೭
ಕೊರೋನಾ ಸೇನಾನಿಗಳು
ರೋಹಿಣಿಗಾದ ಅಂದಿನ ಅಚ್ಚರಿಯು ಖುಷಿ ನೀಡಿತ್ತು. ಆತ್ಮೀಯ ಸ್ನೇಹಿತರಾದರೂ, ಅಪರೂಪದ ಅತಿಥಿಯಾದ ಡಾ. ಕಿರಣರ ಆಗಮನ ರೋಹಿಣಿಯನ್ನು ಚಕಿತಗೊಳಿಸಿತ್ತು. ಸಮಯವಾಗಲೇ ರಾತ್ರಿ ೮ ಘಂಟೆಯಾಗಿತ್ತು. ಆಯಾಸಗೊಂಡಂತೆ ಕಂಡ ಕಿರಣ್ ಮನೆಯ ಹೊರಗಿನ ಕುರ್ಚಿಯ ಮೇಲೆ ಕುಳಿತರು. ಕೊರೋನಾ ಸೋಂಕು ಹರಡಲು ಶುರುವಾದಾಗಿನಿಂದ ಡಾ. ಕಿರಣ್, ಯಾರ ಮನೆಗೆ ಹೋದರೂ, ಮನೆಯ ಹೊರಗೇ ಉಳಿದು ಮಾತನಾಡಿಕೊಂಡು ಹೋಗುವ ನಿಯಮವನ್ನು ಸ್ವಯಂ ವಿಧಿಸಿಕೊಂಡಿದ್ದರು. ಆತಂಕದಿಂದ ಕೂಡಿದ್ದ ಅವರು, ಏನೋ ಹೇಳಲು ಬಂದಂತ್ತಿತ್ತು. ಎಲ್ಲವನ್ನೂ ಗಮಿನಿಸಿದ ರಾಜುರವರೂ ಮನೆಯಿಂದ ಹೊರಗೆ ಬಂದರು.'ಇಂದು ಬೆಳಗ್ಗೆ ದುರ್ಘಟನೆಯೊಂದು ನಡೆಯಿತು. ನಮ್ಮ ಆಶಾ (ASHA - Accredited Social Health Activist) ಕಾರ್ಯಕರ್ತೆಯರ ತಂಡವೊಂದನ್ನು, ಹೆಚ್ಚು ಜನದಟ್ಟಣೆಯುಳ್ಳ ನಮ್ಮ ನಗರದ ಬಡಾವಣೆಯೊಂದಕ್ಕೆ, ಕೋವಿಡ್ ಕುರಿತಾದ ಸಲಹೆಗಳನ್ನು ನೀಡಲು ಕಳುಹಿಸಿದ್ದೆವು. ಆ ಬಡಾವಣೆಯ ಹಲವರು ದೂರದೂರಿನ ಪ್ರವಾಸ ಮುಗಿಸಿ ಹಿಂತಿರುಗಿದ್ದು, ಅವರ ಪ್ರವಾಸದ ವೇಳೆ, ಅವರುಗಳು ಕೋವಿಡ್ ರೋಗ ಪೀಡಿತರ ನಿಕಟ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ನಮಗೆ ಬಂದಿತ್ತು. ಸೋಂಕಿತರ ಪತ್ತೆ ಮತ್ತು ಇನ್ನಿತರರನ್ನು ಎಚ್ಚರಿಸುವ ಕಾರ್ಯ ಕೂಡಲೇ ಆಗಬೇಕಿತ್ತು. ಆ ಬಡಾವಣೆಯ ನಿವಾಸಿಗಳು ಆರಂಭದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಲು ಇಚ್ಛಿಸಲಿಲ್ಲ. ನಂತರ ಅವರುಗಳ ಮಾತಿನ ಬಿಸಿ ಏರಿತ್ತು. ನೋಡ ನೋಡುತ್ತಿದಂತೆ ೧೫-೨೦ ಯುವಕರ ಗುಂಪೊಂದು ಜಮಾಯಿಸಿ ನಮ್ಮ ಕಾರ್ಯಕರ್ತೆಯರನ್ನು ಅಶ್ಲೀಲ ಪದಗಳಿಂದ ಬಯ್ಯಲಾರಂಭಿಸಿತು. ಅವರಲ್ಲಿ ಕೆಲವರು ನಮ್ಮ ವನಿತೆಯರ ಪೆನ್ನು ಮತ್ತು ಡೈರಿಗಳನ್ನು ಕಿತ್ತೆಸದರು. ಕೆಲವು ಕಿಡಿಗೇಡಿಗಳು ನಮ್ಮ ಆಶಾ ಕಾರ್ಯಕರ್ತೆಯರ ಮುಖಗಳ ಮೇಲೆ ಉಗುಳಿದಾಗ, ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಭಯಭೀತರಾದ ನಮ್ಮ ಮಹಿಳೆಯರು, ತಮ್ಮ ಮುಖಗಳನ್ನು ಮುಚ್ಚಿಕೊಂಡು ಅಲ್ಲಿಂದ ಓಡಿ ಬರಬೇಕಾಯಿತು.' ಘಟನೆಯ ವಿವರಗಳನ್ನು ನೀಡಿದ ಡಾ. ಕಿರಣ್ ಜಿಗುಪ್ಸೆಗೊಂಡಂತೆ ಕಂಡಿತ್ತು.
'ನಮ್ಮ ಆಶಾ ವನಿತೆಯೊರೊಂದಿಗೆ ಅವರುಗಳು ಅಷ್ಟು ಕೀಳಾಗಿ ವರ್ತಿಸಿದರೆ? ಅವರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲವೆ?' ಎಂದು ಕೇಳಿದಳು ರೋಹಿಣಿ.
'ಈ ರೀತಿಯ ಘಟನೆಗಳು ನಡೆಯುವುದು ಅಪರೂಪವಾಗಿತ್ತು. ಕೋವಿಡ್ ಮಹಾಮಾರಿ ಹಬ್ಬಿದಾಗಿನಿಂದ, ಕೆಲವರು ಈ ರೀತಿಯ ರೊಚ್ಚಿನ ಪ್ರತಿಕ್ರಿಯೆಯನ್ನು ತೋರಿಸಲಾರಂಭಿಸಿದ್ದಾರೆ. ವೈದ್ಯಕೀಯ ಸಿಬ್ಬಂಧಿಗಳು ಮಾತ್ರವಲ್ಲ, ಪೊಲೀಸರು, ಸ್ವಚ್ಛತಾ ಕರ್ಮಿಗಳು, ಬ್ಯಾಂಕ್ ಕರ್ಮಚಾರಿಗಳು, ಚಾಲಕರು ಮುಂತಾದ ಕೊರೋನಾ ಕಾರ್ಯಕರ್ತರುಗಳು ತಮ್ಮ ಕರ್ತವ್ಯವನ್ನು ನಿಭಾಯಿಸುವುದು ಈಗ ಕಷ್ಟವಾಗಿ ಹೋಗಿದೆ. ನಮ್ಮಗಳ ಕರ್ಮಕ್ಷೇತ್ರ ರಣಭೂಮಿಯಂತಾಗಿ ಹೋಗಿದೆ. ಆದರೂ ನಾವುಗಳು ನಮ್ಮ ಕರ್ತವ್ಯವನ್ನು ನಿರ್ವಹಿಸುವುದು ಅನಿವಾರ್ಯವಾಗಿದೆ. ನಮ್ಮ ವೈದ್ಯರುಗಳು, ದಾದಿಯರು ಮತ್ತು ಕೆಲವು ಆಶಾ ವನಿತೆಯರುಗಳ ತಂಡವೊಂದು ಅದೇ ಬಡಾವಣೆಗೆ ಮತ್ತೆ ಭೇಟಿ ನೀಡಲಿದೆ. ಆ ಬಡಾವಣೆಯಲ್ಲಿ ಕೋವಿಡ್ ಸೋಂಕಿತರುಗಳ ಕುರಿತಾದ ಸಮೀಕ್ಷೆ, ಪತ್ತೆ, ನಿರ್ಬಂಧನ ಮತ್ತು ಚಿಕಿತ್ಸೆಗಳನ್ನು ತುರ್ತಾಗಿ ನಡೆಸಲೇ ಬೇಕಾಗಿದೆ' ಎಂದರು ಡಾ. ಕಿರಣ್.
'ಪೋಲೀಸರ ರಕ್ಷಣೆಯನ್ನು ಏಕೆ ನೀವು ಪಡೆಯಬಾರದು?' ಎಂಬುದು ರಾಜುರವರ ಸಲಹೆಯಾಗಿತ್ತು. 'ಪೊಲೀಸರು ಕೂಡ ತೀವ್ರ ಒತ್ತಡದಲ್ಲಿದ್ದಾರೆ. ಅವರಲ್ಲೂ ಸಿಬ್ಬಂಧಿಯ ಕೊರತೆಯಿದೆ. ಎಲ್ಲಾ ಕಾರ್ಯಕರ್ತರ ತಂಡಗಳಿಗೂ ಪೊಲೀಸರು ರಕ್ಷಣೆ ಕೊಡಲಾರರು' ಎಂದರು ಡಾ. ಕಿರಣ್.
'ಕೋವಿಡ್ ಕುರಿತಾದ ಅಧ್ಯಯನ ಅಧಿಕೃತವಾಗಿ ಮಾಡುತ್ತಿರುವ ಸಂಶೋಧಕಿ ನಾನು. ಹಾಗಾಗಿ ತಮ್ಮ ತಂಡದೊಂದಿಗೆ ನಾಳೆ ನಾನೂ ಬರಬಹುದೆ?' ಎಂದು ಕೇಳಿದಳು ರೋಹಿಣಿ.
'ನೀನು ನಮ್ಮೊಡನೆ ಬರಬಹುದು. ನಮ್ಮೊಂದಿಗೆ ನಾಳೆ ಕೆಲವು ಮಾಧ್ಯಮದ ಪ್ರತಿನಿಧಿಗಳೂ ಬರಲಿದ್ದಾರೆ. ಆದರೆ, ನಮ್ಮಗಳ ಮೇಲೆ ಹಲ್ಲೆ ನಡೆಯಬಹುದು, ಹಿಂಸಾಚಾರ ಜರುಗಬಹುದು' ಎಂದು ರೋಹಿಣಿಯನ್ನು ಎಚ್ಚರಿಸಿದರು ಡಾ. ಕಿರಣ್.
ಮಾರನೆಯ ದಿನ ೮ ಘಂಟೆಗೂ ಮುಂಚೆಯೇ, ಡಾ. ಕಿರಣ್ ಮತ್ತವರ ತಂಡ ಆ ಬಡಾವಣೆಯನ್ನು ತಲುಪಿತ್ತು. ತಂಡದ ವಾಹನವನ್ನು ಬಡಾವಣೆಯ ಪ್ರವೇಶದ ರಸ್ತೆಯಲ್ಲೇ ನಿಲ್ಲಿಸಲಾಗಿತ್ತು. ಬಹಳ ಜನಜಂಗುಳಿಗಳಿಂದ ಕೂಡಿದ್ದ ಆ ಬಡಾವಣೆಯ ರಸ್ತೆಗಳು ಕಿರಿದಾಗಿಯೂ, ಅಂಕುಡೊಂಕಾಗಿಯೂ ಇದ್ದವು. ರಸ್ತೆಗಳ ತುಂಬಾ ಗಲೀಜಿದ್ದು, ದುರ್ವಾಸನೆಯ ನಾತ ಹೊಡೆಯುತ್ತಿತ್ತು. ಅಲ್ಲಲ್ಲಿ ನಾಯಿಗಳು, ಮಕ್ಕಳು ಮಲವಿಸರ್ಜನೆ ಮಾಡುತ್ತಿದ್ದದ್ದು ಕಂಡು ಬರುತಿತ್ತು. ಆದರೂ ಡಾ. ಕಿರಣರ ತಂಡ ಉತ್ಸಾಹದಿಂದ ತನ್ನ ಕೆಲಸವನ್ನು ನಿರ್ವಹಿಸಲು ಮುನ್ನಡೆದಿತ್ತು. ರಸ್ತೆಯಲ್ಲಿ ಓಡಾಡುತ್ತಿದ್ದ ಜನಗಳು ನಿಂತು, ಡಾ. ಕಿರಣರ ತಂಡವನ್ನು ಅನುಮಾನದಿಂದ ನೋಡ ತೊಡಗಿದರು. ಮನೆಗಳಲ್ಲಿದ್ದವರು ಕಿಟಕಿಗಳನ್ನು ತೆರದು ನೋಡುತ್ತಿದ್ದರು. ಅಂತೂ ವೈದ್ಯಕೀಯ ತಂಡ ತನ್ನ ಕಾರ್ಯಕ್ಷೇತ್ರದ ಸ್ಥಾನಕ್ಕೆ ಬಂದು ನಿಂತ್ತಿತ್ತು. ಸುತ್ತುವರೆದಿದ್ದ ಜನರುಗಳನ್ನು ಡಾ. ಕಿರಣ್ ಸಂಭೋದಿಸಲಾರಂಭಿಸುತ್ತಿದ್ದಂತೆಯೇ, ಗುಂಪಿನಲ್ಲಿದ್ದ ಕೆಲವರು 'ಮಾಧ್ಯಮದವರನ್ನೇಕೆ ಕರೆತಂದಿದ್ದೀರ? ಕ್ಯಾಮೆರಾಗಳನ್ನೇಕೆ ತಂದಿದ್ದೀರ? ಅವರುಗಳೆಲ್ಲಾ ಕೂಡಲೇ ಹೊರಟು ಹೋಗಲಿ' ಎಂದು ಕಿರುಚಿದರು. ಡಾ. ಕಿರಣ್ ಸನ್ನೆ ಮಾಡುತ್ತಲೇ ಮಾಧ್ಯಮದ ಮಿತ್ರರೆಲ್ಲ ಹೊರನಡೆದರು.
ತನ್ನ ಸಂಬೋಧನೆಯನ್ನು ಮುಂದುವರಿಸಿದ ಡಾ. ಕಿರಣ್, 'ದೂರದ ಊರಿನಲ್ಲಿ ಈಚೆಗೆ ಜರುಗಿದ ಸಮಾರಂಭವೊಂದಕ್ಕೆ, ತಮ್ಮ ಬಡಾವಣೆಯ ಬಹಳ ಜನಗಳು ಹೋಗಿ ಬಂದಿದ್ದಾರೆ ಎಂದು ತಿಳಿಯಿತು. ಆ ಸಮಾರಂಭದಲ್ಲಿ ವಿದೇಶಿ ಪ್ರತಿನಿಧಿಗಳೂ ಭಾಗವಹಿಸಿದ್ದರೆಂಬ ಮಾಹಿತಿಯಿದೆ. ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದವರಲ್ಲಿ, ಭಾರಿ ಸಂಖ್ಯೆಯಲ್ಲಿನ ವ್ಯಕ್ತಿಗಳಿಗೆ ಕೋವಿಡ್ ಸೋಂಕಿತ್ತು ಎಂದು ಪತ್ತೆಯಾಗಿದೆ. ತಮ್ಮಲ್ಲಿ ಹಲವರುಗಳು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ, ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದಿರಬಹುದು. ಹಾಗಾಗಿ ತಮ್ಮಗಳಿಗೂ ಕೂಡ ಸೋಂಕು ತಗುಲಿರಬಹುದು. ಪ್ರವಾಸದಿಂದ ಹಿಂತಿರುಗಿರುವ ತಮ್ಮ ಬಡಾವಣೆಯವರು ಮತ್ತು ಅವರುಗಳ ನಿಕಟ ಸಂಪರ್ಕದಲ್ಲಿರುವವರನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ಬಂದಿದ್ದೇವೆ. ನಿಮ್ಮ ಬಡಾವಣೆಯಲ್ಲಾಗಲೇ ಕೆಲವು ಕೋವಿಡ್ ರೋಗಿಗಳಿದ್ದಾರೆ. ಸೋಂಕಿತರ ಪತ್ತೆ, ನಿರ್ಬಂಧನೆ ಮತ್ತೆ ಚಿಕಿತ್ಸಾ ಕಾರ್ಯಗಳು ಕೂಡಲೇ ಆಗಬೇಕಾಗಿದೆ' ಎಂದು ತಮ್ಮ ಮಾತನ್ನು ಮುಗಿಸುವಷ್ಟರಲ್ಲೇ, ಆ ಗುಂಪಿನ ನಾಯಕನಂತೆ ಕಾಣುವ ವ್ಯಕ್ತಿಯೊಬ್ಬ, 'ಇಲ್ಲಿ ಬರಲು ನೀವು ನಮ್ಮ ಅನುಮತಿಯನ್ನು ಪಡೆದಿದ್ದೀರ? ನಮಗೆ ಮುಂಚಿತವಾಗಿ ತಿಳಿಸದೇ ಇಲ್ಲಿಗೇಕೆ ಬಂದಿರಿ? ಮಾಧ್ಯಮದವರನ್ನೇಕೆ ಕರೆತಂದಿದ್ದೀರಿ?' ಎಂದು ಕಿರುಚಿದನು. ಅಷ್ಟು ಹೊತ್ತಿಗಾಗಲೇ ಇನ್ನೂ ಹೆಚ್ಚು ಜನಗಳು ಜಮಾಯಿಸಿದ್ದರು. ಇದ್ದಕಿದ್ದಂತೆ ಅಲ್ಲಿನ ಗುಂಪಿನ ಜನರು ಹಿಂಸಾಕಾರ್ಯಕ್ಕೆ ಸಿದ್ಧರಾದರು. ವೈದ್ಯರುಗಳ ಕೈಗಳನ್ನೆಳದು, ಅವರುಗಳ ಅಂಗಿಗಳನ್ನು ಹರಿದರು. ಗುಂಪಿನ ಹಲವರು 'ಇಲ್ಲಿಂದ ಹೊರಡಿ, ಹೊರಡಿ' ಎಂದು ಕಿರುಚಿದರು. ಪೋಲಿ ಸಂಜ್ಞೆಗಳನ್ನು ಮಾಡುತ್ತಾ, ಅಶ್ಲೀಲ ಪದಗಳಿಂದ ಬಯ್ಯುತ್ತ ಮಹಿಳೆಯರತ್ತ ಬಂದ ದುಷ್ಕರ್ಮಿಗಳು ಅವರುಗಳ ಸೀರೆಗಳನ್ನೆಳೆದಾಡಿದರು. ಕಲ್ಲೆಸತದಿಂದ ತಪ್ಪಿಸಿಕೊಳ್ಳಲು ಓಡಲು ಹೊರಟವರಲ್ಲಿ, ಇಬ್ಬರು ಪುರುಷ ಡಾಕ್ಟರ್ಗಳು ಮತ್ತೊಬ್ಬ ಮಹಿಳಾ ದಾದಿಯೊಬ್ಬರು ಕೆಳಗೆ ಬಿದ್ದರು. ಕೆಳಗೆ ಬಿದ್ದವರನ್ನು ಲಾಠಿಯಿಂದ ಥಳಿಸಲಾಯಿತು. ಕೆಲವು ಹಿರಿಯರು ಮಧ್ಯೆ ಪ್ರವೇಶಿಸಿ ಬಿದ್ದವರಿಗೆ ಹೆಚ್ಚಿನ ಹೊಡತಗಳು ಬೀಳದಂತೆ ನೋಡಿಕೊಂಡರು. ತಂಡದ ಎಲ್ಲಾ ಸದಸ್ಯರು ಆತ್ಮರಕ್ಷಣೆಗಾಗಿ ಓಡಿಹೋಗಬೇಕಾಗಿ ಬಂತು.
'ಅಂದಿನ ಅನುಭವ ಭಯಾನಕವಾಗಿತ್ತು' ಎಂದು ರೋಹಿಣಿ ತನ್ನ ಡೈರಿಯಲ್ಲಿ ಬರೆದಳು. 'ತಮ್ಮವರಿಗೆ ಸಹಾಯ ಮಾಡಲು ಬಂದ ವೈದ್ಯಕೀಯ ತಂಡದೊಂದಿಗೆ ಅಷ್ಟು ಕ್ರೂರವಾಗಿ ವರ್ತಿಸಿದರೇಕೆ? ಅವರ ಕ್ರೌರ್ಯಕ್ಕೆ ಕಾರಣ, ಸಿಟ್ಟೋ ಅಥವಾ ದ್ವೇಷವೋ? ಬೇರೆ ವಿಷಯಗಳನ್ನು ಕುರಿತಂತೆ ಸರಕಾರದ ವಿರುದ್ಧ ಅವರುಗಳಿಗಿರಬಹುದಾದ ದ್ವೇಷದಿಂದ, ಅವರುಗಳು ನಮ್ಮ ಕೊರೋನಾ ಸೇನಾನಿಗಳೊಂದಿಗೆ ಈ ರೀತಿಯ ಹಿಂಸಾಚಾರಕ್ಕಿಳಿದರೆ? ನಮ್ಮ ಕೊರೋನಾ ಕಾರ್ಯಕರ್ತರುಗಳ ಜೀವಕ್ಕೆ ಅಪಾಯವಿಲ್ಲವೆ? ಅವರುಗಳಿಗೇಕೆ ಪೊಲೀಸ್ ರಕ್ಷಣೆ ಸಿಗುತ್ತಿಲ್ಲ? ಇಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಮುಂದಾಗುತ್ತಿರುವ ನಮ್ಮ ಕೊರೋನಾ ಸೇನಾನಿಗಳ ಹಿಂದಿರುವ ಪ್ರೇರಕ ಶಕ್ತಿ ಯಾವುದು?' ಹೀಗೆ ಸಾಗಿತ್ತು ರೋಹಿಣಿಯ ಯೋಚನಾ ಲಹರಿ.
ಘಟನೆ ನಡೆದ ಎರಡು ದಿನಗಳನಂತರ ಮತ್ತೆ ಸೇರಿದ ವೈದ್ಯಕೀಯ ತಂಡದಲ್ಲಿ, ಅಂದು ಗಾಯಗೊಂಡ ಡಾ. ಸಯ್ಯದ್, ಡಾ. ಗೋಯಲ್ ಮತ್ತು ಮಹಿಳಾ ದಾದಿ ಸುಪ್ರಿಯಾ ಹೆಚ್ಚು ಉತ್ಸಾಹಿಗಳಂತೆ ಕಂಡರು. 'ಆ ದಿನದ ಅನುಭವ ಆತಂಕಕಾರಿಯಾಗಿತ್ತು. ಆ ರೀತಿಯ ಹಿಂಸಾಚಾರ ನಡೆಯಬಹುದೆಂಬ ಅನುಮಾನ ನಮಗಿರಲಿಲ್ಲ. ಮುಂಚಿನ ಹಲವಾರು ಆರೋಗ್ಯ ಕಾರ್ಯಕ್ರಮಗಳಲ್ಲಿ ಅಲ್ಲಿನ ಜನಗಳು ನಮ್ಮೊಂದಿಗೆ ಸಹಕರಿಸಿದ್ದರು. ಆ ದಿನ ಅವರುಗಳಿಗೇನಾಗಿತ್ತೋ, ತಿಳಿಯದು. ಯಾವುದೇ ರೀತಿಯ ಹಿಂಸಾಚಾರಕ್ಕೆ ಹೆದರುವವರು ನಾವಲ್ಲ. ನಮ್ಮ ಕಾರ್ಯಗಳನ್ನು ಇಂದು ಪೂರ್ತಿ ಮಾಡೇ ಹಿಂತಿರುಗುತ್ತೇವೆ,' ಎಂದ ಡಾ. ಸಯ್ಯದ್ರವರ ಮಾತಿನಲ್ಲಿ ದೃಢ ವಿಶ್ವಾಸವಿತ್ತು.
ಮುನ್ನೆಚ್ಚರಿಕೆಯ ಕ್ರಮವಾಗಿ ಆ ದಿನ ಡಾ. ಕಿರಣರವರ ತಂಡಕ್ಕೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿತ್ತು. ಆದರೆ ಪೊಲೀಸರು ತಮ್ಮ ವಾಹನಗಳೊಂದಿಗೆ ಸ್ವಲ್ಪ ದೂರ ಉಳಿದಿದ್ದರು. ಡಾ. ಸಯ್ಯದ್, ಡಾ. ಗೋಯಲ್ ಮತ್ತು ದಾದಿ ಸುಪ್ರಿಯಾರವರು ತಮ್ಮ ಕೈಯಲ್ಲಿ ಗುಲಾಬಿ ಹೂಗಳನ್ನು ಹಿಡಿದಿದ್ದರು. 'ಎಲ್ಲಿ ಗೂಂಡಾಗಿರಿ ನಡೆಯಬಹುದೋ, ಅಲ್ಲಿ "ಗಾಂಧೀಗಿರಿ" ಪರಿಸ್ಥಿತಿಯನ್ನು ನಿಭಾಯಿಸುವುದೆಂಬ ವಿಶ್ವಾಸ ನಮಗಿದೆ. ಯಾರು ನಿಮ್ಮನ್ನು ದ್ವೇಷಿಸುತ್ತಾರೋ, ಅವರುಗಳನ್ನು ಪ್ರೀತಿಸು ಎಂಬುದೇ "ಗಾಂಧೀಗಿರಿ." ಅದಕ್ಕಾಗಿಯೇ ಈ ಗುಲಾಬಿ ಹೂಗಳು' ಎಂದ ದಾದಿ ಸುಪ್ರಿಯರ ಮುಖದಲ್ಲಿ ಸ್ನೇಹಭರಿತ ಮುಗುಳ್ನಗೆಯೊಂದಿತ್ತು.
ವೈದ್ಯರ ತಂಡ ಮತ್ತೆ ಬಂದಿದ್ದನ್ನು ನೋಡಿ ಅಲ್ಲಿನ ಜನತೆಗೆ ಆಶ್ಚರ್ಯವಾಯಿತು. ಅಂದು ಗಾಯಗೊಂಡಿದ್ದ ಡಾಕ್ಟರ್ಗಳು ಮತ್ತೆ ದಾದಿಯರು, ಇಂದು ಕೈಗಳಲ್ಲಿ ಗುಲಾಬಿಯನ್ನು ಹಿಡಿದು ಬಂದದ್ದನ್ನು ನೋಡಿ, ಅಲ್ಲಿನ ಹಿರಿಯರು ಮತ್ತು ಮಹಿಳೆಯರು ಸಂತೋಷಗೊಂಡಂತೆ ಕಂಡರು. 'ಗಾಂಧೀಗಿರಿ ಕೆಲಸ ಮಾಡಲು ಶುರು ಮಾಡಿದೆ' ಎಂದು ಆಗ ರೋಹಿಣಿಗೆ ಖಾತರಿಯಾಗಿತ್ತು. ಡಾ. ಕಿರಣರ ತಂಡ ತನ್ನ ಕಾರ್ಯವನ್ನು ಆರಂಭಿಸಿತ್ತು. ಸೋಂಕಿತರೊಂದಿಗಿನ ಸಂಪರ್ಕದಲ್ಲಿರುವವರೊಂದಿಗೆ ಮಾತನಾಡಲಾಯಿತು. ನೋಡು ನೋಡುತ್ತಿರುವಷ್ಟರಲ್ಲೇ, ಸೋಂಕಿತರ ಪರೀಕ್ಷೆ, ಪತ್ತೆ, ನಿರ್ಬಂಧನೆ ಮತ್ತು ಚಿಕಿತ್ಸಾ ಕಾರ್ಯಗಳು ಚುರುಕುಗೊಂಡವು. ಆಗಾಗ ಸಾಬೂನಿನಿಂದ ಕೈ ತೊಳೆಯುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಮುಂತಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಅಲ್ಲಿನ ಜನಗಳಿಗೆ ಆಶಾ ಕಾರ್ಯಕರ್ತೆಯರು ವಿವರಿಸಿದರು. ನೆರೆದವರಿಗೆಲ್ಲಾ ಮಾಸ್ಕ್ಗಳನ್ನೂ ವಿತರಿಸಲಾಯಿತು.
ತನ್ನ ಕಾರ್ಯವನ್ನು ಮುಗಿಸಿ ಸಂತೃಪ್ತವಾದ ವೈದ್ಯಕೀಯ ತಂಡ ಹಿಂತಿರುಗಲಾರಂಭಿಸಿತು. ಅಲ್ಲಿನ ಜನತೆಯ ನಡುವಿನ ಹಿರಿಯರೊಬ್ಬರು ಡಾ. ಕಿರಣರ ಕ್ಷಮೆಯನ್ನು ಕೋರುತ್ತಾ, 'ನಕಲಿಯಾಗಿರಬಹುದಾದ ಕೆಲವು ವಿಡಿಯೋಗಳಿಂದ ನಮ್ಮ ಜನರ ಮನಸ್ಸು ಕೆಟ್ಟಿದೆ. ಕೆಲವು ದುಷ್ಟರು ವೈದ್ಯಕೀಯ ತಂಡದ ಸೋಗಿನಲ್ಲಿ ಬಂದು, ಕೋವಿಡ್ ರೋಗವನ್ನು ಹರಡುವ ಚುಚ್ಚುಮದ್ದನ್ನು ನಮ್ಮೆಲ್ಲರಿಗೂ ಚುಚ್ಚುವ ಸಂಚು ನಡೆಸಿದ್ದಾರೆಂಬ ವದಂತಿಗಳು ಇಲ್ಲಿ ದಟ್ಟವಾಗಿ ಹಬ್ಬಿದೆ. ತಾವುಗಳು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೀರಿ. ನಮ್ಮ ಜನಗಳಿಂದ ತಮಗಾದ ತೊಂದರೆಗೆ ನಾನು ಕ್ಷಮೆ ಬೇಡುತ್ತೇನೆ. ಅವರುಗಳನ್ನು ಕ್ಷಮಿಸಿ. ತಮ್ಮೊಂದಿಗೆ ಮುಂದಿನ ದಿನಗಳಲ್ಲಿ ನಾವುಗಳು ಸಹಕರಿಸುತ್ತೇವೆ' ಎಂದರು.
ಸಂತುಷ್ಟಗೊಂಡಂತೆ ಕಂಡ ರೋಹಿಣಿ ತನ್ನ ಡೈರಿಯಲ್ಲಿ ಹೀಗೆ ಬರೆದಳು. 'ಅವಿರತ ಯತ್ನ, ತಾಳ್ಮೆ ಮತ್ತು ಜನತೆಯ ಮೇಲಿನ ವಿಶ್ವಾಸಗಳಿಂದ ಯಾವ ಕಾರ್ಯವನ್ನಾಗಲೀ, ಸಾಧಿಸಬಹುದು.'
***
ಕೊರೋನಾ ಸೇನಾನಿಗಳ ತಂಡಗಳ ಮೇಲಿನ ದಾಳಿ, ಹಿಂಸಾಚಾರದ ವರದಿಗಳು ಬೇರೆ ಬೇರೆ ನಗರಗಳಿಂದಲೂ ಬರುತ್ತಿದ್ದವು. ದೂರದ ಊರೊಂದರಲ್ಲಿ ವೈದ್ಯರ ತಂಡವೊಂದು ಸೋಂಕಿತರೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕದಲ್ಲಿದ್ದ ಹಲವರನ್ನು ಪತ್ತೆ ಹಚ್ಚಿ, ಅದೇ ಊರಿನ ಹೊರ ವಲಯದ ಶಾಲೆಯೊಂದರಲ್ಲಿ ನಿರ್ಬಂಧನೆ(quarantine)ಗೊಳಪಡಿಸಿತ್ತು. ಆದರೆ ನಿರ್ಬಂಧನೆಗೊಳಪಟ್ಟ ಆ ಜನಗಳು ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದರು. ಬೆಳಗಿನ ತಿಂಡಿಗಾಗಿ ಉಪ್ಪಿಟನ್ನು ಕೊಟ್ಟಾಗ, ತಿಂಡಿಯ ತಟ್ಟೆಗಳನ್ನು ರೊಯ್ಯನೆ ಎಸೆದ ಅವರುಗಳು, ಮಸಾಲೆ ದೋಸೆ ಬೇಕೆಂದು ಹಠ ಹಿಡಿದಿದ್ದರು. ಅವರಲ್ಲಿ ಕೆಲವರು ಸಿಗರೇಟುಗಳು ಮತ್ತು ಮದ್ಯದ ಬಾಟಲಿಗಳು ಬೇಕೆಂದು ದಾಂಧಲೆ ನಡೆಸಿದ್ದರು. ಕೆಲ ಯುವಕರು ಶಾಲಾ ಕೊಠಡಿಗಳಲ್ಲೇ ಮೂತ್ರ ಮತ್ತು ಮಲವಿಸರ್ಜನೆ ಮಾಡಹತ್ತಿದ್ದರು. ಅಂತಹ ಗಲೀಜುಗಳನ್ನು ಸ್ವಚ್ಛಗೊಳಿಸಲು ಕೆಲಸಗಾರರು ಹೆಣಗಾಡಬೇಕಾಯಿತು. ಮತ್ತೆ ಕೆಲವು ಯುವಕರು ಮಹಿಳಾ ಪೋಲೀಸರ ಮುಂದೆ ನಗ್ನರಾಗಿ ಓಡಾಡ ಹತ್ತಿದ್ದರು. ಅವರುಗಳನ್ನು ನಿಯಂತ್ರಿಸುವ ಹೊತ್ತಿಗೆ ಪೊಲೀಸರು ಹೈರಾಣಾಗಿ ಹೋಗಿದ್ದರು. ಹೀಗೆ ವರ್ತಿಸಿದ ಕೆಲವರ ಮೇಲೆ ದೂರು ದಾಖಲಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ.
'ತಮ್ಮ ಜೀವಗಳನ್ನೇ ಒತ್ತೆ ಇಟ್ಟು ಕಾರ್ಯ ನಿರ್ವಹಿಸುತ್ತಿರುವ ಕೊರೋನಾ ಸೇನಾನಿಗಳ ಸೇವೆ, ನಮ್ಮ ಪರಾಕ್ರಮಿ ಸೈನಿಕರ ಸೇವೆಯಷ್ಟೇ ಕಷ್ಟಕರವಾದದ್ದು. ಕೊರೋನಾ ಸೇನಾನಿಗಳನ್ನು ಜನತೆಯನ್ನು ಕಾಯುವ ದೇವರೆಂದೇ ಕರೆಯಬಹುದು. ಆದರೆ ಅವರುಗಳ ಕಾರ್ಯಕ್ಕೆ ವಿಘ್ನವೊಡ್ಡಿ, ಅವರುಗಳನ್ನು ಅವಮಾನಿಸುತ್ತಿರುವದು ದುರದೃಷ್ಟಕರ. ಅವರುಗಳ ನಿಸ್ವಾರ್ಥ ಸೇವೆಗೆ ನನ್ನದೊಂದು ದೊಡ್ಡ ಸಲಾಮ್.' ಹೀಗೆ ಹೇಳುತ್ತಾ ರೋಹಿಣಿ ತನ್ನ ಸ್ನೇಹಿತ ಹಾಗು ಕೊರೋನಾ ಸೇನಾನಿ ಡಾ.ಕಿರಣ್ಗೆ 'ಸಲಾಂ' ಹೊಡೆದ್ದಿದ್ದಳು.
ಈ ಮಧ್ಯೆ ಸರಕಾರಗಳು ಕೊರೋನಾ ಸೇನಾನಿಗಳ ಸಂಕಷ್ಟಗಳಿಗೆ ಮರುಗಿ, ಅವರುಗಳ ಬೆಂಬಲಕ್ಕಾಗಿ ಹಲವು ಕ್ರಮಗಳನ್ನು ಕೈಕೊಂಡಿದ್ದವು. ಅವರುಗಳಿಗೆ ಕರ್ತವ್ಯ ನಿರ್ವಹಣಾ ಸಮಯದಲ್ಲಿ ನಿರಂತರ ಪೊಲೀಸ್ ರಕ್ಷಣೆಯ ಏರ್ಪಾಡನ್ನು ಮಾಡಲಾಯಿತು. ಕೊರೋನಾ ಸೇನಾನಿಗಳಿಗೆ ತೊಂದರೆಯನ್ನುಂಟು ಮಾಡಿದ ಹಲವಾರು ದುಷ್ಕರ್ಮಿಗಳ ವಿಚಾರಣೆ ನಡೆಸಿ, ಶಿಕ್ಷೆಗೊಳಪಡಿಸಲಾಗಿತ್ತು. ಎಲ್ಲಾ ಕೊರೋನಾ ಸೇನಾನಿಗಳಿಗೆ ೫೦ ಲಕ್ಷ ರೂಪಾಯಿಗಳ ಜೀವವಿಮೆಯ ಭದ್ರತೆಯನ್ನು ನೀಡಲಾಯಿತು. ಆದರೂ ಅವರುಗಳ ಕಾರ್ಯ ನಿರ್ವಹಣೆಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಾ ಸಾಗಿತ್ತಿದ್ದದು ಮಾತ್ರ ಸುಳ್ಳಾಗಿರಲಿಲ್ಲ.
***
ಯುವ ವೈದ್ಯರಾದ ಡಾ.ಕಿರಣರವರು ಅವರ ನೆರೆಹೊರೆಯವರ 'ಯುವ ಕಣ್ಮಣಿ'ಯಾಗಿದ್ದರು. ಅನುರೂಪ ವರನಾದ ಅವರ ಮೇಲೆ ಎಲ್ಲರ ಕಣ್ಣುಗಳು ಸದಾ ನೆಟ್ಟಿರುತ್ತಿದ್ದವು. ಕೆಲವು ತಿಂಗಳುಗಳ ಹಿಂದೆ ನಡೆದ ಘಟನೆಯೊಂದರ ನೆನಪನ್ನು ಡಾ.ಕಿರಣರು ಇನ್ನೂ ಮರೆತಿರಲಿಲ್ಲ. ತನ್ನ ವೃದ್ಧ ತಾಯಿಯೊಂದಿಗೆ ಡಾ. ಕಿರಣ್ ವಾಸವಿದ್ದ ಮನೆಯ ಮಾಲೀಕರ ಹೆಸರು ರವಿ ಶ್ರೀವಾಸ್ತವ ಎಂದು. ಒಂದು ದಿನ ರವಿಯವರು ಡಾ. ಕಿರಣರನ್ನು ತಮ್ಮ ಮನೆಗೆ ರಾತ್ರಿ ಭೋಜನಕ್ಕಾಗಿ ಆಮಂತ್ರಿಸಿದ್ದರು. 'ನಿಮ್ಮ ತಾಯಿಯವರನ್ನೂ ಜೊತೆಗೆ ಕರೆ ತನ್ನಿ' ಎಂಬುದು ರವಿಯವರ ವಿಶೇಷ ಬಿನ್ನಹವಾಗಿತ್ತು.
ತಮ್ಮ ತಾಯಿಯೊಂದಿಗೆ ಡಾ. ಕಿರಣ್ ಆಗಮಿಸುತ್ತಲೇ, 'ಸ್ವಾಗತ, ಸುಸ್ವಾಗತ ಡಾ. ಕಿರಣರವರೇ; ಮಾತಾಜಿಯವರಿಗೆ ನನ್ನ ವಿಶೇಷ ನಮಸ್ಕಾರಗಳು' ಎನ್ನುತ್ತಾ ಮಾತಾಜಿಯವರ ಚರಣಗಳನ್ನು ಸ್ಪರ್ಶಿಸಿದ್ದರು ರವಿ. ತಾಯಿ ಹಾಗೂ ಮಗನ ಜೋಡಿಯನ್ನು ತಮ್ಮ ಐಷಾರಾಮಿ ಬಂಗಲೆಯ ಕೇಂದ್ರ ಕೊಠಡಿಗೆ, ವಿಶೇಷವಾಗಿ ಸ್ವಾಗತಿಸಿ ಕರೆದೊಯ್ದವರು ರವಿಯವರ ಪತ್ನಿ ಮಂಜುಳಾರವರು. ರವಿ ಸನ್ನೆ ಮಾಡುತ್ತಲೇ, ಸ್ವಾಗತ ಪಾನೀಯಗಳನ್ನು ಹೊತ್ತು ತಂದವಳು ಅವರ ಮಗಳು ಪಿಂಕಿ. ೨೧ರ ಪ್ರಾಯದ ಪಿಂಕಿ ತನ್ನ ಪದವಿ ಕೋರ್ಸನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಯುವ ವೈದ್ಯ ಡಾ.ಕಿರಣರನ್ನು ಸ್ವಾಗತಿಸಲು, 'ಜಾಣರ ಜಾಣೆ' ಪಿಂಕಿ ತುದಿಗಾಲಲ್ಲಿ ನಿಂತ್ತಿದ್ದಳು. 'ಹಲೋ ಡಾ.ಕಿರಣ್, ನೀವು ನಮ್ಮ ಮನೆಗೆ ಬಂದದ್ದು ಬಹಳ ಬಹಳ ಸಂತೋಷದ ವಿಷಯ. ತಮ್ಮ ಮಾರ್ಗದರ್ಶನದೊಂದಿಗೆ ನಾನು ಬರೆದ, ನನ್ನ ಅಂತಿಮ ವರ್ಷದ ಸಾಮಾಜಿಕ ಅಧ್ಯಯನದ ಪ್ರಬಂಧ (dissertation)ಕ್ಕೆ ಪ್ರಥಮ ಸ್ಥಾನ ದೊರೆತಿದೆ! ಮನಸ್ಸಿನಲ್ಲೇ ತಮಗೆ ಅದೆಷ್ಟು ಬಾರಿ "ಥ್ಯಾಂಕ್ಯೂ" ಎಂದು ಹೇಳಿದ್ದೇನೋ ನನಗೇ ತಿಳಿಯದು' ಎಂದು ಕಿರಣರ ಪಕ್ಕದಲ್ಲೇ ಕುಳಿತಳು ಪಿಂಕಿ. 'ಪಿಂಕಿ ನೀನು ಯೋಚಿಸಬೇಕಿಲ್ಲ, ನಿನ್ನ ಡಿಗ್ರಿ ಮುಗಿದ ದಿನದಿಂದಲೇ, ನಿನ್ನ ಕೆಲಸವನ್ನು ಕಿರಣರೊಂದಿಗೇ ಮುಂದುವರೆಸಲು ಅವಕಾಶ ಕಲ್ಪಿಸುವಂತೆ ಕಿರಣರನ್ನು ನಾನಾಗಲೇ ಕೋರಿಕೊಂಡಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನೀನು ಕಿರಣರೊಂದಿಗೆ ನಿನ್ನ ಅಧ್ಯಯನವನ್ನು ನಡೆಸುವೆ' ಎಂದು ಹೇಳುವಾಗ ತಂದೆ ರವಿಯವರು ಉಬ್ಬಿಹೋದಂತೆ ಕಂಡಿದ್ದರು. ರವಿಯವರ ಪತ್ನಿ ಮಂಜುಳಾರವರು ಕೂಡ ಜಾಣತನದ ಮಾತನಾಡುವುದರಲ್ಲಿ ಕಮ್ಮಿಯೇನಿರಲಿಲ್ಲ. 'ಮಾತಾಜಿ, ಡಾ. ರವಿಯಂತಹ ಸುಪುತ್ರನನ್ನು ಹಡೆದ ತಾವು ಅದೃಷ್ಟಶಾಲಿಗಳು. ಕೋಮಲೆಯರಾದ ಹೆಣ್ಣುಮಕ್ಕಳನ್ನು ಪಡೆದ ಪೋಷಕರು, ತಮ್ಮ ಹೆಣ್ಣುಮಕ್ಕಳನ್ನು ನಿಮ್ಮ ಮಗನಿಗೆ ನೀಡಲು ಹಾತೊರೆಯುತ್ತಿರಬಹುದು. ಅಂತಹವರುಗಳ ಪೈಕಿ ನಾವೂ ಇದ್ದೇವೆಂಬುದನ್ನು ಮರೆಯಬೇಡಿ' ಎಂದು ಹೇಳಿದ ಮಂಜುಳಾರವರು, ಡಾ.ಕಿರಣರತ್ತವೂ ಕಣ್ಣು ಹಾಯಿಸುವುದನ್ನು ಮರೆತಿರಲಿಲ್ಲ. ಹಲವು ವಿಭಿನ್ನ ಸಿಹಿತಿಂಡಿಗಳೊಂದಿಗಿನ ಅಂದಿನ ಭೋಜನ ರಸಭರಿತವಾಗಿದ್ದು, ರವಿಯವರು ತಮ್ಮಉಪಚಾರದೊಂದಿಗೆ ಸ್ವರ್ಗವನ್ನೇ ಧರೆಗಿಳಿಸುವ ಪ್ರಯತ್ನ ನಡೆಸಿದ್ದರೆಂಬುದು ಸುಳ್ಳಾಗಿರಲಿಲ್ಲ.
ಕೋವಿಡ್ ರೋಗದ ಹಾವಳಿ ಶುರುವಾದಾಗಿನಿಂದ, ತನ್ನ ನೆರೆಹೊರೆಯವರು ತನ್ನನ್ನು ನೋಡುವ ರೀತಿಯಲ್ಲಿ ಭಾರಿ ಬದಲಾವಣೆಯನ್ನು ಕಂಡಿದ್ದರು ಕಿರಣ್. ಅವರೆಲ್ಲರಿಗೂ ಡಾ. ಕಿರಣ್, ಕೋವಿಡ್ ರೋಗಿಗಳ ಚಿಕಿತ್ಸೆಯ ಕಾರ್ಯಕ್ಕಾಗಿ ನೇಮಕಗೊಂಡಿರುವುದು ತಿಳಿದಿತ್ತು. 'ಕೋವಿಡ್ನ ಸೋಂಕು ವೈದ್ಯರುಗಳಿಗೆ ತಗುಲುವ ಸಾಧ್ಯತೆ ತುಂಬಾ ಹೆಚ್ಚು. ವೈದ್ಯರುಗಳಿಂದ ನಮ್ಮಗಳಿಗೂ ಸೋಂಕು ಹರಡುವ ಸಾಧ್ಯತೆಯು ಮತ್ತೂ ಹೆಚ್ಚು' ಎಂಬ ಪಿಸುಮಾತುಗಳು ಕಿರಣರವರ ಕಿವಿಗೂ ಮತ್ತೆ ಮತ್ತೆ ಬೀಳುತ್ತಿತ್ತು. ನೆರೆಹೊರೆಯ ಸ್ನೇಹಿತರು ಕಿರಣರ ಜೊತೆ ಮಾತನಾಡುವುದನ್ನು ಬಿಟ್ಟು ಎಷ್ಟೋ ದಿನಗಳಾಗಿ ಹೋಗಿತ್ತು.
ಒಂದು ದಿನ ಡಾ. ಕಿರಣ್ ತನ್ನ ಮನೆಯಿಂದ ಆಸ್ಪತ್ರೆ ಕಡೆಗೆ ಹೊರಟಿದ್ದಾಗ, ಮಾಸ್ಕ್ ಧರಿಸಿದ್ದ ರವಿ, ಕಿರಣರನ್ನು ಕರೆದು 'ತಾವು ಇನ್ನೆರಡು ವಾರಗಳಲ್ಲಿ ನನ್ನ ಮನೆಯನ್ನು ಖಾಲಿ ಮಾಡಿ. ನಮ್ಮ ಮನೆಯವರ ಉಪಯೋಗಕ್ಕೇ ಆ ಮನೆ ಬೇಕು. ತಾವು ಕೂಡಲೇ ಮನೆಯನ್ನು ಖಾಲಿ ಮಾಡಿದರೆ, ತಾವು ನೀಡಿರುವ ಮುಂಗಡ ಬಾಡಿಗೆಯನ್ನು ಅದೇ ಕ್ಷಣ ಹಿಂತಿರುಗಿಸುವೆ. ನನ್ನ ಮನೆಯನ್ನು ಖಾಲಿ ಮಾಡುವ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿ' ಎಂದು ಗಡುಸಾದ ಧ್ವನಿಯಲ್ಲೇ ಹೇಳಿದ್ದರು. ಮನೆ ಮಾಲೀಕರಾದ ರವಿಯ ಈ ಗಡುಸಿನ ಮಾತುಗಳನ್ನು, ಬೇರೆ ಬಾಡಿಗೆದಾರರು ತಮ್ಮ ಮನೆಯ ಕಿಟಕಿಗಳ ಹಿಂದೇ ನಿಂತು ಕೇಳಿಸಿಕೊಳ್ಳುತ್ತಿದ್ದದ್ದು ಕಿರಣರ ಗಮನಕ್ಕೆ ಬಾರದಿರಲಿಲ್ಲ. ಅವರುಗಳ್ಯಾರೂ ಮಧ್ಯ ಪ್ರವೇಶಿಸದೆ ತಟಸ್ಥರಾಗಿ ಉಳಿದದ್ದು, ಕಿರಣರ ನೀರಿಕ್ಷೆಗೆ ಹೊರತಾಗೇನೂ ಇರಲಿಲ್ಲ.
ತಮ್ಮ ಆಸ್ಪತ್ರೆಯನ್ನು ತಲುಪಿದ ತಕ್ಷಣ ಡಾ. ಕಿರಣ್, ತಮ್ಮ ಮನೆಯ ಮಾಲೀಕರು ತಮಗೆ ನೀಡಿದ 'ಕಟ್ಟಪ್ಪಣೆ'ಯ ವಿಷಯವನ್ನು ತನ್ನ ಸಹೋದ್ಯೋಗಿಗಳಿಗೆಲ್ಲಾ ಹೇಳಿದ್ದರು. ಕಿರಣರ ಸಹೋದ್ಯೋಗಿಗಳು ಅದೇ ರೀತಿಯ ಅನುಭವಗಳನ್ನು ಅಂದು ಹೇಳಿಕೊಂಡಿದ್ದರು. ಸ್ಟಾಫ್ ನರ್ಸೊಬ್ಬರು ಮಾತನಾಡುತ್ತಾ, 'ಕೋವಿಡ್ ಕರ್ತ್ಯವದ ಮೇಲೆ ಬೇರೆ ಊರಿಗೆ ತೆರಳಿದ್ದ ಮಹಿಳಾ ನರ್ಸೊಬ್ಬರ ಮನೆಯ ಬೀಗವನ್ನು, ಅವರ ಮನೆಯ ಮಾಲೀಕ ಮುರಿದು ಒಳ ಪ್ರವೇಶಿಸಿ, ಮನೆಯೊಳಗಿದ್ದ ಅವರ ಸಾಮಾನುಗಳನ್ನೆಲ್ಲ ಹೊರಗಿಟ್ಟು, ಬೇರೊಂದು ಬೀಗವನ್ನು ಆ ಮನೆಗೆ ಜಡಿದಿದ್ದ ಪ್ರಕರಣವನ್ನು ಮೊನ್ನೆ ನಾನೊಂದು ಪತ್ರಿಕೆಯಲ್ಲಿ ಓದಿದ್ದೆ. ಆ ಬಡಪಾಯಿ ನರ್ಸ್ರವರು ಪೊಲೀಸ್ ದೂರನ್ನು ದಾಖಲಿಸಿದ ಮೇಲೂ, ಅವರಿಗ್ಯಾವ ಪರಿಹಾರವೂ ಇನ್ನೂ ದೊರೆತಿಲ್ಲವೆಂದು ಕೇಳ್ಪಟ್ಟೆ' ಎಂದರು.
'ಇದ್ದಕಿದ್ದಂತೆ ನಾವುಗಳೆಲ್ಲ ಅಸ್ಪೃಶ್ಯರಾಗಿ ಹೋಗಿದ್ದೇವೆ' ಎಂದು ಉದ್ಗರಿಸಿದವರು ಡಾ. ಕಿರಣ್.
ಈ ಮಧ್ಯೆ ಆತಂಕಕಾರಿ ಸುದ್ದಿಯೊಂದು ಡಾ. ಕಿರಣರನ್ನು ತಲುಪಿತ್ತು. ಅವರ ವಾರ್ಡಿನಲ್ಲಿದ್ದ ಕೋವಿಡ್ ರೋಗಿಯೊಬ್ಬ ತಪ್ಪಿಸಿಕೊಂಡು ಓಡಿ ಹೋಗಿದ್ದ. ವೈದ್ಯರುಗಳ ತಂಡವೊಂದರ ಮೇಲೆ ಮಾರಕ ದಾಳಿಯನ್ನು ಮಾಡಿದ್ದ ಆರೋಪ, ಓಡಿ ಹೋಗಿದ್ದ ಆ ರೋಗಿಯ ಮೇಲಿದ್ದ ವಿಷಯ ಕಿರಣರ ಆತಂಕವನ್ನು ಇನ್ನೂ ಹೆಚ್ಚಿಸಿತ್ತು. ಪ್ರಕರಣವನ್ನು ಕುರಿತಾದ ದೂರನ್ನು ಪೊಲೀಸರಿಗೆ ತಲುಪಿಸುವ ಜವಾಬ್ದಾರಿಯೂ ಕಿರಣರದ್ದೇ ಆಗಿತ್ತು. ತಮ್ಮ ಕರ್ತ್ಯವಗಳ ಜೊತೆ ಪೊಲೀಸರಂತೆ ರೋಗಿಗಳನ್ನು, ಅಪರಾಧಿಗಳನ್ನೂ ಕಾಯುವ ಹೊಣೆಯೂ ಈಗ ವೈದ್ಯರುಗಳದ್ದಾಗಿ ಹೋಗಿತ್ತು.
***
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಿರುವ ಪೊಲೀಸರ ಮೇಲಿನ ಒತ್ತಡವೂ ದಿನದಿಂದ ದಿನಕ್ಕೆ ಹದಗೆಡುತ್ತಾ ಸಾಗಿತ್ತು. ಲಾಕ್ಡೌನ್ ಉಲ್ಲಂಘಿಸಿದವರ ಬೆನ್ನಟ್ಟುವುದು, ವೈದ್ಯಕೀಯ ತಂಡಗಳಿಗೆ ರಕ್ಷಣೆಯನ್ನು ಒದಗಿಸುವುದು, ನಿರ್ಬಂಧನೆಗಳೊಪಟ್ಟವರನ್ನು ನಿಯಂತ್ರಿಸುವುದು, ಹೆದ್ದಾರಿ ಹಾಗೂ ರೈಲು ಹಳಿಗಳನ್ನು ಹಿಡಿದು ಕಾಲ್ನಡುಗೆಯಲ್ಲಿ ಸಾಗುವ ವಲಸಿಗರನ್ನು ತಡೆಯುವುದು, ಪೂಜಾ ಮಂದಿರಗಳ ಮೇಲೊಂದು ಕಣ್ಣಿಟ್ಟಿರುವುದು, ಮೇಲಧಿಕಾರಿಗಳ ಆಜ್ಞೆಯನ್ನು ಪಾಲಿಸುವುದು ಮುಂತಾದ ಎಲ್ಲಾ ಕಾರ್ಯಗಳ ಒತ್ತಡ ಪೊಲೀಸರನ್ನು ಸತತವಾಗಿ ಕಾಡಿತ್ತು. ಬಿಡುವಿಲ್ಲದ ಕೆಲಸದ ಭಾರ ಅವರುಗಳ ಮನೋಬಲವನ್ನು ದುರ್ಬಲಗೊಳಿಸಿತ್ತು.
೨೭ರ ಯುವತಿ ತಾಮರೈ ಸೆಲ್ವಿ ದಕ್ಷ ಪೊಲೀಸ್ ಅಧಿಕಾರಿಣಿಯೆಂದು ಹೆಸರು ಗಳಿಸಿದ್ದವರು. ಅವರು ಉತ್ತಮ ವಾಗ್ಮಿಯು ಹಾಗೂ ಗಾಯಕಿಯೂ ಕೂಡ ಎಂಬುದು ಎಲ್ಲರಿಗೂ ತಿಳಿದಿದ್ದ ವಿಷಯವಾಗಿತ್ತು. ಇಲಾಖೆಯ ಹಲವಾರು ಕಠಿಣವಾದ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರವನ್ನು ಕಂಡುಹಿಡಿದ ಖ್ಯಾತಿ ಅವರದ್ದಾಗಿತ್ತು. ಅವರ ನಗರದ ಪ್ರದೇಶವೊಂದು ಕುಖ್ಯಾತ ರೌಡಿಗಳಿಂದ ತುಂಬಿದ್ದು, ಅಲ್ಲಿನ ಜನಗಳೆಲ್ಲರೂ ಲಾಕ್ಡೌನ್ ನಿರ್ಬಂಧಗಳನ್ನು ಲೆಕ್ಕಿಸುತ್ತಿರಲಿಲ್ಲ. ಆ ಪ್ರದೇಶವನ್ನು ನಿಯಂತ್ರಿಸುವಲ್ಲಿ ದಕ್ಷರೆನಿಸಿಕೊಂಡ ಹಲವು ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದರು. ತಾಮರೈ ಸೆಲ್ವಿಯವರ ವಿನೂತನ ವಿಧಾನಗಳ ಬಗ್ಗೆ ಕೇಳಿದ್ದ ನಗರದ ಪೊಲೀಸ್ ಕಮೀಷನರವರು, ಅವರನ್ನು ಆ ಪ್ರದೇಶದ ಪೊಲೀಸ್ ಠಾಣೆಯ ಮುಖ್ಯಾಧಿಕಾರಿಯನ್ನಾಗಿ ನೇಮಿಸಿದ್ದರು. ಸೆಲ್ವಿ ಹೊಸ ಅಧಿಕಾರವನ್ನು ವಹಿಸಿಕೊಳ್ಳುವ ಮುನ್ನ ಅವರೊಂದಿಗೆ ಮಾತನಾಡಿದ ಕಮಿಷನರವರು, 'ಸೆಲ್ವಿಯವರೇ, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಾವುಗಳು ಈವರೆಗೆ ಕೈಗೊಂಡ ಕಠಿಣ ಕ್ರಮಗಳು ವಿಫಲವಾಗಿವೆ. ನಾನು ನಿಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತಿದ್ದೇನೆ. ತಾವು ಯಾವುದೇ ಹೊಸ ರೀತಿಯ ವಿಧಾನಗಳನ್ನು ಪ್ರಯೋಗಿಸಬಹುದು. ನಿಮ್ಮೊಡನೆ ನಾವುಗಳು ಎಂದಿಗೂ ಇರುತ್ತೇವೆ. ತಾವು ಯಶಸ್ವಿಯಾಗುವಿರೆಂಬ ವಿಶ್ವಾಸ ನಮಗಿದೆ' ಎಂದರು.
ಮಾರನೆಯ ದಿನವೇ ಸೆಲ್ವಿಯವರು ಆ ಪೊಲೀಸ್ ಠಾಣೆಯ ಅಧಿಕಾರವನ್ನು ವಹಿಸಿಕೊಂಡಿದ್ದರು. ತಮ್ಮೆಲ್ಲ ಸಹೋದ್ಯೋಗಿಗಳ ಸಭೆಯೊಂದನ್ನು ಕರೆದು ಮಾತನಾಡಿದ ಸೆಲ್ವಿಯವರು, 'ನಾನು ನಿಮ್ಮವರಲ್ಲೊಬ್ಬಳು. ಪರಿಸ್ಥಿತಿಯ ಅರಿವು ನನಗಿಂತ ತಮ್ಮಗಳಿಗೆ ಚೆನ್ನಾಗಿದೆ. ನಯವಾದ ಕ್ರಮಗಳಿಂದ ಜನರುಗಳನ್ನು ಗೆಲ್ಲುವ ಪ್ರಯತ್ನ ಮಾಡೋಣ. ಬಲ ಪ್ರಯೋಗದ ಪ್ರಯತ್ನ ಕಡೆಯದಾಗಿರಲಿ' ಎಂದರು. ಮರು ದಿನ ಬೆಳಗ್ಗೆ ಸೆಲ್ವಿಯವರು ತಮ್ಮ ತಂಡದೊಂದಿಗೆ, ತಮ್ಮ ಪ್ರದೇಶದ ಪ್ರದಕ್ಷಿಣೆ ನಡೆಸುತ್ತಾ, ಬೆಳಗಿನ ವಾಯುವಿಹಾರ ಮಾಡುತ್ತಿದ್ದವರನ್ನು ಭೇಟಿ ಮಾಡಿದರು. ಮಾಸ್ಕ್ ಧರಿಸಿದೆ ಇದ್ದವರಿಗೆಲ್ಲಾ, ಸೆಲ್ವಿ ಗುಲಾಬಿಗಳನ್ನಿತ್ತರು, ಮತ್ತು ಅವರುಗಳಿಗೆ ಮಾಸ್ಕ್ಗಳನ್ನು ವಿತರಿಸಿದರು. ಪೋಷಕರೊಂದಿಗೆ ನಡೆದಾಡುತ್ತಿದ್ದ ಮಕ್ಕಳುಗಳಿಗೆಲ್ಲಾ ಚಾಕಲೇಟ್ಗಳನ್ನೂ ಹಂಚಲಾಯಿತು. ಕೆಲವೇ ಘಂಟೆಗಳಲ್ಲಿ ಸೆಲ್ವಿಯವರ ಈ ವಿನೂತನ ಕ್ರಮದ ಸುದ್ದಿ ಅವರ ಠಾಣೆಯ ಪ್ರದೇಶದ ಸುತ್ತೆಲ್ಲ ಹರಡಿಹೋಗಿತ್ತು. ಮಾರನೆಯ ದಿನ ಬೆಳಗಿನ ನಡೆದಾಟ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಸೆಲ್ವಿಯವರು ಕೂಡ ಮೈಕ್ ಉಪಕರಣಗಳನ್ನುಅಳವಡಿಸಿದ್ದ ಜೀಪೊಂದರಲ್ಲಿ ತಮ್ಮ ತಂಡದವರೊಂದಿಗೆ ಹಾಜರಾಗಿದ್ದರು. ನಡೆದಾಡುತ್ತಿದ್ದ ಜನಗಳನ್ನು ಅಲ್ಲಲ್ಲಿಯೇ ಅಂತರಗಳನ್ನು ಕಾಯ್ದುಕೊಂಡು ನಿಲ್ಲುವಂತೆ ಸೂಚಿಸಿದ ಸೆಲ್ವಿ, ಜನರುಗಳನ್ನುದ್ದೇಶಿಸಿ ಮಾತನಾಡಹತ್ತಿದರು. 'ತಾವುಗಳೆಲ್ಲ ಬೆಳಗಿನ ವಾಯುವಿಹಾರದ ನಡಿಗೆಯನ್ನು ಉತ್ಸಾಹದಿಂದ ಮಾಡುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಆದರೆ ಕೋವಿಡ್ ದಾಳಿಗೆ ನಾವೆಲ್ಲರೂ ತುತ್ತಾಗಬಹುದೆಂಬ ವಿಷಯ ನೆನಪಿರಲಿ. ಲಾಕ್ಡೌನಿನ ನಿಯಮಗಳನ್ನು ಪಾಲಿಸಿ ನಮ್ಮ ನಮ್ಮ ಮನೆಗಳಲ್ಲಿ ನಾವುಗಳು ಉಳಿದುಕೊಳ್ಳುವುದರಿಂದ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಸಹಾಯವಾಗುತ್ತದೆ. ಗುಂಪು ಸೇರುವುದು ಬೇಡ. ಸಭೆ-ಸಮಾರಂಭಗಳಲ್ಲಿ ಸರಕಾರ ನಿಗದಿಪಡಿಸಿರುವಷ್ಟಕ್ಕಿಂತಾ ಹೆಚ್ಚು ಜನರಗಳನ್ನು ಸೇರಿಸುವುದು ಬೇಡ. ಮಾಸ್ಕ್ ಧಾರಣೆ, ಆಗಾಗ ಸಾಬೂನಿನಿಂದ ಕೈತೊಳೆಯುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಂತಾದ ಕ್ರಮಗಳಿಂದ, ಕೋವಿಡ್ ಹರಡುವಿಕೆಯನ್ನು ತಡೆಯಲು ಸಾಧ್ಯ. ಕೋವಿಡ್ ರೋಗವನ್ನು ಹೊಡೆದೋಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆಂಬ ವಿಶ್ವಾಸ ನನಗಿದೆ' ಎಂದ ಸೆಲ್ವಿಯವರು, ತಮ್ಮ ಪುಟ್ಟ ಭಾಷಣದ ಕಡೆಗೊಂದು ಜನಪ್ರಿಯ ಗೀತೆಯೊಂದನ್ನು ಹಾಡ ಹತ್ತಿದರು.
ಜಯವು ನಮ್ಮದೇ, ಜಯವು ನಮ್ಮದೇ
ಜಯವು ನಮ್ಮದೇ ಎಂದೆಂದಿಗೂ
ಮನದಲ್ಲಿದೆ ವಿಶ್ವಾಸ
ಪೂರ್ತಿ ವಿಶ್ವಾಸ
ಜಯವು ನಮ್ಮದೇ ಎಂದೆಂದಿಗೂ
ತನ್ನ ಕೈಗಳಿಂದ ಚಪ್ಪಾಳೆ ತಟ್ಟುತ್ತಾ ಸನ್ನೆ ಮಾಡಿದ ಸೆಲ್ವಿಯವರನ್ನು ಕಂಡು ಉತ್ತೇಜಿತರಾದ ಜನಗಳು ಕೂಡ ಹಾಡಿನ ತಾಳಕ್ಕೆ ಸರಿಯಾಗಿ ಚಪ್ಪಾಳೆ ತಟ್ಟುತ್ತಾ ಹಾಡಲಾರಂಭಿಸಿದರು. ಮಹಿಳೆಯರಲ್ಲಿ ಮತ್ತು ಮಕ್ಕಳುಗಳಲ್ಲಿ ಹಾಡುವ ಉತ್ಸಾಹ ಹೆಚ್ಚಾಗಿದ್ದು ಕಂಡುಬಂದಿತ್ತು.
ಅದೇ ದಿನ ಆ ಪ್ರದೇಶದ ನಾಯಕರು ಮತ್ತು ಹಿರಿಯರ ಸಭೆಯೊಂದನ್ನು ಸೆಲ್ವಿ ಕರೆದಿದ್ದರು. ಸಭೆಯಲ್ಲಿ ಮಾತನಾಡಿದ ಸೆಲ್ವಿ, ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಲಾಕ್ಡೌನಿನ ನಿಯಮಗಳನ್ನು ಪಾಲಿಸಿ ಕೋವಿಡ್ ರೋಗವನ್ನು ನಿಯಂತ್ರಿಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿಕೊಂಡರು. ಅವರುಗಳಲ್ಲಿ ಕೆಲವರು ದಿನಸಿ ಪೊಟ್ಟಣಗಳ ವಿತರಣೆಯ ವಿಷಯವನ್ನು ಪ್ರಸ್ತಾಪಿಸಿದಾಗ, ಒಂದೇ ದಿನದಲ್ಲಿ ಇಡೀ ಪ್ರದೇಶಕ್ಕೆ ಬೇಕಾದಷ್ಟು ದಿನಸಿ ಪೊಟ್ಟಣಗಳನ್ನು ತರಿಸಿ, ಹಂಚುವ ಕಾರ್ಯವನ್ನು ಸೆಲ್ವಿ ಮಾಡಿ ಮುಗಿಸಿದ್ದರು. ಈ ರೀತಿಯ ನಯವಾದ ಕಾರ್ಯಕ್ರಮಗಳಿಂದ, ಇಡೀ ಪ್ರದೇಶವನ್ನು ಒಂದು ವಾರದೊಳಗೆ ಸೆಲ್ವಿ ನಿಯಂತ್ರಣಕ್ಕೆ ತಂದಿಟ್ಟಿದ್ದರು. ಸೆಲ್ವಿಯವರ ಯಶಸ್ವೀ ಪ್ರಯತ್ನದ ಸುದ್ದಿಯು ಪೊಲೀಸ್ ಇಲಾಖೆಯ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ದೇಶದ ದೂರ ದೂರದ ಪೊಲೀಸ್ ವಲಯಗಳಲ್ಲಿ ಸೆಲ್ವಿ ಕ್ರಮದ ಬಗ್ಗೆ ಪ್ರಶಂಸೆಗಳು ಮತ್ತು ಅವರ ವಿಧಾನಗಳನ್ನನುಸರಿಸುವ ಪ್ರಯತ್ನಗಳ ವರದಿಗಳು ಹರಿದಾಡತೊಡಗಿದ್ದವು.
ಅಂದು ರಾತ್ರಿ ೮ ಘಂಟೆಯ ಸಮಯವಾಗಿತ್ತು. ಹೆದ್ದಾರಿಯೊಂದರಲ್ಲಿ ಸಂಚಾರಿ ವಾಹನಗಳ ತಪಾಸಣೆ ನಡೆಸಲೆಂದು ತಡೆಗಟ್ಟನ್ನು (barricades) ಹಾಕಿದ್ದ ಸ್ಥಳದಲ್ಲಿ, ಸೆಲ್ವಿ ಮತ್ತವರ ನಾಲ್ಕು ಸಹೋದ್ಯೋಗಿಗಳು ಕಾವಲು ಕಾಯುತ್ತಿದ್ದರು. ಸೆಲ್ವಿಯವರು ಅಂದು ಮೂರು ತಿಂಗಳ ಗರ್ಭಿಣಿಯಾಗಿದ್ದರು. ಗರ್ಭಾವಸ್ಥೆಯ ಆರಂಭದ ದಿನಗಳ ತೊಂದರೆ ಸೆಲ್ವಿಯವರನ್ನು ತೀವ್ರವಾಗೇ ಕಾಡುತ್ತಿತ್ತು. ಆದರೂ ಮೇಲಧಿಕಾರಿಗಳಿಂದ ಯಾವ ರಿಯಾಯ್ತಿಗೂ ವಿನಂತಿಸದ ಸೆಲ್ವಿಯವರು ರಾತ್ರಿ ಪಾಳಿಯ ಸೇವೆಗೇ ಬಂದು ನಿಂತ್ತಿದ್ದರು. ಲಾಕ್ಡೌನ್ ಜಾರಿಯಲ್ಲಿದ್ದರೂ, ಅನುಮತಿ ಪಡೆದ ವಾಹನಗಳ ಸಂಚಾರಕ್ಕೆ ಅಡ್ಡಿಯಿರಲಿಲ್ಲ. ಇದ್ದಕಿದ್ದಂತೆ ವೇಗವಾಗಿ ನುಗ್ಗಿ ಬಂದ ಕಾರೊಂದು ತಡೆಗಟ್ಟುಗಳಿಗಪ್ಪಳಿಸಿತ್ತು. ಪೊಲೀಸರ ಸೀಟಿಯನ್ನು ಧಿಕ್ಕರಿಸುತ್ತಾ ಆ ಕಾರು ಓಡುತ್ತಾ ರೊಯ್ಯನೆ ಮುಂದೆ ಸಾಗಿತ್ತು. ತಕ್ಷಣವೇ ತನ್ನ ಜೀಪಿನ ಚಾಲಕರ ಆಸನದಲ್ಲಿ ಕುಳಿತಿದ್ದ ಸೆಲ್ವಿ, ತನ್ನ ಸಹೋದ್ಯೋಗಿಗಳಿಗೆ ಜೀಪನ್ನೇರುವಂತೆ ಸನ್ನೆ ಮಾಡಿದರು. ಆ ಪುಂಡ ಕಾರಿನ ಬೆನ್ನಟ್ಟಿ ಹೊರಟ ಸೆಲ್ವಿ ತಮ್ಮ ಜೀಪನ್ನು ಅತಿ ವೇಗವಾಗೇ ಚಲಾಯಿಸಿದ್ದರು. ನಾಲ್ಕೈದು ನಿಮಿಷಗಳು ಬೆನ್ನಟ್ಟುವಷ್ಟರಲ್ಲೇ ಸೆಲ್ವಿ, ಆ ದುಷ್ಟರುಗಳ ಕಾರನ್ನು ತಡೆದು ನಿಲ್ಲಿಸಿದ್ದರು. ಜೀಪಿನಿಂದ ಕೆಳಗಿಳಿದ ಸೆಲ್ವಿ, ಆ ಕಾರಿನ ಚಾಲಕರಿಗೆ ಅನುಮತಿಯ ಪತ್ರವನ್ನು ತೋರಿಸುವಂತೆ ಆಗ್ರಹಿಸಿದ್ದರು. ಮಿಕ್ಕ ಪೊಲೀಸ್ ಅಧಿಕಾರಿಗಳು, ಕಾರಲ್ಲಿದ್ದವರನ್ನೆಲ್ಲಾ ಹೊರಬರುವಂತೆ ಕರೆದರು. ಕಾರೊಳಗಿದ್ದ ಐದೂ ವ್ಯಕ್ತಿಗಳು ಒಮ್ಮಲೇ ಹೊರಬಂದಿದ್ದರು. ಅವರುಗಳ ಪೈಕಿ, ಭಾರಿ ಕತ್ತಿಯೊಂದನ್ನು ಝಳಪಿಸುತ್ತಾ ಮುನ್ನುಗಿದ ದುಷ್ಟನೊಬ್ಬ ನೋಡು ನೋಡುತ್ತಿರುವಷ್ಟರಲ್ಲೇ, ಪಿಸ್ತೂಲ್ ಹಿಡಿದಿದ್ದ ಸೆಲ್ವಿಯವರ ಬಲಗೈಯನ್ನು ತುಂಡರಿಸಿಯೇ ಬಿಟ್ಟಿದ್ದನು. ತುಂಡಾದ ಸೆಲ್ವಿಯವರ ಬಲಗೈ ಕೆಳಗೆ ಬಿದ್ದ ಕೂಡಲೇ, ಸೆಲ್ವಿಯವರೂ ನೆಲಕ್ಕುರುಳಿದ್ದರು. ಇನ್ನುಳಿದ ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅಷ್ಟರೊಳಗೆ ಕಾರನ್ನು ವೇಗವಾಗಿ ಚಲಾಯಿಸಿತ್ತಾ ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದರು.
ಗಾಯಗೊಂಡ ನಾಲ್ಕು ಪೊಲೀಸ್ ಕರ್ಮಚಾರಿಗಳು ತಕ್ಷಣವೇ ಕಾರ್ಯೋನ್ಮುಖರಾಗಿ, ಕೆಳಗೆ ತುಂಡಾಗಿ ಬಿದ್ದಿದ್ದ ಸೆಲ್ವಿಯವರ ಬಲಗೈಯನ್ನು ಕೈಗೆತ್ತಿಕೊಂಡರು. ಎದ್ದು ನಿಲ್ಲಲು ಸೆಲ್ವಿಗೆ ಸಹಾಯ ಮಾಡಿದ ಪೊಲೀಸ್ ಸಹಚರರು, ಸೆಲ್ವಿಯವರನ್ನು ಜೀಪಿನೊಳಗೆ ಕೂರಿಸಿಕೊಂಡು, ಜಿಲ್ಲಾ ಆಸ್ಪತ್ರೆಯ ಕಡೆಗೆ ವೇಗವಾಗಿ ಜೀಪನ್ನು ಓಡಿಸತೊಡಗಿದರು. ತೀವ್ರವಾಗಾಗುತ್ತಿದ್ದ ರಕ್ತಸ್ರಾವವನ್ನು ತಡೆಯಲು ಸೆಲ್ವಿಯವರ ಕೈಗಳಿಗೆ ಮತ್ತು ಮುರಿದುಬಿದ್ದಿದ್ದ ಕೈಭಾಗಕ್ಕೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿದ್ದ ವಸ್ತ್ರಗಳಿಂದ ಬಿಗಿಯಾಗಿ ಬ್ಯಾಂಡೇಜುಗಳನ್ನು, ಸೆಲ್ವಿಯ ಸಹೋದ್ಯೋಗಿಗಳು ಕಟ್ಟಿದ್ದರು. ಸೆಲ್ವಿ ಸಹಚರರೊಬ್ಬರ ಮೊಬೈಲ್ ಮೂಲಕ ನಿಯಂತ್ರಣ ಕಾರ್ಯಾಲಯವನ್ನು ಮುಟ್ಟಿದ ಸುದ್ದಿ, ಬಿರುಗಾಳಿಯಂತೆ ಪೊಲೀಸ್ ವಲಯಗಳೆಲ್ಲ ಹಬ್ಬಿ ಹೋಯಿತು. ಸುದ್ದಿ ತಿಳಿದ ರಾಜ್ಯದ ಮುಖ್ಯ ಮಂತ್ರಿಗಳು, ಗಾಯಗೊಂಡ ಎಲ್ಲ ಪೊಲೀಸರಿಗೂ ಅತ್ತ್ಯುತ್ತಮ ಚಿಕಿತ್ಸೆಯ ಏರ್ಪಾಡು ಕೂಡಲೇ ಆಗಬೇಕೆಂದು ಆಜ್ಞಾಪಿಸಿದ್ದರು.
ತುರ್ತು ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರುಗಳು, ಸೆಲ್ವಿಯವರ ಚಿಕಿತ್ಸೆಯನ್ನಾರಂಭಿಸಿದರು. ಎಲ್ಲಾ ಹಿರಿಯ ವೈದ್ಯರುಗಳಿಗೂ ತುರ್ತು ಕರೆಯನ್ನು ಕಳುಹಿಸಲಾಯಿತು. ಕೊಂಚವೂ ಸಮಯ ವ್ಯರ್ಥವನ್ನು ಮಾಡದ ವೈದ್ಯರುಗಳ ತಂಡ , ಸೆಲ್ವಿಯವರ ಕೈಯನ್ನು ಮತ್ತೆ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ವೈದ್ಯರುಗಳು ನಿರ್ಧಾರ ಸರಿಯಾಗಿಯೇ ಇತ್ತು. ಕತ್ತಿಯಿಂದ ಬಿದ್ದ ಏಟು ಕೈಯನ್ನು ಒಮ್ಮಲೇ ಕತ್ತರಿಸಿ ತುಂಡಾಗಿಸಿತ್ತು. ಕತ್ತಿಯಿಂದ ಜಜ್ಜು ಗಾಯಗಳಾಗದೆ ಇದ್ದದ್ದು, ಕೈಜೋಡಣೆಯ ಶಸ್ತ್ರಚಿಕಿತ್ಸೆಯ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಿತ್ತು. ನೋವಿನಿಂದ ಬಳಲುತ್ತಿದ್ದ ಸೆಲ್ವಿ, ವೈದ್ಯರ ತಂಡಕ್ಕೆ 'ತಾನು ಮೂರು ತಿಂಗಳ ಗರ್ಭಿಣಿ' ಎಂಬುದನ್ನು ತಿಳಿಸಲು ಮರೆಯಲಿಲ್ಲ. ಎರಡು ಸ್ತ್ರೀ ರೋಗ ತಜ್ಞರನ್ನು (gynaecologists) ಕೂಡಲೇ ಕರೆಸಲಾಯಿತು. ಎಂಟು ವೈದ್ಯರುಗಳ ತಂಡ ಶಸ್ತ್ರಕ್ರಿಯೆಯನ್ನು ಆರಂಭಿಸಿದಾಗ ಸಮಯವಾಗಲೇ ರಾತ್ರಿಯ ೧೦ ಘಂಟೆಯಾಗಿತ್ತು. ಸುಮಾರು ಒಂದು ಲೀಟರಿನಷ್ಟು ರಕ್ತವನ್ನು ಕಳೆದುಕೊಂಡಿದ್ದ ಸೆಲ್ವಿಯವರಿಗೆ, ಹೊರಗಿನಿಂದ ರಕ್ತವನ್ನೊದಗಿಸುವ ಕಾರ್ಯಕೂಡ ಜೊತೆ ಜೊತೆಯೇ ಶುರುವಾಗಿತ್ತು.
ಈ ನಡುವೆ ಸ್ತ್ರೀ ರೋಗ ತಜ್ಞರು, ಸೆಲ್ವಿಯವರ ದೇಹದ ಕೆಳಭಾಗದಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದರು. ಸೆಲ್ವಿಯವರು ಘಟನೆಯಿಂದ ಗಾಬರಿಕೊಂಡಿದ್ದು, ಆ ಕಾರಣದಿಂದ ಅವರಿಗೆ ಗರ್ಭಪಾತವಾಗಿರಬಹುದೆಂಬ ವೈದ್ಯರುಗಳು ಅನುಮಾನ ಸರಿಯಾಗಿಯೇ ಇತ್ತು. ಸೆಲ್ವಿಯವರಿಗೆ ಗರ್ಭಪಾತವಾಗಿತ್ತು. ಬೇಕಾದ ಚಿಕಿತ್ಸೆಯನ್ನು ಸ್ತ್ರೀ ರೋಗ ತಜ್ಞರು ಜೊತೆ ಜೊತೆಯಲ್ಲೇ ಆರಂಭಿಸಿದ್ದರು.
ಮುರಿದುಬಿದ್ದ ಕೈಯನ್ನು ಮರುಜೋಡಣೆ ಮಾಡುವ ಶಸ್ತ್ರಚಿಕಿತ್ಸೆಗೆ 'ಅನಸ್ಟೋಮೊಸಿಸ್ (anastomosis)' ಎನ್ನುತ್ತದೆ ವೈದ್ಯಕೀಯ ಶಾಸ್ತ್ರ. ಮೂಳೆಗಳು, ಮಾಂಸ ಖಂಡಗಳು, ರಕ್ತ ನಾಳಗಳು ಮತ್ತು ನರಗಳ ಜೋಡಣೆಯನ್ನೂ ನಡೆಸಬೇಕಾದ ಆ ಶಸ್ತ್ರಚಿಕಿತ್ಸೆ ತುಂಬಾ ಸಂಕೀರ್ಣವಾದದ್ದು ಎಂಬುದು ವೈದ್ಯರುಗಳ ಅಭಿಪ್ರಾಯ. ಮೂಳೆಗಳನ್ನು ವಿಶೇಷವಾದ ತಂತಿಗಳಿಂದ ಕೂಡಿಸಿಡಬೇಕು. ಮೂಳೆಗಳ ನಡುವೆ ಸ್ವಾಭಾವಿಕವಾದ ಸೇರುವಿಕೆ ಉಂಟಾದ ಮೇಲೆ ತಂತಿಗಳನ್ನು ತೆಗೆಯಬೇಕು. ತಜ್ಞ ವೈದ್ಯರುಗಳ ತಂಡಕ್ಕೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಲು ಸುಮಾರು ಏಳು ಘಂಟೆಗಳಷ್ಟು ಸಮಯ ಬೇಕಾಯಿತು. ಶಸ್ತ್ರಚಿಕಿತ್ಸೆಯ ಗಾಯ ಮಾಯಲು ಕನಿಷ್ಠ ಮೂರು ವಾರಗಳ ಸಮಯ ಬೇಕೆಂಬುದು ವೈದ್ಯರುಗಳಿಗೆ ತಿಳಿದಿತ್ತು.
ಏತನ್ಮಧ್ಯೆ ಸೆಲ್ವಿ ಮತ್ತವರ ಸಹೋದ್ಯೋಗಿಗಳ ಸಾಹಸಗಾಥೆ ರಾಷ್ಟ್ರೀಯ ಮಟ್ಟದ ಸುದ್ದಿಯಾಗಿಹೋಗಿತ್ತು. ವೈದ್ಯರುಗಳ ತಂಡ ಯಶಸ್ವಿಯಾಗಿ ಸೆಲ್ವಿಯವರ ಕೈಯಿನ ಮರುಜೋಡಣೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಮಾಡಿರುವ ಸುದ್ದಿ ಜನಗಳಿಗೆ ಸಮಾಧಾನ ತಂದಿತ್ತು. ಆಘಾತದಿಂದ ಸೆಲ್ವಿಯವರಿಗಾದ ಗರ್ಭಪಾತದ ಸುದ್ದಿಯನ್ನು ಟಿ.ವಿ.ಯಲ್ಲಿ ನೋಡಿದ ಮಹಿಳೆಯರು ಕಣ್ಣೀರಿಟ್ಟಿದ್ದರು.
ಶಸ್ತ್ರಚಿಕಿತ್ಸೆಯನಂತರದ ಮೂರುವಾರಗಳ ಅವಧಿ ಮುಗಿದಿತ್ತು. ಧೈರ್ಯಶಾಲಿಯಾದ ಸೆಲ್ವಿಯವರು ಚಿಕಿತ್ಸೆಯ ನೋವನ್ನು ಸಹಿಸುವಲ್ಲಿ ಅಪಾರವಾದ ಸಂಯಮವನ್ನು ಪ್ರದರ್ಶಿಸಿದ್ದರು. ಅವರು ಸಮಸ್ಥಿತಿಗೆ ಮರಳುತ್ತಿದ್ದ ವೇಗವನ್ನು ನೋಡುತ್ತಿದ್ದ ವೈದ್ಯರುಗಳ ತಂಡವೇ ಆಶ್ಚರ್ಯಗೊಂಡಿತ್ತು. ಆದರೂ ಜೋಡಿಸಲ್ಪಟ್ಟ ಕೈಯಿನ ಚಲನೆ ಮತ್ತು ಸಂವೇದನೆಗಳು (motor movements and sensation) ಮರಳಲು ಮತ್ತೆ ಮೂರು ವಾರಗಳಷ್ಟರ 'ಫಿಸಿಯೋಥೆರಪಿ (physiotherapy)'ಯ ಅವಶ್ಯಕತೆಯಿತ್ತು.
ಕಡೆಗೂ ಸೆಲ್ವಿಯವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಹೊರನಡೆವ ದಿನ ಬಂದೇ ಬಂದಿತ್ತು. ಆಸ್ಪತ್ರೆಯಿಂದ ಹೊರಬರುವಾಗಲೇ ಪೊಲೀಸ್ ಸಮವಸ್ತ್ರವನ್ನು ಧರಿಸಿ, ನೇರವಾಗಿ ತನ್ನ ಪೊಲೀಸ್ ಠಾಣೆಯನ್ನು ಸೇರಿ ಕರ್ತವ್ಯಕ್ಕೆ ಹಾಜರಾಗುವ ಆಶಯವನ್ನು ಸೆಲ್ವಿ ವ್ಯಕ್ತಪಡಿಸಿದ್ದರು. ಪೊಲೀಸ್ ಮೇಲಧಿಕಾರಿಗಳ ಆಜ್ಞೆಯ ಮೇರೆಗೆ, ಸೆಲ್ವಿಯವರ ಠಾಣೆ ಸೇರುವ ಮಾರ್ಗಕ್ಕೆ ಕೆಂಪುಹಾಸನ್ನು ಹಾಸಿ ಸಿಂಗರಿಸಲಾಗಿತ್ತು. ಆಸ್ಪತ್ರೆಯಿಂದ ಹೊರಟ ಸೆಲ್ವಿಯವರನ್ನು ತೆರದ ಪೊಲೀಸ್ ಜೀಪೊಂದರಲ್ಲಿ ಕೊಂಡೊಯ್ಯಲಾಗಿತ್ತು. ಅವರ ಜೀಪಿನ್ನು ಹಲವಾರು ಪೊಲೀಸ್ ಅಧಿಕಾರಿಗಳು ಕುಳಿತ ಜೀಪುಗಳು ಹಿಂಬಾಲಿಸಿದವು. ದಾರಿಯುದ್ದಕ್ಕೂ ಪೊಲೀಸ್ ವಾದ್ಯಗಾರರು ತಮ್ಮ ವಾದ್ಯಗಳನ್ನು ನುಡಿಸುತ್ತಾ ಸಾಗಿದ್ದರು. ರಸ್ತೆಗಳ ಎರಡೂ ಬದಿಗಳ, ತಮ್ಮ ಮನೆ ಮತ್ತು ಅಂಗಡಿಗಳ ಬಾಗಿಲುಗಳಲ್ಲಿ ನಿಂತಿದ್ದ ಜನರು ಕೈ ಬೀಸುತ್ತಾ 'ಸೆಲ್ವಿ, ಸೆಲ್ವಿ, ಸೆಲ್ವಿ' ಎಂದು ಜೈಕಾರಗಳನ್ನು ಕೂಗಿದ್ದರು. ಸೆಲ್ವಿ ತನ್ನ ಪೊಲೀಸ್ ಠಾಣೆಯ ಮುಂದಿಳಿಯುತ್ತಲೇ, ಪೊಲೀಸ್ ಅಧಿಕಾರಿಗಳು ಅವರ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದರು. ಸೆಲ್ವಿಯವರ ಪತಿಯವರು ಹಾಗೂ ಅವರ ಕುಟುಂಬದವರೆಲ್ಲರೂ, ಆರತಿ ಬೆಳಗಿ ಸೆಲ್ವಿಯವರನ್ನು ಸ್ವಾಗತಿಸಿದರು. ದೀರ್ಘ ಕರತಾಡನದ ನಡುವೆ ಸೆಲ್ವಿ ತಮ್ಮ ಅಧಿಕೃತ ಆಸನದ ಮೇಲೆ ಕುಳಿತರು. ಸುತ್ತಲೂ ನೆರೆದಿದ್ದವರೆಲ್ಲರಿಗೂ ಸಿಹಿಯನ್ನು ಹಂಚಲಾಯಿತು. ಸಮಾರಂಭಕ್ಕೆ ತಪ್ಪದೆ ಹಾಜರಾಗಿದ್ದ ನಗರದ ಪೊಲೀಸ್ ಕಮೀಷನರ್ರವರು ಸೆಲ್ವಿಯವರ ಧೈರ್ಯ-ಸಾಹಸಗಳನ್ನು ಕೊಂಡಾಡಿ 'ಸೆಲ್ವಿಯವರಿಗೆ ಈ ಕ್ಷಣದಿಂದಲೇ ಮುಂಬಡ್ತಿ ನೀಡಿ, ಡಿ.ವೈ.ಎಸ್ಪಿ. (Dy.S.P.) ಹುದ್ದೆಗೆ ನೇಮಿಸಲಾಗಿದೆ' ಎಂದು ಘೋಷಿಸಿದರು. ಸೆಲ್ವಿಯವರೊಂದಿಗಿದ್ದ ಮಿಕ್ಕ ನಾಲ್ಕು ಪೊಲೀಸ್ ಕರ್ಮಚಾರಿಗಳಿಗೂ ಮುಂಬಡ್ತಿಯನ್ನು ಮೇಲಧಿಕಾರಿಗಳು ಘೋಷಿಸಿದ್ದರು. ಹಾಜರಿದ್ದ ಆರೋಗ್ಯ ಸಚಿವರು, ಸೆಲ್ವಿಯವರಿಗೆ ಚಿಕಿತ್ಸೆ ನೀಡಿದ ವೈದ್ಯರುಗಳ ಇಡೀ ತಂಡಕ್ಕೆ ವಿಶೇಷ ನಗದು ಬಹುಮಾನವನ್ನು ನೀಡಿದರು.
ತನ್ನ ಡೈರಿಯಲ್ಲಿ, ಪೊಲೀಸ್ ಅಧಿಕಾರಿಣಿ ತಾಮರೈ ಸೆಲ್ವಿಯವರ ಸಾಹಸಗಾಥೆಯನ್ನು ದಾಖಲಿಸುತ್ತಾ ರೋಹಿಣಿ ಭಾವಪರವಶರಾಗಿದ್ದರು. ಸೆಲ್ವಿಯವರು ಅನುಭವಿಸಿರಬಹುದಾದ ದೈಹಿಕ ಮತ್ತು ಮಾನಸಿಕ ಆಘಾತಗಳು ರೋಹಿಣಿಯನ್ನು ಇಡೀ ರಾತ್ರಿ ಕಾಡುತ್ತಿತ್ತು.
***
ಮಾರನೆಯ ದಿನದ ಬೆಳಗ್ಗೆ, ದಿನಪತ್ರಿಕೆಯನ್ನೋದುತ್ತಿದ್ದ ರೋಹಿಣಿಗೆ ಸಂತಸದ ಅಚ್ಚರಿಯುಂಟಾಗಿತ್ತು. ಪೊಲೀಸ್ ಸಮವಸ್ತ್ರದಲ್ಲಿದ ಅವಳ ಕಾಲೇಜು ದಿನಗಳ ಸಹಪಾಠಿ ಆಕಾಶ್, ತನ್ನ ಮೇಲಧಿಕಾರಿಯೊಬ್ಬರಿಂದ ಪ್ರಶಸ್ತಿಯೊಂದನ್ನು ಸ್ವೀಕರಿಸುತ್ತಿದ್ದನು. ರೋಹಿಣಿಗೆ ತನ್ನ ಕಾಲೇಜು ದಿನಗಳ ನೆನಪಾಗಿತ್ತು. ಆಕಾಶ್ ಮತ್ತು ರೋಹಿಣಿ ಸಮಾಜ ಶಾಸ್ತ್ರದ ಎಮ್. ಎ. ತರಗತಿಯ ಸಹಪಾಠಿಗಳಾಗಿದ್ದರು. ರೋಹಿಣಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಳು. ಕುಟುಂಬದ ಸಮಸ್ಯೆಗಳ ಒತ್ತಡದ ಕಾರಣಗಳಿಂದ ಆಕಾಶನಿಗೆ ಹಾಜರಿಯ ಕೊರತೆಯುಂಟಾಗಿ, ಪದವಿ ಗಳಿಸದಾಗಿದ್ದನು. ಎಂಟು ತಿಂಗಳ ಹಿಂದೆ ಪೊಲೀಸ್ ಪೇದೆಯಾಗಿ ನೇಮಕಗೊಂಡ ಆಕಾಶ್, ಒಂಬತ್ತು ತಿಂಗಳ ತರಬೇತಿಯ ಅಭ್ಯರ್ಥಿಯಾಗಿದ್ದನು. ಸಂಬಳ ಮತ್ತು ನಿವೃತ್ತಿವೇತನಗಳ ಖಾತರಿಯಿದ್ದ ಸರಕಾರಿ ಕೆಲಸ ಸಿಕ್ಕಿದ್ದರಿಂದ ಆಕಾಶ್ ಖುಷಿಯಾಗೇ ಇದ್ದನು. ಕೊರೋನಾದ ನಿಮಿತ್ತ ಉಂಟಾದ ಸಿಬ್ಬಂಧಿಯ ಕೊರತೆಯನ್ನು ತುಂಬಲು, ಆಕಾಶನೊಡನೆ ತರಬೇತಿಯಲ್ಲಿದ್ದ ಎಲ್ಲಾ ಅಭ್ಯರ್ಥಿಗಳನ್ನು, ಕೋರ್ಸ್ ಮುಗಿಯುವ ಮೂರು ತಿಂಗಳ ಮುಂಚೆಯೇ, ಪೇದೆ ಕೆಲಸ ನಿರ್ವಹಿಸಲು ನೇಮಕ ಮಾಡಲಾಗಿತ್ತು. ಕೆಲಸಗಳನ್ನು ಕಳೆದುಕೊಂಡ ಸುಮಾರು ೬೦ ವಲಸಿಗರುಗಳು ತಂಗಲು ನಿರ್ಮಿಸಿದ್ದ ದೊಡ್ಡ ಬಿಡಾರವೊಂದರ ಕಾವಲಿಗಾಗಿ ಆಕಾಶನನ್ನು ನೇಮಿಸಲಾಗಿತ್ತು.
ಪತ್ರಿಕೆಯ ವರದಿಯನ್ನು ರೋಹಿಣಿ ಕುತೂಹಲದಿಂದ ಓದಲಾರಂಭಿಸಿದಳು. ಜೂನ್ ತಿಂಗಳ ಮಳೆ ಅಬ್ಬರಿಸಿ ಸುರಿಯುತ್ತಿತ್ತು. ಆಕಾಶ್ ಕಾವಲಿದ್ದ ಬಿಡಾರದ ಸೂರು ಮಳೆಯ ರಭಸಕ್ಕೆ ಹರಿದು, ಮಳೆ ನೀರು ಬಿಡಾರದ ತುಂಬಾ ಹರಿಯಲಾರಂಭಿಸಿತ್ತು. ಮಕ್ಕಳುಗಳಿದ್ದ ಮಹಿಳೆಯರನ್ನು ಕ್ಷೇಮವಾದ ಜಾಗಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ಆಕಾಶ್ ತೊಡಗಿದ್ದಾಗ, ಭಾರಿ ಮರವೊಂದು ಮುರಿದು ಬಿಡಾರದ ಮೇಲೆ ಬಿದ್ದಿತ್ತು. ಬಿಡಾರದ ಸೂರಿನ ತಗಡುಗಳು ನೆಲಕ್ಕುರುಳಿದ್ದವು. ಇದ್ದಕಿದ್ದಂತೆ ವಿದ್ಯುತ್ ಸಂಪರ್ಕ ತಪ್ಪಿದ್ದು, ಒಳಗಿದ್ದವರ ಆತಂಕವನ್ನು ಇನ್ನೂ ಹೆಚ್ಚಿಸಿತ್ತು. ಉರಿಯುತ್ತಿದ್ದ ವಿದ್ಯುತ್ ತಂತಿಯೊಂದು ಮಗುವನ್ನು ಹೊತ್ತ ಮಹಿಳೆಯೊಬ್ಬರ ಮೇಲೆ ಬಿದ್ದು, ಆ ಮಹಿಳೆ ಗಾಬರಿಯಿಂದ ಕಿರುಚಾಡಹತ್ತಿದ್ದರು. ಜಾಗರೂಕನಾಗಿದ್ದ ಆಕಾಶ್, ಉದ್ದವಾದ ದೊಣ್ಣೆಯೊಂದರ ಸಹಾಯದಿಂದ ಉರಿಯುತ್ತಿದ್ದ ತಂತಿಯನ್ನು ಮಹಿಳೆಯಿಂದ ದೂರ ಸರಿಸಿದ್ದನು. ತಾಳ್ಮೆಯಿಂದಿರುವಂತೆ ಜನರನ್ನು ಎಚ್ಚರಿಸಿದ ಆಕಾಶ್, ಒಬ್ಬರಿಗೊಬ್ಬರು ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದನು. ವಲಸಿಗರ ಭಾಷೆ ಬರದಿದ್ದರೂ, ಪಕ್ಕದ ಬಿಡಾರದಿಂದ ೮-೧೦ ಯುವಕರನ್ನು ಕರೆತಂದ ಆಕಾಶ್, ಅವರುಗಳ ಸಹಾಯದಿಂದ ತನ್ನ ಬಿಡಾರದ ಜನರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದನು. ಆಕಾಶ್, ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ಸುದ್ದಿಯನ್ನಾಗಲೇ ತಲುಪಿಸಿಯಾಗಿತ್ತು. ಕೂಡಲೇ ಬಿಡಾರದ ಬಳಿ ಆಗಮಿಸಿದ ಪೊಲೀಸ್ ಮೇಲಧಿಕಾರಿಗಳು, ಆಕಾಶನ ಸಮಯ ಪ್ರಜ್ಞೆ ಮತ್ತು ಪರಿಹಾರ ಕಾರ್ಯಗಳನ್ನು ಮೆಚ್ಚಿಕೊಂಡಿದ್ದರು.
ಆಕಾಶನ ಸಾಹಸವನ್ನು ರೋಹಿಣಿ ಕೂಡ ಮೆಚ್ಚಿಕೊಂಡಿದ್ದಳು. ಆಕಾಶನಿಗೆ ಕರೆಮಾಡಿ ಮಾತನಾಡಿದ್ದ ರೋಹಿಣಿ 'ಆಕಾಶ್ ನಿನಗೆ ಅಭಿನಂದನೆಗಳು. ನಿನ್ನ ಮಹತ್ಕಾರ್ಯವನ್ನು ನೋಡಿದ ನಮ್ಮೆಲ್ಲರಿಗೂ ಹೆಮ್ಮೆಯೆನಿಸಿದೆ. ಮುರಿದು ಬಿದ್ದ ಬಿಡಾರದಲ್ಲಿದ್ದ ವಲಸಿಗರ ಜೀವಗಳನ್ನುಳಿಸಿದ್ದೀಯ. ಪೊಲೀಸ್ ಇಲಾಖೆಯಲ್ಲಿ ಇನ್ನೂ ದೊಡ್ಡ ಹುದ್ದೆ ನಿನಗೆ ದೊರೆಯುವಂತಾಗಬೇಕು. ನೀನು "ಐ.ಪಿ.ಎಸ್." ಹುದ್ದೆಗೆ ಪ್ರಯತ್ನಿಸಬೇಕೆಂಬುದು ನನ್ನ ಆಸೆ. ನಿನಗೆ ಬೇಕಾದ ಪರೀಕ್ಷಾ ತಯಾರಿಗೆ ಕೈಲಾದ ಸಹಾಯವನ್ನು ಮಾಡಲು ನಾನು ಸಿದ್ಧಳಿದ್ದೇನೆ' ಎಂದಿದ್ದಳು. ಆಕಾಶ್ ಉತ್ತರಿಸುತ್ತಾ, 'ನನ್ನನ್ನು ಇನ್ನೂ ನೀನು ಮರೆತಿಲ್ಲದ್ದು ಸಂತೋಷದ ವಿಷಯ. ನಾನು ನಿರ್ವಹಿಸಿರುವ ಅಲ್ಪ ಕರ್ತವ್ಯವನ್ನು ನೀನು ಮೆಚ್ಚಿಕೊಂಡಿರುವುದಕ್ಕೆ ನಾನು ಆಭಾರಿ. ಐ.ಪಿ.ಎಸ್. ಎಂಬುದು ದೂರದ ಕನಸು. ಆ ಹುದ್ದೆಗೆ ನಾನು ಅರ್ಹನೆಂದು ಪರಿಗಣಿಸಿದ್ದಕ್ಕೆ ನಿನಗೆ ಧನ್ಯವಾದಗಳು. ನಿನ್ನಂತಹ ಸ್ನೇಹಿತರ ಶುಭ ಹಾರೈಕೆಗಳೊಂದಿಗೆ ನಾನು ಆ ಪರೀಕ್ಷೆಯಲ್ಲಿ ಆಯ್ಕೆಯಾಗಬಲ್ಲೆನೆಂಬ ಭರವಸೆಯಿದೆ,' ಎಂದಿದ್ದನು.
-೦-೦-೦-೦-೦-
No comments:
Post a Comment