Saturday, 29 March 2025

Ramayana - Akkihebbal

  

*******

ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮಿಬ್ಬರ ಸವಿನಯ ನಮಸ್ಕಾರಗಳು.

ಪರಮಾತ್ಮನ ಶ್ರೀಮದ್ರಾಮಾಯಣದ ಇಂದಿನ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮಿಬ್ಬರ ಇಂದಿನ ಪ್ರಯತ್ನಕ್ಕೆ ತಮ್ಮಗಳ ಆಶೀರ್ವಾದವನ್ನು ಬೇಡುತ್ತೇವೆ. 

 *********

ಹರಿಕಥೆಯ ಶುಭಾರಂಭವನ್ನು ಶ್ರೀ ರಾಮನ ಸ್ಮರಣೆಯೊಂದಿಗೆ ಮಾಡೋಣ. 

ಜಯ ಜಾನಕೀ ಕಾಂತ  ----------------- (ಪೂರ್ತಿ ಹಾಡು)

ಕೆಲವು ಕುಹಕಿಗಳು ಪ್ರಶ್ನೆ ಮಾಡ್ತಾರೆ! ಶ್ರೀ ರಾಮಚಂದ್ರನ  ಅತಿಶಯ ಮಹಿಮೆಗಳೆಲ್ಲಾ ಬರೀ ಸುಳ್ಳು ಕಣ್ರೀ ಅಂತಾರೆ........ ! ಶ್ರೀ ರಾಮ ಅಂದ್ರೆ ಬರೀ ಕಲ್ಲು ಕಣ್ರೀ ಅಂತಾರೆ.....!! ಸಭಿಕರುಗಳೇ......ಸ್ವಲ್ಪ ವಿಚಾರ ಮಾಡೋಣ. 

ಮೊನ್ನೆ ನಮ್ಮ ಉತ್ತರ ಪ್ರದೇಶದ ಪ್ರಯಾಗ್ ರಾಜಿನಲ್ಲಿ 144 ವರ್ಷಗಳನಂತರ  ಮಹಾ ಕುಂಭಮೇಳ ನಡೆಯಿತು.  ಕುಂಭಮೇಳ ನಡೆದ 46 ದಿನಗಳಲ್ಲಿ 66 ಕೋಟಿಗಳಷ್ಟು ಭಕ್ತರು ಬಂದು ಮಂಗಳ ಸ್ನಾನವನ್ನು ಮಾಡಿದ್ದು ಒಂದು ಪವಾಡವೇ ಸರಿ. ಇಡೀ ಪ್ರಪಂಚದಲ್ಲೇ ಎಲ್ಲೂ ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ಜನರುಗಳು ಸೇರಿದ ಉತ್ಸವ  ನಡೆದಿಲ್ಲ. ಹಾಗಾದರೂ ಯಾವುದೇ ದುರ್ಘಟನೆ ನಡೆಯದೆ, ಸಮಾರಂಭ ಯಶಸ್ವಿಯಾಗಿ ನಡೆದಿದ್ದು ಶ್ರೀ ರಾಮಚಂದ್ರನ ಮಹಿಮೆಯೇ ಸರಿ.  

ಇಲ್ಲಿ ನೆರೆದಿರುವ ಭಕ್ತಾದಿಗಳೆಲ್ಲರೂ ಪುಣ್ಯಕ್ಷೇತ್ರವಾದ ಅಕ್ಕಿಹೆಬ್ಬಾಳಿನವರೇ.  ಪುಣ್ಯಕ್ಷೇತ್ರ ಅಕ್ಕಿಹೆಬ್ಬಾಳಿನಲ್ಲಿ ನರಸಿಂಹ ದೇವರ ರಥೋತ್ಸವ ಮತ್ತು ರಾಮೋತ್ಸವಗಳು ಶತ ಶತಮಾನಗಳಿಂದಲೂ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವುದು ಶ್ರೀ ರಾಮನ ಆಶೀರ್ವಾದದಿಂದಲೇ. 

೧೪೦ ಕೋಟಿಗಳಷ್ಟು ಭಾರಿ ಜನಸಂಖ್ಯೆಯುಳ್ಳ ವಿಶ್ವದ ಬೃಹತ್ ರಾಷ್ಟ್ರ ನಮ್ಮ ಭಾರತ. ನಮ್ಮ ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ.  ಜೊತೆಗೆ ಹೊರಗಡೆಯ ಮತ್ತು ಒಳಗಡೆಯ ಶತ್ರುಗಳ ಕಾಟ ಬೇರೆ. ಹಾಗಾದರೂ, ಆರ್ಥಿಕವಾಗಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ರಾಷ್ಟ್ರವೆಂದರೆ ನಮ್ಮ ಭಾರತ. ನಮ್ಮ ನೆರೆ ರಾಷ್ಟ್ರಗಳು ಹಸಿವು, ಹಿಂಸಾಚಾರಗಳಿಂದ ಬಳಲುತ್ತಿರುವಾಗ, ನಮ್ಮ ದೇಶದಲ್ಲಿ ಸುಭಿಕ್ಷ ಹಾಗೂ ಶಾಂತಿ ನೆಲಸಿದೆ. ಇದೆಲ್ಲ ವೆಂಕಟೇಶ್ವರರ ಆಶೀರ್ವಾದದಿಂದಲೇ ನಡೆಯುತ್ತಿದೆ ಎಂಬುದು ನಮ್ಮೆಲ್ಲರ ಅಚಲವಾದ ನಂಬಿಕೆ. 

ಐದು  ವರ್ಷಗಳ ಹಿಂದೆ  ಇಡೀ ಪ್ರಪಂಚವನ್ನೇ ಕೋವಿಡ್ ಮಹಾಮಾರಿ ಕಾಡಿತ್ತು. ಅಮೇರಿಕಾ, ಚೀನಾದಂತ ಬಲಿಷ್ಠ ರಾಷ್ಟ್ರಗಳೇ ತತ್ತರಿಸಿ ಹೋಗಿದ್ವು.  ಆದರೂ ನಮ್ಮ ಭಾರತ ದೇಶ ಮಾತ್ರ ಕೋವಿಡ್ ರೋಗವನ್ನು ಸುಲಭವಾಗೇ  ಗೆದ್ದಿತು. ಏಕಪ್ಪಾ ಅಂದ್ರೆ, ಶ್ರೀ ರಾಮಚಂದ್ರನ  ಆಶೀರ್ವಾದ ನಮ್ಮ ದೇಶದ ಮೇಲಿತ್ತು. 

ಬೋಲೋ ಶ್ರೀ ರಾಮಚಂದ್ರ ಕಿ      ಜೈ 

ಪವನ ಪುತ್ರ ಹನುಮನ ಕಿ              ಜೈ 

ಅಕ್ಕಿಹೆಬ್ಬಾಳ್ ಲಕ್ಷ್ಮೀನರಸಿಂಹ ಕಿ    ಜೈ 

ನಮ್ಮನ್ನು ಮತ್ತು ನಮ್ಮ ದೇಶವನ್ನು ಕ್ಷೇಮದಿಂದ ಯಾವಾಗಲೂ ಕಾಪಾಡುತ್ತಿರುವ ಶ್ರೀ ರಾಮಚಂದ್ರನನ್ನು ಈಗ ಮತ್ತೊಮ್ಮೆ ಸ್ಮರಿಸೋಣ. 

ರಾಮ ರಾಮ ರಾಮ ರಾಮ -------------------( ಪೂರ್ತಿ)


--------------------------------------------------------------------------------------------------------------------------------------------------

 ಶ್ರೋತೃಗಳೇ, ರಾಮಾಯಣ ನಡೆದಿದ್ದು ಯಾವಾಗ?  ರಾಮನ ಜನನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯ ಮಧ್ಯಾನ್ಹ ೧ ಘಂಟೆಗಾಯ್ತು ಅಂತ ವಾಲ್ಮೀಕಿಗಳು ರಾಮಾಯಣದಲ್ಲಿ ಬರೆದಿದ್ದರೆ. ರಾಮನ ಜನ್ಮ ಕುಂಡಲಿಯನ್ನೇ ಬರೆದಿರುವ ವಾಲ್ಮೀಕಿಗಳು ರಾಮ ಜನನದ ಸಮಯದಲ್ಲಿದ್ದ ಗ್ರಹಕೂಟಗಳ ಸ್ಥಾನವನ್ನು ಬರೆದಿಟ್ಟಿದ್ದಾರೆ. ಇಂದಿನ ವಿಜ್ಞಾನಿಗಳು ತಮ್ಮ ಪ್ಲಾನೆಟ್ ಸಾಫ್ಟ್ವೇರ್ ನಲ್ಲಿ  ಶೋಧಿಸಿದಾಗ, ವಾಲ್ಮೀಕಿಗಳು ದಾಖಲಿಸಿರುವ ಗ್ರಹಸ್ಥಾನಗಳು ಕ್ರಿಸ್ತ ಪೂರ್ವ ೫೧೧೪ರ ಏಪ್ರಿಲ್ ೧೦ರಂದು ಇತ್ತು ಎಂದು ಒಪ್ಪಿಕೊಳ್ಳುತ್ತಾರೆ. ಕ್ರಿಸ್ತ ಪೂರ್ವದ ೫೦೦೦ ವರ್ಷ ಪ್ಲಸ್ ಕ್ರಿಸ್ತ ಶಕದ ಇಂದಿನ ೨೦೦೦ ವರ್ಷ……….ಅಂದರೆ ರಾಮಾಯಣ ನಡೆದದ್ದು ಇಂದಿಗೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ. ಆದರೂ ವಿತಂಡ ವಾದಿಗಳು ಇಷ್ಟೇ ಆಧಾರ ಸಾಲದು ಅಂತ ತಕರಾರು ಮಾಡ್ತಾರೆ. ಅಂತಹವರಿಗೆ ನಾನ್ ಹೇಳೋದೆನಂದ್ರೆ, ರಾಮ ಸೇತು ಎನ್ನೋದು ಈಗಲೂ ಇದೆ. ಅದು ಶಿಥಿಲವಾಗಿ ಸಾಕಷ್ಟು ಹಾಳಾಗಿರಬಹುದು. ಆದರೂ  ನಮ್ಮ ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ತುದಿಯವರೆಗೆ ಇರುವ ರಾಮಸೇತುವನ್ನು ಬ್ರಿಟಿಷರು ಆಡಮ್'ಸ್ ಬ್ರಿಡ್ಜ್ ಎಂದು ಕರೆದರು. ಕಾರ್ಬನ್ ಡೇಟಿಂಗ್ ಅನ್ನೋ ತಂತ್ರದ ಪ್ರಕಾರ ರಾಮಸೇತುಗೆ ೭೦೦೦ ವರ್ಷಗಳಾಗಿರಬಹುದು ಎಂಬುದನ್ನು ಇಂದಿನ ವಿಜ್ಞಾನಿಗಳು ಒಪ್ಪುತ್ತಾರೆ. ರಾಮಾಯಣ ನಡೆದ್ದದ್ದು ನಿಜ, ರಾಮಾವತಾರವಾಗಿದ್ದು ೭೦೦೦ ವರ್ಷಗಳ ಹಿಂದೆ ಎಂಬುದಕ್ಕೆ ರಾಮ ಸೇತು ಮತ್ತೊಂದು ಆಧಾರ. 

ಇಂತಹ ಮಹಾಮಹಿಮೆಯುಳ್ಳ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರ ಹೇಗೆ ಸ್ವಾಗತಿಸಿದ್ದಾರೆ ಎಂದು ಈಗ ಕೇಳೋಣ. 

ರಾ, ರಾ, ರಾಜೀವಲೋಚನ  ರಾಮ ---------------------------------


-----------------------------------------------------------------------------------------------------------

ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||

ಶ್ರೋತೃಗಳೇ, ನಾನೀಗ ಪಠಿಸಿದ್ದು ಗಾಯತ್ರಿ ಮಂತ್ರ. ರಾಮಾಯಣದ ಮಧ್ಯ ಗಾಯತ್ರಿ ಮಂತ್ರ ಏಕೆ ಬಂತು? ಗಾಯತ್ರಿ ಮಂತ್ರಕ್ಕೂ, ರಾಮಾಯಣಕ್ಕೂ ಏನು ಸಂಬಂಧ? ರಾಮಾಯಣ ಮುಂಚೆ ಬಂತೋ? ಅಥವಾ ಗಾಯತ್ರಿ ಮಂತ್ರ ಮುಂಚೆ ಬಂತೋ? ಎಂಬ ಅನುಮಾನಗಳು ನಿಮ್ಮಿಗಳನೀಗ ಕಾಡುತ್ತಿರಬಹುದು. 

ಗಾಯತ್ರಿ ಮಂತ್ರಕ್ಕೂ ರಾಮಾಯಣಕ್ಕೂ ಇರುವ ಸಂಬಂಧವೇ ರಾಮಾಯಣದ ಮತ್ತೊಂದು ರಹಸ್ಯ. 

ಗಾಯತ್ರಿ ಮಂತ್ರ ರಾಮಾಯಣಕ್ಕಿಂತ ಪ್ರಾಚೀನವಾದುದು. ಆತ್ಮಲಿಂಗವನ್ನು ಪ್ರಮೇಶ್ವರನಿಂದ ಪಡೆದುಕೊಂಡ ರಾವಣ, ಲಂಕೆಗೆ ಹಿಂತಿರುಗುವಾಗ ಗಾಯತ್ರಿ ಮಂತ್ರದ ಪಠಣದೊಂದಿಗೆ ಸಂಧ್ಯಾವಂದನೆಯನ್ನು ಮಾಡಿದ್ದನ್ನು ನಾವು ಕೇಳಿದ್ದೇವೆ. 

ಗಾಯತ್ರಿ ಮಂತ್ರದ ಅರ್ಥವೇನು?

ಗಾಯತ್ರಿ ಮಂತ್ರ ಪ್ರತ್ಯಕ್ಷ ದೈವ ಸೂರ್ಯನಾರಾಯಣನ ಪ್ರಾರ್ಥನೆ. ಮಹಾ ತೇಜಸ್ಸಿನಿಂದ ಕೂಡಿರುವ ಓ, ಸೂರ್ಯನಾರಾಯಣ, ನಿನ್ನ ತೇಜಸ್ಸು ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸಲಿ, ಚುರುಕುಗೊಳಿಸಲಿ, ಧಿಯೋ ಯೋ ನ: ಪ್ರಚೋದಯಾತ್ ಎಂದರ್ಥ. ಇಂದು ನಾವೆಲ್ಲರೂ ಪ್ರತಿದಿನ ಮಾಡುವ ಸೂರ್ಯನಾರಾಯಣನ ಸ್ಮರಣೆ. 

ಸಭಿಕರೆ, ನೋಡಿ ಗಾಯತ್ರಿ ಮಂತ್ರದ ಉದಾರ ಧ್ಯೇಯವನ್ನು! ನನ್ನ ಬುದ್ಧಿಯನ್ನು ಉದ್ದೀಪನಗೊಳಿಸು ಎನ್ನುವ ಸ್ವಾರ್ಥ ಅದರಲಿಲ್ಲ. ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸು, ಇಡೀ ಸಮಾಜವನ್ನೇ ಜಾಗೃತಗೊಳಿಸು ಎಂಬ ಉದಾರ ಧ್ಯೇಯ ಗಾಯತ್ರಿ ಮಂತ್ರದ್ದು.  

ತತ್ಸವಿತುರ್ವರೇಣ್ಯಂ------------------------------------------------------------------------------------------------

ಎಂಬಲ್ಲಿಂದ ಎಣಿಸಿದರೆ ಗಾಯತ್ರಿ ಮಂತ್ರದಲ್ಲಿ ೨೪ ಅಕ್ಷರಗಳಿವೆ.  ವಾಲ್ಮೀಕಿ ರಾಮಾಯಣದಲ್ಲಿ ೨೪೦೦೦ ಶ್ಲೋಕಗಳಿವೆ. ರಾಮಾಯಣದ ಮೊದಲ ಶ್ಲೋಕ ಯಾವುದು? 

ತಪ: ಸ್ವಾಧ್ಯಾಯ ನಿರತ೦
ತಪಸ್ವೀ ವಾಗ್ವಿದಾಂ ವರ೦
ನಾರದಂ ಪರಿಪಪ್ರಚ್ಛ 
ವಾಲ್ಮೀಕಿರ್ಮುನಿಪುಂಗವ೦

ರಾಮಾಯಣದ ಮೊದಲ ಶ್ಲೋಕದ ಮೊದಲ ಅಕ್ಷರ 'ತ'

ಹಾಗೆಯೇ ಹುಡುಕುತ್ತಹೋದರೆ ರಾಮಾಯಣದ ೧೦೦೧ನೇ ಶ್ಲೋಕದ ಮೊದಲ ಅಕ್ಷರ 'ತ್ಸ'. 

೨೦೦೧ನೇ ಶ್ಲೋಕದ ಮೊದಲ ಅಕ್ಷರ 'ವಿ'

ಹೀಗೆ ರಾಮಾಯಣದ ಪ್ರತಿ ಒಂದು ಸಾವಿರದ ಮೊದಲ ಶ್ಲೋಕದ ಮೊದಲ ಅಕ್ಷರಗಳನ್ನು ನಾವುಗಳು ಆರಿಸಿಕೊಳ್ಳುತ್ತಾಹೋದರೆ ನಮಗೆ ೨೪ ಅಕ್ಷರಗಳು ಸಿಕ್ಕುತ್ತವೆ. ಆ ೨೪ ಅಕ್ಷರಗಳನ್ನು ಅದೇ ಕ್ರಮದಲ್ಲಿ ಜೋಡಿಸಿ ನೋಡಿದರೆ ನಮಗೆ ಗಾಯತ್ರಿ ಮಂತ್ರ ದೊರಕ್ಕುತ್ತದೆ. ಹೀಗೆ ಗಾಯತ್ರಿ ಮಂತ್ರ ಎಂಬ ಅನರ್ಘ್ಯ ರತ್ನವನ್ನು ವಾಲ್ಮೀಕಿಗಳು  ತಮ್ಮ ರಾಮಾಯಣದಲ್ಲಿ ಅಡಗಿಸಿಟ್ಟಿದ್ದಾರೆ 

ಮೊದಲಕ್ಷರವನ್ನು ನಾವುಗಳು ಆರಿಸಿಕೊಂಡ ಆ ೨೪ ಶ್ಲೋಕಗಳನ್ನು ನಾವು ಪಠಿಸಿದರೆ ಅದೇ 'ಗಾಯತ್ರಿ ರಾಮಾಯಣ.'   ಗಾಯತ್ರಿ ರಾಮಾಯಣದ ೨೪ ಶ್ಲೋಕಗಳನ್ನು ನಾವು ಪಠಿಸಿದರೆ, ಇಡೀ ರಾಮಾಯಣವನ್ನು ಪಠಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವಾಲ್ಮೀಕಿಗಳು ನಮ್ಮೆಲ್ಲರಿಗೂ ತಿಳಿಸಿದ್ದಾರೆ. 

-------------------------------------------------------------------------------------------------------------------------

ರಾಮಾಯಣ ಪಠಿಸುವುದು ಜನಸಾಮಾನ್ಯರಿಗೆ ಕಷ್ಟ. ೨೪,೦೦೦ ಶ್ಲೋಕಗಳು. 

ಗಾಯತ್ರಿ ರಾಮಾಯಣವನ್ನು ಪಠಿಸುವುದೂ ಕಷ್ಟ. ೨೪ ಶ್ಲೋಕಗಳು, ಅದೂ ಸಂಸ್ಕೃತದಲ್ಲಿ. 

ಪುರಂದರ ದಾಸರು ನಮ್ಮಂತಹವರಿಗೆ ಹೇಳಿದ್ದಾರೆ. ೨೪,೦೦೦ ಶ್ಲೋಕವೂ ಬೇಡ, ೨೪ ಶ್ಲೋಕಗಳೂ ಬೇಡ, ನಾನು ಎರಡಕ್ಷರದ ಒಂದು ಮಂತ್ರ ಹೇಳಿಕೊಡುತ್ತೇನೆ, ಕಲಿತುಕೊಳ್ಳುವಿರಾ ಎಂದು ನಮ್ಮನ್ನು ಕೇಳಿದ್ದಾರೆ. ಯಾವುದು ಆ ಮಂತ್ರ? 

ರಾಮ ಮಂತ್ರವ ಜಪಿಸೋ, ಹೇ ಮನುಜ (ಪೂರ್ತಿ ಹಾಡು) 

--------------------------------------------------------------------------------------------------------------------------


ಪ್ರತಿದಿನ ನಾವೆಲ್ಲ ಈ ರಾಮಸ್ತೋತ್ರವನ್ನ ಜಪ ಮಾಡೇ ಮಾಡ್ತೇವೆ. 

ರಾಮಾಯ ರಾಮಭದ್ರಾಯ 

ರಾಮಚಂದ್ರಾಯ ವೇದಸೇ 

ರಘುನಾಥಾಯ ನಾಥಾಯ 

ಸೀತಾಯ ಪತೆಯೇನಮಃ 

ಇದು ದಶರಥನ ಅರಮನೆಯಲ್ಲಿ ಚಾಲ್ತಿಯಲ್ಲಿದ್ದಂತಹ ಶ್ಲೋಕ. "ರಾಮಾಯ ",  ರಾಮನನ್ನು ಪ್ರೀತಿಯಿಂದ "ರಾಮ" ಅಂತ ಕರೆಯುತ್ತಿದ್ದವರು  ಮಹಾರಾಜಾ ದಶರಥ. ರಾಮಭದ್ರಾ ಅಂತ ರಾಮನನ್ನು ಕರೆಯುತ್ತಿದ್ದವರು ತಾಯಿ ಕೌಸಲ್ಯೆ. ರಾಮಭದ್ರ ಎಂದರೆ ರಾಮ ಎಲ್ಲರಿಗೂ ಮಂಗಳವನ್ನು ಉಂಟು ಮಾಡುವವನು ಎಂದು ಅರ್ಥ.  ರಾಮಚಂದ್ರಾಯ____________,  ರಾಮನನ್ನು ರಾಮಚಂದ್ರ ಎಂದು ಮೊದಲು ಕರೆದವರು ಯಾರು? ನಿಮಗೆಲ್ಲಾ ಆಶ್ಚರ್ಯವಾಗಬಹುದು, ಅದು ಮಂಥರೆ. ಮಂಥರೆ ಮಗುವಾಗಿದ್ದ ರಾಮನ್ನನ್ನು  ಬಹುವಾಗಿ ಪ್ರೀತಿಸುತ್ತಿದ್ದದ್ದು ಹಲವರಿಗೆ ಗೊತ್ತಿಲ್ಲದ ವಿಷಯವಿರಬಹುದು. 

ಒಮ್ಮೆ ರಾಮ ಇನ್ನು ಮೂರು ವರ್ಷದ ಮಗುವಾಗಿದ್ದಾಗ, ಹುಣ್ಣಿಮ್ಮೆಯ ಒಂದು ದಿನ ನನಗೆ ಚಂದ್ರ ಬೇಕು, ನನಗೆ ಚಂದ್ರ ಬೇಕು ಅಂತ ರಚ್ಚೆ ಹಿಡಿದು ಅಳುವುದಕ್ಕೆ ಶುರುಮಾಡಿದ್ದನಂತೆ. ಮೂರು ಜನ ಮಹಾರಾಣಿಯರು ಮತ್ತು ಅರಮನೆಯ ಸಖಿಯರೆಲ್ಲ ರಾಮನನ್ನು ಸಮಾಧಾನಪಡಿಸಲಾಗದೆ ಕಂಗಾಲಾಗಿಹೋಗಿದ್ದರಂತೆ. ಆಗ ಜಾಣೆಯಾದ ಮಂಥರೆ ಬೋಗುಣಿಯೊಂದರಲ್ಲಿ ನೀರನ್ನು ತುಂಬಿ, ಆ ನೀರಿನಲ್ಲಿ ಚಂದ್ರನ ಪ್ರತಿಬಿಂಬವನ್ನು ರಾಮನಿಗೆ ತೋರಿಸಿದಾಗ ರಾಮ ಸಮಾಧಾನಗೊಂಡನಂತೆ. ಸಂತೋಷ ಹಾಗು ಹೆಮ್ಮೆಯಿಂದ ಮಂಥರೆ ಮಗು ರಾಮನನ್ನು ಎತ್ತಿಕೊಳ್ಳಲು ಹೋದಾಗ, ಮಹಾರಾಣಿ ಕೌಶಲ್ಯ ಅವಳನ್ನು ತಡೆದಳಂತೆ. "ವಕ್ರ ಹೆಂಗಸೇ, ವಿಕಾರವಾದವಳೇ" ಎಂದು ಕೌಸಲ್ಯೆ ಮಂಥರೆಯನ್ನು ಹಿಯ್ಯಾಳಿಸಿದಳಂತೆ. ಆ ಅವಮಾನದ ಸೇಡನ್ನು ಮನಸ್ಸಿನಲ್ಲೇ ಇಟ್ಟುಕೊಂಡ ಮಂಥರೆ ಸಮಯಕ್ಕಾಗಿ ಕಾದು, ರಾಮನನ್ನು ಕಾಡಿಗೆ ಕಳುಹಿಸಿವಂತೆ ಮಾಡಿದ್ದು ನಿಮಗೆಲ್ಲ ತಿಳಿದ ವಿಷಯವೇ. 

ಹಾಗಂತ ನಾವು ಮಂಥರೆ-ಕೈಕಯೀಯರನ್ನು ಕೆಟ್ಟವರು ಅಂತ ಹೀಯಾಳಿಸಿದರೆ, ಅದು ತಪ್ಪು. ಮಂಥರೆ-ಕೈಕಯೀಯರು ಸಂಚು ಮಾಡದೇ ರಾಮನನ್ನು ಅಯೋಧ್ಯೆಯಲ್ಲೇ ಇರಿಸಿಕೊಂಡಿದ್ದಾರೆ, ರಾಮ ರಾಮ ಆಗ್ತಾನೇ ಇರಲಿಲ್ಲ. ರಾಮಾಯಣ ನಡೆಯುತ್ತಲೇ ಇರಲಿಲ್ಲ, ರಾವಣನ ಸಂಹಾರ ಆಗುತ್ತಲೇ ಇರಲಿಲ್ಲ. ಆದುದರಿಂದ ಮಂಥರೆ-ಕೈಕಯೀಯರು ಪ್ರಾತಃಸ್ಮರಣೀಯರು ಎಂದರೆ ತಪ್ಪಲ್ಲ. 


ಈಗ ಮತ್ತೊಂದು ಉಪಕಥೆ ನನ್ನ ತಂಗಿ ಪ್ರಜ್ಞಾಳಿಂದ. 

------------------------------------------------------------------------------------------------------

ಅಂತಹ ಮಹಾಮಹಿಮ ಶ್ರೀ ರಾಮನ ಸ್ಮರಣೆಯನ್ನು ಈಗ ಮಾಡೋಣ. 

ಶ್ರೀ ರಾಮಚಂದ್ರ ಕೃಪಾಳು ಭಜಮನಾ...... 

------------------------------------------------------------------

--------------------------------------------------------------------------------------------------------

ರಾಮನ ಬಾಲಲೀಲೆಗಳ ಸರಣಿಯನ್ನು ಮುಂದುವರೆಸುತ್ತಾ, ರಾಮನಿಗೆ ಬಾಲ್ಯ ಸ್ನೇಹಿತರು ಯಾರಾದರೂ ಇದ್ದಾರೆ ಎಂಬ ರಹಸ್ಯವನ್ನು ಪರಿಶೀಲಿಸೋಣ. ಕೃಷ್ಣನಿಗೋ ಇಡೀ ನಂದಗೋಕುಲದ ಭರ್ತಿ ಅವನಿಗೆ ಸ್ನೇಹಿತರು. ಮಕರಂದ, ಕುಚೇಲ ಇವರೆಲ್ಲಾ ಕೃಷ್ಣನ ಬಾಲ್ಯ ಸ್ನೇಹಿತರು.  ಜೊತೆಗೆ ರಾಧೆ ಎಂಬ ಗರ್ಲ್ ಫ್ರೆಂಡ್ ಬೇರೆ. ರಾಮನ ಬಾಲ್ಯ ಸ್ನೇಹಿತರು ಯಾರು?  ಇದೂ ಒಂದು ರಾಮಾಯಣದ ರಹಸ್ಯವೇ ಸರಿ. 

ಅವನೇ ಗುಹ, ಬೆಸ್ತರ ರಾಜ. ಗಂಗಾನದಿಯನ್ನು ದಾಟಲು ರಾಮನಿಗೆ ಸಹಾಯ ಮಾಡಿದ ಗುಹ ರಾಮನ ಬಾಲ್ಯ ಸ್ನೇಹಿತ.  ಈ ಮಾತನ್ನು ನಾನು ಹೇಳುತ್ತಿಲ್ಲ, ಸಾಕ್ಷಾತ್ ವಾಲ್ಮೀಕಿಗಳೇ ಹೇಳಿದ್ದಾರೆ. 

ತ್ರ ರಾಜ ಗುಹೋ ನಾಮ 

ರಾಮಸ್ಯಾತ್ಮಸಮ: ಸಖಾ 

ನಿಷಾದ ಜಾತ್ಯೋ ಬಲವಾನ್ 

ಸ್ಥಪತಿಶ್ಚೇತಿ ವಿಶ್ರುತಃ 

ರಾಮಸ್ಯಾತ್ಮಸಮ: ಸಖಾ-----------ಎಂದರೆ ರಾಮನ ಬಾಲ್ಯ ಸ್ನೇಹಿತ ಗುಹ ಎಂಬುದಾಗಿ ವಾಲ್ಮೀಕಿಗಳೇ ಹೇಳಿದ್ದಾರೆ. 

ಗಂಗಾ ನದಿಯನ್ನು ದಾಟಿಸಿದ ಗುಹನಿಗೆ ಎಷ್ಟು ದಕ್ಷಿಣೆಯನ್ನು ಕೊಡಬೇಕೆಂದು ರಾಮ ಕೇಳಿದಾಗ, ಗುಹ ಹೇಳಿದ್ದು ಒಂದೇ ಮಾತು.  ಗಂಗಾನದಿಯನ್ನು ನಾನು ನಿನಗೆ ದಾಟಿಸಿದ್ದೇನೆ, ಜೀವನವೆಂಬ ಭವಸಾಗರವನ್ನು, ರಾಮ ನನ್ನನ್ನು ನೀನು ದಾಟಿಸಬೇಕು ಎಂದು ಕೇಳಿಕೊಂಡಾಗ, ಬೆಸ್ತನಾದರೂ ಗುಹ ಎಷ್ಟು ಜ್ಞಾನಿಯಾಗಿದ್ದನೆಂಬುದು ನಮಗೆ ತಿಳಿಯುತ್ತದೆ. 

ಭವ ಸಾಗರವನ್ನು ದಾಟಿಸುವ ನಮ್ಮನ್ನು ರಕ್ಷಿಸಬಲ್ಲ ಏಕೈಕ ದೈವ ಶ್ರೀ ರಾಮ. ಅಂತಹ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರು ಹೇಗೆ ಪ್ರಾರ್ಥಿಸಿದ್ದಾರೆ ಎಂಬುದನ್ನು ಈಗ ಕೇಳೋಣ. 

ಬ್ರೋಚೇವಾರೆ ವರೂರ (ಪೂರ್ತಿ ಹಾಡು)

-------------------------------------------------------------------------------------------------------

ರಾಮೋ ವಿಗ್ರಹವಾನ್ ಧರ್ಮ:

ಇಂದೊಂದು ರಾಮಾಯಣದ ಮೇರು ವಾಕ್ಯ. 'ರಾಮ ಧರ್ಮದ ಅಂದರೆ ಸನ್ನಡತೆಯ ಮೂರ್ತಿ ರೂಪ, rama is the very embodiment of dharma'  ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು ಎಂಬುದೇ ಒಂದು ದೊಡ್ಡ ರಹಸ್ಯ. 

ಶ್ರೋತೃಗಳೇ ನಿಮಗೆ ಆಶ್ಚರ್ಯವಾಗ ಬಹುದು. ಈ ಮಾತನ್ನು ಮಾರೀಚ ರಾವಣನಿಗೆ ಹೇಳಿದ್ದು. 

ರಾಮೋ ವಿಗ್ರಹವಾನ್ ಧರ್ಮ:

ಸಾಧುಹು ಸತ್ಯ ಪರಾಕ್ರಮಃ 

ರಾಜ ಸರ್ವಸ್ಯ ಲೋಕಸ್ಯ 

ದೇವಾನಿವ ವಾಸವಃ 

ಸೀತೆಯ ಅಪಹರಣದ ಸಂಚು ಮಾಡಿದ ರಾವಣ, ತನ್ನ ಮಾವ ಮಾರೀಚನ ಸಹಾಯಕ್ಕಾಗಿ ಆಗ್ರಹಿಸುತ್ತಾನೆ. ಸೀತೆಯ ಮುಂದೆ ಚಿನ್ನದ ಮಾಯಾಮೃಗವಾಗಿ ಕಾಣಿಸಿಕೊಳ್ಳುವಂತೆ ಆದೇಶಿಸುತ್ತಾನೆ. 

ವಿಶ್ವಾಮಿತ್ರ  ಯಾಗ ಸಂರಕ್ಷಣೆಯ ಸಮಯದಲ್ಲಿ, ರಾಮನ ಬಾಣದ ಹೊಡೆತಕ್ಕೆ ತತ್ತರಿಸಿ  ನೂರು ಯೋಜನ ಹಾರಿಬಿದ್ದ ಮಾರೀಚ ಈಗ ಸನ್ಯಾಸಿಯಾಗಿ ದಂಡಕಾರಣ್ಯದಲ್ಲಿ ತಪಸ್ಸನ್ನು ಮಾಡುತ್ತಿರುತ್ತಾನೆ. ದುಷ್ಟ ರಾವಣನ ಆಗ್ರಹವನ್ನು ಕೇಳಿ, ಮಾರೀಚ ರಾವಣನ ನ್ನು ಎಚ್ಚರಿಸುತ್ತಾ...... 'ರಾಮ ಧರ್ಮದ ಮೂರ್ತರೂಪ. ಅವನು ಮಹಾ ಪರಾಕ್ರಮಿ. ಅವನೊಂದಿಗಿನ ವೈರದಿಂದ ನೀನು ನಾಶವಾಗಿ ಹೋಗುತ್ತೀಯಾ, ಜೋಕೆ. ಸೀತೆಯನ್ನು ಅಪಹರಿಸುವ ಸಂಚು ಬೇಡ' ಎಂದು ಉಪದೇಶಿಸುತ್ತಾನೆ. ಕೋಪಗೊಂಡ ರಾವಣ 'ನನ್ನೊಡನೆ ಸಹಕರಿಸು, ಇಲ್ಲವೇ ಸಾಯಲು ಸಿದ್ಧನಾಗು' ಎಂದು ಮಾರೀಚನನ್ನು ಗದರಿಸುತ್ತಾನೆ. ಪರಿಸ್ಥಿತಿಯನ್ನು ಅರಿತುಕೊಂಡ ಮಾರೀಚ 'ರಾವಣ......  ನಿನ್ನೊಡನೆ ಸಹಕರಿಸದಿದ್ದರೆ ನಿನ್ನ ಕೈಯಿಂದ ಸಾಯುತ್ತೇನೆ.  ನಿನ್ನೊಡನೆ ಸಹಕರಿಸಿದರೆ ಸಾಕ್ಷಾತ್ ರಾಮನ ಕೈಯಲ್ಲಿ ಹತ್ಯೆಗೊಂಡು ಸ್ವರ್ಗವನ್ನು ಸೇರುತ್ತೇನೆ. ರಾಮನ ಕೈಯಲ್ಲಿ ಸಾಯುವುದೇ ಮೇಲೆ' ಎಂದು ರಾವಣನ ಸಂಚಿಗೆ ಒಪ್ಪಿಕೊಳ್ಳುತ್ತಾನೆ. 


---------------------------------------------------------------------------------------------------------------


ರಾಮಾಯಣದಲ್ಲಿ ರಾಮನನ್ನು ಬಿಟ್ಟರೆ ಮತ್ತೊಬ್ಬ ಮಹಾನ್ ದೈವ  ಅಂದರೆ ನಮ್ಮ ಆಂಜನೇಯ. ಆಂಜನೇಯನ ಸ್ಮರಣೆ ಮಾಡದೇ ಇದ್ದರೆ ರಾಮಾಯಣವೇ ಅಪೂರ್ಣ ಎಂಬುದು ನಮ್ಮೆಲ್ಲರ ಭಾವನೆ. ರಾಮನ ಬಂಟ ಹನುಮಂತನಿಲ್ಲದೆ ಹೊಗ್ಗಿದ್ರೆ ಶ್ರೀ ರಾಮ ರಾವಣವನ ಸಂಹಾರವನ್ನ ಮಾಡೋಕೆ ಆಗ್ತಾ ಇರಲಿಲ್ಲ ಎಂಬುದೂ ನಮಗೆಲ್ಲ ಗೊತ್ತು. ಸ್ವಲ್ಪ ನೆನಸಿಕೊಳ್ಳೋಣ.... 

ವಾನರ ಸೇನೆ ಸೀತೆಯನ್ನು ಹುಡುಕುತ್ತಾ ರಾಮೇಶ್ವರಂ ನ ಸಮುದ್ರ ತೀರದಲ್ಲಿ ಬಂದು ನಿಂತಿರುತ್ತದೆ. ನೂರು ಯೋಜನದಷ್ಟು ದೂರವಿದ್ದ ಲಂಕೆಯನ್ನು ಯಾರು ಹಾರಿ ತಲುಪಬಲ್ಲರು ಎಂಬ ಚರ್ಚೆ ಆಗ್ತಾ ಇರುತ್ತೆ. ಆಗ ನಮ್ಮ ಹನುಮಂತ ಯಾವ ಜಂಬವನ್ನು ಕೊಚ್ಚಿಕೊಳ್ಳದೆ, ಒಂದು ಮೂಲೇಲಿ ಕೂತಿರ್ತಾನೆ. ಆಗ ಹಿರಿಯರಾದ ಜಾಂಬವಂತರು ಹನುಮನ ಹತ್ತಿರ ಬಂದು ಹೇಳ್ತಾರೆ. "ಹನುಮಾ, ನೀನು ಪವನ ಪುತ್ರ…….., ಚಿರಂಜೀವಿ.  ಬಾಲಕನಾಗಿದ್ದಾಗಲೇ ಸೂರ್ಯನನ್ನು ಒಂದು ಹಣ್ಣು ಎಂದು ತಿಳಿದ, ಅದನ್ನು ಪಡೆಯಲು ಆಕಾಶಕ್ಕೆ ಹಾರಿದ್ದ ಧೀರ ನೀನು. ಸೀತಾನ್ವೇಷಣೆಯ ಕಾರ್ಯ ನಿನ್ನಿಂದ ಮಾತ್ರ ಸಾಧ್ಯ" ಎಂದು ಹನುಮಂತನನ್ನು ಹುರಿದುಂಬಿಸುತ್ತಾರೆ. ಉತ್ತೇಜಿತನಾದ ಹನುಮಂತ ಒಂದು ದೊಡ್ಡ ಬೆಟ್ಟದ ಮೇಲೆ ನಿಂತು ತನ್ನ ದೇಹವನ್ನು ಬೃಹದಾಗಿ ಬೆಳಸಿ ಒಮ್ಮೆ ಘರ್ಜಿಸುತ್ತಾನೆ. ಅಲ್ಲಿದ್ದವರಿಗೆಲ್ಲ ಹನುಮಂತನ ವಿಶ್ವರೂಪದ ದರ್ಶನವೇ ಆಯ್ತು ಅಂತಲೇ ಹೇಳ್ಬಹುದು. 

ಘಟಿಕಾಚಲದಿ ನಿಂತ ಶ್ರೀ ಹನುಮಂತ 


ಸೀತಾಮಾತೆಯನ್ನು ಹುಡುಕುವ ಸಲುವಾಗಿ ಗಗನಕ್ಕೆ ನೆಗೆದು ಸಮುದ್ರವನ್ನು ದಾಟುವ ಭರದಲ್ಲಿದ್ದ ಹನುಮಂತನಿಗೆ ಎದುರಾದವಳು ಸುರಸೆ ಎಂಬ ನಾಗಮಾತೆ. ದೇವತೆಗಳು ಅವನನ್ನು ತನಗೆ ಆಹಾರವಾಗಿ ಇತ್ತಿದ್ದಾರೆಂದು ತಿಳಿಸಿ, ತನ್ನ ಬಾಯೊಳಗೆ ಪ್ರವೇಶಮಾಡಲು ಹೇಳುತ್ತಾಳೆ. ಹನುಮಂತನು ಆಕೆಯ ಸವಾಲನ್ನು ಸ್ವೀಕರಿಸಿ ಚಮತ್ಕಾರದಿಂದ ಅವಳ ಬಾಯನ್ನು ಹೊಕ್ಕು ಹೊರಬಂದು ಜಯಶೀಲನಾಗುತ್ತಾನೆ. ತನ್ನ ಆಕಾಶಯಾನವನ್ನು ಮುಂದುವರೆಸುತ್ತಾನೆ.


ಆನಂತರ, ಮತ್ತೊಬ್ಬ ರಕ್ಕಸಿ ಸಿಂಹಿಕೆ ಹನುಮಂತನಿಗೆ ವಿಘ್ನವೊಡ್ಡುತ್ತಾಳೆ. ತನ್ನ ಇರವಿನ ಸುಳಿವೇ ಕೊಡದೆ, ಕುಟಿಲತೆಯಿಂದ ಹನುಮಂತನ ನೆರಳನ್ನು ಕಬಳಿಸಿ ನುಂಗಲು ಹವಣಿಸುತ್ತಾಳೆ.  ಹನುಮಂತ ಆಕೆಯನ್ನು ಸಂಹರಿಸಿ ವಿಜಯಶಾಲಿಯಾಗಿ ಲಂಕೆಯತ್ತ ಮುನ್ನುಗ್ಗುತ್ತಾನೆ.


ಕೊನೆಯಲ್ಲಿ ಅವನು ರಾವಣನಗರಿಯನ್ನು ಪ್ರವೇಶ ಮಾಡುವಾಗ ದ್ವಾರಪಾಲಕಿ ಲಂಕಿಣಿಯನ್ನು ಎದುರಿಸುತ್ತಾನೆ. ತನ್ನನ್ನು ಸೋಲಿಸದೆ ಒಳಗೆ ಪ್ರವೇಶವಿಲ್ಲವೆಂದು ಹೇಳಿ ಆಕೆ ಹನುಮಂತನ ಮೇಲೆ ಆಕ್ರಮಣ ಮಾಡಿದಾಗ, ಅವನು ಆಕೆಗೆ ಸೂಕ್ತವಾಗಿ  ಪ್ರಹಾರಮಾಡಿ ಸೋಲಿಸುತ್ತಾನೆ; ಮತ್ತು ಲಂಕಾಪ್ರವೇಶ ಮಾಡುತ್ತಾನೆ.

ಅಶೋಕವನದಲ್ಲಿದ ಸೀತಾದೇವಿಯನ್ನ ಹನುಮಂತ ಭೇಟಿ ಮಾಡಿ ಅವಳಿಗೆ ಶ್ರೀ ರಾಮ ನೀಡಿದ್ದ ಮುದ್ರೆಯುಂಗುರವನ್ನು ನೀಡಿದಾಗ ಸೀತೆಗೆ ನಂಬಿಕೆ ಬರುತ್ತದೆ. ಸೀತೆಯ ದುಃಖ ನಿವಾರಣೆಯಾಗುತ್ತೆ. ಸೀತೆ ತನ್ನ ಗುರುತಿಗಾಗಿ ರಾಮನಿಗೆ ಕೊಡಲು ತನ್ನ ಚೂಡಾಮಣಿಯನ್ನು ಹನುಮಂತನಿಗೆ ಕೊಡುತ್ತಾಳೆ. 

ಇಷ್ಟಕ್ಕೆ ಸಮಾಧಾನಗೊಳ್ಳದ ಹನುಮಂತ ರಾವಣನ ಸೇನೆಯೊಡನೆ ಏಕಾಂಗಿಯಾಗಿ ಹೋರಾಡಿ ರಾವಣನ ಆಸ್ಥಾನವನ್ನ ತಲಪುತ್ತಾನೆ.  ರಾವಣನ ಆಜ್ಞೆಯ ಮೇರೆಗೆ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಲಾಗುತ್ತದೆ. ಧೀರನಾದ ಹನುಮಂತನನ್ನು ಬೆಂಕಿ ಏನೂ ಮಾಡುವುದಿಲ್ಲ. ತನ್ನ ಬಾಲಕ್ಕೆ ಹಚ್ಚಿದ್ದ ಬೆಂಕಿಯಿಂದ ಆಂಜನೇಯ ಇಡೀ ಲಂಕಾ ಪಟ್ಟಣವನ್ನೇ ಸುಟ್ಟು  ಬೂದಿ ಮಾಡುತ್ತಾನೆ. ನೋಡಿದ್ರ ಹೇಗಿದೆ ನಮ್ಮ ಹನುಮಂತನ ಪರಾಕ್ರಮ?

ಪವನ ಪುತ್ರ ಹನುಮಾನಾಕಿ........ ಜೈ 

ಅಂಜನಿ ಪುತ್ರ  ಹನುಮಾನಾಕಿ ---------------ಜೈ 

ಶ್ರೀ ರಾಮಧೂತ ಹನುಮಾನಾಕಿ........ ಜೈ 

ಹನುಮಂತನ ಪರಮಭಕ್ತರಲ್ಲಿ ಅಗ್ರಗಣ್ಯರು ಅಂದ್ರೆ ನಮ್ಮ ತುಳಸಿದಾಸರು.  ನಿಮಗೆಲ್ಲಾ ತಿಳಿದಿರುವಂತೆ ತುಳಸಿದಾಸರು "ರಾಮಚರಿತ ಮಾನಸ" ಎಂಬ ಮಹಾನ್ ರಾಮಾಯಣ ಕಾವ್ಯವನ್ನು ಬರೆದ ಮಹಾನ್ ರಾಮಭಕ್ತರು. ರಾಮಚರಿತ ಮಾನಸ "ಅವ್ಧಿ" ಭಾಷೆಯಲ್ಲಿ ಇದೆ.  ಅವ್ಧಿ ಎಂಬುದು ಹಿಂದಿಯ ಒಂದು ಉಪಭಾಷೆ. ಅಯೋಧ್ಯಾ ಪ್ರಾಂತ್ಯದ ಸುತ್ತಾ ಮಾತನಾಡುವ ಭಾಷೆಯೇ ಅವ್ಧಿ ಭಾಷೆ. 

ತುಳಸಿ ದಾಸರು ತಮ್ಮ ಇಡೀ ಜೀವಿತ ಕಾಲವನ್ನು ಕಳೆದದ್ದು ವಾರಾಣಸಿಯಲ್ಲಿ.  ಅವರು ತಮ್ಮ ರಾಮಚರಿತ ಮಾನಸವನ್ನು ರಚಿಸಿದ್ದು ವಾರಣಾಸಿಯಲ್ಲೇ. ಹನುಮಂತನ ಪರಮಭಕ್ತರಾದ ತುಳಸಿದಾಸರಿಗೆ ಸಾಕ್ಷಾತ್ ಹನುಮಂತನೇ ಪ್ರತ್ಯಕ್ಷನಾಗಿ ಆಶೀರ್ವದಿಸಿದ್ದೂ ಅದೇ ವಾರಣಾಸಿಯ ಗಂಗಾ ನದಿಯ ತಟದಲ್ಲೇ.  ಅದೇ ಸ್ಥಳದಲ್ಲೇ ತುಳಸೀದಾಸರೇ ನಿರ್ಮಾಣ ಮಾಡಿದಂತಹ ದೇವಸ್ಥಾನವೇ "ಸಂಕಟ್ ಮೋಚನ ಮಂದಿರ್." ನಿಮ್ಮ ಮುಂದಿನ ಕಾಶೀಯಾತ್ರೆಯ ಸಮಯದಲ್ಲಿ ಸಂಕಟ ಮೋಚನ ಮಂದಿರಕ್ಕೆ ಹೋಗಿ ನಮ್ಮ ಹನುಮಂತನ ಪ್ರಾರ್ಥನೆಯನ್ನು ಮಾಡುವುದನ್ನು ಮರೆಯಬೇಡಿ. 

ತುಳಸಿದಾಸರು ರಚನೆ ಮಾಡಿರುವಂತ "ಹನುಮಾನ್ ಚಾಲೀಸಾ" ಎಂಬ ಹನುಮಂತನ ಸ್ತೋತ್ರವನ್ನು ಭಾರತ ದೇಶದ ಎಲ್ಲಾ ಹನುಮಂತನ ಭಕ್ತರು ಪಠಿಸುತ್ತಾರೆ. ಹನುಮಾನ್ ಚಾಲೀಸಾ ಪಠಿಸುವುದರಿಂದ ನಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗುವುದೆಂಬೆದು ನಮ್ಮೆಲ್ಲರ ದೃಢವಾದ ನಂಬಿಕೆ. ಅದಕ್ಕೆ ತುಳಸೀದಾಸರೇ ಸಾಕ್ಷಿ. 

ತುಳಸೀದಾಸರ  ಮಹಿಮೆಗಳನ್ನು ಕೇಳಿದ ಅಂದಿನ ರಾಜನೊಬ್ಬ  ತುಳಸೀದಾಸರನ್ನು ತನ್ನ ಆಸ್ಥಾನಕ್ಕೆ ಬರುವಂತೆ ಆಜ್ಞೆ ಮಾಡಿದನಂತೆ. "ನಾನು ರಾಮಭಕ್ತ ಮಾತ್ರ, ಯಾವ ರಾಜನ  ಆಸ್ಥಾನಕ್ಕೂ ಬರಲಾರೆ" ಎಂದು ರಾಜಾಜ್ಞೆಯನ್ನು ತುಳಸಿದಾಸರು ಧಿಕ್ಕರಿಸಿದರಂತೆ. ಕೋಪಗೊಂಡ ರಾಜ ತುಳಸೀದಾಸರನ್ನು ತನ್ನ ರಾಜಧಾನಿಯಲ್ಲಿ  ಬಂಧಿಸಿಟ್ಟನಂತೆ. ಧೈರ್ಯಗೆಡದ ತುಳಸಿದಾಸರು ಜೈಲಿನಲ್ಲೇ ಹನುಮಾನ್ ಚಾಲೀಸಾ ಸ್ತೋತ್ರವನ್ನು ರಚಿಸಿ, ೪೦ ದಿನಗಳ ಕಾಲ ಪ್ರತಿನಿತ್ಯ ಹನುಮಂತನನ್ನು ಭಜಿಸದರಂತೆ. ೪೦ ದಿನಗಳು ಕಳೆಯುತ್ತಲೇ, ಇಡೀ ರಾಜಧಾನಿಯ  ತುಂಬಾ ಕಪಿಗಳು ಕಾಣಿಸಿಕೊಂಡು ತಮ್ಮ ಹಾವಳಿಯನ್ನು ಶುರುಮಾಡಿಕೊಂಡವಂತೆ. ಕಪಿಗಳ ಕಾಟದಿಂದ ರಾಜನ  ಅರಮನೆಯೇ ತತ್ತರಿಸಿ ಹೋಗಿತ್ತಂತೆ. ಭಕ್ತಮಹಾಶಯರೆ, ಈ ಕಪಿಗಳ ಕಾಟವೇ ಹನುಮಂತನ ಮಹಿಮೆ ಎಂಬುದನ್ನು ನಾನು ನಿಮಗೇನು ಹೇಳಬೇಕಾಗಿಲ್ಲ. 

ಕಪಿಗಳ ಕಾಟದಿಂದ ಪರಿಹಾರದ ಮಾರ್ಗವನ್ನು ತಿಳಿಯಲು ಆ ರಾಜ  ತನ್ನ ಆಸ್ಥಾನದ ಪಂಡಿತರೊಂದಿಗೆ ಸಮಾಲೋಚಿಸಿದಾಗ, ಆಸ್ಥಾನದ ಪಂಡಿತರು ಬಂಧನದಲ್ಲಿದ್ದ ತುಳಸೀದಾಸರ ಕಡೆ ಬೊಟ್ಟು ಮಾಡಿದರಂತೆ. ತನ್ನ ತಪ್ಪಿನ ಅರಿವಾದ ಆ ರಾಜ ತುಳಸೀದಾಸರ ಕ್ಷಮೆ ಕೇಳಿ ಅವರನ್ನು  ಬಂಧಮುಕ್ತರನ್ನಾಗಿಸಿದನಂತೆ. ತುಳಸಿದಾಸರು ಮತ್ತೆ ಹನುಮಂತನನ್ನು ಪ್ರಾರ್ಥಿಸಿದಾಗ ಆ ಪಟ್ಟಣ ಕಪಿಗಳ ಕಾಟದಿಂದ ಮುಕ್ತಿಯನ್ನು ಪಡೆಯಿತಂತೆ. ನೋಡಿದ್ರಾ ನಮ್ಮ ಹನುಮಾನ್ ಚಾಲಿಸದ ಮಹಿಮೆಯನ್ನು. 

ಈಗ ಹನುಮಾನ್ ಚಾಲಿಸದ ಸ್ತೋತ್ರವನ್ನು ಕೇಳೋಣ. 

-----------------------------------------

-------------------------------------------------

 ಹನುಮಾನ್ ಚಾಲಿಸದ ಸ್ತೋತ್ರದಲ್ಲಿ ತುಳಸಿದಾಸರು ತಾವೊಬ್ಬ ಮಹಾನ್ ವಿಜ್ಞಾನಿ ಎಂಬದನ್ನು ಪ್ರಸ್ತುತಪಡಿಸಿದ್ದಾರೆ. ಹೇಗೆ ಅಂತೀರಾ?

ಭೂಮಿಗೂ ಸೂರ್ಯನಿಗೂ ಇರುವ ದೂರ ಎಷ್ಟು ಎಂಬುದರ ನಿಖರವಾದ ಮಾಹಿತಿ ಹನುಮಾನ್ ಚಾಲಿಸದಲ್ಲಿ ಅಡಕವಾಗಿದೆ ಎಂದರೆ ತಮಗೆ ಆಶ್ಚರ್ಯವಾಗಬಹುದು. 

ನಿಮಗೆಲ್ಲಾ ತಿಳಿದಿರುವಂತೆ....... ಬಾಲಕ ಹನುಮಂತ ಒಮ್ಮೆ ಸೂರ್ಯನನ್ನೇ ಹಣ್ಣು ಎಂದು ತಿಳಿದು, ಅವನನ್ನು ಪಡೆಯಲು ಆಕಾಶಕ್ಕೆ ಹಾರಿದ್ದನಂತೆ. ಆ ಘಟನೆಯ ವರ್ಣನೆಯನ್ನು ತುಳಸಿದಾಸರು ತಮ್ಮ ಹನುಮಾನ್ ಚಾಲಿಸದಲ್ಲಿ ಹೀಗೆ ಹಾಡಿದ್ದಾರೆ. 

"ಯುಗ ಸಹಸ್ರ ಯೋಜನಾ ಪರ ಭಾನು 

ಲೀಲ್ಯಾ ತಹಿ ಮಧುರ ಫಲ ಜಾನು"

ಇಲ್ಲೇ ನೋಡಿ ನಮ್ಮ ತುಳಸೀದಾಸರ ವೈಜ್ಞಾನಿಕ ಗುಣಾಕಾರದ ಪರಿಚಯ ನಮಗಾಗುವುದು. ಯುಗ ಎಂದರೆ ನಮ್ಮ ಪುರಾಣಗಳಲ್ಲಿ ೧೨೦೦೦ ವರ್ಷಗಳಷ್ಟು ಎನ್ನುತ್ತಾರೆ. ಅಂದರೆ ಯುಗ ಎಂಬ ಪದ ೧೨೦೦೦ ಸಂಖ್ಯೆಯ ಪ್ರತೀಕ.  ಸಹಸ್ರ ಎಂದರೆ ೧೦೦೦ ಎಂಡಾರ್ಟ. ಯೋಜನಾ ಎಂದಷ್ಟೇ ೮ ಮೈಲಿ ಅಥವಾ ೧೨. ೮  ಕಿಲೋಮೀಟರ್ ಎಂದಾಗತ್ತದೆ. "ಯುಗ ಸಹಸ್ರ ಯೋಜನಾ" ಎಂದರೆ ೧೨೦೦೦ X ೧೦೦೦ X ೧೨. ೮ = ೧೫೩ ದಶಲಕ್ಷ ಅಥವಾ ೧೫೩ ಮಿಲಿಯನ್ ಕಿಲೋಮೀಟರ್ಗಳು. 

ತುಳಸೀದಾಸರನಂತರ ಶತಮಾನಗಳು ಕಳೆದ ಮೇಲೆ ಬಂದಂತಹ ಖಗೋಳ ಶಾಸ್ತ್ರಜ್ಞರು ಸಂಶೋಧನೆ ನಡೆಸಿ ಭೂಮಿಗೂ ಸೂರ್ಯನಿಗೂ ಇರುವ ದೂರ ೧೫೩ ಮಿಲಿಯನ್ ಕಿಲೋಮೀಟರ್ಗಳಷ್ಟೇ ಎಂದು ದೃಢಿಕರಿಸಿದ್ದಾರೆ. 

ತುಳಸೀದಾಸ, ಆರ್ಯಭಟ, ಶುಶ್ರುತ, ಶಾಕುಂತಲ ದೇವಿ ಅಂತಹ ಮಹಾನ್ ವಿಜ್ಞಾನಿ ಪುತ್ರರನ್ನು ಪಡೆದ ನಮ್ಮ ಭಾರತ ದೇಶ ಎಷ್ಟು ಮಹಾನ್ ದೇಶ ಅಲ್ಲವೇ? 

-----------------------------------------------------------------------------------------------------------------------------

ರಾಮ ರಾವಣರ ಮಧ್ಯೆ ಘೋರ ಯುದ್ಧವಾಗುತ್ತದೆ. 

ವೀರಾವೇಶದಿಂದ ಹೋರಾಡಿದ ಲಕ್ಷ್ಮಣ ರಾವಣ ಪುತ್ರ ಇಂದ್ರಜಿತುವಿನ ಸಂಹಾರ ಮಾಡುತ್ತಾನೆ.  ಪುತ್ರ ಇಂದ್ರಜಿತುವಿನ ಹತ್ಯೆಯಿಂದ ರೋಷಗೊಂಡ ರಾವಣ, ರಾಮನ ಕಪಿ ಸೇನೆಯ ಮೇಲೆ 'ಮೂಲಬಲ'ವೆಂಬ ಎರಡು ಲಕ್ಷ ರಾಕ್ಷಸರ ಪಡೆಯ ಸೈನ್ಯದಿಂದ ದಾಳಿಮಾಡುತ್ತಾನೆ. ರಾವಣನ ಮೂಲಬಲದ ಹೋದತ್ತಕ್ಕೆ ತತ್ತರಿಸಿದ ಕಪಿಸೈನ್ಯ ದಿಕ್ಕಾಪಾಲಾಗಿ ಓಡಲಾರಂಭಿಸುತ್ತದೆ. ಕಪಿಸೈನ್ಯದ ರಕ್ಷಣೆಗಾಗಿ ಪಣತೊಟ್ಟ ಶ್ರೀ ರಾಮ, ರಾವಣ ಮೂಲಬಲದ ಮೇಲೆ ಗಂಧರ್ವಾಸ್ತ್ರವೆಂಬ ಸಮ್ಮೋಹಿನಿ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ಗಂಧರ್ವಾಸ್ತ್ರದ ಮೋದಿಯ ಫಲವಾಗಿ ಮೂಲಬಲದ ರಾಕ್ಷರಿಗೆ ಮಂಕುಹಿಡಿದಂತಾಗುತ್ತದೆ. ರಾಕ್ಷಸರಿಗೆ  ಎಲ್ಲೆಲ್ಲೂ ಶ್ರೀ ರಾಮನೇ  ಕಾಣುವಂತಾಗುತ್ತದೆ. ಪ್ರತಿಯೊಬ್ಬ ರಾಕ್ಷಸನಿಗೂ ಪಕ್ಕದ ರಾಕ್ಷಸನೇ ರಾಮನಂತೆ ಕಾಣಿಸುತ್ತದೆ. ಅದನ್ನೇ ಪುರಂದರ ದಾಸರು 'ಅವನಿಗೆ ಇವ ರಾಮ, ಇವನಿಗೆ ಅವ ರಾಮ' ಎಂದು ವರ್ಣಿಸಿದ್ದಾರೆ. ಸಂಮೋಹಕ್ಕೆ ಒಳಗಾದ ರಾಕ್ಷಸರು ತಮ್ಮ ತಮ್ಮೊಳಗೆ ಕಾದಾಡಿ ಮಡಿಯುತ್ತಾರೆ. ಹೀಗೆ ರಾವಣನ ಮೂಲಬಲ ಹಾಗೂ ಅವನ ಎರಡು ಲಕ್ಷ ರಾಕ್ಷಸರ ಪದೇ ನಿರ್ನಾಮಗೊಳ್ಳುತ್ತದೆ.  

ಈ ಯುದ್ಧದ ವರ್ಣನೆಯನ್ನು ಪುರಂದರ ದಾಸರು ತಮ್ಮ ದೇವರನಾಮದಲ್ಲಿ ಸೊಗಸಾಗಿ ಮಾಡಿದ್ದಾರೆ. 

ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ (ಪೂರ್ತಿ ಹಾಡು) 
-----------------------------------------------------------------------------------------------------------------------------
ಇಡೀ ರಾಮಾಯಣವನ್ನು ಗದ್ಯ ರೂಪದಲ್ಲಿ ಪ್ರಸ್ತುತಪಡಿಸಿದವರು ತಮಿಳ್ ನಾಡಿನ ಕವಿ ವೇದಾಂತ ದೇಶಿಕರ್ರವರು. ತಮಿಳ್ ನಾಡಿನ ತಿರುವಹಿಂದ್ರಾಪುರಂನ ಕೋದಂಡ ರಾಮನ ಪರಮ ಭಕ್ತರಾದ ವೇದಾಂತ ದೇಶಿಕರ್ ಅವರು ಕೋದಂಡ ರಾಮನ shauryaವನ್ನು ತಮ್ಮ ರಘುವೀರ ಗದ್ಯದಲ್ಲಿ ಪ್ರಸ್ತುತಪಡಿಸಿದ್ದಾರೆ. 

ರಾವಣನ ಸೇನಾಧಿಪತಿ ಪ್ರಹಸ್ತನ ಹತ್ಯೆಯಾನಂತರ ರಾವಣ ತಾನೇ ರಣರಂಗಕ್ಕೆ ಬರುತ್ತಾನೆ. ಲಕ್ಷ್ಮಣನ ಮೇಲೆ ಘೋರ ಯುದ್ಧವನ್ನಾಡಿದ ರಾವಣ, ಅಮೋಘವಾದ ಅಸ್ತ್ರವೊಂದನ್ನು ಪ್ರಯೋಗಿಸಿ ಲಕ್ಷ್ಮಣನನ್ನು ಮೂರ್ಚಿತನನ್ನಾಗಿ ಮಾಡುತ್ತಾನೆ.  ಯುದ್ಧದ ಪಾರಿತೋಷಕವೆಂದು ಲಕ್ಷ್ಮಣನ ಶರೀರವನ್ನು ರಾವಣ ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಾನೆ.  ಕೈಲಾಸವನ್ನು ಎತ್ತಿ ನಡುಗಿಸಿದ ರಾವಣನಿಗೆ, ಲಕ್ಷ್ಮಣನನ್ನು ಎತ್ತಲು ಆಗುವುದಿಲ್ಲ.  ಎಲ್ಲವನ್ನು ನೋಡುತ್ತಿದ್ದ ಹನುಮಂತ ರಾವಣನನ್ನು ಹಿಮ್ಮೆಟ್ಟಿಸಿ, ಲೀಲಾಜಾಲವಾಗಿ ಲಕ್ಷ್ಮಣನನ್ನು ಎತ್ತಿಕೊಂಡು ಹೋಗಿ ಸುರಕ್ಷಿತ ತಾಣಕ್ಕೆ ಕರೆದೊಯುತ್ತಾನೆ. 

ಹನುಮಂತ ಹಿಂತುರುಗಿ ರಣರಂಗಕ್ಕೆ ಬರುವ ಹೊತ್ತಿಗೆ ರಾಮ ರಾವಣರ ಯುದ್ಧವಾಗುತ್ತಿರುತ್ತದೆ. ರಾವಣ ರಥದ ಮೇಲಿದ್ದರೆ, ಶ್ರೀ ರಾಮ ಭೂಮಿಯ ಮೇಲೆ ನಿಂತಿರುತ್ತಾನೆ. ಮುನ್ನುಗ್ಗಿ ರಾಮನನ್ನು ತನ್ನ ಕುತ್ತಿಗೆಯ ಮೇಲೇರಿಸಿಕೊಂಡ ಹನುಮಂತ, ರಾಮನ ಬಲವನ್ನು ಹೆಚ್ಚಿಸುತ್ತಾನೆ. ವೀರಾವೇಶದಿಂದ ಹೋರಾಡಿದ ರಾಮನ ಬಾಣಗಳಿಗೆ ರಾವಣ ತತ್ತರಿಸಿ ಹೋಗುತ್ತಾನೆ, ನಿರಾಯುಧನಾಗಿ ಹೋಗುತ್ತಾನೆ.  ರಾವಣನ ಅಸಹಾಯಕ ಪರಿಸ್ಥಿತಿಯನ್ನು ಕಂಡ ರಾಮ, 'ರಾವಣ, ನೀನು ಸೋತು ನಿರಾಯುಧನಾಗಿದ್ದೀಯ. ಇಂತಹ ಪರಿಸ್ಥಿತಿಯಲ್ಲಿ ನಾನು ನಿನ್ನ ಹತ್ಯೆ ಮಾಡುವುದಿಲ್ಲ.  ಈಗ ನಿನ್ನ ಮನೆಗೆ ಹೋಗಿ ವಿಶ್ರಾಂತಿ ಪಡೆದುಕೋ. ನಾಳೆ ಮತ್ತೆ ಯುದ್ಧ ಮಾಡುವಿಯಂತೆ' ಎನ್ನುತ್ತಾನೆ. ವೀರ ರಾಮನ ಈ ಔದಾರ್ಯದ ಪ್ರಸಂಗವನ್ನು ರಘುವೀರ ಗದ್ಯದಲ್ಲಿ ವೇದಾಂತ ದೇಶಿಕರು ಹೇಗೆ ವರ್ಣಿಸಿದ್ದಾರೆ ಎಂಬುದನ್ನು ನೋಡೋಣ. 



ರಘುವೀರ ಗದ್ಯ ಗಾಯನ 


-----------------------------------------------------------------------------------------------------------------------------

"ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪೀ ಗರಿಯಾಸಿ"

ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು? ನಿಮಗೆ ಆಶ್ಚರ್ಯವಾಗಬಹುದು, ಈ ಮಾತನ್ನು ಸಾಕ್ಷಾತ್ ಶ್ರೀರಾಮನೇ ಹೇಳಿರುವುದು. ರಾವಣನ ಸಂಹಾರವಾದ ಮೇಲೆ ಲಂಕೆ ರಾಮ-ಲಕ್ಷ್ಮಣರ ಕೈವಶವಾಗುತ್ತದೆ. ವೈಭವಯುಕ್ತವಾದ ಲಂಕೆಯನ್ನು ನೋಡಿ ಬೆರಗಾದ ಲಕ್ಷ್ಮಣ, ರಾಮನನ್ನು ಕೇಳುತ್ತಾನೆ.  "ಅಣ್ಣ..... ನೋಡು ವಜ್ರ ವೈಡೂರ್ಯಗಳಿಂದ ಕೂಡಿದ ಲಂಕೆ ಈಗ ನಮ್ಮ ಕೈವಶವಾಗಿದೆ. ನಮ್ಮ ರಾಜಧಾನಿಯನ್ನು ನಾವು ಅಯೋಧ್ಯೆಯಿಂದ ಲಂಕೆಗೆ ಸ್ಥಳಾಂತರಿಸಿ ನಾವುಗಳು ಎಲ್ಲೇ ಏಕೆ ನೆಲಸಬಾರದು?" ಲಕ್ಷ್ಮನನ್ನೂ ನೋಡಿ ನಸುನಕ್ಕ ರಾಮ ಹೀಗೆ ಹೇಳುತ್ತಾನೆ. 

ಅಪೀ ಸ್ವರ್ಣಮಯೀ ಲಂಕಾ 

ನಮೇ ಲಕ್ಷ್ಮಣ ರೋಚತೇ 

ಜನನಿ ಜನ್ಮಭೂಮಿಶ್ಚ 

ಸ್ವರ್ಗಾದಪಿ ಗರಿಯಾಸಿ 

ಲಕ್ಷ್ಮಣ, ಲಂಕೆ ಎಷ್ಟೇ ವೈಭವೋಪೇತವಾಗಿದ್ದರೂ ಅದು ನಮಗೆ ಬೇಡ. ನಮ್ಮನ್ನು ಹೆತ್ತ ತಾಯಿ ಮತ್ತು ನಾವು ಜನಿಸಿದ ಜನ್ಮಭೂಮಿಯಾದ ಅಯೋಧ್ಯಾ ನಮಗೆ ಸ್ವರ್ಗಕ್ಕಿಂತ ಮಿಗಿಲಾದುದು." ರಾಮನ ದೇಶಪ್ರೇಮ ಇಂದು ಎಷ್ಟು ಆದರ್ಶಮಯವಾದುದು ಎಂಬುದನ್ನು ಗಮನಿಸಿ. ನಮ್ಮ ಯುವಕರೆಲ್ಲರೂ ರಾಮನ ದೇಶಪ್ರೇಮವನ್ನು ಮೈಗೂಡಿಸಿಕೊಂಡರೆ ನಮ್ಮ ದೇಶ ಅತ್ಯಂತ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಅನುಮಾನವೇ ಇಲ್ಲವೆಂಬುದು ನನ್ನ ಭಾವನೆ. 

ಇಡೀ ರಾಮಾಯಣವನ್ನು ಒಂದೇ ಕೀರ್ತನೆಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿರುವವರು ಸ್ವಾತಿ ತಿರುನಾಳ್ ಮಹಾರಾಜರು. ಅದನ್ನು ಸೊಗಸಾಗಿ ಹಾಡಿ ಜೀವ ತುಂಬಿರುವವರು ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿಯವರು. ಆ ಕೃತಿಯನ್ನೀಗ ಕೇಳೋಣ. 

ಭಾವಯಾಮಿ ರಘುರಾಮಂ ಭವ್ಯಸುಗುಣಾರಾಮಂ || ಪ.||
ಭಾವುಕವಿತರಣಪರಾಪಾಂಗಲೀಲಾಲಸಿತಂ || ಅ.ಪ.||

ಬಾಲ ಕಾಂಡ (ರಾಗ: ನಾಟ್ಟ ಕುರಿಂಜಿ)

ದಿನಕರಾನ್ವಯತಿಲಕಂ  ದಿವ್ಯಗಾಧಿಸುತಸವನಾ
ವನರಚಿತಸುಬಾಹುಮುಖವಧಮಹಲ್ಯಾಪಾವನಂ
ಅನಘಮೀಶಚಾಪಭಂಗಂ ಜನಕಸುತಾಪ್ರಾಣೇಶಂ
ಘನಕುಪಿತಭೃಗುರಾಮಗರ್ವಹರಮಿತಸಾಕೇತಂ ||೧||

ಸುಂದರ ಕಾಂಡ (ರಾಗ:ಪೂರ್ವಿ ಕಲ್ಯಾಣಿ)

ವಾನರೋತ್ತಮಸಹಿತವಾಯುಸೂನುಕರಾರ್ಪಿತ
ಭಾನುಸಶತಭಾಸ್ವರಭವ್ಯರತ್ನಾಂಗುಲೀಯಂ
ತೇನ ಪುನರಾನೀತಾನ್ಯೂನಚೂಡಾಮಣಿದರ್ಶಿನಂ
ಶ್ರೀನಿಧಿಮುದಧಿತೀರಾಶ್ರಿತವಿಭೀಷಣಮಿಳಿತಂ ||೫||

ಯುದ್ಧ ಕಾಂಡ (ರಾಗ: ಮಧ್ಯಮಾವತಿ)

ಕಲಿತವರಸೇತುಬಂಧಂ  ಖಲನಿಸ್ಸೀಮಪಿಶಿತಾಶನ-
ದಲನಮುರುದಶಕಂಠವಿದಾರಮತಿಧೀರಂ
ಜ್ವಲನಪೂತಜನಕಸುತಾಸಹಿತಯಾತಸಾಕೇತಂ
ವಿಲಸಿತಪಟ್ಟಾಭಿಷೇಕಂವಿಶ್ವಪಾಲಂ ಪದ್ಮನಾಭಂ |

---------------------------------------------------------------------------------------------------------------------------------------------------

ವಾಲ್ಮೀಕಿಗಳು ರಾಮನನ್ನು ಮರ್ಯಾದಾ ಪುರಷೋತ್ತಮ ಎಂದು ವರ್ಣಿಸಿದ್ದಾರೆ.  ಅಂತಹ ರಾಮನೇ ರಾಮಾಯಣದಲ್ಲಿ ಒಮ್ಮೆ ಪೇಚಿಗೆ ಸಿಲುಕಿದ ಪ್ರಸಂಗ ಉಂಟಾಗ್ಗಿದ್ದ ಕತೆಯನ್ನು ಈಗ ಪ್ರಜ್ಞಾ ಹೇಳುತ್ತಾಳೆ. 

--------------------------------------------------------------------------------------------------------------------------------------------------------------

ಇಲ್ಲಿಗೆ ನಮ್ಮ ರಾಮಾಯಣದ ಕಥಾ ಪ್ರಸಂಗ ಮುಗಿದಿದೆ.  ಬಾಲಕಿಯರಾದ ನಮ್ಮ ಇಂದಿನ ಹರಿಕಥೆಯನ್ನು ಕೇಳಿ ಆಶೀರ್ವದಿಸಿದ ನಿಮಗೆಲ್ಲಾ ನಮ್ಮ ವಂದನೆಗಳು.  ಅಕ್ಕಿಹೆಬ್ಬಾಳಿನ ರಾಮ ಸೇವಾ ಸಮಿತಿಗೆ ಮತ್ತು ಮುಖ್ಯವಾಗಿ ಕಾರ್ಯದರ್ಶಿಗಳಾದ  ಶ್ರೀಧರ್ ರವರಿಗೆ  ಮತ್ತು  ಅಧ್ಯಕ್ಷರಾದ  ರಾಮಕೃಷ್ಣರವರಿಗೆ ನಮ್ಮ ಸವಿನಯ ನಮಸ್ಕಾರಗಳು. 

ಈಗ ಶ್ರೀ ರಾಮನಿಗೆ ಒಂದು ಮಂಗಲವನ್ನು ಹಾಡೋಣ. 

ಪವಮಾನ --------------------------


ಮಧ್ಯಮಾವತಿ ಶ್ಲೋಕ 

ಅಕ್ಕಿ 


No comments:

Post a Comment