Sunday, 19 December 2021

ಧನೋ ರಕ್ಷತಿ ರಕ್ಷಿತಃ


ಧನೋ ರಕ್ಷತಿ ರಕ್ಷಿತಃ 

'ಧರ್ಮೋ ರಕ್ಷತಿ ರಕ್ಷಿತಃ' ಎಂಬ ಮನುಸ್ಮೃತಿಯ ತತ್ವವನ್ನು ಕೊಂಚ ಬದಲಿಸಿ 'ಧನೋ ರಕ್ಷತಿ ರಕ್ಷಿತಃ' ಎಂದರೆ, ಇಂದಿನ ಕಾಲಕ್ಕೆ ಹೆಚ್ಚು ಅರ್ಥಪೂರ್ಣವಾದೀತು. ಯಾರು ತಮ್ಮ ಹಣವನ್ನು      ಕಾಪಾಡಿಕೊಳ್ಳುತ್ತಾರೋ, ಅವರನ್ನು ಹಣ ಕಾಪಾಡುತ್ತದೆ ಎಂಬುದು ಸರಳ ಸತ್ಯ. 

ಹಣದ ಸಂರಕ್ಷಣೆ ಎಂಬುದು ಹಿರಿಯ ನಾಗರೀಕರ ಪಾಲಿಗೆ ಅತಿ ಮುಖ್ಯವಾದುದು. ಏಕೆಂದರೆ ಅವರುಗಳ  ದುಡಿಯುವ ಅವಧಿ ಮುಗಿದಿದ್ದು, ದೇಹ ಹಾಗೂ ಮಾನಸಿಕ ಶಕ್ತಿಗಳು ಕುಗ್ಗಿರುತ್ತವೆ. ಆರೋಗ್ಯದ ಸಮಸ್ಯೆಗಳು ಕೂಡ ಅವರುಗಳನ್ನು ಕಾಡಬಹುದಾದ ಜೀವನದ ಹಂತದಲ್ಲಿ ಅವರುಗಳಿರುತ್ತಾರೆ.  ಆಧುನಿಕ ವೈದ್ಯಕೀಯ ಸೌಲಭ್ಯಗಳ ಫಲವಾಗಿ, ನಮ್ಮ ಹಿರಿಯ ನಾಗರೀಕರುಗಳ ಜೀವಿತಾವಧಿಯೂ ಹೆಚ್ಚುತ್ತಾ ಸಾಗಿದೆ. ಹೀಗಾಗಿ ನಿವೃತ್ತಿಯ ನಂತರದ ಕನಿಷ್ಠ ೨೦-೨೫ ವರ್ಷಗಳ ಜೀವನಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಎಲ್ಲರೂ, ಮುಖ್ಯವಾಗಿ ಹಿರಿಯ ನಾಗರೀಕರು ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿ ಉಂಟಾಗಿದೆಯೆಂದರೆ ತಪ್ಪಾಗಲಾರದು. 

ವೃದ್ಧಾಪ್ಯದಲ್ಲಿ ಹಣಕಾಸಿನ ಸ್ವಾತಂತ್ರ್ಯವೆಂಬುದು ಅತಿ ಮುಖ್ಯ. 'ವಿನಾ ದೈನೇನ ಜೀವನಮ್, ಅನಾಯಾಸೇನ ಮರಣಂ' ಎಂದಿದ್ದಾರೆ ಶಂಕರಾಚಾರ್ಯರು. ಮರಣವೆಂಬುದು ನಮ್ಮ ಕೈಗಳಲಿಲ್ಲ. ಹಣಕ್ಕಾಗಿ ಬೇರೆಯವರ ಮುಂದೆ ಕೈ ಚಾಚದಿರುವಂತಹ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುವ ಪ್ರಯತ್ನವನ್ನು ಎಲ್ಲರೂ ಮಾಡಬೇಕಾದ್ದು ಜಾಣತನವೇ ಸರಿ. 

ಸ್ವಂತ ಮನೆಯಿದ್ದು, ಆರೋಗ್ಯದ ಸಮಸ್ಯೆ ಕಾಡದಿದ್ದು, ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗಿದ್ದರೂ, ಮಧ್ಯಮ ವರ್ಗದ ಹಿರಿಯ ದಂಪತಿಯ ಜೀವನದ ಇಂದಿನ ದಿನಗಳ ತಿಂಗಳ ಖರ್ಚು ಸುಮಾರು ೩೦ ಸಾವಿರ ರೂಪಾಯಿಗಳಷ್ಟಿದೆ. ವೃದ್ಧಾಶ್ರಮವನ್ನು ಸೇರಬೇಕಾದ ಪರಿಸ್ಥಿತಿ ಬಂದರೆ, ಒಬ್ಬರಿಗೇ ಅಷ್ಟು ಖರ್ಚು ಬಂದರೂ ಆಶ್ಚರ್ಯವಿಲ್ಲ! ಕನಿಷ್ಠ ೪೦,೦೦೦ ರೂಪಾಯಿಗಳಷ್ಟರ ನಿವೃತ್ತಿ ವೇತನ ಪಡೆಯುತ್ತಿರುವರ ಪರಿಸ್ಥಿತಿ ಇಂದಿನ ಮಟ್ಟಿಗೆ ಪರವಾಗಿಲ್ಲವೆನ್ನಬಹುದು. ಆದರೆ ಪೆನ್ಷನ್ ಭಾಗ್ಯ ಎಲ್ಲಾ ಹಿರಿಯರಿಗೂ ಇರದು. ಕೃಷಿ, ವ್ಯಾಪಾರ, ಮನೆ ಬಾಡಿಗೆ ಮುಂತಾದ ಆದಾಯಗಳು ಸಾಕಷ್ಟಿದ್ದು, ಕಾಳಜಿ ವಹಿಸುವ ಮಕ್ಕಳಿದ್ದ  ಹಿರಿಯರು ಅದೃಷ್ಟವಂತರೇ. ಮಿಕ್ಕವರ ಗತಿಯೇನು? 

ದುಡಿಮೆಯ ಅವಧಿಯ ಉಳಿತಾಯದ ಹಣ ಮತ್ತು ನಿವೃತ್ತಿಯ ಸಮಯದಲ್ಲಿ ಬರುವ ಹಣ, ಇವುಗಳನ್ನು ಜೋಪಾನವಾಗಿಡುವುದು ಎಲ್ಲರ ಜವಾಬ್ದಾರಿ. ಅಂತೆಯೇ ಗಳಿಸಿದ ಸ್ಥಿರಾಸ್ತಿಗಳನ್ನು ತಮ್ಮ ಹೆಸರುಗಳಲ್ಲೇ ಇರಿಸಿಕೊಳ್ಳುವ ಜಾಣತನವೂ ಹಿರಿಯರಿಗಿರಬೇಕು. ಭಾವನೆಗಳಿಗೊಳಗಾಗಿ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮಕ್ಕಳಿಗೆ ನೀಡಿ, ಬೀದಿಗೆ ಬಂದ ಹಿರಿಯರ ಕರುಣಾಜನಕ ಕಥೆಗಳನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುವುದು ಒಳ್ಳೆಯದು. 

ಹೆಚ್ಚಿನ ಬಡ್ಡಿ ಆಮಿಷಕ್ಕೊಳಗಾಗಿ ಖಾಸಗಿ ಸಾಲಗಳನ್ನು ನೀಡಿ, ಎಲ್ಲಾ ಹಣವನ್ನು ಕಳೆದುಕೊಂಡು ಪಾಡು ಪಡುತ್ತಿರುವವರ ಉದಾಹರಣೆಗಳನ್ನು ಕೇಳದವರಿಲ್ಲ. ಕೊಂಚ ಹೆಚ್ಚಿನ ಬಡ್ಡಿಯ ದರಕ್ಕೆ ಬಲಿಬಿದ್ದು, ಕೆಲವು ಬ್ಯಾಂಕುಗಳಲ್ಲಿ ಠೇವಣಿಯಿಟ್ಟು, ಠೇವಣಿಯನ್ನೇ ಕಳೆದುಕೊಂಡವರನ್ನು ನಮ್ಮ ಹಲವರು ನೋಡಿರಬಹುದು. ಅಂತಹ ಹಲವು ಠೇವಣಿದಾರರಿಗೆ 'ಭಾರತದ ಸರಕಾರದ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್'ವತಿಯಿಂದ ೫ ಲಕ್ಷ ರೂಪಾಯಿಗಳವರೆಗಿನ ಮಾತ್ರದ ಪರಿಹಾರ ಈಚೆಗೆ  ದೊರೆತಿರುವ ಸುದ್ದಿಯನ್ನು ನಮ್ಮ ಓದುಗರಲ್ಲಿ ಹಲವರು ಗಮನಿಸಿರಬಹುದು. ಹಾಗಾಗಿ ಠೇವಣಿ ಇಡುವ ಸಮಯದಲ್ಲಿ ಬ್ಯಾಂಕುಗಳ ಮತ್ತು ಇತರ ಹಣಕಾಸು ಸಂಸ್ಥೆಗಳ ಆಯ್ಕೆಯೂ ಅತಿ ಮುಖ್ಯವಾದುದು. 

'ಬ್ಯಾಂಕುಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿದರ ತುಂಬಾ ಕಮ್ಮಿ ಕಣ್ರಿ. ಬಡ್ಡಿ ಮೇಲೇ ಜೀವಿಸುವವರು ಎಲ್ಲಿ ಹೋಗಬೇಕು?' ಎಂಬುದು ಹಲವು ಹಿರಿಯರನ್ನು ಕಾಡುತ್ತಿರುವ ಪ್ರಶ್ನೆ.  ಇಂಥವರ ಸಮಸ್ಯೆಗಳನ್ನರಿತಿರುವ ಭಾರತ ಸರಕಾರ, ಹಿರಿಯ ನಾಗರೀಕರುಗಳಿಗಾಗಿ ೭.೪% ವಾರ್ಷಿಕ ಬಡ್ಡಿ ದರದ ಎರಡು ಯೋಜನೆಗಳನ್ನು ಜಾರಿಯಲ್ಲಿಟ್ಟಿದೆ. 

ಮೊದಲೆನೆಯದು ಭಾರತ ಸರಕಾರದ ಎಲ್.ಐ.ಸಿ. ಸಂಸ್ಥೆಯ 'ವಯವಂದನಾ' ಯೋಜನೆ. ಹಿರಿಯ ನಾಗರೀಕರು ಈ ಯೋಜನೆಯಡಿ ತಲಾ  ೧೫ ಲಕ್ಷ ರೂಪಾಯಿವರೆಗಿನ ಠೇವಣಿಯನ್ನು ತೊಡಗಿಸಬಹುದು. ಠೇವಣಿಯ ಅವಧಿ ೧೦ ವರ್ಷಗಳಾಗಿದ್ದು, ೭. ೪% ವಾರ್ಷಿಕ ಬಡ್ಡಿ ದರದಂತೆ, ಪ್ರತಿ ತಿಂಗಳೂ ಬಡ್ಡಿಯನ್ನು ನೀಡಲಾಗುವುದು. ವೈದ್ಯಕೀಯ ಖರ್ಚಿನ ಕಾರಣಕ್ಕೆ ಮಾತ್ರ,  ದಾಖಲೆಯನ್ನು ನೀಡಿ ಅವಧಿಗೂ ಮುನ್ನ ಹಣವನ್ನು ಹಿಂಪಡೆಯಬಹುದು. ಹೂಡಿದ ಮೂರು ವರ್ಷಗಳನಂತರ ಠೇವಣಿಯ ಮೇಲೆ ಸಾಲದ ಸೌಲಭ್ಯ ಉಂಟು. 

ಅಂಚೆ ಕಚೇರಿಯ 

ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ

ಇಂದಿನ ಬಡ್ಡಿ ದರಗಳು

ಕ್ರಮ ಸಂಖ್ಯೆ

ಯೋಜನೆ

ವಾರ್ಷಿಕ  ಬಡ್ಡಿ ದರ %

ಅವಧಿ

ಬಡ್ಡಿ ನೀಡುವ/ಜಮಾ ಮಾಡುವ ಅವಧಿ

01

ಅಂಚೆ ಕಚೇರಿ ಉಳಿತಾಯ ಖಾತೆ 

4

--

ವಾರ್ಷಿಕ

02

1 ವರ್ಷದ ಅವಧಿ ಠೇವಣಿ 

5.5

--

ತ್ರೈಮಾಸಿಕ 

03

2 ವರ್ಷದ ಅವಧಿ ಠೇವಣಿ 

5.5

--

ತ್ರೈಮಾಸಿಕ 

04

3 ವರ್ಷದ ಅವಧಿ ಠೇವಣಿ 

5.5

--

ತ್ರೈಮಾಸಿಕ

05

5 ವರ್ಷದ ಅವಧಿ ಠೇವಣಿ 

6.7

--

ತ್ರೈಮಾಸಿಕ

06

 ವರ್ಷದ ಆರ್.ಡಿಠೇವಣಿ 

5.8

--

ತ್ರೈಮಾಸಿಕ

07

ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್.ಸಿ.ಎಸ್.ಎಸ್.)

7.4

5 ವರ್ಷಗಳು 

ತ್ರೈಮಾಸಿಕ

08

ಮಾಸಿಕ ಆದಾಯ ಯೋಜನೆ (ಎಂ..ಎಸ್.)

6.6

5 ವರ್ಷಗಳು 

ಮಾಸಿಕ

09

ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ (೮ನೇ ಇಷ್ಯು)

6.8

5 ವರ್ಷಗಳು 

ವಾರ್ಷಿಕ

10

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ 

7.1

15 ವರ್ಷ ಗಳು 

ವಾರ್ಷಿಕ

11

ಕಿಸಾನ್ ವಿಕಾಸ್ ಪತ್ರ 

6.9

124 ತಿಂಗಳುಗಳಲ್ಲಿ ಹಣ ದ್ವಿಗುಣ

ಗೊಳ್ಳುವುದು 

ವಾರ್ಷಿಕ

12

ಸುಕನ್ಯಾ ಸಮೃದ್ಧಿ ಯೋಜನೆ 

7.6

ಗರಿಷ್ಠ ೨೧ ವರ್ಷಗಳು*

ವಾರ್ಷಿಕ


ಎರಡನೆಯದು ಭಾರತ ಸರಕಾರದ ಸಣ್ಣ ಉಳಿತಾಯದ ಯೋಜನೆಗಳಡಿ ಬರುವ 'ಹಿರಿಯ ನಾಗರೀಕರ ಉಳಿತಾಯ ಯೋಜನೆ (ಎಸ್.ಸಿ.ಎಸ್.ಎಸ್.).' (ಈ ಬರಹದೊಂದಿಗೆ ಅಡಕಗೊಳಿಸಿರುವ ಪಟ್ಟಿಯನ್ನು ನೋಡಿ). ಈ ಯೋಜನೆಯಡಿಯೂ ತಲಾ ೧೫ ಲಕ್ಷ ರೂಪಾಯಿಗಳವರೆಗಿನ ಠೇವಣಿಯನ್ನು ತೊಡಗಿಸಬಹುದು. ಠೇವಣಿಯ ಅವಧಿ ೫ ವರ್ಷಗಳಾಗಿದ್ದು, ೭. ೪% ವಾರ್ಷಿಕ ಬಡ್ಡಿ ದರದಂತೆ, ಪ್ರತಿ ಮೂರು ತಿಂಗಳುಗಳಿಗೊಮ್ಮೆ ಬಡ್ಡಿಯನ್ನು ನೀಡಲಾಗುವುದು. ಠೇವಣಿಗೆ ಒಂದು ವರ್ಷ ಕಳೆದನಂತರ, ಹಣವನ್ನು ಅವಧಿಗೆ ಮುಂಚೆಯೇ ಹಿಂಪಡೆಯುವ ಸೌಲಭ್ಯ ಉಂಟು. ಈ ಯೋಜನೆಯ ಸೌಲಭ್ಯವನ್ನು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಮೂಲಕ ಪಡೆಯಬಹುದು. 

ಗಂಡ ಮತ್ತು ಹೆಂಡತಿ ಇಬ್ಬರೂ ಹಿರಿಯ ನಾಗರೀಕರಾಗಿದ್ದರೆ, ಎಲ್.ಐ.ಸಿ.ಯ ವಯವಂದನ ಮತ್ತು ಎಸ್.ಸಿ.ಎಸ್.ಎಸ್., ಈ ಎರಡೂ ಯೋಜನೆಗಳಡಿ ೬೦ ಲಕ್ಷ ರೂಪಾಯಿಗಳವರೆಗೆ ಹಣವನ್ನು ತೊಡಗಿಸಬಹುದು. ಇನ್ನೂ ಹೆಚ್ಚಿನ ಹಣವನ್ನು ತೊಡಗಿಸಬೇಕಾದರೆ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಯಡಿಯ 'ವಾರ್ಷಿಕ ಠೇವಣಿ ಯೋಜನೆಗಳು, ಮಾಸಿಕ ಆದಾಯದ ಯೋಜನೆ (ಎಂ.ಐ.ಎಸ್) ಮತ್ತು ಕಿಸಾನ್ ವಿಕಾಸ್ ಪತ್ರ'ದ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 

'ಎಲ್.ಐ.ಸಿ. ಸಂಸ್ಥೆಯ ಜೀವನ್ ಶಾಂತಿ' ಎಂಬ ಯೋಜನೆಯೂ ಮಾಸಿಕ ಪೆನ್ಷನ್ ನೀಡುವ ಮತ್ತೊಂದು ಯೋಜನೆ.  ಆಜೀವ ಪೆನ್ಷನ್ ಗಳಿಸಲು ಈ ಯೋಜನೆಯಲ್ಲಿ ಹಣವನ್ನು ತೊಡಗಿಸಬಹುದು. ಹಣದ ಹೂಡಿಕೆಗೆ ಯಾವುದೇ ಮಿತಿಯಿಲ್ಲ.  ೩೦ ವರ್ಷದಿಂದ ೭೯ ವರ್ಷಗಳವರೆಗಿನ ವ್ಯಕ್ತಿಗಳು ಈ ಯೋಜನೆಗೆ ಅರ್ಹರು. ಪೆನ್ಷನ್ ದೊರೆಯುವುದು ಹಣವನ್ನು ತೊಡಗಿಸಿದ ಕನಿಷ್ಠ ೧ ವರ್ಷದನಂತರವೇ. ೬೦ ವರ್ಷದ ಒಬ್ಬ ವ್ಯಕ್ತಿ ೧೦ ಲಕ್ಷ ರೂಪಾಯಿಗಳನ್ನು ಈ ಯೋಜನೆಯಲ್ಲಿ ತೊಡಗಿಸಿದರೆ, ಅವರಿಗೆ ೫ ವರ್ಷಗಳನಂತರ, ರು. ೭೩,೬೦೨ರಷ್ಟು ವಾರ್ಷಿಕ ಪೆನ್ಷನ್ ಜೀವಿತಾವಧಿವರೆಗೂ ದೊರೆಯುವುದು.   ಈ ಉದಾಹರಣೆಯ ಬಡ್ಡಿಯ ದರ ೭. ೩%ರಷ್ಟರಂತೆ ಕಂಡರೂ, ಮೊದಲ ಐದು ವರ್ಷಗಳು ಯಾವ ಪೆನ್ಷನ್ ಕೂಡ ಬರದು ಎಂಬುದನ್ನು ಗಮನಿಸಬೇಕು.  ಪೆನ್ಷನ್ ಅನ್ನು ಪ್ರತಿ ತಿಂಗಳು ಕೂಡ ಪಡೆಯಬಹುದು.  ಜೀವನ ಸಂಗಾತಿಯನ್ನು ಜಂಟಿ ಪೆನ್ಷನ್ ಫಲಾನುಭವಿ ಎಂದು ಸೇರಿಸಿದರೆ,  ಮೊದಲ ಫಲಾನುಭವಿಯ ಮರಣದವಂತರ, ಆ ವ್ಯಕ್ತಿಗೂ ಅವರ  ಜೀವಿತಾವಧಿವರೆಗೂ ಸಮನಾದ ಪೆನ್ಷನ್ ದೊರೆಯುವುದು. ಫಲಾನುಭವಿಗಳ ಮರಣದಂತರ ಮೂಲ ಹೂಡಿಕೆಯ ಹಣ ನಾಮ ನಿರ್ದೇಶನ ಹೊಂದಿರುವವರಿಗೆ ದೊರೆಯುವುದು.

ಈವರೆಗೆ ಚರ್ಚಿಸಿರುವ ಎಲ್ಲಾ ಯೋಜನೆಗಳ ಬಡ್ಡಿ ಮತ್ತು ಪೆನ್ಷನ್ ಗಳು ಆದಾಯ ತೆರಿಗೆಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಕೆಲವು ಯೋಜನೆಗಳಲ್ಲಿ ಬಡ್ಡಿ/ಪೆನ್ಷನ್ ಗಳೊಂದಿಗೆ ಆದಾಯ ತೆರಿಗೆಯನ್ನು ಹಿಡಿದು ನೀಡುವ (ಟಿ.ಡಿ.ಎಸ್.) ಪದ್ಧತಿ ಉಂಟು.  ಆದುದರಿಂದ ಹೂಡಿಕೆದಾರರು ಆದಾಯ ತೆರಿಗೆಯನ್ನು ಹಿಡಿಯದಂತೆ ೧೫G/೧೫H ಫಾರ್ಮ್ಗಳನ್ನು ನೀಡಬೇಕು. ವಾರ್ಷಿಕ ಆದಾಯ ತೆರಿಗೆಯ ಸಲ್ಲಿಕೆಯನ್ನು ಇಲಾಖೆಗೆ ಸಲ್ಲಿಸಿ, ಹಿಡಿದ ಆದಾಯ ತೆರಿಗೆಯಲ್ಲಿನ ಅರ್ಹ ಮೊತ್ತವನ್ನು ಹಿಂಪಡೆಯಬಹುದು. ಈ ವಿಷಯದಲ್ಲಿ ಒಬ್ಬ ಯೋಗ್ಯ ಆದಾಯ ತೆರಿಗೆಯ ಸಲಹೆಗಾರರನ್ನು ಸಂಪರ್ಕಿಸುವುದು ಒಳಿತು. 

ಕೋವಿಡ್ ದಾಳಿಯ ನಡುವೆಯೂ, ಕಳೆದ ೨೧ ತಿಂಗಳುಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ, ಅಪಾರ ಹಣವನ್ನು ಗಳಿಸಿರುವ ಹಿರಿಯ ನಾಗರೀಕರು ಇಲ್ಲದಿಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಅಪಾಯದಿಂದ ಕೂಡಿದ್ದು ಎಂಬುದನ್ನು ಹಿರಿಯರು ಮರೆಯುವಂತಿಲ್ಲ. ಷೇರು ಮಾರುಕಟ್ಟೆಗಿಂತ ಮ್ಯೂಚುಯಲ್ ಫಂಡ್ ಹೂಡಿಕೆ ಕಮ್ಮಿ ಅಪಾಯದ್ದು ಎಂಬುದು ತಜ್ಞರ ಅಭಿಪ್ರಾಯ. ಹಿರಿಯರ ಪಾಲಿಗೆ, ಹಣದ ವೃದ್ಧಿಗಿಂತ ಕೂಡಿಟ್ಟ ಹಣದ ಸುರಕ್ಷೆ ಮುಖ್ಯ ಎಂಬುದನ್ನು ಮರೆಯುವಂತಿಲ್ಲ. 

ಹಿರಿಯ ನಾಗರೀಕರಾದ ದಂಪತಿಗೆ ಸುಮಾರು ೧೦ ಲಕ್ಷ ರೂಪಾಯಿಗಳಷ್ಟರ 'ಆರೋಗ್ಯದ ಸುರಕ್ಷಾ ವಿಮೆ' ಇರಬೇಕಾದ್ದು ಅತ್ಯವಶ್ಯಕ. ೬೫ ವರ್ಷಗಳ ವರೆಗೂ ಆರೋಗ್ಯದ ವಿಮೆ ಹಿರಿಯರ ಪಾಲಿಗೆ ಹೊಸದಾಗಿ ಪಡೆಯಲು ಲಭ್ಯವಿದೆ. ಹೆಚ್ಚಿನ ವಯಸ್ಸಿನವರೂ ವಿಮೆಗಾಗಿ ಬ್ಯಾಂಕ್ ಮತ್ತು ಆರೋಗ್ಯ ವಿಮಾ ಸಂಸ್ಥೆಗಳಲ್ಲಿ ವಿಚಾರಿಸಬಹುದು. ಉದ್ಯೋಗಸ್ಥ ಮಕ್ಕಳು ತಮ್ಮ ತಂದೆ-ತಾಯಿಗಳನ್ನು ತಮ್ಮ ಕಂಪನಿಯ ಆರೋಗ್ಯ ವಿಮಾ ಯೋಜನೆಯಡಿ ಸೇರಿಸುವುದು ಕೂಡ ಅತ್ಯವಶ್ಯಕ. ಆರೋಗ್ಯ ವಿಮೆಯನ್ನು ಸಕಾಲದಲ್ಲಿ ನವೀಕರಿಸುವುದನ್ನು ಮರೆಯುವಂತಿಲ್ಲ. ನವೀಕರಿಸದೇ ಅವನತಿ (ಲ್ಯಾಪ್ಸ್) ಹೊಂದಿದ ಆರೋಗ್ಯ ವಿಮೆಯನ್ನು ಮತ್ತೆ ಪಡೆಯಲು ಸಾಧ್ಯವಾಗದೆ ಇರಬಹುದು.  ಈ ನಿಟ್ಟಿನಲ್ಲಿ ಹಿರಿಯರ ಮಕ್ಕಳು ನಿಗಾ ವಹಿಸುವುದು ಒಳಿತು. 

ಹಿರಿಯ ನಾಗರೀಕರುಗಳು ಮಾಡಿರುವ ವಿವಿಧ ಹೂಡಿಕೆಗಳ ಸರ್ಟಿಫಿಕೇಟ್ಗಳು ಮತ್ತು ಫಾಸ್ಸ್ಬುಕ್ ಗಳನ್ನು ಸುರಕ್ಷಿತವಾಗಿ ಇಡುವುದು ಅತ್ಯವಶ್ಯಕ. ತಮ್ಮ ಎಲ್ಲಾ ಆಸ್ತಿಗಳ ಮತ್ತು ಹೂಡಿಕೆಗಳ ವಿವರಗಳನ್ನು ದಾಖಲಿಸಿ,  ಹಿರಿಯರು ಒಂದು 'ವಿಲ್ (ಮೃತ್ಯುಪತ್ರ)'ಅನ್ನು ಮಾಡಿಡುವುದು ಒಳ್ಳೆಯದು. ಸ್ವಯಾರ್ಜಿತ ಎಲ್ಲಾ ಆಸ್ತಿಗಳಿಗೆ ತಮ್ಮ ಜೀವನ ಸಂಗಾತಿಯನ್ನೇ ವಾರಸುದಾರರನ್ನಾಗಿಸುವುದು ಸೂಕ್ತ. ಈ ವಿಷಯದಲ್ಲಿ ಹಿರಿಯರು, ತಜ್ಞ ವಕೀಲರನ್ನು ಸಂಪರ್ಕಿಸುವುದು ಅವಶ್ಯಕ. 

ನಮ್ಮ ಹಣವನ್ನು ಕಾಪಾಡಿಕೊಂಡರೆ, ನಮ್ಮ ಹಣವೇ ನಮ್ಮನ್ನು ಕಾಪಾಡುವುದು ಎಂಬುದನ್ನು ಮತ್ತೊಮ್ಮೆ ತಮ್ಮ ಗಮನಕ್ಕೆ ತಂದು ನನ್ನ ಲೇಖನವನ್ನು ಸಮಾಪ್ತಿಗೊಳಿಸುತ್ತಿದ್ದೇನೆ. (ಇಲ್ಲಿ ಚರ್ಚಿಸಿರುವ ಎಲ್ಲಾ ಹೂಡಿಕೆಗಳ ಬಗ್ಗೆ ನಿಖರವಾದ ಮಾಹಿತಿಗಳನ್ನು ಆಯಾ ಸಂಸ್ಥೆಗಳ ಮೂಲಕ  ಪಡೆಯುವದು ಒಳಿತು. ಇಲ್ಲಿ ನೀಡಿರುವ ವಿಚಾರಗಳೆಲ್ಲವೂ ಲೇಖಕರ ವೈಯುಕ್ತಿಕ ಅಭಿಪ್ರಾಯ ಮಾತ್ರ. ಹೂಡಿಕೆಯ ನಿರ್ಣಯ ಅಂತಿಮವಾಗಿ ನಿಮ್ಮದೇ).  

-೦-೦-೦-೦-

ವೃದ್ಧಾಪ್ಯದಲ್ಲಿ ಹಣಕಾಸಿನ ಸ್ವಾತಂತ್ರ್ಯವೆಂಬುದು ಅತಿ ಮುಖ್ಯ. 'ವಿನಾ ದೈನೇನ ಜೀವನಮ್, ಅನಾಯಾಸೇನ ಮರಣಂ' ಎಂದಿದ್ದಾರೆ ಶಂಕರಾಚಾರ್ಯರು. ಮರಣವೆಂಬುದು ನಮ್ಮ ಕೈಗಳಲಿಲ್ಲ. ಹಣಕ್ಕಾಗಿ ಬೇರೆಯವರ ಮುಂದೆ ಕೈ ಚಾಚದಿರುವಂತಹ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುವ ಪ್ರಯತ್ನವನ್ನು ಎಲ್ಲರೂ ಮಾಡಬೇಕಾದ್ದು ಜಾಣತನವೇ ಸರಿ. 

(Highlight the above text)






No comments:

Post a Comment