Thursday, 11 March 2021

೬. ಕೋವಿಡ್ ಮಾನವ ಸೃಷ್ಟಿಯೇ?

 

 ಕೋವಿಡ್

 ಮಾನವ ಸೃಷ್ಟಿಯೇ?



'ದೇವರ ನ್ಯಾಯಾಲಯ'ದಲ್ಲಂದು ಮೊಕದ್ದಮೆಯೊಂದರ ಅಂತಿಮ ವಿಚಾರಣೆಯ ದಿನವಾಗಿತ್ತು. 'ಕೋವಿಡ್ನ ದುರಂತ ಮಾನವ ಸೃಷ್ಟಿಯೆ?' ಎಂಬ ಸೂಕ್ಷ್ಮ ಪ್ರಶ್ನೆಯ ನಿರ್ಣಯ ಅಂದಾಗಬೇಕಿತ್ತು.  ನಿಷ್ಪಕ್ಷಪಾತಿಯಾದ  ದೇವರು, ಸಂಬಂಧಪಟ್ಟ ಎಲ್ಲಾ ಆರೋಪಿಗಳಿಗೂ ಹಾಗೂ  ದೂರುದಾರರುಗಳಿಗೂ ತಮ್ಮ ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸುವಂತೆ ತಿಳಿ ಹೇಳಿ ಕರೆಗಳನ್ನು ಜಾರಿಗೊಳಿಸಿದ್ದರು.  ನ್ಯಾಯಾಲಯಕ್ಕೆ ಹಾಜರಾದ ವ್ಯಕ್ತಿಗಳಲ್ಲಿ 'ರೋಹಿಣಿ ಮತ್ತವಳ ತಂದೆ ರಾಜು, ಅವಳ ಸ್ನೇಹಿತ ಡಾ. ಕಿರಣ್ ಮತ್ತು ವಕೀಲ ಮದನ್ ಲಾಲರು' ಸೇರಿದ್ದರು. ಚೀನಾ, ಫ್ರಾನ್ಸ್, ಜಪಾನ್, ಆಸ್ಟ್ರೇಲಿಯಾ, ಅಮೆರಿಕಾ ಮುಂತಾದ ದೇಶಗಳ ಅಧಿಕೃತ ಪ್ರತಿನಿಧಿಗಳು, ಹಲವಾರು ಖ್ಯಾತ ವಿಜ್ಞಾನಿಗಳು ಹಾಗೂ ಸಂಶೋಧಕರು ಕೂಡ ನ್ಯಾಯಾಲಯದಲ್ಲಿ ಜಮಾಯಿಸಿದ್ದರು. ಕೋವಿಡ್ನ ಸ್ಫೋಟದನಂತರ ವಿವಾದಾತ್ಮಕ ಪರಿಸ್ಥಿತಿಯಲ್ಲಿ ಮೃತಪಟ್ಟಿದ್ದ ಚೀನಾದ ಯುವ ವೈದ್ಯರೊಬ್ಬರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.  'ದಿವಂಗತರಾದ ಡಾ. ದ್ವಾರಕಾನಾಥ್ ಕೊಟ್ನಿಸ್' ಎಂಬ ವೈದ್ಯರೂ ಸಹ ದೇವರ ಕರೆಯ ಮೇರೆಗೆ ಬಂದು ಆಸೀನರಾಗಿದ್ದರು. 

'ನ್ಯಾಯದ ಪೀಠವಾದ ದೇವರ ಕುರ್ಚಿ' ಮಾತ್ರ ಖಾಲಿಯಿತ್ತು. ಆದರೆ ಅಂದಿನ ಸಭೆಯಲ್ಲಿ ದೇವರ ಇರುವಿಕೆಯ ಅನುಭೂತಿ ಮಾತ್ರ ಅಲ್ಲಿ ನೆರೆದಿದ್ದವರಿಗೆಲ್ಲಾ ಸ್ಪಷ್ಟವಾಗಿತ್ತು. ದೇವರ ಧ್ವನಿ ಎಲ್ಲರಿಗೂ ಕೇಳಿಸುತ್ತಿತ್ತು. ದೇವರ ದನಿಯಲ್ಲಿ ಪ್ರೇಮ, ವಿಶ್ವಾಸ, ನಿಷ್ಪಕ್ಷಪಾತ ಹಾಗು ಮುಚ್ಚುಮರೆಯಿಲ್ಲದ ಭಾವಗಳು ಸ್ಪಷ್ಟವಾಗಿದ್ದವು. ಸ್ವಯಂ ದೇವರೇ ದಿನದ ಚರ್ಚೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. 

ದೇವರೇ ಎಲ್ಲರನ್ನು ಸಂಬೋಧಿಸುತ್ತ, 'ವಿಶ್ವವ್ಯಾಪಿ ಕೋವಿಡ್ ರೋಗದ ದಾಳಿಯಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಎಲ್ಲ ವೈರಸ್ಗಳು, ಬ್ಯಾಕ್ಟೀರಿಯಗಳು ಮತ್ತು ಪ್ರಾಣಿಗಳು ಪ್ರಕೃತಿಯ ಸೃಷ್ಟಿಗಳೆ. ಕಾಲಾನುಕಾಲಕ್ಕೆ ಸೃಷ್ಟಿಯಾಗುತ್ತ ಸಾಗುವ ಈ ಜೀವಿಗಳ ಸೃಷ್ಟಿಯ ಹಿಂದೆ ಪ್ರಕೃತಿ ತನ್ನ    ಸಮತೋಲನವನ್ನು ಕಾಯ್ದಿರಿಸಿಕೊಳ್ಳುವ ಅಣಿಯಿದೆ. ಬ್ರಹ್ಮಾಂಡದ ಕೇಂದ್ರ, ಭೂಮಿಯೂ ಅಲ್ಲ ಮತ್ತು ಮಾನವನ ಸೃಷ್ಟಿ ಅದರ ಉದ್ದೇಶವೂ ಅಲ್ಲ. ಪ್ರಾಣಿ  ಜಗತ್ತಿನ ವಿಕಾಸದ ಪ್ರಕ್ರಿಯೆಯಲ್ಲಿ ಬುದ್ಧಿವಂತನಾದ ಮಾನವನ ಸೃಷ್ಟಿ ಆಕಸ್ಮಿಕ ಮಾತ್ರ. ಮಾನವನ ಯೋಚನೆ ಮತ್ತು ಕೃತ್ಯಗಳನ್ನು ನಾನಾಗಲಿ, ಪ್ರಕೃತಿಯಾಗಲಿ ನಿಯಂತ್ರಿಸುವ ಕಾರ್ಯವನ್ನು ಮಾಡವುದಿಲ್ಲ. ಪ್ರಪಂಚ ಹೇಗೆ ಮುಂದುವರಿಯಬೇಕೆಂಬುದು ನಾನು ನಿಯಂತ್ರಿಸುವ ಕಾರ್ಯವಲ್ಲ. ಸೃಷ್ಟಿಯ ಎಲ್ಲ ಜೀವಿಗಳು ಅವರವರ ವಿಚಾರಗಳಿಗೆ ಮತ್ತು ಕೃತ್ಯಗಳಿಗೆ ಅವರವರೇ ಜವಾಬ್ದಾರರು. ತಾವು ಜೀವಿಸಬೇಕಾದ ಪ್ರಪಂಚ  ಹೇಗಿರಬೇಕೆಂಬ ನಿರ್ಧಾರ, ಅಲ್ಲಿನ ಜೀವಿಗಳಿಗೆ ಬಿಟ್ಟದ್ದು. ಆದರೆ ಪ್ರಕೃತಿಯೆಂಬುದು ಜೀವಿಗಳ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಪ್ರಕೃತಿಯ ಜೀವಿಗಳ ವಿಚಾರ ಮತ್ತು ಕೃತ್ಯಗಳಿಂದ ಪ್ರಪಂಚಕ್ಕೆ ಆಗಾಗ ವಿಪತ್ತು ಬಂದೊದಗಬಹುದು. ನಿರ್ಜೀವಿಗಳಲ್ಲಾಗುವ ಬದಲಾವಣೆ ಮತ್ತು ಜರುಗುವ ಪ್ರಕ್ರಿಯೆಗಳಿಂದಲೂ ಪ್ರಪಂಚಕ್ಕೆ ವಿಪತ್ತು ಉಂಟಾಗಬಹುದು. ಹಾಗಾದರೂ ನಾನು ಎಂದಿಗೂ ಮಧ್ಯೆ ಪ್ರವೇಶಿಸುವುದಿಲ್ಲ. ಏಕೆಂದರೆ ಪ್ರಕೃತಿ ತನ್ನ ಸಮತೋಲನವನ್ನು ಕಾಯ್ದುಕೊಳ್ಳುವ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳುವ  ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿರುತ್ತೆ. ಆದುದರಿಂದ ಇಂದಿನ ಮೊಕದ್ದಮೆಯ ವಿಚಾರಣೆ ನನ್ನ ಪಾಲಿಗೆ ಅಪ್ರಸ್ತುತವಾದದ್ದು. ಇಂದಿನ ವಿಚಾರಣೆಯನ್ನು ಅಣಿಗೊಳಿಸಿರುವುದು ತಮ್ಮಗಳ ಕೋರಿಕೆಯ ಮನ್ನಣೆಗಾಗಿ ಮಾತ್ರ. ಇಲ್ಲಿ ನೆರೆದಿರುವರೆಲ್ಲರೂ ತಮ್ಮ ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸಲು ಮುಕ್ತರು. ಇಂದಿನ ಚರ್ಚೆ ಶುರವಾಗಿದೆ ಎಂದು ಘೋಷಿಸುತ್ತೇನೆ' ಎಂದರು. 

ವಿಷಯ ಮಂಡನೆಗಾಗಿ ತುದಿಗಾಲಿನಲ್ಲಿ ನಿಂತಿದ್ದ ರೋಹಿಣಿ ಎದ್ದು ನಿಂತು ತನ್ನ ವಾದವನ್ನು ದೇವರ ಮುಂದಿಡುತ್ತಾ, 'ದೇವರೇ, ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದನೆಗಳು. ನಿಮಗೆ ಎಲ್ಲವೂ ತಿಳಿದಿದೆ. ವಿಶ್ವಮಾರಿ ಕೋವಿಡ್ ಇಡೀ ವಿಶ್ವವನ್ನಾವರಿಸಿದೆ. ವಿಶೇಷವಾಗಿ ನನ್ನ ದೇಶ ಭಾರತ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಪ್ರಪಂಚದ ಐದನೇ ಒಂದು ಭಾಗದಷ್ಟು ಜನರುಗಳಿಗೆ ಆಶ್ರಯನ್ನು ನೀಡಿರುವ ನನ್ನ ದೇಶ, ಎದುರಿಸುತ್ತಿರುವ ಸವಾಲುಗಳು ಜಟಿಲವಾದವುಗಳಾಗಿವೆ. ಆದರೂ ತಮ್ಮ ಕೃಪೆಯಿಂದ, ಕಳೆದ ಮೂರು ದಶಕಗಳ ಸರ್ವತೋಮುಖ ವಿಕಾಸದ ಸಾಧನೆ ನಮ್ಮದಾಗಿತ್ತು. ಆದರೆ ಈಗ ಈ ವಿಶ್ವವ್ಯಾಪಿ ಕೋವಿಡ್ನ ದಾಳಿಯಿಂದ ನಮ್ಮ ದೇಶ ಕಂಡು ಕೇಳರಿಯದ ಸಂಕಷ್ಟಗಳ ಸುಳಿಗೆ ಸಿಕ್ಕಿ ಹಾಕಿಕೊಂಡು ನಲುಗಿ ಹೋಗಿದೆ. ೨೦೨೦ರ ಜೂನ್ ೧೦ರ ದಿನವಾದ ಇಂದು ೨.೫ ಲಕ್ಷ  ಕೋವಿಡ್ ರೋಗಿಗಳೊಂದಿಗೆ, ಸೋಂಕಿತ ದೇಶಗಳ ಪಟ್ಟಿಯಲ್ಲಿ, ನಮ್ಮ ದೇಶ ಐದನೇ ಸ್ಥಾನದಲ್ಲಿದೆ. ಈ ಐದು ದೇಶಗಳ ನಡುವೆಯೂ, ಶೇಕಡಾ ೪ರಷ್ಟು ಸೋಂಕಿತರ ಹೆಚ್ಚಳವನ್ನು ದಾಖಲಿಸುತ್ತಿರುವ ನಮ್ಮ ದೇಶದ ಪರಿಸ್ಥಿತಿ ಆತಂಕಕಾರಿಯಾಗಿದೆ. ಬೃಹತ್ ರಾಷ್ಟ್ರವಾದ ನಮ್ಮ ಭಾರತದಲ್ಲಿ ಕೋವಿಡ್ ಪರೀಕ್ಷೆಗಳನ್ನು ಮಾಡುವುದೊಂದು ಸವಲಾಗಿ ಹೋಗಿದೆ. ನಮ್ಮ ಕೋವಿಡ್ ಪರೀಕ್ಷೆಯ ಪ್ರಮಾಣ ಪ್ರತಿ ಸಾವಿರ ಜನಗಳಿಗೆ ೩.೪ ಮಾತ್ರವಾಗಿದೆ. ಇದೆ ಪ್ರಮಾಣದ ಸಂಖ್ಯೆ ರಷ್ಯಾಕ್ಕೆ ೮೭.೨, ಅಮೆರಿಕಕ್ಕೆ ೬೧.೬ ಮತ್ತು ಇಂಗ್ಲೆಂಡ್ಗೆ ೪೭.೯ರಷ್ಟಿದ್ದು, ಆ ದೇಶಗಳು ನಮಗಿಂತ ಬಹಳಷ್ಟು ಮುಂದಿವೆ. ನಮ್ಮ ಕೋವಿಡ್ ಪೀಡಿತರಲ್ಲಿ ಈಗಾಗಲೇ ಸುಮಾರು ೭೦೦೦ ಜನಗಳು ಮೃತಪಟ್ಟಿದ್ದಾರೆ. ಬೇಕಾದ ಪ್ರಮಾಣದಲ್ಲಿ ಸೋಂಕಿತರ ಪರೀಕ್ಷೆಗಳನ್ನು ನಡೆಸಿದಲ್ಲಿ, ನಮ್ಮ ಸೋಂಕಿತರ ಹಾಗೂ  ಕೋವಿಡ್ ಮೃತರುಗಳ ಸಂಖ್ಯೆ ಇನ್ನೂ ಹೆಚ್ಚಿರುವುದಾಗಿ ಕಂಡು ಬಂದರೂ ಆಶ್ಚರ್ಯವಿಲ್ಲ. ಮುಂಬರುವ ಇನ್ನೆರಡು ತಿಂಗಳುಗಳಲ್ಲಿ ಕೋವಿಡ್ ರೋಗದ  ಹರಡುವಿಕೆಯ ಬಗೆಗಿನ ಮುನ್ಸೂಚನೆ ನಮಗೆ ಆತಂಕವನ್ನುಂಟು ಮಾಡಿದೆ. ಭಾರಿ ಪ್ರಮಾಣದಲ್ಲಿ ಹರಡಲಿರುವ ಕೋವಿಡ್ ರೋಗವನ್ನು ನಿವಾರಿಸುವ ಮತ್ತು ನಿಯಂತ್ರಿಸುವ ಮೂಲಭೂತ ಸೌಕರ್ಯಗಳು ನಮ್ಮ ದೇಶದಲ್ಲಿ ಅತಿ ಕಡಿಮೆಯಿದ್ದು, ನಮ್ಮ ಕೋವಿಡ್ ಸೇನಾನಿಗಳ ಮೇಲಿನ ಒತ್ತಡವನ್ನು ಹೆಚ್ಚಾಗಿಸಿದೆ.  

ಸುಮಾರು ೧೪ ಕೋಟಿಯಷ್ಟು ವಲಸಿಗ ಕೆಲಸಗಾರರು ತಮ್ಮ ಕೆಲಸಗಳನ್ನು ಕಳೆದುಕೊಂಡು, ಆದಾಯವಿಲ್ಲದೆ ಕಂಗೆಟ್ಟಿದ್ದಾರೆ. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ನಮ್ಮ ದೇಶ  ಎರಡೂವರೆ ತಿಂಗಳುಗಳಷ್ಟರ ದೀರ್ಘಾವಧಿಯ ಲಾಕ್ಡೌನನ್ನು ಜಾರಿಗೊಳಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದ್ದು ದುರದೃಷ್ಟಕರ. ಅದರಿಂದಾಗಿ ನಮ್ಮ ಅರ್ಥ ವ್ಯವಸ್ಥೆ ಅಲ್ಲೋಲ- ಕಲ್ಲೋಲವಾಗಿದ್ದು, ಕಳೆದ ಎರಡು-ಮೂರು ದಶಕಗಳಲ್ಲಿ ನಾವು ಸಾಧಿಸಿದ ಪ್ರಗತಿಗೆ ಭಾರಿ ಹಿನ್ನಡೆಯುಂಟಾಗಿದೆ. 

ನಮ್ಮ ದೇಶ ಅನುಭವಿಸುತ್ತಿರುವ ಆಘಾತಗಳಿಗೆ ಚೀನಾ ದೇಶವೇ ಕಾರಣವೆಂದು ನಾನು ನೇರವಾಗಿ ಆರೋಪಿಸುತ್ತೇನೆ. ಕೋವಿಡ್ನ ವೈರಾಣು ಆ ದೇಶದ ಮೂಲದ್ದು. ಆ ವೈರಾಣುವನ್ನು ಸೃಷ್ಟಿಸಿದ್ದೇ  ಚೀನಾದವರು ಎಂಬ ಆರೋಪಗಳೂ ಕೇಳಿ ಬಂದಿದೆ. ಕೋವಿಡ್ ರೋಗ ಆ  ದೇಶದಲ್ಲೇ ಮೊದಲು ಕಂಡು ಬಂದಿದ್ದು, ರೋಗದ ಹರಡುವಿಕೆ ಸ್ಪಷ್ಟವಾಗಿ ತಿಳಿದಿದ್ದರೂ, ರೋಗದ ಸುಳಿವನ್ನು ಮುಚ್ಚಿಟ್ಟು, ಇಡೀ ಜಗತ್ತನ್ನು ಚೀನಾ ವಂಚಿಸಿದೆ. ಚೀನಾ ದೇಶ ತನ್ನ ಸ್ವಾರ್ಥ ಸಾಧನಗೆ ಮಾಡಿದ ವಂಚನೆಯಿಂದ,  ನಮ್ಮ ದೇಶ ಭಾರತದೊಂದಿಗೆ ಇಡೀ ವಿಶ್ವವಿಂದು ಕಂಡು ಕೇಳರಿಯದ ಸಂಕಷ್ಟಕ್ಕೆ ತುತ್ತಾಗಿದೆ. ಎಲ್ಲರನ್ನೂ ಕಾಯುವ ದೇವರಾದ ತಾವು ಚೀನಾ ದೇಶಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕೆಂದು ನಾನು ತಮ್ಮನ್ನು ವಿನಂತಿಸಿಕೊಳ್ಳುತ್ತೇನೆ' ಎಂದ ರೋಹಿಣಿಯ ಧ್ವನಿಯು ಗದ್ಗದಿತವಾಗಿತ್ತು. 

ಚೀನಾ ದೇಶದ ಪ್ರತಿನಿಧಿಗೆ, ತನ್ನ ದೇಶದ ಮೇಲಾಗಬಹುದಾದ ಆರೋಪಗಳ ಪೂರ್ವಾನುಮಾನ ಚೆನ್ನಾಗಿಯೇ ಇತ್ತು. ಉತ್ತಮವಾದ ವಾದವನ್ನು ನ್ಯಾಯಾಲಯದ ಮುಂದಿಡಲು ಬೇಕಾದ ತಯಾರಿಯನ್ನು ಮಾಡಿಕೊಂಡೇ ಬಂದಿತ್ತು ಚೀನಾದ ತಂಡ. ಎದ್ದು ನಿಂತು ಎಲ್ಲರಿಗೂ ವಂದಿಸಿದ ಚೀನಾದ ಪ್ರತಿನಿಧಿ ತನ್ನ ವಿಚಾರಗಳನ್ನು ಮಂಡಿಸುತ್ತಾ, 'ದೇವರೇ, ತಮ್ಮ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸುವ ಅವಕಾಶವನ್ನು ನಮ್ಮ ದೇಶಕ್ಕೂ ಕಲ್ಪಿಸಿದ ತಮಗೆ ವಂದನೆಗಳು. ಈ ಮಹಾಮಾರಿ ಕೋವಿಡ್ ವಿಶ್ವವನ್ನು ವ್ಯಾಪಿಸುವ ದುರಂತ  ಆರಂಭವಾದಾಗಿನಿಂದ, "ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ"ನೆಂಬಂತೆ, ಎಲ್ಲರೂ  ನಮ್ಮ ದೇಶ ಚೀನಾದ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಆದರೆ ಆ ಆರೋಪಗಳೆಲ್ಲವೂ ನಿರಾಧಾರವಾದದ್ದು. ಈ ವೈರಸ್ನ ವಂಶವಾಹಿ ನಕ್ಷೆ (genetic map) ಪತ್ತೆಯಾದ ಕೂಡಲೇ, ಅದರ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆ (W.H.O.) ಮತ್ತು ಇಡೀ ವಿಶ್ವದೊಂದಿಗೆ ಹಂಚಿ ಕೊಂಡಿದ್ದೇವೆ. ನಮ್ಮ ಕಡೆಯಿಂದ ಎಲ್ಲರೊಂದಿಗೆ ಮಾಹಿತಿಯ ಹಂಚಿಕೆ ನಿರಂತರವಾಗಿ ಸಾಗಿದೆ. ನಮ್ಮ ದೇಶದ ವಿಜ್ಞಾನಿಗಳು ಅತಿ ಬೇಗನೆ ಅನಾವರಣಗೊಳಿಸಿದ ಕೋವಿಡ್ ವೈರಸ್ನ ವಂಶವಾಹಿ ನಕ್ಷೆಯಿಂದ, ರೋಗ ನಿಯಂತ್ರಣಕ್ಕೆ ಬೇಕಾದ ಪರೀಕ್ಷೆಗಳ, ಲಸಿಕೆಗಳ ಮತ್ತು ಔಷಧಿಗಳ ತಯಾರಿಕೆಯ ಪ್ರಕ್ರಿಯೆ ಇಡೀ ವಿಶ್ವದಲ್ಲಿ ಚುರುಕುಗೊಂಡಿದೆ. ಕೋವಿಡ್ ರೋಗ ಕಾಣಿಸಿಕೊಂಡ ದಿನಗಳಲ್ಲಿ, ನಮ್ಮ ವಿಜ್ಞಾನಿಗಳಿಗೂ ಯಾವುದೇ ಮಾಹಿತಿಯ ಸುಳಿವಿಲ್ಲದಿದ್ದು, ಅವರುಗಳು ಸಾಕಷ್ಟು ಹೆಣಗಾಡಿದ್ದಾರೆ. ಅವಶ್ಯಕವಾದ ಸಂಶೋಧನೆಗಳನ್ನು ಆದಷ್ಟು ಬೇಗ  ನಡೆಸಿ, ಮಾಹಿತಿಯನ್ನು ವಿಶ್ವದ ಮುಂದಿಟ್ಟು, ನಮ್ಮ ಚೀನಾ ದೇಶದ ವಿಜ್ಞಾನಿಗಳು ಮಹದುಪಕಾರವನ್ನು ಮಾಡಿದ್ದಾರೆ' ಎಂದರು. 

ಈ ಹಂತದಲ್ಲಿ ರಾಜುರವರಿಗೆ ಸುಮ್ಮನಿರುವುದು ಕಷ್ಟಸಾಧ್ಯವಾಗಿತ್ತು. ತಟ್ಟನೆ ಎದ್ದು ನಿಂತು, ಬಾಗಿ ದೇವರಿಗೆ ನಮಸ್ಕರಿಸಿದ ಅವರು, 'ದೇವರೇ, ನನ್ನ ವಿನಮ್ರ ಪ್ರಣಾಮಗಳನ್ನು ಸ್ವೀಕರಿಸಿ. ಇತಿಹಾಸದದುದ್ದಕ್ಕೂ, ಚೀನಾ ದೇಶದ ನಡವಳಿಕೆಗಳಲ್ಲಿ ಪ್ರಾಮಾಣಿಕತೆಯಿಲ್ಲದಿದ್ದು, ಅದರ ವಾದಗಳು ಸುಳ್ಳಿನ ಕಂತೆಗಳೇ ಆಗಿವೆ. ಕೋವಿಡ್ ವೈರಾಣುವಿನ ಸೃಷ್ಟಿ ಚೀನಾದವರೇ ಮಾಡಿದ್ದು, ಅದನ್ನವರು ಹೊಸ ಜೈವಿಕ ಅಸ್ತ್ರವನ್ನಾಗಿರಿಸಿಕೊಂಡಿರುವುದು ಸುಳ್ಳಲ್ಲ. ಮಹತ್ವಾಕಾಂಕ್ಷೆಯುಳ್ಳ ಚೀನಾಕ್ಕೆ ಬೇರೆಲ್ಲ ದೇಶಗಳನ್ನೂ, ಮುಖ್ಯವಾಗಿ ಅಮೇರಿಕಾ ಮತ್ತು ಭಾರತ ದೇಶಗಳನ್ನು, ಆದಷ್ಟೂ ಬೇಗ ಹಿಂದೆ ಹಾಕುವ ಹುನ್ನಾರವಿದೆ. ಆ ಉದ್ದೇಶದಿಂದ ತಾನು ಆವಿಷ್ಕರಿಸಿದ ಹೊಸ ಜೈವಿಕ ಅಸ್ತ್ರವಾದ ಕೋವಿಡ್ ವೈರಾಣುವಿನ  ಪ್ರಯೋಗವನ್ನು ಅದು ತನ್ನ ವುಹಾನ್ ನಗರದ ಪ್ರಯೋಗಶಾಲೆಯೊಂದರಲ್ಲಿ ಗುಪ್ತವಾಗಿ ನಡೆಸಿದೆ. ವೈರಾಣುವಿನ ಹರಡುವಿಕೆಯನ್ನು ಸಾಕಷ್ಟು ಕಾಲ ಗುಟ್ಟಾಗಿಟ್ಟ ಚೀನಾ, ವುಹಾನ್ ನಗರದಿಂದ ವಿಶ್ವದೆಲ್ಲಡೆಗೆ ಪ್ರಯಾಣಿಕರ ವಿಮಾನಯಾನಗಳನ್ನು ಎಗ್ಗಿಲ್ಲದಂತೆ ಮೂರು ತಿಂಗಳಿಗೂ ಹೆಚ್ಚು ಕಾಲ  ನಡೆಸಿದೆ. ಕುಟಿಲ ಬುದ್ಧಿಯ ಚೀನಾ ವುಹಾನ್ ನಗರದಿಂದ ಯಾವ ವಾಹನಗಳೂ ತನ್ನದೇ ದೇಶದ ಬೇರೆ ಊರುಗಳಿಗೆ ಹೋಗಿ ತಲುಪುವುದನ್ನು ಸಂಪೂರ್ಣವಾಗಿ ನಿಯಂತ್ರಿಸಿದೆ. ಈ ರೀತಿಯ ದುಷ್ಟ ವ್ಯೂಹದಿಂದ ಇಡೀ ವಿಶ್ವಕ್ಕೆ ಕೋವಿಡ್ ಹರಡಿದರೂ, ತನ್ನ ದೇಶ ಮಾತ್ರ ಸುರಕ್ಷಿತವಾಗಿರುವಂತೆ ಚೀನಾ ನೋಡಿಕೊಂಡಿದೆ. ಚೀನಾ ಮಾಡಿದ ಜೈವಿಕಾಸ್ತ್ರ ಪ್ರಯೋಗದಿಂದ ಇಡೀ ವಿಶ್ವವೇ ಕೋವಿಡ್ ರೋಗಕ್ಕೆ ತುತ್ತಾಗಿದೆ. ತನ್ನ ದೇಶದಿಂದಲೂ ಕೆಲವು  ಸಹಸ್ರ ಸಂಖ್ಯೆಗಳಲ್ಲಿನ  ಸಾವುಗಳನ್ನು ವರದಿ ಮಾಡಿರುವ   ಚೀನಾ, ತಾನಾಡಿದ ಮಹಾಮಾರಿಯ ನಿಯಂತ್ರಣದ ನಾಟಕಕ್ಕೆ ತೆರೆ ಎಳೆದಿದೆ.  "ಈ ರೀತಿಯ ಜೈವಿಕಾಸ್ತ್ರದ ಗುಪ್ತ ಪ್ರಯೋಗ, ಇಡೀ ವಿಶ್ವದ ವಿರುದ್ಧ ಚೀನಾ ನಡೆಸಿದ ಮೂರನೇ ಮಹಾಯುದ್ಧದ ಪ್ರಮುಖ ಭಾಗವಾಗಿತ್ತು ಎಂಬುದೇ ಸತ್ಯ."  ಒಂದು ಗುಂಡನ್ನೂ ಚಲಾಯಿಸದೇ, ಚೀನಾ ಈಗಾಗಲೇ ಮೂರನೇ ಮಹಾಯುದ್ಧವನ್ನು ಗೆದ್ದಾಗಿದೆ. ವಿಶ್ವದೆಲ್ಲಾ ದೇಶಗಳು ತಮ್ಮತಮ್ಮ ಪ್ರಗತಿಯ ಹಾದಿಯಲ್ಲಿ, ಕನಿಷ್ಠ ಒಂದು ದಶಕದಷ್ಟಾದರೂ ಹಿಂದೆ ಸರಿದಿವೆ. ಚೀನಾ ಮಾತ್ರ ಯಾವುದೇ ಅಡೆತಡೆಗಳಿಲ್ಲದೆ ಮುನ್ನಡೆದಿದೆ. ಮನುಕುಲದ ವಿರುದ್ಧ ರೂಪಿಸಿದ ಈ ಷಡ್ಯಂತ್ರಕ್ಕಾಗಿ ಚೀನಾ ದೇಶಕ್ಕೆ ತಕ್ಕ ಶಿಕ್ಷೆಯನ್ನು ತಮ್ಮ ನ್ಯಾಯಾಲಯ ನೀಡ ಬೇಕೆಂಬುದೇ ನನ್ನ ಕೋರಿಕೆ' ಎಂದು ಹೇಳಿ  ಕುಳಿತಾಗ, ಸಭಿಕರಿಗೆಲ್ಲಾ ದೀರ್ಘವಾದ ಸಿಡಿಲೊಂದು ಅಂತ್ಯಗೊಂಡಂತೆ  ಅನಿಸಿತ್ತು.  

ವಿಷಯ ಮಂಡನೆಯ ಮುಂದಿನ ಬಾರಿ, ಶಿಸ್ತಿನ ಸೂಟನ್ನು ಧರಿಸಿದ್ದ ಯೂರೋಪಿನ ವಿಜ್ಞಾನಿಯೊಬ್ಬರದಾಗಿತ್ತು. ತಮ್ಮ ವಾದವನ್ನು ಅವರು ಮಂಡಿಸುತ್ತಾ  'ಎಲ್ಲವನ್ನೂ ಬಲ್ಲ ದೇವರೇ, ನಾನು ಹೇಳುವುದೆಲ್ಲ ಸತ್ಯವೆಂದು ವಿನಂತಿಸಿಕೊಳ್ಳುತ್ತೇನೆ. ೧೯೮೦ರ ದಶಕದಿಂದ ವಿಶ್ವವನ್ನು ಕಾಡುತ್ತಿರುವ ಏಡ್ಸ್ ವೈರಸ್ನ ರಚನೆಯ ವಿನ್ಯಾಸದ  ಸಂಶೋಧನೆಯನ್ನು ಮಾಡಿದ ವಿಜ್ಞಾನಿಗಳ ತಂಡದಲ್ಲಿದ್ದವನು ನಾನು. ನಮ್ಮ ಸಂಶೋಧನೆ  ಏಡ್ಸ್ ರೋಗದ ಪತ್ತೆ, ಪರೀಕ್ಷೆ, ಲಸಿಕೆ ಮತ್ತು ಚಿಕಿತ್ಸೆಗಳಿಗೆ ಅನುವು ಮಾಡಿಕೊಟ್ಟಿದೆ. ಚೀನಾ ದೇಶದ ವುಹಾನಿನಲ್ಲಿ ಏಡ್ಸ್ ರೋಗದ ಸಂಪೂರ್ಣ ನಿಯಂತ್ರಣಕ್ಕೆ ಬೇಕಾದ ಪರಿಕರಗಳ ಬಗ್ಗೆ ಸಂಶೋಧನೆ ಮುಂದುವರೆದಿದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಚೀನಾದ ವಿಜ್ಞಾನಿಗಳು ತಮ್ಮ ಏಡ್ಸ್ ಸಂಶೋಧನೆಯನ್ನು ತ್ವರಿತಗೊಳಿಸಲು, ವಿಶ್ವವನ್ನು ೨೦೦೨-೦೪ರಲ್ಲಿ ಕಾಡಿದ ಸಾರ್ಸ್ ವೈರಾಣುವನ್ನು ಹೇರಳವಾಗಿ ಬಳಸಿದರೆಂಬುದು ನನಗೆ ಗೊತ್ತು. ಈ ಪ್ರಯೋಗಗಳ ನಡುವೆ, ಅನೀರಿಕ್ಷಿತವಾಗಿ ಕೋವಿಡ್ ವೈರಾಣುವಿನ ಸೃಷ್ಟಿಯಾಗಿದೆ. ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಯಲ್ಲಿ ಏಡ್ಸ್ ಮತ್ತು ಸಾರ್ಸ್ ವೈರಾಣುಗಳ ವಿನ್ಯಾಸಗಳು ಕಂಡು ಬಂದಿರುವುದು ನನ್ನ ವಾದಕ್ಕೆ ಪುಷ್ಟಿಯನ್ನು ನೀಡುತ್ತದೆ. ಕೋವಿಡ್ ವೈರಾಣುವಿನ ವಿನಾಶಕಾರಿ ಶಕ್ತಿ, ಪ್ರಾಯಶಃ ಚೀನಾದ ವಿಜ್ಞಾನಿಗಳಿಗೂ ತಿಳಿದಿಲ್ಲದಿರಬಹುದು. ಪ್ರಯೋಗಾಲಯದಲ್ಲಿ ನಡೆದಿರಬಹುದಾದ ಅಚಾತುರ್ಯದ ಪ್ರಸಂಗವೊಂದರಲ್ಲಿ ಕೋವಿಡ್ ವೈರಾಣು ಮಾನವನೊಬ್ಬನನ್ನು ಸೋಂಕಿತಗೊಳಿಸಿರಬಹುದು. ಹೊಸ ಸೋಂಕಿನ ಹರಡುವಿಕೆಯ ಅರಿವು ಚೀನಕ್ಕಿದ್ದರೂ, ತನ್ನ ವ್ಯಾಪಾರೋದ್ಯಮಕ್ಕೆ ಘಾತಕಕಾರಿಯಾಗಬಹುದೆಂಬ ಕಾರಣಕ್ಕೆ, ಅದು ಕೋವಿಡ್ ವೈರಾಣುವಿನ ಸುದ್ದಿಯನ್ನು ಗೌಪ್ಯವಾಗಿಟ್ಟಿತು. ಅದರ ದುಷ್ಪರಿಣಾಮವನ್ನು ಈಗ ಇಡೀ ವಿಶ್ವ ಅನುಭವಿಸುತ್ತಿದೆ' ಎಂದರು. 

ಯೂರೋಪಿನ ವಿಜ್ಞಾನಿಯ ಆರೋಪವನ್ನು ಅಲ್ಲಗಳೆಯಲು ಚೀನಾದ ಪ್ರತಿನಿಧಿಗಳು ತುದಿಗಾಲಲ್ಲಿ ನಿಂತಿದ್ದು,  'ಪ್ರಭುವೇ, ಈ ಯೂರೋಪಿನ ವಿಜ್ಞಾನಿಯ ವಾದದಲ್ಲಿ ಹುರುಳಿಲ್ಲ. ಅವರದೇ ದೇಶದ ಹಲವು ವಿಜ್ಞಾನಿಗಳು ಅವರ ವಾದದ ಮಿಥ್ಯತೆಯನ್ನು ಚರ್ಚಿಸಿ ಗೇಲಿ ಮಾಡಿದ್ದಾರೆ. ಸಾರ್ಸ್ ಮತ್ತು ಏಡ್ಸ್ನ ವೈರಾಣುಗಳ ವಿನ್ಯಾಸ, ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಯಲ್ಲಿ ಕಂಡು ಬಂದಿರುವುದರಿಂದ, ಆ ಎಲ್ಲ ವೈರಸ್ಸುಗಳು ಒಂದೇ ವರ್ಗಕ್ಕೆ ಸೇರಿದವಾಗಿರಬಹುದು ಎಂದು ಮಾತ್ರ ಹೇಳಬಹುದೇ ಹೊರತು ಇನ್ಯಾವ  ಅರ್ಥವನ್ನು ಕಲ್ಪಿಸಿಕೊಳ್ಳುವುದು ಸರಿಯಲ್ಲ,' ಎಂದರು. 

ಏತನ್ಮಧ್ಯೆ, ಅಮೆರಿಕಾದ ತಂಡದ ನಾಯಕರ ತುಡಿತ ಅವರ ನೆತ್ತಿಗೇರಿತ್ತು. ಬಿರುಗಾಳಿ ಮುನ್ನುಗುವಂತೆ ತಮ್ಮ ವಾದ ಮಂಡನೆಗೆ ಎದ್ದು ನಿಂತ ಅವರು, 'ಪ್ರಭುವೇ, ಇಡೀ ವಿಶ್ವದಲ್ಲಿ ಕೋವಿಡ್ನಿಂದ ಅತಿ ಹೆಚ್ಚು ಸಂಕಷ್ಟವನ್ನು ಅನುಭವಿಸುತ್ತಿರುವ ದೇಶ ನಮ್ಮದು. ಇಡೀ ವಿಶ್ವದ ಎಲ್ಲ ದೇಶಗಳೊಂದಿಗೆ ಚೀನಾ ಯುದ್ಧ ಮಾಡಲು ಕಾಲು ಕೆರದು ನಿಂತಿದೆ. ತನ್ನ ಗಡಿ ಸುತ್ತಲಿವಿರುವ ಎಲ್ಲಾ ದೇಶಗಳೊಂದಿಗೆ ಅದು ಘರ್ಷಣೆಯ ಧೋರಣೆಯನ್ನು ಪ್ರದರ್ಶಿಸುತ್ತಿದೆ. ತನ್ನದೇ ಭಾಗವಾಗಿರುವ ಹಾಂಗಕಾಂಗ್ ನಲ್ಲಿ  ನಡೆಯುತ್ತಿರುವ ಪ್ರಜಾಪ್ರಭುತ್ವದ ಪರವಾದ ಜನಾಂದೋಲನವನ್ನು ಚೀನಾ ತನ್ನ ರಾಕ್ಷಸೀ ಕೃತ್ಯಗಳೊಂದಿಗೆ ದಮನಗೊಳಿಸುತ್ತಿದೆ. ತನ್ನದೇ ಜನರುಗಳ ಮೇಲೆ ದೌರ್ಜನ್ಯವೆಸಗಿ, ಕೊಂದು, ಅವರುಗಳ ಬಾಯ್ಮುಚ್ಚಲೆತ್ನಿಸುತ್ತಿರುವ ಚೀನಾ, ತನ್ನೊಂದಿಗೆ ತಾನು ಯುದ್ಧನಿರತವಾಗಿರುವಂತೆ ಕಾಣಿಸುತ್ತಿದೆ. ಇಡೀ ವಿಶ್ವದ ಮೇಲೆ ತನ್ನ ಪಾರುಪತ್ಯವನ್ನು ಸಾಧಿಸಲು ಏನನ್ನಾದರೂ ಮಾಡಲು ಚೀನಾ ಸಿದ್ಧವಾಗಿ ನಿಂತಿದೆ. 

ಕಳೆದ ನಾಲ್ಕು ದಶಕಗಳಿಂದ ಇಡೀ ವಿಶ್ವವನ್ನು ವಿಶ್ವವ್ಯಾಪಿ ವೈರಾಣುಗಳು ಕಾಡುತ್ತಿವೆಯೆಂದು ಚೀನಾಕ್ಕೆ ತಿಳಿದಿದೆ. ೧೯೮೦ರ ಏಡ್ಸ್ ರೋಗದಿಂದ  ಶುರುವಾದ ಈ ಸರಣಿಯಲ್ಲಿ ವಿಶ್ವ, ಹಕ್ಕಿ-ಜ್ವರ, ಹಂದಿ-ಜ್ವರ, ಸಾರ್ಸ್, ಮೆರ್ಸ್ ಮತ್ತು ಎಬೋಲಾ (SARS, MERS and EBOLA)ದಂತಹ ಮಾರಕ ರೋಗಗಳನ್ನು ಎದುರಿಸುತ್ತಿದೆ. ವುಹಾನ್ನಿನ ವೈರಾಣು ಪ್ರಯೋಗಾಲಯ ೨೦೧೩ರಲ್ಲೇ  ಕೋವಿಡ್-೧೯ರ ವೈರಾಣುವಿನ ಸಂಶೋಧನೆಯನ್ನು ನಡೆಸಿತ್ತು.  ಅದರ ಸೋಂಕು ಮನುಕುಲಕ್ಕೆ ಮಾರಕವಾಗಬಹುದೆಂಬುದು ಚೀನಾಕ್ಕೆ ಚೆನ್ನಾಗೇ ತಿಳಿದಿತ್ತು. ಕೋವಿಡ್ ವೈರಾಣುವನ್ನು ಜೈವಿಕಾಸ್ತ್ರವಾಗಿ ಪ್ರಯೋಗಿಸುವ ದುಷ್ಕೃತ್ಯಕ್ಕೆ ಕೈ ಹಾಕಿದ ಚೀನಾ, ಅದರ ಪ್ರಯೋಗವನ್ನು ತನ್ನ ಪ್ರಜೆಗಳ ಮೇಲೇ ಆರಂಭಿಸಿತು. ಇಂತಹ ನೀಚ ಕೃತ್ಯವನ್ನು ಮರೆಮಾಚಲು, ತನ್ನ ಕೆಲವು ವಿಜ್ಞಾನಿಗಳಿಂದ "ಕೋವಿಡ್ ಸೋಂಕಿನ ಹರಡುವಿಕೆ ಆಕಸ್ಮಿಕವಾಗಾಗಿದ್ದು" ಎಂಬ ಹೇಳಿಕೆಯನ್ನು ನೀಡಿಸಿ ನಾಟಕವಾಡುತ್ತಿದೆ. 

ಕಳೆದ ವರ್ಷದ ಕಡೆಯ ದಿನವಾದ, ೩೧-೧೨-೨೦೧೯ರಂದೇ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ  ಕೋವಿಡ್ ವೈರಾಣುವಿನ ಬಗ್ಗೆ ಮಾಹಿತಿಯನ್ನು ತಾನು ಹಂಚಿಕೊಂಡಿರುವುದಾಗಿ ಚೀನಾ ಹೇಳಿಕೊಂಡಿದೆ. ಮಾರನೇ ದಿನವಾದ, ೦೧-೦೧-೨೦೨೦ರಂದು ಚೀನಾ ಸುಮಾರು ೨ ಲಕ್ಷ ಜನರುಗಳನ್ನು, ವುಹಾನ್ನಿಂದ ಬೇರೆ ಬೇರೆ ದೇಶಗಳಿಗೆ ವಿಮಾನ ಪ್ರಯಾಣದ ಮೂಲಕ ಕಳುಹಿಸಿದೆ. ಅಷ್ಟು ಹೊತ್ತಿಗಾಗಲೇ ಚೀನಾ, ಕೋವಿಡ್ನ ಎಚ್ಚರಿಕೆಯ ಸೀಟಿಯನ್ನು ಬಾರಿಸಿದ ತನ್ನ ಎಲ್ಲಾ ವೈದ್ಯರುಗಳ ಹಾಗೂ ವಿಜ್ಞಾನಿಗಳ ಬಾಯ್ಮುಚ್ಚಿಸಿಯಾಗಿತ್ತು. ತನ್ನ ದೇಶದಲ್ಲಿ ಕೋವಿಡ್ ರೋಗದಿಂದ ಉಂಟಾದ ಪ್ರಥಮ ಸಾವನ್ನು ಚೀನಾ ೨೦೨೦ರ ಜನವರಿ ೯ರಂದು ಪ್ರಕಟಿಸಿತ್ತು. ಆ ದಿನದ ನಂತರವೂ ಚೀನಾ ವುಹಾನ್ನಿಂದ, ಸುಮಾರು ೧೦೦೦ ಸೋಂಕಿತರು ಸೇರಿದಂತೆ, ೭೫,೦೦೦ ಪ್ರಯಾಣಿಕರನ್ನು ವಿಶ್ವದ ಎಲ್ಲೆಡೆಗೆ ರವಾನಿಸಿತ್ತು. 

೨೦೨೦ರ ಜನವರಿ ೧೦ರಂದು ಕೂಡ ಚೀನಾ ಕೋವಿಡ್ ವೈರಾಣು ಮಾನವನಿಂದ ಮಾನವನಿಗೆ ಹರಡುವುದಿಲ್ಲವೆಂದು ಹೇಳುತ್ತಾ, ವಿಶ್ವವನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಮುಂದುವರೆಸಿತ್ತು. "ತನ್ನ ಮಾಲೀಕನ ಮಾತುಗಳನ್ನೇ ಪುನರುಚ್ಛರಿಸು"ತ್ತಿರುವಂತೆ ಕಂಡ ವಿಶ್ವ ಆರೋಗ್ಯ ಸಂಸ್ಥೆಯೂ, ಕೋವಿಡ್ ವೈರಾಣು ಮಾನವರಿಂದ ಮಾನವರಿಗೆ ಹರಡುವುದಿಲ್ಲ ಮತ್ತು ಚೀನಾದ ಆರೋಗ್ಯ ಸಿಬ್ಬಂಧಿಗಳ್ಯಾರಿಗೂ ಕೋವಿಡ್ನ ಸೋಂಕು ಹರಡಿಲ್ಲವೆಂದು ಹೇಳಿತ್ತು.  ಇನ್ನೂ ಕೊಂಚ ಮುಂದುವರಿದ ವಿಶ್ವ ಆರೋಗ್ಯ ಸಂಸ್ಥೆ "ವಿಶ್ವದ ಯಾವುದೇ ದೇಶ ಚೀನಾದೊಂದಿಗಿನ ವ್ಯಾಪಾರ ಮತ್ತು ಪ್ರಯಾಣದ ಸಂಬಂಧವನ್ನು ಕಡಿದುಕೊಳ್ಳಬಾರದೆಂಬ ನೀತಿಬೋಧೆಯನ್ನು ಕೂಡ ಮಾಡಿತ್ತು." 

ಈ ಎಲ್ಲ ಘಟನೆಗಳನ್ನು ಅವಲೋಕಿಸಿದರೆ, ಚೀನಾ ಬೇಕೆಂದೇ ಕೋವಿಡ್ ವೈರಾಣು ವಿಶ್ವವನ್ನೆಲ್ಲಾ ವ್ಯಾಪಿಸುವಂತೆ ಮಾಡಿದ್ದು, ತಾನು ಮಾತ್ರ ಕ್ಷೇಮವಾಗಿ ಉಳಿಯುವ ಯೋಜನೆಯನ್ನು ವ್ಯವಸ್ಥಿತವಾಗಿ ಮಾಡಿದೆಯೆಂಬುದು ಸಾಬೀತಾಗುತ್ತದೆ. ಆದುದರಿಂದ ತಾವು ಚೀನಾಕ್ಕೆ ಅತಿ ಘೋರವಾದ ಶಿಕ್ಷೆಯನ್ನು ವಿಧಿಸಬೇಕೆಂದು ನಾನು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ' ಎಂದರು. 

ಅಮೆರಿಕಾದವರ ಆವೇಶಭರಿತ ವಾದವನ್ನು ತದೇಕ ಚಿತ್ತರಾಗಿ  ಕೇಳಿದ, ಚೀನಾ ತಂಡದವರೇನೂ  ವಿಚಲಿತರಾದಂತೆ ಕಂಡು ಬರಲಿಲ್ಲ. ಚೀನಾ ತಂಡದ ನಾಯಕ ತನ್ನ ಪ್ರತಿವಾದವನ್ನು ಮಂಡಿಸುತ್ತಾ, 'ಸದಾ ಯುದ್ಧನಿರತ ದೇಶವೆಂದರೆ ಅದು ಅಮೇರಿಕಾ ಮಾತ್ರ, ನಮ್ಮ ದೇಶವಲ್ಲ. ಎರಡನೇ ಮಹಾಯುದ್ಧದನಂತರವೂ ಪ್ರಪಂಚಾದ್ಯಂತ ವಿವಿಧ ದೇಶಗಳೊಂದಿಗೆ ಅಮೇರಿಕಾ ಕಾಲು ಕೆರದು ಯುದ್ಧ ಮಾಡುತ್ತಿದೆ. 

ವಿಶ್ವದ ಮುಂಚೂಣಿಯಲ್ಲಿರುವ ಅಮೆರಿಕ, ಮಹಾಮಾರಿ ಕೋವಿಡ್ನಿಂದ ತತ್ತರಿಸುತ್ತಿರುವ ದೇಶಗಳಿಗೆ ಸಹಾಯಹಸ್ತವನ್ನು ನೀಡುವ ಯಾವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿಲ್ಲ. ತನ್ನ ಮಿತ್ರ ದೇಶಗಳ ಕಡೆ ಕೋವಿಡ್ ಚಿಕಿತ್ಸಾ ಸಾಮಗ್ರಿಗಳನ್ನು ಹೊತ್ತು ಹೊರಟ ಹಡಗುಗಳನ್ನೇ ತನ್ನ ಕಡೆಗೆ ಅಪಹರಿಸಿದ ಆರೋಪ ಅಮೆರಿಕಾದ ಮೇಲಿದೆ. ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆಯ ಸಂಶೋಧನೆಯನ್ನು ನಡೆಸುತ್ತಿರುವ ಜರ್ಮನಿ ದೇಶದ ಪ್ರಯೋಗಾಲಯವೊಂದನ್ನು, ತನ್ನ ದೇಶಕ್ಕೆ ಸ್ಥಳಾಂತರಿಸುವಂತೆ ಅಮೇರಿಕಾ ಬಲಾತ್ಕಾರ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ.  ಮಲೇರಿಯಾ ಔಷಧಿಯಾದ ಎಚ್.ಸಿ.ಕ್ಯೂ.ವನ್ನು ಭಾರಿ ಪ್ರಮಾಣದಲ್ಲಿ ಪಡೆಯಲು, ಅಮೇರಿಕಾ ಭಾರತದ ದೇಶದ ಮೇಲೆ ಇನ್ನಿಲ್ಲದ ಒತ್ತಡವನ್ನು ಹೇರಿದ್ದು, ಗೂಂಡಾಗಿರಿಯ ವರ್ತನೆಯೇ ಸರಿ.  ಬೇರ್ಯಾವ ದೇಶದ ಮೇಲೂ ಬೊಟ್ಟು ತೋರಿಸಿ ಆರೋಪಿಸುವ ಅರ್ಹತೆ ಅಮೆರಿಕಾಗಿಲ್ಲ.

ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ತಂಡವೊಂದು, ೨೦೧೬ರಲ್ಲೇ ಕೋವಿಡ್-೧೯ ವೈರಾಣುವನ್ನು ಹೋಲುವ ವೈರಾಣುವೊಂದನ್ನು ಕಂಡು ಹಿಡಿದಿತ್ತು. ಹಾಗಾಗಿ ಕೋವಿಡ್ ವೈರಾಣುವನ್ನು ಅಮೆರಿಕವೇ ಇಡೀ ವಿಶ್ವಾದ್ಯಂತ ಹರಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 

೨೦೨೦ರ ಜನವರಿ ೨೦ರಂದು ನಾವು ಇಡೀ ವುಹಾನ್ ನಗರದಲ್ಲಿ ಸಂಪೂರ್ಣ ಲಾಕ್ಡೌನನ್ನು ಜಾರಿಗೊಳಿಸಿದೆವು. ಜನವರಿ ೩೧ರಂದು, ಟ್ರಂಪ್ ಸರಕಾರ, ಚೀನಾ ದೇಶಕ್ಕೆ ಭೇಟಿ ನೀಡಿರುವ ಯಾವುದೇ ಬೇರೆ ದೇಶಗಳ ಪ್ರಜೆ, ಅಮೇರಿಕಾ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಅದರನಂತರವೂ ಸುಮಾರು ೪೦,೦೦೦ದಷ್ಟು ಜನರು ಚೀನಾದಿಂದ ಹೊರಟು ಅಮೇರಿಕಾ ಸೇರಿದ್ದಾರೆ. ೨೦೨೦ರ ಮೊದಲ ಮೂರು ತಿಂಗಳುಗಳಲ್ಲಿ, ಚೀನಾದಿಂದ ನೇರ ಹಾರಾಟದಲ್ಲಿ ಹೊರಟ ಸುಮಾರು ೪,೩೦,೦೦೦ದಷ್ಟು ಜನರು ಅಮೇರಿಕಾವನ್ನು ತಲುಪಿದ್ದಾರೆ. ಇದೇ ಅವಧಿಯಲ್ಲಿ, ಸಹಸ್ರಾರು ಸೋಂಕಿತರು ಯೂರೋಪ್ನ ವಿವಿಧ ದೇಶಗಳಿಂದ ಅಮೆರಿಕಾವನ್ನು ಸೇರಿದ್ದಾರೆ. ೨೦೨೦ರ ಫೆಬ್ರವರಿ ೨೫ರ ಹೊತ್ತಿಗಾಗಲೇ ಶೇಷ-ವಿಶ್ವದ ಕೋವಿಡ್ ಸೋಂಕಿತರ ಸಂಖ್ಯೆ, ಚೀನಾ ದೇಶದ ಕೋವಿಡ್ ಸೋಂಕಿತರ ಸಂಖ್ಯೆಗಿಂತ ಹೆಚ್ಚಿತ್ತು. ಅಂತಹ ವಿಷಮ ಪರಿಸ್ಥಿತಿಯಲ್ಲೂ, ಅಮೆರಿಕಾದ "ನ್ಯೂ ಒರಲೆಯನ್ಸ್"  ನಗರದ ರಸ್ತೆಗಳಲ್ಲಿ, "ಮರ್ಡಿ ಗ್ರಾಸ್ ಹಬ್ಬ"ದ ಸಂಭ್ರಮನ್ನಾಚರಿಸಲು, ಹತ್ತಾರು ಸಾವಿರ ಸಂಖ್ಯೆಯಲ್ಲಿ ಜನಗಳು ಜಮಾಯಿಸಿದ್ದು ಮತ್ತು ಅದು ಕೋವಿಡ್ ಕಾಡ್ಗಿಚ್ಚಿನಂತೆ ಹರಡಲು ಕಾರಣವಾಗಿದ್ದು, ಎಲ್ಲರಿಗೂ ತಿಳಿದ ವಿಷಯವೇ. ಇಷ್ಟೆಲ್ಲ ದುರ್ಘಟನೆಗಳು ತನ್ನದೇ ಮೂಗಿನಡಿ ಜರುಗುತ್ತಿದ್ದರೂ, ಕಣ್ಮುಚ್ಚಿ ಕುಳಿತು, ತನ್ನ ದೇಶದ ಸೋಂಕಿತರ ಸಂಖ್ಯೆಯನ್ನು ತಾನೇ  ಹೆಚ್ಚಿಸಿಕೊಂಡ ಅಮೆರಿಕಾಕ್ಕೆ, ಚೀನಾವನ್ನು ಆಕ್ಷೇಪಿಸುವ ಹಕ್ಕೆಲ್ಲಿದೆ? 

ಕೋವಿಡ್ ವೈರಾಣು ಮಾನವ ಸೃಷ್ಟಿ ಎಂಬ ವಾದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಆದುದರಿಂದ ಅಮೇರಿಕಾ ಸೇರಿದಂತೆ ಬೇರೆಲ್ಲರೂ ಹೊರಿಸುತ್ತಿರುವ ಆರೋಪಗಳಿಂದ, ನಮ್ಮ ದೇಶ ಚೀನಾವನ್ನು ವಿಮುಕ್ತಗೊಳಿಸಬೇಕು ಎಂದು ನಾನು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ' ಎಂದರು. 

ಇಷ್ಟರ ನಡುವೆ, ರೋಹಿಣಿಯ ಚಿತ್ತ ತನ್ನ ಸ್ನೇಹಿತ ಡಾ.ಕಿರಣನ ಮೇಲೆ ನೆಟ್ಟಿತ್ತು. ಅವನೇಕೆ ತನ್ನ ವಾದವನ್ನು ಮಂಡಿಸುತ್ತಿಲ್ಲ ಎನ್ನುವಂತ್ತಿತ್ತು ಅವಳ ನೋಟ. ರೋಹಿಣಿಯನ್ನು ಓಲೈಸಲೆಂದೇ ಎದ್ದುನಿಂತಂತೆ ಕಂಡ ಡಾ. ಕಿರಣ್ ಮಾತನಾಡುತ್ತ, 'ಪ್ರಭುವೇ, "ತೇನವಿನಾ ತೃಣಮಪಿನಚಲತಿ" ಎಂಬುದು ನಮ್ಮ ದೇಶದ ಜನಗಳ ಅಚಲವಾದ ನಂಬಿಕೆ. ತಮ್ಮ ಆಣತಿಯಿಲ್ಲದ ಒಂದು ಹುಲ್ಲುಕಡ್ಡಿ ಕೂಡ ಕದಲದು ಎಂಬುದು ನಮ್ಮ ಜನರ ವಿಶ್ವಾಸ. ಕೋವಿಡ್ ವೈರಾಣು ಪ್ರಕೃತಿಯ ಸೃಷ್ಟಿ ಮಾತ್ರ ಎಂಬುದು ನನ್ನ ನಂಬಿಕೆ. ಏತಕ್ಕಾಗಿ ಎಂಬುದು ಯಾರಿಗೂ ತಿಳಿಯದ ವಿಷಯ. ಚೀನಾ ದೇಶದ ವುಹಾನ್ ನಗರದಲ್ಲಿ ಜನಗಳಿಗೆ ರೋಗದ ಸೋಂಕನ್ನು ಹರಡಿದ ಕೋವಿಡ್ ವೈರಾಣು, ಎಲ್ಲ ವೈರಾಣುಗಳಂತೆ ಪ್ರಾಣಿಗಳಿಂದ ಮಾನವನಿಗೆ ಬಂದದ್ದು. ಕೋವಿಡ್ ವೈರಾಣುವಿನ ಮೂಲದ ಸಂಶೋಧನೆಯಿಂದ, ಕೋವಿಡ್ ನಿವಾರಣೆಗೆ ಬೇಕಾದ ಲಸಿಕೆ ಮತ್ತು ಔಷಧಿಗಳ ತಯಾರಿಕೆಗೆ ಸಹಾಯವಾಗುತ್ತದೆ. 

ತಿಳಿದ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ಚೀನಾ ವಿಳಂಬ ಮಾಡಿತು ಎಂಬ ಆರೋಪವನ್ನು ಸರಿ ಎಂದಿಟ್ಟುಕೊಂಡರೂ, ವಿಶಾಲ ಮನೋಭಾವದವರಾದ ನಮ್ಮ ಭಾರತೀಯರಿಗೆ "ಚೀನಾದ ನಾಗರಿಕರು ಮತ್ತು ಚೀನಾದ ಸರಕಾರ"ದ ನಡುವಿನ ಅಂತರ ಚೆನ್ನಾಗಿ ತಿಳಿದಿದೆ. "ಸರಕಾರಗಳ ನಡುವೆ  ಇರಬಹುದಾದ ವೈಷಮ್ಯಗಳಿಂದಾಗಿ, ಜನಗಳ ನಡುವೆ ಕಂದಕವೇರ್ಪಡುವುದು ಸರಿಯಲ್ಲ." ಕೋವಿಡ್ನ ಬಗ್ಗೆ ಎಚ್ಚರಿಕೆಯ ಸೀಟಿಯನ್ನೂದಿದ, ಚೀನಾದ ಹಲವು ವಿಜ್ಞಾನಿಗಳು ಹಾಗೂ ವೈದ್ಯರುಗಳು, ತಮ್ಮ ಜೀವದ ಹಂಗನ್ನು ತೊರೆದು, ಇಡೀ ವಿಶ್ವವನ್ನೆಚ್ಚರಿಸಿದ್ದಾರೆ. ಚೀನಾದ ಜಾಕ್ ಮಾರಿಗೆ  ಮತ್ತು ಅಲಿಬಾಬಾ ಕಂಪನಿಗೆ ಸೇರಿದ ಹಲವಾರು ಸೇವಾ ಸಂಸ್ಥೆಗಳು ಭಾರತ ಮತ್ತು ಇನ್ನಿತರ ದೇಶಗಳಿಗೆ,  ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಬೇಕಾದ ಹಲವು ಪರಿಕರಗಳನ್ನು ಮತ್ತು ಪದಾರ್ಥಗಳನ್ನು  ಕೊಡುಗೆಯಾಗಿ ನೀಡಿವೆ. ವಿಶ್ವ ಮಟ್ಟದಲ್ಲಿ ದಾಪುಗಾಲನ್ನಿಟ್ಟು ಮುನ್ನಡೆಯುತ್ತಿರುವ ಭಾರತದ ಔಷಧೋದ್ಯಮಕ್ಕೆ (Indian Pharmacy Industry) ಬೇಕಾದ ಕಚ್ಚಾ ವಸ್ತುಗಳ ೭೦%ರಷ್ಟು ಭಾಗವನ್ನು ನಾವು ಚೀನಾದಿಂದ ಪಡೆಯುತ್ತಿದ್ದೇವೆ ಎಂಬುದರಲ್ಲಿ ಉತ್ಪ್ರೇಕ್ಷೆಯಿಲ್ಲ.  ಚೀನಾದೊಂದಿಗಿನ ಇಂತಹ ಸುಮಧುರ ಸಂಬಂಧವನ್ನು, ನಾವು ಬೇಜಾವಾಬ್ದಾರಿಯಿಂದ ಕೂಡಿದ ಆರೋಪಗಳನ್ನು ಮಾಡಿ, ದುರ್ಬಲಗೊಳಿಸಬಾರದು. ಕೋವಿಡ್ ವೈರಾಣು ಮಾನವ ಸೃಷ್ಟಿಯಲ್ಲ ಎಂಬ ನಮ್ಮ ಚೀನಾದ ಪ್ರತಿನಿಧಿಗಳ ವಾದವನ್ನು ನಾನು ಕೂಡ ಸಮರ್ಥಿಸುತ್ತೇನೆ.  ಚೀನಿಯರ ಪ್ರಾಮಾಣಿಕತೆಯನ್ನು ಅನುಮಾನಿಸುವುದಕ್ಕೆ ಯಾವುದೇ ಬಲವಾದ ಕಾರಣಗಳಿಲ್ಲ ಎಂಬುದು ನನ್ನ ಅನಿಸಿಕೆ'  ಎಂದರು. ಹೀಗೆಂದ         ಡಾ. ಕಿರಣನ ವಿನೂತನವಾದ ವಿಷಯ ಮಂಡನೆಯನ್ನು, ತಲೆಯಾಡಿಸುತ್ತಾ ರೋಹಿಣಿ ಮೆಚ್ಚಿಕೊಂಡಿದ್ದು, ಹಾಗೂ ಕಿರಣ ಅದರಿಂದ ಪುಳಕಿತಗೊಂಡಿದ್ದು, ತಂದೆ ರಾಜುರವರ ಗಮನಕ್ಕೂ  ಬಾರದಿರಲಿಲ್ಲ. 

ಹೊಸ ವಾದ ಸರಣಿಯೊಂದಿಗೆ ಎದ್ದು ನಿಂತ ರೋಹಿಣಿಗೆ, ತಾನು ಈಗ ಮಂಡಿಸಲಿರುವ ವಾದವನ್ನು ಅಲ್ಲಗಳೆಯುವುದು ಯಾರಿಗೂ ಸಾಧ್ಯವಾಗದೆಂಬ ನಂಬಿಕೆಯಿತ್ತು. 'ಪ್ರಭುವೇ, ಏಷ್ಯಾದ ವಿಜ್ಞಾನಿಯೊಬ್ಬರ ವರದಿಯ ಆಧಾರದ ಮೇಲೆ ಒಂದು ವಿಷಯವನ್ನು ಎಲ್ಲರ ಮುಂದಿಡುತ್ತಿದ್ದೇನೆ. ಚೀನಾದ ಪ್ರಯೋಗಾಲಯಗಳ ಒಳ ಉದ್ದೇಶಗಳು ಮತ್ತು ಅವುಗಳು ಕಾರ್ಯ ನಿರ್ವಹಿಸುವ ವಿಧಾನಗಳು ಆ ವಿಜ್ಞಾನಿಗೆ ಚೆನ್ನಾಗಿ ತಿಳಿದಿದೆ. ಅವರ ವಾದದ ಪ್ರಕಾರ, ಕೋವಿಡ್ ವೈರಾಣು ಬಾವಲಿಗಳಿಂದ ಹರಡಿದ್ದಲ್ಲ. ಜೈವಿಕ ಅಸ್ತ್ರವೊಂದನ್ನು ತಯಾರಿಸುವ ಉದ್ದೇಶದಿಂದ ಕೋವಿಡ್ ವೈರಾಣುವನ್ನು ಚೀನಾದ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಒಂದೊಮ್ಮೆ ಕೋವಿಡ್ ವೈರಾಣು ಪ್ರಕೃತಿಯ ಕ್ರಿಯೆಯಿಂದ ಜನಿತವಾಗಿದ್ದರೆ, ಅದು ಚೀನಾದ  ವುಹಾನ್ ನಗರವಿರುವ ಹುಬೆಯ್ ಪ್ರಾಂತ್ಯದ ವಾತಾವರಣ ಮತ್ತು ಹವಾಮಾನವಿರುವ ಅನ್ಯ ಪ್ರಾಂತ್ಯಗಳಲ್ಲಿ ಮಾತ್ರ ಹರಡಬೇಕಿತ್ತು. ಆದರೆ ಹಾಗಾಗದೆ, ಬೇರೆ ಬೇರೆ ರೀತಿಯ ವಾತಾವರಣಗಳಿರುವ  ವಿಶ್ವದ ಎಲ್ಲಾ ಮೂಲೆ ಮೂಲೆಗಳಲ್ಲೂ ಕೋವಿಡ್ ಸಮನಾಗಿ ಹರಡುತ್ತಿದೆ. ಆದುದರಿಂದ ಕೋವಿಡ್ ವೈರಾಣು ಮಾನವ ಸೃಷ್ಟಿಯೇ ಹೊರತು ಸ್ವಾಭಾವಿಕವಾದ ಪ್ರಕ್ರಿಯೆಯಿಂದ ಉಂಟಾದುದಲ್ಲ ಎಂದು ಸಾಬೀತಾಗುತ್ತದೆ' ಎಂದ ರೋಹಿಣಿ ಚೀನಾದವರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾ ಕುಳಿತಳು. 

ಯಾವ ಏಷ್ಯಾದ ವಿಜ್ಞಾನಿಯ ವರದಿಯನ್ನು ರೋಹಿಣಿ ಉಲ್ಲೇಖಿಸಿದ್ದಳೋ, ಅದೇ ವಿಜ್ಞಾನಿ ಖುದ್ದು ಪ್ರತ್ಯಕ್ಷನಾಗಿ ಸಭೆಯಲ್ಲಿ ಎದ್ದು ನಿಂತಾಗ, ರೋಹಿಣಿ ಆಶ್ಚರ್ಯಚಕಿತಳಾದಳು. ಕೋವಿಡ್ ವೈರಾಣುವಿನ ಮಾನವ ಸೃಷ್ಟಿಯ ಬಗ್ಗೆ,  ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವರದಿಯೆಂದು ಹಲವಾರು ಜನರು ಹರಿಬಿಟ್ಟಿರುವ, ಚೀನಾದ ಮೇಲಿನ ಆರೋಪ ಸುಳ್ಳೆಂದು ಆ ವಿಜ್ಞಾನಿ ಹೇಳಿದಾಗ ಸಭಿಕರೆಲ್ಲರೂ ತಬ್ಬಿಬ್ಬುಗೊಂಡರು. ತನ್ನ ವರದಿಯನ್ನಾಧರಿಸಿ ಹಲವರು ಚೀನಾದ ಮೇಲೆ ಮಾಡಿರುವ ಆರೋಪದಿಂದ, ಚೀನಾದ ಖ್ಯಾತಿಗೆ ಧಕ್ಕೆಯುಂಟಾಗಿದ್ದು, ಅದಕ್ಕಾಗಿ ತಾನು ಚೀನಾದ ಕ್ಷಮೆಯನ್ನು ಕೇಳುತ್ತಿರುವುದಾಗಿಯೂ ಆ ವಿಜ್ಞಾನಿ ಹೇಳಿದರು. 

ಚೀನಾದ ತಂಡದ ಬಹುದೂರ ಕುಳಿತಿದ್ದ, ಚೀನಾದ ಯುವ ನಾಗರೀಕನೊಬ್ಬ ಮಾತನಾಡಲು ಎದ್ದು ನಿಂತು ಎಲ್ಲರ ಗಮನ ಸೆಳೆದನು. 'ದೇವರೇ, ನಾನೊಬ್ಬ ಮೃತಪಟ್ಟ ವ್ಯಕ್ತಿ. ನಾನೊಬ್ಬ ಚೀನಾ ದೇಶದ ವೈದ್ಯ. ೨೦೧೯ರ ಕಡೆಯ ದಿನಗಳಲ್ಲಿ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯೊಬ್ಬನು ಚಿಕಿತ್ಸೆಗಾಗಿ ನನ್ನಲ್ಲಿಗೆ ಬಂದಿದ್ದನು. ಸುಮಾರು ಒಂದು ದಶಕದ ಹಿಂದೆ ಪ್ರಪಂಚವನ್ನು ಕಾಡಿದ ಉಸಿರಾಟದ ಸಮಸ್ಯೆಯ ಸಾಂಕ್ರಾಮಿಕವೊಂದರ ಲಕ್ಷಣಗಳನ್ನೇ, ಆ ರೋಗಿಯ ಹೊಸ ರೋಗವು ಹೋಲುತ್ತಿತ್ತು. ಆ ರೋಗದ ಬಗ್ಗೆ ಹೆಚ್ಚು ಸಂಶೋಧಿಸುವಂತೆ ಮತ್ತು ಜಾಗರೂಕರಾಗಿರುವಂತೆ ನಾನು ನನ್ನ ಮಿತ್ರ ವೈದ್ಯರುಗಳನ್ನು ಎಚ್ಚರಿಸಿದೆ. ಬಿರುಗಾಳಿಯಂತೆ ಹರಡಿದ ನನ್ನ ಎಚ್ಚರಿಕೆಯ ಸಂದೇಶ, ಪೊಲೀಸರ ಗಮನಕ್ಕೂ ಬಂತು. ನನ್ನ ಸಂದೇಶದ ಸತ್ಯಾಸತ್ಯತೆಯ ತನಿಖೆಯನ್ನು ಮಾಡಿದ ಪೊಲೀಸರು, ನನ್ನ ಮೇಲೆ ಸಮಾಜದ ಶಾಂತಿಯನ್ನು ವಿನಾಕಾರಣ ಕದಡಿದ ಆರೋಪವನ್ನು ಹೊರಿಸಿ, ನನ್ನಿಂದ ತಪ್ಪೊಪ್ಪಿಗೆಯ ಪತ್ರವನ್ನೂ ಬರೆಸಿಕೊಂಡರು. ನನ್ನ ಮೇಲಾದ ಹಿಂಸಾಚಾರಕ್ಕೆ ಚೀನಾದ ಜನತೆಯಿಂದ ತೀವ್ರವಾದ ವಿರೋಧ ವ್ಯಕ್ತವಾಯಿತು. ಹೊಸದಾಗಿ ಕಂಡುಬಂದಿದ್ದ ರೋಗವೊಂದನ್ನು ಕುರಿತು ನಾನು ಎಚ್ಚರಿಕೆಯ ಸೀಟಿಯನ್ನು ಊದಿದ್ದನ್ನು ಪೊಲೀಸರು, ವದಂತಿಗಳನ್ನು ಹರಡಿದ ಅಪರಾಧವೆಂದು ಆರೋಪಿಸಿದರು. ಹೊಸ ರೋಗದ ಸುದ್ದಿಯ ಹಬ್ಬುವಿಕೆ ಚೀನಾದ ಮಾಣಿಜ್ಯೋದ್ಯಮಕ್ಕೆ ಮಾರಕವಾಗಬಹುದೆಂಬುದು ಚೀನೀ ಪೊಲೀಸರ ಅನಿಸಿಕೆಯಿರಬಹುದು. 

ರೋಗಿಯೊಬ್ಬರಲ್ಲಿ ನಾನು ಪತ್ತೆ ಹಚ್ಚಿದ ಹೊಸ ರೋಗವೊಂದನ್ನು, ಕೆಲವು ದಿನಗಳನಂತರ "ಕೋವಿಡ್-೧೯" ರೋಗ ಎಂದು ವಿಜ್ಞಾನಿಗಳು ಕಂಡು ಹಿಡಿದರು. ಕೆಲವು ದಿನಗಳನಂತರ ನಾನು ಕೂಡ ಅದೇ ರೋಗದಿಂದ ಸೋಂಕಿತನಾದೆ. ಕೋವಿಡ್ ರೋಗಿಯೆಂದು ಪರಿಗಣಿಸಲ್ಪಟ್ಟ ನನ್ನನು ನಿರ್ಬಂಧನದಲ್ಲಿಟ್ಟು(ಕ್ವಾರಂಟೈನ್), ನನಗೆ ಚಿಕಿತ್ಸೆಯನ್ನು ನೀಡಲಾರಂಭಿಸಿದರು. ಮತ್ತೆ ಕೆಲವು ದಿನಗಳನಂತರ ನಾನು ಅದೇ ರೋಗಕ್ಕೆ ಬಲಿಯಾಗಿ ಸತ್ತೆ. ಕೋವಿಡ್ ರೋಗದ ಬಗ್ಗೆ ಎಚ್ಚರಿಕೆಯ ಸೀಟಿಯನ್ನು ನಾನು ಊದಿದ ಪ್ರಕ್ರಿಯೆಗಿಂತ ನನ್ನ ಸಾವು, ಆ ರೋಗದ ಎಚ್ಚರಿಕೆಯನ್ನು ಅತಿ ದೊಡ್ಡದಾದ ಪ್ರಮಾಣದಲ್ಲಿ, ಇಡೀ ವಿಶ್ವಕ್ಕೇ ಸಾರಿತ್ತು. ನಾನು ಮೃತಪಟ್ಟಿದ್ದಕ್ಕೆ ನನಗೆ ವಿಷಾದವಿಲ್ಲ. ತಮ್ಮ ಇಚ್ಚೆಯಂತೆ ನನ್ನ ಸಾವು ಉಂಟಾಗಿದೆ. ನನ್ನ ದೇಶ ಚೀನಾವನ್ನು ಮತ್ತು ಇಡೀ ವಿಶ್ವವನ್ನು ಕೋವಿಡ್ ರೋಗದಿಂದ ಬೇಗ ಮುಕ್ತಗೊಳಿಸಬೇಕೆಂದು ತಮ್ಮನ್ನು ಪ್ರಾರ್ಥಿಸಿಕೊಳ್ಳುತೇನೆ,' ಎಂದ ಆ ತರುಣ ವೈದ್ಯನ ಮಾತುಗಳನ್ನು ಕೇಳಿ ಎಲ್ಲಾ ಸಭಿಕರು ದುಃಖತಪ್ತರಾದರು. 

ಹೆಚ್ಚು ಪರಿಚಯವಿಲ್ಲದ ಮತ್ತೊಬ್ಬ ವ್ಯಕ್ತಿ ಮಾತನಾಡಲು ಎದ್ದು ನಿಂತಾಗ, ದೇವರ ನ್ಯಾಯಾಲಯದ ಸಭಿಕರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. 'ನನ್ನ ಹೆಸರು ಡಾ. ದ್ವಾರಕಾನಾಥ್ ಎಸ್. ಕೊಟ್ನಿಸ್. ನಾನು ಭಾರತ ದೇಶದ ಮಹಾರಾಷ್ಟ್ರ ರಾಜ್ಯದವನು. ೧೯೩೮ರಲ್ಲಿ ಜಪಾನಿನ ಆಕ್ರಮಣದಿಂದ ಗಾಯಗೊಂಡ  ಚೀನಾದ ಸೈನಿಕರ ಶುಶ್ರೂಷೆಗೆಂದು ನನ್ನನ್ನು ಭಾರತದಿಂದ ಚೀನಾಕ್ಕೆ ಕಳುಹಿಸಲಾಯಿತು. ನಾನು ನನ್ನ ಕೆಲಸವನ್ನು ಮತ್ತು ಚೀನಾದ ಜನತೆಯನ್ನು ಪ್ರೀತಿಸುತಿದ್ದೆ. ಚೀನಾದ ಜನರೂ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಚೀನಾದ ಯುವತಿಯೊಬ್ಬಳನ್ನು ಪ್ರೀತಿಸಿದ ನಾನು ಅವಳನ್ನೇ ಮದುವೆ ಕೂಡ ಆದೆ. ದುರದೃಷ್ಟವಶಾತ್ ರೋಗವೊಂದಕ್ಕೆ ತುತ್ತಾದ ನಾನು ಚೀನಾದಲ್ಲಿ, ೧೯೪೨ರಲ್ಲೇ ಮೃತಪಟ್ಟೆ.  ಆಗ ನನ್ನ ವಯಸ್ಸು ಕೇವಲ ೩೨ ವರ್ಷವಾಗಿತ್ತು. "ನಮ್ಮ ಸೈನ್ಯ ಸಹಾಯ ಹಸ್ತವೊಂದನ್ನು ಕಳೆದುಕೊಂಡಿದೆ. ನಮ್ಮ ದೇಶ ಸನ್ಮಿತ್ರನೊಬ್ಬನನ್ನು ಕಳೆದುಕೊಂಡಿದೆ. ಗಡಿಯ ಎಲ್ಲೆಗಳನ್ನು ದಾಟಿದ ಅವನ ಸೇವಾ ಮನೋಭಾವವನ್ನು ಗೌರವಿಸೋಣ," ಎಂಬುದು ಅಂದಿನ ಚೀನಾ ದೇಶದ ಸರ್ವೋಚ್ಚ  ನಾಯಕರು ನನ್ನ ಬಗ್ಗೆ ನುಡಿದ ಮೆಚ್ಚುಗೆಯ ಮಾತುಗಳಾಗಿದ್ದವು. ನನ್ನ ನೆನಪಿನ ಸ್ಮಾರಕವೊಂದನ್ನು ಚೀನಾದ ಹೆಬಿ ಪ್ರಾಂತ್ಯದಲ್ಲಿ ನಿರ್ಮಿಸಲಾಗಿದೆ. ಈಗಲೂ ಕೂಡ ಚೀನಿಯರ ಪಾಲಿಗೆ ನಾನೊಬ್ಬ ಗೌರವಾನ್ವಿತ ಮಿತ್ರ. ನನ್ನ ಅಂಚೆ ಚೀಟಿಯೊಂದು ಕೂಡ ಅಲ್ಲಿ ಪ್ರಕಟವಾಗಿದ್ದು, ೨೦೦೯ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, "ಚೀನಾದ ಮೊದಲ ೧೦ ಸನ್ಮಿತ್ರರ ಪಟ್ಟಿಯಲ್ಲಿ," ನಾನು ಕೂಡ ಒಬ್ಬನಾಗಿ ಆಯ್ಕೆಗೊಂಡಿದ್ದೇನೆ. ನನ್ನ ಕತೆಯಿಂದ "ಚೀನಾ ಸುಸಂಸ್ಕೃತ ದೇಶವೊಂದೆಂಬುದು" ಎಲ್ಲರಿಗೂ ಮನವರಿಕೆಯಾಗುತ್ತದೆ. ನನ್ನ ಮರಣದನಂತರ ಭಾರತಕ್ಕೆ ಭೇಟಿ ನೀಡಿರುವ, ಚೀನಾದ ಹಿರಿಯ ನಾಯಕರುಗಳೆಲ್ಲರೂ, ನನ್ನ ಸ್ಮರಣೆಯನ್ನು ಗೌರವಿಸಲು, ನನ್ನ ಕುಟುಂಬದ ಸದಸ್ಯರುಗಳನ್ನು ಭೇಟಿ ಮಾಡುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ. ನನ್ನ ಸೇವಾ ಸ್ಮರಣೆ ಭಾರತ-ಚೀನಾದ ಬಾಂಧವ್ಯವನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಿರುವ ಬಗ್ಗೆ ನನಗೆ ಹೆಮ್ಮೆಯಿದೆ. 

ಭಾರತದಲ್ಲೂ ನನಗೆ ಅಪಾರ ಗೌರವ ದೊರೆತಿದೆ. ನನ್ನ ಜೀವನಾಧಾರಿತ  "ಡಾ. ಕೊಟ್ನಿಸ್ ಕಿ ಅಮರ್ ಕಹಾನಿ" ಎಂಬ ಚಲನ ಚಿತ್ರವೊಂದನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ, ೧೯೪೬ರಲ್ಲಿ ತಯಾರಿಸಲಾಯಿತು. ಸುಪ್ರಸಿದ್ಧ ನಟರಾದ ವಿ. ಶಾಂತಾರಾಮರವರು ನನ್ನ ಪಾತ್ರವನ್ನು ನಿರ್ವಹಿಸಿ, ಚಿತ್ರದ ನಿರ್ದೇಶನವನ್ನು ಸಹ ಮಾಡಿದ್ದರು. 

ಕೋವಿಡ್ ರೋಗದ ಬಗ್ಗೆ ಎಚ್ಚರಿಕೆಯ ಸೀಟಿಯನ್ನುಸಕಾಲದಲ್ಲಿ ಊದಿ, ಇಡೀ ವಿಶ್ವವನ್ನೇ ಎಚ್ಚರಿಸಿದ ಚೀನಾದ ತರುಣ ವೈದ್ಯರು ಈ ಸಭೆಗೆ ಬಂದು ಮಾತನಾಡಿದ್ದು ನನಗೆ ಸಂತಸ ತಂದಿದೆ.  ಆ  ತರುಣ ವೈದ್ಯರನ್ನು ವದಂತಿಕೋರನೆಂದು ಚೀನಾ ಶಿಕ್ಷಿಸಿದ ಘಟನೆಯನ್ನು ಕೇಳಿ ನನ್ನ ಮನಸ್ಸಿಗೆ ನೋವಾಗಿದೆ. ಪ್ರಾಯಶಃ ಅದು ಆತುರದ ಕಾರ್ಯಾಚರಣೆಯಿರಬಹುದು. ಅಂದಿನ ಘಟನೆಯನಂತರ ಚೀನಾ, ಆ ತರುಣ ವೈದ್ಯರನ್ನು ನಿರಪರಾಧಿಯೆಂದು ಘೋಷಿಸಿದೆ ಹಾಗೂ ಆ ವೈದ್ಯರ  ಕುಟುಂಬದ ಕ್ಷಮೆಯನ್ನು ಕೂಡ ಯಾಚಿಸಿದೆ.  

ನನ್ನ ಚೀನಾದ ಸೇವಾವಧಿಯಲ್ಲಿನ ಸುಮಧುರ ಕ್ಷಣಗಳನ್ನು ನೆನಪಿಸಿಕೊಂಡರೆ, ಕೋವಿಡ್ ವೈರಾಣುವನ್ನು ಸೃಷ್ಟಿಸಿ, ಅದನ್ನು ಜೈವಿಕಾಸ್ತ್ರವನ್ನಾಗಿ ಪ್ರಯೋಗಿಸಿರುವಂತಹ ನೀಚ ಕಾರ್ಯವನ್ನು ಚೀನಾ ಮಾಡಿರಲಾರದು ಎಂಬುದು ನನ್ನ ಅಭಿಪ್ರಾಯ. ಕೋವಿಡ್ನ ಶರವೇಗದ ಹಬ್ಬುವಿಕೆಗೆ ಕಾರಣವಾಗುವಂತಹ ಯಾವುದೇ ಕೃತ್ಯವನ್ನು ಚೀನಾ, ಗೊತ್ತಿದ್ದೂ ಮಾಡಿರಲಾರದೆಂಬುದು ನನ್ನ ಅನಿಸಿಕೆ.' ಹೀಗೆಂದು ಡಾ. ದ್ವಾರಕಾನಾಥ್ ಕೊಟ್ನಿಸ್ರವರು ತಮ್ಮ ಮಾತುಗಳನ್ನು ಮುಗಿಸುತ್ತಲೇ, ಇಡೀ ಸಭೆಯಲ್ಲಿ ಮೆಚ್ಚುಗೆಯ ಚಪ್ಪಾಳೆಗಳ ಭೋರ್ಗರೆತ ಕೇಳಿಬಂತು. 

ರಾಜುರವರ ಕಣ್ಣುಗಳೀಗ, ಅವರ ವಕೀಲ ಮಿತ್ರ ಮದನ್ ಲಾಲರ ಮೇಲಿತ್ತು. ಜಾಣರೂ ಮತ್ತು ಅನುಭವಿಯೂ ಆದ ಮದನ್ ಲಾಲರು, ಚೀನಾದ ವಿರುದ್ಧ ಪ್ರಬಲವಾದ ವಾದವನ್ನು ಮಂಡಿಸಬಲ್ಲರೆಂಬ ವಿಶ್ವಾಸ ರಾಜುರವರಿಗಿತ್ತು. 

'ಪ್ರಭುವೇ, ನನ್ನ ವಿನಮ್ರ ನಮಸ್ಕಾರಗಳನ್ನು ಸ್ವೀಕರಿಸಿ. ನಿಮ್ಮ ನ್ಯಾಯಾಲಯದಲ್ಲಿ ನಾನು, ಈಗ ತಾನೇ ಮತ್ತೊಬ್ಬ ದೇವರ ದರ್ಶನವನ್ನು ಮಾಡಿದ್ದೇನೆ. ಹೌದು, ನಮ್ಮವರೇ ಆದ ಡಾ. ದ್ವಾರಕಾನಾಥ್ ಕೊಟ್ನಿಸ್ರವರದ್ದು ಯಾವ ದೇವರಿಗೂ ಕಮ್ಮಿ ಇಲ್ಲದ ವ್ಯಕ್ತಿತ್ವ. ಮನುಕುಲಕ್ಕೆ ಅವರು ಸಲ್ಲಿಸಿರುವ ನಿಸ್ವಾರ್ಥ ಸೇವೆ ಶ್ಲಾಘನೀಯವಾದುದು. ಆದರೆ ಕುಟಿಲ ಬುದ್ಧಿಯ ಚೀನಾ, ಕೊಟ್ನಿಸ್ರವರನ್ನು ಗೌರವಿಸುವ, ಸ್ಮರಿಸುವ ನಾಟಕವನ್ನು ಮಾತ್ರ ಮಾಡುತ್ತಿದೆ. ಭಾರತದ ವಿರುದ್ಧ ಚೀನಾ ನಡೆಸಿರುವ ಕುಕೃತ್ಯಗಳು, ಆ ದೇಶ ವಿಶ್ವಾಸಕ್ಕೆ ಅರ್ಹವಲ್ಲವೆಂದು ಸಾರುತ್ತವೆ. 

ಭೂಗೋಳ ಶಾಸ್ತ್ರದ ಕೆಲವು ಪಾಠಗಳನ್ನು ನೆನೆಪಿಸಿಕೊಳ್ಳೋಣ. ಮಾರಕ ಕೋವಿಡ್ ವೈರಾಣುವಿನ ಮೂಲಸ್ಥಾನವಾದ ಚೀನಾ ದೇಶದ ವುಹಾನ್ ನಗರದಿಂದ, ವಿಶ್ವದ ಬೇರೆ ಪ್ರಮುಖ ನಗರಗಳ ನಡುವಿನ ದೂರವನ್ನು ಗಮನಿಸೋಣ. 

ವುಹಾನ್ನಿಂದ ಶಾಂಘೈ ಗೆ  - ೮೪೦ ಕಿ.ಮೀ.ಗಳು 

ವುಹಾನ್ನಿಂದ ಬೀಜಿಂಗ್ ಗೆ  - ೧೨೦೦ ಕಿ.ಮೀ.ಗಳು 

ವುಹಾನ್ನಿಂದ ಇಟಲಿ ದೇಶದ ಮಿಲಾನ್ ಗೆ - ೧೫,೦೦೦ ಕಿ.ಮೀ.ಗಳು 

ವುಹಾನ್ನಿಂದ ಅಮೆರಿಕಾದ ನ್ಯೂ ಯಾರ್ಕ್ ಗೆ - ೧೫,೦೦೦ ಕಿ.ಮೀ.ಗಳು 

ವುಹಾನ್ನಿಂದ ಭಾರತದ ದಿಲ್ಲಿಗೆ - ೩,೫೦೦ ಕಿ.ಮೀ.ಗಳು 

ವುಹಾನ್ನಿಂದ ಇರಾನಿನ ಟೆಹರಾನ್ ಗೆ - ೬,೦೦೦ ಕಿ.ಮೀ.ಗಳು 

ಆದರೆ ಮಾರಕ ಕೋವಿಡ್ ವೈರಾಣು ಶಾಂಘೈ ಮತ್ತು ಬೀಜಿಂಗ್ ನಗರಗಳಿಗೆ ದೊಡ್ಡ ಪ್ರಮಾಣದಲ್ಲಿ ಹರಡೇ ಇಲ್ಲ. ಆದರೆ ದೂರದ ಯೂರೋಪ್ನ ದೇಶಗಳಲ್ಲಿನ ಜನಗಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿ ಮೃತಪಟ್ಟಿದ್ದಾರೆ. ಅಮೇರಿಕಾ ಮತ್ತು ಭಾರತ ದೇಶಗಳಲ್ಲೂ ಕೋವಿಡ್ನ ಸಮಸ್ಯೆ ತೀವ್ರವಾಗಿ ಹರಡಿದೆ. ಆದರೆ ಚೀನಾ ಕೋವಿಡ್ನ ಶರವೇಗದ ಹರಡುವಿಕೆಗೆ ಅಮೇರಿಕಾ ಮತ್ತಿತರ ದೇಶಗಳನ್ನು ದೋಷಿಯೆಂದು ಆರೋಪಿಸುತ್ತಿದೆ. "ತಾ ಕಳ್ಳ, ಪರರ ನಂಬ" ಎಂಬ ಗಾದೆಯಂತೆ ಚೀನಾ, ಕೋವಿಡ್ ಹರಡಿಸುವ ಅಪರಾಧವನ್ನು ತಾನು ಮಾಡಿ, ಬೇರೆಯವರ ಮೇಲೆ ಆರೋಪವನ್ನು ಹೊರಿಸುತ್ತಿದೆ. ಮುಜುಗರವೆನಿಸಿದರೂ ಚೀನಾ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು. 

೧) ಇಡೀ ವಿಶ್ವದ ಮೂಲೆ ಮೂಲೆಗಳನ್ನಾವರಿಸಿರುವ ಕೋವಿಡ್, ಅಷ್ಟೇ ತೀವ್ರವಾಗಿ ಚೀನಾದಲ್ಲೇಕೆ ವ್ಯಾಪಿಸಿಲ್ಲ? ವುಹಾನ್ನ ಸುತ್ತವಿರುವ ಕೆಲವೇ ಪ್ರಾಂತ್ಯಗಳಲ್ಲಿ ಮಾತ್ರ ಕೋವಿಡ್ ಹರಡಿದ್ದು, ಚೀನಾದ ಮಿಕ್ಕ ಪ್ರಾಂತ್ಯಗಳು ಕ್ಷೇಮವಾಗೇ ಉಳಿದಿರುವುದು ಹೇಗೆ? 

೨) ಕೋವಿಡ್ ಕುರಿತಾದ ಮಾಹಿತಿಯನ್ನು ಬೇರೆ ದೇಶಗಳೊಂದಿಗೆ ಹಂಚಿಕೊಳ್ಳುವಲ್ಲಿ ಚೀನಾ ವಿಳಂಬನ್ನೇಕೆ ಮಾಡಿತು? ನಿಯಂತ್ರಣ ಕಾರ್ಯವನ್ನು ತ್ವರಿತಗೊಳಿಸಬಹುದಾದ ಅಮೂಲ್ಯ ಸಮಯ ವ್ಯರ್ಥವಾಗಿ ಹೋಗಿದ್ದಕ್ಕೆ ಚೀನಾ ಹೊಣೆಯಲ್ಲವೆ?

೩) ಕೋವಿಡ್ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ ತನ್ನದೇ ವಿಜ್ಞಾನಿಗಳ ಮತ್ತು ವೈದ್ಯರುಗಳ ವಿರುದ್ಧ ಚೀನಾ ದಮನಕಾರಿ ಕ್ರಮಗಳನ್ನು ಜರುಗಿಸಿ, ಅವರುಗಳ ಬಾಯ್ಮುಚ್ಚಿಸಿದ್ದೇಕೆ? 

೪) ಕೋವಿಡ್ ವೈರಾಣುವಿನ ಹರಡುವಿಕೆಯನ್ನು ಘೋಷಿಸಿದನಂತರವೂ, ಚೀನಾ ತನ್ನ ವುಹಾನ್ ನಗರದಿಂದ ಅಂತಾರಾಷ್ಟ್ರೀಯ ಹಾರಾಟಗಳನ್ನು ನಿಯಂತ್ರಿಸಲಿಲ್ಲವೇಕೆ? 

೫) ಕೋವಿಡ್ ವೈರಾಣುವಿನ ಹರಡುವಿಕೆಗೆ ಪೂರಕವಾಗಿ ಚೀನಾ ನಡೆಸಿದ ಕುಟಿಲ ನಡೆಗಳ ಬಗ್ಗೆ, ವಿಶ್ವ ಆರೋಗ್ಯ ಸಂಸ್ಥೆ ಮೃದು ಧೋರಣೆಯನ್ನು ತಳೆದಿರುವುದೇಕೆ?'

ಹೀಗೆ ಸೂಕ್ಷ್ಮವಾದ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ ಮದನ್ ಲಾಲರ ವಾದವನ್ನು ಕೇಳಿ ರಾಜು ರವರು ಪುಳಕಿತರಾದರು. 

ವಾದವನ್ನು ಮುಂದುವರೆಸಿದ ಚೀನಾದ ಪ್ರತಿವಾದಿಗಳು ತಮಗೆ ಪೂರಕವಾದ ಅಂಶಗಳಿಗೆ ಒತ್ತು ನೀಡಿದರು. 'ಕೋವಿಡ್ನ ವೈರಾಣು ಪ್ರಾಣಿಗಳಿಂದ ಮಾನವನಿಗೆ ಹರಡಿದೆ. "ಕುದುರೆ ಗಾಳದ ಬಾವಲಿ(ಹಾರ್ಸ್ ಶೂ ಬ್ಯಾಟ್)"ಯಲ್ಲಿ ಕಂಡು ಬಂದ ವೈರಾಣುವಿನ ಮತ್ತು ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಗಳ ನಡುವೆ ತುಂಬಾ ಹೋಲಿಕೆ ಇರುವುದು ಸಂಶೋಧನೆಯಿಂದ ತಿಳಿದಿದೆ. ಬಾವಲಿಯಿಂದ ಮಾನವನಿಗೆ ವೈರಾಣುಗಳು ಹರಡಲು ಮೂರನೇ ಪ್ರಾಣಿಯೊಂದರ ಸಂಪರ್ಕ ಬೇಕೇ ಬೇಕು. ೨೦೦೩ರಲ್ಲಿ ಹರಡಿದ್ದ ಸಾರ್ಸ್ ವೈರಾಣುಗಳು ಬಾವಲಿಗಳಿಂದ ಮಾನವನಿಗೆ ಪುನುಗು ಬೆಕ್ಕಿನ ಮೂಲಕ ಹರಡಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕೊರೋನಾ ವೈರಾಣುಗಳ ವಂಶದಿಂದ ಮಾನವನನ್ನು ಹೊಕ್ಕ ಮೊದಲ ವೈರಾಣುವೇ ಸಾರ್ಸ್ ವೈರಾಣು. ೨೦೧೨ರಲ್ಲಿ ಜಗತ್ತು ಕಂಡ ಮೆರ್ಸ್ ವೈರಾಣು, ಒಂಟೆಗಳ ಮೂಲಕ ಮಾನವನಿಗೆ ಹರಡಿರುವುದೆಂದೂ ತಿಳಿದು ಬಂದಿದೆ. ೨೦೧೯ರ ಕೋವಿಡ್ ರೋಗಕ್ಕೆ ಕಾರಣವಾಗಿರುವ ವೈರಾಣು, ಬಾವಲಿಗಳಿಂದ "ಇರುವೆ ತಿನ್ನುವ ಪ್ಯಾಂಗೋಲಿನ್"ಗಳಿಗೆ, ಮತ್ತು ಪ್ಯಾಂಗೋಲಿನ್ಗಳಿಂದ ಮಾನವನಿಗೆ ಹರಡಿದೆ ಎಂಬುದು ಸಂಶೋಧನೆಯಿಂದ ಋಜುವಾತಾಗಿದೆ. ಅಂತಹ ಪ್ಯಾಂಗೋಲಿನ್ ಗಳಲ್ಲಿ ಕಂಡುಬಂದಿರುವ ಕೊರೋನಾ ವೈರಾಣುವಿಗೂ ಮತ್ತು ಕೋವಿಡ್-೧೯ರ ವೈರಾಣುವಿಗೂ ಬಹಳಷ್ಟು ಹೋಲಿಕೆಯಿದೆ. 

ಕೋವಿಡ್-೧೯ರ ವೈರಾಣು, ಜೀವಂತ ಪ್ರಾಣಿಗಳ ಮಾರಾಟ ಮಾಡುವ ವುಹಾನಿನ ಮಾಂಸದ "ಹಸಿ ಮಾರುಕಟ್ಟೆ (ವೆಟ್ ಮಾರ್ಕೆಟ್)"ಯಿಂದ ಹರಡಿದೆ. ಅಂತಹ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೆಲವು ಕೆಲಸಗಾರರಿಗೆ ಸೋಂಕು ಮೊದಲು ಹರಡಿ, ಅನಂತರ ಅವರುಗಳ ಮೂಲಕ ಬೇರೇ ಜನಗಳಿಗೂ ಹರಡಿದೆ. ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಯನ್ನು ಚೀನಾದ ವಿಜ್ಞಾನಿಗಳು ಅತೀ ಬೇಗನೆ ಅನಾವರಣಗೊಳಿಸಿದ್ದಾರೆ. ಅದರ ಮಾಹಿತಿಯನ್ನು ಕೂಡಲೇ ವಿಶ್ವ ಆರೋಗ್ಯ ಸಂಸ್ಥೆಗೆ ನಮ್ಮ ದೇಶ  ನೀಡಿದೆ. ಇದೆಲ್ಲ ಮಾಹಿತಿಗಳಿಂದ, ಕೋವಿಡ್ ವೈರಾಣು ಮಾನವ ಸೃಷ್ಟಿಯಿಂದ ಆದುದ್ದಲ್ಲ, ಅದರ ಸೃಷ್ಟಿ ಸ್ವಾಭಾವಿಕವಾಗಿ ಆಗಿದೆ  ಎಂದು ಸಾಬೀತಾಗುತ್ತದೆ.' ಕೋವಿಡ್ ವೈರಾಣುವಿನ ಉಗಮದ ಬಗೆಗಿನ ಚೀನಾದ ವಿವರಣೆ ಹೀಗಿತ್ತು. 

'ವಕೀಲ ಮದನ್ ಲಾಲರು ಮುಂದಿಟ್ಟ ಕರಾರುವಾಕ್ಕಾದ ಪ್ರಶ್ನೆಗಳ ಮುಂದೆ ಚೀನಾದವರ ವಿವರಣೆ ಸಮಂಜಸವಾಗಿ ಕಾಣುತ್ತಿಲ್ಲ. ಸರಿಯಾದ ಸಮಯದಲ್ಲಿ ಚೀನಾ ಸರಿಯಾದ ಕ್ರಮಗಳನ್ನು ಕೈಗೊಂಡಿದ್ದರೆ, ಕೋವಿಡ್ ಇಡೀ ವಿಶ್ವವನ್ನಾವರಿಸುವುದನ್ನು ತಡೆಯಬಹುದಿತ್ತು. ಹಾಗೆ ಮಾಡದ ಚೀನಾ, ತನ್ನ ವ್ಯಾಪಾರದ ಹಿತದೃಷ್ಟಿಯ ರಕ್ಷಣೆಗೆ ಮೊದಲ ಆದ್ಯತೆಯನ್ನು ನೀಡಿ, ಬಹಳ ವಾರಗಳ ತನಕ ಸುಮ್ಮನಿದ್ದು, ಇಡೀ ವಿಶ್ವವನ್ನು ವಂಚಿಸಿದೆ. ಇಂತಹ ವಂಚನೆಯನ್ನು ಕುರಿತ ಚರ್ಚೆ ವಿಶ್ವ ಸಂಸ್ಥೆಯ ಮುಂದೆ ೨೦೨೦ರ ಮಾರ್ಚ್ ತಿಂಗಳ ಅಧಿವೇಶನದಲ್ಲಿ ನಡೆಯಬೇಕಾದಾಗ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಚೀನಾ, ಚರ್ಚೆಯೇ ಆಗದಂತೆ ಮಾಡಿತು. ಏಕೆಂದರೆ ಚೀನಾಕ್ಕೆ ತನ್ನ ವಂಚನೆಯನ್ನು ಮುಚ್ಚಿಟ್ಟುಕೊಳ್ಳಬೇಕಾದ ಹುನ್ನಾರವಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನಾದೊಂದಿಗೆ ಒಳಸಂಚು ಮಾಡಿ, ತನ್ನ ಕರ್ತವ್ಯವನ್ನು ಮರೆತು, ಇಡೀ ವಿಶ್ವಕ್ಕೇ  ದ್ರೋಹವನ್ನು ಬಗೆಯಿತು,' ಎಂದು ರೋಹಿಣಿ ತನ್ನ ವಾದವನ್ನು ಮತ್ತೊಮ್ಮೆ ಮುಂದಿಟ್ಟಳು. 

ತಮ್ಮ ಮಗಳ ವಾದಕ್ಕೆ ಒತ್ತು ನೀಡುವಂತೆ ಮಾತನಾಡಿದ ರಾಜುರವರು 'ಮೊನ್ನೆ ಮೊನ್ನೆಯ ಏಪ್ರಿಲ್ ತಿಂಗಳ ನಡುಭಾಗದಲ್ಲಿ, ಚೀನಾ ತನ್ನ ವುಹಾನ್ ನಗರದಲ್ಲಿ ಕೋವಿಡ್ನಿಂದಾದ ಮೃತರುಗಳ ಸಂಖ್ಯೆ, ಮುಂಚೆಯೇ ಘೋಷಿತವಾದ ಸಂಖ್ಯೆಗಿಂತ  ಶೇಕಡಾ ೫೦ರಷ್ಟು ಹೆಚ್ಚಿತ್ತು ಎಂದು ಒಪ್ಪಿಕೊಂಡಿದೆ! ಚೀನಾದ ಈ ಕ್ರಮ, ಆ ದೇಶದ "ಕೋವಿಡ್ ಮಾಹಿತಿ ಮತ್ತು ಅಂಕಿಅಂಶಗಳ ಪ್ರಕಟಣಾ ನೀತಿ"ಯಲ್ಲಿನ ಪಾರದರ್ಶಕತೆಯ ಕೊರತೆಗೆ ಹಿಡಿದ ಕನ್ನಡಿಯಾಗಿದೆ. ಆಸ್ಟ್ರೇಲಿಯಾ ದೇಶ ಕೂಡ, ಚೀನಾ ತನಗೆ ತಿಳಿದಿರುವ ಕೋವಿಡ್ ಮಾಹಿತಿಯನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳದೆಂದು ಅನುಮಾನವನ್ನು ವ್ಯಕ್ತಪಡಿಸಿದೆ. ವಿಶ್ವದ ೬೨ ದೇಶಗಳು, ಚೀನಾ ಕೋವಿಡ್ನ ವಿಷಯದಲ್ಲಿ ನಡೆಸಿರಬಹುದಾದ ವಂಚನೆಗಳ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿವೆ. ವಿಶ್ವ ಆರೋಗ್ಯ ಸಂಸ್ಥೆ ತನ್ನ ಚೀನಾ ಕುರಿತಾದ ಮೃದು ಧೋರಣೆಯನ್ನು ಬಿಟ್ಟು, ಪ್ರಾಮಾಣಿಕ ತನಿಖೆಯನ್ನು ನಡೆಸುವುದೆಂದು ಆಶಿಸೋಣ. 

ಕೋವಿಡ್ನ ಸಂಕಟಗಳ ನಡುವೆ, ಭಾರತದ ಲಡಾಖ್ ಪ್ರಾಂತ್ಯದ ಗಡಿ ಭಾಗದಲ್ಲಿ, ಚೀನಾ ತನ್ನ ಕತ್ತಿಯನ್ನು ಮಸೆಯುತ್ತಾ,  ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿರುವುದು ಹೀನ ಕೃತ್ಯವೇ ಸರಿ. ಈ ರೀತಿಯ ಗಡಿಭಾಗದ ಚಕಮಕಿಗಳನ್ನು ಬೇರೆ ಬೇರೆ ಕಡೆ ನಡೆಸಿ, ವಿಶ್ವದ ಗಮನವನ್ನು ತನ್ನ ಕೋವಿಡ್ ವಂಚನೆಯ ಪ್ರಕರಣಗಳಿಂದ ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಚೀನಾ ಮಾಡುತ್ತಿದೆ. ತನ್ನ ತಪ್ಪುಗಳ ಬಗ್ಗೆ ಚೀನಾಕ್ಕೆ ವಿಷಾದವೆಂಬುದೇ ಇಲ್ಲ. ವಿಶ್ವದ ಐದನೇ ಒಂದು ಭಾಗದಷ್ಟು ಮನುಕುಲಕ್ಕೆ ಆವಾಸ ಸ್ಥಾನವಾದ ನಮ್ಮ ದೇಶ ಭಾರತ ಕೋವಿಡ್ನ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಸಮಯದಲ್ಲಿ, ಚೀನಾ ನಮ್ಮ ಗಡಿಭಾಗದಲ್ಲಿ ಸೈನ್ಯದ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದು ಮನುಕುಲದ ವಿರುದ್ಧ ಚೀನಾವೆಸಗಿರುವ ದ್ರೋಹವಲ್ಲವೆ?' ಎಂದು ಪ್ರಶ್ನಿಸಿದರು. 

ನಿರಂತರವಾಗಿ ಸಾಗಿದ್ದ ವಾದಗಳ ಸರಣಿಗೆ ಮುಕ್ತಾಯ ಹಾಡಲು ಎದ್ದು ನಿಂತಂತೆ  ಕಂಡ  ಚೀನಾ ತಂಡದ  ಪ್ರತಿನಿಧಿ ಮಾತನಾಡುತ್ತ, 'ಪ್ರಭುವೇ, ಈ ಚರ್ಚೆಯ ಎಳೆದಾಟ ಜಾಸ್ತಿಯಾಯಿತು ಎನಿಸುತ್ತದೆ. ಆದರೆ ನಮ್ಮ ದೇಶದ ಮೇಲಿನ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಕೋವಿಡ್ ವೈರಾಣು ಮಾನವ ಸೃಷ್ಟಿಯಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕೋವಿಡ್ ರೋಗಿಗಳಲ್ಲಿ ಕಂಡು ಬಂದಿರುವ ವೈರಾಣುಗಳು ಹಾಗೂ ಪ್ಯಾಂಗೋಲಿನ್ನಿಂದ ಹೊರ ತೆಗೆದ ವೈರಾಣುಗಳಿಗೂ ಬಹಳ ಹತ್ತಿರದ ಹೋಲಿಕೆ ಇದೆ. ಪ್ಯಾಂಗೋಲಿನ್ ಪ್ರಾಣಿ ಕೋವಿಡ್ ವೈರಾಣುವಿನ ವಾಹಕವೆಂಬುದು ವೈಜ್ಞಾನಿಕ ಸತ್ಯ. 

ಕೋವಿಡ್ ವೈರಾಣುವಿನ ಸ್ವಾಭಾವಿಕ ಸೃಷ್ಟಿ, ಮಾನವನ ಊಹೆಗೂ ಮೀರಿದ ಸಂಕೀರ್ಣತೆಯಿಂದ ಕೂಡಿದೆ. ಮಾನವನ ಜೀವಕೋಶಗಳ ಒಳಹೊಕ್ಕು, ಗಟ್ಟಿಯಾಗಿ ಕುಳಿತು, ವೇಗವಾಗಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ಕೋವಿಡ್ ವೈರಾಣುವಿನ ಸಾಮರ್ಥ್ಯ, ಆಧುನಿಕ ವಿಜ್ಞಾನ ಲೋಕವನ್ನೇ ಆಶ್ಚರ್ಯಗೊಳಿಸಿದೆ. ಮುಂಬರುವ ದಿನಗಳಲ್ಲಿ ಕೋವಿಡ್ ವೈರಾಣುವಿಗಿಂತ ಇನ್ನೂ ಮಾರಕವಾದ ಕೊರೋನಾ ವೈರಾಣುಗಳು ನಮ್ಮ ವಿಸ್ಮಯ ಲೋಕದಲ್ಲಿ ಕಂಡು ಬರಬಹುದು.  

ಕೋವಿಡ್ ವೈರಾಣುವಿನ ಸೃಷ್ಟಿಯ ಬಗ್ಗೆ ಇಡೀ ವಿಶ್ವ ಚೀನಾದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರೂ, ಕೋವಿಡ್ ರೋಗದ ಮೇಲಿನ ಹತೋಟಿಯನ್ನು ಮೊದಲು ಸಾಧಿಸಿದ್ದು ಚೀನಾ ದೇಶವೇ ಎಂಬುದನ್ನು ಕಡೆಗಣಿಸುವಂತಿಲ್ಲ. ಕೋವಿಡ್ ರೋಗದ ಯಶಸ್ವಿ ನಿರ್ವಹಣೆಯ ವಿಷಯದಲ್ಲಿ, ಚೀನಾ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು, ಹಗಲಿರುಳೆನ್ನದೆ ಸಂಶೋಧನೆ ನಡೆಸುತ್ತಿರುವ ನಮ್ಮ ವಿಜ್ಞಾನಿಗಳು ಕೋವಿಡ್ ರೋಗ ನಿಯಂತ್ರಣಕ್ಕೆ ಬಹು ಬೇಗ ಲಸಿಕೆಯನ್ನು ಮತ್ತು ಔಷಧಗಳನ್ನು ಕಂಡು ಹಿಡಿಯುತ್ತಾರೆಂಬ ವಿಶ್ವಾಸ ನಮಗಿದೆ. ನಮ್ಮ ವಿಜ್ಞಾನಿಗಳ ಸಂಶೋಧನೆಯ ವಿಚಾರವನ್ನು, ಲಸಿಕೆ ಮತ್ತು ಔಷಧಗಳನ್ನು ವಿಶ್ವದ ಎಲ್ಲಾ ದೇಶಗಳೊಂದಿಗೆ ಹಂಚಿಕೊಳ್ಳುವಲ್ಲಿ ನಮ್ಮಿಂದ ಯಾವುದೇ ವಿಳಂಬವಾಗದು ಎಂಬ ಪ್ರಮಾಣವನ್ನು, ತಮ್ಮ ನ್ಯಾಯಾಲಯದ ಮುಂದೆ ಇಂದು ನಾನು ಮಾಡುತ್ತಿದ್ದೇನೆ.  ವಿಶ್ವವನ್ನು ಕೋವಿಡ್ ರೋಗದಿಂದ ಮುಕ್ತಗೊಳಿಸುವಲ್ಲಿ, ಚೀನಾ ಮಹತ್ತರ ಪಾತ್ರವೊಂದನ್ನು ನಿರ್ವಹಿಸಲಿದೆ. 

ಕೋವಿಡ್ ವೈರಾಣುವನ್ನು ಕುರಿತಾದ, ನಮ್ಮ ಚೀನಾ ದೇಶದ ಮೇಲಿನ ಆರೋಪಗಳೆಲ್ಲವೂ ಆಧಾರರಹಿತವೆಂದು ಪರಿಗಣಿಸಿ, ನಮ್ಮ ದೇಶವನ್ನು ದೋಷಮುಕ್ತವಾಗಿಸಬೇಕೆಂದು ನಾನು ತಮ್ಮಲ್ಲಿ ಬೇಡುತ್ತೇನೆ' ಎಂದು ವಿನಂತಿಸಿಕೊಂಡರು. 

ಚೀನಾದ ಪ್ರತಿನಿಧಿ ತನ್ನ ಅಂತಿಮ ವಾದವನ್ನು ಮಂಡಿಸಿ ಕುಳಿತನಂತರ, ದೇವರ ನ್ಯಾಯಾಲಯವನ್ನು ದಿವ್ಯ ಮೌನ ಆವರಿಸಿತ್ತು. ಕೆಲ ಕಾಲ ನಿಶ್ಯಬ್ದವಾಗಿದ್ದ ಸಭಿಕರಲ್ಲಿ ದೇವರ ನಿರ್ಣಯದ ನಿರೀಕ್ಷೆಯಿತ್ತು. ಎಲ್ಲಾ ಕಣ್ಣುಗಳೂ ದೇವರ ನ್ಯಾಯ ಪೀಠದ ಮೇಲಿದ್ದವು. ದೇವರು ತಮ್ಮ ನ್ಯಾಯದ ಸುತ್ತಿಗೆಯನ್ನು ವೃತ್ತಾಕಾರದ ಹಲಗೆಯ ಮೇಲೆ ಬಡಿದ ತಕ್ಷಣ ಉಂಟಾದ ಭಾರೀ ಸದ್ದಿನಿಂದ ರೋಹಿಣಿ ಎಚ್ಚರಗೊಂಡಳು! ಇಡೀ ಕನಸಿನ ಎಲ್ಲಾ ವೃತ್ತಾಂತಗಳೂ ಅವಳ ಸ್ಮೃತಿ ಪಟಲದ  ಮೇಲೆ ಮತ್ತೊಮ್ಮೆ ಹಾದು  ಹೋದವು. ದೇವರು ನೀಡಬಹುದಾದ ನಿರ್ಣಯವನ್ನು ಕೇಳುವ ತನಕ ಕನಸು ಮುಂದುವರಿಯಲಿಲ್ಲವಲ್ಲಾ ಎಂಬ ವಿಷಾದ ರೋಹಿಣಿಯನ್ನು ಕಾಡಿತ್ತು. 'ದೇವರಿಗೆ ಸತ್ಯ ತಿಳಿದಿರುತ್ತೆ, ಆದರವನು ಕಾದು ನೋಡುತ್ತಾನೆ (God sees the truth, but waits) ಎಂಬ ರಷ್ಯಾದ ತತ್ತ್ವಜ್ಞಾನಿ ಲಿಯೋ ಟಾಲ್ಸ್ಟಾಯ್'ರವರ ವಾಣಿ ಅವಳ ಕಿವಿಗಳಲ್ಲಿ ರಿಂಗಣಿಸುತ್ತಿತ್ತು. 

-೦-೦-೦-೦-೦-೦-೦-   


          

 



No comments:

Post a Comment