೫
ವಲಸಿಗರ ವಂದನೆ
ಅಂದು ೨೦೨೦ರ ಮಾರ್ಚ್ ೨೮ರ ದಿನವಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಪರಮೋಚ್ಚ ನ್ಯಾಯಾಲಯ ನೀಡಿದ್ದ ಮಧ್ಯಕಾಲದ ಆದೇಶದ (interim order) ವಿಷಯದಲ್ಲಿ ತಂದೆ ರಾಜು ಮತ್ತು ಮಗಳು ರೋಹಿಣಿಯ ನಡುವಿನ ಸುದೀರ್ಘ ಚರ್ಚೆಯ ಕಾವೇರಿತ್ತು. ಲಾಕ್ಡೌನಿನಿಂದ ಉಂಟಾದ ವಲಸಿಗ ಕೆಲಸಗಾರರ ಪರದಾಟಗಳಿಗೆ, ಸಾಧ್ಯವಾದಷ್ಟು ಪರಿಹಾರ ದೊರಕಲೆಂಬುದು ಪರಮೋಚ್ಚ ನ್ಯಾಯಾಲಯದ ಆದೇಶದ ಆಶಯವಾಗಿತ್ತು. ಕೋರ್ಟ್ ಆದೇಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ತಂದೆ-ಮಗಳಿಬ್ಬರೂ, ಕುಟುಂಬದ ಸ್ನೇಹಿತರು ಹಾಗೂ ವಕೀಲರೂ ಆದ ಮದನ್ ಲಾಲರ ಮನೆಗೆ ಬಂದಿದ್ದರು. ಕೋವಿಡ್ನಿಂದ ಉಂಟಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಕುರಿತಾದ ಸಂಶೋಧನೆಯನ್ನು ಕೈಗೊಂಡಿದ್ದ ಯುವತಿ ರೋಹಿಣಿಗೆ, ಮದನ್ ಲಾಲರೊಂದಿಗಿನ ಚರ್ಚೆ ಬಹು ಮುಖ್ಯವಾಗಿತ್ತು.ರಾಜು ಮತ್ತು ರೋಹಿಣಿ ಇಬ್ಬರನ್ನೂ ಮದನ್ ಲಾಲರು ಬರಮಾಡಿಕೊಂಡೊಡನೆ, ರಾಜುರವರ ವಾದ ಸರಣಿ ಶುರುವಾಗಿತ್ತು. 'ಮದನ್ ಲಾಲರೆ, ನೋಡಿ ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವಿನ ತಿಕ್ಕಾಟ ಇಂದು-ನೆನ್ನೆಯದಲ್ಲ. ಪರಮೋಚ್ಚ ನ್ಯಾಯಾಲಯ ಕೆಲವೊಮ್ಮೆ ಕಾರ್ಯಾಂಗದ ವ್ಯಾಪ್ತಿಗೆ ಮೂಗು ತೂರಿಸಿ ಅಧಿಕಾರ ಚಲಾಯಿಸುವುದೆಂಬುದು ನನ್ನಂತಹ ಹಲವರ ವಾದ. "ಹೆದ್ದಾರಿಗಳಲ್ಲಿ ಮದ್ಯದ ಮಾರಾಟವನ್ನು ನಿಷೇಧಿಸಿ ಪರಮೋಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶ"ವನ್ನೆ ನೋಡಿ. ಮದ್ಯದ ಬಾರುಗಳು ಮತ್ತು ಭೋಜನ ಮಂದಿರಗಳು ಹೆದ್ದಾರಿಯಿಂದ ೫೦೦ ಮೀಟರ್ಗಳಷ್ಟು ದೂರವಿರಬೇಕೆಂಬುದು ಸುಪ್ರೀಂ ಕೋರ್ಟ್ನ ಆದೇಶ. ಈ ಆದೇಶದಿಂದ ಹಲವಾರು ಬಾರುಗಳು ಮತ್ತು ಉಪಹಾರ ಗೃಹಗಳಿಗೆ ತೊಂದರೆಯುಂಟಾಗಿ ಅವರುಗಳ ಗಳಿಕೆಯಲ್ಲಿ ಭಾರಿ ವ್ಯತ್ಯಯವುಂಟಾಗಿದೆ. ಇಡೀ ಪ್ರವಾಸೋದ್ಯಮಕ್ಕೇ ಭಾರಿ ಹೊಡತವೇ ಬಿದ್ದು, ಸಹಸ್ರಾರು ಯುವಕರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಹೀಗೆಲ್ಲಾ ಮಾಡುವ ಬದಲು, ನ್ಯಾಯಾಲಯ ಸರಕಾರಕ್ಕೆ ಹೆದ್ದಾರಿಗಳಲ್ಲಾ ಗುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬೇಕಾದ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳುವಂತೆ ಆದೇಶವನ್ನು ನೀಡಬಹುದಿತ್ತು. ತಾನೇ ಕಾರ್ಯಾಂಗವೆಂಬಂತೆ ಇಷ್ಟು ತೀವ್ರವಾದ ಆದೇಶವನ್ನು ನೀಡುವ ಅವಶ್ಯಕತೆ ಏನಿತ್ತು?' ಹೀಗಿದ್ದ ರಾಜುರವರ ವಾದದಲ್ಲಿ ಸಾಕಷ್ಟು ಆಕ್ರೋಶವಿತ್ತು.
ವಕೀಲರಾದ ಮದನ್ ಲಾಲರ ಮುಂದೆ ಮಗಳು ರೋಹಿಣಿಯ ಪ್ರತಿವಾದದಲ್ಲಿ ಕೂಡ ಅಷ್ಟೇ ತೀವ್ರತೆಯಿತ್ತು. 'ಪರಮೋಚ್ಚ ನ್ಯಾಯಾಲಯದ ಆದೇಶದಿಂದ ಹೆದ್ದಾರಿಗಳಲ್ಲಿನ ಅಪಘಾತಗಳ ಸಂಖ್ಯೆ ಕಮ್ಮಿಯಾಗಿ ಸಹಸ್ರಾರು ಅಮೂಲ್ಯ ಜೀವಗಳ ರಕ್ಷಣೆಯಾಗಿರುವುದು ಸುಳ್ಳಲ್ಲ. ಪರಿಸ್ಥಿತಿಯ ಅರಿವು ನ್ಯಾಯಾಲಯಕ್ಕೂ ಇದೆ. ಉದ್ಯಮಗಳಿಗಾಗುತ್ತಿರುವ ನಷ್ಟವನ್ನು ತುಂಬುವ ಹಾಗೂ ಉದ್ಯೋಗಗಳ ಮರುಸೃಷ್ಠಿ ಮಾಡುವ ಉದ್ದೇಶದಿಂದ, ನ್ಯಾಯಾಲಯ ತನ್ನ ಆದೇಶವನ್ನು ಸಡಿಲಿಸಿ, ನಗರಗಳ ಹಾಗೂ ಪಟ್ಟಣಗಳ ಪ್ರದೇಶಗಳಿಗೆ ತನ್ನ ಆದೇಶ ಅನ್ವಯಿಸದೆಂದು ಮರು ಆದೇಶ ಹೊರಡಿಸಿದೆ.
ಪರಮೋಚ್ಚ ನ್ಯಾಯಾಲಯದ ಇತ್ತೀಚಿನ ಬಾಬ್ರಿ ಮಸೀದಿ ಕುರಿತಾದ ತೀರ್ಪು ಕೇಂದ್ರ ಸರಕಾರದ ಆಶಯಕ್ಕೆ ಪೂರಕವಾಗಿದೆ. ರಾಮ ಮಂದಿರದ ನಿರ್ಮಾಣಕ್ಕೆ ಬೇಕಾದ ಆದೇಶವನ್ನು ಕೇಂದ್ರ ಸರಕಾರ ಹೊರಡಿಸಬೇಕಾಗಿ ಬಂದಿದ್ದರೆ, ದೊಡ್ಡ ಕೋಲಾಹಲವೇ ನಡೆದು ಹೋಗುತ್ತಿತ್ತು. ಸರಕಾರಕ್ಕೆ ಸಂಸತ್ತಿನಲ್ಲಿ ನಿಭಾಯಿಸಲಾಗದಷ್ಟು ಪ್ರತಿರೋಧ ಬರುತ್ತಿತ್ತು. ದಿನ ನಿತ್ಯ ನ್ಯಾಯಾಂಗವನ್ನು ಟೀಕಿಸುವ ಬುದ್ಧಿಜೀವಿಗಳು ರಾಮ ಮಂದಿರ ಕುರಿತಾದ ತೀರ್ಪಿಗೆ, ನ್ಯಾಯಾಲಯವನ್ನು ಪ್ರಶಂಸಿದ್ದಾರೆಯೆ? ಜಾರಿಗೊಳಿಸಲು ಕಷ್ಟ ಸಾಧ್ಯವಾದ ತೀರ್ಪುಗಳ ಬಗ್ಗೆ, ಸೂರಮೇಲೆ ನಿಂತು ಕೂಗಾಡುವ ಅವರುಗಳು, ಸರಕಾರಕ್ಕೆ ಅನುಕೂಲವಾಗುವಂತಹ ತೀರ್ಪುಗಳು ಬಂದಾಗ "ಜಾಣ ಮೌನ"ಕ್ಕೆ ಜಾರುತ್ತಾರೇಕೆ?' ಎಂದಿತ್ತು ರೋಹಿಣಿಯ ವಾದದ ಸರಣಿ.
ಸದರಿ ವಲಸಿಗರ ಪರದಾಟದ ವಿಷಯಕ್ಕೆ ಬರೋಣವೆಂಬುದು ಮದನ್ ಲಾಲರ ಅಭಿಪ್ರಾಯವಾಗಿತ್ತು.
'ಮೇ ೧ರಂದು, ಸರ್ವೋಚ್ಚ ನ್ಯಾಯಾಲಯ ತನ್ನ ನಿಲುವನ್ನು ವ್ಯಕ್ತಪಡಿಸುತ್ತಾ, ವಲಸಿಗ ಕೆಲಸಗಾರರಿಗೆ ಪ್ರಯಾಣದ ವ್ಯವಸ್ಥೆಯನ್ನು ಮಾಡುವ ಕೆಲಸ ಸರಕಾರಗಳ ರೈಲು ಮತ್ತು ಬಸ್ಸಿನ ಇಲಾಖೆಗಳಿಗೆ ಸಂಬಂಧಪಟ್ಟದ್ದು ಎಂದು ಅಭಿಪ್ರಾಯಪಟ್ಟಿತ್ತು. ತಜ್ಞರ ಹಾಗೂ ಜನಾಭಿಪ್ರಾಯದ ಒತ್ತಡಗಳು ನ್ಯಾಯಾಲಯವನ್ನೂ ಮಣಿಸಿದಂತೆ ಕಾಣುತ್ತದೆ. ತನ್ನ ತಟಸ್ಥ ನಿಲುವನ್ನು ಇದ್ದಕಿದ್ದಂತೆ ಕೈಬಿಟ್ಟ ನ್ಯಾಯಾಲಯ ಈಗ ಸರಕಾರಗಳಿಗೆ ವಲಸಿಗರ ಕುರಿತಾದ ಹೊಸ ಆದೇಶವನ್ನು ಹೊರಡಿಸಿರುವುದು ಸರಿಯೇ?' ಎಂದು ಮುಂದುವರೆದಿತ್ತು ರಾಜುರವರ ವಿಚಾರ ಧಾರೆ.
'ಕೈ ಕಟ್ಟಿ ಕುಳಿತುಕೊಳ್ಳುವುದಕ್ಕಿಂತ, ತಡವಾಗಾದರೂ ಸರ್ವೋಚ್ಚ ನ್ಯಾಯಾಲಯವು ತೆಗೆದುಕೊಂಡಿರುವ ನಿಲುವು ವಲಸಿಗ ಕೆಲಸಗಾರರಿಗೆ ಪರಿಹಾರವನ್ನೊದಗಿಸಿದೆ. ವಲಸಿಗರ ಅತಿಥೇಯ ಮತ್ತು ಮೂಲ ರಾಜ್ಯಗಳು ಪ್ರಯಾಣದ ವೆಚ್ಚವನ್ನು ಸಮನಾಗಿ ಭರಿಸಬೇಕಾಗುತ್ತದೆ. ಪ್ರಯಾಣದ ವೇಳೆಯ ನೀರು-ಆಹಾರಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆಗಳು ಮಾಡಬೇಕಾಗುತ್ತದೆ. ಪ್ರಯಾಣ ಮಾಡಲು ತಮ್ಮ ಸರದಿಗೆ ಕಾಯುತ್ತಿರುವ ವಲಸಿಗರಿಗೆ ಪ್ರಯಾಣದ ವ್ಯವಸ್ಥೆ ಮಾಡಿ ಸರಿಯಾದ ಮಾಹಿತಿಯನ್ನು ನೀಡುವ ಮತ್ತು ಅವರುಗಳಿಗೆ ವಸತಿ ಮತ್ತು ಆಹಾರದ ಏರ್ಪಾಡನ್ನು ಮಾಡುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳದ್ದಾಗಿರುತ್ತದೆ. ವಲಸಿಗರು ಸುಡು ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಪರದಾಡುವಂತಾಗ ಬಾರದೆಂಬುದು ನ್ಯಾಯಾಲಯದ ಆಶಯ' ಎಂದು ರೋಹಿಣಿ ತನ್ನ ಅನಿಸಿಕೆಯನ್ನು ಮಂಡಿಸಿದ್ದಳು.
ರಾಜುರವರು ತಮ್ಮ ಮಗಳ ವಾದಕ್ಕೆ ತೀಕ್ಷ್ಣವಾಗೇ ಪ್ರತಿಕ್ರಿಯಿಸುತ್ತಾ 'ನ್ಯಾಯಾಂಗಕ್ಕಾಗಲಿ ಅಥವಾ ಕಾರ್ಯಾಂಗಕ್ಕಾಗಲಿ ತಮ್ಮದೇ ಆದ ಇತಿ-ಮಿತಿಗಳಿವೆ. ಭಾರತದ ಎಲ್ಲ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಲಕ್ಷಾಂತರ ದಾವೆಗಳ ಪೈಕಿ ಶೇಕಡಾ ೭೦ರಷ್ಟನ್ನು ಇನ್ನೊಂದು ವರ್ಷದೊಳಗೆ ಇತ್ಯರ್ಥಗೊಳಿಸಿ ಎಂದು ಕೇಂದ್ರ ಸರಕಾರ ವಿನಂತಿಸಿಕೊಂಡರೆ, ಸರ್ವೋಚ್ಚ ನ್ಯಾಯಾಲಯ ತಾನೇ ಏನು ಮಾಡಬಲ್ಲದು? ಕೋರ್ಟ್ ಆದೇಶಗಳನ್ನೂ ಜಾರಿಗೊಳಿಸುವಲ್ಲಿ ಕಾರ್ಯಾಂಗಕ್ಕೂ ಅದೇ ರೀತಿಯ ಅಡಚಣೆಗಳು ಇರವುದಿಲ್ಲವೆ?' ಎಂದರು.
ತಂದೆ-ಮಗಳ ವಾದ-ಪ್ರತಿವಾದಗಳನ್ನಾಲಿಸಿದ ವಕೀಲ ಮದನ್ ಲಾಲರಿಗೆ ಈಗ ಮಧ್ಯ ಪ್ರವೇಶ ಅನಿವಾರ್ಯವೆನಿಸಿತು. 'ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕುರಿತಾದ ರೋಹಿಣಿಯ ವಿಶ್ಲೇಷಣೆ ಸರಿಯಾಗಿಯೇ ಇದೆ. ರಾಜುರವರ ವಾದದಲ್ಲೂ ತೂಕವಿಲ್ಲದಿಲ್ಲ. ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿರುವಂತೆ ಸರಕಾರಗಳ ಕ್ರಮಗಳಿಂದ ವಲಸಿಗರುಗಳಿಗೆ ಹಲವಾರು ತೊಂದರೆಗಳು ಉಂಟಾಗಿವೆ. ಬಸ್ಸು ಮತ್ತು ರೈಲುಗಳ ಬಗೆಗಿನ ತಪ್ಪು ಮಾಹಿತಿಗಳು, ಪ್ರಯಾಣದ ವೆಚ್ಚಗಳ ತೀವ್ರ ಹೆಚ್ಚಳ, ಬಸ್ಸು-ರೈಲುಗಳು ಕಡೇ ನಿಮಿಷದಲ್ಲಿ ರದ್ಧಾಗುವುದು ಮುಂತಾದ ಅಚಾತುರ್ಯಗಳಿಂದ ವಲಸಿಗರು ಬಳಲಿ ಬೆಂಡಾಗಿದ್ದಾರೆ. ಸರಕಾರಿ ವಕೀಲರ ವಾದವನ್ನು ಒಪ್ಪದ ಸರ್ವೋಚ್ಚ ನ್ಯಾಯಾಲಯ, ವಲಸಿಗರ ಹಿತರಕ್ಷಣೆಗಾಗಿ ಕೇಂದ್ರ ಹಾಗು ರಾಜ್ಯ ಸರಕಾರಗಳು ಕೈಗೊಂಡಿರುವ ಕ್ರಮಗಳ ವಿವರವನ್ನು ನೀಡುವಂತೆ ಆದೇಶಿಸಿದೆ.
ಇದು ನಮ್ಮ ಸಂವಿಧಾನದ ಶಿಲ್ಪಿಗಳು ಸೃಷ್ಟಿಸಿಟ್ಟಿರುವಂತಹ ಅತ್ಯಂತ ಸೂಕ್ಷ್ಮವಾದ ಸಮತೋಲ. ಕಾರ್ಯಾಂಗ ಹಾಗೂ ಶಾಸಕಾಂಗಗಳು ನೇರವಾಗಿ ಜನತೆಯಿಂದ ಚುನಾಯಿತವಾಗಿದ್ದರೂ, ನಮ್ಮ ಸಂವಿಧಾನದಲ್ಲಿ ನ್ಯಾಯಾಂಗದ ಸ್ವಾಯತ್ತತೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಸದಾ ಒಂದು ಹೆಜ್ಜೆಯನ್ನು ಮುಂದಾಗಿಯೇ ಇಡುವಂತೆ ಕಾಣುವ ನಮ್ಮ ನ್ಯಾಯಾಂಗ, ಆಗಾಗ ತನ್ನ ಎಲ್ಲೆಯನ್ನು ಮೀರಿದಂತೆ ಕಂಡರೂ, ಅದರ ಕ್ರಮಗಳೆಲ್ಲವೂ ಸಂವಿಧಾನದ ಪಾವಿತ್ರ್ಯವನ್ನು ಎತ್ತಿ ಹಿಡಿಯಲು ಕೈಗೊಂಡವಾಗಿವೆ. ನ್ಯಾಯಾಂಗದ ನಿರ್ಣಯಗಳೆಲ್ಲವೂ ಜನಪರವಾಗಿದ್ದು ದೇಶವನ್ನು ಸದೃಢ ಗೊಳಿಸಿವೆ ಎಂಬುದನ್ನು ನಾವು ಮರೆಯುವಂತಿಲ್ಲ' ಎಂದ ಮದನ್ ಲಾಲರ ಮಾತುಗಳು ಅವರ ತೀರ್ಪೆನೋ ಎಂಬತ್ತಿತ್ತು.
'ಕೇಂದ್ರ ಸರಕಾರವೂ ಹಲವಾರು ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡಿದೆ. ವಲಸಿಗರ ಜೊತೆ ಇಡೀ ದೇಶವಿದೆ ಎಂಬುದನ್ನು ಈಗಾಗಲೇ ಸರಕಾರ ಸ್ಪಷ್ಟಪಡಿಸಿದೆ. ಕೋವಿಡ್ ಪಿಡುಗಿನಿಂದ ವಲಸಿಗರು ತೀವ್ರವಾಗಿ ಪೀಡಿತರಾಗಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಹುಟ್ಟಿ ಬೆಳದ ಹಳ್ಳಿಗಳಿಗೆ ಹಿಂತಿರುಗಿರುವ ವಲಸಿಗರಿಗೆ, ಅವರವರ ಹಳ್ಳಿಗಳಲ್ಲೇ, ಕೂಡಲೇ ಉದ್ಯೋಗ ಕಲ್ಪಿಸಲು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗದ ಯೋಜನೆಗೆ (MANREGA) ಪ್ರಸಕ್ತ ವರ್ಷದಲ್ಲಿ (೨೦೨೦-೨೧) ಈಗಾಗಲೇ ನೀಡಿರುವ ಒಂದು ಲಕ್ಷ ಕೋಟಿ ರೂಪಾಯಿಗಳ ಜೊತೆಗೆ ಮತ್ತೆ ೪೦,೦೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.
-ಮನ್ರೇಗಾ ಯೋಜನೆಯಡಿ ನೀಡುವ ದಿನದ ಸಂಬಳವನ್ನು ೧೮೨ರಿಂದ ೨೦೨ ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ.
-ಮನರೇಗಾದ ಅಡಿಯಲ್ಲಿ ಉದ್ಯೋಗ ಪಡೆಯಲಿಚ್ಛಿಸುವವರು ಹಳ್ಳಿಯ ಗ್ರಾಮ ಪಂಚಾಯಿತಿಯ ಕಚೇರಿಯನ್ನು ಸಂಪರ್ಕಿಸಬಹುದು.
-ರಾಷ್ಟ್ರದ ಪೂರ್ವ ಭಾಗದಲ್ಲಿರುವ ೬ ರಾಜ್ಯಗಳ ೧೧೬ ಜಿಲ್ಲೆಗಳಿಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಹಿಂತಿರುಗಿ ಬಂದಿದ್ದಾರೆ. ಅವರುಗಳಿಗೆ ಉದ್ಯೋಗ ಕಲ್ಪಿಸಲೆಂದೇ ಆ ೬ ರಾಜ್ಯಗಳಲ್ಲಿ ಸರಕಾರ ಭಾರಿ ಪ್ರಮಾಣದಲ್ಲಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗಿದೆ. ಮನರೇಗಾದಡಿ ಈ ಕಾರ್ಯಗಳು ನಡೆಯಲಿದ್ದು, ಆ ೧೧೬ ಜಿಲ್ಲೆಗಳಿಗೆ ಈಗಾಗಲೇ ೫೦,೦೦೦ ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿದೆ.
-ಪಡಿತರ ಚೀಟಿ ಇರದಿದ್ದರೂ, ವಲಸಿಗರು ಎಲ್ಲಾದರೂ ೫ ಕೆ.ಜಿ.ಗಳಷ್ಟು ದಿನಸಿಯನ್ನು ಮತ್ತು ೧ ಕೆ.ಜಿ.ಯಷ್ಟು ಬೇಳೆಯನ್ನು ಪಡೆಯುವ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ.
-ಕೆಲಸ ಕಳೆದುಕೊಂಡ ವಲಸಿಗರು ತಮ್ಮ ಶೆಡ್ಡುಗಳಿಗೆ ಬಾಡಿಗೆ ಕಟ್ಟಲಾಗದೆ, ತಮ್ಮ ತಮ್ಮ ಹಳ್ಳಿಗಳ ಕಡೆಗೆ ಮುಖ ಮಾಡುವಂತಾಗಿದೆ. ಈ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಲು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಲಭ ಬಾಡಿಗೆಯ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.'
ಬರುವ ದಿನಗಳಲ್ಲಿ ಈ ರೀತಿಯ ಇನ್ನೂ ಹೆಚ್ಚಿನ ಯೋಜನಗಳನ್ನು ಜಾರಿಗೊಳಿಸಲಾಗುವುದೆಂದು ವಿವರಿಸಿದ ರಾಜುರವರ ಮುಖದಲ್ಲಿ ದೊಡ್ಡದಾದ ಮುಗಳ್ನಗೆಯೊಂದು ಮೂಡಿತ್ತು.
ತಂದೆ ರಾಜುರವರು ತಮ್ಮ ವಿವರಗಳನ್ನು ನೀಡುತ್ತಿದ್ದ ಇಡೀ ಸಮಯದಲ್ಲಿ 'ಅವೆಲ್ಲ ಏನೇನು ಸಾಲದೆಂಬಂತೆ,' ಮಗಳು ರೋಹಿಣಿ ತಲೆಯಾಡಿಸುತ್ತಿದ್ದಳು. ಹಲವು ತಜ್ಞರುಗಳು ಆಗ್ರಹ ಪಡಿಸಿದಂತೆ ವಲಸೆ ಕೆಲಸಗಾರರೆಲ್ಲರಿಗೂ ತಲಾ ೨೫,೦೦೦ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂಬುದು ರೋಹಿಣಿಯ ಅಭಿಪ್ರಾಯವೂ ಆಗಿತ್ತು.
ಚರ್ಚೆಗೆ ತೆರೆ ಎಳೆಯುವ ಸಮಯ ಇದೆಂದು ಮದನ್ ಲಾಲರಿಗೆ ಅನಿಸಿತ್ತು. ಅವರು ಮಾತನಾಡುತ್ತಾ 'ದೇಶದಲ್ಲಿ ಸುಮಾರು ೧೪ ಕೋಟಿಯಷ್ಟು ವಲಸಿಗ ಕೆಲಸಗಾರರಿದ್ದಾರೆ. ಅವರಗಳಲ್ಲಿ ಹೆಚ್ಚಿನವರು ದೇಶದ ಪೂರ್ವ ಭಾಗದ ರಾಜ್ಯಗಳವರು. ಹೆಚ್ಚಿನ ವಲಸಿಗರು ಬೃಹತ್ ನಗರಗಳನ್ನು ಸೇರಿದ್ದಾರೆ.
-ಲಾಕ್ಡೌನ್ ಜಾರಿಗೊಳ್ಳುವುದಕ್ಕಿಂತ ಮುಂಚಿತವಾಗಿಯೇ, ಕೋವಿಡ್ ಭಯದಿಂದ ಸುಮಾರು ಶೇಕಡಾ ೧೦ರಷ್ಟು ವಲಸಿಗರು ತಮ್ಮ ಹಳ್ಳಿಗಳಿಗೆ ಪ್ರಯಾಣಿಸಿದ್ದರು. ಲಾಕ್ಡೌನ್ನಿನ ಮೂರು ಮತ್ತು ನಾಲ್ಕನೇ ಹಂತಗಳ ನಡುವೆ ಇನ್ನು ೧೦%ರಷ್ಟು ವಲಸಿಗರು ನಿರ್ಗಮಿಸಿದ್ದಾರೆ. ಐದನೇ ಹಂತದ ಸಮಯದಲ್ಲಿ ಮತ್ತೆ ಶೇಕಡಾ ೧೦ರಷ್ಟು ವಲಸಿಗರ ಪ್ರಯಾಣದೊಂದಿಗೆ, ಒಟ್ಟು ಶೇಕಡಾ ೩೦ರಷ್ಟು ವಲಸಿಗರು ತಮ್ಮ ತಮ್ಮ ಹಳ್ಳಿಗಳಿಗೆ ಹಿಂತುರುಗಿದಂತಾಗಿದೆ.
ರೋಹಿಣಿ ಆಗ್ರಹ ಪಡಿಸಿದಂತೆ, ಲಾಕ್ಡೌನಿನ ಮೊದಲೆರಡು ತಿಂಗುಳುಗಳ ಸಂಬಳದ ಕೊರತೆಯೆನ್ನು ಸರಿದೂಗಿಸಲು, ವಲಸಿಗರಿಗೆ ತಲಾ ೨೫,೦೦೦ ರೂಪಾಯಿಗಳಷ್ಟು ಪರಿಹಾರವನ್ನು ಸರಕಾರ ನೀಡಬೇಕಿತ್ತು. ಇದರಿಂದ ವಲಸಿಗರ ಕೈಯಲ್ಲಿ ಖರ್ಚು ಮಾಡಲು ಹಣ ಸೇರಿ, ಸ್ಥಳೀಯ ವ್ಯಾಪಾರಗಳು ಚುರುಕುಗೊಳ್ಳುತ್ತಿತ್ತು.
ಹಳ್ಳಿಗಳನ್ನು ತಲುಪಿರುವ ಸುಮಾರು ಶೇಕಡಾ ೩೦ರಷ್ಟು ವಲಸಿಗರು ನಗರಗಳಿಗೆ ಹಿಂತಿರುಗಿ ಬರಲಿಷ್ಟಪಡಲಾರರು. ಆದರೂ ಹಳ್ಳಿಗಳಲ್ಲಿ ಉದ್ಯೋಗಾವಕಾಶವಿರದ ಕಾರಣ ಅವರುಗಳೆಲ್ಲರೂ ನಗರಗಳಿಗೆ ಹಿಂತಿರುಗಬೇಕಾಗಬಹುದು' ಎಂದರು.
***
ಈ ನಡುವೆ, ಪಟ್ಟಣಿಗರಂತೆ ಕಾಣುವ ಇಬ್ಬರು ವ್ಯಕ್ತಿಗಳ ಜೊತೆ ಸುಮಾರು ೧೦ ವಲಸಿಗ ಕೆಲಸಗಾರರು ಮದನ್ ಲಾಲರ ಕಚೇರಿಗೆ ಧಾವಿಸಿ ಬಂದರು. ಅವರುಗಳನ್ನು ಕಂಡ ಕೂಡಲೇ, ಎದ್ದು ನಿಂತು ಹೊರಗೆ ಹೊರಟ ರಾಜು ಮತ್ತು ರೋಹಿಣೀರವರನ್ನು ಕುಳಿತುಕೊಳ್ಳುವಂತೆ ಮದನ್ ಸೂಚಿಸಿದರು. ಪತ್ರಿಕಾ ವರದಿಗಾರ ಯೋಗಿಂದರ್ ಮತ್ತು ಸಮಾಜ ಸೇವಕ ಜಸ್ಪಾಲರು ಕೂಡ ಆಸನಗಳಲ್ಲಿ ಕುಳಿತರು. ಮಿಕ್ಕವರು ಸುತ್ತಲೂ ನಿಂತೇ ಇದ್ದರು.
ಯೋಗಿಂದರ್ ಮಾತನಾಡುತ್ತ 'ಏಪ್ರಿಲ್-ಮೇ ತಿಂಗಳುಗಳಲ್ಲಿ ಬಂಧನಗೊಂಡ ನಮ್ಮಿಬರನ್ನೂ ಮತ್ತು ಮಿಕ್ಕ ಹನ್ನೆರಡು ವಲಸಿಗರನ್ನೂ ಜಾಮೀನನ ಮೇಲೆ ಬಿಡುಗಡೆಗೊಳಿಸದ್ದಕ್ಕಾಗಿ ತಮಗೆ ಧನ್ಯವಾದಗಳು' ಎಂದರು.
ವಕೀಲ ಮದನ್ ಲಾಲರು ಉತ್ತರಿಸುತ್ತಾ, 'ತಮ್ಮೆಲ್ಲರುಗಳ ಮೇಲೂ ಜಾರಿಗೊಂಡಿರುವ ಆರೋಪ ಪತ್ರ (Charge sheet) ನನ್ನ ಕೈಸೇರಿದೆ. ನಿಮ್ಮಗಳ ಮೇಲಿನ ಆರೋಪಗಳು ಗಂಭೀರವಾಗೇ ಇದೆ. ಅಂದಿನ ಘಟನೆ ಕುರಿತಾದ ಎಲ್ಲ ವಿವರಗಳನ್ನು ತಾವುಗಳು ನನಗೆ ನೀಡಬೇಕು. ತಾವುಗಳು ಶೀಘ್ರವಾಗಿ ದೋಷ ಮುಕ್ತರಾಗಬೇಕಾದರೆ, ಸದೃಢವಾದ ವಾದವನ್ನು ನ್ಯಾಯಾಲಯದ ಮುಂದಿಡಬೇಕು' ಎಂದರು.
'ನಮ್ಮಗಳ ಮೇಲಿನ ಆರೋಪದ ವಿವರಗಳನ್ನು ನಮಗೆ ದಯಮಾಡಿ ತಿಳಿಸಿ' ಎಂದರು ಆತಂಕಗೊಂಡಂತೆ ಕಂಡ ಯೋಗಿಂದರ್.
ವಕೀಲ ಮದನರು ಆರೋಪಗಳ ವಿವರಗಳನ್ನು ನೀಡುತ್ತಾ, 'ನಿಮ್ಮ ನಗರದ ಹನುಮಾನ್ ಮಂದಿರದ ಹತ್ತಿರವಿರುವ ಅಂತರ ರಾಜ್ಯ ಬಸ್ ನಿಲ್ದಾಣದಲ್ಲಿ ತಾವಿಬ್ಬರು ಅಂದು ಜಮಾಯಿಸಿದ್ದ ವಲಸಿಗರನ್ನು ದಾಂಧಲೆ ನಡೆಸುವಂತೆ ಪ್ರಚೋದಿಸಿದ್ದೀರಿ. ಆ ನಿಲ್ದಾಣದಿಂದ ಹೊರಡುವ ದೂರ ಪ್ರಯಾಣದ ಬಸ್ಸುಗಳ ತಪ್ಪು ಮಾಹಿತಿಯನ್ನು ನೀಡಿದ್ದೀರಿ. ಏಪ್ರಿಲ್ ೧೫ರನಂತರವೂ ಲಾಕ್ಡೌನ್ ಮುಂದುವರೆಸಿದ್ದರಿಂದ, ವಲಸಿಗರುಗಳಾಗಲೇ ಉದ್ರಿಕ್ತರಾಗಿದ್ದರು. ತಮ್ಮ ತಮ್ಮ ದೂರದ ಹಳ್ಳಿಗಳಿಗೆ ಪ್ರಯಾಣ ಬೆಳಸಲು ಬೇಕಾದ ಬಸ್ಸು-ರೈಲುಗಳ ವ್ಯವಸ್ಥೆಯನ್ನು ಕೂಡಲೇ ಮಾಡಿಕೊಡಬೇಕೆಂಬುದು ಅವರುಗಳ ಆಗ್ರಹವಾಗಿತ್ತು. "ನಮಗೆ ಕೆಲಸವಿಲ್ಲ, ನಮ್ಮ ಬಳಿ ಹಣವಿಲ್ಲ, ನಮ್ಮ ವಸತಿಯ ಶೆಡ್ಡುಗಳಿಗೆ ಬಾಡಿಗೆ ಕಟ್ಟಲಾಗುತ್ತಿಲ್ಲ" ಎಂಬುದು ಅವರುಗಳ ಒಕ್ಕೊರಲ ಘೋಷಣೆಯಾಗಿತ್ತು.
ಅಂದು ನೆರೆ ರಾಜ್ಯಗಳ ಬೃಹತ್ ನಗರಗಳಲ್ಲೂ ಅದೇ ರೀತಿಯ ವಲಸಿಗರ ಜಮಾವಣೆ ಮತ್ತು ಹರತಾಳಗಳು ನಡೆದಿತ್ತು. ಅವರುಗಳೂ ರಸ್ತೆ ತಡೆಗಳನ್ನು ಉಂಟುಮಾಡಿದ್ದರು. ನಿಮ್ಮಗಳ ಸಂಪರ್ಕದಲ್ಲಿದ್ದ ಬೇರೆ ಬೇರೆ ನಗರಗಳ ನಾಯಕರುಗಳ ಪೂರ್ವನಿಯೋಜನೆಗಳಿಂದಲೇ, ಸುತ್ತಲಿನ ಎಲ್ಲಾ ಬೃಹತ್ ನಗರಗಳಲ್ಲೂ, ಜಮಾಯಿಸಿದ್ದ ವಲಸಿಗರುಗಳು ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ರೊಚ್ಚಿಗೆದ್ದು ದಾಂಧಲೆಯೆಬ್ಬಿಸ್ಸಿದ್ದಾರೆ.
ಸಹಸ್ರಾರು ಸಂಖ್ಯೆಗಳಲ್ಲಿ ಪ್ರಯಾಣಕ್ಕೆಂದು ಜಮಾಯಿಸಿದ್ದ ವಲಸಿಗರುಗಳ ಕೈಯಲ್ಲಿ ಗಂಟು ಮೂಟೆಗಳೇಕಿತ್ತಿಲ್ಲ? ದೊಂಬಿ ನಡೆದ ಬಸ್ ನಿಲ್ದಾಣದ ಸುತ್ತ ವಾಸವಿದ್ದ ವಲಸಿಗರುಗಳು ಮಾತ್ರ ಅಲ್ಲಿ ಜಮಾಯಿಸಿದ್ದಕ್ಕೆ ಕಾರಣವೇನು? ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಜರುಗಿದ ದೊಂಬಿ ಪ್ರಕರಣಗಳು ಸರಕಾರದ ಮುಖಕ್ಕೆ ಮಸಿ ಬಳಿಯಲೆಂದೇ ಪೂರ್ವನಿಯೋಜಿತವಾಗಿ ನಡೆಸಿದ ಕೃತ್ಯಗಳು ಎಂದು ನಿಮ್ಮಗಳ ಮೇಲೆ ಆರೋಪಿಸಲಾಗಿದೆ' ಎಂದರು.
ಆರೋಪಗಳ ಪಟ್ಟಿಯನ್ನು ಆಲಿಸಿದ ಯೋಗಿಂದರ್ ಮತ್ತವರ ಸಂಗಡಿಗರು ಸ್ವಲ್ಪ ವಿಚಲಿತರಾದಂತೆ ಕಂಡರು. 'ಚಿಂತಿತರಾಗಬೇಡಿ, ತಮ್ಮಗಳನ್ನು ಆರೋಪ ಮುಕ್ತರುಗಳನ್ನಾಗಿಸುವ ಎಲ್ಲ ಪ್ರಯತ್ನಗಳನ್ನು ಮಾಡುವೆ' ಎಂದು ಮದನ್ ಅವರುಗಳನ್ನು ಸಮಾಧಾನ ಪಡಿಸಿದರು.
ಘಟನೆಗಳ ಎಲ್ಲಾ ವಿವರಗಳನ್ನು ತದೇಕ ಚಿತ್ತಳಾಗಿ ಆಲಿಸಿದ ರೋಹಿಣಿ, ತನ್ನ ಡೈರಿಯಲ್ಲಿ ಕೆಲವು ಟಿಪ್ಪಣಿಗಳನ್ನು ಬರೆದುಕೊಂಡಿದ್ದಳು. 'ಲಾಕ್ಡೌನನ್ನು ಮಾರ್ಚ್ ೨೪ರಂದು ದಿಢೀರನೆ ಜಾರಿಗೊಳಿಸಿದಾಗ, ವಲಸಿಗ ಕೆಲಸಗಾರರಿಗೆ ಉಂಟಾಗಬಹುದಾದ ಅತಂತ್ರ ಪರಿಸ್ಥಿತಿಯ ಪೂರ್ವಾನುಮಾನ ನಮ್ಮ ನಾಯಕರುಗಳಿಗೆ ಇದ್ದಂತೆ ಕಾಣುವುದಿಲ್ಲ. ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುಲು ಹಲವು ಸಾಧನಗಳಿರುವ ನಮ್ಮ ನಾಯಕರುಗಳಿಗೆ ವಲಸಿಗರ ಬವಣೆಯ ಪೂರ್ವಾನುಮಾನ ಇರದೇ ಇದ್ದದ್ದು ನಾಚಿಕೆಗೇಡಿನ ವಿಷಯವೇ ಸರಿ. ಮಾರ್ಚ್ ೨೪ಕ್ಕಿಂತ ಕೆಲವು ದಿನಗಳ ಮುಂಚೆಯೇ, ಲಾಕ್ಡೌನಿನ ಪೂರ್ವಾನುಮಾನವಿದ್ದ ಹಲವು ವಲಸಿಗರು, ಪೂರ್ವದ ರಾಜ್ಯಗಳ ಕಡೆ ಹೊರಡುವ ಹಲವು ರೈಲುಗಳನ್ನು ಹತ್ತಲು ಮುಗಿ ಬಿದ್ದದ್ದು ಸರಕಾರಗಳು ಗಮನಿಸಲಿಲ್ಲವೆ? ವಲಸಿಗರ ಅತಂತ್ರ ಸ್ಥಿತಿಗೆ ನಮ್ಮ ಕೇಂದ್ರ ಹಾಗು ರಾಜ್ಯ ಸರಕಾರಗಳೇ ಕಾರಣ. ಉಂಟಾಗ ಬಹುದಾದ ವಲಸಿಗರ ಪರದಾಟಗಳನ್ನು ನಿಭಾಯಿಸುವ ಯಾವ ಮುಂಜಾಗರೂಕತೆಯ ಕ್ರಮಗಳನ್ನೂ ನಮ್ಮ ಸರಕಾರಗಳು ಕೈಗೊಳ್ಳಲಿಲ್ಲ. ಹಾಗಾಗಿ ನಮ್ಮ ವಲಸಿಗ ಕೆಲಸಗಾರರು ನೀರು, ಆಹಾರ, ವಸತಿಗಳಿಲ್ಲದೆ ಒದ್ದಾಡುವಂತಾಯ್ತು. ಪ್ರಯಾಣಿಸಲು ಅನ್ಯ ಮಾರ್ಗವಿಲ್ಲದೆ, ತಮ್ಮ ಸಾಮಾನುಗಳನ್ನು ಹೊತ್ತು, ಹೆಂಡತಿ-ಮಕ್ಕಳುಗಳೊಡನೆ, ಸುಡುಬಿಸಿಲಿನಲ್ಲಿ ರೈಲು ಮತ್ತು ಬಸ್ಸು ಮಾರ್ಗಗಳನ್ನು ಹಿಡಿದು ಕಾಲ್ನಡಿಗೆಯಲ್ಲಿ ಸಾಗಬೇಕಾಯಿತು' ಎನ್ನುತ್ತಾ ಪ್ರಲಾಪಿಸಿದವಳು ರೋಹಿಣಿ.
ಮದನ್ ಲಾಲರು ಕೂಡ ಹೌದೆಂಬಂತೆ ತಲೆಯಾಡಿಸುತ್ತಾ, 'ರೈಲು ಮತ್ತು ಬಸ್ ಮಾರ್ಗಗಳಲ್ಲಿ ಚಲಿಸುತ್ತಾ ತಮ್ಮ ತಮ್ಮ ಊರುಗಳತ್ತ ಹೋರಾಟ ವಲಸಿಗ ಕೆಲಸಗಾರರ ಕಾಲ್ನಡಿಗೆಯ ಪ್ರಯಾಣ, ೧೯೪೭ರ ಭಾರತ ವಿಭಜನೆಯ ಕರಾಳ ದಿನಗಳಂದು, ಪಂಜಾಬ್ ಹಾಗೂ ಬಂಗಾಳ ಗಡಿಗಳಲ್ಲಿ ದಿಕ್ಕೆಟು ಎರಡೂ ಕಡೆಗೆ ಸಾಗಿದ ನಿರಾಶ್ರಿತರ ವಲಸೆಯನ್ನು ನೆನಪಿಸಿತ್ತು. ಲಾಕ್ಡೌನ್ ವಿಧಿಸುವ ಮುನ್ನ, ವಲಸಿಗ ಕೆಲಸಗಾರರ ಸಮಸ್ಯೆಯನ್ನು ಸರಕಾರಗಳು ಮುಂಚಿತವಾಗಿ ಮನಗಾಣಬೇಕಿತ್ತು. ಲಾಕ್ಡೌನ್ ವಿಧಿಸುವ ಮುನ್ನ ವಲಸಿಗರು ತಮ್ಮ ತಮ್ಮ ಊರುಗಳತ್ತ ಪ್ರಯಾಣಿಸುವ ವ್ಯವಸ್ಥೆಯನ್ನು ಮಾಡಿಕೊಡಬೇಕಿತ್ತು ಅಥವಾ ಅವರುಗಳಿರುವಲ್ಲೇ ಅವರುಗಳಿಗೆ ನೀರು, ಆಹಾರ ಮತ್ತು ವಸತಿಯ ಸೌಕರ್ಯವನ್ನು ಮಾಡಿಕೊಡಬೇಕಿತ್ತು. ಲಾಕ್ಡೌನ್ ದಿನಗಳಲ್ಲಿ ವಲಸಿಗ ಕೆಲಸಗಾರರ ಮೂಲಭೂತ ಅವಶ್ಯಕತೆಗಳ ಏರ್ಪಾಡನ್ನು ಅವರಗುಳಿರುವಲ್ಲಿಯೇ ಮಾಡಿಕೊಡಬೇಕೆಂದು, ನಿರ್ಮಾಣೋದ್ಯಮಿಗಳ ಮತ್ತು ದೊಡ್ಡ ಗುತ್ತಿಗೆದಾರರುಗಳ ಮೇಲೆ ಕಠಿಣ ಷರತ್ತುಗಳನ್ನು ಸರಕಾರಗಳು ವಿಧಿಸಬೇಕಿತ್ತು. ಈ ಅವಧಿಯಲ್ಲಿ ನೂರಾರು ವಲಸಿಗರು ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಂಡದ್ದು, ಸ್ವತಂತ್ರ ಭಾರತದ ಇತಿಹಾಸದ ಮೇಲಿನ ಕಪ್ಪು ಚುಕ್ಕೆ' ಎಂದು ಉದ್ಗರಿಸಿದರು.
ಉತ್ತೇಜಿರಾದಂತೆ ಕಂಡ ರಾಜುರವರು, 'ನಾನು ವಕೀಲನಾಗಿರದಿರಬಹುದು. ಆದರೂ ತಮ್ಮ ಹೋಲಿಕೆ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ' ಎಂದು ಮದನರನ್ನು ನೋಡುತ್ತಾ ಗುಡುಗಿದರು. 'ಹೌದು, ೧೯೪೭ರ ಭಾರತ ವಿಭಜನೆಯ ಸಮಯದಲ್ಲಿ ನಡೆದ ನಿರಾಶ್ರಿತರ ವಲಸೆಯ ದುರಂತ, ಮನುಕುಲದ ಇತಿಹಾಸದಲ್ಲಿ ಕರಾಳವಾದುದೆಂದು ಓದಿದ್ದೇನೆ. ಸುಮಾರು ಒಂದು ಕೋಟಿಗೂ ಮೀರಿದಷ್ಟು ನಿರಾಶ್ರಿತರು ಪಂಜಾಬ್ ಗಡಿಯ ಎರಡೂ ಕಡೆ ಪರದಾಡುತ್ತ ಸಾಗಿದ್ದರು. ಬಂಗಾಳದ ಗಡಿಯಲ್ಲೂ ಸುಮಾರು ೧೦ ಲಕ್ಷದಷ್ಟು ನಿರಾಶ್ರಿತರ ವಿನಿಮಯ ಅಮಾನುಷ ರೀತಿಯಲ್ಲಿ ನಡೆದಿದೆ. ಆ ರೀತಿಯ ನಿರಾಶ್ರಿತರ ಆತಂಕದ ಪ್ರಯಾಣ, ಹಿಂಸಾಚಾರಗಳು, ಕೊಲೆ-ಸುಲಿಗೆಗಳು ನಡೆದೇ ನಡೆಯುತ್ತದೆಂಬ ಪೂರ್ವಾನುಮಾನ ಎರಡೂ ಕಡೆಯ ನಾಯಾಕರುಗಳಿಗೆ ಇದ್ದೇ ಇತ್ತು. ಆದರೆ ಅಂದಿನ ಎರಡೂ ಕಡೆಯ ನಾಯಕರುಗಳಿಗೆ ಅಧಿಕಾರವನ್ನು ಕೂಡಲೇ ವಹಿಸಿಕೊಳ್ಳುವ ತವಕ ಮಾತ್ರವಿದ್ದು, ನಿರಾಶ್ರಿತರ ಕ್ಷೇಮೆದ ಚಿಂತೆಯನ್ನು ಮಾಡಲೇ ಇಲ್ಲ. ಅಂದಿನ ಭಾರತ ವಿಭಜನೆಯ ಪ್ರಕ್ರಿಯೆ, ಅಂದಿನ ನಾಯಕರುಗಳು ಆತಾತುರವಾಗಿ ನಡೆಸಿದ ಅವಿವೇಕವಾಗಿತ್ತು. ಅಂದಿನ ಬ್ರಿಟಿಷ್ ಸರಕಾರ ವಿಭಜನೆಯ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವಂತೆ ೧೨ ತಿಂಗಳುಗಳಿಗೂ ಹೆಚ್ಚಿನ ಸಮಯಾವಕಾಶವನ್ನು ಅಂದಿನ ವೈಸ್ರಾಯರಿಗೆ ನೀಡಿದ್ದರೂ, ಎಲ್ಲ ನಾಯಕರುಗಳು ನಾಲ್ಕೇ ತಿಂಗಳುಗಳ ತರಾತುರಿಯಲ್ಲಿ ದೇಶದ ವಿಭಜನೆಯನ್ನು ಮಾಡಿ ಮುಗಿಸಿದರು.
ಅಂದಿನ ಅವಿಭಜಿತ ಭಾರತದ ಕೈಯಲ್ಲಿ ಸಾಕಷ್ಟು ದೊಡ್ಡದಾದ ಸೇನಾಬಲವಿತ್ತು. ಸೇನೆಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ, ಸೂಕ್ತವಾಗಿ ನಿಯೋಜಿಸಿದ್ದರೆ ರಕ್ತಪಾತ ಹಾಗು ಕೊಲೆ-ಸುಲಿಗೆಗಳನ್ನು ತಡೆಯಬಹುದಿತ್ತು. ದುರದೃಷ್ಟವಶಾತ್ ಹಾಗಾಗಲಿಲ್ಲ. ಆ ದಿನಗಳ ವರದಿಯೊಂದರ ಪ್ರಕಾರ ಅಂದು ನಡೆದ ಹಿಂಸಾಚಾರಗಳಲ್ಲಿ, ಎರಡೂ ಕಡೆಯ ಸುಮಾರು ೧೦ರಿಂದ ೨೦ ಲಕ್ಷಗಳಷ್ಟು ನಿರಾಶ್ರಿತರ ಕಗ್ಗೊಲೆ ನಡೆದು ಹೋಯಿತು. ಸಾವು-ನೋವುಗಳ ಅನುಮಾನವನ್ನು ಉತ್ಪ್ರೇಕ್ಷೆಯಿಲ್ಲದೆ ಬಣ್ಣಿಸಿದ್ದೇವೆಂದು ಹೇಳಿಕೊಂಡ ವರದಿಗಳೂ ಕೂಡ ೨ ಲಕ್ಷದಿಂದ ೫ ಲಕ್ಷಗಳವರೆಗಿನ ಸಂಖ್ಯೆಯಲ್ಲಿ ನಿರಾಶ್ರಿತರು ಹಿಂಸಾಚಾರದಲ್ಲಿ ಅಸು ನೀಗಿದರು ಎಂದು ದಾಖಲಿಸಿವೆ. ಮತ್ತೊಂದು ವರದಿಯ ಪ್ರಕಾರ, "ಎರಡೂ ರಾಷ್ಟ್ರಗಳು ನಿರಾಶ್ರಿತರ ವಿನಿಮಯಕ್ಕೆಂದು ಚಲಾಯಿಸಿದ ಹಲವಾರು ರೈಲುಗಾಡಿಗಳು, ತಮ್ಮ ಅಂತಿಮ ನಿಲ್ದಾಣಗಳನ್ನು ತಲುಪಿ ನಿಂತರೂ, ಯಾವ ಪ್ರಯಾಣಿಕರೂ ಇಳಿಯಲೇ ಇಲ್ಲ. ರೈಲಿನಲ್ಲೇ ನಿರಾಶ್ರಿತರ ಸಾಮೂಹಿಕ ಮಾರಣ ಹೋಮವನ್ನು ನಡೆಸಲಾಗಿತ್ತು. ಎರಡೂ ಕಡೆಯ ನಿರಾಶ್ರಿತರುಗಳ ನಡುವಿನ ದ್ವೇಷ, ಅಸೂಯೆ ಅಷ್ಟು ತೀವ್ರವಾಗಿತ್ತು. ದುಷ್ಕರ್ಮಿಗಳ ಸಂಚು ಹಿಂಸಾಚಾರಕ್ಕೆ ತುಪ್ಪವನ್ನು ಸುರಿಯುವ ಕೆಲಸ ಮಾಡಿತ್ತು. ಜೊತೆಗೆ ಅಂದಿನ ನಾಯಕರುಗಳ ಬೇಜವಾಬ್ದಾರಿ ವರ್ತನೆ ಮತ್ತು ದಿವ್ಯ ನಿರ್ಲಕ್ಷ್ಯಗಳು ಸಾಮೂಹಿಕ ಹತ್ಯೆಗಳಿಗೆ ಎಡೆ ಮಾಡಿ ಕೊಟ್ಟಿತ್ತು. ಎರಡೂ ಕಡೆಯ ನಿರಾಶ್ರಿತರು ತಮ್ಮ ತಮ್ಮ ಆಸ್ತಿ-ಪಾಸ್ತಿಗಳನ್ನು ತೊರೆದು, ಬರಿಗೈಗಳಲ್ಲಿ ದೇಶಾಂತರಿಸಬೇಕಾಗಿ ಬಂದಿತ್ತು. ನಿರಾಶ್ರಿತರು ತ್ಯಜಿಸಿ ಬಂದ ಆಸ್ತಿಗಳ ಕ್ರಮಬದ್ಧ ಮರುಹಂಚಿಕೆಯನ್ನು ಮಾಡುವ ಯಾವ ಪ್ರಯತ್ನಗಳೂ ವ್ಯವಸ್ಥಿತವಾಗಿ ನಡೆಯಲಿಲ್ಲ" ತಿಳಿದು ಬಂದಿದೆ.
೨೦೨೦ರ ವಲಸಿಗರ ಬವಣೆಯನ್ನು ೧೯೪೭ರ ಘಟನೆಯೊಂದಿಗೆ ಹೋಲಿಸಬೇಡಿ. ಮಾರ್ಚ್ ೨೨ರ ದಿನದಂದೇ ನಮ್ಮ ಪ್ರಧಾನಿಯವರು ದೇಶದ ಜನತೆಯನ್ನು ಲಾಕ್ಡೌನ್ಗೆ ಮಾನಸಿಕವಾಗಿ ಸಿದ್ಧರಿರುವಂತೆ ಮಾಡಲು, ಒಂದು ದಿನದ ಲಾಕ್ಡೌನನ್ನು ಜಾರಿಗೊಳಿಸಿದ್ದರು. ಮಾರ್ಚ್ ೨೦ರ ತಮ್ಮ ಭಾಷಣದಲ್ಲೇ ಪ್ರಧಾನಿಯವರು ಜನತೆಗೆ ದೀರ್ಘವಾದ ಹೋರಾಟವೊಂದಕ್ಕೆ ಸಿದ್ಧರಾಗಿರುವಂತೆ ಕರೆ ನೀಡಿದ್ದರು. ಆದುದರಿಂದ ಹಲವಾರು ಹಂತಗಳಲ್ಲಿ ದೀರ್ಘವಾದ ಲಾಕ್ಡೌನನ್ನು ಜಾರಿಗೊಳಿಸಿದ್ದು, ದಿಢೀರನೆ ಕೈಗೊಂಡ ನಿರ್ಣಯವೆಂದು ಹೇಳಲಾಗದು. ಸರಕಾರಕ್ಕೆ ವಲಸಿಗರ ಸಮಸ್ಯೆಯ ಅರಿವು ಇರಲಿಲ್ಲವೆಂದೂ ಹೇಳಲಾಗದು. ವಲಸಿಗರನ್ನು ಲಾಕ್ಡೌನ್ಗೆ ಮುಂಚಿತವಾಗೇ ಅವರವರ ಊರುಗಳನ್ನು ತಲುಪುವಂತೆ ಮಾಡಿದ್ದರೆ, ನಗರಗಳಿಂದ ಸೋಂಕು ಮುಕ್ತವಾಗಿದ್ದ ಹಳ್ಳಿಗಳಿಗೆ ಕೋವಿಡ್ ಸೋಂಕನ್ನು ತಂದು ಸೇರಿಸಿದಂತಾಗುತ್ತಿತ್ತು. ರೈಲುಗಾಡಿಗಳ ತುಂಬಾ ವಲಸಿಗರು ಕಿಕ್ಕಿರಿದು ಸೇರಬೇಕಾಗಿದ್ದುದೇ ಸೋಂಕಿನ ತೀವ್ರ ಹರಡುವಿಕೆಗೆ ಕಾರಣವಾಗ ಬಹುದೇನೋ ಎಂಬ ಭಯವಿತ್ತು.
ವಲಸಿಗರ ಪರದಾಟದ ಬವಣೆಯನ್ನು, ೧೯೯೦ರಲ್ಲಿ ಕಾಶ್ಮೀರದಿಂದ ಹಿಂದೂಗಳನ್ನು ಹೊಡೆದಟ್ಟಿದ ಘಟನೆಗೂ ಹೋಲಿಸಿ ನೋಡಬಹುದು. ಅಂದು ಕಾಶ್ಮೀರದಿಂದ ಹೊರದೂಡಲ್ಪಟ್ಟ ಹಿಂದೂಗಳನ್ನು, ನಮ್ಮ ಮಾಧ್ಯಮದವರು, ರಾಜಕಾರಣಿಗಳು ಮತ್ತು ಕೆಲವು ಸರಕಾರಗಳೂ ಉದ್ದೇಶಪೂರ್ವಕವಾಗಿ "ಕಾಶ್ಮೀರಿ ಪಂಡಿತ"ರೆಂದೇ ಕರೆಯುತ್ತಾರೆ. ಪಂಡಿತ ಜನಾಂಗದವರು ಹಿಂದೂಗಳಲ್ಲವೆ? ಇದು "ಒಡೆದು ಆಳುವ ನೀತಿಯ" ಮುಂದುವರೆದ ಹುನ್ನಾರವಲ್ಲವೆ? ಈ ರೀತಿಯ ಒಡೆದಾಳುವ ಹುನ್ನಾರಗಳಿಗೆ ನನ್ನ ಕಡು ವಿರೋಧವಿದೆ. ಆ ದಿನಗಳಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿರಂತರವಾಗಿ ಸಾಗಿತ್ತು. ಅಪಾರ ಸಂಖ್ಯೆಯಲ್ಲಿ ಅತ್ಯಾಚಾರ ಹಾಗು ಕೊಲೆ ಪ್ರಕರಣಗಳು ನಡೆದಿದ್ದವು. ಕಾಶ್ಮೀರವನ್ನು ಬಿಟ್ಟು ತೊಲಗುವಂತೆ ಉಗ್ರರು, ಶತ ಶತಮಾನಗಳಿಂದ ಅಲ್ಲೇ ಬದುಕು ಕಟ್ಟಿಕೊಂಡಿದ್ದ ಹಿಂದುಗಳಿಗೆ ಬೆದರಿಕೆಯೊಡ್ಡಿದ್ದರು. ನಾಲ್ಕು ಲಕ್ಷಕ್ಕೂ ಹೆಚ್ಚು ಹಿಂದೂಗಳು ಜೀವ ಭಯದಿಂದ ರಾತ್ರೋರಾತ್ರಿ ಕಾಶ್ಮೀರವನ್ನು ತೊರೆದು, ಜಮ್ಮು, ದಿಲ್ಲಿ ಮುಂತಾದ ಸುರಕ್ಷಿತ ತಾಣಗಳಿಗೆ ವಲಸೆ ಹೋದರು. ಆಸ್ತಿ-ಪಾಸ್ತಿಗಳನ್ನು ಬಿಟ್ಟು ಓಡಿ ಹೋಗಬೇಕಾದ ಅವರುಗಳಿಗೆ, ಎಷ್ಟರ ಮಟ್ಟಿನ ಮನೋವೇದನೆಯಾಗಿರ ಬೇಡ? ನಮ್ಮ ದೇಶದಲ್ಲೇ, ನಮ್ಮ ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾದರು. ಆ ದಿನಗಳಲ್ಲಿ ಕಾಶ್ಮೀರಿ ಹಿಂದೂಗಳ ರಕ್ಷಣೆ ಮಾಡಲು ಅಂದಿನ ಯಾವ ಸರಕಾರಗಳೂ ಮುಂದೆ ಬರದೇ ಇದ್ದದ್ದು ದುರಂತವೇ ಸರಿ. ಈ ದುರ್ಘಟನೆ ನಡೆದು ಮೂರು ದಶಕಗಳೇ ಕಳೆದಿದ್ದರೂ, ಕಾಶ್ಮೀರಿ ಹಿಂದುಗಳಿಗೆ ತಮ್ಮ ಊರುಗಳಿಗೆ ಹಿಂತಿರುಗಲಾಗಿಲ್ಲ. ಅವರುಗಳೆಲ್ಲ ಕಾಶ್ಮೀರದ ಹೊರಗೆ ಉಳಿದು, ತಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಂಡಿದ್ದಾರೆ. ಇಂದಿನ ಕೇಂದ್ರ ಸರಕಾರ, ಕಾಶ್ಮೀರಿ ಹಿಂದೂಗಳು ಕಾಶ್ಮೀರಕ್ಕೆ ಹಿಂತಿರುಗುವಂತೆ ಧೈರ್ಯ ತುಂಬಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಅವರುಗಳಿಗೆ ಹಿಂತಿರುಗುವಲ್ಲಿನ ಭಯದ ನಿವಾರಣೆಯಾಗಿಲ್ಲ. ಕಾಶ್ಮೀರಿ ಹಿಂದೂಗಳ ಸಮಸ್ಯೆಗಳಿಗೆ ಹೋಲಿಸಿದರೆ, ಲಾಕ್ಡೌನಿನಿಂದ ಸಂತ್ರಸ್ತರಾದ ವಲಸಿಗರ ಪರಿಸ್ಥಿತಿ ಅಷ್ಟೇನು ತ್ರಾಸದಾಯಕವಾಗೇನಿಲ್ಲವೆಂದೇ ಹೇಳಬಹುದು. ವಲಸಿಗ ಕೆಲಸಗಾರರು ಕೆಲಸಗಳನ್ನು ಕಳೆದುಕೊಂಡಿದ್ದಾರೆ, ಆದರೆ ಆಸ್ತಿ-ಪಾಸ್ತಿಗಳನ್ನಲ್ಲ. ಅವರವರ ಹಳ್ಳಿಗಳಲ್ಲೇ ಅವರುಗಳಿಗೆ ವಸತಿ, ಉದ್ಯೋಗಗಳ ವ್ಯವಸ್ಥೆಯನ್ನು ಮಾಡುವ ಸರ್ವ ಪ್ರಯತ್ನಗಳನ್ನು ಸರಕಾರಗಳು ಮಾಡಿವೆ. ಒಂದೊಮ್ಮೆ ಅವರುಗಳು ಕೆಲಸದ ಸಲುವಾಗಿ ನಗರಗಳಿಗೆ ಹಿಂತಿರುಗಲು ಬಯಸಿದಲ್ಲಿ, ಅವರ ಪ್ರಯಾಣದ ವ್ಯವಸ್ಥೆಯನ್ನೂ ಸರಕಾರ ಮಾಡುವ ಭರವಸೆ ನೀಡಿದೆ.
ಲಾಕ್ಡೌನ್ ಜಾರಿಗೊಂಡ ಕೂಡಲೇ, ವಲಸಿಗ ನೌಕರರು ರೈಲು-ಬಸ್ಸುಗಳನ್ನು ಹಿಡಿದು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಲು ಪ್ರಯತ್ನಿಸಿದರು. ದಿಕ್ಕು ತೋಚದ ಹಲವು ವಲಸಿಗರು ಕಾಲ್ನಡಿಗೆಯಲ್ಲೇ ತಮ್ಮ ಊರುಗಳತ್ತ ಹೊರಟರು. ಇಂತಹ ಬೆಳವಣಿಗೆಗಳನ್ನು ಗಮನಿಸಿದ ಕೇಂದ್ರ ಸರಕಾರ, ಆಯಾ ರಾಜ್ಯ ಸರಕಾರಗಳಿಗೆ ವಲಸಿಗರನ್ನು ಅವರುಗಳಿರುವ ಸ್ಥಳದಲ್ಲೇ ಉಳಿದುಕೊಳ್ಳುವಂತೆ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಕೂಡಲೇ ಮಾಡುವಂತೆ ನಿರ್ದೇಶಿಸಿತು. ಎಲ್ಲಾ ರಾಜ್ಯ ಸರಕಾರಗಳೂ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡರೂ, ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದಿರಬಹುದು. ಆದರೂ ಅಪಾರ ಸಂಖ್ಯೆಯಲ್ಲಿ ವಲಸಿಗರು ಅತಂತ್ರರಾಗಿದ್ದು, ಕಂಡು ಕೇಳರಿಯದ ಸಮಸ್ಯೆಯೇ ಸರಿ. ಆದರೂ ಸರಕಾರಗಳು ಕೈಗೊಂಡ ಕ್ರಮಗಳಿಂದ ಸಾವು ನೋವುಗಳು ನೂರರ ಸಂಖ್ಯೆಯಲ್ಲಿ ಮಾತ್ರವಿದ್ದು, ೧೯೪೭ರಂದು ನಡೆದ "ನರಮೇಧ"ದೊಂದಿಗಿನ ಹೋಲಿಕೆ ಸಲ್ಲದು. ಪರಿಸ್ಥಿತಿಯನ್ನು ನಿಭಾಯಿಸಲು ಶ್ರಮ ಪಡುತ್ತಿರುವ ಸರಕಾರಗಳ ಬಗ್ಗೆ ಸ್ವಲ್ಪ ಅನುಕಂಪವಿರಲಿ.' ಭಾವಾವೇಶದಿಂದ ಕೂಡಿದ ತಮ್ಮ ವಿಚಾರಗಳನ್ನು ಮಂಡಿಸಿದ ರಾಜುರವರು ಸಾಕಷ್ಟು ದಣಿದಿದ್ದಂತೆ ಕೂಡ ಕಂಡರು.
ವಕೀಲ ಮದನ್ ಲಾಲ್ ಮತ್ತು ರೋಹಿಣಿಯವರಿಬ್ಬರೂ ರಾಜುರವರ ಆವೇಶಭರಿತ ವಾದವನ್ನು ಕೇಳಿ ಮೂಕವಿಸ್ಮಿತರಾಗಿದ್ದರು. ೧೯೪೭ರ ಘಟನೆಗಳ ಬಗ್ಗೆ ಕರಾರುವಾಕಾದ ವಿಚಾರಗಳನ್ನು ವಿವರಿಸಿದ ತಂದೆ ರಾಜುರವರಿಗೆ, ಮಗಳು ರೋಹಿಣಿ ಮೆಚ್ಚುಗೆ ವ್ಯಕ್ತಪಡಿಸಿದಳು. ರಾಜು ಮತ್ತು ರೋಹಿಣಿ ಮದನ್ ಲಾಲರ ಮನೆಯನ್ನು ಬಿಟ್ಟು ಹೊರಡುವ ಹೊತ್ತಿಗಾಗಲೇ ತಡರಾತ್ರಿಯಾಗಿತ್ತು.
***
ವಲಸಿಗ ಕೆಲಸಗಾರರ ಕಷ್ಟ-ಕಾರ್ಪಣ್ಯಗಳನ್ನು ಕುರಿತು ಇನ್ನೂ ಹೆಚ್ಚಿನ ಪರಿಶೋಧನೆಯನ್ನು ಮುಂದುವರಿಸಲಿಚ್ಛಿಸಿದ ರೋಹಿಣಿ, ತನ್ನ ತಂದೆ ರಾಜುರವರೊಂದಿಗೆ ನಗರ ಪ್ರದಕ್ಷಿಣೆ ಕೈಗೊಂಡಿದ್ದಳು. ಹೊರವಲಯದ ಒಂದು ಪ್ರದೇಶದಲ್ಲಿ, ಸುಮಾರು ೫೦ ವಲಸಿಗರು ಭಾರಿ ಚರಂಡಿಯ ಬದುವಿನ ಮೇಲಿದ್ದ, ಶಿಥಿಲವಾದ ಶೆಡ್ಡುಗಳಲ್ಲಿ ವಾಸವಿದ್ದರು. ಅವರುಗಳ ಮುಖ್ಯಸ್ಥರಾದ ಮಲ್ಕಿಯತ್ ಸಿಂಗರವರು ತಮ್ಮ ದುರಂತದ ಕಥೆಯನ್ನು ರೋಹಿಣಿಗೆ ವಿವರಿಸಿದರು. 'ನಮ್ಮ ತಂಡದವರೆಲ್ಲ ಕಟ್ಟಡದ ವಿಶೇಷ ಕುಶಲ ಕರ್ಮಿಗಳು. ಆದುದರಿಂದ ನಮ್ಮ ಗುತ್ತಿಗೆದಾರರು ನಮ್ಮಗಳಿಗೆ ಉತ್ತಮವಾದ ಶೆಡ್ಡುಗಳನ್ನು ವಾಸಕ್ಕಾಗಿ ನೀಡಿದ್ದರು. ಆ ಶೆಡ್ಡುಗಳಲ್ಲಿ ವಾಸಿಸುತ್ತ, ನಾಲ್ಕು ವರ್ಷಗಳಷ್ಟು ಕಾಲ ನೆಮ್ಮದಿಯಿಂದ ಕೆಲಸ ಮಾಡಿಕೊಂಡಿದ್ದೆವು. ಲಾಕ್ಡೌನಿನ ಮುನ್ಸೂಚನೆಯನ್ನರಿತ ನಾನು, ನನ್ನ ತಂಡದವರೊಂದಿಗೆ ಮುಂಚಿತವಾಗೇ ನಮ್ಮ ಊರುಗಳನ್ನು ಸೇರಿದೆ. ಆದರೆ ನಮ್ಮ ಊರಿನವರುಗಳೇ ನಮ್ಮಗಳನ್ನು "ದೂರದ ನಗರಗಳಿಂದ ಬಂದವರು, ಕೋವಿಡ್ ಸೋಂಕು ಹರಡುವವರು" ಎಂದು ಭಾವಿಸಿ ನಮ್ಮನ್ನು ಊರಿನ ಹೊರಗೆ ಉಳಿದುಕೊಳ್ಳುವಂತೆ ಮಾಡಿದ್ದರು. ಮೂರು ವಾರಗಳನಂತರವೇ ನಮ್ಮಗಳನ್ನು ಊರಿನೊಳಗೆ ಸೇರಿಸಿಕೊಂಡಿದ್ದು. ನನ್ನ ಹತ್ತಿರ ಕೂಡಿಟ್ಟ ಸ್ವಲ್ಪ ಹಣವಿತ್ತು. ನನ್ನ ತಂದೆ ಹಾಗು ಚಿಕ್ಕಪ್ಪರುಗಳೊಂದಿಗೆ ನಮ್ಮ ಮುತ್ತಾತನವರು ಕಟ್ಟಿದ ಮನೆಯಲ್ಲಿ ಸ್ವಲ್ಪ ದಿನಗಳನ್ನು ಆರಾಮವಾಗಿ ಕಳೆದೆವು. ದಿನಗಳು ಕಳೆದಂತೆ ನನ್ನ ಕೈಯಲ್ಲಿದ್ದ ಹಣ ಖರ್ಚಾಗಿ ಹೋಯಿತು. ಏನಾದರೂ ಕೆಲಸ ಮಾಡಿ ದುಡಿಯೋಣವೆಂದರೆ, ನಮ್ಮ ಊರಿನಲ್ಲಿ ಯಾವ ಕೆಲಸಗಳೂ ಸಿಗುವಂತಿರಲಿಲ್ಲ. ಕೈಗಳು ಬರಿದಾದ ನಮ್ಮಗಳನ್ನು, ನಮ್ಮ ತಂದೆಯವರು ಕೂಡ ಖರ್ಚಿನ ಹೊರೆಗಳಂತೆ ಕಾಣ ತೊಡಗಿದರು. ಹಾಗು ಹೀಗೂ ಎರಡು ತಿಂಗಳುಗಳನ್ನು ಕಳೆದ ಬಳಿಕ, ರೈಲು ಬಸ್ಸುಗಳ ಸಂಚಾರ ಆರಂಭವಾಯಿತು. ನನ್ನೊಂದಿಗೆ ಸುಮಾರು ೪೦ ಜನಗಳು ಹೊರಟರು. ನಾವೆಲ್ಲರೂ ನಮ್ಮ ಕಟ್ಟಡದ ಕೆಲಸವಿದ್ದ ನಗರಕ್ಕೆ ಹಿಂತುರುಗಿ ಬಂದೆವು. ಅಷ್ಟು ಹೊತ್ತಿಗಾಗಲೇ ನಾವು ವಾಸಿಸುತ್ತಿದ್ದ ಶೆಡ್ಡುಗಳೆಲ್ಲವೂ ನೆಲಸಮಗೊಂಡಿದ್ದವು. ನಮ್ಮ ಗುತ್ತಿಗೆದಾರರನ್ನು ಭೇಟಿಮಾಡಿ ಕೇಳಿದಾಗ ಅವರು ನಮಗೆ ಯಾವ ಭರವಸೆಯನ್ನೂ ನೀಡದಾದರು. ನಾನು ಕೇಳ್ಪಟ್ಟ ಸುದ್ದಿಗಳ ಪ್ರಕಾರ, ನಮ್ಮ ನಿರ್ಮಾಣೋದ್ಯಮಿಗಳೇ ನಮ್ಮ ಶೆಡ್ಡುಗಳನ್ನು ನೆಲಸಮಗೊಳಿಸಿ ಮುಂದಿನ ಕಟ್ಟಡಗಳಿಗೆ ಅನುವು ಮಾಡಿಕೊಂಡಿದ್ದರು. ಶೆಡ್ಡುಗಳ ಒಳಗಿದ್ದ ನಮ್ಮ ಸಾಮಾನುಗಳು ಏನಾದುವೆಂಬುದನ್ನು ಯಾರೂ ಹೇಳದಾದರು. ನಾವುಗಳು ಪೊಲೀಸರಿಗೆ ದೂರನ್ನು ನೀಡಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ಕಟ್ಟಡದ ಕೆಲಸಗಳು ಪುನರಾರಂಭವಾಗುವ ಸೂಚನೆಗಳು ಇರಲಿಲ್ಲ. ಬೇರೆಲ್ಲೂ ಹೋಗಲು ತಿಳಿಯದೆ, ಭಾರಿ ಚರಂಡಿಯ ಬದುವಿನ ಮೇಲೆ ಹರಿದ ಮುರಿದ ತಗಡುಗಳಿಂದ ಶೆಡ್ಡುಗಳನ್ನು ನಿರ್ಮಿಸಿಕೊಂಡು ದಿನ ಕಳೆಯುತ್ತಿದ್ದೇವೆ' ಎಂದು ತಮ್ಮ ಅಳಲನ್ನು ರೋಹಿಣಿಯ ಬಳಿ ತೋಡಿಕೊಂಡವರು ಮಲ್ಕಿಯತ್ ಸಿಂಗ್. ಅವರುಗಳ ದಾಖಲೆ ಪತ್ರಗಳ ವಿವರಗಳನ್ನು ಬರೆದುಕೊಂಡ ರೋಹಿಣಿ, ಅವರುಗಳಿಗೆ ಸರಕಾರದಿಂದ ದೊರೆಯಬೇಕಾದ ದಿನಸಿ ಪೊಟ್ಟಣಗಳು ದೊರೆಯುವಂತೆ ಮಾಡುವ ಭರವಸೆಯನ್ನು ನೀಡಿದಳು.
ಕೋವಿಡ್ ತಡೆಗೆಂದು ಜಾರಿಗೊಳಿಸಿದ ಲಾಕ್ಡೌನ್ ದಿನಗಳು ವಲಸಿಗ ಕೆಲಸಗಾರರ ಪಾಲಿಗೆ ಕರಾಳ ದಿನಗಳಾಗಿದ್ದವು. ದೇಶದ ದಕ್ಷಿಣದ ತುತ್ತುದಿಯ ವಲಸಿಗ ರಾಮುವಿನ ದುರಂತ ಕತೆಯನ್ನೋದಿದ ರೋಹಿಣಿ ದುಃಖಿತಳಾಗಿದ್ದಳು. ಒಂಬತ್ತು ಮಕ್ಕಳ ಬಡ ಕುಟುಂಬವೊಂದರ ಐದನೇ ಮಗುವಾಗಿ ಜನಿಸಿದ್ದವನು ರಾಮು. ಹದಿನೈದರ ಎಳೆ ಪ್ರಾಯದಲ್ಲೇ, ಮನೆಯವರಿಗೂ ತಿಳಿಸದೆ ನೌಕರಿಯನ್ನರಸಿ ದೂರದ ನಗರವೊಂದಕ್ಕೆ ವಲಸೆ ಹೋದ ಅವನಿಗೆ, ಸಕ್ಕರೆಯ ಕಾರ್ಖಾನೆಯೊಂದರಲ್ಲಿ ಕೆಲಸ ಸಿಕ್ಕಿತ್ತು. ಕೆಲಸದ ಸೂಕ್ಷ್ಮಗಳನ್ನು ಬೇಗನೆ ಕಲಿತ ರಾಮು ತನ್ನ ಮೇಲಧಿಕಾರಿಗಳ ಮೆಚ್ಚುಗೆಯನ್ನು ಗಳಿಸಿದ್ದನು. ಆರೇ ತಿಂಗಳುಗಳ ಅವಧಿಯಲ್ಲಿ ಸಾಕಷ್ಟು ಸಂಪಾದಿಸಲಾರಂಭಿಸಿದ ರಾಮು, ತನ್ನ ತಾಯಿಗೆ ಪ್ರತಿ ತಿಂಗಳು ಹಣವನ್ನು ಕಳುಹಿಸಲಾರಂಭಿಸಿದ ದಿನ, ಅವನ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಳೆದು ಹೋಗಿದ್ದ ಮಗ ಜೀವಂತವಾಗಿದ್ದು ಇಡೀ ಕುಟುಂಬವನ್ನು ಆನಂದ ಸಾಗರದಲ್ಲಿ ಮುಳಿಗಿಸಿತ್ತು. ಆರು ವರುಷಗಳ ಕಾಲ ನಿರಂತರವಾಗಿ ದುಡಿಯುತ್ತಿದ್ದ ರಾಮು, ಪ್ರತಿ ತಿಂಗಳು ಮನೆಗೆ ಹಣವನ್ನು ಕಳುಹಿಸುವುದನ್ನು ಮಾತ್ರ ಎಂದೂ ಮರೆಯುತ್ತಿರಲಿಲ್ಲ. ಕೋವಿಡ್ನಿಂದಾದ ಲಾಕ್ಡೌನ್ ರಾಮುವಿನ ಮೇಲೆ ಬರ ಸಿಡಿಲಿನಂತೆ ಅಪ್ಪಳಿಸಿತ್ತು. ಕಾರ್ಖಾನೆಯ ಬಾಗಿಲು ಮುಚ್ಚಿ, ಅವನ ಕೆಲಸ ಇಲ್ಲದಂತಾಯ್ತು. ರಾಮುವಿಗೀಗ ತನ್ನ ಊರಿನತ್ತ ಪ್ರಯಾಣ ಬೆಳಸಿ ತನ್ನ ತಂದೆ-ತಾಯಿಗಳನ್ನು ನೋಡುವಾಸೆಯಾಗಿತ್ತು. ಆದರೆ ಬಸ್ಸು-ರೈಲುಗಳ ಸಂಚಾರ ಇಲ್ಲದಂತಾಗಿತ್ತು. ಎದೆಗುಂದದ ಯುವಕ ರಾಮು ಕಾಲ್ನಡುಗೆಯಲ್ಲೇ, ಸುಮಾರು ೨೫೦೦ ಕಿ.ಮೀ.ನಷ್ಟು ದೂರವಿರುವ ತನ್ನೂರಿನತ್ತ ಹೊರಟಿದ್ದನು. ಸ್ವಲ್ಪ ಕಾಲ್ನಡಿಗೆ, ಸ್ವಲ್ಪ ಸರಕು ವಾಹನಗಳ ಮೇಲಿನ ಸವಾರಿ, ಸ್ವಲ್ಪ ವಿಶ್ರಾಂತಿಗಳನ್ನೊಳಗೊಂಡ ರಾಮುವಿನ ಪ್ರಯಾಣ ಸುಮಾರು ಹತ್ತು ದಿನಗಳವರಗೆ ಮುಂದುವರೆದಿತ್ತು. ಕಡೆಗೊಂದು ದಿನ ತನ್ನೂರನ್ನು ತಲುಪಿದ ರಾಮುವನ್ನು ನೋಡಿದ ಅವನ ತಂದೆ-ತಾಯಿಗಳು ಸಂತೋಷದಿಂದ ಉಬ್ಬಿ ಹೋಗಿದ್ದರು. ತಮ್ಮ ಮಗ ರಾಮುವನ್ನು ತಮ್ಮ ಬಳಿ ಕಳುಹಿಸಿದ ದೇವರಿಗೆ ತುಪ್ಪದ ದೀಪ ಹಚ್ಚಿದ ರಾಮುವಿನ ತಾಯಿ, ಪ್ರಸಾದದ ಬೆಲ್ಲದ ಚೂರೊಂದನ್ನು ಮಗನ ಬಾಯಿಗಿಟ್ಟಿದ್ದರು. ರಾಮು ತಂದಿದ್ದ ಮಿಠಾಯಿಯ ಡಬ್ಬವೊಂದು ಮನೆಯವರ ಕೈಗಳಲ್ಲೆಲ್ಲಾ ಸಾಗುತ್ತ, ಕ್ಷಣಾರ್ಧದಲ್ಲಿ ಖಾಲಿಯಾಗಿತ್ತು. ಮನೆಯವರೆಲ್ಲಾ ರಾಮುವಿನ ಮಿಠಾಯಿನ ಸವಿ ಸವಿದನಂತರ, ರಾಮು ಸ್ನಾನಕ್ಕೆಂದು ಹತ್ತಿರದ ತೆಂಗಿನ ತೋಟದ ಕಡೆ ಹೊರಟನು. ಆ ತೋಟದ ಕಾವಲುಗಾರಿಕೆ ರಾಮುವಿನ ತಂದೆಯ ಕೆಲಸವಾಗಿತ್ತು. ನುರಿತ ಈಜುಗಾರನಾದ ರಾಮು ಸಂತೋಷವುಕ್ಕಿ ತೋಟದ ಬಾವಿಯೊಳಗೆ ಹಾರಿ, ಸುಮಾರು ಅರ್ಧ ಘಂಟೆಗಳ ಕಾಲ ಈಜಾಡುತ್ತಾ ಆನಂದಿಸಿದನು. ಸ್ನಾನ ಮುಗಿದನಂತರ ಮೆಟ್ಟಿಲುಗಳನ್ನೇರಿ ಬರುತ್ತಿದ್ದ ರಾಮು, ಪ್ರಾಯಶಃ ಜಾರಿ ಬಾವಿಯೊಳಗೆ ಹಿಮ್ಮುಖನಾಗಿ ಬಿದ್ದವನು, ಮತ್ತೇಳಲೇ ಇಲ್ಲ!
ಎಷ್ಟು ಹೊತ್ತಾದರೂ ಹಿಂತುರುಗಿ ಬಾರದ ರಾಮುವನ್ನು ಹುಡುಕಿಕೊಂಡು ಬಂದ ಅವನ ಅಣ್ಣಂದಿರಿಗೆ, ರಾಮು ಕಾಣ ಸಿಗಲಿಲ್ಲ. ರಾಮು ಬಾವಿಯಲ್ಲಿ ಮುಳುಗಿರಬಹುದೆಂಬ ಅನುಮಾನ ಬಂದ ಅವರು, ಬಾವಿ ಶೋಧಿಸುವರನ್ನು ಕರೆಸಿದರು. ಸುಮಾರು ಒಂದು ತಾಸಿನ ಸಮಯದಲ್ಲೇ ರಾಮುವಿನ ದೇಹವನ್ನು ಹೊರ ತೆಗೆದಾಗ, ರಾಮುವಿನ ಇಡೀ ಕುಟುಂಬ ದಿಗ್ಭ್ರಾಂತವಾಗಿತ್ತು. ರಾಮುವಿನ ತಾಯಿ-ತಂದೆಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಆರು ವರುಷಗಳನಂತರ ಮರಳಿ ಬಂದ ಅವರ ಮುದ್ದಿನ ಮಗನ ಜೀವ ಆರೇ ಘಂಟೆಗಳಲ್ಲಿ ಹಾರಿ ಹೋಗಿತ್ತು.
ಕತೆಯ ವರದಿಯನ್ನೋದಿದ ರೋಹಿಣಿ 'ಒಮ್ಮೊಮ್ಮೆ ದೇವರೇಕೆ ಇಷ್ಟು ನಿಷ್ಕರುಣಿಯಾಗುತ್ತಾನೆ?' ಎಂದುಕೊಳ್ಳುತ್ತ ಕಣ್ಣೀರೊರೆಸಿಕೊಂಡಳು.
ವಲಸಿಗರ ಕಾರ್ಪಣ್ಯಗಳ ಕತೆಯನ್ನು ಹೆಚ್ಚು ಹೆಚ್ಚು ಕಲೆ ಹಾಕುವ ರೋಹಿಣಿಯ ಶೋಧ ಮುಂದುವರೆದಿತ್ತು. ಗಡಿಗಂಟಿಕೊಂಡಿದ್ದ ರಾಜ್ಯವೊಂದರ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ವಲಸಿಗ ತಂಡವೊಂದರ, ಬೇಸಿಗೆ ಬೆಳೆಯ (Rabi crop) ಕೊಯ್ಲಿನ ಕಾರ್ಯ ಆಗಿನ್ನೂ ಮುಗಿದಿತ್ತು. ಲಾಕ್ಡೌನಿನಿಂದಾಗಿ ಬೇರೆ ಮಾರ್ಗವಿಲ್ಲದೆ, ಕಾಲ್ನಡಿಗೆಯಲ್ಲೇ ಅವರುಗಳು ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದರು. ಮಾರ್ಗ ತಪ್ಪಿ ಅವರುಗಳು ನೆರೆ ರಾಷ್ಟ್ರವಾದ ಪಾಕಿಸ್ತಾನದ ಗಡಿಯನ್ನು ತಲುಪಿಬಿಟ್ಟಿದ್ದರು. ಅಲ್ಲಿ ಕಾವಲು ಕಾಯುತ್ತಿದ್ದ ಭಾರತದ ಸುರಕ್ಷತಾ ಪಡೆಯ ಸೈನಿಕರುಗಳು ವಲಸಿಗರನ್ನು ನೋಡಿ ಆಶ್ಚರ್ಯಗೊಂಡರು. ಆದರೂ ಆಹಾರ ನೀರುಗಳ ಉಪಚಾರವನ್ನು ಸೈನಿಕರುಗಳು ವಲಸಿಗರಿಗೆ ಮಾಡಿದರು. 'ವಲಸಿಗರು ಕೂಡಲೇ ಹೊರಟು, ಸರಕಾರ ವಲಸಿಗರುಗಳಿಗಾಗಿ ಏರ್ಪಾಡು ಮಾಡಿರುವ ತಂಗುದಾಣಗಳನ್ನು ಸೇರಬೇಕು' ಎಂಬುದು ಸೈನಿಕರ ಕಟ್ಟಪ್ಪಣೆಯಾಗಿತ್ತು. ವಲಸಿಗರ ತಂಡ ನಡಿಗೆಯನ್ನು ಮುಂದುವರೆಸಿ ಸಮೀಪದ ಸರಕಾರಿ ಶಾಲೆಯ ಕಟ್ಟಡವೊಂದರಲ್ಲಿ ಆಶ್ರಯ ಪಡೆಯಿತು. ಸಮೀಪದ ಹಳ್ಳಿಗರು ಅವರುಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡಿದರು. ಸುಮಾರು ೧೫ ದಿನಗಳು ಕಳೆದನಂತರ ವಲಸಿಗರು ಮಾಡಲು ಕೆಲಸವಿಲ್ಲದೇ ಬೇಜಾರುಗೊಂಡಿದ್ದರು. ತಮ್ಮಗಳಿಗೇನಾದರೂ ಕೆಲಸ ಕೊಡುವಂತೆ ಅವರುಗಳು ಶಾಲೆಯ ಮುಖ್ಯೋಪಾಧ್ಯಾಯರನ್ನು ಕೇಳಿಕೊಂಡರು. ಶಾಲೆಯ ಮತ್ತು ಅದಕ್ಕೆ ಸೇರಿದ ಶಾಲಾ ವಸತಿ ಗೃಹದ ಕಟ್ಟಡಗಳಿಗೆ ಕಳೆದ ಹತ್ತು ವರ್ಷಗಳಿಂದ ಬಣ್ಣ ಬಳಿಯುವ ಕೆಲಸವಾಗಿಲ್ಲ. ತಾವುಗಳು ಆ ಕೆಲಸವನ್ನು ಮಾಡುವಿರಾ ಎಂದು ಕೇಳಿದ ಮುಖ್ಯೋಪಾಧ್ಯಾಯರ ಸಲಹೆಗೆ, ವಲಸಿಗರು ಕೂಡಲೇ ಸಮ್ಮತಿಸಿದರು. ಹಳ್ಳಿಯ ಸರಪಂಚರು ಮತ್ತು ಹಳ್ಳಿಯ ಹಿರಿಯರ ಸಹಾಯದಿಂದ ಮುಖ್ಯೋಪಾಧ್ಯಾಯರು ಬೇಕಾದ ಬಣ್ಣದ ಡಬ್ಬಗಳನ್ನು ತರಿಸಿಕೊಟ್ಟರು. ಉತ್ಸಾಹದಿಂದ ಬಣ್ಣ ಬಳಿಯುವ ಕೆಲಸ ಮಾಡಿದ ವಲಸಿಗರು, ಸುಮಾರು ಹತ್ತು ದಿನಗಳ ಅವಧಿಯಲ್ಲಿ ಇಡೀ ಶಾಲೆ ಹಾಗು ಶಾಲೆಯ ವಸತಿ ಗೃಹದ ಕಟ್ಟಡಗಳು ಹೊಸ ಶೋಭೆಯೊಂದಿಗೆ ಹೊಳೆಯುವಂತೆ ಮಾಡಿದರು. ಹಳ್ಳಿಯ ಮುಖ್ಯಸ್ಥರು ಕೆಲಸದ ಸಂಭಾವನೆಯನ್ನು ವಲಸಿಗರಿಗೆ ನೀಡಲು ಮುಂದಾದಾಗ, ವಲಸಿಗರು ಹಣವನ್ನು ಅಷ್ಟೇ ನಯವಾಗಿ ನಿರಾಕರಿಸಿದರು. 'ನಿಮ್ಮ ಆಥಿತ್ಯ ಪಡೆದು ತೃಪ್ತರಾಗಿದ್ದೇವೆ. ನಿರಾಶ್ರಿತರಾದ ನಮ್ಮಗಳಿಗೆ ಆಹಾರ, ನೀರು ಮತ್ತು ವಸತಿಗಳೊನ್ನದಗಿಸಿ ಸಲಹಿದ್ದೀರಿ. ತಮ್ಮ ಹಳ್ಳಿಯ ಶಾಲೆಗೆ ಬಣ್ಣವನ್ನು ಬಳಿದು, ಸುಂದರವನ್ನಾಗಿಸಿದ ತೃಪ್ತಿ ನಮ್ಮದಾಗಿದೆ' ಎಂದು ವಂದಿಸುತ್ತಾ ನುಡಿದ ವಲಸಿಗರ ಮಾತುಗಳನ್ನು ಕೇಳಿ ಹಳ್ಳಿಗರು ಸಂತೋಷಗೊಂಡರು.
-೦-೦-೦-೦-೦-೦-
No comments:
Post a Comment