ಸರಕಾರಿ ಶಾಲೆಗಳ ಸುತ್ತಾ-ಮುತ್ತಾ.......
ನಮ್ಮ ದೇಶದ ಬಡ ಮಕ್ಕಳ ಪಾಲಿಗೆ ಜ್ಞಾನದೇಗುಲವಾಗಿರುವ ನಮ್ಮ ಸರಕಾರಿ ಶಾಲೆಗಳಿಗೊಂದು ನಮಸ್ಕಾರವಿರಲಿ. ಸಮಾಜದ ಜಾವಬ್ದಾರಿಯುತ ಸ್ಥಾನಗಳನ್ನಲಂಕರಿಸಿರುವ ಇಂದಿನ ಮಧ್ಯವಯಸ್ಕರು ಮತ್ತು ಹಿರಿಯ ನಾಗರೀಕರುಗಳ ಪೈಕಿ ಹೆಚ್ಚಿನವರು ಸರಕಾರಿ ಶಾಲೆಗಳಲ್ಲಿ ಕಲಿತವರೇ. ಅಂತಹದೇ ವರ್ಗಕ್ಕೆ ಸೇರಿದ ನಮ್ಮ-ನಿಮ್ಮಗಳಲ್ಲಿ, ಸರಕಾರಿ ಶಾಲೆಗಳಲ್ಲಿ ಕಲಿತ ಸುಂದರ ನೆನಪುಗಳು ಇನ್ನೂ ಹಸಿರಾಗೇ ಉಳಿದಿರುವುದು ಸಹಜವೇ. ಆ ದಿನಗಳ ನಮ್ಮ ಸರಕಾರಿ ಶಾಲೆಗಳ ಶಿಕ್ಷಕರುಗಳು ಕಲಿಸುತ್ತಿದ್ದ ವೈಖರಿ, ಅವರೊಡನೆ ನಮ್ಮಗಳಿಗಿದ್ದ ಅವಿನಾಭಾವ ಸಂಬಂಧಗಳು, ಅಂದಿನ ದಿನಗಳ ಬಾಲ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಹವರ್ತಿಗಳಿಗೊಂದಿಗೆ ಯಾವುದೇ ನಿರ್ಬಂಧಗಳಿಲ್ಲದೆ ನಡೆಯುತ್ತಿದ್ದ ಆಟೋಟ ಮುಂತಾದವುಗಳೇ ನಮ್ಮ ವ್ಯಕ್ತಿತ್ವದ ಸರ್ವತೋಮುಖ ವಿಕಾಸಕ್ಕೆ ಭದ್ರ ಬುನಾದಿಯನ್ನೊದಗಿಸಿದವೆಂಬುದನ್ನು ಎಲ್ಲರೂ ಅನುಮೋದಿಸುವುದರಲ್ಲಿ ಅನುಮಾನವಿಲ್ಲ.
ಆದರೆ ಕಳೆದ ಒಂದೆರಡು ದಶಕಗಳಿಂದ ದೇಶದ ಶಿಕ್ಷಣ ವ್ಯವಸ್ಥೆಯ ಚಿತ್ರಣವೇ ಬದಲಾಗಿದೆ. ಖಾಸಗಿ ಶಾಲೆಗಳೊಂದಿಗಿನ ಸ್ಪರ್ಧೆಯಲ್ಲಿ, ಸರಕಾರಿ ಶಾಲೆಗಳು ಹಿನ್ನಡೆ ಅನುಭವಿಸುತ್ತಿರುವಂತೆ ಕಂಡು ಬರುತ್ತಿದೆ. ಆರ್ಥಿಕವಾಗಿ ಹಿಂದುಳಿದ ಪೋಷಕರುಗಳಲ್ಲೂ, ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಖಾಸಗಿ ಶಾಲೆಗಳಿಗೆ ಸೇರಿಸುವ ತುಡಿತ ಕಂಡುಬರುತ್ತಿದೆ. ಗ್ರಾಮೀಣ ಕ್ಷೇತ್ರಗಳೂ, ಈ ರೀತಿಯ ಬೆಳವಣಿಗೆಗೆ ಹೊರತಾಗಿಲ್ಲ. ಹಾಗೆಂದ ಮಾತ್ರಕ್ಕೆ, ಖಾಸಗಿ ಶಾಲೆಗಳಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳಲಾಗುವುದಿಲ್ಲ. ಆದರೂ ವಸ್ತುಸ್ಥಿತಿ ಹೀಗೇಕೆ ಎಂದು ಪರಾಮರ್ಶಿಸುವುದೇ ಈ ಲೇಖನದ ಉದ್ದೇಶ.
ಈಚಿನ ವರದಿಯೊಂದರ ಪ್ರಕಾರ ನಮ್ಮ ರಾಜ್ಯ ಕರ್ನಾಟಕದಲ್ಲಿ, ೪೪,೬೧೫ ಪ್ರಾಥಮಿಕ ಶಾಲೆಗಳು, ೫೨೪೦ ಪ್ರೌಢ ಶಾಲೆಗಳು, ೧೨೨೯ ಪಿ.ಯು. ಕಾಲೇಜುಗಳು ಇದ್ದು, ಅವುಗಳಲ್ಲಿ ೫೦ ಲಕ್ಷದಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಜೊತೆಗೆ ೬೮೮೨ ಅನುದಾನಿತ ಶಾಲೆಗಳು, ೭೯೬ ಪಿ. ಯು.ಕಾಲೇಜುಗಳು ಮತ್ತು ೧೯೫೯೩ ಖಾಸಗಿ ಶಾಲೆಗಳೂ ನಮ್ಮ ರಾಜ್ಯದಲ್ಲಿವೆ. ಒಟ್ಟು ಒಂದು ಕೋಟಿಯಷ್ಟು ವಿದ್ಯಾರ್ಥಿಗಳು ನಮ್ಮ ರಾಜ್ಯದಲ್ಲಿ ೧ರಿಂದ ೧೨ನೇ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಾಗಿರುವ ಸರಕಾರಿ ಶಾಲೆಗಳಲ್ಲಿ, ಶಿಕ್ಷಣ ಪಡೆಯುತ್ತಿರುವವರಲ್ಲಿ ಬಡ ವಿದ್ಯಾರ್ಥಿಗಳೇ ಹೆಚ್ಚಿನವರು. ಹೆಸರಿಗಷ್ಟೇ ಎನ್ನಬಹುದಾದ ಅತ್ಯಲ್ಪ ಶುಲ್ಕವನ್ನು ಪಡೆದು, ನಿಜವಾದ ವಿದ್ಯಾದಾನ ಮಾಡುತ್ತಿವೆ ನಮ್ಮ ಸರಕಾರಿ ಶಾಲೆಗಳು. ನಮ್ಮ ಸರಕಾರಿ ಶಾಲೆಗಳ ಶಿಕ್ಷಕ-ಶಿಕ್ಷಕಿಯರುಗಳು ಯಾರಿಗೂ ಕಮ್ಮಿಯೇನಿಲ್ಲ. ನಿಜ ಹೇಳಬೇಕೆಂದರೆ, ಅತ್ಯಂತ ಸುಶಿಕ್ಷಿತ ಮತ್ತು ಸೂಕ್ತ ತರಬೇತಿಯನ್ನು ಪಡೆದ ಶಿಕ್ಷಕರುಗಳು ಇರುವುದು ಸರಕಾರಿ ಶಾಲೆಗಳಲ್ಲೇ. ನಮ್ಮ ರಾಜ್ಯದ ಶಿಕ್ಷಕರುಗಳ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿದ್ದು, ಇಡೀ ದೇಶಕ್ಕೆ ಮಾದರಿಯೆಂದರೆ ಅತಿಶಯೋಕ್ತಿಯೇನಲ್ಲ. ಹಾಗಾಗಿ ಸುಶಿಕ್ಷಿತ ಮತ್ತು ಪ್ರತಿಭಾವಂತ ಶಿಕ್ಷಕರೇ ನಮ್ಮ ಸರಕಾರಿ ಶಾಲೆಗಳಲಿದ್ದಾರೆಂದರೆ ತಪ್ಪಲ್ಲ.
ಹಲವಾರು ಕಷ್ಟ-ನಷ್ಟಗಳ ನಡುವೆಯೂ, ನಮ್ಮ ಸರಕಾರಿ ಶಿಕ್ಷಕರುಗಳು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನೇ ನೀಡುತ್ತಿದ್ದಾರೆ ಎನ್ನಬಹುದು. ಆದರೂ ಸರಕಾರಿ ಶಾಲೆಗಳ ಗುಣಮಟ್ಟ ಸಾಲದೆಂಬ ಉದ್ಗಾರಗಳಿಗೇನು ಕಮ್ಮಿಯಿಲ್ಲ! ಸರಕಾರಿ ಶಾಲೆಗಳ ಶಿಕ್ಷಕರುಗಳ ಮುಂದಿರುವ ಸವಾಲುಗಳತ್ತ ಗಮನ ಹರಿಸೋಣ. ಅವರುಗಳು ಶಿಕ್ಷಣ ನೀಡುತ್ತಿರುವುದು ಬಡ ಹಾಗು ಮುಗ್ಧ ಕುಟುಂಬಗಳಿಂದ ಬರುತ್ತಿರುವ ಮೊದಲ ತಲೆಮಾರಿನ ವಿದ್ಯಾರ್ಥಿಗಳಿಗೆ. ಅಂತಹ ವಿದ್ಯಾರ್ಥಿಗಳಿಗೆ, ಪ್ರೌಢ ಶಾಲಾ ಹಂತದಲ್ಲೇ ದುಡಿಯುವ ಅವಶ್ಯಕತೆ ಇರುತ್ತದೆಂಬುದನ್ನು ನಾವು ಮರೆಯುವಂತಿಲ್ಲ. ಹೊಲ-ಗದ್ದೆಗಳಲ್ಲಿ, ದನಗಳ ಕೊಟ್ಟಿಗೆಗಳಲ್ಲಿ, ಅಪ್ಪ-ಅಮ್ಮಂದಿರ ವ್ಯಾಪಾರದ ಗಾಡಿಗಳಲ್ಲಿ ಕೆಲಸ ಮಾಡಿ, ನಂತರ ಶಾಲೆಗೆ ಬರುವ ವಿದ್ಯಾರ್ಥಿಗಳ ಅಸಹಾಯಕತೆ, ನಿರ್ದಯಿ ವಿಮರ್ಶಕರುಗಳಿಗೆ ಕಾಣಿಸುವುದೇ ಇಲ್ಲ. ಮನೆ ಮನೆಗಳಿಗೆ ಪೇಪರ್ ಹಾಕುವಂತಹ, ಕಾರುಗಳನ್ನು ತೊಳೆಯುವಂತಹ, ಹೂವು ಕಟ್ಟುವಂತಹ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿ ತಮ್ಮ ಕುಟುಂಬಗಳಿಗೆ ನೆರವಾಗುವಂತಹ ಅನಿವಾರ್ಯತೆ ಹಲವು ಬಡ ವಿದ್ಯಾರ್ಥಿಗಳಿಗೆ ಇರುತ್ತವೆಂಬುದು ಎಲ್ಲರ ಕಣ್ಣಿಗೆ ಕಾಣದ ಸತ್ಯ. ಕಳೆದ ೨೧ ತಿಂಗಳುಗಳಿಂದ ದೇಶವನ್ನು ಕಾಡುತ್ತಿರುವ ಕೋವಿಡ್ನಿಂದ ೫೦೦ಕ್ಕೂ ಹೆಚ್ಚು ದಿನ ಶಾಲೆಗಳು ನಡೆಯದೆ, ಆನ್ಲೈನ್ ಶಿಕ್ಷಣವನ್ನೂ ಪಡೆಯಲಾಗದೆ, ಈ ವಿದ್ಯಾರ್ಥಿಗಳು ಕಲಿತದ್ದನ್ನೆಲ್ಲ ಮರೆತುಕೊಂಡಿರುವುದು ಮತ್ತೊಂದು ಕಟು ಸತ್ಯ. ಈ ರೀತಿಯ ಹಿನ್ನಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಕಲಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ಸರಕಾರೀ ಶಿಕ್ಷಕರುಗಳದ್ದು. ಕಷ್ಟದ ಜೀವನದಿಂದ ಮುಂದೆ ಬಂದು, ಕಲಿತರೂ, ಕಲಿಯದಿದ್ದರೂ ನಮ್ಮ ದೇಶದಲ್ಲೇ ಉಳಿದು, ಮುಂದೆ ನಮ್ಮ ದೇಶವನ್ನು ಕಟ್ಟುವ ಪುಣ್ಯದ ಕಾರ್ಯವನ್ನು ಮಾಡುವ ಯುವಕ-ಯುವತಿಯರು ನಮ್ಮ ಸರಕಾರಿ ಶಾಲೆಗಳಿಂದಲೇ, ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಾರೆಂಬುದು ಎಲ್ಲರೂ ಗಮನಿಸಬೇಕಾದ ಅಂಶ.
ಸರಕಾರಿ ಶಾಲೆಗಳಲ್ಲಿ ನಡೆಯುವ ನಿತ್ಯ ಅನ್ನದಾನದ ಸೇವೆ ವಂದನೀಯವಾದುದು. ಜೊತೆಗೆ ವಿದ್ಯಾರ್ಥಿಗಳು ಶಾಲೆಯನ್ನು ಪ್ರವೇಶಿಸುವ ಮುನ್ನ ಬಿಸಿ ಹಾಲಿನ ಸೇವೆ ಕೂಡ. ೧ರಿಂದ ೧೦ರವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರಗಳನ್ನು ಒದಗಿಸುವ ಸರಕಾರದ ಕ್ರಮವನ್ನು ಒಂದು 'ವಿದ್ಯಾಯಜ್ಞ'ವೆಂದೇ ಬಣ್ಣಿಸಬಹುದು. ಕೋವಿಡ್ನಿಂದ ಕಳೆದ ೨೧ ತಿಂಗಳುಗಳಲ್ಲಿ ಶಾಲೆಗಳು ನಡೆಯದಿದ್ದು, ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಕಟ್ಟಲಾಗದ ಹಲವು ಪೋಷಕರು, ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿರುವಂತಹ ಪ್ರಸಂಗಗಳು ಇಲ್ಲದಿಲ್ಲ.
ಇಷ್ಟಾದರೂ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಮ್ಮಿಯಾಗುತ್ತಿರುವುದು ಆತಂಕದ ಸಂಗತಿ. ಈಚಿನ ಸಮೀಕ್ಷೆಯೊಂದರ ಪ್ರಕಾರ, ಮೂರನೇ ಒಂದು ಭಾಗದಷ್ಟು ಸರಕಾರಿ ಶಾಲೆಗಳಲ್ಲಿ, ಹೊಸ ದಾಖಲಾತಿಗಳ ಸಂಖ್ಯೆ ೫೦ಕ್ಕಿಂತಲೂ ಕಮ್ಮಿ ಇದೆ. ೧ರಿಂದ ೧೦ರವರೆಗಿನ ತರಗತಿಗಳಲ್ಲಿ ೨೫% ವಿದ್ಯಾರ್ಥಿಗಳು, ಶಿಕ್ಷಣವನ್ನು ಮಧ್ಯದಲ್ಲೇ ಬಿಡುತ್ತಾರೆಂಬುದು ಸುಳ್ಳಲ್ಲ. ಇಂಗ್ಲಿಷ್ ಮಾಧ್ಯಮಗಳತ್ತದ ಆಕರ್ಷಣೆ ಗ್ರಾಮೀಣ ಪೋಷಕರನ್ನೂ ಖಾಸಗಿ ಶಾಲೆಗಳತ್ತ ಮುಖ ಮಾಡುವಂತೆ ಮಾಡಿದೆ. ಎಲ್.ಕೆ.ಜಿ/ಯು.ಕೆ.ಜಿ. ಹಂತದ ಶಿಕ್ಷಣ, ಸರಕಾರಿ ಶಾಲೆಗಳಲಿಲ್ಲದಿರುವುದು ಒಂದು ಕೊರತೆಯೇ ಸರಿ. ಕುಡಿಯುವ ನೀರು, ಶೌಚಾಲಯಗಳು, ವಿದ್ಯುತ್ ಸಂಪರ್ಕ, ಆಟದ ಮೈದಾನಗಳು ಮುಂತಾದ ಸೌಲಭ್ಯಗಳು ಹಲವು ಸರಕಾರಿ ಶಾಲೆಗಳಲಿಲ್ಲದಿರುವುದು ಮತ್ತೊಂದು ಕೊರತೆ. ಈ ಕೊರತೆಗಳನ್ನು ನೀಗಿಸಲು ಉಚಿತ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಾದುದು ಅತ್ಯವಶ್ಯಕ. ೧ನೇ ತರಗತಿಯಿಂದಲೇ ಎಲ್ಲಾ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಜಾರಿಗೊಳಿಸುವುದು ಕಷ್ಟವಾದರೂ, ಒಂದು ವಿಷಯವಾಗಿ ಇಂಗ್ಲಿಷ್ ಭಾಷೆಯ ಕಲಿಕೆ ಜಾರಿಗೊಳಿಸುವುದು ಒಳಿತು. ಎಲ್.ಕೆ.ಜಿ/ಯು.ಕೆ.ಜಿ. ಹಂತದ ಶಿಕ್ಷಣಗಳನ್ನೂ ಎಲ್ಲಾ ಸರಕಾರೀ ಶಾಲೆಗಳಲ್ಲಿ ಪ್ರಾರಂಭಿಸುವುದು ಸೂಕ್ತ.
'ಹೆಣ್ಣೊಂದು ಕಲಿತರೆ, ಶಾಲೆಯೊಂದನ್ನು ತೆರೆದಂತೆ' ಎಂಬ ಮಾತೊಂದಿದೆ. ಆದರೆ ಹೆಣ್ಣು ಮಕ್ಕಳ ಶಿಕ್ಷಣದ ವಿಷಯದಲ್ಲಿ ಲಿಂಗ ತಾರತಮ್ಯ ಕಂಡು ಬರುತ್ತಿದೆ. ಬಡ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಮತ್ತು ಗಂಡು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವ ಪ್ರಸಂಗಗಳು ಇಲ್ಲದಿಲ್ಲ. ಪ್ರಾಥಮಿಕ ತರಗತಿಗಳನಂತರವೂ ಹೆಣ್ಣು ಮಕ್ಕಳು ಶಿಕ್ಷಣವನ್ನು ಮುಂದುವರೆಸುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಾದ್ದು ಸರಕಾರದ ಹೊಣೆ.
ಶಿಕ್ಷಕರುಗಳ ಕೊರತೆ ನಮ್ಮ ಸರಕಾರಿ ಶಾಲೆಗಳನ್ನು ವಿಶೇಷವಾಗಿ ಕಾಡುತ್ತಿದೆ. ಇಂಗ್ಲಿಷ್ ಭಾಷಾ ಶಿಕ್ಷಕರು ಕೊರತೆ ಹೆಚ್ಚಾಗಿ ಇದೆಯೆಂಬ ಸುದ್ದಿಯನ್ನು ನಮ್ಮ ಓದುಗರು ಗಮನಿಸಿರಬಹುದು. ನೇಮಕಾತಿಯ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗಬಹುದು. ೧೦ನೇ ತರಗತಿಯ ಪರೀಕ್ಷೆ ಇನ್ನು ಮೂರೇ ತಿಂಗಳುಗಳಲ್ಲಿ ನಡೆಯಬೇಕಾದುದರಿಂದ, ಸರಕಾರ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು. ಹಂಗಾಮಿ ಶಿಕ್ಷಕರುಗಳ ಶೀಘ್ರ ನೇಮಕಾತಿಯ ಅಧಿಕಾರವನ್ನು ಆಯಾ ಮುಖ್ಯೋಪಾಧ್ಯಯರುಗಳಿಗೆ ನೀಡಬಹುದು. ನಿವೃತ್ತ ಶಿಕ್ಷಕರ, ಬೇರೆ ಕ್ಷೇತ್ರದ ನಿವೃತ್ತರ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸೇವೆಯನ್ನು ಬಳಸಿಕೊಳ್ಳುವ ಯೋಜನೆಯನ್ನು ನಮ್ಮ ಸರಕಾರ ರೂಪಿಸಬಹುದು. ಸ್ಥಳೀಯ ಜನತಾ ಪ್ರತಿನಿಧಿಗಳೂ ಈ ವಿಷಯದ ಕಡೆ ಗಮನ ಹರಿಸುವುದು ಒಳಿತು.
ಕೋವಿಡ್ನ ಹೊಸ ರೂಪಾಂತರಿ ಒಮಿಕ್ರೋನಿನ ದಾಳಿಯನಂತರ, ಶಾಲೆಗಳನ್ನು ಮುಚ್ಚುವ ಮಾತುಗಳು ಹರಿದಾಡುತ್ತಿರುವುದು ಆತಂಕಕಾರಿ. ಇಂತಹ ಸಮಯದಲ್ಲಿ ಮೊದಲು ಮುಚ್ಚಲ್ಪಡುವ ಮತ್ತು ಕಟ್ಟ ಕಡೆಗೆ ಆರಂಭವಾಗುವ ದೌರ್ಭಾಗ್ಯ ನಮ್ಮ ಶಾಲೆಗಳದ್ದು. ಶಾಲೆಗಳನ್ನು ಆತುರದಲ್ಲಿ ಮುಚ್ಚಿಬಿಡಬಹುದು, ಆದರೆ ಶಾಲೆಗಳನ್ನು ಪುನರಾರಂಭಿಸಿ ಮಕ್ಕಳನ್ನು ಮತ್ತೆ ಶಾಲೆಗಳತ್ತ ಕರೆತರುವುದು ಕಷ್ಟದ ಕೆಲಸ. ಕಳೆದ ಲಾಕ್ಡೌನ್ ಸಮಯದಲ್ಲಿ, ಶಾಲೆಗಳಿಲ್ಲದೆ ಬಾಲ ಕಾರ್ಮಿಕರಾದ, ಬಾಲ್ಯ ವಿವಾಹಾಕ್ಕೊಳಪಟ್ಟ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಖ್ಯೆ ಕಮ್ಮಿಯೇನಲ್ಲ. ಅಂತಹ ದುಃಸ್ಥಿತಿಯ ಸನ್ನಿವೇಶ ಮತ್ತೆ ನುಸುಳುವುದು ಬೇಡ. ಈ ನಿಟ್ಟಿನಲ್ಲಿ ಸರಕಾರ ಎಚ್ಚರಿಕೆಯ ಹೆಜ್ಜೆಗಳನ್ನಿಡುವುದು ಸೂಕ್ತ.
ಸರಕಾರಿ ಶಾಲೆಗಳ ಗುಣಮಟ್ಟದ ಸುಧಾರಣೆ ಅಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ ದಿಲ್ಲಿ ರಾಜ್ಯ ಸರಕಾರದ ಪ್ರಯತ್ನ ಪ್ರಶಂಸನೀಯ. ದಿಲ್ಲಿಯ ಸರಕಾರಿ ಶಾಲೆಗಳ ಗುಣಮಟ್ಟ ಸಾಕಷ್ಟು ಸುಧಾರಿಸಿದ್ದು, ಎಲ್ಲ ವರ್ಗದ ಪೋಷಕರು ಅವುಗಳತ್ತ ಮುಖ ಮಾಡಿರುವುದು ಒಂದು ಒಳ್ಳೆಯ ಬೆಳವಣಿಗೆ. ನಮ್ಮ ರಾಜ್ಯದ ಸರಕಾರಿ ಶಾಲೆಗಳ ಎಲ್ಲಾ ಸಮಸ್ಯೆಗಳು ಬಗೆ ಹರಿದು, ಎಲ್ಲಾ ವರ್ಗದ ಪೋಷಕರು ಮತ್ತೆ ನಮ್ಮ ಸರಕಾರಿ ಶಾಲೆಗಳತ್ತ ತಮ್ಮ ಮಕ್ಕಳನ್ನು ಕರೆತರುವಂತಾಗಲಿ ಎಂದು ಆಶಿಸೋಣ.
-೦-೦-೦-೦-೦-
ಕಷ್ಟದ ಜೀವನದಿಂದ ಮುಂದೆ ಬಂದು, ಕಲಿತರೂ, ಕಲಿಯದಿದ್ದರೂ ನಮ್ಮ ದೇಶದಲ್ಲೇ ಉಳಿದು, ಮುಂದೆ ನಮ್ಮ ದೇಶವನ್ನು ಕಟ್ಟುವ ಪುಣ್ಯದ ಕಾರ್ಯವನ್ನು ಮಾಡುವ ಯುವಕ-ಯುವತಿಯರು ನಮ್ಮ ಸರಕಾರಿ ಶಾಲೆಗಳಿಂದಲೇ, ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಾರೆಂಬುದು ಎಲ್ಲರೂ ಗಮನಿಸಬೇಕಾದ ಅಂಶ.
(ಮೇಲಿನ ಸಾಲುಗಳನ್ನು ಹೈಲೈಟ್ ಮಾಡಿ)
No comments:
Post a Comment