Monday, 6 December 2021

ಲಾಕ್ಡೌನ್ ಗುಮ್ಮ!


 ಲಾಕ್ಡೌನ್ ಗುಮ್ಮ!

'ಹೋದ್ಯಾ ಪಿಶಾಚಿ ಅಂದ್ರೆ, ಬಂದೆ ಗವಾಕ್ಷೀಲಿ,' ಎಂಬುದೊಂದು ಗಾದೆ. ಭಾರತದಲ್ಲಿ, ಕೋವಿಡ್ ಲಸಿಕೆಯ ಯಜ್ಞ ವ್ಯಾಪಕವಾಗಿ ನಡೆದಿದ್ದು, ಇನ್ನೇನು ಕೋವಿಡ್ ನಿಯಂತ್ರಣ ಸಾಧಿಸಿದೆವು, ನಮ್ಮ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲೇ, 'ಒಮಿಕ್ರೋನ್' ಎಂಬ ಹೊಸ ಕೋವಿಡ್ ತಳಿಯೊಂದು ಬಂದು ನಮ್ಮೆಲ್ಲರ ನಿದ್ದೆ ಕೆಡಿಸಿದೆ. ಮತ್ತೊಮ್ಮೆ ಲಾಕ್ಡೌನ್ ಗುಮ್ಮದ ಕರಿ ನೆರಳು ಕಾಣಿಸಿಕೊಂಡಿದೆ. 

ಕೋವಿಡ್ ವೈರಾಣು ರೂಪಾಂತರ ಹೊಂದುತ್ತಿರುವುದು ಹೊಸದೇನಲ್ಲ. ದಕ್ಷಿಣ ಆಫ್ರಿಕಾದ ಮೂಲದಿಂದ ಬಂದಿದೆ ಎಂದು ಹೇಳಾಗುತ್ತಿರುವ ಒಮಿಕ್ರೋನ್ ರೂಪಾಂತರಿ ಭಾರತಕ್ಕೂ ಬಂದಿದೆ. ನಮ್ಮ ರಾಜ್ಯದ ಎರಡು ಪ್ರಕರಣಗಳೂ ಸೇರಿದಂತೆ ಒಮಿಕ್ರೋನ್ ಸೋಂಕು, ನಮ್ಮ ದೇಶದ ೨೧ ಜನರಲ್ಲಿ ಕಾಣಿಸಿಕೊಂಡಿದೆ. ಈ ಹೊಸ ರೂಪಾಂತರಿ ವೇಗವಾಗಿ ಹರಡಬಹುದಾದರೂ, ಹೆಚ್ಚು ವಿನಾಶಕಾರಿಯಲ್ಲ ಎಂಬುದು ತಜ್ಞರ ಅಭಿಪ್ರಾಯ.  ಈವರೆಗೆ, ಒಮಿಕ್ರೋನ್  ಯಾವುದೇ ಸಾವನ್ನುಂಟು ಮಾಡಿಲ್ಲ ಎಂಬುದು ಸಮಾಧಾನದ ವಿಷಯ. 

ಕಳೆದ ವರ್ಷದ ಮಾರ್ಚ್ ೨೫ರಂದು ನಮ್ಮ ದೇಶದಲ್ಲಿ ವಿಧಿಸಿದ ದೀರ್ಘವಾದ ಮತ್ತು ಕಠಿಣ ಲಾಕ್ಡೌನಿನಿಂದ, ಕೋವಿಡ್ ನಿಯಂತ್ರಣ ಎಷ್ಟರ ಮಟ್ಟಿಗಾಯ್ತೋ, ಹೇಳಲಾಗದು. ಆದರೆ ಅದು ನಮ್ಮ ೨೦ ಕೋಟಿಯಷ್ಟು ಬಡವರ ಉದ್ಯೋಗವನ್ನು ಹಾಳುಗೆಡವಿದ್ದು ಮಾತ್ರ ಕಟು ಸತ್ಯ. ಆ ದಿನಗಳಲ್ಲಿ  ಕಟ್ಟಡ ಕ್ಷೇತ್ರದ ನೌಕರರು, ದಿನಗೂಲಿಕಾರರು, ವಲಸಿಗ ನೌಕರರು, ರಸ್ತೆ ಬದಿ ವ್ಯಾಪಾರಿಗಳು, ಸಣ್ಣ ಹೊಟೇಲಿನವರು, ರಿಕ್ಷಾ-ಟಾಕ್ಸಿ ಚಾಲಕರು ಮುಂತಾದ ಬಡವರು ತಮ್ಮ ಕೆಲಸಗಳನ್ನು ಕಳೆದುಕೊಂಡು ಪಟ್ಟ ಪಾಡು ಅಷ್ಟಿಷ್ಟಲ್ಲ.  ನೌಕರಿ ಕಳೆದುಕೊಂಡ ಲಕ್ಷಾಂತರ ವಲಸಿಗರು, ಕಾಲು ನಡಿಗೆಯಲ್ಲಿ ಸಾವಿರಾರು ಮೈಲಿ ನಡೆದು ತಮ್ಮ ಹಳ್ಳಿಗಳನ್ನು ಸೇರಲೆತ್ನಿಸಿದ್ದ ದೃಶ್ಯವನ್ನು ನಾವಿನ್ನು ಮರೆತಿಲ್ಲ. ಅದು  'ಜೀವಗಳು ಮತ್ತು ಜೀವನೋಪಾಯ'ಗಳ ನಡುವಿನ ಸಂಘರ್ಷವಾಗಿತ್ತು. ಬಡವರ ಉದ್ಯೋಗ ನಷ್ಟವೆಂಬುದು, ಕೋವಿಡ್ಗಿಂತ ಹೆಚ್ಚು ಅಪಾಯಕಾರಿ ಎಂಬುದು ಕಳೆದ ವರ್ಷದ ಲಾಕ್ಡೌನಿನಿಂದ ನಾವು ಕಲಿತ ಪಾಠ. 

ಕಳೆದ ೨೧ ತಿಂಗುಳುಗಳಿಂದ ಮಹಾಮಾರಿ ಕೋವಿಡ್ ರೋಗವು, ಪ್ರಪಂಚಾದ್ಯಂತ ೫೦ ಲಕ್ಷಕ್ಕೂ ಹೆಚ್ಚು ಜನರುಗಳ ಸಾವಿಗೆ ಕಾರಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ, ಭಾರತ ದೇಶದ ಕೋವಿಡ್ ನಿರ್ವಹಣೆ ಸಮರ್ಪಕವಾಗಿದ್ದು, ನಮ್ಮವರ ಸಾವುಗಳ ಸಂಖ್ಯೆ ೪. ೭ ಲಕ್ಷದಷ್ಟು ಮಾತ್ರವಿದೆ. ಕೋವಿಡ್ಗೆ ಬಲಿಯಾದವರಲ್ಲಿ, ೭೦ ವಯಸ್ಸನ್ನು ಮೀರಿದ ವೃದ್ಧರು ಮತ್ತು ಇತರ ರೋಗಗಳಿಂದ ಬಳಲುತ್ತಿದ್ದವರ ಸಂಖ್ಯೆಯೇ ಹೆಚ್ಚಿನದು. ಹಾಗಾಗಿ, ವಯೋವೃದ್ಧರು ಮತ್ತು ಇನ್ನಿತರ ರೋಗಗಳಿಂದ ಬಳಲುತ್ತಿರುವವರ ಮೇಲೆ ವಿಶೇಷ ನಿಗಾ ವಹಿಸಬೇಕಾದ್ದು ಸೂಕ್ತ. ಮಿಕ್ಕೆಲರಿಗೂ ಲಾಕ್ಡೌನಿನ ಅವಶ್ಯಕತೆ ಇರದು. ಆದರೆ ಮುನ್ನೆಚ್ಚರಿಕೆಗಳನ್ನಂತೂ ಗಾಳಿಗೆ ತೂರುವಂತಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಆಗಾಗ್ಗೆ ಸೋಪಿನಿಂದ ಕೈಗಳನ್ನು ತೊಳೆಯುವುದು ಮುಂತಾದ ಸರಳ ವಿಧಾನಗಳನ್ನು ಅನುಸರಿಸಿದರೆ, ನಾವುಗಳೆಲ್ಲರೂ ಸಾಕಷ್ಟು ಕ್ಷೇಮವಾಗಿರಬಹುದು. ಎರಡು  ಡೋಸ್ ಲಸಿಕೆಯನ್ನು ಎಲ್ಲರೂ  ಪಡೆಯಬೇಕಾದ್ದು ಅತ್ಯವಶ್ಯಕ. 

೧೬ಕ್ಕೂ ಕಮ್ಮಿ ವಯಸ್ಸಿನ ಮಕ್ಕಳನ್ನು ಕೋವಿಡ್ ಬಹುವಾಗಿ ಕಾಡದು. ಮಕ್ಕಳಲ್ಲಿ, ಕೋವಿಡ್ ಸಂಬಂಧಿತ ಸಾವುಗಳ ಸಂಖ್ಯೆಯಂತೂ ಅತ್ಯಲ್ಪವೆಂದೇ ಹೇಳಬಹುದು. ಹಾಗಾದರೂ ಕಳೆದ ೬೦೦ ದಿನಗಳಿಂದ ನಮ್ಮ ದೇಶದ ಕೋಟ್ಯಂತರ ಮಕ್ಕಳು  ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಮ್ಮ ರಾಜ್ಯ, ಕರ್ನಾಟಕದ ಮಕ್ಕಳೇ ಅದೃಷ್ಟವಂತರು. ಕಳೆದ ಆಗಸ್ಟ್ ೨೩ರಿಂದ ನಮ್ಮ ರಾಜ್ಯದ ೧ರಿಂದ ೧೦ನೇ ತರಗತಿವರೆಗಿನ ಶಾಲೆಗಳು ಆರಂಭವಾಗಿ ಸಾಂಗೋಪಾಂಗವಾಗಿ ನಡೆಯುತ್ತಿದೆ. ಮಧ್ಯಾಹ್ನದೂಟದ ವ್ಯವಸ್ಥೆಯೂ ಸಮರ್ಪಕವಾಗೇ ನಡೆಯುತ್ತಿದೆ.  ಶಾಲಾ ಮಕ್ಕಳಿಗಾಗಲೀ, ಶಿಕ್ಷಕರುಗಳಿಗಾಗಲೀ, ಕೋವಿಡ್ ಸೋಂಕು ತಗುಲಿರುವ ಸುದ್ದಿಯೇ ಇಲ್ಲ.

ಇನ್ನೂ ಹಲವು ರಾಜ್ಯಗಳಲ್ಲಿ ಶಾಲಾ ಶಿಕ್ಷಣ ಆರಂಭವಾಗಿಲ್ಲ. ಕರ್ನಾಟಕದಲ್ಲೂ, ಇನ್ನೂ ಹಲವು ಖಾಸಗಿ ಶಾಲೆಗಳು ಆರಂಭವಾಗಿಲ್ಲ. ಆ ಮಕ್ಕಳುಗಳೆಲ್ಲರನ್ನು  ಒಂಟಿತನ  ಕಾಡುತ್ತಿಲ್ಲವೇ? ಶ್ರೀಮಂತರಂತೂ ಹೆಚ್ಚು ಹಣ ತೆತ್ತು, ತಮ್ಮ ಮಕ್ಕಳಿಗೆ  ಆನ್ಲೈನ್ ಶಿಕ್ಷಣ ಕೊಡಿಸಬಲ್ಲರು. ಬಡ ಮಕ್ಕಳ ಗತಿಯೇನು? ಕೋವಿಡ್ ಲಾಕ್ಡೌನಿನ ನೆಪದಲ್ಲಿ, ಶಾಲಾಶಿಕ್ಷಣದಿಂದ ವಂಚಿತರಾದ ಮಕ್ಕಳೆಲ್ಲರೂ ಕಲಿತದ್ದನ್ನೆಲ್ಲ ಮರೆತು ಕೂತಿದ್ದಾರೆ ಎಂಬ ಸುದ್ದಿ ತುಂಬಾ ವಿಷಾದಕರ.  ಶಾಲೆ ಮುಚ್ಚಿರುವುದರಿಂದ  ಬಡ ಮಕ್ಕಳನ್ನು, ಸಣ್ಣ-ಪುಟ್ಟ ಕೆಲಸಗಳಿಗೆ ತಳ್ಳುವುದು, ಬಾಲ್ಯವಿವಾಹಕ್ಕೊಳಪಡಿಸುವುದು ಮುಂತಾದ ಅನಿಷ್ಟಗಳ ಸುದ್ದಿಗಳು ಮೇಲಿಂದ ಮೇಲೆ ಬರುತ್ತಲೇ ಇವೆ.  

ಕಳೆದ ಆಗಸ್ಟ್ ತಿಂಗಳಲ್ಲಿ  ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ೯೭% ಪೋಷಕರು ಮಕ್ಕಳಿಗೆ ಶಾಲೆಗಳು ಆರಂಭವಾಗಲಿ ಎಂದು ಬಯಸಿದ್ದರು. ಮಕ್ಕಳಲ್ಲಿ ಸ್ವಾಭಾವಿಕ ನಿರೋಧಕ ಶಕ್ತಿಯಿದೆಯೆಂಬುದನ್ನು ತಜ್ಞರು ತಿಳಿ ಹೇಳಿದ್ದಾಗಿದೆ. ಶಿಕ್ಷರುಗಳಿಗೆಲ್ಲಾ ಎರಡು ಡೋಸ್ ಲಸಿಕೆ ನೀಡಿದ್ದೂ ಆಗಿದೆ. ಆದರೂ  ರಾಷ್ಟ್ರಾದ್ಯಂತ ಶಾಲೆಗಳು ಆರಂಭಿಸುವುದಕ್ಕೆ ಮೀನಾ-ಮೇಷ ಏಕೋ, ತಿಳಿಯದು. ಮಕ್ಕಳೆಲ್ಲರಿಗೂ ಲಸಿಕೆ  ದೊರೆಯುವ ತನಕ ಕಾಯುತ್ತಾ ಕೂರುವುದು ಸರಿಯೇ? ಸಂಬಂಧಪಟ್ಟವರೆಲ್ಲರೂ ಕುಳಿತು ಚರ್ಚಿಸುವುದು ಒಳಿತಲ್ಲವೇ? 

ಒಮಿಕ್ರೋನ್  ನೆಪವೊಡ್ಡಿ ಅಂತಾರಾಷ್ಟ್ರೀಯ ಹಾರಾಟಗಳನ್ನು ನಿಷೇಧಿಸುವುದರಿಂದಾಗುವ ಲಾಭಕ್ಕಿಂತ ನಷ್ಟವೇ ಜಾಸ್ತಿಯೆನ್ನಬಹುದು. ಅದರಿಂದ ವ್ಯಾಪಾರ ಕ್ಷೇತ್ರಕ್ಕೆ ಮತ್ತು ಪ್ರವಾಸೋದ್ಯಮಕ್ಕೆ ಭಾರಿ ಹಿನ್ನಡೆಯಾಗುವುದು ಖಂಡಿತ. ಈ ದಿಶೆಯಲ್ಲಿ ಭಾರತ ಕ್ರಿಕೆಟ್ ತಂಡದ, ಈ ತಿಂಗಳ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಸ್ಥಗಿತಗೊಳಿಸದೇ ಇರುವುದೊಂದು ಸ್ವಾಗತಾರ್ಹ ಬೆಳವಣಿಗೆ. 

ಲಸಿಕೆ ನೀಡಿಕೆ ಶತ ಪ್ರತಿಶತದ ಮಟ್ಟ ಮುಟ್ಟಿ ನಿಂತರೂ, ಕೋವಿಡ್ನ ಹಾವಳಿ ನಿಂತುಹೋಗುತ್ತದೆ ಎಂದು ಹೇಳಲಾಗದು. ಕೋವಿಡ್ ವೈರಾಣು ಸತತವಾಗಿ ರೂಪಾಂತರ ಹೊಂದುತ್ತಲೇ ಇರುತ್ತದೆ. ರೂಪಾಂತರಿ ತಳಿಗಳ ಹಾವಳಿಗಳನ್ನು ತಡೆಯಲಾಗದು, ಆದರೆ ನಿಯಂತ್ರಿಸಬಹುದು.  ಎಲ್ಲರಿಗೂ ಎರಡು ಡೋಸ್ ಲಸಿಕೆ ನೀಡುವತ್ತ ನಮ್ಮ ಸರಕಾರ ಕ್ರಮವಾಗಿ ಮುನ್ನಡೆಯುತ್ತಿರುವುದನ್ನು, ಇಡೀ ವಿಶ್ವವೇ ಮೆಚ್ಚಿಕೊಂಡಿದೆ.  ಬೂಸ್ಟರ್ ಡೋಸ್, ಜೊತಗೆ ವಾರ್ಷಿಕ ಡೋಸ್ಗಳ ವ್ಯವಸ್ಥೆಯೂ ಬೇಕಾಗಬಹುದು. ಬಡ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಯನ್ನು ಪೂರೈಸುವ ಮಹತ್ಕಾರ್ಯದ ಮುಂಚೂಣಿಯಲ್ಲಿ ಭಾರತ ದೇಶವಿರುವುದು, ನಮ್ಮೆಲರಿಗೂ ಹೆಮ್ಮೆಯ ವಿಷಯ. 

ಜನಸಾಮಾನ್ಯರೂ ಜವಾಬ್ದಾರಿಯಿಂದ ವರ್ತಿಸುವುದು ಬಹಳ ಮುಖ್ಯ.  ಮುನ್ನೆಚ್ಚರಿಕೆಯ ಶ್ರೀರಕ್ಷೆ ಅತ್ಯವಶ್ಯಕ. ನಾವುಗಳೆಲ್ಲರೂ ಕೋವಿಡ್ನೊಂದಿಗೆ ಜೀವಿಸುದನ್ನು ಕಲಿಯುವುದೇ ಸೂಕ್ತವಾದ ಪರಿಹಾರ.

-೦-೦-೦-೦-೦-

ಬಡವರ ಉದ್ಯೋಗ ನಷ್ಟವೆಂಬುದು, ಕೋವಿಡ್ಗಿಂತ ಹೆಚ್ಚು ಅಪಾಯಕಾರಿ ಎಂಬುದು ಕಳೆದ ವರ್ಷದ ಲಾಕ್ಡೌನಿನಿಂದ ನಾವು ಕಲಿತ ಪಾಠ. 

(ಮೇಲಿನ ವಾಕ್ಯವನ್ನು ಬ್ಲಾಕ್ನಲ್ಲಿ ಹಾಕಿ)


ಕೆಳಕಂಡ ವಾಕ್ಯವನ್ನು ತೆಗೆದು ಹಾಕಿ. 

ಶಾಲಾ ಮಕ್ಕಳಿಗಾಗಲೀ, ಶಿಕ್ಷಕರುಗಳಿಗಾಗಲೀ, ಕೋವಿಡ್ ಸೋಂಕು ತಗುಲಿರುವ ಸುದ್ದಿಯೇ ಇಲ್ಲ.




No comments:

Post a Comment