Tuesday 23 March 2021

 

 ಫ್ಲಾರೆನ್ಸ್ ನೈಟಿಂಗೇಲ್ 



ಅಂದು ೨೦೨೦ರ ಮೇ ೧೨ರ ದಿನವಾಗಿತ್ತು. 'ಆಧುನಿಕ ನರ್ಸಿಂಗ್ ವ್ಯವಸ್ಥೆಯ ಸಂಸ್ಥಾಪಕಿ'ಯಾದ ಫ್ಲಾರೆನ್ಸ್ ನೈಟಿಂಗೇಲ್ರವರ ಜಯಂತಿಯ ದ್ವಿಶತಮಾನೋತ್ಸವ ಅಂದಾಗಿತ್ತು. ಆ ಮಹಾ ಚೇತನದ ಗೌರವಾರ್ಥ ೨೦೨೦ರ ವರ್ಷವನ್ನು 'ಅಂತಾರಾಷ್ಟ್ರೀಯ ನರ್ಸ್ ಮತ್ತು ಮಿಡ್ ವೈಫಗಳ ವರ್ಷ'ವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು. 'ಉತ್ತಮ ನರ್ಸಿಂಗ್ ಮೂಲಕ ವಿಶ್ವ ಆರೋಗ್ಯ' ಎಂಬುದು ಆ ಸಂಸ್ಥೆಯ ೨೦೨೦ರ ಧ್ಯೇಯ ವಾಕ್ಯವಾಗಿತ್ತು. ಅಂದಿನ ಫ್ಲಾರೆನ್ಸ್ ನೈಟಿಂಗೇಲ್ ರವರ ದ್ವಿಶತಮಾನೋತ್ಸವ ಸಮಾರಂಭಕ್ಕೆ ನಗರದ ಕೇಂದ್ರ ಸಭಾಂಗಣವೇ ವೇದಿಕೆಯಾಗಿತ್ತು. ಆಹ್ವಾನಿತರಾದ ಕೆಲವೇ ಗಣ್ಯರುಗಳ ಮುಖಗಳಲ್ಲಿ ಅಂದು ಎಂದಿನ ಉತ್ಸಾಹವಿರಲಿಲ್ಲ. ದಿನದಿಂದ ದಿನಕ್ಕೆ ಇಡೀ ದೇಶವನ್ನೇ ಆವರಿಸುತ್ತಿರುವ ಕೋವಿಡ್ನ ಆತಂಕ ಅವರುಗಳನ್ನು ಕಾಡುತ್ತಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಸನಗಳ ಏರ್ಪಾಡನ್ನು ಎಲ್ಲರಿಗೂ ಮಾಡಲಾಗಿತ್ತು.  'ನೈಟಿಂಗೇಲ್ ಪದಕ ವಿಜೇತರಾದ ಶ್ರೀಮತಿ. ವಸಂತ, ಶ್ರೀ. ಥಾಮಸ್, ಶ್ರೀಮತಿ. ಯಶೋಧ ಮತ್ತು ಶ್ರೀಮತಿ.  ಮಿಠಾಲಿರವರುಗಳೇ ಅಂದಿನ ಸಮಾರಂಭದ ಮುಖ್ಯಾಕರ್ಷಣೆಯಾಗಿದ್ದರು. ವೇದಿಕೆಯ ಮೇಲೆ ಹಾಕಲಾಗಿದ್ದ ವಿಶೇಷ ಆಸನಗಳಲ್ಲಿ ಅವರುಗಳು ಕುಳಿತಿದ್ದರು. ಅಂದಿನ ಸಮಾರಂಭದ ನಿರ್ವಹಣೆಯ ಕಾರ್ಯವನ್ನು  ಡಾ. ಕಿರಣ್ ರವರಿಗೆ ವಹಿಸಲಾಗಿತ್ತು. ರೋಹಿಣಿ ಮತ್ತವಳ ತಂದೆ ರಾಜುರವರು ಶ್ರೋತೃಗಳ ಮೊದಲ ಸಾಲಲ್ಲಿ ಕುಳಿತಿದ್ದರು. ಆಹ್ವಾನಿತ ಮುಖ್ಯ ಅತಿಥಿಗಳೆಲ್ಲರೂ ಸೇರಿ 'ದೀಪವನ್ನು ಬೆಳಗು'ವುದರ ಮೂಲಕ ಅಂದಿನ ಕಾರ್ಯಕ್ರಮಕ್ಕೆ ಚಾಲನೆ ದೊರೆತಿತ್ತು. ಫ್ಲಾರೆನ್ಸ್ ನೈಟಿಂಗೇಲ್ ರವರ ಜೀವನ ಮತ್ತು ಸಾಧನೆಗಳ ಸಾಕ್ಷ್ಯ ಚಿತ್ರವೊಂದರ ಪ್ರದರ್ಶನದೊಂದಿಗೆ ಅಂದಿನ ಕಾರ್ಯಕ್ರಮ ಆರಂಭವಾಗಿತ್ತು. ತನ್ನ ಡೈರಿ ಮತ್ತು ಲೇಖನಿಗಳೊಂದಿಗೆ ಕಾರ್ಯಕ್ರಮದ ವಿವರಗಳನ್ನು ಬರೆದುಕೊಳ್ಳಲು ರೋಹಿಣಿ ಸಿದ್ಧಳಾಗಿ ಕುಳಿತಿದ್ದಳು. 

'ದೀಪದ ಮಹಿಳೆ' (Lady with the lamp) ಎಂದೇ ಖ್ಯಾತಿ ಹೊಂದಿರುವ ಫ್ಲಾರೆನ್ಸ್ ನೈಟಿಂಗೇಲ್ ರವರು ಇಟಲಿ ದೇಶದ ಫ್ಲಾರೆನ್ಸ್ ನಗರದ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಅವರು ಜನಿಸಿದ ನಗರದ ಜ್ಞಾಪಕಾರ್ಥವಾಗಿ ಅವರಿಗೆ 'ಫ್ಲಾರೆನ್ಸ್' ಎಂದು ಹೆಸರಿಡಲಾಗಿತ್ತು. ಕೆಲವು ವರ್ಷಗಳನಂತರ ಅವರ ಕುಟುಂಬವು ತಮ್ಮ ಮೂಲ ದೇಶವಾದ ಇಂಗ್ಲೆಂಡ್ಗೆ ಮರಳಿತ್ತು. ಬಾಲ್ಯದ ದಿನಗಳಿಂದ    ಫ್ಲಾರೆನ್ಸ್ ದೈವಭಕ್ತಳಾಗಿದ್ದು, ದೀನ ದಲಿತರ ಬಗ್ಗೆ ಅಪಾರವಾದ ಅನುಕಂಪವನ್ನು ಹೊಂದಿದವಳಾಗಿದ್ದಳು. ಫ್ಲಾರೆನ್ಸ್ ಮದುವೆಯಾಗಿ ನೆಮ್ಮದಿಯಾದ ಸಂಸಾರವನ್ನು ನಡೆಸಲಿ ಎಂಬುದು ಅವರ ಶ್ರೀಮಂತ ಪೋಷಕರ ಅಭಿಲಾಷೆಯಾಗಿತ್ತು. ಆದರೆ ಫ್ಲಾರೆನ್ಸ್ ತಮ್ಮ ಪೋಷಕರ ಅಭಿಲಾಷೆಯನ್ನು ನಿರಾಕರಿಸಿ, ತನ್ನ ಅಂತಃಸ್ಫೂರ್ತಿಗನುಗುಣವಾದ ನರ್ಸಿಂಗ್ ಕ್ಷೇತ್ರವನ್ನೇ ಆರಿಸಿಕೊಂಡರು. ಆ ದಿನಗಳಲ್ಲಿ ನರ್ಸಿಂಗ್ ಕೆಲಸವನ್ನು ಗೌರವಾನ್ವಿತ  ಕುಟುಂಬದ ಹೆಣ್ಣು ಮಕ್ಕಳು ಆರಿಸಿಕೊಳ್ಳುವುದು ಅಪರೂಪವಾಗಿತ್ತು. 

೧೮೫೪ರ ಇಸವಿಯ ಸಮಯದಲ್ಲಿ, ಇಂಗ್ಲೆಂಡ್ ಮತ್ತು ರಷ್ಯಾ ದೇಶಗಳ ನಡುವೆ ಭೀಕರ ಯುದ್ಧ ಶುರುವಾಗಿತ್ತು. ಆ ಯುದ್ಧದ ಕೇಂದ್ರ ಸ್ಥಾನವಾಗಿದ್ದ ಟರ್ಕಿ ಪ್ರಾಂತ್ಯದ ಸೇವೆಗೆಂದು ಫ್ಲಾರೆನ್ಸ್ ರವರನ್ನು ಅಂದಿನ ಬ್ರಿಟಿಷ್ ಸರಕಾರ ಕಳುಹಿಸಿತ್ತು. ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಗಾಯಾಳು ಸೈನಿಕರ ಆರೈಕೆಯ ಜವಾಬ್ದಾರಿ ಫ್ಲಾರೆನ್ಸ್ರವರ ತಂಡದ ಮೇಲಿತ್ತು.  ಭಾರಿ ಸಂಖ್ಯೆಯ ಗಾಯಾಳು ಸೈನಿಕರುಗಳನ್ನು ಕಿರಿದಾದ ಗಲೀಜು ಕೋಣೆಗಳಲ್ಲಿ ಮಲಗಿಸಲಾಗಿತ್ತು. ಆ ಕೋಣೆಗಳಲ್ಲಿ ಬೆಳಕು, ಗಾಳಿ ಮತ್ತು ನೀರಿನ ವ್ಯವಸ್ಥೆಯ ಕೊರತೆಯಿದ್ದು, ಚರಂಡಿಗಳ ಅನುಕೂಲವೇ ಇರಲಿಲ್ಲ. ಇಲಿಗಳು ಮತ್ತು ಕ್ರಿಮಿಕೀಟಗಳ ಓಡಾಟ ಆ ಕೋಣೆಗಳಲ್ಲಿ ಎಗ್ಗಿಲ್ಲದೆ ಸಾಗಿತ್ತು. ಆಹಾರ ಸಾಮಗ್ರಿಗಳು, ಸಾಬೂನುಗಳು ಮತ್ತು ಬ್ಯಾಂಡೇಜುಗಳ ಕೊರತೆ ತೀವ್ರವಾಗಿತ್ತು. ಯುದ್ಧದಲ್ಲಾದ ಗಾಯಗಳಿಗಿಂತ, 'ಕಾಲರಾ, ಟೈಫಾಯಿಡ್, ಭೇದಿ ಮತ್ತು ಪೌಷ್ಟಿಕ ಆಹಾರದ ಕೊರತೆ' ಮುಂತಾದ ರೋಗಗಳಿಂದ ಹೆಚ್ಚು ಸೈನಿಕರು ಅಲ್ಲಿ ಸಾಯುತ್ತಿದ್ದರು.  

ಆಸ್ಪತ್ರೆಯ ಪರಿಸ್ಥಿತಿಯ ಸುಧಾರಣೆಗಾಗಿ ತನ್ನ ಮೇಲಧಿಕಾರಿಗಳೊಂದಿಗೆ ಹೋರಾಡಲು ಫ್ಲಾರೆನ್ಸ್ ನಿರ್ಧರಿಸಿದ್ದರು. ಹಾಗಾಗಿ ಅವರು ಹಿರಿಯ ವೈದ್ಯರುಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೂ ಫ್ಲಾರೆನ್ಸ್ ತಮ್ಮ ಛಲವನ್ನು ಬಿಡದಾದರು. ತನ್ನ ಆಸ್ಪತ್ರೆಯ ದುಃಸ್ಥಿತಿಯನ್ನು ಇಂಗ್ಲೆಂಡ್ ಸರಕಾರದ ಗಮನಕ್ಕೂ ತರುವುದರಲ್ಲಿ ಫ್ಲಾರೆನ್ಸ್ ಹಿಂಜರಿಯಲಿಲ್ಲ. ಫ್ಲಾರೆನ್ಸ್ರವರು ಗಣಿತ ಮತ್ತು ಸಂಖ್ಯಾಶಾಸ್ತ್ರಗಳಲ್ಲೂ ನಿಪುಣೆಯಾಗಿದ್ದರು. ತಾನೇ ವಿನ್ಯಾಸಗೊಳಿಸಿದ 'ಪೈ ಛಾರ್ಟ(Pai Chart)ನ್ನು ಹೋಲುವ ಕಾಕ್ಸ್ಕುಂಬ್ ನಕ್ಷೆ (coxcomb diagrams)'ಗಳ ಸಹಾಯದಿಂದ ತನ್ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಫ್ಲಾರೆನ್ಸ್, 'ಯುದ್ಧದ ಕಾರಣಗಳಿಗಿಂತ, ಯುದ್ಧೇತರ ಕಾರಣಗಳಿಂದಾಗಿ ಸೈನಿಕರ ಸಾವುಗಳು ಹೆಚ್ಚಾಗುತ್ತಿದೆ' ಎಂದು ಅವರುಗಳು ಮನಗಾಣುವಂತೆ ಮಾಡಿದರು. ಫ್ಲಾರೆನ್ಸ್ ರ ಹೋರಾಟಕ್ಕೆ  ಮನ್ನಣೆ ದೊರೆತಿತ್ತು. ಸಮಸ್ಯೆಯನ್ನು ಒಪ್ಪಿಕೊಂಡ ಹಿರಿಯ ಅಧಿಕಾರಿಗಳು ಔಷಧ, ಆಹಾರ ಮತ್ತು ಸ್ವಚ್ಛತಾ ಸಾಮಗ್ರಿಗಳ ಸರಬರಾಜನ್ನು ಹೆಚ್ಚಿಸಿದರು. ತನ್ನ ತಂಡದ ಸದಸ್ಯರುಗಳೊಂದಿಗೆ ಮಾತನಾಡಿದ ಫ್ಲಾರೆನ್ಸ್, 'ಸ್ವಚ್ಛತೆ ಮತ್ತು ಚಿಕಿತ್ಸಾ ವಿಧಿ-ವಿಧಾನ'ಗಳ ಪಾಲನೆಗೆ  ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವಂತೆ ಆಗ್ರಹಿಸಿದರು. 'ಸಾಬೂನಿನಿಂದ ಆಗಾಗ ಕೈ ತೊಳೆಯುವ ವಿಧಾನ'ವನ್ನು ಅಂದೇ ಫ್ಲಾರೆನ್ಸ್ ರವರು ಸಾರಿ ಸಾರಿ ತಿಳಿಸಿದ್ದರು. ಫ್ಲಾರೆನ್ಸ್ ರ ಈ ಎಲ್ಲ ಕ್ರಮಗಳಿಂದ ಅವರ ಆಸ್ಪತ್ರೆಯ ನೈರ್ಮಲ್ಯ ಮಟ್ಟ ಸುಧಾರಿಸಿತ್ತು.  ಆಸ್ಪತ್ರೆಯಲ್ಲಿನ  ಗಾಯಾಳು ಸೈನಿಕರ ಸಾವು, ಮುಂಚಿನ ಸಂಖ್ಯೆಯ ಮೂರನೇ ಒಂದು ಭಾಗದಷ್ಟಕ್ಕೆ ಇಳಿದಿತ್ತು. ಫ್ಲಾರೆನ್ಸ್ ರ ಶ್ರಮ ಮತ್ತು ಸಾಧನೆ ಇಂಗ್ಲೆಂಡಿನ ಸರಕಾರದ ಗಮನವನ್ನು ಕೂಡ ಸೆಳೆದಿತ್ತು. 

ಫ್ಲಾರೆನ್ಸ್ ರವರು ತಮ್ಮ ರೋಗಿಗಳ ಬಗ್ಗೆ ಅಪಾರವಾದ ಅನುಕಂಪವನ್ನು ಹೊಂದಿದ್ದರು. ಪ್ರತಿ ರೋಗಿಯ ಹೆಸರನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದ ಫ್ಲಾರೆನ್ಸ್ ರವರಲ್ಲಿ, ರೋಗಿಗಳ ನೋವನ್ನು ನಿವಾರಿಸುವ ಮಾಂತ್ರಿಕ ಶಕ್ತಿಯೊಂದಿತ್ತು. ರೋಗಿಗಳ ಆರೋಗ್ಯದ ವಿಷಯವನ್ನು ಅವರವರ ಕುಟುಂಬಗಳಿಗೆ ಪತ್ರಗಳನ್ನು ಬರೆದು ಫ್ಲಾರೆನ್ಸ್ ತಿಳಿಸುತ್ತಿದ್ದರು. ಫ್ಲಾರೆನ್ಸ್ ವಾರ್ಡುಗಳ ಭೇಟಿಗೆಂದು ಬಂದರೆ, ಗಾಯಾಳು ಸೈನಿಕರ ಚೈತನ್ಯ ಇಮ್ಮಡಿಯಾಗುತ್ತಿತ್ತು. ರಾತ್ರಿ ವೇಳೆ ಅವರು ವಾರ್ಡುಗಳ ಭೇಟಿ ನೀಡುವಾಗ ತಪ್ಪದೆ ದೀಪವೊಂದನ್ನು ಹಿಡಿದು ಬರುತ್ತಿದ್ದರು. ಹಾಗಾಗಿ ಸೈನಿಕರು ಅವರನ್ನು 'ದೀಪದ ಮಹಿಳೆ' ಎಂದೇ ಕರೆಯುತ್ತಿದ್ದರು. 

೧೮೫೬ನೇ ಇಸವಿಯಲ್ಲಿ ಯುದ್ಧ ಮುಗಿದನಂತರ 'ದೇಶದ ಹೆಮ್ಮೆ'ಯಾಗಿ ಫ್ಲಾರೆನ್ಸ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿದ್ದರು. ತನ್ನ ಸ್ವಂತ ಉಳಿತಾಯದ ಮತ್ತು ಬಹುಮಾನಗಳಿಂದ ಗಳಿಸಿದ ೪೫,೦೦೦ ಪೌಂಡ್ಗಳಷ್ಟು ಬೃಹತ್ತಾದ ಮೊತ್ತವನ್ನು ವಿನಿಯೋಗಿಸಿ, ಫ್ಲಾರೆನ್ಸ್ ೧೮೬೦ರಲ್ಲಿ, ಲಂಡನ್ ನಗರದಲ್ಲಿ 'ನೈಟಿಂಗೇಲ್ ಟ್ರೈನಿಂಗ್ ಸ್ಕೂಲ್ ಫಾರ್ ನರ್ಸಸ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.  ನರ್ಸ್ಗಳಿಗೆ ತರಬೇತಿಯನ್ನು ನೀಡುವ ವಿಶ್ವದ ಮೊದಲ ಸಂಸ್ಥೆ ಅದಾಗಿತ್ತು. ನರ್ಸಿಂಗ್ ಆದರ್ಶಗಳನ್ನು ತನ್ನ ಶಾಲೆಯಲ್ಲಿ ಬೋಧಿಸಿದ ಫ್ಲಾರೆನ್ಸ್, ನರ್ಸಿಂಗ್ ವೃತ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು. 'ರೋಗಿಗಳಿಗೆ, ನೀವೆಷ್ಟು ಕಾಳಜಿಯನ್ನು ಹೊಂದಿದ್ದೀರಿ ಎಂಬುದು ಮುಖ್ಯ, ನಿಮಗೆಷ್ಟು ಗೊತ್ತೆಂಬುದು ಅವರುಗಳಿಗೆ ಮುಖ್ಯವಲ್ಲ' ಎಂಬ ಧ್ಯೇಯ ವಾಕ್ಯವನ್ನು ಫ್ಲಾರೆನ್ಸ್ ತಮ್ಮ ನರ್ಸಿಂಗ್ ವಿದ್ಯಾರ್ಥಿಗಳಿಗೆ ತಪ್ಪದೆ ಬೋಧಿಸುತ್ತಿದ್ದರು. 

'ಎಲ್ಲರ ಆರೋಗ್ಯಕ್ಕಾಗಿ ಸಮಗ್ರ ಪ್ರಯತ್ನ ನಡೆಸೋಣ' ಎಂಬುದು ಫ್ಲಾರೆನ್ಸ್ ರ ಗುರಿಯಾಗಿತ್ತು. ನರ್ಸಿಂಗ್ ವೃತ್ತಿಗೆ ಅವರು ನೀಡಿದ ಹೊಸ ರೂಪುರೇಷೆಗಳು ಫಲ ನೀಡಿ, ಇಡೀ ಇಂಗ್ಲೆಂಡ್ ದೇಶದ ಆಸ್ಪತ್ರೆಗಳ ಪರಿಸ್ಥಿತಿಯಲ್ಲಿ ಭಾರಿ ಸುಧಾರಣೆ ಉಂಟಾಗಿತ್ತು. ಫ್ಲಾರೆನ್ಸ್ ರ ಬೋಧನೆಯ ಪ್ರೇರಣೆಯಿಂದ, ಅಂದು ಇಂಗ್ಲೆಂಡ್ ದೇಶದ ಆಳ್ವಿಕೆಗೆ ಒಳಪಟ್ಟಿದ್ದ ಭಾರತದ ಆಸ್ಪತ್ರೆಗಳಲ್ಲೂ ಸುಧಾರಣೆ ಕಂಡು ಬಂದಿತ್ತು.  ಅಂದಿನ ಇಂಗ್ಲೆಂಡ್ ದೇಶದ ರಾಜರಾದ ಕಿಂಗ್ ಎಡ್ವರ್ಡ್ರವರು, ಫ್ಲಾರೆನ್ಸ್ ರ ಸೇವೆಯನ್ನು ಗುರುತಿಸಿ ಅವರಿಗೆ 'ಆರ್ಡರ್ ಆಫ್ ಮೆರಿಟ್' ಎಂಬ ಗೌರವವನ್ನು ೧೯೦೮ರಲ್ಲಿ ನೀಡಿದ್ದರು.  

ಫ್ಲಾರೆನ್ಸ್ ರವರು ೨೦೦ ವರ್ಷಗಳ ಹಿಂದೆ ಬೋಧಿಸಿದ 'ಸ್ವಚ್ಛತೆ, ಚಿಕಿತ್ಸಾ ವಿಧಿ-ವಿಧಾನ ಮತ್ತು ಸಾಬೂನಿನಿಂದ ಆಗಾಗ ಕೈ ತೊಳೆಯುವುದು' ಮುಂತಾದ ಪ್ರಕ್ರಿಯೆಗಳು ಇಂದಿಗೂ ಪ್ರಸ್ತುತವಾಗಿವೆ. ನಮ್ಮ ಇಂದಿನ ಕೊರೋನಾ ವಿರುದ್ಧದ ಹೋರಾಟಕ್ಕೆ ಅವುಗಳೇ ದಿವ್ಯವಾದ ಅಸ್ತ್ರಗಳಾಗಿವೆ. 'ರೋಗಿಗಳ ಚಿಕಿತ್ಸೆಗೆ ಅವರವರ ಮನೆಗಳೇ ಅತ್ತ್ಯುತ್ತಮ ಚಿಕಿತ್ಸಾ ತಾಣಗಳೆಂಬ' ಸರಳ ಸತ್ಯವನ್ನು ಫ್ಲಾರೆನ್ಸ್ ರವರು ಅಂದೇ ಬೋಧಿಸಿದ್ದರು. ಆದರಿಂದು ನಾವು ಅವರ ಬೋಧನೆಗಳನ್ನು ಮರೆತ್ತಿದ್ದೇವೆ. 'ನಿರ್ಬಂಧನಾ  (quarantine) ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಇಂದು ನಮ್ಮ ಆರೋಗ್ಯಾಧಿಕಾರಿಗಳಿಗಿರುವ ಗೊಂದಲ ಮತ್ತು ಅವರುಗಳು ಅನುಸರಿಸುತ್ತಿರುವ ಚಂಚಲ ನಡೆಗಳು, ನಮಗೆ ಫ್ಲಾರೆನ್ಸ್ ರವರು ಅಂದು ಬೋಧಿಸಿದ ಸರಳ ವಿಧಾನಗಳ ಪ್ರಾಮುಖ್ಯತೆಯನ್ನು ನೆನಪಿಸುತ್ತವೆ' ಎಂದು ರೋಹಿಣಿ ತನ್ನ ಸಂಶೋಧನಾ ಡೈರಿಯಲ್ಲಿ ಬರೆದುಕೊಂಡಿದ್ದಳು.  

ಫ್ಲಾರೆನ್ಸ್ ನೈಟಿಂಗೇಲ್ ರವರ ಸ್ಮರಣಾರ್ಥವಾಗಿ, ಇಂದಿಗೂ ವಿಶ್ವದಾದ್ಯಂತ ಹೊಸದಾಗಿ ನರ್ಸಿಂಗ್ ವೃತ್ತಿಯ ಪದವಿಯನ್ನು ಪಡೆದ ಅಭ್ಯರ್ಥಿಗಳು ತಮ್ಮ 'ನರ್ಸಿಂಗ್ ಪ್ರಮಾಣ ವಚನ'ವನ್ನು ಅವರ ಹೆಸರಿನಲ್ಲೇ ಸ್ವೀಕರಿಸುತ್ತಾರೆ. ಕೋವಿಡ್ ನಿಯಂತ್ರಣಕ್ಕಾಗೇ ಇತ್ತೀಚೆಗೆ ಲಂಡನ್ನಲ್ಲಿ ಆರಂಭಿಸಿದ ಐದು ಮತ್ತು ಐರ್ಲೆಂಡಿನ ಎರಡು ಚಿಕಿತ್ಸಾ ಕೇಂದ್ರಗಳಿಗೆ ಫ್ಲಾರೆನ್ಸ್ರ ಹೆಸರನ್ನೇ ಇಡಲಾಗಿದೆ. 

###

ಅಂದಿನ ಸಮಾರಂಭದ ಮುಂದಿನ ಕಾರ್ಯಕ್ರಮದ ಅಂಗವಾಗಿ ಆಯ್ಕೆಯಾಗಿದ್ದ ನಾಲ್ಕು ಕೊರೋನಾ ಸೇನಾನಿಗಳಿಗೆ ಫ್ಲಾರೆನ್ಸ್ ನೈಟಿಂಗೇಲ್ ಪದಕಗಳ ವಿತರಣೆಯನ್ನು ಮಾಡಲಾಯಿತು. ತಮ್ಮ ಪದಕಗಳನ್ನು ಪ್ರದರ್ಶಿಸುತ್ತಾ ವಿನಮ್ರತೆಯಿಂದ ವೇದಿಕೆಯ ಮೇಲೆ ನಿಂತ ನಾಲ್ಕೂ ಕೊರೋನಾ ಸೇನಾನಿಗಳಿಗೆ, ಸಭಿಕರುಗಳೆಲ್ಲಾ ದೀರ್ಘ ಕರತಾಡನ ಮಾಡುವ ಮೂಲಕ ತಮ್ಮ ಗೌರವವನ್ನು ಸಲ್ಲಿಸಿ ದರು. 

ಕೊರೋನಾ ಸೇನಾನಿಗಳ ಪೈಕಿ ಮೊದಲನೆಯವರಾಗಿ ಮಾತನಾಡಲು ಆರಂಭಿಸಿದ ವಸಂತರವರ  ಕಣ್ಣಾಲೆಗಳು ತುಂಬಿ ಬಂದಿದ್ದವು. ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಆಸ್ಪತ್ರೆಯ ಆಡಳಿತ ಮಂಡಳಿಗೆ  ಮತ್ತು ಸಭಿಕರಿಗೆ ತಮ್ಮ ಧನ್ಯವಾದಗಳನ್ನು ಅವರು ವ್ಯಕ್ತಪಡಿಸಿದರು.

'ಬಾಲ್ಯದ ದಿನಗಳಿಂದಲೂ ವಸಂತ, ಓರ್ವ ವಿಭಿನ್ನ ಬಾಲಕಿಯಾಗಿದ್ದಳು. ಅವಳ ವಯಸ್ಸು ಕೇವಲ ೧೦ ವರ್ಷಗಳಾಗಿದ್ದಾಗಲೇ, ವಸಂತಳ ಪ್ರೌಢಿಮೆ ಅವಳ ವಯಸ್ಸಿಗೆ ಮೀರಿದ್ದಾಗಿತ್ತು ಎಂಬುದನ್ನು ಅವರ ತಾಯಿ ಮನಗಂಡಿದ್ದರು. ಆ ದಿನಗಳಲ್ಲಿ ವಸಂತಳ ಅಜ್ಜಿ ಸ್ನಾನದ ಮನೆಯಲ್ಲಿ ಬಿದ್ದು ತನ್ನ ಬಲಗಾಲನ್ನು ಮುರಿದುಕೊಂಡಿದ್ದಾಗ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಧೈರ್ಯಶಾಲಿಯಾದ ವಸಂತ ಏಕಾಂಗಿಯಾಗಿದ್ದರೂ, ನೆರೆಹೊರೆಯವರ ಸಹಾಯವನ್ನು ಪಡೆದು, ತನ್ನ ಅಜ್ಜಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಮುರಿದ ಕಾಲಿಗೆ ಹಾಕಿದ ಭಾರಿ ಬ್ಯಾಂಡೇಜಿನ ಸಹಿತ ಅವಳಜ್ಜಿ ಮೂರು ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು.  ಆ ಇಡೀ ಮೂರು ತಿಂಗಳುಗಳ ಕಾಲ ಅವಳಜ್ಜಿಯ ಸೇವೆಗೆ ಅವಿರತವಾಗಿ ನಿಂತಿದ್ದವಳು ಬಾಲಕಿ ವಸಂತ. ಆ ಅವಧಿಯಲ್ಲೇ ವಸಂತ ನರ್ಸಿಂಗ್ ವೃತ್ತಿಯ ಸಾಕಷ್ಟು ಕೆಲಸಗಳನ್ನು ಕಲಿತಿದ್ದಳು. ಅಂದಿನ ದಿನಗಳಲ್ಲೇ ಮುಂದೆ ತಾನು ನರ್ಸ್ ಆಗಬೇಕೆಂಬ ಬಯಕೆ ಬಾಲಕಿ ವಸಂತಳ ಮನಸ್ಸಿನಲ್ಲಿ ಮೂಡಿತ್ತು. 

೨೨ರ ಯುವತಿ ವಸಂತ ನರ್ಸಾಗಿ ಜಿಲ್ಲಾ ಆಸ್ಪತ್ರೆಯನ್ನು ಸೇರಿದಾಗ 'ಅವರ ಕನಸು ನನಸಾಗಿತ್ತು.' ಅರ್ಪಣಾ ಮನೋಭಾವದ ವೃತ್ತಿಪರರಾಗಿದ್ದ ವಸಂತ ತನ್ನ ಆಸ್ಪತ್ರೆಯಲ್ಲಿ ಬಹು ಬೇಗ ಎಲ್ಲರ ಮನಗಳನ್ನು ಗೆದ್ದಿದರು. ಆದರೆ ಮದುವೆಯ ವಿಷಯದಲ್ಲಿ ಅವರಿಗಿದ್ದ ನಿರಾಸಕ್ತಿ, ಅವರ ತಾಯಿ ಅನಸೂಯರಿಗೆ ಆತಂಕವನ್ನುಂಟು ಮಾಡಿತ್ತು. 'ಮದುವೆಯಾಗ ಬೇಕಾದ ಅವಶ್ಯಕತೆ ಎಲ್ಲಿದೆ? ನಮ್ಮ ದೇಶದಲ್ಲಿ ಸಹಸ್ರಾರು ಅನಾಥ ಮಕ್ಕಳಿದ್ದಾರೆ. ಆ ತರಹದ ಅನಾಥ ಮಗುವೊಂದ್ದಕ್ಕೆ ನಾನು ತಾಯಿಯಾಗಬಾರದೇಕೆ?' ಎಂದು ವಸಂತ ತಾಯಿಯನ್ನು ಕೇಳುತ್ತಿದ್ದರು. 

ಬಡ ಕುಟುಂಬದಲ್ಲಿ ಜನಿಸಿದ ಸುಮಿತ್ರ, ವಸಂತಳ ಬಾಲ್ಯದ ಸ್ನೇಹಿತಳಾಗಿದ್ದಳು. ಪ್ರಾಯಕ್ಕೆ ಬಂದಿದ್ದ ಸುಮಿತ್ರ ಒಬ್ಬ ಹುಡುಗನ ಪ್ರೇಮಜಾಲಕ್ಕೆ ಬಿದ್ದಿದ್ದಳು. ದಿನಗಳು ಕಳೆದಂತೆ ಸುಮಿತ್ರ ಬಸುರಿ ಕೂಡ ಆಗಿಬಿಟ್ಟಿದ್ದಳು. ಆದರೆ ಸುಮಿತ್ರಾಳ ಕೈಬಿಟ್ಟ ಆ ಹುಡುಗ ಬೇರೊಂದು ಊರಿಗೆ ಹೋಗಿಬಿಟ್ಟಿದ್ದನು. ಅವನ ನಿರೀಕ್ಷೆಯಲ್ಲೇ ಕಾಲವನ್ನು ತಳ್ಳುತ್ತಿದ್ದ ಸುಮಿತ್ರಳ ಗರ್ಭ ಬೆಳೆಯುತ್ತಾ ಸಾಗಿತ್ತು. ಒಂದು ದಿನ ಹೆರಿಗೆಗಾಗಿ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವಳಿಗೆ ಹೆರಿಗೆ ಮಾಡಿಸುವ ಕಾರ್ಯ ವಸಂತರ ಹೆಗಲಿಗೆ ಬಿದ್ದಿತ್ತು. ತೀವ್ರ ನೋವನ್ನು ಅನುಭವಿಸುತ್ತಿದ್ದ ಸುಮಿತ್ರಾಳ ಹೆರಿಗೆ ಕಷ್ಟವಾಗಿದೆಯೆಂಬುದು ವೈದ್ಯರ ಅಭಿಪ್ರಾಯವಾಗಿತ್ತು. ವಿಪರೀತ ರಕ್ತಸ್ರಾವದ ನಡುವೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ಸುಮಿತ್ರಾಳ ಜೀವವನ್ನು, ವಸಂತ ಮತ್ತವರ ವೈದ್ಯರು ಉಳಿಸದಾದರು. ಮರಣಾವಸ್ಥೆಯಲ್ಲಿದ್ದ ಸುಮಿತ್ರಾ, ವಸಂತರತ್ತ ನೋಡುತ್ತಾ 'ನನ್ನ ಮಗುವಿಗೆ ನೀನೇ ತಾಯಿ' ಎಂದಿದ್ದಳು. ಕೈ ಸೇರಿದ ಹೆಣ್ಣುಮಗುವನ್ನು 'ದೇವರಿತ್ತ ವರ'ವೆಂದೇ ಭಾವಿಸಿದ ವಸಂತ ಮಗುವಿನ ಪಾಲನೆಯನ್ನು ಅಕ್ಕರೆಯಿಂದ ಆರಂಭಿಸಿದ್ದರು. ಆ ಸುಂದರ ಹೆಣ್ಣು ಮಗುವಿಗೆ ವಸಂತ ನೀಡಿದ ಮುದ್ದಾದ ಹೆಸರು 'ಆದ್ಯ.'  ಅಕ್ಕರೆಯ ಪಾಲನೆಯೊಂದಿಗೆ ಬೆಳೆಯುತ್ತಾ ಆದ್ಯ, ವಸಂತರ ಮನಸ್ಸನ್ನು ಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದ್ದಳು. ವಸಂತ ಆಸ್ಪತ್ರೆಯ ಕೆಲಸದ ಮೇಲೆ ತೆರೆಳಿದಾಗ ಆದ್ಯಳ ಲಾಲನೆ, ವಸಂತರ ತಾಯಿ ಅನಸೂಯರವರದಾಗುತ್ತಿತ್ತು.

ಆದ್ಯಳ ಪಾಲನೆ ಪೋಷಣೆಯಲ್ಲಿ ಮೂರು ವರುಷಗಳು ಕಳೆದಿತ್ತು. ವಸಂತ ಹಿರಿಯ ನರ್ಸಾಗಿ ಬಡ್ತಿ ಹೊಂದಿದ್ದರು. ಆ ದಿನಗಳಲ್ಲಿ ಕೋವಿಡ್ ವೈರಾಣು ತನ್ನ ಕೆನ್ನಾಲಿಗೆಯನ್ನು ಭಯಾನಕವಾಗಿ ಚಾಚಿತ್ತು. ಕೋವಿಡ್ ರೋಗಿಗಳ ಚಿಕಿತ್ಸೆಗೆಂದು ಆಯ್ಕೆಗೊಂಡ ಸಿಬ್ಬಂಧಿಯಲ್ಲಿ, ವೃತ್ತಿಪರತೆ ಮತ್ತು ಅರ್ಪಣಾ ಮನೋಭಾವಗಳಿಗೆ ಹೆಸರಾದ ವಸಂತರವರು ಮೊದಲಿಗರಾಗಿದ್ದರು.  ಆಸ್ಪತ್ರೆಯ ಆಡಳಿತ ಮಂಡಳಿಯ ಸೂಚನೆಯ ಪ್ರಕಾರ ವಸಂತ ಮೂರು ವಾರಗಳ ಕಾಲದ ಸತತ ಸೇವೆಯನ್ನು ಆಸ್ಪತ್ರೆಯಲ್ಲೇ ಉಳಿದು ಸಲ್ಲಿಸಬೇಕಿತ್ತು. ಅದಾದನಂತರ ಮನೆಗೆ ಹಿಂತಿರುಗುವ ಮುನ್ನ, ಆಸ್ಪತ್ರೆಯಲ್ಲೇ ಮತ್ತೆರಡು ವಾರಗಳ ನಿರ್ಬಂಧನಾ  ಅವಧಿಯನ್ನು ವಸಂತ ಪೂರ್ಣಗೊಳಿಸಬೇಕಿತ್ತು. 

ತನ್ನ ಅಮ್ಮನ ಮೇಲೆ ಆಸ್ಪತ್ರೆಯವರು ವಿಧಿಸಿದ್ದ ಕರ್ತವ್ಯದ ಹೊರೆಯ ಭಾರವನ್ನರಿಯುವ ವಯಸ್ಸು ಪುಟ್ಟ ಬಾಲಕಿ ಆದ್ಯಳದಾಗಿತ್ತಿಲ್ಲ. ಆಸ್ಪತ್ರೆಗೆ ಹೊರಟು ನಿಂತ ಅಮ್ಮನಿಗೆ, ಎಂದಿನ ಉತ್ಸಾಹದಿಂದಲೇ ಆದ್ಯ 'ಟಾ ಟಾ' ಹೇಳಿದ್ದಳು. ಆದರೆ ಆದ್ಯಳನ್ನು ತನ್ನ ತೋಳುಗಳ ಮೇಲೆ ಕೂರಿಸಿಕೊಂಡಿದ್ದ ಅನಸೂಯಮ್ಮರವರ ಕಣ್ಣುಗಳಿಂದ ಮಾತ್ರ ಕಣ್ಣೀರ ಕೋಡಿ ಹರಿದಿತ್ತು. ತನ್ನ ಕರ್ತವ್ಯ ಕಠಿಣವಾದದ್ದು ಮತ್ತು ದೀರ್ಘವಾದದ್ದು ಎಂದು ವಸಂತರಿಗೆ ತಿಳಿದಿತ್ತು. ಆದರೂ ತನ್ನಮ್ಮ ಮತ್ತು ಪ್ರೀತಿಯ ಮಗಳ ಮುಂದೆ ದುಃಖವನ್ನು ತೋರ್ಪಡಿಸಲಿಚ್ಛಿಸದ ವಸಂತ, ಕಣ್ಣೀರನ್ನು ತಡೆಹಿಡಿದೇ ಆಸ್ಪತೆಯ ವ್ಯಾನನ್ನೇರಿದ್ದರು. 

ವಸಂತರ ಸತತ ಸೇವೆಗೆ ದಿನ ರಾತ್ರಿಗಳ ವ್ಯತ್ಯಾಸವಿರಲಿಲ್ಲ. 'ಐ.ಸಿ.ಯು.'ನಲ್ಲಿದ್ದ ೮ ರೋಗಿಗಳೂ ಸೇರಿದಂತೆ, ೩೨ ಕೋವಿಡ್ ರೋಗಿಗಳನ್ನು ನಿಭಾಯಿಸುವ ಜವಾಬ್ದಾರಿ ವಸಂತರ ತಂಡದ್ದಾಗಿತ್ತು. ಅವರುಗಳಲ್ಲಿ ಮೂರು ರೋಗಿಗಳಿಗೆ 'ವೆಂಟಿಲೇಟರ್' ಕೂಡ ಅಳವಡಿಸಲಾಗಿತ್ತು. ವಸಂತರ ತಂಡದ ಎಲ್ಲಾ  ಸದಸ್ಯರುಗಳಿಗೂ 'ಪಿ.ಪಿ.ಇ.' ತೊಡುಗೆಗಳು ದೊರೆತ್ತದ್ದು ಅವರುಗಳ ಅದೃಷ್ಟವೇ ಆಗಿತ್ತು. ಆದರೆ ಆ ತೊಡುಗೆಗಳನ್ನು ಧರಿಸುವುದೇ ಬಹಳ ತ್ರಾಸದಾಯಕವಾಗಿತ್ತು. ಇಡೀ ದೇಹವನ್ನೇ ಆವರಿಸುತ್ತಿದ್ದ ಆ ತೊಡುಗೆ,  ರಕ್ಷಕ ಪ್ಲಾಸ್ಟಿಕ್ನಿಂದ ತಯಾರಿಸಿದ್ದಾಗಿತ್ತು. ತೊಡುಗೆಯೊಂದಿಗೆ ಶಿರಸ್ತ್ರಣ, ದಪ್ಪವಾದ ಕಪ್ಪನೆಯ ಕನ್ನಡಕ ಮತ್ತು ಉಸಿರಾಟದ ಉಪಕರಣಗಳನ್ನೂ ಧರಿಸಬೇಕಾಗಿತ್ತು. 'ಪಿ.ಪಿ.ಇ. ತೊಡುಗೆಯನ್ನು ಧರಿಸಿದ ಮಾತ್ರಕ್ಕೆ ಸೋಂಕಿನ ಸಾಧ್ಯತೆ ಇಲ್ಲವೇ ಇಲ್ಲವೆಂದು ಹೇಳಲಾಗದು' ಎಂಬುದು ತಜ್ಞರ ಅಭಿಪ್ರಾಯವಾಗಿತ್ತು. ಆದರೂ ಆ ತೊಡುಗೆಯನ್ನು ಧರಿಸದೆ ಬೇರೇ ದಾರಿಯಿರಲಿಲ್ಲ. ಪಿ.ಪಿ.ಇ ತೊಡುಗೆಯನ್ನು ಧರಿಸಿ, ಮಲ ಮೂತ್ರ ವಿಸರ್ಜನೆಗೆ ಹೋಗುವುದು ಅಸಾಧ್ಯವಾಗಿತ್ತು. ಆದುದರಿಂದ ಆ ತೊಡುಗೆಯೊಂದಿಗೆ ವಿಶೇಷ ಪ್ಯಾಡ್ಗಳನ್ನು ಧರಿಸುವುದೂ ಅನಿವಾರ್ಯವಾಗಿತ್ತು. ಸುಡು ಬೇಸಿಗೆ ಈ ಎಲ್ಲಾ ಕಷ್ಟಗಳ ತ್ರಾಸವನ್ನು ಇನ್ನೂ ಹೆಚ್ಚಿಸಿತ್ತು. ಆದರೆ ವಸಂತರವರಿಗೆ ಕರ್ತವ್ಯದ ಕರೆ ಎಲ್ಲವುದಕ್ಕಿಂತಾ ಮಿಗಿಲಾಗಿತ್ತು.

ತನ್ನ ಕೆಲಸದಲ್ಲಿ ನಿಪುಣೆಯಾದ ವಸಂತರಿಗೆ, ತನ್ನ ಕರ್ತವ್ಯದೊತ್ತಡವನ್ನು ನಿಭಾಯಿಸುವುದು ಹೇಗೆ ಎಂದು ಚೆನ್ನಾಗೇ ತಿಳಿದಿತ್ತು. ಆದರೆ ತನ್ನ ಪ್ರೀತಿಯ ಮಗಳು ಆದ್ಯಳನ್ನು ಅಷ್ಟೊಂದು ದಿನ ಬಿಟ್ಟಿರುವುದು ಸಹಿಸಿಕೊಳ್ಳಲಾರದ ವೇದನೆಯಾಗಿತ್ತು. ತನ್ನಮ್ಮನಿಗೆ ಮೊಬೈಲ್ನಿಂದ ವಿಡಿಯೋ ಕರೆ ಮಾಡುವುದು ಹೇಗೆಂಬುದು ಆದ್ಯಳಿಗೆ ತಿಳಿದಿತ್ತು. ಪಿ.ಪಿ.ಇ. ತೊಡುಗೆಯನ್ನು ಧರಿಸಿ ಕರ್ತ್ಯವದಲ್ಲಿ ನಿರತೆಯಾಗಿದ್ದ ವಸಂತಳಿಗೆ ಆದ್ಯಳ ಕರೆಯನ್ನು ಎಷ್ಟೋ ಬಾರಿ ಸ್ವೀಕರಿಸಲಾಗುತ್ತಿರಲ್ಲಿಲ್ಲ. ಅಂತೂ ಒಂದು ದಿನ ವಸಂತ ತನ್ನ ಮಗಳ ಕರೆಯನ್ನು ಸ್ವೀಕರಿಸಿದಾಗ, ಆದ್ಯ ಅಳುತ್ತಲೇ ಮಾತನಾಡಿದ್ದಳು. 'ಅಮ್ಮ, ಮನೆಗ್ ಬಾ. ಈಗಲೇ ಮನೆಗ್ ಬಾ. ಮನೆಗೆ ನೀನ್ಯಾಕೆ ಬರುತ್ತಿಲ್ಲ? ನೀನಿವತ್ತು ಬರ್ದಿದ್ರೆ, ನಾನ್ ಊಟನೇ ಮಾಡಲ್ಲ. ನೋಡಿಲ್ಲಿ, ಅನಸೂಯಜ್ಜಿನೂ ಅಳ್ತಿದಾರೆ.' ತಮ್ಮ ಮಗಳನ್ನು ಸಮಾಧಾನ ಪಡಿಸುವ ಮಾತುಗಳೇ ತೋಚದಾದ ವಸಂತ, 'ನಂಚಿನ್ನ ಅಳಬೇಡ. ನಾನು ಬೇಗ ಬಂದ್ಬಿಡ್ತೀನಿ. ಅಜ್ಜಿ ನಿಂಜೊತೆ ಇದ್ದರಲ್ಲಾ. ಅವರೇ ನಿಂಗ್ ಊಟ ಮಾಡಿಸ್ತಾರೆ. ಅಮ್ಮ....... , ಆದ್ಯಂಗೆ ಮಾವ್ನ ಹಣ್ಣು ಕೊಡ್ಸು.  ನಾನು ಬರುವಾಗ ಅವಳಿಗೆ ದೊಡ್ಡ ದೊಡ್ಡ ಚೊಕೊಲೇಟ್ಸ್ ತರ್ತೀನಿ' ಎಂದು ಹೇಳುವಷ್ಟರಲ್ಲೇ, ಮುಂದಿನ ಮಾತುಗಳು ಅವರ ಕಂಠದಿಂದ ಹೊರಡದಾಗಿತ್ತು. ಪ್ರತಿ ಬಾರಿಯೂ  ಮೊಬೈಲ್ ಕರೆಗಳಿಂದ ತನ್ನಮ್ಮನನ್ನು, ಮಗಳನ್ನು, ವಸಂತ ಸಂತೈಸದಾಗುತ್ತಿದ್ದರು. ಬಿಸಿ ಮುತ್ತುಗಳು ಮತ್ತು ಅಳುಗಳೊಂದಿಗೆ  ಕರೆಗಳು ಕೊನೆಗೊಳ್ಳುವುದು ಸಾಮಾನ್ಯವಾಗಿ ಹೋಗಿತ್ತು. 

ಮೂರು ವಾರಗಳ ಕೋವಿಡ್ ಕರ್ತವ್ಯ, ವಸಂತರಿಗೆ ಮೂರು ವರ್ಷಗಳದ್ದಾಗಿತ್ತೇನೋ ಎಂದೆನಿಸಿತ್ತು. ಅಂತೂ ಮೂರು ವಾರಗಳ ಕೋವಿಡ್ ವಾರ್ಡ್ನ ಕರ್ತವ್ಯ ಮುಗಿಸಿ, ಕ್ವಾರಂಟೈನ್ ವಾರ್ಡ್ಗೆ ಹೊರಡುವ ಸಮಯ ಬಂದೇ ಬಿಟ್ಟಿತ್ತು. ಕ್ವಾರಂಟೈನ್ ವಾರ್ಡ್ಗೆ ಸೇರುವ ಮುನ್ನ ದೂರದಿಂದ ಮಾತ್ರ ತನ್ನ ಮಗಳನ್ನು ನೋಡುವ ಸದವಕಾಶ ಅಂದು ವಸಂತಳದಾಗಿತ್ತು. ಆದ್ಯಳನ್ನು ಎತ್ತಿಕೊಂಡಿದ್ದ ಅನಸೂಯಮ್ಮ ಅಂದು ಆಸ್ಪತ್ರೆಯ ಆವರಣದ ಮೂಲೆಯೊಂದರಲ್ಲಿ ನಿಂತಿದ್ದರು. ಕರುಳು ಕಿತ್ತು ಬರುವಂತಹ  ಅಂದಿನ ಸನ್ನಿವೇಶದ  ನೇರ ಪ್ರಸಾರ ಮಾಡಲು ವಿವಿಧ ಟಿ.ವಿ. ವಾಹಿನಿಗಳು ತಮ್ಮ ಕ್ಯಾಮೆರಾಗಳೊಂದಿಗೆ ಸಿದ್ಧವಾಗಿ ನಿಂತಿದ್ದವು. ಆದ್ಯಳನ್ನು ಕಂಡಾಕ್ಷಣ ವಸಂತ ತಮ್ಮ ಕಣ್ಣೀರನ್ನು ತಡೆಹಿಡಿಯದಾಗಿದ್ದರು. ಆದ್ಯಳ ಆಕ್ರಂದನ ಮುಗಿಲು ಮುಟ್ಟಿತ್ತು. 'ಅಮ್ಮ, ನೀನ್ಯಾಕೆ ದೂರಾನೇ ಇದ್ದೀಯ? ನನ್ನನ್ ಎತ್ಕೊ, ಮುದ್ದ್ ಮಾಡು' ಎಂದ ಆದ್ಯಳ ಗೋಳನ್ನು ನೋಡಿ, ಸುತ್ತಲೂ ನೆರೆದಿದ್ದ ಜನಗಳ ಕಣ್ಣಾಲೆಗಳು ತುಂಬಿ ಬಂದಿದ್ದವು. ಟಿ.ವಿ.ಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದ ರಾಜ್ಯದ ಜನಗಳೆಲ್ಲರೂ ಅಮ್ಮ-ಮಗಳ ಪರಿಸ್ಥಿತಿಯನ್ನು ನೋಡಿ ಕಣ್ಣೀರಿಟ್ಟಿದ್ದರು. ಹಿರಿಯರಾದ ಅನಸೂಯಮ್ಮ ಮಾತ್ರ ಏನೂ ಮಾಡಲು ತೋಚದೆ, ಮೂಕರಾಗಿ ನಿಂತಿದ್ದರು. 

ಅಂದು ವಸಂತರ ಎರಡು ವಾರಗಳ ಕ್ವಾರಂಟೈನ್ ಅವಧಿ ಮುಗಿದಿತ್ತು. ವಸಂತರ ಮನಸ್ಸು ತನ್ನ ಮಗಳನ್ನು ಸೇರುವ ಕಾತರದಲ್ಲಿತ್ತು. ಆ ಅಪೂರ್ವ ಕ್ಷಣವನ್ನು ವೀಕ್ಷಿಸಲು ಇಡೀ ರಾಜ್ಯದ ಜನತೆ ಮತ್ತೆ ಟಿ.ವಿ.ಗಳ ಮುಂದೆ ಕಾಯುತ್ತಿತ್ತು. ಆಸ್ಪತ್ರೆಯಿಂದ ಹೊರಬಂದ ಕ್ಷಣವೇ ವಸಂತ ತನ್ನ ಮಗಳ  ಕಡೆ ಧಾವಿಸಿದ್ದರು. ತನ್ನಮ್ಮ ಎತ್ತಪ್ಪಿಕೊಂಡಾಗ ಆದ್ಯಳ ಸಂತಸಕ್ಕೆ ಪಾರವೇ ಇರಲಿಲ್ಲ. ಸಿಹಿ ಮುತ್ತುಗಳ ಮಳೆಯನ್ನೇ ತಮ್ಮ ಮುದ್ದು ಮಗಳ ಮೇಲೆ ಸುರಿಸಿದ ವಸಂತ, ಮಾತುಗಳೇ ಹೊರಡದಂತಾಗಿದ್ದರು. ಅನಸೂಯಮ್ಮ ಸಮಾಧಾನದ ನಿಟ್ಟುಸಿರಿಟ್ಟಿದ್ದರು. 

ವಸಂತರ ವೃತ್ತಿ ಹಾಗು ವೈಯುಕ್ತಿಕ ಜೀವನದ ಭಾವನಾತ್ಮಕ ಅನುಭವಗಳನ್ನು ಕೇಳಿದ ರೋಹಿಣಿ ಕೂಡ ಕಣ್ಣೀರಿಟ್ಟಿದ್ದಳು. ಸಮೀಪದಲ್ಲೇ ನಿಂತಿದ್ದ ಅವಳ ಗೆಳಯ ಡಾ. ಕಿರಣ್ ಅವಳಿಗೆ ಸಂಯಮದಿಂದಿರುವಂತೆ ಸನ್ನೆ ಮಾಡಿದ್ದರು. 

###  

ಮಾತನಾಡಿದ, ಮುಂದಿನ ಕೊರೋನಾ ಸೇನಾನಿ ಶ್ರೀ.ಥಾಮಸ್ರವರಾಗಿದ್ದರು. ಅವರು ಕೋವಿಡ್ ಪರೀಕ್ಷಾ ಕೇಂದ್ರವೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಶಂಕಿತ ಸೋಂಕಿತರಿಂದ 'ಸ್ವಾಬ್ (swab - ಗಂಟಲು ಮತ್ತು ಮೂಗೊಳಗಿನ ದ್ರವ) ದ್ರವದ ಮಾದರಿ'ಯನ್ನು ಶೇಖರಿಸಿ, ಕೋವಿಡ್ ಪರೀಕ್ಷೆಗೆ ಕಳುಹಿಸುವುದೇ ಅವರ ಕೆಲಸವಾಗಿತ್ತು. ಥಾಮಸ್ ರವರ ಆಸ್ಪತ್ರೆಯ ಪರಿಧಿಯೊಳಗಿದ್ದ ಹಳ್ಳಿಯೊಂದರಲ್ಲಿ,  ಸುಮಾರು ೭೫ ವರ್ಷದ ಹಿರಿಯರೊಬ್ಬರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದರು. ವಿಷಯ ಆಸ್ಪತ್ರೆಯ ಹಿರಿಯಧಿಕಾರಿಗಳನ್ನು ತಲುಪಿತ್ತು. ಉಸಿರಾಟದ ತೊಂದರೆಯಿಂದಾದ ಸಾವಾದುದರಿಂದ, ಆ ಮೃತ ದೇಹದ ಸ್ವಾಬ್ ಮಾದರಿಯನ್ನುಪಡೆದು, ಕೋವಿಡ್ ಪರೀಕ್ಷೆಗೆ ಕಳುಹಿಸಬೇಕೆಂದು ಮೇಲಧಿಕಾರಿಗಳು ಥಾಮಸ್ ರವರಿಗೆ ಆಜ್ಞಾಪಿಸಿದ್ದರು.  ಸಾವುಂಟಾದ ನಾಲ್ಕು ಘಂಟೆಗಳ ಕಾಲಾವಧಿಯಲ್ಲಿ ಸ್ವಾಬ್ ಮಾದರಿಯನ್ನು ಪಡೆಯುವುದು ಅನಿವಾರ್ಯವೆಂದು ಥಾಮಸ್ ರಿಗೆ ತಿಳಿದಿತ್ತು. ಸಾಕಷ್ಟು ಕಾಲಾವಧಿ ಇದ್ದುದರಿಂದ,  ಸುಮಾರು ೨೦ ಕಿ.ಮೀ.ದೂರದಲ್ಲಿದ್ದ ಆ ಹಳ್ಳಿಗೆ ಥಾಮಸ್ ತಮ್ಮ ಆಸ್ಪತ್ರೆ ವ್ಯಾನಿನಲ್ಲೇ ಧಾವಿಸಿದ್ದರು.

ಥಾಮಸ್ ರವರು ಆ ಹಳ್ಳಿಯನ್ನು ಸೇರುವಷ್ಟರಲ್ಲೇ ಆ ಮೃತರ ಕುಟುಂಬದವರು, ದೇಹವನ್ನು ಮಣ್ಣು ಮಾಡುವ ಸ್ಮಶಾನಕ್ಕಾಗಲೇ ಸಾಗಿಸಿಯಾಗಿತ್ತು. ಬೇರೇ ದಾರಿಯಿಲ್ಲದೆ, ಥಾಮಸ್ ಸ್ಮಶಾನಕ್ಕೇ ಧಾವಿಸಬೇಕಾಗಿ  ಬಂದಿತ್ತು.  ದೇಹವನ್ನಾಗಲೇ ಗುಂಡಿಯೊಳಗೆ ಇಳಿಸಿಯಾಗಿತ್ತು. ತನ್ನ ಕೆಲಸವೀಗ ಕಷ್ಟಸಾಧ್ಯವೆಂಬುದು ಥಾಮಸ್ರಿಗೆ ತಿಳಿದಿತ್ತು. ವ್ಯಾನೊಳಗಿಂದಲೇ ಕೂಗಿ ಹೇಳಿದ ಥಾಮಸ್, ನೆರೆದ ಜನಗಳಿಗೆ ಸ್ವಲ್ಪ ನಿಧಾನಿಸುವಂತೆ ತಿಳಿಸಿದರು. ಪಿ.ಪಿ.ಇ. ತೊಡುಗೆಯನ್ನು ಧರಿಸಿಯೇ ತಯಾರಾಗಿದ್ದ ಥಾಮಸ್, ಜನಗಳ ಸಹಾಯ ಪಡೆದು, ಗುಂಡಿಯೊಳಗೆ ಇಳಿಯಬೇಕಾಯಿತು. ಕರ್ತ್ಯವ್ಯ ಪ್ರಜ್ಞೆ ಮೆರೆದ ಥಾಮಸ್, ವಿಧಿ ವಿಧಾನಗಳ ಮೂಲಕ ಶವದಿಂದ ಸ್ವಾಬ್ ಮಾದರಿಯನ್ನು ಪಡೆದು, ಅದನ್ನು ತಂದಿದ್ದ ವಿಶೇಷ  ಸಾಧನವೊಂದರಲ್ಲಿ ಶೇಖರಿಸಿ ಇಟ್ಟದ್ದೂ ಆಯಿತು. ಗುಂಡಿಯಿಂದ ಹೊರಗೆದ್ದ ಥಾಮಸ್, ಸುತ್ತಲೂ ನೆರೆದಿದ್ದವರನ್ನು ಎಚ್ಚರಿಸುತ್ತಾ, 'ಮೃತರು ಕೋವಿಡ್ನಿಂದ ಸತ್ತಿರಬಹುದು. ಕೋವಿಡ್ ಪರೀಕ್ಷೆಯ ವರದಿ ಬರುವ ತನಕ,  ಅವರ ಸಂಪರ್ಕದಲ್ಲಿದ್ದವರೆಲ್ಲರೂ ಕ್ವಾರಂಟೈನಿನಲ್ಲಿ ಇರಬೇಕು' ಎಂದರು. ಆಸ್ಪತ್ರೆಯನ್ನು ಮರಳಿ ತಲುಪಲು ಇನ್ನೂ ೪೦ ನಿಮಿಷಗಳ ಕಾಲಾವಧಿಯಿತ್ತು. ಸಮಯಾವಧಿಯೊಳಗೆ ಆಸ್ಪತ್ರೆಯನ್ನು ತಲುಪಿದ ಥಾಮಸ್, ತಮ್ಮ ಅನುಭವವನ್ನು ಮೇಲಧಿಕಾರಿಗಳಿಗೆ ವಿವರಿಸಿದರು. ಥಾಮಸ್ ರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡ ಅವರ ಮೇಲಧಿಕಾರಿಗಳು, ಅವರ ಸಾಹಸಗಾಥೆಯನ್ನು ಇಲಾಖೆಯ ಮುಖ್ಯಸ್ಥರಿಗೂ ತಲುಪಿಸಿದ್ದರು.  

ಎರಡು ದಿನಗಳೊಳಗೆ ಮೃತರ ಸ್ವಾಬ್ ಮಾದರಿಯ ಪರೀಕ್ಷೆಯ ವರದಿ ಬಂದಿತ್ತು. ಮೃತರಿಗೆ ಕೋವಿಡ್ ಸೋಂಕಿತ್ತೆಂಬುದು ಖಾತರಿಯಾಗಿತ್ತು. ಕೂಡಲೇ ಮೃತರ ಸಂಪರ್ಕದಲ್ಲಿದ್ದವರನ್ನೆಲ್ಲಾ ಎಚ್ಚರಿಸಿದ ಥಾಮಸ್, ಅವರೆಲ್ಲರನ್ನು ಕ್ವಾರಂಟೈನ್ಗೆ ಒಳಪಡಿಸುವ ಏರ್ಪಾಡು ಮಾಡಿಯಾಗಿತ್ತು. 

'ಮಣ್ಣಿನ ಗುಂಡಿಯೊಳಗಿಳಿದು, ಶವದಿಂದ ಸ್ವಾಬ್ ಮಾದರಿಯನ್ನು ಶೇಖರಿಸುವದು, ಥಾಮಸ್ ರಂತಹ ಧೈರ್ಯಶಾಲಿ ಕೊರೋನಾ ಸೇನಾನಿಗಳಿಗೆ ಮಾತ್ರ  ಸಾಧ್ಯ' ಎಂದು ರೋಹಿಣಿ ತನ್ನ ಸಂಶೋಧನಾ ಡೈರಿಯಲ್ಲಿ ದಾಖಲಿಸಿದ್ದಳು. 

----

ಮುಂದಿನ ಹೃದ್ರಾವಕ ಅನುಭವವನ್ನು ಸಭಿಕರ ಮುಂದಿಡಲು ನಿಂತಿದ್ದವರು, ಮಹಿಳಾ ಪೊಲೀಸ್ ಪೇದೆ ಯಶೋದರವರು. ಕೇವಲ ಒಂದು ತಿಂಗಳ ಹಿಂದೆ ಆಕೆ ಗಂಡು ಮಗುವೊಂದ್ದಕ್ಕೆ ಜನ್ಮ ನೀಡಿದ್ದರು. ಆದರೂ ಕೋವಿಡ್ ದಾಳಿಯಿಂದುಟಾದ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಇಲಾಖೆಯಿಂದ ಬಂದ ಕರೆಗೆ ಓಗೊಟ್ಟ ಯಶೋದ, ಸ್ಥಳೀಯ ಸರಕಾರಿ ಆಸ್ಪತ್ರೆಯ ಪೊಲೀಸ್ ತಂಡವನ್ನು ಸೇರಿದ್ದರು. ಹೆರಿಗೆಯಾದ ಸುಮಾರು ೨೦ ತಾಯಂದಿರುಗಳನ್ನೊಳಗೊಂಡ ವಾರ್ಡಿನ ರಾತ್ರಿ ಕಾವಲಿನ ಕರ್ತವ್ಯ ಅವರದ್ದಾಗಿತ್ತು. 

ಹೀಗಿರುವಾಗ ಒಂದು ದಿನ ಯಶೋದರಿದ್ದ ವಾರ್ಡಿಗೆ, ದಿನ ತುಂಬಿದ ಬಸುರಿಯಾದ ಕಮ್ರುನ್ನಿಸ್ಸಾ  ಎಂಬ ಮಹಿಳೆಯನ್ನು ಸುಮಾರು ರಾತ್ರಿ ೧೦ ಘಂಟೆಯ ಹೊತ್ತಿಗೆ ಸೇರಿಸಲಾಗಿತ್ತು. ಅರ್ಧ ಘಂಟೆಯೊಳಗೆ ಕಮ್ರುನಿಸ್ಸಾ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗುವಿನ ಆರೋಗ್ಯ              ಚೆನ್ನಾಗಿತ್ತು. ಹುಟ್ಟಿದ ಒಂದು ಘಂಟೆಯೊಳಗೆ ಮಗು ಹಸಿವಿನಿಂದ ಅಳತೊಡಗಿತು. ಆದರೆ ತಾಯಿಗಿನ್ನೂ  ಹಾಲು ಬಂದಿರಲಿಲ್ಲ. ಕೆಲವು ತಾಯಂದಿರಿಗೆ ಹಾಲು ಬರುವುದು ತಡವಾಗಬಹುದೆಂಬುದು ನರ್ಸೊಬ್ಬರ ಅಭಿಪ್ರಾಯವಾಗಿತ್ತು. ಹೊರಗಿನಿಂದ ನೀಡಲ್ಪಟ್ಟ ಹಾಲನ್ನು ಮಗು ಕುಡಿಯದಾಯಿತು. ಮಗುವಿನ ನಿರಂತರ ರೋದನ ಎಲ್ಲರನ್ನು ಕಂಗೆಡಿಸಿತ್ತು. ಯಶೋದಾ ಕೂಡ ಮಗುವಿನ ಬಗ್ಗೆ ಚಿಂತಿತರಾಗಿದ್ದರು. ಇಡೀ ರಾತ್ರಿ ಕಳೆದು, ಬೆಳಗಿನ ಜಾವದ ಐದು ಘಂಟೆಯ ಸಮಯವಾಗಿದ್ದರೂ ತಾಯಿಗಿನ್ನೂ ಹಾಲು ಬಂದಿರಲಿಲ್ಲ. ಹಾಲು ನೀಡಲಾಗದ ತಾಯಿ ಕಣ್ಣೀರುಡುತ್ತಿದ್ದರು.  ದಿಕ್ಕು ತೋಚದ ಹಿರಿಯ ನರ್ಸ್, ಕಮರುನ್ನೀಸಾರ ಮಗುವಿಗೆ ಮೊಲೆ ಹಾಲನ್ನುಣಿಸಿ, ಮಗುವಿನ ಜೀವವನ್ನುಳಿಸುವಂತೆ, ವಾರ್ಡಿನಲ್ಲಿದ್ದ ಎಲ್ಲಾ ತಾಯಂದಿರನ್ನು ಕೇಳಿಕೊಂಡರು. ಯಾವ ತಾಯಿಯೂ ಹಾಲನ್ನುಣಿಸಲು ಮುಂದೆ ಬರಲೇ ಇಲ್ಲ. ಅಂತೂ ಕಡೆಗೆ ಗಿರಿಜಾ ಎಂಬ ಒಬ್ಬ ತಾಯಿ ತನ್ನ ಮೊಲೆಯುಣಿಸಲು ಮುಂದಾದರೂ, ಗಿರಿಜಾರ ತಾಯಿ ಅವರನ್ನುತಡೆದು, 'ಕೋವಿಡ್ನ ದಿನಗಳಲ್ಲಿ ಗೊತ್ತಿಲ್ಲದವರ ಮಗುವಿಗೆ ಮೊಲೆಯುಣಿಸಿ ತೊಂದರೆಯನ್ನು ತಲೆಯ ಮೇಲೆಳುದುಕೊಳ್ಳುವುದು ಬೇಡ'ವೆಂದಿದ್ದರು. ಪೊಲೀಸ್ ಪೇದೆ ಯಶೋದಾ ಇವೆಲ್ಲವನ್ನೂ ಗಮನಿಸುತ್ತಲೇ ಇದ್ದರು. 

ಯಶೋದರ ಕಣ್ಣುಗಳು ವಾರ್ಡಿನ ಗೋಡೆಯ ಮೇಲೆ ನೇತುಹಾಕಿದ್ದ ಚಿತ್ರವೊಂದರ ಮೇಲೆ ಬಿದ್ದಿದ್ದವು. ತಾಯಿ ಯಶೋದಾ ತನ್ನ ಸಾಕುಮಗ ಕೃಷ್ಣನಿಗೆ ಮೊಲೆಹಾಲುಣಿಸುತ್ತಿರುವ ಚಿತ್ರ ಅದಾಗಿತ್ತು. ಆಗಲೇ ಪೇದೆ ಯಶೋದಾಳ ಒಳಗೆ ಅಡಗಿದ್ದ 'ಮಹಾ ತಾಯಿ'ಯ ಭಾವ ಜಾಗೃತವಾಗಿತ್ತು. ತಟ್ಟನೆ ಮುಂದಾದ ಯಶೋದಾ ಅಳುತ್ತಿದ್ದ ಮಗುವನ್ನು ಕೈಗೆತ್ತಿಕೊಂಡು ಕುಳಿತು, ತಮ್ಮ ಮೊಲೆಯನ್ನು ಮಗುವಿನ ಬಾಯಿಗಿಟ್ಟಿದ್ದರು. ಮೊಲೆಯನ್ನು ಚೀಪುತ್ತಾ ಹಾಲುಂಡ ಮಗು ಸಮಾಧಾನಗೊಂಡಿತ್ತು. ಮನ ಕಲಕುವ ದೃಶ್ಯವನ್ನು ನೋಡುತ್ತಾ ವಾರ್ಡಿನಲ್ಲಿದ್ದ ಎಲ್ಲರೂ ಮೂಕವಿಸ್ಮಿತರಾಗಿದ್ದರು. ಮಾರನೆಯ ದಿನದ ವೃತ್ತ ಪತ್ರಿಕೆಗಳು ಘಟನೆಯ ವಿವರಣೆಯನ್ನು ನೀಡಿ,  'ಕರ್ತವ್ಯದ ಎಲ್ಲೆಯನ್ನು ಮೀರಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಸತ್ಕಾರ್ಯ' ಯಶೋದರದ್ದು ಎಂದು ಪ್ರಶಂಸಿದ್ದವು. 

'ಈ ವರಗೆ ನಾನು ಕೇಳಿದ್ದು ಜಗದೋದ್ಧಾರಕ  ಕೃಷ್ಣನ ತಾಯಿ ಯಶೋದಾ ಬಗ್ಗೆ ಮಾತ್ರ.  ಆದರಿಂದು ಜೀವಂತ ಯಶೋದರ ದರ್ಶನ ಮಾಡಿದ ಭಾಗ್ಯ ನನ್ನದಾಯಿತು' ಎಂದೆನಿಸಿದ ರೋಹಿಣಿ ಭಾವಪರವಶರಾಗಿದ್ದರು. 

---  

ತನ್ನನ್ನು ನೈಟಿಂಗೇಲ್ ಪದಕದ ಪ್ರಶಸ್ತಿಗೆ ಭಾಜನಳನ್ನಾಗಿ ಮಾಡಿದ ತನ್ನ ಸತ್ಕಾರ್ಯವನ್ನು ಸಭಿಕರ ಮುಂದಿಡುವ ಕಡೆಯ ಸರದಿ ಮಿಠಾಲಿಯವರದಾಗಿತ್ತು. ಅವರು ಮಧ್ಯ ವಯಸ್ಸಿನ ವಿಧವೆಯಾಗಿದ್ದರು. ವಿನಯವೇ ಮೂರ್ತಿವೆತ್ತಂತ್ತಿದ್ದ ಮಿಠಾಲಿಯವರು, ಸುಮಾರು ಹತ್ತು ವರ್ಷಗಳ ಹಿಂದೆ 'ಸುಭಿಕ್ಷ ಫೌಂಡೇಶನ್' ಎಂಬ ಸೇವಾ ಸಂಸ್ಥೆಯೊಂದನ್ನು ಆರಂಭಿಸಿದ್ದರು. ಶಾಲಾ ಬಾಲಕರುಗಳಿಗೆ ಮಧ್ಯಾಹ್ನದೂಟವನ್ನು ಕಳುಹಿಸುವುದೇ ಅವರ ಸಂಸ್ಥೆಯ ಮೂಲೋದ್ಧೇಶವಾಗಿತ್ತು. ೨೦ ಸ್ವಯಂ ಸೇವಕಿಯರುಗಳು ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಆಶ್ರಯವಿಲ್ಲದ ಸುಮಾರು ೧೦೦ ಮಹಿಳೆಯರನ್ನು ಮಿಠಾಲಿ ಸಂಸ್ಥೆಯ ವಿವಿಧ ಕೆಲಸಗಳಿಗೆ ನೇಮಿಸಿಕೊಂಡಿದ್ದರು. ಒಂದು ಲಕ್ಷ ಶಾಲಾ ಮಕ್ಕಳಿಗೆ ಭೋಜನವನ್ನು ತಯಾರಿಸುವ ಅಣಿಯಿದ್ದ ಎಂಟು ಸುಸಜ್ಜಿತ ಅಡುಗೆ ಮನೆಗಳು ಅವರೊಂದಿಗಿತ್ತು. ಇಡೀ ನಗರದ ಶಾಲೆಗಳಿಗೆ ಸಿದ್ಧ ಭೋಜನವನ್ನು ಕೊಂಡೊಯ್ಯುವ ಒಂದು ನೂರು ವ್ಯಾನ್ಗಳನ್ನು ಆ ಸಂಸ್ಥೆ ಹೊಂದಿತ್ತು. 

ಕೋವಿಡ್ ಲಾಕ್ಡೌನ್ನಿಂದ ಕೆಲಸವನ್ನು ಕಳೆದುಕೊಂಡ ವಲಸಿಗರು ಮತ್ತು ಇತರ ಬಡವರುಗಳಿಗೆ ಊಟವನ್ನು ಒದಗಿಸುವ ಕಾರ್ಯಕ್ಕೆ ಮಿಠಾಲಿ ಮುಂದಾಗಿದ್ದರು. ಅವರ ಸಂಸ್ಥೆಯಾಗಲೇ ಸರಕಾರದಿಂದ ಮಾನ್ಯತೆಯನ್ನು ಪಡೆದುದಾದ್ದರಿಂದ, ಹೆಚ್ಚಿನ ಸೌಲಭ್ಯಗಳನ್ನು ಗಳಿಸುವುದು ಮಿಠಾಲಿರವರಿಗೆ ಕಷ್ಟವಾಗಲಿಲ್ಲ. ಲಾಕ್ಡೌನ್ ಜಾರಿಗೊಳಿಸಿದಾಗಿನಿಂದ ಸಿದ್ಧ ಭೋಜನದ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಾ ಸಾಗಿತ್ತು. ಹೆಚ್ಚು ಸ್ವಯಂ ಸೇವಕರುಗಳು ಅವರ ಸಂಸ್ಥೆಯನ್ನು ಸೇರಿದ್ದು, ಮೂರು ಪಾಳಿಗಳಲ್ಲಿ ಅಡುಗೆಯ ಕೆಲಸ ನಡೆಸುತ್ತಿದ್ದರು. ಭೋಜನದ ಅವಶ್ಯಕತೆಯುಳ್ಳವರು ಸಂಪರ್ಕಿಸಲೆಂದು ಅವರ ಸಂಸ್ಥೆಗೆ 'ಸಹಾಯ ವಾಣಿ'ಯ ವ್ಯವಸ್ಥೆಯನ್ನು ಏರ್ಟೆಲ್ನಂತಹ ಸಂಸ್ಥೆಗಳು ಮಾಡಿದ್ದವು. ಎಲ್ಲಾ  ಮಾಧ್ಯಮಗಳೂ ಅವರ ಸಂಸ್ಥೆಯ ಸಹಾಯ ವಾಣಿಯ ಬಗೆಗಿನ ಪ್ರಸಾರವನ್ನು ಮತ್ತೆ ಮತ್ತೆ ಮಾಡುತ್ತಿದ್ದವು. ಅವಶ್ಯಕತೆ ಇರುವ ಯಾರಾದರೂ ಸಂಸ್ಥೆಯ ಸಹಾಯ ವಾಣಿಗೆ ಕರೆ ಮಾಡಿ ಬೇಕಾದಷ್ಟು ಭೋಜನಗಳನ್ನು ಉಚಿತವಾಗಿ ಪಡೆಯಬಹುದಿತ್ತು. ನಗರದ ಯಾವುದೇ ಮೂಲೆಯ ನಿರಾಶ್ರಿತರ ಶಿಬಿರಗಳಿಗೆ ಬೇಕಾದಷ್ಟು ಭೋಜನಗಳನ್ನು ತಲುಪಿಸಲು, ನಾಲ್ಕು ಘಂಟೆಗಳ ಮುನ್ಸೂಚನೆ ಆ ಸಂಸ್ಥೆಗೆ ಸಾಕಾಗಿತ್ತು. ಸಂಸ್ಥೆಯ ಈ ಮಹಾ ಅಭಿಯಾನಕ್ಕೆ ಪೊಲೀಸ್ ಇಲಾಖೆಯ ಬೆಂಬಲ ಕೂಡ ಸಹಾಯಕವಾಗಿತ್ತು. ವಲಸಿಗರು, ರಸ್ತೆಬದಿಯ ವ್ಯಾಪಾರಿಗಳು, ಕೊಳಚೆ ಪ್ರದೇಶದ ನಿವಾಸಿಗಳು ಮುಂತಾದವರಿಗೆ, ಮಿಠಾಲೀಯವರ ಸಂಸ್ಥೆ ದಿನನಿತ್ಯ ಒಂದು ಲಕ್ಷದಷ್ಟು ಭೋಜನಗಳನ್ನು ಒದಗಿಸುತ್ತಿತ್ತು. ಸುಡು ಬಿಸಿಲಿನ ದಿನಗಳಲ್ಲಿ ಬೆವರಿಳಿಸಿ ದುಡಿಯುತ್ತಿದ್ದ ಪೊಲೀಸರು, ಸ್ವಚ್ಛತಾ ಕರ್ಮಚಾರಿಗಳು, ಆರೋಗ್ಯ ಸಂಸ್ಥೆಗಳ ನೌಕರರು, ಚಾಲಕರು ಮುಂತಾದ ಸಹಸ್ರಾರು ಕರೋನ ಸೇನಾನಿಗಳಿಗೂ ಆ ಸಂಸ್ಥೆಯ ಭೋಜನವನ್ನು ಅವರಿರುವ ಸ್ಥಳಗಳಿಗೇ ತಲುಪಿಸಲಾಗುತ್ತಿತ್ತು.  

ಮಿಠಾಲೀಯವರ ಮಹತ್ಕಾರ್ಯ ದೇಶದ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಯಾಗಿ, ಇಡೀ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಅವರ ಕಾರ್ಯ ವೈಖರಿ, ಲಾಕ್ಡೌನ್ ಕಾರಣದಿಂದಾಗಿ ಕೆಲಸವಿಲ್ಲದೇ ಬಳಲುತ್ತಿದ್ದ ಕೋಟ್ಯಂತರ ಹಸಿದ ಹೊಟ್ಟೆಗಳಿಗೆ ಅನ್ನವನ್ನೊದಗಿಸುವ ಕಾರ್ಯವನ್ನು ಮಾಡುತ್ತಿದ್ದ ಸಹಸ್ರಾರು ಸಂಸ್ಥೆಗಳಿಗೆ ಮಾದರಿಯಾಗಿತ್ತು. 

'ನಿಷ್ಕರುಣಿ ಕೋವಿಡ್, ಇಡೀ ದೇಶಕ್ಕೆ ಕಂಡು ಕೇಳರಿಯದ ಸಂಕಷ್ಟವನ್ನು ತಂದೊಡ್ಡಿದೆ. ವಸಂತ, ಥಾಮಸ್, ಯಶೋದಾ, ಮಿಠಾಲಿಯವರುಗಳಂತಹ ನಿಸ್ವಾರ್ಥ ಕೊರೋನಾ ಸೇನಾನಿಗಳ ನೆರವಿನಿಂದ ಕೋವಿಡ್ನ ವಿರುದ್ಧದ ಸಮರವನ್ನು ನಾವು ಗೆದ್ದೇ ಗೆಲ್ಲುತ್ತೇವೆ' ಎಂಬ ಭರವಸೆಯೊಂದಿಗೆ ರೋಹಿಣಿ, ಕಿರಣ್ ಮತ್ತು ರಾಜು ಅಂದಿನ ಸಮಾರಂಭದಿಂದ ನಿರ್ಗಮಿಸಿದ್ದರು.

-೦-೦-೦-೦-೦-೦-೦- 











 

No comments:

Post a Comment