ಮನುಕುಲ ಕಂಡ ಮಹಾನ್ ವ್ಯಕ್ತಿಯೆಂದೇ ಗಾಂಧೀಜಿಯವರನ್ನು ಬಣ್ಣಿಸಲಾಗಿದೆ. ಹೌದು, ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಮೇರುನಾಯಕರಾದ ಅವರು ಹಲವು ಕೊಡುಗೆಗಳನ್ನು ನೀಡಿದ್ದಾರೆ.
೧. ಗ್ರಾಮೀಣ ಭಾರತ: ರೈತನೇ ಭಾರತದ ಬೆನ್ನೆಲುಬು ಹಾಗೂ ಹಳ್ಳಿಗಳ ವಿಕಾಸವೇ ಭಾರತದ ವಿಕಾಸ ಎಂಬ ಸಂದೇಶವನ್ನು ಗಾಂಧೀಜಿ ನಮಗೆ ನೀಡಿದರು.
೨. ಸ್ವಚ್ಛ ಭಾರತ: ಸ್ವಚ್ಛತೆಯ ಬಗ್ಗೆ ನಮ್ಮ ಗಮನವನ್ನು ಮೊದಲ ಬಾರಿಗೆ ಸೆಳೆದವರು ಗಾಂಧೀಜಿ. ಸ್ವಚ್ಛ ಭಾರತ ಎಂಬ ಅಭಿಯಾನಕ್ಕೆ ಪ್ರಥಮವಾಗಿ ನಾಂದಿ ಹಾಡಿದವರು ಗಾಂಧೀಜಿಯವರೆ.
೩.ಸ್ವಾವಲಂಭಿ ಭಾರತ: ದೇಶದ ಗುಡಿಕೈಗಾರಿಕೆಗಳಿಂದ ಸ್ವಾವಲಂಬನೆ ಸಾಧ್ಯ ಎಂಬ ದೂರಧೃಷ್ಟಿಯನ್ನು ನಮಗೆ ತೋರಿಸಿದವರು ಗಾಂಧೀಜಿ. 'ಮೇಕ್ ಇನ್ ಇಂಡಿಯ' ಎಂಬುದು ಗಾಂಧೀಜಿಯವರು ಆರಂಭಿಸಿದ ಅಭಿಯಾನದ ಮುಂದುವರಿದ ಭಾಗ.
೪. ಸತ್ಯಾಗ್ರಹ: ಅನ್ಯಾಯದ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಡುವುದೇ ಸತ್ಯಾಗ್ರಹ ಎಂಬ ತಂತ್ರಗಾರಿಕೆಯನ್ನು ನಮಗೆ ತಿಳಿಸಿಕೊಟ್ಟರು ಗಾಂಧೀಜಿ.
೫.ಅಸ್ಪೃಶ್ಯತೆ ವಿರುದ್ಧ ಹೋರಾಟ: ಅಸ್ಪೃಶ್ಯತೆಯೊಂದು ಸಾಮಾಜಿಕ ಪಿಡುಗು ಹಾಗೂ ಎಲ್ಲರೂ ಸಮಾನರು ಎಂಬುದು ಗಾಂಧೀಜಿಯವರ ಅಭಿಪ್ರಾಯ. ದೇಶದಲ್ಲಿ ಈಗ ಮುಂದುವರೆದಿರುವ ಸಾಮಾಜಿಕ ನ್ಯಾಯಕ್ರಾಂತಿಯ ರೂವಾರಿಗಳು ಗಾಂಧೀಜಿಯವರೇ.
ಆದರೇ
೧. ಪ್ರಧಾನಿ ಆಯ್ಕೆ: ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದ ಪಟೇಲರನ್ನು ಕಡೆಗಾಣಿಸಿದ್ದು ಗಾಂಧೀಜಿಯವರು ಮಾಡಿದ ತಪ್ಪುಗಳಲ್ಲಿ ದೊಡ್ಡದು ಎಂಬುದು ನನ್ನ ಅಭಿಪ್ರಾಯ. ದೇಶದ ಹಿತದೃಷ್ಟಿಯಿಂದ ನಿಸ್ವಾರ್ಥ ಹಾಗೂ ನಿಷ್ಟೂರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವ ಅಂದು ಪಟೇಲರಲ್ಲಿ ಮಾತ್ರವಿತ್ತು. ಅವರು ಪ್ರಧಾನಿಯಾಗಿದ್ದರೆ ದೇಶ ಇನ್ನೂ ಬಲಿಷ್ಠವಾಗಿರುತಿತ್ತು ಎಂಬುದರಲ್ಲಿ ಯಾವ ಅನುಮಾನವೂ ನನಗಿಲ್ಲ.
೨.ಹುಲಿಗಳನ್ನು ಇಲಿಗಳನ್ನಾಗಿ ಮಾಡಿದರೆ? ಹಾಗೇ ಸುಭಾಷ್ ಚಂದ್ರ ಬೋಸರಂಥ ನಾಯಕರ ಉತ್ಸಾಹಕ್ಕೆ, ಅಹಿಂಸೆಯ ಹೆಸರಿನಲ್ಲಿ ತಣ್ಣೀರು ಸುರಿದದ್ದು ಮತ್ತು ಅಂಥವರನ್ನು ಕಡೆಗಾಣಿಸಿದ್ದು ಗಾಂಧೀಜಿಯವರು ಮಾಡಿದ ಮತ್ತೊಂದು ತಪ್ಪು. ಒಂದು ಕೆನ್ನೆಗೆ ಬಾರಿಸಿದರೆ, ಮತ್ತೊಂದು ಕೆನ್ನೆಯನ್ನು ತೋರಿಸು ಎಂಬ ಪಾಠ ಭಾರತೀಯರನ್ನು ದುರ್ಬಲ ವ್ಯಕ್ತಿಗಳನ್ನಾಗಿ ಮಾಡಿತೇ ಎಂಬ ಪ್ರಶ್ನೆ ಆಗಾಗ ನನ್ನನ್ನು ಕಾಡುತ್ತದೆ.
೩.ದೇಶ ವಿಭಜನೆಯಲ್ಲಾದ ಹಿನ್ನಡೆ: ಒಡೆದು ಆಳು ಎಂಬ ಬ್ರಿಟಿಷರ ತಂತ್ರಕ್ಕೆ ನಾವು ಸುಲಭ ತುತ್ತಾದೆವು. ನಾವು ಅದರ ಪರಿಣಾಮವನ್ನು ಈಗಲೂ ಅನುಭವಿಸುತ್ತಿದ್ದೇವೆ. ಇದಕ್ಕೆ ಯಾರು ಹೊಣೆ? ಪಟೇಲರು ತಂತ್ರಗಾರಿಕೆ ಮಾಡದಿದ್ದರೆ ನಮ್ಮ ಹೈದರಾಬಾದ್ ಕೂಡ ಪಾಕಿಸ್ತಾನ ಆಗುತಿದ್ದರಲ್ಲಿ ಅನುಮಾನ ಬೇಡ. ಕಾಶ್ಮೀರ ಮುಂತಾದ ಸಮಸ್ಯೆಗಳಿಗೆ ಅಂದೇ ಇತಿಶ್ರೀ ಹಾಡಬಹುದಿತ್ತು. ಮತ್ತೊಂದು ಕೆನ್ನೆ ತೋರಿಸುವ ಮನೋಭಾವವೇ ನಮಗೆ ಮುಳುವಾಯಿತೆ/ಮತ್ತೆ ಮತ್ತೆ ಮುಳುವಾಗುತ್ತಿದೆಯೆ ಎಂಬ ದ್ವಂದ ನಮ್ಮೆಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ.
ಈ ಎಲ್ಲಾ ವಿಚಾರಧಾರೆಗಳ ನಡುವೆ 'nobody is perfect' ಎಂಬ ಮಾತು ನೆನಪಿಗೆ ಬರುತ್ತದೆ. ಆದರೂ ನಮ್ಮ ದೇಶ ಹಾಗೂ ಅದರ ವಿಚಾರಧಾರೆಗಳನ್ನು ರೂಪಿಸುವಲ್ಲಿ ಅಪಾರ ಪ್ರಭಾವ ಬೀರಿದವರಲ್ಲಿ ಗಾಂಧೀಜಿಯವರು ಪ್ರಮುಖರು ಎಂಬುದರಲ್ಲಿ ಎರಡು ಮಾತಿಲ್ಲ .
-೦-೦-೦-೦-೦-೦-೦-೦-೦-
(ಮೇಲಿನ ಚಿತ್ರಗಳ ಮೂಲಕ್ಕೆ ನಾನು ಆಭಾರಿ)