Monday, 22 November 2021
Friday, 19 November 2021
ಬರಲಿದೆ ಎಲ್.ಐ.ಸಿ.ಯ ಭಾರಿ ಐ.ಪಿ.ಓ.!
ಬರಲಿದೆ ಎಲ್.ಐ.ಸಿ.ಯ ಭಾರಿ ಐ.ಪಿ.ಓ.!
ಭಾರತೀಯ ಷೇರು ಮಾರುಕಟ್ಟೆಯ ಹೂಡಿಕೆದಾರರಿಗೀಗ ಪರ್ವ ಕಾಲ. ೨೦೨೧ರ ಸೆಪ್ಟೆಂಬರ್ ೨೪ರಂದು ೬೦,೦೦೦ಕ್ಕೇರಿದ ಸೆನ್ಸೆಕ್ಸ್ ಸೂಚ್ಯಂಕ, ಈಗಲೂ ತನ್ನ ಮಟ್ಟವನ್ನು ಕಾಪಾಡಿಕೊಂಡಿದ್ದು ಸ್ಥಿರ ಪ್ರದರ್ಶನವನ್ನು ನೀಡುತ್ತಿದೆ. ಕಳೆದ ೨೦ ತಿಂಗಳುಗಳಿಂದ ಕೋವಿಡ್ನಿಂದ ತತ್ತರಿಸುತ್ತಿರುವ ಇಡೀ ವಿಶ್ವದಲ್ಲೇ, ಭಾರತದ ಷೇರು ಮಾರುಕಟ್ಟೆಯ ಪ್ರದರ್ಶನ ಉತ್ತಮವೆಂಬುದು ವಿತ್ತ ತಜ್ಞರ ಅಭಿಪ್ರಾಯವಾಗಿದೆ. ಭಾರತದ ಕೋವಿಡ್ ಲಸಿಕೆ ಅಭಿಯಾನ ವ್ಯಾಪಕವಾದ ಯಶಸ್ಸನ್ನು ಕಂಡಿದ್ದು, ಕೋವಿಡ್ ಹರಡುವಿಕೆ ಸಾಕಷ್ಟು ನಿಯಂತ್ರಣದಲ್ಲಿದೆ. ಹಲವಾರು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಕೋವಿಡ್ ಪೂರ್ವ ಸ್ಥಿತಿ ಮರಳುವ ಭರವಸೆ ಮೂಡುತ್ತಿದೆ.
ಇಂತಹ ಆಶಾದಾಯಕ ಪರಿಸ್ಥಿತಿಯಲ್ಲಿ, ಭಾರತ ಸರಕಾರ ತನ್ನ ಸ್ವಾಮ್ಯದ ನವರತ್ನಗಳಲ್ಲೊಂದಾದ ಎಲ್.ಐ.ಸಿ.ಯ ಷೇರುಗಳ ಪ್ರಥಮ ಮಾರಾಟ(ಐ.ಪಿ.ಓ.)ದ ಅಭಿಯಾನಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಈ ಯೋಜನೆಯನ್ನು, 'ಭಾರತದ ಅತ್ಯಂತ ದೊಡ್ಡ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ' ಎಂದೇ ಬಣ್ಣಿಸಲಾಗುತ್ತಿದೆ.
'ಜೀವವೆಂಬ ಜ್ಯೋತಿಯನ್ನು ಕಾಪಾಡುತ್ತಿರುವ ಕೈಗಳ' ಸಂಕೇತ (ಲೋಗೊ)ದೊಂದಿಗೆ ಜನಪ್ರಿಯವಾಗಿರುವ ಎಲ್.ಐ.ಸಿ. ಸಂಸ್ಥೆ, ೧೯೫೬ರಲ್ಲಿ ಸ್ಥಾಪಿತವಾಯಿತು. 'ಯೋಗಕ್ಷೇಮಂ ವಹಾಮ್ಯಹಂ' ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ಈ ಸಂಸ್ಥೆ, ಕೋಟ್ಯಾಂತರ ಭಾರತೀಯರಲ್ಲಿ 'ಜೀವನದೊಂದಿಗಿನ ಮತ್ತು ಜೀವನದನಂತರದ' ಭರವಸೆಯನ್ನು ಮೂಡಿಸಿರುವುದು ಸುಳ್ಳಲ್ಲ.
ಭಾರತದ ಯಾವುದೇ ಮೂಲೆಯ ಮುಗ್ಧ ವ್ಯಕ್ತಿಯನ್ನು ಕೇಳಿ. 'ಸ್ವಾಮಿ, ತಾವು ಜೀವವಿಮೆ ಮಾಡಿಸಿದ್ದೀರಾ? "ಇಲ್ಲ"ವೆಂಬ ಉತ್ತರ ಬರಬಹುದು. ಅದೇ ವ್ಯಕ್ತಿಯನ್ನು ತಾವು ಎಲ್.ಐ.ಸಿ. ಮಾಡಿಸಿದ್ದೀರಾ ಎಂದು ಕೇಳಿದರೆ, ಥಟ್ಟನೆ "ಹೌದು" ಎಂಬ ಉತ್ತರ ಬಂದರೂ ಆಶ್ಚರ್ಯವಿಲ್ಲ.' ಕಳೆದ ೬೫ ವರ್ಷಗಳಲ್ಲಿ, 'ಜೀವವಿಮೆ ಎಂದರೆ ಎಲ್.ಐ.ಸಿ.' ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿರುವುದಂತೂ ಎಲ್ಲರೂ ಅನುಮೋದಿಸುತ್ತಿರುವ ವಿಷಯ.
ಭಾರತೀಯ ಜೀವವಿಮಾ ಸಂಸ್ಥೆ (ಎಲ್.ಐ.ಸಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ.), ಭಾರತದ ಆರ್ಥಿಕ ಕ್ಷೇತ್ರದಲ್ಲಿ ರಾರಾಜಿಸುತ್ತಿರುವ, ಸಂಪೂರ್ಣ ಸರಕಾರಿ ಸ್ವಾಮ್ಯದ ಎರಡು ಭಾರಿ ಸಂಸ್ಥೆಗಳು. ಜಾಗತಿಕ ಮಟ್ಟದಲ್ಲೂ ಈ ಎರಡೂ ಸಂಸ್ಥೆಗಳಿಗೆ ಮಾನ್ಯತೆ ದೊರೆತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಸುಮಾರು ೨೫೦ ವಿವಿಧ ರೀತಿಯ ಸೇವೆಗಳು, ೩೦ ಕೋಟಿ ಜೀವವಿಮಾ ಪಾಲಿಸಿಗಳು, ೧೨ ಲಕ್ಷದಷ್ಟು ಏಜಂಟರು, ಒಂದು ಲಕ್ಷದಷ್ಟು ಉದ್ಯೋಗಿಗಳು, ೨೦೦೦ದಷ್ಟು ಶಾಖೆಗಳು ಮತ್ತು ೧೫೦೦ದಷ್ಟು ಸ್ಯಾಟಲೈಟ್ ಕಚೇರಿಗಳನ್ನೂ ಹೊಂದಿರುವ ಎಲ್.ಐ.ಸಿ.ಯೊಂದು ಮಾಹಾನ್ ವಿಮಾ ಸಂಸ್ಥೆಯೇ ಸರಿ. ಎಲ್.ಐ.ಸಿ. ಹೌಸಿಂಗ್ ಫೈನಾನ್ಸ್, ಎಲ್.ಐ.ಸಿ. ಮ್ಯೂಚುಯಲ್ ಫಂಡ್, ಐ.ಡಿ.ಬಿ.ಐ. ಬ್ಯಾಂಕ್ ಮುಂತಾದ ಅಂಗ ಸಂಸ್ಥೆಗಳನ್ನೂ ಹೊಂದಿರುವ ಎಲ್.ಐ.ಸಿ., ಬೇರೆ ಬೇರೆ ದೇಶಗಳಲ್ಲೂ ತನ್ನ ವಹಿವಾಟನ್ನು ನಡೆಸುತ್ತಿದೆ.
ಕೋವಿಡ್-೧೯ ಮಹಾಮಾರಿಯ ದಾಳಿಗೆ ಕಳೆದ ೨೦ ತಿಂಗಳುಗಳಿಂದ ತತ್ತರಿಸಿರುವ ನಮ್ಮ ದೇಶ, ಭಾರಿ ಸಂಖ್ಯೆಯ ಸಾವು-ನೋವುಗಳನ್ನು ಕಂಡಿದೆ. ಅಂತಹ ಕೋವಿಡ್ ಸಾವುಗಳ ಜೀವವಿಮಾ ಕ್ಲೇಮ್ ಗಳ ನಿರ್ವಹಣೆಯನ್ನು ಎಲ್.ಐ.ಸಿ. ತ್ವರಿತವಾಗಿ ಮಾಡಿ ಮೆಚ್ಚುಗೆ ಗಳಿಸಿದೆ. ಕೋವಿಡ್ ನಿಂದ ಮೃತಪಟ್ಟವರ ಕುಟುಂಬದ ವಿವರಗಳನ್ನು, ಆಯಾ ಜಿಲ್ಲಾಧಿಕಾರಿಗಳಿಂದ ತರಿಸಿಕೊಳ್ಳುವ ವ್ಯವಸ್ಥೆಯನ್ನು ಎಲ್.ಐ.ಸಿ. ಮಾಡಿತ್ತು. ಮೃತರ ಕುಟುಂಬಗಳು ಸಲ್ಲಿಸಿದ ೩೮,೩೦೪ ಕೋವಿಡ್ ಕ್ಲೈಮ್ಸ್ ನ ಮೊತ್ತ ರು. ೧,೦೬೨. ೩೭ಕೋಟಿಗಳಷ್ಟಿತ್ತು. ಅವುಗಳ ಪೈಕಿ ಸಂಸ್ಥೆ ೩೮,೨೯೦ ಕ್ಲೇಮ್ ಗಳನ್ನು ಸಂಸ್ಥೆ ಅನುಮೋದಿಸಿದ್ದು, ರು. ೧೦೬೧. ೯೧ ಕೋಟಿಗಳನ್ನು ವಿತರಿಸಿದೆ. ಇದರಿಂದ ಎಲ್.ಐ.ಸಿ. ಯ ಬಗ್ಗೆ ಸಾರ್ವಜನಿಕರ ವಿಶ್ವಾಸ ಹೆಚ್ಚಿ, ಸಂಸ್ಥೆಯು ತನ್ನ ವಹಿವಾಟಿನಲ್ಲಿ ಭಾರಿ ವೃದ್ಧಿಯನ್ನು ಕಂಡಿದೆ.
ಅಂತಹ ಮಾಹಾನ್ ಸಂಸ್ಥೆಯಾದ, ಭಾರತ ಸರಕಾರದ ಸ್ವಾಮ್ಯದ ಎಲ್.ಐ.ಸಿ.ಯ ಷೇರುಗಳನ್ನು ಪ್ರಥಮವಾಗಿ ಸಾರ್ವಜನಿಕ ಮಾರಾಟಕ್ಕೆ ನೀಡುತ್ತಿರುವುದು ಭಾರತದಲ್ಲೇ ಏಕೆ, ಇಡೀ ವಿಶ್ವದ ಷೇರು ಮಾರುಕಟ್ಟೆಯಲ್ಲೇ ಸಂಚಲನವನ್ನುಂಟು ಮಾಡಿದೆ. ಭಾರತ ಸರಕಾರದ ನಿರ್ಣಯಗಳ ಪ್ರಕಾರ, ಸುಮಾರು ಒಂದು ವರ್ಷಗಳ ಹಿಂದೆಯೇ, ಈ ಪ್ರಥಮ ಷೇರು ಮಾರಾಟ ಜರುಗಬೇಕಿತ್ತು. ಕೋವಿಡ್-೧೯ರ ಕಾರಣದಿಂದ, ಷೇರುಗಳ ಮಾರಾಟದ ಪ್ರಕ್ರಿಯೆ, ಒಂದು ವರ್ಷ ತಡವಾಗಿ ಹೂಡಿಕೆದಾರರ ಮುಂದೆ ಬರುತ್ತಿದೆ. ಎಲ್ಲಾ ಸಿದ್ಧತೆಗಳು ಬಹುತೇಕ ಮುಗಿದಿದ್ದು, ಮುಂದಿನ ತ್ರೈಮಾಸಿಕ(ಜನವರಿ-ಮಾರ್ಚ್ ೨೦೨೨)ದ ಸಮಯದಲ್ಲಿ, ಎಲ್.ಐ.ಸಿ. ಷೇರುಗಳು ಮಾರುಕಟ್ಟೆಗೆ ಬರಬಹುದೆಂಬ ನೀರೀಕ್ಷೆಇದೆ.
ಜೀವ ವಿಮಾ ಕ್ಷೇತ್ರ, ಎರಡು ದಶಕಗಳ ಹಿಂದೆಯೇ ಖಾಸಗೀಕರಣ ಪ್ರಕ್ರಿಯೆಗೆ ಒಳಪಟ್ಟಿದೆ. ವಿದೇಶಿ ವಿಮಾ ಸಂಸ್ಥೆಗಳು ಸೇರಿದಂತೆ ಐ.ಸಿ.ಐ.ಸಿ.ಐ., ಎಚ್.ಡಿ.ಎಫ್.ಸಿ. ಮುಂತಾದ ಮಹಾನ್ ಖಾಸಗಿ ಜೀವ ವಿಮಾ ಸಂಸ್ಥೆಗಳು ಇಂದು ಭಾರತದಲ್ಲಿ ವಹಿವಾಟನ್ನು ಜೋರಾಗೆ ನಡೆಸುತ್ತಿದ್ದರೂ, ಎಲ್.ಐ.ಸಿ. ಸಂಸ್ಥೆ ಭಾರತದ ವಹಿವಾಟಿನ ೭೦%ರಷ್ಟರ ಸಿಂಹಪಾಲಿನೊಂದಿಗೆ ತನ್ನ ಅಗ್ರಾ ಸ್ಥಾನವನ್ನು ಈಗಲೂ ಕಾಯ್ದುಕೊಂಡಿದೆ. ಭಾರತದ ವಿತ್ತ ಕ್ಷೇತ್ರದಲ್ಲಿ ಶಿಖರ ಸ್ಥಾನವನ್ನು ಅಲಂಕರಿಸಿರುವ ಎಲ್.ಐ.ಸಿ. ಸಂಸ್ಥೆಯ ಆಸ್ತಿಗಳ ಮೌಲ್ಯಗಳ ನಿರ್ಧಾರ ಮಾಡುವುದೇ ಒಂದು ಸವಾಲಾಗಿದೆ. ಎಲ್.ಐ.ಸಿ. ಸಾರ್ವಜನಿಕರಿಗೆ ವಿತರಿಸಿರುವ ೩೦ ಕೋಟಿ ಪಾಲಿಸಿಗಳ ಸಾಧಕ-ಬಾಧಕಗಳನ್ನು ಅಂದಾಜಿಸುವುದೇ ಒಂದು ಕ್ಲಿಷ್ಟ ಪ್ರಕ್ರಿಯೆಯಾಗಿದೆ. ಜೊತೆಗೆ ಸಂಸ್ಥೆಯ ೨೦೦೦ ಶಾಖೆಗಳಲ್ಲಿರುವ ಸ್ಥಿರಾಸ್ತಿಗಳ ಮೌಲ್ಯ ಮಾಪನ ಕೂಡ ನಡೆಯಬೇಕಾಗಿದೆ. ಈ ಎಲ್ಲಾ ಮೌಲ್ಯ ಮಾಪನಗಳೂ ಬಹುತೇಕ ಮುಗಿದಿದ್ದು ಎಲ್.ಐ.ಸಿ. ಸುಮಾರು ೧೦ ಲಕ್ಷ ಕೋಟಿಗಳಷ್ಟರ ಮೌಲ್ಯವನ್ನು ಹೊಂದಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಎಲ್.ಐ.ಸಿ.ಯ ಷೇರುಗಳನ್ನು ಖರೀದಿಸಲು, 'ನಾ ಮುಂದು, ತಾ ಮುಂದು' ಎಂದು ಹೂಡಿಕೆದಾರರು ತುದಿಗಾಲಲ್ಲಿ ನಿಂತಿದ್ದಾರೆ.
ಮೇಲಾಗಿ ಎಲ್.ಐ.ಸಿ. ಸಂಸ್ಥೆಯ ಜೀವವಿಮಾ ಪಾಲಸಿಗಳು ಸರಕಾರಿ ಖಾತರಿಯನ್ನು (ಸಾವರಿನ್ ಗ್ಯಾರಂಟಿ) ಹೊಂದಿರುತ್ತವೆ. ಬೇರ್ಯಾವ ಜೀವ ವಿಮಾ ಸಂಸ್ಥೆಯ ಪಾಲಿಸಿಗಳಿಗೂ ಈ ಸೌಲಭ್ಯವಿರುವುದಿಲ್ಲ. ಅದೇ ಎಲ್.ಐ.ಸಿ. ಪಾಲಸಿಗಳ ಮಾರಾಟಕ್ಕಿರುವ ವಿಶೇಷ ಬಲ (U.S.P.). ಆದರೆ ಈವರೆಗೆ ಸಂಸ್ಥೆ, ಸರಕಾರಿ ಗ್ಯಾರಂಟಿಯ ನೆರವನ್ನು ಪಡೆಯದಿರುವುದು ಸಂಸ್ಥೆಯ ಗಟ್ಟಿತನಕ್ಕೆ ಸಾಕ್ಷಿ ಎನ್ನುತ್ತಾರೆ ಎಲ್.ಐ.ಸಿ.ಯ ಇಂದಿನ ಛೇರ್ಮನ್ ರಾದಂತಹ ಶ್ರೀ. ಎಂ.ಆರ್.ಕುಮಾರ್. ಅವರು ಮುಂದುವರೆದು ಮಾತನಾಡುತ್ತಾ, 'ಎಲ್.ಐ.ಸಿ.ಯಲ್ಲಿ ಸುಮಾರು ೨೫೦ ದಶಲಕ್ಷ ಪಾಲಿಸಿದಾರರಿದ್ದಾರೆ. ಆದರೆ ಈವರೆಗೆ, ಷೇರುಗಳ ವಹಿವಾಟಿನಲ್ಲಿ ತೊಡಗಲು ಬೇಕಾಗಿರುವ ಡಿಮ್ಯಾಟ್ ಖಾತೆಗಳನ್ನು ಹೊಂದಿರುವವರ ಸಂಖ್ಯೆ ೬೦ ದಶಲಕ್ಷ ಮಾತ್ರ. ಎಲ್.ಐ.ಸಿ.ಯ ಗ್ರಾಹಕರಿಗಳಿಗೂ ಕೆಲವು ಸಂಖ್ಯೆಯ ಷೇರುಗಳನ್ನು ಕಾದಿರಿಸುವ ಸಾಧ್ಯತೆ ಇರುವುದರಿಂದ, ಅವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆದು, ಷೇರು ಮಾರುಕಟ್ಟೆಗೆ ಕಾಲಿಡಲಿದ್ದಾರೆ. ಅಂತಹವರು ಎಲ್.ಐ.ಸಿ. ಷೇರುಗಳಿಗೆ ಅರ್ಜಿಯನ್ನು ಸಲ್ಲಿಸಿ ಸುಮ್ಮನೆ ಕೂರುವುದಿಲ್ಲ. ಬೇರೆ ಬೇರೆ ಷೇರುಗಳನ್ನು ಅವರುಗಳು ಖರೀದಿಸಲು ಮುಂದಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಎಲ್.ಐ.ಸಿ.ಯ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ, ಭಾರತದ ಷೇರು ಮಾರುಕಟ್ಟೆಯ ವಿಸ್ತರಣೆಯಲ್ಲಿ ದೊಡ್ಡದೊಂದು ಕ್ರಾಂತಿಯನ್ನೇ ಉಂಟುಮಾಡಲಿದೆ' ಎಂದಿದ್ದಾರೆ.
೧೯೯೩ರಲ್ಲಿ ನಡೆದ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಐ.ಪಿ.ಓ., ಭಾರಿ ಯಶಸ್ಸನ್ನು ಕಂಡಿತ್ತು. ೧೦ ರು.ಗಳ ಬ್ಯಾಂಕಿನ ಷೇರನ್ನು ಕೇವಲ ರು. ೧೦೦ ಗಳಿಗೆ ನೀಡಿತ್ತು ಸರಕಾರ. ಎರಡು-ಮೂರು ವಾರಗಳ ಸಮಯದಲ್ಲೇ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಆ ಷೇರು ರೂ. ೨೫೦ಕ್ಕೆ ಮಾರಾಟವಾಗಿದ್ದು ಈಗ ಇತಿಹಾಸ. ಇಂದು ೧೯೯೩ರ ಒಂದು ಸ್ಟೇಟ್ ಬ್ಯಾಂಕ್ ಷೇರು, ಈಗ ರು. ೧ರ ಹತ್ತು ಷೇರುಗಳಾಗಿದ್ದು, ಪ್ರತಿ ರು. ೧ರ ಷೇರಿನ ಬೆಲೆ ಸುಮಾರು ರು. ೫೦೦ರಷ್ಟಿದೆ. ಅಂದರೆ ಸ್ಟೇಟ್ ಬ್ಯಾಂಕ್ ಷೇರಿನಲ್ಲಿ, ೧೯೯೩ರಲ್ಲಿ ಹೂಡಿದ್ದ ರು. ೧೦,೦೦೦ದ, ಬೆಲೆಯಿಂದು ರು. ೫,೦೦,೦೦ (ರು. ಐದು ಲಕ್ಷ - ಕಳೆದ ೨೮ ವರ್ಷಗಳಲ್ಲಿ ವಿತರಿಸಲಾಗಿರುವ ಡಿವಿಡೆಂಡ್ ಮತ್ತು ಬೋನಸ್ ಷೇರುಗಳನ್ನು ಹೊರೆತುಪಡಿಸಿ)ದಷ್ಟಿದೆ. ಹಾಗಾಗಿ ಎಲ್.ಐ.ಸಿ.ಯ ಐ.ಪಿ.ಓ.ಗೆ ಭಾರಿ ಪ್ರತಿಕ್ರಿಯೆ ಕಂಡುಬರುವದರಲ್ಲಿ ಅನುಮಾನವಿಲ್ಲ ಎಂಬುದು ತಜ್ಞರ ಭವಿಷ್ಯವಾಣಿಯಾಗಿದೆ.
ಏನೇ ಆದರೂ ನಾವುಗಳು ಕೆಲವು ಎಚ್ಚರಿಕೆಯ ಮಾತಗಳನ್ನು ಮರೆಯುವಂತಿಲ್ಲ. ಎಲ್.ಐ.ಸಿ.ಯಂತಹ ಪ್ರತಿಷ್ಠಿತ ಕಂಪನಿಗಳ ಷೇರುಗಳಿಗೆ ಭಾರಿ ಬೇಡಿಕೆ ಇರುತ್ತದೆ. ಐ.ಪಿ.ಓ.ಗೆ, ಅವಶ್ಯಕತೆಗಿಂತ ೧೦೦ ಪಟ್ಟು ಹೆಚ್ಚು ಅರ್ಜಿದಾರರು, ಹಣವನ್ನು ಪಾವತಿಸಿದರೂ ಆಶ್ಚರ್ಯವಿಲ್ಲ. ಹಾಗಾಗಿ ಷೇರುಗಳಿಗೆ ಅರ್ಜಿ ಹಾಕಿದವರಿಗೆಲ್ಲಾ, ಷೇರುಗಳು ದೊರೆಯುತ್ತವೆಂಬ ಖಾತರಿಯೇನಿಲ್ಲ. ಷೇರುಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದ್ದದೇ. ಮೊನ್ನೆಯಿನ್ನೂ 'ಪೇಟಿಎಂ' ಸಂಸ್ಥೆಯ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ ಸಂಪನ್ನಗೊಂಡಿದ್ದು, ಅದನ್ನು ಭಾರತದ ಈವರೆಗಿನ ಅತ್ಯಂತ ದೊಡ್ಡ ಐ.ಪಿ.ಓ. ಎಂದೇ ಬಣ್ಣಿಸಲಾಗಿತ್ತು. ರು. ೧ರ ಷೇರೊಂದನ್ನು, ರೂ. ೨೧೫೦ರ ಬೆಲೆಗೆ ಮಾರಾಟ ಮಾಡಿದ್ದ ಆ ಕಂಪನಿಯ ಷೇರುಗಳು, ಕೆಲವೇ ದಿನಗಳಲ್ಲಿ ಲಿಸ್ಟ್ ಆಗಿ ಮಾರುಕಟ್ಟೆಗೆ ಬಂದಾಗ ಅದರ ಬೆಲೆ ರು. ೧೫೬೪. ೧೫ ಮಾತ್ರವಾಗಿ, ಹೂಡಿಕೆದಾರರು ೨೭% ನಷ್ಟವನ್ನು ಅನುಭವಿಸಿದರು. ಮುಂದಿನ ದಿನಗಳಲ್ಲಿ ಅದೇ ಷೇರಿನ ಬೆಲೆ ಭಾರೀ ಹೆಚ್ಚಳವನ್ನು ದಾಖಲಿಸಿಲೂ ಬಹುದು.
ಎಲ್.ಐ.ಸಿ. ಸಂಸ್ಥೆಯ ಮೌಲ್ಯ ಸುಮಾರು ೧೦ ಲಕ್ಷ ಕೋಟಿಯಷ್ಟಿದೆ ಎಂದು ಅನುಮಾನಿಸಲಾಗಿದೆ. ಹಾಗಾಗಿ ಸಂಸ್ಥೆಯ ರು. ೧ರ ಷೇರಿಗೆ, ರು. ೧೦೦೦ ದಷ್ಟರ, ಅಥವಾ ಅದಕ್ಕೂ ಹೆಚ್ಚಿನ ಬೆಲೆ ನಿಗದಿಯಾದರೂ ಆಶ್ಚರ್ಯವಿಲ್ಲ ಎಂಬುದು ತಜ್ಞರ ಒಂದು ಅಂದಾಜು. ಷೇರಿನ ವಿತರಣೆಯ ಪ್ರಕ್ರಿಯೆ ಒಂದೆರಡು ವಾರದಲ್ಲೇ ಮುಗಿದು, ಎಲ್.ಐ.ಸಿ.ಯ ಷೇರುಗಳು ಮುಕ್ತ ಮಾರುಕಟ್ಟೆಗೆ ಬಂದಾಗ, ಅದರ ಬೆಲೆ ಒಮ್ಮಲೇ ದುಪ್ಪಟಾದರೂ ಆಶ್ಚರ್ಯವಿಲ್ಲ ಎಂಬುದು ಮತ್ತೊಂದು ಅಂದಾಜು. ಹಾಗಾಗಿ ಉತ್ಸಾಹಿ ಹೂಡಿಕೆದಾರರು, ಎಲ್.ಐ.ಸಿ.ಯ ಷೇರನ್ನು ಖರೀದಿಸಲು ಮುಗಿ ಬೀಳುವುದರಲ್ಲಿ ಅನುಮಾನವಿಲ್ಲ ಎಂದೇ ನೀರಿಕ್ಷಿಸಲಾಗಿದೆ.
ಈವರೆಗೆ ಯಾವುದೇ ಐ.ಪಿ.ಓ.ದಲ್ಲಿ ಅರ್ಜಿ ಸಲ್ಲಿಸದಿರುವ ಓದುಗರ ಮನಸಿನಲ್ಲಿ, ಐ.ಪಿ.ಓ.ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿರಬಹುದು. ಅಂಥವರ ಪ್ರಶ್ನೆಯ ಉತ್ತರವನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.
-೦-೦-೦-೦-೦-
ಎಲ್.ಐ.ಸಿ.ಯ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ, ಭಾರತದ ಷೇರು ಮಾರುಕಟ್ಟೆಯ ವಿಸ್ತಾರವನ್ನೇ ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. - ಶ್ರೀ. ಎಂ.ಆರ್.ಕುಮಾರ್, ಛೇರ್ಮನ್, ಎಲ್.ಐ.ಸಿ.
(You may put the above message in a separate box, inside the article)
(The suggested picture for the article is attached)
Monday, 15 November 2021
Sunday, 14 November 2021
ಬಿಟ್ ಕಾಯಿನ್ ಎಂದರೇನು?
(Thanks to the sources of the pictures used here. I am indebted to them).
Friday, 5 November 2021
ಮಾನ್ಯರೇ,
ನನ್ನ 'ಕವನೋತ್ಸವ' ಪದ್ಯ ಮಾಲಿಕೆಯನ್ನು ನವೆಂಬರ್ ೨ರ ದಿನದಿಂದ ಪ್ರಕಟಿಸುತ್ತಿದ್ದೀರಿ. ಧನ್ಯವಾದಗಳು.
ಮಾಜಿ ಬ್ಯಾಂಕರ್ ಆದ ನಾನು 'ದುಡ್ಡೇ ದೊಡ್ಡಪ್ಪ' ಎಂಬ ಮಾಲಿಕೆಯಲ್ಲಿ ಪ್ರತಿ ವಾರ ಸಮಕಾಲೀನ ಆರ್ಥಿಕ ವಿಷಯಗಳೊನ್ನೊಳಗೊಂಡ ಕಿರು ಲೇಖನಗಳನ್ನು ಬರೆಯಲಿದ್ದೇನೆ. ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬಹುದೇ, ಪರೀಕ್ಷಿಸಿ. ಮೊದಲ ಲೇಖನವನ್ನು ಕಳುಸುತ್ತಿದೇನೆ.
***
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಛೇರ್ಮನ್ ಶ್ರೀ ಪ್ರತೀಪ್ ಚೌಧ್ರೀರವರ ಇತ್ತೀಚಿನ ಬಂಧನ ಪ್ರಕರಣ ಕುರಿತಾದ ಕಿರು ಲೇಖನವನ್ನು ಕಳುಹಿಸುತ್ತಿದ್ದೇನೆ. ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದು.
ತಮ್ಮವ
ಲಕ್ಷ್ಮೀನಾರಾಯಣ ಕೆ
M.Sc., M.B.A., C.A.I.I.B.
ಮಾಜಿ ಬ್ಯಾಂಕರ್
೯೮೪೫೫ ೬೨೬೦೩
Thursday, 4 November 2021
ಈ ಜೈಲು ನ್ಯಾಯವೇ?
ಈ ಜೈಲು ನ್ಯಾಯವೇ?
ರಾಜಸ್ಥಾನದ ಹೋಟೆಲೊಂದರ ಅನುತ್ಪಾದಕ ಸಾಲ(NPA)ವನ್ನು ಸಾಲ ಮರುಸಂಘಟನಾ ಸಂಸ್ಥೆ (Asset Reconstruction Company)ಯೊಂದಕ್ಕೆ ಅಗ್ಗದ ಬೆಲೆಗೆ ಮಾರಾಟ ಮಾಡಿದ ಆರೋಪದ ಮೇಲೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ(SBI)ದ ಮಾಜಿ ಛೇರ್ಮನ್ ಶ್ರೀ ಪ್ರತೀಪ್ ಚೌಧ್ರಿ ರವರನ್ನು, ರಾಜಸ್ಥಾನದ ಪೊಲೀಸರು ಕಳೆದ ನವೆಂಬರ್ ೧ರಂದು ಬಂಧಿಸಿದ್ದಾರೆ. ಬೃಹತ್ ಸಾಲಗಳ ನಿರ್ವಹಣೆ ಮಾಡುವಲ್ಲಿ ಭಯದ ವಾತಾವರಣದಿಂದ ಹಿಂಜರಿಯುತ್ತಿರುವ ಬ್ಯಾಂಕಿಂಗ್ ಕ್ಷೇತ್ರದ ಉನ್ನತ ಅಧಿಕಾರಿಗಳ ವಲಯದಲ್ಲಿ, ಚೌಧ್ರಿಯವರ ಬಂಧನ ತಲ್ಲಣವನ್ನು ಮೂಡಿಸಿದೆ. ಚೌಧ್ರಿಯವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.ಜೈಸಲ್ಮೇರ್, ರಾಜಸ್ಥಾನದ ಹೋಟೆಲೊಂದಕ್ಕೆ ೨೦೦೭ರಲ್ಲಿ ಸ್ಟೇಟ್ ಬ್ಯಾಂಕ್, ರು.೨೫ ಕೋಟಿಯಷ್ಟರ ಸಾಲವನ್ನು ನೀಡಿತ್ತು. ಮುಖ್ಯ ಪ್ರವರ್ತಕರೊಬ್ಬರ ನಿಧನದೊಂದಿಗೆ ಅಪೂರ್ಣವಾಗುಳಿದ ಹೋಟೆಲ್ ಯೋಜನೆಯನ್ನು, ೨೦೧೦ರಲ್ಲಿ ಅನುತ್ಪಾದಕ ಆಸ್ತಿ (NPA) ಎಂದು ಪರಿಗಣಿಸಲಾಯ್ತು. ಸಾಲ ವಸೂಲಿ ಮಾಡಲಾಗದ ಸ್ಟೇಟ್ ಬ್ಯಾಂಕ್, ೨೦೧೪ರಲ್ಲಿ ಅನುತ್ಪಾದಕ ಆಸ್ತಿಯನ್ನು (ಸಾಲವನ್ನು) ಅಗ್ಗದ ಬೆಲೆಗೆ, ಆಲ್ಕೆಮಿಸ್ಟ್ ಸಾಲ ಮರುಸಂಘಟನಾ ಸಂಸ್ಥೆ(AARC)ಗೆ ಮಾರಾಟ ಮಾಡಿತು ಎಂಬುದು, ಸಾಲ ಕಟ್ಟಲಾಗದ ಪ್ರವರ್ತಕರ ಅಹವಾಲು. ಆರೋಪಿ ಚೌಧ್ರಿಯವರು, ಸ್ಟೇಟ್ ಬ್ಯಾಂಕ್ ನಿಂದ ನಿವೃತ್ತ(೨೦೧೩)ರಾದ ಮೇಲೆ, ಅದೇ ಸಾಲ ಮರುಸಂಘಟನಾ ಸಂಸ್ಥೆಯ ಡೈರೆಕ್ಟರ್ ಆಗಿ ಸೇರಿಕೊಂಡಿದ್ದು(೨೦೧೪) ಅನುಮಾನಗಳಿಗೆ ಆಸ್ಪದ ನೀಡಿರುವುದು ಸುಳ್ಳಲ್ಲ.
ಚೌಧ್ರಿಯವರ ಬಂಧನದಿಂದ ನೊಂದ ಸ್ಟೇಟ್ ಬ್ಯಾಂಕ್ನ ಇಂದಿನ ಛೇರ್ಮನ್ ಶ್ರೀ ದಿನೇಶ್ ಖಾರರವರು ಹೇಳಿಕೆಯೊಂದನ್ನು ನೀಡಿ, 'ಈ ರೀತಿಯ ಸಣ್ಣ ಪ್ರಮಾಣದ ಸಾಲ ಮಾರಾಟದ ನಿರ್ಣಯದ ವಿಷಯದಲ್ಲಿ, ಛೇರ್ಮನ್ ಮಟ್ಟದ ಉನ್ನತ ಅಧಿಕಾರಿಗಳ ಪಾತ್ರವಿರುವುದಿಲ್ಲ. ಈ ರೀತಿಯ ನಿರ್ಣಯಗಳನ್ನು ಸ್ಥಳೀಯ ಮಟ್ಟದಲ್ಲೇ ತೆಗೆದುಕೊಳ್ಳಲಾಗುತ್ತದೆ. ಸದರಿ ಸಾಲ ಮಾರಾಟದ ಪ್ರಕ್ರಿಯೆ, ಬ್ಯಾಂಕಿನ ನಿಯಮಗಳಂತೆ ನಡೆದಿದ್ದು, ಯಾವುದೇ ಅಕ್ರಮ ನಡೆದಿಲ್ಲ. ಚೌಧ್ರಿಯವರ ಬಂಧನ ದುರದೃಷ್ಟಕರ. ಭಾರತೀಯ ಬ್ಯಾಂಕರ್ಗಳ ಸಂಸ್ಥೆ (IBA) ವಿಷಯವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತಿದೆ. ಬೇಗನೆ ಚೌಧ್ರಿಯವರ ಬಿಡುಗಡೆ ಹೊಂದುತ್ತಾರೆಂಬ ಭರವಸೆ'ಯನ್ನು ವ್ಯಕ್ತಪಡಿಸಿದ್ದಾರೆ.
ಚೌಧ್ರಿಯವರಿಗೆ ಕೂಡಲೇ ಜಾಮೀನು ದೊರೆಯಲಿ, ಇಡೀ ಘಟನೆಯ ಸಮಗ್ರ ತನಿಖೆ ನಡೆಯಲಿ, ನಿರ್ದೋಷಿಗಳಿಗೆ ಕಿರುಕುಳ ನೀಡದಂತಾಗಲಿ, ಭಯದ ವಾತಾವರಣದಿಂದ ಬ್ಯಾಂಕಿಂಗ್ ಉದ್ಯಮ ಹೊರಬರುವಂತಾಗಲಿ ಎಂದು ಆಶಿಸೋಣ.
ಲೇಖಕರು:
ಲಕ್ಷ್ಮೀನಾರಾಯಣ ಕೆ.
ಮಾಜಿ ಬ್ಯಾಂಕರ್
Tuesday, 2 November 2021
ಸಮಸ್ತ ಬಾಂಧವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಇಂದಿನಿಂದ ಪ್ರಾರಂಭಿಸುತ್ತಿದ್ದೇನೆ. ದಿನ ನಿತ್ಯದ ಪ್ರಶ್ನೆಗಳ ಉತ್ತರವನ್ನು ನನ್ನ ವಾಟ್ಸಪ್ಪ್ಗೆ (my whatsapp)/fb messengerಗೆ ನೇರವಾಗಿ ಕಳುಹಿಸಿ. ಗ್ರೂಪ್ನಲ್ಲೇ ಉತ್ತರಿಸಬೇಡಿ. ಪ್ರಶ್ನೆಯ ರಹಸ್ಯವೇ ಇಲ್ಲವಾಗುತ್ತದೆಂಬುದು ಹಲವರ ಅಭಿಪ್ರಾಯ. ಸರಿಯುತ್ತರ ನೀಡಿದ ಪ್ರಥಮರ ಭಾವ ಚಿತ್ರವನ್ನು, ಉತ್ತರದ ಹಿಂದಿನ ಮಹಾವ್ಯಕ್ತಿಯ ಜೊತೆಗೆ ಪ್ರಕಟಿಸಲಾಗುವುದು.
ಸಿರಿಗನ್ನಡಂ ಗೆಲ್ಗೆ!
೧) ಡಾ. ರಾಜ್ ಕುಮಾರ್ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿರುವರೆ? ಚರ್ಚಿಸಿ.
೨) ಕನ್ನಡ ಕಾದಂಬರಿಗಾರ್ತಿ ತ್ರಿವೇಣಿಯವರ ಯಾವ ಕಾದಂಬರಿ ಮೊದಲ ಬಾರಿಗೆ ಚಲನ ಚಿತ್ರವಾಯಿತು?
೩) ಕನ್ನಡ ಚಿತ್ರ ರಂಗ ಮರೆಯಲಾಗದ ' ಎಂ. ವೆಂಕಟ ರಾಜು' ಯಾರು?
ನಿನ್ನೆಯ ಪ್ರಶ್ನೆಯ ಸರಿಯುತ್ತರ
ಕಲ್ಪನಾ
ಶಂಕರ್ ನಾಗ್
ಅಪ್ಪು
ವಿಜೇತರು
ಪಾರ್ವತಿ
ಮೋಕ್ಷಗುಂಡಂ
ಕನ್ನಡೋತ್ಸವ - ೨
ಪ್ರಶ್ನೆಗಳ ಉತ್ತರ
ನಿನ್ನೆಯ ಪ್ರಶ್ನೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತು, ಉನ್ನತ ಮಟ್ಟದ ಚರ್ಚೆ ನಡೆದಿದೆ. ಧನ್ಯವಾದಗಳು
೧) ೧೯೫೪ರಲ್ಲಿ ತೆರೆ ಕಂಡ ರಾಜ್ ಕುಮಾರ್ ಅಭಿನಯದ ಚಿತ್ರ 'ಬೇಡರ ಕಣ್ಣಪ್ಪ' ಅಭೂತಪೂರ್ವ ಯಶಸ್ಸು ಕಂಡಿದ್ದು ಈಗ ಇತಿಹಾಸ. ಬೇಡರ ಕಣ್ಣಪ್ಪ ಚಿತ್ರ ತೆಲುಗಿನಲ್ಲಿ 'ಶ್ರೀ ಕಾಳಹಸ್ತಿ ಮಹಾತ್ಮೆ' ಎಂಬ ಹೆಸರಿನಲ್ಲಿ, ಹೊಸ ಚಿತ್ರವಾಗಿ ಅದೇ ವರ್ಷ ಮರು ನಿರ್ಮಾಣಗೊಂಡಿತ್ತು. ತೆಲುಗು ಚಿತ್ರದ ನಾಯಕ ನಟರೂ ನಮ್ಮ ರಾಜ್ ಕುಮಾರವರೇ ಆಗಿದ್ದರು. ನಾಯಕಿಯೂ ಸೇರಿದಂತೆ ಬಹುತೇಕ ಕಲಾವಿದರು ತೆಲುಗಿನವರಾಗಿದ್ದರು. ಚಿತ್ರ ತೆಲುಗಿನಲ್ಲೂ ಜಯಭೇರಿ ಬಾರಿಸಿತ್ತು. ೧೯೫೪ರ ಸಮಯದಲ್ಲಿನ್ನೂ ತೆಲುಗಿನ ಮಹಾ ನಾಯಕರುಗಳಾದ ಎನ್ಟಿಆರ್, ಎಎನ್ನಾರ್ ರವರು ಗಟ್ಟಿಯಾಗಿ ಬೇರು ಬಿಟ್ಟಿರದಿದ್ದ ಸಮಯ. ಅವರೊಂದಿಗೆ ತೆಲುಗು ಚಿತ್ರ ರಂಗದಲ್ಲೂ ಮಿಂಚುವ ಅವಕಾಶವನ್ನು ರಾಜ್- ರವರು ತ್ಯಜಿಸಿ, ಕನ್ನಡ ಚಿತ್ರ ರಂಗಕ್ಕೇ ತಮ್ಮನ್ನು ಮೀಸಲಾಗಿರಿಸಿಕೊಂಡಿದ್ದು ಕನ್ನಡಿಗರ ಭಾಗ್ಯ ಎಂದೇ ಹೇಳಬೇಕು.
೨) ೧೯೬೬ರಲ್ಲೇ, ತ್ರಿವೇಣಿಯವರ ಕಾದಂಬರಿ 'ಬೆಕ್ಕಿನ ಕಣ್ಣು,' ಮಲಯಾಳಂನಲ್ಲಿ, ಪುಟ್ಟಣ್ಣ ಕಣಗಾಲ್ರವರ ನಿರ್ದೇಶನದಲ್ಲೇ ಚಲನ ಚಿತ್ರವಾಗಿ ತೆರೆ ಕಂಡಿತ್ತು. ನಂತರ ಅದೇ ವರ್ಷ ಬೆಳ್ಳಿಮೋಡ ಕನ್ನಡ ಚಿತ್ರವಾಗಿ ತೆರೆ ಕಂಡಿತು.
೩) 'ಭಕ್ತ ಕನಕದಾಸ, ಸ್ವರ್ಣ ಗೌರಿ, ನಂದಾ ದೀಪ' ಮುಂತಾದ ಚಿತ್ರಗಳಿಗೆ ಸುಮಧುರ ಸಂಗೀತವನ್ನು ನೀಡಿದವರು ಎಂ. ವೆಂಕಟರಾಜು. ಅವರು ಸಂಗೀತ ನಿರ್ದೇಶಕ ಎಂ. ರಂಗರಾವ್ ರವರ ಹಿರಿಯಣ್ಣನವರೂ ಹೌದು. ಅಂತಹ ಮಹಾನ್ ಸಂಗೀತ ನಿರ್ದೇಶಕರು ಅಕಾಲ ಮೃತ್ಯುವಿಗೆ ತುತ್ತಾದದ್ದು ಕನ್ನಡಿಗರ ದುರ್ದೈವ.
ಕನ್ನಡೋತ್ಸವ - ೨, ನಿನ್ನೆಯ ವಿಜೇತರು
ಶ್ರೀ. ವೆಂಕಟಾಚಲ
NIIT ಸಂಸ್ಥೆಯ ತರಬೇತುದಾರರು
ಕನ್ನಡೋತ್ಸವ - ೩
ಕೆಳಗಿನ ಚಿತ್ರದಲ್ಲಿರುವ ಮಹಾನ್ ಕನ್ನಡಿಗರನ್ನು ಗುರುತಿಸಿ.
























