ಬರಲಿದೆ ಎಲ್.ಐ.ಸಿ.ಯ ಭಾರಿ ಐ.ಪಿ.ಓ.!
ಭಾರತೀಯ ಷೇರು ಮಾರುಕಟ್ಟೆಯ ಹೂಡಿಕೆದಾರರಿಗೀಗ ಪರ್ವ ಕಾಲ. ೨೦೨೧ರ ಸೆಪ್ಟೆಂಬರ್ ೨೪ರಂದು ೬೦,೦೦೦ಕ್ಕೇರಿದ ಸೆನ್ಸೆಕ್ಸ್ ಸೂಚ್ಯಂಕ, ಈಗಲೂ ತನ್ನ ಮಟ್ಟವನ್ನು ಕಾಪಾಡಿಕೊಂಡಿದ್ದು ಸ್ಥಿರ ಪ್ರದರ್ಶನವನ್ನು ನೀಡುತ್ತಿದೆ. ಕಳೆದ ೨೦ ತಿಂಗಳುಗಳಿಂದ ಕೋವಿಡ್ನಿಂದ ತತ್ತರಿಸುತ್ತಿರುವ ಇಡೀ ವಿಶ್ವದಲ್ಲೇ, ಭಾರತದ ಷೇರು ಮಾರುಕಟ್ಟೆಯ ಪ್ರದರ್ಶನ ಉತ್ತಮವೆಂಬುದು ವಿತ್ತ ತಜ್ಞರ ಅಭಿಪ್ರಾಯವಾಗಿದೆ. ಭಾರತದ ಕೋವಿಡ್ ಲಸಿಕೆ ಅಭಿಯಾನ ವ್ಯಾಪಕವಾದ ಯಶಸ್ಸನ್ನು ಕಂಡಿದ್ದು, ಕೋವಿಡ್ ಹರಡುವಿಕೆ ಸಾಕಷ್ಟು ನಿಯಂತ್ರಣದಲ್ಲಿದೆ. ಹಲವಾರು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಕೋವಿಡ್ ಪೂರ್ವ ಸ್ಥಿತಿ ಮರಳುವ ಭರವಸೆ ಮೂಡುತ್ತಿದೆ.
ಇಂತಹ ಆಶಾದಾಯಕ ಪರಿಸ್ಥಿತಿಯಲ್ಲಿ, ಭಾರತ ಸರಕಾರ ತನ್ನ ಸ್ವಾಮ್ಯದ ನವರತ್ನಗಳಲ್ಲೊಂದಾದ ಎಲ್.ಐ.ಸಿ.ಯ ಷೇರುಗಳ ಪ್ರಥಮ ಮಾರಾಟ(ಐ.ಪಿ.ಓ.)ದ ಅಭಿಯಾನಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಈ ಯೋಜನೆಯನ್ನು, 'ಭಾರತದ ಅತ್ಯಂತ ದೊಡ್ಡ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ' ಎಂದೇ ಬಣ್ಣಿಸಲಾಗುತ್ತಿದೆ.
'ಜೀವವೆಂಬ ಜ್ಯೋತಿಯನ್ನು ಕಾಪಾಡುತ್ತಿರುವ ಕೈಗಳ' ಸಂಕೇತ (ಲೋಗೊ)ದೊಂದಿಗೆ ಜನಪ್ರಿಯವಾಗಿರುವ ಎಲ್.ಐ.ಸಿ. ಸಂಸ್ಥೆ, ೧೯೫೬ರಲ್ಲಿ ಸ್ಥಾಪಿತವಾಯಿತು. 'ಯೋಗಕ್ಷೇಮಂ ವಹಾಮ್ಯಹಂ' ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ಈ ಸಂಸ್ಥೆ, ಕೋಟ್ಯಾಂತರ ಭಾರತೀಯರಲ್ಲಿ 'ಜೀವನದೊಂದಿಗಿನ ಮತ್ತು ಜೀವನದನಂತರದ' ಭರವಸೆಯನ್ನು ಮೂಡಿಸಿರುವುದು ಸುಳ್ಳಲ್ಲ.
ಭಾರತದ ಯಾವುದೇ ಮೂಲೆಯ ಮುಗ್ಧ ವ್ಯಕ್ತಿಯನ್ನು ಕೇಳಿ. 'ಸ್ವಾಮಿ, ತಾವು ಜೀವವಿಮೆ ಮಾಡಿಸಿದ್ದೀರಾ? "ಇಲ್ಲ"ವೆಂಬ ಉತ್ತರ ಬರಬಹುದು. ಅದೇ ವ್ಯಕ್ತಿಯನ್ನು ತಾವು ಎಲ್.ಐ.ಸಿ. ಮಾಡಿಸಿದ್ದೀರಾ ಎಂದು ಕೇಳಿದರೆ, ಥಟ್ಟನೆ "ಹೌದು" ಎಂಬ ಉತ್ತರ ಬಂದರೂ ಆಶ್ಚರ್ಯವಿಲ್ಲ.' ಕಳೆದ ೬೫ ವರ್ಷಗಳಲ್ಲಿ, 'ಜೀವವಿಮೆ ಎಂದರೆ ಎಲ್.ಐ.ಸಿ.' ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿರುವುದಂತೂ ಎಲ್ಲರೂ ಅನುಮೋದಿಸುತ್ತಿರುವ ವಿಷಯ.
ಭಾರತೀಯ ಜೀವವಿಮಾ ಸಂಸ್ಥೆ (ಎಲ್.ಐ.ಸಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ.), ಭಾರತದ ಆರ್ಥಿಕ ಕ್ಷೇತ್ರದಲ್ಲಿ ರಾರಾಜಿಸುತ್ತಿರುವ, ಸಂಪೂರ್ಣ ಸರಕಾರಿ ಸ್ವಾಮ್ಯದ ಎರಡು ಭಾರಿ ಸಂಸ್ಥೆಗಳು. ಜಾಗತಿಕ ಮಟ್ಟದಲ್ಲೂ ಈ ಎರಡೂ ಸಂಸ್ಥೆಗಳಿಗೆ ಮಾನ್ಯತೆ ದೊರೆತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಸುಮಾರು ೨೫೦ ವಿವಿಧ ರೀತಿಯ ಸೇವೆಗಳು, ೩೦ ಕೋಟಿ ಜೀವವಿಮಾ ಪಾಲಿಸಿಗಳು, ೧೨ ಲಕ್ಷದಷ್ಟು ಏಜಂಟರು, ಒಂದು ಲಕ್ಷದಷ್ಟು ಉದ್ಯೋಗಿಗಳು, ೨೦೦೦ದಷ್ಟು ಶಾಖೆಗಳು ಮತ್ತು ೧೫೦೦ದಷ್ಟು ಸ್ಯಾಟಲೈಟ್ ಕಚೇರಿಗಳನ್ನೂ ಹೊಂದಿರುವ ಎಲ್.ಐ.ಸಿ.ಯೊಂದು ಮಾಹಾನ್ ವಿಮಾ ಸಂಸ್ಥೆಯೇ ಸರಿ. ಎಲ್.ಐ.ಸಿ. ಹೌಸಿಂಗ್ ಫೈನಾನ್ಸ್, ಎಲ್.ಐ.ಸಿ. ಮ್ಯೂಚುಯಲ್ ಫಂಡ್, ಐ.ಡಿ.ಬಿ.ಐ. ಬ್ಯಾಂಕ್ ಮುಂತಾದ ಅಂಗ ಸಂಸ್ಥೆಗಳನ್ನೂ ಹೊಂದಿರುವ ಎಲ್.ಐ.ಸಿ., ಬೇರೆ ಬೇರೆ ದೇಶಗಳಲ್ಲೂ ತನ್ನ ವಹಿವಾಟನ್ನು ನಡೆಸುತ್ತಿದೆ.
ಕೋವಿಡ್-೧೯ ಮಹಾಮಾರಿಯ ದಾಳಿಗೆ ಕಳೆದ ೨೦ ತಿಂಗಳುಗಳಿಂದ ತತ್ತರಿಸಿರುವ ನಮ್ಮ ದೇಶ, ಭಾರಿ ಸಂಖ್ಯೆಯ ಸಾವು-ನೋವುಗಳನ್ನು ಕಂಡಿದೆ. ಅಂತಹ ಕೋವಿಡ್ ಸಾವುಗಳ ಜೀವವಿಮಾ ಕ್ಲೇಮ್ ಗಳ ನಿರ್ವಹಣೆಯನ್ನು ಎಲ್.ಐ.ಸಿ. ತ್ವರಿತವಾಗಿ ಮಾಡಿ ಮೆಚ್ಚುಗೆ ಗಳಿಸಿದೆ. ಕೋವಿಡ್ ನಿಂದ ಮೃತಪಟ್ಟವರ ಕುಟುಂಬದ ವಿವರಗಳನ್ನು, ಆಯಾ ಜಿಲ್ಲಾಧಿಕಾರಿಗಳಿಂದ ತರಿಸಿಕೊಳ್ಳುವ ವ್ಯವಸ್ಥೆಯನ್ನು ಎಲ್.ಐ.ಸಿ. ಮಾಡಿತ್ತು. ಮೃತರ ಕುಟುಂಬಗಳು ಸಲ್ಲಿಸಿದ ೩೮,೩೦೪ ಕೋವಿಡ್ ಕ್ಲೈಮ್ಸ್ ನ ಮೊತ್ತ ರು. ೧,೦೬೨. ೩೭ಕೋಟಿಗಳಷ್ಟಿತ್ತು. ಅವುಗಳ ಪೈಕಿ ಸಂಸ್ಥೆ ೩೮,೨೯೦ ಕ್ಲೇಮ್ ಗಳನ್ನು ಸಂಸ್ಥೆ ಅನುಮೋದಿಸಿದ್ದು, ರು. ೧೦೬೧. ೯೧ ಕೋಟಿಗಳನ್ನು ವಿತರಿಸಿದೆ. ಇದರಿಂದ ಎಲ್.ಐ.ಸಿ. ಯ ಬಗ್ಗೆ ಸಾರ್ವಜನಿಕರ ವಿಶ್ವಾಸ ಹೆಚ್ಚಿ, ಸಂಸ್ಥೆಯು ತನ್ನ ವಹಿವಾಟಿನಲ್ಲಿ ಭಾರಿ ವೃದ್ಧಿಯನ್ನು ಕಂಡಿದೆ.
ಅಂತಹ ಮಾಹಾನ್ ಸಂಸ್ಥೆಯಾದ, ಭಾರತ ಸರಕಾರದ ಸ್ವಾಮ್ಯದ ಎಲ್.ಐ.ಸಿ.ಯ ಷೇರುಗಳನ್ನು ಪ್ರಥಮವಾಗಿ ಸಾರ್ವಜನಿಕ ಮಾರಾಟಕ್ಕೆ ನೀಡುತ್ತಿರುವುದು ಭಾರತದಲ್ಲೇ ಏಕೆ, ಇಡೀ ವಿಶ್ವದ ಷೇರು ಮಾರುಕಟ್ಟೆಯಲ್ಲೇ ಸಂಚಲನವನ್ನುಂಟು ಮಾಡಿದೆ. ಭಾರತ ಸರಕಾರದ ನಿರ್ಣಯಗಳ ಪ್ರಕಾರ, ಸುಮಾರು ಒಂದು ವರ್ಷಗಳ ಹಿಂದೆಯೇ, ಈ ಪ್ರಥಮ ಷೇರು ಮಾರಾಟ ಜರುಗಬೇಕಿತ್ತು. ಕೋವಿಡ್-೧೯ರ ಕಾರಣದಿಂದ, ಷೇರುಗಳ ಮಾರಾಟದ ಪ್ರಕ್ರಿಯೆ, ಒಂದು ವರ್ಷ ತಡವಾಗಿ ಹೂಡಿಕೆದಾರರ ಮುಂದೆ ಬರುತ್ತಿದೆ. ಎಲ್ಲಾ ಸಿದ್ಧತೆಗಳು ಬಹುತೇಕ ಮುಗಿದಿದ್ದು, ಮುಂದಿನ ತ್ರೈಮಾಸಿಕ(ಜನವರಿ-ಮಾರ್ಚ್ ೨೦೨೨)ದ ಸಮಯದಲ್ಲಿ, ಎಲ್.ಐ.ಸಿ. ಷೇರುಗಳು ಮಾರುಕಟ್ಟೆಗೆ ಬರಬಹುದೆಂಬ ನೀರೀಕ್ಷೆಇದೆ.
ಜೀವ ವಿಮಾ ಕ್ಷೇತ್ರ, ಎರಡು ದಶಕಗಳ ಹಿಂದೆಯೇ ಖಾಸಗೀಕರಣ ಪ್ರಕ್ರಿಯೆಗೆ ಒಳಪಟ್ಟಿದೆ. ವಿದೇಶಿ ವಿಮಾ ಸಂಸ್ಥೆಗಳು ಸೇರಿದಂತೆ ಐ.ಸಿ.ಐ.ಸಿ.ಐ., ಎಚ್.ಡಿ.ಎಫ್.ಸಿ. ಮುಂತಾದ ಮಹಾನ್ ಖಾಸಗಿ ಜೀವ ವಿಮಾ ಸಂಸ್ಥೆಗಳು ಇಂದು ಭಾರತದಲ್ಲಿ ವಹಿವಾಟನ್ನು ಜೋರಾಗೆ ನಡೆಸುತ್ತಿದ್ದರೂ, ಎಲ್.ಐ.ಸಿ. ಸಂಸ್ಥೆ ಭಾರತದ ವಹಿವಾಟಿನ ೭೦%ರಷ್ಟರ ಸಿಂಹಪಾಲಿನೊಂದಿಗೆ ತನ್ನ ಅಗ್ರಾ ಸ್ಥಾನವನ್ನು ಈಗಲೂ ಕಾಯ್ದುಕೊಂಡಿದೆ. ಭಾರತದ ವಿತ್ತ ಕ್ಷೇತ್ರದಲ್ಲಿ ಶಿಖರ ಸ್ಥಾನವನ್ನು ಅಲಂಕರಿಸಿರುವ ಎಲ್.ಐ.ಸಿ. ಸಂಸ್ಥೆಯ ಆಸ್ತಿಗಳ ಮೌಲ್ಯಗಳ ನಿರ್ಧಾರ ಮಾಡುವುದೇ ಒಂದು ಸವಾಲಾಗಿದೆ. ಎಲ್.ಐ.ಸಿ. ಸಾರ್ವಜನಿಕರಿಗೆ ವಿತರಿಸಿರುವ ೩೦ ಕೋಟಿ ಪಾಲಿಸಿಗಳ ಸಾಧಕ-ಬಾಧಕಗಳನ್ನು ಅಂದಾಜಿಸುವುದೇ ಒಂದು ಕ್ಲಿಷ್ಟ ಪ್ರಕ್ರಿಯೆಯಾಗಿದೆ. ಜೊತೆಗೆ ಸಂಸ್ಥೆಯ ೨೦೦೦ ಶಾಖೆಗಳಲ್ಲಿರುವ ಸ್ಥಿರಾಸ್ತಿಗಳ ಮೌಲ್ಯ ಮಾಪನ ಕೂಡ ನಡೆಯಬೇಕಾಗಿದೆ. ಈ ಎಲ್ಲಾ ಮೌಲ್ಯ ಮಾಪನಗಳೂ ಬಹುತೇಕ ಮುಗಿದಿದ್ದು ಎಲ್.ಐ.ಸಿ. ಸುಮಾರು ೧೦ ಲಕ್ಷ ಕೋಟಿಗಳಷ್ಟರ ಮೌಲ್ಯವನ್ನು ಹೊಂದಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಎಲ್.ಐ.ಸಿ.ಯ ಷೇರುಗಳನ್ನು ಖರೀದಿಸಲು, 'ನಾ ಮುಂದು, ತಾ ಮುಂದು' ಎಂದು ಹೂಡಿಕೆದಾರರು ತುದಿಗಾಲಲ್ಲಿ ನಿಂತಿದ್ದಾರೆ.
ಮೇಲಾಗಿ ಎಲ್.ಐ.ಸಿ. ಸಂಸ್ಥೆಯ ಜೀವವಿಮಾ ಪಾಲಸಿಗಳು ಸರಕಾರಿ ಖಾತರಿಯನ್ನು (ಸಾವರಿನ್ ಗ್ಯಾರಂಟಿ) ಹೊಂದಿರುತ್ತವೆ. ಬೇರ್ಯಾವ ಜೀವ ವಿಮಾ ಸಂಸ್ಥೆಯ ಪಾಲಿಸಿಗಳಿಗೂ ಈ ಸೌಲಭ್ಯವಿರುವುದಿಲ್ಲ. ಅದೇ ಎಲ್.ಐ.ಸಿ. ಪಾಲಸಿಗಳ ಮಾರಾಟಕ್ಕಿರುವ ವಿಶೇಷ ಬಲ (U.S.P.). ಆದರೆ ಈವರೆಗೆ ಸಂಸ್ಥೆ, ಸರಕಾರಿ ಗ್ಯಾರಂಟಿಯ ನೆರವನ್ನು ಪಡೆಯದಿರುವುದು ಸಂಸ್ಥೆಯ ಗಟ್ಟಿತನಕ್ಕೆ ಸಾಕ್ಷಿ ಎನ್ನುತ್ತಾರೆ ಎಲ್.ಐ.ಸಿ.ಯ ಇಂದಿನ ಛೇರ್ಮನ್ ರಾದಂತಹ ಶ್ರೀ. ಎಂ.ಆರ್.ಕುಮಾರ್. ಅವರು ಮುಂದುವರೆದು ಮಾತನಾಡುತ್ತಾ, 'ಎಲ್.ಐ.ಸಿ.ಯಲ್ಲಿ ಸುಮಾರು ೨೫೦ ದಶಲಕ್ಷ ಪಾಲಿಸಿದಾರರಿದ್ದಾರೆ. ಆದರೆ ಈವರೆಗೆ, ಷೇರುಗಳ ವಹಿವಾಟಿನಲ್ಲಿ ತೊಡಗಲು ಬೇಕಾಗಿರುವ ಡಿಮ್ಯಾಟ್ ಖಾತೆಗಳನ್ನು ಹೊಂದಿರುವವರ ಸಂಖ್ಯೆ ೬೦ ದಶಲಕ್ಷ ಮಾತ್ರ. ಎಲ್.ಐ.ಸಿ.ಯ ಗ್ರಾಹಕರಿಗಳಿಗೂ ಕೆಲವು ಸಂಖ್ಯೆಯ ಷೇರುಗಳನ್ನು ಕಾದಿರಿಸುವ ಸಾಧ್ಯತೆ ಇರುವುದರಿಂದ, ಅವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆದು, ಷೇರು ಮಾರುಕಟ್ಟೆಗೆ ಕಾಲಿಡಲಿದ್ದಾರೆ. ಅಂತಹವರು ಎಲ್.ಐ.ಸಿ. ಷೇರುಗಳಿಗೆ ಅರ್ಜಿಯನ್ನು ಸಲ್ಲಿಸಿ ಸುಮ್ಮನೆ ಕೂರುವುದಿಲ್ಲ. ಬೇರೆ ಬೇರೆ ಷೇರುಗಳನ್ನು ಅವರುಗಳು ಖರೀದಿಸಲು ಮುಂದಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಎಲ್.ಐ.ಸಿ.ಯ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ, ಭಾರತದ ಷೇರು ಮಾರುಕಟ್ಟೆಯ ವಿಸ್ತರಣೆಯಲ್ಲಿ ದೊಡ್ಡದೊಂದು ಕ್ರಾಂತಿಯನ್ನೇ ಉಂಟುಮಾಡಲಿದೆ' ಎಂದಿದ್ದಾರೆ.
೧೯೯೩ರಲ್ಲಿ ನಡೆದ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಐ.ಪಿ.ಓ., ಭಾರಿ ಯಶಸ್ಸನ್ನು ಕಂಡಿತ್ತು. ೧೦ ರು.ಗಳ ಬ್ಯಾಂಕಿನ ಷೇರನ್ನು ಕೇವಲ ರು. ೧೦೦ ಗಳಿಗೆ ನೀಡಿತ್ತು ಸರಕಾರ. ಎರಡು-ಮೂರು ವಾರಗಳ ಸಮಯದಲ್ಲೇ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಆ ಷೇರು ರೂ. ೨೫೦ಕ್ಕೆ ಮಾರಾಟವಾಗಿದ್ದು ಈಗ ಇತಿಹಾಸ. ಇಂದು ೧೯೯೩ರ ಒಂದು ಸ್ಟೇಟ್ ಬ್ಯಾಂಕ್ ಷೇರು, ಈಗ ರು. ೧ರ ಹತ್ತು ಷೇರುಗಳಾಗಿದ್ದು, ಪ್ರತಿ ರು. ೧ರ ಷೇರಿನ ಬೆಲೆ ಸುಮಾರು ರು. ೫೦೦ರಷ್ಟಿದೆ. ಅಂದರೆ ಸ್ಟೇಟ್ ಬ್ಯಾಂಕ್ ಷೇರಿನಲ್ಲಿ, ೧೯೯೩ರಲ್ಲಿ ಹೂಡಿದ್ದ ರು. ೧೦,೦೦೦ದ, ಬೆಲೆಯಿಂದು ರು. ೫,೦೦,೦೦ (ರು. ಐದು ಲಕ್ಷ - ಕಳೆದ ೨೮ ವರ್ಷಗಳಲ್ಲಿ ವಿತರಿಸಲಾಗಿರುವ ಡಿವಿಡೆಂಡ್ ಮತ್ತು ಬೋನಸ್ ಷೇರುಗಳನ್ನು ಹೊರೆತುಪಡಿಸಿ)ದಷ್ಟಿದೆ. ಹಾಗಾಗಿ ಎಲ್.ಐ.ಸಿ.ಯ ಐ.ಪಿ.ಓ.ಗೆ ಭಾರಿ ಪ್ರತಿಕ್ರಿಯೆ ಕಂಡುಬರುವದರಲ್ಲಿ ಅನುಮಾನವಿಲ್ಲ ಎಂಬುದು ತಜ್ಞರ ಭವಿಷ್ಯವಾಣಿಯಾಗಿದೆ.
ಏನೇ ಆದರೂ ನಾವುಗಳು ಕೆಲವು ಎಚ್ಚರಿಕೆಯ ಮಾತಗಳನ್ನು ಮರೆಯುವಂತಿಲ್ಲ. ಎಲ್.ಐ.ಸಿ.ಯಂತಹ ಪ್ರತಿಷ್ಠಿತ ಕಂಪನಿಗಳ ಷೇರುಗಳಿಗೆ ಭಾರಿ ಬೇಡಿಕೆ ಇರುತ್ತದೆ. ಐ.ಪಿ.ಓ.ಗೆ, ಅವಶ್ಯಕತೆಗಿಂತ ೧೦೦ ಪಟ್ಟು ಹೆಚ್ಚು ಅರ್ಜಿದಾರರು, ಹಣವನ್ನು ಪಾವತಿಸಿದರೂ ಆಶ್ಚರ್ಯವಿಲ್ಲ. ಹಾಗಾಗಿ ಷೇರುಗಳಿಗೆ ಅರ್ಜಿ ಹಾಕಿದವರಿಗೆಲ್ಲಾ, ಷೇರುಗಳು ದೊರೆಯುತ್ತವೆಂಬ ಖಾತರಿಯೇನಿಲ್ಲ. ಷೇರುಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದ್ದದೇ. ಮೊನ್ನೆಯಿನ್ನೂ 'ಪೇಟಿಎಂ' ಸಂಸ್ಥೆಯ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ ಸಂಪನ್ನಗೊಂಡಿದ್ದು, ಅದನ್ನು ಭಾರತದ ಈವರೆಗಿನ ಅತ್ಯಂತ ದೊಡ್ಡ ಐ.ಪಿ.ಓ. ಎಂದೇ ಬಣ್ಣಿಸಲಾಗಿತ್ತು. ರು. ೧ರ ಷೇರೊಂದನ್ನು, ರೂ. ೨೧೫೦ರ ಬೆಲೆಗೆ ಮಾರಾಟ ಮಾಡಿದ್ದ ಆ ಕಂಪನಿಯ ಷೇರುಗಳು, ಕೆಲವೇ ದಿನಗಳಲ್ಲಿ ಲಿಸ್ಟ್ ಆಗಿ ಮಾರುಕಟ್ಟೆಗೆ ಬಂದಾಗ ಅದರ ಬೆಲೆ ರು. ೧೫೬೪. ೧೫ ಮಾತ್ರವಾಗಿ, ಹೂಡಿಕೆದಾರರು ೨೭% ನಷ್ಟವನ್ನು ಅನುಭವಿಸಿದರು. ಮುಂದಿನ ದಿನಗಳಲ್ಲಿ ಅದೇ ಷೇರಿನ ಬೆಲೆ ಭಾರೀ ಹೆಚ್ಚಳವನ್ನು ದಾಖಲಿಸಿಲೂ ಬಹುದು.
ಎಲ್.ಐ.ಸಿ. ಸಂಸ್ಥೆಯ ಮೌಲ್ಯ ಸುಮಾರು ೧೦ ಲಕ್ಷ ಕೋಟಿಯಷ್ಟಿದೆ ಎಂದು ಅನುಮಾನಿಸಲಾಗಿದೆ. ಹಾಗಾಗಿ ಸಂಸ್ಥೆಯ ರು. ೧ರ ಷೇರಿಗೆ, ರು. ೧೦೦೦ ದಷ್ಟರ, ಅಥವಾ ಅದಕ್ಕೂ ಹೆಚ್ಚಿನ ಬೆಲೆ ನಿಗದಿಯಾದರೂ ಆಶ್ಚರ್ಯವಿಲ್ಲ ಎಂಬುದು ತಜ್ಞರ ಒಂದು ಅಂದಾಜು. ಷೇರಿನ ವಿತರಣೆಯ ಪ್ರಕ್ರಿಯೆ ಒಂದೆರಡು ವಾರದಲ್ಲೇ ಮುಗಿದು, ಎಲ್.ಐ.ಸಿ.ಯ ಷೇರುಗಳು ಮುಕ್ತ ಮಾರುಕಟ್ಟೆಗೆ ಬಂದಾಗ, ಅದರ ಬೆಲೆ ಒಮ್ಮಲೇ ದುಪ್ಪಟಾದರೂ ಆಶ್ಚರ್ಯವಿಲ್ಲ ಎಂಬುದು ಮತ್ತೊಂದು ಅಂದಾಜು. ಹಾಗಾಗಿ ಉತ್ಸಾಹಿ ಹೂಡಿಕೆದಾರರು, ಎಲ್.ಐ.ಸಿ.ಯ ಷೇರನ್ನು ಖರೀದಿಸಲು ಮುಗಿ ಬೀಳುವುದರಲ್ಲಿ ಅನುಮಾನವಿಲ್ಲ ಎಂದೇ ನೀರಿಕ್ಷಿಸಲಾಗಿದೆ.
ಈವರೆಗೆ ಯಾವುದೇ ಐ.ಪಿ.ಓ.ದಲ್ಲಿ ಅರ್ಜಿ ಸಲ್ಲಿಸದಿರುವ ಓದುಗರ ಮನಸಿನಲ್ಲಿ, ಐ.ಪಿ.ಓ.ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿರಬಹುದು. ಅಂಥವರ ಪ್ರಶ್ನೆಯ ಉತ್ತರವನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.
-೦-೦-೦-೦-೦-
ಎಲ್.ಐ.ಸಿ.ಯ ಪ್ರಥಮ ಷೇರು ಮಾರಾಟದ ಪ್ರಕ್ರಿಯೆ, ಭಾರತದ ಷೇರು ಮಾರುಕಟ್ಟೆಯ ವಿಸ್ತಾರವನ್ನೇ ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. - ಶ್ರೀ. ಎಂ.ಆರ್.ಕುಮಾರ್, ಛೇರ್ಮನ್, ಎಲ್.ಐ.ಸಿ.
(You may put the above message in a separate box, inside the article)
(The suggested picture for the article is attached)
No comments:
Post a Comment