. "ಅವಶ್ಯಕತೆಯೇ ಅನ್ವೇಷಣೆಯ ತಾಯಿ (Necessity is the mother of invention)." ಈಗ ಭಾರತದ ಉದ್ಯಮಿಗಳು ಪ್ರತಿದಿನ ೨ ಲಕ್ಷ ಪಿ.ಪಿ.ಇ. ತೊಡುಗೆಗಳನ್ನು ತಯಾರಿಸುವಷ್ಟು ಸಾಮರ್ಥ್ಯವನ್ನು ಸಾಧಿಸಿದ್ದಾರೆ. ಕಮ್ಮಿ ಜನಸಂಖ್ಯೆಯಿದ್ದು, ಹೆಚ್ಚಿನ ಜಿ.ಡಿ.ಪಿ. ಮತ್ತು ತಾಂತ್ರಿಕತೆಯನ್ನು ಹೊಂದಿರುವ ಹಲವು ದೇಶಗಳಿಗಿಂತ, ಭಾರತದ ಕೋವಿಡ್ ನಿರ್ವಹಣೆ ಉತ್ತಮವಾಗಿದೆ ಎಂಬ ಮಾತುಗಳು ಅಂತಾರಾಷ್ಟ್ರೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕೋವಿಡ್-೧೯ರ ರೋಗವನ್ನು ತಡೆಯಬಲ್ಲ ಲಸಿಕೆಯ ತಯಾರಿಕೆಯೂ* ಭಾರತದಲ್ಲಾಗುವ ಎಲ್ಲಾ ಸಾಧ್ಯತೆಗಳು ಇವೆ. ನಮ್ಮ ಆಟೋಮೊಬೈಲ್ ಉದ್ಯಮಿಗಳು, ಜೀವರಕ್ಷಕ ವೆಂಟಿಲೇಟಾರ್ಗಳ ಉತ್ಪಾದನೆಗೆ ತಮ್ಮ ಸಾಧನಗಳ ಮಾರ್ಪಾಡನ್ನು ಮಾಡಿಕೊಂಡು ಸಜ್ಜಾಗುತ್ತಿವೆ. 

ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಅನುಕೂಲವಾಗುವಂತೆ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ. "ಆರ್ಥಿಕತೆ, ಮೂಲಭೂತ ಸೌಕರ್ಯಗಳು, ವಿಧಿವಿಧಾನಗಳು, ಕುಶಲ ಜನತೆ ಮತ್ತು ಬೇಡಿಕೆ, ಈ ಐದು ಅಂಶಗಳನ್ನು ಆತ್ಮನಿರ್ಭರತೆಯ ಐದು ಸ್ತ೦ಭಗಳೆಂದೇ ಗುರುತಿಸಲಾಗಿದೆ." ಎಂ.ಎಸ್.ಎಂ.ಇ. (MSME) ಉದ್ಯಮಿಗಳ, ವಲಸಿಗರ ಮತ್ತು ರೈತರುಗಳ ಬೆಂಬಲಕ್ಕಾಗಿ ಬೇಕಾದ ಕ್ರಮಗಳನ್ನು  ಮತ್ತು ಸುಧಾರಣೆಗಳನ್ನೂ ಜಾರಿಗೆ ತರುವ ಸರ್ವಪ್ರಯತ್ನಗಳು ನಡೆಯುತ್ತಿವೆ.  

ಆತ್ಮನಿರ್ಭರತೆಯೆಂದರೆ ಹೊರದೇಶಗಳೊಂದಿಗಿನ ವ್ಯಾಪಾರವನ್ನು ನಿಲ್ಲಿಸುವುದು ಎಂದಲ್ಲ. ಪ್ರಪಂಚದ ರಾಷ್ಟ್ರಗಳೊಂದಿಗಿನ ಸಂಬಂಧಗಳು ಎಂದಿನಂತೆ ಸಾಗುತ್ತಿರುತ್ತವೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಂದ ನಮಗೆ ಬಂಡವಾಳ (FDI) ಮತ್ತು ತಾಂತ್ರಿಕ ಮಾರ್ಗದರ್ಶನ (technical knowhow) ದೊರೆಯುತ್ತಲೇ ಸಾಗುತ್ತದೆ. ಆಹಾರದ ವಿಷಯದಲ್ಲಿ ದಶಕಗಳ ಹಿಂದೆ ನಾವು ಆತ್ಮನಿರ್ಭರತೆಯನ್ನು ಸಾಧಿಸಿದ್ದಾಗಿದೆ. ಸೇವಾ ಕ್ಷೇತ್ರದಲ್ಲಿ (Service sector) ನಮ್ಮ ದೇಶದ ಪ್ರಗತಿ ಶರವೇಗದಲ್ಲಿ ಸಾಗುತ್ತಿದೆ. ಇವುಗಳೆಲ್ಲಕ್ಕಿಂತ ಮೇಲಾಗಿ, ಭಾರತದ ೧೩೦ ಕೋಟಿಯಷ್ಟರ ಅಪಾರವಾದ ಜನಸಂಖ್ಯೆ, ವಿಶ್ವದ ಬೃಹತ್ ಮಾರುಕಟ್ಟೆಗಳಲ್ಲೊಂದಾಗಿದೆ. ಆದುದರಿಂದ ನಾವೊಂದು ಆತ್ಮನಿರ್ಭರ ದೇಶವಾಗಿ ಹೊರಹೊಮ್ಮುವ ಸಾಧ್ಯತೆ ನಿಚ್ಚಳವಾಗಿದೆ. ಆತ್ಮನಿರ್ಭರತೆಯ ಬಲದಿಂದ ವಿಶ್ವದ ಅತಿ ಮುಖ್ಯ ರಾಷ್ಟ್ರವೊಂದಾಗಿ ಬೆಳೆಯುವ ಶಕ್ತಿ ನಮಗಿದೆ.'  ರಾಜುರವರ ಆತ್ಮನಿರ್ಭರತೆಯ ವ್ಯಾಖ್ಯಾನ ಹೀಗೆ ಸಾಗಿತ್ತು. 

ರೋಹಿಣಿ ಪ್ರತಿವಾದಿಸುತ್ತಾ, 'ಅಪ್ಪಾ, ನಮ್ಮ ವಿರೋಧ ಪಕ್ಷಗಳ ನಾಯಕರು ಆತ್ಮನಿರ್ಭರತೆ ಎಂಬುದು ಆಡಳಿತ ಪಕ್ಷದ ನಾಟಕ ಮಾತ್ರ. ಅದು "ಹೊಸ ಬಾಟಲಿನಲ್ಲಿ ತುಂಬಿಸಿ ಕೊಟ್ಟ ಹಳೆ ಮದಿರೆಯಂತೆ (Old wine in a new bottle)." ಉಕ್ಕಿನ ಕ್ಷೇತ್ರದಲ್ಲಿ ಸೈಲ್ (SAIL), ತಾಂತ್ರಿಕ ಶಿಕ್ಷಣದಲ್ಲಿ ಐ.ಐ.ಟಿ. (IIT)ಗಳು, ವೈದ್ಯಕೀಯ ಸೌಲಭ್ಯದಲ್ಲಿ ಏಮ್ಸ್ (AIIMS), ರಕ್ಷಣಾ ಸಂಶೋಧನೆಯಲ್ಲಿ ಡಿಆರ್ಡಿಓ (DRDO), ಹಾರಾಟಗಳ ಕ್ಷೇತ್ರದಲ್ಲಿ ಎಚ್. ಎ.ಎಲ್.(HAL), ಬಾಹ್ಯಾಕಾಶ ಸಂಶೋಧನೆಯಲ್ಲಿ ಐ. ಎಸ್.ಆರ್.ಒ. (ISRO)" ಮುಂತಾದ ಸಂಸ್ಥೆಗಳ ಸ್ಥಾಪನೆ ಹಲವು ದಶಕಗಳ ಹಿಂದೇ ಆಗಿದ್ದು, ನಮ್ಮ ದೇಶ ಸಾಕಷ್ಟು ಆತ್ಮನಿರ್ಭರತೆಯನ್ನು ಅಂದೇ ಸಾಧಿಸಿತ್ತಲ್ಲವೇ?' ಎಂದಳು. 

'ಹೌದು ಮಗಳೆ, ಸ್ವಾತಂತ್ರ್ಯ ಸಿಕ್ಕನಂತರ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ೧೯೯೧ರಲ್ಲೇ ನಾವು ಆರ್ಥಿಕ ಕ್ಷೇತ್ರದ ಸುಧಾರಣೆಯನ್ನು ಆರಂಭಿಸಿದ್ದು, ಅದರ ಫಲವಾಗಿ ನಾವುಗಳು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ, ಮತ್ತು ನಮ್ಮ ಜಿ.ಡಿ.ಪಿ.ಯ ವೃದ್ಧಿಯ ದರ ಸಾಕಷ್ಟು ಹೆಚ್ಚಳವನ್ನು ಕಂಡಿದೆ. ಆದರೆ ಅನೀರಿಕ್ಷಿತವಾಗಿ ಬಂದಪ್ಪಳಿಸಿರುವ ಕೋವಿಡ್ ಮಹಾಮಾರಿ ನಮ್ಮನ್ನು ಹೊಡೆದೆಬ್ಬಿಸಿದೆ ಮತ್ತು ಆರ್ಥಿಕ ಕ್ಷೇತ್ರದ ಅಭಿವೃದ್ಧಿಯ ವೇಗವನ್ನು ತ್ವರಿತಗೊಳಿಸುವ ಅವಶ್ಯಕತೆಯ ಅರಿವನ್ನು ಮೂಡಿಸಿದೆ. ದೀರ್ಘವಾದ ಲಾಕ್ಡೌನಿನಿಂದ ಕುಂಠಿತವಾಗಿರುವ ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಕೋವಿಡ್ನ ಜೊತೆಯೇ ಜನಜೀವನ ಸಾಗಬೇಕಿದೆ' ಎನ್ನುವ ಸಮಜಾಯಿಷಿ ತಂದೆ ರಾಜುರವರದಾಗಿತ್ತು. 

*** 

ತನ್ನ ಸಂಶೋಧನಾ ಕಾರ್ಯವನ್ನು ಮುಂದುವರೆಸುತ್ತಿದ್ದ ರೋಹಿಣಿಗೆ, ತಾನೊಂದು ತಳ ಕಾಣದ ಸಾಗರವೊಂದರಲ್ಲಿ ಈಜುತ್ತಿರುವಂತೆ ಅನಿಸಿತ್ತು.  ಆಲೋಚಿಸುತ್ತಿದ್ದ ಅವಳಿಗೆ, 'ಕೋವಿಡ್-೧೯ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಕದಡದ ಕ್ಷೇತ್ರಗಳೇ ಇಲ್ಲವೆ? ಪೂರ್ವಸ್ಥಿತಿಗೆ ಮರಳಲಾಗದಂತಹ (irreversible) ಹಲವಾರು ಬದಲಾವಣೆಗಳನ್ನು ಕೋವಿಡ್ ತಂದೊಡ್ಡಿದೆಯೆ? ಅಂತಹ ಬದಲಾವಣೆಗಳಲ್ಲಿ  'ಮನೆಯಿಂದಲೇ ಕೆಲಸ (work from home)' ಎಂಬುದೊಂದಲ್ಲವೇ?' ಎಂದೆನಿಸಿತ್ತು. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ರೋಹಿಣಿ, ತನ್ನ ಹಳೆಯ ಗೆಳತಿ  ಸೂಕ್ಷ್ಮಾಳಿಗೆ ಫೋನಾಯಿಸಿದ್ದಳು. ಆ ಕರೆಯನ್ನು ಕಾನ್ಫರೆನ್ಸ್ ಕರೆಯನ್ನಾಗಿ ಪರಿವರ್ತಿಸಿದ ಸೂಕ್ಶ್ಮಾ, ತನ್ನ ಪತಿ ಪ್ರತಾಪನು ಕರೆಯಲ್ಲಿ ಭಾಗಿಯಾಗುವಂತೆ ಮಾಡಿದ್ದಳು. 

'ಮನೆಯಿಂದಲೇ ಕೆಲಸ' ಎಂಬ ಹೊಸ ಬೆಳವಣಿಗೆಗೆ ಸಂಬಂಧಪಟ್ಟಂತಹ ತಮಾಷೆಯ ಪ್ರಸಂಗವೊಂದನ್ನು ಸೂಕ್ಷ್ಮಾ ಹೇಳಲಾರಂಭಿಸಿದಳು. 'ಮನೆಯಿಂದ ಕೆಲಸ ಮಾಡುತ್ತಿದ್ದ ತನ್ನ ಸಹಾಯಕನೊಬ್ಬನ ಮೇಲೆ ನಿಗಾ ಇರಿಸಲೆಂದು, ಮೇಲಧಿಕಾರಿ(Boss)ಯೊಬ್ಬನು ಅವನಿಗೆ ಕರೆಯೊಂದನ್ನು ಮಾಡಿದ್ದನು. ಕರೆಯ ಸಮಯ ಸುಮಾರು ಬೆಳಗಿನ ೯. ೦೦ ಘಂಟೆಯಾಗಿತ್ತು. ಕರೆಯನ್ನು ಸ್ವೀಕರಿಸಿದ ಸಹಾಯಕನ ಪತ್ನಿ ಮಾತನಾಡಿ, "ಅವರು ಬಟ್ಟೆಯನ್ನೊಗೆಯುತ್ತಿದ್ದಾರೆ," ಎಂದು ತಿಳಿಸಿದ್ದಳು. "ಕೂಡಲೇ ನನಗೆ ಮರುಕರೆಯೊಂದನ್ನು ಮಾಡಿ, ಎಂದು ನಿಮ್ಮ ಪತಿಗೆ ತಿಳಿಸಿ" ಎಂದ "ಬಾಸ್"ನ ಉತ್ತರದಲ್ಲಿ ದರ್ಪವಿತ್ತು. ೧೧. ೦೦ ಘಂಟೆಯಾದರೂ ಸಹಾಯಕನಿಂದ ಯಾವ ಮರುಕರೆಯೂ ಬಾಸ್ಗೆ ಬರದಿದ್ದಾಗ, ಕೋಪಗೊಂಡ ಬಾಸ್ ತನ್ನ ಸಹಾಯಕನಿಗೆ ಮತ್ತೊಂದು ಕರೆಯನ್ನು ಮಾಡಿ ಮಾತನಾಡಿದ್ದನು. "ನಾನು ನಿನಗೆ ಬೆಳಗ್ಗೆ ೯. ೦೦ ಘಂಟೆಗೆ ಕರೆಯೊಂದನ್ನು ಮಾಡಿದ್ದೆ. ಆಗ ನೀವು ತಮ್ಮ ಮನೆಯ ಬಟ್ಟೆಗಳನ್ನು ಒಗೆಯುತ್ತಿದ್ದಿರಿ. ನನಗೆ ಮರುಕರೆಯನ್ನು ಮಾಡುವಂತೆ ನಿಮ್ಮ ಪತ್ನಿಗೆ ತಿಳಿಸಿದ್ದೆ. ತಾವೇಕೆ ಮರುಕರೆಯನ್ನು ಈವರೆಗೆ ಮಾಡಿಲ್ಲ?" ಎಂದ ಬಾಸ್ನ ಕೋಪ ನೆತ್ತಿಗೇರಿತ್ತು. ಕ್ಷಮಾಪಣಾ ಛಾಯೆಯಿದ್ದ ದನಿಯಲ್ಲಿ ಉತ್ತರಿಸಿದ ಆ ಸಹಾಯಕ ಮಾತನಾಡುತ್ತಾ, "ಸಾರ್, ನಾನು ೯. ೩೦ಕ್ಕೇ ಮರುಕರೆಯನ್ನು ತಮಗೆ ಮಾಡಿದ್ದೆ. ಕರೆಯನ್ನು ಸ್ವೀಕರಿಸಿ ಮಾತನಾಡಿದ ತಮ್ಮ ಪತ್ನಿಯವರು, ತಾವು ಮನೆಯ ಪಾತ್ರೆಗಳನ್ನು ತೊಳೆಯುತ್ತಿರುವುದಾಗಿ ಉತ್ತರಿಸಿದರು," ಎಂದಾಗ ಆ ಬಾಸನಿಗಾದ ತಬ್ಬಿಬ್ಬನ್ನು ಕೇಳಿ,' ಮೂವರೂ ಗಹಗಹಿಸಿ ನಕ್ಕಿದ್ದರು. 

ಸೂಕ್ಷ್ಮಾ ಮುಂದುವರೆದು ಮಾತನಾಡುತ್ತಾ, 'ಹಾಸ್ಯದ ಪ್ರಸಂಗಗಳು ಹಾಗಿರಲಿ, ಕೋವಿಡ್ ಮಹಾಮಾರಿಯನಂತರ "ಮನೆಯಿಂದಲೇ ಕೆಲಸ" ಎಂಬುದೊಂದು "ಹೊಸ ಸಾಮಾನ್ಯ ಸಂಗತಿ"(new normal)ಯಾಗಿ ಹೋಗಿದೆ. ನನ್ನಂತಹ ೯೦%ರಷ್ಟು  ಐ.ಟಿ. ಉದ್ಯೋಗಿಗಳು, ಈಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರುಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ಸಣ್ಣ ಸಣ್ಣ ಪಟ್ಟಣಗಳ, ತಮ್ಮ ಮನೆಗಳಿಂದಲೇ ಕೆಲಸ ಮಾಡುತ್ತಿದ್ದು, ಮಹಾನಗರಗಳಲ್ಲಿ ಅವರುಗಳು ನೀಡುತ್ತಿದ್ದ ಭಾರೀ ಬಾಡಿಗೆಯನ್ನು ಮತ್ತು ಪ್ರಯಾಣದ ವೆಚ್ಚವನ್ನೂ ಉಳಿಸುತ್ತಿದ್ದಾರೆ. ನನ್ನಂತಹ ೧೨ ಮತ್ತು ೭ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಇರುವಂತಹ ತಾಯಂದಿರುಗಳಿಗೆ ಈ ಹೊಸ ಪದ್ಧತಿಯೊಂದು "ದೇವರು ಕೊಟ್ಟ ವರ"ವೆಂದೇ ಹೇಳಬೇಕು. ನಿನಗೆ ತಿಳಿದಿರುವಂತೆ ಈಗ ಲಾಕ್ಡೌನಿನಿಂದಾಗಿ ಮಕ್ಕಳ ಶಾಲೆಗಳೆಲ್ಲಾ ಮುಚ್ಚಿವೆ. ಮಕ್ಕಳೆಲ್ಲರ ಶಿಕ್ಷಣ ಈಗ  "ಆನ್ಲೈನ್ (online)" ತರಗತಿಗಳ ಮೂಲಕ ನಡೆಯುತ್ತಿದೆ. ಮನೆಯಲ್ಲೇ ಇದ್ದುಕೊಂಡು, ನನ್ನ ಮಕ್ಕಳ ಕಲಿಕೆಯ  ಹಿಂದಿರುವುದೆಂದರೆ ನನಗಿಷ್ಟ' ಎಂದಳು. 

ಆಗ, ಸೂಕ್ಷ್ಮಾಳ  ಪತಿ ಪ್ರತಾಪನ ಮಧ್ಯ ಪ್ರವೇಶ ತನ್ನಂತೆ ತಾನೇ ಆಗಿತ್ತು. 'ಇಲ್ಲ, ಇಲ್ಲ, ನನ್ನ ಹೆಂಡತಿ ಸುಳ್ಳು ಬಿಡುತ್ತಿದ್ದಾಳೆ. ಮಕ್ಕಳ ಮೇಲಿನ ನಿಗಾದ ಕಾರ್ಯವನ್ನು ಅವಳು ನನಗೆ ವಹಿಸಿ ತಾನು ತೆಪ್ಪನಿದ್ದಾಳೆ. ಅವಳ ಸ್ವಭಾವ "ಗೂಳಿ"ಯಂತಹದ್ದು. ಅವಳ ಸ್ವಭಾವಕ್ಕೆ ತಕ್ಕ ಹಾಗೆ ಅವಳ ಕೆಲಸದ ಸಮಯ ದಿನದ ವೇಳೆಯಲ್ಲಿದ್ದು, ಅದನ್ನವಳು ಇಷ್ಟಪಡುತ್ತಾಳೆ. ನನ್ನನ್ನವಳು "ಗೂಬೆ" ಅಂತ ಕರೆಯುತ್ತಾಳೆ. ಅದಕ್ಕೆ ತಕ್ಕ ಹಾಗೆ ನನ್ನ ಕೆಲಸದ ವೇಳೆ ಸಾಯಿಂಕಾಲ ೭ರಿಂದ ಮಧ್ಯರಾತ್ರಿ ೧ರ ವರೆಗಿರುತ್ತದೆ. ಹಾಗಾಗಿ ದಿನದ ವೇಳೆಯಲ್ಲಿ ನಡೆಯುವ ಮಕ್ಕಳ ಆನ್ಲೈನ್ ತರಗತಿಗಳ ಮೇಲಿನ ನಿಗಾ ವಹಿಸುವ ಭಾರ ನನ್ನದಾಗಿರುತ್ತದೆ. ಇದರ ಜೊತೆಗೆ ನನ್ನ ಮುದ್ದು ಮಗಳು "ತೀಕ್ಷ್ಣ"ಳ ೬೦ ನಿಮಿಷಗಳ ಸಂಗೀತದ ತರಗತಿಯೂ ಆನ್ಲೈನ್ನಲ್ಲೇ ಇದ್ದು, ಅದು ವಾರಕ್ಕೆರಡು ಬಾರಿ ಇರುತ್ತದೆ. ಅದರ ನಿಗವನ್ನೂ ನಾನೇ ವಹಿಸಬೇಕು. ನನಗಂತೂ ಸಂಗೀತದ ಗಂಧ ಸ್ವಲ್ಪವೂ ಇಲ್ಲ. ಸಂಗೀತದ ಕ್ಲಾಸ್ನಲ್ಲಿ ಏನಾಗುತ್ತದೆ ಎಂಬುದೇ ನನಗೆ ತಿಳಿಯುವುದಿಲ್ಲ. ನನ್ನ ಮಗಳ ಸಂಗೀತದ ಮೇಡಂ ಹೆಸರು "ಪ್ರೇಮಾ" ಎಂದು ಮಾತ್ರ ನನಗೆ ಗೊತ್ತು. ಯಾವಾಗಲೂ ನಗುಮೊಗದವರಾದ ಅವರೆಂದರೆ ನನಗಿಷ್ಟ! ಅವರು ಹಾಡುವುದೂ ನನಗಿಷ್ಟ. ತರಗತಿ ಆರಂಭವಾಗುವ ಮೊದಲು ಅವರಿಗೊಮ್ಮೆ "ಹಲೋ" ಅಂತೂ ಹೇಳೇ ಹೇಳುತ್ತೇನೆ.' 

ಮಾತನ್ನು ಮುಂದೆ ಬೆಳೆಸುತ್ತಾ ಪ್ರತಾಪ್, 'ರೋಹಿಣಿ, ನಿಮಗೆ ತಿಳಿದಿರುವಂತೆ ನಾನೂ ಕೂಡಾ ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುವವನೆ. "ಮನೆಯಿಂದಲೇ ಕೆಲಸ" ಎಂಬ ಹೊಸ ಪದ್ಧತಿಗೆ ಐ.ಟಿ. ಕ್ಷೇತ್ರ ಮತ್ತು ಅದರ ಉದ್ಯೋಗಿಗಳು ಬಹು ಬೇಗ ಹೊಂದುಕೊಂಡಿದ್ದಾರೆ ಎಂದೇ ಹೇಳಬಹುದು. ನಮ್ಮ ಗ್ರಾಹಕರುಗಳಿಗೂ ಈ ಹೊಸ ಪದ್ಧತಿ ಸರಿಯೆನಿಸಿಹೋಗಿದೆ. ನಮ್ಮ ಐ.ಟಿ. ಉದ್ಯಮದ ಬಾಸ್ಗಳಿಗೂ ಹಾಗೂ ಗ್ರಾಹಕರುಗಳಿಗೂ, "ಮನೆಯಿಂದಲೇ ಕೆಲಸದ" ಸೂತ್ರದ  ಬಗ್ಗೆ ಏಕ ಕಾಲದಲ್ಲಿ, ಸಮ್ಮತಿ  ಮೂಡಿರುವುದು ಅಚ್ಚರಿಯ ಸಂಗತಿ. ಗುಣಮಟ್ಟದ ದೃಷ್ಟಿಯಿಂದ ನಾವುಗಳಂತೂ ಯಾವ ರಾಜಿಗೂ ಒಪ್ಪಲಾರೆವು. ದೊಡ್ಡ ನಗರಗಳು, ಸಣ್ಣ ಪಟ್ಟಣಗಳು ಮತ್ತು ಹಳ್ಳಿ ಹಳ್ಳಿಗಳಲ್ಲೂ, ಉತ್ತಮ ಗುಣಮಟ್ಟದ ಅಂತರ್ಜಾಲದ (bandwidth) ಸೌಲಭ್ಯಗಳು ದೊರೆಯುತ್ತಿರುವುದು "ಮನೆಯಿಂದಲೇ ಕೆಲಸ"ವೆಂಬ ಹೊಸ ಪದ್ಧತಿ ಬೇರೂರಲು ಸಹಾಯಕವಾಗಿದೆ' ಎಂದನು. 

'ಮನೆಯಿಂದಲೇ ಕೆಲಸವೆಂಬ ಹೊಸ ಪದ್ಧತಿ ಸಣ್ಣ ಪಟ್ಟಣಗಳ ಪಾಲಿಗೆ ವರವಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ವಿಷಯದ ಬಗ್ಗೆ ಸ್ವಲ್ಪ ವಿವರಿಸಿ,' ಎಂದು ಕೇಳಿದ ರೋಹಿಣಿಯಲ್ಲಿ ಹೆಚ್ಚಿನ ಉತ್ಸುಕತೆಯಿತ್ತು. 

ಸೂಕ್ಷ್ಮಾ ಪ್ರತಿಕ್ರಿಯಿಸುತ್ತಾ, 'ನಿನ್ನ ಅನಿಸಿಕೆ ಸರಿ ರೋಹಿಣಿ. ಸಣ್ಣ ಪಟ್ಟಣಗಳಲ್ಲಿನ ಉದ್ಯೋಗಿಗಳು ಕಮ್ಮಿ ಸಂಬಳಕ್ಕೆ ದುಡಿಯಲು ತಯಾರಿರುವುದು, ಕಂಪನಿಗಳ ಖರ್ಚನ್ನು ತಗ್ಗಿಸುವಲ್ಲಿ ಸಹಾಯಕವಾಗಿದೆ. ಸಣ್ಣ ಪಟ್ಟಣಗಳಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಅವರುಗಳು ಕೆಲಸವನ್ನು ಆಗಾಗ್ಗೆ ಬದಲಿಸುವ ಸಾಧ್ಯತೆ ಕಮ್ಮಿಯಿರುತ್ತದೆ. ಕೋವಿಡ್ನ೦ತರದ ದಿನಗಳಲ್ಲಿ ಐ.ಟಿ. ಕ್ಷೇತ್ರ ತನ್ನ ಕಾರ್ಯಕ್ಷೇತ್ರವನ್ನು ಸಣ್ಣ ಪಟ್ಟಣಗಳೆಡೆಗೆ, ಇನ್ನೂ ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸಿದರೂ ಆಶ್ಚರ್ಯವಿಲ್ಲ. ಆರ್ಥಿಕ ತಜ್ಞರುಗಳ ಪ್ರಕಾರ, ವಿವಿಧ ಉದ್ಯಮಗಳ ಕಾರ್ಯಕ್ಷೇತ್ರ ಸಣ್ಣ ಪಟ್ಟಣಗಳೆಡೆಗೆ ಸ್ಥಳಾಂತರಗೊಳ್ಳುವುದರಿಂದ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತದೆ. ಮತ್ತು ದೇಶದಲ್ಲಿ ಸಂಪತ್ತಿನ ಹಂಚಿಕೆ (wealth distribution)ಯಲ್ಲಿನ ಅಸಮತೋಲನ ಸಾಕಷ್ಟು ಸುಧಾರಿತವಾಗುತ್ತದೆ' ಎಂದಳು. 

ಪ್ರತಾಪ್ ಮಾತನಾಡುತ್ತಾ, 'ಹಲವಾರು ಉದ್ಯಮಗಳ ಕಾರ್ಯಕ್ಷೇತ್ರದ ವಿಸ್ತರಣೆ ಸಣ್ಣ ಪಟ್ಟಣಗಳ ಕಡೆಗೆ ಆಗುತ್ತಿರುವುದು ಒಂದು ಉತ್ತಮ ಬೆಳವಣಿಗೆ.  ಅದು ಭಾರೀ ನಗರಗಳ ಕಡೆಗೆ ಸತತವಾಗಿ ನಡೆಯುತ್ತಿರುವ "ವಲಸೆ"ಯನ್ನು ಸಾಕಷ್ಟು ತಪ್ಪಿಸುತ್ತಿದೆ. ಸಣ್ಣ ಪಟ್ಟಣಗಳಲ್ಲಿನ ಬಾಡಿಗೆಗಳು ಕಮ್ಮಿಯಿದ್ದು, ಅದು  ಉದ್ಯಮಗಳು ತಮ್ಮ ವೆಚ್ಚವನ್ನು ತಗ್ಗಿಸುವಲ್ಲಿ  ಸಹಾಯಕವಾಗಿದೆ.' 

'ಮನೆಯಿಂದಲೇ ಕೆಲಸವೇನೋ ಸರಿ. ಆದರೆ "ಮನೆಯ ಕೆಲಸ"ವನ್ನ್ಯಾರು ನಿರ್ವಹಿಸಿಯುತ್ತಾರೆ?' ರೋಹಿಣಿಯ ಪ್ರಶ್ನೆಯಲ್ಲಿ ವಿಶೇಷ ಕಾಳಜಿಯಿತ್ತು. 

ಈ ನಡುವೆ, ಸೂಕ್ಷ್ಮಾಳ ತಾಯಿಯಾದ 'ಪ್ರಭಾ'ರ ಮಧ್ಯೆ ಪ್ರವೇಶ ಸ್ವಲ್ಪ ಅಚ್ಚರಿ ಮೂಡಿಸಿತ್ತು. ಪ್ರಭಾರವರು  ಸುಮಾರು ೭೦ ವಯಸ್ಸಿನ ಹಿರಿಯ ಮಹಿಳೆಯಾಗಿದ್ದರು. ಲ್ಯಾಪ್ಟಾಪ್ ಪರದೆಯ ಮೇಲೆ ಪ್ರಭಾರವರನ್ನು ನೋಡಿದ ರೋಹಿಣಿ, 'ನಮಸ್ತೆ ಅಮ್ಮ. ತಾವೂ ಏನನ್ನೋ ಹೇಳಲು ಇಷ್ಟ ಪಡುತ್ತಿರುವಂತಿದೆ. ದಯವಿಟ್ಟು ಮಾತನಾಡಿ' ಎಂದಳು. 

'ರೋಹಿಣಿ ಮಗಳೇ, ನಿನ್ನ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ. ನನ್ನ ಮಗಳು ಮತ್ತು ನನ್ನಳಿಯ ಮನೆಯಿಂದಲೇ ಕೆಲಸ ಆರಂಭಿಸಿದಾಗಿನಿಂದ, ಮನೆಯಲ್ಲೊಂದು ಹೊಸ ಶಾಂತಿಯುಂಟಾಗಿದೆ. ಮಕ್ಕಳೂ ಸಂತೋಷವಾಗಿದ್ದಾರೆ. ದಿನದ ವೇಳೆ ಬಿಡುವಾಗಿರುವ ನನ್ನಳಿಯ, ನನಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾನೆ. ನನ್ನ ಅಡುಗೆಗಳೆಂದರೆ ನನ್ನ ಮಗಳಿಗೆ ಇಷ್ಟ. ಆದರೆ ಈ ಪ್ರತಾಪ್ ಸುಮ್ಮನಿರುವ ಮನುಷ್ಯನಲ್ಲ. ಹೊಸ ಹೊಸ ಅಡುಗೆಗಳ ಪ್ರಯೋಗ ಮಾಡುವುದೆಂದರೆ ಅವನಿಗಿಷ್ಟ. ಆ ರೀತಿಯ ಹೊಸ ಪ್ರಯೋಗಗಳಿಂದ ಸೂಕ್ಷ್ಮಾ ಮತ್ತು ಪ್ರತಾಪರ ನಡುವೆ ಆಗಾಗ್ಗೆ ಪುಟ್ಟ ಜಗಳಗಳೇ ಭುಗಿಲೇಳುತ್ತವೆ! ಆದರೆ ಅವುಗಳನ್ನೆಲ್ಲ ಜಗಳ ಎನ್ನುವದಕ್ಕಿಂತಾ, ಅವರಿಬ್ಬರ ಒಡನಾಟದ ಮುಂದುವರೆದ ಭಾಗವೆನ್ನಬಹುದು. ಆ ಪುಟ್ಟ ಜಗಳಗಳನ್ನು ನೋಡುವುದೆಂದರೆ, ನನಗೆ ಮತ್ತು ನನ್ನ ಮೊಮ್ಮಕ್ಕಳಿಗೆ ಖುಷಿ. "ಮನೆಯಿಂದಲೇ ಕೆಲಸ"ವೆಂಬ ಹೊಸ ಪದ್ಧತಿ ಸ್ವಾಗತಾರ್ಹವಾದುದೇ. ಆದರೆ ಅದರ ಯಶಸ್ಸಿಗೆ ಮನೆಯ ಎಲ್ಲಾ ಸದಸ್ಯರುಗಳು ಕೊಂಚ "ತ್ಯಾಗ"ವನ್ನು ಮಾಡಬೇಕಾಗುತ್ತದೆ. ಹಾಗಾಗಿ  "ಮನೆಯಿಂದಲೇ  ಕೆಲಸ"ವೆಂಬ ಹೊಸ ಪದ್ಧತಿಯ ಯಶಸ್ಸಿನ ಗೌರವ, ಮನೆಯ ಸದಸ್ಯರೆಲ್ಲರಿಗೂ  ಕೂಡ ದೊರೆಯಬೇಕು. ಈ ಪದ್ಧತಿಯೇ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಹೋದರೆ, ನನ್ನ ಅಭ್ಯಂತರಗಳೇನೂ ಇಲ್ಲ' ಎಂದು ಸಮಾಧಾನ ವ್ಯಕ್ತ ಪಡಿಸಿದವರು ಪ್ರಭಾ. 

ಪ್ರತಾಪ ಮಧ್ಯೆ ಪ್ರವೇಶಿಸಿ, 'ನಮ್ಮತ್ತೆಯವರ ಮಾತುಗಳು ಬಹುಪಾಲಿಗೆ ಸರಿ.  ಆದರೆ ಮನೆಯಿಂದಲೇ ಕೆಲಸವೆಂಬ ಪದ್ಧತಿಯಿಂದ ನಮ್ಮಂತಹ ಯುವಕರುಗಳು ಮನೆಯಲ್ಲೇ ಕೂರುವಂತಾಗಿ, ಒಂದು ರೀತಿಯ "ಜಡ್ಡು ಹಿಡಿದ ಭಾವ" ನಮ್ಮನ್ನು ಕಾಡುತ್ತಿದೆ.  ಮನೆಯ ಹೊರಗಿನ ಸ್ನೇಹಿತರುಗಳೊಂದಿಗೆ ನಮ್ಮ ನೇರ ಒಡನಾಟ ತಪ್ಪಿಹೋಗಿ ಬೇಸರವೆನಿಸುತ್ತಿದೆ. ಇದರಿಂದ ಹೊಸ ನೌಕರರು  "ವೃತ್ತಿಪರರಾಗಿ ಸರ್ವತೋಮುಖ" ಅಭಿವೃದ್ಧಿಹೊಂದುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ನನಗನಿಸುತ್ತದೆ. ಮೇಲಿನ ಅಧಿಕಾರಿಗಳಿಂದ ನಮ್ಮಗಳ ಮೇಲಿರುವ ಒತ್ತಡ ಕಮ್ಮಿಯೇನಲ್ಲ. "ಕೆಲಸದ ಕರೆ"ಗಳು ಯಾವಾಗೆಂದರವಾಗ ಬರಬಹುದು. ಕೆಲವೊಮ್ಮೆ ನಮ್ಮ ಸ್ವಾತಂತ್ರ್ಯ ಹಾಗೂ ನೆಮ್ಮದಿಗಳನ್ನೇ ಕಳೆದುಕೊಂಡಿದ್ದೇವೋ ಎನಿಸುತ್ತದೆ. ಮನೆಗಳ ಶಾಂತಿ ಕದಡಿ ಹೋಗಿರುವುದು ಸುಳ್ಳಲ್ಲ.  ನಮ್ಮಗಳಿಗಂತೂ ಇಂತಹ ಬದಲಾದ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಅನಿವಾರ್ಯತೆ ಉಂಟಾಗಿ ಹೋಗಿದೆ ಎಂದೆನಿಸುತ್ತದೆ' ಎಂದನು. 

'ನಿಮ್ಮಗಳ ಕಷ್ಟ ನನಗರ್ಥವಾಗುತ್ತದೆ. ಆದರೂ ತಂತ್ರಜ್ಞಾನ ತಂದೊಡ್ಡುವ ಬದಲಾವಣೆಗಳನ್ನು ನಾವುಗಳು ತಡೆಯಲಾರೆವು ಎಂಬ ಮಾತುಗಳನ್ನು ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಉದ್ಯಮಗಳ ಕಾರ್ಯವೈಖರಿ ಹೇಗಿರುತ್ತದೆ?' ಎಂದ ರೋಹಿಣಿಯ ಪ್ರಶ್ನೆ, ಪ್ರತಾಪ್ ಮತ್ತು ರೋಹಿಣಿ, ಇಬ್ಬರನ್ನು ಕೆದಕಿತ್ತು. 

ಪ್ರತಾಪ್ ಉತ್ತರಿಸುತ್ತಾ, 'ಮನೆಯಿಂದಲೇ ಕೆಲಸ, ಆಗೀಗೊಮ್ಮೆ ಆಫೀಸಿನ ನೇರ ಭೇಟಿಗಳು ಮತ್ತು ಹೊರಗುತ್ತಿಗೆಗಳು (outsourcing) ಮುಂತಾದ ಹೊಸ ತಂತ್ರಗಳ ಸಮ್ಮಿಶ್ರಣವೇ ಮುಂದಿನ ದಿನಗಳ ವ್ಯವಸ್ಥೆಯ  ಅವಿಭಾಜ್ಯ ಅಂಗಗಳಾಗಿ ಹೋಗುತ್ತವೆ ಎಂದು ನನಗನಿಸುತ್ತದೆ. ಹೊರ ದೇಶಗಳಲ್ಲಿ ನೆಲಸಿರುವ, ನಮ್ಮ ಹಲವಾರು ಅನಿವಾಸಿ ಭಾರತೀಯ (Non-resident Indians - NRIs)ರುಗಳನ್ನೀಗ, ಅಲ್ಲಿನ ಅನಿಶ್ಚತತೆಗಳು ಕಾಡಿವೆ.  ಹಾಗಾಗಿ ಅವರುಗಳೀಗ ಭಾರತದ ಕಡೆ ಮುಖ ಮಾಡುವಂತಾಗಿದೆ. ಅನಿವಾಸಿ ಭಾರತೀಯರುಗಳಲ್ಲಿ ಹಲವರು ತಮ್ಮ ವಿದೇಶದ ಕೆಲಸಗಳನ್ನು ಕಳೆದುಕೊಂಡಿದ್ದಾರೆ. "ಅಮೇರಿಕಾ -ಅಮೇರಿಕಾ" ಎಂದು ತುಡಿಯುತ್ತಿದ್ದ ನಮ್ಮವರುಗಳಿಗೆ ಈಗ, ಸ್ವದೇಶದ ನೆಮ್ಮದಿಯ  ಸತ್ಯದರ್ಶನವಾಗುತ್ತಿದೆ ಎಂದು ನನಿಗನಿಸುತ್ತಿದೆ. ನೌಕರರು, ವಲಸಿಗರು, ಅನಿವಾಸಿ ಭಾರತೀಯರು, ಉದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳು  ಮುಂತಾದ ಎಲ್ಲಾ ಪಾಲುದಾರರಿಗೂ (stakeholders) ಕೋವಿಡನಂತರದ ಬೆಳವಣಿಗೆಗಳು "ಗೆಲ್ಲು ಮತ್ತು ಗೆಲ್ಲಿಸು (win-win)" ಎಂಬ ಸ್ವಾಗತಾರ್ಹ ಸನ್ನಿವೇಶವನ್ನು ಕಲ್ಪಿಸಿಕೊಡುತ್ತಿದೆ ಎಂಬುದು ನನ್ನ ಊಹೆ' ಎಂದನು.   

ಸಾಕಷ್ಟು ಅನುಭವಗಳನ್ನು ಹಂಚಿಕೊಂಡ ಪ್ರತಾಪ, ಪ್ರಭಾ ಮತ್ತು ಸೂಕ್ಷ್ಮಾರಿಗೆ  ವಂದಿಸಿ, ಕರೆಯನ್ನು ಕೊನೆಗೊಳಿಸಿದ ರೋಹಿಣಿ, 'ಪ್ರತಿಯೊಂದು ಬಿಕ್ಕಟ್ಟು (crisis) ಬದಲಾವಣೆಗಳನ್ನು ತರುತ್ತದೆ ಮತ್ತು ನಮಗೆ ಹೊಸ ಪಾಠಗಳನ್ನು ಕಲಿಸುತ್ತದೆ. ಕೋವಿಡ್ ಮಹಾಮಾರಿ ಇಡೀ ಪ್ರಪಂಚವನ್ನೇ ನಡುಗಿಸಿದೆ. ಮುಂದೇನು, ಕೋವಿಡ್ ಎಂದಿಗೆ ಪರಿಸಮಾಪ್ತಿಗೊಳ್ಳಬಹುದು ಎಂಬ ಆತಂಕ ಎಲ್ಲರನ್ನೂ ಈಗಲೂ ಕಾಡುತ್ತಿದೆ. ಕೋವಿಡನಂತಹ ವೈರಾಣುವಿನ ಹೊಸ ಹೊಸ ದಾಳಿಗಳು, ಮುಂದಿನ ದಿನಗಳಲ್ಲಿ ಮನುಕುಲವನ್ನು ಕಾಡುವುದು ಖಚಿತ. ಅಂತಹ ಸವಾಲುಗಳನ್ನು ನಿಭಾಯಿಸುತ್ತಾ ಮುನ್ನಡೆಯುವ ಹೊಸ ಜೀವನ ಕ್ರಮಗಳನ್ನು ನಾವುಗಳು ಅಳವಡಿಸಿಕೊಳ್ಳುವುದು ಅನಿವಾರ್ಯ' ಎಂದು ತನ್ನ ಸಂಶೋಧನಾ ಟಿಪ್ಪಣಿಗಳನ್ನು ಬರೆದುಕೊಂಡಳು. 

ಅಂತಿಮವಾದರೂ, ಅತಿ ಪ್ರಮುಖವಾದ ಮತ್ತೊಂದು ವಿಷಯವನ್ನು ರೋಹಿಣಿ ತನ್ನ 'ಕೋವಿಡ್ ಕಲಿ ಸಿದ ಪಾಠ'ಗಳು ಸರಣಿಯಲ್ಲಿ ಸೇರಿಸಲಿಚ್ಛಿಸಿದ್ದಳು. 'ಕೋವಿಡ್ ಮಹಾಮಾರಿಯ ಬಿಕ್ಕಟ್ಟು, ಸ್ವಾಭಾವಿಕವಾಗಿ ಆಗಿದ್ದೋ ಅಥವಾ ಯಾರೋ ದುಷ್ಕರ್ಮಿಗಳು ನೆಡೆಸಿದ ಜೈವಿಕಾಸ್ತ್ರದ ಪ್ರಯೋಗದ ಪರಿಣಾಮವೋ ತಿಳಿಯದು.  ವಿಶ್ವದ ಜನತೆಗೀಗ ಜೈವೀಕಾಸ್ತ್ರಗಳು ಉಂಟು ಮಾಡಬಹುದಾದ ಅನಾಹುತಗಳ ಅರಿವು ಉಂಟಾಗಿದೆ. ಜೈವೀಕಾಸ್ತ್ರಗಳ ವಿನಾಶಕಾರಿ ಶಕ್ತಿಯ ಮುಂದೆ ಅಣ್ವಸ್ತ್ರಗಳೇ ಮಕ್ಕಳಾಟಿಗೆಗಳಂತೆ ಕಾಣಿಸುತ್ತಿವೆ! ಮೊದಲ ಮಹಾಯುದ್ಧದ ಅಂತ್ಯದ ಸಮಯದಲ್ಲೇ, ವಿಶ್ವ ನಾಯಕರುಗಳು, ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಬಳಕೆಯನ್ನು ನಿಷೇಸಿದ್ದರು. ಈ ಮುಂಚೆ ಘೋಷಿಸಿದ್ದ ನಿಷೇಧಗಳ ಪುನರುಚ್ಛಾರದ ನಿರ್ಣಯಗಳನ್ನು ೧೯೭೨ ಮತ್ತು ೧೯೯೩ರಲ್ಲೂ ವಿಶ್ವದ ನಾಯಕರುಗಳು ಅನುಮೋದಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಮುನ್ನಡೆಯುತ್ತಿರುವಂತೆ, ವಿಶ್ವದ ಬಲಶಾಲಿ ರಾಷ್ಟ್ರಗಳ ನಡುವಿನ ತಿಕ್ಕಾಟ ಹೆಚ್ಚಾಗುತ್ತಾ ಸಾಗುತ್ತಿದೆ. ಹಾಗಾಗಿ ಜೈವೀಕಾಸ್ತ್ರಗಳ ಬಳಕೆಯಂತಹ ನೀಚ ಕೃತ್ಯಗಳು ಮುಂಬರುವ ದಿನಗಳಲ್ಲಿ ನಡೆಯಲಾರವು ಎಂದು ಹೇಳಲಾಗುದು. ಈ ಸುಂದರ ವಿಶ್ವವನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶ್ವದ ಮುಂಚೂಣಿಯಲ್ಲಿರುವ ನಮ್ಮ ನಾಯಕರುಗಳು ಈ ನಿಟ್ಟಿನಲ್ಲಿ ಯೋಚಿಸಬಲ್ಲರೇ? ಸಂಯಮವನ್ನು ಕಾಪಾಡಿಕೊಳ್ಳಬಲ್ಲರೇ? ಎಂಬುದೇ ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ' ಎಂದು ದಾಖಲಿಸಿದ ರೋಹಿಣಿ, ಆತಂಕಿತಳಾಗಿದ್ದಳು. 

******


೧೪

 ಅಂತಿಮ ಜಯ ನಮ್ಮದೇ


 

'ಕೊರೋನಾ ಸೇನಾನಿ'ಗಳಾಗಲು ತಮ್ಮ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಿದ ಮೇಲೆ ರಾಜು ಮತ್ತು ರೋಹಿಣಿಯವರಲ್ಲಿ ಹೊಸದೊಂದು ಉತ್ಸಾಹ ಮೂಡಿತ್ತು. ಅವರಿಬ್ಬರಿಗೂ  'ಸೇವಾ ಮನೋಭಾವ' ಎಂಬುದೇ ಸ್ಫೂರ್ತಿಯಾಗಿತ್ತು. ತನ್ನ ಸಂಶೋಧನೆಯ ಮಂಡನೆಗೆ ಹೆಚ್ಚಿನ ನೈಜತೆ ತರುವುದರಲ್ಲಿ, ಕೆಲವು ತಿಂಗಳುಗಳ 'ಕೊರೋನಾ ಸೇನಾನಿ' ಎಂಬ ಅನುಭವ ಅವಶ್ಯಕವಾದುದು ಎಂಬುದು ರೋಹಿಣಿಗೆ ಚೆನ್ನಾಗಿ ತಿಳಿದಿತ್ತು. 'ಅಪ್ಪಾ, ಸುಂದರ ಗುರಿಗಳ ಹಾದಿಗಳು ಕೆಲವೊಮ್ಮೆ ಕಲ್ಲು ಮುಳ್ಳಿನದಾಗಿರುತ್ತವೆ (difficult roads often lead to beautiful destinations), ಎಂದು ಕೇಳಿದ್ದೇನೆ. ಇದನ್ನೊಂದು ಅಪೂರ್ವ ಅವಕಾಶ ಎಂದು ಸ್ವೀಕರಿಸೋಣ,' ಎಂದಿದ್ದಳು ರೋಹಿಣಿ. 

'ರೋಹಿಣಿ, "ಕೋವಿಡ್ ಮಣಿಸಲು ಯೋಗ" ಎಂಬ ಆನ್ಲೈನ್ ಕಾರ್ಯಕ್ರಮವೊಂದು ನಾಳೆ ಇದೆ.  ಆ ಕಾರ್ಯಕ್ರಮವನ್ನು ಪ್ರಸಿದ್ಧ ಯೋಗ ಶಿಕ್ಷಕಿಯಾಗಿರುವ "ಜಾನಕೀ ಅಯ್ಯಂಗಾರ್"ರವರು ನಡೆಸಿಕೊಡುತ್ತಾರಂತೆ. ನಾಳಿನ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳೋಣವೇ?' ಎಂದರು ರಾಜು. 

'ನಿಮ್ಮ ಸಲಹೆ ಉತ್ತಮವಾದುದೇ. ಕೋವಿಡ್ ರೋಗವನ್ನು ದೂರವಿಡುವಲ್ಲಿ ನಮಗೆ ಹೆಚ್ಚಿನೆ ನಿರೋಧಕ ಶಕ್ತಿಯನ್ನು ತಂದು ಕೊಡಬಲ್ಲ, ಹಲವಾರು ಯೋಗಾಸನಗಳಿವೆ ಎಂದು ಕೇಳಿದ್ದೇನೆ. ಕೊರೋನಾ ಸೇನಾನಿಗಳಾಗಿ ಸೇವೆ ಸಲ್ಲಿಸಲು ನಾವಿಬ್ಬರೂ ಮುಂದಾಗಿರುವುದರಿಂದ, ಮುಂದಿನ ದಿನಗಳಲ್ಲಿ ನಮಗೆ ಸೋಂಕಿನ ಸಾಧ್ಯತೆ ಹೆಚ್ಚಾಗಿರುವುದು. ಆದುದರಿಂದ ನಾವುಗಳು ನಮ್ಮ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಹೆಚ್ಚು ಪ್ರಯತ್ನಗಳನ್ನು ಮಾಡಬೇಕು.  ಆ ನಿಟ್ಟಿನಲ್ಲಿ ಈ ಯೋಗದ ಕಾರ್ಯಕ್ರಮವು ಸಹಾಯಕವಾಗಬಲ್ಲದು,' ಎಂದಳು ರೋಹಿಣಿ. 

೨೦೨೦ರ ಆಗಸ್ಟ್ ತಿಂಗಳ ಅಂತಿಮ ಭಾನುವಾರದ ಅಂದು ಯೋಗ ಕಾರ್ಯಕ್ರಮದ ದಿನವಾಗಿತ್ತು. ರಾಜು ಮತ್ತು ರೋಹಿಣಿಯವರಿಬ್ಬರೂ ತಮ್ಮ ತಮ್ಮ ಲ್ಯಾಪ್ಟಾಪ್ಗಳ ಮುಂದೆ ಸಿದ್ಧರಾಗಿ ಕುಳಿತಿದ್ದರು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು. ಮೊದಲನೆಯದಾಗಿ, ಜಾನಕಿಯವರ ತಂದೆಯವರಾದ ನರಸಿಂಹ ಅಯ್ಯಂಗಾರ್ರವರ ಪ್ರಾಸ್ತಾವಿಕ  ಭಾಷಣವಿತ್ತು. ಅನುಭವಿ ಆಯುರ್ವೇದದ ವೈದ್ಯರು ಕೂಡ ಆಗಿದ್ದ ಅವರ ಭಾಷಣದ ವಾಗ್ಝರಿ ಹೀಗೆ ಸಾಗಿತ್ತು. 'ಇಡೀ ವಿಶ್ವವೀಗ ಕೋವಿಡ್ ಮಹಾಮಾರಿಯ ಸುಳಿವಿನಲ್ಲಿ ಸಿಕ್ಕಿ ನಲುಗುತ್ತಿದೆ. ನಮ್ಮ ಭಾರತೀಯ ಪರಂಪರೆಯ ಹಲವು ಮುನಿವರ್ಯರು, ಪ್ರಪಂಚವನ್ನು ಸಧ್ಯದಲ್ಲೇ ಕೋವಿಡ್ನಂತಹ  ರೋಗವೊಂದು ಕಾಡಬಹುದೆಂಬ ಮುನ್ಸೂಚನೆಯನ್ನು, ಸುಮಾರು ಒಂದು ವರ್ಷದ ಹಿಂದೆಯೇ ನೀಡಿದ್ದರು. ಮೊನ್ನೆ ಇನ್ನೂ ನೇಪಥ್ಯಕ್ಕೆ ಸರಿದಿರುವ "ವಿಕಾರಿ ನಾಮ ಸಂವತ್ಸರ (೨೦೧೯-೨೦)"ದ ಅಂತ್ಯ, ಇಡೀ ವಿಶ್ವವನ್ನು "ವಿಕಾರ"ವಾದಂತಹ ಪರಿಸ್ಥಿತಿಗೆ ತಳ್ಳಿದೆ. ವಿಶ್ವವನ್ನು ಕಾಡುತ್ತಿರುವ ಈ ವಿಚಿತ್ರ ರೋಗಕ್ಕೆ ಮದ್ದನ್ನು ಹುಡುಕುವುದು ಕಷ್ಟಸಾಧ್ಯ. ಹಲವು ಬಾರಿ ಮರುಕಳಿಸುವ ಆ ರೋಗದ ಹೊಸ ಹೊಸ ಅಲೆಗಳಿಗೆ ವಿಶ್ವವು ನಲುಗುವುದು ಖಚಿತ. ಕೋಟಿಗಟ್ಟಲೆ ಸಾವು-ನೋವುಗಳಾಗಬಹುದು. ಮಹಾಮಾರಿಯನ್ನು ನಿಯಂತ್ರಿಸಲಾಗದೆ, ವಿಶ್ವದ ಹಲವು ಖ್ಯಾತ ನಾಯಕರುಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳಬಹುದು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಮಹಾಮಾರಿಯ ತೀವ್ರತೆ, ನಮ್ಮ ಭಾರತದ ಮೇಲೆ ಕಮ್ಮಿ ಇರುವುದೆಂದೇ ಹೇಳಬಹುದು. ಆ ಮಹಾಮಾರಿಯನ್ನು ಹತ್ತಿಕ್ಕುವುದರಲ್ಲಿ, ನಮ್ಮ ಆಯುರ್ವೇದದ ವೈದ್ಯರುಗಳು ಕಂಡುಹಿಡಿಯಬಹುದಾದ ಔಷಧವೊಂದು ಪರಿಣಾಮಕಾರಿಯಾಗುವುದು. ಆ ದಿವ್ಯ ಔಷಧದ ಸಹಾಯದಿಂದ ಇಡೀ ವಿಶ್ವವನ್ನು ಕಾಪಾಡಿ, ಭಾರತ ವಿಶ್ವಗುರುವಾಗಿ ಹೊರಹೊಮ್ಮುವುದು.'  

ಕಾರ್ಯಕ್ರಮದ ಮುಂದಿನ ಭಾಗವಾಗಿ ಜಾನಕೀರವರ ಯೋಗ ಕುರಿತಾದ "ಪ್ರಾತ್ಯಕ್ಷಿಕೆ" ಶುರುವಾಗಿತ್ತು. 'ಕೋವಿಡ್-೧೯ ರೋಗವು ಮುಖ್ಯವಾಗಿ ಮಾನವನ ಶ್ವಾಸಕೋಶಗಳನ್ನು ಹಾನಿಗೊಳಿಸುತ್ತದೆ. ಆದುದರಿಂದ, ಕೋವಿಡ್ ನಿಯಂತ್ರಿಸಲು ಬೇಕಾದ ನಿರೋಧಕ ಶಕ್ತಿಯನ್ನು ಗಳಿಸಿಕೊಳ್ಳಲು ನಾವು ನಮ್ಮ ಶ್ವಾಸಕೋಶಗಳನ್ನು ಬಲಪಡಿಸಿಕೊಳ್ಳಬೇಕು. ನಮ್ಮ ಯೋಗ ಶಾಸ್ತ್ರದ "ಪ್ರಾಣಾಯಾಮ" ಎಂಬ ವಿಧಿಯ ಆವಿಷ್ಕಾರದ ಮೂಲೋದ್ದೇಶವೇ, ನಮ್ಮ ಶ್ವಾಸಕೋಶಗಳ ಬಲವರ್ಧನೆ. ನಮ್ಮ ಉಸಿರಾಟದ ಕ್ರಮವನ್ನು ನಿಯಂತ್ರಿಸುವ ವಿಶೇಷ ವಿಧಾನವೇ "ಪ್ರಾಣಾಯಾಮ"ವೆಂದು ಹೇಳಬಹುದು. ಇಂದು ನಾನು ತಮ್ಮಗಳಿಗೆ ಪ್ರಾಣಾಯಾಮದ ಮೂರು ಮುಖ್ಯ ವಿಧಾನಗಳಾದ "ಭಸ್ತ್ರಿಕ, ಕಪಾಲಭಾತಿ ಮತ್ತು ಅನುಲೋಮ-ವಿಲೋಮ"ಗಳನ್ನು, ಪ್ರಾತ್ಯಕ್ಷಿಕೆ ಮುಖಾಂತರ ವಿವರಿಸುತ್ತೇನೆ. ಕೋವಿಡ್ ರೋಗವನ್ನು ನಿಯಂತ್ರಿಸಲು ಬೇಕಾದ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು, ನಮ್ಮ ಪ್ರಾಣಾಯಾಮವೇ ಅತ್ಯಂತ ವೈಜ್ಞಾನಿಕವಾದ ಮಾರ್ಗವೆಂಬುದು ತಮ್ಮಗಳಿಗೆ ಇಂದು ಮನವರಿಕೆಯಾಗುವುದು ಖಂಡಿತ.'

'ತಾವೆಲ್ಲರೂ ಈಗ ಪ್ರಾಣಾಯಾಮದ ಪ್ರಕ್ರಿಯೆಗಳನ್ನು ಅಭ್ಯಾಸ ಮಾಡಲು ಸಿದ್ಧರಾಗಿ. ಮೊದಲ ಪ್ರಕ್ರಿಯೆಯನ್ನು "ಭಸ್ತ್ರಿಕ" ಎಂದು ಕರೆಯುತ್ತಾರೆ. ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಳ್ಳುವುದು (ಉಚ್ಛ್ವಾಸ) ಮತ್ತು ದೀರ್ಘವಾಗಿ ಉಸಿರನ್ನು ಹೊರಬಿಡುವುದು (ನಿಶ್ವಾಸ), ಈ ಎರಡು ಪ್ರಕ್ರಿಯೆಗಳಿಗೆ "ಭಸ್ತ್ರಿಕ" ಎಂದು ಹೆಸರು.' ಭಸ್ತ್ರಿಕ ಪ್ರಕ್ರಿಯೆಯನ್ನು ಜಾನಕಿರವರು ಪ್ರಾತ್ಯಕ್ಷಿಕೆಯ ಮುಖಾಂತರ ವಿವರಿಸಿದರು.  ರಾಜು ಮತ್ತು ರೋಹಿಣಿಯರಿಬ್ಬರೂ ತಮ್ಮ ತಮ್ಮ ಆಸನಗಳ ಮೇಲೇ ಕುಳಿತು, ಭಸ್ತ್ರಿಕ ಪ್ರಕ್ರಿಯೆಯನ್ನು ಜಾನಕಿರವರ ಮಾರ್ಗದರ್ಶನದ ಪ್ರಕಾರ ನಿರ್ವಹಿಸಿದರು. 'ಹೊಸದಾಗಿ ಮಾಡುವವರು ೧೦-೧೨ ಭಸ್ತ್ರಿಕ ಪ್ರಕ್ರಿಯೆಗಳವರೆಗೆ ಮಾಡಬಹುದು. ಕ್ರಮೇಣವಾಗಿ ಪ್ರಕ್ರಿಯೆಗಳ ಸಂಖ್ಯೆಗಳನ್ನು ಹೆಚ್ಚಿಸುತ್ತಾ ಹೋಗಬಹುದು.' 

ಮುಂದಿನ ಸರದಿ "ಕಪಾಲಭಾತಿ"ಯದಾಗಿತ್ತು. 'ಕಪಾಲಭಾತಿಯನ್ನು "ಪ್ರಾಣಾಯಾಮಗಳ ರಾಜ"ನೆಂದು ಕರೆಯುತ್ತಾರೆ. ಈ ವಿಧಾನದಲ್ಲಿ, ಮೂಗಿನ ಹೊಳ್ಳೆಗಳ ಮುಖಾಂತರ ಚಿಕ್ಕದಾಗಿ ಮತ್ತು ಬಲವಾಗಿ ಉಸಿರನ್ನು ಹಲವು ಬಾರಿ ಹೊರಹಾಕಬೇಕು (ನಿಶ್ವಾಸ). ಉಚ್ಛ್ವಾಸ (ಉಸಿರನ್ನು ಒಳಗೆಳುದುಕೊಳ್ಳುವ ಕ್ರಿಯೆ) ಪ್ರಕ್ರಿಯೆ ತನಗೆ ತಾನೇ ಆಗುತ್ತದೆ. ನೀವುಗಳು ೨೦ ಪ್ರಕ್ರಿಯೆಗಳೊಂದಿಗೆ ಆರಂಭಿಸಿ, ಕ್ರಮೇಣವಾಗಿ ೧೦೦ರವರೆಗೆ ಹೋಗಬಹುದು,' ಎಂದು ವಿವರಿಸಿದ ಜಾನಕಿಯವರು ಕಪಾಲಭಾತಿಯ ವಿಧಾನವನ್ನು ಮಾಡಿ ತೋರಿಸಿಕೊಟ್ಟರು. ಮಿಕ್ಕೆಲ್ಲರೂ ಪ್ರಕ್ರಿಯೆಯನ್ನು ವಿಧೇಯರಾಗಿ ಪಾಲಿಸಿದರು. 

ಪ್ರಾಣಾಯಾಮದ ಮೂರನೇ ಪ್ರಕ್ರಿಯೆಯನ್ನು "ಅನುಲೋಮ-ವಿಲೋಮ" ಎಂದು ಕರೆಯುತ್ತಾರೆ. 'ತಮ್ಮ ಬಲ ಹೊಳ್ಳೆಯನ್ನು ತಮ್ಮ ಬಲ ಹೆಬ್ಬೆಟ್ಟಿನಿಂದ ಮುಚ್ಚಿಕೊಳ್ಳಿ  ಮತ್ತು ಎಡ ಹೊಳ್ಳೆಯ ಮುಖಾಂತರ ದೀರ್ಘವಾಗಿ ಉಸಿರನ್ನೆಳೆದುಕೊಳ್ಳಿ. ಈಗ ತಮ್ಮ ಎಡ ಹೊಳ್ಳೆಯನ್ನು ಮುಚ್ಚಿಕೊಳ್ಳಿ ಮತ್ತು ತಮ್ಮ ಬಲ ಹೊಳ್ಳೆಯ ಮುಖಾಂತರ ದೀರ್ಘವಾಗಿ ಉಸಿರನ್ನು ಹೊರ ತಳ್ಳಿ. ಆನಂತರ ಉಸಿರನ್ನು ಒಳಗೆ ಳುದುಕೊಳ್ಳುವ ಪ್ರಕ್ರಿಯೆ ತಮ್ಮ ಬಲ ಹೊಳ್ಳೆಯ ಮುಖಾಂತರ ನಡೆಯಲಿ ಮತ್ತು ಉಸಿರನ್ನು ಹೊರಹಾಕುವ ಪ್ರಕ್ರಿಯೆ ತಮ್ಮ ಎಡ ಹೊಳ್ಳೆಯಿಂದಾಗಲಿ. ಈ ರೀತಿಯ ಜೋಡಿ ಪ್ರಕ್ರಿಯೆಗೆ ಒಂದು "ಅನುಲೋಮ-ವಿಲೋಮದ"ದ ಸುತ್ತು ಎಂದು ಹೇಳುತ್ತಾರೆ. ಈ ವಿಧಾನದಿಂದ ಉಸಿರಿನ ಶಕ್ತಿಯ ನಿರ್ವಹಣೆ ಮತ್ತು ಸಂರಕ್ಷಣೆ ಉತ್ತಮವಾಗಿ ಆಗುತ್ತದೆ. ಅಭ್ಯಾಸವನ್ನು ಶುರು ಮಾಡುತ್ತಾ, ತಾವುಗಳು ಈ ಪ್ರಕ್ರಿಯೆಯನ್ನು ದಿನವೊಂದಕ್ಕೆ ೧೦-೧೨ ಬಾರಿ ಮಾಡಬಹುದು' ಎಂದು ಸಾಗಿತ್ತು ಜಾನಕಿಯವರ ಪ್ರಾತ್ಯಕ್ಷಿಕೆ. ವಿಧೇಯರಾದ ಎಲ್ಲಾ  ಅಭ್ಯರ್ಥಿಗಳು ತಮ್ಮ ಗುರುಗಳು ತೋರಿಸಿಕೊಟ್ಟ ವಿಧಾನವನ್ನು, ಚಾಚೂ ತಪ್ಪದೇ ಅನುಸರಿಸಿದರು. 

'ಪ್ರಾಣಾಯಾಮದ ಅಭ್ಯಾಸ  "ಓಂಕಾರ"ದ ಉದ್ಘೋಷದೊಂದಿಗೆ ಮುಗಿಯಬೇಕು. ಉದ್ಘೋಷದ ಮೊದಲು ತಾವು ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಳ್ಳಬೇಕು. ಉಸಿರನ್ನು ಹೊರ ಹಾಕುವ ಪ್ರಕ್ರಿಯೆ ಆದಷ್ಟೂ ದೀರ್ಘವಾಗಿದ್ದು, "ಓಂಕಾರ"ದ ಗಟ್ಟಿಯಾದ ಉಚ್ಚಾರದೊಂದಿಗೆ ಸಾಗಬೇಕು. ಆರಂಭದಲ್ಲಿ ೪-೫ ಸುತ್ತುಗಳೊಂದಿಗೆ ಶುರುಮಾಡಿ, ಈ ಪ್ರಕ್ರಿಯೆಯನ್ನು ೨೦ ಸುತ್ತುಗಳವರೆಗೆ ಹೆಚ್ಚಿಸುತ್ತಾ ಸಾಗಬಹುದು' ಎಂದಿತ್ತು ಜಾನಕಿಯವರ ವಿವರಣೆ.  ಓಂಕಾರದ ಉದ್ಘೋಷದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಯೋಗದ ಕಾರ್ಯಕ್ರಮ ಮುಗಿದನಂತರ ರಾಜುರವರು ತಮ್ಮ ಮಗಳೊಂದಿಗೆ ಮಾತನಾಡುತ್ತಾ, 'ಇಂದಿನ ಕಾರ್ಯಕ್ರಮವೊಂದು ದೈವೀಕ ಅನುಭವವಾಗಿತ್ತಲ್ಲವೇ?' ಎಂದರು. 

'ಹೌದು, ಅದೊಂದು ದೈವೀಕ ಅನುಭವವೇ ಆಗಿತ್ತು. ಪ್ರಾಣಾಯಾಮದಿಂದ ನಮ್ಮ ಶ್ವಾಸಕೋಶಗಳ ಶಕ್ತಿ ವೃದ್ಧಿಸಿ, ನಮ್ಮಲ್ಲಿ ಕೋವಿಡ್ ರೋಗವನ್ನು ಧೈರ್ಯವಾಗೆದುರಿಸುವ ಆತ್ಮವಿಶ್ವಾಸವು  ಮೂಡುವುದರಲ್ಲಿ  ಅನುಮಾನವಿಲ್ಲ,' ಎಂಬುದು ರೋಹಿಣಿಯ ಅನಿಸಿಕೆಯಾಗಿತ್ತು. 

ಆದರೆ ಆಯುರ್ವೇದದ ವೈದ್ಯರಾದ ನರಸಿಂಹ ಅಯ್ಯಂಗಾರ್ರವರು ವ್ಯಕ್ತ ಪಡಿಸಿದ ವಿಚಾರಗಳ ಬಗ್ಗೆ ರೋಹಿಣಿಗೆ ತೀವ್ರ ಅಸಮಾಧಾನವಿತ್ತು. 'ಅವರ ವಿಚಾರಗಳು ಆಯುರ್ವೇದದ ವಿಚಾರಗಳಿಗಿಂತ, ಬುರುಡೆ ಭವಿಷ್ಯಕಾರರ ವಾಣಿಯಂತಿತ್ತು. ಅವರ ವಿಚಾರಗಳನ್ನೆಲ್ಲಾ ನಂಬಬಹುದೇ?'  

'ನರಸಿಂಹ ಅಯ್ಯಂಗಾರ್ರವರ ಭವಿಷ್ಯ ವಾಣಿಯನ್ನು ಕುರಿತಾದ ನಿನ್ನ ಅಸಮ್ಮತಿ ನನಗರ್ಥವಾಗುತ್ತದೆ. ಆ ರೀತಿಯ ಭವಿಷ್ಯ ವಾಣಿಗಳನ್ನು ಗೌರವಿಸುವ ಹಲವರು ನಮ್ಮ ದೇಶದಲ್ಲಿದ್ದಾರೆ. ಆಯುರ್ವೇದದ ಔಷಧಗಳ ವಿಚಾರಕ್ಕೆ ಬರೋಣ. ನಮ್ಮ ಭಾರತೀಯ ಪದ್ಧತಿಯಾದ ಆಯುರ್ವೇದದ ಬಗ್ಗೆ ಹಲವರು ಹಗುರವಾಗಿ ಮಾತನಾಡುತ್ತಾರೆ. ನಮ್ಮ ದೇಶವಾದ ಭಾರತದಲ್ಲಿ ಅಲೋಪಥಿಯೂ ಸೇರಿದಂತೆ, ಸುಮಾರು ಏಳು ವಿಭಿನ್ನ ಚಿಕಿತ್ಸಾ ಪದ್ಧತಿಗಳು ಜಾರಿಯಲ್ಲಿವೆ. "ಆಯುರ್ವೇದ, ಸಿದ್ಧ, ಯುನಾನಿ, ಯೋಗ, ಪ್ರಾಕೃತಿಕ ಚಿಕಿತ್ಸೆ (naturopathy) ಮತ್ತು ಹೋಮಿಯೋಪಥಿ," ಮುಂತಾದ ಚಿಕಿತ್ಸಾ ವಿಧಾನಗಳು ನಮ್ಮ ದೇಶದ ಒಂದಿಲ್ಲೊಂದು ಮೂಲೆಯಲ್ಲಿ ಜನಪ್ರಿಯವಾಗಿವೆ. ಅವುಗಳಲ್ಲಿನ  ಮೊದಲೈದು ಪದ್ಧತಿಗಳು ಶುದ್ಧ ಭಾರತೀಯ ಪದ್ಧತಿಗಳಾಗಿದ್ದು, ಅನಾದಿ ಕಾಲದಿಂದಲೂ ನಮ್ಮಲ್ಲಿ ಜಾರಿಯಲ್ಲಿವೆ. ವಿಶ್ವದಲ್ಲಿನ ಪ್ರತಿಯೊಂದು ಚಿಕಿತ್ಸಾ ವಿಧಾನಗಳಲ್ಲೂ, ಕೆಲವು ವಿಶೇಷಗಳು ಮತ್ತು ಕೆಲವು ನ್ಯೂನ್ಯತೆಗಳು ಇದ್ದೇ ಇರುತ್ತವೆ. ಅಲೋಪಥಿಯ ಎಲ್ಲಾ ವಿಧಿ-ವಿಧಾನಗಳು ಸರಿಯೆಂದು ಹೇಳಲಾಗದು. "ಮರಳಿ ಪ್ರಯತ್ನಿಸುವ ಮತ್ತು ಕಾದು ನೋಡುವ (trial and error, wait and watch)" ತಂತ್ರಗಳು ಅಲೋಪಥಿ ಪದ್ಧತಿಯ್ಲಲೂ ಇದ್ದೇ ಇದೆ. ೧೯೧೮ರಲ್ಲಿ "ಸ್ಪ್ಯಾನಿಷ್ ಫ್ಲೂ"ವನ್ನು ಹರಡಿದ್ದ ವೈರಾಣುವೇ, ೨೦೦೯ರಲ್ಲಿ "ಹಂದಿ ಜ್ವರ"ವನ್ನು ತಂದು ಹರಡಿತ್ತು ಎಂಬ ಬಲವಾದ ವಾದವಿದೆ. ೨೦೦೯ರಲ್ಲೂ, ಹಂದಿ ಜ್ವರವನ್ನು ನಿಯಂತ್ರಿಸುವಲ್ಲಿ ನಮ್ಮ ಅಲೋಪಥಿ ವೈದ್ಯರುಗಳು ತಿಣುಕಾಡಿದ್ದು ಸುಳ್ಳಲ್ಲ. ಇಂದಿಗೂ ನಮ್ಮ ಅಲೋಪಥಿ ವಿಜ್ಞಾನಿಗಳಿಗೆ, "ಸ್ಪ್ಯಾನಿಷ್ ಫ್ಲೂ - ೧೯೧೮ರ ವೈರಾಣು"ವಿನ  ಬಗ್ಗೆ ಹೆಚ್ಚು ತಿಳಿದಿಲ್ಲ. ಒಂದು ಶತಮಾನದಷ್ಟರ ದೀರ್ಘಾವಧಿಯಲ್ಲಿ ನಮ್ಮ ಅಲೋಪಥಿ ವೈದ್ಯರುಗಳು ಹಾಗೂ ವಿಜ್ಞಾನಿಗಳು ಮಾಡಿದ್ದಾದರೂ ಏನು? ಎಂದು ನಾವು ಆರೋಪಿಸಬಹುದಲ್ಲವೇ?

ರೋಹಿಣಿ, ನಿನಗೆ ತಿಳಿದಿರುವಂತೆ ಹಲವು ವರ್ಷಗಳಿಂದ ನನ್ನನ್ನು "ಬೆನ್ನು ನೋವು" ತೀವ್ರವಾಗಿ ಕಾಡುತ್ತಿದೆ. ಮೂಳೆ ತಜ್ಞರ (orthopaedic surgeon) ಆಸ್ಪತ್ರೆಯ ಕಡೆಗಿನ ನನ್ನ ದಂಡಯಾತ್ರೆಯನ್ನು ನೀನು ನೋಡುತ್ತಲೇ ಬಂದಿದ್ದೀಯ. ನನಗೇನಾದರೂ ಶಾಶ್ವತ ಪರಿಹಾರ ದೊರೆತಿದೆಯೇ? ಹಾಗೆಂದು ನಾನು ಆ  ವೈದ್ಯರನ್ನು ದೂಷಿಸುವುದಿಲ್ಲ. ಅವರಿಗೆ ತಿಳಿದಿರುವ ಎಲ್ಲಾ ಪ್ರಯತ್ನಗಳನ್ನೂ ಅವರು ಮಾಡುತ್ತಾ ಬಂದಿದ್ದಾರೆ.  ಅದೇ ರೀತಿಯ ರಿಯಾಯಿತಿ, ಅನುಕಂಪಗಳು ಬೇರೇ ಪದ್ಧತಿಯ ವೈದ್ಯರುಗಳ ಮೇಲೂ ಇರಲಿ ಎಂಬುದೇ ನನ್ನ ಪ್ರಾಮಾಣಿಕ ಅನಿಸಿಕೆ. ಆದರೆ, ಭಾರತೀಯ ಚಿಕಿತ್ಸಾ ಪದ್ಧತಿಗಳ ಮೇಲೆ ಆರೋಪವನ್ನು ಹೊರಿಸುವಲ್ಲಿ ಮಾತ್ರ, ನಮ್ಮಲ್ಲಿ ಹಲವರು  ಅಷ್ಟೊಂದು ತೀಕ್ಷ್ಣರಾಗುತ್ತಾರೇಕೆ?' ಎಂದು ಸಾಗಿತ್ತು ರಾಜುರವರ ವಿಚಾರ ಸರಣಿ. 

'ಅಪ್ಪಾ, ನಿಮ್ಮ ವಿಚಾರದಲ್ಲಿ ಸತ್ಯವಿಲ್ಲದಿಲ್ಲ. ಭಾರತದಾದ್ಯಂತ ನಮ್ಮ ಆಯುರ್ವೇದದ ವೈದ್ಯರುಗಳು, ಕೋವಿಡ್ ರೋಗಕ್ಕೆ ಔಷಧಗಳನ್ನು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಅವರುಗಳಲ್ಲಿ ಕೆಲವರು ತಮ್ಮ ಔಷಧಗಳು ಪರಿಣಾಮಕಾರಿಯಾಗಿವೆ ಎಂದೂ ಘೋಷಿಸಿದ್ದಾರೆ. ಕೆಲವು ರಾಜ್ಯಗಳಲ್ಲಿ ಅಂತಹ ಔಷಧಗಳನ್ನು, ಕೋವಿಡ್ ರೋಗಿಗಳ ಮೇಲೆ ಪ್ರಯೋಗಿಸಿ ನೋಡುವ ಅನುಮತಿಯನ್ನೂ ನೀಡಿದ್ದಾರೆ. ಕೆಲವು ಕೇಂದ್ರಗಳಲ್ಲಿನ ಫಲಿತಾಂಶಗಳು ಆಶಾದಾಯಕವಾಗಿವೆ. "ಆಯುರ್ವೇದದ ಔಷಧಗಳಿಂದ ಗುಣಮುಖರಾದರು ಎಂಬ ರೋಗಿಗಳಿಗೆ, ಅಲೋಪಥಿಯ ಔಷಧಗಳನ್ನೂ ನೀಡಲಾಗಿತ್ತು" ಎಂಬುದನ್ನು ಮರೆಯುವಂತಿಲ್ಲ ಎಂಬುದು ಅಲೋಪಥಿ ವೈದ್ಯರುಗಳ ವಾದ. ಆದರೂ, ಆಯುರ್ವೇದದ ವೈದ್ಯರುಗಳ ಔಷಧಗಳಿಗೂ ಅರ್ಹ ವೇದಿಕೆ ದೊರೆಯಲಿ, ಆ ಔಷಧಗಳೂ ಎಲ್ಲಾ ಪರೀಕ್ಷೆಗಳಿಗೂ ಒಳಪಡಲಿ ಎಂಬುದು ನನ್ನ ಅನಿಸಿಕೆ. ಅವಕಾಶವನ್ನೇ ನೀಡದೆ ಆಯುರ್ವೇದದ ಔಷಧಗಳನ್ನು ಅಲ್ಲಗಳೆಯುವುದು ಸರಿಯಲ್ಲ.'  

ರಾಜುರವರು ಮಾತು ಮುಂದುವರೆಸುತ್ತಾ, 'ನಿನ್ನ ವಿಚಾರಗಳು ಸರಿ ಎಂಬುದು ನನ್ನ ಅಭಿಪ್ರಾಯ. ಆಯುರ್ವೇದದ ಔಷಧಗಳ ಬಗ್ಗೆ ನಡೆಯುತ್ತಿರುವ ತನಿಖೆಗಳ ಬಗ್ಗೆ ನಾನೂ ಕೇಳಿದ್ದೇನೆ. ನಮ್ಮ ಕೆಲವು ಅಲೋಪಥಿ ವೈದ್ಯರುಗಳೂ, ಆಯುರ್ವೇದದ ಔಷಧಗಳ ಬಗ್ಗೆ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.  ಅವುಗಳಿಂದ ಅಡ್ಡ ಪರಿಣಾಮದ ಸಾಧ್ಯತೆ ಅತ್ಯಂತ ಕಡಿಮೆ ಎಂಬುದನ್ನು ಹಲವರು ಅನುಮೋದಿಸುತ್ತಾರೆ. "ಬೆಳ್ಳುಳ್ಳಿ, ಶುಂಠಿ, ಮೆಣಸು, ಈರುಳ್ಳಿ ಮತ್ತು ಜೇನುತುಪ್ಪ"ಗಳ ಆಯುರ್ವೇದದ ಕಷಾಯ, ವೈರಾಣುಗಳ ಸೋಂಕನ್ನು ತಡೆಯಬಲ್ಲದು ಎಂಬುದನ್ನು, ಹಲವು  ಅಲೋಪಥಿಯ ವೈದ್ಯರುಗಳೂ ಒಪ್ಪುತ್ತಾರೆ.

"ಗೌಟ್ (Gout ಎಂಬುದು ಒಂದು ರೀತಿಯ arthritis ರೋಗ)" ರೋಗದ ಚಿಕಿತ್ಸೆಗೆ ನೀಡುವ "ಕೋಲ್ಚಿಸೀನ್ (Colchicine)" ಎಂಬ ಗಿಡಮೂಲಿಕೆಗಳ ಮೂಲದ ಔಷಧವು ೨೦೦೦ ವರ್ಷಗಳಷ್ಟು ಹಳೆಯದು. ಆ ಔಷಧವು ಕೋವಿಡ್ ರೋಗದ ನಿವಾರಣೆಗೂ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಗ್ರೀಸ್ ದೇಶದಲ್ಲಿ ಆ ಔಷಧಿಯ ಮೇಲಿನ ಸಂಶೋಧನೆ ಸಾಗಿದ್ದು, ಫಲಿತಾಂಶಗಳು ಹೊಸ ಭರವಸೆಯನ್ನು ಮೂಡಿಸಿವೆ. ಅದೇ ಔಷಧದ ಬಳಕೆ ಭಾರತೀಯ ಆಯುರ್ವೇದದ ಪದ್ಧತಿಯಲ್ಲೂ ಇದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಏನೇ ಆಗಲಿ, ಭಾರತೀಯ ಔಷಧಗಳು ಬಡವರ ಪಾಲಿಗೆ ದುಬಾರಿಯಲ್ಲದ್ದು, ಮತ್ತು ಅವುಗಳಿಂದ ಅಡ್ಡ ಪರಿಣಾಮಗಳ ಸಾಧ್ಯತೆ ಕಡಿಮೆ. ಆದುದರಿಂದ ಅವುಗಳ ಮೇಲಿನ ಪ್ರಯೋಗಗಳು ನಿರಂತರವಾಗಿ ಸಾಗಲಿ' ಎಂದರು. 

                                                                                  ***

ಅಂತೂ, ಬಹು ನಿರೀಕ್ಷೆಯ ಆ ದಿನ ಬಂದಿತ್ತು. ಸರಕಾರದ ವತಿಯಿಂದ ರಾಜು ಮತ್ತು ರೋಹಿಣಿರವರನ್ನು, 'ಕೊರೋನಾ ಸೇನಾನಿ'ಗಳೆಂದು ಅಧಿಕೃತವಾಗಿ ಗುರುತಿಸಿ, ಕರೆಪತ್ರವನ್ನು ನೀಡಲಾಗಿತ್ತು. ಅದೇ ದಿನ ಡಾ. ಕಿರಣರಿಗೆ ಸುದ್ದಿಯನ್ನು ಮುಟ್ಟಿಸಿದ ಅವರಿಬ್ಬರೂ, ಅಂದೇ ಕರ್ತವ್ಯಕ್ಕೆ ಹಾಜರಾಗಿದ್ದರು. 'ಕೊರೋನಾ  ಸೇನಾನಿಗಳನ್ನು ನಿಯಂತ್ರಿಸುವ ಕೋಣೆ (digital war room)'ಯ ಮುಖಾಂತರ ಕೊರೋನಾ ಸೇನಾನಿಗಳನ್ನು ನಿಯಂತ್ರಿಸಲಾಗುತ್ತಿತ್ತು. ಕೊರೋನಾ ಸೇನಾನಿಗಳಿಗೆ ವಹಿಸಬಹುದಾದ ವಿವಿಧ ಕಾರ್ಯಗಳ ಪಟ್ಟಿ ಕೆಳಕಂಡಂತಿತ್ತು. 

-ದಿನಸಿ ಪೊಟ್ಟಣಗಳ ವಿತರಣೆ 

-ಹಿರಿಯ ನಾಗರೀಕರು ಮತ್ತು ದೈಹಿಕ ಸವಾಲುಗಳನ್ನೆದುರಿಸುತ್ತಿರುವವರಿಗೆ (physically challenged) ಔಷಧ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವುದು 

-ಸಾಮೂಹಿಕ ಅಡುಗೆ ಮನೆಗಳಲ್ಲಿ ಸಿದ್ಧ ಪಡಿಸಿದ ಆಹಾರಗಳನ್ನು ಪೊಟ್ಟಣಗಳಲ್ಲಿರಿಸುವುದು 

-ಅವಶ್ಯಕತೆ ಇದ್ದವರಿಗೆ 'ಫೋನ್ ಮುಖಾಂತರ ಔಷಧ (telemedicine)'ಗಳ ವ್ಯವಸ್ಥೆ ಮಾಡುವುದು 

-ಕೊರೋನಾ ರೋಗಿಗಳ ಮತ್ತು ಕ್ವಾರಂಟೈನ್ಗೆ ಒಳಪಟ್ಟವರ ಮನೆಗಳ ಮುಂದೆ ಎಚ್ಚರಿಕೆಯ ಪತ್ರಗಳನ್ನು ಅಂಟಿಸುವುದು 

-ಕೊಳಚೆ ಪ್ರದೇಶ ಮತ್ತು ಹಳ್ಳಿ ಪ್ರದೇಶಗಳಲ್ಲಿ ಮಾಸ್ಕ್, ಸಾಬೂನು ಮುಂತಾದ ಸಾಮಗ್ರಿಗಳ ವಿತರಣೆ 

-ಜಿಲ್ಲಾಡಳಿತ ಏರ್ಪಡಿಸುವ ಕೊರೋನಾ ನಿರ್ವಹಣೆ ಕುರಿತಾದ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದು 

-ವಲಸಿಗ ಕೆಲಸಗಾರರಿಗೆ ಸೂಕ್ತ ಸಲಹೆಗಳನ್ನು ನೀಡುವುದು ಮತ್ತು ಅವರುಗಳು 'ಸೇವಾಸಿಂಧು' ಅರ್ಜಿಗಳನ್ನು ತುಂಬಿಸಿ, ಸರಕಾರಕ್ಕೆ  ಸಲ್ಲಿಸುವಲ್ಲಿ ಸಹಾಯ ಮಾಡುವುದು

ಹೀಗಿರಲು ಒಂದು ದಿನ, ಸೇನಾನಿಗಳ ಸಭೆಯೊಂದರಲ್ಲಿ ತಂಡದ ನಾಯಕರ ಕೋರಿಕೆಯೊಂದಿತ್ತು. ೮೦ ವರ್ಷದ ವಯೋವೃದ್ಧರೊಬ್ಬರಿಗೆ  ಸಹಾಯವೊಂದು ಬೇಕಿತ್ತು. ಕೃಷ್ಣ ಸೋಲಂಕಿ ಎಂಬ ಹೆಸರಿನ ಅವರು ಪಾರ್ಶ್ವವಾಯು (paralysis)ವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಅವರ ಪತ್ನಿ ಜಯ ಸೋಲಂಕಿರವರಿಗೆ ಸುಮಾರು ೭೦ ವರ್ಷಗಳಾಗಿದ್ದು, ಪ್ರತಿ ವಾರ ಅವರಿಗೆ ಡಯಾಲಿಸಿಸ್ (dialysis) ಚಿಕಿತ್ಸೆಯ ಅವಶ್ಯಕತೆ ಇತ್ತು. ವೃದ್ಧ ದಂಪತಿಗೆ ಮಕ್ಕಳಿರಲಿಲ್ಲ. ಸಮೀಪದ ಹಳ್ಳಿಯ ಯುವಕನೊಬ್ಬನು ಪ್ರತಿ ವಾರ ಆಕೆಯನ್ನು, ಸುಮಾರು ೬೦ ಕಿ.ಮೀ.ರಷ್ಟು ದೂರವಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ಡಯಾಲಿಸಿಸ್ ಚಿಕಿತ್ಸೆಯನ್ನು ಕೊಡಿಸುವ ಸತ್ಕಾರ್ಯವನ್ನು ಮಾಡುತ್ತಿದ್ದನು. ತುರ್ತು ಕಾರಣಗಳಿಗಾಗಿ ಅಂದು,  ಆ ಯುವಕನು ದೂರದ ಊರಿಗೆ ತೆರಳಿದ್ದನು. ಹಾಗಾಗಿ ಆ ಕಾರ್ಯವನ್ನು ಮಾಡುವ ಸೇನಾನಿಯೊಬ್ಬರನ್ನು ಹುಡುಕುವ ಭಾರ ತಂಡದ ನಾಯಕರ ಮೇಲಿತ್ತು. ಹಿರಿಯ ಸೇನಾನಿಗಳಾದ ರಾಜುರವರು ಆ ಕಾರ್ಯವನ್ನು ವಹಿಸಿಕೊಂಡಿದ್ದು, ಎಲ್ಲರಿಗೂ ಸ್ಫೂರ್ತಿದಾಯಕವಾಗಿತ್ತು. 

ಹತ್ತು ವರ್ಷಗಳಷ್ಟು ಹಳೆಯದಾದ ರಾಜುರವರ ಕಾರು, ಓಡಿದ್ದಕ್ಕಿಂತ ನಿಂತ್ತಿದ್ದೇ ಜಾಸ್ತಿಯಾಗಿತ್ತು. ಆದರೂ ರಾಜುರವರು ಆ ಕಾರಿನ ಸುಸ್ಥಿತಿಯ ನಿರ್ವಹಣೆಯಲ್ಲಿ ಉದಾಸೀನ ಮಾಡುತ್ತಿರಲಿಲ್ಲ. ಅವರೇ ಕಾರನ್ನು ಚಲಾಯಿಸುತ್ತಾ, ಕೃಷ್ಣ ಸೋಲಂಕಿಯವರ ಮನೆಯಿಂದ ವೃದ್ಧೆಯನ್ನು ಕೊಂಡೊಯ್ದು ಡಯಾಲಿಸಿಸ್ ಆಸ್ಪತ್ರೆಯನ್ನು ತಲುಪಿಸಿದ್ದರು. ಡಯಾಲಿಸಿಸ್ ಪ್ರಕ್ರಿಯೆ ಮುಗಿಯಲು ಸುಮಾರು ನಾಲ್ಕು ಘಂಟೆಗಳ ಕಾಲ ಕಾಯಬೇಕಾಗಿ ಬಂತು. ಸಮಾಧಾನದಿಂದ ಕಾದ ರಾಜುರವರು, ಚಿಕಿತ್ಸೆ ಮುಗಿದನಂತರ ವೃದ್ಧೆಯನ್ನು ಕ್ಷೇಮವಾಗಿ ಮನೆ ತಲುಪಿಸಿದ್ದರು. ಕೃಷ್ಣ ಮತ್ತು ಜಯ ಸೋಲಂಕಿರವರ ಆನಂದಕ್ಕೆ ಅಂದು ಪಾರವೇ ಇರಲಿಲ್ಲ. ಮನಸಾರೆ ಹರೆಸಿ, ಅವರು ರಾಜುರವರನ್ನು ಬೀಳ್ಕೊಟ್ಟಿದ್ದರು. 

ಮತ್ತೊಂದು ತಡ ರಾತ್ರಿ, 'ಕೊರೋನಾ ವಾರ್ ಕೋಣೆ'ಯಿಂದ ತುರ್ತು ಕರೆಯೊಂದು ಬಂದಿತ್ತು. ರಾಜು ಮತ್ತು ರೋಹಿಣಿಯರಿಬ್ಬರೂ ಕರೆಯನ್ನು ಸ್ವೀಕರಿಸಿ ಸಭೆಯಲ್ಲಿ ಭಾಗಿಗಳಾಗಿದ್ದರು. ತಂಡದ ನಾಯಕರ ಮಾತಿನಲ್ಲಿ ಸಾಕಷ್ಟು ಆತಂಕವಿತ್ತು. ಯುರೋಪ್ ಖಂಡದ ದೊಡ್ಡ ನಗರವೊಂದರಲ್ಲಿ, ಸುಮಾರು ೨೬೦ ಭಾರತೀಯರು ಸಿಲುಕಿಕೊಂಡಿದ್ದರು. ಅವರುಗಳಲ್ಲಿ ಬಹುತೇಕರು ಹಿರಿಯ ನಾಗರೀಕರಾಗಿದ್ದರು. ಕಳೆದೆರಡು ವಾರದಿಂದ ಅತಂತ್ರರಾದ ಅವರುಗಳು, ಭಾರತಕ್ಕೆ ಮರಳಲು ವಿಮಾನ  ದೊರಕದೆ ಪರೆದಾಡುತ್ತಿದ್ದರು. ಅಂದು, ಭಾರತ ಸರಕಾರವು ಅವರುಗಳನ್ನು ವಾಪಸ್ಸು ಕರೆ ತರಲು ವಿಮಾನವೊಂದನ್ನು ಕಳುಹಿಸುವ ಏರ್ಪಾಡನ್ನು ಮಾಡಿತ್ತು. ಆದರೆ, ಆ ವಿಮಾನದಲ್ಲಿ ಗಗನ ಸಖಿಯರ ತೀವ್ರ ಕೊರತೆಯಿತ್ತು. 'ಆ ವಿಮಾನದಲ್ಲಿರುವ ಒಂದೆರಡು ಹಿರಿಯ ಗಗನ ಸಖಿಯರಿಗೆ ಸಹಾಯಕರಾಗಿ ಹೋಗಲಿಚ್ಛಿಸುವ, ಸುಮಾರು ೨೫ರ ಪ್ರಾಯದ ಯುವತಿಯರು ನನಗೆ ತಮ್ಮ ಹೆಸರುಗಳನ್ನು ಈಗಲೇ ನೀಡಿ. ಇಂದೊಂದು ತುರ್ತು ಕರೆಯಾದುದರಿಂದ, ಅಭ್ಯರ್ಥಿಗಳಿಗೆ ಯಾವುದೇ ಅನುಭವ ಅಥವಾ ತರಬೇತಿಗಳ ಅವಶ್ಯಕತೆ ಇಲ್ಲ. ಇಚ್ಛೆಯುಳ್ಳ,  ಪಾಸ್ಪೋರ್ಟ್ ಇಲ್ಲದವರೂ ಮುಂದೆ ಬರಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ  "ಕೋವಿಡ್ ರೋಗ"ದ ಪರೀಕ್ಷೆಯನ್ನು ವಿಮಾನ ನಿಲ್ದಾಣದಲ್ಲೇ ಮಾಡಲಾಗುವುದು.  ಕೊರೋನಾ ಪರಿಸ್ಥಿತಿ ಇರುವುದರಿಂದ, ಕಾರ್ಯದಲ್ಲಿ ಪಾಲ್ಗೊಳ್ಳುವ  ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ, ಎಲ್ಲಾ ಮುಂಜಾಗರೂಕತೆಗಳನ್ನೂ ಅನುಸರಿಸಲಾಗುವುದು. "ಕೋವಿಡ್ ಇಲ್ಲ"ವೆಂಬ ಪ್ರಮಾಣ ಪತ್ರವನ್ನು, ಅಲ್ಲಿನ  ಸ್ಥಳೀಯ ವೈದ್ಯರಿಂದ ಪಡೆದವರನ್ನು ಮಾತ್ರ ಭಾರತಕ್ಕೆ ವಾಪಸ್ಸು ಕರೆ ತರಲಾಗುವುದರಿಂದ, ತಮ್ಮಗಳಲ್ಲಿ ಆತಂಕ ಬೇಡ' ಎಂದು ಕೋರಿಕೊಂಡ ತಂಡದ ನಾಯಕರು, ಪ್ರತಿಕ್ರಿಯೆಗಳಿಗಾಗಿ ಕಾಯುತ್ತಾ ಕುಳಿತಿದ್ದರು.  

ಕೋರಿಕೆಯ ಪ್ರಕಟಣೆಯನಂತರ, ಸದಸ್ಯರುಗಳು ತಮ್ಮ ತಮ್ಮ ಮನೆಯವರೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಲೆಂದು, ೩೦ ನಿಮಿಷಗಳ ವಿರಾಮವನ್ನು ನೀಡಲಾಗಿತ್ತು. ವಿರಾಮದ ವೇಳೆಯಲ್ಲಿ, ರೋಹಿಣಿ ತನ್ನ ತಂದೆಯೊಂದಿಗೆ ಚರ್ಚಿಸಿದ್ದಳು. 'ಅಪ್ಪಾ, ನಾನು ೨೫ರ ಒಳಗಿನ ಪ್ರಾಯದ ಯುವತಿ. ನನ್ನ ಹತ್ತಿರ ಪಾಸ್ಪೋರ್ಟ್ ಕೂಡಾ ಇದೆ. ಭಾರತದಲ್ಲಿನ ವಿವಿಧ ನಗರಗಳಿಗೆ ನಾನು ಸುಮಾರು ಏಳು ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದೇನೆ. ಆದುದರಿಂದ, ಗಗನ ಸಖಿಯರ ಕೆಲಸವೇನೆಂಬುದರ ಅರಿವು ನನಗಿದೆ. ಹೇಗೂ ಇಬ್ಬರು ನುರಿತ ಗಗನ ಸಖಿಯರು ಇದ್ದು, ನನಗೆ ಮಾರ್ಗದರ್ಶನ ನೀಡುತ್ತಾರೆ. ನಾನೇಕೆ ಈ ಕೆಲಸಕ್ಕೆ ಮುಂದಾಗಬಾರದು?' 

'ಮಗಳೇ, ನಿನ್ನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತಿದೆ. ನಿನ್ನ ಧೈರ್ಯ ಮತ್ತು ಸೇವಾ ಮನೋಭಾವಗಳನ್ನು ನೋಡಿ ನನ್ನ ಮನಸ್ಸು ತುಂಬಿ ಬಂದಿದೆ. ಸಂಕಷ್ಟಗಳಿಗೆ ಸಿಲುಕಿರುವ ಮನುಷ್ಯರುಗಳಿಗೆ ಸಹಾಯ ಹಸ್ತ ಚಾಚುವುದೊಂದು ಮಹತ್ಕಾರ್ಯ. ದೇವರ ಆಶೀರ್ವಾದ ನಿನ್ನೊಂದಿಗಿರಲಿ' ಎಂದು ತುಂಬು ಮನಸ್ಸಿನಿಂದ ಹರಸಿದ್ದರು, ತಂದೆ ರಾಜು. 

ಆನ್ಲೈನ್ ಸಭೆ ಮತ್ತೆ ಸೇರಿದ ಕ್ಷಣವೇ, ರೋಹಿಣಿ ತುದಿಗಾಲಿನಲ್ಲಿ ನಿಂತಿದ್ದಳು. 'ಗಗನ ಸಖಿಯರ ಸಹಾಯಕಿಯಾಗಿ ಕಾರ್ಯ ನಿರ್ವಹಿಸಲು ನಾನು ಸಿದ್ಧಳಿದ್ದೇನೆ' ಎಂದು ಕಿರುಚುತ್ತಾ ನುಡಿದ ರೋಹಿಣಿಯ ಧ್ವನಿಯಲ್ಲಿ ಕಾತರವಿತ್ತು. 

ವಿಮಾನ ಪ್ರಯಾಣದ ದಿನ ಸಮೀಪಿಸುತ್ತಿತ್ತು. ರೋಹಿಣಿಯ ಗೆಳೆಯನಾದ ಡಾ. ಕಿರಣ್ ಕೊಂಚ ಚಿಂತಿತನಾಗಿದ್ದನು. ತನ್ನ ಆತಂಕಗಳನ್ನು ತೋರ್ಪಡಿಸದೇ, ಅವನು ಗೆಳತಿ ರೋಹಿಣಿಯೊಂದಿಗೆ ಮಾತನಾಡಿದ್ದನು. 'ರೋಹಿಣಿ, ನಿನ್ನ ಬಗ್ಗೆ ನನ್ನಲ್ಲೀಗ ಹೆಚ್ಚಿನ ಗೌರವ ಮೂಡಿದೆ. ನಿನ್ನ ನಿಸ್ವಾರ್ಥ ಸೇವೆಗೆ ನನ್ನದೊಂದು ನಮನವಿರಲಿ. ಆದರೆ ನೀನು ಮುನ್ನೆಚ್ಚರಿಕೆಯಿಂದಿರಬೇಕು. "ಪಿ.ಪಿ.ಇ. ತೊಡುಗೆ"ಯನ್ನು ಅವರು ನೀಡಿದರೆ, ಅದನ್ನು ತಪ್ಪದೇ ಧರಿಸು. ಎನ್-೯೫ ಮಾಸ್ಕ್ಗಳನ್ನು ಮತ್ತು ಕೈ-ತೊಡುಗೆ (hand-gloves)ಗಳನ್ನು ನಾನು ನೀಡುತ್ತೇನೆ. ಅವುಗಳ ಧಾರಣೆ ನಿರಂತರವಾಗಿರಲಿ. ಆದಷ್ಟೂ ಸಾಮಾಜಿಕ ಅಂತರವನ್ನು ಕಾಪಾಡಿಕೊ. ಹಾರಾಟ ತಂಡದ ಮುಖ್ಯಸ್ಥರುಗಳು ನಿನಗೆ ಸಾಕಷ್ಟು ಎಚ್ಚರಿಕೆಗಳನ್ನು ನೀಡುತ್ತಾರೆ.  ಅವುಗಳನ್ನು ಚಾಚೂ ತಪ್ಪದೆ ಪಾಲಿಸು. ನಿನ್ನ ಕಾರ್ಯ ಯಶಸ್ವಿಯಾಗಿ ಸಾಗಲಿ.' 

ರಾಜು ಮತ್ತು ಕಿರಣರಿಬ್ಬರೂ, ರೋಹಿಣಿಯನ್ನು ಬೀಳ್ಕೊಡಲು ವಿಮಾನ ನಿಲ್ದಾಣದವರೆಗೆ ಬಂದಿದ್ದರು. ಎರಡೂ ಕಡೆಯ ಹಾರಾಟದ ಸಮಯದಲ್ಲೂ ಪಿ.ಪಿ.ಇ. ತೊಡುಗೆಗಳೊಂದಿಗೆ ಎಲ್ಲಾ ಸಲಕರಣೆಗಳನ್ನೂ, ಸ್ವಯಂ ಸೇವಕರಿಗೆ ನೀಡುವುದಾಗಿ ವಿಮಾನದ ಮುಖ್ಯಸ್ಥರು ಪ್ರಕಟಿಸಿದ್ದು, ಮೂವರಿಗೂ ಸಮಾಧಾನವನ್ನು ತಂದಿತ್ತು. ತಂದೆಗೆ ನಮಸ್ಕರಿಸಿ, ಕಿರಣನಿಗೆ 'ಬೈ' ಹೇಳಿದ ರೋಹಿಣಿ ವಿಮಾನದ ಕಡೆ ಹೊರಟಳು. 

ಯೂರೋಪಿನ ಆ ಮಹಾ ನಗರದಿಂದ ಭಾರತದ ಕಡೆಯ ಹಾರಾಟದ ದಿನ ಅದಾಗಿತ್ತು. ಎಲ್ಲಾ ೨೬೦ ಪ್ರಯಾಣಿಕರೂ ವಿಮಾನದಲ್ಲಿ ಆಸೀನರಾಗಿ ಕುಳಿತಿದ್ದರು. ಅವರೆಲ್ಲರೂ 'ಕೋವಿಡ್ ಇಲ್ಲ'ವೆಂಬ ಪ್ರಮಾಣ ಪತ್ರವನ್ನು ಸ್ಥಳೀಯ ವೈದ್ಯರಿಂದ ಹೊಂದಿದವರಾಗಿದ್ದರು. ರೋಹಿಣಿಯೂ ಸೇರಿದಂತೆ  ವಿಮಾನದ ತಂಡದ ಎಲ್ಲ ಸದಸ್ಯರುಗಳಿಗೂ, ಕೋವಿಡ್ ಇಲ್ಲವೆಂದು ಪರೀಕ್ಷೆಯ ಮೂಲಕ ದೃಢ ಪಡಿಸಿಕೊಳ್ಳಲಾಗಿತ್ತು. ತಂಡದ ಎಲ್ಲಾ ಸದಸ್ಯರುಗಳಿಗೂ ಪಿ.ಪಿ.ಇ. ತೊಡುಗೆಗಳೊಂದಿಗೆ ಎಲ್ಲಾ ಸುರಕ್ಷಾ ಸಲಕರಣೆಗಳನ್ನೂ ನೀಡಲಾಗಿತ್ತು. ಮನ್ನೆಚ್ಚರಿಕೆಯ ಎಲ್ಲಾ ಸೂಚನೆಗಳನ್ನೂ ತಂಡದ ಸದಸ್ಯರುಗಳೆಲ್ಲರಿಗೂ ಸ್ಪಷ್ಟವಾಗಿ ನೀಡಲಾಗಿತ್ತು. ಪ್ರಯಾಣಿಕರೆಲ್ಲರುಗಳನ್ನೂ ಸಾಮಾಜಿಕ ಅಂತರವಿರುವಂತೆ ಆಸೀನರನ್ನಾಗಿಸಿತ್ತು. ಪ್ರತಿ ಎರಡು ಪ್ರಯಾಣಿಕರುಗಳ ನಡುವೆ ಮಧ್ಯದ ಆಸನವನ್ನು ಖಾಲಿ ಬಿಡಲಾಗಿತ್ತು. ಪ್ರಯಾಣಿಕರುಗಳಿಗೆ ಮುನ್ಸೂಚನೆಯನ್ನು, ಇದ್ದ ಎರಡು ನುರಿತ ಗಗನ ಸಖಿಯರೇ ನೀಡಿದ್ದರು. ವಿಧೇಯಳಾದ ರೋಹಿಣಿ ತನ್ನ ಸೇವೆಯಲ್ಲಿ ನಿರತಳಾಗಿದ್ದಳು. ಆ ವಿಮಾನ ಭಾರತವನ್ನು ತಲುಪಲು ಸುಮಾರು ಹತ್ತು ಘಂಟೆಗಳ ಹಾರಾಟವನ್ನು ನಡೆಸಿತ್ತು. ಭಾರತದ ವಿಮಾನ ನಿಲ್ದಾಣದಲ್ಲಿ ಕ್ಷೇಮವಾಗಿ ವಿಮಾನ ನೆಲಕ್ಕಿಳಿದಾಗ, ಎಲ್ಲಾ ೨೬೦ ಪ್ರಯಾಣಿಕರೂ ಮತ್ತು ತಂಡದ ಸದಸ್ಯರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ವಿಮಾನದಿಂದಿಳಿದ ಎಲ್ಲರನ್ನೂ, ವಿಮಾನ ನಿಲ್ದಾಣದಲ್ಲೇ  ಪರೀಕ್ಷೆಗೊಳಪಡಿಸಲಾಯಿತು. ಪರೀಕ್ಷೆಗಳು ಮುಗಿದನಂತರ ರೋಹಿಣಿಯನ್ನು ಮನೆಗೆ ಕಳುಹಿಸುವ ಮುನ್ನ, ಹತ್ತು ದಿನಗಳ ಕ್ವಾರಂಟೈನಿನಲ್ಲಿರುವಂತೆ ಸೂಚಿಸಿ ಬೀಳ್ಕೊಡಲಾಯಿತು. ರೋಹಿಣಿಯನ್ನು ಸ್ವಾಗತಿಸಲು ಬಂದಿದ್ದ ಕಿರಣ್ ಮತ್ತು ರಾಜುರವರಿಬ್ಬರೂ, ರೋಹಿಣಿಯೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳ ಬೇಕಾಯಿತು. ಮೂರು ದಿನಗಳನಂತರ ಮತ್ತೊಮ್ಮೆ ಪರೀಕ್ಷೆಗೊಳಪಡುವಂತೆ ರೋಹಿಣಿಗೆ ಸೂಚಿಸಲಾಗಿತ್ತು. 

***

ರೋಹಿಣಿಯ ಸಾಹಸದ ಸೇವೆಯ ಬಗ್ಗೆ, ತಂದೆ ರಾಜು ಮತ್ತು ಕಿರಣರಿಬ್ಬರಿಗೂ ಹೆಮ್ಮೆಯೆನಿಸಿತ್ತು. ರೋಹಿಣಿಯೊಂದಿಗೆ ಕಿರಣ್ ಮಾತನಾಡುತ್ತಾ, 'ಮೂರು ದಿನಗಳನಂತರ ನೀನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು ಎಂದು ಸೂಚಿಸಿದ್ದಾರೆ. ಮುಂಜಾಗರೂಕತೆಯ ಎಲ್ಲಾ ಕ್ರಮಗಳನ್ನು ವಿಮಾನ ಪ್ರಯಾಣದ ಎಲ್ಲಾ ಹಂತಗಳಲ್ಲೂ ಶಿಸ್ತಿನಿಂದ ಅನುಸರಿಸಿರುವುದರಿಂದ,  ನೀನು ಭಯ ಪಡಬೇಕಿಲ್ಲ' ಎಂದಿದ್ದನು. 

ಮೂರು ದಿನಗಳು ಕಳೆದನಂತರ, ಗೆಳಯ ಕಿರಣ್ ಮತ್ತು ತನ್ನ ತಂದೆ ರಾಜುರವರೊಂದಿಗೆ ರೋಹಿಣಿ ಕೋವಿಡ್ ಪರೀಕ್ಷೆಗೆಂದು ಆಸ್ಪತ್ರೆಯನ್ನು ತಲುಪಿದ್ದಳು. ಕಾರಿನಲ್ಲಿ ಪ್ರಯಾಣಿಸುವಾಗ ಎಲ್ಲಾ  ಮುನ್ನೆಚ್ಚರಿಕೆಗಳನ್ನು ಮೂವರು ಚಾಚೂ ತಪ್ಪದೆ ಪಾಲಿಸಿದ್ದರು.  ರೋಹಿಣಿಯನ್ನು 'ಆರ್.ಟಿ. - ಪಿ.ಸಿ.ಆರ್. (RT-PCR)' ಪರೀಕ್ಷೆಗೆ ಅಂದಿನ ಬೆಳಗ್ಗೆ ಒಳಪಡಿಸಲಾಯಿತು. 'ಆರ್.ಟಿ. - ಪಿ.ಸಿ.ಆರ್. ಪರೀಕ್ಷೆಯು ಅತ್ಯಂತ ನಿಖರವಾದ ಕೋವಿಡ್ ಪರೀಕ್ಷೆಯೆಂಬುದು ತಜ್ಞರೆಲ್ಲರ ಅಭಿಪ್ರಾಯ' ಎಂದು ಪರೀಕ್ಷೆಯನ್ನು ನಡೆಸಿದ ಡಾ. ನಿರ್ಮಲ, ರಾಜುರವರಿಗೆ ತಿಳಿಸಿದ್ದರು. ರೋಹಿಣಿಯ ಮೂಗು ಮತ್ತು ಗಂಟಲಿನ ದ್ರವಗಳನ್ನು (Swab samples), ಡಾ. ನಿರ್ಮಲರವರೇ ಪಡೆದುಕೊಂಡಿದ್ದರು. ಸುಮಾರು ೬-೭ ಘಂಟೆಗಳೊಳಗೆ ಪರೀಕ್ಷೆಯ ಫಲಿತಾಂಶವನ್ನು ತಿಳಿಸುವುದಾಗಿ ಹೇಳಿ ರೋಹಿಣಿಯನ್ನು ಕಳುಹಿಸಿಕೊಡಲಾಗಿತ್ತು. 

ಆಸ್ಪತ್ರೆಯಿಂದ ಬಂದ ಕರೆಗೆ ಓಗೊಟ್ಟು, ರಾಜು ಮತ್ತು ರೋಹಿಣಿಯರಿಬ್ಬರೂ ಅದೇ ದಿನದ ಸಂಜೆ ೫ರ ವೇಳೆಗೆ ಆಸ್ಪತ್ರೆಯನ್ನು ತಲುಪಿದ್ದರು. ಡಾ. ನಿರ್ಮಲರವರ ಕೋಣೆಯಲ್ಲಿ, ಡಾ. ಕಿರಣ್ ಮುಂಚೆಯೇ ಬಂದು ಆಸೀನರಾಗಿದ್ದನ್ನು ನೋಡಿ ರಾಜು ಮತ್ತು ರೋಹಿಣಿಯರಿಗೆ ಆಶ್ಚರ್ಯವಾಗಿತ್ತು. ಡಾ. ನಿರ್ಮಲರ ಸನ್ನೆಯ ಮೇರೆಗೆ ರಾಜು ಮತ್ತು ರೋಹಿಣಿರವರು ಕೂಡಾ, ಅವರ ಕೋಣೆಯನ್ನು ಪ್ರವೇಶಿಸಿದರು. ಡಾ. ನಿರ್ಮಲರವರು ಮೆದುವಾದ ದನಿಯಲ್ಲಿ ಮಾತನಾಡುತ್ತಾ, 'ರೋಹಿಣಿ, ನೀನು ಹೆಚ್ಚು ಭಯ ಪಡುವ ಅವಶ್ಯಕತೆ ಇಲ್ಲ. ನಿನ್ನ ಮೇಲೆ ನಾವು ನಡೆಸಿರುವ  ಆರ್.ಟಿ. - ಪಿ.ಸಿ.ಆರ್. ಪರೀಕ್ಷೆಯ ಫಲಿತಾಂಶಗಳು ನಿಖರವಾದವು ಎಂಬುದು ವೈದ್ಯಕೀಯ ವಲಯದ ಅಭಿಪ್ರಾಯ. ನಿನ್ನ ಪರೀಕ್ಷೆಯ ಫಲಿತಾಂಶ ಬಂದಿದೆ. ಫಲಿತಾಂಶದ ಪ್ರಮಾಣ ಪತ್ರ, ಇಗೋ ಇಲ್ಲಿದೆ. "ಅದರ ಪ್ರಕಾರ ನಿನಗೆ ಕೋವಿಡ್ ಸೋಂಕು ತಗುಲಿದೆ." ಆದರೆ ಸೋಂಕಿನ ತೀವ್ರತೆ ಕಮ್ಮಿಯಿದ್ದು, ನೀವುಗಳು ಗಾಬರಿ ಪಡಬೇಕಾದ ಅವಶ್ಯಕತೆ ಏನಿಲ್ಲ.' ಸೋಂಕು ತಗುಲಿರುವ ಸುದ್ದಿ, ರೋಹಿಣಿಗಿಂತ ತಂದೆ ರಾಜುರವರನ್ನು ಹೆಚ್ಚು ಆತಂಕಿತರನ್ನಾಗಿಸಿತ್ತು. ಡಾ. ಕಿರಣ್ ಕಣ್ಸನ್ನೆ ಮಾಡಿ, ಶಾಂತಿಯಿಂದಿರುವಂತೆ ರಾಜು-ರೋಹಿಣಿಯರಿಗೆ ಸೂಚಿಸಬೇಕಾಯಿತು. ತನಗೆ ಸೋಂಕು ತಗುಲಿರುವ ವಿಷಯ ಕಿರಣನಿಗೆ ಮುಂಚೆಯೇ ತಿಳಿದಿತ್ತೆಂದು, ರೋಹಿಣಿಗೆ ಅರಿವಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. 

ಡಾ.ನಿರ್ಮಲರವರೇ ಮಾತನ್ನು ಮುಂದುವರೆಸುತ್ತಾ, 'ರೋಹಿಣಿ, ತುಂಬಾ ಗಾಬರಿ ಪಡಬೇಡ. ನಿನ್ನ ಸೋಂಕಿನ ತೀವ್ರತೆ ಹೆಚ್ಚೇನಿಲ್ಲ. ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇರದು. ನಿನ್ನ ಚಿಕಿತ್ಸೆ ಮನೆಯಲ್ಲೂ ನಡೆಯಬಹುದು. ಇನ್ನೂ ಕೆಲವು ವಾರಗಳವರೆಗೆ ನೀನು ಕ್ವಾರಂಟೈನಿನಲ್ಲಿರಬೇಕಾಗ ಬಹುದು. ಮುಂದಿನ ವಿಧಿ-ವಿಧಾನಗಳು,  ನಿನಗೆ ಚಿಕಿತ್ಸೆಯನ್ನು ನೀಡುವ ವೈದ್ಯರ ನಿರ್ಧಾರಕ್ಕೆ ಬಿಟ್ಟದ್ದು' ಎಂದು ಡಾ. ಕಿರಣ್ ರವರ ಕಡೆ ನೋಡಿದರು. 

ರೋಹಿಣಿಯ ಸೋಂಕಿನ ನಿಜ ಪರಿಸ್ಥಿತಿಯನ್ನು ಡಾ. ನಿರ್ಮಲ, ಡಾ. ಕಿರಣರವರಿಗೆ ಮುಂಚೆಯೇ ವಿವರಿಸಿಯಾಗಿತ್ತು. ತಜ್ಞ ವೈದ್ಯರುಗಳಾಗಲೇ ರೋಹಿಣಿಯ ಸೋಂಕಿನ ತೀವ್ರತೆಯನ್ನು ಪರೀಶೀಲಿಸಿ, ಆಕೆಯನ್ನು ಎಲ್ಲಾ ಸೌಲಭ್ಯಗಳಿರುವ ಕೋವಿಡ್ ಆಸ್ಪತ್ರೆಯೊಂದಕ್ಕೆ ದಾಖಲಿಸುವುದೇ ಸೂಕ್ತ ಎಂದು ಡಾ. ಕಿರಣರಿಗೆ ತಿಳಿಸಿಯೂ ಆಗಿತ್ತು. ಅಸಲಿ ಪರಿಸ್ಥಿತಿಯನ್ನು ರೋಹಿಣಿ ಮತ್ತು ರಾಜುರವರಿಗೆ ತಿಳಿಸುವ ಭಾರ ಈಗ ಡಾ. ಕಿರಣರ ಮೇಲಿತ್ತು. 

'ಡಾ ಕಿರಣ್ ರವರೊಂದಿಗೆ, ಡಾ. ನಿರ್ಮಲ ಮಾತನಾಡುತ್ತಾ,  'ನಿಮ್ಮ ಮತ್ತು ರೋಹಿಣಿಯವರ ನಡುವಿನ ಸಂಬಂಧ "ವಿಶೇಷ"ವಾದುದು ಎಂದು ನನಗೆ ಗೊತ್ತು. ಆದುದರಿಂದ ಈಕೆಯನ್ನು ತಮ್ಮ ಆಸ್ಪತ್ರೆಗೆ ಚಿಕಿತ್ಸೆಗೆಂದು ಕೊಂಡೊಯ್ಯುವುದು ಬೇಡ. ಅವರಿಗೆ ಚಿಕಿತ್ಸೆ ನೀಡುವಾಗ ತಾವು ಭಾವುಕರಾಗುವ ಸಾಧ್ಯತೆ ಹೆಚ್ಚು. ಆದುದರಿಂದ ರೋಹಿಣಿಯನ್ನು, ಮುಂದಿನ ಪರೀಕ್ಷೆಗಾಗಿ  ಜಿಲ್ಲಾ ಆಸ್ಪತ್ರೆಗೆ  ಕೊಂಡೊಯ್ಯುವುದು ಒಳ್ಳೆಯದು. ಅಲ್ಲೂ ಕೋವಿಡ್ ಚಿಕಿತ್ಸೆಗೆ ಬೇಕಾದ ಎಲ್ಲಾ ಅನುಕೂಲಗಳೂ ಚೆನ್ನಾಗಿದೆ' ಎಂಬ ಡಾ.ನಿರ್ಮಲರ ಸಲಹೆ  ಡಾ. ಕಿರಣರಿಗೂ ಸರಿಯೆನಿಸಿತ್ತು. ಡಾ. ನಿರ್ಮಲರ ಮಾತುಗಳನ್ನು ಕೇಳಿಸಿಕೊಂಡ ರೋಹಿಣಿಗೆ, ತಾನು ಆಸ್ಪತ್ರೆ ಸೇರಬೇಕಾಗಬಹುದೇನೋ ಎಂಬ ಸಂಶಯ ಮೂಡಿರ ಬಹುದು ಎಂಬದನ್ನು, ಡಾ ಕಿರಣ  ಗಮನಿಸಿಯಾಗಿತ್ತು.   

 ರೋಹಿಣಿ, ರಾಜು ಮತ್ತು ಕಿರಣರು ಮನೆಯನ್ನು ತಲುಪುವ ಹೊತ್ತಿಗೆ ಸಮಯ ಸಂಜೆಯ ೭ ಘಂಟೆಯಾಗಿತ್ತು. ರೋಹಿಣಿ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿಯನ್ನು ಡಾ. ಕಿರಣ್, ರಾಜುರವರಿಗೆ ತಿಳಿಸಿಯಾಗಿತ್ತು. ತಂದೆ ರಾಜುರವರು ಆತಂಕಕ್ಕೊಳಗಾಗಿದ್ದು ಸ್ಪಷ್ಟವಾಗಿತ್ತು.

ಪರಿಸ್ಥಿತಿಯ ಸೂಕ್ಷ್ಮವನ್ನು ಗಮನಿಸಿದ್ದ ರೋಹಿಣಿ ಕೂಡ ಗಾಬರಿಗೊಂಡಿದ್ದರೂ, ಅದನ್ನಾಕೆ ಮುಖದಲ್ಲಿ ತೋರ್ಪಡಿಸುತ್ತಿಲ್ಲವೆಂಬುದು ವೈದ್ಯನಾದ ಕಿರಣನಿಗೆ ತಿಳಿದಿತ್ತು. ಕೆಲವು ನಿಮಿಷಗಳ ಮೌನ ಆ ಮೂವರನ್ನು ಆವರಿಸಿತ್ತು. ಎಲ್ಲರಿಗೂ ಚಹಾವನ್ನು ಮಾಡಿ ತರುತ್ತೇನೆಂದು ಹೇಳಿ, ತಂದೆ ರಾಜು ಅಡುಗೆ ಮನೆಯ ಕಡೆ ನಡೆದಿದ್ದರು. ಕಿರಣ್ ಮತ್ತು ರೋಹಿಣಿಯರ ನಡುವೆ ಪರಸ್ಪರ ವಿಚಾರ ವಿನಿಮಯಕ್ಕೆ ಅನುವು ಮಾಡಿಕೊಡುವುದೇ  ರಾಜುರವರು ನಿರ್ಗಮಿಸಿದ  ಉದ್ದೇಶವಾಗಿತ್ತು. 

'ರೋಹಿಣಿ, ಬಹಳ ಚಿಂತಿಸ ಬೇಡ. ನಿನಗೆ ತಗುಲಿರುವ ಸೋಂಕು ಸಾಧಾರಣವಾದದ್ದು. ಮನೆಯಲ್ಲೇ ಇದ್ದುಕೊಂಡು ನೀನು ಗುಣ ಹೊಂದಬಹುದು. ಒಂದೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಬಂದರೂ, ಹೆದರುವುದು ಬೇಡ. ಚಿಕಿತ್ಸೆಯುದ್ದಕ್ಕೂ ನಾನು ನಿನ್ನೊಡನಿರುತ್ತೇನೆ.  ಚಿಕಿತ್ಸೆ ಮತ್ತು ಕ್ವಾರಂಟೈನ್ ಅವಧಿ ೨-೩ ವಾರಗಳಷ್ಟಿರಬಹುದು. ಜಿಲ್ಲಾ ಆಸ್ಪತ್ರೆಯ ಕೋವಿಡ್ ಚಿಕಿತ್ಸೆಗೆಂದು ನಾನು ಕೂಡ ಹಲವು ಬಾರಿ ಹೋಗಿದ್ದೇನೆ.  ಹಾಗಾಗಿ ಅಲ್ಲಿನ ವೈದ್ಯರುಗಳೆಲ್ಲರೂ ನನ್ನ ಮಿತ್ರರುಗಳೇ. ಈವರೆಗೆ ನಡೆದಿರುವ ಸಂಶೋಧನೆಗಳ ಪ್ರಕಾರ ಕೋವಿಡ್ನ ಪರಿಣಾಮದ ತೀವ್ರತೆ,  ಸ್ತ್ರೀಯರ ಮೇಲೆ ಹೆಚ್ಚಾಗಿರುವುದಿಲ್ಲ ಎಂದೇ ತಿಳಿದು ಬಂದಿದೆ. ಪುರಷರಲ್ಲಿ ಒಂದೇ X-ಕ್ರೋಮೋಸೋಮ್ (X-chromosome) ಇರುತ್ತದೆ. ಆದರೆ ಸ್ತ್ರೀಯರಲ್ಲಿ X-ಕ್ರೋಮೋಸೋಮ್ ಗಳ ಸಂಖ್ಯೆ ಎರಡಿರುವದರಿಂದ, ಅವರಲ್ಲಿ ರೋಗ ನಿರೋಧಕ ಶಕ್ತಿ (immunity), ಪುರಷರಿಗಿಂತ ಜಾಸ್ತಿ. ಸ್ತ್ರೀಯರಲ್ಲಿರುವ ವಿಶೇಷವಾದ ಹಾರ್ಮೋನ್ (hormone)ಗಳೂ, ಅವರ ಹೆಚ್ಚಿನ ನಿರೋಧಕ ಶಕ್ತಿಗೆ ಪೂರಕವಾಗಿರುತ್ತದೆ. ಅಂದ ಹಾಗೆ, ನೀನಿನ್ನೂ ಯುವತಿ ಮತ್ತು ಆರೋಗ್ಯವಂತಳು. ಬೇರ್ಯಾವ ರೋಗದ (comorbidities) ತೊಡಕು ನಿನಗಿಲ್ಲ.  ನೀನು ಎಂದಿನಂತೆ  ಹರ್ಷಚಿತ್ತಳಾಗಿರು. ಅದು ಕೂಡ ನಿನ್ನ ಸೋಂಕಿನ ನಿವಾರಣೆಗೆ ಸಹಾಯಕವಾಗುತ್ತದೆ. ನಿನ್ನ ಮುಗುಳ್ನಗೆಯನ್ನು ನಾನು ನೋಡಲಿಚ್ಛಿಸುತ್ತೇನೆ. ಒಮ್ಮೆ ನಕ್ಕು ತೋರಿಸು' ಎಂದು ವಿವರಿಸಿದ ಡಾ. ಕಿರಣನ ಉದ್ದೇಶ ರೋಹಿಣಿಯ ಮನಸ್ಸನ್ನು ಹಗುರಗೊಳಿಸುವುದಾಗಿತ್ತು. 

ಸ್ತ್ರೀಯರ ಮೇಲೆ ಮತ್ತು ಯುವಕರ ಮೇಲೆ ಕೋವಿಡ್ನ ಪರಿಣಾಮ ಹೆಚ್ಚು ತೀವ್ರವಾಗಿರದು ಎಂಬುದು ರೋಹಿಣಿಗೂ ತಿಳಿದಿತ್ತು. ಜೊತೆಗೆ ತಾನು ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇದೆ ಎಂಬುದೂ, ಸೂಕ್ಷ್ಮ ಮನಸ್ಸಿನ ರೋಹಿಣಿಯ ಗಮನಕ್ಕೆ ಬಂದಿತ್ತು.  ಎಲ್ಲವುದಕ್ಕಿಂತ ಹೆಚ್ಚಾಗಿ ತನ್ನ ಗೆಳಯ ಕಿರಣನೂ ಆತಂಕಕ್ಕೊಳಪಟ್ಟಿರುವುದನ್ನು ರೋಹಿಣಿ ಗಮನಿಸದಿರಲಿಲ್ಲ. ಅವನ ಮನಸ್ಸನ್ನು ಹಗುರಗೊಳಿಸಲು, ತಾನೊಂದು ನಗೆ ಬೀರಬೇಕಾದ್ದು ಅವಶ್ಯಕವೆಂದು ರೋಹಿಣಿಗನಿಸಿತ್ತು.  ರೋಹಿಣಿ ಆತ್ಮೀಯವಾಗಿ ಮುಗುಳ್ನಕ್ಕಿದ್ದನ್ನು ನೋಡಿ, ಗೆಳಯ ಕಿರಣನೂ ಮುಗುಳ್ನಕ್ಕರೂ, ಇಬ್ಬರ ಮನಸ್ಸಿನಲ್ಲೂ ಆತಂಕವಿದ್ದದ್ದು ಸುಳ್ಳಾಗಿರಲಿಲ್ಲ. 

ಆಗ ಸಮಯ ರಾತ್ರಿಯ ಎಂಟು ಘಂಟೆಯಾಗಿತ್ತು. ಜಿಲ್ಲಾ ಆಸ್ಪತ್ರೆಗೆ ದಾಖಲಿಸಲೆಂದು, ಡಾ ಕಿರಣ್, 'ಕೋವಿಡ್ ಹಾಸಿಗೆಗಳ ನಿರ್ವಹಣಾ ಕೇಂದ್ರ'ದ ಮುಖ್ಯಸ್ಥರಾದ ಡಾ. ನಾರಂಗ್ ರವರಿಗೆ ಫೋನಾಯಿಸಿದ್ದರು. ಡಾ. ನಾರಂಗ್ ಉತ್ತರಿಸುತ್ತಾ, 'ಒಹೋ, ನಿಮ್ಮ ಗೆಳತಿ ರೋಹಿಣಿಯವರ ದಾಖಲಾತಿಯ ಬಗ್ಗೆ ವಿಚಾರಿಸುತ್ತಿದ್ದೀರಾ? ಅವರ ಎಲ್ಲಾ ದಾಖಲೆ-ಪಾತ್ರಗಳು ನನಗೆ ದೊರೆತಿದೆ. ಅವರಿಗೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಯ ಹಾಸಿಗೆ ದೊರೆಯಬೇಕಾದರೆ, ಸ್ವಲ್ಪ ಸಮಯ ಬೇಕಾಗಬಹುದು. ತಾವು ನನಗೆ ಬೆಳಗ್ಗೆ ಕರೆಯನ್ನು ಮಾಡುವಿರಾ?' ಎಂದಿದ್ದರು. 

ಬೆಳಗಿನವರೆಗೆ ಕಾಯಬೇಕಾದ ಅನಿವಾರ್ಯತೆ ಉಂಟಾಗಿದ್ದರಿಂದ, ಡಾ. ಕಿರಣ್ ಅಂದಿನ ರಾತ್ರಿ ರೋಹಿಣಿಯ ಮನೆಯಲ್ಲೇ ಉಳಿದುಕೊಂಡರು. 

ಬೆಳಗಾಗುತ್ತಲೇ, ಸಮಯ ಎಂಟರ ಹೊತ್ತಿಗೆ ಡಾ. ಕಿರಣ್, ಡಾ. ನಾರಂಗ್ ರವರಿಗೆ ಮತ್ತೆ ಫೋನಾಯಿಸಿದ್ದರು. 'ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕು. ಸಾಯಿಂಕಾಲಕ್ಕೆ ಮುಂಚೆ ಯಾವ ಹಾಸಿಗೆಯೂ ಲಭ್ಯವಿರುವುದಿಲ್ಲ. ಅಂದ ಹಾಗೆ ರೋಗಿಯ ಪರಿಸ್ಥಿತಿ ಹೇಗಿದೆ? ಭರವಸೆಯ ಮಾತುಗಳನ್ನಾಡಿ, ಆಕೆಯ ಮನಸ್ಸು ಹಗುರಗೊಳ್ಳುವಂತೆ ಮಾಡುತ್ತಿರಿ' ಎಂಬ ಉತ್ತರ ಡಾ. ನಾರಂಗರಿಂದ ಬಂದಿತ್ತು. 

ಸಮಯ ಒಂಬತ್ತಾಗುತ್ತಲೇ, ಡಾ. ಕಿರಣ, ತನ್ನ ಆಸ್ಪತ್ರೆಗೆ ಹೊರಟು ನಿಂತಿದ್ದನು. 'ರೋಹಿಣಿ, ನಿನಗೆ ಹಾಸಿಗೆಯ ಏರ್ಪಾಡಾಗುವುದಕ್ಕೆ ಸಾಯಿಂಕಾಲದವರೆಗೆ ಕಾಯಬೇಕಾಗಿದೆ. ಕೊಟ್ಟಿರುವ ಔಷಧಿಗಳನ್ನು ಸಮಯಕ್ಕೆ ಸರಿಯಾಗೇ ತೆಗೆದುಕೋ, ಹೆದರಿಕೆ ಬೇಡ. "ನಾನಿದ್ದೇನಲ್ಲ," ಎಲ್ಲದರ ಮೇಲೂ ನನ್ನ ನಿಗಾ ಇದ್ದೆ ಇರುತ್ತದೆ. ನಿಮ್ಮಪ್ಪ ನಿನ್ನೊಡನೇ ಇರುತ್ತಾರಲ್ಲವೇ? ಸಾಯಿಂಕಾಲದ ಸಮಯಕ್ಕೆ ನಾನಿಲ್ಲಿಗೇ ಬರುತ್ತೇನೆ' ಎಂದನು. ಬಾಗಿಲನಲ್ಲೇ ನಿಂತ ರೋಹಿಣಿ, ಗೆಳಯ ಕಿರಣನಿಗೆ ಕೈಗಳನಾಡಿಸುತ್ತಾ ಬೀಳ್ಕೊಟ್ಟಿದ್ದಳು. 

ಸಾಯಿಂಕಾಲ ಐದರ ಸಮಯಕ್ಕೆ, ರೋಹಿಣಿಯ ಮನೆಯನ್ನು ತಲುಪಿದ ಕೂಡಲೇ, ಅವನು ಕರೆ ಮಾಡಿದ್ದು ಡಾ. ನಾರಂಗ್ ರವರಿಗೆ. 'ಐ ಆಮ್ ಸಾರೀ ಡಾ. ಕಿರಣ್. ಸುಮಾರು ೧೨ ರೋಗಿಗಳು  ಆಸ್ಪತ್ರೆಯಿಂದ ಬಿಡುಗಡೆ (discharge) ಆಗುವುದನ್ನು ಕಾಯುತ್ತಿದ್ದೇವೆ. ಅವರ ಅಂತಿಮ ಪರೀಕ್ಷಾ ಫಲಿತಾಂಶಗಳಿನ್ನೂ, ಆಸ್ಪತ್ರೆಯ ವೈದ್ಯರುಗಳ ಕೈಸೇರಿಲ್ಲ. ಸುಮಾರು ೨೦ ರೋಗಿಗಳು ಹಾಸಿಗೆ ಪಡೆಯಲು ಈಗಲೂ ಕಾಯುತ್ತಿದ್ದಾರೆ.  ಸಧ್ಯಕ್ಕಂತೂ ನಾನೇನೂ ಮಾಡಲಾರೆ. ನಾಳಿನ ಬೆಳಗಿನವರೆಗೆ ಕಾಯದೆ ಅನ್ಯ ಮಾರ್ಗವಿಲ್ಲ.' ಡಾ. ನಾರಂಗ್ ರವರ ಉತ್ತರ, ಕಿರಣನನ್ನೇ ಆತಂಕಗೊಳಿಸಿತ್ತು. 

ರೋಹಿಣಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಖಾತರಿಯಾಗಿ, ೨೪ ಘಂಟೆಗಳೇ ಕಳೆದಿದ್ದವು. ವೈದ್ಯನಾದ ಕಿರಣನಿಗೇ, ತನ್ನ ಗೆಳತಿಗೊಂದು ಹಾಸಿಗೆಯ ಏರ್ಪಾಡನ್ನು ಮಾಡಲಾಗಿರಲಿಲ್ಲ. ರಾತ್ರಿ ಹತ್ತರ ಸಮಯಕ್ಕೆ, ರೋಹಿಣಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ಅಂದ ಹಾಗೆ, ತನ್ನ ಆಸ್ಪತ್ರೆಯ ಪರಿಸ್ಥಿತಿ ಏನಿರಬಹುದೆಂದು ತಿಳಿಯಲು, ಡಾ. ಕಿರಣ್ ತನ್ನ ಆಸ್ಪತ್ರೆಗೇ ಫೋನಾಯಿಸಿದ್ದನು. ರಾತ್ರಿ ಪಾಳಯದ ಕರ್ತವ್ಯದ ಮೇಲಿದ್ದ, ಕಿರಿಯ ವೈದ್ಯ ಉಮೇಶ ಮಾತನಾಡುತ್ತಾ, ನಾಳಿನ ಬೆಳಗ್ಗೆ ವೇಳೆಗೆ ಒಂದೆರಡು ರೋಗಿಗಳು ಬಿಡುಗಡೆ ಹೊಂದಬಹುದೆಂದು ತಿಳಿಸಿದ್ದರು. 

ಕಿರಣ್ ಮತ್ತು ರಾಜುರವರಿಗೆ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ. ಮಾರನೆಯ ದಿನದ ಬೆಳಗ್ಗೆ ೫ರ ಸಮಯಕ್ಕೆ, ಡಾ.ಕಿರಣ್ ರೋಹಿಣಿ ಹೇಗಿರಬಹುದೆಂದು ನೋಡಲು ಹೋಗಿದ್ದನು. ಅವಳ ಜ್ವರ ಸಾಕಷ್ಟು ಮೇಲೇರಿತ್ತು. ತನ್ನ ಇಡೀ ದೇಹದಲ್ಲಿ ನೋವಿನ ಅನುಭವವಾಗುತ್ತಿದ್ದು, ಮಗ್ಗುಲನ್ನು ಬದಲಾಯಿಸುವುದು ಕಷ್ಟವಾಗಿದೆ ಎಂದು ರೋಹಿಣಿ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಳು. ಆಗಾಗ ಅವಳು ಕೆಮ್ಮುತ್ತಿದ್ದದ್ದೂ, ಕಿರಣನ ಗಮನಕ್ಕೆ ಬಂದಿತ್ತು. ಕಳವಳಗೊಂಡ ಕಿರಣ್ ತನ್ನ ಆಸ್ಪತ್ರೆಯ, ಕಿರಿಯ ವೈದ್ಯ, ಉಮೇಶನಿಗೆ ಕರೆಮಾಡಿದ್ದನು. 'ಹೌದು, ಇನ್ನೇನು ೯ ಘಂಟೆಯ ಹೊತ್ತಿಗೆ ಮೂರು ಕೋವಿಡ್ ರೋಗಿಗಳು ಆಸ್ಪತ್ರೆಯಿಂದ ಮನೆಗೆ ತೆರಳಬಹುದು. ಅವರ ಡಿಸ್ಚಾರ್ಜ್ ಕುರಿತಾದ ಎಲ್ಲಾ ಕ್ರಮಗಳನ್ನು ಪೂರೈಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ನಿಮ್ಮ ರೋಹಿಣಿಗೆ ನಮ್ಮ ಆಸ್ಪತ್ರೆಯಲ್ಲಿ ಹಾಸಿಗೆಯ ವ್ಯವಸ್ಥೆ ಆಗಬೇಕಾದರೂ, ಸ್ಥಳೀಯ ಮುಖ್ಯಸ್ಥ ಡಾ.ನಾರಂಗ್ ರವರ ಅನುಮತಿ ಬೇಕೆಂಬುದು ನಿಮಗೂ ಗೊತ್ತು. ಕೂಡಲೇ ಅವರೊಂದಿಗೆ ಮಾತನಾಡುವುದು ಸೂಕ್ತ,' ಎಂದಿದ್ದರು ಡಾ. ಉಮೇಶ್. 

ಅಷ್ಟುಹೊತ್ತಿಗೆ ಸಮಯವಾಗಲೇ ಬೆಳಗ್ಗೆ ೯ ಘಂಟೆಯಾಗಿತ್ತು. ರೋಹಿಣಿಗೆ ಕೋವಿಡ್ ಸೋಂಕು ತಗುಲಿದೆ ಎಂಬುದು ಖಾತರಿಯಾಗಿ ೩೬ ಘಂಟೆಗಳೇ ಕಳೆದಿದ್ದವು. ಭರವಸೆಯ ಸಣ್ಣ ಎಳೆಯೊಂದನ್ನು ಕಂಡಿದ್ದ ಡಾ. ಕಿರಣ್, ಡಾ. ನಾರಂಗರಿಗೆ ಕರೆ ಮಾಡಿದ್ದರು.  'ನಿಮ್ಮದೇ ಆಸ್ಪತ್ರೆಯಲ್ಲಿರುವ ಮೂರು ಹಾಸಿಗೆಗಳನ್ನು ಬಿಟ್ಟರೆ, ಬೇರೆಲ್ಲೂ ಹಾಸಿಗೆಗಳು ಖಾಲಿ ಇಲ್ಲ. ಆ ಮೂರು ಹಾಸಿಗೆಗಳಿಗೂ, ಸುಮಾರು ೨೦ ರೋಗಿಗಳು ಕಾಯುತ್ತಿದ್ದಾರೆ. ಆದರೆ ನಿಮ್ಮ ರೋಹಿಣಿಗೆ ಕೊರೋನಾ ಸೇನಾನಿಯಾಗಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ಸೋಂಕು ತಗುಲಿರುವುದರಿಂದ, ಅವಳಿಗೆ ಆದ್ಯತೆಯ ಮೇರೆಗೆ ನಿಮ್ಮ ಆಸ್ಪತ್ರೆಯ, ಎಲ್ಲಾ ಸಲಕರಣೆಗಳುಳ್ಳ ಹಾಸಿಗೆಯೊಂದರ ಏರ್ಪಾಡನ್ನು ಕೂಡಲೇ ಮಾಡುತ್ತಿದ್ದೇನೆ. ನಮ್ಮಲ್ಲಿ ಆಂಬುಲೆನ್ಸ್ ವ್ಯಾನ್ ಸಧ್ಯಕ್ಕಂತೂ ಲಭ್ಯವಿಲ್ಲ. ಅದರ ಏರ್ಪಾಡನ್ನು ತಾವೇ ಮಾಡಿಕೊಳ್ಳಬೇಕು. ಕೂಡಲೇ ಆಕೆಯನ್ನು ತಮ್ಮ ಆಸ್ಪತ್ರೆಗೆ ಕರೆದು ಕೊಂಡು ಹೊರಡಿರಿ,'  ಎಂದಿದ್ದರು ಡಾ. ನಾರಂಗ್. 

ಸಮಯಾವಕಾಶ ತುಂಬಾ ಕಮ್ಮಿ ಇದ್ದುದರಿಂದ, ಡಾ. ಕಿರಣನೇ, ತನ್ನ ಕಾರನ್ನು ಚಲಾಯಿಸುತ್ತಾ, ರೋಹಿಣಿಯನ್ನು,  ಅವಳ ತಂದೆ ರಾಜುರವರೊಂದಿಗೆ, ತನ್ನ ಆಸ್ಪತ್ರೆಗೆ ಕರೆದೊಯ್ದಿದ್ದನು. ಕಿರಣನ ಮೇಲಿನ ಹಿರಿಯ ವೈದರಾದ ಡಾ.ಈಶ್ವರ್ ಗುಲಾಟಿಯವರಾಗಲೇ ಕಾಯುತ್ತಿದ್ದರು. ಡಾ. ಗುಲಾಟಿಯವರ ಮುಂದೆ ಕೈಜೋಡಿಸಿ ನಿಂತ ತಂದೆ ರಾಜು, 'ನನ್ನ ಮಗಳ ಜೀವವನ್ನುಳಿಸಿ,' ಎಂದು ಬೇಡಿಕೊಂಡಿದ್ದರು.  ರಾಜುರವರನ್ನು ಸಂತೈಸಿದ ಡಾ. ಗುಲಾಟಿ, ರೋಹಿಣಿಯನ್ನು ಪರೀಕ್ಷಿಸಲೆಂದು ಅವಳ ವಾರ್ಡಿನ ಕಡೆಗೆ ನಡೆದರು; ಡಾ. ಕಿರಣ್ ಅವರನ್ನು ಹಿಂಬಾಲಿಸಿದ್ದರು. ಪರೀಕ್ಷೆಗಳನ್ನು ನಡೆಸಿದ ಡಾ. ಗುಲಾಟಿರವರು ಮಾತನಾಡುತ್ತಾ, 'ರೋಹಿಣಿ, ನೀನು ಭಯಪಡಬೇಕಾಗಿಲ್ಲ. ನಿನ್ನ ಪರೀಕ್ಷೆಯ ಪತ್ರಗಳನ್ನು ನೋಡಿದ್ದೇನೆ. ನಿನ್ನ ಸೋಂಕು ತೀವ್ರವಾದುದೇನಲ್ಲ. ೩-೪ ದಿನಗಳಲ್ಲಿ ನೀನು ಗುಣಮುಖಳಾಗಿ ಮನೆಗೆ ತೆರಳಬಹುದು. ಎಲ್ಲಿ, ಒಮ್ಮೆ ನಕ್ಕು ತೋರಿಸು' ಎಂದಿದ್ದರು. ರೋಹಿಣಿಯಲ್ಲಿ ಧೈರ್ಯವನ್ನು ತುಂಬುವುದು, ಚಿಕಿತ್ಸೆಯ ಯಶಸ್ಸಿಗೆ ಬೇಕಾದ ಪೂರಕ ಅಂಶವೆಂಬುದು ಡಾ.ಕಿರಣರಿಗೂ ಚೆನ್ನಾಗಿ ತಿಳಿದಿತ್ತು. ಸ್ವಲ್ಪವೂ ತಡ ಮಾಡದೆ ರೋಹಿಣಿಗೆ ಎಲ್ಲ ಚಿಕಿತ್ಸಾ ವಿಧಿ-ವಿಧಾನಗಳನ್ನು, ಆಸ್ಪತ್ರೆಯ ನರ್ಸ್ಗಳು ಶುರುಮಾಡಿದ್ದರು. 

ತಂದೆ ರಾಜುರವರ ಆತಂಕ ಕಿರಣನಿಗೆ ತಿಳಿದಿತ್ತು.  ಅವನು ರಾಜುರವರನ್ನು ಸಂತೈಸುತ್ತಾ, 'ರೋಹಿಣಿಯ ಚಿಕಿತ್ಸೆಯನ್ನು ಡಾ.ಗುಲಾಟಿ ಮಾಡುತ್ತಾರೆ.  ಅವರೊಬ್ಬ ಅನುಭವಿ ವೈದ್ಯರು. ಸಧ್ಯಕ್ಕೆ ಕೆಲವು ಸರಳ ಔಷಧಗಳನ್ನು ಅವಳಿಗೆ ನೀಡಲಾಗಿದೆ. ಮುಂದಿನ ೨೪ ಘಂಟೆಗಳ ಬೆಳವಣಿಗೆಗಳನ್ನು ವೈದ್ಯರು ಗಮನಿಸುತ್ತಿರುತ್ತಾರೆ. ರೋಹಿಣಿ ೩-೪ ದಿನಗಳಲ್ಲಿ ಗುಣ ಹೊಂದುವ ನಿರೀಕ್ಷೆ ಇದೆ. ಆತಂಕ ಬೇಡ' ಎಂದಿದ್ದನು. 

ರೋಹಿಣಿ, ಆಸ್ಪತ್ರೆಯನ್ನು ಸೇರಿ ೨೪ ಘಂಟೆಗಳ ಅವಧಿ ಕಳೆದಿತ್ತು. ಅಂದು ಬೆಳಗ್ಗೆ ನಡೆಸಿದ ಪರೀಕ್ಷೆಗಳಿಂದ, ರೋಹಿಣಿಯ ಶ್ವಾಸಕೋಶಗಳು ಊದಿಕೊಂಡಿರುವುದು ಸ್ಪಷ್ಟವಾಗಿತ್ತು. ಹಾಗಾಗಿ ಡಾ.ಗುಲಾಟಿ, ರೋಹಿಣಿಯನ್ನು ಆಮ್ಲಜನಕದ (Oxygen) ಹಾಸಿಗೆಯುಳ್ಳ  ಐ.ಸಿ.ಯು.(ICU)ಗೆ ಸ್ಥಳಾಂತರಿಸಿದ್ದರು. ಐ.ಸಿ.ಯು. ಒಳಗೆ ಪ್ರವೇಶಿಸಿದ ಕಿರಣ್ ತನ್ನ ಗೆಳತಿ ರೋಹಿಣಿಯ ಬಳಿ ನಿಂತಿದ್ದನು. 'ರೋಹಿಣಿ, ಗುಡ್ ಮಾರ್ನಿಂಗ್, ನೆನ್ನೆಗಿಂತ ನಿನ್ನ ಇಂದಿನ ಪರಿಸ್ಥಿತಿ ಚೆನ್ನಾಗಿದೆ. ಬೇರೇ ಸೋಂಕಿತರಿಂದ ನಿನ್ನನ್ನು ರಕ್ಷಿಸಲೆಂದು ಮಾತ್ರ, ನಿನ್ನನ್ನು ಐ.ಸಿ.ಯು.ಗೆ ಸ್ಥಳಾಂತರಿಸಲಾಗಿದೆ. ನಿನ್ನ ಉಸಿರಾಟದ ಪ್ರಕ್ರಿಯೆ ಸುಲಲಿತವಾಗಿರಲೆಂದು ಮಾತ್ರ, ನಿನಗೆ  ಆಕ್ಸಿಜನ್ ಮಾಸ್ಕನ್ನು ಅಳವಡಿಸಲಾಗಿದೆ. ಚಿಕಿತ್ಸೆಗಳೆಲ್ಲವೂ ಚೆನ್ನಾಗೇ ಮುನ್ಸಾಗುತ್ತಿದೆ. ನೀನು ಆತಂಕಪಡುವ ಅವಶ್ಯಕತೆ ಇಲ್ಲ' ಎಂದ ಗೆಳಯ ಕಿರಣನನ್ನು ನೋಡಿ ಮುಗುಳ್ನಕ್ಕು, ತನ್ನ ಹೆಬ್ಬರಳಿನಿಂದ 'ಥಂಬ್ಸ್-ಅಪ್ (Thumbs-up)' ಸನ್ನೆಯನ್ನು  ತೋರಿಸಿದ ರೋಹಿಣಿಗೆ, ಕಿರಣ್  ತನ್ನಲ್ಲಿ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಾನೆಂಬುದು ತಿಳಿದಿತ್ತು.  

ಮತ್ತೆರಡು ದಿನಗಳ ಅವಧಿ ಕಳೆದಿತ್ತು. ಡಾ.ಗುಲಾಟಿ ಮತ್ತು ಡಾ. ಕಿರಣರಿಬ್ಬರೂ, ರೋಹಿಣಿಯ ಪರಿಸ್ಥಿತಿ ಹದಗೆಡುತ್ತಿರುವದನ್ನು ಗಮನಿಸಿದ್ದರು.  ಅಂದಿನ ಬೆಳಗ್ಗೆ, ಆಕ್ಸಿಜನ್ ಮಾಸ್ಕ್ ಧರಿಸಿದ್ದರೂ ರೋಹಿಣಿ ಉಸಿರಾಡಲಾಗದೆ ಒದ್ದಾಡುತ್ತಿದ್ದಳು. ಆಕೆಯ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿತ್ತು. ಡಾ ಗುಲಾಟಿರವರ ಅನುಮಾನ ಸರಿಯಾಗೇ ಇತ್ತು. ಕೂಡಲೇ ನಡೆಸಿದ ಪರೀಕ್ಷೆಗಳ ಪ್ರಕಾರ, ರೋಹಿಣಿಗೆ ನಿಮೋನಿಯಾ (pneumonia) ಕೂಡಾ ವಕ್ಕರಿಸಿತ್ತು. ಡಾ. ಕಿರಣರನ್ನು ಐ.ಸಿ.ಯು.ಗೆ ಕರೆದೊಯ್ದ ಡಾ. ಗುಲಾಟಿ ಮಾತನಾಡುತ್ತಾ, 'ರೋಹಿಣಿ, ಧೈರ್ಯದಿಂದಿರು. ನಿನ್ನ ಪರಿಸ್ಥಿತಿ ಉತ್ತಮಗೊಳ್ಳುತ್ತಾ ಸಾಗಿದೆ. ಕೆಲವು ರೋಗಿಗಳಲ್ಲಿ, ಕೋವಿಡ್ ರೋಗ ಸುಧಾರಿಸುವ ಮುನ್ನ, ಸ್ವಲ್ಪ ಉಲ್ಬಣಗೊಂಡಂತಾಗುತ್ತದೆ. ಈಗ ಲೈಟಾಗಿ ತಿಂಡಿಯನ್ನು ತಿನ್ನು. ಮುಂದಿನ ೨೪ ಘಂಟೆಗಳಲ್ಲಿ ನೀನು ಸರಿ ಹೋಗುತ್ತೀಯ' ಎಂದಿದ್ದರು. ರೋಹಿಣಿ ತಿಂಡಿ ತಿಂದು ಮುಗಿಸಿದ ಕೂಡಲೇ, ಅವಳಿಗೆ ಐ.ಸಿ.ಯು.ನಲ್ಲೇ, 'ವೆಂಟಿಲೇಟರನ್ನು(ventilator)' ಅಳವಡಿಸಲಾಯಿತು. 

ರೋಹಿಣಿಯ ನಿಜ ಪರಿಸ್ಥಿತಿಯನ್ನು ಈಗ ತಡ ಮಾಡದೆ, ತಂದೆ ರಾಜುರವರಿಗೆ ತಿಳಿಸಬೇಕೆಂಬುದು ಡಾ. ಗುಲಾಟಿರವರ ಅಭಿಪ್ರಾಯವಾಗಿತ್ತು. ಡಾ. ಕಿರಣರ ಸಮ್ಮುಖದಲ್ಲಿ, ರಾಜುರವರೊಂದಿಗೆ ಅವರು  ಮಾತನಾಡುತ್ತಾ, 'ರಾಜುರವರೇ ಭಯಪಡ ಬೇಡಿ. ತಮ್ಮ ಮಗಳು ಕಳೆದ ಮೂರು ದಿನಗಳಿಂದ ನಮ್ಮ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಅವಳಿಗೀಗ ನಿಮೋನಿಯಾದ ಸೋಂಕು ಕೂಡಾ ತಗುಲಿದೆ. ಆದುದರಿಂದಲೇ ಅವಳಿಗೆ ನಾವು ವೆಂಟಿಲೇಟರ್ ಅಳವಡಿಸಬೇಕಾಯಿತು. ಅವಳಿಗೀಗ "ಪ್ಲಾಸ್ಮಾ ಚಿಕಿತ್ಸೆ (plasma therapy)"ಯನ್ನು ನೀಡಬೇಕಾಗಿದೆ. ಅದಕ್ಕೆ ಬೇಕಾದ ಎಲ್ಲ ಏರ್ಪಾಡುಗಳನ್ನೂ ಮಾಡಿಕೊಳ್ಳುತ್ತಿದ್ದೇವೆ,' ಎಂದಾಗ, ಕಿರಣನು ಹೌದೆಂಬಂತೆ ತಲೆಯಾಡಿಸಿದ್ದನು. ಮಾತೇ ಹೊರಡದಾದ ತಂದೆ ರಾಜು, ಡಾ.ಗುಲಾಟಿಯವರ ಮುಂದೆ ಕೈಮುಗಿದು ನಿಂತಿದ್ದರು. 

ತಂದೆ ರಾಜುರವರಿಗೆ, ಪ್ಲಾಸ್ಮಾ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಕಿರಣನಿಗೆ ಅನಿಸಿತ್ತು. 'ಪ್ಲಾಸ್ಮಾ ಚಿಕಿತ್ಸೆಯೊಂದು ಪರಿಣಾಮಕಾರಿಯಾದ ವಿಧಾನ. ಕೋವಿಡ್-೧೯ರ ರೋಗದಿಂದ ಗುಣಮುಖರಾಗಿರುವ ವ್ಯಕ್ತಿಗಳ ರಕ್ತದ "ಪ್ಲಾಸ್ಮಾ"ದಲ್ಲಿ, ಕೋವಿಡ್-೧೯ರ ವೈರಾಣುಗಳ ವಿರುದ್ಧ ಹೊರಡ ಬಲ್ಲ "ಪ್ರತಿರೋಧಕಾರಿ ಅಣು (antibodies)"ಗಳು ಇರುತ್ತವೆ. ಗುಣಮುಖರಾದ ರೋಗಿಗಳಿಂದ ಪಡೆದ ರಕ್ತದಿಂದ ಪ್ಲಾಸ್ಮಾವನ್ನು ನಮ್ಮ ತಂತ್ರಜ್ಞರು ಬೇರ್ಪಡಿಸುತ್ತಾರೆ. ವೈದ್ಯರು ಅಂತಹ ಪ್ಲಾಸ್ಮಾವನ್ನು ಕೋವಿಡ್ ರೋಗಿಗಳಿಗೆ ನೀಡುತ್ತಾರೆ. ಪ್ಲಾಸ್ಮಾ ಚಿಕಿತ್ಸೆಯಿಂದ ಈಚೆಗೆ ಸಾಕಷ್ಟು ರೋಗಿಗಳು ನಮ್ಮ ಆಸ್ಪತ್ರೆಯಲ್ಲೇ ಗುಣಮುಖರಾಗಿದ್ದಾರೆ. ರೋಹಿಣಿ ಕೂಡ ಶೀಘ್ರವಾಗಿ ಗುಣಮುಖಳಾಗಬಲ್ಲಳೂ ಎಂಬ ವಿಶ್ವಾಸ ನನಗಿದೆ,' ಎಂಬ ವಿವರಣೆಯನ್ನು ಕಿರಣನಿಂದ ಕೇಳಿದ ರಾಜುರವರಿಗೆ, ಪರಿಸ್ಥಿತಿ ಎಷ್ಟು ಗಂಭೀರವಾಗಿರುವುದು ಎಂಬುದರ ಅರಿವಾಗಿತ್ತು. 

ಡಾ. ಗುಲಾಟಿರವರ ಮಾರ್ಗದರ್ಶನದಲ್ಲಿ, ಆಸ್ಪತ್ರೆಯ ಹಿರಿಯ ನರ್ಸ್ರವರಾದ ಶ್ರೀಮತಿ ನಳಿನಿ ಗೌಡರವರು, ರೋಹಿಣಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದರು. ಅವರು ರೋಹಿಣಿಯೊಂದಿಗೆ ಮಾತನಾಡುತ್ತಾ, 'ರೋಹಿಣಿ, ನಿನ್ನ ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ. ನಮ್ಮ ಆಸ್ಪತ್ರೆಯಲ್ಲೇ, ಈ ಚಿಕಿತ್ಸೆಯಿಂದ ಸಾಕಷ್ಟು ಕೋವಿಡ್ ರೋಗಿಗಳು ಗುಣಮುಖರಾಗಿದ್ದಾರೆ. ದೇಶಾದ್ಯಂತ ಪ್ಲಾಸ್ಮಾ ಚಿಕಿತ್ಸೆ ಹೆಚ್ಚಿನ ಯಶಸ್ಸನ್ನು ಕಂಡಿದ್ದು, ವೈದ್ಯಕೀಯ ವಲಯಗಳಲ್ಲಿ ಉತ್ತಮ ಭರವಸೆಯನ್ನು ಮೂಡಿಸಿದೆ. ನಿನಗೂ ಈ ಚಿಕಿತ್ಸೆಯಿಂದ ಒಳ್ಳೆಯದಾಗುವುದೆಂಬ ಭರವಸೆ ನನಗಿದೆ. ಡಾ. ಗುಲಾಟಿರವರೊಬ್ಬ ನುರಿತ ವೈದ್ಯರು. ಜೊತೆಗೆ ನಿನಗೆ ಡಾ. ಕಿರಣರಂತಹ ಆತ್ಮೀಯ ಗೆಳೆಯರಿದ್ದಾರೆ. ನಿಮ್ಮ ತಂದೆ ರಾಜುರವರು ದೇವರಲ್ಲಿ ನಂಬಿಕೆ ಇಟ್ಟವರು. ಅವರ ಪ್ರಾರ್ಥನೆ ಒಳ್ಳೆ ಫಲವನ್ನು ನೀಡೇ ನೀಡುತ್ತದೆ. ಇನ್ನೆರಡು ದಿನಗಳಲ್ಲಿ ನೀನು ಗುಣಮುಖ ಹೊಂದುವೆ,' ಎಂದರು.  ವೆಂಟಿಲೇಟರ್ನ ಅಳವಡಿಕೆಯ ಜೊತೆಗೆ, ರೋಹಿಣಿಯ ಎಲ್ಲಾ ಚಿಕಿತ್ಸೆಗಳೂ  ಐ.ಸಿ.ಯು.ನಲ್ಲೇ ಮುಂದುವರೆದಿತ್ತು. 

ರಾಜು ಮತ್ತು ಕಿರಣರು ಮನೆಯನ್ನು ತಲುಪಿಯಾಗಿತ್ತು. ಮನೆಯ "ಪೂಜಾ ಕೋಣೆ"ಗೆ ರಾಜು ಕೂಡಲೇ ತೆರಳಿದ್ದರು. 'ಓ, ನನ್ನ ದೇವರೇ, ನಮ್ಮೊಂದಿಗೆ ನೀನಿರು. ನನ್ನ ಮಗಳ ಜೀವವನ್ನು ಕಾಪಾಡು. ನನ್ನ ಮಗಳು ರೋಹಿಣಿ ಗುಣಮುಖಳಾದ ಮೇಲೆ, ನಾನು ತಿರುಪತಿ, ಶಿರಡಿ ಮತ್ತು ಉಜ್ಜಯಿನಿ ಕ್ಷೇತ್ರಗಳಿಗೆ  ಬಂದು ನಿನ್ನ ಸೇವೆಯನ್ನು ಮಾಡುತ್ತೇನೆ' ಎಂದು ಪ್ರಾರ್ಥಿಸಿದ ರಾಜು, ದೀರ್ಘದಂಡ ನಮಸ್ಕಾರವನ್ನು ಮಾಡಿದ್ದರು.  ಕಣ್ಣೀರೊರೆಸಿಕೊಂಡ ರಾಜುರವರು, ರೂ. ೧೦೧ರ ಮೂರು ಮುಡುಪಿನ ಕಟ್ಟುಗಳನ್ನು ಮಹಾಕಾಳೇಶ್ವರರ ಮೂರ್ತಿಯ ಪಕ್ಕದಲ್ಲಿಟ್ಟರು. ರಾಜುರವರ ಹಿಂದೆಯೇ ಕಣ್ಣು ಮುಚ್ಚಿ ನಿಂತಿದ್ದ ಕಿರಣ್ ಕೂಡ ದೇವರಿಗೆ ಕೈಗಳನ್ನು ಮುಗಿದು, ತಲೆ ಬಾಗಿಸಿದ್ದನು.

ರೋಹಿಣಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಿ ೨೪ ಘಂಟೆಗಳ ಸಮಯ ಕಳೆದಿತ್ತು. ರೋಹಿಣಿಯನ್ನು ಪರೀಕ್ಷಿಸಲೆಂದು, ಡಾ ಕಿರಣರವರೊಂದಿಗೆ ಬಂದ ಡಾ. ಗುಲಾಟಿಯವರನ್ನು ಗುರುತಿಸಿದ, ರೋಹಿಣಿಯೇ ಅವರಿಗೆ ಸನ್ನೆಯ ಮುಖಾಂತರ ನಮಸ್ಕಾರಗಳನ್ನು ಮಾಡಿದ್ದಳು. ರೋಹಿಣಿಯ ಪರಿಸ್ಥಿತಿ ಸುಧಾರಿಸಿದೆಯೆಂಬ ವಿಶ್ವಾಸ ಡಾ. ಗುಲಾಟಿರವರಿಗೆ ಗೋಚರಿಸಿತ್ತು. ಅಂದಿನ ಬೆಳಗ್ಗೆ ನಡೆಸಿದ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳು ಡಾ. ಗುಲಾಟಿರವರ ಕೈಸೇರಿದ್ದವು.  ಪ್ಲಾಸ್ಮಾ ಚಿಕಿತ್ಸೆಗೆ ರೋಹಿಣಿ ಉತ್ತಮವಾಗಿ ಪ್ರತಿಕ್ರಿಯಿಸಿದ್ದಳು. ಅವಳ ಆಕ್ಸಿಜನ್ ಮಟ್ಟ ಸಾಕಷ್ಟು ಸುಧಾರಿಸಿದ್ದು, ಶ್ವಾಸಕೋಶಗಳ ಸೋಂಕಿನ ದಟ್ಟಣೆ (congestion) ಸಾಕಷ್ಟು ತಿಳಿಯಾಗಿತ್ತು. ಹಸನ್ಮುಖರಾದ ಡಾ. ಗುಲಾಟಿರವರು ಸನ್ನೆಗಳನ್ನು ತೋರಿಸುತ್ತಾ, ರೋಹಿಣಿಯೊಂದಿಗೆ ಮಾತನಾಡಿ, 'ರೋಹಿಣಿ ಪ್ಲಾಸ್ಮಾ ಚಿಕಿತ್ಸೆಯಿಂದ ನಿನ್ನ ಪರಿಸ್ಥಿತಿ ಉತ್ತಮಗೊಂಡಿದೆ. ನಿನ್ನ ಆರೋಗ್ಯವೀಗ ನನ್ನ ನೀರಿಕ್ಷೆಗೂ ಮೀರಿ ಉತ್ತಮಗೊಂಡಿದೆ. ನಿನ್ನ ಆಕ್ಸಿಜನ್ ಮಟ್ಟ ವೃದ್ಧಿಸಿದ್ದು, ನಿನ್ನ ಶ್ವಾಸಕೋಶಗಳು ಸಾಕಷ್ಟು ತಿಳಿಯಾಗಿವೆ. ಗೆಲವಿನ ನಗೆ ಸೂಸುವ ಸಮಯ ನಿನಗೀಗ ಬಂದಿದೆ,' ಎಂದಾಗ, ರೋಹಿಣಿಯ ಮುಗುಳ್ನಗೆಯ ಮುಖಾಂತರ, ತನ್ನ ವೈದ್ಯರಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಳು. 

ಡಾ. ಕಿರಣ್, ರಾಜುರವರಿಗೆ ಅವರ ಮಗಳು ಆರೋಗ್ಯ ಸುಧಾರಿಸಿರುವ ವಿಷಯವನ್ನು ವಿವರಿಸಿದರು. ಸಂತುಷ್ಟರಾದ ರಾಜುರವರು, ಆಕಾಶದ ಕಡೆ ನೋಡುತ್ತಾ, ಕೈ ಮುಗಿದಿದ್ದರು. 

 ರೋಹಿಣಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಿ ಮೂರು ದಿನಗಳು ಕಳೆದಿತ್ತು. ಡಾ. ಗುಲಾಟಿರವರೀಗ, ರೋಹಿಣಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದರು. ಬೇಗನೆ ಬಂದ ಫಲಿತಾಂಶದ ಪ್ರಕಾರ, ರೋಹಿಣಿ ಕೋವಿಡ್ನಿಂದ ಮುಕ್ತಳಾಗಿದ್ದಾಳೆಂದು ತಿಳಿದು ಬಂದಿತ್ತು. 'ಡಾ. ಕಿರಣ್, ನಿಮ್ಮ ರೋಹಿಣಿಯನ್ನು ಅದೃಷ್ಟಶಾಲಿ ಎಂದೇ ಹೇಳಬೇಕು. ಪ್ಲಾಸ್ಮಾ ಚಿಕಿತ್ಸೆ ಅವಳಿಗೆ ಫಲ ನೀಡಿದೆ. ಪ್ಲಾಸ್ಮಾ ಚಿಕಿತ್ಸೆ ಪಡೆದ ಮೂರು ದಿನಗಳನಂತರ ಅವಳ ಕೋವಿಡ್ ರೋಗ ನಿವಾರಣೆಗೊಂಡಿರುವುದು ಕಂಡುಬಂದಿದೆ. ಇನ್ನೆರಡು ದಿನಗಳನಂತರ ನಾವು ನಡೆಸುವ ಕೋವಿಡ್ ಪರೀಕ್ಷೆಯಲ್ಲಿ, ರೋಹಿಣಿ ಗುಣಮುಖಳಾಗಿರುವುದು ಖಾತರಿಯಾದರೆ, ಅವಳನ್ನು ಅಂದೇ ಮನೆಗೆ ಕಳುಹಿಸಬಹುದು' ಎಂದ ಡಾ. ಗುಲಾಟಿರವರಲ್ಲಿ ಗೆಲುವಿನ ನಗುವಿತ್ತು. ಶುಭ ಸಮಾಚಾರವನ್ನು ಕೇಳಿಸಿಕೊಂಡ ರೋಹಿಣಿ, ರಾಜು ಮತ್ತು ಕಿರಣರೆಲ್ಲರೂ ಸಂತಸಗೊಂಡಿದ್ದರು. 

ಮತ್ತೆರಡು ದಿನಗಳ ಸಮಯ ಕಳೆದಿತ್ತು. ಆಸ್ಪತ್ರೆಗೆ ತೆರಳುವ ಮುನ್ನ, ಮೊತ್ತೊಮ್ಮೆ ಪೂಜಾ ಕೋಣೆಗೆ ತೆರಳಿದ ರಾಜು, ದೇವರಿಗೆ ಕೈಜೋಡಿಸಿ ಪ್ರಾರ್ಥಿಸಿದ್ದರು. ಆಸ್ಪತ್ರೆಯನ್ನು ತಲುಪಿದ ರಾಜುರವರಿಗೆ, ಡಾ. ಗುಲಾಟಿ ಮತ್ತು ಡಾ. ಕಿರಣರವರಿಬ್ಬರೂ ಐ.ಸಿ.ಯು. ಕೋಣೆಯಲ್ಲಿದ್ದದ್ದು ಕಂಡು ಬಂತು. ರೋಹಿಣಿಯ ಮೇಲೆ ಅಂತಿಮ ಕೋವಿಡ್ ಪರೀಕ್ಷೆ ನಡೆಯುತ್ತಿದೆಯೆಂಬುದು, ರಾಜುರವರು ಗಮನಿಸಿಯಾಗಿತ್ತು. ಬೇಗನೆ ಬಂದ ಪರೀಕ್ಷಾ ಫಲಿತಾಂಶಗಳಿಂದ ಸಂತುಷ್ಟರಾದ ಡಾ. ಗುಲಾಟಿ, ಡಾ. ಕಿರಣ್ ಮತ್ತು ನರ್ಸಗಳಿಬ್ಬರೂ, ವಿಜಯದ ಸನ್ನೆಯನ್ನು (V for Victory) ರೋಹಿಣಿಗೆ ತೋರಿಸುತ್ತಿರುವದನ್ನು ನೋಡಿದ, ರಾಜುರವರ ಆನಂದಕ್ಕೆ ಪಾರವೇ ಇರಲಿಲ್ಲ. 

'ರೋಹಿಣಿ, ನಿನ್ನ ಧೈರ್ಯವನ್ನು ನಾನು ಮೆಚ್ಚುತ್ತೇನೆ. ನಾವು ನೀಡಿದ ಚಿಕಿತ್ಸೆಗಳಿಗೆಲ್ಲಾ ಉತ್ತಮ ಸಹಕಾರ ನೀಡಿದ್ದೀಯ. ನಿನ್ನ ಧನಾತ್ಮಕ ಚಿಂತನೆ (Positive Mental Attitude)ಗಳಿಂದಲೇ ನಮ್ಮ ಚಿಕಿತ್ಸೆಗಳೆಲ್ಲಾ ಉತ್ತಮ ಫಲ ನೀಡಿವೆ. ನೀನೀಗಲೇ ಮನೆಗೆ ತೆರಳಬಹುದು' ಎಂದರು ಡಾ. ಗುಲಾಟಿ. ರೋಹಿಣಿ ಕೈಜೋಡಿಸಿ ಮಾತನಾಡುತ್ತಾ, 'ತಾವು ನೀಡಿರುವ ಉತ್ತಮ ಚಿಕಿತ್ಸೆಗಳಿಂದಲೇ ನಾನು ಮತ್ತೆ ಬದುಕಿ ಬಂದಿದ್ದೇನೆ. ಚಿಕಿತ್ಸೆಯುದ್ದಕ್ಕೂ ನೀವು ಮತ್ತು ನಿಮ್ಮ ನರ್ಸಗಳೆಲ್ಲರೂ ನನ್ನಲ್ಲಿ ಧೈರ್ಯ ತುಂಬುತ್ತಿದ್ದಿರಿ. ಹಿರಿಯ ನರ್ಸ್ ರವರಾದ ನಳಿನಿ ಗೌಡರವರಿಗೆ ನನ್ನ ವಿಶೇಷ ಧನ್ಯವಾದಗಳು. ಡಾ. ಕಿರಣನಂತಹ ಆತ್ಮೀಯ ಗೆಳೆಯನನ್ನು ಪಡೆದ ನಾನೇ ಭಾಗ್ಯವಂತಳು. ನಮ್ಮಪ್ಪ ಯಾವಾಗಲೂ ನನ್ನೊಡನಿದ್ದದ್ದು, ನನ್ನ ವಿಶ್ವಾಸವನ್ನು ಹೆಚ್ಚಿಸಿತ್ತು,' ಎಂದಳು. ರೋಹಿಣಿಯ ಗೆಲುವಿನ ಮಾತುಗಳನ್ನು ಕೇಳುತ್ತಿದ್ದ ಕಿರಣನ ಮುಖದಲ್ಲೂ ಆನಂದದ ನಗೆ ಮೂಡಿತ್ತು. ತಂದೆ ರಾಜು ಮಾತ್ರ ಡಾ. ಗುಲಾಟಿರವರಿಗೆ ಕೈ ಜೋಡಿಸಿ ನಿಂತಿದ್ದರು.   

ಆಸ್ಪತ್ರೆಯಿಂದ ಬಿಡುಗಡೆಯ ಪತ್ರಗಳನ್ನು ಸಹಿಮಾಡುತ್ತಿದ್ದ ಡಾ. ಗುಲಾಟಿರವರು, ರಾಜುವರೊಂದಿಗೆ ಮಾತನಾಡುತ್ತಾ, 'ರೋಹಿಣಿಗೆ ಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ, ಕೆಲವು ವಾರಗಳಾಗಬಹುದು. ಅವಳನ್ನು ಕೆಲವು ವಾರಗಳ ಕಾಲ ನಿರಂತರ ದಣಿವು ಕಾಡುಬಹುದು. ಮತ್ತೆ ೧೪ ದಿನಗಳು ಕಳೆದನಂತರ, ಅವಳನ್ನು ಮತ್ತೊಮ್ಮೆ ಪರೀಕ್ಷೆಗೆ ನೀವು ಕರೆತರಬೇಕು. ಮತ್ತೊಮ್ಮೆ ಸಂಪೂರ್ಣವಾಗಿ ಗುಣಮುಖಳಾದ ವರದಿಗಳು ಬರುವವರೆಗೆ, ಅವಳ ನಿರ್ಬಂಧನೆ (quarantine) ಮುಂದುವರೆಯಲಿ. ಎಲ್ಲರೂ ಜಾಗರೂಕತೆಯಿಂದಿರಿ,' ಎಂದರು. 

ಮುಂದಿನ ೧೪ ದಿನಗಳು ಕಳೆದಿದ್ದವು. ರೋಹಿಣಿಯ ಅಂತಿಮ ಕೋವಿಡ್ ಪರೀಕ್ಷೆಯ ದಿನ ಅಂದಾಗಿತ್ತು. ಕೋವಿಡ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳಿಗೆ, ರಾಜ್ಯ ಪ್ರಶಸ್ತಿಯನ್ನು ಪ್ರಕಟಿಸುವ ದಿನವೂ ಅಂದೇ ಆಗಿತ್ತು. ಜಿಲ್ಲೆಯಿಂದ ರಾಜ್ಯ ಸರಕಾರಕ್ಕೆ ಶಿಫಾರಿಸು ಮಾಡಿ ಕಳುಹಿಸಿದ ವೈದ್ಯರುಗಳ ಪಟ್ಟಿಯಲ್ಲಿ, ತನ್ನ ಹೆಸರು ಮುಂಚೂಣಿಯಲ್ಲಿದೆ ಎಂಬುದು ಡಾ. ಕಿರಣನಿಗೆ ತಿಳಿದಿತ್ತು. ಹಾಗಾಗಿ ಅಂದು ಡಾ. ಕಿರಣನು ಎರಡು ವಿಷಯಗಳ ಬಗ್ಗೆ ಕಾತರನಾಗಿದ್ದನು. ಒಂದು ರೋಹಿಣಿಯ ಅಂತಿಮ ವೈದ್ಯಕೀಯ ಪರೀಕ್ಷೆಯ ಫಲಿತಾಂಶವಾದರೆ, ಮತ್ತೊಂದು ರಾಜ್ಯ ಪ್ರಶಸ್ತಿಯ ಫಲಿತಾಂಶದ ಸುದ್ದಿಯಾಗಿತ್ತು. ರೋಹಿಣಿ, ಕಿರಣ್ ಮತ್ತು ರಾಜುರವರುಗಳು ಆಸ್ಪತ್ರೆಯ ಡಾ. ಗುಲಾಟಿರವರ ಕೋಣೆಯನ್ನು ಸೇರಿದಾಗ, ಅವರುಗಳೆಲ್ಲಾ ಹರ್ಷಚಿತ್ತರಾಗಿದ್ದರು. ರೋಹಿಣಿಯನ್ನು ಅಂತಿಮ ಪರೀಕ್ಷೆಗೆಂದು ವಿಶೇಷ ಕಕ್ಷೆಯೊಳಗೆ ಕರೆದೊಯ್ಯಲಾಯಿತು. ಬೇಗನೆ ಬಂದ ಪರೀಕ್ಷಾ ವರದಿಯನ್ನು ನೋಡಿದ ಕೂಡಲೇ ಡಾ. ಗುಲಾಟಿರವರು ನಗುತ್ತಾ,  ವಿಜಯದ ಸನ್ನೆಯನ್ನು ತೋರಿಸಿದ್ದರು. ನಾಲ್ವರ ನಡುವೆ ಸಂತಸದ ನಗೆಯ ವಿನಿಮಯವಾಗಿತ್ತು. ತಂದೆ ರಾಜು, ಕೈಜೋಡಿಸಿ ಡಾ. ಗುಲಾಟಿರವರಿಗೆ ವಂದನೆಗಳನ್ನು ಸಮರ್ಪಿಸಿದ್ದರು.  

ಈ ನಡುವೆ, ಡಾ. ಗುಲಾಟಿರವರ ಫೋನು ರಿಂಗಣಿಸಿತ್ತು. ಆ ಕಡೆಯ ಧ್ವನಿಯ ಮುಖಾಂತರ,  ಮಾತನಾಡುತ್ತಿದ್ದ ವ್ಯಕ್ತಿಯು ಯಾರೆಂಬುದು, ಡಾ. ಕಿರಣನಿಗೆ ತಿಳಿದಿತ್ತು. ಆ ಕಡೆಯಿಂದ ಮಾತನಾಡುತ್ತಿದ್ದವರು ರಾಜ್ಯದ ಆರೋಗ್ಯ ಇಲಾಖೆಯ ನಿರ್ದೇಶಕರಾಗಿದ್ದವರು. 'ಅಭಿನಂದನೆಗಳು ಡಾ. ಗುಲಾಟಿರವರೇ! ತಾವು ರಾಜ್ಯ ಸರಕಾರದ ಪ್ರಶಸ್ತಿಗೆ ಆಯ್ಕೆಯಾಗಿದ್ದೀರ. ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ತಮ್ಮ ಹೆಸರೇ ಮೊದಲನೆಯದು. ಪ್ರಶಸ್ತಿ ಗಳಿಸಿದ ಮಿಕ್ಕ ವೈದ್ಯರುಗಳ ಹೆಸರುಗಳು ಹೀಗಿವೆ,' ಎಂದು ಓದುತ್ತಾ ಸಾಗಿತ್ತು ನಿರ್ದೇಶಕರ ವಾಣಿ. ಪಟ್ಟಿಯಲ್ಲಿದ್ದ ಹೆಸರುಗಳನ್ನು, ಗಮನವಿಟ್ಟು ಡಾ. ಕಿರಣ್ ಕೇಳುತ್ತಿದ್ದದ್ದು, ಡಾ. ಗುಲಾಟಿ, ರೋಹಿಣಿ ಮತ್ತು ರಾಜುರವರ ಗಮನಕ್ಕೂ ಬಂದಿತ್ತು. ತನ್ನ ಹೆಸರು, ಪಟ್ಟಿಯಲ್ಲಿಲ್ಲದ್ದನ್ನು ಕೇಳಿ, ನಿರಾಶೆಯ ಛಾಯೆ ಡಾ. ಕಿರಣನ ಮುಖದಲ್ಲಿ ಮೂಡಿತ್ತು. 

'ಸಾರೀ ಡಾ. ಕಿರಣ್, ಉತ್ಸಾಹಿ ಯುವ ವೈದ್ಯರಾದ ತಮಗೂ ಈ ಪ್ರಶಸ್ತಿ ದೊರೆಯಬೇಕಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ತಾವು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಪ್ರಶಸ್ತಿ ಪಡೆಯಬೇಕಾದ ಅರ್ಹ ವೈದ್ಯರು ತಾವಾಗಿದ್ದಿರಿ,' ಎಂದು ಡಾ. ಕಿರಣನನ್ನು ಸಂತೈಸಲೆತ್ನಿಸಿದವರು ಡಾ. ಗುಲಾಟಿ.  'ಇರಲಿ ಬಿಡಿ ಸಾರ್, ನನ್ನ ಪ್ರಶಸ್ತಿ ನನಗಾಗಲೇ ದೊರೆತಾಗಿದೆ,' ಎಂದು ಮುಗುಳ್ನಗುತ್ತಾ ಡಾ . ಕಿರಣ್, ತನ್ನ ಗೆಳತಿ ರೋಹಿಣಿಯತ್ತ ನೋಡಿದನು. ರೋಹಿಣಿ ಕೂಡಾ  ಹೆಮ್ಮೆಯಿಂದ ತನ್ನ ಗೆಳಯ ಕಿರಣನತ್ತ ನೋಡಿ ಮುಗುಳ್ನಕ್ಕಿದ್ದಳು. ಅವರಿಬ್ಬರ ನಡುವಿನ ಗೆಲುವಿನ ನಗು, ಅವರಿಬ್ಬರ ಜೀವನದ ಮುಂದಿನ ಸುಂದರ ಅಧ್ಯಾಯದ ಆರಂಭಕ್ಕೆ ನಾಂದಿ ಹಾಡಿತ್ತು.  

                                                                                  ******    


                                                ವಿಷಯಾಧಾರದ ಮೂಲಗಳು  (Bibliography)

೧. ಭಾರತೀಯ ಕನ್ನಡ ಮತ್ತು ಇಂಗ್ಲೀಷ್ ದಿನ ಪತ್ರಿಕೆಗಳು 

೨. ಪುಸ್ತಕ "ಕೋವಿಡ್-೧೯", ಲೇಖಕರು: ಡಾ. ಮೈಕಲ್ ಮೋಸ್ಲೆ 

೩. ಪುಸ್ತಕ "ಫ್ರೀಡಂ ಅಟ್ ಮಿಡ್ನೈಟ್", ಲೇಖಕರು: ಡಾಮಿನಿಕ್ ಮತ್ತು ಲಾರಿ 

೪. ಪುಸ್ತಕ "ಮೈಗ್ರ್೦ಟ್ಸ್, ರೆಫ್ಯೂಜಿಸ್ ಅಂಡ್ ದಿ ಸ್ಟೇಟ್ಲೆಸ್ ಇನ್ ಸೌತ್ ಏಷ್ಯಾ," ಲೇಖಕರು: ಪಾರ್ಥ    ಎಸ್. ಘೋಷ್ 

೫. "ಕಂಬ್ಯಾಟಿಂಗ್ ಹಂಗರ್ ಅಂಡ್ ಅಚೈವಿಂಗ್ ಫುಡ್ ಸೆಕ್ಯೂರಿಟಿ," ಲೇಖಕರು: ಎಂ.ಎಸ್. ಸ್ವಾಮಿನಾಥನ್ 

೬. "ದಿ ಗ್ರೇಟ್ ಇನ್ಫ್ಲುಯೆಂಜಾ," ಲೇಖಕರು: ಜಾನ್ ಎಮ್. ಬ್ಯಾರಿ 

೭. ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ (WHO)ದ ಜಾಲ ತಾಣ 

೮. ಭಾರತ ಸರಕಾರದ ಜಾಲ ತಾಣ 

೯. ಕರ್ನಾಟಕ ಸರಕಾರದ ಜಾಲ ತಾಣ 

೧೦. htts://www.nature.com/articles/

೧೧. https://www.imperial.ac.uk/news/how-viruses-secretly-control-planet 

೧೨. ಅಂತರ್ಜಾಲದ ವಿವಿಧ ಜಾಲ ತಾಣಗಳು 

******

ಲೇಖಕರ ಪರಿಚಯ 



ಶ್ರೀಯುತರಾದ ಲಕ್ಷ್ಮೀನಾರಾಯಣ ಕೆ., M.Sc.,M.B.A.,CAIIB, ಇವರು ಮಾಜಿ ಬ್ಯಾಂಕರ್ ಹಾಗೂ ದೀರ್ಘಕಾಲದ ಬ್ಯಾಂಕ್ ತರಬೇತುದಾರರು. ಪೂರ್ಣಾವಧಿಯ ಬ್ಯಾಂಕ್ ತರಬೇತುದಾರರಾಗಿ ಅವರು ಸುಮಾರು ೨೬ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. "ಸಾಫ್ಟ್ ಸ್ಕಿಲ್ಸ್ (Soft Skills)" ತರಬೇತಿಯಲ್ಲಿ ಅವರು ವಿಶೇಷಜ್ಞರು. 

ಬರವಣಿಗೆ ಅವರ ಪ್ರವೃತ್ತಿ. 'https://blogbuster-lakshminarayana-k.blogspot.com/' ಎಂಬ ಹೆಸರಿನ ಬ್ಲಾಗ್ನಲ್ಲಿ ಹಲವು ವರ್ಷಗಳಿಂದ ವಿವಿಧ ವಿಷಯಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದಾರೆ. 

ಅವರ ಮೊದಲ ಕನ್ನಡ ಕೃತಿಯಾದ "ರಾಜಣ್ಣ ಮತ್ತೊಮ್ಮೆ ಹುಟ್ಟಿ ಬಾ" ಎಂಬ ಕೃತಿ, ದಿ. ಪಾರ್ವತಮ್ಮ ರಾಜ್ ಕುಮಾರ್ ರವರ ಅಮೃತ ಹಸ್ತದಿಂದ ೨೦೦೮ರಲ್ಲಿ ಬಿಡುಗಡೆ ಹೊಂದಿ, ಅಪಾರ ಜನಪ್ರಿಯತೆಯನ್ನು ಕಂಡಿತ್ತು. 

೨೦೨೦ರಲ್ಲಿ ಅವರು ರಚಿಸಿದ ಇ-ಪುಸ್ತಕವಾದ "ಇಂಡಿಯಾ, ಡಿಫೀಟ್ ಕೊರೋನಾ (India, Defeat Corona)" ಕೂಡ ಸಾಕಷ್ಟು ಜನಪ್ರಿಯತೆಯನ್ನು ಕಂಡಿತ್ತು. 

'ವಿಶ್ವಾದ್ಯಂತದ ಪ್ರವಾಸ' ಲೇಖಕರ ಮತ್ತೊಂದು ಹವ್ಯಾಸಗಳಲ್ಲೊಂದು. ಅವರ ಆಗ್ನೇಯ ಏಷ್ಯಾ, ಯುರೋಪ್ ಮತ್ತು ಅಮೇರಿಕಾ ಪ್ರವಾಸಗಳನ್ನು ಕುರಿತಾದ ಬ್ಲಾಗ್ ಲೇಖನಗಳನ್ನು ಅಪಾರ ಸಂಖ್ಯೆಯ ಓದುಗರು ಓದಿದ್ದಾರೆ. 

ಶ್ರೀಮತಿ ಮತ್ತು ಶ್ರೀ ಲಕ್ಷ್ಮೀನಾರಾಯಣರವರು ಬೆಂಗಳೂರಿನ ನಿವಾಸಿಗಳು. ಇವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಅವರಿಬ್ಬರೂ ವಿವಾಹಿತರು. 

ಅವರ ಇ-ಅಂಚೆಯ ವಿಳಾಸ: klakshminarayana1956@rediffmail.com

-ಓದುಗರೆಲ್ಲರಿಗೂ ಲೇಖಕರ ನಮಸ್ಕಾರಗಳು- 

******

ಹಿನ್ನುಡಿ 

ಶ್ರೀ ವಿ. ರಾಘವನ್ 
ಉಪ ಮಹಾ ಪ್ರಬಂಧಕರು (ನಿವೃತ್ತ)
ಹೈದರಾಬಾದ್ 
***
ಕೋವಿಡ್ ಮಹಾಮಾರಿ (pandemic)ಯನ್ನು ಕುರಿತಾಗಿ, ನನ್ನ ಸ್ನೇಹಿತರಾದ ಲಕ್ಷ್ಮೀನಾರಾಯಣ ಕೆ.ರವರು ಬರೆದಿರುವ ಈ ಪುಸ್ತಕ ("ಕೋವಿಡ್, ಮಾನವ ಸೃಷ್ಟಿಯೇ?")ವನ್ನೋದಿ ಸಂತೋಷವಾಯ್ತು. 

ಕೋವಿಡ್ನ ಮೂಲ, ಸಮಾಜದ ವಿವಿಧ ವರ್ಗಗಳ ಮೇಲೆ ಅದರಿಂದುಟಾದ ಪ್ರಭಾವ, ಅದರ ಹರಡುವಿಕೆಯನ್ನು ನಿಯಂತ್ರಿಸಲು ನಮ್ಮ ಸರಕಾರಗಳು ತೆಗೆದುಕೊಂಡ ಕ್ರಮಗಳು, ನಮ್ಮ ಕೊರೋನಾ ಸೇನಾನಿಗಳು ಮಾಡುತ್ತಿರುವ ಅಮೂಲ್ಯ ಸೇವೆಗಳು, ಲಾಕ್ಡೌನಿನಿಂದ ನಮ್ಮ ಅರ್ಥ ವ್ಯವಸ್ಥೆಯ ಮೇಲಾಗಿರುವ ದುಷ್ಪರಿಣಾಮಗಳು, ನಮ್ಮ ವಲಸಿಗ ಕೆಲಸಗಾರರು  ಮತ್ತು ಸಣ್ಣ ವ್ಯಾಪಾರಿಗಳು  ಲಾಕ್ಡೌನಿನಿಂದ ಅನುಭವಿಸುತ್ತಿರುವ ಕಷ್ಟ-ಕಾರ್ಪಣ್ಯಗಳು, ಆರ್ಥಿಕ ವ್ಯವಸ್ಥೆಯ ಪುನರುಜ್ಜೀವನಕ್ಕಾಗಾಗಿ ನಮ್ಮ ಸರಕಾರ ಜಾರಿಗೊಳಿಸಿರುವ ವಿವಿಧ ಕಾರ್ಯಕ್ರಮಗಳು ಮುಂತಾದ ಎಲ್ಲಾ ಆಯಾಮಗಳ ವಿವರಗಳನ್ನು, ಈ ಕಾದಂಬರಿಯಲ್ಲಿ ಕಾಣಬಹುದು. 

ಸಾರ್ವಜನಿಕ ವಲಯಗಳಲ್ಲಿ, ಕೋವಿಡ್ ಕುರಿತಾಗಿ ಕೇಳಿಬರುವ ವಿವಿಧ ವಿಷಯಗಳು ಹಾಗೂ ಭಿನ್ನಾಭಿಪ್ರಾಯಗಳ, ವಿಮರ್ಶಾತ್ಮಕ ಚರ್ಚೆಯನ್ನು ಲೇಖಕರಿಲ್ಲಿ ದಾಖಲಿಸಿದ್ದಾರೆ. ಲಾಕ್ಡೌನಿನಿಂದ ತಮ್ಮ ಸಂಪಾದನೆಗಳನ್ನು ಕಳೆದುಕೊಂಡ ಬಡವರು, ವಲಸಿಗ ಕೆಲಸಗಾರರು, ಸಣ್ಣ ವ್ಯಾಪಾರಿಗಳು ಮತ್ತು ಸ್ವಯಂ-ಉದ್ಯೋಗಿಗಳು ಪಡುತ್ತಿರುವ ಸಂಕಷ್ಟಗಳನ್ನು ನಿವಾರಿಸಲು, ಸರಕಾರಗಳು ಜಾರಿಗೊಳಿಸಿರುವ ಹಲವು ಯೋಜನೆಗಳ  ಅಸಮರ್ಪಕತೆಯನ್ನೂ ಲೇಖಕರು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. 

ಕೋವಿಡ್ ತಂದೊಡಿದ್ದ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು, ಅನುಭವಿಸುತ್ತಿರುವ ಬೇರೆ ಬೇರೆ ಕಾಲ್ಪನಿಕ ಪಾತ್ರಗಳುಳ್ಳ  ಸಣ್ಣ ಕಥೆಗಳನ್ನು, ಲೇಖಕರು ತಮ್ಮ ಈ ಕಾದಂಬರಿಯಲ್ಲಿ ಅಡಕಗೊಳಿಸಿದ್ದಾರೆ.  ಕಥೆಗಳ ಹಾಗೂ ವಿಚಾರಗಳ ನಿರೂಪಣೆ ಚೇತೋಹಾರಿಯಾಗಿದ್ದು, ಲೇಖಕರು ಓದುಗರ ಆಸಕ್ತಿಯನ್ನು ಕಡೆಯವರೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪುಸ್ತಕದ ವಿವಿಧ ಅಧ್ಯಾಯಗಳ ಆರಂಭದಲ್ಲಿ ಕಂಡು ಬರುವ ವ್ಯಂಗ್ಯ ಚಿತ್ರಗಳು, ವಿಚಾರಗಳ ಮಂಡನೆಗೆ   ಪೂರಕವಾಗಿವೆ .  

ಕೋವಿಡ್ ಕುರಿತಾದ ಎಲ್ಲಾ ಘಟನೆಗಳ ಸಂಶೋಧನೆಯನ್ನು ಲೇಖಕರು ಚೆನ್ನಾಗಿ ಮಾಡಿ, ಸರಳವಾದ ಮತ್ತು ಚುರುಕಾದ ಭಾಷೆಯಲ್ಲಿ ಬರೆದು, ಈ ಪುಸ್ತಕವನ್ನು ಓದುಗರ ಮುಂದಿಟ್ಟಿದ್ದಾರೆ. 
(proposed back cover)

******
ಲೇಖಕರ ಇನ್ನಿತರ ಕೃತಿಗಳು 

೧. ರಾಜಣ್ಣ ಮತ್ತೊಮ್ಮೆ ಹುಟ್ಟಿ ಬಾ (೨೦೦೮)
೨. India, Defeat Corona (e-book)  (೨೦೨೦)
******