3
ಸಿಖ್ ಧರ್ಮ
-೦-೦-
ಸಿಖ್ ಧರ್ಮ
ಗುರು ಪರಂಪರೆ
೧) ಗುರು ನಾನಕ್ (1469 - 1539)
೨) ಅಂಗದ್ (1504 - 1552)
೩) ಅಮರ್ ದಾಸ್ (1479 - 1574)
೪) ರಾಮ್ ದಾಸ್ (1534 - 1581)
೫) ಅರ್ಜುನ್ (1563 - 1606)
೬) ಹರ್ ಗೋವಿಂದ್ (1595 - 1644)
೭) ಹರ್ ರಾಯ್ (1630 - 1661)
೮) ಹರಿ ಕೃಷನ್ (1656 - 1664)
೯) ಟೇಗ್ ಬಹದ್ದೂರ್ (1621 -1675)
೧೦) ಗೋವಿಂದ್ ಸಿಂಗ್ (1666 - 1708)
ಸಿಖ್ ಧರ್ಮದ ಸಂಸ್ಥಾಪಕರು ಗುರು ನಾನಕ್ ರವರು. ಇತಿಹಾಸಕಾರರ ಪ್ರಕಾರ ನಾನಕರು ಜನಿಸಿದ್ದು ಏಪ್ರಿಲ್ 15, 1469ರಂದು. ಆದರೆ ಸಿಖ್ ಸಮುದಾಯದ ಆಚರಣೆಯ ಪ್ರಕಾರ, ನಾನಕರು ಜನಿಸಿದ್ದು 1469ರ ಕಾರ್ತೀಕ ಮಾಸದ ಹುಣ್ಣಿಮೆಯಂದು. ಪ್ರತೀ ವರ್ಷ ಕಾರ್ತೀಕ ಮಾಸದ ಹುಣ್ಣಿಮೆಯಂದೇ ನಾನಕರ ಜನ್ಮದಿನವಾದ 'ಗುರು ಪೂರಬ್ ಅಥವಾ ಗುರು ಪರ್ವ'ವನ್ನು ಆಚರಿಸುವ ಪದ್ಧತಿ ನಡೆದುಕೊಂಡುಬಂದಿದೆ. ಗುರು ನಾನಕರಿಗೆ ಜ್ಞಾನೋದಯವಾದ ದಿನ ಕಾರ್ತಿಕ ಮಾಸದ ಹುಣ್ಣಿಮೆಯಾಗಿದ್ದು, ಅದೇ ದಿನದಂದೇ ಗುರುವರ್ಯರ ಜಯಂತಿಯನ್ನು ಆಚರಿಸುವ ಪದ್ಧತಿ ರೂಢಿಗೆ ಬಂತೆಂಬುದು ಮತ್ತೆ ಕೆಲವರ ವಿಚಾರ.
ಗುರು ನಾನಕರ ತಂದೆಯ ಹೆಸರು ಮೆಹ್ತಾ ಕಾಲಿಯನ್ ದಾಸ್ ಬೇಡಿ ಎಂದು. ಅವರು ಈಗಿನ ಪಾಕಿಸ್ತಾನದ ಲಾಹೋರ್ ಸಮೀಪದ 'ತಲವ೦ಡಿ ರಾಯ್ ಭೋಯೆ' ಗ್ರಾಮದ ನಿವಾಸಿಯಾಗಿದ್ದವರು. ಗುರು ನಾನಕರ ಬಾಲ್ಯದ ಗ್ರಾಮವಾದ ಆ ಸ್ಥಳವನ್ನು ಈಗ 'ನನ್ಕಾನ ಸಾಹಿಬ್' ಎಂದೇ ಕರೆಯುತ್ತಾರೆ. ಗುರು ನಾನಕರ ತಾಯಿಯ ಹೆಸರು 'ತೃಪ್ತ' ಎಂದು. ಗುರು ನಾನಕರ ಜನನ ಅವರ ತಾಯಿಯವರ ತವರಾದ 'ನಾನಕೆ' ಎಂಬ ಗ್ರಾಮದಲ್ಲಾದುದರಿಂದ ಪೂಜ್ಯರಿಗೆ 'ನಾನಕ್' ಎಂದು ಹೆಸರಿಡಲಾಯಿತು. ಅವತಾರ ಪುರುಷನ ಜನನಕ್ಕೆ ಸಾಕ್ಷಿಗಳೋ ಎಂಬಂತೆ ಗುರು ನಾನಕರ ಬಾಲ್ಯದಲ್ಲೇ ಹಲವು ಪವಾಡಗಳು ಜರುಗಿದ್ದವು. ಸುಡು ಬಿಸಿಲಿನಲ್ಲಿ ಮಲಗಿದ್ದ ಬಾಲಕ ನಾನಕನ ಮುಖದ ಮೇಲೆ, ಕಾಳಿಂಗ ಸರ್ಪವೊಂದು ತನ್ನ ಹೆಡೆಯಿಂದ ನೆರಳನ್ನು ಒದಗಿಸಿದ್ದರ ಉಲ್ಲೇಖ ಹಲವು ಗ್ರಂಥಗಳಲ್ಲಿವೆ.
ಬಾಲಕ ನಾನಾಕನಿಗೆ ವಯಸ್ಸಿಗೆ ಮೀರಿದ ಪ್ರೌಢಿಮೆ ಇತ್ತು. ಐದೇ ವರ್ಷದ ಬಾಲಕ ನಾನಕ್, 'ಜನನ ಮರಣಗಳ ಮರ್ಮವೇನು?' ಎಂಬ ಪ್ರಶ್ನೆಯನ್ನು ಕೇಳುತ್ತಿದ್ದನು. ನಾನಕನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟ ಅವನ ತಂದೆಯವರು, ಬಾಲಕ ನಾನಕನನ್ನು ಶಾಲೆಯೊಂದಕ್ಕೆ ಕಳುಹಿಸಿತ್ತಿದ್ದರು. ಮುಸ್ಲಿಂ ಮುಲ್ಲಾರೊಬ್ಬರು ನಾನಕನಿಗೆ ಪಂಜಾಬಿ, ಉರ್ದು, ಪರ್ಷಿಯನ್ ಮತ್ತು ಅರಾಬಿಕ್ ಭಾಷೆಗಳನ್ನು ಕಲಿಸುತ್ತಿದ್ದರು. ಸಾಂಪ್ರದಾಯಿಕ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿಯನ್ನು ತೋರದ ಬಾಲಕ ನಾನಕ್, ಪಂಡಿತ-ಫಕೀರರೊಡನೆ ದೇವರ ಬಗೆಗಿನ ಚರ್ಚೆಯಲ್ಲಿ ತೊಡಗುತ್ತಿದ್ದನು. ಬಹುದೇವೋಪಾಸನೆ, ವಿಗ್ರಹಾರಾಧನೆ, ಜಾತಿ ಪದ್ಧತಿ, ಅಸಹಿಷ್ಣುತೆ ಮುಂತಾದ ವಿಷಯಗಳ ಬಗ್ಗೆ ಬಾಲಕ ನಾನಕನ ವಿಚಾರ ಮಂಡನೆಯನ್ನು ಕಂಡು, ಜ್ಞಾನವಂತರು ಮತ್ತು ಹಿರಿಯರು ಕೂಡ ತಲೆದೂಗುತ್ತಿದ್ದರು.
ಹನ್ನೆರಡು ವರ್ಷದ ಬಾಲಕ ನಾನಕನಿಗೆ, 'ಸುಲಖ್ನಿ' ಎಂಬ ಹೆಣ್ಣುಮಗಳೊಂದಿಗೆ ವಿವಾಹವಾಯಿತಾದರೂ, ಬಾಲಕ ನಾನಕನಿಗೆ ಲೌಕಿಕ ವಿಷಯಗಳ ಬಗ್ಗೆ ಆಸಕ್ತಿ ಮೂಡಲೇ ಇಲ್ಲ. ಯಾಂತ್ರಿಕವಾಗಿ ಸಂಸಾರ ಜೀವನ ನಡೆಸಿದ ನಾನಕರಿಗೆ ಶ್ರೀಚಂದ್ ಮತ್ತು ಲಕ್ಷ್ಮಿ ದಾಸ್ ಎಂಬ ಇಬ್ಬರು ಗಂಡುಮಕ್ಕಳು ಜನಿಸಿದರು. ಜೀವನೋಪಾಯಕ್ಕೆಂದು ನಾನಕರು ವ್ಯಾಪಾರಿಯೊಬ್ಬರ ಕೈಕೆಳಗೆ ಲೆಕ್ಕಿಗನ ಕೆಲಸವನ್ನು ಆರಿಸಿಕೊಂಡರು. ತಾವು ಹಿಡಿದ ಕೆಲಸವನ್ನು ನಾನಕರು ಚೆನ್ನಾಗಿಯೇ ನಿಭಾಯಿಸಿದರಾದರೂ, ಅವರ ಒಲವಿದ್ದದ್ದು ಆಧ್ಯಾತ್ಮಿಕ ಜ್ಞಾನದ ಕಡೆಗೆ.
ಸುಲ್ತಾನ್ಪುರದ ಜನಪದ ಹಾಡುಗಾರ 'ಮರ್ದಾನ' ಎಂಬ ಮುಸ್ಲಿಂ ವ್ಯಕ್ತಿಯ ಸ್ನೇಹವನ್ನು ಬೆಳೆಸಿದ ನಾನಕರು, ಆ ಗಾಯಕನೊಂದಿಗೆ ಭಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾರಂಭಿಸಿದರು. ಹಿಂದುವಾದ 'ಬಾಲ' ಎಂಬ ಮತ್ತೊಬ್ಬನು ನಾನಕರ ಪರಿಚಾರಕನಾಗಿದ್ದನು. ಸೂರ್ಯೋದಯಕ್ಕೆ ಮುಂಚೆಯೇ ನದಿಸ್ನಾನ ಮಾಡಿ, ಭಜನೆ ಮತ್ತು ಆಧ್ಯಾತ್ಮಿಕ ಚರ್ಚೆಗಳನ್ನು ನಡೆಸುತ್ತಿದ್ದ ನಾನಕರು, ನೆರೆದ ಭಕ್ತರುಗಳಿಗೆಲ್ಲಾ ಊಟದ ವ್ಯವಸ್ಥೆಯನ್ನೂ ಮಾಡುತ್ತಿದ್ದರು.
ಹೀಗಿರುವಾಗ ಒಂದು ದಿನ, ಎಂದಿನಂತೆ ಬೆಳಗಿನ ನದಿಸ್ನಾನಕ್ಕೆ ತೆರಳಿದ್ದ ನಾನಕರಿಗೆ ದೈವೀಕ ಅನುಭವವೊಂದು ಉಂಟಾಯಿತು. ಪರಮಾತ್ಮನ ಸಾಕ್ಷಾತ್ಕಾರವಾದಂತಹ ಅನುಭವವಾಗಿ, ನಾನಕರಿಗೆ ಸಂದೇಶವೊಂದನ್ನು ಬೋಧಿಸಿದಂತಾಯಿತು. 'ನಾನಕ್, ನಿನ್ನೊಂದಿಗೆ ನಾನಿದ್ದೇನೆ. ನಿನ್ನ ಮುಖಾಂತರ ನನ್ನ ಅರಿವು ಹೆಚ್ಚು ಹೆಚ್ಚು ಜನರುಗಳಲ್ಲಿ ಮೂಡಲಿ. ನಿನ್ನ ಮಾರ್ಗದರ್ಶನವನ್ನು ಪಾಲಿಸುವವರನ್ನು ನಾನು ಉದ್ಧಾರಮಾಡುತ್ತೇನೆ. ಪ್ರಪಂಚದ ಜನತೆಗೆ ದೇವರನ್ನು ಭಜಿಸುವ ಮಾರ್ಗವನ್ನು ತಿಳಿಸು. ಲೌಕಿಕ ಸುಖಗಳಿಂದ ಜನರುಗಳನ್ನು ಭಗವತ್ಪ್ರಾರ್ಥನೆ, ದಾನಧರ್ಮಗಳು, ಸೇವೆ ಮತ್ತು ಆತ್ಮಶುದ್ಧಿಗಳ ಕಡೆಗೆ ಕರೆದುಕೊಂಡುಹೋಗು. ಇದು ನಿನ್ನ ಜೀವನದ ಗುರಿಯಾಗಲಿ. ನನಗೆ ವಾಗ್ದಾನವನ್ನು ನೀಡು' ಎಂಬುವ ಆ ದಿವ್ಯ ಚೇತನದ ದಿವ್ಯವಾಣಿ ನಾನಕರನ್ನು ಮಂತ್ರಮುಗ್ಧರನ್ನಾಗಿಸಿತು. ಅದೇ ಕ್ಷಣ, ಪುಳಕಿತರಾದ ನಾನಕರ ಬಾಯಿಂದ ಪರಮಾತ್ಮನ ದಿವ್ಯಸಂಕೀರ್ತನೆಯೊಂದು ಅಯಾಚಿತವಾಗಿ ಹೊರಬಿತ್ತು.
ದೇವನೊಬ್ಬನೇ ಅವನು
ಅಂತಿಮ ಸತ್ಯದ ಸಾರವೇ ಅವನು
ಕರ್ತಾರನು ಅವನು
ರಾಗದ್ವೇಷಗಳಿಗೆ ಸಿಲುಕನು ಅವನು
ನಿರಾಕಾರ ನಿರ್ಮಲನವನು
ಸರ್ವಶಕ್ತನು ಸರ್ವಾ೦ತರ್ಯಾಮಿಯು ಅವನು
ಹುಟ್ಟುಸಾವುಗಳ ಮೀರಿ ನಿಂತವನು
ಸಕಲಜೀವಿಗಳಿಗೆ ಪೂಜ್ಯನು ಅವನು
ಮೇಲಿನ ಘಟನೆ ಜರುಗಿದ ಮೇಲೆ ಮೂರು ದಿನಗಳು ಕಳೆದರು ಕಾಣಿಸಿಕೊಳ್ಳದ ನಾನಕರು, ನದಿಯಲ್ಲಿ ಮುಳುಗಿಹೋಗಿರಬಹುದೆಂದು ಜನಗಳು ಭಾವಿಸಿದರು. ನಾಲ್ಕನೆಯ ದಿನ ಕಾಣಿಸಿಕೊಂಡ ನಾನಕರು ತಮ್ಮ ಆಸ್ತಿಪಾಸ್ತಿಗಳನೆಲ್ಲಾ ಬಡಬಗ್ಗರಿಗೆ ಹಂಚಿದರು. ಏಕವಸ್ತ್ರಧಾರಿಯಾದ ನಾನಕರು ತಮ್ಮ ಸಹಚರರಾದ ಜಾನಪದ ಗಾಯಕ 'ಮರ್ದಾನ' ಮತ್ತು 'ಬಾಲ'ರುಗಳೊಂದಿಗೆ, ಫಕೀರರ, ಪಂಡಿತರ ಜೊತೆಗೂಡಿ ತಮಗೆ ಸಾಕ್ಷಾತ್ಕಾರವಾದ ದಿವ್ಯಜ್ಞಾನವನ್ನು ಹಂಚಿಕೊಳ್ಳಲಾರಂಭಿಸಿದರು. 'ಯಾರೂ ಹಿಂದೂಗಳೂ ಅಲ್ಲ, ಯಾರೂ ಮುಸ್ಲಿಮರು ಅಲ್ಲ, ಎಲ್ಲರೂ ಆ ಅವಿನಾಶಿ ಪರಮಾತ್ಮನ ಅನುಯಾಯಿಗಳು' ಎಂಬುದು ನಾನಕರ ಮೂಲಮಂತ್ರವಾಗಿತ್ತು.
ತಾವು ಪಡೆದ ದಿವ್ಯಜ್ಞಾನವನ್ನು ಪ್ರಚಾರಮಾಡುತ್ತಾ ನಾನಕರು ಇಡೀ ಭಾರತದ ಸಂಚಾರ ಮಾಡಿದರು. ತಮ್ಮ ಬೋಧನೆಗಳನ್ನು ಅನುಮೋದಿಸುವ ಅನುಯಾಯಿಗಳು ದೊರಕಿದ ಸ್ಥಳಗಳಲ್ಲೆಲ್ಲಾ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸುತ್ತಾ ಮುನ್ನಡೆದ ನಾನಕರು, ಹಿಂದೂ ಯಾತ್ರಾಸ್ಥಳಗಳಾದ ಹರಿದ್ವಾರ, ಋಷಿಕೇಶ, ಮಥುರಾ, ತ್ರಿವೇಣಿ ಸಂಗಮ, ಕಾಶಿ, ಗಯಾ, ಬಂಗಾಳ ಮಾರ್ಗವಾಗಿ ಅಸ್ಸಾಮನ್ನೂ ತಲುಪಿದರು. ಹಿಂತಿರುಗುತ್ತಾ ಒಡಿಶಾದ ಪುರಿಯಲ್ಲೂ ಧರ್ಮಪ್ರಚಾರ ಮಾಡಿದರು.
ಅವಿಭಜಿತ ಪಂಜಾಬ್ ಎಂಬುದು ಐದು ನದಿಗಳ ನಾಡು. ಝೆಲುಮ್, ಚಿನಾಬ್, ರಾವೀ, ಬ್ಯಾಸ್ ಮತ್ತು ಸಟ್ಲೆಜ್, ಈ ಐದು ನದಿಗಳು ಸಿಂಧೂ ನದಿಯ ಉಪನದಿಗಳು. ಈ ಐದು ನದಿಗಳನ್ನೊಳಗೊಂಡ ನಾಡನ್ನೇ ಪಂಜಾಬ್ ಎಂದು ಕರೆಯುತ್ತಾರೆ. ಈಗ ಪಂಜಾಬ್ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹಂಚಿಹೋಗಿದೆ. ಪಂಜಾಬಿನ ಉದ್ದಗಲಕ್ಕೂ ಧರ್ಮಪ್ರಚಾರ ಮಾಡುತ್ತಾ ನಾನಕರು ಹಲವು ವರ್ಷಗಳನ್ನು ಕಳೆದರು. ಪಾಕ್ ಪಠಾಣ್ ಎಂಬುದು ಸಟ್ಲೆಜ್ ನದಿ ತೀರದಲ್ಲಿರುವ ಪಾಕಿಸ್ತಾನದ ಒಂದು ಮುಸ್ಲಿಂ ಧಾರ್ಮಿಕ ಕ್ಷೇತ್ರ. ಪಾಕ್ ಪಠಾಣ್ ಪಟ್ಟಣಕ್ಕೂ ಹಲವು ಬಾರಿ ಭೇಟಿ ನೀಡಿ ನಾನಕರು ಧರ್ಮಪ್ರಚಾರವನ್ನು ಮಾಡಿದರು. ಆನಂತರ ನಾನಕರು ದಕ್ಷಿಣದ ತಮಿಳ್ ನಾಡು ಮತ್ತು ಶ್ರೀ ಲಂಕಾ ವರೆಗೂ ಪ್ರಯಾಣ ಬೆಳಸಿ, ಹಿಂದಿರುಗುತ್ತಾ ಕೇರಳ, ಕೊಂಕಣ, ಮುಂಬೈ ಮತ್ತು ರಾಜಸ್ಥಾನ್ ಮಾರ್ಗವಾಗಿ ಪಂಜಾಬ್ ತಲುಪಿದ್ದು ಅವರ ಇಚ್ಛಾಶಕ್ತಿಗೊಂದು ನಿದರ್ಶನ. ಸಮಗ್ರ ಭಾರತ ದೇಶದಲ್ಲಿ ಧರ್ಮಪ್ರಚಾರ ಮಾಡಿದ ನಾನಕರು ಹಿಮಾಲಯದ ಲಡಾಖ್ ಮತ್ತು ಟಿಬೆಟ್ ಕ್ಷೇತ್ರಗಳಿಗೂ ಭೇಟಿ ನೀಡಿದ್ದರು.
ತಮ್ಮ ಧರ್ಮಪ್ರಚಾರ ಪ್ರವಾಸದ ಕೊನೆಯ ಹಂತದಲ್ಲಿ, ನಾನಕರು ಮುಸ್ಲಿಮರ ಪವಿತ್ರ ಸ್ಥಾನವಾದ ಮೆಕ್ಕಾ ಮತ್ತು ಮದೀನಾಗಳನ್ನೂ ತಲುಪಿದರು. ಹಿಂದಿರುಗವಾಗ ಇರಾಕಿನ ಬಾಗ್ದಾದ್ ಪಟ್ಟಣಕ್ಕೂ ಭೇಟಿ ನೀಡಿ, ಅಲ್ಲಿ ಮುಸ್ಲಿಂ ಫಕೀರರೊಡನೆ ಚರ್ಚೆ ನಡೆಸಿದರು. ಅಂತಿಮವಾಗಿ ನಾನಕರು, ರಾವಿ ನದಿಯ ತೀರದಲ್ಲಿ ತಾವೇ ನಿರ್ಮಿಸಿದ ಕರ್ತಾರ್ ಪುರ್ ಎಂಬ ಪಟ್ಟಣದಲ್ಲಿ ನೆಲಸಿದರು. ಈಗ ಪಾಕಿಸ್ತಾನದಲ್ಲಿರುವ ಕರ್ತಾರ್ ಪುರ್, ಲಾಹೋರ್ ನಗರದ ಸಮೀಪ, ಈಶಾನ್ಯ ದಿಕ್ಕಿನಲ್ಲಿದೆ. ಕರ್ತಾರ್ ಪುರ ಎಂದರೆ ಸೃಷ್ಟಿಕರ್ತನ ಆವಾಸಸ್ಥಾನ ಎಂದರ್ಥ.
ಗುರು ನಾನಕರು ತಮ್ಮ ಧರ್ಮಪ್ರಚಾರದ ಪ್ರವಾಸಗಳಲ್ಲಿ ಹಿಂದೂ ಪಂಡಿತರು ಮತ್ತು ಮುಸ್ಲಿಂ ಫಕೀರರುಗಳೊಂದಿಗೆ ಚರ್ಚೆಯನ್ನು ಮಾಡುತ್ತಿದ್ದರು. ನಾನಕರ ವೇಷಭೂಷಣಗಳು, ಹಿಂದೂ ಮತ್ತು ಮುಸ್ಲಿಂ, ಎರಡೂ ಧರ್ಮಗಳ ಲಕ್ಷಣಗಳನ್ನು ಹೊಂದಿದ್ದರೂ, ವಿಭಿನ್ನವಾಗಿದ್ದವು. ಅವರೊಂದಿಗೆ ಪ್ರವಾಸ ಮಾಡಿದ ಅನುಯಾಯಿಗಳಲ್ಲಿ ಹಿಂದೂ ಮತ್ತು ಇಸ್ಲಾಂ, ಎರಡೂ ಧರ್ಮಕ್ಕೆ ಸೇರಿದ್ದ ಭಕ್ತರುಗಳು ಇರುತ್ತಿದ್ದರು. ಒಮ್ಮೆ ಅವರು ಹರಿದ್ವಾರದ ಪ್ರವಾಸವನ್ನು ಮಾಡುತ್ತಿದ್ದರು. ಹಿಂದೂ ಭಕ್ತರುಗಳು ಗಂಗಾ ನದಿಯಲ್ಲಿ ಸ್ನಾನ ಮಾಡಿ ತಮ್ಮ ಪಿತೃಗಳಿಗೆ ಜಲತರ್ಪಣವನ್ನು ಪೂರ್ವ ದಿಕ್ಕಿನ ಕಡೆಗೆ ಅರ್ಪಿಸುತ್ತಿದ್ದರು. ಅವರುಗಳು ಮುಂದೆ ಪಶ್ಚಿಮ ದಿಕ್ಕಿಗೆ ಜಲತರ್ಪಣವನ್ನು ಅರ್ಪಿಸಲು ಆರಂಭಿಸಿದ ನಾನಕರನ್ನು, ಹಿಂದೂಗಳು ಪ್ರಶ್ನಿಸುತ್ತಾ, 'ನಿಮ್ಮ ಜಲತರ್ಪಣ ಎಲ್ಲಿಗೆ?' ಎಂದು ಕೇಳಿದರು. 'ನನ್ನ ಜಲತರ್ಪಣ ನನ್ನ ಹೊಲವನ್ನು ತಲುಪುತ್ತದೆ' ಎಂದು ಉತ್ತರಿಸಿದ ನಾನಕರಿಗೆ, ಹಿಂದೂಗಳು 'ದೂರದ ಪಂಜಾಬಿನಲ್ಲಿರುವ ನಿಮ್ಮ ಹೊಲವನ್ನು, ನಿಮ್ಮ ಜಲತರ್ಪಣ ತಲುಪೀತೆ?' ಎಂದು ಪ್ರಶ್ನಿಸಿದರು. ಆಗ ನಾನಕರು ನಗುತ್ತಾ, 'ನಿಮ್ಮ ಜಲತರ್ಪಣ ಬೇರೆ ಲೋಕದಲ್ಲಿರುವ ನಿಮ್ಮ ಪಿತೃಗಳನ್ನು ತಲುಪುವುದಾದರೆ, ನನ್ನ ಜಲತರ್ಪಣ 200 ಕೋಸುಗಳಷ್ಟು ಮಾತ್ರ ದೂರವಿರುವ ಪಂಜಾಬಿನ ನನ್ನ ಹೊಲವನ್ನು ತಲುಪಲಾರದೇ?' ಎಂದು ಉತ್ತರಿಸಿದರು. ನಾನಕರ ಉತ್ತರದ ವಿಡಂಬನೆಯನ್ನು ಅರ್ಥಮಾಡಿಕೊಂಡ ಹಿಂದೂ ಭಕ್ತರುಗಳು ನಾನಕರ ವಿಚಾರಧಾರೆಗೆ ತಲೆದೂಗಿದರು. ಗಂಗಾ ನದಿಯಲ್ಲಿ ಮಿಂದೇಳುವುದಕ್ಕಿಂತಾ, ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ಮುಖ್ಯ ಎಂಬುದು ನಾನಕರ ವಿಚಾರಧಾರೆಯಾಗಿತ್ತು.
ನಾನಕರ ಮೆಕ್ಕಾ ಪ್ರವಾಸದ ಸಂದರ್ಭದಲ್ಲಿ, ನಾನಕರೊಮ್ಮೆ ಕಾಬಾದ ಕಡೆ ಕಾಲುಗಳನ್ನು ಚಾಚಿಕೊಂಡು ಗಾಢ ನಿದ್ರೆಗೆ ಜಾರಿದರು. ನಾನಕರನ್ನು ಅಲ್ಲಾಡಿಸಿ ಎಚ್ಚರಿಸಿದ ಮುಲ್ಲಾರೊಬ್ಬರು, 'ಪರಮಾತ್ಮನ ಆವಾಸ ಸ್ಥಾನವಿರುವ ಕಾಬಾದ ಕಡೆ ಕಾಲು ಚಾಚಿ ಮಲಗುವುದು ಅಪರಾಧವಲ್ಲವೇ' ಎಂದು ಪ್ರಶ್ನಿಸಿದಾಗ, ನಾನಕರು ಉತ್ತರಿಸುತ್ತಾ 'ಮುಲ್ಲಾರವರೇ, ಹಾಗಾದರೆ ನನ್ನ ಕಾಲುಗಳನ್ನು ಪರಮಾತ್ಮನಿಲ್ಲದ ದಿಕ್ಕಿಗೆ ತಿರುಗಿಸಿ' ಎಂದಾಗ, ಮುಲ್ಲಾರವರು ನಿರುತ್ತರರಾದರು.
ನಾನಕರು ಹುಟ್ಟುಕವಿಗಳಾಗಿದ್ದವರು. ಅವರು ರಚಿಸಿದ 974 ಕೀರ್ತನೆಗಳು ಸಿಖ್ಖರ ಪವಿತ್ರ ಗ್ರಂಥವಾದ 'ಗುರುಗ್ರಂಥ್ ಸಾಹಿಬ್'ನ ಆದಿಭಾಗವಾಗಿದೆ. ನಾನಕರ ಕೀರ್ತನೆಗಳಲ್ಲಿ 'ಜಪ್ ಜಿ ಸಾಹಿಬ್ (ಪರಮಾತ್ಮನ ನಾಮ ಜಪ), ಆಸಾ ದಿ ವರ್ (ಭರವಸೆಯ ವರ) ಮತ್ತು ಸಿದ್ಧ ಗೋಷ್ಟ್ (ಸಿದ್ಧ ಪುರುಷರೊಡಗಿನ ಚರ್ಚೆ)'ಗಳು ಪ್ರಮುಖವಾದವು. ನಾನಕರ ಶಿಷ್ಯರುಗಳಲ್ಲಿ ಅನೇಕರು ರೈತಾಪಿ ಜನಗಳಾದುದರಿಂದ, ಅವರು ರಚಿಸಿದ ಕೀರ್ತನೆಗಳಲ್ಲಿ ಕೃಷಿಯಾಧಾರಿತ ಉಪಮಾನಗಳೇ ಇರುತ್ತಿದ್ದವು.
ಜೀವನವೆಂಬುದೇ ಕೃಷಿಯು
ನೇಗಿಲನೆಳೆಯುವ ಜೋಡೆತ್ತುಗಳೆ ವರವು
ನೇಗಿಲ ನೊಗವ ಮುನ್ನಡಪನೆ 'ಗುರುವು'
ಬೀಜಗಳ ಬಿತ್ತಿ ಸಲಹುದೇ ಅವನೇ
ಬಿತ್ತಿದ ಬೀಜದಂತೆಯೇ ಬೆಳೆಯು
ಮನುಜನ ಜೀವಕಧಾರವೇ ಬೆಳೆಯು
ಅದರೊಳೆ 'ನೀಡಿ' ಪಡೆವುದೆ ಧನ್ಯತೆಯು
ನಾನಕರ ಕರ್ತಾರ್ ಪುರದ ಆಶ್ರಮದ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಸಾಗಿತ್ತು. ಬೆಳಗಿನ ಸ್ನಾನ, ಭಗವಂತನ ಸಂಕೀರ್ತನೆ ನಾನಕರು ಬೋಧಿಸಿದ ದಿನಚರಿಯಾಗಿತ್ತು. ನಂತರ ಭಕ್ತರು ತಮ್ಮಗಳ ಕಸುಬಿನಲ್ಲಿ ನಿರತರಾಗುತ್ತಿದ್ದರು. ಮತ್ತೆ ಸಂಜೆ ಆಶ್ರಮದಲ್ಲಿ ಸೇರುತ್ತಿದ್ದ ಭಕ್ತರುಗಳು ಮತ್ತೆ ಪರಮಾತ್ಮನ ಸಂಕೀರ್ತನೆಯಲ್ಲಿ ತಲ್ಲೀನರಾಗುತ್ತಿದ್ದರು. ನಾನಕರ ಆಶ್ರಮದಲ್ಲಿ ಭಕ್ತರುಗಳಿಗೆ ಉಚಿತ ಊಟದ ವ್ಯವಸ್ಥೆ ಪ್ರತಿನಿತ್ಯ ಇರುತ್ತಿತ್ತು. ಇದೇ ದಿನಚರಿ ನಾನಕರು ಸ್ಥಾಪಿಸಿದ ವಿವಿಧ ಕೇಂದ್ರಗಳಲ್ಲೂ ಸಾಗುತ್ತಿತ್ತು. ನಾನಕರು ರಚಿಸಿದ ಕೀರ್ತನೆಗಳ ಪುಸ್ತಕದ ಪ್ರತಿಯೊಂದನ್ನು ಎಲ್ಲಾ ಕೇಂದ್ರಗಳಿಗೂ ಕಳುಹಿಸಲಾಗಿತ್ತು. ನಾನಕರ ಗ್ರಂಥವನ್ನೇ ಗರ್ಭಗುಡಿಯ ಕೇಂದ್ರಭಾಗದ ಪೀಠದಲ್ಲಿ ವಿರಾಜಮಾನಗೊಳಿಸಿ ಪೂಜಿಸುವುದೇ ನಾನಕರ ಧಾರ್ಮಿಕ ಕೇಂದ್ರಗಳ ಆರಾಧನೆಯಾಗಿತ್ತು. ವಿಗ್ರಹಪೂಜೆಗೆ ಅಲ್ಲಿ ಅವಕಾಶವಿರಲಿಲ್ಲ. ಪ್ರತಿ ಕೇಂದ್ರದಲ್ಲೂ ಕೀರ್ತನೆಗಳನ್ನು ಬೋಧಿಸುವ ಗ್ರಂಥಿಯೊಬ್ಬರನ್ನು ನೇಮಿಸಲಾಗಿತ್ತು. ನಾನಕರ ಬೋಧನೆ ಮತ್ತು ಕೀರ್ತನೆಗಳು ಪಂಜಾಬಿ ಭಾಷೆಯಲ್ಲೇ ಇರುತ್ತಿದ್ದರಿಂದ, ನಾನಕರ ಶಿಷ್ಯರುಗಳು ಪಂಜಾಬ್ ಪ್ರಾಂತ್ಯದಲ್ಲೇ ಹೆಚ್ಚಾಗಿದ್ದರು. ಹಿಂದೂ ಮತ್ತು ಇಸ್ಲಾಂ, ಎರಡೂ ಸಮಾಜಗಳ ಬಡವರು ಮತ್ತು ಶೋಷಿತರು ನಾನಕರ ಹೊಸ ಪಂಥದ ಕಡೆ ಸ್ವಾಭಾವಿಕವಾಗಿ ಆಕರ್ಷಿತರಾದರು. ಶಿಷ್ಯ ಎಂಬುವ ಪದವೇ ಮುಂದೆ ಪರಿಷ್ಕರಣೆ ಹೊಂದಿ 'ಸಿಖ್' ಎಂದಾಯಿತು.
ನಾನಕರ ಏಕದೇವೋಪಾಸನೆಯನ್ನು ಬೋಧಿಸಿದರು. ನಾನಕರ ಬೋಧನೆಯ ಪ್ರಕಾರ ಪರಮಾತ್ಮನು ನಿರಾಕಾರ ಮತ್ತು ನಿರ್ಮಲನು. ಜನನ ಮರಣಗಳ ಚಕ್ರಗಳನ್ನು ಮೀರಿದವನು, ಸರ್ವಶಕ್ತನು ಮತ್ತು ಸರ್ವಾಂತರ್ಯಾಮಿಯಾದವನು. ಅನಂತ ಸತ್ಯವೇ ಪರಮಾತ್ಮನೆಂಬುದು ನಾನಕರ ವಿಚಾರವಾಗಿತ್ತು. ಹಾಗಾಗಿ ಅಸತ್ಯ, ಕಳ್ಳತನ, ಮೋಸ ಇತ್ಯಾದಿಗಳು ಪರಮಾತ್ಮನ ಆಶಯಕ್ಕೆ ವಿರುದ್ಧವಾದವು. ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯುವುದಕ್ಕೆ 'ಗುರು'ವೊಬ್ಬನ ಅವಶ್ಯಕತೆ ಇದೆ ಎಂಬುದು ನಾನಕರ ವಿಚಾರಧಾರೆಯಾಗಿತ್ತು. ನಾನಕರ ಬೋಧನೆಗಳು 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ದಾಸವಾಣಿಯನ್ನು ನೆನಪಿಸುತ್ತಿತ್ತು. ನಾನಕರು ತಾವೊಬ್ಬ ಗುರುವೇ ಹೊರತು ಪ್ರವಾದಿಯಲ್ಲ ಎಂದು ಸಾರಿದ್ದರು.
ಪರಮಾತ್ಮನ ಆರಾಧನೆಗೆ ಸನ್ಯಾಸಿಯಾಗಬೇಕಿಲ್ಲ. ಗೃಹಸ್ಥನಾಗಿದ್ದುಕೊಂಡೇ ಪರಮಾತ್ಮನನ್ನು ಆರಾಧಿಸಬಹುದು. 'ಈಸಬೇಕು, ಇದ್ದು ಜಯಿಸಬೇಕು.' ಮೇಲು, ಕೀಳು ಎಂಬ ಜಾತಿಪದ್ಧತಿ ಸಲ್ಲದು, ಪರಮಾತ್ಮನ ಮುಂದೆ ಎಲ್ಲರೂ ಸಮಾನರು. ನಾನಕರ ಬೋಧನೆಯ ಪ್ರಕಾರ, 'ಕೀರ್ತನೆ ಮಾಡು, ಪರಮಾತ್ಮನ ನಾಮವನ್ನು ಜಪಿಸು ಮತ್ತು ದಾನಧರ್ಮಗಳನ್ನು ಮಾಡು' ಎಂಬುದು ಪರಮಾತ್ಮನ ಆರಾಧನೆಯ ಮೂರು ವಿಧಾನಗಳಾಗಿದ್ದವು. ನಾನಕರು ತಮ್ಮ ಭೋಜನ ಶಾಲೆಗೆ 'ಲಂಗರ್' ಎಂಬ ಹೆಸರಿಟ್ಟಿದ್ದರು. ಅವರ ಭೋಜನ ಶಾಲೆಯಲ್ಲಿ ಬಡವ, ಬಲ್ಲಿದ, ಮೇಲು, ಕೀಳುಗಳೆಂಬ ಭಾವನೆಗಳಿಲ್ಲದೆ, ಎಲ್ಲರೂ ಸಮಾನರಾಗಿ ಕುಳಿತು ಭೋಜನವನ್ನು ಸ್ವೀಕರಿಸುವ ಪದ್ಧತಿಯನ್ನು ರೂಢಿಸಲಾಗಿತ್ತು.
ನಾನಕರ ಬೋಧನೆಯ ಪ್ರಕಾರ ವ್ಯಕ್ತಿಗಳ ನಡುವಿನ ಅಭಿನಂದನೆಯ ಮಾರ್ಗ ಬೇರೆಯಾಗಿತ್ತು. ಹಿಂದೂಗಳ 'ನಮಸ್ತೆ'ಯು ಅಲ್ಲದ, ಮುಸಲ್ಮಾನರ 'ಸಲಾಂ ಅಲೈಕುಂ' ಕೂಡ ಅಲ್ಲದ 'ಸತ್ ಶ್ರೀ ಅಕಾಲ್' ಎಂಬುದು ನಾನಕರ ಅಭಿನಂದನೋಕ್ತಿಯಾಗಿತ್ತು. 'ಸತ್' ಎಂಬುದು ಕರ್ತಾರ, ಅಂದರೆ ಪರಮಾತ್ಮನ ಹೆಸರು. 'ಅಕಾಲ್' ಎಂಬುದು ಆ ಪರಮಾತ್ಮ ಕಾಲಾತೀತ ಎಂಬುದರ ಸೂಚಕ. ನಾನಕರ ಬೋಧನೆಗಳಿಂದಲೇ 'ಪಂಜಾಬಿ ಅಸ್ಮಿತೆ' ರೂಪುಗೊಂಡಿತೆಂಬುದು ಗಮನಾರ್ಹ.
ಗುರು ಅಂಗದ್ (1504-1552)
ಕರ್ತಾರ್ ಪುರದ ಆಶ್ರಮದಲ್ಲಿ ಗುರು ನಾನಕರ ಧರ್ಮಬೋಧನೆಯು ಉತ್ತುಂಗವನ್ನು ತಲುಪಿತ್ತು. ಆ ಅಮೃತ ಕಾಲದಲ್ಲಿ ನಾನಕರ ಶಿಷ್ಯರಾದವರು 'ಲೆಹ್ನಾ'ರವರು. ಲೆಹ್ನಾರವರು ತಮ್ಮ ಪೂರ್ವಾಶ್ರಮದಲ್ಲಿ ಕಟ್ಟುನಿಟ್ಟಿನ ಹಿಂದುವಾಗಿದ್ದವರು. ನಾನಕರ ಹೊಸ ವಿಚಾರಧಾರೆಯಿಂದ ಪ್ರಭಾವಿತರಾದ ಅವರು, ಹಿಂದೂ ಆಚಾರ ವಿಚಾರಗಳನ್ನು ತ್ಯಜಿಸಿ ನಾನಕರ ಶಿಷ್ಯರಾದರು. ನಾನಕರು ಲೆಹ್ನಾರವರಿಗೆ ಅವರ ಊರಾದ ಖಡೂರ್ ಸಾಹಿಬ್ (ಈ ಪಟ್ಟಣ ಈಗಿನ ಪಂಜಾಬಿನ ತರನ್ ತಾರನ್ ಜಿಲ್ಲೆಯಲ್ಲಿದೆ)ಗೆ ಹಿಂದಿರುಗುವಂತೆ ಎರಡು ಬಾರಿ ಸಲಹೆ ನೀಡಿದರು. ಆದರೂ, ಹಿಂದಿರುಗದೆ ನಾನಕರೊಂದಿಗೆ ಬಂಡೆಯಂತೆ ನಿಂತವರು ಲೆಹ್ನಾರವರು. ಹಾಗಾಗಿಯೇ ತಮ್ಮ ಉತ್ತರಾಧಿಕಾರಿಯ ಶೋಧದಲ್ಲಿದ ನಾನಕರಿಗೆ, ತಮ್ಮಿಬ್ಬರು ಪುತ್ರರುಗಳಿಗಿಂತ ಲೆಹ್ನಾರವರು ಹೆಚ್ಚು ಸೂಕ್ತ ಎಂದೆನಿಸಿದ್ದು. ಮೇಲಾಗಿ ಲೆಹ್ನಾರವರಿಗೆ ಸಾಕಷ್ಟು ಸಂಖ್ಯೆಯ ಹಿಂದೂಗಳ ಮೇಲೆ ಪ್ರಭಾವವಿತ್ತು. ಅವರೆಲ್ಲರನ್ನೂ ಸಿಖ್ ಧರ್ಮಕ್ಕೆ ಕರೆತರುವ ಸಾಮರ್ಥ್ಯ ಲೆಹ್ನಾರವರಿಗಿದೆ ಎಂಬ ಅಂಶವೂ ನಾನಕರ ಮನಸಿನಲ್ಲಿತ್ತು. ಮುಂದೆ ತಮ್ಮ ಪುತ್ರದ್ವಯರಿಂದ ವಿರೋಧ ಬರಬಹುದೆಂಬ ಅನುಮಾನವಿದ್ದ ನಾನಕರು, ತಮ್ಮ ಜೀವಿತ ಕಾಲದಲ್ಲೇ, ಸಾರ್ವಜನಿಕ ಸಭೆಯೊಂದರಲ್ಲಿ "ಲೆಹ್ನಾ ನನ್ನ ಶರೀರದ ಮುಖ್ಯಭಾಗವಾಗಿ ಹೋಗಿದ್ದಾನೆ. ಆದುದರಿಂದ ಅವನಿಗೆ 'ಅಂಗದ'ನೆಂಬ ಹೊಸ ನಾಮಕರಣವನ್ನು ಮಾಡುತ್ತಿದ್ದೇನೆ. ಆತನೇ ನನ್ನ ಸಿಖ್ ಪರಂಪರೆಯ ಉತ್ತರಾಧಿಕಾರಿ" ಎಂದು ಘೋಷಿಸಿದರು.
ಧರ್ಮಪ್ರಚಾರದ ವಿಸ್ತರಣೆಯ ಅವಶ್ಯಕತೆಯನ್ನು ಮನಗಂಡಿದ್ದ ನಾನಕರು, ಹೊಸ ಗುರು ಅಂಗದರಿಗೆ, ಅವರ ಊರಾದ ಖಡೂರ್ ಸಾಹಿಬ್ ಗೆ ಹೋಗಿ ನೆಲಸುವಂತೆ ಸಲಹೆ ನೀಡಿದರು. ಈ ನಡುವೆ ನಾನಕರ ಪ್ರಥಮ ಪುತ್ರರಾದ ಶ್ರೀಚಂದರೊಂದಿಗೂ ಸಾಕಷ್ಟು ಭಕ್ತರ ಸಮೂಹವಿತ್ತು. ವಿನಯಶೀಲರಾದ ಅಂಗದರು ಶ್ರೀಚಂದರ ಭಕ್ತ ಸಮೂಹವನ್ನೂ ತಮ್ಮಡೆಗೆ ಸೆಳೆಯುವಲ್ಲಿ ಯಶಸ್ವಿಯಾದರು. ಒಟ್ಟು ಹದಿಮೂರು ವರ್ಷಗಳಷ್ಟು ಕಾಲ ಸಿಖ್ ಪರಂಪರೆಯನ್ನು ಮುನ್ನೆಡೆಸಿದ ಅಂಗದರ ಅನುಯಾಯಿಗಳ ಸಂಖ್ಯೆ ಬೆಳೆಯುತ್ತಲೇ ಸಾಗಿತ್ತು. ಧಾರ್ಮಿಕ ಕೇಂದ್ರಗಳ, ಅಂದರೆ ಗುರುದ್ವಾರಗಳ ವಿಸ್ತರಣೆಯ ಅಭಿಯಾನವನ್ನು ಕೈಗೊಂಡ ಅಂಗದರು ಹೆಚ್ಚು ವೆಚ್ಚಗಳ ಭಾರವನ್ನು ಎದುರಿಸಬೇಕಾಯಿತು. ಹೆಚ್ಚು ಕಾಣಿಕೆಗಳನ್ನು ಗಳಿಸುವಲ್ಲಿ ಯಶಸ್ವಿಯಾದ ಅಂಗದರು, ತಮ್ಮ ಧಾರ್ಮಿಕ ಕೇಂದ್ರಗಳ 'ಲಂಗರ್ ಅಂದರೆ ಭೋಜನ ಶಾಲೆ'ಗಳ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಂಡರು.
ಹೊಸ ಗುರುದ್ವಾರಗಳಿಗೆ ನಾನಕರ ಬೋಧನೆಯ ಗ್ರಂಥಗಳ ಹೊಸ ಪ್ರತಿಗಳನ್ನು ಕಳುಹಿಸಿಕೊಡುವ ಅವಶ್ಯಕತೆ ಇತ್ತು. ನಾನಕರ ಕೀರ್ತನೆಗಳೆಲ್ಲವೂ ಪಂಜಾಬಿ ಭಾಷೆಯಲ್ಲಿದ್ದು, ಆ ಸಮಯದಲ್ಲಿ ಪಂಜಾಬಿ ಭಾಷೆಯ ಲಿಪಿ ಇನ್ನೂ ಅಸ್ಪಷ್ಟವಾಗಿತ್ತು. ಅಂಗದರು, ನಾನಕರ ವಿನೂತನ ರಚನೆಗಳಲ್ಲಿನ ಮೂವತ್ತೈದು ಅಕ್ಷರಗಳನ್ನು ಆರಿಸಿಕೊಂಡರು. ಅವುಗಳನ್ನು ಅಂದು ಚಾಲ್ತಿಯಲ್ಲಿದ್ದ ಉತ್ತರ ಭಾರತದ ಭಾಷೆಗಳ ಅಕ್ಷರಗಳೊಂದಿಗೆ ಸಮೀಕರಿಸಿ, ಪಂಜಾಬಿ ಭಾಷೆಗೊಂದು ಸುಂದರ ಹೊಸ ವರ್ಣಮಾಲೆಯನ್ನು ರೂಪಿಸಿದ ಕೀರ್ತಿ ಗುರು ಅಂಗದರಿಗೇ ಸಲ್ಲಬೇಕು. ಮೂವತ್ತೈದು ಅಕ್ಷರಗಳ ಹೊಸ ಪಂಜಾಬಿ ವರ್ಣಮಾಲೆಗೆ 'ಗುರುಮುಖಿ' ಎಂದು ನಾಮಕರಣವನ್ನು ಮಾಡಿದವರೂ ಗುರು ಅಂಗದರೇ. ಭಾರತದ ಬಹುತೇಕ ಭಾಷೆಗಳಿಗೆ 'ದೇವನಾಗರಿ ಲಿಪಿ'ಯೇ ಆಧಾರವಾದರೂ, ಮತ್ತೊಂದು ಭಾರತೀಯ ಭಾಷೆಯಾದ 'ಪಂಜಾಬಿ'ಗೆ 'ಗುರುಮುಖಿ ಲಿಪಿ'ಯೇ ಆಧಾರ ಎಂಬುದು ಗಮನಾರ್ಹ. 'ಗುರುಮುಖಿ' ಎಂದರೆ ಗುರುಗಳ ಮುಖೇನ ಲಭಿಸಿದ್ದು ಎಂದರ್ಥ.
ಗುರು ಅಂಗದರವರು ತಮ್ಮ ಅನುಯಾಯಿಗಳ ಉತ್ತಮ ದೈಹಿಕ ಸಾಮರ್ಥ್ಯಕ್ಕೆ ಒತ್ತು ನೀಡಿದರು. ಬೆಳಗಿನ ಪ್ರಾರ್ಥನೆಯನಂತರ ದೈನಿಂದಿಕ ವ್ಯಾಯಾಮ ಮತ್ತು ಆಟೋಟಗಳ ಕ್ರಮವನ್ನು ಸೇರಿಸಿದ ಅಂಗದರು, ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಯಾಮ ಶಾಲೆಗಳನ್ನು ಆರಂಭಿಸಿದರು. ಗುರು ಅಂಗದರ ಈ ಕ್ರಮ, ಮುಂದೆ ಸಿಖ್ಖರುಗಳ ರಕ್ಷಣೆಗಾಗಿ ಉತ್ತಮ ದೇಹದಾರ್ಢ್ಯವುಳ್ಳವರ ಪಡೆಯನ್ನು ಕಟ್ಟುವಲ್ಲಿ ಸಹಾಯಕವಾಯಿತು.
ಗುರು ಅಂಗದರಿಗೆ ಇಬ್ಬರು ಸುಪುತ್ರರು ಇದ್ದರೂ, ತಮ್ಮ ಶಿಷ್ಯರಲ್ಲಿ ಒಬ್ಬರಾದ 73 ವರ್ಷದ ಅಮರ್ ದಾಸ್ ರವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದರು.
ಗುರು ಅಮರ್ ದಾಸ್ (1479 - 1574)
ಸಿಖ್ಖರ ಮೂರನೇ ಗುರುವಾಗಿ ದೀಕ್ಷೆವಹಿಸಿದ ಗುರು ಅಮರ್ ದಾಸರು, ಈಗಿನ ಪಂಜಾಬಿನ ತರನ್ ತಾರನ್ ಜಿಲ್ಲೆಗೆ ಸೇರಿರುವ ಗೋಯಿಂದ್ವಾಲ್ ಅನ್ನು ತಮ್ಮ ಧಾರ್ಮಿಕ ಕೇಂದ್ರವನ್ನಾಗಿಸಿಕೊಂಡರು. ಅಮರ್ ದಾಸರ ಪ್ರಭಾವಕ್ಕೊಳಗಾಗಿ ಹೆಚ್ಚು ಹೆಚ್ಚು ಭಕ್ತರು ಗೋಯಿಂದ್ವಾಲ್ ಕೇಂದ್ರಕ್ಕೆ ಭೇಟಿ ನೀಡಲಾರಂಭಿಸಿದರು. ಗೋಯಿಂದ್ವಾಲ್ ಕೇಂದ್ರ ದೊಡ್ಡ ಪಟ್ಟಣವಾಗಿದ್ದು ಗುರು ಅಮರ್ ದಾಸರ ಆಕರ್ಷಣೆಯಿಂದಲೇ. ವಾತ್ಸಲ್ಯದ ಪ್ರತಿರೂಪರಾದ ಅಮರ್ ದಾಸರು ತಮ್ಮ ಆಶ್ರಮದ ಭೋಜನ ಶಾಲೆಯ ನಿರ್ವಹಣೆಯಲ್ಲಿ ಹೆಚ್ಚಿನ ಆಸಕ್ತಿವಹಿಸಿದ್ದರು. ಅವರ ದರ್ಶನಕ್ಕೆ ಬರುವವರು ಮೊದಲು ಭೋಜನ ಶಾಲೆಯಲ್ಲಿ ಭೋಜನವನ್ನು ಸ್ವೀಕರಿಸಿ ಬರಬೇಕಿತ್ತು. ಅಮರ್ ದಾಸರ ಆಶ್ರಮಕ್ಕೆ ಭೇಟಿ ನೀಡಿದವರಲ್ಲಿ ಮೊಗಲ್ ದೊರೆ ಅಕ್ಬರ್ ಪ್ರಮುಖರು. ಅಮರ್ ದಾಸರ ಆಶ್ರಮದ ವಿಚಾರ ಧಾರೆ ಮತ್ತು ಜೀವನ ಕ್ರಮಗಳಿಗೆ ಮಾರುಹೋದ ಅಕ್ಬರ್ ದೊರೆ, ಅಮರ್ ದಾಸರ ಮಗಳ ವಿವಾಹ ಸಮಾರಂಭದ ಉಡುಗೊರೆಯೆಂದು, ಸುತ್ತಲಿನ ಹಲವು ಹಳ್ಳಿಗಳ ಕಂದಾಯದ ಹಣವನ್ನು ಗುರುಗಳಿಗೆ ವಹಿಸಿದರು. ಹಾಗೆ ದೊರಕಿದ ಆದಾಯವನ್ನೆಲ್ಲಾ ಗುರುಗಳು ತಮ್ಮ ಗುರುದ್ವಾರದ ಅಭಿವೃದ್ಧಿಗಾಗಿ ಉಪಯೋಗಿಸಿದರು.
ತಮ್ಮ ಗುರುದ್ವಾರದ ಭಕ್ತರುಗಳ ಸಂಖ್ಯೆ ಹೆಚ್ಚುತ್ತಲೇ, ಗುರು ಅಮರ್ ದಾಸರು 22 ಧರ್ಮಪ್ರಚಾರಕರನ್ನು ನೇಮಿಸದರು. ಸ್ವತಃ ಕವಿಗಳಾದ ಅಮರ ದಾಸರು 907 ಹೊಸ ಕೀರ್ತನೆಗಳನ್ನು ರಚಿಸಿ ಅವುಗಳನ್ನು ಪವಿತ್ರ ಗುರು ಗ್ರಂಥಸಾಹಿಬ್ ಗೆ ಸೇರಿಸಿದರು. ಗುರುವರ್ಯರುಗಳ ಬೋಧನೆಗೆ ಪೂರಕವಾದ ಹಿಂದೂ ಸಂತರ ಕೀರ್ತನೆಗಳನ್ನೂ ಗುರು ಗ್ರಂಥ ಸಾಹಿಬ್ ಗೆ ಸೇರಿಸಿದ ಗುರು ಅಮರದಾಸರು, ಗುರು ಗ್ರಂಥ ಸಾಹಿಬ್ ಗೆ ಹೊಸ ರೂಪವನ್ನು ನೀಡಿದರು.
'ಬೈಸಾಖಿ ಅಥವಾ ವೈಶಾಖಿ' ಎಂಬುದು ಪಂಜಾಬ್ ಪ್ರಾಂತ್ಯದ ವಸಂತಮಾಸದ ಸುಗ್ಗಿ ಹಬ್ಬ. ಬೈಸಾಖ ಮಾಸದ ಪ್ರಥಮ ದಿನ, ಸಮಸ್ತ ಸಿಖ್ ಸಮುದಾಯದ ಜನರು ಒಂದು ಕೇಂದ್ರದಲ್ಲಿ ಸೇರಿ ಹಬ್ಬವನ್ನಾಚರಿಸುವ ಸಂಪ್ರದಾಯಕ್ಕೆ ಮೊದಲು ನಾಂದಿ ಹಾಡಿದವರು ಗುರು ಅಮರ ದಾಸರು. ಹುಟ್ಟು, ಸಾವುಗಳ ಸಮಾರಂಭದಂದು ಗುರು ಗ್ರಂಥ ಸಾಹಿಬಿನ ಕೀರ್ತನೆಗಳನ್ನು ಪಠಿಸುವ ಪರಿಪಾಠವನ್ನು ಆರಂಭಿಸಿದ್ದು ಗುರು ಅಮರ ದಾಸರೇ. ಹಾಗಾಗಿ ಹಿಂದೂಗಳ ಸಂಸ್ಕೃತ ಭಾಷೆಯ ಪೌರೋಹಿತ್ಯಕ್ಕೆ ಪಂಜಾಬಿನಲ್ಲಿ ಕಡಿವಾಣ ಬಿದ್ದದ್ದು ಗುರು ಅಮರ ದಾಸರ ಪ್ರಯತ್ನಗಳಿಂದಲೇ. ಮಹಿಳೆಯರ ಒಳಿತಿಗಾಗಿ ಶ್ರಮಿಸಿದ ಗುರು ಅಮರದಾಸರು, ಸ್ತ್ರೀ ಪರಧಾ ಪದ್ಧತಿಯನ್ನು ಹೋಗಲಾಡಿಸಲು ಶ್ರಮಿಸಿದರು. ಏಕಪತ್ನಿ ವ್ಯವಸ್ಥೆ, ಅಂತರ್ಜಾತಿ ವಿವಾಹ, ವಿಧವಾ ವಿವಾಹ ಮುಂತಾದ ಸುಧಾರಣೆಗಳಿಗೆ ಒತ್ತು ನೀಡಿದವರು ಗುರು ಅಮರ ದಾಸರು.
ಅಮರ ದಾಸರ ಸುಧಾರಣೆಗಳು ಅವರನ್ನು ಜನಪ್ರಿಯರನ್ನಾಗಿಸಿದವು. ಅವರ ಜನಪ್ರಿಯತೆಯನ್ನು ಸಹಿಸದ ಜನರುಗಳು, ಗುರುಗಳ ವಿರುದ್ಧ ಅಕ್ಬರ್ ದೊರೆಗೆ ದೂರು ನೀಡಿದರು. ಅಕ್ಬರ್ ದೊರೆ ಆ ರೀತಿಯ ದೂರುಗಳಿಗೆ ಮನ್ನಣೆ ನೀಡದಿದ್ದಾಗ, ಹೊಟ್ಟೆಕಿಚ್ಚಿನ ಆ ಜನರು ಹತ್ತಿರದ ಸಾಮಂತರ ಕಿವಿ ಚುಚ್ಚಿ, ಸಿಖ್ ಸಮುದಾಯ ಹಿಂಸಾಚಾರಕ್ಕೊಳಗಾಗುವಂತೆ ಮಾಡಿದರು. ಇವನ್ನೆಲ್ಲಾ ಸಮರ್ಥವಾಗಿ ಎದುರಿಸಿದ ಅಮರ ದಾಸರು 22 ವರ್ಷಗಳಷ್ಟು ಧೀರ್ಘ ಕಾಲ, ಸಿಖ್ ಪರಂಪರೆಯನ್ನು ಮುನ್ನೆಡೆಸಿದರು. ಅಮರ ದಾಸರ ಸತ್ಕಾರ್ಯವನ್ನು ಗುರು ಗ್ರಂಥ ಸಾಹಿಬಿನಲ್ಲೂ ಪ್ರಶಂಸಿಸಲಾಗಿದೆ. 95 ವರ್ಷಗಳಷ್ಟು ಧೀರ್ಘ ಕಾಲ ಜೀವಿಸಿದ್ದ ಅಮರ ದಾಸರು, ತಮ್ಮ ಪುತ್ರರುಗಳನ್ನು ಪರಿಗಣಿಸದೆ, ತಮ್ಮ ಪ್ರಿಯ ಶಿಷ್ಯ ರಾಮ್ ದಾಸರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು.
ಗುರು ರಾಮ್ ದಾಸ್ (1534 - 1581)
ಸಿಖ್ಖರ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಅಮೃತ್ ಸರ್ ಪಟ್ಟಣದ ನಿರ್ಮಾಣಕ್ಕೆ ಮೊದಲು ಅಡಿಪಾಯ ಹಾಕಿದವರು ಗುರು ರಾಮ್ ದಾಸರು. ತಮ್ಮ ಗುರುಗಳಾದ ಅಮರ್ ದಾಸರ ಮಾರ್ಗದರ್ಶನದಲ್ಲಿ ತಮ್ಮ ಜೀವಿತ ಕಾಲದ ದೀರ್ಘ ಕಾಲ ಕಳೆದಿದ್ದ ರಾಮ್ ದಾಸರು, ಹಲವು ಬಾರಿ ಮೊಗಲ್ ದರ್ಬಾರಿನಲ್ಲಿ ಸಿಖ್ ಧರ್ಮದ ಪ್ರತಿನಿಧಿಯಾಗಿದ್ದರು. ದೊರೆ ಅಕ್ಬರ್ ಅವರಿಗೆ ಬಳುವಳಿಯಾಗಿ ನೀಡಿದ್ದ ನಿವೇಶನದಲ್ಲಿ ರಾಮ್ ದಾಸರು ಬೃಹದಾದ ಸರೋವರವೊಂದನ್ನು ನಿರ್ಮಿಸಿದರು. ಧರ್ಮ ದೀಕ್ಷೆಯನ್ನು ವಹಿಸಿಕೊಂಡನಂತರ ಗುರು ರಾಮ್ ದಾಸರು, ತಮ್ಮ ಕೇಂದ್ರವನ್ನು ಗೋಯಿಂದ್ವಾಲಿನಿಂದ, ತಾವು ನಿರ್ಮಿಸಿದ ಸರೋವರದ ಸ್ಥಾನಕ್ಕೆ ಸ್ಥಳಾಂತರಿಸಿದರು. ಗುರುಗಳ ಹೊಸ ಧಾರ್ಮಿಕ ಸ್ಥಾನವನ್ನು 'ರಾಮ್ ದಾಸ್ ಪುರ'ವೆಂದೇ ಭಕ್ತರು ಕರೆಯಲಾರಂಭಿಸಿದರು. ಮುಂದೆ ಈ ರಾಮ್ ದಾಸ್ ಪುರವೇ, 'ಅಮೃತ್ ಸರ'ವಾಗಿ ರೂಪುಗೊಂಡದ್ದು ಈಗ ಇತಿಹಾಸ. ಗುರು ರಾಮ್ ದಾಸರ ಕರೆಯ ಮೇರೆಗೆ ಹೆಚ್ಚು ಹೆಚ್ಚು ವ್ಯಾಪಾರಿಗಳು ತಮ್ಮ ಉದ್ದಿಮೆಯನ್ನು ರಾಮ್ ದಾಸ್ ಪುರಕ್ಕೆ ಸ್ಥಳಾಂತರಿಸಿದರು. ಗುರುಗಳ ನೆಚ್ಚಿನ ಪವಿತ್ರ ಸ್ಥಾನ ಬೆಳೆಯುತ್ತಾ ಸಾಗಿತ್ತು. ಗುರು ರಾಮ್ ದಾಸರಿಗೆ ಮೂರು ಜನ ಪುತ್ರರಿದ್ದರು. ಅವರುಗಳಲ್ಲಿ ಅತ್ಯಂತ ಕಿರಿಯರಾದ 'ಅರ್ಜುನ್'ರವರು ಗುರು ಪರಂಪರೆಯ ಉತ್ತರಾಧಿಕಾರಿಯಾಗಿ ನೇಮಕಗೊಂಡರು.
ಗುರು ಅರ್ಜುನ್ ದೇವ್ (1563 - 1606)
ಸಿಖ್ಖರ ಅತ್ಯಂತ ಪವಿತ್ರ ಧಾರ್ಮಿಕ ಸ್ಥಾನವಾದ ಅಮೃತ್ ಸರ್ ನ ಸ್ವರ್ಣ ಮಂದಿರವನ್ನು ನಿರ್ಮಾಣ ಮಾಡಿದ ಕೀರ್ತಿ ಗುರು ಅರ್ಜುನ್ ರವರಿಗೆ ಸಲ್ಲುತ್ತದೆ. ತಮ್ಮ ಗುರುಗಳಾದ ಗುರು ರಾಮ್ ದಾಸರು ಕಟ್ಟಿದ ಪಟ್ಟಣವಾದ 'ರಾಮ್ ದಾಸ್ ಪುರ'ದಲ್ಲೇ ಸಿಖ್ಖರ ಪವಿತ್ರ ಮಂದಿರದ ನಿರ್ಮಾಣವಾಗಬೇಕೆಂಬ ಕನಸು ಕಂಡವರು ಗುರು ಅರ್ಜುನ್ ರವರು. ಈಗಿನ ಸ್ವರ್ಣ ಮಂದಿರವನ್ನು ಗುರು ಅರ್ಜುನರು 'ಹರ್ ಮಂದಿರ್ ಸಾಹಿಬ್, ಅಂದರೆ ಪರಮಾತ್ಮನ ಮಂದಿರ' ಎಂದೇ ಕರೆದಿದ್ದರು. ಹರ್ ಮಂದಿರ್ ಸಾಹಿಬ್ ನ ಮೊದಲ ಅಡಿಗಲ್ಲನ್ನು ಇಟ್ಟು ಪೂಜಿಸುವ ಕಾರ್ಯವನ್ನು, ಗುರು ಅರ್ಜುನ್ ರವರ ಕರೆಯ ಮೇರೆಗೆ ನೆರವೇರಿಸಿದವರು ಲಾಹೋರಿನ ಇಸ್ಲಾಂ ಧರ್ಮದ ಸಂತ 'ಮಿಯಾ ಮೀರ್'ರವರು. ಹಿಂದೂ ಮತ್ತು ಇಸ್ಲಾಂ ಧರ್ಮಗಳಿಗೆ ಸೇರಿದ ವಾಸ್ತುಶಿಲ್ಪಿಗಳು, ಹರ್ ಮಂದಿರ್ ಸಾಹಿಬ್ ನ ಕಟ್ಟಡದ ವಿನ್ಯಾಸವನ್ನು ರೂಪಿಸಲು ಶ್ರಮಿಸುವಂತೆ ಮಾಡಿದ್ದು, ಗುರು ಅರ್ಜುನರ ಕ್ರಿಯಾಶೀಲತೆಗೊಂದು ಸಾಕ್ಷಿ.
ಹಿಂದೂ ಧರ್ಮದ ಮಂದಿರಗಳ ಗರ್ಭಗುಡಿ ಎತ್ತರದ ಸ್ಥಾನದಲಿರುತ್ತದೆ. ಆದರೆ ಗುರು ಅರ್ಜುನ್ ರು ತಮ್ಮ ಮಂದಿರದ ಗರ್ಭಗುಡಿಯನ್ನು, ಸುತ್ತಲಿನ ನೆಲಮಟ್ಟಕಿಂತ ಕೆಳಗೆ ನಿರ್ಮಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಹಿಂದೂಗಳ ಮಂದಿರಗಳಿಗೆ ಒಂದೇ ಒಂದು ಬಾಗಿಲಿರುತ್ತಿತ್ತು. ಆದರೆ ಗುರು ಅರ್ಜುನರು ತಮ್ಮ ಹರ್ ಮಂದಿರ್ ಸಾಹಿಬ್ ನ ನಾಲ್ಕೂ ದಿಕ್ಕುಗಳಿಗೂ ಒಂದೊಂದು ಬಾಗಿಲನ್ನು ಇರಿಸಿದರು. ಗುರು ಅರ್ಜುನರ ಈ ಹೊಸ ವಿನ್ಯಾಸ ಹೊಸ ಸಂದೇಶವನ್ನೇ ಸಾರಿತ್ತು. ಪರಮಾತ್ಮನೆಡೆಗೆ ನಡೆಯುವಾಗ ಅತ್ಯಂತ ನಿಮ್ನ ಜಾತಿಯ ಮನುಜನೂ, ಇನ್ನೂ ತಳಗೆ ಇಳಿದು ಸಾಗಬೇಕು ಎಂಬುದು ಕೆಳಮಟ್ಟದಲ್ಲಿ ನಿರ್ಮಾಣಗೊಂಡ ಗರ್ಭಗುಡಿಯ ಸಂದೇಶ. ಪರಮಾತ್ಮನ ಕೇಂದ್ರ ಸ್ಥಾನಕ್ಕೆ ಎಲ್ಲಾ ವರ್ಗದವರಿಗೂ, ಎಲ್ಲಾ ಕಡೆಯಿಂದಲೂ ಸ್ವಾಗತ ಎಂಬುದು ಗರ್ಭಗುಡಿಯ ನಾಲ್ಕು ದ್ವಾರಗಳ ಸಂದೇಶ.
ಮಂದಿರದ ನಿರ್ಮಾಣಕ್ಕಾಗಿ ಅಪಾರ ಧನರಾಶಿಯ ಅವಶ್ಯಕತೆ ಇತ್ತು. ಧನರಾಶಿಯನ್ನು ಸಂಗ್ರಹಿಸಲು ಗುರು ಅರ್ಜುನರು ತಮ್ಮ ಸಿಖ್ ಅನುಯಾಯಿಗಳಿಗೆ 'ದಸ್ವಂಧ್, ಅಂದರೆ ನಿಮ್ಮ ಆದಾಯದಲ್ಲಿ ಹತ್ತನೇ ಒಂದು ಭಾಗ'ವನ್ನು ನನಗೆ ನೀಡಿ ಎಂದು ಕರೆಯಿತ್ತರು. ಪ್ರತಿ ಬೈಸಾಖಿ ಮಾಸದ ಮೊದಲನೆಯ ದಿನ ಸಿಖ್ ಧರ್ಮದ ಅನುಯಾಯಿಗಳೆಲ್ಲರೂ ರಾಮ್ ದಾಸ್ ಪುರಕ್ಕೆ ಬಂದು ಸೇರಬೇಕೆಂಬ ಸಂಪ್ರದಾಯಕ್ಕೆ ಒತ್ತು ನೀಡಿದವರೂ ಗುರು ಅರ್ಜುನರೇ ಆಗಿದ್ದರು. ಅಪಾರ ಧನರಾಶಿಯ ಸಂಗ್ರಹವಾಗುತ್ತಲೇ, ಹರ್ ಮಂದಿರ್ ಸಾಹಿಬ್ ನ ಕಟ್ಟಡದ ಕಾರ್ಯ ಸಂಪನ್ನವಾಯಿತು. ಹರ್ ಮಂದಿರ್ ಸಾಹಿಬ್ ನ ಸುತ್ತಲೂ ಇದ್ದ ಸರೋವರಕ್ಕೆ ನೀರು ತುಂಬಿಸಿದಾಗ, ಮಂದಿರದ ಪಾವಿತ್ರ್ಯತೆ ಇಮ್ಮಡಿಯಾಯಿತು. ಆಗ ಪ್ರಸನ್ನರಾದ ಗುರು ಅರ್ಜುನರು, ತಮ್ಮ ರಾಮ್ ದಾಸ್ ಪುರಕ್ಕೆ ನೀಡಿದ ಹೊಸ ಹೆಸರೇ 'ಅಮೃತ್ ಸರ್, ಅಂದರೆ ಅಮೃತದ ಸರೋವರ' ಎಂದು. ಹಿಂದುಗಳಿಗೆ ಕಾಶಿ ಹೇಗೋ, ಮುಸಲ್ಮಾನರಿಗೆ ಮೆಕ್ಕಾ ಹೇಗೋ, ಹಾಗೆ ಸಿಖ್ಖರ ಪವಿತ್ರ ಧಾರ್ಮಿಕ ಸ್ಥಾನ ಅಮೃತ್ ಸರ್.
ಗುರು ಅರ್ಜುನ್ ದೇವರು ತಮ್ಮ ನೇತೃತ್ವದಲ್ಲಿ ಅಮೃತ್ ಸರ್ ದಿಂದ 11 ಮೈಲಿಗಳಷ್ಟು ದಕ್ಷಿಣಕ್ಕಿರುವ ಗ್ರಾಮವೊಂದರಲ್ಲಿ ಮತ್ತೊಂದು ದೊಡ್ಡ ಸರೋವರವನ್ನು ನಿರ್ಮಿಸಿದರು. ಆ ಸರೋವರಕ್ಕೆ ಗುರುಗಳು 'ತರನ್ ತಾರನ್' ಎಂದು ನಾಮಕರಣ ಮಾಡಿದರು. ತರನ್ ತಾರನ್ ಎಂದರೆ ಮುಕ್ತಿ ಸರೋವರ ಎಂದರ್ಥ. ಹೊಸ ನಾಮಕರಣಕ್ಕೆ ಅನುಗುಣವಾಗಿ ಆ ಸರೋವರದಲ್ಲಿ ಸ್ನಾನ ಮಾಡಿದವರಿಗೆ ಕುಷ್ಠರೋಗದಂತಹ ಖಾಯಿಲೆಗಳು ವಾಸಿಯಾಗತೊಡಗಿದವು. ಆ ಸರೋವರದ ಸಮೀಪವೇ ಗುರುದ್ವಾರವೊಂದನ್ನು ಮತ್ತು ಕುಷ್ಠರೋಗ ಚಿಕಿತ್ಸಾ ಕೇಂದ್ರವೊಂದನ್ನು ಗುರುವರ್ಯರು ನಿರ್ಮಿಸಿದರು.
ತರನ್ ತಾರನ್ನಿನಿಂದ ಜಲಂಧರ್ ಪಟ್ಟಣಕ್ಕೆ ಪ್ರಯಾಣ ಬೆಳಸಿದ ಗುರು ಅರ್ಜುನರು, ಜಲಂಧರ್ ಸಮೀಪವೇ ಕರ್ತಾರ್ ಪುರ್ (ಗುರು ನಾನಕರು ಕಟ್ಟಿದ ಕರ್ತಾರ್ ಪುರ್ ಎಂಬುದು ಬೇರೆ ಪಟ್ಟಣ. ಅದು ಈಗ ಪಾಕಿಸ್ತಾನದಲ್ಲಿದೆ) ಎಂಬ ಪಟ್ಟಣವೊಂದನ್ನು ನಿರ್ಮಿಸಿದರು. ಕರ್ತಾರ್ ಪುರದಿಂದ ಲಾಹೋರ್ ಪಟ್ಟಣಕ್ಕೆ ಪ್ರಯಾಣ ಬೆಳಸಿದ ಗುರುವರ್ಯರು, ಬ್ಯಾಸ್ ನದಿಯ ದಂಡೆಯ ಮೇಲೆ ತಮ್ಮ ಪುತ್ರರಾದ ಹರ್ ಗೋವಿಂದರ ಹೆಸರಿನಲ್ಲಿ 'ಶ್ರೀ ಹರ್ ಗೋವಿಂದ್ ಪುರ್' ಎಂಬ ಹೊಸ ಪಟ್ಟಣವನ್ನು ನಿರ್ಮಿಸಿದರು. ಅವಿಭಜಿತ ಪಂಜಾಬಿನ ಮಧ್ಯಭಾಗಕ್ಕೆ 'ಮಾಝಾ' ಪ್ರಾಂತ್ಯವೆಂದು ಹೆಸರು. ಅದು ಬಲಿಷ್ಠರು ಮತ್ತು ಸಮರ್ಥ ರೈತರುಗಳಾದ ಜಾಟ್ ಜನಾಂಗದ ಆವಾಸ ಸ್ಥಾನ. ಮಾಝಾ ಪ್ರಾಂತ್ಯದ ಪ್ರವಾಸವನ್ನು ಐದು ವರ್ಷಗಳ ಕಾಲ ಮಾಡಿದ ಗುರು ಅರ್ಜುನರು, ಆ ಪ್ರಾಂತ್ಯದ ಬಹುತೇಕ ಜಾಟ್ ರೈತರನ್ನು ತಮ್ಮ ಅನುಯಾಯಿಗಳನ್ನಾಗಿ ಪರಿವರ್ತಿಸಿದರು.
1595ರ ಸಮಯಕ್ಕೆ ತಮ್ಮ ನೆಚ್ಚಿನ ಅಮೃತ್ ಸರಕ್ಕೆ ಹಿಂದಿರುಗಿದ ಗುರು ಅರ್ಜುನರು, ಸಿಖ್ ಧರ್ಮದ ಪವಿತ್ರ ಗ್ರಂಥವಾದ 'ಗುರು ಗ್ರಂಥ್ ಸಾಹಿಬ್'ನ ಸಂಪಾದನೆಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಹಿಂದಿನ ನಾಲ್ಕು ಗುರುಗಳು ರಚಿಸಿದ ಕೀರ್ತನೆಗಳಿಗೆ, ಗುರು ಅರ್ಜುನರು ತಾವು ರಚಿಸಿದ ಕೀರ್ತನೆಗಳನ್ನು ಸೇರಿಸಿದರು. ಹಿಂದೂ ಮತ್ತು ಇಸ್ಲಾಂ ಧರ್ಮದ ಸಂತರುಗಳ ಆಯ್ದ ಕೀರ್ತನೆಗಳನ್ನೂ ಸೇರಿಸಿಕೊಂಡ ಗುರು ಅರ್ಜುನರು ಗುರು ಗ್ರಂಥ್ ಸಾಹಿಬ್ ಗೆ ಹೆಚ್ಚಿನ ಸಮಗ್ರ ರೂಪವನ್ನು ತಂದಿಟ್ಟರು. ಗ್ರಂಥ್ ಸಾಹಿಬ್ ನ ಅಂತ್ಯದಲ್ಲಿ ಫಲಶ್ರುತಿಯನ್ನು ದಾಖಲಿಸಿದ ಗುರು ಅರ್ಜುನರು, ಸತ್ಯ, ಶಾಂತಿ ಮತ್ತು ದಿವ್ಯ ಚಿಂತನೆಗಳೇ ಪವಿತ್ರ ಗ್ರಂಥದ ಸಂದೇಶವೆಂದು ಸಾರಿದರು. ಪವಿತ್ರ ಗುರು ಗ್ರಂಥ್ ಸಾಹಿಬ್ ನ ಪ್ರತಿಷ್ಠಾಪನೆಯನ್ನು ಹರ್ ಮಂದಿರ್ ಸಾಹಿಬ್ ನ ಗರ್ಭಗುಡಿಯಲ್ಲಿ ನೆರವೇರಿಸಲಾಯಿತು. ಗುರು ಅರ್ಜುನರು ತಮ್ಮ ನೆಚ್ಚಿನ ಹಿರಿಯ ಶಿಷ್ಯರಾದ ಭಾಯೀ ಬುದ್ಧರವರನ್ನು ಹರ್ ಮಂದಿರದ ಪ್ರಥಮ ಗ್ರಂಥಿಯನ್ನಾಗಿ ನೇಮಿಸಿದರು. ಗುರು ಗ್ರಂಥ್ ಸಾಹಿಬ್ ನ ಬೋಧನೆಗಳು ಮೊಗಲ್ ದೊರೆ ಅಕ್ಬರರನ್ನು ಆಕರ್ಷಿಸಿದವು. ಅಕ್ಬರರ ಅಭಿಮಾನವನ್ನು ಗಳಿಸಿದ ಸಿಖ್ ಪಂಥ, ವೇಗವಾಗಿ ಬೆಳೆಯುತ್ತಾ ಸಾಗಿತು.
1606ರಲ್ಲಿ ಮೊಗಲ್ ದೊರೆ ಅಕ್ಬರ್ ನಿಧನಹೊಂದಿದನಂತರ ಪರಿಸ್ಥಿತಿ ಬದಲಾಗಿಹೋಯಿತು. ಮುಂದಿನ ಮೊಗಲ್ ದೊರೆ ಜಹಾಂಗೀರ್, ಗುರು ಅರ್ಜುನರ ಜನಪ್ರಿಯತೆಯನ್ನು ಸಹಿಸದಾದನು. ಜಹಾಂಗೀರನ ಪುತ್ರ ಖುಸ್ರೋ ತಂದೆಯ ವಿರುದ್ಧ ದಂಗೆ ಎದ್ದು, ಗುರು ಅರ್ಜುನರ ಬೆಂಬಲ ಪಡೆದಿದ್ದು, ಜಹಾಂಗೀರನ ಕೆಂಗಣ್ಣಿಗೆ ಗುರಿಯಾಯಿತು. ಪುತ್ರ ಖುಸ್ರೋನ ದಂಗೆಯನ್ನು ಬಗ್ಗು ಬಡಿದ ಜಹಾಂಗೀರನ ಕೋಪ ಗುರು ಅರ್ಜುನರ ಕಡೆಗೆ ತಿರುಗಿತು. ಗುರು ಅರ್ಜುನರನ್ನು ಬಂಧಿಸಿದ ಜಹಾಂಗೀರ್, ಅವರ ಮೇಲೆ ದೇಶದ್ರೋಹದ ಆಪಾದನೆಯನ್ನು ಹೊರಿಸಿದನು. ಗುರು ಅರ್ಜುನರು ದೇಶದ್ರೋಹದ ಆಪಾದನೆಯನ್ನು ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಗುರು ಅರ್ಜುನರು ಭಾರಿ ದಂಡವನ್ನು ತೆರಬೇಕಾಗಿಯೂ, ದಂಡವನ್ನು ಕೊಡಲಾಗದ ಪಕ್ಷದಲ್ಲಿ ಅವರನ್ನು ಚಿತ್ರಹಿಂಸೆಯ ಮರಣದಂಡನೆಗೆ ಗುರಿಪಡಿಸಬೇಕಾಗಿಯೂ, ದೊರೆ ಜಹಾಂಗೀರ್ ಕಟ್ಟಪ್ಪಣೆಯನ್ನು ಹೊರಡಿಸಿದನು. ಗುರುವರ್ಯರನ್ನು ಬಂಧಿಸಿ ಲಾಹೋರಿನ ಜೈಲಿಗೆ ಕರೆದೊಯ್ಯಲಾಯಿತು. ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಗುರುಗಳು, ತಮ್ಮ ಅಂತ್ಯ ಸಮೀಪವೇ ಇದೆಯೆಂದು ಅರಿತು, ತಮ್ಮ ಹನ್ನೊಂದು ವರ್ಷದ ಪುತ್ರ ಹರ್ ಗೋವಿಂದನನ್ನು ಸಿಖ್ ಧರ್ಮದ ಆರನೇ ಗುರುವಾಗಿ ನೇಮಿಸಬೇಕೆಂದು ತಮ್ಮ ಹಿರಿಯ ಶಿಷ್ಯ ಭಾಯೀ ಬುದ್ಧರಿಗೆ ಸಂದೇಶವನ್ನು ಕಳುಹಿಸಿದರು. 1966ರ ಮೇ ತಿಂಗಳ 30ರಂದು, ಚಿತ್ರಹಿಂಸೆಗಳ ನಡುವೆ ಗುರು ಅರ್ಜುನ ದೇವರನ್ನು ರಾವೀ ನದಿಯಲ್ಲಿ ಸ್ನಾನ ಮಾಡಲು ಕಳುಹಿಸಲಾಯಿತು. ನದಿಯ ಪ್ರವಾಹದೊಡನೆ ಮುಂದೆ ಸಾಗಿದ ಗುರುವರ್ಯರು ಯಾರ ಕೈಗೂ ಸಿಗದೆ, ಪರಮಾತ್ಮನಲ್ಲಿ ಐಕ್ಯವಾದರು.
ತಮ್ಮ 25 ವರ್ಷಗಳ ಧರ್ಮಾಧಿಕಾರದ ಅವಧಿಯಲ್ಲಿ ಗುರು ಅರ್ಜುನರು ಸಿಖ್ಖರಿಗೆ, ಹಿಂದೂಗಳಂತೆಯೂ ಅಲ್ಲದ, ಮುಸಲ್ಮಾನರಂತೆಯೂ ಅಲ್ಲದ, ಪ್ರತ್ಯೇಕವಾದ ಅಸ್ತಿತ್ವವನ್ನು ಗಳಿಸಿಕೊಟ್ಟರು. ಹರ್ ಮಂದಿರ್ ಸಾಹಿಬಿನ ನಿರ್ಮಾಣ ಮತ್ತು ಅದರ ಗರ್ಭಗುಡಿಯಲ್ಲಿ ಗುರು ಗ್ರಂಥ್ ಸಾಹಿಬ್ ನ ಪ್ರತಿಷ್ಠಾಪನೆಯನ್ನು ನೆರೆವೇರಿಸಿದ ಅರ್ಜುನರು ಸಿಖ್ ಧರ್ಮದ ಹೊಸ ದಾರಿದೀಪವಾದರು. ಗುರು ಅರ್ಜುನರ ಬಲಿದಾನ ದಿವಸದಂದು ಪ್ರತಿವರ್ಷ ಅಮೃತ್ ಸರ್ ನ ಸ್ವರ್ಣ ಮಂದಿರದಲ್ಲಿ ವಿಶೇಷ ಪೂಜೆಪುನಸ್ಕಾರಗಳನ್ನು ಇಂದಿಗೂ ಸಲ್ಲಿಸಲಾಗುತ್ತದೆ.
ಗುರು ಹರ್ ಗೋವಿಂದ್ ಸಿಂಗ್ (1595 - 1644)
ಗುರು ಅರ್ಜುನ್ ದೇವರ ಹತ್ಯೆ ಸಿಖ್ ಸಮುದಾಯಕ್ಕೆ ಆಘಾತವನ್ನು ಉಂಟುಮಾಡಿತ್ತು. ಗುರುಗಳ ಹತ್ಯೆಯನಂತರವೂ ಜಹಾಂಗೀರನ ಕೋಪವು ಇನ್ನೂ ಆರಿರಲಿಲ್ಲ. ಗುರು ಅರ್ಜುನರ ಕುಟುಂಬದ ಎಲ್ಲಾ ಸದಸ್ಯರನ್ನೂ ಬಂಧಿಸಿ ಅವರ ಎಲ್ಲಾ ಅಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿದ ಜಹಾಂಗೀರನ ಆಜ್ಞೆಯನ್ನು, ಅವನ ಪಂಜಾಬಿನ ಸಾಮಂತರು ಕಾರ್ಯಗತಗೊಳಿಸಲಿಲ್ಲ. ಭಯಭೀತವಾಗಿರುವ ಸಿಖ್ ಸಮುದಾಯ ಮೇಲೇಳಲಾರದು ಎಂಬುದು ಸಾಮಂತರ ಎಣಿಕೆಯಾಗಿತ್ತು. ಆದರೆ ಗುರು ಅರ್ಜುನರ ಹಿರಿಯ ಶಿಷ್ಯರಾದ ಭಾಯೀ ಬುದ್ಧರು ನೀಡಿದ ಪ್ರೇರಣೆಯಿಂದ, ಅಂದಿನ ಸಿಖ್ ಧರ್ಮದ ಅನುಯಾಯಿಗಳು, ನೂತನ ಗುರು ಹರ್ ಗೋವಿಂದ್ ಸಿಂಗ್ ರ ನೇತೃತ್ವದಲ್ಲಿ ಸೆಟೆದೆದ್ದು ನಿಂತರು.
ಗುರು ಅರ್ಜುನರಂತೆ ಶಾಂತಮೂರ್ತಿಯಾಗಲಿಚ್ಛಿಸದ ಗುರು ಹರ್ ಗೋವಿಂದರು ಧರ್ಮರಕ್ಷಣೆಯ ಯೋಧರಾಗಿ ನಿಂತರು. ಎರಡು ಖಡ್ಗಗಳನ್ನು ಧರಿಸಿದ ಅವರು, ಒಂದು ಖಡ್ಗ ಧರ್ಮದ ಪ್ರತೀಕವಾದರೆ, ಮತ್ತೊಂದು ಸಿಖ್ಖ ಸಮುದಾಯದ ಪ್ರಾಪಂಚಿಕ ಹಿತಾಸಕ್ತಿಗಳ ಹೋರಾಟದ ಪ್ರತೀಕ ಎಂದು ಘೋಷಿಸಿದರು. ತಮ್ಮ ತಲೆಯ ಮೇಲಿನ ಪಗಡಿ ತಮ್ಮ ಧರ್ಮಾಧಿಕಾರದ ಪ್ರತೀಕವೆಂದರು. ಧನದ ಕಾಣಿಕೆ ನೀಡುವ ಬದಲು ನನಗೆ ಆಯುಧಗಳ ಮತ್ತು ಯುದ್ಧದ ಕುದುರೆಗಳ ಕಾಣಿಕೆಯನ್ನು ನೀಡಿ ಎಂದು ಅವರು ತಮ್ಮ ಭಕ್ತರಿಗೆ ಕರೆಯಿತ್ತರು. ತಮ್ಮದೇ ಆದ ಸುಸಜ್ಜಿತ ಸೈನ್ಯವೊಂದನ್ನು ಸಿದ್ಧಗೊಳಿಸಿದ ಗುರುವರ್ಯರು, ಅವರ ಸೈನ್ಯಕ್ಕೆ ಯುದ್ಧಾಭ್ಯಾಸದ ಮತ್ತು ಬೇಟೆಯ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದ್ದರು. ತಮ್ಮ ರಕ್ಷಣೆಗಾಗಿ ಉಕ್ಕಿನ ಕೋಟೆಯೊಂದನ್ನು ನಿರ್ಮಾಣಮಾಡಿದ ಕೀರ್ತಿ ಅವರದಾಗಿತ್ತು.
ಸಿಖ್ಖರ ಪವಿತ್ರ ಸ್ಥಾನವಾದ ಹರ್ ಮಂದಿರ್ ಸಾಹಿಬ್ ನ ಎಡ ಭಾಗದಲ್ಲಿ 'ಅಕಾಲ್ ತಖ್ತ್'ನ ನಿರ್ಮಾಣ ಮಾಡಿದವರು ಗುರು ಹರ್ ಗೋವಿಂದರೇ ಆಗಿದ್ದರು. ಅಕಾಲ್ ತಖ್ತ್ ಎಂದರೆ ಅವಿನಾಶಿ ಪರಮಾತ್ಮನ ಸಿಂಹಾಸನ ಎಂದರ್ಥ. ಅಕಾಲ್ ತಖ್ತ್ ಎಂಬುದು ಒಂದು ಮಂದಿರವಾಗಿದ್ದು, ಅದು ಶ್ವೇತವರ್ಣದ ಕಟ್ಟಡವಾಗಿದೆ. ಗುರು ಹರ್ ಗೋವಿಂದರ ಕನಸಿನ ಕೂಸಾದ ಅಕಾಲ್ ತಖ್ತ್ ನಲ್ಲಿ, ಅವರು ಶಾಂತಿಮಂತ್ರ ಪಠಿಸುತ್ತಿರಲಿಲ್ಲ. ಧರ್ಮಹೋರಾಟದ ವೀರರ ಕಥೆಗಳನ್ನು ಹಾಡಿ ಹೊಗಳುವ ಪರಿಪಾಠ ಅಕಾಲ್ ತಖ್ತ್ ನಲ್ಲಿ ನಡೆಯುತ್ತಿತ್ತು. ಮುಂದೆ ನಡೆಸಬೇಕಾದ ಧರ್ಮದ ಪರವಾದ ಹೋರಾಟಗಳ ತಂತ್ರಗಳನ್ನು ಚರ್ಚಿಸಿ ಸಿದ್ಧಪಡಿಸುವ ವೇದಿಕೆ ಅಕಾಲ್ ತಖ್ತ್ ಅಂದೇ ಆಗಿದ್ದು, ಗುರು ಹರ್ ಗೋವಿಂದರ ದೂರದರ್ಶಿತ್ವದಿಂದಲೇ. ಗುರು ಹರ್ ಗೋವಿಂದರು ಹಾಕಿದ ಮೇಲ್ಪಂಕ್ತಿಯಂತೆ ಇಂದು ಅಕಾಲ್ ತಖ್ತ್, ಸಿಖ್ ಸಮುದಾಯದ ಪ್ರಾಪಂಚಿಕ ವ್ಯವಹಾರಗಳ ಅಧಿಕಾರ ಕೇಂದ್ರವಾಗಿ ಹೊರಹೊಮ್ಮಿದೆ. ಅಕಾಲ್ ತಖ್ತ್ ಸಿಖ್ಖರ ನಂಬಿಕೆ ಹಾಗೂ ಶ್ರದ್ಧೆಗಳ ಕೇಂದ್ರವೂ ಹೌದು.
ಗುರು ಹರ್ ಗೋವಿಂದರ ನೇತೃತ್ವದಲ್ಲಿ ಸಿಖ್ ಸಮುದಾಯ ಹೋರಾಟದ ಸಂಘಟನೆಯಾಗಿ ಬೆಳೆದು ನಿಂತ ವಿಚಾರ ಜಹಾಂಗೀರನಿಗೆ ತಿಳಿಯಿತು. ಗುರು ಅರ್ಜುನರು ಕೊಡದಿದ್ದ ಜುಲ್ಮಾನೆ ಹಣದ ನೆಪವೊಡ್ಡಿ, ಜಹಾಂಗೀರ್ ಗುರು ಹರ್ ಗೋವಿಂದರನ್ನು ಬಂಧಿಸಿ, ಗ್ವಾಲಿಯರ್ ಜೈಲಿನಲ್ಲಿಟ್ಟನು. ಒಂದು ವರ್ಷದನಂತರ ಬಿಡುಗಡೆ ಹೊಂದಿದ ಗುರುಗಳು, ಪಠಾಣರ ಬಾಡಿಗೆ ಸೈನ್ಯದ ಬಲವನ್ನು ಗಳಿಸಿಕೊಂಡರು. ಜೊತೆಗೆ ತಮ್ಮ ಸಮುದಾಯದ ಯುವಕರ ಸೈನ್ಯವನ್ನೂ ಕಟ್ಟಿದ ಗುರುವರ್ಯರು, ಸಿಖ್ ಸಮುದಾಯದ ಧಾರ್ಮಿಕ ಹಾಗೂ ಪ್ರಾಪಂಚಿಕ ವ್ಯವಹಾರಗಳ ಶಕ್ತಿಕೇಂದ್ರವಾಗಿ ಬೆಳೆದುನಿಂತರು. ಉತ್ತರ ಭಾರತದ ಪ್ರವಾಸವನ್ನು ಕೈಗೊಂಡ ಗುರುವರ್ಯರು, ಹಲವು ಊರುಗಳಲ್ಲಿ ಹೊಸ ಗುರುದ್ವಾರಗಳನ್ನು ಮತ್ತು ದೂರದ ಹಿಮಾಲಯದ ತಪ್ಪಲಿನಲ್ಲಿ 'ಕಿರಾತ್ಪುರ್' ಎಂಬ ತಂಗುದಾಣವನ್ನೂ ನಿರ್ಮಿಸಿದರು.
ಜಹಾಂಗೀರನ ನಿಧನದನಂತರ ಷಹ ಜಹಾನನು ಮೊಗಲ್ ದೊರೆಯಾದನು. ಹಲವು ಬಾರಿ ದಂಡೆತ್ತಿ ಬಂದ ಷಹ ಜಹಾನನ ಸೈನ್ಯವನ್ನು ಹಿಮ್ಮೆಟ್ಟಿಸಿದ ಕೀರ್ತಿ ಗುರು ಹರ್ ಗೋವಿಂದರಿಗೆ ಸಲ್ಲುತ್ತದೆ. ಮೊಗಲರ ಉಪಟಳಕ್ಕೆ ಬೇಸತ್ತ ಗುರುಗಳು ತಮ್ಮ ಕಡೆಯ ದಿನಗಳನ್ನು ತಾವೇ ನಿರ್ಮಿಸಿದ ಹಿಮಾಲಯ ತಪ್ಪಲಿನ ತಂಗುದಾಣವಾದ ಕಿರಾತ್ಪುರ್ ನಲ್ಲಿ ಕಳೆದರು. 1644ರಲ್ಲಿ ನಿಧನರಾದ ಗುರು ಹರ್ ಗೋವಿಂದರು ತಮ್ಮ ಮೊಮ್ಮಗನಾದ 'ಹರ್ ರಾಯ್'ರವರನ್ನು ಸಿಖ್ ಧರ್ಮದ ಏಳನೇ ಗುರುವಾಗಿ ನೇಮಿಸಿದರು. ಪಂಜಾಬಿನ ಜನಗಳು ಹುಟ್ಟುಹೋರಾಟಗಾರರು. ಸಿಖ್ ಧರ್ಮದ ಮತ್ತು ಸಿಖ್ಖರ ಪ್ರಾಪಂಚಿಕ ಹಿತಾಸಕ್ತಿಗಳ ರಕ್ಷಣೆಗಾಗಿ ಸಿಖ್ಖರನ್ನು ಹೋರಾಟಕ್ಕೆ ಸಜ್ಜುಗೊಳಿಸಿದವರು ಗುರು ಹರ್ ಗೋವಿಂದರು.
No comments:
Post a Comment