Monday, 1 March 2021

4. ವಲಸಿಗರ ಪರದಾಟ

4. ವಲಸಿಗರ ಪರದಾಟ 

ಸುಮಾರು ೪೦ರ ಪ್ರಾಯದ ಮದನ್ ಲಾಲ್ ವೃತ್ತಿಯಲ್ಲಿ ವಕೀಲರಾಗಿದ್ದರು.  ಬಡ ಕಾರ್ಮಿಕರ ಹಕ್ಕುಗಳಿಗಾಗಿ ಸದಾ ಹೋರಾಡಲು ಸಿದ್ಧರಿರುವ ಚಳವಳಿಗಾರರೆಂದೇ ಅವರನ್ನು ಜನತೆ ಗುರುತಿಸಿತ್ತು. ಹಾಗಾಗಿ ಅವರ ವಕೀಲೀ ವೃತ್ತಿಯ ವರಮಾನವೇನು ಹೇಳಿಕೊಳ್ಳುವಷ್ಟಿತ್ತಿಲ್ಲ. ಒಂದು ಕೋಟಿಗೂ ಮೀರಿದ ಜನಸಂಖ್ಯೆಯ ಒಂದು ನಗರದ ಹೊರವಲಯದಲ್ಲಿ ಮದನರ ಪುಟ್ಟ ಮನೆಯೊಂದಿತ್ತು.  ಅವರ ಮನೆಯ ಸುತ್ತ ಹಲವಾರು ಬೃಹತ್ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು.  ಆ ಕಟ್ಟಡಗಳ ಬದಿಯ ರಸ್ತೆಗಳಲ್ಲೇ ಮದನ್ ಲಾಲರ  ದಿನನಿತ್ಯದ ವಾಯುವಿಹಾರದ  ನಡಿಗೆ ಸಾಗಿತ್ತು. ನಿರ್ಮಾಣ ಹಂತದ ಆ ಕಟ್ಟಡಗಳ ಸುತ್ತ ಕಟ್ಟಡ ಕಾರ್ಮಿಕರ ಮಕ್ಕಳು ಆಟವಾಡುವುದನ್ನು ಮದನ್ ವಿಶೇಷವಾಗಿ ಗಮನಿಸುತ್ತಿದ್ದರು.  'ಚುಕ್-ಬುಕ್ ರೈಲಾಟ' ಆ ಮಕ್ಕಳ ದಿನನಿತ್ಯದ ಆಟವಾಗಿತ್ತು. ಕೊಂಚ ಹೆಚ್ಚು ಎತ್ತರವಿರುವ ಹುಡುಗನೊಬ್ಬ 'ಎಂಜಿನ್' ಆದರೆ, ಒಬ್ಬರ ಅಂಗಿಯನ್ನೊಬ್ಬರು ಹಿಡಿದ ಮಿಕ್ಕ ಬಾಲಕರು ಅವನ ಹಿಂದಿನ ರೈಲು ಡಬ್ಬಗಳಾಗಿ ಹಿಂಬಾಲಿಸುವುದು ಆಟದ ಕ್ರಮವಾಗಿತ್ತು. ಎಂಜಿನ್ ಬಾಲಕ 'ಕೂ....' ಎಂದು ಜೋರಾಗಿ ಕೂಗಿ ಓಡಲು ಶುರು ಮಾಡುತ್ತಲೇ, ಹಿಂದಿನ ಬಾಲಕರೆಲ್ಲರೂ 'ಚುಕ್-ಬುಕ್' ಎಂದು ಸದ್ದು ಮಾಡುತ್ತಾ  ಅವನನ್ನು ಹಿಂಬಾಲಿಸುತ್ತಿದ್ದರು. ಸುಮಾರು ೧೪ರ ಪ್ರಾಯದ ಒಂಟಿ ಕಾಲಿನ ಕುಂಟ ಹುಡುಗನೊಬ್ಬ ಮಾತ್ರ ವೃತ್ತಾಕಾರದ ರೈಲಿನ ಪಥದ ನಡುವೆ ನಿಂತು, ಹಳೆಯ ಹಸಿರು ಬಟ್ಟೆಯೊಂದನ್ನು ಬೀಸುತ್ತಾ ನಿರ್ವಾಹಕನ ಪಾತ್ರವನ್ನು ಉತ್ಸಾಹದಿಂದ ನಿರ್ವಹಿಸುತ್ತಿದ್ದನು. ಎಂಜಿನ್ ಮತ್ತು ರೈಲು ಡಬ್ಬಗಳ ಸರದಿ, ಮಿಕ್ಕ ಬಾಲಕರುಗಳ ನಡುವೆ ದಿನನಿತ್ಯ ಬದಲಾಗುತ್ತಿದಾದರೂ, ಆ ಒಂಟಿ ಕಾಲಿನ ಬಾಲಕನ ಪಾತ್ರ ಮಾತ್ರ ಎಲ್ಲ ದಿನಗಳಲ್ಲೂ ಮಧ್ಯೆ ನಿಂತ ನಿರ್ವಾಹಕನದೇ ಆಗಿರುತ್ತಿತ್ತು. 

ಒಂದು ದಿನ, ಎಂದಿನಂತೆ ಮದನ್ ಲಾಲರ ಗಮನ ರೈಲಾಟವಾಡುತ್ತಿರುವ ಬಾಲಕರ ಮೇಲಿತ್ತು. ಎಂದಿನಂತೆ ಆ ಒಂಟಿ ಕಾಲಿನ ಬಾಲಕ ಮಧ್ಯೆ ನಿಂತು, ನಿರ್ವಾಹಕನ ಪಾತ್ರವನ್ನು ನಿರ್ವಹಿಸುತ್ತಿದ್ದನು. ಆಟದ ರೈಲಿನ ಮಾರ್ಗದ ಬದಿಯೇ, ಮಹಿಳಾ ಕಾರ್ಮಿಕರುಗಳು ತಮ್ಮ ಕಂದಮ್ಮಗಳನ್ನು ಮಲಗಿಸಿ ಕೆಲಸಕ್ಕೆ ತೆರಳಿದ್ದರು. ಹುಡುಗರ ರೈಲು ಮಲಗಿದ್ದ ಕಂದಮ್ಮಗಳನ್ನು ಸಮೀಪಿಸುತ್ತಲೇ, 'ಕಂದಮ್ಮಗಳು ಮಲಗಿವೆ, ಹುಷಾರಾಗಿ ರೈಲು ಚಲಾಯಿಸಿ' ಎಂದು ನಿರ್ವಾಹಕ ಬಾಲಕ ಕೂಗಿದನು. ಹುಡುಗರು ರೈಲು ಮಾರ್ಗವನ್ನು ಕೊಂಚ ಬದಲಿಸಿ ಚಲಿಸಿದಾಗ, ಮಲಗಿದ ಕಂದಮ್ಮಗಳಿಗೆ ಯಾವ ತೊಂದರೆಯೂ  ಉಂಟಾಗಲಿಲ್ಲ. ನಿರ್ವಾಹಕ ಬಾಲಕನ ಎಚ್ಚರ, ಸೂಕ್ಷ್ಮಮತಿಯಾದ ಮದನ್ ಲಾಲರ ಗಮನಕ್ಕೆ ಬಾರದೇ ಇರಲಿಲ್ಲ. ನಿರ್ವಾಹಕ ಬಾಲಕನನ್ನು ಮಾತನಾಡಿಸುವ ಇಚ್ಛೆ ಅಂದು ಮದನ್ ಲಾಲರಿಗಾಗಿತ್ತು. ಆ ಬಾಲಕನನ್ನು ಮಾತನಾಡಿಸುತ್ತಾ,  'ಪ್ರತಿ ದಿನ ನೀನು ನಿರ್ವಾಹಕನ ಪಾತ್ರವನ್ನೇ ವಹಿಸುವೆ. ಎಂಜಿನ್ ಆಗುವ ಬಯಕೆ ನಿನಗಿಲ್ಲವೆ?' ಎಂಬುದು ಮದನರ ಪ್ರಶ್ನೆಯಾಗಿತ್ತು. 'ನನಗಿರುವುದು ಒಂದೇ ಕಾಲು.  ಅವರುಗಳಂತೆ ನಾನು ಓಡಲಾರೆ. ಹಾಗಾಗಿ ನನಗೆ ಬೇರೆ ದಾರಿಯಿಲ್ಲ. ದಿನ ನಿತ್ಯ ರೈಲ್ವೆ ಗಾರ್ಡ್ ಆಗುವುದೇ ನನ್ನ ಆಟ.  ಇಲ್ಲವಾದಲ್ಲಿ ಅವರುಗಳು ನನ್ನನ್ನು ಆಟಕ್ಕೆ ಸೇರಿಸಿಕೊಳ್ಳರು' ಎಂದ ಬಾಲಕನ ಉತ್ತರವನ್ನು ಕೇಳಿ ಮದನ್ ಲಾಲರಿಗೆ ಕನಿಕರ ಮೂಡಿತು. ಆ ಬಾಲಕನ ಉತ್ತರದಲ್ಲಿ ಜೀವನದ ಕಟು ಸತ್ಯವೊಂದು ಅಡಗಿತ್ತು. 'ಇಲ್ಲದಿರುವ ವಸ್ತುಗಳ ಬಗೆಗಿನ ತುಡಿತ ಎಲ್ಲರನ್ನೂ ಕಾಡುವುದು ಸಹಜ. ಆದರೆ ಈ ಬಾಲಕನ ಚಿಂತನೆಯೇ ಬೇರೆ.  ಒಂದು ಕಾಲಿಲ್ಲದ ಕುಂಟನಾದರೂ, ವಿಷಾದಿಸದೆ ಮಿಕ್ಕ ಬಾಲಕರೊಂದಿಗೆ ಬೆರೆತು ಆಟವಾಡುವ ಮಾರ್ಗವೊಂದನ್ನು ಕಂಡುಕೊಂಡಿದ್ದಾನೆ. ಇದಲ್ಲವೇ ಬದುಕುವ ದಾರಿ' ಎಂದು ಸಾಗಿತ್ತು ಮದನ್ ಲಾಲರ ಅಂದಿನ ವಿಚಾರ ಧಾರೆ. 

ಮತ್ತೊಂದು ದಿನ ಮದನರಿಗೆ, ವ್ಯಕ್ತಿಯೊಬ್ಬ ಆ ಕುಂಟ ಬಾಲಕನಿಗೆ ತಿಂಡಿಯ ಪೊಟ್ಟಣವೊಂದನ್ನು ಕೊಡುತ್ತಿರುವ ದೃಶ್ಯ ಕಂಡು ಬಂತು. ಆ ವ್ಯಕ್ತಿಯ ಬಳಿ ತೆರಳಿದ ಮದನ್ 'ನೀವು ಈ ಬಾಲಕನಿಗೇನಾಗಬೇಕು?' ಎಂದು ಕೇಳಿದರು. ಬಾಲಕನ ಬೆನ್ನು ತಟ್ಟುತ್ತಾ, 'ನನ್ನ ಹೆಸರು ವಿಷ್ಣು ಮಂಡಲ್. ಈ ಬಾಲಕ ನನ್ನ ಮಗ ಸೋನು. ನಾನು ಮತ್ತು ನನ್ನ ಹೆಂಡತಿ ಈ ಕಟ್ಟಡದ ಕೆಲಸ ಮಾಡುತ್ತೇವೆ. ನನ್ನ ತಮ್ಮನೂ ಇಲ್ಲೇ ಕೆಲಸ ಮಾಡುತ್ತಾನೆ. ನಮ್ಮ ಹಳ್ಳಿಯ ಸುಮಾರು ೪೦ ಜನರು ಇದೇ ಕಟ್ಟಡದ ಕೆಲಸ ಮಾಡುತ್ತಾರೆ' ಎಂದು ಆ ವ್ಯಕ್ತಿ ಉತ್ತರಿಸಿದನು. ಕುಂಟು ಬಾಲಕ ಸೋನುವಿನ ತಂದೆ ವಿಷ್ಣುವಿನ ಎಡಗೈ ಇಲ್ಲದಿರುವುದನ್ನು ಮದನ್ ಗಮನಿಸದಿರಲಿಲ್ಲ. 

'ನೀವು ಎಲ್ಲಿಯವರು?' ಎಂಬುದು ಮದನರ ಮರು ಪ್ರಶ್ನೆಯಾಗಿತ್ತು. 

'ನಾವು ದೂರದ ರಾಜ್ಯದವರು. ಸಾವಿರಾರು ಕಿ.ಮೀ. ದೂರದಲ್ಲಿ ನಮ್ಮ ಹಳ್ಳಿ ಇದೆ. ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿಕೊಂಡು ಇಲ್ಲಿಯವರೆಗೆ ಬಂದಿದ್ದೇವೆ' ಎಂಬುದು ವಿಷ್ಣುವಿನ  ಉತ್ತರವಾಗಿತ್ತು. 

'ನೀವಿಲ್ಲಿ ಏನು ಕೆಲಸ ಮಾಡುವಿರಿ?' ಮದನರ ಕುತೂಹಲ ಮುಂದುವರೆದಿತ್ತು. 

'ನನಗೆ ಎಡಗೈ ಇಲ್ಲದಿರುವುದನ್ನು ತಾವೇ ನೋಡಿದ್ದೀರಿ. ಕಟ್ಟಡದ ಕೆಲಸ ನಾನು ಮಾಡಲಾರೆ. ನಾನು ೧೦ನೇ ತರಗತಿವರೆಗೆ ಓದಿದ್ದೇನೆ. ಹಾಗಾಗಿ ಇವರು ನನ್ನನು "ಗೋದಾಮಿನ ರಕ್ಷಕ (Store keeper)" ಎಂದು ನೇಮಿಸಿಕೊಂಡಿದ್ದಾರೆ.'  

'ನಿಮ್ಮ ಸಂಬಳ ಎಷ್ಟು?' ಎಂಬದು ಮದನರ ಮರುಪ್ರಶ್ನೆಯಾಗಿತ್ತು. 

'ನಾನು ಮತ್ತು ನನ್ನ ಹೆಂಡತಿ ಇಬ್ಬರೂ  ಇಲ್ಲಿ ಕೆಲಸ ಮಾಡುತ್ತೇವೆ. ಸಿಮೆಂಟ್ ಚೀಲಗಳ ಲೆಕ್ಕವಿಡುವುದು ನನ್ನ ಕೆಲಸವಾದರೆ, ನಾವಿಬ್ಬರು ಮತ್ತು ನಮ್ಮ ಮಗ ಇಲ್ಲಿನ  ಸಿಮೆಂಟ್ ಗೋದಾಮಿನ  ರಾತ್ರಿ ಕಾವಲುಗಾರರಾಗಿ ಮಲಗುತ್ತೇವೆ. ನಮ್ಮಿಬ್ಬರ ಒಟ್ಟು ಸಂಬಳ  ದಿನವೊಂದಕ್ಕೆ ಸಾವಿರ ರೂಪಾಯಿಗಳೆಂದು ಕೊಡುತ್ತಾರೆ. ಇಡೀ ತಿಂಗಳ ಎಲ್ಲ ದಿನಗಳ ಸಂಬಳವೂ ನಮಗೆ ಸಿಗುತ್ತದೆ' ಎಂದು ಉತ್ತರಿಸುವಾಗ ವಿಷ್ಣು ಉಬ್ಬಿಹೋದಂತೆ ಮದನರಿಗೆ ಕಂಡು ಬಂತು. 'ತಂದೆಯಂತೆ ಮಗ' ಎಂಬ ನಾಣ್ನುಡಿಯನ್ನು ನೆನಪಿಸಿಕೊಂಡ  ಮದನ್ 'ಒಂದೇ ಕೈನವನಾದರೂ ಅಪ್ಪ ದುಡಿಯುವುದನ್ನು ನಿಲ್ಲಿಸಿಲ್ಲ, ಕುಂಟನಾದರೂ ಅವನ ಪುಟ್ಟ ಮಗ ಮಿಕ್ಕ ಬಾಲಕರೊಂದಿಗೆ ಆಡುವುದನ್ನು ಬಿಟ್ಟಿಲ್ಲ. ಜೀವನವೆಂಬುದು ಹಲವು ಉಪಯುಕ್ತ ಪಾಠಗಳನ್ನು ಕಲಿಸುತ್ತೆ' ಎಂದು ಯೋಚಿಸುತ್ತ ವಿಚಾರ ಮಗ್ನರಾದರು. 

ಅಂದು ೨೦೨೦ರ ಮಾರ್ಚ್ ೨೫ರ ದಿನವಾಗಿತ್ತು. ಕೋವಿಡ್ನ ಸಲುವಾಗಿ ದೇಶಾದ್ಯಂತ ಲಾಕ್ಡೌನನ್ನು ಜಾರಿಗೊಳಿಸಲಾಗಿತ್ತು. ಆ ಕಟು ನಿರ್ಧಾರ ಬಡವರ ಪಾಲಿಗೆ ಮಾರಕವಾದುದೆಂಬುದು ಎಲ್ಲರಿಗೂ  ತಿಳಿದಿತ್ತು. ಮದನ್ ಲಾಲರ ಮನೆ ಸಮೀಪದ ಬೃಹತ್ ಕಟ್ಟಡಗಳ ನಿರ್ಮಾಣ ಕಾರ್ಯವೆಲ್ಲಾ  ಸ್ಥಗಿತಗೊಂಡಿತ್ತು. ನಿರ್ಮಾಣ ಕಾರ್ಯದ ಸಾವಿರಾರು ಕಾರ್ಮಿಕರುಗಳಿಗೆ ಕೆಲಸವಿಲ್ಲದಂತಾಗಿತ್ತು. ಆ ಬಡ ಕೆಲಸಗಾರರ ವಾರದ ಸಂಬಳ ನಿಂತು ಹೋಗಿತ್ತು.  ಕೆಲಸವಿಲ್ಲದೇ ಬರಿಗೈಯಲ್ಲಿ ಕಾಲ ತಳ್ಳುತ್ತಿದ್ದ ಬಡ ಕಾರ್ಮಿಕರ ದೃಶ್ಯಗಳು ಮದನರ ಗಮನಕ್ಕೆ ಬಂದಿತ್ತು. ಒಂದು ದಿನ ವಿಷ್ಣು ಮಂಡಲನನ್ನು ಭೇಟಿ ಮಾಡಿದ ಮದನರು ಅವನ ಜೊತೆ ಮಾತಿಗಿಳಿದಿದ್ದರು.  

'ಸ್ವಾಮಿ, ನಾವ್ಗಳು ಸಂಬಳದ ಮುಖ ನೋಡಿ ಹತ್ತು ದಿನಗಳಾಯ್ತು. ನಮ್ಮವರ್ಯಾರ ಹತ್ತಿರವೂ ಹಣವಿಲ್ಲ. ನಮ್ಮ ಹಳ್ಳಿಗಳಿಗೆ ಈ ತಿಂಗಳ ಹಣವನ್ನು ನಾವುಗಳು ಕಳಿಸಲಾಗಿಲ್ಲ. ನಮ್ಮ ಗುತ್ತಿಗೆದಾರ ಒಳ್ಳೆಯವನು. ಅವನು ನಮ್ಮ ಹಳ್ಳಿಯವನೇ. ಎಲ್ಲರಿಗೂ ದಿನಸಿ ಪೊಟ್ಟಣಗಳನ್ನು ಅವನು ವಿತರಿಸಿದ್ದಾನೆ. ಮೇಲಿನ ಗುತ್ತಿಗೆದಾರರಿಂದ ಅವನಿಗೆ ಹಣ ಬಂದಿಲ್ಲವಾಗಿ, ಮುಂದಿನ ದಿನಗಳಲ್ಲಿ ಹಣದ ವಿತರಣೆ ಸಾಧ್ಯವಿಲ್ಲವೆಂದು ಅವನು ನಮ್ಮಗಳಿಗೆ ತಿಳಿಸಿಯಾಗಿದೆ. ಕಟ್ಟಡಗಳ ಕೆಲಸಗಳು ಮತ್ತೆ ಶುರುವಾಗುವ  ಯಾವ ಸೂಚನೆಯೂ ಸಿಕ್ಕಿಲ್ಲ. ಹತ್ತಿರದ ಕೊಳಚೆ ಪ್ರದೇಶದಲ್ಲಿ ವಾಸಿಸುವ ನಮ್ಮ ಹಲವಾರು ಕೆಲಸಗಾರರು, ಮನೆಯ ಬಾಡಿಗೆಗಳನ್ನು ಕಟ್ಟಲಾಗದೆ, ಬೈಗುಳಗಳನ್ನು ಕೇಳಬೇಕಾಗಿ ಬಂದಿದೆ. ಮುಂದೇನು ಎಂಬುದೇ ತಿಳಿಯದು' ಎನ್ನುತ್ತಿದ್ದ ವಿಷ್ಣುವಿನ ದನಿಯಲ್ಲಿ ನೋವಿತ್ತು. 

ಮದನರು ಮಾತು ಮುಂದುವರೆಸಿ 'ವಿಷ್ಣು, ನಾನೊಬ್ಬ ವಕೀಲ. ಕೋರ್ಟಿನಲ್ಲಿ ಹೋರಾಡಿ ನಿಮ್ಮಗಳಿಗೆ ಸ್ವಲ್ಪವಾದರೂ ಸಂಬಳ ಬರುವಂತೆ ಮಾಡಬಲ್ಲೆ. ನಿನ್ನೊಡನಿರುವ ಎಲ್ಲ ಕೆಲಸಗಾರರನ್ನೂ ನನ್ನ ಕಚೇರಿಗೆ ಕರೆತರಬಲ್ಲೆಯ?' ಎಂದು ಕೇಳಿದರು. ನಮ್ಮ ಪರವಾಗಿ ಮಾತಾಡುವರೊಬ್ಬರಿದ್ದಾರೆ ಎಂದು ವಿಷ್ಣುವಿಗೆ ಆಗ ಅನಿಸಿದ್ದು ಸುಳ್ಳಾಗಿತ್ತಿಲ್ಲ. 

ಮಾರನೆಯ ದಿನವೇ ಒಂದೆರಡು ಸ್ನೇಹಿತರೊಂದಿಗೆ ವಿಷ್ಣು, ಮದನರ ಕಚೇರಿ ಬಳಿ ಬಂದಿದ್ದನು. 'ಮಿಕ್ಕವರೆಲ್ಲಾ ಎಲ್ಲಿ?' ಎಂಬುದು ಮದನರ ಪ್ರಶ್ನೆಯಾಗಿತ್ತು.  'ಸಾರ್, ಅವರುಗಳೆಲ್ಲಾ ಹೆದರಿದವರಾಗಿದ್ದಾರೆ. ನಾವುಗಳು ತಮ್ಮ ಬಳಿಗೆ ಬಂದ ವಿಷಯ ನಮ್ಮ ಗುತ್ತಿಗೆದಾರನಿಗೆ ತಿಳಿದರೆ, ಅವನು ಸುಮ್ಮನಿರುವುದಿಲ್ಲ. "ಮೇಲಿನ ಗುತ್ತಿಗೆದಾರರೊಡನೆ ಮಾತನಾಡಿದ್ದೇನೆ, ಸ್ವಲ್ಪವಾದರೂ ಹಣವನ್ನು ತಮ್ಮಗಳಿಗೆ ದೊರಕಿಸಬಲ್ಲೆ. ಸ್ವಲ್ಪ ತಾಳ್ಮೆಯಿಂದಿರಿ" ಎಂದವನು ನಮಗೆ ತಿಳಿಹೇಳಿದ್ದಾಗಿದೆ. ಏನೇ ಆಗಲಿ, ಅವನು ನಮ್ಮ ಹಳ್ಳಿಯವನು. ಎಲ್ಲರಿಗೂ ಅವನಲ್ಲಿ ನಂಬಿಕೆ ಇದೆ. ಆದುದರಿಂದ ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಸಾರ್,' ಎಂಬ ವಿಷ್ಣುವಿನ ಮಾತುಗಳಲ್ಲಿ ಭಯ ಹಾಗು ಮುಗ್ಧತೆಯ ಎರಡೂ ಭಾವಗಳು ಮದನರಿಗೆ ಕಂಡು ಬಂತು. ಇನ್ನು ಮಾತು ಬೆಳಸಿ ಪ್ರಯೋಜನವಿಲ್ಲವೆಂಬ ನಿರ್ಧಾರಕ್ಕೆ ಮದನರು ಬಂದಾಗಿತ್ತು. 

ಕಟ್ಟಡ ನೌಕರರ ಪರಿಸ್ಥಿತಿ ದಿನೇ ದಿನೇ ಚಿಂತಾಜನಕವಾಗುತ್ತಾ ಸಾಗುತ್ತಿದುದನ್ನು ಮದನರು ಗಮನಿಸುತ್ತಲೇ ಇದ್ದರು. ಕೈಯಲ್ಲಿ ಕೆಲಸವಿಲ್ಲದೇ ಅವರುಗಳು ಒಂದು ತಿಂಗಳು ಕಳೆದುದ್ದಾಗಿತ್ತು. ಲಾಕ್ಡೌನಿನಿಂದ ಸಧ್ಯಕ್ಕೆ ಬಿಡುಗಡೆ ದೊರಕದೆಂಬುದು ವಲಸಿಗ ಕೆಲಸಗಾರರೆಲ್ಲರಿಗೂ ತಿಳಿದಿತ್ತು. ಸುತ್ತಲ ೧೦೦ ಕಿ.ಮೀ.ನಷ್ಟು ದೂರದ ಹಳ್ಳಿಗಳ ನೌಕರರು ಕಾಲ್ನಡುಗೆಯಲ್ಲೇ ಹೊರಟು, ತಮ್ಮ ತಮ್ಮ ಹಳ್ಳಿಗಳನ್ನು ಸೇರಿಯಾಗಿತ್ತು. ದೂರದ ರಾಜ್ಯಗಳ ವಲಸೆ ಕೆಲಸಗಾರರೂ ತಮ್ಮ ಹಳ್ಳಿಗಳನ್ನು ಹೇಗಾದರೂ ತಲುಪುವ ತವಕದಲ್ಲಿದ್ದರು. ಸರಕಾರ, ಗುತ್ತಿಗೆದಾರರು ಮತ್ತು ಕೆಲವು ಸೇವಾ ಸಂಸ್ಥೆಗಳಿಂದ ದಿನಸಿ  ಪೊಟ್ಟಣಗಳೇನೋ ಅವರುಗಳಿಗೆ ಆಗೀಗ ಬರುತ್ತಿತ್ತು. ಆದರೆ ಆಹಾರದ ವಿತರಣೆ ಸಾಕಾಗುತ್ತಿರಲಿಲ್ಲ. ಕೆಲಸವೇ ಇಲ್ಲದ ಕೈಗಳಿಗೆ ಸಂಬಳವೊಂದು ದೂರದ ಕನಸಾಗಿತ್ತು.  ಈ ನಡುವೆ ದೂರದ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕೊಂಡೊಯ್ಯಲು ರೈಲುಗಳ ವ್ಯವಸ್ಥೆಯನ್ನು ಸರಕಾರ ಮಾಡುತ್ತಿರುವ ಬಗ್ಗೆ ಹಲವಾರು ಮೂಲಗಳಿಂದ ಸುದ್ದಿ ಬರತೊಡಗಿತ್ತು. 

ಹೀಗಿರುವಾಗ ಒಂದು ದಿನ ಬೆಳಗಾಗಿ ಏಳುವ ಹೊತ್ತಿಗಾಗಲೇ ಮದನರನ್ನು ಭಯಾನಕ ಸುದ್ದಿಯೊಂದು ಆಘಾತಗೊಳಿಸಿತ್ತು. ಕಳೆದ ರಾತ್ರಿ, ಮದನರ ಮನೆಯಿಂದ ಕೇವಲ ೫೦ ಕಿ.ಮೀ. ದೂರದ ರಾಜ್ಯದ ಹೆದ್ದಾರಿಯ ಪಾದಚಾರಿಗಳ ಪಥದಲ್ಲಿ ಮಲಗಿದ್ದ ೧೫ ವಲಸಿಗ ಕೆಲಸಗಾರರ ಮೇಲೆ ವೇಗವಾಗಿ ಬಂದ ಬಸ್ಸೊಂದು ಹರಿದು, ಅವರುಗಳೆಲ್ಲರೂ ಸ್ಥಳದಲ್ಲೇ ಮೃತರಾಗಿದ್ದರು. ಕಾಲ್ನಡುಗೆಯಲ್ಲಿ  ಹೊರಟಿದ್ದ ಸಹಸ್ರಾರು ಕಿ.ಮೀ.ಗಳ ದೂರದ ಪ್ರಯಾಣ,  ಅವರುಗಳ ಸಾವಿನೊಂದಿಗೆ ಮುಗಿದಿತ್ತು.  ಮದನ್ ಲಾಲರ ಊರಿನಿಂದ ತಮ್ಮ ಹಳ್ಳಿಗಳ ಕಡೆ ಕೊಂಡೊಯ್ಯುವ ರೈಲುಬಂಡಿಗಳನ್ನು ಹತ್ತಲು ಕಾಲ್ನಡುಗೆಯಲ್ಲಿ  ಹೊರಟಿದ್ದ ೧೮ ವಲಸಿಗರ ಪೈಕಿ ೧೫ ಜನ ಮೃತಪಟ್ಟಿದ್ದು, ಮೂವರು ಮಾತ್ರ ಬದುಕುಳಿದಿದ್ದರು. ಹತ್ತಲು ಹೊರಟಿದ್ದ ರೈಲುಗಾಡಿ, ಯಾವ ಕಾರಣಕ್ಕೂ ತಪ್ಪದಂತೆ ಯೋಜಿಸಿದ್ದ ಅವರುಗಳ ಪೈಕಿ, ೧೫ ಜನಗಳಿಗೆ  ಜೀವನ ಪಯಣವೇ ತಪ್ಪಿಹೋಗಿದ್ದು ಮಾತ್ರ ದೊಡ್ಡ ವಿಪರ್ಯಾಸವಾಗಿತ್ತು.  

ಅಪಘಾತದಲ್ಲಿ ಬದುಕುಳಿದ ಮೂವರು ಕೂಡ ಮಲಗಿದ್ದು ಅದೇ ಹೆದ್ದಾರಿಯ ಪಾದಚಾರಿಗಳ ಪಥದಲ್ಲಿಯೆ.  ಆದರೂ ಅವರುಗಳು ನಿದ್ರೆಗಿನ್ನು ಜಾರಿರದ ಕಾರಣ ಬದುಕುಳಿದಿದ್ದರು. 'ಎರಡು ದಿನಗಳ ಹಿಂದಿನ ಬೆಳಗ್ಗೆ ೧೦ರ ಸಮಯಕ್ಕೆ ನಾವುಗಳು ನಮ್ಮ ಊರುನಿಂದ ಕಾಲ್ನಡುಗೆಯಲ್ಲಿ ಹೊರಟೆವು. ಸಹಸ್ರಾರು ಮೈಲು ದೂರದ ನಮ್ಮ ಹಳ್ಳಿಯನ್ನು ತಲುಪುವುದು ನಮ್ಮ ಉದ್ದೇಶವಾಗಿತ್ತು. ಸುಮಾರು ೫೦ ಕಿ.ಮೀ.ನಷ್ಟು ದೂರವನ್ನು ಕ್ರಮಿಸಿ, ನಮ್ಮನ್ನು ಕೊಂಡೊಯ್ಯುವ ರೈಲುಬಂಡಿ ಹೊರಡುವ ರೈಲು ನಿಲ್ದಾಣವನ್ನು ತಲುಪುವುದರಿಲ್ಲಿದ್ದೆವು. ರೈಲುಬಂಡಿ ಹೊರಡಲು ಇನ್ನೆರಡು ದಿನಗಳ ಸಮಯಾವ ಕಾಶವಿದೆಯೆಂದು ತಿಳಿದಿತ್ತು.  ಅಷ್ಟು ಹೊತ್ತಿಗಾಗಲೇ ಸಮಯ ರಾತ್ರಿ ೮ ಘಂಟೆಯಾಗಿತ್ತು. ೫೦ ಕಿ.ಮೀ.ನಷ್ಟು ದೂರ ನಡೆದು ನಾವೆಲ್ಲರೂ ದಣಿದಿದ್ದೆವು. ಲಾಕ್ಡೌನ್ ದಿನಗಳಾದ್ದರಿಂದ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಬಹಳ ಕಮ್ಮಿಯಿತ್ತು. ಹೆದ್ದಾರಿಯ ಬದುವಿನಲ್ಲೇ ವಿರಮಿಸಲು ಕುಳಿತ ನಾವುಗಳು ರೊಟ್ಟಿ-ಪಲ್ಯಗಳನ್ನು ತಿನ್ನುವಷ್ಟರಲ್ಲೇ, ನಮ್ಮಲ್ಲಿನ ಹಲವರುಗಳು ನಿದ್ದೆಗೆ ಜಾರಿದ್ದಾಗಿತ್ತು. ವೇಗವಾಗಿ ಅಡ್ಡಾದಿಡ್ಡಿ ಚಲಿಸುತ್ತಾ ಬರುತ್ತಿದ್ದ ಬಸ್ಸೊಂದನ್ನು ಎಚ್ಚರವಿದ್ದ ನಾವು ಮೂವರೂ ಮುಂಚೆಯೇ ನೋಡಿದ್ದೆವು. ಬಸ್ಸು ಮಾಮೂಲಿನಂತೆ ಹೆದ್ದಾರಿಯಲ್ಲೇ ಹೋಗುವುದೆಂದು ಎಣಿಸಿದ್ದೆವು.  ನಮ್ಮವರು ನಿದ್ರಿಸುತ್ತಿದ್ದ ಸ್ಥಳಕ್ಕೆ, ಸ್ವಲ್ಪ ದೂರದಿಂದ ಧಾವಿಸಿ ಬರುತ್ತಿದ್ದ ಬಸ್ಸು ನಿಯಂತ್ರಣ ತಪ್ಪಿ ಪಾದಚಾರಿಗಳ ಪಥದ ಕಟ್ಟೆಯನ್ನೇರಿತ್ತು. ಎಚ್ಚರವಿದ್ದ ನಾವುಗಳು ಎಷ್ಟೇ ಕಿರುಚಾಡಿದರೂ, ಮಲಗಿದ್ದ ನಮ್ಮವರುಗಳು ಏಳಲಿಲ್ಲ. ಬಸ್ ಚಾಲಕ ಬಸ್ಸನ್ನು ನಿಯಂತ್ರಿಸಲಾಗಲಿಲ್ಲ. ನೋಡು ನೋಡುತ್ತಲೇ ಆ ಪಾಪಿ ಬಸ್ಸು ಮಲಗಿದ್ದ  ನಮ್ಮವರುಗಳ ಮೇಲೆ ಹರಿದು ಅವರುಗಳ ಪ್ರಾಣಗಳನ್ನು ತೆಗೆದಿತ್ತು' ಎಂದು ವಿವರಿಸುತ್ತಾ ಟಿ.ವಿ. ಸುದ್ದಿಗಾರರ ಮುಂದೆ ರೋದಿಸಿದವನೇ ಸೋನು ಮಂಡಲ್ ಎಂದು ತಿಳಿಯಲು ಮದನ್ ಲಾಲರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. 

ಕೂಡಲೇ ಮದನ್ ಲಾಲರ ಕಣ್ಣು ಮೃತರ ಪಟ್ಟಿಯ ಮೇಲೆ ಹರಿಯಿತು. ಸತ್ತವರ ಪೈಕಿ ಸೋನುವಿನ ತಂದೆ ವಿಷ್ಣು ಮಂಡಲರ ಹೆಸರೂ ಇದ್ದುದನ್ನು ನೋಡಿ ಅವರು ಬೇಸರಗೊಂಡರು. 'ಇದೆಂತಹ ದುರಂತ? ದಿನ ನಿತ್ಯ ರೈಲುಗಾಡಿಯ ಆಟದಲ್ಲಿ ನಿರ್ವಾಹಕನಾಗುತ್ತಿದ್ದ ಸೋನು, ಅತ್ಯಾವಶ್ಯಕವಾದಾಗ  ಬಸ್ಸೊಂದನ್ನು ನಿಲ್ಲಿಸಿ ತನ್ನವರ ಪ್ರಾಣಗಳನ್ನು ಉಳಿಸಿಕೊಳ್ಳದಾದನೆ?' ಎನಿಸಿದ ಮದನ್ ಲಾಲರ ಕಣ್ಣುಗಳು ಅಪಘಾತದ ಕರಾಳ ದೃಶ್ಯಗಳ ಮೇಲೆ ಬಿತ್ತು. ಹೆದ್ದಾರಿಯ ಕಾಲ್ನಡುಗೆಯ ಪಥದ  ಭರ್ತಿ ಚದುರಿ ಹರಡಿದ್ದ ರುಂಡ-ಮುಂಡಗಳು, ಕೈ-ಕಾಲುಗಳು, ಸೂಟ್ಕೇಸುಗಳು, ರೊಟ್ಟಿಯ ಚೂರುಗಳ ದೃಶ್ಯ ಎಲ್ಲರ ಮನ ಕಲಕುವಂತ್ತಿತ್ತು.   

 'ಅಂದು ಇಡೀ ಬಸ್ ಖಾಲಿಯಿತ್ತು. ಬಸ್ಸನ್ನು ನಾನು ಗ್ಯಾರೇಜ್ ಕಡೆಗೆ ಚಲಾಯಿಸುತ್ತಿದ್ದೆ. ತಡ ರಾತ್ರಿಯಾದುದರಿಂದ ಬಸ್ಸನ್ನು ನಾನು ವೇಗವಾಗೇ ಓಡಿಸುತ್ತಿದ್ದೆ. ರಸ್ತೆಯ ಬದಿಯಲ್ಲೇ ಹಲವರು ಮಲಗಿದ್ದುದನ್ನು ನಾನು ದೂರದಿಂದಲೇ ನೋಡಿದ್ದೆ.  ಇದ್ದಕ್ಕಿದ್ದಂತೆ ನನಗೆ ಬಸ್ ಮೇಲಿನ ನಿಯಂತ್ರಣ ತಪ್ಪಿತು. ಬ್ರೇಕ್ ಹಾಕಿದ್ದು, ಜೋರಾಗಿ ಹಾರ್ನ್ ಬಾರಿಸಿದ್ದು, ಪ್ರಯೋಜನಕ್ಕೆ ಬರಲಿಲ್ಲ.  ನಿಯಂತ್ರಣ ತಪ್ಪಿದ ಬಸ್ಸು ಕಾಲ್ನಡುಗೆಯ ಕಟ್ಟೆಯನ್ನು ಹತ್ತೇ ಬಿಟ್ಟಿತ್ತು. ನೋಡು ನೋಡುವಷ್ಟರಲ್ಲೇ ಮಲಗಿದ್ದ ಹಲವರ ಮೇಲೆ ಬಸ್ಸು ಹರಿದೇ ಬಿಟ್ಟಿತ್ತು. ಬಡ ವಲಸಿಗ ಕೆಲಸಗಾರರ ಸಾವಿಗೆ ಕಾರಣನಾದ ನನ್ನನ್ನು ಕ್ಷಮಿಸಿ' ಎಂದು ಕೋರಿಕೊಂಡ ಬಸ್ ಚಾಲಕನ ಮುಖದಲ್ಲೂ ವಿಷಾದವಿತ್ತು. 

ಅಪಘಾತ ಜರುಗಿದ ರಾಜ್ಯದ ಮುಖ್ಯ ಮಂತ್ರಿಗಳು ಮೃತ ಪಟ್ಟವರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದರು. ವಲಸಿಗರ ರಾಜ್ಯದ ಮುಖ್ಯ ಮಂತ್ರಿಗಳು ಕೂಡ ಅಷ್ಟೇ ಮೊತ್ತದ ಪರಿಹಾರವನ್ನು ಸಂಬಂಧ ಪಟ್ಟ ಕುಟುಂಬಗಳಿಗೆ ಘೋಷಿಸಿದ್ದರು. ಹಣದ ರಾಶಿ ಹಾರಿ ಹೋದ ಜೀವಗಳನ್ನು ಮರಳಿಸಬಲ್ಲುದೆ, ಎಂಬುದು ಮದನ್ ಲಾಲರ ಚಿಂತೆಯಾಗಿತ್ತು. ಮನೆಯಲ್ಲಿ ಕೂತು  ಮೊಬೈಲುಗಳನ್ನು ಒತ್ತುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ವಿತಂಡ ವಾದಿಗಳು ಅಪಘಾತದ ಬಗ್ಗೆ ಹರಿಬಿಟ್ಟಿದ್ದ ಉಡಾಫೆ ಟಿಪ್ಪಣಿಗಳು ಮದನರನ್ನು ಕುಪಿತರನ್ನಾಗಿಸಿತ್ತು. 'ಅಪಘಾತಕ್ಕೆ ವಲಸಿಗರ ಬೇಜಾಬ್ದಾರಿಯೇ ಕಾರಣ. ಅವರುಗಳು ಬೇರೆಯವರನ್ನು ಬೈದು ಪ್ರಯೋಜನವಿಲ್ಲ. ಹೆದ್ದಾರಿಯ ಕಾಲ್ನಡುಗೆಯ ಪಥದಲ್ಲಿ ಮಲಗುವ ಮುನ್ನ ಅವರುಗಳು ಕೊಂಚ ಯೋಚಿಸಬೇಕಿತ್ತು. ಅವರುಗಳ ಬೇಜಾಬ್ದಾರಿಗೆ ಪ್ರಾಯಶಃ ಅವರುಗಳ ಕುಡಿತದ ಚಟವೇ ಕಾರಣವಿರಬೇಕು. ಹೆದ್ದಾರಿಯ ಪಕ್ಕದಲ್ಲೇ ಇದ್ದ ದೊಡ್ಡ ಮೈದಾನದಲ್ಲೇಕೆ ಅವರುಗಳು ಮಲಗಲಿಲ್ಲ? ಆ ಮೂರ್ಖರ ಬೇಜಾಬ್ದಾರಿಯಿಂದುಂಟಾದ ಸಾವುಗಳಿಗೆ ಭಾರಿ ಮೊತ್ತದ ಸರಕಾರಿ ಪರಿಹಾರವೇಕೆ?' ಎಂಬ ನಿಷ್ಕರುಣರ  ಮಾತುಗಳನ್ನು ಫೇಸ್ಬುಕ್/ವಾಟ್ಸಪ್ಪುಗಳಲ್ಲಿ ಓದಿದ ಮದನರ ಮನಸ್ಸು ರೋಸಿ ಹೋಗಿತ್ತು. 'ಅತ್ಯಾಚಾರದ ಘಟನೆಗಳು ನಡೆದಾಗ, ಅತ್ಯಾಚಾರಕ್ಕೊಳಗಾದ ಬಲಿಪಶುಗಳದ್ದೆ ತಪ್ಪೆನ್ನುವ ನಮ್ಮ ಜನಗಳಿಂದ ಬೇರ್ಯಾವ ರೀತಿಯ ಮಾತುಗಳನ್ನು ನೀರಿಕ್ಷಿಸಲು ಸಾಧ್ಯ?' ಎಂಬುದು ಮದನರ್ ಮನಸ್ಸಿನ ಉದ್ಗಾರವಾಗಿತ್ತು. 

ಮದನ್ ಲಾಲರ ಯೋಚನಾ ಲಹರಿ ಮುಂದುವರೆದಿತ್ತು......  'ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡವರ, ಬಾಡಿಗೆ ಮನೆಗಳಿಂದ ಹೊರದೂಡಲ್ಪಟ್ಟವರ, ಹೆಂಡತಿ ಮಕ್ಕಳುಗಳೊಡನೆ ಸಾಮಾನುಗಳನ್ನು ಹೊತ್ತು  ಸುಡುಬಿಸಿಲ ನಡುವೆ ಕಾಲ್ನಡುಗೆಯಲ್ಲಿ ತಮ್ಮೂರಿನತ್ತ ತೆರಳುತ್ತಿರುವರ ನೋವು, ಹವಾನಿಯಂತ್ರಿತ ಕೋಣೆಯ ಆರಾಮದ ಕುರ್ಚಿಗಳ ಮೇಲೆ ಕುಳಿತು ಬರೆಯುವ ಈ ಸ್ವಯಂ ನಿಯೋಜಿತ ಸುದ್ದಿ ವಿಶ್ಲೇಷಕರಿಗೆ ತಿಳಿಯುತ್ತದೆಯೆ? ಅಸಹಾಯಕತೆ ಮತ್ತು ಆಯಾಸದಿಂದ ದಣಿದ ಮನಸ್ಸುಗಳಲ್ಲುಂಟಾದ ಆಘಾತಗಳಿಂದ  ವಿವೇಚನೆ ಕಳೆದು ಹೋಗುವುದು  ಸಹಜವಲ್ಲವೆ? ಕೋರ್ಟಿನ  ನ್ಯಾಯಾಧೀಶರುಗಳಿಗೆ ಅಂತಹ ವಲಸಿಗರ ಮೇಲೆ ಅನುಕಂಪ ಮೂಡಲಾರದೆ?'

ಲಾಕ್ಡೌನ್ ಜಾರಿಗೊಂಡನಂತರ, ರೈಲು ಮತ್ತು ರಸ್ತೆ ಅಪಘಾತಗಳಲ್ಲಿ ಸುಮಾರು ೭೨ರಷ್ಟು ವಲಸಿಗರು ಮೃತಪಟ್ಟಿದ್ದಾರೆಂದು ಕೇಂದ್ರ ಸರಕಾರಕ್ಕೆ ತಿಳಿದಿತ್ತು. ಇನ್ನೂ ಹೆಚ್ಚು ಜನರು ಹೊಟ್ಟೆಗಿಲ್ಲದೆ, ಕುಡಿಯಲು ನೀರಿಲ್ಲದೆ ಮತ್ತು ಬಿಸಿಲಿನ ತಾಪವನ್ನು ತಾಳಲಾರದೆ ಸತ್ತಿದ್ದರು. ೨೦೨೦ರ ಮಾರ್ಚ್ ೩೧ರ ದಿನ ಕೇಂದ್ರ ಸರಕಾರ  'ವಲಸಿಗರ್ಯಾರೂ ರಸ್ತೆ ಮತ್ತು ರೈಲ್ವೆ ಹಳಿಗಳ ಮೇಲೆ ಕಾಲ್ನಡುಗೆಯಲ್ಲಿ ತಮ್ಮ ಹಳ್ಳಿಗಳತ್ತ ನಡೆಯುವಂತೆ ಮಾಡುವುದಿಲ್ಲ. ಅವರುಗಳೆಲ್ಲರಿಗೂ ವಸತಿ ಹಾಗೂ ಆಹಾರದ ವ್ಯವಸ್ಥೆಗಳನ್ನು ಅವರುಗಳಿರುವಲ್ಲಿಯೇ ಮಾಡಿಕೊಡುತ್ತೇವೆಂಬ' ವಾಗ್ದಾನವನ್ನು ಪರಮೋಚ್ಚ ನ್ಯಾಯಾಲಯಕ್ಕೆ ನೀಡಿದ್ದಾಗಿತ್ತು. ಅದರನಂತರದ ದಿನಗಳಲ್ಲಿ ವಲಸಿಗರಿಗೆ ತಮ್ಮ ತಮ್ಮ ಊರುಗಳತ್ತ ಪ್ರಯಾಣಿಸಲು ಬಸ್ ಹಾಗು ರೈಲುಗಳ ವ್ಯವಸ್ಥೆಯನ್ನು ಕಲ್ಪಿಸುವ ಪ್ರಯತ್ನಗಳನ್ನು ಸರಕಾರಗಳು ಮಾಡಿದ್ದವು. ಆದರೂ ವ್ಯವಸ್ಥೆ ಸಮರ್ಪಕವಾಗಿರದೆ, ರೈಲು-ಬಸ್ಸುಗಳು ಹೊರಡುವ ಬಗ್ಗೆ ತಪ್ಪು ಮಾಹಿತಿಗಳು, ವದ೦ತಿಗಳು ಹರಿದಾಡಿ ವಲಸಿಗರನ್ನು ಹೈರಾಣಾಗಿಸಿದ್ದವು. ರದ್ದಾದ ಮತ್ತು ತಪ್ಪಿ ಹೋದ ರೈಲು-ಬಸ್ಸುಗಳಿಗಂತೂ ಲೆಕ್ಕವೇ ಇಲ್ಲದಂತಾಗಿ, ಪ್ರಯಾಣಕ್ಕೆ ಕಟ್ಟಿದ ಹಣ ವಾಪಸ್ಸು ಪಡೆಯುವುದು ಹೇಗೆಂಬ ಮಾಹಿತಿ ವಲಸಿಗರಿಗೆ ತಿಳಿಯದಾಗಿತ್ತು. ಹೀಗಾಗಿ ರೈಲ್ವೆ ಹಳಿಗಳ ಮೇಲೆ, ಹೆದ್ದಾರಿಯ ಕಾಲ್ನಡುಗೆಯ ಪಥಗಳ ಮೇಲೆ ವಲಸಿಗ ಕೆಲಸಗಾರರು ಮಲಗುವಂತಹ ಪರಿಸ್ಥಿತಿ ಏಕೆ ಉಂಟಾಯಿತು ಎಂಬುದು ಸಂಬಂಧಪಟ್ಟವರಿಗೆಲ್ಲ ತಿಳಿದ ವಿಷಯವೇ ಆಗಿತ್ತು. ಹಸಿವು, ಬಾಯಾರಿಕೆ ಮತ್ತು ದಣಿವಿನಿಂದ ಬಳಲಿ ನಿದ್ರಿಸುತ್ತಿದ್ದ ಅವರುಗಳನ್ನು ಓಡುತ್ತಿರುವ ರೈಲು-ಬಸ್ಸುಗಳ ಶಬ್ದ ಕೂಡ  ಎಚ್ಚರಿಸಲಾಗದಿದ್ದುದು ದುರಂತವೇ ಸರಿ. 'ರೈಲು-ಬಸ್ಸುಗಳ ಪಥದ ಮೇಲೆ ಚದುರಿ ಬಿದ್ದ ವಲಸಿಗರ ಕಾಲು-ಕೈಗಳಿಂದಲೇ ನಮ್ಮ ರಸ್ತೆಗಳು, ಸೇತುವೆಗಳು, ಅಣೆಕಟ್ಟುಗಳು ನಿರ್ಮಾಣಗೊಂಡಿದ್ದೆಂಬುದನ್ನು ಯಾರೂ ಮರೆಯುವಂತಿಲ್ಲ. ಅವರುಗಳ ಛಿದ್ರವಾದ ದೇಹಗಳ ಸುತ್ತ ಚದುರಿ ಬಿದ್ದ            ರೊಟ್ಟಿಗಳನ್ನೇನೋ ಅವರುಗಳೇ ತಯಾರಿಸಿದ್ದು. ಆದರೆ ಅವರುಗಳ ಪ್ರಾಣಗಳನ್ನು  ಹರಣ ಮಾಡಿದ್ದ  ಸಾವುಗಳನ್ನು ಮಾತ್ರ ಅವರುಗಳು ತಂದುಕೊಂಡಿದ್ದೆಂದು ಹೇಳಲಾಗದು' ಎಂಬ ಹೊಸ ವಾದ ಸರಣಿಯೊಂದನ್ನು ಮದನರ ಮನಸ್ಸು ಯೋಚಿಸುತ್ತಿತ್ತು. 

'ಸಂತ್ರಸ್ತರ ಕಣ್ಣು-ಕಿವಿಗಳ ತುಡಿತಗಳನ್ನು ಗಮನಿಸುವ ಹಾಗೂ ಅವರುಗಳ ಹೃದಯದ ಮಿಡಿತಗಳನ್ನು ಅರಿಯುವ ಅಂತಃಕರಣವೇ ಅನುಕಂಪದ ಮೂಲ'ವೆಂಬ ಸಮಾಜ ಶಾಸ್ತ್ರಜ್ಞ ಆಲ್ಫ್ರೆಡ್ ಅಡ್ಲರರ ಮಾತುಗಳು  ಮದನ್ ಲಾಲರ ಕಿವಿಯಲ್ಲಿ ರಿಂಗಣಿಸುತ್ತಿದ್ದವು. 

                                                                                                ***

ಮದನ್ ಲಾಲ್ ಮತ್ತು ಸಲೋನಿಯವರು ಬಾಲ್ಯ ಸ್ನೇಹಿತರೂ ಹಾಗೂ ಸಹಪಾಠಿಗಳಾಗಿದ್ದವರು. ಬೇರೆ ರಾಜ್ಯವೊಂದರ ಸರ್ಕಾರಿ ಅಧಿಕಾರಣಿಯಾಗಿದ್ದರೂ ಸಲೋನಿ, ಮದನ್ ಲಾಲರ ಸಂಪರ್ಕದಲ್ಲಿದ್ದರು. ವಕೀಲ ಮದನ್ ಲಾಲರ ಕಾನೂನಿನ ಜ್ಞಾನ ಹಾಗೂ ಬಡವರುಗಳ ಮೇಲಿನ ಕಳಕಳಿಯ ಬಗ್ಗೆ  ಸಲೋನಿಗೆ ಅಪಾರ ಮೆಚ್ಚುಗೆಯಿತ್ತು. ಬಡ ಕೆಲಸಗಾರರ ನೂರಾರು ಕಾನೂನಿನ ಹೋರಾಟಗಳನ್ನು ಯಶಸ್ವಿಯಾಗಿ ಮದನ್ ಲಾಲರು ನಿರ್ವಹಿಸಿದ್ದ ವಿಷಯ ಸಲೋನಿಗಿ ತಿಳಿದಿತ್ತು.  ಕಳೆದ ವರ್ಷ, ತಮ್ಮ ರಾಜ್ಯದ ಜಿಲ್ಲೆಯೊಂದರ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಅಧಿಕಾರಿಣಿಯಾಗಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಹಾಗಾಗಿ ಮದನ್ ಲಾಲರಿಂದ ಆಗಾಗ ತಮ್ಮ ಇಲಾಖೆಗೆ ಸಂಬಂಧಪಟ್ಟಂತಹ ಕಾನೂನಿನ ಸಲಹೆಯನ್ನು ಸಲೋನಿ ಪಡೆಯುತ್ತಿದ್ದುದು  ಸಾಮಾನ್ಯವಾಗಿತ್ತು. ತನ್ನ ಇಲಾಖೆಗೆ ಸಂಬಂಧಪಟ್ಟಂತಹ ರಾಜ್ಯ ಹಾಗೂ ರಾಷ್ಟ್ರದ ಆಗು-ಹೋಗುಗಳು ಮತ್ತು ಅಂಕಿ-ಅಂಶಗಳು  ದಕ್ಷ ಅಧಿಕಾರಿಣಿಯಾಗಿದ್ದ ಸಲೋನಿಯವರ ಬೆರಳ ತುದಿಯಲ್ಲೇ ಇರುತ್ತಿತ್ತು. 

ಒಂದು ಭಾನುವಾರದ ಬೆಳಗ್ಗೆ ಸಲೋನಿ, ಮದನ್ ಲಾಲರಿಗೆ ಫೋನಾಯಿಸಿದ್ದರು. 'ಮದನ್ ಹೇಗಿದ್ದೀರಿ? ಇಂಟರ್ನೆಟ್ನಲ್ಲಿ, ನಿಮ್ಮ ರಾಜ್ಯದಲ್ಲಿ ನಡೆದ ಹೆದ್ದಾರಿ ಬಸ್ ದುರ್ಘಟನೆಯ ಬಗ್ಗೆ ತಾವು ಬರೆದ ವಿಶ್ಲೇಷಣೆಯನ್ನು ಓದಿದೆ. ದುರ್ಘಟನೆಯಲ್ಲಿ ೧೫ ಜನ ಅಮಾಯಕ ವಲಸಿಗರ ಸಾವು ಸಂಭವಿಸಿದ್ದನ್ನು ಕೇಳಿ ನನ್ನ ಮನಸ್ಸಿಗೆ ನೋವಾಯಿತು. ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರವನ್ನೊದಗಿಸಲು, ತಾವು ಕಾನೂನಿನ ಹೋರಾಟ ಕೈಗೆತ್ತಿಕೊಂಡಿರುವ ವಿಷಯ ತಿಳಿಯಿತು. ತಮ್ಮ ಹೋರಾಟ ಕೈಗೂಡಿದಲ್ಲಿ, ಇಡೀ ರಾಷ್ಟ್ರದ ವಲಸಿಗ ಕೆಲಸಗಾರರ ಸೇವಾ ನಿಯಮಗಳಲ್ಲಿ ಮಾರ್ಪಾಡುಂಟಾಗಿ, ಅವರುಗಳ ಜೀವನ ಹೆಚ್ಚು ಸುಗಮವಾಗಬಹುದೆಂಬ ನಂಬಿಕೆ ನನಗಿದೆ. ಇಲ್ಲಿ ನನ್ನ ಇಲಾಖೆಯ ವ್ಯಾಪ್ತಿಯು ಕೂಡ ವಲಸಿಗ ಕೆಲಸಗಾರರಿಗೆ ಸಂಬಂಧಪಟ್ಟದ್ದಾದುದರಿಂದ, ತಮ್ಮಿಂದ ಕೆಲವು ಸಲಹೆಗಳನ್ನು ಪಡೆಯೋಣವೆಂದು ತಮಗೆ ಕರೆ ಮಾಡಿದ್ದೇನೆ. ನನ್ನೊಂದಿಗೆ ಮಾತನಾಡಲು ತಮಗೆ ಸ್ವಲ್ಪ ಸಮಯವಿದೆಯೆ?'

'ಪ್ರಾಮಾಣಿಕವಾಗಿ ಸಲಹೆ ಕೇಳುವ ತಮಗೆ ನನ್ನ ಬಳಿ ಯಾವಾಗಲೂ ಸಮಯವಿದ್ದೇ ಇರುತ್ತದೆ. ತಮ್ಮ ಕಾರ್ಯಬದ್ಧತೆಯ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಆದರೆ ತಮ್ಮ ಸಮಸ್ಯೆಗಳಿಗೆ ದೀರ್ಘವಾದ ಚರ್ಚೆ ಅವಶ್ಯಕವಿರಬಹುದೆಂದು ನನ್ನ ಅನಿಸಿಕೆ. ತಮ್ಮ ಸಮಸ್ಯೆಗಳನ್ನು ವಿವರಿಸಿ ತಾವು ಇ-ಅಂಚೆಯೊಂದನ್ನು ಕಳುಹಿಸಬಾರದೇಕೆ?' ಎಂದು ಉತ್ತರಿಸಿದರು ಮದನ್. 

ಮಾರನೆಯ ದಿನವೇ ಮದನರ ಕೈಸೇರಿದ ಇ-ಅಂಚೆ ಹೀಗಿತ್ತು. 'ಮದನ್ ಲಾಲರವರಿಗೆ...., ನನ್ನ ಇಲಾಖೆಗೆ ಸಂಬಂಧಪಟ್ಟಂತಹ ಕೆಲವು ವಿಷಯಗಳ ಬಗ್ಗೆ ತಮ್ಮ ಸಲಹೆಯನ್ನು, ನಾನು ವೈಯಕ್ತಿಕವಾಗಿ ಕೇಳುತ್ತಿದ್ದೇನೆ. ನಿಮಗೆ ತಿಳಿದಿರುವಂತೆ ನಾನು ಬೇರೊಂದು ರಾಜ್ಯವೊಂದರಲ್ಲಿ ಸೇವೆ ಸಲ್ಲಿಸುತ್ತಿರುತ್ತೇನೆ. ನನ್ನ ಇಲಾಖೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ, ನನ್ನ ರಾಜ್ಯದ ಪರಿಸ್ಥಿತಿಗಳ ಅರಿವು ಮತ್ತು ನಮ್ಮ ಹಿರಿಯಧಿಕಾರಿಗಳ ಸಮ್ಮತಿಯೂ ಮುಖ್ಯ ಎಂಬುದು ನನಗೆ ಗೊತ್ತು. 

ಕೃಷಿ ಕ್ಷೇತ್ರವನ್ನು ಹೊರತು ಪಡಿಸಿ, ನಿರ್ಮಾಣ ಕ್ಷೇತ್ರ  ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬುದು ತಮಗೆ ಗೊತ್ತು. ನಮ್ಮ ದೇಶದಲ್ಲಿ ಸುಮಾರು  ೧೪ ಕೋಟಿಗಳಷ್ಟು ವಲಸಿಗ ಕೆಲಸಗಾರರಿದ್ದು, ಅವರುಗಳ ಪೈಕಿ ೫ ಕೋಟಿಯಷ್ಟು ಕೆಲಸಗಾರರು ದುಡಿಯುವುದು ನಿರ್ಮಾಣ ಕ್ಷೇತ್ರದಲ್ಲಿ. ನಮ್ಮ ರಾಜ್ಯದ ನಾಲ್ಕು ನಗರಗಳಲ್ಲಿ, ಹಲವಾರು ಭಾರಿ ನಿರ್ಮಾಣ ಕ್ಷೇತ್ರದ ಕಂಪನಿಗಳು, ನೂರಾರು ಬೃಹತ್ ಕಟ್ಟಡಗಳ ನಿರ್ಮಾಣ ಮಾಡುತ್ತಿವೆ. ಆದರೆ ನಾನು ನಮ್ಮ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಣಿ ಮಾತ್ರ. ಕಳೆದ ಮಾರ್ಚ್ ೨೫ರಂದು ದೇಶಾದ್ಯಂತ ಜಾರಿಗೊಂಡ ಲಾಕ್ಡೌನ್, ನಿರ್ಮಾಣ ಕ್ಷೇತ್ರದ ವಲಸಿಗ ಕೆಲಸಗಾರರಿಗೆ ಕಂಡು ಕೇಳರಿಯದ ಸಮಸ್ಯೆಗಳನ್ನು ತಂದೊಡ್ಡಿದೆ. ನನ್ನ ಜಿಲ್ಲೆಯ ವಲಸಿಗ ಕೆಲಸಗಾರರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿತ್ತಿದ್ದೇನೆ.  

ಸಾವಿರಾರು ಕಟ್ಟಡ ನಿರ್ಮಾಣ ಕೆಲಸಗಾರರು ಪರಿಹಾರ ಕೇಳಿ ನನ್ನನ್ನು ಸಂಪರ್ಕಿಸಿದ್ದಾರೆ. ಲಾಕ್ಡೌನ್ ಜಾರಿಗೊಂಡಾಗಿನಿಂದ ಇವರುಗಳು ತಮ್ಮ ಕೆಲಸಗಳನ್ನು ಕಳೆದುಕೊಂಡು ಆದಾಯವಿಲ್ಲದೆ, ವಸತಿ ಸೌಕರ್ಯವನ್ನು ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಅವರುಗಳಲ್ಲಿ ಕೆಲವರಿಗೆ ಮಾತ್ರ ವಸತಿ ಸೌಕರ್ಯ ಇನ್ನೂ ಉಳಿದಿದ್ದು, ಅಲ್ಪ-ಸ್ವಲ್ಪ ದಿನಸಿ ಪೊಟ್ಟಣಗಳು ಅವರುಗಳ ಗುತ್ತಿಗೆದಾರರ ಮೂಲಕ ದೊರೆಯುತ್ತಿವೆ. ಹಲವಾರು ನೌಕರರು ಬಾಡಿಗೆ ಶೆಡ್ಡುಗಳಲಿದ್ದು ಅವರುಗಳಿಗೆ ಬಾಡಿಗೆ ಕಟ್ಟಲಾಗುತ್ತಿಲ್ಲ. ಶೆಡ್ಡುಗಳನ್ನು ಖಾಲಿ ಮಾಡುವಂತೆ ಅವರುಗಳ ಮೇಲೆ ಬಲಾತ್ಕಾರ ನಡೆಯುತ್ತಿದೆ. ನನ್ನ ಇಲಾಖೆಯ ಮುಖಾಂತರ, ಕಳೆದ ಏಪ್ರಿಲ್ ತಿಂಗಳಂದು ಹಲವು ವಲಸಿಗರಿಗೆ ನಾವು ದಿನಸಿ ಪೊಟ್ಟಣಗಳನ್ನು ಒದಗಿಸಿದ್ದೆವು. ಹಲವಾರು ಸ್ವಯಂ ಪ್ರೇರಿತ ಸಂಘ ಸಂಸ್ಥೆಗಳ ನೆರವಿನ ಸಹಕಾರವಿದ್ದರೂ, ನಮ್ಮ ಜಿಲ್ಲೆಯ ಎಲ್ಲಾ ವಲಸಿಗರಿಗೆ  ಮೇ ತಿಂಗಳ ದಿನಸಿ ವಿತರಿಸಲಾಗಿಲ್ಲ. ಹಲವಾರು ಕೆಲಸಗಾರರು ನನ್ನಲ್ಲಿ ಬೇಡಿಕೆ ಇಟ್ಟಿದ್ದು, ಅವರುಗಳ ಗುತ್ತಿಗೆದಾರರು ತಡೆ ಹಿಡಿದಿಟ್ಟಿರುವ ಸುಮಾರು ತಲಾ ೨೫,೦೦೦ ರುಪಾಯಿಗಳಷ್ಟು ಹಣವನ್ನು ಬಿಡುಗಡೆ ಮಾಡಿಸಿಕೊಡಬೇಕಾಗಿ ಕೇಳಿಕೊಂಡಿದ್ದಾರೆ. ಗುತ್ತಿಗೆದಾರ ರುಗಳ ಪ್ರತಿನಿಧಿಗಳೊಂದಿಗೆ ಈ ವಿಷಯವನ್ನು ಚರ್ಚಿಸಿದ್ದೇನೆ. ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿದ್ದು, ಅವರುಗಳ ಮೇಲಧಿಕಾರಿಗಳು ಹಣ ಬಿಡುಗಡೆಗೆ ಸಿದ್ಧರಿಲ್ಲ. 

ನನ್ನ ಇಲಾಖೆಯ ಮೇಲಿನ ಅಧಿಕಾರಿಗಳಿಗೆ ನನ್ನ ಕಾರ್ಯ ವೈಖರಿ ಬಗ್ಗೆ ಅಸಮಾಧಾನವಿದೆ. ನಾನು "ಅತಿ ಜಾಣೆ"ಯಾಗಲು ಪ್ರಯತ್ನಿಸುತ್ತಿದ್ದೇನೆಂಬುದು ಅವರುಗಳ ಅನಿಸಿಕೆ. ನನ್ನ ಮೇಲಿನ ರಾಜ್ಯ ಮಟ್ಟದ ಅಧಿಕಾರಿಗಳು "ನಿಮ್ಮ ಇತಿ-ಮಿತಿ"ಯೊಳಗಿರಿ ಎಂದು ನನ್ನನ್ನು ಎಚ್ಚರಿಸಿದ್ದಾರೆ. "ವಲಸೆ ಕೆಲಸಗಾರರ ಸಾಮಾನ್ಯ ಸಮಸ್ಯೆಗಳ ಬಗ್ಗೆ ರಾಜ್ಯಮಟ್ಟದಲ್ಲಿ ತೆಗೆದುಕೊಳ್ಳಬಹುದಾದ ನಿರ್ಧಾರಗಳ ತನಕ ಸುಮ್ಮನಿರಿ"ಎಂಬುದು ಅವರುಗಳ ಅಲಿಖಿತ ಆಜ್ಞೆಯಾಗಿದೆ. ನಾನು ಜಿಲ್ಲಾ ಮಟ್ಟದ ಅಧಿಕಾರಿಣಿ ಮಾತ್ರವಾಗಿದ್ದು, ಸ್ವತಂತ್ರವಾಗಿ ಹೊಸ ಕ್ರಮಗಳನ್ನು ಕೈಗೂಳ್ಳುವ  ಅಧಿಕಾರ ನನಗಿಲ್ಲವೆಂಬುದು ಇಲಾಖೆಯ ಮುಖ್ಯಸ್ಥರ ವಿಚಾರವಾಗಿದೆ. 

ನಮ್ಮ ಜಿಲ್ಲೆಯ ವಲಸಿಗ ಕಟ್ಟಡದ ಕೆಲಸಗಾರರನ್ನು, ದೇಶದ ಪೂರ್ವದ ರಾಜ್ಯಗಳಿಂದ ದಲ್ಲಾಳಿಗಳು ಕರೆತಂದಿದ್ದಾರೆ. ಆಹಾರ, ವಸತಿ ಮತ್ತು ಪ್ರಯಾಣದ ಖರ್ಚುಗಳ ಆಶ್ವಾಸನೆಗಳನ್ನು ನೀಡಿ ಈ ಕಾರ್ಮಿಕರುಗಳನ್ನು ಆಕರ್ಷಿಸಲಾಗುತ್ತದೆ. ೧೦೦ರಿಂದ ೨೦೦ ಕೆಲಸಗಾರರುಗಳ ತಂಡವನ್ನು ನಮ್ಮ ನಗರಕ್ಕೆ ಕರೆತಂದು, ಅವರುಗಳನ್ನು ನಗರದ ಹೊರವಲಯಗಳ ಬಿಡಾರಗಳಲ್ಲಿ ಇರಿಸಲಾಗುತ್ತದೆ. ಅವರುಗಳಿಗೆ ಕೆಲಸಗಳನ್ನೊದಗಿಸುವ ಹೊತ್ತಿಗೆ ೨-೩ ವಾರಗಳಷ್ಟು ಸಮಯ ಬೇಕಾಗಬಹುದು. ಅಲ್ಲಿಯವರೆಗಿನ ವಲಸಿಗರ ಖರ್ಚುಗಳೆಲ್ಲವನ್ನೂ, ಸಂಬಂಧ ಪಟ್ಟ ದಳ್ಳಾಳಿಗಳೇ ವಹಿಸಿಕೊಂಡಿರುತ್ತಾರೆ. ಕಟ್ಟಡದ ಗುತ್ತಿಗೆದಾರರುಗಳಡಿ ಕೆಲಸಕ್ಕೆ ನೇಮಕಗೊಳ್ಳುವವರೆಗಿನ ಹೊಸ ವಲಸಿಗರ ಮೇಲಿನ ಖರ್ಚು-ವೆಚ್ಚಗಳನ್ನು, ಅವರುಗಳು ಮುಂದೆ ಗಳಿಸುವಂತಹ ವಾರ/ತಿಂಗಳುಗಳ ಹಣದಿಂದ ಕಂತುಗಳ ಮುಖಾಂತರ ಮುರಿದುಕೊಂಡು ಇರಿಸಿಕೊಳ್ಳಲಾಗುತ್ತೆ.  ಆ ರೀತಿ ಕಾದಿರಿಸಲಾದ ಮೊತ್ತವನ್ನು, ಆಯಾ ವಲಸಿಗ ಕೆಲಸಗಾರರು ಮೂರು ವರುಷುಗಳ ಸೇವಾವಧಿಯನ್ನು ಪೂರ್ಣಗೊಳಿಸಿದನಂತರ ಹಿಂತಿರುಗಿಸಲಾಗುವುದೆಂದು ಮುಂಚಿತವಾಗೇ ತಿಳಿಸಲಾಗಿರುತ್ತೆ. ಈ ರೀತಿಯ ನಿರ್ಬಂಧಗಳನ್ನು ಕೆಲಸ ಸಿಕ್ಕ ಹುರುಪಿನಲ್ಲಿ ಯಾವ ಹೊಸ ವಲಸಿಗರು ವಿರೋಧಿಸಿರುವುದಿಲ್ಲ. ಲಾಕ್ಡೌನಿನಿಂದ ಕೆಲಸ ಕಳೆದುಕೊಂಡಿರುವ ವಲಸಿಗರು ನನ್ನಲ್ಲಿ ಬಂದು ಈಗ ಗುತ್ತಿಗೆದಾರರುಗಳಿಂದ  ಹಿಂತುರಿಗಿಸಿ ಕೊಡಿಸುವಂತೆ ಕೇಳುತ್ತಿರುವುದೇ ಈಗಾಗಲೇ ಆ ರೀತಿ ಕಾದಿರಿಸಿಡಲಾದ  ತಲಾ ೨೫,೦೦೦ ರೂಪಾಯಿಗಳಷ್ಟರ  ಮೊತ್ತ. "ಹಾಗೆ ಕಾದಿರಿಸಿಟ್ಟ ಮೊತ್ತ ಕೈಸೇರಿದರೆ, ನಾವುಗಳು ನಮ್ಮ ಹಳ್ಳಿಗಳತ್ತ ಪ್ರಯಾಣ ಬೆಳಸಲು ಅನುಕೂಲ"ವಾಗುವುದೆಂಬುದು ಅವರುಗಳ ಆಗ್ರಹ. 

ಹೊಸ ವಲಸಿಗರನ್ನು ಸಣ್ಣ ಗುತ್ತಿಗೆದಾರರುಗಳ ಕೈಸೇರಿಸಿದ ಕೂಡಲೇ, ಅವರುಗಳನ್ನು ಕರೆತಂದ ದಲ್ಲಾಳಿಗಳ ಜಾವಬ್ದಾರಿ ಮುಗಿದಂತೆ. ವಲಸಿಗರ ಮುಂದಿನ ಆಗು-ಹೋಗುಗಳ ಜವಾಬ್ದಾರಿ ಆಯಾ ಸಣ್ಣ ಗುತ್ತಿಗೆದಾರರುಗಳದ್ದೆ. ವಲಸಿಗರಲ್ಲಿ ಕೆಲವರಿಗೆ ಮಾತ್ರ ವಸತಿಯ ಶೆಡ್ಡುಗಳು ದೊರೆಯುತ್ತೆ. ಮಿಕ್ಕವರು ತಮ್ಮ ಶೆಡ್ಡುಗಳನ್ನು ತಾವೇ ಬಾಡಿಗೆಗೆ ಪಡೆದು ಕೊಳ್ಳಬೇಕಾಗುತ್ತದೆ. ಕೆಲಸಗಾರರ ವಾರದ ಅಥವಾ ತಿಂಗಳ ಸಂಬಳದ ಪಾವತಿ ಸಣ್ಣ ಗುತ್ತಿಗೆದಾರರುಗಳಿಂದಲೇ ನಡೆದು ಹೋಗುತ್ತದೆ. ಹಾಗಾಗಿ ಕೆಲಸಗಾರರಿಗೆ ತಾವು ಯಾವ ಗುತ್ತಿಗೆದಾರರಡಿ ಕೆಲಸ ಮಾಡುತ್ತಿದ್ದೆವೆಂಬುದೇ ತಿಳಿದಿರುವುದಿಲ್ಲ. 

ವಲಸಿಗರ ನೆರವಿನಿಂದ ನಾನು ಎಲ್ಲ ಸಣ್ಣ ಗುತ್ತಿಗೆದಾರರುಗಳನ್ನು ಗುರುತಿಸಿ, ಅವರುಗಳನ್ನು ನನ್ನ ಕಚೇರಿಯ ಸಭೆಯೊಂದಕ್ಕೆ ಕರೆದಿದ್ದೆ. ಸಭೆಗೆ ಹಾಜರಾದವರು ಬೆರಳೆಣಿಕೆಯಷ್ಟು ಸಣ್ಣ ಗುತ್ತಿಗೆದಾರರುಗಳು ಮಾತ್ರ. ಮಿಕ್ಕವರೆಲ್ಲ ಮೇಲಿನ ಗುತ್ತಿಗೆದಾರರುಗಳ ಭಯದಿಂದ ಬಂದಿರಲಿಲ್ಲವಂತೆ. ನನ್ನೊಡನೆ ಮಾತನಾಡಿದ ಸಣ್ಣ ಗುತ್ತಿಗೆದಾರರುಗಳ ಪ್ರಕಾರ, ಮೇಲಿನ ಗುತ್ತಿಗೆದಾರರುಗಳೊಂದಿಗೆ ಅವರುಗಳು  ವ್ಯವಹರಿಸುವದೇ ಇಲ್ಲವಂತೆ. ನೌಕರರಿಗೆ ವಿತರಿಸಬೇಕಾದ ಹಣವನ್ನೆಲ್ಲಾ  ಮಧ್ಯವರ್ತಿಗಳ ಮುಖಾಂತರ ಪಡೆಯುತ್ತಾರಂತೆ. "ಹಾಗಾಗಿ ಕಾದಿರಿಸಿಟ್ಟ ಹಣದ ವಿಷಯ ತಮ್ಮಗಳಿಗೇನೂ ತಿಳಿದಿಲ್ಲವೆಂಬುದು" ಅವರುಗಳ ವಿವರಣೆಯಾಗಿತ್ತು. 

೨೦೨೦ರ ಮಾರ್ಚ್ ೨೯ರಂದು ಕೇಂದ್ರ ಸರ್ಕಾರ ಜಾರಿಗೊಳಿಸಿದ ನಿರ್ದೇಶನದ ಪ್ರಕಾರ, ಕಟ್ಟಡ ನೌಕರರ ಸಂಬಳಗಳನ್ನು ಲಾಕ್ಡೌನ್ ಅವಧಿಯಲ್ಲಿ ತಡೆ ಹಿಡಿಯುವಂತಿಲ್ಲ. ಆದರೆ ನಮ್ಮ ಜಿಲ್ಲೆಯ ಯಾವ ಗುತ್ತಿಗೆದಾರರು ಆ ನಿರ್ದೇಶನವನ್ನು ಪಾಲಿಸುತ್ತಿಲ್ಲ. ಅಂದ ಹಾಗೆ ನಿರ್ಮಾಣ ಕ್ಷೇತ್ರ ವಿಧಿಯುಕ್ತವಲ್ಲದ್ದು (informal sector). ಈ ಕ್ಷೇತ್ರದ ಸುಮಾರು ಶೇಕಡ ೯೮ರಷ್ಟು ಕೆಲಸಗಾರರುಗಳೊಂದಿಗೆ ಯಾವ ಲಿಖಿತ ಕರಾರುಗಳು ಇರುವುದಿಲ್ಲ.  ಪರಿಸ್ಥಿತಿ ಹೀಗಿರುವಾಗ ಕೆಲಸಗಾರರ ಹಿತಾಸಕ್ತಿಗಳಿಗೆ ಯಾರು ಜವಾಬ್ದಾರರೆಂಬುದನ್ನು ನಿರ್ಧರಿಸುವುದೇ ದೊಡ್ಡ ಪ್ರಶ್ನೆ.'

ಸಲೋನಿರವರ ಸಮಸ್ಯೆಗಳಿಗೆ ಮದನ್ ಲಾಲರ ಉತ್ತರ ಹೀಗಿತ್ತು. 'ಕಾರ್ಮಿಕರುಗಳಿಗೆ ಸಂಬಂಧ ಪಟ್ಟಂತಹ ಕಾನೂನುಗಳ ಸುಧಾರಣೆಗೆ ಸರಕಾರ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಬರುತ್ತಿದ್ದು, ನಿರ್ಮಾಣ ಕ್ಷೇತ್ರದಲ್ಲಿ ನಿರ್ಮಾಣೋದ್ಯಮಿಗಳ (builders) ಹಾಗೂ ಗುತ್ತಿಗೆದಾರರುಗಳ ಕೈ ಮೇಲಾಗುತ್ತಿದೆ. ಮಧ್ಯವರ್ತಿಗಳ ಮುಖಾಂತರ ಸಣ್ಣ ಗುತ್ತಿಗೆದಾರರನ್ನು ನಿಯಂತ್ರಿಸುವ ನಿರ್ಮಾಣೋದ್ಯಮಿಗಳು, ತೆರೆಯ ಹಿಂದೆ ನಿಂತು ತಮ್ಮ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ. ಹೀಗಿರುವಾಗ ಕಟ್ಟಡ ನಿರ್ಮಾಣ ಕಾರ್ಯದ ಒಡೆಯ (employer) ಯಾರೆಂದು ನಿರ್ಧರಿಸುವುದೇ ಕಷ್ಟ. ಆದುದರಿಂದ ನನಗೆ ಒಂದೆರಡು ವಾರಗಳ ಸಮಯಾವಕಾಶ ಬೇಕಾಗಿದೆ. ಸಮಸ್ಯೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ತಮಗೆ ನಾನು ಸಲಹೆಯನ್ನು ನೀಡುತ್ತೇನೆ.'

ತಮ್ಮ ಸಲಹೆಯನ್ನು ಕಳುಹಿಸುವಲ್ಲಿ ವಕೀಲ ಮದನ್ ಲಾಲರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಆದರೆ,  ತಮ್ಮ ಸಲಹೆಯನ್ನು ಸಲೋನಿರವರಿಗೆ ಕಳುಹಿಸಿದ ಕೆಲವೇ ದಿನಗಳಲ್ಲೇ, ನಡೆದ ಬೆಳವಣಿಗೆಗಳು  ಅವರಿಗೆ ಆಘಾತವನ್ನುಂಟುಮಾಡಿತ್ತು. ದಿನ ಪತ್ರಿಕೆಗಳ ಸುದ್ದಿಯ ಪ್ರಕಾರ ಸಲೋನಿರವರನ್ನು ಬೇರೊಂದು ಇಲಾಖೆಗೆ ದಿಢೀರನೆ ವರ್ಗ ಮಾಡಲಾಗಿತ್ತು.  ರಾಜ್ಯ ಸಂಪುಟ ಮಟ್ಟದ ಒತ್ತಡವೇ ಸಲೋನಿರವರ ಅಕಾಲಿಕ ವರ್ಗಾವಣೆಗೆ ಕಾರಣವೆಂದು ಪತ್ರಿಕೆಗಳಲ್ಲಿ ಬರೆಯಲಾಗಿತ್ತು. ಸುದ್ದಿ ವಿಶ್ಲೇಷಕರ ಪ್ರಕಾರ ಸಲೋನಿರವರ ವರ್ಗದ ಹಿಂದಿನ ಕಾರಣಗಳ ಪಟ್ಟಿ ಕೆಳಕಂಡ ರೀತಿ ಇತ್ತು. 

-ಸಲೋನಿರವರು, ತಮ್ಮಕಾರ್ಮಿಕ ಇಲಾಖೆಯ ಮುಖಾಂತರ ಸುಮಾರು ೨೦,೦೦೦ ದಿನಸಿ ಪೊಟ್ಟಣಗಳನ್ನು ಕಟ್ಟಡದ ವಲಸೆ ಕೆಲಸಗಾರರಿಗೆ ವಿತರಣೆ ಮಾಡಿಸಿದ್ದರು. ಹಾಗೆ ವಿತರಿಸುವಲ್ಲಿ ಸ್ಥಳೀಯ ಶಾಸಕರುಗಳು ಮತ್ತು ನಗರ ಪಾಲಿಕೆ ಸದಸ್ಯರುಗಳು ನೀಡಿದ್ದ ಪಟ್ಟಿಯನ್ನು ಸಲೋನಿರವರು  ಸಾರಾ ಸಗಟಾಗಿ ತಿರಸ್ಕರಿಸಿದ್ದರು. ಅವರುಗಳು ಮಾಡಿದ್ದ ಪ್ರತ್ಯಾರೋಪಗಳ ಪ್ರಕಾರ ಸಲೋನಿಯವರೊಬ್ಬರೇ ವಿತರಣೆ ಕುರಿತಾದ ನಿರ್ಣಯಗಳನ್ನು ತೆಗೆದುಕೊಂಡಿದ್ದು, 'ಅವರ ನೆಚ್ಚಿನ ಪ್ರದೇಶ'ಗಳಿಗೆ ಹೆಚ್ಚಿನ ಪೊಟ್ಟಣಗಳು ವಿತರಣೆಯಾಗಿದ್ದು, ಬಡವರುಗಳಿಗೆ ಅನ್ಯಾಯವಾಗಿದೆ ಎಂಬುದಾಗಿತ್ತು.  

-ಸಲೋನಿಯವರ ಕೋರಿಕೆಯ ಮೇರೆಗೆ ಖಾಸಗಿ ಸಂಸ್ಥೆಗಳು ವಲಸಿಗರಿಗೆ ನೀಡಿದ ತಲಾ ರೂ.೨೦೦೦ಗಳ ನಗದು ವಿತರಣೆಯಲ್ಲಿ ಅಕ್ರಮ ನಡೆದಿದ್ದು, ನಗದು ವಿತರಣೆಯ ಬದಲು ಹಣವನ್ನು ಚೆಕ್ಕುಗಳ ಮುಖಾಂತರ ವಿತರಿಸಬಹುದಿತ್ತು ಎಂಬುದು ಮತ್ತೊಂದು ಆರೋಪವಾಗಿತ್ತು.  

-ತಮ್ಮ ಜಿಲ್ಲೆಯಲ್ಲಿನ ವಲಸಿಗ ಕಟ್ಟಡದ ಕೆಲಸಗಾರರನ್ನು ಲಾಕ್ಡೌನ್ ನೆಪವೊಡ್ಡಿ ಕೆಲಸದಿಂದ ತೆಗೆಯಬಾರದು ಹಾಗೂ ಅವರುಗಳ ಸಂಬಳಗಳನ್ನು ತಡೆ ಹಿಡಿಯಬಾರದಾಗಿ ಜಿಲ್ಲೆಯ ಎಲ್ಲ ನಿರ್ಮಾಣೋದ್ಯಮಿಗಳಿಗೆ ಸಲೋನಿರವರು ಆದೇಶ ನೀಡಿದ್ದರು. ಆದೇಶವನ್ನು ಪಾಲಿಸದ  ಕೆಲವು ನಿರ್ಮಾಣೋದ್ಯಮಿಗಳ ವಿರುದ್ಧ ಸಲೋನಿ, ಪೊಲೀಸ್ ದೂರನ್ನು ದಾಖಲಿಸಿದ್ದರು. ಜಿಲ್ಲೆಯ ಮಂತ್ರಿಗಳಿಗೆ ಈ ಕ್ರಮ ತೀವ್ರ ಮುಜುಗರವನ್ನುಂಟು ಮಾಡಿದ್ದು, ಸಲೋನಿಯವರ ಕ್ರಮ ಸಿಂಧುವಲ್ಲವೆಂಬುದು ಹಲವರ ಅಭಿಪ್ರಾಯವಾಗಿತ್ತು. ಜರುಗಿಸಿದ ಕ್ರಮಗಳೆಲ್ಲವನ್ನೂ ಹಿಂತೆಗೆದುಕೊಳ್ಳುವಂತೆ ಸಲೋನಿಯವರ ಮೇಲೆ ತೀವ್ರ ಒತ್ತಡವನ್ನು ಹೇರಲಾಗಿತ್ತು. 

-ಕೆಲಸವಿಲ್ಲದೆ ಕುಳಿತಿದ್ದ ವಲಸಿಗ ಕಟ್ಟಡದ ಕೆಲಸಗಾರರುಗಳಿಗೆ ಸಲೋನಿರವರು ಸ್ಥಳೀಯ ನಗರ ಪಾಲಿಕೆಯ ಕೆಲಸಗಳನ್ನು ನೀಡಿ ಸಹಾಯ ಮಾಡಿದ್ದರು. ಆ ರೀತಿ ಕೆಲಸಗಳಿಗೆ ಸ್ಥಳೀಯ ಕೆಲಸಗಾರರು ಲಭ್ಯವಿದ್ದರೂ, ಅವರುಗಳನ್ನು ನೇಮಿಸಿಕೊಳ್ಳಲಿಲ್ಲವೇಕೆ ಎಂಬುದೂ ಒಂದು ಆರೋಪವಾಗಿತ್ತು. 

-ವಲಸಿಗ ಕೆಲಸಗಾರರುಗಳ ಪರವಾಗಿ ಯಾರಾದರೂ 'ಆನ್ ಲೈನ್ (online)' ದೂರುಗಳನ್ನು ದಾಖಲಿಸುವ ಸೌಲಭ್ಯವೊಂದನ್ನು ಸಲೋನಿ ಕಲ್ಪಿಸಿದ್ದರು. ಈ ಕ್ರಮದ ಬಗೆಗಿನ ಮಾಹಿತಿ ಅವರ ಹಿರಿಯಧಿಕಾರಿಗಳಿಗೆ ಸಲೋನಿಯವರು ನೀಡಿತ್ತಿಲ್ಲ.

-ತಮ್ಮ ಕಾರ್ಯವ್ಯಾಪ್ತಿಯ ಎಲ್ಲೆಯನ್ನು ಮೀರಿ, ಕೋವಿಡ್ ಪರಿಹಾರ ಕಾರ್ಯಗಳಲ್ಲಿ ಆಗಿರಬಹುದಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಕಾರ್ಯಕರ್ತರುಗಳನ್ನೊಳಗೊಂಡ  'ಕೋವಿಡ್ ಸೇನಾನಿಗಳ ಜಾಗೃತ ದಳ'ವೊಂದನ್ನು ಸಲೋನಿ ಆರಂಭಿಸಿದ್ದರು. 

-ಸಲೋನಿಯವರ ಎಲ್ಲ ಕ್ರಮಗಳು ಅತಿಯಾದ ಉತ್ಸಾಹದಿಂದ ಕೂಡಿದ್ದು, ಇಲಾಖೆಯ ನೀತಿ-ನಿಯಮಗಳ ಅನುಸಾರ ಇತ್ತಿಲ್ಲವೆಂಬುದು ಹಲವರ ಅಭಿಪ್ರಾಯವಾಗಿತ್ತು. 

ಈ ಬೆಳವಣಿಗೆಗಳ ಮಧ್ಯೆ ಸಲೋನಿರವರು ಮಾಧ್ಯಮ ಮಿತ್ರರುಗಳೊಂದಿಗೆ ಮಾತನಾಡಿ, 'ತಾನು ತೆಗೆದುಕೊಂಡ ಕ್ರಮಗಳೆಲ್ಲವೂ ವಲಸಿಗ ಕೆಲಸಗಾರರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ತೆಗೆದುಕೊಂಡವುಗಳಾಗಿವೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಪರಮಾಧಿಕಾರ  ಸರಕಾರಕ್ಕಿದೆ. ಅದರ ಪ್ರಕಾರ ನನ್ನ ಅಧಿಕಾರವನ್ನು ನೇಮಕಗೊಂಡಿರುವ ಹೊಸ ಅಧಿಕಾರಿಗೆ ಹಸ್ತಾಂತರಿಸಿದ್ದೇನೆ. ನನ್ನ ವರ್ಗಾವಣೆ ಕುರಿತು ಹರಿದಾಡುತ್ತಿರುವ ವದಂತಿಗಳು ಈಗ ಅಪ್ರಸ್ತುತ. ಆ ರೀತಿಯ ವದಂತಿಗಳಿಂದ ನಮ್ಮಂತಹ ಸಾರ್ವಜನಿಕ ಸೇವಕರಿಗೆ ಯಾವ ಉಪಯೋಗವೂ ಆಗದು. ಸರಕಾರದ ರೀತಿ-ನೀತಿಗಳ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮುಂದಿನ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ನನ್ನೊಡನೆ ಸಹಕರಿಸಿ ದುಡಿದ ಎಲ್ಲರಿಗೂ ನಾನು ಆಭಾರಿ' ಎಂದಿದ್ದರು.

ಎಲ್ಲ ವಿಷಯಗಳನ್ನು ಗ್ರಹಿಸಿದ ಮದನ್ ಲಾಲರು ತಮ್ಮ ಸ್ನೇಹಿತೆ ಸಲೋನಿರವರನ್ನು ಕೂಡಲೇ ಸಂಪರ್ಕಿಸಿ,  'ಆದ ಬೆಳವಣಿಗೆಗಳನ್ನೆಲ್ಲ ನಿಭಾಯಿಸಿ ಮುನ್ನಡೆಯುವ ಮನೋಧರ್ಮ ನಿಮ್ಮದು ಎಂದು ನನಗೆ ಗೊತ್ತು. ನಿಮ್ಮ ಕ್ರಮಗಳೆಲ್ಲವೂ ಪ್ರಾಮಾಣಿಕವಾದವಾಗಿದ್ದು, ತಲೆಯೆತ್ತಿ ಸಾಗುವ ಹೆಮ್ಮೆ ನಿಮ್ಮದು. ತಾತ್ಕಾಲಿಕವಾಗಿ ಸ್ವಲ್ಪ ಹಿನ್ನಡೆ ನಿಮಗಾಗಿರಬಹುದು. ಕೆಲವು ದಿನಗಳು ಕಳೆದನಂತರ ಗೆಲುವು ನಿಮ್ಮದೇ ಆಗಿರುತ್ತದೆ. ನೀವು ಜಾರಿಗೊಳಿಸಿದ ಕ್ರಮಗಳೆಲ್ಲವೂ ನ್ಯಾಯಯುತವಾಗಿದ್ದು, ಸರಕಾರ ಕೂಡ ಅವುಗಳನ್ನು ಜಾರಿಗೊಳಿಸಲೇ ಬೇಕಾಗುವ ಪರಿಸ್ಥಿತಿ ಬಂದೇ ಬರುತ್ತದೆ. ಕಾರ್ಮಿಕ ಇಲಾಖೆಯ ಅಧಿಕಾರವನ್ನು ನಿಮ್ಮಿಂದ ವಹಿಸಿಕೊಂಡಿರುವ ಅಧಿಕಾರಿಯೂ, ನೀವಿಟ್ಟ ದಿಟ್ಟ ಹೆಜ್ಜೆಯ  ಗುರುತುಗಳನ್ನು ಅನುಸರಿಸೇ ಸಾಗಬೇಕಾಗುತ್ತೆ. ಎಲ್ಲಿ ಹೋದರೂ ನಿಮ್ಮ ಪ್ರಾಮಾಣಿಕತೆ ಹಾಗೂ  ಉತ್ಸಾಹಗಳು ನಿಮ್ಮೊಂದಿಗಿರಲಿ. ದೇವರ ಆಶೀರ್ವಾದವೂ ನಿಮ್ಮೊಡನಿರಲಿ' ಎಂದರು.

-೦-೦-೦-೦-೦-೦-     

 

 






  

No comments:

Post a Comment