Sunday 28 November 2021

ಬೆಂಬಲ ಬೆಲೆ (ಎಂ.ಎಸ್.ಪಿ.) ಸುತ್ತಾ....... 

ನಮ್ಮ ರೈತರ ಐತಿಹಾಸಿಕ ಸುದೀರ್ಘ ಹೋರಾಟಕ್ಕೆ ಜಯ ದೊರೆತಿದೆ. ಎಲ್ಲಾ ಮೂರೂ ವಿವಾದಿತ ಕೃಷಿ ಕಾಯಿದೆಗಳನ್ನು ಹಿಂಪಡೆಯಲು ಕೇಂದ್ರ ಸರಕಾರ ಒಪ್ಪಿದೆ. ಆದರೂ ರೈತರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಅವರ ಮುಖ್ಯ ಬೇಡಿಕೆಗಳಲ್ಲಿ 'ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.)'ಗೆ ಸರಕಾರ ಕಾನೂನನ್ನು ರೂಪಿಸಬೇಕೆಂಬುದೇ ಮುಖ್ಯವಾದುದು. 

ನಮ್ಮ ದೇಶದ ಶೇಕಡಾ ೬೫ರಷ್ಟು ಜನರು ರೈತರು. ರೈತಾಪಿ ಜನರ ಕಷ್ಟ-ಕಾರ್ಪಣ್ಯಗಳು ನಮ್ಮೆಲ್ಲರಿಗೂ ತಿಳಿದದ್ದೇ. ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರೀತ್ಯ, ಪ್ರವಾಹ, ಬೆಂಕಿ, ಕಳ್ಳತನ, ಬೆಲೆ ಕುಸಿತ ಮುಂತಾದ ಹತ್ತು ಹಲವು ಆಘಾತಗಳ ಸಾಧ್ಯತೆಯ ಕರಿನೆರಳಿನ ನಡುವೆಯೇ ಸಾಗಬೇಕು ನಮ್ಮ ಕೃಷಿಕರ ವ್ಯವಸಾಯ. ಮೇಲಾಗಿ ನಮ್ಮ ರೈತರ ಪೈಕಿ ಶೇಕಡಾ ೮೨ರಷ್ಟು ರೈತರು, 'ಸಣ್ಣ ಮತ್ತು ಅತಿ ಸಣ್ಣ ವರ್ಗ'ಕ್ಕೆ ಸೇರಿದ ದುರ್ಬಲ ರೈತರು. ನಮ್ಮ ಹಳ್ಳಿಗರ ಪೈಕಿ ಸುಮಾರು ಶೇಕಡಾ ೪೦ರಷ್ಟು ಜನರು ಭೂರಹಿತ ಕೃಷಿ ಕೂಲಿಕಾರರು. ಇವರುಗಳೆಲ್ಲರ ಮೂಲಭೂತ ಸೌಕರ್ಯದ ಪೂರೈಕೆ, ಅವರುಗಳ ಕೃಷಿ  ಆದಾಯದಿಂದ ಸಾಲದೆಂಬುದು ವಿತ್ತತಜ್ಞರ ಅಭಿಪ್ರಾಯವೂ ಹೌದು. ಈ ಸಮಸ್ಯೆಯನ್ನು ನಮ್ಮ ಪ್ರಧಾನಿಯವರು ಮಾನ್ಯ ಮಾಡಿ, ವರ್ಷದಿಂದ ವರ್ಷಕ್ಕೆ, ವಿವಿಧ ಬೆಳೆಗಳಿಗೆ ಸಲ್ಲುವ ಬೆಂಬಲ ಬೆಲೆಯನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. 'ಬೆಂಬಲ ಬೆಲೆಯನ್ನು ನೀಡುತ್ತೀರ, ಆದರೆ ಬೆಂಬಲ ಬೆಲೆಯ ಕಾನೂನನ್ನು ಜಾರಿಗೊಳಿಸಲು ನೀವೇಕೆ ತಯಾರಿಲ್ಲ?' ಎಂಬುದೇ ನಮ್ಮ ರೈತರುಗಳ ಪ್ರಶ್ನೆ. 

ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆ ನಮ್ಮ ದೇಶದಲ್ಲಿ ಸುಮಾರು ೬೦ ವರ್ಷಗಳಿಂದ ಇದೆ. ಕ್ಷಾಮದ ಆ ದಿನಗಳಲ್ಲಿ, ಹೆಚ್ಚು ಹೆಚ್ಚು ಧಾನ್ಯಗಳನ್ನು ಬೆಳೆಯುವಂತೆ ನಮ್ಮ ರೈತರನ್ನು ಪ್ರೋತ್ಸಾಹಿಸಲು, ಬೆಂಬಲ ಬೆಲೆಯ ಬೆಂಬಲ ಬೇಕಾಗೇ ಇತ್ತು. ಅಂದಿನ ಪ್ರಧಾನಿ ಶಾಸ್ತ್ರಿಯವರ 'ಜೈ ಜವಾನ್, ಜೈ ಕಿಸಾನ್' ಎಂಬ ಘೋಷಣೆಗೆ  ಸಕಾರಾತ್ಮಕವಾಗಿ ಸ್ಪಂದಿಸಿದ ನಮ್ಮ ರೈತರು 'ಹಸಿರು ಕ್ರಾಂತಿ'ಯ ಹರಿಕಾರರಾದರು. ನಮ್ಮ ದೇಶ ಮುಂದಿನೆರಡು ದಶಕಗಳಲ್ಲಿ ಆಹಾರೋತ್ಪನ್ನದ ಸ್ವಾವಲಂಬನೆಯನ್ನು ಸಾಧಿಸಿತು. ಆದರೂ ೧೩೦ ಕೋಟಿಗಳಿಗೂ ಮೀರಿದ ನಮ್ಮ ಬೃಹತ್ ಜನಸಂಖ್ಯೆಗೆ, ಆಹಾರವನ್ನೊದಗಿಸುವ   ಜವಾಬ್ದಾರಿ ಸರಕಾರದ್ದು. ಆ ಮಹತ್ ಕಾರ್ಯಕ್ಕಾಗಿ ದುಡಿಯುವ ನಮ್ಮ ರೈತರಿಗೆ ಬೆಂಬಲ ಬೆಲೆಯ ಕಾನೂನಿನ ಶ್ರೀರಕ್ಷೆ ಅವಶ್ಯಕವಲ್ಲವೇ? ಭೂರಹಿತ ಕೃಷಿ ಕೂಲಿಕಾರರ ಹಿತಾಸಕ್ತಿಗಳಿಗೂ ಸರಕಾರದ ಶ್ರೀರಕ್ಷೆ ಬೇಡವೇ?

ಅವಶ್ಯಕತೆಗೆ ಅನುರೂಪವಾಗಿ ಸ್ಪಂದಿಸುತ್ತಿರುವ  ನಮ್ಮ ಸರಕಾರ, ಈಗ ೭ ಧಾನ್ಯಗಳು, ೫ ರೀತಿಯ ಬೇಳೆ ಗಳು, ೭ ರೀತಿಯ ಎಣ್ಣೆಕಾಳುಗಳು ಮತ್ತು ೪ ವಾಣಿಜ್ಯ ಬೆಳೆಗಳೂ ಸೇರಿದಂತೆ ೨೩ ವಿವಿಧ ರೀತಿಯ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸುತ್ತಾ ಬಂದಿದೆ. ಬೆಂಬಲ ಬೆಲೆಯ ಸಿಂಹಪಾಲನ್ನು, ಪಂಜಾಬ್, ಹರ್ಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ಪಡೆಯುತ್ತಿದ್ದಾರೆ. ಬೆಂಬಲ ಬೆಲೆಯ ಬಹುಪಾಲು ಗೋಧಿ ಮತ್ತು ಭತ್ತ ಬೆಳೆಯುವ ರೈತರುಗಳಿಗೇ ವಿನಿಯೋಗವಾಗುತ್ತಿದೆ.  ೧೦೦ ದಶಲಕ್ಷ ಟನ್ ಗಳಿಗೂ ಮೀರಿದಷ್ಟು ಆಹಾರದ ದಾಸ್ತಾನು, ಕೇಂದ್ರ ಸರಕಾರದ ಬಳಿ ಈಗಿದೆ. ಕಳೆದ ೨೦ ತಿಂಗಳುಗಳಿಂದ ಕೋವಿಡ್-೧೯ರ ದಾಳಿಗೆ ತತ್ತರಿಸುತ್ತಿರುವ ಭಾರತದ, ೮೦ ಕೋಟಿಗಳಷ್ಟು ಬಡವರಿಗೆ ತಲಾ ೫ ಕೆ.ಜಿ.ಗಳಷ್ಟು ಆಹಾರ ಧಾನ್ಯಗಳನ್ನು ಉಚಿತವಾಗಿ ಸರಕಾರ ಪೂರೈಸುತ್ತಿರುವುದು, ಈ ದಾಸ್ತಾನಿನ ನೆರವಿನಿಂದಲೇ. 

ಆದರೂ ಕನಿಷ್ಠ ಬೆಂಬಲ ಬೆಲೆಯ ಕಾನೂನಿನ ಜಾರಿಯನ್ನು ವಿರೋಧಿಸದ ವರ್ಗ ನಮ್ಮ ದೇಶದಲ್ಲಿ ಇಲ್ಲದಿಲ್ಲ. 'ಕಾನೂನು ಜಾರಿಯಲಿಲ್ಲದಿದ್ದರೂ, ಅವಶ್ಯಕತೆಗಿಂತ ಹೆಚ್ಚು ಬೆಳೆಗಳನ್ನು ನಮ್ಮ ದೇಶ, ಹೆಚ್ಚು ಬೆಲೆಯನ್ನು ತೆತ್ತು ರೈತರಿಂದ ಖರೀದಿಸುತ್ತಿದೆ. ಆ ಬೆಳೆಗಳನ್ನು ಜೋಪಾನವಾಗಿ ಗೋದಾಮುಗಳಲ್ಲಿಡುವುದೇ ಸರಕಾರಕ್ಕೊಂದು ಸವಾಲು. ಗೋದಾಮಿನಲ್ಲಿ ಕೊಳೆಯುವಿಕೆ, ಕ್ರಿಮಿ-ಕೀಟಗಳ, ಇಲಿ-ಹೆಗ್ಗಣಗಳ ಪಾಲಾಗುವಿಕೆ ಮುಂತಾದ ಪ್ರಕ್ರಿಯೆಗಳಿಂದ ಹಾಳಾಗುವ ದಾಸ್ತಾನಿನ ಧಾನ್ಯಗಳ  ಪ್ರಮಾಣವೂ  ಕಮ್ಮಿಯೇನಿಲ್ಲ. ನೀಡುತ್ತಿರುವ ಬೆಂಬಲ ಬೆಲೆಗೆ, ಸಾಗಾಣಿಕೆ ಮತ್ತು ಗೋದಾಮಿನ ಖರ್ಚುಗಳು ಸೇರಿ, ನಮ್ಮ ದಾಸ್ತಾನಿನಲ್ಲಿರುವ ಧಾನ್ಯಗಳ ಬೆಲೆಗಳು,  ಅಂತಾರಾಷ್ಟ್ರೀಯ ಬೆಲೆಗಳನ್ನೂ ಮೀರುವುದರಿಂದ ಅವುಗಳನ್ನು ರಫ್ತು ಮಾಡಲೂ ಆಗುವುದಿಲ್ಲ. ಮೇಲಾಗಿ ಖಾತರಿ ಬೆಂಬಲ ಬೆಲೆ ಇರುವ ಭತ್ತ ಮತ್ತು ಗೋಧಿಗಳನ್ನೇ ಸತತವಾಗಿ ಪ್ರತಿವರ್ಷ ಬೆಳೆಯುತ್ತಿರುವ ನಮ್ಮ ದೇಶದ ಪಶ್ಚಿಮೋತ್ತರ ಭಾಗದಲ್ಲಿ, ಭೂಮಿಯ ಫಲವತ್ತತೆಯೇ  ಹಾಳಾಗುತ್ತಿದೆ. ಅತ್ಯಂತ ಹೆಚ್ಚು ನೀರು ಹೀರುವ ಗೋಧಿ-ಭತ್ತದ ಬೆಳೆಗಳು, ಅಂತರ್ಜಲದ ಮಟ್ಟವನ್ನೇ ಚಿಂತಾಜನಕ ಸ್ಥಿತಿಗೆ ತಳ್ಳಿವೆ. ಆ ಭಾಗದ ರೈತರು ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ, ತಮ್ಮ ಜಮೀನುಗಳ ಕೂಳೆಯನ್ನು ಎಗ್ಗಿಲ್ಲದ ಸುಡುವುದರಿಂದ ವಾಯುಮಾಲಿನ್ಯ ಉಂಟಾಗಿ, ದಿಲ್ಲಿಯಂತಹ ಮಹಾನಗರಗಳಲ್ಲಿ ಜನರು ನರಕ ಯಾತನೆಯನ್ನು ಪ್ರತಿವರ್ಷ ಅನುಭವಿಸುತ್ತಿದ್ದಾರೆ. ಬೆಂಬಲ ಬೆಲೆಯ ಕಾನೂನು ಜಾರಿಗೊಂಡರೆ, ಮುಂದೆ ಹಣ್ಣು-ತರಕಾರಿಗಳಿಗೂ ಬೆಂಬಲ ಬೆಲೆಯ ಬೇಡಿಕೆ ಬರಬಹುದು. ತೀವ್ರವಾದ ಹಣದ ಕೊರತೆ ಸರಕಾರವನ್ನು ಕಾಡಬಹುದು,' ಎಂಬ ವಾದಗಳೂ ಹರಿದಾಡುತ್ತಿರುವುದು ಸುಳ್ಳಲ್ಲ. 

ಆದರೂ ನಮ್ಮ ಕೇಂದ್ರ ಸರಕಾರ, ಕನಿಷ್ಠ ಬೆಂಬಲ ಬೆಲೆಯ ಕಾನೂನು, ಬಹುಬೆಳೆ ಪದ್ಧತಿ, ಶೂನ್ಯ ಕೃಷಿ ಯೋಜನೆ ಮುಂತಾದ ವಿಷಯಗಳ ಚರ್ಚೆಗೆ, ರೈತ ಮುಖಂಡರನ್ನೊಳಗೊಂಡ ವಿಶೇಷ ಸಮಿತಿಯೊಂದನ್ನು ರಚಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಸ್ವಲ್ಪ ಸಮಾಧಾನಗೊಂಡಂತೆ ಕಾಣುತ್ತಿರುವ ನಮ್ಮ ರೈತರು, ನವೆಂಬರ್ ೨೯ರಂದು ಆಯೋಜಿಸಿದ್ದ ಪಾರ್ಲಿಯಮೆಂಟಿನತ್ತದ ಟ್ರ್ಯಾಕ್ಟರ್ ಮೆರವಣಿಗೆಯನ್ನು ಸ್ಥಗಿತಗೊಳಿಸಿರುವುದು ಸ್ವಾಗತಾರ್ಹವೇ ಸರಿ. ರೈತರು ಮತ್ತು ಸರಕಾರದ ನಡುವೆ ಸಾಮರಸ್ಯ ಮೂಡಲಿ, ರೈತರ ಎಲ್ಲಾ ಸಮಸ್ಯೆಗಳಿಗೂ  ಸೂಕ್ತ ಪರಿಹಾರ ದೊರಕಲಿ ಎಂದು ಆಶಿಸೋಣ.   

-0-0-0-0-0- 

 

  



No comments:

Post a Comment