ಈ ಜೈಲು ನ್ಯಾಯವೇ?
ರಾಜಸ್ಥಾನದ ಹೋಟೆಲೊಂದರ ಅನುತ್ಪಾದಕ ಸಾಲ(NPA)ವನ್ನು ಸಾಲ ಮರುಸಂಘಟನಾ ಸಂಸ್ಥೆ (Asset Reconstruction Company)ಯೊಂದಕ್ಕೆ ಅಗ್ಗದ ಬೆಲೆಗೆ ಮಾರಾಟ ಮಾಡಿದ ಆರೋಪದ ಮೇಲೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ(SBI)ದ ಮಾಜಿ ಛೇರ್ಮನ್ ಶ್ರೀ ಪ್ರತೀಪ್ ಚೌಧ್ರಿ ರವರನ್ನು, ರಾಜಸ್ಥಾನದ ಪೊಲೀಸರು ಕಳೆದ ನವೆಂಬರ್ ೧ರಂದು ಬಂಧಿಸಿದ್ದಾರೆ. ಬೃಹತ್ ಸಾಲಗಳ ನಿರ್ವಹಣೆ ಮಾಡುವಲ್ಲಿ ಭಯದ ವಾತಾವರಣದಿಂದ ಹಿಂಜರಿಯುತ್ತಿರುವ ಬ್ಯಾಂಕಿಂಗ್ ಕ್ಷೇತ್ರದ ಉನ್ನತ ಅಧಿಕಾರಿಗಳ ವಲಯದಲ್ಲಿ, ಚೌಧ್ರಿಯವರ ಬಂಧನ ತಲ್ಲಣವನ್ನು ಮೂಡಿಸಿದೆ. ಚೌಧ್ರಿಯವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.ಜೈಸಲ್ಮೇರ್, ರಾಜಸ್ಥಾನದ ಹೋಟೆಲೊಂದಕ್ಕೆ ೨೦೦೭ರಲ್ಲಿ ಸ್ಟೇಟ್ ಬ್ಯಾಂಕ್, ರು.೨೫ ಕೋಟಿಯಷ್ಟರ ಸಾಲವನ್ನು ನೀಡಿತ್ತು. ಮುಖ್ಯ ಪ್ರವರ್ತಕರೊಬ್ಬರ ನಿಧನದೊಂದಿಗೆ ಅಪೂರ್ಣವಾಗುಳಿದ ಹೋಟೆಲ್ ಯೋಜನೆಯನ್ನು, ೨೦೧೦ರಲ್ಲಿ ಅನುತ್ಪಾದಕ ಆಸ್ತಿ (NPA) ಎಂದು ಪರಿಗಣಿಸಲಾಯ್ತು. ಸಾಲ ವಸೂಲಿ ಮಾಡಲಾಗದ ಸ್ಟೇಟ್ ಬ್ಯಾಂಕ್, ೨೦೧೪ರಲ್ಲಿ ಅನುತ್ಪಾದಕ ಆಸ್ತಿಯನ್ನು (ಸಾಲವನ್ನು) ಅಗ್ಗದ ಬೆಲೆಗೆ, ಆಲ್ಕೆಮಿಸ್ಟ್ ಸಾಲ ಮರುಸಂಘಟನಾ ಸಂಸ್ಥೆ(AARC)ಗೆ ಮಾರಾಟ ಮಾಡಿತು ಎಂಬುದು, ಸಾಲ ಕಟ್ಟಲಾಗದ ಪ್ರವರ್ತಕರ ಅಹವಾಲು. ಆರೋಪಿ ಚೌಧ್ರಿಯವರು, ಸ್ಟೇಟ್ ಬ್ಯಾಂಕ್ ನಿಂದ ನಿವೃತ್ತ(೨೦೧೩)ರಾದ ಮೇಲೆ, ಅದೇ ಸಾಲ ಮರುಸಂಘಟನಾ ಸಂಸ್ಥೆಯ ಡೈರೆಕ್ಟರ್ ಆಗಿ ಸೇರಿಕೊಂಡಿದ್ದು(೨೦೧೪) ಅನುಮಾನಗಳಿಗೆ ಆಸ್ಪದ ನೀಡಿರುವುದು ಸುಳ್ಳಲ್ಲ.
ಚೌಧ್ರಿಯವರ ಬಂಧನದಿಂದ ನೊಂದ ಸ್ಟೇಟ್ ಬ್ಯಾಂಕ್ನ ಇಂದಿನ ಛೇರ್ಮನ್ ಶ್ರೀ ದಿನೇಶ್ ಖಾರರವರು ಹೇಳಿಕೆಯೊಂದನ್ನು ನೀಡಿ, 'ಈ ರೀತಿಯ ಸಣ್ಣ ಪ್ರಮಾಣದ ಸಾಲ ಮಾರಾಟದ ನಿರ್ಣಯದ ವಿಷಯದಲ್ಲಿ, ಛೇರ್ಮನ್ ಮಟ್ಟದ ಉನ್ನತ ಅಧಿಕಾರಿಗಳ ಪಾತ್ರವಿರುವುದಿಲ್ಲ. ಈ ರೀತಿಯ ನಿರ್ಣಯಗಳನ್ನು ಸ್ಥಳೀಯ ಮಟ್ಟದಲ್ಲೇ ತೆಗೆದುಕೊಳ್ಳಲಾಗುತ್ತದೆ. ಸದರಿ ಸಾಲ ಮಾರಾಟದ ಪ್ರಕ್ರಿಯೆ, ಬ್ಯಾಂಕಿನ ನಿಯಮಗಳಂತೆ ನಡೆದಿದ್ದು, ಯಾವುದೇ ಅಕ್ರಮ ನಡೆದಿಲ್ಲ. ಚೌಧ್ರಿಯವರ ಬಂಧನ ದುರದೃಷ್ಟಕರ. ಭಾರತೀಯ ಬ್ಯಾಂಕರ್ಗಳ ಸಂಸ್ಥೆ (IBA) ವಿಷಯವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತಿದೆ. ಬೇಗನೆ ಚೌಧ್ರಿಯವರ ಬಿಡುಗಡೆ ಹೊಂದುತ್ತಾರೆಂಬ ಭರವಸೆ'ಯನ್ನು ವ್ಯಕ್ತಪಡಿಸಿದ್ದಾರೆ.
ಚೌಧ್ರಿಯವರಿಗೆ ಕೂಡಲೇ ಜಾಮೀನು ದೊರೆಯಲಿ, ಇಡೀ ಘಟನೆಯ ಸಮಗ್ರ ತನಿಖೆ ನಡೆಯಲಿ, ನಿರ್ದೋಷಿಗಳಿಗೆ ಕಿರುಕುಳ ನೀಡದಂತಾಗಲಿ, ಭಯದ ವಾತಾವರಣದಿಂದ ಬ್ಯಾಂಕಿಂಗ್ ಉದ್ಯಮ ಹೊರಬರುವಂತಾಗಲಿ ಎಂದು ಆಶಿಸೋಣ.
ಲೇಖಕರು:
ಲಕ್ಷ್ಮೀನಾರಾಯಣ ಕೆ.
ಮಾಜಿ ಬ್ಯಾಂಕರ್
ಅತ್ಯಂತ ದುರಾದೃಷ್ಟಕರ. ತಿಂಗಳ ಹಿಂದೆ ಒಬ್ಬನ ಜಾಮೀನಿನ ಬಗ್ಗೆ ಆದ ಗಲಾಟೆ ನೋಡಿ. ಈಗ ದೇಶದ ಅತ್ಯುನ್ನತ ಬ್ಯಾಂಕ್ ಅಧಿಕಾರಿಗೆ ಕೊಟ್ಟಿರುವ ಸ್ಥಿತಿ ನೊಡಿ. ಇದಕ್ಕಿಂತ ಹೆಚ್ಚು ಹೇಳಬೇಕಿಲ್ಲ.
ReplyDelete😢
Delete